ಹಂಪೆಯ ಬಡವಿ ಲಿಂಗ ಪೂಜಿಸುವ ಶ್ರೀ ಕೃಷ್ಣ ಭಟ್ಟರು

ಹದಿಮೂರನೇ ಶತಮಾನದಲ್ಲಿ ಗುರು ವಿದ್ಯಾರಣ್ಯರ ಪ್ರೇರಣೆಯಿಂದ ಹಕ್ಕ ಬುಕ್ಕರ ಸಾರಥ್ಯದಲ್ಲಿ ಮುಸಲ್ಮಾನರ ದಬ್ಬಾಳಿಕೆಯನ್ನು ಮೆಟ್ಟಿನಿಂತು ವಿಜಯನಗರ ಹಿಂದವೀ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆ. ನಮಗೆಲ್ಲರಿಗೂ ತಿಳಿದಂತಹ ವಿಷಯ. ಇದೇ ವಿಜಯನರಗರದ ರಾಜಧಾನಿಯಾಗಿದ್ದ ಹಂಪೆ ಮುಂದೆ ಕೃಷ್ಣದೇವರಾಜನ ಆಳ್ವಿಕೆಯ ಸಮಯದಲ್ಲಿ ಮುತ್ತು ರತ್ನಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದಂತಹ ಸಮೃದ್ಧ ಸಾಮ್ರಾಜ್ಯವಾಗಿತ್ತು ಎಂದು ಕೇವಲ ನಮ್ಮ ಇತಿಹಾಸಕಾರರಲ್ಲದೇ, ವಿದೇಶೀ ಇತಿಹಾಸಕಾರರೂ ನಮೂದಿಸಿದ್ದಾರೆ. ಇಂತಹ ಕೇವಲ ಆರ್ಥಿಕವಾಗಲ್ಲದೇ ಶಿಲ್ಪಕಲೆ. ಸಂಗೀತ, ಸಾಹಿತ್ಯಗಳಲ್ಲಿಯೂ ಸಮೃದ್ಧವಾಗಿದ್ದಂತಹ ನಾಡಾಗಿತ್ತು.

ವಿಜಯನಗರ ಸಾಮ್ರಾಜ್ಯದ ಉಚ್ಫ್ರಾಯ ಸ್ಥಿತಿಯಲ್ಲಿದ್ದಾಗ ಹಂಪಿಯ ಸುತ್ತಮುತ್ತಲೂ ನೂರಾರು ಕಲಾತ್ಮಕ ದೇವಸ್ಥಾನಗಳನ್ನು ಮತ್ತು ಕಲಾ ಕುಟೀರಗಳನ್ನು ಅಂದಿನ ಸಾಮ್ರಾಜ್ಯದ ಖ್ಯಾತ ಶಿಲ್ಪಿಗಳು ರಾಜಾಶ್ರಯದಲ್ಲಿ ನಿರ್ಮಿಸಿದ್ದರು. ಆದರೆ ಕೃಷ್ಣದೇವರಾಯರ ನಂತರ ಆಳ್ವಿಕೆಗೆ ಬಂದ ಅರಸರು ಬಲಾಢ್ಯರಾಗಿಲ್ಲದಿದ್ದ ಕಾರಣ ಮುಸಲ್ಮಾನರು ವಿಜಯನಗರ ಸಾಮ್ರಾಜ್ಯದ ಮೇಲೆ ಆಕ್ರಮಣ ಸಾಮ್ರಾಜ್ಯವನ್ನು ಲೂಟಿ ಮಾಡಿದ್ದಲ್ಲದೇ ಸಿಕ್ಕ ಪಕ್ಕ ದೇವಾಲಯಗಳನ್ನೂ ಮತ್ತು ಅದರೊಳಗಿದ್ದ ವಿಗ್ರಹಗಳನ್ನು ಭಂಗ ಗೊಳಿಸಿದ ಕಾರಣ ಅನೇಕ ದೇವಾಲಯಗಳಲ್ಲಿ ನಿತ್ಯ ಪೂಜೆಯೇ ನಡೆಯದಂತಾಯಿತು. ಅಂತಹ ಭಂಗಗೊಂಡ ದೇವಸ್ಥಾನಗಳ ಸಾಲಿನಲ್ಲಿ ಬಡವಿ ಲಿಂಗದ ದೇವಾಲಯವೂ ಒಂದಾಗಿ ಸುಮಾರು ಶತಮಾನಗಳ ಕಾಲ ನಿತ್ಯಪೂಜೆಯಿಂದ ಹೊರತಾಗಿತ್ತು.

ಎಂಭತ್ತರ ದಶಕದಲ್ಲಿ ಕರ್ನಾಟಕದ ಮೂಲದವರೇ ಆಗಿದ್ದ ಕಂಚಿ ಕಾಮಕೋಟಿ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಅವರ ಆಶಯದಂತೆ ಅಂದಿನ ಕಿರಿಯ ಶ್ರೀಗಳಾಗಿದ್ದ ಜಯೇಂದ್ರ ಸರಸ್ವತಿಯವರು ಕರ್ನಾಟಕದಲ್ಲಿ ಅವರ ಶಾಖಾಮಠಕ್ಕೆ ಪ್ರಶಸ್ಥವಾದ ಜಾಗವನ್ನು ಹುಡುಕುತ್ತಿದ್ದರು (ಅದೇ ಸಮಯದಲ್ಲಿಯೇ ಗುರು ವಿದ್ಯಾರಣ್ಯರ ಜನ್ಮ ಸ್ಥಳವೆಂದೇ ಪ್ರತೀತವಾಗಿರುವ ನಮ್ಮೂರು ಬಾಳಗಂಚಿಗೂ ಬಂದು ನಮ್ಮೂರಿನಲ್ಲಿ ನದಿ ಇಲ್ಲದಿದ್ದ ಕಾರಣ ಮಠ ಸ್ಥಾಪಿಸಲು ಮುಂದಾಗಲಿಲ್ಲ) ಅದೇ ಹುಡುಕಾಟದಲ್ಲಿಯೇ 1986ರಲ್ಲಿ ಶ್ರೀಗಳು ಹಂಪೆಗೂ ಭೇಟಿಕೊಟ್ಟ ಸಮಯದಲ್ಲಿ ಈ ಬಡವಿ ಲಿಂಗದ ದರ್ಶನ ಮಾಡಿದಾಗ ಒಂದು ಚೂರೂ ಭಿನ್ನವಾಗದೇ ಪರಿಶುದ್ಧಗಿರುವ ಈ ದೇವರಿಗೆ ಏಕೆ ನಿತ್ಯ ಪೂಜೆ ನಡೆಯುತ್ತಿಲ್ಲ? ಎಂದು ಕೇಳಿದಾಗ, ಅವರ ಜೊತೆಯಲ್ಲಿಯೇ ಇದ್ದ ಆನೆಗುಂದಿ ರಾಜವಂಶದವರು ಅದರ ಹೊಣೆಗಾರಿಕೆಯನ್ನು ಹೊತ್ತು ಕೊಂಡು ಸುಮಾರು ಹತ್ತು ಅಡಿಗಷ್ಟು ಎತ್ತರ ಇರುವ ಆ ಮಹಾಶಿವನಿಗೆ ಪ್ರತಿ ದಿನವೂ ಪೂಜೆ ಮಾಡಲು ಕೆಲವು ಅರ್ಚಕರು ನೇಮಕಗೊಂಡರೂ, 1995ರಲ್ಲಿ ದೈನಂದಿನ ನೈವೇದ್ಯಕ್ಕೆಂದು 2–3 ತಿಂಗಳಿಗೆ 30 ಕೆಜಿ ಅಕ್ಕಿ ಮತ್ತು ತಿಂಗಳಿಗೆ 300ರೂ ಸಂಭಾವನೆಯೊಂದಿಗೆ ನಿಯುಕ್ತರಾದವರೇ, ಶ್ರೀಯುತ ಕೃಷ್ಣ ಭಟ್ಟರು. ಅಂದಿನಿಂದ ಇಂದಿನವರೆಗೂ ವಯಸ್ಸು ಸುಮಾರು 90ರ ಆಸುಪಾಸಿನಲ್ಲಿ ಇದ್ದರೂ ಶರೀರವೆಲ್ಲಾ ಜರ್ಜರಿತವಾಗಿ ಸೊಂಟ ಬಾಗಿದ್ದರೂ, ಚಳಿ, ಮಳೆ, ಗುಡುಗು ಸಿಡಿಲು ಇದಾವುದನ್ನೂ ಲೆಖ್ಖಿಸದೇ ಪ್ರತೀದಿನವೂ ನಿರಂತರವಾಗಿ ಪೂಜಾವಿಧಿವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಶ್ರೀ ಕೃಷ್ಣ ಭಟ್ಟರು.

ಶ್ರೀ ಕೃಷ್ಣ ಭಟ್ಟರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿರುವ ಕಾಸರವಳ್ಳಿ ಎಂಬ ಗ್ರಾಮದವರು. 1978ರಲ್ಲಿ ರಾಮಭಟ್‌ ಎನ್ನುವರು ಇವರನ್ನು ಹಂಪಿಯ ಸತ್ಯನಾರಾಯಣ ದೇವಾಲಯದ ಅರ್ಚಕರಾಗುವಂತೆ ಕರೆತಂದರಂತೆ. ಹಾಗೆ ಮಲೆನಾಡಿನಿಂದ ಬಿಸಿಲು ನಾಡಿಗೆ ಬಂದ ಶ್ರೀ ಕೃಷ್ಣ ಭಟ್ಟರು ಕೆಲಕಾಲ ವಿರೂಪಾಕ್ಷ ದೇವರ ಅರ್ಚಕರೂ ಆಗಿದ್ದು, ಕಾಲ ಕ್ರಮೇಣ ಇಲ್ಲಿಯರೇ ಆಗಿಹೋಗಿದ್ದಾರೆ. ವಯಸ್ಸಾಗಿದೆ. ಇನ್ನಾದರೂ ಮನೆಯಲ್ಲಿರಿ ಎಂದು ಕುಟುಂಬದವರು ಹೇಳುತ್ತಲೇ ಇದ್ದರೂ, ನನಗೆ ಶಿವನ ಆರಾಧನೆಯೇ ಸರ್ವಸ್ವ. ಮುಪ್ಪು ದೇಹಕ್ಕೆ ಬಂದಿರಬಹುದು. ನನ್ನ ಸಂಕಲ್ಪ, ಭಕ್ತಿಗೆ ಮುಪ್ಪಾಗಿಲ್ಲ ಎಂದು ಇದೇ ಬಡವಿ ಲಿಂಗನ ಸೇವೆಯಲ್ಲಿಯೇ ತಮ್ಮ ಜೀವನ ಅಂತ್ಯವಾಗಿ ಹೋಗಲಿ ಎಂದು ದಿನ ಕಳೆಯುತ್ತಿದ್ದೇನೆ ಎನ್ನುತ್ತಾರೆ ಭಟ್ಟರು.

ಈ ದೇವಸ್ಥಾನದ ವಿಶೇಷವೇನೆಂದರೆ, ಈ ಬಡವಿ ಲಿಂಗಕ್ಕೆ ಚಾವಣಿಯೇ ಇಲ್ಲ. ಅರ್ಥಾತ್ ಇದಕ್ಕೆ ಆಕಾಶವೇ ಅಂಬರ. ಇದಕ್ಕೆ ಸೂರಿಲ್ಲ ಮತ್ತು ನೆರಳಿಲ್ಲ. ಸುಮಾರು 9 ಅಡಿ ಎತ್ತರದ ಏಕಶಿಲೆಯ ಲಿಂಗಕ್ಕೆ ಬೇಸಿಗೆಯಲ್ಲಿ ಸೂರ್ಯನ ಬಿಸಿಲು, ಚಳಿಗಾಲದಲ್ಲಿ ಮಂಜಿನ ಇಬ್ಬನಿಗಳು ಮತ್ತು ಮಳೆಗಾಲದಲ್ಲಿ ವರುಣನ ನಿರಂತರ ಅಭಿಷೇಕವಾಗುತ್ತಲೇ ಇರುತ್ತದೆ. ಹಂಪೆಯಲ್ಲಿ ಹರಿಯುವ ತುಂಗಾಭದ್ರ ನದಿಯ ತುರ್ತು ಕಾಲುವೆಯಿಂದ, ಒಂದು ಸಣ್ಣ ಕಾಲುವೆಯ ನೀರು, ಈ ಬಡವಿಲಿಂಗ ಇರುವ ಗರ್ಭಾಂಗಣದ ಮೂಲಕವೇ ಹರಿದುಕೊಂಡು ಮುಂದಿರುವ ಹೊಲಗದ್ದೆಗಳಿಗೆ ಹೋಗುತ್ತದೆ. ಹೀಗಾಗಿ ವರ್ಷವಿಡೀ ಬಡವಿಲಿಂಗದ ಪೀಠದಿಂದ 3 ಅಡಿಗಳು ಸದಾ ಜಲಾವೃತವಾಗಿರುತ್ತದೆ. ಬೇಸಿಗೆಯಲ್ಲಿ ನದಿಯ ನೀರು ಬತ್ತಿದ್ದರೂ ಯಾವುದೋ ನೀರಿನ ಸೆಲೆಯಿಂದಾಗಿ ಈ ದೇವಾಲಯದ ಒಳಾಂಗಣ ವರ್ಷವಿಡೀ ನೀರಿನಿಂದ ಆವೃತವಾಗಿರುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಇನ್ನೂ ದೇವಾಲಯಕ್ಕೆ ಬಡವಿ ಲಿಂಗ ಎಂದು ಹೆಸರಾಗುವುದಕ್ಕೂ ಒಂದೆರಡು ದಂತ ಕಥೆಗಳಿವೆ. ಶೈವ ಮತ್ತು ವೈಷ್ಣವರ ನಡುವೆ ಸಾಮರಸ್ಯ ಏರ್ಪಡಿಸುವ ದೃಷ್ಟಿಯಿಂದ ಶಿವಲಿಂಗ ಮತ್ತು ಉಗ್ರ ನರಸಿಂಹ ಎರಡೂ ಒಂದೇ ಕಡೇ ಇರುವ ಈ ದೇವಾಲಯದಲ್ಲಿ ಈ ಶಿವಲಿಂಗವನ್ನು ಒಬ್ಬ ಬಡ ರೈತ ಮಹಿಳೆ ಪ್ರತಿಷ್ಠಾಪಿಸಿದ್ದರಿಂದ, ಇದನ್ನು ಬಡವಿಲಿಂಗ ಎಂದು ಕರೆಯುತ್ತಾರೆ ಎಂದರೆ ಮತ್ತೊಂದು ಕಥೆಯ ಪ್ರಕಾಋಅ, ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ, ಒಂದು ಶಿವಲಿಂಗವನ್ನು ಕಟ್ಟುತ್ತೇನೆಂದು ಶಪಥಗೈದನಂತೆ. ಅವನಿಚ್ಛೆಯಂತೆಯೇ ಅವನ ಆಸೆಗಳೆಲ್ಲವೂ ಈಡೇರಿದಾಗ, ಆತ ತನ್ನ ಕೈಯಿಂದಲೇ ಈ ಶಿವ ಲಿಂಗವನ್ನು ಸ್ಥಾಪಿಸಿಕೊಂಡನಂತೆ ಎನ್ನುತ್ತದೆ‌ ಮತ್ತೊಂದು ಕಥೆ.. ವಿಜಯ ನಗರದ ಅರಸರ ಕಾಲದಲ್ಲಿ ನಿತ್ಯವೂ ಈ ಲಿಂಗಕ್ಕೆ ವಿಶೇಷ ಪೂಜೆಗಳು ಸಲ್ಲುತ್ತಿದ್ದು ಕ್ರಮೇಣ ಪೂಜೆ ಇಲ್ಲದ್ದಾಗಿತ್ತು. ಈಗ ಕೃಷ್ಣ ಭಟ್ಟರ ಅರ್ಚಕತ್ವದಲ್ಲಿ ನಿತ್ಯ ಪೂಜೆ ನಡೆದು, ಹಂಪಿಗೆ ಬರುವ ಪ್ರವಾಸಿಗರಿಗೆ ವಿರೂಪಾಕ್ಷ ದೇವಾಲಯ, ತಾಯಿ ಭುವನೇಶ್ವರಿ, ಯಂತ್ರೋದ್ಧಾರ ಆಂಜನೇಯಮ್ ಸಾಸಿವೇ ಕಾಳು ಗಣೇಶ, ಕಲ್ಲಿನ ರಥದ ಜೊತೆ ಈ ಬಡವಿ ಲಿಂಗವೂ ಆಕರ್ಷಣೀಯ ದೇವಾಲಯವಾಗಿದೆ. ಶಿವರಾತ್ರಿಯಂದು ಈ ಬೃಹದೀಶ್ವರ, ಜಲಕಂಠನಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತದೆ.

ಇಂತಹ ಪುರಾಣ ಪ್ರಸಿದ್ಧ ದೇವಸ್ಥಾನದ ವಯೋವೃದ್ಧ ಅರ್ಚಕರಾದ ಶ್ರೀಕೃಷ್ಣ ಭಟ್ಟರ ದಿನಚರಿ ಬೆಳಿಗ್ಗೆ 6 ಗಂಟೆಗೆಲ್ಲಾ ಆರಂಭವಾಗುತ್ತದೆ. ಬೆಳಗ್ಗೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಸ್ನಾನ ಸಂಧ್ಯಾವಂದನೆಗಳ ನಂತರ ಮನೆಯಲ್ಲಿ ನಿತ್ಯಪೂಜಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಪೂರೈಸಿದ ನಂತರ ಮನೆಯ ಮುಂದಿನ ಜಗುಲಿಯಲ್ಲಿ ಕುಳಿತು ಲೋಕಾಭಿರಾಮವಾಗಿ ಬಂದು ಹೋದವರೊಡನೇ ಮಾತಾನಾಡುತ್ತಲೇ, ಸೂರ್ಯ ನೆತ್ತೀ ಮೇಲೆ ಬರುವುದನ್ನೇ ಕಾಯುತ್ತಿರುತ್ತಾರೆ. ಗಂಟೆ ಒಂದಾಗುತ್ತಿದ್ದಂತೆಯೇ, ಕೈಯ್ಯಲ್ಲೊಂದು ಬಕೇಟು ಹಿಡಿದುಕೊಂಡು ಅದರಲ್ಲಿ ವಿಭೂತಿ, ಅರಿಶಿನ-ಕುಂಕುಮ, ನೈವೇದ್ಯಕ್ಕೆಂದು ಒಂದಿಷ್ಟು ಅಕ್ಕಿ ಇಟ್ಟುಕೊಂಡು, ಬಾಗಿದ ಬೆನ್ನುಗಳಿಗೆ ಆಸರೆಯಾಗಿ ಊರುಗೋಲನ್ನು ಊರಿಕೊಂಡು ದೇವಸ್ಥಾನದ ಹಾದಿಯಲ್ಲಿ ಸಿಗುವ ಗಂಟೆ ಹೂಗಳೋ ಇಲ್ಲವೇ ಕಾಡು ಹೂವುಗಳನ್ನು ಕಿತ್ತುಕೊಂಡು ನಿಧಾನವಾಗಿ ಬಡವಿ ದೇವಸ್ಥಾನವನ್ನು ತಲುಪುತ್ತಾರೆ.

ಹೀಗೆ ಕಷ್ಟ ಪಟ್ಟು ದೇವಸ್ಥಾನಕ್ಕ ಬರುವ ಭಟ್ಟರಿಗೆ ಬಡವಿ ಲಿಂಗವನ್ನು ನೋಡಿದ ತಕ್ಷಣವೇ ಅದೆಲ್ಲಿಂದ ಬರುತ್ತದೋ ಅಧಮ್ಯ ಚೇತನಾ ಶಕ್ತಿ. ನಡುಗುವ ದೇಹಕ್ಕೆ ಒಂದು ತುಂಡು ಪಂಚೆಯನ್ನು ಸುತ್ತಿಕೊಂಡು ಅವರ ಮಂಡಿವರೆಗೂ ಇರುವ ನೀರಿಗೆ ಇಳಿದು, 3 ಅಡಿ ನೀರಿನಲ್ಲಿ ಮಳುಗಿರುವ ಲಿಂಗದ ಪೀಠಕ್ಕೆ ಕಾಲೂರಿ, 9 ಅಡಿಯ ಲಿಂಗದ ಮೇಲ್ಭಾಗವನ್ನು ಶುಚಿಗೊಳಿಸುವ ಅವರ ಸಾಹಸನ್ನು ನೋಡುವುದಕ್ಕೇ ಒಂದು ರೋಮಾಂಚನ. ಇನ್ನೇನು ಬಿದ್ದು ಬಿಡುವರೇನೋ ಎಂಬಂತೆ ತೂರಾಡುತ್ತಿದ್ದರೂ ಅಷ್ಟು ಎತ್ತರದ ಲಿಂಗದ ಮೇಲೆ ಹತ್ತಿ ಹಿಂದಿನ ದಿನದ ಹೂಗಳನ್ನು ಮತ್ತು ಭಕ್ತರು ಎಸೆದ ನಾಣ್ಯಗಳನ್ನು ಹೆಕ್ಕಿ ತೆಗೆದು, ನಂತರ ಬಕೀಟಿನಿಂದ ನೀರನ್ನು ಲಿಂಗ ಸಂಪೂರ್ಣ ನೆನೆಯುವಷ್ಟು ಎರಚಿ, ಆ ಬೃಹತ್ ಲಿಂಗವನ್ನು ಶುದ್ಧೀಕರಿಸಿ, ಹೂವು, ವಿಭೂತಿ ಅರಿಶಿನ ಕುಂಕುಮವಿಟ್ಟು, ನೈವೇದ್ಯ ಅರ್ಪಿಸಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸುತ್ತಲೇ, ಪೂಜೆ ಸಲ್ಲಿಸುವ ಪರಿ ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ. ಬಡವಿಲಿಂಗನನ್ನು ನೋಡಲು ಬರುವ ವಿದೇಶಿಗರ ಬಾಯಿಯಲ್ಲೂ, ಓಂ ನಮಃ ಶಿವಾಯ ಮಂತ್ರೋಚ್ಚಾರ ಮಾಡಿಸುವುದೂ, ಭಟ್ಟರ ವೈಶಿಷ್ಟ್ಯಗಳಾಗಿದೆ.

ಸುಮಾರು ಅರ್ಧ ಗಂಟೆಗಳ ಕಾಲ ನಡೆಯುವ ಈ ಪೂಜಾ ಕೈಂಕರ್ಯವನ್ನು ಒಂದು ದಿನವೂ ತಪ್ಪಿಸದೇ ನಡೆಸಿಕೊಂಡು ಹೋಗುತ್ತಿರುವ ಈ ತೊಂಬ್ಬತ್ತರ ವಯೋವೃದ್ಧರ ದೈವಭಕ್ತಿಯನ್ನು ಎಷ್ಟು ಹೊಗಳಿದರೂ ಸಾಲದು. ಈ ಇಳೀ ವಯಸ್ಸಿನಲ್ಲಿಯೂ ಛಾವಣಿ ಇಲ್ಲದ ಆ ದೇವಾಲಯದಲ್ಲಿ ಅರ್ಧಗಂಟೆಗಳ ಕಾಲ ತಣ್ಣನೆಯ ನೀರಲ್ಲಿ ನಿಂತು ನಡೆಸುವ ಪೂಜೆ ಭಕ್ತಾದಿಗಳ ಮುದವನ್ನು ಹೆಚ್ಚಿಸುವುದಲ್ಲದೇ, ಯಾವುದೇ ಸ್ವಾರ್ಥವಿಲ್ಲದೇ, ಕೇವಲ ಭಗವಂತನ ಸೇವಾ ಮನೋಭಾವದಿಂದ ಪೂಜೆ ಮಾಡುವ ಕೃಷ್ಣ ಭಟ್ಟರ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಇದಕ್ಕಿಂತಲೂ ಗಮನಾರ್ಹವಾದ ಅಂಶವೆಂದರೆ, ಶ್ರೀಯುತರು ಯಾರೊಂದಿಗೂ ಕಾಣಿಕೆಯನ್ನಾಗಲೀ, ದಕ್ಷಿಣೆಯನ್ನಾಗಲೀ ಕೇಳುವುದೂ ಇಲ್ಲ ಮತ್ತು ಬಯಸುವುದೂ ಇಲ್ಲ. ಹಾಗೊಮ್ಮೆ ಪ್ರವಾಸಿಗಳು ಮತ್ತು ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಒಂದಷ್ಟು ಕಾಣಿಕೆ ಸಲ್ಲಿಸಿದರೆ, ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಆ ಕಾಣಿಕೆಯ ಬಹುಪಾಲು ಮೊತ್ತವನ್ನು ಗೋಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ದೇವರ ಹೆಸರಿನಲ್ಲಿ ದುಡ್ಡನ್ನು ಮಾಡುವವರಿಗೆ ಅನುಕರಣಿಯವೇ ಆಗಿದೆ.
ಕೃಷ್ಣಭಟ್ಟರು ತಮ್ಮೀ ಈ ನಿಸ್ವಾರ್ಥ ಸೇವೆ ಮತ್ತು ಪರಿಶ್ರಮದಿಂದಾಗಲೇ ಸ್ಥಳೀಯವಾಗಿ ಅಪಾರ ಗೌರವವನ್ನು ಗಳಿಸಿರುವುದಲ್ಲದೇ ಅನೇಕ ಯುವಕರಿಗೆ ಮಾರ್ಗದರ್ಶಿಗಳಾಗಿದ್ದಾರೆ. ಹಾಗಾಗಿ ಹಂಪೆಯ ಪ್ರವಾಸಿಗರಿಗೆ ಹಂಪೆಯ ಪರಿಚಯ ಮಾಡಿಕೊಡುವ ಪ್ರವಾಸಿ ಗೈಡ್‍ಗಳೂ ಖಡ್ಡಾಯವಾಗಿ ಪ್ರವಾಸಿಗರಿಗೆ ಈ ಬಡವಿ ಲಿಂಗದ ದರ್ಶನ ಮಾಡಿಸಿ ಇಲ್ಲಿಯ ಐತಿಹ್ಯದೊಂದಿಗೆ ಈ ವಯೋವೃದ್ದ ಕೃಷ್ಣ ಭಟ್ಟರ ಸೇವಾ ಕೈಂಕರ್ಯಗಳ ಬಗ್ಗೆ ಮೆಚ್ಚುಗೆ ಮಾತನಾಡಿಯೇ ಮುಂದುವರೆಯುತ್ತಾರೆ.

ದೇಶಾದ್ಯಂತ ಮುಸ್ಲಿಮ್ಮರು ಹಿಂದೂಗಳ ಮೇಲೆ ಒಂದಲ್ಲಾ ಒಂದು ಕ್ಷುಲ್ಲಕ ಕಾರಣಕ್ಕೆ ಬಡಿದಾಡುತ್ತಿದ್ದರೆ, ಕೃಷ್ಣ ಭಟ್ಟರು ಮತ್ತು ಅವರ ಮುಸ್ಲಿಂ ಅನುಯಾಗಿಗಳಾದ ಪೀರ್‌ಸಾಬ್ ಮತ್ತು ಅಬ್ಬಾಸ್‌ ಅವರ ಗೆಳೆತನ ಭಾವೈಕ್ಯ ಸಂಗಮಕ್ಕೆ ಮುನ್ನುಡಿಯಾಗಿದೆ. ಕೃಷ್ಣಭಟ್ಟರು ಮನೆಯಿಂದ ಸ್ವಲ್ಪವೇ ದೂರದ ರಸ್ತೆ ಬದಿಯಲ್ಲಿ ಸಣ್ಣದಾದ ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಪೀರ್‌ಸಾಬ್ ಮಟ ಮಟ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಲು ಕೋಲೂರಿಕೊಂಡು ನಡುಗುತ್ತಾ ಇವರ ಅಂಗಡಿಯ ಮುಂದೆ ಹಾದು ಹೋಗುತ್ತಿದ್ದಂತೆಯೇ, ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ತಮ್ಮ ಬೈಕಿನಲ್ಲಿ ಶ್ರೀ ಕೃಷ್ಣಭಟ್ಟರನ್ನು ಕೂರಿಸಿಕೊಂಡು ದೇವಾಲಯದ ದ್ವಾರದ ಬಳಿ ಇಳಿಸಿಹೋಗುತ್ತಾರೆ. ಪೂಜೆಗಳೆಲ್ಲವೂ ನಿರ್ವಿಘ್ನವಾಗಿ ಮುಗಿಸಿ, ದೇವಾಲಯದ ಹೊರಗೆ ಒಂದೆರೆಡು ಕಲ್ಲುಗಳನ್ನು ಇಟ್ಟು ಮಾಡಿರುವ ಮಾಡಿರುವ ಜಗುಲಿಯ ಮೇಲೇ ಶಿವನಾಮ ಸ್ಮರಣೆ ಮಾಡುತ್ತಲೋ ಇಲ್ಲವೇ ಪುರಾಣ ಪುಣ್ಯಕಥೆಗಳನ್ನು ಓದುತ್ತಲೂ ಕುಳಿತುಕೊಳ್ಳುವ ಕೃಷ್ಣಭಟ್ಟರು ಬರುವ ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಅಭಿಷೇಕದ ತೀರ್ಥವನ್ನು ಪ್ರೋಕ್ಷಿಸಿ ಆಶೀರ್ವಾದಿಸುತ್ತಾರೆ ಸಂಜೆ ಪುರಾತತ್ವ ಇಲಾಖೆಯ ಸಿಬ್ಬಂದಿ, ಬಾಗಿಲು ಮುಚ್ಚುತ್ತಿದ್ದಂತೆಯೇ ಇವರೂ ಸಹಾ ಮನೆಗೆ ಹೊರಡಲು ಸಿದ್ಧರಾದಾಗ, ಅದೇ ದೇವಸ್ಥಾನದ ಬಳಿ ಕಬ್ಬಿನ ಹಾಲು ಮತ್ತು ಸೋಡಾದ ಮೂಲಕ ಪ್ರವಾಸಿಗರ ದಾಹವನ್ನು ತೀರಿಸುವ ಕಾಯಕ ಮಾಡಿಕೊಂಡಿರುವ ಅಬ್ಬಾಸ್ ತಮ್ಮ ಬೈಕಿನಲ್ಲಿ ಕೃಷ್ಣಭಟ್ಟರನ್ನು ನಿಧಾನವಾಗಿ ಹತ್ತಿಸಿಕೊಂಡು ಮನೆಗೆ ಕರೆದುಕೊಂಡು ಬಂದು ಬಿಡುತ್ತಾರೆ. ಇದೇ ಅಬ್ಬಾಸ್ ದೇವರ ಪೂಜೆಗೆಂದು ಹೂವು ಮತ್ತು ಬಾಳೆಎಲೆಯನ್ನೂ ಹಲವಾರು ಬಾರಿ ತಂದು ಕೊಡುತ್ತಾರೆ. ಕೃಷ್ಣ ಭಟ್ಟರ ಬಡವಿಲಿಂಗನ ಪ್ರತೀದಿನದ ಸೇವಾ ಕೈಕಂರ್ಯದಲ್ಲಿ ಅಬ್ಬಾಸ್ ಮತ್ತು ಪೀರ್ ಸಾಬ್ ಅವರ ಈ ಅಳಿಲು ಸೇವೆಯೂ ಸೇರಿಕೊಂಡಿದೆ. ಎಲ್ಲೋ ಕೆಲವೊಮ್ಮೆ ಪರಿಚಯಸ್ಥರು ಮತ್ತು ಕೆಲ ಆಟೊ ಚಾಲಕರೂ ಈ ಸೇವೆಯಲ್ಲಿ ಪಾಲ್ಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಅಲ್ಲಿನವರಿಗೆ ಮೆಚ್ಚಿನ ಅಜ್ಜನಾಗಿದ್ದಾರೆ ಶ್ರೀ ಕೃಷ್ಣಭಟ್ಟರು ಎಂದರೂ ತಪ್ಪಾಗಲಾರದು.

ಬಾಗಿದ ದೇಹ, ನಡುಗುವ ಕೈ ಕಾಲು, ಮಂದವಾಗಿರುವ ಕಿವಿ, ಮಂಜಾಗಿರುವ ಕಣ್ಣು ಇಷ್ಟೆಲ್ಲಾ ಇದ್ದರೂ ಪ್ರತಿನಿತ್ಯವೂ ಮಳೆ-ಗಾಳಿ-ಬಿಸಲು ಯಾವುದನ್ನೂ ಲೆಕ್ಕಿಸದೇ ಬಡವಿ ಲಿಂಗಕ್ಕೆ ತಪ್ಪಿಸದೇ ಪೂಜೆ ಸಲ್ಲಿಸುತ್ತಿರುವ ಶ್ರೀ ಕೃಷ್ಣ ಭಟ್ಟರನ್ನು ಮತ್ತು ಬಡವಿ ಲಿಂಗವನ್ನು ಮುಂದಿನ ಬಾರಿ ಹಂಪೆಗೆ ಹೋದಾಗ ನೋಡಲು ಮರೆಯದಿರೋಣ. ಅಲ್ಲಿಯ ವರೆಗೂ ಆ ಬಡವಿ ಲಿಂಗನೇ ಅವರ ಪರಮಾಪ್ತ ಭಕ್ತರಾದ ಶ್ರೀ ಕೃಷ್ಣ ಭಟ್ಟರಿಗೆ ಆಯುರಾರೋಗ್ಯ ನೀಡಿ ಇನ್ನೂ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸುವ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ ಅಲ್ಲವೇ?

ಏನಂತೀರೀ?

ದಿ.25.04.2021 ಭಾನುವಾರದಂದು ಶ್ರೀ ಕೃಷ್ಣ ಭಟ್ಟರು ನಿಧನರಾಗಿದ್ದಾರೆ. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ.

ಚಿತ್ರಗಳು: ಅಂತರ್ಜಾಲದಿಂದ ಎರವಲು ಪಡೆದದ್ದು.

ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀ ವಿದ್ಯಾರಣ್ಯರು

ಸಾಧಾರಣವಾಗಿ ಬ್ರಿಟಿಷರು ಭಾರತಕ್ಕೆ ಬರುವ ಮುಂಚೆ ಭಾರತ ಸುವರ್ಣ ಯುಗವಾಗಿತ್ತು ಎಂದು ಹೇಳುತ್ತಾ ಅಲ್ಲಿ ಮುತ್ತು ರತ್ನ ಹವಳ ಪಚ್ಚೆ ಮುಂತಾದ ಅಮೂಲ್ಯವಾದ ಅನರ್ಘ್ಯ ಬೆಲೆಬಾಳುವ ವಸ್ತುಗಳನ್ನೂ ರಸ್ತೆಯ ಬದಿಯಲ್ಲಿ ಸೇರಿನಲ್ಲಿ ಮಾರಲಾಗುತ್ತಿತ್ತು ಎಂದು ಅನೇಕ ಪಾಹಿಯಾನ್, ಹುಯ್ಯನ್ ಸಾಂಗ್ ಅಂತಹ ವಿದೇಶೀ ಇತಿಹಾಸಕಾರರೇ ಬಣ್ಣಿಸಿದ್ದಾರೆ. ಇನ್ನು ಸಂಗೀತ ಮತ್ತು ಶಿಲ್ಪಕಲೆ ಎಂದೊನೆಯೇ ಥಟ್ಟನೆ ಎಲ್ಲರಿಗೂ ನೆನಪಾಗುವುದು ಕರ್ನಾಟಕವೇ. ಕರ್ನಾಟಕ ಎಂದೊಡನೇ ನೆನಪಾಗುವುದೇ ವೈಭವೋಪೇತ ದಸರಾ ಹಬ್ಬ. ಕನ್ನಡ ಎಂದೊಡನೆ ಎಲ್ಲರೂ ನಮಸ್ಕರಿಸುವುದೇ ತಾಯಿ ಭುವನೇಶ್ವರಿಗೇ. ಇಷ್ಟೆಲ್ಲಾ ಇತಿಹಾಸಗಳಿಗೆ ಪ್ರಸಿದ್ಧವಾಗಿದ್ದದ್ದೇ, ವಿಜಯನಗರ ಸಾಮ್ರಾಜ್ಯ. ದಕ್ಷಿಣ ಭಾರತದಲ್ಲಿ ಪ್ರಪಥಮ ಬಾರಿಗೆ ಅಷ್ಟು ದೊಡ್ಡ ಹಿಂದೂ ಸಾಮಾಜ್ಯದ ಪರಿಕಲ್ಪನೆ ಮಾಡಿಕೊಂಡು ಅದನ್ನು ಕಟ್ಟಲು ಮೂಲ ರೂವಾರಿಗಳಾದವರು, ಶ್ರೀ ಶಂಕರಾಚಾರ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ನಾಲ್ಕು ಶಕ್ತಿಪೀಠಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ದಕ್ಷಿಣಾಮ್ನೇಯ ಶೃಂಗೇರೀ ಪೀಠದ 12ನೇಯ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ವಿದ್ಯಾರಣ್ಯರು.    ಅವರ ಜನ್ಮ ದಿನದಂದು ಅವರ ಸಾಧನೆಗಳನ್ನು ಸಣ್ಣದಾಗಿ ಮೆಲುಕು ಹಾಕುವ ಸಣ್ಣ ಪ್ರಯತ್ನ

vid2ಅದು 14ನೆಯ ಶತಮಾನ, ಸಕಲ ವೇದ ಶಾಸ್ತ್ರ ಪಾರಂಗತರಾದ ಶ್ರೀ ವಿದ್ಯಾರಣ್ಯರು, ಅದ್ವೈತ ಪಂಥದ ಶೃಂಗೇರಿ ಶಾರದಾ ಪೀಠದ 12ನೇಯ ಜಗದ್ಗುರುಗಳಾಗಿರುತ್ತಾರೆ. ಸನ್ಯಾಸಿಗಳು ಎಂದರೆ, ಕಾಮ ಕ್ರೋಧ, ಮೋಹ, ಲೋಭ ಮಧ ಮತ್ತು ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳಿಂದ ಹೊರಬಂದು ಸಾತ್ವಿಕ ಬದುಕನ್ನು ನಡೆಸುತ್ತಾ ಧರ್ಮ ರಕ್ಷಣೆಗಾಗಿ ಜನ ಸಾಮಾನ್ಯರಿಗೆ ಧಾರ್ಮಿಕವಾಗಿ ಮತ್ತು ರಾಜರಿಗೆ ಆಡಳಿತಾತ್ಮಕವಾಗಿ ಕಾಲ ಕಾಲಕ್ಕೆ ಸೂಕ್ತವಾದ ಸಲಹೆಗಳನ್ನು ನೀಡುತ್ತಾ ಇಡೀ ದೇಶವನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಗುರುತರ ಜವಾಬ್ಧಾರಿ ಇಂತಹ ಆಚಾರ್ಯರ ಮೇಲಿರುತ್ತದೆ. ಆದರೆ ಇವೆಲ್ಲವನ್ನೂ ಮೀರಿ ಕ್ಷಾತ್ರಗುಣವನ್ನು ಪ್ರಚೋದಿಸಿದ ಯತಿಗಳು ಯಾರಾದರೂ ಇದ್ದಲ್ಲಿ ಅದು ಗುರು ವಿದ್ಯಾರಣ್ಯರು ಮಾತ್ರವೇ.

ಅಂದಿನ ಪರಿಸ್ಥಿತಿಯ ಅನುಗುಣವಾಗಿ ವಿದ್ಯಾರಣ್ಯರು ಕ್ಷಾತ್ರ ತೇಜದ ಗುರುಗಳಾಗ ಬೇಕಾದಂತಹ ಸಂಧರ್ಭ ಬರುತ್ತದೆ. ದಕ್ಷಿಣದಲ್ಲಿ ಆಡಳಿತ ನಡೆಸಿದ ಅನೇಕ ರಾಜ ಮನೆತನಗಳು ಸಂಪೂರ್ಣವಾಗಿ ನಿಸ್ತೇಜವಾಗಿದ್ದವು, ಅವರ ಮುಂದಿನ ತಲೆಮಾರಿನ ರಾಜರುಗಳಲ್ಲಿ ಕ್ಷಾತ್ರಗುಣ ಸಂಪೂರ್ಣವಾಗಿ ಕುಗ್ಗಿತ್ತು. ಪದೇ ಪದೇ ಉತ್ತರದ ಕಡೆಯಿಂದ ಮುಸಲ್ಮಾನರ ಆಕ್ರಮಣ. ಬಿಜಾಪುರದ ಬಹುಮನಿ ಸುಲ್ತಾನ ಮತ್ತು ಗೊಲ್ಕೊಂಡಾದ ರಾಜರುಗಳು ದಕ್ಷ್ಣಿಣ ಭಾರತದ ಮೇಲೆ ಸಾಲು ಸಾಲು ದಂಡ ಯಾತ್ರೆ ಮಾಡಿ ಲೂಟಿ ಮಾಡಿದ್ದಲ್ಲದೇ ಅನೇಕ ದೇವಾಲಯಗಳನ್ನು ನಾಶ ಪಡಿಸಿ ನಮ್ಮ ಮಾತಾ ಭಗಿನಿಯರ ಮಾನಹಾನಿ ಮಾಡಿದ್ದಲ್ಲದೇ ಬಲವಂತದಿಂದ ಮತಾಂತರ ಮಾಡುವ ದುಸ್ಸಾಹಸಕ್ಕೆ ಇಳಿದಿರುತ್ತಾರೆ. ಮತಾಂತರಕ್ಕೆ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕುವುದಕ್ಕೂ ಹಿಂದು ಮುಂದೂ ನೋಡದಂತಹ ರಾಕ್ಷಸ ಪ್ರವೃತ್ತಿಯಲ್ಲಿ ಆಟ್ಟ ಹಾಸದಲ್ಲಿ ಮೆರೆಯುತ್ತಾ, ಸಿಕ್ಕ ಸಿಕ್ಕ ಸಾರ್ವಜನಿಕ ಆಸಿಪಾಸ್ತಿಗಳನ್ನು ದೋಚುತ್ತಾ , ಸಾಮ್ರಾಜ್ಯವನ್ನು ಅಕ್ಷರಶಃ ಹಾಳು ಮಾಡುತ್ತಿರುತ್ತಾರೆ. ಇಂತಹ ಮತಾಂಧರ ವಿರುದ್ದ ಹೋರಾಡುವ ಬದಲು ಅವರಿಗೆ ಕಪ್ಪ ಕೊಟ್ಟು ಅವರ ಸಾಮಂತರಾಗಿ ಪ್ರಾಣ ಉಳಿಸಿಕೊಂಡರೆ ಸಾಕು ಎನ್ನುವಂತ ಮನಸ್ಥಿತಿಗೆ ಅನೇಕ ರಾಜಮನೆತನಗಳು ಬಂದು ಬಿಟ್ಟಿರುತ್ತವೆ. ಇಂತಹವರ ವಿರುದ್ಧ ಸಿಡಿದೆದ್ದು ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿ, ಸಿಂಹಾಸನವನ್ನೇರಿ ಸಮರ್ಥವಾಗಿ ಮುನ್ನಡೆಸುವ ಛಾತಿ ಇರುವ ರಾಜರುಗಳೇ ಇರಲಿಲ್ಲ. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುತ್ತದೆ ನಮ್ಮ ನಾಣ್ಣುಡಿ. ಅದರೆ ಗೊತ್ತೂ ಗುರಿ ಇಲ್ಲದೇ, ಸಮರ್ಥ ಗುರುವಿನ ಮಾರ್ಗದರ್ಶನವಿಲ್ಲದೆ ಸೊರಗಿ ಹೋಗಿದ್ದ ಸಮಯದಲ್ಲಿಯೇ ಒಬ್ಬ ಸಮರ್ಥ ಶಕ್ತಿಶಾಲಿಯಾದ ನಾಯಕನನ್ನು ಹುಡುಕಿ ಅವನ ಶಕ್ತಿ ಸಾಮರ್ಥ್ಯಗಳ ಅರಿವು ಮೂಡಿಸಿ, ಧೈರ್ಯ ತುಂಬಿ ಸೂಕ್ತ ಮಾರ್ಗದರ್ಶನವನ್ನು ನೀಡಿ, ಅವನೊಂದಿಗೆ ಒಂದು ಬಲಶಾಲಿಯಾದ ಸೈನ್ಯವನ್ನು ಕಟ್ಟಿ ಮತ್ತೆ ಮುಸಲ್ಮಾನ ಧಾಳಿಕೋರರನ್ನು ಮಟ್ಟ ಹಾಕಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಿದ್ದ ಶ್ರೀ ವಿದ್ಯಾರಣ್ಯರ ಕಣ್ಣಿಗೆ ಹಕ್ಕ ಬುಕ್ಕರೆಂಬ ಇಬ್ಬರು ಉತ್ಸಾಹೀ ತರುಣರು ಕಣ್ಣಿಗೆ ಬೀಳುತ್ತಾರೆ.

hakka_bukkaಹರಿಹರ ಮತ್ತು ಬುಕ್ಕರು ಮುಸಲ್ಮಾನರ ವಿರುದ್ಧದ್ದ ಯುದ್ದದಲ್ಲಿ ಸೋತು ರಾಜ್ಯವನ್ನು ಕಳೆದು ಕೊಂಡ ಪರಿಣಾಮವಾಗಿ, ದೆಹಲಿಯ ಸುಲ್ತಾನ ಅವರ ಬಂಧುಗಳನ್ನು ಕೊಲ್ಲಿ ಇವರಿಬ್ಬರನ್ನೂ ದೆಹಲಿಯಲ್ಲಿ ಯುದ್ದ ಖೈದಿಗಳಾಗಿ ಸೆರೆಮನೆಯಲ್ಲಿಟ್ಟಿರುತ್ತಾನೆ. ಅದೇ ಸಮಯದಲ್ಲಿ ದಕ್ಷಿಣದಲ್ಲಿ ಆರಾಜಕತೆ ಉಂಟಾದಾಗ ಅದನ್ನು ಹತ್ತಿಕ್ಕಲು ಸ್ಥಳೀಯರೇ ಸೂಕ್ತ ಎಂದು ನಿರ್ಧರಿಸಿದ ದೆಹಲಿ ಸುಲ್ತಾನ, ಇದೇ ಹಕ್ಕಬುಗ್ಗರನ್ನು ಅಲ್ಲಿಯ ಅರಾಜಕತೆಯನ್ನು ಅಡಗಿಸಲು ದಕ್ಷಿಣಕ್ಕೆ ಕಳುಹಿಸುತ್ತಾನೆ. ದೆಹಲಿಯ ಸುಲ್ತಾನನ ವಿರುದ್ಧ ಹಗೆತನವನ್ನು ತೀರಿಸಿಕೊಳ್ಳಲು ಖಾತರಿಸುತ್ತಿದ್ದ ಈ ಯುವಕರಿಗೆ ವಿದ್ಯಾರಣ್ಯರ ಆಶ್ರಯ ಸಿಕ್ಕಿ , ಇಂತಹ ಮತಾಂಧರ ಸಾಮಂತರಾಗಿರುವ ಬದಲು ತಮ್ಮದೇ ಸ್ವತಂತ್ರ್ಯವಾದ ನೂತನವಾದ ರಾಜ್ಯವನ್ನು ಕಟ್ಟುವಂತೆ ಪ್ರೇರೇಪಿಸಿ ಅದಕ್ಕೆ ಸೂಕ್ತವಾದ ಸಂಕಲ್ಪವನ್ನು ಅವರಲ್ಲಿ ಮೂಡಿಸುತ್ತಾರೆ.

ಇದೇ ಸಮಯದಲ್ಲಿ ದೆಹಲಿಯ ಸುಲ್ತಾನನಾಗಿದ್ದ ಮಹಮದ್ ಬಿನ್ ತುಘಲಕ್ ಆನೆಗೊಂದಿಯ ರಾಜನನ್ನು ಸೋಲಿಸಿ, ಆ ಪ್ರದೇಶದ ಉಸ್ತುವಾರಿಗೆ ತನ್ನ ಪ್ರತಿನಿಧಿಯನ್ನು ನೇಮಿಸಿರುತ್ತಾನೆ. ವಿದ್ಯಾರಣ್ಯರು, ಶಕ್ತಿ ಶಾಲಿ, ಧರ್ಮ ಮತ್ತು ದೇಶಾಭಿಮಾನವಿರುವ ಯುವಕರ ತಂಡವೊಂದನ್ನು ಸಂಘಟಿಸ, ಹಕ್ಕ ಬುಕ್ಕರು ನಾಯಕತ್ವದಲ್ಲಿ ಆನೆಗೊಂದಿ ಕೋಟೆಯನ್ನು ಪ್ರವೇಶಿಸಿ ತುಘಲಕನ ಪ್ರತಿನಿಧಿಯನ್ನು ನಿರಾಯಾಸವಾಗಿ ಕೊಂದು ಹಾಕಿ ಯಾವುದೇ ರಕ್ತಪಾತವಿಲ್ಲದೆ ಅನೆಗೊಂದಿಯನ್ನು ತಮ್ಮ ಕೈವಶಮಾಡಿಕೊಳ್ಳುವ ಮೂಲಕ ಮೊತ್ತ ಮೊದಲ ಹಿಂದೂ ಸಾಮ್ರಾಜ್ಯದ ಉದಯಕ್ಕೆ ನಾಂದಿ ಹಾಡುತ್ತಾರೆ.

ಹಕ್ಕ-ಬುಕ್ಕರು ತುಂಗಾ ಭದ್ರ ನದಿಯ ತಟದಲ್ಲಿರುವ ಆನೆಗೊಂದಿಯ ಮತ್ತೊಂದು ಬದಿಯಲ್ಲಿ ವಿದ್ಯಾನಗರವೆಂಬ ನೂತನ ನಗರಕ್ಕೆ ಶಂಕು ಸ್ಥಾಪನೆ ಮಾಡಿ, ವಿರೂಪಾಕ್ಷ ಮತ್ತು ಭುವನೇಶ್ವರಿಯರ ಸುಂದರವಾದ ಮತ್ತು ಬೃಹತ್ತಾದ ದೇವಾಲಯವನ್ನು ಕಟ್ಟುತ್ತಾರೆ.ಮೊಘಲರ ವಿರುದ್ಧದ ಪ್ರಪ್ರಥಮ ವಿಜಯದ ಸಂಕೇತವಾಗಿ ನಿರ್ಮಿಸಿದ ಈ ನಗರವನ್ನು ವಿದ್ಯಾನಗರದ ಬದಲಾಗಿ ವಿಜಯನಗರ ಎಂದು ಕರೆಯುವುದೇ ಸೂಕ್ತ ಎಂದು ನಿರ್ಧರಿಸಿದ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಗೆ ಕಾರಣೀಭೂತರಾಗುತ್ತಾರೆ. ಅಂದು ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಸ್ಥಾಪಿಸಲ್ಪಟ್ಟ ವಿಜಯನಗರ ಸಾಮ್ರಾಜ್ಯ, ಪರಕೀಯರ ಆಕ್ರಮಣವನ್ನು ಮೆಟ್ಟಿ, ಮುಂದೆ ಸುಮಾರು 310ವರ್ಷಗಳ ಕಾಲದಲ್ಲಿ ದಕ್ಷಿಣಾದ್ಯಂತ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡು ಮುಂದೆ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾಗಿ ಸುವರ್ಣಯುಗವಾಗಿ ವಿಜೃಂಭಿಸಿತು ಎಂಬುದನ್ನು ಇತಿಹಾಸಕಾರು ಬಣ್ಣಿಸುತ್ತಾರೆ.

ನಂದರ ದುರಾಕ್ರಮಣದಿಂದ ಬೇಸಿತ್ತಿದ್ದ ಜನರಿಗೆ ಚಾಣಕ್ಯರೆಂಬ ಗುರುಗಳು ಚಂದ್ರಗುಪ್ತ ಎಂಬ ಯುವಕನ ಹಿಂದೆ ಮಾರ್ಗದರ್ಶನ ಮಾಡಿ ನಂದರನ್ನು ಮಟ್ಟಹಾಕಿ ಚಂದ್ರಗುಪ್ತನ ನಾಯಕತ್ವದಲ್ಲಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದಂತೆಯೇ, ವಿದ್ಯಾರಣ್ಯರು, ಹಕ್ಕ-ಬುಕ್ಕರ ಹಿಂದೆ ಬಲವಾದ ಶಕ್ತಿಯಾಗಿ ನಿಂತು ಅವರ ನೇತೃತ್ವದಲ್ಲಿಯೇ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಹಿಂದೂ ಸಾಮ್ರಾಜ್ಯದ ಸ್ಥಾಪನೆಗೆ ಕಾರಣೀಭೂತರಾಗಿದ್ದಲ್ಲದೇ, ಮುಂದೆ ಅವರೆಂದೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಶೃಂಗೇರಿ ಶಾರದಾ ಪೀಠದ ಮಠಾಧೀಶರಾಗಿ, ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅದ್ವೈತ ವೇದಾಂತ ಸಾರವನ್ನು ನಿರೂಪಿಸುವ ಪಂಚದಶೀ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶ ಎಂಬ ಗ್ರಂಥಗಳನ್ನೂ ರಚಿಸಿದ್ದಲ್ಲದೇ, ಭಾರತೀಯ ತತ್ತ್ವಶಾಸ್ತ್ರ ಪ್ರಕಾರಗಳನ್ನು ಸುಲಭವಾಗಿ ಪರಿಚಯ ಮಾಡಿಕೊಡುವ ಸರ್ವದರ್ಶನ ಸಂಗ್ರಹ ಜ್ಯೋತಿಷಕ ಕೃತಿ ಕಾಲನಿರ್ಣಯ, ಶಂಕರವಿಜಯ ಮುಂತಾದ ಗ್ರಂಥಕರ್ತರು ವಿದ್ಯಾರಣ್ಯರೇ ಎಂದು ನಂಬಲಾಗಿದೆ.

ಸಾಹಿತ್ಯದ ಜೊತೆಗೆ ಸಂಗೀತದಲ್ಲೂ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದ ವಿದ್ಯಾರಣ್ಯರು ಸಂಗೀತಸಾರವೆಂಬ ಸಂಗೀತ ಗ್ರಂಥವನ್ನು ರಚಿಸಿ ಇದರಲ್ಲಿ ರಾಗಗಳ ಜನ್ಯ ಜನಕ ರೀತಿಗಳ ಮೊದಲನೇ ನಿರೂಪಣೆ ಕಂಡು ಬರುತ್ತದೆ. ಅವರು ನಿರೂಪಿಸಿದ ದಕ್ಷಿಣಾದಿ ಸಂಗೀತ ರೀತಿಯು ಮುಂದೆ ಕರ್ನಾಟಕ ಸಂಗೀತವೆಂದೇ ಜಗತ್ಪ್ರಸಿದ್ಧವಾಗಿದೆ. ವಿದ್ಯಾರಣ್ಯರೇ ರಚಿಸಿದ ವಿವರಣಾ ಪ್ರಮೇಯ ಸಂಗ್ರಹ ಕೃತಿಯೂ ಕೂಡಾ ಅತ್ಯಂತ ಮಹತ್ವದ್ದಾಗಿದೆ.

ವಿದ್ಯಾರಣ್ಯರು ಶೃಂಗೇರಿಯ ಪೀಠಾಧಿಪತಿಗಳಾಗಿದ್ದದ್ದು ಕೇವಲ 6 ವರ್ಷಗಳು ಮಾತ್ರ ಉಳಿದಂತೆ ಅವರ ಜೀವಿತವಧಿ ಹಿಂದೂಧರ್ಮ ಸಾಮ್ರಾಜ್ಯ ಸ್ಥಾಪನೆಗಾಗಿಯೇ ಮೀಸಲಾಗಿದ್ದಿತ್ತು. ಆದರೆ, ಪೀಠಾಧಿಪತಿಗಳಾಗಿದ್ದ ಅಲ್ಪಾವಧಿಯಲ್ಲಿ ಶೃಂಗೇರಿ ಮಠವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು. ಕಾಶ್ಮೀರದ ಮೂಲ ಶಾರದಾ ಪೀಠದಿಂದ ಆದಿ ಶಂಕರರು ತಂದ ಮೂಲ ಶ್ರೀಗಂಧದ ವಿಗ್ರಹದ ಬದಲಿಗೆ ಶ್ರೀ ಶಾರದಾ ದೇವಿಯ ಚಿನ್ನದ ವಿಗ್ರಹವನ್ನು ಸ್ಥಾಪಿಸಿದವರೂ ವಿದ್ಯಾರಣ್ಯರೇ. ಮುಂದೇ 1386ರಲ್ಲಿ ಹಂಪೆಯಲ್ಲಿ ವಿದ್ಯಾರಣ್ಯರು ಮೃತರಾಗುತ್ತಾರೆ. ಇಂದಿಗೂ ಸಹಾ ಹಂಪೆಯ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ಅವರ ಸಮಾಧಿಯನ್ನು ಕಾಣ ಬಹುದಾಗಿದೆ.

ತಮ್ಮ ಅಪಾರವಾದ ಪಾಂಡಿತ್ಯದಿಂದ ಕೇವಲ ಮಠಾಧಿಪತಿಗಳಾಗಿಯೇ ಕೂರದೇ, ಮುಸನ್ಮಾನರ ಧಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಹಿಂದು ರಾಜ್ಯ ಸ್ಥಾಪನೆಗೆ ಕಾರಣರಗಿದ್ದಲ್ಲದೇ, ಅನೇಕ ಧಾರ್ಮಿಕ ಗ್ರಂಥಗಳು, ಸಂಗೀತದ ಕುರಿತಾದ ಮೂಲ ಗ್ರಂಥಗಳನ್ನು ರವಿಸುವ ಮೂಲಕ ಬಹುಮುಖ ಪ್ರತಿಭೆಯ ಗುರುಗಳು ಎನಿಸಿಕೊಳ್ಳುತ್ತಾರೆ ವಿದ್ಯಾರಣ್ಯರು. ಸಾಮ್ರಾಜ್ಯ, ಸಂಗೀತ ಸಾಹಿತ್ಯ ಮತ್ತು ಕಲೆಗಳಲ್ಲಿ ಕರ್ನಾಟಕದ ಕೀರ್ತಿಯನ್ನು ಇತಿಹಾಸದ ಪುಟಗಳಲ್ಲಿ ಆಜರಾಮರವಾಗಿಸಿದ ವಿದ್ಯಾರಣ್ಯರ ಕಾರ್ಯಕ್ಕೆ ಮಾರುಹೋದ ಕನ್ನಡಿಗರು ಹೆಮ್ಮೆಯಿಂದ ಅವರನ್ನು ಕರ್ನಾಟಕ ರಾಜ್ಯ ಸಂಸ್ಥಾಪನಾಚಾರ್ಯ ಎಂದು ಕರೆದದ್ದರಲ್ಲಿ ಅತಿಶಯೋಕ್ತಿಯೇನಿಲ್ಲ.

ಇಂದು ವೈಶಾಖ ಶುದ್ಧ ಸಪ್ತಮಿ. ಗುರು ವಿದ್ಯಾರಣ್ಯರ ಜಯಂತಿ. ಹಿಂದೂ ಸಾಮ್ರಾಜ್ಯ ಮತ್ತು ಕರ್ನಾಟಕ ರಾಜ್ಯ ಸ್ಥಾಪನೆಗೆ ಕಾರಣಿಭೂತರಾದ ವಿದ್ಯಾರಣ್ಯರ ಸಾಧನೆಯ ಕುರಿತಂತೆ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲವಾಗಿದೆ. ಎಲ್ಲೋ ಮೈಸೂರು ಮತ್ತು ಬೆಂಗಳೂರಿನಲ್ಲಿ ಅವರ ಹೆಸರಿನಲ್ಲಿ ಬಡಾವಣೆ ಇದ್ದು ಅವರ ಜಯಂತಿಯನ್ನು ಶಂಕರ ಮಠಗಳಲ್ಲಿ ಕೇವಲ ಮಂಗಳಾರತಿ, ಕೋಸಂಬರಿ ಮತ್ತು ಪಾನಕಗಳಿಗಷ್ಟೇ ಸೀಮಿತ ಮಾಡಿರುವುದು ನಿಜಕ್ಕೂ ದುಃಖಕರವೇ ಸರಿ.

ವಯಕ್ತಿಕವಾಗಿ ಹೇಳಬೇಕೆಂದರೆ, ವಿದ್ಯಾರಣ್ಯರ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಹೆಮ್ಮೆ. ಏಕೆಂದರೆ ಒಂದು ಮೂಲದ ಪ್ರಕಾರ ಮತ್ತು ದೊರೆತಿರುವ ಕೆಲ ಶಾಸನಗಳು ಮತ್ತು ದಾಖಲೆಗಳ ಪ್ರಕಾರ ವಿದ್ಯಾರಣ್ಯರ ಜನ್ಮಸ್ಥಳ ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣದ ಬಾಳಗಂಚಿ ಎಂಬ ಪುಟ್ಟ ಗ್ರಾಮ. ಬಾಲಕಂಚಿ, ಅಂದರೆ ಚಿಕ್ಕ ಕಂಚಿ ಎಂಬ ಹೆಸರಾಗಿದ್ದ ಊರು ನಂತರ ಜನರ ಆಡುಭಾಷೆಯಲ್ಲಿ ಅಪಭ್ರಂಶವಾಗಿ ಸದ್ಯಕ್ಕೆ ಬಾಳಗಂಚಿಯಾಗಿದೆ. ಹಕ್ಕ ಬುಕ್ಕರೂ ಇಲ್ಲಿಯ ಅಕ್ಕ ಪಕ್ಕದವರು ಎಂಬುವುದನ್ನು ಪುಷ್ಟೀಕರಿಸುವಂತೆ ಹತ್ತಿರದಲ್ಲಿ ಹಕ್ಕನ ಹಳ್ಳ ಮತ್ತು ಬುಕ್ಕನ ಬೆಟ್ಟ ಎಂಬದನ್ನು ಇಂದಿಗೂ ಕಾಣಬಹುದಾಗಿದೆ. 80ರ ದಶಕದಲ್ಲಿ ಇದೇ ವಿಷಯವಾಗಿ ಕಂಚಿ‌ಮಠದ ಜಯೇಂದ್ರ ಸರಸ್ವತಿಗಳು (ಈಗ ಅವರಿಲ್ಲ) ತಮ್ಮ ಶಿಷ್ಯ ವೃಂದದೊಂದಿಗೆ ನಮ್ಮ ಊರಿಗೆ ಭೇಟಿಯಿತ್ತು ನಮ್ಮ ಮನೆಯಲ್ಲಿ ಎರಡು ದಿನ ತಂಗಿದ್ದು ವಿದ್ಯಾರಣ್ಯರ ಬಗ್ಗೆ ಅನೇಕ ಮಾಹಿತಿಗಳನ್ನು ಸಂಗ್ರಹಿಸಿ ಇಂತಹ ಇತಿಹಾಸವುಳ್ಳ ಊರನ್ನು ಉದ್ದಾರ ಮಾಡಲು ಕಂಚಿ ಮಠದ ಕಡೆಯಿಂದ ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು. ದುರದೃಷ್ಟವಶಾತ್ ಅವರ ಆಶ್ವಾಸನೆ ಕಾರಣಾಂತರಗಳಿಂದ ‌ಅದು ಹಾಗೆಯೇ ಉಳಿದು‌ ಹೋಯಿತು. ನಾವೂ ಕೂಡಾ ಅದೇ ಊರಿನವರಾಗಿರುವ ಕಾರಣ ಬಹುಶಃ ನಾವೂ ಕೂಡಾ ವಿದ್ಯಾರಣ್ಯರ ವಂಶದವರು ಎನ್ನುವ ಹೆಮ್ಮೆಇದೆ. ಇನ್ನೂ ಕಾಕತಾಳೀಯವೆಂದರೇ, ಹಲವಾರು ವರ್ಷಗಳಿಂದ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿಯೇ ಆಶ್ರಯ ಪಡೆದಿದ್ದೇವೆ. ಇದು ನಮ್ಮ ಪೂರ್ವಜನ್ಮದ ಸುಕೃತದ ಫಲವೋ ಅಥವಾ ವಿದ್ಯಾರಣ್ಯರ ಜೊತೆಯ ಋಣಾನು ಸಂಬಂಧ ಮತ್ತು ಅನುಬಂಧ ಇರಲೇಕು.

ಏನಂತೀರೀ?

ಈ ಲೇಖನವನ್ನು ಬರೆಯಲು ಪ್ರೇರೇಪಿಸಿದ ಗೆಳೆಯ ಮಂಜುನಾಥ್ದ್ (ಪಣವ ಮಂಜು) ಅವರಿಗೆ ಹೃತ್ಪೂರ್ವಕ ಧನ್ಯವಾದಗಳು