ಅಳಿಲು ಸೇವೆ

ಅದು ಎಂಭತ್ತನೇ ದಶಕದ ಆರಂಭದ ದಿನಗಳು. ನಾನಾಗ ಇನ್ನೂ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದೆ. ಅದೊಂದು ರಾತ್ರಿ ನನ್ನ ತಂಗಿಗೆ ಜ್ವರ ಬಂದಿದ್ದ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯನ್ನು ಸೈಕಲ್ಲಿನ ಮುಂದುಗಡೆಯ ಬಾರ್ ಮೇಲಿನ ಚಿಕ್ಕ ಸೀಟಿನಲ್ಲಿ ಕೂರಿಸಿಕೊಂಡು ಮನೆಗೆ ಹಿಂತಿರುಗುವಾಗ ಇಳಿಜಾರಿನಲ್ಲಿ ಆಕೆ ಅಚಾನಕ್ಕಾಗಿ ಸೈಕಲ್ ಮುಂದಿನ ಚಕ್ರಕ್ಕೆ ತನ್ನ ಕಾಲು ಕೊಟ್ಟ ಪರಿಣಾಮ ಆಕೆಯ ಕಾಲಿನ ಹಿಮ್ಮಡಿ ಕಿತ್ತು ಬಂದು ಎಂಟು ಹತ್ತು ಹೊಲಿಗೆ ಹಾಕಿದ್ದಲ್ಲದೇ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸೈಕಲ್ಲಿನಿಂದ ಕೆಳಗೆ ಬೀಳುವಾಗ ಕೈಊರಿದ ಪರಿಣಾಮವಾಗಿ ನಮ್ಮ ತಂದೆಯವರಿಗೆ ಬಲಗೈ ಮುರಿದಿದ್ದಲ್ಲದೇ, ತಲೆಗೂ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿ ಕನಿಷ್ಟ ಪಕ್ಷ ಏನಿಲ್ಲವೆಂದರೂ ಆರೆಂಟು ವಾರಗಳು ಕಾರ್ಖಾನೆಗೆ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಸುಧಾಸಿಕೊಳ್ಳುವಂತಹ ಸಂಧಿಗ್ಧ ಪರಿಸ್ಥಿತಿ ಬಂದಿತ್ತು .

ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ಅದೇ ಸಮಯದಲ್ಲಿಯೇ ಅಂದಿನ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ಮೂಲತಃ ಕೇರಳಿಗನಾದರೂ ಇಂದಿರಾ ಕೃಪಾಪೋಷಣೆಯಲ್ಲಿ ಕರ್ನಾಟಕದ ಗುಲ್ಬರ್ಗಾದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಕಾರ್ಮಿಕ ವಿರೋಧಿ. ಕಾರ್ಮಿಕ ಮಂತ್ರಿಯಾಗಿದ್ದ, ಸ್ಟೀಫನ್ ಅವರ ಉದ್ಧಟತನದಿಂದಾಗಿ ದೇಶಾದ್ಯಂತ ಇದ್ದ ಎಲ್ಲಾ ಸಾರ್ವಜನಿಕ ವಲಯಗಳ ಕಾರ್ಖಾನೆಗಳು ಸುಮಾರು ಮೂರು ತಿಂಗಳ ಕಾಲ ಲಾಕ್ ಔಟ್ ಆಗುವಂತಹ ಪರಿಸ್ಥಿತಿ ಬಂದೊದಗಿತ್ತು.

ಕಾರ್ಖಾನೆ ಮುಚ್ಚಿದೆ. ಸಂಬಳವಿಲ್ಲ. ಆಯ್ಕೊಂಡು ತಿಂತಿದ್ದ ಕೋಳಿ ಕಾಲು ಮುರ್ಕೊಂಡ್ ಕೂತಿದೆ ಅನ್ನೋ ಹಾಗೆ ದುಡಿದು ಸಂಪಾದನೆ ಮಾಡಿ ತಂದು ಹಾಕುತ್ತಿದ ಮನೆಯ ಯಜಮಾನ ಹಾಸಿಗೆ ಹಿಡಿದಿದ್ದಾರೆ. ಅವರನ್ನು ನೋಡಿ ಕೊಂಡು ಹೋಗಲು ದಿನವೂ ಬಂಧು ಮಿತ್ರರು ಬರುತ್ತಿದ್ದ ಕಾರಣ ಮನೆಯನ್ನು ನಿಭಾಯಿಸುವುದು ಕಷ್ಟವೇ ಆಗಿತ್ತು. ತಿಂಗಳಾಂತ್ಯದಲ್ಲಿ ಮನೆಯ ಬಾಡಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ನಮ್ಮ ವಠಾರದ ಮನೆಯ ಮಾಲಿಕರಾಗಿದ್ದ ಶ್ರೀ ಆಂಜನಮೂರ್ತಿಯವರ ಬಳಿ ನಾನು ಮತ್ತು ನಮ್ಮ ತಾಯಿ ಇಬ್ಬರೂ ಹೋದೆವು

ನಮ್ಮ ಮನೆಯ ಮಾಲೀಕರೋ ಅಜಾನು ಬಾಹು. ಕಪ್ಪಗೆ ಎತ್ತರದ ಮನುಷ್ಯ ಕಣ್ಣುಗಳು ಸದಾ ಕೆಂಪು. ಹೇಳ ಬೇಕೆಂದರೆ ಕನ್ನಡ ಚಲನಚಿತ್ರದ ಖಳ ನಟ ವಜ್ರಮನಿಯವರ ತದ್ರೂಪು. ವಜ್ರಮುನಿ ಬೆಳ್ಳಗಿದ್ದರೆ ನಮ್ಮ ಮಾಲಿಕರದ್ದು ಎಣ್ಣೆ ಗೆಂಪು ಬಣ್ಣ. ಮೊತ್ತ ಮೊದಲಬಾರಿಗೆ ಯಾರೇ ಅವರನ್ನು ನೋಡಿದರೂ ಭಯಪಡಲೇ ಬೇಕಾದಂತಹ ಶರೀರ. ಆದರೆ ಮನಸ್ಸು ಮಾತ್ರ ಐಸ್ ಕ್ರೀಂ ನಂತಹ ಮೃದು. ವರ ವಠಾರದ ಹದಿನೆಂಟು ಮನೆಗಳಲ್ಲಿ ಬಹುತೇಕರು ಒಂದೇ ಕಾರ್ಖಾನೆಯ ಕಾರ್ಮಿಕರಾಗಿದ್ದ ಕಾರಣ ಕಾರ್ಖಾನೆ ಲಾಕ್ ಔಟ್ ಆಗಿದ್ದದ್ದು ಗೊತ್ತಿತ್ತು ಮತ್ತು ನಮ್ಮ ತಂದೆಯವರಿಗೆ ಅಪಘಾತ ಆದ ಸುದ್ದಿಯೂ ಅವರಿಗೆ ತಿಳಿದು ನಮ್ಮ ಮನೆಯ ಪರಿಸ್ಥಿತಿಯ ಅರಿವಿತ್ತು. ನಾವು ಬಾಡಿಗೆ ಕೊಡಲು ಹೋಗಿದ್ದನ್ನು ನೋಡಿ, ಒಂದು ಕ್ಷಣ ಕೋಪಗೊಂಡು ನಾನೇನು ಮನುಷ್ಯನೋ ಅಥವಾ ಮೃಗನೋ? ನನಗೂ ಸಂಸಾರವಿದೆ. ನನಗೂ ಮಕ್ಕಳು ಆಳು ಕಾಳು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮಿಂದ ಬಾಡಿಗೆ ತೆಗೆದುಕೊಂಡು ಜೀವಿಸುವ ಅಗತ್ಯ ನನಗೆ ಬಂದಿಲ್ಲ. ಎಂದು ಸ್ವಲ್ಪ ಎತ್ತರದ ಧನಿಯಲ್ಲಿ ಹೇಳಿ, ಅವರ ಮನೆಯವರನ್ನು ಕರೆದು, ನೋಡು ನಮ್ಮ ವಠಾರದಲ್ಲಿ ವಾಸಿಸುವವರ ಎಲ್ಲರ ಮನೆಗಳ ಪರಿಸ್ಥಿತಿ ಸರಿಯಾಗುವವರೆಗೂ ಯಾರ ಹತ್ತಿರವೂ ಬಾಡಿಗೆ ಮತ್ತು ಹಾಲಿನ ದುಡ್ಡನ್ನು ತೆಗೆದುಕೊಳ್ಳುವುದು ಬೇಡ. ಪರಿಸ್ಥಿತಿ ತಿಳಿಯಾದ ಮೇಲೆ ಕಂತಿನಲ್ಲಿ ಅವರಿಗೆ ಹೊರೆಯಾಗದಂತೆ ಪಡೆದುಕೊಳ್ಳೋಣ. ಹಾಗೆಯೇ ಅವರೆಲ್ಲರಿಗೂ ಅಗತ್ಯವಾದಷ್ಟು ರಾಗಿ ಮತ್ತು ಅಕ್ಕಿಯನ್ನು ಉಚಿತವಾಗಿ ಕೊಡು. ಕಷ್ಟ ಮನುಷ್ಯರಿಗೆ ಬಾರದೇ ಮರಗಳಿಗೆ ಬರುತ್ತದೆಯೇ? ನಮ್ಮ ಮನೆಯಲ್ಲಿ ಇರುವವರೆಲ್ಲಾ ನಮ್ಮ ಬಂಧುಗಳೇ ಎಂದಾಗ ನಮಗರಿವಿಲ್ಲದಂತೆಯೇ ನಮ್ಮ ಅಮ್ಮ ಮತ್ತು ನನ್ನ ಕಣ್ಣುಗಳಲ್ಲಿ ಧನ್ಯತಾ ಪೂರ್ವಕವಾಗಿ ನೀರು ಜಿನಿಗಿತ್ತು. ಅದೇ ರೀತಿ ನಮ್ಮ ತಂದೆಯ ಕಾರ್ಖಾನೆಯಲ್ಲಿಯೇ ಕೆಲಸ ಮಾಡುತ್ತಾ ಮನೆಯಲ್ಲಿಯೇ ದಿನಸಿ ವ್ಯಾಪಾರ ಮಾಡುತ್ತಿದ್ದ ಮುನಿಯಪ್ಪ ಮತ್ತು ಅವರ ಮಡದಿಯವರೂ ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ನಮ್ಮಿಂದ ಒಂದು ನಯಾ ಪೈಸೆಯೂ ತೆಗೆದುಕೊಳ್ಳದೇ ಮನೆಗೆ ಅಗತ್ಯವಿದ್ದ ಎಲ್ಲಾ ದಿನಸಿಗಳನ್ನು ಉದ್ರಿಯಲ್ಲಿ ಕೊಟ್ಟಿದ್ದರು.

ಕೆಲ ತಿಂಗಳುಗಳ ನಂತರ ನಮ್ಮ ತಂದೆ ಮತ್ತು ತಂಗಿಯ ಆರೋಗ್ಯ ಸುಧಾರಿತ್ತು. ಕಾರ್ಮಿಕರು ಮತ್ತು ಸರ್ಕಾರ ನಡುವೆ ಒಪ್ಪಂದವಾಗಿ ಕಾರ್ಖಾನೆ ಆರಂಭವಾಯಿತು. ಮುಂದಿನ ಐದಾರು ತಿಂಗಳುಗಳ ಕಾಲ ಕಂತಿನಲ್ಲಿ ನಮ್ಮ ಮನೆಯ ಮಾಲಿಕರ ಮತ್ತು ಅಂಗಡಿ ಮುನಿಯಪ್ಪನವರ ಉದ್ರಿಯನ್ನು ತೀರಿಸಿದೆವಾದರೂ ಸುಮಾರು ನಲವತ್ತು ವರ್ಷಗಳಾದರೂ ಇಂದಿಗೂ ಅವರು ಮಾಡಿದ ಆ ಸಹಾಯವನ್ನು ನಾವು ಮರೆತಿಲ್ಲ. ನಮ್ಮ ಜೀವಮಾನ ಇರುವವರೆಗೂ ಮರೆಯುವುದಿಲ್ಲ ಮತ್ತು ಮರೆಯಲೂ ಬಾರದು.

ಸದ್ಯದ ಪರಿಸ್ಥಿತಿಯೂ ಮೇಲೆ ತಿಳಿಸಿದ ಪ್ರಸಂಗಕ್ಕಿಂತ ಭಿನ್ನವಾಗಿಲ್ಲ. ಮಹಾಮಾರಿ ಕೊರೋನ ಸೋಂಕಿನಿಂದಾಗಿ ದೇಶಾದ್ಯಂತ ನಿರ್ಭಂಧ ಹೇರಿರುವ ಸಮಯದಲ್ಲಿ, ಕಾರ್ಖಾನೆಗಳೆಲ್ಲವೂ ಬಂದ್ ಆಗಿದೆ. ಈಗೇನೋ ದೇಶಾದ್ಯಂತ ಮೂರು ವಾರ ಲಾಕ್ ಡೌನ್ ಅಂತಾ ಹೇಳಿದ್ದಾರೆ. ಆದರೆ ನಮ್ಮ ಜನರು ಅದಕ್ಕೆ ವ್ಯತಿರಿಕ್ತವಾಗಿ ಪ್ರತಿಸ್ಪಂದಿಸುತ್ತಿರುವುದನ್ನೋ ನೋಡಿದರೆ ಈ ಲಾಕ್ ಡೌನ್ ಇನ್ನೂ ಕೆಲವು ವಾರಗಳು ಮುಂದುವರಿಯಬಹುದಾದ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ನಮ್ಮ ಜೊತೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು, ನಮ್ಮ ಮನೆಯ ಕೆಲಸದವರು, ಪೇಪರ್ ಹಾಕುವ ಹುಡುಗರು, ಮನೆಯ ಅಕ್ಕ ಪಕ್ಕದಲ್ಲಿ ಕಟ್ಟಡ ಕೆಲಸ ಮಾಡುತ್ತಿರುವ ಕಾರ್ಮಿಕರು, ಸಣ್ಣ ಪುಟ್ಟ ದಿನಗೂಲಿ ಕಾರ್ಮಿಕರರಿಗೆ ನಿತ್ಯದ ಊಟ ತಿಂಡಿಗಳಿಗೂ ತೊಂದರೆಯಾಗ ಬಹುದಾಗಿದೆ. ಹಾಗಾಗಿ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಮಯದಲ್ಲಿ ಈ ಕೆಳಕಂಡಂತೆ ನಮ್ಮ ಕೈಲಾದ ಮಟ್ಟಿಗೆ ಅಳಿಲು ಸಹಾಯ ಮಾಡಬಹುದಲ್ಲವೆ ?

 • ನಮ್ಮ ಮನೆಯ ಕೆಲಸದಾಗಿ ಕೆಲಸಕ್ಕೆ ಬಂದಿಲ್ಲಾ ಅಂತಾ ಸಂಬಳ ಹಿಡಿದು ಕೊಳ್ಳದೇ ಆಕೆಗೆ ಪೂರ್ಣ ಸಂಬಳ ಕೊಡುವುದು
 • ಆಕೆಯ ಮನೆಗೆ ಹೋಗಿ ಊಟ ತಿಂಡಿಯ ಹೊರತಾಗಿ ಅವರ ದೈನಂದಿನ ಅಗತ್ಯಗಳಿಗೆ ಬೇಕಾದ ಧನ ಧಾನ್ಯ ಸಹಾಯ ಮಾಡುವುದು
 • ಸೋಂಕು ತಡೆಗಟ್ಟುವ ಪರಿಣಾಮವಾಗಿ ಮನೆಗೆ ಪ್ರತಿದಿನ ವೃತ್ತ ಪತ್ರಿಕೆ ಬಾರದಿದ್ದರೂ ಪೂರ್ಣ ಪಾವತಿ ಮಾಡುವುದು
 • ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕೂಲೀ ಕಾರ್ಮಿಕರಿಗೆ ಸ್ವತಃ ಸಹಾಯ ಹಸ್ತ ಚಾಚುವುದು ಇಲ್ಲವೇ ಸಹಾಯ ಮಾಡುತ್ತಿರುವ ಹಲವಾರು ಸಂಘಸಂಸ್ಥೆಗಳಿಂದ ಅವರಿಗೆ ನೆರವು ಸಿಗುವಂತೆ ಮಾಡುವುದು.
 • ಸದ್ಯದ ಪರಿಸ್ಥಿತಿಯನ್ನು ಅವರಿಗೆ ಸೂಕ್ಷ್ಮವಾಗಿ ವಿವರಿಸಿ ದಿನನಿತ್ಯದ ವಸ್ತುಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಬಳಸುತ್ತಾ, ವೃಥಾ ವ್ಯರ್ಥ ಮಾಡದಂತೆ ತಿಳಿಸುವುದು
 • ನಮ್ಮ ಮನೆಯಲ್ಲಿ ಬಾಡಿಗೆದಾರರಿದ್ದರೆ, ಈ ಲಾಕಡೌನ್ ಪರಿಣಾಮದಿಂದ ಆರ್ಥಿಕ ತೊಂದರೆ ಇದ್ದಲ್ಲಿ ಮನೆಯ ಬಾಡಿಗೆಯನ್ನು ಪಡೆಯದೆ ಪರಿಸ್ಥಿತಿ ತಿಳಿಯಾದ ಮೇಲೆ ಕಂತಿನ ರೂಪದಲ್ಲಿ ಪಡೆಯುವುದು
 • ನಮ್ಮ ಸಹೋದ್ಯೋಗಿಗಳ ಸಂಕಷ್ಟದಲ್ಲಿ ಭಾಗಿಯಾಗುವುದು.
 • ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಈ ಸೋಂಕಿನ ಕುರಿತಂತೆ ಸರಿಯಾದ ಮಾಹಿತಿಗಳನ್ನು ಅವರಿಗೆ ತಿಳಿಸಿ ಅನಗತ್ಯ ವಂದಂತಿಗಳಿಗೆ ಕಿವಿಗೊಡದಂತೆ ಮತ್ತು ಅವುಗಳಿಗೆ ಹೆದರಿ ಅಂತಹ ವದಂತಿಗಳನ್ನು ಮತ್ತೊಬ್ಬರಿಗೆ ಹರಡದಂತೆ ತಿಳಿಸುವುದು
 • ಸೋಂಕು ಹರಡದಂತೆ ಶುಚಿತ್ವ ಕಾಪಾಡಲು ತಿಳಿಸಿವುದು ಮತ್ತು ಅಪರಿಚಿತರೊಂದಿಗೆ ಬೆರೆಯದೆ ನಿರ್ಧಿಷ್ಟ ಅಂತರವನ್ನು ಕಾಪಾಡುವಂತೆ ತಿಳಿಸುವುದು
 • ಸಾಧ್ಯವಾದಷ್ಟೂ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ವಹಿಸಿವಂತೆ ತಿಳಿಸುವುದು
 • ನಮ್ಮ ಸ್ವಾಸ್ಥ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ಪೋಲೀಸ್ ಸಿಬ್ಬಂಧಿಗಳು ಮತ್ತು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರನ್ನು. ವೃಥಾ ನಿಂದಿಸದೇ ಅವರ ಸೇವಾಕಾರ್ಯಗಳನ್ನು ಗೌರವಿಸಿ ಅಭಿನಂಧಿಸುವುದು.
 • ಈ ಸಮಯದಲ್ಲಿ ಸರ್ಕಾರ ವಿಧಿಸುವ ಎಲ್ಲಾ ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ತಿಳಿಹೇಳುವುದು
 • ಈ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಮುಂದಿರುವ ಆಯ್ಕೆಗಳು ಕೇವಲ ಮೂರು
  1. ಸುಮ್ಮನೆ ಕುಟುಂಬದೊಡನೆ ಮನೆಯೊಳಗಯೇ ಇರುವುದು
  2. ಸೋಂಕು ತಗುಲಿಸಿಕೊಂಡು ಆಸ್ಪತ್ರೆಯಲ್ಲಿ ನರಳುವುದು
  3. ಖಾಯಿಲೆ ವಿಷಮ ಸ್ಥಿತಿಗೆ ತಲುಪಿ, ನಮ್ಮ ಫೋಟೋ ನಮ್ಮ ಮನೆಯ ಗೋಡೆಯ ಫೋಟೋ ಫ್ರೇಮ್‌ನಲ್ಲಿ ಹಾಕುವಂತಾಗುವುದು ಎಂಬ ಕಠೋರ ಸತ್ಯವನ್ನು ಮನದಟ್ಟು ಮಾಡುವುದು

ಈ ಮೇಲೆ ತಿಳಿಸಿದ್ದೆಲ್ಲವೂ ಸಣ್ಣ ಸಣ್ಣ ವಿಷಯಗಳಾದರೂ, ಅವುಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ನಾವೇ ಭಾರೀ ಮೊತ್ತದ ಹಾನಿಗೊಳಗಾಗ ಬೇಕಾಗುತ್ತದೆ ಎನ್ನುವುದಂತೂ ಸೂರ್ಯ ಮತ್ತು ಚಂದ್ರರಷ್ಟೇ ಸತ್ಯ. ಕೇವಲ ನಾವು ಮತ್ತು ನಮ್ಮದು ಎಂದು ಸ್ವಾರ್ಥಿಗಳಾಗದೇ ಬಹುಜನ ಹಿತಾಯಾ. ಬಹುಜನ ಸುಖಾಯ ಎನ್ನುವ ತತ್ವದಂತೆ ಸರ್ವೇಜನಾಃ ಸುಖಿನೋ ಭವಂತು ಎನ್ನುವಂತೆ ನಮ್ಮ ಕೈಲಾದ ಮಟ್ಟಿಗೆ ಮತ್ತೊಬ್ಬರ ಬಾಳಿನಲ್ಲಿ ಸಂತೋಷವನ್ನು ತರುವಂತಹ ಅಳಿಲು ಸೇವೆಯನ್ನು ಮಾಡಬಹುದಲ್ಲವೇ?

ಈ ಲೇಖನದಲ್ಲಿ ಹಲವಾರು ಬಾರಿ ಅಳಿಲು ಸೇವೆ ಎಂಬ ಪದವನ್ನು ಬಳೆಸಿದ್ದೇನೆ. ಹಾಗಾದಲ್ಲಿ ಅಳಿಲು ಸೇವೆ ಎಂದರೆ ಏನು? ರಾಮಾಯಣ ಕಾಲದಲ್ಲಿ ಆದ ಆ ಪ್ರಸಂಗ ಏನು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇನೆ.

alilu2

ನಮಗೆಲ್ಲಾ ತಿಳಿಸಿರುವಂತೆ ರಾವಣ, ಸೀತಾಮಾತೆಯನ್ನು ಕದ್ದೊಯ್ದು ಲಂಕೆಯ ಅಶೋಕವನದಲ್ಲಿ ಕೂಡಿಟ್ಟಿದ್ದನು ಹನುಮಂತ ಕಣ್ಣಾರೆ ನೋಡಿ ಅರ್ಧ ಲಂಕೆಯನ್ನು ದಹನ ಮಾಡಿ ಶ್ರೀರಾಮಚಂದ್ರನಿಗೆ ಬಂದು ತಿಳಿಸುತ್ತಾನೆ. ಸೀತಾ ಮಾತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಕಪಿ ಸೇನೆಯೊಂದಿಗೆ ರಾಮೇಶ್ವರದ ಬಳಿಯ ಧನುಷ್ಕೋಟಿಯ ಬಳಿ ಬಂದು ವಾನರ ವಾಸ್ತುತಜ್ಞರಾದ ನಳ ಮತ್ತು ನೀಲ ಅವರ ನೇತೃತ್ವದಲ್ಲಿ ಶ್ರೀರಾಮ ಲಕ್ಷ್ಮಣರ ಸಾರಥ್ಯದಲ್ಲಿ ಲಂಕೆಗೆ ಸೇತುವೆಯನ್ನು ಕಟ್ಟಲು ಆರಂಭಿಸುತ್ತಾರೆ. ಕಪಿಸೇನೆಯಾದಿ ಅಲ್ಲಿದ್ದವರೆಲ್ಲಾ ತಮ್ಮ ಕೈಯಲ್ಲಿ ಆದ ಮಟ್ಟಿಗೆ ಆ ಮಹತ್ಕಾರ್ಯದಲ್ಲಿ ಪಾಲ್ಗೊಂಡಿದ್ದನ್ನು ಕಂಡ ಅಳಿಲು, ಶ್ರೀರಾಮನ ಬಳಿ ಬಂದು ನಾನೂ ಕೂಡಾ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಚಿಸುತ್ತೇನೆ. ದಯವಿಟ್ಟು ಯಾವುದಾರದೂ ಕೆಲಸ ನೀಡಿ ಎಂದು ಕೇಳಿ ಕೊಳ್ಳುತ್ತದೆ. ಅಳಿಲಿನ ಈ ಆಳಲನ್ನು ಕೇಳಿ ಸಂತೋಷಗೊಂಡ ಶ್ರೀರಾಮನು, ಇಲ್ಲಿ ಯಾರಿಗೂ ಯಾವುದೇ ನಿಬಂಧನೆಗಳಿಲ್ಲ, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮತ್ತು ಇಮ್ಮಿಚ್ಚೆಯಂತೆ ಯಾವುದಾದರೂ ಕೆಲಸ ಮಾಡಬಹುದು ಎಂದಾಗ ಸಂತೋಷಗೊಂಡ ಅಳಿಲು ಒಂದು ಕ್ಷಣ ತನ್ನಿಂದೇನಾಗಬಹುದು ಎಂದು ಯೋಚಿ‍ಸಿ, ಕೂಡಲೇ ಸಮುದ್ರಲ್ಲಿ ಧುಮಿಕಿ ಮೈ ಪೂರ್ತಿ ಒದ್ದೆ ಮಾಡಿಕೊಂಡು ಸಮುದ್ರದ ದಂಡೆಯ ಮರಳಿನ ಮೇಲೆ ಉರುಳಾಡುತ್ತದೆ. ಹಾಗೆ ಉರುಳಾಡಿದಾಗ ಒದ್ದೆಯಾದ ಅಳಿಲಿನ ಮೈ ಮತ್ತು ಬಾಲಕ್ಕೆ ಮರಳು ಮೆತ್ತಿಕೊಳ್ಳುತ್ತದೆ. ಕೂಡಲೇ ಆ ಅಳಿಲು ಗಾರೆ ಕಲೆಸುತ್ತಿದ್ದ ಜಾಗಕ್ಕೆ ಹೋಗಿ ತನ್ನ ಮೈ ಕೊಡವಿ, ತನ್ನ ದೇಹ ಮತ್ತು ಬಾಲಕ್ಕೆ ಅಂಟಿಕೊಂಡಿದ್ದ ಮರಳನ್ನು ಅಲ್ಲಿಗೆ ಹಾಕಿ, ಆಹಾ ಈ ಮಹತ್ಕಾರ್ಯದಲ್ಲಿ ನನ್ನದೂ ಒಂದು ಪಾಲಿದೆಯಲ್ಲಾ ಎಂದು ಸಂತೋಷ ಪಡುತ್ತದೆ ಮತ್ತು ಇದೇ ಕಾರ್ಯವನ್ನು ರಾಮ ಸೇತುವೆ ಮುಗಿಯುವ ವರೆಗೂ ಪುನರಾವರ್ತನೆ ಮಾಡುತ್ತಲೇ ಇರುತ್ತದೆ. ಅಂದಿನಿಂದಲೂ ಇದು ಅಳಿಲು ಸೇವೆ ಎಂದೇ ಪ್ರಸಿದ್ಧಿಯಾಗಿದೆ ಮತ್ತು ಜನಮಾನಸದಲ್ಲಿ ಅಚ್ಚಳಿಯದೆ ಹಚ್ಚಹಸಿರಾಗಿಯೇ ಉಳಿದಿದೆ.

ಸಹಾಯ ಮಾಡಲು ಎಲ್ಲರೂ ಉಳ್ಳವರೇ ಆಗಬೇಕೆಂದಿಲ್ಲ. ಅದು ದೊಡ್ದದಾಗಿರಲೀ ಅಥವಾ ಚಿಕ್ಕದೇ ಆಗಿರಲಿ, ಎಲ್ಲದ್ದಕ್ಕೂ ಧನವನ್ನೇ ವ್ಯಯ ಮಾಡಬೇಕೆಂದಿಲ್ಲ. ಸಹಾಯ ಮಾಡುವ ಮನಸ್ಸಿರಬೇಕು ಮತ್ತು ಒಮ್ಮೆ ಒಪ್ಪಿಕೊಂಡ ಕೆಲಸವನ್ನು ಶ್ರಧ್ಧೆಯಿಂದ ಮಾಡುವ ಧೃಢ ಸಂಕಲ್ಪವಿರಬೇಕು ಮತ್ತು ಪ್ರತಿಫಲಾಪೇಕ್ಷೆಯಿಲ್ಲದೇ ನಿಸ್ವಾರ್ಥವಾಗಿರಬೇಕು. ಬಲಗೈಯಲ್ಲಿ ಕೊಟ್ಟದ್ದು ಎಡಗೈಯ್ಯಿಗೂ ಗೊತ್ತಾಗಬಾರದಂತೆ. ಅದೇ ರೀತಿ ದುಡಿಮೆಯನ್ನು ತಲೆ ಎತ್ತಿ ಮಾಡು ಸಹಾಯವನ್ನು ತಲೆ ತಗ್ಗಿಸಿ ಮಾಡು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಾಗಾಗಿ ನಾವು ಕೂಡಾ ನಮ್ಮ ಬಾಡಿಗೆಯ ಮನೆಯ ಮಾಲಿಕರಾಗಿದ್ದಂತಹ ಆಂಜನಮೂರ್ತಿಯವರಂತೆ ನಮ್ಮ ದಿನಸೀ ಅಂಗಡಿಯ ಮುನಿಯಪ್ಪನವರಂತೆ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಿದ್ದವರಿಗೆ ನಮ್ಮ ಕೈಲಾದ ಮಟ್ಟಿಗೆ ಅಳಿಲು ಸೇವೆಯನ್ನು ಮಾಡಬಹುದಲ್ಲವೇ?

ಏನಂತೀರೀ??