ಸಂಘ ಮತ್ತು ಸಂಘದ ಸ್ವಯಂಸೇವಕರು

modiಸ್ವಾತಂತ್ರ್ಯ ಬಂದಾಗಲಿಂದಲೂ ಒಂದೇ ಕುಟುಂಬದ, ತುಷ್ಟೀಕರಣದ ಸ್ವಾರ್ಥ ಆಡಳಿತಕ್ಕೆ ಒಗ್ಗಿ ಹೋದಿದ್ದವರಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವವಾದ ಜನ ಬೆಂಬಲದೊಂದಿಗೆ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದು ಮತ್ತೆ 2019 ರಲ್ಲಿ ಮತ್ತೊಮ್ಮೆ ಭಾರಿ ಜನಬೆಂಬಲದೊಂದಿಗೆ ಪುನಃ ಆಡಳಿತಕ್ಕೆ ಬಂದಿರುವುದು ಅನೇಕರಿಗೆ ನುಂಗಲಾರದ ತುತ್ತಾಗಿದೆ. ಮೋದಿಯವರು ಆಡಳಿತಕ್ಕೆ ಬಂದ ಕೂಡಲೇ ಇದ್ದಕ್ಕಿದ್ದಂತೆಯೇ ದೇಶದಲ್ಲಿ ಅಸಹಿಷ್ಣುತೆ ಮತ್ತು ಅಭದ್ರತೆ ಕಾಡತೊಡಗಿತು. ಕೆಲವರು ದೇಶ ಬಿಡುವ ಮಾತನಾಡಿದರೆ ಇನ್ನೂ ಕೆಲವರು ಸರ್ಕಾರ ಕೊಟ್ಟಿದ್ದ ಪ್ರಶಸ್ತಿ ಪುರಸ್ಕಾರಗಳನ್ನು ಹಿಂದಿರುಗಿಸುವ (ಪ್ರಶಸ್ತಿಯೊಂದಿಗೆ ಪಡೆದಿದ್ದ ಹಣವನ್ನು ಮಾತ್ರ ಹಿಂದಿರುಗಿಸಲಿಲ್ಲ) ನಾಟಕವಾಡಿದರೇ ಇನ್ನೂ ಕೆಲವರು ವ್ಯವಸ್ಥಿತವಾಗಿ ದೇಶದನ್ನು ತುಂಡರಿಸುವ ಮಾತುಗಳನ್ನು ಆಡುವ ಮುಖಾಂತರ ದೇಶದಲ್ಲಿ ಅರಾಜಕತೆ ಮತ್ತು ದಂಗೆಗಳು ಏಳುವಂತೆ ಮಾಡಲು ಪ್ರಯತ್ನಿಸಿದರಾದರೂ ಸಫಲರಾಗದೇ ಬೇಕೋ ಬೇಡವೋ ಎಲ್ಲದರಲ್ಲಿಯೂ ಮೋದಿಯವರನ್ನು ಮತ್ತು ಸಂಘ ಪರಿವಾರದವರನ್ನು ಎಳೆದು ತರುವುದು ಮತ್ತು ಸುಖಾಸುಮ್ಮನೆ ಸಂಘ ಪರಿವಾರದ ಮೇಲೆ ಆರೋಪ ಮಾಡುವುದನ್ನು ಚಾಳಿ ಮಾಡಿಕೊಂಡಿದ್ದಾರೆ.

ಮೊನ್ನೆ ಮೊನ್ನೆ ಮನೆ ಮಠ ಬಿಟ್ಟು ಬೀದಿ ಬೀದಿ ಅಲೆಯುತ್ತಿರುವ ನಿರ್ದೇಶಕ ಅಂಡೆಲೆದು ಕೊರೋನಾ ಬರಿಸಿಕೊಂಡು ನನ್ನ ಸಾವಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದರೆ ಮತ್ತೊಬ್ಬ ಧಾರವಾಹಿ ನಟ ತನ್ನ ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕುರಿತಾಗಿ ಆಕ್ರೋಶದಿಂದ ಮಾತನಾಡಿರುವ ವೀಡಿಯೋವಿನಲ್ಲಿ ಸರ್ಕಾರ ರಾಮ ಮಂದಿರ ಕಟ್ಟುವ ಬದಲು ಆಸ್ಪತ್ರೆ ಕಟ್ಟಬಾರದಿತ್ತೇ? ಎಂದು ಓತಪ್ರೋತವಾಗಿ ಹೇಳಿದರೆ, ಖರ್ಗೆ ಎಂಬ ಮಹಾಶಯ ಸಂಘ ಎಂಬುದು ವಿಷ ಇದ್ದಂತೆ ಎಂಬ ಆಣಿ ಮುತ್ತು ಉದುರಿಸಿದರೆ, ಸಿದ್ದರಾಮಯ್ಯರಂತೂ ದೇಶಕ್ಕಾಗಿ ಸಂಘದ ಕೊಡುಗೆ ಇಲ್ಲವೇ ಇಲ್ಲಾ ಎಂದು ಬಾರಿ ಬಾರಿ ಸುಳ್ಳನ್ನು ಹೇಳುತ್ತಲೇ ಬಂದಿದ್ದಾರೆ.

drji1925ರಲ್ಲಿ ನಾಗಪುರದ ಮೋಹಿತೇವಾಡದ ಮೈದಾನದಲ್ಲಿ ಡಾ. ಕೇಶವ ಬಲಿರಾಂ ಹೆಡಗೇವಾರ್ ಎಂಬ ಮಹಾನ್ ದೇಶಭಕ್ತರು ಆರಂಬಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಇಂದು ಭಾರತದ ಮೂಲೆ ಮೂಲೆಗೂ ಆಲದ ಮರದಂತೆ ಹಬ್ಬಿರುವುದಲ್ಲದೆ HSS ಸಂಘಟನೆಯ ಹೆಸರಿನಲ್ಲಿ ವಿದೇಶಗಳಲ್ಲಿಯೂ ತನ್ನ ಬಿಳಿಲನ್ನು ಬಿತ್ತಿದೆ.

rss1ಸಂಘದ ಸಂಪರ್ಕಕ್ಕೆ ಬಂದು ಒಮ್ಮೆ ಸ್ವಯಂಸೇವಕನಾದವರು ಸದಾಕಾಲವೂ ಸ್ವಯಂಸೇವಕರೇ (once a swyamsevak is always a swyamsevak) ಎಂಬ ಮಾತು ಪ್ರಚಲಿತದಲ್ಲಿದೆ. ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳು ಸಂಭವಿಸಿದಲ್ಲಿ ಅಥವಾ ಪ್ರಕೃತಿ ಅವಘಡಗಳು ಸಂಭವಿಸಿದಲ್ಲಿ ಅಲ್ಲಿ ಮೊದಲು ತಲುಪಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದೇ ಸಂಘದ ಸ್ವಯಂಸೇವಕರು ಎಂಬುದನ್ನು ಸಂಘದ ವಿರೋಧಿಗಳು ಅಲ್ಲಗಳೆಯಲಾರರು. ಎಂತಹ ವಿಷಮ ಸ್ಥಿತಿಯಲ್ಲಿಯೂ ಸಂಘದ ಸ್ವಯಂ ಸೇವಕರು ಸಮಾಜ ಸೇವೆಗೆ ಸಿದ್ಧರಾಗಿರುತ್ತಾರೆ ಎಂಬುದಕ್ಕೆ ಈ ಪ್ರಸಂಗಗಳೇ ಸಾಕ್ಷಿಯಾಗಿದೆ.

dabdkarಬಹಳಷ್ಟು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದ 85 ವರ್ಷ ವಯಸ್ಸಿನ ನಾಗ್ಪುರದ ನಾರಾಯಣ್ ದಾಬಡ್ಕರ್ ಅವರಿಗೆ ಸತತವಾಗಿ ಮೂರು ದಿನಗಳ ಕಾಲ ಪರಿಶ್ರಮದ ನಂತರ ಸ್ಥಳೀಯ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಹಾಸಿಗೆಯ ಲಭ್ಯವಾಗುತ್ತದೆ. ಆ ಕೂಡಲೇ ದಾಬಡ್ಕರ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುವ ಔಪಚಾರಿಕತೆಯನ್ನು ಅವರ ಮಗಳು ಪೂರ್ಣಗೊಳಿಸುತ್ತಿದ್ದ ಸಂದರ್ಭದಲ್ಲಿಯೇ ಅಲ್ಲಿಗೆ ಒಬ್ಬ ಮಹಿಳೆ 40ರ ಪ್ರಾಯದ ತನ್ನ ಗಂಡನಿಗೆ ಆ ಆಸ್ಪತ್ರೆಯಲ್ಲಿ ದಾಖಲು ಮಾಡಲು ಪರದಾಡುತ್ತಾ ಕಂಡ ಕಂಡವರ ಬಳೆ ದೈನೇಸಿಯಾಗಿ ಬೇಡಿಕೊಳ್ಳುತ್ತಿರುವುದು ಮತ್ತು ಆಕೆಯ ಮಕ್ಕಳೂ ಅವಳೊಂದಿಗೆ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಆ ಹಿರಿಯರು ಗಮನಿಸುತ್ತಾರೆ. ಕೂಡಲೇ ಅವರಲ್ಲಿದ್ದ ಸಂಘದ ಸ್ವಯಂಸೇವಕನ ಮನೋಭಾವನೆ ಜಾಗೃತಗೊಂಡು ಒಂದು ಧೃಢ ನಿರ್ಧಾರಕ್ಕೆ ಬರುತ್ತಾರೆ.

ಅಲ್ಲಿದ್ದ ತಮ್ಮ ಕುಟುಂಬ ಮತ್ತು ವೈದ್ಯಕೀಯ ಸಿಬ್ಬಂಧಿಯನ್ನು ಕರೆದು ಬಹಳ ಶಾಂತಚಿತ್ತದಿಂದ ನನಗೀಗ 85 ವರ್ಷಗಳಾಗಿವೆ. ನನ್ನ ಜೀವನದ ಬಹು ಕಾಲವನ್ನು ಈಗಾಗಲೇ ಅನುಭವಿಸಿದ್ದೇನೆ. ಅಲ್ಲದೇ ನನ್ನ ಜವಾಬ್ಧಾರಿಗಳು ಮುಗಿದಿವೆ. ಇನ್ನು ನಾನು ಹೆಚ್ಚಿನ ದಿನ ಬದುಕಿದ್ದು ಸಾಧಿಸಬೇಕಾದದ್ದು ಏನೂ ಇಲ್ಲ ಎಂಬುದರ ಅರಿವಿದೆ. ಹಾಗಾಗಿ ದಯವಿಟ್ಟು ನನ್ನ ಬದಲಾಗಿ ನೀವು ಈ ಮನುಷ್ಯನನ್ನು ಈ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಿ. ಈ ಸಣ್ಣ ವಯಸ್ಸಿನ ಈಕೆಗೆ ಮತ್ತು ಅವಳ ಮಕ್ಕಳಿಗೆ ತಂದೆಯ ಅವಶ್ಯಕತೆ ಇದೆ ಎಂದು ತಿಳಿಸುತ್ತಾರೆ.

ತಂದೆಯವರ ಈ ಹಠಾತ್ ನಿರ್ಧಾರ ದಾಬಡ್ಕರ್ ಅವರ ಮಗಳು ಮತ್ತು ಅಕೆಯ ಮೊಮ್ಮಗನಿಗೆ ಕಸಿವಿಸಿ ಎನ್ನಿಸಿದರೂ ನಂತರ ತಂದೆಯ ಅಂತಿಮ ನಿರ್ಧಾರಕ್ಕೆ ಭಾರವಾದ ಮನಸ್ಸಿನಿಂದ ಒಪ್ಪಿಗೆ ನೀಡಿ, ಅವರ ಬದಲಿಗೆ ಆ 40ರ ಪ್ರಾಯದವರಿಗೆ ಹಾಸಿಗೆ ಬಿಟ್ಟು ಕೊಡಬೇಕೆಂಬ ಪತ್ರಕ್ಕೆ ಸಹಿ ಮಾಡಿ ತಮ್ಮ ತಂದೆಯವರನ್ನು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪುನಃ ಮನೆಗೆ ಕರೆದುಕೊಂಡು ಹೋಗುತ್ತಾರೆ. ಮನೆಗೆ ಮರಳಿದ 3 ದಿನಗಳ ನಂತರ ದಾಬಡ್ಕರ್ ನಿಧನರಾಗುತ್ತಾರೆ. ಈ ಮೂಲಕ ಪರೋಪಕಾರಾಯ ಮಿದಂ ಶರೀರಂ ಎಂಬ ಡಾ.ಜೀ ಅವರ ಕನಸನ್ನು ನನಸಾಗಿ ಮಾಡಿದ ಕೀರ್ತಿ ಆಚಾಂದ್ರಾರ್ಕವಾಗಿರುವಂತೆ ಅಮರರಾಗುತ್ತಾರೆ.

ಕೆಲ ವರ್ಷಗಳ ಪಲ್ಸ್ ಪೋಲೀಯೋ ಅಭಿಯಾನದ ಮಾರನೇ ದಿನ. ಅನಿವಾರ್ಯ ಕಾರಣಗಳಿಂದ ಈ ಅಭಿಯಾನವನ್ನು ತಪ್ಪಿಸಿಕೊಂಡ ಮಕ್ಕಳಿಗೆ ಅನುಕೂಲವಾಗಲೆಂದು ಸ್ವಯಂ ಸೇವಕರಾಗಿ ನರ್ಸಿಂಗ್ ಓದುತ್ತಿರುವ ಹುಡುಗ ಹುಡುಗಿಯರನ್ನು ಮನೆ ಮನೆಗೂ ಕಳುಹಿಸಿ ಪೋಲಿಯೋ ಅಭಿಯಾನವನ್ನು ತಪ್ಪಿಸಿಕೊಂಡಿದ್ದ ಮಕ್ಕಳಿಗೆ ಪೋಲೀಯೋ ಲಸಿಕೆ ಹಾಕುವ ಜವಾಬ್ಧಾರಿಯನ್ನು ವಹಿಸಿರುತ್ತಾರೆ.

rss2ಇದರ ನಿಮಿತ್ತ ಆ ಕಾರ್ಯಕರ್ತೆಯರು ಒಂದು ಮನೆಗೆ ಹೋದಾಗ ಆ ಮನೆಯ ಹಿರಿಯ ವಯಸ್ಸಿನ ಆಕೆ ಇವರು ಬಂದ ವಿಚಾರ ಕೇಳಿ, ಒಳಗೆ ಬನ್ನಿ ಎಂದು ಕರೆದು ಕೂಡಲೇ ಅವರಿಗೆಲ್ಲಾ ನೀರು ಕೊಟ್ಟು ಬಾಯಿ ತುಂಬಾ ಮಾತನಾಡಿಸಿ ತಮ್ಮ ಮೊಮ್ಮಕ್ಕಳಿಗೆ ಹಿಂದಿನ ದಿನವೇ ಪೋಲಿಯೋ ಲಸಿಕೆ ಹಾಕಿಸಿರುವ ವಿಷಯ ತಿಳಿಸುತ್ತಾರೆ. ಆ ಮನೆಯ ಆತಿಥ್ಯ ಮತ್ತು ಮಾತುಕತೆಯಿಂದ ಕೇಳಿದ ಕೇರಳಾದ ಕ್ರಿಶ್ಚಿಯನ್ ಮೂಲದ ಆ ಹುಡುಗಿ ನಿಮ್ಮ ಮನೆಯಲ್ಲಿ ಯಾರಾದರೂ RSSಗೆ ಹೋಗುತ್ತಾರಾ? ಎಂದು ಕೇಳುತ್ತಾಳೆ. ಆಕೆಯ ಪ್ರಶ್ನೆಯಿಂದ ಆಶ್ಚರ್ಯ ಚಕಿತರಾದ ಮನೆಯಾಕೆ ಹೌದು. ನಮ್ಮ ಮನೆಯವರು ನನ್ನ ಮಗ ಅಷ್ಟೇ ಏಕೆ ಈ ನಮ್ಮ ಪುಟ್ಟ ಮೊಮ್ಮಗನೂ ಶಾಖೆಗೆ ಹೋಗುತ್ತಾನೆ. ನಮ್ಮದು ಸಂಘದ ಮನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಕೂಡಲೇ ತನ್ನ ಎರಡೂ ಕೈಗಳಿಂದ ನಮಸ್ಕರಿಸುವ ಆ ಹುಡುಗಿ, ಇದುವರೆಗೂ ಸುಮಾರು ಮನೆಗಳಿಗೆ ಹೋಗಿದ್ದೇವೆ. ಬಹುತೇಕರು ಬಿಕ್ಷುಕರನ್ನೋ ಇಲ್ಲವೇ ಮಾರ್ಕೆಟಿಂಗ್ ಜನರನ್ನು ಅಟ್ಟಿ ಕಳಿಸುವಂತೆ ಬೈದು ಕಳಿಸಿದವರೇ ಹೆಚ್ಚು. ನಿಮ್ಮ ಮೊಮ್ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ, ನೀವೊಬ್ಬರೇ ಈ ರೀತಿಯಾಗಿ ಒಳಗೆ ಕರೆದು, ಬಿಸಿಲಿನಲ್ಲಿ ಬಂದಿದ್ದೀರಿ ಎಂದು ನೀರು ಕೊಟ್ಟಿರಿ. ನಮ್ಮನ್ನು ಬಾಯಿ ತುಂಬಾ ಹೃದಯವಂತಿಗೆಯಿಂದ ಮಾತನಾಡಿಸಿದ್ದೀರಿ ಇಂತಹ ಸುಂದರ ಸಂಸ್ಕಾರ ಸಂಘದ ಮನೆಯವರಿಂದಲೇ ಸಾಧ್ಯ ಎಂಬುದನ್ನು ನಮ್ಮ ಕೇರಳದಿಂದಲೂ ಗಮನಿಸಿದ್ದೇನೆ ಎನ್ನುತ್ತಾಳೆ. ಸಂಸ್ಕಾರ ಎನ್ನುವುದು ಕೇವಲ ಸಂಘದ ಸ್ವಯಂಸೇವಕರಿಗಲ್ಲದೇ ಪರೋಕ್ಷವಾಗಿ ಅವರ ಇಡೀ ಕುಟುಂಬಕ್ಕೇ ಆಗಿರುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ.

ತೊಂಭತ್ತರ ದಶಕದಲ್ಲಿ ಪೂರ್ವಾಂಚಲದ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಕೊಡಿಸಲೂ ಆಗದೇ ಪರದಾಡುತ್ತಿದ್ದಾಗ ಅಲ್ಲಿಂದ ಸುಮಾರು ಮಕ್ಕಳನ್ನು ಕರ್ನಾಟಕಕ್ಕೆ ಕರೆತಂದು ಆ ಮಕ್ಕಳನ್ನು ಪ್ರತಿಷ್ಟಿತ ಶಾಲೆಗಳಿಗೆ ಸೇರಿಸಿ ಆ ಮಕ್ಕಳಿಗೆ ಅಕ್ಕರೆಯ ತಾಯಂದಿರ ವಾರನ್ನದ ವ್ಯವಸ್ಥೆ ಮಾಡಿ ಉತ್ತಮ ಶಿಕ್ಷಣ ಕೊಡಿಸಿದ ಪರಿಣಾಮ ಆ ರೀತಿಯಾಗಿ ಬಂದ ಅನೇಕ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಇಂದು ಐದಂಕಿಯ ಸಂಬಳ ಪಡೆಯುವಂತೆ ಮಾಡಿದ್ದು ಇದೇ ಸಂಘದ ಸ್ವಯಂಸೇವಕರೇ.

ಕಳೆದ ವರ್ಷ ಕೊರೋನಾದಿಂದಾಗಿ ಅನಿರ್ಧಿಷ್ಟಾವಧಿಯ ಕಾಲ ಲಾಕ್ಡೌನ್ ಆದಾಗ ಕೂಲಿ ಕೆಲಸ ಮಾಡುತ್ತಿದ್ದ ಇಲ್ಲವೇ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರಿಗೆ ಕೆಲಸವೇ ಇಲ್ಲದೇ ಊಟಕ್ಕೂ ತೊಂದರೆಯಾದಾಗ ಅಂತಹವರಿಗೆ ದವಸ ಧಾನ್ಯಗಳ ಕಿಟ್ ವಿತರಿಸಲು ಆರಂಭಿಸಿದ್ದೇ ಸಂಘದ ಸ್ವಯಂಸೇವಕರು. ಊರೂರಿನಲ್ಲಿ ಅಗತ್ಯವಿದ್ದವರನ್ನು ಹುಡುಕಿ ಹುಡುಕಿ ಲಾಕ್ಡೌನ್ ಮುಗಿಯುವವರೆಗೂ ಸರ್ಕಾರದ ನೆರವಿಲ್ಲದೇ ದವಸ ಧಾನ್ಯಗಳನ್ನು ಸಂಗ್ರಹಿಸಿ ಹಂಚಿದ್ದನ್ನು ಇಂದಿಗೂ ಉಪಕೃತರು ಸ್ಮರಿಸುತ್ತಾರೆ.

rama_mandirಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಮನೆ ಮನೆಗಳಿಗೂ ಹೋಗಿ ನಿಧಿ ಸಂಗ್ರಹಿಸುತ್ತಿದ್ದ ಸಂಧರ್ಭದಲ್ಲಿ, ಸುಮಾರು ಎಂಬ್ಬತ್ತು ವರ್ಷದ ಆಸುಪಾಸಿನ ಅಜ್ಜಿಯೊಬ್ಬರು ನಿಧಿ ಸಂಗ್ರಹಣಾ ಅಭಿಯಾನಕ್ಕೆ ಹೋಗಿದ್ದ ಮಾತೆಯ ಕೈಗಳಲ್ಲಿ ಒಂದು ಬೆಳ್ಳಿಯ ಬಟ್ಟಲೊಂದನ್ನು ಕೊಡುತ್ತಾರೆ. ಕುತೂಹಲದಿಂದ ಏನೆಂದು ನೋಡಿದರೆ, ಆ ಬೆಳ್ಳಿ ಬಟ್ಟಲಿನಲ್ಲಿ ಚಿನ್ನದ ಓಲೆಗಳು ಇರುತ್ತವೆ. ಈ ಬೆಳ್ಳಿ ಬಟ್ಟಲು ನನ್ನ ಮದುವೆ ಸಮಯದಲ್ಲಿ ನನ್ನ ತಾಯಿ ಮನೆಯಲ್ಲಿ ಕೊಟ್ಟದ್ದು. ಈ ಓಲೆಗಳನ್ನು ನಮ್ಮ ಮನೆಯವರು ಮಾಡಿಸಿದ್ದು. ದಯವಿಟ್ಟು ಇವೆರಡನ್ನು ಮಾರಿ ಅದರಿಂದ ಬಂದ ಹಣವನ್ನು ರಾಮಮಂದಿರಕ್ಕೆ ಉಪಯೋಗಿಸಿಕೊಳ್ಳಿ. ತಮ್ಮೂರಿನಲ್ಲಿ ತಮ್ಮ ಯಜಮಾನರೂ ಚಿಕ್ಕ ವಯಸ್ಸಿನಲ್ಲಿ ಸಂಘಕ್ಕೆ ಹೋಗುತ್ತಿದ್ದದ್ದನ್ನು ನೆನಪಿಸಿ ಈ ಮೂಲಕ ತಮ್ಮ ತವರು ಮನೆಯವರು ಮತ್ತು ತಮ್ಮ ಯಜಮಾನರ ಬೆವರಿನ ಹನಿಯೂ ರಾಮ ಮಂದಿರಕ್ಕೆ ಸಮರ್ಪಿತವಾಗಲಿ ಎಂದು ಈ ಇಳೀ ವಯಸ್ಸಿನಲ್ಲಿಯೂ ಬಯಸುವಂತಹ ಸಂಗತಿ ಬಹುಶಃ ಸಂಘದ ಮನೆಯಲ್ಲಿ ಬಿಟ್ಟರೆ ಬೇರೆಲ್ಲೂ ಕಾಣ ಸಿಗದು ಎಂದರೂ ತಪ್ಪಾಗಲಾರದು.

bloodನಮಗೆಲ್ಲರಿಗೂ ತಿಳಿದಿರುವಂತೆ ದೇಶಾದ್ಯಂತ ಕೋವಿಡ್ ಲಸಿಕೆಯ ಅಭಿಯಾನ ಶುರುವಾಗಿದೆ. ಇನ್ನು ಮೇ 1ರಿಂದ ದೇಶದಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತಾಗ ದೇಶದ ಬಹು ಭಾಗದ ಜನರಿಗೆ ಇದರಿಂದ ಅನುಕೂಲವಾದರೂ, ಲಸಿಕೆ ತೆಗೆದುಕೊಂಡವರು ಸುಮಾರು 60 ದಿನಗಳವರೆಗೆ ರಕ್ತದಾನ ಮಾಡ ಬಾರದಿರುವ ಕಾರಣ ಈ ಸಮಯದಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತದ ಕೊರತೆ ಬರಬಹುದು ಎಂಬ ದೂರಾಲೋಚನೆ ಮಾಡಿರುವ ಸಂಘದ ಸ್ವಯಂ ಸೇವಕರು ದೇಶಾದ್ಯಂತ ತ್ವರಿತವಾಗಿ ಸ್ವಪ್ರೇರಣೆಯಿಂದ ಲಸಿಕೆ ತೆಗೆದುಕೊಳ್ಳುವ ಮುಂಚೆಯೇ ರಕ್ತದಾನ ಮಾಡುವ ಸಂಕಲ್ಪ ಕೈಗೊಂಡು ಈಗಾಗಲೇ ಎಲ್ಲಾ ಕಡೆಯಲ್ಲಿಯೂ ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಈ ಮೂಲಕ ಆರೋಗ್ಯವಂತ ತರುಣರು ರಕ್ತದಾನ ಮಾಡುವ ಮೂಲಕ ಕೊರೋನಾ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸುತ್ತಾ ದೇಶದ ಸ್ವಾಸ್ಥ್ಯವನ್ನು ಬಲಪಡಿಸುವತ್ತ ಮುನ್ನಡೆಯುತ್ತಿದ್ದಾರೆ.

ಗಾಂಧಿಯವರ ಹತ್ಯೆಯಾದಾಗ ಅದರ ಆರೋಪವನ್ನು ಸಂಘದ ಮೇಲೆ ಹೊರಿಸಿ ಸಂಘವನ್ನು ನಿಷೇಧಿಸಿ ನಂತರ ಅದರಲ್ಲಿ ಸಂಘದ ಪಾತ್ರವಿಲ್ಲ ಹಾಗಾಗಿ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪಿತ್ತ ನಂತರ ಸಂಘ ತನ್ನ ಚಟುವಟಿಕೆಗಳನ್ನು ಮುಂದುವರೆಸಿ ಚೀನಾ ದೇಶದ ಯುದ್ಧದ ಸಮಯದಲ್ಲಿ ಸಂಘದ ನೆರವನ್ನು ಪ್ರಶಂಸಿಸಿ 1963ರ ದೆಹಲಿಯ Republic Day ಪೆರೇಡಿನಲ್ಲಿ ಸಂಘದ ಸ್ವಯಂಸೇವಕರಿಗೆ ಅವಕಾಶ ನೀಡಿದ್ದರು,

ಎಂಭತ್ತರ ದಶಕದಲ್ಲಿ BBC ಅವರು ಇಂದಿರಾ ಗಾಂಧಿಯವರೊಡನೆ ನಡೆಸಿದ ಸಂದರ್ಶನದಲ್ಲಿ ನಿಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪವಿದೆ. ನಿಮ್ಮ ದೇಶದಲ್ಲಿ ಯಾವದೇ ಪ್ರಾಮಾಣಿಕ ಸಂಘ ಸಂಸ್ಥೆಗಳು ಇಲ್ಲವೇ? ಎಂದು ಕೇಳಿದ ಕೂಡಲೇ, ಏಕಿಲ್ಲಾ? ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾಗಿರುವ RSS ಎಂಬ ಸಂಸ್ಥೆ ಅತ್ಯಂತ ಪ್ರಾಮಾಣಿಕವಾದ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯಾಗಿದೆ ಎಂದು ಹೊಗಳಿದ್ದಾರೆ.

ಹೀಗೆ ತಮ್ಮ ಬದ್ದ ವಿರೋಧಿಗಳಿಂದಲೂ ನಿಸ್ವಾರ್ಥ ಸೇವೆಗೆ ಮತ್ತು ಕಾರ್ಯತತ್ಪರತೆಗಳಿಗೆ ಹೊಗಳಿಸಿಕೊಳ್ಳುವ ಜಗತ್ತಿನ ಏಕೈಕ ಸ್ವಯಂಸೇವಾ ಸಂಸ್ಥೆ RSS ಎಂದರೆ ಅತಿಶಯೋಕ್ತಿಯಾಗಲಾರದು.

ವಿದ್ಯಾಕ್ಷೇತ್ರ, ರಾಜಕೀಯ, ಧಾರ್ಮಿಕ, ರೈತ ಸಂಘಟನೆ, ಕಾರ್ಮಿಕ ಸಂಘಟನೆ, ಸ್ವದೇಶೀ ಆಂದೋಲನ, ವನವಾಸಿ ಕಲ್ಯಾಣ ಹೀಗೆ ನೂರಾರು ಸಂಘಟನೆಗಳ ಮುಖಾಂತರ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಂಘಪರಿವಾರದ ಕೋಟ್ಯಾಂತರ ಸ್ವಯಂಸೇವಕರು ದೇಶದ ರಕ್ಷಣೆಗೆ ಕಟಿ ಬದ್ಧರಾಗಿರುವ ವಿಷಯಗಳು ತಿಳಿದಿದ್ದರೂ, ಸಂಘ ಮತ್ತು ಸಂಘದ ಸ್ವಯಂಸೇವಕರನ್ನು ಯಾವುದೇ ರೀತಿಯಲ್ಲಿಯೂ ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತೇ ಅವರ ಮೇಲೆ ಮೇಲಿಂದ ಮೇಲೆ ಆರೋಪ ಮಾಡುತ್ತಾ ನೂರು ಸುಳ್ಳುಗಳನ್ನು ಹೇಳಿ ಅದನ್ನೇ ಸತ್ಯ ಮಾಡುವ ಗೊಬೆಲ್ಸ್ ತಂತ್ರವನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

rss1ತಮಗಾಗಿ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವ ಸಿದ್ಧಾಂತವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉದಾತ್ತ ಜೀವನವನ್ನು ನಡೆಸುತ್ತಿರುವ ಸಂಘದ ಸ್ವಯಂಸೇವರನ್ನು ಗುರುತಿಸಿಯೇ ನಮ್ಮ ದೇಶದ ಪ್ರಜೆಗಳು ಇಂದು ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಹತ್ತಾರು ರಾಜ್ಯಗಳ ಮುಖ್ಯಮಂತ್ರಿಗಳು, ನೂರಾರು ಸಾಂಸದರು, ಸಹಸ್ರಾರು ಶಾಸಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳನ್ನಾಗಿ ಸಂಘದ ಸ್ವಯಂಸೇವಕರನ್ನು ಆಯ್ಕೆಮಾಡಿರುವುದು ಸಂಘ ಮತ್ತು ಸಂಘದ ಸ್ವಯಂ ಸೇವಕರ ಘನತೆ ಮತ್ತು ಕೀರ್ತಿಗಳನ್ನು ಎತ್ತರಕ್ಕೇರಿಸಿದೆ. ಆನೆ ಅಂಬಾರಿಯ ಹೊತ್ತುಕೊಂಡಿರುವುದನ್ನು ನೋಡಿ ನಾಯಿ ಬೊಗಳಿದರೆ, ಜನಾ ನಾಯಿಯನ್ನ ಹಚ್ಚಾ ಎಂದು ಓಡಿಸಿ ಅಂಬಾರಿಗೆ ತಲೆಬಾಗುತ್ತಾರೆ ಅಲ್ಲವೇ?  ಆಡು ಮುಟ್ಟದ ಸೊಪ್ಪಿಲ್ಲಾ, ದೇಶದಲ್ಲಿ ಸಂಘದ ಸ್ವಯಂಸೇವಕರು ಮಾಡದ ಸೇವಾ ಚಟುವಟಿಕೆಗಳು ಇಲ್ಲಾ ಎನ್ನುವುದಂತೂ ಸತ್ಯ ಸತ್ಯ ಸತ್ಯ.

ಏನಂತೀರೀ?

ನಿಮ್ಮವನೇ ಉಮಾಸುತ

ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ದುರ್ಗಾವಸತಿಯ ಬಡಾವಣೆಗಳನ್ನು ನಿಶ್ಚಯಿಸಿದಾಗ ಅದರ ವಿಸ್ತೀರ್ಣವನ್ನು ನೋಡಿಯೇ ತಲೆ ತಿರುರುಗುವ ಹಾಗಿತ್ತು. ನಂಜಪ್ಪ ವೃತ್ತದಿಂದ ಹಿಡಿದು ವಿದ್ಯಾರಣ್ಯಪುರದ ಮುಖ್ಯರಸ್ತೆಯ ಸಂಪೂರ್ಣ ಬಲಭಾಗ ಬಿಇಎಲ್, ಹೆಚ್.ಎಂ.ಟಿ, ಐಇಸಿಹೆಚ್ ಬಡಾವಣೆ, ಜ್ನಾನೇಶ್ವರಿ ಬಡಾವಣೆ, ವೆಂಕಟಸ್ವಾಮಪ್ಪ ಬಡಾವಣೆ, ಬಸವಸಮಿತಿ, ನರಸೀಪುರ, ದುರ್ಗಾ ಬಡಾವಣೆ, ಆಂಜನೇಯಸ್ವಾಮಿ ಬಡಾವಣೆ ಉಫ್ ಹೇಳುವುದಿರಲಿ ನೆನೆಸಿಕೊಂಡರೇ ಸಾಕು ಮೈ ಜುಮ್ಮೆನೆಸುವಷ್ಟು ವಿಸ್ತೀರ್ಣ ಹೊಂದಿದ ಪ್ರದೇಶಗಳಿಂದ ಕೂಡಿತ್ತು.

ಬೈಠಕ್ಕಿಗೆ ಬಂದ ಕಾರ್ಯಕರ್ತರ ಸಂಖ್ಯೆ ನೋಡಿದಾಗ, ಇದೇನು ಸಮಸ್ಯೆಯಾಗದು ಒಂದೆರಡು ವಾರಗಳಲ್ಲೇ ಮುಗಿಸಿಬಿಡಬಹುದು ಎಂದೆನೆಸಿತ್ತು ಎಂದರೂ ಸುಳ್ಳಲ್ಲ. 15ನೇ ತಾರೀಖು ಉಳಿದೆಲ್ಲಾ ವಸತಿಗಳು ದೇವಸ್ಥಾನದಲ್ಲಿ ರಸೀದಿ ಪುಸ್ತಗಳ ಪೂಜೆ ಮಾಡಿಸಿ ತಮ್ಮ ತಮ್ಮ ಸಮರ್ಪಣಾ ಅಭಿಯಾನವನ್ನು ಆರಂಭಿಸಿ ವರದಿ ಕೊಡಲಾರಂಭಿಸಿದರೆ, ನಮ್ಮ ವಸತಿಯಲ್ಲಿ ಪೂಜೆಯೇ ನಡೆದಿರಲಿಲ್ಲ. ಅಂದು ಸಂಜೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಡ ರಾತ್ರಿ ಪೂಜೆ ನಡೆಸಿ ಅಲ್ಲಿದ್ದ ಭಕ್ತಾದಿಗಳ ಬಳಿಯೇ ಅಭಿಯಾನ ನಡೆಸೋಣ ಎಂದರೆ ಅವರ ಬಳಿ ಆ ಕ್ಷಣದಲ್ಲಿ ನಿಧಿ ಸಮರ್ಪಣೆ ಮಾಡಲು ಹಣವೇ ಇರದಿದ್ದದ್ದು ನಿಜಕ್ಕೂ ಸೋಜಿಗವೇ ಸರಿ.

16ನೇ ತಾರೀಖು ಶನಿವಾರ ನಮ್ಮ ಟೋಳಿಯನ್ನು ಕಟ್ಟಿಕೊಳ್ಳುವುದರಲ್ಲಿಯೇ ಕಳೆದು ಹೋಗಿ ಅಂತೂ ಇಂತೂ, ವೆಂಕ, ನಾಣಿ, ಸೀನ ಎನ್ನುವಂತೆ, ಮೂರ್ನಾಲ್ಕು ಮಂದಿಯ ತಂಡವನ್ನು ಕಟ್ಟಿಕೊಂಡು 17ನೇ ತಾರೀಖು ಭಾನುವಾರ ಬೆಳಿಗ್ಗೆ ಸರಿ ಸುಮಾರು 10, 10-30ಕ್ಕೆ ನಮ್ಮ ಟೆಂಟ್ ಹೌಸ್ ಮಂಜು ಅವರ ಅಂಗಡಿಯ ಬಳಿಯಿಂದ ಜ್ಞಾನೇಶ್ವರಿ ಬಡಾವಣೆಯಿಂದ ಅಭಿಯಾನ ಆರಂಭಿಸುವ ಹೊತ್ತಿಗೆ ಇತರೇ ವಸತಿಗಳು ನೂರಾರು ಮನೆಗಳನ್ನು ತಲುಪಿ ಲಕ್ಷಾಂತರ ರೂಪಾಯಿಗಳ ನಿಧಿಯನ್ನು ಸಂಗ್ರಹಿಸಿಯಾಗಿತ್ತು.

ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ ಎಂದು ಮನಸ್ಸಿನಲ್ಲಿಯೇ ಅಂದು ಕೊಂಡು ಎಲ್ಲರೂ ಒಟ್ಟಾಗಿ ಜೈ ಶ್ರೀರಾಮ್ ಎಂದು ಆರಂಭಿಸಿದ ಆಭಿಯಾನ ಮುಂದಿನ ಇಪ್ಪತ್ತು ದಿನಗಳ ಕಾಲ ನಿರಂತರವಾಗಿ ಯಾವುದೇ ಎಡರು ತೊಡರುಗಳು ಇಲ್ಲದೇ ಹೂವಿನಂತೆ ನಡೆದು ಹೋದದ್ದು ರಾಮನ ಕೃಪೆಯೇ ಸರಿ.

ಆರಂಭದಲ್ಲಿ ಮಹಂತೇಶ್, ಮನಿಲಾ ರೆಡ್ದಿ, ಮಂಜುನಾಥ್, ಚೇತನ್ ಮತ್ತು ನಾನು ಹೀಗೆ ಐದು ಜನರಿದ್ದ ತಂಡಕ್ಕೆ ಪ್ರಸನ್ನ ಕೋಸಗಿಯವರು ಸೇರಿಕೊಂಡರು. ನಂತರ ಮಂಜುವಿನ ಸಹಕಾರದೊಂದಿಗೆ ಬಿಜೆಪಿಯ ಕೆಲ ನಿಷ್ಠಾವಂತ ಕಾರ್ಯಕರ್ತರೂ ನಮ್ಮೊಂದಿಗೆ ಸೇರಿಕೊಂಡ ನಂತರ ಒಳ್ಳೆಯ ತಂಡ ರೂಪುಗೊಂಡಿತು. ಇಂತಹ ತಂಡವನ್ನು ಪರಿಚಯಿಸುವುದು ಮತ್ತು ಅವರ ಕಾರ್ಯಗಳನ್ನು ಅಭಿನಂದಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿ ಈ ಲೇಖವನ್ನು ಅವರೆಲ್ಲರಿಗೂ ಅರ್ಪಿಸುತ್ತಿದ್ದೇನೆ.

ಶ್ರೀ ಮಹಂತೇಶ್ : ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್ ಆದರೂ, ಸಂಘ, ಯುವ ಬ್ರಿಗೇಡ್ ಮತ್ತು ಸ್ವದೇಶೀ ಜಾಗರಣ್ ಮಂಚ್ ಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ಉತ್ಸಾಹೀ ತರುಣ. ದೇಶಕ್ಕಾಗಿ ತನ್ನ ದೇಹದಾರೋಗ್ಯವನ್ನೆಲ್ಲಾ ಬದಿಗೊತ್ತಿರುವ ಕೆಚ್ಚದೆಯವ ಎಂದರೂ ತಪ್ಪಾಗಲಾರದು. ಉತ್ಸಾಹಿ, ಶಾಂತಚಿತ್ತ ಮತ್ತು ನಿಗರ್ವಿ. ದುರ್ಗಾವಸತಿಅಭಿಯಾನದ ಸಂಪೂರ್ಣ ಜವಾಬ್ಧಾರಿಯನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು ದಿನದ ಇಪ್ಪತ್ನಾಲ್ಕು ಗಂಟೆಯೂ ಅಭಿಯಾನದಲ್ಲಿ ಭಾಗವಹಿಸಿದ ಹೆಗ್ಗಳಿಗೆ ಆತನದು

ಶ್ರೀಮತಿ ಮನಿಲಾ ರೆಡ್ಡಿ : ಸಂಬಂಧದಲ್ಲಿ ಮಂತಹೇಶನ ತಾಯಿ. ಶಿವಾಜಿಗೆ ಜೀಜಾಬಾಯಿ ಇದ್ದಂತೆ, ಮಂತನಿಗೆ ಮನಿಲಾ ಅವರಿದ್ದಾರೆ ಎನ್ನಬಹುದು. ಚಿಂತಾಮಣಿಯ ಮೂಲದವರರಾದ ಮನಿಲಾರವರು ಉತ್ತಮ ಯೋಗ ಪಟು, ಯೋಗ ಶಿಕ್ಷಕಿ ಮತ್ತು ಆಯುರ್ವೇದದ ಮಸಾಜ್ ತಜ್ಞೆ. ಈ ಅಭಿಯಾನದಲ್ಲಿ ತಮ್ಮ ಮಗನ ಸಾಕಷ್ಟು ಸಮಯವನ್ನು ಮೀಸಲಿಟ್ಟು ತಮ್ಮ ಮಗನ ಮೇಲಿನ ಜವಾಬ್ಧಾರಿಯ ಹೊರೆಯನ್ನು ತಾವೂ ಸಹಾ ಹೊತ್ತು ಕೊಂಡು ಆತನಿಗೆ ಕಷ್ಟವಾಗದಂತೆ ಸಮರ್ಥವಾಗಿ ನಿಭಾಯಿಸಿದ ಮಹಾನ್ ತಾಯಿ.

ಶ್ರೀ ಚೇತನ್ : ಹೆಸರಿಗೆ ಅನ್ವರ್ಥದಂತೆ ಉತ್ಸಾಹದ ಚಿಲುಮೆ. ವೃತ್ತಿಯಲ್ಲಿ ಸಾಫ್ಘ್ವೇರ್ ಕಂಪನಿಯಲ್ಲಿ ಪ್ರೋಗ್ರಾಂ ಮ್ಯಾನೇಜರ್ ಆಗಿದ್ದರೂ, ಸಮಯ ಸಿಕ್ಕಾಗಲೆಲ್ಲಾ ನಮ್ಮೊಂದಿಗೆ ಅಭಿಯಾನದಲ್ಲಿ ಜೋಡಿಸಿಕೊಂಡು ರಾಮನ ಕಾರ್ಯದಲ್ಲಿ ತನ್ನ ಅಳಿಲು ಸೇವೆಯನ್ನು ಸಲ್ಲಿಸಿದ್ದಾರೆ.

ಶ್ರೀ ಮಂಜುನಾಥ್ : ಬಾಲ್ಯದಿಂದಲೂ ಸಂಘದ ಸ್ವಯಂಸೇವಕ ನಾಗಿದ್ದು ಪ್ರಸ್ತುತ ತನ್ನದೇ ಆದ ಸ್ವಂತದ ಟೆಂಟ್ ಹೌಸ್ ನಡೆಸುತ್ತಿದ್ದರೂ, ಅರಂಭದಿಂದ ಅಂತ್ಯದವರೆಗೂ ತಂಡದ ಬೆನ್ನೆಲುಬಾಗಿದ್ದರು ಎಂದರೂ ತಪ್ಪಾಗಲಾರದು. ಅವರ ಅಂಗಡಿಯಿಂದಲೇ ಅಭಿಯಾನ ಆರಂಭಿಸೋಣ ಎಂದ ತಕ್ಷಣ ಕೂಡಲೇ ಹಣ ಸಂಗ್ರಹಣೆಗೊಂದು ಚೆಂದದ ಜೋಳಿಗೆ, ಸಂಗ್ರಹ ಪುಸ್ತಕಗಳ ಒತ್ತಿಗೆ ಸುಂದರವಾದ ರೊಟ್ಟು ಗಳನ್ನು ಕೊಟ್ಟು ತಂಡವನ್ನು ಮುಂಚೂಣಿಯಲ್ಲಿ ಮುನ್ನೆಡೆಸಿದ ಅಗ್ರೇಸರ. ಎ. ರವಿಯವರೊಂದಿಗೆ ಮಾತನಾಡಿ ಬಿಜೆಪಿ ಕಾರ್ಯಕರ್ತರನ್ನೂ ನಮ್ಮೊಂದಿಗೆ ಕೈ ಜೋಡಿಸಿದ ಕಾರಣಕರ್ತ.

ಶ್ರೀ ಚಿದಾನಂದ : ಮೂಲತಃ ವಿದ್ಯಾರಣ್ಯಪುರದ ನಿವಾಸಿ ಮತ್ತು ಸಿವಿಲ್ ಕಂಟ್ರಾಕ್ಟರ್. ಆಡು ಮುಟ್ಟದ ಸೊಪ್ಪಿಲ್ಲ. ವಿದ್ಯಾರಣ್ಯಪುರದಲ್ಲಿ ಚಿದಾನಂದನಿಗೆ ಪರಿಚಯವಿಲ್ಲದ ಜನರು ಮತ್ತು ಜಾಗವಿಲ್ಲಾ ಎಂದರೂ ತಪ್ಪಾಗಲಾರದು. ಮಂಗಳವಾರದಿಂದ ನಮ್ಮೊಂದಿಗೆ ಕೈಜೋಡಿಸಿಕೊಂಡರೂ, ಮೂರು ವಾರಗಳ ಕಾಲ ಸಮಯಕ್ಕೆ ಸರಿಯಾಗಿ ನಿಗಧಿ ಪಡಿಸಿದ ಜಾಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹಾಜರಿರುತ್ತಿದದ್ದು ಗಮನಾರ್ಹವಾದ ಸಂಗತಿ. ಆತನ ಭಾಷಾ ಪ್ರಾವೀಣ್ಯತೆ, ಆತನ ಪರಿಚಿತ ಸಂಪರ್ಕಗಳನ್ನು ಅಭಿಯಾನದಲ್ಲಿ ಸಮರ್ಥವಾಗಿ ಬಳಸಿಕೊಂಡೆವು. ನರಸೀಪುರ, ದುರ್ಗಾದೇವಿ ಬಡಾವಣೆ, ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ತಿಂಡ್ಲುವಿನ ಬಹುತೇಕ ಭಾಗಗಳಲ್ಲಿ ನಮ್ಮೊಂದಿಗೆ ಆತನಿಲ್ಲದೇ ಹೋಗಿದ್ದರೆ ಕಷ್ಟವಾಗುತ್ತಿತ್ತೇನೋ.

ಶ್ರೀ ರವೀಂದ್ರ : ರಾಮನಿರುವಲ್ಲಿ ಲಕ್ಷ್ಮಣ ಹೇಗೆ ಇರುತ್ತಾನೋ ಹಾಗೆ ಚಿದಾನಂದ ಇರುವಲ್ಲಿ ರವೀಂದ್ರ ಇದ್ದೇ ಇರುತ್ತಾರೆ ಎನ್ನುವುದು ಜಗ್ಗಜಾಹೀತಾಗಿದೆ. ಒಂದೇ ತಾಯಿಯ ಮಕ್ಕಳಾಗದಿದ್ದರೂ, ಒಡಹುಟ್ಟಿದವರಂತೆಯೇ ಸದಾಕಾಲವೂ ಪ್ರತಿಯೊಂದು ಕಾರ್ಯದಲ್ಲಿಯೂ ಈ ಜೋಡಿ ಇರುವುದು ನಿಜಕ್ಕೂ ಅಭಿನಂದನೀಯ. ಈ ಅಪರೂಪದ ಜೋಡಿ ನಮ್ಮ ತಂಡದೊಂದಿಗೂ ಭಾಗಿಯಾಗಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ಶ್ರೀ ರವೀಂದ್ರರವರು ನಮ್ಮ ತಂಡದ ಅತ್ಯಂತ ಶಾಂತ ಸ್ವಭಾವದ ವ್ಯಕ್ತಿ. ವೃತ್ತಿಯಲ್ಲಿ ಸಿವಿಲ್ ಕಂಟ್ರಾಕ್ಟರ್, ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಪ್ರತೀ ದಿನ ಸಂಜೆ ನಮ್ಮ ತಂಡದೊಂದಿಗಿದ್ದು ತಮ್ಮ ಅನುಭವವನ್ನು ಅಭಿಯಾನಕ್ಕೆ ಧಾರೆ ಎರೆದಿದ್ದಾರೆ.

ಶ್ರೀ ಶರಣಪ್ಪನವರು : ವಯಸ್ಸಿನಲ್ಲಿ ನಮ್ಮ ತಂಡದ ಅತ್ಯಂತ ಹಿರಿಯ ಸದಸ್ಯರಾದರೂ ಅತ್ಯಂತ ಉತ್ಸಾಹಿಗಳು. ಹೆಚ್.ಎಂ.ಟಿ ಕಾರ್ಖಾನೆಯಲ್ಲಿ ನಿವೃತ್ತಿ ಹೊಂದಿದ ನಂತರ ಪ್ರಸ್ತುತ ಹೆಚ್. ಎಂ.ಟಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿರುವುದು ನಮಗೆ ಆನೆಯ ಬಲ ತಂದಿತ್ತು. ಹೆಚ್.ಎಂ.ಟಿ ಬಡಾವಣೆಯ ಬಹುತೇಕ ಮನೆಗಳ ನೇರ ಪರಿಚಯ ಅವರಿಗೆ ಇದ್ದ ಕಾರಣ ನಮ್ಮ ಅಭಿಯಾನ ಸುಲಭವಾಗಿ ಮತ್ತು ಸರಾಗವಾಗಿ ನಡೆಯುವಂತಾಗಿತ್ತು. ಇವರೂ ಸಹಾ ಬೆಳಿಗ್ಗೆ ಮತ್ತು ಸಾಯಂಕಾಲ ಸಮಯಕ್ಕೆ ಸರಿಯಾಗಿ ನಮ್ಮೊಂದಿಗೆ ಆಭಿಯಾನದಲ್ಲಿ ಭಾಗವಹಿಸಿದ್ದು ನಿಜಕ್ಕೂ ಶ್ಲಾಘನೀಯ.

ಮಹೇಂದ್ರ : ಬಾಲ್ಯದಿಂದಲೂ ಸಂಘದ ಸ್ವಯಂ ಸೇವಕ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ವಿದ್ಯಾರಣ್ಯಪುರದ ಹೆಚ್.ಎಂ.ಟಿ ಬಡಾವಣೆಯ ಬಹುತೇಕರ ವ್ಯಕ್ತಿಗತ ಪರಿಚಯ ಮಹೇಂದ್ರನಿಗಿದ್ದದ್ದು ನಮ್ಮ ಅಭಿಯಾನಕ್ಕೆ ಬಹಳಷ್ಟು ಸಹಕಾರಿಯಾಗಿತ್ತು.

ಶ್ರೀಮತಿ ನಳೀನಾಕ್ಷಿ : ಮೂಲತಃ ಮಂಗಳೂರಿನವರಾದರೂ, ಬಹಳ ವರ್ಷಗಳಿಂದ ವಿದ್ಯಾರಣ್ಯಪುರದಲ್ಲಿರುವ ಗೃಹಿಣಿ. ಮಾತೆಯರಲ್ಲಿ ನಮ್ಮ ತಂಡದ ಅತ್ಯಂತ ಹಿರಿಯ ಸದಸ್ಯೆಯಾದರೂ, ಯಾವುದೇ ಸಮಸ್ಯೆಗಳಿಲ್ಲದೇ ಮೂರು ವಾರಗಳ ಕಾಲ ತಂಡದೊಂದಿಗೆ ಅಭಿಯಾನದಲ್ಲಿ ಒಂದು ಚೂರೂ ಬೇಸರವಿಲ್ಲದೇ ಜವಾಬ್ಧಾರಿಯನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿದವರು. ಅಭಿಯಾನದ ಸಮಯದಲ್ಲಿ ಬಿಸಿಲಿನ ಬೇಗೆಯಲ್ಲಿ ಬಳಲಿದವರಿಗೆ ತಮ್ಮ ಕೈಯ್ಯಿಂದಲೇ, ಚಾಕ್ಲೇಟ್, ಪೆಪ್ಪರ್ಮೆಂಟ್, ಇಲ್ಲವೇ ದೇವರ ಪ್ರಸಾದಗಳನ್ನು ಕೊಡುತ್ತಾ ನಮ್ಮನ್ನೆಲ್ಲಾ ಹುರಿದುಂಬಿಸಿದವರು.

ಶ್ರೀಮತಿ ಡಾ. ವಿಶಾಲಾಕ್ಷಿ : ವೃತ್ತಿಯಲ್ಲಿ ಫಿಸಿಯೋಥೆರೆಪಿ ವೈದ್ಯರಾದರೂ, ಪರಮ ಸಾಯಿ ಭಕ್ತೇ. ಸದಾಕಾಲವೂ ಸಾಯಿರಾಂ ಸ್ಮರಣೆಯಿಲ್ಲದೇ, ಮಾತೇ ಹೊರಡದು. ತಮ್ಮ ಬಿಡುವಿಲ್ಲದ ವೃತ್ತಿಯ ನಡುವೆಯೂ, ಮೂರು ವಾರಗಳ ಕಾಲ ಸಂಜೆಯ ಹೊತ್ತು ಎರಡು ಮೂರು ಗಂಟೆಗಳ ಕಾಲ ಅಭಿಯಾನಕ್ಕಾಗಿಯೇ ತಮ್ಮ ಅಮೂಲ್ಯಸಮಯವನ್ನು ಮೀಸಲಾಗಿಟ್ಟಿದ್ದಲ್ಲದೇ, ಕಡೆಯ ಎರಡು ದಿನಗಳ ಕಾಲ ವಿದ್ಯಾರಣ್ಯಪುರದ ಬಹುತೇಕ ವೈದ್ಯರುಗಳನ್ನು ಸಂಪರ್ಕಿಸಿ ಅವರನ್ನೂ ಅಭಿಯಾನದಲ್ಲಿ ಪಾಲ್ಗೊಂಡುವಂತೆ ಮಾಡಿದ ದಿಟ್ಟ ಮಹಿಳೆ.

ರಮಾ ಮತ್ತು ಪದ್ಮ: ಅಪ್ಪಟ್ಟ ಗೃಹಿಣಿಯರು ಮತ್ತು ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು. ಬಹಳ ಚುರುಕಿನ ದಿಟ್ಟ ಮಹಿಳೆಯರು. ಅದರಲ್ಲೂ ಪದ್ಮಾರವರಂತೂ ಬಹಳ ಚುರುಕಾಗಿದ್ದು ಎಲ್ಲರಿಗಿಂತಲೂ ಮುಂಚೆ ಸರ ಸರನೇ ಬಹು ಮಡಿಗಳ ಕಟ್ಟಡಗಳನ್ನು ಸರಾಗವಾಗಿ ಹತ್ತುವ ಮೂಲಕ ಅಭಿಯಾನವನ್ನು ಚುರುಕುಗೊಳಿಸಿದರು.

ಶ್ರೀ ರವಿ ತೇಜ ಮತ್ತು ಶ್ರೀಮತಿ ಪಲ್ಲವಿ ರವಿ ತೇಜ ದಂಪತಿಗಳು : ಬಹುಶಃ ತಮ್ಮ ತಂಡ ಕಿರಿಯ ಸದಸ್ಯರಾದರೂ ಕಾರ್ಯ ಮತ್ತು ಗಾತ್ರದಲ್ಲಿ ಹಿರಿಯರೇ ಸರಿ. ತಮ್ಮ ಕೆಲಸಗಳ ಒತ್ತಡದ ಮಧ್ಯೆಯೂ ಅಭಿಯಾನಕ್ಕೆಂದೇ ಸಮಯವನ್ನು ಮೀಸಲಾಗಿಟ್ಟಿದ್ದಲ್ಲದೇ ಅತ್ಯಂತ ಲವಲವಕೆಯಿಂದ, ಗಟ್ಟಿತನ ಮತ್ತು ದಿಟ್ಟತನದಿಂದ ಆಭಿಯಾನಾದಲ್ಲಿ ನಮ್ಮ ತಂಡದಲ್ಲಿದ್ದದ್ದು ನಮಗೆ ಆನೆ ಬಲ ತಂದಂತಿತ್ತು ಎಂದರೂ ತಪ್ಪಾಗಲಾರದು.

ಶ್ರೀಮತಿ ಪ್ರೀತಿ ಜಯಂತ್ : ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯ ತ್ಯಾಗವಿರುತ್ತದೆ ಎನ್ನುವಂತೆ, ದುರ್ಗಾ ವಸತಿಯ ಭಾಗವಾಗಿದ್ದರೂ ತಮ್ಮ ಪತಿ ಜಯಂತ್ ಅವರನ್ನು ಶಕ್ತಿ ಗಣಪತಿ ವಸತಿಯೊಂದಿಗೆ ಜೋಡಿಸಿ, ತಮ್ಮ ಪುಟ್ಟ ಕಂದನನ್ನು ಪಕ್ಕದ ಮನೆಯಲ್ಲಿ ಬಿಟ್ಟು ಸಮಯ ಮಾಡಿಕೊಂಡು ನಮ್ಮ ಅಭಿಯಾನದಲ್ಲಿ ಭಾಗಿಯಾಗಿದ್ದದ್ದು ನಿಜಕ್ಕೂ ಅಭಿನಂದನೀಯ. ನಮ್ಮ ತಂಡದಲ್ಲಿ ಒಬ್ಬರನ್ನೊಬ್ಬರ ಕಾಲೆಳೆಯುತ್ತಾ, ಚೈತನ್ಯದ ಚಿಲುಮೆಯಾಗಿ ತಂಡಕ್ಕೆ ಸ್ಪೂರ್ತಿಯನ್ನು ತುಂಬಿದ ಕೀರ್ತಿ, ಪ್ರೀತಿಯವರದ್ದು.

ಉಮೇಶ್ ಗಾಯಕ್ವಾಡ್ : ನಮ್ಮ ತಂಡದ ಮತ್ತೊಬ್ಬ ಚೈತನ್ಯದ ಚಿಲುಮೆ ಮತ್ತು ಹಸನ್ಮುಖಿ. ಸಮಯ ಸಿಕ್ಕಾಗಲೆಲ್ಲಾ ನಮ್ಮೊಂದಿಗಿದ್ದು ತಮ್ಮ ಅಪಾರವಾದ ಅನುಭವ ಮತ್ತು ಸಂಪರ್ಕವನ್ನು ಅಭಿಯಾನದಲ್ಲಿ ತೊಡಗಿಸಿಕೊಂಡವರು.

ಪ್ರಸನ್ನ ಕೋಸಕಿ : ವೃತ್ತಿಯಲ್ಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಪ್ರೋಗ್ರಾಂ ಮ್ಯಾನೇಜರ್. ಸದಾ ಕಾಲವೂ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುವಂತಹ ಜವಾಬ್ಧಾರಿಯುತ ವ್ಯಕ್ತಿ. ಸಂಘದ ದೃಷ್ಠಿಯಿಂದ ಯಲಕಹಂಕ ಭಾಗದ ಸಂಘಚಾಲಕ್. ಇಷ್ಟೆಲ್ಲಾ ಹೊಣೆಯನ್ನು ಹೊತ್ತಿರುವಂತಹ ಪ್ರಸನ್ನ ಸಂಪೂರ್ಣವಾಗಿ ತನು ಮನ ಮತ್ತು ಧನಗಳಿಂದ ಕುಟುಂಬ ಸಮೇತರಾಗಿ ನಮ್ಮ ತಂಡದೊಂದಿಗೆ ಸಮಯ ಸಿಕ್ಕಾಗಲೆಲ್ಲಾ ಭಾಗವಹಿಸಿದ್ದಲ್ಲದೇ, ನಮ್ಮ ವಸತಿಯ ಗಣ್ಯವ್ಯಕ್ತಿಗಳ ಸಂಪರ್ಕ ಮಾಡಿ ಅಂತಹವರನ್ನು ನಿಧಿ ಸಮರ್ಮಣಾ ಅಭಿಯಾನದಲ್ಲಿ ಭಾಗಿಯಾಗುವಂತೆ ಮಾಡಿದ ಶ್ರೇಯಕರ್ತರಾಗಿದ್ದಾರೆ.

ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ಭಾಗಿಗಳಾಗುವಂತೆ ಕೋರುವಾಗ ದಯವಿಟ್ಟು ತಮ್ಮ ತನು ಮನ ಧನದ ಸಹಾಯ ಕೋರುವುದು ವಾಡಿಕೆ. ಇಂದು ಬಹುತೇಕರು ಧನದ ಸಹಾಯ ಮಾಡಲು ಸನ್ನದ್ಧರಾಗಿದ್ದರೂ ತನ ಮತ್ತು ಮನ ದೊಂದಿಗೆ ಭಾಗಿಗಳಾಗುವವರ ಸಂಖ್ಯೆ ಬಹುತೇಕ ಬೆರಳೆಣಿಕೆಯಲ್ಲಿರುತ್ತದೆ. ರಾಮ ಮಂದಿರದ ಅಭಿಯಾನದಲ್ಲಿ ಭಾಗವಹಿಸಲೆಂದೇ ಏನೋ ಕೋವಿಡ್ ನಿಂದಾಗಿ ಕೆಲಸ ಕಳೆದುಕೊಂದಿದ್ದ ನನಗೆ ಈ ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ದುರ್ಗಾವಸತಿಯ ಅಭಿಯಾನದ ತಂಡದ ಭಾಗವಾಗಿ 22 ದಿನಗಳ ಕಾಲ ಸರಾಸರಿ ಪ್ರತೀ ದಿನ 9549 ಹೆಜ್ಜೆಗಳಂತೆ, ಒಟ್ಟು 210078 ಹೆಜ್ಜೆಗಳು ಅಂದರೆ ಸುಮಾರು 156 ಕಿ.ಮೀ. ದೂರವನ್ನು ಈ ಆಭಿಯಾನದಲ್ಲಿ ಸವೆಸಿದ್ದಲ್ಲದೇ, ಕೇವಲ ನಮ್ಮ ವಸತಿಯಲ್ಲದೇ ಅಕ್ಕ ಪಕ್ಕದ ವಸತಿಯಲ್ಲಿ ಸಂಗ್ರಹವಾದ ಹಣವನ್ನೂ ಸಹಾ ಜತನದಿಂದ ಬ್ಯಾಂಕಿನಲ್ಲಿ ಸಂದಾಯ ಮಾಡುವ ಮೂಲಕ ತನು, ಮನ ಮತ್ತು ಧನದ ರೂಪದಲ್ಲಿ ರಾಮ ಮಂದಿರದ ಅಭಿಯಾನದಲ್ಲಿ ಭಾಗಿಯಾಗುವ ಅವಕಾಶವನ್ನು ಪ್ರಭು ಶ್ರೀರಾಮ ನನಗೆ ವಯಕ್ತಿಕವಾಗಿ ಕರುಣಿಸಿದ್ದದ್ದು ನಿಜಕ್ಕೂ ಪೂರ್ವ ಜನ್ಮದ ಸುಕೃತವೇ ಸರಿ.

ಇಲ್ಲಿ ನಮೂದಿಸಿರುವ ಹೆಸರುಗಳಲ್ಲದೇ ಪೃಥ್ವಿ, ಶ್ರೀ ಅಭಿರಾಮ ಮತ್ತು ಶ್ರೀಮತಿ ಶ್ರೀಲತ ದಂಪತಿಗಳು, ಶ್ರೀ ನಂಜಯ್ಯ ಗೌಡರು (ಪಾನೀ ಪುರಿ ಗೌಡ್ರು) ಶ್ರೀ ವಿಶ್ವನಾಥ್ ರೆಡ್ಡಿಯವರು (ಮಹಂತೇಶ್ ತಂದೆ), ರಾಜಕೀಯ ಧುರೀಣರಾದ ಶ್ರೀ ಎ. ರವಿ ಮತ್ತು ಶ್ರೀ ಪಿಳ್ಳಪ್ಪನವರು ಮತ್ತು ಶ್ರೀನಾಥ್ ಹೀಗೆ ಇನ್ನೂ ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡ ಪರಿಣಾಮವಾಗಿಯೇ, late ಆದರೂ latest ಆಗಿ ಬಂದರು ಎನ್ನುವಂತೆ ತಡವಾಗಿ ಅಭಿಯಾನವನ್ನು ಆರಂಭಿಸಿದರೂ, ತಂಡವಾಗಿ ಅಭಿಯಾನದಲ್ಲಿ ನಮ್ಮೆಲ್ಲಾ ಹಮ್ಮು ಬಿಮ್ಮುಗಳನ್ನು ಬದಿಗೊತ್ತಿ ಭಾಗವಹಿಸಿದ ಕಾರಣ, ಜಾಲಹಳ್ಳಿ ನಗರದಲ್ಲಿಯೇ ಅತ್ಯಂತ ಯಶಸ್ವೀ ತಂಡವಾಗಿ ದುರ್ಗಾ ವಸತಿ ತಂಡ ಹೊರಹೊಮ್ಮಿರುವ ಯಶಸ್ಸಿನ ಶ್ರೇಯ ಇಡೀ ತಂಡಕ್ಕೇ ಸಲ್ಲುತ್ತದೆ.

ಈ ಆಭಿಯಾನದಲ್ಲಿ ಪಾಲ್ಗೊಂಡಾಗಿನ ಅನುಭವ ನಿಜಕ್ಕೂ ಅನನ್ಯ ಮತ್ತು ಆನಂದಮಯವೇ ಸರಿ. ಸರಿ ಸುಮಾರು ಮೂರು ಸಾವಿರದಿಂದ ಮೂರೂವರೆ ಸಾವಿರ ಮನೆಗಳನ್ನು ತಂಡದೊಂದಿಗೆ ಭೇಟಿ ಮಾಡಿದ ಅಪರೂಪದ ಸದಾವಕಾಶ. ಈ ಮೂಲಕ ಸಾವಿರಾರು ಹೊಸಬರನ್ನು ಪರಿ‍ಚಯ ಮಾಡಿಕೊಂಡಿದ್ದಲ್ಲದೇ, ನೂರಾರು ಪರಿಚಯಸ್ಥರನ್ನು ಮತ್ತೊಮ್ಮೆ ಭೇಟಿಯಾಗಿ ನಮ್ಮ ಗೆಳೆತನವನ್ನು ಮತ್ತಷ್ಟೂ ಗಟ್ಟಿ ಮಾಡಿಕೊಳ್ಳುವ ಸುವರ್ಣಾವಕಾಶ ದೊರೆಕಿತು. ನಾವು ಭೇಟಿ ಮಾಡಿದ ಶೇ 98ರಷ್ಟು ಮನೆಗಳಲ್ಲಿ ಯಾವುದೇ ಧರ್ಮ, ಜಾತಿ, ಬಡವ ಮತ್ತು ಬಲ್ಲಿದರೆನ್ನದೇ ಸ್ವಪ್ರೇರಣೆಯಿಂದ ಅಭಿಯಾನದಲ್ಲಿ ಭಾಗವಹಿಸಿದ್ದು ನಿಜಕ್ಕೂ ಅವರ್ಣನೀಯ. ಅವರೆಲ್ಲರ ಅಳಿಲು ಸೇವೆಯ ಕಾಣಿಕೆಯ ಪರಿಣಾಮವಾಗಿ ಇನ್ನು ಎರಡು ಮೂರು ವರ್ಷಗಳಲ್ಲಿ ನಿಗಧಿತ ಸಮಯದಲ್ಲಿಯೇ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರನ ಭವ್ಯವಾದ ಮಂದಿರ ನಿರ್ಮಾಣವಾಗಿ ವಿಶ್ವಾದ್ಯಂತ ಹಂಚಿ ಹರಡಿಹೋಗಿರುವ ಸಮಸ್ತ ಹಿಂದುಗಳ ಶ್ರದ್ಧಾ ಕೇಂದ್ರವಾಗಿ ಮಾರ್ಗದರ್ಶನ ಮಾಡುವಂತಾಗಲಿ ಮತ್ತು ನಮಗೆಲ್ಲರಿಗೂ ಆ ದೇವಸ್ಥಾನದ ದರ್ಶನದ ಭ್ಯಾಗ್ಯ ಆದಷ್ಟು ಬೇಗನೆ ಸಿಗಲಿ ಎಂದೇ ಎಲ್ಲರ ಆಶಯವಾಗಿದೆ. ಕುಟುಂಬದೊಡನೆ ಅಯೋಧ್ಯಾ ರಾಮನ ದರ್ಶನ ಮಾಡುವಾಗ ಈ ಭವ್ಯ ದೇಗುಲದ ನಿರ್ಮಾಣ ಕಾರ್ಯದಲ್ಲಿ ನಮ್ಮದೂ ಸಹಾ ತನು ಮನ ಧನದ ಅಳಿಲು ಸೇವೆ ಇದೆ ಎನ್ನುವ ಸಾರ್ಥಕತೆಯೇ ಅನನ್ಯವಾದದ್ದು

ರಾಮನಿಗೆ ಸೀತಾನ್ವೇಷಣೆಯಲ್ಲಿ ಸಹಕರಿಸಲು ಜಟಾಯು ನಾವಾಗಲಿಲ್ಲ …

ರಾಮನೊಂದಿಗೆ ವಾನರರಂತೆ ರಾಮಸೇತುವಿನ ಭಾಗವಾಗುವ ಭಾಗ್ಯ ನಮಗೆ ಸಿಗಲಿಲ್ಲ …

ಕಡೆಯ ಪಕ್ಷ ರಾಮನ ಮಂದಿರಕ್ಕಾಗಿ ನಡೆದ ಕರಸೇವೆಯಲ್ಲಿ ಭಾಗವಹಿಸುವ ಭಾಗ್ಯವೂ ನಮ್ಮಲ್ಲಿ ಬಹುತೇಕರಿಗೆ ಸಿಕ್ಕಿರಲಿಲ್ಲ …

ಸದ್ಯ ಈಗ ನಿರ್ಮಾಣವಾಗುತ್ತಿರುವ ರಾಮನ ಭವ್ಯ ಮಂದಿರಕ್ಕಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದ್ದೇ ನಮ್ಮ ಪುಣ್ಯ.

ಈ ಐತಿಹಾಸಿಕ ಅಭಿಯಾನದಲ್ಲಿ ಎರಡು ವಾರ ಕಟಿ ಬದ್ಧರಾಗಿ ನಮ್ಮೊಂದಿಗೆ ಶ್ರಮಿಸಿದ ಎಲ್ಲರಿಗೂ ಮತ್ತೊಮ್ಮೆ ವಂದನೆಗಳು ಮತ್ತು ಅಭಿನಂದನೆಗಳು.

ಏನಂತೀರೀ?
ನಿಮ್ಮವನೇ ಉಮಾಸುತ

ಶ್ರೀ ರಾಮ ಜನ್ಮಭೂಮಿ ನಡೆದು ಬಂದ ಹಾದಿ

ನಮ್ಮ ದೇಶದ ಯಾವುದೇ ಪ್ರದೇಶಕ್ಕೆ ಹೋಗಿ ಯಾರನ್ನಾದರೂ ನಿಮ್ಮ ಹೆಸರೇನು? ನಿಮ್ಮ ತಂದೆಯ ಹೆಸರೇನು? ನಿಮ್ಮ ತಾತನ ಹೆಸರೇನು? ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಮುತ್ತಾತನ ಹೆಸರೇನು? ಎಂದು ಕೇಳ ಬಹುದು ಅದಕ್ಕಿಂತ ಹೆಚ್ಚಿನದ್ದೇನೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅದೇ ರಾಮನ ಬಗ್ಗೆ ಕೇಳಿ ಆತ ಥಟ್ ಅಂತಾ,‌ ಪ್ರಭು ಶ್ರೀ ರಾಮಾ, ವಿಷ್ಣುವಿನ ದಶಾವತಾರದಲ್ಲಿ ಏಳನೇ ಅವತಾರ. ದಶರಥನಿಗೆ ಮೂರು ಜನ ಆಧಿಕೃತವಾದ ರಾಣಿಯರಿದ್ದರೂ ಮಕ್ಕಳಾಗದಿದ್ದಾಗ ಪುತ್ರಕಾಮೇಷ್ಟಿ ಯಾಗದ ಫಲವಾಗಿ ಜನಿಸಿದ ನಾಲ್ಕು ಮಕ್ಕಳಲ್ಲಿ ಅಗ್ರಜನೇ ಶ್ರೀರಾಮ. ಆತನ ಧರ್ಮ ಪತ್ನಿ ಸೀತಾಮಾತೆ. ಲಕ್ಷ್ಮಣ, ಭರತ, ಶತೃಘ್ನ ಅವನ ತಮ್ಮಂದಿರು. ಹನುಮಂತ ಆತನ ಪರಮ ಭಕ್ತ. ಇನ್ನು ಲವ ಕುಶ ಆತನ ಮಕ್ಕಳು ಎಂದು ಇಡೀ ಇಕ್ಷ್ವಾಕು ವಂಶಾವಳಿಯನ್ನೇ ಪಟ ಪಟ ಹೇಳುತ್ತಾರೆ ಎಂದರೆ ರಾಮ ನಮ್ಮ ದೇಶವಾಸಿಗಳ ಜನಮಾನದಲ್ಲಿ ಹೇಗೆ ತುಂಬಿಕೊಂಡಿದ್ದಾನೆ ಎಂಬುದು ಅರಿವಾಗುತ್ತದೆ. ಅಧಿಕೃತವಾಗಿ ರಾಮಾಯಣ ಸೇರಿದಂತೆ ಹಿಂದೂ ಧರ್ಮದ ಯಾವುದೇ ಗ್ರಂಥಗಳಲ್ಲಿ ರಾಮ ಹುಟ್ಟಿದ ದಿನಾಂಕ ಅಥವಾ ವರ್ಷವನ್ನು ನಮೂದಿಸಿಲ್ಲವಾದರೂ ಆತನ ರಾಜ್ಯಭಾರ ನಡೆಸಿದ್ದು ಕೋಸಲ ರಾಜ್ಯವಾಗಿದ್ದು ಈಗಿನ ಉತ್ತರಪ್ರದೇಶಕ್ಕೆ ಸೇರಿರುವ ಸರಯೂ ನದಿಯ ತಟದಲ್ಲಿರುವ ಅಯೋಧ್ಯೆ ಆವನ ರಾಜಧಾನಿಯಾಗಿತ್ತು ಎಂದು ಕೋಟ್ಯಂತರ ಹಿಂದೂಗಳ ನಂಬಿಕೆ ಆಗಿದೆ. ಅ-ಯೋಧ್ಯ ಅಂದರೆ, ಯುದ್ದಕ್ಕೂ ಕಲ್ಪನೆ ಮಾಡದಂತಹ ನಾಡು ಎನ್ನುವಂತಹ ಅರ್ಥ ಬರುತ್ತದೆ. ಹಿಂದೂಗಳು ಅನಾದಿ ಕಾಲದಿಂದಲೂ ಈ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಪರಿಗಣಿಸಿ ಅಲ್ಲಿರುವ ಆ ಪ್ರದೇಶದಲ್ಲಿ ಸೀತೆ ಅಡುಗೆ ಮಾಡಿದ್ದ ಸ್ಥಳ ಅಥವಾ ಸೀತಾ ಕೀ ರಸೋಯಿ ಹಾಗೂ ಹನುಮಾನ ಮಂದಿರಗಳನ್ನು ಪೂಜಿಸಿಕೊಂಡು ಬರುತ್ತಿದ್ದಾರೆ.

ram2

ನಮ್ಮ ದೇಶದ ಮೇಲೆ ಮೊಘಲರ ಆಕ್ರಮಣವಾಗಿ ಇಂದಿನ ಉಜ್ಬೇಕಿಸ್ತಾನಕ್ಕೆ ಸೇರಿದ ಫರ್ಗಾನಾ ನಗರದ ಜಹೀರ್ ಉದ್ ದಿನ್ ಮೊಹಮ್ಮದ್ ಬಾಬರ್ ಎಂಬ ಮೊಘಲ್ ದೊರೆ 1527ರಲ್ಲಿ ಭಾರತದ ಮೇಲೆ ದಾಳಿ ನಡೆಸಿ ಸಂಗ್ರಾಮ ಸಿಂಗರನ್ನು ಸೋಲಿಸಿದ ನಂತರ ಮತಾಂಧತೆಯ ಉನ್ಮಾದ ಮತ್ತು ದೇವಾಲಯಗಳ ಸಂಪತ್ತುಗಳನ್ನು ಲೂಟಿ ಮಾಡುವ ಉದ್ದೇಶದಿಂದ ಅನೇಕ ದೇವಾಲಯಗಳನ್ನು ನಾಶಪಡಿಸಿಕೊಂಡು ಬರುತ್ತಿರುವಾಗಲೇ ಅವರ ಕಣ್ಣು ಅಯೋಧ್ಯೆಯ ರಾಮ ಮಂದಿರದ ಮೇಲೆ ಬಿದ್ದು ಬಾಬರನ ಸೇನಾಧಿಪತಿ ಮೀರ್ ಬಾಕಿ ಅನೇಕ ಹಿಂದೂಗಳ ತೀವ್ರ ಹೋರಾಟದ ನಡುವೆಯೂ 1528 ರಲ್ಲಿ ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಧ್ವಂಸ ಮಾಡಿ ಅದರ ಮೇಲೊಂದು ಮಸೀದಿಯನ್ನು ನಿರ್ಮಿಸಿ ತನ್ನ ಒಡೆಯನ್ನನ್ನು ಸಂಪ್ರೀತಗೊಳಿಸಲು ಅದಕ್ಕೆ ಬಾಬರ್ ಮಸೀದಿ ಎಂದು ಹೆಸರಿಡುತ್ತಾನೆ. ಕಾಲ ಕ್ರಮೇಣ ಅದು ಜನರ ಆಡು ಭಾಷೆಯಲ್ಲಿ ಬಾಬ್ರಿ ಮಸ್ಜೀದ್ ಎಂದೇ ಪ್ರಖ್ಯಾತವಾಗುತ್ತದೆ.

ರಾಮ ಮಂದಿರ ನಾಶವಾದಗಲಿಂದಲೂ ಅದರ ಪುರರ್ನಿಮಾಣ ಮಾಡಲು ಅನೇಕ ಹಿಂದೂಗಳು ಪ್ರಯತ್ನಿಸಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರ ತ್ಯಾಗ ಬಲಿದಾನಗಳಾಗಿವೆ. ಅನೇಕರು ಅಲ್ಲಿನ ನವಾಬರಿಗೆ ಹಣವನ್ನು ಕೊಟ್ಟು ಆ ಪ್ರದೇಶವನ್ನು ಖರೀದಿಸಿ ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಪ್ರಯತ್ನಿಸಿದರಾದರೂ ಫಲಕಾರಿಯಾಗದೇ ಯಥಾ ಸ್ಥಿತಿಯೇ ಮುಂದುವರಿದುಕೊಂಡು ಹೋಗಿತ್ತು. 1857ರಲ್ಲಿ ಮುಸಲ್ಮಾನರು ಇಡೀ ರಾಮಮಂದಿರದ ಸಂಕೀರ್ಣವನ್ನು ಹಿಂದೂಗಳಿಗೆ ಬಿಟ್ಟು ಕೊಡಲು ಮುಂದಾದರೂ ಬ್ರಿಟೀಷರ ವಿರುದ್ಧದ ಯುದ್ದದಲ್ಲಿ ಸೋಲುಂಟಾದ ಪರಿಣಾಮ ಆ ವಿಷಯ ನೆನೆಗುದಿಗೆ ಬೀಳುತ್ತದೆ. 1885ರಲ್ಲಿ ಪ್ರಪ್ರಥಮ ಬಾರಿಗೆ ಮಹಂತಾ ರಘುವರ್ ದಾಸ್ ಎಂಬವರು ರಾಮ ಜನ್ಮಸ್ಥಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾರೆ. ಹೀಗೆ ಹಿಂದೂ-ಮುಸ್ಲಿಮರ ನಡುವೆ ಪೂಜಾ ಸ್ಥಳ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡ ಬ್ರಿಟೀಷರು, ಮೂರು ಗುಮ್ಮಟಗಳು ಮತ್ತು ರಾಮ ಚಬೂತರ್ ಗಳ ಮಧ್ಯೆ ಗೋಡೆಗಳನ್ನು ನಿರ್ಮಿಸಿ ಎರಡೂ ಧರ್ಮೀಯರಿಗೆ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುತ್ತಾರೆ.

ತೀವ್ರವಾಗುತ್ತಿದ್ದ ಸ್ವಾತಂತ್ತ್ಯ ಹೋರಾಟವನ್ನು ಹತ್ತಿಕ್ಕಲು ಹೈರಾಣಾಗಿದ್ದ ಬ್ರಿಟೀಷರು ಹಿಂದೂ ಮತ್ತು ಮುಸಲ್ಮಾನರ ನಡುವೆ ಸಂಘರ್ಷನ್ನು ತರಲು ಸ್ಥಳೀಯ ಮುಸಲ್ಮಾನರಿಗೆ ಕುಮ್ಮಕ್ಕು ನೀಡಿ 1934ರಲ್ಲಿ ರಾಮಮಂದಿರದ ಸ್ಥಳದಲ್ಲಿ ಗೋಹತ್ಯೆ ಮಾಡುತ್ತಾರೆ. ಇದರಿಂದ ಕೆರಳಿದ ಹಿಂದೂ ಯುವಕರು ಅಂದಿನ ಕಾಲದಲ್ಲಿಯೇ ವಿವಾಧಿತ ಪ್ರದೇಶಕ್ಕೆ ನುಗ್ಗಿ ಮೂರು ಗುಂಬಜ್ ಗಳ ಮೇಲೇರಿ ಬಹಳಷ್ಟು ಹಾನಿ ಮಾಡುತ್ತಿರುವಾಗ ಬ್ರಿಟೀಷರ ಬಲ ಪ್ರಯೋಗದಿಂದಾಗಿ ಅದನ್ನು ವಿಫಲಗೊಳಿಸಿದ ನಂತರ ಆ ಪ್ರದೇಶಕ್ಕೆ ಮತ್ತೆಂದೂ ಮುಸಲ್ಮಾನರು ಕಾಲು ಇಡಲೇ ಇಲ್ಲ.

ಆದರೂ ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾದ ಅಲ್ಲಿನ ಕಲೆಕ್ಟರ್ ಹಿಂದುಗಳ ಮೇಲೆ ಪುಂಡಗಂದಾಯ ಹೇರಿ ಅದರಿಂದ ಬಂದ ಹಣದಲ್ಲಿ ಹಾನಿಯಾಗಿದ್ದ ಗುಂಬಜ್ ಗಳನ್ನು ಸರಿಪಡಿಸುತ್ತಾನೆ. ಇಷ್ಟೆಲ್ಲಾ ಗಲಾಟೆಗಳು ಆದರೂ ಅಲ್ಲಿ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇರುತ್ತದೆ.

ಸ್ವಾತಂತ್ರ್ಯಾ ನಂತರ ಸರ್ದಾರ್ ಪಟೇಲ್ ಗುಜರಾತಿನಲ್ಲಿ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಮುಂದಾದಾಗ ಅನೇಕ ಸಾಧು ಸಂತರು ಅದರ ಜೊತೆಯಲ್ಲಿಯೇ ಅಯೋಧ್ಯೆಯಲ್ಲಿಯೂ ರಾಮ ಮಂದಿರವನ್ನು ಭವ್ಯವಾಗಿ ನಿರ್ಮಿಸಲು ಅಂದಿನ ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತಾರೆ. 1949ರ ಡಿಸೆಂಬರ್ 23ರಂದು ಗುಂಬಜ್ ಇದ್ದ ಮಸೀದಿಯ ಒಳಗೆ ಇದ್ದಕ್ಕಿದ್ದಂತೆಯೇ ಪುಟ್ಟ ಶ್ರೀರಾಮ ಲಲ್ಲಾನ ವಿಗ್ರಹವನ್ನು ಕಾಣಿಸಿಕೊಂಡ ಪರಿಣಾಮವಾಗಿ ಹಿಂದೂಗಳೆಲ್ಲರೂ ಉತ್ಸಾಹದಿಂದ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಲು ಧಾವಿಸುತ್ತಿದ್ದಂತೆಯೇ ಅಂದಿನ ನೆಹರೂ ಸರ್ಕಾರ ಸ್ಥಳೀಯ ಉತ್ತರ ಪ್ರದೇಶದ ಸರ್ಕಾರದ ಮೇಲೆ ಒತ್ತಡ ಹೇರಿ ರಾಮನ ವಿಗ್ರಹವನ್ನು ತೆಗೆಸಲು ಪ್ರಯತ್ನಿಸಿತಾದರೂ ವಿಫಲವಾದ ಪರಿಣಾಮ ಕೇವಲ ಪೂಜೆಗೆ ಮಾತ್ರವೇ ಅವಕಾಶ ನೀಡಿ, ದೇವಾಲಯಕ್ಕೆ ಬೀಗವನ್ನು ಜಡಿದು, ಭಕ್ತಾದಿಗಳಿಗೆ ಬಾಗಿಲಿನ ಹೊರಗಿನಿಂದಲೇ ಸರಳುಗಳ ಮೂಲಕ ದೇವರ ದರ್ಶನ ಮಾಡಲು ಅನುವು ಮಾಡಿಕೊಡುತ್ತದೆ. ಇದೇ ಸಮಯದಲ್ಲಿ ಸ್ಥಳೀಯ ಮುಸಲ್ಮಾನರಿಂದ ಸಿವಿಲ್ ಕೇಸ್ ದಾಖಲಾದ ನೆಪ ಹಿಡಿದುಕೊಂಡು ಆ ಪ್ರದೇಶವನ್ನು ವಿವಾದಿತ ಸ್ಥಳ ಎಂದು ಘೋಷಿಸಿ ಸುಲಭವಾಗಿ ಪರಿಹರಿಸ ಬಹುದಾಗಿದ್ದ ಸಮಸ್ಯೆಯನ್ನು ಮತ್ತೊಮ್ಮೆ ಜಟಿಲ ಗೊಳಿಸುತ್ತದೆ.

ಇದಕ್ಕೆ ಪ್ರತಿಯಾಗಿ 1950ರಲ್ಲಿ ಹಿಂದೂ ಮಹಾಸಭಾ ಸದಸ್ಯ ಗೋಪಾಲ್ ಸಿಂಗ್ ವಿಶಾರದ್ ಎಂಬವರು ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶಕ್ಕೆ ಸಂಬಂಧಪಟ್ಟಂತೆ ಫೈಜಾಬಾದಿನಲ್ಲಿ ಪ್ರಕರಣ ದಾಖಲಿಸುತ್ತಾರೆ, ಮುಂದೆ 1959ರಲ್ಲಿ ವಿವಾದಿತ ಪ್ರದೇಶವನ್ನು ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು ನಿರ್ಮೋಹಿ ಅಖಾಡಾ ಎಂಬ ಸಂಸ್ಥೆ ಮತ್ತೊಂದು ದಾವೆ ಹೂಡುತ್ತದೆ. 1961 ರಲ್ಲಿ ಆ ಜಾಗದ ಒಡೆತನಕ್ಕಾಗಿ ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯೂ ಪ್ರಕರಣ ದಾಖಲಿಸುವ ಮೂಲಕ ಮೂರು ವಿವಿಧ ಸಂಘಟನೆಗಳು ಆ ಪ್ರದೇಶದ ಹಕ್ಕೊತ್ತಾಯ ಮಾಡುತ್ತವೆ.

1984ರಲ್ಲಿ ಅಶೋಕ್ ಸಿಂಘಾಲ್ ಮತ್ತು ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷದ್ ಮುಂದಾಳತ್ವದಲ್ಲಿ ಶ್ರೀ ರಾಮ ರಾಮ ಮಂದಿರ ನಿರ್ಮಾಣ ಸಮಿತಿಯ ರಚನೆ ಮಾಡಿ ದೇಶಾದ್ಯಂತ ನಡೆಸಿದ ಭಾರೀ ಆಂದೋಳಕ್ಕೆ ಮಣಿದು ಅಂದಿನ ಪ್ರಧಾನಿಗಳಾಗಿದ್ದ ಶ್ರೀ ರಾಜೀವ್ ಗಾಂಧಿಯವರು 1985 ರಲ್ಲಿ ವಿವಾದಿತ ಮಸೀದಿಗೆ ಜಡಿದಿದ್ದ ಬೀಗವನ್ನು ತೆಗೆಸುವುದರ ಮೂಲಕ ರಾಮಜನ್ಮ ಭೂಮಿಯ ಗೆಲುವಿಗೆ ಮೊದಲ ಮೆಟ್ಟಲಾಗುತ್ತದೆ.

ಹರಿಶಂಕರ್ ದುಬೆಯವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು 1986ರ ಫೆಬ್ರವರಿ 1ರಂದು ಮಸೀದಿಯ ಬಾಗಿಲುಗಳನ್ನು ತೆರೆದು ಹಿಂದೂಗಳಿಗೆ ರಾಮಲಲ್ಲಾನ ದರ್ಶನ ಮತ್ತು ಪೂಜೆಗೆ ಅವಕಾಶ ಕೊಡುತ್ತದೆ. ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ರಾಮ ಜನ್ಮಭೂಮಿ ನ್ಯಾಸವನ್ನು ಸ್ಥಾಪಿಸಿತು.

ಇದಕ್ಕೆ ಪ್ರತಿಯಾಗಿ ಅದೇ ಸಮಯದಲ್ಲಿ ಮುಸಲ್ಮಾನರು ಸೈಯ್ಯದ್ ಶಹಾಬುದ್ದೀನ್ ನೇತೃತ್ವದಲ್ಲಿ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ರಚಿಸಿಕೊಂಡರು.

1989 ಆಗಸ್ಟ್ 25 ವಿವಾದಿತ ಕಟ್ಟಡದ 2.77 ಎಕರೆ ಪ್ರದೇಶವನ್ನು ಹೊರತುಪಡಿಸಿ 42.09 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತದೆ. ಇದೇ ಆದೇಶದ ಮೇರೆಗೆ, 25 ನವೆಂಬರ್ 1989 ರಲ್ಲಿ ವಿವಾದಿತ ಪ್ರದೇಶದ ಹೊರಗಡೆ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನಡೆಸಲು ಅಂದಿನ ರಾಜೀವ್ ಗಾಂಧಿ ಸರ್ಕಾರ ವಿಶ್ವಹಿಂದೂ ಪರಿಷತ್ತಿಗೆ ಒಪ್ಪಿಗೆ ಸೂಚಿಸಿತು.

1990ರ ಸೆಪ್ಟೆಂಬರ್ 25ರಂದು ಗುಜರಾತಿನ ಸೋಮನಾಥ ಮಂದಿರದಿಂದ ಅಯೋಧ್ಯೆ ಕುರಿಂತೆ ಭಾರತದಾದ್ಯಂತ ಜಾಗೃತಿ ಮೂಡಿಸಲು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಅವರ ಮಹತ್ವಾಕಾಂಕ್ಷೆಯ ರಥಯಾತ್ರೆ ಆರಂಭವಾಗಿ ಸುಮಾರು 10,000 ಕಿಲೋ ಮೀಟರ್ ದೇಶದಾದ್ಯಂತ ಸಂಚಾರ ಮಾಡಬೇಕಿತ್ತಾದರೂ, ನವೆಂಬರ್ ತಿಂಗಳ ಹೊತ್ತಿಗೆ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಸರ್ಕಾರ ಅಡ್ವಾಣಿಯವರನ್ನು ಬಂಧಿಸಿದಾಗ ರಥಯಾತ್ರೆಗೂ ತೊಡಕಾಯಿತಾದರೂ, ಅದಲ್ಲೆವನ್ನೂ ನಿಗ್ರಹಿಸಿಕೊಂಡು ಅಯೋಧ್ಯೆಯಲ್ಲಿ ತಮ್ಮ ಯಾತ್ರೆಯನ್ನು ಸಮಾಪ್ತಿಗೊಳಿಸಿದ್ದಲ್ಲದೇ ರಾಮ ಮಂದಿರದ ಬಗ್ಗೆ ಇಡೀ ದೇಶದ ಹಿಂದೂಗಳಲ್ಲಿ ಭಾರೀ ಅಲೆಯನ್ನೇ ಎಬ್ಬಿಸಲು ಸಫಲರಾದರು.

ವಿಶ್ವಹಿಂದೂ ಪರಿಷದ್ ವಿವಾದಿತ ಪ್ರದೇಶದಲ್ಲಿ ಶಿಲಾನ್ಯಾಸ ನಡೆಸುವ ಸಲುವಾಗಿ 1990ರಲ್ಲಿ ಕರಸೇವೆಗೆ ಕರೆ ನೀಡುತ್ತದೆ. ಈ ಕರಸೇವೆಗಾಗಿ ದೇಶದ ನಾನಾ ಕಡೆಗಳಿಂದ ಲಕ್ಷೋಪ ಸಂಖ್ಯೆಯಲ್ಲಿ ಅಯೋಧ್ಯೆಗೆ ಆಗಮಿಸಿದ್ದನ್ನು ಸಹಿಸದ ಅಂದಿನ ಮುಖ್ಯಮಂತ್ರಿ ಮುಲಯಂ ಸಿಂಗ್ ಯಾದವ್ ಕರಸೇವರನ್ನು ಬಂಧಿಸುವ ಪ್ರಯತ್ನ ಮಾಡುತ್ತದೆ. ಇದೇ ಸಮಯದಲ್ಲಿಯೇ ವಿವಾಧಿತ ಗುಂಬಜ್ ಮೇಲೆ ಪ್ರಥಮಬಾರಿಗೆ ಭಗವಾದ್ವಜವನ್ನು ಕರಸೇವಕರು ಹಾರಿಸಿ ವಿಜಯದ ಕಹಳೆಯನ್ನೂದುತ್ತಾರೆ.

1991ರಲ್ಲಿ ರಾಮ ಮಂದಿರ ಪರ ಚಳವಳಿ ಮತ್ತಷ್ಟು ತೀವ್ರ ಗೊಂಡಿತು. ಸಂಘ ಪರಿವಾರದ ಕಾರ್ಯಕರ್ತರು, ಬಜರಂಗ ದಳದವರು ಮತ್ತು ಕರಸೇವಕರು ಚಳವಳಿಯನ್ನು ತೀವ್ರಗೊಳಿಸಿ ಅಯೋಧ್ಯೆ ಪ್ರವೇಶಿಸಲು ಯತ್ನಿಸಿದ್ದಲ್ಲದೇ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಶ್ರೀರಾಮ ಹ್ಯೋತಿ ಯಾತ್ರೆ ನಡೆಸಿ ದೇಶದ ಎಲ್ಲಾ ಭಾಗಗಳಿಂದಲೂ ರಾಮ ಮಂದಿರಕ್ಕಾಗಿ ಇಟ್ಟಿಗೆಗಳನ್ನು ಸಂಗ್ರಹಿಸುವ ಅಭಿಯಾನ ನಡೆಸುತ್ತದೆ. ಸುಮಾರು ಆರು ಲಕ್ಷ ಹಳ್ಳಿಗಳು ಇರುವ ನಮ್ಮ ದೇಶದ ಅರ್ಧಕ್ಕಿಂತಲೂ ಹೆಚ್ಚು ಅಂದರೆ ಮೂರೂವರೆ ಲಕ್ಷ ಹಳ್ಳಿಗಳಿಂದ ಲಕ್ಷಾಂತರ ಇಟ್ಟಿಗೆಗಳು ಸಂಗ್ರಹವಾದರೆ, ದೂರದ ಅಮೇರಿಕ, ಕೆನಡಾ, ಇಂಗ್ಲೇಂಡಿನಲ್ಲಿರುವ ಭಾರತೀಯರು ಚಿನ್ನದ ಮತ್ತು ಬೆಳ್ಳಿಯ ಇಟ್ಟಿಗೆಗಳನ್ನು ಕಳುಹಿಸಿಕೊಡುವ ಮೂಲಕ ರಾಮ ಮಂದಿರಕ್ಕೆ ತಮ್ಮ ಸಮರ್ಥನೆ ಮತ್ತು ಸಹಕಾರವನ್ನು ನೀಡಲು ಮುಂದಾಗುತ್ತಾರೆ.

ಕರಸೇವಕರ ಮೇಲೆ ಕೈ ಎತ್ತಿದ ಪರಿಣಾಮವಾಗಿ ಮುಲಯಂ ಸರ್ಕಾರ ಬಿದ್ದು ಹೋಗಿ ಪ್ರಥಮ ಬಾರಿಗೆ ಉತ್ತರಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ವಿವಾದಿತ 2.77 ಎಕರೆ ಸಮೀಪದಲ್ಲಿಯೇ 67 ಎಕರೆ ಭೂಮಿಯಲ್ಲಿ ರಾಮಕಥಾ ಪಾರ್ಕ್ ನಿರ್ಮಾಣ ಮಾಡಲು ರಾಮಜನ್ಮ ಭೂಮಿ ನ್ಯಾಸಕ್ಕೆ ಹಸ್ತಾಂತರಿಸಲಾಗುತ್ತದೆ.

ram3

ನವೆಂಬರ್ 27, 1992 ರಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರಕಾರ ಭರವಸೆಯ ಅನುಗುಣವಾಗಿ, ಸಾಂಕೇತಿಕ ಕರಸೇವೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತು. ಇದರಿಂದ ಉತ್ಸಾಹಿತರಾದ ವಿಶ್ವ ಹಿಂದೂ ಪರಿಷತ್ 1992ರ ಡಿಸೆಂಬರ್ ತಿಂಗಳಿನಲ್ಲಿ ಎರಡನೇ ಕರಸೇವೆಗೆ ಕರೆನೀಡುತ್ತದೆ. ಈ ಬಾರಿ ಉತ್ಸಾಹಿತರಾಗಿ ದೇಶದ ನಾನಾ ಕಡೆಯಿಂದಲೂ ಬಂದ ಕರಸೇವಕರು ಡಿಸೆಂಬರ್ 6 ನೇ ತಾರೀಖಿನಂದು ಬೆಳಿಗ್ಗೆ 10:30ಕ್ಕೆ ಬಿಜೆಪಿ ಮತ್ತು ವಿಎಚ್‌ಪಿ ನಾಯಕರು ಸಾಂಕೇತಿಕ ಕರಸೇವೆ ನಡೆಸಿದರು. ಸುಮಾರು 12.15ಕ್ಕೆ ಕರಸೇವಕನೊಬ್ಬ ಗುಮ್ಮಟದ ಮೇಲ್ಭಾಗಕ್ಕೆ ಹತ್ತಿದ್ದದ್ದನೇ ಗಮನಿಸಿ ಅವನ ಹಿಂದೆ ನೂರಾರು ಕರಸೇವಕರು ಅವನನ್ನೇ ಹಿಂಬಾಲಿ ನೋಡ ನೋಡುತ್ತಿದ್ದಂತೆಯೇ ತಮ್ಮ ಬಳಿ ಆಯುಧಗಳಿಂದಲೇ, ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದ ಆ ಮೂರೂ ಗುಮ್ಮಟಗಳನ್ನು ಕ್ಷಣ ಮಾತ್ರದಲ್ಲಿಯೇ ಕುಟ್ಟಿ ಕುಟ್ಟಿ ಪುಡಿಮಾಡಿದ್ದಲ್ಲದೇ ಇಡೀ ಮಸೀದಿಯನ್ನು ಮಧ್ಯಾಹ್ನ 3ಗಂಟೆಯಷ್ಟರೊಳಗೆ ಧ್ವಂಸಗೊಳಿಸಿ ಅಲ್ಲಿದ್ದ ರಾಮಲಲ್ಲನ ವಿಗ್ರಹದ ಮೇಲೆ ತಾತ್ಕಾಲಿಕ ಮಂದಿರವನ್ನು ನಿರ್ಮಿಸಿ ಪೂಜೆ ಮಾಡುತ್ತಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಿಗಾದ ಸಂತೋಷ ಅವರ್ಣನೀಯ.

ram6

ಬಾಬರಿ ಮಸೀದಿ ಧ್ವಂಸದ ಹತ್ತು ದಿನಗಳ ಬಳಿಕ ಡಿಸೆಂಬರ್ 16ರಂದು, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರವು ಘಟನೆಯ ಕುರಿತು ತನಿಖೆ ನಡೆಸಲು ನ್ಯಾಯಮೂರ್ತಿ ಲಿಬರ್ಹಾನ್ ನೇತೃತ್ವದ ಆಯೋಗವನ್ನು ನೇಮಿಸಿತು. 1994ರಲ್ಲಿ ಕೇಂದ್ರ ಸರ್ಕಾರವು ಆ ವಿವಾಧಿತ ಸ್ಥಳದಲ್ಲಿ ಮಂದಿರವಿತ್ತು ಎಂಬುದನ್ನು ಸಾಭೀತು ಪಡಿಸಿದಲ್ಲಿ ಆ ಜಾಗವನ್ನು ಹಿಂದೂಗಳಿಗೆ ನೀಡುವುದಾಗಿ ವಾಗ್ದಾನ ಮಾಡಿ ನ್ಯಾಯಾಲಯಕ್ಕೂ ಆಫಿಡೆವಿಟ್ ಸಲ್ಲಿಸಿತು.

ಶತಾಯಗತಾಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟ ,ವಿಶ್ವ ಹಿಂದೂ ಪರಿಷದ್ 2001ರಲ್ಲಿ ಕೇಂದ್ರಸರ್ಕಾರದ ನೆರವನ್ನೂ ಕೋರಿತು ಅದರ ಪರಿಣಾಮವಾಗಿ ಜನವರಿ 2002 ರಲ್ಲಿ ಅಯೋಧ್ಯಾ ವಿವಾದ ಬಗೆಹರಿಸಲು ಅಂದಿನ ಪ್ರಧಾನಮಂತ್ರಿಗಳಾಗಿದ್ದ ಶ್ರೀ ವಾಜಪೇಯೀಯವರು ಅಯೋಧ್ಯಾ ಸಮಿತಿ ರಚಿಸಿದರು. ಅಯೋಧ್ಯೆಯ ಒಡೆತನ ಯಾರಿಗೆ ಸೇರಿದ್ದು ಎಂಬುದನ್ನು ನಿರ್ಧರಿಸಲು ಅಲಹಾಬಾದ್ ಹೈಕೋರ್ಟ್ ಲಕ್ನೋದ ವಿಶೇಷ ತ್ರಿಸದಸ್ಯ ಪೀಠದಲ್ಲಿ ವಿಚಾರಣೆಯನ್ನೂ ಆರಂಭಿಸಲಾಗುತ್ತದೆ.

ram4

ವಿಶ್ವ ಹಿಂದೂ ಪರಿಷದ್ 2002 ಮಾರ್ಚ್ 15 ರಂದು ರಾಮ ಮಂದಿರ ನಿರ್ಮಾಣ ಕಾರ್ಯ ಶುರು ಮಾಡುವದಾಗಿ ಘೋಷಣೆ ನೀಡಿದ್ದಕ್ಕೆ ಸಾವಿರಾರು ಕರಸೇವಕರು ಅಯೋಧ್ಯಾಯಲ್ಲಿ ಜಮಾಯಿಸಿದರೂ ಅಲ್ಲಿನ ಸರ್ಕಾರದ ಅನುಮತಿ ದೊರೆಯದ ಕಾರಣ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾಗಲೇ. ಗುಜರಾತಿನ ಕರಸೇವಕರು ಪ್ರಯಾಣಿಸುತ್ತಿದ್ದ ರೈಲಿನ ಭೋಗಿಯನ್ನು ಎಲ್ಲಾ ಕಡೆಯಿಂದಲೂ ಕೆಲ ದುಷ್ಕರ್ಮಿಗಳು ಮುಚ್ಚಿ ಗೋದ್ರಾ ಎಂಬಲ್ಲಿ ಇಡೀ ಭೋಗಿಗೆ ಬೆಂಕಿ ಹಚ್ಚಿ 58 ಕರಸೇವಕರು ಜೀವಂತ ಸುಟ್ಟು ಕರಕಲಾದ ಪರಿಣಾಮ ನಡೆದ ಕೋಮುಗಲಭೆಯಲ್ಲಿ ಗುಜರಾತ್ ಹೊತ್ತಿ ಉರಿದು ಎರಡು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿ ಹೋಗಿದ್ದು ಈಗ ಇತಿಹಾಸ.

ಅದೇ ಸಮಯಕ್ಕೆ ಸಿಬಿಐ ಕೂಡಾ 1992ರ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂದಿನ ಉಪ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಲಾಲಕೃಷ್ಣ ಆಡ್ವಾಣಿ ಸಹಿತ 8 ಜನರ ವಿರುದ್ದ ಪೂರಕ ಆರೋಪಪತ್ರ ದಾಖಲಿಸಿ ತನ್ನ ತನಿಖೆ ಮುಂದುವರಿಸುತ್ತದೆ.

ಏಪ್ರಿಲ್ 2003ರಲ್ಲಿ ಅಲಹಾಬಾದ್ ಹೈಕೋರ್ಟ್ ಲಕ್ನೋದ ವಿಶೇಷ ಪೀಠದಲ್ಲಿ ನಿರ್ದೇಶದಂತೆ ಪುರಾತಾತ್ವಿಕ ಸರ್ವೇಕ್ಷಣ ವಿಭಾಗವು ವಿವಾದಿತ ಸ್ಥಳದಲ್ಲಿ ಉತ್ಖನ ಮಾಡಿ, ಜೂನ್ 2003ರಲ್ಲಿ ಮಸೀದಿಯನ್ನು ದೇವಸ್ಥಾನದ ಮೇಲೆಯೇ ನಿರ್ಮಿಸಲಾಗಿದೆ. 10ನೇ ಶತಮಾನದಲ್ಲಿ ದೇವಾಲಯವಿತ್ತು ಎಂದು ನೀಡಿದ ಉತ್ಖನನದ ವರದಿಯನ್ನು ಒಪ್ಪಲು ಮುಸಲ್ಮಾನರು ತಯಾರಿರಲಿಲ್ಲ. ಅಂದಿನ ಕಾಂಚೀ ಪೀಠಾಧೀಶರಾಗಿದ್ದ ದಿವಂಗತ ಶ್ರೀ ಶ್ರೀ ಶ್ರೀ ಜಯೇಂದ್ರ ಸರಸ್ವತೀಯವರ ಮಧ್ಯಸ್ಥಿಕೆ ನಡೆಸಲು ಪ್ರಯತ್ನಿಸಿದರಾದರೂ ಅದು ವಿಫಲವಾಯಿತು.

ಲಿಬರ್ಹಾನ್ ಆಯೋಗವು 17 ವರ್ಷಗಳ ನಂತರ 2009 ಜೂನ್ 30ರಂದು ಅಂದಿನ ಪ್ರಧಾನಮಂತ್ರಿಗಳದ ಶ್ರೀ ಮನಮೋಹನ ಸಿಂಗರಿಗೆ ವರದಿಯನ್ನು ಒಪ್ಪಿಸಿಲಾಯಿತಾದರೂ ಆ ಆಯೋಗದ ತನಿಖೆಯ ಅಂಶಗಳು ಬಯಲಾಗಿಲ್ಲ.

2010 ಸೆಪ್ಟಂಬರ್ 24ರಂದು ಅಯೋಧ್ಯಾ ವಿವಾದಿತ ಪ್ರಕರಣದ ತೀರ್ಪು ಘೋಷಿಸುವುದಾಗಿ ಅಲಹಾಬಾದ್ ಹೈ ಕೋರ್ಟ್ ಘೋಷಿಸಿದ ಪರಿಣಾಮವಾಗಿ ದೇಶಾದ್ಯಂತ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಯಿತಾದರೂ, ತೀರ್ಪು ಹೊರಬೀಳಲಿರುವ ಒಂದು ದಿನಕ್ಕೆ ಮುಂಚೆ ಹೈಕೋರ್ಟ್ ತೀರ್ಪು ನೀಡುವುದಕ್ಕೆ ತಡೆಯಾಜ್ಞೆ ನೀಡಿ, ರಮೇಶ್‌ಚಂದ್ರ ತ್ರಿಪಾಠಿ ಸಲ್ಲಿಸಿದ ಅರ್ಜಿಯ ಮೇರೆಗೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟಂಬರ್ 28 ಕ್ಕೆ ನಿಗದಿಗೊಳಿಸಿದಾಗ ಎಲ್ಲಾ ಹಿಂದೂಗಳಲ್ಲಿಯೂ ನಿರಾಶೆಯ ಕಾರ್ಮೋಡ ಹರಿದಿತು. ಸೆಪ್ಟಂಬರ್ 28ರಂದು ತ್ರಿಪಾಠಿಯವರ ಅರ್ಜಿಯ ವಿಚಾರಣೆ ನಡೆಸಿ ಅವರ ಅರ್ಜಿ ತಿರಸ್ಕರಿಸಿ, ಸೆಪ್ಟಂಬರ್ 30ರಂದು ಮಧ್ಯಾಹ್ನ 3:30ಕ್ಕೆ ಐತಿಹಾಸಿಕ ತೀರ್ಪನ್ನು ನೀಡಿತು.

ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಕುರಿತಂತೆ ಅತ್ಯಂತ ಕುತೂಹಲ ಮತ್ತು ಕಾತರದಿಂದ ನಿರೀಕ್ಷಿಸಲಾಗುತ್ತಿದ್ದ ತೀರ್ಪಿನ ಪ್ರಕಾರ ಆ ವಿವಾದಿತ 2.7 ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೇ ಆದನ್ನು ಮೂರು ಭಾಗಗಳನ್ನಾಗಿ ಹಂಚುವ ಮೂಲಕ ಸಾಮಾಜಿಕ ನ್ಯಾಯವನ್ನು ಕೊಟ್ಟಿದೆ ಎಂದಿತು.

ಆ ತೀರ್ಪಿನ ಪ್ರಕಾರ ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಮತ್ತು ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂಬ ಹಾವೂ ಸಾಯ ಬಾರದು ಕೋಲೂ ಮುರಿಯಬಾರದು ಎಂಬಂತಹ ತೀರ್ಪನ್ನು ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನೀಡಿತು.

ಈ ತೀರ್ಪನ್ನು ಮೂರು ಪಂಗಡಗಳೂ ಒಪ್ಪಲು ಸಿದ್ಧರಿರಲಿಲ್ಲವಾದ ಕಾರಣ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತಾದರೂ, ಈ ತೀರ್ಪಿನ ಪ್ರಕಾರ ಪುರಾತತ್ವ ಶಾಸ್ತ್ರ ಉತ್ಖನನಗೊಂಡ ಅವಶೇಷಗಳ ಅಧ್ಯಯನ ತಂಡವು ಸ್ಥಳದಲ್ಲಿ ನಡೆದ ಉತ್ಖನನದಲ್ಲಿ ದೊರೆತ ಪುರಾವೆಗಳ ಪ್ರಕಾರ ಅಲ್ಲಿ ರಾಮಮಂದಿರ ಇತ್ತು ಎನ್ನುವುದನ್ನು ಸೂಚಿಸುತ್ತವೆ. ಪ್ರಮುಖವಾಗಿ ಜೇಡಿ ಮಣ್ಣಿನಿಂದ ತಯಾರಿಸಲಾದ ಆಕೃತಿಗಳು, ಪ್ರಾಣಿ ಮತ್ತು ಮಾನವ ಉಪಯೋಗಿ ವಸ್ತುಗಳು, ಕಂಬದ ರಚನೆಗಳು, ಅಡಿಪಾಯ, ಗೋಡೆಗಳ ಸಂದುಗಳು, ಸಮಾಧಿಗಳು, ದೇವನಾಗರಿ ಲಿಪಿಯಲ್ಲಿರುವ ಶಿಲಾಶಾಸನಗಳು, ಛಬೂತರಗಳು ಉತ್ಖನನದ ವೇಳೆಯಲ್ಲಿ ಪತ್ತೆಯಾಗಿವೆ ಎಂಬುವುದರ ಮೂಲಕ ಮೊದಲ ಬಾರಿಗೆ ಹಿಂದೂಗಳಿಗೆ ಸ್ವಲ್ಪ ಆಶಾವಾದವನ್ನು ತಂದಿದ್ದಂತೂ ಸುಳ್ಳಲ್ಲ.

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯ ವಿವಾದದ ಕುರಿತಂತೆ 134 ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಗುರಿಯಾಗಿದ್ದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ಕುರಿತಂತೆ ಐವರು ನ್ಯಾಯಾಧೀಶರುಗಳು ದಿ. 9, ನವೆಂಬರ್ 2019 ಸಿಜೆಐ ರಂಜನ್ ಗೋಗೊಯಿ ನೇತೃತ್ವದಲ್ಲಿ ತೀರ್ಪಿನ್ನು ನೀಡಿತು.

ಆ ತೀರ್ಪಿನ ಪ್ರಕಾರ ನಿರ್ಮೋಹಿ ಅಖಾಡದ ಮತ್ತು ಶಿಯಾ ವಕ್ಫ್ ಬೋರ್ಡ್ ಅರ್ಜಿಯನ್ನು ವಜಾ ಮಾಡಿ, ರಾಮ ಲಲ್ಲಾ ಸಂಸ್ಥೆ ಮುಖ್ಯ ಅರ್ಜಿದಾರ ಎಂದು ಮಾನ್ಯತೆ ನೀಡಿತು. ನಿರ್ಮೋಹಿ ಅಖಾಡಕ್ಕೆ ಅಲ್ಲಿ ಪೂಜಾ ಅಧಿಕಾರವಿಲ್ಲ ಎಂದು ಹೇಳಿತು. ಕಂದಾಯ ದಾಖಲೆ ಪ್ರಕಾರ ಈ ವಿವಾದಿತ ಭೂಮಿ ಸರ್ಕಾರಿ ಜಾಗವಾಗಿತ್ತು. ಉತ್ಖನನದಲ್ಲಿ ಕಂಡಂತೆ ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ ಇದು ಇಸ್ಲಾಂ ರಚನೆಯಾಗಿರಲಿಲ್ಲ. ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವುದಕ್ಕೆ ಆಧಾರ ಖಚಿತತೆ ಇಲ್ಲವಾದರೂ, ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ಧಾರ್ಮಿಕ ಅಥವಾ ಶಿಲ್ಪ ರಚನೆಯಾಗಿರಲಿಲ್ಲ. ರಾಮನು ಅಯೋಧ್ಯೆಯಲ್ಲೇ ಹುಟ್ಟಿದ ಎಂಬ ನಂಬುಗೆಯ ಬಗ್ಗೆ ವಿವಾದವಿಲ್ಲ. ಮಸೀದಿಯ ಮುಖ್ಯ ಗುಂಬಝ್ ಕೆಳ ಭಾಗದಲ್ಲಿ ಗರ್ಭ ಗುಡಿ ಇತ್ತೆಂದು ನಂಬಲಾಗುತ್ತಿದೆ. ಆದರೆ ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲವಾದರೂ, ಕಾನೂನಿನ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ. ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಂ ಇಬ್ಬರೂ ಪೂಜೆ ಸಲ್ಲಿಸುತ್ತಿದ್ದರು. ಮುಸ್ಲಿಮರಿಗೆ ಒಳಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಇರದಿದ್ದರು, ಪ್ರಾರ್ಥನೆ ಮಾಡುತ್ತಿದ್ದರು. ಮಸೀದಿಯ ಒಳಭಾಗದಲ್ಲಿಯೂ ವಿವಾದ ಇದೆ. ಆದರೆ ಮಸೀದಿಗೆ ಹಾನಿ ಮಾಡಿದ್ದು ಕಾನೂನಿನ ಉಲ್ಲಂಘನೆ. ವಿವಾದಿತ ಸ್ಥಳವನ್ನು ಮೂರು ವಿಭಾಗ ಮಾಡಿರುವುದು ಸರಿ ಇಲ್ಲ ಎಂದು ಹೇಳಿದ್ದಲ್ಲದೇ, ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚಿಸಲು ಮತ್ತು ವಿವಾದಿತಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವನ್ನು ಸುಪ್ರೀಂ ಕೋರ್ಟ ವಿಧಿಸಿತು. ರಾಮಮಂದಿರ ನಿರ್ಮಾಣ ಹೊಣೆಯನ್ನು ಸರ್ಕಾರಕ್ಕೂ, ಅದ ನಿರ್ವಹಣೆ ಹೊಣೆಯನ್ನು ಟ್ರಸ್ಟ್‌ಗೂ ನೀಡುವಂತೆಯೂ ಸರ್ಕಾರಕ್ಕೆ ಆದೇಶ ನೀಡುವ ಮೂಲಕ ಅಯೋಧ್ಯಾ ವಿವಾದಕ್ಕೆ ಶಾಶ್ವತವಾದ ತೆರೆಯನ್ನು ಎಳೆಯಿತು. ಈ ತೀರ್ಪು ಹೊರ ಬರುತ್ತಿದ್ದಂತೆಯೇ ದೇಶಾದ್ಯಂತ ಹಬ್ಬದ ವಾತಾವರಣ ಮೂಡಿತಲ್ಲದೇ, ದೀಪಾವಳಿ ಹಬ್ಬಕ್ಕಿಂತಲೂ ಹೆಚ್ಚಿನ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದು ಇನ್ನೂ ಎಲ್ಲರ ಮನದಲ್ಲೂ ಹಚ್ಚ ಹಸಿರಾಗಿದೆ.

ಇಷ್ಟು ವರ್ಷಗಳ ಕಾಲ ನ್ಯಾಯಾಲಯದ ಪ್ರಕ್ರಿಯೆಗಾಗಿಯೇ ಕಾಯುತ್ತಾ ಸತ್ಯಕ್ಕೇ ಜಯವಿದೆ ಎಂಬುದರಲ್ಲಿ ನಂಬಿಕೆ ಇಟ್ಟ ಹಿಂದೂಗಳಿಗೆ ಆಗಸ್ಟ್ 5 2020 ಸುವರ್ಣಾಕ್ಷರದಲ್ಲಿ ಬರೆದಿಡ ಬೇಕಾದಂತಹ ದಿವಸವಾಗಿದೆ. ಅಂದು ಬೆಳಿಗ್ಗೆ 8 ರಿಂದ 12ಗಂಟೆಯೊಳಗೆ ಹಿಂದೂಗಳಿಗೆ ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ಐದು ಗುಮ್ಮಟಗಳ ಜೊತೆಗೆ 161 ಅಡಿ ಎತ್ತರವನ್ನು ಹೊಂದಿರುವ ಭವ್ಯವಾದ ಮತ್ತು ವಿಶಾಲವಾದ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದ್ದು ಅಂದು ದೇಶಾದ್ಯಂತ ಒಂದು ರೀತಿಯ ಹಬ್ಬದ ಆಚರಣೆ ಎಂದರೂ ತಪ್ಪಾಗಲಾರದು. ಈ ದೃಶ್ಯವನ್ನು ಪ್ರಪಂಚಾದ್ಯಂತ ಅನೇಕ ರಾಷ್ಟ್ರಗಳು ನೇರ ಪ್ರಸಾರ ಮಾಡುತ್ತಿವೆ ಎಂದರೆ ನಮ್ಮ ರಾಮನ ಹೆಮ್ಮೆ ಎಷ್ಟು ಎಂಬುದು ಎಲ್ಲರಿಗೂ ತಿಳಿಯುತ್ತದೆ.

ನ್ಯಾಯಾಲಯದಲ್ಲಿ ಇಷ್ಟೆಲ್ಲಾ ವಿವಾದಗಳು ನಡೆಯುತ್ತಿದ್ದರೂ ದೇವಾಲಯಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಂಬಗಳ ಕೆತ್ತನೆ ಕೆಲಸಗಳು ಬಹುತೇಕ ಮುಗಿದಿದ್ದು ಎಲ್ಲವೂ ಅಂದು ಕೊಂಡಂತೆ ನಡೆದಲ್ಲಿ, ಇನ್ನು ಮೂರು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ಕಾಣಬಹುದಾಗಿದೆ. ರಾಮ ಮಂದಿರ ನಮಗೆ ಕೇವಲ ಒಂದು ಕಲ್ಲು ಮಣ್ಣುಗಳಿಂದ ಕಟ್ಟುವ ದೇವಾಲಯವಾಗಿರದೆ ಅದು ನಮ್ಮ ಸ್ವಾಭೀಮಾನದ ಪ್ರತೀಕವಾಗಿದೆ. ದಾಸ್ಯವನ್ನು ಮಟ್ಟಿ ನಿಲ್ಲುವ ಸಂಕೇತವಾಗಿದೆ

ram5

ಇನ್ನು ವಯಕ್ತಿವಾಗಿ ಹೇಳಬೇಕೆಂದರೆ ಕರಸೇವೆಗೆ ಖುದ್ದಾಗಿ ನಮ್ಮ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅಣ್ಣ ಹೋಗಿ ತಮ್ಮ ಅಳಿಲು ಸೇವೆ ಸಲ್ಲಿಸಿದರೆ, ನಮ್ಮ ತಂದೆ ಮತ್ತು ನಮ್ಮ ಇಡೀ ಕುಟುಂಬ ರಾಮ ಭಜನೆ ಸಂಕೀರ್ತನೆ ಮತ್ತು ಇಟ್ಟಿಗೆ ಸಂಗ್ರಹದಲ್ಲಿ ಭಾಗವಹಿಸಿದ್ದು ಹೆಮ್ಮೆ ಎನಿಸುತ್ತದೆ. ಫಣವಿದು ರಾಮನ ಮೇಲಾಣೆ ಮಂದಿರವಲ್ಲೇ ಕಟ್ಟುವೆವು ಎಂಬ ಘೋಷಣೆಯನ್ನು ಹತ್ತಾರು ವರ್ಷಗಳಿಂದ ಹೇಳಿ ಕೊಂಡು ಬರುತ್ತಿದ್ದದ್ದು ಈಗ ನಮ್ಮ ಜೀವಿತಾವಧಿಯಲ್ಲಿಯೇ ನಮ್ಮ ಕಣ್ಮುಂದೆಯೇ ಸಾಕಾರ ಆಗುತ್ತಿರುವುದನ್ನು ಕಣ್ತುಂಬ ನೋಡಲು ಕಾತುರರಿಂದ ಕಾಯುತ್ತಿದ್ದೇವೆ. ಇಂದು ನಮ್ಮನ್ನು ಅಗಲಿರುವ ನಮ್ಮ ತಂದೆ ಮತ್ತು ಚಿಕ್ಕಪ್ಪನವರು ಮತ್ತು ಅಂದಿನ ಕರಸೇವೆಯಲ್ಲಿ ಪಾಲ್ಗೊಂಡು ಈಗ ನಮ್ಮೊಂದಿಗೆ ಇಲ್ಲದಿರುವವರ ಲಕ್ಷಾಂತರ ಕರಸೇವಕರ ಮತ್ತು ರಾಮ ಭಕ್ತರ ಆತ್ಮಗಳಿಗೆ ಕ್ಕೆ ನಾಳೆ ಬಹುಶಃ ಶಾಂತಿ ಸಿಗಬಹುದು ಎಂದರೂ ಅತಿಶಯೋಕ್ತಿಯಾಗಲಾರದು.

ಪ್ರಪಂಚಾದ್ಯಂತ ಕೂರೋನಾ ಮಹಾಮಾರಿಯ ಹರಡಿರುವ ಕಾರಣ ಎಲ್ಲರೂ ಅಲ್ಲಿ ಖುದ್ದಾಗಿ ಪಾಲ್ಗೊಳ್ಳುವ ಪರಿಸ್ಥಿತಿ ಇಲ್ಲದ ಕಾರಣ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ತಳಿರು ತೋರಣದ ಸಿಂಗಾರ ಮಾಡಿ ಮನೆಯ ಮುಂದೆ ಚಿತ್ತಾರದ ರಂಗೋಲಿಯನ್ನು ಬಿಡಿಸಿ, ಮನೆಯ ಮೇಲೆ ಭಗವಾಧ್ವಜವನ್ನು ಏರಿಸಿ, ಭೂಮಿ ಪೂಜೆಯ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಜಪ, ತಪ ಮಾಡುತ್ತಾ, ಮರ್ಯಾದಾ ಪುರುಶೋತ್ತಮ ಶ್ರೀ ರಾಮನಿಗೆ ಪೂಜೆ ಪುನಸ್ಕಾರಗಳನ್ನು ಮಾಡಿ, ಪ್ರಸಾದವನ್ನು ಅಕ್ಕ ಪಕ್ಕದವರೊಂದಿಗೆ ಹಂಚಿಕೊಂಡು ದೂರದರ್ಶನದಲ್ಲಿ ಬೆಳಿಗ್ಗೆಯಿಂದಲೇ ನೇರ ಪ್ರಸಾರವಾಗುವ ಭೂಮಿ ಪೂಜೆಯನ್ನು ವಿಕ್ಷಿಸುತ್ತಾ ಮನೆಯಲ್ಲಿ ಹಬ್ಬದ ಸಿಹಿ ಅಡುಗೆ ಮಾಡಿ ಎಲ್ಲರೂ ಸವಿಯುವ ಮೂಲಕ ಆ ರಸಕ್ಷಣಗಳನ್ನು ಸಂಭ್ರಮಿಸೋಣ.

ಜೈ ಶ್ರೀರಾಮ್

ಏನಂತೀರೀ?