ಐದು ರೂಪಾಯಿ ಡಾಕ್ಟರ್ ಶಂಕರೇಗೌಡ

ಇವತ್ತಿನ ದಿನ ಕಾಲದಲ್ಲಿ ದುಡಿಯುವ ಸಮಯದಲ್ಲಿ ಸರಿಯಾಗಿ ಎರಡು ಹೊತ್ತಿನ ಊಟ ಕಣ್ತುಂಬ ನಿದ್ದೆಯನ್ನೂ ಮಾಡದೇ, ಹೊಟ್ಟೆ ಬಟ್ಟೆ ಕಟ್ಟಿ ಅಷ್ಟೋ ಇಷ್ಟೋ ಉಳಿಸಿದ್ದನ್ನು ಒಂದು ಸಣ್ಣ ಖಾಯಿಲೆಯಿಂದ  ಹುಷಾರಾಗೋದಿಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯರನ್ನು ಬೈದು ಕೊಳ್ಳುತ್ತಲೇ,  ಲಕ್ಷಾಂತರ ರೂಪಾಯಿ ಹಣ ಆಸ್ಪತ್ರೆಗೆ ಕಟ್ಟಿ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ಇರುವಾಗ, ಮಣಿಪಾಲ್ ಅಂತಹ ಕಾಲೇಜಿನಲ್ಲಿ ಓದಿ ವೈದ್ಯಕೀಯ ಪದವಿಯನ್ನು ಪಡೆದು ದೇಶ ವಿದೇಶಗಳಲ್ಲಿ ಲಕ್ಷಾಂತರ ಹಣವನ್ನು ಸಂಪದಿಸಿ ನೆಮ್ಮದಿಯಾಗಿರುವ ಬದಲು ವೈದ್ಯೋ ನಾರಯಣೋ ಹರಿಃ ಎನ್ನುವುದನ್ನು ಅಕ್ಷರಶಃ ಪಾಲಿಸುವಂತೆ ಮಂಡ್ಯಾದ ಗ್ರಾಮೀಣ ಜನರಿಗೆ ದೇವರಂತೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ  ಐದು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯರಾದ ಡಾ. ಎಸ್‌. ಸಿ. ಶಂಕರೇಗೌಡವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆ ಅವರ ಯಶೋಗಾಥೆಯನ್ನು ನಮ್ಮ  ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

shank1ಶಂಕರೇಗೌಡರು ಹುಟ್ಟಿದ್ದು ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ. ಬಾಲ್ಯದಿಂದಲೂ ಓದಿನಲ್ಲಿ ಚುರುಕಾಗಿದ್ದ ಶಂಕರೇ ಗೌಡರು ತಮ್ಮ  ವೈದ್ಯಕೀಯ ಶಿಕ್ಷಣವನ್ನು ಉಡುಪಿ ಮಣಿಪಾಲ್ ಕಾಲೇಜಿನಲ್ಲಿ ಪಡೆದು  ಇತರೇ ವೈದ್ಯರಂತೆ ವಿದೇಶಕ್ಕೆ ಫಲಾಯನ ಮಾಡಿಯೋ ಇಲ್ಲವೇ ತಮ್ಮದೇ ನರ್ಸಿಂಗ್ ಹೋಮ್ ಕಟ್ಟಿಸಿಕೊಂಡು ಲಕ್ಷ ಲಕ್ಷಗಟ್ಟಲೇ ಹಣವನ್ನು ಸಂಪಾದಿಸುವವರೇ ಹೆಚ್ಚಾಗಿರುವ ಕಾಲದಲ್ಲಿ  ಆರ್ಥಿಕ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಬಹುತೇಕರಿಗೆ ಸೂಕ್ತವಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದನ್ನು ಮನಗಂಡು  ಸೂಕ್ತ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಸುಮ್ಮನಾಗದೇ ತಮ್ಮೂರಿನಿಂದ ಸುಮಾರು 12 ಕಿಮೀ ದೂರದ ಮಂಡ್ಯದಲ್ಲಿ 30 ವರ್ಷಗಳ ಹಿಂದೆ  ಸಣ್ಣದೊಂದು ಕ್ಲಿನಿಕ್ ಆರಂಭಿಸಿ ಚರ್ಮವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಕೈಗುಣ ಚೆನ್ನಾಗಿರುವ ಕಾರಣ ಕೇವಲ ಮಂಡ್ಯಾದ ರೋಗಿಗಳಲ್ಲದೇ, ದೂರದ ಬೆಂಗಳೂರು, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತಮಿಳುನಾಡು, ಒಡಿಶಾ ಮತ್ತು ಮುಂಬೈನಿಂದಲೂ ರೋಗಿಗಳು ಬರುತ್ತಾರೆ  ಎಂಬುದು ಅವರ ಹೆಗ್ಗಳಿಕೆಯಾಗಿದೆ.

ಹಾಗಾಗಿಯೇ ದೇಶದ ನಾನಾ ಭಾಗಗಳಿಂದ ಇವರ ಬಳಿ ಜನರು ಬಂದು ಚಿಕಿತ್ಸೆ ಪಡೆಯಲು ನಿತ್ಯ ನೂರಾರು ಜನ ಸಾಲುಗಟ್ಟಿ ನಿಲುತ್ತಾರೆ. ಕೇವಲ 5 ರೂಪಾಯಿಗಳಷ್ಟೇ ರೋಗಿಗಳಿಂದ ಹಣವನ್ನು ಪಡೆದರೂ ಇವರು ಬರೆದು ಕೊಡುವ ಔಷಧಿಗಳು ಕೂಡ ದುಬಾರಿಯಾಗಿರದೇ, ಕೇವಲ ನೂರರಿಂದ ಇನ್ನೂರು ರೂಪಾಯಿಯಲ್ಲೇ ಸಿಗುತ್ತದೆ. ಒಮ್ಮೆ ಇವರ ಬಳಿ ಬಂದು ಚಿಕಿತ್ಸೆ ಪಡೆದರೆ ಸಾಕು ಮತ್ತೆ ಮತ್ತೆ ಅವರ ಬಳಿ ಅಲೆಯುವ ಅವಶ್ಯಕತೆಯೂ ಇಲ್ಲ. ಅವರು ಒಮ್ಮೆ ನೀಡುವ ಔಷಧಿಯಿಂದಲೇ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬುದು  ಅವರಿಂದ ಚಿಕಿತ್ಸೆ ಪಡೆಯುವ ರೋಗಿಗಳ ನಂಬಿಕೆಯಾಗಿರುವ ಕಾರಣ ದಿನೇ ದಿನೇ ಅವರ ಜನಪ್ರಿಯರಾಗುತ್ತಿದ್ದಾರೆ.

ಇವರ ಬರಿ ಚಿಕಿತ್ಸೆ ಪಡೆಯಲು ಯಾರದ್ದೇ ಶಿಫಾರಸ್ಸಾಗಲಿ ಹಂಗಾಗಲೀ ಇಲ್ಲವೇ ಇಲ್ಲವಾಗಿದೆ. ರೋಗಿಯು ಬಡವನಾಗಿರಲೀ, ಬಲ್ಲಿದನಾಗಿರಲೀ,  ರಾಜಕಾರಣಿಯಾಗಿರಲೀ, ಇಲ್ಲವೇ ಉದ್ಯಮಿಯಾಗಿರಲೇ ಅಥವಾ ಹಿರಿಯ  ಅಧಿಕಾರಿಯೇ ಆಗಿದ್ದರೂ  ಇವರ ಬಳಿ ಎಲ್ಲರೂ ಸಮಾನರೇ. ಎಲ್ಲರು ಸರದಿಯ ಸಾಲಿನಲ್ಲಿಯೇ ನಿಂತು ಕೊಂಡು ಸರದಿ  ಬಂದಾಗ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುತ್ತಾರೆ. ಆದರೆ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಅಶಕ್ತರಿಗೆ ಪ್ರತ್ಯೇಕ ಸರತಿ ಸಾಲು ಇದೆ.  ಚಿಕಿತ್ಸೆಯ ನಂತರ ಎಲ್ಲರಿಂದಲೂ ಪಡೆಯುವುದು ಒಂದೇ ದರವಾದ್ದರಿಂದ ಅದೆಷ್ಟೋ ಜನರು ಮೂಗಿಗಿಂತ ಮೂಗಿನ ನತ್ತೇ ಭಾರ ಎನ್ನುವಂತೆ  ಇವರ ಚಿಕಿತ್ಸೆಯ ಹಣಕ್ಕಿಂತ ಇಲ್ಲಿಗೆ ಬರುವ ಬಸ್ ಚಾರ್ಜ ಹೆಚ್ಚಾಗಿರುತ್ತದೆ ಎಂದೇ ತಮಾಷೆ ಮಾಡುತ್ತಾರೆ.

shank3ಸಾಮಾನ್ಯವಾಗಿ ವೈದ್ಯರ ಚಿಕಿತ್ಸಾ ವೆಚ್ಚವನ್ನು ಐಎಂಎ(ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ನಿರ್ಧರಿಸುತ್ತದೆ. ಆದರೆ  ಶಂಕರೇ ಗೌಡರು ಇದಾವುದರ ಹಂಗಿಲ್ಲದೇ ತಮ್ಮ ಪಾಡಿಗೆ ತಾವು  ಸಂತೋಷದಿಂದ ಐದು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅನೇಕ ಬಾರಿ ತಮ್ಮ ಚಿಕಿತ್ಸೆಯ ದರವನ್ನು  ಹೆಚ್ಚಿಸಲು ಸಲಹೆ ನೀಡಿದರೂ ಅದಕ್ಕೆಲ್ಲಾ ಶಂಕರೇಗೌಡ್ರು ಸೊಪ್ಪೇ ಹಾಕದೇ, ಇನ್ನು ಅದಿಲ್ಲ ಇದಿಲ್ಲ ಎಂದು ಪದೇ ಪದೇ  ಒಂದಲ್ಲ ಒಂದು ಮುಷ್ಕರದಲ್ಲಿ ಭಾಗಿಗಳಾಗಿ ತಮ್ಮ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸುವ ವೈದ್ಯರಿಂದ ಸದಾಕಾಲವೂ ದೂರವಿದ್ದು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ರೋಗಿಗಳ ಚಿಕಿತ್ಸೆಗೆಂದೇ ವೈದ್ಯರಿರಬೇಕು. ರೋಗಿಗಳಿಗೆ ಚಿಕಿತ್ಸೆ ಕೊಡದ ವೈದ್ಯರು ಇಲ್ಲವೇ ರೋಗಿಗಳಿಂದ ಸುಲಿಗೆ ಮಾಡುವವರು ನಿಜವಾದ  ವೈದ್ಯರೇ ಅಲ್ಲಾ ಎಂದು ಎನ್ನುವುದು ಅವರ ಧ್ಯೇಯವಾಗಿದೆ. ನನಗೆ ನನ್ನ ವೈದ್ಯಕೀಯ ಸೇವೆಯಲ್ಲೇ ತೃಪ್ತಿ ಇದೆ. ಹಾಗಾಗಿ ನಾನು ಸದಾಕಾಲವು ಹೀಗೆಯೇ ಇದೇ ರೀತಿಯಲ್ಲಿಯೇ  ಮುಂದುವರೆಯುತ್ತೇನೆ  ಎನ್ನುತ್ತಾರೆ  ಡಾ.ಶಂಕರೇಗೌಡರು.

shank2ಡಾ. ಶಂಕರೇಗೌಡರು ವೃತ್ತಿಯಲ್ಲಿ ವೈದ್ಯರಾಗಿದ್ದರೇ, ಪ್ರವೃತ್ತಿಯಲ್ಲಿ ಅವರೊಬ್ಬ ಯಶಸ್ವಿ ರೈತರು ಮತ್ತು ಸಜ್ಜನಿಕೆಯ ರಾಜಕಾರಣಿಯೂ  ಆಗಿದ್ದಾರೆ. ತಮ್ಮ ಸ್ವಗ್ರಾಮ ಶಿವಳ್ಳಿಯಲ್ಲಿ ಹತ್ತಾರು ಎಕರೆ ಜಮೀನು ಹೊಂದಿರುವ ಶಂಕರೇಗೌಡರು ಪ್ರತಿ ವರ್ಷ ನೂರಾರು ಟನ್ ಕಬ್ಬು ಮತ್ತು ಮನೆಗೆ ಅಗತ್ಯವಿರುವಷ್ಟು ಭತ್ತ ಬೆಳೆಯುತ್ತಾರೆ. ಹಾಗಾಗಿಯೇ ಅವಾ ದೈನಂದಿನ ಚಟುವಟಿಕೆ ಉಳಿದವರಿಗಿಂತಲೂ ಸ್ವಲ್ಪ ವಿಭಿನ್ನವಾಗಿದೆ. ಮಂಡ್ಯದ ಬಂಡೀಗೌಡ ಮೂರನೇ ತಿರುವಿನಲ್ಲಿರುವ ಮನೆಯಲ್ಲಿ ವಾಸಿಸುವ ವೈದ್ಯರು,  ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಪ್ರಾಥಃರ್ವಿಧಗಳನ್ನು ಮುಗಿಸಿದ  ನಂತರ ಸುಮಾರು ಒಂದು ಗಂಟೆ ಕಾಲ ದಿನಪತ್ರಿಕೆಗಳ ಓದಿದ ಬಳಿಕ ಊರಿನಲ್ಲಿರುವ ತಮ್ಮ ಜಮೀನಿನಲ್ಲಿ ಇತರೇ ರೈತರಂತೆಯೇ ಸುಮಾರು ಎರಡು ಗಂಟೆ ಕಾಲ ಜಮೀನಿನಲ್ಲಿ ಬೇಸಾಯ ಮಾಡಿ ನಂತರ  ಅವರಿಗಾಗಿಯೇ ಅಲ್ಲೇ ಕಾಯುತ್ತಿರುವ  ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.

shank3ಆದಾದ ನಂತರ ಮನೆಗೆ ಬಂದು ಸ್ನಾನ ತಿಂಡಿ ಇಲ್ಲವೇ ಊಟವನ್ನೇ ಮುಗಿಸಿ ಚಿಕಿತ್ಸೆ ನೀಡಲು ಆರಂಭಿಸಿದರೆ ರಾತ್ರಿ ಎಂಟು ಗಂಟೆವರೆಗೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇಿ ಇರುತ್ತಾರೆ. ಕೆ.ಆರ್.ರಸ್ತೆಯಲ್ಲಿರುವ ಆದಿಚುಂಚನಗಿರಿ ಬಿಲ್ಡಿಂಗ್ ನಲ್ಲಿ ತಮ್ಮ ಕ್ಲಿನಿಕ್ ಹೊಂದಿರುವ ವೈದ್ಯರು  ಇತರೇ ಕ್ಲಿನಿಕ್ಕಿನಂತೆ ಭಾರೀ  ಐಶಾರಾಮ್ಯವಾಗಿರದೇ ಸಾಧಾರಣವಾಗಿದ್ದರೂ ಅವರ ಕೈಗುಣ ಚೆನ್ನಾಗಿರುವ ಕಾರಣ ಜನರು ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಬಾರಿ ರೋಗಿಗಳು ಕ್ಲೀನಿಕ್ಕಿಗೆ ಬರಲೂ ಸಾಧ್ಯಾವಾದೇ ಇರುವ ಹೋಗುತ್ತಿರುವ ದಾರಿಯ ಮಧ್ಯದಲ್ಲಿ ಕೈ ಅಡ್ಡ ಹಾಕಿ ನಿಲ್ಲಿಸಿದರೆ, ಅಲ್ಲೇ ಯಾವುದೋ ಅಂಗಡಿಯ ಜಗುಲಿಯ ಮೇಲೆ ಕುಳಿತೋ ಇಲ್ಲವೇ  ರಸ್ತೆಯ ಪಕ್ಕದಲ್ಲಿ ನಿಂತೂ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಗುಣಪಡಿಸಲು ಸಾಧ್ಯವಾಗದ ಅನೇಕ ರೋಗಗಳನ್ನು ಗುಣಪಡಿಸಿರುವ ವೈದ್ಯರ ಬಳಿ ಒಂದು ಮೊಬೈಲ್ ಫೋನಾಗಲೀ, ಕಂಪ್ಯೂಟರ್ ಅಥವಾ ಇಂಟರ್ನೆಟ್ ಇಲ್ಲದಿರುವುದು ಅಚ್ಚರಿಯ ವಿಷಯವಾಗಿದೆ. ಅವರ ಕ್ಲಿನಿಕ್‌ನಲ್ಲಿ ಕೇವಲ ಒಂದು ದೂರವಾಣಿ ಇದ್ದು ಅದನ್ನೂ ಸಹಾ ಯಾವುದೇ ಸಹಾಯಕರು ಅಥವಾ ಕಾಂಪೌಂಡರ್ಗಳು ಇಲ್ಲದೇ ಅವೆಲ್ಲಾ ಕೆಲಸವನ್ನೂ ವೈದ್ಯರೇ ಸ್ವತಃ ನಿರ್ವಹಿಸುತ್ತಾರೆ.

ಈ ರೀತಿಯ ಸರಳ ಸಜ್ಜನರು ರಾಜಕೀಯಕ್ಕೆ ಬಂದಲ್ಲಿ ಹೆಚ್ಚಿನ ಸೇವೆ ಸಲ್ಲಿಸಬಹುದು ಎನ್ನುವ ಕಾರಣದಿಂದಾಗಿ, ತಮ್ಮ  ಕ್ಷೇತ್ರದ ಜನರ ಬಲವಂತಕ್ಕೆ ಮಣಿದು ಕಳೆದ ಜಿಲ್ಲಾ ಪಂಚಾಯತ್  ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡೂವರೆ ವರ್ಷಗಳ ಕಾಲ ಮಂಡ್ಯ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರು. ಇದೇ  ಉತ್ಸಾಹದಲ್ಲಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿಯೂ ಪಕ್ಷೇತರರಾಗಿ ಸ್ಪರ್ಧಿಸಿ ಜನ ಬೆಂಬಲ ಸಿಗದೇ ಪರಾಭವಗೊಂಡು ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಡಾ.ಶಂಕರೇಗೌಡ ಅವರು ಸಮಾಜಕ್ಕೆ ಸಲ್ಲಿಸಿದ ಈ ಅಸಾಧಾರಣವಾದ ಸೇವೆಗಾಗಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದಾರೆ

 • ಕಲ್ಪವೃಕ್ಷ ಟ್ರಸ್ಟ್ ಕರ್ನಾಟಕ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಿದೆ.
 • ಜೀ ಕನ್ನಡ ವಾಹಿನಿಯು 2019ರಲ್ಲಿ  ಹೆಮ್ಮೆಯ ಕನ್ನಡಿಗ  ಪ್ರಶಸ್ತಿ ನೀಡಿ ಗೌರವಿಸಿದೆ.
 • ಅವರ ನಿಸ್ವಾರ್ಥ ಕೆಲಸಕ್ಕಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಲೇಖನವನ್ನು ಬರೆದು  ಗೌರವ ಸಲ್ಲಿಸಿವೆ.

shank4ಕೊರೋನಾ ಮಹಾಮಾರಿಯ ಸಂಧರ್ಭದಲ್ಲಿಯೂ ಯಾವುದಕ್ಕೂ ಜಗ್ಗದೆ, ಕುಗ್ಗದೆ ನಿರಂತರವಾಗಿ ಎಂದಿನಂತೆ ಚಿಕಿತ್ಸೆ ನೀಡುತ್ತಲೇ ಇದ್ದರು. ವರ್ಷದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ  ವಿಶ್ರಾಂತಿ ದೃಷ್ಟಿಯಿಂದ ಮನೆಯಲ್ಲೇ ಕ್ಲಿನಿಕ್ ಮಾಡಿಕೊಂಡು ಬೆಳಿಗ್ಗೆ 8ರಿಂದ 9.30ರವರೆಗೆ ಹಾಗೂ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆವರೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಂದೆಲ್ಲಾ ಇವರು ಮನೆಗೆ ಬರುವವರೆಗೂ ಆತಂಕದಲ್ಲೇ ಇರುತ್ತಿದ್ದ ಶಂಕ್ರೇಗೌಡರ ಮಡದಿ ಮತ್ತು ಮಗಳಿಗೆ ಈಗ ವೈದ್ಯರು ಮನೆಯಲ್ಲೇ ಇದ್ದು ಚಿಕಿತ್ಸೆ  ಕೊಡುತ್ತಿರುವುದು ಅವರ ಮನೆಯವರಿಗೆ ತುಸು ನೆಮ್ಮದಿ ನೀಡಿದೆ.

ವರ್ಷದ 365 ದಿನವೂ ಬೇಸರಿಸಿಕೊಳ್ಳದೇ, ಇಷ್ಟು ತಡರಾತ್ರಿಯವರೆಗೂ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡುತ್ತೀರಿ? ಎಂದು ಪ್ರಶ್ನಿಸಿದ್ದಕ್ಕೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾಗಿದ್ದ ಡಾ.ಕೆ.ಗೋವಿಂದ ಅವರೂ ಸಹಾ ಹೀಗೆಯೇ ಹಗಲಿರುಳು ಎನ್ನದೇ ಚಿಕಿತ್ಸೆ ಕೊಡುತ್ತಿದ್ದದ್ದೇ ನನಗೆ ಸ್ಫೂರ್ತಿ ಎನ್ನುತ್ತಾರೆ ಗೌಡರು.

ಈ ಮೊದಲೇ ಹೇಳಿದಂತೆ ವೈದ್ಯೋ ನಾರಯಣೋ ಹರಿಃ ಎಂದು ವೈದ್ಯರನ್ನು ದೇವರ ಸಮಾನ ಎಂದು  ಅನಾದಿ ಕಾಲದಿಂದಲೂ ನಂಬಿರುವವರಿಗೆ, ಇತ್ತೀಚಿಗೆ  ಎಲ್ಲೆಡೆಯೂ  ವಾಣಿಜ್ಯೀಕರಣವಾಗಿ  ಅನೇಕ ವೈದ್ಯರು ದುಬಾರಿ ಶುಲ್ಕವನ್ನು ವಿಧಿಸುವುದಲ್ಲದೇ, ಔಷಧಿ ಕಂಪನಿಗಳು ಮತ್ತು ಸುತ್ತಮುತ್ತಲಿನ ಮೆಡಿಕಲ್ ಸ್ಟೋರ್ಗಳೊಂದಿಗೆ ಶಾಮೀಲಾಗಿ, ಅವರು ಕೊಡುವ ಕಮಿಷನ್ ಆಸೆಗಾಗಿ ದುಬಾರೀ ಔಷಧಿಗಳನ್ನೇ ಬರೆಯುವ ದಿನಗಳಲ್ಲಿ,  ವೃತ್ತಿ ಗೌರವ  ಅದರ್ಶ ಮತ್ತು ತತ್ವಗಳನ್ನು ಉಳಿಸಿಕೊಂಡು ಗ್ರಾಮೀಣ ಜನರಿಗೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ  ಡಾ. ಶಂಕ್ರೇಗೌಡರು ಈಗ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾವೀ ವೈದ್ಯರಿಗೆ ಖಂಡಿತವಾಗಿಯೂ ಮಾದರಿಯಾಗಬಲ್ಲರು ಇಂತಹ ಮಾನವೀಯತೆ ಮತ್ತು ಸೇವಾ ಮನೋಭಾವನೆಯನ್ನು  ಹೊಂದಿರುವ ಶ್ರೀ ಡಾ. ಶಂಕರೇ ಗೌಡರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ವಿಶ್ವ ಆರೋಗ್ಯ ದಿನಾಚರಣೆ

WHD1ವಿಶ್ವ ಆರೋಗ್ಯ ದಿನವು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು, ಪ್ರತಿವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ. ಆರೋಗ್ಯದ ಕಾಳಜಿ ಕುರಿತಾಗಿ ವಿಶ್ವಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷವೂ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ವೆಂದು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ಈ ವಿಶ್ವ ಆರೋಗ್ಯ ದಿನಾಚರಣೆಯಂದು ವಿಶ್ವದಾದ್ಯಂತ ಹರಡಿರುವ ಮಹಾಮಾರಿ ಕೊರೋನಾದ ವಿರುದ್ಧ ಆರೋಗ್ಯ ರಕ್ಷಣೆ ನೀಡುವಲ್ಲಿ ಹಗಲಿರಳೂ ಶ್ರಮವಹಿಸುತ್ತಿರುವ ವೈದ್ಯರು, ದಾದಿಯರು, ಶುಶ್ರೂಷಕಿಯರು ಮತ್ತು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ಅಭಿನಂದನೆಗಳನ್ನು ತಿಳಿಸುವುದರ ಜೊತೆಗೆ ಸಾಧ್ಯವಾದಲ್ಲಿ ಅವರೊಂದಿಗೆ ಸೇರಿಕೊಂಡು ನಮ್ಮ ಕೈಲಾದ ಮಟ್ಟಿಗೆ ಆ ಮಹಾಸೇವೆಯಲ್ಲಿ ಪಾಲ್ಗೊಳ್ಳೋಣ.

VHD3ಉತ್ತಮ ರೀತಿಯ ಬದುಕಿಗೆ ಆರೋಗ್ಯವೂ ಅತ್ಯಗತ್ಯ. ಆರೋಗ್ಯವಿದ್ದಲ್ಲಿ ಮಾತ್ರವೇ ಆಯುಷ್ಯ ಎಂಬುದನ್ನು ಎಲ್ಲರೂ ಅರಿತು ಕೊಳ್ಳಬೇಕು. ಇತ್ತೀಚೆಗೆ ಕೂರೂನಾ ಕುರಿತಂತೆ ಕುಚೋದ್ಯವಾಗಿ, ದೊಡ್ಡ ಫಜೀತಿ ಆಗಿದೆ ಮಾರ್ರೆ. ಆಗಾಗ ಕೈ ತೊಳೆದು ತೊಳೆದೂ, ಕೈಯಲ್ಲಿರುವ ಧನ ರೇಖೆಯೇ ಅಳಿಸಿಹೋಗುತ್ತಿದೆ. ಕೈ ತೊಳಿಲಿಲ್ಲಾಂದ್ರೆ ಆಯುಷ್ಯ ರೇಖೆಗೆ ಅಳಿಸಿ ಹೋಗುವ ಭಯ ಎಂಬ ಸಂದೇಶವನ್ನು ಹರಿಬಿಟ್ಟರು. ಅದಕ್ಕೆ ಪ್ರತ್ಯುತ್ತರವಾಗಿ ಕೈಇದ್ದರೆ ಮಾತ್ರವೇ ಧನರೇಖೆ ಕಾಣೋದು. ಮೊದಲು ಆಯುಷ್ಯ ಗಟ್ಟಿ ಮಾಡ್ಕೊಳ್ಳೋಣ. ಆಯಸ್ಸು ಇದ್ರೆ ಕೈ ಇರುತ್ತದೆ. ಅದೇ ಕೈಯಿಂದ ಕೈತುಂಬಾ ಹಣವನ್ನು ಎಷ್ಟು ಬೇಕಾದ್ರೂ ಸಂಪಾದಿಸಬಹುದು ಎಂದು ಪ್ರತ್ಯುತ್ತರಿಸಿದೆ.

WHD2ಅದೇಕೋ ಏನೋ, ನಮ್ಮ ದೇಶದಲ್ಲಿ ಆರೋಗ್ಯದ ಕುರಿತಾದ ಅರಿವು ಸ್ವಲ್ಪ ಕಡಿಮೆಯೇ ಎಂಬುದು ವಿಷಾದನೀಯ ಸಂಗತಿ. ಭಾರತ ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದೆ. ದೇಶದ ಜನರ ಆರೋಗ್ಯ ಸುಧಾರಣೆಗಳಿಗೆ ಹಲವಾರು ವರ್ಷಗಳಿಂದ ಹತ್ತಾರು ಕ್ರಮಗಳನ್ನು ತೆಗೆದುಕೊಂಡಿದ್ದರೂ ಆರೋಗ್ಯ ಸುಧಾರಿಸಿಲ್ಲ. ಅದರಲ್ಲೂ ಮಹಿಳೆಯರಲ್ಲಿ ಅನೀಮಿಯಾ, ಇನ್ನೂ ನಿಲ್ಲದ ಬಾಲ್ಯ ವಿವಾಹ ಪದ್ದತಿ, ಆಟ ಆಡಿಕೊಂಡು ನಲಿಯುವ ಚಿಕ್ಕ ವಯಸ್ಸಿಗೇ ಮದುವೆಯಾಗಿ ಮಕ್ಕಳನ್ನು ಹೆರುವುದರಿಂದ, ಹುಟ್ಟುವ ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ರಕ್ತ ಕಣಗಳ ಕೊರತೆ, ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳಲ್ಲಿ ಅಸಂತೃಪ್ತಿ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ ಎಲ್ಲವೂ ತಲೆ ಎತ್ತಿ ನಿಂತಿವೆ. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಬಡತನ ಮತ್ತು ಶಿಕ್ಷಣದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳೇ ಆರೋಗ್ಯದ ಕೆಡುಕಿಗೆ ತಳಹದಿಯಾಗಿದೆ.

ನಮ್ಮ ರಾಜಕೀಯ, ಸಾಮಾಜಿಕ ಮತ್ತು ವಾಣಿಜ್ಯ ನಿರ್ಧಾರಗಳಿಂದಾಗಿ ಹವಾಮಾನದಲ್ಲಿ ವೈಪರೀತ್ಯವನ್ನುಂಟು ಮಾಡುತ್ತಿರುವ ಪರಿಣಾಮವಾಗಿ ಆರೋಗ್ಯ ಬಿಕ್ಕಟ್ಟನ್ನು ಹೆಚ್ಚಿಸುತ್ತಿದೆ. ವಿಪರೀತವಾದ ಇಂಧನಗಳ ಬಳಕೆಯ ಪರಿಣಾಮವಾಗಿ ವಾಯುಮಾಲಿನ್ಯವು ಹೆಚ್ಚಾಗಿ ನಾವಿಂದು ಅನಾರೋಗ್ಯಕರ ಗಾಳಿಯನ್ನೇ ಉಸಿರಾಡುವಂತಾಗಿದೆ. ಎಗ್ಗಿಲ್ಲದೇ ಕೊಳವೇ ಭಾವಿಗಳನ್ನು ತೋಡುವ ಮೂಲಕ ಅಂತರ್ಜಲವನ್ನು ಬರಿದು ಮಾಡುತ್ತಿದ್ದರೆ, ಕೊಳಚೇ ನೀರನ್ನು ನದಿಗಳಿಗೆ ಬಿಡುವ ಮೂಲಕ ಶುಭ್ರವಾಗಿದ್ದ ನದಿ ನೀರನ್ನೂ ಕೊಳಕು ಮಾಡಿಯಾಗಿದೆ. ನೂರಾರು ವರ್ಷಗಳಾದರೂ ಮಣ್ಣಿನಲ್ಲಿ ಕೊಳೆಯದ ಪ್ಲಾಸ್ಟಿಕ್‌ಗಳನ್ನು ನಮ್ಮ ದೈನಂದಿನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿರುವುದೂ ಕ್ಯಾನ್ಸರ್ ಮತ್ತು ಹೃದ್ರೋಗವನ್ನು ಹೆಚ್ಚುವಲ್ಲಿ ಮಹತ್ತರ ಪಾತ್ರವನ್ನು ಪಡೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ.

ಹಾಗೆಂದ ಮಾತ್ರಕ್ಕೆ ಈ ಸಮಸ್ಯೆಗಳು ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗದೇ, ಪ್ರಪಂಚಾದ್ಯಂತ ಇದೇ ರೀತಿಯ ಸಮಸ್ಯೆಗಳು ಎಲ್ಲ ಕಡೆಯಲ್ಲೂ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಉತ್ತಮ ಆರೋಗ್ಯಕ್ಕಾಗಿ ಸತ್ವಯುತ ಆಹಾರಗಳು, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ-ಬೆಳಕು, ಸ್ವಚ್ಛ ಪರಿಸರ, ನೆಮ್ಮದಿ ಮತ್ತು ಮನರಂಜನೆ ಅತ್ಯಗತ್ಯವಾದದ್ದು.

ನಾವಿಂದು ದೈಹಿಕ, ಮಾನಸಿಕ ಒತ್ತಡದಿಂದ ಜೀವನಶೈಲಿ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕೇವಲ ಆಸ್ಪತ್ರೆ, ಔಷಧ, ವೈದ್ಯರಿಂದಲೇ ಆರೋಗ್ಯ ಸುಧಾರಣೆಯಾಗುತ್ತದೆಂದು ನಂಬಿದರೆ ಅದು ತಪ್ಪು ಕಲ್ಪನೆ. ರೋಗ ಬಾರದಂತೆ ತಡೆಗಟ್ಟುವಿಕೆಯೇ ಚಿಕಿತ್ಸೆಗಿಂತ ಉತ್ತಮವಾದುದು. ಆದ್ದರಿಂದ ಪ್ರತಿಯೊಬ್ಬರೂ ಈ ಕೆಳಗೆ ತಿಳಿಸಿದಂತೆ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಚ್ಚ ಅರೋಗ್ಯದತ್ತ ಹರಿಸೋಣ ಚಿತ್ತ.

 • ರಾತ್ರಿ ಬೇಗ ಮಲಗೋಣ ಮತ್ತು ಬೆಳಿಗ್ಗೆ ಬೇಗ ಏಳೋಣ. ಅರೋಗ್ಯವಂತ ಮನುಷ್ಯರಿಗೆ ಕನಿಷ್ಟ 6 -7 ಗಂಟೆ ನಿದ್ರೆ ಅವಶ್ಯಕತೆಯಿದ್ದು, ಮಕ್ಕಳು, ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತರಿಗೆ ಮಾತ್ರ ಅದಕ್ಕಿಂತ ಹೆಚ್ಚಿನ ನಿದ್ದೆಯ ಅಗತ್ಯವಿದೆ.
 • ಬ್ರಾಹ್ಮಿಮುಹೂರ್ತದಲ್ಲೆದ್ದು (5-5.45ರೊಳಗೆ) ಕನಿಷ್ಠ 650 ಮಿ.ಲೀಟರ್ ನಿಂದ 1.2 ಲೀಟರ್ ಉಗುರು ಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯುವುದು ಉತ್ತಮ ಅಭ್ಯಾಸ
 • ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಅಥವಾ ಟೀ ಬೇಡ. ಎದ್ದ ತಕ್ಷಣ ದಿನನಿತ್ಯದ ಶೌಚಾದಿ ಕರ್ಮಗಳನ್ನು ಮುಗಿಸಿ ಸ್ವಲ್ಪ ಕಾಲ ದೀರ್ಘ ನಡಿಗೆ ಅಥವಾ ವ್ಯಾಯಾಮ ಮಾಡಿ ಎದ್ದು2 ಘಂಟೆಯಾದ ನಂತರ ಯಾವುದಾದರೂ ಹಣ್ಣನ್ನು ಅಥವಾ ತಿಂಡಿಯನ್ನು ಸೇವಿಸುವುದು ಉತ್ತಮ.
 • ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ತಪ್ಪಿಸಬಾರದು. ಕಾಫಿ, ಟೀ ಕುಡಿಯಲೇ ಬೇಕಿದ್ದಲ್ಲಿ ತಿಂಡಿ ಆದ ನಂತರ ಕನಿಷ್ಟ ಒಂದುವರೆ ಗಂಟೆ ಬಿಟ್ಟು ಕುಡಿಯಿರಿ.
 • ಬೆಳಗಿನ ಉಪಹಾರದಲ್ಲಿ ಮಾಮೂಲಿ ಇಡ್ಲಿ, ದೋಸೆ, ಉಪ್ಪಿಟ್ಟು ಇತ್ಯಾದಿಗಳ ಜೊತೆಗೆ ಯಾವುದಾದರೊಂದು ಋತುವಿಗನುಗುಣವಾದ ತಾಜಾಹಣ್ಣು, ತರಕಾರಿ ಸಲಾಡ್, ಸ್ವಲ್ಪ ಒಣಹಣ್ಣುಗಳಿರಲಿ. ಜೊತೆಗೆ ಮೊಳಕೆ ಕಾಳುಗಳಿರಲಿ. ಜಂಕ್ ಪುಡ್ ಗಳಿಂದ ಮತ್ತು ಕರಿದ ಕುರುಕಲು ಪದಾರ್ಥಗಳನ್ನು ನಿರ್ಭಂಧಿಸೋಣ.
 • ಊಟಕ್ಕೆ ಅಥವಾ ತಿಂಡಿಗೆ ಕನಿಷ್ಟ ಅರ್ಧ ಗಂಟೆ ಮೊದಲು ನೀರು ಕುಡಿಯುವುದನ್ನು ನಿಲ್ಲಿಸೋಣ ಮತ್ತು ಊಟವಾದ ನಂತರ 2 ತಾಸು ಬಿಟ್ಟು ಕುಡಿಯೋಣ. ಊಟದ ಜೊತೆಗೆ ನೀರು ಕುಡಿಯುವುದು ಮತ್ತು ಊಟದ ಮಧ್ಯ ಮಾತನಾಡದಿರುವುದು ಒಳಿತು.
 • ಬೆಳಿಗ್ಗೆ 8 ಘಂಟೆಯೊಳಗೆ ತಿಂಡಿ, ಮಧ್ಯಾಹ್ನ 1-2 ಗಂಟೆಯೊಳಗೆ ಊಟದಲ್ಲಿ ಮುದ್ದೆ/ರೊಟ್ಟಿ/ಚಪಾತಿ, ಅನ್ನಾ, ಸಾರು, ಪಲ್ಯ, ಕೋಸಂಬರಿ, ಇತ್ಯಾದಿ ಒಳಗೊಂಡಿರಲಿ ಮತ್ತು ರಾತ್ರಿ 8 ಘಂಟೆಯೊಳಗೆ ರಾತ್ರಿಯ ಲಘುಬೋಜನ ಸೇವಿಸಬೇಕು.
 • ಒಮ್ಮೆಲೇ ಅತಿಯಾಗಿ ತಿನ್ನುವುದರ ಬದಲು ಅದೇ ಆಹಾರವನ್ನು ಪ್ರತೀ ಎರಡು ಗಂಟೆಗಳಿಗೊಮ್ಮೆ ತಿಂದಲ್ಲಿ ಉತ್ತಮವಾಗಿ ಜೀರ್ಣವಾಗಿ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ
 • ಇನ್ನು ಸೇವಿಸುವ ಯಾವುದೇ ಆಹಾರವನ್ನು ನಿಧಾನವಾಗಿ ಅಗಿದು ಜಗಿದು (ಕನಿಷ್ಠ 20-25 ಬಾರಿ) ಸೇವಿಸೋಣ. ನಮ್ಮ ಬಾಯಿಗಳಲ್ಲಿ ಹಲ್ಲುಗಳಿರುವುದೇ ಹೊರತು, ಹೊಟ್ಟೆಯಲ್ಲಿಲ್ಲ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಜೀರ್ಣಕ್ರಿಯೆ ಸುಲಲಿತವಾಗಿ ಆಗಿ ಮಲಬದ್ಧತೆಯಾಗುವುದಿಲ್ಲ ಮತ್ತು ಜೊತೆಗೆ ಬೊಜ್ಜು ಬರುವುದಿಲ್ಲ.
 • ರಾತ್ರಿ ಊಟಮಾಡಿದ ತಕ್ಷಣವೇ ಮಲಗಲು ಹೋಗದೇ ಕನಿಷ್ಟ ಪಕ್ಷ ಊಟವಾದ ನಂತರ 2 ಗಂಟೆ ಆದ ಮೇಲೆ ನಿದ್ದೆ ಮಾಡೋಣ. ಅಂದರೆ ಸುಮಾರು 8 ಗಂಟೆಗೆ ಊಟ ಮಾಡಿ 10 ಗಂಟೆಗೆ ನಿದ್ದೆ ಮಾಡೋಣ. ಈ ಮಧ್ಯದಲ್ಲಿ ಸ್ವಲ್ಪ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಮನರಂಜನೆ ಇರಲಿ.
 • ನಮ್ಮ ಆಹಾರದಲ್ಲಿ 5 ಬಿಳಿ ವಿಷಗಳು ಅಂದರೆ, ಸಕ್ಕರೆ, ಮೈದಾ, ಬಿಳಿಅಕ್ಕಿ, ಉಪ್ಪು, ಸಂಸ್ಕರಿಸದೇ ಇರುವ ಹಾಲು (ಹಾಲಿನ ಬದಲು ಕಡೆದ ಮಜ್ಜಿಗೆ ಸೇವನೆ ಅತ್ಯುತ್ತಮ) ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸೋಣ.
 • ಈಗಾಗಲೇ ನಾವು ಬಳಸುತ್ತಿರುವ ಅನೇಕ ಆಹಾರಗಳಿಂದ ಹಲವಾರು ರಾಸಾಯನಿಕಗಳು ನಮ್ಮ ಶರೀರವನ್ನು ಸೇರುತ್ತಿವೆ. ಅದರ ಜೊತೆಗೆ ಕೃತಕ ಬಣ್ಣ, ಪ್ರಿಸರ್ವೇಟಿವ್‌ ಬಳೆಸಿದ ಆಹಾರಗಳನ್ನು ತಿನ್ನುವುದನ್ನು ನಿಲ್ಲಿಸೋಣ.
 • ಆದಷ್ಟೂ ತಾಜ ತಾಜಾ ಆಹಾರಗಳನ್ನು ಸೇವಿಸುವ ಮೂಲಕ ಫ್ರಿಡ್ಜನಲ್ಲಿಟ್ಟ ತಂಪು ಪಾನಿಯಗಳು, ಇನ್ನಿತರ ರೆಡಿಮೇಡ್ ಪಾನಿಯಗಳು ಬೇಡ. ನಮ್ಮ ಆಹಾರದಲ್ಲಿ ಧನಾತ್ಮಕ ಆಹಾರ ಅಂದರೆ ಹೆಚ್ಚು ಹೆಚ್ಚು ಪ್ರಕೃತಿದತ್ತ ಹಣ್ಣು, ತರಕಾರಿ ಸೇವನೆ ಇರಲಿ.
 • ದಿನದಲ್ಲಿ ಕನಿಷ್ಟ 3-4 ಲೀಟರ್ ನೀರು ಸೇವನೆ ಅಗತ್ಯ. ಯಾಕೆಂದರೆ 7 ಮೀಟರ್ ಉದ್ದದ ಜೀರ್ಣಾಂಗ ವ್ಯೂಹದ ಶುದ್ಧತೆಗಾಗಿ ಕನಿಷ್ಠ 4 ಲೀಟರ್ ನೀರು ಅಗತ್ಯ. ರಾತ್ರಿ 7 ಗಂಟೆಗೆ ನೀರು ಕುಡಿಯುವುದನ್ನು ನಿಲ್ಲಿಸಿ, ಇಲ್ಲವಾದಲ್ಲಿ ಪದೇ-ಪದೇ ನಿದ್ರಾ ಭಂಗವಾಗುತ್ತದೆ.
 • ನೀರು ಆಹಾರಕ್ಕಿಂತ ನಮಗೆ ಹೆಚ್ಚು ಶಕ್ತಿ ಸಿಗುವುದು ಉಸಿರಾಡುವ ಗಾಳಿಯಿಂದ (ಶೇ.54ರಷ್ಟು). ಆದ್ದರಿಂದ ದೀರ್ಘವಾಗಿ ಉಸಿರಾಡಲು ಪ್ರಯತ್ನಿಸಿ.
 • ಲಂಘನಂ ಪರಮೌಷಧಂ ಎಂದರೆ ಅನೇಕ ರೋಗಗಳಿಗೆ ಉಪವಾಸವೇ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನದೇ, ಅಗಾಗ ವ್ರತಾಚರಣೆಯ ರೂಪದಲ್ಲಿ ಉಪವಾಸಗಳನ್ನು ಮಾಡೋಣ.
 • ಕಷ್ಟಪಟ್ಟು ಬೆವರು ಸುರುಸುವಿಕೆ ಇಂದು ಮಾಯವಾಗಿದೆ. ಎಲ್ಲವೂ ಕೇವಲ ಎರಡು ಬೆರಳಿನಿಂದ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಕನಿಷ್ಟ 1 ಗಂಟೆಗಳ ಕಾಲ ವಾಕಿಂಗ್, ಸ್ವಿಮ್ಮಿಂಗ್, ಜಾಗಿಂಗ್, ಯೋಗ, ಡ್ಯಾನ್ಸಿಂಗ್ ಇತ್ಯಾದಿಗಳನ್ನು ಮಾಡಬೇಕು. ಎಲ್ಲರೂ ಒಟ್ಟಿಗೆ ಸೇರಿ ಸ್ನೇಹಿತರೊಂದಿಗೆ ಮಾಡುವ ವ್ಯಾಯಾಮ ಅಥವಾ ಯೋಗಾಭ್ಯಾಸಗಳನ್ನು ಹೆಚ್ಚು ದಿನ ಮುಂದುವರೆಸಬಹುದು.
 • ಮಧ್ಯಪಾನ, ಧೂಮಪಾನ ಇನ್ನಿತರ ದುಶ್ಚಟಗಳಿಂದ ದೂರವಿರಿ.
 • ಧನಾತ್ಮಕ ಚಿಂತನೆಯಿಂದ, ಪರೋಪಕಾರದಿಂದ, ಅಧ್ಯಾತ್ಮಿಕ ಚಿಂತನೆಗಳಿಂದ, ಸಜ್ಜನರ ಸಂಗದಿಂದ, ಮನಸ್ಸು ಸಂತುಲತೆಯಿಂದಿದ್ದಾಗ ಆರೋಗ್ಯ ಸುಧಾರಿಸುವುದು.

ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ ಎನ್ನುತ್ತದೆ ನಮ್ಮ ಆರೋಗ್ಯ ಶಾಸ್ತ್ರ. ಹಾಗಾಗಿ ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಗೊಳ್ಳಬಹುದಾದರೆ ಅದೇ ಆರೋಗ್ಯ. ಆದರೆ ಇಂದಿನ ಕಲಿಯುಗದಲ್ಲಿ ನಾವು ಮನುಷ್ಯರು ಮಾತ್ರ ಬೇರೆ ಜೀವಿಗಳಿಗಿಂತ ಭಿನ್ನವಾಗಿ ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಇದೇ ನಮ್ಮ ಅನಾರೋಗ್ಯದ ಗುಟ್ಟು. ಆದ್ದರಿಂದ ನಾವು ಪರಿಸರವನ್ನು ಪೋಷಿಸಿ ಪ್ರಕೃತಿನಿಯಮಗಳಿಗನುಗುಣವಾಗಿ ಜೀವನ ನಡೆಸಿ ಒಳ್ಳೆಯ ಗಾಳಿ, ಒಳ್ಳೆಯ ನೀರು, ಒಳ್ಳೆಯ ಆಹಾರ ಇವುಗಳನ್ನು ಪಡೆದು ಉತ್ತಮ ದೈಹಿಕ ಚಟುವಟಿಕೆಯೊಂದಿಗೆ ಧನಾತ್ಮಕ ಚಿಂತನೆಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಪಡೆಯೋಣ.

ಏನಂತೀರೀ?
ನಿಮ್ಮವನೇ ಉಮಾಸುತ