ರಾಮಕೃಷ್ಣ ಹೆಗಡೆ

h6

ಕರ್ನಾಟಕ ಕಂಡ ಅತ್ಯಂತ ಚಾಣಕ್ಷ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದಂತಹ ಹಳ್ಳಿಯಿಂದ ದಿಲ್ಲಿಯವರೆಗೂ ಯುವಕರಿಂದ ವಯಸ್ಸಾದವರೂ ಇಷ್ಟಪಡುತ್ತಿದ್ದ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವುಗಳ ಮೂಲಕ ಇಂದಿಗೂ ರಾಜ್ಯದ ಜನಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಶ್ರೀ ರಾಮಕೃಷ್ಣ ಹೆಗಡೆಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಉತ್ತರಕರ್ನಾಟಕದ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕೃಷಿಕ ಕುಟುಂಬದ ಮಹಾಬಲೇಶ್ವರ ಹೆಗಡೆ ಹಾಗೂ ಸರಸ್ವತಿ ಹೆಗಡೆ ದಂಪತಿಗಳಿಗೆ 1926ರ ಅಗಸ್ಟ್ 29ರಂದು ರಾಮಕೃಷ್ಣ ಹೆಗಡೆಯವರು ಜನಿಸುತ್ತಾರೆ. ಓದಿನಲ್ಲಿ ಅತ್ಯಂತ ಚುರುಕಾಗಿದ್ದ ರಾಮಕೃಷ್ಣರಿಗೆ ನಾಯಕತ್ವ ಎನ್ನುವುದು ರಕ್ತಗತವಾಗಿ ಬರುವುದಕ್ಕೆ ಅವರ ಮನೆಯ ವಾತಾವರಣವೂ ಕಾರಣವಾಗಿತ್ತು ಎಂದರೂ ಎಂದರೂ ತಪ್ಪಾಗದು. ಅವರು ತಂದೆಯವರು ಸ್ವಾತ್ರಂತ್ರ ಹೋರಾಟಗಾರಾಗಿದ್ದರೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಅಂಟಿಕೊಂದ್ದಂತಹ ತೋಟದ ಮಧ್ಯೆಯಲ್ಲಿದ್ದ ಅವರ ಮನೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯತಾಣವಾಗಿತ್ತು. ಹಾಗಾಗಿಯೇ ಅವರ ಮನೆಗೆ ಪೋಲೀಸರ ಧಾಳಿ ಆಗ್ಗಿಂದ್ದಾಗೆ ನಡೆಯುತ್ತಿದ್ದವು.

h3

ಸ್ವಾತ್ರಂತ್ರ್ಯ ಹೋರಾಟಗಾರರನ್ನು ಮತ್ತು ಬ್ರಿಟೀಷರ ದಬ್ಬಾಳಿಕೆಯನ್ನು ಅತ್ಯಂತ ಹತ್ತಿರದಿಂದ ಕಂಡಿದ್ದ ರಾಮಕೃಷ್ಣರು ಚಿಕ್ಕಂದಿನಿಂದಲೇ, ಪತ್ರಕರ್ತರಾಗಬಯಸಿದ್ದರು. ಹಾಗಾಗಿಯೇ ಸಿರ್ಸಿಯ ಮಾರಿಕಾಂಬ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕೈಬರಹದ ಪತ್ರಿಕೆ ಹೂವಿನ ಸರಕ್ಕೆ ಲೇಖನ ಬರೆಯುತ್ತಿದ್ದರು. ಮುಂದೆ ಬನಾರಸ್ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಅವರ ಆಸೆಗಳನ್ನು ಪೂರೈಸಿಕೊಂಡಿದ್ದರು. ಕಾಶಿ ವಿದ್ಯಾಪೀಠದಲ್ಲಿ ಪದವಿ ಮುಗಿಸಿ ಅಲ್ಲಿಂದ ಲಕ್ನೋ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಗಿಸಿಕೊಂಡು ಕರ್ನಾಟಕಕ್ಕೆ ಮರಳಿ ವಕೀಲ ವೃತ್ತಿಯೊಂದಿಗೆ ಕೆಲಕಾಲ ಸಿರ್ಸಿಯ ಸ್ಥಳೀಯ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ನಂತರ ರಾಜಕೀಯದತ್ತ ಮುಖ ಮಾಡಿದ ಕಾರಣ ಪತ್ರಕರ್ತನಾಗದೇ ಹೋದದ್ದಕ್ಕೆ ಅವರಿಗೆ ವಿಷಾಧವಿತ್ತು.

h1

1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ ಹೆಗಡೆಯವರು ತಮ್ಮ 20ನೇ ವಯಸ್ಸಿನಲ್ಲಿಯೇ ರೈತ ಚಳುವಳಿಯ ರೂವಾರಿಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಹೆಗಡೆಯವರು 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಮಂತ್ರಿಮಂಡಲಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ ಜನಪ್ರಿಯರಾದರು. ಹೆಗಡೆ ಮತ್ತು ವೀರೇಂದ್ರ ಪಾಟೀಲರ ಜೋಡಿಯನ್ನು ಲವ-ಕುಶ ಜೋಡಿ ಎಂದೇ ಜನರು ಕರೆಯುತ್ತಿದ್ದರು.

1975ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಹೆಗಡೆಯವರು ಜೈಲುವಾಸಕ್ಕೆ ತಳ್ಳಲ್ಪಟ್ಟಾಗ, ಅಲ್ಲಿ ಅವರಿಗೆ ಹಿರಿಯ ನಾಯಕರಾದ ಜಯಪ್ರಕಾಶ ನಾರಾಯಣ್ ವಾಜಪೇಯಿ, ಮಧುದಂಡವತೆ, ಅಡ್ವಾಣಿ, ಚಂದ್ರಶೇಖರ್ ಮುಂತಾದ ಹಿರಿಯ ನಾಯಕರು ಬಹಳ ಹತ್ತಿರವಾಗಿ ಜೆಪಿಯವರ ನೇತೃತ್ವದಲ್ಲಿ ಆರಂಭಗೊಂಡ ಜನತಾ ಪಕ್ಷಕ್ಕೆ ಸೇರಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.

h2

1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷ ಮತ್ತು ಕ್ರಾಂತಿರಂಗ ಜಂಟಿಯಾಗಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಹುಮತಕ್ಕೆ ಅಲ್ಪ ಸಂಖ್ಯೆಯ ಕೊರತೆ ಇದ್ದಾಗ, ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಪ್ರಪ್ರಥಮವಾದ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಮಂತ್ರಿಯಾದ ಸಮಯದಲ್ಲಿ ರಾಜ್ಯದಲ್ಲಿ ಕಾಡುತ್ತಿದ ಬರಕ್ಕೆ ಪರಿಹಾರವಾಗಿ ನೀರ್ ಸಾಬ್ ಎಂದೇ ಖ್ಯಾತಿಯಾದ ಅಬ್ದುಲ್ ನಜೀರ್ ಸಾಬ್ ಅವರೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಕೊಳವೇ ಭಾವಿಯನ್ನು ತೊಡಿಸಿ ಜನರ ದಾಹವನ್ನು ತೀರಿಸಿದ್ದಲ್ಲದೇ, ದೇಶದಲ್ಲೇ ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಕೆಲವೇ ದಿನಗಳಲ್ಲಿ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡರು.

ಇದೇ ಜನಪ್ರಿಯತೆಯನ್ನೇ ರಾಜಕಿಯವಾಗಿ ಬಳಸಿಕೊಳ್ಳಲು ನಿರ್ಧರಿ, ವಿಧಾನಸಭೆಯನ್ನು ವಿಸರ್ಜಿಸಿ ಮುಂದೆ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಅಧಿಕಾರದ ಹಿಂದೆ ಜೋತು ಬೀಳುವ ಅನೇಕ ರಾಜಕಾರಣಿಗಳ ಮಧ್ಯೆ ಅಧಿಕಾರವೇ ಹೆಗಡೆವರನ್ನು ಹುಡಿಕಿಕೊಂಡು ಬರುವಷ್ಟು ಅದೃಷ್ಟಶಾಲಿಯಾಗಿದ್ದರು ಎಂದರೂ ತಪ್ಪಾಗದು. ಕುರ್ಚಿಗಾಗಿ ಬಡಿದಾಡುವ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆ ಅವರ ಈ ನಡೆ ಸಾರ್ವಕಾಲಿಕವಾಗಿ ಅಚ್ಚರಿ ಹುಟ್ಟಿಸುವಂತದ್ದಾಗಿತ್ತು. ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ, ಮತ್ತು ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 25 ರ ಮೀಸಲಾತಿ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ದೇಶದಲ್ಲಿಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ.

ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಅವರ ಬೆನ್ನು ಬಿಡದ ಬೇತಾಳದಂತೆ ಕಾಡಿದವರೆಂದರೆ ಎ.ಕೆ.ಸುಬ್ಬಯ್ಯನವರು. ರಾಮಕೃಷ್ಣ ಹೆಗಡೆಯವರ ಮೊದಲ ಬಾರಿಗೆ ಮುಖ್ಯ ಮಂತ್ರಿಗಳಾಗಿದ್ದಾಗ ರೇವಜೀತು ಹಗರಣ ಹಾಗೂ ಅವರ ಮಗ ಭರತ್ ಹೆಗಡೆ ಶಾಮೀಲಾಗಿದ್ದ ಎನ್ನಲಾದ ಮೆಡಿಕಲ್ ಸೀಟ್ ಹಗರಣ ಮುಂತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕತ್ವಕ್ಕೆ ಕಪ್ಪು ಚುಕ್ಕಿ ಮೂಡಿಸಿದ್ದಲ್ಲದೇ, ಅವರ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾಗಿ ಅವರೆಲ್ಲರ ಮೇಲೆಯೇ ನ್ಯಾಯಾಂಗ ತನಿಖೆಗೆ ಆದೇಶಿಸಿ ರಾಜ್ಯಾದ್ಯಂತ ಮನೆ ಮಾತಾದರೆ, ಎರಡನೇ ಬಾರೀ ದೂರವಾಣಿ ಕದ್ದಾಲಿಕೆಯ ಹಗರಣದ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆಯವರು ರಾಜ್ಯರಾಜಕೀಯದಿಂದ ದೂರ ಸರಿಯುವಂತಾಯಿತು.

h5

ತಮ್ಮ ರಾಜಕೀಯ ಅವಧಿಯಲ್ಲಿ ಮಂತ್ರಿಗಳಾಗಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ನಂತರ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13 ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ ಎಂಬುದು ಅವರ ಹೆಗ್ಗಳಿಕೆಯಾಗಿದೆ. ರಾಜಕೀಯದ ಜೊತೆ ಜೊತೆಗೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳಲ್ಲಿಯೂ ಅಪಾರವಾದ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದ್ದರು. ಅದರ ಮುಂದು ವರೆದ ಭಾಗವಾಗಿಯೇ ಹೆಸರಘಟ್ಟದ ಬಳಿ ಖ್ಯಾತ ಒಡಿಸ್ಸೀ ನೃತ್ಯಗಾರ್ತಿ ಪ್ರೋತಿಮಾ ಬೇಡಿ ಅವರ ನೃತ್ಯಗ್ರಾಮಕ್ಕೆ ಸರ್ಕಾರಿ ಜಾಗವನ್ನು ನೀಡಿದ್ದರು. ಮತ್ತೊಬ್ಬ ನೃತ್ಯಗಾರ್ತಿ ಪ್ರತಿಭಾ ಪ್ರಹ್ಲಾದ್ ಅವರಿಗೂ ಹೆಗಡೆಯವರ ಕೃಪಾಶೀರ್ವಾದವಿತ್ತು ಎನ್ನುವುದು ಬಲ್ಲವರ ಮಾತಾಗಿದೆ. ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆಯವರು ಮರಣ ಮೃದಂಗ ಎನ್ನುವ ಸಿನಿಮಾ ಸೇರಿದಂತೆ ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ, ರಾಜ್ಯದ ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಗೆ ಶೇಕಡಾ50 ರ ರಿಯಾಯಿತಿ ಮುಂತಾದ ಯೋಜನೆಗನ್ನು ತರುವುದರ ಮೂಲಕ ಕಲಾ ಪೋಷಕರೆನಿಸಿಕೊಂಡರು.

ಈ ದೇಶ ಪ್ರಜಾಪ್ರಭುತ್ವ ದೇಶ ಎನಿಸಿದರು ಅನೇಕ ರಾಜಕೀಯ ನಾಯಕರು ತಮ್ಮ ಕುಟುಂಬಸ್ಥರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡು ಅಧಿಕಾರ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳುವಾಗ ಇದಕ್ಕೆ ಅಪರಾಧ ಎನ್ನುವಂತಿದ್ದರು ಹೆಗಡೆಯವರು. ರಾಮಕೃಷ್ಣ ಹೆಗಡೆಯವರು ತಮ್ಮ ಕಾಲದಲ್ಲಿ ಹಲವಾರು ನಾಯಕರನ್ನು ಬೆಳಸಿ ಹೋದರು. ಪ್ರಸ್ತುತ ರಾಜಕಾರಣದಲ್ಲಿರುವ ಹಲವಾರು ನಾಯಕರುಗಳು ಹೆಗಡೆಯವರ ಗರುಡಿಯಿಂದ ಹೊರಬಂದಿರುವ ಶಿಷ್ಯರೇ. ಮಾಜೀ ಮುಖ್ಯ ಮಂತ್ರಿಗಳಾದ ಎಸ್. ಆರ್. ಬೊಮ್ಮಾಯಿ, ಸಿದ್ದರಾಮಯ್ಯ, ಬಿ.ಸೋಮಶೇಖರ್, ಆರ್. ವಿ. ದೇಶಪಾಂಡೆ, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಪಿ.ಜಿ.ಆರ್.ಸಿಂಧ್ಯ, ಜೀವರಾಜ್ ಆಳ್ವ ಹೀಗೆ ಇನ್ನೂ ಅನೇಕ ನಾಯಕರುಗಳನ್ನು ಬೆಳೆಸಿದರು. ಹೆಗಡೆ ತಾವೊಬ್ಬರೇ ಬೆಳೆಯದೇ ಇತರರನ್ನೂ ಬೆಳೆಸಿ ಅವರವರ ಶಕ್ತಿ ಸಾಮರ್ಥ್ಯದ ಅನುಗುಣವಾಗಿ ಅವರಿಗೆ ಅಧಿಕಾರವನ್ನು ನೀಡಿ ಬೆಳಸಿದರು.

ಬಾಯಿಮಾತಿನಲ್ಲಿ ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ರಾಜಕೀಯ ನಾಯಕರೇ ಹೆಚ್ಚಾಗಿರುವ ಇಂದಿನ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆಯವರು ಅಪ್ಪಟವಾದ ಜಾತ್ಯತೀತರಾಗಿದ್ದರು ಎಂದರೆ ಅತಿಶಯವೆನಿಸಿದು. ಅವರೆಂದೂ ತಮ್ಮ ಸ್ವಜಾತಿಯಿಂದ ಗುರುತಿಸಿಕೊಳ್ಳಲೇ ಇಲ್ಲ, ಉತ್ತರ ಕರ್ನಾಟಕದ ಲಿಂಗಾಯಿತರ ನಾಯಕರೆಂದೇ ಪ್ರಸಿದ್ಧಿ ಪಡೆದಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನಿಗೂ ಸಹಾ ಅಂತರ್ಜಾತಿ ವಿವಾಹವನ್ನು ಮಾಡಿಸಿದ್ದದ್ದು ಗಮನಾರ್ಹವಾಗಿತ್ತು.

h4

ಬದಲಾದ ರಾಜಕೀಯದಲ್ಲಿ ಯಾರನ್ನು ಹೆಗಡೆಯವರು ಬೆನ್ನು ತಟ್ಟಿ ಬೆಳೆಸಿದ್ದರೋ ಅದೇ ನಾಯಕರು ತಮ್ಮ ಬೆಂಬಲಿಗರ ಮೂಲಕ ಹೆಗಡೆಯವರಿಗೆ ವಿಧಾನಸೌಧದ ಮುಂದೆ ಚೆಪ್ಪಲಿಯ ಸೇವೆಯನ್ನು ಮಾಡಿಸಿ ಅವಮಾನಿಸಿದ್ದಲ್ಲದೇ ಮುಂದೆ ಅವರಿಗೆ ಅಚಾನಕ್ಕಾಗಿ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗ ತಾವು ಕಟ್ಟಿದ ಪಕ್ಷದಂದಲೇ ಉಚ್ಚಾಟಿಸುವ ಮೂಲಕ ಹೆಗಡೆಯವರ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಿದಾಗ, ಸ್ವಪಕ್ಷೀಯರಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ಕೊರಗಿನಲ್ಲೇ 2004ರ ವರ್ಷದ ಜನವರಿ 12ರಂದು ನಿಧನರಾದರು.

ರಾಜಕಾರಣದಲ್ಲಿದ್ದು ಜನಾನುರಾಗಿಯಾಗಿ, ಜನತೆಯ ಕೈಗೆ ಆಡಳಿತ ನೀಡಿ, ಸದುದ್ದೇಶಗಳಿಂದ, ಜಾತಿಯ ಹಂಗು ಮತ್ತು ಬೆಂಬಲವಿಲ್ಲದೇ, ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾದ ಶ್ರೀ ರಾಮಕೃಷ್ಣ ಹೆಗಡೆ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

ಜೆ. ಹೆಚ್. ಪಟೇಲ್

pat6

ಜಯದೇವಪ್ಪ ಹಾಲಪ್ಪ ಪಟೇಲ್ ಕರ್ನಾಟಕ ಕಂಡ ಅತ್ಯಂತ ದಿಟ್ಟತನದ ಪ್ರಾಮಾಣಿಕ ರಾಜಕಾರಣಿ ರಾಜ್ಯದ ವಿವಿಧ ಖಾತೆಗಳ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಾಗಿದ್ದಲ್ಲದೇ, 15 ನೇ ಮುಖ್ಯಮಂತ್ರಿಯಾಗಿದ್ದವರು. ಸಮಾಜವಾದಿ ಹಿನ್ನಲೆಯ ಹೋರಾಟದಿಂದ ಬಂದು ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ವಿರೋಧೀ ನಾಯಕರಾಗಿಯೇ ರಾಜ್ಯ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಶಿವಮೊಗ್ಗಾ ಸಾಂಸದರಾಗಿ ದೂರದ ದೆಹಲಿಯ ಸಂಸತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಕಂಪನ್ನು ಎಲ್ಲೆಡೆಯೂ ಹರಡಿದ್ದವರು. ಸಂಗೀತ ಮತ್ತು ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀ ಜೆ ಹೆಚ್ ಪಟೇಲ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಜೆ.ಎಚ್‌.ಪಟೇಲರು ಅಕ್ಟೋಬರ್‌ 1 1930ರಲ್ಲಿ ಕಾಗಿನೂರಿನಲ್ಲಿ ಸಿರಿವಂತ ಕುಟಂಬದಲ್ಲೇ ಜನಿಸುತ್ತಾರೆ. ಬಾಲ್ಯದಿಂದಲೂ ಎಲ್ಲದರಲ್ಲೂ ಚುರುಕಾಗಿದ್ದ ಪಟೇಲರು ವಿಜ್ಞಾನದ ವಿದ್ಯಾರ್ಥಿಯಾಗಿ ಇಂಟರ್ಮೀಡಿಯಟ್ ವರೆಗೂ ದಾವಣಗೆರೆಯಲ್ಲಿ ಮುಗಿಸಿ, ತಮ್ಮ ವಿದ್ಯಾಭ್ಯಾಸದಲ್ಲಿ ರಾಜಕೀಯದ ವಿಷಯವೂ ಇದ್ದು ಅದರಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಬಿಎ ಓದುವುದಕ್ಕಾಗಿ ಮೈಸೂರು ಮಹಾರಾಜ ಕಾಲೇಜ್ ಸೇರಿಕೊಳ್ಳುತ್ತಾರೆ. ಪ್ರೌಢಶಾಲೆಯ ದಿನಗಳಲ್ಲಿಯೇ ಸಮಾಜವಾದದ ಪ್ರಭಾವಕ್ಕೆ ಒಳಗಾಗಿದ್ದ ಪಟೇಲರು 1947ರ ಸೆಪ್ಟೆಂಬರ್‌ 1ರಂದು ಮೈಸೂರು ಮಹಾರಾಜರ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕರೆ ಕೊಟ್ಟಿದ್ದ ‘ಮೈಸೂರು ಚಲೋ’ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಹೋರಾಟಕ್ಕೆ ಧುಮುಕುತ್ತಾರೆ.

ಆ ದಿನಗಳಲ್ಲಿ ಪಟೇಲರ ಊರಾದ ಕಾರಿಗನೂರು ಚಳವಳಿಗೆ ಕೇಂದ್ರವಾಗಿತ್ತು. ಹಾಗಾಗಿ ಚನ್ನಗಿರಿ ತಾಲ್ಲೂಕಿನ ಜನರು ಅತ್ಯಂತ ಉತ್ಸಾಹದಿಂದ ಕೇವಲ 18 ದಾಟಿರದ ತರುಣ ಪಟೇಲರ ನೇತೃತ್ವದಲ್ಲಿ ಸೆಪ್ಟೆಂಬರ್‌ 3 ರಂದು ಚನ್ನಗಿರಿಯಲ್ಲಿ ಸತ್ಯಾಗ್ರಹ ನಡೆಸುತ್ತಾರೆ. ಕಾಂಗ್ರೆಸ್‌ ಬಾವುಟವನ್ನು ಹಿಡಿದುಕೊಂಡು ಹೊರಟಿದ್ದ ಚಳುವಳಿಗಾರರ ಮೇಲೆ ಪೊಲೀಸರು ದಾಳಿ ನಡೆಸಿ ಅಲ್ಲಿದ್ದವರೆಲ್ಲರನ್ನೂ ಚೆಲ್ಲಾಪಿಲ್ಲಿಯಾಗುವಂತೆ ಹೊಡೆಯುತ್ತಿದ್ದಾಗ ಧೈರ್ಯವಂತ ಜೆ ಎಚ್‌ ಪಟೇಲರು ತಾಲ್ಲೂಕು ಕಚೇರಿಯ ಮೇಲೆ ಬಾವುಟ ಹಾರಿಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಿ, ಶಿವಮೊಗ್ಗದ ಜಿಲ್ಲಾ ಕಾರಾಗೃಹದಲ್ಲಿ ಎರಡು ದಿನಗಳ ಕಾಲ ವಿಚಾರಣೆ ನಡೆಸಿ, ನಂತರ ಮಂಡಗದ್ದೆ ಕಾರಾಗೃಹದಲ್ಲಿ ಮೂರು ತಿಂಗಳು ಕಾಲ ಸೆರೆಮನೆ ವಾಸವನ್ನು ಅನುಭವಿಸುವ ಮೂಲಕ ಅವರ ರಾಜಕೀಯ ಜೀವನ ಮತ್ತು ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗುತ್ತದೆ. .

pat2

1951ನೇ ಇಸವಿಯ ಸಮಯದಲ್ಲಿ ಮೊದಲನೆಯ ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕೆಂದು ಮೈಸೂರಿಗೆ ಸಮಾಜವಾದಿ ಪಕ್ಷದ ನಾಯಕರಾಗಿದ್ದ ಜಯಪ್ರಕಾಶ್‌ ನಾರಾಯಣ್‌ ಆಗಮಿಸಿದ್ದಾಗ ಅವರ ಮಾತುಗಳಿಂದ ಪಟೇಲರು ಪ್ರಭಾವಕ್ಕೊಳಗಾಗುತ್ತಾರಾದರೂ, ಇದರ ಜೊತೆ ಜೊತೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, 1954ರಲ್ಲಿ ಬೆಳಗಾವಿಯಲ್ಲಿ ತಮ್ಮ ಎಲ್‌.ಎಲ್‌.ಬಿ. ಪದವಿ ಪಡೆದ್ದಲ್ಲದೇ ಅದೇ ವರ್ಷ ಮೇ ತಿಂಗಳಿನಲ್ಲಿ ಸರ್ವಮಂಗಳ ಅವರನ್ನು ವರಿಸುತ್ತಾರೆ.

1955ರಲ್ಲಿ ತಮ್ಮ ಸಹಪಾಠಿ ಶಂಕರನಾರಾಯಣ ಭಟ್ಟರ ಜೊತೆ ಶಿವಮೊಗ್ಗದಲ್ಲಿ ಕೆಲ ಕಾಲ ವಕೀಲಿ ವೃತ್ತಿಯನ್ನು ಆರಂಭಿಸುತ್ತಾರಾದರೂ ಅವರ ಆಸಕ್ತಿಯೆಲ್ಲಾ ರಾಜಕೀಯದತ್ತವೇ ಇದ್ದು, 1957ರ ನಂತರ ಕರ್ನಾಟಕದ ಸಮಾಜವಾದಿ ಪಕ್ಷದ ಜನನಾಯಕರಾಗಿದ್ದ ಶ್ರೀ ಶಾಂತವೇರಿ ಗೋಪಾಲಗೌಡರ ಜತೆಗೂಡಿ ವಿವಿಧ ಹೋರಾಟದಲ್ಲಿ ಭಾಗಿಯಾಗಿ, 1960ರ ತಾಲೂಕು ಬೋರ್ಡ್‌ ಚುನಾವಣೆಯಲ್ಲಿ ಬಸವಪಟ್ಟಣ ಕ್ಷೇತ್ರದಿಂದ ಚನ್ನಗಿರಿ ತಾಲೂಕು ಬೋರ್ಡ್‌ಗೆ ಚುನಾಯಿತರಾಗುತ್ತಾರೆ. ಇದೇ ಸಮಯದಲ್ಲಿಯೇ ಉಳುವವನಿಗೇ ಭೂಮಿ ಎಂದು ಆರಂಭವಾದ ಹೋರಾಟ, ಕಾಗೋಡು ಸತ್ಯಾಗ್ರಹ ಎಂದೇ ರಾಷ್ಟ್ರೀಯ ಸುದ್ದಿಯಾಗಿ ಭಾರತದ ಎಲ್ಲ ಕಡೆಗೂ ರಾಮ್ ಮನೋಹರ್ ಲೋಹಿಯಾ ಅವರ ನೇತೃತ್ವದಲ್ಲಿ ಚಳವಳಿ ಆರಂಭವಾದಾಗ ಸಮಾಜವಾದಿ ಪಕ್ಷದ ವತಿಯಿಂದ ನಡೆಸಿದ ಭೂ ಚಳುವಳಿಗಳಲ್ಲಿ ಜೆ.ಹೆಚ್‌. ಪಟೇಲರು ಭಾಗಿಯಾಗಿ ಎರಡು ಸಾರಿ ಸೆರೆಮನೆಯ ವಾಸವನ್ನು ಅನುಭವಿಸಿ ಹೊರಬರುವಷ್ಟರಲ್ಲಿ ಶಿವಮೊಗ್ಗಾ ಜಿಲ್ಲಾದ್ಯಂತ ಜನಪ್ರಿಯ ನಾಯಕರಾಗಿ ಮುನ್ನಲೆಗೆ ಬಂದಿರುತ್ತಾರೆ.

ಇದೇ ಜನಪ್ರಿಯತೆಯೇ ಅವರನ್ನು 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡಿಸುತ್ತದೆ. ಸಾಂಸದರಾಗಿ ಲೋಕಸಭೆಯಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಲು ಆರಂಭಿಸಿದಾಗ ಅದಕ್ಕೆ ಇತರ ಸಾಂಸದರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದಾಗ, ಆಗಿನ ಲೋಕಸಭೆಯ ಅಧ್ಯಕ್ಷರಾಗಿದ್ದ ಶ್ರಿ ನೀಲಂ ಸಂಜೀವ ರೆಡ್ಡಿ ಅವರು ಪಟೇಲ್ ಅವರಪರ ನಿಂತು ಭಾಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಭಾರತೀಯ ಸಂಸತ್ತು ಜಾರಿಯಾದ 17 ವರ್ಷಗಳ ನಂತರ ಪ್ರಪ್ರಥಮವಾಗಿ ಸಾಂಸದರೊಬ್ಬರು ಪ್ರಾದೇಶಿಕ ಭಾರತೀಯ ಭಾಷೆಯಲ್ಲಿ ಮಾತನಾಡಿದ ಸದಸ್ಯರು ಎಂಬ ಹಿರಿಮೆ ಪಟೇಲದ್ದಾಗುತ್ತದೆ. ಇದಾದ ನಂತರ ಶ್ರೀ ಸಂಜೀವ ರೆಡ್ಡಿ ಅವರು ಯಾವುದೇ ಲೋಕಸಭೆಯ ಸದಸ್ಯರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಮಾತೃಭಾಷೆಯಲ್ಲಿ ಸಂಸತ್ತಿನಲ್ಲಿ ತಮ್ಮ ವಾದವನ್ನು ಮಂಡಿಸಬಹುದು ಎಂಬ ಅಧಿಕೃತ ಆದೇಶವನ್ನು ಹೊರಡಿಸಲು ನಮ್ಮ ಪಟೇಲರೇ ಪ್ರೇರೇಪಣೆಯಾಗುತ್ತಾರೆ. ಆದಾದ ನಂತರ ಅಂದಿನ ಗೃಹಮಂತ್ರಿಗಳಾಗಿದ್ದ ಶ್ರೀ ವೈ.ವಿ. ಚವ್ಹಾಣ್‌ ಅವರೊಡನೆ ಮಹಾಜನ ಆಯೋಗದ ಸಂಬಂಧವಾಗಿ ಕರ್ನಾಟಕದ ಪರವಾಗಿ ವಾಗ್ಯುದ್ಧ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗುವ ಮೂಲಕ ಕೆಲವೇ ಕೆಲವು ದಿನಗಳಲ್ಲಿ ಅವರು ಬಹು ಜನಪ್ರಿಯ ಲೋಕಸಭಾ ಸದಸ್ಯರಾಗುವುದಲ್ಲದೇ, ಡಾ.ಲೋಹಿಯ ಅವರ ಅಚ್ಚುಮೆಚ್ಚಿನ ಸಂಗಾತಿಯಾಗುತ್ತಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೆಪಿ ಯವರ ನೇತೃತ್ವದಲ್ಲಿ ದೇಶಾದ್ಯಂತ ನಡೆದ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಕೊಂಡ ಪಟೇಲರು ಅದಕ್ಕಾಗಿ ಸೆರೆಮನೆಯ ವಾಸವನ್ನು ಅನುಭವಿಸುವ ಮೂಲಕ ಸಂಪೂರ್ಣ ಗಮನ ರಾಜ್ಯದತ್ತ ಹರಿಯುತ್ತದೆ. ತುರ್ತು ಪರಿಸ್ಥಿತಿಯ ನಂತರದ ವಿಧಾನ ಸಭಾ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಆಗ ರಾಜ್ಯದಲ್ಲಿ ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸುತ್ತಲಿದ್ದು,
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಟೇಲರು ಆರ್ಥಿಕ ಸ್ಥಿತಿ ಮತ್ತು ಅದರ ಗತಿಯ ಕುರಿತು ಮಾತನಾಡುತ್ತಾ ದೇಶದ ಆರ್ಥಿಕ ಸ್ಥಿತಿ, ಕರ್ನಾಟಕದ ಪರಿಸ್ಥಿತಿ, ಪಂಜಾಬ್ ರಾಜ್ಯದಲ್ಲಿ ಜಾರಿಗೆ ತಂದಿರುವ ಆರ್ಥಿಕ ಸುಧಾರಣೆಗಳನ್ನು ನಿಖರ ಅಂಕಿ ಅಂಶಗಳ ಮೂಲಕ 3 ಗಂಟೆಗಳ ಕಾಲ ಮಾಡಿದ ಅಮೋಘ ಭಾಷಣ ಖುದ್ದು ಮುಖ್ಯಮಂತ್ರಿಗಳ ಗಮನ ಸೆಳೆದ ಪರಿಣಾಮ ಮಧ್ಯಾಹ್ನದ ಭೋಜನ ಸಮಯದಲ್ಲಿ ವಿರೋಧಪಕ್ಷದ ಮೊಗಸಾಲೆಗೆ ಬಂದ ದೇವರಾಜ ಅರಸರು ಪಟೇಲರನ್ನು ಅಭಿನಂದಿಸಿ ಅವರ ಭಾಷಣದಲ್ಲಿದ್ದ ಅಂಕಿ ಅಂಶಗಳ ನಕಲನ್ನು ಕೇಳಿ ಪಡೆದ್ದದ್ದಲ್ಲದೇ ಅಂದಿನ ಸಂಜೆಯ ಭೋಜನ ಕೂಟಕ್ಕೆ ಆಹ್ವಾನಿಸುತ್ತಾರೆ. ನಂತರ ಮುಂದೊಮ್ಮೆ ಅದೇ ಸ್ನೇಹದಿಂದ ತಮ್ಮ ಸಂಪುಟದಲ್ಲಿ ಮಂತ್ರಿಯಾಗುವಂತೆ ಅರಸರು ನೀಡಿದ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರಲ್ಲದೇ, ಅವರ ರಾಜಕೀಯ ಜೀವನಾದ್ಯಂತ ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ನಡೆಸಿದ್ದದ್ದು ಅವರ ಹೆಗ್ಗಳಿಗೆ.

pat4

83ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ಸರ್ಕಾರ ಬಂದಾಗ ಶ್ರೀ ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. 90ರ ದಶಕದಲ್ಲಿ ದೇವೇಗೌಡರ ನೇತೃತ್ವದಲ್ಲಿ ಜನತಾದಳದ ಸರ್ಕಾರ ಆಡಳಿತಕ್ಕೆ ಬಂದಾಗ ಅವರ ಮಂತ್ರಿಮಂಡಳದಲ್ಲಿ ಉಪಮುಖ್ಯಮಂತ್ರಿಯಾಗಿದ್ದಲ್ಲದೇ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಯಾವ ಪಕ್ಷಕ್ಕೂ ಪೂರ್ಣಬಹುಮತ ಬಾರದೇ ಹೋದಾಗ, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವೇಗೌಡರು ಅಚಾನಕ್ಕಾಗಿ ಪ್ರಧಾನ ಮಂತ್ರಿಗಳಾದಾಗ ಸಹಜವಾಗಿಯೇ, ಜೆ. ಹೆಚ್ ಪಟೇಲರು 1996 ಮೇ 31 ರಂದು ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿ ಕಾಂಗ್ರೇಸ್ ಪಕ್ಷಕ್ಕೆ ಎಂದೂ ಭಾಗವಾಗದಿದ್ದ ರಾಜ್ಯದ ಮೊತ್ತ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿ ಪಟೇಲರದ್ದಾಗಿದೆ.

ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟು 7 ಹೊಸ ಜಿಲ್ಲೆಗಳನ್ನು ಘೋಷಿಸಿದ್ದರು. 4,800 ಕೋಟಿ ವಿದೇಶಿ ಬಂಡವಾಳವನ್ನು ಹೂಡಿಕೆ ಮಾಡಲು ವಾತಾವರಣ ಸೃಷ್ಟಿಸಿದ್ದಲ್ಲದೇ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ,ವರುಣಾ, ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣಕ್ಕೆ ಆಧ್ಯತೆ ನೀಡಿದ್ದರು. ಕೂಡಲ ಸಂಗಮದ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದವರೂ ಪಟೇಲರೇ.

ಕರ್ನಾಟಕದಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿದ್ದಾಗ, ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟು, ಅಧಿಕ ವಿದ್ಯುತ್ ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ನಮ್ಮ ರಾಜ್ಯವೂ ಒಂದಾಯಿತು.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮಂತ್ರಿ ಮಂಡಲದ ಪ್ರತಿಯೊಬ್ಬ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು ಎನ್ನುವುದಕ್ಕೆ ಈ ಉದಾರಣೆ ನೀಡಲೇ ಬೇಕು. ಪಟೇಲರ ಮಂತ್ರಿಮಂಡಲದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಮಲೆನಾಡಿನ ಗಾಂಧಿ ಎಂದೇ ಖ್ಯಾತಿ ಪಡೆದಿದ್ದ ಹೆಚ್ ಜಿ ಗೋವಿಂದೇಗೌಡರು ಲಕ್ಷಾಂತರ ಶಿಕ್ಷಕರ ನೇಮಕಾತಿಯ ಫೈಲ್ ಹಿಡಿದು ಪಟೇಲರ ಅನುಮತಿ ಕೇಳಲು ಬಂದಾಗಾ, ಗೌಡರೇ ಇಂತಹ ಉತ್ತಮ ಕೆಲಸಕ್ಕೆ ನನ್ನ ಅನುಮತಿ ಯಾಕೇ, ಧೈರ್ಯದಿಂದ ಮುಂದುವರೆಸಿ ಶಹಭಾಷ್ ಎಂದು ಬೆನ್ನು ತಟ್ಟಿದ್ದರು ಪಟೇಲರು.

pat3

ದುರಾದೃಷ್ಠವಷಾತ್ ಆ ಸ್ವಾತಂತ್ರ್ಯವೇ ಸ್ವೇಚ್ಛೆಯಾಗಿ ಕೆಲವು ಮಂತ್ರಿಗಳು, ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಪಟೇಲರಿಗೆ ಅಪಖ್ಯಾತಿಯನ್ನು ತಂದಿದ್ದಲ್ಲದೇ, ತಮ್ಮ ಪಕ್ಷದ 116 ಶಾಸಕರ ಪೈಕಿ 52 ಭಿನ್ನಮತೀಯ ಶಾಸಕರು ಪಟೇಲರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರೂ, ಪಟೇಲರೆಂದೂ ಭಿನ್ನಮತೀಯರನ್ನು ಕರೆದು ಮಾತನಾಡಿಸಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಹಾತೊರೆಯದೇ ಇದು ಅವರದ್ದೇ ಸರ್ಕಾರವಾಗಿದ್ದು, ಬೇಕಿದ್ದರೆ ಆ ಶಾಸಕರೇ ಸರ್ಕಾರವನ್ನು ಉಳಿಸಿಕೊಳ್ಳಲಿ ಎಂದು ಹಿರಿಯ ಸಚಿವರಾದ ಎಂ ಪಿ ಪ್ರಕಾಶ್ ಹಾಗೂ ನಾಣಯ್ಯನವರ ಮೂಲಕ ಸಂದೇಶ ರವಾನಿಸಿ ತಮ್ಮ ಕಾಯಕದಲ್ಲಿ ನಿರತರಾಗಿಬಿಟ್ಟರು. ಚುನಾವಣೆಗೆ ಇನ್ನೂ 6 ತಿಂಗಳುಗಳು ಬಾಕೀ ಇರುವಾಗಲೇ 1999ರ ಅಕ್ಟೋಬರ್ 7 ರಂದು ಸರ್ಕಾರವನ್ನು ವಿಸರ್ಜಿಸಿ ಒಟ್ಟು 1200 ದಿನಗಳಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.

pat5

ನಂತರ ನಡೆದ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದಲೇ, ತಮ್ಮ ಬಹುಕಾಲದ ಗೆಳೆಯರಾದ ಜಾರ್ಜ್ ಫರ್ನಾಂಡೀಸ್ ಮತ್ತು ರಾಮಕೃಷ್ಣ ಹೆಗಡೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಿಜೆಪಿಯ ಜತೆಗೆ ಹೊಂದಾಣಿಕೆಗೆ ಮಾಡಿಕೊಂಡು 1999ರ ವಿಧಾನಸಭಾ ಚುನಾವಣೆ ಎದುರಿಸಿ ತಮ್ಮ ಸ್ವಕ್ಷೇತ್ರ ಚನ್ನಗಿರಿಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ವಡ್ನಾಳ್ ರಾಜಣ್ಣ ಆವರ ವಿರುದ್ಧ ಸೋಲನ್ನಭಿಸಿ ರಾಜ್ಯದಲ್ಲಿ ಎಸ್. ಎಂ. ಕೃಷ್ಣಾರವರ ನೇತೃತ್ವದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗ, ಕೃಷ್ಣರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುವುದರೊಂದಿಗೆ ತಮ್ಮ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತಾರೆ. ಪಟೇಲರ ಆಗಮನವನ್ನು ದೂರದಿಂದಲೇ ಗಮನಿಸಿದ ಕೃಷ್ಣರವರು ವಿಧಾನ ಸೌಧದ ಮೆಟ್ಟಿಲುಗಳನ್ನು ಇಳಿದು ಬಂದು ಪಟೇಲರನ್ನು ಮಾತನಾಡಿಸಿ ನಿಮ್ಮಂತಹ ಹಿರಿಯರು ವಿಧಾನ ಸಭೆಯ ವಿರೋಧಪಕ್ಷದ ಸಾಲಿನಲ್ಲಿ ಇರಬೇಕಿತ್ತು ಎಂದು ಹೇಳಿದ್ದದ್ದು ಗಮನಾರ್ಹವಾಗಿತ್ತು.

ಪಟೇಲರು ಮಂತ್ರಿಯಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ, ಅವರು ಅಧಿಕಾರವನ್ನು ಕುಟುಂಬಕ್ಕಾಗಿ ದುರುಪಯೋಗ ಮಾಡಲಿಲ್ಲ. ತಮ್ಮ ಯಾವ ಮಕ್ಕಳನ್ನೂ ಚುನಾವಣೆಗೆ ನಿಲ್ಲಿಸಲು ಒಪ್ಪಲಿಲ್ಲ. ಸದಾ ಸ್ನೇಹಿತರೊಡನೆ ಮತ್ತು ಕುಟುಂಬದೊಡನೆ ಅತ್ಯಂತ ಮನಃಪೂರ್ವಕವಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಮಕ್ಕಳ ಮೇಲಿನ ಪ್ರೀತಿಗಿಂತ ಮೊಮ್ಮಕ್ಕಳ ಮೇಲಿನ ಪ್ರೀತಿ ಅಗಾಧವಾಗಿತ್ತು. ಅವರ ಮೊಮ್ಮಗಳು ಸಣ್ಣ ವಯಸ್ಸಿನಲ್ಲಿಯೇ ಭಯಂಕರ ಖಾಯಿಲೆಯಿಂದಾಗಿ ಅಸುನೀಗಿದಾಗ ಬಹಳ ದಿನಗಳ ಕಾಲ ಪಟೇಲರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಎಂತಹ ವಿರೋಧಿಗಳನ್ನೂ ಅತ್ಯಂತ ವಿಶ್ವಾಸದಿಂದ ಕಾಣುತ್ತಿದ್ದ ಕಾರಣ ಅವರೊಬ್ಬ ಅಜಾತಶತ್ರುವಾಗಿದ್ದರು ಎಂದರೂ ಅತಿಶಯವಲ್ಲ.

ನೇರವ್ಯಕ್ತಿತ್ವ ಮತ್ತು ಹಾಸ್ಯ ಪ್ರವೃತ್ತಿ ಅವರಿಗೆ ಜನ್ಮಜಾತವಾಗಿ ಬಂದಿದ್ದು,ಅದರಿಂದಾಗಿ ಪಟೇಲರ ಸಾಧನೆಗಳು, ಸಮಾಜವಾದಿ ವಿಚಾರಧಾರೆಗಳು ಹಿನ್ನೆಲೆಗೆ ಸರಿದು ನಿಂತಿತು. ಪಟೇಲರು ಇದ್ದಾರೆ ಎಂದರೆ ಅಲ್ಲೊಂದು ನವಿರಾದ ಹಾಸ್ಯವಿರುತ್ತದೆ ಮತ್ತು ಅಷ್ಟೇ ಮೊನಚಾದ ಕುಟುಕುವಂತಹ ಉತ್ತರವಿರುತ್ತದೆ ಎನ್ನುವುದಕ್ಕೆ ಈ ಪ್ರಸಂಗವನ್ನು ಹೇಳಲೇ ಬೇಕು ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿ.ಮೀ ದೂರದಲ್ಲಿದ್ದ ಸೂಳೆ ಕೆರೆ ಎಂಬ ಹೆಸರು ಜನರಲ್ಲಿ ತಪ್ಪು ಭಾವನೆ ಕಲ್ಪಿಸುತ್ತದೆ ಎಂಬ ಕಾರಣ ನೀಡಿ ಈ ಕೆರೆಯನ್ನು ಶಾಂತಿ ಸಾಗರ ಎಂದು ಪುರರ್ನಾಮಕರಣ ಮಾಡಬೇಕೆಂಬ ಪ್ರಸ್ತಾಪನೆ ಇಡುತ್ತಾರೆ.

ಅವರ ಪ್ರಸ್ತಾವನೆಗೆ ಒಪ್ಪದ ಪಟೇಲರು, ಇರಲಿ ಬಿಡ್ರಿ. ಸೂಳೆ ಕೆರೆ ಅನ್ನೋ ಹೆಸರೇ ಇತಿಹಾಸ ಪ್ರಸಿದ್ಧವಾಗಿದೆ. ಈಗ ಅದರ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿ ಇತಿಹಾಸವನ್ನು ತಿದ್ದಲಾಗದು ಎಂದಿದ್ದಲ್ಲದೇ, ಹಾಗೆಯೇ, ಮಾತನ್ನು ಮುಂದುವರೆಸಿ, ಒಬ್ಬ ಹೆಣ್ಣು ಮಗಳನ್ನು ಸೂಳೆಯ ಪಟ್ಟಕ್ಕೇರಿಸುವುದು ಯಾರು? ಈ ಸಮಾಜದ ದುರುಳ ಗಂಡಸರು ಮತ್ತು ಬಾಯಿ ಚಪಲ ಅತಿಯಾಗಿರುವ ಹೆಂಗಸರಲ್ಲವೇ? ಒಬ್ಬ ಹೆಣ್ಣಿಗೆ ಮೈ ಮಾರಿಕೊಳ್ಳುವುದನ್ನು ಅನಿವಾರ್ಯವಾಗುವಂತೆ ಮಾಡಿದ್ದು ಇದೇ ಸಮಾಜವಲ್ಲವೇ? ಈ ಸಮಾಜದ ಕಣ್ಣಲ್ಲಿ ಸೂಳೆ ಎನ್ನಿಸಿಕೊಂಡ ಆ ಹೆಣ್ಣು ಮಗಳು ಕೆರೆ ಕಟ್ಟಿಸುವ ಮೂಲಕ ಇಂದಿಗೂ ಸಹಾ ಲಕ್ಷಾಂತರ ಜನರ ನೆಮ್ಮದಿಗೆ ದಾರಿ ಮಾಡಿಕೊಟ್ಟಳು ಎಂದ್ದಲ್ಲಿ ಅದನ್ನೇಕೆ ತಪ್ಪೆಂದು ಭಾವಿಸಿ ಬದಲಿಸ ಬೇಕು? ಎಂದು ಕೇಳಿದ್ದರಂತೆ. ಇಂತಹ ಪಟೇಲರನ್ನು ಆಜ್ ತಕ್ ಎನ್ನುವ ಹಿಂದಿ ಛಾನೆಲ್ಲಿನಲ್ಲಿ ನಡೆಸಿದ ಸಂದರ್ಶನವನ್ನು ತಿರುಚಿ women and wine are my weakness ಅಂದರೆ ಮಾನಿನಿ ಮತ್ತು ಮದಿರೆ ನನ್ನ ದೌರ್ಬಲ್ಯ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆಂದು ವಿಕೃತವಾಗಿ ವರದಿ ಮಾಡಿ ಪಟೇಲರ ವ್ಯಕ್ತಿತ್ವಕ್ಕೆ ಕಳಂತ ತರುವುದರಲ್ಲಿ ಕೆಲ ಕಾಣದ ಕೈಗಳು ಸಫಲರಾಗಿದ್ದಂತೂ ಸುಳ್ಳಲ್ಲ.

ಪಟೇಲರ ಸರಳತೆಗೆ ಈ ಒಂದು ಪ್ರಸಂಗವನ್ನು ಹೇಳಲೇ ಬೇಕು. ಅದೊಮ್ಮೆ ಪಟೇಲರು ತಮ್ಮೂರಿನಲ್ಲಿ ಇದ್ದಾಗ, ಆ ಊರಿನ ಅತಿಯಾದ ಸಿನಿಮಾ ಪ್ರೇಮಿಯಾಗಿದ್ದ ಚಪ್ಪಲಿ ಹೊಲೆಯುವ ಹುಡುಗನೊಬ್ಬ ಪಟೇಲರ ಬಳಿ ಬಂದು, ಸಾಹೇಬ್ರೇ ಈ ಸಲ ನಮ್ಮೂರ ಜಾತ್ರೆಗೆ ಅಂಬರೀಷಣ್ಣ ಮತ್ತು ಅನಂತನಾಗ್ ಅವರನ್ನು ಕರೆಸಿ ಎಂಬ ಬೇಡಿಕೆಯಿಟ್ಟನಂತೆ. ಆ ಹುಡುಗನ ಮುಗ್ಧತೆಯನ್ನು ಮೆಚ್ಚಿದ ಪಟೇಲರು ಸುಮ್ಮನೇ ನಕ್ಕು ಆಯ್ತು ಹೋಗೋ ಎಂದವರು, ಕೊಟ್ಟ ಮಾತಿಗೆ ತಪ್ಪದೆ ಸುಮಾರು 1500 ಜನರಿರುವ ಕಾರಿಗನೂರಿನ ಜಾತ್ರೆಗೆ ಆ ಇಬ್ಬರು ನಟರನ್ನು ಕರೆತಂದಾಗ ಆ ಹುಡುಗನ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ಬೇರೆ ಹೇಳಬೇಕಿಲ್ಲ.

pat1

ನೇರ ನಡೆ ಮತ್ತು ನುಡಿಗಳಿಂದ ಹಿಡಿದ ಕೆಲಸವನ್ನು ಮಾಡಿಯೇ ತೀರುತ್ತಿದ್ದ ಪಟೇಲರು 7 October 1999ರಂದು ತಮ್ಮ ವಯೋಸಹಜವಾಗಿ ನಿಧನರಾಗುವ ಮೂಲಕ ಸಮಾಜವಾದಿ ಮೂಲದ ಕೊಂಡಿಯೊಂದು ರಾಜ್ಯ ರಾಜಕಾರಣದಲ್ಲಿ ಮಿಂಚಿ ಮರೆಯಾಗುತ್ತದೆ. ಅವರ ಅಂತ್ಯ ಸಂಸ್ಕಾರಕ್ಕೆ, ಜಾರ್ಜ್ ಫೆರ್ನಾಂಡಿಸ್, ನಿತೇಶ್ ಕುಮಾರ್ ಮತ್ತು ಶರದ್ ಯಾದವ್, ದೂರದ ಬಿಹಾರ್ ನಿಂದ ಬಂದಿದ್ದದ್ದು ವಿಶೇಷವಾಗಿತ್ತು. ಪಟೇಲರು ನಮ್ಮ ನಾಡು ಕಂಡ ಅತ್ಯಂತ ಧೀಮಂತ ವ್ಯಕ್ತಿಯಾಗಿದ್ದಲ್ಲದೇ, ನಾಡು ಮತ್ತು ನುಡಿಯ ವಿಚಾರ ಬಂದಾಗ ಕೆಚ್ಚದೆಯಿಂದ ಎದುರಿಸಿ ಸೈ ಎನಿಸಿಕೊಂಡ ಜೆ. ಹೆಚ್. ಪಟೇಲರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್

ರಾಜ್ಯದಲ್ಲಿ ಈಗ ಪಂಚಾಯತಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮತ್ತು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೇ ಕೇವಲ ರಾಜ್ಯದಲ್ಲೇಕೇ, ಇಡೀ ರಾಷ್ಟ್ರದಲ್ಲಿಯೇ ಗ್ರಾಮೀಣ ಮಟ್ಟಕ್ಕೆ ಅಧಿಕಾರವನ್ನು ವಿಕೇಂದ್ರೀಕರಿಸಿದ ಹಿಂದಿರುವ ಕಥೆ ಬಲು ರೋಚಕವಾಗಿದೆ. ಅದು 1983, ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಪರ್ವ. ಸುಮಾರು 35-37 ವರ್ಷಗಳ ಕಾಲ ಕಾಂಗ್ರೇಸ್ ಆಡಳಿತದಿಂದ ಬೇಸತ್ತಿದ್ದ ಕನ್ನಡಿಗರು ಮೊತ್ತ ಮೊದಲ ಬಾರಿಗೆ ಕಾಂಗ್ರೇಸ್ಸನ್ನು ಧಿಕ್ಕರಿಸಿ, ಜನತಾ ಪಕ್ಷ + ಕ್ರಾಂತಿರಂಗ= ಜನತಾರಂಗವನ್ನು ಬೆಂಬಲಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ , ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ, ರಾಜ್ಯ ಕಂಡ ಅತ್ಯಂತ ಚಾಣಾಕ್ಷ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಕಾಂಗ್ರೇಸ್ಸೇತರ ಸರ್ಕಾರ ಆಡಳಿತಕ್ಕೆ ಬಂದ್ದಿತ್ತು. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದ ಕ್ರಾಂತಿರಂಗದ ಬಂಗಾರಪ್ಪ ನಿರಾಶರಾಗಿ ಸರ್ಕಾರದಿಂದ ದೂರ ಉಳಿದಾಗ ಕ್ರಾಂತಿರಂಗದ ಮತ್ತೊಬ್ಬ ಹಿರಿಯರಿಗೆ ಕೇಳಿದ ಖಾತೆಯ ಮಂತ್ರಿಗಿರಿ ಸಿಗುತ್ತಿತ್ತಾದರೂ, ಅವರು ಬಯಸೀ ಬಯಸೀ, ಯಾರೂ ಇಚ್ಛೆ ಪಡದ ಖಾತೆಯಾದ ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೇಳಿ ಪಡೆದದ್ದಲ್ಲದೇ, ಆ ಖಾತೆಯ ಮೂಲಕವೇ ಜನಸಾಮಾನ್ಯರಿಗೆ ಅದ್ಭುತ ಸೇವೆಯನ್ನು ಮಾಡಿ ಎಲ್ಲರೂ ಮೂಗಿನ ಮೇಲೆ ಬೆರೆಳಿಡುವಂತೆ ಮಾಡಿದ್ದಲ್ಲದೇ ಇಂದಿಗೂ ಹಳ್ಳಿಗಾಡಿನಲ್ಲಿ ಅವರ ಸೇವೆಯಿಂದಾಗಿ ನೀರ್ ಸಾಬ್ ಎಂದೇ ಪ್ರಖ್ಯಾತರಾಗಿರುವ ಅಬ್ದುಲ್ ನಜೀರ್ ಸಾಬ್ ಅವರು ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯವರಾದ ಅಬ್ದುಲ್ ನಜೀರ್ ಸಾಬ್, 25 ಡಿಸೆಂಬರ್ 1932, ತಮಿಳು ನಾಡಿನ ಬಯನಾಪುರಂ ಎಂಬಲ್ಲಿ ಜನಿಸಿದರೂ ಬೆಳೆದದ್ದೆಲ್ಲಾ ಗುಂಡ್ಲುಪೇಟೆಯಲ್ಲಿಯೇ. ಮನೆಯ ಆರ್ಥಿಕ ದುಸ್ಥಿತಿಯ ಪರಿಣಾಮವಾಗಿ ಹೈಸ್ಕೂಲ್ ವರೆಗೂ ಓದಿದ್ದ ನಜೀರ್ ಸಾಬ್, ಕೃಷಿ ಕಾರ್ಮಿಕರನ್ನು ಸಂಘಟಿಸುವುದು ಮತ್ತು ದೀನ ದಲಿತರ ಉನ್ನತಿಗಾಗಿ ಕೆಲಸ ಮಾಡುತ್ತಲೇ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು. ಗುಂಡ್ಲು ಪೇಟೆಯ ಅಂದಿನ ಶಾಸಕಿಯಾಗಿದ್ದ ಕೆ.ಎಸ್ ನಾಗತ್ನಮ್ಮ ಅವರ ಗರಡಿಯಲ್ಲಿಯೇ ಪಳಗಿ ,ಗುಂಡ್ಲು ಪೇಟೆ ಪಟ್ಟಣದ ಮುನ್ಸಿಪಲ್ ಕೌನ್ಸಿಲರ್ ಆಗಿ ನಂತರ ಅಧ್ಯಕ್ಷರು ಆಗಿ, ಕ್ರಾಂಗ್ರೇಸ್ ಪಕ್ಷದ ಕಟ್ಟಾಳುವಾಗಿದ್ದರು. ಆಗ ಕಾಂಗ್ರೇಸ್ಸಿನಲ್ಲಿ ಕೋಲಾರದ ಶ್ರೀನಿವಾಸಪುರದ ರಮೇಶ್ ಕುಮಾರ್ ಮತ್ತು ಆಂಧ್ರ ಮೂಲದವರಾಗಿದ್ದರೂ ಬೆಂಗಳೂರಿನ ಮಲ್ಲೇಶ್ವರದ ಶಾಸಕರಾಗಿದ್ದ ರಘುಪತಿ ಮತ್ತು ನಜೀರ್ ಸಾಬ್ ಅಮರ್ ಅಕ್ವರ್ ಆಂಥೋಣಿಯವರಂತೆ ತ್ರಿಮೂರ್ತಿಗಳೆಂದೇ ಖ್ಯಾತರಾಗಿದ್ದರು.. ಇನ್ನೂ ಬಿಸಿರಕ್ತದ ಚುರುಕಾದ ಆ ಯುವಕರ ಬಗ್ಗೆ, ಅದೇಕೋ ಏನೋ ಕಾಂಗ್ರೇಸ್ ಆಸಕ್ತಿ ತೋರದೇ, ಮೂಲೆ ಗುಂಪು ಮಾಡಿತ್ತು. ಸಾಮಾನ್ಯವಾಗಿ ಯಾವ ರಾಜಕಾರಣಿಗಳನ್ನೂ ಹೊಗಳದ ಲಂಕೇಶ್ ರವರು ತಮ್ಮ ಪತ್ರಿಕೆಯಲ್ಲಿ ನಜೀರ್ ಸಾಬ್ ಅವರ ವ್ಯಕ್ತಿತ್ವದ ಬಗ್ಗೆ ಒಂದು ವಾಸ್ತವಿಕ ಚಿತ್ರಣದ ಲೇಖನವೊಂದನ್ನು ಬರೆದು ಅದಕ್ಕೆ ನೀಡಿದ್ದ ಶೀರ್ಷಿಕೆ ಕಾಂಗೈ ಕೊಚ್ಚೆಯಲ್ಲೊಂದು ಕಮಲ – ನಜೀರ್ ಸಾಬ್‌ ಎಂಬುದು ಎಷ್ಟು ಅರ್ಥಗರ್ಭಿತವಾಗಿತ್ತು ಎಂದೆನಿಸುತ್ತದೆ.

ಮುಂದೆ ಇಂದಿರಾಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ದೇವರಾಜ ಅರಸು ರವರು ಕ್ರಾಂಗ್ರೇಸ್ಸಿನಿಂದ ಹೊರಬಂದು ಶ್ರೀ ಬಂಗಾರಪ್ಪನವರ ಸಹಕಾರದೊಂದಿಗೆ ಕ್ರಾಂತಿರಂಗ ಪಕ್ಷವನ್ನು ಕಟ್ಟಿದಾಗ ನಜೀರ್ ಸಾಬ್ ಆರಸು ಅವರನ್ನೇ ಅನುಸರಿಸಿ, ಅರಸು ಅವರ ನಿಧನರಾದ ನಂತರ ಕ್ರಾಂತ್ರಿರಂಗದ ಅಧ್ಯಕ್ಷರೂ ಆಗಿದ್ದರು. 1983ರಲ್ಲಿ ಜನತಾ-ರಂಗದ ಭಾಗವಾಗಿ ಹೆಗಡೆ ಸರ್ಕಾರದ ಮಂತ್ರಿಗಳಾಗಿದ್ದು ಈಗ ಇತಿಹಾಸ.

ಗ್ರಾಮೀಣಾಭಿವೃದ್ಧಿ ‍ಸಚಿವರಾಗಿ ಅಧಿಕಾರವಹಿಸಿಕೊಂಡು ಮೈಮರೆಯದೇ ತಕ್ಷಣವೇ ಕಾರ್ಯ ಪ್ರವೃತ್ತರಾಗಿ, ಆ ಸಮಯದಲ್ಲಿ ನಾಡಿನಾದ್ಯಂತ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಸರಿಯಾಗಿ ಮಳೆಯೂ ಬಾರದೇ ಬರಗಾಲದಿಂದ ಕೆರೆ ಕಟ್ಟೆ, ಭಾವಿಗಳೆಲ್ಲವೂ ಬರಿದಾಗಿ ಕುಡಿಯಲೂ ನೀರಿಲ್ಲದಿದ್ದಂತಹ ಪರಿಸ್ಥಿತಿ ಇದ್ದದ್ದನ್ನು ಗಮನಿಸಿ ಕೂಡಲೇ ಸರ್ಕಾರದ ವತಿಯಿಂದ ಅಂತಹ ಪ್ರತೀ ಬರದ ಪೀಡಿತ ಹಳ್ಳಿಗಳಲ್ಲಿಯೂ ಕೊಳವೇ ಭಾವಿಗಳನ್ನು ಕೊರೆಸಿ, ಕೈ ಪಂಪ್ ಹಾಕಿಸಿ ಕೊಡುವ ಮೂಲಕ ಜನರಿಗೆ ನೀರನ್ನು ಒದಗಿಸಿದ ಆಧುನಿಕ ಭಗೀರಥ ಎಂದೆನಿಸಿದ ಕಾರಣ ಜನರು ಅವರನ್ನು ನೀರ್ ಸಾಬ್ ಎಂದೇ ಪ್ರೀತಿಯಿಂದ ಕರೆಯತೊಡಗಿದರು.

ಹೇಳೀ ಕೇಳೀ ಭಾರತ ಕೃಷಿ ಪ್ರಧಾನವಾಗಿರುವ ಹಳ್ಳಿಗಳಿಂದ ಕೂಡಿರುವ ರಾಷ್ಟ್ರ. ಬ್ರಿಟೀಷರು ನಮ್ಮನ್ನು ಆಕ್ರಮಿಸಿಕೊಳ್ಳುವವರೆಗೂ ಬಹುತೇಕ ಹಳ್ಳಿಗಳ ಆಡಳಿತ ಆಯಾಯಾ ಪಂಚಾಯ್ತಿ ಕಟ್ಟೆಗಳಲ್ಲಿಯೇ ಮುಗಿದು ಹೋಗುತ್ತಿತ್ತು. ಆದರೇ ಬದಲಾದ ರಾಜಕೀಯ ಕಾರಣಗಳಿಂದಾಗಿ, ಪ್ರಜಾಪ್ರಭುತ್ವ ಬಂದರೂ ಆಡಳಿತವೆಲ್ಲವೂ ಹಳ್ಳಿಯಿಂದ ಕೈ ಜಾರಿ ದಿಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು. ಬಡತನ ಮತ್ತು ಶೋಷಣೆಗಳನ್ನು ಖುದ್ದಾಗಿ ಅನುಭವಿಸಿದ್ದ ಸಮಾಜವಾದಿ ಹಿನ್ನಲೆಯುಳ್ಳ ನಜೀರ್ ಸಾಬ್ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮಹಾತ್ಮಾ ಗಾಂಧಿಯವರ ಕನಸಿನ ಕೂಸಾಗಿದ್ದ ಸ್ವರಾಜ್ಯ ಕಲ್ಪನೆಯ ಭಾಗವಾಗಿ ಗ್ರಾಮ ಪಂಚಾಯಿತಿ ಮತ್ತು ಮಂಡಲ ಪಂಚಾಯಿತಿಯನ್ನು ಭಾರೀ ವಿರೋಧಗಳನ್ನು ಎದುರಿಸಿಯೂ ಜಾರಿಗೆ ತರುವ ಮೂಲಕ ಅಧಿಕಾರವನ್ನು ಪುನಃ ಹಳ್ಳಿಗಳತ್ತ ತರುವುದರಲ್ಲಿ ಯಶಸ್ವಿಯಾದರು.

ಜನ್ಮತಃ ಮುಸ್ಲಿಂ ಆಗಿದ್ದರೂ, ಹಿಂದೂಗಳೊಂದಿಗೆ ಬಹಳ ಸ್ನೇಹ ಸೌಹಾರ್ದಗಳೊಂದಿಗೆ ಗೌರವಾದರಗಳನ್ನು ಪಡೆದುಕೊಂಡು ನಿಜವಾದ ಅರ್ಥದಲ್ಲಿ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿರುವಾಗ ರಾಜ್ಯದಾದ್ಯಂತ ಕೊಳವೇ ಭಾವಿ‌ಗಳನ್ನು ತೆಗೆಸಿದ್ದನ್ನೇ ಮುಂದು ಮಾಡಿಕೊಂಡು ಬಹಳಷ್ಟು ಜನರು ತಮ್ಮಷ್ಟಕ್ಕೆ ತಾವು ಎಗ್ಗಿಲ್ಲದೇ ಕೊಳವೇ ಭಾವಿ‌ಗಳನ್ನು ತೆಗೆಸಿ ಅಂತರ್ಜಲ ಬರಿದು ಮಾಡುತ್ತಿರುವುದನ್ನು ಗಮನಿಸಿದ ನಜೀರ್ ಸಾಬ್, ಎರಡು ಬೋರ್‌ವೆಲ್‌ಗಳ ನಡುವೆ ಕಡ್ಡಾಯವಾಗಿ 500 ಮೀಟರ್ ಗಳ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಕಾನೂನನ್ನು ಜಾರಿಗೆ ತಂದು ಅಂತರ್ಜಲದ ಬಗ್ಗೆ ಕಾಳಜಿ ವಹಿಸಿದ್ದರು.

ನಜೀರ್ ಸಾಬ್ ಅಂತಿಮ ದಿನಗಳು ಬಹಳ ಯಾತನಾಮಯವಾಗಿತ್ತು. ಪುಪ್ಪುಸ ಕ್ಯಾನ್ಸರ್ ನಿಂದ ಉಲ್ಬಣಾವಸ್ಥೆಗೆ ತಲುಪಿದ್ದ ನಜೀರ್ ಸಾಬ್ ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಸಹಾ ಅವರು ಹೆಚ್ಚು ದಿನ ಬದುಕುವುದಿಲ್ಲ ಎಂದು ತಿಳಿಸಿದ್ದ ಕಾರಣ ಅವರ ಬಹುತೇಕ ಸಂಬಂಧಿಗಳು ಮತ್ತು ಹಿತೈಷಿಗಳು ನೋಡಿಕೊಂಡು ಹೋಗಲು ಆಸ್ಪತ್ರೆಗೆ ಬರುತ್ತಿದ್ದರು. ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿ ತಂದಿದ್ದನ್ನು ನೋಡಿ ಸಂತೋಷವಾಗಿದ್ದ ಅಂದಿನ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರು ನಜೀರ್ ಸಾಬ್ ಅವರ ಆರೋಗ್ಯವನ್ನು ವಿಚಾರಿಸಲು ಅವರ ಆಪ್ತ ಮಿತ್ರ ಸ್ಯಾಮ್ ಪಿತ್ರೋಡ ಅವರನ್ನು ಕಳುಹಿಸಿದ್ದರು. ಅದೇ ಸಮಯದಲ್ಲಿ ಒಂದಿಬ್ಬರು ಪ್ರಗತಿ ಪರರೂ ಆಸ್ಪತ್ರೆಗೆ ಬಂದಿದ್ದು ಅವರು ಏನು ಸಾಹೇಬ್ರೇ ನಿಮ್ಮ ಆರೋಗ್ಯ ಹೇಗಿದೆ? ಎಂದು ವಿಚಾರಿಸಿದಾಗ, ಕ್ಯಾನ್ಸರಿನಿಂದ ವಿಷಮಸ್ಥಿತಿಯನ್ನು ತಲುಪಿದ್ದ ಸಮಯದಲ್ಲೂ, ನನ್ನ ಆರೋಗ್ಯದ ವಿಚಾರ ಬಿಡಿ. ಈ ವರ್ಷ ರಾಜ್ಯದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದು ರಾಜ್ಯದಲ್ಲೆಲ್ಲಾ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿರುವ ಕಾರಣ, ಚೀನಾದಿಂದ ಒಳನಾಡು ಮೀನುಗಾರಿಕೆಯ ಹೊಸ ವಿಧಾನಗಳ ಕುರಿತಂತೆ ಮಾಹಿತಿ ಪಡೆದು ಬ್ಲೂಪ್ರಿಂಟ್ ಮಾಡಿಸ್ತಾ ಇದ್ದೀನಿ. ಅದು ಆದಷ್ಟು ಬೇಗ ಜಾರಿಗೆಯಾಗಿ ನಮ್ಮ ಹಳ್ಳಿಗಾಡಿನ ರೈತರಿಗೆ ನೆಮ್ಮದಿ ತರಲಿ ಅನ್ನೋದೆ ನನ್ನ ಉದ್ದೇಶ ಎಂದಿದ್ದರಂತೆ.

ಸಾವಿಗೆ ಒಂದೆರಡು ಗಂಟೆಗಳ ಮುಂಚೆ ಆ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್. ಆರ್. ಬೊಮ್ಮಾಯಿಯವರು ಕೆಲ ಸಚಿವರೊಂದಿಗೆ ನಜೀರ್ ಸಾಬ್ ಆವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಲು ಬಂದು, ಉಭಯ ಕುಶಲೋಪರಿ ವಿ‍ಚಾರಿಸಿದ ನಂತರ ನಜೀರ್ ಸಾಬ್ ಅವರ ಹೆಗಲು ಮೇಲೆ ಕೈಇರಿಸಿ, ಸಾಹೇಬ್ರೇ ನೀವೇನೂ ಕಾಳಜಿ ಮಾಡಿಕೊಳ್ಳಬೇಡಿ, ಇಲ್ಲಿನ ಒಳ್ಳೆಯ ಔಷಧೋಪಚಾರದಿಂದ ಅತೀ ಶೀಘ್ರವಾಗಿಯೇ ಗುಣಮುಖರಾಗುತ್ತೀರಿ. ನಿಮಗೇನಾದರೂ ಸಮಸ್ಯೆ ಇದ್ದಲ್ಲಿ ನನ್ನೊಂದಿಗೆ ಹೇಳಿ, ನಾನು ಪರಿಹರಿಸುತ್ತೇನೆ ಎಂದು ಹೇಳಿದಾಗ ನಜೀರ್ ಸಾಬ್ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿದ್ದಾಗ ಮತ್ತೊಮ್ಮೆ ಸ್ವಲ್ಪ ಎತ್ತರದ ಧ್ವನಿಯಲ್ಲಿ ಸಾಹೇಬ್ರೇ, ನಿಮ್ಮ ಕುಟುಂಬದಲ್ಲಿ ಯಾವುದಾದರೂ ಸಮಸ್ಯೆ ಇದ್ಯೇ? ಎಂದು ವಿಚಾರಿಸಿದಾಗ,

ತಮಗೆ ಹಾಕಿದ್ದ ಮಾಸ್ಕ್ ಸರಿಸಿ, ಸರ್, ನನ್ನ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ನಿರ್ವಸತಿಕರಿಗೆಂದು ಸಾವಿರ ಮನೆಗಳ ಹೊಸಾ ಕಾರ್ಯಕ್ರಮವೊಂದನ್ನು ರೂಪಿಸಿದ್ದೇನೆ. ಅದರಂತೆ ಪ್ರತೀ ತಾಲೂಕಿನ ಬಡವರಿಗೆ ವರ್ಷಕ್ಕೆ ಒಂದು ಸಾವಿರ ಮನೆಗಳನ್ನು ಕಟ್ಟಿಸಿತ್ತಾ ಹೋದ್ರೇ, ಇನ್ನೈದು ವರ್ಷಗಳಲ್ಲಿ ಇಡೀ ರಾಜ್ಯದ ವಸತಿರಹಿತರ ಸಮಸ್ಯೆಯೆ ಬಗೆಹರಿದು, ರಾಜ್ಯಕ್ಕೂ ಮತ್ತು ನಿಮಗೂ ಒಳ್ಳೆಯ ಹೆಸರು ಬರುತ್ತದೆ. ಇದಕ್ಕೆಂದೇ ಐರ್‌ಡಿಪಿಯಲ್ಲಿ ಹೆಚ್ಚುವರಿಯಾಗಿ ಮಿಕ್ಕಿರುವ 13 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಆದಷ್ಟು ಬೇಗನೇ ಕೆಲಸ ಶುರು ಮಾಡಿಸಿ ಬಿಡಿ ನಮ್ಮ ಸರಕಾರಕ್ಕೆ ಪುಣ್ಯ ಬರುತ್ತದೆ ಎಂದ್ದಿದ್ದರಂತೆ.

ಇಂದೋ ನಾಳೆಯೋ ಸಾವಿನ ಮನೆಯ ಕದ ತಟ್ಟುತ್ತಿದ್ದ ವ್ಯಕ್ತಿಯು ಸ್ವಂತಕ್ಕೇನೂ ಕೇಳದೇ, ನಾಡಿನ ವಸತಿ ರಹಿತರಿಗೋಸ್ಕರ ಮನೆಕಟ್ಟಿಸಿ ಕೊಡಬೇಕೆಂಬ ಕೋರಿಕೆ ಕೇಳಿದ ಮುಖ್ಯಮಂತ್ರಿಗಳು ಮತ್ತು ನಜೀರ್ ಸಾಹೇಬರ ರಾಜಕೀಯ ಒಡನಾಡಿಗಳಾದ ರಮೇಶ್ ಕುಮಾರ್ ಮತ್ತು ಎಂ.ರಘುಪತಿ, ಪತ್ರಕರ್ತ ಮಿತ್ರರಾದ ಇಮ್ರಾನ್ ಖುರೇಶಿ,ಇ.ರಾಘವನ್ ಮತ್ತು ರವೀಂದ್ರ ರೇಷ್ಮೆಯವರು ಮಮ್ಮಲ ಮರುಗಿದ್ದರೆ, ರ ಮುಖ್ಯಮಂತ್ರಿಗಳು ಕೊಠಡಿಯಿಂದ ಹೊರಬಂದು ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿದ್ದರಂತೆ. ಈ ಘಟನೆ ನಡೆದ ಒಂದೆರಡು ಗಂಟೆಗಳಲ್ಲಿಯೇ ಅತ್ಯಂತ ಕ್ರಿಯಾಶೀಲ ಹಾಗೂ ಮಾನವೀಯ ಸಂವೇದನೆಯುಳ್ಳ, ಪ್ರಾಮಾಣಿಕ ರಾಜಕಾರಣಿ ನಜೀರ್ ಸಾಬ್ ಮತ್ತೆ ಬಾರದ ಲೋಕಕ್ಕೆ ಹೋಗಿಬಿಟ್ಟರು.

ನಜೀರ ಸಾಬ್ ಅವರ ನಿಧನರಾದ ನಂತರ 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಪಕ್ಷಭೇದವೆಣಿಸದೆ ಅತ್ಯಂತ ಪ್ರಾಂಜಲ ಮನಸ್ಸಿನಿಂದ ಸಂಸತ್ತಿನಲ್ಲಿ ಸಂವಿಧಾನದ 64ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಇದು ಕರ್ನಾಟಕದ ಜನತಾದಳ ರಾಜ್ಯ ಸರಕಾರದ ಮಾದರಿ ಎಂದು ತಿಳಿಸಿದ್ದರು. ಕಾರಣಾಂತರಗಳಿಂದ ಆಗ ಆ ಮಸೂದೆ ಅಂಗಿತವಾಗದಿದ್ದರೂ, ನಂತರ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಸಂವಿಧಾನದ 73ನೇ ಹಾಗೂ 74ನೇ ತಿದ್ದುಪಡಿಕಾಯ್ದೆಗಳು ನಜೀರ್ ಸಾಬ್ ರಾಜ್ಯದಲ್ಲಿ ತಂದ ಸುಧಾರಣೆಗಳು ಅಂದು ಇಡೀ ದೇಶಾದ್ಯಂತ ಜಾರಿಗೆಯಾಗಿ ನಜೀರ್ ಸಾಬ್ ಅವರ ಕನಸು ದೇಶಾದ್ಯಂತ ನನಸಾಯಿತು.

ನಜೀರ್ ಸಾಬ್ ಅವರ ನಿಧನರಾದ ನಂತರ ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ಮಾಡಲು ಮೈಸೂರಿನಲ್ಲಿರುವ ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿ, ಅಂದಿನ ಮಹಾ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಆವರ ಉಸ್ತುವಾರಿಯಲ್ಲಿ ಅಬ್ದುಲ್ ನಜೀರ್‌ಸಾಬ್ ‌ಗ್ರಾಮೀಣಾಭಿವೃದ್ಧಿ ಅಧ್ಯಯನ ಮತ್ತು ತರಬೇತಿ ಸಂಸ್ಥೆಯನ್ನು ಆರಂಭಿಸುವ ಮೂಲಕ ಗ್ರಾಮರಾಜ್ಯದ ಪರಿಕಲ್ಪನೆಗೆ ನಜೀರ ಸಾಬ್ ಅವರು ನೀಡಿದ ಕೊಡುಗೆಯ ಐತಿಹಾಸಿಕ ಸ್ಮಾರಕವನ್ನಾಗಿಸಿದರು.

ಸರಿ ಸುಮಾರು ಐದೂವರೆ ವರ್ಷಗಳ ಕಾಲ ರಾಜ್ಯದ ಮಂತ್ರಿಯಾಗಿ, ಅಧಿಕಾರ ವಿಕೇಂದ್ರೀಕರಣ ಮಾಡಿದ್ದಲ್ಲದ್ದೇ, ಬರ‌ ಪೀಡಿತ ಪ್ರದೇಶಗಳಲ್ಲಿ ಕೊಳವೇ ಭಾವಿಗಳನ್ನು ಕೊರೆಸಿ, ಜನರ ಬಾಯಾರಿಕೆಯನ್ನು ನಿವಾರಿಸಿದ ಆಧುನಿಕ ಭಗೀರಥ ಎನಿಸಿಕೊಂಡವರು. ಕೇವಲ ಮಂತ್ರಿಯಾಗಿಯೇ, ರಾಜ್ಯದ ಯಾವುದೇ ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಜನ ಮನ್ನಣೆಯನ್ನು ಗಳಿಸಿದ್ದಲ್ಲದೇ, ಇಂದಿಗೂ ರಾಜ್ಯದ ಕೆಲವೆಡೆ ಕೊಳವೆ ಬಾವಿಯ ಹ್ಯಾಂಡ್ ಪಂಪಿನ ಮೇಲೆ ನಜೀರ್ ಸಾಬ್ ಕೃಪೆ ಎಂಬ ಕೆತ್ತನೆಯೊಂದಿಗೆ ಜನರ ಮನಗಳಲ್ಲಿ ಅಚ್ಚೊತ್ತಿರುವುದನ್ನು ಕಾಣಬಹುದು.

ಇಂತಹ ನಿಸ್ವಾರ್ಥ, ಅಪ್ಪಟ ಪ್ರಾಮಾಣಿಕ ರಾಜಕಾರಣಿಯಾಗಿಯೂ, ಅಪರೂಪದ ಜನಸೇವಕ ಮತ್ತು ಜನನಾಯಕರಾಗಿದ್ದ ನೀರ್ ಸಾಬ್ ಅರ್ಥಾತ್ ಅಬ್ದುಲ್ ನಜೀರ್ ಸಾಬ್ ಆವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?