ಬ್ರಾಹ್ಮಣರು ಭಾರತೀಯರಲ್ಲವೇ? ಬ್ರಾಹ್ಮಣರಿಗೆ ಭಾರತದಲ್ಲಿ ಜೀವಿಸುವ ಹಕ್ಕಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಮಟ್ಟಿಗೆ ಕೇಳುತ್ತಿರುವುದು ಎರಡು ವಿಷಯ ಒಂದು ಕೊರೋನ ಕುರಿತಾದ ವಿಷಯವಾದರೆ, ಇನ್ನೊಂದು ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರ ವಿರುದ್ಧ ಅನಾವಶ್ಯಕವಾಗಿ ತಮ್ಮ ತಮ್ಮ ತೆವಲುಗಳನ್ನು ತೀರಿಸಿಕೊಳ್ಳುವಷ್ಟು ವಾಚಾಮಗೋಚರವಾಗಿ ಕಂಡ ಕಡೆಗೆಳಲ್ಲಿ ಬೈದಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಮಂದಿಗಳೇ ಹೆಚ್ಚಾಗಿದ್ದಾರೆ. ಮೇಲೆ ತಿಳಿಸಿದ ಎರಡೂ ವಿಷಯಗಳೂ ಒಂದಕ್ಕೊಂದು ಪೂರಕವಾಗಿದೆ ಅಂದ್ರೇ ಆಶ್ಚರ್ಯವಾಗುತ್ತದೆ ಅಲ್ವೇ?

WhatsApp Image 2021-06-29 at 8.00.40 PM (1)

ನಿಜ ಹೇಳ್ಬೇಕು ಅಂದ್ರೇ, ಬಹಳ ಹಿಂದಿನಿಂದಲೂ ನಮ್ಮಲ್ಲಿ ತಮ್ಮ ಕರ್ಮಾನುಸಾರವಾಗಿ ವರ್ಣಾಶ್ರಮಗಳು ರೂಢಿಯಲ್ಲಿ ಇತ್ತೇ ಹೊರತು ಅವು ಜನ್ಮತಃ ಆಚರಣೆಯಲ್ಲಿರಲಿಲ್ಲ, ಯಾರು ಬ್ರಹ್ಮತ್ವವನ್ನು ಪಾಲಿಸಿ ಕರ್ಮಾನುಷ್ಠಾನಗಳನ್ನು ಪಾಲಿಸುತ್ತಾ ಶಾಸ್ತ್ರ ಸಂಪ್ರದಾಯಗಳ ಜೊತೆಗೆ ವೇದಾಧ್ಯಯನದ ಮೂಲಕ ಜ್ಞಾನಾರ್ಜನೆ ಮಾಡುವುದಲ್ಲದೇ ತಮ್ಮ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವವರು ಮಾತ್ರವೇ ಬ್ರಾಹ್ಮಣರಾಗುತ್ತಿದ್ದರು. ಒಕ್ಕಲುತನ ಮಾಡುವವರ ಮನೆ ಹುಡುಗ ಓದಿ ಬ್ರಹ್ಮತ್ವವನ್ನು ಪಡೆದು ಜ್ಞಾನಿಯಾಗಿ ಬ್ರಾಹ್ಮಣನಾಗಬಹುದಿತ್ತು. ಅದೇ ರೀತಿ ಬ್ರಾಹ್ಮಣರ ಮನೆಯ ಕ್ಷಾತ್ರತೇಜದ ಬಲಶಾಲಿ ಹುಡುಗ ಸೈನ್ಯವನ್ನು ಸೇರಿ ದೇಶವನ್ನು ಕಾಯುವ ಕ್ಷತ್ರಿಯನಾಗಬಹುದಿತ್ತು. ನಂತರದ ದಿನಗಳಲ್ಲಿ ಅದೇ ವರ್ಣಾಶ್ರಮ ಜನ್ಮತಃ ಜಾತಿಯತೆಗೆ ಬದಲಾಗಿದ್ದು ವಿಪರ್ಯಾಸವೇ ಸರಿ.

ರಾಮ ಕೃಷ್ಣ, ಹನುಮಂತ ಮುಂತಾದ ದೇವಾನು ದೇವತೆಗಳಾಗಲಿ ವಿಶ್ವಮಿತ್ರ, ವಾಲ್ಮೀಕಿ, ವ್ಯಾಸ ಮರ್ಹರ್ಷಿಗಳಾಗಲೀ ಯಾರೂ ಜನ್ಮತಃ ಬ್ರಾಹ್ಮಣರೇ ಅಲ್ಲಾ ಅವರೆಲ್ಲಾರೂ ಬೇರೆ ಬೇರೆಯ ಜಾತಿಯಲ್ಲಿ ಹುಟ್ಟಿದರೂ ತಮ್ಮ ಜ್ಞಾನ, ಆಚಾರ ಮತ್ತು ವಿಚಾರಗಳಿಂದಾಗಿ ದೇವಾನು ದೇವತೆಗಳು ಮತ್ತು ಮಹರ್ಷಿಗಳ ಪಟ್ಟಕ್ಕೆ ಏರಿದ್ದನ್ನು ಸಂಭ್ರಮಿಸಿದ ಬ್ರಾಹ್ಮಣರು ಅವರನ್ನು ದೇವರು ಮತ್ತು ಗುರುಗಳೆಂದು ಭಕ್ತಿಯಿಂದ ಅಂದಿಗೂ ಇಂದಿಗೂ ಪೂಜಿಸಿಕೊಂಡು ಬರುತ್ತಿದ್ದಾರೆ.

ಪ್ರಾಪಂಚಿಕ ಸುಖದಿಂದ ಪಾರಮಾರ್ಥಿಕ ಸುಖಃವನ್ನು ಪಡೆಯಲು ತಾಮಸ ಗುಣಗಳಿಂದ ಸಾತ್ವಿಕ ಗುಣಗಳನ್ನು ಪಡೆಯುವ ಸಲುವಾಗಿ ಕೆಲವೊಂದು ಕಟ್ಟುನಿಟ್ಟಾದ ನಿಷ್ಥೆ, ನೀತಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಹಾಗಾಗಿಯೇ ಬ್ರಾಹ್ಮಣರು ಮಡಿ ಹುಡಿ ಆಚಾರ ವಿಚಾರವಂತರಾಗಿ ಸಸ್ಯಾಹಾರವನ್ನು ಸೇವಿಸುತ್ತಾ ಶುಚಿವಂತರಾಗಿ ಇರುತ್ತಾರೆ. ಈ ರೀತಿಯ ನಿಯಮಗಳನ್ನು ಆಚರಿಸದೇ ಇರುವರನ್ನು ಮುಟ್ಟಿಸಿಕೊಳ್ಳುವುದಾಗಲೇ ಮನೆಯೊಳಗೆ ಸೇರಿಸಿಕೊಳ್ಳುವುದಾಗಲೀ ಅವರೊಂದಿಗೆ ಊಟವನ್ನು ಸೇವಿಸುವ ಪರಿಪಾಠಗಳನ್ನು ಬೆಳಸಿಕೊಂಡಿರಲಿಲ್ಲ. ಈಗ ಕೊರೋನಾ ಸಮಯದಲ್ಲಿ ಎಲ್ಲರೂ ಕಂಡ ಕಂಡ ತಿನ್ನದೇ, ಉಗುಳದೇ, ಕೈ ಕಾಲು ಮುಖವನ್ನು ತೊಳೆದುಕೊಳ್ಳುವ ಮೂಲಕ ಶುಚಿತ್ವ ಕಾಪಾಡಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದನ್ನೇ ಬ್ರಾಹ್ಮಣರು ಅಂದಿನಿಂದಲೂ ಆಚಾರ ವಿಚಾರದ ಹೆಸರಿನಲ್ಲಿ ಪಾಲಿಸಿಕೊಂಡು ಬರುತ್ತಿದ್ದದ್ದನ್ನು ಬ್ರಾಹ್ಮಣ್ಯತ್ವ ಎಂದು ಆಡಿಕೊಳ್ಳುವುದು ಎಷ್ಟು ಸರಿ?

WhatsApp Image 2021-06-29 at 7.31.09 PM

ಇಲ್ಲೊಬ್ಬ ಕನಕದಾಸರಿರುವ ಟಿ-ಶರ್ಟ್ ಹಾಕಿಕೊಂಡವ ಮತ್ತೊಬರಿಗೆ ಕುಡಿಯಲು ಮೇಲಿಂದ ನೀರು ಹಾಕುತ್ತಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ, ಇವನು ಬ್ರಾಹ್ಮಣನಲ್ಲ ಆದರೆ ಇವನಲ್ಲಿ ಬ್ರಾಹ್ಮಣ್ಯವಿದೆ ಎಂದು ಓತಪ್ರೋತವಾಗಿ ಕುಹಕವಾಡುವುದು ಎಷ್ಟು ಸರಿ? ಮತ್ತೊಬ್ಬ ಕನ್ನಡ ಚಿತ್ರನಟ ಸ್ವಘೋಷಿತ ಬುದ್ಧಿ ಜೀವಿ ಮತ್ತು ಹೆಸರಿನಲ್ಲೇ ಅಹಿಂಸೆಯನ್ನು ಸೇರಿಸಿಕೊಂಡು ಬ್ರಾಹ್ಮಣ್ಯತ್ವವನ್ನು ಧರ್ಮದ ಭಯೋತ್ಪಾದನೆ ಎಂದು ಬೊಬ್ಬಿರಿಯುತ್ತಾ,ಜನರಲ್ಲಿ ಪ್ರತೀಕಾರದ ಸೇಡಿನ ಹಿಂಸೆಯನ್ನು ಪ್ರಚೋದನೆ ಮಾಡುವವರಿಗೆ ಏನನ್ನಬೇಕು?

ಬ್ರಿಟೀಶರು ಭಾರತಕ್ಕೆ ಬಂದಾಗ, ಮುಸಲ್ಮಾನರು ಈ ದೇಶವನ್ನು ಅ ಪಾಟಿಯಾಗಿ ಕೊಳ್ಳೇ ಹೊಡೆದಿದ್ದರೂ ಸುಭಿಕ್ಷವಾಗಿತ್ತು. ಇಲ್ಲಿ ಎಲ್ಲರೂ ದುಡಿದು ತಿನ್ನುತ್ತಿದ್ದರೇ ಹೊರತು ಮತ್ತೊಬ್ಬರ ಹತ್ತಿರ ಬೇಡುವುದಾಗಲೀ ಅವರಿವರ ತಲೆಯನ್ನು ಹೊಡೆಯುವ ಕುಕೃತ್ಯಕ್ಕೆ ಇಳಿಯುತ್ತಿರಲಿಲ್ಲ. ಆದರೆ ಒಬ್ಬರೊನ್ನಬ್ಬರು ಕಂಡರೆ ಆಗದೇ ಅಸೂಯೆ ಪಡುವುದನ್ನೇ ಗಮನಿಸಿದ ಬ್ರಿಟೀಷರು ಅದನ್ನೇ ಉಪಯೋಗಿಸಿಕೊಂಡು ನಮ್ಮ ನಮ್ಮಲೇ ಒಳಜಗಳ ತಂದು ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಒಂದೊಂದೇ ರಾಜ್ಯಗಳನ್ನು ಕೈವಶ ಮಾಡಿಕೊಳ್ಳುತ್ತಿದ್ದನ್ನು ಗಮನಿಸಿದ ಬುದ್ಧಿವಂತ ಬ್ರಾಹ್ಮಣರು ಜನರನ್ನು ಎಚ್ಚರಿಸಿತೊಡಗಿದರು. ಅದೇ ಕಾರಣಕ್ಕಾಗಿಯೇ ಗೋವಾವನ್ನು ಆಕ್ರಮಣ ಮಾಡಿಕೊಂಡಿದ್ದ ಪೋರ್ಚುಗೀಸರು ಗೋವಾದಲ್ಲಿ ಬಹುಸಂಖ್ಯಾತರಾಗಿದ್ದ ಬ್ರಾಹ್ಮಣರನ್ನು ಬಲವಂತವಾಗಿಯೋ ಮತಾಂತರ ಗೊಳಿಸಿದ್ದಲ್ಲದೇ, ಮತಾಂತರಕ್ಕೆ ಒಪ್ಪದವರನ್ನು ಮಾರಣ ಹೋಮ ಮಾಡುತ್ತಿರುವುದನ್ನು ಸಹಿಸಿದ ಲಕ್ಷಾಂತರ ಬ್ರಾಹ್ಮಣರು ರಾತ್ರೋ ರಾತ್ರಿ ಮನ ಮಠಗಳನ್ನೆಲ್ಲಾ ಬಿಟ್ಟು ತಮ್ಮಪ್ರಾಣ ಉಳಿಸಿಕೊಳ್ಳುವುದಕ್ಕಾಗಿದೇ ಕೇರಳ ಮತ್ತು ಕರ್ನಾಟಕದ ಕಡೆ ವಲಸೆ ಬಂದಿದ್ದು ಈಗ ಇತಿಹಾಸ.

ಬ್ರಾಹ್ಮಣರು ಎಚ್ಚೆತ್ತರೆ ತಮಗೆ ಉಳಿಗಾಲವಿಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿದ್ದ ಬ್ರಿಟೀಷರು ಮೊದಲು ಕೈ ಹಾಕಿದ್ದೇ ತಮ್ಮ ಹೊಸಾ ಶಿಕ್ಷಣದ ಪದ್ದತಿಯ ಮೂಲಕ ಗುರುಕುಲವನ್ನು ನಾಶಮಾಡುವುದಕ್ಕೆ. ಕೇವಲ ಗುರುಕುಲವನ್ನು ನಾಶ ಪಡಿಸಿದ್ದಲ್ಲದೇ ಬ್ರಾಹ್ಮಣರು ಶೂದ್ರರನ್ನು ಶೋಷಣೆ ಮಾಡಿದರು ಎಂಬ ಕಾಗಕ್ಕ ಗುಬ್ಬಕ್ಕ ಕತೆಯನ್ನು ಕಟ್ಟಿ ಜನರು ಬ್ರಾಹ್ಮಣರ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಮೂಲಕ ನಮ್ಮ ನಮ್ಮಲೇ ಒಳಜಗಳ ತಂದು ತಮ್ಮ ಬೇಳೆ ಬೇಯಿಸಿಕೊಂಡಿದ್ದು ಈಗ ಇತಿಹಾಸ.

ತಮ್ಮ ಪಾಂಡಿತ್ಯದಿಂದ ರಾಜನನ್ನು ಮೆಚ್ಚಿಸಿ ಉಂಬಳಿಯಾಗಿ ಪಡೆದಿದ್ದ ಜಮೀನುಗಳನ್ನು ಆಳು ಕಾಳುಗಳೊಂದಿಗೆ ನೋಡಿಕೊಳ್ಳುತ್ತಾ ರಾಮಾ ಕೃಷ್ಣಗೋವಿಂದಾ ಎಂದು ಭಗವಂತನ ಧ್ಯಾನ ಮಾಡುತ್ತಾ ಇದ್ದದ್ದರಲ್ಲಿಯೇ ಸುಖಃವನ್ನು ಕಾಣುತ್ತಿದ್ದ ಬಹುತೇಕ ಬ್ರಾಹ್ಮಣರು ಎಪ್ಪತ್ತರ ದಶಕದಲ್ಲಿ ಬಂದ ಉಳುವವನೇ ರೈತ ಎಂಬ ನಿಯಮದಡಿಯಲ್ಲಿ ರಾತ್ರೋ ರಾತ್ರಿ ಇದ್ದ ಬದ್ದ ಜಮೀನುಗಳನ್ನೆಲ್ಲಾ ಕಳೆದು ಕೊಂಡು ಬೀದಿ ಪಾಲಿನ ಭಿಕ್ಷುಕರಾದರೂ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿದರೇ ವಿನಾಃ ಉಗ್ರಗಾಮಿಗಳಾಗುವುದು ಬಿಡಿ, ಉಗ್ರವಾಗಿ ಪ್ರತಿಭಟನೆಯನ್ನೂ ಮಾಡದೇ ಪಟ್ಟಣಗಳಲ್ಲಿ ತಮಗೆ ತಿಳಿದಿದ್ದ ದೇವರ ಪೂಜೆ, ಆಡುಗೆ ಕೆಲಸ ಮಾಡಿಕೊಂಡು ಜೀವಿಸತೊಡಗಿದರು. ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಕಾಶ್ಮೀರದಲ್ಲಿ ಬಹುಸಂಖ್ಯಾತರಾಗಿದ್ದ ಕಾಶ್ಮೀರೀ ಪಂಡಿತರನ್ನು ಹಿಂಸಿಸಿ ನರಮೇಧ ನಡೆಸಿ ಅವರನ್ನು ಕಾಶ್ಮೀರದ ಕಣಿವೆಯಿಂದ ರಾತ್ರೋ ರಾತ್ರಿ ಬಲವಂತವಾಗಿ ಹೊರಗೆ ಓಡಿಸಿದಲಾಗಲೂ ಯಾವುದೇ ರೀತಿಯ ಉಗ್ರವಾದ ಪ್ರತಿಭಟನೆ ನಡೆಸದೇ ತಮ್ಮ ಸಂಸಾರದೊಂದಿಗೆ ದೇಶಾದ್ಯಂತ ಹರಿದು ಹಂಚಿಹೋಗಿದ್ದು ಈಗ ಇತಿಹಾಸ.

ಬ್ರಾಹ್ಮಣರ ಮೇಲೆ ಇಷ್ಟೆಲ್ಲಾ ಪೂರ್ವಯೋಜಿತವಾಗಿ ಧಾಳಿಗಳು ನಡೆಯುತ್ತಿದ್ದರೂ, ತಮ್ಮ ಬುದ್ಧಿ ಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ವಿದ್ಯೆಯನ್ನು ಕಲಿತು ಸ್ವಸಾಮರ್ಥ್ಯದಿಂದ ವಿವಿಧ ಹುದ್ದೆಗಳಲ್ಲಿ ಮೇಲಕ್ಕೆ ಬಂದರು. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ, ಕೇವಲ ನಮ್ಮ ದೇಶವೇಕೇ? ಇಡೀ ವಿಶ್ವವೇ ಕಂಡ ಅತ್ಯುತ್ತಮ ಇಂಜೀನಿಯರ್ ಆದ ಸರ್ ಎಂ ವಿಶ್ವೇಶ್ವರಯ್ಯನವರ ಈ ದೃಷ್ಟಾಂತ

ಅದೊಮ್ಮೆ ಪೂರ್ವನಿರ್ಧಾರದಂತೆ, ಗಾಂಧೀಯವರನ್ನು ಭೇಟಿಯಾಗಲು ಸರ್ ಎಂ,ವಿ. ಯವರು ಗಾಂಧಿಯವರ ಮನೆಗೆ ಹೊದಾಗ, ಗಾಂಧಿಯವರು ವಿಶ್ವೇಶ್ವರಯ್ಯನವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಟ್ಟು ತಾವು ಮಾತ್ರ ಕಾಲು ಮಡಿಚಿಕೊಂಡು ನೆಲದ ಮೇಲೆ ಕುಳಿತುಕೊಂಡದ್ದು ವಿಶ್ವೇಶ್ವರಯ್ಯನವರಿಗೆ ಕಸಿವಿಸಿ ಎನಿಸಿ, ನೀವೇಕೆ ಇಲ್ಲೇ ಇರುವ ಕುರ್ಚಿಯ ಮೇಲೆ ಕುಳಿತು ಕೊಳ್ಳಬಾರದು ಎಂದು ಪ್ರಶ್ನಿಸಿದರು.

ghandhi

ಆಗ ಗಾಂಧೀಜಿಯವರು ನಗು ನಗುತ್ತಲೇ, ನೀವು ಬಿಡಿಪ್ಪಾ ಸೂಟು ಬೂಟು ಹಾಕಿಕೊಂಡು ತಲೆಯ ಮೇಲೆ ಪೇಟ ಸುತ್ತಿಕೊಂಡು ಕೈಯಲ್ಲಿ ಚಿನ್ನದ ಹ್ಯಾಂಡಲ್ ಇರುವ ಕೋಲನ್ನು ಹಿಡಿದು ಕೊಂಡು ಜೇಬಿನಲ್ಲಿ ಚಿನ್ನದ ಗಡಿಯಾರವನ್ನು ಇಟ್ಟುಕೊಂಡು ಭರ್ಜರಿಯಿಂದ ಠಾಕೂ ಠೀಕಾಗಿ ಇರುತ್ತೀರಿ. ಹಾಗಾಗಿ ನಿಮ್ಮ ಸೂಟಿನ ಸುಕ್ಕು ಹಾಳಾಗಬಾರದೆಂದು ಕುರ್ಚಿಯ ಮೇಲೆ ಕೂರಿಸಿದ್ದೇನೆ. ಇನ್ನು ನಾನಾದರೋ ಸಾಧಾರಣ ಪಂಚೆ ಉಟ್ಟು ಶಲ್ಯವನ್ನು ಹೊದ್ದುಕೊಳ್ಳುವ ಆಸಾಮಿ ಹಾಗಾಗಿ ನೆಲದ ಮೇಲೇ ಕುಳಿತುಕೊಂಡರೂ ನಡೆಯುತ್ತದೆ ಎಂದರಂತೆ.

vish

ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ ಸರ್ ಎಂ.ವಿಯವರು ಅಯ್ಯೋ ರಾಮಾ.. ನೀವು ತಪ್ಪು ತಿಳಿದುಕೊಂಡಿದ್ದೀರಿ, ನಾನು ನಿಮ್ಮಂತೆ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಆಗರ್ಭ ಶ್ರೀಮಂತರ ಮನೆಯಲ್ಲಿ ಜನಿಸಿದವನಲ್ಲಾ. ನಾನು ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದಂತಹ ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡವ. ಅಮ್ಮನೇ ಅವರಿವರ ಮನೆಯಲ್ಲಿ ಮುಸುರೇ ತಿಕ್ಕಿ ಬಡತನದ ಬೇಗೆಯಲ್ಲೇ ಬೆಳೆದವ. ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಾ ಅವರಿವರ ಮನೆಯಲ್ಲಿ ವಾರಾನ್ನ ಮಾಡಿ ಓದನ್ನು ಮುಂದುವರೆಸುತ್ತಿದ್ದಾಗ, ನಮ್ಮ ಸುತ್ತ ಮುತ್ತಲೂ, ಇಂಗ್ಲಿಷರು ಚಿನ್ನದ ಸರಳುಳಿಂದ ಎಳೆಯುವ ಕುದುರೆ ಗಾಡಿಯಲ್ಲಿ ಠಾಕೂ ಠೀಕು ಧಿರಿಸನ್ನು ಧರಿಸಿ ಸವಾರಿ ಮಾಡುವುದನ್ನು ನೋಡಿದಾಗಲೆಲ್ಲಾ ನಾನು ದೊಡ್ಡವನಾದ ಮೇಲೆ ಅವರಿಗಿಂತಲೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಧೃಢ ಸಂಕಲ್ಪ ತೊಟ್ಟೆ, ಆದ್ದರಿಂದ ನಾನು ಬಹಳ ಕಷ್ಟ ಪಟ್ಟು ಶ್ರಮವಹಿಸಿ ಅಧ್ಯಯನ ಮಾಡಿ ಈ ಸ್ಥಾನವನ್ನು ಗಳಿಸಿದ ನಂತರವಷ್ಟೇ ಸ್ವಯಾರ್ಜಿತವಾಗಿ ಈ ರೀತಿಯ ಪೋಷಾಕುಗಳನ್ನು ಧರಿಸುವುದನ್ನು ರೂಢಿಸಿಕೊಂಡೆ ಅಧಿಕಾರವನ್ನು ಗಳಿಸಿ ಜನಾನುರಾಗಿಯಾಗಿ ಕೈಲಾದ ಮಟ್ಟಿಗಿನ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ.

ನಮ್ಮ ದೇಶವಾಸಿಗಳಲ್ಲರೂ ನಿಮ್ಮಂತೆಯೇ ಯೋಚಿಸಿ, ಕೈಯಲ್ಲಿ ಆಗದು ಎಂದು ತಲೆಯ ಮೇಲೆ ಕೈ ಹೊತ್ತುಕೊಂಡು ನಿಮ್ಮಂತೆ ನೆಲದ ಮೇಲೆ ಕುಳಿತು ಕೊಳ್ಳುವ ಮನೋಭಾವನೆಯನ್ನೇ ಬೆಳಸಿ ಕೊಂಡಲ್ಲಿ , ಈ ಬ್ರಿಟೀಷರು ನಮ್ಮ ತಲೆಯ ಮೇಲೆ ಕುಳಿತುಕೊಂಡು ನಮ್ಮನ್ನು ತುಳಿಯುತ್ತಾರೆ ಎಂದಿದ್ದರಂತೆ. ಇದು ನಿಜವಾದ ಬ್ರಾಹ್ಮಣರ ತಾಕತ್ತು.

ಎಂಬ್ಬತ್ತರ ದಶಕದಲ್ಲಿ ಚೆನ್ನರಾಯಪಟ್ಟಣದಂತಹ ಸಾಧಾರಣ ಪಟ್ಟಣದಲ್ಲಿ ಕನ್ನಡ ಪ್ರಾಥಮಿಕ ಶಾಲೆಯ ಅಧ್ಯಾಪಕರೊಬ್ಬರ ಮಗನಾಗಿ ಜನಿಸಿ ಉನ್ನತ ದರ್ಜೆಯಲ್ಲಿ ಬಿಎಸ್ಸಿ ಪದವಿ ಪಡೆದು ನಂತರ ಸಂಸ್ಕೃತದಲ್ಲಿ ಎಂಎ ಪಡೆದು ಬೇಲೂರಿನ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸವನ್ನು ಮಾಡುತ್ತಿದ್ದ ಬ್ರಾಹ್ಮಣರ ಯುವಕನಿಗೆ ಅದೇಕೋ ಏನೋ ತಾನೂ ಸಹಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಮಟ್ಟದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗ ಬೇಕೆಂಬ ಆಸೆ ಚಿಗುರಿದ ಕೂಡಲೇ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡು ಕೆ.ಎ.ಎಸ್ ಪರೀಕ್ಷೆ ಪಡೆದು ರಾಜಕ್ಕೇ 5ನೇ ರ್ಯಾಂಕ್ ಪಡೆದು ಡಿಸಿ ಆಗುವ ಸಂದರ್ಶನದಲ್ಲಿ ಭಾಗವಹಿಸಿದಾಗ, ಮುಂದುವರಿದ ಜನಾಂಗದವರು ಮೊದಲ 4 ರ್ಯಾಂಕಿನೊಳಗೆ ಬಂದಲ್ಲಿ ಮಾತ್ರವೇ ಡಿಸಿಯಾಗಬಹುದು ಎಂಬುದನ್ನು ತಿಳಿದು ಬೇಸರ ಗೊಂಡು, ಅವರು ಕೊಟ್ಟ ಹುದ್ದೆಯನ್ನು ನಿರಾಕರಿಸಿ ಮತ್ತೆ ಉಪನ್ಯಾಸಕ ವೃತ್ತಿಯನ್ನೇ ಮುಂದುವರೆಸಿಕೊಂಡು ಮುಂದಿನ ಬಾರಿಯ ಪರೀಕ್ಷೆಯಲ್ಲಿ ರಾಜ್ಯಕ್ಕೇ ಕೆ.ಎ.ಎಸ್ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಗಳಿಸಿ ಡಿಸಿ ಸಂದರ್ಶನಕ್ಕೆ ಹಾಜರಾದಾಗ, ಹಿಂದಿನ ಬಾರಿಯ ಸಂದರ್ಶನದಲ್ಲಿದ್ದವರೇ, ಆ ಬ್ರಾಹ್ಮಣ ಯುವಕನ ಛಲ ಮತ್ತು ಸಾಧನೆಗಳನ್ನು ಮೆಚ್ಚಿ ಅಭಿನಂದಿಸಿದರೂ, ಮತ್ತೆ ಯಾರದ್ದೋ ಒತ್ತಡಕ್ಕೆ ಮಣಿದು ನೀರಿಲ್ಲದ ಬಿಸಿಲು ನಾಡಾದ ಗುಲ್ಬರ್ಗಾಕ್ಕೆ ಡಿಸಿಯಾಗಿ ನೇಮಕ ಮಾಡಿದ್ದರು. ನಂತರದ ದಿನಗಳಲ್ಲಿ ಆವರ ಪ್ರಾಮಾಣಿಕತೆಯನ್ನು ಮೆಚ್ಚಿದ ಕಂದಾಯ ಇಲಾಖೆಯಲ್ಲಿದ್ದ ದಲಿತ ಮಂತ್ರಿಗಳೊಬ್ಬರು ಅವರನ್ನು ಅಲ್ಲಿಂದ ಮುಕ್ತ ಗೊಳಿಸಿ ತಮ್ಮ ಆಪ್ತ ಕಾರ್ಯದರ್ಶಿಯಾಗಿ ಬಹಳ ವರ್ಷಗಳ ಕಾಲ ಇಟ್ಟುಕೊಂಡಿದ್ದರು. ನಂತರ ಅನೇಕ ಜಿಲ್ಲೆಗಳಲ್ಲಿ ಚಿಲ್ಲಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿ ಕಡೆಗೆ ಹಾವೇರಿ ಜಿಲ್ಲೆಯಲ್ಲಿದ್ದಾಗ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೆ ಹೆಸರಿನಿಂದ ನಿವೃತ್ತಿ ಹೊಂದಿದ್ದರು. ಇದುವೇ ನಿಜವಾದ ಬ್ರಾಹ್ಮಣರ ತಾಕತ್ತು.

ಪ್ರಪಂಚದ ಅತ್ಯಂತ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಹುದ್ದೆಯಲ್ಲಿ ಇರುವ ಬಹುತೇಕರು ಬ್ರಾಹ್ಮಣರೇ ಆಗಿರುವುದು ಅನೇಕರಿಗೆ ಕಣ್ಣು ಉರಿ ತರಿಸಿದೆ. ಅದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅವರ್ಯಾರೂ ಸರ್ಕಾರದ ಯಾವುದೇ ಮೀಸಲಾತಿಯ ಸೌಲಭ್ಯವನ್ನು ಪಡೆಯದೇ, ಯಾರ ಮುಂದೆಯೂ ದೈನೇಸಿಯಾಗಿ ಬೇಡದೇ, ಯಾವುದೇ ಧರ್ಮ,ಜಾತಿ, ವರ್ಣವನ್ನೂ ಹಳಿಯದೇ ತಮ್ಮ ಸ್ವಸಾಮಥ್ಯದ ಮೇಲೆ ಅಂತಹ ಉನ್ನತ ಮಟ್ಟದ ಹುದ್ದೆಗೆ ಏರಿದ್ದಾರೆ.

WhatsApp Image 2021-06-29 at 8.00.40 PM

ದೇಶದಲ್ಲಿ ಕೇವಲ 2-3% ಜನ್ಮತಃ ಬ್ರಾಹ್ಮಣರು ಇದ್ದಾರೆ. ಅದರಲ್ಲಿ ನಿಜವಾಗಿಯೂ ಬ್ರಹ್ಮತ್ವದ ಆಚಾರ ವಿಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವವರು ಕೆಲವೇ ಕೆಲವು ಜನರು ಇದ್ದಾರೆ. ಕಳೆದ 300-400 ವರ್ಷಗಳಲ್ಲಿ ಪ್ರಪಂಚಾದ್ಯಂತ ಬ್ರಾಹ್ಮಣರಿಂದ ಯಾವುದೇ ದಬ್ಬಾಳಿಕೆಯಾಗಲೀ ಭಯೋತ್ಪಾನೆಯಾಗಲೀ ನಡೆದಿಲ್ಲದಿರುವಾಗ ವಿನಾಕಾರಣ ಬ್ರಾಹ್ಮಣರ ವಿರುದ್ಧ ಈ ಪರಿಯಾಗಿ ಹರಿಹಾಯುವುದು ಎಷ್ಟು ಸರಿ?

ಈ ದೇಶದಲ್ಲಿ ದಲಿತರು ಸವರ್ಣೀಯ ವಿರುದ್ಧ ಅಟ್ರಾಸಿಟಿ(ಜಾತಿನಿಂದನೆ) ಕೇಸ್ ಹಾಕಲು ಅವಕಾಶವಿದ್ದಂತೆ, ಪ್ರತಿನಿತ್ಯವೂ ಜಾತಿ ನಿಂದನೆಗೆ ಒಳಗಾಗಿ ಮಾನಸಿಕವಾಗಿ ಶೋಷಣೆಗೆ ಒಳಗಾಗುತ್ತಿರುವ ಬ್ರಾಹ್ಮಣರು ಜಾತಿ ನಿಂದನೆ ಕೇಸ್ ಹಾಕಲು ಆಗದಿರುವಂತಹ ವ್ಯವಸ್ಥೆಯಿಂದ ದೇಶದಲ್ಲಿ ಸಾಮಾಜಿಕ ಸಮಾನತೆಯನ್ನು ಹೇಗೆ ತಾನೇ ತರಲು ಸಾಧ್ಯ?

ವಿದ್ಯೆ ಬುದ್ಧಿ ಅಧಿಕಾರ ಯಾವುದೇ ಧರ್ಮ ಅಥವಾ ಜಾತಿಯ ಸ್ವತ್ತಲ್ಲ. ಸತತ ಸಾಧನೆ ಮತ್ತು ಕಠಿಣ ಪರಿಶ್ರಮದಿಂದ ಯಾರು ಬೇಕಾದರೂ ಏನನ್ನಾದರೂ ಸಾಧಿಸಬಹುದಾಗಿದೆ. ಎನ್ನುವುದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರೀ, ಫುಲೆ, ನಾರಾಯಣ ಗುರುಗಳು, ರೆವರೆಂಡ್ ಕಿಟ್ಟಲ್, ಅಂಬೇಡ್ಕರ್, ಅಬ್ದುಲ್ ಕಲಾಂ ಅಂತಹವರೇ ಸಾಕ್ಷಿ. ಇಂತಹ ಮಹನೀಯರನ್ನೆಲ್ಲಾ ನಾವು ಪ್ರಾರ್ಥಸ್ಮರಣೀಯರೆಂದೇ ಆದರಿಸುತ್ತೇವೆ. ಶೃಂಗೇರೀ ಜಗದ್ಗುರುಗಳು ಮತ್ತು ಉಡುಪಿಯ ಪೇಜಾವರ ಶ್ರೀಗಳನ್ನು ಅದರಿಸುವಷ್ಟೇ ಗುರುಭಕ್ತಿಯಿಂದ ಸಿದ್ದಗಂಗಾ ಶ್ರೀಗಳು ಮತ್ತು ಬಾಲಗಂಗಾಧರ ನಾಥ ಸ್ವಾಮೀಗಳನ್ನು ಪೂಜಿಸುವಾಗ ವಿನಾಕಾರಣ ಜಾತಿ ಜಾತಿಗಳ ಮಧ್ಯೆ ತಾರತಮ್ಯವೇಕೆ?

ಬ್ರಾಹ್ಮಣರೂ ಈ ದೇಶದವರೇ ಆಗಿರುವಾಗ ಅವರಿಗೂ ಈ ದೇಶದಲ್ಲಿ ಇರುವ ಹಕ್ಕಿರುವಾಗ, ಭಾರತೀಯನೇ ಅಲ್ಲದ ವ್ಯಕ್ತಿಯೊಬ್ಬ ಬ್ರಾಹ್ಮಣ್ಯತ್ವವನ್ನು ನಾಶ ಮಾಡುವುದೇ ನನ್ನ ಗುರಿ ಎಂದು ಅಬ್ಬರಿಸುವಾಗ, ಹಚ್ಚಾ ಎಂದು ಓಡಿಸುವ ಬದಲು ಆತನನ್ನು ಸಮರ್ಥನೆ ಮಾಡುತ್ತಿರುವುದು ನಮ್ಮ ಜನರ ಬೌದ್ಧಿಕ ದೀವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗದು.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ರಾಜ್ಯಪಾಲರ ಭಾಷಣದ ಅಂತ್ಯದಲ್ಲಿ ಹೇಳುತ್ತಿದ್ದ ಜೈ ಹಿಂದ್ ಎಂಬ ಘೋಷಣೆಗೆ ಕತ್ತರಿ ಹಾಕಿ ದೇಶದ ಒಕ್ಕೂಟದ ವ್ಯವಸ್ಥೆಗೇ ಉದ್ಧಟತನ ತೋರಿರುವುದು ಅಕ್ಷಮ್ಯವೇ ಸರಿ.

ಇದೇ ರೀತಿಯ ಮನೋಭಾವ ಎಲ್ಲೆಡೆಯೂ ಮುಂದುವರೆದಲ್ಲಿ ಮುಂದೊಂದು ದಿನ ಕಮ್ಯೂನಿಷ್ಟ್ ಸಿದ್ಧಾಂತದ ವ್ಯಕ್ತಿಗಳು, ಹಿಂದೂ ವಿರೋಧಿ ಶಕ್ತಿಗಳು ಮತ್ತು ಕೆಲ ಮತಾಂಧದ ಶಕ್ತಿಗಳು ಒಂದಾಗಿ, ಅಹಿಂದ ಎನ್ನುವ ವಿಷಬೀಜವನ್ನು ಬಿತ್ತಿ, ಬ್ರಿಟಿಷರಂತೆಯೇ ಜಾತಿ, ಧರ್ಮ ಭಾಷೆಗಳನ್ನೇ ಎತ್ತಿ ಕಟ್ಟಿ ಇಡೀ ದೇಶವನ್ನೇ ಮತ್ತೊಮ್ಮೆ ತುಂಡರಿಸುವ ಕಾಲ ಬರಲೂ ಬಹುದು.

ಮಿಂಚಿ ಹೋದ ಮೇಲೆ ಚಿಂತಿಸುವ ಫಲವಿಲ್ಲ ಎನ್ನುವಂತೇ ಭಾರತದಲ್ಲಿ ಇರುವವರೆಲ್ಲರೂ ಭಾರತೀಯರು. ಅದರಲ್ಲಿ ಬ್ರಾಹ್ಮಣರೂ ಸೇರಿ ಇಲ್ಲಿರುವ ಪ್ರತಿಯೊಬ್ಬರಿಗೂ ಒಂದು ದೇಶ ಒಂದು ಕಾನೂನು ಎಂಬ ಅಡಿಯಲ್ಲಿ ಎಲ್ಲರಿಗೂ ಸರಿಸಮಾನವಾಗಿ ನೆಮ್ಮದಿಯಿಂದ ಜೀವಿಸುವ ಹಕ್ಕಿದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ಸಿವಿಲ್ ಇಂಜೀನಿಯರಿಂಗ್ ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಅಧೂತ್ ಮೋಹಿತ್ ಎಂಬುವರ ಲೇಖನದ ಭಾವಾರ್ಥವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ನಾನು ಬ್ರಾಹ್ಮಣನಲ್ಲ, ನಾನು ಮರಾಠಿಗ. ಆದರೂ ಕಳೆದ ಕೆಲವು ವರ್ಷಗಳಿಂದ ನನ್ನ ಅವಲೋಕನಗಳನ್ನು ಆಧರಿಸಿ ಇದಕ್ಕೆ ಸೂಕ್ತವಾದ ಉತ್ತರವನ್ನು ನೀಡಬಲ್ಲೆ ಎಂದು ನಾನು ಭಾವಿಸುತ್ತೇನೆ.

ಇಂದಿನ ಭಾರತದಲ್ಲಿ ಬ್ರಾಹ್ಮಣನಾಗಿರುವುದು ಎಂದರೆ 1930ರ ಜರ್ಮನಿಯಲ್ಲಿ ಯಹೂದಿಗಳಿದ್ದಂತೆ. ಜರ್ಮನಿಯ ಜನಸಂಖ್ಯೆಗೆ ಹೋಲಿಸಿದರೆ, ಯಹೂದಿಗಳ ಶೇಕಡಾವಾರು ಸಂಖ್ಯೆ ಬಹಳಷ್ಟು ಕಡಿಮೆ ಇದ್ದರೂ, ಜರ್ಮನ್ನರಿಗೆ ತಮ್ಮೆಲ್ಲಾ ಸಮಸ್ಯೆಗಳಿರೂ ಯಹೂದಿಗಳೇ ಕಾರಣರು ಎಂಬ ಭಾವನೆಯಾಗಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಬ್ರಾಹ್ಮಣರ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಭಾರತದ ಜನಸಂಖ್ಯೆಯಲ್ಲಿ ಕೇವಲ 2% ಜನರಿದ್ದರೂ ಬ್ರಾಹ್ಮಣರನ್ನು ಭಾರತದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಅನಾವಶ್ಯಕವಾಗಿ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ

ಎಲ್ಲಾ ಬ್ರಾಹ್ಮಣರೂ ಸಹ ಶ್ರೀಮಂತರು ಅಥವಾ ಶಕ್ತಿಶಾಲಿಗಳಲ್ಲ. ಅವರಲ್ಲಿ ಹೆಚ್ಚಿನವರು ಎಲ್ಲರಂತೆ ಮಧ್ಯಮ ವರ್ಗದವರು ಮತ್ತು ಅನೇಕರು ಕಡು ಬಡತನದ ರೇಖೆಗಿಂತಲೂ ಅತ್ಯಂತ ಕಡಿಮೆ ಸ್ಥಿತಿಯಲ್ಲಿ ಇದ್ದಾರೆ. ಅಂತಹವರು, ಮದುವೆ, ಮುಂಜಿ ನಾಮಕರಣ, ತಿಥಿ ಮುಂತಾದ ಧಾರ್ಮಿಕ ಸಮಾರಂಭಗಳಲ್ಲಿ ಪೌರೋಹಿತ್ಯ ಮತ್ತು ಅಡುಗೆ ಮಾಡಿಕೊಂಡು ಸ್ವಾಭಿಮಾನಿಗಳಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ.

ಬ್ರಾಹ್ಮಣರಿಗೆ ಯಾವುದೇ ಮೀಸಲಾತಿ ಇಲ್ಲ ( ಇತ್ತೀಚೆಗೆ ಸರ್ಕಾರ ಕೊಟ್ಟಿರುವ 10% ಮೀಸಲಾತಿ ಎಲ್ಲಾ ಸವರ್ಣೀಯರಿಗೂ ಅನ್ವಯವಾಗುತ್ತದೆಯೇ ಹೊರತೂ, ಕೇವಲ ಬ್ರಾಹ್ಮಣರಿಗೆ ಮಾತ್ರವೇ ಮೀಸಲಾಗಿಲ್ಲ) ಅವರಿಗೆ ಸರ್ಕಾರದಿಂದ ಯಾವುದೇ ವಿಶೇಷ ಸಬ್ಸಿಡಿಗಳನ್ನು ನೀಡಲಾಗುವುದಿಲ್ಲ. ಆದರೂ ಎಲ್ಲದಕ್ಕೂ ಅವರನ್ನು ದೂಷಿಸಲಾಗುತ್ತದೆ.

ಜರ್ಮನಿಯಲ್ಲಿ ಎಲ್ಲದಕ್ಕೂ ಯಹೂದಿಗಳನ್ನೇ ಬಲಿಪಶುಗಳನ್ನಾಗಿ ಮಾಡುತ್ತಿದ್ದಂತೆ, ಭಾರತದಲ್ಲಿಯೂ ಕಮ್ಯುನಿಸ್ಟರು, ಇಸ್ಲಾಮಿಕ್ ಆಮೂಲಾಗ್ರರು ಮತ್ತು ಎಲ್ಲಾ ಹಿಂದೂ ವಿರೋಧಿ ಗುಂಪುಗಳು ಮತ್ತು ಕೆಲ ಸ್ವಯಂ ಘೋಷಿತ ಬುದ್ಧಿಜೀವಿಗಳು ನಿರಂತರವಾಗಿ ಬ್ರಾಹ್ಮಣರನ್ನು ವಿನಾಕಾರಣ ದ್ವೇಷಿಸುತ್ತಾರೆ ಮತ್ತು ದೂಷಿಸುತ್ತಾರೆ

ಏಳನೇ ಶತಮಾನದಲ್ಲಿ ಬೌದ್ಧರ ಅಹಿಂಸಾ ಪರಮೋಧರ್ಮಃ ಎಂಬುದಕ್ಕೆ ಮನಸೋತು ಮತ್ತು ಹಿಂದೂ ಧರ್ಮದಲ್ಲಿದ್ದ ಕಠುವಾದ ಆಚರಣೆಗಳಿಂದ ಬೇಸರಗೊಂಡ ಹಲವು ಬೌದ್ಧ ಧರ್ಮಕ್ಕೆ ಮತಾಂತರವಾಗಿ ಸನಾತನ ಧರ್ಮ ಅವನತಿಯ ಹಾದಿಯಲ್ಲಿ ಇದ್ದಾಗ, ಕೇರಳದ ಬ್ರಾಹ್ಮಣ, ವೈದಿಕ ಧರ್ಮಕ್ಕೆ ಸೇರಿದ ಆದಿ ಶಂಕರಾಚಾರ್ಯರು ತಮ್ಮ ಅಪಾರವಾದ ಪಾಂಡಿತ್ಯ, ಇಚ್ಛಾಶಕ್ತಿ, ಬುದ್ಧಿವಂತಿಕೆ ಮತ್ತು ಚರ್ಚಾ ಶಕ್ತಿಯಿಂದಾಗಿ ಎಲ್ಲರನ್ನೂ ಸೋಲಿಸಿ ಸರ್ವಜ್ಞ ಪೀಠವನ್ನೇರಿ, ದೇಶದ ನಾಲ್ಕೂ ಕಡೆಯಲ್ಲಿಯೂ ಧಾರ್ಮಿಕ ಶಕ್ತಿ ಕೇಂದ್ರಗಳನ್ನು ಆರಂಭಿಸಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದರು.

ಅದಲ್ಲದೇ ನಿರಂಕುಶವಾಗಿ 1000 ವರ್ಷಗಳ ಕಾಲ ಹಿಂದೂ ಧರ್ಮದ ಮೇಲೆ ಅಕ್ರಮ ಮಾಡಿದ ಇಸ್ಲಾಮಿಕ್ ಆಕ್ರಮಣಕಾರನ್ನು ಮತ್ತು 300 ವರ್ಷಕ್ಕೂ ಅಧಿಕ ಕಾಲ ಬ್ರಿಟಿಷ್ ವಸಾಹತುಶಾಹಿಗಳ ಗುಲಾಮಗಿರಗಳ ಸತತ ಧಾಳಿಯ ನಡುವೆಯೂ, ಸನಾತನ ಅಮೂಲ್ಯ ಗ್ರಂಥಗಳಾದ ವೇದಗಳು, ಉಪನಿಷತ್ತುಗಳು, ಬ್ರಹ್ಮ ಸೂತ್ರಗಳು, ಭಗವದ್ಗೀತೆಯ ಜ್ಞಾನವನ್ನು ಸಂರಕ್ಷಿಸಿ ಉಳಿಸಿದವರೇ ಬ್ರಾಹ್ಮಣರು. ಉಳಿದೆಲ್ಲಾ ಜಾತಿಯ ಹಿಂದೂಗಳು ನಮ್ಮ ಧರ್ಮವನ್ನು ಉಳಿಸಲು ಹೋರಾಡಿದರೆ, ವೇದ ಧರ್ಮದ ಮೂಲ ಗ್ರಂಥಗಳು ಮತ್ತು ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಉಳಿಸಿದವರು ಬ್ರಾಹ್ಮಣರು ಎನ್ನುವುದು ಸತ್ಯ.

ಜಗತ್ತಿನ ಬಹುತೇಕ ಭಾಷೆಗಳ ಮೂಲ ಭಾಷೆಯಾದ ಸಂಸ್ಕೃತ ಭಾಷೆಯನ್ನು ಜೀವಂತವಾಗಿರಿಸಿದ್ದ (ಮತ್ತು ಇನ್ನೂ ಇಟ್ಟುಕೊಂಡಿರುವ) ಬ್ರಾಹ್ಮಣರು, ಮೊಘಲ್ ಸಾಮ್ರಾಜ್ಯವನ್ನು ನಾಶಪಡಿಸಿ ಮರಾಠಾ ಸಾಮ್ರಾಜ್ಯವನ್ನು ಅಷ್ಟು ದೊಡ್ಡದಾಗಿ ವಿಸ್ತರಿಸಿದ ಬಾಜಿರಾವ್ ಪೇಶ್ವೆಯವರೂ ಸಹಾ ಬ್ರಾಹ್ಮಣರೇ ಆಗಿದ್ದರು ಎನ್ನುವುದು ಗಮನಾರ್ಹ.

ಬಹುಶಃ ಬ್ರಾಹ್ಮಣರಿಲ್ಲದಿದ್ದರೆ, ವೇದ ನಾಗರಿಕತೆಯು ಪರ್ಷಿಯನ್, ಗ್ರೀಕ್, ಈಜಿಪ್ಟಿನ, ರೋಮನ್ ಮತ್ತು ಇತರ ಅನೇಕ ನಾಗರಿಕತೆಗಳಂತೆ ಸತ್ತುಹೋಗುತ್ತಿತ್ತು. ಹಾಗಾಗಿ ಬ್ರಾಹ್ಮಣರೇ ಪ್ರಾಚೀನ ವೈದಿಕ ನಾಗರಿಕತೆಗೆ ನಮ್ಮನ್ನು ಸಂಪರ್ಕಿಸುವ ಕೊಂಡಿಗಳಾಗಿದ್ದರು ಎಂದರೂ ಅತಿಶಯವಲ್ಲ.

ಇಂಗ್ಲಿಷ್ನಲ್ಲಿ To kill a snake, cut it’s head off ಅಂದರೆ ಹಾವನ್ನು ಕೊಲ್ಲ ಬೇಕೆಂದರೆ ಅದರ ತಲೆಯನ್ನು ಮೊದಲು ಕತ್ತರಿಸಿ ಎಂಬ ಗಾದೆಯ ಮಾತಿನಂತೆ, ಭಾರತದಲ್ಲಿ ಹಿಂದೂ ಧರ್ಮವನ್ನು ಅಳಿಸಲು ಬುದ್ಧಿವಂತರಾದ ಬ್ರಾಹ್ಮಣರನ್ನು ನಾಶಮಾಡಬೇಕು ಎಂಬುದನ್ನು ಅತ್ಯಂತ ಶೀಘ್ರವಾಗಿ ಬ್ರಿಟೀಶರು ಮನಗಂಡಿದ್ದರು. ಈಗ ಅದನ್ನೇ, ಭಾರತದ ಹಿಂದೂ ವಿರೋಧಿ ಶಕ್ತಿಗಳು 40 ರ ದಶಕದಲ್ಲಿ ಯಹೂದಿಗಳ ವಿರುದ್ಧ ಧಾಳಿ ಮಾಡಿದ ನಾಜಿಗಳಂತೆಯೇ ಇಂದು ಬ್ರಾಹ್ಮಣರು ಮೇಲೆ ಬಿದ್ದಿದ್ದಾರೆ.

ಇದಕ್ಕೆ ಪುರಾವೆ ಎಂಬಂತೆ ಕೆಳಜಾತಿಯವರು ಬ್ರಾಹ್ಮಣರಿಂದ ಅತ್ಯಂತ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂಬ ಕಟ್ಟು ಕಥೆಯನ್ನು ತೇಲಿಬಿಟ್ಟರು. ನಿಜ ಹೇಳಬೇಕೆಂದರೆ, ನಾನು ಜಾತಿ ತಾರತಮ್ಯವನ್ನು ವಿರೋಧಿಸುತ್ತೇನೆ. ಆದರೆ, ನಿಜವಾದ ಚರಿತ್ರೆಯಲ್ಲಿ ಹಿಂದೂಗಳು, ಬೌದ್ಧರು, ಜೈನರು ಇಸ್ಲಾಮಿಕ್ ಆಡಳಿತಗಾರರಿಂದ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದಾರೆಯೇ ಹೊರತು, ಇಸ್ಲಾಮಿಕ್ ಆಕ್ರಮಣಕಾರರಂತೆ ಬ್ರಾಹ್ಮಣರು ಎಂದಿಗೂ ಯಾರೊಬ್ಬರ ವಿರುದ್ಧವೂ ನರಮೇಧ ಅಭಿಯಾನವನ್ನು ನಡೆಸಲಿಲ್ಲ. ಯಾವುದೇ ಧಾರ್ಮಿಕ ಕಟ್ಟಡಗಳನ್ನು ಹಾಳು ಮಾಡುವುದಿರಲಿ, ಕನಿಷ್ಟ ಪಕ್ಷ ಒಂದು ಚೂರು ಭಿನ್ನಗೊಳಿಸಿದ ಯಾವುದೇ ಇತಿಹಾಸವಿಲ್ಲ.

2500 ವರ್ಷಗಳ ಹಿಂದಿನ ವೈದಿಕ ಕಾಲದಲ್ಲಿ ಮಾತ್ರ ಬ್ರಾಹ್ಮಣರು ಪ್ರಭಲಾಗಿದ್ದಿರ ಬಹುದು ಅದರೆ ಕ್ರಿ.ಪೂ 500 ರಲ್ಲಿ ಬೌದ್ಧಧರ್ಮದ ಆರಂಭವಾದ ನಂತರದ, ಭಾರತೀಯರು ಬ್ರಾಹ್ಮಣರ ಸಂಪ್ರದಾಯಗಳನ್ನು ಧಿಕ್ಕರಿಸಿ, ನಿಧಾನವಾಗಿ ಬೌದ್ಧಧರ್ಮಕ್ಕೆ ಮತಾಂತರವಾಗ ತೊಡಗಿದರು.

8 ನೇ ಶತಮಾನದವರೆಗೆ ಶಂಕರಾಚಾರ್ಯರು ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವವರೆಗೂ ಬೌದ್ಧಧರ್ಮವೇ ಭಾರತ ಮತ್ತು ಸುತ್ತಮುತ್ತಲ ವಿದೇಶಗಳಲ್ಲಿಯೂ ಬಹುಸಂಖ್ಯಾತ ಧರ್ಮವಾಗಿತ್ತು.

ಅದಾಗಿ 200 ವರ್ಷಗಳ ನಂತರ ಇಸ್ಲಾಮಿಕ್ ಆಕ್ರಮಣಗಳು ಪ್ರಾರಂಭವಾಗಿ ಉತ್ತರದಿಂದ ದಕ್ಷಿಣದ ವರೆಗೂ ಭಾರತದ ಬಹುಭಾಗ ಇಸ್ಲಾಮಿಕ್ ಆಡಳಿತಗಾರರ ದೌರ್ಜನ್ಯಕ್ಕೆ ಒಳಗಾಗಿತ್ತು. ಮೊಘಲ್ ಸಾಮ್ರಾಜ್ಯದ ಇನ್ನೇನೂ ಅಂತ್ಯವಾಗುತ್ತದೆ ಎನ್ನುವಷ್ಟರಲ್ಲಿ ಯೂರೋಪಿಯನ್ನರ ಹಿಡಿತಕ್ಕೆ ಒಳಗಾಗಿ ಅದರಲ್ಲೂ ಬ್ರಿಟಿಷರ ವಸಾಹತುಗಳಗಿ ಮಾರ್ಪಾಟಾಗಿತ್ತು.

ನಂದರ ದುರಾಡಳಿಕ್ಕೆ ವಿರೋಧವಾಗಿ ಚಂದ್ರಗುಪ್ತನೆಂಬ ಸಾಮಾನ್ಯರ ಬೆನ್ನುಲುಬಾಗಿ‌ನಿಂತು ನಂದರ ವಂಶವನ್ನು ನಿರ್ನಾಮಗೊಳಿಸಿ‌ ಮೌರ್ಯ ವಂಶ ಸ್ಥಾಪಿಸಿದವರು ಇಂದಿಗೂ ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದೇ ಖ್ಯಾತಿ ಪಡೆದ ಚಾಣಕ್ಯ.

ಉತ್ತರದಲ್ಲೆಲ್ಲಾ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ, ದಕ್ಷಿಣದ ಕಡೆ ದಂಡೆತ್ತಿ ಬರುತ್ತಿದ್ದ ಮೊಘಲರನ್ನು ಸಾಧಾರಣ ಪಾಳೆಯಗಾರರಾಗಿದ್ದ ಹಕ್ಕ-ಬುಕ್ಕರ ಬೆಂಬಲಕ್ಕೆ ನಿಂತು ವಿಜಯನಗರ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಗುರು ವಿದ್ಯಾರಣ್ಯರು.

ಚಾಣಕ್ಯ ಮತ್ತು ವಿದ್ಯಾರಣ್ಯರು ಮನಸ್ಸು ಮಾಡಿದ್ದಲ್ಲಿ ತಾವೇ ರಾಜರಾಗಬಹುದಿತ್ತಾದರೂ, ಅವರೆಂದೂ ಆ ದುರಾಸೆ ಪಡಲಿಲ್ಲ. ಅವರು King ಆಗುವುದಕ್ಕಿಂತಲೂ King Maker ಆಗುವುದಕ್ಕೇ ಇಚ್ಚೆ ಪಟ್ಟು, ರಾಜ್ಯ ಸ್ಥಾಪನೆಯಾಗಿ ಸುಸ್ಥಿರವಾದ ಕೂಡಲೇ ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿರತರಾದರು.

ಇತಿಹಾಸದ ಈ ಎಲ್ಲಾ ಉದಾಹರಣೆಗಳನ್ನು ಅವಲೋಕಿಸಿದರೆ, ಭಾರತದಲ್ಲಿ ಕಳೆದ 1000 ವರ್ಷಗಳಿಂದ ಬ್ರಾಹ್ಮಣರು ಭಾರತದಲ್ಲಿ ಎಂದೂ ಪ್ರಭಲವಾಗಿ ಅಧಿಕಾರದಲ್ಲಿ ಇರಲೇ ಇಲ್ಲ. ಎಲ್ಲಾ ರಾಜಕೀಯ, ಆರ್ಥಿಕ ಮತ್ತು ಆಡಳಿತ ಅಧಿಕಾರಗಳು ಇಸ್ಲಾಮಿಕ್ ಚಕ್ರವರ್ತಿಗಳಿಂದ ಬ್ರಿಟಿಷರರಿಗೆ ಹಸ್ತಾಂತರವಾಗಿ ನಂತರ ಪ್ರಜಾಪ್ರಭುತ್ವದ ಆಡಳಿತಕ್ಕೆ ಒಳಗಾಯಿತು. ಹಾಗಾಗಿ ಇಂದಿನ ಭಾರತದಲ್ಲಿ ಹೆಚ್ಚಿನ ಬಡತನ ಮತ್ತು ಅಸಮಾನತೆಗಳು ವಸಾಹತುಶಾಹಿ ಮತ್ತು ಬಂಡವಾಳಶಾಹಿಗಳ ಕೊಡುಗೆಯಾಗಿದೆ. ಅವರು ಸೃಷ್ಟಿಸಿದ ಪರಿಸ್ಥಿತಿಗಳಿಗೆ ಬ್ರಾಹ್ಮಣರನ್ನು ಸುಖಾ ಸುಮ್ಮನೆ ಏಕೆ ದೂಷಿಸಲಾಗುತ್ತದೆ ? ಎಂದು ತಿಳಿಯದಾಗಿದೆ.

ಸ್ವಾತ್ರಂತ್ರ್ಯಾನಂತರವಂತೂ ಬ್ರಾಹ್ಮಣರು ತಮ್ಮ ಸ್ವಂತ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಇತರರು ಬ್ರಾಹ್ಮಣರ ಬಗ್ಗೆ ಏನು ಆಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಕನಿಷ್ಠ ತಲೆಕೆಡಿಸಿಕೊಳ್ಳದೇ, ತಮ್ಮ ಬುದ್ಧಿ ಶಕ್ತಿ, ಕಠಿಣ ಪರಿಶ್ರಮದಿಂದ ವಿಶ್ವಾದ್ಯಂತ ಯಶಸ್ವಿಯಾಗಿದ್ದಾರೆ. ಎಪ್ಪತ್ತರ ದಶಕದಲ್ಲಿ ಉಳುವವನಿಗೇ ಭೂಮಿ ಎಂಬ ಕಾನೂನು ಬಂದಾಗಲಂತೂ ಅತ್ಯಂತ ಹೆಚ್ಚಿನ ಭೂಮಿಯನ್ನು ಕಳೆದುಕೊಂಡವರು ಬ್ರಾಹ್ಮಣರೇ. ಹಿಂದಿನ ದಿನದವರೆಗೂ ನೂರಾರು ಎಕರೆ ಜಮೀನ್ದಾರರಾಗಿದ್ದವರು ಏಕಾ ಏಕಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದರೂ, ಯಾವುದೇ ರೀತಿಯ ಪ್ರತಿಭಟನೆಯಾಗಲೀ, ಹೋರಾಟವನ್ನಾಗಲೀ ಮಾಡದೇ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಜೀವನ ನಡೆಸತೊಡಗಿದರು.

ಈ‌ ಕ್ಷಣಕ್ಕೂ, ವಿಶ್ವದ ಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ ಮೈಕ್ರೋಸಾಫ್ಟ್ , ಗೂಗಲ್, ಇನ್ಫೋಸಿಸ್ ಇನ್ನು ಮುಂತಾದ ಕಂಪನಿಗಳಲ್ಲಿ ಬ್ರಾಹ್ಮಣರೇ ಪ್ರಮುಖ ಸ್ಥಾನಗಳಲ್ಲಿದ್ದರೂ, ಅವರೆಂದೂ ಜಾತಿವಾದಿಗಳಾಗಿಲ್ಲ. ತಮ್ಮ ಜಾತಿಯವರಿಗೆ ಪ್ರಾಮುಖ್ಯತೆಯನ್ನೂ ನೀಡಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಇನ್ನು ಹೊಸ ಪೀಳಿಗೆಯ ಬ್ರಾಹ್ಮಣ ಯುವಕರಂತೂ ಈ ಜಂಜಾಟಗಳಿಂದ ಬೇಸತ್ತು, ತಮ್ಮ ಬುದ್ಧಿವಂತಿಗೆ ಮತ್ತು ಕಠಿಣ ಪರಿಶ್ರಮದಿಂದ ಇಂದು ವಿಶ್ವದ ವಿವಿಧ ಮೂಲೆಗಳಿಗೆ ವಲಸೆ ಹೋಗಿದ್ದಾರೆ ಮತ್ತು ತಮ್ಮ ಪರಿಣತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನಗಳನ್ನು ಪಡೆದಿದ್ದಾರೆ. When you are in Rom, be lika a Roman ಎನ್ನುವಂತೆ ಎಲ್ಲೆಡೆಯೂ ಬ್ರಾಹ್ಮಣರು ತಾಳ್ಮೆ ಮತ್ತು ಶಾಂತಿಯಿಂದ ಜೀವಿಸುವುದಲ್ಲದೇ ಸನ್ನಡತೆಗೆ ಹೆಸರುವಾಸಿಯಾಗಿದ್ದಾರೆ.

ಈಗ ಹೇಳಿ,

ಶತ ಶತಮಾನಗಳ ಹಿಂದೆ ಆಗಿರಬಹುದಾಗಿದ್ದ ತಪ್ಪುಗಳಿಗೆ ಈ ಪರಿಯಾಗಿ ಇಂದಿಗೂ ಬ್ರಾಹ್ಮಣರನ್ನು ದೂಷಿಸುವುದು ಮತ್ತು ದ್ವೇಷಿಸುವುದು ಎಷ್ಟು ಸರಿ?

ಮೀಸಲಾತಿಯ ಹಂಗಿಲ್ಲದೇ, ಸ್ಚಶಕ್ತಿಯಿಂದ ಉದ್ದಾರವಾಗಿರೋದು ತಪ್ಪಾ?

ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದು ಎನ್ನುವುದು ಬರೀ ಬಾಯಿ ಮಾತಾ?

ನಾವೂ ಬದುಕೋಣ. ಎಲ್ಲರನ್ನೂ ಬಾಳಲು ಬಿಡೋಣ. ಎಷ್ಟಾದರೂ ನಮ್ಮದು ವಸುಧೈವ ಕುಟುಂಬಕಂ ಅಲ್ಲವೇ? ಎನ್ನುತ್ತಲೇ, ಬ್ರಾಹ್ಮಣರನ್ನು ದೂರ ಮಾಡಿದರೆ ಸಮಾಜದಲ್ಲಿ ಸಮಾನತೆ ಹೇಗೆ ಸಾಧ್ಯ?

ಏನಂತೀರೀ?
ನಿಮ್ಮವನೇ ಉಮಾಸುತ

ಪೊಗರು ಇಳಿಸಿದ ಪರಿ

ಕಳೆದ ಶುಕ್ರವಾರ ಬಹು ನಿರೀಕ್ಷಿತ ನಂದಕಿಶೋರ್ ನಿರ್ದೇಶಿಸಿದ ಮತ್ತು ಧೃವ ಸರ್ಜಾ ನಟಿಸಿದ ಪೊಗರು ಚಿತ್ರ, ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಇದೇ ಚಿತ್ರಕ್ಕಾಗಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಸಣ್ಣ ಮತ್ತು ದಪ್ಪ ಮಾಡಿಕೊಂಡಿದ್ದ ಧೃವ ಸರ್ಜಾ ಬಗ್ಗೆ ಎಲ್ಲರೂ ಹಾಡಿ ಹೊಗಳುತ್ತಿದ್ದದ್ದನ್ನು ಓದಿ, ಕೇಳಿ ಎಲ್ಲರೂ ಪುಳಕಿತಗೊಂಡಿದ್ದಂತೂ ಸುಳ್ಳಲ್ಲ. ಆದರೆ ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ಚಿತ್ರದಲ್ಲಿ ಒಂದು ಸಮುದಾಯವನ್ನು ಬಹಳ ಕೀಳಾಗಿ ಚಿತ್ರೀಕರಿಸಲ್ಪಟ್ಟಿದೆ ಎಂಬ ವಿಷಯ ಹೊರಬರುತ್ತಿದ್ದಂತೆಯೇ ರಾಜ್ಯಾದ್ಯಂತ ಹತ್ತು ಹಲವಾರು ಚರ್ಚೆಗಳು ಆರಂಭವಾದವು.

ಚಿತ್ರ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಆರಂಭದಲ್ಲಿ ಇದು ಸಣ್ಣದಾದ ಕಿರಿಕ್ ಎನ್ನಿಸಿದರೂ, ದಿನ ಕಳೆದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡರು. ಈ ವಿಷಯ ಕುರಿತಂತೆ ಅಪರೂಪಕ್ಕೆ ತ್ರಿಮತಸ್ಥ ಬ್ರಾಹ್ಮಣರು ಒಗ್ಗಟ್ಟಾಗಿ ನಿಂತರು. ತ್ರಿಮತಸ್ಥ ಮಠಾಧೀಶರೂ ತಮ್ಮ ಹಮ್ಮು ಬಿಮ್ಮುಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಈ ಕುಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಿದರು. ಎಲ್ಲದ್ದಕ್ಕಿಂತಲೂ ಮೆಚ್ಚಬೇಕಾದ ಅಂಶವೆಂದರೆ, ಇದು ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧ ವಯಕ್ತಿಕ ಹೋರಾಟವಾಗಿರದೇ, ಯಾವುದೇ ರೀತಿಯ ಪ್ರಚೋದನಾತ್ಮಕವಾದ ಹೇಳಿಕೆಗಳನ್ನು ನೀಡದೇ, ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದೇ, ಎಲ್ಲಿಯೂ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಷ್ಟ ಉಂಟು ಮಾಡದೇ, ವಿನಾ ಕಾರಣ, ಸಹಸ್ರಾರು ಜನರನ್ನು ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಒಗ್ಗೂಡಿಸಿ ಭಾರೀ ಪ್ರತಿಭಟನೆ ನಡೆಸಿ ರಸ್ತೆ ಬಂದ್ ಮಾಡದೇ ಅತ್ಯಂತ ನಾಜೂಕಿನಿಂದ ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ನೀಡಿದ್ದು ಮೆಚ್ಚುಗೆಯ ಅಂಶವಾಗಿರುವುದಲ್ಲದೇ ಎಲ್ಲರಿಗೂ ‌ಮಾದರಿಯಾಗಿದೆ.

ಚಿತ್ರ ತಂಡದ ವಿರುದ್ಧ ಫಿಲ್ಮ್ ಛೇಂಬರಿಗೆ ಈ ಕುರಿತಂತೆ ದೂರನ್ನು ದಾಖಲಿಸಿ ಅವರ ಸಮ್ಮುಖದಲ್ಲಿಯೇ ಇಡೀ ಚಿತ್ರತಂಡವನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಈ ರೀತಿಯ ಆಳಲನ್ನು ತೋಡಿ ಕೊಳ್ಳುವ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಒಂದಿಬ್ಬರು ನಾಯಕರು ಅನಗತ್ಯವಾಗಿ ಮುಜುಗೊರವನ್ನುಂಟು ಮಾಡುವ ಕೆಲವೊಂದು ಅವಾಚ್ಯ ಪದಗಳನ್ನು ಆಡಿದ್ದು ತಪ್ಪೆನಿಸಿದರೂ, ಕೂಡಲೇ ಅವರ ತಪ್ಪಿನ ಅರಿವಾಗಿ ಅಲ್ಲಿಯೇ ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇನ್ನು ಚಿತ್ರ ತಂಡವೂ ಆರಂಭದಲ್ಲಿ ಸ್ವಲ್ಪ ಉಡಾಫೆ ತೋರಿಸಿದರೂ ನಂತರ ಸಮಚಿತ್ತದಿಂದ ಅವರ ಆರೋಪವನ್ನು ಆಲಿಸಿ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಲ್ಲದೇ, ನಿರ್ದೇಶಕರು ಕ್ಷಮೆ ಯಾಚಿಸಿ ಇಡೀ ಗೊಂದಲವನ್ನು ಎರಡು ಮೂರು ದಿನಗಳಲ್ಲಿ ಸರಿ ಪಡಿಸುತ್ತೇವೆ ಎಂದು ಹೇಳಿದರೂ ನಂತರ ಸಮಾಜದ ಒಕ್ಕೊರಲಿನ ಒತ್ತಾಯಕ್ಕೆ ಮಣಿದು ಕೂಡಲೇ, ಚಿತ್ರದಲ್ಲಿದ್ದ ಆಕ್ಷೇಪಾರ್ಹವಾದ ಸುಮಾರು 15-16 ದೃಶ್ಯಗಳನ್ನು ಕತ್ತರಿಸಿ ಮರು ಸೆನ್ಸಾರ್ ಮಾಡಿಸಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿದ್ದು ಮೆಚ್ಚುಗೆ ಪಡಬೇಕಾದಂತಹ ಅಂಶವಾಗಿತ್ತು.

ಆರಂಭದಲ್ಲಿ ತನಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಮೌನಕ್ಕೆ ಜಾರಿದ್ದ ಚಿತ್ರದ ನಾಯಕ ಧೃವ ಸರ್ಜಾ ಕೂಡಾ ನಮ್ಮ ಇಡೀ ಕುಟುಂಬ ಹನುಮಭಕ್ತರು. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತಾ ಗೌರವಿಸುತ್ತಾ ಬದುಕುತ್ತಿದ್ದೇವೆ. ತಾತನವರ ಕಾಲದಿದಂಲೂ ಹಿಂದೂತ್ವದ ಪ್ರತಿಪಾದಕರಾಗಿಯೇ ಬದುಕಿದ್ದೇವೆ. ಕಲೆಯೇ ಧರ್ಮ.. ನಾವು ಎಲ್ಲಾ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ ಎಂದು ನಡೆದು ಹೋದ ಅಚಾತುರ್ಯಕ್ಕೆ ಭೇಷರತ್ತು ಕ್ಷಮೆಯಾಚಿಸಿ ಇನ್ನು ಮುಂದೆ ಈ ರೀತಿಯ ಮುಜುಗರದ ಪ್ರಸಂಗಳು ಆಗದಂತೆ ನೋಡಿಕೊಳ್ಳುತ್ತೇನೆ ಎಂಬ ಆಶ್ವಾಸನೆ ನೀಡಿದ್ದು ಗಮನಾರ್ಹವಾಗಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಯಾರದ್ದೇ ಕಾರಿಗೂ ಕಲ್ಲು ಹೊಡೆಯದೇ, ಎಲ್ಲಿಯೂ ಬೆಂಕಿ‌ ಹಚ್ಚದೇ, ಯಾವುದೇ ರಾಜಕೀಯ ಪಕ್ಷದ ಹಂಗಿಲ್ಲದೇ, ಸಂವಿಧಾನ, ಹಕ್ಕು, ಜಾತಿ, ಅಥವಾ ಯಾರದ್ದೇ ವಯಕ್ತಿಯ ಹೆಸರುಗಳನ್ನು ಎತ್ತುತ್ತಾ ಕೆಸರೆಚಾಡದೇ, ಇಲ್ಲವೇ ಬ್ರಾಹ್ಮಣ ಸಮಾಜದ ನಾಯಕರು ತೆರೆಯ ಮರೆಯಲ್ಲಿ ಸದ್ದಿಲ್ಲದೇ, ಚಿತ್ರತಂಡವನ್ನು ಭೇಟಿ ಮಾಡಿ ಯಾವುದೇ ಡೀಲ್ ನಡೆಸದೇ, ಜನಿವಾರಧಾರಿ ಋತ್ವಿಕರ ಭುಜದ ಮೇಲೆ ಕಾಲು ಇಟ್ಟವನಿಗೆ ಶಾಲು ಸುತ್ತಿ ಗೌರವಾಧರಗಳಿಂದ ಹೊಡೆಯುವಂತಹ ಚಾಣ್ಯಕ ರೀತಿಯನ್ನು ಮೆಚ್ಚಲೇ ಬೇಕಾಗಿದೆ.

ಇದು ಕೇವಲ ಒಂದು ಸಮುದಾಯದ ಹೋರಾಟವಾಗಿರದೇ, ಇದು ಇಡೀ ಹಿಂದೂ ಸಮಾಜಕ್ಕೇ ಆದ ಅವಮಾನ ಎಂದು ಇತರೇ ಎಲ್ಲಾ ಸಮುದಾಯದವರೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ, ಹಿಂದೂಗಳ ಒಗ್ಗಟ್ಟು ಮತ್ತು ಜಾಗೃತಿಯನ್ನು ಎತ್ತಿ ತೋರಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಇಡೀ ಪ್ರಸಂಗವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇದು ಯಾರೊಬ್ಬರ ಗೆಲುವೂ ಅಲ್ಲ ಮತ್ತು ಇನ್ನೊಬ್ಬರ ಸೋಲೂ ಅಲ್ಲ. ಇದೊಂದು ರೀತಿಯ ಬದಲಾವಣೆಯ ಪರ್ವ ಎಂದರೂ ತಪ್ಪಾಗಲಾರದು.

ಪುರಂದರದಾಸರು ಹೇಳಿರುವಂತೆ ನಿಂದಕರಿರಬೇಕು. ಕೇರಿಯಲ್ಲಿ ಹಂ.. ಇದ್ದ ಹಾಗೆ ಎನ್ನುವಂತೆ ಇಡೀ ಪ್ರಸಂಗವನ್ನು ಮೂಲಭೂತವಾದಕ್ಕೆ ಹೋಲಿಸುವರು ಮತ್ತು ಈ ಹಿಂದೇ ಉಪೇಂದ್ರ ಚಿತ್ರದಲ್ಲಿ ಆರ್ಚಕರಿಗೆ ಹೆಂಡ ಕುಡಿಸಿರಲ್ಲವೇ? ಬೇಡರ ಕಣ್ಣಪ್ಪ ಚಿತ್ರದಲ್ಲಿ ರಾಜಕುಮಾರ್ ಅವರು ಶಿವಲಿಂಗದ ಮೇಲೆ ಕಾಲಿಟ್ಟಿರಲಿಲ್ಲವೇ? ಶ್ರೀ ಮಂಜುನಾಥ ಚಿತ್ರದಲ್ಲಿ ಅರ್ಜುನ್ ಸರ್ಜಾ ಬಾಯಿಗೆ ಬಂದಂತೆ ಶಿವನಿಂದನೆ ಮಾಡಿರಲಿಲ್ಲವೇ? ಆಗ ನಡೆಯದ ಪ್ರತಿಭಟನೆ ಈಗೇಕೆ? ಎಂಬ ವಿಂತಡವಾದ ಮಂಡಿಸುವವರಿಗೇನೂ ಕಡಿಮೆ ಇರಲಿಲ್ಲ. ಹಿಂದೆಯೂ ಇಂತಹ ‍ಚಾರ್ವಾಕರುಗಳು ಇದ್ದರು. ಈಗಲೂ ಇಂತಹ ಚಾರ್ವಾಕರು ಇದ್ದಾರೆ ಮತ್ತು ಮುಂದೆಯೂ ಇಂತಹ ಚಾರ್ವಕರ ಸಂತಾನ ಇದ್ದೇ ಇರುತ್ತದೆ. ಅಂದು ಯಾರೋ ತಪ್ಪು ಮಾಡಿದ್ದರು ಇಂದು ನಾವೂ ಸಹಾ ಅದೇ ತಪ್ಪನ್ನು ಮಾಡುತ್ತೇವೆ ಎನ್ನುವುದು ವಿತಂಡವಾದವಾಗುತ್ತದೆ. ಅಂದು ಉಪೇಂದ್ರ ಮಾಡಿದ್ದನ್ನು ಖಂಡಿಸಲಿಲ್ಲ ಎನ್ನುವವರಿಗೆ ಅದನ್ನು ಸಮರ್ಥನೆ ಮಾಡಿದರೂ ಇರಲಿಲ್ಲ ಎನ್ನುವುದನ್ನು ನೆನಪಿಸಬೇಕಾಗಿದೆ. ಮನುಷ್ಯ ಖಾಯಿಲೆಯಿಂದ ಸತ್ತಹೋದ ಮೇಲೆ ಶವನ್ನು ಪೋಸ್ಟ್ ಮಾರ್ಟಂ ನಡೆಸಿ, ಆತ ಸಾವಿನ ಹಿಂದಿನ ನಿಜವಾದ ಕಾರಣವನ್ನು ತಿಳಿದು ಮುಂದೆ ಆ ರೀತಿಯಾಗಿ ಯಾರೂ ಸಾಯದಂತೆ ತಡೆಯುವುದು ಸರಿಯಾದ ಮಾರ್ಗವಾಗಿದೆಯೇ ಹೊರತು ಹೆಣವನ್ನು ಸುಮ್ಮನೇ ಕೊಳೆಯುವಂತೆ ಮಾಡುವುದು ಉತ್ತಮ ಲಕ್ಷಣವಲ್ಲ ಅಲ್ಲವೇ? ಈ ಸನ್ನಿವೇಶದಲ್ಲಿಯೂ ಸಹಾ ಅದೇ ರೀತಿಯನ್ನು ಅನುಸರಿಸಲಾಗಿದೆ.

ಮನೋರಂಜನೆ ಎನ್ನುವ ಹೆಸರಿನಲ್ಲಿ ಮತ್ತೊಂದು ಸಮಾಜವನ್ನು ಅವಹೇಳನ ಮಾಡುವಂತಹ ಚಿತ್ರಕಥೆ ಬರೆದವರೂ ಇಂತಹದ್ದೇ ಚಾರ್ವಾಕ ಮನಸ್ಥಿತಿಯವರೇನೋ ಎನ್ನುವ ಅನುಮಾನ ಮೂಡಿದೆ. ಸಮಾಜದಲ್ಲಿ ತಮ್ಮ ಪರಿಶ್ರಮದಿಂದ ಗೌರವಾದರಗಳನ್ನು ಗಳಿಸಿರುವಂತಹವರ, ಲೋಕಕಲ್ಯಾಣಕ್ಕಾಗಿ ಹೋಮ ಮಾಡುತ್ತಿದ್ದಂತಹವರ ವಿರುದ್ಧ ಕಾಲು ಕೆರೆದುಕೊಂಡು ಕುಚೋದ್ಯವನ್ನು ಮಾಡಿ ವಿಕೃತ ಅನುಭವವನ್ನು ಹೊಂದುವ ಮನಸ್ಸಿನ ವ್ಯಕ್ತಿಗಳಿಗೆ ಈ ಹೋರಾಟ ನಿಜಕ್ಕೂ ಪಾಠ ಕಲಿಸಿದೆ. ಸಮಾಜದಲ್ಲಿ ಯಾರೂ ಕೀಳಲ್ಲ. ಯಾರೂ ಮೇಲಲ್ಲ. ಎಲ್ಲರೂ ಅವರವರ ನಿಟ್ಟಿನಲ್ಲಿ ಅವರವರ ಕಾಯಕವನ್ನು ಮಾಡಿಕೊಂಡು ಹೋಗುತ್ತಾ, ಸಮಾಜದಲ್ಲಿ ಪರಸ್ಪರ ಸರಿ ಸಮಾನಾಗಿ ಜೀವನ ನಡೆಸುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಎತ್ತಿ ಹಿಡಿಯುವಂತೆ ಮಾಡಿದೆ.

ಸಾಕು ಪ್ರಾಣಿಗಳನ್ನು ಚಿತ್ರದಲ್ಲಿ ಬಳಸಿಕೊಂಡರೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಹಿಂದು ಮುಂದು ನೋಡುವ ಸೆನ್ಸಾರ್ ಮಂಡಲಿ, ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಕೀಳು ಮಟ್ಟದಲ್ಲಿ ನಡೆಸಿಕೊಂಡಂತಹ ಅನೇಕ ದೃಶ್ಯಗಳು ಇರುವಂತಹ ಈ ಚಿತ್ರಕ್ಕೆ ಅದು ಹೇಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಟ್ಟರು? ಎಂಬ ವಿಷಯವನ್ನೂ ತನಿಖೆ ನಡೆಸಬೇಕಿದೆ. ಹಿಂದೆ ಚಂದ್ರಶೇಖರ್ ಎಂಬ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ತಮ್ಮ ಚಿತ್ರಗಳಿಗೆ ಅನವಶ್ಯಕ ತೊಂದರೆ ಕೊಡುತ್ತಿದ್ದಾರೆ. ನಮ್ಮ ಆಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪ ಮಾಡಿ ಅವರನ್ನು ಅಲ್ಲಿಂದ ಹೊರ ಹಾಕಲು ಪ್ರಯತ್ನಿಸಿದ್ದ ಕನ್ನಡ ಚಿತ್ರರಂಗದ ಮಂದಿ ಈಗ ಇಂತಹ ಕೀಳು ಅಭಿರುಚಿಯ ದೃಶ್ಯಗಳನ್ನು ಹೇಗೆ ಸಮರ್ಥಿಸಿಕೊಂಡರು? ಎಂಬುದು ಚಿದಂಬರ ರಹಸ್ಯವಾಗಿದೆ.

ಇಡೀ ದೇಶದಲ್ಲಿ ಕನ್ನಡ ಚಿತ್ರಗಳು ಎಂದರೆ ಸದಭಿರುಚಿಯ ಚಿತ್ರಗಳು ಎಂಬ ಅಭಿಪ್ರಾಯವಿತ್ತು. ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಅನೇಕರು ಕುಡಿತವನ್ನು ಬಿಟ್ಟಿದ್ದು, ನಗರದಿಂದ ಮತ್ತೆ ಕೃಷಿಯತ್ತ ಮರಳಿದ್ದಂತಹ ಸಾಮಾಜಿಕ ಪರಿವರ್ತನೆಗಳಾದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿರುವಾಗ ಇತ್ತೀಚಿನ ದಿನಗಳಲ್ಲಿ ಅದೆಲ್ಲವೂ ಮಾಯವಾಗಿ ಲಾಂಗ್, ಮಚ್ಚು, ಪಿಸ್ತೂಲ್ಗಳನ್ನು ಹಿಡಿದು ಹೊಡೀ, ಬಡೀ, ಕಡೀ ಯಂತಹ ಚಿತ್ರಗಳನ್ನು ತಯಾರಿಸುತ್ತಾ ಯಾವುದೇ ಸಾಮಾಜಿಕ ಜವಾಬ್ಧಾರಿಯನ್ನೂ ಹೊಂದಿಲ್ಲದೇ ದುಡ್ಡು ಮಾಡುವುದೇ ಧ್ಯೇಯ ಎನ್ನುವಂತಹ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಒಂದು ಪಾಠವನ್ನಂತೂ ಕಲಿಸಿದೆ ಎಂದರೂ ತಪ್ಪಾಗಲಾರದು.

ತಪ್ಪು ಮಾಡುವುದು ಮನುಷ್ಯರ ಸಹಜ ಗುಣ. ಮಾಡಿದ ತಪ್ಪನ್ನು ಒಪ್ಪಿಕೊಂಡು ಸರಿದಾರಿಯಲ್ಲಿ ನಡೆಯುವುದು ಮೆಚ್ಚಬೇಕಾದ ಲಕ್ಷಣ. ಇಲ್ಲಾ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತೇವೆ. ನಾವು ಮಾಡುವುದೇ ಸರಿ ಎಂದು ಹೋದಾಗಲೇ ಇಂತಹ ಸಂಘರ್ಷಕ್ಕೆ ಈಡು ಮಾಡುವುದಲ್ಲದೇ ಸಮಾಜದ ಸ್ವಾಸ್ಥ್ಯವನ್ನು ಮತ್ತು ನೆಮ್ಮದಿಯನ್ನು ಹಾಳು ಮಾಡುವುದಲ್ಲದೇ ವಿನಾ ಕಾರಣ ದ್ವೇಷ ಮತ್ತು ಅಸೂಯೆಗಳನ್ನು ಹರಡುತ್ತವೆ. ಬಹುಶಃ ಇಂತಹ ಕ್ಲಿಷ್ಟಕರ ಸಮಸ್ಯೆ ಅತ್ಯಂತ ಸುಗಮವಾಗಿ ಪರಿಹಾರವಾಗುವ ಮೂಲಕ ಇನ್ನು ಮುಂದೆ ಇಂತಹ ತಪ್ಪನ್ನು ಮರುಕಳಿಸಬಾರದು ಎಂಬ ಅಂಶ ಎಲ್ಲರ ಹೃನ್ಮನಗಳಿಗೆ ನಾಟಿದೆ ಎನಿಸುತ್ತದೆ ಅಲ್ವೇ?

ಕಡೆಯ ಹನಿ: ಎಲ್ಲಾ ಬ್ರಾಹ್ಮಣರೂ ಅರ್ಚಕರಲ್ಲಾ. ಹಾಗೆಯೇ ಎಲ್ಲಾ ಅರ್ಚಕರೂ ಬ್ರಾಹ್ಮಣರಲ್ಲ. ಹಾಗಾಗಿ ಅರ್ಚಕರನ್ನು ಅವಹೇಳನ ಮಾಡುವುದು ಕೇವಲ ಒಂದು ಜಾತಿಯ ಅವಹೇಳನವಾಗದೇ ಅದು ಇಡೀ ಹಿಂದೂ ಸಮಾಜವನ್ನು ಅವಹೇಳನ ಮಾಡಿದಂತಾಗುತ್ತದೆ. ಹಿಂದಿನಂತೆ ಹಿಂದುಗಳು ಹಿಂದುಳಿಯದೇ, ಜಾಗೃತರಾಗಿ ಒಗ್ಗಟ್ಟಾಗಿ ಮುಂದುವರೆದಿದ್ದಾರೆ. ಹಾಗಾಗಿ ಇನ್ನು ಮುಂದೇ ಯಾರೇ ಆಗಲೀ ಹಿಂದೂಗಳ ಭಾವನೆಗಳ ವಿರುದ್ಧ ಇಂತಹ ಚೆಲ್ಲಾಟವಾಡುವ ದುಸ್ಸಾಹಸಕ್ಕೆ ಕೈ ಹಾಕದಿರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಬೌದ್ಧಿಕ ದಿವಾಳಿತನ

ಒಂದು ಸಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ.

ಬ್ರಾಹ್ಮಣರು ತಮ್ಮ ಜಾತಿಗೆ ಅವಮಾನ ಮಾಡಲಾಗಿದೆ ಆ ಪೂಜಾರಿ ಪಾತ್ರಧಾರಿಯ ಹೆಗಲಮೇಲೆ ಕಾಲಿಟ್ಟ ದೃಶ್ಯವನ್ನು ಕತ್ತರಿಸಬೇಕೆಂದು ಪ್ರತಿಭಟನೆ ಮಾಡುತ್ತಾರಂತೆ..😛

ಆದರೆ ಮತ್ತೊಬ್ಬ ಸಹಕಲಾವಿದನ ತಲೆಯಮೇಲೆ ಕಾಲಿಟ್ಟರು ಅದನ್ನು ಕೇಳುವವರು ಯಾರಿಲ್ಲ ಯಾಕೆಂದರೆ ಇಲ್ಲಿ ಮನುಷ್ಯನಿಗಿಂತ ಆತ ಪ್ರತಿನಿಧಿಸುವ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ…🤨

ಒಂದುವೇಳೆ ಪೂಜಾರಿಯ ಸೀನನ್ನು ಕತ್ತರಿಸುವುದಾದರೆ ಸಹಕಲಾವಿದನ ಸೀನನ್ನು ಕತ್ತರಿಸಬೇಕು ಅಷ್ಟೇ ಇಲ್ಲಿ ಎಲ್ಲರೂ ಒಂದೇ ಯಾರು ವಿಶೇಷರಲ್ಲ…👍

ಈ ರೀತಿಯಾದ ಇನ್ನೂ ಅನೇಕ ವಿತಂಡವಾದಗಳು ನೆನ್ನೆ ಮೊನ್ನೆಯಿಂದ ಆರಂಭವಾಗಿದೆ. ಈ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿತಂಡ ವಾದ ಮಂಡನೆ ಮಾಡುತ್ತಿರುವವರೆಲ್ಲರೂ ಅನ್ಯ ಧರ್ಮೀಯರಾಗಿರದೇ ನಮ್ಮ ಹಿಂದೂಗಳೇ ಎನ್ನುವುದು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಈ ರೀತಿಯಾಗಿ ಓತ ಪ್ರೋತವಾಗಿ ವಾದ ಮಂಡಿಸುತ್ತಿರುವ ಬೌದ್ಧಿಕ ದಿವಾಳಿತನದ ಬಗ್ಗೆ ನಿಜಕ್ಕೂ ಕಾಳಜಿಯಾಗುತ್ತಿದೆ.

ಆರಂಭದಿಂದಲೂ ಹಿಂದೂಗಳನ್ನು ಒಡೆಯುವ ಹುನ್ನಾರ ನಡೆಯುತ್ತಲೇ ಇತ್ತು. ಹಾಗೆ ಹಿಂದೂಗಳನ್ನು ಒಡೆಯ ಬೇಕೆಂದರೆ ಅವರಲ್ಲಿಯೇ ಒಡಕು ಮೂಡಿಸಬೇಕು, ಹಾಗೆ ಒಡಕು ಮೂಡಿಸಬೇಕೆಂದರೆ ಅವರಿಗೆ ಸುಲಭವಾಗಿ ಸಿಕ್ಕಿದ್ದೇ ಬ್ರಾಹ್ಮಣರು. ಹಾಗಾಗಿ ಅವರು ಬ್ರಾಹ್ಮಣರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಅವರ ವಿರುದ್ಧ ಇತರೇ ಹಿಂದೂಗಳನ್ನು ಎತ್ತಿ ಕಟ್ಟುವುದಕ್ಕೆ ನಿರಂತರವಾಗಿ ಪ್ರಯಾಸ ಪಡುತ್ತಲೇ ಇದ್ದರು. ಕೆಲವು ಬುದ್ಧಿ ಜೀವಿ ಎನಿಸಿಕೊಂಡವರು ತಮ್ಮ ಲೇಖನದ ಮೂಲಕವೋ ಇಲ್ಲವೇ ತಮ್ಮ ಚಲನ ಚಿತ್ರಗಳಲ್ಲಿ ಕಥೆಗೆ ಅನುಗುಣವಾಗಿ, ಇಲ್ಲವೇ ಕಥೆಗೆ ಪೂರಕವಾಗಿದೆ ಎಂದು ಒಂದೋ ಇಲ್ಲಾ ಎರಡು ದೃಶ್ಯಗಳಲ್ಲಿ ಬ್ರಾಹ್ಮಣರನ್ನು ನಿಂದಿಸುವಂತಹ ಸನ್ನಿವೇಶಗಳನ್ನು ತುರುಕುವ ಮೂಲಕ ವಿಕೃತ ಮನಸ್ಥಿತಿಯನ್ನು ಮೆರೆಸುತ್ತಿದ್ದರು.

ಅಂದು ಕಿತ್ತೂರು ಸಂಸ್ಥಾನದಲ್ಲಿ ಇದ್ದ ಮಲ್ಲಪ್ಪ ಶೆಟ್ಟರ ಸಂತಾನ ಇಂದು ರಕ್ತ ಬೀಜಾಸುರರಂತೆ ಬುದ್ಧಿ ಜೀವಿಗಳು ಕಮ್ಯೂನಿಷ್ಟರು ಮತ್ತು ಜಾತ್ಯಾತೀತ ರಾಜಕಾರಣಿಗಳ ರೂಪದಲ್ಲಿ ದೇಶಾದ್ಯಂತ ಹರಡಿ ಹಿಂದೂಗಳನ್ನು ಜಾತಿ ಜಾತಿಯಡಿಯಲ್ಲಿ ಒಡೆದು ಹಿಂದೂ ಧರ್ಮವನ್ನೂ ಭಾರತವನ್ನೂ ಛಿದ್ರ ಮಾಡುವ ಹುನ್ನಾರ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದಾರೆ. ಈ‌ ಕುಕೃತ್ಯಕ್ಕೆ ಮೊದಲು ಕ್ರೈಸ್ತ ಮಿಷನರಿಗಳು ಮತ್ತು ಪಾಕಿಸ್ತಾನದ ಬೆಂಬಲವಿತ್ತು. ಈಗ ಅವರ ಜೊತೆ ಖಲೀಸ್ಥಾನಿಗಳು ಮತ್ತು ನಮ್ಮ ವಿವಿಧ ಮಠಾಧಿಪತಿಗಳೂ‌ ಕೈ ಜೋಡಿಸಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ. ಬ್ರಿಟೀಷರೂ ಹಿಂದೂಗಳನ್ನು ಒಡೆಯಲು ಇದೇ ಬ್ರಾಹ್ಮಣರನ್ನೇ ನಿಂದಿಸುತ್ತಿದ್ದರು.‌ ಈಗಲೂ ಹಾಗೆಯೇ ಬ್ರಾಹ್ಮಣರ ಮುಖಾಂತರ ಹಿಂದೂಗಳನ್ನು ಒಡೆಯುವ ಹುನ್ನಾರ.

ಈಗ ವಿವಾದ ಎಬ್ಬಿಸಿರುವ ಚಿತ್ರದಲ್ಲಿ‌ ಬ್ರಾಹ್ಮಣರ‌‌ ನಿಂದನೆ ಕೇವಲ ಒಂದು ಸನ್ನಿವೇಶದಲ್ಲಿ ಆಗಿದ್ದಲ್ಲಿ ಕಥೆಗೆ ಪೂರಕ ಎಂದು ಹಿಂದೆ ಸುಮ್ಮನಿದ್ದಂತೆ ಈಗಲೂ ಬ್ರಾಹ್ಮಣರು ಸುಮ್ಮನಿರುತ್ತಿದ್ದರೋ ಏನೋ? ಆದರೆ ದುರಾದೃಷ್ಟವಶಾತ್ ಇಡೀ ಸಿನಿಮಾದಲ್ಲಿ ಬ್ರಾಹ್ಮಣರ ಅವಹೇಳನ ಮಾಡುವಂತಹ ಹತ್ತಾರು ದೃಶ್ಯಗಳು ಇರುವುದು ನಿಜಕ್ಕೂ ದುಖಃಕರವೇ ಸರಿ.

ನಾಯಕನನ್ನು ವಿಜೃಂಭಿಸಲು, ಕಥೆಗೆ ಪೂರಕ ಎನ್ನುವ ಸಬೂಬು ನೀಡಿ ನಾಯಕ ಹೋಮ ಮಾಡುತ್ತಿದ್ದ ಪುರೋಹಿತರ ಭುಜದ ಮೇಲೆ ಕಾಲು ಇಡುವುದು, ನಂತರ ಪುರೋಹಿತರನ್ನು ತಲೆಕೆಳಗೆ ನೇತು ಹಾಕಿ ಅವರ ಗಡ್ಡವನ್ನು ಕತ್ತರಿಸುವುದು ಎಷ್ಟು ತಪ್ಪು ಎಂದು ಹೇಳುತ್ತೇವೆಯೋ ಅದೇ ರೀತಿ ಸಹ ಕಲಾವಿದನ ತಲೆಯ ಮೇಲೆ ಕಾಲನ್ನು ಇಡುವುದನ್ನೂ ಖಂಡಿಸುತ್ತೇವೆ. ಕೆಲ ತಿಂಗಳುಗಳ ಹಿಂದೆ ವಿನಯ್ ಗುರೂಜಿ ಎಂಬ ಸ್ವಘೋಷಿತ ಅವಧೂತರೊಬ್ಬರು ಈಜುಕೊಳದಲ್ಲಿದ್ದ ತಮ್ಮ ಭಕ್ತನ ತಲೆಮೇಲೆ ಕಾಲಿಟ್ಟಾಗಲೂ ಆದನ್ನು ಖಂಡಿಸಿದ್ದೆವು. ತಪ್ಪು ಯಾರು ಮಾಡಿದರೂ ಅದು ತಪ್ಪೇ ಅದರ ಕುರಿತಂತೆ ಯಾವುದೇ ತಾರತಮ್ಯವಿಲ್ಲ.

ನಮ್ಮ ಧರ್ಮದಲ್ಲಿ ಪ್ರತಿಯೊಬ್ಬರಲ್ಲೂ ಭಗವಂತನನ್ನು ಕಾಣುತ್ತೇವೆ. ಅದು ಮನುಷ್ಯ, ಪ್ರಾಣಿ, ಪಶು ಪಕ್ಷಿ ಕಡೆಗೆ ವಾಹನಗಳಲ್ಲಿಯೂ ದೇವರನ್ನು ಕಾಣುತ್ತೇವೆ. ಅಕಸ್ಮಾತ್ ತಿಳಿದೋ ತಿಳಿಯದೋ ಒಬ್ಬರ ಕಾಲು ಮತ್ತೊಬ್ಬರಿಗೆ ತಗುಲಿದರೇ ಸಾಕು. ನಮಗೆ ನಮ್ಮ ಹಿರಿಯರು ಕೂಡಲೇ ಅವರಲ್ಲಿರುವ ಭಗವಂತನಿಗೆ ನಮ್ಮಿಂದ ಅಪಚಾರವಾಗಿದೆ ಎಂದು ಅವರನ್ನು ಮುಟ್ಟಿ ನಮಸ್ಕಾರ ಮಾಡುವನ್ನು ಹೇಳಿಕೊಟ್ಟಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ, ಭೂಮಿಯನ್ನು ಸ್ಪರ್ಷಿಸಿ ಭೂತಾಯಿ ಎಂದು ನಮಸ್ಕರಿಸುತ್ತೇವೆ. ಹಸುಗಳನ್ನು ಸಹಾ ಗೋಮಾತೇ ಎಂದೇ ಪೂಜಿಸುತ್ತೇವೆ, ನಮಸ್ಕರಿಸುತ್ತೇವೆ. ಇನ್ನು ನಾವು ಓಡಾಡಲು ಬಳಸುವ ಕುದುರೆಯನ್ನಾಗಲೀ ಇಲ್ಲವೇ ವಾಹನಗಳನ್ನು ಹತ್ತಿ ಕೂರುವ ಮುನ್ನ ಅದಕ್ಕೆ ನಮಸ್ಕರಿಸಿಯೇ ಕುಳಿತು ಕೊಳ್ಳುವ ಸಂಸ್ಕಾರ ನಮ್ಮದಾಗಿದೆ.

ನೆನ್ನೆ ಮೊನ್ನೆ ಬ್ರಾಹ್ಮಣರು ಜಾಗೃತಗೊಂಡು ದಿಟ್ಟತನದಿಂದ ನಡೆಸುತ್ತಿರುವ ಈ ಹೋರಾಟದ ಪರಿಣಾಮ ಆ ಚಿತ್ರದ ನಿರ್ದೇಶಕ ಕ್ಷಮೆಯಾಚಿಸಿದ್ದಲ್ಲದೇ, ಆ ಚಿತ್ರದಲ್ಲಿದ್ದ ಎಲ್ಲಾ ಅವಹೇಳನಕಾರಿ ದೃಶ್ಯಗಳನ್ನು ಕತ್ತರಿಸಿ ಹಾಕಲು ಒಪ್ಪಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಹೋರಾಟ ಕೇವಲ ಬ್ರಾಹ್ಮಣರ ಜಾತಿಗೆ ಮೀಸಲಾಗಿರುವ ಹೋರಾಟ ಎಂದು ಭಾವಿಸಿದ್ದರೆ ಅದು ಅಂತಹವರ ಬೌದ್ಧಿಕ ದಿವಾಳಿತನ ಎನ್ನಬೇಕಾಗುತ್ತದೆ.

ಹೋರಾಟ ಕೇವಲ ಬ್ರಾಹ್ಮಣರ ಹೋರಾಟವಾಗಿರದೇ, ಸಕಲ ಹಿಂದೂ ಪರ ಹೋರಾಟವಾಗಿದೆ. ಈ ‌ಹೋರಾಟದ ಪರಿಣಾಮವಾಗಿ ಇನ್ನು‌ ಮುಂದೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಯಾವುದೋ ಒಂದು ಜಾತಿ, ಧರ್ಮದ ಕುರಿತಂತೆ ಇಂತಹ ವಿವಾದಾತ್ಮಕ ಕಥೆ ಸಂಭಾಷಣೆಗಳನ್ನು ಬರೆಯುವ, ಅಂತಹ ಚಿತ್ರಗಳನ್ನು ನಿರ್ದೇಶಿಸುವ ಇಲ್ಲವೇ ನಿಮಾಣ ಮಾಡುವ ಮುನ್ನ ಹತ್ತು ಹಲವಾರು ಬಾರಿ ಯೋಚಿಸುತ್ತಾರೆ. ಇನ್ನು ಮುಂದೆ ನಟ ನಟಿಯರು ಖಂಡಿತವಾಗಿಯೂ ಯಾವುದೇ ಜಾತಿ ಅಥವಾ ಧರ್ಮವನ್ನು ಅವಹೇಳನ ಮಾಡುವ ದೃಶ್ಯಗಳಲ್ಲಿ ನಟಿಸುವ ದುಸ್ಸಾಹಸಕ್ಕೆ ಇಳಿಯುವುದಿಲ್ಲ ಎನ್ನುವ ಆಶಾಭಾವನೆ ಈ ಪ್ರತಿಭಟನೆಯ ಮೂಲಕ ಮೂಡಿದೆ.

ಹಿಂದೂ ಎದ್ದರೆ ದೇಶ ಎದ್ದೀತು. ಹಿಂದೂ ಉಳಿದರೆ ಮಾತ್ರವೇ ದೇಶ ಉಳಿದೀತು. ಹಿಂದೂಗಳು ನೆಮ್ಮದಿಯಾಗಿದ್ದಲ್ಲಿ ಮಾತ್ರವೇ ಈ ದೇಶದಲ್ಲಿ ಅನ್ಯಧರ್ಮೀಯರೂ ನೆಮ್ಮದಿಯಾಗಿ ತಮ್ಮ ತಮ್ಮ ಥರ್ಮಾಚರಣೆಯನ್ನು ಮಾಡಿಕೊಳ್ಳುತ್ತಾ ಬಾಳಬಹುದು ಇಲ್ಲದಿದ್ದಲ್ಲಿ ಯಾವುದೋ ಒಂದು ಧರ್ಮಾನುಸಾರವಾಗಿ ಬಾಳಬೇಕಾದ ಸರ್ವಾಧಿಕಾರಿತನದ ಅನಿವಾರ್ಯತೆ ಬಂದೊದಗಬಹುದು.

ಈ‌ ಪ್ರತಿಭಟನೆಯ ಮೂಲಕ ಸಮಸ್ತ ಹಿಂದೂಗಳ ಒಗ್ಗಟ್ಟಿಗೆ ಬುನದಿ ಹಾಕಿದೆ ಎಂದರೂ ತಪ್ಪಾಗಲಾರದು. ಇಂದು ಕನ್ನಡಿಗರು ನಡೆಸಿದ ಹೋರಾಟದ ಮೂಲಕ ಕನ್ನಡ ಚಿತ್ರರಂಗ ಮಾರ್ಪಾಟಾದಲ್ಲಿ ಕ್ರಮೇಣ ಈ ಉತ್ತಮ ಬೆಳವಣಿಗೆಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಅಂತಿಮವಾಗಿ ಹಾಲಿವುಡ್ಡಿನಲ್ಲೂ ಬದಲಾವಣೆ ಗಾಳಿ ಬೀಸುವುದರಲ್ಲಿ ಅನುಮಾನವೇ ಇಲ್ಲ.

ಹಿಂದೂಗಳು ಎಂದೂ, ಯಾವತ್ತೂ, ಯಾರ ಮೇಲೂ ಹಿಂದೂ ಧಾಳಿ ನಡೆಸಿಲ್ಲ ಮತ್ತು ಮುಂದೂ ಧಾಳಿ ನಡೆಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಹಿಂದಿನಂತೆ ತನ್ನ ಮೇಲೆ ಅವ್ಯಾಹತವಾಗಿ ಧಾಳಿ ನಡೆಸುತ್ತಿದ್ದರೆ ಸುಮ್ಮನೆ ಕೈ ಕಟ್ಟಿ ಕೂರುವ ಮನಸ್ಥಿತಿ ಇಂದಿನ ಹಿಂದೂಗಳಿಗಿಲ್ಲ.

ಸ್ನೇಹಕ್ಕೆ ಬದ್ಧ. ಸಮರಕ್ಕೂ ಸಿದ್ದ. ಸಮರ ಎಂದರೆ ಕೇವಲ ಖಡ್ಗ ಹಿಡಿದಾಗಲೀ ಇಲ್ಲವೇ ಮತ್ತೊಬ್ಬರ ಮೇಲೆ ದಾಳಿ ಮಾಡುವುದಲ್ಲ. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವುದರ ಮೇಲೆ ನಂಬಿಕೆ ಇರುವವರು ನಾವು. ಹಾಗಾಗಿ ಹಿಂದುಗಳು ಎಂದೂ ಮೂಲಭೂತವಾದಿಗಳಾಗಲು ಸಾಧ್ಯವೇ ಇಲ್ಲ.

ಏನಂತೀರೀ?
ನಿಮ್ಮವನೇ ಉಮಾಸುತ

ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಅಂದು ಶಂಕರನ ಮನೆಯಲ್ಲಿ ಅವರ ತಾತನ ಶ್ರಾದ್ಧಾಕಾರ್ಯವಿತ್ತು. ಅವರ ಮನೆಯಲ್ಲಿ ಶ್ರಾಧ್ಧ ಕಾರ್ಯವೆಂದರೆ ಅದೊಂದು ದೊಡ್ಡವರ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಎಲ್ಲಾ ಸಂಬಂಧೀಕರು ಒಟ್ಟಿಗೆ  ಅಗಲಿದ ಹಿರೀಕರ ನೆನೆಯುವ ನೆಪದಲ್ಲಿ ಒಂದುಗೂಡುವ ಸಮಾರಂಭವಾಗಿತ್ತು.  ಹಿರಿಯರು, ಕಿರಿಯರು, ನೆಂಟರು ಇಷ್ಟರು ಮತ್ತು ಬಹಳ ಆತ್ಮೀಯರೂ ಸೇರಿದಂತೆ ಸುಮಾರು 60-70 ಜನರು ಬರುತ್ತಿದ್ದ ಕಾರಣ  ಹೊತ್ತಿಗೆ ಮುಂಚೆಯೇ ಅಡುಗೆಯವರು ಮನೆಗೆ ಬಂದು  ಬೆಳಗಿನಿಂದಲೇ  ಮಡಿಯಲ್ಲಿ  ಶ್ರಾದ್ಧ ಆಡುಗೆಯ ಸಿದ್ದತೆಯಲ್ಲಿದ್ದರು.  ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಮಡಿಯ ವಾತಾವರಣ. ಚಿಕ್ಕ ಮಕ್ಕಳಿಗಂತೂ ಮನೆಯ ಹಜಾರದಿಂದ ಒಳಗೆ ಹೋಗುಲು ನಿಶಿದ್ಧವಿದ್ದು, ಅವರ ಎಲ್ಲಾ ಬೇಡಿಕೆಗಳು  ಅಲ್ಲೇ ಹಜಾರದಲ್ಲೇ ಈಡೇರುತ್ತಿದ್ದವು. ಅಲ್ಲಿಯೇ ಶಂಕರನ ಅತ್ತೆ  ಮಕ್ಕಳಿಗೆ ಮತ್ತು ವಯಸ್ಸಾದವರಿಗೆ  ತಿಂಡಿ ಕೊಟ್ಟರೆ ಉಳಿದವರಿಗೆ  ಬಿಸಿ ಬಿಸಿ ಕಾಫಿ ಕೊಡುತ್ತಾ ಲೋಕಾಭಿರಾಮವಾಗಿ ಹರಟುತ್ತಿದ್ದರು.

shradha1

ಗಂಟೆ ಸುಮಾರು 11 ಆಗುತ್ತಿದ್ದಂತೆಯೇ ಶ್ರಾದ್ಥ ಕರ್ಮಗಳನ್ನು ಮಾಡಿಸಲು ಪುರೋಹಿತರು ಮತ್ತು ಅವರ ಜೊತೆ ಇಬ್ಬರು ಬ್ರಾಹ್ಮಣರು ಬಂದು ಅವರಿಗೂ ಕಾಫಿಯ ಸೇವೆಯಾಗಿ ಎಲ್ಲರೂ ಮಡಿ ಉಟ್ಟುಕೊಂಡು ಗಂಟೆ ಸರಿಯಾಗಿ  12 ಬಾರಿಸುತ್ತಿದ್ದಂತೆಯೇ, ಮಧ್ಯಾಹ್ನ ಶುರುವಾಯಿತು. ಭಕ್ಷ ಎಲ್ಲಾ ಸಿದ್ದವಾಗಿದಯೇ? ನಾವು ಮಾಧ್ಯಾಹ್ನಿಕ ಶುರು ಮಾಡಬಹುದೇ ಎಂದು ಅಡುಗೆ ಭಟ್ಟರನ್ನು ಕುಳಿತಲ್ಲಿಂದಲೇ ಪುರೋಹಿತರು  ವಿಚಾರಿಸಿದರು.  ಅದಕ್ಕೆ  ಅಡುಗೆ ಮನೆಯ ಒಳಗಿನಿಂದಲೇ ಭಟ್ಟರು, ಓಹೋ ಅಗತ್ಯವಾಗಿ ಶುರು ಮಾಡಿಕೊಳ್ಳಿ, ಅಡುಗೆ ಎಲ್ಲಾ ಮಾಡಿಯಾಗಿದೆ. ಭಕ್ಷವೂ ಸಿದ್ಧವಾಗಿದೆ. ನಿಮ್ಮ ಸಮಯಕ್ಕೆ ಸರಿಯಾಗಿ ಉಳಿದೆಲ್ಲವೂ ಬಿಸಿ ಬಿಸಿಯಾಗಿ  ಸಿದ್ಧ ಮಾಡುತ್ತೇವೆ ಎಂದು ಪ್ರತ್ಯುತ್ತರಿಸಿದರು.

pavitra

ಬನ್ರಯ್ಯಾ, ಶ್ರಾಧ್ಧ ಕರ್ಮಗಳನ್ನು ಶುರು ಮಾಡಿ ಬಿಡೋಣ. ಆಮೇಲೆ ಬಂದವರೆಲ್ಲಾ ಊಟಕ್ಕೆ ಹೊತ್ತಾಯಿತು.  ಈ ಪುರೋಹಿತರು ಸರಿಯಿಲ್ಲ ಎಂದು ನನ್ನನ್ನೇ ಬೈದು ಕೊಳ್ಳುತ್ತಾರೆ ಎಂದು ಹಾಸ್ಯಮಯವಾಗಿಯೇ ಛೇಡಿಸುತ್ತಾ  ಬಾಳೇ  ಎಲೆಯಿಂದ ದೊನ್ನೆಗಳನ್ನು ಸಿದ್ಧಪಡಿಸಿ,  ದರ್ಬೆಯಿಂದ ಅಗತ್ಯವಿದ್ದ ಪವಿತ್ರಗಳನ್ನೂ ಮತ್ತು  ಕುರ್ಚವನ್ನೂ ಸಿದ್ಧ ಪಡಿಸಿಕೊಂಡು ಸಾಂಗೋಪಾಂಗವಾಗಿ ಶ್ರಾದ್ಧವನ್ನು ಆರಂಭಿಸಿದರು ಪುರೋಹಿತರು.   ಅಗಲಿದ ಹೆತ್ತವರಿಗೆ ಗೌರವಾರ್ಪಣೆ ಸಲ್ಲಿಸಲು ಒಬ್ಬರು ನಡೆಸುವ ಕ್ರಿಯಾ ವಿಧಿಯೇ ಶ್ರಾದ್ಥ. ಹೆತ್ತವರ ಜೊತೆಗೆ ಅವರ ಪೂರ್ವಜರನ್ನೂ ನೆನೆಸಿಕೊಳ್ಳುತ್ತಾ ,  ಶ್ರಾದ್ಧಕ್ಕೆ ಬಂದ ಬ್ರಾಹ್ಮಣರಲ್ಲಿ ಅವರ ಪಿತೃಗಳನ್ನು ಆಹ್ವಾನಿಸಿ ಅವರಿಗೆ  ಭಕ್ತಿ ರೂಪದಲ್ಲಿ ತಮ್ಮ  ಹೃತ್ಪೂರ್ವಕ ಕೃತಜ್ಞತೆ ಹಾಗು ವಂದನೆಗಳನ್ನು ವ್ಯಕ್ತಪಡಿಸಿ ಅವರಿಗೆ ಸಕಲ ರೀತಿಯಾದ ಭಕ್ಷ ಭೋಜನವನ್ನು ಬಡಿಸಿ ಅಂತಿಮವಾಗಿ ಯಥಾಶಕ್ತಿ ದಕ್ಷಿಣೆಯನ್ನು ಕೊಡುವುದು ಶ್ರಾಧ್ಧದಲ್ಲಿ ನಡೆವ ಸಂಪ್ರದಾಯ. ಹಾಗಾಗಿ  ಶ್ರಧ್ಧೆಯಿಂದ ಹಿರಿಯರನ್ನು ನೆನೆಸಿಕೊಳ್ಳುವುದೇ ಶ್ರಾಧ್ಧ ಎನಿಸಿಕೊಳ್ಳುತ್ತದೆ.  ಶ್ರಾದ್ಧವೆಲ್ಲಾ ಮುಗಿದು ಬ್ರಾಹ್ಮಣರ ಊಟವಾಗಿ ಪಿಂಡ ಪ್ರಧಾನವಾಗಿ ಎಲ್ಲರೂ ನಮಸ್ಕಾರಕ್ಕೆ  ಬನ್ನೀ ಎಂದಾಗ ಆಗಲೇ ಗಂಟೆ 2 ಆಗಿತ್ತು.  ಬಂದವರೆಲ್ಲರೂ  ಶಂಕರ ತಾತನವರ ಗುಣಗಾನ ಮಾಡುತ್ತಾ ಅವರಿಗೆ ಭಕ್ತಿಯಿಂದ ನಮಸ್ಕರಿಸಿ ಶಂಕರನ  ಅತ್ತೆ ಪ್ರಸಾದ ರೂಪದಲ್ಲಿ ಕೊಡುತ್ತಿದ್ದ  ವಡೆ, ಆಂಬಡೆ ಮತ್ತು ಸಜ್ಜಪ್ಪಾ ಸ್ವೀಕರಿಸಿದರು. ಅಯ್ಯೋ ಇಷ್ಟೊಂದು ಕೊಡಬೇಡಿ.  ಈ ಪಾಟಿ ಪ್ರಸಾದ ತಿಂದರೆ ಆಮೇಲೇ ಊಟ ಏನು ಮಾಡುವುದು ಎಂದು  ಬಂದವರಾರೋ ಎತ್ತಿದ ಆಕ್ಷೇಪಣೆಗೆ, ಅಯ್ಯೋ ಪರವಾಗಿಲ್ಲಾ  ಊಟ ಬಡಿಸಲು  ಇನ್ನು ಅರ್ಧಗಂಟೆ ಆಗುತ್ತದೆ. ಅಷ್ಟರಲ್ಲಿ ನೀವು ತಿಂದಿದ್ದೆಲ್ಲಾ ಕರಗಿ ಹೋಗಿರುತ್ತದೆ ತೆಗೆದುಕೊಳ್ಳಿ  ಎಂದು ಇನ್ನೂ ಸ್ವಲ್ಪ ಪ್ರಸಾದ ಕೊಟ್ಟಾಗ, ಬೇಡಾ ಬೇಡಾ ಎಂದವರೇ, ಮೂರ್ನಾಲ್ಕು ವಡೆ ಆಂಬೊಡೆ ಮತ್ತು ಸಜ್ಜಪ್ಪ ತಿಂದದ್ದು ವಿಶೇಷವಾಗಿತ್ತು.

ಶ್ರಾಧ್ಧವೆಲ್ಲಾ ಸಾಂಗೋಪಾಂಗವಾಗಿ ಮುಗಿದು, ಬ್ರಾಹ್ಮಣರಿಗೆ ಕೊಡಬೇಕಾದ ದಕ್ಷಿಣೆ ಎಲ್ಲಾ ಕೊಟ್ಟು ಶಂಕರನ ತಂದೆ ಮತ್ತು ಚಿಕ್ಕಪ್ಪಂದಿರು ಪಿಂಡವನ್ನು  ವಿಸರ್ಜಿಸಲು ಕೆರೆಯಕಡೆಗೆ ಹೋರಟಾಗ, ಮನೆಯ ಹೆಂಗಸರೆಲ್ಲಾ ಒಬ್ಬೊಬ್ಬರೇ, ತಾ ಮುಂದು ತಾ ಮುಂದು ಎಂದು ಕಸ ಗುಡಿಸಿ ಮೇಲೆ ಮೇಲೆ ಮನೆ ಒರೆಸಿ, ಚಾಪೆ ಹಾಕಿ  ಎಲ್ಲರೂ ಊಟಕ್ಕೆ ಬನ್ನಿ ಎಂದು ಕರದೇ ಬಿಟ್ತರು. ಅದಾಗಲೇ ಎನ್ನಾಗಿ ಹಸಿದಿದ್ದ ಮಕ್ಕಳು ಮತ್ತು ವಯಸ್ಸಾದವರು  ಗಬ್ಬಕ್ಕನೆ  ಚಾಪೆಯ ಮೇಲೆ ಕುಳಿತು, ಎಲೆ ಹಾಕುವುದನ್ನೇ ಬಕ ಪಕ್ಷಿಯಂತೆ ಕಾಯತೊಡಗಿದರು.  ಇದನ್ನು ಗಮನಿಸಿದ ಅಡುಗೆಯವರೂ ಕೂಡಲೇ ಎಲೆ ಬಡಿಸಿ ಲೋಟ ಇಟ್ಟು ನೀರು ಬಡಿಸಿ ಎಲೆ ಎಲ್ಲಾ ತೊಳಿದುಕೊಳ್ಳಿ, ಒಟ್ಟಿಗೇ ಎಲ್ಲರೂ ಒಂದೇ ಸಾರಿ ಕುಳಿತುಕೊಂಡು ಬಿಟ್ಟರೇ ನಮಗೂ ಬಡಿಸುವುದು ಸುಲಭವಾಗುತ್ತದೆ ಎಂದು ಹೇಳಿದರು. ಅವರು ಹೇಳುತ್ತಿರುವುದು ಸರಿ ಎಂದು ಖಾಲಿ ಇದ್ದ ಎಲೆಗಳಿಗೆ  ಏ ನೀನು ಕೂತ್ಕೋ ಎಂದರೆ, ಇಲ್ಲಾಪ್ಪಾ ನಾನು ಎರಡನೇ ಪಂಕ್ತಿಯಲ್ಲಿ ಕೂತ್ಕೋತೀನಿ. ಅರ್ಜೆಂಟ್ ಇದ್ದವರು ಕೂತ್ಕೊಳ್ಳಿ ಎಂದು ಹೇಳುವರು ಕೆಲವರಾದರೇ, ಯಾರು ಏನಾದರೂ ತಿಳಿದುಕೊಳ್ಳಲಿ  ಮಕ್ಕಳು ಸ್ಕೂಲಿನಿಂದ ಬರುವ ಸಮಯವಾಯ್ತು. ನಾನಂತೂ  ಊಟಕ್ಕೆ ಕೂತ್ಕೋತೀನಪ್ಪಾ ಎನ್ನುವರು ಇನ್ನು ಕೆಲವರು. ಒಟ್ಟಿನಲ್ಲಿ ಹಾಕಿದ ಎಲೆ ಮುಂದೆ  ಎಲ್ಲರೂ ಕುಳಿತು ಕೊಳ್ಳುವಷ್ಟರಲ್ಲಿಯೇ ಐದು ಹತ್ತು ನಿಮಿಷ ತಡವಾಗಿಯೇ ಹೊಯ್ತು. ಅಷ್ಟರಲ್ಲಿ ಪಿಂಡ ವಿಸರ್ಜನೆಗೆ ಹೋಗಿದ್ದವರೂ ಹಿಂದಿರುಗಿ ಕೈಕಾಲು ತೊಳೆದುಕೊಂಡು  ಅವರಿಗೆಂದೇ ಮೀಸಲಾಗಿದ್ದ ಎಲೆಗಳ ಮುಂದೆ ಕುಳಿತುಕೊಂಡು ಭಟ್ರೇ ಎಲ್ಲರೂ ಬಂದಾಯ್ತು ಇನ್ನು ಬಡಿಸಿ  ಎಂದರು.

ಎಲ್ಲರೂ ಎಲೆ ಮುಂದೆ ಕುಳಿತುಕೊಂಡರೂ ಎಷ್ಟು ಹೊತ್ತಾದರೂ ಬಡಿಸುವ ಲಕ್ಷಣಗಲೇ ಕಾಣಿಸುತ್ತಿಲ್ಲಾ. ಎಲ್ಲರ ಹೊಟ್ಟೆ ಕವ ಕವಾ ಎನ್ನುತ್ತಿದೆ ಆದರೆ ಎಲೆ ಹಾಕಿ ಹೋದ ಮೇಲೆ ಭಟ್ಟರೇ ನಾಪತ್ತೆಯಾಗಿದ್ದಾರೆ.  ಅದೇ ಸಮಯದಲ್ಲಿ ಅಡುಗೆ ಮನೆಯ ಹಿಂದಿನ ಹಿತ್ತಲಿನಲ್ಲಿ  ಎನೋ ಜೋರು ಜೋರಾದ ಮಾತು ಕತೆಯಾಗುತ್ತಿದ್ದ ಶಭ್ಧ ಕೇಳಿಬಂದು ಎನಪ್ಪಾ  ಅದು ಎಂದು ಶಂಕರ ನೋಡಲು ಹೋದರೆ, ಅಡುಗೆ ಭಟ್ಟರು ಮತ್ತು ಬ್ರಾಹ್ಮಣಾರ್ಥಕ್ಕೆ ಬಂದಿದ್ದ ಬ್ರಾಹ್ಮಣರೊಬ್ಬರು ಒಂದು ಪಟಾ ಪಟಿ ಚೆಡ್ಡಿಯನ್ನು ಹಿಡಿದುಕೊಂಡು ಇದು ನನ್ನದು, ಇದು ನನ್ನದು ಎಂದು ಜಗಳವಾಡುತ್ತಿದ್ದಾರೆ.  ಏನ್ರೀ  ನೀವು? ಬೆಳಗ್ಗೆಯೇ ಅಡಿಗೆ ಕೆಲಸಕ್ಕೆ ಇಳಿಯುವ ಮುಂಚೆಯೇ ಈ ಚೆಡ್ಡಿಯನ್ನು ತೆಗೆದಿಟ್ಟು ಮಡಿಯುಟ್ಟು ಅಡಿಗೆ ಕೆಲಸಕ್ಕೆ ಇಳಿದಿದ್ದೀನಿ. ಈಗ  ನೀವು ಬಂದು ಈ ಚೆಡ್ಡಿ ನನ್ನದು ಎಂದರೆ ಹೇಗೆ? ಎಂದು ಭಟ್ಟರು ಕೇಳಿದರೆ,  ಅಯ್ಯೋ ಮಧ್ಯಾಹ್ನ  ನಾನು ಬ್ರಾಹ್ಮಣಾರ್ಥಕಕ್ಕೆ ಕೂರುವ ಮೊದಲು ಇಲ್ಲೇ ನನ್ನ ಬಟ್ಟೆಗಲನ್ನೆಲ್ಲಾ  ಬಿಚ್ಚಿ ಎತ್ತಿಟ್ಟು ಮಡಿ ಉಟ್ಟು ಕೊಂಡು ಶ್ರಾದ್ಧಕ್ಕೆ ಕುಳಿತಿದ್ದೆ. ಇದು ನನ್ನದೇ ಚೆಡ್ಡಿ. ಅಡುಗೆಯವರು ದ್ರಾಕ್ಷಿ, ಗೋಡಂಬಿ, ಎಣ್ಣೆ , ತುಪ್ಪಾ ಪಾಕೀಟುಗಳನ್ನು  ಕದ್ದು ಕೊಂಡು ಹೋಗುತ್ತಾರೆ ಎಂದು ಕೇಳಿದ್ದೆ. ಆದರೆ ಇಲ್ಲಿ ನೋಡಿದರೆ ಚೆಡ್ಡಿಯನ್ನೇ ಕಳ್ತನ ಮಾಡುತ್ತಾರೆ ಎಂದು ತಿಳಿದಿರಲಿಲ್ಲ. ರಾಮ ರಾಮ ಎಂತಹ ಕಲಿಗಾಲ ಬಂತಪ್ಪಾ.  ಒಳ ಚೆಡ್ಡಿಯನ್ನೂ ಬಿಡುವುದಿಲ್ಲವಲ್ಲಪ್ಪಾ ಎಂದು ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರೆ ಆ ಬ್ರಾಹ್ಮಣರು.  ಏನ್ರೀ ನೀವು ನನ್ನನ್ನೇ ಕಳ್ಳಾ ಅಂತಿದ್ದೀರಿ? ನಾನು ಎಷ್ಟು ವರ್ಷಗಳಿಂದ ಇವರ ಮನೆಗೆ ಅಡುಗೆಗೆ ಬರುತ್ತಿದ್ದೀನಿ. ಯಾವಾಗಲಾದರೂ  ನನ್ನಿಂದಾ ಏನಾದರೂ ಕಳ್ತನಾ ಆಗಿದ್ಯಾ  ಅಂತ ವಿಚಾರಿಸಿ. ಸುಮ್ಮನೆ ಬಾಯಿಗೆ ಬಂದ ಹಾಗೆ ಏನೇನೋ ಹರಟಬೇಡಿ.  ದುಡ್ಡು ಕಾಸು ಅಂದ್ರೆ ಓಕೆ, ಅದೂ  ನಿಮ್ಮ ಚೆಡ್ಡೀನ ಕಳ್ತನ ಮಾಡೋ ಅಷ್ಟು ದರಿದ್ರ ನನಗೆ ಬಂದಿಲ್ಲ. ದುಡಿದು ತಿನ್ನುತ್ತೇನೇ ಹೊರತು ಈ ರೀತಿ ಚಿಲ್ರೆ ಕೆಲಸ ಮಾಡೋದಿಲ್ಲಾ  ಎಂದು ಭಟ್ಟರೂ ದಬಾಯಿಸುತ್ತಿದ್ದನ್ನು ನೋಡಿದ ಶಂಕರ.   ರೀ.. ರೀ..  ಭಟ್ಟೇ,  ಸ್ವಲ್ಪ ತಡೀರೀ.. ಅಲ್ಲಿ ಎಲ್ಲರೂ ಹೊಟ್ಟೆ ಹಸಿದು ಕೊಂಡು ಊಟಕ್ಕೆ  ಕುಳಿತಿದ್ದಾರೆ ಮೊದಲು ಅವರಿಗೆ  ಊಟ ಬಡಿಸಿ. ನಾನು ನಿಮ್ಮ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಸಮಾಧಾನ ಪಡಿಸಿ ಅವರನ್ನು ಅಡುಗೆ ಬಡಿಸಲು ಒಳಗೆ ಕಳುಹಿಸಿ  ನಿಧಾನವಾಗಿ ಎಲ್ಲವನ್ನೂ ವಿಚಾರಿಸಿ ಸಮಸ್ಯೆ ಬಗೆಹರಿಸಿ ಒಳಗೆ ಬರುವಷ್ಟರಲ್ಲಿ  ಅನ್ನಾ ತೊವ್ವೇ, ಅನ್ನಾ ಹುಳಿ, ಅನ್ನಾ ಸಾರು  ಮುಗಿಸಿ, ಪಾಯಸದ ಜೊತೆ ವಡೆ ವಿಚಾರಣೆ ನಡೆಯುತ್ತಿತ್ತು.

ಇದೇನೋ ಶಂಕರ ಇದ್ದಕ್ಕಿದ್ದಂತೆಯೇ ಊಟ ಬಿಟ್ಟು ಎದ್ದು ಹೋದೆ. ನೀನು ಹೊದ ಸ್ವಲ್ಪ ಹೊತ್ತಿನಲ್ಲಿಯೇ ಬಡಿಸೋಕೆ ಶುರುಮಾಡಿದರು. ಶಂಕರ ಎಲ್ಲಿ ಎಂದರೆ ಬರ್ತಾನೆ ನೀವು ಊಟ ಮಾಡಿ  ಅಂದ್ರೂ. ನೀನು ನೋಡಿದ್ರೇ ಈಗ ಬರ್ತಾ ಇದ್ಯಾ ಎಲ್ಲಿ ಹೋಗಿದ್ದೆ? ಅಂತಾ ಕೇಳಿದರು ಶಂಕರನ ಮಾವ. ಅಯ್ಯೋ ಬಿಡಿ ಮಾವ. ಅದೊಂದು ದೊಡ್ಡ ಕಥೆ. ನೀವು ಊಟ ಮಾಡಿ ಆಮೇಲೆ ನಿಧಾನವಾಗಿ ಹೇಳ್ತೀನಿ  ಎಂದ ಶಂಕರ.  ಏ, ಊಟ ಮಾಡ್ತಾ ಇರೋರು ನಾವು. ನೀನು  ಹೇಗಿದ್ರೂ ಮುಂದಿನ ಪಂಕ್ತಿಲೇ ಊಟ ಮಾಡ್ಬೇಕು.  ಹೇಗೂ ಸುಮ್ಮನೆ ಇದ್ಯಲ್ಲಾ ಹೇಳು ಕೇಳೋಣ ಎಂದು ಕಿಚಾಯಿಸಿದರು. ಸರಿ ನಿಮ್ಮಿಷ್ಟ ಎಂದು ಶಂಕರ  ಅಡುಗೆಯವರು ಮತ್ತು ಬ್ರಾಹ್ಮಣರು ಪಟಾಪಟಿ ಚೆಡ್ಡಿಗೆ  ಜಟಾಪಟಿಯ ವಿಷಯವನ್ನು ಸವಿರವಾಗಿ ತಿಳಿಸಿದ.  ಅದು ಸರಿ ಸಮಸ್ಯೆ ಎಲ್ಲಿತ್ತು? ಮತ್ತು ಹೇಗೆ ಬಗೆ ಹರೀತೂ ಅಂತಾನೇ  ಹೇಳ್ತಾನೇ ಇಲ್ವಲ್ಲಪ್ಪಾ ಎಂದು ಶಂಕರನ ಚಿಕ್ಕಪ್ಪ ತೆಗೆದರು ವರಾತ.

ಆದೇನೂ ಇಲ್ಲಾ ಚಿಕ್ಕಪ್ಪಾ. ಇಬ್ಬರೂ ಸರಿಯಾಗಿಯೇ ಹೇಳುತ್ತಿದ್ದರು ಎಂದ ಶಂಕರ. ಮತ್ತೇ? ಇಬ್ಬರೂ ಸರಿಯಾಗಿದ್ದರೆ ಚೆಡ್ಡಿ ಮಾತ್ರ ಒಂದೇ ಅದು ಹೇಗೆ ಸಾಧ್ಯ? ಎಂದು ಮತ್ತೆ ಪ್ರಶ್ನೆ ಹಾಕಿದರು. ಅದೇನಪ್ಪಾ ಆಯ್ತು ಎಂದರೆ, ಅಲ್ಲಿದ್ದ  ಪಟಾಪಟಿ ಚೆಡ್ಡಿ ಶಾಸ್ತ್ರಿಗಳದ್ದು. ಅಡುಗೆಯವರು  ಎತ್ತಿಟ್ಟಿದ್ದ ಚೆಡ್ದಿಯನ್ನು ನಮ್ಮ ಅಜ್ಜಿ ಗೊತ್ತಿಲ್ಲದೇ ಒಗೆಯುವುದಕ್ಕೆ ಹಾಕಿ ಬಿಟ್ಟಿದ್ದರು. ಅಲ್ಲಿಯವರೆಗೂ ಅಡುಗೆ  ಮಾಡುವುದರಲ್ಲಿ ನಿರತಾಗಿದ್ದ ಭಟ್ಟರು ಆ ಕಡೆ ಗಮನ ಕೊಟ್ಟಿರಲಿಲ್ಲ. ಯಾವಾಗ ಅಡುಗೆ ಎಲ್ಲಾ ಮುಗಿಸಿ ಸ್ವಲ್ಪ ಬಿಡುವಾಗಿದ್ದಾಗ, ಶಾಸ್ತ್ರಿಗಳು ಮಡಿ ಬಟ್ಟೆ ತೆಗೆದು ಬೇರೆ ಬಟ್ಟೆ ಹಾಕಿಕೊಳ್ಳುವಾಗ ಅಡುಗೇ ಭಟ್ಟರೂ ತಮ್ಮ ಬಟ್ಟೆಗಳತ್ತ ಹರಿಸುತ್ತಾರೆ ತಮ್ಮ ಚಿತ್ತ. ಆಗ ಅವರ ಚೆಡ್ಡಿ ಕಾಣದಿದ್ದಾಗ ಅದೇ ರೀತಿಯ ಚೆಡ್ಡಿಯನ್ನು ಶಾಸ್ತ್ರಿಗಳು ಹಾಕಿಕೊಂಡಿದ್ದನ್ನು ನೋಡಿದ ಪರಿಣಾಮವಾಗಿಯೇ ಇಷ್ಟೊಂದು ಪಜೀತಿ ಮತ್ತು ಗಡಿ ಬಿಡಿ.  ನಮ್ಮ ಅಜ್ಜೀ ಮಾಡಿದ ಕಿತಾಪತಿಗೆ ಭಟ್ಟರು ಮತ್ತು ಶಾಸ್ತ್ರಿಗಳು ಜಟಾಪಟಿ ಮಾಡಬೇಕಾಯ್ತು ಎಂದು ಹೇಳಿ ನಿಟ್ಟುಸಿರು ಬಿಟ್ಟ ಶಂಕರ. , ಅಲ್ಲಿಯವರೆಗೂ ತದೇಕ ಚಿತ್ತದಿಂದ ಶಂಕರನ ಕಥೆಯನ್ನೇ ಕೇಳುತ್ತಿದ್ದವರೆಲ್ಲಾರೂ ಜೋರಾಗಿ ಗಹ ಗಹಿಸಿ ಮಾಡುಕಿತ್ತು ಹೋಗುವಂತೆ ನಕ್ಕಿದ್ದೇ ನಕ್ಕಿದ್ದು. ನಿಧಾನವಾಗಿ ಏನೂ ನಡದೇ ಇಲ್ಲದಂತೆ ವಡೆ ಬಡಿಸುತ್ತಿದ್ದ ಭಟ್ಟರು ಎಲ್ಲರೂ ನಕ್ಕಿದ್ದನ್ನು ನೋಡಿ ಒಳಗೆ ಓಡಿ ಹೋದವರು  ಅಮೇಲೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಮೊದಲನೇ ಪಂಕ್ತಿ ಊಟ ಮಾಡುವಾಗ ಎಲ್ಲರೂ ನಗಲು ಶುರು ಮಾಡಿದ್ದು  ಎರಡನೇ ಪಂಕ್ತಿ ಮುಗಿದ ಮೇಲೂ ನಗುವಿನ ಮೆಲುಕು ಮುಂದುವರೆದಿತ್ತು.  ಕೇವಲ ಅಡುಗೆ ಭಟ್ಟರನ್ನಲ್ಲದೇ ಪರೋಕ್ಷವಾಗಿ ಕಾರಣೀಭೂತರಾಗಿದ್ದ ಅಜ್ಜಿಯನ್ನೂ ಎಲ್ಲರೂ ಕಾಡದೇ ಬಿಡಲಿಲ್ಲ.

ಮುಂದಿನ ವರ್ಷ  ಮತ್ತದೇ ಶ್ರಾದ್ಧದಲ್ಲಿ ಅದೇ ಅಡಿಗೆಯವರು ಬಂದಿದ್ದರು. ಮಧ್ಯಾಹ್ನ ಬಂದ ಪುರೋಹಿತರು ಅವರನ್ನು ನೋಡಿ, ಏನು ಭಟ್ಟರೇ ಆರಾಮೇ? ಈ ಬಾರಿ ನಿಮ್ಮ ಪಟಾ ಪಟಿ ಚೆಡ್ಡಿಗೆ ಸಮಸ್ಯೆ ಆಗಬಾರದೆಂದು ಈಗಿನ ಕಾಲದ ಸಣ್ಣ ವಯಸ್ಸಿನ ಬ್ರಾಹ್ಮಣರನ್ನು ಕರೆದು ಕೊಂಡು ಬಂದಿದ್ದೀನಿ. ಅವರು ನಿಮ್ಮ ರೀತಿ ಪಟಾ ಪಟಿ ಚೆಡ್ಡಿ ಹಾಕುವುದಿಲ್ಲ ಬಿಡಿ ಎಂದಾಗ ಮತ್ತೊಮ್ಮೆ ಎಲ್ಲರೂ ಅದೇ ಪ್ರಸಂಗವನ್ನು ನೆನೆದು  ನಕ್ಕಿದೇ ನಕ್ಕಿದ್ದು.

ಹೀಗೆ ಜೀವನದಲ್ಲಿ   ನಮ್ಮ ಸುತ್ತ ಮುತ್ತಲಿನಲ್ಲಿಯೇ ನಡೆಯುವ  ಅನೇಕ ಸಣ್ಣ ಪುಟ್ಟ ಪ್ರಸಂಗಗಳೇ ತಿಳಿದೋ ತಿಳಿಯದೋ ಹಾಸ್ಯಮಯವಾಗಿ ಎಲ್ಲರಿಗೂ ನಗೆ ಬುಗ್ಗೆಯನ್ನು ಉಕ್ಕಿಸುತ್ತದೆ.   ನಗುತ್ತಿರುವವರ ಆಯಸ್ಸು ಜಾಸ್ತಿ ಎಂದು ಎಲ್ಲೋ ಓದಿನ ನೆನಪು. ಹಾಗಾಗಿ ಸದಾ ನಗ್ತಾ ಇರೀ ಮತ್ತು ಎಲ್ಲರನ್ನೂ ನಗಿಸ್ತಾ ಇರಿ. ಜೀವನದಲ್ಲಿ ಹಾಸ್ಯ ಮಾಡ್ತಾ ಇರಬೇಕೇ  ಹೊರತು, ನಾವೇ  ಹಾಸ್ಯಾಸ್ಪದವಾಗಬಾರದು

ಏನಂತೀರೀ?