ಏರ್ ಇಂಡಿಯ

ಇತ್ತೀಚೆಗೆ ದೇಶಾದ್ಯಂತ ನೆಡೆಯುತ್ತಿರುವ ಬಹುಮುಖ್ಯ ಚರ್ಚೆ ಎಂದರೆ, ಈ ಸರ್ಕಾರ ದೇಶವನ್ನು ಒಂದೊಂದಾಗಿ ಮಾರಲು ಹೊರಟಿದೆ. ಸರ್ಕಾರ ನಡೆಸಿ ಎಂದು ಅವರನ್ನು ಅಧಿಕಾರಕ್ಕೆ ತಂದರೆ ಇವರು ಹೀಗೆ ಒಂದೊಂದೇ ಸರ್ಕಾರೀ ಸಂಸ್ಥೆಗಳನ್ನು ಮಾರಾಟ ಮಾಡಲು ಅವರಿಗೆ ಯಾವ ಹಕ್ಕಿದೆ? ಎಂಬುದರ ಕುರಿತಾಗಿದೆ. ಹಾಗಾದರೆ ನಿಜವಾಗಿಯೂ ನಡೆಯುತ್ತಿರುದಾದರೂ ಏನು? ಎಂಬುದರ ಕುರಿತಾಗಿ ಚರ್ಚೆ ಮಾಡೋಣ.

ಅದೊಂದು ಸಣ್ಣ ಮಕ್ಕಳ ಶಾಲೆ. ಶಾಲೆಯ ಶಿಕ್ಷಕಿ ಪ್ರತೀ ವಿದ್ಯಾರ್ಥಿಗಳಿಗೂ ಒಂದೊಂದು ಹಣ್ಣನ್ನು ತರಲು ಹೇಳಿದ್ದ ಕಾರಣ ಎಲ್ಲಾ ಮಕ್ಕಳೂ ಸಂತೋಷದಿಂದ ಮಾರನೆಯ ದಿನ ಹಣ್ಣುಗಳನ್ನು ತಂದು ಅದನ್ನು ಆ ಶಿಕ್ಷಕಿಗೆ ತೋರಿಸಿದಾಗ ಅದನ್ನು ತಾನು ಹೇಳುವವರೆಗೂ ತಮ್ಮ ಚೀಲದಲ್ಲೇ ಇಟ್ಟು ಕೊಳ್ಳಲು ತಿಳಿಸಿದರೆ, ಹೀಗೆ ಒಂದು, ಎರಡು, ಮೂರು, ನಾಲ್ಕು ಹೀಗೇ ಹತ್ತು ದಿನಗಳು ಕಳೆದವು. ಚೀಲದಲ್ಲಿದ್ದ ಹಣ್ಣು ಕೊಳೆತು ನಾರಲು ಆರಂಭವಾದಾಗ, ಅದರ ನಾತವನ್ನು ತಡೆಯಲು ವಿದ್ಯಾರ್ಥಿಗಳಿಗೆ ಅಗದಿದ್ದರೂ ಶಿಕ್ಷಕಿಯ ಭಯದಿಂದ ಸಹಿಸಿಕೊಂಡಿದ್ದರು. ಅದೊಮ್ಮೆ ಎಲ್ಲಾ ವಿದ್ಯಾರ್ಥಿಗಳೂ ಒಟ್ಟಿಗೆ ಚರ್ಚೆ ಮಾಡಿ ಆ ಕೊಳೆತ ಹಣ್ಣುಗಳನ್ನು ಬೀಸಾಡಲು ತೀರ್ಮಾನಿಸಿದ್ದಲ್ಲದೇ ಎಲ್ಲರೂ ಕೊಳೆತು ನಾರುತ್ತಿದ್ದ ಹಣ್ಣುಗಳನ್ನು ಬಿಸಾಡಿದ ನಂತರ ನೆಮ್ಮೆದಿಯಾಗಿ ಶಾಲೆಗೆ ಬರುತ್ತಾರೆ. ಅದೇ ದಿನ ಶಿಕ್ಷಕಿಯು ಎಲ್ಲರೂ ನಾನು ಹೇಳಿದ ಹಣ್ಣುಗಳನ್ನು ಜೋಪಾನವಾಗಿ ಇಟ್ಟು ಕೊಂಡಿದ್ದೀರಿ ಎಂದು ಭಾವಿಸುತ್ತೇನೆ ಎಂದು ಕೇಳುತ್ತಾರೆ. ಆಗ ಆ ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ, ಮಿಸ್, ಐದಾರು ದಿನಗಳ ಕಾಲ ಚೆನ್ನಾಗಿದ್ದ ಹಣ್ಣುಗಳು ದಿನೇ ದಿನೇ ಕಳೆದಂತೆ ಕೊಳೆತು ನಾರುತ್ತಿದ್ದಾಗ ಸಹಿಸಿಕೊಳ್ಳಲಾಗದೇ, ವಿಧಿ ಇಲ್ಲದೇ ಬಿಸಾಡಬೇಕಾಯಿತು ಎಂದರು. ಇಂತಹ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಆ ಶಿಕ್ಷಕಿ ಇದೇ ನೋಡಿ ಸೂಕ್ತವಾದ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೇ ಮುಂದೂಡುತ್ತಾ ಹೋದಲ್ಲಿ ಸಮಸ್ಯೆ ಉಲ್ಬಣವಾಗಿ ಈ ರೀತಿಯಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ವಿವರಿಸಿದರು.

ಆ ಶಾಲೆಯಲ್ಲಿ ಅಂದು ಶಿಕ್ಷಕಿ ತೋರಿಸಿದ ಪ್ರಾತ್ಯಕ್ಷಿಕೆಯನ್ನೇ ಇಂದು ಕೇಂದ್ರ ಸರ್ಕಾರವೂ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶದ ಆಭಿವೃದ್ಧಿಗಾಗಿ ಸಾರ್ವಜನಿಕ ಉದ್ಯಮಗಳನ್ನು ಸರ್ಕಾರ ಆರಂಭಿಸಿದ್ದು ಸೂಕ್ತವಾದ ನಿರ್ಧಾರವಾಗಿತ್ತು. ಆದರೇ ಅದೇ ಸರ್ಕಾರದ ಮೀಸಲಾತಿಯ ಪ್ರಭಾವದಿಂದ ಅರ್ಹತೆಯೇ ಇಲ್ಲದವರು ಸರ್ಕಾರ ಮತ್ತು ಸಾರ್ವಜನಿಕ ಉದ್ಯಮಗಳಲ್ಲಿ ತುಂಬಿ ತುಳುಕಿ ಕೆಲಸವೇ ಮಾಡದೇ ಕೈತುಂಬ ಸಂಬಳ ತೆಗೆದುಕೊಳ್ಳುವವರೇ ಹೆಚ್ಚಾದ ಪರಿಣಾಮ ಕೆಲವೇ ವರ್ಷಗಳಲ್ಲಿ ಈ ಎಲ್ಲಾ ಉದ್ಯಮಗಳೂ ನಷ್ಟವನ್ನು ಅನುಭವಿಸ ತೊಡಗಿದವು. ದುರಾದೃಷ್ಟವಷಾತ್ ಈ ಹಿಂದೆ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳು ಜನರ ತೆರಿಗೆ ದುಡ್ಡುಗಳನ್ನು ಅನುದಾನವಾಗಿ ಕೊಡುತ್ತಲೇ ಸೆರಗಿನಲ್ಲಿ ಕೆಂಡವನ್ನು ಇಟ್ಟುಕೊಂಡು ಮುಂದುವರಿಸಿಕೊಂಡು ಹೋದ ಪರಿಣಾಮವಾಗಿಯೇ, ಇಂದಿನ ಸರ್ಕಾರ ಅದನ್ನು ಖಾಸಗೀ ವ್ಯಕ್ತಿಗಳ ಜೊತೆ ಮರುಹೂಡಿಕೆ ಮಾಡುವ (Disinvestment) ಇಲ್ಲವೇ ಬಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿರುವ ಸಂಸ್ಥೆಗಳನ್ನು ಖಾಸಗಿಯವರಿಗೆ ಪರಿಭಾರೆ ಮಾಡಿ ಒಂದಿಷ್ಟು ಸಂಪನ್ಮೂಲಗಳನ್ನು ಸಂಗ್ರಹ ಮಾಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ದುರಾದೃಷ್ಟವಷಾತ್ ತಾ ಕಳ್ಳ ಪರರ ನಂಬ ಎನ್ನುವಂತಿರುವ ಕೆಲವರು ಸರ್ಕಾರದ ದೂರದೃಷ್ಟಿಯನ್ನು ಗ್ರಹಿಕೆ ಮಾಡುವುದರಲ್ಲಿ ಎಡುವುತ್ತಿರುವುದಲ್ಲದೇ, ಅದನ್ನೇ ದೊಡ್ಡದಾಗಿ ಮಾಡಿಕೊಂಡು ಜನರನ್ನು ಸರ್ಕಾರದ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ಕಂಪನಿಯು ವರ್ಷದಿಂದ ವರ್ಷಕ್ಕೆ ನಷ್ಟವನ್ನೇ ಅನುಭವಿಸುತ್ತಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿತ್ತು. 2009-10ರ ಆರ್ಥಿಕ ವರ್ಷದಿಂದೀಚೆಗೆ ಏರ್ ಇಂಡಿಯಾಗಾಗಿ ಕೇಂದ್ರ ಸರ್ಕಾರವು ₹ 1,10,276 ಕೋಟಿ ಖರ್ಚು ಮಾಡಿದ್ದರೂ ರಾವಣ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿ ಸಂಸ್ಥೆ ಉದ್ಧಾರವಾಗದೇ ಹೋದಾಗಾ ಭಾರತ ಸರ್ಕಾರವು ಏರ್ ಇಂಡಿಯಾದ ಶೇ 100ರಷ್ಟು ಬಂಡವಾಳ ಹಿಂಪಡೆಯಲು ನಿರ್ಧರಿಸಿ ಅಷ್ಟೂ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿ ಬಹಿರಂಗ ಹರಾಜಿಗೆಂದು ಸಾರ್ವಜನಿಕರನ್ನು ಕರೆದಾಗ, ಏಳು ಸಂಸ್ಥೆಗಳು ಅದರಲ್ಲಿ ಆಸಕ್ತಿ ತೋರಿಸಿದವು. ಅವುಗಳ ಪೈಕಿ ಐದು ಪ್ರಸ್ತಾವಗಳು ನಿರ್ಧಾರಿತ ಮಾನದಂಡಗಳನ್ನು ಪೂರೈಸಿಲ್ಲ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿದ್ದವು. ಅಂತಿಮವಾಗಿ ಏರ್ ಇಂಡಿಯಾ ಟಾಟಾ ಸನ್ಸ್ ಕಂಪನಿಗೆ ₹ 18,000 ಕೋಟಿಯ ಭಾರೀ ಮೊತ್ತಕ್ಕೆ ಹಸ್ತಾಂತರವಾಗಲಿದೆ ಎಂದು ಸರ್ಕಾರದ ಪ್ರತಿನಿಧಿಗಳು ಘೋಷಿಸಿದಾಗ, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಸದ್ಯಕ್ಕೆ ಏರ್ ಇಂಡಿಯಾ ಕಂಪನಿಯ ಮೇಲಿರುವ ಒಟ್ಟು ಸಾಲದ ಹೊರೆ ₹ 61,562 ಕೋಟಿಗಳಿದ್ದು ಅದರಲ್ಲಿ ಟಾಟಾ ಸನ್ಸ್ ಕಂಪನಿಯು ₹ 15,300 ಕೋಟಿ ಸಾಲದ ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ ಮತ್ತು ಉಳಿದ ₹ 46,262 ಕೋಟಿ ಸಾಲ ತೀರುವಳಿ ಜವಾಬ್ದಾರಿಯನ್ನು ಸರ್ಕಾರವು ವಹಿಸಿಕೊಳ್ಳುವ ಮೂಲಕ ಏರ್ ಇಂಡಿಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಉದ್ಯೋಗಿಗಳ ಹಿತರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ಈ ಎಲ್ಲಾ ಉದ್ಯೋಗಿಗಳನ್ನೂ ಒಂದು ವರ್ಷಗಳ ಕಾಲ ಕಂಪನಿಯಲ್ಲಿಯೇ ಉಳಿಸಿಕೊಂಡು ಅವರ ಕೆಲಸ ಮತ್ತು ಕಾರ್ಯತತ್ಪರತೆಯ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಸಿ ಅಂತಿಮವಾಗಿ ಅವರ ಸೇವೆಯನ್ನು ಮುಂದುವರೆಸಿಕೊಳ್ಳಬೇಕೇ ಇಲ್ಲವೇ, ಅಂತಹವರನ್ನು ಸ್ವಯಂ ನಿವೃತ್ತಿ ಯೋಜನೆಯಡಿಯಲ್ಲಿ ತರಬೇಕೇ ಎಂಬ ತೀರ್ಮಾನ ಟಾಟಾ ಕಂಪನಿಯದ್ದಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ತನ್ಮೂಲಕ ಜರಡಿಯಲ್ಲಿ ಗಟ್ಟಿಕಾಳುಗಳು ಉಳಿದುಕೊಂಡು ಜೊಳ್ಳುಗಳೆಲ್ಲವೂ ಉದುರಿಹೋಗಿ ಕಂಪನಿಗೆ ಲಾಭವಾಗಲಿದೆ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ.

ai4

ನಿಜ ಹೇಳಬೇಕೆಂದರೆ, ಏರ್ ಇಂಡಿಯವನ್ನು ಆರಂಭಿಸಿದ್ದೇ ಜೆಆರ್‌ಡಿ ಟಾಟಾರವರು. ಏರ್ ಇಂಡಿಯಾದ ಆರಂಭಿಸಿದ ಕತೆಯೇ ಒಂದು ರೋಚಕವಾಗಿದೆ. ಜೆಆರ್‌ಡಿ ಟಾಟಾರವರ ಬಾಲ್ಯವೆಲ್ಲವೂ ಫ್ರಾನ್ಸ್‌ನಲ್ಲಿ ಲೂಯಿಸ್ ಬ್ಲೂರಿಯೋಟ್‌ನ ನೆರೆಹೊರೆಯಲ್ಲಿ ಕಳೆದದ್ದಲ್ಲದೇ, 1907 ರಲ್ಲಿ ಅಂತಾರಾಷ್ಟ್ರೀಯ ಸಾಗರೋತ್ತರ ವಿಮಾನಯಾನವನ್ನು ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದಂತಹವರಾಗಿದ್ದರು. 1929 ರಲ್ಲಿ ಮುಂಬೈನಲ್ಲಿ (ಅಗಿನ ಬಾಂಬೆ) ಫ್ಲೈಯಿಂಗ್ ಕ್ಲಬ್ ಆರಂಭಿಸಿ, ವಿಮಾನಗಳ ಕುರಿಗಾಗಿ ಅಧ್ಯಯನ ಮಾಡಲು ಸುಮಾರು ಗಂಟೆಗಳ ಕಾಲ ವಿಮಾನ ಯಾನ ಮಾಡಿದ್ದಲ್ಲದೇ, ಅದರ ಬಗ್ಗೆ ಸುದೀರ್ಘವಾದ ಅಧ್ಯಯನ ಮಾಡಿ, ಅಂತಿಮವಾಗಿ, 1932 ರಲ್ಲಿ 2 ಲಕ್ಷ ರೂ.ಗಳ ಹೂಡಿಕೆಯೊಂದಿಗೆ ಟಾಟಾ ಏವಿಯೇಷನ್ ಸೇವೆಯನ್ನು ಆರಂಭಿಸುವ ಮೂಲಕ ತಾವೇ ಸ್ವತಃ ಏರ್ ಇಂಡಿಯಾದ ಮೊದಲ ವಿಮಾನದ ಚಾಲನೆಯನ್ನೂ ಮಾಡಿದ್ದರು. ಆರಂಭದಲ್ಲಿ ಅದು ಕೇವಲ ಸರಕು ಸಾಗಣಿಕೆಯ ವಿಮಾನವಾಗಿದ್ದು, ಅತೀ ಶೀಘ್ರದಲ್ಲೇ ಲಾಭ ಗಳಿಸುವ ಉದ್ಯಮವಾಗಿ 1937 ರಲ್ಲಿ ಕೇವಲ ಐದು ವರ್ಷಗಳಲ್ಲಿಯೇ ಟಾಟಾ ಏರ್ ಮೇಲ್ ಲಾಭ 60,000 ರಿಂದ 6 ಲಕ್ಷಕ್ಕೆ ಏರಿತ್ತು.

ai1

1938 ರಲ್ಲಿ ಈ ವಿಮಾನ ಸಂಸ್ಥೆ ತನ್ನ ಹೆಸರನ್ನು ಟಾಟಾ ಏರ್‌ಲೈನ್ಸ್ ಎಂದು ಬದಲಾಯಿಕೊಂಡಾಗಲೇ ಪ್ರಪಂಚಾದ್ಯಂತ. ಎರಡನೆಯ ಮಹಾಯುದ್ಧ ಪ್ರಾರಂಭವಾಗಿ, ಅಂದಿನ ಬ್ರಿಟಿಷ್ ಸರ್ಕಾರ ಟಾಟಾ ಏರ್‌ಲೈನ್ಸಿನ ಎಲ್ಲಾ ವಿಮಾನಗಳನ್ನೂ ತನ್ನ ವಶಕ್ಕೆ ಪಡೆದು ಅದನ್ನು ಯುದ್ಧಗಳಲ್ಲಿ ಬಳಸಿಕೊಂಡಿತ್ತು. ಎರಡನೆಯ ಮಹಾಯುದ್ಧ ಮುಗಿದ ಸರ್ಕಾರದೊಂದಿಗೆ ತೀವ್ರವಾಗಿ ಹೋರಾಟ ನಡೆಸಿದ ಫಲವಾಗಿ ಮತ್ತೆ ಟಾಟಾ ಸಂಸ್ಥೆ ವಿಮಾನ ಸಂಸ್ಥೆಯ ನಿಯಂತ್ರಣವನ್ನು ಮರಳಿ ಪಡೆದದ್ದಲ್ಲದೇ, 1946 ರಲ್ಲಿ ಟಾಟಾ ಏರ್‌ಲೈನ್ಸ್ ಎಂದಿದ್ದ ಹೆಸರನ್ನು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಿ ಸಾರ್ವಜನಿಕವಾಗಿ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿತು. ಸ್ವಾತಂತ್ರ್ಯಾನಂತರ ಅಕ್ಟೋಬರ್ 1947 ರಲ್ಲಿ, ಏರ್-ಇಂಡಿಯಾ ಇಂಟರ್ನ್ಯಾಷನಲ್ ಎಂಬಂತಾಗಿ ಸರ್ಕಾರದ ಶೇಕಡಾ 49 ರಷ್ಟು ಪಾಲಿನ ಜೊತೆಗೆ ಟಾಟಾ ಕುಟುಂಬಕ್ಕೆ ಶೇಕಡಾ 25 ರಷ್ಟನ್ನು ಪಾಲು ಮತ್ತು ಉಳಿದ್ದದ್ದು ಸಾರ್ವಜನಿಕರ ಒಡೆತನದಲ್ಲಿರುವ ಒಂಡಂಬಡಿಕೆಗೆ ಸಹಿ ಮಾಡುವ ಮೂಲಕ, ಏರ್ ಇಂಡಿಯಾ ಬಾಂಬೆ-ಲಂಡನ್ ಮಾರ್ಗದಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸಿತು. ಇದೇ ಸಮಯದಲ್ಲಿಯೇ ತನ್ನ ಚಿಹ್ನೆಯಾಗಿ ಈಗ ಬಹುಜನಪ್ರಿಯವಾಗಿರುವ ಮಹಾರಾಜನನ್ನು ಬಳಸಿಕೊಳ್ಳಲಾಯಿತು.

ai5

ಅದೇಕೋ ಏನೋ ಅಂದಿನ ನೆಹರು ಸರ್ಕಾರ ಇದ್ದಕ್ಕಿದ್ದಂತೆಯೇ ರಾಷ್ಟ್ರೀಕರಣದತ್ತ ಚಿಂತನೆ ನಡೆಸಿ, ಸರ್ಕಾರದ್ದೇ 49 ಪ್ರತಿಶತದಷ್ಟು ಪಾಲನ್ನು ಹೊಂದಿದ್ದರೂ, 1953 ರಲ್ಲಿ, ಟಾಟಾ ಕುಟುಂಬಕ್ಕೆ 2.8 ಕೋಟಿ ರೂ.ಗಳನ್ನು ನೀಡಿ ಒಂದು ರೀತಿಯಲ್ಲಿ ಬಲವಂತವಾಗಿಯೇ ಏರ್ ಇಂಡಿಯಾದ ಸಂಪೂರ್ಣ ಷೇರುಗಳನ್ನು ಖರೀದಿಸಿದ ಸರ್ಕಾರ ನಾಗರಿಕ ವಿಮಾನಯಾನವನ್ನು ಸಂಪೂರ್ಣವಾಗಿ ರಾಷ್ಟ್ರೀಕರಣಗೊಳಿಸಿತು, ಸರ್ಕಾರದ ಈ ರೀತಿ ನೀತಿಗಳು ಜೆಆರ್‌ಡಿ ಟಾಟಾ ಅವರಿಗೆ ಅಚ್ಚರಿ ಮೂಡಿಸಿದ್ದಲ್ಲದೇ, ಸರ್ಕಾರವು ವಾಯು ಸಾರಿಗೆ ಉದ್ಯಮವನ್ನು ನಡೆಸಿಕೊಂಡ ರೀತಿ ಅವರಿಗೆ ಕೋಪದ ಜೊತೆಗೆ ಬೇಸರವನ್ನೂ ತರಿಸಿತ್ತು. ಅದಕ್ಕಾಗಿಯೇ ಏರ್ ಇಂಡಿಯಾದ ರಾಷ್ಟ್ರೀಕರಣವಾದರೂ, ಸುಮಾರು 25 ವರ್ಷಗಳ ಕಾಲ ಜೆಆರ್‌ಡಿ ಟಾಟಾ ಅವರನ್ನೇ ಆ ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರೆಸಿದ ಅಂದಿನ ಸರ್ಕಾರ ಜನವರಿ 1, 1978 ರಲ್ಲಿ ಮುಂಬೈನಿಂದ ಹಾರಿದ್ದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನವು ಅರೇಬಿಯನ್ ಸಮುದ್ರದಲ್ಲಿ ಪತನವಾಗಿ ಅದರಲ್ಲಿದ್ದ ಎಲ್ಲಾ 213 ಪ್ರಯಾಣಿಕರು ಮತ್ತು ಸಿಬ್ಬಂಧಿ ವರ್ಗ ಸಮುದ್ರದ ಪಾಲಾದಾಗ ಅಂದಿನ ಮೊರಾರ್ಜಿ ದೇಸಾಯಿ ಸರ್ಕಾರವು ಜೆಆರ್‌ಡಿ ಟಾಟಾವನ್ನು ಅಧ್ಕಕ್ಷ ಸ್ಥಾನದಿಂದ ವಜಾಮಾಡಿತು.. ಮುಂದೆ 1980 ರಲ್ಲಿ ಪುನಃ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ಬಂದಾಗ ಜೆಆರ್‌ಡಿ ಟಾಟಾ ಅವರನ್ನು ಏರ್ ಇಂಡಿಯಾದ ನಿರ್ದೇಶಕರ ಮಂಡಳಿಗೆ ಮರಳಿ ಕರೆ ತಂದಿದ್ದಲ್ಲದೇ, 1986 ರವರೆಗೂ ಅದೇ ಸ್ಥಾನದಲ್ಲಿ ಮುಂದುವರೆಸಿದ ನಂತರ ಅಂದಿನ ಪ್ರಧಾನಿಗಳಾಗಿದ್ದ ಸ್ವತಃ ಅದೇ ಸಂಸ್ಥೆಯಲ್ಲಿ ಪೈಲೆಟ್ ಆಗಿ ಕಾರ್ಯನಿರ್ವಹಿಸಿದ್ದ ಶ್ರೀ ರಾಜೀವ್ ಗಾಂಧಿ ಅವರು ರತನ್ ಟಾಟಾ ಅವರನ್ನು ಏರ್ ಇಂಡಿಯಾ ಅಧ್ಯಕ್ಷರನ್ನಾಗಿ ನೇಮಿಸಿದರು. ರತನ್ ಟಾಟಾರವರು 1989 ರವರೆಗೆ ಅದೇ ಸ್ಥಾನದಲ್ಲಿ ಮುಂದುವರೆದಿದ್ದರು.

ai2

1990 ರ ದಶಕದಲ್ಲಿ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ನರಸಿಂಹರಾವ್ ಮತ್ತು ಅಂದಿನ ಹಣಕಾಸಿನ ಮಂತ್ರಿಗಳಾಗಿದ್ದ ಶ್ರೀ ಮನಮೋಹನ ಸಿಂಗ್ ಆವರ ಸಾರಥ್ಯದಲ್ಲಿ ಭಾರತ ದೇಶದಲ್ಲಿ ಆರಂಭವಾದ ಆರ್ಥಿಕತೆಯ ಉದಾರೀಕರಣದ ನಂತರ ನಂತರ, ಹತ್ತಾರು ಖಾಸಗಿ ವಿಮಾನ ಯಾನ ಸಂಸ್ಥೆಗಳು ಆರಂಭವಾಗಿ ಸಮಯಕ್ಕೆ ಸರಿಯಾದ ಹಾರಾಟದ ಜೊತೆಗೆ ಉತ್ತಮ ಸೇವೆಯನ್ನು ಕೊಡಲಾರಂಭಿಸಿ ಕೊಟ್ಟ ಹಣಕ್ಕೆ ಕಿಂಚಿತ್ತೂ ಮೋಸವಿಲ್ಲದಂತೆ ಸೇವೆಯನ್ನು ಒದಗಿಸಲು ಆರಂಭಿಸಿದಾಗ, ಸರ್ಕಾರೀ ನಿರಂಕುಶ ಧೋರಣೆಯನ್ನೇ ಹೊಂದಿದ್ದ ಏರ್ ಇಂಡಿಯಾ ನಿಧಾನವಾಗಿ ನಷ್ಟದತ್ತ ಜಾರಿ ಹೋಗಿ ಕಡೆಗೆ ವಿಮಾನಗಳು ಬಾನಿಗೆ ಏರಲಾದಷ್ಟು ಹದಗೆಟ್ಟು ಹೋಗಿದ್ದು ಈಗ ಇತಿಹಾಸ.

WhatsApp Image 2021-10-08 at 11.39.21 PM

ಏರ್ ಇಂಡಿಯಾದ ತನ್ನ 89 ನೇ ಹುಟ್ಟುಹಬ್ಬದ ಒಂದು ವಾರದಲ್ಲಿಯೇ 68 ವರ್ಷಗಳ ನಂತರ, ಅಕ್ಟೋಬರ್ 15, 2021ರಂದು ಪುನಃ ಸಂಪೂರ್ಣವಾಗಿ ತಾನೇ ಹುಟ್ಟು ಹಾಕಿದ್ದ ಸದ್ಯದಲ್ಲಿ ನಷ್ಟದಲ್ಲಿಯೇ ಇದ್ದ ಏರ್ ಇಂಡಿಯಾ ಎಂಬ ಸರ್ಕಾರಿ ಕಂಪನಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ನಿಜವಾದ ರಾಷ್ಟ್ರೀಯತೆಯ ಕಾಳಜಿಯನ್ನು ಮೆರೆದಿದೆ ಎಂದರೂ ತಪ್ಪಾಗದು. ಜನವರಿ 1961ರಲ್ಲಿ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿಯವರು, ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ, ಅದರ ಬದಲಾಗಿ ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು? ಎಂದು ಒಮ್ಮೆ ಯೋಚಿಸಿ ಎಂದು ಹೇಳಿದ್ದನ್ನು ಇಂದು ಟಾಟಾ ಸಂಸ್ಥೆ ಅಕ್ಷರಶಃ ಜಾರಿಗೆ ತಂದಿರುವುದು ನಿಜಕ್ಕೂ, ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.

ಲಾಭದಲ್ಲಿರುವ ಕಂಪನಿಗಳನ್ನು ಕೊಂಡು ಕೊಳ್ಳಲು ಸರದಿಯಲ್ಲಿ ನಿಂತು ಕೊಂಡವರೇ ಹೆಚ್ಚಾಗಿರುವಾಗ, ದೇಶಕ್ಕೆ ಹೊರೆಯಾಗಿ ನಷ್ಟದಲ್ಲಿ ನಡೆಯುತ್ತಿದ್ದ ಕಂಪನಿಯನ್ನು ಪ್ರತಿಷ್ಟೆಗಾಗಿ ಖರೀದಿಸಿ, ತನ್ಮೂಲಕ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವುದಲ್ಲದೇ, ಜಾಗತಿಕ ಪ್ರಪಂಚದಲ್ಲಿ ಮತ್ತೆ ಏರ್ ಇಂಡಿಯಾ ಮಹಾರಾಜನ ಹಿರಿಮೆಯನ್ನು ಎತ್ತಿ ಹಿಡಿಯಲು ಹೊರಟಿರುವ ಟಾಟಾ ಸಂಸ್ಥೆಯ ಈ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲನ್ನು ಕೊಡೋಣ. ಕೆಮ್ಮುವಳಾದರೂ ನಮ್ಮವಳಲ್ಲವೇ? ಎನ್ನುವ ಗಾದೆಯಂತೆ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಕಾರಣ, ಮುಂದಿನ ಬಾರಿ ವಿಮಾನ ಯಾನ ಮಾಡುವಾಗ ಪ್ರಜ್ಞಾಪೂರ್ವಕವಾಗಿ ಏರ್ ಇಂಡಿಯಾ ವಿಮಾನಗಳಲ್ಲೇ ಪ್ರಯಾಣಿಸುವ ಮುಖಾಂತರ ಏರ್ ಇಂಡಿಯಾ ಮತ್ತೊಮ್ಮೆ ಲಾಭದ ಸಂಸ್ಥೆಯನ್ನಾಗಿ ಮಾಡುವತ್ತ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ. ಹನಿ ಹನಿ ಗೂಡಿದರೆ ಹಳ್ಳ. ತೆನೆ ತೆನೆ ಗೂಡಿದರೆ ಬಳ್ಳ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ವಿದ್ಯಾರಣ್ಯಪುರ ಮಂಥನದ ಹನ್ನೆರಡನೇ ಆವೃತ್ತಿಯ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಅರೇನಹಳ್ಳಿ ಧರ್ಮೇಂದ್ರ ಕುಮಾರ್(ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್, ಪ್ರವೃತ್ತಿಯಲ್ಲಿ ಖ್ಯಾತ ಲೇಖಕರು ಮತ್ತು ಇತಿಹಾಸಕಾರರು) ಮತ್ತು ಶ್ರೀ ನಾಗರಾಜ ಮೌದ್ಗಲ್ ಅವರುಗಳ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಅವರ ಸುಶ್ರಾವ್ಯ ಕಂಠದ ವಿಘ್ನವಿನಾಶಕನ ಸ್ತುತಿಸುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಮೈಸೂರು ಸಂಸ್ಥಾನದಲ್ಲಿ ಅರಮನೆಯ ಖ್ಯಾತ ವೈದ್ಯರಾಗಿದ್ದ ಡಾ. ಅಣ್ಣಾಜಪ್ಪನವರ ಮೊಮ್ಮಗ ಮತ್ತು ಇಂದಿನ ಅರಮನೆಯ ಕೂಗಳತೆಯ ದೂರದಲ್ಲಿ ರಾಜರ ಕೃಪಾಶೀರ್ವಾದದಿಂದಲೇ ಪಡೆದಂತಹ ಮನೆಯಲ್ಲಿ ಜನಿಸಿ, ಇಂದಿಗೂ ಅಲ್ಲಿಯೇ ಅವರ ಕುಟುಂಬಸ್ತರು ವಾಸವಾಗಿರುವ ಮತ್ತು ಅರಮನೆಯ ಮುಂಭಾಗದಲ್ಲಿಯೇ ಕಣ್ಣಾ ಮುಚ್ಚಾಲೆ, ಲಗೋರಿ, ಕ್ರಿಕೆಟ್ ಆಟವಾಡಿರುವ ಮತ್ತು ಇಂದಿಗೂ ಮೈಸೂರು ಒಡೆಯರ್ ಮತ್ತು ದಿವಾನರುಗಳ ಕುಟುಂಬದೊಡನೆ ಅತ್ಯಂತ ಪ್ರೀತಿಪಾತ್ರವಾದ ಒಡನಾಟ ಇಟ್ಟುಕೊಂಡಿರುವ, ಅರಮನೆಯ ಬಗ್ಗೆ ಇಂಚಿಂಚಿನ ವಿವರದ ಜೊತೆಗೆ ಮೈಸೂರಿನ ಇತಿಹಾಸದ ಬಗ್ಗೆ ಅಧಿಕಾರಯುತವಾಗಿ ವಿಷಯ ಮಂಡನೆ ಮಾಡಬಲ್ಲ ಶ್ರೀಯುತ ಧರ್ಮೇಂದ್ರ ಕುಮಾರ್ ಅವರ ವರ್ಣನೆಯಲ್ಲಿ ಮೈಸೂರಿನ ಇತಿಹಾಸ ಮತ್ತು ಮಹಾರಾಜರ ಕೊಡುಗೆಗಳನ್ನು ಕೇಳುವುದು ನಿಜಕ್ಕೂ ಆನಂದವೇ ಸರಿ. ಪ್ರತಿಯೊಂದು ವಿಷಯವನ್ನು ಸರಿಯಾದ ಕಾಲಘಟ್ಟದೊಡನೆ ಹೇಳುತ್ತಿದ್ದರೆ, ನಮಗೇ ಅರಿವಿಲ್ಲದಂತೆಯೇ ನಾವುಗಳೇ ಆ ಕಾಲಘಟ್ಟದಲ್ಲಿ ಇದ್ದೇವೆಯೋ ಏನೋ? ನಮ್ಮ ಕಣ್ಣ ಮುಂದೆಯೇ ಯುದ್ದ ನಡೆಯುತ್ತಿದೆಯೇನೋ? ಇಲ್ಲವೇ ನಾವೇ ಅರಮನೆಯ ದರ್ಬಾರ್ ಹಾಲಿನಲ್ಲಿ ಸಂಗೀತವನ್ನು ಕೇಳುತ್ತಿದ್ದೇವೆಯೋ ಏನೋ? ಮೈಸೂರಿನ ಮರದ ಅರಮನೆ ನಮ್ಮ ಕಣ್ಣ ಮಂದೆಯೇ ಸುಟ್ಟು ಭಸ್ಮವಾಯಿತೇನೋ? ಎನ್ನುವಂತೆ ಕ್ರಿ.ಶ. 1400-1947ರ ವರೆಗೂ ಸರಿ ಸುಮಾರು 550 ವರ್ಷಗಳ ಇತಿಹಾಸದಲ್ಲಿ ನಾವುಗಳೇ ಭಾಗಿಗಳಾಗಿದ್ದೆವೇನೋ ಅಥವಾ ನಮ್ಮ ಕಣ್ಣ ಮುಂದೆಯೇ ನಡೆಯಿತೇನೋ ಎನ್ನುವಂತಾಯಿತು ಎಂದರೆ ಅತಿಶಯೋಕ್ತಿಯೇನಲ್ಲ.

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ಟಿದರು ಅಲ್ಲಿಂದ ಆಳಿದ ಸುಮಾರು 7 ರಾಜರುಗಳು ಅದನ್ನೇ ಮುಂದುವರಿಸಿಕೊಂಡು ಹೋದರು. 1529ರಲ್ಲಿ ಶ್ರೀ ಕೃಷ್ಣದೇವರಾಯರ ಕಾಲಾವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದು ವಿಜಯನಗರದಿಂದ ಮೈಸೂರಿಗೆ ತರುತ್ತಾರೆ. ಮುಂದೆ 1610 ರಲ್ಲಿ ಆಳ್ವಿಕೆಯಲ್ಲಿದ್ದ ಒಡೆಯರ್ ಅವರು ಮತ್ತೆ 30 ಗ್ರಾಮಗಳನ್ನು ಗೆದ್ದು ಮೈಸೂರು ಸಂಸ್ಥಾನವನ್ನು 60 ಗ್ರಾಮಗಳ ವರೆಗೆ ವಿಸ್ತರಿಸಿದ್ದರು. ಆಗ ಮೈಸೂರು ಎಂದರೆ ಈಗಿನ ಅರಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವಾಗಿದ್ದು ಉಳಿದ ಕನ್ನೇಗೌಡನ ಕೊಪ್ಪಲು, ಒಂಟೀಕೊಪ್ಪಲು ಮುಂತಾದ ಊರುಗಳಿಂದ ಸುತ್ತುವರಿದಿತ್ತು. ವಿಜಯನಗರಲ್ಲಿ ಬನ್ನಿ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಹಬ್ಬ 1612ರಲ್ಲಿ ಹತ್ತು ದಿನಗಳ ಕಾಲದ ವೈಭವೋಪೇತ ಆಚರಣೆಗೆ ಈ ಕಾಲದಲ್ಲಿಯೇ ರೂಢಿಗೆ ಬಂದಿತು.

ಶ್ರೀ ರಣಧೀರ ಕಂಠೀರವ ಅವರ ಆಳ್ಚಿಕೆಯಲ್ಲಿ ರಾಜ ಮನೆತನ ಮತ್ತಷ್ಟೂ ಪ್ರಾಭಲ್ಯಕ್ಕೆ ಬಂದು. ಸ್ವತಃ ಅಜಾನುಬಾಹು ಮತ್ತು ಶೂರರಾಗಿದ್ದ ಮತ್ತು ಜಟ್ಟಿಯಾಗಿದ್ದ ರಣಧೀರ ಕಂಠೀರವ ಅವರು ಆಗಿನ ಕಾಲದಲ್ಲಿಯೇ ತಿರುಚನಾಪಳ್ಳಿಯ ಜಟ್ಟಿಯವರು ಕಟ್ಟಿದ್ದ ಚೆಲ್ಲವನ್ನು ಕಿತ್ತೊಗೆದು ಅವರನ್ನು ಸೋಲಿಸಿ ಬಂದಿದ್ದವರು. ಅವರನ್ನು ಮೋಸದಿಂದ ಸಾಯಿಸಲು ದೊಡ್ಡಮ್ಮಣ್ಣಿ ಎಂಬ ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು ಬಂದಿದ್ದ ಸುಮಾರು 26ಕ್ಕೂ ಅಧಿಕ ಜಟ್ಟಿಗಳನ್ನು ತಮ್ಮ ವಿಜಯನಾರಸಿಂಹ ಎಂಬ ಬಾಕುವಿನಿಂದ ಇರಿದು ಕೊಂದು ದೊಡ್ಡಮ್ಮಣ್ಣಿಯವರನ್ನು ವಿದ್ಯುಕ್ತವಾಗಿ ಮದುವೆಯಾಗಿ ಆಕೆಯ ಹೆಸರಿನಲ್ಲಿಯೇ, ಬಂಗಾರದ ದೊಡ್ಡಿ ನಾಲೆಯನ್ನು ಕಟ್ಟಿ ಕಾವೇರೀ ನದಿಯ ನೀರನ್ನು ತಮ್ಮ ಪ್ರಾಂತದ ರೈತರ ಅಗತ್ಯಗಳಿಗೆ ಪೂರೈಸುತ್ತಾರೆ.

ಅಲ್ಲಿಂದ ಸುಮಾರು ನೂರೈವತ್ತು ವರ್ಷಗಳ ಕಾಲ ಹಾಗೂ ಹೀಗೂ ಆಳ್ವಿಕೆ ನಡೆಸಿದ ನಂತರ ಆಳ್ವಿಕೆ ಬಂದ ದೊಡ್ಡ ದೇವರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟದಲ್ಲಿ ಶ್ರೀ ಯದುರಾಯರು ಕಟ್ಟಿಸಿದ್ದ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನಕ್ಕೆ, ಜನಸಾಮಾನ್ಯರು ದರ್ಶನ ಪಡೆಯಲು ಸುಲಭವಾಗುವಂತೆ ಮೆಟ್ಟಿಲುಗಳನ್ನು ಕಟ್ಟಿಸಿ ಮಾರ್ಗದ ಮಧ್ಯದಲ್ಲಿ ದೊಡ್ಡದಾದ ಏಕಶಿಲಾ ನಂದಿಯನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಯವರೆಗೂ ನರಬಲಿ ಮತ್ತು ಪ್ರಾಣಿಬಲಿಗಳನ್ನು ಕೊಡುತ್ತಿದ್ದ ಕಾಪಾಲಿಕರನ್ನು 1760ರಲ್ಲಿ ಬಲಿಹಾಕಿ, ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಬಲಿಗಳನ್ನು ನಿಷೇಧಿಸಿ ಅದನ್ನು ಅಲ್ಲೇ ಸ್ವಲ್ಪ ದೂರದ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಸ್ಥಳಾಂತರಿಸುತ್ತಾರೆ.

ಇದಾದ ನಂತರ ಆಳ್ವಿಕೆಗೆ ಬಂದ ಚಿಕ್ಕ ದೇವರಾಜ ಒಡೆಯರು ಅತ್ಯಂತ ಧೈರ್ಯವಂತ ಮತ್ತು ಬಲಶಾಲಿಯಾದ ರಾಜರಾಗಿದ್ದರು. ಅವರ ಆಡಳಿತ ಕಾಲದಲ್ಲಿ ಸುಮಾರು 40ಕ್ಕೂ ಅಧಿಕ ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. 1674-1704ರ ವರೆಗೆ ದೆಹಲಿಯನ್ನು ಆಳ್ವಿಕೆ ನಡೆಸಿದ ಔರಂಗಜೇಬ್ ನಡೆಸುತ್ತಿದ್ದ ಅದೊಮ್ಮೆ ಮೈಸೂರಿನ ಸೈನಿಕರು ತಂಜಾವೂರಿನಲ್ಲಿ ಇದ್ದಾಗ ಶಿವಾಜಿಯ ಮೊಮ್ಮಗ ಮೈಸೂರು ಸಂಸ್ಥಾನದ ಮೇಲೆ ದಂಡೆತ್ತಿ ಬಂದಿದ್ದಾಗ ಧೃತಿಗೆಡದ ಚಿಕ್ಕ ದೇವರಾಜರು ಅವರ ಬಳಿ ಇದ್ದ ಸುಮಾರು 26000 ಅಮೃತಮಹಲ್ ತಳಿಯ ಗೋವುಗಳ ಕೊಂಬುಗಳಿಗೆ ಪಂಜನ್ನು ಕಟ್ಟಿ ಕತ್ತಲಾದ ಮೇಲೆ ಮರಾಠಾ ಸೈನಿಕರತ್ತ ಕಳುಹಿಸುತ್ತಾರೆ. ವಿಶ್ರಾಂತ ಸಮಯದಲ್ಲಿ ಈ ರೀತಿಯ ಧಾಳಿಯಿಂದ ದಂಗಾದ ಸೈನಿಕರು ದಿಕ್ಕಾಪಾಲಾಗಿ ಓಡಿ ಹೋಗುವ ಸಂದರ್ಭದಲ್ಲಿ ಗೋವುಗಳ ಕಾಲ್ತುಳಿತಕ್ಕೆ ಸಿಕ್ಕು ನಲುಗಿಹೋಗಿ ಸೋತು ಓಡಿಹೋಗುತ್ತಾರೆ. ಈ ರೀತಿಯಾಗಿ ನಿರಾಯಾಸವಾಗಿ ಬುದ್ಧಿವಂತ ತನದಿಂದ ವಿಜಯಿಶಾಲಿಯಾಗಿದ್ದನ್ನು ಗಮನಿಸಿದ ಔರಂಗಜೇಬ್ ಚಿಕ್ಕದೇವರಾಜರನ್ನು ದೆಹಲಿಗೆ ಅರೆಸಿಕೊಂಡು ಅವರ ಸಿಂಹಾಸನಕ್ಕೆ ಸರಿಯಾಗಿ ಇವರಿಗೂ ಒಂದು ಸಿಂಹಾಸನ ಮಾಡಿಸಿ ಅವರಲ್ಲಿ ಅವರನ್ನು ಕುಳ್ಳರಿಸಿ ಅವರಿಗೆ ಸನ್ಮಾನಿಸಿ ಅವರಿಗೆ ರಾಜ ಜಗದೇವ ಎಂಬ ಬಿರುದನ್ನೂ ಕೊಟ್ಟು ಅವರಿಬ್ಬರ ಗೆಳೆತನವನ್ನು ಗಟ್ಟಿ ಮಾಡಿಕೊಳ್ಳುತ್ತಾನೆ.

ಇದೇ ಸಮಯದಲ್ಲಿ ಔರಂಗಜೇಬನ ಕಡೆ ಖಾಸಿಂ ಖಾನ್ ಎಂಬುವನ ಉಸ್ತುವಾರಿಯಲ್ಲಿ ಬೆಂಗಳೂರು ನಗರವಿರುತ್ತದೆ. ಆ ಖಾಸೀಂ ಖಾನ್ ನನ್ನು ಸೋಲಿಸಿ ಬೆಂಗಳೂರನ್ನು ವಶಪಡಿಸಿಕೊಂಡರೂ ಕೊನೆಗೆ ಒಪ್ಪಂದ ಮಾಡಿಕೊಂಡು ಅಂದಿನ ಕಾಲಕ್ಕೇ ಸುಮಾರು 3,00,000 ರೂಗಳಿಗೆ ಖಾಸೀಂ ನಿಂದ ಬೆಂಗಳೂರನ್ನು ಕೊಂಡು ಕೊಳ್ಳುತ್ತಾರೆ. ಹಾಗೆ ಒಪ್ಪಂದ ಮಾಡಿಕೊಂಡರೂ ಸುಮಾರು ಎರಡು ಮೂರು ವರ್ಷಗಳನಂತರವೇ ಬೆಂಗಳೂರಿನಲ್ಲಿ ಇದ್ದದ್ದು ಬದ್ದದ್ದನ್ನು ದೋಚಿಕೊಂಡು ಬಿಟ್ಟು ಹೋಗುತ್ತಾನೆ. ಚಿಕ್ಕ ದೇವರಾಜ ಕಾಲದಲ್ಲೇ ಆಡಳಿತದ ಅನುಕೂಲಕ್ಕಾಗಿ ಹದಿನೆಂಟು ಕಛೇರಿಗಳನ್ನು ಒಂದು ಕಡೆ ಇರುವಂತೆ ಆಠಾರ ಕಛೇರಿಯನ್ನು ಕಟ್ಟಿಸುತ್ತಾರೆ. ಅದೇ ಅಠಾರ ಕಚೇರಿಯೇ ಇಂದು ಉಚ್ಚನ್ಯಾಯಾಲಯವಾಗಿ ಪರಿವರ್ತಿತವಾಗಿದೆ. ಇವರ ಕಾಲದಲ್ಲಿಯೇ ವ್ಯವಸ್ಥಿತವಾದ ಅಂಚೆ ಇಲಾಖೆ ಸ್ಥಾಪಿಸಲ್ಪಡುತ್ತದೆ. ಇವರ ಕಾಲದಲ್ಲಿ ಸಾಲಕ್ಕೆ ಶಿಕ್ಷೇ ಎಂಬ ವಿಭಿನ್ನವಾದ ಶಿಕ್ಷೆ ಜಾರಿಗೆಯಲ್ಲಿತ್ತು. ಅದರ ವಿಶಿಷ್ಟ್ಯತೆ ಏನೆಂದರೆ ಸಂಸ್ಥಾನದ ಅಧಿನದಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬ ನೌಕರನು ಅವನ ಅದಾಯ ತಕ್ಕಂತೆ ಖರ್ಚು ಮಾಡಬೇಕಿತ್ತು. ಅದಕ್ಕಿಂತ ಹೆಚ್ಚಿನ ಕರ್ಚು ವೆಚ್ಚ ಮಾಡಿದ್ದು ಕಂಡು ಬಂದಿದ್ದಲ್ಲಿ ಅವರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದರು. ಉದಾ. ಒಬ್ಬ ಸೈನಿಕ ತನ್ನ ಆದಯಕ್ಕಿಂತ ಹೆಚ್ಚಿನ ಹಣ ವ್ಯಯಿಸಿದಲ್ಲಿ ಆತನನ್ನು ಕರೆಸಿ ಕೇಳಿದಾಗ, ಆತ ಸೇನಾಧಿಪತಿಗಳ ಬಳಿ ಸಾಲ ಮಾಡಿದೆ ಎಂದರೆ, ಆಗ ಸೇನಾಧಿಪತಿಯನ್ನು ಕರೆಸಿ ಆವರಿಗೆ ಬರುವ ಆದಾಯದಲ್ಲಿ ಅದು ಹೇಗೆ ಸಾಲ ಕೊಟ್ಟಿರಿ ಎಂದು ವಿಚಾರಿಸಿ ಅನುಮಾನ ಬಂದಲ್ಲಿ ಆ ಸೈನಿಕ ಮತ್ತು ಅವನ ಸೇನಧಿಪತಿಗಳಿಗೆ ಶಿಕ್ಷೆಯನ್ನು ಕೊಡುಬ ಪದ್ದತಿಯಿತ್ತು . ಹಾಗಾಗಿ ಸರ್ಕಾರಿ ವೃತ್ತಿಯಲ್ಲಿದ್ದವರು ಅತ್ಯಂತ ಪ್ರಾಮಾಣಿಕರಾಗಿ ಆದಕ್ಕಿಂತ ಹೆಚ್ಚಿನ ಹಣವನ್ನು ಸಂಪಾದಿಸುವ ದುರ್ಮಾರ್ಗವನ್ನು ಅನುಸರಿಸುತ್ತಿರಲಿಲ್ಲ. ಇವರ ಕಾಲದಲ್ಲೇ 9 ಕೋಟಿ ಚಿನ್ನದ ವರಹಗಳನ್ನು ಖಜಾನೆಯಲ್ಲಿಟ್ಟಿದ್ದರಂತೆ. ಕವಿರಾಜ ಮಾರ್ಗದಲ್ಲಿ ಹೇಳಿರುವಂತೆ ಕಾವೇರಿಂದ ಗೋದಾವಿಯವರೆಗೆ ಇದ್ದ ಕನ್ನಡ ನಾಡು ಎಂಬುದನ್ನು ಅಕ್ಷರಶಃ ಕಾರ್ಯರೂಪಗೊಳಿಸಿದ್ದ ವೀರಾಗ್ರಣಿಯಾಗಿದ್ದರು. ಅಂದಿನ ಕಾಲದಲ್ಲಿಯೇ ಇಡೀ ಭಾರತದ ಅಷ್ಟೂ ಸಂಸ್ಥಾನಗಳ ಹಣ ಬೆಂಗಳೂರಿನಲ್ಲಿ ಚಲಾವಣೆಯಾಗುವಂತಹ ಸುಸ್ಥಿತಿಯಲ್ಲಿಟ್ಟಿದ್ದರು. ಆದರೆ 1700-1800ರ ವರೆಗೆ ದೇಶಾದ್ಯಂತ ಯುದ್ಧಗಳೇ ನಡೆಯುತ್ತಿದ್ದಂತಹ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಮೂವರು ರಾಜರು ಆಳಿದರು. ಆದರೆ ಅವರಾರು ಬಲಶಾಲಿಗಳಾಗಿರದ ಕಾರಣ, ನಂಜನಗೂಡಿನ ಬಳಿಯ ಕಳಲೆಯ ದಳವಾಯಿಗಳು ಕೊಟ್ಟ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕೋಶದಲ್ಲಿದ್ದ 9 ಕೋಟಿ ಚಿನ್ನದ ವರಹಗಳನ್ನು ಬರಿದು ಮಾಡಿ ಮೈಸೂರು ಸಂಸ್ಥಾನವನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಿಬಿಡುತ್ತಾರೆ. ಮೈಸೂರು ಸಂಸ್ಥಾನವು ಪ್ರತೀ ಬಾರಿ ಯುದ್ದದಲ್ಲಿ ಸೋತಾಗಲು ಸಂಧಾನ ರೂಪದಲ್ಲಿ ಒಂದೊಂದೇ ಪ್ರದೇಶಗಳನ್ನು ಬಿಟ್ಟು ಕೊಡುತ್ತಾ ಹೋಗಿ ಕಡೆಗೆ ಏನೂ ಉಳಿಯದೇ ಹೋಗಿ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸುತ್ತಾರೆ.ಿ ಇಂತಹ ಸಂದರ್ಭದಲ್ಲಿಯೇ ಪೈಲ್ವಾನ್ ಮತ್ತು ಕುದುರೆಯನ್ನು ನೋಡಿಕೊಳ್ಳುವ ಸಹಾಯಕನಾಗಿ ಬಂದು ಕಡೆಗೆ ತನ್ನ ಶೌರ್ಯ ಮತ್ತು ಪರಾಕ್ರಮದಿಂದ ರಾಜರ ಮೆಚ್ಚುಗೆ ಗಳಿಸಿ ಸೇನಾಧಿಪತಿಯಗಿದ್ದ ಹೈದರ್ ಅಲಿಯ ಸುಪರ್ಧಿಗೆ ಮೈಸೂರು ಸಂಸ್ಥಾನ ಜಾರಿ ಹೋಗಿ ಅವನ ನಂತರ ಅಧಿಕಾರ ಅವನ ಮಗ ಟಿಪ್ಪು ಸುಲ್ತಾನನ ಕೈವಶವಾಗಿಹೋಗುತ್ತದೆ. 1799ರಲ್ಲಿ ಬ್ರಿಟಿಷರು ಟಿಪ್ಪು ಸುಲ್ತಾನನ್ನು ಯುದ್ದದಲ್ಲಿ ಹತ್ಯೆಮಾಡಿದ ನಂತರ ಕರ್ನಲ್ ವೆಲ್ಲೆಸ್ಲಿ ಇಡೀ ಸಂಪತ್ತನ್ನು ದೋಜಿಕೊಂಡು ಹೋಗುತ್ತಾನೆ. ಅವರು ದೋಚಿಕೊಂಡು ಹೋದ ಸಂಪತ್ತು ಎಷ್ಟು ಇರಬಹುದು ಎಂದು ಅಂದಾಜು ಮಾಡಲು ಹೊರಟರೇ ಇಂದಿಗೂ ಇಂಗ್ಲೇಂಡಿನ ಎಡಿನ್ ಬರ್ಗ್ನಲಿ ಇರುವ ರಾಬರ್ಟ್ ಕ್ಲೈವ್ ಅವರ ಎಂಟು-ಹತ್ತನೇ ತಲೆಮಾರಿನ ಸಂಬಧೀಕರು ಮೈಸೂರು ಸಂಸ್ಥಾನದಿಂದ ಲೂಟಿ ಮಾಡಿಕೊಂಡು ಹೋದ ಹಣದಿಂದಲೇ ಜೀವನ ಮಾಡುತ್ತಿದ್ದಾರೆ. ಅದೇನೋ ಕರುಣೆಯಿಂದ ಲಾರ್ಡ್ ಮಾರ್ನಿಂಗ್ಟನ್ ಬ್ರಿಟೀಶ್ ಸಾಮ್ರಾಜ್ಯದ ತೆಕ್ಕೆಗೆ ಮೈಸೂರು ಸಂಸ್ಥಾನವನ್ನು ತೆಗೆದು ಕೊಳ್ಳಲು ಬಯಸದ ಕಾರಣ. ಐದು ವರ್ಷದ ಮಗುವಾಗಿದ್ದ 3ನೇ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ತೆಂಗಿನಸೋಗೆಯ ಚಪ್ಪರದ ಅಡಿಯಲ್ಲಿ ಮೇ 30, 1799 ರಂದು ಲಕ್ಷ್ಮೀ ಅಮ್ಮಣ್ಣಿಯವರ ಸಾರಥ್ಯದಲ್ಲಿ ನಡೆಯುತ್ತದೆ.

poorr
ಅದಾದ ನಂತರ ಮೈಸೂರಿಗೆ ವಾಸ್ತವ್ಯ ಬದಲಿಸಿ ದಿವಾನ್ ಪೂರ್ಣಯ್ಯನವರು ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಿರುತ್ತಾರೆ. ಅದೇ ಸಂದರ್ಭದಲ್ಲಿಯೇ ಮರದ ಅರಮನೆಯನ್ನೂ ಮತ್ತೆ ದಿವಾನ್ ಪೂರ್ಣಯ್ಯನವರ ನೇತೃತ್ವದಲ್ಲಿ ಕೇವಲ ಎರಡೇ ವರ್ಷಗಳಲ್ಲಿ ನಿರ್ಮಾಣ ವಾಗುತ್ತದೆ. ಹೈದರ್ ಅಲಿ, ಟಿಪ್ಪುಸುಲ್ತಾನ್ ಮತ್ತು 3ನೇ ಕೃಷ್ಣರಾಜ ಒಡೆಯರ್ ಹೀಗೆ ಮೂರು ಜನರ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಪೂರ್ಣಯ್ಯನವರ ಕೀರ್ತಿ ಇಡೀ ಪ್ರಪಂವಾದ್ಯಂತ ಹರಡಲ್ಪಟ್ಟು ಅಂದಿನ ಕಾಲಕ್ಕೇ ಜಾಗತಿಕವಾಗಿ ಅತ್ಯುತ್ತಮ ಆಡಳಿತಗಾರ ಎಂಬ ಗೌರವಕ್ಕೆ ಪಾತ್ರರಾಗಿರುತ್ತಾರೆ. ಜಾತಸ್ಯ ಮರಣಂ ಧೃವಂ ಎನ್ನುವ ಹಾಗೆ ಹುಟ್ಟಿದವನು ಸಾಯಲೇ ಬೇಕು ಎಂಬ ಜಗದ ನಿಯಮದಂತೆ 1815ರಲ್ಲಿ ದಿವಾನ್ ಪೂರ್ಣಯ್ಯನವರು ಕಾಲವಾಗುತ್ತಾರೆ.

ಭಾರತ ದೇಶದ ಇತಿಹಾಸದಲ್ಲಿ 1857 ಸಿಪಾಯಿ ದಂಗೆ ಎಂದೇ ಪ್ರಸಿದ್ದವಾಗಿದೆ. ಆದರೆ ಅದಕ್ಕೂ ಮೊದಲು 1807 ರಲ್ಲಿಯೇ ಶ್ರೀರಂಗ ಪಟ್ಟಣದಲ್ಲಿ ಸಿಪಾಯಿ ದಂಗೆ ನಡೆದಿತ್ತು ಎಂದರೆ ಎಲ್ಲರಿಗೂ ಆಶ್ವರ್ಯವಾಗಬಹುದು. ಟಿಪ್ಪು ಸುಲ್ತಾನನ ಮರಣಾನಂತರ ಬ್ರಿಟಿಷರ ಅಧೀನದಲ್ಲಿಯೇ ಇದ್ದ ಮೈಸೂರು ಸಂಸ್ಥಾನದಲ್ಲಿ ಸೈನಿಕರಿಗೆ ನಿರಂತವಾಗಿ ಯುದ್ದ ಭತ್ಯೆಯನ್ನು (War allowance) ಕೊಡುತ್ತಲೇ ಇರುತ್ತಾರೆ. ಅದೊಮ್ಮೆ ಇಂಗ್ಲೇಂಡಿನಿಂದ ಬಂದ ಲೆಕ್ಕ ಪರಿಶೋಧಕರು ಯುದ್ಧ ಮುಗಿದು ಏಳು ವರ್ಷಗಳು ಕಳೆದರೂ ಇನ್ನೂ ಏಕೆ ಭತ್ಯೆ ಕೊಡುತ್ತಿದ್ದೀರೀ ಎಂದು ಆಕ್ಷೇಪಣೆ ಎತ್ತಿದಾಗ ಎಚ್ಚೆತ್ತು ಕೊಂಡ ಲಾರ್ಡ್ ವೆಲ್ಲೆಸ್ಲಿ ಯಾವುದೇ ಮುನ್ಸೂಚನೆಯನ್ನೂ ಕೊಡದೇ ಸೈನಿಕರ ಯುದ್ದ ಭತ್ಯೆಯನ್ನು ನಿಲ್ಲಿಸುತ್ತಾನೆ. ಇದ್ದಕ್ಕಿದ್ದಂತೆಯೇ ತಮ್ಮ ಆದಾಯ ಕಡಿತಗೊಂಡ ಪರಿಣಾಮ ಸೈನಿಕರು ಬಂಡೆದ್ದು ಶ್ರೀರಂಗ ಪಟ್ಟಣಕ್ಕೇ ಸುಮಾರು ದಿನಗಳ ಕಾಲ ಮುತ್ತಿಗೆ ಹಾಕುತ್ತಾರೆ. ಆಗ ಪರಿಸ್ಥಿಯನ್ನು ತಹಬದಿಗೆ ತರಲು ಮಹಾರಾಣಿ ಅಮ್ಮಣ್ಣಿಯವರು ಮೈಸೂರಿನಿಂದ 1000 ಯೋಧರನ್ನು ಕಳುಹಿಸಿ ಸೈನಿಕರನ್ನು ಹತ್ತಿಕ್ಕೆ ಶಾಂತಿ ಸುವ್ಯವಸ್ಥೆಯನ್ನು ತಂದು ಬ್ರಿಟಿಷರನ್ನು ರಕ್ಷಿಸುತ್ತಾರೆ. ಆದದ ನಂತರವೇ ಶ್ರೀರಂಗ ಪಟ್ಟಣ ತಮಗೆ ಸುರಕ್ಷಿತ ಸ್ಥಳವಲ್ಲವೆಂದು ಬ್ರಿಟಿಷರು ಭಾವಿಸುತ್ತಾರೆ.

ಆಷ್ಟು ಹೊತ್ತಿಗೆ ಬೆಳೆದು ದೊಡ್ಡವರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸತತ ಯುದ್ದದಿಂದ ಜರ್ಜರಿತವಾಗಿ ಭೂಮಿ ಫಲವತ್ತಾಗಿದ್ದರೂ ಯಾವುದೇ ಬೆಳೆಗಳನ್ನೂ ಬೆಳೆಯದೇ ಬೆಂಗಾಡಾಗಿದ್ದ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲು ಅಕ್ಕ ಪಕ್ಕದ ರಾಜ್ಯಗಳಿಂದ ಅತ್ಯುತ್ತಮ ಕೃಷಿಕರನ್ನು ಕರೆತಂದು ಅವರಿಗೆ ಉಚಿತವಾಗಿ ನೂರಾರು ಎಕರೆ ಜಮೀನುಗಳನ್ನು ಕೊಟ್ಟು ಅವರಿಗೆ ಬೆಳೆಯನ್ನು ಬೆಳೆಯಲು ಸಹಾಯ ಮಾಡಿ ಮೈಸೂರು ಸಂಸ್ಥಾನದಲ್ಲಿ ಅಹಾರ ಕ್ರಾಂತಿಗೆ ಕಾರಣೀಭೂತರಾಗುತ್ತಾರೆ. ಸ್ವತಃ ವೇದಪಾರಂಗತರೂ ಸಂಗೀತಗಾರರೂ ಆಗಿದ್ದ ಮಹಾರಾಜರೂ ದೇಶವಿದೇಶಗಳಿಗೆ ಪ್ರವಾಸ ಮಾಡಿ ಅಲ್ಲಿದ್ದ ಅತ್ಯುತ್ತಮ ಕಲಾವಿದರುಗಳನ್ನು ಮೈಸೂರಿಗೆ ಕರೆತಂದು ಮೈಸೂರನ್ನು ಸಾಂಸ್ಕೃತಿಕ ಕಲಾನಗರಿಯನ್ನಾಗಿ ಮಾಡುತ್ತಾರೆ. ಈ ಪ್ರೋತ್ಸಾಹದ ಪರಿಣಾಮವಾಗಿಯೇ ಇಂದೂ ಕೂಡಾ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ಅದೇ ರೀತಿ ಅವರ ದರ್ಬಾರ್ ಹಾಲಿನಲ್ಲಿ ಸಂಗೀತ ಕಛೇರಿ ಇದೆ ಎಂದರೇ ಅದು ಸಭಾ ಕಛೇರಿ ಎಂದೇ ಖ್ಯಾತಿ ಪಡೆದಿರುತ್ತದೆ. ದೇಶದ ಎಲ್ಲಾ ಕಲಾವಿದರಿಗೂ ಮೈಸೂರು ಅರಮನೆಯಲ್ಲಿ ಕಾರ್ಯಕ್ರಮ ಕೊಡುವುದೇ ಒಂದು ಹೆಮ್ಮೆಯ ಮತ್ತು ಗೌರವಯುತ ಸಂಗತಿಯಾಗಿರುತ್ತದೆ.

ಮಹಾರಾಜರ ಸಂಗೀತ ನೈಪುಣ್ಯತೆಗೆ ಸಾಕ್ಷಿಯಾಗಿ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳಲೇ ಬೇಕು. ಅದೋಂದು ಬಾರಿ ತಮಿಳುನಾಡಿನ ಖ್ಯಾತ ಸಂಗೀತ ತಂಡವೊಂದು ಮೈಸೂರಿನ ಅರಮನೆಯಲ್ಲಿ ರಾಜರ ಸಮ್ಮುಖದಲ್ಲಿ ಸುಮಾರು ಮೂರು ಗಂಟೆಗೂ ಅಧಿಕ ಹೊತ್ತು ಸಂಗೀತ ಕಾರ್ಯಕ್ರಮ ಕೊಟ್ಟು ಎಲ್ಲರ ಮೆಚ್ಚಿಗೆ ಗಳಿಸುತ್ತಾರೆ. ಸಾಥಾರಣವಾಗಿ ಕಾರ್ಯಕ್ರಮ ಮುಗಿದ ನಂತರ ಮಹಾರಾಜರು ಮೆಚ್ಚಿಗೆ ಸೂಚಿಸಿ ಯಾವುದಾದರೂ ಬಹುಮಾನ ಕೊಡುವ ಸಂಪ್ರದಾಯ ಇರುತ್ತದೆ. ಆದರೆ ಅಂದೇಕೂ ಮಹಾರಾಜರೂ ಏನೂ ಹೇಳದೇ ಸುಮ್ಮನೆ ಒಳಗೆ ಹೊರಟುಹೋದಾಗ ಸಂಗೀತಗಾರರಲ್ಲಿ ಅಸಮಧಾನವಾಗುತ್ತದೆ. ಅದಾದ ಸ್ವಲ್ಪ ಸಮಯದ ನಂತರ ರಾಜರ ಆಡಳಿತಗಾರರು ಬಂದು ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಇದೇ ಸಭಾಂಗಣದಲ್ಲಿ ಮಹಾರಾಜರು ನಿಮ್ಮನ್ನು ಭೇಟಿಯಾಗುತ್ತಾರಂತೆ ಇಂದು ನೀವು ವಿಶ್ರಾಂತಿ ಪಡೆದುಕೊಳ್ಳಿ ಎಂದು ಸೂಚಿಸಿದರು. ಮಾರನೆಯ ದಿನ ಹತ್ತು ಗಂಟೆಗೆ ಸರಿಯಾಗಿ ಸಂಗೀತಗಾರರು ಮತ್ತವರ ತಂಡ ದರ್ಬಾರ್ ಹಾಲಿಗೆ ಹೋಗಿ ನೋಡಿದರೆ ಸ್ವತಃ ಮಹಾರಾಜರೇ ಸಂಗೀತಗಾರ ಮಧ್ಯದಲ್ಲಿ ಕುಳಿತಿರುವುದನ್ನು ನೋಡಿ ಸಂಗೀತಗಾರಗಿಗೆ ಆಶ್ವರ್ಯವಾಗುತ್ತದೆ. ಅದನ್ನು ಸಾವರಿಸಿಕೊಂಡು ಅವರೆಲ್ಲರೂ ಅಲ್ಲೇ ಕುಳಿತಾಗ ಮಹಾರಾಜರು ತನ್ಮಯರಾಗಿ ಸುಮಾರು ಮೂರು ಘಂಟೆಗಳಿಗೂ ಅಧಿಕ ಸಮಯ ಸುಶ್ರಾವ್ಯವಾಗಿ ಸಭಿಕರೆಲ್ಲರೂ ತಲೆ ತೂಗುವಂತೆ ಕಛೇರಿ ನಡೆಸಿಕೊಟ್ಟು ಹಿಂದಿನ ದಿನ ಆ ಸಂಗೀತಗಾರರು ಹಾಡಿದ್ದ ಪ್ರತಿಯೊಂದು ತಪ್ಪನ್ನೂ ಸರಿಯಾಗಿ ಹೇಗೆ ಹಾಡಬೇಕೆಂದು ತೋರಿಸಿಕೊಟ್ಟು, ಇನ್ನು ಮುಂದೆ ಯಾವುದೇ ಕಛೇರಿಗೆ ಹೋಗುವ ಮೊದಲು ಸರಿಯದ ತಾಲೀಮು ಮಾಡಿಕೊಳ್ಳದೇ ಹೋಗದಿರೆಂದು ಸಲಹೆ ಕೊಟ್ಟು ಅವರಿಗೆ ಕೈ ತುಂಬಾ ಸಂಭಾವನೆ ಕೊಟ್ಟು ಕಳುಹಿಸಿದ ಮಹಾನುಭಾವರಾಗಿದ್ದರು ನಮ್ಮ ನಾಲ್ವಡೀ ಕೃಷ್ಣರಾಜ ಒಡೆಯರ್ ಅವರು.

ಹೇಗಾದರೂ ಮಾಡಿ ಮೈಸೂರನ್ನು ತಮ್ಮ ಆಡಳಿತಕ್ಕೆ ಒಳಪಡಿಸಲೇಬೇಕು ಎಂದು ಹವಣಿಸುತ್ತಿದ್ದ ಬ್ರಿಟೀಷರು 1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿ ಇಲ್ಲ. ಅನಾವಶ್ಯಕ ಖರ್ಚುಗಳನ್ನು ಮಾಡುತ್ತಿದ್ದಾರೆ ಮತ್ತು ಆಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಮೈಸೂರು ಸಂಸ್ಥಾನವನ್ನು ತಮ್ಮ ಸುಪರ್ಧಿಗೆ ವಶಪಡಿಸಿಕೊಳ್ಳುತ್ತಾರೆ ಬ್ರಿಟೀಷರು. ತಾಳ್ಮೆವಂತರಾದ ನಮ್ಮ ರಾಜರು ಅದಕ್ಕೆ ಸ್ವಲ್ಪವೂ ಪ್ರತಿರೋಧ ತೋರದೇ, ಶಾಂತಿಯಂದ ಬಗೆಹರಿಸಿಕೊಳ್ಳುವ ಸಲುವಾಗಿ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಾರೆ. ಇಂತಹ ಪತ್ರ ವ್ಯವಹಾರ ಸುಮಾರು 50 ವರ್ಷಗಳ ಕಾಲ ಮುಂದುವರಿಯುತ್ತದೆಯೇ ಹೊರತು ರಾಜ್ಯದ ಆಡಳಿತ ಒಡೆಯರ್ ಅವರ ಸುಪರ್ದಿಗೆ ಒಪ್ಪಿಸಲು ಬ್ರಿಟಿಷರು ಒಪ್ಪಲೇ ಇಲ್ಲ.

ಇಷೃರ ಮಧ್ಯದಲ್ಲಿಯೇ ಬ್ರಿಟೀಷರು ಶ್ರೀರಂಗ ಪಟ್ಟಣದಲ್ಲಿದ್ದ ಹಲವಾರು ಅರಮನೆಗಳನ್ನು ನಾಶಗೊಳಿಸಿ ಅಲ್ಲಿಯ ಮರ ಮುಟ್ಟುಗಳನ್ನು ಊಟಿಗೆ ಸಾಗಿಸಿ ಅಲ್ಲಿ ಸೆಂಟ್ ಸ್ಟೀಫನ್ ಚರ್ಚ್ ಕಟ್ಟುವ ಸಮಯದಲ್ಲಿ ಬಳೆಸಿಕೊಳ್ಳುತ್ತಾರೆ ಮತ್ತು ಆಡಳಿತಕ್ಕೆ ಬಂದ ಎಲ್ಲಾ ಬ್ರಿಟೀಷ್ ಅಧಿಕಾರಿಗಳು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲಿಯ ಸಂಪತ್ತನ್ನು ಲೂಟಿ ಮಾಡಿಕೊಂಡು ಹೋಗುತ್ತಾರೆ.

ಇಷ್ಟರಲ್ಲಿ ಪರ್ಷಿಯಾದಿಂದ ಕುದುರೇ ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಬೆಂಗಳೂರಿನಲ್ಲಿಯೇ ನೆಲೆಸಿದ್ದ ಅಲಿ ಅಸ್ಗರ್ ನಮ್ಮ ರಾಜರಿಗೆ ಪರಮಾಪ್ತರಾಗಿರುತ್ತಾರೆ. ಅಸ್ಗರ್ ಅವರಿಗೆ ನಮ್ಮ ಮಹಾರಾಜರಲ್ಲದೇ ದೇಶದ ಉಳಿದ ಸಂಸ್ಥಾನದ ಮಹಾರಾಜರು ಮತ್ತು ಬ್ರಿಟಿಷರ ನಡುವೆಯೂ ಉತ್ತಮ ಬಾಂಧವ್ಯವಿದ್ದು ಅವರೊಂದಿಗೂ ಕುದುರೆಯ ವ್ಯಾಪಾರವನ್ನು ಮಾಡಿ ಗೆಳೆತನ ಸಂಪಾದಿಸಿರುತ್ತಾರೆ. ಅಂದು ಅಲೀ ಅಸ್ಗರ್ ಅವರೇ ಕಟ್ಟಿಸಿದ ಭವನವನ್ನು ಅಂದಿನ ಕಾಲದ 10000ರೂಗಳಿಗೆ ಮೈಸೂರು ಮಹಾರಾಜರು ಖರೀದಿಸಿರುತ್ತಾರೆ ಸ್ವಾತಂತ್ರ್ಯಾನಂತರ ಅದೇ ಬಂಗಲೆ ರಾಜಭವನವಾಗಿ ಮಾರ್ಪಾಟಾಗುತ್ತದೆ.

ಅದೇ ರೀತಿ ದಖನ್ನಿನ ಕೇಂದ್ರ ಕಚೇರಿಯಾಗಿದ್ದ ಮದರಾಸು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ದಿನಸಿಗಳನ್ನು ಸರಬರಾಜು ಮಾಡುತ್ತಿದ್ದ ಮತ್ತು ಅಗ್ಗಾಗ್ಗೆ ಸಾಲ ಕೊಡುತ್ತಿದ್ದ ಮತ್ತೊಬ್ಬ ಮಹಾನುಭಾವನೇ ಶ್ರೀ ಲಕ್ಷ್ಮೀನರಸೂ ಚೆಟ್ಟಿ. ಕೊಯಮತ್ತೂರಿನಲ್ಲಿ ಹುಟ್ಟಿ ಬೆಳೆದು ಬದುಕಿದ ಚೆಟ್ಟಿ ಮೂಲತಃ ಬಹುದೊಡ್ಡ ಕಿರಾಣಿ ವ್ಯಾಪಾರಿಯಾಗಿದ್ದ… ಈತನ ವ್ಯಾಪಾರೀ ಜಾಲ ಎಷ್ಟು ದಿವಿನಾಗಿತ್ತೆಂದರೆ ಅಲ್ಲಿಯೇ ಕುಳಿತು ಮದರಾಸಿನ ಈಸ್ಟ್ ಇಂಡಿಯಾ ಕಂಪನಿಗೂ ಮೈಸೂರಿನ ಅರಮನೆಗೂ ಏಕಕಾಲಕ್ಕೆ ಕಿರಾಣಿ ಒದಗಿಸುತ್ತಿದ್ದ ಚತುರ… ಇಡೀ ದಖನ್ನಿನ ಸಿರಿವಂತರ , ಪಾಳೇಗಾರರ , ಬ್ರಿಟಿಷ ಅಧಿಕಾರಿಗಳ ಸ್ನೇಹ ಅವನಿಗಿತ್ತು… ಅಂತೆಯೇ…

ಮೈಸೂರು ಸಂಸ್ಥಾನದ ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರ ಸ್ನೇಹಸುಮವೂ ಅವನ ತೋಟದಲ್ಲಿ ಅರಳಿತ್ತು… ಬ್ರಿಟಿಷರು ಕುಂಟುನೆಪವೊಡ್ಡಿ ರಾಜ್ಯ ಕಸಿದುಕೊಂಡಾಗಲಿನಿಂದ ಅಧಿಕಾರವಿಲ್ಲದಿದ್ದರೂ ಅವರು ಮಾಡುತ್ತಿದ್ದ ಜನಸೇವೆ… ಅವರಿಗಿದ್ದ ಪ್ರಜಾಪ್ರೀತಿ… ಹಗಲಿರುಳೂ ಅವರು ಚಿಂತಿಸುತ್ತಿದ್ದ ರಾಜ್ಯದ ಅಭ್ಯುದಯ… ಈ ಎಲ್ಲವನ್ನೂ ಹತ್ತಿರದಿಂದ ನೋಡುವ ಭಾಗ್ಯ ಚೆಟ್ಟಿಯದಾಗಿತ್ತು…

ಪದೇ ಪದೇ ದೇಶದ ನಾನಾ ಪ್ರಾಂತ್ಯಗಳ ಮೇಲೆ ನಡೆಯುತ್ತಿದ್ದ ಯುದ್ಧಗಳಿಂದ ಬ್ರಿಟಿಷರ ಕೈ ಖಾಲಿಯಾಗಿತ್ತು… ಹಣ ನೀರಿನಂತೆ ಹರಿದುಹೋಗಿತ್ತು. ಆನೆಗಾತ್ರದಂತೆ ಬೆಳೆಯುತ್ತಿದ್ದ ಬ್ರಿಟಿಷ್ ಸೈನ್ಯವನ್ನು ಸಲಹಲು ಮದರಾಸಿನ ಈಸ್ಟ್ ಇಂಡಿಯಾ ಕಂಪನಿಗೆ ಹಣದ ಅವಶ್ಯಕತೆ ಹೆಚ್ಚಿತ್ತು… ದಾಹದಿಂದ ಗುಳ್ಳೆನರಿ ನೀರಿಗಾಗಿ ಅತ್ತಿತ್ತ ಅಲೆದಾಡುತ್ತಾ ಹುಡುಕುವಾಗ ಕಣ್ಣಿಗೆ ಕಂಡಿದ್ದೇ ಈ ಕಿರಾಣಿ ವ್ಯಾಪಾರಿ ಚೆಟ್ಟಿ… ಸಣ್ಣ ಮೊತ್ತದಿಂದ ಶುರುವಾದ ಸಾಲ ಕೆಲವರ್ಷಗಳನ್ನು ಕಳೆಯುವ ಹೊತ್ತಿಗೆ ಲಕ್ಷಗಳನ್ನು ದಾಟಿತ್ತು… ಒಬ್ಬೊಬ್ಬ ಬ್ರಿಟಿಷ್ ಆಫೀಸರನೂ ಒಂದೊಂದು ಬಿಳಿಯಾನೆಯಂತೆ ಕಂಪನಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿಬಿಟ್ಟಿದ್ದ… ಕರ್ನಲ್ಲುಗಳ , ಲೆಫ್ಟಿನೆಂಟುಗಳ ಮತ್ತು ಲಾರ್ಡುಗಳ ಮೇಜವಾನಿ ಮೋಜುಮಸ್ತಿ ಎಗ್ಗಿಲ್ಲದೇ ಸಾಗಿತ್ತು. ಅವರೆಲ್ಲರ ಅಗತ್ಯಗಳನ್ನು ಪೂರೈಸಲು ಈ ಚೆಟ್ಟಿ ಮದರಾಸಿನ ಈಸ್ಟ್ ಇಂಡಿಯಾ ಕಂಪನಿಯ ಪಾಲಿಗೆ ಕಾಮಧೇನುವಾಗಿದ್ದ…

ಇತ್ತ… ಮಹಾರಾಜ ಮುಮ್ಮುಡಿ ಕೃಷ್ಣರಾಜ ಒಡೆಯರು ಮೇಲಿಂದ ಮೇಲೆ ಪತ್ರಗಳನ್ನು ಬರೆದು ಅಧಿಕಾರ ವಾಪಸಿಗಾಗಿ ವಿನಂತಿಸಿಕೊಳ್ಳುತ್ತಿದ್ದರೂ ಬ್ರಿಟಿಷರು ಕ್ಯಾರೇ ಎಂದಿರಲಿಲ್ಲ… ಇದನ್ನೆಲ್ಲಾ ಹತ್ತಿರದಿಂದಲೇ ಗ್ರಹಿಸುತ್ತಿದ್ದ ಚೆಟ್ಟಿ ಅದೊಂದು ದಿನ. ನೀವು ಮೈಸೂರು ಪ್ರಭುಗಳಿಗೆ ರಾಜ್ಯಾಧಿಕಾರ ಹಿಂದಿರುಗಿಸದಿದ್ದಲ್ಲಿ ನಾನು ಹಣ ಸಾಲ ಕೊಡುವುದನ್ನು ನಿಲ್ಲಿಸಬೇಕಾದೀತು ಎಚ್ಚರ ಎಂಬ ಬೆದರಿಗೆ ಹಾಗಿದರು. ಅದಕ್ಕೆ ಅಲೀ ಆಸ್ಗರ್ ಕೂಡಾ ತನ್ನ ಪ್ರಭಾವ ಬಳೆಸಿ ಮೈಸೂರು ಅರಸರಿಗೆ ಅಧಿಕಾರವನ್ನು ಹಿಂದಿರುಗಿಸಬೇಕೆಂದು ಒತ್ತಾಯ ಹಾಕಿದರು

ಇವರಿಬ್ಬರ ಬೆದರಿಕೆಗೆ ಬೆಚ್ಚಿದಂತೆ ನಟಿಸಿದ ಬ್ರಿಟಿಷರು ಅಂದಿನಿಂದ ಪ್ರಭುಗಳ ಪತ್ರಗಳಿಗೆ ಮಾನ್ಯತೆ ಕೊಟ್ಟು ಮಾರುತ್ತರ ಬರೆಯಲಾರಂಭಿಸಿದರು… ಅಧಿಕಾರ ವಾಪಸಿಗಾಗಿ ತಾವು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿಯೂ ವಾಗ್ದಾನ ಮಾಡಿದರು…

ಹೀಗೆ ಮೈಸೂರು ಸಂಸ್ಥಾನದ ಆಪ್ತರಾಗಿ ಚೆಟ್ಟಿ ಮತ್ತು ಅಸ್ಗರ್ ಅಲಿಯವರು ಮೈಸೂರಿಗೆ ಬ್ರಿಟಿಷರಿಂದ ಮರಳಿ ಅಧಿಕಾರ ಕೊಡಿಸಲು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಮೈಸೂರು ಸಂಸ್ಥಾನದ ಜನರ ಪಾಲಿಗೆ ಪ್ರಾತಃಸ್ಮರಣೀಯರಾಗುತ್ತಾರೆ.

1857ರಲ್ಲಿ ಬ್ರಿಟಿಷರ ವಿರುದ್ಧ ಸಿಪಾಯಿ ದಂಗೆಯಾಗಿ ಪ್ರಥಮ ಸ್ವಾಂತ್ರತ್ರ್ಯ ಸಂಗ್ರಾಮವಾದಾಗ ಅದನ್ನು ಹತ್ತಿಕ್ಕಲು ಸಾಧ್ಯವಾಗದ ಈಸ್ಟ್ ಇಂಡಿಯಾ ಕಂಪನಿ ಬ್ರಿಟನ್ ರಾಣಿ ವಿಕ್ಟೋರಿಯಾಗೆ ಶರಣಾದಾಗ, ವಿಕ್ಟೋರಿಯಾರಾಣಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಾಗ, ಪ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಮತ್ತು ಅವರ ಸಹಾಯಕರಾಗಿದ್ದ ಮಾರ್ಕ್ ಕಬ್ಬನ್ ಅವರು ಬರೆದಿದ್ದ ಪತ್ರವನ್ನು ಪುರಸ್ಕರಿಸಿ 565 ಸಂಸ್ಥಾನಗಳ ಪೈಕಿ ಮೈಸೂರಿನ ರಾಜರಿಗೆ ಮಾತ್ರವೇ ಆಡಳಿತವನ್ನು ಮರಳಿ ಹಸ್ತಾಂತರ ಮಾಡುತ್ತಾಳೆ. ಅಂತಹ ಮಹನೀಯರ ಸ್ಮರಣಾರ್ಥವಾಗಿಯೇ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಮತ್ತು ಉದ್ಯಾನಗಳಿಗೆ ಅವರುಗಳ ಹೆಸರನ್ನೇ ನಾಮಕರಣ ಮಾಡಿ ಇಂದಿಗೂ ಅವರನ್ನು ಸ್ಮರಿಸುವಂತೆ ಮಾಡಿದ್ದಾರೆ ನಮ್ಮ ಮಹಾರಾಜರು.

ಹಾಗೆ ಆಡಳಿತವನ್ನು ಮರಳಿ ಪಡೆದ ನಂತರ 1947ರ ವರೆಗೂ ನಿರಾತಂಕವಾಗಿ ಮೈಸೂರಿನ ಸಂಸ್ಥಾನ ಒಡೆಯರ್ ಕುಟುಂಬದ ಆಳ್ವಿಕೆಯನ್ನು ಅತ್ಯಂತ ಸುಭಿಕ್ಷವಾಗಿ ಆಡಳಿತ ನಡೆಸಲ್ಪಡುತ್ತದೆ. ಇದೇ ಸಮಯದಲ್ಲಿ ಮೈಸೂರಿಗೆ ಭೇಟಿನೀಡಿದ ಲಾರ್ಡ್ ಮೆಕಾಲೆ ವ್ಯವಹಾರದ ದೃಷ್ಥಿಯಿಂದ ರಾಜರುಗಳಿಗೆ ಇಂಗ್ಲೀಷ್ ಕಲಿಯಲು ಸೂಚಿಸಿದ್ದನ್ನು ಸ್ವೀಕರಿಸಿ ಮಹಾರಾಜರ ಮಕ್ಕಳುಗಳು ಮತ್ತು ಅವರ ಪ್ರಾಂತ್ಯದಲ್ಲಿ ಅನೇಕ ಮಕ್ಕಳುಗಳು ಆಂಗ್ಲಮಾಧ್ಯಮದ ಶಿಕ್ಷಣ ಪಡೆಯುತ್ತಾರೆ. 1892ರಲ್ಲಿ ಶ್ರೀ ಚಾಮರಾಜ ಒಡೆಯರ್ ಅವರು ಮಹಾರಾಜರಾಗಿಯೂ ಮತ್ತು ಶೇಷಾದ್ರಿ ಐಯ್ಯರ್ ಅವರು ದಿವಾನರಾಗಿದ್ದಾಗ ದೇಶ ಕಂಡ ವೀರ ಸನ್ಯಾಸಿ ಸ್ವಾಮೀ ವಿವೇಕಾನಂದರು ಪರಿವ್ರಾಜಕರಾಗಿ ಮೈಸೂರಿಗೆ ಭೇಟಿಕೊಟ್ಟು ಸುಮಾರು ಎರಡು ವಾರಗಳ ಕಾಲ ಇಲ್ಲಿ ತಂಗಿದ್ದು ಮೈಸೂರಿನ ಸುತ್ತಮುತ್ತಲಿನ ಪ್ರದೇಶ ಅದರಲ್ಲೂ ಕಾನಕಾನಹಳ್ಳಿ (ಕನಕಪುರದ) ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆ ಸೂಚಿಸುತ್ತಾರೆ. ಅದೇ ರೀತಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಹೆಣ್ಣುಮಕ್ಕಳ ಶಾಲೆಯನ್ನು ಆರಂಭಿಸಲು ಸಲಹೆನೀಡುತ್ತಾರೆ. ಅವರ ಸಲಹೆಯಮೇರೆಗೇ ರಾಣಿಯವರ ಹೆಸರಿನಲ್ಲಿ ಅಮ್ಮಣ್ಣಿ ಕಾಲೇಜ್ ಆರಂಭವಾಗುತ್ತದೆ. ಅದೇ ರೀತಿ ಸ್ವಾಮಿಗಳು ಚಿಕಾಗೋದ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಧನ ಸಹಾಯವನ್ನೂ ಮಾಡುತ್ತಾರೆ. ಮುಂದೆ ವಿವೇಕಾನಂದರಿಂದ ಪ್ರೇರೇಪಿತರಾಗಿ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸೂಕ್ತ ಜಾಗ ಮತ್ತು ಧನ ಸಹಾಯವನ್ನು ಹುಡುಕುತ್ತಿದ್ದ ಜೆಮ್ ಷೇಡ್ ಜೀ ಟಾಟಾರವರಿಗೆ ಬೆಂಗಳೂರಿನಲ್ಲಿ ಸುಮಾರು 400 ಎಕರೆಯಷ್ಟು ಜಮೀನು ನೀಡಿದ್ದಲ್ಲದೇ ಅಂದಿನ ಕಾಲಕ್ಕೇ ಸುಮಾರು 50,000 ರೂಪಾಯಿಗಳ ಧನಸಹಾಯ ಮಾಡಿದರು ನಮ್ಮ ಮಹಾರಾಜರು. ಇಂದು ಅದೇ ಟಾಟಾ ಇನಿಸ್ಟಿಟ್ಯೂಟ್ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್ ಹೆಸರಿನಲ್ಲಿ ವಿಶ್ವವಿಖ್ಯಾತವಾಗಿ ಸಾವಿರಾರು ವಿಜ್ಞಾನಿಗಳಿಗೆ ವಿದ್ಯಾತಾಣವಾಗಿದೆ.

ನಾಲ್ವಡೀ ಕೃಷ್ಣರಾಜ ಒಡೆಯರ್ ಅವರಿಗೆ ಶಿಕ್ಷಣವನ್ನು ಕೊಡಿಸಲು ಕರ್ನಲ್ ಫ್ರೇಜರ್ (ಬೆಂಗಳೂರಿನ ಫ್ರೇಜರ್ ಟೌನ್ ಇವರ ಸವಿ ನೆನಪಿನಲ್ಲಿಯೇ ಇದೆ) ಅವರನ್ನು ನೇಮಿಸುತ್ತಾರೆ. ಅರಮನೆಯ ಸಮೀಪದಲ್ಲೇ ಇದ್ದ ಖಾಸ್ ಬಂಗಲೆಯಲ್ಲಿ (ಇಂದಿನ ಪ್ರಾಣಿ ಸಂಗ್ರಹಾಲಯ) ಆರಂಭವಾಗುತ್ತದೆ. ಅದೇ ಸಮಯದಲ್ಲಿ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ ಅಚಾತುರ್ಯವಾಗಿ ಬೆಂಕಿ ಹತ್ತಿಕೊಂಡು ಇಡೀ ಅರಮನೆ ಹೊತ್ತಿ ಉರಿದಾಗ, ಫ್ರೇಜರ್ ಅವರು ಮಹಾರಾಜರಿಗೆ ಅಗ್ನಿಶಾಮಕ ದಳದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿ ಮೊತ್ತ ಮೊದಲಿಗೆ ಅಗ್ನಿಶಾಮಕ ದಳದ ಆರಂಭಕ್ಕೆ ಕಾರಣೀಭೂತರಾಗುತ್ತಾರೆ. ಅದಾದ ನಂತರ ಮತ್ತೆ ಈಗಿರುವ ಭವ್ಯವಾದ ಅರಮನೆ ರೂಪುಗೊಳ್ಳುತ್ತದೆ. ಫ್ರೇಜರ್ ಅವರು ಕೇವಲ ಇಂಗ್ಲೀಷ್ ಮಾತ್ರವಲ್ಲದೇ ಕಾನೂನು, ರಾಜ್ಯಾಡಳಿತ, ಆಡಳಿತ ನಿರ್ವಹಣೆ ಮುಂತಾದ ವಿಷಯಗಳನ್ನು ಮಹಾರಾಜರಿಗೆ ಕಲಿಸಿಕೊಡುತ್ತಾರೆ

1902ರಲ್ಲಿ ಆರಂಭವಾದ ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಕುಂಟುತ್ತಾ ಸಾಗುತ್ತಾ ಕೇವಲ ಮಳೆಗಾಲದಲ್ಲಿ ಮಾತ್ರವೇ ವಿದ್ಯುತ್ ಉತ್ಪಾದಿಸುತ್ತಾ, ಮೈಸೂರು, ಬೆಂಗಳೂರು ಮತ್ತು ಕೆಜಿಎಫ್ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸುತ್ತಿರುತ್ತದೆ. ವರ್ಷದ ಮುನ್ನೂರೈವತ್ತೈದು ದಿನಗಳೂ ವಿದ್ಯುತ್ ಉತ್ಪಾದಿಸಬೇಕಾದರೇ ನೀರನ್ನು ಎಲ್ಲಾದರೂ ತಡೆಹಿಡಿದು ಅದನ್ನು ಪ್ರತಿದಿನವೂ ಪೂರೈಸುವಂತೆ ಮಾಡುವ ಸಲುವಾಗಿಯೇ ಕನ್ನಂಬಾಡಿ ಕಟ್ಟೆಯನ್ನು ಕಟ್ಟುವ ನಿರ್ಧಾರಕ್ಕೆ ಬರುತ್ತಾರೆ.

ಮುಂಬೈಯಲ್ಲಿ ಎಂಜಿನಿಯರ್ ಆಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1909 ರಲ್ಲಿ ಮೈಸೂರಿಗೆ ಕರೆಸಿಕೊಂಡು ತಮ್ಮ ಕನಸಿನ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯನ್ನು ಸಾಕಾರಗೊಳಿಸಲು ವಿಶ್ವೇಶ್ವರಯ್ಯನವರನ್ನು ಕೇಳಿಕೊಂಡರು. ಅವರ ಇಚ್ಚೆಯಂತೆ 1911ರಲ್ಲಿ ಕನ್ನಂಬಾಡಿ ಅಣೆಕಟ್ಟೆಯ ಮೊದಲ ವರದಿ ಸಿದ್ಧವಾಯಿತಾದರೂ ಅದಕ್ಕೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಎಂದು ಮದ್ರಾಸ್ ಸರ್ಕಾರದ ಆಕ್ಷೇಪದಿಂದಾಗಿ ಈ ಯೋಜನೆಯ ಬಗ್ಗೆ ಆಗಿನ ದಿವಾನರಾಗಿದ್ದ ಟಿ.ಆನಂದರಾಯರು ಹೆಚ್ಚಿನ ಗಮನ ಕೊಡಲಿಲ್ಲ. ಇದರಿಂದ ನೊಂದ ವಿಶ್ವೇಶ್ವರಯ್ಯ ಅವರು ದೈನಂದಿನ ಕೆಲಸಗಳಲ್ಲಿಯೂ ಆಸಕ್ತಿ ಕಳೆದುಕೊಂಡರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶ್ವೇಶ್ವರಯ್ಯ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿ ಯೋಜನೆ ಜಾರಿಗೆ ನಿರ್ಧರಿಸಿದರು. ಅದಕ್ಕೆ ಹಣವನ್ನು ಹೊಂಚಲು ತಮ್ಮ ರಾಣಿಯವರ ಚಿನ್ನಾಭರಣ ಬೆಳ್ಳಿಯ ನಾಣ್ಯಗಳು, ಮುತ್ತು, ವಜ್ರ ವೈಡೂರ್ಯಗಳಿದ್ದ ನಾಲ್ಕು ಮೂಟೆಯಲ್ಲಿ ಕೊಂಡೊಯ್ದು ಇಲ್ಲಿಗಿಂತ ದೂರದ ಬಾಂಬೆಯಲ್ಲಿ ಈ ಚಿನ್ನಾಭರಣಗಳಿಗೆ ಹೆಚ್ಚಿನ ಹಣ ಸಿಗಬಹುದೆಂಬ ಕಾರಣದಿಂದ ದೂರದ ಬಾಂಬೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸುಮಾರು 80 ಲಕ್ಷ ರೂಪಾಯಿಗಳನ್ನು ಹೊಂಚಿಸುವ ಮೂಲಕ 1911 ಅಕ್ಟೋಬರ್ 12ರಂದು ಯೋಜನೆಗೆ ಒಪ್ಪಿಗೆ ಸೂಚಿಸಿದರು. ಆದರೆ ಕಾಮಗಾರಿ ನಡೆಯುತ್ತಿದ್ದ ಸಂಧರ್ಭದಲ್ಲಿ ನದಿಯಲ್ಲಿ ಭಾರಿ ಪ್ರವಾಹ ಬಂದು ಕಾರ್ಮಿಕರು ಕೊಚ್ಚಿಹೊಗುತ್ತಿದ್ದ ಸಂದರ್ಭದಲ್ಲಿ ಅವರಲ್ಲಿ ಕೆಲವರನ್ನು ರಕ್ಷಿಸುವ ಸಂದರ್ಭದಲ್ಲಿ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ಡಾರ್ವಿನ್ ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ಅವರ ಸೇವೆ ಮತ್ತು ಬಲಿದಾನವನ್ನು ಚಿರಂತನವಾಗಿಡಲು ಕನ್ನಂಬಾಡಿ ಸುತ್ತಮುತ್ತಲಿನ ಜನರು ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ 5, 10, 25, 50 ಪೈಸೆ, 1 ರೂಪಾಯಿಗಳನ್ನು ಸಂಗ್ರಹಿಸಿ ಸುಮಾರು 600ರೂಪಾಯಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪುದುವಟ್ಟು ಇಟ್ಟು ಬುದ್ದಿವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಮಾಡುತ್ತಾರೆ.

ಇಂದು ನಾಡಿನಾದ್ಯಂತ ಸ್ವಚ್ಛಭಾರತ ಅಭಿಯಾನ ನಡೆಯುತ್ತಿದ್ದರೆ ಆದನ್ನು ನಮ್ಮ ರಾಜರು ಅಂದಿನ ಕಾಲದಲ್ಲೇ ಜಾರಿಗೆ ತಂದು ಪ್ರತೀ ಗ್ರಾಮಗಳಿಗೂ ಒಂದು ಕನ್ನಡಿ ಮತ್ತು ಬಾಚಣಿಗೆ ಕೊಟ್ಟು ಪ್ರತಿಯೊಬ್ಬರು ಶುಭ್ರವಾಗಿ ಇರಬೇಕು ಎಂದು ಅಜ್ಞಾಪಿಸಿರುತ್ತಾರೆ. ಅದೇ ರೀತಿ ತಮ್ಮ ದೂರದೃಷ್ಟಿಯಿಂದ ಮೈಸೂರಿನ ಪ್ರತೀ ರಸ್ತೆಗಳು ವಿಶಾಲವಾಗಿ ಇರುವಂತೆ ಎಂದೂ ಕೂಡಾ ರಸ್ತೆಗಳಲ್ಲಿ ಜನ ಸಂದಣಿಯಾಗದಂತೆ ನೋಡಿಕೊಂಡಿರುತ್ತಾರೆ. ಬ್ರಿಟೀಷರೇ ಹೇಳಿದಂತೆ ಬ್ರಿಟನ್ ಬಿಟ್ಟರೇ ಬ್ರಿಟೀಷರು ವಾಸ ಮಾಡುವಂತಹ ಸುಸಜ್ಜಿತ, ವ್ಯವಸ್ಥಿತ ಮತ್ತು ಸುಂದರ ನಗರ ಮತ್ತೊಂದು ಎಂದರೆ ಅದು ಮೈಸೂರು ಎಂದು ಹೇಳಿದ್ದದ್ದು ಮೈಸೂರಿನ ಹೆಮ್ಮೆಯ ಸಂಕೇತವಾಗಿದೆ. ಜೋಗದ ಜಲಪಾತದಲ್ಲಿ ವಿದ್ಯುತ್ ಉತ್ಪಾದನಾ ಘಟಕ, ಬೆಂಗಳೂರಿನಲ್ಲಿ ಹೆಚ್.ಎ.ಎಲ್ ವಿಮಾನ ತಯಾರಿಕಾ ಘಟಕಗಳೂ ಮಹಾರಾಜರ ದೂರದೃಷ್ಟಿಯ ಫಲಗಳೇ ಆಗಿವೆ.

ಸ್ವತಃ ಸಂಗೀತ ಮತ್ತು ವೇದ ಪಾರಂಗತರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 36000 ಪುಟಗಳ ಋಗ್ವೇದವನ್ನು 1000 ಪುಟಗಳ 36 ಸಂಪುಟದ ಪುಸ್ತವನ್ನಾಗಿ ಮಾಡಿಸಿ ಎಲ್ಲರಿಗೂ ಹಂಚಿಕೆ ಮಾಡುತ್ತಾರೆ. ಅದೇ ರೀತಿ ಸ್ವತಃ 21 ಕೃತಿಗಳನ್ನು ರಚಿಸಿ ಅದಕ್ಕೇ ಅವರೇ ಸ್ವತಃ ರಾಗ ಸಂಯೋಜನೆ ಮಾಡಿದ್ದಾರೆ.

pak

ಮೈಸೂರಿನ ಹೆಸರನ್ನು ವಿಶ್ವವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಈ ಸಿಹಿತಿಂಡಿಯ ಇತಿಹಾಸ ಬಲು ರೋಚಕವಾಗಿದೆ. ಅದೊಮ್ಮೆ ರಾಜರು ಅರಮನೆಯ ಬಾಣಸಿಗ ಕಾಕಾಸುರ ಮಾದಪ್ಪನವರನ್ನು ಕರೆದು ಯಾವುದಾದರೂ ಹೊಸಾ ಸಿಹಿ ತಿಂಡಿ ತಯಾರಿಸಲು ಹೇಳಿದರು ಮಹಾರಾಜರು ಹೇಳಿದ ಕೂಡಲೇ ಮರು ಮಾತನಾಡದೇ ಆಡುಗೆ ಮನೆಗೆ ಹೋದಾಗ ತಮ್ಮ ಮುಂದಿದ್ದ ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿ, ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಎಂದು ಯೋಚಿಸಿ ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. (ಪಾಕ್ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). ಈ ಸಿಹಿ ತಿಂಡಿ ಕೇವಲ ಅರಮನೆಗಷ್ಟೇ ಮೀಸಲಾಗಿರಬಾರದೆಂದು ನಿರ್ಧರಿಸಿ ಅವರಿಗೆಂದೇ ಗುರುರಾಜ ಸ್ವೀಟ್ಸ್ ಎಂಬ ಅಂಗಡಿಯನ್ನು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ. ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ಉದ್ದಗಲಕ್ಕೂ ಚಾಚಿಕೊಂಡಿರುವ ದೇವರಾಜ ಮಾರ್ಕೆಟ್ ಕಟ್ಟಿಸಿಕೊಡುತ್ತಾರೆ. ಇಂದಿಗೂ ಕೂಡಾ ಮಾದಪ್ಪ ಅವರ ಕುಟುಂಬದವರೇ ಗುರು ಸ್ವೀಟ್ಸ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

1947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟಾಗ, ಸರ್ದಾರ್ ವಲ್ಲಭಾಯಿಪಟೇಲ್ ಅವರ ನೇತೃತ್ವದಲ್ಲಿ 565 ಸಂಸ್ಥಾನಗಳನ್ನು ಭಾರತ ಗಣತಂತ್ರಕ್ಕೆ ಸೇರಿಕೊಳ್ಳಲು ಕೇಳಿಕೊಂಡಾಗ ಕಡೆಯ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಸಂತೋಷದಿಂದ ಮರು ಮಾತನಾಡಡೇ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಕೊಳ್ಳಲು ಒಪ್ಪಿಕೊಂಡಾಗ ಸ್ವತಃ ಅಂದಿನ ಪ್ರಧಾನಿಗಳಾಗಿದ್ದ ನೆಹರರವರು ಖುದ್ದಾಗಿ ಮೈಸೂರಿಗೆ ಬರುತ್ತಾರೆ ಎಂದರೆ ನಮ್ಮ ಮೈಸೂರಿನ ಖ್ಯಾತಿ ಎಷ್ಟಿತ್ತು ಎಂಬುದನ್ನು ಕಂಡು ಕೊಳ್ಳಬಹುದಾಗಿದೆ.

vish
ಇಂದು ಸೆಪ್ಟೆಂಬರ್ 14, ಖ್ಯಾತ ಇಂಜಿನಿಯರ್ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಜಯಂತಿ ಅವರಿಗೆ ಮೈಸೂರಿನ ಅರಸ ಬಗ್ಗೆ ಇದ್ದ ಅಪಾರ ಪ್ರೇಮ ಮತ್ತು ಕಾಳಜಿ ಎಷ್ಟಿತ್ತು ಎಂದು ಈ ಪ್ರಸಂಗದ ಮೂಲಕ ತಿಳಿಯುತ್ತದೆ.

ಐವತ್ತರ ದಶಕ. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಪ್ರಮುಖ ವೃತ್ತಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನಿಟ್ಟು ಅಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಕೆಲಸ ಭರದಿಂದ ಸಾಗಿತ್ತು. ಹಾಗೆಯೇ ಅದನ್ನು ಉದ್ಘಾಟನೆಗೆ ಯಾರನ್ನು ಕರೆಸಬೇಕೆಂಬ ಚರ್ಚೆಯೂ ನಡೆಯುತ್ತಿತ್ತು. ರಾಜರ್ಷಿ ನಾಲ್ವಡಿಯವರ ಜತೆ ಒಡನಾಡಿದ್ದ ಬಹುತೇಕ ಎಲ್ಲ ಪ್ರಮುಖರೂ ಕಾಲನ ಕರೆಗೆ ಓಗೊಟ್ಟು ಹೋಗಿದ್ದರಿಂದ ಅಷ್ಟೇ ಘನವಾದವರ ಹುಡುಕಾಟ ನಡೆಯುತ್ತಿತ್ತು. ಆಗ ಫಕ್ಕನೆ ಮಿಂಚು ಹೊಳೆದಂತೆ ಮಹಾರಾಜರ ಆಸ್ಥಾನದಲ್ಲಿ ದಿವಾನರಾಗಿದ್ದ , ಮುಖ್ಯ ಎಂಜಿನೀರ್ ಆಗಿದ್ದ , ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದ ಧೀಮಂತ ಮಹಾನುಭಾವ ಸರ್ ಎಂ ವಿಶ್ವೇಶ್ವರಯ್ಯನವರೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಲಾಯಿತು.

ಅವರಿಗೆ ಆಗ ತೊಂಭತ್ತರ ಇಳಿವಯಸ್ಸು… ವಿಶ್ರಾಂತ ಜೀವನ ನಡೆಸುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು. ಖುಷಿಯಿಂದಲೇ ಒಪ್ಪಿಕೊಂಡು ಮೈಸೂರಿಗೆ ಬಂದಿಳಿದ ಅವರನ್ನು ಸರ್ಕಾರಿ ಗೆಸ್ಟ್ ಹೌಸಿನಲ್ಲಿ ಇಳಿಸಲಾಗಿತ್ತು. ಉದ್ಘಾಟನೆಯ ದಿನ, ಎಂದಿನಂತೆ ಸರ್ ಎಂ ವಿ ಯವರು ಸೂಟು ಬೂಟಿನಲ್ಲಿ ಕಂಗೊಳಿಸುತ್ತ ಹೊರಡಲು ಸಿದ್ಧವಾಗಿದ್ದಾಗ ಬಾಗಿಲ ಬಳಿ ಸದ್ದಾಯಿತು. ನಿಧಾನವಾಗಿ ಬಾಗಿಲು ತೆರೆದರೆ ಸರ್, ಕಾರು ಸಿದ್ಧವಿದೆ ಸರ್ … ಹೊರಡೋಣವೇ ಎಂದು ಕೇಳಿದರು.
ಆದಕ್ಕೆ ತಕ್ಷಣವೇ ವಿಶ್ವೇಶ್ವರಯ್ಯನವರು ಕಾರೇ … ಏತಕ್ಕೆ ? ಇಲ್ಲೇ ಇರುವ ಕೆ ಆರ್ ಸರ್ಕಲ್ಲಿಗೆ ಕಾರೇ?
ನೋ ನೋ ನೋ … ಅದೆಲ್ಲ ಬೇಡ …. ನಾಲ್ವಡಿಯವರು ನಮ್ಮನ್ನೆಲ್ಲ ಸಾಕಿ ಸಲಹಿದ ಧಣಿ… ನಾಡಿನ ಹಿತಕ್ಕಾಗಿ ಸದಾ ಸರ್ವದಾ ತಮ್ಮನ್ನು ತೊಡಗಿಸಿಕೊಂಡ ಮಹನೀಯ… ಅಂಥವರ ಪ್ರತಿಮೆ ಉದ್ಘಾಟನೆಗೆ ಕಾರಿನಲ್ಲಿ ಹೋಗುವುದೇ… ಅದಾಗದು…. ನಾನು ಇಲ್ಲಿಂದ ಅಲ್ಲಿಯವರೆಗೆ ನಡೆದೇ ಅಲ್ಲಿಗೆ ಬರುತ್ತೇನೆ ಎಂದು ಹೇಳಿ ಆ ಜ್ಞಾನವೃದ್ಧ , ವಯೋವೃದ್ಧ ಜೀವ ತಮ್ಮ ತೊಂಭತ್ತರ ಇಳಿವಯಸ್ಸಿನಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ನಿಧಾನವಾಗಿ ನಡೆಯಲಾರಂಭಿಸಿತು. ಇದನ್ನೆಲ್ಲಾ ಕಣ್ಣಲ್ಲಿ ನೀರು ತಬ್ಬಿಕೊಂಡು ನೋಡುತ್ತಿದ್ದ ಉಳಿದ ಪ್ರಮುಖರೂ ಅವರ ಜತೆಗೂಡಿ ನಡೆದೇ ಹೊರಟು ಕೃಷ್ಣರಾಜ ಸರ್ಕಲ್ಲು ತಲುಪಿ ವಿದ್ಯುಕ್ತವಾಗಿ ಉಧ್ಘಾಟನೆಯನ್ನು ನಡೆಸಿಕೊಟ್ಟರು. ಈ ರೀತಿಯಾಗಿ ರಾಜಾ ಪ್ರತ್ಯಕ್ಷ ದೇವತ ಎನ್ನುವುದಕ್ಕೆ ಅನ್ವರ್ಥವಾಗಿ ನಮ್ಮ ಮೈಸೂರು ಅರಸರು ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ್ದರು.

ಕಡೆಯದಾಗಿ ಮೈಸೂರು ಮಹಾರಾಜರ ಮತ್ತೊಂದು ಉತ್ತಮ ಗುಣವನ್ನು ಹೇಳಲೇ ಬೇಕಿದೆ. ಸಾಧಾರಣವಾಗಿ ಎಲ್ಲಾ ಸಾಮಂತರು ಮತ್ತು ಜನಸಾಮಾನ್ಯರು ತಮ್ಮಲ್ಲಿರುವ ಅತ್ಯುತ್ತಮವಾದ ಅನನ್ಯವಾದ ಅನರ್ಘ್ಹ್ಯವಾದ ವಸ್ತುಗಳನ್ನು ಮಹಾರಾಜರುಗಳಿಗೆ ಕಾಣಿಕೆಯನ್ನಾಗಿ ಕೊಡುವುದು ವಾಡಿಕೆ. ಹಾಗೆ ಕೊಟ್ಟ ಕಾಣಿಕೆಗಳನ್ನು ಬಹುತೇಕ ರಾಜ ಮಾಹಾರಾಜರು ತಮ್ಮಲ್ಲೇ ಇಟ್ಟುಕೊಳ್ಳುವುದು ನಡೆದು ಬಂದ ಸಂಪ್ರದಾಯ. ಆದರೆ ನಮ್ಮ ಮಹಾರಾಜರು ಅಂತಹ ಕಾಣಿಕೆಗಳನ್ನು ಕೇವಲ ತಮ್ಮ ಕೈಯಲ್ಲಿ ಒಮ್ಮೆ ಮುಟ್ಟಿ, ನಿಮ್ಮ ಕಾಣಿಕೆ ನಮಗೆ ತಲುಪಿದೆ ಎಂದು ತಿಳಿಸಿ ಮತ್ತೇ ಅವರಿಗೇ ಹಿಂದಿರುಗಿಸಿ ಪ್ರಜೆಗಳಿಗೆ ರಾಜಾ ಭಾರವಾಗಬಾರದು ಎಂದು ಹೇಳುತ್ತಿದ್ದರಂತೆ.

ಇದರ ಜೊತೆ ಇನ್ನೂ ಅನೇಕ ಪ್ರಸಂಗಗಳನ್ನು ಸುಲಲಿತವಾಗಿ ಅರಳು ಹುರಿದಂತೆ ಶ್ರೀ ಧರ್ಮೇಂದ್ರವರವು ಹೇಳುತ್ತಿದ್ದರೆ ಸಮಯ ಹೋದ್ದದ್ದೇ ಗೊತ್ತಾಗಲಿಲ್ಲ. ಆದರೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಒಂದಷ್ಟು ನಿರ್ಧಾರಿತ ಸಮಯ ಇರುವುದರಿಂದ ಆಯೋಜಕರ ಒತ್ತಾಯದ ಮೇರೆಗೆ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಗಿಸಲೇ ಬೇಕಾಯಿತು. ಕಾರ್ಯಕ್ರಮದ ಅಂತ್ಯದ ಪ್ರಶ್ನೋತ್ತರದ ಸಮಯದಲ್ಲಿ ಇಷ್ಟೆಲ್ಲಾ ಕೊಡುಗೆಗಳನ್ನು ನೀಡಿದ ನಮ್ಮ ಮೈಸೂರು ರಾಜ ಮಹಾರಾಜರುಗಳನ್ನು ಇಂದಿನ ಯುವಜನಗೆ ಏಕೆ ನೆನಸಿಕೊಳ್ಳುತ್ತಿಲ್ಲಾ? ರಾಜರು ಏನು ಮಾಡಿದರು ಎಂದು ಉದ್ಧಟನದಿಂದ ಇಂದಿನ ರಾಜಕೀಯ ನಾಯಕರು ಏಕೆ ಕೇಳುತ್ತಾರೆ ಎಂಬ ಪ್ರಶ್ನೆಗೆ ಬಹಳ ನೋವಿನಿಂದಲೇ ಉತ್ತರಿಸಿದ ಧರ್ಮೇಂದ್ರರವರು ಮೈಸೂರು ರಾಜರ ಕೊಡುಗೆಗಳನ್ನು ನೆನೆಸಿಕೊಳ್ಳುವುದಕ್ಕೂ ಜನ ಹಿಂದೂ ಮುಂದು ನೋಡುತ್ತಿರುವುದು ನಿಜಕ್ಕೂ ದುಖಃಕರ. ಅದು ಅಕ್ಷಮ್ಯ ಅಪರಾಧ ಮತ್ತು ರಾಜಮನೆತನಕ್ಕೆ ಮಾಡಿದ ಅವಮಾನ ಎಂದೇ ಪರಿಗಣಿಸಬೇಕು ಎಂದರು. ಅದೇ ಕಾರಣಕ್ಕಾಗಿಯೇ ಸುಮಾರು 18 ವರ್ಷಗಳ ಕಾಲ ಮಧ್ಯಪ್ರಾಚ್ಯದೇಶಗಳಲ್ಲಿ ಕೆಲಸ ಮಾಡಿ ಭಾರತಕ್ಕೆ ಹಿಂದಿರುಗಿದ ನಂತರ ಮೈಸೂರಿನಲ್ಲಿ ಹುಟ್ಟಿ ರಾಜಮನೆತನ ಮತ್ತು ಅರಮನೆಯ ಪರಿಸರದಲ್ಲಿಯೇ ಬೆಳೆದ ನಾನು ಈ ಇತಿಹಾಸವನ್ನು ಇತರರಿಗೆ ತಿಳಿಸದಿದ್ದಲ್ಲಿ ಅದು ದೇಶದ್ರೋಹಕ್ಕೆ ಸಮಾನ ಎಂದು ಪರಿಗಣಿಸಿ ಕಳೆದ ಐದು ವರ್ಷಗಳಿಂದ ಮೈಸೂರಿನ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅದಕ್ಕೆ ಅಗತ್ಯವಿರುವ ದಾಖಲೆ ಮತ್ತು ಪುರಾವೆಗಳನ್ನು ಸಂಗ್ರಹಿಸಿ ಜನರ ಮುಂದಿಡುವ ಕಾಯಕವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಈ ಬಾರಿ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಶ್ರೀಕಂಠ ಬಾಳಗಂಚಿಯವರು ಮಾಡಿದರೆ, ಶ್ರೀಯುತ ಜಯಂತ್ ಅವರ ನೇತೃತ್ವದಲ್ಲಿ ಬಂದಿದ್ದವರೆಲ್ಲರ ಜೊತೆಗೆ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಕಾರ್ಯಕ್ರಮ ವಿರಳ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇದು ಹನ್ನೇರಡನೇ ಆವೃತ್ತಿಯಾಗಿದ್ದರಿಂದ ಇಂದಿನ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಎಂದಿಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಯೋಜಿಸಬೇಕು ಎಂದು ನಿರ್ಧರಿಸಲಾಗಿತ್ತು. ಕಾಕತಾಳೀಯವೋ ಎನ್ನುವಂತೆ ಮೈಸೂರಿನ ದಿವಾನರಾಗಿ ಮೈಸೂರಿನ ಸಂಸ್ಥಾನಕ್ಕೆ ಅತ್ಯಂತ ಹೆಚ್ಚಿನ ಕೊಡುಗೆ ನೀಡಿದ್ದಂತಹ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟಿದ ದಿನವೂ ಇಂದೇ ಆಗಿದ್ದರಿಂದ ಅವರ ಕಾರ್ಯಗಳನ್ನೂ ಇಂದಿನ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು ಮತ್ತು ಅವರ ಕೆಲಸಗಳಿಗೆ ಜೋರಾದ ಕರತಾಡನದ ಮೂಲಕ ಅಭಿನಂದನೆಯನ್ನೂ ಸಲ್ಲಿಸಲಾಯಿತು. ಸಾಧಾರಣವಾಗಿ ಒಂದು ಅಥವಾ ಒಂದೂ ಕಾಲು ಗಂಟೆಯಷ್ಟು ಇರುತ್ತಿದ್ದ ನಮ್ಮ ಕಾರ್ಯಕ್ರಮ ಈ ಬಾರಿ ಒಂದುವರೆ ಗಂಟೆ ದಾಟಿದ್ದರೂ ಕೇಳುವವರಿಗಾಗಲೀ, ವಕ್ತಾರರಿಗಾಗಲೀ ಒಂದೂ ಚೂರೂ ದಣಿವಾಗದೇ ಸಾಗುತ್ತಿದ್ದದ್ದು ಇಂದಿನ ಕಾರ್ಯಕ್ರಮದ ಗುಣಮಟ್ಟದ ದ್ಯೋತವಾಗಿತ್ತು. ಮೈಸೂರಿನ ಇತಿಹಾಸ ಹೇಳಲು ಮತ್ತು ಕೇಳಲು ಒಂದೆರಡು ಗಂಟೆಗಳು ಸಾಲದ ಕಾರಣ, ಇದೇ ಕಾರ್ಯಕ್ರಮದ ಮುಂದುವರಿದ ಭಾಗ ಮತ್ತೊಮ್ಮೆ ನಡೆಸುತ್ತೇವೆ ಎಂದು ಆಯೋಜಕರ ಆಶ್ವಾಸನೆಯ ಮೇರೆಗೆ ಕಾರ್ಯಕ್ರಮವನ್ನು ಮುಗಿಸಲಾಯಿತು. ಕಾರ್ಯಕ್ರಮ ಮುಗಿದ ನಂತರ ಧರ್ಮೇಂದ್ರ ಅವರ ಮರೆತು ಹೋದ ಮೈಸೂರಿನ ಪುಟಗಳು ಪುಸ್ತಕದ ಮಾರಾಟದ ವ್ಯವಸ್ಥೆ ಮಾಡಲಾಗಿ ಅವುಗಳು ಬಿಸಿಬಿಸಿ ದೋಸೆಯಂತೆ ಹಲವಾರು ಪ್ರತಿಗಳು ಮಾರಾಟವಾಗಿದ್ದು ಇಂದಿನ ಕಾರ್ಯಕ್ರಮದ ವಿಶೇಷವಾಗಿತ್ತು.

ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಇನ್ನೂ ಕೆಲವೇ ವಾರಗಳಲ್ಲಿ ಬರುವ ದಸರಾ ಹಬ್ಬದಲ್ಲಿ ರಾಜರ ಪಟ್ಟಾಭಿಷೇಕದ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುವಾಗ ನಮ್ಮ ಮೈಸೂರು ರಾಜರನ್ನು ಮತ್ತವರ ಕೊಡುಗೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡೋಣ. ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗ ಬೇಕಾದರೇ ಸಭಿಕರ ಪಾಲ್ಗೊಳ್ಳುವಿಯ ಪಾತ್ರ ಬಹಳ ಮುಖ್ಯವಾಗಿರುವುದರಿಂದ ದಯವಿಟ್ಟು ಪ್ರತಿಯೊಬ್ಬರೂ ಕನಿಷ್ಟ ಪಕ್ಷ ಇಬ್ಬರನ್ನು ಮುಖತಃ ಸಂಪರ್ಕಮಾಡಿ ಕಾರ್ಯಕ್ರಮಕ್ಕೆ ಕರೆದು ಕೊಂಡು ಬರುವಂತೆ ಸಂಕಲ್ಪಮಾಡೋಣ. ಮತ್ತೆ ಮುಂದಿನ ತಿಂಗಳ ಮೂರನೆಯ ಭಾನುವಾರ ಇನ್ನೂ ಹೆಚ್ಚಿನ ಜನರೊಂದಿಗೆ ಇದೇ ಮಂಥನ ಕಾರ್ಯಕ್ರಮದಲ್ಲಿ ಭೇಟಿಯಾಗೋಣ.

ಏನಂತೀರೀ?