ಹಾಗಲಕಾಯಿ ಗೊಜ್ಜು

ಸಾಧಾರಣವಾಗಿ ಹಾಗಲಕಾಯಿ ಗೊಜ್ಜು ಎಂದರೆ ಅದರ ಕಹಿ ಗುಣದಿಂದಾಗಿ ಮೂಗು ಮುರಿಯುವವರೇ ಹೆಚ್ಚು. ಆದರೆ ಹಾಗಲಕಾಯಿಯ ಈ ಕಹೀ ಗುಣವೇ ಮಧುಮೇಹಿಗಳಿಗೆ ರಾಮಬಾಣ. ಬರೀ ಹಾಗಲಕಾಯಿಯನ್ನು ತಿನ್ನಲು ಅಸಾಧ್ಯವಾದ್ದರಿಂದ ಕಾಯಿ, ಹುಣಸೇಹಣ್ಣು, ಬೆಲ್ಲ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಗೊಜ್ಜು ತಯಾರಿಸಲು ಬೇಕಾಗುವ ಪದಾರ್ಥಗಳು

 • ಮಧ್ಯಮ ಗಾತ್ರದ ಹಾಗಲಕಾಯಿ – 2
 • ನೆನಸಿದ ಹುಣಸೇ ಹಣ್ಣು – ನಿಂಬೆ ಗಾತ್ರದ್ದು
 • ಬೆಲ್ಲದ ಪುಡಿ – 5 ಚಮಚ
 • ಗೊಜ್ಜಿನ ಪುಡಿ – 3 ಚಮಚ
 • ಚಿಟಿಕಿ ಅರಿಷಿನ ಪುಡಿ
 • ರುಚಿಗೆ ತಕ್ಕಷ್ಟು ಉಪ್ಪು
 • ಕತ್ತರಿಸಿದ ಕೊತ್ತಂಬರೀ ಸೊಪ್ಪು – 2 ಚಮಚ

ಗೊಜ್ಜಿನ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು

 • ಉದ್ದಿನಬೇಳೆ – 2 ಚಮಚ
 • ಜೀರಿಗೆ – 1/2 ಚಮಚ
 • ಮೆಣಸು – 1/4 ಚಮಚ
 • ಬಿಳೀ ಎಳ್ಳು – 2 ಚಮಚ
 • ತುರಿದ ಕೊಬ್ಬರಿ – 4 ಚಮಚ

ಒಗ್ಗರಣೆಗಾಗಿ ಬೇಕಾಗುವ ಸಾಮಗ್ರಿಗಳು

 • ಕತ್ತರಿಸಿದ ಒಣಮೆಣಸಿನಕಾಯಿ – 2
 • ಸಾಸಿವೆ – 2 ಚಮಚ
 • ಅಡುಗೆ ಎಣ್ಣೆ – 2 ಚಮಚ
 • ಚಿಟಿಕೆ ಇಂಗು
 • ಕರಿಬೇವು 3 – 4 ಎಲೆಗಳು

ಹಾಗಲಕಾಯಿ ಗೊಜ್ಜು ತಯಾರಿಸುವ ವಿಧಾನ:

 • ಒಣ ಕೊಬ್ಬರಿಯನ್ನು ಹೊರತು ಪಡಿಸಿ ಗೊಜ್ಜಿನ ಪುಡಿಯ ಉಳಿದೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಿ
 • ಅದು ತಣ್ಣಗಾದ ನಂತರ ಅದಕ್ಕೆ ಒಣ ಕೊಬ್ಬರಿಯನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
 • ಹಾಗಲಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಿ
 • ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಹಸೀ ಹೋಗುವವರೆಗೂ ಹೆಚ್ಚಿದ ಹಾಗಲಕಾಯಿಯನ್ನು ಹುರಿದುಕೊಳ್ಳಿ
 • ಈಗ ಸ್ವಲ್ಪ ಅರಿಷಿನ, ರುಚಿಗೆ ತಕ್ಕಷ್ಟು ಉಪ್ಪು, ಹುಣಸೇ ಹುಳಿ ಮತ್ತು ಬೆಲ್ಲದ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ
 • ಚೆನ್ನಾಗಿ ಕುದಿಯುತ್ತಿರುವಾಗ ಸಿದ್ಧ ಪಡಿಸಿಟ್ಟುಕೊಂಡ ಗೊಜ್ಜಿನ ಪುಡಿಯನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾಗುವಷ್ತು ಹೊತ್ತು ಕುದಿಸಿ.
 • ಸಣ್ಣ ಬಾಣಲೆಯನ್ನು ಒಲೆಯ ಮೇಲೆ ಇರಿಸಿ ಅದಕ್ಕೆ ಎಣ್ಣೆ ಹಾಕಿ,
 • ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿಕೊಂಡು ಅದಕ್ಕೆ ಇಂಗು,ಅರಿಶಿನ ಮತ್ತು ಕತ್ತರಿಸಿಕೊಂಡ ಒಣ ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ
 • ಸಿದ್ಧ ಪಡಿಸಿಟ್ಟು ಕೊಂಡ ಒಗ್ಗರಣೆಯನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಒಂದೆರಡು ನಿಮಿಷಗಳಷ್ಟು ಕುದಿಸಿ ಅದಕ್ಕೆ ಕತ್ತರಿಸಿದ ಕೊತ್ತಂಬರೀ ಸೊಪ್ಪನ್ನು ಸೇರಿಸಿದಲ್ಲಿ ಆರೋಗ್ಯಕರವಾದ ಮತ್ತು ರುಚಿಕರವಾದ ಹಾಗಲಕಾಯಿ ಗೊಜ್ಜು ಸಿದ್ದ.

ಚಪಾತಿ, ದೋಸೆ, ರೊಟ್ಟಿ ಮತ್ತು ಅನ್ನದ ಜೊತೆಯೂ ಈ ಹಾಗಲಕಾಯಿ ಗೊಜ್ಜು ಸವಿಯಲು ಮಜವಾಗಿರುತ್ತದೆ.

ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ಮಾಡುವುದನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

WhatsApp Image 2020-06-25 at 2.34.49 PM

ಮನದಾಳದ ಮಾತು : ಕಹಿ ಎಂಬ ಪದ ನೆನಪಾದಾಗಲೆಲ್ಲ ಅದರ ಹೊತೆ ನೆನಪಾಗುವ ಇನ್ನೆರಡು ಪದಗಳೆಂದರೆ ಹಾಗಲಕಾಯಿ ಮತ್ತು ಬೇವಿನ ಕಾಯಿ. ಈ ಎರಡೂ ಪದಾರ್ಥಗಳೂ ಕಹಿಯಾಗಿರುವುದರಿಂದ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬ ಗಾದೆ ಮಾತಿದೆ. ಅದರೆ ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪಲ್ಯ, ಗೊಜ್ಜು, ಉಪ್ಪಿನಕಾಯಿ ಇಲ್ಲವೇ ಯಾವುದೇ ಒಂದು ರೀತಿಯಲ್ಲಾದರೂ ಹಾಗಲಕಾಯಿಯನ್ನು ವಾರಕ್ಕೊಮ್ಮೆಯಾದರೂ ಬಳಸುವ ಮೂಲಕ ಆರೋಗ್ಯವಂತರಾಗಿರೋಣ.
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು