ವಿಮಲ ಮಿಸ್

ಅದು ಎಂಭತ್ತರ ದಶಕ ಆರಂಭದ ಕಾಲ ನಾನು ಆಗ ತಾನೇ ನೆಲಮಂಗಲದ ಸರ್ಕಾರೀ ಪ್ರಾಥಮಿಕ ಶಾಲೆಯಿಂದ ಬೆಂಗಳೂರಿನ ಪ್ರತಿಷ್ಠಿತ ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಸ್ಲೇಟು ಬಳಪ ಹಿಡಿದುಕೊಂಡು ಯಾವುದೇ ರೀತಿಯ ಸಮವವಸ್ತ್ರ ಇಲ್ಲದೇ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡು ನೆಲದ ಮೇಲೆ ಹಾಕಿದ್ದ ಮಣೆಯ ಮೇಲೆ ಪಾಠ ಕಲಿಯುತ್ತಿದ್ದ ನನಗೆ, ಏಕಾ ಏಕಿ ಸ್ಲೇಟು ಬಳಪ ಜಾಗದಲ್ಲಿ ನೋಟ್ ಪುಸ್ತಕ, ಪೆನ್ಸಿಲ್, ಸಮವಸ್ತ್ರದ ಜೊತೆ ಟೈ ಮತ್ತು ಶೂ ಹಾಕಿಕೊಂಡು ಡೆಸ್ಕಿನ ಮೇಲೆ ಕುಳಿತು ಕೊಂಡು ಪಾಠ ಕೇಳುವ ಸೌಭಾಗ್ಯ ಒಂದು ರೀತಿಯ ಭಯವನ್ನು ಹುಟ್ಟಿಸಿತ್ತು. ಹೊಸಾ ಶಾಲೆ ಅಪರಿಚಿತ ಸಹಪಾಠಿಗಳು ಮತ್ತುಪರಿಚಯವೇ ಇಲ್ಲದ ಗುರುಗಳು. ಹೇಗಪ್ಪಾ ಈ ಶಾಲೆಯಲ್ಲಿ ಕಲಿಯುವುದು? ಎಂದು ಯೋಚಿಸುತ್ತಿರುವಾಗಲೇ ನನ್ನ ಚಿಂತೆಯನ್ನು ದೂರ ಮಾಡಿದವರೇ, ನಮ್ಮ ವಿಮಲ ಮಿಸ್.

WhatsApp Image 2021-09-05 at 12.21.14 AM

ಆಗ ತಾನೇ ತಮ್ಮ ಚೊಚ್ಚಲು ಬಾಣಂತನವನ್ನು ಮುಗಿಸಿಕೊಂಡು ಬಹಳ ಉತ್ಸಾಹದ ಚಿಲುಮೆಯಾಗಿ ಶಾಲೆಗೆ ಪುನಃ ಬಂದು ನಮ್ಮ ತರಗತಿಯ ಉಪಾಧ್ಯಾಯಿನಿಯಾಗಿ ಬಂದಿದ್ದರು. ಬಿ. ಆರ್ ಛಾಯರವರು ಹಾಡಿದ್ದ ಶಿಶು ಗೀತೆಯಾದ, ಬಹಳ ಒಳ್ಳೆಯವರು ನಮ್ಮ ಮಿಸ್, ಎನ್ ಕೇಳಿದ್ರು ಎಸ್ ಎಸ್ಸು, ನಗುತ ನಗುತ ಮಾತಾಡ್ತಾರೆ! ಸ್ಕ್ಹೂಲಿಗೆಲ್ಲ ಫೇಮಸ್ಸು, ಸ್ಕ್ಹೂಲಿಗೆಲ್ಲ ಫೇಮಸ್ಸೂ !! ಹಾಡು ಬಹುಶಃ ನಮ್ಮ ವಿಮಲಾ ಮಿಸ್ ಅವರನ್ನು ನೋಡಿಕೊಂಡೇ ಬರೆದಿದ್ದರೇನೋ ಎನ್ನುವಂತಹ ಶಿಕ್ಷಕಿ ಎಂದರೂ ತಪ್ಪಾಗದು. ನೋಡಲು ಗೌರವ ವರ್ಣವಾದರೂ ಬಹಳ ಲಕ್ಷಣವಂತೆ ಮತ್ತು ಸದಾಕಾಲವೂ ಹಸನ್ಮುಖಿ.

ಏಳನೇ ತರಗತಿಯ ವರೆಗೂ ನಮ್ಮ ಕ್ಲಾಸ್ ಟೀಚರ್ ಆಗಿದ್ದಲ್ಲದೇ, ಕನ್ನಡ, ಹಿಂದಿ ಮತ್ತು ವಿಜ್ಞಾನವನ್ನು ನನಗೆ ಕಲಿಸಿಕೊಟ್ಟವರು. ನನಗೆ ತಿಳಿದಿದ್ದ ಹಾಗೆ ಆವರ ಮನೆಯ ಆಡು ಭಾಷೆ ತೆಲುಗು. ಆದರೆ ಅವರ ಕನ್ನಡ ಭಾಷೆಯ ವೈಖರಿ ಮಾತ್ರಾ ಅತ್ಯಂತ ಸುಸ್ಪಷ್ಟ. ಇನ್ನು ಅವರ ಕೈ ಬರಹವಂತೂ ಮುತ್ತು ಪೋಣಿಸಿದಂತೆ ಇರುತ್ತಿದ್ದ ಕಾರಣ ನಮ್ಮ ಬಿಇಎಲ್ ಪ್ರಾಥಮಿಕ, ಪೌಢ ಶಾಲೆ ಮತ್ತು ಕಾಲೇಜಿನ ಯಾವುದೇ ಸಭೆ ಸಮಾರಂಭಗಳ ಬರಹಗಳೆಲ್ಲವೂ ನಮ್ಮ ವಿಮಲಾ ಮಿಸ್ ಅವರದ್ದೇ ಇರುತ್ತಿತ್ತು. ಬರಹದ ಜೊತೆಗೆ ಚಿತ್ರಗಳನ್ನೂ ಅತ್ಯದ್ಭುತವಾಗಿ ಬಿಡಿಸುವ ಕಲೆ ಅವರಿಗೆ ಕರಗತವಾಗಿದ್ದ ಕಾರಣ ಬಣ್ಣ ಬಣ್ಣದ ಚಾಕ್ ಪೀಸಿನಲ್ಲಿ ಬೋರ್ಡಿನ ಮೇಲೆ ಅವರು ಬಿಡಿಸುತ್ತಿದ್ದ ಚಿತ್ತಾರ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು ಎಂದರೂ ಅತಿಶಯವಲ್ಲ.

ಇಂತಹ ಅದ್ಭುತ ಪ್ರತಿಭೆಗಳನ್ನು ಹೊಂದಿದ್ದ ವಿಮಲ ಮಿಸ್ ಅವರನ್ನು ನಮ್ಮ ಪ್ರಾಥಮಿಕ ಶಾಲೆಯ ಅಧ್ಯಾಪಕಿಯನ್ನಾಗಿ ಪಡೆದ ನಾವುಗಳು ನಿಜಕ್ಕೂ ಧನ್ಯರೇ ಸರಿ. ಅದಕ್ಕೇ ಅಲ್ಲವೇ ಮಾತೃ ದೇವೋಭವ, ಪಿತೃ ದೇವೋಭವ ನಂತರದ ಸ್ಥಾನವನ್ನು ಆಚಾರ್ಯ ದೇವೋಭವ ಎಂದು ಗುರುಗಳಿಗೆ ಪೋಷಕರ ನಂತರದ ಸ್ಥಾನವನ್ನು ನೀಡಿದ್ದಾರೆ ನಮ್ಮ ಪೂರ್ವಜರು. ವಿಮಲ ಮಿಸ್ ಅವರೇ ಹೇಳಿಕೊಳ್ಳುತ್ತಿದ್ದ ಹಾಗೆ ಅವರ ತಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರ ವಿದ್ಯಾಭ್ಯಾಸ ತಂದೆಯವರು ವರ್ಗಾವಣೆಯ ಜೊತೆ ಜೊತೆಯಲ್ಲಿಯೇ ವಿವಿದೆಡೆಯಲ್ಲಿ ಆಗಿದ್ದ ಕಾರಣ, ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಆಗಿದ್ದ ಕಾರಣ ನಮ್ಮ ಪಾಠ ಪ್ರವಚನಗಳಲ್ಲಿ ಕಾಡು-ಮೇಡು, ನದಿ-ಝರಿ, ಸಾಕು ಪ್ರಾಣಿಗಳು ಮತ್ತು ವನ್ಯ ಮೃಗಗಳ ಕುರಿತು ಪ್ರಸ್ತಾವನೆ ಬಂದಿತೆಂದರೆ ಸಾಕು. ಆ ದಿನ ನಮಗೆ ಹಬ್ಬವೇ ಸರಿ. ಆದಿನ ನಮಗೆ ರಸಕವಳ ಎಂದೇ ತಿಳಿಯಬೇಕು. ಅವರು ತಮ್ಮ ಬಾಲ್ಯದಲ್ಲಿ ಕಂಡಿದ್ದ ಆ ಮಲೆನಾಡು. ಅಗೊಮ್ಮೆ ಈಗೊಮ್ಮೆ ರೈಲುಗಳು ಬಂದು ಹೋದ ಮೇಲೆ ನಿರ್ಜನವಾಗಿರುತ್ತಿದ್ದ ರೈಲ್ವೇ ನಿಲ್ಡಾಣದ ಬಳಿ ಬರುತ್ತಿದ್ದ ವನ್ಯಮೃಗಗಳು, ಅದನ್ನು ಕಂಡು ಅವರು ಮತ್ತು ಅವರ ಸಹೋದರ ಸಹೋದರಿಯರು ಬೆಚ್ಚಿ ಬೀಳುತ್ತಿದ್ದದ್ದು.‌ ರಾತ್ರಿಯ ನೀರವದಲ್ಲಿ ಟಾರ್ಚ್ ಹಾಕಿಕೊಂಡು ಇನ್ನೂ‌ ಮನೆಗೆ ಬಾರದೇ ಹೋದ ಹಸುವನ್ನು ಹುಡುಕಿಕೊಂಡು ಬರುತ್ತಿದ್ದುದನ್ನು ವರ್ಣಿಸಲು ಆರಂಭಿಸಿದರೆಂದರೆ ನಾವೇ ಅಲ್ಲಿ ಸ್ವತಃ ಅದನ್ನು ಅನುಭವಿಸುತ್ತಿದ್ದೇವೇನೋ ಇಲ್ಲವೇ ನಮ್ಮ ಕಣ್ಣ ಮುಂದೆಯೇ ಅದೆಲ್ಲವೂ ನಡೆಯುತ್ತಿದೆಯೇನೋ ಎನ್ನುವಂತೆ ಅವರು ಹೇಳುತ್ತಿದ್ದ ಪರಿ ನಿಜಕ್ಕೂ ಅವರ್ಣನೀಯ. ಅದನ್ನು ಅವರ ಬಾಯಿಂದಲೇ ಕೇಳಿದರೇ ಮಜ.

ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಸಾಹಿತ್ಯಾಸಕ್ತಿ ಆನುವಂಶಿಕವಾಗಿ ತಾತ ಮತ್ತು ತಂದೆಯವರಿಂದ ಬಂದ ಬಳುವಳಿಯಾರೂ, ಶುದ್ಧವಾಗಿ ವ್ಯಾಕರಣಬದ್ಧವಾಗಿ ಕನ್ನಡ ಮಾತನಾಡಲು ಮತ್ತು ಬರೆಯಲು ಕಲಿಸಿಕೊಟ್ಟ ಶ್ರೇಯ ವಿಮಲ ಮಿಸ್ ಅವರಿಗೆ ಸಲ್ಲುತ್ತದೆ. ನಮಗೆ ಆಗ ಆವರು ಕಲಿಸಕೊಟ್ಟ ಸಂಧಿ ಸಮಾಸಗಳು, ಕೆಲವು ಪದಗಳನ್ನು ಕೊಟ್ಟು ವಾಕ್ಯ ರಚನೆ ಮಾಡಿಸುತ್ತಿದ್ದ ಪರಿ, ಕಠಿಣ ಒತ್ತಕ್ಷರಗಳಿರುವ ಪದಗಳ ಉಕ್ತಲೇಖನ ನೀಡಿ ಅದರ ಕಾಗುಣಿತ ತಿದ್ದಿ ಬೆಳಸಿದ ಕಾರಣದಿಂದಲೇ, ನಾನಿಂದು ಈ ಲೇಖನವನ್ನು ಬರೆಯಲು ಸಾಧ್ಯವಾಗಿದೆ ಎನ್ನುವುದು ಅಕ್ಷರಶಃ ಸತ್ಯ.

ಇನ್ನು ಹಿಂದಿ ಹೇಳಿಕೊಡುವಾಗಲೂ ಅಷ್ಟೇ. ಎಲ್ಲಾ ವಿದ್ಯಾರ್ಥಿಗಳೂ ಸ್ಪಷ್ಟವಾಗಿ ಓದಬೇಕು ಮತ್ತು ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಬರೆಯಲೇ‌ ಬೇಕು. ಓದುವಾಗ ಅಕಸ್ಮಾತ್ ಉಚ್ಚಾರವೇನಾದರೂ ತಪ್ಪಾದಲ್ಲಿ ಅದು ಸರಿಯಾಗುವವರೆಗೂ ಹತ್ತಾರು ಸಲಾ ಓದಿಸಿ ಅದು ನಮಗೆ ಸರಿಯಾಗಿ ಮನನವಾಗುವವರೆಗೂ ಬಿಡುತ್ತಲೇ ಇರಲಿಲ್ಲ. ಅದಕ್ಕಾಗಿಯೇ ನಾವೆಲ್ಲರೂ ಮೊದಲನೇ ಸಲವೇ ಸರಿಯಾಗಿ ಗಮನವಿಟ್ಟು ಓದುವ ಮೂಲಕ ಆ ರೀತಿಯ ಶಿಕ್ಷೆಯಿಂದ ಬಚಾವಾಗುತ್ತಿದ್ದೆವು.

ಇನ್ನು ವಿಜ್ಞಾನ ಹೇಳಿಕೊಡುವಾಗಲಂತೂ ಎಲ್ಲಾ ವಿಷಯಗಳೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತೆ ಹೇಳಿಕೊಡುತ್ತಿದ್ದರು. ಈ ಮೊದಲೇ ಹೇಳಿದ ಹಾಗೆ ಚಿತ್ರಕಲೆಯಲ್ಲಿ ಪ್ರಬುದ್ಧರಾಗಿದ್ದ ಕಾರಣ ವಿಜ್ಞಾನದ ಚಿತ್ರಗಳನ್ನು ಅತ್ಯಂತ ಸ್ಪುಟವಾಗಿ ಬಿಡಿಸುತ್ತಿದ್ದದ್ದಲ್ಲದೇ ನಮಗೂ ಸಹಾ ಅದೇ ರೀತಿ ಬಿಡಿಸಲು ಕಲಿಸಿಕೊಡುತ್ತಿದ್ದರು. ಅವರ ಮುಂದೆ ಶಹಭಾಷ್ ಪಡೆಯಲೆಂದೇ ನಾನು scientific stencils ಬಳಸಿಕೊಂಡು ಚಿತ್ರಗಳನ್ನು ಬಿಡಿಸಿ ತೋರಿಸಿ ಹಸಿರು ಬಣ್ಣದ ಪೆನ್ನಿನಲ್ಲಿ Good or Very Good ಹಾಕಿಸಿಕೊಂಡರೆ ಸಾಕು ಮುಂದೆ ನಾಲ್ಕೈದು ದಿನಗಳ ಮಟ್ಟಿಗೆ ಅದುವೇ ಓಲಂಪಿಕ್ಸ್ ಪದಕ ಗೆದ್ದಂತಾಗುತ್ತಿತ್ತು.

ಸತತವಾಗಿ ಮೂರ್ನಾಲ್ಕು ವರ್ಷಗಳ ಕಾಲ ನಮ್ಮ ಕ್ಲಾಸ್ ಟೀಚರ್ ಆಗಿದ್ದ ಕಾರಣ ಅವರು ಕೇವಲ ಟೀಚರ್ ಮಾತ್ರವೇ ಆಗಿರದೇ ನಮ್ಮ ತಾಯಿಯೋ ಇಲ್ಲವೋ ಚಿಕ್ಕಮ್ಮನಂತೆ ನಮ್ಮೆಲ್ಲರ ಗುಣ, ಸ್ವಭಾವಗಳು, ನಮ್ಮ ಶಕ್ತಿ ಮತ್ತು ಸಾಮರ್ಥ್ಯದ ಅರಿವು ಅವರಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಪ್ರತಿಯೊಬ್ಬರನ್ನೂ ಅವರವರ ಪ್ರತಿಭೆ ಮತ್ತು ಶಕ್ತ್ಯಾನುಸಾರ ಕಲೆ, ಕ್ರೀಡೆ, ಕುಶಲ ಕಲೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದದ್ದಲ್ಲದೇ, ಪ್ರತಿಯೊಬ್ಬರಲ್ಲಿದ್ದ ಅಳುಕನ್ನು ಹೋಗಲಾಡಿಸಿ, ಎಲ್ಲರ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿದ್ದರು.

ಅದರಲ್ಲೂ ನಾನು ಕ್ರೀಡೆಗಿಂತ ಕಲೆಯಲ್ಲಿ ಮಿಂಚಬಹುದು ಎಂದು ಗುರುತಿಸಿ ನನಗೆ ನಾಟಕ, ಫ್ಯಾನ್ಸಿ ಡ್ರೆಸ್ ಏಕಪಾತ್ರಾಭಿನಯ, ಮಿಮಿಕ್ರಿ, ಚರ್ಚಾಸ್ಪರ್ಥೆ, ಪ್ರಬಂಧ ಹೀಗೆ ಯಾವುದೇ ರೀತಿಯ ಸ್ಪರ್ಧೆಗಳಿದ್ದರೂ ನನಗೆ ತರಭೇತಿ ನೀಡಿ ಪ್ರಶಸ್ತಿ ಬರುತ್ತದೆಯೋ ಇಲ್ಲವೋ ಆದರೆ ಭಾಗವಹಿಸುವಿಕೆ ಮುಖ್ಯ. ಅಲ್ಲಿ ಇತರೇ ಶಾಲೆಗಳ ಮಕ್ಕಳ ಪ್ರತಿಭೆ ಹೇಗೆ ಇರುತ್ತದೆ ಅವರಿಂದ ಏನಾದಾರೂ ಒಳ್ಳೆಯದನ್ನು ಕಲಿತುಕೊಳ್ಳಿ ಎಂದು ಪ್ರೋತಾಹಿಸುತ್ತಿದ್ದರು. ನನಗೆ ಚೆನ್ನಾಗಿ ನೆನಪಿದ್ದಂತೆ ಅವರ ನಿರ್ದೇಶನದಲ್ಲೇ ಅಲೆಕ್ಶಾಂಡರ್ ಮತ್ತು ಪುರೂರವಾ ನಾಟಕದಲ್ಲಿ ಅಲೆಕ್ಶಾಂಡರ್ ಪಾತ್ರ, ಅರ್ಧ ನಾರೀಶ್ವರ ಫ್ಯಾನ್ಸಿ ಡ್ರೆಸ್, ಇನ್ನು 7ನೇ ತರಗತಿಯಲ್ಲಿ ಏಕಲವ್ಯ ನಾಟಕದಲ್ಲಿ ಏಕಲವ್ಯ ಏಕಲವ್ಯ ಮಾಡಿಸಿದ್ದಲ್ಲದೇ ಅನೇಕ ಏಕಪಾತ್ರಾಭಿನಯ, ಪ್ರಬಂಧ, ರಸಪ್ರಶ್ನೆ ‌ಮತ್ತು ಚರ್ಚಾ ಸ್ಪರ್ಧೆಗಳಿಗೆ ತಾವೇ ಕರೆದುಕೊಂಡು ಹೋಗಿ ಹತ್ತಾರು ಬಹುಮಾನಗಳನ್ನು ಗೆಲ್ಲಲು ಪ್ರೋತ್ಸಾಹ ನೀಡಿದ ಮಹಾಮಾತೆ ಎಂದರೂ ಅತಿಶಯವಲ್ಲ.

ಎಷ್ಟೇ ತಾಳ್ಮೆ ವಹಿಸಿದ್ದರೂ ಕೆಲವೊಂದು ಬಾರಿ ಅವರ ತಾಳ್ಮೆಯನ್ನೂ ಪರೀಕ್ಷಿಸುವಂತೆ ಗಲಾಟೆಯನ್ನು ಮಾಡಿದಾಗ ಎಲ್ಲರಿಗೂ ಬೆತ್ತದಿಂದ ಸರಿಯಾಗಿ ಬಾರಿಸುತ್ತಿದ್ದರೆ, ಅದರಲ್ಲೂ ಅವರ ಅಚ್ಚು ಮೆಚ್ಚಿನ ಶಿಷ್ಯನಾಗಿದ್ದ ಕಾರಣ ನನಗೆ ಸ್ವಲ್ಪ ಹೊಡೆತಕ್ಕಿಂತಲೂ ಕಿವಿ ಹಿಂಡಿಸಿ ಕೊಂಡಿರುವುದೇ ಹೆಚ್ಚು. ಬರೀ ಚೆನ್ನಾಗಿ ಓದಿದರೆ ಸಾಕಾಗುವುದಿಲ್ಲ. ಓದಿನ ಜೊತೆ ವಿನಯವಂತಿಕೆ ಮತ್ತು ಹಿರಿಯರಿಗೆ ಗೌರವವನ್ನು ಕೊಡುವುದನ್ನು ಕಲಿತು ಕೊಂಡಾಗಲೇ ಆತ ಒಳ್ಳೆಯ ವ್ಯಕ್ತಿ ಎನಿಸಿ ಕೊಳ್ಳುತ್ತಾನೆ ಎನ್ನುತ್ತಿದ್ದದ್ದು ಇಂದಿಗೂ ನನ್ನಂತಹ ಅನೇಕ ಶಿಷ್ಯರಿಗೆ ವೇದವಾಕ್ಯವಾಗಿದೆ.

ವಿದ್ಯಾರ್ಥಿಗಳೊಂದಿಗೆ ಮಾತ್ರವೇ ಅವಿನಾಭಾವ ಸಂಬಂಧವನ್ನು ಹೊಂದಿರುವುದಲ್ಲದೇ ತಮ್ಮ ವಿದ್ಯಾರ್ಥಿಗಳ ಪೋಷಕರೊಂದಿಗೂ ಅವರೂ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಿದ್ದದ್ದು ನಮ್ಮ ವಿಮಲ ಮಿಸ್ ಅವರ ಮತ್ತೊಂದು ಹೆಗ್ಗಳಿಕೆ. ಅದರಲ್ಲೂ ನಮ್ಮ ತಾಯಿ ಮತ್ತು ವಿಮಲ ಮಿಸ್ ಅವರ ಸುಮಧುರ ಬಾಂಧವ್ಯ ನಿಜಕ್ಕೂ ಅನನ್ಯ. ಹಾಗಾಗಿಯೇ ನಮ್ಮಮ್ಮ ಕೈಯ್ಯಾರೆ ವಿಮಲಾ ಮಿಸ್ ಅವರ ಮಕ್ಕಳಿಗೆ ಕ್ರೋಷಾದಲ್ಲಿ ಉಲ್ಲನ್ ಟೋಪಿಯನ್ನು ಹಾಕಿ ಕೊಟ್ಟಿದ್ದನ್ನು ತಮ್ಮ ಮಕ್ಕಳಿಗೆ ಸುಮಾರು ವರ್ಷಗಳ ಕಾಲ ಹಾಕಿದ್ದಲ್ಲದೇ, ನಾನು ಮತ್ತು ನನ್ನ ತಂಗಿಯರು ಪ್ರಾಥಮಿಕ ಶಾಲೆಯನ್ನು ಮುಗಿಸಿ ಎಷ್ಟೋ ವರ್ಷಗಳ ನಂತರ ಸಿಕ್ಕಿದಾಗಲೂ ಅದನ್ನು ನೆನಪಿಸಿಕೊಳ್ಳುತ್ತಿದ್ದದ್ದು ಅವರ ದೊಡ್ಡತನವನ್ನು ತೋರಿಸುತ್ತಿತ್ತು.

ಸುಮಾರು 10-15 ವರ್ಷಗಳ ಹಿಂದೆ‌ ಗಂಟೆ ರಾತ್ರಿ 9 ಆಗಿತ್ತು.‌ಮನೆಯಿಂದಲೂ ಮೇಲಿಂದ‌ ಮೇಲೆ ಕರೆ ಬರುತ್ತಿದ್ದ ಕಾರಣ, ಕಛೇರಿಯ ಕೆಲಸವನ್ನು ಮುಗಿಸಿಕೊಂಡು, ಬೈಕಿನಲ್ಲಿ ಬಿಇಎಲ್ ರಸ್ತೆಯಲ್ಲಿ ಬರುತ್ತಿದ್ದಾಗ, ದೇವಸಂದ್ರ ಬಸ್‌ನಿಲ್ದಾಣ ‌ದಾಟುತ್ತಿದ್ದಾಗ ಬಸ್ ನಿಲ್ದಾಣದಲ್ಲಿ ನಮ್ಮ ವಿಮಲ‌ ಮಿಸ್ ಬಸ್ಸಿಗಾಗಿ ಕಾಯುತ್ತಿದ್ದ ಹಾಗಾಯ್ತು. ಸರಿ ನೋಡಿಯೇ ಬಿಡೋಣ ಎಂದು ಗಾಡಿಯನ್ನು ಹಿಂದಕ್ಕೆ ತಿರುಗಿಸಿಕೊಂಡು ಅವರ ಹತ್ತಿರ ಹೋಗಿ ನಮಸ್ಕಾರ ಮಿಸ್ ಹೇಗಿದ್ದೀರೀ? ಎಂದಾಗ ಹೆಲ್ಮೆಟ್ ಹಾಕಿದ್ದ ನನ್ನನ್ನು ಗುರುತಿಸಲಾಗದೇ ಒಂದು ಕ್ಷಣ ಬೆಚ್ಚಿ ಬಿದ್ದರೂ ಹೆಲ್ಮೆಟ್ ತೆಗೆದ ನಂತರ ಗುರುತಿಸಿ, ಓ ಶ್ರೀಕಂಠಾ.. ಏನೋ ಇಷ್ಟು ಹೊತ್ತಿನಲ್ಲೀ? ಎಂದು ಪ್ರೀತಿಯ ಕಕ್ಕಲುತೆಯನ್ನು ತೋರಿಸಿದ್ದರು.‌ ಅರೇ ನೀವೇನು ಮೇಡಂ ಇಷ್ಟು ಹೊತ್ತಿನಲ್ಲಿ‌ ಇಲ್ಲೀ.?  ಅದೂ ಒಬ್ಬರೇ ? ಎಂದಾಗ, ಅಲ್ಲೇ ನಮ್ಮ ಮತ್ತೊಬ್ಬ ಶಿಕ್ಷಕಿ ನಾಗರತ್ನ ಮೇಡಂ ಅವರ ಮನೆಗೆ ಬಂದು ಸುಮಾರು ಹೊತ್ತಿನಿಂದಲೂ ಬಸ್ಸಿಗೆ ಕಾಯುತ್ತಿದ್ದ ವಿಷಯ ತಿಳಿಸಿದರು. ಕೂಡಲೇ ಅವರನ್ನು ಬೈಕಿನಲ್ಲಿ ಕೂರಿಸಿಕೊಂಡು ಮನೆಯವರೆಗೂ ಬಿಟ್ಟು ಹೋಗುವ ಮಾರ್ಗದ ಮಧ್ಯದಲ್ಲಿ ಎಲ್ಲರ ಬಗ್ಗೆಯೂ ಮತ್ತದೇ ಪ್ರೀತಿಯಿಂದ ವಿಚಾರಿಸಿ ಎಲ್ಲರಿಗೂ‌ ಬಾಯಿ ತುಂಬ ಹರಸಿದ್ದರು.

ವಿಜ್ಞಾನದಲ್ಲಿ ಅತೀವವಾದ ಆಸಕ್ತಿ ಇದ್ದ ಕಾರಣ, ಆಕೆ ಮುಖ್ಯೋಪಾಧ್ಯಾಯಿನಿ ಆದ ನಂತರ ಮಕ್ಕಳಿಗೆ ಕೇವಲ ಪಾಠ ಹೇಳುವುದಕ್ಕಿಂತಲೂ ಪ್ರಾಥಮಿಕ ತರಗತಿಗಳಿಂದಲೇ ಪ್ರಾಯೋಗವಾಗಿ ತೋರಿಸಿದರೆ ಹೆಚ್ಚು ಪರಿಣಾಮಕಾರಿ ಎಂದು ತಮ್ಮ ಶಾಲೆಯಲ್ಲೇ ಅನೇಕ ವಿಜ್ಞಾನದ ಕಮ್ಮಟಗಳನ್ನು ಏರ್ಪಡಿಸಿ ತಮ್ಮ ಶಾಲೆಯ ಜೊತೆಗೆ ಸರ್ಕಾರೀ ಶಾಲೆಗಳನ್ನೂ ಒಳಗೊಂಡು ನೂರಾರು ಶಾಲೆಗಳ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಮತ್ತು ಪ್ರಯೋಗಗಳಲ್ಲಿ ಆಸಕ್ತಿ ಮೂಡಿಸಿ ಮುಂದೆ ಅವರ ಶಿಷ್ಯಂದಿರು ಹೆಸರಾಂತ ಡಾಕ್ಟರ್, ಇಂಜೀನಿಯರ್, ವಿಜ್ಞಾನಿಗಳಾಗಿ ದೇಶ ವಿದೇಶದಲ್ಲಿ ಭಾರತದ ಹೆಮ್ಮೆಯನ್ನು ಪಸರಿಸುತ್ತಿರುವ ಕೀರ್ತೀಯ ಶ್ರೇಯ ವಿಮಲ ಮಿಸ್ ಅವರಿಗೂ ಸಲ್ಲುತ್ತದೆ. ನಮ್ಮ ವಿಮಲ ಮಿಸ್ ಅವರ ಈ ಸಾಧನೆಗಳನ್ನು ತಾಲ್ಲೂಕ್ ಮಟ್ಟದಲ್ಲಿ ಗುರುತಿಸಿ ಅತ್ಯುತ್ತಮ ಶಿಕ್ಷಕಿ ಎಂಬ ಪ್ರಶಸ್ತಿಯನ್ನು ಕೊಟ್ಟಿರುವುದು ಗಮನಾರ್ಹವಾಗಿದೆ.

ಸೆಪ್ಟೆಂಬರ್ 5, ಭಾರತ ದೇಶದ ಮಾಜಿ ರಾಷ್ಟ್ರಪತಿಗಳು, ಹಿರಿಯ ವಿದ್ವಾಂಸರು, ತತ್ವಜ್ಞಾನಿಗಳು ಮತ್ತು ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಅವರ ನೆನಪಿನಲ್ಲಿ ಸೆಪ್ಟೆಂಬರ್ 5ರಂದು ನಮ್ಮ ದೇಶದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹ ಶಿಕ್ಷಕರ ದಿನದಂದು ನಮಗೆ ಉತ್ತಮ ವಿದ್ಯೆಯ ಜೊತೆಗೆ ವಿನಯ ಮತ್ತು ವಿವೇಕವನ್ನು ಕಲಿಸಿಕೊಟ್ಟಿದ್ದಲ್ಲದೇ ಸಮಾಜದಲ್ಲಿ ಸ್ವಾವಲಂಭಿಗಳಾಗಿ ಮತ್ತು ಸ್ವಾಭಿಮಾನಿಗಳಾಗಿ ಬಾಳುವುದನ್ನು ಕಲಿಸಿಕೊಟ್ಟ ನಮ್ಮ ಮೆಚ್ಚಿನ ಶಿಕ್ಷಕಿಯಾದ ವಿಮಲ ಮಿಸ್ ಅವರಿಗೆ ಈ ಅಕ್ಷರಗಳ ಮೂಲಕ ನುಡಿ ನಮನಗಳನ್ನು ಸಲ್ಲಿಸಲು ಬಯಸುತ್ತೇನೆ.

WhatsApp Image 2021-09-05 at 12.22.27 AM

ನಮ್ಮ ಮನೆಯವರೆಲ್ಲಾ ಪ್ರಾಥಮಿಕ ಶಾಲೆಯನ್ನು ಮುಗಿಸಿ ಸುಮಾರು 35 ವರ್ಷಗಳೇ ಕಳೆದಿದ್ದರೂ ಇಂದಿಗೂ ನಮ್ಮ ಮತ್ತು ವಿಮಲ ಮಿಸ್ ಅವರೊಂದಿಗಿನ ಸಂಬಂಧ ಅಂದಿನಂತೆಯೇ ಇದೆ. ಅಗ್ಗಾಗ್ಗೆ ನಮ್ಮ ಕುಟುಂಬದ ಸದಸ್ಯರಲ್ಲೊಬ್ಬರು ಅವರನ್ನು ವಯಕ್ತಿಕವಾಗಿ ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದುಕೊಂಡು ಬರುವುದನ್ನು ಮುಂದುವರೆಸಿಕೊಂಡು ಹೋಗಿದ್ದೇವೆ.

WhatsApp Image 2021-09-05 at 12.23.14 AM

ಶಿಕ್ಷಕಿಯಾಗಿ ವೃತ್ತಿಯನ್ನು ಆರಂಭಿಸಿ ಕಡೆಗೆ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಹೊಂದಿ ಗಂಡ ಮಗಳು ಮತ್ತು ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರೂ, ಪ್ರತಿ ಬಾರಿ ಅವರನ್ನು ಭೇಟಿ ಯಾದಾಗಲೂ ಹೇ.. ನಿಮ್ಮ ಬ್ಯಾಚಿನ ಅವನು ಸಿಕ್ಕಿದ್ದ, ಇವಳು ಸಿಕ್ಕಿದ್ದಳು. ಅವಳು ಹೇಗಾಗಿದ್ದಾಳೇ ಗೊತ್ತಾ? ಎಂದೋ ಇಲ್ಲವೇ, ಹೇ.. ಅವನಿದ್ದಲ್ಲಾ ಅವನು ಈಗ ಹೇಗಿದ್ದಾನೇ? ಎಂದು ಇಂದಿಗೂ ತಮ್ಮ ವಿದ್ಯಾರ್ಥಿಗಳ ಬಗ್ಗೆಯೇ ತುಡಿಯುವಂತಹ ಹೃದಯವಂತೆ ನಮ್ಮ ವಿಮಲ ಮಿಸ್. ಕೇವಲ ಶೈಕ್ಷಣಿಕವಾಗಿ ಕಲಿಸಿ‌ಕೊಡುವುದಲ್ಲದೇ, ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಂತಹ ಅವರಂತಹ ಶಿಕ್ಷಕಿಯರ ಸಂಖ್ಯೆ ಆಗಣಿತವಾಗಲಿ ಮತ್ತು ಆ ಭಗವಂತ ನಮ್ಮ ವಿಮಲ ಮಿಸ್ ಅವರಿಗೆ ಆಯಸ್ಸು ಆರೋಗ್ಯ ನೀಡಿ ನೂರ್ಕಾಲ ಆನಂದಮಯವಾಗಿ ನಮ್ಮ ನಿಮ್ಮಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಶ್ರೇಯೋಭಿಲಾಶಿಗಳಾಗಿರಲಿ ಎಂದು ಆಶಿಸೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಶ್ರೀ ಗುರುಭ್ಯೋ ನಮಃ

ಸೂಟು, ಕೋಟು, ಬೂಟು, ಕುತ್ತಿಗೆಯಲ್ಲಿ ಟೈ.‌ಅದಕ್ಕೆ ಮಿರಿ‌ಮಿರಿ ಮಿಂಚುವ ಟೈ ಪಿನ್, ತೆಲೆಯ ಮೇಲೊಂದು ಮೈಸೂರು ಪೇಟ, ಹಣೆಯಲ್ಲಿ ಕೆಂಪನೆಯ ಉದ್ದನೆಯ ನಾಮ, ಕಣ್ಣಿಗೆ ಅಗಲವಾದ ಕನ್ನಡಕ, ನೋಡಲು ಕುಳ್ಳಗಿರುವ ವ್ಯಕ್ತಿಯೊಬ್ಬರು ತಮಗಿಂತಲೂ ಎತ್ತರವಿದ್ದ ಸೈಕಲ್ಲನ್ನು ತುಳಿದುಕೊಂಡು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುತ್ತಿದ್ದರು. ಹೊರಗಿನಿಂದ ನೋಡಿದರೆ ಬಾರೀ ಶಿಸ್ತಿನ ಕೋಪಿಷ್ಟ ಎನ್ನುವಂತೆ ಕಾಣಿಸಿಕೊಂಡರೂ, ಸ್ವಲ್ಪ ಹೊತ್ತು ಮಾತನಾಡಿಸಿದರೆ ಅವರಷ್ಟು ಮೃದು ಸ್ವಭಾವದ ವ್ಯಕ್ತಿ ಮತ್ತೊಬ್ಬರು ಇರಲಿಕ್ಕಿಲ್ಲ ಎಂದೆಸುವಂತಹ ವ್ಯಕ್ತಿತ್ವ.

ಬಹುಶಃ ಎಪ್ಪತ್ತು, ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಬಿಇಎಲ್ ಪ್ರೌಢಶಾಲೆಯಲ್ಲಿ ಓದಿದವರು ಯಾರಾದರೂ ಈ ಲೇಖನವನ್ನು ಓದುತ್ತಿದ್ದಂತೆಯೇ ನಾನು ಯಾರ ಬಗ್ಗೆ ವಿವರಿಸುತ್ತಿದ್ದೇನೆ ಎಂದು ಅವರಿಗೆ ಥಟ್ ಅಂತ ತಿಳಿದು ಬಿಡುತ್ತದೆ. ಹೌದು ಇವತ್ತು ಸೆಪ್ಟಂಬರ್ 5ನೇ ತಾರೀಖು ಶಿಕ್ಷಕರ ದಿನಾಚರಣೆ. ಹಾಗಾಗಿ ನಾನು ನಮ್ಮ ಆತ್ಮೀಯರು ಹಾಗೂ ನೆಚ್ಚಿನ ಗುರುಗಳಾಗಿದ್ದ ದಿವಂಗತ ಶ್ರೀ ಕೆ. ಎಲ್. ಅನಂತನಾರಾಯಣ್ ಅರ್ಥಾತ್ ನಮ್ಮೆಲ್ಲರ ಪ್ರೀತಿಯ ಕೆ.ಎಲ್.ಎ. ಮೇಷ್ಟ್ರರನ್ನು ಎಲ್ಲರಿಗೂ ಪರಿಚಯಿಸುವ ಪ್ರಯತ್ನ.

ಅಪ್ಪ ಬಿ.ಇ.ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ನಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕಾಲೇಜು ವಿದ್ಯಾಭ್ಯಾಸವೆಲ್ಲವೂ ನಡೆದದ್ದು ಬಿಇಎಲ್ ವಿದ್ಯಾಸಂಸ್ಥೆಯಲ್ಲಿಯೇ. ಶಾಲೆಯ ಆಡಳಿತದ ನಿಯಂತ್ರಣವೆಲ್ಲವೂ ಕಾರ್ಖಾನೆಯ ಸುಪರ್ದಿಯಲ್ಲಿದ್ದ ಕಾರಣ ಎಲ್ಲವೂ ಕಾರ್ಖಾನೆಯಂತೆಯೇ ಶಿಸ್ತಿನಿಂದಲೇ ನಡೆಯುತ್ತಿತ್ತು. ಕಾರ್ಖಾನೆಯ ಸಿಬ್ಬಂಧಿ ವರ್ಗಕ್ಕೆ ಸಿಗುತ್ತಿದ ವಾಹನ ಸೌಕರ್ಯ, ಕಾಲೋನಿ, ಕ್ಯಾಂಟೀನ್ ಎಲ್ಲವೂ ನಮ್ಮ ಶಾಲೆಯ ಸಿಬ್ಬಂಧಿ ವರ್ಗಲ್ಲೂ ಲಭ್ಯವಾಗಿ ನಮ್ಮ ಶಾಲಾ ಕಟ್ಟಡವೂ ಆಗಿನ ಕಾಲದಲ್ಲಿಯೇ ಅದ್ದೂರಿಯಾಗಿತ್ತು.

ಇಂತಹ ಶಾಲೆಯ ತುಂಬಾ ಹಿರಿಯ ಮತ್ತು ನುರಿತ ಶಿಕ್ಷಕ ವೃಂದದವರೇ ಇದ್ದರೂ ತಮ್ಮ ಉಡುಗೆ ತೊಡುಗೆ, ಅಚಾರ, ವಿಚಾರ ಮತ್ತು ಶಿಸ್ತಿನ ಕಾರಣದಿಂದಾಗಿ ಕೆ.ಎಲ್.ಎ ಸರ್ ಇತರೇ ಶಿಕ್ಷರಿಗಿಂತಲೂ ವಿಭಿನ್ನವಾಗಿ ಮತ್ತು ವೈಶಿಷ್ಟ್ಯವಾಗಿ ಎಲ್ಲರ ಮನಸ್ಸನ್ನು ಸೆಳೆಯುತ್ತಿದ್ದರು ಎಂದರೆ ತಪ್ಪಾಗಲಾರದು. ನಾವು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಅವರ ಬಗ್ಗೆ ಕೇಳಿದ್ದ ಕಾರಣ ಅವರ ಮೇಲೆ ಬಹಳ ಪೂಜ್ಯ ಭಾವನೆ ಮೂಡಿತ್ತು.

ಎಂಟು ಮತ್ತು ಒಂಭತ್ತನೇ ತರಗತಿಯಲ್ಲಿ ನಮಗೆ ಅವರ ಪಾಠ ಕೇಳಲು ಸಾದ್ಯವಾಗಿರಲಿಲ್ಲ. ಆದರೆ ನಮ್ಮ ಸುಕೃತವೋ ಎನ್ನುವಂತೆ ಹತ್ತನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ಈ ಮೂರಕ್ಕೂ ನಮಗೆ ಕೆ.ಎಲ್.ಎ ಅವರೇ ನಿಯುಕ್ತರಾದಾಗ ನಮಗೆಲ್ಲಾ ಒಂದು ಕಡೆ ಸಂತೋಷವಾದರೇ, ಅವರ ಶಿಸ್ತು ಮತ್ತು ಕೋಪ ಕೇಳಿ ಮನಸ್ಸೊಳಗೇ ಅಳುಕೂ ಇತ್ತು. ಆದರೆ ನಮ್ಮ ತರಗತಿಗೆ ಬಂದ ಮೊದಲನೇ ದಿನವೇ ನಮ್ಮೆಲ್ಲರನ್ನೂ ಅವರು ಪರಿಚಯ ಮಾಡಿಕೊಂಡ ರೀತಿ ಅವರು ಪಾಠ ಮಾಡುವ ಮುನ್ನ ಮಾಡಿಕೊಳ್ಳುತ್ತಿದ್ದ ತಯಾರಿ ಮತ್ತು ಅವರು ಪಾಠವನ್ನು ಆರಂಭಿಸಿದ ರೀತಿ ನಮ್ಮೆಲ್ಲರನ್ನೂ ದಂಗು ಬಡಿಸಿತ್ತು. ಮೂರು ವಿಷಯಗಳನ್ನು ಹೇಳಿಕೊಡುತ್ತಿದ್ದ ಕಾರಣ ದಿನದಲ್ಲಿ ಎರಡರಿಂದ ಮೂರು ತರಗತಿಗಳು ಅವರದ್ದೇ ಇರುತ್ತಿದ್ದ ಕಾರಣ ಅವರನ್ನೇ ಕ್ಲಾಸ್ ಟೀಚರ್ ಗಿಂತಲೂ ಬಹಳ ಹೆಚ್ಚಾಗಿ ಹಚ್ಚಿಕೊಂಡಿದ್ದೆವು. ಬೇರೆಲ್ಲಾ ಶಿಕ್ಷಕರು ಸ್ಟಾಫ್ ರೂಮಿನಲ್ಲಿ ಕುಳಿತು ಕೊಳ್ಳುತ್ತಿದ್ದರೆ ಇವರು ಮಾತ್ರಾ ನಮ್ಮ ತರಗತಿಯ ಪಕ್ಕದಲ್ಲಿಯೇ ಇದ್ದ ಭೌತಶಾಸ್ತ್ರದ ಪ್ರಾಯೋಗಿಕ ಕೊಠಡಿಯಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ಹಾಗಾಗಿ ಬೆಲ್ ಹೊಡೆದ ಕೆಲವೇ ಕೆಲವು ಕ್ಷಣಗಳಲ್ಲಿ ನಮ್ಮ ತರಗತಿಯಲ್ಲಿ ಹಾಜರಾಗಿ ತಮ್ಮ ಕೋಟಿನಲ್ಲಿ ಇರುತ್ತಿದ್ದ ಮೂರ್ನಾಲ್ಕು ಪೆನ್ಗಳಲ್ಲಿ ಹಸಿರು ಇಂಕಿನ ಪೆನ್ ತೆಗೆದುಕೊಂಡು ಹಿಂದಿನ ದಿನ ಕೊಟ್ಟ ಮನೆಗೆಲಸವನ್ನು ನೋಡಿ ಅದಕ್ಕೆ ಹಸ್ತಾಕ್ಷಾರವನ್ನು ಹಾಕುವುದು ಅವರ ಆಭ್ಯಾಸ. ಅವರು ಪ್ರತಿಯೊಬ್ಬರ ಮೆನೆಗೆಲಸವನ್ನು ಖುದ್ದಾಗಿ ನೋಡುತ್ತಿದ್ದ ಕಾರಣ ಯಾವ ವಿದ್ಯಾರ್ಥಿಯೂ ಮನೆಗೆಲಸವನ್ನು ಪೂರ್ಣಗೊಳಿಸದೇ ಅವರ ತರಗತಿಗೆ ಬರುತ್ತಿರಲಿಲ್ಲ. ಇನ್ನು ಅವರು ನಮ್ಮ ಬಳಿಗೆ ಬಂದಾಗ ಅವರ ಕೋಟಿನಿಂದ ಬರುತ್ತಿದ್ದ ಸೆಂಟಿನ ವಾಸನೆ ನಮಗೆಲ್ಲರಿಗೂ ಅಪ್ಯಾಯಮಾನವಾಗುತ್ತಿತ್ತು. ಹಿಂದಿನ ದಿನ ಮಾಡಿದ ಪಾಠವನ್ನು ಒಮ್ಮೆ ಪುನರ್ಮನನ ಮಾಡಿ, ಒಮ್ಮೆ ಸೊರ್ ಎಂದು ಜೋರಾಗಿ ಎಂಜಿಲನ್ನು ನುಂಗಿಕೊಂಡು ಅಂದಿನ ಪಾಠವನ್ನು ಮಾಡಲು ಆರಂಭಿಸಿದರೆಂದರೆ ನಿರರ್ಗಳವಾಗಿ ತಮ್ಮ ಅಷ್ಟೂ ವರ್ಷದ ಆನುಭವವನ್ನು ತಮ್ಮ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದರು.

ಬೇರೆಲ್ಲಾ ಶಿಕ್ಷಕರಂತೆ ನೋಟ್ಸ್ ಕೊಡುವುದರಲ್ಲಿ ಅವರು ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿರಲಿಲ್ಲ. ಇಂದಿನಂತೆ ಆಗೆಲ್ಲಾ ಝೆರಾಕ್ಸ್ ಅಷ್ಟೋಂದು ಪ್ರಚಲಿತವಿಲ್ಲದಿದ್ದ ಕಾರಣ, ತಮ್ಮ ಮುದ್ದಾದ ಹಸ್ತಾಕ್ಷರದಲ್ಲಿ ನೋಟ್ಸ್ ಬರೆದು ಅದನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಲಚ್ಚು ಮಾಡಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಹಂಚುತ್ತಿದ್ದ ಪುಣ್ಯಾತ್ಮರು ನಮ್ಮ ಕೆ.ಎಲ್.ಎ. ಮೌಖಿಕ ಪಾಠಕಿಂತ ಪ್ರಾಯೋಗಿಕ ಪಾಠಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರಿಂದ ಕೆಲವೊಮ್ಮೆ ತರಗತಿಯಲ್ಲಿಯೇ ಇಲ್ಲವೇ ಹಲವು ಬಾರಿ ಎಲ್ಲರನ್ನೂ ಲ್ಯಾಬ್ ಗೆ ಕರೆದುಕೊಂಡು ಪ್ರತಿಯೊಂದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುವ ಮೂಲಕ ಪಾಠವು ಎಲ್ಲರಿಗೂ ಮನದಟ್ಟಾಗುವಂತೆ ಮಾಡುತ್ತಿದ್ದರು. ಇನ್ನು ಗಣಿತದಲ್ಲಿನ ಸೂತ್ರಗಳನ್ನು ಮತ್ತು ಪ್ರಮೇಯಗಳನ್ನು ಎಲ್ಲರಿಗೂ ಹೇಗೆ ಕಂಠ ಪಾಠ ಮಾಡಿಸುತ್ತಿದ್ದರು ಎಂದರೆ, ನಿದ್ದೆಯಲ್ಲಿ ಎಬ್ಬಿಸಿ ಕೇಳಿದರೂ ( a + b ) 2 = a 2 + b 2 + 2 a b ಎಂದೋ ಪೈಥಾಗೋರೆಸ್ ಪ್ರಮೇಯವಾದ AC2= AB2=BC2 ಎಂದು ಥಟ್ ಅಂತಾ ಹೇಳುವಷ್ಟು ತಯಾರು ಮಾಡಿಸುತ್ತಿದ್ದದ್ದು ಅವರ ವಿಶೇಷತೆ.

ಪರೀಕ್ಷೆ ಸಮಯದಲ್ಲಿ ಇನ್ನೂ ಪೂರ್ಣ ಪ್ರಮಾಣದ ಪಾಠಗಳು ಆಗಿಲ್ಲದಿದ್ದಲ್ಲಿ ತರಗತಿಯ ನಂತರವೋ ಅಥವಾ ಶನಿವಾರ ಮಧ್ಯಾಹ್ನ ಇಲ್ಲವೇ ಭಾನುವಾರಗಳಂದು ವಿಶೇಷ ತರಗತಿಗಳನ್ನು ತೆಗೆದುಕೊಂಡು ಸರಿಯಾದ ಸಮಯಕ್ಕೆ ಪಾಠವನ್ನು ಮುಗಿಸುತ್ತಿದ್ದರು. ಹಾಗೆ ಹೆಚ್ಚಿನ ಆವಧಿಯ ಪಾಠ ಮಾಡುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿಗಳೆಲ್ಲರಿಗೂ ತಮ್ಮ ಖರ್ಚಿನಲ್ಲಿ ಬ್ರೆಡ್, ಬನ್, ಕಪ್ ಕೇಕ್ ಇಲ್ಲವೇ ಬಾಳೇ ಹಣ್ಣುಗಳನ್ನು ತರಿಸಿಕೊಡುತ್ತಿದ್ದಂತಹ ಮಹಾನುಭಾವರು ಅವರು.

ಕಾಲೇಜ್ ಮುಗಿಸುವವರೆಗೂ ನಾನು ಬಹಳ ಕುಳ್ಳಗಿದ್ದ ಕಾರಣ ಸದಾಕಾಲವೂ ಮೊದಲನೇ ಬೆಂಚಿನ ಮೊದಲನೇ ವಿದ್ಯಾರ್ಥಿಯಾಗಿಯೇ ಕುಳುತುಕೊಳ್ಳುತ್ತಿದ್ದರಿಂದ ಮತ್ತು ಸ್ವಲ್ಪ ಚುರುಕಾಗಿದ್ದ ಕಾರಣ, ಬಹುತೇಕ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗುತ್ತಿದ್ದೆ ಅದೇ ರೀತಿ ನಮ್ಮ ಕೆ.ಎಲ್.ಎ ಅವರ ಗಮನವನ್ನು ಸೆಳೆದಿದ್ದೆ. ಅದೊಂದು ದಿನ ಮಧ್ಯಾಹ್ನ ನಮ್ಮ ಪ್ರಾಂಶುಪಾಲರು ಮಾರನೆಯ ದಿನ ಅಂದಿನ ಕೇಂದ್ರ ಸಚಿವ ಶ್ರೀ ಸುಖ್ ರಾಂ ಅವರು ನಮ್ಮ ಶಾಲೆಗೆ ಬರುತ್ತಾರೆ ಎಂದು ತಿಳಿಸಿ ಅದಕ್ಕೆ ಬೇಕಾದಂತಹ ವ್ಯವಸ್ಥೆಗಳನ್ನು ಮತ್ತು ಅಲ್ಪ ಸ್ವಲ್ಪ ಅಲಂಕಾರಗಳನ್ನು ಮಾಡಲು ಕೆ.ಎಲ್.ಎ ಮೇಷ್ಟ್ರಿಗೆ ಹೇಳಿದ ಕಾರಣ, ನನ್ನನ್ನೂ ಮತ್ತು ಇನ್ನೂ ಒಂದೆರಡು ಎತ್ತರವಾಗಿದ್ದ ಹುಡುಗರನ್ನು ಕರೆದು ಶಾಲಾ ಸಮಯದ ನಂತರ ಅವರೊಂದಿಗೆ ಸಹಾಯ ಮಾಡಲು ತಿಳಿಸಿದರು. ಶಾಲೆ ಮುಗಿದ ನಂತರ ನಾನು ಮನೆಗೆ ಸ್ವಲ್ಪ ತಡವಾಗಿ ಬರವುದಾಗಿ ನಮ್ಮ ಗೆಳೆಯನಿಗೆ ನಮ್ಮ ಮನೆಯಲ್ಲಿ ತಿಳಿಸಲು ಕೋರಿ ಕೆ.ಎಲ್.ಎ ಮೇಷ್ಟ್ರ ಸಹಾಯಕ್ಕೆ ಟೊಂಕ ಕಟ್ಟಿ ನಿಂತೆವು. ಪ್ರತಿಯೊಂದರಲ್ಲೂ ಮಿಸ್ಟರ್ ಪರ್ಫೆಕ್ಟ್ ಆಗಿದ್ದ ನಮ್ಮ ಮೇಷ್ಟು ನಿಧಾನವಾಗಿ ಎಲ್ಲವನ್ನೂ ಅಚ್ಚು ಕಟ್ಟಾಗಿ ಮಾಡುತ್ತಿದ್ದ ಕಾರಣ ಸಂಜೆ ಏಳು ಗಂಟೆಯಾದರೂ ನಮ್ಮ ಕೆಲಸ ಮುಂದುವರೆಯುತ್ತಿತ್ತು. ಇಂದಿನಂತೆ ಫೋನ್ ಅಥವಾ ಮೊಬೈಲ್ ಇಲ್ಲದಿದ್ದ ಕಾರಣ, ಗಂಟೆ ಏಳಾದರೂ ಮಗ ಮನೆಗೆ ಬಂದಿಲ್ಲ ಎಂದು ಸೈಕಲ್ಲನ್ನು ಏರಿ ನನ್ನನ್ನು ಹುಡುಕಿಕೊಂಡು ನಮ್ಮ ಶಾಲೆಗೇ ಬಂದೇ ಬಿಟ್ಟರು ನಮ್ಮ ತಂದೆ.

ಶಾಲೆಯ ಮುಂಭಾಗದ ಅಲಂಕಾರದಲ್ಲಿ ನಿರತರಾಗಿದ್ದ ನಮ್ಮೆಲ್ಲರನ್ನೂ ನೋಡಿ ನಿರಾಳರಾಗಿ ಹಾಗೇ ನಮ್ಮ ಗುರುಗಳ ಬಳಿ ತಮ್ಮ ಪರಿಚಯ ಮಾಡಿಕೊಂಡು ಮಾತನ್ನು ಮುಂದುವರೆಸುತ್ತಾ ಅದೇಕೋ ನಮ್ಮ ಊರು ಬಾಳಗಂಚಿಯ ಪ್ರಸ್ತಾಪವಾಗಿದ್ದೇ ತಡ ನಮ್ಮ ಗುರುಗಳು ನಿಮಗೆ ಬಾಳಗಂಚಿ ಗಮಕಿ ನಂಜುಂಡಯ್ಯರು ಗೊತ್ತೇ? ಎಂದು ಕೇಳಿದ್ದಾರೆ. ಅವರ ಮೊಮ್ಮಗನೇ ನಿಮ್ಮ ಶಿಷ್ಯ ಎಂದು ನಮ್ಮ ತಂದೆಯವರು ಹೇಳಿದ್ದನ್ನು ಕೇಳಿ ಬಹಳ ಸಂತೋಷ ಪಟ್ಟರು. ಮಾರನೆಯ ದಿನ ತರಗತಿಗೆ ಬಂದಿದ್ದೇ ತಡಾ, ಏನೂ ಬಾಳಗಂಚೀ.. ಹೇಗಿದ್ದೀಯಾ.. ಎಂದು ರಾಗವಾಗಿ ಕರೆದು ಅಲ್ಲಿಯವರೆಗೂ ನಮ್ಮ ಊರಿನ ಹೆಸರನ್ನೇ ಅರಿಯದ ಇಡೀ ನಮ್ಮ ತರಗತಿಯವರಿಗೆ ನಮ್ಮೂರನ್ನು ಪರಿಚಯಿಸಿದ್ದಲ್ಲದೇ, ನಾನು ಇವರ ತಾತ ಶ್ರೀ ಗಮಕಿ ನಂಜುಂಡಯ್ಯನವರ ಶಿಷ್ಯ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ನಾನು ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದೇನೆ ಅವರ ಅನೇಕ ಕೀರ್ತನೆಗಳನ್ನು ಕಲಿತಿದ್ದೇನೆ. ಎಂದು ಹೇಳಿ ಅವತ್ತಿನ ದಿನ ಇಡೀ ತರಗತಿಯಲ್ಲಿ ಹೀರೋ ಆಗಿ ಮೆರೆಯುವಂತೆ ಮಾಡಿದ್ದಲ್ಲದೇ, ಅಂದಿನಿಂದ ಅಲಿಖಿತವಾಗಿ ಅವರ ಪಟ್ಟ ಶಿಷ್ಯನಾಗಿ ಬಿಟ್ಟೆ. ಅದಲ್ಲದೇ ನನ್ನ ತಂಗಿಯ ತರಗತಿಯಲ್ಲಿ ಗಣಿತ ಹೇಳಿಕೊಡಲು ಹೋದಾಗ ಅಲ್ಲಿಯೂ ಇದೇ ವಿಷಯವನ್ನು ಪ್ರಸ್ತಾಪಿಸಿ, ನಮ್ಮ ತಾತನವರ ಒಂದೆರಡು ಹಾಡುಗಳನ್ನು ನನ್ನ ತಂಗಿಯೊಂದಿಗೆ ಹಾಡಿಯೂ ತೋರಿಸಿದ್ದರು.

ಹೈಸ್ಕೂಲ್ ಮೇಷ್ಟ್ರಾಗಿದ್ದರೂ ಕಾಲೇಜ್ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ಪಾಠವನ್ನು ತಮ್ಮ ಮನೆಯಲ್ಲಿ ಹೇಳಿಕೊಡುತ್ತಿದ್ದರು. ಮುಂಜಾನೆ ಹೈಸ್ಕೂಲ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರೆ, ರಾತ್ರಿ ಏಳರ ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಪಾಠ ಹೇಳಿಕೊಡಲು ತಿಂಗಳಿಗೆ 20-30 ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದ ಅವರು ಅದನ್ನೂ ಕೊಡಲು ಕಷ್ಟ ಇದ್ದವರಿಗೆ ಉಚಿತವಾಗಿಯೂ ಹೇಳಿಕೊಟ್ಟಿದ್ದು ಉಂಟು. ಈ ರೀತಿಯಾಗಿ ಮನೆ ಪಾಠದಿಂದ ಸಂಗ್ರಹಿಸಿದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಅನಾಥಾಶ್ರಮಕ್ಕೆ ದಾನ ನೀಡುತ್ತಿದ್ದದ್ದು ಬಹಳ ವಿಶೇಷವಾಗಿತ್ತು.

ಸರಿ ಸುಮಾರು ತಮ್ಮ ಐವತ್ತೈದು ವರ್ಷಗಳವರೆಗೂ ತಮಗಿಂತಲೂ ಎತ್ತರವಾದ ಸೈಕಲ್ಲಿನಲ್ಲಿಯೇ ಓಡಾಡುತ್ತಿದ್ದದ್ದು ವಿಶೇಷ. (ನಿವೃತ್ತಿಯ ಅಂಚಿನಲ್ಲಿ ಟಿವಿಎಸ್-50ಗೆ ಭಡ್ತಿ ಹೊಂದಿದ್ದರು) ಅಷ್ಟು ಬಳಸಿದ್ದ ಅವರ ಸೈಕಲ್ ನಿಜಕ್ಕೂ ಅತ್ಯುತ್ತಮವಾದ ಸುಸ್ಥಿತಿಯಲ್ಲಿ ಇಡುತ್ತಿದ್ದದ್ದಲ್ಲದೇ ಅವರಲ್ಲದೇ ಅದನ್ನು ಯಾರಿಂದಲೂ ಮುಟ್ಟಿಸುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಮನೆಯಿಂದ ಮಧ್ಯಾಹ್ನದ ಊಟ ತರಲು ಯಾರನ್ನಾದರೂ ಕಳುಹಿಸುತ್ತಿದ್ದರು. ಅಂತಹ ಸೌಭಾಗ್ಯ ಕೆಲವು ಬಾರಿ ನನಗೆ ದೊರೆತು ಆ ಮೂಲಕ ಅವರ ನಯವಾದ ಸೈಕಲ್ ಸವಾರಿ ಮಾಡುವಂತಾಗಿತ್ತು.

ದಸರ ಹಬ್ಬ ಬಂದಿತೆಂದರೆ ನಮ್ಮ ಕೆ.ಎಲ್.ಎ ಅವರ ಮನೆಯಲ್ಲಿ ಸಂಭಮವೋ ಸಂಭ್ರಮ. ವಿಭಕ್ತ ಕುಟುಂಬದಲ್ಲಿ ತಾಯಿ, ತಮ್ಮಂದಿರು ಮತ್ತು ತಂಗಿಯರೊಡನೆ ಬಹಳ ಸಂಪ್ರದಾಯಸ್ಥ ಕುಟುದವರಾಗಿದ್ದು ಅವರ ಮನೆಯಲ್ಲಿ ಇಡುತ್ತಿದ್ದ ಹತ್ತಾರು ಸಾಲಿನ ಗೊಂಬೆಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಬಣ್ಣ ಬಣ್ಣದ ಮೈಸೂರು ಅರಸರ ಗೊಂಬೆಗಳು ಅದಕ್ಕೆ ಬಣ್ಣ ಬಣ್ಣದ ಪೇಪರಿನಲ್ಲಿ ಮಾಡುತ್ತಿದ್ದ ಅಲಂಕಾರ, ಸೀರಿಯಲ್ ಸೆಟ್ ಹಾಕಿ ಜಗ ಮಗ ಎಂದು ಹೊಳೆಯುವಂತೆ ಮಾಡುತ್ತಿದ್ದದ್ದಲ್ಲದೇ, ಅಷ್ಟೂ ದಿನಗಳು ತಮ್ಮ ಮನೆಗೆ ಪಾಠಕ್ಕೆ ಬರುತ್ತಿದ್ದ ಹುಡುಗರಿಗೆ ಬೊಂಬೇ ಬಾಗಿಣವನ್ನು ಕೊಡುತ್ತಿದ್ದರು.

ಶಾಲೆಯಿಂದ ನಿವೃತ್ತಿ ಹೊಂದಿದ ಮೇಲೆ ನಮ್ಮ ಮನೆಯ ಹತ್ತಿರವೇ ಅವರು ಮನೆಕಟ್ಟಿ ಕೊಂಡು ಬಂದ ಮೇಲಂತೂ ನಮ್ಮ ಅವರ ಗುರು ಶಿಷ್ಯ ಮಧುರ ಬಾಂಧವ್ಯ ಮತ್ತಷ್ಟು ಮುಂದುವರೆದು ದಸರಾ ಮತ್ತು ಗೋಕುಲಾಷ್ಟಮಿಗೆ ನಾವು ಅವರ ಮನೆಗೆ ಹೋಗುತ್ತಿದ್ದರೆ, ಗೌರೀ ಗಣೇಶ ಹಬ್ಬ ಮತ್ತು ಉಳಿದ ಹಬ್ಬಗಳಲ್ಲಿ ಅವರ ಮನೆಯವರು ನಮ್ಮ ಮನೆಗೆ ಬಂದು ಹೋಗುವುದು ರೂಡಿಯಲ್ಲಿತ್ತು.

ನಿವೃತ್ತಿಯಾದ ನಂತರ ತಮ್ಮ ಸೂಟು ಬೂಟಿಗೆ ತಿಲಾಂಜಲಿ ನೀಡಿ ಕಚ್ಚೇ ಪಂಜೆ ಉದ್ದ ತೋಳಿನ ಬೀಳೀ ಶರ್ಟು ಹಣೆಯಲ್ಲಿ ಉದ್ದದ ನಾಮ ರಾರಾಜಿಸುತ್ತಿತ್ತು, ಎಲ್ಲೇ ಸಿಕ್ಕಾಗಲೂ ನಿಂತು ಏನೂ ಬಾಳಗಂಚೀ.. ಹೇಗಿದ್ದೀಯಾ… ಎಂದು ಅದೇ ಅಕ್ಕರೆಯಿಂದಲೇ ಬಾಯಿ ತುಂಬಾ ಮಾತನಾಡಿಸಿ ಮನೆಯವರೆಲ್ಲರ ಕುಶಲೋಪರಿಯನ್ನು ವಿಚಾರಿಸುತ್ತಿದ್ದರು.

ಮನೆ ಪಾಠದಲ್ಲಿಯೇ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಾ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಾ ಅಕ್ಕರೆಯಿಂದ ಪಾಠ ಹೇಳಿಕೊಟ್ಟಂತಹ ನಮ್ಮ ಕೆ.ಎಲ್.ಎ ಮಾಸ್ಟರ್ ಅವರು ಅತ್ಯಂತ ವಿಭಿನ್ನವಾಗಿ ಮತ್ತು ವಿಶಿಷ್ಠವಾಗಿ ಎದ್ದು ಕಾಣುತ್ತಾರೆ. ನಿಸ್ವಾರ್ಥವಾಗಿ ಅಕ್ಕರೆಯಿಂದ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಧಾರೆಯನ್ನು ಎರೆದಂತಹ ಆ ಮಹಾನ್ ಚೇತನವನ್ನು ಶಿಕ್ಷಕರ ದಿನಾಚರಣೆಯ ದಿನಂದಂದು ಹೃತ್ಪೂರ್ವಕವಾಗಿ ನೆನೆಸಿ ಕೊಳ್ಳುತ್ತಾ ಈ ನುಡಿ ನಮನಗಳನ್ನು ಸಲ್ಲಿಸಲು ಇಚ್ಚಿಸುತ್ತಿದ್ದೇನೆ.
ಇಂದು ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರಿಂದ ಶಿಕ್ಷಣ ಕಲಿತ ನನ್ನಂತಹ ಸಾವಿರಾರು ಶಿಷ್ಯಂದಿರ ಮುಖಾಂತರ ದೇಶ ವಿದೇಶಗಳಲ್ಲಿ ಅವರು ಕಲಿಸಿಕೊಟ್ಟ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಅವರಿನ್ನೂ ಎಲ್ಲರ ಮನಗಳಲ್ಲಿ ಜೀವಂತವಾಗಿಯೇ ಇದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇಂತಹ ಶಿಕ್ಷಕರ ಸಂಖ್ಯೆ ಅಗಣಿತವಾಗಿ ನಮ್ಮ ಮುಂದಿನ ಪೀಳಿಗೆಯವರಿಗೂ ಉತ್ತಮ ಶಿಕ್ಷಣ ದೊರೆತು ಸಮಾಜದಲ್ಲಿ ಸತ್ಪ್ರಜೆಯಾಗುವಂತಾಗಲೀ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಏನಂತೀರೀ?