ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು 53ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ ನಡೆದ ಸುಂದರ ಮದುವೆಯೊಂದರ ಚಿತ್ರಣ ಇದೋ ನಿಮಗಾಗಿ

appa

ಸರಿ ಸುಮಾರು 1969ನೇ ಇಸ್ವಿ, ಹಾಸನ ಮೂಲದ ಗಮಕಿಗಳು ಮತ್ತು ಖ್ಯಾತ ಹರಿಕಥಾ ವಿದ್ವಾಂಸರೊಬ್ಬರು ಅಂದಿನ ದಿನಗಳಲ್ಲೇ ಸಾಕಷ್ಟು ಪ್ರಖ್ಯಾತವಾಗಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಅದಾಗ ತಾನೇ ಉದ್ಯೋಗಿಯಾಗಿದ್ದ ತಮ್ಮ ಜೇಷ್ಠ ಪುತ್ರನಿಗೆ ವಧುವನ್ನು ಹುಡುಕುತ್ತಿರುತ್ತಾರೆ. ಹಲವಾರು ಕಡೆ ನಾನಾ ರೀತಿಯ ಕೆಲಗಳನ್ನು ಮಾಡಿ ಕಟ್ಟ ಕಡೆಯದಾಗಿ ಬಿಇಎಲ್ ಕಾರ್ಖಾನೆಗೆ ಸೇರಿಕೊಂಡಿದ್ದ ಅವರ ಮಗನಿಗೆ ಅದಾಗಲೇ ವಯಸ್ಸು ಮೂವತ್ತು ದಾಟಿರುತ್ತದೆ.

amma

ಇನ್ನು ಮೂಲತಃ ಬೆಳ್ಳೂರಿನವರಾದರೂ, ತಮ್ಮ ತಂದೆ ತಾಯಿಯವರ ಕಾಲವಾದ ನಂತರ ಸೋದರತ್ತೆಯ ಆಶ್ರಯದಲ್ಲಿ ಬೆಳೆದು, ಕರ್ನಾಟಕದಿಂದ ಅಂದಿನಕಾಲದಲ್ಲೇ ಉತ್ತರ ಪ್ರದೇಶದ ವಾರಣಾಸಿಗೆ (ಕಾಶೀ) ಹೋಗಿ ಅಲ್ಲಿ ವಿದ್ಯಾಭ್ಯಾಸ ಮಾಡಿಕೊಂದು ಕೆಲಸವನ್ನು ಅರೆಸುತ್ತಾ, ಕೋಲಾರದ ಚಿನ್ನದ ಗಣಿಯಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆದಿದ್ದಂತಹ ಹಿರಿಯರೊಬ್ಬರು, ಮೆಟ್ರಿಕ್ಯುಲೇಷನ್ ವರೆಗೂ ಓದಿ, ತಕ್ಕ ಮಟ್ಟಿಗೆ ಹಾಡು, ಹಸೆ, ಅಡಿಗೆ ಕಲಸಗಳನ್ನು ಕಲಿತಿದ್ದ ಅತ್ಯಂತ ರೂಪವತಿ ಮತ್ತು ಬಹುಭಾಷೆ ಪಂಡಿತೆಯಾಗಿದ್ದ ತಮ್ಮ ಮುದ್ದಿನ ಜೇಷ್ಠಪುತ್ರಿಗೂ ಒಳ್ಳೆಯ ಸಂಬಂಧ ಹುಡುಕುತ್ತಿರುತ್ತಾರೆ.

ಒಂದು ಗಂಡಿಗೆ ಒಂದು ಹೆಣ್ಣು ಎಂದು ಸೃಷ್ಟಿ ಕರ್ತ ಬ್ರಹ್ಮ ಹುಟ್ಟಿಸುವಾಗಲೇ ನಿರ್ಧರಿಸಿರುತ್ತಾನಂತೆ ಎಂಬಂತೆ ಮದುವೆ ಎಂಬುದು ಸ್ವರ್ಗದಲ್ಲಿಯೇ ನಿರ್ಧಾರಿವಾಗಿ ಇಲ್ಲಿ ಗಂಡು ಹೆಣ್ಣು ಹುಡುಕುವುದು ನೆಪ ಮಾತ್ರ ಎನ್ನುವಂತೆ ಅದೊಮ್ಮೆ ಗಮಕಿಗಳು ತಮ್ಮ ಕಾರ್ಯಕ್ರಮವೊಂದನ್ನು ನಡೆಸಿಕೊಡುವ ಸಲುವಾಗಿ ಬೆಂಗಳೂರಿನ ಮಲ್ಲೇಶ್ವರದ ಪೈಪ್ ಲೈನ್ ರಸ್ತೆಯ ಆರಂಭದಲ್ಲೇ ಇರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆ ಕಾರ್ಯಕ್ರಮವನ್ನು ಕೇಳಲು ಬಂದಿದ್ದಂತಹ ಸ್ಥಳೀಯರೊಬ್ಬರು ಕಾರ್ಯಕ್ರಮ ಮುಗಿದ ನಂತರ ಗಮಕಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಾ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಿದ್ದಂತಹ ಸಂಧರ್ಭದಲ್ಲೇ, ಎಲ್ಲಿ ಉಳಿದುಕೊಂಡಿದ್ದೀರೀ? ಎಂದು ವಿಚಾರಿಸಿದಾಗ, ಇಲ್ಲೇ ನನ್ನ ಮಗನ ಮನೆಯಲ್ಲಿ ಉಳಿದುಕೊಂಡಿದ್ದೇವೆ. ಮಗನಿಗೂ ಮದುವೆಯ ವಯಸ್ಸಾಗಿದ್ದು ಹುಡುಗಿ ಹುಡುಕುತ್ತಿದ್ದೇವೆ ಎಂದಾಗ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಅಯ್ಯೋ ನನ್ನ ಮೊಮ್ಮಗಳಿಗೂ ಗಂಡು ಹುಡುಕುತ್ತಿದ್ದೇವೆ ಎಂದು ಆರಂಭವಾದ ಮಾತು ಕತೆ ನೋಡ ನೋಡುತ್ತಿದ್ದಂತೆಯೇ ಮುಂದುವರೆದು ಮಾರನೇ ದಿನವೇ ಅದೇ ಪೈಪ್ ಲೈನ್ ನಲ್ಲಿ ಇದ್ದ ಅವರ ಮನೆಯಲ್ಲೇ ಹುಡುಗಿ ನೋಡುವ ಶಾಸ್ತ್ರವೆಲ್ಲವೂ ಮುಗಿದು ಮದುವೆಯೂ ನಿಶ್ಚಯವಾಗಿಯೇ ಬಿಡುತ್ತದೆ.

wedding

ಗಂಡಿನ ಮನೆಯವರು ಹಾಸನದ ಮೂಲದವರು, ಹೆಣ್ಣಿನ ಮನೆಯವರು ಇರುವುದು ಕೋಲಾರದ ಚಿನ್ನದ ನಾಡಿನಲ್ಲಿ ಇಬ್ಬರಿಗೂ ಸರಿಯಾಗಲಿ ಎಂದು ಮಧ್ಯ ಭಾಗವಾದ ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ಗಂಡಿನ ಮನೆಯವರು ಕೇಳಿಕೊಳ್ಳುತ್ತಾರಾದರೂ, ಹುಡುಗಿಯ ಪೋಷಕರು, ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ತಮ್ಮ ಅಸಹಾಯಕತೆಯನ್ನು ತೋರಿ, ಪರಿಚಯಸ್ಥರೇ ಇರುವ ಕೆಜಿಎಫ್ ನಲ್ಲಿಯೇ ಮದುವೆ ಮಾಡಿದರೆ ತಮಗೆ ಎಲ್ಲಾ ರೀತಿ ಅನುಕೂಲವಾಗುತ್ತದೆೆ ಎಂದಿದ್ದಲ್ಲದೇ, ವರನ ಊರಿನಿಂದ ಮದುವೆಗೆ ಬಂದು ಹೋಗುವ ಖರ್ಚನ್ನು ಭರಿಸಲು ಒಪ್ಪಿಕೊಂಡಾಗ, ಹುಡುಗನಿಗೆ ಲೋಕಾರೂಢಿಯಂತೆ ವಾಚು ಉಂಗುರ ಸೂಟು ಬೂಟಿನ ಹೊರತಾಗಿ ಇನ್ನಾವುದೇ ಬೇಡಿಕೆ ಇಲ್ಲದೇ ಮಾತು ಕಥೆ ಎಲ್ಲವೂ ಸುಗಮವಾಗಿ ಮುಗಿದು ಮೇ 3-4 ರಂದು ಕೆಜಿಎಫ್ ರಾಬರ್ಟ್ಸನ್ ಪೇಟೆಯಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದ ಎದುರಿಗಿರುವ ಇರುವ ಮದ್ದಯ್ಯ ಕಲ್ಯಾಣ ಮಂಟಪದಲ್ಲಿ ನೆರೆವೇರಿಸಲು ನಿರ್ಧರಿಸಲಾಗುತ್ತದೆ

invitationಹಾಸನದ ಕಡೆಯ ವರನ ಕುಟುಂಬವನ್ನು ಹೊತ್ತ ಬಸ್ ಕೋಲಾರದತ್ತ ಬರುತ್ತಿದ್ದಾದಾಗಲೇ, ಧುತ್ ಎಂದು ಆಕಾಶವಾಣಿಯಲ್ಲಿ ಭಾರತದ ಮೂರನೇ ರಾಷ್ಟ್ರಪತಿಗಳಾಗಿದ್ದ ಶ್ರೀ ಝಾಕಿರ್ ಹುಸೇನ್ ಖಾನ್ 3 ಮೇ 1969 ರಂದೇ ನಿಧನರಾಗಿ ದೇಶಾದ್ಯಂತ ಶೋಕಚರಣೆ ಜಾರಿಯಾದ ಸುದ್ದಿ ತಿಳಿಯುತ್ತಿದ್ದಂತೆಯೇ, ಕೋಲಾರದ ಸುತ್ತ ಮುತ್ತಲೂ ಅವರ ಬಂಧು ಬಾಂಧವರೇ ಇರುವ ಕಾರಣ ಅಲ್ಲಲ್ಲಿ ಸಣ್ಣ ಗಲಭೆಗಳು ನಡೆದು ಬಸ್ ಕೆಲವು ಗಂಟೆಗಳ ಕಾಲ ಮಾರ್ಗದ ಮಧ್ಯದಲ್ಲೇ ತಡೆ ಹಿಡಿಯಲ್ಪಟ್ಟಾಗ, ಆರಂಭದಲ್ಲಿಯೇ ಈ ರೀತಿಯ ಅಪಶಕುನವಾದರೇ, ಇನ್ನು ಮದುವೆ ಹೇಗೆ ನಡೆಯುತ್ತದೆಯೋ ಎನ್ನುವ ಆತಂಕ ಗಂಡಿನ ಮನೆಯವರದ್ದಾದರೆ, ಬೆಳಿಗ್ಗೆ ಹೊರಟ ಬಸ್ ಮಧ್ಯಾಹ್ನವಾದರೂ ಬಾರದೇ ಹೋದ್ದದ್ದಕೆ ಹೆಣ್ಣಿನ ಕಡೆಯವರಲ್ಲಿ ಆತಂಕ ಮನೆ ಮಾಡಿತ್ತಾದರೂ, ಅದೃಷ್ಟವಷಾತ್ ಮದುವೆಯ ದಿಬ್ಬಣ ಎಂದು ಬಸ್ಸನ್ನು ಅನುವು ಮಾಡಿಕೊಟ್ಟ ಪರಿಣಾಮ ಮತ್ತು ಕೆಜಿಎಫ್ ನಲ್ಲಿ ಆದರ ಅಷ್ಟಾಗಿ ಗಲಭೆ ಇರದ ಕಾರಣ, ವರನ ಮನೆಯೆವರೆಲ್ಲರೂ ಸುರಕ್ಷಿತವಾಗಿ ಮದುವೆ ಮಂಟಪ ತಲುಪುವಷ್ಟರಲ್ಲಿ ಸಂಜೆಯಾಗಿ, ಅವರನ್ನು ಸಂಭ್ರಮದಿಂದ ಸ್ವಾಗತ ಮಾಡಲು ಹಾಕಿದ ಲೌಡ್ ಸ್ಪೀಕರಿನಲ್ಲಿ ಇದ್ದಕ್ಕಿದ್ದಂತೆಯೇ ತಮಿಳು ಹಾಡು ಮೊಳಗುತ್ತಿದ್ದಂತೆಯೇ, ಮಧುಮಗನ ಮನೆಯವರೆಲ್ಲರಿಗೂ ಕಸಿವಿಸಿ. ಅರೇ ಇದೇನು ಹುಡುಗಿ ಕಡೆಯವರು ತಮಿಳುನವರಾ? ಎಂಬ ಗುಲ್ಲು. ಇದನ್ನು ತಕ್ಷಣವೇ ಅರಿತ ವಧುವಿನ ಸಹೋದರ ಕೂಡಲೇ ಲೌಡ್ ಸ್ಪೀಕರ್ ಆರಿಸಿ ಮುಂದೆ ನಡೆಯಬಹುದಾಗಿದ್ದ ಆತಂಕವನ್ನು ಕಡಿಮೆ ಮಾಡಿ, ಹಾಗೂ ಹೀಗೂ ಮಾಡಿ ಮದುವೆಯ ಈ ಬಂಧ ಅನುರಾಗದ ಅನುಬಂಧ ಎಂಬ ಹಾಡಿನ ರೆಕಾರ್ಡ್ ತಂದು ಎಲ್ಲರಿಗೂ ಕೇಳಿಸಿ ಸಂತೋಷ ಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದರೆ, ಅದೇ ಹಾಡು ಆರಂಭವಾಗುವ ಶುಭಾಶಯ, ಶುಭಾಶಯ ಪದಗಳನ್ನು ಕೇಳಿದ ಸ್ಥಳೀಯರೊಬ್ಬರು ಇದ್ಯಾರು ಸುಬ್ಬಾ ಜಯಾ? ಮದುವೆ ಗಂಡು ಎಣ್ಣಿನ ಎಸ್ರೂ, ಸಿವಾ, ಮಣಿ ಅಲ್ವಾ? ಎಂದಾಗ ನೆರೆದಿದ್ದವರೆಲ್ಲಾ ಗೊಳ್ ಎಂದು ನಕ್ಕಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವವೇ?

dding2

ವರಪೂಜೆ ಸುಸೂತ್ರವಾಗಿ ಮುಗಿದು ಊರು ಸುತ್ತು ಹಾಕಲು ಹೊರ ಬಂದವರಿಗೆ ವ್ಯವಹರಿಸಲು ಭಾಷಾ ಸಮಸ್ಯೆ ಎದುರಗಿತ್ತು. ಹೇಳಿಕೊಳ್ಳಲು ಕರ್ನಾಟಕದ ಅವಿಭಾಜ್ಯ ಅಂಗವಾದರೂ ಇಡೀ ಊರಿಗೆ ಊರೇ ತಮಿಳುಮಯವಾಗಿದ್ದ ಕಾರಣ, ಕೆಲವು ನೆಂಟರಿಷ್ಟರಿಗೆ ಇದೇನೂ ಅಪ್ಪಟ ಕನ್ನಡಿಗರಾಗಿ ತಮಿಳು ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಿದ್ದಾರಾ? ಎಂಬ ಸಂದೇಹ ಮತ್ತೊಮ್ಮೆ ಮೂಡಿ ಅದನ್ನು ನಿವಾರಿಸಲು ಹುಡುಗನ ಮನೆಯವರು ಪಟ್ಟ ಪರಿಶ್ರಮ ಅಷ್ಟಿಷ್ತಲ್ಲಾ. ಮಾರನೇ ದಿನ ಕಾಶೀ ಯಾತ್ರೆ ಮುಗಿದು, ಜೀರಿಗೆ ಧಾರಣೆಯಾಗಿ ವರ-ವಧುವಿನ ತಾಳಿಗೆ ಮೂರು ಗಂಟು ಹಾಕಿ ನಿರ್ವಿಘ್ನವಾಗಿ ಧಾರೆಯೂ ಮುಗಿದು ಬಂದಿದ್ದವರೆಲ್ಲರೂ ವಧು ವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿ ಮದುವೆ ಮುಗಿದು, ಊಟಕ್ಕೆ ಕುಳಿತುಕೊಳ್ಳ ಬೇಕು ಎಂದು ಊಟದ ಮನೆಗೆ ಧಾವಿಸಿದರೆ ಆದಾಗಲೇ ಊಟದ ಮನೆಯಲ್ಲಿ ಸ್ಥಳಿಯ ನೂರಾರು ಜನರಿಂದ ತುಂಬಿ ತುಳುಕುತ್ತಿದ್ದು ನೋಡಿ ಹೌರಾರಿದ್ದಂತೂ ಸುಳ್ಳಲ್ಲ.

wedd4

ರಾಮಾಯಣ ಕಾಲದಲ್ಲಿದ್ದ ಮಂಥರೆಯಂತೆ, ಎಲ್ಲಾ ಮದುವೆ ಮನೆಗಳಲ್ಲೂ ಸಮಯಕ್ಕೆ ತಕ್ಕಂತೆ ಹುಟ್ಟಿಕೊಳ್ಳುವ ಕೆಲ ಮಂಥರೆಯರೂ ಸಹಾ ಇದೇ ಸಂದರ್ಭವನ್ನು ಬಳಸಿಕೊಂಡು, ಅರೇ ಇದೇನು? ಗಂಡಿನ ಮನೆಯವರನ್ನು ಹೀಗಾ ನೋಡಿಕೊಳ್ಳೋದು? ನಾವೇನು ಊಟಕ್ಕೆ ಗತಿ ಕೆಟ್ಟು ಅಷ್ಟು ದೂರದಿಂದ ಬಂದಿದ್ದೇವಾ? ಈ ಪರಿಯಾಗಿ ನೋಡಿಕೊಳ್ಳುವುದಕ್ಕಾ 220 ಕಿಮೀ ದೂರದ ಹೆಣ್ಣನ್ನು ತರಬೇಕಿತ್ತಾ? ಗಂಡಿನ ಮನೆಯವರಿಗಲ್ಲವೇ ಮೊದಲು ಊಟ ಹಾಕೋದು? ಎಂದು ಅಲ್ಲೊಂದು ಸಣ್ಣದಾದ ಅಸಮಧಾನವನ್ನು ಹುಟ್ಟು ಹಾಕಲು ಪ್ರಯತ್ನಿಸಿದರಾದರೂ, ವರನ ತಂದೆಯವರ ಸಮಯೋಚಿತ ತಾಳ್ಮೆಯಿಂದಾಗಿ ನಡೆಯಬಹುದಾಗಿದ್ದ ಎಲ್ಲಾ ಅವಗಢಗಳನ್ನೂ ಅರಂಭದಲ್ಲೇ ಚಿವುಟಿ ಹಾಕಿದ್ದು ವಧುವಿನ ತಂದೆಯವರಿಗೆ ತುಸು ನೀರಾಳವನ್ನು ನೀಡಿದ್ದಂತೂ ಸುಳ್ಳಲ್ಲ. ಕೂಡಲೇ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡೇ ಇದ್ದ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪರಿಚಯಸ್ಥರನ್ನು ಕೇಳಿಕೊಂಡು ಅಲ್ಲೇ ಇದ್ದ ಮತ್ತೊಂದು ಪ್ರಾಂಗಣದಲ್ಲಿ ಗಂಡಿನ ಮನೆಯವರೆಲ್ಲರನ್ನೂ ಕೂಡಿಸಿ ಸಾಂಗೋಪಾಂಗವಾಗಿ ಊಟೋಪಚಾರಗಳನ್ನು ಮಾಡಿಸಿದರೂ ಮಂಥರೆಯರ ಮನಸ್ಸಿನಲ್ಲಿ ಮೂಡಿದ್ದ ಜ್ವಾಲೆ ಆರದೇ ಸಣ್ಣ ಪುಟ್ಟದಾಗಿ ಪಿಸುಧನಿಯಲ್ಲಿ ಮಾತನಾಡಿ ಕೊಳ್ಳುತ್ತಿದ್ದದ್ದು ಗುಟ್ಟಾಗೇನು ಉಳಿಯಲಿಲ್ಲ.

saptapadi

ಮದುವೆಯ ಮನೆಯಲ್ಲಿ ಇಷ್ಟೆಲ್ಲಾ ರಂಪ ರಾದ್ಧಾಂತಳು ನಡೆಯುತ್ತಿದ್ದರೂ ಮಧುಮಗ ಮಧುಮಗಳು ಮತ್ತು ಪುರೋಹಿತರಿಗೂ ಇದ್ಯಾವುದರ ಪರಿವೇ ಇಲ್ಲದೇ, ಲಾಜಾ ಹೋಮ, ಎನ್ನರಸ ನನ್ನ ಉಪ್ಪಿನ ಮನೆ ಕೊಡ್ತೀನಿ ನಿಮ್ಮ ಅಕ್ಕಿಯ ಮನೆ ಕೊಡು ಎಂದೋ ಇಲ್ಲವೇ ಆನೆ ಕೊಡು ಎಂದು ಶಾಸ್ತ್ರವನ್ನು ಮುಂದುವರೆಸುತ್ತಾ ಸಪ್ತ ಪದಿಯ ಶಾಸ್ತ್ರದಲ್ಲಿ ಕನ್ಯಾ ಪಿತೃವು ವರನಿಂದ ಮಾಡಿಸಿಕೊಳ್ಳುವಂತಹ ಧರ್ಮೇಚ, ಅರ್ಥೇಚ, ಕಾಮೇಚ, ನಾತಿ ಚರಾಮಿ. ಅಂದರೆ ಧರ್ಮದ ವಿಷಯದಲ್ಲಿ ಹಣ ಗಳಿಸುವ ವಿಷಯದಲ್ಲಿ, ಸಂಭೋಗಾದಿ ವಿಷಯದಲ್ಲಿ ನಿನ್ನ ಒಪ್ಪಿಗೆ ಇಲ್ಲದೆ ಕಾರ್ಯ ಪ್ರವೃತ್ತವಾಗುವುದಿಲ್ಲ ಎಂದರ್ಥ ಬರುವ ಪ್ರತಿಜ್ಞೆಯನ್ನು ಮುಗಿಸಿಕೊಂಡು ಭೂಮದೂಟಕ್ಕೆ ಅಣಿಯಾಗುವಷ್ಟರಲ್ಲಿ ಉಳಿದೆಲ್ಲಾ ವಿಷಯಗಳೂ ಭೂದಿ ಮುಚ್ಚಿದ ಕೆಂಡದಂತೆ ಆರಿರುತ್ತದೆ.

ಮದುವೆಗೆ ಬಂದಿದ್ದ ನೆಂಟರಿಷ್ಟರೆಲ್ಲರೂ ನವದಂಪತಿಗಳು ಒಂದೇ ಎಲೆಯಲ್ಲಿ ಭೂಮದೂಟ ಮಾಡುತ್ತಿರುವುದನ್ನು ನೋಡುವುದಲ್ಲಿ ತಲ್ಲೀನರಾಗಿದ್ದರೆ, ಹುಡುಗಿಯ ತಂದೆ ಮದುವೆಗೆ ನಿರೀಕ್ಷೆಗೂ ಮೀರಿದ ಜನರು ಬಂದಿದ್ದಾರೆ. ಅವರಿಗೆಲ್ಲಾ ಸರಿಯಾದ ಊಟೋಪಚಾರಗಳು ನಡೆಯಿತೇ? ಅಡುಗೆಯವರು ಅವರನ್ನು ಹೇಗೆ ಸಂಭಾಳಿಸಿರಬಹುದು? ತಮ್ಮ ಕೆಲಸ ಮುಗಿಸಿ ಹೊರಡಲು ಅನುವಾದ ಓಲಗದವರಿಗೆ ದಕ್ಷಿಣೆ ನೀಡಬೇಕು? ಎಂಬ ಧಾವಂತದಲ್ಲೇ ಬಾಹ್ಯ ನೋಟಕ್ಕೆ ನಗುತ್ತಿದ್ದರೂ ಅಂತರ್ಮುಖಿಯಾಗಿ ಆತಂಕದಿಂದಲೇ ಒಂದೆರಡು ತುತ್ತನ್ನು ಬಾಯಿಗೆ ಹಾಕಿಕೊಂಡು ಊಟದ ಶಾಸ್ತ್ರವನ್ನು ಮುಗಿಸಿ ಮದುವೆಯ ಜವಾಬ್ಧಾರಿಯನ್ನು ಹೊತ್ತಿದ್ದ ತಮ್ಮ ಮಗನೊಂದಿಗೆ ಮದುವೆ ಮಾರನೆಯ ದಿನದ ಸತ್ಯನಾರಾಯಣ ಪೂಜೆ ಮತ್ತು ಬೀಗರ ಔತಣದ ಉಳಿದ ವ್ಯವಸ್ಥೆಗಳತ್ತ ಗಮನ ಹರಿಸಲು ಎದ್ದು ಬಿಡುತ್ತಾರೆ.

WhatsApp Image 2022-05-04 at 10.12.06 AM

ಸಾವಿರ ಸುಳ್ಳುಗಳನ್ನು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದ್ದರೂ, ಎಲ್ಲಾ ಕಡೆಯಲ್ಲೂ ಸತ್ಯಗಳನ್ನೇ ಹೇಳಿದರೂ ಮದುವೆ ಮಾಡುವುದು ಎಷ್ಟು ಕಷ್ಟ ಎಂದು ಹೆಣ್ಣು ಹೆತ್ತವರಿಗೆ ಮಾತ್ರ ಗೊತ್ತು. ಇಷ್ಟೆಲ್ಲಾ ಸಂಕಷ್ಟಗಳನ್ನೂ ದಾಟಿಕೊಂಡು ಹೀಗೆ 53 ವರ್ಷಗಳ ಹಿಂದೆ ನಡೆದದ್ದೇ ನಮ್ಮ ಅಪ್ಪ ಬಾ. ನಂ. ಶಿವಮೂರ್ತಿ(ಶಿವು) ಮತ್ತು ಅಮ್ಮ ( ಉಮಾವತಿ (ಮಣಿ)) ಅವರ ಮದುವೆ. ಇವತ್ತು ಅಪ್ಪಾ ಅಮ್ಮಾ ನಮ್ಮೊಂದಿಗೆ ಇಲ್ಲದಿದ್ದರೂ ಅವರು ನಮಗೆ ಕಲಿಸಿಕೊಟ್ಟ ಆದರ್ಶಗಳು ಮತ್ತು ಅವರ ತದ್ರೂಪುಗಳಾದ ಮೊಮ್ಮಕಳ ಮೂಲಕ ಸದಾ ಕಾಲವೂ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಮನುಷ್ಯನ ದೇಹಕ್ಕೆ ಅಂತ್ಯವಿದೆಯಾದರು ಮನುಷ್ಯರು ಮಾಡಿದ ಕೆಲಸಗಳಿಗೆ ಎಂದೂ ಅಂತ್ಯವಿರುವುದಿಲ್ಲ ಎನ್ನುವುದಕ್ಕೆ ನಮ್ಮ ಅಪ್ಪಾ ಅಮ್ಮನ ಮದುವೆಯಲ್ಲಿ ನಾನಿಲ್ಲದಿದ್ದರು ತಮ್ಮ ಮದುವೆಯ ಬಗ್ಗೆ ಅವರುಗಳು ಮತ್ತು ಮನೆಯ ಇತರೇ ಸದಸ್ಯರು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡು ಅದನ್ನೇ ಯಥಾವತ್ತಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಕರ್ಮಾಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ. ಅಂದರೆ, ನಿನ್ನ ಕೆಲಸಗಳನ್ನು ನೀನು ಅಚ್ಚುಕಟ್ಟಾಗಿ ಮಾಡು ಫಲಾಪಲಗಳನ್ನು ನನ್ನ ಮೇಲೆ ಬಿಡು ಎಂದಿದ್ದಾನೆ. ಹಾಗಾಗಿ ನೆನಪುಗಳೇ ಮಧುರ ಮತ್ತು ಅಮರ ಹಾಗಾಗಿ ನಮ್ಮ ಮನೆಗಳ ಸಭೆ ಸಮಾರಂಭಗಳಲ್ಲಿ ಮಂಥರೆಯರ ಮಾತುಗಳಿಗೆ ಬೆಲೆ ಕೊಡದೇ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುವುದರ ಮೂಲಕ ಆ ಕಾರ್ಯಕ್ರಮದ ನೆನಪು ಸದಾಕಾಲವೂ ಹಸಿರಾಗಿರುವಂತೆ ನೋಡಿ ಕೊಳ್ಳುವ ಜವಾಬ್ಧಾರಿ ನಮ್ಮ ನಿಮ್ಮದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಉಮಾ

ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿತ್ತು. ಕೆ.ಜಿ.ಎಫ್ ನಲ್ಲಿದ್ದ  ಅಂದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಜಾರಾವ್ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಸತವಾಗಿ ಏಳು ಗಂಡು ಮಕ್ಕಳ (ಅರು ಮಕ್ಕಳು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅಳಿದು ಹೋಗಿದ್ದವು) ನಂತರ ಅವರ  ಮನೆಯಲ್ಲಿ ಮೊತ್ತ ಮೊದಲಬಾರಿಗೆ  ಮಹಾಲಕ್ಷ್ಮಿಯ ಜನನವಾಗಿತ್ತು.  ರಾಯರ ಮನೆ ದೇವರು ಮೇಲುಕೋಟೆ ಯೋಗಾನರಸಿಂಹನಾಗಿದ್ದ ಕಾರಣ,  ಅವರಿಗೆ ತಮ್ಮ ಮಗಳ ಹೆಸರು  ಲಕ್ಷ್ಮಿಯ ಹೆಸರಿಡಬೇಕು ಎಂದಿತ್ತು. ಆದರೆ ಅವರ ಮಡದಿ ವಿಶಾಲಾಕ್ಷಿ ಅವರ ತಾಯಿಯವರು ತಮ್ಮ ಮನೆ ದೇವರು  ವೀರಭದ್ರಸ್ವಾಮಿಗೆ  ಹೊತ್ತ ಹರಕೆಯನ್ನು ತೀರಿಸುವ ಸಲುವಾಗಿ ಮಗುವಿಗೆ ಉಮಾ (ಮುಂದೆ ದೈವೇಚ್ಚೆಯೇ ಬೇರೆಯಾಗಿತ್ತು) ಎಂದು ಹೆಸರಿಟ್ಟಿದ್ದರು.  ಆರಂಭದಲ್ಲಿ ಇದರ ಬಗ್ಗೆ ಸ್ವಲ್ಪ ಕಸಿವಿಸಿಯಾದರೂ ನಂತರ ಆ ಮಗುವಿನ ಸೌಂದರ್ಯ, ಆಟ ಪಾಟಗಳಿಂದಾಗಿ ಎಲ್ಲವೂ ಮರೆಯಾಗಿತ್ತು. ಅಂತಿಮವಾಗಿ ಮನೆಯಲ್ಲಿ ಉಮಾಮಣಿ ಎಲ್ಲರ ಪ್ರೀತಿಯ ಮಣಿ ಆದರೆ ಶಾಲೆಯಲ್ಲಿ ಅಪ್ಪನ ಆಸೆಯಂತೆ ಉಮಾವತಿ  ಎಂದಾಗಿತ್ತು.

ತಮ್ಮ ಮನೆಯ ರಾಜಕುಮಾರಿ ನಡೆದರೆ ಕಾಲು ನೋಯುತ್ತದೆ ಎಂಬಂತೆ ಕೈ ಗೊಂದು ಆಳು ಕಾಲಿಕೊಂದು ಆಳು ಇಟ್ಟು ಕೊಂಡು ಸಾಕಿದ್ದರು.  ಅಂದಿನ ಕಾಲದಲ್ಲಿ ಕೆಜಿಎಫ್ ನಲ್ಲಿ ಕನ್ನಡ ಶಾಲೆಗಳು  ಅವರ ಮನೆಯಿಂದ ದೂರವಿದ್ದ ಕಾರಣ ಮನೆಯ ಹತ್ತಿರವೇ ಇದ್ದ ತಮಿಳು  ಮಾಧ್ಯಮದ ಶಾಲೆಗೆ ಸೇರಿಸಿದ್ದರು. ಹಾಗಾಗಿ ಮನೆಯಲ್ಲಿ ಕನ್ನಡ  ಅಕ್ಕ ಪಕ್ಕ ಮತ್ತು ಶಾಲೆಯಲ್ಲಿ ತಮಿಳು, ಇಂಗ್ಲೀಶ್ ಇನ್ನು ಮನೆಯ ಕೆಲಸದವರೊಂದಿಗೆ ತೆಲುಗು ಭಾಷೆಯಲ್ಲಿ ವ್ಯವಹಿರಿಸುತ್ತಿದ್ದ ಕಾರಣ,  ಉಮಾಳಿಗೆ  ಈ ಎಲ್ಲಾ ಭಾಷೆಗಳೂ  ಸರಾಗ ಮತ್ತು ಸುಲಲಿತವಾಗಿಹೋಯಿತು. ನೋಡ ನೋಡುತ್ತಿದ್ದಂತೆಯೇ ಬೆಳೆದು ದೊಡ್ಡವಳಾಗಿ ಮದುವೆಯ ಪ್ರೌಢಾವಸ್ಥೆಗೆ ಬಂದಾಗ, ಬಹುಶಃ ಉಮಾ ಹುಟ್ಟಿದಾಗ ಮುಂದೊಮ್ಮೆ ಆಕೆ ಶಿವ ಎಂಬುವನೊಂದಿಗೆ ಮದುವೆಯಾಗುತ್ತದೆ ಎಂದು ಕನಸು  ಕಂಡಿದ್ದರೋ ಏನೋ? ಹಾಗೆಯೇ ತಮ್ಮ ಅಂತಸ್ತಿಗೆ ತಕ್ಕ ಹಾಗೆ ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ  ಶಿವಮೂರ್ತಿ ಎಂಬವರೊಂದಿಗೆ ಮದುವೆ ಆಗಿ ಬೆಂಗಳೂರಿಗೆ ಬರುತ್ತಾರೆ.

ಅರೇ ಇದೇನು  ಉಮಾ, ಶಿವಮೂರ್ತಿಯೊಂದಿಗೆ ಮದುವೆ ಮಾಡಿಕೊಂಡ್ರೇ ನಮಗೇನು ಅಂತೀರಾ ?ಅಲ್ಲೇ ಇರೋದು ನೋಡಿ ಗಮ್ಮತ್ತು. ಅದೇ ಉಮಾ ಶಿವಮೂರ್ತಿಗಳ ಸುಮಧುರ ದಾಂಪತ್ಯದ ಫಲವಾಗಿಯೇ ಎಪ್ಪತ್ತರ ದಶಕದಲ್ಲಿ ನನ್ನ ಜನನವಾಗುತ್ತದೆ. ಮತ್ತದೇ ಸಂಪ್ರದಾಯದ ರೀತಿಯಲ್ಲಿಯೇ ಮನೆ ದೇವರ ಹೆಸರಾಗಿ ಶ್ರೀಕಂಠ ಎಂದು ನಾಮಕರಣ ಮಾಡಿದರೂ ತಾಂತ್ರಿಕವಾಗಿ ಉಮಾ ಆವರ ಮಗನಾಗಿರುವ ಕಾರಣ ನಾನು ಉಮಾಸುತನಾಗಿರುವೆ.

ನಾನು ಶಿಶುವಿಹಾರಕ್ಕೆ ಸೇರಿದಾಗ ನನಗೆ ಹೇಳಿಕೊಡುವ ಸಲುವಾಗಿಯೇ ನಮ್ಮ ಅಮ್ಮಾ ನನ್ನ ಜೊತೆಯಲ್ಲಿಯೇ ಕನ್ನಡ ಓದು ಬರೆಯುವುದನ್ನು ಕಲಿತಿದ್ದಲ್ಲದೇ ನನಗೆ   ಅಕ್ಷರಗಳು ಸುಲಭವಾಗಿ ಪರಿಚಯವಾಗಲಿ ಎಂದು ಕೋಡು ಬಳೆಯಲ್ಲಿ ಅ, ಆ, ಇ, ಈ….  ಕಲಿಸಿಕೊಟ್ಟವರು. ಐದನೇ ವಯಸ್ಸಿಗೆ ಮನೆಗೆ ಬರುತ್ತಿದ್ದ ಪ್ರಜಾವಾಣಿಯ  ದಪ್ಪದಪ್ಪ ಅಕ್ಷರಗಳ ಶೀರ್ಷಿಕೆ ಓದುವುದಕ್ಕೆ ಪ್ರೋತಾಹಿಸಿದ್ದಲ್ಲದೇ, ಒಂದನೇ  ತರಗತಿಗೆ ಬರುವಷ್ಟರಲ್ಲಿಯೇ ಕೈಗೆ ವೃತ್ತ ಪತ್ರಿಕೆ, ಸುಧಾ, ಪ್ರಜಾಮತ, ಮಯೂರವನ್ನು ಕೊಟ್ಟು ಕನ್ನಡವನ್ನು ಸರಾಗವಾಗಿ ಓದುವುದನ್ನು ಕಲಿಸಿದ್ದಲ್ಲದೇ, ಕೈಗೆ ಏನೇ ಸಿಕ್ಕರು ಅದನ್ನು ಓದಿ ಮುಗಿಸುವ ಗೀಳನ್ನು ಹಚ್ಚಿಸಿದ್ದವರು ನಮ್ಮಮ್ಮ.

ಅದೊಮ್ಮೆ ನಾನು ಅಯ್ಯೋ ನೀವು ಬರೀ ಎಸ್.ಎಸ್.ಎಲ್.ಸಿ ಅಷ್ಟೇನಾ ಓದಿರೋದು? ಎಂದು ಕೇಳಿದ್ದನ್ನೇ ಛಲವಾಗಿ ತೆಗೆದುಕೊಂಡು ನನ್ನ ಪೆನ್ಸಿಲ್ಲನ್ನೇ ತೆಗೆದುಕೊಂಡು ಹೋಗಿ ನೆಲಮಂಗಲದಿಂದ ಬೆಂಗಳೂರಿಗೆ ಬಂದು ಮೈ ಇನಿಸ್ಟಿಟ್ಯೂಟಿನಲ್ಲಿ ಟಿಸಿಹೆಚ್ ಮಾಡಿದ್ದಂತಹ ಛಲಗಾರ್ತಿ ನಮ್ಮಮ್ಮ.

ಇನ್ನು ಆಕೆಯ ಭಾಷಾ ಪಾಂಡಿತ್ಯಕ್ಕೆ ಸರಿ ಸಾಟಿ ಯಾರೂ ಇಲ್ಲವೇನೋ? ಮನೆಯ ಮುಂದೆ ನಿಂಬೇಹಣ್ಣು ಮಾರಿಕೊಂಡು ಬರುವ ತಮಿಳಿಗನೊಂದಿಗೆ ಎಂದ ಊರುಪಾ? ಎಂದು ಮಾತಿಗಾರಂಭಿಸಿ, ಓ ಅದಾ ಪಾತ್ತೇ  ನಂಬ ಆಳಾಚ್ಚೇ.. ಎಂದು  ಅವನ ಊರಿನ ಶೈಲಿಯಲ್ಲೇ ಮಾತನಾಡಿ ಮೋಡಿ ಮಾಡಿ ತನಗೆ ಬೇಕಾದಷ್ಟು ಚೌಕಾಸಿ ಮಾಡಿ ನಿಂಬೇ ಹಣ್ಣುಗಳನ್ನು ಕೊಂಡು ಕೊಳ್ಳುತ್ತಿದ್ದ ಚಾಲಾಕಿ ನಮ್ಮಮ್ಮ.

ಇನ್ನು ತರಕಾರಿ ಮಾರಿಕೊಂಡು ತೆಲುಗರವರು ಬಂದರೆ,  ಎಂಪಾ, ಏ ಊರು ಮೀದೀ? ಓ ಮನವಾಡಾ.. ಎಂದು ಅವನನ್ನು ಅಲ್ಲಿಗೇ ಕಟ್ಟಿ ಹಾಕಿದರೆ ಇನ್ನು ಕರ್ನಾಟಕದ ಯಾವುದೇ ಶೈಲಿಯಲ್ಲಿ ಮಾತಾನಾಡಿದರೂ ಅವರಿಗೇ ನೀರು ಕುಡಿಸುವಷ್ಟು ಸರಾಗವಾಗಿ ಮೋಡಿ ಮಾಡುತ್ತಿದ್ದವರು ನಮ್ಮಮ್ಮ. ಹೀಗೆ ಕಲ್ಲನ್ನೂ ಮಾತನಾಡಿಸಿ ಕರಗಿಸುವುದನ್ನು ಕರಗತ ಮಾಡಿಕೊಂಡಿದ್ದವರು ನಮ್ಮಮ್ಮ.

ಶಿಸ್ತಿಗೆ ಮತ್ತೊಂದು ಹೆಸರೇ ಉಮಾ ಎಂದರೂ ತಪ್ಪಾಗಲಾರದು. ಸುಳ್ಳು ಮತ್ತು ಮೋಸ ಮಾಡುವುದು ನಮ್ಮಮ್ಮನಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿಯೇ ನಮ್ಮನ್ನೆಲ್ಲಾ ಬಹಳ ಶಿಸ್ತಿನಿಂದಲೇ ಬೆಳೆಸಿದ್ದರು.  ನಮ್ಮ ಇಡೀ ವಂಶವೇ ಕಾಫೀ ಕುಡಿಯುತ್ತಿದ್ದರೆ ನಮ್ಮ ಅಮ್ಮಾ ನಮಗಾರಿಗೂ ಕಾಫೀ ಅಭ್ಯಾಸ ಮಾಡಿಸಲೇ ಇಲ್ಲ, ಇನ್ನು ಪ್ರತೀ ದಿನ ನಾವು  ಕರಾಗ್ರೇ ವಸತೇ  ಲಕ್ಷ್ಮೀ… ಎಂದು ಹೇಳಿಕೊಂಡೇ ಹಾಸಿಗೆಯಿಂದ ಎದ್ದು ಸೀದಾ ಬಚ್ಚಲು ಮನೆಗೆ ಹೋಗಿ ಗಂಗೇಚ ಯಮುನೇ ಚೈವ… ಹೇಳಿಕೊಂಡು  ಸ್ನಾನ ಮುಸಿಗಿಸಿಕೊಂಡು ಹಣೆಗೆ ವಿಭೂತಿ/ಕುಂಕುಮ  ಇಟ್ಟುಕೊಂಡು ದೇವರಿಗೆ ಬೆನಕ ಬೆನಕ ಏಕದಂತ… ಹೇಳಿ ನಮಸ್ಕಾರ ಮಾಡಿದ ನಂತರವಷ್ಟೇ ನಮಗೆ ಹಾಲು ಮತ್ತು ತಿಂಡಿ. ಇನ್ನು ಪ್ರತೀ ದಿನ ಶಾಲೆಗೆ ಹೋಗುವ ಮುನ್ನಾ ಖಡ್ಡಾಯವಾಗಿ ಅಮ್ಮನಿಗೆ ಮತ್ತು ಮನೆಯಲ್ಲಿದ್ದ ಹಿರಿಯರಿಗೆ ನಮಸ್ಕಾರ ಮಾಡೊಕೊಂಡು ಹೋಗುವುದನ್ನು ರೂಢಿ ಮಾಡಿಸಿದ್ದರು ನಮ್ಮಮ್ಮ.   ಊಟ ಮಾಡುವುದಕ್ಕೆ ಮುನ್ನಾ  ಅನ್ನಪೂರ್ಣೇ, ಸದಾಪೂರ್ಣೇ… ಸಹನಾವವರು ಹೇಳಿಕೊಟ್ಟಿದ್ದರೆ ರಾತ್ರಿ ಮಲಗುವಾಗ ರಾಮಸ್ಕಂದ ಹನೂಮಂತಂ.. ಹೇಳಿಯೇ ನಿದ್ದೆ ಮಾಡುವುದು ನಮಗೆ ರೂಢಿ ಮಾಡಿಸಿದ್ದರು.

ಅಪ್ಪಾ ಅಮ್ಮಾ  ಅಪರೂಪಕ್ಕೆ ಸಿನಿಮಾಗೆ ಹೋದರೆ, ನಮ್ಮನ್ನು ಮನೆಯಲ್ಲಿಯೇ ಬಿಟ್ಟು ಸಿನಿಮಾದಿಂದ ಬಂದ ನಂತರ ಸಿನಿಮಾ ಟಿಕೇಟ್ ಹಣವನ್ನು ನಮಗೆ ಕೊಟ್ಟು  ಅದನ್ನು ಡಬ್ಬಿ ಗಡಿಗೆಯಲ್ಲಿ ಹಾಕಿಸಿ ತಿಂಗಳಿಗೊಮ್ಮೆ ಕೆನರಾ ಬ್ಯಾಂಕಿಗೆ ಹೋಗಿ ನಮ್ಮ ಹೆಸರಿನಲ್ಲಿ ಉಳಿತಾಯ ಮಾಡಿಸುವುದನ್ನು ಚಿಕ್ಕವಯಸ್ಸಿನಲ್ಲಿಯೇ ಕಲಿಸಿದ್ದರು. ಹಾಗೆ ಕಲೆ ಹಾಕಿದ್ದ ದುಡ್ಡಿನಲ್ಲಿಯೇ ಕಾಶೀಗೆ ಹೋಗಿದ್ದಾಗ ಅಂದಿನ ಕಾಲಕ್ಕೆ 300 ರೂಪಾಯಿಗಳಿಗೆ ಅಮ್ಮನಿಗೆ  ಬನಾರಸ್ ಸಿಲ್ಕ್ ಸೀರೆ ಕೊಡಿಸಿದ್ದೆ.

ನಾನು ಸಣ್ಣವನಿದ್ದಾಗ ಪ್ರತೀ ದಿನ ಸಂಜೆ RSS ಶಾಖೆಗೆ ಹೋಗಿ ಬಂದು ಕೈ ಕಾಲು ಮುಖ ತೊಳೆದುಕೊಂಡು ವೀಭೂತಿ ಇಟ್ಟುಕೊಂಡು ದೇವರಿಗೆ ನಮಸ್ಕರಿಸಿ ಖಡ್ಡಾಯವಾಗಿ ಬಾಯಿಪಾಠ ಹೇಳಲೇ ಬೇಕಿತ್ತು. ಬಾಯಿ ಪಾಠದಲ್ಲಿ ಹಲವು ಬಗೆಯ ಶ್ಲೋಕಗಳು, ವಾರಗಳು, ತಿಂಗಳುಗಳು, ನಕ್ಷತ್ರಗಳು, ರಾಶಿ, 1-20 ರ ವರೆಗಿನ ಮಗ್ಗಿ ಹೀಗೆ ಎಲ್ಲವನ್ನು ಮನನ ಮಾಡಿಸಿ ನಂತರ ಆ ದಿನದ ಮನೆಪಾಠವನ್ನು ಮುಗಿಸಿದ ನಂತರವಷ್ಟೇ ನಮಗೆ ರಾತ್ರಿಯ ಊಟ.

ನೀರಿನಲ್ಲಿ ಮೀನು ಹೇಗೆ ಸರಾಗವಾಗಿ  ಈಜುತ್ತದೆಯೋ ಹಾಗೆಯೇ ನಮ್ಮ ವಂಶದಲ್ಲಿ ಇಸ್ಪೀಟ್ ಆಡುವುದನ್ನು ಮಕ್ಕಳಿಗೆ ಕಲಿಸಬೇಕಿರಲಿಲ್ಲ ಅದು ಸುಲಭವಾಗಿಯೇ ಬರುತ್ತಿತ್ತು..  ಇದಕ್ಕೆ ಮೊದಲು ಕಡಿವಾಣ ಹಾಕಿದ್ದೇ ನಮ್ಮಮ್ಮ. ನಮಗಾರಿಗೂ ಇಂದಿಗೂ  ಇಸ್ಪೀಟ್ ಆಟ ಆಡುವುದು ಇರಲಿ ಅದನ್ನು ಹಿಡಿಯುವುದನ್ನು ಕಲಿಸಲಿಲ್ಲ. ಅದಕ್ಕೆ ನಮ್ಮ ದೊಡ್ಡಮ್ಮ ಎಷ್ಟೋ ಬಾರಿ ಹೇಳುತ್ತಿದ್ದರು, ಉಮಾ ನಮಗೆ ಮೂರು ಗಂಡು ಮಕ್ಕಳಿರುವುದೂ ಒಂದೇ ನಿನಗೆ ಒಬ್ಬ ಮಗನಿರುವುದು ಒಂದೇ ಎಂದು ಹೊಗಳುತ್ತಿದ್ದರು.

ಇನ್ನು ನೀವೆಲ್ಲಾ ನನ್ನ enantheeri.com ಬ್ಲಾಗಿನಲ್ಲಿ  ನಳಪಾಕ ಮತ್ತು Enantheeri YouTube ಛಾನೆಲ್ಲಿನಲ್ಲಿ ಅನ್ನಪೂರ್ಣ ಮಾಲಿಕೆಯನ್ನು ನೋಡಿ ಬಹಳ ಸಂತೋಷ ಪಟ್ಟಿದ್ದೀರಿ ಮತ್ತು ಹಾರೈಸಿದ್ದೀರಿ.  ನಿಜ ಹೇಳಬೇಕೆಂದರೆ  ಇದರ ಸಂಪೂರ್ಣ ಶ್ರೇಯ ನಮ್ಮಮ್ಮನಿಗೇ ಸೇರಬೇಕು. ನಾವೆಲ್ಲಾ ಚಿಕ್ಕವರಿದ್ದಾಗ ಮೂರು ದಿನಗಳು ಅಮ್ಮಾ ಮೂಲೆಯಲ್ಲೇ ಕುಳಿತೇ ನಮ್ಮ ಕೈಯಲ್ಲಿ ಅನ್ನಾ, ಸಾರು, ಹುಳಿ ಮಾಡಿಸಿ ತಕ್ಕ ಮಟ್ಟಿಗಿನ  ಅಡುಗೆ ಕಲಿಸಿದ್ದರಿಂದಲೇ ಈಗ ಏನೋ ಅಲ್ಪ ಸ್ವಲ್ಪ ಅಡುಗೆ ಮಾಡುವುದಲ್ಲದೇ ಹತ್ತಾರು ಜನರಿಗೆ  ಮಾಡಿ ತೋರಿಸುವಷ್ಟು ಕಲಿತಿದ್ದೇವೆ.

ಚುರುಕು ಎನ್ನುವುದಕ್ಕೆ ಅನ್ವರ್ಥವೆಂದರೆ ನಮ್ಮಮ್ಮ ಎಂದರೂ ಅತಿಶಯೋಕ್ತಿಯೇನಲ್ಲ. ಯಾವುದೇ ಕೆಲಸವಿರಲಿ ಥಟ್ ಅಂತಾ ಮಾಡಿ ಮುಗಿಸುತ್ತಿದ್ದರು. ಅದು ಹೂವು ಕಟ್ಟುವುದೇ ಇರಲೀ, ದೇವರ ಪೂಜೆಯೇ ಇರಲಿ, ಅತಿಥಿ ಸತ್ಕಾರವೇ ಇರಲಿ, ಅಡುಗೆಯೇ ಇರಲಿ  ಎಲ್ಲದ್ದರಲ್ಲಿಯೂ ಅಚ್ಚುಕಟ್ಟು. ಯಾವುದೇ ರೀತಿಯ ಹೂಗಳನ್ನು ಕೊಟ್ಟರೂ ಚಕ ಚಕಾ  ಅಂತಾ ಚೆಂದನೆಯ  ಹೂವಿನ ಮಾಲೆ ಕಟ್ಟಿಕೊಡುವುದರಲ್ಲಿ ನಮ್ಮನಿಗೆ ನಮ್ಮನೇ ಸೈ. ಇನ್ನು ದೇವರ ಪೂಜೆಗೆ ಕುಳಿತರೆಂದರೆ ಮಧ್ಯಾಹ್ನ ಒಂದು ಗಂಟೆಯಾದರೂ ಅದರ ಪರಿವೇ ಇರುತ್ತಿರಲಿಲ್ಲ. ಮನೆಗೆ ಬಂದವರೊಡನೆ ಮಾತನಾಡಿಸುತ್ತಲೇ ಅವರಿಗೆ ಗೊತ್ತಾಗದಂತೆಯೇ ಇರುವ ಪರಿಕರಗಳಲ್ಲಿಯೇ ಅತ್ಯಂತ ರುಚಿಯಾದ ಅಡುಗೆಯನ್ನು ಮಾಡಿಹಾಕುತ್ತಿದ್ದ ಅನ್ನಪೂರ್ಣೆ ನಮ್ಮಮ್ಮ.

ದೇಶ ಸುತ್ತಿ ನೋಡು, ಕೋಶ ಓದಿ ನೋಡಿದರೆ ಜ್ಞಾನ ವೃದ್ಧಿಯಾಗುತ್ತದೆ  ಎಂಬ ಕಾರಣದಿಂದ ಪ್ರತೀ ಬೇಸಿಗೆಯಲೂ ಹುಡುಕೀ ಹುಡುಕೀ ಒಂದಾಲ್ಲಾ ಒಂದು ಊರಿನಲ್ಲಿ ವೇದ ಶಿಬಿರಕ್ಕೋ, ಸಂಘದ ಶಿಬಿರಗಳಿಗೋ ಇಲ್ಲವೇ ಮತ್ತಾವುದೋ  ಕೆಲ ಕಾರ್ಯಗಳಲ್ಲಿ ನನ್ನನ್ನು ಜೋಡಿಸಿ ನನ್ನ ಜ್ಞಾನ ದಾಹವನ್ನು ಹೆಚ್ಚಿಸುತ್ತಿದ್ದಾಕೆ ನಮ್ಮಮ್ಮ.

ಹಾಗಂತ ನಮ್ಮಮ್ಮ ತುಂಬಾ ಸಾಧು ಅಂತೇನೂ ಇಲ್ಲಾ. ಕೋಪ ಬಂದರೆ ರಣಚಂಡಿಯೇ. ಕೈಗೆ ಸಿಕ್ಕದ್ದರಲ್ಲಿಯೇ ಬಾರಿಸುತ್ತಿದ್ದಾಕೆ. ಕೋಪದಲ್ಲಿ ಮೊಗಚೇ ಕೈನಿಂದ ತಂಗಿಯ ತಲೆಗೆ ಮೊಟಕಿ ಮೂರು ಹೊಲಿಗೆಯನ್ನು ಹಾಕಿಸಿದ ಉದಾಹರಣೆಯೂ ಉಂಟು. ಆದರೆ ಆ ಕೋಪ ತಾಪವೆಲ್ಲಾ ಬೆಣ್ಣೆ ಕರಗುವ ಮುನ್ನವೇ ನೆರೆ ಬಂತು ಪೆನ್ನಾರಿಗೆ ಎನ್ನುವಂತೆ ಕ್ಷಣ ಮಾತ್ರದಲ್ಲಿಯೇ ಕರಗಿ ಹೋಗುತ್ತಿತ್ತು. ಕೆಲವೇ ನಿಮಿಷಗಳ ಹಿಂದೇ  ಇವರೇ ಏನು ರೌದ್ರಾವತಾರದಲ್ಲಿದ್ದು ಎನ್ನುವಷ್ಟರ ಮಟ್ಟಿಗೆ ಆಚ್ಚರಿಯನ್ನು ಮೂಡಿಸುತ್ತಿದ್ದರು.

ಮದುವೆಯಾದ ಹೊಸತರಲ್ಲಿ ಎಲ್ಲ ಅಮ್ಮಂದಿರಂತೆ,  ಮಗ ನನ್ನಿಂದ ದೂರವಾಗುತ್ತಿದ್ದಾನೇನೋ ಎನ್ನುವ ಭಾವನೆ ಮೂಡಿ ಆಗಾಗಾ.. ಹೋಗೋ ಹೋಗೋ ಹೆಂಡ್ತೀ ಗುಲಾಮಾ.. ಹೆಂಡ್ತೀ ಸೆರಗು ಹಿಡ್ದುಕೊಂಡು ಓಲಾಡು ಎಂದು ಮೂದಲಿಸಿದರೆ, ಇತ್ತ ಹೆಂಡ್ತಿ.. ನಿಮ್ಮಂತಹವರಿಗೇಕೆ ಮದುವೆ ಮಕ್ಕಳು? ಸುಮ್ಮನೇ ಅಮ್ಮನ ಸೆರಗು ಹಿಡಿದುಕೊಂಡು ಓಡಾಡಿ ಎಂದು ಬೈಯುತ್ತಿದ್ದರು. ಒಟ್ಟಿನಲ್ಲಿ ಮದುವೆಯಾದ ಗಂಡು ಮಕ್ಕಳದ್ದು ಎರಡು ಅಲುಗಿನ ಕತ್ತಿಯ ಮೇಲೆ ನಡೆಯ ಬೇಕಾದ  ಅನಿವಾರ್ಯವಾಗಿತ್ತು.  ಇದೇ ವಿಷಯಕ್ಕೆ ನಾನು ಮತ್ತು ನಮ್ಮಮ್ಮ ಶರಂಪರ ಕಿತ್ತಾಡಿ ಕೆಲವೇ ನಿಮಿಷಗಳಲ್ಲಿ ಏನೂ ಆಗದಂತೆ ಅಮ್ಮನೊಂದಿಗೆ ಸಹಜವಾಗಿ ಬೆರೆಯುತ್ತಿದ್ದದ್ದು ನಮ್ಮಾಕಿಗೆ ಬಹಳ  ಆಶ್ಚರ್ಯವನ್ನುಂಟು ಮಾಡುತ್ತಿತ್ತು. ಕಡೆಗೆ, ಈ ಅಮ್ಮಾ ಮಗನ ಜಗಳದ ಮಧ್ಯೆ ಮೂಗು ಏಕೆ ತೂರಿಸುವುದು ಎಂದು ತಟಸ್ಥವಾಗಿ ಅಲಿಪ್ತ ನೀತಿ ತಳೆದು ಬಿಡುತ್ತಿದ್ದಳು.

ನಮ್ಮ ಮನೆಯ ಮುಂದಿರುವ ಪಾರ್ಕಿಗೆ ಅಪ್ಪಾ- ಅಮ್ಮಾ ಪ್ರತೀದಿನ ಸಂಜೆ ತಪ್ಪದೇ ಹೋಗ್ತಾ ಇದ್ರೂ, ಅಪ್ಪಾ ಹೋಗೋದು walking ಮಾಡೋದಕ್ಕೆ ಆದ್ರೇ ಅಮ್ಮಾ ಮಾತ್ರಾ ಪರಿಶುಧ್ಧವಾಗಿ ಮನಬಿಚ್ಚಿ talking ಮಾಡುವುದಕ್ಕಾಗಿಯೇ ಎಂದರೂ ತಪ್ಪಾಗದು. ಅಪ್ಪನ ಜೊತೆ ಎರಡು ಮೂರು ಸುತ್ತು ಹಾಕುತ್ತಿದ್ದಂತೆಯೇ, ರೀ.. ನನಗೆ ಇನ್ನು ಮುಂದೆ ನಡೆಯಲು ಸಾಥ್ಯವಿಲ್ಲಾ ಎಂದು ಅಲ್ಲಿಯೇ ಹಾಸಿರುವ ನಿಗಧಿತ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾರೆ ಎಂದರೆ ಅವರ ಅಂದಿನ ದರ್ಬಾರ್ ಶುರು ಎಂದೇ ಆರ್ಥ. ರೀ ಸೀತಾ ಲಕ್ಷಮ್ಮಾ ನಿಮ್ಮ ಎರಡನೇ ಮಗನಿಗೆ ಯಾವುದಾದ್ರೂ ಹೆಣ್ಣು ಗೊತ್ತಾಯ್ತಾ? ಅವರ ಪಾಡಿಗೆ ಆವರು walk ಮಾಡುತ್ತಿದ್ದವರನ್ನು ಮಾತಾಡಿಸಿ, ನೋಡಿ ಮಹಾಲಕ್ಷ್ಮೀ ಲೇಔಟಿನಲ್ಲಿ ಒಬ್ಬಳು ಹುಡುಗಿ ಇದ್ದಾಳೆ. ಒಳ್ಳೆ ಮನೆತನ ಮನೆಗೆ ಬನ್ನಿ ಜಾತಕ ಕೊಡ್ತೀನಿ. ಯಾರಿಗೆ ಯಾರ ಮನೆಯ ಋಣಾ ಇರುತ್ತದೋ? ಯಾರಿಗೆ ಗೊತ್ತು? ಎಂದು ಅಲ್ಲೇ ಕುಳಿತಲ್ಲಿಯೇ ಹೆಣ್ಣುಗಂಡು ಜೋಡಿಸಿಯೇ ಬಿಡುತ್ತಿದ್ದರು. ಈ ರೀತಿ ಅಮ್ಮಾ ಮಾಡಿಸಿದ ಮದುವೆ ಲೆಖ್ಕವೇ ಇಲ್ಲ, ಇಂದಿಗೂ ಅದು ಹೇಗೋ ನಮ್ಮ ಮನೆಯ ಫೋನ್ ನಂಬರ್ ಪತ್ತೇ ಮಾಡೀ ಉಮಾ ಅವರು ಇದ್ದಾರಾ? ಎಂದು ಕೇಳಿದಾಗ.. ಆವರು ಇಲ್ಲಾ.. ನೀವು ಯಾರು ಮಾತಾಡ್ತಾ ಇರೋದು? ಏನು ಸಮಾಚಾರ ಎಂದು ಕೇಳಿದ್ರೇ.. ಹೌದಾ… ಯಾವಾಗ ಬರ್ತಾರೇ? ಸ್ವಲ್ಥ ಹೊತ್ತಿನ ನಂತರ ನಾನೇ ಕರೆ ಮಾಡ್ತೇನೆ ಅಂದಾಗ, ಅಮ್ಮಾ ಹೋಗಿ ಸುಮಾರು ವರ್ಷ ಆಯ್ತು ಎನ್ನುವಾಗ ಗಂಟಲು ಗಟ್ಟಿಯಾಗುತ್ತದೆ. ಅಯ್ಯೋ ಪಾಪವೇ.. ದಯವಿಟ್ಟು ಕ್ಷಮಿಸಿ ನನಗೆ ಗೊತ್ತಿರಲಿಲ್ಲ ನನ್ನ ದೊಡ್ಡ ಮಗಳಿಗೆ ಅವರೇ ಗಂಡು ಹುಡುಕಿ ಕೊಟ್ಟಿದ್ದರು ಈಗ ನಮ್ಮ ಚಿಕ್ಕ ಮಗನಿಗೋ ಇಲ್ಲವೇ ಮಗಳಿಗೋ ಸಂಬಂಧ ಹುಡುಕ್ತಾ ಇದ್ದೀವಿ ಅದಕ್ಕೆ ಉಮಾ ಅವರನ್ನೊಮ್ಮೆ ವಿಚಾರಿಸಿ ಬಿಡೋಣ ಎಂದು ಕರೆ ಮಾಡಿದ್ದೇ ಎಂದು ಇಂದಿಗೂ ಕರೆಗಳು ಬರುತ್ತಲೇ ಇರುತ್ತದೆ ಎಂದರೆ ಅಮ್ಮನ ಪ್ರಭಾವ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

ಕೆಲ ವರ್ಷಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಬಳ್ಳಾರಿಯ ಗಣಿ ಬ್ರದರ್ಸ್ ಗಳದ್ದೇ ಕಾರುಬಾರು ನಡೆಯುತ್ತಿದ್ದಾಗ, ಅಮ್ಮನ ತವರು ಕೆಜಿಎಫ್ ಆಗಿದ್ದ ಕಾರಣ ನಾನು ತಮಾಷೆಗೆಂದು ಭಯಾನಕ ಗಣಿ ಸಿಸ್ಟರ್ಸ್ ಎಂದು ನಮ್ಮ ಅಮ್ಮ ಮತ್ತು ಚಿಕ್ಕಮ್ಮಂದಿರನ್ನು ರೇಗಿಸುತ್ತಿದ್ದೆ.

maniಅಮ್ಮನ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳ್ತಾ ಇದ್ದೀನಂದ್ರೇ, ಇವತ್ತು ವೈಶಾಖ ಬಹುಳ ತೃತಿಯಾ. 12 ವರ್ಷಗಳ ಹಿಂದೆ ಅಕಾಲಿಕವಾಗಿ  ಅಮ್ಮಾ ನಮ್ಮನ್ನೆಲ್ಲಾ ಅಗಲಿದ ದಿನವಿದು. ಹಾಗಾಗಿ ನಮ್ಮನನ್ನು ಪರಿಚಯಿಸ ಬೇಕೆನಿಸಿತು.

ಕೊರೋನಾ ಮಾಹಾಮಾರಿಯಿಂದಾಗಿ ಕಳೆದೆರಡು ವರ್ಷ ಅಮ್ಮನ ಶ್ರಾಧ್ದವನ್ನು ಶಾಸ್ತ್ರೋಕ್ತವಾಗಿ ಮಾಡಲು ಸಾಧ್ಯವಾಗದೇ ಹೋಗಿದ್ದದ್ದಕ್ಕಾಗಿ ಬೇಸರವಿದೆ.  ಶ್ರದ್ಧೆಯಿಂದ ಮಾಡುವುದೇ ಶ್ರಾಧ್ಧ  ಎನ್ನುವಂತೆ, ಎರಡೂ ಬಾರಿಯೂ ಮನೆಯ ಹತ್ತಿರದ ಪುರೋಹಿತರನ್ನು ಕರೆಸಿ ಶ್ರದ್ಧಾ ಭಕ್ತಿಗಳಿಂದ  ಅಮ್ಮಾ ಅಜ್ಜಿ ಮತ್ತು ಮುತ್ತಜ್ಜಿಯರಿಗೆ ತಿಲತರ್ಪಣವನ್ನು ನೀಡಿ ಅರ್ಚಕರಿಗೆ ಯಥಾ ಶಕ್ತಿ ಸ್ವಯಂಪಾಕವನ್ನು ಕೊಟ್ಟು ಮಗಳಿಗಿಂತ ಮುತ್ತೈದೆ ಇಲ್ಲಾ‍, ಅಳಿಯನಿಗಿಂತ ಬ್ರಾಹ್ಮಣನಿಲ್ಲ ಎನ್ನುವಂತೆ ಮನೆಯ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬವನ್ನು ಕರೆಸಿ ಯಥಾ ಶಕ್ತಿ ಸತ್ಕರಿಸಿ ಅವರಿಗೇ ಮುತ್ತೈದೆ ಬಾಗಿಣವನ್ನು ಕೊಟ್ಟು ಮನಸ್ಸನ್ನು ಹಗುರ ಮಾಡಿಕೊಂಡಿದ್ದೆ. ಎಲ್ಲಾ ಅಮ್ಮಂದಿರಿಗೂ ತಮ್ಮ ಗಂಡು ಮಕ್ಕಳು ಮನೆಯ ಹೆಣ್ಣುಮಕ್ಕಳನ್ನು ಕರೆದು ಸತ್ಕರಿಸಿಬಿಟ್ಟರೆ ಖಂಡಿತವಾಗಿಯೂ  ಎಲ್ಲಿದ್ದರೂ ಅಲ್ಲಿಂದಲೇ ನಮ್ಮನ್ನೆಲ್ಲಾ ಹಾರೈಸುತ್ತಾರೆ ಎನ್ನುವುದೇ ನನ್ನ ಭಾವನೆ. ಈ ಬಾರಿ ಕೊರೋನಾ ಹಾವಳಿ ಅಷ್ಟಾಗಿ ಇಲ್ಲದಿರುವ ಕಾರಣ ಶಾಸ್ತ್ರೋಕವಾಗಿ ಶ್ರಾದ್ಧ ಮಾಡುವ ಮೂಲಕ ಅಮ್ಮನಿಗೆ ಸದ್ಗತಿ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.

ಇಂದಿಗೂ ನಾವು ಎಷ್ಟೇ ಆಸ್ತೆ ವಹಿಸಿ ಒತ್ತು ಶಾವಿಗೆ, ತಂಬುಳಿ, ಹುಣಸೇ ಗೊಚ್ಚು, ಬಜ್ಜಿ ಬೋಂಡ, ಹುಗ್ಗಿ, ಬೆಲ್ಲದನ್ನ ಮಾಡಿದರೂ ತಿನ್ನುವಾಗ ಛೇ.. ನಮ್ಮಮ್ಮ ಮಾಡುತ್ತಿದ್ದ ರುಚಿ ಬರಲಿಲ್ಲವಲ್ಲಾ ಎಂದು ಅಮ್ಮನ ನೆನಸಿಕೊಂಡೇ ತಿನ್ನುತ್ತೇವೆ. ಇಂಗು ತೆಂಗು ಕೊಟ್ಟರೆ ಮಂಗವೂ ಅಡುಗೆ ಮಾಡುತ್ತದೆ ಎನ್ನುವುದು ಗಾದೆ ಮಾತಾದರೂ, ಎಲ್ಲರಂತೆ ಅಮ್ಮ, ಕಾಯಿ ತುರಿಯನ್ನು ಸಾರಿಗೆ ಹಾಕದೇ, ಕಾಯಿಯನ್ನು ಚೆನ್ನಾಗಿ ರುಬ್ಬಿ ಅದರ ಹಾಲು ತೆಗೆದು ಹಾಕಿ ಹದವಾಗಿ ಇಂಗಿನ ಒಗ್ಗರಣೆ ಹಾಕಿ ಅಮ್ಮಾ ಮಾಡುತ್ತಿದ್ದ ಸಾರಿನ ರುಚಿ ವರ್ಣಿಸುವುದಕ್ಕಿಂತಲೂ ಅದನ್ನು ಸವಿದಿದ್ದವರಿಗೇ ಗೊತ್ತು. ಇನ್ನು ರುಬ್ಬಿದ ಕಾಯಿಯ ಚರಟವನ್ನು ಹಾಗೇ ಬೀಸಾಕದೇ ಯಾವುದಾದರೂ ತರಕಾರಿಯ ಪಲ್ಯ ಮಾಡಿ ಅದಕ್ಕೆ ಆ ಕಾಯಿ ಚರಟವನ್ನು ಹಾಕಿ ಕಸದಿಂದಲೂ ರಸವನ್ನು ತೆಗೆಯುತ್ತಿದ್ದ ಪುಣ್ಯಾತ್ಗಿತ್ತಿ. ಪುಣ್ಯಕ್ಕೆ ಅಮ್ಮನ ಜೊತೆಯಲ್ಲೇ ಪಳಗಿದ್ದ ನಮ್ಮಾಕೆಯೂ ಸಹಾ ಅದೇ ರೀತಿಯ ಸಾರನ್ನು ಮಾಡುವುದನ್ನು ಕಲಿತು ನಮ್ಮಮ್ಮನಿಂದಲೇ ನನಗಿಂತಲೂ ಚೆನ್ನಾಗಿ ಸಾರು ಮಾಡುತ್ತೀಯೇ, ಎಂಚು ಭೇಷ್ ಪಡೆದಿರುವ ಕಾರಣ, ಇನ್ನೂ ಸಹಾ ಅಮ್ಮನ ಸಾರಿನ ರುಚಿಯನ್ನು ಆಗಾಗ ಮನೆಯಲ್ಲಿ ಸವಿಯುತ್ತಿರುತ್ತೇವೆ. 

ಅಮ್ಮನ ನೆನಪಿಸುವ ಅದೆಷ್ಟೋ ಕೆಲಸಗಳನ್ನು ನಾನು ಇಂದಿಗೂ ಮಾಡುವುದೇ ಇಲ್ಲ. ಅದಕ್ಕೆ ಉದಾಹರಣೆ ಎಂದರೆ, ಇಂದಿಗೂ ನಾನು ಯಶವಂತಪುರ ಸರ್ಕಲ್ ಕಡೆ ಹೋಗುವುದನ್ನು ತಪ್ಪಿಸುತ್ತೇನೆ. ಯಶವಂತಪುರ ಮಾರ್ಕೆಟ್ ಕಡೆ ಹೋದಾಗಲೆಲ್ಲಾ ಒಂದು ಕ್ಷಣ ನಿಲ್ಲಿಸಿ ಓಡೋಡಿ ಹೋಗಿ ಅಮ್ಮನಿಗಾಗಿ ಚಿಗುರು ವಿಳ್ಳೇದೆಲೆ ತರುತ್ತಿದ್ದದ್ದು ನೆನಪಿಗೆ ಬಂದು ಬಿಡುತ್ತದೆ. ಇಂದಿಗೂ ಬೀದಿಯಲ್ಲಿ ಬಿಡಿ ಹೂ ಮಾರಿಕೊಂಡು ಹೋಗುವುದನ್ನು ನೋಡಿದಾಗಲೆಲ್ಲಾ ಗೊತ್ತಿಲ್ಲದೇ ಕಣ್ಣಂಚಿನಲ್ಲಿ ನೀರೂರುತ್ತದೆ.  ಅದರೆ ಭಿಕ್ಶುಕರನ್ನು ಕಂಡರೆ, ಇಲ್ಲವೇ ಸುಭ್ರಹ್ಮಣ್ಯನ ಕಾವಡಿ ಹೊತ್ತುಕೊಂಡು ಹೋಗುವವರನ್ನು ಎಲ್ಲಿಯೇ ನೋಡಿದರೂ, ಎಂತಹ ತುರ್ತು ಕೆಲಸದಲ್ಲಿ ಮಗ್ನನಾಗಿದ್ದರೂ ಒಂದು ಕ್ಷಣ ಬಿಡುವು ಮಾಡಿಕೊಂಡು  ತಕ್ಷಣವೇ ಅವರ ಬಳಿ ಹೋಗಿ ಕೈಲಾದ ಮಟ್ಟಿಗಿನ ಕಾಣಿಕೆ ಹಾಕುವಾಗ  ಅಮ್ಮನೇ ಚಿಕ್ಕ ವಯಸ್ಸಿನಲ್ಲಿ ಕೈ ಹಿಡಿದು ಹಾಕಿಸುತ್ತಿದ್ದದ್ದು ನೆನಪಾಗುವುರಿಂದ ಅಂತಹ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಎಂದಿಗೂ ಬಯಸುವುದಿಲ್ಲ.

ನಮ್ಮ ಅಮ್ಮಾ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮ ನಡೆ ನುಡಿ ಆಚಾರ ವಿಚಾರಗಳ ಮೂಲಕ ಸದಾಕಾಲವೂ ನಮ್ಮೊಂದಿಗೆ ಇದ್ದೇ ಇದ್ದಾರೆ. ಅಮ್ಮಾ ಹೇಳಿಕ್ಕೊಟ್ಟ ಪ್ರತಿಯೊಂದನ್ನೂ ಇಂದಿಗೂ ಚಾಚೂ ತಪ್ಪದೇ ಅಚರಿಸಿಕೊಂಡು ಹೋಗುವ ಮುಖಾಂತರ ಅಮ್ಮನ ವ್ಯಕ್ತಿತ್ವವನ್ನು ನಮ್ಮಲ್ಲಿ ಪ್ರತಿಫಲನಗೊಳಿಸುತ್ತಿದ್ದೇವೆ.

ಬಹುತೇಕರು ನನ್ನ ಬರಹವವನ್ನು ಓದಿಯೋ ಇಲ್ಲವೇ, ನನ್ನ ಮಾತುಗಳನ್ನು ಕೇಳಿಯೋ ಇಲ್ಲವೇ ಗಮಕ ವ್ಯಾಖ್ಯಾನ ಮಾಡುವಾಗ ಎಲ್ಲಾ ಥೇಟ್ ತಾತ ಮತ್ತು ಅಪ್ಪನ ಹಾಗೇ ರೂಡಿಸಿಕೊಂಡಿದ್ದೀಯೇ ಎಂದುಹೊಗಳುತ್ತಾರೆ. ಆದರೆ ನನಗೆ ನಿಜವಾಗಿಯೂ ಓದಿನ ಹುಚ್ಚನ್ನು ಹತ್ತಿಸಿದ ಅಮ್ಮನನ್ನು ಯಾರೂ ನೆನೆಯದ ಕಾರಣ, ನನ್ನ ಅಂಕಿತನಾಮವನ್ನು ಉಮಾಸುತ ಎಂದಿಟ್ಟು ಕೊಂಡು ಪ್ರತಿ ಬಾರಿಯೂ ಅವರೆಲ್ಲರೂ ನನ್ನ ಲೇಖನದ ಕೊನೆಯಲ್ಲಿ ನಮ್ಮಮ್ಮನನ್ನು ನೆನಪಿಸಿಕೊಳ್ಳುವಂತೆ ಮಾಡುವುದರಲ್ಲಿ ಖುಷಿ ಪಡುತ್ತೇನೆ. ತನ್ಮೂಲಕ ನನಗೆ ವಿದ್ಯೆ, ಬುದ್ಧಿ, ವಿವೇಕಗಳನ್ನು ಕಲಿಸಿದ ಅಮ್ಮನಿಗಾಗಿಯೇ ಕಿಂಚಿತ್ ಗೌರವನ್ನು ಕೊಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಹೆತ್ತ ತಾಯಿಯ ಋಣ ನೂರು ಜನ್ಮ ಎತ್ತಿಬಂದರೂ ತೀರಿಸಲಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಜನ್ಮ ರಹಸ್ಯ

ಅದು 1970ನೇ ಇಸವಿ ಅಕ್ಟೋಬರ್ ಮಾಸದ ಮೊದಲ ವಾರ. ಆಗ ತಾನೇ ಬಾದ್ರಪದ ಹಬ್ಬಗಳು ಕಳೆದು ಪಕ್ಷಮಾಸವೂ ಮುಗಿದು ಆಶ್ವಿಯಜಮಾಸ ಶುರುವಾಗುತ್ತಿತ್ತು. ನವರಾತ್ರಿಯ ಹಬ್ಬಕ್ಕೆ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲು ಸಕಲ ಸಿದ್ಧತೆಗಳು ನಡೆಯುತ್ತಿತ್ತು. ಚೊಚ್ಚಲು ಬಾಣಂತನಕ್ಕೆ ಬಂದಿದ್ದ ಹಿರಿಯ ಮಗಳು ಆದರೆ ಇದ್ದಕ್ಕಿದ್ದಂತೆಯೆ ಹೊಟ್ಟೆ ನೋವು ಎಂದು ಹೇಳಿದಾಗ, ತಾಯಿ ಗರ್ಭಿಣಿ ಹೆಂಗಸರಿಗೆ ಈ ರೀತಿಯ ನೋವುಗಳೆಲ್ಲಾ ಸಹಜ ಎಂದು ಬಿಸಿ ನೀರು ಮತ್ತು ಮನೆಯ ಮದ್ದನ್ನು ನೀಡಿದರೂ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿದರು. ಅಷ್ಟು ತಡರಾತ್ರಿಯಲ್ಲಿ ಹೇಗೆ ಕರೆದುಕೊಂಡು ಹೋಗುವುದು. ಮನೆಯ ಹಿರಿಯರೂ ಸಹಾ ಆರೋಗ್ಯ ಸರಿಯಿಲ್ಲದೇ ಚಿಕಿತ್ಸೆಯಲ್ಲಿದ್ದಾರೆ. ಇನ್ನು ಬೆಳೆದು ನಿಂತ ಹೆಣ್ಣು ಮಕ್ಕಳಿದ್ದಾರೆ.
ಅಷ್ಟು ಹೊತ್ತಿನಲ್ಲಿ ಅಕ್ಕ ಪಕ್ಕದವರಿಗೆ ತೊಂದರೆ ಕೊಡಬಾರದೆಂದು ನಿರ್ಧರಿಸಿ ಇದ್ದ ಒಬ್ಬನೇ ಒಬ್ಬ ಮಗನನ್ನು ಎಬ್ಬಿಸಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡು ಆಷ್ಟರಲ್ಲಿ ನಾನು ಬಟ್ಟೆ ಬರೆ ಮತ್ತು ಅಗತ್ಯ ವಸ್ತುಗಳನ್ನು ತೆಗೆದಿಟ್ಟು ಕೊಳ್ಳುತ್ತೇನೆ ಎಂದು ಸೂಚಿಸಿದರು. ಅಮ್ಮ ಹೇಳಿದ್ದೇ ವೇದವಾಕ್ಯ ಎಂದು ನಂಬಿದ್ದ ಮಗ ಕೂಡಲೇ ಮನೆಯ ಪಕ್ಕದಲ್ಲಿದ್ದ ಪೋಲೀಸ್ ಸ್ಟೇಷನ್ನಿಗೆ ಧಾವಿಸಿದ. ಈ ರೀತಿಯ ಪರಿಸ್ಥಿತಿ ಎಂದಾದರೂ ಬರಬಹುದೆಂಬ ಕಾರಣದಿಂದಾಗಿಯೇ ಚೆನ್ನಾಗಿಯೇ ಪರಿಚಯವಿದ್ದ ಪೋಲಿಸರಿಗೆ ಅಗತ್ಯ ಬಿದ್ದಾಗ ನಿಮ್ಮ ವಾಹನದ ಅವಶ್ಯತೆ ಆಗಬಹುದೆಂದು ತಿಳಿಸಿದ್ದ ಕಾರಣ ಮತ್ತು ಗರ್ಭಿಣಿ ಹೆಂಗಸಿನ ಪರಿಸ್ಥಿತಿ ಅರಿವಿದ್ದ ಪೋಲೀಸರೂ ಸಹಾ ಮಾನವೀಯತೆಯಿಂದ ಕೂಡಲೇ ತಮ್ಮ ಜೀಪ್ ಕಳುಹಿಸಿ ಕೊಟ್ಟು ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿ ಸ್ವಲ್ಪ ಹೊತ್ತಿನ ನಂತರ ತಾಯಿ ಮಗಳೂ ಆಸ್ಪತ್ರೆಯಲ್ಲಿಯೇ ಉಳಿದು ಕೊಂಡರೆ ಮಗ ಅದೇ ಪೋಲೀಸ್ ವಾಹನದಲ್ಲಿ ಮನೆಗೆ ಹಿಂದಿರುಗಿದ.

ಮಾರನೇಯ ದಿನ ಬೆಳಿಗ್ಗೆ ಮನೆಯವರೆಲ್ಲರೂ ಎದ್ದಾಗ, ಅಮ್ಮ ಮತ್ತು ಹಿರಿಯ ಮಗಳು ಮನೆಯಲ್ಲಿ ಕಾಣಿಸಲಿಲ್ಲದ ಕಾರಣ ಎಲ್ಲರಿಗೂ ಆತಂಕ. ಅದೇ ಸಮಯಕ್ಕೆ ಮನೆಯ ಮಗ ನಿದ್ದೆಯಿಂದ ಎದ್ದು ಹಿಂದಿನ ರಾತ್ರಿ ನಡೆದದ್ದೆಲ್ಲವನೂ ತಿಳಿಸಿ, ಬಿಸಿ ಬಿಸಿ ಕಾಫೀ ಮತ್ತು ತಿಂಡಿಯನ್ನು ಮಾಡಿ ಕೊಡಲು ಎರಡನೇ ತಂಗಿಗೆ ತಿಳಿಸಿದ. ಅಣ್ಣನ ಕೋರಿಕೆಯನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಪೂರೈಸುವ ಹೊತ್ತಿಗೆ, ತಂದೆ ಮತ್ತು ಮಗ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಥರ್ಮಾಸ್ ಫ್ಲಾಸ್ಕಿನಲ್ಲಿ ಹಾಕಿಕೊಟ್ಟ ಕಾಫಿ ಮತ್ತು ತಿಂಡಿಯ ಡಭ್ಬಿಯನ್ನು ತೆಗೆದುಕೊಂಡು ಇಬ್ಬರೂ ಒಂದೇ ಸೈಕಲ್ಲೇರಿ ಮನೆಯಿಂದ ನಾಲ್ಕೈದು ಕಿಮಿ ದೂರದಲ್ಲಿದ್ದ ಆಸ್ಪತ್ರೆಗೆ ತಲುಪುವಷ್ಟರಲ್ಲಿ, ಪ್ರಸವ ನೋವಿನಿಂದ ಇಡೀ ರಾತ್ರಿ ನರಳಿ ಗರ್ಭಿಣಿಗೆ ಆಗತಾನೇ ನಿದ್ದೆ ಹತ್ತಿತ್ತು. ಸರಿ ಗರ್ಭಿಣಿಯನ್ನು ಎಚ್ಚರಿಸುವುದು ಬೇಡ ಎಂದು ನಿರ್ಧರಿಸಿ ಆಸ್ಪತ್ರೆಯ ವೈದ್ಯರನ್ನು ಕಾಣಲು ಹೋದಾಗ, ಅ ಕ್ಷಣದಲ್ಲಿ ಕೇವಲ ಕರ್ತವ್ಯ ನಿರತ ವೈದ್ಯರಿದ್ದು ಹಿರಿಯ ವೈದ್ಯರು ಸುಮಾರು ಒಂಭತ್ತು ಗಂಟೆ ಹೊತ್ತಿಗೆ ರೋಗಿಗಳ ತಪಾಸಣೆಗೆ ಬರುತ್ತಾರೆ ಎಂದು ತಿಳಿದ ಕೂಡಲೇ ಮಗನನ್ನು ಆತನ ಕಛೇರಿಗೆ ಹೋಗಲು ತಿಳಿಸಿ ತಾವೂ ಸಹಾ ಆ ಆಸ್ಪತ್ರೆಯ ಹತ್ತಿರದಲ್ಲೇ ಇದ್ದ ತಮ್ಮ ಕಛೇರಿಗೆ ಹೋಗಿ ಕೆಲಸ ಆರಂಭಿಸಿ ಸರಿಯಾಗಿ ಒಂಬತ್ತರ ಹೊತ್ತಿಗೆ ಹಿರಿಯ ವೈದ್ಯರನ್ನು ಕಾಣಲು ಆಸ್ಪತ್ರೆಗೆ ಬಂದರು. ಆವರನ್ನು ನೋಡಿದ ಕೂಡಲೇ ಆ ವೈದ್ಯರು ಎದ್ದು ನಿಂತು ತಮ್ಮ ಗೌರವವನ್ನು ಸೂಚಿಸಿ, ಸಾರ್ ಈಗ ತಾನೇ ನಿಮ್ಮ ಮಗಳನ್ನೇ ಪರೀಕ್ಷಿಸಿ ಬಂದೆ. ಈಗ ತಾನೇ ಹೆರಿಗೆ ನೋವು ಶುರುವಾಗಿದೆ. ನೋಡೋಣ ಇನ್ನು ಎರಡು ಮೂರು ದಿನಗಳ ಒಳಗೆ ಹೆರಿಗೆಯಾಗ ಬಹುದು. ಸುಮ್ಮನೆ ಮನೆಗೆ ಕರೆದು ಕೊಂಡು ಹೋಗಿ ಪುನಃ ಪುನಃ ಕರೆದು ಕೊಂಡು ಬರುವುದು ಕಷ್ಟದ ಕೆಲಸವಾದ್ದರಿಂದ ಇಲ್ಲಿಯೇ ಇದ್ದು ಪ್ರಸವ ಆದ ನಂತರ ತಾಯಿ ಮಗವಿನ ಆರೋಗ್ಯ ಸ್ಥಿತಿ ನೋಡಿದ ನಂತರ ಒಟ್ಟಿಗೆಮನೆಗೆ ಕರೆದುಕೊಂಡು ಹೋಗುವಿರಂತೆ. ಈಗ ಏನೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಸಮಾಧಾನ ಪಡಿಸಿದರು. ಇಡೀ ಕೋಲಾರದ ಚಿನ್ನದ ಗಣಿಯ ಅಷ್ಟೂ ಕಛೇರಿಗಳ ಪ್ರಮುಖ ನಿರ್ವಾಹಕರಾಗಿದ್ದ (ಅಡ್ಮಿನ್) ಶ್ರೀಯುತರ ಅಧಿಕಾರ ವ್ಯಾಪ್ತಿಯಲ್ಲಿ ಈ ಆಸ್ಪತ್ರೆಯೂ ಸೇರಿತ್ತು. ಹಾಗಾಗಿ ವೈದ್ಯರು ತುಸು ಹೆಚ್ಚಿನ ಕಾಳಜಿ ವಹಿಸುತ್ತಿದ್ದರು.

ಇನ್ನು ಮಡಿಗೆಂದು ಮನೆಗೆ ಬಂದ ತಾಯಿಯವರಿಗೆ ಒಂದು ಕಡೆ ಮಗಳ ಪ್ರಸವದ ಬೇನೆಯಾದರೆ, ಗೊಂಬೇ ಹಬ್ಬಕ್ಕೆಂದು ವಾರದಿಂದಲೇ ತಯಾರಿ ನಡೆಸಿ ಅಂದಿನಿಂದಲೇ ಶುರುವಾಗಿದ್ದ ನವರಾತ್ರಿಗೆ ಬೊಂಬೆ ಕೂರಿಸುವುದೋ ಬೇಡವೋ ಎಂಬ ಜಿಜ್ಞಾಸೆ ಮೂಡಿತಾದರೂ, ಸುಖಾ ಸುಮ್ಮನೆ ಹಬ್ಬವನ್ನು ನಿಲ್ಲಿಸಬಾರದೆಂದು ನಿರ್ಧರಿಸಿ ಶಾಸ್ತ್ರಕ್ಕೆಂದು ದೇವರ ಮನೆಯಲ್ಲಿ ಕೇವಲ ಪಟ್ಟದ ಗೊಂಬೆಗಳನ್ನು ಇರಿಸಿ ಲಗುಬಗೆಯಿಂದ ಪೂಜೆ ಮಾಡಿ ಮನೆಯವರಿಗೆಲ್ಲಾ ಅಡುಗೆ ಮಾಡಿಟ್ಟು ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಪುನಃ ಆಸ್ಪತ್ರೆಗೆ ಹೊರಟರು. ಈ ರೀತಿಯ ಪ್ರಕ್ರಿಯೆ ಮುಂದಿನ ಮೂರು ದಿನಗಳು ನಡೆಯಿತು. ಮಗಳಿಗೆ ಬಿಟ್ಟು ಬಿಟ್ಟೂ ನೋವು ಬರುತ್ತಿತ್ತಾದರೂ ನಿಜವಾದ ಹೆರಿಗೆಯ ನೋವು ಬರುತ್ತಿರಲಿಲ್ಲ. ಅತ್ತ ಬೆಂಗಳೂರಿನ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡನಿಗೆ ಇದಾವುದರ ಅರಿವೇ ಇರಲಿಲ್ಲ. ಮಡದಿಯನ್ನು ಬಾಣಂತನಕ್ಕೆ ತವರಿಗೆ ಕಳುಹಿಸಿಕೊಟ್ಟ ಮೇಲೆ ಪ್ರತೀ ಶನಿವಾರ ಸಂಜೆ ಬೆಂಗಳೂರಿನಿಂದ ಹೊರಟು ತಡರಾತ್ರಿಯ ಹೊತ್ತಿಗೆ ಮಾವನ ಮನೆ ತಲುಪಿ, ಪುನಃ ಭಾನುವಾರ ಸಂಜೆಯೋ ಇಲ್ಲವೇ ಸೋಮವಾರ ಬೆಳಗಿನ ಜಾವವೇ ಬೆಂಗಳೂರಿಗೆ ಹಿಂದಿರುಗುತ್ತಿದ್ದದ್ದು ಪ್ರತೀವಾರದ ದಿನಚರಿಯಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನವೇ Wife admitted to hospital start immediately ಎಂಬ ಟಿಲಿಗ್ರಾಂ ಕಛೇರಿಗೇ ಬಂದ ಕಾರಣ, ಅದನ್ನು ತನ್ನ ಮೇಲಧಿಕಾರಿಗೆ ತೋರಿಸಿ ರಜೆ ಪಡೆದು ಮನೆಯವರ ಕ್ಷೇಮವನ್ನು ವಿಚಾರಿಸಲು ಮಾವನ ಊರು ತಲುಪಿದಾಗ ಸ್ವಲ್ಪ ಸಂಜೆಯ ಹೊತ್ತಾಗಿತ್ತು. ಬಸ್ಸಿನಿಂದ ಇಳಿದು ನೇರವಾಗಿ ಮನೆಗೆ ಹೋಗದೇ, ಅಸ್ಪತ್ರೆಗೆ ಹೋದಾಗ ಪತಿಯನ್ನು ನೋಡಿ ಕೊಂಚ ಸಂತೋಷ ಪಟ್ಟಳಾದರೂ, ಹೆರಿಗೆ ನೋವಿನ ಭರದಲ್ಲಿ ಆ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಇದೇ ಪರಿಸ್ಥಿತಿ ಮುಂದಿನ ಎರಡು ದಿನಗಳವರೆಗೂ ಮುಂದುವರೆದು ಕೊನೆಗೆ ಸೋಮವಾರ ಬೆಳಿಗ್ಗೆ ಇನ್ನು ತಡ ಮಾಡಿದರೆ ತಾಯಿ ಮಗುವಿನ ಆರೋಗ್ಯಕ್ಕೆ ಅಪಾಯಕಾರಿ ಎಂದು ತಿಳಿಸಿ ಅಂದಿನ ಕಾಲಕ್ಕೇ ಬಹಳ ಬಹಳ ವಿರಳವಾಗಿದ್ದ ಸಿಝೇರಿಯನ್ ಮಾಡಲು ನಿರ್ಧರಿದರು. ಸಾಧಾರಣವಾಗಿ ಒಂಭತ್ತು ತಿಂಗಳು ಕಳೆದು ಒಂದು ವಾರಕ್ಕೋ ಇಲ್ಲವೇ ಎರಡನೇ ವಾರಕ್ಕೋ ಪ್ರಸವವಾಗುವ ಸಂದರ್ಭಗಳೇ ಹೆಚ್ಚಾಗಿರುವಾಗ ಬರೋಬರೀ ಹತ್ತು ತಿಂಗಳಾದರೂ ಪ್ರಸವವೇ ಆಗಿರದೆ, ಒಂದು ರೀತಿಯ ಗಜಪ್ರಸವದ ಮಾದರಿಯಾಗಿತ್ತು.

ತಾಯಿ ಮತ್ತು ಮಗು ಗಂಭೀರ ಸ್ಥಿತಿಯನ್ನು ತಲುಪಿದ್ದಾರೆ, ಸಹಜ ಹೆರಿಗೆ ಆಗದ ಕಾರಣ, ಆಪರೇಷನ್ ಮಾಡ ಬೇಕಂತೇ ಎಂಬ ವಿಷಯ ಇಡೀ ಮನೆಯವರಿಗೆಲ್ಲಾ ಆತಂಕವನ್ನು ಉಂಟು ಮಾಡಿತ್ತು. ಮನೆಯ ಯಜಮಾನರು ತಮ್ಮ ಅಧಿಕಾರದ ಪ್ರಭಾವ ಬಳೆಸಿ ಕೋಲಾರದಿಂದ ಹಿರಿಯ ಮತ್ತು ಸಿಝರಿಯೆನ್ ನಲ್ಲಿ ಪಳಗಿರುವ ಪ್ರಸೂತಿ ತಜ್ಣೆಯನ್ನು ಕರೆಸಲು ವ್ಯವಸ್ಥೆ ಮಾಡಿದ್ದರು. ಬೆಳ್ಳಿಗ್ಗೆಯೇ ಬರಬೇಕಾಗಿದ್ದವರು ಸುಮಾರು ಮಧ್ಯಾಹ್ನದ ಸಮಯಕ್ಕೆ ಬಂದು ಗರ್ಭಿಣಿಯನ್ನು ಕೂಲಂಕುಶವಾಗಿ ಪರೀಕ್ಷೀಸಿ ಈಗಾಗಲೇ ಹತ್ತು ತಿಂಗಳು ಪೂರ್ಣವಾಗಿ ಹೊಟ್ಟೆಯಲ್ಲಿ ಮಗು ಚೆನ್ನಾಗಿ ಬೆಳೆದಿರುವ ಕಾರಣ ಸಹಜವಾಗಿ ಪ್ರಸವ ಆಗುವುದು ಕಷ್ಟವಾಗುತ್ತಿದೆ. ಸ್ವಲ್ಪ ಶ್ರಮ ವಹಿಸಿ ಎಚ್ಚರಿಕೆಯಿಂದ ಈ ಕೂಡಲೇ ಸಿಝೇರಿಯನ್ ಮಾಡಿದಲ್ಲಿ ತಾಯಿ ಮತ್ತು ಮಗು ಇಬ್ಬರನ್ನೂ ಕಾಪಾಡಬಹುದು ಎಂದು ತಿಳಿಸಿ ಆಪರೇಷನ್ ಮಾಡಲು ಅಗತ್ಯವಿದ್ದ ಸಹಿಗಳನ್ನೆಲ್ಲಾ ಪತಿರಾಯರ ಹತ್ತಿರ ಮಾಡಿಸಿಕೊಂಡು ಸುಮಾರು ಒಂದು ಗಂಟೆಗೆ ಆಪರೇಷನ್ ಶುರು ಮಾಡಿದರೂ ಗಂಟೆ ಮೂರಾದರೂ ಒಳಗಿನಿಂದ ಮಗು ಅಳುವಿನ ಶಭ್ದ ಕೇಳಿಸುತ್ತಲೇ ಇಲ್ಲ. ಆವಾಗ, ಈವಾಗ ಒಮ್ಮೆ ದಾದಿಯರು ಹೊರಗೆ ಬಂದು ಏನೇನೋ ತೆಗೆದುಕೊಂಡು ಹೋಗುತ್ತಿದ್ದರಾದರೂ ಒಳಗೆ ಏನಾಗುತ್ತಿದೆ ಎಂಬುದನ್ನು ತಿಳಿಸದೇ ಇದ್ದದ್ದರಿಂದ ಆಸ್ಪತ್ರೆಯಲ್ಲಿ ಕಾಯುತ್ತಿದ ಮನೆಯವರಿಗೆಲ್ಲರಿಗೂ ಅತಂಕದ ಛಾಯೆ ಮೂಡಿತ್ತು. ಸುಮಾರು ಮೂರುವರೆಯ ಹೊತ್ತಿಗೆ ಹೊರಗೆ ಬಂದ ಹಿರಿಯ ವೈದ್ಯೆ ಗರ್ಭಿಣಿಯ ತಂದೆ ಮತ್ತು ಗಂಡನನ್ನು ಕರೆಸಿ ಕೊಂಡು ನೋಡಿ ಆಪರೇಷನ್ ಮಾಡುವುವುದು ಸುಲಭ ಆದರೆ ಅದರೆ ಮುಂದೆ ಅದರ ಪರಿಣಾಮ ಕೆಲವು ಬಾರಿ ಚೆನ್ನಾಗಿ ಇರದ ಕಾರಣ, ನಾವು ಇಂಗ್ಝೆಕ್ಷನ್ ಕೊಟ್ಟು ಕೃತಕ ಹೆರಿಗೆ ನೋವು ಬರಿಸಲು ಇದುವರೆಗೂ ಪ್ರಯತ್ನ ಪಟ್ಟೆವು. ಸುಮ್ಮನೆ ನೋವು ಬರುತ್ತಿದೆಯಾದರೂ ಪ್ರಸವ ಆಗುತ್ತಿಲ್ಲವಾದ್ದರಿಂದ ಸ್ವಲ್ಪ ರಿಸ್ಕ್ ತೆಗೆದುಕೊಂಡು ಈಗ ಆಪರೇಷನ್ ಮಾಡುತ್ತಿದ್ದೇವೆ. ನಾವು ನಮ್ಮ ಪ್ರಯತ್ನವನ್ನಂತೂ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಮುಂದಿನದನ್ನು ಆ ಭಗವಂತನ ಮೇಲೆ ಭಾರ ಹಾಕೋಣ. ನಮ್ಮ ಮೇಲೆ ಭರವಸೆ ಇಡಿ ಎಂದು ಸಮಾಧಾನ ಪಡಿಸಿ ಒಳಗೆ ಹೋದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಂದ ಹೊರೆಗೆ ಬಂದ ಪರಿವಯದ ದಾದಿಯನ್ನು ಕೇಳಿದಾಗ, ಪರಿಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಮಗು ಹೆಡ್ ಫಿಕ್ಸ್ ಆಗದ ಕಾರಣ ಸಹಜವಾದ ಹೆರಿಗೆ ಯಾಗುತ್ತಿಲ್ಲ. ಈಗಾಗಲೇ ಹತ್ತು ತಿಂಗಳಾದ ಪರಿಣಾಮ ಮಗು ತುಂಬಾನೇ ಬೆಳೆದು ಬಿಟ್ಟಿರುವ ಕಾರಣ, ಆಪರೇಷನ್ ಕೂಡ ಸ್ವಲ್ಪ ಕಷ್ಟ ಅದಕ್ಕೇ ಡಾಕ್ಟರ್ ಸ್ವಲ್ಪ ಹಿಂದೂ ಮುಂದೂ ನೋಡುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾಯಿ ಇಲ್ಲವೇ ಮಗುವನ್ನು ಕಳೆದು ಕೊಳ್ಳುವ ಅಪಾಯ ಇದೆ ಎಂದು ವೈದ್ಯರುಗಳು ಮಾತನಾಡಿಕೊಳ್ಳುತ್ತಿದ್ದಾರೆಂದು ತಿಳಿಸಿ, ದಯವಿಟ್ಟು ಇದನ್ನು ನಾನು ಹೇಳಿದೆ ಎಂದು ಯಾರಲ್ಲೂ ಹೇಳಬೇಡಿ. ಆಮೇಲೆ ನನಗೆ ತೊಂದರೆಯಾಗುತ್ತದೆ ಎಂದು ಒಂದೇ ಉಸಿರಿನಲ್ಲಿ ದಾದಿ ಹೇಳಿದ್ದನ್ನು ಕೇಳಿದ ಮನೆಯವರಿಗೆಲ್ಲರಿಗೂ ಮತ್ತೊಮ್ಮೆ ಇನ್ನು ಆತಂಕ ಮೂಡಿಸಿತು.

Screenshot 2019-10-03 at 5.33.21 AM.png

ಅಲ್ಲಿಯವರೆಗೂ ಸುಮ್ಮನಿದ್ದ ಪತಿರಾಯ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದದ್ದನು ಕಂಡು ಈ ವಿಚಾರವನ್ನು ಊರಿನಲ್ಲಿರುವ ತನ್ನ ತಂದೇ ತಾಯಿಯವರಿಗೆ ತಿಳಿಸಲು ಅಲ್ಲೇ ಹತ್ತಿರವಿದ್ದ ಪೋಸ್ಟ್ ಆಫೀಸಿಗೆ ಹೋಗಿ ಕಾರ್ಡ್ ಒಂದನ್ನು ಕೊಂಡು ಮಡದಿಯನ್ನು ಹೆರಿಗೆಗಾಗಿ ಐದಾರು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಿ ಈಗ ಪರಿಸ್ಥಿತಿ ಗಂಭಿರ ಸ್ಥಿತಿಗೆ ತಲುಪಿರುವುದನ್ನು ಬಹಳ ದುಃಖದಿಂದಲೇ ವಿವರಿಸಿ ದಯವಿಟ್ಟು ಮನೆ ದೇವರು ಮತ್ತು ಗ್ರಾಮದೇವತೆಗೆ ಸುಖಃ ಪ್ರಸವವಾಗುವಂತೆ ಕೋರಿಕೊಳ್ಳಲು ಬರೆದು ಪೋಸ್ಟ್ ಮಾಡಿ ಭಗವಂತನ ಸ್ಮರಣೆ ಮಾಡುತ್ತಲೇ ಪುನಃ ಲಗುಬಗನೇ ಆಸ್ಪತ್ರೆಗೆ ಹಿಂದಿರುಗುತ್ತಾನೆ. ಊರಿನಲ್ಲಿ ಅದೇ ಸಮಯಕ್ಕೇ ಅವರ ದೊಡ್ದ ತಾತನವರ ಶ್ರಾಧ್ಧ ನಡೆಯುತ್ತಿರುತ್ತದೆ ಎಂಬ ವಿಷಯವೂ ಅವರಿಗೆ ಅರಿವಿರಲಿಲ್ಲ. ವಿಧಿಯಾಟ ನೋಡಿ, ಅತ್ತ ಊರಿನಲ್ಲಿ ಹಿರಿಯರ ಶ್ರಾದ್ಧ ಕಾರ್ಯ ಇಲ್ಲಿ ಅದೇ ಕುಟುಂಬದ ಸೊಸೆ ಜೀವನ್ಮರಣ ಸ್ಥಿತಿಯಲ್ಲಿ ಪ್ರಸವದ ವೇದನೆ ಪಡುತ್ತಿದ್ದಾಳೆ.

ಅಂತೂ ಇಂತೂ ವೈದ್ಯರ ಸತತ ಪರಿಶ್ರಮದ ಫಲವೋ, ಆವರ ಮನೆಯ ಹಿರಿಯರ ಆಶೀರ್ವಾದವೋ ಇಲ್ಲವೇ, ಭಗವಂತನ ಅನುಗ್ರಹವೋ ಎನೋ? ಸಂಜೆ ಸುಮಾರು 5:30ಕ್ಕೆ ಒಳಗಿನಿಂದ ಮಗು ಅಳುವ ಶಬ್ಧ ಕೇಳುತ್ತಿದ್ದಂತೆಯೇ ಹೊರಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಎಲ್ಲರ ಮುಖದಲ್ಲೂ ಸಂತಸದ ವಾತಾವರಣ. ಅಬ್ಬಾ ದೇವರು ಕಣ್ಣು ಬಿಟ್ಟು ಬಿಟ್ಟ ಎಂದು ಎಲ್ಲರೂ ತಮ್ಮ ಮನಸ್ಸಿನಲ್ಲಿಯೇ ಆ ಭಗವಂತನನ್ನು ಪ್ರಾರ್ಥಿಸಿದರು. ಹೆರಿಗೆಯೇನೋ ಆಯಿತು. ಹುಟ್ಟಿರುವ ಮಗು ಗಂಡೋ ಹೆಣ್ಣೊ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡ ತೊಡಗುತ್ತದೆ. ಹತ್ತು ತಿಂಗಳು ತುಂಬಿದ ನಂತರ ಹುಟ್ಟಿದ್ದಾದ್ದರಿಂದ ಗಂಡು ಮಗುವೇ ಆಗಿರ ಬಹುದು ಎಂದು ಆಕೆಯ ತಾಯಿ ಹೇಳಿದರೆ, ಇಲ್ಲಾ ಇತ್ತೀಚೆಗೆ ತುಂಬಾನೇ ಸೊರಗಿ ಹೋಗಿದ್ದಳು ಹಾಗಾಗಿ ಹೆಣ್ಣು ಮಗುವಾಗಿರ ಬಹುದು ಎಂದು ಆಕೆಯ ಪತಿರಾಯರ ವಾದ. ಅತ್ತೆ ಮಾವನ ಜಟಾಪಟಿಯನ್ನು ನೋಡುತ್ತಿದ್ದ ಅಳಿಯ ಮಗು ಆದ ಸಂತೋಷದಲ್ಲೇ, ಮಗು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ನಮಗೆ ತೊಂದರೆ ಇಲ್ಲ, ಕಣ್ಣು ಮೂಗು, ಬಾಯಿ, ಕಿವಿ ಹೀಗೆ ಎಲ್ಲಾ ಅಂಗಾಗಗಳೂ ಸರಿಯಾಗಿದ್ದು. ತಾಯಿ ಮಗು ಆರೋಗ್ಯವಾಗಿದ್ದರೆ ಸಾಕು ಎನ್ನುತ್ತಾರೆ. ಆಷ್ಟರೊಳಗೆ ಒಳಗಿನಿಂದ ಬಂದ ವೈದ್ಯರು, Congratulations Mr. Rao. ನೀವು ತಾತ ಆಗಿದ್ದೀರಿ. ನಿಮ್ಮ ಮಗಳು ಮುದ್ದಾದ ಮತ್ತು ಆಷ್ಟೇ ಗುಂಡು ಗುಂಡಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗು ಹೊಟ್ಟೆಯಲ್ಲಿ ತುಂಬಾನೇ ಬೆಳೆದಿದ್ದ ಕಾರಣ ತುಸು ಹೆರಿಗೆ ತುಸು ಪ್ರಯಾಸವಾಯಿತು. ಮಾಡುವ ಭರದಲ್ಲಿ ಮಗುವಿನ ಹಣೆಗೆ ಕತ್ತರಿ ತಾಕಿದ ಪರಿಣಾಮ ಸ್ವಲ್ಪ ಗಾಯವಾಗಿದೆ ಮತ್ತು ಅದಕ್ಕೆ ನಾವು ಚಿಕಿತ್ಸೆ ಮಾಡಿದ್ದೇವೆ. ಗಾಭರೀ ಪಡುವ ಅಗತ್ಯವಿಲ್ಲ. ಒಂದೈದು ನಿಮಿಷ ತಡೆಯಿರಿ. ಮಗುವಿಗೆ ಸ್ನಾನ ಮಾಡಿಸಿ ಶುಚಿಮಾಡಿ ನಿಮಗೆ ತೋರಿಸುತ್ತಾರೆ ಎಂದು ಹೇಳುತ್ತಿದ್ದಂತೆಯೇ, ದಾದಿ ತನ್ನ ಎರಡೂ ಕೈಗಳು ತುಂಬುವಷ್ಟು ದಪ್ಪವಾಗಿದ್ದ ಮಗುವನ್ನು ಬೆಳ್ಳಗಿನ ವಸ್ತ್ರದಲ್ಲಿ ಬೆಚ್ಚಗೆ ಸುತ್ತಿ ಅಜ್ಜಿಯ ಕೈಗಿತ್ತಳು. ಸಂಜೆಯ ಸೂರ್ಯನ ಪ್ರಕಾಶ ಆ ಬೆಳ್ಳಗಿನ ವಸ್ತ್ರದ ಮೇಲೆ ಬಿದ್ದು ಮೊದಲೇ ಹಾಲಿನಂತೆ ಬೆಳ್ಳಗಿದ್ದ ಮಗುವಿನ ಮೇಲೆ ಪ್ರತಿಫಲವಾಗಿ ಮಗುವಿನ ಸುತ್ತ ಪ್ರಭಾವಳಿಯೇ ಬಿದ್ದಿತ್ತು ಎಂದು ಅಲ್ಲಿ ನೋಡಿದವರ ಅಂಬೋಣ. ಎಲರೂ ಮಗುವನ್ನು ಅಪ್ಪಿ ಮುದ್ದಾಡುವಷ್ಟರಲ್ಲಿ ವೈದ್ಯರು ತಾಯಿಗೆ ಉಳಿದ ಚಿಕಿತ್ಸೆಯನ್ನು ಮುಗಿಸಿ ಅವರನ್ನು ನೋಡಲು ಅನುಮತಿ ಮಾಡಿ ಕೊಟ್ಟರು. ಅಜ್ಜಿ ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿ, ನಾನೂ ಆರು ಗಂಡು ಮತ್ತು ಐದು ಹೆಣ್ಣು ಮಕ್ಕಳನ್ನು ಹೆತ್ತಿದ್ದೀನಪ್ಪಾ ಆದರೆ ಈ ರೀತಿಯ ಕಷ್ಟ ಪಡಲೇ ಇಲ್ಲಪ್ಪಾ. ಅದಕ್ಕೇ ಹೇಳೋದು ಬಸುರಿಯಲ್ಲಿ ಚೆನ್ನಾಗಿ ತಿಂದುಂಡು ಶಕ್ತಿ ಭರಿಸಿಕೊಂಡು ಎಲ್ಲಾ ತರಹದ ಕೆಲಸಗಳನ್ನು ಮಾಡ್ತಾ ಇದ್ರೇ ಮಗು ಸುಲಭವಾಗಿ ಆಗುತ್ತದೆ ಎಂದು ತಮ್ಮ ಅನುಭವ ಹೇಳಿಕೊಂಡ್ರು. ಸಾಕು ಸಾಕು. ಇದೇಲ್ಲಾ ಈಗ ಬೇಕಾ? ಮೊದಲು ಮನೆಗೆ ಹೋಗಿ ಸ್ನಾನ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚು ಎಂದು ಮಡದಿಯನ್ನು ಪ್ರೀತಿಯಂದಲೇ ಗದುರಿಸಿ, ಅಳಿಯಂದಿರೇ, ಎರಡು ವರ್ಷದ ಹಿಂದೆ ಕೋಲಾರದ ಅಪ್ಪಟ ಪುಟವಿಟ್ಟ ಚಿನ್ನದಂತಹ ನಮ್ಮ ಮಗಳನ್ನು ನಿಮಗೆ ಧಾರೆ ಎರೆದು ಕೊಟ್ಟಿದ್ದೆವು. ಈಗ ಅದೇ ಚಿನ್ನ, ತನಗಿಂತಲೂ ಹೊಳೆಯುವಂತಹ ಮಾಣಿಕ್ಯವನ್ನು ನಿಮ್ಮ ವಂಶೋದ್ಧಾರಕನನ್ನಾಗಿ ಹೊತ್ತು ಹೆತ್ತು ಕೊಟ್ಟಿದ್ದಾಳೆ. ಸಂತೋಷವೇ? ಎಂದು ಕೇಳಿದಾಗ, ಪತಿರಾಯ ಬಾಯಿಯಿಂದ ಮಾತೇ ಹೊರಡದೇ, ಅವರಿಗೇ ಅರಿವಿಲ್ಲದಂತೆ ಕಣ್ಣಿನಿಂದ ಆನಂದ ಬಾಷ್ಪ ಉಕ್ಕಿ ಹರಿಯಿತು. ಇಬ್ಬರು ಇಬ್ಬರನ್ನೊಬ್ಬರು ತಬ್ಬಿಕೊಂಡು ಕ್ಷಣ ಕಾಲ ಗದ್ಗತಿರಾದರು. ಮಾವ, ಅಳಿಯನ ಅಪ್ಪುಗೆಯ ಆಲಿಂಗನವನ್ನು ನೋಡಿ ಆಕೆಯೂ ಪ್ರಸವದ ನೋವಿನ ನಡುವೆಯೂ ಮುಗಳ್ನಕ್ಕಳು.

ಅಯ್ಯೋ ರಾಮ!! ಒಂದು ಅಚಾತುರ್ಯ ನಡೆದು ಹೋಗಿದೆಯಲ್ಲಪ್ಪಾ!! ಈಗೇನು ಮಾಡೋದು ? ಎನ್ನುತ್ತಾ ತನ್ನ ತಲೆ ಮೇಲೆ ಕೈ ಇಟ್ಟುಕೊಂಡ ಅಳಿಯನ್ನು ನೋಡಿದ ಮಾವನವರಿಗೆ ಇದೇನಪ್ಪಾ ಹೊಸಾ ಸಮಸ್ಯೇ? ಅಷ್ಟೆಲ್ಲಾ ಕಷ್ಟ ಪಟ್ಟು ಈಗ ಖುಷಿ ಪಡುತ್ತಿರುವಾಗ ಇದೇನಪ್ಪಾ ಹೊಸಾ ವರಸೇ ಎಂದು ಆಶ್ಚರ್ಯ ಚಕಿತರಾಗಿ ಅಳಿಯನ ಕಡೇ ನೋಡಿ ಏನಾಯ್ತು ಅಳಿಯಂದಿರೇ? ಅಂದಾಗ ಮಧ್ಯಾಹ್ನ ನಮ್ಮ ತಂದೆ ತಾಯಿಯವರಿಗೆ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ತಿಳಿಸಿ ದೇವರಿಗೆ ಪ್ರಾರ್ಥಿಸಲು ತಿಳಿಸಿ ಪತ್ರ ಬರೆದಿದ್ದೆ. ಈಗ ಮತ್ತೊಂದು ಪ್ರತ್ರ ಬರೆಯಬೇಕು. ಎರಡೂ ಒಟ್ಟೊಟ್ಟಿಗೆ ತಲುಪಿದರೆ ಅವರಿಗೂ ಗೊಂದಲ ಮೂಡಿಸ ಬಹುದು ಎಂದು ತಿಳಿಸಿ ಒಂದು ನಿಮಿಷ ಇರಿ ಪಕ್ಕದ ಪೋಸ್ಟ್ ಆಫೀಸಿಗೆ ಹೋಗಿ ಮಗು ಹುಟ್ಟಿದ ವಿಷಯ ತಿಳಿಸಿ ಹೊಸಾ ಪತ್ರ ಬರೆದು ಸಾಧ್ಯವಾದರೇ ಹಳೆಯ ಪತ್ರವನ್ನು ಹಿಂದಿರುಗೆ ಪಡೆಯುತ್ತೇನೆ ಎಂದು ತಿಳಿಸಿ ಪೋಸ್ಟ್ ಆಫೀಸಿನ ಕಡೆಗೆ ಓಡಿದರು. ತಾನೊಂದು ಬಗೆದರೇ ದೈವವೊಂದು ಬಗೆದೀತು ಎನ್ನುವಂತೆ ಅವರು ಬರೆದ ಪತ್ರ ಅದಾಗಲೇ ಅಂಚೆಯಣ್ಣನ ಚೀಲ ಸೇರಿ ಅಲ್ಲಿಂದ ಪ್ರಧಾನ ಕಛೇರಿಯ ಕಡೆಗೆ ತಲುಪುವ ಮಾರ್ಗದಲ್ಲಿತ್ತು. ಕೂಡಲೇ ಭಾವ, ಬಾಮೈದ ಇಬ್ಬರು ಸೈಕಲ್ಲನ್ನೇರಿ ಪ್ರಧಾನ ಅಂಚೆ ಕಛೇರಿಗೆ ಹೋಗಿ ನಡೆದದ್ದೆಲ್ಲವನ್ನೂ ಚುಟುಕಾಗಿ ತಿಳಿಸಿ ಹಳೆಯ ಪತ್ರದ ಬದಲಾಗಿ ಈ ಹೊಸಾ ಪತ್ರವನ್ನು ಕಳುಹಿಸಿ ಕೊಡಬೇಕೆಂದು ಕೋರಿ ಕೊಂಡರು. ನಿಯಮವಳಿಯ ಪ್ರಕಾರ ಹಾಗೆ ಮಾಡಲು ಬರುವುದಿಲ್ಲವಾದರೂ ಮಾನವೀಯತೆ ದೃಷ್ತಿಯಿಂದ ಅನಗತ್ಯ ಗೊಂದಲ ಸೃಷ್ತಿಯಾಗಬಾರದೆಂದು ಮೊದಲ ಮತ್ತು ಎರಡನೆಯ ಪತ್ರವನ್ನು ಪಕ್ಕ ಪಕ್ಕದಲ್ಲಿಟ್ಟು ಕೈಬರಹ ಸಾಮ್ಯವನ್ನು ನೋಡಿ ಖಚಿತ ಪಡಿಸಿಕೊಂಡು ಹಳೆಯ ಪತ್ರ ಹಿಂದಿರುಗಿಸಿ ಹೊಸ ಪತ್ರವನ್ನು ರವಾನಿದ್ದರು ಅಂಚೆಯವರು.

ಆದಾದಾ ಎರಡು ಮೂರು ದಿನಗಳಲ್ಲಿಯೇ ಆ ಪತ್ರ ಊರಿಗೆ ತಲುಪಿ ತಮ್ಮ ವಂಶೋದ್ಧಾರಕ ಜನಿಸಿರುವ ವಿಷಯ ತಿಳಿದು, ಆ ಕೂಡಲೇ ಮಗ, ಸೊಸೆ ಮತ್ತು ಮೂಮ್ಮಗನನ್ನು ನೋಡಲು ಆತುರಾತುರವಾಗಿ ತಾತ ಬಂದೇ ಬಿಟ್ಟರು. ಮೊಮ್ಮಗನನ್ನು ಕೈಯಲ್ಲಿ ಕೊಟ್ಟ ತಕ್ಷಣ ಮಗುವಿನ ತೊಡೆಗೆ ಕೈಹಾಗಿ ಮತ್ತೊಮ್ಮೆ ಮಗು ಗಂಡಾ , ಹೆಣ್ಣಾ ಎಂದು ಖಚಿತ ಪಡಿಸಿಕೊಂಡ ತಾತ (ತಂದೆಯ ತಂದೆ ತಾತ). ಭೇಷ್! ಭೇಷ್! ರಾಜಕುಮಾರನಂತಿದ್ದಾನೆ. ಅಗಲವಾದ ಹಣೆ, ಕಣ್ಣು ಮೂಗು ಎಲ್ಲಾ ನೋಡಿದ್ರೇ ಥೇಟ್ ನಮ್ಮ ಮನೆಯ ಕಡೆಯವರ ಹಾಗೇ ಇದೆ ಎಂದದ್ದನು ಕೇಳಿಸಿ ಕೊಂಡ ಅಜ್ಜ (ಅಮ್ಮನ ಜನಕ ಅಜ್ಜ). ಇಲ್ಲಾ ಬಿಡಿ ಮಗು ಥೇಟ್ ನಮ್ಮ ಮಗಳು ತರಹಾನೇ ಬೆಳ್ಳಗೆ ಮುದ್ದು ಮುದ್ದಾಗಿದ್ದಾನೆ ಎಂದು ತಮ್ಮ ವಾದವನ್ನೂ ಮಂಡಿಸಿದ್ದರು.

ಹಾಗೆ ಇಂದಿಗೆ ಸರಿಯಾಗಿ 51 ವರ್ಷಗಳ ಹಿಂದೆ ಅತ್ಯಂತ ಪ್ರಯಾಸಕರವಾಗಿ ಮತ್ತು ಅಷ್ಟೇ ರೋಚಕವಾಗಿ ಸಾಧಾರಣ ನಾಮ ಸಂವತ್ಸರದ, ಆಶ್ವಯುಜ ಶುದ್ಧ ಪಂಚಮಿ, ಸೋಮವಾರದಂದು ಈ ಪ್ರಪಂಚಕ್ಕೆ ಕಾಲಿಟ್ಟ ಮಗು ಯಾರಿರಬಹುದು? ಎಂದು ತಿಳಿಯುವ ಕುತೂಹಲ ನಿಮಗೆ ಎಷ್ಟು ಇದೆಯೋ ಅಷ್ಟೇ ಸಂಭ್ರಮ ಮತ್ತು ಸಂತೋಷದಿಂದ ತಿಳಿಸಲು ಬಯಸುವುದೇನಂದರೇ, ಆ ರೀತಿಯಾಗಿ ಅಮ್ಮ,ಅಜ್ಜಿ,ಅಜ್ಜ, ಅಪ್ಪಾ, ಮಾವ ಮತ್ತು ಚಿಕ್ಕಂಮ್ಮಂದಿರಿಗೆ ಆರಂಭದಲ್ಲಿ ಆತಂಕ ಮೂಡಿಸಿ, ಅಂತಿಮವಾಗಿ ಆನಂದ ನೀಡಿದ ಆ ಮಗುವೇ, ಇಷ್ಟು ಹೊತ್ತು ತನ್ನ ಜನ್ಮ ರಹಸ್ಯವನ್ನು ನಿಮ್ಮ ಮುಂದೆ ಬಿಚ್ಚಿಟ್ಟಿದ್ದಾನೆ.

ಹೌದು. ನಿಜ. ನಿಮ್ಮ ಉಹೇ ಸರಿ. ಶರನ್ನವರಾತ್ರಿಯ ಪಂಚಮಿ ದಿನದಂದು ಹಾಸನ ಮೂಲದ ಬಾಳಗಂಚಿ ಗ್ರಾಮ ಮತ್ತು ಕೋಲಾರದ ಚಿನ್ನ ಗಣಿ ಪ್ರದೇಶಗಳ ಸಮಾಗಮದ ಫಲವೇ ಉಮಾಸುತ, ಶಿವನ ಪ್ರತಿರೂಪವೇ ಆದ ಬಾಳಗಂಚಿ ಶಿವಮೂರ್ತಿ ಶ್ರೀಕಂಠ. ಆರ್ಥಾತ್, ನಿಮ್ಮೆಲ್ಲರ ಪ್ರೀತಿಯ ಶ್ರೀಕಂಠ, ಇನ್ನೂ ಹಲವರಿಗೆ ಕಂಠೀ, ಕೆಲವರಿಗೆ ಕಂಠಾ, ಮತ್ತೊಬ್ಬರಿಗೆ ಶ್ರೀಕ್ಸ್, ಹೆಂಗಳೆಯರಿಗೆ ಶ್ರೀ, ಕನ್ನಡ ಬಾರದಿರುವವರಿಗೆ ಶ್ರೀಕಾಂತಾ.

anna_amma

51 ವರ್ಷಗಳ ಹಿಂದೆ ನನ್ನ ಜನ್ಮಕ್ಕೆ ಕಾರಣೀಭೂರತಾದ ನಮ್ಮ ತಾಯಿ ಉಮಾ ಮತ್ತು ನಮ್ಮ ತಂದೆ ಶಿವಮೂರ್ತಿ ಮತ್ತವರ ಜನ್ಮದಾತರಾದ, ಅಜ್ಜ ಬೆಳ್ಳೂರು ರಾಜಾರಾವ್,ಅಜ್ಜಿ ವಿಶಾಲಾಕ್ಷಿ, ತಾತ ಬಾಳಗಂಚಿ ಗಮಕಿ ನಂಜುಂಡಯ್ಯ ಮತ್ತು ಅಜ್ಜಿ ಚೆನ್ನಮ್ಮ (ಲಕ್ಷ್ಮೀ) ಅವರಿಗಳಿಗೆ ನನ್ನ ಹೃದಯಾಂತರಾಳದಿಂದ ಕೋಟಿ ಕೋಟಿ ಪ್ರಣಾಮಗಳು.

family.jpeg

ಇಂದು ಅವರುಗಳು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿಕೊಟ್ಟ ಸಂಸ್ಕಾರ, ಸಂಪ್ರದಾಯ, ಅಚಾರ ಮತ್ತು ವಿಚಾರಗಳಿಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ನಡೆದು ಕೊಂಡು ಹೋಗುವ ಪ್ರಯತ್ನದಲ್ಲಿದ್ದೇನೆ. ಆ ಪ್ರಯತ್ನದಲ್ಲಿ ಸ್ವಲ್ಪವಾದರೂ ಆಚೀಚೆಯಾದರೂ ಅದನ್ನು ಸರಿ ಪಡಿಸಲು ನನ್ನ ಮಡದಿ ಮಂಜುಳಾ (ಮಮತ) ಹೆಸರಿಗೆ ಅನ್ವರ್ಥವಾಗಿ ಮಮತಾಮಯಿಯಾಗಿ ತಿದ್ದಿ ತೀಡುತ್ತಾಳೆ. ಇನ್ನು ಕ್ಷಣ ಮಾತ್ರದ ಸಿಟ್ತು ಸೆಡವು ಮತ್ತದೇ ಕ್ಷಣದಲ್ಲಿ ಪ್ರೀತಿಯ ಅಮೃತವನ್ನು ಉಣಿಸುತ್ತಿದ್ದ ನಮ್ಮಮ್ಮನ ಪ್ರತಿರೂಪವಾಗಿ ಹೆಜ್ಜೆ ಹೆಜ್ಜೆಗೂ ಏ ಅಪ್ಪ ಕಳ್ಳಾ, ತಪ್ಪು ಮಾಡ್ಬಾರ್ದು ಎಂದು ಎಚ್ಚರಿಸುವ ಮಗಳು ಸೃಷ್ಟಿ ಒಂದಡೆಯಾದರೇ, ಮತ್ತೊಂದೆಡೆ, ತಾತನ ಹಾವ, ಭಾವ, ಅವರದೇ ರೀತಿಯಲ್ಲಿ ಗುಣಾಕಾರ, ಭಾಗಾಕಾರ ಹಾಕುತ್ತಾ, ಲೆಕ್ಕಾಚಾರದಲ್ಲಿ ನಮ್ಮಪ್ಪನ ತದ್ರೂಪಾದ ಮಗ ಸಾಗರ ನನ್ನ ಪ್ರತೀ ಕೆಲಸ ಕಾರ್ಯಗಳಲ್ಲಿ ಕೈ ಹಿಡಿದು ಮುನ್ನಡೆಸುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾನೆ. ಅಮ್ಮಾ ಮತ್ತು ಅಪ್ಪನನ್ನು ಕಳೆದುಕೊಂಡಾಗ ಆಸರೆಯಾದವರೇ, ಹೆಣ್ಣು ಕೊಟ್ಟ ಅತ್ತೇ ಮತ್ತು ಮಾವ. ಅಮ್ಮನಂತೆಯೇ, ಅಳಿಯನಿಗೆ ಅಚ್ಚುಮೆಚ್ಚಿನ ಅಡುಗೆಗಳ ಮೂಲಕ ಅಕ್ಕರೆ ತೋರಿಸುತ್ತಿರುವ ಅತ್ತೆ (ಗಾಯತ್ರಿ) , ಅಪ್ಪನಂತೆಯೇ ದಿನಕ್ಕೆ ಕನಿಷ್ಟ ಪಕ್ಷ ಮೂರ್ನಾಲ್ಕು ಬಾರಿಯಾದರೂ ಕರೆ ಮಾಡಿ ಸಾಧ್ಯವಾದರೆ ಒಂದು ಕ್ಷಣ ಮನೆಗೇ ಬಂದು ಹೋಗುತ್ತಾ ನನ್ನನ್ನು ಮುನ್ನಡೆಸುತ್ತಿರುವ ಮಾವನವರು (ಜಿ. ಎಂ. ರಾಜು).

gmr.jpeg

ಇವರೆಲ್ಲರ ಹೊರತಾಗಿ, ಸ್ನೇಹಮಯೀ ಸಹೋದರಿಯರು, ಬಾಂಧವ್ಯ ಬೆಳೆಸಿದ ಬಾವಂದಿರು, ಅಕ್ಕರೆಯ ಅಳಿಯ, ಸುಂದರಿಯರಾದ ಸೊಸೆಯಂದಿರು, ನನ್ನ ಪ್ರತೀ ಕೆಲಸ ಕಾರ್ಯಗಳಿಗೂ ಭೇಷ್! ಭೇಷ್! ಎಂದು ಬೆನ್ನು ತಟ್ಟುತ್ತಾ ಬೆಳೆಸುತ್ತಿರುವ ಬಂಧು-ಬಾಂಧವರು ಒಂದೆಡೆಯಾದರೇ, ನನ್ನೆಲ್ಲಾ ಪ್ರಯತ್ನಗಳೂ ಫಲಕಾರಿಯಾಗುವಂತೆ ಲಾಲಿಸಿ, ಪಾಲಿಸಿ ಪೋಷಿಸುತ್ತಿರುವ ನನ್ನೆಲ್ಲಾ ಸಹೃದಯೀ ಗೆಳೆಯರು ಮತ್ತು ಗೆಳತಿಯರನ್ನು ಪಡೆದಿರುವ ನಾನೇ ಪ್ರಪಂಚದಲ್ಲಿಯೇ ಅತ್ಯಂತ ಭಾಗ್ಯಶಾಲಿ.

birthday.jpeg

51 ಎನ್ನುವುದು ಸಂಖ್ಯಾಶಾಸ್ತ್ರದಲ್ಲಿ ಒಂದು ಮಹತ್ತರ ಘಟ್ಟ. ಅಂತೆಯೇ ಬದುಕಿನಲ್ಲಿ 50ಸಂವತ್ಸರಗಳನ್ನು ಯಶಸ್ವಿಯಾಗಿ ಮುಗಿಸಿ, ಇಂದಿನಿಂದ ಮಹತ್ತರವಾದ 51 ನೇ ವರ್ಷಕ್ಕೆ ಕಾಲಿಡುತ್ತಿರುವ ನನಗೆ ನಿಮ್ಮೆಲ್ಲರ ಸ್ನೇಹ ಮತ್ತು ಸಹಕಾರಗಳ ಜೊತೆ ಕಿರಿಯರ ಮತ್ತು ಸಮಕಾಲೀನರ ಶುಭಹಾರೈಕೆಗಳು ಮತ್ತು ಹಿರಿಯರ ಮಾರ್ಗದರ್ಶನದ ಜೊತೆಗೆ ಆಶೀರ್ವಾದಗಳು ಸದಾಕಾಲವೂ ಎಂದಿನಂತೆಯೇ ಅಥವಾ ಅದಕ್ಕಿಂತಲು ಸ್ವಲ್ಛ ಹೆಚ್ಚಾಗಿಯೇ ಇರಲಿ ಎಂದು ಆಶೀಸುತ್ತೇನೆ.

ಏನಂತೀರೀ?

ನಿಮ್ಮವನೇ ಉಮಾಸುತ

ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

ಅದೊಂದು ಹೆಸರಾಂತ ಗುರುಕುಲ ಬಹಳಷ್ಟು ವಿದ್ಯಾರ್ಥಿಗಳು ಆ ಗುರುಗಳ ಬಳಿ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಒಮ್ಮೆ ಗುರುಗಳಿಗೆ ತಮ್ಮ ಶಿಷ್ಯಂದಿರನ್ನು ಪರೀಕ್ಷಿಸುವ ಮನಸಾಗಿ, ಎಲ್ಲರನ್ನೂ ಒಟ್ಟುಗೂಡಿಸಿ ನಮಗೂ ಮತ್ತು ಭಗವಂತನಿಗೂ ಇರುವ ಅಂತರವೆಷ್ಟು? ಎಂಬ ಸರಳ ಪ್ರಶ್ನೆಯನ್ನು ಕೇಳಿದರು. ಗುರುಗಳ ಈ ಸರಳ ಪ್ರಶ್ನೆಗೆ ಬಹಳವಾಗಿ ತಲೆಕೆಡಿಸಿಕೊಂಡ ಶಿಷ್ಯಂದಿರು, ಒಬ್ಬ ಭೂಮಿ ಆಕಾಶದಷ್ಟು ದೂರವೆಂದರೆ ಮತ್ತೊಬ್ಬ, ಭೂಮಿ ಪಾತಾಳದಷ್ಟು ದೂರ ಗುರುಗಳೇ ಎಂದ ಹೀಗೆ ಒಬ್ಬಬ್ಬೊರು ಒಂದೊಂದು ರೀತಿಯಾಗಿ ಉತ್ತರಿಸಿದಾಗ ಸಮಾಧಾನರಾಗದ ಗುರುಗಳು. ಆ ಭಗವಂತ ನಮ್ಮಿಂದ ಕೇವಲ ಕೂಗಳತೆಯ ದೂರದಲ್ಲಿದ್ದಾನೆ ಎಂದರು. ಭಗವಂತ ನಮ್ಮಿಂದ ಕೂಗಳತೆಯ ದೂರದಲ್ಲೇ? ಅದು ಹೇಗೆ ಗುರುಗಳೇ ಎಂದು ಶಿಷ್ಯರು ಪ್ರಶ್ನಿಸಿದಾಗ ಸಮಚಿತ್ತದಿಂದ ಗುರುಗಳು, ನಮಗೆ ಸಂಕಟ ಬಂದ ಕೂಡಲೇ ಭಗವಂತಾ ನಮ್ಮನ್ನು ಸಂಕಟದಿಂದ ಪಾರು ಮಾಡು ಎಂದು ಪ್ರಾರ್ಥಿಸುತ್ತೇವೆ. ಅದೇ ರೀತಿ ಸಂಭ್ರಮಿಸುವ ಸಂದರ್ಭದಲ್ಲಿ ಭಗವಂತಾ ಏನಿದು ನಿನ್ನ ಲೀಲೇ ಎಂದು ಕೊಂಡಾಡುತ್ತೇವೆ. ಯಾರಾದರೂ ನಮ್ಮ ಸ್ಥಿತಿ ಗತಿ ಮತ್ತು ಆರೋಗ್ಯ ಹೇಗಿದೆ ಎಂದು ವಿಚಾರಿಸಿದಲ್ಲಿ ಎಲ್ಲಾ ಭಗವಂತನ ದಯೆಯಿಂದ ಇಲ್ಲಿಯವರೆಗೂ ಚೆನ್ನಾಗಿದೆ ಎನ್ನುತ್ತೇವೆ. ಹೀಗೆ ಪ್ರತಿ ಕ್ಷಣದಲ್ಲೂ ನಾವು ಭಗಂತನ ಸ್ಮರಣೆ ಮಾಡಿದಾಗಲೆಲ್ಲಾ ಭಗವಂತನು ಯಾವುದೋ ಒಂದು ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿಯೇ ತೀರುತ್ತಾನೆ. ಯಾವುದೋ ದೂರದ ಪ್ರಯಾಣದ ವೇಳೆಯಲ್ಲಿ ದಾರಿ ತಪ್ಪಿ ಅಯ್ಯೋ ಭಗವಂತಾ!! ಎಲ್ಲಿದ್ದೀನಪ್ಪಾ? ಇಲ್ಲಿಂದ ಪಾರಾಗುವುದು ಹೇಗಪ್ಪಾ? ಎಂದು ಯೋಚಿಸುತ್ತಿರುವಾಗಲೇ ದಾರಿ ಹೋಕನೊಬ್ಬ ಕಾಣ ಸಿಕ್ಕಿ, ನಾವು ಹೋಗಬೇಕಿದ್ದ ಸ್ಥಳದ ದಾರಿಯನ್ನು ತೋರಿದಾಗ ಆ ಸಂದರ್ಭದಲ್ಲಿ ಆತನೇ ದೇವರಹಾಗೆ ಕಾಣುತ್ತಾನಲ್ಲವೇ, ದುಷ್ಯಾಸನ ದ್ರೌಪತಿಯ ವಸ್ತ್ರಾಪಹರಣ ಮಾಡುತ್ತಿದ್ದಾಗ ದ್ರೌಪತಿಯನ್ನು ಕೃಷ್ಣ ರಕ್ಷಿಸಿದ್ದು ಭಕ್ತಿಯಿಂದ ಕರೆ ಮಾಡಿದಾಗಲೇ, ಮೊಸಳೆಯ ಬಾಯಿಯಿಂದ ಗಜೇಂದ್ರನನ್ನು ರಕ್ಷಿಸಿದ್ದೂ ಭಕ್ತಿಯಿಂದ ಕರೆ ಮಾಡಿದಾಗಲೇ , ಹಾಗಾಗಿ ಭಗವಂತ ನಮ್ಮ ಕೂಗಳತೆಯ ದೂರದಲ್ಲಿಯೇ ಇದ್ದಾನೆ. ನಾವು ಅವನನ್ನು ಭಕ್ತಿಯಿಂದ ಕೂಗಿ ಕರೆಯಬೇಕಷ್ಟೇ. ಎಂದಾಗ ಶಿಷ್ಯರೆಲ್ಲರೂ ಗುರುಗಳ ಉತ್ತರಕ್ಕೇ ಸಂತೃಪ್ತರಾಗಿ ಸಂತೋಷದಿಂದ ತಲೆದೂಗುತ್ತಾರೆ.

ನನ್ನನ್ನು ಹೆತ್ತು , ಹೊತ್ತು, ಸಾಕಿ, ಸಲಹಿ, ತಕ್ಕ ಮಟ್ಟಿಗೆ ವಿದ್ಯೆಯನ್ನು ಕಲಿಸಿ, ವಿವೇಕದೊಂದಿಗೆ ಸಂಸ್ಕಾರವಂತನನ್ನಾಗಿ ಮಾಡಿ, ನನ್ನ ಇಂದಿನ ಎಲ್ಲಾ ಏಳಿಗೆಗೆ ಕಾರಣಕರ್ತರಾದವರು ನನ್ನ ಪ್ರತ್ಯಕ್ಷ ದೇವರುಗಳಾದ ನನ್ನ ತಂದೆ ತಾಯಿಯರು. ಎಲ್ಲದ್ದಕ್ಕೂ ಅಮ್ಮನನ್ನೇ ಆಶ್ರಯಿಸಿ, ಅಮ್ಮನ ಮುದ್ದಿನ ಮಗನಾಗಿದ್ದ ನಾನು, ಹತ್ತು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಾಗ, ನನ್ನ ಬೆನ್ನಲುಬಾಗಿ ನಿಂತವರೇ ನನ್ನ ತಂದೆಯವರು. ನೆಚ್ಚಿನ ಮಡದಿಯನ್ನು ಕಳೆದು ಕೊಂಡಿದ್ದ ಅವರು, ತಾಯಿಯನ್ನು ಕಳೆದು ಕೊಂಡಿದ್ದ ನಾನು ಪರಸ್ಪರ ಸಂತೈಸಿಕೊಳ್ಳುತ್ತಾ ತೀರಾ ಹತ್ತಿರದವರಾಗಿ ಬಿಟ್ಟೆವು. ಅಪ್ಪನ ಮೇಲಿನ ಗೌರವಕ್ಕೂ ಮಿಗಿಲಾಗಿ, ತಂದೆ ಮಗನ ಸಂಬಂಧಕ್ಕೂ ಮಿಗಿಲಾಗಿ ಅತ್ಯುತ್ತಮ ಗೆಳೆಯರಾಗಿಬಿಟ್ಟೆವು. ಬೆಳಿಗ್ಗೆ ಒಟ್ಟೊಟ್ಟಿಗೇ ಏಳುತ್ತಾ, ವಾಯು ವಿಹಾರಕ್ಕೇ ಜೊತೆ ಜೊತೆಯಾಗಿಯೇ ಹೋಗುತ್ತಾ, ಮಾರ್ಗದ ನಡುವಿನಲ್ಲಿ ಪ್ರಸಕ್ತ ವಿದ್ಯಮಾನಗಳು, ದೇಶದ ಆಗುಹೋಗುಗಳು, ಕ್ರೀಡೆ, ಸಂಗೀತ, ಸಾಹಿತ್ಯ, ಬಿಡುಗಡೆಯಾದ ಹೊಸಾ ಪುಸ್ತಕಗಳನ್ನು ವಿಮರ್ಶಿಸುತ್ತಾ, ಕಡೆಗೆ ಯಾವುದೂ ಇಲ್ಲದಿದ್ದಲ್ಲಿ ನಮ್ಮ ಕುಟುಂಬದ ವಿಷಯಗಳನ್ನು ಚರ್ಚಿಸುತ್ತಾ ತೀರಾ ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಹತ್ತಿರವಾಗಿ ಬಿಟ್ಟೆವು. ಆರೋಗ್ಯ ತಪಾಸಣೆಗಿರಲಿ, ಅಂಗಡಿಗಿರಲೀ, ತವರೂರಿನ ಜಾತ್ರೆಗಳಿಗಾಗಲೀ , ಯಾವುದೇ ಸಭೆ ಸಮಾರಂಭವಿರಲೀ ಒಟ್ಟಿಗೇ ಹೋಗಿ ಒಟ್ಟಿಗೇ ಬರುತ್ತಿದ್ದೆವು. ಕಛೇರಿಯಿಂದ ಅಕಸ್ಮಾತ್ ಒಂದೋಂದು ದಿನ ಬರಲು ತಡವಾಯಿತೆಂದರೆ ಹತ್ತಾರು ಸಲಾ ಕರೆ ಮಾಡಿ, ಮಗೂ ಎಲ್ಲಿದ್ದೀಯಾ? ಮನೆಗೆ ಬರಲು ಎಷ್ಟು ಹೊತ್ತಾಗುತ್ತದೆ ಎಂದ ವಿಚಾರಿಸಿ ಮನೆಗೆ ಬರುವ ವರೆಗೂ ಎಚ್ಚರವಾಗಿರುತ್ತಿದ್ದು ಮನೆಗೆ ಬಂದಾಕ್ಷಣ ಗೇಟ್ ತೆಗೆದು ಕಾರ್ ನಿಲ್ಲಿಸಿ ಮನೆಯೊಳಗೆ ಬರುವಷ್ಟರಲ್ಲಿ ಆ ದಿನದ ಎಲ್ಲಾ ವಿವರಗಳನ್ನು ಚುಟುಕಾಗಿ ಹೇಳಿಬಿಡುತ್ತಿದ್ದರು.

ಅಂದು 2017 ಆಕ್ಟೋಬರ್ 1, ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಒಂದು ದಿನದ ಕ್ರಿಕೆಟ್ ಪಂದ್ಯ. ಎರಡೂ ತಂಡಗಳು 2-2 ಪಂದ್ಯಗಳನ್ನು ಗೆದ್ದು ಅಂತಿಮ ಪಂದ್ಯ ಬಹಳ ಕುತೂಹಲವಾಗಿದ್ದು, ಭಾರತ ತಂಡ ರೋಚಕವಾಗಿ 5ನೇ ಪಂದ್ಯ ಗೆದ್ದಾಗ, ಇಬ್ಬರೂ ಒಟ್ಟಿಗೆ ಅವರ ಕೊಠಡಿಯಲ್ಲೇ ಕುಳಿತು ನೋಡಿ ಗೆಲುವನ್ನು ಸಂಭ್ರಮಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಕಣ್ಣಿಗೆ ಕಟ್ಟಿದ ಹಾಗಿದೆ. ತಡ ರಾತ್ರಿಯರೆಗೂ ಪಂದ್ಯಾವಳಿಯನ್ನೇ ಮೆಲುಕು ಹಾಕುತ್ತ ಜೋರಾಗಿ ಕೇಕೇ ಹಾಕುತ್ತಿದ್ದವರಿಗೆ, ನನ್ನ ಮಡದಿ ರೀ… ಎಂದಾಗಲೇ ಸಮಯದ ಪರಿವಾಗಿ ನಾವಿಬ್ಬರೂ ಪಂದ್ಯ ಗೆದ್ದ ಸಂತೋಷದಿಂದಲೇ ಮಲಗಿದ್ದ ಸವಿನೆನಪು. ಮಾರನೇಯ ದಿನ ಅಕ್ಟೋಬರ್ 2, ರಾಷ್ಟ್ರಪಿತ ಗಾಂಧೀಜಿ ಮತ್ತು ರಾಷ್ಟ್ರಕಂಡ ಅತ್ಯುತ್ತಮ ಧೈರ್ಯವಂತ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಗಳ ಹುಟ್ಟಿದ ಹಬ್ಬ.

ರಾತ್ರಿ ತಡವಾಗಿ ಮಲಗಿದ್ದ ವಯಸ್ಸಾದವರನ್ನು ಎಬ್ಬಿಸುವುದು ಬೇಡ ಎಂದು ಪ್ರತಿನಿತ್ಯದಂತೆ ಬೆಳಗಿನ ಜಾವವೇ ಎದ್ದು ಮೆಲ್ಲಗೆ ಬಾಗಿಲು ತೆಗೆದು ವ್ಯಾಯಮಕ್ಕೆಂದು ಹೊರಡಲು ಅನುವಾದಾಗ, ಮಗೂ ಬಂದೇ ತಡಿ ಎಂದಾಗ, ಅಣ್ಣಾ, ರಾತ್ರಿ ತುಂಬ ತಡವಾಗಿ ಮಲಗಿದ್ದೀರಿ, ನೀವು ಇನ್ನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಿ, ನಾನು ಜಿಮ್ಗೆ ಹೋಗಿ ಬರುತ್ತೇನೆ ಎಂದು ಬಾಗಿಲಿಗೆ ಬೀಗ ಹಾಕಿಕೊಂಡ ಹೋಗಿದ್ದೆ. ಜಿಮ್ ಮುಗಿಸಿ ಬರುವಷ್ಟರಲ್ಲಿ ತಂದೆಯವರು ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಎಂದಿನಂತೆ ಮನೆಗೆ ಬರುತ್ತಿದ್ದ ಮೂರು ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರು. ಅಷ್ಟರಲ್ಲಿ ಅಡುಗೆ ಮನೆಯಿಂದ ಘಮ ಘಮ ದೋಸೆಯ ವಾಸನೆ. ರೀ.. ಮಾವನವರಿಗೆ ತಿಂಡಿ ಕೊಟ್ಟು ನೀವು ಸ್ನಾನ ಮುಗಿಸಿಬಿಡಿ, ನಿಮಗೂ ಬಿಸಿ ಬಿಸಿ ದೋಸೆ ಹಾಕಿ ಕೊಡುತ್ತೇನೆ ಎಂದು ನಮ್ಮಾಕಿ ಹೇಳಿದಾಗ, ಅಡುಗೆ ಮನೆಯಿಂದ ದೋಸೆ ಚಟ್ನಿಯ ತಟ್ಟೆಯನ್ನು ತಂದೆಯವರಿಗೆ ತಂದು ಕೊಟ್ಟಿದ್ದೆ. ಎರಡು ಮೂರು ಬಾರಿ ದೋಸೆ ತಿಂದು ನೆತ್ತಿ ಹತ್ತಿದಂತಾಗಿ ತಿಂದ ದೋಸೆಯನ್ನು ಕಕ್ಕಿಕೊಂಡಾಗ ಅಲ್ಲಿಯೇ ಪಕ್ಕದಲ್ಲಿದ್ದ ನಾನು ಅವರನ್ನು ಸಂತೈಸಿ ಬೆನ್ನು ಸವರುತ್ತಿದ್ದಾಗ, ಅವರ ಮೈ ಸ್ವಲ್ಪ ಸುಡುತ್ತಿತ್ತು. ಕೂಡಲೇ ಕುಟುಂದ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಗಾಬರಿ ಪಡುವಂತಹದ್ದೇನಿಲ್ಲಾ, ಆಸ್ಪತ್ರೆಗೆ ಕರೆದು ಕೊಂಡು ಬಂದು ಬಿಡು ಒಮ್ಮೆ ಪರಿಕ್ಷಿಸಿಯೇ ಬಿಡುವಾ ಎಂದಾಗ, ನಾನು ಮತ್ತು ನನ್ನ ಆಕೆ ತುರಾತುರಿಯಲ್ಲಿ ಸ್ನಾನ ಮುಗಿಸಿ ಮಗಳಿಗೆ ದೇವರ ಪೂಜೆ ಮಾಡಲು ತಿಳಿಸಿ ತಂದೆಯವರೇ ಸಹಜವಾಗಿ ನಡೆದುಕೊಂಡು ಬಂದು ಕಾರನ್ನೇರಿ, ಕ್ಷಣ ಮಾತ್ರದಲ್ಲಿಯೇ ಹತ್ತಿರದಲ್ಲಿದ್ದ ನರ್ಸಿಂಗ್ ಹೋಮ್ ತಲುಪಿದ್ದೆವು.

ತಂದೆಯವರನ್ನು ಕೂಲಂಕುಶವಾಗಿ ಪರೀಕ್ಷಿಸಿದ ಅಲ್ಲಿಯ ವೈದ್ಯರು ECG Report ನೋಡಿ ಭಯ ಪಡುವಂತಹದ್ದೇನಿಲ್ಲಾ, ಆದರೂ ನೀವು ದೊಡ್ಡ ಆಸ್ಪತ್ರೆಯಲ್ಲಿ ಯಾವುದಕ್ಕೂ ಒಮ್ಮೆ ಹೃದಯರೋಗ ತಜ್ಞರನ್ನು ನೋಡಲು ತಿಳಿಸಿ, ಪ್ರಥಮ ಚಿಕಿತ್ಸೆ ಕೊಟ್ಟು ಅವರದೇ Ambulanceನಲ್ಲಿ ತಂದೆಯವರನ್ನು ಕೂಡಲೇ ಕರೆದುಕೊಂಡು ಹೋಗಲು ಹೇಳಿದರು. ತಂದೆಯವರೇ ಖುದ್ದಾಗಿ ನಡೆದುಕೊಂಡು ಆಸ್ಪತ್ರೆಯಲ್ಲಿದ್ದ ಕೆಲವು ಪರಿಚಯಸ್ಥರನ್ನು ಮಾತನಾಡಿಸಿ Ambulanceನಲ್ಲಿ ಕುಳಿತು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? ಎಂದು ವಿಚಾರಿಸಿ ರಾಮಯ್ಯ ಆಸ್ಪತ್ರೆಗೆ ಹೊಗುತ್ತಿರುವುದನ್ನು ಖಚಿತ ಪಡಿಸಿಕೊಂಡು ಮುಖಕ್ಕೆ ಆಮ್ಲಜನಕದ ಮುಖವಾಡವನ್ನು ತಾವೇ ಧರಿಸಿ ಹಾಗೇ ಸುಮ್ಮನೆ ಮಲಗಿ ಕೊಂಡಾಗಲೂ ನನ್ನ ದೇವರು ನನ್ನ ಕೂಗಳತೆಯ ದೂರದಲ್ಲಿಯೇ ಇದ್ದರು ವಿಧಿಯಾಟದ ಮುಂದೆ ಯಾರದ್ದೂ ನಡೆಯುವುದಿಲ್ಲ ಎನ್ನುವಂತೆ ಅವರ ಕರ್ಮಭೂಮಿಯಾದ ಬಿಇಎಲ್ ಕಾರ್ಖಾನೆ ದಾಟುತ್ತಲೇ ಎರಡು ಬಾರಿ ಜೋರಾಗಿ ಉಸಿರಾಡಿ ಮೂರನೆಯದ್ದಕ್ಕೆ ಸುಮ್ಮನಾದಾಗ ಅವರ ಕೂಗಳತೆ ಅಂತರದಲ್ಲಿಯೇ ನಾನಿದ್ದೆ. ಆದರೆ ಕೂಗಿದರೆ ಓಗೊಡಲು ನನ್ನ ದೇವರೇ ಬದುಕಿರಲಿಲ್ಲ.

ಹೌದು ಇಂದಿಗೆ ಸರಿಯಾಗಿ ಮೂರು ವರ್ಷದ ಹಿಂದೆ ನನ್ನನ್ನೂ ಮತ್ತು ನನ್ನ ತಂದೆಯವರನ್ನು ಆ ಭಗವಂತ ದೂರ ಮಾಡಿದನಾದರೂ, ಅವರನ್ನು ನೆನಸಿಕೊಂಡಾಗಲೆಲ್ಲಾ ಮಗೂ ಎಂದು ನನ್ನನ್ನು ಕರೆಯುವುದು ನನಗೆ ಮಾತ್ರ ಕೇಳಿಸುತ್ತದೆ. ಹೊಸದದ್ದೇನಾದರೂ ಓದಿದಾಗ, ಯಾವುದೇ ಪದದ ಅರ್ಥ ತಿಳಿಯದಿದ್ದಾಗ, ಮನೆಯ ಮುಂದೆ ದುರ್ಗಾ ದೇವಿಯ ಮರವಣಿಗೆಯ ವಾದ್ಯದವರ ಸದ್ದಾದಾಗ, ನಮ್ಮ ಮಕ್ಕಳು ಹೆಚ್ಚಿನದ್ದೇನಾದರೂ ಸಾಧಿಸಿದಾಗ, ಮಗ ತಾತನ ರೀತಿಯನ್ನು ಅನುಕರಣೆ ಮಾಡಿದಾಗ, ಮನೆಯಲ್ಲಿ ವಿಶೇಷ ಅಡುಗೆ ಮಾಡಿದಾಗ, ಅದರಲ್ಲೂ ತಂಬುಳಿ, ರಾಗಿ ಮುದ್ದೆ ಮತ್ತು ಹುಗ್ಗಿಯನ್ನು ಮಾಡಿದಾಗ, ಜೋರಾದ ಮಳೆ ಬೀಳುತ್ತಿರುವಾಗ, ಮಲ್ಲೇಶ್ವರಂ ನೆಶ್ಯದ ಅಂಗಡಿ ಮುಂದೆ ಹೋದಾಗ, ಎಲ್ಲಿಯಾದರೂ ಸಂಗೀತ ಇಲ್ಲವೇ ಗಮಕ ವಾಚನ ಕೇಳಿದಾಗ, ಟಿವಿಯಲ್ಲಿ ಕ್ರಿಕೆಟ್ ಪಂದ್ಯ ಪ್ರಸಾರವಾಗುತ್ತಿದ್ದಾಗ, ಯಾರಾದರೂ ತಂದೆಯವರ ಸ್ನೇಹಿತರು ಅಥವಾ ದೂರದ ಸಂಬಂಧಿಕರು ಎಲ್ಲಾದರೂ ಸಿಕ್ಕಿ, ನೀನು ಶಿವಮೂರ್ತಿಯವರ ಮಗ ಶ್ರೀಕಂಠ ಅಲ್ಲವೇ, ಪಾಪ ಒಳ್ಳೆಯ ದೇವರಂಥಾ ಮನುಷ್ಯ, ಒಳ್ಳೆಯ ಸಂಪ್ರದಾಯಸ್ಥರು, ವಾಗ್ಮಿಗಳು, ಸುಸಂಸ್ಕೃತರು, ಎಲ್ಲಕ್ಕೂ ಹೆಚ್ಚಾಗಿ ಕವಿಗಳು, ಗಮಕಿಗಳು ಅಷ್ಟು ಆರೋಗ್ಯವಂತರಾಗಿದ್ದವರನ್ನು ಆ ಭಗವಂತ ಇಷ್ಟು ಬೇಗ ಕರೆಸಿಕೊಂಡು ಬಿಟ್ಟನಲ್ಲಾ ಎಂದಾಗಲೆಲ್ಲಾ, ಹೇ ನನ್ನ ತಂದೆಯವರು ಎಲ್ಲಿ ಹೋಗಿದ್ದಾರೆ? ನನ್ನ ಕೂಗಳತೆಯ ದೂರದಲ್ಲೇ ಇದ್ದಾರಲ್ಲಾ ಎನ್ನುವ ಭಾಸವಾಗುತ್ತದೆ.

ನನ್ನ ಪೂಜ್ಯ ತಂದೆಯವರು ಇಂದು ನನ್ನೊಂದಿಗೆ ಭೌತಿಕವಾಗಿ ಇಲ್ಲವಾದರೂ, ಮಾನಸಿಕವಾಗಿ ಖಂಡಿತವಾಗಿಯೂ ನನ್ನ ಕೂಗಳತೆಯ ದೂರದಲ್ಲಿಯೇ ಇದ್ದಾರೆ. ಅವರ ಅಕಾಲಿಕ ಅಗಲಿಕೆ ನಮ್ಮನ್ನು ಕಾಡುತ್ತದಾದರೂ, ಅವರ ಆಶೀರ್ವಾದ ನಮ್ಮನ್ನು ಸದಾ ಕಾಪಾಡುತ್ತಲೇ ಇರುತ್ತದೆ.

ಏನಂತೀರೀ?