ಭಾವೈಕ್ಯತೆಯ ರಾಯಭಾರಿ ಅಬ್ದುಲ್ ಕಲಾಂ

KALAM5

ಈ ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ಒಬ್ಬರಾದ ಶ್ರೀ ಅಬ್ದುಲ್ ಕಲಾಂ ಅವರ ಹೃದಯ ಶ್ರೀಮಂತಿಕೆ ಮತ್ತು ಈ ದೇಶದ ಧರ್ಮಾಚಾರಣೆಗಳಲ್ಲಿ ಅವರಿಗಿದ್ದ ಅಪರಿಮಿತ ನಂಬಿಕೆಯನ್ನು ಅವರ ಕಾಲದಲ್ಲಿ ರಾಷ್ಟ್ರಪತಿ ಭವನದ ಕಂಟ್ರೋಲರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್ ಆವರ ಅಂಗ್ಲ ಭಾಷೆಯ ಲೇಖನ ನಿಜಕ್ಕೂ ಹೃದಯವನ್ನು ತಟ್ಟಿದ ಕಾರಣ ಅದರ ಭಾವಾನುವಾವನ್ನು‌ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆಗ ತಾನೇ ಶ್ರೀ ಕಲಾಂ ಅವರು ರಾಷ್ಟ್ರಪತಿಗಳಾಗಿ ಪದವಿಯನ್ನು ಸ್ವೀಕರಿಸಿದ್ದರು. ಅವರಿಗೆ ರಾಷ್ಟ್ರಪತಿ ಭವನಕ್ಕೆ ಮೊದಲ ಬಾರಿಗೆ ಸನಾತನ ಧರ್ಮಗುರುಗಳಾದ ಕಂಚೀ ಪೀಠದ ಶಂಕರಾಚಾರ್ಯಾರಾಗಿದ್ದ ಶ್ರೀ ಶ್ರೀ ಜಯೇಂದ್ರ ಸರಸ್ವತಿಗಳನ್ನು ರಾಷ್ಟ್ರಪತಿಗಳ ಭವನಕ್ಕೆ ಕರೆಸಿ ಅವರಿಗೆ ಸೂಕ್ತವಾದ ಗೌರವವನ್ನು ನೀಡಲು ನಿರ್ಧರಿಸಿದ್ದರು. ಹಾಗಾಗಿ ಅವರು ಈ ನಿಟ್ಟಿನಲ್ಲಿ ರಾಷ್ಟ್ರಪತಿ ಭವನದ ರೀತಿ ರಿವಾಜು (ಪ್ರೋಟೋಕಾಲ್) ತಿಳಿದುಕೊಳ್ಳಲು ನನ್ನನ್ನು ಆವರ ಬಳಿಗೆ ಕರೆಸಿಕೊಂಡಾಗ, ನಾನು ಸಂತರನ್ನು ರಾಷ್ಟ್ರ ಪತಿ ಭವನದ ಮುಖ್ಯದ್ವಾರದಲ್ಲಿ ಎದುರುಗೊಂಡು ಅವರನ್ನು ನಿಮ್ಮ ಬಳಿಗೆ ಕರೆದು ಕೊಂಡು ಬರುತ್ತೇನೆ ಎಂದು ತಿಳಿಸಿದಾಗ, ಕೆಲವು ನಿಮಿಷಗಳ ಆಳವಾದ ಆಲೋಚನೆಯ ನಂತರ, ನಾನೇ ಖುದ್ದಾಗಿ ಅವರನ್ನು ಕರೆತಂದರೆ ಏನಾಗುತ್ತದೆ? ಎಂದು ಮುಗ್ಧ ಮಗುವಿನ ರೀತಿಯಲ್ಲಿ ಕೇಳಿದರು.

KALAM4

ಅದಕ್ಕುತ್ತರವಾಗಿ ಸರ್ ನೀವು ಈ ದೇಶದ ರಾಷ್ಟ್ರಪತಿಗಳು ಎಂದು ನೆನಪಿಸಿದೆ. ಅದಕ್ಕವರು ಸುಮ್ಮನೇ ಮುಗುಳ್ನಗೆ ಚೆಲ್ಲಿದರೇ ಹೊರತು ಏನನ್ನೂ ಹೇಳಲಿಲ್ಲ. ಆನಂತರ ಸ್ವಾಮಿಗಳನ್ನು ತಮ್ಮ ಕಛೇರಿಯ ಒಳಗೆ ಕರೆ ತಂದು ಅಲ್ಲಿರುವ ಅತಿಥಿಗಳಿಗಾಗಿ ಇರುವ ಆಸನವೊಂದನ್ನು ತೋರಿಸಿ ಅದರ ಮೇಲೆ ಅವರನ್ನು ಕುಳ್ಳರಿಸುತ್ತೇನೆ ಎಂದಾಗ ಮತ್ತೆ ಕಲಾಂ ಅವರು ಸ್ವಾಮಿಗಳನ್ನು ಈ ಸಾಧಾರಣ ಆಸನದ ಬದಲು ನಾನು ಕುಳಿತುಕೊಳ್ಳುವ ಆಸನದಲ್ಲಿ ಕೂರಿಸಿದರೆ ಏನಾಗುತ್ತದೆ? ಎಂದರು. ಅದಕ್ಕೆ ನಾನು ಸರ್ ಅದು ರಾಷ್ಟ್ರಪತಿಗಳ ಆಸನ ಎಂದು ನೆನಪಿಸಿದೆ. ಮತ್ತೆ ಅದಕ್ಕವರು ಸುಮ್ಮನೇ ಮುಗುಳ್ನಗೆ ಚೆಲ್ಲಿದರೇ ಹೊರತು ಏನನ್ನೂ ಹೇಳಲಿಲ್ಲ.

kalam3

ನಮ್ಮ ಮಾತುಕತೆಯಾಗಿ ಸುಮಾರು ಮೂವತ್ತು ನಿಮಿಷಗಳ ನಂತರ, ಆ ಸಂತರು ರಾಷ್ಟ್ರಪತಿ ಭವನ ಬಳಿಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದು ಅವರನ್ನು ಬರಮಾಡಿಕೊಳ್ಳಲು ನಾನು ಖುದ್ದಾಗಿ ಮುಖ್ಯ ದ್ವಾರದ ಬಳಿ ಹೋದೆ. ಸ್ವಾಮೀಜಿಯವರ ವಾಹನ ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ಮುಖ್ಯ ದ್ವಾರ ತಲುಪುತ್ತಿದೆ ಎನ್ನುವಷ್ಟರಲ್ಲಿ ನನ್ನ ಹಿಂದೆ ಯಾರೋ ಬಂದು ನಿಂತ ಹಾಗಾಗಿ, ಹಿಂದಿರುಗಿ ನೋಡಿದರೇ ನನಗೇ ಆಶ್ಚರ್ಯವಾಗುವಂತೆ, ಡಾ ಕಲಾಂ ಅವರು ಮುಖ್ಯದ್ವಾರದ ಬಳಿ ಸ್ವಾಮಿಜೀಗಳನ್ನು ಬರಮಾಡಿಕೊಳ್ಳಲು ನನ್ನ ಹಿಂದೆ ನಿಂತಿದ್ದಾರೆ. ಕೂಡಲೇ ನಾನು ಆವರ ಹಿಂದೆ ಹೋಗಿ ನಿಂತೆ. ಸ್ವಾಮೀಜಿಗಳು ತಮ್ಮ ವಾಹನದಿಂದ ಇಳಿದ ಕೂಡಲೇ, ಕಲಾಂ ಆವರೇ ಖುದ್ಧಾಗಿ ಹೂಮಾಲೆ ಹಾಕಿ ಅವರೊಂದಿಗೆ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಾ ಕಲಾ ಅವರ ಕಛೇರಿಗೆ ಕರೆದು ಕೊಂಡು ಬಂದರು. ಈ ಮೊದಲೇ ನಾವು ಮಾತನಾಡಿದಂತೆ, ಸಂದರ್ಶಕರ ಆಸನದಲ್ಲಿ ಸಂತರ ಆಸನವನ್ನು (ಹುಲಿ ಚರ್ಮದ ಆಸನ) ಹಾಸಲು ನಾನು ಸ್ವಾಮೀಜಿಯವರ ಶಿಷ್ಯರಿಗೆ ಸೂಚಿಸುತ್ತಿದ್ದದ್ದನ್ನು ಗಮನಿಸಿದ ರಾಷ್ಟ್ರಪತಿಗಳು ಆ ಹುಲಿ ಚರ್ಮವನ್ನು ತಮ್ಮ ಆಸನದ ಮೇಲೆ ಹಾಕುವಂತೆ ನಿರ್ದೇಶಿಸಿದ್ದನ್ನು ಗಮನಿಸಿ ನಾನು ಕೆಲ ಕಾಲ ಆಘಾತಕ್ಕೊಳಗಾದರೂ ಅದನ್ನು ಸಾವರಿಸಿಕೊಂದು ಸ್ವಾಮಿಜೀಗಳಿಗೆ ಫಲಪುಷ್ಪದ ಬುಟ್ಟಿಯನ್ನು ಅರ್ಪಿಸಿ ನಾವೆಲ್ಲರೂ ಅಲ್ಲಿಂದ ಹೊರಗೆ ಬಂದೆವು.

ಸುಮಾರು ಹೊತ್ತಿನವರೆಗೂ ಸ್ವಾಮೀಜಿಗಳು ಮತ್ತು ರಾಷ್ಟ್ರಪತಿಗಳ ನಡುವೆ ಅನೇಕ ವಿಷಯಗಳು ಚರ್ಚೆಯಾಗಿ ನಿಗಧಿಯಂತೆ ಸ್ವಾಮೀಜಿಗಳು ಹೊರಡಲು ಅನುವಾದಾಗ ರಾಷ್ಟ್ರಪತಿಗಲೇ ಎಲ್ಲಾ ಸಾಮಾನ್ಯ ಭಕ್ತರಂತೆಯೇ ಸ್ವಾಮಿಗಳಿಗೆ ನಮಸ್ಕರಿಸಿ ಮತ್ತೆ ಅವರ ವಾಹನದ ವರೆಗೂ ಬೀಳ್ಕೊಟ್ಟರು. ನಂತರ ನಾವಿಬ್ಬರೂ ಮತ್ತದೇ ಕಛೇರಿಯಲ್ಲಿ ಭೇಟಿಯಾದೆವು.

WhatsApp Image 2021-08-04 at 10.54.38 PM

ಹಾಗೆ ಭೇಟಿಯಾದ ಸಂದರ್ಭದಲ್ಲಿ ರಾಷ್ಟ್ರಪತಿಗಳ ನಿವಾಸದ ರೀತಿ ರಿವಾಜುಗಳನ್ನು ಕಡೆಯ ಕ್ಷಣಗಳಲ್ಲಿ ಆ ರೀತಿಯಲ್ಲಿ ಬದಲಾಯಿಸಿದ ಕಾರಣವನ್ನು ಸ್ವಲ್ಪ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. ಪ್ರಶ್ನೆ ಕೇಳಿದ ನಂತರ, ರಾಷ್ಟ್ರಪತಿಗಳನ್ನು ಈ ರೀತಿಯಾಗಿ ಪ್ರಶ್ನಿಸಬಹುದೇ? ಅದರಿಂದ ಅವರೆಲ್ಲಿ ಕೋಪ ಮಾಡಿಕೊಳ್ಳುತ್ತಾರೋ? ಎಂಬ ಅಂಜಿಕೆ ನನ್ನ ಮನದಲ್ಲಿತ್ತು. ಆದರೆ ಮತ್ತದೇ ಸಂತನ ರೀತಿಯಲ್ಲೇ ಮುಗುಳ್ನಕ್ಕು ನಾನು ಇಲ್ಲಿಗೆ ರಾಷ್ಟ್ರಪತಿಯಾಗಿರುವುದು ಕೇವಲ ಐದು ವರ್ಷಗಳ ಕಾಲಕ್ಕೆ ಮಾತ್ರಾ. ಆದರೆ ಆ ಜಗದ್ಗುರುಗಳು ಜೀವನ ಪರ್ಯಂತ ವಿಶೇಷವಾದ ಗೌರವನ್ನು ಹೊಂದಿರುತ್ತಾರೆ, ಅಂತಹ ಸಾಧು ಸಂತರು ಈ ರಾಷ್ಟ್ರಪತಿಗಳ ಆಸನದಲ್ಲಿ ಕುಳಿತಾಗ ಅವರ ಅದಮ್ಯವಾದ ಆಧ್ಯಾತ್ಮಿಕ ಶಕ್ತಿಗಳು ಈ ಆಸನಕ್ಕೆ ಲಭಿಸಿ ಮುಂದೆ ಈ ಸ್ಥಾನದಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬರಿಗೂ ಅವರ ಕೃಪಾ ಶೀರ್ವಾದ ಆಚಂದ್ರಾರ್ಕವಾಗಿರುತ್ತದೆ. ಹಾಗಾಗಿಯೇ ನಾನು ಅವರನ್ನು ಈ ಸ್ಥಾನದಲ್ಲಿ ಕುಳ್ಳರಿಸಿದೆ ಎಂದಾಗ ನನ್ನ ಮನಸ್ಸು ತುಂಬಿ ಬಂದು ಸರ್ ನಾನು ಇದುವರೆವಿಗೂ ನಿಮ್ಮನ್ನು ಕೇವಲ ವಿಜ್ಞಾನಿ ಎಂದು ಕೊಂಡಿದ್ದೆ. ಆದರು ನೀವು ಕೇವಲ ವಿಜ್ಞಾನಿಗಳು ಮಾತ್ರವಾಗಿರದೇ ಮಹಾನ್ ದಾರ್ಶನಿಕರು ಮತ್ತು ಭಾವೈಕ್ಯತೆಯ ನಿಜವಾದ ರಾಯಭಾರಿಗಳು. ನಿಮ್ಮೀ ಸರಳತೆ, ನಿಮ್ಮ ಈ ಸಂಸ್ಕಾರ ಮತ್ತು ಈ ದೇಶದ ಸಂಪ್ರದಾಯಗಳ ಮೇಲಿಟ್ಟಿರುವ ಪ್ರೀತಿ ನಿಜಕ್ಕೂ ಅನನ್ಯ ಮತ್ತು ಅನುಕರಣೀಯ‌‌ ಎಂದು ಅವರಿಗೆ ಹೇಳಿ, ಮನಃಪೂರ್ವಕವಾಗಿ ಅವರಿಗೆ ವಂದಿಸಿ ಅಲ್ಲಿಂದ ಹೊರಬಿದ್ದಾಗ ಜೀವನದಲ್ಲಿ ಏನನ್ನೋ ಸಾಧಿಸಿದ ಅನುಭವ ನನಗಾಗಿತ್ತು ಎಂದು ಹೇಳಿಕೊಂಡಿದ್ದಾರೆ ಅಂದಿನ ರಾಷ್ಟ್ರಪತಿ ಭವನದ ಕಂಟ್ರೋಲರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಆವರು.

kalam1

ನಮ್ಮ ದೇಶದ ತುತ್ತ ತುದಿಯ ಊರು ರಾಮೇಶ್ವರಂನ ಒಂದು ಸಾಧಾರಣ ಮುಸ್ಲಿಂ ಬೆಸ್ತರ ಕುಟುಂಬದಲ್ಲಿ ಜನಿಸಿ ತಮ್ಮ ಸ್ವಂತ ಪ್ರಯತ್ನದಿಂದ ದೇಶ ಕಂಡ ಅತ್ಯುತ್ತಮ ಬಾಹ್ಯಾಕಾಶ ವಿಜ್ಞಾನಿಯಾಗಿ ಅನೇಕ ಸಾಧನೆಗಳನ್ನು ಮಾಡಿ ವಿಶ್ವ ವಿಖ್ಯಾತರಾದ ನಂತರ ದೇಶದ ಪ್ರಥಮ ಪ್ರಜೆಯಾದರೂ ತಾವು ಚಿಕ್ಕಂದಿನಲ್ಲಿ ತಮ್ಮ ಹುಟ್ಟೂರಾದ ರಾಮೇಶ್ವರದಲ್ಲಿ ಕಲಿತ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ರಾಷ್ಟ್ರಪತಿ ಭವನದಲ್ಲೂ ಎತ್ತಿ ಹಿಡಿಯುವ ಮೂಲಕ ನಿಜವಾದ ಭಾವೈಕ್ಯತೆಯನ್ನು ತೋರಿಸಿದ್ದಾರೆ.

ಅದೊಮ್ಮೆ ಹೈದರಾಬಾದಿನ MIM ಸಂಸದ ಅಸಾದುದ್ದೀನ್ ಓವೈಸಿ DRDO & ISRO ಚೇರ್ಮನ್ ಪ್ರೋ.ರಾಧಾಕೃಷ್ಣನ್ ಅವರಿಗೆ ಪತ್ರವೊಂದನ್ನು ಬರೆದು ನಮ್ಮ ದೇಶದ ಸ್ವದೇಶಿ ಕ್ಷಿಪಣಿಗಳಿಗೆ ಕೇವಲ ತ್ರಿಶೂಲ್, ಅಗ್ನೀ, ಪೃಥ್ವೀ, ಪಿನಾಕ್, ತೇಜಸ್ ಮುಂತಾದ ಹಿಂದು ಹೆಸರುಗಳನ್ನೇಕೆ ಇಡುತ್ತೀರಿ? ಜ್ಯಾತಾತೀತ ಹೆಸರುಗಳನ್ನೇಕೆ ಇಡುವುದಿಲ್ಲ? ಎಂದು ಪ್ರಶ್ನಿಸಿದ್ದರಂತೆ.

ಈ ಪತ್ರವನ್ನೋದಿದ ಪ್ರೋ.ರಾಧಾಕೃಷ್ಣನ್ ಅದಕ್ಕೆ ಅಷ್ಟೇ ಸರಳವಾಗಿ ಆದರೆ ತುಂಬಾ ಸುಂದರವಾಗಿ ಕೊಟ್ಟ ಉತ್ತರ ಹೀಗಿತ್ತು.

ಮಾನ್ಯರೇ, ನೀವು ಮಂಡಿಸಿರುವ ವಿಷಯ ನಿಶ್ಚಯವಾಗಿಯೂ ವಿಚಾರಮಾಡಬೇಕಾದ ಸಂಗತಿಯೇ. ಆದರೇ…. ನಮ್ಮ ಕ್ಷಿಪಣಿಗಳ ಹೆಸರನ್ನು ನಿರ್ಧರಿಸುವ ವ್ಯಕ್ತಿ ಹಿಂದುವಾಗಿರದೇ ಅವರೊರ್ವ ಮುಸ್ಲೀಂ ವ್ಯಕ್ತಿಯಾಗಿದ್ದು ಅವರ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಕ್ಷಿಪಣಿಗಳ ಸರದಾರ ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹಸ್ತಾಕ್ಷರದೊಂದಿಗೆ ಈ ಎಲ್ಲಾ ಕ್ಷಿಪಣಿಗಳ ಹೆಸರನ್ನು ನಮೂದಿಸಿದ್ದ ಅನುಮೋದನೆಯ ಪತ್ರವನ್ನು ಲಗತ್ತಿಸಿ ಕಳುಹಿಸಿಕೊಡುತ್ತಾರೆ.

ಕಲಾಂ ಸಾಹೇಬರು ತಮ್ಮ ಮೊದಲನೇ ಹೋವರ್ ಕ್ರಾಫ್ಟ್ ನ ಹೆಸರನ್ನು ನಂದಿ ಎಂದು ನಾಮಕರಣ ಮಾಡಿದ್ದರು.

ಹಿಂದು ಮತ್ತು ಮುಸ್ಲೀಂ ಹೆಸರಿನಲ್ಲಿ ಬೆಂಕಿ ಹಚ್ಚುವ ಓವೈಸಿಯಂಥವರಿಗೆ ಈ ಉತ್ತರ ಖಂಡಿತವಾಗಿಯೂ ತಪರಾಕಿಯಾಗಿತ್ತು ಎಂದು ಹೇಳಬೇಕಿಲ್ಲ ಅಲ್ಲವೇ?

ಧರ್ಮದ ಹೆಸರಿನಲ್ಲಿ ಪ್ರತಿದಿನವೂ ಹೊಡೆದಾಡುವವರೆಲ್ಲರೂ ಕಲಾಂ ಅವರಿಂದ ಪ್ರೇರಿತರಾಗಿ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಬೆಳಸಿಕೊಂಡಲ್ಲಿ, ದೇಶದಲ್ಲಿ ಯಾವುದೇ ಕೋಮು ಗಲಭೆಗಳು ನಡೆಯದೇ ಭಾವೈಕ್ಯತೆಯು ಮೂಡಿ ದೇಶವಾಸಿಗಳಲ್ಲರೂ ಸಾಮರಸ್ಯದಿಂದ ಇರಬಹುದು ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಇಬ್ರಾಹಿಂ ಸುತಾರ್

ಇತ್ತೀಚೆಗೆ ಪ್ರಪಂಚಾದ್ಯಂತ ನಡೆಯುತ್ತಿರುವ ಬಹುತೇಕ ಭಯೋತ್ಪಾದನೆಯ ಹಿಂದೆ ಧಾರ್ಮಿಕ ಕಾರಣಗಳು ಇರುವುದನ್ನು ಮನಗೊಂಡು ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಧರ್ಮವಿಲ್ಲ. ದೇವನೊಬ್ಬ ನಾಮ ಹಲವು ಹಾಗಾಗಿ ಎಲ್ಲರೂ ಸಹಬಾಳ್ವೆ ನಡೆಸಬೇಕೆಂದು ಓತಾನುಪ್ರೋತವಾಗಿ ಹೇಳುವುದನ್ನು ಕೇಳಿದ್ದೇವೆ. ನಿಜ ಹೇಳಬೇಕೆಂದರೆ ಅದೆಲ್ಲವೂ ಕೇವಲ ಬಾಯಿ ಚಪಲಕ್ಕೆ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ತಪ್ಪಿಸಿಕೊಳ್ಳಲು ಹೇಳುವ ಮಾತಾಗಿ ನಿಜ ಜೀವನದಲ್ಲಿ ಅಂತಹ ಸಾಮರಸ್ಯ ಇಲ್ಲವಾಗಿದೆ. ಆದರೆ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯ ಕಥಾ ನಾಯಕರಾದ ಶ್ರೀ ಇಬ್ರಾಹಿಂ ಸುತಾರ್ ಅವರು ನಿಜಕ್ಕೂ ಭಾವೈಕ್ಯದ ರಾಯಭಾರಿಗಳಾಗಿದ್ದಾರೆ ಎಂದರೂ ತಪ್ಪಾಗಲಾರದು.

ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ನಬೀ ಸಾಹೇಬ್ ಮತ್ತು ಅಮೀನಾಬಿ ದಂಪತಿಗಳಿಗೆ 10-05-1940ರಲ್ಲಿ ಇಬ್ರಾಹಿಂ ಸುತಾರ್ ಅವರ ಜನನವಾಗುತ್ತದೆ. ಅತೀ ಬಡ ಕುಟುಂಬವಾದ್ದರಿಂದ ಕೇವಲ ಮೂರನೇ ತರಗತಿಯವರೆಗೆ ಮಾತ್ರ ಅವರ ವಿದ್ಯಾಭ್ಯಾಸವಾಗಿ ಅಕ್ಷರಗಳ ಪರಿಚಯವಾಗಿ ಅಲ್ಪ ಸ್ವಲ್ಪ ಓದು ಬರೆಯುವುದನ್ನು ಕಲಿತುಕೊಳ್ಳುತ್ತಾರೆ. ಆದರೆ ಅಷ್ಟರಲ್ಲಿಯೇ ಸುತಾರ್ ಅವರು ವಿದ್ಯೆಗಿಂತ ವಿನಯವನ್ನು ಕಲಿತುಕೊಂಡರು ಎಂದರೂ ತಪ್ಪಾಗಲಾರದು. ಮನೆಯ ತುಂಬಾ ಮಕ್ಕಳು ದುಡಿಯುವ ಕೈ ಒಂದಾದರೆ ತಿನ್ನವ ಕೈಗಳು ಹತ್ತಾರು. ಹಾಗಾಗಿ ಚಿಕ್ಕವಯಸ್ಸಿನಲ್ಲಿಯೇ ನೇಕಾರಿಕೆಯನ್ನು ಕಲಿತ ಸುತಾರರು ಕುಟುಂಬದ ನೆರವಿಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸತೊಡಗುತ್ತಾರೆ.

ಬಾಲ್ಯದಲ್ಲಿಯೇ ತಮ್ಮ ಧರ್ಮದ ಆನ್ವಯದಂತೆ ಪ್ರತಿ ನಿತ್ಯವೂ ಐದು ಬಾರಿ ಮಸೀದಿಯಲ್ಲಿ ನಮಾಜು ಮಾಡುತ್ತಾ ಅಲ್ಲಿಯೇ, ತಮ್ಮ ಧರ್ಮ ಗ್ರಂಥವಾದ ಕುರಾನ್ ಅಧ್ಯಯನ ಮಾಡುತ್ತಾರೆ. ಸಂಜೆ ತಮ್ಮ ಮನೆಯ ಹತ್ತಿರದ ಶ್ರೀ ಗುರು ಸಾಧು ನಿರಂಜನಾವಧೂತರ ಗುಡಿ ಮತ್ತು ಭಜನಾಮಂಡಲಿಗಳಲ್ಲಿ ಭಕ್ತಿ ಪರವಶವಾಗಿ ನಡೆಯುತ್ತಿದ್ದ ಭಜನೆಯನ್ನು ನೋಡಿ ಅದಕ್ಕೆ ಮರುಳಾಗಿ ಆದರಲ್ಲಿ ಅಂತಹದ್ದೇನಿದೆ ಎಂಬ ಕುತೂಹಲದಿಂದ ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ ಮತ್ತು ವಚನಗಳನ್ನು ಕಲಿತು ಕೊಳ್ಳುವುದರ ಜೊತೆಗೆ ಅಲ್ಲಿ ನಡೆಯುತ್ತಿದ್ದ ಪ್ರವಚನಗಳ ಮೂಲಕ ನಿಜಗುಣಯೋಗಿಗಳ ಶಾಸ್ತ್ರ ಮತ್ತು ಭಗವದ್ಗೀತೆಗಳ ಪರಿಚಯವಾಗಿ ತಮಗೇ ಅರಿವಿಲ್ಲದಂತೇ ಅವೆಲ್ಲವನ್ನೂ ಅಧ್ಯಯನ ಮಾಡುತ್ತಾರೆ.

ಹೀಗೆ ಕೆಲವೇ ವರ್ಷಗಳಲ್ಲಿ ಬಸವಣ್ಣನವರ ತತ್ವಗಳನ್ನು ಅನುಷ್ಠಾನಕ್ಕೆ ತಂದರೆ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳುತ್ತಾರೆ. ಭಗವದ್ಗೀತೆ ಹಾಗೂ ಉಪನಿಷತ್ತುಗಳಲ್ಲಿ ಎಲ್ಲರೂ ಒಪ್ಪುವಂತಹ ಆದರ್ಶಗಳು ಇದ್ದರೂ,ಅದು ಅನುಷ್ಠಾನಕ್ಕೆ ಬರಲಿಲ್ಲ. ಸಮಾನತೆ ಇಲ್ಲದ ಆದರ್ಶವಾದವನ್ನು ಒಪ್ಪಲಾರೆ ಎಂದು ಬಸವಣ್ಣನವರು ಅದನ್ನು ತಿರಸ್ಕರಿಸಿದರು. ಮುಹಮ್ಮದ್‌ ಪೈಗಂಬರ್‌ ಅವರು ಮಂತ್ರವನ್ನು ಬಳಸಿದಂತೆ ಬಸವಣ್ಣನವರು ಇಷ್ಟಲಿಂಗ ಬಳಕೆ ಮಾಡಿ, ಸಮಾನತೆಯನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದರು. ಹಾಗಾಗಿ ಅವರ ಅನುಯಾಯಿಗಳಿಗೆಲ್ಲರಿಗೂ ಲಿಂಗಧಾರಣೆ ಮಾಡಿದ್ದರು. ಆದರೆ ದುರ್ಬಲ ಮನಸ್ಸಿನವರಿಂದ ಬಸವಣ್ಣನವರ ತತ್ವಾದರ್ಶಗಳನ್ನು ಅನುಷ್ಠಾನಕ್ಕೆ ತರಲು ಆಗದು. ವ್ಯಸನಿಗಳಿಗೆ ಸಂಪತ್ತು ನೀಡಿದರೆ ಸದುಪಯೋಗವಾಗದೇ ದುರ್ಬಳಕೆಯಾಗುತ್ತದೆ ಹಾಗಾಗಿ ಅಂತಹವರಿಗೆ ಸಂಸ್ಕಾರ ಎಂಬ ಸಂಪತ್ತು ನೀಡಿದಲ್ಲಿ ಅದರ ಸದುಪಯೋಗವಾಗುತ್ತದೆ, ಇಂತಹ ಸಂಸ್ಕಾರವನ್ನು ಬಸವಣ್ಣನವರು ನಮಗೆ ನೀಡಿದ್ದಾರೆ ಎಂದು ಹೇಳುತ್ತಾರೆ ಇಬ್ರಾಹಿಂ ಸುತಾರ್ ಅವರು.

1970 ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳವನ್ನು ಸ್ಥಾಪಿಸಿ ಇದರಲ್ಲಿ ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆಯನ್ನು ಮಾಡುವ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾಗಿದ್ದಲ್ಲದೇ, ದೇವರು ಮತ್ತು ಧರ್ಮ ಬೇರೆ ಆದರೂ ಸತ್ಯ ಒಂದೇ ಎಂಬ ತತ್ವದ ಅಡಿಯಲ್ಲಿ ಮಹಾತ್ಮ ಕಬೀರರಂತೆ ಇವರು ಸಮಾಜದಲ್ಲಿ ಭಾವೈಕ್ಯತೆಯನ್ನು ತರಲು ಪ್ರವಚನಗಳನ್ನು ನೀಡಲು ಆರಂಭಿಸಿದರು. ಕಳೆದ ನಾಲ್ಕು ದಶಕಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ತಮ್ಮ ನೂರಾರು ಕಾರ್ಯ ಕ್ರಮಗಳ ಮೂಲಕ ಹಿಂದು-ಮುಸ್ಲಿಂರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶವನ್ನು ಸಾರುತ್ತ ವಿಶ್ವ ಪ್ರೇಮವನ್ನು ಬೆಳೆಸುವುದೇ ನನ್ನ ಜೀವನದ ಗುರಿಯಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.

ತಮ್ಮ ಭಜನಾ ಸಂಘದ ವತಿಯಿಂದ ಕೇವಲ ಭಾವೈಕ್ಯತೆಯ ಭಜನೆಗಳಲ್ಲದೇ ಯೋಗಾಸನ ಶಿಬಿರಗಳು, ಸಾಕ್ಷರತಾ ಶಿಬಿರಗಳು, ಶಾಲಾ ಕೊಠಡಿಗಳ ನಿರ್ಮಸಿ, ಕೊಳವೇ ಭಾವಿಗಳನ್ನು ತೋಡಿಸಿ ಕುಡಿಯುವ ನೀರಿನ್ ಟ್ಯಾಂಕ್ ಆಳವಡಿಸುವಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ಮಾಡಿಸಿದ್ದಾರೆ. ಇಂತಹ ವಿಚಾರವಂತ ಮುಸಲ್ಮಾನರ ಸಂಖ್ಯೆ ನಮ್ಮ ದೇಶದಲ್ಲಿ ಅಗಣಿತವಾದಲ್ಲಿ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳ ಬಹುದಾಗಿದೆ.

ವೈದಿಕ ಧರ್ಮ, ವಚನಗಳು ಮತ್ತು ಸೂಫಿ ಪರಂಪರೆಗಳ ಹದವಾದ ಸಮ್ಮಿಳನದ ಇವರ ಭಜನೆಗಳು, ಪ್ರವಚನಗಳು ಮತ್ತು , ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ತುಂಬುವ ಇವರ ಶ್ಲಾಘನೀಯವಾದ ಕಾರ್ಯವನ್ನು ಗುರುತಿಸಿ

  • 1995ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
  • 2018ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
  • ಭಾವೈಕ್ಯ ದರ್ಶನ ಶರಣ ಶ್ರೀ ಇಬ್ರಾಹಿಂ ಅವರ ಆಬಿನಂದನಾ ಗ್ರಂಥ,

ಮಾತೃಭಾಷೆ ಉರ್ದುವಾದರೂ ಕನ್ನಡದ ಮೇಲೆ ಅಪಾರವಾದ ಪ್ರೇಮ ಮತ್ತು ಭಾಷೆಯ ಮೇಲೆ ಅಪಾರವಾದ ಹಿಡಿತವಿದ್ದ ಕಾರಣ, ಕನ್ನಡದಲ್ಲಿ ನಾವೆಲ್ಲಾ ಭಾರತೀಯರು, ತತ್ವ ಜ್ಞಾನಕ್ಕೆ ಸರ್ವರೂ ಅಧಿಕಾರಿಗಳು, ಪರಮಾರ್ಥ ಲಹರಿ ಮುಂತಾದ ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.

ಸ್ಥಿತಪ್ರಜ್ಞರು, ಹಣ ಹೆಚ್ಚೋ? ಗುಣ ಹೆಚ್ಚೋ?, ಮನಬಂದಂತೆ ಓಡ್ಯಾಡಬೇಡ, ಆಧ್ಯಾತ್ಮ ಸಂವಾದ ತರಂಗಿಣಿ – 2 ಭಾಗದಲ್ಲಿದೆ, ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ಮಾಡಿದ ಗೀತಾ ಸಂವಾದ ತರಂಗಿಣಿ 5 ಭಾಗಗಳಲ್ಲಿ ಭಜನೆಯ ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಸೌಡಿಲ್ಲದ ಸಾಹುಕಾರ, ಪಾಪ ಮಾಡಬೇಡ, ಪುಣ್ಯವನೇ ಮಾಡು, ಉತ್ತಮರ ಸಂಗಮಾಡು, ಮೊದಲು ಮಾನವನಾಗು, ದಯವೇ ಧರ್ಮದ ಮೂಲ, ಭಾವೈಕ್ಯತೆ ಎಂದರೇನು?, ನೀತಿವಂತನಾಗು, ಯಾರು ಜಾಣರು?, ಪರಮಾತ್ಮನ ಭಜಿಸು, ದೈವವು ಬದಲಾಗಬಹುದೇ?, ಗ್ರಹಸ್ಥ ಜೀವನದಲ್ಲಿ ಹೇಗಿರಬೇಕು? ಮುಂತಾದ ಅವರ ಪ್ರವಚನದ ಧ್ವನಿಸುರುಳಿಗಳು ಬಿಡುಗಡೆಯಾಗಿ ಭಾರೀ ಪ್ರಖ್ಯಾತವಾಗಿದೆ.

  • ಶ್ರಾವಣಕ್ಕೊಂದು ಸಮಾಜ ಸೇವೆ ಎಂಬ ವಿನೂತನ ಕಾರ್ಯಕ್ರಮವನ್ನು ವಿಜಯಪುರದ ವೇದಾಂತ ಕೇಸರಿ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಇಬ್ರಾಹಿಂ ಸುತಾರ್ ಅವರ ನೇತೃತ್ವದಲ್ಲಿ ಮಾಡಿದ ಸಮಾಜ ಸೇವೆಗಳು ಈ ರೀತಿಯಾಗಿವೆ.
  • 1988ರಲ್ಲಿ ಶೇಗುಣಸಿ- ತೇರದಾಳ ಮಧ್ಯೆ 9 ಕಿ.ಮೀ. ಶ್ರಮದಾನದಿಂದ ರಸ್ತೆ ನಿರ್ಮಾಣ
  • 2002ರಲ್ಲಿ ಢವಲೇಶ್ವರಲ್ಲಿ ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆಯ ನಿರ್ಮಾಣ
  • 2009ರಲ್ಲಿ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಕಲ್ಯಾಣ ಮಂಟಪದ ನಿರ್ಮಾಣ
  • 2011ರಲ್ಲಿ ಅರಳಿಮಟ್ಟಿಯಲ್ಲಿ ಶ್ರೀ ಬಸವೇಶ್ವರ ಯಾತ್ರಿ ನಿವಾಸ
  • ಶಾಂತಿಕುಟೀರ ಕನ್ನೂರಿನ ಶ್ರೀ ಸ.ಸ.ಗಣಪತರಾವ್ ಮಹಾರಾಜರ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣದ ಪಾದಯಾತ್ರೆ
  • ಅವರ ಪುತ್ರನ ವಿವಾಹದ ಸಮಯದಲ್ಲಿ, ಕಲ್ಯಾಣ ಮಹೋತ್ಸವದ ನಿಮಿತ್ತ ಶರಣರ – ಸಂತರ – ಸೂಫಿಗಳ ಭಾವೈಕ್ಯ ಸಂಗಮ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಭಾವೈಕತೆಯನ್ನು ತಮ್ಮ ಮನೆಯಿಂದಲೇ ಮಾಡಿ ತೋರಿಸಿದ ಮಹಾನುಭಾವರು ಇಬ್ರಾಹಿಂ ಸುತಾರರು.

ಹೀಗೆ ಸೂಫಿ ಸಾಹಿತ್ಯ, ವಚನಗಳು, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಹಿಂದೂ-ಮುಸ್ಲಿಮ್ಮರಲ್ಲಿ ಭಾವೈಕ್ಯತೆಯ ಸಂದೇಶವನ್ನು ನಾಲ್ಕು ದಶಕಗಳಿಂದಲೂ ಸಾರುತ್ತಿರುವ ಕೇವಲ ಕರ್ನಾಟಕವಲ್ಲದೇ ಹೊರರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಒರಿಸ್ಸಾ, ರಾಜಸ್ಥಾನ,ಗೋವಾಗಳಲ್ಲಿಯೂ ಯಶಸ್ವಿಯಾಗಿ ತಮ್ಮ ಕಾರ್ಯಕ್ರಮಗಳನ್ನು ನೀಡಿ ಕರ್ನಾಟಕದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಸಾರಿ ಭಾವೈಕ್ಯತೆಯ ರಾಯಭಾರಿಯಾಗಿರುವ ಕರ್ನಾಟಕದ ಸಂತ ಕಬೀರ‌‌ದಾಸರಾದ ಶ್ರೀ ಇಬ್ರಾಹಿಂ ಸುತಾರ್ ಅವರು ನಿಜವಾದ ಕನ್ನಡದ ಕಲಿಗಳೇ ಸರಿ

ಏನಂತೀರೀ?

ಅನಂತ ಚತುರ್ದಶಿ ವ್ರತ

ಭಾದ್ರಪದ ಮಾಸದ ಶುಕ್ಲ ಪಕ್ಷದ ಹದಿನಾಲ್ಕನೇಯ ದಿನವಾದ ಚತುರ್ದಶಿಯನ್ನು ಅನಂತ ಚತುರ್ದಶಿ ಅಥವಾ ಅನಂತನ ಹಬ್ಬ ಎಂದು ಆಚರಿಸಲಾಗುತ್ತದೆ. ಮಹಾರಾಷ್ಟ್ರ ಮತ್ತು ಆಂಧ್ರಪದೇಶಗಳಲ್ಲಿ ಭಾದ್ರಪದ ಶುಕ್ಲ ಚೌತಿಯಂದು ಪ್ರತಿಷ್ಠಾಪಿಸಿದ ಶ್ರೀ ಗಣೇಶನ ಮೂರ್ತಿಯನ್ನು ಇದೇ ದಿನದಂದು ಸಂಭ್ರಮಾಚರಣೆಯಿಂದ ಬಹಳ ಅದ್ದೂರಿಯಾಗಿ ವಿಸರ್ಜಿಸುತ್ತಾರೆ. ಹಾಗಾಗಿ ಈ ದಿನವನ್ನು ಗಣೇಶ್ ವಿಸರ್ಜನ್ ದಿವಸ್ ಎಂದೂ ಕರೆಯುವ ರೂಡಿಯಲ್ಲಿದೆ.

ಈ ದಿನದಂದು ವಿಷ್ಣು ದೇವರು ಸಾವಿರ ಹೆಡೆಯ ಅನಂತ ಶೇಷನ ಮೇಲೆ ಶಯನಿಸುತ್ತಾರೆ ಎಂಬ ನಂಬಿಕೆಯಿದೆ. ಈ ದಿನದಂದು ಶ್ರದ್ಧಾ ಭಕ್ತಿಯಿಂದ ಅನಂತ ಪದ್ಮನಾಭವನ್ನು ಭಜಿಸಿದರೆ, ದೇವರು ಅವರ ಇಷ್ಟಾರ್ಥಗಳನ್ನು ಅದರಲ್ಲೂ ವಿಶೇಷವಾಗಿ ಸಂಪತ್ತು ಹಾಗೂ ಸಂತಾನ ಪ್ರಾಪ್ತಿಯನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇರುವ ಕಾರಣವಿರುವುದರಿಂದ ನಮ್ಮ ರಾಜ್ಯವೂ ಒಳಗೊಂಡಂತೆ ಆಂಧ್ರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಿನವರು ಆಚರಿಸುತ್ತಾರೆ. ಈ ಹಬ್ಬ ಸಂಕ್ರಾಂತಿ ಮತ್ತು ಯುಗಾದಿಯಂತೆ ಎಲ್ಲರ ಮನೆಗಳಲ್ಲೂ ಆಚರಿಸದೇ, ಕೇವಲ ಯಾರ ಮನೆಗಳಲ್ಲಿ ವ್ರತಾಚರಣೆಯನ್ನು ಹಿಡಿದಿರುತ್ತಾರೋ ಅಂತಹವರ ಮನೆಗಳಲ್ಲಿ ಮಾತ್ರವೇ ಆಚರಿಸಲಾಗುತ್ತದೆ. ಯಾರು ಬೇಕಾದರೂ ಈ ವ್ರತವನ್ನು ಹಿಡಿಯಬಹುದಾಗಿದೆ. ಆದರೆ ಒಮ್ಮೆ ವ್ರತಮಾಡಲು ಸಂಕಲ್ಪ ಮಾಡಿದಲ್ಲಿ ಕನಿಷ್ಟ ಪಕ್ಷ 14 ವರ್ಷಗಳಾದರೂ ಅದನ್ನು ಸತತವಾಗಿ ಬಿಡದೇ ಆಚರಿಸಬೇಕೆಂಬ ನಿಯಮವಿದೆ. ಯಾವುದಾರೂ ಅಸೌಖ್ಯವಾಗಲೀ ಅಥವಾ ಮುಟ್ಟುಚೆಟ್ಟಿನಿಂದ ಭಾದ್ರಪದ ಚರ್ತುದಶಿಯಂದು ಆಚರಿಸಲಾಗದವರು, ದಸರಾ ಹಬ್ಬದ ಸಮಯದಲ್ಲೂ ಆಚರಿಸಬಹುದಾಗಿದೆ.

ಈ ಅನಂತ ವ್ರತದ ಬಗ್ಗೆ ಅನೇಕ ಕಥೆಗಳು ನಮ್ಮ ಪುರಾಣದಲ್ಲಿ ಇದ್ದು ಅವುಗಳಲ್ಲಿ ಪ್ರಮುಖವಾದವು ಹೀಗಿವೆ.

ಕೃತಾಯುಗದಲ್ಲಿ ಸುಮಂತ ಎಂಬ ಬ್ರಾಹ್ಮಣನಿಗೆ ದೀಕ್ಷಾ ಎಂಬ ಮಡದಿ ಮತ್ತು ಸುಶೀಲ ಎಂಬ ಮಗಳಿದ್ದಳು. ಕೆಲ ಕಾಲದಲ್ಲಿ ಅನಾರೋಗ್ಯದ ಕಾರಣ ಪತ್ನಿ ದೀಕ್ಷ ವಿಧಿವಶವಾದಾಗ ಸುಮಂತ ಕರ್ಕಶ ಎಂಬುವಳನ್ನು ಮದುವೆಯಾಗುತ್ತಾನೆ. ಯಥಾ ಪ್ರಕಾರ ಮಲತಾಯಿ ಧೋರಣೆಯಿಂದ ತನ್ನ ಹೆಸರಿಗೆ ಅನ್ವರ್ಥದಂತೆ ಕರ್ಕಶ ತನ್ನ ಮಲ ಮಗಳಾದ ಸುಶೀಲೆಯನ್ನು ಪ್ರೀತಿಯಿಂದ ಕಾಣದೆ, ಅನೇಕ ಹಿಂಸೆ ಕೊಡುತ್ತಿರುತ್ತಾಳೆ. ತನ್ನ ಎರಡನೇ ಹೆಂಡತಿಯು ಮಗಳಿಗೆ ಕೊಡುವ ಕಾಟವನ್ನು ನೋಡಲಾರದೆ ಮಗಳನ್ನು ಕೌಂಡಿನ್ಯ ಎಂಬುವನೊಂದಿಗೆ ಮದುವೆ ಮಾಡಿಕೊಟ್ಟು ಆಕೆಯ ಗಂಡನ ಮನೆಗೆ ಕಳುಹಿಸಿಕೊಡುತ್ತಾನೆ.

ತವರು ಮನೆಯಿಂದ ಗಂಡನಮನೆಗೆ ಹೋಗುತ್ತಿದ್ದ ದಾರಿಯಲ್ಲಿ ಯುಮನಾ ನದಿ ತಟದಲ್ಲಿ ಕೆಲ ಮುತ್ತೈದೆಯರು ಪೂಜೆ ಮಾಡುತ್ತಿರುವುದನ್ನು ಕಂಡು ಆ ಪೂಜೆಯ ವಿವರಗಳು ಮತ್ತು ಫಲಗಳಿಂದ ಪ್ರೇರಿತಳಾಗಿ ತನಗೆ ಮಕ್ಕಳಾಗಲು ಮತ್ತು ತನ್ನ ಗಂಡನ ವೃತ್ತಿಯಲ್ಲಿ ಯಶಸ್ಸು ಕಾಣುವಂತಾಗಲು ಅನಂತ ವ್ರತವನ್ನು ಮಾಡಬೇಕೆಂದು ನಿರ್ಧರಿಸಿ ವ್ರತಾಚರಣೆಯಲ್ಲಿ ತೊಡಗುತ್ತಾಳೆ. ಆಕೆಯ ವ್ರತದಿಂದ ಸಂತೃಪ್ತನಾದ ಪದ್ಮನಾಭ ಆ ದಂಪತಿಗಳಿಗೆ ಅವರ ಸಂಪತ್ತು ವೃದ್ಧಿಯಾಗಿ ಅವರ ಸಕಲ ಇಷ್ಟಾರ್ಥಗಳು ನೆರವೇರಲೆಂದು ಆಶೀರ್ವದಿಸುತ್ತಾನೆ. ಈ ರೀತಿಯ ವ್ರತಾಚರಣೆಗಳ ಬಗ್ಗೆ ಆಕೆಯ ಗಂಡನಾದ ಕೌಂಡಿನ್ಯನಿಗೆ ನಂಬಿಕೆ ಬಾರದೆ,ಆತ ವ್ರತದ ಅಂಗವಾಗಿ ತನ್ನ ಮಡದಿ ತನ್ನ ಎಡಗೈ ತೋಳಿಗೆ ಕಟ್ಟಿದ್ದ ದಾರವನ್ನು ಕಿತ್ತು ಬೆಂಕಿಗೆ ಎಸೆಯುತ್ತಾನೆ. ಈ ಘಟನೆಯ ನಂತರ ಅವರ ಸಂಪತ್ತು ನಿಧಾನವಾಗಿ ನಶಿಸುತ್ತಾ ಹೋಗಿ ಕ್ರಮೇಣ ಅವರು ಕಡು ಬಡವರಾಗುತ್ತಾರೆ.

ನಾನಾ ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದ ನಂತರ ಕೌಂಡಿನ್ಯನಿಗೆ ತನ್ನ ತಪ್ಪಿನ ಅರಿವಾಗಿ, ವಿಷ್ಣುವನ್ನು ಕುರಿತು ಅಖಂಡ ತಪಸ್ಸನ್ನು ಮಾಡಿ ಶ್ರೀ ಮಹಾವಿಷ್ಣುವನ್ನು ಪ್ರಸನ್ನಗೊಳಿಸಿಕೊಳ್ಳುತ್ತಾನೆ. . ಭಗವಾನ್ ವಿಷ್ಣು ಪರಮಾತ್ಮ ಕೌಂಡಿನ್ಯಗಿನೆ ದರ್ಶನವನ್ನಿತ್ತು, 14 ವರ್ಷಗಳ ಕಾಲ ಅನಂತ ಪದ್ಮನಾಭ ವ್ರತವನ್ನು ಆಚರಿಸಿದರೆ, ಕಳೆದು ಕೊಂಡ ಸುಖ ಸಂಪತ್ತು ಪುನಃ ಗಳಿಸುವುದಾಗಿ ವರವನ್ನು ನೀಡುತ್ತಾನೆ. ಅದರಂತೆ ದಂಪತಿಗಳು ಶ್ರಧ್ಧಾ ಭಕ್ತಿಯಿಂದ ಮುಂದಿನ 14 ವರ್ಷಗಳ ಕಾಲ ಪ್ರತಿವರ್ಷ ಅನಂತ ಪದ್ಮನಾಭ ವ್ರತ ಮಾಡಿ ಕಳೆದುಕೊಂಡಿದ್ದ ಎಲ್ಲಾ ಸಿರಿ ಸಂಪತ್ತುಗಳನ್ನು ಮರಳಿ ಪಡೆಯುತ್ತಾರೆ. ಹೀಗೆ ಅನಂತ ಪದ್ಮನಾಭ ವ್ರತ ಆಚರಣೆಗೆ ಬಂದಿತು ಎಂಬ ಪ್ರತೀತಿಯಿದೆ.

ಆದೇ ರೀತಿ ದ್ವಾಪರ ಯುಗದಲ್ಲಿ ಪಾಂಡವರು ಕೌರವರೊಂದಿಗೆ ಮೋಸದ ಜೂಜಿನಲ್ಲಿ ಸೋತು 14 ವರ್ಷಗಳ ಕಾಲ ವನವಾಸವನ್ನು ಮತ್ತು ಒಂದು ವರ್ಷ ಅಜ್ಞಾತವಾಸವನ್ನು ಅನುಭವಿಸಬೇಕಾಗುತ್ತದೆ. ಈ ಸಮಯದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಪಾಂಡವರ ಕೈಯಿಂದ ಶ್ರೀ ಅನಂತ ವ್ರತವನ್ನು ಆಚರಿಸಿದ ಫಲವಾಗಿ ಅವರಿಗೆ ಮರಳಿ ರಾಜ್ಯ ಭಾಗ್ಯ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

anantha_vratha

ಅನಂತ ಚತುರ್ದಶಿ ವ್ರತಾಚರಣೆ ವಿಧಿ ವಿಧಾನಗಳು ಹೀಗಿವೆ:

ಹಬ್ಬದ ದಿನದಂದು ಮನೆಯವರೆಲ್ಲರೂ ಹೊತ್ತಿಗೆ ಮಂಚೆಯೇ ಎದ್ದು ಶುಚಿರ್ಭೂತರಾಗಿ, ಹೆಂಗಳೆಯರು ಮನೆಯ ಅಂಗಳ ಮುಂಬಾಗಿಲು ಗುಡಿಸಿ ಸಾರಿಸಿ ದೊಡ್ಡ ದೊಡ್ಡ ರಂಗೋಲಿಯಿರಿಸಿ ಹೊಸಿಲಿಗೆ ಅರಿಶಿನ ಕುಂಕುಮವಿರಿಸಿ ಮನೆಯ ಮುಂದಿನ ತುಳಸಿ ಕಟ್ಟೆಗೆ ಗೆಜ್ಜೆವಸ್ತ್ರವಿಟ್ಟು ಪೂಜಿಸಿ ಅನಂತದೇವರ ಮಂಟಪ ಕಟ್ಟಿರುವ ಜಾಗದಲ್ಲಿ ರಂಗೋಲಿಹಾಕಿ ಮಣೆಹಾಕಿ ಅದರ ಮೇಲೆ ತಟ್ಟೆಯಲ್ಲಿ ಗೋಧಿ ಹರಡಿ ಅದರಮೇಲೆ ಎರಡು ಕಲಶ ಕೂಡಿಸುತ್ತಾರೆ. ಮೊದಲನೆಯದು ಅನಂತ ದೇವರ ಕಲಶವಾದರೆ ಮತ್ತೊಂದು ಯಮುನಾದೇವಿಯ ಕಲಶವಾಗಿರುತ್ತದೆ. ಮನೆಯ ಗಂಡಸರು, ಮನೆಯ ಹೆಬ್ಬಾಗಿಲಿಗೆ ಮಾವಿನ ತೋರಣ ಕಟ್ಟಿ, ದೇವರ ಮಂಟಪಕ್ಕೆ ಬಾಳೆಕಂದು ಕಟ್ಟಿ ಮಾವಿನ ತೋರಣ ಕಟ್ಟಿ ಪೂಜೆಗೆ ಸಿದ್ಧ ಪಡಿಸಿದರೆ, ಮನೆಯ ಹಿರಿಯರು ಮನೆಯ ಹತ್ತಿರದ ಬಾವಿ ಅಥವಾ ಕೆರೆಯಿಂದ ಮಡಿಯಲ್ಲಿ ನೀರನ್ನು ತಂದು. (ಇದಕ್ಕೆ ಯಮುನೆ ನೀರು ಎಂದು ಕರೆಯುತ್ತಾರೆ.) ಅದನ್ನು ಆ ಎರಡು ಕಲಶಗಳಿಗೆ ಹಾಕಿ ಅದರ ಮೇಲೆ ಹಾವಿನ ಹೆಡೆಯಂತೆ ಧರ್ಭೆಯಲ್ಲಿ ರಚಿಸಿಟ್ಟು ಅದರ ಮುಂದೆ ಸಾಲಿಗ್ರಾಮವನ್ನಿಟ್ಟು ಶೋಡಷೋಪಚಾರ ಪೂಜೆ ಮಾಡಿ 14 ಬಗೆಯ ಭಕ್ಷ್ಯಗಳಾದ ಅನ್ನ, ಪಾಯಸ, ಕಡುಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರ ಮುಂದಿಟ್ಟು ನೈವೇದ್ಯ ಮಾಡುತ್ತಾರೆ. ಆದಾದ ನಂತರ, ಅನಂತ ಪದ್ಮನಾಭನ ಕಥೆ ಓದಿ ಮಹಾಮಂಗಳಾರತಿ ಮಾಡಿ ಮನೆಯ ಎಲ್ಲಾ ಬಂಧು ಮಿತ್ರರೂ ಕೂಡಿ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಭಗವಂತನನ್ನು ಕೋರಿಕೊಳ್ಳುತ್ತಾರೆ.

ಆದದ ನಂತರ ಮನೆಯ ಗಂಡಸರು ಬಲಗೈ ತೋಳಿಗೆ ಕುಂಕುಮ ಲೇಪಿತ ಗಂಟು ಕಟ್ಟಿದ ಕೆಂಪು ಬಣ್ಣದ ದಾರ ಹಾಗೂ ಹೆಂಗಳೆಯರು ಎಡಗೈ ತೋಳಿಗೆ ದಾರ ಕಟ್ಟಿಕೊಳ್ಳುವ ಶಾಸ್ತ್ರವಿದೆ. ಇದನ್ನು ಅನಂತನ ದಾರ ಅಥವಾ ನೋಂಬು ಎನ್ನುತ್ತಾರೆ. ಬೆಳಗಿನಿಂದ ಉಪವಾಸವಿದ್ದವರು ಎಲ್ಲರೂ ದೇವರ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಒಟ್ಟಿಗೆ ಕುಳಿತು ಭೋಜನ ಮಾಡುತ್ತಾರೆ.

ಕೆಲವರ ಮನೆಯವರ ಮನೆಯಲ್ಲಿ ಆದಿನ ರಾತ್ರಿಯಿಡೀ ಜಾಗರಣೆ ಮಾಡುತ್ತಾ ದೇವರ ಸ್ಮರಣೆ ಮಾಡಿ ಮಾರನೆಯ ದಿನ ಸ್ನಾನ ಸಂಧ್ಯಾವಂದನೆಯಾದ ನಂತರ ಆ ಕಳಸದ ನೀರನ್ನು ಮತ್ತೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸುವ ಮೂಲಕ ಈ ಪೂಜೆ ಸಂಪೂರ್ಣವಾಗುತ್ತದೆ. ಈ ವ್ರತವನ್ನು ಆಚರಿಸುವವರ ಮನೆ ಅಥವಾ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಆ ಕಳಸಗಳನ್ನು ಯಾರೇ ನೋಡಿದರೂ ಅವರ ಇಷ್ಟಾರ್ಥ ಗಳು ಫಲಿಸುತ್ತದೆ ಇನ್ನೂ ಕೆಲವರಿಗೆ ಸಂತಾನಪ್ರಾಪ್ತಿ, ಧನಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಈ ರೀತಿಯಾಗಿ ಪ್ರತೀ ಮನೆಗಳಲ್ಲಿ ತಮ್ಮ ಬಂಧು ಮಿತ್ರರ ಕೂಡಿ ಅನಂತ ಪದ್ಮನಾಭ ವ್ರತವನ್ನು ಆಚರಿಸಿದರೆ, ಮೈಸೂರು ಮತ್ತು ಕೊಡಗಿನ ನಿಖರವಾಗಿ ಮಧ್ಯದಲ್ಲಿರುವ ಹುಣಸೂರು ತಾಲ್ಲೂಕಿಗೆ ಸೇರಿರುವ ಚಿಲ್ಕುಂದ ಎಂಬ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಮತ್ತು ವಿಶೇಷವಾಗಿ ಆಚರಿಸುತ್ತಾರೆ. ಸರಿ ಸುಮಾರು 50-60 ರಷ್ಟು ಮನೆಗಳು ಇರುವ ಸಂಕೇತಿ (ಕನ್ನಡ ಮತ್ತು ತಮಿಳು ಮಿಶ್ತ್ರಿತ ಭಾಷೆಯನ್ನಾಡುವ ಬ್ರಾಹ್ಮಣರ ಉಪಸಮುದಾಯ) ಕುಟುಂಬಗಳು ಅತ್ಯಂತ ಬುದ್ಧಿವಂತಿಕೆ, ಪ್ರಜ್ಞಾವಂತಿಕೆ, ಸಂಗೀತ, ಗಮಕ, ಆಗಮ ಮತ್ತು ಆಚಾರ ವಿಚಾರಗಳಿಗೆ ಹೆಸರುವಾಸಿಯಾಗಿದ್ದಾರೆ. ಈಗಂತೂ ಪ್ರತೀ ಮನೆಯಲ್ಲೊಬ್ಬರು ಸಾಫ್ಟ್ವೇರ್ ಇಂಜೀನೀಯರ್ಗಳಾಗಿ ದೇಶ ವಿದೇಶಗಳಲ್ಲಿ ತಮ್ಮ ಊರಿನ ಹೆಸರನ್ನು ಪ್ರಖ್ಯಾತಿ ಗೊಳಿಸಿದ್ದಾರೆ. ಅತಿಥಿ ಸತ್ಕಾರಕ್ಕೆ ಅತ್ಯಂತ ಹೆಸರುವಾಸಿಯಾಗಿರುವ ಈ ಊರಿನಲ್ಲಿ ಅಪ್ಪಿ ತಪ್ಪಿ ನಮ್ಮ ಸಂಬಂಧೀಕರ ಮನೆಗೆ ಹೋಗುವ ಬದಲು ಅವರ ಅಕ್ಕ ಪಕ್ಕದ ಬೇರೋಬ್ಬರ ಮನೆಗೆ ಹೋದರೂ ಯಾವುದೇ ಬೇಸರವಿಲ್ಲದೇ, ಮಾಮ ಅತ್ತೇ ಎನ್ನುತ್ತಾ, ತಮ್ಮ ಮನೆಯ ಅತಿಥಿಗಳೇನೋ ಎನ್ನುವಂತೆ ಪ್ರೀತಿ ಪಾತ್ರವಾಗಿ ಸತ್ಕರಿಸಿ ಕಳುಹಿಸುವ ಮಂದಿ ಇಂದಿಗೂ ಆ ಊರಿನಲ್ಲಿ ಇದ್ದಾರೆ ಎನ್ನುವುದು ಆ ಊರಿನ ಹೆಗ್ಗಳಿಕೆ. ಅವರ ಅತಿಥಿ ಸತ್ಕಾರವನ್ನು ವರ್ಣಿಸುವುದಕ್ಕಿಂತ ಒಮ್ಮೆ ಅನುಭವಿಸಿದರೇ, ಅತ್ಯಂತ ಆನಂದ.

ಊರಿನಲ್ಲಿ ಎಲ್ಲರ ಮನೆಗಳಲ್ಲಿಯೂ ಈ ವ್ರತಾಚರಣೆ ಇರದೇ ಕೇವಲ 15-20 ಮನೆಗಳಲ್ಲಿ ಮಾತ್ರವೇ ಅನಂತ ಪದ್ಮನಾಭನ ವ್ರತವನ್ನು ಆಚರಿಸುವುದರಿಂದ ಉಳಿದವರೆಗೆ ಬೇಸರವಾಗದಿರಲೆಂದು. ಯಾರ ಯಾರ ಮನೆಗಳಲ್ಲಿ ವ್ರತಾಚರಣೆ ಇರುವುದಿಲ್ಲವೂ ಅಂತಹವರು ತಮ್ಮ ಅಕ್ಕ ಪಕ್ಕದ ವ್ರತಾಚರಣೆಯ ಮನೆಯಲ್ಲಿ ಪೂಜೆಯಲ್ಲಿ ಭಾಗಿಯಾಗಿ ಅನಂತ ಪದ್ಮನಾಭನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಹೀಗೆ ಇಡೀ ಊರಿಗೆ ಊರೇ ಹಬ್ಬವನ್ನು ಬಹಳ ಶ್ರಧ್ಧಾ ಭಕ್ತಿಗಳಿಂದ ಆಚರಿಸಿ ಅನಂತ ಪದ್ಮನಾಭನ ಅನುಗ್ರಹಕ್ಕೆ ಪಾತ್ರರಾಗುವುದು ಈ ಊರಿನ ಭಾವೈಕ್ಯತೆಗೆ ಅನಾದಿ ಕಾಲದಿಂದಲೂ ಸಾಕ್ಷಿಯಾಗಿದೆ.

anantha_vratha2

ಪೂಜೆಯಾದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಭಕ್ಷ ಭೋಜನಗಳನ್ನು ತಯಾರಿಸಿ ಭಕ್ಷಿಸುತ್ತಿದ್ದದ್ದು ಅಲ್ಲಿ ನಡೆದುಕೊಂಡು ಬಂದಿದ್ದ ಸಂಪ್ರದಾಯ. ಆದರೆ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಸ್ವಲ್ಪ ಬದಲಾವಣೆ ತಂದು, ಪೂಜೆಯಾದ ನಂತರ, ಊರಿನ ಮಧ್ಯದಲ್ಲಿ ತಮ್ಮದೇ ಸಂಕೇತಿ ಬಂಧುಗಳೊಬ್ಬರು ದಾನವಾಗಿ ನೀಡಿರುವ ವಿಶಾಲವಾದ ಜಾಗದಲ್ಲಿರುವ ಈಶ್ವರ ದೇವಸ್ಥಾನ ಮತ್ತು ಅದರ ಪಕ್ಕದಲ್ಲೇ ಇರುವ ಛತ್ರದಲ್ಲಿ ಸಾಮೂಹಿಕವಾಗಿ ಭೂರೀ ಭೋಜನವನ್ನು ಏರ್ಪಡಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ತನ್ಮೂಲಕ ಇಡೀ ಊರಿನವರೆಲ್ಲರೂ ಒಟ್ಟಾಗಿ ಸಂತರ್ಪಣೆ ಊಟ ಮಾಡುವ ಸುಂದರ ಪರಿಕಲ್ಪನೆಯನ್ನು ರೂಢಿಗೆ ತಂದಿರುವುದು ಅನನ್ಯ ಮತ್ತು ಅನಕರಣೀಯವೂ ಹೌದು.

ಸಂಕೇತಿಗಳ ಮತ್ತೊಂದು ವಿಶೇಷವೇನೆಂದರೆ, ಅವರು ಬಾರೀ ಭೋಜನ ಪ್ರಿಯರು ಮತ್ತು ಬಹುತೇಕರೆಲ್ಲರೂ ನಳ ಮಹಾರಾಜರೇ, ಹಾಗಾಗಿ ಹೆಚ್ಚಿನ ಸಮಾರಂಭಗಳಲ್ಲಿ ಇಂದಿಗೂ ಊರಿನ ಗಂಡಸರೇ ಸೇರಿಕೊಂಡು ಸಂತರ್ಪಣೆ ಅಡುಗೆಯನ್ನು ಸಿದ್ಧ ಪಡಿಸುತ್ತಾರೆ ಮತ್ತು ಅವರೇ ಸೇರಿಕೊಂಡು ಎಲ್ಲರಿಗೂ ಹೊಟ್ಟೆ ಬಿರಿಯುವಷ್ಟು ಬಡಿಸುವುದರಲ್ಲಿಯೂ ಎತ್ತಿದ ಕೈ. ಊಟದ ಮಧ್ಯದಲ್ಲಿ ಮಾಡಿರುವ ಯಾವುದಾದರೂ ಸಿಹಿ ಪದಾರ್ಥಗಳಾದ ಲಾಡು, ಒಬ್ಬಟ್ಟು ಅದಾವುದೂ ಇಲ್ಲದಿದ್ದಲ್ಲಿ ಪಾಯಸವನ್ನು ತಿನ್ನುವ ಸ್ಪರ್ಧೆ ಏರ್ಪಟ್ಟಲ್ಲಿ, ಮಯಾಬಜಾರ್ ಚಿತ್ರದಲ್ಲಿ ವಿವಾಹ ಭೋಜನವಿದು ವಿಚಿತ್ರ ಭಕ್ಷಗಳಿರುವು ಎಂದು ಹಾಡುತ್ತಾ ತಿನ್ನುವ ಒಬ್ಬ ಭಕಾಸುರನನ್ನು ನೋಡಿದರೇ ಇಲ್ಲಿ ಅಂತಹಾ ಹತ್ತಾರು ಭಕಾಸುರರನ್ನು ಕಾಣಬಹುದಾಗಿದೆ. ಇಂತಹ ಘಟನೆಗಳನ್ನೇ ಆಧಾರವಾಗಿಟ್ಟು ಕೊಂಡು ಕೆಲವೊಮ್ಮೆ ಸಂಕೋಚವಿಲ್ಲದೇ ಕೇಳಿ ತಿನ್ನುವವರೇ ಸಂಕೇತಿಗಳು ಎಂದು ಹಾಸ್ಯಮಾಡುವುದೂ ಉಂಟು.

ಈ ರೀತಿಯಾಗಿ ಕೇವಲ ಹಬ್ಬ ಹರಿದಿನಗಳಿಗೇ ಈ ರೀತಿಯ ಬಂಧುತ್ವ ಮೀಸಲಾಗದೇ, ಪ್ರತೀ ಶನಿವಾರ ರಾಮನ ಗುಡಿಯಲ್ಲಿ ನಡೆಯುವ ಸಾಮೂಹಿಕ ಭಜನೆಯಲ್ಲಿ ಪ್ರತೀ ಮನೆಯಿಂದ ಕಡ್ಡಾಯವಾಗಿ ಭಾಗಿಯಾಗಲೇ ಬೇಕು ಮತ್ತು ವಾರಕ್ಕೆ ಒಬ್ಬರ ಮನೆಯಿಂದ ಪ್ರಸಾದ ವಿನಿಯೋಗವಾಗಬೇಕೆಂಬ ಅಲಿಖಿತ ನಿಯಮವನ್ನು ಮಾಡಿಕೊಂಡಿದ್ದಾರೆ. ಇರುವ 50-60 ಮನೆಗಳಿಗೆ ವರ್ಷಕ್ಕೊಮ್ಮೆ ಬರುವ ಈ ಸುಯೋಗವನ್ನು ಅತ್ಯಂತ ಪ್ರೀತಿಯಿಂದ ಬಳೆಸಿಕೊಳ್ಳುತ್ತಾ ಇಂದಿಗೂ ಸಾಮರಸ್ಯದಿಂದ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಮತ್ತು ಶ್ಲಾಘನೀಯ. ಇಂತಹ ಸಾಮರಸ್ಯ ಗ್ರಾಮಗಳ ಸಂಖ್ಯೆ ನಮ್ಮ ದೇಶದಲ್ಲಿ ಅಗಣಿತವಾದಲ್ಲಿ ನಮ್ಮ ದೇಶ ರಾಮ ರಾಜ್ಯವಾಗುವುದರಲ್ಲಿ ಸಂದೇಹವೇ ಇಲ್ಲಾ.

ಏನಂತೀರೀ?

ನಿಮ್ಮವನೇ ಉಮಾಸುತ