ಮಾಸ ಶಿವರಾತ್ರಿ

ನಮಗೆಲ್ಲಾ ತಿಳಿದಿರುವಂತೆ  ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ  ಮಾಗಿಯ ಚಳಿಯ ಇನ್ನೂ ಹೋಗದೇ ಇದ್ದಾಗ,  ಶಿಶಿರ ಋತುವಿನ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿ ಹಬ್ಬ ಕಳೆದ ಕೂಡಲೇ ಚಳಿ ಎಲ್ಲವೂ ಮಂಗಮಾಯ ಎಂದು ಮಾತನಾಡುವುದನ್ನುಕೇಳಿದ್ದೇವೆ. ಶಿವರಾತ್ರಿ ಹಬ್ಬದ  ದಿನವಿಡೀ ಉಪವಾಸ ಮಾಡಿ ರಾತ್ರಿ  ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಭಗವಾನ್ ಶಂಕರನನ್ನು  ಪ್ರಾರ್ಥಿಸಿ ಮಾರನೇಯ ದಿನ  ದಿನ ವಿವಿಧ ರೀತಿಯ ಭಕ್ಷ ಭೋಜನಗಗಳನ್ನು ತಯಾರಿಸಿ  ಭಗವಂತನಿಗೆ ನೈವೇದ್ಯ ಮಾದಿ ಹಂಚಿ ತಿನ್ನುವ ರೂಢಿಯಿದೆ. ಶಿವರಾತ್ರಿಯಂದ ತನ್ನನ್ನು ಭಕ್ತಿಯಿಂದ ಪೂಜಿಸಿದ  ಭಕ್ತರ ಸಕಲ ಇಷ್ಟಾರ್ಥಗಳನ್ನೂ ಆ ದಯಾಮಯಿ ಶಿವನು ಪೂರೈಸುತ್ತಾನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

WhatsApp Image 2022-01-01 at 6.24.20 PMಕೇವಲ ಶಿವರಾತ್ರಿಯಲ್ಲದೇ, ಪ್ರತೀ ತಿಂಗಳು, ಕೃಷ್ಣ ಪಕ್ಷದ  14 ನೇ ದಿನ ಅರ್ಥಾತ್ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಾಸಿಕ ಶಿವರಾತ್ರಿಯನ್ನು  ಆಚರಿಸುವ ಸಂಪ್ರದಾಯವಿದೆ.  ಶಿವ ಮತ್ತು ಶಕ್ತಿಯ ಒಮ್ಮುಖವನ್ನು ಸೂಚಿಸುವ ಈ ಉತ್ಸವಕ್ಕೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಶಿವನು ಪುರುಷ ಶಕ್ತಿಯನ್ನು ಪ್ರತಿನಿಧಿಸಿದರೆ ಶಕ್ತಿ ಅಥವಾ ಪಾರ್ವತಿಯು ಪ್ರಕೃತಿ ಶಕ್ತಿಯನ್ನು ಸಂಕೇತಿಸುತ್ತಾರೆ. ಹಾಗಾಗಿ  ಶಿವನ  ಭಕ್ತರು ಈ ದಿನದಂದು ಉಪವಾಸವಿದ್ದು ಶಿವನನ್ನು ಭಕ್ತಿಯಿಂದ ಪೂಜಿಸಿದಲ್ಲಿ  ಅಸಾಧ್ಯ ಮತ್ತು ಕಷ್ಟಕರವಾದ ಕೆಲಸವನ್ನು ಸಾಧಿಸಲು ಶಿವಪಾರ್ವತಿಯರ ಆಶೀರ್ವಾದವಿರುತ್ತದೆ  ಎಂಬ ನಂಬಿಕೆ ಇಉವ ಕಾರಣ ಪ್ರತೀ ತಿಂಗಳೂ ಮಾಸ ಶಿವರಾತ್ರಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಮಾಸಿಕ ಶಿವರಾತ್ರಿಯನ್ನು ಆಚರಿಸಿವವರು ಇಡೀ ದಿನ ಉಪವಾಸವಿದ್ದು  ಶಿವ ದೇವಾಲಯಗಳಿಗೆ ಭೇಟಿ ನೀಡುವುದಲ್ಲದೇ ಸಂಜೆ ಶಿವ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಯ ಸಮಯದಲ್ಲಿ  ಶಿವನ ವಿಗ್ರಹ ಅಥವಾ ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ಪೂಜೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಗಂಗಾಜಲ, ಹಾಲು, ತುಪ್ಪ, ಜೇನುತುಪ್ಪ, ಅರಿಶಿನ ಪುಡಿ, ಸಿಂಧೂರ, ಪನ್ನೀರುಗಳಿಂದ ಅಭಿಷೇಕಮಾಡಿದ ನಂತರ ಶಿವನ ವಿಗ್ರಹ ಅಥವಾ ಶಿವಲಿಂಗಕ್ಕೆ ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ವಿವಿಧ ಹಣ್ಣುಗಳನ್ನು  ನೈವೇದ್ಯ ಮಾಡಲಾಗುತ್ತದೆ.

ಪೂಜೆಯ ಸಮಯದಲ್ಲಿ  ರುದ್ರ ಮತ್ತು ಚಮಕಗಳನ್ನು ಪಠಣ ಮಾಡಿದರೆ ಇನ್ನೂ ಕೆಲವೆಡೆ ಸರಳವಾಗಿ, ಮಹಾಮೃತ್ಯುಂಜಯ ಮಂತ್ರವಾದ

ಓಂ ಹೌಂ ಜೂಂ ಸಃ ಓಂ ಭೂರ್ಭುವಃ ಸ್ವಃ

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ

ಊರ್ವರುಕಮಿವ ಬಂಧನಾನ್‌

ಮೃತ್ಯೋರ್ಮುಕ್ಷೀಯ ಮಾಮೃತಾತ್‌

ಓಂ ಸ್ವಃ ಭುವಃ ಭೂಃ ಓಂ ಸಃ ಜೂಂ ಹೌ ಓಂ

ಮತ್ತು

ರುದ್ರ ಗಾಯತ್ರಿ ಮಂತ್ರವಾದ

ಓಂ ತತ್ಪುರುಷಾಯ ವಿದ್ಮಹೇ

ಮಹಾದೇವಾಯ ಧೀಮಹಿ

ತನ್ನೋ ರುದ್ರಃ ಪ್ರಚೋದಯಾತ್‌   ಮಂತ್ರಗಳನ್ನು ಪಠಿಸಿ, ನಂತರ ಪರ ಶಿವನಿಗೆ ಆರತಿಯನ್ನು ಮಾಡಿದ ನಂತರ ಪ್ರಸಾದವನ್ನು ವಿತರಿಸಲಾಗುತ್ತದೆ.

ಅವಿವಾಹಿತರು ಈ ಮಾಸ ಶಿವರಾತ್ರಿಯಂದು ಶಿವನನ್ನು ಪೂಜೆ ಮಾಡುವ ಮೂಲಕ, ವಿವಾಹದ ವಿಳಂಬವನ್ನು ದೂರವಾಗಿ ಅವರ ವಿವಾಹದಲ್ಲಿ ಬರುವ ಅಡೆತಡೆಗಳನ್ನು ದೂರವಾಗಿ  ಅವರ ವೈವಾಹಿಕ ಜೀವನವು ತುಂಬಾ ಸಂತೋಷವಾಗಿರುತ್ತದೆ ಎಂಬ ನಂಬಿಕೆ ಇದೆ.

WhatsApp Image 2022-01-01 at 6.24.20 PM (1)ಈ ರೀತಿಯಾಗಿ ಶ್ರದ್ಧಾ ಭಕ್ತಿಯಿಂದ  ಪೂಜಿಸುವ ಮೂಲಕ, ಭಕ್ತರು ಆಂತರಿಕ ಶಾಂತಿಗಾಗಿ ಮತ್ತು ಶಾಶ್ವತ ಕೃಪಾಶೀರ್ವಾದವನ್ನು ಪಡೆಯಬಹುದು ಎಂದು ನಂಬಲಾಗಿದೆ. ಈ ರೀತಿಯಾಗಿ ಉಪವಾಸ ಮಾಡುವ ಮೂಲಕ  ಆತ್ಮಕ್ಕೆ ಮೋಕ್ಷ ಪಡೆಯಬಹುದು ಎನ್ನಲಾಗಿದೆ. ಒಟ್ಟಿನಲ್ಲಿ  ಶಿವನ ಆಶೀರ್ವಾದವನ್ನು ಪಡೆಯಲು ಮಾಸಿಕ ಶಿವರಾತ್ರಿಯನ್ನು ಆಚರಿಸುವುದು ಅತ್ಯಂತ ಸುಲಭವಾದ ಮಾರ್ಗವಾಗಿರುವ ಕಾರಣ ಶಿವನ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸೋಣ ಅಲ್ಲವೇ?

ಏನಂತೀರಿ?

ನಿಮ್ಮವನೇ ಉಮಾಸುತ

ಜಟೋಲಿ ಶಿವ ಮಂದಿರ

ನಮ್ಮ ಭಾರತ ದೇಶ ದೇವಾಲಯಗಳ ಬೀಡು. ಪೂರ್ವದ ಅಟಕ್ ನಿಂದ ಪಶ್ಚಿಮದ ಕಟಕ್ ವರೆಗೂ ಮತ್ತು ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೂ ಎಲ್ಲೇ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿದರೂ ಅಲ್ಲೊಂದು ದೇವಾಲಯಗಳನ್ನು ಕಾಣಬಹುದಾಗಿದೆ. ಬಹುತೇಕ ದೇಲಯಗಳು ಸಹಸ್ರಾರು ವರ್ಷಗಳಿಂದಲೂ ಅಲ್ಲಿದ್ದು ಅನೇಕ ವೈಶಿಷ್ಟ್ಯತೆ ಮತ್ತು ನಿಗೂಢತೆಗಳಿಂದ ಕೂಡಿರುತ್ತದೆ ಇಂದೂ ಸಹಾ ಅಂತಹದೇ ಐತಿಹ್ಯವಿರುವ ನಿಗೂಢವೆಂದೇ ಪರಿಗಣಿಸಲಾದ ಶಿವನ ದೇವಾಲಯದ ದರ್ಶನ ಮಾಡುವುದರ ಜೊತೆಗೆ ಆ ದೇವಾಲಯದ ಐತಿಹ್ಯ, ಅಲ್ಲಿನ ಸ್ಥಳ ಪುರಾಣ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

sim3ದೇವರು ಬಹಳ ಸಮಯ ತೆಗೆದುಕೊಂಡು ಸ್ವರ್ಗವನ್ನೇ ಧರೆಗೆ ಇಳಿದಂತೆ ಇರುವ ಹಿಮಾಚಲ ಪ್ರದೇಶದ ಸೋಲನ್ ಎಂಬ ಪ್ರದೇಶದಲ್ಲಿ ಜಟೋಲಿ ಎಂಬ ಹಳ್ಳಿಯಲ್ಲಿದೆ. ಸೋಲನ್‌ನಿಂದ ಜಟೋಲಿ ದೇವಸ್ಥಾನಕ್ಕೆ ಸುಮಾರು 7.3 ಕಿಲೋಮೀಟರ್ ದೂರವಿದ್ದು ಈ ದೂರವನ್ನು ಸುಮಾರು 20 ನಿಮಿಷಗಳಲ್ಲಿ ಕ್ರಮಿಸಿದಲ್ಲಿ ಅತ್ಯಂತ ಸುಂದರವಾದ ದೇವಾಲಯವು ನೆಲೆಗೊಂಡಿದ್ದು ಇದನ್ನು ಜಟೋಲಿ ಶಿವ ದೇವಾಲಯ ಎಂದು ಕರೆಯಲಾಗುತ್ತದೆ. ಇದನ್ನು ದೇವಭೂಮಿ ಎಂದೇ ಕರೆಯಲಾಗುತ್ತದೆ. ದಕ್ಷಿಣ-ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಎತ್ತರವು ಸುಮಾರು 111 ಅಡಿಗಳು ಇದ್ದು, ಈ ದೇವಾಲಯದ ಕಟ್ಟಡವು ಒಂದು ವಿಶಿಷ್ಟವಾದ ನಿರ್ಮಾಣ ಕಲೆಯಾಗಿದ್ದು, ಹೊಸ ರೀತಿಯ ದೃಷ್ಟಿಕೋನದಿಂದ ಕಟ್ಟಲಾಗಿದೆ.

jot1ಪ್ರವಾಸಿಗರು ಬೆಟ್ಟದ ತುದಿಯಲ್ಲಿರುವ ಭವ್ಯವಾದ ಮತ್ತು ಅದ್ಭುತವಾದ ದೇವಾಲಯವನ್ನು ನೋಡಲು ಬಯಸಿದರೆ ಕೆಳಗಿನಿಂದ 100 ಮೆಟ್ಟಿಲುಗಳನ್ನು ಹತ್ತಿಕೊಂಡು ಬರಬೇಕಾಗಿದೆ. ಅಷ್ಟು ಮೆಟ್ಟಿಲುಗಳನ್ನು ಹತ್ತಿ ಮಟ್ಟಿಲು ಹತ್ತಿ ಬೆಟ್ಟದ ತುದಿಯಲ್ಲಿರುವ ಜಟೋಲಿ ಶಿವನ ದೇವಾಲಯವನ್ನು ನೋಡಿದಾಕ್ಷಣ ಹತ್ತುವಾಗ ಆಗುವ ಎಲ್ಲಾ ಆಯಾಸಗಳೂ ತಕ್ಷಣವೇ ಪರಿಹಾರವಾಗಿ ಬಿಡುತ್ತದೆ.

ajot4ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ಕಥೆಗಳಿದ್ದು ಅವುಗಳಲ್ಲಿ ಪ್ರಸಿದ್ಧವಾದ ಒಂದು ಕಥೆಯ ಪ್ರಕಾರ ಶಿವ ಭೂಲೋಕದ ಪ್ರದಕ್ಷಿಣೆ ಹಾಕುತ್ತಿದ್ದ ಸಂದರ್ಭದಲ್ಲಿ ಇಲ್ಲಿಯ ಪ್ರಕೃತಿದತ್ತ ರಮಣೀಯಕ್ಕೆ ಮನಸೋತು ಈ ಸ್ಥಳದಲ್ಲಿ ಒಂದು ರಾತ್ರಿ ತಂಗಿದ್ದನಂತೆ. ಹಾಗಾಗಿ ಈ ಬೆಟ್ಟದ ತುದಿಯಲ್ಲಿ ಸುಂದರವಾದ ಭೋಲೇನಾಥ ಮಂದಿರವನ್ನು ಕಟ್ಟಲಾಗಿದ್ದು ಇಂದಿಗೂ ಶಿವ ಅಲ್ಲಿಯೇ ವಾಸಿಸುತ್ತಾನೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಪರಮಶಿವನು ಜಟಾಧಾರಿಯಾಗಿ ಉದ್ದುದ್ದ ಕೂದಲುಗಳನ್ನು ಹೊಂದಿರುವ ಕಾರಣ ಈ ದೇವಾಲಯವನ್ನು ಜಟೋಲಿ ದೇವಾಲಯ ಎಂದು ಕರೆಯಲಾಗುತ್ತದೆ. ಇದು ಏಷ್ಯಾದ ಅತ್ಯುನ್ನತ ಹಳೆಯ ಶಿವ ದೇವಾಲಯಗಳಲ್ಲಿ ಒಂದು ಪರಿಗಣಿಸಲಾಗಿದೆ. ಇಲ್ಲಿನ ಸ್ಪಟಿಕಲಿಂಗ ಅತ್ಯಂತ ಪ್ರಾಚೀನ ಕಾಲದ್ದು ಎನ್ನಲಾಗುತ್ತದೆ.

krish51950ರ ವರೆಗೂ ಎಲ್ಲಾ ಹಳೆಯ ದೇವಾಲಯದಂತೆಯೇ ಇದ್ದ ಈ ದೇವಾಲಯಕ್ಕೆ ಸ್ವಾಮಿ ಕೃಷ್ಣಾನಂದ ಪರಮಹಂಸ ಎಂಬ ಸ್ವಾಮೀಜಿಯೊಬ್ಬರು ಅಲ್ಲಿಗೆ ಭೇಟಿ ನೀಡಿ ಈ ದೇವಾಲಯದ ಇತಿಹಾಸ ಸ್ಥಳ ಪುರಾಣ ಮತ್ತು ಪರಮ ಪಾವಿತ್ರತೆಯನ್ನು ತಿಳಿದುಕೊಂಡು ಅಲ್ಲೊಂದು ಭವ್ಯವಾದ ದೇವಾಲಯವನ್ನು ತಮ್ಮ ಸಾರಥ್ಯದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿ, ಸ್ಥಳೀಯರು ಮತ್ತು ಪ್ರಪಂಚಾದ್ಯಂತ ಇರುವ ತಮ್ಮ ಅನುಯಾಯಿಗಳು ಮತ್ತು ಶಿವಭಕ್ತರ ತನು ಮನ ಧನಗಳ ಸಹಾಯದಿಂದ ಸ್ಪಟಿಕ ಸ್ವರೂಪಿ ಶಿವಲಿಂಗ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭಿಸಲು 1974ರಲ್ಲಿ ಅವರು ಈ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 1983 ಸ್ವಾಮೀಜಿ ಅವರು ಸಮಾಧಿ ಸ್ವೀಕರಿಸಿದರು. ಆದರೆ, ಈ ದೇವಸ್ಥಾನದ ಕಾರ್ಯ 39 ವರ್ಷಗಳ ನಂತರ ಪೂರ್ಣಗೊಂಡಿತು.

jot1ಈ ವಿಶಾಲಾಕೃತಿಯ ದೇವಸ್ಥಾನದ ನಾಲ್ಕು ಕಡೆಗಳಲ್ಲಿ ದೇವಿ-ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನದ ಒಳಗೆ ಸ್ಫಟಿಕ ಮಣಿ ಶಿವಲಿಂಗ ವಿರಾಜಮಾನವಾಗಿದೆ. ಇದಲ್ಲದೆ ಈ ದೇವಸ್ಥಾನದಲ್ಲಿ ಮಾತೆ ಪಾರ್ವತಿಯ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದ ವಿಶೇಷತೆ ಎಂದರೆ, ಈ ದೇವಸ್ಥಾನದ ಮೇಲ್ಭಾಗದಲ್ಲಿ 11 ಅಡಿ ಎತ್ತರದ ಒಂದು ವಿಶಾಲ ಚಿನ್ನದ ಕಳಸ ಸ್ಥಾಪಿಸಲಾಗಿದೆ.

ನಾವೆಲ್ಲಾ ಹಂಪೆಯಲ್ಲಿನ ಕಂಬಗಳನ್ನು ತಟ್ಟಿದರೆ ಸರಿಗಮಪ ಸ್ವರಗಳನ್ನು ನುಡಿಯುವುದನ್ನು ಕೇಳಿದ್ದೇವೆ ಮತ್ತು ಕಂಡಿದ್ದೇವೆ. ಇಲ್ಲಿನ ದೇವಸ್ಥಾನದ ಕಥೆಯು ಅಷ್ಟೇ ಆಸಕ್ತಿದಾಯಕವಾಗಿದೆ. ಈ ದೇವಾಲಯದ ಕಲ್ಲುಗಳನ್ನು ಮುಟ್ಟಿದರೆ ಸಾಕು ಅವುಗಳಿಂದ ಡಮರುಗದ ಶಬ್ದ ಕೇಳಿಸುವುದರಿಂದ ಇಲ್ಲಿ ಶಿವನ ಉಪಸ್ಥಿತಿ ಸದಾಕಾಲವೂ ಇರುವುದರಿಂದ ಈ ಪವಾಡ ಸಂಭವಿಸುತ್ತದೆೆ ಎಂದು ಸ್ಥಳೀಯರು ಪರಿಗಣಿಸುತ್ತಾರೆ.

ಇದೂ ಅಲ್ಲದೇ, ಈ ಭೋಲೆನಾಥ್ ದೇವಸ್ಥಾನಕ್ಕೆ ಬರುವವರು ಯಾರೂ ಸಹ ಬರಿಗೈಯಲ್ಲಿ ಹಿಂತಿರುಗುವುದಿಲ್ಲ. ಅವರ ಎಲ್ಲಾ ಆಸೆಗಳನ್ನು ಶಿವ ಈಡೇರಿಸುತ್ತಾನೆ ಎಂದೇ ಸ್ಥಳೀಯರ ನಂಬಿಕೆಯಾಗಿದೆ. ಈ ದೇವಾಲಯದ ಪ್ರದೇಶವನ್ನು ದೇವ್ ಭೂಮಿ ಎಂದು ಕರೆಯಲಾಗುತ್ತದೆ.

ಬಹಳ ವರ್ಷಗಳ ಹಿಂದೆ ಈ ಜಟೋಲಿ ದೇವಸ್ಥಾನದಲ್ಲಿ ನೀರಿಗೆ ಸಾಕಷ್ಟು ಸಮಸ್ಯೆ ಇದ್ದು, ಜನರು ಬಹಳ ದೂರದಿಂದ ನೀರನ್ನು ತರಬೇಕಾಗಿತ್ತು. ಭಗವಾನ್ ಸ್ವಾಮಿ ಕೃಷ್ಣಾನಂದ ಪರಮಹಂರು ಆ ಪರಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿ ತಮ್ಮ ಬಳಿ ಇದ್ದ ತ್ರಿಶೂಲವನ್ನು ಒಮ್ಮೆ ಜೋರಾಗಿ ಗುದ್ದಿದ ಸ್ಥಳದಲ್ಲಿ ನೀರು ನೆಲದಿಂದ ಚಿಮ್ಮತೊಡಗಿತು. ಅದೇ ಪ್ರದೇಶದಲ್ಲಿ ಒಂದು ಸುಂದರವಾದ ಕೊಳವನ್ನು ಕಟ್ಟಲಾಗಿದ್ದು ಇದನ್ನು ಸ್ಥಳೀಯರು ಜಲ್ ಕುಂಡ್ ಎಂದು ಕರೆಯುತ್ತಾರೆ. ಈ ಕೊಳದ ನಿರ್ಮಾಣವಾದ ನಂತರ ಜಟೋಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದ್ದು, ಜನರು ಈ ನೀರನ್ನು ಪವಾಡದ ನೀರು ಎಂದು ಪರಿಗಣಿಸುತ್ತಾರೆ. ಈ ನೀರನ್ನು ಕುಡಿಯುವುದರಿಂದ ಸರ್ವ ರೋಗವೂ ಅದರಲ್ಲೂ ಎಲ್ಲಾ ರೀತಿಯ ಚರ್ಮರೋಗಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ.

ಮಹಾ ಶಿವರಾತ್ರಿಯ ಹಬ್ಬದಂದು ಫೆಬ್ರವರಿ ತಿಂಗಳಲ್ಲಿ, ಇಲ್ಲಿ ದೊಡ್ಡದಾದ ಜಾತ್ರೆ ನಡೆದು ರಾತ್ರಿಯಿಡೀ ವಿವಿಧ ರೀತಿಯ ಪೂಜೆಗಳು ಇಲ್ಲಿ ನಡೆಯುತ್ತದೆ. ಈ ವಿಶೇಷ ಪೂಜೆಯನ್ನು ನೋಡಲು ದೇಶ ವಿದೇಶದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬಂದು ಶಿವನ ಕರುಣೆಗೆ ಪಾತ್ರರಾಗುತ್ತಾರೆ. ಅಂದಿನ ದಿನ ಎಲ್ಲಾ ಭಕ್ತರಿಗೆ ಹಾಲು ಮತ್ತು ಸಕ್ಕರೆಯ ಮಿಶ್ರಣದ ಘೋಟಾ ಎಂಬ ಪಾನೀಯವನ್ನು ತೀರ್ಥರೂಪದಲ್ಲಿ ನೀಡಲಾಗುತ್ತದೆ. ಇಲ್ಲಿ ಪ್ರತೀ ಭಾನುವಾರವೂ ಅನ್ನ ದಾಸೋಹ ದೇವಾಲಯದ ಕಡೆಯಿಂದ ನಡೆಸಲಾಗುತ್ತದೆ.

ಜಟೋಲಿ ಶಿವ ದೇವಾಲಯದೊಳಗೆ ಒಂದು ಗುಹೆ ಇದ್ದು ಪ್ರವಾಸಿಗರು ಅಲ್ಲಿರುವ ಮಾತೆಯ ಪ್ರತಿಮೆಯನ್ನು ದರ್ಶನ ಪಡೆದು ಭಗವಂತನ ಆಶೀರ್ವಾದ ಪಡೆಯಲು ಅವಕಾಶವಿದೆ. ಹಿಂದೆ ಶಿವ ನೆಲೆಸಿದ ಸ್ಥಳ ಇದಾಗಿದೆ ಎಂದು ಸ್ಥಳೀಯರು ನಂಬುತ್ತಾರೆ.

nandi1ದೇವಾಲಯದ ಕೆಲವು ಮೀಟರ್ ದೂರದಲ್ಲಿಯೇ ಕಪ್ಪು ಬಣ್ಣದ ಶಿವಲಿಂಗವಿದ್ದು ಆ ಶಿವಲಿಂಗದ ಪಕ್ಕದಲ್ಲಿಯೇ ಶಿವನ ವಾಹನವಾದ ನಂದಿಯ ಪ್ರತಿಮೆಯೂ ಶಿವನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಈ ನಂದಿಯನ್ನು ಬಳಸುತ್ತಾನೆ ಎಂದು ನಂಬಲಾಗಿದೆ.

ಇನ್ನೇಕೆ ತಡಾ ಮುಂದಿನ ಬಾರಿ ನೀವು ಶಿಮ್ಲಾಕ್ಕೆ ಹೋಗುವಾಗ, ದಾರಿಯಲ್ಲಿಯೇ ಮೋಡಿ ಮಾಡುವ ಈ ಜಟೋಲಿ ದೇವಸ್ಥಾನಕ್ಕೂ ಭೇಟಿ ನೀಡಿ ಭೋಲೇನಾಥನ ಕೃಪಾಶೀವಾದಕ್ಕೂ ಪಾತ್ರರಾಗುವುದಲ್ಲದೇ, ಈ ಧಾರ್ಮಿಕ ಸ್ಥಳದ ಪ್ರಶಾಂತತೆಯನ್ನು ಅನುಭವಿಸುತ್ತೀರೀ ಅಲ್ವೇ?

ಈ ದೇವಾಲಯದ ಸುಂದರ ರಮಣೀಯ ದೃಶ್ಯಗಳನ್ನು ಕಣ್ತುಂಬಿಸಿ ಕೊಳ್ಳೋಣ ಬನ್ನಿ.

ಏನಂತೀರೀ?
ನಿಮ್ಮವನೇ ಉಮಾಸುತ

ಶಿವರಾತ್ರಿ

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಹಬ್ಬವೂ ಒಂದಾಗಿದ್ದು ಇದು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ದಿನ ಬಹುತೇಕ ಶಿವಭಕ್ತರು ಇಡೀ ದಿನ ಉಪವಾಸವಿದ್ದು ಶ್ರದ್ಧಾಭಕ್ತಿಯಿಂದ ಶಿವಪೂಜೆಯನ್ನು ಮನೆಗಳಲ್ಲಿ ಮಾಡಿ ನಂತರದ ಹತ್ತಿರದ ಶಿವನ ದೇವಸ್ಥಾನಕ್ಕೆ ಹೋಗಿ ಪರಶಿವನ ದರ್ಶನ ಪಡೆದ ನಂತರ ಇಡೀ ರಾತ್ರಿ ನಿದ್ದೆ ಮಾಡದೇ ಶಿವಧ್ಯಾನ ಮಾಡುತ್ತಾ ಜಾಗರಣೆ ಮಾಡಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಆಸ್ತಿಕ ಭಕ್ತ ಮಹಾಶಯರ ನಂಬಿಕೆಯಾಗಿದೆ.

ಶಿವರಾತ್ರಿಯ ಕುರಿತಾಗಿ ಅನೇಕ ಪೌರಾಣಿಕ ಮತ್ತು ಜನಪದ ಕಥೆಗಳು ಪ್ರಚಲಿತದಲ್ಲಿದೆ.

ಜಟಾಧರನಾದ ಪರಶಿವನನ್ನು ಹಿಮವಂತನ ಮಗಳಾದ ಗಿರಿಜೆಯು ಭಕ್ತಿಯಿಂದ ರ್ಪಾರ್ಥಿಸಿ, ಜಪ ತಪ ಮತ್ತು ಪೂಜೆಗಳನ್ನು ಮಾಡಿ ಶಿವನ ಮನಸ್ಸನ್ನು ಒಲಿಸಿಕೊಂಡು ವಿವಾಹವಾದದ್ದು ಶಿವರಾತ್ರಿಯಂದು ಎಂದು ಪುರಾಣದದಲ್ಲಿ ಹೇಳಲಾಗಿದೆ.

ಅದೇ ರೀತಿ ದೇವತೆಗಳು ಮತ್ತು ರಾಕ್ಷಸರುಗಳು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವ ಸಮಯದಲ್ಲಿ ಹಾಲಾಹಲ ಉತ್ಪತ್ತಿಯಾಗಿ ಅದರ ಪ್ರಭಾವದಿಂದ ಇಡೀ ಭೂಮಂಡಲವೇ ನಾಶವಾಗುವಂತಹ ಸಂದರ್ಭಬಂದಾಗ ಎಲ್ಲಾ ದೇವಾನು ದೇವತೆಗಳು ಪರಶಿವನನ್ನು ಪ್ರಾರ್ಥಿಸಿದಾಗ, ಸದಾಶಿವನು ಲೋಕ ಕಲ್ಯಾಣಕ್ಕಾಗಿ ಆ ಇಡೀ ಹಾಲಾಹಲವನ್ನು ಕುಡಿದದ್ದನ್ನು ಕಂಡು ಆತನ ಪತ್ನಿ ಪಾರ್ವತಿ ದೇವಿ ಓಡಿ ಬಂದು ಶಿವನ ಕುತ್ತಿಗೆಯನ್ನು ಹಿಡಿದುಕೊಂಡು ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದ್ದಲ್ಲದೇ, ಶಿವ ನಿದ್ರೆ ಮಾಡಿದರೆ ವಿಷವೆಲ್ಲಾ ದೇಹದಲ್ಲಿ ಸುಲಭವಾಗಿ ಹರಡುವ ಕಾರಣ, ದೇವಾನು ದೇವತೆಗಳೆಲ್ಲರೂ ಎಚ್ಚರವಾಗಿದ್ದು, ಇಡೀ ರಾತ್ರಿ ಶಿವನ ಧ್ಯಾನ ಮಾಡಿಕೊಂಡು ಶಿವ ನಿದ್ರಿಸದಂತೆ ನೋಡಿಕೊಂಡ ದಿನವನ್ನೇ ಶಿವರಾತ್ರಿ ಎಂದು ಆಚರಿಸುವ ರೂಢಿಯಾಯಿತು. ಶಿವನ ಕಂಠದಲ್ಲಿಯೇ ವಿಷವು ನಿಂತು ಹೋದ ಕಾರಣ ಅಂದಿನಿಂದ ಶಿವನನ್ನು ವಿಷಕಂಠ, ನೀಲಕಂಠ ಮತ್ತು ಶ್ರೀಕಂಠನೆಂದೂ ಕರೆಯಲಾರಂಭಿಸಿದರು. ಹಾಗೆ ನಂಜನ್ನು ಉಂಡ ಕಾರಣ ಈಶ್ವರ ನಂಜುಂಡೇಶ್ವರನಾದ.

ಇನ್ನು ಜನಪದ ಕಥೆಯ ಪ್ರಕಾರ ಅದೊಮ್ಮೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ಹೋಗಿ ಇಡೀ ದಿನವೆಲ್ಲಾ ಅಲೆದಾಡಿದರೂ ಒಂದು ಬೇಟೆಯೂ ಸಿಗದೆ, ಕಾಡಿನಲ್ಲಿ ದಾರಿ ತಪ್ಪಿಸಿಕೊಂಡ. ಆಷ್ಟರಲ್ಲಾಗಲೇ ಕತ್ತಲಾಗಿದ್ದ ಕಾರಣ, ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮರವೊಂದನ್ನು ಏರಿ ಕುಳಿತ. ಆ ಬೇಡನನ್ನು ನೋಡಿದ ಕ್ರೂರಮೃಗಗಳು ಮರವನ್ನು ಸುತ್ತುವರಿದಾಗ ಭಯಭೀತನಾದ ಬೇಡನು ಶಿವನ ಧ್ಯಾನ ಮಾಡುತ್ತಾ ಆತ ಕುಳಿತಿದ್ದ ಮರದ ಎಲೆಗಳನ್ನೇ ಕಿತ್ತು ಕೆಳಗೆ ಹಾಕತೊಡಗಿದ. ಅಚ್ಚರಿಯೆನ್ನುವಂತೆ ಆತ ಕುಳಿತಿದ್ದ ಮರ ಬಿಲ್ವಮರವಾಗಿದ್ದು, ಆತ ಎಸೆದ ಎಲೆಗಳು ಬಿಲ್ವಪತ್ರೆಯಗಿದ್ದು ಅದು ಅವನಿಗೇ ಅರಿವಿಲ್ಲದಂತೆಯೇ, ಮರದ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಈ ರೀತಿಯಾಗಿ ಇಡೀ ರಾತ್ರಿ ಶಿವಧ್ಯಾನ ಮಾಡಿದ ಪರಿಣಾಮದಿಂದಾಗಿಯೇ ಬೇಡನಿಗೆ ಶಿವನೇ ಅಭಯದಾಯಕನಾದ ವಿಷಯ ಎಲ್ಲೆಡೆ ಹರಡಿ ಆ ದಿನವನ್ನು ಶಿವರಾತ್ರಿ ಎಂದು ಕರೆದು, ಅಂದಿನಿಂದ ಪ್ರತೀವರ್ಷವೂ ಶಿವರಾತ್ರಿಯನ್ನು ಭಯ ಭಕ್ತಿಗಳಿಂದ ಜಾಗರಣೆ ಮಾಡುತ್ತಾ ಶಿವಧ್ಯಾನ ಮಾಡುತ್ತಾ ಆಚರಿಸಲಾರಂಭಿಸಿದರು ಎಂದು ಈ ಪೌರಾಣಿಕ ಕಥೆ ಹೇಳುತ್ತದೆ.

ಇನ್ನು ವೈಜ್ಞಾನಿಕವಾಗಿ ನೋಡಿದರೆ, ರಥ ಸಪ್ತಮಿಯಂದು ಸೂರ್ಯ ಪಥವನ್ನು ಬದಲಿಸಿದ ನಂತರ ಶಿವರಾತ್ರಿಯವರೆಗೂ ಚಳಿ ಇದ್ದು ಶಿವರಾತ್ರಿಯ ನಂತರ ಛಳಿಯೆಲ್ಲಾ ಮಾಯವಾಗಿ ಬೇಸಿಗೆ ಪ್ರಾರಂಭವಾಗಿ ಹಗಲು ಹೆಚ್ಚಾಗಿರುತ್ತದೆ. ಹವಾಮಾನದ ಈ ವೈಪರೀತ್ಯದ ಸಮಯದಲ್ಲಿ ಮನುಷ್ಯರದ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗಿ ಹಲವರಿಗೆ ಉಸಿರಾಟದ ತೊಂದರೆ ನೆಗಡಿ, ಕೆಮ್ಮು, ಶೀತದ ಬಾಧೆಗಳು ಕಾಣಿಸಿಕೊಳ್ಳುತ್ತದೆ. ಲಂಘನಂ ಪರಮೌಷಧಂ ಎನ್ನುವಂತೆ ಶಿವರಾತ್ರಿಯಂದು ಉಪವಾಸವಿದ್ದು ಮಹಾಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ಮಾಡುವ ಸಂದರ್ಭದಲ್ಲಿ ಬಿಲ್ವಪತ್ರೆಯ ವಾಸನೆ ನೋಡುವುದರಿಂದ ರೋಗರುಜಿನಗಳಿಂದ ಮುಕ್ತವಾಗ ಬಹುದಾಗಿದೆ.

ಶಿವರಾತ್ರಿಯ ದಿನದಂದು ಮನೆಯವರೆಲ್ಲರೂ ಹೊತ್ತಿಗೆ ಮುಂಚೆ ಎದ್ದು ತೈಲಾಭ್ಯಂಜನ ಮಾಡಿ, ಇಡೀ ದಿನವೂ ಉಪವಾಸವಿದ್ದು ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ಹಾಲು, ಜೇನುತುಪ್ಪ, ನೀರು, ಬಿಲ್ವಪತ್ರೆ, ತುಳಸಿ, ಶ್ರೀಗಂಧಗಳಿಂದ ಶಿವನಿಗೆ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡಿ ಬಗೆ ಬಗೆಯ ಪತ್ರೆ ಮತ್ತು ಹೂಗಳಿಂದ ಶಿವನನ್ನು ಆಲಂಕರಿಸಿ ಪೂಜೆ ಮಾಡುವುದು ರೂಢಿಯಲ್ಲಿದೆ. ಅದರಲ್ಲೂ ಹೃದಯವನ್ನೇ ಹೋಲುವ ಬಿಲ್ಪಪತ್ರಾರ್ಚನೆ ವಿಶೇಷವಾಗಿದೆ. ಪೂಜೆಯ ಸಮಯದಲ್ಲಿ ರುದ್ರ, ನಮಕ ಮತ್ತು ಚಮಕಗಳನ್ನು ಬಾರಿ ಬಾರಿ, ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. ಇಡೀ ದಿನ ಶಿವ ಪಂಚಾಕ್ಷರಿ ಮಂತ್ರವಾದ ಓಂ ನಮ: ಶಿವಾಯ, ಹರ ಹರ ಮಹಾದೇವ, ಶಂಭೋ ಶಂಕರ ಎಂದು ದಿನವಿಡೀ ಧ್ಯಾನ ಮಾಡುತ್ತಾರೆ. ಈ ರೀತಿಯ ಪೂಜೆಯನ್ನು ಬೆಳಿಗ್ಗೆ ಸಂಜೆ ಮತ್ತು ರಾತ್ರಿ ಶಿವನ ಧ್ಯಾನ ಮಾಡುತ್ತಾ ಜಾಗರಣೆ ಮಾಡುವುದು ರೂಢಿಯಲ್ಲಿದೆ. ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದರ್ಥವೂ ಇದೆ. ಬಹುತೇಕರು ಅಂದು ನಿಟ್ಟುಪವಾಸ ಮಾಡಿದರೆ, ಇನ್ನೂ ಕೆಲವರು ಅಲ್ಪಾಹಾರ ಇಲ್ಲವ್ವೇ ಫಲಾಹಾರವನ್ನು ಸೇವಿಸುವ ಪರಿಪಾಠವೂ ಇದೆ. ಶಿವರಾತ್ರಿಯ ರಾತ್ರಿಯ ದಿನ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂಬ ನಂಬಿಕೆಯೂ ಇದೆ.

ಶಿವರಾತ್ರಿಯಂದು ದೇಶದ ಪ್ರಮುಖ ಶಿವನ ದೇವಾಲಯಗಳಾದ ಕಾಶಿ ವಿಶ್ವನಾಥ, ಮುರುಡೇಶ್ವರ, ಗೋಕರ್ಣದ ಮಹಾಬಲೇಶ್ವರ, ನಂಜನಗೂಡಿನ ಶ್ರೀಕಂಠೇಶ್ವರನಿಗೆ, ರಾಮೇಶ್ವರದ ರಾಮೇಶ್ವರ, ತಂಜಾವೂರಿನ ಬೃಹದೇಶ್ವರ, ಕೊಯಮತ್ತೂರಿನ ಇಶಾ ಫೌಂಡೇಷನ್ನಿನ ಇನ್ನೂ ಅನೇಕ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿರುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ. ಇನ್ನೂ ಹಲವು ದೇವಾಲಯಗಳಲ್ಲಿ ಸಾಮೂಹಿಕ ಭಜನೆ, ಹರಿಕಥೆ, ಗಮಕವಾಚನಗಳನ್ನೂ ಏರ್ಪಡಿಸಿರುತ್ತಾರೆ.

ಭಗವಂತನ ಹೆಸರಿನಲ್ಲಿ ನಮ್ಮ ಮನಸ್ಸು ಮತ್ತು ಆರೋಗ್ಯ ಎರಡನ್ನೂ ಸುಧಾರಿಸುವ ಈ ಶಿವರಾತ್ರಿ ಹಬ್ಬವನ್ನು ಅರ್ಥಪೂರ್ಣವಾಗಿ ಭಗವಂತನನ್ನು ಸ್ಮರಿಸುತ್ತಾ ಆಚರಿಸುವ ಮೂಲಕ ಅದರ ಸತ್ಫಲವನ್ನು ಪಡೆಯೋಣ ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ