ಶುಂಠಿ ತೊಕ್ಕು (ಅಲ್ಲಂ ಪಚ್ಚಡಿ)

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಆರೋಗ್ಯಕರವಾಗಿರುವ ಮತ್ತು ತುಂಬಾ ದಿನಗಳವರೆಗೂ ಇಟ್ಟು ಕೊಂಡು ತಿನ್ನಬಹುದಾದ ಶುಂಠಿ ತೊಕ್ಕು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಶುಂಠಿ ತೊಕ್ಕು ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಕೊಂಡ ಶುಂಠಿ – 1 ಬಟ್ಟಲು
 • ಹುಣಸೆಹಣ್ಣಿನ ರಸ – 2 ಬಟ್ಟಲು
 • ಬೆಲ್ಲ 1/2 ಬಟ್ಟಲು
 • ಧನಿಯ – 1 ಚಮಚ
 • ಮೆಂತ್ಯ – 3 ಚಮಚ
 • ಜೀರಿಗೆ – 1 ಚಮಚ
 • ಸಾಸಿವೆ – 1 ಚಮಚ
 • ಉದ್ದಿನಬೇಳೆ – 4 ಚಮಚ
 • ಚಿಟುಕಿ – ಇಂಗು
 • ಚಿಟುಕಿ – ಅರಿಶಿನ
 • ಮೆಣಸಿನ ಪುಡಿ – ಖಾರಕ್ಕೆ ಅನುಗುಣವಾಗಿ
 • ಎಣ್ಣೆ – 1 ಬಟ್ಟಲು
 • ಕರಿಬೇವು – 8-10 ಎಲೆಗಳು
 • ರುಚಿಗೆ ಅನುಗುಣವಾಗಿ ಉಪ್ಪು

ಶುಂಠಿ ತೊಕ್ಕು ತಯಾರಿಸುವ ವಿಧಾನ

 • ಬಾಣಲೆಯಲ್ಲಿ ಉದ್ದಿನಬೇಳೆ, ದನಿಯಾ, ಜೀರಿಗೆ ಮತ್ತು ಮೆಂತ್ಯವನ್ನು ಹಾಕಿಕೊಂಡು ಚೆನ್ನಾಗಿ ಹಸೀ ಹೋಗುವವರೆಗೂ ಹುರಿದುಕೊಂಡು ಆರಿದ ನಂತರ ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.
 • ಅಗಲವಾದ ಗಟ್ಟಿ ತಳದ ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಆದ ನಂತರ ಸಾಸಿವೆ, ಇಂಗು, ಕರಿಬೇವು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ
 • ಈಗ ಒಗ್ಗರಣೆಗೆ ನುಣ್ಣಗೆ ರುಬ್ಬಿ ಇಟ್ಟುಕೊಂಡ ಶುಂಠಿ, ಹುಣಸೇ ಹುಳಿ, ಉಪ್ಪು, ಮೆಣಸಿನ ಪುಡಿ, ಬೆಲ್ಲಾ, ಅರಿಶಿನಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚೆನ್ನಾಗಿ ಎಣ್ಣೆ ಬಿಡುವ ವರೆಗೂ ಕುದಿಸಿದಲ್ಲಿ ಆರೋಗ್ಯಕರವಾದಮತ್ತು ರುಚಿಯಾದ ಶುಂಠಿ ತೊಕ್ಕು ಸವಿಯಲು ಸಿದ್ದ

ಗಾಳಿಯಾಡದಂತಹ ಬಿಗಿಯಾದ ಬಾಟಲಿನಲ್ಲಿ ಸುಮಾರು ಒಂದು ವರ್ಷದವರೆಗೂ ಇಟ್ಟುಕೊಂಡು ಸವಿಯಬಹುದಾಗಿದೆ.

ಮೊದಲೇ ತಿಳಿಸಿದಂತೆ ಈ ತೊಕ್ಕು ದೋಸೆ, ಇಡ್ಲಿ, ಚಪಾತಿಗಳಲ್ಲದೇ, ಇಡ್ಲಿ, ವಡೆ ಮತ್ತು ಪೊಂಗಲ್ ಜೊತೆಯೂ ತಿನ್ನಲು ಚೆನ್ನಾಗಿರುತ್ತದೆ

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ಈ ಶುಂಠಿ ತೊಕ್ಕು ಗ್ಯಾಸ್ಟ್ರಿಕ್ ಸಮಸ್ಯೆಗೆ ತುಂಬಾ ಆರೋಗ್ಯಕರವಲ್ಲದೇ, ಶುಂಠಿಯು ನೋವುನಿವಾರಕ, ಉದ್ವೇಗಶಾಮಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಜೊತೆಗೆ ಜೀರ್ಣಶಕ್ತಿಯನ್ನು ಹೆಚ್ಚಿಸುವ ವಿಶೇಷ ಗುಣವನ್ನು ಸಹ ಹೊಂದಿವೆ. ಪ್ರವಾಸದಿಂದ ಉಂಟಾಗುವ ತಲೆಸುತ್ತುವಿಕೆ, ಹೊಟ್ಟೆ ತೊಳಸುವಿಕೆಗಳಿಗೆ ಶುಂಠಿ ಅತ್ಯುತ್ತಮ ಔಷಧಿಯಾಗಿದೆ. ಹೆಣ್ಣುಮಕ್ಕಳ ಮುಟ್ಟಿನ ನೋವನ್ನು ಸಹಾ ಶಮನಗೊಳಿಸಲು ಶುಂಠಿ ಸಹಕಾರಿಯಾಗಿರುವುದಲ್ಲದೇ, ರಕ್ತದಲ್ಲಿನ ಕೆಟ್ಟ ಕೊಬ್ಬನ್ನು ಕಡಿತಗೊಳಿಸುವುದರ ಜೊತೆ ನರಮಂಡಲದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಈ ಪಾಕ ವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ ಅವರಿಗೆ ತುಂಬು ಹೃದಯದ ಧನ್ಯವಾದಗಳು