ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು 53ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ ನಡೆದ ಸುಂದರ ಮದುವೆಯೊಂದರ ಚಿತ್ರಣ ಇದೋ ನಿಮಗಾಗಿ

appa

ಸರಿ ಸುಮಾರು 1969ನೇ ಇಸ್ವಿ, ಹಾಸನ ಮೂಲದ ಗಮಕಿಗಳು ಮತ್ತು ಖ್ಯಾತ ಹರಿಕಥಾ ವಿದ್ವಾಂಸರೊಬ್ಬರು ಅಂದಿನ ದಿನಗಳಲ್ಲೇ ಸಾಕಷ್ಟು ಪ್ರಖ್ಯಾತವಾಗಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಅದಾಗ ತಾನೇ ಉದ್ಯೋಗಿಯಾಗಿದ್ದ ತಮ್ಮ ಜೇಷ್ಠ ಪುತ್ರನಿಗೆ ವಧುವನ್ನು ಹುಡುಕುತ್ತಿರುತ್ತಾರೆ. ಹಲವಾರು ಕಡೆ ನಾನಾ ರೀತಿಯ ಕೆಲಗಳನ್ನು ಮಾಡಿ ಕಟ್ಟ ಕಡೆಯದಾಗಿ ಬಿಇಎಲ್ ಕಾರ್ಖಾನೆಗೆ ಸೇರಿಕೊಂಡಿದ್ದ ಅವರ ಮಗನಿಗೆ ಅದಾಗಲೇ ವಯಸ್ಸು ಮೂವತ್ತು ದಾಟಿರುತ್ತದೆ.

amma

ಇನ್ನು ಮೂಲತಃ ಬೆಳ್ಳೂರಿನವರಾದರೂ, ತಮ್ಮ ತಂದೆ ತಾಯಿಯವರ ಕಾಲವಾದ ನಂತರ ಸೋದರತ್ತೆಯ ಆಶ್ರಯದಲ್ಲಿ ಬೆಳೆದು, ಕರ್ನಾಟಕದಿಂದ ಅಂದಿನಕಾಲದಲ್ಲೇ ಉತ್ತರ ಪ್ರದೇಶದ ವಾರಣಾಸಿಗೆ (ಕಾಶೀ) ಹೋಗಿ ಅಲ್ಲಿ ವಿದ್ಯಾಭ್ಯಾಸ ಮಾಡಿಕೊಂದು ಕೆಲಸವನ್ನು ಅರೆಸುತ್ತಾ, ಕೋಲಾರದ ಚಿನ್ನದ ಗಣಿಯಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆದಿದ್ದಂತಹ ಹಿರಿಯರೊಬ್ಬರು, ಮೆಟ್ರಿಕ್ಯುಲೇಷನ್ ವರೆಗೂ ಓದಿ, ತಕ್ಕ ಮಟ್ಟಿಗೆ ಹಾಡು, ಹಸೆ, ಅಡಿಗೆ ಕಲಸಗಳನ್ನು ಕಲಿತಿದ್ದ ಅತ್ಯಂತ ರೂಪವತಿ ಮತ್ತು ಬಹುಭಾಷೆ ಪಂಡಿತೆಯಾಗಿದ್ದ ತಮ್ಮ ಮುದ್ದಿನ ಜೇಷ್ಠಪುತ್ರಿಗೂ ಒಳ್ಳೆಯ ಸಂಬಂಧ ಹುಡುಕುತ್ತಿರುತ್ತಾರೆ.

ಒಂದು ಗಂಡಿಗೆ ಒಂದು ಹೆಣ್ಣು ಎಂದು ಸೃಷ್ಟಿ ಕರ್ತ ಬ್ರಹ್ಮ ಹುಟ್ಟಿಸುವಾಗಲೇ ನಿರ್ಧರಿಸಿರುತ್ತಾನಂತೆ ಎಂಬಂತೆ ಮದುವೆ ಎಂಬುದು ಸ್ವರ್ಗದಲ್ಲಿಯೇ ನಿರ್ಧಾರಿವಾಗಿ ಇಲ್ಲಿ ಗಂಡು ಹೆಣ್ಣು ಹುಡುಕುವುದು ನೆಪ ಮಾತ್ರ ಎನ್ನುವಂತೆ ಅದೊಮ್ಮೆ ಗಮಕಿಗಳು ತಮ್ಮ ಕಾರ್ಯಕ್ರಮವೊಂದನ್ನು ನಡೆಸಿಕೊಡುವ ಸಲುವಾಗಿ ಬೆಂಗಳೂರಿನ ಮಲ್ಲೇಶ್ವರದ ಪೈಪ್ ಲೈನ್ ರಸ್ತೆಯ ಆರಂಭದಲ್ಲೇ ಇರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆ ಕಾರ್ಯಕ್ರಮವನ್ನು ಕೇಳಲು ಬಂದಿದ್ದಂತಹ ಸ್ಥಳೀಯರೊಬ್ಬರು ಕಾರ್ಯಕ್ರಮ ಮುಗಿದ ನಂತರ ಗಮಕಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಾ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಿದ್ದಂತಹ ಸಂಧರ್ಭದಲ್ಲೇ, ಎಲ್ಲಿ ಉಳಿದುಕೊಂಡಿದ್ದೀರೀ? ಎಂದು ವಿಚಾರಿಸಿದಾಗ, ಇಲ್ಲೇ ನನ್ನ ಮಗನ ಮನೆಯಲ್ಲಿ ಉಳಿದುಕೊಂಡಿದ್ದೇವೆ. ಮಗನಿಗೂ ಮದುವೆಯ ವಯಸ್ಸಾಗಿದ್ದು ಹುಡುಗಿ ಹುಡುಕುತ್ತಿದ್ದೇವೆ ಎಂದಾಗ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಅಯ್ಯೋ ನನ್ನ ಮೊಮ್ಮಗಳಿಗೂ ಗಂಡು ಹುಡುಕುತ್ತಿದ್ದೇವೆ ಎಂದು ಆರಂಭವಾದ ಮಾತು ಕತೆ ನೋಡ ನೋಡುತ್ತಿದ್ದಂತೆಯೇ ಮುಂದುವರೆದು ಮಾರನೇ ದಿನವೇ ಅದೇ ಪೈಪ್ ಲೈನ್ ನಲ್ಲಿ ಇದ್ದ ಅವರ ಮನೆಯಲ್ಲೇ ಹುಡುಗಿ ನೋಡುವ ಶಾಸ್ತ್ರವೆಲ್ಲವೂ ಮುಗಿದು ಮದುವೆಯೂ ನಿಶ್ಚಯವಾಗಿಯೇ ಬಿಡುತ್ತದೆ.

wedding

ಗಂಡಿನ ಮನೆಯವರು ಹಾಸನದ ಮೂಲದವರು, ಹೆಣ್ಣಿನ ಮನೆಯವರು ಇರುವುದು ಕೋಲಾರದ ಚಿನ್ನದ ನಾಡಿನಲ್ಲಿ ಇಬ್ಬರಿಗೂ ಸರಿಯಾಗಲಿ ಎಂದು ಮಧ್ಯ ಭಾಗವಾದ ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ಗಂಡಿನ ಮನೆಯವರು ಕೇಳಿಕೊಳ್ಳುತ್ತಾರಾದರೂ, ಹುಡುಗಿಯ ಪೋಷಕರು, ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ತಮ್ಮ ಅಸಹಾಯಕತೆಯನ್ನು ತೋರಿ, ಪರಿಚಯಸ್ಥರೇ ಇರುವ ಕೆಜಿಎಫ್ ನಲ್ಲಿಯೇ ಮದುವೆ ಮಾಡಿದರೆ ತಮಗೆ ಎಲ್ಲಾ ರೀತಿ ಅನುಕೂಲವಾಗುತ್ತದೆೆ ಎಂದಿದ್ದಲ್ಲದೇ, ವರನ ಊರಿನಿಂದ ಮದುವೆಗೆ ಬಂದು ಹೋಗುವ ಖರ್ಚನ್ನು ಭರಿಸಲು ಒಪ್ಪಿಕೊಂಡಾಗ, ಹುಡುಗನಿಗೆ ಲೋಕಾರೂಢಿಯಂತೆ ವಾಚು ಉಂಗುರ ಸೂಟು ಬೂಟಿನ ಹೊರತಾಗಿ ಇನ್ನಾವುದೇ ಬೇಡಿಕೆ ಇಲ್ಲದೇ ಮಾತು ಕಥೆ ಎಲ್ಲವೂ ಸುಗಮವಾಗಿ ಮುಗಿದು ಮೇ 3-4 ರಂದು ಕೆಜಿಎಫ್ ರಾಬರ್ಟ್ಸನ್ ಪೇಟೆಯಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದ ಎದುರಿಗಿರುವ ಇರುವ ಮದ್ದಯ್ಯ ಕಲ್ಯಾಣ ಮಂಟಪದಲ್ಲಿ ನೆರೆವೇರಿಸಲು ನಿರ್ಧರಿಸಲಾಗುತ್ತದೆ

invitationಹಾಸನದ ಕಡೆಯ ವರನ ಕುಟುಂಬವನ್ನು ಹೊತ್ತ ಬಸ್ ಕೋಲಾರದತ್ತ ಬರುತ್ತಿದ್ದಾದಾಗಲೇ, ಧುತ್ ಎಂದು ಆಕಾಶವಾಣಿಯಲ್ಲಿ ಭಾರತದ ಮೂರನೇ ರಾಷ್ಟ್ರಪತಿಗಳಾಗಿದ್ದ ಶ್ರೀ ಝಾಕಿರ್ ಹುಸೇನ್ ಖಾನ್ 3 ಮೇ 1969 ರಂದೇ ನಿಧನರಾಗಿ ದೇಶಾದ್ಯಂತ ಶೋಕಚರಣೆ ಜಾರಿಯಾದ ಸುದ್ದಿ ತಿಳಿಯುತ್ತಿದ್ದಂತೆಯೇ, ಕೋಲಾರದ ಸುತ್ತ ಮುತ್ತಲೂ ಅವರ ಬಂಧು ಬಾಂಧವರೇ ಇರುವ ಕಾರಣ ಅಲ್ಲಲ್ಲಿ ಸಣ್ಣ ಗಲಭೆಗಳು ನಡೆದು ಬಸ್ ಕೆಲವು ಗಂಟೆಗಳ ಕಾಲ ಮಾರ್ಗದ ಮಧ್ಯದಲ್ಲೇ ತಡೆ ಹಿಡಿಯಲ್ಪಟ್ಟಾಗ, ಆರಂಭದಲ್ಲಿಯೇ ಈ ರೀತಿಯ ಅಪಶಕುನವಾದರೇ, ಇನ್ನು ಮದುವೆ ಹೇಗೆ ನಡೆಯುತ್ತದೆಯೋ ಎನ್ನುವ ಆತಂಕ ಗಂಡಿನ ಮನೆಯವರದ್ದಾದರೆ, ಬೆಳಿಗ್ಗೆ ಹೊರಟ ಬಸ್ ಮಧ್ಯಾಹ್ನವಾದರೂ ಬಾರದೇ ಹೋದ್ದದ್ದಕೆ ಹೆಣ್ಣಿನ ಕಡೆಯವರಲ್ಲಿ ಆತಂಕ ಮನೆ ಮಾಡಿತ್ತಾದರೂ, ಅದೃಷ್ಟವಷಾತ್ ಮದುವೆಯ ದಿಬ್ಬಣ ಎಂದು ಬಸ್ಸನ್ನು ಅನುವು ಮಾಡಿಕೊಟ್ಟ ಪರಿಣಾಮ ಮತ್ತು ಕೆಜಿಎಫ್ ನಲ್ಲಿ ಆದರ ಅಷ್ಟಾಗಿ ಗಲಭೆ ಇರದ ಕಾರಣ, ವರನ ಮನೆಯೆವರೆಲ್ಲರೂ ಸುರಕ್ಷಿತವಾಗಿ ಮದುವೆ ಮಂಟಪ ತಲುಪುವಷ್ಟರಲ್ಲಿ ಸಂಜೆಯಾಗಿ, ಅವರನ್ನು ಸಂಭ್ರಮದಿಂದ ಸ್ವಾಗತ ಮಾಡಲು ಹಾಕಿದ ಲೌಡ್ ಸ್ಪೀಕರಿನಲ್ಲಿ ಇದ್ದಕ್ಕಿದ್ದಂತೆಯೇ ತಮಿಳು ಹಾಡು ಮೊಳಗುತ್ತಿದ್ದಂತೆಯೇ, ಮಧುಮಗನ ಮನೆಯವರೆಲ್ಲರಿಗೂ ಕಸಿವಿಸಿ. ಅರೇ ಇದೇನು ಹುಡುಗಿ ಕಡೆಯವರು ತಮಿಳುನವರಾ? ಎಂಬ ಗುಲ್ಲು. ಇದನ್ನು ತಕ್ಷಣವೇ ಅರಿತ ವಧುವಿನ ಸಹೋದರ ಕೂಡಲೇ ಲೌಡ್ ಸ್ಪೀಕರ್ ಆರಿಸಿ ಮುಂದೆ ನಡೆಯಬಹುದಾಗಿದ್ದ ಆತಂಕವನ್ನು ಕಡಿಮೆ ಮಾಡಿ, ಹಾಗೂ ಹೀಗೂ ಮಾಡಿ ಮದುವೆಯ ಈ ಬಂಧ ಅನುರಾಗದ ಅನುಬಂಧ ಎಂಬ ಹಾಡಿನ ರೆಕಾರ್ಡ್ ತಂದು ಎಲ್ಲರಿಗೂ ಕೇಳಿಸಿ ಸಂತೋಷ ಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದರೆ, ಅದೇ ಹಾಡು ಆರಂಭವಾಗುವ ಶುಭಾಶಯ, ಶುಭಾಶಯ ಪದಗಳನ್ನು ಕೇಳಿದ ಸ್ಥಳೀಯರೊಬ್ಬರು ಇದ್ಯಾರು ಸುಬ್ಬಾ ಜಯಾ? ಮದುವೆ ಗಂಡು ಎಣ್ಣಿನ ಎಸ್ರೂ, ಸಿವಾ, ಮಣಿ ಅಲ್ವಾ? ಎಂದಾಗ ನೆರೆದಿದ್ದವರೆಲ್ಲಾ ಗೊಳ್ ಎಂದು ನಕ್ಕಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವವೇ?

dding2

ವರಪೂಜೆ ಸುಸೂತ್ರವಾಗಿ ಮುಗಿದು ಊರು ಸುತ್ತು ಹಾಕಲು ಹೊರ ಬಂದವರಿಗೆ ವ್ಯವಹರಿಸಲು ಭಾಷಾ ಸಮಸ್ಯೆ ಎದುರಗಿತ್ತು. ಹೇಳಿಕೊಳ್ಳಲು ಕರ್ನಾಟಕದ ಅವಿಭಾಜ್ಯ ಅಂಗವಾದರೂ ಇಡೀ ಊರಿಗೆ ಊರೇ ತಮಿಳುಮಯವಾಗಿದ್ದ ಕಾರಣ, ಕೆಲವು ನೆಂಟರಿಷ್ಟರಿಗೆ ಇದೇನೂ ಅಪ್ಪಟ ಕನ್ನಡಿಗರಾಗಿ ತಮಿಳು ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಿದ್ದಾರಾ? ಎಂಬ ಸಂದೇಹ ಮತ್ತೊಮ್ಮೆ ಮೂಡಿ ಅದನ್ನು ನಿವಾರಿಸಲು ಹುಡುಗನ ಮನೆಯವರು ಪಟ್ಟ ಪರಿಶ್ರಮ ಅಷ್ಟಿಷ್ತಲ್ಲಾ. ಮಾರನೇ ದಿನ ಕಾಶೀ ಯಾತ್ರೆ ಮುಗಿದು, ಜೀರಿಗೆ ಧಾರಣೆಯಾಗಿ ವರ-ವಧುವಿನ ತಾಳಿಗೆ ಮೂರು ಗಂಟು ಹಾಕಿ ನಿರ್ವಿಘ್ನವಾಗಿ ಧಾರೆಯೂ ಮುಗಿದು ಬಂದಿದ್ದವರೆಲ್ಲರೂ ವಧು ವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿ ಮದುವೆ ಮುಗಿದು, ಊಟಕ್ಕೆ ಕುಳಿತುಕೊಳ್ಳ ಬೇಕು ಎಂದು ಊಟದ ಮನೆಗೆ ಧಾವಿಸಿದರೆ ಆದಾಗಲೇ ಊಟದ ಮನೆಯಲ್ಲಿ ಸ್ಥಳಿಯ ನೂರಾರು ಜನರಿಂದ ತುಂಬಿ ತುಳುಕುತ್ತಿದ್ದು ನೋಡಿ ಹೌರಾರಿದ್ದಂತೂ ಸುಳ್ಳಲ್ಲ.

wedd4

ರಾಮಾಯಣ ಕಾಲದಲ್ಲಿದ್ದ ಮಂಥರೆಯಂತೆ, ಎಲ್ಲಾ ಮದುವೆ ಮನೆಗಳಲ್ಲೂ ಸಮಯಕ್ಕೆ ತಕ್ಕಂತೆ ಹುಟ್ಟಿಕೊಳ್ಳುವ ಕೆಲ ಮಂಥರೆಯರೂ ಸಹಾ ಇದೇ ಸಂದರ್ಭವನ್ನು ಬಳಸಿಕೊಂಡು, ಅರೇ ಇದೇನು? ಗಂಡಿನ ಮನೆಯವರನ್ನು ಹೀಗಾ ನೋಡಿಕೊಳ್ಳೋದು? ನಾವೇನು ಊಟಕ್ಕೆ ಗತಿ ಕೆಟ್ಟು ಅಷ್ಟು ದೂರದಿಂದ ಬಂದಿದ್ದೇವಾ? ಈ ಪರಿಯಾಗಿ ನೋಡಿಕೊಳ್ಳುವುದಕ್ಕಾ 220 ಕಿಮೀ ದೂರದ ಹೆಣ್ಣನ್ನು ತರಬೇಕಿತ್ತಾ? ಗಂಡಿನ ಮನೆಯವರಿಗಲ್ಲವೇ ಮೊದಲು ಊಟ ಹಾಕೋದು? ಎಂದು ಅಲ್ಲೊಂದು ಸಣ್ಣದಾದ ಅಸಮಧಾನವನ್ನು ಹುಟ್ಟು ಹಾಕಲು ಪ್ರಯತ್ನಿಸಿದರಾದರೂ, ವರನ ತಂದೆಯವರ ಸಮಯೋಚಿತ ತಾಳ್ಮೆಯಿಂದಾಗಿ ನಡೆಯಬಹುದಾಗಿದ್ದ ಎಲ್ಲಾ ಅವಗಢಗಳನ್ನೂ ಅರಂಭದಲ್ಲೇ ಚಿವುಟಿ ಹಾಕಿದ್ದು ವಧುವಿನ ತಂದೆಯವರಿಗೆ ತುಸು ನೀರಾಳವನ್ನು ನೀಡಿದ್ದಂತೂ ಸುಳ್ಳಲ್ಲ. ಕೂಡಲೇ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡೇ ಇದ್ದ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪರಿಚಯಸ್ಥರನ್ನು ಕೇಳಿಕೊಂಡು ಅಲ್ಲೇ ಇದ್ದ ಮತ್ತೊಂದು ಪ್ರಾಂಗಣದಲ್ಲಿ ಗಂಡಿನ ಮನೆಯವರೆಲ್ಲರನ್ನೂ ಕೂಡಿಸಿ ಸಾಂಗೋಪಾಂಗವಾಗಿ ಊಟೋಪಚಾರಗಳನ್ನು ಮಾಡಿಸಿದರೂ ಮಂಥರೆಯರ ಮನಸ್ಸಿನಲ್ಲಿ ಮೂಡಿದ್ದ ಜ್ವಾಲೆ ಆರದೇ ಸಣ್ಣ ಪುಟ್ಟದಾಗಿ ಪಿಸುಧನಿಯಲ್ಲಿ ಮಾತನಾಡಿ ಕೊಳ್ಳುತ್ತಿದ್ದದ್ದು ಗುಟ್ಟಾಗೇನು ಉಳಿಯಲಿಲ್ಲ.

saptapadi

ಮದುವೆಯ ಮನೆಯಲ್ಲಿ ಇಷ್ಟೆಲ್ಲಾ ರಂಪ ರಾದ್ಧಾಂತಳು ನಡೆಯುತ್ತಿದ್ದರೂ ಮಧುಮಗ ಮಧುಮಗಳು ಮತ್ತು ಪುರೋಹಿತರಿಗೂ ಇದ್ಯಾವುದರ ಪರಿವೇ ಇಲ್ಲದೇ, ಲಾಜಾ ಹೋಮ, ಎನ್ನರಸ ನನ್ನ ಉಪ್ಪಿನ ಮನೆ ಕೊಡ್ತೀನಿ ನಿಮ್ಮ ಅಕ್ಕಿಯ ಮನೆ ಕೊಡು ಎಂದೋ ಇಲ್ಲವೇ ಆನೆ ಕೊಡು ಎಂದು ಶಾಸ್ತ್ರವನ್ನು ಮುಂದುವರೆಸುತ್ತಾ ಸಪ್ತ ಪದಿಯ ಶಾಸ್ತ್ರದಲ್ಲಿ ಕನ್ಯಾ ಪಿತೃವು ವರನಿಂದ ಮಾಡಿಸಿಕೊಳ್ಳುವಂತಹ ಧರ್ಮೇಚ, ಅರ್ಥೇಚ, ಕಾಮೇಚ, ನಾತಿ ಚರಾಮಿ. ಅಂದರೆ ಧರ್ಮದ ವಿಷಯದಲ್ಲಿ ಹಣ ಗಳಿಸುವ ವಿಷಯದಲ್ಲಿ, ಸಂಭೋಗಾದಿ ವಿಷಯದಲ್ಲಿ ನಿನ್ನ ಒಪ್ಪಿಗೆ ಇಲ್ಲದೆ ಕಾರ್ಯ ಪ್ರವೃತ್ತವಾಗುವುದಿಲ್ಲ ಎಂದರ್ಥ ಬರುವ ಪ್ರತಿಜ್ಞೆಯನ್ನು ಮುಗಿಸಿಕೊಂಡು ಭೂಮದೂಟಕ್ಕೆ ಅಣಿಯಾಗುವಷ್ಟರಲ್ಲಿ ಉಳಿದೆಲ್ಲಾ ವಿಷಯಗಳೂ ಭೂದಿ ಮುಚ್ಚಿದ ಕೆಂಡದಂತೆ ಆರಿರುತ್ತದೆ.

ಮದುವೆಗೆ ಬಂದಿದ್ದ ನೆಂಟರಿಷ್ಟರೆಲ್ಲರೂ ನವದಂಪತಿಗಳು ಒಂದೇ ಎಲೆಯಲ್ಲಿ ಭೂಮದೂಟ ಮಾಡುತ್ತಿರುವುದನ್ನು ನೋಡುವುದಲ್ಲಿ ತಲ್ಲೀನರಾಗಿದ್ದರೆ, ಹುಡುಗಿಯ ತಂದೆ ಮದುವೆಗೆ ನಿರೀಕ್ಷೆಗೂ ಮೀರಿದ ಜನರು ಬಂದಿದ್ದಾರೆ. ಅವರಿಗೆಲ್ಲಾ ಸರಿಯಾದ ಊಟೋಪಚಾರಗಳು ನಡೆಯಿತೇ? ಅಡುಗೆಯವರು ಅವರನ್ನು ಹೇಗೆ ಸಂಭಾಳಿಸಿರಬಹುದು? ತಮ್ಮ ಕೆಲಸ ಮುಗಿಸಿ ಹೊರಡಲು ಅನುವಾದ ಓಲಗದವರಿಗೆ ದಕ್ಷಿಣೆ ನೀಡಬೇಕು? ಎಂಬ ಧಾವಂತದಲ್ಲೇ ಬಾಹ್ಯ ನೋಟಕ್ಕೆ ನಗುತ್ತಿದ್ದರೂ ಅಂತರ್ಮುಖಿಯಾಗಿ ಆತಂಕದಿಂದಲೇ ಒಂದೆರಡು ತುತ್ತನ್ನು ಬಾಯಿಗೆ ಹಾಕಿಕೊಂಡು ಊಟದ ಶಾಸ್ತ್ರವನ್ನು ಮುಗಿಸಿ ಮದುವೆಯ ಜವಾಬ್ಧಾರಿಯನ್ನು ಹೊತ್ತಿದ್ದ ತಮ್ಮ ಮಗನೊಂದಿಗೆ ಮದುವೆ ಮಾರನೆಯ ದಿನದ ಸತ್ಯನಾರಾಯಣ ಪೂಜೆ ಮತ್ತು ಬೀಗರ ಔತಣದ ಉಳಿದ ವ್ಯವಸ್ಥೆಗಳತ್ತ ಗಮನ ಹರಿಸಲು ಎದ್ದು ಬಿಡುತ್ತಾರೆ.

WhatsApp Image 2022-05-04 at 10.12.06 AM

ಸಾವಿರ ಸುಳ್ಳುಗಳನ್ನು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದ್ದರೂ, ಎಲ್ಲಾ ಕಡೆಯಲ್ಲೂ ಸತ್ಯಗಳನ್ನೇ ಹೇಳಿದರೂ ಮದುವೆ ಮಾಡುವುದು ಎಷ್ಟು ಕಷ್ಟ ಎಂದು ಹೆಣ್ಣು ಹೆತ್ತವರಿಗೆ ಮಾತ್ರ ಗೊತ್ತು. ಇಷ್ಟೆಲ್ಲಾ ಸಂಕಷ್ಟಗಳನ್ನೂ ದಾಟಿಕೊಂಡು ಹೀಗೆ 53 ವರ್ಷಗಳ ಹಿಂದೆ ನಡೆದದ್ದೇ ನಮ್ಮ ಅಪ್ಪ ಬಾ. ನಂ. ಶಿವಮೂರ್ತಿ(ಶಿವು) ಮತ್ತು ಅಮ್ಮ ( ಉಮಾವತಿ (ಮಣಿ)) ಅವರ ಮದುವೆ. ಇವತ್ತು ಅಪ್ಪಾ ಅಮ್ಮಾ ನಮ್ಮೊಂದಿಗೆ ಇಲ್ಲದಿದ್ದರೂ ಅವರು ನಮಗೆ ಕಲಿಸಿಕೊಟ್ಟ ಆದರ್ಶಗಳು ಮತ್ತು ಅವರ ತದ್ರೂಪುಗಳಾದ ಮೊಮ್ಮಕಳ ಮೂಲಕ ಸದಾ ಕಾಲವೂ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಮನುಷ್ಯನ ದೇಹಕ್ಕೆ ಅಂತ್ಯವಿದೆಯಾದರು ಮನುಷ್ಯರು ಮಾಡಿದ ಕೆಲಸಗಳಿಗೆ ಎಂದೂ ಅಂತ್ಯವಿರುವುದಿಲ್ಲ ಎನ್ನುವುದಕ್ಕೆ ನಮ್ಮ ಅಪ್ಪಾ ಅಮ್ಮನ ಮದುವೆಯಲ್ಲಿ ನಾನಿಲ್ಲದಿದ್ದರು ತಮ್ಮ ಮದುವೆಯ ಬಗ್ಗೆ ಅವರುಗಳು ಮತ್ತು ಮನೆಯ ಇತರೇ ಸದಸ್ಯರು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡು ಅದನ್ನೇ ಯಥಾವತ್ತಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಕರ್ಮಾಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ. ಅಂದರೆ, ನಿನ್ನ ಕೆಲಸಗಳನ್ನು ನೀನು ಅಚ್ಚುಕಟ್ಟಾಗಿ ಮಾಡು ಫಲಾಪಲಗಳನ್ನು ನನ್ನ ಮೇಲೆ ಬಿಡು ಎಂದಿದ್ದಾನೆ. ಹಾಗಾಗಿ ನೆನಪುಗಳೇ ಮಧುರ ಮತ್ತು ಅಮರ ಹಾಗಾಗಿ ನಮ್ಮ ಮನೆಗಳ ಸಭೆ ಸಮಾರಂಭಗಳಲ್ಲಿ ಮಂಥರೆಯರ ಮಾತುಗಳಿಗೆ ಬೆಲೆ ಕೊಡದೇ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುವುದರ ಮೂಲಕ ಆ ಕಾರ್ಯಕ್ರಮದ ನೆನಪು ಸದಾಕಾಲವೂ ಹಸಿರಾಗಿರುವಂತೆ ನೋಡಿ ಕೊಳ್ಳುವ ಜವಾಬ್ಧಾರಿ ನಮ್ಮ ನಿಮ್ಮದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಇತ್ತೀಚೆಗೆ ವಾಟ್ಸಾಪಿನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಈ ಭಾವಾನುವಾದವನ್ನು ಮೊದಲು ಓದಿದ ನಂತರ ವಿಚಾರಕ್ಕೆ ಬರೋಣ.

girlಒಂದೂರಿನಲ್ಲಿದ್ದ  ದೇವಸ್ಥಾನವೊಂದಕ್ಕೆ ಪ್ರತಿದಿನ ಮುಂಜಾನೆ ಒಂದು ಚಿಕ್ಕ ಹುಡುಗಿ ಬಂದು ದೇವರ ಮುಂದೆ ನಿಂತು, ಕಣ್ಗಳನ್ನು ಮುಚ್ಚಿ, ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಸಿಕೊಂಡು ಒಂದೆರಡು ನಿಮಿಷಗಳ ಕಾಲ ಏನನ್ನೋ ಗೊಣಗುತ್ತಾ, ನಂತರ ಕಣ್ಣು ತೆರೆದು, ನಮಸ್ಕರಿಸಿ, ನಗುತ್ತಾ ಓಡಿಹೋಗುತ್ತಿದ್ದಳು. ಇದು ಆಕೆಯ ದೈನಂದಿನ ಕಾರ್ಯವಾಗಿತ್ತು.

ಅ ಪುಟ್ಟ ಹುಡುಗಿಯನ್ನು ಪ್ರತಿದಿನವೂ ಗಮನಿಸುತ್ತಿದ್ದ ದೇವಸ್ಥಾನದ ಅರ್ಚಕರಿಗೆ ಅಷ್ಟು ಸಣ್ಣ ಹುಡುಗಿಗೆ ಧರ್ಮ ಆಚಾರ ವಿಚಾರಗಳ ಅರಿವಿಲ್ಲದಿದ್ದರೂ ಪ್ರತಿದಿನವೂ ಅದೇನೋ ಪ್ರಾರ್ಥಿಸುತ್ತಿದ್ದಾಳೆ. ಹಾಗಾಗಿ ಆಕೆ ಏನನ್ನು ಪ್ರಾರ್ಥಿಸುತ್ತಿದ್ದಾಳೆ ಎಂಬುದನ್ನು ತಿಳಿಯಲು ಪ್ರಯತ್ನಿಸಿದರಾದರೂ ಸಫಲವಾಗದೇ, ಅದೊಂದು ದಿನ ಎಂದಿನಂತ ಆಕೆ ದೇವಾಲಯಕ್ಕೆ ಬಂದು ಆಕೆಯ ಪ್ರಾರ್ಥನೆ ಮುಗಿದ ನಂತರ ಆಕೆಯ ತಲೆಯ ಮೇಲೆ ಆಶೀರ್ವಾದರೂಪದಲ್ಲಿ ಕೈಗಳನ್ನು ಇಟ್ಟು, ಪುಟ್ಟೀ ನಾನು ಬಹಳ ದಿನಗಳಿಂದಲೂ ನಿನ್ನನ್ನು ಗಮನಿಸುತ್ತಿದ್ದೇನೆ, ನೀನು ಪ್ರತಿದಿನವೂ ಇಲ್ಲಿಗೆ ಬಂದು ಅದೇನು ಮಾಡುತ್ತಿದ್ದೀಯೇ ಎಂದು ಕೇಳಿದರು.

ಆಕೆ ಕೂಡಲೇ ನಾನು ಪ್ರಾರ್ಥಿಸುತ್ತೇನೆ ಗುರುಗಳೇ ಎಂದು ಉತ್ತರಿಸಿದಳು.
ಹಾಂ! ಪ್ರಾರ್ಥನೆಯೇ? ಹಾಗಾದರೆ ಪ್ರಾರ್ಥನೆ ಎಂದರೆ ನಿನಗೇ ಏನು ತಿಳಿದಿದೆ ಎಂದು ಸ್ವಲ್ಪ ಅನುಮಾನದಿಂದಲೇ ಕೇಳಿದರು.
ಅದಕ್ಕೆ ಆ ಹುಡುಗಿ ಇಲ್ಲಾ.. ನನಗೆ ಯಾವ ಪ್ರಾರ್ಥನೆಯೂ ಗೊತ್ತಿಲ್ಲಾ ಎಂದು ಮುಗ್ಧಳಾಗಿ ಉತ್ತರಿಸಿದಳು.
ಹಾಗಾದರೆ ನೀನು ಪ್ರತಿದಿನವೂ ಕಣ್ಣು ಮುಚ್ಚಿಕೊಂಡು ಅದೇನೋ ಗೊಣಗುತ್ತಿರುತ್ತೇಯಲ್ಲಾ ಅದೇನು? ಎಂದು ಅವರು ಮುಗುಳ್ನಕ್ಕರು.
ಆಗ ಹುಡುಗಿ ತುಂಬಾ ಮುಗ್ಧಧತೆ ಯಿಂದ ನನಗೆ ಯಾವುದೇ ಶ್ಲೋಕ ಅಥವಾ ಪ್ರಾರ್ಥನೆ ತಿಳಿದಿಲ್ಲ. ಆದರೆ ನನಗೆ ಅಮ್ಮಾ ಹೇಳಿಕೊಟ್ಟ ಅ,ಆ,ಇ,ಈ… ಸ,ಹ,ಳ ವರೆಗೆ ಬರುತ್ತದೆ. ಹಾಗಾಗಿ ನಾನು ಅದನ್ನೇ ಐದು ಬಾರಿ ಭಕ್ತಿಯಿಂದ ದೇವರ ಮುಂದೆ ಹೇಳಿ, ದೇವರೇ ಎಲ್ಲರನ್ನೂ ಕಾಪಾಡಪ್ಪಾ ಎಂದು ಕೇಳಿಕೊಳ್ಳುತ್ತೇನೆ. ನನಗೆ ಪ್ರಾರ್ಥನೆ ಗೊತ್ತಿಲ್ಲದಿರಬಹುದು ಆದರೆ ನಿಮ್ಮ ಪ್ರಾರ್ಥನೆ, ಈ ವರ್ಣಮಾಲೆಗಳ ಹೊರತಾಗಿ ಇರುವಂತಿಲ್ಲ ಎನ್ನುವುದಂತೂ ಸತ್ಯ. ಹಾಗಾಗಿ ದಯವಿಟ್ಟು ನಿಮ್ಮ ಇಚ್ಛೆಯಂತೆ ವರ್ಣಮಾಲೆಗಳನ್ನು ಜೋಡಿಸಿ ಕೊಂಡಲ್ಲಿ ಅದುವೇ ನನ್ನ ಪ್ರಾರ್ಥನೆ ಎಂದು ತನ್ನ ಪಾಡಿಗೆ ಓಡಿ ಹೋಗುತ್ತಾಳೆ.

ಆಗ ಆ ಅರ್ಚಕರು ಮೂಕವಿಸ್ಮಿತರಾಗಿ ಅರೇ ಹೌದಲ್ಲಾ!! ಇಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಅರಿವಾದದ್ದು ನಮಗೇ ಹೊಳೆಯಲಿಲ್ಲಾ!!.. ನಾವು ಪ್ರಾರ್ಥಿಸುವ ದೇವರಿಗೆ ಪ್ರಾರ್ಥನೆಯ ಹೊರತಾಗಿ ಬೇಷರತ್ತಾದ ನಂಬಿಕೆ ಇರಬೇಕು ಅಲ್ಲವೇ ಎಂದು ಕೊಳ್ಳುತ್ತಾರೆ ಎಂಬ ಭಾವಾರ್ಥದಲ್ಲಿದೆ.

ಈ ಸಂದೇಶವನ್ನು ಒಮ್ಮೆ ಓದಿದ ಕೂಡಲೇ ಅರೇೆ ಭಗವಂತನ ಕುರಿತಾಗಿ ಪ್ರಾರ್ಥನೆಯ ಮಾಡುವ ಬಗ್ಗೆ ಎಷ್ಟು ಸರಳವಾಗಿ ಅ ಪುಟ್ಟ ಹುಡುಗಿ ತಿಳಿಸಿದ್ದಾಳೆ ಎಂದು ಕೊಂಡರೂ ಈ ಪ್ರಸಂಗವನ್ನು ಹೆಣೆದವರ ಹಿಂದಿನ ಚಾರ್ವಕತನವನ್ನು ಅರ್ಥ ಮಾಡಿಕೊಳ್ಳಲು ತುಸು ಸಮಯವೇ ಹಿಡಿಯುತ್ತದೆ. ಪ್ರಾರ್ಥನೆ ಎಂದರೆ ಅದು ಕೇವಲ ಕೆಲವು ಶ್ಲೋಕಗಳು, ಮಂತ್ರಗಳು, ಹಾಡು, ಭಜನೆ, ಮಡಿ ಮೈಲಿಗೆ ಭಕ್ತಿ, ಪೂಜೆ, ನೈವೇದ್ಯ, ಆರತಿ ಮತ್ತು ಪ್ರಸಾದ ವಿತರಣೆ ಅಷ್ಟೇ ಅಲ್ಲ. ಇವಲ್ಲವೂ ನಮ್ಮಲ್ಲಿ ಏಕಾಗ್ರತೆಯನ್ನು ಮೂಡಿಸುವುದಕ್ಕೆ ಇರುವ ಸಾಧನಗಳು ಎಂಬುದರ ಅರಿವಿಲ್ಲದೇ ಪ್ರಾರ್ಥನೆಯನ್ನು  ಮೂದಲಿಸುವುದು ದುರಾದೃಷ್ಟಕರವಾಗಿದೆ.

ಮನಸ್ಸಿನಲ್ಲಿ ಏಕಾಗ್ರತೆ ಬರಲು ಧ್ಯಾನ ಮಾಡಬೇಕು ಎಂದು 2 ನಿಮಿಷಗಳ ಕಾಲ ಸುಮ್ಮನೆ ಕಣ್ಮುಚ್ಚಿ ಕುಳಿತಲ್ಲಿ ಚಂಚಲ ಮನಸ್ಸು ಅತ್ತಿಂದಿತ್ತಾ ಓಡಾಡುತ್ತಿರುತ್ತದೆ. ಅದಕ್ಕಾಗಿಯೇ ದೇವರುಗಳನ್ನು ಕಲ್ಪನೆ ಮಾಡಿ ಅದನೇ ಮೂರ್ತಿರೂಪದಲ್ಲಿ ಸಾಕಾರಗೊಳಿಸಿ ಅದನ್ನೇ ಕೇಂದ್ರೇ ಕರಿಸಿಕೊಂಡಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ. ಅದೇ ರೀತಿ ಮಂತ್ರ ಶ್ಲೋಕ, ಭಜನೆಗಳನ್ನು ಮಾಡುವುದರಿಂದ ಮನಸ್ಸು ಬೇರೆಲ್ಲೂ ಹೋಗದೇ ಒಂದೇ ಕಡೆ ಮೂಡುವ ಮೂಲಕ ಮನಸ್ಸಿಗೆ ಮುದ ನೀಡುತ್ತದೆ. ಇನ್ನು ಹಾಡು ಮತ್ತು ಭಜನೆಗಳನ್ನು ಸಂಗೀತ ರೂಪದಲ್ಲಿ ಹಾಡಿದಾಗ ನಮ್ಮಲ್ಲಿರಬಹುದಾದ ವಿರಕ್ತಿಗಳೆಲ್ಲವೂ ಮಾಯವಾಗುತ್ತದೆ. ವೇದ ಮಂತ್ರಗಳು ಮತ್ತು ಶ್ಕೋಕಗಳನ್ನು ಸರಿಯಾಗಿ ಸ್ವರ ಬದ್ಧವಾಗಿ ಪಠಣ ಮಾಡುವಾಗ ದೇಹದ ಎಲ್ಲಾ ಅಂಗಗಳೂ ಜಾಗೃತವಾಗಿ ಅದರ ತರಂಗಾಂತರಗಳಿಂದ ಬಹಳ ರೀತಿಯ ಅನಾರೋಗ್ಯಗಳು ದೂರವಾಗುತ್ತವೆ. ಎಲ್ಲದ್ದಕಿಂತಲೂ ಹೆಚ್ಚಾಗಿ ಚಿಕ್ಕ ಮಕ್ಕಳು ವೇದಾಧ್ಯಯನ, ಶ್ಲೋಕ, ಹಾಡು ಮತ್ತು ಭಜನೆಗಳನ್ನು ಕಲಿತುಕೊಳ್ಳುವುದರಿಂದ ಅವರ ಮಾತಿನ ಉಚ್ಚಾರ ಶುದ್ಧವಾಗುವುದಲ್ಲದೇ, ಜ್ಣಾಪಕಶಕ್ತಿ ವೃದ್ಧಿಯಾಗುತ್ತದೆ. ಅದಕ್ಕೇ ಅಲ್ಲವೇ ನಿಶ್ಕಲ್ಮಶವಾದ ಚಿಕ್ಕವಯಸ್ಸಿನಲ್ಲಿ ಕಲಿತ ಬಾಲ ಪಾಠಗಳು ಎಷ್ಟೇ ವಯಸ್ಸಾದರು ಸ್ಪಷ್ಟವಾಗಿ ನಮ್ಮ ನೆನಪಿನಂಗಳದಲ್ಲಿ ಇರುತ್ತದೆ.

ನಮ್ಮ ಹಿರಿಯರು ಮಾಡಿರುವ ಪ್ರತಿಯೊಂದು ಆಚಾರ ವಿಚಾರ ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಕಾರಣಗಳಿದ್ದು ದುರಾದೃಷ್ಟವಶಾತ್ ನಾವಿಂದು ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೇ ಅವುಗಳನ್ನು ಮೂಢ ನಂಬಿಕೆ, ಮನುವಾದಿತನ, ಬ್ರಾಹ್ಮಣ್ಯತ್ವ ಎಂದು ಜರಿಯುತ್ತಿರುವುದು ಒಂದು ಕಡೆಯಾದರೆ ಈ ಹಿಂದೆ ಕೆಲವು ಬೆರಳೆಣಿಕೆಯಷ್ಟು ಮಂದಿ ಈ ರೀತಿಯ ಆಚಾರ ವಿಚಾರಗಳನ್ನೇ ಅತಿಯಾಗಿ ನಂಬಿಕೊಂಡು ಕಟ್ಟರ್ ವಾದಿಗಳಾಗಿ ಮಡಿ ಮೈಲಿಗೆ ಎಂದು ಪಂಕ್ತಿ ಬೇಧ ಮಾಡುವ ಮೂಲಕ ಜನರಲ್ಲಿ ನಮ್ಮ ಧರ್ಮ ಮತ್ತು ಆಚಾರ ವಿಚಾರಗಳಲ್ಲಿ ನಂಬಿಕೆ ಕಳೆದುಕೊಂಡು ಹೋಗುವಂತೆ ಮಾಡಿರುವುದನ್ನೂ ಅಲ್ಲಗಳೆಯಲಾಗದು. ಅದೃಷ್ಟವಷಾತ್ ನಮ್ಮಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಆಚಾರ್ಯರು ಮತ್ತು ಧರ್ಮಗುರುಗಳು ನಮ್ಮ ಆಚರಣೆಯನ್ನು ಪರಾಂಬರಿಸಿ ಈಗಿನ ಕಾಲ ಘಟ್ಟಕ್ಕೆ ಅನುಗುಣವಾಗಿ ಸೂಕ್ತವಾದ ಬದಲಾವಣೆ ತರುತ್ತಿರುವುದು ಉತ್ತಮ ಬೆಳವಣಿಯಾಗಿದೆ. ಇದಕ್ಕೆ ಉತ್ತಮ ಉದಾರಣೆಯೆಂದರೆ ಸಹಾಗಮನ ಪದ್ದತಿ ವಿಧವಾ ಕೇಳ ಮುಂಡನ ರದ್ದಾದರೆ, ವಿಧವಾ ಮರು ವಿವಾಹ ಸ್ವಾಗತಾರ್ಹವಾಗಿದೆ.

arishinaಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಮಕೂರಿನಲ್ಲಿ ಜರುಗಿದ ವಿವಾಹವೊಂದರಲ್ಲಿ ಮಧುಮಗ ಎಲ್ಲಾ ರೀತಿಯ ಶಾಸ್ತ್ರ ಸಂಪ್ರದಾಯಗಳನ್ನೂ ಧಿಕ್ಕರಿಸಿ ನೂರಾರು ಜನರ ಸಮ್ಮುಖದಲ್ಲಿ ಕೇವಲ ಮಧುಮಗಳಿಗೆ ಮಂಗಲಸೂತ್ರವನ್ನು ಕಟ್ಟಿ ವಿವಾಹವಾಗಿರುವುದು ವೈರಲ್ ಆಗಿದೆ. ಇಷೇ ಆಗಿದ್ದರೆ ಅದೊಂದು ಉತ್ತಮವಾದ ಬೆಳವಣಿಗೆ ಎಂದು ಶ್ಲಾಘಿಸಬಹುದಾಗಿತ್ತು. ಆದರೆ ಎಲ್ಲರ ಸಮ್ಮುಖದಲ್ಲಿ ಎಲ್ಲರ ಸಮ್ಮುಖದಲ್ಲಿ ನಮ್ಮ ಶಾಸ್ತ್ರ ಸಂಪ್ರದಾಯಗಳನ್ನು ತಾನೂ ಸಹಾ ಸರಿಯಾಗಿ ಅರ್ಥ ಮಾಡಿಕೊಳ್ಳದೇ ವಿವಾಹಕ್ಕೆ ಬಂದಿದ್ದವರೆಲ್ಲರ ತಲೆಗಳಲ್ಲಿ ಅನುಮಾನದ ಹುಳವನ್ನು ಬಿಟ್ಟಿರುವುದು ನಿಜಕ್ಕೂ ದುರಾದೃಷ್ಟಕರವಾಗಿದೆ. ನೂರಾರು ರೀತಿಯ ಸೋಪು ಶಾಂಪು ಬಳಸುವ ಇಂದಿನ ಯುಗದಲ್ಲಿ ಅರಿಶಿನ ಶಾಸ್ತ್ರವೇಕೇ? ಅಕ್ಕಿ, ಬೇಳೆ, ಎಣ್ಣೆಗಳು ಹಣ ನೀಡಿದರೆ ನೇರವಾಗಿ ಮಿಲ್ಲುಗಳಿಂದ ಲಭ್ಯವಾಗವೇಕಾದರೆ, ಭತ್ತ ಕುಟ್ಟುವ ಶಾಸ್ತ್ರವೇಕೇ? ಶಾಸ್ತ್ರ, ಸಂಪ್ರದಾಯ, ಪುರೋಹಿತರು, ಚಪ್ಪರ, ಅಡುಗೆಯವರು, ಓಲಗ ಎಂದೆಲ್ಲಾ ಲಕ್ಷಾಂತರ ರೂಪಾಯಿಗಳನ್ನೇಕೆ ಖರ್ಚು ಮಾಡಬೇಕು? ಎಂದು ಪ್ರಶ್ನೆ ಮಾಡಿರುವ ವೀಡಿಯೋ ನೋಡಿದಾಗ ನಮ್ಮ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಸರಿಯಾಗಿ ಅರಿವಿಲ್ಲದ ಅವರ ಬೌದ್ಧಿಕ ದೀವಾಳಿತನಕ್ಕೆ ಮರುಕವುಂಟಾಗುವುದಲ್ಲದೇ, ತುಸು ಕೋಪವೂ ಬರುತ್ತದೆ.

ಇಂತಹ ವಿಕೃತಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇದೊಂದು ಕ್ರಾಂತಿಕಾರಿ ಬೆಳವಣಿಗೆ, ಬ್ರಾಹ್ಮಣ್ಯಕ್ಕೆ ಇಟ್ಟ ಕೊಳ್ಳಿ, ಸಂಸ್ಕೃತಕ್ಕೆ ಧಿಕ್ಕಾರ, ಮನುವಾದಿಗಳಿಗೆ ಬರ್ನಾಲ್, ತಟ್ಟೇ ಕಾಸಿನವರಿಗೆ ಬಗಣೀ ಗೂಟ ಎಂದೆಲ್ಲಾ ನೂರಾರು ಮಂದಿ ಸಮರ್ಥನೆ ಮಾಡುವುದನ್ನು ಓದಿದಾಗ ನಿಜಕ್ಕೂ ರಕ್ತ ಕುದಿಯುತ್ತದೆ. ಹೀಗೆ ರಕ್ತ ಕುದಿಯುವುದು ವಿರೋಧಿಸುವ ಭರದಿಂದಾಗಿರದೇ, ನಮ್ಮ ಅಚಾರ ವಿಚಾರಗಳ ಮೌಢ್ಯತನದಿಂದಾಗಿ ಈ ರೀತಿಯ ಪರಿಸ್ಥಿತಿಯನ್ನು ತಂದುಕೊಂಡಿರುದಕ್ಕಾಗಿ ರಕ್ತ ಕುದಿಯುತ್ತದೆ. ಈ ಎಲ್ಲಾ ಶಾಸ್ತ್ರಗಳ ಹಿಂದೆಯೂ ವೈಜ್ಞಾನಿಕ ಕಾರಣ ಇರುವುದಲ್ಲದೇ, ಮದುವೆ ಮುಂಜಿ, ಶ್ರೀಮಂತ ನಾಮಕಾರಣ ಅಷ್ಟೇ ಏಕೆ ತಿಥಿ ಮುಂತಾದ ಸಭೆ ಸಮಾರಂಭಗಳ ಮೂಲಕ ಹತ್ತು ಹಲವಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಕೊಡುತ್ತಾ ಸಮಾಜದಲ್ಲಿ ಆರ್ಥಿಕ ಸುಧಾರಣೆಯನ್ನು ತರುವುದೇ ಇದರ ಹಿಂದಿನ ಮೂಲ ಉದ್ದೇಶವಾಗಿರುವುದನ್ನು ಅರಿತು ಕೊಳ್ಳದೇ ಓತಪ್ರೋತವಾಗಿ ನಾಲಿಗೆ ಹರಿಬಿಡುವುದು ವಿಪರ್ಯಾಸವಾಗಿದೆ.

ನಿಜ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿ ಇದಕ್ಕಿಂತಲೂ ಕೆಟ್ಟದಾದ ಆರ್ಥಿಕ ಪರಿಸ್ಥಿತಿ ಇತ್ತು. ಅಂದೆಲ್ಲಾ ಮನೆಗಳಲ್ಲಿ ದುಡಿಯುವ ಕೈ ಒಂದಾದರೆ, ತಿನ್ನುವ ಕೈ ಹತ್ತಾರು ಇತ್ತು. ಮನೆಗಳೆಲ್ಲವೂ ಸಣ್ಣದಾದರೂ ಮನಸ್ಸು ದೊಡ್ಡದಾಗಿದ್ದ ಕಾರಣ ಅಷ್ಟೂ ಮಕ್ಕಳಿಗೆ ತಕ್ಕ ಮಟ್ಟಿಗಿನ ವಿದ್ಯಾಭ್ಯಾಸದ ಜೊತೆಗೆ ಮದುವೆ ಮಂಜಿ ನಾಮಕರಣಗಳು ನಿರ್ವಿಘ್ನವಾಗಿ ನಡೆದುಕೊಂಡು ಹೋಗುವುದರ ಹಿಂದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವಿರುತ್ತಿತ್ತು. ಊರಿನಲ್ಲಿ ಒಬ್ಬರ ಮನೆಯಲ್ಲಿ ಮದುವೆ ಎಂದರೆ ಇಡೀ ಊರಿಗೆ ಊರೇ ಸಂಭ್ರಮ ಪಡುತ್ತಿದ್ದದ್ದಲ್ಲದೇ ಅದು ತಮ್ಮ ಮನೆಯ ಸಮಾರಂಭವೇನೋ ಎನ್ನುವಂತೆ ಎಲ್ಲರು ಅದರಲ್ಲಿ ತನು ಮನ ಧನಗಳಿಂದ ಭಾಗಿಗಳಾಗಿ ಒಟ್ಟಿಗೆ ಊರಿಗೆ ಊರೇ ಚಪ್ಪರ ಹಾಕಿ ತಳಿರು ತೋರಣಗಳಿಂದ ಸಿಂಗರಿಸಿದರೆ, ಹೆಂಗಸರು ಸಾರಿಸಿ ಗುಡಿಸಿ ರಂಗೋಲಿ ಇಟ್ಟು ಭತ್ತವನ್ನು ಕುಟ್ಟಿ ಅಕ್ಕಿ ಮಾಡಿ ಶುಭ್ರಗೊಳಿಸಿ ಅಡುಗೆಯಲ್ಲೂ ಸಹಾಯ ಮಾಡುತ್ತಿದ್ದರು. ಇನ್ನು ದೂರದ ಊರಿನಿಂದ ಬರುವ ಬಂಧು ಮಿತ್ರರು ಬರಿ ಕೈಯ್ಯಲ್ಲಿ ಬರದೇ ಅಕ್ಕಿ ಬೇಳೆ, ಬೆಲ್ಲ, ತೆಂಗಿನಕಾಯಿ, ಹಣ್ಣು ಹಂಪಲುಗಳು, ಕಡೇ ಪಕ್ಷ ಇದಾವುದೂ ಇಲ್ಲದೇ ಹೋದಲ್ಲಿ ಮನೆಯಲ್ಲಿ ಬೆಳೆದ ಕಾಯಿಪಲ್ಲೆ, ತೆಂಗಿನಕಾಯಿ ತರುತ್ತಿದ್ದ ಕಾರಣ ಮನೆಯವರಿಗೆ ಹೆಚ್ಚಿನ ಹೊರೆ ಯಾಗುತ್ತಿರಲಿಲ್ಲ. ಪುರದಹಿತವನ್ನು ಕಾಪಾಡುವ ಪುರೋಹಿತರು ಶಾಸ್ತ್ರ ಸಂಪ್ರದಾಯದ ಮೂಲಕ ನಿರ್ವಿಘ್ನವಾಗಿ ಮುಗಿಸುತ್ತಿದ್ದ ಕಾರಣ ಆರ್ಥಿಕವಾಗಿ ಹೆಚ್ಚಿಗೆ ಯಾರಿಗೂ ತೊಂದರೆ ಆಗುತ್ತಿರಲಿಲ್ಲ. ಇದರ ಹೊರತಾದ ಬಟ್ಟೆ ಬರೆ ಆಭರಣ ಹೀಗೆ ಹತ್ತು ಹಲವಾರು ಜನರಿಗೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಆದರೆ ಆರ್ಥಿಕವಾಗಿ ಸಧೃಢರಾದ ಕೂಡಲೇ ಎಲ್ಲರ ಮನೆಗಳೂ ದೊಡ್ಡದಾದರೂ ಮನಸ್ಸುಗಳು ಚಿಕ್ಕದಾಗತೊಡಗಿತು. ದುಡ್ಡಿದ್ದರೆ ಯಾವುದನ್ನು ಬೇಕಾದರೂ ಎಷ್ಟು ಬೇಕಾದರು ಕೊಂಡು ಕೊಳ್ಳಬಹುದು ಎಂಬ ಧೋರಣೆ ಬೆಳಸಿಕೊಂಡಿದ್ದೇ ತಡಾ ಎಲ್ಲವೂ ವ್ಯಾಪಾರೀಕರಣಗೊಂಡು ಪರಸ್ಪರ ಸಂಬಂಧಗಳು ಕ್ಷೀಣಿಸಿಕೊಂಡ ಪರಿಣಾಮವಾಗಿ ಇಂದು ಮನೆಯ ಮುಂದೆ ಚಪ್ಪರ ಹಾಕಿಸಲು 5-10 ಸಾವಿರ, ಓಲಗದವರಿಗೆ 10-15 ಸಾವಿರ, ಅಡುಗೆಯವರಿಗೆ ಲಕ್ಷ ಲಕ್ಷ, ತಮ್ಮ ಆಡಂಭರ ತೋರಿಸಿಕೊಳ್ಳಲು ಕಲ್ಯಾಣ ಮಂಟಪಗಳಿಗೆ ಲಕ್ಷಾಂತರ ರೂಪಾಯಿ, ಇನ್ನು ಅವರವರ ಅಂತಸ್ತಿಗೆ ತಕ್ಕಂತೆ ಉಡುಗೆ ತೊಡಿಗೆ ಆಭರಣಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಛು ಮಾಡಲು ಮುಂದಾದ ಕಾರಣದಿಂದಾಗಿಯೇ ಸಭೆ ಸಮಾರಂಭಗಳು ದುಬಾರಿ ಆದವೇ ಹೊರತು ಶಾಸ್ತ್ರ ಸಂಪ್ರದಾಯಗಳಿಂದಲ್ಲ ಎನ್ನುವುದನ್ನು ಮರೆತಿರುವುದು ವಿಷಾಧನೀಯವಾಗಿದೆ.

ಬಹಳ ಹಿಂದೆ ಸಂಸ್ಕೃತವೇ ಆಡು ಭಾಷೆಯಾಗಿದ್ದ ಕಾರಣ ನಮ್ಮ ವೇದ ಶಾಸ್ತ್ರ ಪುರಾಣಗಳೆಲ್ಲವೂ ಸಂಸ್ಕೃತಮಯವಾಗಿತ್ತು. ಆದರೆ ಇಂದು ಅನೇಕರು ಸಣ್ಣ ಸಣ್ಣ ಪ್ರಮಾಣದಲ್ಲಿ ಅವುಗಳನ್ಣೇ ಕನ್ನಡೀಕರಿಸಿರುವುದಕ್ಕೆ ಹಿರೇಮಗಳೂರು ಕಣ್ಣನ್ ಅವರ ತಂದೆಯವರಾಗಿದ್ದ ಶ್ರೀ ಸವ್ಯಸಾಚಿಗಳೇ ಸಾಕ್ಷಿ. ಅದೇ ರೀತಿ ರಾಷ್ಟಕವಿ ಕುವೆಂಪುರವರೂ ಸಹಾ ಸರಳವಾಗಿ ಮದುವೆ ಮಾಡುವ ಪದ್ದತಿಯನ್ನು ರೂಢಿಗೆ ತಂದಿರುವುದನ್ನು ನೆನಪಿಸಿಕೊಳ್ಳಬೇಕಾಗಿದೆ.

ಹಾಗಾಗಿ ಸುಖಾ ಸುಮ್ಮನೇ ಯಾರದ್ದೋ ಮಾತುಗಳು ಮತ್ತು ಧೋರಣೆಗೆ ಕಟ್ಟು ಬಿದ್ದು ನಮ್ಮ ಪ್ರಾರ್ಥನೆ, ಆಚಾರ ವಿಚಾರ ಸಂಪ್ರದಾಯಗಳನ್ನು ಧಿಕ್ಕರಿಸುವ ಬದಲು ಅವುಗಳನ್ನು ಸರಿಯಾಗಿ ಅರಿತುಕೊಂಡು ಅರ್ಥಪೂರ್ಣವಾಗಿ ಸರಳವಾಗಿಯೇ ಆಚರಿಸಬಹುದಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ಕೊರೋನಾ ಬಂದು ಇಡೀ ಪ್ರಪಂಚವೇ ಕಳೆದು ಒಂದೂವರೆ ವರ್ಷಗಳಿಂದ ಲಾಕ್ಡೌನ್ ಆಗಿರುವಾಗ ಅರೇ ಇದೇನಪ್ಪಾ ಇಂತಹ ಶೀರ್ಷಿಕೆ ಎಂದು ಆಶ್ಚರ್ಯ ಪಡುತ್ತಿದ್ದರೆ ನಿಮಗೊಂದು ಅಚ್ಚರಿಯ ಸಂಗತಿಗಳೊಂದಿಗೆ ನಿಮಗೆ ಸಾದರ ಪಡಿಸುವ ಸಣ್ಣದಾದ ಪ್ರಯತ್ನ

ಕೊರೋನಾ ವಕ್ಕರಿಸುವುದಕ್ಕಿಂತಲೂ ಮುಂಚೆ, ಎಲ್ಲರ ಮನೆಗಳಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಸಮಾರಂಭಗಳೂ ಸಹಾ ಬಹಳ ಅದ್ದೂರಿಯಿಂದ ನೂರಾರು ಜನರ ಸಮ್ಮುಖದಲ್ಲಿ ನಡೆಯುತ್ತಿತ್ತು. ಇನ್ನೂ ಮದುವೆ ಮುಂಜಿ ಉಪನಯನಗಳಲ್ಲಂತೂ ಸಾವಿರಾರು ಜನರನ್ನು ಸೇರಿಸಿ ನಭೂತೋ ನ ಭವಿಷ್ಯತಿ ಎನ್ನುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಜಾಂ ಜಾಂ ಎಂದು ನಡೆಸುತ್ತಿದ್ದರು. ನಿಜ ಹೇಳಬೇಕೆಂದರೆ ಈ ಎಲ್ಲಾ ಸಮಾರಂಭಗಳಲ್ಲಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಆತ್ಮೀಯತೆಗಿಂತ ಅಬ್ಬರದ ಆಡಂಬರವೇ ಪ್ರಾಧಾನ್ಯವಾಗಿ ಕಾರ್ಯಕ್ರಮಕ್ಕೆ ಬಂದಿರುವವರನ್ನು ಸರಿಯಾಗಿ ಯಾರೂ ವಿಚಾರಿಸಿಕೊಳ್ಳದೇ, ಬಂದವರು ಬಂದರು ಹೋದವರು ಹೋದರು ಎನ್ನುವಂತೆ ಹೊಟ್ಟೆ ಭರ್ತಿ ಉಂಡು ಲೋಕಾರೂಢಿಯಾಗಿ ಉಡುಗೊರೆಯೊಂದನ್ನು ಕೊಟ್ಟು ಫೋಟೋ ಇಲ್ಲವೇ ವೀಡಿಯೋ ತೆಗೆಸಿಕೊಳ್ಳುವುದಕ್ಕೆ ಮಾತ್ರವೇ ಸೀಮಿತವಾಗಿ ಹೋಗಿದ್ದದ್ದು ವಿಪರ್ಯಾಸವಾಗಿತ್ತು.

ಯಾವಾಗ ಕೊರೋನ ವಕ್ಕರಿಸಿ ಕೊಂಡಿತೋ, ಅದನ್ನು ತಡೆಗಟ್ಟುವುದಕ್ಕೆ ಮಾಸ್ಕ್ ಧರಿಸುವುದು, ಶುಚಿತ್ವ ಕಾಪಾಡಿ ಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದೊಂದೇ ಸೂಕ್ತವಾದ ಮಾರ್ಗ ಎಂದು ತಿಳಿಯುತ್ತಿದ್ದಂತೆಯೇ, ಸರ್ಕಾರವು ಎಲ್ಲಾ ಸಭೆ ಸಮಾರಂಭಗಳಿಗೆ ಅಂಕುಶವನ್ನು ಹಾಕಿದ್ದಲ್ಲದೇ, ಮೂವತ್ತು ನಲವತ್ತು ಜನರಿಗಷ್ಟೇ ಸೀಮಿತಗೊಳಿಸಿತು. ಆರಂಭದಲ್ಲಿ ಸರ್ಕಾರದ ಈ ನಿಯಮ ಅನೇಕರಿಗೆ ಕೋಪ ತರಿಸಿದರೂ ನಂತರದ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರದ ನಿಯಮಗಳು ಸೂಕ್ತ ಎನಿಸಿ ಅದಕ್ಕೆ ತಕ್ಕಂತೆ ಅನುಸರಿಸಿದ್ದು ಮೆಚ್ಚಿಗೆಯ ವಿಷಯವಾಗಿತ್ತು.

ನಮ್ಮ ಕುಟುಂಬದಲ್ಲೂ ಇದಕ್ಕೆ ಹೊರತಾಗಿರಲಿಲ್ಲ. ನಮ್ಮ ತಂದೆ ತಾಯಿಯರ ಶ್ರಾದ್ಧ ಕಾರ್ಯಕ್ಕೆ ಸುಮಾರೂ ಐವತ್ತು ಅರವತ್ತು ಜನರು ಸೇರುವುದು ಸಹಜ ಪ್ರಕ್ರಿಯೆಯಾಗಿತ್ತು. ಈ ಕೊರೋನಾದಿಂದಾಗಿ ಶ್ರಾದ್ಧ ಕಾರ್ಯಗಳನ್ನು ಮಾಡಿಸಲು ಪೌರೋಹಿತರು ಮತ್ತು ಅಡುಗೆಯವರು ಸಿಗದೇ ಹೋದಂತಹ ಪರಿಸ್ಥಿತಿಯ ಜೊತೆಗೆ ಕುಟುಂಬದವರು ಕೊರೋನಾ ನೆಪದಿಂದ ಬರಲು ಹಿಂದೇಟು ಹಾಕಿದಾಗ ವಿಧಿ ಇಲ್ಲದೇ ಮನೆಯ ಮಟ್ಟಿಗೆ ಶ್ರದ್ಧೆಯಿಂದ ಶ್ರಾದ್ಧವನ್ನು ಮಾಡಿ ಪಿತೃಕಾರ್ಯವನ್ನು ಮುಗಿಸಿದ್ದೆವು.

ವರ್ಷದ ಹಿಂದೆಯೇ ತಂಗಿಯ ಮಗಳಿಗೆ ಸಂಬಂಧ ಗೊತ್ತಾಗಿದ್ದರೂ ಕೊರೋನಾದಿಂದಾಗಿ ನಿಶ್ಚಿತಾರ್ಥ ಮತ್ತು ಮದುವೆಯನ್ನು ಮುಂದೂಡುತ್ತಲೇ ಬಂದು ಕಡೆಗೆ ಕಳೆದ ಅಕ್ಟೋಬರ್ ಸಮಯದಲ್ಲಿ ಕೊರೋನಾ ಸ್ವಲ್ಪ ಕಡಿಮೆಯಾದಾಗ ಸರ್ಕಾರೀ ನಿಯಮದಂತೆಯೇ, ಕೇವಲ ಮೂವತ್ತು ಜನರ ಸಮ್ಮುಖದಲ್ಲಿಯೇ ನಿಶ್ಚಿತಾರ್ಥ ನಡೆಸಿದಾಗ, ಮನೆಯ ಅನೇಕ ಹಿರಿಯರು ನೀವೆಲ್ಲಾ ದೊಡ್ಡವರಾಗಿ ಬಿಟ್ರೀ. ನಮ್ಮನ್ನೆಲ್ಲಾ ಕರೆಯದೇ ನಿಮ್ಮ ಪಾಡಿಗೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿಯೂ ಆಗಿತ್ತು. ಆನಂತರ ಅವರಿಗೆ ಕಾರ್ಯಕ್ರಮದ ವೀಡೀಯೋ ಮತ್ತು ಪೋಟೋಗಳನ್ನು ತೋರಿಸಿ ಕೇವಲ ಮನೆಯ ಮಟ್ಟಿಗೆ ಮಾಡಿಕೊಂಡಿದ್ದೇವೆ ಎಂದು ಸಮಾಧಾನ ಪಡಿಸುವುದರಲ್ಲಿ ಸಾಕು ಸಾಕಾಗಿ ಹೋಗಿತ್ತು.

ಮದುವೆಯನ್ನಾದರೂ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗೇ ಮಾಡೋಣ ಎಂದು ತೀರ್ಮಾನಿಸಿ ಅದಕ್ಕೆ ತಕ್ಕಂತೆ ಛತ್ರ, ಪುರೋಹಿತರು, ಅಡುಗೆಯವರು, ಪೋಟೋ, ಓಲಕ, ಹೀಗೆ ಎಲ್ಲರನ್ನೂ ಸಂಪರ್ಕಿಸಿ ಎಲ್ಲರಿಗೂ ಮುಂಗಡವನ್ನು ಕೊಟ್ಟು ಒಪ್ಪಿಸಲಾಗಿತ್ತು. ದುರಾದೃಷ್ಟವಶಾತ್ ಮತ್ತೆ ಕೊರೋನಾ ಎರಡನೇ ಅಲೇ ಮಿತಿ ಮೀರೀ ಹರಡಿ ಅನೇಕ ಹತ್ತಿರದ ಬಂಧು ಮಿತ್ರರನ್ನೇ ಆಹುತಿ ತೆಗೆದುಕೊಂಡಾಗ ಸರ್ಕಾರವೂ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ಡೌನ್ ಮತ್ತೊಮ್ಮೆ ಘೋಷಿಸಿದ್ದಲ್ಲದೇ ಮತ್ತೆ ಮದುವೆ ಮುಂಜಿ ಮತ್ತು ಸಮಾರಂಭಳಿಗೆ ಜನರ ಮಿತಿಯನ್ನು ಹೇರಿದಾಗ ಮತ್ತೊಮ್ಮೆ ಕುಟುಂಬದಲ್ಲಿ ಆತಂಕದ ಛಾಯೆ. ಮದುವೆಗೆ ಇನ್ನೇನು ಹತ್ತು ದಿನಗಳವರೆಗೂ ಎಲ್ಲವೂ ಅಯೋಮಯವಾಗಿತ್ತು. ಕಡೆಗೆ ಛತ್ರದವರು ಫೋನ್ ಮಾಡಿ ಸರ್ಕಾರದ ಆಜ್ಞೆಯ ಅನುಸಾರವಾಗಿ ನಿಮ್ಮ ಮದುವೆಗೆ ನಮ್ಮ ಛತ್ರ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ ಆದರೂ ಮನೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದಾಗ ಕೊಂಚ ನಿರಾಳ.

ಮತ್ತೆ ಪುರೋಹಿತರು, ಪೋಟೋದವರಿಗೆ, ಹೂವಿನವರಿಗೆ, ಅಡುಗೆಯವರಿಗೆ, ಅಲಂಕಾರ ಮಾಡುವವರಿಗೆ ಎಲ್ಲರೀಗೂ ಮನೆಯಲ್ಲಿಯೇ ಮನೆಮಟ್ಟಿಗೆ ಮದುವೆ ಮಾಡುತ್ತಿರುವ ವಿಷಯವನ್ನು ತಿಳಿಸಿ ಮತ್ತೊಮ್ಮೆ ಬಂಧು ಮಿತ್ರರಿಗೆಲ್ಲರಿಗೂ ಅನಿವಾರ್ಯ ಕಾರಣಗಳಿಂದಾಗಿ ಮದುವೆಯನ್ನು ಮನೆಯ ಮಟ್ಟಿಗೆ ಮನೆಯಲ್ಲೇ ಮಾಡುತ್ತಿರುವ ವಿಷಯವನ್ನು ತಿಳಿಸುವುದಕ್ಕೂ ಕೊಂಚ ನಿರಾಸೆಯಾದರೂ, ವಿಧಿ ಇಲ್ಲದೇ ಎಲ್ಲರಿಗೂ ವಿಷಯವನ್ನು ತಿಳಿಸಿ, ಅದರ ಜೊತೆಗೆ ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲರು ಅವರವರ ಮನೆಗಳಲ್ಲಿಯೇ ಕುಳಿತುಕೊಂಡು ಮದುವೆಯ ನೇರಪ್ರಸಾರ (Live) ನೋಡುವ ಸೌಲಭ್ಯವನ್ನು ಕಲ್ಪಿಸಿರುವುದನ್ನು ತಿಳಿಸಿಯಾಗಿತ್ತು. ಸ್ಥಳೀಯ ಬಿಬಿಎಂಪಿ ಕಛೇರಿಗೆ ಹೋಗಿ ಐದಾರು ಗಂಟೆಗಳ ಕಾಲ ವ್ಯಯಿಸಿ ಮದುವೆಗೆ ಬೇಕಾಗಿದ್ದ ಎಲ್ಲಾ ಅನುಪತಿ ಪತ್ರಗಳನ್ನು ಪಡೆದು ಅದರ ನಕಲನ್ನು ಹತ್ತಿರದ ಪೋಲೀಸ್ ಠಾಣೆಗೆ ತಲುಪಿಸಿದಾಗಲೇ ಮದುವೆ ಹೆಣ್ಣಿನ ಅಪ್ಪನಿಗೆ ಒಂದು ರೀತಿಯ ನಿರಾಳ.

ಮನೆಯಲ್ಲಿಯೇ ಮದುವೆಯಾಗಿದ್ದರಿಂದ ಸಾಂಗೋಪಾಂಗವಾಗಿ ಯಾವುದೇ ಶಾಸ್ತ್ರ ಸಂಪ್ರದಾಯಗಳಿಗೆ ಲೋಪವಾಗಂತೆ ಐದು ದಿನಗಳ ಮದುವೆಯ ಕಾರ್ಯ ಶುರುವಾಗಿತ್ತು. ಮನೆಯ ಹೆಣ್ಣು ಮಕ್ಕಳಿಗಂತೂ ಐದು ದಿನಗಳ ಮದುವೆಯ ಸಂಭ್ರಮ ನಿಜಕ್ಕೂ ಕೌತುಕವನ್ನು ಹೆಚ್ಚಿಸಿತ್ತು, ಗುರುವಾರ ಶಾಸ್ತ್ರ ಎಂದಿಲ್ಲದಿದ್ದರೂ, ಇಂದಿನ ರೂಢಿಯಂತೆ ಮದರಂಗಿ ಹಚ್ಚುವವರನ್ನು ಮನೆಗೇ ಕರೆಸಿ ಮನೆಯ ಹೆಣ್ಣು ಮಕ್ಕಳಿಗೆಲ್ಲರಿಗೂ ಎರಡೂ ಕೈಗಳಿಗೂ ಮದರಂಗಿ ಹಚ್ಚಿಸಿದ್ದ ಕಾರಣ ಅವರ ಊಟೋಪಚಾರಗಳೆಲ್ಲವೂ ಮನೆಯ ಗಂಡುಮಕ್ಕಳದ್ದೇ ಆಗಿತ್ತು. ಐದಾರು ಗಂಟೆಗಳ ನಂತರ ಅವರ ಕೈಗಳಲ್ಲಿ ಕೆಂಪಗೆ ಅರಳಿದ್ದ ಮದರಂಗಿಯ ಬಣ್ಣ ನೋಡಿ ಅವರ ಮುಖಾರವಿಂದಗಳು ಅರಳಿದ್ದನ್ನು ಹೇಳುವುದಕ್ಕಿಂತಲೂ ನೋಡಿದ್ದರೇ ಚೆನ್ನಾಗಿರುತ್ತಿತ್ತು.

ಎರಡನೆಯ ದಿನ ಚಪ್ಪರದ ಪೂಜೆ, ಹಿರಿಯರಿಗೆ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆದು, ನಾಂದಿ ಹೋಮದಲ್ಲಿ ಗಣಪತಿ ಮತ್ತು ನವಗ್ರಹಗಳನ್ನು ಸಂಪ್ರಿತಗೊಳಿಸಿ ಮದುವೆ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುವಂತೆ ಕೋರಿ, ಬಂದಿದ್ದ ಮುತ್ತೈದೆಯರ ಕಾಲು ತೊಳೆದು, ಕೈ ತುಂಬಾ ಅರಿಶಿನ ಕೊಟ್ಟು ಬಳೆ ತೊಡಿಸಿ ನಾನಾವಿಧದ ಪಲಪುಷ್ಪಗಳೊಂದಿಗೆ ಹೂವಿಳ್ಯವೆಲ್ಲವೂ ಶಾಸ್ತ್ರೋಕ್ತವಾಗಿ ವಿಧಿವತ್ತಾಗಿ ನಡೆದು ಇಂದಿನ ಕಾಲಕ್ಕೆ ಅನುಗುಣವಾಗಿ ಬೀಸೋಕಲ್ಲು, ಒನಕೆ ಎಲ್ಲವಕ್ಕೂ ಪೂಜೆ ಮಾಡಿ ಶಾಸ್ತ್ರಕ್ಕಾಗಿ ಅರಿಶಿನ ಕುಟ್ಟಿಸಿದಾಗ ಅಧಿಕೃತವಾಗಿ ಮದುವೆಯ ಕಾರ್ಯ ಆರಂಭವಾಗಿತ್ತು.

ಮೂರನೇ ದಿನದ ಸಂಜೆ ವರಪೂಜೆಯಾದರೂ ಬೆಳಗಿನಿಂದಲೇ ಮನೆಯಲ್ಲಿ ಸಂಭ್ರಮ. ಗಂಡಸರು ಹೂವು ಮತ್ತಿತರ ಸಾಮಗ್ರಿಗಳನ್ನು ತರಲು ಹೊರಗೆ ಹೊದರೆ, ಮನೆಯಲ್ಲಿದ್ದ ಹೆಣ್ಣುಮಕ್ಕಳು ಮದುವೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಮಧ್ಯಾಹ್ನವಾಗಿ ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಮನೆಯಲ್ಲಿದ್ದ ಹತ್ತು ಹದಿನೈದು ಜನರಿಗೆ ತಟ್ಟೆಯಲ್ಲಿ ಊಟಬಡಿಸಿ ಆ ತಟ್ಟೆಗಳನ್ನೆಲ್ಲಾ ತೊಳೆಯುವವರು ಯಾರು ಎಂದು ಅಲ್ಲರನ್ನೂ ಅರ್ಧ ಚಕ್ರಾಕಾರದಲ್ಲಿ ಕುಳ್ಳರಿಸಿಕೊಂಡು ಮನೆಯ ಹಿರಿಯ ತಾಯಿ ಕೈ ತುತ್ತು ಹಾಕುತ್ತಿದ್ದರೆ, ತಾಮುಂದು ನಾಮುಂದು ಎಂದು ಹತ್ತು ಹದಿನೈದು ನಿಮಿಷಗಳಲ್ಲಿ ಎಲ್ಲರ ಹೊಟ್ಟೆ ತುಂಬಿಹೋಗಿದ್ದೇ ಗೊತ್ತಾಗಲಿಲ್ಲ.

ಸಂಜೆ ಗಂಡಿನ ಮನೆಯವರು ಬರುವಹೊತ್ತಿಗೆ ಎಲ್ಲಾ ಹೆಣ್ಣುಮಕ್ಕಳು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಯಥಾಶಕ್ತಿ ಸೌಂದರ್ಯವರ್ಧಕಗಳನ್ನು ಧರಿಸಿ ಆಕಾಶದಲ್ಲಿದ್ದ ನಕ್ಷತ್ರಗಳೆಲ್ಲಾ ಒಟ್ಟಿಗೆ ಭೂಮಿಗೆ ಇಳಿದು ಬಿಟ್ಟಿದ್ದಾರೇನೋ ಎನ್ನುವಂತೆ ಕಂಗಳಿಸುತ್ತಿದ್ದರು ಎಂದರೂ ಉತ್ರ್ಪೇಕ್ಶೆಯೇನಲ್ಲ.

ಬೀಗರ ಮನೆಯವರು ಆಗಮಿಸುತ್ತಿದ್ದಂತೆಯ ಮನೆಯ ಹೆಣ್ಣು ಮಕ್ಕಳು ಆರತಿ ಬೆಳಗಿದರೆ, ಮನೆಯ ಹಿರಿಯರು ಎಲ್ಲರಿಗೂ ಸಂಬಂಧಮಾಲೆ ಹಾಕಿ ಸ್ವಾಗತಿಸಿದರು, ಗಂಡು ಮಕ್ಕಳು ಬೀಗರ ಮೆನೆಯವರು ತಂದಿದ್ದ ಸಾಮಾನುಗಳನ್ನೆಲ್ಲಾ ಅಚ್ಚುಕಟ್ಟಾಗಿ ಅವರ ಕೋಣೆಗೆ ತಲುಪಿಸಿ ಎಲ್ಲರನ್ನು ತಿಂಡಿಗೆ ಕೂರಿಸುವ ಹೊತ್ತಿನಲ್ಲಿ ಸೂರ್ಯ ಮುಳುಗಿ ಚಂದ್ರ ವರಪೂಜೆಯಲ್ಲಿ ನವ ದಂಪತಿಗಳನ್ನು ನೋಡಲು ಬಂದಿದ್ದ. ಗಂಡು ಮತ್ತು ಹೆಣ್ಣಿನ ಮನೆ ಎರಡೂ ಕಡೆ ಸೇರಿಸಿದರು ಸಂಖ್ಯೆ 40 ಮೀರದೇ ಹೋದದ್ದು ಹೆಣ್ಣಿನ ತಂದೆಗೆ ಕೊಂಚ ನಿರಾಳ. ಎಂಕಾ ನಾಣಿ ಸೀನ ಎಂದು ಮೂರು ಮತ್ತೊಂದು ಜನರು ಇದ್ದ ಕಾರಣ, ಕೆಲವೇ ಕೆಲವು ನಿಮಿಷಗಳಲ್ಲಿ ಎಲ್ಲರಿಗೂ ಅವರವರ ಪರಿಚಯವಾಗಿ ವರಪೂಜೆಯ ಕಾರ್ಯಕ್ರಮಗಳೆಲ್ಲವೂ ನಿರ್ವಿಘ್ನವಾಗಿ ನಡೆದು ರಾತ್ರಿ ಹೋಳಿಗೆ ಊಟ ಮುಗಿಯುತ್ತಿದ್ದಂತೆಯೇ ಬಂದವರಿಗೆ ಹಾಸಿಗೆ ಹೊದಿಕೆಯನ್ನು ಹೊಂದಿಸಿಯಾಗಿತ್ತು.

ನಾಲ್ಕನೇಯ ದಿನ ಧಾರೆಯ ದಿನ ಬೆಳಿಗ್ಗೆಯೇ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ, ಎಲ್ಲರೂ ಅವರವರಿಗೆ ಒಪ್ಪಿಸಿದ್ದ ಕಾರ್ಯಗಳನ್ನೆಲ್ಲಾ ಮುಗಿಸುವಷ್ಟರಲ್ಲಿ ಗಂಟೆ ಎಂಟಾಗಿತ್ತು. ಒಂದು ಸಾರಿ ಕಾಫಿ ಕುಡಿದ ನಂತರ ಹೆಣ್ಣು ಮಕ್ಕಳೆಲ್ಲಾ ಪುರೋಹಿತರ ಆಣತಿಯಂತೆ ಹಸೆಹಾಕಿ ಹಸೇಮಣೆಯನ್ನು ಇಟ್ಟು ಎಲ್ಲಾ ಅಲಂಕಾರಗಳನ್ನು ಮಾಡುತ್ತಿದ್ದರೆ, ಗಂಡಸರು ಹಿಂದಿನ ದಿನ ಹಿಡಿದಿಟ್ಟಿದ್ದ ನೀರೇಲ್ಲಾ ಖಾಲಿಯಾಗಿದ್ದನ್ನು ನೋಡಿ ಮತ್ತೆ ನೀರು ತುಂಬಿಸುವಷ್ಟರಲ್ಲಿ ಬಿಸಿ ಬಿಸಿ ತಿಂಡಿ ಸಿದ್ಧವಾಗಿತ್ತು. ಒಂದು ಕಡೆ ತಿಂಡಿ ತಿನ್ನುತ್ತಿದ್ದರೆ ಮತ್ತೊಂದು ಕಡೆ ಕಾಶೀ ಯಾತ್ರೆಗೆ ವರ ಸಿದ್ಧಾನಾಗಿ ಹೊರಟಾಗಿತ್ತು. ಅರರರೇ.. ಕಾಶೀಯಾತ್ರೆಗೆ ಒಬ್ಬಂಟಿಯಾಗಿ ಹೋಗುವುದು ಸರಿಯಲ್ಲ. ಹಾಗಾಗಿ ನಿಮ್ಮೊಂದಿಗೆ ನನ್ನ ಮಗಳನ್ನು ಕಲ್ಯಾಣ ಮಾಡಿಕೊಡುತ್ತೇನೆ. ಇಬ್ಬರೂ ನೆಮ್ಮದಿಯಾಗಿ ಕಾಶೀ ಯಾತ್ರೆ ಮುಗಿಸಿಕೊಂಡು ಬನ್ನಿ ಎಂದು ವಧುವಿನ ತಂದೆ ವರನ ಕಾಲು ತೊಳೆದು ಕೇಳಿಕೊಂಡರೆ ಹುಡುಗಿಯ ಸಹೋದರ ಭಾವನ ಕಾಲುಗಳಿಗೆ ಚಪ್ಪಲಿ ತೋಡಿಸಿ, ಛತ್ರಿ ಹಿಡಿದು ಹಸೆ ಮಣೇಗೆ ಕರೆದು ತರುವಷ್ಟರಲ್ಲಿ ಅಂತರಪಟ ಹಿಡಿದಾಗಿತ್ತು. ಹುಡುಗಿಯ ಸೋದರ ಮಾವ, ಸಕ್ಕರೆಯಂತೆ ಅಲಂಕಾರ ಮಾಡಿಕೊಂಡು ಸಿದ್ಧವಾಗಿದ್ದ ತನ್ನ ಸೊಸೆಯನ್ನು ಅಕ್ಕರೆಯಿಂದ ಎತ್ತುಕೊಂಡು ಹಸೆಯಣೆಯ ಮೇಲೆ ನಿಲ್ಲಿಸಿ ಜೀರಿಗೆ ಧಾರಣೆ ಮಾಡಿಸಿ, ಮಾಂಗಲ್ಯವನ್ನು ಬಂದಿದ್ದವರೆಲ್ಲರ ಕೈಗೆ ಮುಟ್ಟಿಸಿ ತನ್ನ ಸೊಸೆಯ ಮಾಂಗಲ್ಯಭಾಗ್ಯ ನೂರ್ಕಾಲ ಗಟ್ಟಿಯಾಗಿರಲಿ ಎಂದು ಹರಸಿ ಎಂದು ಕೇಳಿಕೊಂಡು ಮಾಂಗಲ್ಯವನ್ನು ವರನ ಕೈಗೆ ಕೊಡುತ್ತಿದ್ದಂತೆಯೇ ಪುರೋಹಿತರ ಗಟ್ಟಿ ಮೇಳಾ ಗಟ್ಟಿಮೇಳಾ ಎನ್ನುತಿದ್ದಂತೆಯೇ, ಮೊಬೈಲಿನಲ್ಲಿಯೇ ನಾದಸ್ವರ ಜೋರಾದರೆ, ಮಾಂಗಲ್ಯಂ ತಂತುನಾನೇನಾ ಮಮ ಜೀವನ ಹೇತುನಾ… ಎಂದು ಪುರೋಹಿತರು ಹೇಳುತ್ತಿದ್ದರೆ, ವರ ಮಧುವಿನ ಕೊರಳಿಗೆ ಮಾಂಗಲ್ಯದ ಮೂರು ಗಂಟು ಹಾಕುತ್ತಿದ್ದರೆ, ಅಲ್ಲಿಯವರೆಗೂ ತಡೆದು ಹಿಡಿದುಕೊಂಡಿದ್ದ ಕಣ್ನೀರ ಧಾರೆ ವಧುವಿನ ತಾಯಿಯ ಕಣ್ಣುಗಳಲ್ಲಿ ಧಾರಾಕಾರವಾಗಿ ಹರಿದು ಅದೇ ಕಣ್ಣಿರಿನಲ್ಲಿಯೇ ಮಗಳನ್ನು ಅಳಿಯನಿಗೆ ಧಾರೆ ಎರೆದು ಕೊಡುತ್ತಿದ್ದಂತೆಯೇ ಮದುವೆಯೂ ಮುಗಿದು ಹೊಗಿತ್ತು. ಸಪ್ತಪದಿ, ಲಾಜಹೋಮಗಳೆಲ್ಲವೂ ಸಾಂಗವಾಗಿ ನಡೆದು, ನಂತರ ಬಂದವರೆಲ್ಲರು ಭೂರೀ ಭೂಜನ ಸವಿದರೆ, ವಧು ವರರು ಜೊತೆಗೊಂದಿಷ್ಟು ಹಿರಿಯರು ಎಲ್ಲರು ಒಟ್ಟಿಗೆ ಭೂಮದ ಊಟಕ್ಕೆ ಕುಳಿತರೆ, ಉಳಿದವರೆಲ್ಲರು ಅದರ ಮಜ ತೆಗೆದುಕೊಳ್ಳಲು ಸುತ್ತುವರೆದಿದ್ದರು. ಅತ್ತೆ ಅಳಿಯನಿಗೆ ಪಾಯಸ ಹಾಕಲು ಬಂದಾಗ ಅಳಿಯ ಅತ್ತೆಯ ಕೈ ಹಿಡಿದು ಚಕ್ಕುಲಿಯನ್ನು ತೊಡಿಸಿದಾಗ ಎಲ್ಲರ ಹರ್ಷೋಧ್ಗಾರ ಮುಗಿಲಿ ಮುಟ್ಟಿತ್ತು. ನಂತರ ವರ ನಯವಾಗಿ ಸಿಹಿತಿಂಡಿಗಳನ್ನು ತಿನ್ನಿಸಿದರೆ, ವಧು ಮಾತ್ರಾ ತನ್ನ ಪತಿಗೆ ಬಗೆ ಬಗೆಯ ಉಂಡೆಗಳು, ಚಕ್ಕುಲಿ ಕೋಡುಬಳೆಯಂತಹ ಬಗೆ ಬಗೆಯ ತಿನಿಸಿಗಳನ್ನು ತಿನ್ನಿಸಿದರೆ, ಅವರ ಜೊತೆಗೆ ಕುಳಿತಿದ್ದ ಹಿರಿಯರೂ ತಮ್ಮ ಮದುವೆಯ ಸಮಯದಲ್ಲಿ ತಾವು ಇದೇ ರೀತಿಯಾಗಿ ತಿನಿಸಿದ್ದದ್ದನ್ನು ಮೆಲುಕು ಹಾಕುತ್ತಾ ಮತ್ತೆ ತಿನಿಸಿದ್ದು ಎಲ್ಲರಿಗೂ ಮೋಜು ತರಿಸಿದ್ದಂತೂ ಸುಳ್ಳಲ್ಲ. ಮತ್ತೆ ಸಂಜೆ ಔಪಚಾರಿಕವಾಗಿ ನಡೆದ ಆರತಕ್ಷತೆಗೆ ಎಲ್ಲರೂ ಮತ್ತೆ ಸಿದ್ಧರಾಗಿ, ಬಂದ ಅಕ್ಕ ಪಕ್ಕದ ಮನೆಯವರ ಜೊತೆ ಫೋಟೋ ತೆಗೆಸಿಕೊಂಡು ಎಲ್ಲರೊಂದಿಗೆ ಬಗೆ ಬಗೆಯ ಸಿಹಿಗಳೊಂದಿಗೆ ಊಟ ಮುಗಿಸಿ ಹಾಸಿಗೆಗೆ ಕಾಲು ಚಾಚಿದ್ದಷ್ಟೇ ನೆನಪಾಗಿ ಮತ್ತೆ ಎಚ್ಚರವಾದಾಗ ಸೂರ್ಯ ತನ್ನ ಆಗಮನವನ್ನು ತಿಳಿಸಿಯಾಗಿತ್ತು.

ಐದನೇ ದಿನ ಲಗುಬಗನೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಸತ್ಯನಾರಾಯಣ ಸ್ವಾಮಿಯ ಪೂಜೆಗೆ ಸಿದ್ಧತೆ ಮಾಡಿಕೊಂಡು ಭಕ್ತಿ ಪೂರ್ವಕವಾಗಿ ವಿಘ್ನವಿನಾಶಕನ ಜೊತೆ, ಮನೆ ದೇವರಿಗೆ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡಿ, ಸತ್ಯನಾರಾಯಣ ಕತೆಯ ಜೊತೆಜೊತೆಯಲ್ಲಿಯೇ ಪೂಜೆಯನ್ನು ಮುಗಿಸಿ ಎಲ್ಲರೂ ಭಕ್ತಿಯಿಂದ ಮಂಗಳಾರತಿ ತೀರ್ಥಪ್ರಸಾದಗಳನ್ನು ಸ್ವೀಕರಿಸಿ, ಬೀಗರ ಔತಣವನ್ನು ಸವಿದು ಫಲತಾಂಬೂಲವನ್ನು ಸ್ವೀಕರಿಸುತ್ತಿದ್ದಂತೆಯೇ ಮಗಳನ್ನು ಕಳುಹಿಸಿಕೊಡುವ ಹೃದಯವಿದ್ರಾವಕ ಪ್ರಸಂಗ ಹೇಳಲಾಗದು. ಮಧುಮಗಳಿಗೆ ಗಂಡನ ಮನೆಗೆ ಹೋಗುವ ಸಂಭ್ರಮದ ಕಡೆ ಇಷ್ಟು ದಿನಗಳ ಕಾಲ ಹುಟ್ಟಿ ಆಡಿ ಬೆಳೆದ ತವರು ಮನೆಯನ್ನು ಬಿಟ್ಟು ಹೊಗಬೇಕಲ್ಲಾ ಎಂಬ ಸಂಕಟವಾದರೇ, ಇಷ್ಟು ದಿನ ತಮ್ಮ ತೋಳಿನಲ್ಲಿ ಆಡಿ ಬೆಳೆದ ಮಗಳನ್ನು ಕಳುಹಿಸಿ ಕೊಡುವ ಸಂಕಟಕ್ಕೆ ಹರಿಯುವ ಕಣ್ಣೀರ ಧಾರೆ ಅಲ್ಲಿದ್ದ ಮಕ್ಕಳಿಗೆ ನಗುಹುಟ್ಟಿಸುವುದಾದರೂ ಮುಂದೆ ಅವರು ಆ ಸಂಧರ್ಭವನ್ನು ಅನುಭವಿಸಬೇಕಾದಗಲೇ ಅದರ ಸಂಕಟದ ಅರಿವಾಗುತ್ತದೆ.

ಬಹುಶಃ ಕೊರೋನಾ ಇಲ್ಲದಿದ್ದರೆ ಛತ್ರದಲ್ಲಿ ಇದೇ ಮದುವೆ ನಡೆದಿದ್ದರೇ, ಯಾವುದೋ ಕೆಲಸದಲ್ಲಿ ತೊಡಗಿಕೊಂಡೋ ಇಲ್ಲವೇ ಛತ್ರದ ಮೂಲೆಯೊಂದರಲ್ಲಿ ಕುಳಿತುಕೊಂಡು ಕಾಡು ಹರಟೆ ಹೊಡೆಯುವುದರಲ್ಲೇ ಕಳೆದು ಹೊಗುತ್ತಿತ್ತು. ಕೊರೋನಾದಿಂದಾಗಿ ಮನೆಯ ಮಟ್ಟಿಗೆ ಮದುವೆ ಮಾಡಬೇಕಾದಾಗ ಪ್ರತಿಯೊಂದನ್ನು ಹತ್ತಿರದಿಂದ ನೋಡುತ್ತಾ ಆ ಸಂಭ್ರಮ ಸಡಗರಗಳಲ್ಲಿ ಪಾಲ್ಗೊಳ್ಳುವ ಸುಯೋಗ ಲಭಿಸಿತು ಎಂದರು ತಪ್ಪಾಗದು.

ಮದುವೆ ಎಂದರೆ ಅದು ಕೇವಲ ಗಂಡು ಮತ್ತು ಹೆಣ್ಣಿನ ಸಂಬಂಧವಲ್ಲ. ಅದು ಕುಟುಂಬ ಕುಟುಂಬಗಳ ನಡುವಿನ ಸಂಬಂಧಕ್ಕೆ ಬೆಸುಗೆಯನ್ನು ಹಾಕುವ ಒಂದು ಸುಂದರ ವಿಧಿ ವಿಧಾನ ಎಂಬುದನ್ನು ಈ ಮೂಲಕ ಕೊರೋನಾ ತಿಳಿಸಿ ಕೊಟ್ಟಿದ್ದಲ್ಲದೇ ಕಾಲ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದರು ಅತಿಶಯವಲ್ಲ. ಇದೇ ಸತ್ ಸಂಪ್ರದಾಯವನ್ನು ಕೊರೋನ ನಂತರವೂ ಮುಂದುವರೆಸಿಕೊಂಡು ಹೋದರೆ ಉತ್ತಮವಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಮದುವೆ ಮತ್ತು ಸಾಮಾಜಿಕ ಜಾಲತಾಣ

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ತುಂಬಾನೇ ವೈರಲ್ ಆಗಿತ್ತು. ಈ ವಯಸ್ಸಿನಲ್ಲಿ ಈ ಮುದುಕನಿಗೆ ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಮದುವೆ ಬೇಕಿತ್ತಾ? ಅರವತ್ತಕ್ಕೆ ಮೂವತ್ತರ ಆಸೆಯೇ?, ಚಪಲ ಚೆನ್ನಿಗರಾಯ, ದುಡ್ಡಿದ್ದವರು ಅಮಾಯಕ ಹೆಣ್ಣು ಮಕ್ಕಳ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ? ಹೀಗೇ ಹಾಗೇ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಆದರೆ ಈ ಮದುವೆಯ ಹಿಂದೆ ಇದ್ದ ಅಸಲೀ ಕಾರಣ ತಿಳಿದ ಮೇಲೆ ಬಹುತೇಕರು ಆ ವಯಸ್ಸಾದವರನ್ನು ಹಾಡಿ ಹೊಗಳಿದ ಕಥೆ ಇದೋ ನಿಮಗಾಗಿ

ನಮ್ಮ ದೇಶದಲ್ಲಿ ಹಿಂದಿನ ಕಾಲದಲ್ಲಂತೂ ಮಕ್ಕಳು ಹುಟ್ಟಿದ ಕೂಡಲೇ ತೊಟ್ಟಿಲಲ್ಲೇ ಮದುವೆ ಶಾಸ್ತ್ರ ಮಾಡಿ ಮುಗಿಸುತ್ತಿದ್ದರಂತೆ. ಇನ್ನೂ ಕೆಲವೆಡೆ ಏನನ್ನೂ ತಿಳಿಯದ ಅಪ್ರಾಪ್ತ ವಯಸ್ಸಿನಲ್ಲಿ ಬಾಲ್ಯವಿವಾಹವನ್ನು ಮಾಡುತ್ತಿದ್ದರು. ಈ ಬಾಲ್ಯವಿವಾಹವನ್ನು ತೆಡೆಗಟ್ಟಲು ನಮ್ಮ ಸರ್ಕಾರ, ಮದುವೆಯಾಗಲು ಹೆಣ್ಣುಮಕ್ಕಳಿಗೆ 18 ಮತ್ತು ಗಂಡು ಮಕ್ಕಳಿಗೆ 21 ವರ್ಷಗಳಾದರೂ ಆಗಿರಲೇ ಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಇಂದಿನ ಹೆಣ್ಣು ಮಕ್ಕಳು ಸಹಾ ಹಿಂದಿನಂತೆ ತಂದೆ ತಾಯಿ ಹೇಳಿದ್ದಕ್ಕೆಲ್ಲಾ ಕೋಲೇ ಬಸವನಂತೆ ತಲೆಯಾಡಿಸದೇ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ನೌಕರಿಯೊಂದನ್ನು ಗಿಟ್ಟಿಸಿಕೊಂಡ ನಂತರ ಮದುವೆ ಮಾಡಿ ಕೊಳ್ಳುತ್ತಿದ್ದಾರೆ. ಅದೇ ರೀತಿ ಗಂಡು ಹುಡುಗರೂ ಸಹಾ ಹಿಂದಿನಂತೆ ಚಿಕ್ಕ ವಯಸ್ಸಿಗೇ ಮದುವೆಯಾಗದೇ ಓದು ಮುಗಿಸಿ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೌಕರಿ ಗಿಟ್ಟಿಸಿಕೊಂಡು ತಮ್ಮ ಕಾಲಮೇಲೆ ನಿಂತ ಮೇಲೆಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ಕಾಣಿಸುತ್ತಿರುವ ಮಧುಮಗನ ಹೆಸರು ಶ್ರೀ ಮಾಧವ ಪಾಟೀಲ್. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಉರನ್ ತಾಲ್ಲೂಕ್ಕಿನವರು. ವೃತಿಯಲ್ಲಿ ಪತ್ರಕರ್ತರಾಗಿದ್ದು, ಕಳೆದ 36 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದು, ರಾಯಗಢ ಜಿಲ್ಲೆಯಲ್ಲಿ ಉತ್ತಮ ಪತ್ರಕರ್ತರೆಂಬ ಕೀರ್ತಿಗೆ ಪಾತ್ರರಾಗಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದರೂ ಬ್ರಹ್ಮಚಾರಿಗಳಾಗಿಯೇ ಇದ್ದವರು, ಈಗ ತಮ್ಮ 66 ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ಮತ್ತಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ ಎನ್ನುವುದು ಕಠು ಸತ್ಯವೇ ಸರಿ.

ನಿಜ ಹೇಳಬೇಕೆಂದರೆ, ಅವರಿಗೆ 30 ವರ್ಷಗಳಾಗಿದ್ದಾಗಲೇ ಒಂದು ಹುಡುಗಿಯೊಂದಿಗೆ ನಿಶ್ಚಿತಾರ್ಥವಾಗಿತ್ತಾದರೂ, ಅದಾವುದೋ ಕಾರಣಗಳಿಂದಾಗಿ ಆ ನಿಶ್ಚಿತಾರ್ಥ ಮುರಿದುಬಿದ್ದು, ಅವರ ಮದುವೆ ನಿಂತು ಹೋಯಿತ್ತು. ಮದುವೆಯಾಗಿ ಸುಂದರ ಸಂಸಾರವನ್ನು ನಡೆಸ ಬೇಕೆಂದು ಆಶಿಸುತ್ತಿದ್ದವರಿಗೆ ಇದ್ದಕ್ಕಿದ್ದಂತಯೇ ಮದುವೆಯೇ ನಿಂತು ಹೋದಾಗ, ಆವರಿಗೆ ಮದುವೆಯ ವ್ಯವಸ್ಥೆಯ ಬಗ್ಗೆಯೇ ವಿಶ್ವಾಸ ಹೋಗಿ, ಜೀವನವಿಡೀ ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂಬ ಭೀಷ್ಮ ಪ್ರತಿಜ್ಞೆ ಮಾಡಿ ಅದನ್ನು ಅನೂಚಾನವಾಗಿ ಇದುವರೆವಿಗೂ ನಡೆಸಿಕೊಂಡು ಹೋಗುತ್ತಿದ್ದರು. ಮಗನ ಈ ರೀತಿಯ ನಿರ್ಧಾರದಿಂದ ವಿಚಲಿತರಾದ ಅವರ ಪೋಷಕರು ಪದೇ ಪದೇ ಮದುವೆಯಾಗುವಂತೆ ಪರಿ ಪರಿಯಾಗಿ ಕೇಳಿಕೊಂಡಾರೂ ಮಾಧವ ಪಾಟೀಲ್ ಅದಕ್ಕೆ ಒಪ್ಪಿರಲಿಲ್ಲ. ಆದರೆ ಈ ಮಹಾಮಾರಿ ಕರೋನಾ ಲಾಕ್ ಡೌನ್ ಪರಿಸ್ಥಿತಿ ಅವರ ಬದುಕಿನಲ್ಲೊಂದು ಮಹತ್ತರ ತಿರುವೊಂದನ್ನು ತಂದಿದೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ 66 ವಯಸ್ಸಿನ ಮಾಧವ ಪಾಟೀಲ್ ಹೊರಗೆಲ್ಲೂ ಹೊಗಲಾರದೇ ಮನೆಯಲ್ಲಿಯೇ ಕುಳಿತು ಕಾಲ ಕಳೆಯಬೇಕಾದಂತಹ ಪರಿಸ್ಥಿತಿ ಉಂಟಾದಾಗ ಅವರಿಗೆ ಏಕಾಂಗಿತನ ಕಾಡತೊಡಗಿದೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳಲಾದರೂ ಯಾರಾದರೂ ಇರಬೇಕು ಎಂದೆನಿಸಿದೆ. ಅದೂ ಅಲ್ಲದೇ, 88 ವಯಸ್ಸಿನವರಾದ ಅವರ ತಾಯಿಯನ್ನು ನೋಡಿಕೊಂಡು ಮನೆಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗಲು ಒಂದು ಹೆಣ್ಣಿನ ಅವಶ್ಯಕತೆಯನ್ನು ಮನಗಂಡಿದ್ದಾರೆ. ಆದರೇ ಈ ಇಳೀ ವಯಸ್ಸಿನಲ್ಲಿ ನನಗೆ ಯಾರು ಹೆಣ್ಣು ಕೊಡುತ್ತಾರೆ? ಈ ವಯಸ್ಸಿನಲ್ಲಿ ಮದುವೆಯಾದರೇ ಸಮಾಜ ಹೇಗೆ ನೋಡುತ್ತದೆ ? ಎಂದೂ ಅಳುಕಿದ್ದಾರೆ.

ಆದರೇ ಆ ಬ್ರಹ್ಮ ಒಂದು ಗಂಡಿಗೆ ಒಂದು ಹೆಣ್ಣನ್ನು ಸೃಷ್ಟಿಸಿಯೇ ಇರುತ್ತಾನೆ ಎಂದು ಎಲ್ಲರೂ ನಂಬುವಂತೆ, ಪಾಟೀಲರಿಗೆ ಹೆಣ್ಣು ಹುಡುಕುತ್ತಿದ್ದ ಸಮಯದಲ್ಲಿ ಸಂಜನಾ ಎಂಬಾಕೆಯ ಬಗ್ಗೆ ಸುದ್ದಿ ತಿಳಿದು ಬಂದಿದೆ. ಸುಮಾರು 45 ವಯಸ್ಸಿನ ಸಂಜನಾರವರಿಗೆ ಬಾಲ್ಯದಲ್ಲಿಯೇ ಮದುವೆಯಾಗಿದ್ದು, ಯಾವುದೋ ವಯಕ್ತಿಕ ಕಾರಣಗಳಿಂದ ವಿವಾಹ ವಿಚ್ಛೇದಿತರಾಗಿ ತಮ್ಮ ಅಣ್ಣನ ಮನೆಯಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿರುತ್ತಾರೆ. ದುರದೃಷ್ಟದಂತೆ ಆಕೆಗೆ ಆಸರೆಯಾಗಿದ್ದ ಅವರ ಅಣ್ಣ, ಕೊರೋನಾ ಸೋಂಕಿನಿಂದಾಗಿ ಮೃತ ಪಟ್ಟಾಗ ದಿಕ್ಕಿಲ್ಲದೇ ಅನಾಥರಾಗಿ ಒಬ್ಬಂಟಿಯಾಗುತ್ತಾರೆ. ಹೀಗಾಗೇ ತಮಗಿಂತಲೂ ಸುಮಾರು 20 ವರ್ಷ ವಯಸ್ಸಿನಲ್ಲಿ ದೊಡ್ಡವರಾದ ಮಾಧವ್ ಪಾಟೀಲ್ ಅವರನ್ನು ಮದುವೆಯಾಗಲೂ ಸ್ವಪ್ರೇರಣೆಯಿಂದ ಒಪ್ಪಿಕೊಂಡ ಪರಿಣಾಮವಾಗಿ ಈ ಮದುವೆ ನಡೆದಿದೆ. ಇದರಿಂದ ಪರಸ್ಪರ ಆಸರೆ ಇಲ್ಲದಿದ್ದ ಒಂದು ಗಂಡು ಮತ್ತು ಹೆಣ್ಣು ಒಂದಾಗಿ ಬಾಳುವ ಅವಕಾಶವನ್ನು ಈ ಕೂರೋನಾ ತಂದುಕೊಟ್ಟಿದೆ.

ಮದುವೆ ಎನ್ನುವುದು ಕೇವಲ ಗಂಡು ಮತ್ತು ಹೆಣ್ಣುಗಳ ನಡುವಿನ ದೇಹದ ವಾಂಛೆಯಲ್ಲದೇ ಅದು ಎರಡು ಮನಸ್ಸುಗಳ ನಡುವಿನ ಸುಂದರ ಬೆಸುಗೆ ಮತ್ತು ಪರಸ್ಪರ ಒಬ್ಬರಿಗೊಬ್ಬರು ಸಾಮಾಜಿಕ ಮತ್ತು ಆರ್ಥಿಕ ಆಶ್ರಯವನ್ನು ಮತ್ತು ಆಸರೆಯನ್ನು ಕೊಡುವುದಾಗಿದೆ ಎನ್ನುವುದನ್ನು ಅರಿಯದ ಇಂದಿನ ಸಾಮಾಜಿಕ ಜಾಲತಾಣದಲ್ಲಿ ಅಂಡಲೆಯುವ ಅಂಡುಪಿರ್ಕೆಗಳು ತಮಗೆ ತಿಳಿದಂತೆ ಟ್ರೋಲ್ ಮಾಡುತ್ತಿದ್ದರೇ, ಅದಕ್ಕೆ ತಾಳ ಹಾಕುವಮಂದಿಯೇ ಹೆಚ್ಚಾಗಿರುವುದು ವಿಯರ್ಯಾಸವೇ ಸರಿ.

ಅದಕ್ಕೇ ನಮ್ಮ ಹಿರಿಯರು ಹೇಳಿರುವುದು ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎಂದು. ಈಗ ನಮಗೆಲ್ಲರಿಗೂ ವಿಷಯ ತಿಳಿದಿರುವಾಗ ಇಲ್ಲಿಂದಲೇ ಅವರ ದಾಂಪತ್ಯ ಜೀವನ ಅನ್ಯೋನ್ಯವಾಗಿ ಮತ್ತು ಸುಂದರವಾಗಿರಲಿ ಎಂದು ಹಾರೈಸೋಣ ಅಲ್ಲವೇ?

ಏನಂತೀರೀ?

ಸಿಹಿ-ಕಹಿ ಪ್ರಸಂಗ-1

mealಯಾವುದೇ ಸಮಾರಂಭಗಳಲ್ಲಿ ಸಿಹಿ ತಿಂಡಿಯದ್ದೇ ಭರಾಟೆ. ಸಮಾರಂಭಕ್ಕೆ ಅಡುಗೆಯವರನ್ನು ಮಾತು ಕಥೆಗೆ ಕರೆಸಿದಾಗ, ಪಾಯಸ, ಎರಡು ಪಲ್ಯ, ಎರಡು ಕೋಸಂಬರಿ, ಗೊಜ್ಜು, ಅನ್ನಾ ಸಾರು, ಕೂಟು ಎಂಬೆಲ್ಲವೂ ಮಾಮೂಲಿನ ಅಡುಗೆಯಾದರೇ, ಸಮಾರಂಭಗಳ ಊಟದ ಘಮ್ಮತ್ತನ್ನು ಹೆಚ್ಚಿಸುವುದೇ ಸಿಹಿ ತಿಂಡಿಗಳು. ಸಮಾರಂಭದಲ್ಲಿ  ಎಷ್ಟು ಬಗೆಯ ಸಿಹಿ ತಿಂಡಿಗಳು ಮತ್ತು ಯಾವ ಯಾವ ಸಿಹಿತಿಂಡಿಗಳನ್ನು ಮಾಡಿಸಿರುತ್ತಾರೋ ಅದರ ಮೇಲೆ ಅವರ ಅಂತಸ್ತು ಮತ್ತು ಸಮಾರಂಭದ ಘನತೆಯನ್ನು ಹೆಚ್ಚಿಸುತ್ತದೆ ಎಂದರೂ ತಪ್ಪಾಗಲಾರದು.  ಸಮಾರಂಭ ಮುಗಿದ  ಎಷ್ಟೋ ದಿನಗಳ ನಂತರವೂ ಅಲ್ಲಿ ತಿಂದಿದ್ದ  ಸಿಹಿ ತಿಂಡಿಗಳ ಕುರಿತೇ ಚರ್ಚೆ ನಡೆಯುತ್ತಿರುತ್ತದೆ. ಆದರೆ ಅದೇ ಸಿಹಿ ತಿಂಡಿಗಳಿಂದಲೇ ಸಮಾರಂಭ ಕಹಿಯಾಗಿ ಮಾರ್ಪಟ್ಟ ಪೇಚಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಅದು 70ರ ದಶಕ. ನಾನಿನ್ನೂ ಚಿಕ್ಕ ಹುಡುಗ ನಮ್ಮ ಚಿಕ್ಕಪ್ಪನ ಮದುವೆ, ಚಿಕ್ಕಮ್ಮನ ಊರಾದ ಭದ್ರಾವತಿಯಲ್ಲಿ ನಿಶ್ಚಯವಾಗಿದ್ದ ಕಾರಣ, ನಮ್ಮ ಬಹುತೇಕ ಬಂಧುಗಳೆಲ್ಲರೂ ನಮ್ಮ ಊರಿಗೆ ಬಂದು ಅಲ್ಲಿ ಚಪ್ಪರ ಶಾಸ್ತ್ರ, ಹೂವಿಳ್ಯ ನಾಂದಿ ಶಾಸ್ತ್ರಗಳನ್ನೆಲ್ಲಾ ಮುಗಿಸಿಕೊಂಡು ಹತ್ತಾರು ಗಾಡಿಗಳ ಮೂಲಕ ಹಿರೀಸಾವೆಗೆ ಬಂದು ಅಲ್ಲಿಂದ ಚೆನ್ನರಾಯಪಟ್ಟಣದ ಮೂಲಕ ಭದ್ರಾವತಿ ತಲುಪಿದಾಗ ಸಂಜೆಯಾಗಿ ವರಪೂಜೆಗೆ ಸರಿಯಾದ ಸಮಯವಾಗಿತ್ತು.

ಸಂಜೆಯ ವರಪೂಜೆಯೆಲ್ಲಾ ಸಾಂಗವಾಗಿ ಮುಗಿದು ಊಟೋಪಚಾರಗಳೆಲ್ಲವೂ ಅಚ್ಚುಕಟ್ಟಾಗಿ ನಡೆದು, ಮಾರನೇಯ ದಿನ ಧಾರೆಯೂ ನಿರ್ವಿಘ್ನವಾಗಿ ನಡೆದು ಯಾವುದೇ ತರಹದ ರಂಪ ರಾಮಾಯಣಗಳಿಗೂ ಆಸ್ಪದ ಇಲ್ಲದೇ ಮೊದಲ ಪಂಕ್ತಿಯ ಊಟವೂ ಸುಸೂತ್ರವಾಗಿಯೇ ಮುಗಿದು ಎರಡನೇಯ ಪಂಕ್ತಿಯ ಊಟ ಇನ್ನೇನು ಆರಂಭವಾಗಬೇಕಿತ್ತು ಎನ್ನುವಷ್ಟರಲ್ಲಿ ಛತ್ರದ ಮುಂಭಾಗದಲ್ಲಿ ಜೋರು ಜೋರಾದ ಗಲಾಟೆಯ ಶಬ್ಧ ಒಂಡೆಡೆಯಾದರೆ ಮತ್ತೊಂಡೆಡೆ ಅಳುತ್ತಿರುವ ಶಬ್ಧ ಕೇಳಿಬಂದಾಗ, ಹಾಂ! ಈಗ ನೋಡಿ ಮದುವೆ ಮನೆ ಕಳೆಗಟ್ಟುತ್ತಿದೆ.  ಮದುವೆ ಎಂದರೆ ಯಾರೋ ಒಬ್ಬರು ಕೊಂಕು ತೆಗೆಯಬೇಕು, ಮತ್ತೊಬ್ಬರು ಅಳಬೇಕು. ಹಾಗಾದಾಗಲೇ ಅದು ಮದುವೆ ಎನ್ನಿಸಿಕೊಳ್ಳುವುದು ಎಂದು ಯಾರೋ ಮಾತನಾಡಿಕೊಳ್ಳುತ್ತಿದ್ದದ್ದೂ ನಮ್ಮ ಕಿವಿಗೆ ಬಿದ್ದದ್ದು ಸುಳ್ಳಲ್ಲ.

laaduನಂತರ ಗಲಾಟೆಗೆ ಕಾರಣವೇನೂ ಎಂದು ತಿಳಿದು ಬಂದದ್ದೇನೆಂದರೆ, ಗಂಡಿನ ಕಡೆಯ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ಮೊದಲನೇ ಪಂಕ್ತಿಯಲ್ಲಿ ಊಟ ಮುಗಿಸಿ  ಕೈಯ್ಯಲ್ಲಿ ಮೂರ್ನಾಲ್ಕು ಲಾಡುಗಳನ್ನು ಹಿಡಿದುಕೊಂಡು ಹೊರಬಂದಿದ್ದನ್ನು ಗಮನಿಸಿದ ಹೆಣ್ಣಿನ ಕಡೆಯ ಹುಡುಗನೊಬ್ಬ ಏಯ್! ಯಾರು ನೀನು? ಯಾರ ಮನೆಯ ಹುಡುಗಿ? ಇಷ್ಟೋಂದು ಲಾಡುಗಳನ್ನೇಕೆ ತೆಗೆದು ಕೊಂಡು ಹೋಗುತ್ತಿದ್ದೀಯೇ? ಎಂದು ಗದರಿಸಿ ಕೇಳಿದನಂತೆ. ಹಳ್ಳಿಯಿಂದ ಬಂದಿದ್ದ ಆ ಹುಡುಗಿಗೆ ಒಂದೇ ಸಮನೆಯ ಪ್ರಶ್ನೆಯಿಂದ ತಬ್ಬಿಬ್ಬಾಗಿ, ಏನು ಹೇಳಬೇಕೆಂದು ತಿಳಿಯದೆ ಬೆಬ್ಬೆಬ್ಬೇ ಎಂದಾಗ, ಆ ಹುಡುಗನೂ, ಏನು ಕಳ್ತನ ಮಾಡಿಕೊಂಡು ಹೋಗ್ತಿದ್ದೀಯಾ? ಎಂದು ದಬಾಯಿಸುತ್ತಿದ್ದದ್ದನ್ನು ಆ ಹುಡುಗಿಯ ತಾಯಿ ಗಮನಿಸಿದ್ದೇ ತಡಾ, ಆಕೆಗೆ ಎಲ್ಲಿಲ್ಲದ ರೋಷಾ ವೇಷಗಳು ಬಂದು, ನಾವು ಗಂಡಿನ ಕಡೆಯವರು, ಗತಿ ಗೆಟ್ಟು ಊಟಕ್ಕೆ ಬಂದಿಲ್ಲ. ನಮ್ಮನ್ನೇ ಕಳ್ಳರು ಅಂತೀರಾ ಎಂದು ಹೇಳಿದ್ದಲ್ಲದೇ ಗೋಳೋ ಎಂದು ಅಳುವುದಕ್ಕೆ ಆರಂಭಿಸಿದ್ದಾರೆ. ಹೆಂಡತಿಯ ಅಳುವಿನ ಸದ್ದನ್ನು ಕೇಳಿದ ಆಕೆಯ ಪತಿಯೂ ಅಲ್ಲಿಗೆ ಬಂದು ಜೋರಾದ ರಂಪಾಟ ಮಾಡಿ ಕಡೆಗೆ ಅವರನ್ನು ಸಮಾಧಾನ ಪಡಿಸಲು ವಧುವಿನ ತಂದೆ ತಾಯಿಯರೇ ಖುದ್ದಾಗಿ ಕ್ಷಮೆಯಾಚಿಸಿ,  ಆ ಹುಡುಗನಿಂದಲೂ ಕ್ಷಮೆ ಬೇಡಿಸಿ ಆ ಪ್ರಸಂಗಕ್ಕೆ ಒಂದು ಇತಿಶ್ರೀ ಹಾಡಿದರು. ಊಟದ ಸಮಯದಲ್ಲಿ ಲಾಡುವನ್ನು ಎಲೆಗೆ ಹಾಕಿಸಿಕೊಳ್ಳುವ ಬದಲು ಕೈಯಲ್ಲಿ ಪಡೆದುಕೊಂಡು ಊಟವಾದ ನಂತರ ಕೈತೊಳೆಯುವ ಸಮಯದಲ್ಲಿ  ಎಲ್ಲರ ಲಾಡುಗಳನ್ನೂ ಆ ಹುಡುಗಿಯ ಕೈಗೆ ಕೊಟ್ಟಿದ್ದೇ ಈ ಅಚಾತುರ್ಯಕ್ಕೆ ಕಾರಣವಾಗಿತ್ತು ಮದುವೆ ಮನೆಯಲ್ಲಿ ಸಿಹಿ ಅನುಭವವನ್ನು ಕಟ್ಟಿಕೊಡಬೇಕಿದ್ದ ಸಿಹಿ ತಿಂಡಿ ಲಾಡು ಕಹಿ ಅನುಭವನ್ನು ತಂದೊದಗಿಸಿದ್ದು ಎಲ್ಲರನ್ನೂ ಮುಜುಗರಕ್ಕೀಡು ಮಾಡಿದ್ದಂತೂ ಸುಳ್ಳಲ್ಲ.

ಆನಂತರ ಬಂದವರೆಲ್ಲರ ಊಟದ ಶಾಸ್ತ್ರ ಮುಗಿದು ಹೆಣ್ಣು ಒಪ್ಪಿಸಿಕೊಳ್ಳುವ ಶಾಸ್ತ್ರಗಳನ್ನೆಲ್ಲಾ ಲಗು ಬಗನೆ ಮುಗಿಸಿಕೊಂಡು  ಮಾರನೆಯ ದಿನ ನಮ್ಮ ಊರಿನಲ್ಲಿ ಆಯೋಜಿಸಲಾಗಿದ್ದ  ಸತ್ಯನಾರಾಯಣ ಪೂಜೆ ಮತ್ತು ಬೀಗರ ಔತಣಕ್ಕೆ ಆಹ್ವಾನಿಸಿ ಸಂಜೆ ಹೊತ್ತಿಗೆ ಮುಂಚೆಯೇ ಭದ್ರಾವತಿ ಬಿಟ್ಟು ನವ ದಂಪತಿಗಳ ಸಮೇತ ಹಾಗೂ ಹೀಗೂ ನಮ್ಮ ಊರಿಗೆ ಬರುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು. ತಣ್ಣನೆಯ ರಾತ್ರಿಯ ಜೊತೆಗೆ ಸಂಜೆಯಿಂದಲೇ ಕರೆಂಟು ಹೋಗಿತ್ತು. ಹಳ್ಳಿಗಳ ಕಡೆ ಸಂಜೆ ಕರೆಂಟು ಹೋದರೆ ಪುನಃ ಬರುವುದು ಯಾವಾಗಲೋ ಹಾಗಾಗಿ ಎಲ್ಲರಿಗೂ  ಪ್ರಯಾಣದ ಆಯಾಸ ಮತ್ತು ಹೊಟ್ಟೆ ಕವ ಕವ ಎನ್ನುತ್ತಿದ್ದರಿಂದ ಎಲ್ಲರೂ ಲಗು ಬಗನೆ ಕೈತೊಳೆದು ಬುಡ್ಡೀ ದೀಪ ಮತ್ತು ಲ್ಯಾಂಟೀನ್ ಬೆಳಕಿನಲ್ಲಿಯೇ ಊಟಕ್ಕೆ ಕುಳಿತುಕೊಂಡೆವು.  ಎಲೆ ಕೊನೆಗೆ ಪಾಯಸ, ಚೆಟ್ನಿ. ಉಪ್ಪು ಬಡಿಸಿ ಬಿಸಿ ಬಿಸಿ ಅನ್ನಾ ತಂದು ಎಲೆಗೆ ಬಡಿಸುತ್ತಿದ್ದಂತೆಯೇ ಒಮ್ಮೊಂದೊಮ್ಮೆಲ್ಲೇ ಇಡೀ ಮನೆಯಲ್ಲಿ ನಿಶ್ಯಬ್ಧ. ನಮ್ಮ ಮತ್ತೊಬ್ಬ ಚಿಕ್ಕಪ್ಪ ಹುಳಿಯನ್ನು ತಂದು ಬಡಿಸಿದರೆ, ನಮ್ಮತ್ತೆ ತುಪ್ಪಾ ಬಡಿಸಿ ಎಲ್ಲರೂ ಊಟಕ್ಕೆ ಏಳಬಹುದು ಎನ್ನುತಿದ್ದಂತೆಯೇ, ಗಬ ಗಬನೇ  ಪಾಯಸಕ್ಕೆ ಕೈಹಾಕಿ ಬಾಯಿಗೆ ಇಡುತ್ತಿದ್ದರೆ, ಅದೇನೂ ಕಹಿ ಕಹಿ. ಸರಿ ಪ್ರಯಾಣದ ಆಯಾಸಕ್ಕೆ ಹೀಗಾಗಿರ ಬಹುದೆಂದು ಭಾವಿಸಿ ಪಾಯಸವನ್ನು ತಿನ್ನದೇ ಹಾಗೇ ಬಿಟ್ಟು ಅನ್ನಾ ಹುಳಿ ಕಲೆಸಿಕೊಂಡರೂ ಅದೇ ಕಮಟು ವಾಸನೆ ಮತ್ತು ಕಹಿ. ಈ ಅನುಭವ ಕೇವಲ ನನಗೆ ಮಾತ್ರವೇ ಅಥವಾ ಎಲ್ಲರಿಗೂ ಹಾಗೇನಾ ಎಂದು ತಲೆ ಕೆರೆದುಕೊಳ್ಳುತ್ತಿದ್ದಂತೆಯೇ ನಮ್ಮ ದೊಡ್ಡಪ್ಪ ಜೋರು ಧನಿಯಲ್ಲಿ ಇದ್ರೇನ್ರೋ ಪಾಯಸ ಹುಳಿ ಎಲ್ಲವೂ ಕಹಿ ಕಹಿಯಾಗಿದೆ ಮತ್ತು ಒಂದು ರೀತಿಯ ಕಮಟು ವಾಸನೆ ಬರುತ್ತಿದೆಯಲ್ರೋ ?  ಎಂದಾಗ ಎಲ್ಲರೂ ಹೌದೌದು ಎಂದು ಧನಿಗೂಡಿಸಿದಾಗ ಸದ್ಯ ಬದುಕಿತು ಬಡಜೀವ ಇದು ನನಗೊಬ್ಬನಿಗೇ ಆದ ಅನುಭವವಲ್ಲ ಎಂದೆನಿಸಿತ್ತು.

payasa2ಹೇ, ಅದ್ಯಾಕೇ ಕಹಿ ಇರುತ್ತದೇ? ಅಷ್ಟು ಚೆನ್ನಾಗಿ ತರಕಾರಿಗಳನ್ನು ಹಾಕಿ ತುಪ್ಪದ ಒಗ್ಗರಣೆಯೊಂದಿಗೆ ಹುಳಿ ಮಾಡಿದ್ದೇವೆ ಅದು ಹೇಗೆ ಕಹಿಯಾಗಿರುತ್ತದೆ? ಎಂದು ನಮ್ಮ ಚಿಕ್ಕಪ್ಪ ಕೇಳಿದರು. ತುಪ್ಪದ ಒಗ್ಗರಣೆಯೇ? ಎಲ್ಲಿಂದ ತೆಗೆದುಕೊಂಡರೀ ತುಪ್ಪಾ ಎಂದು ನಮ್ಮ ಅಜ್ಜಿ ಕೇಳಿದಾಗ, ಅಷ್ಟೇ ಮುಗ್ಧವಾಗಿ ನಮ್ಮ ಚಿಕ್ಕಪ್ಪ, ಒಗ್ಗರಣೆಗೆ ಈ ಕತ್ತಲಲ್ಲಿ ಎಣ್ಣೇ ಹುಡುಕುತ್ತಿದ್ದಾಗ ದೇವರ ಮನೆಯ ಮುಂದೆ ತುಪ್ಪದ ಡಬ್ಬಿ ಕಾಣಿಸಿತು. ಸರಿ ತುಪ್ಪದಲ್ಲೇ ಒಗ್ಗರಣೆ ಹಾಕೋಣ ಎಂದು ನಿರ್ಧರಿಸಿ, ಹುಳಿ, ಸಾರು ಪಾಯಸ ಎಲ್ಲದ್ದಕ್ಕೂ  ಅದೇ ತುಪ್ಪದಲ್ಲಿಯೇ  ಒಗ್ಗರಣೆ ಹಾಕಿದ್ದೇವೆ ಎಂದಾಗ ನಮ್ಮ ಅಜ್ಜಿ ಅಯ್ಯೋ ರಾಮ ಅದು ತುಪ್ಪಾ ಅಲ್ರೋ ಅದು ಹಿಪ್ಪೇ ಎಣ್ಣೆ. ದೇವರ ದೀಪಕ್ಕೆಂದು ಮೊನ್ನೇ ತಾನೇ ದಬ್ಬದ ತುಂಬಾ ಹಿಪ್ಪೆ ಎಣ್ಣೆ ತಂದಿದ್ದೇ ಎನ್ನಬೇಕೆ?

ಧಾರೆ ಮುಗಿದು ಮೊದಲ ಪಂಕ್ತಿಯಲ್ಲಿಯೇ ಊಟ ಮಗಿಸಿದ ನಮ್ಮ ಕಡೆಯ ಚಿಕ್ಕಪ್ಪಂದಿರಿಬ್ಬರೂ ಒಬ್ಬ ಅಡಿಗೆಯವರೊಂದಿಗೆ ಊರಿಗೆ ಬಂದು ಎಲ್ಲರಿಗೂ ಅಡಿಗೆ ಮಾಡಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳಬೇಕೆಂದಿದ್ದರು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದೀತೂ ಎನ್ನುವಂತೆ ದುರಾದೃಷ್ಟವಷಾತ್ ನೋಡುವುದಕ್ಕೆ ಹಿಪ್ಪೇ ಎಣ್ಣೆಯೂ ಗಟ್ಟಿಯಾಗಿ ಮರಳು ಮರಳಾಗಿ ತುಪ್ಪದಂತೆಯೇ ಕಾಣುವುದರಿಂದ ಮತ್ತು ದೇವರ ಕೋಣೆಯ ಮುಂದಿದ್ದ  ಕಾರಣ ಕತ್ತಲಲ್ಲಿ ತುಪ್ಪಾ ಎಂದು ಭಾವಿಸಿ ಹಿಪ್ಪೇ ಎಣ್ಣೆಯ ಅಡುಗೆ ಮಾಡಿಸಿದ್ದದ್ದು ಈ ಎಲ್ಲಾ ಮುಜುಗರದ ಪ್ರಸಂಗಕ್ಕೆ ಕಾರಣವಾಗಿತ್ತು. ಎಲ್ಲರ ಹೊಟ್ಟೆಯೂ ಬಹಳ ಹಸಿದಿದ್ದರಿಂದ ಮತ್ತು ಹಿಪ್ಪೇ ಎಣ್ಣೆ ಸ್ವಲ್ಪ ಕಹಿ ಎನ್ನುವುದರ ಹೊರತಾಗಿ ಅದರಿಂದ ದೇಹಕ್ಕೆ ಯಾವುದೇ ದುಷ್ಪರಿಣಾಮವಾಗದು ಎಂದು ನಮ್ಮ ತಾತನವರು ಹೇಳಿದ್ದರಿಂದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಉಪ್ಪಿನ ಕಾಯಿ, ಹುಣಸೇ ರಸ, ತೊಕ್ಕು ಮತ್ತು ಮಜ್ಜಿಗೆಯೊಡನೇ ಊಟದ ಶಾಸ್ತ್ರ ಮುಗಿಸುವ ಹೊತ್ತಿಗೆ ಗಂಟೆ ಒಂದಾಗಿತ್ತು.

ಈ ರೀತಿ ಸಿಹಿ ಪದಾರ್ಥಗಳಾದ ಲಾಡು ಮತ್ತು ಪಾಯಸಗಳ ಕಹಿ ಪ್ರಸಂಗಗಳಿಂದ ನಮ್ಮ ಚಿಕ್ಕಪ್ಪನವರ ಮದುವೆ ಸದಾಕಾಲವೂ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು. ಒಂದು ಸಣ್ಣ ಅವಾಂತರ ಎಷ್ಟೋಂದು ಮುಜುಗರವನ್ನು ತಂದೊಡ್ದಿ ಒಂದು  ಸಿಹಿಯಾದ ಸುಂದರವಾಗ ಬೇಕಿದ್ದ  ನೆನಪುಗಳನ್ನು ಕಹಿಯನ್ನಾಗಿ ಮಾಡಿಬಿಡುತ್ತವೆ ಅಲ್ವೇ?

ಏನಂತೀರೀ?

ಮದುವೆ ಮಾಡಿ ನೋಡು..

ಮದುವೆ ಎಂಬುದು ಕೇವಲ ಗಂಡು ಮತ್ತು ಹೆಣ್ಣುಗಳ ಬಂಧವಲ್ಲ. ಅದು ಎರಡು ಕುಟುಂಬಗಳ ನಡುವಿನ ಸಂಬಂಧದ ಬೆಸುಗೆ. ಕೇವಲ ಕುಟುಂಬ ಏಕೆ ? ಹಿಂದೆಲ್ಲಾ ಅದು ಎರಡು ಊರುಗಳನ್ನು ಒಗ್ಗೂಡಿಸುವ ಇಲ್ಲವೇ ಎರಡು ದೇಶಗಳ ನಡುವಿನ ಶತ್ರುತ್ವವನ್ನು ಬಂಧುತ್ವವನ್ನಾಗಿ ಬೆಸೆಯುವ ಕೊಂಡಿಯಾಗಿತ್ತು. ಮದುವೆಯ ಬಗ್ಗೆ ಇಷ್ಟೆಲ್ಲಾ ಏಕೆ ಪೀಠಿಕೆ ಅಂದ್ರಾ, ಅದು ಏನು ಇಲ್ಲಾ ಕಳೆದ ಎರಡು ಮೂರು ದಿನಗಳಿಂದ ನಮ್ಮ ಕುಟುಂಬದ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾಗ ಮದುವೆಯಲ್ಲಿ ಆಗುವ ಕೆಲವೊಂದು ಗಂಭಿರವಾದ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳ ಬೇಕೆನಿಸಿದೆ.

ಮದುವೆಯ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಹೆತ್ತವರಿಗೆ ಒಂದು ರೀತಿಯ ವಿಶೇಷ ಕಾಳಜಿ ಮತ್ತು ಜವಾಬ್ದಾರಿ. ಮಗಳಿಗೆ ಒಳ್ಳೆಯ ಸಂಬಂಧ ಹುಡುಕಿ ಅವಳಿಗೆ ಮದುವೆ ಮಾಡಿ ಕಳುಹಿಸಿಕೊಟ್ಟರೆ ಸಾಕಪ್ಪ ಎನ್ನುತ್ತಿರುತ್ತಾರೆ. ಅದಕ್ಕಾಗಿ ಅಪ್ಪಾ ಮಗಳು ಹುಟ್ಟಿದಾಗಿನಿಂದಲೂ ಪ್ರತೀ ತಿಂಗಳು ಅಲ್ಪ ಸ್ವಲ್ಪ ಹಣವನ್ನು ಜೋಪಾನವಾಗಿ ಮಗಳ ಮದುವೆಗೆಂದೇ ಉಳಿತಾಯ ಮಾಡುತ್ತಿದ್ದರೆ, ತಾಯಿ ಅಲ್ಪ ಸ್ವಲ್ಪವೇ ಉಳಿಸಿ, ಚಿನ್ನದ ಅಂಗಡಿಯಲ್ಲಿ ಚೀಟಿ-ಗೀಟಿ ಹಾಕಿ ಮಗಳ ಮದುವೆಗೆಂದು ಚಿನ್ನಾಭರಣ ಮತ್ತು ಬೆಳ್ಳಿ ಸಾಮಾನುಗಳನ್ನು ತೆಗೆದು ಇಡುತ್ತಾಳೆ. ಹಾಗೆಯೇ, ಸಂಕ್ರಾಂತಿಗೋ ಇಲ್ಲವೇ ಯುಗಾದಿ ಅಥವಾ ಗೌರಿ ಹಬ್ಬಕ್ಕೆ ಪ್ರಿಯದರ್ಶಿನಿ ಇಲ್ಲವೇ ಮೈಸೂರು ಸಿಲ್ಕ್ ನವರು ರಿಯಾಯಿತಿ ದರದಲ್ಲಿ ರೇಶ್ಮೆ ಸೀರೆಯ ಮಾರಾಟವಿದ್ದಲ್ಲಿ, ಮಗಳ ಮದುವೆಗೆ ಬೇಕಿದ್ದ ಸೀರೆಗಳನ್ನು ಎತ್ತಿ ತೆಗೆದಿಡುತ್ತಾಳೆ. ಇನ್ನು ಒಳ್ಳೆಯ ಸಂಬಂಧ ಗೊತ್ತಾದ ಮೇಲಂತೂ ಹುಡುಗಾ ಹುಡುಗಿ ಪಾರ್ಕು, ಸಿನಿಮಾ, ಹೋಟೆಲ್, ಕಾಫೀ ಬಾರ್ ಅಂತಾ ಸುತ್ತಾಡ್ತಾ , ಮೊಬೈಲ್ನಲ್ಲಿ ಗಂಟೆ ಗಟ್ಟಲೆ ಮಾತನಾಡುತ್ತಾ , ವ್ಯಾಟ್ಯಾಪ್, ಇಸ್ಟಾಗ್ರಾಂ ಚಾಟ್ ಮಾಡ್ತಾ ಇದ್ರೇ, ಅಪ್ಪಾ- ಅಮ್ಮಾ ಮದುವೆಗೆ ಖರ್ಚಿಗೆ ಹಣವನ್ನು ಹೊಂಚುತ್ತಾ, ಛತ್ರದವರಿಗೆ, ಅಡುಗೆಯವರಿಗೆ, ಪುರೋಹಿತರಿಗೆ ಮುಂಗಡ ಕೊಟ್ಟು ಪ್ರಿಂಟಿಂಗ್ ಪ್ರೆಸ್ಗೆ ಹೋಗಿ ಆಹ್ವಾನ ಪತ್ರ ಅಚ್ಚು ಹಾಕಿಸುವುದರಲ್ಲಿ ನಿರತರಾಗಿತ್ತಾರೆ.

ಪುರೋಹಿತರು ಎಂದು ಹೇಳಿದಾಗ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಚಿಕ್ಕ ತಂಗಿಯ ಮದುವೆ ಮಾಡಿದ ಸಂದರ್ಭ ಜ್ಞಾಪಕಕ್ಕೆ ಬರ್ತಾ ಇದೆ. ಮದುವೆ ಬೆಂಗಳೂರಿನಲ್ಲಿದ್ದರೂ ಕುಲಪುರೋಹಿತರೆಂದು ಊರಿನ ಪುರೋಹಿತರಿಗೆ ನಾಲ್ಕು ತಿಂಗಳ ಮುಂಚೆಯೇ ವಿಷಯ ತಿಳಿಸಿ ಅವರಂದಲೇ ಲಗ್ನ ಹಾಕಿಸಿಕೊಂಡು ಛತ್ರಕ್ಕೆ ಮುಂಗಡ ಕೊಟ್ಟ ಕೂಡಲೇ ಅವರಿಗೂ ತಿಳಿಸಿ, ಒಂದು ತಿಂಗಳ ಮುಂಚೆಯೇ ಖುದ್ದಾಗಿ ಮುಖತಃ ಭೇಟಿಯಾಗಿ ಅವರಿಗೆ ಆಹ್ವಾನ ಪತ್ರ ಕೊಟ್ಟು, ಮದುವೆಯ ಹಿಂದಿನ ದಿನವೇ ನಾಂದಿಯಿಂದ ಹಿಡಿದು, ವರಪೂಜೆ, ಮಾರನೇ ದಿನ ಧಾರೆ, ನಾಗೋಲಿ ಮತ್ತು ಮೂರನೆಯ ದಿನ ಸತ್ಯನಾರಾಯಣ ಪೂಜೆಗೂ ಅವರಿಗೇ ಒಪ್ಪಿಸಲಾಗಿತ್ತು. ಇಂದಿನ ಹಾಗೆ ಅಂದೆಲ್ಲಾ ಫೋನ್ ಅಥವಾ ಮೊಬೈಲ್ ಇಲ್ಲದಿದ್ದರಿಂದ ಎಲ್ಲವೂ ಅಂಚೆ ಕಾಗದ ಮೂಲಕವೇ ವ್ಯವಹಾರವಾಗಿತ್ತು. ಮದುವೆ ಹಿಂದಿನ ದಿನ ಬೆಳಿಗ್ಗೆ ನಾವೆಲ್ಲರೂ ಛತ್ರಕ್ಕೆ ಹೋಗಿ ಸಾಮಾನು ಸರಂಜಾಮುಗಳನ್ನೆಲ್ಲಾ ಇಳಿಸಿ, ನಮ್ಮ ದೊಡ್ಡಪ್ಪನ ಮಗ ಅಣ್ಣನನ್ನು ಬಸ್ ಸ್ಟಾಂಡಿನಿಂದ ಪುರೋಹಿತರನ್ನು ಕರೆತರಲು ಕಳುಹಿಸಿದ್ದೆವು. ಅಡಿಗೆಯವರು ಬಂದು ತಮ್ಮ ಕೆಲಸ ಆರಂಭಿಸಿ ಎಲ್ಲರಿಗೂ ಕಾಫಿ, ತಿಂಡಿ ಮಾಡಿ ಕೊಟ್ಟರೂ ಪುರೋಹಿತರ ಆಗಮನವಾಗಲೇ ಇಲ್ಲ, ಗಂಟೆ, ಒಂಭತ್ತಾಗಿ, ಹತ್ತಾದರೂ ಪುರೋಹಿತರು ಮತ್ತು ಅವರನ್ನು ಕರೆ ತರಲು ಹೋಗಿದ್ದ ನಮ್ಮ ಅಣ್ಣನ ಸುದ್ದಿಯೇ ಇಲ್ಲವಾದಾಗ ನಮ್ಮ ಎಲ್ಲರಲ್ಲೂ ಆತಂಕವಾದಾಗ, ನಮ್ಮ ಮಾವನ ಮಗ ತನಗೆ ಹತ್ತಿರದಲ್ಲೇ ಪರಿಚಯವಿದ್ದ ದೇವಸ್ಥಾನದ ಅರ್ಚಕರ ಬಳಿ ವಿಚಾರಿಸಿದಾಗ, ಅವರು ನನಗೆ ಮದುವೆ ಪೂರ್ತಿ ಮಾಡಿಸಲು ಬರುವುದಿಲ್ಲ. ಬೇಕಾದರೆ ನಾಂದಿ ಮಾಡಿಸಿ ಕೊಡುತ್ತೇನೆ ಎಂದಾಗ, ಸರಿ ಈಗ ನಾಂದಿ ಮಾಡಿಸಿ ಕೊಡಿ ಮಧ್ಯಾಹ್ನದ ಹೊತ್ತಿಗೆ ನಮ್ಮ ಶಾಸ್ತ್ರಿಗಳು ಬಂದು ಬಿಡಬಹುದು ಎಂದು ಅವರನ್ನು ಕರೆತಂದು ಅವರಿಂದ ನಾಂದಿ ಶಾಸ್ತ್ರ ಮಾಡಿಸಿ, ಮುತ್ತೈದೆಯರಿಗೆ ಹೂವಿಳ್ಯ ಮುಗಿಸಿ ಊಟಕ್ಕೆ ಅಣಿಯಾಗುವ ಹೊತ್ತಿಗೆ ಶಾಸ್ತ್ರಿಗಳನ್ನು ಕರೆತರಲು ಹೋಗಿದ್ದ ಅಣ್ಣ ಬರಿಗೈಯ್ಯಲ್ಲಿ ಬಂದಾಗ , ಇನ್ನು ಕಾಯ್ದು ಪ್ರಯೋಜನವಿಲ್ಲ ಎಂದು ನಿರ್ಧರಿದ ನಮ್ಮ ತಂದೆಯವರು, ಬೇಗನೆ ಊಟದ ಶಾಸ್ತ್ರ ಮುಗಿಸಿ, ನಾನು ಮತ್ತು ನಮ್ಮ ತಂದೆಯವರು ನಮಗೆ ಪರಿಚಯವಿದ್ದ ಒಬ್ಬಬ್ಬರೇ ಪುರೋಹಿತರನ್ನು ಭೇಟಿ ಮಾಡಿದಾಗ ಬಹುತೇಕ ಎಲ್ಲರೂ ಒಂದಲ್ಲಾ ಒಂದು ಕಾರ್ಯಕ್ರಮ ಒಪ್ಪಿಕೊಂಡಿದ್ದರು. ಕಡೆಯ ಪ್ರಯತ್ನವೆಂಬಂತೆ ಹತ್ತಿರದ ಗಣೇಶ ದೇವಸ್ಥಾನದ ಪುರೋಹಿತರ ಮನೆಗೆ ಹೋಗಿ ಅವರನ್ನು ವಿಚಾರಿಸಿದಾಗ, ಅಯ್ಯೋ ರಾಮಾ, ಎಂಥಾ ಕೆಲಸವಾಯಿತು. ಒಂದೆರಡು ದಿನ ಮುಂಚೆ ಹೇಳಿದ್ದರೆ, ದೇವಸ್ಥಾನದ ಪೂಜೆಗೆ ಯಾರನ್ನಾದರೂ ಅಣಿಮಾಡಿ ಬರುತ್ತಿದ್ದೆ. ಈಗ ಹೇಳಿದರೆ ಆಗುವುದಿಲ್ಲವಲ್ಲಾ ಎಂದಾಗ, ಸರಿ ಬೇರೆಯವರನ್ನು ಹುಡುಕೋಣ ಎಂದು ಅವರ ಮನೆಯಿಂದ ಹೊರಗೆ ಬರುತ್ತಿದ್ದಾಗ, ಅವರ ಮಗ ಗೋಪಾಲ, ತನ್ನ ಕೆಲಸ ಮುಗಿಸಿಕೊಂಡು ಮನಗೆ ಬರುತ್ತಿದ್ದ. ನನ್ನನ್ನು ನೋಡಿದ ಕೂಡಲೇ ಓ ಶ್ರೀಕಂಠಾ, ಚೆನ್ನಾಗಿದ್ದೀಯಾ? ಏನು ಸಮಾಚಾರ ಇಷ್ಟು ದೂರ ಬಂದ್ದೀದ್ದೀಯಾ ಎಂದ? ಅವನಿಗೆ ನಡೆದದ್ದೆಲ್ಲವನ್ನೂ ವಿವರಿಸಿ, ದೇವಸ್ಥಾನದ ಪೂಜೆ ಮಾಡಲು ಯಾರೂ ಇಲ್ಲದ ಕಾರಣ ನಿಮ್ಮ ತಂದೆಯವರೂ ಕೂಡಾ ಬರಲು ಒಪ್ಪಿಕೊಳ್ಳಲಿಲ್ಲ ಎಂದೆ. ಅಷ್ಟೇ ತಾನೇ, ನಾನು ಇಲ್ವಾ, ಬನ್ನಿ ಒಳಗೆ ಎಂದು ಕರೆದು, ಅಪ್ಪಾ, ನೀವು ಅವರ ಮನೆಯ ಮದುವೆ ಖಂಡಿತವಾಗಿಯೂ ಮಾಡಿಸಿಕೊಡಲೇ ಬೇಕು. ನಾನು ದೇವಸ್ಥಾನದ ಪೂಜೆ ಮಾಡುತ್ತೇನೆ ಎಂದ. ಆದಕ್ಕೆ ಅವರ ತಂದೆ ಅಲ್ಲಾ ಮಗು ನಿನಗೆ ಕೆಲಸ ಇದೆಯಲ್ಲವೇ ಎಂದಾಗ, ಮದುವೆಯ ಹುಡುಗಿ ಲಕ್ಷ್ಮೀ, ನನ್ನ ಸಹಪಾಠಿ, ಶ್ರೀಕಂಠ ಮತ್ತು ಅವನ ಇನ್ನೊಬ್ಬ ತಂಗಿ ನಮ್ಮ ಅಕ್ಕಂದಿರ ಸಹಪಾಠಿಗಳು ಹಾಗಾಗಿ ಒಬ್ಬ ಸ್ನೇಹಿತನಾಗಿ ಅವರ ಕಷ್ಟಕ್ಕೆ ಆಗುವುದು ನಮ್ಮ ಧರ್ಮ. ನೀವು ಮದುವೆ ಮಾಡಿಸಿಕೊಡಿ ನಾನು ರಜಾ ಹಾಕಿ ದೇವಸ್ಥಾನ ನೋಡಿ ಕೊಳ್ಳುತ್ತೇನೆ ಎಂದಾಗ, ಸರಿಯಪ್ಪಾ. ನನ್ನ ಮಗ ಹೇಳಿದ ಮೇಲೆ ನಾನು ಬರ್ತೀನಿ. ಆದರೆ ನನಗೆ ಓಡಾಲು ಆಗದ ಕಾರಣ ನೀವೇ ಬಂದು ಕರೆದು ಕೊಂಡು ಹೋಗಿ, ಕರೆದು ಕೊಂಡು ಬಿಡಬೇಕು ಎಂದಾಗ, ನಮ್ಮ ತಂದೆಯವರ ಕಣ್ಣಿನಲ್ಲಿ ಆನಂದ ಭಾಷ್ಪ ಉಕ್ಕಿ ಹರಿಯುತ್ತಿತ್ತು. ಅವರನ್ನು ಸಮಾಧಾನ ಪಡಿಸಿ, ಸರಿ ಶಾಸ್ತ್ರಿಗಳೇ, ಆ ಜವಾಬ್ಧಾರಿ ನನಗೆ ಬಿಡಿ. ನಾನು ನಿಮಗೆ ವಾಹನದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ. ಗೋಪಾಲನ ಎರಡೂ ಕೈಗಳನ್ನು ಹಿಡಿದು, ಗೋಪಾಲ ನಿನ್ನಿಂದ ಬಾರೀ ಉಪಕಾರವಾಯಿತು. ನಿನ್ನ ಈ ಉಪಕಾರವನ್ನು ನಮ್ಮ ಜೀವಮಾನ ಇರುವ ತನಕ ಮರೆಯುವುದಿಲ್ಲ ಎಂದು ಹೇಳಿದೆ. ಶಾಸ್ತ್ರಿಗಳು ವರಪೂಜೆ ಮತ್ತು ಮದುವೆಯ ಶಾಸ್ತ್ರವನ್ನು ಸಾಂಗೋಪಾಂಗವಾಗಿ ಯಾವುದೇ ಲೋಪವಿಲ್ಲದೆ ನಡೆಸಿಕೊಟ್ಟ ನಂತರ, ಅವರಿಗೆ ಸಂಭಾವನೆ ಎಷ್ಟು ಕೊಡಬೇಕು ಎಂದು ಕೇಳಿದಾಗ, ನೀವು ನಮ್ಮ ಸ್ನೇಹಿತರು ನಿಮ್ಮ ಮನಸ್ಸಿಗೆ ಸಂತೋಷವಾದಷ್ಟು ಕೊಡಿ ಎಂದಾಗ ನಮ್ಮ ತಂದೆಯವರು, ಸಮಯಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ಮದುವೆ ಶಾಸ್ತ್ರ ಮುಗಿಸಿಕೊಟ್ಟು ನಮ್ಮ ಮಾನ ಕಾಪಾಡಿದ ಶಾಸ್ತ್ರಿಗಳಿಗೆ ಉತ್ತಮ ಸಂಭಾವನೆಯ ಜೊತೆಗೆ, ಅವರ ಮಗ ಗೋಪಾಲನಿಗೂ ಒಳ್ಳೆಯ ಶರ್ಟ್ ಪೀಸ್ ಕಾಣಿಕೆ ಕೊಟ್ಟಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ.

ಇನ್ನು ಮದುವೆ ಎಂದ ಮೇಲೆ ಖರ್ಚು ಹೆಚ್ಚೇ. ಅದಕ್ಕಾಗಿ ಪ್ರತಿಯೊಂದು ಪೈಸೆ ಉಳಿಸಿದರೂ ನಮಗೇ ಲಾಭ. ಅದಕ್ಕಾಗಿಯೇ ಅಡುಗೆಯ ಎಲ್ಲಾ ಸಾಮಾನುಗಳನ್ನು ವಾರಕ್ಕೇ ಮುಂಚೆಯೇ ಎಪಿಎಂಸಿ ಯಾರ್ಡ್ ನಿಂದ ತಂದು, ತೆಂಗಿನ ಕಾಯಿಯನ್ನು ಚೆನ್ನಪಟ್ಟಣದ ನಮ್ಮ ಸ್ನೇಹಿತನ ಮಾವನ ತೋಟದಿಂದ, ಅಕ್ಕಿಯನ್ನು ಕುಣಿಗಲ್ಲಿನ ನಮ್ಮ ಅತ್ತೆಯವರ ಮನೆಯ ಹತ್ತಿರದ ಅಕ್ಕಿ ಮಿಲ್ನಿಂದ ತಂದಿದ್ದರೆ, ಸಕ್ಕರೆಯನ್ನು ಪರಿಚಯವಿದ್ದ ಫುಡ್ ಡಿಪಾರ್ಟ್ಮೆಂಟ್ ನವರು ಕೊಡಿಸಿದ್ದರು. ಸೀಮೇ ಎಣ್ಣೆಯನ್ನು ನಮ್ಮ ತಂದೆಯವರಿಗೆ ಪರಿಚಯವಿದ್ದ ನ್ಯಾಯಬೆಲೆ ಅಂಗಡಿಯವರು ಕೊಡಿಸಿದ್ದರು. ಬಾಳೆಎಲೆ ಮತ್ತು ವಿಳ್ಳೇದೆಲೆಯನ್ನು ನೇರವಾಗಿ ತೋಟದಿಂದಲೇ ಕೊಂಡು ತಂದಿದ್ದೆವು. ಹೀಗೆ ಪ್ರತಿಯೊಂದರಲ್ಲೂ ಆದಷ್ಟೂ ಶ್ರಮವಹಿಸಿ ಹಣ ಉಳಿತಾಯ ಮಾಡಿದ್ದೆವು. ಮದುವೆಯ ಬೆಳಿಗ್ಗೆ ಹತ್ತಿರದ ಹಾಲಿನ ಬೂತ್ನಿಂದ ಹಾಲು ತೆಗೆದುಕೊಂಡರೆ ಲೀಟರಿಗೆ ಒಂದು ರೂಪಾಯಿ ಜಾಸ್ತಿ ತೆಗೆದುಕೊಳ್ಳುತ್ತಾರೆ ಎಂದು, ಬೆಳ್ಳಂಬೆಳಿಗ್ಗೆಯೇ ಯಲಹಂಕ ಮದರ್ ಡೈರಿಗೆ ಹೋಗಿ ಬೇಕಾಗಿದ್ದ ಹಾಲನ್ನು ತೆಗೆದುಕೊಂಡು ಮದುವೆ ಮನೆಗೆ ಬಂದರೆ ಅಡುಗೆಯ ಮನೆಯ ಸ್ಟೋರ್ ಬೀಗ ಹಾಕಿತ್ತು.

ಅಡುಗೆಯ ಮನೆಯ ಸ್ಟೋರ್ ನೋಡಿಕೊಳ್ಳಲು ನಮ್ಮ ತಾಯಿಯ ತಂಗಿಯ ಯಜಮಾನರಿಗೆ ಅಂದರೆ ನಮ್ಮ ಚಿಕ್ಕಪ್ಪನಿಗೆ ವಹಿಸಿತ್ತು. ಅವರ ಮನೆ ಅಲ್ಲೇ ಛತ್ರದ ಬಳಿ ಇದ್ದುದರಿಂದ ಅಡುಗೆಯವರಿಗೆ ಏನಾದರೂ ಸಾಮಾನುಗಳು ಬೇಕಾದಲ್ಲಿ ತಂದು ಕೊಡಬಹುದು ಎಂಬ ಆಲೋಚನೆ ನಮ್ಮದಾಗಿತ್ತು. ಸರಿ ಚಿಕ್ಕಪ್ಪ ಇಲ್ಲೇ ಎಲ್ಲೋ ಹೋಗಿರಬಹುದೆಂದು ಇಡೀ ಕಲ್ಯಾಣ ಮಂಟಪ ಹುಡುಕಾಡಿದರೂ ಚಿಕ್ಕಪ್ಪನ ಸುಳಿವೇ ಇಲ್ಲ. ಆಗಲೇ ಒಂದಿಬ್ಬರು ಬೀಗರ ಮನೆಯವರು ಕಾಫಿ ರೆಡಿ ಆಗಿದ್ಯಾ ಅಂತಾ ಕೇಳಿಕೊಂಡು ಬಂದಿದ್ದರು. ಇದೊಳ್ಳೆ ಗ್ರಹಚಾರವಾಯ್ತಲ್ಲಪ್ಪಾ ಎಂದು ಯೋಚಿಸುತ್ತಾ ಎಲ್ಲಿ ಹೋಗಿರಬಹುದು ಎಂದು ಎಲ್ಲರ ಬಳಿ ಕೇಳುತ್ತಿದ್ದಾಗ, ನಮ್ಮ ಸಂಬಂಧೀಕರು ಹೇಳಿದ ಕಥೆ ಕೇಳಿ ಗಾಬರಿಯಾಗಿ ಬಿಟ್ಟೆ. ಸಾಮಾನ್ಯವಾಗಿ ಮದುವೆ ಮನೆಯಲ್ಲಿ ಇಸ್ಪೀಟ್ ಆಡುವ ಕೆಲವರು ಬಂದೇ ಬಂದಿರುತ್ತಾರೆ. ಊಟ ತಿಂಡಿ ಹೊತ್ತಿಗೆ ಆಟದಿಂದ ಏಳುವುದು ಬಿಟ್ಟರೆ, ಹಗಲು ರಾತ್ರಿ ಎನ್ನದೇ, ನಿದ್ದೇ ಕೂಡಾ ಬಿಟ್ಟು ಇಸ್ಪೀಟ್ ಆಟದಲ್ಲಿ ಮಗ್ನರಾಗಿರುತ್ತಾರೆ. ಹಾಗೆಯೇ ಹಿಂದಿನ ದಿನ ರಾತ್ರಿ ಇಸ್ಪೀಟ್ ಆಟ ಆಡುತ್ತಿದ್ದವರ ಬಳಿ ತಡ ರಾತ್ರಿಯಲ್ಲಿ ನಮ್ಮ ಚಿಕ್ಕಪ್ಪ ಕಾಫಿ ತೆಗೆದುಕೊಂಡು ಹೋಗಿದ್ದಾರೆ. ಕಾಫಿ ಪ್ರಿಯನಾದ ನಮ್ಮ ದೂರದ ಸಂಬಂಧಿಗೆ ಅಂದು ಚಾಕ್ ಪಾಟ್ ಹೊಡೆದಿದ್ದ ಕಾರಣ, ಬನ್ನೀ ಭಟ್ರೇ. ಒಳ್ಳೆಯ ಸಮಯಕ್ಕೆ ಬಂದ್ರೀ. ಬಿಸಿ ಬಿಸಿ ಕಾಫಿ ಕೊಡಿ ಎಂದು ಪಟ ಪಟ ಮಾತನಾಡುತ್ತಾ ಕಾಫಿ ಕೆಟಲ್ನಿಂದ ಅವನೇ ಕಾಫಿ ಬಗ್ಗಿಸಿಕೊಂಡು ತಗೊಳ್ಳಿ ಭಟ್ರೇ ಭಕ್ಷೀಸು ಎಂದು ನಮ್ಮ ಚಿಕ್ಕಪ್ಪನ ಕೈಗೆ ನೋಟೋಂದ್ದನ್ನು ತುರುಕಿದ್ದಾನೆ. ಮೊದಲೇ ದೂರ್ವಾಸ ಮುನಿಯಾದ ನಮ್ಮ ಚಿಕ್ಕಪ್ಪನ ಪಿತ್ತ ನೆತ್ತಿಗೇರಿದೆ. ಪಾಪ ಆಡ್ತಾ ಇದ್ದಾರಲ್ಲಾ ಅಂತಾ ಕಾಫಿ ಮಾಡಿಕೊಂಡು ಬಂದ್ರೇ, ನನ್ನನ್ನೇ ಅಡುಗೆ ಭಟ್ಟ ಅಂತಾನಲ್ಲಾ ಎಂದು ಮನಸ್ಸಿನಲ್ಲೇ ಅವನನ್ನು ಶಪಿಸುತ್ತಾ. ಅವನು ಕೊಟ್ಟ ನೋಟನ್ನು ಅವನ ಕೈಗೇ ಕೊಟ್ಟು, ಕಾಫೀ ಕೆಟಲ್ ಅಲ್ಲಿಯೇ ಕುಕ್ಕಿ ದುರು ದುರು ಅಂತಾ ಕೋಪದಿಂದ ತಮ್ಮ ಮನೆಗೆ ಹೋಗಿಬಿಟ್ಟಿರುವ ವಿಷಯ ತಿಳಿಯಿತು.

ಕೂಡಲೇ ಚಿಕ್ಕಮ್ಮನ ಮನೆಯ ಕಡೆ ಗಾಡಿ ತೆಗೆದುಕೊಂಡು ಹೋಗಿ, ಬಾಗಿಲು ಎಷ್ಟೇ ತಟ್ಟಿದರೂ, ಕಾಲಿಂಗ್ ಬೆಲ್ ಮಾಡಿದರೂ ಬಾಗಿಲು ತೆಗೆಯುತ್ತಲೇ ಇಲ್ಲ. ಈಗೇನಪ್ಪಾ ಮಾಡೋದು? ಸ್ಟೋರ್ ಬೀಗನೇನೋ ಒಡೆದು ಹಾಕಬಹುದು ಅದರೆ ಚಿಕ್ಕಪ್ಪನನ್ನು ಸಮಾಧಾನ ಮಾಡದಿದ್ದರೆ, ದೊಡ್ಡ ರಾದ್ದಾಂತವೇ ಆಗಬಹುದು ಎಂದು ಯೋಚಿಸುತ್ತಲೇ, ಜೋರಾಗಿ ಮತ್ತೊಮ್ಮೆ ಕಾಲಿಂಗ್ ಬೆಲ್ ಭಾರಿಸಿ, ಬಾಗಿಲನ್ನು ತಟ್ಟಿದಾಗ, ಯಾರೂ? ಬಂದೆ ಬಂದೆ ಎಂಬ ಚಿಕ್ಕಪ್ಪ ಶಬ್ಧ ಕೇಳಿ, ಅಬ್ಬ ಬದುಕಿದೆಯಾ ಬಡ ಜೀವ ಎಂಬಂತಾಗಿ ಅಲ್ಲೇ ಒಂದೈದು ನಿಮಿಷ ಕಾಯುವ ಹೊತ್ತಿಗೆ, ಚಿಕ್ಕಪ್ಪ ಸ್ನಾನ ಮುಗಿಸಿ ಮೈ ಒರೆಸಿಕೊಂಡು ಬಾಗಿಲು ತೆಗೆದರು. ಚಿಕ್ಕಪ್ಪಾ, ರಾತ್ರಿ ನಡೆದ ವಿಷಯ ಈಗ ಗೊತ್ತಾಯ್ತು. ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ. ಏನೋ ಆಡುವ ಭರದಲ್ಲಿ ನಿದ್ದೆ ಮೂಡಿನಲ್ಲಿ ಅವನು ಹಾಗೆ ಹೇಳ್ಬಿಟ್ಟಿದ್ದಾನೆ. ಕೋಪ ಮಾಡಿಕೊಳ್ಳಬೇಡಿ. ನಾನು ಅವನ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಒಂದೇ ಸಮನೆ ಉಸುರಿದೆ. ಅಯ್ಯೋ ಬಿಡೋ ರಾಜಕುಮಾರಾ (ವರನಟ ಡಾ. ರಾಜಕುಮಾರರ ಅಪ್ಪಟ ಅಭಿಮಾನಿಯಾದ ನಮ್ಮ ಚಿಕ್ಕಪ್ಪ ಎಲ್ಲಾ ಮಕ್ಕಳನ್ನೂ ರಾಜಕುಮಾರಾ ಎಂದೇ ಕರೆಯುತ್ತಿದ್ದರು). ಅವನಾಡಿದ ಮಾತಿಗೆ ರಾತ್ರಿ ಸಿಕ್ಕಪಟ್ಟೆ ಕೋಪ ಬಂದು ಬಿಡ್ತು. ಅಲ್ಲೇ ಉಗಿದು ಬಂದು ಬಿಡೋಣ ಅನ್ನಿಸ್ತು. ಆದ್ರೆ, ಅವನು ಹೆಣ್ಣಿನ ಮನೆಯ ಕಡೆಯವರಾ? ಇಲ್ಲಾ ಗಂಡಿನ ಮನೆ ಕಡೆಯವರಾ? ಎಂದು ತಿಳಿಯದೆ, ಸುಮ್ಮನೆ ಮದುವೆ ಮನೆಯಲ್ಲಿ ಯಾಕೆ ಗಲಾಟೆ ಎಂದು ಕೋಪ ನುಂಗಿಕೊಂಡು ಮನೆಗೆ ಬಂದು ನಿದ್ದೆ ಮಾಡಿಬಿಟ್ಟೆ. ಅಲಾರಾಂ ಹೊಡೆದದ್ದೂ ಗೊತ್ತಾಗಲಿಲ್ಲ. ಸರಿ ಸರಿ ನಡಿ ಸ್ಟೋರ್ ಕೀ ಕೂಡಾ ನನ್ನ ಹತ್ತಿರಾನೇ ಇದೇ. ಇನ್ನೂ ತಿಂಡಿ ಅಡುಗೆ ಎಲ್ಲಾ ಮಾಡಬೇಕು. ಮಹೂರ್ತ ಬೇರೆ ಬೇಗ ಇದೇ ಎಂದು ನಮ್ಮ ಚಿಕ್ಕಪ್ಪ ಹೇಳಿದಾಗಾ, ಸದ್ಯ ಕೋಪ ಎಲ್ಲಾ ಇಳಿದು ಚಿಕ್ಕಪ್ಪ ತಣ್ಣಗಾಗಿದ್ದಾರೆ ಎಂದು ಮನಸ್ಸಿನಲ್ಲೇ ಅಂದು ಕೊಂಡು ಚಿಕ್ಕಪ್ಪನ್ನನ್ನು ಗಾಡಿಯಲ್ಲಿ ಕೂರಿಸಿಕೊಂಡು ಮದುವೆ ಮನೆಗೆ ಬಂದು ಸ್ವಲ್ಪ ಸಮಯದ ನಂತರ ನನ್ನ ಸಂಬಂಧಿಯ ಬಳಿ ನಮ್ಮ ಚಿಕ್ಕಪ್ಪನವರಿಗೆ ಕ್ಷಮೆಯನ್ನೂ ಕೇಳಿಸಿ ಸಮಸ್ಯೆ ಬಗೆ ಹರಿಸಿದ್ದೆ.

ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬಂತೆ ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆಂಬ ವಾಡಿಕೆ ಮಾತಾಗಿದ್ದರೂ ಅಂತಹ ಮದುವೆ ಮಾಡುವಾಗ ಇಂತಹ ನೂರಾರು ಸಮಸ್ಯೆಗಳು, ಕಷ್ಟ ಕಾರ್ಪಣ್ಯಗಳು ಹೆಣ್ಣಿನ ಮನೆಯವರಿಗೆ ಎದುರಾಗಿರುತ್ತವೆ. ಆದರೆ ಇದರ ಅರಿವಿಲ್ಲದ ಬಹಳಷ್ಟು ಮಂದಿ, ಮದುವೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆಯುವುದು, ವಿನಾಕಾರಣ ಅದು ಸರಿ ಇಲ್ಲಾ ಇದು ಸರಿ ಇಲ್ಲಾ ಎಂದು ಕಿತಾಪತಿ ಮಾಡುವುದು, ಗಂಡಿನ ಕಡೆಯವರು ಎಂದು ಹೆಣ್ಣಿನ ಮನೆಯವರ ಮೇಲೆ ದರ್ಪ ತೋರುವುದು ಎಷ್ಟು ಸರಿ?. ಮದುವೆ ಮನೆಗೆ ಹೋದಾಗ ಅಲ್ಲಿಯ ಸ್ಥಿತಿ ಗತಿಯ ಅನುಗುಣವಾಗಿ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು. ಇಲ್ಲದಿದ್ದಲ್ಲಿ ಮದುವೆಗೆ ಬಂದ ಸಂಬಂಧೀಕರನ್ನು ಬಾಯಿ ತುಂಬಾ ಮಾತನಾಡಿಸುತ್ತಾ ಸತ್ಕರಿಸಬೇಕು. ಅದು ಬಿಟ್ಟು ಬಂದವನ್ನು ಸರಿಯಾಗಿ ಗಮನಿಸಿಕೊಳ್ಳಲಿಲ್ಲಾ ಎಂದೂ ಅಡುಗೆ ಸರಿ ಇಲ್ಲಾ ಎಂದೂ ಕೊಂಕು ತೆಗೆಯುವುದು ಒಳ್ಳೆಯ ಲಕ್ಷಣವಲ್ಲ. ಹತ್ತಿರದ ಸಂಬಂಧೀಕರಿಗೆ ಮಾತ್ರವೇ ಮದುವೆಯ ನಂಟಿದ್ದರೆ, ಇನ್ನು ಮದುವೆಗೆ ಬಂದವರಿಗೆ ಆಥಿತ್ಯ ಮತ್ತು ಊಟೋಪಚಾರಗಳೇ ಹೆಚ್ಚಿನ ಮಹತ್ವವಾಗುವುದು ಸೋಜಿಗವೇ ಸರಿ.

ಇಂದಿಗೂ ಕೂಡಾ ನನಗೆ ಮದುವೆ ಮನೆಯಲ್ಲಿ ಊಟ ಮಾಡುವ ಸಮಯದಲ್ಲಿ ಬಹಳವಾಗಿ ಕಾಡುವ ಪ್ರಶ್ನೆಯೆಂದರೆ, ಆ ಹೆಣ್ಣು ಹೆತ್ತ ತಂದೆಯ ಕಣ್ಣೀರಿನ ಶ್ರಮದ ಫಲ ಮತ್ತು ಅವರ ಬೆವರಿನ ಪರಿಶ್ರಮದಿಂದ ತಯಾರಾದ ಅಡುಗೆಯನ್ನು ತಿನ್ನಲು ನಾವು ಎಷ್ಟು ಅರ್ಹರು?

ಮದುವೆ ಮನೆಯಲ್ಲಿನ ಊಟದಲ್ಲಿ ಸ್ವಲ್ಪ ಉಪ್ಪು ಹೆಚ್ಚಾಗಿದ್ದರೆ ಅದನ್ನು ಎತ್ತಿ ಆಡಿ ತೋರಿಸಬೇಡಿ. ಅದು ಹೆಣ್ಣು ಹೆತ್ತ ತಂದೆತಾಯಿಯರ ಕಣ್ಣೀರು ಅಡಿಗೆಗೆ ಬಿದ್ದು ಉಪ್ಪಾಗಿರುಬಹುದು ಎಂದು ಎಲ್ಲೋ ಓದಿದ ನೆನಪು. ಅದಕ್ಕೇ ಏನೋ ಇಂತಹ ಎಲ್ಲಾ ಸಮಸ್ಯೆಗಳನ್ನು ಅನುಭವಿಸಿಯೇ ನಮ್ಮ ಹಿರಿಯರು ಮದುವೆ ಮಾಡಿ ನೋಡು ಮನೆಕಟ್ಟಿ ನೋಡು ಎಂಬ ಗಾದೆ ಮಾಡಿದ್ದಾರೆ.

ಏನಂತೀರೀ?