ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಇತ್ತೀಚೆಗೆ ವಾಟ್ಸಾಪಿನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಈ ಭಾವಾನುವಾದವನ್ನು ಮೊದಲು ಓದಿದ ನಂತರ ವಿಚಾರಕ್ಕೆ ಬರೋಣ.

girlಒಂದೂರಿನಲ್ಲಿದ್ದ  ದೇವಸ್ಥಾನವೊಂದಕ್ಕೆ ಪ್ರತಿದಿನ ಮುಂಜಾನೆ ಒಂದು ಚಿಕ್ಕ ಹುಡುಗಿ ಬಂದು ದೇವರ ಮುಂದೆ ನಿಂತು, ಕಣ್ಗಳನ್ನು ಮುಚ್ಚಿ, ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಸಿಕೊಂಡು ಒಂದೆರಡು ನಿಮಿಷಗಳ ಕಾಲ ಏನನ್ನೋ ಗೊಣಗುತ್ತಾ, ನಂತರ ಕಣ್ಣು ತೆರೆದು, ನಮಸ್ಕರಿಸಿ, ನಗುತ್ತಾ ಓಡಿಹೋಗುತ್ತಿದ್ದಳು. ಇದು ಆಕೆಯ ದೈನಂದಿನ ಕಾರ್ಯವಾಗಿತ್ತು.

ಅ ಪುಟ್ಟ ಹುಡುಗಿಯನ್ನು ಪ್ರತಿದಿನವೂ ಗಮನಿಸುತ್ತಿದ್ದ ದೇವಸ್ಥಾನದ ಅರ್ಚಕರಿಗೆ ಅಷ್ಟು ಸಣ್ಣ ಹುಡುಗಿಗೆ ಧರ್ಮ ಆಚಾರ ವಿಚಾರಗಳ ಅರಿವಿಲ್ಲದಿದ್ದರೂ ಪ್ರತಿದಿನವೂ ಅದೇನೋ ಪ್ರಾರ್ಥಿಸುತ್ತಿದ್ದಾಳೆ. ಹಾಗಾಗಿ ಆಕೆ ಏನನ್ನು ಪ್ರಾರ್ಥಿಸುತ್ತಿದ್ದಾಳೆ ಎಂಬುದನ್ನು ತಿಳಿಯಲು ಪ್ರಯತ್ನಿಸಿದರಾದರೂ ಸಫಲವಾಗದೇ, ಅದೊಂದು ದಿನ ಎಂದಿನಂತ ಆಕೆ ದೇವಾಲಯಕ್ಕೆ ಬಂದು ಆಕೆಯ ಪ್ರಾರ್ಥನೆ ಮುಗಿದ ನಂತರ ಆಕೆಯ ತಲೆಯ ಮೇಲೆ ಆಶೀರ್ವಾದರೂಪದಲ್ಲಿ ಕೈಗಳನ್ನು ಇಟ್ಟು, ಪುಟ್ಟೀ ನಾನು ಬಹಳ ದಿನಗಳಿಂದಲೂ ನಿನ್ನನ್ನು ಗಮನಿಸುತ್ತಿದ್ದೇನೆ, ನೀನು ಪ್ರತಿದಿನವೂ ಇಲ್ಲಿಗೆ ಬಂದು ಅದೇನು ಮಾಡುತ್ತಿದ್ದೀಯೇ ಎಂದು ಕೇಳಿದರು.

ಆಕೆ ಕೂಡಲೇ ನಾನು ಪ್ರಾರ್ಥಿಸುತ್ತೇನೆ ಗುರುಗಳೇ ಎಂದು ಉತ್ತರಿಸಿದಳು.
ಹಾಂ! ಪ್ರಾರ್ಥನೆಯೇ? ಹಾಗಾದರೆ ಪ್ರಾರ್ಥನೆ ಎಂದರೆ ನಿನಗೇ ಏನು ತಿಳಿದಿದೆ ಎಂದು ಸ್ವಲ್ಪ ಅನುಮಾನದಿಂದಲೇ ಕೇಳಿದರು.
ಅದಕ್ಕೆ ಆ ಹುಡುಗಿ ಇಲ್ಲಾ.. ನನಗೆ ಯಾವ ಪ್ರಾರ್ಥನೆಯೂ ಗೊತ್ತಿಲ್ಲಾ ಎಂದು ಮುಗ್ಧಳಾಗಿ ಉತ್ತರಿಸಿದಳು.
ಹಾಗಾದರೆ ನೀನು ಪ್ರತಿದಿನವೂ ಕಣ್ಣು ಮುಚ್ಚಿಕೊಂಡು ಅದೇನೋ ಗೊಣಗುತ್ತಿರುತ್ತೇಯಲ್ಲಾ ಅದೇನು? ಎಂದು ಅವರು ಮುಗುಳ್ನಕ್ಕರು.
ಆಗ ಹುಡುಗಿ ತುಂಬಾ ಮುಗ್ಧಧತೆ ಯಿಂದ ನನಗೆ ಯಾವುದೇ ಶ್ಲೋಕ ಅಥವಾ ಪ್ರಾರ್ಥನೆ ತಿಳಿದಿಲ್ಲ. ಆದರೆ ನನಗೆ ಅಮ್ಮಾ ಹೇಳಿಕೊಟ್ಟ ಅ,ಆ,ಇ,ಈ… ಸ,ಹ,ಳ ವರೆಗೆ ಬರುತ್ತದೆ. ಹಾಗಾಗಿ ನಾನು ಅದನ್ನೇ ಐದು ಬಾರಿ ಭಕ್ತಿಯಿಂದ ದೇವರ ಮುಂದೆ ಹೇಳಿ, ದೇವರೇ ಎಲ್ಲರನ್ನೂ ಕಾಪಾಡಪ್ಪಾ ಎಂದು ಕೇಳಿಕೊಳ್ಳುತ್ತೇನೆ. ನನಗೆ ಪ್ರಾರ್ಥನೆ ಗೊತ್ತಿಲ್ಲದಿರಬಹುದು ಆದರೆ ನಿಮ್ಮ ಪ್ರಾರ್ಥನೆ, ಈ ವರ್ಣಮಾಲೆಗಳ ಹೊರತಾಗಿ ಇರುವಂತಿಲ್ಲ ಎನ್ನುವುದಂತೂ ಸತ್ಯ. ಹಾಗಾಗಿ ದಯವಿಟ್ಟು ನಿಮ್ಮ ಇಚ್ಛೆಯಂತೆ ವರ್ಣಮಾಲೆಗಳನ್ನು ಜೋಡಿಸಿ ಕೊಂಡಲ್ಲಿ ಅದುವೇ ನನ್ನ ಪ್ರಾರ್ಥನೆ ಎಂದು ತನ್ನ ಪಾಡಿಗೆ ಓಡಿ ಹೋಗುತ್ತಾಳೆ.

ಆಗ ಆ ಅರ್ಚಕರು ಮೂಕವಿಸ್ಮಿತರಾಗಿ ಅರೇ ಹೌದಲ್ಲಾ!! ಇಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಅರಿವಾದದ್ದು ನಮಗೇ ಹೊಳೆಯಲಿಲ್ಲಾ!!.. ನಾವು ಪ್ರಾರ್ಥಿಸುವ ದೇವರಿಗೆ ಪ್ರಾರ್ಥನೆಯ ಹೊರತಾಗಿ ಬೇಷರತ್ತಾದ ನಂಬಿಕೆ ಇರಬೇಕು ಅಲ್ಲವೇ ಎಂದು ಕೊಳ್ಳುತ್ತಾರೆ ಎಂಬ ಭಾವಾರ್ಥದಲ್ಲಿದೆ.

ಈ ಸಂದೇಶವನ್ನು ಒಮ್ಮೆ ಓದಿದ ಕೂಡಲೇ ಅರೇೆ ಭಗವಂತನ ಕುರಿತಾಗಿ ಪ್ರಾರ್ಥನೆಯ ಮಾಡುವ ಬಗ್ಗೆ ಎಷ್ಟು ಸರಳವಾಗಿ ಅ ಪುಟ್ಟ ಹುಡುಗಿ ತಿಳಿಸಿದ್ದಾಳೆ ಎಂದು ಕೊಂಡರೂ ಈ ಪ್ರಸಂಗವನ್ನು ಹೆಣೆದವರ ಹಿಂದಿನ ಚಾರ್ವಕತನವನ್ನು ಅರ್ಥ ಮಾಡಿಕೊಳ್ಳಲು ತುಸು ಸಮಯವೇ ಹಿಡಿಯುತ್ತದೆ. ಪ್ರಾರ್ಥನೆ ಎಂದರೆ ಅದು ಕೇವಲ ಕೆಲವು ಶ್ಲೋಕಗಳು, ಮಂತ್ರಗಳು, ಹಾಡು, ಭಜನೆ, ಮಡಿ ಮೈಲಿಗೆ ಭಕ್ತಿ, ಪೂಜೆ, ನೈವೇದ್ಯ, ಆರತಿ ಮತ್ತು ಪ್ರಸಾದ ವಿತರಣೆ ಅಷ್ಟೇ ಅಲ್ಲ. ಇವಲ್ಲವೂ ನಮ್ಮಲ್ಲಿ ಏಕಾಗ್ರತೆಯನ್ನು ಮೂಡಿಸುವುದಕ್ಕೆ ಇರುವ ಸಾಧನಗಳು ಎಂಬುದರ ಅರಿವಿಲ್ಲದೇ ಪ್ರಾರ್ಥನೆಯನ್ನು  ಮೂದಲಿಸುವುದು ದುರಾದೃಷ್ಟಕರವಾಗಿದೆ.

ಮನಸ್ಸಿನಲ್ಲಿ ಏಕಾಗ್ರತೆ ಬರಲು ಧ್ಯಾನ ಮಾಡಬೇಕು ಎಂದು 2 ನಿಮಿಷಗಳ ಕಾಲ ಸುಮ್ಮನೆ ಕಣ್ಮುಚ್ಚಿ ಕುಳಿತಲ್ಲಿ ಚಂಚಲ ಮನಸ್ಸು ಅತ್ತಿಂದಿತ್ತಾ ಓಡಾಡುತ್ತಿರುತ್ತದೆ. ಅದಕ್ಕಾಗಿಯೇ ದೇವರುಗಳನ್ನು ಕಲ್ಪನೆ ಮಾಡಿ ಅದನೇ ಮೂರ್ತಿರೂಪದಲ್ಲಿ ಸಾಕಾರಗೊಳಿಸಿ ಅದನ್ನೇ ಕೇಂದ್ರೇ ಕರಿಸಿಕೊಂಡಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ. ಅದೇ ರೀತಿ ಮಂತ್ರ ಶ್ಲೋಕ, ಭಜನೆಗಳನ್ನು ಮಾಡುವುದರಿಂದ ಮನಸ್ಸು ಬೇರೆಲ್ಲೂ ಹೋಗದೇ ಒಂದೇ ಕಡೆ ಮೂಡುವ ಮೂಲಕ ಮನಸ್ಸಿಗೆ ಮುದ ನೀಡುತ್ತದೆ. ಇನ್ನು ಹಾಡು ಮತ್ತು ಭಜನೆಗಳನ್ನು ಸಂಗೀತ ರೂಪದಲ್ಲಿ ಹಾಡಿದಾಗ ನಮ್ಮಲ್ಲಿರಬಹುದಾದ ವಿರಕ್ತಿಗಳೆಲ್ಲವೂ ಮಾಯವಾಗುತ್ತದೆ. ವೇದ ಮಂತ್ರಗಳು ಮತ್ತು ಶ್ಕೋಕಗಳನ್ನು ಸರಿಯಾಗಿ ಸ್ವರ ಬದ್ಧವಾಗಿ ಪಠಣ ಮಾಡುವಾಗ ದೇಹದ ಎಲ್ಲಾ ಅಂಗಗಳೂ ಜಾಗೃತವಾಗಿ ಅದರ ತರಂಗಾಂತರಗಳಿಂದ ಬಹಳ ರೀತಿಯ ಅನಾರೋಗ್ಯಗಳು ದೂರವಾಗುತ್ತವೆ. ಎಲ್ಲದ್ದಕಿಂತಲೂ ಹೆಚ್ಚಾಗಿ ಚಿಕ್ಕ ಮಕ್ಕಳು ವೇದಾಧ್ಯಯನ, ಶ್ಲೋಕ, ಹಾಡು ಮತ್ತು ಭಜನೆಗಳನ್ನು ಕಲಿತುಕೊಳ್ಳುವುದರಿಂದ ಅವರ ಮಾತಿನ ಉಚ್ಚಾರ ಶುದ್ಧವಾಗುವುದಲ್ಲದೇ, ಜ್ಣಾಪಕಶಕ್ತಿ ವೃದ್ಧಿಯಾಗುತ್ತದೆ. ಅದಕ್ಕೇ ಅಲ್ಲವೇ ನಿಶ್ಕಲ್ಮಶವಾದ ಚಿಕ್ಕವಯಸ್ಸಿನಲ್ಲಿ ಕಲಿತ ಬಾಲ ಪಾಠಗಳು ಎಷ್ಟೇ ವಯಸ್ಸಾದರು ಸ್ಪಷ್ಟವಾಗಿ ನಮ್ಮ ನೆನಪಿನಂಗಳದಲ್ಲಿ ಇರುತ್ತದೆ.

ನಮ್ಮ ಹಿರಿಯರು ಮಾಡಿರುವ ಪ್ರತಿಯೊಂದು ಆಚಾರ ವಿಚಾರ ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಕಾರಣಗಳಿದ್ದು ದುರಾದೃಷ್ಟವಶಾತ್ ನಾವಿಂದು ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೇ ಅವುಗಳನ್ನು ಮೂಢ ನಂಬಿಕೆ, ಮನುವಾದಿತನ, ಬ್ರಾಹ್ಮಣ್ಯತ್ವ ಎಂದು ಜರಿಯುತ್ತಿರುವುದು ಒಂದು ಕಡೆಯಾದರೆ ಈ ಹಿಂದೆ ಕೆಲವು ಬೆರಳೆಣಿಕೆಯಷ್ಟು ಮಂದಿ ಈ ರೀತಿಯ ಆಚಾರ ವಿಚಾರಗಳನ್ನೇ ಅತಿಯಾಗಿ ನಂಬಿಕೊಂಡು ಕಟ್ಟರ್ ವಾದಿಗಳಾಗಿ ಮಡಿ ಮೈಲಿಗೆ ಎಂದು ಪಂಕ್ತಿ ಬೇಧ ಮಾಡುವ ಮೂಲಕ ಜನರಲ್ಲಿ ನಮ್ಮ ಧರ್ಮ ಮತ್ತು ಆಚಾರ ವಿಚಾರಗಳಲ್ಲಿ ನಂಬಿಕೆ ಕಳೆದುಕೊಂಡು ಹೋಗುವಂತೆ ಮಾಡಿರುವುದನ್ನೂ ಅಲ್ಲಗಳೆಯಲಾಗದು. ಅದೃಷ್ಟವಷಾತ್ ನಮ್ಮಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಆಚಾರ್ಯರು ಮತ್ತು ಧರ್ಮಗುರುಗಳು ನಮ್ಮ ಆಚರಣೆಯನ್ನು ಪರಾಂಬರಿಸಿ ಈಗಿನ ಕಾಲ ಘಟ್ಟಕ್ಕೆ ಅನುಗುಣವಾಗಿ ಸೂಕ್ತವಾದ ಬದಲಾವಣೆ ತರುತ್ತಿರುವುದು ಉತ್ತಮ ಬೆಳವಣಿಯಾಗಿದೆ. ಇದಕ್ಕೆ ಉತ್ತಮ ಉದಾರಣೆಯೆಂದರೆ ಸಹಾಗಮನ ಪದ್ದತಿ ವಿಧವಾ ಕೇಳ ಮುಂಡನ ರದ್ದಾದರೆ, ವಿಧವಾ ಮರು ವಿವಾಹ ಸ್ವಾಗತಾರ್ಹವಾಗಿದೆ.

arishinaಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಮಕೂರಿನಲ್ಲಿ ಜರುಗಿದ ವಿವಾಹವೊಂದರಲ್ಲಿ ಮಧುಮಗ ಎಲ್ಲಾ ರೀತಿಯ ಶಾಸ್ತ್ರ ಸಂಪ್ರದಾಯಗಳನ್ನೂ ಧಿಕ್ಕರಿಸಿ ನೂರಾರು ಜನರ ಸಮ್ಮುಖದಲ್ಲಿ ಕೇವಲ ಮಧುಮಗಳಿಗೆ ಮಂಗಲಸೂತ್ರವನ್ನು ಕಟ್ಟಿ ವಿವಾಹವಾಗಿರುವುದು ವೈರಲ್ ಆಗಿದೆ. ಇಷೇ ಆಗಿದ್ದರೆ ಅದೊಂದು ಉತ್ತಮವಾದ ಬೆಳವಣಿಗೆ ಎಂದು ಶ್ಲಾಘಿಸಬಹುದಾಗಿತ್ತು. ಆದರೆ ಎಲ್ಲರ ಸಮ್ಮುಖದಲ್ಲಿ ಎಲ್ಲರ ಸಮ್ಮುಖದಲ್ಲಿ ನಮ್ಮ ಶಾಸ್ತ್ರ ಸಂಪ್ರದಾಯಗಳನ್ನು ತಾನೂ ಸಹಾ ಸರಿಯಾಗಿ ಅರ್ಥ ಮಾಡಿಕೊಳ್ಳದೇ ವಿವಾಹಕ್ಕೆ ಬಂದಿದ್ದವರೆಲ್ಲರ ತಲೆಗಳಲ್ಲಿ ಅನುಮಾನದ ಹುಳವನ್ನು ಬಿಟ್ಟಿರುವುದು ನಿಜಕ್ಕೂ ದುರಾದೃಷ್ಟಕರವಾಗಿದೆ. ನೂರಾರು ರೀತಿಯ ಸೋಪು ಶಾಂಪು ಬಳಸುವ ಇಂದಿನ ಯುಗದಲ್ಲಿ ಅರಿಶಿನ ಶಾಸ್ತ್ರವೇಕೇ? ಅಕ್ಕಿ, ಬೇಳೆ, ಎಣ್ಣೆಗಳು ಹಣ ನೀಡಿದರೆ ನೇರವಾಗಿ ಮಿಲ್ಲುಗಳಿಂದ ಲಭ್ಯವಾಗವೇಕಾದರೆ, ಭತ್ತ ಕುಟ್ಟುವ ಶಾಸ್ತ್ರವೇಕೇ? ಶಾಸ್ತ್ರ, ಸಂಪ್ರದಾಯ, ಪುರೋಹಿತರು, ಚಪ್ಪರ, ಅಡುಗೆಯವರು, ಓಲಗ ಎಂದೆಲ್ಲಾ ಲಕ್ಷಾಂತರ ರೂಪಾಯಿಗಳನ್ನೇಕೆ ಖರ್ಚು ಮಾಡಬೇಕು? ಎಂದು ಪ್ರಶ್ನೆ ಮಾಡಿರುವ ವೀಡಿಯೋ ನೋಡಿದಾಗ ನಮ್ಮ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಸರಿಯಾಗಿ ಅರಿವಿಲ್ಲದ ಅವರ ಬೌದ್ಧಿಕ ದೀವಾಳಿತನಕ್ಕೆ ಮರುಕವುಂಟಾಗುವುದಲ್ಲದೇ, ತುಸು ಕೋಪವೂ ಬರುತ್ತದೆ.

ಇಂತಹ ವಿಕೃತಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇದೊಂದು ಕ್ರಾಂತಿಕಾರಿ ಬೆಳವಣಿಗೆ, ಬ್ರಾಹ್ಮಣ್ಯಕ್ಕೆ ಇಟ್ಟ ಕೊಳ್ಳಿ, ಸಂಸ್ಕೃತಕ್ಕೆ ಧಿಕ್ಕಾರ, ಮನುವಾದಿಗಳಿಗೆ ಬರ್ನಾಲ್, ತಟ್ಟೇ ಕಾಸಿನವರಿಗೆ ಬಗಣೀ ಗೂಟ ಎಂದೆಲ್ಲಾ ನೂರಾರು ಮಂದಿ ಸಮರ್ಥನೆ ಮಾಡುವುದನ್ನು ಓದಿದಾಗ ನಿಜಕ್ಕೂ ರಕ್ತ ಕುದಿಯುತ್ತದೆ. ಹೀಗೆ ರಕ್ತ ಕುದಿಯುವುದು ವಿರೋಧಿಸುವ ಭರದಿಂದಾಗಿರದೇ, ನಮ್ಮ ಅಚಾರ ವಿಚಾರಗಳ ಮೌಢ್ಯತನದಿಂದಾಗಿ ಈ ರೀತಿಯ ಪರಿಸ್ಥಿತಿಯನ್ನು ತಂದುಕೊಂಡಿರುದಕ್ಕಾಗಿ ರಕ್ತ ಕುದಿಯುತ್ತದೆ. ಈ ಎಲ್ಲಾ ಶಾಸ್ತ್ರಗಳ ಹಿಂದೆಯೂ ವೈಜ್ಞಾನಿಕ ಕಾರಣ ಇರುವುದಲ್ಲದೇ, ಮದುವೆ ಮುಂಜಿ, ಶ್ರೀಮಂತ ನಾಮಕಾರಣ ಅಷ್ಟೇ ಏಕೆ ತಿಥಿ ಮುಂತಾದ ಸಭೆ ಸಮಾರಂಭಗಳ ಮೂಲಕ ಹತ್ತು ಹಲವಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಕೊಡುತ್ತಾ ಸಮಾಜದಲ್ಲಿ ಆರ್ಥಿಕ ಸುಧಾರಣೆಯನ್ನು ತರುವುದೇ ಇದರ ಹಿಂದಿನ ಮೂಲ ಉದ್ದೇಶವಾಗಿರುವುದನ್ನು ಅರಿತು ಕೊಳ್ಳದೇ ಓತಪ್ರೋತವಾಗಿ ನಾಲಿಗೆ ಹರಿಬಿಡುವುದು ವಿಪರ್ಯಾಸವಾಗಿದೆ.

ನಿಜ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿ ಇದಕ್ಕಿಂತಲೂ ಕೆಟ್ಟದಾದ ಆರ್ಥಿಕ ಪರಿಸ್ಥಿತಿ ಇತ್ತು. ಅಂದೆಲ್ಲಾ ಮನೆಗಳಲ್ಲಿ ದುಡಿಯುವ ಕೈ ಒಂದಾದರೆ, ತಿನ್ನುವ ಕೈ ಹತ್ತಾರು ಇತ್ತು. ಮನೆಗಳೆಲ್ಲವೂ ಸಣ್ಣದಾದರೂ ಮನಸ್ಸು ದೊಡ್ಡದಾಗಿದ್ದ ಕಾರಣ ಅಷ್ಟೂ ಮಕ್ಕಳಿಗೆ ತಕ್ಕ ಮಟ್ಟಿಗಿನ ವಿದ್ಯಾಭ್ಯಾಸದ ಜೊತೆಗೆ ಮದುವೆ ಮಂಜಿ ನಾಮಕರಣಗಳು ನಿರ್ವಿಘ್ನವಾಗಿ ನಡೆದುಕೊಂಡು ಹೋಗುವುದರ ಹಿಂದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವಿರುತ್ತಿತ್ತು. ಊರಿನಲ್ಲಿ ಒಬ್ಬರ ಮನೆಯಲ್ಲಿ ಮದುವೆ ಎಂದರೆ ಇಡೀ ಊರಿಗೆ ಊರೇ ಸಂಭ್ರಮ ಪಡುತ್ತಿದ್ದದ್ದಲ್ಲದೇ ಅದು ತಮ್ಮ ಮನೆಯ ಸಮಾರಂಭವೇನೋ ಎನ್ನುವಂತೆ ಎಲ್ಲರು ಅದರಲ್ಲಿ ತನು ಮನ ಧನಗಳಿಂದ ಭಾಗಿಗಳಾಗಿ ಒಟ್ಟಿಗೆ ಊರಿಗೆ ಊರೇ ಚಪ್ಪರ ಹಾಕಿ ತಳಿರು ತೋರಣಗಳಿಂದ ಸಿಂಗರಿಸಿದರೆ, ಹೆಂಗಸರು ಸಾರಿಸಿ ಗುಡಿಸಿ ರಂಗೋಲಿ ಇಟ್ಟು ಭತ್ತವನ್ನು ಕುಟ್ಟಿ ಅಕ್ಕಿ ಮಾಡಿ ಶುಭ್ರಗೊಳಿಸಿ ಅಡುಗೆಯಲ್ಲೂ ಸಹಾಯ ಮಾಡುತ್ತಿದ್ದರು. ಇನ್ನು ದೂರದ ಊರಿನಿಂದ ಬರುವ ಬಂಧು ಮಿತ್ರರು ಬರಿ ಕೈಯ್ಯಲ್ಲಿ ಬರದೇ ಅಕ್ಕಿ ಬೇಳೆ, ಬೆಲ್ಲ, ತೆಂಗಿನಕಾಯಿ, ಹಣ್ಣು ಹಂಪಲುಗಳು, ಕಡೇ ಪಕ್ಷ ಇದಾವುದೂ ಇಲ್ಲದೇ ಹೋದಲ್ಲಿ ಮನೆಯಲ್ಲಿ ಬೆಳೆದ ಕಾಯಿಪಲ್ಲೆ, ತೆಂಗಿನಕಾಯಿ ತರುತ್ತಿದ್ದ ಕಾರಣ ಮನೆಯವರಿಗೆ ಹೆಚ್ಚಿನ ಹೊರೆ ಯಾಗುತ್ತಿರಲಿಲ್ಲ. ಪುರದಹಿತವನ್ನು ಕಾಪಾಡುವ ಪುರೋಹಿತರು ಶಾಸ್ತ್ರ ಸಂಪ್ರದಾಯದ ಮೂಲಕ ನಿರ್ವಿಘ್ನವಾಗಿ ಮುಗಿಸುತ್ತಿದ್ದ ಕಾರಣ ಆರ್ಥಿಕವಾಗಿ ಹೆಚ್ಚಿಗೆ ಯಾರಿಗೂ ತೊಂದರೆ ಆಗುತ್ತಿರಲಿಲ್ಲ. ಇದರ ಹೊರತಾದ ಬಟ್ಟೆ ಬರೆ ಆಭರಣ ಹೀಗೆ ಹತ್ತು ಹಲವಾರು ಜನರಿಗೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಆದರೆ ಆರ್ಥಿಕವಾಗಿ ಸಧೃಢರಾದ ಕೂಡಲೇ ಎಲ್ಲರ ಮನೆಗಳೂ ದೊಡ್ಡದಾದರೂ ಮನಸ್ಸುಗಳು ಚಿಕ್ಕದಾಗತೊಡಗಿತು. ದುಡ್ಡಿದ್ದರೆ ಯಾವುದನ್ನು ಬೇಕಾದರೂ ಎಷ್ಟು ಬೇಕಾದರು ಕೊಂಡು ಕೊಳ್ಳಬಹುದು ಎಂಬ ಧೋರಣೆ ಬೆಳಸಿಕೊಂಡಿದ್ದೇ ತಡಾ ಎಲ್ಲವೂ ವ್ಯಾಪಾರೀಕರಣಗೊಂಡು ಪರಸ್ಪರ ಸಂಬಂಧಗಳು ಕ್ಷೀಣಿಸಿಕೊಂಡ ಪರಿಣಾಮವಾಗಿ ಇಂದು ಮನೆಯ ಮುಂದೆ ಚಪ್ಪರ ಹಾಕಿಸಲು 5-10 ಸಾವಿರ, ಓಲಗದವರಿಗೆ 10-15 ಸಾವಿರ, ಅಡುಗೆಯವರಿಗೆ ಲಕ್ಷ ಲಕ್ಷ, ತಮ್ಮ ಆಡಂಭರ ತೋರಿಸಿಕೊಳ್ಳಲು ಕಲ್ಯಾಣ ಮಂಟಪಗಳಿಗೆ ಲಕ್ಷಾಂತರ ರೂಪಾಯಿ, ಇನ್ನು ಅವರವರ ಅಂತಸ್ತಿಗೆ ತಕ್ಕಂತೆ ಉಡುಗೆ ತೊಡಿಗೆ ಆಭರಣಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಛು ಮಾಡಲು ಮುಂದಾದ ಕಾರಣದಿಂದಾಗಿಯೇ ಸಭೆ ಸಮಾರಂಭಗಳು ದುಬಾರಿ ಆದವೇ ಹೊರತು ಶಾಸ್ತ್ರ ಸಂಪ್ರದಾಯಗಳಿಂದಲ್ಲ ಎನ್ನುವುದನ್ನು ಮರೆತಿರುವುದು ವಿಷಾಧನೀಯವಾಗಿದೆ.

ಬಹಳ ಹಿಂದೆ ಸಂಸ್ಕೃತವೇ ಆಡು ಭಾಷೆಯಾಗಿದ್ದ ಕಾರಣ ನಮ್ಮ ವೇದ ಶಾಸ್ತ್ರ ಪುರಾಣಗಳೆಲ್ಲವೂ ಸಂಸ್ಕೃತಮಯವಾಗಿತ್ತು. ಆದರೆ ಇಂದು ಅನೇಕರು ಸಣ್ಣ ಸಣ್ಣ ಪ್ರಮಾಣದಲ್ಲಿ ಅವುಗಳನ್ಣೇ ಕನ್ನಡೀಕರಿಸಿರುವುದಕ್ಕೆ ಹಿರೇಮಗಳೂರು ಕಣ್ಣನ್ ಅವರ ತಂದೆಯವರಾಗಿದ್ದ ಶ್ರೀ ಸವ್ಯಸಾಚಿಗಳೇ ಸಾಕ್ಷಿ. ಅದೇ ರೀತಿ ರಾಷ್ಟಕವಿ ಕುವೆಂಪುರವರೂ ಸಹಾ ಸರಳವಾಗಿ ಮದುವೆ ಮಾಡುವ ಪದ್ದತಿಯನ್ನು ರೂಢಿಗೆ ತಂದಿರುವುದನ್ನು ನೆನಪಿಸಿಕೊಳ್ಳಬೇಕಾಗಿದೆ.

ಹಾಗಾಗಿ ಸುಖಾ ಸುಮ್ಮನೇ ಯಾರದ್ದೋ ಮಾತುಗಳು ಮತ್ತು ಧೋರಣೆಗೆ ಕಟ್ಟು ಬಿದ್ದು ನಮ್ಮ ಪ್ರಾರ್ಥನೆ, ಆಚಾರ ವಿಚಾರ ಸಂಪ್ರದಾಯಗಳನ್ನು ಧಿಕ್ಕರಿಸುವ ಬದಲು ಅವುಗಳನ್ನು ಸರಿಯಾಗಿ ಅರಿತುಕೊಂಡು ಅರ್ಥಪೂರ್ಣವಾಗಿ ಸರಳವಾಗಿಯೇ ಆಚರಿಸಬಹುದಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಪಂಡಿತ ಸುಧಾಕರ ಚತುರ್ವೇದಿ

ಸಾಧಾರಣವಾಗಿ ನಾವೆಲ್ಲರೂ ಪಂಡಿತ್, ದ್ವಿವೇದಿ, ತ್ರಿವೇದಿ ಮತ್ತು ಚತುರ್ವೇದಿ ಎನ್ನುವ ಉಪನಾಮಗಳನ್ನು ಕೇಳಿರುತ್ತೇವೆ.  ಅದೆಲ್ಲವೂ ಅವರ ಕುಟುಂಬದ  ಎಷ್ಟೋ ತಲೆಮಾರಿನವರೊಬ್ಬರು ಪಂಡಿತರಾಗಿದ್ದರಂತೆ  ಅಥವಾ ಅವರು ಎರಡು, ಮೂರು ಅಥವಾ ನಾಲ್ಕುವೇದಗಳನ್ನೂ ಕರಗತ ಮಾಡಿಕೊಂಡಿದ್ದರಿಂದ ಅವರಿಗೆ ಆ ರೀತಿಯ ಹೆಸರು ಬಂದಿರುತ್ತದೆ. ಸದ್ಯಕ್ಕೆ  ಆ ವೇದದ ಗಂಧಗಾಳಿಯೂ ಗೊತ್ತಿಲ್ಲದೇ ಇದ್ದರೂ ಅವರ ಹೆಸರಿನೊಂದಿಗೆ ಸೇರಿಕೊಂಡಿರುತ್ತರೆ. ಆದರೆ ಇಲ್ಲೊಬ್ಬರು ಈ ಎಲ್ಲವನ್ನೂ ಅಧಿಕಾರಯುತವಾಗಿ ಕರಗತ ಮಾಡಿಕೊಂಡು ಚತುರ್ವೇದಿ ಎಂಬ ಬಿರುದನ್ನು ಗಳಿಸಿದ್ದ ಶತಾಯುಷಿಗಳಾಗಿದ್ದರೂ ಕನ್ನಡಿಗರಿಗೆ ಎಲೆಮರೆಕಾಯಿಯಾಗಿಯೇ ಉಳಿದು ಹೋದ ಪಂಡಿತ ಸುಧಾಕರ ಚತುರ್ವೇದಿ ಆವರ ಬಗ್ಗೆ ನಮ್ಮ ಕನ್ನಡದ  ಕಲಿಗಳು ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಪಂಡಿತ ಸುಧಾಕರ ಅವರ ಹಿರಿಯರು ಮೂಲತಃ ತುಮಕೂರು ಬಳಿಯ ಕ್ಯಾತಸಂದ್ರದವರಾದರೂ, ಕೃಷ್ಣರಾಯರು ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ 20 ಎಪ್ರಿಲ್ 1897 ರಂದು ರಾಮನವಮಿಯಂದು ಬೆಂಗಳೂರಿನಲ್ಲಿ ಸುಧಾಕರ ಅವರ  ಜನನವಾಗುತ್ತದೆ. ಬಾಲ್ಯದಿಂದಲೂ ಅತ್ಯಂತ ಚುರುಕಾಗಿ ಪ್ರತಿಭಾವಂತರಾಗಿದ್ದ ಸುಧಾಕರ್ ಅವರಿಗೆ ಮನೆಯ ಮೊದಲ ಪಾಠ ಶಾಲೆ ಎನ್ನುವಂತೆ, ಅವರ ಎಂಟನೇ ವಯಸ್ಸಿನಲ್ಲೇ  ಅವರ ಅಕ್ಕ ಪದ್ಮಾವತಿ ಬಾಯಿ ಅವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡರೆ, ತಾಯಿ  ಲಕ್ಷ್ಮಮ್ಮ(ಪುಟ್ಟಮ್ಮ)ನವರು ಶಿವಾಜಿಗೆ ಜೀಜಾಬಾಯಿಯವರು ಹೇಳಿಕೊಟ್ಟಂತೆ ಸುಧಾಕರ್ ಅವರಿಗೆ ಅನೇಕ ಧಾರ್ಮಿಕ ವಿಷಯಗಳನ್ನು ಮನನ ಮಾಡಿಸಿದ್ದರು. ಸುಧಾಕರ್ ಅವರಿಗೆ  ದಯಾನಂದ ಸರಸ್ವತಿಯವರ ಜೀವನ ಚರಿತ್ರೆ ಬಾಲ್ಯದಲ್ಲಿ ಮೆಚ್ಚಿನದ್ದಾಗಿದ್ದಲ್ಲದೇ, ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಬಹಳ ಪಾತ್ರವೂ ಪ್ರಮುಖವಾಗಿತ್ತು.

ಈ ಅಧ್ಭುತವಾದ ಪ್ರತಿಭೆಗೆ ಮತ್ತಷ್ಟು ಪ್ರಖರವಾಗಲೀ ಎಂಬ ಉದ್ದೇಶದಿಂದ ಹದಿಮೂರರ ಬಾಲಕರಾಗಿದ್ದ ಸುಧಾಕರ್ ಅವರನ್ನು ಹೆಚ್ಚಿನ  ವಿದ್ಯಾಭ್ಯಾಸಕ್ಕಾಗಿ ಹರಿದ್ವಾರದ  ಪ್ರಖ್ಯಾತ ಕಾಂಗಡಿ ಗುರುಕುಲಕ್ಕೆ ಕಳುಹಿಸಿಕೊಡುತ್ತಾರೆ. ಅಲ್ಲಿ ಸ್ವಾಮಿ ಶ್ರದ್ಧಾನಂದರ ಶ್ರದ್ಧೆಯ ಶಿಷ್ಯರಾಗಿ ಅಖಂಡ ಒಂದು ದಶಕಗಳ ಕಾಲ ಸಂತಸ್ವರೂಪೀ ಬದುಕು ನೆಡೆಸಿದ್ದಲ್ಲದೇ  ನಾಲ್ಕು ವೇದಗಳಲ್ಲಿ ಪಾರಮ್ಯ ಪಡೆದು ಅಧಿಕಾರಯುತವಾಗಿ ಚತುರ್ವೇದಿ  ಎಂಬ ಬಿರುದನ್ನು ಪಡೆದದ್ದು ಹೆಮ್ಮೆಯ ವಿಷಯವಾಗಿತ್ತು.

sc91915ರಲ್ಲಿ  ಹರಿದ್ವಾರದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ ಗಾಂಧೀಜಿಯವರ ಭೇಟಿಯಾದದ್ದು ಅವರ ಬದುಕಿನಲ್ಲಿ ಬಹಳ ತಿರುವನ್ನು ಪಡೆಯಿತು ಎಂದರೂ ತಪ್ಪಾಗದು. ದಕ್ಷಿಣ ಭಾರತದವರಾದರೂ ಸುಲಲಿತವಾಗಿ ಹಿಂದಿ ಮಾತನಾಡುವುದನ್ನು ಕಂಡು ಆಶ್ಚರ್ಯ ಚಕಿತರಾದ ಗಾಂಧಿಯವರು ಸುಧಾಕರ್ ಚತುರ್ವೇದಿಯವರನ್ನು ತಮ್ಮ ಒಡನಾಡಿಯಾಗಿರಿಸಿಕೊಂಡರು. ಅವರಿಬ್ಬರ ಸ್ನೇಹ ಎಷ್ಟಿತ್ತೆಂದರೆ, ಗಾಂಧಿಯವರಿಗೆ  ಕನ್ನಡದಲ್ಲಿ ಸಹಿ ಮಾಡಲು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧಿಯವರಿಗೆ  ಸುಧಾಕರ್ ಅವರು ಕಲಿಸಿದ್ದರು ಎಂಬುದು ಗಮನಾರ್ಹವಾಗಿದೆ.

ಗಾಂಧಿಯವರ ಶರೀರಕ್ಕೆ ಸುಧಾಕರ್  ಅವರು ಶಾರೀರ ಎನ್ನುವಂತೆ ಮಹಾತ್ಮ ಗಾಂಧಿಯವರು ಬ್ರಿಟೀಷರೊಡನೆ ಪತ್ರ ಬರೆಯುವಾಗಲೆಲ್ಲಾ  ಸುಧಾಕರರನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದಲ್ಲದೇ, ಬ್ರಿಟಿಷ್ ವೈಸ್ ರಾಯ್ ಅವರೊಡನೆ  ನಡೆಸುವ ಪತ್ರ ವ್ಯವಹಾರಗಳ ಜವಾಬ್ಧಾರಿಯೆಲ್ಲಾ ಸುಧಾಕರ್ ಅವರಿಗೆ ವಹಿಸಿಕೊಟ್ಟಿದ್ದರು.  ಗಾಂಧಿಯವರು ಹೊರತರುತ್ತಿದ್ದ ಹಿಂದಿ ಮತ್ತು ಸಂಸ್ಕೃತ ಲೇಖನಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುತ್ತಿದ್ದದ್ದೇ ಸುಧಾಕರ್ ಅವರು.  ಅದೇ ರೀತೀಯಲ್ಲಿ  ಗಾಂಧಿಯವರ ಹರಿಜನ  ಪತ್ರಿಕೆಯ ಕನ್ನಡ ಅವತರಣಿಕೆಯೂ  ಸುಧಾಕರ್ ಆವರ ಸಂಪಾದಕತ್ವ ವಹಿಸಿಕೊಂಡಿದ್ದ ಕಾರಣ,  ಸುಧಾಕರ ಚತುರ್ವೇದಿಯವರನ್ನು ಮಹಾತ್ಮ ಗಾಂಧಿ ಅವರ ಪೋಸ್ಟ್ ಮನ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದರು.  ಸುಧಾಕರ್ ಅವರ ಪಾಂಡಿತ್ಯಕ್ಕೆ ಮಾರು ಹೊಗಿದ್ದ ಗಾಂಧಿಯವರು ಪ್ರೀತಿಯಿಂದ ಕರ್ನಾಟಕೀ ಎಂದೇ ಸುಧಾಕರ್ ಅವರನ್ನು ಕರೆಯುತ್ತಿದ್ದರು. ಮತ್ತೊಂದು ಕುತೂಹಲಕಾರಿಯಾದ ವಿಷಯವೇನೆಂದರೆ  ಅವರು ಲಾಹೋರಿನಲ್ಲಿದ್ದಾಗ ಸುಧಾಕರ್ ಅವರು ಮತ್ತೊಬ್ಬ ವೀರ ಸೇನಾನಿ ಭಗತ್ ಸಿಂಗ್ ಅವರಿಗೆ ಗಣಿತವನ್ನು ಹೇಳಿಕೊಟ್ಟಿದ್ದ ಗುರುಗಳಾಗಿದ್ದರು.  

sc1ಸ್ವಾತಂತ್ರ್ಯ ಹೋರಾಟಗಳಲ್ಲಿ ನಡೆದ ಅನೇಕ ಮಾರಣ ಹೋಮಗಳಲ್ಲಿ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಅತ್ಯಂತ ಪ್ರಮುಖಪಾತ್ರವಹಿಸುತ್ತದೆ. ನಾವೆಲ್ಲರೂ ಅದನ್ನು ಇತಿಹಾಸದ ಭಾಗವಾಗಿ ಪುಸ್ತಕಗಳಲ್ಲಿ ಓದಿದರೆ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಸುಧಾಕರ್ ಚತುರ್ವೇದಿಯವರು ಪ್ರಮುಖ ಸಾಕ್ಷಿಯಾಗಿದ್ದರು ಎಂದರೆ ಅಚ್ಚರಿಯನ್ನು ಮೂಡಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಸೇರಿದ್ದ ಸಾವಿರಾರು ಅಮಾಯಕರ ಮೇಲೆ ಏಕಾ ಏಕಿ ಗುಂಡಿನ ಧಾಳಿ ನಡೆಸಿ ನೂರಾರು ಜನರು ಗುಂಡಿನೇಟಿಗೆ ಬಲಿಯಾದರೆ,  ಇನ್ನೂ ಹಲವರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿದ್ದ ಭಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡರೆ, ಇನ್ನೂ ಹಲವರು ಕಾಲ್ತುಳಿತಕ್ಕೆ ಬಲಿಯಾಗಿ ಒಟ್ಟಿನಲ್ಲಿ  ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು ಈಗ  ಮರೆಯಲಾಗದ ಇತಿಹಾಸ. ಬ್ರಿಟಿಷ್ ಸರ್ಕಾರದ ದಾಖಲೆ ಪ್ರಕಾರ ಕೇವಲ 670 ಜನರು ಸತ್ತಿದ್ದಾರೆ ಎಂದರೂ,  ನದಿ ತಟದಲ್ಲಿ ಸಾವಿರಾರು ಜನರ ಅಂತ್ಯಸಂಸ್ಕಾರದ ಪೌರೋಹಿತ್ಯ ವಹಿಸಿದ್ದವರೇ ಸುಧಾಕರ್ ಚತುರ್ವೇದಿಯವರೇ ಎನ್ನುವುದು ಗಮನಾರ್ಹ.

ಹೀಗೆ ಗಾಂಧಿಯವರ ಜೊತೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡಿದ್ದ ಸುಧಾಕರ್ ಅವರು ತಮ್ಮ ಪ್ರಖರ ಭಾಷಣಗಳಿಂದ ಜನರನ್ನು ಬ್ರಿಟೀಷರ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಿದ್ದಾರೆ ಎಂಂದು ಬ್ರಿಟೀಷರಿಂದ ಮೂವತ್ತಕ್ಕೂ ಹೆಚ್ಚಿನ ಬಾರಿ ಸೆರೆಮನೆಗೆ ಹೋಗಿ ಸುಮಾರು  13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಗಾಂಧಿಯವರ ಜೊತೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿಗಳಾಗಿದ್ದಲ್ಲದೇ ಗಾಂಧಿಯವರಂತೆಯೇ ವಿದೇಶಿ ಉತ್ಪನ್ನಗಳನ್ನು ಸುಟ್ಟು ಚರಕದಿಂದಲೇ ಖಾದಿ ತಯಾರಿಸಿ ಧರಿಸುತ್ತಿದ್ದರು.

sc2ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್ ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಿದ್ದುದರಿಂದ ಪಂಜಾಬ್, ಲಾಹೋರ್, ಪಾಟ್ನಾ, ಕೋಲ್ಕತ್ತಾಗಳಲ್ಲಿ ಇವರ ಪ್ರಖರ ಭಾಷಣಗಳಿಗೆ ಸೋತು ಸುಧಾಕರ್ ಅವರಿಗೆ ದೊಡ್ಡ ಶಿಷ್ಯ ವೃಂದವೇ ಸೃಷ್ಟಿಯಾಗಿತ್ತು. ಅಂತಹ ಶಿಷ್ಯೆಯೊಬ್ಬರು ಸುಧಾಕರ್ ಅವರನ್ನು ಪ್ರೀತಿಸಿ ತಮ್ಮ ಮಗಳನ್ನು ವರಿಸಬೇಕೆಂದು ಆಕೆಯ ತಂದೆಯು ಸುಧಾಕರ್ ಅವರಲ್ಲಿ ಕೇಳಿಕೊಂಡಾಗ ಸ್ವರಾಜ್ಯ ಬರುವವರೆಗೂ ತಾನು ಮದುವೆಯಾಗುವುದಿಲ್ಲ  ಎಂಬ ಪ್ರತಿಜ್ಞೆ ತೊಟ್ಟಿದ್ದನ್ನು ನೆನಪಿಸಿದರು.  1935ರಲ್ಲಿ ಬಲೋಚಿಸ್ತಾನದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿನ ಜನರ ಸೇವೆಗೆಂದು ತೆರಳಿದ್ದ ಅವರ ಪ್ರೀತಿಯ ಶಿಷ್ಯೆ ಮರಳಿ ಬರಲೇ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವಷ್ಟರಲ್ಲಿ ಸುಧಾಕರ್ ಅವರ ವಯಸ್ಸು 50 ವರ್ಷ ದಾಟಿದ್ದ ಕಾರಣ ಈ ವಯಸ್ಸಿನಲ್ಲಿ ಮದುವೆಯಾಗಿ ಸಾಧಿಸುವುದಾದರೂ ಏನು? ಎಂದು ತಿಳಿದು  ಅವರು ಆಜೀವ ಬ್ರಹ್ಮಚಾರಿಯಾಗಿಯೇ  ಉಳಿದುಬಿಟ್ಟರು.

sc7ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ  ಚತುರ್ವೇದಿಗಳ ಗುರಿ ಬದಲಾಯಿತು. ಬೆಂಗಳೂರಿನ ಜಯನಗರ 5ನೆಯ ಹಂತದಲ್ಲಿರುವ ಮನೆಯೊಂದರಲ್ಲಿ ಕುಳಿತು ವೇದ – ವೇದಾಂತಗಳ ಕುರಿತಾಗಿ ಲೇಖನಗಳನ್ನು ಬರೆಯಲಾರಂಭಿಸಿದರು. ತಮ್ಮ ನೆಚ್ಚಿನ ದಯಾನಂದ ಸರಸ್ವತಿಗಳು ವೇದಗಳಿಗೆ ಬರೆದಿದ್ದ ಉದ್ದಾಮ ಭಾಷ್ಯಗಳನ್ನೆಲ್ಲ ಕನ್ನಡಕ್ಕೆ ಸುಮಾರು 20 ಸಂಪುಟಗಳಲ್ಲಿ 30,000 ಪುಟಗಳಷ್ಟು ತರ್ಜುಮೆ ಮಾಡಿದರು.  ವೈದಿಕರಿಂದ ಜಾತೀಯತೆ ಹುಟ್ಟಿತೆಂಬ ವಿತಂಡ ವಾದ ಮಾಡುವವರಿಗೆ ಹಾಗೆ ಜಾತೀಯತೆಯನ್ನು ಪುರಸ್ಕರಿಸಿದ ವೇದಮಂತ್ರವನ್ನು ಎಲ್ಲಿವೇ? ಎಂಬ ಸವಾಲನ್ನು ಹಾಕಿದ್ದ ಸುಧಾಕರ್ ಚತುರ್ವೇದಿಗಳು ಅನೇಕ ಹರಿಜನರ ಮಕ್ಕಳನ್ನು ದತ್ತು ಪಡೆದು ಅವರಿಗೆ ಸೂಕ್ತ ವಿದ್ಯಾಭ್ಯಾಸವನ್ನು ಮಾಡಿಸಿದರು. ಅವರಲ್ಲಿ ಕೆಲವರು ಐಎಎಸ್ ಸಹಾ ಮುಗಿಸಿ  ಹಿರಿಯ  ಅಧಿಕಾರಿಗಳಗಿದ್ದಾರೆ  ಎಂಬುದು ಮೆಚ್ಚುಗೆಯ ವಿಷಯವಾಗಿದೆ. ನೂರಾರು ಅಂತರ್ಜಾತೀಯ ಮದುವೆಗಳನ್ನು ಮಾಡಿಸಿದ್ದಲ್ಲದೇ,  ಹರಿಜನರ ಸಾವಿರಾರು ಕೇರಿಗಳಲ್ಲಿ ಸಂಚರಿಸಿ, ಅವರುಗಳಿಗೆ ದೇವಾಲಯದ ಪ್ರವೇಶವನ್ನು ಕೊಡಿಸಿದ್ದಲ್ಲದೇ, ಅಸ್ಪೃಶ್ಯತೆಯ ನಿವಾರಣೆಗಾತಿ ತಮ್ಮ ಬದುಕನ್ನೇ ಮೀಸಲಾಗಿಟ್ಟರು. . ಯಾರೇ  ಆಗಲಿ ಅವರ ಬಳಿ ವೇದ ಕಲಿಯಬೇಕೆಂಬ  ಅಪೇಕ್ಷೆ ವ್ಯಕ್ತಪಡಿಸಿದರೆ ಸಾಕು,  ಆವರ ಜಾತಿ ಧರ್ಮ ವಯಸ್ಸು, ಅಂತಸ್ತು ಹೆಂಗಸು ಗಂಡಸು ಎಂಬ ಲಿಂಗ ತಾರತಮ್ಯವಿಲ್ಲದೇ ಎಲ್ಲರಿಗು ವೇದಾದ್ಯಯನ ಮಾಡಿಸಿದರು. ಹರಿಜರ ಉದ್ಧಾರ ಎಂದು  ವೇದಿಕೆಗಳ ಮೇಲೆ ದೊಡ್ಡ ಭಾಷಣ ಮಾಡುತ್ತಾ  ಪ್ರಚಾರ ಪಡೆಯುವ  ರಾಜಕೀಯ ನಾಯಕರಂತಲ್ಲದೇ  ತಾವು ನುಡಿದದ್ದನ್ನು ಅಕ್ಷರಶಃ ಕಾರ್ಯಸಾಧುವನ್ನಾಗಿ ಮಾಡಿದ ಕೀರ್ತಿ ಸುಧಾಕರ್ ಚತುರ್ವೇದಿಗಳಿಗೆ ಸಲ್ಲುತ್ತದೆ.

sc5ನಾಲ್ಕು ವೇದಗಳ ಕುರಿತು 20 ಸಂಪುಟಗಳನ್ನು ರಚಿಸಿದ್ದರಲ್ಲದೇ, ವೇದ ತರಂಗ ಹಾಗೂ ವೇದ ಪ್ರಕಾಶ ಎಂಬ ಮಾಸಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು.

2009 ರ ಹೊತ್ತಿಗೆ, ನಾಲ್ಕು ವೇದಗಳಲ್ಲಿ ಮೂರು ಮತ್ತು ಋಗ್ವೇದದ ಆರು ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.

sc8ಅದೊಮ್ಮೆ ಅವರಿಗೆ 112 ವರ್ಷಗಳಾಗಿದ್ದಾಗ  ಇವರ ದೀರ್ಘಾಯುಷ್ಯದ ಕುರಿತಂತೆ ಸಂದರ್ಶಕಿಯೊಬ್ಬರು ಕೇಳಿದ ಪ್ರಶ್ನೆಗೆ ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆ ಹಣ್ಣು ಸೇವನೆಯೇ. ನನ್ನ ಆಯುಷ್ಯದ ಗುಟ್ಟು ಎಂದು ನಕ್ಕಿದ್ದಂತೆ. ಹಾಗೇ ತಮ್ಮ ಮಾತನ್ನು ಮುಂದುವರಿಸಿ, ವೇದಗಳ ಪ್ರಕಾರ ಮನುಷ್ಯರ ಅಂದಾಜು ಆಯಸ್ಸು 120 ವರ್ಷಗಳು. ನಾನೇನಾದ್ರು 120 ವರ್ಷಗಳಿಗಿಂತ ಕಡಿಮೆ ವಯಸ್ಸಿಗೆ ಸತ್ತರೆ ನಾನು ವೇದಗಳು ಹೇಳುವಂತೆ ಬದುಕಿಲ್ಲ ಎಂಬರ್ಥ ಬರುತ್ತದೆ ಎಂದಿದ್ದರಂತೆ. ವೇದಗಳಲ್ಲಿ  ಹೇಳಿದಂತೆಯೇ ಬದುಕಿದ್ದರು ಸುಧಾಕರ್ ಚತುರ್ವೇದಿಗಳು. 1897ರಲ್ಲಿ ಜನಿಸಿದ ಅವರು 3 ಶತಕಗಳ ಎಲ್ಲಾ ಬದಲಾವಣೆಗಳಿಗೂ ಸಾಕ್ಷಿಯಾಗಿದ್ದಲ್ಲದೇ   27-02-2020  ತಮ್ಮ  122 ವರ್ಷ, 313 ದಿನಗಳ ತುಂಬು ಜೀವನ ನಡೆಸಿ ಬೆಂಗಳೂರಿನಲ್ಲಿ ದೇಹಾಂತ್ಯವನ್ನು ಮಾಡಿದರು.

sc4ವಯಸ್ಸು 120ಕ್ಕೂ ಹೆಚ್ಚು ವರ್ಷ ದಾಟಿದ್ದರೂ, ಇತರರ ವೃದ್ಧರಂತೆ ನಡುಗುವ ಕೈಗಳಲ್ಲಿ ಕೋಲು ಹಿಡಿಯದ ಸದಾ ಕ್ಷಾತ್ರ ತೇಜದ, ಆರೋಗ್ಯವಂತ, ವೇದಗಳ ಅಧ್ಯಯನ, ಸಂಶೋಧನೆ, ವೇದ ಪಾಠ, ಪ್ರತಿನಿತ್ಯವೂ ಮನೆಯಲ್ಲಿ ಅಗ್ನಿಹೋತ್ರವನ್ನು ತಪ್ಪಿಸದೇ ಮಾಡುತ್ತಿದ್ದರು. ಪ್ರತಿ ಶನಿವಾರ ಅವರ ಮನೆಯಲ್ಲಿ ಸತ್ಸಂಗವನ್ನು  ನಡೆಸುತ್ತಿದ್ದರಲ್ಲದೇ, ಆ ವಯಸ್ಸಿನಲ್ಲಿಯೂ ತಮ್ಮ  ಗುರುಗಳಾದ ಶ್ರೀ ಶ್ರದ್ಧಾನಂದರ ಆದೇಶದಂತೆ ವೇದಗಳ ಬಗ್ಗೆ ಪುಸ್ತಕ ಬರೆಯುವುದರಲ್ಲಿಯೇ ತಮ್ಮ  ಜೀವನವನ್ನು ಕಳೆದ ಹಿರಿಯ ಜೀವ  ಸುಧಾಕರ್ ಚರ್ತುವೇದಿಗಳದ್ದು.

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಅದೇಕೋ ಏನೋ? ಅವರ ವಿದ್ಯೆಗೆ ಸಲ್ಲಬೇಕಿದ್ದ ಸತ್ಕಾರ ಸನ್ಮಾನಗಳು ಅವರಿಗೆ ಬರಲೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ಸಹಾ ಅವರು ನಯವಾಗಿ ತಿರಸ್ಕರಿಸಿದ್ದರು.  ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ರಾಜ್ಯೋತ್ಸವದ ಪ್ರಶಸ್ತಿ ಹೊರತಾಗಿ ಕೇಂದ್ರ ಸರ್ಕಾರದಿಂದ ಅವರಿಗೆ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆಯಲೇ ಇಲ್ಲ ಎನ್ನುವುದು ನಿಜಕ್ಕು ವಿಷಾಧನೀಯ.  ಮೂರು ಶತಮಾನಗಳ ಸಾರ್ಥಕ ಬದುಕನ್ನು ಕಳೆದರೂ  ಎಲೆಮರೆಕಾಯಿಯಂತೆ ಸ್ವಾತಂತ್ರ್ಯ ಹೊರಾಟಗಾರಾಗಿ, ಸಮಾಜ ಸುಧಾರಕರಾಗಿ, ಸಾರಸ್ವತ ಲೋಕದಲ್ಲಿ ಸರಸ್ವತಿ ಪುತ್ರರಂತೆ ಎಲೆಮರೆಕಾಯಿಯಂತೆಯೇ ಜೀವಿಸಿದ ಪಂಡಿತ ಸುಧಾಕರ್ ಚತುರ್ವೇದಿಗಳು ಖಂಡಿತವಾಗಿಯೂ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ