ಎಲ್ಲರಂತಲ್ಲ ನನ್ನ ಮಕ್ಕಳು

dad2

ಅರೇ! ಇದೇನಿದು ಈ ರೀತಿಯ ಶೀರ್ಷಿಕೆ? ನಿಮ್ಮ ಮಕ್ಕಳು ಅದೇನು ಅಷ್ಟು ದೊಡ್ಡ ಸಾಧಕರೇ? ಎಂದು ಕೇಳಿದರೆ, ನಾನು ಯಾವುದೇ ಮುಚ್ಚುಮರೆ ಇಲ್ಲದೇ ಹೇಳುತ್ತೇನೆ. ಇಲ್ಲಾ ನನ್ನ ಮಕ್ಕಳು ಸರಾಸರಿಯವರು ಮತ್ತು ನಾನು ಸರಾಸರಿ ಮಕ್ಕಳ ತಂದೆ. ನನ್ನ ಮಕ್ಕಳು ಶಾಲೆಯ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವಲ್ಲಿ ಸರಾಸರಿ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಓಹೋ!! ಎಂದು ಹೇಳಿಕೊಳ್ಳುವಂತಿಲ್ಲದ ಸರಾಸರಿಯವರು. ಹಾಗಾದರೆ ಆವರ ವಿಶೇಷತೆಗಳೇನು? ಎಂದು ಕೇಳಿದರೆ ಸದ್ಯಕ್ಕೆ ಸಮಾಜದ ದೃಷ್ಟಿಯಲ್ಲಿ ಮತ್ತು ಶೈಕ್ಷಣಿಕವಾಗಿ ಅವರು ಅಂತಹದ್ದೇನನ್ನೂ ಸಾಧಿಸಿಲ್ಲ ಎನ್ನುತ್ತೇನೆ.

ಯಾರಾದರೂ ನಿಮ್ಮ ಮಕ್ಕಳು ಬಿಡಿ ಅವರು ತುಂಬಾ ಬುದ್ದಿವಂತರು ಬಿಡಿ. ಎಷ್ಟೇ ಆದರೂ ಅವರು ನಿಮ್ಮ ಮಕ್ಕಳಲ್ಲವೇ? ಎಂದು ಹೇಳಿದರೆ, ನಾನು ದಯವಿಟ್ಟು ಕ್ಷಮಿಸಿ, ನೀವು ತಪ್ಪು ತಿಳಿದಿದ್ದೀರಿ. ನಾನು ಮತ್ತು ನನ್ನ ಮಕ್ಕಳು ಅಷ್ಟೇನೂ ಬುದ್ಧಿವಂತರಲ್ಲ. ನಾವೆಲ್ಲರೂ ಶೈಕ್ಷಣಿಕವಾಗಿ ಸರಾಸರಿಯವರು ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯನ್ನೇನು ಪಡುವುದಿಲ್ಲ. ಸುಮ್ಮನೇ ಯಾರನ್ನೋ ಮೆಚ್ಚಿಸುವುದಕ್ಕೋ ಇಲ್ಲವೇ ಪ್ರತಿಷ್ಠೆಗಾಗಿ ಎಲ್ಲರ ಮುಂದೆ ಇಲ್ಲ ಸಲ್ಲದ ಸುಳ್ಳನ್ನು ಹೇಳಿಕೊಂಡು ಅನಗತ್ಯವಾದ ನಿರೀಕ್ಷೆಯನ್ನು ಹುಟ್ಟಿಸಿ ನಂತರ ನಿಜಾಂಶ ತಿಳಿದು ಒಡೆದ ಬೆಲೂನ್ ನಂತೆ ಆಗುವುದು ನನಗೆ ಖಂಡಿತವಾಗಿಯೂ ಇಷ್ಟವಿಲ್ಲ.

dat

ಶೈಕ್ಷಣಿಕವಾಗಿ ನನ್ನ ಮಕ್ಕಳು ಇತರರಂತೆ ಸದಾಕಾಲವೂ 100ಕ್ಕೆ 90ರ ಮೇಲೆ ಅಂಕ ಗಳಿಸದೇ 80-85 ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ ಗಳಿಸಬಹುದು ಆದರೆ ಅವರು ಗಳಿಸಿದ ಅಂಕಗಳ ಹಿಂದೆ ಖಂಡಿತವಾಗಿಯೂ ಆವರ ಪರಿಶ್ರಮವಿರುತ್ತದೆ ಮತ್ತು ಅದು ಉರು ಹೊಡೆದು ಗಳಿಸಿದ ಅಂಕವಾಗಿರದೇ, ವಿಷಯವನ್ನು ಅರ್ಥಮಾಡಿಕೊಂಡು ಗಳಿಸಿದ ಅಂಕವಾಗಿರುತ್ತದೆ. ಆವರ ನಡತೆ, ಸ್ನೇಹಪರ ವ್ಯಕ್ತಿತ್ವ, ದಯೆಯ ನಡವಳಿಕೆ, ಸೌಮ್ಯ ನಡವಳಿಕೆ ಮತ್ತು ಮತ್ತೊಬ್ಬರ ಕಷ್ಟದಲ್ಲಿ ಸಹಾಯ ಮಾಡುವ ಸ್ವಭಾವವನ್ನು ಜನರು ಗಮನಿಸಲು ವಿಫಲರಾಗುತ್ತಾರೆ ಏಕೆಂದರೆ ಆವರಿಗೆ ಅಂಕಗಳಷ್ಟೇ ಮಾನದಂಡವಾಗಿ ಇಳಿದೆಲ್ಲಾ ಅಂಶಗಳು ನಗಣ್ಯವಾಗಿ ನನ್ನ‌ ಮಕ್ಕಳನ್ನು ಸಾಮಾನ್ಯ ಸರಾಸರಿಯ ಮಕ್ಕಳು ಎಂದೇ ಎಲ್ಲರೂ ಹಣೆಪಟ್ಟಿ ಕಟ್ಟಿಬಿಡುತ್ತಾರೆ.

dad3

ಇನ್ನು ಈ ಸಮಾಜದಲ್ಲಿ ಶಾಲೆಗೆ ಸೇರಿಸಿಕೊಳ್ಳುವಾಗ ಸಣ್ಣ ಪುಟ್ಟ ಕಂದಮ್ಮಗಳ ಬುದ್ಧಿ ಮತ್ತೆಗಿಂತಲೂ ಅವರ ಪೋಷಕರು ಕೊಡಬಹುದಾದ ದೇಣಿಗೆಗಳಿಂದ, ವಿದ್ಯಾರ್ಥಿಗಳಾಗಿದ್ದಲ್ಲಿ ಅವರು ಗಳಿಸುವ ಅಂಕಗಳಿಂದ, ಕ್ರೀಡಾಪಟುಗಳಾಗಿದ್ದಲ್ಲಿ ಅವರು ಆಟ ಆಡಿದ್ದಕ್ಕಿಂತಲೂ ಅವರು ಗಳಿಸಿದ ವಿಜಯ/ಪದಕಗಳಿಂದ, ಇನ್ನು ಕೆಲಸ ಮಾಡುವವರು ಅಥವಾ ವ್ಯಾಪಾರಿಗಳಾಗಿದ್ದಲ್ಲಿ, ಅವರು ಕೆಲಸ ಮಾಡುತ್ತಿರುವ ಸಂಸ್ಥೆ ಮತ್ತು ಅವರು ಗಳಿಸುವ ದೊಡ್ಡ ಮೊತ್ತದ ಸಂಬಳಗಳಿಂದ, ಹೆಣ್ಣು ಮಕ್ಕಳಿಗೆ ಗಂಡು ಹುಡುಕುವಾಗ ಹುಡುಗನ ವಿದ್ಯಾರ್ಹತೆ ಮತ್ತು ನಡತೆಗಳಿಗಿಂತಲೂ ಆತನ ಮನೆಯ ಆಸ್ತಿ ಮತ್ತು ಅಂತಸ್ತುಗಳಿಂದ, ಅದೇ ರೀತಿ ಗಂಡು ಮಕ್ಕಳಿಗೆ ಹೆಣ್ಣುಗಳನ್ನು ಹುಡುಕುವಾಗ ಆಕೆಯ ಸ್ವಭಾವ, ಹೊಂದಿಕೊಳ್ಳುವ ಗುಣಗಳಿಗಿಂತಲೂ ಅವರ ಪೋಷಕರು ಹೊಂದಿರಬಹುದಾದ ಆಸ್ತಿ ಮತ್ತು ಅವರು ಕೊಡಬಹುದಾದ ವರದಕ್ಷಿಣೆಯಿಂದ ಅಳೆಯುವ ಕೆಟ್ಟ ಸಂಪ್ರದಾಯ ರೂಢಿಯಲ್ಲಿರುವುದರಿಂದ ಅವರಿಗೆ ಸರಾಸರಿಯವರನ್ನು ಗಣನೆಗೇ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಈ ಎಲ್ಲದರ ನಡುವೆ, ನನ್ನ ಸರಾಸರಿ ಮಕ್ಕಳು ಮೂಕ ಪ್ರೇಕ್ಷಕರಾಗಿ ತಮ್ಮ ಸುತ್ತಮುತ್ತಲಿರುವವರನ್ನು ಪೂರ್ಣ ಹೃದಯದಿಂದ ಹುರಿದುಂಬಿಸುವುದನ್ನು ಗಮನಿಸದೆ ಹೋಗುತ್ತದೆ. ನಮ್ಮ ಮಕ್ಕಳು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡದೇ ಹೋದರೂ ಅವರಿಗೆ ಆ ಕ್ರೀಡೆಯ ಬಗ್ಗೆ ಇರುವ ಸಂಪೂರ್ಣ ಜ್ಞಾನದ ಬಗ್ಗೆ ಇತರರಿಗೆ ಪರಿಜ್ಞಾನವೇ ಇರುವದಿಲ್ಲ. ಅವರು ಇತರರಂತೆ ವೇದಿಕೆಯ ಮೇಲೆ ತಮ್ಮ ಸಂಗೀತದ ಸುಧೆಯನ್ನು ಹರಿಸದೇ ಇರಬಹುದು ಆದರೆ ಅವರಿಗೆ ಸಂಗೀತದ ಮೇಲಿರುವ ಪ್ರೀತಿ ಮತ್ತು ಸ್ವರ ಜ್ಞಾನದ ಬಗ್ಗೆ ಇರುವ ಜ್ಞಾನವನ್ನು ತಿಳಿದುಕೊಳ್ಳುವುದಕ್ಕೆ ಯಾರೂ ಪ್ರಯತ್ನಿಸುವುದೇ ಇಲ್ಲಾ ಏಕೆಂದರೆ ಆ ರೀತಿಯ ಪರೀಕ್ಷಿಸುವವರಿಗೇ ಅದರ ಬಗ್ಗೆ ಹೆಚ್ಚಿನ ಅರಿವಿಲ್ಲದೇ ಬಹುತೇಕರು ಸ್ವಂತಿಕೆ ಇಲ್ಲದೇ ಮತ್ತೊಬ್ಬರನ್ನು ಅನುಸರಿಸುತ್ತಾ ಆಯಾಯಾ ಕ್ಷೇತ್ರಗಳಲ್ಲಿ ಮೇಲೆ ಬರುವುದಷ್ಟೇ ಸಾಧನೆ ಎಂದು ಭಾವಿಸಿರುತ್ತಾರೆ.

dad5

ಇವೆಲ್ಲದರ ಅರಿವಿದ್ದೂ ನಾನೂ ಸಹಾ ಹಲವಾರು ಬಾರಿ ನನ್ನ ಮಕ್ಕಳು ಪರೀಕ್ಷೆಗಳಲ್ಲಿ ಎಲ್ಲರಂತೆ ಅಥವಾ ನನ್ನ ನಿರೀಕ್ಷೆಯಂತೆ ಅಂಕಗಳನ್ನು ಗಳಿಸದೇ ಇದ್ದಾಗ ತಾಳ್ಮೆ ಕಳೆದುಕೊಂಡು ಅವರ ಮೇಲೆ ರೇಗಿರುವ ಅಥವಾ ಕೆಲವೊಮ್ಮೆ ಕೈ ಎತ್ತಿರುವ ಸಂದರ್ಭಗಳೂ ಉಂಟು. ಏಕೆಂದರೆ ನಮಗೆ ಆವರ ಇಚ್ಚೆಗಳೇನು? ಅವರ ಮನಸ್ಸಿನಲ್ಲಿ ಅವರು ಮುಂದೆ ಏನಾಗ ಬಯಸಲು ಇಚ್ಚಿಸುತ್ತಾರೆ? ಎಂದು ತಾಳ್ಮೆಯಿಂದ ಕೇಳುವ ಬದಲು, ನಾವು ಸಾಧಿಸಲು ಆಗದೇ ಹೋದದ್ದನ್ನೋ ಇಲ್ಲವೇ ನಮ್ಮ ಬಂಧು-ಮಿತ್ರರ ಮಕ್ಕಳೋ ಇಲ್ಲವೇ ಅಕ್ಕ ಪಕ್ಕದ ಮನೆಯ ಮಕ್ಕಳು ಸಾಧಿಸಿದ್ದನ್ನು ನಮ್ಮ ಮಕ್ಕಳು ಸಾಧಿಸಲಿ ಎಂಬುವ ಹಪಾಹಪಿ ಇರುತ್ತದೆ. ಹಾಗಾಗಿ ನಾವು ನಮ್ಮ ಮಕ್ಕಳ ಮೇಲೆ ಅನಗತ್ಯವಾಗಿ ಹೇರಿಕೆಯನ್ನು ಹಾಕುತ್ತೇವೆ. ನಮ್ಮಲ್ಲಿ ಬಹುತೇಕರು ನಮ್ಮ ಮಕ್ಕಳ ಇಚ್ಚೆಗಳನ್ನೂ ಗೌರವಿಸಬೇಕು. ಈಗ ಅವರೇನೂ ಸಣ್ಣವರೇನಲ್ಲಾ. ಆವರೂ ವಯಸ್ಕರಾಗಿದ್ದು ಅವರಿಗೂ ಮುಂದೆ ತಾನು ಏನಾಗಬೇಕು ಎಂಬುದರ ಅರಿವಿರುತ್ತದೆ ಎಂಬ ವಿಷಯ ಗೊತ್ತಿದ್ದೂ ಜಾಣ ಮೌನವನ್ನು ತಾಳುತ್ತೇವೆ.

ನಮ್ಮಲ್ಲಿ ಪದವಿ ಎಂದ ತಕ್ಷಣ ಐ.ಐ.ಟಿ, ಐ.ಎ.ಎಮ್. ಡಾಕ್ಟರ್ ಇಂಜೀನಿಯರ್ ಇಲ್ಲವೇ ಕಡೇ ಪಕ್ಷ ಚಾರ್ಟಡ್ ಅಕೌಂಟೆಟ್/ವಕೀಲರಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹಾರುವ ಮೂಲಕ ಪ್ರತಿಭಾಪಲಾಯನ ಮಾಡಿ ಅಲ್ಲಿ ಯಾವುದೋ ವಿದೇಶೀ ಕಂಪನಿಗಳಿಗೆ ಕೆಲಸ ಮಾಡುತ್ತಾ ಅವರು ಕಳುಹಿಸುವ ವಿದೇಶೀ ವಿನಿಮಯದ ಹಣ ಮತ್ತು ಮಕ್ಕಳು ವಿದೇಶದಲ್ಲಿ ಇದ್ದಾರೆ ಎಂದು ಎಲ್ಲರ ಬಳಿ ಹೇಳಿ ಕೊಳ್ಳುವುದೇ ಗೌರವ ಮತ್ತು ಘನತೆ ಎಂದು ಭಾವಿಸಿರುತ್ತೇವೆ. ನಮಗೆ ಮಕ್ಕಳ ಅವಶ್ಯತೆ ಇದ್ದಾಗ ಅವರು ಬಾರದೇ ಹೋದಲ್ಲಿ ಅದೇ ಕೊರತೆಯಲ್ಲಿಯೇ ಖಿನ್ನರಾಗಿ ಹೋದ ಅದೆಷ್ಟೋ ಜನರನ್ನು ನಾವೇ ನೋಡಿದ್ದೇವೆ.

ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

ಲಂಕೆ ಚಿನ್ನದ ನಗರಿಯೇ ಆಗಿದ್ದರೂ ನಮಗೆ ನಮ್ಮ ಜನ್ಮಭೂಮಿಯೇ ಸ್ವರ್ಗಕ್ಕೆ ಸಮಾನ. ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು ಎಂದು ಲಕ್ಷಣನಿಗೆ ಪ್ರಭು ಶ್ರೀರಾಮ ಚಂದ್ರನು ತಿಳುವಳಿಕೆ ಹೇಳಿದಂತೆ ಇಂದು ನಮ್ಮ ಮಕ್ಕಳಿಗೆ ನಮ್ಮ ದೇಶದ ಹಿರಿಮೆ ಗರಿಮೆ ಬಗ್ಗೆ ತಿಳುವಳಿಕೆ ಹೇಳುವ ಮನೋಭಾವನೆಯನ್ನು ಬಹುತೇಕರು ಬೆಳಸಿಕೊಳ್ಳದೇ, ತಮ್ಮ ವಯಕ್ತಿಕ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನೇ ಬಲಿ ಕೊಡುತ್ತಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.

ಲೊಕದ ವ್ಯವಹಾರಕ್ಕೆ ತಕ್ಕಷ್ಟು ವಿದ್ಯೆ ಮತ್ತು ಜೀವನೋಪಾಯಕ್ಕಾಗಿ ತಕ್ಕಷ್ಟು ದುಡಿಮೆಯಿದ್ದು ತಂದೆ ತಾಯಿ ಮತ್ತು ಸಂಸಾರದೊಂದಿಗೆ ತಮ್ಮ ಇಷ್ಟಾನುಸಾರವಾದ ಹವ್ಯಾಸಗಳೊಂದಿಗೆ ನೆಮ್ಮದಿಯಾಗಿ ಎರಡು ಹೊತ್ತು ಊಟ ಮತ್ತು‌ ಕಣ್ತುಂಬ ನಿದ್ದೆ ಮಾಡಿಕೊಂಡು ಹಾಯಾಗಿ ಇರುತ್ತಿದ್ದ ನಮ್ಮ ಪೂರ್ವಜರ ಜೀವನ ಶೈಲಿ ಇಂದಿನವರಿಗೆ ತುಚ್ಚವಾಗಿದೆ.

ಆನಂದವಾಗಿ ಜೀವನ ನಡೆಸಬೇಕೆಂದರೆ ಐಶಾರಾಮ್ಯವಾಗಿಯೇ ಇರಬೇಕು ಎಂದೇನಿಲ್ಲ. ನಿಜ ಹೇಳ ಬೇಕೆಂದರೆ . ನಾಳೆಯ ಬಗ್ಗೆ ಸುದೀರ್ಘವಾಗಿ ಯೋಚಿಸದೇ ದೈನಂದಿನ ಕೂಲೀ ಕೆಲಸ ಮಾಡಿ ಸಂಪಾದನೇ ಮಾಡಿ ಪ್ರತೀದಿನವೂ ಹೊಟ್ಟೆಯ ತುಂಬಾ ಊಟ ಕಣ್ತುಂಬ ನಿದ್ದೇ ಮಾಡುವವರೇ ನಿಜಕ್ಕೂ ಯಾವುದೇ ರೀತಿಯ ಖಾಯಿಲೆಗಳು ಇಲ್ಲದೇ ನೆಮ್ಮದಿಯಾಗಿ ಜೀವನ ನಡೆಸುತ್ತಿರುತ್ತಾರೆ ಎಂಬು ಪರಮ ಸತ್ಯವನ್ನು ಅರಿಯಲಾರದಷ್ಟು ಬೌದ್ಧಿಕ ದಿವಾಳಿತನದಿಂದ, ಅಂಧ ಪಾಶ್ಚಾತ್ಯ ಅನುಕರಣೆಯಲ್ಲೇ ಮುಳುಗಿರುವ ಇಂದಿನ ಯುವ ಜನತೆಯ ಬಗ್ಗೆ ಕನಿಕರ ಮೂಡುತ್ತದೆ.

ಹಾಗಂತ ಯಾವುದೇ ವಿದ್ಯಾ ಬುದ್ಧಿ ಇಲ್ಲದೇ ನನ್ನ ಮಕ್ಕಳು ಕೂಲಿ ಕೆಲಸ ಮಾಡಲಿ ಎಂದೇನೂ ನಾನು ಬಯಸುವುದಿಲ್ಲ. ಅದೇ ರೀತಿ 100 ಕ್ಕೆ 100 ಅಂಕಗಳನ್ನು ಗಳಿಸಿ ನಾಲ್ಕಾರು ಪದವಿಗಳನ್ನು ಪಡೆದು ಸಣ್ಣ ವಯಸ್ಸಿನಲ್ಲಿಯೇ ವಿದೇಶೀ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಾ ಆನಾವಶ್ಯಕವಾದ ಕೆಲಸದ ಒತ್ತಡಕ್ಕೆ ಒಳಗಾಗಿ ಸಣ್ಣ ವಯಸ್ಸಿಗೇ ಹತ್ತಾರು ಖಾಯಿಲೆಗಳಿಗೆ ತುತ್ತಾಗಿ, ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ನೋಡಲು ನಾನು ಖಂಡಿತವಾಗಿಯೂ ಬಯಸುವುದಿಲ್ಲ.

dad4

ನನಗೆ ನನ್ನ ಮಕ್ಕಳು ಸರಾಸರಿ ಮಕ್ಕಳಾಗಿದ್ದರೂ ಪರವಾಗಿಲ್ಲ. ಆದರೆ ಅವರು ತಮ್ಮ ಇಚ್ಚೆಗೆ ಅನುಗುಣವಾಗಿ ವಿದ್ಯೆಯನ್ನು ಪಡೆಯುವ ಜೊತೆ ಸಂಸ್ಕಾರವಂತರಾಗಿ ದೇಶ ಮತ್ತು ಧರ್ಮದ ಬಗ್ಗೆ ಅಭಿಮಾನ, ಉತ್ತಮ ನಡೆ ನುಡಿಗಳೊಂದಿಗೆ ಲೋಕಜ್ಞಾನವನ್ನು ಹೊಂದುವ ಮೂಲಕ, ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ಕೊಡುವ ಹಿಂದೂ ಸ್ಥಾನವು ಎಂದೂ ಮರೆಯದಂತಹ ಭಾರತ ರತ್ನಗಳಾದರೆ ಸಾಕು ಎಂದು ಬಯಸುತ್ತೇನೆ. ನಮ್ಮ ಮುಂದಿನ ಪೀಳಿಗೆಯವರಿಗೆ ಆಸ್ತಿ ಮಾಡುವುದಕ್ಕಿಂತಲೂ ನಾವು ಪ್ರಸ್ತುತ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸುವುದನ್ನು ಇಚ್ಚಿಸುತ್ತೇನೆ.

ಹೀಗಾಗಿಯೇ ನನ್ನ ಮಕ್ಕಳು ಎಲ್ಲರಂತಹವರಲ್ಲ ಮತ್ತು ನಾನೂ ಸಹಾ ಲೋಕದ ದೃಷ್ಟಿಯಲ್ಲಿ ಸಾಧಾರಣ ಸರಾಸರಿ ಮಕ್ಕಳ ತಂದೆ ಎಂದು ಹೇಳಿಕೊಳ್ಳುತ್ತೇನೆ. ಇನ್ನು ನೀವೂ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಾಮಾಜಿಕ ಜಾಲತಾಣದಲ್ಲಿ ಓದಿದ ಲೇಖನವೊಂದರಿಂದ ಸ್ಪೂರ್ತಿ ಪಡೆದ್ದಾಗಿದೆ.

ಲೈಫ್ ಇಷ್ಟೇ ಗುರು

ಕುಟುಂಬದ ಮುಖ್ಯಸ್ಥರ ಮರಣದ ನಂತರ ಆಸ್ತಿ ಮತ್ತು ಹಣಕಾಸಿನೊಂದಿಗೆ ವ್ಯವಹರಿಸಿದ್ದವರ ಕಷ್ಟ ನಷ್ಟಗಳ ಕುರಿತಾದ ಈ ಸುದೀರ್ಘವಾದ ಲೇಖನವನ್ನು ಸ್ವಲ್ಪ ಸಮಯ ಕೊಟ್ಟು ಸಮಚಿತ್ತದಿಂದ ಓದ ಬೇಕೆಂದು ಕಳಕಳಿಯ ಮನವಿ.

ಗಂಡ ಸಾಫ್ಟ್ ವೇರ್ ಇಂಜೀನಿಯರ್ ಆಗಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಮಡದಿ ಚಾರ್ಟಡ್ ಅಕೌಂಟೆಂಟ್ ಆಗಿದ್ದರು. ಇಬ್ಬರಿಗೂ ಕೈ ತುಂಬಾ ಕೆಲಸ ಜೋಬು ತುಂಬಿ ತುಳುಕುವಷ್ಟು ಹಣ ಇದ್ದ ಕಾರಣ ಮನೆ ಮಠ ಸಂಸಾರದ ಮಕ್ಕಳು ಮಾಡಿಕ್ಕೊಳ್ಳುವುದಕ್ಕೂ ಪುರುಸೊತ್ತು ಇಲ್ಲದಷ್ಟು ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಅವರ ಬಂಧು-ಮಿತ್ರರಿಗೆಲ್ಲಾ ಈ ದಂಪತಿಗಳನ್ನು ನೋಡಿದಾಕ್ಷಣ ಆಬ್ಬಾ ಇವರಿಗೇನಪ್ಪಾ ತೊಂದರೆ ಎನ್ನುವಷ್ಟರ ಮಟ್ಟಿಗೆ ಇದ್ದ ಸುಂದರವಾದ ಸಂಸಾರಕ್ಕೆ ಬರ ಸಿಡಿಲು ಬಡಿದಂತೆ ರಸ್ತೆಯ ಅಪಘಾತದಲ್ಲಿ ಮನೆಯ ಜನಮಾನರು ಸಾವನ್ನಪ್ಪಿದ ನಂತರ ಅವರ ಹೆಂಡತಿ ಮನದಾಳದ ಮಾತು ಇದೋ ನಿಮಗಾಗಿ.

ನನ್ನ ಗಂಡನ ಮರಣದ ನಂತರ ನಾನು ಕಲಿತ ಕೆಲವು ವಿಷಯಗಳು ಈ ರೀತಿಯಾಗಿವೆ

ನಮ್ಮ ನಂಬಿಕೆಯ ಪ್ರಕಾರ ಕೆಟ್ಟ ಸಂರ್ಭಗಳು ಕೇವಲ ಬೇರೆಯವರಿಗೆ ಬರುತ್ತದೆ ಮತ್ತು ನಾವು ಮಾತ್ರಾ ಶಾಶ್ವತವಾಗಿ ಬದುಕುತ್ತೇವೆ ಎನ್ನುವ ಭ್ರಮಾ ಲೋಕದಲ್ಲಿ ಸದಾಕಾಲವೂ ವಿಹರಿಸುತ್ತಿರುತ್ತೇವೆ .

ಅನಿರೀಕ್ಷಿತ ಘಟನೆಗಳು ನಮ್ಮ ಜೀವನದಲ್ಲಿ ಸಂಭವಿಸಿದಾಗ ಮಾತ್ರವೇ ವಾಸ್ತವದ ಸಂಗತಿ ನಮಗೆ ಅರಿವಾಗುತ್ತದೆ. ದುರಾದೃಷ್ಟವಷಾತ್ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

ನನ್ನ ಪತಿ ಐಟಿ ಟೆಕಿ ಮತ್ತು ನಾನು ಚಾರ್ಟರ್ಡ್ ಅಕೌಂಟೆಂಟ್ ಇವೆರಡೂ ಅದ್ಭುತವಾದ ಸಂಯೋಜನೆ ಎಂದು ಎಲ್ಲರೂ ಭಾವಿಸುತ್ತಾರೆ.

ಪತಿ ಟೆಕ್ಕಿ ಆದ್ದರಿಂದ ಆತನ್ ಎಲ್ಲಾ ಕಾರ್ಯಚರಣೆಯ ಪಟ್ಟಿಗಳು ಅವರ ಲ್ಯಾಪ್ ಟ್ಯಾಪಿನ ಒಂದು ಫೈಲಿನಲ್ಲಿದೆ, ಎಲ್ಲಾ ರೀತಿಯ ಬಿಲ್ಲುಗಳು, ಉಳಿತಯ ಖಾತೆಗಳು ಮತ್ತು ಬ್ಯಾಂಕ್ ವಿವರಗಳೆಲ್ಲವೂ ಅವರ ಇಮೇಲ್‌ನಲ್ಲಿದೆ. ಅದರ ಎಲ್ಲಾ ರಹಸ್ಯ ವಿವರಗಳನ್ನೂ IMPWDS ಎಂಬ ಫೋಲ್ಡರ್ ನಲ್ಲಿ ಚೆನ್ನಾಗಿ ಇಟ್ಟಿದ್ದಾರೆ. ಅದರಲ್ಲಿ ತಮ್ಮ ಎಲ್ಲಾ ಆನ್‌ಲೈನ್ ಖಾತೆಗಳ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಬರೆದಿಟ್ಟಿದ್ದಲ್ಲದೇ, ಇದನ್ನು ಬೇರೆಯವರ ಕೈಗೆ ಸಿಗದಂತೆ ತಮ್ಮ ಲ್ಯಾಪ್‌ಟಾಪಿಗೂ ಯಾರಿದಂಲೂ ಭೇಧಿಸಲಾಗದ ಕಠಿಣವಾದ ಪಾಸ್‌ವರ್ಡ್ ಹಾಕಿ ಅದನ್ನು ಪ್ರತಿ 30 ದಿನಗಳಿಗೊಮ್ಮೆ ಬದಲಾಯಿಸುವ ಪರಿಪಾಠವನ್ನೂ ರೂಢಿಯಲ್ಲಿಟ್ಟು ಕೊಂಡಿದ್ದರು. ಅಕಸ್ಮತ್ ನಾನು ಅವರ ಲ್ಯಾಪ್‌ಟಾಪ್ ಬಳಸುವ ಅನಿವರ್ಯ ಸಂದರ್ಭ ಬಂದಲ್ಲಿ ಅವರ ಬಳಿ ಅವರ ಪ್ರಸ್ತುತ ಪಾಸ್ ವರ್ಡ್ ಕೇಳಿಯೇ ಬಳಸುತ್ತಿದೆ.

ನಾನು ಚಾರ್ಟರ್ಡ್ ಅಕೌಂಟೆಂಟ್ ಆಗಿರುವುದರಿಂದ ನಾನು ಪ್ರತಿಯೊಂದು ದಾಖಲೆಯನ್ನೂ ಮತ್ತು ಲೆಕ್ಕಾಚಾರಗಳನ್ನು ಸರಿಯಾಗಿ ಇಟ್ಟಿರುತ್ತೇವೆ ಎಂದು ನೀವೆಲ್ಲರೂ ಭಾವಿಸಿರುತ್ತೀರಿ. ಆದರೆ ದೂರದ ಬೆಟ್ಟ ನುಣ್ಣಗೆ ಎಂದು ನಾವು ನಮ್ಮ ಗ್ರಾಹಕರ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತೇವೆಯಾದರೂ ಸ್ವಂತ ಕೆಲಸವೆಂದರೆ ಅಷ್ಟಕಷ್ಟೇ. ದೀಪದ ಕೆಳಗೆ ಕತ್ತಲೆಯಂತೆ ನಮ್ಮದೆಲ್ಲವೂ ಅಯೋಮಯವೇ.

ಅದೊಂದು ಬೆಳಗ್ಗೆ ಮನೆಯಿಂದ ಕಛೇರಿಗೆ ಬೈಕಿನಲ್ಲಿ ಹೋಗುವ ದಾರಿಯ ಮಧ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 33 ವರ್ಷದ ನನ್ನ ಪತಿ ಅಸುನಿಗಿದರು. ಆ ಅಪಘಾತದ ಸಮಯದಲ್ಲಿಯೇ ಅವರ ಲ್ಯಾಪ್‌ಟಾಪ್ ಕೂಡಾ ನುಚ್ಚುನೂರಾಗಿ ಅದರ ಹಾರ್ಡ್ ಡಿಸ್ಕ್ನಲ್ಲಿ ಇದ್ದ ಎಲ್ಲಾ ಡೇಟಾ ಕೂಡಾ ಎಲ್ಲವೂ ನಾಶವಾಗಿಹೋಗಿತ್ತು. ಈಗಾಗಲೇ ತಿಳಿಸಿದ IMPWDSನ ಫೋಲ್ಡರ್ ನನಗೆ ಸಿಗದ ಕಾರಣ ನನ್ನ ಪತಿಯ ಆರ್ಥಿಕ ವ್ಯಹಹಾರಗಳ ದಾಖಲೆಗಳೇ ನನಗೆ ತಿಳಿಯದಾಗಿ ಹೋಯಿತು.

ಒಂಭತ್ತು ವರ್ಷಗಳ ಸುಂದರ ಸಂಸಾರ ಇದ್ದಕ್ಕಿದ್ದಂತೆಯೇ ನುಚ್ಚು ನೂರಾಗಿ ನಾನು ಪ್ರಥಮಬಾರಿಗೆ ಒಬ್ಬಂಟಿಗಳಾಗಿ ಹೋದೆ.

ಪತಿಯ ಅಂತಿಮ ವಿಧಿ ವಿಧಾನಗಳೆಲ್ಲವೂ ಮುಗಿದ ನಂತರ ಅವರ ಮರಣ ಪತ್ರವನ್ನು ಪಡೆದು ಎಲ್ಲಾ ಬ್ಯಾಂಕುಗಳಿಗೂ ಮತ್ತು ವಿಮಾಕಂಪನಿಗಳಿಗೆ ಎಡತಾಕಿದಾಗಲೇ ನನ್ನ ಪತಿ ನಿರ್ಲಕ್ಷಗಳು ಒಂದೊಂದೇ ಬಾಣಗಳಾಗಿ ನನಗೆ ಚುಚ್ಚತೊಡಗಿದವು. ಅವರ ಬ್ಯಾಂಕ್ ಉಳಿತಾಯ ಖಾತೆಗಳು ಮತ್ತು ಅವರ ಸಂಬಳ ಬ್ಯಾಂಕ್ ಖಾತೆಗಳಿಗೆ ಯಾವುದೇ ನಾಮಿನಿ ಇರಲಿಲ್ಲ. ಅವರ ವಿಮೆಯಲ್ಲಿ ಇನ್ನೂ ಅವರ ತಾಯಿಯೇ ನಾಮಿನಿಯಾಗಿದ್ದು ಆಕೆಯೂ ಕೂಡಾ ಎರಡು ವರ್ಷಗಳ ಹಿಂದೆ ತೀರಿಹೋಗಿದ್ದರು. ಅವರ ಎಲ್ಲಾ ಇ-ಬಿಲ್ಲುಗಳಿಗೆ ಬರುತ್ತಿದ್ದರೂ ಅವರ ಈ-ಮೇಲ್ ಪಾಸ್‌ವರ್ಡ್ ನನಗೆ ತಿಳಿದಿರಲಿಲ್ಲವಾದ್ದರಿಂದ ಅವರು ಪೂರ್ವ ನಿರ್ಧಾರದ ಸೂಚನೆಗಳ ಮೂಲಕ ಅವರು ಯಾವ ವೆಚ್ಚವನ್ನು ಯಾರಿಗೆ ಪಾವತಿಸುತ್ತಿದ್ದಾರೆಂವ ವಿವರ ನನಗೆ ತಿಳಿಯುತ್ತಿರಲಿಲ್ಲ.

ಇತ್ತೀಚೆಗಷ್ಟೇ ನನ್ನ ಪತಿ ಹೊಸಾ ಕಂಪನಿಗೆ ಸೇರಿದ್ದ ಕಾರಣ ಅವರ ಹೊಸಾ ಕಛೇರಿಯ ಸ್ನೇಹಿತರು, ಅವರ ಮೇಲಧಿಕಾರಿಗಳು ಪರಿಚಯವಿಲ್ಲದಿದ್ದ ಕಾರಣ ಅವರ ಅಂತಮ ಪಾವತಿಗಳ ವಿವರಗಳನ್ನು ಪಡೆಯಲೂ ಬಹಳ ಕಷ್ಟ ಪಡಬೇಕಾಯಿತು.

ಇಬ್ಬರೂ ಕೈ ತುಂಬಾ ಸಂಪಾದನೆ ಮಾಡುತ್ತಿದ್ದರಿಂದ ಇಬ್ಬರೂ ಸೇರಿ ದೊಡ್ಡದಾದ ಮನೆಯನ್ನು ಬಹಳ ದೊಡ್ಡ ಮೊತ್ತದ ಸಾಲದೊಂದಿಗೆ ಖರೀದಿಸಿದ್ದೆವು. ಗೃಹ ಸಾಲದ ಮೇಲೆ ವಿಮೆ ಮಾಡಿಸಲು ಸೂಚಿಸಿದಾಗ, ಸುಮ್ಮನೆ ವಿಮೆಗೆ ಕಟ್ಟುವ ಬದಲು ಅದೇ ಹಣವನ್ನು ಸಾಲಕ್ಕೇ ಕಟ್ಟಿದರೆ ಸಾಲ ಬಲು ಬೇಗನೆ ತೀರಿಸಬಹುದೆಂದು ನಿರ್ಧರಿಸಿ ವಿಮೆಯನ್ನೂ ಪಡೆದಿರಲಿಲ್ಲ. ಅವರಿಲ್ಲದೇ ಒಬ್ಬಳ ಸಂಬಳದಿಂದ ಅಷ್ಟೊಂದು ಗೃಹಸಾಲವನ್ನು ಕಟ್ಟಲು ಈಗ ಕಷ್ಟವಾಗುತ್ತಿದೆ.

ರಸ್ತೆ ಅಪಘಾತದ ಪ್ರಕರಣವಾಗಿದ್ದರಿಂದ ಎಲ್ಲಡೆಯಲ್ಲಿಯೂ ಆವರ ಮರಣ ಪತ್ರ, ಎಫ್ಐಆರ್ ವರದಿ, ಪೋಸ್ಟ್ ಮಾರ್ಟಮ್ ವರದಿ ಎಲ್ಲವನ್ನೂ ಸಲ್ಲಿಸ ಬೇಕಿತ್ತಲ್ಲದೇ ಪ್ರತಿಯೊಂದಕ್ಕೂ ನೋಟರಿ ಸಹಿ ಅದೂ ಇದೂ ಎಂದು ಗಂಟೆಗಟ್ಟಲೆ ಸಮಯವನ್ನು ವ್ಯಯ ಮಾಡಬೇಕಿತ್ತು.

ಮನೆ, ಭೂಮಿ, ಕಾರು, ಬೈಕು ಕಡೆಗೆ ಜಂಟಿಯಾಗಿ ತೆಗೆದುಕೊಂಡಿದ್ದ ಮನೆ ಎಲ್ಲದರ ಮಾಲಿಕತ್ವದ ಜೊತೆ ಅಡುಗೆ ಅನಿಲದ ಸಂಪರ್ಕ, ನೀರು, ವಿದ್ಯುತ್ ಮೀಟರ್, ಆವರ ಹೂಡಿಕೆಗಳು ಎಲ್ಲವನ್ನೂ ನನ್ನ ಹೆಸರಿನಲ್ಲಿ ಬದಲಾಯಿಸಿಕೊಳ್ಳಲು ಹರ ಸಾಹಸ ಪಡಬೇಕಾಗಿತ್ತು. ನಾನು ಸಹಾ ಕೆಲಸ ಮಾಡುತ್ತಿದ್ದರಿಂದ ಎಲ್ಲದಕ್ಕೂ ವಾರಾಂತ್ಯದಲ್ಲೇ ಮುಗಿಸಲು ಪ್ರಯತ್ನಿಸುತ್ತಿದ್ದ ಕಾರಣ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿದ್ದದ್ದು ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿಯೇ ತೆಗೆದುಕೊಳ್ಳುತ್ತಿದ್ದ ಕಾರಣ,ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿತ್ತು. ಕಬ್ಬಿಣ ಕಾದಾಗಲೇ ಬಗ್ಗಿಸಬೇಕು ಎನ್ನುವಂತೆ ಸಾವು ಸಂಭವಿಸಿದ ಕೆಲವೇ ದಿನಗಳೊಳಗೇ ಎಲ್ಲಾ ಕೆಲಸಗಳನ್ನು ಮುಗಿಸಬೇಕಾಗಿದ್ದರಿಂದ ನಮ್ಮ ಕುಟುಂಬದ ಇತರೇ ಸಂಬಂಧೀಕರೊಂದಿಗೆ ಸಮಯವನ್ನು ಕಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ನನ್ನ ಬಹುತೇಕ ಸಮಯವು ಕಾಗದ ಪತ್ರಗಳನ್ನು ವಿಂಗಡಿಸುವಲ್ಲಿಯೇ ಕಳೆದು ಹೋಗುತ್ತಿತ್ತು.

ಕೆಲ ತಿಂಗಳುಗಳ ಹಿಂದೆ ನಮ್ಮ ಹಿತೈಷಿಯೊಬ್ಬರು ನಮ್ಮ ಸ್ಥಿರಸ್ತಿಗಳ ಕುರಿತಾದ ವಿಲ್ ಮಾಡಲು ಸೂಚಿಸಿದ್ದಾಗ ನಾವಿಬ್ಬರೂ ಹೇ… ನಮಗೇನು ಅಂತಾ ವಯಸ್ಸಾಗಿದೆ. ನಮಗಿನ್ನೂ ಮಕ್ಕಳು ಮರಿಗಳೇ ಆಗಿಲ್ಲ ಎಂದು ನಕ್ಕಿದ್ದೆವು. ಆದರೆ ಪತಿಯ ಹಠಾತ್ ಮರಣದ ನಂತರ ಈಗ ನಾನು ನನ್ನ ಜೀವನವನ್ನು ಅತ್ಯಂತ ಹೆಚ್ಚು ಗಂಭೀರವಾಗಿ ಪರಿಗಣಿಸ ಬೇಕೆಂದು ತಿಳಿದುಕೊಂಡಿದ್ದೇನೆ.

ನಾನು ಇಂತಹ ಕಠಿಣ ಸಂಧರ್ಭದಲ್ಲಿ ಕಲಿತ ಪಾಠಗಳನ್ನು ಇತರರೊಡನೆ ಹಂಚಿಕೊಳ್ಳುವ ಮುಖಾಂತರ ಮುಂದೆ ಅವರ ಪ್ರೀತಿ ಪಾತ್ರರು ಇಂತಹ ಕಠಿಣ ಸಂಧರ್ಭಗಳನ್ನು ಎದುರಿಸಬಾರದು ಎಂಬುದು ನನ್ನ ಆಶಯವಾಗಿದೆ.

 1. ನಿಮ್ಮ ಎಲ್ಲಾ ನಾಮನಿರ್ದೇಶನಗಳನ್ನು ಪರಿಶೀಲಿಸಿ …
  ನಾವೆಲ್ಲಾ ದುಡಿಯುವುದೇ ನಮ್ಮ ಕುಟುಂಬಕ್ಕಾಗಿ. ಹಾಗಾಗಿ ಮದುವೆಗೆ ಮುಂಚೆ ನಮ್ಮ ಬಹುತೇಕ ದಾಖಲೆಗಳಲ್ಲಿ ತಂದೆ ಅಥವಾ ತಾಯಿಯವರನ್ನು ನಾಮನಿರ್ದೇಶನಗಳಲ್ಲಿ ನಮೂದಿಸುವುದು ಸಹಜ ಪ್ರಕ್ರಿಯೆಯಾದರೂ, ಮದುವೆಯಾದ ನಂತರ ಮತ್ತು ಕಾಲ ಕಾಲಕ್ಕೆ ಅನುಗುಣವಾಗಿ ಅದನ್ನು ಬದಲಿಸುತ್ತಿರಬೇಕು ಹಾಗಾಗಿ ನಿಮ್ಮ ಈ ಎಲ್ಲಾ ನಾಮಪತ್ರಗಳನ್ನು ಒಮ್ಮೆ ಪರಿಶೀಲಿಸಿ
 2. ಬ್ಯಾಂಕ್ ಖಾತೆಗಳು
 3. ಸ್ಥಿರ ಠೇವಣಿ, ಎನ್‌ಎಸ್‌ಸಿ
  ಬ್ಯಾಂಕ್ ಲಾಕರ್ಸ್
  ಡಿಮ್ಯಾಟ್ ಖಾತೆಗಳು
  ವಿಮೆ (ಜೀವ, ಬೈಕು ಅಥವಾ ಕಾರು ಅಥವಾ ಆಸ್ತಿ)
  ಹೂಡಿಕೆಗಳು
  ಪಿಎಫ್ ಪಿಂಚಣಿ ನಮೂನೆಗಳು
 4. ಪಾಸ್‌ವರ್ಡ್‌ಗಳು ..
  ಪ್ರಾಯೋಗಿಕವಾಗಿ ಭಧತ್ರಾ ಕಾರಣಗಳಿಂದಾಗಿ ಎಲ್ಲದ್ದಕ್ಕೂ ನಾವು ಪಾಸ್‌ವರ್ಡ್‌ಳ ಮೂಲಕ ಸುರಕ್ಷಿತವಾಗಿ ಇಡುತ್ತೇವೆ. ಹಾಗಾಗಿ ನಾವು ಬಳಸುವ ಲ್ಯಾಪ್‌ಟಾಪ್‌, ಇಮೇಲ್ ಖಾತೆಗಳು, ಬ್ಯಾಂಕ್ ಖಾತೆಗಳ ಎಲ್ಲದರ ವಿವರಗಳನ್ನು ಕಂಪ್ಯೂಟರ್ ನಲ್ಲಿ ಇಡುವ ಜೊತೆಯಲ್ಲಿಯೇ ಕಾಗದ ಮೇಲೂ ಅದನ್ನು ಬರೆದು ಸುರಕ್ಷಿತವಾದ ಸ್ಥಳದಲ್ಲಿ ಇಡುವ ಅಭ್ಯಾಸ ಮಾಡಿಕೊಳ್ಳಿ ಮತ್ತು ಕಾಲ ಕಾಲಕ್ಕೆ ತಕ್ಕಂತೆ ಪಾಸ್ವರ್ಡ್ಗಲು ಬದಲಾದಾಗ ಈ ಲಕೋಟೆಯಲ್ಲಿಯೂ ಬದಲಾಯಿಸುವುದನ್ನು ರೂಡಿ ಮಾಡಿಕೊಳ್ಳಿ.
 5. ಹೂಡಿಕೆಗಳು.
  ತೆರಿಗೆಯನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬರೂ ಹಲವಾರು ಹೂಡಿಕೆಗಳನ್ನು ಮಾಡುತ್ತೇವೆ ಮತ್ತು ಅದರ ವಿವರಗಳನ್ನು ಎಕ್ಸೆಲ್ ಶೀಟ್ ನಲ್ಲಿ ಇಡುವುದರ ಜೊತೆಯಲ್ಲಿಯೇ ಅದರ ಕಾಗದ ಪತ್ರಗಳನ್ನು ಮನೆಯ ಸುರಕ್ಷಿತ ಜಾಗದಲ್ಲಿಟ್ಟು ಅದರ ವಿವರಗಳು ನಮ್ಮ ಕುಟುಂಬದವರಿಗೆ ತಿಳಿದಿರಲಿ.
 6. ವಿಲ್.
  ವಿಲ್ ಮಾಡುವುದಕ್ಕೆ ಯಾವುದೇ ವಯಸ್ಸಿನ ನಿಬಂಧನೆ ಇರುವುದಿಲ್ಲ ಮತ್ತು ಅದನ್ನು ಎಷ್ಟು ಬಾರಿ ಬೇಕಾದರೂ ಬದಲಿಸಬಹುದಾದ ಕಾರಣ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮೆಲ್ಲರ ಚರ ಮತ್ತು ಸ್ಥಿರಾಸ್ತಿಗಳನ್ನು ನಮ್ಮ ನೆಚ್ಚಿನವರಿಗೆ ಸೇರಬೇಕಾದ ಪಾಲನ್ನು ವಿಲ್ ಮುಖಾಂತರ ನಮೂದಿಸಿ ಅದನ್ನು ರಿಜಿಸ್ಟರ್ ಮಾಡಿಸಿದ್ದಲ್ಲಿ ನಮ್ಮ ಅಗಲಿಕೆಯ ನಂತರದ ಕಾಗದ ಪತ್ರಗಳ ಕೆಲಸ ಸುಲಭವಾಗುತ್ತದೆ ಮತ್ತು ನಮ್ಮ ಆಸ್ತಿ ಅಪಾತ್ರರ ಪಾಲಾಗುವುದಿಲ್ಲ.
 7. ಹೊಣೆಗಾರಿಕೆಗಳು.
  ನಾವು ಸಾಲ ತೆಗೆದುಕೊಂಡಾಗ ನನ್ನ ನಂತರ ಸಾಲ ಕಟ್ಟುವುದು ಹೇಗೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಸಾಲದ ಮೇಲೆ ವಿಮೆ ಪಡೆದಿದ್ದಲ್ಲಿ ನಾವು ಅಗಲಿದ ನಂತರ ಯಾವುದೇ ಹೆಚ್ಚಿನ ಹಣ ಕಟ್ಟದೇ ನಮ್ಮ ಮನೆ ಅಥವಾ ವಾಹನ ಸುಲಭವಾಗಿ ನಮ್ಮ ಕುಟುಂಬಕ್ಕೆ ಸೇರುತ್ತದೆ.

ನನ್ನ ಯುದ್ಧಗಳು ಇದೀಗ ಪ್ರಾರಂಭವಾಗಿವೆ … ಆದರೆ ನಾವು ಹೋದ ನಂತರ ನಮ್ಮ ಪ್ರೀತಿಪಾತ್ರರು ತೊಂದರೆ ಅನುಭವಿಸದಂತೆ ಕನಿಷ್ಠ ಪ್ರಯತ್ನಗಳನ್ನು ಇಂದಿನಿಂದಲೇ ಮಾಡೋಣ. ಭವಿಷ್ಯದಲ್ಲಿ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲವಾದ್ದರಿಂದ ಎಲ್ಲದ್ದಕ್ಕೂ ಮೊದಲಿನಿಂದಲೇ ಸಿದ್ದರಾಗಿರೋಣ.

ಯಾರನ್ನೋ ಮೆಚ್ಚಿಸುವ ಸಲುವಾಗಿ ಎಂದಿಗೂ ಜೀವನ ನಡೆಸಬೇಡಿ. ನಮ್ಮನ್ನು ಪ್ರೀತಿಸುವ ಕುಟುಂಬ ಮತ್ತು ಬಂಧು ಮಿತ್ರರೊಡನೆ ಜೀವಿಸುವುದನ್ನು ರೂಡಿಸಿಕೊಳ್ಳಿ.

ಇದೊಂದು ನೈಜವಾದ ಘಟನೆಯಾಗಿದ್ದು ಯಾವುದೇ ಕಲ್ಪನಿಕ ಕಥೆಯಾಗದಿರುವ ಕಾರಣ ಎಲ್ಲರೂ ಇದರ ಬಗ್ಗೆ ಸ್ವಲ್ಪ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳಿ.

ಟಿವಿ ಧಾರಾವಾಹಿಗಳನ್ನು ನೋಡುವುದಕ್ಕೋ ಇಲ್ಲವೇ, ಕ್ರಿಕೆಟ್, ಚಲನಚಿತ್ರಗಳನ್ನು ನೋಡಲು ನಾವು ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಇವೆಲ್ಲದರ ಮಧ್ಯೆ ದಯವಿಟ್ಟು ಸುಮಾರು ೧೦- 15 ನಿಮಿಷಗಳ ಸಮಯ ಮಾಡಿಕೊಂಡು ನಿಮ್ಮ ಪ್ರೀತಿ ಪಾತ್ರರಿಗಾಗಿ ಈ ಲೇಖನವನ್ನು ಮೂರ್ನಾಲ್ಕು ಬಾರಿ ಓದಿ ಮತ್ತು ಅದನ್ನು ಕಾರ್ಯರೂಪಕ್ಕೆ ತನ್ನಿ.

ಸಾರ್ವಜನಿಕರ ಹಿತಾಸಕ್ತಿಗಾಗಿ ದಯವಿಟ್ಟು ನಿಮ್ಮ ಬಂಧು ಮಿತ್ರರೊಡನೆ ಇಂತಹ ಅತ್ಯುತ್ತಮ ಸಂದೇಶವನ್ನು ರವಾನಿಸುವುದನ್ನು ಮರೆಯದಿರಿ.

ಈ ಸಂದೇಶ ಕೇವಲ ದುಡಿಯುವವರಿಗೆ ಮಾತವಲ್ಲದೇ, ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸೂಕ್ತವೆನಿಸುತ್ತದೆ. ಕುಟುಂಬ ನಿರ್ವಹಣೆ ಎಂದರೆ, ಕೇವಲ ಅಡುಗೆ ಮಾಡುವುದು, ಮನೆಯನ್ನು ಶುಚಿಗೊಳಿಸುವುದು, ಅವಲಂಬಿತರನ್ನು ನೋಡಿಕೊಳ್ಳುವುದು ಮಾತ್ರವಲ್ಲದೇ ಹಣಕಾಸಿನ ಸಂಕೀರ್ಣ ಕಾರ್ಯಾಚರಣೆಯ ಜ್ಞಾನವನ್ನೂ ಒಳಗೊಂಡಿರುತ್ತದೆ ಎಂಬುದನ್ನು ಮರೆಯದಿರೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಸೂಚನೆ : ಈ ಲೇಖನ ಆತ್ಮೀಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶದ ಭಾವಾನುವಾದವಾಗಿದ್ದು ಇದನ್ನು ಬರೆದ ಅನಾಮಿಕ ಲೇಖಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕಾಲ ಹೀಗೇ  ಇರುವುದಿಲ್ಲ

ಸ್ವಲ್ಪ ದಿನಗಳಾದ ನಂತರ, ಯಾರೂ ನಮ್ಮಲ್ಲಿ ಈ ವಿಷಯಗಳ ಬಗ್ಗೆ ವಿಚಾರಿಸುವುದೇ ಇಲ್ಲಾ

 • ನೀವು ಎಷ್ಟು ಹಣ ಸಂಪಾದಿಸಿದ್ದೀರೀ?
 • ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?
 • ನಿಮ್ಮಲ್ಲಿ ಎಷ್ಟು ಮತ್ತು ಯಾವ ಕಾರುಗಳಿವೆ? ಅಂತಾ,

ಅದರ ಬದಲು ಎಲ್ಲರೂ ಕೇಳುವುದು ಕೇವಲ ಎರಡೇ ಪ್ರಶ್ನೆಗಳು

 • ನಿಮ್ಮ ಆರೋಗ್ಯ ಹೇಗಿದೆ?
 • ನಿಮ್ಮ ಮಕ್ಕಳು ಏನು ಮಾಡ್ತಾ ಇದ್ದಾರೆ?

ಹಾಗಾಗಿ ಈ ಕರೋನಾ ಲಾಕ್ ಡೊನ್ ಸಮಯದಲ್ಲಿ ಚೆನ್ನಾಗಿ ಊಟ ತಿಂಡಿ ಮಾಡಿ, ಸ್ವಲ್ಪ ವ್ಯಾಯಾಮಾನೂ ಮಾಡಿ , ಮನೆಯಿಂದ ಹೊರಗೆ ಬರದೇ, ಮನೆಯಲ್ಲಿಯೇ ಲವಲವಿಕೆಯಿಂದ  ಮಡದಿ ಮಕ್ಕಳೊಂದಿಗೆ  ಚಟುವಟಿಕೆಯಿಂದ ಸಂತೋಷವಾಗಿ ಕಾಲ ಕಳೆಯಿರಿ. ಈ ಸಮಯದಲ್ಲಿ ಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ಕಲಿಸಿಕೊಡಿ. ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪರಿಚಯಿಸಿ. ಏಕಂದರೆ ಇಂದಿನ ಮಕ್ಕಳೇ ನಾಳೇ ನಾಡಿನ ಸತ್ಪ್ರಜೆಗಳು. ಯಥಾ ರಾಜಾ ತಥಾ ಪ್ರಜಾ ಎನ್ನುವುದರ ಜೊತೆಗೆ ಯಥಾ ಪ್ರಜಾ ತಥಾ ದೇಶ ಎನ್ನುವುದೂ ಈಗ ಅನ್ವಯವಾಗುವ ಹೊಸಾ ಮಾತು

ಆರೋಗ್ಯ  ಇದ್ರೇ, ಹಣ ಸಂಪಾದನೆ ಮಾಡ ಬಹುದೇ  ಹೊರತು,

ಹಣದಿಂದ ಆರೋಗ್ಯವನ್ನು  ಖಂಡಿತವಾಗಿಯೂ ಕೊಳ್ಳಲಾಗುವುದಿಲ್ಲ.

kala

ಏಕೆಂದರೆ,  ಕಾಲ ಹೀಗೇ  ಇರುವುದಿಲ್ಲ. ಸದಾಕಾಲವೂ ಬದಲಾಗುತ್ತಲೇ ಇರುತ್ತದೆ.

 

 

ಏನಂತೀರೀ?

ಈ ಶತಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?

vig

ಕಳೆದ ವಾರಾಂತ್ಯದಲ್ಲಿ ಮನೆಗೆ ಅವಶ್ಯಕವಿದ್ದ ತರಕಾರಿಗಳನ್ನು ಕೊಳ್ಳಲು ರಸ್ತೆಯ ಬದಿಯಲ್ಲಿದ್ದ ವ್ಯಾಪಾರಿಗಳ ಬಳಿ ಹೋಗಿದ್ದೆ. ನಮಗೆ ಬೇಕಾದ ತರಕಾರಿಗಳನ್ನೆಲ್ಲಾ ಕೊಂಡು ದುಡ್ಡು ಎಷ್ಟಾಯಿತು ಎಂದೆ? ಅಲ್ಲಿ ವ್ಯಾಪಾರ ಮಾಡುತ್ತಿದ್ದ ಸುಮಾರು 18-20ರ ವಯಸ್ಸಿನ ತರುಣ ತರಕಾರಿ ಕೊಡುವಾಗ ಇದ್ದ ಚುರುಕು ಲೆಕ್ಕ ಹಾಕುವಾಗ ತಡಕಾಡತೊಡಗಿದ್ದ. ಕಡೆಗೆ ಕ್ಯಾಲುಕ್ಯುಲೇಟರ್ ಸಹಾಯದಿಂದ ಲೆಖ್ಖಾ ಹಾಕಿ ಅಂಕಲ್ 235 ಆಯ್ತು ಎಂದ. ಸರಿ ಎಂದು 500 ರೂಪಾಯಿ ಕೊಟ್ಟರೆ ಪುನಃ ಕ್ಯಾಲುಕ್ಯುಲೇಟರ್ ತೆಗೆದುಕೊಂಡು 500-235 ಲೆಖ್ಖ ಹಾಕಿ ಚಿಲ್ಲರೆ 265 ರೂಗಳನ್ನು ಹಿಂದಿರುಗಿಸಿದ.

money

ಮತ್ತೊಂದು ದಿನ ನಮ್ಮ ಮಕ್ಕಳು ಪುಸ್ತಕ, ಪೆನ್ನುಗಳು ಬೇಕು ಎಂದಾಗ ಮಕ್ಕಳಿಗೂ ವ್ಯವಹಾರದ ಜ್ಞಾನ ಬರಲಿ ಎಂದು ಹೈಸ್ಕೂಲ್ ಓದುತ್ತಿದ್ದ ಮಗ ಮತ್ತು ಪ್ರೈಮರಿಯಲ್ಲಿದ್ದ ಮಗಳು ಇಬ್ಬರಿಗೂ ಸೇರಿ 500ರೂಗಳನ್ನು ಕೊಟ್ಟು ನಿಮಗೆ ಬೇಕಾದದ್ದನ್ನು ತೆಗೆದುಕೊಂಡು ಬಿಲ್ ಸಹಿತ ಚಿಲ್ಲರೆ ವಾಪಸ್ಸು ಕೊಡಿ ಎಂದು ತಿಳಿಸಿದೆ. ಅಂಗಡಿಗೆ ಹೋದ ಸ್ವಲ್ಪ ಸಮಯದಲ್ಲಿಯೇ ಹ್ಯಾಪು ಮೊರೆ ಹಾಕಿಕೊಂಡು ಬರೀ ಕೈಯಲ್ಲಿ ಮನೆಗೆ ಹಿಂದಿರುಗಿದರು. ಯಾಕ್ರೋ ಅಂಗಡಿ ತೆಗೆದಿರಲಿಲ್ವಾ ಎಂದು ಕೇಳಿದೆ. ಅದಕ್ಕೆ ಮಗ ಅಂಗಡಿ ತೆಗೆದಿತ್ತು ಎಂದ. ನಿಮಗೆ ಬೇಕಾದದ್ದು ಅಂಗಡಿಯಲ್ಲಿ ಇರಲಿಲ್ವಾ ಎಂದೇ? ಎಲ್ಲಾ ಇತ್ತು ಎಂದಳು ಮಗಳು. ಮತ್ತೇ ಬರೀ ಕೈಯಲ್ಲಿ ಯಾಕೆ ಬಂದ್ರಿ ? ಎಂದು ಮತ್ತೆ ಕೇಳಿದಾಗ, ಎಲ್ಲಾ ಅವನಿಂದಾನೇ ಅಂತಾ ಮಗಳು, ಇಲ್ಲಾಪ್ಪಾ ನಂದೇನೂ ತಪ್ಪಿಲ್ಲ ಎಲ್ಲಾ ಅವಳೇ ಮಾಡಿದ್ದು ಎಂದು ಪರಸ್ಪರ ದೂಷಣೆ ಮಾಡತೊಡಗಿದರು. ನಂತರ ಇಬ್ಬರನ್ನೂ ಸಮಾಧಾನ ಪಡಿಸಿ ನಿಧಾನವಾಗಿ ಕೇಳಿದಾಗ ತಿಳಿದು ಬಂದಿದ್ದೇನೆಂದರೆ, ಕೊಟ್ಟ 500ರೂಗಳನ್ನು ಕೈಯ್ಯಲ್ಲಿ ಹಿಡಿದಿದ್ದ ಮಗ ತನಗೆ ಬೇಕಾದದ್ದನ್ನು ತೆಗೆದುಕೊಳ್ಳುವಾಗ ತಂಗಿಯ ಕೈಗೆ ಹಣವನ್ನು ಕೊಟ್ಟಿದ್ದಾನೆ. ತಂಗಿ ಅವಳಿಗೆ ಬೇಕಾದದ್ದನ್ನು ತೆಗೆದುಕೊಳ್ಳುವಾಗ ಹಣವನ್ನು ಪಕ್ಕಕ್ಕಿಟ್ಟು ಮರೆತು ಬಿಟ್ಟಿದ್ದಾಳೆ. ಯಾರೋ ಅಂಗಡಿಗೆ ಬಂದಿದ್ದವರು ಆ ಹಣವನ್ನು ನೋಡಿ ತೆಗೆದುಕೊಂಡು ಹೋಗಿದ್ದರು. ಅವರಿಬ್ಬರನ್ನು ಸಮಾಧಾನ ಪಡಿಸಿ ಪುನಃ 500ರೂಗಳನ್ನು ಆವರಿಬ್ಬರಿಗೂ ಕೊಟ್ಟು ಜೋಪಾನವಾಗಿ ಹೋಗಿ ತೆಗೆದುಕೊಂಡು ಬನ್ನಿ ಎಂದಾಗ ಇಬ್ಬರೂ ಸಂತೋಷದಿಂದ ಹೋಗಿ ತಮಗೆ ಬೇಕಾದದ್ದನ್ನು ಕೊಂಡು ತಂದು ಚಿಲ್ಲರೆ ಹಿಂದುರಿಗಿಸಿದರು.

ಈ ಎರಡೂ ಪ್ರಸಂಗಗಳನ್ನು ಅವಲೋಕನ ಮಾಡುತ್ತಿದ್ದಾಗ ನನ್ನ ಮನಸ್ಸಿಗೆ ಅನ್ನಿಸಿದ್ದು, ಈ ಶತಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?ಮ್ಮ ಹಿರಿಯರು, ವೇದಗಳನ್ನು, ಇಡೀ ಭಗವದ್ಗೀತೆಯ ಜೊತೆಗೆ ನೂರಾರು ಶ್ಲೋಕಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಅನಕ್ಷರಸ್ಥರಾಗಿದ್ದರೂ ಲಕ್ಷಾಂತರ ಏಕೆ? ಕೊಟ್ಯಾಂತರ ರೂಪಾಯಿಗಳ ವ್ಯವಹಾರವನ್ನು ಬರೀ ಬಾಯಿಮಾತಿನಲ್ಲಿಯೇ ಜೋಪಾನವಾಗಿ ಮಾಡುತ್ತಿದ್ದರೆ ಹೊರತು ಈಗಿನ ತರಹ ಸಣ್ಣ ಪುಟ್ಟ ಸಂಕಲನ ವ್ಯವಕಲನಕ್ಕೂ ಕ್ಯಾಲುಕ್ಲೇಟರ್ ಉಪಯೋಗಿಸುತ್ತಿರಲಿಲ್ಲ.

ಹೌದು. ನಿಜವಾಗಿಯೂ ನಾವು ನಮ್ಮ ಮಕ್ಕಳನ್ನು ರೂಪಿಸಿವುದರಲ್ಲಿ ಖಂಡಿತವಾಗಿಯೂ ಎಡವುತ್ತಿದ್ದೇವೆ.

gurukula1.jpeg

ಹಿಂದಿನ ಕಾಲದಲ್ಲಿ ನಮ್ಮ ಶಿಕ್ಷಣ ಪದ್ದತಿಯೆಲ್ಲವೂ ನಿಸರ್ಗದ ಅಡಿಯಲ್ಲಿಯೇ ಪ್ರಾಯೋಗಿಕವಾಗಿಯೇ ನಡೆಯುತ್ತಿತ್ತು. ವಯಸ್ಸಿಗೆ ಬಂದ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ದೂರದ ಗುರುಕುಲಕ್ಕೆ ಕಳುಹಿಸುತ್ತಿದ್ದರು ಅಲ್ಲಿ ಬಡವ ಬಲ್ಲದ, ಅರಸ ಆಳು ಎನ್ನುವ ಬೇಧ ಭಾವವಿಲ್ಲದೇ ಎಲ್ಲರಿಗೂ ಸಮಾನರೀತಿಯಾಗಿ 64 ವಿದ್ಯೆಗಳನ್ನೂ ಕಲಿಸುತ್ತಿದ್ದರು. ಪ್ರತಿ ಶಿಕ್ಷಾರ್ಥಿಗಳೂ ಪ್ರತಿ ದಿನ ತಮ್ಮ ಅಕ್ಕ ಪಕ್ಕದ ಊರುಗಳಿಗೆ ಹೋಗಿ ಆ ದಿನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಭಿಕ್ಷೆ ಬೇಡಿ ತಂದು ಅದರಿಂದ ಜೀವಿಸುತ್ತಿದ್ದರು. ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರಕೃತಿಯ ಅಡಿಯಲ್ಲಿರುವ ಎಲ್ಲಾ ಕೆಲಸಗಳನ್ನು ನೀಡಿ ನಂತರ ಆತ ಯಾವ ವಿದ್ಯೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಗಳಿಸುತ್ತಾನೋ ಅದನ್ನೇ ಮುಂದೆ ತನ್ನ ವೃತ್ತಿಯನ್ನಾಗಿ ಮಾಡಿ ಕೊಂಡು ಜೀವನವನ್ನು ಸಾಗಿಸುತ್ತಿದ್ದರು.

ಅವರೆಲ್ಲರೂ ಅನಕ್ಷರಸ್ಥರಾಗಿದ್ದರೂ, ಎಲ್ಲರಿಗೂ ಲೆಖ್ಖದ ಮಗ್ಗಿ ಕಂಠ ಪಾಠವಾಗಿ, ದೈನಂದಿನ ವ್ಯವಹಾರಕ್ಕೆ ತಕ್ಕಷ್ಟು ಲೆಕ್ಕಾಚಾರ ಬಲ್ಲವರಾಗಿರುತ್ತಿದ್ದರು .ಅವರೆಲ್ಲರಿಗೂ ಶ್ಲೋಕದ ಮುಖೇನ, ಸುಭಾಷಿತ ಮುಖೇನ, ನೀತಿ ಕಥೆಗಳನ್ನು ಹೇಳುವ ಮೂಲಕ ಹಬ್ಬ ಹರಿದಿನಗಳನ್ನು ಆಚರಿಸುವ ಮುಖಾಂತರ ಶಾಸ್ತ್ರ ಸಂಪ್ರದಾಯಗಳನ್ನು ಬದುಕುವ ಜೀವನ ಕಲೆಯನ್ನು ಕಲಿಸಿಕೊಡಲಾಗುತ್ತಿತ್ತು.
ಕಳ್ಳತನ ಮಾಡುವುದು, ಭಿಕ್ಷೆ ಬೇಡುವುದು ಅಪರಾಧ. ಹಾಗಾಗಿ ಎಲ್ಲರೂ ಮೈ ಮುರಿದು ಯಾವುದಾದರೂ ಕೆಲಸ ಮಾಡಿ ದುಡಿದು ತಿನ್ನುವಂತಹ ಆಭ್ಯಾಸವನ್ನು ರೂಢಿಯಲ್ಲಿಟ್ಟಿದ್ದರು.

ಕೆಲವೇ ಕೆಲವು ನೂರು ವರ್ಷಗಳ ಹಿಂದೆ ನಮ್ಮ ದೇಶ ಅತ್ಯಂತ ಸುಭಿಕ್ಷವಾಗಿ ಜಗತ್ತಿನಲ್ಲಿಯೇ ಅತ್ಯಂತ ಒಳ್ಳೆಯ ನಾಗರೀಕತೆ ಹೊಂದಿರುವಂತಹ ಎಲ್ಲರೂ ಸುಖಃ ಶಾಂತಿಯಿಂದ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಂತಹ ರಾಷ್ಟ್ರವಾಗಿತ್ತು. ನಮ್ಮ ನಳಂದ ವಿಶ್ವವಿದ್ಯಾನಿಯಕ್ಕೆ ಅಭ್ಯಾಸಕ್ಕೆಂದು ಬಂದ ಹುಯ್ಯನ್ ಸ್ಯಾಂಗ್ ಮತ್ತು ಪಾಹಿಯಾನ್ ಅಂತಹ ವಿದೇಶಿಗರೇ ಬರೆದಿರುವಂತೆ ಇಡೀ ದೇಶದಲ್ಲಿ ಹುಡುಕಿದರೂ ಒಬ್ಬನೇ ಒಬ್ಬ ಭಿಕ್ಷುಕನನ್ನು ನೋಡಿರಲಿಲ್ಲವಂತೆ. ವಿಜಯನಗರದ ಕಾಲದಲ್ಲಿ ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ಈಗ ರಸ್ತೆಗಳ ಬದಿಯಲ್ಲಿ ತರಕಾರಿ ಮಾರುವಂತೆ ಮಾರುತ್ತಿದ್ದರಂತೆ. ಆದರೆ ನಳಂದ ವಿಶ್ವವಿದ್ಯಾನಿಲಯ ಧಾಳಿಕೋರರ ಬೆಂಕಿಗೆ ಆಹುತಿಯಾಗಿ ಆರು ತಿಂಗಳುಗಳ ಕಾಲ ಸುಟ್ಟುಹೋದ ನಂತರ ಶಿಕ್ಷಣದಲ್ಲಿಯೂ ಕುಂಠಿತವಾಗ ತೊಡಗಿತು. ನಂತರ ವ್ಯಾಪಾರಕ್ಕೆಂದು ಬಂದು ನಮ್ಮ ನಮ್ಮ ಒಳಜಗಳಗಳನ್ನೇ ಆಧಾರವಾಗಿಟ್ಟು ಕೊಂಡು ನಮ್ಮ ನಮ್ಮಲಿಯೇ ಜಗಳತಂದು ದೇಶವನ್ನು ದಾಸ್ಯಕ್ಕೆ ತಳ್ಳಿದ ಬ್ರಿಟೀಷರಿಗೆ ತಮ್ಮ ಆಳ್ವಿಕೆಯನ್ನು ಜಾರಿಗೊಳಿಸಲು ಪ್ರತೀಬಾರಿಯೂ ಇಂಗ್ಲೇಂಡಿನಿಂದ ಜನರನ್ನು ಕರೆತರುವುದು ದುಬಾರಿ ಎನಿಸಿದಾಗಲೇ ಲಾರ್ಡ್ ಮೆಕಾಲೆ ಸರಿಯಾಗಿ ಯೋಚಿಸಿ, ಬಣ್ಣದಲ್ಲಿ ಭಾರತೀಯರು ಬುದ್ಧಿ ಮತ್ತು ಆಲೋಚನೆಯಲ್ಲಿ ಬ್ರಿಟಿಷರಂತೆ ಇರುವಂತೆ ಸ್ಥಳೀಯರನ್ನು ತಯಾರು ಮಾಡಲೆಂದೇ ನಮ್ಮ ಸಂಸ್ಕೃತಿಯ ತಳಹಳಿಯಾದ ಭಧ್ರ ಬುನಾದಿಯಾದ ಗುರುಕುಲದ ವಿದ್ಯಾಭ್ಯಾಸ ಪದ್ದತಿಗೆ ಕೊಡಲಿ ಹಾಕಿ ಪಾಶ್ವ್ಯಾತ್ಯ ರೀತಿಯ ಶಿಕ್ಷಣ ಪದ್ದತಿ ಬಲವಂತವಾಗಿ ಹೇರಿದ ಪರಿಣಾಮವೇ ಇಂದಿನ ಎಲ್ಲಾ ಅದ್ವಾನಗಳಿಗೆ ಮತ್ತು ಅಭಾಸಗಳಿಗೆ ಕಾರಣ ಎಂದರೆ ತಪ್ಪಾಗಲಾರದು.

ಹಿಂದೆಲ್ಲಾ ಪೋಷಕರು ಮನೆಯೇ ಮೊದಲ ಪಾಠ ಶಾಲೆ ಎಂದು ವಿದ್ಯೆಯ ಜೊತೆಗೆ, ಮನೆಯಲ್ಲಿಯೇ ಸಂಗೀತ, ನಾಟಕ, ನೃತ್ಯ ಪಕ್ಕವಾದ್ಯ, ಸಂಸ್ಕೃತ, ವೇದ, ಪುರಾಣ, ಯೋಗ, ಅಡುಗೆ ಮುಂತಾದ ವಿಷಯಗಳಲ್ಲಿ ತಮ್ಮ ಮಕ್ಕಳನ್ನು ತಯಾರು ಮಾಡುತ್ತಿದ್ದರು. ತಮ್ಮ ಮಕ್ಕಳು ಸಮಾಜದಲ್ಲಿ ಒಳ್ಳೆಯ ನಾಗರೀಕರಾಗ ಬೇಕೆಂದು ಬಯಸಿದ್ದರೇ ಹೊರತು ಆವರಿಂದ ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯನ್ನು ಬಯಸುತ್ತಿರಲಿಲ್ಲ.

ಆದರೆ ಇಂದು ಅದಕ್ಕೆ ತದ್ವಿರುದ್ಧವಾಗಿದೆ. ಪ್ರತಿ ಪೋಷಕರೂ, ತಮ್ಮ ತಮ್ಮ ಮಕ್ಕಳು ಆಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲವನ್ನೂ ಬದಿಕೊತ್ತಿ ತಮ್ಮ ಮಕ್ಕಳು ಕೇವಲ ಓದಿದ್ದೇ ಓದುತ್ತಾ ಮಕ್ಕೀಕಾಮಕ್ಕಿ ಉರು ಹೊಡಿಸುವುದನ್ನೇ ವಿದ್ಯಾಭ್ಯಾಸ ಎಂದು ತಿಳಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಪೋಷಕರೂ ಅಂಕಗಳ ಹಿಂದೆಯೇ ಬಿದ್ದಿದ್ದಾರೆ. ಮೊದಲೆಲ್ಲಾ ಹಿಂದೆ ಪರೀಕ್ಷೆಗಳಲ್ಲಿ ಪಾಸ್ ಆಗಿದ್ದರೆ ಸಾಕಿತ್ತು. ನಂತರ ಫಸ್ಟ್ ಕ್ಲಾಸ್ ಬಂದರೆ ಓಹೋ ಎನ್ನುತ್ತಿದ್ದರು. ಈಗ ಡಿಸ್ಟಿಂಗ್ಷನ್ ತೆಗೆದುಕೊಂಡರೂ ಅಯ್ಯೋ ಇಷ್ಟೇನಾ? ಈ ಸ್ಪರ್ಥಾತ್ಮಕ ಜಗತ್ತಿನಲ್ಲಿ ಪ್ರತೀ ವಿಷಯದಲ್ಲೂ ನೂರಕ್ಕೆ ನೂರು ಅಂಕವನ್ನೇ ಬ. ಡಾಕ್ಟರ್ ಇಲ್ಲವೇ ಇಂಜೀನಿಯರ್ ಆಗಲೇ ಬೇಕು. ಡಿಗ್ರಿ ಮುಗಿದ ನಂತರ ವಿದೇಶಕ್ಕೆ ಫಲಾಯನ ಮಾಡಿ ಹೆತ್ತ ಅಪ್ಪಾ ಅಮ್ಮನನ್ನು ಮರೆತು ಲಕ್ಷ ಲಕ್ಷ ಸಂಪಾದಿಸ ಬೇಕು ಎಂಬುದನ್ನೇ ಬಯಸುವುದರಿಂದ ವಿದ್ಯಾರ್ಥ್ದಿಗಳ ಮೇಲೆ ಅನಗತ್ಯ ಹೇರಿಕೆಯಾಗುತ್ತಿದೆ. ಬಾಲ್ಯದಿಂದಲೇ ಅವರ ಆಟ, ಸಾಂಸ್ಕೃತಿಯ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲ್ಪಟ್ಟಿರುತ್ತದೆ. ಸದಾಕಾಲವೂ ಪುಸ್ತಕದ ಹುಳುವಾಗಿ, ವಿಷಯವನ್ನು ಅರ್ಥಮಾಡಿಕೊಳ್ಳದೇ, ಉರು ಹೊಡೆದು ಮಕ್ಕೀ ಕಾ ಮಕ್ಕಿಯಾಗಿ ಓದಿದ್ದನ್ನು ಕಕ್ಕಿ ಅಂಕ ಗಳಿಸುವ ಭರದಲ್ಲಿರುತ್ತಾರೆ. ಕೇವಲ ಅಂಕಗಳನ್ನು ಗಳಿಸುವ ಭರದಲ್ಲಿ ಲೋಕ ಜ್ಞಾನ, ವ್ಯಾವಹಾರಿಕ ಜ್ಞಾನ, ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳ ಬಗ್ಗೆ ಕಲಿಯುವ ಆಸಕ್ತಿಯೇ ಇರುವುದಿಲ್ಲವಾದ ಕಾರಣದಿಂದಾಗಿಯೇ ಅಪ್ಪಾ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೂ ಶ್ರಾಧ್ದಕ್ಕೂ ವೆತ್ಯಾಸವೇ ತಿಳಿದಿರುವುದಿಲ್ಲ. ಅಂತೆಯೇ ಅಂಕಗಳಿಸುವುದರಲ್ಲಿ ಒಂದಿಷ್ಟು ಆಚೀಚೆಯಾದರೂ ಅತ್ಯಂತ ದುರ್ಬಲ ಮನಸ್ಸಿನವರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದುರ್ಬಲ ಹೃದಯಿಗಳನ್ನಾಗಿ ಮಾಡುತ್ತಿದ್ದೇವೆ.

ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುವುದಕ್ಕೆ ಹೋಗುತ್ತಾರೆ. ಕಾಟಾಚಾರಕ್ಕೆ ಮಕ್ಕಳಿಗೆ ಜನ್ಮ ನೀಡಿ, ಅ ಮಕ್ಕಳನ್ನು ಹತ್ತಿರದ ಪ್ಲೇಹೋಮ್ ಗಳಲ್ಲಿ ಬಿಟ್ಟು, ಸ್ವಲ್ಪ ದೊಡ್ಡವರಾದ ಮೇಲೆ ಒಳ್ಳೋಳ್ಳೆ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಕೊಡಿಸಿ, ಅ ಅವರಿಗೆ ಬೇಕಾದದ್ದೆಲ್ಲವನ್ನೂ ತಿನ್ನಸುತ್ತಾ , ಕಾಲ ಕಾಲಕ್ಕೆ ಕೇಳಿದ್ದನ್ನು ಕೊಡಿಸಿ, ಐಶಾರಾಮ್ಯ ಗಾಡಿಗಳಲ್ಲಿ ಓಡಾಡಿಸಿ, ತಮ್ಮ ಪಾಡಿಗೆ ತಮ್ಮ ಕೆಲಸಗಳಲ್ಲಿ ಮಗ್ನರಾಗಿ ಹೋಗುವುದೇ, ತಂದೆ ಮತ್ತು ತಾಯಿಯರ ಕರ್ತವ್ಯ ಎಂದು ಭಾವಿಸಿರುವುದೇ ದುರದೃಷ್ಟಕರ. ಇನ್ನು ಕೆಲಸದಿಂದ ಮನೆಗೆ ಬಂದ ಕೂಡಲೇ ಮಕ್ಕಳ ಜೊತೆ ಸ್ವಲ್ಪವೂ ಹೊತ್ತು ಸಮಯ ಕಳೆಯದೆ, ಮನೆಗೆ ಬಂದ ತಕ್ಷಣವೇ ಮೊಬೈಲ್ ಇಲ್ಲವೇ ಟಿವಿಯಲ್ಲಿ ಮಗ್ನರಾಗಿ ಹೋಗುವುದನ್ನು ನೋಡುವ ಮಕ್ಕಳು ನೊಲಿ ನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಹಾಗೆ ತಾವೂ ಸಹಾ ತಮ್ಮ ಪೋಷಕರ ಮೇಲೆ ಯಾವುದೇ ರೀತಿಯ ಮಮಕಾರವಿಲ್ಲದೇ ಅವರು ಕೇವಲ ದುಡ್ಡನ್ನು ನೀಡುವ ಎಟಿಎಂ ಮೆಷಿನ್ ಎಂದು ಭಾವಿಸುವಂತಾಗಿದೆ.

ಮಾತೃದೇವೋಭವ, ಪಿತೃದೇವೋಭವ ಅಂತಾ ತಂದೆ ತಾಯಿಯರ ನಂತರದ ಸ್ಥಾನವನ್ನು ಅಚಾರ್ಯದೇವೋಭವ ಎಂದು ಗುರುಗಳಿಗೆ ಮಹತ್ತರ ಸ್ಥಾನವನ್ನು ನಮ್ಮ ಹಿರಿಯರು ಕಲ್ಪಿಸಿದ್ದರು. ಒಂದಕ್ಷರವಂ ಕಲಿಸಿದಾತಂ ಗುರು ಅಂದರೆ ಒಂದು ಅಕ್ಷವನ್ನು ಕಲಿದವರೂ ನಮಗೆ ಗುರುವಾಗುತ್ತಾನೆ ಎಂಬ ನಾಣ್ಣುಡಿ ನಮ್ಮಲ್ಲಿ ಪ್ರಚಲಿತದಲ್ಲಿತ್ತು. ತಂದೆ ತಾಯಿಯರು ಜನ್ಮದಾತರಾಗಿ ನಮ್ಮ ಹೊತ್ತು ಹೆತ್ತು ಪೋಷಿಸಿದರೆ, ನಮ್ಮ ಗುರುಗಳು ನಿಸ್ವಾರ್ಥವಾಗಿ ನಮಗೆ ನಾಲ್ಕಕ್ಷರವನ್ನು ಕಲಿಸುವುದರ ಜೊತೆಗೆ ನಮ್ಮನ್ನು ಒಳ್ಳೆಯ ವ್ಯಕ್ತಿತ್ವಕ್ಕೆ ಕಾರಣೀಭೂತರಾಗುತ್ತಾರೆ. ಗುರುವಿನ ಗುಲಾಮ ನಾಗದ ತನಕ ದೊರೆಯದಣ್ಣ ಮುಕುತಿ ಎನ್ನುವುದನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡಲಾಗುತ್ತಿತ್ತು. ಆದರೆ ಇಂದು ವಿದ್ಯಾರ್ಥಿಗಳಿಗೆ ಗುರುವಿನ ಮೇಲೆ ಎಳ್ಳಷ್ಟೂ ಭಕ್ತಿ ಭಾವವೇ ಇಲ್ಲದಂತಾಗಿ, ವಿದ್ಯಾರ್ಥಿಗಳು ಗುರುವಿನ ಗುಲಾಮನಾವುದು ಬಿಡಿ ಗುರುವೇ ವಿದ್ಯಾರ್ಥಿಯ ಗುಲಾಮನಾಗುವಂತಹ ಪರಿಸ್ಥಿತಿ ಬಂದೊದಗಿರುವುದೇ ದೌರ್ಭಾಗ್ಯವೇ ಸರಿ.

ಹಿಂದೆಲ್ಲಾ ಈ ರೀತಿಯ ಅಭಾಸಗಳು ಆಗುವುದಕ್ಕೆ ಅವಕಾಶವೇ ಇರದಂತೆ ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯೇ ಮೊದಲ ಗುರುವಾಗುತ್ತಿದ್ದರು, ಇಲ್ಲವೇ ಬಹುತೇಕವಾಗಿ ಇರುತ್ತಿದ್ದ ಅವಿಭಕ್ತ ಕುಟುಂಬಳಲ್ಲಿ ಮನೆಯಲ್ಲಿರುವ ಹಿರಿಯರಾದ ಅಜ್ಜಿ ತಮ್ಮ ಮೊಮ್ಮಕ್ಕಳನ್ನು ತೊಡೆಯ ಮೇಲೆ ಕುಳ್ಳಸಿಕೊಂಡು ಅವರಿಗೆ ನಮ್ಮ ಪುರಾಣ ಪುರುಷರ ಕಥೆಗಳನ್ನು ಹೇಳುತ್ತಾ ಹಾಡು ಹಸೆಗಳನ್ನು ಹೇಳಿಕೊಡುತ್ತಿದ್ದರೆ , ತಾತ ಅವರ ಮೊಮ್ಮಕ್ಕಳಿಗೆ ಬಾಲ ಪಾಠಗಳನ್ನೂ, ಶ್ಲೋಕಗಳನ್ನು ಶಾಸ್ತ್ರ ಸಂಪ್ರದಾಯಗಳನ್ನೂ ವೀರ ಯೋಧರ, ಸ್ವಾತಂತ್ಯ್ರ ಹೋರಾಟಗಾರರ ಯಶೋಗಾಥೆಯನ್ನು , ಗುರು ಹಿರಿಯರಿಗೆ ಮತ್ತು ಗುರುಗಳಿಗೆ ತಗ್ಗಿ ಬಗ್ಗಿ ನಡೆದುಕೊಂಡು ಅವರು ಹೇಳಿ ಕೊಟ್ಟಿದ್ದನ್ನು ಚಾಚೂ ತಪ್ಪದೇ ಪಾಲಿಸ ಬೇಕೆಂದು ಮಕ್ಕಳಿಗೆ ಅರ್ಥವಾಗುವಂತೆ ಮನನಮಾಡಿಸುತ್ತಿದ್ದರು.

ಆದರೆ ಇಂದು ಅದೆಲ್ಲವನ್ನು ಮರೆತು ಪ್ರತೀ ಕೆಲವನ್ನೂ ಸರ್ಕಾರವೇ ಮಾಡಲೀ ಎಂದೋ ಎಲ್ಲಾ ಸವಲತ್ತುಗಳನ್ನು ಸರ್ಕಾರವೇ ಮಾಡಿ ಕೊಡಬೇಕು ಅಂತಾನೇ ಯೋಚಿಸುತ್ತಾ ನಮ್ಮ ಮಕ್ಕಳಿಗೆ ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ ಲೋಕಜ್ಞಾನವನ್ನು ರೂಢಿ ಮಾಡಿಸದಿರುವುದೇ ಈ ಎಲ್ಲಾ ಅವನತಿಗೆ ಕಾರಣವಾಗಿದೆ.

ಮಕ್ಕಳು ನಾಲ್ಕಾರು ಪದವಿ ಪಡೆದಿದ್ದರೇನು? ವಿದೇಶದಲ್ಲಿ ಓದಿದ್ದರೇನು?
ವಿನಯ ಮತ್ತು ವಿವೇಚನೆ ಇಲ್ಲದಿದ್ದರೆ, ಪಡೆದ ವಿದ್ಯೆಯೆಲ್ಲವೂ ತೃಣಕ್ಕೆ ಸಮಾನ
ಮಕ್ಕಳಿಗೆ ವಿದ್ಯೆಯ ಜೊತೆಗೆ ವಿನಯ ಮತ್ತು ವಿವೇಚನೆ ಹೆಚ್ಚಿಸುವತ್ತ ಹರಿಸೋಣ ಚಿತ್ತ.

ಮಕ್ಕಳಿಗೆ ನಾವು ಕಲಿಯುತ್ತಿರುವ ವಿದ್ಯೆ , ಕೇವಲ ಡಿಗ್ರಿ ಪಡೆದು
ನೌಕರಿ ಗಿಟ್ಟಿಸಿ ಐದಂಕಿಯ ಸಂಬಳ ಪಡೆಯುವುದಕ್ಕಲ್ಲ
ಅವರು ಕಲಿತ ಡಿಗ್ರಿಗಳು ಕೆಲ ಸಮಯ ಉಪಯೋಗಕ್ಕೆ ಬಾರದಿದ್ದರೂ,
ಸಾಮಾನ್ಯ ಜ್ಞಾನ ಜೀವನದಲ್ಲಿ ಖಂಡಿತಾ ಉಪಯೋಗಕ್ಕೆ ಬಂದೇ ಬರುತ್ತದೆ.
ಆದ ಕಾರಣ, ನಮ್ಮ ಮಕ್ಕಳಿಗೆ ವಿದ್ಯೆಯ ಜೊತೆ ಸಾಮಾನ್ಯ ಜ್ಞಾನಾರ್ಜನೆಯನ್ನು ಹೆಚ್ಚಿಸೋಣ
ಸಮಾಜದಲ್ಲಿ ವಿವೇಕವಂತರಾಗಿ, ಸತ್ಪ್ರಜೆಯಾಗಿ, ನೆಮ್ಮದಿಯ ಜೀವನ ನಡೆಸುವಂತೆ ಮಾಡೋಣ.

ದುಡ್ಡಿನಿಂದ ಏನು ಬೇಕಾದರೂ ಕೊಂಡು ಕೊಳ್ಳಬಹುದು
ಏಂದು ಎಣಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು.
ದುಡ್ದಿನಿಂದ ಆಸ್ತಿ ಪಾಸ್ತಿ ಕೊಳ್ಳಬಹುದೇ ಹೊರತು ಮನ ಶಾಂತಿಯನ್ನಲ್ಲಾ
ಆತ್ಮ ಸಂತೃಪ್ತಿಯ ಮುಂದೆ ಕೋಟ್ಯಾಂತರ ರೂಪಾಯಿಯೂ ನಗಣ್ಯ.

ಇಂದಿನ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ವ್ಯವಹಾರ ಜ್ಞಾನವೇ ಇಲ್ಲದಂತಾಗಿ ಪ್ರತಿಯೊಂದಕ್ಕೂ ಪರಾವಲಂಭಿಗಳಾಗಿಯೇ ಇರುತ್ತಾರೆ. ಭಟ್ಟರ ಲೈಫು ಇಷ್ಟೇನ ಹಾಡಿನಲ್ಲಿ ಹೇಳಿದಂತೆ ಮನೆಯಲ್ಲಿ ಇಲಿ ಹೊಕ್ಕಿದರೆ ಅದನ್ನು ಹಿಡಿಯುವುದು ಹೇಗೆ ಎಂಬುದಕ್ಕೂ ಇಂಟರ್ನೆಟ್ ಹುಡುಕುವಂತಹ ಬೌಧ್ಧಿಕ ದೌರ್ಭಲ್ಯಕ್ಕೆ ಒಳಗಾಗಿರುವುದು ನೋಡಿದರೆ ನಿಜಕ್ಕೂ ನಮ್ಮ ಮಕ್ಕಳಿಗೆ ಈಗ ಹೇಳಿ ಕೊಡುವುದರಲ್ಲಿ ನಾವು ಎಡುವುತ್ತಿದ್ದೇವೆ ಎಂದನಿಸುತ್ತಿದೆಯಲ್ಲವೇ?

ಏನಂತೀರೀ?

ಆಸ್ತಿ

ಎಂಭತ್ತರ ದಶಕ. ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ  ತುಮಕೂರು ಬಳಿಯ ಬೋರೇಗೌಡರ ಕುಟುಂಬಕ್ಕೆ ನಿಜಕ್ಕೂ ಬಹಳ ಆಘಾತವಾಗಿತ್ತು. ಸತತವಾಗಿ ಎರಡು ಮೂರು ವರ್ಷಗಳು ಸರಿಯಾಗಿ ಮಳೆಯಾಗದೆ  ಅವರಿದ್ದ ಪ್ರದೇಶ ಬರಗಾಲಕ್ಕೆ ತುತ್ತಾಗಿತ್ತು.  ಹೊತ್ತು ಹೊತ್ತಿಗೆ ಎರಡು ತುತ್ತು ಊಟ ಮಾಡಲೂ ಕಷ್ಟ ಪಡುವ ಸ್ಥಿತಿ ಬಂದೊದಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಕೆಟ್ಟು ಪಟ್ಟಣ ಸೇರು ಎನ್ನುವಂತೆ ತಮ್ಮ ಸಂಬಂಧೀಕರು ಬೆಂಗಳೂರಿನಲ್ಲಿದ್ದ ಕಾರಣ, ಅಲ್ಲಿ ಏನಾದರೂ ಕೂಲೀ ನಾಲಿ ಮಾಡಿ ಸ್ವಲ್ಪ ಸಂಪಾದಿಸಿಕೊಂಡು ಜೀವನ ಸಾಗಿಸುತ್ತಾ ಪರಿಸ್ಥಿತಿ ಸರಿಹೋದ ಮೇಲೆ ಪುನಃ ಊರಿಗೆ ಬಂದು ಬೇಸಾಯ ಮುಂದುವರಿಸಬಹುದು ಎಂದು ನಿರ್ಧರಿಸಿ ರೈಲನ್ನು ಹತ್ತಿ ಬೆಂಗಳೂರಿನ ಮಲ್ಲೇಶ್ವರದ ರೈಲ್ವೇ ಸ್ಟೇಷನ್ನಿನ ಪಕ್ಕದಲ್ಲೇ ಇದ್ದ ತನ್ನ ಸಂಬಂಧೀಕರ ಮನೆಗೆ ಬಂದರು ಬೋರೇಗೌಡರು. ಆವರ ಸಂಬಂಧೀಕರೇನೂ ಅಷ್ಟೇನು ಹೆಚ್ಚಿನ ಸ್ಥಿತಿವಂತರಾಗಿರಲಿಲ್ಲ, ಮನೆಯ ಯಜಮಾನ ಅಂದಿನ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿ ಇದ್ದ ಕಿರ್ಲೋಸ್ಕರ್ ಕಂಪನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರು ಅವರ ಮನೆಯಲ್ಲಾಗಲೇ ಐದಾರು ಜನರಿದ್ದರು.  ಅವರ ಜೊತೆ ಬೋರೇಗೌಡನೂ ಒಬ್ಬನಾದ.    ಮಿಡ್ಲ್ ಸ್ಕೂಲ್ ವರೆಗೆ ಮಾತ್ರವೇ ಓದಿದ್ದರಿಂದ ಹೆಲ್ಪರ್ ಕೆಲಸ ಸಿಗುವ ವರೆಗೂ  ಅಲ್ಲಿಲ್ಲಿ ಕೂಲಿ ಕೆಲಸ ಮಾಡುತ್ತಾ ಕೊನೆಗೆ  ಅಲ್ಲೇ ರಾಮಣ್ಣ  ಎಂಬುವರು ನಡೆಸುತ್ತಿದ್ದ ಹಾಲಿನ ಡೈರಿಯಲ್ಲಿ  ಹಾಲು ಕರೆಯುವ ಕೆಲಸ ಮಾಡುವ ಕಾಯಕ್ಕೆ ಖಾಯಂ ಆಗಿ ಸೇರಿಕೊಂಡ. ಬೆಳಿಗ್ಗೆ ಹೊತ್ತಿಗೆ ಮುಂಚೆ ಮತ್ತು ಸಂಜೆ ಸೂರ್ಯಾಸ್ತವಾಗುವ ಮುಂಚೆ ಎರಡು ಬಾರಿ ಹಾಲನ್ನು ಕರೆಯುತ್ತಾ ಉಳಿದ ಸಮಯದಲ್ಲಿ ಅಲ್ಲಿಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಕೊಂಡಿದ್ದ ಬೋರೇಗೌಡನಿಗೆ ಅದೊಂದು ದಿನ ಹಾಲಿನ ಡೈರಿ ರಾಮಣ್ಣನೊಂದಿಗೆ ಸಣ್ಣ ವೈಮನಸ್ಯವಾಯಿತು. ಸರಿ ಎಷ್ಟು ದಿನ ನಾನೂ ಇನ್ನೊಬ್ಬರ ಕೈಕೆಳಗೆ ಕೆಲಸಮಾಡುವುದು ಎಂದು ನಿರ್ಧರಿಸಿ  ಊರಿಗೆ ಹೋಗಿ ತಮ್ಮ ಬಳಿ ಇದ್ದ  ದೇಸೀ ಹಸು ಮತ್ತು ಕರು ಜೊತೆಗೆ ಆತನ ಮಡದಿ ಮತ್ತು ತಾಯಿಯನ್ನು ಕರೆದುಕೊಂಡು ಬಂದು ಅಲ್ಲಿಯೇ ತಮ್ಮ  ಸಂಬಧೀಕರ ಮನೆಯ ಬಳಿಯೇ ಇದ್ದ ಸಣ್ಣ  ಶೀಟ್ ಮನೆಯೊಂದನ್ನು ಬಾಡಿಗೆ ಪಡೆದು  ಹಾಲಿನ ಡೈರಿ ರಾಮಣ್ಣನಿಗೆ ಸಡ್ಡು ಹೊಡೆಯಲು ನಿರ್ಧರಿಸಿದ.

ಬರದಿಂದ ಬೆಂಡಾಗಿದ್ದ ಊರಿನಲ್ಲಿ ಮೇವು ಸಿಗದೇ ಬಾಡಿ ಹೋಗಿದ್ದ ಹಸುವನ್ನು ಪಕ್ಕದ ಮಿಲ್ಕ್ ಕಾಲೋನಿ ಮತ್ತು ಅದರ ಪಕ್ಕದಲ್ಲೇ ಇದ್ದ ಕೆರೆಯ ಅಂಗಳದಲ್ಲಿ ಹುಲುಸಾಗಿ ಬೆಳೆದ್ದಿದ್ದ ಹುಲ್ಲುಗಾವಲಿನಲ್ಲಿ ಪ್ರತಿದಿನ ಮೇಯಿಸಿದ ತೊಡಗಿದ.  ಒಳ್ಳೆಯ ಆಹಾರ ಸಿಕ್ಕ ಮೂರ್ನಾಲ್ಕು  ವಾರಗಳಲ್ಲಿಯೇ ಹಸು ದಷ್ಟ ಪುಷ್ಟವಾಗ ತೊಡಗಿತು. ಹಾಲಿನ ಡೈರಿಗೆ ಬರುತ್ತಿದ್ದ ನಾಲ್ಕಾರು ಜನರು ಪರಿಚಯಸ್ಥರ ಮನೆಗೆ ಹೋಗಿ ನಿಮ್ಮ ಮನೆಯ ಮಂದೆಯೇ ಕರೆದ ಗಟ್ಟಿ ಹಾಲನ್ನು ತೆಗೆದುಕೊಳ್ಳಿ ಎಂದು ಪುಸಲಾಯಿಸಿ ಅವರಿಗೆ ಒಳ್ಳೆಯ ಕರೆದ ಹಾಲನ್ನೇ ಮಾರ ತೊಡಗಿದ. ಇದರ ಮಧ್ಯದಲ್ಲಿಯೇ ಬೋರೆಗೌಡರ ಪತ್ನಿ ಅಕ್ಕ ಪಕ್ಕದ ನಾಲ್ಕಾರು ಮನೆಗಳನ್ನು ಪರಿಚಯ ಮಾಡಿಕೊಂಡು ಅವರಿವರ ಮನೆಯ ಕಸೆ ಮುಸುರೆ ತಿಕ್ಕಿಕೊಂಡು ಅವರ ಮನೆಗಳ ಮುಂದೆ ಕಲಗಚ್ಚಿನ ಮಡಕೆಯೊಂದನ್ನು ಇಟ್ಟು ಪ್ರತಿದಿನ ಅವರ ಮನೆಯಲ್ಲಿನ ಅನ್ನ ಬಸಿದ ಗಂಜಿ,ಆಳುದುಳಿದಿದ್ದ ತಂಗಳು ಆಹಾರ ಮತ್ತು ತರಕಾರಿ ಸಿಪ್ಪೆಗಳನ್ನು ಅದರಲ್ಲಿ ಹಾಕಲು ಹೇಳಿ ನಿಗಧಿತ ಸಮಯದಲ್ಲಿ ಅದನ್ನು ಸಂಗ್ರಹಿಸಿ ಅದನ್ನು  ತಮ್ಮ ಹಸುಕರುಗಳಿಗೆ ನೀಡತೊಡಗಿದ್ದಳು.  ಮಗ ಮತ್ತು ಸೊಸೆ ಕಷ್ಟ ಪಡುತ್ತಿದ್ದರೆ ಇನ್ನು ತಾಯಿ ತಾನೆ ಅದೆಷ್ಟು ದಿನ ತಾನೇ ನೋಡಿಕೊಂಡು ಸುಮ್ಮನಿದ್ದಾಳೂ. ಆಕೆಯೂ ಕೂಡಾ, ತನ್ನ ಹಸುವಿನ ಸಗಣಿಯೊಂದಿಗೆ  ಮೇಯಲು ಬರುತ್ತಿದ್ದ ಉಳಿದ ಹಸುಗಳ ಸಗಣಿಯನ್ನು ಜತನದಿಂದ ಸಂಗ್ರಹಿಸಿ, ಮನೆಯ ಪಕ್ಕದಲ್ಲಿಯೇ ಇದ್ದ ರೈಲ್ವೇ ಸ್ಟೇಷನ್ನಿನ ಕಾಂಪೌಂಡ್ ಗೋಡೆಗೆ ಬೆರಣಿ ತಟ್ಟಿ ಅದು ಒಣಗಿದ ನಂತರ ಅದನ್ನು ಜೋಪಾನವಾಗಿ ಸಂಗ್ರಹಿಸಿ ವಾರಕ್ಕೊಮ್ಮೆ ಅಲ್ಲಿಯೇ ಇದ್ದ ಸೌದೇ ಮಂಡಿಗೆ ಅಲ್ಪ ಸ್ವಲ್ಪ ಸಂಪಾದನೆ ಮಾಡುತ್ತಾ ತನ್ನ ಮಗನ ಕಷ್ಟದಲ್ಲಿ ಅಳಿಲು ಸೇವೆಯಂತೆ ದುಡಿಯತೊಡಗಿದಳು. ಒಟ್ಟಿನಲ್ಲಿ ಒಂದು ಹಸುವಿನಂದಲೇ ಇಡೀ ಮನೆಯ ಮಂದಿಯೆಲ್ಲಾ ತೃಪ್ತಿಯಾಗಿ ಕುಳಿತು ತಿನ್ನುವಷ್ಟರ ಮಟ್ಟಿಗೆ ಸಂಪಾದನೆಯಾಗಿದ್ದಲ್ಲದೆ, ಅಲ್ಪ ಸ್ವಲ್ಪ ಹಣವನ್ನೂ ಉಳಿಸತೊಡಗಿದರು.

ಒಂದೆರದು ವರ್ಷ ಕಳೆಯುವಷ್ಟರಲ್ಲಿ  ಬೋರೇಗೌಡರ ಕುಟುಂಬ ಬೆಂಗಳೂರಿಗೆ ಒಗ್ಗಿಕೊಂಡಾಗಿತ್ತು. ಇನ್ನು  ಊರಿಗೆ ಹಿಂದಿರಿಗಿ ಹೋಗಲು ಮನಸ್ಸಾಗದೆ,  ಊರಿನಲ್ಲಿದ್ದಷ್ಟೂ ಜಮೀನನ್ನೂ ಮಾರಿ ಬಂದ ಹಣದಲ್ಲಿ ಅವನು ವಾಸವಾಗಿದ್ದ ಶೀಟ್ ಮನೆಯನ್ನೇ ಖರೀದಿಸಿ, ಉಳಿದಿದ್ದ ಹಣದಲ್ಲಿ  ಮತ್ತೊಂದು  ಸೀಮೇ ಹಸುವನ್ನು ಕೊಂಡುಕೊಂಡ. ಮನೆಯವರೆಲ್ಲರ ಪರಿಶ್ರಮದಿಂದ ನೋಡ ನೋಡುತ್ತಲೇ ಹಸುಗಳು ಒಂದರಿಂದ ಎರಡಾಗಿ, ಎರಡರಿಂದ ನಾಲ್ಕಾಗಿ, ನಾಲ್ಕಾರಿಂದ ಎಂಟಾಗಿ, ಹತ್ತು ಹದಿನೈದಾಗಿತ್ತು.  ಹಸುಗಳು ಹೆಚ್ಚಾಗುತ್ತಿದ್ದಂತೆಯೇ ಅವನ ಸಂಸಾರವೂ ಹೆಚ್ಚಾಗಿ ಸುಖಃ ದಾಂಪತ್ಯದ ಫಲವಾಗಿ  ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಾದವು. ನಾವಂತೂ ಓದಲಿಲ್ಲ ಆದರೆ ನಮ್ಮ ಮಕ್ಕಳು ಓದಿ ವಿದ್ಯಾವಂತರಾಗ ಬೇಕು ಎಂದು ನಿರ್ಧರಿಸಿ ಮನೆಯ ಸಮೀಪದಲ್ಲೇ ಇದ್ದ ಆಂಗ್ಲ ಮಾಧ್ಯಮದ ಶಾಲೆಗೆ ಮಕ್ಕಳನ್ನು ಸೇರಿಸಿದರು ಬೋರೇಗೌಡರು.   ಅಲ್ಲಿಯವರೆಗೂ ಮನೆಯಲ್ಲಿ  ಯಮ್ಮೋ, ಯಪ್ಪಾ .. ಎಂಬ ಕನ್ನಡ ಕಲರವವಿದ್ದ ಮನೆ, ನಿಧಾನವಾಗಿ ಮಮ್ಮಿ, ದ್ಯಾಡಿ  ಸಂಸ್ಕೃತಿಗೆ ಒಗ್ಗಿಹೋಗ ತೊಡಗಿತು. ಮಕ್ಕಳು ಮಮ್ಮೀ ಡ್ಯಾಡಿ ಎಂದು ಕರೆಯುತ್ತಿದ್ದರೆ, ಬೋರೇ ಗೌಡರಿಗೆ ಸ್ವರ್ಗಕ್ಕೆ  ಮೂರೇ ಗೇಣು.

ಅತ್ತ ಹಸುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಬೇಕಾಗುವ  ಹುಲ್ಲು ಹಿಂಡಿ ಬೂಸಾ ಎಲ್ಲವನ್ನೂ ಯಶವಂತರಪುರದಿಂದ ಹೆಚ್ಚಿನ ಬೆಲೆಗೆ ತರಬೇಕಾಗುತ್ತಿತ್ತು. ಹೇಗೋ ನಮ್ಮ ಬಳಿಯೇ ಹತ್ತು ಹದಿನೈದು ಹಸುಗಳಿವೆ. ಅದಕ್ಕೆ  ನೇರವಾಗಿ ಮಾರುಕಟ್ಟೆಯಿಂದಲೇ ಒಟ್ಟಾಗಿ ತಂದು ಬಿಟ್ಟರೆ ಹಣವೂ ಉಳಿತಾಯವಾಗುತ್ತದೆ ಎಂದು ನಿರ್ಧರಿಸಿ ಮಾರುಕಟ್ಟೆಯಿಂದ ಸಗಟಾಗಿ ತಂದು ತನ್ನ ಮನೆಯಲ್ಲಿ ಹೇರಿಕೊಂಡ. ಹಾಗೇ ಸುಮ್ಮನೆ ಇಟ್ಟುಕೊಳ್ಳುವುದೇಕೆ ಎಂದು ನಿರ್ಧರಿಸಿ ಅಲ್ಲೇ  ಅಕ್ಕ ಪಕ್ಕದ ಹೈನುಗಾರರಿಗೂ ಅಲ್ಪ ಸ್ವಲ್ಪ ಲಾಭದೊಂದಿಗೆ ವ್ಯಾಪಾರ ಮಾಡತೊಡಗಿದ.  ಯಶವಂತಪುರದ ಬೆಲೆಗೆ ಮನೆಯ ಮುಂದೆಯೇ ಸಿಗುತ್ತಿದ್ದಾಗ ಎಲ್ಲರೂ ಬೋರೇಗೌಡರ ಅಂಗಡಿಯಲ್ಲಿಯೇ ಹಿಂದಿ ಬೂಸ ಮತ್ತು ಹೈನುಗಾರಿಕೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಳ್ಳಲು ಶುರುವಾದಾಗಾ ದೊಡ್ಡ ಅಂಗಡಿಯನ್ನೇ ಮಾಡಿ ಗಲ್ಲಾ ಪೆಟ್ಟಿಗೆ ಮೆಲೇ ತಾವೇ ಕೂರ ತೊಡಗಿದರು ಬೋರೇಗೌಡರು. ಪ್ರತಿದಿನ ಮಾರುಕಟ್ಟೆಯಿಂದ ಸಾಮಾನು ತರಲು ಯಾರದ್ದೋ ವಾಹನ ಬಾಡಿಗೆಗೆ ತರುವ ಬದಲು ತಮ್ಮದೇ ಒಂದು ಟೆಂಪೋ ಇದ್ದರೆ ಹೇಗೆ ಎಂದು ನಿರ್ಧರಿಸಿ ಆರಂಭದಲ್ಲಿ ಸೆಕೆಂಟ್ ಹ್ಯಾಂಡ್ ಟಂಪೋ ಖರೀದಿಸಿ ನಂತರ ಅದರ ರಿಪೇರಿಗಳಿಗೆ ನೀರಿನಂತೆ ಹಣ ಖರ್ವಾದಾಗ ಹೊಸದೊಂದು ಟೆಂಪೋವನ್ನು ಖರೀದಿಸಿಯೇ ಬಿಟ್ಟರು ಬೋರೇಗೌಡರು.

ನೋಡ ನೋಡುತ್ತಿದ್ದಂತಯೇ, ತನ್ನ ಕಠಿಣ ಪರಿಶ್ರಮ ಮತ್ತು ಬುದ್ದಿವಂತಿಕೆಯಿಂದ ಕೂಲೀ ಮಾಡಲು ಬೆಂಗಳೂರಿಗೆ ಬಂದ ಬೋರೇಗೌಡ ಕೆಲವೇ ವರ್ಷಗಳಲ್ಲಿ ಯಶಸ್ವೀ ವ್ಯವಹಾರಸ್ಥರಾಗಿ ಏಕವಚನದ ಬೋರೇಗೌಡ ಈಗ ಬಹುವಚನದ ಬೋರೆಗೌಡರಾಗಿ ಬಿಟ್ಟಿದ್ದರು. ಹೆಚ್ಚಿನ ಹಣ ಕೈ ಸೇರುತ್ತಿದ್ದಂತೆಯೇ, ಅದನ್ನು ಒಂದು ಚೂರೂ ಪೋಲು ಮಾಡದೇ, ಬೇರೇ ಬೇರೇ ವ್ಯವಹಾರಕ್ಕೋ ಇಲ್ಲವೇ ಇತರರರಿಗೆ ಕೈ ಸಾಲ ಕೊಡುತ್ತಲೋ ಹಣ ತನ್ನಿಂದ ತಾನೇ ಬೆಳೆದುಕೊಂಡು ಹೋಗುವಂತಹ ಮಾರ್ಗವನ್ನು ಕಂಡು ಕೊಂಡಿದ್ದರು ಬೋರೇಗೌಡರು. ಹೀಗಾಗಿ, ಹೈನುಗಾರಿಕೆ ಜೊತೆ ಜೊತೆಯಲ್ಲೇ ಬೂಸಾ ಅಂಗಡಿ, ಫೈನಾನ್ಸ್, ಆಟೋ ಕನ್ಸಲ್ಟಿಂಗ್ ಇದರ ಜೊತೆ ರಿಯಲ್  ಎಸ್ಟೇಟ್ ವ್ಯವಹಾರಕ್ಕೂ ಕೈಹಾಕಿ ಸುತ್ತಮುತ್ತಲ ಪ್ರದೇಶಗಳಲ್ಲಿ  ಹತ್ತಾರು ಸೈಟ್ ಮತ್ತು ಮನೆಗಳ ಒಡೆಯರಾದರು ಬೋರೇಗೌಡರು.  ಹಣ ಹೆಚ್ಚುತ್ತಿದ್ದಂತೆಯೇ ಸಮಾಜದಲ್ಲಿ  ಅವರಿಗೆ ಗೌರವವೂ ಹೆಚ್ಚಾಗಿ ಅವರ ಪ್ರದೇಶದಲ್ಲಿ ನಡೆಯುವ  ಅಣ್ಣಮ್ಮ, ಗಣೇಶೋತ್ಸವ, ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಪ್ರಮುಖ ಪೋಷಕರಾದರು ಬೋರೇಗೌಡರು.  ಆ ರೀತಿ ಉಪಕೃತರಾದ ಮೇಲೆ ಅದರ ಋಣ ಸಂದಾಯದ ಫಲವೋ ಎನ್ನುವಂತೆ  ಆ ಸಭೆ ಸಮಾರಂಭಗಳಲ್ಲಿ ಕೊಡುಗೈ ದಾನಿ, ಕಲಿಯುಗದ ಕರ್ಣ, ಬಡವರ ಬಂಧು ಇನ್ನು ಮುಂತಾದ ಬಿರುದು ಬಾವಲಿಗಳು   ಬೋರೇಗೌಡರ ಪಾಲಾದವು. ಅಲ್ಲಿಯವರಿಗೂ ಇವರು ಎಲ್ಲರಿಗೂ ಅಣ್ಣಾ ಅಕ್ಕಾ ಎನ್ನುತಿದ್ದರೆ, ಈಗ ಜನಾ ಇವರಿಗೇ ಅಣ್ಣಾ ಮತ್ತು  ಅವರಿವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಅವರ ಮನೆಯವರು ಎಲ್ಲರಿಗೂ ಮೆಚ್ಚಿನ ಅಕ್ಕನಾಗಿ ಹೋಗಿದ್ದರು.  ಹಣ ಎಷ್ಟೇ ಬಂದರೂ ಬೋರೇಗೌಡರ  ವ್ಯಕ್ತಿತ್ವದಲ್ಲಿ  ಸ್ವಲ್ಪವೂ ಬದಲಾಗಲೇ ಇಲ್ಲ.  ಬಡತನದ ಕಷ್ಟದ ಅರಿವಿತ್ತು. ಕಷ್ಟ ಪಟ್ಟು ದುಡಿದು ಪೈಸೆ ಪೈಸೆ ಉಳಿಸಿದ ದುಡ್ಡಿನ ಮಹತ್ವ ಗೊತ್ತಿತ್ತು. ಹಾಗಾಗಿ ಹಲವಾರು ರೀತಿಯಲ್ಲಿ ದುಡಿಯುತ್ತಲೇ ಪೈಸೆ ಪೈಸೆ ಜೋಡಿಸುತ್ತಾ ಕೋಟ್ಯಾದೀಶ್ವರನಾಗಿ ಬಿಟ್ಟರು ಬೊರೇಗೌಡರು.

ಆಷ್ಟ್ರರಲ್ಲಾಗಲೇ ಹೆಣ್ಣು ಮಕ್ಕಳು ಮದುವೆಯ  ವಯಸ್ಸಿಗೆ  ಬಂದಿದ್ದರಿಂದ ಒಳ್ಳೊಳ್ಳೆಯ ಸಂಬಂಧಗಳನ್ನು ನೋಡಿ ಅಳಿಯನಿಗೆ ಕಾರು,ಬಂಗಲೆಗಳನ್ನು ವರದಕ್ಷಿಣೆಯ ರೂಪದಲ್ಲಿ ಕೊಟ್ಟು ಅದ್ದೂರಿಯಿಂದಲೇ ಮದುವೆ ಮಾಡಿಕೊಟ್ಟರು. ಅದೇ ಸಮಯಕ್ಕೆ ದೊಡ್ಡ ಮಗನೂ ಪದವಿ ಮುಗಿಸಿ ಮುಂದೆ ಓದಲು ಮನಸ್ಸು ಮಾಡದೇ ಬೆಂಗಳೂರು ಐಶಾರಾಮಿ ನಗರವಾಗಿ ಪರಿವರ್ತಿತಗೊಂಡು ಹೈನುಗಾರಿಕೆ ಸಂಪೂರ್ಣ ನೆಲಕಚ್ಚಿದ್ದರಿಂದ  ಅಪ್ಪನ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಂಡು  ಲಕ್ಷಾಂತರ ರೂಪಾಯಿಗಳು ವ್ಯವಹಾರ ಮಾಡತೊಡಗಿದ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವಂತೆ ಅಣ್ಣಾ ವ್ಯವಹಾರಕ್ಕೆ ಇಳಿದು ಕೈಯಲ್ಲಿ  ಚೆನ್ನಾಗಿ ದುಡ್ಡು ಕಾಸು ಓಡಾಡುತ್ತಿದ್ದದ್ದನ್ನು ಗಮನಿಸಿದ ತಮ್ಮನಿಗೆ ಓದು ಎಲ್ಲಿ ಹತ್ತಬೇಕು? ಆತನೂ ಕೂಡ ತನ್ನ ಓದನ್ನು ಪಿಯೂಸಿಗೇ ನಿಲ್ಲಿಸಿ ತಾನೂ ಅಣ್ಣನ ಜೊತೆ  ವ್ಯವಹಾರದಲ್ಲಿ ಓಡಾಡತೊಡಾಗಿದ. ರಿಯಲ್ ಎಸ್ಟೇಟ್ ಕೂಡಾ ಹಾಗೆ ಹೀಗೇ ಓಲಾಡುತ್ತಿದ್ದಾಗ, ಸಿನಿಮಾದವರಿಗೆ ಫೈನಾನ್ಸ್, ಆಟೋ ಕನ್ಸೆಲ್ಟಿಂಗ್ ಮತ್ತು ಮೀಟರ್ ಬಡ್ಡಿಯ ದಂದೆಗೆ ಇಳಿದು ಬಿಟ್ಟರು ಅಣ್ಣ ತಮ್ಮಂದಿರು.

ಬೋರೇಗೌಡ ದಂಪತಿಗಳು ತಮ್ಮ ಗಂಡು ಮಕ್ಕಳಿಬ್ಬರಿಗೂ  ಒಳ್ಳೆಯ ಹೆಣ್ಣುಗಳನ್ನು ನೋಡಿ ಒಟ್ಟಿಗೇ ಒಂದೇ ಮಂಟಪದಲ್ಲಿ ಮದುವೆ ಮಾಡಿ  ತಮ್ಮ ಜವಾಬ್ದಾರಿಯನ್ನು  ಪೂರ್ಣಮಾಡಿಕೊಂಡರು.   ಸೊಸೆಯಂದಿರು  ಬಂದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಅದಾದನಂತರವೇ ಶುರುವಾಯಿತು ನೋಡಿ ಒಂದೊಂದೇ ವರಾತ.  ಬೋರೇಗೌಡರ ಕುಟುಂಬದವರು ಪೈಸೆ ಪೈಸೆಗೆ ಲೆಕ್ಕಾಹಾಕಿ ಜೀವನಾವಶ್ಯಕತೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ  ಖರ್ಚು ಮಾಡುತ್ತಾ ಅನಗತ್ಯ  ದುಂದು ವೆಚ್ಚ ಮಾಡದವರು. ಆದರೆ ಬಂದ ಸೊಸೆಯಂದಿರು ಆಧುನಿಕ ಯುಗದವರು. ಮಾಲ್, ಶಾಪಿಂಗ್ ಮಲ್ಟಿ  ಪ್ಲೆಕ್ಸ್ ಸಿನಿಮಾ, ಸ್ಟಾರ್ ಹೋಟೆಲ್, ಕಾಫೀ ಕ್ಲಬ್ ಸಂಸ್ಕೃತಿಯವರು. ಕ್ರಮೇಣ ತಮ್ಮ ಗಂಡಂದಿರನ್ನು  ತಮ್ಮದೇ ಸಂಸ್ಕೃತಿಗೆ ಪಳಗಿಸಿ ಬಿಟ್ಟು ಕೊಂಡು ಬಿಟ್ಟರು.  ಹೊತ್ತಲ್ಲದ ಹೊತ್ತಿಗೆ ಮನೆಯಿಂದ ಹೋಗುವುದು, ಬರುವುದು. ಸದಾ ಮನೆಯಿಂದ ಹೊರಗಡೆಯೇ ಊಟ ತಿಂಡಿ ಇದೆಲ್ಲವೂ ಬೋರೇಗೌಡ ದಂಪತಿಗಳಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಮದುವೆ ಹೊಸದರಲ್ಲಿ ಈಗ ಸರಿ ಹೋಗಬಹುದು ಆಗ ಸರಿ ಹೋಗ ಬಹುದು ಎಂದು ಕಾದಿದ್ದೇ ಹೊರತು ಮತ್ತೇನೂ ಬದಲಾಗಲೇ ಇಲ್ಲ ಕಷ್ಟ ಪಟ್ಟು ಸಾಕಿ ಸಲಹಿದ ಗಂಡು ಮಕ್ಕಳು ಹೆಂಡತಿಯರ ಗುಲಾಮರಾಗಿದ್ದನ್ನು ನೋಡಲು ಸಹಿಸಲಾಗದೇ ಮಕ್ಕಳಿಗೆ ಆಸ್ತಿಯನ್ನು  ಹಂಚಿ ಆವರಿಗೇ ಜವಾಬ್ದಾರಿಯನ್ನು ಕೊಟ್ಟರೆ ಸುಧಾರಿಸಬಹುದೆಂದು ನಿರ್ಧರಿಸಿದ ಬೋರೇಗೌಡರು, ತಮ್ಮ ವಕೀಲರನ್ನು ಕರೆಸಿ ಮಕ್ಕಳಿಗೆ ಆಸ್ತಿಯನ್ನು ಹಂಚುವ ಪ್ರಕ್ರಿಯೆ ಶುರುಮಾಡಿದರು. ಆದರೆ ಇದು ಬೋರೇಗೌಡರ ಮನೆಯವರಿಗೆ ಹಿಡಸಲಿಲ್ಲ. ನಾವು ಜೀವಂತ ಇರುವವರೆಗೂ ಆಸ್ತಿ ಹಂಚಬೇಡಿ. ನಾವು ಸತ್ತ ನಂತರವೇ ನಮ್ಮ ಆಸ್ತಿ ಮಕ್ಕಳ ಪಾಲಿಗೆ ಹೋಗುವಂತಾಗಲೀ ಎಂದು ಎಷ್ಟೇ ಪರಿ ಪರಿಯಾಗಿ ಕೇಳಿಕೊಂಡರೂ, ಗಂಡು  ಮಕ್ಕಳ ಮೇಲಿನ ಮಮಕಾರದಿಂದ, ಮಡದಿಯ ಮಾತನ್ನು ಧಿಕ್ಕರಿಸಿ, ಗಂಡು ಮಕ್ಕಳಿಗೆ ಆಸ್ತಿಯನ್ನು ಪಾಲು ಮಾಡಿಯೇ ಬಿಟ್ಟರು ಬೋರೇಗೌಡರು. ಚಿಕ್ಕ ಮಗ ಸ್ವಲ್ಪ ಕಡಿಮೆ ಓದಿದ್ದರಿಂದ ಮತ್ತು ವ್ಯವಹಾರದಲ್ಲಿ ಆಷ್ಟೇನೂ ಚುರುಕಾಗಿರದಿದ್ದ ಕಾರಣ ಅವನಿಗೆ ತುಸು ಹೆಚ್ಚಿನ ಪಾಲನ್ನು ನೀಡುತ್ತಿದ್ದೇನೆ ಎಂದು ಯೋಚಿಸಿದರು.  ಹೇಗೋ   ಒಡಹುಟ್ಟುದ ತಮ್ಮನೇ ತಾನೇ   ಎಂದು ದೊಡ್ಡ ಮಗ ಆರಂಭದಲ್ಲಿ ಯಾವ ಕ್ಯಾತೆ ತೆಗೆಯದಿದ್ದರೂ  ಹೆಂಡತಿಯ ಮಾತನ್ನು ಕೇಳಿಕೊಂಡು ಎರಡು ಮೂರು ದಿನಗಳಲ್ಲಿ  ಮನೆಯಲ್ಲಿ ರಂಪ ರಾಮಾಯಣ ಮಾಡಿಯೇ ಬಿಟ್ಟ. ಬೋರೇಗೌಡರು ವಿಧ ವಿಧವಾಗಿ ಅವನಿಗೆ ಸಮಜಾಯಿಷಿ ಹೇಳಿದರೂ ಮಾತಿನ ಭರದಲ್ಲಿ ತಂದೆಯನ್ನೇ ಬೋ.. ಮಗನೇ, ಸೂ.. ಮಗನೇ, ಆಸ್ತಿಯಲ್ಲಿ ಸಮಪಾಲನ್ನು ಮಾಡಲು ನಿನಗೇನಾಗಿತ್ತು ಧಾಡಿ? ಎಂದು ಹೇಳುತ್ತಾ ಪರಿಸ್ಥಿತಿ ಕೈಮೀರಿ ಅಪ್ಪನ ಮೇಲೆ ಕೈ ಮಾಡಿಯೇ ಬಿಟ್ಟ.  ಹೆತ್ತ ಮಗನೇ ಗಂಡನ ಮೇಲೇ ಆಸ್ತಿಗಾಗಿ ಈ ರೀತಿಯಾಗಿ ದಾಂಗುಡಿ ಮಾಡುತ್ತಾನೆ ಎಂಬುದನ್ನು  ನಿರೀಕ್ಷಸದಿದ್ದ ಬೋರೇಗೌಡರ ಮಡದಿ ಆ ಕೂಡಲೇ ಕುಸಿದು ಬಿಟ್ಟರು. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು  ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

brother.png

ಸುಮಾರು ವರ್ಷಗಳ ಕಾಲ ಕಷ್ಟ ಸುಖಃ ಎಲ್ಲವನ್ನೂ ಹಂಚಿಕೊಂಡಿದ್ದ ಹೆಂಡತಿಯ ಅಗಲಿಕೆಯಿಂದ  ಮೊದಲ ಬಾರಿಗೆ ಬೋರೇಗೌಡರು ಒಬ್ಬಂಟಿಗರಾಗಿ ಹೋದರು. ಹೆಂಡತಿಯ ಸಾವಿಗೆ ಮಕ್ಕಳೇ ಕಾರಣರಾದರಲ್ಲಾ ಎಂದು ಅವರೂ ಕೊರಗಿ ಕೊರಗೀ ಕೃಶರಾಗಿ ಹೋಗಿ ಖಾಯಿಲೆಗೆ ಬಿದ್ದರು. ಹೇಗೂ ನಿನಗೆ ಆಸ್ತಿಯಲ್ಲಿ ಹೆಚ್ಚಿನ ಪಾಲು ಸಿಕ್ಕಿದೆಯಲ್ಲಾ ನೀನೇ ಅಪ್ಪನನ್ನು ಆಸ್ಪತ್ರೆಗೆ ಸೇರಿಸು ಎಂದು ದೊಡ್ಡವ, ಯಾಕೇ? ನಿನಗೂ ಕೂಡಾ ಅವರು ತಂದೆಯಲ್ಲವೇ? ನೀನೇ ಏಕೆ  ಆಸ್ಪತ್ರೆಗೆ ಸೇರಿಸಬಾರದು ಎಂದು ಚಿಕ್ಕವ, ಹೀಗೆ ಅಪ್ಪನಿಗೆ ಶುಶ್ರೂಷೆಯನ್ನು ಮಾಡಿಸಲು ಕಿತ್ತಾಡ ತೊಡಗಿದರು.  ತಮ್ಮಂದಿರ ಈ ಕಿತ್ತಾಟ ನೋಡಲಾರದೇ ಹೆಣ್ಣು ಮಕ್ಕಳು ಅಪ್ಪನ ಋಣ  ಈ ರೀತಿಯಲ್ಲಾದರೂ ತೀರಿಸ ಬಹುದಲ್ಲಾ ಎಂದು  ಆಸ್ಪತ್ರೆಗೆ ಸೇರಿಸಿ ಸರಿಯಾದ ಚಿಕಿತ್ಸೆ ಕೊಡಿಸಿದರು. ದೈಹಿಕವಾಗಿ ಬೋರೇಗೌಡರು ಹುಷಾರಾದರೂ ಮಾನಸಿಕವಾಗಿ ಜರ್ಜರಿತರಾಗಿಯೇ ಹೋದರು. ಗಂಡು ಮಕ್ಕಳಿದ್ದರೂ ಹೆಣ್ಣು ಮಕ್ಕಳ ಮನೆಯಲ್ಲಿ ಕಡೆಯ ದಿನಗಳನ್ನು ಕಳೆಯಬೇಕಾಯಿತಲ್ಲಾ ಎಂದು ಕೊರಗುತ್ತಾಲೇ ಪ್ರಾಣ ಬಿಟ್ಟರು. ಸಾಯುವ ಸಮಯದಲ್ಲಿ ಗಂಡು ಮಕ್ಕಳು ನೋಡಿಕೊಳ್ಳಲಿಲ್ಲಾ ಎಂಬ ಕೆಟ್ಟ ಹೆಸರನ್ನು ನಮ್ಮ ಮೇಲೆ ಹೊರಿಸಿ ಹೋದರು ಎಂಬ ಕುಂಟು ನೆಪವೊಡ್ಡಿ ಗಂಡು ಮಕ್ಕಳಿಬ್ಬರೂ  ಅಪ್ಪನ ಅಂತಿಮ ಸಂಸ್ಕಾರಕ್ಕೂ ಬರಲಿಲ್ಲ. ಅಳಿಯಂದಿರೂ ಗಂಡು ಮಕ್ಕಳು ಇದ್ದಾಗಲೂ ನಾವೇಕೆ ಅಂತಿಮ ವಿಧಿವಿಧಾನಗಳನ್ನು ಮಾಡಬೇಕು ಎಂದರೂ ಹೆಂಡತಿಯರ ಮಾತನ್ನು  ಮೀರಲಾಗದೇ ಒಲ್ಲದ ಮನಸ್ಸಿನಿಂದಲೇ ಮಾವನವರನ್ನು ಮಣ್ಣು ಮಾಡಿದರು.  ಗಂಡು ಮಕ್ಕಳು ಹುಟ್ಟಿದಾಗ  ಅಬ್ಬಾ ಕುಟುಂಬಕ್ಕೆ ವಾರಸುದಾರ ಹುಟ್ಟಿದ. ಸಾಯುವ ಕಾಲದಲ್ಲಿ  ಚಿಂತಿಸುವ ಹಾಗಿಲ್ಲ  ತನ್ನ  ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಸ್ತಿಸಂಚಯನ ಮಾಡಿ ನಮಗೊಂದು ಮುಕ್ತಿ ಕರುಣಿಸುತ್ತಾನೆ ಎಂದು ಬಯಸುವವರೇ  ಬಹಳಷ್ಟು ಮಂದಿ ಇರುವಾಗ. ಕೇವಲ ಆಸ್ತಿಗಾಗಿ ಅಪ್ಪನ ಆಂತಿಮ ಸಂಸ್ಕಾರಕ್ಕೂ ಬಾರದೇ ಅಸ್ತಿ ಸಂಚಯನವನ್ನೂ ಮಾಡದೇ ಹೋದ ಇಂತಹ ಗಂಡು ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು?

dis1

ಅದಕ್ಕೇ  ಹಿರಿಯ ಸಾಹಿತಿಗಳಾದ ಶಿವರಾಮ ಕಾರಂತರು ಹೇಳಿದ್ದು. ದಯವಿಟ್ಟು ಮಕ್ಕಳಿಗೆ ಆಸ್ತಿ ಮಾಡಬೇಡಿ. ಅದರ ಬದಲು ಮಕ್ಕಳನ್ನೇ ಆಸ್ತಿ ಮಾಡಿ ಬಿಡಿ.  ಅದನ್ನು ಮುಂದುವರಿಸಿ  ಹೇಳಬೇಕೆಂದರೆ, ನಮ್ಮ ದೇಹದಲ್ಲಿ ಕಸುವಿರುವಾಗ ಕಷ್ಟ ಪಟ್ಟು ಬೆವರು ಸುರಿಸಿ ಸಂಪಾದನೆ ಮಾಡಿ ನಮಗೋಸ್ಕರ ಒಂದು ಚೂರು ಖರ್ಚು ಮಾಡದೇ ಮುಂದೆ ಮಕ್ಕಳಿಗಾಗುತ್ತದೇ ಎಂದು ಪೈಸೆ ಪೈಸೆ ಉಳಿತಾಯ ಮಾಡಿ ಅವರಿಗಾಗಿ ಆಸ್ತಿ ಮಾಡುವ ಬದಲು, ನಿಮ್ಮ ಸಂಪಾದನೆಯಲ್ಲಿಯೇ ನಮಗೋಸ್ಕರವಾಗಿಯೇ ಹಣವನ್ನು ವಿನಿಯೋಗಿಸಿಕೊಂಡು ಮಕ್ಕಳಿಗೆ  ಒಳ್ಳೆಯ ವಿದ್ಯಾ ಬುದ್ಧಿ ಕೊಟ್ಟು ಅವರೇ ತಮ್ಮ ಸ್ವಸಾಮರ್ಥ್ಯದಲ್ಲಿ ಆಸ್ತಿ ಸಂಪಾದನೆ ಮಾಡುವಂತೆ ಮಾಡಿದರೆ ಚೆನ್ನ ಅಲ್ಲವೇ?  ಹಾಗೂ ಹಣ ಮತ್ತು ಆಸ್ತಿ ಮಾಡಿಟ್ಟಿದ್ದರೆ ನಮ್ಮ  ಆಗಲಿಕೆಯ ನಂತರ ನಮ್ಮನ್ನು ಯಾರು ಚೆನ್ನಾಗಿ ಕಡೆ ತನಕ ನೋಡಿಕೊಳ್ಳುತ್ತಾರೋ ಅವರಿಗೇ   ಅದು  ಸಂದಾಯವಾಗುತ್ತದೆ ಎಂಬ ವಿಲ್ ಮಾಡಿಸಿಕೊಳ್ಳಿ ಹಾಗೆ ಮಾಡಿದರಾಗಲೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳ ಬಹುದೇನೋ?

ಏನಂತೀರೀ?

ಕರ್ಮ

ನಮ್ಮ ಸನಾತನ ಧರ್ಮದಲ್ಲಿ ಕರ್ಮದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೇವೆ. ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ ಎಂಬ ನಂಬಿಕೆ ಇದೆ. ಆದರೆ ಈ ಕಲಿಗಾಲದಲ್ಲಿ ಅದು ಸ್ವಲ್ಪ ಬದಲಾಗಿ, ನಾವು ಮಾಡಿದ ಕರ್ಮವನ್ನು ಇಂದೇ ಡ್ರಾ, ಇಂದೇ ಬಹುಮಾನ ಎನ್ನುವ ಹಾಗೆ ಇಲ್ಲೇ ಅನುಭವಿಸುವ ಹೃದಯವಿದ್ರಾವಕ ಕಥೆಯೊಂದನ್ನು ಹೇಳಲು ಹೊರಟಿದ್ದೇನೆ.

ಧಾರವಾಡದ ಪ್ರಾಣೇಶ್ ಕುಲಕರ್ಣಿಯವರು ಇದ್ದಕ್ಕಿದ್ದಂತೆಯೇ ನಡು ರಾತ್ರಿಯಲ್ಲಿ ತಮ್ಮ ಪ್ರಾಣ ಸ್ನೇಹಿತ ಗುರುರಾಜ ದೇಶಪಾಂಡೆಯವರಿಗೆ ಕರೆಮಾಡಿದರು. ಇಬ್ಬರೂ ಒಳ್ಳೆಯ ಕೆಲಸದಲ್ಲಿದ್ದು ನಿವೃತ್ತರಾದವರೇ, ಹಾಗಾಗಿ ಗಾಡ ನಿದ್ದೆಯಲ್ಲಿದ್ದ ದೇಶಪಾಂಡೆಯವರು ಕರೆ ಬಂದ ಕೆಲ ಸಮಯದ ನಂತರವೇ ಕರೆ ಸ್ವೀಕರಿಸಲು ಮುಂದಾದರು. ಆದರೆ ಅತ್ತ ಕಡೆ ಬಹಳ ಆತಂಕದಲ್ಲಿದ್ದ ಕುಲಕರ್ಣಿಯವರು, ಛೇ!! ಇದೇನಿದು ಗೆಳೆಯ, ಇಷ್ಟು ಹೊತ್ತು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲವಲ್ಲಾ? ಆವನು ಆರಾಮಾಗಿದ್ದಾನೋ ಇಲ್ಲೊ? ಅಥವಾ.. ಎಂದು ನೂರಾರು ಆಲೋಚನೆ ಮಾಡುವಷ್ಟರಲ್ಲಿ ದೇಶಪಾಂಡೆಯವರೇ ಕರೆ ಮಾಡಿ, ದೋಸ್ತಾ, ಏನ್ ಪಾ!! ಸಮಾಚಾರ? ಇಷ್ಟೊಂದು ರಾತ್ರಿಯಾಗ ಕರೆ ಮಾಡಿದ್ದೀ? ಎಲ್ಲಾ ಆರಾಮ್ ಇದ್ದೀರಿ? ಎಂದು ಕೇಳಿದ ಕೂಡಲೇ, ಅದುವರೆಗೂ ದುಃಖವನ್ನು ತಡೆ ಹಿಡಿದಿದ್ದ ಕುಲಕರ್ಣಿಯವರು ಒಮ್ಮಿಂದೊಮ್ಮೆಲೆ, ಜೋರಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಏ… ಏ.. ಸಮಾಧಾನ ಮಾಡ್ಕೋ.. ನೀ ಹೀಗ್ ಅಳ್ತಾ ಕುಂದ್ರೆ ಏನಾತ್ ಎಂದು ನನಗೆ ತಿಳಿವಲ್ದು? ಸ್ವಲ್ಪ ಅಳು ನಿಂದ್ರಿಸಿ ಏನಾತು ವದರು ಎಂದು ಪ್ರೀತಿಯಿಂದಲೇ ಗೆಳೆಯನನ್ನು ಗದುರಿಸಿದರು. ದೇಶಪಾಂಡೆಯವರ ಜೋರು ಧನಿಗೆ ಸ್ವಲ್ಪ ತಣ್ಣಗಾದ ಕುಲಕರ್ಣಿಯವರು, ನನ್ನಾಕಿ ಲಕ್ಶ್ಮೀಗೆ ನಾಲ್ಕೈದು ದಿನಗಳಿಂದ ಆರಾಮಿಲ್ಲ. ಈಗ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಎದೆ ನೋವು ಅಂತಿದ್ದಾಳೆ ಏನು ಮಾಡ್ಲಿಕ್ಕೂ ತಿಳಿವಲ್ದು ಅದಕ್ಕೇ ನಿನಗೆ ಕರಿ ಮಾಡ್ದೇ ಅಂದ್ರು. ಅದನ್ನು ಕೇಳಿಸಿಕೊಂಡ ದೇಶಪಾಂಡೆಯವರು, ಸರಿ ಸರಿ ಸ್ವಲ್ಪ ಬಿಸಿ ನೀರು ಕುಡಿಸ್ತಾ ಇರು. ನಾನು ನನ್ನ ಮಗನ್ ಜೋಡಿ ಕಾರ್ ತಗೊಂಡ್ ಬರ್ತೀನಿ. ದವಾಖಾನೆಗೆ ಕರ್ಕೊಂಡು ಹೋಗೋಣು ಎಂದು ಹೇಳಿ, ಫೋನ್ ಕೆಳಗಿಟ್ಟು ಆತುರಾತುರದಲ್ಲಿ ತಮ್ಮ ಮಗ ಹರಿಯ ಜೊತೆ ಕುಲಕರ್ಣಿಯವರ ಮನೆಗೆ ಹೋಗಿ ಅವರ ಮನೆಯವರನ್ನು ಹತ್ತಿರದಲ್ಲೇ ಇದ್ದ ನರ್ಸಿಂಗ್ ಹೋಮ್ ಒಂದಕ್ಕೆ ಸೇರಿಸಿದರು. ಅಲ್ಲಿಯ ವೈದ್ಯರು ಆ ಕೂಡಲೇ ಪ್ರಥಮ ಚಿಕಿತ್ಸೆಯ ಜೊತೆ ಜೊತೆಯಲ್ಲಿಯೇ ECG ಮಾಡಿ ಸ್ವಲ್ಪ ಹೃದಯ ಸಂಬಂಧದ ತೊಂದರೆಯಿದೆ. ನಾಳೆ ಬೆಳಿಗ್ಗೆ ದೊಡ್ಡ ಡಾಕ್ಟರ್ ಆವರು ಬಂದು ಮುಂದಿನ ಚಿಕಿತ್ಸೆಗಳನ್ನು ನೋಡುತ್ತಾರೆ. ಅಲ್ಲಿಯವರೆಗೂ ಆವರಿಗೆ ನೋವಾಗದಂತೆ ನಾವು ನೋಡಿಕೊಳ್ತೇವೆ ಎಂದು ತಿಳಿಸಿದರು. ಮಾರನೇಯ ದಿನ ಬಂದ ಸರ್ಜನ್ ಅವರನ್ನು ಕೂಲಂಕುಶವಾಗಿ ಪರೀಕ್ಷಿಸಿ, ಸರಿಯಾದ ಸಮಯಕ್ಕೆ ಕರೆದು ತಂದಿದ್ದೀರಿ. ಈ ಕೂಡಲೇ ಒಂದು ಶಸ್ತ್ರಚಿಕಿತ್ಸೆ ಮಾಡಿದರೆ, ಒಂದೆರಡು ತಿಂಗಳೊಳಗೇ ಸರಿ ಹೋಗುತ್ತಾರೆ ಎಂದು ತಿಳಿಸಿ, ಶಸ್ತ್ರ ಚಿಕಿತ್ಸೆಗೆ ಸರಿ ಸುಮಾರು 8-10 ಲಕ್ಷಗಳು ಆಗಬಹುದು. ಅದನ್ನು ಎಷ್ಟು ಬೇಗ ಹೊಂದಿಸುತ್ತೀರೋ ಅಷ್ಟು ಬೇಗ ನಾವು ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದರು. ನೀವು ದುಡ್ಡಿನ ಬಗ್ಗೆ ಯಾವುದೇ ಯೋಚನೆ ಮಾಡದಿರಿ. ನಾವಿಗಲೇ ವಿಮೆ ಮಾಡಿಸಿದ್ದೇವೆ ಮತ್ತು ಅದಕ್ಕಿಂತಲೂ ಹೆಚ್ಚಿನ ಖರ್ಚಾದಲ್ಲಿ ಭರಿಸಲು ಸಿದ್ದವಿದ್ದೇವೆ. ಹಾಗಾಗಿ ತಡಮಾಡದೇ ಶಸ್ತ್ರಚಿಕಿತ್ಸೆಯನ್ನು ಮಾಡಿ ನನ್ನ ಮಡದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿ ಎಂದು ಕೇಳಿಕೊಂಡರು ಕುಲಕರ್ಣಿಯವರು.

ದೇವರ ದಯೆ ಮತ್ತು ವೈದ್ಯರ ಕೈಗುಣದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಕುಲಕರ್ಣಿಯವರ ಪತ್ನಿ ಲಕ್ಷ್ಮಿಯವರು ನಿಧಾನವಾಗಿ ಹುಶಾರಾಗುವಷ್ಟರಲ್ಲಿ, ಕುಲಕರ್ಣಿಯವರು ವಿದೇಶದಲ್ಲಿ ಇದ್ದ ತಮ್ಮ ಇಬ್ಬರು ಗಂಡು ಮಕ್ಕಳಿಗೂ ಕರೆ ಮಾಡಿ ಅವರ ತಾಯಿಯವರು ಗಂಭೀರ ಸ್ಥಿತಿಯಲ್ಲಿರುವುದನ್ನು ತಿಳಿಸಿ ಮಕ್ಕಳು ಮತ್ತು ಮೊಮ್ಮಕ್ಕಳನ್ನು ನೋಡಿಯಾದರೂ ಅವರ ಮಡದಿ ಆದಷ್ಟು ಬೇಗನೆ ಚೇತರಿಸಿಕೊಳ್ಳಬಹುದೇನೋ ಎಂದೆಣಿಸಿ, ಆದಷ್ಘು ಬೇಗನೆ ಅವರನ್ನು ನೋಡಲಿಕ್ಕೆ ಬರಲು ಸೂಚಿಸಿದ್ದರು. ಮೊದ ಮೊದಲು ಕೆಲಸ ತುಂಬಾ ಇದೆ. ಈಗ ಬರಲು ಸಾದ್ಯವಿಲ್ಲ. ದುಡ್ಡು ಎಷ್ಟೇ ಖರ್ಚಾದರೂ ಪರವಾಗಿಲ್ಲಾ. ದೊಡ್ಡ ಆಸ್ಪತ್ರೆಗೆ ಸೇರಿಸಿ ಅವರನ್ನು ಗುಣಪಡಿಸಿ. ಮನೆಗೆ ಬಂದ ಮೇಲೆ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಅವರನ್ನು ನೋಡಿ ಕೊಳ್ಳಲು ದಾದಿಯರ ವ್ಯವಸ್ಥೆ ಮಾಡೋಣ. ಆಡಿಗೆಯವರನ್ನು ನೇಮಿಸೋಣ ಎಂದೆಲ್ಲಾ ಹೇಳಿದ ಮಕ್ಕಳು, ತಮ್ಮ ತಂದೆಯವರ ಬಾರಿ, ಬಾರಿ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದಲೇ ತಾಯಿಯನ್ನು ನೋಡಲು ಸಕುಂಟ ಸಮೇತರಾಗಿ ಬಂದರು.

ತಂದೆ ಮಕ್ಕಳ ಮಾತುಕತೆಯ ಅರಿವಿಲ್ಲದಿದ್ದ ಕುಲಕರ್ಣಿಯವರ ಮಡದಿ, ಒಮ್ಮಿಂದೊಮ್ಮೆಲೆ ಇಬ್ಬರೂ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ನೋಡಿ ಬಹಳ ಸಂತೋಷಗೊಂಡರು. ಅವರ ಆಗಮನದ ಪರಿಣಾಮವಾಗಿಯೋ ಏನೋ? ವೈದ್ಯರು ಹೇಳಿದ್ದಕಿಂತ ಮೊದಲೇ ಸಂಪೂರ್ಣ ಗುಣಮುಖರಾಗಿ ಮನೆಯವರೆಲ್ಲರೂ ಕೂಡಿ ಅವರ ಮನೆದೇವರು ಮತ್ತು ಸುತ್ತ ಮುತ್ತಲಿನ ತೀರ್ಥಕ್ಷೇತ್ರಗಳಿಗೂ ಹೋಗಿ ಬಂದರು. ಅತ್ಯಂತ ಆಸೆ ಪಟ್ಟು ವಿಶಾಲವಾಗಿ ಕಟ್ಟಿದ್ದ ಮನೆಯಲ್ಲಿ ಅನೇಕ ವರ್ಷಗಳಿಂದಲೂ ಕೇವಲ ಅಜ್ಜಿ ಮತ್ತು ತಾತಂದಿರೇ ಇದ್ದದ್ದು ಈಗ ಎಲ್ಲರೂ ಬಂದ ಪರಿಣಾಮ ಮನೆಯಲ್ಲಿನ ಕಲರವ ಹೇಳ ತೀರದು. ಇನ್ನೇನು ಮಕ್ಕಳು ಹೊರಡಲು ಎರಡು ದಿನಗಳು ಇವೇ ಎಂದಾಗ ಕುಲಕರ್ಣಿಯವರು ತಮ್ಮ ಆಪ್ತಮಿತ್ರ ದೇಶಪಾಂಡೆಯವರ ಸಮ್ಮುಖದಲ್ಲಿ ಇಬ್ಬರೂ ಮಕ್ಕಳನ್ನು ಮನೆಯ ಮೇಲಿನ ಹಜಾರಕ್ಕೆ ಕರೆದೊಯ್ದು ಇಬ್ಬರೂ ಮಕ್ಕಳನ್ನು ತಬ್ಬಿಕೊಂಡು ಗಳಗಳನೆ ಅಳ ತೊಡಗಿದರು. ಮಕ್ಕಳ ಮುಂದೆ ಈ ರೀತಿಯಾಗಿ ಎಂದು ಅಳದ ತಂದೆಯವರ ಈ ರೀತಿಯ ವರ್ತನೆ ಮಕ್ಕಳಲ್ಲಿ ಆತಂಕ ತರಿಸಿತಾದರೂ ಅದನ್ನು ಸಾವರಿಸಿಕೊಂಡು ಅವರ ತಂದೆಯನ್ನು ಸಂತೈಯಿಸಿ, ಸುಮ್ಮನೆ ಅಳಬೇಡಿ. ಏನೋ ಮಾತನಾಡಬೇಕು ಎಂದು ಹೇಳಿದ್ದಿರಿ. ಏನು ಸಮಾಚಾರ? ಯಾರಾದರೂ ಏನಾದರೂ ಹೇಳಿದರೇ? ನಮ್ಮಿಂದೇನಾದರೂ ಆರ್ಥಿಕ ಸಹಾಯ ಬೇಕೇ? ಅಥವಾ ಇನ್ನಾವುದಾರೂ ಸೌಲಭ್ಯಗಳು ಬೇಕೇ? ಎಂದು ಒಂದೇ ಉಸಿರಿನಲ್ಲಿ ತಂದೆಯವರನ್ನು ಕೇಳಿದರು. ಅಲ್ಲಿಯವರೆಗೂ ಸುಮ್ಮನೆ ತಲೆ ತಗ್ಗಿಸಿ ಮೌನವಾಗಿ ಅಳುತ್ತಿದ್ದ ಕುಲಕರ್ಣಿಯವರು ಒಮ್ಮೆಲೆ ಛಗ್ಗನೆ, ತಮ್ಮ ತಲೆ ಎತ್ತಿ ಮಕ್ಕಳನ್ನು ದುರು ದುರುಗುಟ್ಟಿ ನೋಡಿದರು. ಅಪ್ಪನನ್ನು ಹಾಗೆಂದೂ ನೋಡಿರದ ಮಕ್ಕಳಿಬ್ಬರೂ ತಬ್ಬಿಬ್ಬಾದರು.

ನಮಗೆ ಯಾರೂ ಏನೂ ಹೇಳಲಿಲ್ಲ. ನಮಗೆ ಇನ್ನಾವ ಸೌಲಭ್ಯಗಳೂ ಬೇಡ. ನಿಮ್ಮ ಆರ್ಥಿಕ ಸಹಾಯವಂತೂ ಮೊದಲೇ ಬೇಡ. ದಯವಿಟ್ಟು ನೀವು ಹೋಗೋ ಮುಂದೆ ಎರಡು ತೊಟ್ಟು ವಿಷವನ್ನು ನಿಮ್ಮ ಕೈಯ್ಯಾರೆ ನಮ್ಮಿಬ್ಬರಿಗೆ ಕೊಟ್ಟು ಬಿಡಿ. ನಾವಿಬ್ಬರೂ ಒಟ್ಟಿಗೆ ನೆಮ್ಮದಿಯಿಂದ ಸಾಯುತ್ತೇವೆ. ಸರಿ ಸುಮಾರು 50 ವರ್ಷಗಳಿಗೂ ಅಧಿಕ ವರ್ಷಗಳಿಂದ ಒಟ್ಟಿಗೆ ಬಾಳುತ್ತಿದ್ದೇವೆ. ನನ್ನ ಬಿಟ್ಟು ನಿಮ್ಮ ಅಮ್ಮ , ನಿಮ್ಮ ಅಮ್ಮನನ್ನು ಬಿಟ್ಟು ನಾನು. ಹೀಗೆ ಒಬ್ಬರೊನ್ನೊಬ್ಬರು ಅಗಲಿ ಇರಲಾವು. ನಮ್ಮ ಕಾಲಾನಂತರ ನಮ್ಮ ಅಂತ್ಯಕ್ರಿಯೆಯನ್ನು ಮಾತ್ರಾ ಮಾಡಿದರೆ ಸಾಕು. ಬೇರಾವ ವಿಧಿ ವಿಧಾನಗಳನ್ನೂ ಮಾಡದಿದ್ದರೂ ಪರವಾಗಿಲ್ಲ. ಎಂದು ಹೇಳಿದರು. ಅಪ್ಪಾ! ಇದೇನಿದು ಈ ರೀತಿಯಾಗಿ ಅಪಶಕುನದ ಮಾತಗಳನ್ನು ಆಡುತ್ತೀರಿ? ನಾವೇನು ನಿಮಗೆ ಕಡಿಮೆ ಮಾಡಿದ್ದೇವೆ? ಇಲ್ಲಿ ಸಕಲ ರೀತಿಯ ಸೌಲಭ್ಯಗಳಿವೆ ಮತ್ತೇಕೆ ಚಿಂತೆ ಎಂದ ದೊಡ್ಡ ಮಗ. ಅದಕ್ಕೆ ಹೂಂ ಎಂದು ಹೂಂಗುಟ್ಟಿದ ಚಿಕ್ಕ ಮಗ. ಹೌದಪ್ಪಾ. ನಮಗೆ ಇಲ್ಲಿ ಎಲ್ಲವೂ ಇದೆ. ಆದರೆ ವಯಸ್ಸಾದ ಸಮಯದಲ್ಲಿ ನಮ್ಮನ್ನು ನೋಡಿ ಕೊಳ್ಳಬೇಕಾದವರೇ ಇಲ್ಲಿ ಇಲ್ಲ. ಆದಿನ ನಿಮ್ಮ ಅಮ್ಮ ಹುಷಾರು ತಪ್ಪಿದಾಗ, ಇದೇ ದೇಶಪಾಂಡೆ ಮತ್ತವನ ಮಗ ಇಲ್ಲದಿದ್ದಲ್ಲಿ ನೀವಿಂದು ನಿಮ್ಮ ಅಮ್ಮನ ಮುಖ ನೋಡಲು ಸಾಧ್ಯವಾಗುತ್ತಿರಲಿಲ್ಲ. ವಂಶೋದ್ದಾರಕರು ಎಂದು ಇಬ್ಬಿಬ್ಬರು ಗಂಡು ಮಕ್ಕಳಿದ್ದರೂ ಸಹಾ ಆಪತ್ತಿನಲ್ಲಿ ಸ್ನೇಹಿತ ಮತ್ತು ಆತನ ಮಗನನ್ನು ಆಶ್ರಯಿಸಬೇಕಾಯಿತು. ಇಂತಹ ಸುಖಃಕ್ಕೆ ಮಕ್ಕಳೇಕೆ ಬೇಕು? ನಿಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿ, ನೀವು ಕೇಳಿದ್ದದ್ದನ್ನೆಲ್ಲಾ ಕೊಡಿಸಿ ನಿಮಗ ವಿದ್ಯೆಕಲಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೂ ಕಳುಹಿಸಿ, ಮದುವೆ ವಯಸ್ಸಿಗೆ ಬಂದಾಗ, ನಿಮಗೊಪ್ಪುಂತಹಾ ಹುಡುಗಿಯ ಜೊತೆಗೇ ಮದುವೆ ಮಾಡಿಸಿ ನಿಮ್ಮ ಸುಖಃವೇ ನಮ್ಮ ಸುಖಃ ಎಂದು ತಿಳಿದಿರುವ ನಮಗೆ ಸಾಯುವ ಕಾಲದಲ್ಲಿ ನೋಡಿಕೊಳ್ಳಲು ಹೆತ್ತ ಮಕ್ಕಳೇ ಇಲ್ಲದಿದ್ದರೆ ಹೇಗೆ ? ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಅಲ್ಲಿಯವರೆಗೂ ಸುಮ್ಮನೆ ಅಣ್ಣನ ಮಾತಿಗೆ ಹೂಂ ಗುಟ್ಟುತ್ತಿದ್ದ ತಮ್ಮ, ಇದ್ದಕ್ಕಿದ್ದಂತೆಯೇ ವ್ಯಗ್ರನಾಗಿ ಹೋದ. ಅಪ್ಪಾ, ಸಾಕು ಮಾಡಿ ಈ ನಿಮ್ಮ ಪ್ರಲಾಪ. ಅವಾಗಲಿನಿಂದಲೂ ಕೇಳುತ್ತಲೇ ಇದ್ದೇನೆ ನಿಮ್ಮ ಆಲಾಪ. ಸುಮ್ಮನೆ ನಮ್ಮನ್ನೇಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುತ್ತಿದ್ದೀರಿ? ನೀವು ಹೇಳಿದ್ದೆಲ್ಲವೂ ಒಬ್ಬ ಪೋಷಕರಾಗಿ ಮಾಡಬೇಕಾದಂತಹ ಕರ್ತವ್ಯಗಳೇ ಹೊರತು ಅದಕ್ಕಿಂತ ಹೆಚ್ಚಿನದ್ದೇನು ನೀವು ಮಾಡಿಲ್ಲ. ನಾವೆಲ್ಲರೂ ನಿಮ್ಮ ಆಣತಿಯಂತೆಯೇ ಓದಿ, ವಿದೇಶಗಳಲ್ಲಿ ನೆಲೆಸಿದಾಗ, ನಮ್ಮ ಮಕ್ಕಳು ವಿದೇಶದಲ್ಲಿದ್ದಾರೆ ಎಂದು ಎಲ್ಲರ ಮುಂದೆ ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದವರು, ಈಗ ಕಷ್ಟ ಬಂದಿತೆಂದು ನಮ್ಮನ್ನು ತೆಗಳುವುದು ಸರಿಯೇ? ಭಗವಧ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಪ್ರತಿಪಲಾಪೇಕ್ಷೆಯಿಂದ ಯಾವುದೇ ಕೆಲಸಗಳನ್ನು ಮಾಡಕೂಡದು. ನಿಜಕ್ಕೂ ಹೇಳಬೇಕೆಂದರೇ, ಸದ್ಯದ ಈ ಪರಿಸ್ಥಿತಿ ಬಂದೊದಗಲು ನಿಮಗೆ ನೀವೇ ಕಾರಣ. ನೀವು ಅಂದು ಒಬ್ಬ ಮಗನಾಗಿ ನಿಮ್ಮ ತಂದೆ ತಾಯಿಯರಿಗೆ ಏನು ಮಾಡಿದ್ದೀರೋ ಅದನ್ನೇ ನೀವು ಇಂದು ನಿಮ್ಮ ಮಕ್ಕಳಿಂದ ಪಡೆಯುತ್ತಿದ್ದೀರಿ ಎಂದು ಅಬ್ಬರಿಸಿದ. ಕಿರಿಯ ಮಗನ ಈ ಹೇಳಿಕೆಯಿಂದ ಎಲ್ಲರೂ ಒಂದು ಕ್ಷಣ ಮೌನವಾದರು. ಆ ಒಂದು ಕ್ಷಣ ಯಾರಿಗೂ ಏನು ಹೇಳಬೇಕೆಂದೇ ತಿಳಿಯಲಿಲ್ಲ.

ಸ್ವಲ್ಪ ಸಾವರಿಸಿಕೊಂಡ ಕುಲಕರ್ಣಿಯವರು. ಹೌದು. ಎಲ್ಲವೂ ನನ್ನದೇ ತಪ್ಪು. ಅಂದು ನನ್ನ ಹೆತ್ತ ತಂದೆ ತಾಯಿಯರು, ಅಂತಹ ಕಷ್ಟದ ಸಮಯದಲ್ಲೂ ಹೊಟ್ಟೆ ಬಟ್ಟೆ ಕಟ್ಟಿ ಅಂದಿನ ಕಾಲದಲ್ಲೇ ಇಂಜಿನೀಯರಿಂಗ್ ಓದಿಸಿದರು. ಹಾಗೆ ಓದಿದ ನಂತರ ಧಾರವಾಡದಲ್ಲಿ ನನಗೆ ಸೂಕ್ತ ಕೆಲಸ ಸಿಗದ ಕಾರಣ, ದೂರದ ಪೂನಾಕ್ಕೆ ಕೆಲಸ ಹುಡುಕಿಕೊಂಡು ಹೋಗಿ ಅಲ್ಲೇ ನನ್ನ ಬದುಕು ಕಟ್ಟಿಕೊಂಡೆ. ಅಲ್ಲೇ ನನ್ನ ಮದುವೆಯಾಗಿ ಮಕ್ಕಳಾದರು. ಕಾಲ ಕಾಲಕ್ಕೆ ಪರಿಶ್ರಮಕ್ಕೆ ತಕ್ಕ ಹಣವೂ ಕೈ ಸೇರ ತೊಡಗಿತು. ಮೊದಮೊದಲು ಅಪ್ಪಾ ಅಮ್ಮನನ್ನು ನೋಡಲು ತಿಂಗಳಿಗೊಮ್ಮೆಯಾದರೂ ಬಂದು ಹೋಗುತ್ತಿದ್ದವನು, ಕ್ರಮೇಣ ಮೂರು, ಇಲ್ಲವೇ ಆರು ತಿಂಗಳು ಇಲ್ಲವೇ, ವರ್ಷಕ್ಕೊಮ್ಮೆ ನಾಗರಪಂಚಮಿಗೆ ಬರುವಷ್ಟಕ್ಕೇ ಸೀಮಿತವಾಯಿತು. ತಿಂಗಳು ತಿಂಗಳಿಗೆ ಸರಿಯಾಗಿ ಹಣವನ್ನು ಕಳುಹಿಸುತ್ತಿದ್ದೆನಾದ್ದರಿಂದ ಊರಿನಲ್ಲಿ ಎಲ್ಲರೂ ಚೆನ್ನಾಗಿರ ಬಹುದೆಂಬ ಭಾವನೆ ನನ್ನದಾಗಿತ್ತು. ನಾನು ಊರಿಗೆ ಬಂದಾಗಲೂ ನನ್ನ ಮನಸ್ಸನ್ನು ನೋಯಿಸಬಾರದೆಂಬ ಕಾರಣದಿಂದ ನಮ್ಮ ತಂದೆ ತಾಯಿಯರೂ ನನ್ನ ಬಳಿ ಯಾವುದೇ ತೊಂದರೆಗಳನ್ನು ಹೇಳಿಕೊಳ್ಳದೇ ಚೆನ್ನಾಗಿಯೇ ಇರುವಂತೆ ನಟಿಸಿ, ಕಾಲ ಬಂದಾಗ ನಮ್ಮನ್ನಗಲಿದರು. ಅವರು ಕಾಲವಾದ ನಂತರ ಅವರ ನೆನಪಿನಲ್ಲಿ ಈ ಬಂಗಲೆ ಕಟ್ಟಿಸಿದೆ. ಕೆಲಸದಿಂದ ನಿವೃತ್ತನಾದ ನಂತರ ಕಡೆಯ ದಿನಗಳನ್ನು ನಮ್ಮ ತವರಿನಲ್ಲೇ ಕಳೆಯುವ ಇಚ್ಛೆಯಿಂದ ಇಲ್ಲೇ ಬಂದು ನೆಲೆಸಿದೆ. ನಾವು ವಯಸ್ಸಾದಾಗ, ನಮಗೀಗ ಮಕ್ಕಳ ಅಗಲಿಕೆಯಿಂದಾಗಿರ ಬಹುದಾದ ಕಷ್ಟಗಳು ಅರಿವಾಗುತ್ತಿದೆ ಎಂದು ಹೇಳಿ. ಇಬ್ಬರೂ ಮಕ್ಕಳಿಗೆ ಕೈ ಮುಗಿಯುತ್ತಾ , ನಮಗಿಂತಲೂ ಚಿಕ್ಕವರಾದರೂ ನೀವು ಕಣ್ಣು ತೆರೆಸಿದ್ದೀರಿ ಅದಕ್ಕೆ ಧನ್ಯವಾದಗಳು. ಮರ್ಯಾದಾ ಪುರುಶೋತ್ತಮನಾದ, ಎಲ್ಲರಿಗೂ ಆದರ್ಶ ಪ್ರಾಯನಾದ, ಶ್ರೀರಾಮ ಚಂದ್ರನ ತಂದೆ ದಶರಥ ಮಹಾರಾಜನಿಗೇ ಸಾಯುವ ಸಮಯದಲ್ಲಿ ಅವರ ನಾಲ್ಕೂ ಮಕ್ಕಳು ಜೊತೆಯಲ್ಲಿ ಇಲ್ಲದಿದ್ದಾಗಾ, ಇನ್ನು ಹುಲು ಮಾನವನಾದ ನಾನು ಅದನ್ನು ಹೇಗೆ ಬಯಸಲಿ? ನನ್ನ ಹಣೆಯಲ್ಲಿ ಬರೆದ ವಿಧಿಯಂತೆಯೇ ಆಗುತ್ತದೆ. ವಿಧಿ ಬದಲಿಸಲು ನಾನ್ಯಾರು? ನೀವ್ಯಾರು? ನಾವು ಮಾಡಿದ ಕರ್ಮವನ್ನು ನಾವೇ ಅನುಭವಿಸುತ್ತೇವೆ. ಅದಕ್ಕೇ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದು ಹೇಳಿ, ದೇಶಪಾಂಡೇ, ನಡೀರೀ, ಆಕೀಗೆ ದವಾ ಕೊಡ ಹೊತ್ತಾತು. ಹಂಗೇ ಇಬ್ರೂ ಕೂಡೀ ಊಟ ಮಾಡೋಣು ಎನ್ನುತ್ತಾ ತನ್ನ ಆಪ್ತ ಮಿತ್ರರನ್ನು ಕರೆದುಕೊಂಡು ಮಹಡಿ ಇಳಿಯತೊಡಗಿದರು.

ತಂದೆ ಮತ್ತು ಅವರ ಸ್ನೇಹಿತರು ಕೆಳಗಿ ಇಳಿದು ಹೋದಂತೆಯೇ, ಮಕ್ಕಳಿಬ್ಬರಿಗೂ ಮಾತಿನ ಭರದಲ್ಲಿ ತಾವು ಆಡಿದ ಮಾತಿನಿಂದ ತಮ್ಮ ತಂದೆಯವರಿಗಾದ ನೋವು ಅರಿವಾಯಿತು ಮತ್ತು ಅದರ ಜೊತೆ ಜೊತೆಗೇ ಇನ್ನೊಬ್ಬರು ಮಾಡಿದ ತಪ್ಪನ್ನು ಎತ್ತಿ ಆಡಿ ತೋರಿಸಿದರೆ ಅದು ದ್ವೇಷವಾಗುತ್ತದೆಯೇ ಹೊರತು ಅಲ್ಲಿ ಪ್ರೀತಿ ಉಕ್ಕುವುದಿಲ್ಲ ಎಂಬುದು ಮನದಟ್ಟಾಯಿತು. ತಮ್ಮ ತಂದೆಯವರು ಅಂದು ಅರಿವಿಲ್ಲದೇ ಮಾಡಿದ ತಪ್ಪನ್ನು ಇಂದು ತಾವುಗಳು ಗೊತ್ತಿದ್ದೂ ಗೊತ್ತಿದ್ದೂ ಮಾಡಿದರೇ, ಮುಂದೇ ಅದೇ ತಪ್ಪನ್ನು ತಮ್ಮ ಮಕ್ಕಳೂ ಖಂಡಿತವಾಗಿಯೂ ಮಾಡಿಯೇ ತೀರುತ್ತಾರೆ ಮತ್ತು ನಾವುಗಳು ಇದೇ ಪರಿಸ್ಥಿತಿಯನ್ನು ಅನುಭವಿಸಿಯೇ ತೀರುತ್ತೇವೆ. ಇಲ್ಲೇ ಸ್ವರ್ಗ. ಇಲ್ಲೇ ನರಕ. ಮೇಲೇನಿಲ್ಲಾ ಇಲ್ಲಾ ಸುಳ್ಳು ಹುಟ್ಟು ಸಾವು ಎರಡರ ಮಧ್ಯೇ ಮೂರು ದಿನದಾ ಬಾಳು ಎಂಬ ನಾಗರಹೊಳೆ ಚಿತ್ರದ ಅಂಬರೀಷ್ ಅಭಿನಯದ ಹಾಡು ಅವರಿಗೆ ನೆನಪಾಯಿತು. ಇಬ್ಬರೂ ಕೊಂಚ ಹೊತ್ತು ಮಾತನಾಡಿ, ಒಂದು ನಿರ್ಧಾರಕ್ಕೆ ಬಂದು, ತಮ್ಮ ತಮ್ಮ ಮಡದಿಯರೊಡನೇ ನಡೆದದ್ದೆಲ್ಲವನ್ನೂ ತಿಳಿಸಿ ತಮ್ಮ ನಿರ್ಧಾರವನ್ನೂ ಅವರಿಗೆ ತಿಳಿಸಿ ಎಲ್ಲರೂ ಒಟ್ಟಾಗಿ ತಂದೆ ತಾಯಿಯರ ಕೋಣೆಗೆ ಬಂದು ಅಪ್ಪಾ, ಅಮ್ಮಾ ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ. ಗೊತ್ತಿದ್ದೋ ಗೊತ್ತಿಲ್ಲದಂತೆಯೋ ಇಷ್ಟು ದಿನ ನಿಮಗೆ ತೊಂದರೆ ಕೊಟ್ಟಿದ್ದೀವಿ. ಇನ್ನು ಮುಂದೆ ಆ ರೀತಿಯಾಗಿ ಮಾಡುವುದಿಲ್ಲ. ನಮ್ಮ ಮಕ್ಕಳ ಈ ವರ್ಷದ ಪರೀಕ್ಷೇ ಮುಗಿಯುತ್ತಿದ್ದಂತೆಯೇ, ಇಲ್ಲಿಗೇ ಹಿಂದಿರುಗಿ ಬರುತ್ತೇವೆ. ಇಲ್ಲಿಗೇ ಬಂದು ನಮ್ಮಿಬ್ಬರ ಅನುಭವದ ಮೇಲೆ ಒಂದು ಹೊಸಾ ಕಂಪನಿ ಹುಟ್ಟು ಹಾಕಿ ಇಲ್ಲಿಂದಲೇ ಕೆಲಸ ಮಾಡುತ್ತೀವಿ. ಆಗ ಕೇವಲ ನಮಗಲ್ಲದೇ ನಮ್ಮಂತಹ ಅನೇಕರು ತಮ್ಮ ತಂದೆ ತಾಯಿಯರ ಜೊತೆಯಲ್ಲಿಯೇ ಇದ್ದು ಇಲ್ಲೇ ಉದ್ಯೋಗ ಮಾಡುವಂತಾಗುತ್ತದೆ. ದೇಶ ಕಾರ್ಯ ಈಶ ಕಾರ್ಯ ಎನ್ನುವಂತೆ, ನಮ್ಮ ಸ್ವಾರ್ಥಕ್ಕಾಗಿ ಸ್ಥಾಪಿಸುವ ಕಂಪನಿ, ನಿಸ್ವಾರ್ಥವಾಗಿ ಅನೇಕರಿಗೆ ಉಪಯೋಗವಾಗುತ್ತದೆ ಎಂದು ಹೇಳಿ ತಂದೆ ತಾಯಿಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಇಷ್ಟು ಶ್ರೀಘ್ರವಾಗಿ ಮತ್ತು ಈ ರೀತಿಯಾಗಿ ತಮ್ಮ ಮಕ್ಕಳು ಬದಲಾಗುತ್ತಾರೆ ಎಂಬುದನ್ನು ನಿರೀಕ್ಷಿಸದ ಅವರ ತಂದೆ ತಾಯಿಯರು ಆನಂದ ಭಾಷ್ಪ ಹರಿಸಿದರು. ಕಾಲ ಉರುಳಿ ಹೋಗಿದ್ದೇ ಗೊತ್ತಾಗಲಿಲ್ಲ. ನುಡಿದಂತೆ ಆರೆಂಟು ತಿಂಗಳಿನಲ್ಲಿ ಮಕ್ಕಳಿಬ್ಬರೂ ಸಕುಟುಂಬ ಸಮೇತರಾಗಿ ಹಿಂದಿರುಗಿ ಬಂದು ಒಂದೇ ಮನೆಯಲ್ಲಿ ಅಜ್ಜಿ, ತಾತ, ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮೊಕ್ಕಳೊಂದಿಗೆ ಅವಿಭಕ್ತ ಕುಟುಂಬವಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಅವರು ಸ್ಥಾಪಿಸಿದ ಕಂಪನಿಯಲ್ಲಿ ಆ ಇಬ್ಬರು ಗಂಡು ಮಕ್ಕಳು ಮತ್ತು ಸೊಸೆಯರಲ್ಲದೇ, ಅವರ ಜೊತೆ ನೂರಾರು ಜನರಿಗೆ ಉದ್ಯೋಗ ದೊರೆತು, ಸಾವಿರಾರು ಜನರಿಗೆ ಆಶ್ರಯತಾಣವಾಗಿ, ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಮಾಡುತ್ತಾ , ಕೋಟ್ಯಾಂತರ ಜನಸಂಖ್ಯೆ ಇರುವ ಈ ದೇಶಕ್ಕೇ ಹೆಮ್ಮೆಯನ್ನು ತರುತ್ತಿದೆ.

ನಿಜ. ಮೇಲೆ ಹೇಳಿದಂತಹ ಕಥೆಯಲ್ಲಿ ಎಲ್ಲವೂ ನಿಜವಲ್ಲ. ಕೆಲವೊಂದು ಕಾಲ್ಪನಿಕವಾಗಿಯೂ ಇದೆಯಾದರೂ, ಸಾಧಿಸಲು ಅಸಾಧ್ಯೇನೂ ಅಲ್ಲದ್ದಾಗಿದೆ. ಜೀವನದಲ್ಲಿ
ಪ್ರಾಣ, ಯೌವನ ಮತ್ತು ಕಾಲ ಹಿಂದಿರುಗಿ ಬರಲಾರದು, ಅದೇ ರೀತಿ
ರೋಗ, ಆಸ್ತಿ ಮತ್ತು ಕಷ್ಟಗಳು ಬಂದು ಹೋಗುವಂತಹದ್ದು. ಆದರೇ,
ವಿದ್ಯೆ, ಸ್ನೇಹ ಮತ್ತು ಸಂಬಂಧಗಳು ಜೀವಿತಾವಧಿಯವರೆಗೂ ನಮ್ಮೊಂದಿಗೇ ಇರುವಂತಹವು. ಹಾಗಾಗಿ ಕಲಿತ ವಿದ್ಯೆಯನ್ನು ಸರಿಯಾಗಿ ಬಳೆಸಿಕೊಂಡು ಬಂಧು-ಮಿತ್ರರೊಡನೇ ಸ್ನೇಹ ವೃದ್ಧಿಸಿ ಕೊಂಡು ಸಂಬಂಧಗಳನ್ನು ಬೆಳೆಸೋಣ ಮತ್ತು ಉಳಿಸೋಣ. ಏಕೆಂದೆರೆ ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲಿ ಬಲವಿದೆಯೋ ಅಲ್ಲಿ ಛಲವಿರುತ್ತದೆ. ಎಲ್ಲಿ ಛಲ ಇರುತ್ತದೆಯೋ ಅಲ್ಲಿ ಗೆಲುವು ಇದ್ದೇ ಇರುತ್ತದೆ.

ನಾವು ಗೆದ್ದೇ ಗೆಲ್ತೀವೀ.. ನಾವು ಗೆದ್ದೇ ಗೆಲ್ತೀವೀ, ಒಂದು ದಿನಾ.. ನಮ್ಮಲೀ ಛಲವಿದೇ.. ನಮ್ಮಲೀ ಬಲವಿದೇ.. ನಾವು ಗೆದ್ದೇ ಗೆಲ್ತೀವೀ..ಒಂದು ದಿನಾ.. ನಾವು ಗೆಲ್ಲಲೇ ಬೇಕು ಒಂದು ದಿನಾ..

ಏನಂತೀರೀ?