ಮೃಗವಧೆ

WhatsApp Image 2022-02-03 at 10.29.00 PMನಮ್ಮ ದೇಶದಲ್ಲಿ ಪ್ರತಿಯೊಬ್ಬರ ಹೆಸರಿನೊಂದಿಗೆ ಇರುವ ಉಪನಾಮಗಳು ಇಲ್ಲವೇ ಅವರ ಊರಿನ ಹೆಸರು ಒಂದೊಂದು ಇತಿಹಾಸವನ್ನು ಹೇಳುತ್ತವೆ. ದುರಾದೃಷ್ಟವಷಾತ್ ನಾವು ಆ ಊರಿನ ಹೆಸರು ಮತ್ತು ಇತಿಹಾಸವನ್ನು ತಿಳಿದುಕೊಳ್ಳದೇ ಅವುಗಳನ್ನು ಬದಲಾಯಿಸಲು ಮುಂದಾಗಿರುವುದು ವಿಪರ್ಯಾಸವೆನಿಸುತ್ತದೆ. ಇತ್ತೀಚೆಗೆ ನನಗೆ ಪರಿಚಿತರಾದ ಗೆಳೆಯರೊಬ್ಬರ ಹೆಸರಿನೊಂದಿಗೆ ಮೃಗವಧೆ ಎಂದಿದ್ದದ್ದನ್ನು ಕೇಳಿದಾಗ ನನ್ನ ಕಿವಿಗಳು ಚುರುಕಾಗಿ ಅವರ ಊರಿನ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗಲೇ ನಮ್ಮ ದೇಶದಲ್ಲಿ ನಡೆದ ಮತ್ತು ಈಗ ಅವುಗಳನ್ನು ಕಥೆಗಳ ರೂಪದಲ್ಲಿ ಓದುತ್ತಿರುವ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಬಹಳ ಗೌರವ ಮೂಡಿದ್ದಲ್ಲದೇ, ರಾಮಾಯಣ ಮತ್ತು ಮಹಾಭಾರತಗಳು ಈ ದೇಶದಲ್ಲಿ ನಡದೇ ಇಲ್ಲಾ ಅವುಗಳೆಲ್ಲವು ಕಟ್ಟು ಕಥೆ ಎನ್ನುವವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಐತಿಹ್ಯ ಆ ಊರಿನಲ್ಲಿತ್ತು. ನಾವಿಂದು ಅಂಥಹ ಕುತೂಹಲಕಾರಿ ಊರಾದ ಮೃಗವಧೆಯ ಸ್ಥಳ ಪುರಾಣ ಮತ್ತು ಐತಿಹ್ಯವನ್ನು ತಿಳಿಯೋಣ ಬನ್ನಿ.

ಮೃಗವಧೆ ಎಂಬ ಹೆಸರು ಕೇಳಿದ ಕೂಡಲೇ ಥಟ್ ಅಂತಾ ಹೊಳೆಯುವುದೇ ಅಲ್ಲಿ ಯಾವುದೋ ಪ್ರಾಣಿಯ ವಧೆಯಾಗಿರಬೇಕು ಎಂಬುದಾಗಿರುತ್ತದೆ. ಪ್ರಾಣಿ ವಧೆ ಎಂದು ಕೇಳಿದ ತಕ್ಶಣವೇ ನಿಮ್ಮ ಕಣ್ಮುಂದೆ ರಾಮಾಯಣ ಕಾಲದಲ್ಲಿ ಪ್ರಭು ಶ್ರೀರಾಮ 14 ವರ್ಷ ವನವಾಸವನ್ನು ಮಾಡುತ್ತಿರುವಾಗ ಸೀತಾ ದೇವಿಯ ಕೋರಿಕೆಯಂತೆ ಮಾಯಾ ಚಿನ್ನದ ಜಿಂಕೆಯನ್ನು ವಧಿಸಿದ ಕಥೆ ಮೂಡಿದಲ್ಲಿ ಖಂಡಿತವಾಗಿಯೂ ನಿಮ್ಮ ಊಹೆ ಸರಿಯಾಗಿದೆ.

shivaಹಾಗೆಂದ ಮಾತ್ರಕ್ಕೆ ಇದು ಕೇವಲ ರಾಮಾಯಣಕ್ಕೆ ಸೀಮಿತವಾಗಿರದೇ, ರಾಮಾಯಣಕ್ಕೂ ಮುಂಚೆ ಶಿವ ಪಾರ್ವತಿಯರ ಕಾಲಘಟ್ಟಕ್ಕೂ ಈ ಊರಿನ ಐತಿಹ್ಯ ಬೆರೆತುಕೊಂಡಿದೆ. ಅದೊಮ್ಮೆ ಶಿವ ಪಾರ್ವತಿಯರಿಬ್ಬರೂ ಏಕಾಂತದಲ್ಲಿ ಸಂಬೋಧಿಸುತ್ತಿರುವಾಗ, ಇದ್ದಕ್ಕಿದ್ದಂತೆಯೇ ಪಾರ್ವತಿಯು ತಾನು ಹೆಚ್ಚೋ ಇಲ್ಲವೇ ಸರಸ್ವತಿ ಹೆಚ್ಚೋ ಎಂದು ಶಿವನಲ್ಲಿ ಕೇಳಿದಾಗ, ಪರಶಿವನು ಥಟ್ ಎಂದು ಸಕಲ ವೇದಗಳು ಮತ್ತು ವಿದ್ಯೆಗೆ ಅಧಿದೇವತೆಯಾದ ವಾಣಿಯೇ ಶ್ರೇಷ್ಠ ಎಂದು ಹೇಳಿದ್ದನ್ನು ಕೇಳಿ ಬೇಸರಗೊಂಡ ಪಾರ್ವತಿಯು ಶನಿ ಬಳಿ ಹೋಗಿ ತನ್ನ ಗಂಡನಿಗೆ ಕಾಡಬೇಕೆಂದು ಕೋರಿಕೊಳ್ಳುತ್ತಾಳೆ. ಶಿವನನ್ನು ಕೆಣಕಲು ಹೋಗಿ ಶಿವನ ಮೂರನೇ ಕಣ್ಣಿನಿಂದ ಸುಟ್ಟು ಹೋದ ಮನ್ಮಥನ ಪ್ರಸಂಗವನ್ನು ಉದಾಹರಿಸಿ ತನ್ನಿಂದ ಈ ಕೆಲಸ ಅಸಾಧ್ಯ ಎಂದಾಗ, ಶಿವನಿಂದ ಯಾವುದೆ ತೊಂದರೆ ಆಗದಂತೆ ನಿನ್ನನ್ನು ಕಾಯುವುದು ನನ್ನ ಕೆಲಸ ಎಂದು ಪಾರ್ವತೀ ದೇವಿ ಅಭಯ ನೀಡಿದ ನಂತರ ಶನಿಯ ದೃಷ್ಟಿ ಶಿವನ ಮೇಲೆ ಬಿದ್ದು ಸಾಕ್ಷಾತ್ ಪರಶಿವನಿಗೂ ಶನಿಯ ಕಾಟ ಆರಂಭವಾಗುತ್ತದೆ. ಇದರ ಪರಿಣಾಮ ಶಿವನು ಚತುರ್ಮುಖ ಬ್ರಹ್ಮನಲ್ಲಿ ಅಹಂಕಾರದ ದ್ಯೋತಕವಾಗಿ ಮೂಡಿದ್ದ ಐದನೇ ತಲೆಯನ್ನು ಚ್ಛೇಧಿಸಿ ಬಹ್ಮನ ಕಪಾಲವನ್ನು ಹಿಡಿದುಕೊಂಡು ಮೂರು ಲೋಕದಲ್ಲಿಯೂ ಭಿಕ್ಷಾಟನ ಮಾಡತೊಡಗುತ್ತಾನೆ. ಹೀಗೆ ಕೈಲಾಸದಲ್ಲಿ ಬಹಳ ಕಾಲ ಶಿವನು ಇಲ್ಲದೇ ದುಃಖಿತಳಾದ ಪಾರ್ವತಿಯು ತನ್ನ ಪತಿಯಿಂದ ಶನಿಪ್ರಭಾವವನ್ನು ಹೊರದೋಡಿಸುವ ಸಲುವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಚರಿಸುತ್ತಾ ಅಂತಿಮವಾಗಿ ಮೃಗವಧೆಯ ಕ್ಷೇತ್ರದಲ್ಲಿ ಐದು ಹೋಮಕುಂಡಗಳನ್ನು ಮಾಡಿ ಅಲ್ಲೊಂದು ಲಿಂಗಕ್ಕೆ ಈಶ್ವರನನ್ನು ಆಹ್ವಾವನೆ ಮಾಡಿ ಸದ್ಯೋಜಾತಾದಿ ಐದು ಮಂತ್ರಗಳಿಂದ ಭಕ್ತಿಯಿಂದ ಪೂಜಿಸಿ ಶನಿಯು ಪರಶಿವನಿಗೆ ಮುಕ್ತಿ ಕೊಡದೇ ಹೋದಲ್ಲಿ ತಾನು ಹೋಮಕುಂಡಕ್ಕೆ ಬಿದ್ದು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಘೋಷಿಸುತ್ತಾಳೆ. ಐದು ಯಾಮಗಳಲ್ಲಿ ಆಕೆ ಪೂಜೆಮಾಡುತ್ತಿದ್ದಾಗ ಐದು ಪ್ರಾಣಿಗಳ ರೀತಿಯಲ್ಲಿ ಕೂಗಿ ಶ್ರೀ ನರಸಿಂಹಸ್ವಾಮಿಯು ಆಕೆಯ ತಪಸ್ಸನ್ನು ಪರೀಕ್ಷೇ ಮಾಡುತ್ತಾರೆ.

WhatsApp Image 2022-02-03 at 10.28.12 PMಪೂಜೆ ಎಲ್ಲವೂ ಮುಗಿದು ಇನ್ನೇನು ಪಾರ್ವತಿಯು ಅಗ್ನಿ ಕುಂಡವನ್ನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಶಿವನು ಶನಿದೋಷದಿಂದ ಮುಕ್ತನಾಗಿ ಅಲ್ಲಿ ಪ್ರತ್ಯಕ್ಷನಾಗಿ ಪಾರ್ವತಿಯ ಕೈ ಹಿಡಿಯುವುದಲ್ಲದೇ, ಯಾರು ಶನಿಯನ್ನು ಪೂಜಿಸಿ ಇಲ್ಲಿನ ಶನೈಶ್ವರನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅಂತಹವರಿಗೆ ಶನಿದೋಷ ಕಾಡಕೂಡದು ಎಂದು ಶನಿಗೆ ಪರಶಿವನು ಆಜ್ಞಾಪಿಸುತ್ತಾನೆ. ಅದೇ ರೀತಿ ನರಸಿಂಹಸ್ವಾಮಿಗೂ ತ್ರೇತಾಯುಗದಲ್ಲಿ ರಾಮನ ಅವತಾರದಲ್ಲಿ ಮಾರೀಚನೆಂಬ ರಾಕ್ಷಸನನ್ನು ವಧಿಸಿ ಇದೇ ಕ್ಷೇತ್ರದಲ್ಲಿ ನನ್ನನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಮಹಾವಿಷ್ಣುವಿಗೆ ಶಿವನು ಹೇಳುತ್ತಾನೆ ಎಂಬುದು ಇಲ್ಲಿನ ಸ್ಥಳ ಪುರಾಣವಾಗಿದೆ. ಹಾಗಾಗಿ ಅಂದಿನಿಂದ ಈ ಕ್ಷೇತ್ರ ಗೌರ್ಯಾಶ್ರಮ ಎಂದು ಪ್ರಖ್ಯಾತವಾಗಿತ್ತು ಹಾಗಾಗಿಯೇ ಇಲ್ಲಿ  ಶ್ರೀ ಶನೈಶ್ಚರ ಸ್ವಾಮಿಯ ದೇವಸ್ಥಾನವೂ ಆಕರ್ಷಣೆಯ ಕೇಂದ್ರವಾಗಿದ್ದು, ಈ ಗ್ರಾಮಕ್ಕೆ ಬರುವ ಭಕ್ತಾದಿಗಳು ಮೊದಲು ಶನೈಶ್ಚರನ ದರ್ಶನದ ಮಾಡಿದ ನಂತರವೇ ಉಳಿದೆಲ್ಲಾ ದೇವಸ್ಥಾನಗಳ ದರ್ಶನ ಪಡೆಯುವುದು ಇಲ್ಲಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಶ್ರಾವಣ ಮಾಸದ ಶನಿವಾರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಶನೈಶ್ವರ ದೇವಾಲಯಕ್ಕೆ ಆಗಮಿಸಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಮುಂದೆ ತ್ರೇತಾಯುಗದಲ್ಲಿ ಸೂರ್ಯವಂಶದ ದಶರಥನ ಮಗ ರಾಮನಾಗಿ ಅವತರಿಸಿದ ಮಹಾವಿಷ್ಣುವು ತನ್ನ ತಂದೆಯ ಅಜ್ಞೆಯನ್ನು ಪಾಲಿಸುವ ಸಲುವಾಗಿ 14 ವರ್ಷಗಳ ಕಾಲ ವನವಾಸವನ್ನು ಮಾಡಲು ಹೊರಟಾಗ ಆತನ ಜೊತೆ ಸಹಾಯಕ್ಕಾಗಿ ಅವನ ತಮ್ಮ ಲಕ್ಷಣ ಮತ್ತು ಮಡದಿ ಸೀತಾ ದೇವಿಯೂ ಸಹಾ ಸಿದ್ಧರಾಗುತ್ತಾರೆ. ಅವರು ಹೀಗೆಯೇ ಕಾಡಿನಲ್ಲಿ ಒಂದೊಂದು ಪ್ರದೇಶದಲ್ಲಿ ಕೆಲವೊಂದು ಕಾಲ ನೆಲೆಸಿದ್ದಾಗ ರಾವಣ ತಂಗಿ ಶೂರ್ಪಣಖಿಯ ಪ್ರಸಂಗದಲ್ಲಿ ಲಕ್ಷಣನಿಂದ ಮೂಗನ್ನು ಕತ್ತರಿಸಿಕೊಂಡು ಅವಮಾನಿತಳಾಗಿ ತನ್ನ ಅಣ್ಣನಾದ ರಾವಣನ ಬಳಿ ಇಲ್ಲ ಸಲ್ಲದ ಚಾಡಿಯನ್ನು ಹೇಳಿ ಆ ಅವಮಾನಕ್ಕೆ ಪ್ರತೀಕಾರವನ್ನು ತೆಗೆದುಕೊಳ್ಳಲು ಒತ್ತಾಯಿಸಿದಾಗ ತಂಗಿಯ ಕೋರಿಕೆಯನ್ನು ಮನ್ನಿಸಿ ಕಾಡಿಗೆ ಬಂದ ರಾವಣ ಸೀತೆಯನ್ನು ನೋಡಿ ಆಕೆಯಲ್ಲಿ ಮೋಹಿತನಾಗಿ (ಸೀತಾ ಸ್ವಯಂವರದಲ್ಲಿ ರಾವಣನೂ ಪಾಲ್ಗೊಂಡು ಶಿವಧನಸ್ಸನು ಎತ್ತಲಾಗದೇ ಹೋದದ್ದು ಇಲ್ಲಿ ಗಮನಾರ್ಹ) ಅಕೆಯನ್ನು ಹೇಗಾದರೂ ಮಾಡಿ ಪಡಯಲೇ ಬೇಕೆಂದು ಯೋ‍ಚಿಸಿದಾಗಲೇ ಆತನಿಗೊಂದು ಉಪಾಯ ಹೊಳೆಯುತ್ತದೆ.

ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ತನ್ನ ಸೋದರಮಾವ ಮತ್ತು ಪರಮ ಶಿವಭಕ್ತನಾದ ಮಾರೀಚನ ಸಹಾಯವನ್ನು ಕೇಳುತ್ತಾನೆ. ಅದರ ಪ್ರಕಾರ ಮಾರೀಚನು ಮಾಯಾ ಜಿಂಕೆಯ ವೇಷ ಧರಿಸಿ, ಸೀತೆಯು ಅದರಿಂದ ಆಕರ್ಷಿತಳಾಳಾಗುವಂತೆ ಮಾಡಿ, ಶ್ರೀ ಶ್ರೀರಾಮನನ್ನು ಸೀತೆಯಿಂದ ಬೇರ್ಪಡಿಸಿ ಆತನನ್ನು ದಾರಿ ತಪ್ಪಿಸುವಂತೆ ಮಾಡಿ ತಾನು ಸೀತೆಯನ್ನು ಅಪಹರಿಸುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಒಪ್ಪದ ಮಾರೀಚನು ಶ್ರೀರಾಮನಿಗೆ ಮೋಸ ಮಾಡುವ ಸ್ಸಾಹಸಕ್ಕೆ ಕೈಹಾಕಬೇಡ ಆತನ ಬಾಣದ ರುಚಿಯನ್ನು ಆತ ಚಿಕ್ಕವನಿರ ಬೇಕಾದಾಗಲೇ ನಾನು ಅನುಭವಿಸಿದ್ದಲ್ಲದೇ ನನ್ನ ತಮ್ಮ ಸುಬಾಹುವನ್ನು ಕಳೆದುಕೊಂಡಿದ್ದೇನೆ ಎಂದು ಪರಿ ಪರಿಯಾಗಿ ತಿಳಿ ಹೇಳಿದರು ಅದಕ್ಕೆ ರಾವಣನು ಒಪ್ಪದಿದ್ದಾಗ, ವಿಧಿಯಿಲ್ಲದೆ ಮಾರೀಚನು ರಾವಣನ ಆಜ್ಞೆಯಂತೆ ಮಾಯಾ ಜಿಂಕೆಯ ವೇಷಧಾರಿಯಾಗಿ ಕಾಡಿಗೆ ಬರುತ್ತಾನೆ.

seeta3ಆ ಮಾಯಾಜಿಂಕೆಯನ್ನು ನೋಡಿ ಆಕರ್ಷಿತಳಾದ ಸೀತಾ ದೇವಿಯ ಆ ಜಿಂಕೆಯನ್ನು ಹಿಡಿದುಕೊಂಡು ಬರಲು ರಾಮನನ್ನು ಕೋರಿಕೊಂಡಾಗ, ಸೀತೆಯ ಕೋರಿಕೆಯಂತೆ ಚಿನ್ನದಜಿಂಕೆಯನ್ನು ಹಿಡಿಯುವ ಸಲುವಾಗಿ ಅದನ್ನು ಬೆನ್ನಟ್ಟಿ ಕೊಂಡು ಹೋಗಿ ಕಡೆಗೆ ಜಿಂಕೆರೂಪದಲ್ಲಿ ಬಂದಿದ್ದ ಮಾಯವಿ ಮಾರೀಚನು ರಾಮನ ಬಾಣಕ್ಕೆ ಹತನಾಗುತ್ತಾನೆ. ಈ ಸಂಪೂರ್ಣ ಘಟನೆಯು ನಡೆದ ಸ್ಥಳವೇ ಮೃಗವಧಾ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿದ್ದು ಪ್ರಸ್ತುತ ಅದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಕೇವಲ 27 ಕಿಮೀ ದೂರದಲ್ಲಿದೆ.

murugavadhe3ಮಾರೀಚನನ್ನು ಕೊಂದು ಬ್ರಹ್ಮ ಹತ್ಯೆಯ ದೋಷಕ್ಕೆ ಒಳಗಾಗಿ ಆ ಕಳಂಕದಿಂದ ಪಾರಾಗಲು ರಾಮನು ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿಯೇ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದನಂತೆ. ಆ ಲಿಂಗವನ್ನು ಮೊದಲು ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಕರೆಯುತ್ತಿದ್ದು ನಂತರ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ಸುಮಾರು ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಇಲ್ಲಿನ ವೈಶಿಷ್ಟ್ಯವಾಗಿದೆ. ಚಾಲುಕ್ಯರ ಕಾಲದ ಶಿಲ್ಪ ಕಲೆಯನ್ನು ಒಳಗೊಂಡಿರುವ ಈ ದೇವಸ್ಥಾನವನ್ನು ಚಾಲುಕ್ಯ ಅರಸ ತ್ರಿಭುವನಮಲ್ಲನು 1060ರಲ್ಲಿ ನಿರ್ಮಿಸಿದನು. ಕಾಲಾನಂತರ ಅವಸಾನದ ಹಂತದಲ್ಲಿದ್ದ ದೇವಾಲಯವನ್ನು ಕೆಳದಿ ಸೋಮಶೇಖರ ನಾಯಕನ ಕಾಲದಲ್ಲಿ ಪುನರುತ್ಥಾನ ಮಾಡಿಸಿದ ಎನ್ನುವ ಶಾಸನಗಳು ಅಲ್ಲಿ ಕಾಣಬಹುದಾಗಿದೆ.

mugavadhe2ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸುತ್ತಲೂ ಪಂಜುರ್ಲಿ, ಧೂಮಾವತಿ, ಕ್ಷೇತ್ರಪಾಲ ಸೇರಿದಂತೆ ಈಶ್ವರನ ಸಮಸ್ತ ಗಣಗಳನ್ನು ಕಾಣಬಹುದಾಗಿದೆ. ಪ್ರತಿದಿನವೂ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ತ್ರಿಕಾಲವೂ ಬಲಿಹರಣ, ಆಗಮೋಕ್ತಿ, ಹಗಲು ದೀವಟಿಗೆ,ಅಷ್ಟಾವಧಾನ ಸೇವೆಗಳಿಂದ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಕಾರ್ತಿಕ ಮಾಸದ ದೀಪೋತ್ಸವವು ಅತ್ಯಂತ ವೈಭವವಾಗಿ ನಡೆದರೆ, ಪ್ರತೀ ವರ್ಷದ ಫಾಲ್ಗುಣ ಮಾಸದ ಬಹುಳದ ಮೊದಲ ಐದು ದಿನಗಳು ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಬಹಳ ವೈಭವದಿಂದ ನಡೆಸಲಾಗುತ್ತದೆ. ಇದರ ಜೊತೆ ಈಗಾಗಲೇ ತಿಳಿಸಿದಂತೆ ಶ್ರೀ ಶನೈಶ್ವರ ಶಂಕರೇಶ್ವರ, ಉಗ್ರ ನರಸಿಂಹ ಮತ್ತು ಆಂಜನೇಯ ದೇವರುಗಳ ಚಿಕ್ಕ ದೇವಾಲಯಗಳನ್ನೂ ಈ ಊರಿನಲ್ಲಿ ಕಾಣಬಹುದಾಗಿದೆ.

ಇನ್ನು ಐತಿಹಾಸಿಕವಾಗಿ ನೋಡಿದರೆ ಮೃಗವಧೆಯಿಂದ ಕೇವಲ 2 ಕಿಮೀ ದೂರದಲ್ಲೇ ಇರುವ ಮಲ್ಲಾಪುರ ಎಂಬ ಊರಿನಲ್ಲಿ ಶಿಲಾಯುಗದ ಪಳಿಯುಳಿಕೆಯಾಗಿ ಹಳೆಯ ಕಾಲದ ನಿವೇಶನ, ಬಂಡೆ ಮೇಲಿನ ಅಪರೂಪದ ರೇಖಾಚಿತ್ರಗಳು ದೊರೆತಿದೆ. 3ನೇ ಶತಮಾನದ್ದು ಎಂದು ಅಂದಾಜಿಸಲಾಗಿರುವ ಶಾತವಾಹನರ ಕಾಲದ ಶಾಸನವು ಅಲ್ಲಿ ಸಿಕ್ಕಿರುವ ಮೂಲಕ ಅಲ್ಲೊಂದು ದೊಡ್ಡದಾದ ದೇವಸ್ಥಾನವಿತ್ತು ಎಂಬುದಾಗಿ ಇಲ್ಲಿ ಸಂಶೋಧನೆ ನಡೆಸಿದವರ ಅಭಿಪ್ರಾಯವಾಗಿದೆ. 10ನೇ ಶತಮಾನಕ್ಕೆ ಸೇರಿದ ನಂದಿಕಲ್ಲು ಶಾಸನ ಕಾಲದಲ್ಲೂ ಅಲ್ಲಿನ ದೇವಸ್ಥಾನಗಳ ಉಲ್ಲೇಖವಿದೆ. ಅದೇ ಅಲ್ಲದೇ ಈ ಹಿಂದೆ ಅಲ್ಲೊಂದು ಭವ್ಯವಾದ ಅರಮನೆ ಮತ್ತು ಅಗ್ರಹಾರಗಳಿಂದ ಕೂಡಿದ್ದ ದೊಡ್ಡದಾದ ಸುಸಜ್ಜಿತವಾದ ನಗರವಾಗಿತ್ತು ಎಂಬುದಕ್ಕೆ ಪುರಾವೆ ಎನ್ನುವಂತೆ  1 x 1 ಅಗಲದ 6 ಇಂಚುಗಳ ದಪ್ಪದ ಸಾವಿರಾರು ವರ್ಷಗಳ ಹಿಂದಿನ ಇಟ್ಟಿಗೆಗಳು ಅಲ್ಲಿ ದೊರೆತಿದ್ದು ಇಂದಿಗೂ ಅದನ್ನು ಭಾರವಾದ ಆಯುಧಗಳಿಂದಲೂ ಭಿನ್ನಮಾಡಲಾಗಷ್ಟು ಗಟ್ಟಿಮುಟ್ಟಾಗಿದೆ. ಈಗ ಆ ಪ್ರದೇಶಗಳಲ್ಲಿ ಒಂದಷ್ಟು ಮನೆಗಳು ಇದ್ದರೆ ಉಳಿದ ಪ್ರದೇಶದವು ಅರಣ್ಯವಾಗಿದ್ದು ಸರಿಯಾಗಿ ಉತ್ಖನ ಮಾಡಿದಲ್ಲಿ ಭೂಗತವಾಗಿರಬಹುದಾದ ದೇವಸ್ಥಾನ ಮತ್ತು ನಗರದ ಹೆಚ್ಚಿನ ವಿಷಯಗಳು ತಿಳಿದು ಬರಬಹುದು ಎಂದು ಸ್ಥಳೀಯರು ಮತ್ತು ಮೃಗವಧೆ ಊರಿನ ಬಗ್ಗೆ ಕಾಳಜಿಯುಳ್ಳ ಶ್ರೀ ಅಭಿನಂದನ್ ಭಟ್ ಮೃಗವಧೆ ಅವರು ತಿಳಿಸಿದರು.

murugavadhe4ತೀರ್ಥಹಳ್ಳಿಯಿಂದ 27 ಮತ್ತು ಕೊಪ್ಪದಿಂದ 17 ಕಿಮೀ, ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳ್ಳಿಯಿಂದ 25 ಕಿಮೀ ದೂರದಲ್ಲಿರುವ ಈ ಮೃಗವಧೆಗೆ ಬರಲು ಖಾಸಗಿ ಮತ್ತು ಸರ್ಕಾರಿ ವಾಹನಗಳ ಸೌಕರ್ಯವಿದ್ದು, ದೂರದ ಊರಿನಿಂದ ಬರುವ ಭಕ್ತಾದಿಗಳಿಗೆಂದೇ ಪ್ರತೀ ದಿನ ಮಧ್ಯಾಹ್ನ ದಾಸೋಹದ ವ್ಯವಸ್ಥೆಯೂ ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದೆ.

ಇಷ್ಟೆಲ್ಲಾ ಮಾಹಿತಿಗಳು ದೊರೆತ ಮೇಲೆ ಇನ್ನೇಕೆ ತಡಾ ಸ್ವಲ್ಪ ಸಮಯ ಮಾಡಿಕೊಂಡು ಮಲೆನಾಡಿನ ಕಡೆ ಪ್ರಯಾಣ ಬೆಳಸಿ ಮೃಗವಧೆಯ ಬ್ರಾಹ್ಮಿ ನದಿಯಲ್ಲಿ ಮಿಂದೆಂದು ಶ್ರೀ ಶನೈಶ್ವರ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಮೋಕ್ಷರಂಗ, ರಂಗಸ್ಥಳ

ಧನುರ್ಮಾಸದ ಸಮಯದಲ್ಲಿ ಒಂದೇ ದಿನ ಶ್ರೀರಂಗ ಪಟ್ಟಣದ ಆದಿರಂಗ, ಶಿಂಷಾದ ಮಧ್ಯರಂಗ ಮತ್ತು ತಮಿಳುನಾಡಿನ ಶ್ರೀರಂಗನ ಅಂತ್ಯರಂಗ ಈ ಮೂರು ರಂಗನಾಥನ ದರ್ಶನ ಮಾಡಿದಲ್ಲಿ ಬಹಳ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಅದರೆ ಈ ಮೂರು ರಂಗನಾಥನ ದರ್ಶನದ ಮಾಡಿದ ನಂತರ ಮೋಕ್ಷ ಪಡೆಯುವುದಕ್ಕಾಗಿ ನಾಲ್ಕನೇ ರಂಗನಾಥನ ದರ್ಶನ ಮಾಡಬೇಕು ಎನ್ನುವ ವಿಷಯ ಬಹುತೇಕರಿಗೆ ತಿಳಿದೇ ಇಲ್ಲ.  ಬನ್ನಿ ನಾವಿಂದು ಚಿಕ್ಕಬಳ್ಳಾಪುರದ ಸಮೀಪವೇ ಇರುವ ರಂಗಸ್ಥಳದ ಮೋಕ್ಷರಂಗನಾಥನ ದರ್ಶನವನ್ನು ಕುಳಿತಲ್ಲಿಂದಲೇ  ಮಾಡಿಕೊಳ್ಳುವ ಮೂಲಕ ರಂಗನಾಥ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿ ಮೋಕ್ಷವನ್ನು ಪಡೆಯೋಣ.

ಅವಿಭಜಿತ ಕೋಲಾರ ಜಿಲ್ಲೆಯು ಅನೇಕ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿಯಾಗಿರುವುದು ಈಗಾಗಲೇ ನಮೆಗೆಲ್ಲರಿಗೂ ತಿಳಿದಿರುವ ವಿಷಯವೇ ಸರಿ. ಚಿಕ್ಕಬಳ್ಳಾಪುರದಿಂದ  ಕೇವಲ ಆರೇಳು ಕಿಮೀ ದೂರಲ್ಲೇ ಇರುವ ಅತ್ಯಂತ ಪುರಾಣ ಪ್ರಸಿದ್ದವಾಗಿದ್ದರೂ ಇನ್ನೂ ಬಹುತೇಕರಿಗೆ  ತಿಳಿಯದೇ ಇರುವ ಶ್ರೀ ರಂಗನಾಥಸ್ವಾಮಿಯ ಶ್ರೀ ಕ್ಶೇತ್ರವೇ  ರಂಗಸ್ಥಳ.

ವಿಜಯನಗರದ ಆಡಳಿತಾವಧಿಯ ಶಿಲ್ಪಕಲೆಗಳಿಗೆ ರಂಗಸ್ಥಳ ಪ್ರಸಿದ್ಧಿ ಪಡೆದಿದ್ದು, ಶ್ರೀರಂಗಂ, ಶ್ರೀರಂಗಪಟ್ಟಣ, ರಂಗಸ್ಥಳದಲ್ಲಿ ಏಕಕಾಲಕ್ಕೆ ರಂಗನಾಥ ಮೂರ್ತಿ ಪ್ರತಿಷ್ಠಾಪನೆಯಾಯಿತು ಎಂಬ ನಂಬಿಕೆಯೂ ಇದೆ. ಗರ್ಭಗೃಹ ಬಿದಿರಿನಿಂದ ಮಾಡಲ್ಪಟ್ಟಿರುವ ಬುಟ್ಟಿಯ ಆಕಾರದಲ್ಲಿದ್ದು, ಇದರ ಪ್ರತಿಷ್ಠಾಪನೆಯ ಹಿಂದೆ ರಾಮಯಣದ ನಂಟಿದೆ ಎಂಬ ಪ್ರತೀತಿ ಇದೆ.  ತ್ರೇತಾಯುಗದಲ್ಲಿ ಶ್ರೀರಾಮ ರಾವಣನನ್ನು ಸಂಹರಿಸಿದ ನಂತರ ತನ್ನ ಸಕಲ ಪರಿವಾರದೊಂದಿಗೆ ಅಯೋಧ್ಯೆಯಲ್ಲಿ ನಡೆದ  ಪಟ್ಟಾಭಿಷೇಕ ಮಹೋತ್ಸವವಕ್ಕೆ ರಾವಣನ ತಮ್ಮ ವಿಭೀಷಣನೂ ಬಂದಿರುತ್ತಾನೆ.  ಕಾರ್ಯಕ್ರಮ ಎಲ್ಲವೂ ಸಾಂಗೋಪಾಂಗವಾಗಿ ನಡೆದ ನಂತರ, ಲಂಕೆಗೆ  ಹಿಂದಿರುಗುವ ಮನ್ನಾ  ಭಗವಾನ್ ರಾಮನು ವಿಭೀಷಣನಿಗೆ ತನ್ನ ಮನೆದೇವರಾದ ಶ್ರೀ ರಂಗನಾಥಸ್ವಾಮಿಯ ವಿಗ್ರಹವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು ಪ್ರೀತಿ ಮತ್ತು ಕೃತಜ್ಞತೆಯ ಸಂಕೇತವಾಗಿ ಉಡುಗೊರೆಯಾಗಿ ನೀಡುತ್ತಾನೆ. ಶ್ರೀದೇವಿ ಭೂದೇವಿ ಸಮೇತ ಇರುವ ಈ ರಂಗನಾಥನ ವಿಗ್ರಹವನ್ನು ವಿಭೀಷಣನು ಶ್ರೀರಂಗಂನಲ್ಲಿ ಈ ವಿಗ್ರಹವನ್ನು  ಪ್ರತಿಷ್ಠಾಪನೆ ಮಾಡಲು ಇಚ್ಚಿಸಿದನಂತೆ. ಆದರೆ ನಂದಿಯ ಬಳಿ ವಾಸವಾಗಿದ್ದ ಸಪ್ತ ಋಷಿಗಳು ಆ ವಿಗ್ರಹವನ್ನು ಈಗಿನ ರಂಗಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವಂತೆ ಸೂಚನೆ ನೀಡುತ್ತಾರೆ. ಬುಟ್ಟಿಯಲ್ಲಿ ಶ್ರೀ ರಂಗನಾಥ ಸ್ವಾಮಿ ಇದ್ದದ್ದರಿಂದ ಈ ದೇವಸ್ಥಾನದ ಗರ್ಭಗುಡಿಯು ಬಿದಿರಿನ ಬುಟ್ಟಿಯ ರೂಪದಲ್ಲಿ ಇದೆ ಎನ್ನುವ  ಪ್ರತೀತಿ ಇದೆ.

ಸ್ಥಳೀಯ ದಂತಕಥೆಯ ಪ್ರಕಾರ, ಸಪ್ತ ಋಷಿಗಳು  ಸ್ಕಂದ-ಗಿರಿ ಬೆಟ್ಟದ ಹತ್ತಿರದ ಗುಹೆಯಲ್ಲಿ ವಾಸಿಸುತ್ತಿದ್ದರು. ಶ್ರೀರಾಮನು ವಿಭೀಷಣನಿಗೆ ರಂಗನಾಥಸ್ವಾಮಿಯನ್ನು ಉಡುಗೊರೆಯಾಗಿ ನೀಡಿದ ವಿಗ್ರಹವನ್ನು  ಶ್ರೀರಂಗಪಟ್ಟಣ, ಶ್ರೀರಂಗಂ ಮತ್ತು ರಂಗಸ್ಥಳದಲ್ಲಿರುವ  ಒಂದೇ ಮುಹೂರ್ತದಲ್ಲಿ (ಒಂದು ಮಂಗಳಕರ ಸಮಯ) ಸ್ಥಾಪಿಸಿ ಪೂಜೆಮಾಡಲಾರಂಭಿಸಿದರು ಎನ್ನುತದೆ.  ನಂತರ ಹೊಯ್ಸಳರ ರಾಜರ ಆಸ್ಥಾನ ಶಿಲ್ಪಿ ಜಕಣಾಚಾರಿ  ಇಲ್ಲಿ  ಸುಂದರವಾದ ಬುಟ್ಟಿಯಾಕಾರದ ಗರ್ಭಗುಡಿಯನ್ನು ರಾತ್ರಿ ಮುಗಿದು ಬೆಳಗಾಗುವುದರೊಳಗೆ ನಿರ್ಮಿಸಿದರಂತೆ.

ಸಾಮಾನ್ಯವಾಗಿ ಎಲ್ಲಾ ರಂಗನಾಥನ ದೇವಾಲಯಗಳಲ್ಲಿ  ಶೇಷಶಯನ ರಂಗನಾಥನ ಅಕ್ಕ ಪಕ್ಕದಲ್ಲಿ ಭೂದೇವಿಯ ಪ್ರತ್ಯೇಕ ಮೂರ್ತಿಇದ್ದಲ್ಲಿ  ಈ ರಂಗಸ್ಥಳದ ರಂಗನಾಥಸ್ವಾಮಿಯ ವಿಗ್ರಹವು  ಎಲ್ಲದ್ದಕಿಂತಲೂ ಸ್ವಲ್ಪ ವಿಭಿನ್ನವಾಗಿದೆ.  ಶಾಲಿಗ್ರಾಮ ಶಿಲೆಯ, ಅನಂತ ಶೇಷನ ಮೇಲೆ ಮಲಗಿದ್ದಲ್ಲಿ ಆತನ ಪದತಲದಲ್ಲಿ ನೀಲಾದೇವಿ ಮತ್ತು ಭೂದೇವಿಯರು ಇರುವ  ಏಕಶಿಲೆಯ ರಂಗನಾಥನ ವಿಗ್ರಹವಾಗಿರುವುದು ಬಹಳ ಅಪರೂಪವಾಗಿದೆ. ಸ್ವಾಮಿಯ ಪಾದಗಳು ಕಮಲದ ಮೇಲಿದ್ದರೆ, ಸ್ವಾಮಿಯ ಸುತ್ತಲೂ  ಬ್ರಹ್ಮ, ಶಿವ, ಅಷ್ಟ-ದಿಕ್ ಪಾಲಕರು, ಸ್ವಾಮಿಯ ಅತೀಂದ್ರಿಯ ಆಯುಧಗಳು, ಕಲ್ಪ-ವೃಕ್ಷ  ಕಾಮಧೇನು ಮತ್ತು ಗರುಡ ಇದ್ದು, ಈ ಎಲ್ಲರೂ ಸ್ವಾಮಿಯ ಸೇವೆಗೆ ಸದಾಕಾಲವೂ ಸಿದ್ಧರಾಗಿವಂತಿದೆ. ನಿಜ ಹೇಳಬೇಕೆಂದರೆ ವೈಕುಂಠದಲ್ಲಿ ಮಹಾವಿಷ್ಣು ಹೇಗೆ ಇರುತ್ತಾರೆಯೋ ಅದರ ಯಥಾವತ್ ಚಿತ್ರಣವನ್ನು ಇಲ್ಲಿ ರೂಪಿಸಲಾಗಿದೆ ಎಂದರೂ ಅತಿಶಯವೆನಿಸದು. ಸ್ವಾಮಿಯ  ಮಂದಸ್ಮಿತ ನಗು ಬಹಳ ಮೋಡಿಯನ್ನು ಮಾಡುವದಲ್ಲದೇ ಈ ರೀತಿಯಾಗಿ ಅತ್ಯಂತ  ಸುಂದರವಾಗಿರುವ ಕಾರಣ ಸ್ವಾಮಿಯನ್ನು ಜಗನ್ಮೋಹನ ಎಂದೂ ಕರೆಯಲಾಗುತ್ತದೆ

ಸುತ್ತಮುತ್ತಲಿನ ಬೆಟ್ಟ ಗುಡ್ಡಗಳ ಪ್ರಶಾಂತ ವಾತಾವರಣದಲ್ಲಿ ಹೊಯ್ಸಳ ವಾಸ್ತುಶಿಲ್ಪದ ಶೈಲಿಯ ಅದ್ಭುತವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಬೃಹತ್ತಾದ  ರಾಜಗೋಪುರವನ್ನು ನಿರ್ಮಿಸಲಾಗಿದೆ. ದೇವಾಲಯದಲ್ಲಿ ಅತ್ಯಂತ ಸುಂದರವಾದ ಕಂಬಗಳು ಮತ್ತು ಅದರ ಸುತ್ತಲೂ ಪ್ರಾಕಾರವನ್ನು ಹೊಂದಿರುವ ಮಂಟಪವಿದೆ. ಈಗಾಗಲೇ ತಿಳಿಸಿರುವಂತೆ ದೇವಾಲಯದ ಗರ್ಭಗೃಹವು ಬಿದಿರಿನ ಬುಟ್ಟಿಯಂತಿದ್ದು  ಆ ಬುಟ್ಟಿಯ ಮಧ್ಯದಲ್ಲಿ ಭಗವಾನ್ ರಂಗನಾಥನು ಇರುವಂತೆ ನಿರ್ಮಿಸಲಾಗಿದೆ.  ಗರ್ಭಗೃಹಕ್ಕೆ ಅತ್ಯಂತ ಸುಲಭವಾಗಿ  ಪ್ರದಕ್ಷಿಣೆ ಮಾಡುವಂತಿದ್ದು, ಅಲ್ಲಿಯೇ  ಲಕ್ಷ್ಮೀದೇವಿಯ ಪ್ರತ್ಯೇಕ ದೇವಾಲಯವೂ ಇದೆ.

ಈ ದೇವಾಲಯದ ಮತ್ತೊಂದು ವಿಶೇಷವೆಂದರೆ,  ಮಕರ ಸಂಕ್ರಾಂತಿಯ ಮುಂಜಾನೆ ಸೂರ್ಯೋದಯದ ಸಮಯದಲ್ಲಿ  ಸೂರ್ಯನ ಕಿರಣಗಳು ದೇವಾಲಯದ ಕಿಟಕಿಯ ಮೂಲಕ ಭಗವಂತನ ಪಾದಕಮಲಗಳ ಮೇಲೆ  ಕೆಲ ಕ್ಷಣಗಳ ಕಾಲ ಬೀಳುತ್ತದೆ.  ಈ ಸುಂದರವಾದ ಸಮಯದಲ್ಲಿ ಭಗವಂತನ ಪಾದಕಮಲಗಳ ದರ್ಶನವನ್ನು  ಪಡೆದವರ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನುವ ನಂಬಿಕೆ ಇರುವ ಕಾರಣ,  ಈ ಅವಿಸ್ಮರಣೀಯ ಘಟನೆಯನ್ನು ವೀಕ್ಷಿಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಅಂದು ದೇವಾಲಯಕ್ಕೆ  ಸಾವಿರಾರು ಭಕ್ತರು ಬರುತ್ತಾರೆ. ದೇವಾಲಯದ ಹೊರೆಗೆ ದೇವಾಲಯದಲ್ಲಿ ಶಂಖ ತೀರ್ಥ ಮತ್ತು ಚಕ್ರತೀರ್ಥಗಳೆಂಬ  ಕಲ್ಯಾಣಿಗಳು ಇದ್ದು ಈ ಮೊದಲ ಸ್ಪಟಿಕದಂತೆ ಸ್ವಚ್ಛವಾಗಿ ಬಳೆಸಲು ಯೋಗ್ಯವಾಗಿದ್ದಂತಹ ನೀರು ಸದ್ಯಕ್ಕೆ  ಸೂಕ್ತವಾದ ನಿರ್ವಹಣೆ ಇಲ್ಲದ ಕಾರಣ ಸದ್ಯಕ್ಕೆ ನೀರೇಲ್ಲಾ ಪಾಚಿಕಟ್ಟಿಕೊಂಡಿರುವುದು ತುಸು ಬೇಸರ ತರಿಸುತ್ತದೆ.

ಸದ್ಯಕ್ಕೆ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಾಲಯ ಸೂಕ್ತವಾದ ನಿರ್ವಹಣೆ ಇಲ್ಲದೇ ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಾಲಯ ಇಂದು  ಟಿವಿ ಧಾರಾವಾಹಿಗಳು ಮತ್ತು  ಇತ್ತೀಚಿಗೆ  ಆರಂಭವಾಗಿರುವ ಖಯಾಲಿ   Prewedding shootingಗಳ ಶೂಟಿಂಗ್ ಸ್ಪಾಟ್ ಆಗಿ ಹೋಗಿ ಹೋಯ್ಸಳರ ಶೈಲಿಯಲ್ಲಿ  ಸುಂದರವಾಗಿ ಕೆತ್ತಿರುವ ಕಂಬಗಳು ಮತ್ತು ಶಿಲಾಬಾಲಿಕೆಯರ ಮುಂದೆ ಅಸಭ್ಯ ರೀತಿಯಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದನ್ನು ನೋಡಿದಾಗ ತುಸು ಮುಜುಗೊರದ ಜೊತೆಗೆ ಸಾತ್ವಿಕ ಕೋಪವನ್ನೂ ತರಿಸುತ್ತದೆ.

ಪ್ರತೀ ಶುಕ್ರವಾರ ಲಕ್ಷ್ಮಿ ದೇವಿಗೆ ಪಂಚಾಮೃತ ಅಭಿಷೇಕವನ್ನು ಮಾಡಿದರೆ, ಪ್ರತಿ ಶನಿವಾರ ರಂಗನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ.  ಪ್ರತೀ ಏಕದಶಿಯಂದು ಸ್ವಾಮಿಯ ವಿಶೇಶ ಪೂಜೆಯನ್ನು ನಡೆಸುವುದಲ್ಲದೇ, ಆಶ್ವಿಜ ಏಕಾದಶಿಯಿಂದ ಪೂರ್ಣಿಮೆಯವರೆಗೆ ಪವಿತ್ರೋತ್ಸವನ್ನು ಆಚರಿಸಿದರೆ,  ಮಾರ್ಗಶಿರ ಮಾಸದ ಏಕಾದಶಿಯಿಂದ ಬಹುಳ ದ್ವಿತೀಯವರೆಗೆ  ಬ್ರಹ್ಮ ರಥೋತ್ಸವವನ್ನು ಆಚರಿಸಲಾಗುತ್ತದೆ. ಹುಣ್ಣಿಮೆಯಂದು ಬ್ರಹ್ಮ ರಥವನ್ನು ಎಳೆಯಲಾಗುತ್ತದೆ.  ಈ ಮಹಾ ಹಬ್ಬಗಳಲ್ಲದೆ,  ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ, ರಥ ಸಪ್ತಮಿ, ಶ್ರಾವಣಮಾಸದ ಪ್ರತೀ ಶನಿವಾರಗಳು ಮತ್ತು  ಕಾರ್ತಿಕ ಮಾಸದ ಸೋಮವಾರಗಲ್ಲದೇ ಎಲ್ಲಾ ಹಬ್ಬ ಹರಿದಿನಗಳಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು  ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಕಡೆಗೆ ಹೋಗುವ ರಸ್ತೆಯಲ್ಲಿ 6 ಕಿಲೋಮೀಟರ್ ದೂರದ ತಿಪ್ಪನಹಳ್ಳಿ ತಲುಪಿ ಅಲ್ಲಿ ಬಲಕ್ಕೆ ತಿರುಗಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ರಂಗಸ್ಥಳಕ್ಕೆ ತಲುಪಿ ಶೇಷಶಯನ ಶ್ರೀ ಮೋಕ್ಷರಂಗನಾಥನ ದರ್ಶವನವನ್ನು ಪಡೆದು ನಿಮ್ಮ ಅನುಭವವನ್ನು ಹಂಚಿಕೊಳ್ತೀರಿ ತಾನೇ?

ಏನಂತೀರಿ?

ನಿಮ್ಮವನೇ ಉಮಾಸುತ

ಉಲ್ಟೇ ಹನುಮಾನ್ ಮಂದಿರ್

han5

ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಕಾಣಬಹುದಾಗಿದೆ.

temple1

ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ದೇಶದ ಮಧ್ಯಪ್ರದೇಶದ ಇಂದೋರ್ ಜಿಲ್ಲೆಗೆ ಸೇರಿದ ಸ್ಯಾನ್ವೆರ್ ಪಟ್ಟಣದಲ್ಲಿ ತಲೆಕೆಳಕಾಗಿರುವ ಅರ್ಥಾತ್ ಶೀರ್ಷಾಸನದ ಭಂಗಿಯಲ್ಲಿರುವ ವಿಶಿಷ್ಟವಾದ ಉಲ್ಟೇ ಹನುಮಾನ್ ಮಂದಿರ್ ಎಂಬ ದೇವಾಲಯವೊಂದಿದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ?

ulte

ಹೌದು ನಿಜ. ಇಂದೋರ್‌ನಿ ಜಿಲ್ಲಾ ಪ್ರಧಾನ ಕಚೇರಿಯಿಂದ ಉತ್ತರಕ್ಕೆ 30 ಕಿ.ಮೀ ಮತ್ತು ಪುರಾಣ ಪ್ರಸಿದ್ಧ ಉಜ್ಜಯಿನಿಯಿಂದ ಸುಮಾರು 30 ಕಿ.ಮೀ ದೂರದಲ್ಲಿ ಇಂತಹದ್ದೊಂದು ವಿಭಿನ್ನವಾದ ಮತ್ತು ವಿಶಿಷ್ಟವಾದ ದೇವಾಲಯವಿದೆ. ಬಹುಶಃ ಈ ರೀತಿಯಾಗಿ ತಲೆ ಕೆಳಾಗಾಗಿರುವ ವಿಶ್ವದ ಏಕೈಕ ಹನುನಂತನ ಪ್ರತಿಮೆಯಾಗಿದೆ ಎಂದರೂ ತಪ್ಪಾಗಲಾರದೇನೋ? ಸ್ಥಳೀಯ ದಂತಕಥೆಯ ಪ್ರಕಾರ, ಈ ದೇವಾಲಯವು ರಾಮಾಯಣ ಕಾಲದಿಂದಲೂ ಇದೆೆ ಎಂಬ ನಂಬಿಕೆಯಿದೆ. ಈ ದೇವಾಲಯದಲ್ಲಿರುವ ಆಂಜನೇಯನ ವಿಗ್ರಹವನ್ನು ಸದಾಕಾಲವೂ ಸಿಂಧೂರದಿಂದ ಅಲಂಕರಿಸಲಾಗಿರುವುದು ಇನ್ನೂ ಗಮನಾರ್ಹವಾಗಿದೆ.

temple9

ತಲೆಕೆಳಗಾಗಿರುವುದರಿಂದಲೋ ಏನೋ? ಈ ದೇವಾಲಯ ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳನ್ನು ತನ್ನತ್ತ ಗಮನ ಸೆಳೆಯುತ್ತಿದೆ. ಇಲ್ಲಿನ ಸ್ಥಳೀಯರ ಪ್ರಕಾರ ಮೂರು ಅಥವಾ ಐದು ಮಂಗಳವಾರಗಳು ಈ ಉಲ್ಟೇ ಹನುಮಂತನನ್ನು ಅಚಲ ಭಕ್ತಿಯಿಂದ ಪೂಜಿಸಿದರೆ ಅವರ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆಯೂ ಇರುವುದರಿಂದ ಪ್ರತೀ ಮಂಗಳವಾರವೂ ಇಲ್ಲಿ ಒಂದು ರೀತಿಯ ಜನಜಂಗುಳಿ ಸೇರಿ ಜಾತ್ರೆಯೇ ನಡೆಯುತ್ತದೆ. ಪ್ರತೀ ಮಂಗಳವಾರವೂ ಇಲ್ಲಿ ಭಕ್ತಾದಿಗಳು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ತಮ್ಮ ಶಕ್ತ್ಯಾನುಸಾರ ಹನುಮನ್ ಚಾಲಿಸವನ್ನು ಪಠಿಸಿ ತಮ್ಮ ಮನೋಕಾಮನೆಗಳನ್ನು ಪರಿಹರಿಸಿಕೊಳ್ಳುತ್ತಾರೆ.

temple7

ಎಲ್ಲಿ ಹನುಮನೋ ಅಲ್ಲಿ ರಾಮನು. ಎಲ್ಲಿ ರಾಮನೋ ಅಲ್ಲಿ ಹನುಮನೂ. ರಾಮನ ಉಸಿರೇ ಹನುಮಾ.. ಹನುಮನ ಪ್ರಾಣವೇ ರಾಮಾ.. ಎನ್ನುವಂತೆ ಈ ದೇವಾಲಯದಲ್ಲಿ ತಲೆಕೆಳಗಾದ ಹನುಮಂತನಲ್ಲದೇ, ಶ್ರೀರಾಮ, ಸೀತಾ ಮತ್ತು ಲಕ್ಷಣರ ಸುಂದರ ಮೂರ್ತಿಯಿದೆ. ಇದರ ಜೊತೆ ಬಹಳ ಹಳೆಯದಾದ ಎರಡು ಪಾರಿಜಾತದ ಮರಗಳೂ ಇವೆ. ಇಲ್ಲಿನ ಸ್ಥಳೀಯರ ಪ್ರಕಾರ, ರಾಮಾಯಣ ಕಾಲದಲ್ಲಿ, ರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿದ್ದಾಗ, ಶ್ರೀರಾಮನ ಕೈ ಮೇಲಾಗುತ್ತಿದ್ದದ್ದನ್ನು ಗಮನಿದ ರಾವಣನು ತನ್ನ ತಮ್ಮ ಅಹಿರಾವಣನನ್ನು ಕರೆದು ಹೇಗಾದರು ಮಾಡಿ ರಾಮನನ್ನು ಸೋಲಿಸಲೇ ಬೇಕು ಎಂದಾಗ, ಅಣ್ಣನ ಆಜ್ಞಾಪಾಲಕನಾಗಿ ತನ್ನ ಮಾಯಾಜಾಲದಿಂದ ವಿಭೀಷಣನ ವೇಷಧಾರಿಯಾಗಿ ಅಹಿರಾವಣನು ಶ್ರೀರಾಮ ಲಕ್ಷಣರ ತಂಡವನ್ನು ಸೇರಿಕೊಂಡು ಅದೊಂದು ರಾತ್ರಿ ರಾಮ ಲಕ್ಷ್ಮಣರು ನಿದ್ರಿಸುತ್ತಿದ್ದಾಗ ಅವರಿಬ್ಬರನ್ನೂ ತನ್ನ ಮಾಯಾಶಕ್ತಿಯಿಂದ ಪಾತಾಳ ಲೋಕಕ್ಕೆ ಹೊತ್ತೊಯ್ಯುತ್ತಾನೆ.

ravan3

ತಾನು ಪಾತಾಳಲೋಕಕ್ಕೆ ಹೋದಲ್ಲಿ ತನ್ನನ್ನು ಅಲ್ಲಿ ಯಾರೂ ಸೋಲಿಸಲಾರರು ಎಂಬ ನಂಬಿಕೆ ಅಹಿರಾವಣನಿಗೆರುತ್ತದೆ. ಬೆಳಿಗ್ಗೆ ರಾಮ ಲಕ್ಷ್ಮಣರನ್ನು ಕಾಣದೆ ಕಳವಳಗೊಂಡ ಕಪೀ ಸೇನೆ ಮತ್ತೆ ಅವರಿಬ್ಬರನ್ನೂ ಹುಡುಕಿ ಕರೆತರಲು ಆಂಜನೇಯನನ್ನು ಕೇಳಿಕೊಳ್ಳುತ್ತದೆ. ಎಲ್ಲರ ಇಚ್ಚೆಯಂತೆ ರಾಮ ಲಕ್ಷ್ಮಣನನ್ನು ಹುಡುಕುತ್ತಾ, ಹನುಮಂತನು ಪಾತಾಳವನ್ನು ತಲುಪಿ ಅಲ್ಲಿ ಅಹಿರಾವಣನೊಂದಿಗೆ ಘನಘೋರವಾದ ಯುದ್ಧವನ್ನು ಮಾಡಿ ಅವನನ್ನು ಸಂಹರಿಸಿ, ಶ್ರೀ ರಾಮ ಮತ್ತು ಲಕ್ಷ್ಮಣರನ್ನು ಭೂಲೋಕಕ್ಕೆ ಮತ್ತೆ ಹಿಂದಕ್ಕೆ ಕರೆತರುತ್ತಾನೆ.

h10

ಇಲ್ಲಿನ ಜನರ ನಂಬಿಕೆಯ ಪ್ರಕಾರ ಹನುಮಂತನು ಇದೇ ದೇವಾಲಯದ ಮೂಲಕವೇ ಪಾತಾಳವನ್ನು ತಲುಪಿದ ಎನ್ನಲಾಗಿದೆ. ಪಾತಾಳ ಲೋಕಕ್ಕೆ ಹೋಗುವಾಗ, ನೀರಿನಲ್ಲಿ ಹನುಮಂತನ ತಲೆ ಕೆಳಗಾಗಿದ್ದು ಆತನ ಪಾದಗಳು ಆಕಾಶದ ಕಡೆಗೆ ಇದ್ದ ಕಾರಣ ಅದೇ ಭಂಗಿಯಲ್ಲಿಯೇ ಇರುವ ಹನುಮಂತನ ವಿಗ್ರಹವನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.

ನಮ್ಮ ದೇಶದಲ್ಲಿ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಇಂತಹ ಅನೇಕ ವೈಶಿಷ್ಟ್ಯಗಳನ್ನು ಕಾಣಬಹುದಾದರೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ಸುಂದರವಾದ ದೇಶ ನಮ್ಮದಾಗಿದೆ ಎನ್ನುವುದೇ ನಮ್ಮ ಹೆಮ್ಮೆ ಅಲ್ವೇ? ಎಲ್ಲೇ ಇರಲಿ ಹೇಗೇ ಇರಲಿ ಎಂದೆದೂ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮಾತ್ರಾ ಮರೆಯದಿರೋಣ ಅಲ್ವೇ?.

ಏನಂತೀರೀ?
ನಿಮ್ಮವನೇ ಉಮಾಸುತ

ಈ ದೇವಾಲಯದ ಬಗ್ಗೆ ಮಾಹಿತಿ ತಿಳಿಸಿದ ನನ್ನ ತಮ್ಮ ಕುರುವಾಂಕ ಹರೀಶ್ ರಾಮಸ್ವಾಮಿಗೆ ಧನ್ಯವಾದಗಳು

ಅಳಿಲು ಸೇವೆ

ಅದು ಎಂಭತ್ತನೇ ದಶಕದ ಆರಂಭದ ದಿನಗಳು. ನಾನಾಗ ಇನ್ನೂ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದೆ. ಅದೊಂದು ರಾತ್ರಿ ನನ್ನ ತಂಗಿಗೆ ಜ್ವರ ಬಂದಿದ್ದ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯನ್ನು ಸೈಕಲ್ಲಿನ ಮುಂದುಗಡೆಯ ಬಾರ್ ಮೇಲಿನ ಚಿಕ್ಕ ಸೀಟಿನಲ್ಲಿ ಕೂರಿಸಿಕೊಂಡು ಮನೆಗೆ ಹಿಂತಿರುಗುವಾಗ ಇಳಿಜಾರಿನಲ್ಲಿ ಆಕೆ ಅಚಾನಕ್ಕಾಗಿ ಸೈಕಲ್ ಮುಂದಿನ ಚಕ್ರಕ್ಕೆ ತನ್ನ ಕಾಲು ಕೊಟ್ಟ ಪರಿಣಾಮ ಆಕೆಯ ಕಾಲಿನ ಹಿಮ್ಮಡಿ ಕಿತ್ತು ಬಂದು ಎಂಟು ಹತ್ತು ಹೊಲಿಗೆ ಹಾಕಿದ್ದಲ್ಲದೇ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸೈಕಲ್ಲಿನಿಂದ ಕೆಳಗೆ ಬೀಳುವಾಗ ಕೈಊರಿದ ಪರಿಣಾಮವಾಗಿ ನಮ್ಮ ತಂದೆಯವರಿಗೆ ಬಲಗೈ ಮುರಿದಿದ್ದಲ್ಲದೇ, ತಲೆಗೂ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿ ಕನಿಷ್ಟ ಪಕ್ಷ ಏನಿಲ್ಲವೆಂದರೂ ಆರೆಂಟು ವಾರಗಳು ಕಾರ್ಖಾನೆಗೆ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಸುಧಾಸಿಕೊಳ್ಳುವಂತಹ ಸಂಧಿಗ್ಧ ಪರಿಸ್ಥಿತಿ ಬಂದಿತ್ತು .

ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ಅದೇ ಸಮಯದಲ್ಲಿಯೇ ಅಂದಿನ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ಮೂಲತಃ ಕೇರಳಿಗನಾದರೂ ಇಂದಿರಾ ಕೃಪಾಪೋಷಣೆಯಲ್ಲಿ ಕರ್ನಾಟಕದ ಗುಲ್ಬರ್ಗಾದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಕಾರ್ಮಿಕ ವಿರೋಧಿ. ಕಾರ್ಮಿಕ ಮಂತ್ರಿಯಾಗಿದ್ದ, ಸ್ಟೀಫನ್ ಅವರ ಉದ್ಧಟತನದಿಂದಾಗಿ ದೇಶಾದ್ಯಂತ ಇದ್ದ ಎಲ್ಲಾ ಸಾರ್ವಜನಿಕ ವಲಯಗಳ ಕಾರ್ಖಾನೆಗಳು ಸುಮಾರು ಮೂರು ತಿಂಗಳ ಕಾಲ ಲಾಕ್ ಔಟ್ ಆಗುವಂತಹ ಪರಿಸ್ಥಿತಿ ಬಂದೊದಗಿತ್ತು.

ಕಾರ್ಖಾನೆ ಮುಚ್ಚಿದೆ. ಸಂಬಳವಿಲ್ಲ. ಆಯ್ಕೊಂಡು ತಿಂತಿದ್ದ ಕೋಳಿ ಕಾಲು ಮುರ್ಕೊಂಡ್ ಕೂತಿದೆ ಅನ್ನೋ ಹಾಗೆ ದುಡಿದು ಸಂಪಾದನೆ ಮಾಡಿ ತಂದು ಹಾಕುತ್ತಿದ ಮನೆಯ ಯಜಮಾನ ಹಾಸಿಗೆ ಹಿಡಿದಿದ್ದಾರೆ. ಅವರನ್ನು ನೋಡಿ ಕೊಂಡು ಹೋಗಲು ದಿನವೂ ಬಂಧು ಮಿತ್ರರು ಬರುತ್ತಿದ್ದ ಕಾರಣ ಮನೆಯನ್ನು ನಿಭಾಯಿಸುವುದು ಕಷ್ಟವೇ ಆಗಿತ್ತು. ತಿಂಗಳಾಂತ್ಯದಲ್ಲಿ ಮನೆಯ ಬಾಡಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ನಮ್ಮ ವಠಾರದ ಮನೆಯ ಮಾಲಿಕರಾಗಿದ್ದ ಶ್ರೀ ಆಂಜನಮೂರ್ತಿಯವರ ಬಳಿ ನಾನು ಮತ್ತು ನಮ್ಮ ತಾಯಿ ಇಬ್ಬರೂ ಹೋದೆವು

ನಮ್ಮ ಮನೆಯ ಮಾಲೀಕರೋ ಅಜಾನು ಬಾಹು. ಕಪ್ಪಗೆ ಎತ್ತರದ ಮನುಷ್ಯ ಕಣ್ಣುಗಳು ಸದಾ ಕೆಂಪು. ಹೇಳ ಬೇಕೆಂದರೆ ಕನ್ನಡ ಚಲನಚಿತ್ರದ ಖಳ ನಟ ವಜ್ರಮನಿಯವರ ತದ್ರೂಪು. ವಜ್ರಮುನಿ ಬೆಳ್ಳಗಿದ್ದರೆ ನಮ್ಮ ಮಾಲಿಕರದ್ದು ಎಣ್ಣೆ ಗೆಂಪು ಬಣ್ಣ. ಮೊತ್ತ ಮೊದಲಬಾರಿಗೆ ಯಾರೇ ಅವರನ್ನು ನೋಡಿದರೂ ಭಯಪಡಲೇ ಬೇಕಾದಂತಹ ಶರೀರ. ಆದರೆ ಮನಸ್ಸು ಮಾತ್ರ ಐಸ್ ಕ್ರೀಂ ನಂತಹ ಮೃದು. ವರ ವಠಾರದ ಹದಿನೆಂಟು ಮನೆಗಳಲ್ಲಿ ಬಹುತೇಕರು ಒಂದೇ ಕಾರ್ಖಾನೆಯ ಕಾರ್ಮಿಕರಾಗಿದ್ದ ಕಾರಣ ಕಾರ್ಖಾನೆ ಲಾಕ್ ಔಟ್ ಆಗಿದ್ದದ್ದು ಗೊತ್ತಿತ್ತು ಮತ್ತು ನಮ್ಮ ತಂದೆಯವರಿಗೆ ಅಪಘಾತ ಆದ ಸುದ್ದಿಯೂ ಅವರಿಗೆ ತಿಳಿದು ನಮ್ಮ ಮನೆಯ ಪರಿಸ್ಥಿತಿಯ ಅರಿವಿತ್ತು. ನಾವು ಬಾಡಿಗೆ ಕೊಡಲು ಹೋಗಿದ್ದನ್ನು ನೋಡಿ, ಒಂದು ಕ್ಷಣ ಕೋಪಗೊಂಡು ನಾನೇನು ಮನುಷ್ಯನೋ ಅಥವಾ ಮೃಗನೋ? ನನಗೂ ಸಂಸಾರವಿದೆ. ನನಗೂ ಮಕ್ಕಳು ಆಳು ಕಾಳು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮಿಂದ ಬಾಡಿಗೆ ತೆಗೆದುಕೊಂಡು ಜೀವಿಸುವ ಅಗತ್ಯ ನನಗೆ ಬಂದಿಲ್ಲ. ಎಂದು ಸ್ವಲ್ಪ ಎತ್ತರದ ಧನಿಯಲ್ಲಿ ಹೇಳಿ, ಅವರ ಮನೆಯವರನ್ನು ಕರೆದು, ನೋಡು ನಮ್ಮ ವಠಾರದಲ್ಲಿ ವಾಸಿಸುವವರ ಎಲ್ಲರ ಮನೆಗಳ ಪರಿಸ್ಥಿತಿ ಸರಿಯಾಗುವವರೆಗೂ ಯಾರ ಹತ್ತಿರವೂ ಬಾಡಿಗೆ ಮತ್ತು ಹಾಲಿನ ದುಡ್ಡನ್ನು ತೆಗೆದುಕೊಳ್ಳುವುದು ಬೇಡ. ಪರಿಸ್ಥಿತಿ ತಿಳಿಯಾದ ಮೇಲೆ ಕಂತಿನಲ್ಲಿ ಅವರಿಗೆ ಹೊರೆಯಾಗದಂತೆ ಪಡೆದುಕೊಳ್ಳೋಣ. ಹಾಗೆಯೇ ಅವರೆಲ್ಲರಿಗೂ ಅಗತ್ಯವಾದಷ್ಟು ರಾಗಿ ಮತ್ತು ಅಕ್ಕಿಯನ್ನು ಉಚಿತವಾಗಿ ಕೊಡು. ಕಷ್ಟ ಮನುಷ್ಯರಿಗೆ ಬಾರದೇ ಮರಗಳಿಗೆ ಬರುತ್ತದೆಯೇ? ನಮ್ಮ ಮನೆಯಲ್ಲಿ ಇರುವವರೆಲ್ಲಾ ನಮ್ಮ ಬಂಧುಗಳೇ ಎಂದಾಗ ನಮಗರಿವಿಲ್ಲದಂತೆಯೇ ನಮ್ಮ ಅಮ್ಮ ಮತ್ತು ನನ್ನ ಕಣ್ಣುಗಳಲ್ಲಿ ಧನ್ಯತಾ ಪೂರ್ವಕವಾಗಿ ನೀರು ಜಿನಿಗಿತ್ತು. ಅದೇ ರೀತಿ ನಮ್ಮ ತಂದೆಯ ಕಾರ್ಖಾನೆಯಲ್ಲಿಯೇ ಕೆಲಸ ಮಾಡುತ್ತಾ ಮನೆಯಲ್ಲಿಯೇ ದಿನಸಿ ವ್ಯಾಪಾರ ಮಾಡುತ್ತಿದ್ದ ಮುನಿಯಪ್ಪ ಮತ್ತು ಅವರ ಮಡದಿಯವರೂ ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ನಮ್ಮಿಂದ ಒಂದು ನಯಾ ಪೈಸೆಯೂ ತೆಗೆದುಕೊಳ್ಳದೇ ಮನೆಗೆ ಅಗತ್ಯವಿದ್ದ ಎಲ್ಲಾ ದಿನಸಿಗಳನ್ನು ಉದ್ರಿಯಲ್ಲಿ ಕೊಟ್ಟಿದ್ದರು.

ಕೆಲ ತಿಂಗಳುಗಳ ನಂತರ ನಮ್ಮ ತಂದೆ ಮತ್ತು ತಂಗಿಯ ಆರೋಗ್ಯ ಸುಧಾರಿತ್ತು. ಕಾರ್ಮಿಕರು ಮತ್ತು ಸರ್ಕಾರ ನಡುವೆ ಒಪ್ಪಂದವಾಗಿ ಕಾರ್ಖಾನೆ ಆರಂಭವಾಯಿತು. ಮುಂದಿನ ಐದಾರು ತಿಂಗಳುಗಳ ಕಾಲ ಕಂತಿನಲ್ಲಿ ನಮ್ಮ ಮನೆಯ ಮಾಲಿಕರ ಮತ್ತು ಅಂಗಡಿ ಮುನಿಯಪ್ಪನವರ ಉದ್ರಿಯನ್ನು ತೀರಿಸಿದೆವಾದರೂ ಸುಮಾರು ನಲವತ್ತು ವರ್ಷಗಳಾದರೂ ಇಂದಿಗೂ ಅವರು ಮಾಡಿದ ಆ ಸಹಾಯವನ್ನು ನಾವು ಮರೆತಿಲ್ಲ. ನಮ್ಮ ಜೀವಮಾನ ಇರುವವರೆಗೂ ಮರೆಯುವುದಿಲ್ಲ ಮತ್ತು ಮರೆಯಲೂ ಬಾರದು.

ಸದ್ಯದ ಪರಿಸ್ಥಿತಿಯೂ ಮೇಲೆ ತಿಳಿಸಿದ ಪ್ರಸಂಗಕ್ಕಿಂತ ಭಿನ್ನವಾಗಿಲ್ಲ. ಮಹಾಮಾರಿ ಕೊರೋನ ಸೋಂಕಿನಿಂದಾಗಿ ದೇಶಾದ್ಯಂತ ನಿರ್ಭಂಧ ಹೇರಿರುವ ಸಮಯದಲ್ಲಿ, ಕಾರ್ಖಾನೆಗಳೆಲ್ಲವೂ ಬಂದ್ ಆಗಿದೆ. ಈಗೇನೋ ದೇಶಾದ್ಯಂತ ಮೂರು ವಾರ ಲಾಕ್ ಡೌನ್ ಅಂತಾ ಹೇಳಿದ್ದಾರೆ. ಆದರೆ ನಮ್ಮ ಜನರು ಅದಕ್ಕೆ ವ್ಯತಿರಿಕ್ತವಾಗಿ ಪ್ರತಿಸ್ಪಂದಿಸುತ್ತಿರುವುದನ್ನೋ ನೋಡಿದರೆ ಈ ಲಾಕ್ ಡೌನ್ ಇನ್ನೂ ಕೆಲವು ವಾರಗಳು ಮುಂದುವರಿಯಬಹುದಾದ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ನಮ್ಮ ಜೊತೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು, ನಮ್ಮ ಮನೆಯ ಕೆಲಸದವರು, ಪೇಪರ್ ಹಾಕುವ ಹುಡುಗರು, ಮನೆಯ ಅಕ್ಕ ಪಕ್ಕದಲ್ಲಿ ಕಟ್ಟಡ ಕೆಲಸ ಮಾಡುತ್ತಿರುವ ಕಾರ್ಮಿಕರು, ಸಣ್ಣ ಪುಟ್ಟ ದಿನಗೂಲಿ ಕಾರ್ಮಿಕರರಿಗೆ ನಿತ್ಯದ ಊಟ ತಿಂಡಿಗಳಿಗೂ ತೊಂದರೆಯಾಗ ಬಹುದಾಗಿದೆ. ಹಾಗಾಗಿ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಮಯದಲ್ಲಿ ಈ ಕೆಳಕಂಡಂತೆ ನಮ್ಮ ಕೈಲಾದ ಮಟ್ಟಿಗೆ ಅಳಿಲು ಸಹಾಯ ಮಾಡಬಹುದಲ್ಲವೆ ?

 • ನಮ್ಮ ಮನೆಯ ಕೆಲಸದಾಗಿ ಕೆಲಸಕ್ಕೆ ಬಂದಿಲ್ಲಾ ಅಂತಾ ಸಂಬಳ ಹಿಡಿದು ಕೊಳ್ಳದೇ ಆಕೆಗೆ ಪೂರ್ಣ ಸಂಬಳ ಕೊಡುವುದು
 • ಆಕೆಯ ಮನೆಗೆ ಹೋಗಿ ಊಟ ತಿಂಡಿಯ ಹೊರತಾಗಿ ಅವರ ದೈನಂದಿನ ಅಗತ್ಯಗಳಿಗೆ ಬೇಕಾದ ಧನ ಧಾನ್ಯ ಸಹಾಯ ಮಾಡುವುದು
 • ಸೋಂಕು ತಡೆಗಟ್ಟುವ ಪರಿಣಾಮವಾಗಿ ಮನೆಗೆ ಪ್ರತಿದಿನ ವೃತ್ತ ಪತ್ರಿಕೆ ಬಾರದಿದ್ದರೂ ಪೂರ್ಣ ಪಾವತಿ ಮಾಡುವುದು
 • ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕೂಲೀ ಕಾರ್ಮಿಕರಿಗೆ ಸ್ವತಃ ಸಹಾಯ ಹಸ್ತ ಚಾಚುವುದು ಇಲ್ಲವೇ ಸಹಾಯ ಮಾಡುತ್ತಿರುವ ಹಲವಾರು ಸಂಘಸಂಸ್ಥೆಗಳಿಂದ ಅವರಿಗೆ ನೆರವು ಸಿಗುವಂತೆ ಮಾಡುವುದು.
 • ಸದ್ಯದ ಪರಿಸ್ಥಿತಿಯನ್ನು ಅವರಿಗೆ ಸೂಕ್ಷ್ಮವಾಗಿ ವಿವರಿಸಿ ದಿನನಿತ್ಯದ ವಸ್ತುಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಬಳಸುತ್ತಾ, ವೃಥಾ ವ್ಯರ್ಥ ಮಾಡದಂತೆ ತಿಳಿಸುವುದು
 • ನಮ್ಮ ಮನೆಯಲ್ಲಿ ಬಾಡಿಗೆದಾರರಿದ್ದರೆ, ಈ ಲಾಕಡೌನ್ ಪರಿಣಾಮದಿಂದ ಆರ್ಥಿಕ ತೊಂದರೆ ಇದ್ದಲ್ಲಿ ಮನೆಯ ಬಾಡಿಗೆಯನ್ನು ಪಡೆಯದೆ ಪರಿಸ್ಥಿತಿ ತಿಳಿಯಾದ ಮೇಲೆ ಕಂತಿನ ರೂಪದಲ್ಲಿ ಪಡೆಯುವುದು
 • ನಮ್ಮ ಸಹೋದ್ಯೋಗಿಗಳ ಸಂಕಷ್ಟದಲ್ಲಿ ಭಾಗಿಯಾಗುವುದು.
 • ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಈ ಸೋಂಕಿನ ಕುರಿತಂತೆ ಸರಿಯಾದ ಮಾಹಿತಿಗಳನ್ನು ಅವರಿಗೆ ತಿಳಿಸಿ ಅನಗತ್ಯ ವಂದಂತಿಗಳಿಗೆ ಕಿವಿಗೊಡದಂತೆ ಮತ್ತು ಅವುಗಳಿಗೆ ಹೆದರಿ ಅಂತಹ ವದಂತಿಗಳನ್ನು ಮತ್ತೊಬ್ಬರಿಗೆ ಹರಡದಂತೆ ತಿಳಿಸುವುದು
 • ಸೋಂಕು ಹರಡದಂತೆ ಶುಚಿತ್ವ ಕಾಪಾಡಲು ತಿಳಿಸಿವುದು ಮತ್ತು ಅಪರಿಚಿತರೊಂದಿಗೆ ಬೆರೆಯದೆ ನಿರ್ಧಿಷ್ಟ ಅಂತರವನ್ನು ಕಾಪಾಡುವಂತೆ ತಿಳಿಸುವುದು
 • ಸಾಧ್ಯವಾದಷ್ಟೂ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ವಹಿಸಿವಂತೆ ತಿಳಿಸುವುದು
 • ನಮ್ಮ ಸ್ವಾಸ್ಥ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ಪೋಲೀಸ್ ಸಿಬ್ಬಂಧಿಗಳು ಮತ್ತು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರನ್ನು. ವೃಥಾ ನಿಂದಿಸದೇ ಅವರ ಸೇವಾಕಾರ್ಯಗಳನ್ನು ಗೌರವಿಸಿ ಅಭಿನಂಧಿಸುವುದು.
 • ಈ ಸಮಯದಲ್ಲಿ ಸರ್ಕಾರ ವಿಧಿಸುವ ಎಲ್ಲಾ ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ತಿಳಿಹೇಳುವುದು
 • ಈ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಮುಂದಿರುವ ಆಯ್ಕೆಗಳು ಕೇವಲ ಮೂರು
  1. ಸುಮ್ಮನೆ ಕುಟುಂಬದೊಡನೆ ಮನೆಯೊಳಗಯೇ ಇರುವುದು
  2. ಸೋಂಕು ತಗುಲಿಸಿಕೊಂಡು ಆಸ್ಪತ್ರೆಯಲ್ಲಿ ನರಳುವುದು
  3. ಖಾಯಿಲೆ ವಿಷಮ ಸ್ಥಿತಿಗೆ ತಲುಪಿ, ನಮ್ಮ ಫೋಟೋ ನಮ್ಮ ಮನೆಯ ಗೋಡೆಯ ಫೋಟೋ ಫ್ರೇಮ್‌ನಲ್ಲಿ ಹಾಕುವಂತಾಗುವುದು ಎಂಬ ಕಠೋರ ಸತ್ಯವನ್ನು ಮನದಟ್ಟು ಮಾಡುವುದು

ಈ ಮೇಲೆ ತಿಳಿಸಿದ್ದೆಲ್ಲವೂ ಸಣ್ಣ ಸಣ್ಣ ವಿಷಯಗಳಾದರೂ, ಅವುಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ನಾವೇ ಭಾರೀ ಮೊತ್ತದ ಹಾನಿಗೊಳಗಾಗ ಬೇಕಾಗುತ್ತದೆ ಎನ್ನುವುದಂತೂ ಸೂರ್ಯ ಮತ್ತು ಚಂದ್ರರಷ್ಟೇ ಸತ್ಯ. ಕೇವಲ ನಾವು ಮತ್ತು ನಮ್ಮದು ಎಂದು ಸ್ವಾರ್ಥಿಗಳಾಗದೇ ಬಹುಜನ ಹಿತಾಯಾ. ಬಹುಜನ ಸುಖಾಯ ಎನ್ನುವ ತತ್ವದಂತೆ ಸರ್ವೇಜನಾಃ ಸುಖಿನೋ ಭವಂತು ಎನ್ನುವಂತೆ ನಮ್ಮ ಕೈಲಾದ ಮಟ್ಟಿಗೆ ಮತ್ತೊಬ್ಬರ ಬಾಳಿನಲ್ಲಿ ಸಂತೋಷವನ್ನು ತರುವಂತಹ ಅಳಿಲು ಸೇವೆಯನ್ನು ಮಾಡಬಹುದಲ್ಲವೇ?

ಈ ಲೇಖನದಲ್ಲಿ ಹಲವಾರು ಬಾರಿ ಅಳಿಲು ಸೇವೆ ಎಂಬ ಪದವನ್ನು ಬಳೆಸಿದ್ದೇನೆ. ಹಾಗಾದಲ್ಲಿ ಅಳಿಲು ಸೇವೆ ಎಂದರೆ ಏನು? ರಾಮಾಯಣ ಕಾಲದಲ್ಲಿ ಆದ ಆ ಪ್ರಸಂಗ ಏನು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇನೆ.

alilu2

ನಮಗೆಲ್ಲಾ ತಿಳಿಸಿರುವಂತೆ ರಾವಣ, ಸೀತಾಮಾತೆಯನ್ನು ಕದ್ದೊಯ್ದು ಲಂಕೆಯ ಅಶೋಕವನದಲ್ಲಿ ಕೂಡಿಟ್ಟಿದ್ದನು ಹನುಮಂತ ಕಣ್ಣಾರೆ ನೋಡಿ ಅರ್ಧ ಲಂಕೆಯನ್ನು ದಹನ ಮಾಡಿ ಶ್ರೀರಾಮಚಂದ್ರನಿಗೆ ಬಂದು ತಿಳಿಸುತ್ತಾನೆ. ಸೀತಾ ಮಾತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಕಪಿ ಸೇನೆಯೊಂದಿಗೆ ರಾಮೇಶ್ವರದ ಬಳಿಯ ಧನುಷ್ಕೋಟಿಯ ಬಳಿ ಬಂದು ವಾನರ ವಾಸ್ತುತಜ್ಞರಾದ ನಳ ಮತ್ತು ನೀಲ ಅವರ ನೇತೃತ್ವದಲ್ಲಿ ಶ್ರೀರಾಮ ಲಕ್ಷ್ಮಣರ ಸಾರಥ್ಯದಲ್ಲಿ ಲಂಕೆಗೆ ಸೇತುವೆಯನ್ನು ಕಟ್ಟಲು ಆರಂಭಿಸುತ್ತಾರೆ. ಕಪಿಸೇನೆಯಾದಿ ಅಲ್ಲಿದ್ದವರೆಲ್ಲಾ ತಮ್ಮ ಕೈಯಲ್ಲಿ ಆದ ಮಟ್ಟಿಗೆ ಆ ಮಹತ್ಕಾರ್ಯದಲ್ಲಿ ಪಾಲ್ಗೊಂಡಿದ್ದನ್ನು ಕಂಡ ಅಳಿಲು, ಶ್ರೀರಾಮನ ಬಳಿ ಬಂದು ನಾನೂ ಕೂಡಾ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಚಿಸುತ್ತೇನೆ. ದಯವಿಟ್ಟು ಯಾವುದಾರದೂ ಕೆಲಸ ನೀಡಿ ಎಂದು ಕೇಳಿ ಕೊಳ್ಳುತ್ತದೆ. ಅಳಿಲಿನ ಈ ಆಳಲನ್ನು ಕೇಳಿ ಸಂತೋಷಗೊಂಡ ಶ್ರೀರಾಮನು, ಇಲ್ಲಿ ಯಾರಿಗೂ ಯಾವುದೇ ನಿಬಂಧನೆಗಳಿಲ್ಲ, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮತ್ತು ಇಮ್ಮಿಚ್ಚೆಯಂತೆ ಯಾವುದಾದರೂ ಕೆಲಸ ಮಾಡಬಹುದು ಎಂದಾಗ ಸಂತೋಷಗೊಂಡ ಅಳಿಲು ಒಂದು ಕ್ಷಣ ತನ್ನಿಂದೇನಾಗಬಹುದು ಎಂದು ಯೋಚಿ‍ಸಿ, ಕೂಡಲೇ ಸಮುದ್ರಲ್ಲಿ ಧುಮಿಕಿ ಮೈ ಪೂರ್ತಿ ಒದ್ದೆ ಮಾಡಿಕೊಂಡು ಸಮುದ್ರದ ದಂಡೆಯ ಮರಳಿನ ಮೇಲೆ ಉರುಳಾಡುತ್ತದೆ. ಹಾಗೆ ಉರುಳಾಡಿದಾಗ ಒದ್ದೆಯಾದ ಅಳಿಲಿನ ಮೈ ಮತ್ತು ಬಾಲಕ್ಕೆ ಮರಳು ಮೆತ್ತಿಕೊಳ್ಳುತ್ತದೆ. ಕೂಡಲೇ ಆ ಅಳಿಲು ಗಾರೆ ಕಲೆಸುತ್ತಿದ್ದ ಜಾಗಕ್ಕೆ ಹೋಗಿ ತನ್ನ ಮೈ ಕೊಡವಿ, ತನ್ನ ದೇಹ ಮತ್ತು ಬಾಲಕ್ಕೆ ಅಂಟಿಕೊಂಡಿದ್ದ ಮರಳನ್ನು ಅಲ್ಲಿಗೆ ಹಾಕಿ, ಆಹಾ ಈ ಮಹತ್ಕಾರ್ಯದಲ್ಲಿ ನನ್ನದೂ ಒಂದು ಪಾಲಿದೆಯಲ್ಲಾ ಎಂದು ಸಂತೋಷ ಪಡುತ್ತದೆ ಮತ್ತು ಇದೇ ಕಾರ್ಯವನ್ನು ರಾಮ ಸೇತುವೆ ಮುಗಿಯುವ ವರೆಗೂ ಪುನರಾವರ್ತನೆ ಮಾಡುತ್ತಲೇ ಇರುತ್ತದೆ. ಅಂದಿನಿಂದಲೂ ಇದು ಅಳಿಲು ಸೇವೆ ಎಂದೇ ಪ್ರಸಿದ್ಧಿಯಾಗಿದೆ ಮತ್ತು ಜನಮಾನಸದಲ್ಲಿ ಅಚ್ಚಳಿಯದೆ ಹಚ್ಚಹಸಿರಾಗಿಯೇ ಉಳಿದಿದೆ.

ಸಹಾಯ ಮಾಡಲು ಎಲ್ಲರೂ ಉಳ್ಳವರೇ ಆಗಬೇಕೆಂದಿಲ್ಲ. ಅದು ದೊಡ್ದದಾಗಿರಲೀ ಅಥವಾ ಚಿಕ್ಕದೇ ಆಗಿರಲಿ, ಎಲ್ಲದ್ದಕ್ಕೂ ಧನವನ್ನೇ ವ್ಯಯ ಮಾಡಬೇಕೆಂದಿಲ್ಲ. ಸಹಾಯ ಮಾಡುವ ಮನಸ್ಸಿರಬೇಕು ಮತ್ತು ಒಮ್ಮೆ ಒಪ್ಪಿಕೊಂಡ ಕೆಲಸವನ್ನು ಶ್ರಧ್ಧೆಯಿಂದ ಮಾಡುವ ಧೃಢ ಸಂಕಲ್ಪವಿರಬೇಕು ಮತ್ತು ಪ್ರತಿಫಲಾಪೇಕ್ಷೆಯಿಲ್ಲದೇ ನಿಸ್ವಾರ್ಥವಾಗಿರಬೇಕು. ಬಲಗೈಯಲ್ಲಿ ಕೊಟ್ಟದ್ದು ಎಡಗೈಯ್ಯಿಗೂ ಗೊತ್ತಾಗಬಾರದಂತೆ. ಅದೇ ರೀತಿ ದುಡಿಮೆಯನ್ನು ತಲೆ ಎತ್ತಿ ಮಾಡು ಸಹಾಯವನ್ನು ತಲೆ ತಗ್ಗಿಸಿ ಮಾಡು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಾಗಾಗಿ ನಾವು ಕೂಡಾ ನಮ್ಮ ಬಾಡಿಗೆಯ ಮನೆಯ ಮಾಲಿಕರಾಗಿದ್ದಂತಹ ಆಂಜನಮೂರ್ತಿಯವರಂತೆ ನಮ್ಮ ದಿನಸೀ ಅಂಗಡಿಯ ಮುನಿಯಪ್ಪನವರಂತೆ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಿದ್ದವರಿಗೆ ನಮ್ಮ ಕೈಲಾದ ಮಟ್ಟಿಗೆ ಅಳಿಲು ಸೇವೆಯನ್ನು ಮಾಡಬಹುದಲ್ಲವೇ?

ಏನಂತೀರೀ??

ನಂಬಿಕೆ

ಇಂದಿನ ನಮ್ಮ ಬಹುತೇಕ ಯುವ ಜನಾಂಗವನ್ನು ಕರೆದು, ಈ ಕಾರ್ಯವನ್ನು ನಿಮ್ಮಿಂದ ಸಾಧಿಸಲು ಸಾಧ್ಯವೇ ? ಎಂದು ಒಂದು ಸಾಮಾನ್ಯ ಕೆಲಸವನ್ನು ತೋರಿಸಿದರೂ, ಅವರಿಂದ ಮೊದಲು ಬರುವ ಉತ್ತರವೇ ಇಲ್ಲಾ. ಇದು ಸಾಧ್ಯವಿಲ್ಲ. ಅದು ಏಕೆ ಸಾಧ್ಯವಿಲ್ಲಾ ಎಂದು ನಾವು ಕೇಳುವುದಕ್ಕೆ ಮುಂಚೆಯೇ, ಅದಕ್ಕೆ ನಾನಾ ರೀತಿಯ ಕಾರಣಗಳನ್ನು ನೀಡಲು ಆರಂಭಿಸುತ್ತಾರೆ. ಅರೇ ಅದೇಕೆ ಸಾಧ್ಯವಿಲ್ಲಾ? ನೀವು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸ ಕಾರ್ಯಸಾಧುವಾಗುತ್ತದೆ ಎಂದು ತಿಳಿಸಿದಾಗ ಹಾಂ!! ಹೌದು. ನಿಜ. ನೀವು ಹೇಳಿದ ಹಾಗೆ ಮಾಡಿದಲ್ಲಿ ಅದು ಕಾರ್ಯ ಸಾಧುವಾಗಬಹುದು ಆದರೇ… ಎಂದು ಮತ್ತೊಮ್ಮೆ ರೇ… ಪ್ರಪಂಚಕ್ಕೆ ಮುಳುಗುತ್ತಾರೆ.

ಈ ರೀತಿಯ ಪರಿಸ್ಥಿತಿಗೆ ಕಾರಣವೇನು ಎಂದು ಯೋಚಿಸಿದಲ್ಲಿ, ಕಾರಣ ಬಲು ಸರಳ. ಅದೇನೆಂದರೆ ಅವರೆಲ್ಲರಿಗೂ ಅವರವರ ಶಕ್ತಿ , ಸಾಮಥ್ಯದ ಮೇಲಿನ ನಂಬಿಕೆಯೇ ವಿರಳ. ಈ ಸಮಸ್ಯೆ ಇಂದಿನದ್ದಲ್ಲಾ. ಅದು ತ್ರೇತಾಯುಗದಲ್ಲಿ ವಾಲಿಯನ್ನು ಮಣಿಸಲು ಸುಗ್ರೀವನಿಗೆ ಮತ್ತು ಸಮುದ್ರೋಲಂಘನ ಮಾಡುವ ಸಮಯದಲ್ಲಿ ಹನುಮಂತನಿಗೂ ಅವರದ್ದೇ ಶಕ್ತಿ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲದ ಕಾರಣ ಮುಂದುವರೆಯಲು ಸಾಧ್ಯವಾಗಿರಲಿಲ್ಲ. ಸುಗ್ರೀವನಿಗೆ ರಾಮ, ಹನುಮಂತನಿಗೆ ಜಾಂಬವಂತನು ಬಂದು ಅವರ ಶಕ್ತಿ ಸಾಮಾರ್ಥ್ಯವ ಬಗ್ಗೆ ಅರಿವು ಮೂಡಿಸಿದಾಗಲೇ ವಿಜಯವನ್ನು ಕಾಣುವಂತಾಯಿತು.

nam1

ಯಾವುದೇ ಕೆಲವನ್ನು ಮಾಡಬೇಕಿದ್ದಲ್ಲಿ ಅದು ಒಬ್ಬನಿಂದಾಗಲೀ ಅಥವಾ ಮತ್ತೊಬ್ಬರ ಸಹಾಯದಿಂದಾಗಲೀ ಅಥವಾ ಗುಂಪಿನೊಂದಿಗೆ ಮಾಡಬೇಕಿದ್ದಲ್ಲಿ ಮೊದಲು ನಮಗೆ ನಮ್ಮ ಮೇಲೆ, ನಮ್ಮ ಸಹಾಯಕನ ಮೇಲೆ ಮತ್ತು ನಮ್ಮ ಗುಂಪಿನ ಮೇಲೆ ನಂಬಿಕೆ ಮತ್ತು ವಿಶ್ವಾಸವಿದ್ದಲ್ಲಿ ಮಾತ್ರವೇ ಕೆಲಸ ಸುಲಭ ಸಾಧ್ಯವಾಗುತ್ತದೆ. ಉದಾ. ಸಾಮಾನ್ಯವಾಗಿ ಎಲ್ಲರೂ ಪುಟ್ಟ ಮಕ್ಕಳನ್ನು ಆಟ ಆಡಿಸುವಾಗ, ಆ ಮಗುವನ್ನು ಮೇಲೆಕ್ಕೆ ಚಿಮ್ಮಿಸಿ ನಂತರ ಅದು ಕೆಳಗೆ ಬೀಳುವಷ್ಟರಲ್ಲಿ ಹಿಡಿಯುತ್ತೇವೆ. ಹಾಗೆ ಮಾಡುವ ಪ್ರಕ್ರಿಯೆಯಲ್ಲಿ ನಮಗೆ ಆ ಮಗುವನ್ನು ಹಿಡಿಯುವ ಭರವಸೆ ಮತ್ತು ನಂಬಿಕೆ ಇರುವ ಕಾರಣದಿಂದಾಗಿಯೇ ನಮಗೆ ಎಷ್ಟು ಸಾಧ್ಯವೋ ಅಷ್ಟೇ ಎತ್ತರಕ್ಕೆ ಚಿಮ್ಮಿಸುತ್ತೇವೆ. ಅಂತಯೇ, ಆ ಪುಟ್ಟಮಗುವಿಗೂ ಅದು ಕೆಳಗೆ ಬೀಳುವ ಮುನ್ನವೇ ನಾವು ಹಿಡಿದೇ ಹಿಡಿಯುತ್ತೇವೆ ಎಂಬ ನಂಬಿಕೆ ಇರುವ ಕಾರಣದಿಂದಾಗಿಯೇ ನಾವು ಆ ಮಗುವನ್ನು ಎಷ್ಟು ಮೇಲೆ ಎಸೆದಾಗಲೂ ಅದು ನಗುತ್ತಲೇ ಇರುತ್ತದೆ.

ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸಂಬಂಧಗಳ ಮಧ್ಯೆಯೂ ನಂಬಿಗೆ ಇರಲೇ ಬೇಕು. ಅಪ್ಪಾ ಮಕ್ಕಳ ನಡುವೆ, ಗುರು ಶಿಷ್ಯರ ನಡುವೆ, ಕೆಲದಲ್ಲಿ ಸಹೋದ್ಯೋಗಿಗಳೊಂದಿಗೆ, ವಿಶೇಷವಾಗಿ ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ಸಂಬಿಕೆ ಇದ್ದಾಗಲೇ ಸಂಸಾರ ಸ್ವರ್ಗವಾಗುತ್ತದೆ ಒಮ್ಮೆ ಒಬ್ಬರನ್ನೊಬ್ಬರ ನಡುವೆ ನಂಬಿಕೆ ಕಳೆದು ಹೋದಾಗಾ ಅದೇ ಸಂಸಾರ ನರಕಮಯವಾಗಿ ಹೋಗುತ್ತದೆ. ಜಗತ್ತಿನಲ್ಲಿ ಎಲ್ಲಾ ನಂಬಿಕೆಗಳಿಗಿಂತ ತಾಯಿಯ ಮೇಲೆ ಮಕ್ಕಳಿಗಿರುವ ನಂಬಿಕೆಯೇ ಅತ್ಯಂತ ಪವಿತ್ರವಾದದ್ದು ಮತ್ತು ಮಹತ್ವವಾದದ್ದು. ತಾಯಿಯೇ ಮೊದಲ ಗುರು ಆಕೆ ಹೇಳಿದ್ದೇ ಮಕ್ಕಳಿಗೆ ವೇದ ವಾಕ್ಯ ಮತ್ತು ಆಕೆ ಹೇಳಿದವರೇ ಅವರ ಅಪ್ಪ. ಇದನ್ನೇ ಧೃಢೀಕರಿಸುವಂತೆ ಇಂಗ್ಲೀಷಿನಲ್ಲಿ ಒಂದು ಗಾದೆ ಮಾತಿದೆ. mother is a fact father is assumption. ಇಂದೇನೋ DNA ಮುಂಖಾಂತರ ತಂದೆ ಮಕ್ಕಳ ಸಂಬಂಧವನ್ನು ಗುರುತಿಸಬಹುದಾದರೂ, ಮಕ್ಕಳು ತಾಯಿ ತೋರಿಸಿದಾತನನ್ನೇ ತಂದೆ ಎಂದು ನಂಬುವುದೇ ಹೆಚ್ಚು.

ಇನ್ನು ದೀರ್ಘಕಾಲದ ಗೆಳೆತನ ಮುಖ್ಯ ಸೇತುವೆಯೇ ನಂಬಿಕೆ, ಗೆಳೆತನ ಮತ್ತು ನಂಬಿಕೆ ಎಂದಾಗ ದ್ವಾಪರ ಯುಗದ ಧುರ್ಯೋಧನ ಮತ್ತು ಕರ್ಣರ ನಡುವಿನ ಗೆಳೆತನ ಮತ್ತು ನಂಬಿಕೆಯ ಬಗ್ಗೆ ಪ್ರಸ್ತಾಪಿಸಲೇ ಬೇಕಾಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಕರ್ಣ ಕುಂತೀ ಪುತ್ರ ಹೌದಾದರೂ ವಿಧಿ ಬರಹದಂತೆ ಆತ ಸೂತಪುತ್ರನಾಗಿ ಬೆಳೆದು ನಾನಾ ರೀತಿಯ ಕಷ್ಟಗಳ ನಡುವೆ ವಿದ್ಯೆ ಕಲಿತು ಸ್ವಸಾಮಥ್ಯದಿಂದ ಬೆಳೆದು ಅದೊಮ್ಮೆ ಸುಯೋಧನನ ಕಣ್ಣಿಗೆ ಬಿದ್ದು ಆತನ ಶಕ್ತಿ ಸಾಮರ್ಥ್ಯಕ್ಕೆ ಮೆಚ್ಚಿ, ಅತನನ್ನು ಅಂಗ ದೇಶದ ರಾಜನನ್ನಾಗಿ ಮಾಡಿ ಇನ್ನು ಮುಂದೆ ನಾವಿಬ್ಬರೂ ಪ್ರಾಣ ಸ್ನೇಹಿತರು ಎಂದಿರುತ್ತಾನೆ. ಕರ್ಣನೂ ಸಹಾ ಅದೇ ಮಾತಿಗೆ ತಕ್ಕಂತೆ ಆತ ಬದುಕಿರುವವರೆಗೂ ಅದೇ ನಂಬಿಕೆಯನ್ನು ಉಳಿಸಿ ಕೊಂಡಿರುತ್ತಾನೆ. ಅವರಿಬ್ಬರ ನಡುವೆ ಎಂತಹ ನಂಬಿಕೆ ಇತ್ತೆಂಬುತಕ್ಕೆ ಈ ಪ್ರಸಂಗವೇ ಸಾಕ್ಷಿ. ಅದೊಮ್ಮೆ ಸುಯೊಧನನ ಹೆಂಡತಿ ಭಾನುಮತಿ ಮತ್ತು ಕರ್ಣ ಭಾನುಮತಿಯ ಆಂತಃಪುರದಲ್ಲಿ ಪಗಡೆಯಾಟ ಆಡುತ್ತಿರುತ್ತಾರೆ. ಆಟವನ್ನು ಸುಮ್ಮನೆ ಆಡಿದರೆ ಮಜಾ ಬರುವುದಿಲ್ಲವೆಂಬ ಕಾರಣ, ಸೋತವರು ಗೆದ್ದವರಿಗೆ ತಮ್ಮ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕೊಡಬೇಕೆಂದು ಇಬ್ಬರೂ ತೀರ್ಮಾನಿಸಿತುತ್ತಾರೆ. ಅದೇ ರೀತಿ ಆಟ ಮುಂದುವರೆದು, ಕರ್ಣ ಆಟದಲ್ಲಿ ವಿಜಯಿಯಾಗಿ, ನಾ ಗೆದ್ದೇ, ನಾ ಗೆದ್ದೇ ಎಲ್ಲಿ ಕೊಡೂ ಆ ಕಂಠೀಹಾರವನ್ನು ಎಂದು ನಮ್ರತೆಯಿಂದ ಕೇಳುತ್ತಾನೆ. ಆದರೆ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳದ ಭಾನುಮತಿ, ಇಲ್ಲಾ ನೀನು ಮೋಸದಿಂದ ಗೆದ್ದಿರುವ ಕಾರಣ ನಾನು ನಿನಗೆ ನನ್ನ ಕಂಠೀಹಾರವನ್ನು ಕೊಡುವುದಿಲ್ಲಾ ಎಂದು ವಾದ ಮಾಡುತ್ತಿರುತ್ತಾಳೆ, ಅವರಿಬ್ಬರ ವಾದ ವಿತಂಡ ವಾದಕ್ಕೆ ತಿರುಗಿ ಕೊನೆಗೆ ಕೋಪಗೊಂಡ ಕರ್ಣ ಭರದಲ್ಲಿ ಭಾನುಮತಿಯ ಕುತ್ತಿಗೆಗೇ ಕೈ ಹಾಕಿ ಕಂಠೀ ಹಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ, ಭಾನುಮತಿ ಅದನ್ನು ತಡೆಯಲು ಪ್ರಯತ್ನಿಸುವ ಸಂಧರ್ಭದಲ್ಲಿ ಸರ ಕಿತ್ತು ಬಂದು ಅದರಲ್ಲಿದ್ದ ಮುತ್ತು ರತ್ನಗಳು ಚೆಲ್ಲಾಪಿಲ್ಲಿಯಾಗಿ ಭೂಮಿಯ ಮೇಲೆ ಬೀಳುತ್ತದೆ. ಅದೇ ಸಮಯದಲ್ಲೇ ಸುಯೋಧನನು ತನ್ನ ರಾಣಿಯ ಅಂತಃಪುರ ಪ್ರವೇಶ ಮಾಡಿ ಅವರಿಬ್ಬರ ಆ ಪರಿಯಾಗಿ ಪರಸ್ಪರ ಕಿತ್ತಾಡುತ್ತಿದ್ದೂ ಮತ್ತು ಗೆಳೆಯ ಕರ್ಣ ತನ್ನ ಹೆಂಡತಿಯ ಕುತ್ತಿಗೆ ಕೈಹಾಕಿ ಆಕೆಯ ಸರವನ್ನು ಎಳೆದಾಡಿದರೂ ಒಂದು ಚೂರೂ ಕೋಪಗೊಳ್ಳದೇ, ನೆಲದ ಮೇಲೆ ಬಿದ್ದಿದ್ದ ಮುತ್ತು ರತ್ನಗಳನ್ನು ಹೆಕ್ಕುತ್ತಾ, ಸರಿಯಾಗಿ ಮಾಡಿದೆ ಗೆಳೆಯಾ, ಆಟದಲ್ಲಿ ಸೋತಾಗ ಒಪ್ಪಂದಂತೆ ನಡೆದುಕೊಳ್ಳಬೇಕು ಎಂದು ಗೆಳೆಯನ ಪರ ವಾದಿಸುತ್ತಾನೆ. ತನ್ನ ಪತಿರಾಯ ತನ್ನ ಪರವಾಗಿರದೇ ಆತನ ಗೆಳೆಯ ಪರ ಬೆಂಬಲಿಸಿದ್ದನ್ನು ನೋಡಿ ಪತಿರಾಯನ ಮೇಲೆ ಕೋಪಗಂಡದ್ದನ್ನು ನೋಡಿದ ಸುಯೋಧನ, ನೋಡು ಭಾನುಮತಿ, ನಾನು ನಿನ್ನನ್ನು ಮುದುವೆ ಆಗುವ ಮುಂಚೆಯೇ ನನಗೆ ಕರ್ಣನ ಪರಿಯವವಿದೆ. ಅತನ ಗುಣ ಮತ್ತು ನಡುವಳಿಕೆಯ ಮೇಲೆ ನಂಬಿಕೆ ಇದೆ. ಆತ ವಿನಾಕಾರಣ, ಎಂದೂ ಯಾರ ಮೇಲೂ ಆಕ್ರಮಣ ಮಾಡಲಾರ. ಒಂದು ವೇಳೆ ಆತ ಆಕ್ರಮಣ ಮಾಡಿದ್ದಾನೆಂದರೇ ಅಲ್ಲೊಂದು ಘನ ಘೋರವಾದ ತಪ್ಪು ನಡೆದೇ ಇರುತ್ತದೆ ಎನ್ನುವುದು ನನ್ನ ನಂಬಿಕೆ ಹಾಗಾಗಿ, ಅಂತಹ ನಂಬಿಕೆಯಿಂದಾಗಿಯೇ, ಈ ಪ್ರಸಂಗದಲ್ಲಿ ನಾನು ನನ್ನ ಅರ್ಥಾಂಗಿಗಿಂತಲೂ ಹೆಚ್ಚಾಗಿ ನನ್ನ ಸ್ನೇಹಿತನ ಮೇಲೆ ಭರವಸೆ ಇದೆ ಎನ್ನುತ್ತಾನೆ.

ಆಚಾರ್ಯ ದ್ರೋಣಾಚಾರ್ಯರು ಕ್ಷತ್ರೀಯರಿಗಲ್ಲದೇ ಬೇರೆಯವರಿಗೆ ವಿದ್ಯೆ ಹೇಳಿಕೊಡುವುದಿಲ್ಲಾ ಎಂಬ ಕಾರಣದಿಂದಾಗಿ ಬೇಡರ ಮಗ ಏಕಲವ್ಯನಿಗೆ ವಿದ್ಯೆ ಕಲಿಸಲು ನಿರಾಕರಿಸಿದಾಗ, ಏಕಲವ್ಯ ಮಾನಸಿಕವಾಗಿ ದ್ರೋಣರನ್ನೇ ತನ್ನ ಗುರುವಾಗಿ ಸ್ವೀಕರಿಸಿ ಅವರ ಮೇಲಿನ ಅಪಾರವಾದ ನಂಬಿಕೆಯಿಂದಲೇ ತನ್ನ ಸ್ವಸಾಮಥ್ಯದಿಂದ ಬಿಲ್ವಿದ್ಯೆ ಪಾರಂಗತನಗುತ್ತಾನೆ. ಅತನ ಪಾರಂಗತ್ಯವನ್ನು ಮುರಿಯಲೆಂದೇ ಅದೇ ಗುರು, ಗುರು ಕಾಣಿಕೆಯಾಗಿ ಆತನ ಬಲಗೈ ಹೆಬ್ಬರಳನ್ನು ಅರ್ಪಿಸುವಂತೆ ಕೇಳಿದಾಗ, ಒಂದು ಚೂರು ತಡಮಾಡದೇ, ಏನನ್ನೂ ಯೋಚಿಸದೇ, ತನ್ನ ಗುರುವಿಗೆ ಹೆಬ್ಬರಳನ್ನು ಅರ್ಪಿಸಿಯೂ ಮತ್ತದೇ ಗುರುವಿನ ಮೇಲಿನ ನಂಬಿಕೆಯಿಂದಾಗಿ ತನ್ನ ಎದಗೈನಿಂದ ಬಿಲ್ವಿದ್ಯೆ ಅಭ್ಯಾಸ ಮಾಡಿ ಮತ್ತೆ ತನ್ನ ಪ್ರಾಭಲ್ಯವನ್ನು ತೋರುತ್ತಾನೆ.

ನಂಬಿಕೆ ಮತ್ತು ವಿಶ್ವಾಸಗಳ ಕುರಿತಾದ ಶ್ರೀ ರಾಮಕೃಷ್ಣ ಪರಮಹಂಸರ ಒಂದು ದೃಷ್ಟಾಂತವನ್ನು ಹೇಳಲೇ ಬೇಕು. ಇದನ್ನು ಶ್ರೀಯುತ ಗುರುರಾಜ ಕರ್ಜಗಿಯವರೂ ಕೂಡಾ ಅನೇಕ ಬಾರಿ ಪ್ರಸ್ತಾಪಿದ್ದಾರೆ. ಅದೊಂದು ನದಿಯ ಆಚೆಯಲ್ಲಿರುವ ಗ್ರಾಮ. ಅಲ್ಲೊಂದು ಪ್ರಸಿದ್ಧ ದೇವಸ್ಥಾನ. ಆ ದೇವರ ಆಭಿಷೇಕಕ್ಕೆ ಪ್ರತಿದಿನವೂ ನದಿಯ ಮತ್ತೊಂದು ಕಡೆ ಇರುವ ಊರಿನಿಂದ ಹಾಲಿನಾಕೆ ಹಾಲನ್ನು ತಂದು ಕೊಡುತ್ತಿದ್ದಳು. ಅದೋಂದು ದಿನ ಭಾರೀ ಮಳೆಯಿಂದಾಗಿ ಆ ನದಿ ಉಕ್ಕಿ ಹರಿಯುತ್ತಿರುತ್ತಿದ್ದ ಪರಿಣಾಮ ಎಷ್ಟು ಹೊತ್ತಾದರೂ ಆಕೆ ಹಾಲನ್ನು ತಂದು ಕೊಡದಿದ್ದಾಗ, ಅಯ್ಯೋ ದೇವರಿಗೆ ಅಭಿಷೇಕ ಮಾಡಲು ಇಂದು ಹಾಲೇ ಇಲ್ಲವೇ? ಛೇ!! ಆಕೆಯಾದರೂ ಏನು ಮಾಡಿಯಾಳು ಎಂದು ಮನಸ್ಸಿನಲ್ಲಿಯೇ ಪರಿತಪಿಸುತ್ತಾ ಪೂಜೆ ಮುಂದುವರಿಸಿದ್ದಾಗ, ಸ್ವಾಮೀ ಹಾಲನ್ನು ತೆಗೆದುಕೊಳ್ಳಿ ಮತ್ತು ತಡವಾಗಿದ್ದಕ್ಕೆ ದಯವಿಟ್ಟು ಕ್ಷ್ಮಮಿಸಿ ಬಿಡಿ ಎಂಬ ಹಾಲಿನಾಕೆಯ ಮಾತನ್ನು ಕೇಳಿ ಅಶ್ವರ್ಯ ಚಕಿತರಾಗಿ, ಅರೇ ನದಿ ಈ ಪಾಟಿ ಉಕ್ಕಿ ಹಾರಿಯುತ್ತಿದ್ದಾಗ ಅದು ಹೇಗೆ ಬಂದೆಯಮ್ಮಾ ಎಂದು ಕೇಳುತ್ತಾರೆ ಶಾಸ್ತ್ರಿಗಳು. ಸ್ವಾಮೀ ಎಂದಿನಂತೆ ಹಾಲನ್ನು ತೆಗೆದುಕೊಂಡು ನದಿಯ ದಡಕ್ಕೆ ಬಂದು ನೋಡಿದರೆ ನದಿ ಪ್ರವಾಹದ ರೂಪದಲ್ಲಿ ಉಕ್ಕಿ ಹರಿಯುತ್ತಿದ್ದ ಪರಿಣಾಮವಾಗಿ ದೋಣಿ ನಡೆಸುವ ಅಂಬಿಗ ಕಾಣಲಿಲ್ಲ. ಸ್ವಲ್ಪ ಹೊತ್ತು ಆತನಿಗಾಗಿ ಕಾಯ್ದ ನಂತರ ಇನ್ನು ಹೆಚ್ಚು ಕಾಯ್ದರೆ ನಿಮ್ಮ ಪೂಜೆಗೆ ತಡವಾಗುತ್ತದೆ ಎಂದು ಭಾವಿಸಿ, ನೀವೇ ಪ್ರತಿ ಸಂಜೆ ನಿಮ್ಮ ಪ್ರವಚನದಲ್ಲಿ ನೀವೇ ಹೇಳುವಂತೆ, ಶ್ರದ್ಧಾ ಭಕ್ತಿಯಂದ ಮತ್ತು ಭಗವಂತನ ಮೇಲೆ ನಂಬಿಕೆ ಹಾಕಿ ಆತನ ನಾಮವನ್ನು ಸ್ಮರಿಸಿದರೆ, ಜನ ಭವಸಾಗರವನ್ನು ದಾಟುತ್ತಾರೆ ಎಂಬುದನ್ನು ನೆನೆದು, ಹಾಗೆಯೇ ನದಿಯ ಮೇಲೆಯೇ ನಡೆದು ಕೊಂಡು ಬಂದು ಬಿಟ್ಟೆ ಎಂದು ಮುಗ್ಘವಾಗಿ ಹೇಳುತ್ತಾಳೆ. ಆಕೆಯ ಮಾತನ್ನು ಕೇಳಿದ ಅರ್ಚಕರಿಗೆ ಅರೇ ನನ್ನ ಪ್ರಚನಕ್ಕೆ ಇಷ್ಟೋಂದು ಶಕ್ತಿಯಿದಯೇ? ಸರಿ ಅದನ್ನು ನಾನೊಮ್ಮೆ ಪರೀಕ್ಷಿಸ್ಸಲೇ ಬೇಕು ಎಂದು ತೀರ್ಮಾನಿಸಿ ಅಮ್ಮಾ ಸ್ವಲ್ಪ ಪೂಜೆ ಆಗುವವರೆಗೂ ತಡಿ. ನೀನು ನದಿ ದಾಟುವುದನ್ನು ನಾನು ನೋಡಬೇಕು ಎಂದು ಹೇಳಿ. ಲಗು ಬಗೆಯಾಗಿ ಪೂಜಾವಿಧಾನಗಳನ್ನು ಪೂರ್ಣಗೊಳಿಸಿ, ಭಾರೀ ಅಹಂನ್ನಿನೊಂದಿಗೆ, ಹಾಲಿನಾಕೆಯ ಸಂಗಡ ನದಿ ತಟಕ್ಕೆ ಬರುತ್ತಾರೆ. ಹಾಲಿನಾಕೆ ಮತ್ತದೇ ಭಗವಂತನ ಮೇಲೆ ನಂಬಿಕೆ ಇಟ್ಟು ತನ್ನ ಪಾದಿಗೆ ನದಿಯ ಮೇಲೆ ನಡೆಯಲಾರಂಭಿಸಿದಳು ಅಕೆಯನ್ನು ಅರ್ಚಕರು ಅಹಂನಿಂದ ಹಿಂಬಾಲಿಸಿ, ಒಂದೆರಡು ಹೆಜ್ಜೆ ಇಡುವಷ್ಟರಲ್ಲಿಯೇ ಅಯ್ಯೋ, ಅಮ್ಮಾ, ನಾನು ಸತ್ತೇ ಸತ್ತೇ, ಎಂದು ಕೂಗಲಾರಂಭಿಸಿದರು. ಆಕೆ ಆ ಶಬ್ಧವನ್ನು ಕೇಳಿ ಹಿಂತಿರುಗಿ ನೋಡಿದರೆ, ಅರ್ಚಕರು ಮುಳುಗುತ್ತಿದ್ದನ್ನು ನೋಡಿ, ಅವರ ಕೈ ಹಿಡಿರು ದಡಕ್ಕೆ ಎಳೆದು ತಂದು, ಸ್ವಾಮಿಗಳೆ, ನೀವು ದೇವರ ಹೆಸರನ್ನು ಬಾಯಲ್ಲಿ ಮಾತ್ರ ಹೇಳಿದಿರೇ ಹೊರತು, ಹೃದಯದಿಂದಲ್ಲಾ. ನಿಮ್ಮ ನಂಬಿಕೆ ದೇವರ ಮೇಲೆ ಇರದೇ, ಗಮನವೆಲ್ಲಾ ಪಂಚೆ ಒದ್ದೆಯಾಗದಿರಲಿ ಎಂದು ಅದನ್ನು ಮೇಲಕ್ಕೆತ್ತಿ ಹಿಡಿಯುವುದರ ಕಡೆ ಇದ್ದ ಪರಿಣಾಮ ನೀವು ನದಿ ದಾಟಲಾಗಲಿಲ್ಲ. ನೀವು ನಿಜವಾಗಿಯೂ ಭಗವಂತನ ಮೇಲೆ ನಂಬಿಕೆ ಇಟ್ಟು ಆತನ ಮೇಲೆ ಭಾರ ಹಾಕಿ ನಡೆದಿದ್ದಲ್ಲಿ ಇಷ್ಟು ಹೊತ್ತಿಗೆ ನಾವಿಬ್ಬರೂ ನದಿಯ ತಟದಲ್ಲಿ ಇರ ಬೇಕಿತ್ತು ಎಂದಳು. ಅರ್ಚಕರ ಅಹಂ ನೀರಿನಲ್ಲಿ ಮುಳುಗುವಾಗಲೇ ಕೊಚ್ಚಿಹೋಗಿ, ಅವರಿಗೆ ತಮ್ಮ ತಪ್ಪಿನ ಅರಿವಾಗಿ ಆಕೆಯಲ್ಲಿ ಕ್ಷಮೆಯಾಚಿಸಿದರು.

ಇದೇ ರೀತಿ ರಾಮಾಯಣದ ಮತ್ತೊಂದು ಪ್ರಸಂಗ ಹೇಳಲೇ ಬೇಕು. ರಾಮ ಮತ್ತು ಲಕ್ಷ್ಮಣರು ತಮ್ಮ ಕಪಿ ಸೇನೆಯ ಸಹಾಯದಿಂದ ಸೇತು ಬಂಧನ ಮಾಡಿ ಲಂಕೆಯನ್ನು ತಲುಪಿ, ಲಂಕಾಧಿಪತಿಯ ವಿರುದ್ಧ ಯುದ್ದಕ್ಕೆ ಸಕಲ ಸನ್ನದ್ಧರಾಗಿ ಮಾರನೆಯ ದಿನದಿಂದ ಯುದ್ಧವನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಿರುತ್ತಾರೆ. ಆದರೆ ಕ್ಷತ್ರೀಯರ ಸಂಪ್ರದಾಯಾದ ಪ್ರಕಾರ ಯುಧ್ದಕ್ಕೆ ಮುಉನ ಶತ್ರು ವಿನಾಶಕಾರೀ ಪೂಜೆಮಾಡಿಸಲು ಲಂಕೆಯಲ್ಲಿ ಸೂಕ್ತ ಪುರೋಹಿತರ ಹುಡುಕಾಟ ನಡೆಶುತ್ತಿದ್ದಾಗ , ವಿಭೀಷಣನ ತನ್ನ ಅಣ್ಣ ರಾವಣನ್ನನೇ ಪೌರೋಹಿತ್ಯಕ್ಕೆ ಕರೆಯುವಂತೆ ಸಲಹೆ ನೀಡುತ್ತಾನೆ. ನಾಲ್ಕು ವೇದ ಪಾರಂಗತ, ಮಹಾ ಜ್ಞಾನಿ ಪರಮ ಬ್ರಾಹ್ಮಣ ಮತ್ತು ಶಿವ ಭಕ್ತ ಲಂಕಾಧಿಪತಿಗಿಂತ ಮತ್ತೊಬ್ಬ ಸಮರ್ಥ ಪುರೋಹಿತರು ಲಂಕೆಯಲ್ಲಿ ಬೇರಾರು ಇಲ್ಲಬೆಂಬ ನಂಬಿಕೆ ವಿಭೀಷಣನದ್ದು. ಅಂತೆಯೇ ಯುದ್ಧವನ್ನು ಮುಂದಿಟ್ಟು ಕೊಂಡು ವಿಭೀಷಣನ ಮೇಲಿನ ನಂಬಿಕೆಯಿಂದಲೇ, ಹನುಮಂತನ ಮುಖಾಂತರ ರಾವಣನನ್ನು ಪೌರೋಹಿತ್ಯಕ್ಕೆ ಹೇಳಿ ಕಳುಹಿಸುತ್ತಾರೆ. ಗುರುವಿನ ಸ್ಥಾನಕ್ಕೆ ಮರ್ಯಾದೆ ಕೊಟ್ಟು ಕರೆದ ಪರಿಣಾಮ ತನ್ನ ಶತೃ ಎಂದೂ ಲೆಕ್ಕಿಸದೇ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ರಾಮ ಲಕ್ಷ್ಮಣರಿಗೆ ಕಂಕಣ ಕಟ್ಟಿ, ರಾಮ ಲಕ್ಷ್ಮಣರು ಭಕ್ತಿಪೂರ್ವಕವಾಗಿ ಅಚಾರ್ಯ ರಾವಣನಿಗೆ ನಮಿಸಿದಾಗ ಅವರಿಬ್ಬರಿಗೂ ವಿಜಯೀಭವ ಎಂದು ಹರಸಿ ತನ್ನ ಬ್ರಾಹ್ಮಣ್ಯತ್ವವನ್ನು ಮೆರೆಯುತ್ತಾನೆ. ತನ್ನ ಶತೃವಿನ ಬಾಯಿಯಿಂದ ವಿಜಯೇಭವ ಎಂಬ ಮಾತನ್ನು ಕೇಳಿ ದಂಗಾದ ರಾಮ, ಅರೇ ಇದೇನಿದು? ಯುದ್ದಕ್ಕೆ ಮುಂಚೆಯೇ ಶಸ್ತ್ರ ತ್ಯಾಗವೇ? ಯುದ್ಧ ಮಾಡದಯೇ ನಾವು ಗೆದ್ದು ಬಿಟ್ಟೆವೇ ಎಂದು ಕೇಳಿದ್ದಕ್ಕೆ ವ್ಯ್ರಘ್ರನಾದ ರಾವಣ, ನೀವಿಬ್ಬರೂ ನನಗೆ ನಮಸ್ಕರಿಸಿದಾಗ, ಗುರುವಿನ ರೂಪದಲ್ಲಿ ಆಶೀರ್ವಾದ ಮಾಡಿದ್ದೇನೆಯೇ ಹೊರತು, ನಿಮ್ಮ ಶತೃವಾಗಿ ಅಲ್ಲಾ. ನನ್ನ ಶಕ್ತಿ ಸಾಮರ್ಥ್ಯದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ನಾಳಿನ ಯುದ್ದದಲ್ಲಿ ನನ್ನ ಸಾಮಥ್ಯದಿಂದ ನಿಮ್ಮನ್ನು ಸೋಲಿಸಿ ನಾನೇ ವಿಜಯೆಯಾಗುತ್ತೇನೆ ಎಂದು ತನ್ನ ದರ್ಪವನ್ನು ತೋರುತ್ತಾನಾದರೂ ಮುಂದಿನ ಯುದ್ದದಲ್ಲಿ ರಾಮ ಲಕ್ಷ್ಮಣರ ಮುಂದೆ ಆತನ ಪರಾಕ್ರಮವೇನೂ ನಡೆಯದೆ ಸೋತು ಸತ್ತು ಹೋಗುತ್ತಾನೆ.

ಮೇಲೆ ಹೇಳಿದ ಎರಡೂ ಪ್ರಸಂಗಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೇ, ಹಾಲಿನಾಕಿ ಮತ್ತು ರಾಮ ಲಕ್ಷ್ಮಣರ ನಂಬಿಕೆಗೂ, ದೇವಸ್ಥಾನದ ಅರ್ಚಕರು ಮತ್ತು ಪುರೋಹಿತ ರೂಪದಲ್ಲಿ ಬಂದಿದ್ದ ರಾವಣರ ನಂಬಿಕೆಗಳ ಮಧ್ಯೆ ಅಜಗಜಾಂತರದ ವೆತ್ಯಾಸವಿದೆ. ಹಾಲಿನಾಕಿ ದೇವರನ್ನು ನಂಬಿದರೆ, ರಾಮ ಲಶ್ಷ್ಮಣರು ವಿಭೀಷಣನ ಮಾತಿನ ಮೇಲೆ ನಂಬಿಕೆ ಇಟ್ಟ ಪರಿಣಾಮವಾಗಿ ತಮ್ಮ ಕಾರ್ಯವನ್ನು ಸಾಧಿಸಿದರು. ಅದರೇ ಇಬ್ಬರೂ ಪುರೋಹಿತರೂ ತಮ್ಮ ಮೇಲಿನ ಅತಿಯಾದ ಆತ್ಮವಿಶ್ವಾಸದ ಪರಿಣಾಮದಿಂದ ನಂಬಿಕೆಯಿಂದ ವಿಚಲಿತರಾಗಿ ಸೋಲುಣಬೇಕಾಯಿತು.

ಇನ್ನು ರೋಗಿಗಳ ಖಾಯಿಲೆಗಳನ್ನು ಗುಣಪಡಿಸುವುದರಲ್ಲಿ ಔಷಧಿಗಳ ಜೊತೆ ಜೊತೆಗೆ ರೋಗಿಗಳಿಗೆ ವೈದ್ಯರ ಮೇಲಿನ ನಂಬಿಕೆಯೇ ಹೆಚ್ಚಿನ ಪಾತ್ರ ವಹಿಸುತ್ತದೆ. ಆ ವೈದ್ಯರು ಎಷ್ಟೇ ಸುಪ್ರಸಿದ್ಧರಾಗಿದ್ದರೂ ಸಿದ್ಧ ಹಸ್ತರಾಗಿದ್ದರೂ ರೋಗಿಗಳಿಗೆ ಅವರ ಚಿಕಿತ್ಸೆಯ ಮೇಲೆ ನಂಬಿಕೆ ಇಲ್ಲದಿದ್ದಲ್ಲಿ ಎಂತಹ ಶಕ್ತಿಶಾಲಿ ಔಷಧಿಗಳನ್ನು ನೀಡಿದರೂ ಗುಣಪಡಿಸಲಾಗದು. ಅದೇ ರೋಗಿಗಳಿಗೆ ವೈದ್ಯರ ಚಿಕಿತ್ಸೆಯ ಮೇಲೆ ನಂಬಿಕೆ ಇದ್ದಲ್ಲಿ, ಮದ್ದೇ ಇಲ್ಲದೇ ಗುಣ ಪಡಿಸಬಹುದು. ಆಪ್ತರಕ್ಷಕ ಸಿನಿಮಾದಲ್ಲಿ ವೈದ್ಯರಾಗಿ ನಟಿಸಿರುವ ಡಾ.ವಿಷ್ಣುವರ್ಧನ್ ಅವರು ತಮ್ಮ ಸಹಾಯಕ ಕೋಮಲ್ ನಿದ್ದೆಯೇ ಬರುತ್ತಿಲ್ಲಾ ಎಂದಾಗ, ಎಲ್ಲಿ ಕಣ್ಣು ಮುಚ್ಚಿಕೊಂಡು ಬಾಯಿ ತೆಗಿ. ನಾನು ಮಾತ್ರೆ ಹಾಕುತ್ತೇನೆ ಸುಮ್ಮನೆ ನೀರು ಕುಡಿದು ಮಲಗಿ ಕೋ. ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಒಂದು ಕಾಗದ ತುಣುಕನ್ನು ಉಂಡೆ ಮಾಡಿ ಕಣ್ಣು ಮುಚ್ಚಿಕೊಂಡಿದ್ದ ಕೋಮಲ್ ಬಾಯಿಗೆ ಹಾಕಿದಾಗ, ಆತ ವೈದ್ಯರ ಮೇಲಿನ ನಂಬಿಕೆಯಿಂದ ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಗಡದ್ದಾಗಿ ನಿದ್ದೆ ಜಾರಿಹೋಗುತ್ತಾನೆ. ಸಿನಿಮಾದಲ್ಲಿ ಹಾಸ್ಯಕ್ಕೆಂದು ಈ ದೃಶ್ಯವನ್ನು ತೋರಿಸಿದ್ದರೂ ವೈದ್ಯರ ಕೈಗುಣ ನಿಜಕ್ಕೂ ದೊಡ್ಡದೇ ಸರೀ.

ಹಾಗಾಗಿ ಅಂದೂ ಇಂದೂ ಎಂದೆಂದೂ ಈ ಜಗತ್ತಿನಲ್ಲಿ ಸುಖಃ ಶಾಂತಿಯಿಂದ ನೆಮ್ಮದಿಯಾಗಿ ಬಾಳ್ವೆ ನಡೆಸಲು ಎಲ್ಲರ ಮೇಲೂ ಪರಸ್ಪರ ನಂಬಿಕೆ ಇರಬೇಕು, ನಂಬಿಕೆ ವಿಸ್ವಾಸವನ್ನು ಹೆಚ್ಚಿಸುತ್ತದೆ ಅದರ ಪರಿಣಾಮವಾಗಿ ಮಿತೃತ್ವ ಹೆಚ್ಚಾಗಿ ಎಲ್ಲರೂ ಸ್ನೇಹಪೂರ್ವಕವಾಗಿರಬಹುದು. ಆದೇ ಅಪನಂಬಿಕೆ ವಿಸ್ವಾಸವನ್ನು ಕುಗ್ಗಿಸುವ ಪರಿಣಾಮವಾಗಿ ಶತೃತ್ವ ಹೆಚ್ಚಾಗಿ ಪರಸ್ಪರ ದ್ವೇಷದಿಂದ ಕಚ್ಚಾಡುವ ಸಂಭವೇ ಹೆಚ್ಚು. ಆದನ್ನೇ ಅಲ್ಲವೇ ಚಿ.ಉದಯಶಂಕರ್ ಅವರು ಒಡಹುಟ್ಟಿದವರು ಸಿನಿಮಾದಲ್ಲಿ ರಾಜಕುಮಾರ್ ಅವರಿಂದ ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋಕೆಟ್ಟವರಿಲ್ಲವೋ ಎಂದು ಹಾಡಿಸಿದ್ದಾರೆ. ಹಾಗಾಗಿ ಎಲ್ಲರಲ್ಲೂ ನಂಬಿಕೆ ಇಡೋಣ. ನುಡಿದಂತೆಯೇ ನಡೆಯೋಣ. ನಡೆಯುಂತೆಯೇ, ನುಡಿಯುವುದರ ಮೂಲಕ ಎಲ್ಲರ ನಂಬಿಕೆಗೆ ಪಾತ್ರರಾಗೋಣ.

ಏನಂತೀರೀ?

ರಾಮ ಹೆಚ್ಚೋ, ರಾವಣ ಹೆಚ್ಚೋ‌

ಎರಡನೆಯ ಮಗುವಿನ‌ ನಿರೀಕ್ಷೆಯಲ್ಲಿದ್ದ ಒಬ್ಬ ತಾಯಿ ತನ್ನ ಎಂಟು ವರ್ಷದ ಮಗಳನ್ನು ರಾತ್ರಿ ಮೆಲ್ಲಗೆ ತಲೆ ಸವರುತ್ತಾ ಹಾಸಿಗೆಯ ಮೇಲೆ ಮಲಗಿಸುತ್ತಾ ಕುತೂಹಲದಿಂದ ಮಗಳನ್ನು ಕೇಳುತ್ತಾಳೆ. ಪುಟ್ಟೀ ನಿನಗೆ ತಮ್ಮ ಪಾಪು ಬೇಕಾ, ಇಲ್ಲವೇ ತಂಗಿ ಪಾಪು ಬೇಕಾ ಎಂದು.

ತಾಯಿ ಕೇಳಿದ ಪ್ರಶ್ನೆಗೆ ಮಗಳು ಅಷ್ಟೇ ಮುಗ್ಧವಾಗಿ ನನಗೆ ತಂಗಿ ಪಾಪು ಬೇಡ ತಮ್ಮ ಪಾಪು ಬೇಕು ಅಂತ ಹೇಳುತ್ತಾಳೆ. ಪಾಪ ಮುಗ್ಧ ಮಗುವಿಗೆ ಏನೂ ತಿಳಿಯದು ‌ಎಂದು ಭಾವಿಸಿದ ತಾಯಿ ಮಾತು ಮುಂದುವರೆಸುತ್ತಾ, ಅಲ್ಲಾ ಕಣೇ ಪುಟ್ಟಿ, ತಂಗಿ ಪಾಪು ಆದ್ರೆ, ಅವಳಿಗೆ ನಿನ್ನೆಲ್ಲಾ ಬಟ್ಟೆಗಳನ್ನೂ, ಬಣ್ಣ ಬಣ್ಣದ ಗೊಂಬೆಗಳನ್ನು ಕೊಡಬಹುದು. ಅದೂ ಅಲ್ಲದೆ ದೊಡ್ಡವಳಾದ ಮೇಲೆ ಇಬ್ಬರೂ ಒಟ್ಟಿಗೆ ಒಂದೇ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳ ಬಹುದು, ಸುಖಃ ದುಖಃಗಳನ್ನು ಹಂಚಿಕೊಳ್ಳಬಹುದು. ತಮ್ಮಾ ಆದ್ರೆ ಇದೆಲ್ಲಾ ಆಗೋದಿಲ್ಲಾ ಅಲ್ವಾ ಎಂದು ‌ಕೇಳುತ್ತಾಳೆ.

ಅದಕ್ಕೆ ಮಗಳು ಅಷ್ಟೇ ದೃಢವಾಗಿ ಮತ್ತೊಮ್ಮೆ ಇಲ್ಲಮ್ಮಾ ನನಗೆ ತಂಗಿ ಬೇಡ ತಮ್ಮಾನೇ‌ ಇರಲಿ ಎಂದಾಗ,‌ ಕುತೂಹಲದಿಂದ ಹೋಗಲಿ ಬಿಡು ತಮ್ಮಾನೇ ಬರಲಿ. ಅದು ಸರಿ ಎಂತಹ ತಮ್ಮ ಬರಬೇಕು ಎಂದಾಗ.

ಅಮ್ಮಾ ನನಗೆ ರಾವಣನಂತಹ‌ ಗುಣವುಳ್ಳ ತಮ್ಮಾ ಬೇಕು ಎಂದಾಗ,‌ ಒಂದು‌ ಕ್ಷಣ ಮಗಳ ಉತ್ತರದಿಂದ ಅವಕ್ಕಾದ ತಾಯಿ, ದಡಕ್ಕನೆ ಹಾಸಿಗೆಯಿಂದ ಮೇಲೆದ್ದು ಪುಟ್ಟಿ ಅದು ರಾಕ್ಷಸ ಗುಣದ ರಾವಣನ ಹಾಗೆ ಅಲ್ಲಮ್ಮಾ, ರಾಮನ ಗುಣವುಳ್ಳ ತಮ್ಮ ಬೇಕು ಎಂದು‌ ಕೇಳು ಎಂದು ಸರಿಪಡಿಸಲು ಹೊರಟಾಗ, ಇಲ್ಲಮ್ಮಾ ಒಮ್ಮೆ ಯೋಚಿಸಿ ನೋಡು, ತಂಗಿ ಶೂರ್ಪನಖಿಯ ಕಿವಿ ಮೂಗು ಕತ್ತರಿಸಿದವರಿಗೆ ತಕ್ಕ ಶಾಸ್ತಿ‌ ಕಲಿಸಲು, ತಂಗಿಯ ಕೋಪ ಶಮನಗಳಿಸಲು, ಸೀತೆಯನ್ನು ಅಪಹರಿಸಿ ಕೊಂಡು ಬರುವಾಗ ಸೀತೆಯ ರೂಪ ಲಾವಣ್ಯಗಳಿಗೆ ಮಾರು ಹೋಗಿ ಅವಳನ್ನು ವರಿಸಲು‌ ಇಚ್ಚಿಸಿ, ಅವಳನ್ನು ಅಶೋಕವನದಲ್ಲಿ‌ ಇರಿಸಿ, ತನ್ನ ದಾಸಿಯರ ಮೂಲಕ ರಾವಣನನ್ನು ವರಿಸುವಂತೆ ಸೀತೆಯ ಮನಸ್ಸನ್ನು ಬದಲಿಸಲು ಪ್ರಯತ್ನಿಸಿದನಾದರೂ ಒಮ್ಮೆಯೂ ಸೀತೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲಾ, ಬಲಾತ್ಕಾರವನ್ನೇನು ಎಸಗಲಿಲ್ಲಾ.

ಅದೇ ರಾಮ, ತನ್ನ ಮಲತಾಯಿಯ ಆಶೆಯದಂತೆ ಹದಿನಾಲ್ಕು ವರ್ಷಗಳ ವನವಾಸ ಮಾಡಲು ಹೊರಟಾಗ, ಸಕಲ ಸುಪ್ಪತ್ತಿಗೆಗಳನ್ನೆಲ್ಲಾ ಬಿಟ್ಟು, ನಾರಿನ ಮಡಿಯುಟ್ಟು, ಪತಿಯ ಸೇವೆಯೇ ಪರಮಾತ್ಮನ ಸೇವೆ ಎಂದು ಭಾವಿಸಿ ಕಾಡು ಮೇಡುಗಳಲ್ಲಿ ಅಲೆಯುತ್ತಾ,‌ ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ, ರಾವಣನ ಮೋಸದ ಬಲೆಯಿಂದಾಗಿ ಅಪಹರಿಸಲ್ಪಟ್ಟ, ಪತಿಯನ್ನು ‌ಬಿಟ್ಟು ಬೇರಾವ ಗಂಡಸನ್ನೂ ತಲೆ ಎತ್ತಿ ನೋಡದಂತಹ ಪತಿವ್ರತಾ ಶಿರೋಮಣಿ ಸೀತಾಮಾತೆಯ ಶೀಲದ ಮೇಲೆ ಅನುಮಾನ ಪಟ್ಟು, ಅಗ್ನಿ ಪರೀಕ್ಷೆ ನಡೆಸಿ ನಂತರ ಯಾರೋ ಪ್ರಜೆ ಮತ್ತೆ ಸೀತೆಯ ಮೇಲೆ ಅನುಮಾನ ವ್ಯಕ್ತಪಡಿಸಿದರೆಂದು ತುಂಬು ಗರ್ಭಿಣಿ ಎಂದೂ ಲೆಕ್ಕಿಸದೆ ಕಾಡಿಗೆ ಅಟ್ಟಿದ.

ಈಗ ಹೇಳಮ್ಮಾ ರಾಮನು ಹೆಚ್ಚೋ, ರಾವಣ ಹೆಚ್ಚೋ‌? ಎಂದಾಗ‌ ತಾಯಿಗೆ ಏನನ್ನೂ ಹೇಳಲಾಗದೇ ತನ್ನ ಮಗಳನ್ನು ಅಪ್ಪಿ‌‌ ಮುದ್ದಾಡಿ ತನಗಿರಿವಿಲ್ಲದೇ ಕಣ್ಣಂಚಿನಲ್ಲಿ ಜಾರಿದ ಕಣ್ಣೀರನ್ನು ಒರೆಸಿ ಕೊಳ್ಳುತ್ತಾ, ಮಗಳನ್ನು ತಟ್ಟಿ‌ ತಟ್ಟಿ ಮಲಗಿಸುತ್ತಾ, ತಾನೂ ನಿದ್ರೆಗೆ ಜಾರುತ್ತಾಳೆ.

ಯಾಕೋ‌ ಏನೋ, ದೇಶಾದ್ಯಂತ ಏನನ್ನೂ ಅರಿಯದ ಪುಟ್ಟ ಪುಟ್ಟ ಮುಗ್ಧ ಹೆಣ್ಣು ಕಂದಮ್ಮಗಳ ಮೇಲೆ ಅತ್ಯಾಚಾರ ನಡೆಸಿ‌ ಕೊಲೆ ನಡೆಸುತ್ತಿರುವ ವಿಷಯಗಳನ್ನು ಕೇಳುತ್ತಿರುವಾಗ, ಈ‌ ಮೇಲಿನ ಕಥೆ ನನ್ನ ಮನಸ್ಸನ್ನು ಬಹಳವಾಗಿ ಕಾಡಿತು.

ಧರ್ಮದ ಸೋಗಿನಲ್ಲಿ, ಮರ್ಯಾದೆಗೆ ಅಂಜಿ ರಾಮನಂತೆ ಸುಮ್ಮನಿರದೆ, ರಾಕ್ಷಸನಾದರೂ ತಂಗಿ‌ಯ ಇಚ್ಛೆಯನ್ನೂ ಮತ್ತು ಸೀತೆಯ ಪಾತಿವ್ರತ್ಯವನ್ನೂ ಕಾಪಾಡಿದ ರಾವಣನಂತಾಗುವುದೇ ಸರಿಯಲ್ಲವೇ

ಅತ್ಯಾಚಾರಿಗಳಿಗೆ ಧರ್ಮದ ಹಂಗಿಲ್ಲಾ, ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ.

ಏನಂತೀರೀ?

ಭಾಗ-2

ರಾಕ್ಷಸೀ ಗುಣವುಳ್ಳ‌ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನು ಎನಿಸಬಹುದಾದರೂ, ಆತ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ‌ಸಂಗೀತಗಾರ, ಶಿವನನ್ನು ‌ಒಲಿಸಿಕೊಳ್ಳುವ ಸಲುವಾಗಿ‌ ತನ್ನ‌ ಕರಳುಗಳನ್ನೇ ಹೊರ‌ತೆಗೆದು‌ ರುದ್ರ ವೀಣೆಯನ್ನಾಗಿಸಿ‌‌ ನುಡಿಸಿ‌ ಶಿವನನ್ನು ಒಲಿಸಿಕೊಂಡು‌ ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು.

ರಾಮ‌‌ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು‌‌ ಲಂಕೆಯಲ್ಲಿ ಪುರೋಹಿತರು ‌ಯಾರೂ‌ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ‌ ರಾಮ‌ ಲಕ್ಷ್ಮಣರಿಗೆ ಕಂಕಣ ಕಟ್ಟಿ ವಿಜಯೀಭವ ಎಂದು ಹರಸಿ ತನ್ನ ಬ್ರಾಹ್ಮಣ್ಯತ್ವವನ್ನೇ ಮೆರೆದವನು. ಮಾರನೇಯ ದಿನ ಯುದ್ದದಲ್ಲಿ ಎದುರಿಸ ಬೇಕಾಗಿದ್ದ ಶತ್ರುವಿಗೇ ವಿಜಯೀಭವ ಎಂದು ಆಶೀರ್ವಾದ ಮಾಡಿದ್ದಕ್ಕೆ ಆಶ್ಚರ್ಯ ಚಕಿತನಾದ ಲಕ್ಷಣನನ್ನು ನೋಡಿದ ರಾವಣ. ಈಗ ಗುರುವಾಗಿ ನನ್ನ ಶಿಷ್ಯಂದಿರಾದ ನಿಮಗೆ ಆಶೀರ್ವದಿಸಿದ್ದೇನೆ. ನನ್ನ ಶಕ್ತಿ ಸಾಮರ್ಥ್ಯದ ಬಗ್ಗೆ ನನಗೆ ಅರಿವಿವಿದೆ. ನಾಳಿನ ಯುದ್ಧದಲ್ಲಿ ನಿಮ್ಮನ್ನು ಸೋಲಿಸುವ ಭರವಸೆಯಂತೂ ನನಗಿದೆ ಎಂದು ತಿಳಿಸಿದ್ದ ರಾವಣ, ಕೇವಲ ತಂಗಿಗಾದ ಅವಮಾನಕ್ಕೆ ಪ್ರತೀಕಾರ ತೀರಿಸಲು ಮಾತ್ರವೇ ಸೀತಾಮಾತೆಯನ್ನು ಅಪಹರಿಸಿದ ಕಪ್ಪು ಚುಕ್ಕೆಯ ಹೊರತಾಗಿ ಆತನ ಮೇಲೆ ಬೇರಾವ ಗಹನವಾದ ಆರೋಪಗಳು ಕಾಣಸಿಗುವುದಿಲ್ಲ.

ಆದರೆ ಅದೇ, ರಾಮ ಯುಧ್ಧದಲ್ಲಿ ರಾವಣನ್ನು‌ ಸೋಲಿಸಿ ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ ಸೀತಾಮಾತೆಯನ್ನು ಯಾರಾದರೂ ಪರಪುರುಷ ಮುಟ್ಟಿದರೆ ಸುಟ್ಟು ಭಸ್ಮವಾಗುತ್ತಾನೆ ಎಂಬ ಅಂಶ ಗೊತ್ತಿದ್ದರೂ, ಸೀತಾ‌ಮಾತೆಯ ಪಾತಿವ್ರತ್ಯವನ್ನು ಮತ್ತೊಮ್ಮೆ ಪರೀಕ್ಷಿಸುವ ಸಲುವಾಗಿ ಆಕೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿದ್ದು ಸುಳ್ಳಲ್ಲ. ನಂತರ ಕೆಲವು ವರ್ಷಗಳು‌ ಸುಖಃ ಸಂಸಾರ ನಡೆಸಿದ ಫಲವಾಗಿ ಸೀತಾ ಮಾತೆಯು ಗರ್ಭಿಣಿಯಾಗಿದ್ದಾಗ, ಅರಮನೆಯ ಅಗಸರ ದಾಂಪತ್ಯದಲ್ಲಿ ಬಿರುಕಿನ ಸಮಸ್ಯೆ ‌ಪರಿಹರಿಸುತ್ತಿದ್ದಾಗ, ಅಚಾನಕ್ಕಾಗಿ ಅಗಸ ಬಾಯಿ ತಪ್ಪಿ‌ ಆಡಿದ‌ ಮಾತು‌ ಕಂಡವರ‌ ಮನೆಯಲ್ಲಿದ್ದ ಹೆಂಡತಿಯನ್ನು ಮರಳಿ‌ ಸ್ವೀಕರಿಸಲು ನಾನೇನೂ ಪ್ರಭು ಶ್ರೀರಾಮನಲ್ಲಾ ಎಂಬ ಮಾತಿನ ಕಟ್ಟು ಪಾಡಿಗೆ ಬಿದ್ದು, ನಾನು ಮತ್ತೊಮ್ಮೆ ಅರಣ್ಯಕ್ಕೆ ಹೋಗಿ ವಾಲ್ಮೀಕಿಗಳ ಆಶ್ರಮ ವಾಸಿಗಳನ್ನು ಭೇಟಿಯಾಗ ಬೇಕು ಮತ್ತು ಅಲ್ಲಿಯ ಪಶು ಪಕ್ಷಿಗಳನ್ನು ನೋಡಬೇಕೆಂಬುದು ಬಸುರಿಯ ಬಯಕೆ ಎಂದು, ಎಂದೋ ಹೇಳಿದ್ದನ್ನು ನೆನಪಿಸಿಕೊಂಡು, ಸೀತೆಗೆ ಏನನ್ನೂ ತಿಳಿಸದೆ, ಆಕೆಯನ್ನು ಮಾತನಾಡಿಸಲೂ ಇಚ್ಚಿಸದೇ, ನಟ್ಟ ನಡು ರಾತ್ರಿಯಲ್ಲಿ ಲಕ್ಷ್ಮಣನ ಮೂಲಕ ಕಾಡಿನಲ್ಲಿ ಬಿಟ್ಟದ್ದೂ‌ ಸುಳ್ಳಲ್ಲ.

ಒಟ್ಡಿನಲ್ಲಿ ನನ್ನ ಬರಹದ ಹಿಂದೆ ರಾಮನನ್ನು ‌ತೆಗಳಿ‌ ರಾವಣನನ್ನು ‌ವೈಭವೀಕರಿಸುವ ಉದ್ದೇಶವಿರದೆ. ರಾಕ್ಷಸೀ‌ ಗುಣವುಳ್ಳ ರಾವಣನಂತಹ ಮನುಷ್ಯನೇ ಸೀತಾಮಾತೆಯ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರ ಮಾಡದಿದ್ದಾಗ,ರಾಮನಂತಹ ಮರ್ಯಾದೆಗೆ ಆಂಜುವ ನರ ಮನುಷ್ಯರು‌ ಮುಗ್ಧ ಹಸು ಕಂದಮ್ಮಗಳ ಮತ್ತು ‌ಅತ್ಯಾಚಾರ ಮಾಡುತ್ತಿರುವುದು ಎಷ್ಟು‌ ಸರಿ?

ಅಂತಹ ಅತ್ಯಾಚಾರಿಗಳನ್ನು ಧರ್ಮದ ‌ಹೆಸರಿನಲ್ಲಿ ರಕ್ಷಿಸುತ್ತಿರುವುದು ಎಷ್ಟು ಸರಿ?

ಇಂತಹ ಕೆಲವು ಅತ್ಯಾಚಾರಿಗಳಿಗೆ ಯಾವುದೇ ವಿಚಾರಣೆಯಿಲ್ಲದೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ‌ನೀಡಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸದ‌ ಹೊರತಾಗಿ ಇಂತಹ‌ ಪಿಡುಗನ್ನು ತಪ್ಪಿಸಲಾಗದು ಎನ್ನುವ ಭಾವನೆಯಿಂದ ಬರೆದದ್ದಷ್ಟೆ.

ಅತ್ಯಾಚಾರಿಗಳಿಗೆ ಧರ್ಮವಿಲ್ಲಾ. ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ

ಏನಂತೀರೀ?

ಭಾಗ-3

ನಾವೆಲ್ಲಾ ಓದಿದಂತೆ‌ ಇಲ್ಲವೇ ನಮ್ಮ ಹಿರಿಯರಿಂದ ಕೇಳಿ ತಿಳಿದಿರುವುದು ರಾಮ‌ ಒಳ್ಳೆಯವನು‌ ಮತ್ತು ರಾವಣ ಕೆಟ್ಟವನು ಏಂದೇ. ಹಾಗಾಗಿ ಪ್ರತೀ ಬಾರಿಯೂ ರಾವಣ ‌ಮಾಡಿದ ಎಲ್ಲ ಕೆಲಸಗಳನ್ನೂ ದ್ವೇಷಿಸ‌ಲೇ ಬೇಕು ಮತ್ತು ರಾಮ ಏನನ್ನೇ ಮಾಡಿದರು ಸಹಿಸಿಕೊಳ್ಳಬೇಕು. ರಾಮ ಪ್ರಶ್ನಾತೀತ ಎಂದೇ ನಮ್ಮ ಹಿರಿಯರು ನಮ್ಮ ಮನಃ ಪಠದಲ್ಲಿ ಅಚ್ಚೊತ್ತಿರುವ ಹಾಗಿದೆ.

ಆದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ‌ಹಾಗೂ‌‌ ಕೆಟ್ಟ ಗುಣಗಳಿದ್ದು ಅದು ಅಯಾಯಾ ಸಂದರ್ಭಕ್ಕನುಗುಣವಾಗಿ ‌ಪ್ರಕಟಿತಗೊಳ್ಳುತ್ತವೆ. ಒಳ್ಳೆಯ ಕೆಲಸ‌‌‌ ಮಾಡಿದಾಗ ಅವರನ್ನು ಪ್ರೋತ್ಸಾಹಿಸಿ, ಕೆಟ್ಟ‌ ಕೆಲಸಗಳನ್ನು ಮಾಡಿದಾಗ ದಾಕ್ಷಿಣ್ಯವಿಲ್ಲದೆ ಖಂಡಿಸೋಣ.

ನಾನು ವಿವರಿಸಿದ ಎರಡೂ ಸಂದರ್ಭಗಳಲ್ಲಿ ಶಕ್ತಿಶಾಲಿ ರಾಮ, ವಿವೇಕವಂತ ರಾಮ, ಪತ್ನಿಯನ್ನು ಅತ್ಯಂತ ಗೌರವಾದರದಿಂದ ಕಾಣುತ್ತಿದ್ದ ರಾಮ, ಸುಗ್ರೀವನ ಪರವಾಗಿ ವಾಲಿಯ ವಿರುದ್ಧ ರಾಮನಿಗೆ ಯಾವುದೇ ದ್ವೇಷವಿರದಿದ್ದರೂ ಆತನನ್ನು ಕುತಂತ್ರದಿಂದ ಕೊಂದದ್ದು ಅದೇ ರೀತಿ ಲವ ಕುಶರೊಂದಿಗೆ ಹೋರಾಟ ಮಾಡುವಾಗಲೂ ರಾಮನ ದ್ವಂದ್ವ ನೀತಿ ತಳೆದಿದ್ದು, ರಾಮ ಎಲ್ಲರಿಗೂ ಒಳ್ಳೆಯನಾಗುವ ಉಮೇದಿನಲ್ಲಿ ಸತ್ಯದ ಪರವಾಗಿರದೇ ಅನುಕೂಲ ಸಿಂಧುವಾಗಿದದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.

ಉಳಿದ‌ ಎಲ್ಲಾ ಸಂದರ್ಭಗಳಲ್ಲಿ ‌ರಾವಣ ಎಂತೆಂತಹಾ ತಪ್ಪಗಳನ್ನು ‌ಮಾಡಿದ್ದರೂ ರಾಮನ ಗೆಲುವಿಗೆ ಪೌರೋಹಿತ್ಯವಹಿಸಿ ವಿಜಯದ‌ ಕಂಕಣ ಕಟ್ಟಿದ್ದಂತೂ ಸುಳ್ಳಲ್ಲ. (ಈ ಕೆಳಕಂಡ ವಿಡೀಯೋ ನೋಡಿ)

ನಾನು ರಾಮನ ಮತ್ತೊಂದು ‌ಮುಖವನ್ನು ಪರಿಚಯಿಸಿದ ಮಾತ್ರಕ್ಕೆ, ನನ್ನನ್ನು ಹಿಂದೂ ವಿರೋಧಿ, ಕಮ್ಯುನಿಸ್ಟ್ ಅಥವಾ ಅನ್ಯಮತದ ಪರವಾಗಿ ಹಿಂದೂ‌ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿ ಎಂದು ಪೂರ್ವಾಗ್ರಹ ಪೀಡಿತರಾಗದೇ ಸೂಕ್ಷ್ಮವಾಗಿ ಒಮ್ಮೆ ಬಿಚ್ಚು ಮನಸ್ಸಿನಿಂದ, ಓದಿದರೆ ನನ್ನ ಲೇಖನದ ಒಳ ಅರಿವಾಗುತ್ತದೆ. ಇಲ್ಲಿ ರಾಮನ ‌ಅವೇಳನ‌ ರಾವಣನ ಗುಣಗಾನ ಮಾಡುತ್ತಿದ್ದೇನೆ ಎಂದು ನೋಡದೆ ಆ ಸಾಂಧರ್ಭಿಕ ಸತ್ಯವನ್ನು ಪರಾಮರ್ಶಿಸಿ‌‌ ನೋಡೋಣ.

ಪ್ರಸ್ತುತವಾಗಿ ರಾವಣನಂತಹ‌ ರಾಕ್ಷಸೀ ಪ್ರವೃತ್ತಿಯ ‌ವ್ಯಕ್ತಿಗಳು ನಾನಾ ಕಾರಣಗಳಿಂದಾಗಿ ಮೃಗೀಯ ವರ್ತನೆಯಿಂದ ಹೆಣ್ಣು ಮಕ್ಕಳನ್ನು ಅಪಹರಿಸಿಯೋ ಇಲ್ಲವೇ ಹೊಂಚಿ ಹಾಕಿ ಅವರುಗಳ ಮೇಲೆ ಅನಾಗರೀಕವಾಗಿ ಅತ್ಯಾಚಾರಮಾಡಿ ಕಡೆಗೆ ಸಿಕ್ಕಿ ಹಾಕಿಕೊಳ್ಳುವ ಭಯದಿಂದಾಗಿ ಸಾಕ್ಷಾಧಾರ ನಾಶಕ್ಕಾಗಿ ಅವರನ್ನು ಸುಟ್ಟುಹಾಕುವ ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಸಂತ್ರಸ್ತರ ಪರವಾಗಿ ಇದ್ದೇವೆಂದು ಮೇಲಿಂದ ಮೇಲೆ ಮೂಂಬತ್ತಿಗಳನ್ನು ಉರಿಸುತ್ತಾ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಾ , ಅತ್ಯಾಚಾರಿಗಳಿಗೆ ಶಿಕ್ಷೆಯಾದಾಗ ಇದೇ ಬುಧ್ದಿ ಜೀವಿಗಳು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಸೋಗಿನಲ್ಲಿ ಅಪರಾಧಿಯ ಪರವಾಗಿ ನಿಲ್ಲುವ ಇಬ್ಬಂಧಿತನಕ್ಕೆ ಕೊನೆ ಹಾಡಲೇ ಬೇಕಾಗಿದೆ. ಅತ್ಯಾಚಾರಿಗಳ ವಿಚಾರಣೆಯನ್ನು ಅನಗತ್ಯವಾಗಿ ಹತ್ತಾರು ವರ್ಷಗಳಷ್ಟು ಎಳೆಯದೇ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ನ್ಯಾಯಾಲಯಗಳೂ ಶೀಘ್ರಾತಿಶೀಘ್ರವಾಗಿ ಇತ್ಯರ್ಥಗೊಳಿಸಿ ನಿಜವಾದ ಅಪರಾಧಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡುವ ಮೂಲಕ ಮುಂದೆಂದೂ ಯಾರೂ ಇಂತಹ ಕುಕೃತ್ಯವನ್ನು ಎಸಗುವ ಮೊದಲು ನೂರು ಬಾರಿ ಯೋಚಿಸುವಂತಾದಲ್ಲಿ ಮಾತವೇ ನಮ್ಮ ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ ಎನ್ನುವ ಶ್ಲೋಕಕ್ಕೆ ನಿಜವಾದ ಅರ್ಥ ಬರುತ್ತದೆ. ರಾತ್ರಿ ಹನ್ನೆರಡು ಘಂಟೆಯಲ್ಲಿಯೂ ನಿರ್ಜನ ಬೀದಿಯಲ್ಲಿ ಹೆಣ್ಣುಮಕ್ಕಳು ಓಡಾಡುವ ಹಾಗೆ ಆದಾಗಲೇ ನಿಜವಾದ ಸ್ವಾತಂತ್ರ್ಯ ದೊರೆಯುವುದು ಎಂಬುದಾಗಿ ಹೇಳಿದ್ದ ಮಹಾತ್ಮ ಗಾಂಧಿಯವರ ಕನಸು ಸಾಕಾರಗೊಳ್ಳುತ್ತದೆ.

ಅದು ಬಿಟ್ಟು ಸುಮ್ಮನೆ ಧರ್ಮದ ಸೋಗಿನಲ್ಲಿಯೋ ಇಲ್ಲವೇ ಯಾವುದೇ ಒತ್ತಡಗಳಿಂದಾಗಿಯೋ ಶ್ರೀರಾಮನಂತೆ ಮರ್ಯಾದೆಗೆ ಅಂಜಿ ರಾವಣನಂತಹ ಖೂಳರನ್ನು ಶಿಕ್ಷಿಸದೇ ಹೋದಲ್ಲಿ ನಾವೆಲ್ಲರೂ ರಾಮನ ಅನುರೂಪ‌, ರಾಮನೇ ನಮ್ಮ‌ ಆದರ್ಶ ಎಂದು‌ ಹೇಳುವ ನಾವುಗಳು ಏನೂ ಅರಿಯದ ನೂರಾರು ಮುಗ್ಧ ಕಂದಮ್ಮಗಳು ಮತ್ತು ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ‌ ವ್ಯಕ್ತಿಗಳನ್ನು ರಾಜಾರೋಷವಾಗಿ ತಮ್ಮ ಕುಕೃತ್ಯಗಳನ್ನು ಮುಂದುವರಿಸುತ್ತಲೇ ಹೋಗುತ್ತಾರೆ. ನಿಧಾನಗತಿಯ ಕಾನೂನಿನ ಮೇಲೆ ಜನರಿಗೂ ಬೇಸರಮೂಡಿ ಜನರೇ ಕಾನೂನನ್ನು ಕೈಗೆತ್ತಿಕೊಳ್ಳುವ ಮುಂಚೆ ಸರ್ಕಾರ ಮತ್ತು ನ್ಯಾಯಾಂಗ ಎಚ್ಚೆತ್ತಿಕೊಳ್ಳಲಿ ಮತ್ತು ರಾಮ ಮತ್ತು ರಾವಣ ಎಂಬ ಪೂರ್ವಾಗ್ರಹ ಪೀಡಿತರಾಗದೇ, ರಾಮನಾಗಲೀ, ರಾವಣನಾಗಲೀ ತಪ್ಪು ಮಾಡಿದ್ದರೆ ಅವರಿಗೆ ಅತೀ ಶೀಘ್ರದಲ್ಲಿ ಕಠಿಣವಾದ ಸಜೆ ಸಿಗುವಂತಾಗಲಿ ಎಂದಷ್ಟೇ ನನ್ನ ಈ ಬರಹದ ಸದುದ್ದೇಶ.

ಸತ್ಯ ಸದಾ ಕಹಿ. ಆ ಕಹಿಯನ್ನು ಮೀರಿ ಸವಿಯುವ ಪ್ರಯತ್ನ ಮಾಡಿದರೆ ಖಂಡಿತ‌ ಸಿಹಿ.

ಅತ್ಯಾಚಾರಿಗಳಿಗೆ ಧರ್ಮವಿಲ್ಲಾ. ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ

ನಾನು ಮಂಡಿಸಿದ ಈ ವಿಚಾರಗಳಿಗೆ ಸದಾ ಬದ್ದ. ಆರೋಗ್ಯಕರ ಚರ್ಚೆಗೆ ಸದಾ ಸಿದ್ಧ.

ಏನಂತೀರಿ?