ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಗಳಿಗೆ ಹೋಗುವ  ಆಬಾವೃದ್ದರಾದಿಯಾದ ಸ್ವಯಂಸೇವಕರಿಗೆ  ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..  ಹಾಡು ಖಂಡಿತವಾಗಿಯೂ ತಿಳಿದೇ ಇರುತ್ತದೆ. ಈ ಹಾಡಿನ ಪಲ್ಲವಿ ಮತ್ತು ಚರಣಗಳಲ್ಲಿ ಬರುವ ಪ್ರತಿಯೊಂದು ಪದವೂ ಸ್ವಯಂಸೇವಕನ ಬಾಳಿನಲ್ಲಿ ಅಕ್ಷರಶಃ ಸತ್ಯವಾಗಿರುವುದಕ್ಕೆ ನನ್ನಂತಹ ಕೋಟ್ಯಾಂತರ ಸ್ವಯಂಸೇವಕರೇ ಸಾಕ್ಷಿಯಾಗಿದೆ. ಹಾಗಾಗಿ, ವಯಕ್ತಿಕವಾಗಿ ನನಗಂತೂ ಪ್ರತೀ ಬಾರಿ ಈ ಹಾಡು ಹಾಡುವಾಗಲಾಗಲೀ ಇಲ್ಲವೇ ಕೇಳುವಾಗಲೀ ಮೈ ರೋಮಾಂಚನ ಗೊಳ್ಳುತ್ತದೆ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ? ಎಂದು ನೀವೆಲ್ಲ ಯೋಚಿಸುತ್ತಿರುವುದಕ್ಕೆ ಕಾರಣವಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಕನ್ನಡ ಪತ್ರಿರಂಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಅದರಲ್ಲೂ ಚಲನಚಿತ್ರ ಪತ್ರಿಕಾರಂಗದಲ್ಲಿ ಪ್ರಖ್ಯಾತವಾಗಿರುವುದಲ್ಲದೇ, ಅವರ ಮಕ್ಕಳು ಸೊಸೆಯಂದಿರಾದಿಯಾಗಿ ಎಲ್ಲರೂ ಕನ್ನಡ ನಾಟಕ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಿರಿಯ ಲೇಖಕಿಯೊಬ್ಬರು ತಮ್ಮ ಆತ್ಮಚರಿತ್ರೆಯಲ್ಲಿ ರಾ.ಸ್ವ.ಸಂಘದ ಬಗ್ಗೆ ಬರೆದಿರುವ ಕೆಲವು ಅಪಸವ್ಯಗಳು ನಿಜಕ್ಕೂ ಮನಸ್ಸಿಗೆ ಛೇಧವೆನಿಸಿದರೂ, ವಾಮಪಂತೀಯ ಮನೋಸ್ಥಿತಿಯವರಿಂದ ಇನ್ನೇನು ಬಯಸಲು ಸಾಧ್ಯ ಎಂದೆನಿಸಿದರೂ, ತಮ್ಮ ಆತ್ಮಚರಿತೆಯ ಮಾರಾಟಕ್ಕೆ ಸುಮಾರು 100 ವರ್ಷಗಳ ಇತಿಹಾಸವಿರುವ ಈ ಸಂಘಟನೆಯ ಬಗ್ಗೆ ಈ ಪರಿಯ ಹಸೀ ಸುಳ್ಳುಗಳನ್ನು ಹೇಳುತ್ತಿರುವುದನ್ನು ಕೇಳಿಕೊಂಡು  ಸುಮ್ಮನಿರಲಾಗದೇ ಈ ಲೇಖನ ಬರೆಯಬೇಕಾಯಿತು.

ನಡೆಯಲಾರದೆ ತೆವಳುತಿದ್ದೆನು ನಡಿಗೆ ಕಲಿಸಿತು ಸಂಘವು

ನುಡಿಯಲಾರದೆ ತೊದಲುತಿದ್ದೆನು ನುಡಿಯ ಉಲಿಸಿತು ಸಂಘವು

ಎನ್ನುವ ಸಾಲಿನಂತೆ  1950ರ ದಶಕದಲ್ಲಿಯೇ ಸಂಘದ ಸಂಪರ್ಕ ನಮ್ಮ ತಂದೆಯವರಿಗೆ, ಮೈಸೂರು ಮತ್ತು ತುಮಕೂರಿನಲ್ಲಿ ಆದ ನಂತರ ಕ್ರಮೇಣ ನಮ್ಮ ತಂದೆ, ಚಿಕ್ಕಂಪದಿರೂ ಸ್ವಯಂಸೇವಕರಾದ ಕಾರಣ, ನಮ್ಮ ಮನೆ ಅಪ್ಪಟ ಸಂಘದ ಮನೆ. ಹೀಗಾಗಿ ನನಗೆ ಎರಡೂವರೆ ಮೂರು ವರ್ಷವಾಗಿ ನಡೆಯಲು ಮಾತನಾಡಲು ಬರುವಷ್ಟರಲ್ಲಿಯೇ ಬೆಂಗಳೂರಿನ ಶ್ರೀರಾಮ ಪುರದ ಶ್ರೀರಾಂ ಸಾಯಂ ಶಾಖೆಗೆ ನಮ್ಮ ಚಿಕ್ಕಪ್ಪ ಕರೆದುಕೊಂಡು ಹೋದ ಕಾರಣ, ಸಂಘದ ಪ್ರಭಾವ  ಶಾರೀರಿಕವಾಗಿ ಮತ್ತು  ದೈಹಿಕವಾಗಿ  ನನ್ನ ಜೀವನದ ಮೇಲೆ  ಪರಿಣಾಮ ಬೀರಿತು.

ಪಡೆದೆ ಉನ್ನತ ಜ್ಞಾನ ಸದ್ಗುಣ ಲಭಿಸಿ ಸಜ್ಜನ ಸಂಗವು                        || 1 ||

ಗುರಿಯ ಅರಿಯದೆ ತಿರುಗುತ್ತಿದ್ದೆನು ಮರೆತು ತನುವಿನ ಪರಿವೆಯ

ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ

ನನಗೆ ಐದಾರು ವರ್ಷಗಳು ಆಗುವಷ್ಟರಲಿ ನಾವು ನೆಲಮಂಗಲಕ್ಕೆ ಹೋದ ನಂತರವಂತೂ ಸಂಘದ ಸಂಪರ್ಕ ಇನ್ನೂ ಹೆಚ್ಚಾಯಿತು. ನಾನು ಸಾಯಂ ಶಾಖೆ, ಅಪ್ಪಾ ರಾತ್ರಿ ಶಾಖೆಗೆ ನಿತ್ಯವೂ ತಪ್ಪದೇ ಹೋಗುತ್ತಿದ್ದಾಗ ನಿಧಾನವಾಗಿ ಶಾಖೆಯಲ್ಲಿ ಹೇಳಿಕೊಡುತ್ತಿದ್ದ ಹಾಡುಗಳು, ಅಮೃತವಚನ, ಶ್ಲೋಕಗಳಿಂದಾಗಿ ನನ್ನ ಬೌದ್ಧಿಕ ವಿಕಸನವಾಗ ತೊಡಗಿತು.

ತಾಯೇ ಭಾರತೀ ನಿನ್ನ ಮೂರುತೀ.. ಎದೆಯ ಗುಡಿಯಲಿಟ್ಟು ಭಜಿಪೆ ದ್ವಲಿಪನಾರತಿ

ಹಿಮಗಿರಿ ಎಲ್ಲಿನ ಉನ್ನತ ಶಿಖರ ಕನ್ಯಾಕುಮರಿಯ ಹಿಂದು ಸಾಗರ ಹಾಡುಗಳು ನನ್ನಲ್ಲೀ ದೇಶಭಕ್ತಿಯನ್ನು ಮೂಡಿಸ ತೊಡಗಿತು

ಸಾಲವನು ಕೊಂಬಾಗ ಹಾಲೋಗ ರುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಎಂಬ ಶ್ಲೋಕವನ್ನು ಕೇಳುತ್ತಿದ್ದಂತೆಯೇ ಸಮಾಜದಲ್ಲಿ ಸ್ವಾಭಿಮಾನಿಯಾಗಿ ಹೇಗೆ ಜೀವಿಸಬೇಕು ಎನ್ನುವುದರ ಪಾಠವನ್ನು ಅರಿವಿಲ್ಲದ ಗುರುವಾಗಿ ಸಂಘಸ್ಥಾನದಲ್ಲಿ ಕಲಿತುಕೊಳ್ಳತೊಡಗಿದೆ.

ದಾರಿ ದೀಪದ ತೆರದಿ ಬೆಳಗಿಹ ವೀರಪುರುಷರ ಚರಿತೆಯ                      || 2 ||

ಶುದ್ಧಶೀಲಕೆ ಬದ್ಧನಾಗಿ ಪ್ರಬುದ್ಧನಾಗಿ ಬೆಳೆದೆನು

ಬುದ್ಧಶಂಕರ ಮಧ್ವ ಬಸವರ ಅಂಶವನು ಮೈ ತಳೆದೆನು

rss5ಕೆಲ ವರ್ಷಗಳ ನಂತರ ಬೆಂಗಳೂರಿನಲ್ಲಿ ಅಪ್ಪನ ಬಿಇಎಲ್ ಕಾರ್ಖಾನೆಯ ಬಳಿಗೆ ಮನೆಯನ್ನು ಬದಲಿಸಿದಾಗ, ಆ ಸಮಯದಲ್ಲಿ ಅಲ್ಲಿ ಸಂಘದ ಶಾಖೆ ಇಲ್ಲದಿದ್ದಾಗ, ಏಳೆಂಟು ವರ್ಷದ ಬಾಲಕನಾಗಿದ್ದ ನಾನೇ ಕೆಲವು ಹುಡುಗರನ್ನು ಜೋಡಿಸಿಕೊಂಡು ಶಾಖೆಯನ್ನು ಆರಂಭಿಸುವಷ್ಟರ ಮಟ್ಟಿಗೆ ನಾಯಕತ್ವದ ಗುಣವನ್ನು ಸಂಘ ಕಲಿಸಿಕೊಟ್ಟಿತ್ತು.  ಇದೇ ಸಮಯದಲ್ಲಿ  ನನ್ನ ತಂಗಿಯರೂ ಪ್ರತೀ ದಿನವೂ ನನ್ನ ಜೊತೆಗೇ ಸಂಘಸ್ಥಾನಕ್ಕೆ ಬರುತ್ತಿದ್ದ ಕಾರಣ, ಅವರಿಗೂ ಸಹಾ ಶಾಖೆಯಲ್ಲಿ ಹೇಳಿಕೊಡುತ್ತಿದ್ದ ಏಕಾತ್ಮತಾ ಸ್ತ್ರೋತ್ರ, ಹಾಡು, ಶ್ಲೋಕಗಳು, ಅಮೃತವಚನಗಳು ಕಂಠಸ್ಥವಾಗಿದ್ದಲ್ಲದೇ, ಶಾಖೆಗಳಿಗೆ ಪ್ರವಾಸಕ್ಕೆ ಬರುತ್ತಿದ್ದ ಹಿರಿಯ ಕಾರ್ಯಕರ್ತರುಗಳು ಹೇಳುತ್ತಿದ್ದ ಕಥೆಗಳ ಮೂಲಕ ಪಠ್ಯ ಪುಸ್ತಕಗಳಲ್ಲಿ ಓದಿರದಿದ್ದ ವೀರ ಸಾವರ್ಕರ್, ಆಜಾದ್, ಭಗತ್ ಸಿಂಗ್, ತಿಲಕರಂತಹ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ನಮ್ಮೆಲ್ಲರಿಗೂ ಆಗತೊಡಗಿದ್ದಲ್ಲದೇ, ಶ್ಲೋಕ ಮತ್ತು ಅಮೃತವಚನಗಳ ಮೂಲಕ ಆಚಾರತ್ರಯರಾದ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರುಗಳು ಅಲ್ಲದೇ ಸರ್ವಜ್ಞ, ಬಸವಣ್ಣ, ಅಕ್ಕಮಹಾದೇವಿಯವರ ವಚನಗಳು ಕಂಠಸ್ಥವಾಗುವ ಮೂಲಕ ಅವರ ಆದರ್ಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರತೊಡಗಿದವು.

ಜನುಮ ಜನುಮದ ಮೌಢ್ಯ ಭ್ರಾಂತಿಯ ಕಲುಷವೆಲ್ಲವ ತೊಳೆದೆನು || 3 ||

ದೇಶಕಾರ್ಯವೆ ಈಶ ಕಾರ್ಯವು ಎನುವ ತತ್ವವು ಶಾಶ್ವತ

ಪೂಜ್ಯ ಕೇಶವ ಪೂಜ್ಯ ಮಾಧವ ಚರಣವಿರಚಿತ ಸತ್ಪಥ

ನಾಶವಾಯಿತು ಮೋಹಪಾಶವು ಮಾತೆಗೆಲ್ಲ ಸಮರ್ಪಿತ   

ss3ಇನ್ನು ಶಾಖೆಯಲ್ಲಿ ಯಾವುದೇ ಜಾತಿ ಮತಗಳ ಬೇಧವಿಲ್ಲದೇ  ಎಲ್ಲರೂ ಕೂಡಿ ಅಟವಾಡುವುದು, ವ್ಯಾಯಾಮ ಮಾಡುವುದು, ಒಟ್ಟಿಗೆ ಒಂದೇ ಗಣವೇಶ ಧರಿಸಿಕೊಂಡು ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ ಯುಗದ ಹಣೆಯ ಬರಹ ತಿದ್ದಿ ಹಗೆಯಕುಲವ ತೊಡೆಯುವಾ … ಎನ್ನುವಂತೆ ಹೊರಟಿದೋ ಅಜಿಂಕ್ಯ ಸೇನೆ ರಾಷ್ಟ್ರಕಿದುವೇ ರಕ್ಷಣೆ ಎನ್ನುವಂತೆ  ಶಿಸ್ತಿನಿಂದ  ಪಥಸಂಚಲನ ಮಾಡುವ ಮೂಲಕ  ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಘೋಘಣೆಗೆ ಅನ್ವರ್ಥವಾಗಿ ಸಾಮರಸ್ಯತೆಯಿಂದ ನಡೆಯುವಂತಾಯಿತು.

rss1ಸಾಮಾನ್ಯವಾಗಿ ಸಂಘದಲ್ಲಿ  ಯಾರೂ ಸಹಾ ಎಂದೂ ಸಹಾ ನೀನು ಅದು ಮಾಡು ನೀನು ಇದು ಮಾಡು ಎಂದು ಹೇಳುವುದನ್ನು ಕೇಳಿಯೇ ಇಲ್ಲ. ಅಲ್ಲಿ  ನಾವೆಲ್ಲರೂ ಹೀಗೆ ಮಾಡೋಣ, ನಾವೆಲ್ಲರು ಹಾಗೆ ಮಾಡೋಣ ಎನ್ನುವ ಮೂಲಕ ಸಂಘದ ಅನುಶಾಸನಕ್ಕೆ ಸಂಘಸ್ಥಾನದಲ್ಲಿ ಇರುವವರೆಲ್ಲರೂ  ಬದ್ಧರಾಗುರಾಗುತ್ತಾರೆ ಎನ್ನುವುದುನಮಗೆ ಅರಿವಿಲ್ಲದಂತೆಯೇ ರಕ್ತಗತವಾಗಿ ಹೋಗುತ್ತದೆ. ಹಾಗಾಗಿಯೇ, 14-16 ವರ್ಷದ ಮುಖ್ಯ ಶಿಕ್ಷಕ್ ಕೊಟ್ಟ ಆಜ್ಞೆಗೆ 70ವರ್ಷದ ಸಂಘದ ಸರಸಂಘಚಾಲಕರ ಆದಿಯಾಗಿ ಪ್ರತಿಯೊಬ್ಬರೂ ಸ್ಪಂದಿಸುವ ಗುಣ ಬಹುಶಃ ಸಂಘದಲ್ಲಿ ಅಲ್ಲದೇ ಬೇರೆಲ್ಲೂ ಕಾಣಲಾಗದು ಎಂದರೆ ಅತಿಶಯವೆನಿಸದು.

rss6ಇನ್ನು ತರುಣಾವಸ್ಥೆಗೆ ಬರುವಷ್ಟರಲ್ಲಿ ಸಂಘ ಶಿಕ್ಷಾವರ್ಗ ಮತ್ತು ವಿವಿಧ  ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಯಾವ ಶಾಲಾ ಕಾಲೇಜಿನಲ್ಲಿಯೂ ಕಲಿಸಿಕೊಡದಂತಹ  ನಮಗೆ ಅರಿವಿಲ್ಲದಂತೆಯೇ ಸ್ವಾವಲಂಭಿಗಳಾಗಿ ನಮ್ಮ ಕೆಲಸಗಳನ್ನು ನಾವು ಮಾಡುವುದನ್ನು ಕಲಿತುಕೊಳ್ಳುವುದಲ್ಲದೇ, ಬೇರೆ ಬೇರೆ ಊರುಗಳಿಂದ ಬಂದಿರುವವರೊಂದಿಗೆ ಸುಲಭವಾಗಿ ಒಗ್ಗೂಡುವ ಗುಣ, ಸಂಘಸ್ಥಾನದಲ್ಲಿ ದೇಸೀ ಆಟಗಳನ್ನು ಆಡುವಾಗ ಮತ್ತು ಆಟಗಳನ್ನು ಆಡಿಸುವಾಗ ತೆಗೆದುಕೊಳ್ಳುವ ನಿರ್ಧಾರ ಮೂಲಕ  ನಾಯಕತ್ವದ ಗುಣ ತಂಡದ ನಿರ್ವಹಣೆ, ಸಂವಹನ ಕಲೆ, ಇನ್ನು ಬೌದ್ಧಿಕ್ ಮತ್ತು ಬೌಠಕ್ ಗಳ ಭಾಷಣ ಕಲೆಯ ಜೊತೆಗೆ ಉತ್ತಮ ಮಾತುಗಾರಿಕೆ ಕಲೆ ನಮಗೆ ಕರಗತವಾಗಿ ಹೋಗುತ್ತದೆ. ಇನ್ನು ನಮಗೆ ಸಂಗೀತದ ಕಡೆ ಆಸಕ್ತಿ ಇದ್ದಲ್ಲಿ, ಸಂಘದ ಘೋಷ್ ವಿಭಾಗದಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ತಾಳವಾದ್ಯ, ಶಂಖ, ವಂಶಿ ಹೀಗೆ ಹತ್ತು ಹಲವಾರು ವಾದ್ಯಗಳನ್ನು ಕಲಿತುಕೊಂಡು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿರುವ ಎಷ್ಟೋ ಸ್ವಯಂಸೇವರಿದ್ದಾರೆ

ಸಂಘದಲ್ಲಿ ಕಲಿಯುವ ಸಮಯ ಪ್ರಜ್ಞೆ, ಶಿಸ್ತು, ಸಂಯಮ ಸಮಾಜ ಸೇವೆ  ದೇಶಭಕ್ತಿಗಳ ಬಗ್ಗೆ ಒಂದೆರಡು ಉದಾಹರಣೆಯನ್ನು ಹೇಳಲೇ ಬೇಕು.

  • rss7ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದಲ್ಲಿ ಸರ್ಕಾರೀ ಸೇವೆಗಳು ಆಲ್ಲಿ ಆರಂಭವಾಗುವುದಕ್ಕೂ ಮುನ್ನವೇ ಸಂಘದ ಸ್ವಯಂಸೇವಕರು ಸದ್ದಿಲ್ಲದೇ ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎನ್ನುವಂತೆ ಸೇವಾ ನಿರತರಾಗಿರುವುದನ್ನು ಮಾಧ್ಯಮಗಳಲ್ಲಿ ತೋರಿಸದಿದ್ದರು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ  ನೋಡ ಬಹುದಾಗಿದೆ
  • ಅದೊಂದು ಬಡಾವಣೆಯಲ್ಲಿ ಸಾಯಂ ಶಾಖೆ ಪ್ರತೀ ನಿತ್ಯವೂ 5:30ಕ್ಕೆ ಆರಂಭವಾಗುತ್ತಿತ್ತು. ಸಂಘಸ್ಥಾನದ  ಎದುರಿಗೇ ಇದ್ದ ವಯೋವೃದ್ಧ ದಂಪತಿಗಳು 5:30ಕ್ಕೆ ಮುಖ್ಯ ಶಿಕ್ಷಕ್ ಸೀಟಿ ಹಾಕಿದಾಗ ತಮ್ಮ ಮನೆಯ ಹೊರಗಡೆ ಖುರ್ಚಿಯಲ್ಲಿ ಕುಳಿತು ಶಾಖೆಯಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡುತ್ತಿದ್ದರಂತೆ.  ಅದೊಮ್ಮೆ ಸೀಟಿಯನ್ನು ಮನೆಯಿಂದ ತರಲು ಮರೆತಿದ್ದ ಮುಖ್ಯಶಿಕ್ಷಕ್  ಆಜ್ಞೆಗಳ ಮೂಲಕಕವೇ ಶಾಖೆ ಆರಂಭಿಸಿದ್ದ. ಇದೇನಿದೂ ಇಷ್ಟು ಹೊತ್ತಾದರೂ ಶಾಖೆಯ ಸೀಟಿಯೇ ಕೇಳಿಸಲಿಲ್ಲವಲ್ಲಾ ಎಂದು ಸಂಘಸ್ಥಾನಕ್ಕೆ ಆ ವೃದ್ಧರು ಸೀಟಿ ಹಾಕದ ಕಾರಣವನ್ನು ವಿಚಾರಿಸಿಕೊಂಡು ಹೋಗಿ, ನೀವು ಸಮಯಕ್ಕೆ ಸರಿಯಾಗಿ ಹಾಕುವ  ಸೀಟೀಯಿಂದಲೇ ನಾನು ಮಧ್ಯಾಹ್ನದ ನಿದ್ದೆಯಿಂದ ಎದ್ದು ಶಾಖೆ ನಡೆಯುವುದನ್ನು ನೋಡಿ ಸಂತೋಷ ಪಡುತ್ತೇವೆ  ಎಂದಿದ್ದರಂತೆ.
  • ಕೆಲವರ್ಷಗಳ ಹಿಂದೆ  ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಸಮಯದಲ್ಲಿಯೇ ಗಣರಾಜ್ಯೋತ್ಸವವನ್ನು ಆಚರಿಸಿ ಅದರಲ್ಲಿ ಧ್ವಜಾರೋಹಣ ಮಾಡಿ ಕೆಲವು  ಹಿಂದೀಹಾಡುಗಳನ್ನು ಹಾಡುವ ಮತ್ತು ಅದಕ್ಕೆ ನೃತ್ಯವನ್ನು ಮಾಡಿ ಕಾರ್ಯಕ್ರಮವನ್ನು ಮುಗಿಸಿದ್ದನ್ನು ನೋಡಿ ಅರೇ ಭಾರತಮಾತೆಗೆ ಒಂದು ಘೋಘಣೆಯೇ ಇಲ್ಲವಲ್ಲಾ ಎಂಬ ಜಾಗೃತಿ ನನ್ನಲ್ಲಿ ಮೂಡಿ ಎಂದಿನಂತೆ ಬೋಲೋ….. ಭಾರತ್…… ಮಾತಾ….ಕೀ…ಎಂದು ಘೋಷಣೆ ಹಾಕಿದಕ್ಕೆ  ಜೈ … ಎಂದು ನೆರೆದಿದ್ದವರೆಲ್ಲರೂ ಪ್ರತಿಸ್ಪಂದನೆ ನಡೆಸಿದ್ದಲ್ಲದೇ ಕಾರ್ಯಕ್ರಮ ಮುಗಿದ ಕೆಲವೇ ಸೆಕೆಂಡುಗಳಲ್ಲಿ ಮೂರ್ನಾಲ್ಕು ಸಹೋದ್ಯೋಗಿಗಳು ಬಂದು ನೀವು   ಸ್ವಯಂ ಸೇವಕರು ಎಂದು ಗೊತ್ತೇ ಇರ್ಲಿಲ್ಲಾ ಎಂದರು.  ನಾನು ಸ್ವಯಂಸೇವಕ ಎಂದು ನಿಮಗೆ ಹೇಗೆ ತಿಳಿಯುತು? ಎಂದು ಕೇಳಿದಾಗ, ಅರೇ ಇದೇನ್ ಸಾರ್ ಹೀಗೆ ಹೇಳ್ತೀರಿ? ಭಾರತ ಮಾತೆಗೆ ಜೈ ಮತ್ತು ವಂದೇ ಮಾತರಂನ್ನು ಸಂಘದವರು ಬಿಟ್ಟರೆ ಮತ್ತಾರು ಹೇಳುವುದಿಲ್ಲ ಎಂದಾಗ ಆಶ್ಚರ್ಯ ಮತ್ತು ಖೇದ ಎರಡೂ  ಒಟ್ಟಿಗೆ ಮೂಡಿತು.
  • ಕೆಲ ತಿಂಗಳುಗಳ ಹಿಂದೆ ರಾಮಜನ್ಮಭೂಮಿ ನಿಧಿ ಸಂಗ್ರಹಣಕ್ಕೆ ಮನೆ ಮನೆಗಳಿಗೆ ಹೋಗಿದ್ದಾಗ, ಅದೊಂದು ಮನೆಯಲ್ಲಿದ್ದ ವಯೋವೃದ್ಧ ಅಜ್ಜಿಯೊಬ್ಬರು ನಾವು ಸಂಘದ ಕಡೆಯಿಂದ ರಾಮ ಮಂದಿರ ಕಟ್ಟಲು ನಿಧಿ ಸಂಗ್ರಹಕ್ಕೆ ಬಂದಿದ್ದೇವೆ ಎಂದು ಕೇಳಿ ಸಂತೋಷದಿಂದ ತಮ್ಮ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಮತ್ತು ದೇವರ ಮನೆಯಲ್ಲಿದ್ದ ಬೆಳ್ಳಿಯ ಬಟ್ಟಲೊಂದನ್ನು ತಮ್ಮ ಸೊಸೆಯ ಮೂಲಕ ನಮಗೆ ಕೊಡಿಸಿ ಇದನ್ನು ಮಾರಿ ಇದರಿಂದ ಬರುವ ಹಣವನ್ನು ರಾಮ ಮಂದಿರದ ನಿಧಿ ಸಂಗ್ರಹಕ್ಕೆ ಅರ್ಪಿಸಿಕೊಳ್ಳಬೇಕೆಂದು ಕೋರಿದರು.  ಅಜ್ಜೀ ನಾವು ಹಣವಲ್ಲದೇ ಬೇರೇ ಏನನ್ನೂ ತೆಗೆದುಕೊಳ್ಳುವುದಿಲ್ಲ. ಹೀಗೆ ಯಾರು ಬಂದರೂ ಈ ರೀತಿಯಾಗಿ ಕೊಡಬೇಡಿ ಎಂದು ಹೇಳಿದಾಗ, ನಮ್ಮನ್ನೊಮ್ಮೆ ದುರುಗುಟ್ಟಿ ನೋಡಿದ ಅಜ್ಜಿ ನಾನು ಕೊಡ್ತಾ ಇರೋದು ಸಂಘದ ಸ್ವಯಂಸೇಕರಿಗೆ. ಸಂಘದ ಸ್ವಯಂಸೇವರೆಂದೂ ಮೋಸ ಮಾಡಲಾರರು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ನಮ್ಮ ಮನೆಯವರೂ 50-60ರ  ದಶಕದಿಂದಲೂ ಶಾಖೆಗೆ ಹೋಗುತ್ತಿದ್ದರು. ನಮ್ಮದು ಸಂಘದ ಮನೆ ಎಂದಾಗ ನಮಗೆಲ್ಲರಿಗೂ ಆಶ್ವಯವಾಗಿತ್ತು.
  • ಕೆಲ ವಾರಗಳ ಹಿಂದೆ ಬಾಲಗೋಕುಲವೊಂದರಲ್ಲಿ ಸಣ್ಣ ಮಕ್ಕಳಿಗೆ ಬೌದ್ಧಿಕ್ ಮಾಡಲು ಕರೆದಿದ್ದರು.  ಸಭಾಂಗಣದ ಹೊರಗೆ ಸುಮಾರು 50-60 ಮಕ್ಕಳು ಸಾಲಾಗಿ ಶಿಸ್ತಿನಲ್ಲಿ ಚಪ್ಪಲಿಗಳನ್ನು ಜೋಡಿಸಿದ್ದನ್ನು ನೋಡಿ ಸಂತೋಷದಿಂದ ಬೌದ್ಧಿಕ್ ಮೊದಲು ಇದರ ಕುರಿತಂತೆ ಕೇಳಿದಾಗ ಮೂರ್ನಾಲ್ಕು ವಾರಗಳ ಹಿಂದಿನ ಬೌದ್ಧಿಕ್ಕಿನಲ್ಲಿ ಅನುಶಾಸನದ ಬಗ್ಗೆ ಹೇಳಿಕೊಟ್ಟಿದ್ದನ್ನು ಯಥಾವತ್ತಾಗಿ ಆ ಮಕ್ಕಳು ಜಾರಿಗೆ ತಂದಿದ್ದಲ್ಲದೇ, ಅದೇ ಪದ್ದತಿಯನ್ನು ತಮ್ಮ ಮನೆಗಳಲ್ಲಿಯೂ ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದಾಗ ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ.. ಹಾಡು ನೆನಪಾಗಿದ್ದಂತೂ ಸುಳ್ಳಲ್ಲ.

rss2ಹೀಗೆ ಸಂಘದ ಬಗ್ಗೆ ಹೇಳುತ್ತಾ ಹೋದಲ್ಲಿ ಪುಟಗಟ್ಟಲೇ ಬರೆಯಬಹುದೇನೋ?  ಈ ದೇಶಕ್ಕೆ ಸಂಘದ ಕೊಡುಗೆ ಏನು? ಎಂದು ಕೇಳಿದವರಿಗೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆದೇಶದ ರಾಷ್ಟ್ರಪತಿಗಳು, ಉಪರಾಷ್ತ್ರಪತಿಗಳು, ಪ್ರಧಾನ ಮಂತ್ರಿಗಳು, 20ಕ್ಕೂ ಹೆಚ್ಚಿನ ರಾಜ್ಯದ ಮುಖ್ಯಮಂತ್ರಿಗಳು, 300 ಕ್ಕೂ ಹೆಚ್ಚಿನ ಸಾಂಸದರು, ವಿವಿಧ ರಾಜ್ಯಗಳ ಸಾವಿರಾರು ಶಾಸಕರು, ನಗರ ಸಭಾ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸದಸ್ಯರನ್ನು ನೀಡಿದೆ ಎಂದು ಗೌರವದಿಂದ ಅಷ್ಟೇ ಗರ್ವದಿಂದ ಹೇಳಿಕೊಳ್ಳಬಹುದು. ಇದಲ್ಲದೇ ಸಂಘದ ಸ್ವಯಂಸೇವಕರಿಂದು ದೇಶ ವಿದೇಶಗಳಲ್ಲಿ ವಿವಿಧ ಸ್ಥರಗಳಲ್ಲಿ ಅತ್ಯಂತ ದೊಡ್ಡ ಹುದ್ದೆಗಳನ್ನು ಜವಾಬ್ಧಾರಿಯುತವಾಗಿ ನಿಭಾಯಿಸುತ್ತಿದ್ದಾರೆ.

ತಿಳಿದೋ ತಿಳಿಯದೋ ಸಂಘದ ಸ್ವಯಂಸೇವಕರು ವಯಕ್ತಿಕ ಕಾರಣಗಳಿಂದ  ತಪ್ಪುಗಳನ್ನು ಮಾಡಿರಬಹುದು ಆದರೆ ಸಂಘದ ಸ್ವಯಂಸೇವಕರೆಂದೂ ದೇಶದ್ರೋಹಿಯಾಗಿಲ್ಲ ಮತ್ತು ಆಗುವುದೂ ಇಲ್ಲಾ ಎನ್ನುವುದು ಸೂರ್ಯಚಂದ್ರರಷ್ಟೇ ಸತ್ಯ ಎನ್ನುವುದನ್ನು ಸಂಘವನ್ನು ದ್ವೇಷಿಸುವವರೂ ಒಪ್ಪಿಕೊಳ್ಳುತ್ತಾರೆ.

ಈ ಮೇಲೆ ತಿಳಿಸಿದ್ದೆಲ್ಲವೂ ನನ್ನ 50 ವರ್ಷಗಳ ಸ್ವಂತ ಅನುಭವವಾಗಿದ್ದು ನನ್ನಂತಹ ಕೋಟ್ಯಾಂತರ ಸ್ವಯಂಸೇವಕರನ್ನು ಕಳೆದ 96 ವರ್ಷಗಳಿಂದಲು ಸಂಘ ಈ ದೇಶಕ್ಕೆ ತಯಾರು ಮಾಡಿಕೊಟ್ಟಿದೆ.  ಹಾಗಾಗಿ ಇನ್ನು ಮುಂದೆ ಯಾರೇ ಆಗಲೀ ಸಂಘದ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಏನೇನೋ ಬಡಬಡಿಸುವ ಮುನ್ನಾ ದಯವಿಟ್ಟು ಕೆಲ ದಿನಗಳ ಕಾಲ ಸಂಘಕ್ಕೆ ಬಂದು ಸಂಘದ ಚಟುವಟಿಕೆಗಳನ್ನು ನೋಡಿ ಆನಂತರ ಅದರ ಬಗ್ಗೆ ಮಾತನಾಡುವುದು ಒಳಿತು  ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಪಂಡಿತ ಸುಧಾಕರ ಚತುರ್ವೇದಿ

ಸಾಧಾರಣವಾಗಿ ನಾವೆಲ್ಲರೂ ಪಂಡಿತ್, ದ್ವಿವೇದಿ, ತ್ರಿವೇದಿ ಮತ್ತು ಚತುರ್ವೇದಿ ಎನ್ನುವ ಉಪನಾಮಗಳನ್ನು ಕೇಳಿರುತ್ತೇವೆ.  ಅದೆಲ್ಲವೂ ಅವರ ಕುಟುಂಬದ  ಎಷ್ಟೋ ತಲೆಮಾರಿನವರೊಬ್ಬರು ಪಂಡಿತರಾಗಿದ್ದರಂತೆ  ಅಥವಾ ಅವರು ಎರಡು, ಮೂರು ಅಥವಾ ನಾಲ್ಕುವೇದಗಳನ್ನೂ ಕರಗತ ಮಾಡಿಕೊಂಡಿದ್ದರಿಂದ ಅವರಿಗೆ ಆ ರೀತಿಯ ಹೆಸರು ಬಂದಿರುತ್ತದೆ. ಸದ್ಯಕ್ಕೆ  ಆ ವೇದದ ಗಂಧಗಾಳಿಯೂ ಗೊತ್ತಿಲ್ಲದೇ ಇದ್ದರೂ ಅವರ ಹೆಸರಿನೊಂದಿಗೆ ಸೇರಿಕೊಂಡಿರುತ್ತರೆ. ಆದರೆ ಇಲ್ಲೊಬ್ಬರು ಈ ಎಲ್ಲವನ್ನೂ ಅಧಿಕಾರಯುತವಾಗಿ ಕರಗತ ಮಾಡಿಕೊಂಡು ಚತುರ್ವೇದಿ ಎಂಬ ಬಿರುದನ್ನು ಗಳಿಸಿದ್ದ ಶತಾಯುಷಿಗಳಾಗಿದ್ದರೂ ಕನ್ನಡಿಗರಿಗೆ ಎಲೆಮರೆಕಾಯಿಯಾಗಿಯೇ ಉಳಿದು ಹೋದ ಪಂಡಿತ ಸುಧಾಕರ ಚತುರ್ವೇದಿ ಆವರ ಬಗ್ಗೆ ನಮ್ಮ ಕನ್ನಡದ  ಕಲಿಗಳು ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಪಂಡಿತ ಸುಧಾಕರ ಅವರ ಹಿರಿಯರು ಮೂಲತಃ ತುಮಕೂರು ಬಳಿಯ ಕ್ಯಾತಸಂದ್ರದವರಾದರೂ, ಕೃಷ್ಣರಾಯರು ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ 20 ಎಪ್ರಿಲ್ 1897 ರಂದು ರಾಮನವಮಿಯಂದು ಬೆಂಗಳೂರಿನಲ್ಲಿ ಸುಧಾಕರ ಅವರ  ಜನನವಾಗುತ್ತದೆ. ಬಾಲ್ಯದಿಂದಲೂ ಅತ್ಯಂತ ಚುರುಕಾಗಿ ಪ್ರತಿಭಾವಂತರಾಗಿದ್ದ ಸುಧಾಕರ್ ಅವರಿಗೆ ಮನೆಯ ಮೊದಲ ಪಾಠ ಶಾಲೆ ಎನ್ನುವಂತೆ, ಅವರ ಎಂಟನೇ ವಯಸ್ಸಿನಲ್ಲೇ  ಅವರ ಅಕ್ಕ ಪದ್ಮಾವತಿ ಬಾಯಿ ಅವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡರೆ, ತಾಯಿ  ಲಕ್ಷ್ಮಮ್ಮ(ಪುಟ್ಟಮ್ಮ)ನವರು ಶಿವಾಜಿಗೆ ಜೀಜಾಬಾಯಿಯವರು ಹೇಳಿಕೊಟ್ಟಂತೆ ಸುಧಾಕರ್ ಅವರಿಗೆ ಅನೇಕ ಧಾರ್ಮಿಕ ವಿಷಯಗಳನ್ನು ಮನನ ಮಾಡಿಸಿದ್ದರು. ಸುಧಾಕರ್ ಅವರಿಗೆ  ದಯಾನಂದ ಸರಸ್ವತಿಯವರ ಜೀವನ ಚರಿತ್ರೆ ಬಾಲ್ಯದಲ್ಲಿ ಮೆಚ್ಚಿನದ್ದಾಗಿದ್ದಲ್ಲದೇ, ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಬಹಳ ಪಾತ್ರವೂ ಪ್ರಮುಖವಾಗಿತ್ತು.

ಈ ಅಧ್ಭುತವಾದ ಪ್ರತಿಭೆಗೆ ಮತ್ತಷ್ಟು ಪ್ರಖರವಾಗಲೀ ಎಂಬ ಉದ್ದೇಶದಿಂದ ಹದಿಮೂರರ ಬಾಲಕರಾಗಿದ್ದ ಸುಧಾಕರ್ ಅವರನ್ನು ಹೆಚ್ಚಿನ  ವಿದ್ಯಾಭ್ಯಾಸಕ್ಕಾಗಿ ಹರಿದ್ವಾರದ  ಪ್ರಖ್ಯಾತ ಕಾಂಗಡಿ ಗುರುಕುಲಕ್ಕೆ ಕಳುಹಿಸಿಕೊಡುತ್ತಾರೆ. ಅಲ್ಲಿ ಸ್ವಾಮಿ ಶ್ರದ್ಧಾನಂದರ ಶ್ರದ್ಧೆಯ ಶಿಷ್ಯರಾಗಿ ಅಖಂಡ ಒಂದು ದಶಕಗಳ ಕಾಲ ಸಂತಸ್ವರೂಪೀ ಬದುಕು ನೆಡೆಸಿದ್ದಲ್ಲದೇ  ನಾಲ್ಕು ವೇದಗಳಲ್ಲಿ ಪಾರಮ್ಯ ಪಡೆದು ಅಧಿಕಾರಯುತವಾಗಿ ಚತುರ್ವೇದಿ  ಎಂಬ ಬಿರುದನ್ನು ಪಡೆದದ್ದು ಹೆಮ್ಮೆಯ ವಿಷಯವಾಗಿತ್ತು.

sc91915ರಲ್ಲಿ  ಹರಿದ್ವಾರದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ ಗಾಂಧೀಜಿಯವರ ಭೇಟಿಯಾದದ್ದು ಅವರ ಬದುಕಿನಲ್ಲಿ ಬಹಳ ತಿರುವನ್ನು ಪಡೆಯಿತು ಎಂದರೂ ತಪ್ಪಾಗದು. ದಕ್ಷಿಣ ಭಾರತದವರಾದರೂ ಸುಲಲಿತವಾಗಿ ಹಿಂದಿ ಮಾತನಾಡುವುದನ್ನು ಕಂಡು ಆಶ್ಚರ್ಯ ಚಕಿತರಾದ ಗಾಂಧಿಯವರು ಸುಧಾಕರ್ ಚತುರ್ವೇದಿಯವರನ್ನು ತಮ್ಮ ಒಡನಾಡಿಯಾಗಿರಿಸಿಕೊಂಡರು. ಅವರಿಬ್ಬರ ಸ್ನೇಹ ಎಷ್ಟಿತ್ತೆಂದರೆ, ಗಾಂಧಿಯವರಿಗೆ  ಕನ್ನಡದಲ್ಲಿ ಸಹಿ ಮಾಡಲು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧಿಯವರಿಗೆ  ಸುಧಾಕರ್ ಅವರು ಕಲಿಸಿದ್ದರು ಎಂಬುದು ಗಮನಾರ್ಹವಾಗಿದೆ.

ಗಾಂಧಿಯವರ ಶರೀರಕ್ಕೆ ಸುಧಾಕರ್  ಅವರು ಶಾರೀರ ಎನ್ನುವಂತೆ ಮಹಾತ್ಮ ಗಾಂಧಿಯವರು ಬ್ರಿಟೀಷರೊಡನೆ ಪತ್ರ ಬರೆಯುವಾಗಲೆಲ್ಲಾ  ಸುಧಾಕರರನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದಲ್ಲದೇ, ಬ್ರಿಟಿಷ್ ವೈಸ್ ರಾಯ್ ಅವರೊಡನೆ  ನಡೆಸುವ ಪತ್ರ ವ್ಯವಹಾರಗಳ ಜವಾಬ್ಧಾರಿಯೆಲ್ಲಾ ಸುಧಾಕರ್ ಅವರಿಗೆ ವಹಿಸಿಕೊಟ್ಟಿದ್ದರು.  ಗಾಂಧಿಯವರು ಹೊರತರುತ್ತಿದ್ದ ಹಿಂದಿ ಮತ್ತು ಸಂಸ್ಕೃತ ಲೇಖನಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುತ್ತಿದ್ದದ್ದೇ ಸುಧಾಕರ್ ಅವರು.  ಅದೇ ರೀತೀಯಲ್ಲಿ  ಗಾಂಧಿಯವರ ಹರಿಜನ  ಪತ್ರಿಕೆಯ ಕನ್ನಡ ಅವತರಣಿಕೆಯೂ  ಸುಧಾಕರ್ ಆವರ ಸಂಪಾದಕತ್ವ ವಹಿಸಿಕೊಂಡಿದ್ದ ಕಾರಣ,  ಸುಧಾಕರ ಚತುರ್ವೇದಿಯವರನ್ನು ಮಹಾತ್ಮ ಗಾಂಧಿ ಅವರ ಪೋಸ್ಟ್ ಮನ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದರು.  ಸುಧಾಕರ್ ಅವರ ಪಾಂಡಿತ್ಯಕ್ಕೆ ಮಾರು ಹೊಗಿದ್ದ ಗಾಂಧಿಯವರು ಪ್ರೀತಿಯಿಂದ ಕರ್ನಾಟಕೀ ಎಂದೇ ಸುಧಾಕರ್ ಅವರನ್ನು ಕರೆಯುತ್ತಿದ್ದರು. ಮತ್ತೊಂದು ಕುತೂಹಲಕಾರಿಯಾದ ವಿಷಯವೇನೆಂದರೆ  ಅವರು ಲಾಹೋರಿನಲ್ಲಿದ್ದಾಗ ಸುಧಾಕರ್ ಅವರು ಮತ್ತೊಬ್ಬ ವೀರ ಸೇನಾನಿ ಭಗತ್ ಸಿಂಗ್ ಅವರಿಗೆ ಗಣಿತವನ್ನು ಹೇಳಿಕೊಟ್ಟಿದ್ದ ಗುರುಗಳಾಗಿದ್ದರು.  

sc1ಸ್ವಾತಂತ್ರ್ಯ ಹೋರಾಟಗಳಲ್ಲಿ ನಡೆದ ಅನೇಕ ಮಾರಣ ಹೋಮಗಳಲ್ಲಿ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಅತ್ಯಂತ ಪ್ರಮುಖಪಾತ್ರವಹಿಸುತ್ತದೆ. ನಾವೆಲ್ಲರೂ ಅದನ್ನು ಇತಿಹಾಸದ ಭಾಗವಾಗಿ ಪುಸ್ತಕಗಳಲ್ಲಿ ಓದಿದರೆ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಸುಧಾಕರ್ ಚತುರ್ವೇದಿಯವರು ಪ್ರಮುಖ ಸಾಕ್ಷಿಯಾಗಿದ್ದರು ಎಂದರೆ ಅಚ್ಚರಿಯನ್ನು ಮೂಡಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಸೇರಿದ್ದ ಸಾವಿರಾರು ಅಮಾಯಕರ ಮೇಲೆ ಏಕಾ ಏಕಿ ಗುಂಡಿನ ಧಾಳಿ ನಡೆಸಿ ನೂರಾರು ಜನರು ಗುಂಡಿನೇಟಿಗೆ ಬಲಿಯಾದರೆ,  ಇನ್ನೂ ಹಲವರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿದ್ದ ಭಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡರೆ, ಇನ್ನೂ ಹಲವರು ಕಾಲ್ತುಳಿತಕ್ಕೆ ಬಲಿಯಾಗಿ ಒಟ್ಟಿನಲ್ಲಿ  ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು ಈಗ  ಮರೆಯಲಾಗದ ಇತಿಹಾಸ. ಬ್ರಿಟಿಷ್ ಸರ್ಕಾರದ ದಾಖಲೆ ಪ್ರಕಾರ ಕೇವಲ 670 ಜನರು ಸತ್ತಿದ್ದಾರೆ ಎಂದರೂ,  ನದಿ ತಟದಲ್ಲಿ ಸಾವಿರಾರು ಜನರ ಅಂತ್ಯಸಂಸ್ಕಾರದ ಪೌರೋಹಿತ್ಯ ವಹಿಸಿದ್ದವರೇ ಸುಧಾಕರ್ ಚತುರ್ವೇದಿಯವರೇ ಎನ್ನುವುದು ಗಮನಾರ್ಹ.

ಹೀಗೆ ಗಾಂಧಿಯವರ ಜೊತೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡಿದ್ದ ಸುಧಾಕರ್ ಅವರು ತಮ್ಮ ಪ್ರಖರ ಭಾಷಣಗಳಿಂದ ಜನರನ್ನು ಬ್ರಿಟೀಷರ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಿದ್ದಾರೆ ಎಂಂದು ಬ್ರಿಟೀಷರಿಂದ ಮೂವತ್ತಕ್ಕೂ ಹೆಚ್ಚಿನ ಬಾರಿ ಸೆರೆಮನೆಗೆ ಹೋಗಿ ಸುಮಾರು  13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಗಾಂಧಿಯವರ ಜೊತೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿಗಳಾಗಿದ್ದಲ್ಲದೇ ಗಾಂಧಿಯವರಂತೆಯೇ ವಿದೇಶಿ ಉತ್ಪನ್ನಗಳನ್ನು ಸುಟ್ಟು ಚರಕದಿಂದಲೇ ಖಾದಿ ತಯಾರಿಸಿ ಧರಿಸುತ್ತಿದ್ದರು.

sc2ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್ ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಿದ್ದುದರಿಂದ ಪಂಜಾಬ್, ಲಾಹೋರ್, ಪಾಟ್ನಾ, ಕೋಲ್ಕತ್ತಾಗಳಲ್ಲಿ ಇವರ ಪ್ರಖರ ಭಾಷಣಗಳಿಗೆ ಸೋತು ಸುಧಾಕರ್ ಅವರಿಗೆ ದೊಡ್ಡ ಶಿಷ್ಯ ವೃಂದವೇ ಸೃಷ್ಟಿಯಾಗಿತ್ತು. ಅಂತಹ ಶಿಷ್ಯೆಯೊಬ್ಬರು ಸುಧಾಕರ್ ಅವರನ್ನು ಪ್ರೀತಿಸಿ ತಮ್ಮ ಮಗಳನ್ನು ವರಿಸಬೇಕೆಂದು ಆಕೆಯ ತಂದೆಯು ಸುಧಾಕರ್ ಅವರಲ್ಲಿ ಕೇಳಿಕೊಂಡಾಗ ಸ್ವರಾಜ್ಯ ಬರುವವರೆಗೂ ತಾನು ಮದುವೆಯಾಗುವುದಿಲ್ಲ  ಎಂಬ ಪ್ರತಿಜ್ಞೆ ತೊಟ್ಟಿದ್ದನ್ನು ನೆನಪಿಸಿದರು.  1935ರಲ್ಲಿ ಬಲೋಚಿಸ್ತಾನದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿನ ಜನರ ಸೇವೆಗೆಂದು ತೆರಳಿದ್ದ ಅವರ ಪ್ರೀತಿಯ ಶಿಷ್ಯೆ ಮರಳಿ ಬರಲೇ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವಷ್ಟರಲ್ಲಿ ಸುಧಾಕರ್ ಅವರ ವಯಸ್ಸು 50 ವರ್ಷ ದಾಟಿದ್ದ ಕಾರಣ ಈ ವಯಸ್ಸಿನಲ್ಲಿ ಮದುವೆಯಾಗಿ ಸಾಧಿಸುವುದಾದರೂ ಏನು? ಎಂದು ತಿಳಿದು  ಅವರು ಆಜೀವ ಬ್ರಹ್ಮಚಾರಿಯಾಗಿಯೇ  ಉಳಿದುಬಿಟ್ಟರು.

sc7ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ  ಚತುರ್ವೇದಿಗಳ ಗುರಿ ಬದಲಾಯಿತು. ಬೆಂಗಳೂರಿನ ಜಯನಗರ 5ನೆಯ ಹಂತದಲ್ಲಿರುವ ಮನೆಯೊಂದರಲ್ಲಿ ಕುಳಿತು ವೇದ – ವೇದಾಂತಗಳ ಕುರಿತಾಗಿ ಲೇಖನಗಳನ್ನು ಬರೆಯಲಾರಂಭಿಸಿದರು. ತಮ್ಮ ನೆಚ್ಚಿನ ದಯಾನಂದ ಸರಸ್ವತಿಗಳು ವೇದಗಳಿಗೆ ಬರೆದಿದ್ದ ಉದ್ದಾಮ ಭಾಷ್ಯಗಳನ್ನೆಲ್ಲ ಕನ್ನಡಕ್ಕೆ ಸುಮಾರು 20 ಸಂಪುಟಗಳಲ್ಲಿ 30,000 ಪುಟಗಳಷ್ಟು ತರ್ಜುಮೆ ಮಾಡಿದರು.  ವೈದಿಕರಿಂದ ಜಾತೀಯತೆ ಹುಟ್ಟಿತೆಂಬ ವಿತಂಡ ವಾದ ಮಾಡುವವರಿಗೆ ಹಾಗೆ ಜಾತೀಯತೆಯನ್ನು ಪುರಸ್ಕರಿಸಿದ ವೇದಮಂತ್ರವನ್ನು ಎಲ್ಲಿವೇ? ಎಂಬ ಸವಾಲನ್ನು ಹಾಕಿದ್ದ ಸುಧಾಕರ್ ಚತುರ್ವೇದಿಗಳು ಅನೇಕ ಹರಿಜನರ ಮಕ್ಕಳನ್ನು ದತ್ತು ಪಡೆದು ಅವರಿಗೆ ಸೂಕ್ತ ವಿದ್ಯಾಭ್ಯಾಸವನ್ನು ಮಾಡಿಸಿದರು. ಅವರಲ್ಲಿ ಕೆಲವರು ಐಎಎಸ್ ಸಹಾ ಮುಗಿಸಿ  ಹಿರಿಯ  ಅಧಿಕಾರಿಗಳಗಿದ್ದಾರೆ  ಎಂಬುದು ಮೆಚ್ಚುಗೆಯ ವಿಷಯವಾಗಿದೆ. ನೂರಾರು ಅಂತರ್ಜಾತೀಯ ಮದುವೆಗಳನ್ನು ಮಾಡಿಸಿದ್ದಲ್ಲದೇ,  ಹರಿಜನರ ಸಾವಿರಾರು ಕೇರಿಗಳಲ್ಲಿ ಸಂಚರಿಸಿ, ಅವರುಗಳಿಗೆ ದೇವಾಲಯದ ಪ್ರವೇಶವನ್ನು ಕೊಡಿಸಿದ್ದಲ್ಲದೇ, ಅಸ್ಪೃಶ್ಯತೆಯ ನಿವಾರಣೆಗಾತಿ ತಮ್ಮ ಬದುಕನ್ನೇ ಮೀಸಲಾಗಿಟ್ಟರು. . ಯಾರೇ  ಆಗಲಿ ಅವರ ಬಳಿ ವೇದ ಕಲಿಯಬೇಕೆಂಬ  ಅಪೇಕ್ಷೆ ವ್ಯಕ್ತಪಡಿಸಿದರೆ ಸಾಕು,  ಆವರ ಜಾತಿ ಧರ್ಮ ವಯಸ್ಸು, ಅಂತಸ್ತು ಹೆಂಗಸು ಗಂಡಸು ಎಂಬ ಲಿಂಗ ತಾರತಮ್ಯವಿಲ್ಲದೇ ಎಲ್ಲರಿಗು ವೇದಾದ್ಯಯನ ಮಾಡಿಸಿದರು. ಹರಿಜರ ಉದ್ಧಾರ ಎಂದು  ವೇದಿಕೆಗಳ ಮೇಲೆ ದೊಡ್ಡ ಭಾಷಣ ಮಾಡುತ್ತಾ  ಪ್ರಚಾರ ಪಡೆಯುವ  ರಾಜಕೀಯ ನಾಯಕರಂತಲ್ಲದೇ  ತಾವು ನುಡಿದದ್ದನ್ನು ಅಕ್ಷರಶಃ ಕಾರ್ಯಸಾಧುವನ್ನಾಗಿ ಮಾಡಿದ ಕೀರ್ತಿ ಸುಧಾಕರ್ ಚತುರ್ವೇದಿಗಳಿಗೆ ಸಲ್ಲುತ್ತದೆ.

sc5ನಾಲ್ಕು ವೇದಗಳ ಕುರಿತು 20 ಸಂಪುಟಗಳನ್ನು ರಚಿಸಿದ್ದರಲ್ಲದೇ, ವೇದ ತರಂಗ ಹಾಗೂ ವೇದ ಪ್ರಕಾಶ ಎಂಬ ಮಾಸಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು.

2009 ರ ಹೊತ್ತಿಗೆ, ನಾಲ್ಕು ವೇದಗಳಲ್ಲಿ ಮೂರು ಮತ್ತು ಋಗ್ವೇದದ ಆರು ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.

sc8ಅದೊಮ್ಮೆ ಅವರಿಗೆ 112 ವರ್ಷಗಳಾಗಿದ್ದಾಗ  ಇವರ ದೀರ್ಘಾಯುಷ್ಯದ ಕುರಿತಂತೆ ಸಂದರ್ಶಕಿಯೊಬ್ಬರು ಕೇಳಿದ ಪ್ರಶ್ನೆಗೆ ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆ ಹಣ್ಣು ಸೇವನೆಯೇ. ನನ್ನ ಆಯುಷ್ಯದ ಗುಟ್ಟು ಎಂದು ನಕ್ಕಿದ್ದಂತೆ. ಹಾಗೇ ತಮ್ಮ ಮಾತನ್ನು ಮುಂದುವರಿಸಿ, ವೇದಗಳ ಪ್ರಕಾರ ಮನುಷ್ಯರ ಅಂದಾಜು ಆಯಸ್ಸು 120 ವರ್ಷಗಳು. ನಾನೇನಾದ್ರು 120 ವರ್ಷಗಳಿಗಿಂತ ಕಡಿಮೆ ವಯಸ್ಸಿಗೆ ಸತ್ತರೆ ನಾನು ವೇದಗಳು ಹೇಳುವಂತೆ ಬದುಕಿಲ್ಲ ಎಂಬರ್ಥ ಬರುತ್ತದೆ ಎಂದಿದ್ದರಂತೆ. ವೇದಗಳಲ್ಲಿ  ಹೇಳಿದಂತೆಯೇ ಬದುಕಿದ್ದರು ಸುಧಾಕರ್ ಚತುರ್ವೇದಿಗಳು. 1897ರಲ್ಲಿ ಜನಿಸಿದ ಅವರು 3 ಶತಕಗಳ ಎಲ್ಲಾ ಬದಲಾವಣೆಗಳಿಗೂ ಸಾಕ್ಷಿಯಾಗಿದ್ದಲ್ಲದೇ   27-02-2020  ತಮ್ಮ  122 ವರ್ಷ, 313 ದಿನಗಳ ತುಂಬು ಜೀವನ ನಡೆಸಿ ಬೆಂಗಳೂರಿನಲ್ಲಿ ದೇಹಾಂತ್ಯವನ್ನು ಮಾಡಿದರು.

sc4ವಯಸ್ಸು 120ಕ್ಕೂ ಹೆಚ್ಚು ವರ್ಷ ದಾಟಿದ್ದರೂ, ಇತರರ ವೃದ್ಧರಂತೆ ನಡುಗುವ ಕೈಗಳಲ್ಲಿ ಕೋಲು ಹಿಡಿಯದ ಸದಾ ಕ್ಷಾತ್ರ ತೇಜದ, ಆರೋಗ್ಯವಂತ, ವೇದಗಳ ಅಧ್ಯಯನ, ಸಂಶೋಧನೆ, ವೇದ ಪಾಠ, ಪ್ರತಿನಿತ್ಯವೂ ಮನೆಯಲ್ಲಿ ಅಗ್ನಿಹೋತ್ರವನ್ನು ತಪ್ಪಿಸದೇ ಮಾಡುತ್ತಿದ್ದರು. ಪ್ರತಿ ಶನಿವಾರ ಅವರ ಮನೆಯಲ್ಲಿ ಸತ್ಸಂಗವನ್ನು  ನಡೆಸುತ್ತಿದ್ದರಲ್ಲದೇ, ಆ ವಯಸ್ಸಿನಲ್ಲಿಯೂ ತಮ್ಮ  ಗುರುಗಳಾದ ಶ್ರೀ ಶ್ರದ್ಧಾನಂದರ ಆದೇಶದಂತೆ ವೇದಗಳ ಬಗ್ಗೆ ಪುಸ್ತಕ ಬರೆಯುವುದರಲ್ಲಿಯೇ ತಮ್ಮ  ಜೀವನವನ್ನು ಕಳೆದ ಹಿರಿಯ ಜೀವ  ಸುಧಾಕರ್ ಚರ್ತುವೇದಿಗಳದ್ದು.

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಅದೇಕೋ ಏನೋ? ಅವರ ವಿದ್ಯೆಗೆ ಸಲ್ಲಬೇಕಿದ್ದ ಸತ್ಕಾರ ಸನ್ಮಾನಗಳು ಅವರಿಗೆ ಬರಲೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ಸಹಾ ಅವರು ನಯವಾಗಿ ತಿರಸ್ಕರಿಸಿದ್ದರು.  ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ರಾಜ್ಯೋತ್ಸವದ ಪ್ರಶಸ್ತಿ ಹೊರತಾಗಿ ಕೇಂದ್ರ ಸರ್ಕಾರದಿಂದ ಅವರಿಗೆ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆಯಲೇ ಇಲ್ಲ ಎನ್ನುವುದು ನಿಜಕ್ಕು ವಿಷಾಧನೀಯ.  ಮೂರು ಶತಮಾನಗಳ ಸಾರ್ಥಕ ಬದುಕನ್ನು ಕಳೆದರೂ  ಎಲೆಮರೆಕಾಯಿಯಂತೆ ಸ್ವಾತಂತ್ರ್ಯ ಹೊರಾಟಗಾರಾಗಿ, ಸಮಾಜ ಸುಧಾರಕರಾಗಿ, ಸಾರಸ್ವತ ಲೋಕದಲ್ಲಿ ಸರಸ್ವತಿ ಪುತ್ರರಂತೆ ಎಲೆಮರೆಕಾಯಿಯಂತೆಯೇ ಜೀವಿಸಿದ ಪಂಡಿತ ಸುಧಾಕರ್ ಚತುರ್ವೇದಿಗಳು ಖಂಡಿತವಾಗಿಯೂ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಶಹೀದ್ ಉಧಮ್ ಸಿಂಗ್

ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ಕೇಂದ್ರದ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳಲ್ಲಿ ಅಮೂಲಾಗ್ರವಾದ ಬದಲಾವಣೆ ತರಲು ಮುಂದಾಗಿದ್ದು ಅದಕ್ಕೆ ಪೂರಕವಾಗಿ ದೇಶವಾಸಿಗಳಿಂದ ಸೂಚನೆ ಮತ್ತು ಸಲಹೆಗಳನ್ನು ಕೇಳಿರುವ ಸುದ್ದಿ ಓದಿ ಮೈ ರೋಮಾಂಚನವಾಯಿತು. ಸ್ವಾತ್ರಂತ್ಯ ಬಂದು ೭೦+ ವರ್ಷಗಳ ನಂತರವೂ ಅದೇ ಅಕ್ಬರ್ ದಿ ಗ್ರೇಟ್, ಅಲೆಕ್ಶಾಂಡರ್ ದಿ ಗ್ರೇಟ್, ಆರ್ಯರು ಭಾರತಕ್ಕೆ ಬಂದರು ಎನ್ನುವ ಆಂಗ್ಲರ ಸುಳ್ಳು ಸುಳ್ಳು ಇತಿಹಾಸವನ್ನೇ ಓದಿ ಬೆಳೆದಿದ್ದ ನಾವು ಇನ್ನು ಮುಂದೆಯಾದರೂ ನಮ್ಮ ನಿಜವಾದ ರಾಜ ಮಹಾರಾಜರು ಮತ್ತು ಸ್ವಾತ್ರಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ನಮ್ಮ ಮಕ್ಕಳಿಗೆ ತಿಳಿಸಬಹುದು ಎಂಬ ಆಸೆ ಮೊಳಕೆಯೊಡೆಯಿತು. ಹಾಗೆ ಯೋಚಿಸುತ್ತಿರುವಾಗಲೇ ಕಣ್ಣ ಮುಂದೆ ಬಂದು ಹೋದದ್ದೇ ಶಹೀದ್ ಉಧಮ್ ಸಿಂಗ್ ಅವರ ಚರಿತ್ರೆ.

udham126 ಡಿಸೆಂಬರ್ 1899 ರಲ್ಲಿ ಸಂಗ್ರೂರ್ ಜಿಲ್ಲೆಯ ಸುನಮ್ ಎಂಬ ಗ್ರಾಮದಲ್ಲಿ ಉಧಮ್ ಸಿಂಗ್ ಜನಿಸಿದರು. ಚಿಕ್ಕವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡಿದ್ದರಿಂದ ಅಮೃತ್ ಸರದ ಅನಾಥಾಶ್ರಮವೊಂದರಲ್ಲಿ ಆಶ್ರಯ ಪಡೆದು ತಮ್ಮ ಮೆಟ್ರಿಕ್ಯುಲೇಶನ್ ಮುಗಿಸಿದ್ದರು. 1919 ರಲ್ಲಿ ಬೈಸಾಖಿ ಹಬ್ಬದಂದು ಅಮೃತಸರದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಅಲ್ಲಿ ನೆರೆದಿದ್ದ 20,000 ಜನರಿಗೆ ನೀರು ಬಡಿಸುತ್ತಿದ್ದ ಸ್ವಯಂಸೇವಕರಲ್ಲಿ 19ರ ಪ್ರಾಯದ ಉಧಮ್ ಸಿಂಗ್ ಕೂಡಾ ಒಬ್ಬನಾಗಿದ್ದು ಆತ ಜನರಲ್ ಡ್ವೈರ್ ಅತ್ಯಂತ ಕ್ರೂರವಾಗಿ 1526 ನಿರಾಯುಧ ಶಾಂತಿಯುತ ಅಮಾಯಕ ಜನರ ಹತ್ಯೆ ಮಾಡಿದ್ದನ್ನು ಕಣ್ಣಾರೆ ಕಂಡಿದ್ದ.

jalianಅಂತಹ ಅಮಾನವೀಯ ಘಟನೆಯನ್ನು ಕೇಳಿಯೋ ಇಲ್ಲವೇ ಓದಿಯೋ ನಮ್ಮ ನರನಾಡಿಗಳು ಉಬ್ಬಿ ರಕ್ತ ಕುದಿಯುತ್ತದೆಯೆಂದರೆ ಇನ್ನು ಆ ಪ್ರಕರಣಕ್ಕೆ ಜ್ವಲಂತ ಸಾಕ್ಷಿಯಾಗಿದ್ದ ಉಧಮ್ ಸಿಂಗ್ ಜೀವ ಇನ್ನಾ ಪರಿ ನೊಂದಿರಬೇಕು? ತನ್ನ ಕಣ್ಣ ಮುಂದೆಯೇ ತನ್ನ ಬಂಧು ಮಿತ್ರರು ಬ್ರಿಟೀಶರ ಗುಂಟೇಟಿಗೋ ಇಲ್ಲವೇ ಕಾಲ್ತುಳಿತಕ್ಕೋ ಇಲ್ಲವೇ ಭಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದು ಆತನ ಮನಸ್ಸಿನ ಮೇಲೆ ತೀವ್ರತರವಾಗಿ ಘಾಸಿಯನ್ನುಂಟು ಮಾಡಿತ್ತು ಈ ಅಮಾನವೀಯ ಕೃತ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸೇಡನ್ನು ತೀರಿಸಿ ಹುತಾತ್ಮರಿಗೆ ನ್ಯಾಯವನ್ನು ಕೊಡಿಸಲು ಅಂದೇ ಆತ ಧೃಢ ನಿರ್ಧಾರ ಮಾಡಿದ.

ಈ ಘಟನೆಯ ವಿರುದ್ಧ ಸ್ವಾತ್ರಂತ್ರ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೇಸ್ ಕೂಡ ತೀವ್ರತರನಾದ ಹೋರಾಟ ನಡೆಸಲಿಲ್ಲ. ಕಾಟಾಚಾರಕ್ಕೆ ಅಲ್ಲೊಂದು ಇಲ್ಲೊಂದು ಪ್ರತಿಭಟನೆ ನಡೆಸಿ ಸುಮ್ಮನಾಗಿತ್ತು. ಸಾವಿರಾರು ಜನರ ಮಾರಣ ಹೋಮ ನಡೆಸಿದ ಡಯರ್ ವಿರುದ್ಧ ಅಂದಿನ ಬ್ರಿಟಿಷ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಆತ ಕೆಲ ಕಾಲ ಭಾರತದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬ್ರಿಟನ್ನಿನಲ್ಲಿ ಅತ್ಯಂತ ಶ್ರೀಮಂತಿಕೆಯಿಂದ ತನ್ನ ವಿಶ್ರಾಂತ ಜೀವನ ನಡೆಸ ತೊಡಗಿದ.

ಕಾಂಗ್ರೇಸ್ಸಿನ ಈ ಇಬ್ಬಂಧಿತನದಿಂದ ಬೇಸತ್ತ ಉಧಮ್ ಸಿಂಗ್ 1924ರಲ್ಲಿ ಗಧರ್ ಪಕ್ಷದೊಂದಿಗೆ ಜೊಡಿಸಿ ಕೊಂಡರು. ಬ್ರಿಟೀಷರ ವಸಾಹತುಶಾಹಿ ಆಡಳಿತವನ್ನು ಉರುಳಿಸಲು ವಿದೇಶದಲ್ಲಿ ಭಾರತೀಯರನ್ನು ಸಂಘಟಿಸ ತೊಡಗಿದರು. 1927 ರಲ್ಲಿ, ಭಗತ್ ಸಿಂಗ್ ಅವರ ಆದೇಶದ ಮೇರೆಗೆ ಭಾರತಕ್ಕೆ 25 ಸಹವರ್ತಿಗಳೊಂದಿಗೆ ರಿವಾಲ್ವರ್ ಮತ್ತು ಮದ್ದುಗುಂಡುಗಳೊಂದಿಗೆ ಮರಳಿದರು. ಇದಾದ ನಂತರ, ಪರವಾನಗಿ ಪಡೆಯದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಆವರನ್ನು ಬಂಧಿಸಿದ ಕಾರಣ 5 ವರ್ಷಗಳ ಕಾಲ ಸೆರೆಮನೆಯನ್ನೂ ಅನುಭವಿಸಬೇಕಾಯಿತು. ಇದೇ ಸಮಯದಲ್ಲಿ ಭಗತ್ ಸಿಂಗ್ ಅವರ ಸಾವು ಮತ್ತು ಅವರ ಹುತಾತ್ಮತೆಯಿಂದ ಸ್ಫೂರ್ತಿ ಪಡೆದು ಡಯರ್ ವಿರುದ್ಧ ಪ್ರತೀಕಾರವನ್ನು ತೆಗೆದುಕೊಳ್ಳಲು ಬಯಸಿ, ಸೆರೆಮನೆಯಿಂದ ಬಿಡುಗಡೆ ಹೊಂದಿದ ನಂತರ, ಕಾಶ್ಮೀರದ ಮಾರ್ಗವಾಗಿ ಭಾರತದಿಂದ ತಪ್ಪಿಸಿಕೊಂಡು ಜರ್ಮನಿ ತಲುಪಿ ಅಲ್ಲಿಂದ ನೇರವಾಗಿ ಲಂಡನ್ನಿಗೆ ಹೋಗಿ ಅಲ್ಲಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಲ್ಲದೇ ಸುಮಾರು 6 ವರ್ಷಗಳ ಕಾಲ ಡಯರ್ ಅವರ ಚಲನವಲನಗಳನ್ನು ಗಮನಿಸತೊಡಗಿದರು. ಈ ಮಧ್ಯೆ ಬಂದೂಕನ್ನು ಕೊಂಡು ಕೊಂಡಿದ್ದಲ್ಲದೇ, ಅದನ್ನು ಬಳಸುವ ಕಲೆಯನ್ನು ಕರಗತ ಮಾಡಿಕೊಂಡರು.

udam4ಮಾರ್ಚ್ 13, 1940 ರಂದು ಡ್ವೈರ್ ಲಂಡನ್‌ನ ಕ್ಯಾಕ್ಸ್ಟನ್ ಹಾಲ್‌ನಲ್ಲಿ ಮಾತನಾಡಲು ಬರುತ್ತಿರುವುದನ್ನು ತಿಳಿದುಕೊಂಡ ಉಧಮ್ ಸಿಂಗ್ ಪುಸ್ತಕವೊಂದರ ಒಳಗೆ ಬಂದೂಕಿನ ಆಕಾರದಲ್ಲಿ ಕೊರೆದು ಅದರೊಳಗೆ ಬಂದೂಕನ್ನು ಅಡಗಿಸಿಟ್ಟುಕೊಂದು ಆಲ್ಲಿಗೆ ಹೋಗಿ ಮುಂದಿನ ಸಾಲಿನಲ್ಲಿಯೇ ಕುಳಿತುಕೊಂಡರು. ಭಾಷಣವೆಲ್ಲವೂ ಮುಗಿದು ಇನ್ನೇನೂ ಅತಿಥಿಗಳೆಲ್ಲರೂ ಹೊರಡಬೇಕು ಎನ್ನುವಷ್ಟರಲ್ಲಿ ಉಧಮ್ ಸಿಂಗ್ ತಮ್ಮ ಬಂದೂಕಿನಿಂದ ಹಾರಿಸಿದ ಎರಡು ಗುಂಡು ನೇರವಾಗಿ ಡ್ವೈಯರ್‌ನ ಹೃದಯ ಮತ್ತು ಶ್ವಾಸಕೋಶಕ್ಕೆ ತಗುಲಿ ಡ್ವಯರಿನ ಪ್ರಾಣ ಪಕ್ಷಿ ಅಲ್ಲಿಯೇ ಹಾರಿ ಹೋಗುವ ಮುಖಾಂತರ ಜಲಿಯನ್ ವಾಲಾ ಬಾಗ್ ನಲ್ಲಿ ಮರಣ ಹೊಂದಿದ್ದ ಅಮಾಯಕರ ಆತ್ಮಗಳಿಗೆ ಶಾಂತಿ ದೊರಕುವಂತೆ ಮಾಡಿದ್ದರು ಉಧಮ್ ಸಿಂಗ್.

ಎಲ್ಲಾ ಆಪರಾಧಿಗಳಂತೆ ಉಧಮ್ ಸಿಂಗ್ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸದೇ, ಬಹಳ ಧೈರ್ಯದಿಂದ ಬ್ರಿಟೀಷರ ಬಂಧನಕ್ಕೆ ಒಳಗಾಗಿ ಅಲ್ಲಿ ನಡೆದ ಕಾಟಾಚಾರದ ವಿಚಾರಣೆಯಲ್ಲಿ ನಮ್ಮ ಅಮಾಯಕ ಜನರನ್ನು ಹತ್ಯೆ ಮಾಡಿದ್ದ ಕಾರಣ ಅವರ ವಿರುದ್ಧ ನನಗೆ ದ್ವೇಷವಿತ್ತು ಹಾಗಾಗಿ ನಾನು ಅವರನ್ನು ಹತ್ಯೆ ಮಾಡಿದೆ. ಆವರು ನಿಜವಾದ ಅಪರಾಧಿಯಾಗಿದ್ದ ಕಾರಣ ಈ ಹತ್ಯೆಗೆ ಅವರು ಅರ್ಹರಾಗಿದ್ದರು. 21 ವರ್ಷಗಳಿಂದ ಹುದಿಗಿಟ್ಟುಕೊಂಡಿದ್ದ ಪ್ರತೀಕಾರವನ್ನು ನಾನಿಂದು ಪೂರ್ಣಗೊಳಿಸಿದ ಸಂತೃಪ್ತಿ ಇದೆ. ನಾನು ಸಾವಿಗೆ ಹೆದರುವುದಿಲ್ಲ. ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿ ಸಾಯುತ್ತಿರುವುದಕ್ಕೆ ನನಗೆ ಖುಷಿಯಿದೆ. ಬ್ರಿಟೀಷರ ದಬ್ಬಾಳಿಕೆಗೆ ತುತ್ತಾಗಿ ಭಾರತದಲ್ಲಿ ಲಕ್ಷಾಂತರ ಜನರು ಸಾಯುತ್ತಿರುವುದು ನನಗೆ ಬೇಸರ ತರಿಸುತ್ತಿದೆ. ಹಾಗಾಗಿ ನನ್ನ ತಾಯಿನಾಡಿನ ಸಲುವಾಗಿ ಮರಣಕ್ಕಿಂತ ಹೆಚ್ಚಿನ ಗೌರವವವನ್ನೇನು ಬಯಸುವುದಿಲ್ಲ. ಅದು ನನ್ನ ಕರ್ತವ್ಯವೇ ಹೌದು ಎಂದು ದಿಟ್ಟವಾಗಿ ನುಡಿದು ನ್ಯಾಯಾಧೀಶರನ್ನೇ ಬೆಚ್ಚುವಂತೆ ಮಾಡಿದ್ದ ಧೀರ ಉಧಮ್ ಸಿಂಗ್.

udam5ನಿರೀಕ್ಷೆಯಂತೆಯೇ ಉಧಮ್ ಸಿಂಗ್ ಅವರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿತು. ಗಾಂದಿಯವರು ಭಾರತದಲ್ಲಿ 21 ದಿವಸಗಳು ಮಾಡಿದ ಉಪವಾಸವನ್ನೇ ಕೊಂಡಾಡುವರಿಗೆ ಉಧಮ್ ಸಿಂಗ್ ಲಂಡನ್ನಿನ ಜೈಲಿನಲ್ಲಿ 42 ದಿನಗಳ ಕಾಲ ಉಪವಾಸ ಮಾಡಿದ ವಿಷಯದ ಅರಿವೇ ಇಲ್ಲದಿರುವುದು ಈ ದೇಶದ ದೌರ್ಭ್ಯಾಗ್ಯ. ಅಂತಿಮವಾಗಿ ಉಧಮ್ ಸಿಂಗ್ ಅವರನ್ನು 1940 ರ ಜುಲೈ 31 ರಂದು ಅತ್ಯಂತ ಕ್ರೂರವಾಗಿ ಹಿಂಸಿಸಿ ಗಲ್ಲಿಗೇರಿಸಲಾಯಿತು.

ಯಥಾ ಪ್ರಕಾರ ಭಾರತದಲ್ಲಿ ಕಾಂಗ್ರೆಸ್ ಡಯರ್ ಅವರ ಹತ್ಯೆಯನ್ನು ಖಂಡಿಸಿತು. ಬ್ರಿಟಿಷರು ಕೋಪಗೊಂಡಿದ್ದಕ್ಕಾಗಿ ಗಾಂಧಿ ಮತ್ತು ನೆಹರೂ ಉಧಮ್ ಸಿಂಗ್ ಅವರನ್ನು ವಾಚಾಮಗೋಚರವಾಗಿ ನಿಂದಿಸಿದರು.

ಅವನೊಬ್ಬ ಹುಚ್ಚು ಮನುಷ್ಯ ಎಂದು ಗಾಂಧಿಯವರು ಹೇಳಿದರೇ,

ಅವನ ಕಾರ್ಯವು ಪ್ರಜ್ಞಾಶೂನ್ಯ ಕಾರ್ಯವಾಗಿತ್ತು ಎಂದು ನೆಹರು ಆಣಿ ಮುತ್ತನ್ನು ಉದುರಿಸಿದ್ದಲ್ಲದೇ,

ನಾವು ಉಧಮ್ ಸಿಂಗ್ ಅವರ ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ. ಅದಕ್ಕಾಗಿ ನಮಗೆ ಶಿಕ್ಷೆಯಾಗುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಅಂದಿನ ಕಾಂಗ್ರೆಸ್ ನಿರ್ಣಯವನ್ನು ಅಂಗೀಕರಿಸಿತ್ತು.

ಬ್ರಿಟಿಷರಿಗೂ ಎರಡನೇ ಮಹಾಯುದ್ಧಕ್ಕೆ ಪಂಜಾಬ್ ರೆಜೆಮೆಂಟ್ ಸೈನಿಕರ ಅವಶ್ಯಕತೆ ಇದ್ದ ಕಾರಣ, ಈ ಪ್ರಕರಣವನ್ನು ಹೆಚ್ಚಿನದಾಗಿಸಲು ಪ್ರಯತ್ನಿಸದೇ ಆ ವಿಷಯವನ್ನು ತಣ್ಣಗಾಗಿಸಿತು. ಉಧಮ್ ಸಿಂಗ್ ಅವರನ್ನು ಲಂಡನ್‌ನಲ್ಲಿ ಸಮಾಧಿ ಮಾಡುವ ಮುಖಾಂತರ ಇತರೇ ಸ್ವಾತಂತ್ರ್ಯ ಹೋರಾಟಗಾರರಂತೆ ಅವರನ್ನು ಸಹಾ ಭಾರತದಲ್ಲಿ ಸಂಪೂರ್ಣವಾಗಿ ಮರೆತು ಬಿಡಲಾಯಿತು. ಈ ಕುರಿತಂತೆ ಯಾವುದೇ ಪಠ್ಯಪುಸ್ತಕಗಳಲ್ಲಿಯೂ ನಮ್ಮ ಮಕ್ಕಳಿಗೆ ತಿಳಿಸುವುದಿಲ್ಲ.

udham3ಸ್ವಾತ್ರಂತ್ಯಾನಂತರ 1974 ರಲ್ಲಿ ಅವರ ಅವಶೇಷಗಳನ್ನು ಹೊರತೆಗೆದು ಭಾರತಕ್ಕೆ ತಂದು ಇಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಿದ್ದಲ್ಲದೇ, ಅವರ ಚಿತಾಭಸ್ಮವನ್ನು ಜಲಿಯನ್ ವಾಲಾ ಬಾಗ್‌ನಲ್ಲಿ ಇರಿಸಲಾಯಿತು. ಪಂಜಾಬ್ ಸರ್ಕಾರ ಉದಮ್ ಸಿಂಗ್ ಅವರನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಸಿದ್ಧ ವ್ಯಕ್ತಿ ಎಂದು ಗುರುತಿಸಿದ್ದಲ್ಲದೇ, ಅವರನ್ನು ಶಹೀದ್-ಇ-ಅಜಮ್ ಸರ್ದಾರ್ ಉದಮ್ ಸಿಂಗ್ ಎಂದೂ ಕರೆದರು. (ಶಾಹೀದ್-ಇ-ಅಜಮ್,ಅಂದರೆ ಮಹಾನ್ ಹುತಾತ್ಮ) 1995 ಅಕ್ಟೋಬರ್ ತಿಂಗಳಲ್ಲಿ ಉತ್ತರಪ್ರದೇಶದ ಅಂದಿನ ಮಾಯಾವತಿ ಸರ್ಕಾರವು ಉತ್ತರಾಖಂಡದ ಒಂದು ಜಿಲ್ಲೆಯೊಂದಕ್ಕೆ ಉಧಮ್ ಸಿಂಗ್ ಹೆಸರನ್ನು ಇಡುವ ಮೂಲಕ ಉಧಮ್ ಸಿಂಗ್ ಅವರಿಗೆ ಗೌರವವನ್ನು ಸಲ್ಲಿಸಿದೆ.

ಕಾಕತಾಳೀಯದಂತೆ ಕೆಲವರ್ಷಗಳ ಹಿಂದೆ ಗಾಂಧಿ ಜಯಂತಿಯಂದೇ ಉಧಮ್ ಸಿಂಗ್ ಅವರ ಕುರಿತಾದ ಹಿಂದಿ ಸಿನಿಮಾ ಕೂಡಾ ಬಿಡುಗಡೆಯಾಗಿ ಅವರ ತ್ಯಾಗ, ಬಲಿದಾನದ ಸ್ಪೂರ್ತಿದಾಯಕವಾದ ಕಥೆ ಎಲ್ಲರ ಹೃನ್ಮನಗಳನ್ನು ಗೆದ್ದಿತ್ತು.

ಸದ್ಯಕ್ಕೆ ಈ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸುವ ಮೂಲಕ ನಮ್ಮ ದೇಶಕ್ಕೆ ಸ್ವಾತ್ರಂತ್ಯ ಬಂದಿದ್ದು ಕೆಲ ಒಣ ಜನರ ಶಾಂತಿಯುತ ಸತ್ಯಾಗ್ರಹದಿಂದಲ್ಲ. ಬದಲಾಗಿ ಇಂತಹ ಲಕ್ಷಾಂತರ ಕ್ಷಾತ್ರತೇಜ ಕ್ರಾಂತಿಕಾರರ ತ್ಯಾಗ ಮತ್ತು ಬಲಿದಾನಗಳಿಂದ ಎಂದು ನಮ್ಮ ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಿಳಿಯಲಿ. ಅದರ ಜೊತೆಯಲ್ಲಿಯೇ ಪಠ್ಯಕ್ರಮದಲ್ಲಿಯೂ ಅಮೂಲಾಗ್ರವಾಗಿ ಬದಲಾಗಿ ನಮ್ಮ ದೇಶದ ವೀರಪುರುಷರ ಕತೆಗಳು ನಮ್ಮ ಮಕ್ಕಳಿಗೆ ಸ್ಪೂರ್ತಿ ತುಂಬುವಂತಾಗಲಿ.

ಏನಂತೀರೀ?
ನಿಮ್ಮವನೇ ಉಮಾಸುತ

ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ

ಏಪ್ರಿಲ್ 13, 1919 ಭಾನುವಾರ ಅಂದರೆ ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ ಬೈಶಾಖೀ ಹಬ್ಬದ ದಿನ. ಸೌರಮಾನ ಪಂಚಾಂಗದ ಪ್ರಕಾರ ಹೊಸ ವರುಷದ ದಿನ ಅದರಲ್ಲೂ ಪಂಜಾಬಿನ ಸಿಖ್ಖರಿಗೆ ತುಂಬಾ ವಿಶೇಷವಾದ ಹಬ್ಬ. ಎಲ್ಲರೂ ಒಟ್ಟಿಗೆ ಸಂಭ್ರಮಿಸಿಸುವ ಹಬ್ಬ ಅದೇ ಸಮಯದಲ್ಲಿ ದೇಶಾದ್ಯಂತ ಸ್ವಾತತ್ರ್ಯ ಸಂಗ್ರಾಮದ ಕಿಚ್ಚು ಹಬ್ಬಿತ್ತು. ದೇಶಾದ್ಯಂತ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಸ್ಥಳೀಯ ಮುಖಂಡರುಗಳ ನೇತೃತ್ವದಲ್ಲಿ ತಮಗೆ ತೋಚಿದಂತೆ ಬ್ರಿಟಿಷರ ವಿರುದ್ಧ ಹೋರಾಟಗಳನ್ನು ನಡೆಸುತ್ತಿದ್ದರು. ಬ್ರಿಟೀಷರೂ ಸಹಾ ಅಂತಹ ಹೋರಾಟಗಾರರನ್ನು ಹತ್ತಿಕ್ಕುವುದಲ್ಲಿ ಬಹಳ ಕ್ರೂರಿಗಳಾಗಿದ್ದರು. ಅದೇ ರೀತಿ ಇಬ್ಬರು ರಾಷ್ಟ್ರೀಯ ನಾಯಕರಾದ ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚ್‌ಲೆವ್ ಅವರನ್ನು ಅಂದಿನ ಬ್ರಿಟಿಷ್ ಸರ್ಕಾರ ಬಂಧಿಸಿ ಗಡೀಪಾರು ಮಾಡಿದ್ದರು. ಇದು ಸಹಜವಾಗಿ ಪಂಜಾಬಿಗಳನ್ನು ಕೆರಳಿಸಿತ್ತಾದರೂ, ಅದಕ್ಕಾಗಿ ಹಬ್ಬದ ದಿನ ಸುತ್ತ ಮುತ್ತಲಿನ ಗ್ರಾಮಸ್ಥರು ಜಲಿಯನ್ ವಾಲಾ ಭಾಗ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.

ಇಂತಹ ಪ್ರತಿಭಟನೆಗಳು ನಡೆಯಬಹುದೆಂದು ಅದಾಗಲೇ ಅನುಮಾನಿಸಿದಿದ್ದ ಬ್ರಿಟಿಷ್ ಸರ್ಕಾರ ಆ ದಿನದಂದು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಭೆ ಸಮಾರಂಭ ನಡೆಸಬಾರದು ಎಂಬ ಸುತ್ತೋಲೆಯನ್ನು ಹೊರಡಿಸಿತ್ತಾದರೂ, ಒಂದು ಕಡೆ ರಾಷ್ಟ್ರೀಯ ನಾಯಕರ ಗಡಿಪಾರು ದುಖಃ ಮತ್ತೊಂದು ಕಡೆ ಬೈಸಾಖೀ ಹಬ್ಬದ ಸಂಭ್ರಮದಲ್ಲಿದ್ದ ಬಹುತೇಕ ಸ್ಥಳೀಯರಿಗೆ ಈ ಸುತ್ತೋಲೆ ಜಾರಿಯಾದದ್ದು ಗೊತ್ತೇ ಇರಲಿಲ್ಲ.

Jal7

ಪೂರ್ವ ನಿರ್ಧಾರದಂತೆ ಸುಮಾರು ಆರೇಳು ಎಕರೆ ವಿಶಾಲವಾದ ಸುತ್ತಲೂ ಎತ್ತರವಾದ ಗೋಡೆಗಳಿಂದ ಆವೃತವಾಗಿದ್ದ ಕೇವಲ ಒಂದೇ ಒಂದು ಮುಖ್ಯ ದ್ವಾರದ ಮೂಲಕ ಪ್ರವೇಶ ಮಾಡಬಹುತಾಗಿತ್ತಾ ಜಲಿಯನ್ ವಾಲಾ ಉದ್ಯಾನವನದಲ್ಲಿ ಆ ದಿನ ಹೊಸಾವರ್ಷದ ಸಂಭ್ರಮ ಮತ್ತು ಶಾಂತಿಯುತ ಪ್ರತಿಭಟನೆಯನ್ನಾಚರಿಸಲು ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಸರಿ ಸುಮಾರು ಹತ್ತು ಹದಿನೈದು ಸಾವಿರ ಜನ ಸೇರಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಅಲ್ಲೊಂದು ಕಂಡೂ ಕೇಳರಿಯದ ಘನ ಘೋರ ಇತಿಹಾಸಕ್ಕೆ ತಾವೇ ಸಾಕ್ಷಿಗಳಾಗುತ್ತೇವೆ ಇಲ್ಲವೇ ಇತಿಹಾಸದ ಭಾಗ ವಾಗುತ್ತೇವೆ ಎಂಬ ಸಣ್ಣ ಕುರುಹೂ ಯಾರಿಗೂ ಇರಲಿಲ್ಲ .

ತಮ್ಮ ಆದೇಶವನ್ನೂ ಧಿಕ್ಕರಿ ಸುಮಾರು ಹತ್ತು ಹದಿನೈದು ಸಾವಿರ ಜನರು ಪ್ರತಿಭಟನೆಗೆ ಜಲಿಯನ್ ವಾಲಾ ಭಾಗ್ ನಲ್ಲಿ ಸೇರಿರುವ ವಿಷಯ ಬ್ರಿಟಿಷ್ ಸೈನ್ಯಾಧಿಕಾರಿ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಕಿವಿಗೆ ಬಿದ್ದ ತಕ್ಷಣವೇ, ಆತ ಕೆಂಡಾಮಂಡಲನಾಗಿ ಹೋದ. ಭಾರತೀಯರಿಗೆ ತಕ್ಕ ಪಾಠ ಕಲಿಸಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ ಜನರಲ್ ಡೈಯರ್ ಸುಮಾರು ಐವತ್ತು ಮಂದಿ ಬಂಧೂಕುಧಾರೀ ಸೈನಿಕರನ್ನು ಕರೆದುಕೊಂಡು ಹೋಗಿ ಜಲಿಯನ್ ವಾಲಾ ಭಾಗ್ ಪ್ರವೇಶ ದ್ವಾರದ ಬಳಿ ನಿಲ್ಲಿಸಿ ಏಕಾ ಏಕಿ ಫೈಯರ್ ಎಂಬ ಆಜ್ಞೆಯನ್ನು ನೀಡಿಯೇ ಬಿಟ್ಟ. ಜನರಲ್ ಡೈಯರ್ ಆಜ್ಞೆಗೇ ಕಾಯುತ್ತಿದ್ದ ಆ ಸೈನಿಕರು ಆ ಮುಗ್ಧ ಜನರ ಮೇಲೆ ಯದ್ವಾ ತದ್ವಾ ಗುಂಡು ಹಾರಿಸಿಯೇ ಬಿಟ್ಟರು. ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಒಂದು ಕಡೆ ಗುಂಡಿನ ಭೋರ್ಗರೆಯುವ ಸದ್ದಾದರೇ, ಮತ್ತೊಂದು ಕಡೆ ಗುಂಡು ತಗುಲಿ ಪ್ರಾಣ ಬಿಡುತ್ತಿದ್ದವರ ನರಳಾಟ ಚೀರಾಟ. ಇನ್ನು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಾಡುವವರ ಕಾಲ್ತುಳಿಕ್ಕೆ ಸಿಕ್ಕ ಮಕ್ಕಳ ಆಕ್ರಂದನ ಕೇಳಲಾಗುತ್ತಿಲ್ಲವಾದರೇ, ಇನ್ನೊಂದು ಆ ಉದ್ಯಾನವನಾಲ್ಲಿದ್ದ ದೊಡ್ಡದಾದ ಭಾವಿಗೆ ಧುಮುಕುತ್ತಿದ್ದವರ ಸದ್ದು ಒಟ್ಟಿನಲ್ಲಿ ಜನರಲ್ ಡೈಯರ್ ಎಂಬ ಕ್ರೂರಿ, ರಕ್ತಪಿಪಾಸು, ಮನುಷ್ಯತ್ವವೇ ಇಲ್ಲದ ಒಬ್ಬ ಬ್ರಿಟಿಷ್ ಅಧಿಕಾರಿಯ ಅಮಾನವೀಯ ಕ್ರೌರ್ಯಕ್ಕೆ ಕೆಲವೇ ಕೆಲವು ನಿಮಿಷಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 400 ಜನರು ಬಲಿಯಾದರೆ, 1,000 ಕ್ಕೂ ಹೆಚ್ಚು ಜನರು ಗಾಯಗೊಂಡು ಇಡೀ ಭಾರತವೇಕೆ ವಿಶ್ವವನ್ನೇ ಆ ಸಮಯದಲ್ಲಿ ತಲ್ಲಣಗೊಳಿಸಿತ್ತು.

bhagat

ಪಂಜಾಬಿನಲ್ಲಿ ನಡೆದ ಈ ಅಮಾನವೀಯ ಕೃತ್ಯ ಇಡೀ ದೇಶಾದ್ಯಂತ ಕಿಚ್ಚನ್ನು ಹತ್ತಿಸಿದರೆ, ಆ ಸಮಯದಲ್ಲಿ ಕೇವಲ 12 ವಯಸ್ಸಿನ ಬಾಲಕನಾಗಿದ್ದ ಭಗತ್ ಸಿಂಗ್ ಮೇಲೇ ಭಾರಿ ಪ್ರಭಾವನ್ನೇ ಬೀರಿತು. ಆ ಘಟನೆ ಆದ ಎರಡು ಮೂರು ದಿನಗಳ ನಂತರ ಶಾಲೆಗೆ ಚಕ್ಕರ್ ಹಾಕಿ ದುರಂತ ನಡೆದ ಸ್ಥಳಕ್ಕೆ ಹೋದ ಬಾಲಕ ಭಗತ್ ಸಿಂಗ್, ಒಂದು ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದು ಅದನ್ನು ತನ್ನ ಮನೆಯ ದೇವರ ಕೋಣೆಯಲ್ಲಿಟ್ಟು ಇತರೇ ದೇವರುಗಳ ಜೊತೆ ಆ ಮಣ್ಣಿಗೂ ಪ್ರತಿದಿನವೂ ಪೂಜಿಸುತ್ತಿದ್ದನೆಂದರೆ ಆ ಒಂದು ದುರಂತ ಇನ್ನೆಷ್ಟು ಜನರ ದೇಶಪ್ರೇಮಕ್ಕೆ ಕಿಚ್ಚನ್ನು ಹತ್ತಿಸಿತು ಎಂಬುದನ್ನು ಅರಿಯ ಬಹುದಾಗಿದೆ. ಅಂದು ಜಲಿಯನ್ ವಾಲಾ ಭಾಗ್ ನಲ್ಲಿ ಹರಿದ ಅಮಾಯಕರ ರಕ್ತದೋಕುಳಿ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕು ದೆಸೆಯನ್ನೇ ಬದಲಿಸಿತು ಎಂದರೂ ಅತಿಶಯೋಕ್ತಿಯೇನಲ್ಲ.

ಈ ಘಟನೆ ನಡೆದು ನೂರು ವರ್ಷಗಳು ಕಳೆದ ನಂತರವೂ ಇದರ ಕುರಿತು ಕೇಳಿದ ತಕ್ಷಣ ಇಲ್ಲವೇ ಓದಿದ ಕೂಡಲೇ ನಮ್ಮೆಲ್ಲರ ರಕ್ತವೂ ಕುದಿಯುತ್ತದೆ. ಜನರಲ್ ಡೈಯರ್ ಎಂಬ ಕ್ರೂರಿಯ ವಿರುದ್ಧ ಆಕ್ರೋಶ ಏಳುವುದು ಸಹಜ. ಹಾದರೆ ಸುಮ್ಮನೆ ಒಂದು ಕ್ಷಣ ಶಾಂತ ಚಿತ್ತದಲ್ಲಿ ಯೋಚಿಸಿದಲ್ಲಿ ಈ ಘಟನೆಗೆ ಆತನೊಬ್ಬ ನಿಮಿತ್ತ ಮಾತ್ರ. ಫಯರ್ ಎಂದು ಆಜ್ಞೆ ನೀಡಿದ್ದ ಬ್ರಿಟಿಷ್ ಅಧಿಕಾರಿ ಆತನೊಬ್ಬನೇ ಆಗಿದ್ದರೂ ಆತ ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದ ಸೈನಿಕರೆಲ್ಲರೂ ಭಾರತೀಯರೇ ಆಗಿದ್ದರು. ಅವರೆಲ್ಲಾ ಗೂರ್ಖಾ ರೆಜಿಮೆಂಟ್, ಸಿಂಧ್ ರೆಜಿಮೆಂಟ್ ಮತ್ತು ಆಶ್ವರ್ಯಕರವಾಗಿ ಸಿಖ್ ರೆಜಿಮೆಂಟಿಗೂ ಸೇರಿದ್ದವರು ಸಿಖ್ಖರೂ ಇದ್ದರು. ಡೈಯರ್ ಫೈರ್ ಎಂದು ಕೂಗಿಕೊಂಡಾಗ ಅವರೆಲ್ಲರೂ ಒಂದು ಕ್ಷಣ ಮನಸ್ಸಿನ ಮಾತು ಕೇಳಿ ನಿಶ್ಯಬ್ಧವಾಗಿ ನಾವು ನಮ್ಮ ಅಮಾಯಕ ಸಹೋದರ ಮೇಲೆ ಗುಂಡನ್ನು ಹಾರಿಸುವುದಿಲ್ಲ ಎಂದು ಪ್ರತಿಭಟಿಸಿದ್ದರೇ ಈ ವಿಛಿದ್ರಕಾರಿ ಘಟನೆಯೇ ನಡೆಯುತ್ತಿರಲಿಲ್ಲ. ಆದರೆ ಅವರಲ್ಲಿದ್ದ ಗುಲಾಮೀ ತನದ ಮಂದೆ ಅವರ ಭಾರತೀಯತೆ ಸತ್ತು ಹೋಗಿದ್ದ ಪರಿಣಾಮ ಆ ಭಾರತೀಯ ಸೈನಿಕರೆಲ್ಲರೂ ಆ ದುರ್ಘಟನೆಯ ಭಾಗವಾಗಿ ಹೋಗಿದ್ದು ಈಗ ಇತಿಹಾಸ.

diar

ಇಂತಹ ಘನ ಘೋರ ನರಮೇದಕ್ಕೆ ಕಾರಣನಾದ ಜನರಲ್ ಡಯರ್ ಮುಂದೆ ಅನೇಕ ತನಿಖೆಗಳಿಗೆ ಓಳಗಾದ. ಕೆಲವರು ಆತನನ್ನು ರಕ್ತ ಪಿಪಾಸು ದುಷ್ಟ, ಮಹಾ ಕ್ರೂರಿ ಎಂದು ತೀವ್ರವಾಗಿ ಆತನ ಕುಕೃತ್ಯವನ್ನು ಕಠಿಣ ಶಬ್ಧಗಳಿಂದ ನಿಂದಿಸಿದರೂ, ಒಬ್ಬ ಸೈನ್ಯಾಧಿಕಾರಿಯಾಗಿ ಆತ ತನ್ನ ಕೆಲಸ ನಿರ್ವಹಿಸಿದ್ದಾನೆ ಎಂದು ಆತನನ್ನು ಸಮರ್ಥಿಸಿಕೊಳ್ಳುವವರಿಗೇನೋ ಕಡಿಮೆ ಇರಲಿಲ್ಲ. ತಾನೆಸಗಿದ ಭೀಕರ ನರಮೇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಹಲವಾರು ತನಿಖೆಗಳಲ್ಲಿ ಪರ ವಿರೋಧ ನಿಲುವಿನಿಂದಾಗಿ ಜನರಲ್ ಡಯರ್ ಆಂತರಿಕವಾಗಿ ಹುಚ್ಚನಂತಾಗಿ ಹೋಗಿದ್ದ ಮತ್ತು ಮನಸ್ಸಿನ ಸ್ಥಿಮಿತ ಕಳೆದು ಕೊಂಡು ಹಲವಾರು ಸರಣಿ ಆಘಾತಗಳಿಗೆ ಒಳಗಾಗಿ, ಕೈ ಕಾಲುಗಳಿಗೆ ಲಕ್ವ ಹೊಡೆದು, ಮಾತನಾಡಲೂ ಆಗದೆ ಅಸಹಾಯಕನಾಗಿ ನರಳಿ ಕಡೆಗೆ 1927ರಲ್ಲಿ ಮೆದುಳಿನ ರಕ್ತಸ್ರಾವದಿಂದ ಪ್ರಾಣ ಬಿಟ್ಟ.

jap3

ಈ ಘಟನೆ ನಡೆದು 100 ವರ್ಷಗಳಾದರೂ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಇನ್ನೂ ನಮ್ಮಲ್ಲನೇಕರು ಈ ಘಟನೆಯಿಂದ ಬುದ್ದಿ ಕಲಿಯದೇ ಇರುವುದು ಎದ್ದು ಕಾಣುತ್ತದೆ. ಅಂಧ ಪಾಶ್ವಾತ್ಯಾಭಿಮಾನ, ಆತ್ಮಾಭಿಮಾನವಿಲ್ಲದೆ ಮತ್ತೊಬ್ಬರಿಗೆ ಅಡವಿಡುವ ಗುಲಾಮೀ ಮನಸ್ಥಿತಿ. ಸ್ವಂತಿಕೆಯಿಲ್ಲದೆ ಆತ್ಮಾಭಿಮಾನ ಶೂನ್ಯ ಮನಸ್ಥಿತಿ, ಯಾರೋ ಎಲ್ಲೋ ಕುಳಿತು ಏನೋ ಹೇಳಿದ್ದನ್ನು ಕೇಳಿ ಆದನ್ನು ತೆಪ್ಪಗೆ ಬಾಯಿಮುಚ್ಚಿಕೊಂಡು ಅನುಸರಿಸುವ ಅಸಹ್ಯಕರ ದಾಸ್ಯ ಪ್ರವೃತ್ತಿ. ದೇಶ ಮತ್ತು ಧರ್ಮದ ನಡುವಿನ ಅಂತರವನ್ನು ಅಳೆಯದಷ್ಟು ವಿವೇಚನೆಯನ್ನೇ ಕಳೆದುಕೊಂಡು ದೇಶದ ಮಾನ ಕಳೆಯುವ ಜೀತದಾಳುಗಳ ಪ್ರವೃತ್ತಿ.

ಜಲಿಯನ್ ವಾಲಾ ಭಾಗ್ ಹತ್ಯಾ ಕಾಂಡದಲ್ಲಿ ಮಡಿದ ಎಲ್ಲ ಮಕ್ಕಳು, ಶ್ರದ್ಧೇಯ ತಾಯಂದಿರು, ಸಹೋದರ ಮತ್ತು ಸಹೋದರಿಯರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಆತ್ಮಾಭಿಮಾನದಿಂದ ಎದೆತಟ್ಟಿ ನಾವೆಲ್ಲಾ ಭಾರತೀಯರು. ನಾವೆಲ್ಲರೂ ಒಂದು. ದೇಶದ ಮುಂದೆ ಜಾತೀ ಕುಲ, ಧರ್ಮ ಎಲ್ಲಾ ನಗಣ್ಯ ಎಂದು ಹೇಳುವ ಗಟ್ಟಿತನ ನಮ್ಮಲ್ಲಿ ಬಾರದಿದ್ದರೆ, ಮುಂದೊಂದು ದಿನ ಯಾವುದೋ ಬಹುರಾಷ್ಟ್ರೀಯ ಕಂಪನಿಯೋ ಇಲ್ಲವೇ, ಯಾವುದೋ ಹಣವಂತ ಭಾರತೀಯ ಉದ್ಯಮಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಾಗ, ಮತ್ತದೇ ದಾಸ್ಯಕ್ಕೆ ಮರಳುವಂತಾಗಿ, ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ನಮ್ಮನ್ನು ಆ ಜಲಿಯನ್ ವಾಲಾ ಭಾಗ್ ಭೀಕರ ಹತ್ಯಾಕಾಂಡದಲ್ಲಿ ನಮ್ಮವರನ್ನೇ ಕೊಂದ ಮತಿಹೀನ ಸೈನಿಕರ ಜೊತೆ ಹೋಲಿಕೆ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ.

ಇನ್ನೂ ಕಾಲ ಮಿಂಚಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಸೆಟೆದೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕಷ್ಟೇ

ಏನಂತೀರೀ?

ನಿಮ್ಮವನೇ ಉಮಾಸುತ

ಭಗತ್ ಸಿಂಗ್

ಅದು ಸೆಪ್ಟೆಂಬರ್ 27,1907 ಅಂದು ಅಖಂಡ ಭಾರತದ ಅಂಗವಾಗಿದ್ದ ಇಂದಿನ ಪಾಕೀಸ್ಥಾನದ ಜರನವಾಲಾ ತಾಲ್ಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಶ್ರೀಮತಿ ವಿದ್ಯಾವತಿ ಮತ್ತು ಶ್ರೀ ಕಿಶನ್ ಸಿಂಗ್ ಎಂಬ ದಂಪತಿಗಳಿಗೆ ಗಂಡು ಮಗು ಜನವಾಯಿತು. ಮುದ್ದು ಮುದ್ದಾಗಿ ಸ್ವಲ್ಪ ಉದ್ದವಾಗಿದ್ದ ಮುಖ, ನೀಳ ನಾಸಿಕವಾಗಿದ್ದ ಮಗುವಿಗೆ ಭಗತ್ ಸಿಂಗ್ ಎಂದು ಹೆಸರಿಟ್ಟರು. ಅವರದ್ದು ಕೃಷಿ ಆಧಾರಿತ ಕುಟುಂಬ ತಂದೆ ಕೃಷಿಯ ಜೊತೆಜೊತೆಗೆ ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದರು. ಅವರ ಚಿಕ್ಕಪ್ಪ ಶ್ರೀ ಅಜಿತ್ ಸಿಂಗರು ಅದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮಿಕಿ ಸುತ್ತ ಮುತ್ತಲಿನ ಹಳ್ಳಿಗಳ ಜನರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ತಮ್ಮ ಉಗ್ರ ಭಾಷಣಗಳ ಮೂಲಕ ಪ್ರೇರೇಪಿಸುತ್ತಿದ್ದರು. ಇಂತಹ ವಾತವರಣದಲ್ಲಿ ಬೆಳೆದ ಭಗತ್ ಸಿಂಗರಿಗೆ ಸಹಜವಾಗಿಯೇ ಸ್ವಾತಂತ್ಯ್ರದ ಕಿಚ್ಚು ಬಾಲ್ಯದಲ್ಲಿಯೇ ಹತ್ತಿತ್ತು ಎಂದರೆ ತಪ್ಪಾಗಲಾರದು. ಅದೊಮ್ಮೆ ಹರಸಾಹಸ ಮಾಡಿ ಅವರ ಚಿಕ್ಕಪ್ಪನವರನ್ನು ಸೆರೆ ಹಿಡಿದ ಬ್ರಿಟೀಷರು ಅವರನ್ನು ಜೈಲಿನಲ್ಲಿ ಬಂಧಿಸಿಟ್ಟಿದ್ದರು. ಹಾಗೆ ಚಿಕ್ಕಪ್ಪನ್ನನ್ನು ನೋಡಲೂ ಹೋಗಿದ್ದ ಬಾಲಕ ಭಗತ್ ಸಿಂಗ್ ಅಲ್ಲಿದ್ದ ಬಂದೂಕುಗಳನ್ನು ನೋಡಿ ಮನೆಗೆ ಬಂದು ತಮ್ಮ ತಾಯಿಯವರಿಗೆ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ನಮ್ಮ ಹೊಲ ಗದ್ದೆಗಳಲ್ಲಿ ಭತ್ತ, ಜೋಳದ ಬದಲು ಬಂದೂಕುಗಳನ್ನು ಬೆಳೆದು ಅದನ್ನು ಎಲ್ಲರಿಗೂ ಹಂಚಿ ಬ್ರಿಟಿಷರನ್ನು ದೇಶದಿಂದ ಓಡಿಸಬಹುದಲ್ಲವೇ? ಎಂದು ಮುಗ್ಧನಾಗಿ ಕೇಳಿದ್ದನೆಂದರೆ ಸ್ವಾತಂತ್ಯ್ರದ ಪ್ರೇಮ ರಕ್ತಗತವಾಗಿತ್ತು ಎನ್ನಬಹುದು.

ಭಗತ್ ಸಿಂಗ್ ಅವರು 12ನೇ ವಯಸ್ಸಿನಲ್ಲಿದ್ದಾಗ, ಏಪ್ರಿಲ್ 13, 1919ರಂದು ಅಂದರೆ ಸರಿಯಾಗಿ ನೂರು ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಲು ಜಲಿಯನ್ ವಾಲಾ ಬಾಗ್ ಎಂಬ ಪ್ರದೇಶದಲ್ಲಿ ನ್ರೆರೆದಿದ್ದ ಸಾವಿರಾರು ಮುಗ್ಧ ಜನರ ಮೇಲೆ ಡಯರ್ ಎಂಬ ಕ್ರೂರ ಅಧಿಕಾರಿ ಮಾರಣ ಹೋಮ ನಡೆಸಿ ಸಾವಿರಾರು ಅಮಾಯಕರನ್ನು ಬಲಿ ತೆಗೆದುಕೊಂಡ ದುರಂತ ಭಗತ್ ಸಿಂಗರ ಮೇಲೇ ಭಾರಿ ಪ್ರಭಾವ ಬೀರಿತು. ಆ ಘಟನೆ ಆದ ಎರಡು ಮೂರು ದಿನಗಳ ನಂತರ ಶಾಲೆಯಿಂದ ಚಕ್ಕರ್ ಹಾಕಿ ದುರಂತ ನಡೆದ ಸ್ಥಳಕ್ಕೆ ಹೋದ ಬಾಲಕ ಭಗತ್ ಸಿಂಗ್ ಒಂದು ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದು ಅದನ್ನು ತನ್ನ ಮನೆಯ ದೇವರ ಕೋಣೆಯಲ್ಲಿಟ್ಟು ಇತರೇ ದೇವರುಗಳ ಜೊತೆ ಆ ಮಣ್ಣಿಗೂ ಪ್ರತಿದಿನವೂ ಪೂಜಿಸುತ್ತಿದ್ದನೆಂದರೆ ಅವರ ದೇಶಪ್ರೇಮ ಇನ್ನೆಷ್ಟು ಇತ್ತು ಎಂಬುದು ತಿಳಿಯುತ್ತದೆ, ಇದೇ ಘಟನೆ ಅವರ ಮೇಲೆ ಬಹಳ ಪ್ರಭಾವ ಬೀರಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹುಚ್ಚೆಬ್ಬಿಸಿ ಅಂದಿನಿಂದಲೇ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು. ತಾನು ಹುಟ್ಟಿರುವುದೇ ದೇಶದ ವಿಮೋಚನೆಗಾಗಿಯೇ ಎಂದು ಎಲ್ಲರೊಡನೆ ಹೇಳುತ್ತಿದ್ದರು.

ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ – ಸ್ವಾತಂತ್ರ್ಯ. ಅದೊಂದೇ ನನ್ನ ಕನಸು ಎಂಬ ಸರಭ್ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವ ಗುಣವನ್ನು ಮೈಗೂಡುವಂತೆ ಮಾಡಿತ್ತು.

ಭಗತ್ ಸಿಂಗ್ ಸುಮಾರು 18-19ರ ವಯಸ್ಸಿಗೆ ಬಂದಾಗ ಹೀಗೆಯೇ ಬಿಟ್ಟು ಬಿಟ್ಟರೆ ತಮ್ಮ ಕೈ ತಪ್ಪಿ ಹೋದಾನು ಎಂದು ಭಾವಿಸಿದ ಅವರ ಪೋಷಕರು ಮದುವೆ ಮಾಡಲು ಮುಂದಾದಾಗ ಆ ಬಾಲ್ಯ ವಿವಾಹವನ್ನು ತಪ್ಪಿಸಿಕೊಳ್ಳಲು ಭಗತ್ ಮನೆಯಿಂದ ಓಡಿಹೋಗಿದ್ದದು. ಮದುವೆಯಾಗುವುದೇ ಒಂದು ದೊಡ್ಡ ಸಾಧನೆಯಾ? ಮದುವೆ ಯಾರು ಬೇಕಾದರೂ ಆಗಬಹುದು, ಆದರೆ ನನ್ನ ಗುರಿ ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಎಂದು ಎದೆತಟ್ಟಿ ಎಲ್ಲರ ಬಳಿ ಹೇಳಿದ ದಿಟ್ಟ ಯುವಕ ಭಗತ್.

ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸಿ ಮಹಾತ್ಮಾ ಗಾಂಧೀಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಸಕ್ರೀಯವಾಗಿ ಧುಮುಕಿದರು. ಬ್ರಿಟಿಷರ ವಿರುದ್ಧ ಗಾಂಧಿಯವರ ಅಹಿಂಸಾ ಹೋರಾಟ ಅನೇಕ ಯುವಕರುಗಳಿಗೆ ಇಷ್ಟವಾಗುತ್ತಿರಲಿಲ್ಲ. ದಂಡ ದಶಗುಣಂ ಭವೇತ್ ಎನ್ನುವಂತೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆದು ಹಾಕುವಂತೆ ಬ್ರಿಟಿಯರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಿಯಾದರೂ ಅವರನ್ನು ಓದಿಸಬೇಕೆಂದು ಹೇಳುತ್ತಿದ್ದ ಅನೇಕ ಯುವಕರುಗಳಲ್ಲಿ ಭಗತ್ ಸಿಂಗ್, ಚಂದ್ರಶೇಖರ ಆಝಾದ್ ರಾಜಗುರು, ಸುಖದೇವ್ ಮುಂತಾದವರು ಪ್ರಮುಖರು.

ಭಾರತೀಯರು ಕೇವಲ ಅಂಹಿಂಸಾವಾದಿಗಳಲ್ಲ. ನಮ್ಮಲ್ಲೂ ಕ್ಷಾತ್ರವಿದೆ ಎಂದು ತೋರಿಸುವ ಸಲುವಾಗಿಯೇ, ಅದೊಂದು ದಿನ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಭಗತ್ ಮತ್ತು ಸಹಚರರು ಕಡಿಮೆ ತಾಕತ್ತಿನ ಬಾಂಬುಗಳು ಸ್ಫೋಟಿಸಿದ್ದರು. ಈ ಸ್ಪೋಟ ಕೇವಲ ಅಲ್ಲಿ ಕಾರಿಡಾರಿನಲ್ಲಿ ನೆರೆದಿದ್ದ ಜನರನ್ನು ಬೆದರಿಸಿ ಓಡಿಸಲು ಮಾತ್ರ ಅವನ್ನು ಬಳಸಲಾಗಿತ್ತೇ ಹೊರತು ಯಾರನ್ನು ಬಲಿ ತೆಗೆದುಕೊಳ್ಳುವ ಉದ್ದೇಶವಾಗಿರಲಿಲ್ಲ. ಆದರೆ ಭಾರತೀಯರಿಂದ ಇಂತಹ ಉಗರ ಪ್ರತಿಭಟನೆಯನ್ನು ನಿರೀಕ್ಷಿಸಿರದಿದ್ದ ಬ್ರಿಟೀಷರು ಇದನ್ನು ಹೀಗೆಯೇ ಬಿಟ್ಟರೆ ನಾವು ಅಸಹಾಯಕರು ಎಂದು ತೋರಿಸಿಕೊಂಡಂತೆ ಆಗುತ್ತದೆ ಎಂದು ಭಾವಿಸಿ ತೀವ್ರತರವಾಗಿ ತನಿಖೆ ನಡೆಸಿ, ಕಡೆಗೆ ಈ ಕೃತ್ಯದ ಕಾರಣೀಭೂತರದಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಬಂಧಿಸಲು ಯಶಸ್ವಿಯಾಗಿ ಅವರನ್ನು ಎಲ್ಲಾ ಖೈದಿಗಳ ಜೊತೆಯಲ್ಲಿ ಸೆರೆಮನೆಗೆ ತಳ್ಳಿದರು.

ಬ್ರಿಟೀಷರ ಈ ರೀತಿಯ ದೌರ್ಜನ್ಯವನ್ನು ಪ್ರತಿಭಟಿಸಿದ ಭಗತ್ ಸಿಂಗರು, ಆವೇನೂ ಕಳ್ಳತನ ಮಾಡಿಲ್ಲ ದರೋಡೆ ಮಾಡಿಲ್ಲ. ನಾವು ಮಾಡಿರುವುದು ಸ್ವಾತಂತ್ಯ್ರ ಹೋರಾಟ ಹಾಗಾಗಿ ನಮ್ಮನ್ನು ಎಲ್ಲಾ ಖೈದಿಗಳಂತೆ ಭಾವಿಸದೇ, ರಾಜಕೀಯ ಸೆರೆಯಾಳು ಎಂಬುದಾಗಿ ಕಾಣಬೇಕೆಂದು ತಿಳಿಸಿ, ತನಗೆ ಮತ್ತು ತನ್ನ ಸಹಚರರಿಗೆ ಎಲ್ಲ ಸವಲತ್ತುಗಳನ್ನು ಕೊಡಬೇಕೆಂದು ಆಗ್ರಹಿಸಿದ್ದರು. ಅಲ್ಲಿ ಬ್ರಿಟಿಷ್ ಕಳ್ಳರು, ದಂಗೆಕೋರರಿಗೆ ನೀಡುತ್ತಿದ್ದ ಸವಲತ್ತುಗಳನ್ನು ಭಾರತೀಯ ಕೈದಿಗಳಿಗೆ ನೀಡುತ್ತಿರಲಿಲ್ಲ.

ಬಂಗಾಲದಿಂದ ವಂದೇ ಮಾತರಂ ಪ್ರತಿಧ್ವನಿಸಿದರೆ ಇನ್ ಕ್ವಿಲಾಬ್ ಜಿಂದಾಬಾದ್ ಎಂಬ ಮತ್ತೊಂದು ವೀರ ಘೋಷಣೆಯನ್ನು ಹುಟ್ಟುಹಾಕಿದ್ದೇ ಭಗತ್ ಸಿಂಗ್. ಮುಂದೆ ಈ ಎರಡು ಘೋಷಣೆಗಳೂ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯವಾಗಿ ಹೋಯಿತು.

ಭಗತ್ ಸಿಂಗ್ ಮತ್ತು ಅವರ ಸಹಚರರ ಅಪರಾಧ ಅಂತಹ ಗಂಭೀರವಲ್ಲದ ಕಾರಣ ಅವರಿಗೆ ಗಲ್ಲು ಶಿಕ್ಷೆ ಅಧಿಕವಾಯಿತೆಂದು ಬ್ರಿಟಿಷರಿಗೆ ತಿಳಿಸಿ ಅವರನ್ನು ಬಿಡುಗಡೆ ಮಾಡಿಸಬೇಕೆಂದು ಕೇಳಿಕೊಳ್ಳಲು, ಗಾಂಧಿಯವರನ್ನು ಪರಿ ಪರಿಯಾಗಿ ಕೇಳಿಕೊಂಡರೂ, ನಮ್ಮದು ಅಂಹಿಸಾವಾದ. ಅವರದ್ದು ಹಿಂಸಾವಾದ. ಅವರನ್ನು ಸಮರ್ಥನೆ ಮಾಡಲಾಗದು ಎಂಬ ವಿತಂಡ ವಾದ ಮಂಡಿಸಿದ ಗಾಂಧಿಯವರು, ಭಗತ್ ಸಿಂಗ್ ಅವರ ಪರವಾಗಿ ಬ್ರಿಟಿಷರ ವಿರುದ್ಧ ವಾದ ಮಾಡದ ಪರಿಣಾಮವಾಗಿ ಭಗತ್ ಸಿಂಗ್ ಮತ್ತವರ ಸಹಚರರನ್ನು ಮಾರ್ಚ್ 25, 1931 ರಂದು ಗಲ್ಲಿಗೆ ಏರಿಸಲು ನಿರ್ಧರಿಸಿ ಕಡೆಯ ಬಾರಿಗೆ ಅವರ ತಾಯಿಯವರನ್ನು ಭೇಟಿ ಮಾಡಲು ಅನುವು ಮಾಡಿಕೊಡಲಾಯಿತು. ಭಗತ್ ಅವರನ್ನು ನೋಡಿ ಅವರ ತಾಯಿಯವರು ಕಣ್ಣೀರು ಹಾಕಿದಾಗ, ಅಮ್ಮಾ ಇದೇನಿದು? ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಹೆಂಡತಿ, ಅತ್ತಿಗೆ ಮತ್ತು ತಾಯಿಯಾಗಿ ಈ ರೀತಿ ಆಳುವುದು ತರವಲ್ಲ. ಹುಟ್ಟಿದವರು ಎಂದಾದರೂ ಒಮ್ಮೆ ಸಾಯಲೇ ಬೇಕಲ್ಲವೇ? ಎಂದೋ, ಹೇಗೋ ಸಾಯುವ ಬದಲು ಈಗಲೇ, ನಮ್ಮ ದೇಶಕ್ಕಾಗಿ ದೇಹತ್ಯಾಗ ಮಾಡುವುದು ಎಷ್ಟು ಜನರಿಗೆ ಸಿಗುತ್ತದೆ. ಅಂತಹ ಸದಾವಕಾಶ ನಿಮ್ಮ ಮಗನಿಗೆ ಸಿಕ್ಕಿರುವುದರಿಂದ ಸಂತೋಷದಿಂದ ಕಳುಹಿಸಿಕೊಡಿ ಎಂದು ತಾಯಿಯನ್ನು ಸಮಾಧಾನ ಪಡಿಸಿದ ದಿಟ್ಟ ಯುವಕ ಭಗತ್ ಸಿಂಗ್ .

Bhagat2

ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರಿಗೆ ಗಲ್ಲಿಗೇರಿಸುವುದನ್ನು ವಿರೋಧಿಸಲು ಜೈಲಿನ ಮುಂದೆ ಅನೇಕರು ಉಗ್ರ ಹೋರಾಟ ಮಾಡುವರಿದ್ದಾರೆ ಎಂಬುದನ್ನು ಅರಿತ ಬ್ರಿಟಿಷರು, ಅಂದು ಬಾರೀ ಗಲಭೆಯಾಗ ಬಹುದೆಂದು ತಿಳಿದು ಅವರಿಗೆ ನಿಗದಿಪಡಿಸಿದಕ್ಕಿಂತ ಒಂದು ದಿನಕ್ಕೆ ಮಂಚೆಯೇ ಮಾರ್ಚ್ 24, 1931 ರಂದು ಗಲ್ಲಿಗೇರಿಸಿ ರಹಸ್ಯವಾಗಿ ಸಟ್ಲೇಜ್ ನದಿಯ ತಟದ ಮೇಲೆ ಜೈಲು ಅಧಿಕಾರಿಗಳಿಂದಲೇ ಅಂತ್ಯಕ್ರಿಯೆ ನಡೆಸಲಾಯಿತು. ಈ ವಿಷಯ ಜನರ ಕಿವಿಗೆ ಬೀಳುತ್ತಿದ್ದಂತೆ ಪ್ರತಿಭಟನೆ ನಡೆಸಿ ಆವರ ಚಿತಾಭಸ್ಮದೊಡನೆ ಮೆರವಣಿಗೆ ಮಾಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರು ದೇಶ ವಿದೇಶಗಳಲ್ಲಿ ಹಿಂದೂ ಧರ್ಮದ ಹಿರಿಮೆ ಗರಿಮೆಗಳನ್ನು ಜಗತ್ತಿಗೆ ಸಾರಿ, ತೋರಿ ತಮ್ಮ ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ವಿಧಿವಶರಾದರೇ. ಆಚಾರ ತ್ರಯರಲ್ಲಿ ಪ್ರಮುಖರಾದ ಶ್ರೀ ಶಂಕರಾಚಾರ್ಯರು ಬೌದ್ಧ ಮತ್ತು ಜೈನ ಮತಕ್ಕಿಂತ ನಮ್ಮ ಹಿಂದೂ ಧರ್ಮ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎನ್ನುವುದನ್ನು ಸಾರಿ ಹೇಳಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಶಕ್ತಿ ಪೀಠವನ್ನು ಸ್ಥಾಪಿಸಿ ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿಯೇ ಕಾಲವಾದರೆ, ಆ ಇಬ್ಬರು ಮಹಾನ್ ಚೇತನರಂತೆಯೇ, ಭಗತ್ ಸಿಂಗ್ ಅವರೂ ಸಹಾ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ, ಅದೂ ಕೇವಲ ಇಪ್ಪತ್ಮೊರನೇ ವಯಸ್ಸಿನಲ್ಲಿಯೇ ಬ್ರಿಟೀಷರನ್ನು ಕಾಡಿ , ಅವರ ವಿರುದ್ಧ ಉಗ್ರವಾಗಿ ಹೋರಾಡಿ ಹುತಾತ್ಮರಾದವರು. ತನ್ನ 23 ವರ್ಷಗಳ ಜೀವಿತಾವಧಿಯಲ್ಲಿ, ಕ್ರಾಂತಿಯ ಜ್ವಾಲೆಯನ್ನು ಶರವೇಗದಂತೆ ಪಸರಿಸಿದ ಭಗತ್ ಸಿಂಗ್, ಅದೇ ವೇಗದಲ್ಲಿ ತಾಯಿ ಭಾರತಿಗೆ ತಮ್ಮ ಪ್ರಾಣವನ್ನು ಅರ್ಪಿಸಿದರು. ನಮ್ಮ ಧರ್ಮ, ಸಂಸ್ಕೃತಿ ಮತ್ತು ದೇಶಕ್ಕಾಗಿ ಅವರವರ ಕ್ಷೇತ್ರಗಳಲ್ಲಿ ಅವರ ಶಕ್ತ್ಯಾನುಸಾರ, ತಮ್ಮ ತನು ಮನ ಧನವನ್ನು ಅರ್ಪಿಸಿದ ಈ ಮೂವರೂ ನಮಗೆಲ್ಲಾ ಪ್ರಾತಃಸ್ಮರಣೀಯರೇ ಹೌದು.

bhagat3

ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಅಂತಹ ಕ್ರಾಂತಿಕಾರಿ ಹುತಾತ್ಮ ಶ್ರೀ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯಂದು,. ಭಾರತಾಂಬೆಗೆ ತನ್ನ ಸರ್ವಸ್ವವನ್ನು ಅರ್ಪಿಸಿದ ಭಗತ್ ಸಿಂಗ್ ‌ನಂತಹ ಮಹಾನ್ ದೇಶಭಕ್ತನಿಗೆ ನಮ್ಮ ಭಕ್ತಿ ಪೂರ್ವಕ ನಮನಗಳನ್ನು ಸಮರ್ಪಿಸೋಣ!

ಏನಂತೀರೀ?

ನಿಮ್ಮವನೇ ಉಮಾಸುತ

ತ್ಯಾಗ ಮತ್ತು ಬಲಿದಾನದ ದಿನ.

ಇಂದು ಮಾರ್ಚ್ 23. 1931ರ ಇದೇ ದಿನದಂದು ಭಾರತ ದೇಶದ ಮೂವರು ಮಹಾನ್ ಚೇತನಗಳಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರುಗಳು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತಾ ಅತ್ಯಂತ ಸಂತೋಷದಿಂದಲೇ ಕೊರಳಿಗೆ ಹಾಕಿದ್ದ ಉರುಳನ್ನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ ತ್ಯಾಗ ಮತ್ತು ಬಲಿದಾನದ ದಿನ.

ಸ್ವಾತಂತ್ಯ್ರ ಸಂಗ್ರಾಮದ ಸಮಯದಲ್ಲಿ ಗಾಂಧೀಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಉಪವಾಸ, ಧರಣಿ ಸತ್ಯಾಗ್ರಹ ರೂಪದಲ್ಲಿ ಶಾಂತಿಯುತವಾಗಿ ಅಹಿಂಸಾ ಮಾರ್ಗವಾದ ಹೋರಾಟಗಳು ಬಿಸಿರಕ್ತದ ಅನೇಕ ತರುಣರುಗಳಿಗೆ ಇಷ್ಟವಾಗುತ್ತಿರಲಿಲ್ಲ. ಅವರದ್ದೇನಿದ್ದರೂ ದಂಡ ದಶಗುಣಂ ಭವೇತ್ ಎನ್ನುವಂತೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆದು ಹಾಕುವಂತೆ ಬ್ರಿಟಿಯರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಿಯಾದರೂ ಅವರನ್ನು ಭಾರತದಿಂದ ತೊಲಗಿಸಬೇಕೆಂದು ಉಗ್ರರೂಪದಲ್ಲಿ ಹೋರಾಟಮಾಡುತ್ತಿದ್ದ ಅನೇಕ ಯುವಕರುಗಳಲ್ಲಿ ಭಗತ್ ಸಿಂಗ್, ಚಂದ್ರಶೇಖರ ಆಝಾದ್ ರಾಜಗುರು, ಸುಖದೇವ್ ಮುಂತಾದವರು ಅಗ್ರಗಣ್ಯರು.

ಭಾರತೀಯರು ಕೇವಲ ಅಂಹಿಂಸಾವಾದಿಗಳಲ್ಲ. ನಮ್ಮಲ್ಲೂ ಕ್ಷಾತ್ರವಿದೆ ಎಂದು ತೋರಿಸುವ ಸಲುವಾಗಿಯೇ, ಅದೊಂದು ದಿನ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಭಗತ್ ಮತ್ತು ಸಹಚರರು ಕಡಿಮೆ ತಾಕತ್ತಿನ ಬಾಂಬುಗಳು ಸ್ಫೋಟಿಸಿದ್ದರು. ಈ ಸ್ಪೋಟ ಕೇವಲ ಅಲ್ಲಿ ಕಾರಿಡಾರಿನಲ್ಲಿ ನೆರೆದಿದ್ದ ಜನರನ್ನು ಬೆದರಿಸಿ ಓಡಿಸುವ ತಂತ್ರವಾಗಿತ್ತೇ ಹೊರತು ಯಾರನ್ನೂ ಬಲಿ ತೆಗೆದುಕೊಳ್ಳುವ ಉದ್ದೇಶವಿರಲಿಲ್ಲ.‌ ಹಾಗಾಗಿಯೇ ಭಬಾಂಬ್ ಸ್ಪೋಟಿಸಿದ ನಂತರ ಅವರು ತಪ್ಪಿಸಿಕೊಂಡು ಓಡಿ‌ಹೋಗದೇ ಅಲ್ಲಿಯೇ ನಿಂತರಲ್ಲದೇ ಸ್ವಪ್ರೇರಣೆಯಿಂದ ಪೋಲಿಸರಿಗೆ ಶರಣಾದರು.

ಭಾರತೀಯರಿಂದ ಏಕಾಏಕಿ ಇಂತಹ ಉಗ್ರ ಪ್ರತಿಭಟನೆಯನ್ನು ನಿರೀಕ್ಷಿಸಿರದಿದ್ದ ಬ್ರಿಟೀಷರಿಗೆ, ಇಂತಹ ಕೃತ್ಯಗಳನ್ನು ಆರಂಭದಲ್ಲೇ ಚಿವುಟದಿದ್ದರೆ ಅವರ ಮುಂದೆ ನಾವು ಅಸಹಾಯಕರು ಎಂದು ತೋರಿಸಿಕೊಂಡಂತೆ ಆಗುತ್ತದೆ ಎಂಬುದನ್ನು ಮನಗಂಡು‌ ಆನಕೂಡಲೇ ತೀವ್ರತರವಾದ ತನಿಖೆ ನಡೆಸಿ, ಕಡೆಗೆ ಈ ಕೃತ್ಯದ ಕಾರಣೀಭೂತರದಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಬಂಧಿಸಿ ಸಾಮಾನ್ಯ ಖೈದಿಗಳ ಜೊತೆಯಲ್ಲಿ ಸೆರೆಮನೆಗೆ ತಳ್ಳುತ್ತಾರೆ ಮತ್ತು ಅವರಿಗೆ‌ ಅತ್ಯಂತ‌ ಕ್ರೂರವಾದ ಮರಣದಂಡನೆಯ ಶಿಕ್ಷೆಯನ್ನು ವಿಧಿಸುತ್ತಾರೆ.

ಇದನ್ನು ತೀವ್ರತರವಾಗಿ ಖಂಡಿಸಿದ ಭಗತ್ ಸಿಂಗ್ ನಮ್ಮನ್ನು ನೇಣಿಗೆ ಹಾಕಬೇಡಿ ಎಂದು ಅಂದಿನ ಪಂಜಾಬ್ ಪ್ರಾಂತ್ಯದ ಗವರ್ನರ್ ಗೆ ಪತ್ರ ಬರೆಯುತ್ತಾರೆ. ಹಾಗೆಂದ ಮಾತ್ರಕ್ಕೆ ಆ ಪತ್ರ ಹೇಡಿಯಂತೆ ಕ್ಷಮಾಪಣಾ ಪತ್ರವಾಗಿರಲಿಲ್ಲ ಬದಲಾಗಿ ಕೆಚ್ಚೆದೆಯ ಆತ್ಮವಿಶ್ವಾಸದ ದೇಶಪ್ರೇಮಿಯಾದ ಒಬ್ಬ ನೈಜ ಯೋಧನ ಅಪ್ರತಿಮ ಶೌರ್ಯ ಸ್ವಾಭಿಮಾನದ ಪ್ರತೀಕದಂತಿತ್ತು.

ಆ ಪತ್ರವನ್ನು ಮುಂದುವರಿಸುತ್ತಾ , ನಾವು ಸ್ವಾತಂತ್ರ್ಯ ಸಂಗ್ರಾಮದ ಸ್ವಾಭಿಮಾನೀ ಸೈನಿಕರು, ಕೆಚ್ಚೆದೆಯ ಕ್ರಾಂತಿಕಾರಿಗಳು, ನಾವು ಅಪರಾಧಿಗಳಲ್ಲಾ. ನಾವು ಕ್ರಿಮಿನಲ್ ಗಳಲ್ಲಾ . ಹಾಗಾಗಿ ನಮಗೆ ಗೌರವಾರ್ಹವಾದ ವೀರ ಯೋಧರ ಸಾವು ಬೇಕು. ಭಾರತಮಾತೆಯ ಸೇವೆಗಾಗಿ ಪ್ರಾಣವನ್ನರ್ಪಿಸಲು ಸಂತೋಷದಿಂದ ನಾವೆಲ್ಲಾ ಸಿದ್ಧರಿದ್ದೇವೆ. ಆದರೆ…ಸುಖಾ ಸುಮ್ಮನೆ ಯಾವುದೋ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಶಿಕ್ಷೆಗೆ ಗುರಿಯಾದ ಅಪರಾಧಿಗಳಂತೆ ನಮ್ಮನ್ನು ನೇಣಿಗೆ ಹಾಕಬೇಡಿ. ನಾವು ವೀರಮರಣವನ್ನಪ್ಪಲು ಸದಾ ಹಾತೊರೆಯುತ್ತಿದ್ದೇವೆ. ಹಾಗಾಗಿ ಯುದ್ಧದಲ್ಲಿ ಸೈನಿಕರನ್ನು ಶೂಟ್ ಮಾಡುವಂತೆ ನಮ್ಮನ್ನೂ ಬಂದೂಕುಗಳಿಂದ ಸುಟ್ಟು ಸಾಯಿಸಿ ಅಥವಾ ಫಿರಂಗಿಯ ಗುಂಡಿಟ್ಟು ಉಡಾಯಿಸಿ. ನಾವು ತುಪಾಕಿಯ ಬಾಯಿಗೆ, ಫಿರಂಗಿಯ ಗುಂಡಿಗೆ ಪ್ರಾಣವನ್ನರ್ಪಿಸುವ ಗುಂಡಿಗೆಯಿರುವ ಗಂಡುಗಲಿಗಳು, ಹಾಗಾಗಿ ಹೇಡಿಗಳಂತೆ ನೇಣಿಗೆ ಕೊರಳೊಡ್ಡುವ ಬದಲಿಗೆ ಬಂದೂಕಿಗೆ ಎದೆಯೊಡ್ಡಿ ಸಾಯುತ್ತೇವೆ. ಎನ್ನುವಂತಹ ಕ್ಷಾತ್ರ ತೇಜದ ವೀರಯೋಧರುಗಳು ಮರೆಯುವಂತಹ ಪತ್ರವನ್ನು ಭಗತ್ ಸಿಂಗ್ ಮತ್ತಅವರ ಗೆಳೆಯರು ಬರೆದಿದ್ದರು.

ಇವರನ್ನು ಗಲ್ಲಿಗೇರಿಸಲು ಸಕಲ ಸಿದ್ಧತೆಗಳನ್ನು ಬ್ರಿಟೀಷರು ಮಾಡಿಕೊಳ್ಳುತ್ತಿದ್ದಾಗಲೇ,‌ ಇಷ್ಟು‌ ಸಣ್ಣ ವಯಸ್ಸಿನಲ್ಲಿಯೇ ಅಂತಹ ಘನ‌ಘೋರ ತಪ್ಪನ್ನು ಮಾಡದಿದ್ದರೂ ಗಲ್ಲು ಶಿಕ್ಷೆಯಂತರ ಕಠೋರವಾದ ಶಿಕ್ಷೆಯಿಂದ ಪಾರು ಮಾಡುವಂತೆ ಅಂದಿನ ಕೆಲ‌ ಸ್ವಾತಂತ್ರ್ಯ ಹೋರಾಟಗಾರು ಮಹಾತ್ಮಾ ಗಾಂಧಿಯವರ ಬಳಿ ಬಂದು ಹೇಗಾದರೂ ಮಾಡಿ ಬ್ರಿಟೀಷರೊಡನೆ ಮಾತನಾಡಿ ಭಗತ್ ಸಿಂಗ್ ಮತ್ತವರ ಸಂಗಡಿಗರ ಗಲ್ಲು ಶಿಕ್ಷೆಯನ್ನು ತಡೆಯವ ಪ್ರಯತ್ನ ಮಾಡ ಬೇಕೆಂದು ಕೋರುತ್ತಾರೆ‌. ದುರಾದೃಷ್ಟವಶಾತ್ ಅಹಿಂಸಾತ್ಮಕ ಹೋರಾಟದ ಭ್ರಮೆಯಲ್ಲಿಯೇ ತೇಲಾಡುತ್ತಿದ್ದ ಗಾಂಧಿಯವರು, ಭಗತ್ ಸಿಂಗ್ ಮತ್ತವರ ಸಂಗಡಿಗರು ತಮ್ಮ ನಂಬಿಕೆಯ ವಿರುದ್ಧವಾಗಿ ಹಿಂಸಾತ್ಮಕ ಚಳುವಳಿಯಲ್ಲಿ ಪಾಲ್ಗೊಂಡ ಪರಿಣಾಮ, ತಾವು ಅವರ ಪರ ಬ್ರಿಟೀಷ್ ಅಧಿಕಾರಿಗಳ ಬಳಿ ಮಾತನಾಡಲು ಸಿದ್ದವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದಾಗ, ಮನಸ್ಸಿನಲ್ಲಿ ಗಾಂಧಿಯವರ ಸಂಕುಚಿತ ಮನೋಭಾವನೆಯನ್ನು ಮತ್ತು ದೂರದೃಷ್ಟಿಯ ಕೊರತೆಯನ್ನು ಹಳಿಯುತ್ತಾ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ, ಹಿಂದುರಿಗಿದ್ದು ದುರಾದೃಷ್ಟಕರ ಸಂಗತಿಯಾಗಿ ಭಾರತೀಯ ಇತಿಹಾಸದಲ್ಲಿ ಕಪ್ಪು‌‌ ಚುಕ್ಕೆಯಾಗಿಯೇ ಉಳಿದು ಹೋಗಿದೆ.

ಅಂದಿನ ಬ್ರಿಟಿಷ್ ಸರ್ಕಾರ, ಭಗತ್ ಸಿಂಗ್ ಮತ್ತವರ ಕ್ರಾಂತಿಕಾರಿಗಳ ತಂಡಕ್ಕೆ ಹೆದರಿ ನಡುಗಿ ಹೋಗಿತ್ತು…! ಈಗಾಗಲೇ ಭಗತ್ ಸಿಂಗ್ ಮತ್ತವರ ಸಂಗಡಿಗರು ತಮ್ಮ ಸಾಹಸದಿಂದ ಇಡೀ ಭಾರತದಲ್ಲೇ ಸಂಚಲವನ್ನುಂಟು ಮಾಡಿದ್ದರು. ದೇಶದಾದ್ಯಂತ ಯುವಜನತೆಗೆ ಭಗತ್ – ರಾಜ ಗುರು – ಸುಖದೇವ್ ಮಾದರಿಯಾಗಿದ್ದರು, ದಿನ ಬೆಳಗಾಗುವುದರೊಳಗೆ ಆ ಮೂವರೂ ದೇಶಾಭಿಮಾನೀ ಯುವಕ ಯುವತಿಯರ ಪಾಲಿಗೆ ಹೀರೋಗಳಾಗಿದ್ದರು. ಒಂದು ವೇಳೆ ತಾವು ಭಗತ್ ಮತ್ತವರ ಸಂಗಡಿಗರನ್ನು ಬಂದೂಕಿನಿಂದ ಗುಂಡು ಹಾರಿಸಿ ಅಥವಾ ಫಿರಂಗಿಯಿಂದ ಉಡಾಯಿಸಿ ಸಾಯಿಸಿದ್ದೇ ಆದರೆ ಇಡೀ ಭಾರತದಾದ್ಯಂತ ಕ್ರಾಂತಿಯ ಕೆನ್ನಾಲಗೆ ಹರಡಿ ದೇಶಭಕ್ತಿ ಕಿಚ್ಚು ವ್ಯಾಪಿಸಿ ತಾವು ಭಾರತ ಬಿಟ್ಟೋಡುವ ಪರಿಸ್ಥಿತಿ ಉದ್ಭವವಾಗಬಹುದೆಂಬುದನ್ನು ಊಹಿಸಿಯೇ ಬೆದರಿದ ಬ್ರಿಟಿಷರು ಬಹಳ ಗುಟ್ಟು ಗುಟ್ಟಾಗಿ, ಅತ್ಯಂತ ರಹಸ್ಯವಾಗಿ, ಅವಸರವಸರವಾಗಿ ಭಗತ್ ಸಿಂಗ್, ಶಿವರಾಮ ರಾಜ್ ಗುರು, ಸುಖದೇವ್ ಥಾಪರ್ ಅವರನ್ನು ಒಂದು ದಿನದ ಮುಂಚೆಯೇ ಅಂದರೆ ಅಂದರೆ ಮಾರ್ಚ್ 23, 1931 ರಂದೇ ಲಾಹೋರ್ ಜೈಲಿನಲ್ಲಿ ಗಲ್ಲುಗಂಭಕ್ಕೇರಿಸಿದರು. ಬ್ರಿಟಿಷ್ ಅಧಿಕಾರಿಗಳು ಇವರ ಬಗ್ಗೆ ಅದೆಷ್ಟು ಭಯಭೀತರಾಗಿದ್ದರೆಂದರೆ ನೇಣಿಗೇರಿಸಿದರೂ, ಅವರೆಲ್ಲಾದರೂ ಮತ್ತೆ ಬದುಕಿಬಿಟ್ಟಾರೂ ಎಂಬ ಭಯದಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೇಣುಗಂಭದಲ್ಲೇ ಆ ಮೂವರನ್ನೂ ನೇತಾಡಿಸಿ ಅವರು ನಿಜವಾಗಲೂ ಸತ್ತಿದ್ದಾರೆ ಅಂತ ವೈದ್ಯರು ಖಾತ್ರಿ ಪಡಿಸಿದ ನಂತರವೇ ದೇಹಗಳನ್ನು ನೇಣು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿದರು.

ಇಂದು ಭಾರತ ಮಾತೆಯ ಆ ಮೂವರು ವೀರಪುತ್ರರು ವೀರಸ್ವರ್ಗವನ್ನೇರಿದ ದಿನ. ಭಗತ್ ಸಿಂಗ್, ಶಿವರಾಂ ರಾಜ್ ಗುರು ಮತ್ತು ಸುಖದೇವ್ ಥಾಪರ್ ಈ ಮೂವರ ಬಲಿದಾನದ ದಿವಸವನ್ನು ಶಹೀದ್ ದಿವಸ ಅಥವಾ ಹುತಾತ್ಮ ದಿನಾಚರಣೆ ಅಂತ ದೇಶಭಕ್ತರೆಲ್ಲರೂ ಆಚರಿಸುತ್ತೇವೆ. ಅಂದು, ಇಂದು, ಮುಂದೆಯೂ ಅವರೆಲ್ಲರೂ ಸಮಸ್ತ ಭಾರತೀಯರ ಪ್ರಾಥ ಸ್ಮರಣೀಯರು ಮತ್ತು ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವವರು. ದೇಶಕ್ಕಾಗಿ ಅವರ ನಿಸ್ವಾರ್ಥ ತ್ಯಾಗ ಮತ್ತು ಬಲಿದಾನಕ್ಕಾಗಿ ಇಡೀ ಭಾರತ ದೇಶವಾಸಿಗಳ ಪರವಾಗಿ ಅವರಿಗೆ ನಮ್ಮ‌ ಕೋಟಿ ಕೋಟಿ ನಮನಗಳು. 🙏🙏🙏

ಅಂದು ಅವರ ಬಲಿದಾನದಿಂದಾಗಿ ಲಭಿಸಿದ ಸ್ವಾತಂತ್ರ್ಯ, ಕೇವಲ ರಂಗ್ ದೇ ಬಸಂತಿ ಎಂದು ಹಾಡುತ್ತಲೋ ಅಥವ ಆ ಸಿನಿಮಾ ನೋಡುತ್ತಲೋ ಒಂದು ದಿನ ಕಳೆಯದೆ ರಾಷ್ಟ್ರದ ಐಕ್ಯತೆಗಾಗಿ ಮತ್ತು ಏಳಿಗೆಗಾಗಿ ನಾವೆಲ್ಲರೂ ಕಟಿ ಬದ್ಧರಾಗಿ ಶ್ರಮಿಸುವ ಮೂಲಕ ಭಾರತ ದೇಶ ಮತ್ತೊಮ್ಮೆ ವಿಶ್ವಗುರುವಾದಾಗಲೇ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅಂತಹ ವ್ಯಕ್ತಿಗಳ ತ್ಯಾಗ ಮತ್ತು ಬಲಿದಾನಗಳಿಗೆ ಸಾರ್ಥಕತೆ ದೊರೆಯುತ್ತದೆ.

ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ನಿಮ್ಮಿಂದಲೇ ಇಂದುನಾವೆಲ್ಲಾ. ನೀವಿಲ್ಲದೆ ಎಂದೂ,ನಾವಿಲ್ಲ. ಇವೆಲ್ಲರೂ ನಿಸ್ಸಂಶಯವಾಗಿ, ಆಚಂದ್ರಾರ್ಕವಾಗಿ ಭಾರತೀಯರ ಪಾಲಿಗೆ ಅಜರಾಮರರು..

ಭಾರತ್ ಮಾತಾ ಕಿ ಜೈ. ವಂದೇ ಮಾತರಂ

ಏನಂತೀರೀ?
ನಿಮ್ಮವನೇ ಉಮಾಸುತ