ಮಕರ ಸಂಕ್ರಾಂತಿ

ದೈನಂದಿನದ ಚಟುವಟಿಗಳಿಂದ ಬೇಸತ್ತವರಿಗೆ ಮುದ ನೀಡಲು ನಮ್ಮ ಹಿರಿಯರು ಹಬ್ಬದ ಆಚರಣೆಗಳನ್ನು ರೂಢಿಗೆ ತಂದರು. ಕೇವಲ ಮಾನವರು ಮಾತ್ರವಲ್ಲದೇ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಕು ಪ್ರಾಣಿಗಳಿಗೂ ತುಸು ನೆಮ್ಮದಿ ಮತ್ತು ಸಂತೋಷವನ್ನು ನೀಡಲು ಕೆಲವು ವಿಶೇಷ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೆ ಪ್ರಕೃತಿ, ಪ್ರಾಣಿ, ಪಶು ಮತ್ತು ಮಾನವವರು ಎಲ್ಲರೂ ಕೂಡಿ ಸಂತಸದಿಂದ ವೈವಿದ್ಯಮಯವಾಗಿ ಸಂಭ್ರಮಿಸುವ ಹಬ್ಬವೇ ಮಕರ ಸಂಕ್ರಾಂತಿ. ಇದನ್ನು ಸುಗ್ಗಿಯ ಹಬ್ಬವೆಂದೂ ಕರೆಯಲಾಗುತ್ತದೆ.

ಇಡೀ ಭೂಸಂಕುಲದ ಎಲ್ಲಾ ಚಟುವಟಿಕೆಗಳು ಸೂರ್ಯ ಮತ್ತು ಚಂದ್ರನ ಮೇಲೆಯೇ ಅವಲಂಭಿತವಾಗಿದೆ. ಪ್ರತಿ ಸಂವತ್ಸರ(ವರ್ಷ)ವನ್ನು ಎರಡು ಅಯನಗಳಾಗಿ ವಿಂಗಡಿಸಲಾಗಿದೆ.ಉತ್ತರಾಯಣ ( ಪುಷ್ಯಮಾಸದಿಂದ ಆಷಾಢಮಾಸದವರೆಗೆ) ಮತ್ತು ದಕ್ಷಿಣಾಯನ ( ಆಷಾಡ ಮಾಸದಿಂದ ಪುಷ್ಯಮಾಸದವರೆಗೆ)ಹೀಗೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಕಾಲವನ್ನು ಮಕರ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನು ಪ್ರತೀ ರಾಶಿಯಲ್ಲಿ ಒಂದೊಂದು ತಿಂಗಳ ಕಾಲವಿದ್ದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ. ಸಾಧಾರಣವಾಗಿ ಪ್ರತೀ ವರ್ಷ ಜನವರಿ 14 ಅಥವಾ 15ರಂದು ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ಮೂಲಕ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುವ ಕಾರಣ, ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ.

bheeshma.jpeg

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿರುವ ಕಾರಣ, ಈ ಸಮಯದಲ್ಲಿ ಮೃತರಾದವರು ಸೀದಾ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನೂ ಸಹಾ ಭಗದ್ಗೀತೆಯಲ್ಲಿ ಆಯಣಗಳಲ್ಲಿ ಉತ್ತರಾಯಣವೇ ಅತಿ ಶ್ರೇಷ್ಠ ಎಂದಿದ್ದಾನೆ. ಹಾಗಾಗಿಯೇ ಕುರುಕ್ಷೇತ್ರದ ಯುದ್ಧದಲ್ಲಿ ಭೀಷ್ಮ ಪಿತಾಮಹರು ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಇಚ್ಛಿಸದೇ, ಉತ್ತರಾಯಣದ ಪುಣ್ಯಕಾಲದವರೆಗೂ ಅರ್ಜುನ ನಿರ್ಮಿಸಿದ ಬಾಣಗಳ ಮಂಚದ ಮೇಲೆ ದಿನಗಳನ್ನು ಕಳೆದು ಅಷ್ಟಮಿ ದಿನದಂದು ಇಚ್ಛಾ ಮರಣಿಯಾಗುತ್ತಾರೆ.

ಇನ್ನು ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣ ಕಾಲದಲ್ಲಿಯೇ. ಹಾಗಾಗಿ ಬಹುತೇಕ ವಿವಾಹಗಳು, ನಾಮಕರಣ, ಚೌಲ-ಉಪನಯನ ಮತ್ತು ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು ಉತ್ತರಾಯಣಕಾಲದಲ್ಲಿ ಹೆಚ್ಚಾಗಿ ಮಾಡಲ್ಪಡುತ್ತದೆ. ಮಾಘ ಮಾಸದಲ್ಲಿ ನದಿಗಳಲ್ಲಿ ಸ್ನಾನ ಮಾಡಿ ಗಂಗೆ ಪೂಜೆ ಮಾಡಿದರೂ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನು ಹಳ್ಳಿಗಾಡಿನಲ್ಲಿ ಬೇರೆಲ್ಲಾ ಹಬ್ಬಗಳಿಗಿಂತ ಈ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಆಗ ತಾನೆ ಬೆಳೆದ ಫಸಲುಗಳೆಲ್ಲವನ್ನೂ ಕಟಾವು ಮಾಡಿ ಕಣಜಗಳಲ್ಲಿ ರಾಶಿ ರಾಶಿಯಾಗಿ ತಂಬಿರುವ ಪರಿಣಾಮವಾಗಿ ಇದನ್ನು ಸುಗ್ಗಿ ಹಬ್ಬ ಎಂದೂ ಕರೆಯುತ್ತಾರೆ. ಸುಗ್ಗಿಯು ಬಂದಿತು, ಹಿಗ್ಗನು ತಂದಿತು, ನಮ್ಮಯ ನಾಡಿನ ಜನಕೆಲ್ಲ ಎಂಬ ಜನಪದ ಹಾಡು ಬಹಳ ಪ್ರಸಿದ್ಧವಾಗಿದೆ.

ಸಂಕ್ರಾಂತಿ ಹಬ್ಬದ ದಿನದಂದು ಬೆಳ್ಳಂಬೆಳಗ್ಗೆಯೇ ಮನೆಯವರರೆಲ್ಲಾ ಎದ್ದು ಎಣ್ಣೆಯ ಅಭ್ಯಂಜನ ಮಾಡಿ, ಮನೆಯ ಹೆಣ್ಣು ಮಕ್ಕಳು ಮನೆಯ ಮುಂದೆ ದೊದ್ಡ ದೊಡ್ಡದಾದ ರಂಗೋಲಿಗಳನ್ನು ಇಟ್ಟು ಮನಯನ್ನು ಸಿಂಗರಿಸಿದರೆ, ಮನೆಯ ಗಂಡಸರು ಮನೆಯಲ್ಲಿರುವ ದನಕರುಗಳಿಗೆ ಸ್ನಾನ ಮಾಡಿಸಿ, ಕೊಟ್ಟಿಗೆ ಶುಚಿಗೊಳಿಸಿ ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಕಣಜದಲ್ಲಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಇನ್ನು ಮಕ್ಕಳು ಹೊಸಬಟ್ಟೆ ತೊಟ್ಟು ಅದರಲ್ಲೂ ಹೆಣ್ಣುಮಕ್ಕಳು ಲಂಗ ರವಿಕೆ ತೊಟ್ಟು, ತಲೆಗೆ ಬೈತಲೆಬಟ್ಟು , ಮುಡಿ ತುಂಬಾ ಹೂ ಮುಡಿದು ವೈಯಾರವಾಗಿ ಓಡಾಡುವುದನ್ನು ವರ್ಣಿಸುವುದಕ್ಕಿಂತ ನೋಡಿ ನಲಿಯುವುದಕ್ಕೇ ಆನಂದ.

sank3.jpeg

ಈ ಹಬ್ಬಕ್ಕೆ ವಿಶೇಷವಾಗಿ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಮತ್ತು ಕಡಲೇಕಾಯಿ ಬೀಜದ ಮಿಶ್ರಣದ ಜೊತೆಗೆ ಸಕ್ಕರೆಯ ಪಾಕದಿಂದ ತಯಾರಿಸಿದ ಸಕ್ಕರೇ ಅಚ್ಚು, ಮತ್ತು ಕಬ್ಬನ್ನು ಇಟ್ಟು ಪೂಜಿಸುತ್ತಾರೆ. ಈ ಹಬ್ಬಕ್ಕೆ ತುಪ್ಪಾ, ಅಕ್ಕಿ, ಹೆಸರುಬೇಳೆ, ಜೀರಿಗೆ, ಮೆಣಸು, ಹಸೀ ಮೆಣಸಿನಕಾಯಿ, ಅರಿಷಿನ ತೆಂಗಿನ ಕಾಯಿ ಮತ್ತು ಬೆಲ್ಲದ ಮಿಶ್ರಣದಿಂದ ಮಾಡಿದ ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)ಯನ್ನು ನೈವೇದ್ಯ ಮಾಡಿ, ಮನೆಯ ಹಿರಿಯರು ಎಲ್ಲರಿಗೂ ಎಳ್ಳು-ಬೆಲ್ಲದ ಮಿಶ್ರಣವನ್ನು ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೇ ಮಾತನಾಡೋಣ ಎಂದು ಹೇಳುತ್ತಾ ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ.

ಸಾಧಾರಣವಾಗಿ ಶುಭಸಮಾರಂಭಗಳಲ್ಲಿ ಎಳ್ಳಿನ ಬಳಕೆ ಇರುವುದಿಲ್ಲ, ಎಳ್ಳನ್ನು ಅಪರ ಕರ್ಮಗಳಲ್ಲಿ ತರ್ಪಣ ಬಿಡುವುದಕ್ಕೆ ಮತ್ತು ಶನಿ ಗ್ರಹದ ದೋಷ ಪರಿಹಾರಕ್ಕಾಗಿ ಉಪಯೋಗಿಸುವುದು ರೂಡಿಯಲ್ಲಿರುವ ಕಾರಣ ಸಾಮಾನ್ಯ ದಿನಗಳಂದು ಎಳ್ಳಿನ ದಾನವನ್ನು ಸ್ವೀಕರಿಸಲು ಹಿಂದು ಮುಂದು ನೋಡುತ್ತಾರೆ. ಆದರೆ ಸಂಕ್ರಾಂತಿಯಂದು ಮಾತ್ರ ಎಳ್ಳು ಬೀರುವುದೇ ಸಂಪ್ರದಾಯ. ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಇದು ಚಳಿಗಾಲವಾದ್ದರಿಂದ ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಮಾಡುವುದಲ್ಲದೇ ಚರ್ಮದ ಕಾಂತಿಯನ್ನೂ ಹೆಚ್ಚುತ್ತದೆ. ಇನ್ನು ಕೊಬ್ಬರಿ‌ ಮತ್ತು ಕಡಲೇಕಾಯಿ ಬೀಜವೂ ಸಹಾ ಎಣ್ಣೆ ಅಂಶದ ವಸ್ತುಗಳಾಗಿದ್ದು ಅವುಗಳ‌ಜೊತೆ ಸರಿದೂಗಿಸಲು ಹುರಿಗಡಲೆ ಮತ್ತು ಬೆಲ್ಲವನ್ನು ಬೆರೆಸಲಾಗಿರುತ್ತದೆ. ಇದೇ ರೀತಿ ಅಕ್ಕಿ, ಹೆಸರುಬೇಳೆ, ಜೀರಿಗೆ ಮತ್ತು ಮೆಣಸು ಮಿಶ್ರಿತ ಹುಗ್ಗಿಯೂ ಕೂಡಾ ಇದೇ ದೇಹಕ್ಕೆ ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಹೆಣ್ಣು ಮಕ್ಕಳು ನೆರೆಹೊರೆಯವರೊಂದಿಗೆ ಎಳ್ಳು ಬೆಲ್ಲ, ಕಬ್ಬು, ಬಾಳೆಹಣ್ಣುಗಳನ್ನು ಪರಸ್ಪರ ಎಳ್ಳು-ಬೆಲ್ಲ ಬೀರುವ ( ವಿನಿಮಯ ಮಾಡಿಕೊಳ್ಳುವ) ಸಂಪ್ರದಾಯ ರೂಢಿಯಲ್ಲಿದೆ.

ಇದು ಮಾಗಿಯ ಕಾಲವಾದ್ದರಿಂದ ಅಗ ತಾನೆ ಸೊಗಡಿನ ಮಣಿ ಅವರೇಕಾಯಿಯನ್ನು ತಂದು ಮಧ್ಯಾಹ್ನದ ಅಡುಗೆಯಲ್ಲಿ ಬಹತೇಕ ಅವರೇಕಾಯಿ ಮಯವಾಗಿರುತ್ತದೆ, ಅವರೇಕಾಯಿ-ಮೆಣಸು ಮಿಶ್ರಿತ ಉದ್ದಿನ ಕಡುಬು (ಅವರೇಕಾಯಿ ಇಡ್ಲಿ), ಅವರೇಕಾಯಿ ಹುಳಿ ಇಲ್ಲವೇ ಹಿದುಕಿದ ಆವರೇಕಾಯಿ ಕೂಟು, ಅವರೇಕಾಯಿ-ಕುಂಬಳಕಾಯಿ ಪಲ್ಯ ಇಲ್ಲವೇ ತೊವ್ವೆ, ಸಿಹಿಗೆಣಸಿನ ಪಲ್ಯದೊಂದಿಗೆ ಮನೆಯವರೆಲ್ಲರೂ ಸಂತೃಪ್ತಿಯಿಂದ ಊಟದ ಶಾಸ್ತ್ರ ಮುಗಿಸಿ ಭುಕ್ತಾಯಾಸ ಪರಿಹರಿಸಿಕೊಳ್ಳಲು ಸಣ್ಣದಾದ ನಿದ್ದೆಯನ್ನು ಮಾಡಿದರೆ ಅರ್ಧ ಸಂಕ್ರಾಂತಿ ಮುಗಿದ ಹಾಗೆಯೇ.

sank5

ಇನ್ನು ಸಂಜೆ ಹೊತ್ತು ಹೆಣ್ಣು ಮಕ್ಕಳು ಮತ್ತೊಮ್ಮೆ ಸಿಂಗರಿಸಿಕೊಂಡು ಎಳ್ಳು ಬೀರುವುದದನ್ನು ಮುಂದುವರೆಸಿದರೆ, ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮೊದಲ ವರ್ಷ ಮುತ್ತೈದೆಯರಿಗೆ ಐದು ಬಾಳೆಹಣ್ಣುಗಳನ್ನು ಕೊಟ್ಟು ಮುಂದಿನ ಐದು ವರ್ಷಗಳ ಕಾಲ ಕ್ರಮೇಣವಾಗಿ ಐದರಿಂದ ಹೆಚ್ಚಿಸಿಕೊಂಡು, ಐದನೇ ವರ್ಷಕ್ಕೆ ಇಪ್ಪತ್ತೈದು ಬಾಳೇ ಹಣ್ಣುಗಳನ್ನು ಬಾಗಿಣವಾಗಿ ಕೊಡುವ ಮೂಲಕ ಮುಕ್ತಾಯ ಮಾಡುತ್ತಾರೆ, ಗಂಡಸರುಗಳು ತಮ್ಮ ತಮ್ಮ ದನಕರುಗಳಿಗೆ ನಾನಾ ರೀತಿಯ ಹೂಗಳಿಂದ ಸಿಂಗಾರ ಮಾಡಿ, ಕೊರಳಿಗೆ ಮತ್ತು ಕಾಲ್ಗಳಿಗೆ ಗೆಜ್ಜೆ ಕಟ್ಟಿ ಕೆಲವರು ಅವುಗಳ ಕೋಡುಗಳಿಗೆ ಬಣ್ಣ ಬಳಿದು, ಉಸುರುಬುಡ್ಡೆ(ಬೆಲೂನ್)ಗಳನ್ನು ಕಟ್ಟಿ ಕತ್ತಲಾದ ಮೇಲೆ ಊರಿನ ಅರಳೀ ಕಟ್ಟೆಯ ಮುಂದೆ ದೊಡ್ಡದಾದ ಬೆಂಕಿಯನ್ನು ಹಾಕಿ, ಆ ಬೆಂಕಿಯ ಮೇಲೆ ತಮ್ಮ ಹಸುಗಳನ್ನು ಹಾರಿಸುತ್ತಾರೆ. ಈ ರೀತಿಯಾಗಿ ಕಿಚ್ಚು ಹಾಯಿಸುವುದನ್ನು ನೋಡಲೆಂದೇ, ಊರಿನ ಹಿರಿ ಕಿರಿಯರೆಲ್ಲಾ ಸಂಭ್ರಮ ಸಡಗರದಿಂದ ವರ್ಷವಿಡೀ ಕಾಯುತ್ತಿರುತ್ತಾರೆ, ಈ ರೀತಿಯಾಗಿ ಕಿಚ್ಚಾಯಿಸುವುದರಿಂದ ಆ ಹಸುಗಳ ಮೇಲಿರಬಹುದಾದ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿಕೀಟಗಳು ಬೆಂಕಿಯ ಶಾಖಕ್ಕೆ ನಾಶವಾಗುತ್ತದೆ ಎನ್ನುವುದು ಇದರ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವೂ ಇದೆ ಈ ರೀತಿಯಾಗಿ ಕರ್ನಾಟಕ ಮತ್ತು ಆಂದ್ರ ಪ್ರದೇಶಗಳಲ್ಲಿ ಆಚರಿಸುತ್ತಾರೆ.

sank2

ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂಬ ಹೆಸರಿನಿಂದ ಸಂಭ್ರಮದಿಂದ ಹಬ್ಬದ ಹಿಂದಿನ ದಿನ ಭೋಗಿ ಎಂಬ ಹೆಸರಿನಲ್ಲಿ ಮನೆಯಲ್ಲಿದ್ದ ಎಲ್ಲಾ ಕಸಕಡ್ಡಿಗಳನ್ನು ಮನೆಯ ಮುಂದೆ ಹಾಕಿ ಅದಕ್ಕೆ ಬೆಂಕಿ ಇಟ್ಟು ಮನೆಯ ಸುತ್ತಮುತ್ತ ಸ್ವಚ್ಚಗೊಳಿಸುತ್ತಾರೆ ಹಬ್ಬದ ದಿನವನ್ನು ಪೊಂಗಲ್ ಎಂಬ ಹೆಸರಿನಲ್ಲಿ ಸಮೃದ್ಧಿಯ ಸಂಕೇತವಾಗಿ ಹಾಲಿನ ಜೊತೆಗೆ ಬೆಲ್ಲ ಸೇರಿಸಿ ಕುದಿಸಿ ಉಕ್ಕಿಸಲಾಗುತ್ತದೆ ಮತ್ತು ಹಬ್ಬದ ಮಾರನೆಯ ದಿನ ಮಾಟ್ಟು ಪೊಂಗಲ್ ಎಂಬ ಹೆಸರಿನಲ್ಲಿ ಗೋಪೂಜೆ ಮಾಡುತ್ತಾರೆ

ಹಲವಾರು ಕಡೆ ಬಾರಿ ಅಪಾಯಕಾರಿ ಮತ್ತು ಸಾಹಸಮಯವಾದ ಜಲ್ಲಿಕಟ್ಟು ಎಂಬ ಹೆಸರಿನಲ್ಲಿ ಗೂಳಿಯನ್ನು ಪಳಗಿಸುವ ಆಟವಾಡಿಸುತ್ತಾರೆ. ಈ ಆಟವಾಡುವಾಗ, ಪ್ರಾಣಿ ಹಿಂಸೆಯಾಗುವುದಲ್ಲದೇ ಜನರಿಗೂ ಗಾಯವಾಗುವ ಕಾರಣ ಕೆಲಕಾಲ ಇದನ್ನು ನಿಷೇಧಿಸಲಾಗಿದ್ದರೂ ಈಗ ಸಾಂಕೇತಿಕವಾಗಿ ಆಚರಿಸಲು ನ್ಯಾಯಾಲಯಗಳು ಅನುಮತಿ ನೀಡಿದೆ. ನಾಲ್ಕನೇ ದಿನ ಕಾಣುಮ್ ಪೊಂಗಲ್ ಎಂಬ ಹೆಸರಿನಲ್ಲಿ ರುಚಿ ರುಚಿಯಾದ ಬಗೆ ಬಗೆಯ ಭಕ್ಷ ಭೋಜನಗಳನ್ನು ತಯಾರಿಸಿ ಮನೆಮಂದಿಯೆಲ್ಲಾ ಸೇವಿಸಿ ಸಂಭ್ರಮಿಸುತ್ತಾರೆ.

jyothi

ಕೇರಳದ ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿಯಂದು ಸಂಜೆ ಕಾಣುವ ಮಕರಜ್ಯೋತಿಯನ್ನು ಕಣ್ತುಂಬ ನೋಡಲು ದೇಶಾದ್ಯಂತ ಮಾಲೆ ಧರಿಸಿದ ಅಯ್ಯಪ್ಪ ವ್ರತಾಧಾರಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಶಬರಿಮಲೆಗೆ ಆಗಮಿಸುತ್ತಾರೆ. ಸಂಜೆ ಮಕರಜ್ಯೋತಿಯ ನಂತರ ಕೇರಳಾದ್ಯಂತ ಎಲ್ಲಾ ಆಸ್ತಿಕ ಬಂಧುಗಳ ಮನೆಯಲ್ಲಿ ನಂದಾದೀಪವನ್ನು ಬೆಳಗಿ ಸೂರ್ಯನು ಪಥವನ್ನು ಬದಲಿಸುವ ಸಮಯ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತಾರೆ.

kite.jpeg

ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನವನ್ನು ಗಾಳಿಪಟದ ಹಬ್ಬವನ್ನಾಗಿ ಆಚರಿಸುತ್ತಾರೆ. ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ , ಕರ್ನಾಟಕದಂತೆಯೇ ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ ( ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾನಾಡೋಣ) ಎಂದು ಹೇಳುತ್ತಾ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದೆ.

ಈ ರೀತಿಯಾಗಿ ನಮ್ಮ ಹಿರಿಯರು ರೂಢಿಗೆ ತಂದ ಪ್ರತಿಯೊಂದು ಹಬ್ಬಗಳಲ್ಲಿಯೂ ಸಾಮಾಜಿಕ ಸಾಮರಸ್ಯದ ಜೊತೆಗೆ, ಪ್ರಾಕೃತಿಕವಾಗಿಯೋ, ಸ್ಥಳೀಯ ಐತಿಹಾಸಿಕವಾಗಿಯೋ,ಇಲ್ಲವೇ ಪೌರಾಣಿಕವಾಗಿಯೋ ಮತ್ತು ವೈಜ್ಞಾನಿಕವಾಗಿ ಮಹತ್ವ ಪಡೆದಿರುತ್ತವೆ. ಆದರೆ ವಿಪರೀತವಾದ ಪಾಶ್ಚಾತ್ಯ ಅಂಧಾನುಕರಣೆ ಮತ್ತು ನಮ್ಮ ಹಬ್ಬಗಳ ವೈಚಾರಿಕತೆಯ ಬಗ್ಗೆ ಸರಿಯಾದ ತಿಳುವಳಿಕೆ ನಮ್ಮ ಇಂದಿನ ಯುವಜನತೆಗೆ ಇಲ್ಲದ ಕಾರಣ ಹಬ್ಬಗಳ ಸಡಗರ ಸಂಭ್ರಮ ಆಚರಣೆ ಹಿಂದಿನಂತೆ ಇಲ್ಲದಿರುವುದು ತುಸು ಬೇಸರದ ಸಂಗತಿಯಾದರೂ, ಮನೆಯ ಹಿರಿಯರು ಪರಂಪರಾಗತವಾಗಿ ರೂಡಿಯಲ್ಲಿರುವ ಆಚರಣೆಗಳನ್ನು ಮತ್ತದರ ಹಿಂದಿರುವ ಮಹತ್ವಗಳನ್ನು ತಿಳಿಸುವ ಮೂಲಕ ಮತ್ತೊಮ್ಮೆ ಗತವೈಭವವನ್ನು ಮರಳಿ ತರಬಹುದಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ನೀರು, ಕಣ್ಣೀರು

ಕೆಲ ವರ್ಷಗಳ ಹಿಂದೆ ಹೊರಗೆಲ್ಲೋ ಹೋಗಿದ್ದಾಗ ಬಾಯರಡಿಕೆಯಾದಾಗ, ಸೀದಾ ಯಾವುದಾದರೂ ಹೋಟೆಲ್ಗಳಿಗೆ ಹೋಗಿ ಯಾರನ್ನೂ ಕೇಳದೇ ನೀರನ್ನು ಕುಡಿದು ಬರಬಹುದಾಗಿತ್ತು. ಅದೇ ರೀತಿ ಯಾವುದೇ ಅಪರಿಚಿತರ ಮನೆಯ ಕದವನ್ನು ತಟ್ಟಿ ಕುಡಿಯಲು ನೀರನ್ನು ಕೇಳಿದರೆ, ನಿಸ್ಸಂಕೋಚವಾಗಿ ನೀರನ್ನು ಕೊಡುತ್ತಿದ್ದರು. ಇನ್ನೂ ಕೆಲವರ ಮನೆಯವರು ನೀರಿನ ಜೊತೆ ಬೆಲ್ಲವನ್ನೂ ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅದೂ ಇಲ್ಲದೇ ಹೋದಲ್ಲಿ, ಅನೇಕ ಸಂಘಸಂಸ್ಥೆಗಳು ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಅರವಟ್ಟಿಕೆಗಳನ್ನು ಸ್ಥಾಪಿಸಿ ಎಲ್ಲರ ನೀರಡಿಕೆಯನ್ನು ನೀಗಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ ಸಂಪೂರ್ಣವಾಗಿ ಬದಲಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಕೆಲ ದಿನಗಳ ಹಿಂದೆ ಮೈಸೂರಿನ ಹೋಟೆಲ್ ಒಂದರಲ್ಲಿ ತಿಂಡಿ ತಿಂದ ನಂತರ ಕುಡಿಯಲು ನೀರು ಕೇಳಿದರೆ, ಆ ಹೋಟೆಲ್ಲಿನವರು ಎಂದಿನಂತೆ ಲೋಟದಲ್ಲಿ ನೀರನ್ನು ತಂದು ಕೊಡದೇ, Packed Water Bottle ತಂದು ಕೊಟ್ಟರಂತೇ. ಅಯ್ಯಾ ನನಗೆ ಈ ರೀತಿಯಾದ ಬಾಟಲ್ ನೀರು ಬೇಡ ಶುದ್ಧವಾದ ಸಾಧಾರಣವಾಗಿ ಎಲ್ಲರೂ ಕುಡಿಯುವ ನೀರನ್ನು ತಂದು ಕೊಡಿ ಎಂದಾಗ, ಅಂತಹ ಶುದ್ಧ ನೀರು ನಮ್ಮಲ್ಲಿಲ್ಲ ಎಂದು ಜೋರಾಗಿಯೇ ಗದರಿಸಿ ಹೇಳಿದರಂತೆ ಆ ಹೋಟೆಲ್ಲಿನವರು. ಈ ಕುರಿತಂತೆ ರಾಜ್ಯಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿಯೂ ವೈರಲ್ ಆಗಿ ಆ ಹೋಟೆಲ್ ವಿರುದ್ಧ ಪ್ರತಿಭಟನೆ ನಡೆಸಿದ್ದು ಈಗ ಇತಿಹಾಸ.

ನಿಜ ಹೇಳಬೇಕೆಂದರೆ, ಇದು ವಾಸ್ತವದ ಕಠು ಸತ್ಯವೇ ಆಗಿದೆ ಇಂದು ಶುದ್ಧವಾದ ನೀರು ಉಚಿತವಾಗಿ ಸಿಗುವುದೇ ದುರ್ಲಭವಾಗಿ ಹೋಗಿರುವುದು ನಿಜಕ್ಕೂ ಆತಂಕವಾಗಿದೆ. ನೀರು ಸಕಲ ಜೀವರಾಶಿಗಳಿಗೆ ಅತ್ಯಾವಶ್ಯಕವಾದದ್ದು. ಒಂದು ಪಕ್ಷ ಆಹಾರವಿಲ್ಲದೇ ಬದುಕ ಬಹುದೇನೋ? ಆದರೆ ನೀರಿಲ್ಲದೆ ಜೀವನವನ್ನು ಊಹಿಸಲೂ ಅಸಾಧ್ಯ. ಎಲ್ಲರ ಪ್ರಾತರ್ವಿಧಿಯಿಂದ ಹಿಡಿದು ರಾತ್ರಿ ಮಲಗುವ ವರೆಗೆ ನೀರು ಮನುಷ್ಯರ ಜೀವನಾವಶ್ಯಕವಾಗಿದೆ. ಇನ್ನೂ ಕೃಷಿ, ಹೈನುಗಾರಿಕೆ ಮತ್ತಾವುದೇ ಉದ್ಯೋಗಗಳೇ ಆಗಲಿ ಅದು ಒಂದಲ್ಲಾ ಒಂದು ರೀತಿಯಿಂದ ಅದು ನೀರಿನ ಮೇಲೆ ಅವಲಂಭಿತವಾಗಿದೆ. ಇಡೀ ಭೂ ಮಂಡಲದ ಶೇ 60ಕ್ಕೂ ಹೆಚ್ಚಿನ ಭಾಗ ಜಲಾವೃತವಾಗಿದ್ದರೂ ಇಡೀ ವಿಶ್ವದಲ್ಲಿ ಇಂದು ನೀರಿಗೆ ಹಾಹಾಕಾರವಾಗಿರುವುದು ನಿಜಕ್ಕೂ ಕಳಕಳಕಾರಿಯಾಗಿದೆ.

ಭಾರತದಲ್ಲಿ ಗಂಗಾ, , ಯಮುನಾ, ಗೋದಾವರಿ, ಸರಸ್ವತಿ,ನರ್ಮದಾ, ಸಿಂಧೂ, ಕಾವೇರಿ ಬ್ರಹ್ಮಪುತ್ರ, ಕೃಷ್ಣಾ, ಶರಾವತಿ, ತುಂಗಭದ್ರಾ ಇನ್ನೂ ಮುಂತಾದ ಅನೇಕ ನದಿಗಳು ನಮ್ಮ ದೇಶಾದ್ಯಂತ ಹರಿಯುತ್ತವಾದರೂ ಈ ರೀತಿಯ ನೀರಿನ ಬರಕ್ಕೆ ಕಾರಣವೇನು ಎಂದು ಯೋಚಿಸಿ ನೋಡಿದಲ್ಲಿ, ಈ ಎಲ್ಲಾ ನದಿಗಳಲ್ಲಿ ಅಂದಿನ ಸೊಬಗು ಇಂದು ಮಾಯವಾಗಿದೆ. ಹರಿಯುತ್ತಿರುವ ನೀರಿನ ಪ್ರಮಾಣವೂ ಅತ್ಯಂತ ಗಣನೀಯವಾಗಿ ಕಡಿಮೆಯಾಗಿದೆ. ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ ಉಗಮವಾಗಿ ಹರಿಯುವ ಕೆಲವು ಪ್ರಮುಖ ನದಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ನದಿಗಳು ಮಳೆಯನ್ನೇ ಆಶ್ರಯಿಸಿವೆ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾದ ಪರಿಣಾಮವಾಗಿಯೇ ಇಂದು ಹಲವಾರು ನದಿಗಳು ಕೇವಲ ಮಳೆಗಾಲದಲ್ಲಿ ಮಾತ್ರವೇ ಪ್ರಸ್ತುತವಾಗಿದ್ದು ಉಳಿದ ಸಮಯದಲ್ಲಿ ಬತ್ತಿ ಹೋಗುತ್ತಿರುವುದು ನೀರಿನ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿವೆ.

ನದಿಗಳು ತುಂಬಿ ಹರಿಯುತ್ತಿದ್ದಲ್ಲಿ ನದಿ ಪಾತ್ರಗಳ ಪ್ರದೇಶಗಳ ಕರೆ ಕಟ್ಟೆಗಳು ತುಂಬುತ್ತವೆ. ಕೆರೆ ಕಟ್ಟೆಗಳು ತುಂಬಿದ್ದಲ್ಲಿ ಸಹಜವಾಗಿ ಅ ಭಾಗಗಳಲ್ಲಿ ಅಂತರ್ಜಲ ಉತ್ತಮವಾಗಿದ್ದು ಜೀವನ ಅವಶ್ಕಕ್ಕೆ ಮತ್ತು ಕೃಷಿಗೆ ಅಗತ್ಯವಾದ ನೀರು ದೊರಕಿ ಎಲ್ಲವೂ ಸುಭಿಕ್ಷವಾಗಿರುತ್ತವೆ. ಹಾಗೆ ನದಿಗಳು ತುಂಬಿ ಹರಿಯಬೇಕಿದ್ದಲ್ಲಿ ಮಳೆಯ ಅವಶ್ಯಕವಿದೆ. ಸರಿಯಾದ ಸಮಯದಲ್ಲಿ ಸರಿಪ್ರಮಾಣದ ಮಳೆ ಸುರಿಯಲು ಗಿಡ ಮರಗಳ ಅವಶ್ಯಕವಿದೆ. ಭೂಮಿಯ ಮೇಲಿನ ನೀರು ಆವಿಯಾಗಿ ಮೋಡಗಳಾಗಿ ಮಾರ್ಪಾಡಗಿರುವುದನ್ನು ಈ ಎತ್ತರೆತ್ತರದ ಮರಗಿಡಗಳು ಆಕರ್ಷಿಸಿ ನಿಲ್ಲಿ ಮೋಡಗಳೇ, ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲೀ ಎಂಬ ಕವಿ ಶಿವರುದ್ರಪ್ಪನವರ ಕವಿತೆಯಂತೆ ಮಳೆ ಸುರಿಸುತ್ತವೆ. ಇಳೆಯನ್ನು ತಂಪಾಗಿಸುತ್ತವೆ.

ದುರದೃಷ್ಟವಶಾತ್ ನದಿ ಪಾತ್ರಗಳಲ್ಲಿ ಮರಗಳ್ಳರ ಹಾವಳಿ ಹೆಚ್ಚಾದ ಪರಿಣಾಮ ಸದ್ದಿಲ್ಲದೆ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಪರಿಣಾಮ ಆ ನದೀ ಪಾತ್ರಗಳಲ್ಲಿ ಸರಿಯಾಗಿ ಮಳೆಯೇ ಆಗುತ್ತಿಲ್ಲ. ಮಳೆಯೇ ಆಗದಿದ್ದರೆ ಇನ್ನು ನದಿಗಳು ತುಂಬುವುದು ಎಲ್ಲಿಂದ ಬಂತು? ನದಿಗಳೇ ತುಂಬದಿದ್ದರೆ ಕೆರೆ ಕಟ್ಟೆಗಳಿಗೆ ನೀರು ಎಲ್ಲಿಂದ ಬರಬೇಕು? ಮಾನವ ತನ್ನ ದುರಾಸೆಯಂದ ನಿತ್ಯಹರಿದ್ವರ್ಣ ಕಾಡುಗಳನ್ನು ಬರಿದು ಮಾಡುತ್ತಾ ಕಾಂಕ್ರೀಟ್ ನಾಡನ್ನು ಕಟ್ಟುವ ಭರದಲ್ಲಿ ನದಿ ಪಾತ್ರಗಳ ಮರಳನ್ನು ಸದ್ದಿಲ್ಲದೆ, ಎಗ್ಗಿಲ್ಲದೆ ದೋಚುತ್ತಿರುವ ಪರಿಣಾಮವೂ ನೀರಿನ ಆಭಾವಕ್ಕೆ ಕಾರಣವಾಗಿದೆ. ಇನ್ನು ಅಲ್ಪ ಸ್ವಲ್ಪ ಹರಿಯುವ ನದಿಗಳಿಗೆ ಅಥವಾ ಕೆರೆಗಳಿಗೆ ವಿವಿಧ ಕಾರ್ಖಾನೆಗಳ ಮತ್ತು ಜನರ ತ್ಯಾಜ್ಯದ ನೀರನು ಹರಿಸಿ ನೀರನ್ನು ಮಲಿನಗೊಳಿಸುತ್ತಿರುವ ಪರಿಣಾಮ ಅಂತಹ ನೀರು ಕಲುಷಿತಗೊಂಡು ಕುಡಿಯಲು ಮತ್ತು ಬಳೆಸಲು ಅಯೋಗ್ಯವಾಗುತ್ತಿರುವುದು ಮಾರಕವಾಗಿದೆ.

ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಕೇವಲ ಎಂಟು ಹತ್ತು ಅಡಿ ಭಾವಿ ತೋಡಿದರೆ ಸಾಕಷ್ಟು ದೊರಕುತ್ತಿದ್ದ ನೀರು ಇಂದು ಸಾವಿರಾರು ಅಡಿಗಳಷ್ಟು ಕೊರೆದರೂ ಕೊಳವೆ ಭಾವಿಗಳಲ್ಲಿ ಚಿಲುಕು ನೀರು ದೊರೆಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನೀರು ಸಂಪೂರ್ಣವಾಗಿ ಬಟ್ಟ ಬರಿದಾಗುವ ಅಪಾಯವೇ ಕಣ್ಣ ಮುಂದಿದೆ. ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಇದೆ. ಖಂಡಿತವಾಗಿಯೂ ಈ ಸಮಸ್ಯೆಗೆ ನಮ್ಮಲ್ಲಿಯೇ ಪರಿಹಾರವಿದೆ. ಅದರೆ ಅದಕ್ಕಾಗಿ ನಮ್ಮ ಜೀವನ ಶೈಲಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಿದೆ.

ಮೊಟ್ಟ ಮೊದಲಿಗೆ ಅಗತ್ಯವಿದ್ದಷ್ಟೇ ನೀರನ್ನು ಬಳಸಬೇಕಿದೆ. ಸ್ನಾನ ಮಾಡಲು, ಶೌಚಾಲಯಗಳಲ್ಲಿ, ಪಾತ್ರೆ ತೊಳಯಲು, ಬಟ್ಟೆ ಒಗೆಯುವಾಗ ಧಾರಳವಾಗಿ ನೀರನ್ನು ಬಳೆಸದೆ ಎಷ್ಟು ಬೇಕೋ ಅಷ್ಟನ್ನೇ ಬಳಸುವ ಅಭ್ಯಾಸ ರೂಡಿಸಿಕೊಳ್ಳ ಬೇಕಾಗಿದೆ. ಹಿಂದಿನ ಕಾಲದಲ್ಲಿ ಈ ರೀತಿಯಾಗಿ ಬಳೆಸಿದ ಎಲ್ಲಾ ನೀರೂ, ಮನೆಯ ಹಿಂದಿನ ಹಿತ್ತಲಿಗೆ ಹೋಗುತ್ತಿತ್ತು. ಆಹಿತ್ತಲಿನಲ್ಲಿಯೇ ಸುಂದರವಾದ ಕೈತೋಟವಿದ್ದು, ಅಲ್ಲಿ ಮನೆಗೆ ಬೇಕಾದ ಹಣ್ಣು ವಿಶೇಷವಾಗಿ ಬಾಳೆಹಣ್ಣು, ವಿವಿಧ ತರಕಾರಿಗಳು ಹೂವಿನ ಗಿಡಗಳನ್ನು ಹಾಗಿ ಬಳೆಸಿದ ನೀರನ್ನು ಮರುಬಳಕೆ ಮಾಡುತ್ತಿದ್ದರು. ಇಂದು ಎಲ್ಲವನ್ನೂ ಒಳ ಚೆರಂಡಿಗೆ ಹಾಯಿಸಿ ನೀರನ್ನು ವ್ಯರ್ಥ ಮಾಡದೆ ಮೊದಲಿನಂತೆಯೇ ಉಪಯೋಗ ಮಾಡಿಕೊಳ್ಳಬೇಕಾಗಿದೆ.

ಹಿಂದೆ ಯಾವುದೇ ಪಾಳೇಗಾರರಿರಲಿ, ಸಾಮಂತರಿರಲಿ ಇಲ್ಲವೇ ರಾಜ ಮಹಾರಾಜರುಗಳೇ ಇರಲಿ ಪ್ರತೀ ನಾಲ್ಕೈದು ಹಳ್ಳಿಗಳ ಮಧ್ಯೆ ಒಂದು ದೊಡ್ಡದಾದ ಕೆರೆಯನ್ನು ನಿರ್ಮಿಸಿ ಎಲ್ಲಾ ಹಳ್ಳಿಗಳಿಂದಲೂ ರಾಜ ಕಾಲುವೆಗಳ ಮುಖಾಂತರ ಮಳೆಯ ನೀರೆಲ್ಲವೂ ಆ ಕೆರೆಯನ್ನು ತುಂಬಿಸುವುದರ ಮೂಲಕ ಆ ಎಲ್ಲಾ ಹಳ್ಳಿಗಳ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಆದರೆ ಇಂದು ಇದ್ದ ರಾಜಕಾಲುವೆ ಮತ್ತು ಕೆರೆಗಳನ್ನೆಲ್ಲಾ ಮುಚ್ಚಿ ದೊಡ್ದದೊಡ್ಡ ಗಗನಚುಂಬಿ ಕಟ್ಟಡಗಳನ್ನು ಕಟ್ಟಿರುವುದರಿಂದಲೇ ನೀರಿಗೆ ಹಾಹಾಕಾರವಾಗಿದೆ. ಅಳಿದುಳಿದಿರುವ ಕೆರೆ ಕಟ್ಟೆಗಳ ಹೂಳನ್ನು ಎತ್ತಿಸಿ, ದಂಡೆಗಳನ್ನು ಭದ್ರಪಡಿಸಿ ರಾಜಕಾಲುವೆಗಳನ್ನು ಒತ್ತುವರಿಯನ್ನು ತೆರವು ಮಾಡಿಸಿ ಮಳೆ ನೀರು ಸರಾಗವಾಗಿ ಹರಿದು ಕೆರೆ ಕಟ್ತೆಗಳನ್ನು ತುಂಬುವಂತೆ ಮಾಡಬೇಕಿದೆ.

ದೇಶಾದ್ಯಂತ ಎಲ್ಲರ ಮನೆಗಳಲ್ಲಿಯೂ ಖಡ್ಡಾಯವಾಗಿ ಮಳೆಯ ನೀರಿನ ಕೊಯ್ಲಿನ ಪದ್ದತಿಯನ್ನು ಅಳವಡಿಸಿಕೊಂಡು ಮನೆಯ ಮಾಳಿಗೆಯ ಮೇಲೆ ಬಿದ್ದ ಪ್ರತಿ ಹನಿ ನೀರನ್ನೂ ಸಂಗ್ರಹಿಸಿ ಅದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆ ಹೆಚ್ಚಾದ ಮಳೆ ನೀರನ್ನು ಅಲ್ಲಿಯೇ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಬಹುದಾಗಿದೆ.

ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎಲ್ಲರ ಮನೆಯ ಮುಂದೆಯೂ ಖಡ್ಡಾಯವಾಗಿ ಮರಗಳನ್ನು ನೆಟ್ಟು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿ ಅವರದ್ದೇ ಆಗಬೇಕಿದೆ. ಹಾಗೆ ಮರ ಗಿಡಗಳನ್ನು ನೆಡುವುದರಿಂದ ಶುಧ್ಧವಾದ ಆಮ್ಲಜನಕವನ್ನು ನಮ್ಮಲ್ಲೇ ಪಡೆಯಬಹುದಲ್ಲದೆ ಆ ಮರಗಳು ಅನೇಕ ಪಕ್ಷಿಗಳ ಆಶ್ರಯ ತಾಣವಾಗುವುದಲ್ಲದೇ, ಮೋಡಗಳನ್ನು ಆಕರ್ಷಿಸಿ ಮಳೆಯನ್ನು ಸುರಿಸಬಲ್ಲದಾಗಿದೆ.

ಕಳೆದ ವಾರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಉಧ್ಘಾಟಿಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಬಳಿಯ ಉಜಿರೆಗೆ ಹೋಗಿದ್ದಾಗ ಬೇಸಿಗೆಯ ಸಮಯದಲ್ಲಿ ನೀರಿನ ಅಭಾವದಿಂದಾಗಿ ಎಷ್ಟೋ ಹೋಟೆಲ್ಲುಗಳು ಮುಚ್ಚಿಬಿಡುತ್ತದಲ್ಲದೇ, ನೀರಿನ ಅಭಾವದಿಂದಾಗಿಯೇ ಧರ್ಮಸ್ಥಳ, ಕುಕ್ಕೆ ಮತ್ತು ಉಡುಪಿ ಶ್ರೀ ಕ್ಷೇತ್ರಗಳಿಗೆ ದಯವಿಟ್ಟು ಬಾರದಿರಿ ಎಂದು ಧರ್ಮಾಧಿಕಾರಿಗಳೇ ಭಕ್ತಾದಿಗಳನ್ನು ವಿನಂತಿಸಿಕೊಳ್ಳುವ ವಿಷಯ ತಿಳಿದು ಬಹಳ ಅಚ್ಚರಿ ಮೂಡಿಸಿದ್ದಂತೂ ಸುಳ್ಳಲ್ಲ. ಅಂತಹ ಅಂತಹ ಮಲೆನಾಡಿನ ನಿತ್ಯಹರ್ದ್ವರ್ಣ ಪ್ರದೇಶಗಳಲ್ಲಿಯೇ ನೀರಿಗೆ ಈ ಪರಿಯ ಅಭಾವವಾದರೇ ಸಾವಿರಾರು ಅಡಿಗಳಷ್ಟು ಕೊಳವೇ ಭಾವಿಗಳನ್ನು ಕೊರೆದು ಅಂತರ್ಜಲವನ್ನೇ ಬರಿದು ಮಾಡುತ್ತಿರುವ ನಗರ ಪ್ರದೇಶಗಳ ಪರಿಸ್ಥಿತಿ ಹೇಗಾಗಬಹುದು ಎಂಬುದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.

ಮಾರ್ಚ್ 22 ವಿಶ್ವನೀರಿನ ದಿನ. ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಕೇವಲ ಇದೊಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿ ದಿನವೂ, ಪ್ರತಿಕ್ಷಣವೂ ನಮ್ಮ ಮನಸ್ಸಿನಲ್ಲಿ ಗಮನವಿಟ್ಟು ಕೊಂಡು ಎಲ್ಲೆಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಅತ್ಯಗತ್ಯವಾಗಿ ಉಳಿಸಬೇಕಾದ ಜವಾಬ್ಧಾರಿ ನಮ್ಮ ಮೇಲಿಯೇ ಇದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರ ಈಗಾಗಲೇ ಅಕ್ಷರಶಃ ನೀರಿಲ್ಲದ ನಗರ ಎಂದು ಘೋಷಿಸಲಾಗಿದೆ ಮತ್ತು ಅದೇ ರೀತಿ ನಮ್ಮ ದೇಶದಲ್ಲೂ 21 ನಗರಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿಹೋಗಿದೆ ಎಂದು ಫೋಷಿಸಲಾಗಿದೆ. ಮಿಂಚಿ ಹೋದರೆ ಚಿಂತಿಸಿ ಫಲವಿಲ್ಲ ಎಂಬಂತೆ, ಪ್ರತಿ ಹನಿ ಹನಿ ನೀರನ್ನೂ ಸರಿಯಾದ ರೀತಿಯಲ್ಲಿ ಬಳಸದೇ, ಉಳಿಸದೇ ಹೋದಲ್ಲಿ , ಮುಂದೆ ನೀರಲ್ಲ, ಕಣ್ಣೀರನ್ನೂ ಸುರಿಸಲು ಆಗದಂತಹ ಪರಿಸ್ಥಿತಿ ಬರುವ ಎಲ್ಲ ಸಂಭವೂ ಹೆಚ್ಚಾಗಿದೆ. ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ನಾವು ಬಳಸುವ ಪ್ರತಿಯೊಂದು ಹನಿ ಹನಿ ನೀರನ್ನೂ ಎಚ್ಚರಿಕೆಯಂದ ಬಳಸುವ ಮೂಲಕ‌ ಮುಂದಿನ ಪೀಳಿಗೆಗೆ ನೀರನ್ನು ಉಳಿಸಲೇ ಬೇಕಿದೆ.

ಏನಂತೀರೀ?
ನಿಮ್ಮವನೇ ಉಮಾಸುತ