ವಿದ್ಯಾರಣ್ಯಪುರದ 2022ರ ಯೋಗ ದಿನಾಚರಣೆ

ಎಂಟು ವರ್ಷಗಳ ಹಿಂದೆ 2014ರಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ಯೋಗದ ಈ ಯೋಗದ ಉಪಯುಕ್ತತೆಯನ್ನು ತಿಳಿಸಿ, ಅದರ ಸದುಪಯೋಗವನ್ನು ಇಡೀ ವಿಶ್ವವೇ ಸದ್ಬಳಿಕೆ ಮಾಡಿಕೊಳ್ಳುವ ಹಾಗೆ ಕಾರ್ಯಕ್ರಮವನ್ನು ರೂಪಿಸುವ ಬಗ್ಗೆ ಪ್ರಸ್ತಾಪನೆ ಮಾಡಿದಕ್ಕೆ ಸುಮಾರು 140ಕ್ಕೂ ಹೆಚ್ಚು ರಾಷ್ಟ್ರಗಳೂ ಒಕ್ಕೊರಿಲಿನಿಂದ ಬೆಂಬಲಿಸಿದ ಪರಿಣಾಮವಾಗಿಯೇ ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿಯೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಬೆಂಗಳೂರು ಆಶ್ರಯದಲ್ಲಿ ವಿದ್ಯಾರಣ್ಯಪುರದಲ್ಲೂ ಸತತವಾಗಿ 5 ವರ್ಷಗಳ ಕಾಲ ನಿರಂತರವಾಗಿ ಬಹಳ ಅದ್ದೂರಿಯಿಂದ ಆಚರಿಸಲ್ಪಟ್ಟಿತ್ತು. ಕರೋನ ಮಹಾಮಾರಿಯ ಲಾಕ್ಡೌನ್ ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮ ನಡೆಯದಿದ್ದರಿಂದ ಈ ಬಾರಿಯ ಯೋಗ ದಿನಾಚರಣೆ ಬಹಳ ವಿಶೇಷವಾಗಿತ್ತು.

ಪ್ರತಿ ಬಾರಿಯಂತೆ ಯೋಗದಿನಾಚರಣೆ ಆಚರಿಸಲು ಬೈಠಕ್ ಮಾಡಲು ಮುಂದಾದಾಗ, ನಮ್ಮೊಂದಿಗೆ ಸಂಘ ಪರಿವಾರದ ಅಂಗ ಸಂಸ್ಥೆಗಳಾದ ಆರೋಗ್ಯ ಭಾರತಿ, ಕ್ರೀಡಾಭಾರತಿ, ಸಂಸ್ಕಾರ ಭಾರತಿಯ ಜೊತೆ ವಿದ್ಯಾರಣ್ಯಪುರದ ಆಶಾ ಯೋಗ ಸಂಸ್ಥೆಯವರೂ ಕೈ ಜೋಡಿಸಿ, ಕಾರ್ಯಕ್ರಮದ ರೂಪುರೇಷುಗಳನ್ನು ಸಿದ್ಧಪಡಿಸಿಕೊಂಡು ವಿದ್ಯಾರಣ್ಯಪುರದ ಸುವರ್ಣಮಹೋತ್ಸವ ಕ್ರೀಡಾಂಗಣದದಲ್ಲಿ ಕಾರ್ಯಕ್ರಮ ನಡೆಸಲು ಬಿಬಿಎಂಪಿ ಅವರನ್ನು ಕೇಳಲು ಹೋದಲ್ಲಿ ಅದಾಗಲೇ ಮತ್ತೊಬ್ಬರು ಅದೇ ಸಮಯದಲ್ಲೇ ಅಲ್ಲಿ ಯೋಗ ನಡೆಸಲು ಅನುಮತಿ ಪಡೆದ ವಿಷಯ ಕೇಳಿ ಆಘಾತವಾಯಿತಾದರೂ, ನಿಧಾನವೇ ಪ್ರಧಾನ, ಹೊಂದಿಕೊಂಡು ನೆಡೆಯುವುದೇ ಜೀವನ ಎಂದು ಹಾಗೆ ಅನುಮತಿ ಪಡೆದವರು ಯಾರು? ಅವರೊಂದಿಗೆ ನಾವೂ ಸೇರಿಕೊಳ್ಳಬಹುದೇ?  ಎಂದು ವಿಚಾರಿಸಿದಾಗ, ಆರಂಭದಲ್ಲಿ ತುಸು ಹಿಂದು ಮುಂದು ನೋಡಿದರೂ ಆನಂತರ ಒಪ್ಪಿಕೊಂಡ ಕಾರಣ, ಕಾರ್ಯಕ್ರಮದ ವಕ್ತಾರರು, ಅಧ್ಯಕ್ಷರ ಹುಡುಗಾಟದಲ್ಲಿ ತೊಡಗಿಕೊಳ್ಳುವಷ್ಟರಲ್ಲಿ, ಅದಾಗಲೇ ಅನುಮತಿ ಪಡೆದಿದ್ದವರೇ ತಮ್ಮ ಕಾರ್ಯಕ್ರಮದ ಸ್ಥಳವನ್ನು ಬದಲಿಸಿದ್ದರಿಂದ ತುಸು ನೆಮ್ಮದಿಯಾಯಿತು.

ಕಾರ್ಯಕ್ರಮದ ಫ್ಲೆಕ್ಸ್ ಎಲ್ಲಾ ಕಡೆ ಕಟ್ಟಿ ಮತ್ತು ಕರಪತ್ರವನ್ನು ಎಲ್ಲರಿಗೂ ವಿತರಿಸಿ ಪರಿಸರವನ್ನು ಹಾಳು ಮಾಡುವ ಬದಲು ಸಾಮಾಜಿಕ ಜಾಲತಾಣ ಮತ್ತು ಪರಸ್ಪರ ಕರೆಗಳ ಮೂಲಕ ಡಿಜಿಟಲ್ ಮೂಲಕವೇ ಸಂಪರ್ಕವನ್ನು ಆರಂಭಿಸಿ ಎಲ್ಲವೂ ನಿರ್ವಿಘ್ನವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆ ನಮ್ಮೆಲ್ಲರ ಆಸೆಗೆ ತಣ್ಣೀರು ಸುರಿಸುವುದರ ಜೊತೆಗೆ ಮುಂದಿನ 5 ದಿನಗಳ ಕಾಲ ನಗರದಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಹವಾಮಾನ ಇಲಾಖೆಯ ವರದಿಯೂ ಸಹಾ ತುಸು ಬೇಸರ ತರಿಸಿತ್ತು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಕರ್ಮಾಣ್ಯೇವಾಧಿಕಾರಸ್ತೇ, ಮಾಫಲೇಷು ಕದಾಚಾನ. ನಮ್ಮ ಕೆಲಸವನ್ನು ನಾವು ಶ್ರದ್ದೆಯಿಂದ ಮಾಡಿ ಫಲಾ ಫಲಗಳನ್ನು ಭಗವಂತನ ಮೇಲೆ ಬಿಡೋಣ ಎಂದು ನಿರ್ಧರಿಸಿ ಸೋಮವಾರ ರಾತ್ರಿ ವೇದಿಕೆಯನ್ನು ಸಿದ್ಧಪಡಿಸುವಾಗಲೂ ನಾಲ್ಕಾರು ಹನಿ ಬಿದ್ದಾಗ ಅಯ್ಯೋ ದೇವರೇ ನಾಳೆ ಬೆಳ್ಳಗ್ಗೆ ವರೆಗೂ ಮಳೆ ಸುರಿಸದಿರಪ್ಪಾ ಎಂದು ಮನಸ್ಸಿನಲ್ಳೇ ಕೇಳಿಕೊಂಡಿದ್ದಂತೂ ಸುಳ್ಳಲ್ಲ.

ಅದೇ ಗುಂಗಿನಲ್ಲೇ ಮನೆಗೆ ಬಂದು ಮಲಗಿದರೂ ಎಷ್ಟು ಹೊತ್ತಾದರೂ ನಿದ್ದೇಯೇ ಬಾರದೇ ಕಡೆಗೆ ಬೆಳಿಗ್ಗೆ 3 ಘಂಟೆಗೆಲ್ಲಾ ಎಚ್ಚರವಾಗಿ ಮತ್ತೊಮ್ಮೆ ಕಾರ್ಯಕ್ರಮಕ್ಕೆ ತೆಗೆದುಕೊಂಡು ಹೋಗಬೇಕಿದ್ದ ಎಲ್ಲಾ ವಸ್ತುಗಳನ್ನೂ ಜೋಡಿಸಿಕೊಂಡು 4:30 ಕ್ಕೆಲ್ಲಾ ಮೈದಾನಕ್ಕೆ ಹೋಗಿ ಸ್ವಲ್ಪ ವ್ಯಾಯಾಮ ಮತ್ತು ಚುರುಕಾದ ನಡಿಗೆಯನ್ನು ಮಾಡಿ ಘಂಟೆ 5 ಆಗುತ್ತಿದ್ದಂತೆಯೇ ಮತ್ತೆ ಶಾಮಿಯಾನಾದವರನ್ನು ಎಬ್ಬಿಸಿ, ಉಳಿದ ಕೆಲಸವನ್ನು ಆರಂಭಿಸಿ ಧ್ವನಿವರ್ಥಕಗಳನ್ನು ಸಿದ್ದಪಡಿಸುತ್ತಿದ್ದಂತೆಯೇ ಮೂಡಣದಲ್ಲಿ ಸೂರ್ಯ ನಿಧಾನವಾಗಿ ಕಣ್ಣಾಮುಚ್ಚಾಲೆ ಆಟವಾಡುತ್ತಾ ಹೊರ ಬರಲೋ ಬೇಡವೋ ಎನ್ನುತ್ತಿರುವಂತೆಯೇ ನಿಧಾನವಾಗಿ ಒಬ್ಬೊಬ್ಬರೇ ಯೋಗಪಟುಗಳು ಮೈದಾನಕ್ಕೆ ಬಂದು ನಿಗಧಿತ ಸಮಯಕ್ಕೆ ಸರಿಯಾಗಿ ಅಧ್ಯಕ್ಷರು ವಕ್ತಾರರು ಎಲ್ಲರೂ ಸೇರಿದ ಕೂಡಲೇ, 6:05 ನಿಮಿಷಕ್ಕೆ ಎಲ್ಲರೂ ಚಪ್ಪಲಿಗಳನ್ನು ಸಾಲಾಗಿ ವೇದಿಕೆಯ ಎಡಭಾಗದಲ್ಲಿ ಬಿಟ್ಟು, ಸಾಲಾಗಿ ಒಂದು ಕೈ ಅಳತೆ ಅಂತರದಲ್ಲಿ ಯೋಗ ಮ್ಯಾಟ್ ಹಾಕಿಕೊಂಡು ಕುಳಿತುಕೊಳ್ಳಬೇಕು. ಕಾರ್ಯಕ್ರದ ಏಕಾಗ್ರತೆಗೆ ಭಂಗವಾಗದಿರಲೆಂದು, ಎಲ್ಲರೂ ತಮ್ಮ ಜಂಗಮವಾಣಿ ಅರ್ಥಾತ್ ಮೋಬೈಲ್ ಸ್ಥಬ್ಧವಾಗಿಸಿ, ಕಾರ್ಯಕ್ರಮದ ಮಧ್ಯದಲ್ಲಿ ಆಗತ್ಯವಾಗಿ ಓಡಾಡದೇ, ಕಾರ್ಯಕ್ರಮ ಪೂರ್ತಿ ಅವಧಿಯವರೆಗೂ ಶಾಂತ ಚಿತ್ತದಿಂದ ಇದ್ದು ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದು ಕೊಳ್ಳೋಣ ಎಂಬ ಸೂಚನೆಯನ್ನು ಕೊಟ್ಟು. ಭಾರತ ಮಾತೆಗೆ ಪುಷ್ಪಾರ್ಚನೆಯನ್ನು ಮಾಡುತ್ತಿದ್ದಂತೆಯೇ ಎಲ್ಲರಲ್ಲೂ ಉತ್ಸಾಹ ಮೂಡಿಸಲೆಂದು ಕಾರ್ಯಕ್ರಮದ ನಿರೂಪಕರಾದ ಶ್ರೀಕಂಠ ಬಾಳಗಂಚಿಯವರು ತಮ್ಮ ವಿಭಿನ್ನ ಶೈಲಿಯಲ್ಲಿ ಬೋಲೋ……. ಭಾರತ್ ಮಾತಾ ಕೀ… ಎಂದು 20-30 ಸೆಕೆಂಡುಗಳ ಸುಧೀರ್ಘವಾಗಿ ಘೋಷಣೆ ಹಾಕುತ್ತಿದ್ದಂತೆ ನೆರೆದಿದ್ದವರೆಲ್ಲರೂ ಮುಗಿಲು ಮುಟ್ಟುವ ಹಾಗೆ ಜೈಕಾರ ಹಾಕಿದ ನಂತರ ಎಲ್ಲರಿಗೂ ಸ್ವಾಗತವನ್ನು ಕೋರುವ ಮೂಲಕ ವಿದ್ಯಾರಣ್ಯಪುರದ ಯೋಗ ದಿನಾಚರಣೆ ಅಧಿಕೃತವಾಗಿ ಆರಂಭವಾಯಿತು.

WhatsApp Image 2022-06-21 at 7.20.28 AMಶ್ರೀಮತಿ ಸುಧಾ ಸೋಮೇಶ್ ಮತ್ತು ಸಿಂಧು ನಂದಕೀಶೋರ್ ಅವರಿಂದ ಸುಮಧುರ ಯೋಗ ಗೀತೆ ಮುಗಿಯುತ್ತಿದ್ದಂತೆಯೇ, ನಿರೂಪಕರು ಇಂದಿನ ಕಾರ್ಯಕ್ರಮದ ವಕ್ತಾರರಾಗಿದ್ದ ಮತ್ತೀಕೆರೆಯ ನಿವಾಸಿಗಳಾದ, ಬಾಲ್ಯದಿಂದಲೂ ರಾಷ್ಟ್ತೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಸಂಘದ ಅನ್ಯಾನ್ಯ ಜವಾಬ್ಧಾರಿಗಳನ್ನು ನಿಭಾಯಿಸಿ ಸದ್ಯಕ್ಕೆ ಸಂಘ ಪರಿವಾರದ ಧರ್ಮ ಜಾಗರಣಾದ ಪ್ರಾಂತ ನಿಧಿ ಪ್ರಮುಖ್ ಆಗಿ ಜವಾಬ್ಧಾರಿಯನ್ನು ಪ್ರವೃತ್ತಿಯಾಗಿ ನಿಭಾಯಿಸುತ್ತಾ ವೃತ್ತಿಯಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶ್ರೀ ರಾಘವೇಂದ್ರ ಅವರ ಪರಿಚಯ ಮಾಡಿಕೊಟ್ಟು, ಶ್ರೀಯುತರನ್ನು ಈ ಯೋಗ ದಿನಾಚರಣೆಯ ಯೋಗಾ ಯೋಗದ ಕುರಿತಾಗಿ ಮಾತನಾಡಬೇಕೆಂದು ಕೋರಿಕೊಂಡರು

WhatsApp Image 2022-06-21 at 7.20.29 AMರಾಘವೇಂದ್ರರವರು ಯೋಗ ಎಂಬುದು ನಮ್ಮ ಪೂರ್ವಜರು ನಮಗೆ ಕೊಟ್ಟು ಹೋದ ಅಪೂರ್ವವಾದ ವಿದ್ಯೆಯಾಗಿದ್ದು, ಯೋಗ ಮಾಡುವುದರಿಂದ ಕೇವಲ ದೈಹಿಕವಾಗಿ ಅಲ್ಲದೇ ಮಾನಸಿಕವಾಗಿಯೂ ಸಧೃಢರಾಗಬಹುದು ಎಂಬುದನ್ನು ಬಹಳ ಮನ್ಯೋಜ್ಞವಾಗಿ ವಿವರಿಸಿದರು. ಮಾತನ್ನು ಮುಂದುವರೆಸುತ್ತಾ, ಈಶಾವಾಸ್ಯೋಪನಿಷತ್ತಿನ ಶ್ಲೋಕದ ಒಂದು ಸಾಲಾದ ತೇನ ತ್ಯಕ್ತೇನ ಭುಂಜೀಥಾ ಎಂಬುದನ್ನು ಉಲ್ಲೇಖಿಸುತ್ತಾ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುವುದರ ಮೂಲಕ ಮನಸ್ಸಿಗೆ ನೆಮ್ಮದಿ ದೊರೆತು ಶ್ಲೋಕದಲ್ಲಿ ಹೇಳಿರುವಂತೆ ತನ್ನಲ್ಲಿರುವುದನ್ನೆಲ್ಲಾ ಅವಶ್ಯಕತೆ ಇರುವವರಿಗೆ ಕೊಟ್ಟು ಅದರಲ್ಲಿ ಉಳಿದದ್ದರಲ್ಲಿ ಜೀವಿಸುವಂತಹ ಧನ್ಯತಾಭಾವ ಮೂಡುವಂತಾಗುತ್ತದೆ ಎಂದು ತಿಳಿಸಿದರು.

gಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಂತಹ ಸಹಕಾರ ನಗರದ ಟಾಟಾ ನಗರದ ನಿವಾಸಿಗಳಾದ, ತಮ್ಮ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಪ್ರಸ್ತುತ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮೂಳೆ ರೋಗ ತಜ್ನರಾಗಿ ಸೇವೆ ಸಲ್ಲಿಸುತ್ತಿರುವ ಜೊತೆಯಲ್ಲೇ, ತಮ್ಮ ಬಹುಮುಖಿ ಸಮಾಜ ಸೇವೆಗಳಿಂದಲೇ ಹೆಚ್ಚು ಪ್ರಖ್ಯಾತರಾಗಿರುವುದಲ್ಲದೇ, ಸಮಾಜ ಸೇವೆಯನ್ನು ಮಾಡುವ ಉತ್ಕಟ ಬಯಕೆಯಿಂದಾಗಿ ಸಂಘ ಪರಿವಾರದ ಮತ್ತೊಂದು ಅಂಗ ಸಂಸ್ಥೆಯಾದ ಆರೋಗ್ಯ ಭಾರತಿ ಬೆಂಗಳೂರು ಘಟಕದ ಆರೋಗ್ಯ ವಿಭಾಗದ ಕಾರ್ಯಕ್ರಮುಖರಾಗಿ ಜವಾಭ್ಧಾರಿಯನ್ನು ನಿಭಾಯಿಸುತ್ತಿರುವ ಜನಾನುರಾಗಿ ಶ್ರೀ ನಿರಂತರ ಗಣೇಶ್ ಅವರು ಸಭೆಯನ್ನು ಉದ್ದೇಶಿಸಿ ಸುಧೀರ್ಘವಾಗಿ ಮಾತನಾಡಿದರು.

ತಮ್ಮ ವೈದ್ಯಕೀಯ ವೃತ್ತಿಯ ಅನುಭವದಲ್ಲಿ ಅದರಲ್ಲೂ ಮೂಳೆ ತಜ್ಞರಾದರೂ ಕೆಲವೊಂದು ಸಂಧಿ ಸಂಬಂಧಿತ ತೊಂದರೆಗಳಿಗೆ ಯೋಗಾಸನ ಮಾಡಲು ಸೂಚಿಸುವುದಾಗಿ ಹೇಳಿದರು. ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ಬಹಳ ಜನರು ಶ್ವಾಸಕೋಶ ಸಂಬಂಧಿತ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದವರಿಗೆ ಶ್ರೀಯುತರು ನಿಯಮಿತವಾಗಿ ಪ್ರಾಣಾಯಾಮವನ್ನು ಮಾಡಲು ಸೂಚಿಸುವ ಮೂಲಕ ಅವರನ್ನು ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡರು. ದೇಹ ಸಧೃಢರಾಗಿರುವುದಕ್ಕೆ ನಿರಂತರ ವ್ಯಾಯಾಮ ಅತ್ಯಗತ್ಯವಾಗಿದ್ದು, ಸಾಧಾರಣ ಜಿಮ್ ಗಿಂತಲೂ ಯೋಗ ಮತ್ತು ಪ್ರಾಣಾಯಾಮಗಳು ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೇ ಹೆಚ್ಚು ಪರಿಣಾಮಕಾರಿಯಗಿದೆ ಎಂದು ಹೇಳಿದರು.

yd1ಇದಾದ ನಂತರ ಕಾರ್ಯಕ್ರಮದ ಮುಖ್ಯ ಘಟ್ಟವಾದ ಯೋಗಾಭ್ಯಾಸದ ಮೊದಲು ಸುಮಾರು ಐದು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಯೋಗ ಕಲೆಯನ್ನು ಜಗತ್ತಿಗೆ ಪರಿಚಯಿಸಿದ ಹಿರಿಮೆ ನಮ್ಮ ದೇಶದ್ದಾಗಿದ್ದು, ಕೇವಲ ದೈಹಿಕ ಪರಿಶ್ರಮವಲ್ಲದೆ, ಮಾನಸಿಕ ಸ್ಥಿಮಿತೆಯನ್ನು ಕಾಪಾಡಿಕೊಳ್ಳುವುದಕ್ಕೂ ಸಹಾಯಕಾರಿಯಾಗಿದ ಇಂತಹ ಅಭೂತಪೂರ್ವವಾದ ಯೋಗ ಕಲೆಯನ್ನು ಎಲ್ಲರಿಗೂ ಪರಿಚಯಿಸಿದ ಶ್ರೀ ಪತಂಜಲಿ ಮಹರ್ಷಿಗಳನ್ನು ಯೋಗೇನ ಚಿತ್ತಸ್ಯ ಪದೇನ ವಾಚಾ… ಶ್ಲೋಕದ ಮೂಲಕ ಸ್ಮರಿಸಿಕೊಂಡು ಧನ್ಯವಾದಗಳನ್ನು ಅರ್ಪಿಸಿ, ವಿದ್ಯಾರಣ್ಯಪುರದಲ್ಲಿ ಆಶಾ ಯೋಗ ಕೇಂದ್ರವನ್ನು ನಡೆಸುತ್ತಿರುವ ಶ್ರೀಮತಿ ಆಶಾರವರು ಮತ್ತು ಅವರ ತಂಡದವರು, ನೆರೆದಿದ್ದ ಎಲ್ಲಾ ಯೋಗಪಟುಗಳಿಗೆ, ಆರಂಭದಲ್ಲಿ ಲಘುವ್ಯಾಯಾಮ, ನಂತರ ನಿಂತು, ಕುಳಿತು, ಮಲಗಿ ಆಸನಗಳನ್ನು ಮಾಡಿಸಿ, ಕಡೆಯದಾಗಿ ಕಪಾಲಭಾತಿ, ನಾಡಿ ಶೋಧ ಮತ್ತು ಭ್ರಾಮರಿ ಮುಂತಾದ ಪ್ರಾಣಾಯಾಮಗಳನ್ನು ಮಾಡಿಸುವುದರ ಜೊತೆಗೆ, ಪ್ರತಿಯೊಂದು ಆಸನದ ವಿವರಗಳು ಮತ್ತು ಅದರ ಉಪಯುಕ್ತತೆಯನ್ನು ತಿಳಿಸಿಕೊಟ್ಟು ಮೂರು ಬಾರಿ ಓಂಕಾರದೊಂದಿಗೆ ಯೋಗಾಭ್ಯಾಸವನ್ನು ಮುಗಿಸಿದಾಗ ಯೋಗ ದಿನಾಚರಣೆಗೆ ಬಂದಿದ್ದವರೆಲ್ಲರಿಗೂ ತೃಪ್ತಿ ತಂದಿತು ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಇಂದಿನ ಈ ಕಾರ್ಯಕ್ರಮ ಯಶಸ್ವಿಯಾಗಲು ಬಹಳಷ್ಟು ಜನರ ಸುಮಾರು ದಿನಗಳ ಪರಿಶ್ರಮವೇ ಕಾರಣವಾಗಿದ್ದು ಈ ಕಾರ್ಯಕ್ರಮವನ್ನು ಆಯೋಜಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.

WhatsApp Image 2022-06-21 at 7.20.50 AMಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ವಂದೇ ಮಾತರಂ ಹಾಡಿದ ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯ ಅವರು ನೆರೆದಿದ್ದರೆಲ್ಲರಿಗೂ ವಿಶೇಷವಾದ ಧನಾತ್ಮಕ ಕಂಪನಗಳನ್ನು ಹರಿಸಿದ್ದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

yd2ಕಾರ್ಯಕ್ರಮ ಮುಗಿದು ಎಲ್ಲರೂ ಹೊರಡುವ ಮೊದಲು ಈ ಯೋಗಾಭ್ಯಾಸವನ್ನು ಕೇವಲ ಒಂದೇ ದಿನಕ್ಕೆ ಮೀಸಲಿಡದೆ ಪ್ರತೀದಿನವೂ ಅಭ್ಯಾಸ ಮಾಡುವುದರ ಮೂಲಕ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿ ಇರುವಂತೆ ಪ್ರತಿಜ್ಞೆ ಮಾಡ ಬೇಕು ಎಂದು ಕಾರ್ಯಕ್ರಮದ ಆಯೋಜಕರು ಕೊರಿದ್ದಲ್ಲದೇ, ಮತ್ತೊಮ್ಮೆ ನಿರೂಪಕರು ಭಾರತ ಮಾತೆಗೆ ಜೈ ಕಾರ ಹಾಕಿಸುವ ಮೂಲಕ ಇಂದಿನ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಪ್ರತೀ ಬಾರಿಯೂ 600-800 ಜನರ ಎರಡು ತಂಡಗಳಲ್ಲಿ (ಹಿರಿಯರಿಗೆ ಮತ್ತು ಶಾಲಾಮಕ್ಕಳಿಗೆ) ಯೋಗದಿನಾಚರಣೆಯನ್ನು ನಡೆಸುತ್ತಿದ್ದು ಈ ಬಾರಿ 100-120 ಜನರಿಗೆ ಸೀಮಿತಗೊಂಡಿದ್ದಕ್ಕೆ, ಯೋಗ ದಿನಾಚರಣೆ ಈಗ ಸಮಾಜದ ಅಂಗವಾಗಿ ಹೋಗಿದ್ದು, ಎಲ್ಲರೂ ಒಂದೇ ಕಡೆ ಸೇರಿ ಯೋಗಾಭ್ಯಾಸ ಮಾಡುವ ಬದಲು ಅವರವರ ಬಡಾವಣೆಗಳಲ್ಲಿ ಅವರ ಅನುಕೂಲಕ್ಕೆ ತಕ್ಕಂತಹ ಸಮಯದಲ್ಲಿ ಯೋಗದಿನಾಚರಣೆಯನ್ನು ಆಚರಿಸಿದ್ದನ್ನು ಸಂಘಟಕರು ವಿವರಿಸಿ, ಅಂತಿಮವಾಗಿ ಯೋಗ ಕೆಲವರಿಗಷ್ಟೇ ಸೀಮಿತವಾಗಿರದೇ ಸಮಾಜ ಮುಖಿಯಾಗಿ ಎಲ್ಲರೂ ಮಾಡುವಂತಾಗುವುದೇ ಯೋಗ ದಿನಾಚರಣೆಯ ಉದ್ದೇಶ ಅದು ಈ ಬಾರಿ ವಿದ್ಯಾರಣ್ಯಪುರದಿಂದಲೇ ಆರಂಭವಾಗಿರುವುದು ಗಮನಾರ್ಹ ಎಂದಾಗ ನೆರೆದಿದ್ದವರ ಮನದಲ್ಲಿ ಮೂಡಿದ್ದ ಸಂದೇಹ ಮಂಜಿನಂತೆ ಕರಿಗಿ ನೀರಾಗಿ ಹೋಗಿತ್ತು ಎಂದು ವಿಶೇಷವಾಗಿ ಹೇಳ್ಬೇಕಿಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಸಾಯೋದಿಕ್ಕೆ ಬೇಕೊಂದು ನೆಪ

punit1

ಕನ್ನಡ ಚಲನಚಿತ್ರರಂಗದ ಪ್ರತಿಭಾವಂತ ಸರಳ ‍‍ಸಜ್ಜನ ಸದಾಕಾಲವೂ ವಿನೀತರಾಗಿರುತ್ತಿದ್ದ ಪುನೀತ್ ರಾಜಕುಮಾರ್ ಅಕ್ಟೋಬರ್ 29ರ ಬೆಳಿಗ್ಗೆ 11:30ರ ಹೊತ್ತಿಗೆ ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕವವೇ ಸರಿ. ಭಗವಂತ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ದುಃಖತಪ್ತ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಅವರ ಅಕಾಲಿಕ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ.

pun4

ಪುನೀತ್ ಅವರ ಅಕಾಲಿಕ ಮರಣದ ನಂತರ ಬಹುತೇಕರರ ಬಾಯಿಯಿಂದ ಕೇಳಿ ಬರುತ್ತಿರುವ ಎರಡು ಸುದ್ದಿ ಎಂದರೆ, ಅಯ್ಯೋ ಪುನೀತ್ ರಾಜಕುಮಾರ್ ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಖಂಡಿತವಾಗಿಯೂ ಸಾಯುವ ವಯಸ್ಸಲ್ಲ ಸದಾ ಕಾಲವೂ ಫಿಟ್ ಅಂಡ್ ಫೈನ್ ಆಗಿದ್ದ ವ್ಯಕ್ತಿ ಅಂತಹ ವ್ಯಕ್ತಿಗೆ ಸಾವು ಬರಬಾರದಾಗಿತ್ತು. ಚೆನ್ನಾಗಿ ಕುಡಿದು, ತಿಂದು ಯಾವುದೇ ವ್ಯಾಯಾಮ ಮಾಡದೇ, ಮಾಡಬಾರದ ಕೆಲಸಗಳನ್ನೆಲ್ಲಾ ಮಾಡ್ತಾ ಇರುವವರು ಇನ್ನೂ ಗುಂಡು ಕಲ್ಲಿನ ಹಾಗಿ ಎಪ್ಪತ್ತು ಎಂಭತ್ತು ವರ್ಷಗಳ ಕಾಲ ಇರ್ಬೇಕಾದ್ರೇ, ಯಾವುದೇ ರೀತಿಯ ವ್ಯಸನಗಳಿಲ್ಲದ ಆರೋಗ್ಯಕರವಾದ ಜೀವನ ನಡೆಸುತ್ತಿದಂತಹ ಪುನೀತ್ ಅಸುನೀಗಿರುವುದು ನಿಜಕ್ಕೂ ದುಃಖಕರವೇ ಸರಿ

ಇನ್ನು ಮತ್ತೊಬ್ಬರು ಹೇಳುವ ಪ್ರಕಾರ ಅತಿಯಾದ ಜಿಮ್ ಮತ್ತು ವರ್ಕೌಟ್ ಮಾಡಿರುವ ಕಾರಣ, ಹೃದಯದ ಮೇಲೆ ಹೆಚ್ಚಾದ ಒತ್ತಡ ಬಿದ್ದಿರುವ ಕಾರಣ ಹೃದಯಾಘಾತವಾಗಿದೆ. ಹಾಗಾಗಿ ಎಷ್ಟೇ ವೈದ್ಯಕೀಯ ತಂತ್ರಜ್ಞಾನ ಇದ್ದರೂ ಅವರನ್ನು ಉಳಿಸಿಕೊಳ್ಳಲಾಲಿಲ್ಲ ಎನ್ನುವುದು ಮತ್ತೊಬ್ಬರ ವಾದ.

ಈ ಕುರಿತಂತೆ ಪುನೀತ್ ಅವರಿಗೆ ಮೊದಲ ಚಿಕಿತ್ಸೆ ನೀಡಿದ ಅವರ ಕುಟುಂಬ ವೈದ್ಯ ಡಾ. ರಮಣರಾವ್ ಅವರೇ ಹೇಳಿರುವಂತೆ ಅವರ ಆಸ್ಪತ್ರೆಗೆ ಅಪ್ಪು ಚಿಕಿತ್ಸೆಗೆ 11:15ಕ್ಕೆ ಬಂದಾಗ ಅವರ ಮೈ ಬೆವರುತ್ತಿತ್ತಾದರೂ BP, Sugar & ECG ಎಲ್ಲವೂ ಸರಿಯಾಗಿಯೇ ಇತ್ತಾದರೂ ದುರಾದೃಷ್ಟವಷಾತ್ ಇದ್ದಕ್ಕಿದ್ದಂತೆಯೇ ಹೃದಯಸ್ಥಂಭನವಾದ ಕಾರಣ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೇವಲ 10-15 ನಿಮಿಷಗಳ ಕಾಲದೊಳಗೆ ವಿಕ್ರಂ ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಜವರಾಯ ತನ್ನ ಕೆಲಸವನ್ನು ಮುಗಿಸಿಬಿಟ್ಟಿದ್ದು ವಾಸ್ತವ ಅಂಶ.

pun1

ಇಷ್ಟರ ಮಧ್ಯೆ ಮಾಧ್ಯಮದವರು ಜಿಮ್ನಲ್ಲಿ ಅಪ್ಪು ಮಾಡುತ್ತಿದ್ದ ವರ್ಕೌಟ್ ದೃಶ್ಯಗಳನ್ನು ಪದೇ ಪದೇ ತೋರಿಸುತ್ತಿದ್ದಾಗ, ಈ ಜಿಮ್ ಎನ್ನುವುದು ಎಲ್ಲಾ ವಯಸ್ಸಿನವರಿಗೂ ಅಲ್ಲ , 30-35 ವರ್ಷಗಳ ತನಕ ದೇಹವನ್ನು ಚೆನ್ನಾಗಿ ಜಿಮ್ ನಲ್ಲಿ ದಂಡಿಸಿ ನಂತರ ಜಿಮ್ ಬಿಟ್ಟು ಯೋಗ, ಧ್ಯಾನಗಳಲ್ಲಿ ನಿರತವಾಗಿದ್ದರೆ ದೇಹ ಆರೋಗ್ಯವಾಗಿ ಮತ್ತು ಸದೃಢವಾಗಿರುತ್ತದೆ. ಜಿಮ್ ನಲ್ಲಿ ಎಲ್ಲರ ಜೊತೆಯಾಗಿ ಮಾಡುವಾಗ ಪೈಪೋಟಿಯಿಂದಾಗಿ ಅತಿಯಾದ ಭಾರ ಎತ್ತಿ ವ್ಯಾಯಾಮ ಮಾಡುತ್ತಾರೆ. ಹೀಗೆ ಮಾಡುವಾಗ ದೇಹಕ್ಕೆ ತುಸು ತ್ರಾಸದಾಯಕವೆನಿಸಿದರೂ ಎಲ್ಲರ ಜೊತೆ ಮಾಡುವಾಗ ಜೋಶ್ ನಲ್ಲಿ ವ್ಯಾಯಾಮ ಮಾಡಿದಾಗ ಅವರ ಅರಿವಿಲ್ಲದಂತೆಯೇ ಹೃದಯದ ಮೇಲೆ ಬಹಳ ಒತ್ತಡ ಬೀಳುತ್ತದೆ. 30-35 ವರ್ಷ ಧಾಟಿದ ನಂತರ ದೇಹದ ತೂಕವೂ ಹೆಚ್ಚಾಗುತ್ತಾ ಹೋಗುವುದಲ್ಲದೇ, ದೇಹದ ಕಸುವು ಸಹಾ ಕಡಿಮೆಯಾಗುತ್ತದೆ. ಸ್ವಚ್ಚಂದ ಗಾಳಿಯಾಡದ, ಹವಾನಿಯಂತ್ರಿತ ನಾಲ್ಕು ಗೋಡೆಗಳ ಮಧ್ಯೆ ವಿರಾಮವಿಲ್ಲದೇ ಮೇಲಿಂದ ಮೇಲೆ ಒಂದೆರಡು ಗಂಟೆಗಳ ಕಾಲ ಮಿಲ್, ಸೈಕ್ಲಿಂಗ್, ಕ್ರಾಸ್ ಟ್ರೈನರ್ ಮಾಡುತ್ತಾ ಬೆವರನ್ನು ಸುರಿಸಿ ನಂತರ ತೂಕದ ಕಬ್ಬಿಣದ ಗುಂಡುಗಳನ್ನು ಎತ್ತುವ ಮೂಲಕ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಆಯಾಸವಾಗುವುದಲ್ಲದೇ ಹೃದಯದ ಮೇಲೆ ಅನಾವಶ್ಯಕ ಒತ್ತಡ ಬೀಳುತ್ತದೆ. ಇದರ ಜೊತೆ ಜಿಮ್ ಟ್ರೈನರ್ ಗಳ ಸಲಹೆ ಮೇರೆಗೆ ವಿವಿದ poutine powder, muscle mass powder, Harmon injection, steroids ಆ ಕ್ಷಣಕ್ಕೆ ಫಲಿತಾಂಶಗಳನ್ನು ನೀಡುತ್ತವಾದರೂ ದೀರ್ಘಕಾಲ ಅವುಗಳನ್ನು ಬಳಸುವುದು ದೇಹಕ್ಕೆ ಮಾರಕ ಎನ್ನುವುದು ಹಲವರ ಅಭಿಪ್ರಾಯ.

pun2

ಬಲ್ಲ ಮೂಲಗಳ ಪ್ರಕಾರ ಪುನೀತ್ ಅವರು ಸದಾಶಿವ ನಗರದ ಅಫಿನಿಟಿ ಇಂಟರ್‌ನ್ಯಾಶನಲ್ ಮತ್ತು ಸ್ವಿಚ್ ವೆಲ್ನೆಸ್ ಎಂಬ ಎರಡು ಜಿಮ್ ಗಳಲ್ಲಿ ತಮ್ಮ ದೇಹದಾಢ್ಯವನ್ನು ಮಾಡುತ್ತಿದ್ದದ್ದಲ್ಲದೇ ಅವರ ಮನೆಯಲ್ಲಿಯೂ ಸುಸಜ್ಜಿತವಾದ ಸಣ್ನದೊಂದು ಜಿಮ್ ಹೊಂದಿದ್ದರು. ಅಫಿನಿಟಿ ಇಂಟರ್‌ನ್ಯಾಶನಲ್ ಪ್ರಮಾಣೀಕೃತ ಜಿಮ್ ಟ್ರೈನರ್ (certified gym trainer) ಮಧು ಅವರು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದಂತೆ ಪುನೀತ್ ಅವರು ವಾರಕ್ಕೆ 4-5 ದಿನಗಳ ಕಾಲ ತಮ್ಮೊಂದಿಗೆ ಪ್ರಮಾಣೀಕೃತ ವೈಯಕ್ತಿಕ ತರಬೇತುದಾರ (certified personal trainer) ಸಲಹೆಯಂತೆಯೇ ದಿನಕ್ಕೆ ಮೂರ್ನಾಲ್ಕು ಗಂಟೆಗಳ ಕಾಲ ದೇಹವನ್ನು ದಂಡಿಸುತ್ತಿದ್ದರಲ್ಲದೇ, ಅವರಿಗೆ ತಿಳಿದಿರುವಂತೆ ಪುನೀತ್ ಯಾವುದೇ ರೀತಿಯ poutine powder ತೆಗೆದುಕೊಳ್ಳುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

guru

ಹೀಗೆ ಪುನೀತ್ ಅವರ ಕುಟುಂಬ ವೈದ್ಯರು ಮತ್ತು ಜಿಮ್ ತರಭೇತುದಾರರು ಹೇಳಿರುವಂತೆ ಪುನೀತ್ ಅವರ ಸಾವಿಗೆ ಕೇವಲ ಜಿಮ್ ಮಾಡಿರುವುದೇ ಕಾರಣವಲ್ಲ. ಏಕೆಂದರೆ ಇದೇ ರೀತಿಯ ತರಭೇತನ್ನು ಅವರು ಪ್ರತೀದಿನವು ಮಾಡುತ್ತಲೇ ಇದ್ದರು. ಮಾಧ್ಯಮಗಳಲ್ಲಿಯೇ ತೋರಿಸುರುವಂತೆ ಹಿಂದಿನ ದಿನ ರಾತ್ರಿ 11ರ ವರೆವಿಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಚಿತ್ರರಂಗದ ಬಹುತೇಕ ಗಣ್ಯರೊಂದಿಗೆ ಚೆನ್ನಾಗಿಯೇ ಕಾಲ ಕಳೆದಿದ್ದಾರೆ. ಸಾಯುವ ಎರಡು ಮೂರು ದಿನಗಳ ಹಿಂದಿನಿಂದಲೂ ಶಿವರಾಜ್ ಕುಮಾರ್ ಅವರ ಭಜರಂಗಿ-2 ಸಿನಿಮಾ ಮತ್ತು ದುನಿಯಾ ವಿಜಯ್ ಅವರ ಸಲಗ ಚಿತ್ರದ ಪ್ರಚಾರದಲ್ಲಿ ಶಿವರಾಜ್ ಕುಮಾರ್ ಮತ್ತು ಯಶ್ ಅವರೊಂದಿಗೆ ಲವಲವಿಕೆಯಿಂದಲೇ ಕುಣಿದು ಕುಪ್ಪಳಿಸಿದ್ದದ್ದನ್ನು ನೋಡಿದ್ದೇವೆ. ಹೃದಯಾಘಾತವಾದಾಗ ಒಂದು ಗಂಟೆಯ ಚಿನ್ನದ ಕಾಲಾವಕಾಶವಿದ್ದು ಆ ಒಂದು ಘಂಟೆಯ ಒಳಗೆ ಸೂಕ್ತ ಚಿಕಿತ್ಸೆ ದೊರಕಿದಲ್ಲಿ ಬದುಕುವ ಸಾಧ್ಯತೆ ಇದೆ. ಆದರೆ ಇಲ್ಲಿ ಪುನೀತ್ ಅವರಿಗೆ ತೀವ್ರವಾದ ಹೃದಯಸ್ಥಂಭನವಾಗಿರುವ ಕಾರಣ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದೇ ಅವರ ಕುಟುಂಬವೈದ್ಯರು ತಿಳಿಸಿರುವುದು ಗಮನಾರ್ಹ. ಹಾಗಾಗಿ ಜಿಮ್ ಎನ್ನುವುದೇ ಅವರ ಸಾವಿಗೆ ಕಾರಣವಾಗಿರದೇ ಸಾಯುವುದಕ್ಕೊಂದು ಅದೊಂದು ನೆಪವಷ್ಟೇ ಎನ್ನುವುದೇ ನನ್ನ ವಯಕ್ತಿಕ ಭಾವನೆಯಾಗಿದೆ.

WhatsApp Image 2021-10-30 at 8.37.08 AM

ಒಳ್ಳೆಯ ಆಹಾರ, ಸ್ವಲ್ಪ ವ್ಯಾಯಾಮ, ಕಣ್ತುಂಬ ನಿದ್ದೆಯ ಜೊತೆಗೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡಲ್ಲಿ ಆರೋಗ್ಯಕರವಾದ ಜೀವನವನ್ನು ಸಾಗಿಸಬಹುದಾಗಿದೆ ಎನ್ನುವುದು ನನ್ನದೇ ಸ್ವ-ಅನುಭವವಾಗಿದೆ. ಅಪಘಾತದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಾನಾ ರೀತಿಯ ಔಷಧೋಪಚಾರ ಪಡೆದು, ಕೆಲಸದ ಒತ್ತಡದಿಮ್ದ ಸರಿಯಾದ ಸಮಯಕ್ಕೆ ಊಟ ತಿಂಡಿ ನಿದ್ರೆ ಇಲ್ಲದೇ ನಾನಾ ರೀತಿಯ ಕಾರಣಗಳಿಂದಾಗಿ 94 ಕೆಜಿಗಳಷ್ಟು ತೂಗುತ್ತಿದ್ದ ನಾನು, 5 ವರ್ಷಗಳ ಹಿಂದೆ ಉತ್ತಮವಾದ ಆಹಾರ ಪದ್ದತಿಯ ಜೊತೆಗೆ ಜಿಮ್ ನಲ್ಲಿ light stretching exercises, cardio, abs pushup ಮಾಡುವ ಮುಖಾಂತರ 68 ಕೆಜಿಗಳಿಗೆ ದೇಹದ ತೂಕವನ್ನು ಇಳಿಸಿಕೊಂಡು ನಂತರ ಅದೇ ಉತ್ತಮ ಆಹಾರದ ಪದ್ದತಿಯನ್ನೇ ಜೀವನ ಶೈಲಿಯಾಗಿಸಿಕೊಳ್ಳುವುದರ ಜೊತೆಗೆ ಯೋಗಾಸನ ಪ್ರಾಣಾಯಾಮ, ಉತ್ತಮವಾದ ಸಾಹಿತ್ಯ ಚಟುವಟಿಕೆಗಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ.

pun3

ಅದಕ್ಕೇ ಅಲ್ಲವೇ ನಮ್ಮ ಹಿರಿಯರು ಒಂದು ಹೊತ್ತು ಉಂಡವ ಯೋಗಿ. ಎರಡು ಹೊತ್ತು ಉಂಡವ ಭೋಗಿ. ಮೂರು ಹೊತ್ತು ಉಂಡವ ರೋಗಿ. ನಾಲ್ಕು ಹೊತ್ತು ಉಣ್ಣುವವನನ್ನು ಎತ್ಕೊಂಡು ಹೋಗಿ ಎಂಬ ಕಿವಿ ಮಾತನ್ನು ಹೇಳಿದ್ದಾರೆ. ಹಾಗಾಗಿ ಯಾರನ್ನೋ ಮೆಚ್ಚಿಸುವ ಸಲುವಾಗಿ ಕಟ್ಟು ಮಸ್ತಾದ ದೇಹವನ್ನು ಮಾಡಲು ಹೋಗಿ ಅನಾವಶ್ಯಕವಾಗಿ ದೇಹದಂಡನೆ ಮಾಡುತ್ತಾ ಆರೋಗ್ಯವನ್ನು ಹಾನಿ ಮಾಡಿಕೊಳ್ಳದಿರೋಣ. ಜೀವ ಇದ್ದಲ್ಲಿ ಮಾತ್ರವೇ ಜೀವನ. ಹಾಗಾಗಿ ಲಂಘನಂ ಪರಮೌಷಧಂ ಎನ್ನುವಂತೆ ಜೀವಕ್ಕೆ ಎಷ್ಟು ಬೇಕೋ ಅಷ್ಟನ್ನು ತಿನ್ನಬೇಕೇ ಹೊರತು ತಿನ್ನುವದಕ್ಕೇ ಜೀವಿಸಬಾರದು. ಹಾಗೆ ತಿಂದದ್ದನ್ನು ಅಂದಂದೇ ಕರಗಿಸಿಕೊಳ್ಳುವ ಮೂಲಕ ಆರೋಗ್ಯಕರವಾದ ಜೀವನವನ್ನು ನಡೆಸಬಹುದು.

ಜಾತಸ್ಯ ಮರಣಂಧೃವಂ.‌ ಹುಟ್ಟುವಾಗಲೇ ಸಾಯುವ ದಿನವನ್ನೂ ಭಗವಂತ ಹಣೆಮೇಲೆ ಬರೆದು ಕಳುಹಿಸಿರುತ್ತಾನೆ.ಆ ಸಮಯ ಬಂದಾಗ ಹೊರಟು ಹೋಗ್ತಾರೆ. ಮಿಕ್ಕಿದ್ದೆಲ್ಲವೂ ಕೇವಲ ನೆಪ ಅಷ್ಟೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

ಯೋಗ ಎಂಬುದು ನಮ್ಮ  ಭಾರತೀಯರ ಪರಂಪರೆಯ ಒಂದು ಬಹುಮುಖ್ಯ ಅಂಗವಾಗಿದೆ. ನಮ್ಮ  ಋಷಿಮುನಿಗಳ ಸಹಸ್ರಾರು ವರ್ಷಗಳ ಪರಿಶ್ರಮದ ಫಲವೇ ಯೋಗಾಸನ. ಇತರೇ ಎಲ್ಲಾ ವ್ಯಾಯಾಮಗಳು ಕೇವಲ ದೈಹಿಕ ಸಧೃಡತೆ ಕೊಟ್ಟರೆ  ಯೋಗಾಸನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಡೃಡತೆ ಕೊಡುತ್ತದೆ ಎಂಬುದು ಈಗ ಜಗಜ್ಜಾಹೀರಾತಾಗಿರುವ ವಿಷಯ  ಅದಕ್ಕೆಂದೇ ಸಾವಿರಾರು ವರ್ಷಗಳ ಹಿಂದೆ ಸಡೃಡ ಆರೋಗ್ಯಕ್ಕಾಗಿ ದೇವರನ್ನು ನಮಿಸುವುದರೊಂದಿಗೆ ಯೋಗಾಸನ ಮಾಡಬೇಕು ಎಂದು ಭಾರತೀಯ ಋಷಿಮುನಿಗಳು ತೋರಿಸಿಕೊಟ್ಟರು.  ಅದಕ್ಕೆ ಪತಂಜಲಿ ಮಹರ್ಷಿಗಳು  ಒಂದು ರೂಪವನ್ನು ಕೊಟ್ಟು  ಯೋಗ  ಪಿತಾಮಹ ಎನಿಸಿದರು.   ಇಷ್ಟೆಲ್ಲಾ ಪ್ರಯೋಜನವಿದ್ದರೂ ಭಾರತೀಯರಾದ ನಾವುಗಳೇ  ಯೋಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳದ ಕಾರಣ  ಜಗತ್ತಿನ ಮುಂದೆ ಅದನ್ನು  ಸರಿಯಾಗಿ ಪ್ರಚಾರ ಮಾಡದೆ ಪ್ರಸ್ತುತ  ಪಡಿಸಲಾಗಿರಲಿಲ್ಲ.

2014ರಲ್ಲಿ  ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯಲ್ಲಿ  ಯೋಗದ ಮಹತ್ವವನ್ನು ಎತ್ತಿ ತೋರಿಸಿ ಅದರ ಪ್ರಯೋಜನ ಪ್ರಪಂಚದ ಎಲ್ಲರೂ ಪಡೆಯ ಬೇಕೆಂಬ ಸದುದ್ದೇಶದಿಂದ  ಜೂನ್ 21ನೇ ದಿನವನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ  ಪ್ರಸ್ತಾವನೆ ಇಟ್ಟಾಗ,  ಬೇಷರತ್ತಾಗಿ ಸುಮಾರು 140ಕ್ಕೂ ಅಧಿಕ ರಾಷ್ಟ್ರಗಳು ಅದಕ್ಕೆ ಒಪ್ಪಿದ ಪರಿಣಾಮ,   ಜೂನ್ 21 ಅಂತರಾಷ್ಟ್ರೀಯ ಯೋಗದಿನ ಎಂದು ವಿಶ್ವ ಸಂಸ್ಥೆ ಘೋಷಿಸಿತು.  ಮುಂದಿನ ದಿನಗಳಲ್ಲಿ ಸುಮಾರು 190ಕ್ಕೂ ಅಧಿಕ ರಾಷ್ಟ್ರಗಳು ಯಾವುದೇ ಧರ್ಮದ ಅಡೆತಡೆಯಿಲ್ಲದೆ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿ.

ಇದಕ್ಕನುಗುಣವಾಗಿ  ಕಳೆದ ಐದು ವರ್ಷಗಳಿಂದಲೂ ನಮ್ಮ ವಿದ್ಯಾರಣ್ಯಪುರದ ಸುವರ್ಣ ಮಹೋತ್ಸವ ಕ್ರೀಡಾಂಗಣದಲ್ಲಿ  ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಅನೇಕ ಯೋಗಕೇಂದ್ರಗಳು ಮತ್ತು ಯೋಗಾಸಕ್ತರ ಸಹಕಾರದೊಂದಿಗೆ ವಿಶ್ವ ಯೋಗ ದಿನವನ್ನು ಬಹಳ ಅದ್ದೂರಿಯಿಂದ ಆಚರಿಸುತ್ತಾ ಬಂದಿದ್ದೇವೆ. ಇಂದೂ ಕೂಡ ಬೆಳ್ಳಂಬೆಳ್ಳಗಿನ ಚುಮು ಚುಮ ಚಳಿಯಲ್ಲಿ ಮೋಡ ಕವಿದ  ವಾತವರಣವನ್ನೂ ಲೆಕ್ಕಿಸದೆ ಸುಮಾರು 400-500 ಯೋಗಪಟುಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದದ್ದು ಅಭಿನಂದನೀಯ.

ಇಂದಿನ ಕಾರ್ಯಕ್ರಮ ಅಸತೋಮ ಸದ್ಗಮಯ ಶ್ಲೋಕದ ಹಿನ್ನಲೆ ಧ್ವನಿಯೊಂದಿಗೆ ಜ್ಯೋತಿ ಬೆಳಗಿ, ಭಾರತಮಾತೆಗೆ  ಒಕ್ಕೊರಲಿನ ಕಂಠದಿಂದ ಬೋಲೋ…. ಭಾರತ್ ಮಾತಾ ಕೀ… ಜೈ… ಎಂಬ ಜಯ ಘೋಷದೊಂದಿಗೆ ಆರಂಭವಾಗಿ,  ಶ್ರೀಮತಿ ಸುಧಾ ಸೋಮೇಶ್ ಮತ್ತು ಸಿಂಧು ಸೋಮೇಶ್ ಅವರ ಯೋಗ ಗೀತೆಯೊಂದಿಗೆ ಆರಂಭವಾಯಿತು.   ಇಂದಿನ ವಕ್ತಾರರಾದ            ಶ್ರೀ. ಡಾ. ಜಯಪ್ರಕಾಶ್  ಮೂಲತಃ ಪುತ್ತೂರಿನವರು. ಪಶುವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವೀಧರರು ಮತ್ತು ಪ್ರಸ್ತುತ ರಾಜ್ಯಸರ್ಕಾರ ಪಶು ಸಂಗೋಪನ ಇಲಾಖೆಯಲ್ಲಿ  ಸಹಾಯಕ ನಿರ್ದೇಶಕಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಅವರು ಭಾರತೀಯ ಯೋಗ ಮತ್ತು ಇಂದಿನ ಜನತೆಗೆ ಅದರ ಆವಶ್ಯಕತೆಯನ್ನು ಅತ್ಯಂತ ಮನೋಜ್ಞವಾಗಿ  ತಿಳಿಸಿಕೊಟ್ಟರು.  ಅಷ್ಟಾಂಗ ಯೋಗದ ನಿಯಮಗಳಾದ  ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಾಹಾರ, ಧಾರಣ, ಧ್ಯಾನ  ಮತ್ತು ಸಮಾಧಿಗಳನ್ನು ಅತ್ಯಂತ ಸರಳವಾಗಿ ತಿಳಿಸಿಕೊಟ್ಟ ನಂತರ ಆರೋಗ್ಯಕರವಾಗಿರಲು ಪರಿಸರದ ಯೋಗದ ಜೊತೆಗೆ ಪರಿಸರದ ಕಾಳಜಿಯೂ ಅತ್ಯಾವಶ್ಯಕ ಎಂದು ತಿಳಿಸಿ ಸಾಧ್ಯವಾದಷ್ಟೂ ಪ್ಲಾಸ್ಟಿಕ್ ಮಕ್ತವನ್ನಾಗಿಸೋಣ ಎಂದು ತಿಳಿಸಿ say  NO to carry BAG , Carry a BAG ಎಂದು ಮನವಿ ಮಾಡಿದ್ದಲ್ಲದೆ,   ಯೋಗ ಕೇವಲ ಆರೋಗ್ಯಕ್ಕಾಗಿಯೇ ನೋಡದೆ ಅದನ್ನು ನಮ್ಮ ದೈನಂದಿನ  ಚಟುವಟಿಕೆಯ ಭಾಗವನ್ನಾಗಿ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಜಯಪ್ರಕಾಶ್ ಜೀ ಅವರ ಭೌಧ್ದಿಕ್ ನಂತರ ಶ್ರೀಮತಿ ಆಶಾ  ನೇತೃತ್ವದಲ್ಲಿ  ಸುಮಾರು  ಅರ್ಧ ಗಂಟೆಗಳಿಗೂ ಅಧಿಕ ಸಮಯ  ವಿವಿಧ ರೀತಿಯ ನಿಂತ ಮತ್ತು ಕುಳಿತ ಆಸನಗಳ ಜೊತೆ ಸೂರ್ಯ ನಮಸ್ಕಾರ ಮಾಡಿಸಿ, ಯೋಗ ಗುರು ಪಂತಜಲಿ ಮಹರ್ಷಿಗಳನ್ನು ಸ್ಮರಿಸಿದರು.    ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯ ಅವರ ಕಂಚಿನ ಕಂಠದ ವಂದೇಮಾತರಂ ನೊಂದಿಗೆ ಮೊದಲ ಭಾಗದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಹಾಗಾಗಿ ನಮ್ಮೆಲ್ಲಾ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು  ನಮ್ಮ ಮಕ್ಕಳಿಗೆ ಕಲಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.  ಅದರ ಭಾಗವಾಗಿಯೇ ನಮ್ಮ ಕಾರ್ಯಕ್ರಮದ ಎರಡನೇಯ ಭಾಗವಾಗಿ ವಿದ್ಯಾರಣ್ಯಪುರದ ಸುತ್ತಮುತ್ತಲಿನ ಸುಮಾರು ಎಂಟು ಹತ್ತು ಶಾಲೆಗಳ ಸುಮಾರು 700-800ಕ್ಕೂ ಅಧಿಕ ಮಕ್ಕಳು ತಮ್ಮ ಅಧ್ಯಾಪಕರ ಜೊತೆ ಶಿಸ್ತಿನಲ್ಲಿ ಬಂದು ಇಡೀ ಕಾರ್ಯಕ್ರಮದ ಕಲರವವನ್ನು ಹೆಚ್ಚಿಸಿದವು.

ಕಾರ್ಯಕ್ರಮದ ನಿರೂಪಕರಾದ ಶ್ರೀಕಂಠ ಬಾಳಗಂಚಿಯವರು ಮಕ್ಕಳ  ಉತ್ಸಾಹ ಹೆಚ್ಚಿಸಲು ಮಕ್ಕಳಿಂದ  ಎರಡೂ ಕೈಗಳನ್ನು ಎತ್ತಿ ಹಿಡಿದು ಜೋರಾಗಿ ಬೋಲೋ…. ಭಾರತ್ ಮಾತಾ ಕೀ… ಜೈ… ಎಂಬ ಜಯ ಘೋಷವನ್ನು ಮೂರು ಬಾರಿ ಇಡೀ ವಿದ್ಯಾರಣ್ಯಪುರಕ್ಕೇ ಕೇಳುವಂತೆ ಹೇಳಿಸುವುದರೊಂದಿಗೆ ಆರಂಭವಾಯಿತು. ಮಕ್ಕಳ  ಅಮಿತೋತ್ಸಾಹವನ್ನು ಗಮನಿಸಿದ ಯೋಗ ಶಿಕ್ಷಕಿ ಆಶಾರವರೂ ಕೂಡಾ ಮಕ್ಕಳಿಗೆ  ಸ್ನಾಯು ಸಡಿಲಗೊಳಿಸುವ ವ್ಯಾಯಾಮಗಳೊಂದಿಗೆ ಆರಂಭಿಸಿ ನಿಧಾನವಾಗಿ ನಾನಾ ರೀತಿಯ  ನಿಂತ ಮತ್ತು ಕುಳಿತ ಆಸನಗಳ ಜೊತೆ ಸೂರ್ಯ ನಮಸ್ಕಾರ ಮಾಡಿದರು. ಮಕ್ಕಳ ಜೊತೆಗೆ  ಹಲವಾರು ಶಾಲಾ ಶಿಕ್ಷಕ, ಶಿಕ್ಷಕಿಯರೂ ಸಹಾ ಯೋಗಭ್ಯಾಸ ಮಾಡಿ ಕಾರ್ಯಕ್ರಮದ ಮೆರಗನ್ನು ಇನ್ನಷ್ಟೂ ಹೆಚ್ಚಿಸಿದರು. ಅದರ ಜೊತೆ ಜೊತೆಯಲ್ಲಿಯೇ ಯೋಗ ಗುರು ಪಂತಜಲಿ ಮಹರ್ಷಿಗಳನ್ಣೂ ಸ್ಮರಿಸಿದರು.   ಕಾರ್ಯಕ್ರಮಕ್ಕೆ ಪ್ರತ್ಯಕ್ಶವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲ ಮಹನೀಯರಿಗೂ ಮತ್ತು ಶಾಲಾ ಆಡಳಿತ ಮಂಡಲಿ ಮತ್ತು ಶಿಕ್ಷಕ/ಶಿಕ್ಷಕಿಯರಿಗೆ ವಂದಾನಾರ್ಪಣೆ ಅರ್ಪಿಸಿ,    ಯೋಗಾಭ್ಯಾಸದಿಂದ  ಆದ ಆಯಾಸ ಪರಿಹಾರಕ್ಕಾಗಿ ಮಕ್ಕಳಿಗೆ ಬಿಸ್ಕೆಟ್ ಕೊಡುವುದರ ಮೂಲಕ ವಿದ್ಯಾರಣ್ಯಪುರದಲ್ಲಿ   ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಎರಡನೇ ಭಾಗವನ್ನೂ ಸಹಾ  ಅತ್ಯಂತ ಯಶಸ್ವಿಯಾಗಿ  ನಡೆಸಲಾಯಿತು.

ಎರಡೂ  ಕಾರ್ಯಕ್ರಮಗಳನ್ನು ಮುಗಿಸುವ ಮೊದಲು ಎಲ್ಲರೂ ಯೋಗಾಭ್ಯಾಸವನ್ನು ಕೇವಲ  ಇದೊಂದೇ  ದಿನಕ್ಕೆ ಮೀಸಲಾಗಿಡದೆ ಯೋಗವನ್ನು ನಮ್ಮ ದೈನಂದಿನ ಅಂಗವಾಗಿ ಮಾಡಿಕೊಳ್ಳುವುದರ ಮೂಲಕ  ಪ್ರತೀ ದಿನವೂ ಅಭ್ಯಾಸ ಮಾಡುತ್ತಾ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿ  ಇಟ್ಟಿಕೊಳ್ಳುವಂತೆ   ಪ್ರತಿಜ್ಞೆ ಮಾಡಿ ಕೊಳ್ಳೋಣ ಎಂದು ವಿನಂತಿ ಮಾಡಿಕೊಳ್ಳಲಾಯಿತು.

ಎಲ್ಲಾ ಸಹೃದಯರ ಸಹಕಾರದಿಂದ ಕಾರ್ಯಕ್ರಮ ಮತ್ತೊಮ್ಮೆ  ಅತ್ಯಂತ ಯಶಸ್ವಿಯಾಗಿ ನಡೆದು ಕಾರ್ಯಕ್ರಮ ಮುಗಿದ  ಒಂದು ಘಂಟೆಗೊಳಗೆ ಅಲ್ಲಿ  ಅಂತಹ ದೊಡ್ಡ ಕಾರ್ಯಕ್ರಮ ನಡೆಯಿತು ಎನ್ನುವ ಯಾವುದೇ ರೀತಿಯ ಕುರುಹು ಇಲ್ಲದಂತೆ ಸ್ಚಚ್ಚಗೊಳಿಸಿ ಸ್ವಚ್ಚ ಭಾರತವನ್ನು ಅಕ್ಷರಶಃ ಆಚರಣೆಗೆ ತಂದ  ಕಾರ್ಯಕ್ರಮದ ಆಯೋಜಕರು ಎಲ್ಲರ ಮನಸ್ಸೆಳೆದರು ಎಂದರೆ ಅತಿಶಯೋಕ್ತಿಯೇನಲ್ಲ.

ಇಂದು ವಿದ್ಯಾರಣ್ಯಪುರದ ಐದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಲಿತ ಯೋಗಾಸನಗಳನ್ನು  ವರ್ಷವಿಡೀ ಅಭ್ಯಾಸ ಮಾಡುತ್ತಾ ಮತ್ತೆ ಮುಂದಿನ ವರ್ಷ ಇದೇ ಜಾಗದಲ್ಲಿ  ಇದೇ ಸಮಯಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ.

ಏನಂತೀರೀ?

ಭಾರತೀಯ ಯೋಗ ಮತ್ತು ಜೀವನ ಪದ್ದತಿ

ವಿದ್ಯಾರಣ್ಯಪುರ ಮಂಥನದ ಒಂಬತ್ತನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ಭಾರತೀಯ ಯೋಗ ಮತ್ತು ಜೀವನ ಪದ್ದತಿ ಕುರಿತಾದ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಹೆಚ್. ಪಿ. ಕುಂಟೋಜಿ (ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ಪ್ರಸ್ತುತ ಯೋಗ ಶಿಕ್ಷಕರು) ಅವರ ಅಮೃತ ಹಸ್ತದಿಂದ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಕೆಲ ಮಾತೆಯವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಯುತ ಕುಂಟೋಜಿಯವರು ಇಂದಿನ ವಿಷಯವಾಗಿದ್ದ ಭಾರತೀಯ ಯೋಗ ಮತ್ತು ಜೀವನ ಪದ್ದತಿ ಎರಡು ವೈರುಧ್ಯ ಎಂದೇ ಆರಂಭಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಭಾರತೀಯರು, ಭಾರತೀಯ ಜೀವನ ಶೈಲಿಯನ್ನು ಸಂಪೂರ್ಣವಾಗಿ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದು ನಿಜಕ್ಕೂ ಖೇದಕರ. ಕಾಮ, ಕ್ರೋದ, ಲೋಭ,ಮೋಹ ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಮೀರಿ ಬರಲು ಸಾಧ್ಯವಾಗದೇ ಜಂಜಾಟದಲ್ಲಿ ಮುಳುಗಿದ್ದೇವೆ. ಭಗವದ್ಗೀತೆಯ ಆರನೇ ಅಧ್ಯಾಯದ ಒಂದು ಶ್ಲೋಕದಲ್ಲಿ ಯೋಗದ ಕುರಿತಾಗಿ ಹೇಳಿರುವುದನ್ನು ಉಲ್ಲೇಖಿಸಿತ್ತಾ, ನಮಗೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸ ಬೇಕು. ನಮಗೆ ಎಷ್ಟು ಬೇಕೋ ಅಷ್ಟೇ ದುಡಿಯಬೇಕು ಮತ್ತು ಅಷ್ಟನ್ನೇ ಅನುಭವಿಸಬೇಕು. ಹಾಗಾದಾಗಲೇ ಆವನು ಯೋಗಿ ಅನಿಸಿಕೊಳ್ಳುವುದು. ಶಂಕರಾಚಾರ್ಯರ ಭಜಗೋವಿಂದಂ ಆಭ್ಯಸಿದರೂ ಕೂಡಾ ಇದೇ ಅನುಭವವಾಗುತ್ತದೆ. ಯೋಗ ಎನ್ನುವುದು ನಮ್ಮ ಪ್ರಕೃತಿಯಲ್ಲಿ ನಮ್ಮ ಸುತ್ತಮುತ್ತಲಿರುವ, ಪ್ರಾಣಿ, ಪಶು ಪಕ್ಷೀ, ಕ್ರಿಮಿ ಕೀಟಗಳ ಹಾವ ಭಾವ ಮತ್ತು ಭಂಗಿಗಳ ಪ್ರತಿರೂಪವಾಗಿದೆ.

ಆದರೆ ನಾವಿಂದು life is enjoyment ಎಂದು ಭಾವಿಸಿ ನಮ್ಮ ದೇಹದ ಬಗ್ಗೆ ಯೋಚನೆಯೇ ಮಾಡದೇ ಇರುವುದರಿಂದ ನಮ್ಮ ದೇಹದಲ್ಲಿ ಕ್ರಿಮಿ ಕೀಟಗಳಿಂದ ತುಂಬಿಹೋಗಿದೆ. ನಮ್ಮ ದೇಹದಲ್ಲಿ ಉಸಿರು ಇರುವವರೆಗೂ ನಾವು ಮನುಷ್ಯರು. ಒಮ್ಮೆ ಉಸಿರು ನಿಂತು ಹೋದಲ್ಲಿ ನಮ್ಮನ್ನು ಶವ ಎನ್ನುತ್ತಾರೆ ಹಾಗಾಗಿ ಉಸಿರಾಡುವ ಸ್ಥಿತಿಯಲ್ಲಿರುವಾಗಲೇ ಆ ದೇಹ, ದೇಶದ ಅಭಿವೃಧ್ಧಿಗೆ ಉಪಯೋಗಿಸಿದ್ದರೆ ಏನೂ ಪ್ರಯೋಜನವಾಗದು.

ಶರೀರದ ರಚನೆಯ ಬಗ್ಗೆ ಉಪನಿಷತ್ತಿನಲ್ಲಿ ಚೆನ್ನಾಗಿ ಹೇಳಿದ್ದಾರೆ. ನಾವು ತಾಯಿಯ ಗರ್ಭದಲ್ಲಿರುವಾಗಲೇ ಸಕಲ ಯೋಗಾಸನಗಳನ್ನು ಕಲಿತಿರುತ್ತೇವೆ. ಅಮ್ಮನ ಕರುಳುಬಳ್ಳಿಯಲ್ಲಿ ಸುತ್ತಿಕೊಂಡಿರುವಾಗಲೇ ಅಷ್ಟಾಂಗ ಯೋಗಗಳನ್ನು ಮಾಡಿರುತ್ತೇವೆ. ನಮ್ಮ ದೇಹದಲ್ಲಿ ಒಟ್ಟು 206 ಮೂಳೆಗಳಿರುತ್ತವೆ. ಕಪಾದಲ್ಲಿ 8, ಮುಖದಲ್ಲಿ 14, ಎದೆ ಗೂಡಿನಲ್ಲಿ 24, ತೋಳು 64, ತೊಡೆ 64 ಇತರೆ ಕಡೆಯಲ್ಲಿ 26 ಈ ರೀತಿಯಾಗಿ ಅಸ್ತಿ ಪಂಜರಗಳಿಂದ ಸುಂದರವಾಗಿ ರೂಪುಗೊಂಡಿದೆ. ನಮ್ಮ ದೇಹ ವಾತ, ಪಿತ್ತ, ಕಫದಿಂದ ಆವೃತ್ತವಾಗಿದೆ. ಅದನ್ನು ಸ್ಥಿಮಿತವಾಗಿಟ್ಟು ಕೊಳ್ಳಲು ಯೋಗ ಬಹಳ ಸಹಕಾರಿಯಾಗಿದೆ. ಯೋಗ ಗರಡಿಮನೆಯಂತೆ ಕೇವಲ ದೇಹದಾಡ್ಯ ಬೆಳೆಸದೇ, ಮನಸ್ಸು ಮತ್ತು ದೇಹ ಎರಡನ್ನೂ ದಂಡಿಸುತ್ತದೆ. ಹಾಗಾಗಿ ಇತರೇ ವ್ಯಾಯಾಮದಿಂದ ಮೂವತ್ತು ನಲವತ್ತು ವರ್ಷಗಳು ನೆಮ್ಮದಿಯಾಗಿದ್ದರೆ, ಯೋಗ ಸಾಯವರೆಗೂ ನೆಮ್ಮದಿಯಾಗಿಡುತ್ತದೆ. ಹಾಗಾಗಿ ಮೊದಲು ನಾವು ನಮ್ಮನ್ನು ಮತ್ತು ನಮ್ಮ ದೇಹವನ್ನು ಪ್ರೀತಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ನಮ್ಮ ದೇಹದಲ್ಲಿ 80ರಷ್ಟು ನೀರಿದ್ದರೆ 10ರಷ್ಟು ಗಾಳಿ ಮತ್ತು 10ರಷ್ಟು ಆಹಾರ ಇರಬೇಕು. ಆದರೆ ನಮ್ಮ ಇಂದಿನ ಜೀವನ ಶೈಲಿಯಲ್ಲಿ 90ರಷ್ಟು ಆಹಾರ ಮತ್ತು ಉಳಿದ 10ರಷ್ಟರಲ್ಲಿ ಗಾಳಿ ಮತ್ತು ನೀರು ತುಂಬಿ ಕೊಂಡಿರುವುದರಿಂದ ನಾವಿಂದು ಸ್ಧೂಲ ಕಾಯರಾಗಿದ್ದೇವೆ. ಕೈಕಾಲುಗಳು ಸಣ್ಣಗಿದ್ದು ಹೊಟ್ಟೆ ದಪ್ಪಗಾಗಿ ದಡೂತಿ ದೇಹದವರಾಗಿ ಬಿಟ್ಟಿದ್ದೇವೆ. ಹಾಗಾಗಿ ಕೇವಲ ಬಾಹ್ಯರೀತಿಯಲ್ಲಿ ಸುಂದರವಾಗಿದ್ದರೆ ಸಾಲದು. ಆಂತರಿಕವಾಗಿ ಸುಖಃದಿಂದ ಸುಂದರವಾಗಿಟ್ಟಿದ್ದಲ್ಲಿ ಮಾತ್ರವೇ ಆರೋಗ್ಯಕರವಾಗಿರುತ್ತದೆ. ಬೆಳಗಿನಿಂದ ಮಧ್ಯಾಹ್ನ 3ರ ವರೆಗೆ ದೇಹ ಬಿಸಿಯಾಗಿಟ್ಟು ಕೊಂಡರೆ ಸಂಜೆ 3ರ ನಂತರ ತಣ್ಣಗಿಟ್ಟು ಕೊಳ್ಳಬೇಕು. ಹಾಗೆ ದೇಹ ಇರಬೇಕಾಗಿದ್ದಲ್ಲಿ ನಮ್ಮ ಪಂಚೇಂದ್ರಿಯಗಳನ್ನು ನಿಗ್ರಹವಾಗಿಟ್ಟು ಕೊಳ್ಳಬೇಕು. ಹಾಗೆ ಇಂದ್ರೀಯಗಳನ್ನು ನಿಗ್ರಹದಲ್ಲಿಟ್ಟುಕೊಂಡಿರಲು ಯೋಗ ಬಹಳ ಉಪಕಾರಿಯಾಗಿದೆ. ಇದನ್ನೇ ನಮ್ಮ ಋಷಿ ಮುನಿಗಳು ಕಠಿಣ ಪರಿಶ್ರಮದಿಂದ ತಪ್ಪಸ್ಸಿನ ಮೂಲಕ ಸಾಧಿಸಿಕೊಂಡಿದ್ದರು. ಅವರು ಬಹಳಷ್ಟು ಸಮಯ ಮನೆಯ ಹೊರಗೇ ಇರುತ್ತಿದ್ದರು ಮತ್ತು ದೇಹವನ್ನು ದಂಡಿಸುತ್ತಿದ್ದರು. ಜೀವಿಸಲು ಅಗತ್ಯವಿದ್ದಷ್ಟೇ ಸೇವಿಸುತ್ತಿದ್ದರು ಹೊರತು, ಸೇವಿಸುವುದಕ್ಕೇ ಜೀವಿಸುತ್ತಿರಲಿಲ್ಲ. ಆದರೆ ನಾವಿಂದು ದೇಹ ದಂಡನೆ ಕಡಿಮೆಗೊಳಿಸಿ ಹೆಚ್ಚು ಹೆಚ್ಚು ಆಹಾರ ಸೇವಿಸುತ್ತಿರುವುದರಿಂದ ನಮ್ಮ ದೇಹ ಅನಾರೋಗ್ಯದ ಗೂಡಾಗಿದೆ. ಸಾಧ್ಯವಾದಷ್ಟೂ ಯೋಗಿಗಳಂತಾಗಲು ಪ್ರಯತ್ನಿಸ ಬೇಕು. ಸಾಧ್ಯವಾದಷ್ಟೂ ಮನಸ್ಸು ಮತ್ತು ದೇಹ ಒಂದೇ ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳುವುದು ಅತ್ಯಾವಶ್ಯಕ. ಆದರೆ ನಾವಿಂದು ದೇಹ ಒಂದೆಡೆ ಇದ್ದರೆ ಮನಸ್ಸು ಮರ್ಕಟದಂತೆ ಮತ್ತೇನನ್ನೋ ಯೋಚಿಸುತ್ತಿರುತ್ತದೆ. ಹಾಗೆ ಮನಸ್ಸು ಮತ್ತು ದೇಹ ಏಕರೂಪದಲ್ಲಿ ಸದಾಕಾಲವೂ ಜಾಗೃತವಾಗಿರಲು ಯೋಗ ಬಹಳ ಪರಿಣಾಮಕಾರಿಯಾಗಿದೆ. ಕೇವಲ ಪುಸ್ತಕ ಓದಿಯೋ ಅಥವಾ ಯಾರನ್ನೋ ನೋಡಿಯೋ ಅಥವಾ ವೀಡಿಯೋ ನೋಡಿ ಆಸನಗಳನ್ನು ಮಾಡಿ ನಾವು ಯೋಗಿಗಳಾದೆವು ಎಂದೆಣಿಸಿದರೆ ಅದು ಕೇವಲ ಭ್ರಮೆಯಾಗುತ್ತದೆ. ಅಂತರಂಗ ಶುಧ್ದಿಯಾಗಿದ್ದಲ್ಲಿ ಮಾತ್ರವೇ ಬಹಿರಂಗ ಶುಧ್ಧಿ. ಹಾಗಾದಲ್ಲಿ ಮಾತ್ರವೇ ಯೋಗದ ಸಿಧ್ಧಿಯಾಗುತ್ತದೆ.

ನಮ್ಮ ದೇವಾನು ದೇವತೆಗಳನ್ನು ಸರಿಯಾಗಿ ಗಮನಿಸಿದಲ್ಲಿ ನಮಗೆ ಕಂಡು ಬರುವ ಅಂಶವೆಂದರೆ ಆ ದೇವಾನು ದೇವತೆಗಳು ಸಾಧಾರಣ ಸ್ಥಿತಿಯಲ್ಲಿ ನಿಂತಿರದೇ ಯಾವುದಾದರೊಂದು ಯೋಗಾಸನದ ಸ್ಥಿತಿಯಲ್ಲಿಯೇ ಕಾಣಸಿಗುತ್ತಾರೆ. ಆದರೆ ನಾವು ಅಂಧ ಪಾಶ್ಚಾತ್ಯೀಕರಣದಿಂದಾಗಿ ನಮ್ಮ ದೇವರನ್ನು ಅನುಕರಿಸದೇ ಮತ್ತಾವುದನ್ನೋ ಅನುಸರಿಸುತ್ತಾ ಅಧೋಗತಿಯತ್ತ ಸಾಗಿ ಆಲಸಿಗಳಾಗಿ ಹೋಗುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ. ನಮ್ಮ ದೇಶ, ನಮ್ಮ ಧರ್ಮ, ನಮ್ಮ ಹೆತ್ತ ತಂದೆ ತಾಯಿಯರನ್ನು ಪ್ರೀತಿಸದೆ ಆದರಿಸದೇ, ಗೌರವಿಸದೇ, ಮತ್ತಾವುದೋ ಪಾಶ್ವಾತ್ಯ ಸಂಸ್ಕಾರ, ಸಂಸ್ಕೃತಿಯನ್ನು ಆದರಿಸುತ್ತ ಕಾಲ ಕಳೆಯುತ್ತಿರುವುದು ನಿಜಕ್ಕೂ ದುಖಃಕರ. ನಮ್ಮ ಮನಸ್ಥಿತಿಯನ್ನು ಸರಿಯಾಗಿಟ್ಟು ಕೊಂಡು ನಿಯಮಿತವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ , ಸುಳ್ಳು , ಮೋಸ ಮಾಡದೆ, ದುರಾಸೆ ಪಡದೆ ನಮ್ಮಲ್ಲಿ ಎಷ್ಟಿದೆಯೋ ಅಷ್ಟರಲ್ಲಿಯೇ ಜೀವನ ಮಾಡುವ ಶೈಲಿಯನ್ನು ಅನುಸರಿಸಿಕೊಳ್ಳಬೇಕು.
ಪರೋಪಕಾರಾಯ ಇದಂ ಶರೀರಂ ಎನ್ನುವಂತೆ ನಮ್ಮಲ್ಲಿ ಅರ್ಪಣಾಭಾವವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರವೇ ದೇಹ ಮತ್ತು ಮನಸ್ಸು ಆಂತರಿಕವಾಗಿ ಶುದ್ಧವಾಗಿ ಆಂತರಂಗ ಮತ್ತು ಯಾವುದೇ ಖಾಯಿಲೆ ಕಸಾಲೆಗಳಿಲ್ಲದೆ ಬಹಿರಂಗವಾಗಿಯೂ ಶುದ್ಧತೆಯನ್ನು ಪಡೆದುಕೊಳ್ಳುತ್ತೇವೆ.

ಇನ್ನು ಸರಿಯಾದ ಉಸಿರಾಟದ ಕ್ರಮವನ್ನು ಸೂಚಿಸುವುದೇ ಪ್ರಣಾಯಾಮ. ಯಾರು ಸರಿಯಾಗಿ ಉಸಿರಾಟ ಮಾಡುತ್ತಾರೋ ಅಂತಹವರು ಯಾವ ರೋಗವಿಲ್ಲದೇ ದೀರ್ಘಾಯಸ್ಸನ್ನು ಪಡೆಯುತ್ತಾರೆ. ಹಾಗಾಗಿ ಉತ್ತಮ ಜೀವನ ಶೈಲಿಯ ಜೊತೆಗೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನಕ್ಕೆ ಒತ್ತು ಕೊಡಬೇಕು. ಧ್ಯಾನ ಎಂದರೆ ಕೇವಲ ಕಣ್ಣು ಮುಚ್ಚಿ ಕೂರುವುದಲ್ಲ. ಮನಸ್ಸನ್ನು ನಿಯಂತ್ರಿಸಿಕೊಂಡು ಏಕಾಗ್ರ ಚಿತ್ತದಲ್ಲಿ ಸಮಾಧಿ ಸ್ಥಿತಿಗೆ ತಲುಪುವುದು ಎಂದರ್ಥ. ಇದರ ಜೊತೆ ಜೊತೆಗೆ ದೇಹಕ್ಕೆ ಸರಿಯಾದ ವಿಶ್ರಾಂತಿಯೂ ಅತ್ಯಗತ್ಯ. ನಮ್ಮ ಭಾರತೀಯ ಯೋಗ ಮತ್ತು ನಮ್ಮ ಭಾರತೀಯ ಜೀವನ ಶೈಲಿಯೆಂದರೆ, ನಮ್ಮ ಮನಸ್ಸು, ಮನೋಸ್ಥಿತಿ ಮತ್ತು ದೇಹಗಳನ್ನು ಏಕಾಗ್ರಚಿತ್ತದಲ್ಲಿರಿಕೊಂಡು ನೆಮ್ಮದಿಯ ದೀರ್ಘಕಾಲ ಜೀವಿಸುವ ಪದ್ದತಿ ಅದನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳೋಣ. ಎಂದು ಹೇಳಿ ತಮ್ಮ ಕಾರ್ಯಕ್ರಮವನ್ನು ಮುಗಿಸಿದರು.

ಕಾರ್ಯಕ್ರಮವನ್ನು ಶ್ರೀ ಜಯಂತ್ ಅವರು ಸುಂದರವಾಗಿ ನಿರೂಪಣೆ ಮಾಡಿದರೆ, ಶ್ರೀಕಂಠ ಬಾಳಗಂಚಿಯವರ ವಂದಾನಾರ್ಪಣೆ ಮತ್ತು ಎಲ್ಲರ ಒಕ್ಕೊರಲಿನ ವಂದೇಮಾತರಂ ನೊಂದಿಗೆ ಯಶಸ್ವಿಯಾಗಿ ಅಂತ್ಯಗೊಂಡಿತು.

ಮುಂದಿನ ತಿಂಗಳು ಮತ್ತೊಂದು ವಿಷಯದೊಂದಿಗೆ ಮತ್ತಷ್ಟೂ ರೋಚಕವಾದ ಕಾರ್ಯಕ್ರಮದೊಂದಿಗೆ ನಿಮ್ಮನ್ನು ಭೇಟಿಯಾಗೋಣ. ಅಲ್ಲಿಯವರೆಗೂ ಭಾರತೀಯ ಯೋಗ ಮತ್ತು ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮುಂದುವರಿಸೋಣ.

ಏನಂತೀರೀ?

WhatsApp Image 2019-05-20 at 12.02.52 AM