ಲಂಚದಲ್ಲೂ ಡಿಜಟಲೀಕರಣ

ಮೊನ್ನೆ ಇನ್ನೂ, ಮಂಗಳೂರು ಟ್ರಾಫಿಕ್ ಪೋಲಿಸರ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಇದಕ್ಕೆ ಪೂರಕವಾದ ಬೆಂಗಳೂರಿನ ಯಲಹಂಕದ ಬಳಿಯ ಮತ್ತೊಂದು ಪ್ರಸಂಗಕ್ಕೆ ನೆನ್ನೆ ನಾನೇ ಸಾಕ್ಷಿಯಾಗಬೇಕಾಗಿದ್ದು ನಿಜಕ್ಕೂ ಅಸಹ್ಯಕರ ಎನಿಸಿತು. ಹಾಗಾಗಿ ಮಂಗಳೂರಿನ ಪ್ರಕರಣವನ್ನು ಯಥಾವತ್ ಹಾಗೆಯೇ ಪ್ರಕಟಿಸಿ ನಂತರ ನನಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ಮಂಗಳೂರಿನ ಪ್ರಕರಣ

police2

ಇಂದು ಸ್ಟೇಟ್ ಬ್ಯಾಂಕ್ ನಲ್ಲಿ ನಾವು ರಾಂಗ್ ಸೈಡಲ್ಲಿ (one way) ಕಾರು ಚಲಾಯಿಸಿದ್ದಕ್ಕೆ ಪೋಲಿಸ್ ಅಡ್ಡಗಟ್ಟಿ ಫೈನ್ ಕಟ್ಟಲು ಹೇಳಿದ್ರು, ರಶೀದಿ ಬೇಕಾ? ಬೆಡ್ವಾ? ಅಂತ ಪೋಲಿಸ್ ಕೇಳಿದಾಗ, ನಾವು ಅವರಲ್ಲಿ ರಶೀದಿ ಕೊಟ್ರೆ ಎಷ್ಟು? ಇಲ್ಲದಿದ್ರೆ ಎಷ್ಟು ಚಾರ್ಜ್ ಮಾಡ್ತೀರಾ? ಅಂತ ಕೇಳಿದೆವು, ಅದಕ್ಕೆ ಈ ಪೋಲಿಸನ ಉತ್ತರ, ರಶೀದಿ ಬೇಕಾದಲ್ಲಿ 200, ಇಲ್ಲದಿದ್ದಲ್ಲಿ 100 ರೂಪಾಯಿ. ಅದಕ್ಕೆ ನಾನು ಕೇಳಿದೆ, ಹಾಗಾದ್ರೆ 100 ರೂಪಾಯಿ ನಿಮ್ಮ ಜೇಬಿಗಾ? ಅದಕ್ಕೆ ಪೊಲಿಸನ ಉತ್ತರ, ಎರಡರಲ್ಲೂ ಹಣ ನನಗೆನೇ ಅಂತ ಉತ್ತರಕೊಟ್ಟ…..

ಹಾಗಾದ್ರೆ ಪೋಲಿಸರ ಕೈಯಲ್ಲಿರುವ ರಶೀದಿ ಪುಸ್ತಕ ಸರಕಾರದ್ದೋ ಅಥವಾ ಇವರು ಸ್ವತಃ ಪ್ರಿಂಟ್ ಮಾಡಿಸಿದ್ದೋ? ಅದರಲ್ಲಿ ಸರ್ಕಾರದ ಸೀಲ್ ಕೂಡ ಇರಲಿಲ್ಲ, ಫೈನ್ ಹಾಕುವ ನೆಪದಲ್ಲಿ ಸರಕಾರಕ್ಕೆ ಅದರ ಹಣವನ್ನು ನೀಡದೆ ಸ್ವಂತ ಜೇಬಿಗೆ ಹಾಕುವ ಪೋಲಿಸರ ಮೇಲೆ ಕ್ರಮ ಕೈಗೊಳ್ಳಬೇಕು….

ಬೆಂಗಳೂರಿನ ಯಲಹಂಕ ಪ್ರಕರಣ

police

ನೆನ್ನೆೆ ಸುಮಾರು 11:30ರ ಆಸುಪಾಸಿನಲ್ಲಿ ಯಲಹಂಕದ ಕೋಗಿಲ್ ಕ್ರಾಸ್ ನಿಂದ ಹೆಬ್ಬಾಳದ ಕಡೆ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಸಂಧರ್ಭದಲ್ಲಿ ರೈತರ ಸಂತೆ ಸರ್ಕಲ್ಲಿಗಿಂತ ಸ್ವಲ್ಪ ಮುಂದೆ ಟ್ರಾಫಿಕ್ ಪೋಲಿಸ್ ನನ್ನನ್ನು ಅಡ್ಡಗಟ್ಟಿದರು. ಸಾಧಾರಣವಾಗಿ ಅಲ್ಲಿ ಪ್ರತೀ ದಿನವೂ ಟ್ರಾಫಿಕ್ ಪೋಲಿಸರು ಇದೇ ರೀತಿಯ ತಪಾಸಣೆ ಮಾಡುವ ಕಾರಣ ಅದು ಅಚ್ಚರಿ ಎನಿಸಲಿಲ್ಲ. ಆದರೆ ನಂತರ ನಡೆದ ಪ್ರಕ್ರಿಯೆ ನಿಜಕ್ಕೂ ದಂಗು ಬಡಿಸಿತು.

ಗಾಡಿ ನಿಲ್ಲಿಸಿದ ತಕ್ಷಣ, ನನ್ನನ್ನು ಅಡಿಯಿಂದ ಮುಡಿಯವರೆಗೂ ಒಮ್ಮೆ ನೋಡಿ, ಹೆಲ್ಮೆಟ್ ಇದೆಯೇ, ಮುಖಕ್ಕೆ ಮಾಸ್ಕ್ ಧರಿಸಿದ್ದೇನೆಯೇ ಎಲ್ಲವನ್ನೂ ಒಮ್ಮೆ ಕೂಲಂಕುಶವಾಗಿ ಪರೀಕ್ಷಿಸಿದ ಪೋಲೀಸರೊಬ್ಬರು, ನನ್ನ ಗಾಡಿಯ ನಂಬರ್ ನೋಡಿದ ಕೂಡಲೇ ಅದನ್ನು ತಮ್ಮ ಬಳಿಯಿದ್ದ ಉಪಕರಣದಲ್ಲಿ ನಮೂದಿಸಿ, ಮೊದಲೇ ಯಾವುದಾದರೂ ದಂಡ ಬಾಕಿ ಇದೆಯೇ ಎಂದು ಕ್ಷಣಮಾತ್ರದಲ್ಲಿ ಪರೀಕ್ಷಿಸಿ ಎಲ್ಲವೂ ಸರಿ ಇದೆ ಎನಿಸಿದ ಮೇಲೆ, ಡ್ರೈವಿಂಗ್ ಲೈಸೆನ್ಸ್ ತೋರಿಸಿ ಎಂದು ಕೇಳಿದರು.

ಕೂಡಲೇ ನನ್ನ ಪರ್ಸ್ ತೆಗೆದು ಡ್ರೈವಿಂಗ್ ಲೈಸೆನ್ಸ್ ತೋರಿಸಿದೆ. ಅದೂ ಕೂಡಾ ಸರಿ ಇದೆೆ ಎನಿಸಿದ ಮೇಲೆ ಪೋನ್ ಪೇ ಇಲ್ಲಾ ಗೂಗಲ್ ಪೇ ಇದೆಯೇ? ಎಂದು ಕೇಳಿದ್ದಕ್ಕೆ ಹೌದು ಇದೆ ಎಂದೆ. ಹಾಗೆಂದ ಕೂಡಲೇ ಅಲ್ಲೇ ಪಕ್ಕದಲ್ಲಿಯೇ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ತೋರಿಸಿ, ಇವರು ನಿಮಗೆ 200 ರೂ online Transfer ಮಾಡ್ತಾರೆ. ನೀವು ನಮಗೆ Cash ಕೊಡಿ ಎಂದಾಗ, ಒಮ್ಮಿಂದೊಮ್ಮೆಲೆ ಮನಸ್ಸಿಗೆ ಕಸಿವಿಸಿಯಾಗಿ, ಆ ವ್ಯಕ್ತಿಯನ್ನು ನೋಡಿದರೆ ಅವರ್ಯಾರೋ ಕೂಲಿ ಕೆಲಸ ಮಾಡುವ ವ್ಯಕ್ತಿಯಂತಿದ್ದು ನೋಡಲು ಅಮಾಯಕ ಎಂದೆನಿಸುತು.

ಸತ್ಯಂ ಬ್ರೂಯಾತ್ ಪ್ರಿಯಮ್ ಬ್ರೂಯಾತ್ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ನಾನೃತಂ ಬ್ರೂಯಾದೇಷ ಧರ್ಮ: ಸನಾತನ: ||

ಸತ್ಯವಾದದ್ದನ್ನು ಹೇಳಬೇಕು, ಪ್ರಿಯವಾದದ್ದನ್ನು ಹೇಳಬೇಕು. ಕಹಿಯಾದ ಸತ್ಯವನ್ನು ಹೇಳಬಾರದು, ಹಾಗೆಯೇ ಪ್ರಿಯವಾದ ಅಸತ್ಯವನ್ನೂ ನುಡಿಯಬಾರದು. ಇದುವೇ ಸನಾತನ ಧರ್ಮ ಎನ್ನುವ ಸುಭಾಷಿತ ನೆನಪಾಗಿ ಕೂಡಲೇ ಇಲ್ಲಾ ಸರ್ ನನ್ನ ಬಳಿ ಚಿಲ್ಲರೆ ಇಲ್ಲಾ ಎನ್ನುತ್ತಾ, ಡ್ರೈವಿಂಗ್ ಲೈಸೆನ್ಸ್ ಪರ್ಸಿನಲ್ಲಿ ಇಟ್ಟು ಕೊಳ್ಳಲು ಮುಂದಾಗುತ್ತಿದ್ದಂತೆಯೇ, ಅರೇ ಅಲ್ಲೇ ಪರ್ಸಿನಲ್ಲಿ ಇದ್ಯಾಲ್ಲಾ ಅಂತ ಪೋಲೀಸರೇ ನೆನಪಿಸಿದರು.

ಇವರು ತೆಗೆದುಕೊಳ್ಳುವ ಲಂಚಕ್ಕೆ ನಾನೇಕೇ ಪರೋಕ್ಷವಾಗಿ ಕಾರಣೀಭೂತನಾಗ ಬೇಕು ಎಂದು ನಿರ್ಧರಿಸಿ ಇಲ್ಲಾ ಸರ್ ಬರೀ ನೂರು ರೂಪಾಯಿ ಐದು ನೂರು ರೂಪಾಯಿ ನೋಟು ಇದೆ ಎಂದು ಸುಳ್ಳನ್ನು ಹೇಳಿ ಗಾಡಿ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಭರ್ ಎಂದು ಮನೆಯ ಕಡೆಗೆ ಬರುವಾಗ ನಾನು ಕೊಡದೇ ಹೋದರೆ ಏನಂತೆ ನನ್ನಂತಹ ಇನ್ನೊಬ್ಬರನ್ನು ಬಲೆಗೆ ಬೀಳಿಸಿಕೊಂಡು ಅವರ ಬಳಿ ಇದೇ ರೀತಿಯಲ್ಲಿ ಹಣ ತೆಗೆದುಕೊಂಡಿರುತ್ತಾರೆ ಎಂದೆನಿಸಿತು.

ಈ.ಲೇಖನದಲ್ಲಿ ಪೋಲೀಸರು ದಂಡ ವಿಧಿಸುವುದನ್ನು ತಪ್ಪು ಎನ್ನುತ್ತಿಲ್ಲ. ಆದರೆ ವಿಧಿಸಿದ ದಂಡ ಸರ್ಕಾರದ ಖಜಾನೆಗೆ ತಲುಪದೆ ಪೋಲೀಸರ ಜೇಬು ತಲುಪುತ್ತಿರುವುದು ಕಳವಳಕಾರಿಯಾದ ಅಂಶವಾಗಿದೆ.

ನಿಜ ಹೇಳಬೇಕು ಎಂದರೆ, ತಪ್ಪು ಮಾಡಿದವರಿಗೆ ಸುಮ್ಮನೇ ಬುದ್ಧಿ ಮಾತು ಹೇಳಿ ಕಳುಹಿಸಿದರೆ ತಮ್ಮ ತಪ್ಪನ್ನು ಅರಿತುಕೊಳ್ಳುವುದಿಲ್ಲ ಹಾಗಾಗಿಯೇ ಅವರಿಗೆ ಅಲ್ಪ ಪ್ರಮಾಣದಲ್ಲಿ ದಂಡ ವಿಧಿಸಿದಾಗ, ಕೈಯಿಂದ ಹಣ ಖರ್ಚಾದಾಗಲಾದರೂ ಬುದ್ಧಿ ಬರಬಹುದು ಎನ್ನುವ ಕಾರಣಕ್ಕೆ ಸರ್ಕಾರ ದಂಡದ ಮೊತ್ತವನ್ನು ನಿಗಧಿತ ಪಡಿಸಿ ಅದನ್ನು ಸಂಗ್ರಹಿಸಲು ಪೋಲೀಸರಿಗೆ ಅನುಮತಿ ನೀಡಿರುತ್ತದೆ. ಹಾಗೆ ಸಂಗ್ರಹಿಸುವ ಹಣದ ಲೆಖ್ಖ ಸರಿಯಾಗಿ ಸಿಗಲಿ ಎನ್ನುವ ಕಾರಣದಿಂದಾಗಿಯೇ ಇತ್ತೀಚೆಗೆ ಎಲ್ಲರಿಗೂ ಡಿಜಿಟಲ್ ಮೂಲಕ ಸಂಗ್ರಹಿಸುವ ಸೌಲಭ್ಯವನ್ನೂ ಕೊಟ್ಟಿದೆ.

ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ, ಸರ್ಕಾರದಿಂದ ತಿಂಗಳು ತಿಂಗಳೂ ಸರಿಯಾಗಿ ಸಂಬಳ ಎಣಿಸಿಕೊಳ್ಳುತ್ತಿದ್ದರೂ, ಮೇಲೆ ತಿಳಿಸಿದ ಎರಡೂ ಪ್ರಕರಣಗಳಲ್ಲಿ ರಕ್ಷಕರೇ ರೀತಿಯಲ್ಲಿ ಭಕ್ಷಕರಾಗಿ ಸರ್ಕಾರಕ್ಕೆ ಸಲ್ಲಬೇಕಾದ ದಂಡವನ್ನು ಹಾಡು ಹಗಲಲ್ಲೇ ನಟ್ಟ ನಡು ರಸ್ತೆಯಲ್ಲೇ ಈ ಪರಿಯಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಇಂತಹವರನ್ನು ಹಿಡಿದು, ಅವರಿಗೆ ದಂಡ ಹಾಕಿ ಬುದ್ಧಿ ಕಲಿಸುವವರು ಯಾರು? ಸರ್ಕಾರ ಯಾವುದೇ ಬಂದು ಎಷ್ಟೇ ಜನೋಪಕಾರಿ ಯೋಜನೆಗಳನ್ನು ಜಾರಿಗೆ ತಂದರೂ, ಅದನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕಾದವರೇ ಭ್ರಷ್ಟರಾದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಆದಷ್ಟು ಶೇರ್ ಮಾಡಿ, ಪೋಲಿಸ್ ಕಮೀಷನರ್ ರವರಿಗೆ ವಿಷಯವನ್ನು ಮುಟ್ಟಿಸೋಣ…..

ಏನಂತೀರೀ?
ನಿಮ್ಮವನೇ ಉಮಾಸುತ

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕಳೆದ ಎರಡು ಮೂರು ಮೂರು ವಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ದೇಶದ ಹಣವನ್ನು ಕೊಳ್ಳೆಹೊಡೆದ ಆರೋಪದ ಮೇಲೆ ಬಂಧಿಸಲ್ಪಟ್ಟ ರಾಜಕಾರಣಿಗಳ ಬಗ್ಗೆ ಚರ್ಚಿಸುತ್ತಿದ್ದ ಭಾರತೀಯರು, ಇದ್ದಕ್ಕಿಂದಂತೆಯೇ ಎರಡು ಮೂರು ದಿನಗಳಿಂದ ಹೊಸ ಮೋಟಾರು ವಾಹನ ತಿದ್ದುಪಡಿ ಮಸೂದೆ 2019 ಸಂಚಾರ ನಿಯಮದ ಕಠಿಣ ದಂಡ ದೃಷ್ಟಿ ಹಾಯಿಸಿದ್ದಾರೆ. ಸರ್ಕಾರ ದಂಡಗಳನ್ನು ಬಹು ಪಟ್ಟು ಹೆಚ್ಚು ಮಾಡುತ್ತಿದ್ದಂತೆಯೇ ನಿಯಮವನ್ನು ಉಲ್ಲಂಘಿಸುವ ಮೊದಲು, ಉಲ್ಲಂಘಿಸುವವರು ಎರಡು ಬಾರಿ ಯೋಚಿಸುವಂತೆ ಮಾಡಿದೆಯಾದರೂ, ಹೊಸಾ ನಿಯಮ ಏಕೋ ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಎಳಿದಂತಿದೆ.

fine2

ಹಾಗಾಂತ ಹೊಸಾ ನಿಯಮ ಚೆನ್ನಾಗಿಯೇ ಇಲ್ಲ ಎಂದರ್ಥವಲ್ಲಾ. ಈ ಕೆಳಕಂಡ ಅಂಶಗಳು ಹಿಂದಿನ ನಿಯಮಗಳಿಗಿಂತ ಬಹಳಷ್ಟು ಉತ್ತಮವಾಗಿವೆ

  • ಬಾಲಾಪರಾಧಿಗಳಿಂದ ಉಂಟಾಗುವ ಅಪಘಾತಗಳಲ್ಲಿ, ಕಾರು ಮಾಲೀಕರನ್ನು ಕ್ರಿಮಿನಲ್ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಬಾಲಾಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ಅಪಘಾತ ಮಾಡಿದ ವಾಹನದ ನೋಂದಣಿ ರದ್ದುಗೊಳಿಸುವುದು.
  • ಹಿಟ್ ಅಂಡ್ ರನ್ ಸಾವುನೋವು ಪ್ರಕರಣಗಳಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ ಪ್ರಸ್ತುತ ಕೇವಲ 25 ಸಾವಿರ ರೂ.ಕೊಡುತ್ತಿತ್ತು. ಈಗ ಹೊಸ ನಿಯಮದ ಅಡಿಯಲ್ಲಿ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡುತ್ತದೆ.
  • ತುರ್ತುವಾಹನಗಳಿಗೆ ಅಡ್ಡಿ ಪಡಿಸಿದಲ್ಲಿ ದಂಡ ವಿಧಿಸುವುದು.
  • ಅಗತ್ಯವಿರುವ ಮಾನದಂಡಗಳನ್ನು ಪೂರೈಸದ ವಾಹನ ತಯಾರಿಕಾ ಘಟಕಗಳಿಗೆ ದಂಡ ವಿಧಿಸುವುದು
  • ರಸ್ತೆ ಅಪಘಾತದ ಪ್ರಕರಣಗಳಲ್ಲಿ ನ್ಯಾಯಮಂಡಳಿಗೆ ತಮ್ಮ ಪರಿಹಾರಕ್ಕಾಗಿ ಅಪಘಾತವಾದ ನಂತರವೂ 6 ತಿಂಗಳ ಒಳಗೆ ದೂರು ಸಲ್ಲಿಸುವುದು.
  • ಅಪಘಾತಗಳಿಗೆ ಕಾರಣವಾಗುವ ರಸ್ತೆಗಳ ದೋಷಯುಕ್ತ ವಿನ್ಯಾಸ, ನಿರ್ಮಾಣ ಅಥವಾ ಕಳಪೆ ನಿರ್ವಹಣೆಗೆ ಸಿವಿಕ್ ಏಜೆನ್ಸಿಗಳು, ಗುತ್ತಿಗೆದಾರರು, ಸಲಹೆಗಾರರು ಜವಾಬ್ದಾರರನ್ನಾಗಿ ಮಾಡಿ ಅವರಿಗೆ ದಂಡ ವಿಧಿಸುವುದು.
  • ತೃತೀಯ ವಿಮೆಯ ಹೊಣೆಗಾರಿಕೆಯ ಗರಿಷ್ಟ ಪ್ರಮಾಣವನ್ನು ತೆಗೆದುಹಾಕಲಾಗಿ. 2016 ರ ಮಸೂದೆಯು ಗರಿಷ್ಠ ಹೊಣೆಗಾರಿಕೆಗೆ ಸಾವಿಗೆ 10 ಲಕ್ಷ ರೂ. ಮತ್ತು ತೀವ್ರವಾದ ಗಾಯಕ್ಕೆ 5 ಲಕ್ಷ ರೂ. ಕೊಡುವುದು.
  • ಚಾಲನಾ ಪರವಾನಗಿ ನವೀಕರಣದ ಸಮಯ ಮಿತಿಯನ್ನು ಮುಕ್ತಾಯ ದಿನಾಂಕದ ಮೊದಲು ಮತ್ತು ನಂತರ ಒಂದು ತಿಂಗಳಿಂದ ಒಂದು ವರ್ಷಕ್ಕೆ ಹೆಚ್ಚಿಸಲಾಗಿದೆ.
  • ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡಲು ಮುಂದೆ ಬರುವವರನ್ನು ನಾಗರಿಕ ಅಥವಾ ಅಪರಾಧ ಹೊಣೆಗಾರಿಕೆಯಿಂದ ರಕ್ಷಿಸಲಾಗುತ್ತದೆ. ಅವರು ತಮ್ಮ ಗುರುತನ್ನು ಪೊಲೀಸ್ ಅಥವಾ ವೈದ್ಯಕೀಯ ಸಿಬ್ಬಂದಿಗೆ ಬಹಿರಂಗಪಡಿಸುವುದು ಕಡ್ಡಾಯವಾಗಿರುವುದಿಲ್ಲ

ಹೀಗೆ ಮೇಲ್ನೋಟಕ್ಕೆ ಈ ಆಂಶಗಳು ಸರಳವಾಗಿ ಮತ್ತು ಸುಂದರವಾಗಿ ಕಂಡರೂ ಹಳೆಯ ನಿಯಮಗಳಿಗಿಂತ ಹತ್ತರಿಂದ-ಇಪ್ಪತ್ತು ಪಟ್ಟು ಹೆಚ್ಚಿಸಿದ ದಂಡಗಳು ನಿಜಕ್ಕೂ ಭಯವನ್ನುಂಟು ಮಾಡುತ್ತಿವೆ. ಈ ರೀತಿಯಾಗಿ ಅತೀಯಾದ ದಂಡವನ್ನು ಹೆಚ್ಚಿಸಲು ಯಾವ ಮಾನದಂಡವನ್ನು ಅನುಸರಿಸಲಾಯಿತು ಎಂದು ಸಂಬಂಧ ಪಟ್ಟವರು ಜನ ಸಾಮಾನ್ಯರಿಗೆ ತಿಳಿಸಲೇ ಬೇಕಾಗಿದೆ. ಕಳೆದ ಎರಡು ಮೂರು ದಿನಗಳಲ್ಲಿ ಅಮಾಯಕರು ದಂಡ ಕಟ್ಟಿದ ವೃತ್ತಾಂತಗಳನ್ನು ನೋಡಿದಲ್ಲಿ, ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತಿದೆ.

ಸಾಮಾನ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸುವ ಮೊದಲು ಅದಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡ ನಂತರವೇ ಹೊಸಾ ಕಾನೂನನ್ನು ಜಾರಿಗೆ ತರುವುದು ಉತ್ತಮ ಮಾರ್ಗ. ಆದರೆ ಹೊಸಾ ಕಾನೂನುಗಳು ಮೇಲ್ನೋಟಕ್ಕೆ ವಾಹನ ಚಾಲಕರ ಪರವಾಗಿ ಇರುವಂತೆ ಕಾಣುತ್ತದಾದರೂ ನಿಜವಾಗಿಯೋ ಸಮಚಿತ್ತದಿಂದ ನೋಡಿದಲ್ಲಿ ಮಾರಕವಾಗಿದೆ.

ಸರ್ಕಾರ ನಿಜವಾಗಿಯೂ ಜನಪರವಾಗಿದ್ದು ಜನರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ರೀತೀಯ ಅತಿಯಾದ ದಂಡವನ್ನು ವಿಧಿಸುವ ಬದಲು ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲಿ. ಸರಿಯಾದ ರಸ್ತೆಗಳು ಇದ್ದಲ್ಲಿ ಮತ್ತು ಸಾರ್ವಜನಿಕ ವಾಹನದ ವ್ಯವಸ್ಥೆ ಇದ್ದಲ್ಲಿ ಜನಾ ಏಕೆ ತಮ್ಮ ಸ್ವಂತದ ವಾಹನ ಉಪಯೋಗಿಸುತ್ತಾರೆ? ಸುಮಾರು ಹತ್ತು ವರ್ಷಗಳ ಮುಂಚೆ ಜನರ ಅನುಕೂಲಕ್ಕೆಂದು ಆರಂಭಿಸಿದ ನಮ್ಮ ಮೆಟ್ರೋ, ಹತ್ತು ವರ್ಷದ ನಂತರವೂ ಪೂರ್ಣಗೊಳ್ಳದೇ, ನಮ್ಮ ಮೆಟ್ರೋ ಎಂದು ಕರೆಯುವ ಬದಲು ನಮ್ಮ ಮಕ್ಕಳ ಮೆಟ್ರೋ ಅಥವಾ ನಮ್ಮ ಮೊಮ್ಮಕ್ಕಳ ಮೆಟ್ರೋ ಎಂದು ಹೆಸರಿಸಬೇಕಾಗಬಹುದೇನೋ? ಒಂದು ಕಡೆ ಮೆಟ್ರೋ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದರೆ, ಮತ್ತೊಂದು ಕಡೆ ವೈಟ್ ಟಾಪಿಂಗ್ ಹೆಸರಿನಲ್ಲಿ ರಸ್ತೆಗಳನ್ನು ತಿಂಗಳಾನು ಗಟ್ಟಲೇ ಮುಚ್ಚಿದಲ್ಲಿ ಜನಾ ಏಕ ಮುಖ ಇಲ್ಲವೇ ದ್ವಿಮುಖ ರಸ್ತೆ ಎಂದು ಗಮನಿಸದೇ ಸಿಕ್ಕ ಸಿಕ್ಕ ರಸ್ತೆಗಳಲ್ಲಿ ನುಗ್ಗದೇ ಇನ್ನು ಏನು ಮಾಡಲು ಸಾಧ್ಯ?

ಪ್ರತೀ ದಿನ ದೇಶಾದ್ಯಂತ ಮಾರಾಟವಾ/ಗುವ ಲಕ್ಷಾಂತರ ವಾಹನಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಸಂಗ್ರಹಿಸುತ್ತದೆ. ಹಾಗಾಗಿ ಸರ್ಕಾರ ಅದೇ ಹಣದಿಂದ ಸರಿಯಾದ ರಸ್ತೆಗಳನ್ನು ಮಾಡಿಸಬಹುದಲ್ಲದೇ? ಅಷ್ಟೋಂದು ಹಣವನ್ನು ಸಂಗ್ರಹಿಸ ಮೇಲೂ ಅತಿಯಾದ ದಂಡವನ್ನು ವಿಧಿಸುವ ಅಗತ್ಯತೆ ಏನು?

ಇನ್ನು ಬಹುತೇಕ ನೋ-ಪಾರ್ಕಿಂಗ್ ಬೋರ್ಡ್ಗಳು ಇಲ್ಲವೇ ಏಕ ಮುಖ ರಸ್ತೆಗಳು ಸಿರಿವಂತರ ಇಲ್ಲವೇ ಅಧಿಕಾರಿಗಳ ತೆವಲುಗಳಿಗೆ ಮೀಸಲಾಗಿರುವುದು ಗೊತ್ತಿಲ್ಲದ ವಿಷಯವೇನಲ್ಲ. ಅಂದಿನ ಕಾಲದ ಹೆಸರಾಂತ ರಾಜಕಾರಣಿಯಾಗಿದ್ದ ದಿವಂಗತ ಮಾಜೀ ಸಚಿವರೊಬ್ಬರು ಸ್ಯಾಂಕಿ ರಸ್ತೆಯ ತಮ್ಮ ಮನೆಯ ಮುಂದೆ ಹೆಚ್ಚಿನ ವಾಹನ ಓಡಾಡಿದರೆ ಅವರಿಗೆ ತೊಂದರೆಯಾತ್ತದೆ ಎಂದು ಆ ರಸ್ತೆಯನ್ನೇ ಏಕಮುಖ ರಸ್ತೆಯನ್ನಾಗಿಸಿದ್ದರು. ಇನ್ನು ಇತ್ತೀಚೆಗೆ ಮಾಜಿ ಮಂತ್ರಿಗಳಾದ ಯುವ ಸಚಿವರೊಬ್ಬರು ತಮ್ಮ ಮನೆಯ ಮುಂದೆ ವಾಹನ ದಟ್ಟಣೆಯಿಂದ ತೊಂದರೆಯಾಗ ಬಹುದೆಂದು ರಸ್ತೆ ಅಗಲಕ್ಕೆ ರಕ್ಷಣಾ ಇಲಾಖೆ ಜಾಗ ಕೊಡುತ್ತಿಲ್ಲಾ ಎಂಬ ಕುಂಟು ನೆಪವೊಡ್ಡಿ ಅವರ ಮನೆಯ ಮುಂದಿನ ರಸ್ತೆಯನ್ನು ಅಭಿವೃಧ್ದಿಯೇ ಗೊಳಿಸದೇ ಇರುವ ಕಾರಣ ಜನ ಸಿಕ್ಕ ಪಕ್ಕ ರಸ್ತೆ ಉಪಯೋಗಿಸುತ್ತಿರುವುದು ಜ್ವಲಂತ ಉದಾಹರಣೆಯಾಗಿದೆ.

ಇಂದಿನ ಕಾಲದಲ್ಲಿ RTO ಕಛೇರಿಯಲ್ಲಿ ಎಷ್ಟೇ ಬದಲಾವಣೆ ತಂದರೂ ಮಧ್ಯವರ್ತಿಗಳು ಇಲ್ಲದೇ ಮತ್ತು ಲಂಚ ಕೊಡದೇ ಡ್ರೈವಿಂಗ್ ಲೈಸೆನ್ಸ್ ಅಥವಾ ವಾಹನ ಪರವಾನಗಿ ಪಡೆಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಾಗಿದೆ. ಮೊದಲು ಇದನ್ನು ಸರಿ ಪಡಿಸಿ ಜನರು ಸುಲಭವಾಗಿ ಹೊಸಾ ಲೈಸೆನ್ಸ್ ಮತ್ತು ಹಳೆಯ ಲೈಸನ್ಸ್ ನವೀಕರಿಸುವಂತಾದಲ್ಲಿ ಖಂಡಿತವಾಗಿಯೂ ಜನರು ಲೈಸೆನ್ಸ್ ಮಾಡಿಸುತ್ತಾರಲ್ಲವೇ?

lic
ಇನ್ನು ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವವರಿಗೆ 1000 ರೂಪಾಯಿಗಳನ್ನು ವಿಧಿಸುವ ಬದಲು ಅದೇ 1000ರೂಪಾಯಿಯಿಂದ ಅವರಿಗೆ ಹೆಲ್ಮೆಟ್ ತೆಗೆಸಿಕೊಟ್ಟಲ್ಲಿ ಅತ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುತ್ತಾರಲ್ಲವೇ?

ವಾಹನಕ್ಕೆ ವಿಮೆ ಮಾಡಿಸಲು 1000 – 1500ರೂಪಾಯಿಗಳು ಆಗಬಹುದು. ಕಾರಣಾಂತರಗಳಿಂದ ವಿಮೆ ನವೀಕರಿಸದೇ ಇಲ್ಲದಿದ್ದಲ್ಲಿ ಅದಕ್ಕೆ 2000 ರೂಪಾಯಿ ದಂಡ ವಿಧಿಸುವ ಬದಲು, ವಾಹನವನ್ನು ಸೀಜ್ ಮಾಡಿ ಅದೇ 2000 ರೂಪಾಯಿಗಳಲ್ಲಿ ಆ ವಾಹನಕ್ಕೆ ವಿಮೆ ಮಾಡಿಸಿದ ಮೇಲೆಯೇ ವಾಹನವನ್ನು ಬಿಟ್ಟು ಕಳುಹಿಸಬಹುದಲ್ಲವೇ?

ಇನ್ನು ವಾಯುಮಾಲಿನ್ಯ ತಪಾಸಣೆ ಮಾಡಿಸಲು ಕೇವಲ 50-200ರೂಗಳಷ್ಟಾಗುತ್ತದೆ. ಕಾರಣಾಂತರದಿಂದ ಅದನ್ನು ಮಾಡಿಸಿದ್ದಲ್ಲಿ ಅಥವಾ ನವೀಕರಿಸದಿದ್ದಲ್ಲಿ ಅದರಕ್ಕೆ ಸಾವಿರಾರು ರೂಪಾಯಿಗಳ ದಂಡ ವಿಧಿಸುವ ಬದಲು ಅಂತಹ ವಾಹನಗಳಿಗೇ ಸ್ಥಳದಲ್ಲಿಯೇ ಪರೀಕ್ಷೇ ಮಾಡಿಸಿ ಅದಕ್ಕೆ ತಕ್ಕಷ್ಟು ಹಣವನ್ನು ಮಾತ್ರವೇ ಪಡೆದಲ್ಲಿ ಉತ್ತಮವಲ್ಲವೇ?

ವಾಹನಗಳ ವಾಯುಮಾಲಿನ್ಯ ತಡೆಗಟ್ಟಲು ಪೆಟ್ರೋಲ್ ಮತ್ತು ಡೀಸೆಲ್ ಕಲಬೆರಕೆ ಮಾಡುವವರನ್ನು ಶಿಕ್ಷಿಸಬೇಕು. ಈಗಿರುವ ವಾಹನಗಳ ವಾಯುಮಾಲಿನ್ಯ ಪರೀಕ್ಷೇ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು 50-200ರೂಗಳನ್ನು ಕೊಟ್ಟಲ್ಲಿ ಯಾರು ಬೇಕಾದರೂ ಪ್ರಮಾಣ ಪತ್ರವನ್ನು ಪಡೆಯಬಹುದಾಗಿರುವುದನ್ನು ತಡೆಗಟ್ಟದೇ ಕೇವಲ ಅಧಿಕ ದಂಡ ವಿದಿಸುವುದರಿಂದ ಎಲ್ಲವನ್ನೂ ಪರಿಹರಿಸಲು ಸಾಧ್ಯವಿಲ್ಲ ಅಲ್ಲವೇ?

ನಮ್ಮದೇಶ ಮಾಹಿತಿ ತಂತ್ರಜ್ನಾನದಲ್ಲಿ ಇಡೀ ವಿಶ್ವಕ್ಕೇ ಗುರು. ಎಲ್ಲರ ಬಳಿಯೂ ಮೊಬೈಲ್ ಗಳಿವೆ ನಾನಾ ರೀತಿಯ ಅಪ್ಲಿಕೇಷನ್ಗಳಿವೆ. ಸರ್ಕಾರವೇ ಒಂದು ಅಪ್ಲಿಕೇಷನ್ ಸಿದ್ಧಪಡಿಸಿ ಆದರಲ್ಲಿ ಎಲ್ಲರೂ ತಮ್ಮ ತಮ್ಮ ದಾಖಲೆಗಳನ್ನು ದಾಖಲಾತಿಸಿ ಅಗತ್ಯವಿದ್ದಾಗ ಅದನ್ನೇ ಪೋಲೀಸರಿಗೆ ತೋರಿಸಬಹುದಲ್ಲವೇ? ಏಕೆಂದರೆ ಪ್ರತೀಬಾರಿಯೂ ಮೂಲ ದಾಖಲೆಯನ್ನೇ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಅಲ್ಲವೇ?

ಈ ರೀತಿಯಾಗಿ ಜನಸ್ನೇಹಿಯಾಗಿ ಯೋಚಿಸಿ ಹೊಸಾ ನಿಯಮಗಳನ್ನು ಜಾರಿಗೆ ತಂದಿದ್ದಲ್ಲಿ ಜನರಿಗೂ ತಮ್ಮ ತಪ್ಪಿನ ಅರಿವಾಗಿ ಎಲ್ಲರೂ ಸ್ವಯಂಪ್ರೇರಿತರಾಗಿ ಸಂಚಾರ ನಿಯಮಗಳನ್ನು ಪಾಲಿಸುತ್ತಾರೆ ಅಲ್ಲವೇ?

ಸ್ನೇಹಿತರ ಬಳಿ ಇದೇ ವಿಚಾರವನ್ನು ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾಗ, ಈ ರೀತಿಯ ದಂಡ ಕೇವಲ ನಮ್ಮ ದೇಶದಲ್ಲಿ ಮಾತ್ರವೇ ಇಲ್ಲ, ವಿದೇಶಗಳಲ್ಲಿ ಇದಕ್ಕಿಂತಲೂ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಈ ಕೆಳಗಿನ ಚಾರ್ಟ್ ತೋರಿಸಿ ಸಮಾಧಾನ ಪಡಿಸಲು ಯತ್ನಿಸಿದರು

WhatsApp Image 2019-09-06 at 9.27.26 AM

ಆ ರೀತಿಯಾಗಿ ನನಗೆ ತಿಳಿ ಹೇಳಲು ಪ್ರಯತ್ನಿಸಿದವರಿಗೆ ಹೇಳ ಬಯಸುವುದೇನೆಂದರೆ, ವಿದೇಶಗಳಲ್ಲಿ ರಸ್ತೆಗಳು ಹೇಮಾಮಾಲಿನಿಯ ಕೆನ್ನೆಯಂತಹ ನುಣಪಾದ ರಸ್ತೆಗಳು ಇರುತ್ತವೆ. ಹಾಗಾಗಿ ಅಲ್ಲಿ ಸಂಚಾರ ಸುಗಮವಾಗಿರುತ್ತದೆ.

ಇನ್ನು ಅಕಸ್ಮಾತ್ ಒಂದು ವಾಹನ ಮತ್ತೊಂದು ವಾಹನದ ಜೊತೆ ಅಪಘಾತವಾದಲ್ಲಿ, ಇಲ್ಲಿಯ ರೀತಿ ಜನಾ ಕುತ್ತಿಗೆ ಪಟ್ಟಿ ಹಿಡಿದು ಜಗಳ ಆಡುವುದಿಲ್ಲ ಅದರ ಬದಲಾಗಿ ತಮ್ಮ ವಿಮೆಯನ್ನು ಪರಸ್ಪರ ಬದಲಾಯಿಸಿಕೊಳ್ಳುತ್ತಾರೆ ಮತ್ತು ತಮ್ಮ ವಾಹನಗಳ ರಿಪೇರಿ ಖರ್ಚುಗಳನ್ನು ವಿಮಾ ಕಂಪನಿಗಳೇ ಭರಿಸುತ್ತವೆ. ಇನ್ನು ವಿಮಾ ಕಂಪನಿಗಳು ನಮ್ಮ ದೇಶದಂತೆ ತಿಂಗಳಾನು ಗಟ್ಟಲೇ ಕುಂಟು ನೆಪವೊಡ್ದಿ ವಿಮೆಯ ಮೊತ್ತವನ್ನು ತಡಮಾಡುವುದಾಗಲೀ, ನಿರಾಕರಿಸುವುದಾಗಲೀ ಮಾಡುವುದಿಲ್ಲ. ನಿಗಧಿತ ಸಮಯದಲ್ಲಿ ಸರಿಯಾದ ತನಿಖೆಯನ್ನು ಮಾಡಿ ಸತ್ಯ ಕಂಡು ಬಂದಲ್ಲಿ, ತಕ್ಷಣವೇ ವಿಮೆ ಭರಿಸುವುದರಿಂದ ಅಲ್ಲಿಯ ಜನ ವಿಮೆ ಮಾಡಿಸಲು ಅಥವಾ ನವೀಕರಿಸಲು ನಿರಾಕರಿಸುವುದೇ ಇಲ್ಲ.

ದೇಶ ನಡೆಸಲು ಖಂಡಿತವಾಗಿಯೂ ಹಣ ಅತ್ಯಾವಶ್ಯಕ. ವಿವಿಧ ರೀತಿಯ ತೆರಿಗೆಯ ರೂಪಾದಲ್ಲಿ ಜನರಿಂದ ಹಣವನ್ನು ಸಂಗ್ರಹ ಮಾಡಲಾಗುತ್ತಿದೆ. ಇದಾದ ಮೇಲೂ ಈ ರೀತಿಯಾಗಿ ಹತ್ತು ಪಟ್ಟು ಹೆಚ್ಚಿನ ದಂಡ ನಿಜಕ್ಕೂ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆಯೇ. ಆರಂಭ ಶೂರತ್ವದಂತೆ, ಮೊದ ಮೊದಲು ಸ್ವಲ್ಪ ಹೆಚ್ಚಿನ ಮೊತ್ತದ ದಂಡ ಸರ್ಕಾರಕ್ಕೆ ಸಂದಾಯವಾದರೂ ನಂತರದ ದಿನಗಳಲ್ಲಿ ಸರ್ಕಾರಿ ಖಜಾನೆಗೆ ತಲುಪದೇ ನೇರವಾಗಿ ಪೋಲಿಸರ ಜೋಬಿನ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ. ಪ್ರತಿದಿನ ಲಂಚದ ರೂಪದಲ್ಲಿ 500- 1000 ರೂಗಳನ್ನು ಮನ್ಗೆಗೆ ಕೊಂಡೊಯ್ಯುತ್ತಿದ್ದ ಪೋಲೀಸರು ಇನ್ನು ಮುಂದೆ 5000-10000 ವರೆಗೂ ಲಂಚದ ಹಣವನ್ನು ತೆಗೆದುಕೊಂಡು ಹೋಗಿ ಅವರು ಉದ್ದಾರವಾಗುತ್ತಾರೆಯೇ ಹೊರತು ಸರ್ಕಾರಕ್ಕೆ ಏನೂ ಲಾಭವಾಗುವುದಿಲ್ಲ ಜನಾ ಬದಲಾಗುವುದಿಲ್ಲ. ಆ-ರಕ್ಷಕರೋ ಇಲ್ಲಾ ಭಕ್ಷಕರೋ? 

police

ಸರ್ಕಾರೀ ನಿಯಮದಂತೆ ಕನಿಷ್ಥ ವೇತನ ದಿನವೊಂದಕ್ಕೆ 350 ರೂಪಾಯಿಗಳು ಭಾನುವಾರದ ರಜಾ ದಿನಗಳನ್ನು ಹೊರತು ಪಡಿಸಿ, ತಿಂಗಳಿಗೆ 25 ದಿನ ಬೆವರು ಸುರಿಸಿ ದುಡಿದರೂ ಆತ ಗಳಿಸುವುದು ಕೇವಲ 8750 ರೂಪಾಯಿಗಳು ಮಾತ್ರ. ಹಾಗೆ ಕಷ್ಟು ಪಟ್ಟು ದುಡಿದ ಹಣದಲ್ಲಿ ಅಚಾನಕ್ಕಾಗಿ ಆದ ಒಂದು ತಪ್ಪಿಗಾಗಿ ಸಾವಿರಾರು ರೂಪಾಯಿಗಳ ದಂಡವನ್ನು ಕಟ್ಟಿದರೇ ಅತನ ಜೀವನ ಹೇಗೆ ನಡೆಯ ಬೇಕು?

ಹಾಗೆಂದು ನಾನೇನು ದಂಡವನ್ನೇ ವಿಧಿಸಬಾರದು ಎಂದು ವಾದಿಸುತ್ತಿಲ್ಲ. ಮನೆಯಲ್ಲಿ ಮಕ್ಕಳು ಚೇಷ್ಟೆ ಮಾಡಿದಲ್ಲಿ , ಆಗ ಒಂದೆರಡು ಬಾರಿ ತಿಳಿ ಹೇಳುತ್ತೀವಿ. ಅದಕ್ಕೂ ಜಗ್ಗದೇ ಇದ್ದಲ್ಲಿ ಬೈದು ತಿಳಿಹೇಳಬಹುದು ಇಲ್ಲವೇ, ಮೃದುವಾಗಿ ಒಂದೆರಡು ಪೆಟ್ಟು ಕೊಡುತ್ತೇವೆಯೇ ಹೊರತು ಮಕ್ಕಳ ಜೀವಕ್ಕೇ ಅಪಾಯವಾಗುವಂತೆ ಹೊಡೆಯುವುದಲ್ಲಾ ಅಲ್ಲವೇ? ಹಾಗೆ ಸೀಟ್ ಬೆಲ್ಟ್ ಹಾಕಿಲ್ಲಾ, ಹೆಲ್ಮೆಟ್ ಇಲ್ಲಾ, ಡ್ರೈವಿಂಗ್ ಲೈಸೆನ್ಸ್ ಮನೆಯಲ್ಲಿ ಮರೆತು ಬಂದಿರುವುದಕ್ಕೆ, ಇನ್ಷೂರೆನ್ಸ್ ಇಲ್ಲದಿರುವುದಕ್ಕೆ 200-300ರೂಗಳ ವರೆಗೂ ದಂಡ ವಿಧಿಸಿ, ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಇರುವುದು, ಅತೀ ವೇಗದಿಂದ ವಾಹನ ಚೆಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಮಾತನಾಡುವಂತಹ ಕ್ರಿಯೆಗಳಿಗೆ ಕಠಿಣವಾಗಿ ಶಿಕ್ಷಿಸಬಹುದಾಗಿದೆ.

ಅರೇ ಇದೇನು ಸರ್ಕಾರವನ್ನು, ಪ್ರಧಾನಿಗಳನ್ನು ಸಮರ್ಥಿಸಿಕೊಳ್ಳುವವರೇ ಈ ರೀತಿಯಾಗಿ ಅವರ ಹೊಸಾ ನೀತಿಗಳನ್ನು ಬಹಿರಂಗವಾಗಿ ಕಠುವಾಗಿ ಟೀಕಿಸುತ್ತಿದ್ದಾರಲ್ಲಾ ಎಂದು ಆಶ್ಚರ್ಯವೇ? ಇದರಲ್ಲಿ ಖಂಡಿತವಾಯೂ ಆಶ್ಚರ್ಯ ಪಡುವಂತಹದ್ದೇನು ಇಲ್ಲಾ. ಸರ್ಕಾರದ ನೀತಿಗಳು ಜನಪರವಾಗಿರದೇ ಜನರಿಗೆ ಮಾರಕವಾಗಿದ್ದಲ್ಲಿ ಅದನ್ನು ಖಂಡಿಸಲೇ ಬೇಕು. ಹೇಗೆ ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳುವುದಿಲ್ಲವೋ ಹಾಗೇ ನಮ್ಮ ನೆಚ್ಚಿನವರು ತಪ್ಪು ಮಾಡಿದಾಗ ಅದನ್ನು ಸರಿ ಹೇಳಿ ತಪ್ಪನ್ನು ಅವರಿಗೆ ಅರಿವುಗೊಳಿಸಿ ತಿದ್ದದೇ ಇಲ್ಲದಿದ್ದಲ್ಲಿ ನಾವುಗಳು ಅವರಿಗಿಂತ ಹೆಚ್ಚಿನ ತಪ್ಪನ್ನು ಮಾಡಿದಂತಾಗುತ್ತದೆ.

ಯಾರೋ ಯಾರೋ ಲಂಪಟರನ್ನು ವಿಚಾರಣೆಗೆಂದು ಬಂಧಿಸಿದ್ದಾರೆ ಎಂದು ಜನ ರಸ್ತೆಗಿಳಿದು ಸರ್ಕಾರಿ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ಹಾಳು ಮಾಡುವ ಬದಲು ಇಂತಹ ಜನ ವಿರೋಧಿ ನೀತಿಗಳಿಗೆ ಜನರು ಒಗ್ಗಟ್ಟಾಗಿ ಕಾನೂನು ವ್ಯಾಪ್ತಿಯಡಿಯಲ್ಲಿಯೇ ಶಾಂತಿಯುತವಾಗಿ ಪ್ರತಿಭಟಿಸಬಹುದಲ್ಲವೇ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂದು ಯೋಚಿಸುತ್ತಾ ಕೂರದೇ ನಾವೇ ಮುಂದೆ ಬಂದು ಬೆಕ್ಕಿಗೆ ಗಂಟೆ ಕಟ್ಟಬಹುದಲ್ಲವೇ? ಶಾಂತಿಯುತ ಹೋರಾಟ ನಮ್ಮಿಂದಲೇ ಸಿದ್ದವಾಗಲಿ. ನಮ್ಮ ಹೋರಾಟದ ಫಲದಿಂದಾಗಿ ಸರ್ಕಾರ ಜನಪರವಾಗಿ ಯೋಚಿಸಿ ಹೊಸಾ ಕಾನೂನುಗಳನ್ನು ಜಾರಿಗೆ ತಂದಲ್ಲಿ ಜನರು ಖಂಡಿತವಾಗಿಯೂ ಮೆಚ್ಚುತ್ತಾರೆ. ಆದರೇ ಈ ರೀತಿಯಾಗಿ ಅವೈಜ್ಞಾನಿಕವಾಗಿ ಜನರ ಮೇಲೆ ದಂಡವನ್ನು ಹೇರಲು ಹೋದಲ್ಲಿ ಜನ ಬಂಡಾಯಕ್ಕೆ ತಿರುಗಿ ಸಂಘರ್ಷಕ್ಕೇ ತಿರುಗುವ ಮೊದಲು ಸರ್ಕಾರ ಎಚ್ಚೆತ್ತು ಕೊಂಡು ಈ ಹೊಸಾ ಕಾನೂನಿನ ನ್ಯೂನತೆಗಳನ್ನು ಆದಷ್ಟು ಬೇಗ ಸರಿಪಡಿಸಲಿ ಎನ್ನುವುದೇ ನಮ್ಮ ಆಶಯವಾಗಿದೆ.

ಈ ಮೇಲೆ ತಿಳಿಸಿದಂತಹ ಎಲ್ಲಾ ಅಂಶಗಳು ನಾವು ಸಂಚಾರೀ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮಾತ್ರವೇ ಅನ್ವಯವಾಗುವುದರಿಂದ, ಅದರ ಬಗ್ಗೆ ಹೆಚ್ಚಿನ ಚಿಂತೆ ಮಾಡಿಕೊಳ್ಳದೇ, ವಾಹನಗಳನ್ನು ಸದಾ ಸುಸ್ಥಿತಿಯಲ್ಲಿಟ್ಟು ಕೊಂಡು, ಅಗತ್ಯವಿರುವ ಎಲ್ಲಾ ದಾಖಲಾತಿ ಪತ್ರಗಳನ್ನು ಜೊತೆಯಲ್ಲಿಟ್ಟು ಕೊಂಡು ಆದಷ್ಟೂ ಜಾಗೃತರಾಗಿ ವಾಹನ ಚಲಾಯಿಸೋಣ. ಅಕಸ್ಮಾತ್ ಗ್ರಹಚಾರ ತಪ್ಪಿ ಪೋಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ, ಅವರ ಮೇಲೆ ಕಿರುಚಾಡದೇ ಸಂಯಮದಿಂದ ವರ್ತಿಸಿ ದಂಡ ಪಾವತಿಸೋಣ ಮತ್ತು ಅದಕ್ಕೆ ತಕ್ಕ ರಸೀದಿಯನ್ನು ತಪ್ಪದೇ ಪಡೆದು ನಾವು ಕಟ್ಟುವ ಹಣ ಸರ್ಕಾರಕ್ಕೇ ತಲುಪುವ ಹಾಗೆ ನೋಡಿಕೊಳ್ಳೋಣ. ಈ ನಿಯಮಗಳನ್ನು ಸರ್ಕಾರ ಮಾಡುತ್ತದೆ. ಸರ್ಕಾರದ ಮೇಲಿನ ಕೋಪವನ್ನು ಪೋಲೀಸರ ಮೇಲೆ ತೋರಿಸದಿರೋಣ. ಏಕೆಂದರೆ ಅವರು ಕೇವಲ ಸರ್ಕಾರದ ಕಾನೂನು ಅಜ್ಞಾಪಾಲಕರಷ್ಟೇ.

ಏನಂತೀರೀ?