ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ

pappu2-removebg-previewಅದೇ ಸಾರು ಹುಳೀ ಪಲ್ಯಗಳನ್ನು ತಿಂದು ಜಡ್ಡು ಹೋಗಿರುವ ನಾಲಿಗೆಗೆ ಸ್ವಲ್ಪ ಹುಳೀ ಮತ್ತು ಖಾರದ ಜೊತೆಗೆ ಒಗರು ಸೇರಿರುವ ಹುಳಿ ಮಾವಿನ ಕಾಯಿಯ ಜೊತೆಗೆ ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಅತೀ ಸುಲಭದ ದರದಲ್ಲಿ ಸಿಗುವ, ಬಹಳ  ಔಷಧೀಯ ಗುಣಗಳಿರುವ ಮೆಂತ್ಯದ ಸೊಪ್ಪು ಸೇರಿಸಿ ಅತ್ಯಂತ ರುಚಿಕರವಾದ ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ  ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ತಯಾರಿಸಲು ಬೇಕಾಗುವ ಪದಾರ್ಥಗಳು

  • ಬೇಯಿಸಿದ ತೊಗರಿ ಬೇಳೆ – 1 ಬಟ್ಟಲು
  • ತುರಿದ/ಹೆಚ್ಚಿದ ಮಾವಿನಕಾಯಿ – 1 ಬಟ್ಟಲು
  • ಮೆಂತ್ಯ ಸೊಪ್ಪು – 1 ಬಟ್ಟಲು
  • ಮೆಣಸಿನ ಪುಡಿ –  1 ಚಮಚ
  • ಸಾಸುವೆ – 1/2 ಚಮಚ
  • ಜೀರಿಗೆ  – 1/2 ಚಮಚ
  • ಮೆಂತ್ಯ – 1/4 ಚಮಚ
  • ಚಿಟುಕಿ ಅರಿಶಿನ
  • ಚಿಟುಕಿ ಇಂಗು
  • ರುಚಿಗೆ ತಕ್ಕಷ್ಟು ಉಪ್ಪು
  • ಹಸಿರು ಮೆಣಸಿನಕಾಯಿ 5-6
  • ಕರಿ ಬೇವಿನ ಸೊಪ್ಪು – 8-10 ಎಲೆಗಳು
  • ಸ್ವಲ್ಪ ಕೊತ್ತಂಬರೀ ಸೊಪ್ಪು

ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವ ವಿಧಾನ

  • ಒಂದು ಕುಕ್ಕರಿನಲ್ಲಿ ತೊಗರೀಬೇಳೇ ಹಾಕಿ ಸುಮಾರು ಮೂರ್ನಾಲ್ಕು ವಿಸಿಲ್ ಬರುವವರೆಗೂ ಬೇಯಿಸಿಕೊಳ್ಳಿ.
  • ಒಂದು ಗಟ್ಟಿ ತಳದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿಕೊಂಡು ಅದಕ್ಕೆ ಜೀರಿಗೆ, ಮೆಂತ್ಯ  ಕರಿಬೇವು ಹಸಿರು ಮೆಣಸಿನಕಾಯಿಗಳ ಜೊತೆಗೆ ಚಿಟುಕಿ ಇಂಗು ಹಾಕಿ ಚೆನ್ನಾಗಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ
  • ಇದಕ್ಕೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡಿರುವ ಇಲ್ಲವೇ ತುರಿದುಕೊಂಡಿರುವ ಮಾವಿನ ಕಾಯಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ
  • ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಮೆಂತ್ಯಾ ಸೊಪ್ಪುನ್ನು ಸೇರಿಸಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ.
  • ಚೆನ್ನಾಗಿ ಬಾಡಿದ ನಂತರ ಅದಕ್ಕೆ ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಒಂದು ಕುದಿ ಬರುತ್ತಿದ್ದಂತೆಯೇ, ಬೇಯಿಸಿಟ್ಟುಕೊಂಡ ತೊಗರೀಬೇಳೆಯನ್ನು ಬೆರೆಸಿ 5 ನಿಮಿಷಗಳಷ್ಟು  ಕುದಿಸಿ,
  • ಕತ್ತರಿಸಿದ ಕೊತ್ತಂಬರಿ ಸೊಪ್ಪು ಬೆರೆಸಿದಲ್ಲಿ, ಬಿಸಿ ಬಿಸಿಯಾದ ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ ಸವಿಯಲು ಸಿದ್ಧ

pappu2ಈ ತೂವ್ವೆಯನ್ನು ದೋಸೆ, ಚಪಾತಿ ಪರೋಟದೊಂದಿಗೆ ನೆಂಚಿಕೊಂಡು ತಿನ್ನಬಹುದಾಗಿದೆ. , ಹಾಗೆಯೇ  ಬಿಸಿ ಬಿಸಿ ಅನ್ನದ ಜೊತೆಗೆ ಒಂದೆರಡು ಮಿಳ್ಳೆ ತುಪ್ಪಾ ಮತ್ತು ಈ ತೊವ್ವೆಯನ್ನು ಸೇರಿಸಿಕೊಂಡು ಕಲಸಿ ತಿನ್ನುತ್ತಿದ್ದರೆ, ಸ್ವರ್ಗಕ್ಕೆ ಮೂರೇ ಗೇಣು.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ನಿಮ್ಮವನೇ ಉಮಾಸುತ

mentyaಮನದಾಳದ ಮಾತು :  ಮಾವಿನಕಾಯಿ ಮತ್ತು ಮೆಂತ್ಯ ಸೊಪ್ಪಿನಲ್ಲಿ  ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯಾಗಿ ಬಳಸಬಹುದಾಗಿದೆ.  ಮೆಂತ್ಯ ಸೊಪ್ಪಿನ ನಿರಂತರ  ಸೇವನೆಯಿಂದ  ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇನ್ನು ಮಧುಮೇಹಿಗಳಿಗಂತು ಮೆಂತ್ಯಾ ಸೊಪ್ಪು ರಾಮಬಾಣವಾಗಿದೆ. ಮೆಂತ್ಯೆಯಲ್ಲಿ ಇರುವ ನಾರಿನಾಂಶವು ಸಾಧಾರಣ ಜನರಲ್ಲಿ ಕಾರ್ಬ್ಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದಲ್ಲದೇ, ಇನ್ಸುಲಿನ್ ಚಟುವಟಿಕೆ ಸುಧಾರಣೆ ಮಾಡುವುದು. ಹಾಲುಣಿಸುವ ತಾಯಂದಿರಿಗೆ ಹಾಲನ್ನು ವೃದ್ಧಿಸಲೂ ಸಹಾ ಮೆಂತ್ಯ ಸೊಪ್ಪು ಬಹಳ ಸಹಕಾರಿಯಾಗಿದೆ.

ಈ ಪಾಕಶಾಸ್ತ್ರವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ

ಪ್ರತೀ ದಿನ, ಅದೇ ಹುಳಿ ಸಾರು, ಪಲಾವ್ ಇಲ್ಲವೇ ಪುಳಿಯೋಗರೇ ತಿಂದು ಬೇಜಾರಾಗಿದ್ದಲ್ಲಿ , ಅನ್ನದ ಜೊತೆ ಕಲಸಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ ಮತ್ತು ಥಟ್ ಅಂತ ಮಾಡಬಹುದಾದ ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ

  • ನೆನಸಿದ ಕಡಲೇಬೇಳೆ – 1 ಬಟ್ಟಲು
  • ಮೆಂತ್ಯ ಸೊಪ್ಪು – 1 ಕಟ್ಟು
  • ಹಸಿರು ಮೆಣಸಿನಕಾಯಿ – 7 ರಿಂದ 8
  • ಜೀರಿಗೆ – 1/2 ಚಮಚ
  • ಶುಂಠಿ- ಸಣ್ಣ ತುಂಡು
  • ಕರಿಬೇವಿನ ಸೊಪ್ಪು- 5 ರಿಂದ 6 ಎಲೆಗಳು
  • ಕೊತಂಬರಿ ಸೊಪ್ಪು – ಸ್ವಲ್ಪ
  • ತೆಂಗಿನ ತುರಿ – 1/2 ಬಟ್ಟಲು
  • ನಿಂಬೇರಸ – 1/2 ಚಮಚ
  • ಸಕ್ಕರೆ – 1/2 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

  • ಸಾಸಿವೆ – 1/2 ಚಮಚ
  • ಕಡಲೇಕಾಯಿ ಬೀಜ – 4 ಚಮಚ
  • ಚಿಟುಕಿ ಇಂಗು
  • ಒಣ ಮೆಣಸಿನಕಾಯಿ 2-4
  • ಸ್ವಲ್ಪ ಕರಿಬೇವಿನ ಸೊಪ್ಪು

ಮಟೋಡಿ ಪಲ್ಯ ತಯಾರಿಸುವ ವಿಧಾನ

  • ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು, ಕಡಲೇಬೇಳೆ, ಜೀರಿಗೆ, ಶುಂಠಿ, ಕರಿಬೇವು ಮತ್ತು ತೆಂಗಿನ ತುರಿಯೊಂದಿಗೆ ಬೆರಸಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
  • ರುಬ್ಬಿದ ಮಿಶ್ರಣವನ್ನು ಕುಕ್ಕರಿನಲ್ಲಿ ಎರಡು ಸೀಟಿಗಳು ಬರುವ ವರೆಗೂ ಬೇಯಿಸಿಕೊಳ್ಳಿ
  • ಒಂದು ದಪ್ಪ ತಳದ ಬಾಣಲೆಗೆ ಎಣ್ಣೆಯನ್ನು ಹಾಕಿಕೊಂಡು, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಇಂಗನ್ನು ಹಾಕಿ ಸಿಡಿಸಿಕೊಳ್ಳಿ. ಈಗ ಅದಕ್ಕೆ ಕರೀಬೇವು, ಒಣ ಮೆಣಸಿನಕಾಯಿ ಮತ್ತು ಕಡಲೇಕಾಯಿ ಬೀಜವನ್ನು ಹಾಕಿ ಚೆನ್ನಾಗಿ ಕೆಂಪಗೆ ಬರುವಂತೆ ಹುರಿಯಿರಿ
  • ಬಾಣಲೆಯಲ್ಲಿರುವ ಒಗ್ಗರಣೆಗೆ ಬೇಯಿಸಿಕೊಂಡ ಮಿಶ್ರಣವನ್ನು ಸೇರಿಸಿ ಅದಕ್ಕೆ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕಾಲ ಕುದಿಯಲು ಬಿಡಿ
  • ಈಗ ಅದಕ್ಕೆ ನಿಂಬೇ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲೆಸಿ ಸ್ವಲ್ಪ ಕಾಲ ಆರಲು ಬಿಟ್ಟಲ್ಲಿ, ತುಂಬಾ ಆರೋಗ್ಯಕರವಾದ ಮತ್ತು ರುಚಿ ರುಚಿಯಾದ ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ಸಿದ್ಧ. ಇದಕ್ಕೆ ಪಟೋಲಿ ಪಲ್ಯ ಎಂದೂ ಕರೆಯಲಾಗುತ್ತದೆ.

ದೋಸೆ, ಚಪಾತಿ ಜೊತೆ ನೆಂಚಿಕೊಂಡು ತಿನ್ನ ಬಹುದಾದರೂ, ಬಿಸಿ ಬಿಸಿ ಅನ್ನದ ಜೊತೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕಲಸಿಕೊಂಡು ಮಾವಿನ ಮಿಡಿ ಉಪ್ಪಿನಕಾಯಿ ಜೊತೆ ಸವಿಯಲು ಬಲು ಮಜವಾಗಿರುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ‍ನಮ್ಮ ಅಡುಗೆಯಲ್ಲಿ ಮೆಂತ್ಯ ಮತ್ತು ಮೆಂತ್ಯ ಸೊಪ್ಪನ್ನು ವಿಶೇಷವಾಗಿ ಬಳಸುತ್ತಾರೆ. ಮೆಂತ್ಯದ ಹಸೀ ಎಲೆ ಕಹಿ/ಒಗರು ಎನಿಸಿದರೂ ಅದರ ರುಚಿ ಮತ್ತು ಪರಿಮಳದಿಂದಾಗಿ ಎಲ್ಲರೂ ಹಸಿಯಾಗಿಯೇ ತಿನ್ನಲು ಇಷ್ಟ ಪಡುತ್ತಾರೆ.

  • ಮೆಂತ್ಯ ಹಸೀ ಎಲೆಗಳು ಬಾಯಿಯ ದುರ್ಗಂಧವನ್ನು ನಿವಾರಿಸುವ ಕಾರಣ ಇದನ್ನು ನೈಸರ್ಗಿಕ ಮೌತ್ ಫ್ರೆಶ್ ನರ್ ಆಗಿ ಸಹ ಉಪಯೋಗಿಬಹುದಾಗಿದೆ
  • ಮೆಂತ್ಯ ಎಲೆಗಳನ್ನು ನಿರಂತರವಾಗಿ ಸೇವಿಸುವುದರಿಂದ, ಮಧುಮೇಹ, ಮಲಬದ್ಧತೆ ಮತ್ತು ಮೂತ್ರಪಿಂಡದ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ.
  • ಭೇದಿ ಮತ್ತು ಅತಿ ಸಾರದಿಂದ ಬಳಲುತ್ತಿರುವವರಿಗೆ ಕಾಲು ಚಮಚ ಮೆಂತ್ಯವನ್ನು ಅರ್ಧ ಬಟ್ಟಲು ಮೊಸರಿನೊಂದಿಗೆ ಸೇವಿಸಿದಲ್ಲಿ ಥಟ್ ಎಂದು ನಿಂತು ಹೋಗುತ್ತದೆ.
  • ಶೀತ ವಾತಾವರಣದಲ್ಲಿ ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಿದ್ದವರಿಗೆ ಪ್ರತಿ ದಿನ ಒಣಗಿದ ಮೆಂತ್ಯ ಎಲೆಗಳಿಂದ ಮಾಡಿದ ಚಹಾ ಕುಡಿಸಿದಲ್ಲಿ, ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.
  • ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಲುವಾಗಿಯೂ ಮೆಂತ್ಯ ಎಲೆಗಳು ಸಹಕಾರಿಯಾಗಿದೆ.
  • ಟೈಪ್ 2 ಮಧುಮೇಹಕ್ಕೆ ಮೆಂತ್ಯ ಸೊಪ್ಪಿನ ಪಲ್ಯ ಅಥವಾ ತೊವ್ವೆ ಹೇಳಿಮಾಡಿಸಿದಂತಹ ಔಷಧಿಯಾಗಿದೆ.

ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು