ಭೀಷ್ಮಾಷ್ಟಮಿ

ಇಂದು ಮಾಘ ಮಾಸದ ಶುದ್ಧ ಅಷ್ಟಮಿ. ಆಜೀವ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ ಎಂದು ಶಪಥ ಮಾಡಿ,  ಮಹಾಭಾರತದಲ್ಲಿ  ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸಿ ಪಿತಾಮಹರೇ ಎನಿಸಿದ್ದ ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಇಚ್ಛಾಮರಣಿಗಳಾಗಿ ತಮ್ಮ ಜೀವನವನ್ನು ತ್ಯಜಿಸಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾಯುತ್ತಿದ್ದ   ಶ್ರೀ ಭೀಷ್ಮಾಚಾರ್ಯರು ತಮ್ಮ ದೇಹತ್ಯಾಗವನ್ನು ಮಾಡಿದ ದಿನ ಹಾಗಾಗಿ ಈ ದಿನವನ್ನು ಭೀಷ್ಮಾಷ್ಟಮಿ  ಎಂದೂ ಕರೆಯಲಾಗುತ್ತದೆ.

bhe5ಮಹಾಭಾರತದಲ್ಲಿ ಶಂತನು ಮತ್ತು ಗಂಗಾದೇವಿಯ ಪುತ್ರನಾಗಿ ಜನಿಸಿದ್ದ ದೇವವ್ರತ ಸಹಜವಾಗಿಯೇ ಶಂತನುವಿನ ಉತ್ತರಾಧಿಕಾರಿಗಳಾಗಿರುತ್ತಾರೆ. ವಯಸ್ಸಿಗೆ ಬಂದ ಮಗನಿದ್ದರೂ ಯೋಜನಗಂಧಿಯನ್ನು ಮೋಹಿಸಿ ಮದುವೆ ಆಗಲು ಶಂತನು ನಿರ್ಧರಿಸಿದಾಗ ಆಕೆಯ ತಂದೆ, ತನ್ನ ಮಗಳ ಮಕ್ಕಳಿಗೆ ಪಟ್ಟಾಭಿಷೇಕ ಮಾಡುತ್ತೇನೆ ಎಂದು ವಚನ ಕೊಡದ ಹೊರತು ತನ್ನ ಮಗಳನ್ನು ಮದುವೆ ಮಾಡಿಕೊಡಲಾರೆ ಎಂದು ಪಟ್ಟು ಹಿಡಿದಿದ್ದಾಗ, ತಂದೆಯ ಆಸೆಯನ್ನು ತೀರಿಸುವ ಸಲುವಾಗಿ ತಾನು ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಿ ಭೀಷ್ಮ ಪ್ರತಿಜ್ಞೆ  ಎಂದೇ ಪ್ರಖ್ಯಾತವಾಗಿ ದೇವವ್ರತರು ಮುಂದೇ ಭೀಷ್ಮಾಚಾರ್ಯರೆಂದೇ ಪ್ರಖ್ಯಾತರಾಗುತ್ತಾರೆ.

bhe2ತನಗಾಗಿ ತನ್ನ ಯೌವ್ವನದ  ಜೀವನವನ್ನೇ ಮುಡುಪಾಗಿಟ್ಟ ಕಾರಣ,  ಅವರ ತಂದೆ ಆತನಿಗೆ ಇಚ್ಛಾಮರಣಿ ಆಗುವಂತೆ ವರ ಕೊಡುತ್ತಾರೆ.  ಅಂದಿನಿಂದ ಭೀಷ್ಮಾಚಾರ್ಯರು  ಇಡೀ ಜೀವನಪೂರ್ತಿ ಬ್ರಹ್ಮಚರ್ಯವನ್ನು ಪಾಲಿಸುತ್ತಲೇ ಹಸ್ತಿನಾಪುರದ ಒಳಿತಿಗಾಗಿ ಶ್ರಮಿಸುತ್ತಾರಲ್ಲದೇ, ಇಷ್ಟವಿಲ್ಲದಿದ್ದರೂ  ಕುರುಕ್ಷೇತ್ರದಲ್ಲಿ ಅನಿವಾರ್ಯವಾಗಿ ಕೌರವರ ಪರ ಪಾಂಡವರ ವಿರುದ್ಧ ಯುದ್ಧಕ್ಕೆ ಇಳಿಯುತ್ತಾರೆ.

bhe4ಯುದ್ಧದಲ್ಲಿ ಭೀಷ್ಮಾಚಾರ್ಯರನ್ನು ಸೋಲಿಸುವುದು ಕಷ್ಟ ಎಂದು ಅರಿತ ಶ್ರೀ ಕೃಷ್ಣನು ಶಿಖಂಡಿಯನ್ನು ಅವರ ಮುಂದೆ ಯುದ್ದಕ್ಕೆ ತಂದಾಗ, ವಿಧಿ ಇಲ್ಲದೇ ಭೀಷ್ಮಾಚಾರ್ಯರು ಶಸ್ತ್ರತ್ಯಾಗ ಮಾಡಿ ಯುದ್ದದಿದ್ದ ವಿಮುಕ್ತರಾಗುತ್ತಾರೆ. ಯುದ್ಧದಲ್ಲಿ ಬಾಣಗಳಿಂದ ಜರ್ಜರಿತರಾಗಿದ್ದರೂ ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗ ಮಾಡಲು ಇಚ್ಚಿಸಿದ ಕಾರಣ, ಶ್ರೀ ಕೃಷ್ಣನ ಸಲಹೆಯಂತೆ, ಅರ್ಜುನನು  ಬಾಣಗಳಿಂದ ಹಾಸಿಯಂತೆ ಮಾಡಿ ಅವರನ್ನು ಶರಶಯ್ಯೆಯಲ್ಲಿ ಮಲಗಿಸುತ್ತಾನಲ್ಲದೇ ಕುಡಿಯಲು ನೀರನ್ನು ಕೇಳಿದಾಗ  ಸಂದರ್ಭದಲ್ಲಿ ಮತ್ತೆ ಶ್ರೀ ಕೃಷ್ಣನು ಅರ್ಜುನನಿಗೆ ಗಂಗಾಮಾತೆಯನ್ನೇ  ಅಲ್ಲಿಗೆ  ತರಲು ಸೂಚಿಸಿದಾಗ, ಅರ್ಜುನನು ನೆಲಕ್ಕೆ ಬಾಣ ಹೊಡೆದು ಗಂಗಾಜಲ ನೇರವಾಗಿ ಭೀಷ್ಮಾಚಾರ್ಯರ ಬಾಯಿಗೆ ಬೀಳುವಂತೆ ಮಾಡುತ್ತಾನೆ.

bhe3ಹೀಗೆ ದೇಹ ತ್ಯಾಗಕ್ಕಾಗಿ ಉತ್ತರಾಯಣದ ಪುಣ್ಯಕಾಲದಲ್ಲಿ ವೀರೋಚಿತವಾದ ಮರಣವನ್ನು ಹೊಂದಲು ಶರಶಯ್ಯೆಯನ್ನು ಮಲಗಿದ್ದ ಭೀಷ್ಮಾಚಾರ್ಯರನ್ನು ನೋಡಲು ಪಾಂಡವರು ಬಂದಾಗ, ಭೀಷ್ಮಾಚಾರ್ಯರು ತ್ಯಾಗದ ಭಾವನೆಗೆ ಮೂಲವಾದ ಆಧ್ಯಾತ್ಮಿಕ ಜ್ಞಾನದ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಫಲವೇ, ಧರ್ಮರಾಯನಿಗೆ ಉಪದೇಶಿಸಿದ ವಿಷ್ಣುಸಹಸ್ರನಾಮ ಮತ್ತು ಇತರೇ ಧಾರ್ಮಿಕ ಉಪದೇಶಗಳು. ಶ್ರೀಕೃಷ್ಣನೇ ಪರಮಜ್ಞಾನಿಗಳಾದ ಭೀಷ್ಮರ ಮುಖಾಂತರ ಲೋಕಕ್ಕೆ ನಾನಾ ಧಾರ್ಮಿಕ ರಹಸ್ಯಗಳನ್ನು ತಿಳಿಯಪಡಿಸಿದನು ಎಂದರು ತಪ್ಪಾಗದು.

vishunu_sahasraamaವಿಷ್ಣು ಸಹಸ್ರನಾಮದಂತಹ ಅದ್ಭುತ ಶ್ಲೋಕವನ್ನು ನಮಗೆ ನೀಡಿದ ಭೀಷ್ಮಾಚಾರ್ಯರನ್ನು ಇದೇ ಮಕರಮಾಸದ ಮಾಘ ಶುದ್ಧ ಅಷ್ಟಮಿಯಂದೇ ತಮ್ಮ ದೇಹತ್ಯಾಗ ಮಾಡಿದ ಕಾರಣ  ಈ ದಿನವನ್ನು ಭೀಷ್ಮಾಷ್ಠಮಿ ಎಂದೇ ಕರೆಯಲಾಗುತ್ತದೆ.

ಹಾಗಾಗಿ ಈ ದಿನ ತಮ್ಮ ಪಿತೃಗಳಿಗೆ ಕನಿಷ್ಮ ಪಕ್ಷ ನೀರಿನಿಂದಲಾದರೂ ತರ್ಪಣವನ್ನು ಕೊಟ್ಟಲ್ಲಿ ಸಂತಾನ ಅಭಿವೃದ್ಧಿಯಾಗುವುದಲ್ಲದೇ, ತಮ್ಮ ಇಡೀ ಕುಟುಂಬಕ್ಕೆ ಶೇಯಸ್ಕರ ಎಂದು ಈ ಶ್ಲೋಕದಲ್ಲಿ ವಿವರಿಸಲಾಗಿದೆ.

ಮಾಘೇ ಮಾಸಿ ಸಿತಾಷ್ಟಮ್ಯಾಂ ಸಲಿಲಂ ಭೀಷ್ಮವರ್ಮಣೇ!
ಶ್ರಾದ್ಧಂ ಚ ಯೇ ನರಾಃ ಕುರ್ಯುಃ ತೇ ಸ್ಯುಃ ಸಂತತಿಭಾಗಿನಃ

ಅದೇ ರೀತಿ ಭೀಷ್ಮ ತರ್ಪಣ ಕೊಡದಿದ್ದಲ್ಲಿ ವರ್ಷವಿಡೀ ಮಾಡಿದ ಪುಣ್ಯಗಳು ನಾಶವಾಗುತ್ತದೆ ಎಂದು ಈ ಶ್ಲೋಕ ಹೇಳುತ್ತದೆ.

ಬ್ರಾಹ್ಮಣಾದ್ಯಾಶ್ಚ ಯೇ ವರ್ಣಾಃ ದದ್ಯುಃ ಭೀಷ್ಮಾಯ ನೋ ಜಲಂ |
ಸಂವತ್ಸರಕೃತಂ ತೇಷಾಂ ಪುಣ್ಯಂ ನಶ್ಯತಿ ಸತ್ತಮ ||

ತರ್ಪಣ ಕೊಡುವ ವಿಧಾನ

ತಂದೆ ಇರದವರು ಜನಿವಾರವನ್ನು ಪ್ರಾಚೀನವೀತಿ (ಎಡಕ್ಕೆ ಹಾಕಿಕೊಂಡು) ಮೂರು ಬಾರಿ ಈ ಮಂತ್ರವನ್ನು ಹೇಳಿಕೊಂಡು ತರ್ಪಣವನ್ನು ಕೊಡಬೇಕು.

ತಂದೆ ತಾಯಿ ಇದ್ದವರು ಜನಿವಾರವನ್ನು ಎಡ ಹೆಬ್ಬೆರಳಿಗೆ ಸಿಕ್ಕಿಸಿಕೊಂಡು ಪೂರ್ವಾಭಿಮುಖವಾಗಿ ಕುಳಿತು ಮೂರು ಬಾರಿ ಕೇವಲ ನೀರಿನಿಂದ ತರ್ಪಣವನ್ನು ಕೊಡಬೇಕು.

ಭೀಷ್ಮಃಶಾಂತನವೊ ವೀರಃ ಸತ್ಯವಾದೀ ಜಿತೇಂದ್ರಿಯಃ |
ಆಭಿರದ್ಭಿರವಾಪ್ನೋತಿ ಪುತ್ರಪೌತ್ರೋಚಿತಾಂ ಕ್ರಿಯಾಂ |
ವೈಯಾಘ್ರಪಾದಗೋತ್ರಾಯ ಸಾಂಕೃತಿಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮರ್ಘ್ಯಮ್ ||
ವಸೂನಾಮವತಾರಾಯ ಶಂತನೋರಾತ್ಮಜಾಯ ಚ |
ಅರ್ಘ್ಯಂ ದದಾಮಿ ಭೀಷ್ಮಾಯ ಆಬಾಲಬ್ರಹ್ಮಚಾರಿಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮಸ್ತು ತಿಲೋದಕಮ್ |

kandhi_preriyavarಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಬೋಧಿಸಿದ ವಿಷ್ಣು ಸಹಸ್ರನಾಮವನ್ನು ಹೇಗೆ ದಾಖಲಿಸಲಾಯಿತು? ಎಂಬುದನ್ನು ಕಂಚಿಯ ಮಹಾ ಪೆರೆಯವರ್ ಎಂದೇ ಪ್ರಖ್ಯಾತರಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮಿಗಳು ಅದ್ಭುತವಾಗಿ ವಿವರಿಸಿದ್ದಾರೆ.

50 ರ ದಶಕದಲ್ಲಿ ಕಂಚಿ ಜಗದ್ಗುರುಗಳನ್ನು ಸಂದರ್ಶಿಸುತ್ತಿದ್ದವರೊಬ್ಬರು ಟೇಪ್ ರೆಕಾರ್ಡರ್ ಬಳಸುತ್ತಿದ್ದದ್ದನ್ನು ಗಮಿಸಿದ ಸ್ವಾಮಿಗಳುಜಗತ್ತಿನ ಅತ್ಯಂತ ಹಳೆಯ  ಟೇಪ್ ರೆಕಾರ್ಡರ್ ಯಾವುದು ಎಂದು ನಿಮಗೆ ತಿಳಿದಿದೆಯೇ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಯಾರಿಂದಲೂ ಉತ್ತರ ಬಾರದಿದ್ದಾಗ, ವಿಷ್ಣು ಸಹಸ್ರನಾಮವು ನಮಗೆ ಹೇಗೆ ಲಭ್ಯವಾಯಿತು? ಎಂದಾಗ ಅಲ್ಲಿದ್ದವರೊಬ್ಬರು. ಭೀಷ್ಮ ಪಿತಾಮಹರಿಂದ ವಿಷ್ಣು ಸಹಸ್ರನಾಮ ಉಪದೇಶಿಸಲ್ಪಟ್ಟಿತು ಎಂದು ತಿಳಿಸಿದಾಗ ಸಂತೋಷ ಗೊಂಡ ಸ್ವಾಮಿಗಳು, ಯುದ್ಧಭೂಮಿಯಲ್ಲಿ ಎಲ್ಲರೂ ಭೀಷ್ಮರ ಮಾತುಗಳನ್ನು ಆಲಿಸುತ್ತಿರುವಾಗ ಅದನ್ನು ಬರೆದುಕೊಂಡವರು ಯಾರು?  ಎಂದು ಪ್ರಶ್ನಿಸಿದಾಗ ಎಲ್ಲರೂ ಮೌನಕ್ಕೆ ಜಾರುತ್ತಾರೆ.

ಆಗ ತಮ್ಮ ಮಾತನ್ನು ಮುಂದಿವರೆಸಿದ ಶ್ರೀಗಳು.

ಭೀಷ್ಮ ಪಿತಾಮಹರು ಸಹಸ್ರನಾಮದೊಂದಿಗೆ ಶ್ರಿ ಕೃಷ್ಣನನ್ನು ವೈಭವೀಕರಿಸುತ್ತಿದ್ದಾಗ, ಪಾಂಡವರು, ಶ್ರೀಕೃಷ್ಣ ಮತ್ತು  ವೇದವ್ಯಾಸರು ಸೇರಿದಂತೆ ಎಲ್ಲರ ಚಿತ್ತ ಅವರತ್ತವೇ ಇತ್ತು. ಭೀಷ್ಮರು 1000 ನಾಮಗಳನ್ನು ಮುಗಿಸಿದ ನಂತರ ಎಲ್ಲರೂ ಕಣ್ಣು ತೆರೆದಾದ ಕೂಡಲೇ ಧರ್ಮರಾಯನು. ಪಿತಾಮಹರು ವಾಸುದೇವನ 1000 ಅದ್ಭುತವಾದ ನಾಮಗಳನ್ನು ಜಪಿಸಿ  ನಮ್ಮನ್ನೆರನ್ನೂ ಪವನಮಾಡಿದ್ದಾರಾದರೂ ಅದನ್ನು ಕೇಳುವ ಭರದಲ್ಲಿ ಅದನ್ನು ನಾವ್ಯಾರೂ ದಾಖಲೆಯೇ ಮಾಡಿಕೊಳ್ಳಲಿಲ್ಲವಲ್ಲಾ| ಎಂದು ಚಿಂತಾಕ್ರಾಂತನಾಗಿ ಶ್ರೀಕೃಷ್ಣನ ಕಡೆಗೆ ತಿರುಗಿ ಅವನ ಸಹಾಯವನ್ನು ಕೋರುತ್ತಾರೆ.

ಆಗ ಶ್ರೀ ಕೃಷ್ಣನೂ ಸಹಾ,  ನಾನೂ ಕೂಡಾ ನಿಮ್ಮಂತೆಯೇ ಅದನ್ನೇ ಕೇಳುವುದರಲ್ಲಿ ತಲ್ಲೀನರಾಗಿದ್ದ ಕಾರಣ ಅವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲಾಗಲಿಲ್ಲ. ಆದರೆ, ಸಹದೇವ ಮತ್ತು ವ್ಯಾಸರ ಸಹಾಯದಿಂದ ಸಂಪೂರ್ಣವಾಗಿ ಮರಳಿಪಡೆಯ ಬಹುದಾಗಿದೆೆ ಎಂದಾಗ ಎಲ್ಲರ ಮುಖದಲ್ಲಿ ಮಂದಹಾಸ ಮೂಡುತ್ತದೆ.

ನಮ್ಮೆಲ್ಲರಲ್ಲಿ ಸಹದೇವನೊಬ್ಬನು ಮಾತ್ರವೇ ಶುದ್ಧ ಸ್ಫಟಿಕವನ್ನು ಧರಿಸಿರುವ ಕಾರಣ ಅವನು ಶುದ್ಧಮನಸ್ಸಿನಿಂದ ಶಿವನನ್ನು ಪ್ರಾರ್ಥಿಸುತ್ತಾ ಧ್ಯಾನವನ್ನು ಮಾಡಿದರೆ, ಶಿವನ ಅನುಗ್ರಹದಿಂದ  ಸ್ಫಟಿಕವನ್ನು ಶಬ್ದದ ಅಲೆಗಳಾಗಿ ಪರಿವರ್ತಿಸಬಹುದು ಮತ್ತು ವ್ಯಾಸರು ಅದನ್ನು ಬರೆದು ಕೊಳ್ಳಬಹುದು ಎಂದು ಶ್ರೀ ಕೃಷ್ಣನು ತಿಳಿಸುತ್ತಾನೆ. ಆಗ ಸಹದೇವ ಮತ್ತು ವ್ಯಾಸ ಇಬ್ಬರೂ ವಿಷ್ಣುಸಹಸ್ರನಾಮವನ್ನು ಪಠಿಸಿದ ಭೀಷ್ಮ ಪಿತಾಮಹನ ಕೆಳಗೆ ಒಂದೇ ಸ್ಥಳದಲ್ಲಿ ಕುಳಿತುಕೊಂಡಿದ್ದಲ್ಲದೇ,  ಸ್ಫಟಿಕದಿಂದ ಧ್ವನಿ ತರಂಗಗಳನ್ನು ಪಡೆದುಕೊಳ್ಳುವ ಸಲುವಾಗಿ ಸಹದೇವನು ಶಿವನ ಕುರಿತು ಧ್ಯಾನವನ್ನು ಮಾಡಲು ಪ್ರಾರಂಭಿಸಿದನು.

ಶ್ವೇತಾಂಬರ ಮತ್ತು ಸ್ಫಟಿಕನಾದ ಮಹೇಶ್ವರನ ಸರಿಯಾದ ಧ್ಯಾನದಿಂದ ಹಿಂತಿರುಗಬಹುದಾದ ಶಾಂತ ವಾತಾವರಣದಲ್ಲಿ ಶಬ್ದಗಳನ್ನು ಸೆರೆಹಿಡಿಯುವುದು ಸ್ಫಟಿಕ ಸ್ವರೂಪವಾಗಿರುವ ಕಾರಣ, ಭೀಷ್ಮಾಚಾರ್ಯರು ಬೋಧಿಸಿದ  ಅದ್ಭುತವಾದ ವಿಷ್ಣುಸಹಸ್ರನಾಮವನ್ನು ಸಂಪೂರ್ಣವಾಗಿ ದಾಖಲು ಮಾಡಿಕೊಳ್ಳಲು ಸಾಧ್ಯವಾಗಿರುವ ಕಾರಣ ಈ ಸ್ಫಟಿಕವೇ ಪ್ರಪಂಚದ ಮೊತ್ತ ಮೊದಲ ಟೇಪ್ ರೆಕಾರ್ಡರ್ ಆಗಿದೆ ಎಂದು ಶ್ರೀಗಳು ಹೇಳಿದಾಗ  ಅಲ್ಲಿ ಕುಳಿತಿದ್ದವರೆಲ್ಲರು ಅಚ್ಚರಿಗೊಂಡರು. ಹೀಗೆ ಸ್ಫಟಿಕ ಧ್ವನಿಮುದ್ರಣದಿಂದ ವೇದವ್ಯಾಸರ ಮೂಲಕ ವಿಷ್ಣುಸಹಸ್ರನಾಮವು ಗ್ರಂಥರೂಪದಲ್ಲಿ ಈ ಲೋಕಕ್ಕೆ ಸಮರ್ಪಣೆಯಾಯಿತು.

ಭಗವಂತನನ್ನು ತಲುಪಲು ಪ್ರಾರ್ಥನೆಯೇ ಮುಖ್ಯವಾಹಿನಿಯಾಗಿರುವ ಕಾರಣ, ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಒಳ್ಳೆಯತನ, ಆನಂದ ಮತ್ತು ಶಾಂತಿ ದೊರೆಯುವುದಲ್ಲದೇ, ಖಂಡಿತವಾಗಿಯೂ ಭಗವಂತನ ಕೃಪಾಶೀರ್ವಾದ ದೊರಕುತ್ತದೆ.

ಸ್ತ್ರೋತ, ಮಂತ್ರಗಳು ಮತ್ತು ಶ್ಲೋಕಗಳ ಪ್ರತೀ ಪದಗಳನ್ನು ಸರಿಯಾದ ಉಚ್ಚಾರದೊಂದಿಗೆ ಪಠಿಸಿದಾಗ, ಮನಸ್ಸಿನ ಏಕಾಗ್ರತೆ ಹೆಚ್ಚಾಗಿ ಜೀವನದಲ್ಲಿ ಗಮನವನ್ನು ಕೇಂದ್ರೀಕರಿಸಲು ನಮಗೆ ಸಹಾಯ ಮಾಡುತ್ತದಲ್ಲದೇ, ಪ್ರತೀ ಪದವನ್ನು ಸರಿಯಾಗಿ ಉಚ್ಚರಿಸಿದಾಗ ಅದರಿಂದ ಉಂಟಾಗುವ ತರಂಗಗಳು  ದೇಹದ ಅತ್ಯಂತ ಚಿಕ್ಕ ಜೀವಕೋಶಗಳನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ  ಮಾನಸಿಕ ಮತ್ತು ದೈಹಿಕ ಆರೋಗ್ಯ, ಒತ್ತಡ ಮತ್ತು ಅನಾರೋಗ್ಯದಿಂದ ಮುಕ್ತಗೊಳಿಸಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ವಿಷ್ಣು ಸಹಸ್ರನಾಮವನ್ನು ನಿಯಮಿತವಾಗಿ  ಪಠಣ ಮಾಡುವುದರಿಂದಾಗಲೀ ಅಥವಾ ಕನಿಷ್ಟ ಪಕ್ಷ ಪ್ರತಿ ದಿನವೂ ಕೇಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಅದೇ ರೀತಿ ವಿಷ್ಣು ಸಹಸ್ರನಾಮವನ್ನು ನಿರಂತರವಾಗಿ ಪಠಿಸುವುದರಿಂದ ಜನನ, ಮರಣ ಮತ್ತು ಪುನರ್ಜನ್ಮದ ಕೆಟ್ಟ ಚಕ್ರದಿಂದ ಜನರನ್ನು ಮುಕ್ತಗೊಳಿಸುವುದಲ್ಲದೇ ಮರಣದ ನಂತರ ನೇರವಾಗಿ ವೈಕುಂಠಕ್ಕೆ ಹೋಗುತ್ತಾರೆ ಎಂದೇ ನಂಬಲಾಗಿದೆ.

bheeshamaಇಂತಹ ಅದ್ಭುತವಾದ ವಿಷ್ಣು ಸಹಸ್ರನಾಮವನ್ನು ನಮಗೆ ನೀಡಿದ ಶ್ರೀ ಭೀಷ್ಮಾಚಾರ್ಯರನ್ನು ಅವರು ದೇಹತ್ಯಾಗ ಮಾಡಿದ ದಿನದಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ವೈಕುಂಠ ಏಕಾದಶಿ  

ಏಕಾದಶಿ ಎಂದರೆ 11ನೇಯ ದಿನವಾಗಿದ್ದು, ನಮ್ಮ ಹಿಂದೂ ಪಂಚಾಂಗದಲ್ಲಿ ಪ್ರತಿ 15 ದಿನಕ್ಕೊಮ್ಮೆ (ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ) ಹನ್ನೊಂದನೆಯ ದಿನಕ್ಕೆ ಏಕಾದಶಿ ಬರುತ್ತದೆ. ಈ ದಿನದಂದು ಬಹುತೇಕ ಆಸ್ತಿಕರು ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಹೀಗೆ ಚೈತ್ರ ಮಾಸದ ಕಾಮದಾ ಏಕಾದಶಿ, ಆಷಾಢ ಮಾಸದ ಏಕಾದಶಿ, ಪುಷ್ಯ ಮಾಸದ ವೈಕುಂಠ ಏಕಾದಶಿ, ಫಾಲ್ಗುಣದ ಪಾಪ ವಿಮೋಚನೀ ಏಕಾದಶಿಯವರೆಗೂ ಹೀಗೆ ವರ್ಷವಿಡೀ ಬರುವ ಏಕಾದಶಿಗಳಿಗೆ ಅದರದ್ದೇ ಆದ ಮಹತ್ವವಿದೆ.

ಇನ್ನು ವೈಜ್ಞಾನಿಕವಾಗಿಯೂ ಏಕಾದಶಿಯ ಉಪವಾಸ ಅತ್ಯಂತ ಮಹತ್ವದ್ದಾಗಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸವಾಸ ಮಾಡುವುದೂ ಒಂದು ರೀತಿಯ ಔಷಧ ಎಂದು ಆಯುರ್ವೇದದಲ್ಲಿ ತಿಳಿಸಲಾಗಿರುವ ಕಾರಣ ಏಕಾದಶಿ ಧಾರ್ಮಿಕವಾಗಿ ಅತ್ಯಂತ ಮಹತ್ವವಾಗಿದೆ. ಉಪವಾಸದ ಮುಖಾಂತರ ಪಚನ ಕ್ರಿಯೆ ಶುದ್ಧಿಗೊಂಡಲ್ಲಿ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಇಡೀ ದಿನ ನಿಟ್ಟುಪವಾಸ ಮಾಡುಲು ಆಶಕ್ತರಾದವರು ಮತ್ತು ವಯೋವೃದ್ಧರು, ಸಾತ್ವಿಕವಾದ ಲಘು ಫಲಹಾರವಾದ ವಿವಿಧ ಬಗೆಯ ಹಣ್ಣುಗಳು, ಹಾಲು ಮತ್ತು ಮುಸುರೆಯಲ್ಲದ ಪದಾರ್ಥಗಳನ್ನು ಸ್ವೀಕರಿಸುವ ಪದ್ದತಿಯೂ ರೂಢಿಯಲ್ಲಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳನ್ನೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಿದ್ದು ಅಂದು ಉಪವಾಸದಿಂದಿದ್ದು, ಮಾನಸಿಕವಾಗಿ ದೃಢಚಿತ್ತದಿಂದ ಹರಿ ನಾಮ ಜಪ ಮಾಡಿದಲ್ಲಿ ಪುಣ್ಯ ಲಭಿಸುತ್ತದೆ ಎಂದೇ ಬಹುತೇಕ ಆಸ್ತಿಕರ ನಂಬಿಕೆಯಾಗಿದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

vk2ಏಕಾದಶಿ ವ್ರತದ ಅಂಗವಾಗಿ, ಏಕಾದಶಿಯ ಹಿಂದಿನ ದಿನ ದಶಮಿಯಂದು ಕೇವಲ ಮಧ್ಯಾಹ್ನ ಒಂದು ಹೊತ್ತು ಮಾತ್ರವೇ ಊಟ ಮಾಡಿ, ಸಕಲ ಭೋಗಗಳನ್ನು ತ್ಯಜಿಸಿ, ಏಕಾದಶಿಯಂದು ಇಡೀ ದಿನ ಉಪವಾಸವಿದ್ದು, ಮಾರನೆಯ ದಿನ ದ್ವಾದಶಿಯಂದು ನಿತ್ಯಕರ್ಮ ಮುಗಿಸಿ ಭೋಜನ ಮಾಡುವುದು ರೂಢಿಯಲ್ಲಿದೆ. ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ ಭಗವಂತನ ಸಮೀಪದಲ್ಲಿರುವುದು ಎಂಬ ಅರ್ಥ ಬರುತ್ತದೆ. ಹೀಗೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥವಾಗಿದೆ. ಹೀಗೆ ಮಾಡುವುದರಿಂದ ಏಕ ಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.

WhatsApp Image 2022-01-13 at 8.45.12 AMಉಳಿದೆಲ್ಲಾ ಏಕಾದಶಿಗಿಂತಲೂ ಪುಷ್ಯಮಾಸದ ಶುಕ್ಲಪಕ್ಷದಂದು ಬರುವ ವೈಕುಂಠ ಏಕಾದಶಿಯು ಅತ್ಯಂತ ವಿಶೇಷವಾಗಿದೆ. ಈ ದಿನದಂದು ವೈಕುಂಠದ (ಸ್ವರ್ಗ ಲೋಕ ಅಥವಾ ವಿಷ್ಣುವಾಸ ಸ್ಥಾನ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ದೇಶಾದ್ಯಂತ ಇರುವ ವಿಷ್ಣು ಅಥವಾ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಅಂದು ಬಹುತೇಕ ದೇವಾಲಯಗಳಲ್ಲಿ ದೇವಸ್ಥಾನದ ಉತ್ಸವ ಮೂರ್ತಿಗಳನ್ನು ಎತ್ತರದ ಉಯ್ಯಾಲೆಯಲ್ಲಿ ತೂಗಿ ಹಾಕಿ ಅದರ ಕೆಳಗೆ ಸ್ವರ್ಗದ ಬಾಗಿಲಿನಂತ ಅಲಂಕರಿಸಿ ಅದರ ಕೆಳಗೆ ಭಕ್ತಾದಿಗಳು ಹಾದು ಹೋಗುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಶರೀರಮಾಧ್ಯಂ ಖಲು ಧರ್ಮಸಾಧನಂ ಎಂದರೆ, ಒಳ್ಳೆಯ ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೆ, ಅದಕ್ಕೆ ದೇಹ ಮತ್ತು ಮನಸ್ಸು ಸದೃಢವಾಗಿರುವುದು ಅತ್ಯಗತ್ಯವಾಗಿದೆ. ಹಾಗಾಗಿ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಸುಧಾರಿಸುವ ಕಾರಣ, ಜೀವನದಲ್ಲಿ ಎದುರಾಗುವ ಎಲ್ಲಾ ಸಂಕಷ್ಟಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಪರಮಪದವನ್ನು ಸೇರಬಹುದು ಎಂಬುದೇ ವೈಕುಂಠ ಏಕಾದಶಿಯ ವ್ರತಾಚರಣೆ ಹಿಂದಿರುವ ಅಂಶವಾಗಿದೆ.

ವೈಕುಂಠ ಏಕಾದಶಿಯ ಆಚರಣೆಯ ಹಿಂದೆಯೂ ರೋಚಕವಾದ ಪೌರಾಣಿಕ ಕಥೆಯಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನ ಸಾಕು ತಂದೆ ನಂದಗೋಪನು ತಪ್ಪದೇ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ಆಚರಿಸುತ್ತಿದ್ದ. ಅದೊಮ್ಮೆ ಏಕಾದಶಿಯ ವ್ರತವನ್ನು ಆಚರಿಸಿದ ಮಾರನೇಯ ದಿನ ದ್ವಾದಶಿಯಂದು ಬೆಳ್ಳಂಬೆಳಿಗ್ಗೆ ಯಮುನಾನದಿಯಲ್ಲಿ ಸ್ನಾನಕ್ಕಿಳಿ. ಆ ಸಮಯ ರಾಕ್ಷಸರ ಸಂಚಾರದ ಸಮಯವಾದ್ದರಿಂದ, ವರುಣದೇವನ ಸೇವಕನು ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ಯುತ್ತಾನೆ. ಸ್ನಾನಕ್ಕೆಂದು ಹೋದ ನಂದನು ಎಷ್ಟು ಹೊತ್ತಾದರೂ ಬಾರದಿದ್ದದ್ದನ್ನು ಗಮನಿಸಿದ, ಗೋಕುಲವಾಸಿಗಳು ಬಲರಾಮ ಮತ್ತು ಕೃಷ್ಣರಿಗೆ ಈ ಸುದ್ದಿ ತಿಳಿಸುತ್ತಾರೆ. ಕೂಡಲೇ, ತಂದೆಯನ್ನು ಕರೆತರಲು ಶ್ರೀಕೃಷ್ಣನು ವರುಣಲೋಕಕ್ಕೆ ತೆರಳಿ ಅಲ್ಲಿ ವರುಣದೇವನನ್ನು ಭೇಟಿಯಾದಾಗ, ತಮ್ಮ ಸೇವಕರಿಂದಾದ ತಪ್ಪನ್ನು ಮನ್ನಿಸಬೇಕೆಂದು ಕೋರಿದ ವರುಣನು ನಂದಗೋಪನನ್ನು ಸಕಲ ಮರ್ಯಾದೆಯೊಂದಿಗೆ ಶ್ರೀ ಕೃಷ್ಣನೊಂದಿಗೆ ಕಳುಹಿಸಿಕೊಡುತ್ತಾನೆ.

ವರುಣಲೋಕದಿಂದ ಹಿಂದುರಿಗಿದ ನಂದಗೋಪನು ತನ್ನ ಪರಿವಾರದೊಂದಿಗೆ ವರುಣನ ಲೋಕದ ವೈಭವದ ಜೊತೆಗೆ ವರುಣ ದೇವನನು ತನ್ನ ಮಗನಿಗೆ ತೋರಿದ ಆದರಾತಿಥ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ, ಆ ಗೋಪಾಲಕರಿಗೆಲ್ಲಾ ಶ್ರೀಕೃಷ್ಣನೇ ಸಾಕ್ಷಾತ್ ಭವಂತನಾಗಿದ್ದು ಅಲ್ಪಮತಿಗಳಾದ ನಮಗೆ ಅದರ ಅರಿವಿಲ್ಲದೇ ಹೋಯಿತಲ್ಲಾ ಎಂದು ಪರಿತಪಿಸಿ, ಶ್ರೀಕೃಷ್ಣನ ಬಳಿ ಕ್ಷಮೆಯಾಚಿಸುತ್ತಾರೆ. ಆಗ ಶ್ರೀಕೃಷ್ಣನು ಅವರೆಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ಸೂಚಿರುತ್ತಾನೆ. ಶ್ರೀಕೃಷ್ಣನ ಆದೇಶದಂತೆ ಬ್ರಹ್ಮಕುಂಡಲ್ಲಿ ಮುಳುಗಿದವರಿಗೆಲ್ಲರಿಗೂ ವೈಕುಂಠದ ದರ್ಶನವಾಗಿ ಅವರ ಜೀವನ ಪರಮ ಪಾವನವಾಯಿತು. ಈ ಕಾರಣಕ್ಕಾಗಿಯೇ ಆ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ ಎಂಬ ನಂಬಿಕೆ ಇದೆ.

ಮತ್ತೊಂದು ಪುರಾಣದ ಪ್ರಕಾರ, ದೇವತೆಗಳ ರಾಜನಾದ ದೇವೇಂದ್ರನು ತನ್ನ ಐರಾವತದ ಮೇಲೇರಿ ಎಲ್ಲಿಗೋ ಹೋಗುತ್ತಿದ್ದಾಗ ಅವರಿಗೆ ದೂರ್ವಾಸ ಮಹರ್ಷಿಗಳು ಎದಿರಾಗುತ್ತಾರೆ. ಆಗ ಮಹರ್ಷಿಗಳು ರಾಜಾ ಪ್ರತ್ಯಕ್ಷ ದೇವತ. ಅತನಿಗೆ ಗೌರವ ಸಲ್ಲಿಸುವುದು ಕರ್ತವ್ಯ ಎಂಬು ಭಾವಿಸಿ, ಸುವಾಸನೆಯುಳ್ಳ ಹೂವಿನ ಮಾಲೆಯನ್ನು ಇಂದ್ರನಿಗೆ ಗೌರವಪೂರ್ವಕವಾಗಿ ಕೊಡುತ್ತಾರೆ. ಅದರೆ ಅದಾವುದೋ ಯೋಚನೆಯಲ್ಲಿದ್ದ ಇಂದ್ರನು ಒಂದು ರೀತಿಯ ತಿರಸ್ಕಾರ ಇಲ್ಲವೇ ದುರಹಂಕಾರದಿಂದ ಆ ಹೂವಿನ ಮಾಲೆಯನ್ನು ತನ್ನ ಆನೆಯ ಕುತ್ತಿಗೆಗೆ ಹಾಕುತ್ತಾನೆ. ಕತ್ತೆಗೆ ಏನು ಗೊತ್ತು ಕಸ್ತೂರಿ ವಾಸನೆ ಎನ್ನುವಂತೆ ಅಂತಹ ಸುವಾಸನೆಯುಕ್ತ ಹೂವಿನ ಹಾರ ಆನೆಗೆ ಒಗ್ಗದೆ ಅದು ತನ್ನ ಕೊರಳಿನಿಂದ ಕಿತ್ತು ತೆಗೆದು ತನ್ನ ಕಾಲಿನಿಂದ ಹೊಸಕಿ ಹಾಕುತ್ತದೆ. ತಾನು ಆಶೀರ್ವಾದದ ರೂಪದಲ್ಲಿ ಕೊಟ್ಟ ಹೂವಿನ ಮಾಲೆಗೆ ಇಂದ್ರನು ಅಪಮಾನ ಮಾಡಿದ್ದನ್ನು ಸಹಿಸಿದ ಪರಮ ಕೋಪಿಷ್ಠ ದೂರ್ವಾಸರು, ಇಂದ್ರನ ಸಮೇತ ದೇವಾನು ದೇವತೆಗಳ ಸಕಲ ಶಕ್ತಿ ಮತ್ತು ಐಶ್ವರ್ಯಗಳು ನಶಿಸಿ ಹೋಗಲಿ ಎಂದು ಶಾಪವನ್ನು ನೀಡುತ್ತಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ, ಇಂದ್ರನಿಗೆ ತನ್ನ ತಪ್ಪಿನ ಅರಿವಾಗಿ ಕೂಡಲೇ, ಅಂಬಾರಿಯಿಂದ ಕೆಳಗಿಳಿದು ದುರ್ವಾಸರ ಬಳಿ ಮಾಡಿದ ಅಚಾತುರ್ಯಕ್ಕೆ ಕ್ಷಮೆ ಕೇಳಿದರೂ ಶಾಂತರಾಗದ ದೂರ್ವಾಸರು ಸುಮ್ಮನೆ ಹೊರಟು ಹೋಗುತ್ತಾರೆ.

bali

ಇದಾದ ಕೆಲವೇ ದಿನಗಳಲ್ಲೇ ರಾಕ್ಷಸ ರಾಜ ಬಲಿ ಚಕ್ರವರ್ತಿಯು ಶಕ್ತಿಹೀನರಾದ ದೇವತೆಗಳ ಮೇಲೆ ಧಾಳಿ ನಡೆಸಿ ಮೂರು ಲೋಕಗಳನ್ನೂ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಆಗ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಕಲ ದೇವಾನು ದೇವತೆಗಳು ವಿಷ್ಣುವಿನ ಬಳಿ ಹೋಗಿ ತಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡು ಎಂದು ಕೋರಿದಾಗ, ಭಗವಾನ್ ವಿಷ್ಣು ವಾಮನನ ರೂಪದಲ್ಲಿ ಭೂಲೋಕಕ್ಕೆ ಬಂದು ಬಲಿ ಚಕ್ರವರ್ತಿಯ ಬಳಿ ಮೂರು ಹೆಜ್ಜೆಯ ದಾನ ಕೇಳಿ, ವಿಶ್ವರೂಪ ತಾಳಿ, ಮೊದಲ ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೆಟ್ಟು, ಎರಡನೇ ಹೆಜ್ಜೆಯನ್ನು ಆಕಾಶವನ್ನೇಲ್ಲಾ ಆಕ್ರಮಿಸಿ, ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ ಬಂದಿರುವುದು ಸಾಮಾನ್ಯ ವಟುವಾಗಿರದೇ, ಸಾಕ್ಷಾತ್ ವಿಷ್ಣು ಎಂಬುದನ್ನು ಅರಿತ ಬಲಿ ಚಕ್ರವರ್ತಿ ಮೂರನೇ ಹೆಜ್ಜೆಯನ್ನು ತನ್ನ ತಲೆಯ ಮೇಲಿಡಿ ಎಂದು ಹೇಳಿದಾಗ, ವಾಮನರೂಪಿ ವಿಷ್ಣು, ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ತುಳಿದು ಕಳಿಸುತ್ತಾನೆ.

samudra

ಬಲಿ ಚಕ್ರವರ್ತಿಯ ಧಮನದ ನಂತರ ಕಳೆದು ಹೋದ ಲೋಕವೆಲ್ಲಾ ಹಿಂದಿರುಗಿದರೂ, ದೂರ್ವಾಸರ ಶಾಪದಿಂದಾಗಿ, ದೇವತೆಗಳ ಶಕ್ತಿ ಮಾತ್ರ ಇನ್ನೂ ಕ್ಷೀಣಿಸಿಯೇ ಇದ್ದಾ ಕಾರಣ, ಮತ್ತೆ ವಿಷ್ಣುವಿನ ಆಜ್ಞೆಯಂತೆ ಸಮುದ್ರ ಮಂಥನ ಮಾಡಿ ಅದರಿಂದ ಹೊರಬರುವ ಅಮೃತವನ್ನು ಗಳಿಸುವ ಸಲುವಾಗಿ ರಾಕ್ಷಸರೊಂದಿಗೆ ಸೇರಿ ಮಂದರಗಿರಿ ಪರ್ವತವನ್ನು ಕಡಗೋಲನ್ನಾಗಿಸಿ, ಆದಿಶೇಷನನ್ನು ಹಗ್ಗವನ್ನಾಗಿಸಿಕೊಂಡು ದೇವರು ಮತ್ತು ದಾನವರು ಸೇರಿಕೊಂಡು ಕ್ಷೀರ ಸಮುದ್ರವನ್ನು ಕಡೆಯಲು ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ದೇವತೆಗಳಿಗೆ ಶಕ್ತಿ ಹಿಂದಿರುಗಿ ಬರಲಿ ಎಂದು ಭೂಲೋಕದ ಋಷಿಮುನಿಗಳು ಇಡೀ ದಿನ ಉಪವಾಸವಿದ್ದು ಶ್ರೀ ಸೂಕ್ತ, ಪುರುಷುಕ್ತವನ್ನು ಪಠಿಸುತ್ತಾ ಯಜ್ಞಯಾಗಾದಿಗಳನ್ನು ಮಾಡಿ ದೇವತೆಗಳಿಗೆ ಹವಿಸ್ಸನ್ನು ಕೊಟ್ಟು, ಭಗವಂತನನ್ನು ಸ್ಮರಣೆ ಮಾಡುತ್ತಾರೆ. ಹೀಗೆ ಪೂಜೆ ಮಾಡಿದ ದಿನವೇ ಪರಶಿವ ಹಾಲಾಹಲವನ್ನು ಕುಡಿದು ವಿಷಕಂಠನಾದರೇ ಸಮುದ್ರಮಂಥನದಲ್ಲಿ ಅಂತಿಮವಾಗಿ ಅಮೃತವು ದೊರಕಿದ ದಿನವು ಏಕಾದಶಿಯಾಗಿದ್ದು, ಅಂದಿನಿಂದಲೇ ಪವಿತ್ರವಾದ ಏಕಾದಶಿ ವ್ರತದ ಆಚರಣೆಗೆ ಬಂದಿತು ಎಂಬ ನಂಬಿಕೆ ಇದೆ. ಈ ರೀತಿಯಾಗಿ ಏಕಾದಶಿಯಂದು ಉಪವಾಸ ಮಾಡಿ ಭಗವಂತನ ಧ್ಯಾನ ಮಾಡಿದರೆ ಆಯುರಾರೋಗ್ಯ ಐಶ್ವರ್ಯಾದಿಗಳು ಅಭಿವೃದ್ಧಿಯಾಗುತ್ತದೆ ಎಂದು ಶ್ರೀಕೃಷ್ಣನು ಏಕಾದಶಿ ವ್ರತದ ಮಹತ್ವವನ್ನು ಧರ್ಮರಾಯನಿಗೆ ತಿಳಿಸುತ್ತಾನೆ ಎಂಬ ಪ್ರತೀತಿಯೂ ಇದೆ.

kur

ಮಹಾಭಾರತ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದ ದಿನವೂ ಏಕಾದಶಿಯಾಗಿತ್ತು ಎಂಬ ನಂಬಿಕೆ ಇದೆ.
ಮಹಾ ವಿಷ್ಣುವು ಬಹಳ ದಿನಗಳವರೆಗೆ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೂ ಏಕಾದಶಿಯಾಗಿದ್ದು, ಹಾಗಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು ಎಂಬ ಪದ್ದತಿ ಇದೆ ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಹೋಮ ಹವನಗಳು, ಜಪ-ತಪಗಳು ನಡೆಯುವುದಲ್ಲದೇ, ಈ ದಿನ ಉಪವಾಸ ಹಾಗೂ ಜಾಗರಣೆ ಮಾಡಿದರೆ ಒಳ್ಳೆಯದಾಗುತ್ತದೆ. ವಿಷ್ಣು ಪುರಾಣದ ಪ್ರಕಾರ ರಾಕ್ಷಸರ ವಿರೋಧದ ನಡುವೆಯೂ ವಿಷ್ಣುವು ವೈಕುಂಠ ಏಕಾದಶಿ ದಿನ ತನ್ನ ವೈಕುಂಠದ ಬಾಗಿಲನ್ನು ತೆರೆದಿರುತ್ತಾನಂತೆ. ಹಾಗಾಗಿ ಈ ಕಥೆಯನ್ನು ಓದುವುದರಿಂದ ಇಲ್ಲವೇ ಕೇಳುವುದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವುದಲ್ಲದೇ ಮೋಕ್ಷವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ.

ಧನುರ್ಮಾಸದ ಶುಕ್ಲ ಏಕಾದಶಿ ದಿನವನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ಮುಕ್ಕೋಟಿ ಏಕಾದಶಿಯ ದಿನ ಉಪವಾಸಮಾಡಿದಲ್ಲಿ, ವರ್ಷದ ಉಳಿದ 23 ಏಕಾದಶಿಗಳಲ್ಲಿ ಉಪವಾಸ ಮಾಡಿದ ಫಲ ಸಿಗುವುದಲ್ಲದೇ, ರಾಜಸಿಕ ಹಾಗೂ ತಾಮಾಸಿಕ ಗುಣಗಳನ್ನು ಜಯಿಸುವ ಮೂಲಕ ಮುಕ್ತಿಗೆ ಮಾರ್ಗ ದೊರೆಯುತ್ತದೆ ಎಂಬ ನಂಬಿಕೆ ಇದೆ.

vk3

ಇಷ್ಟೆಲ್ಲಾ ವಿಷಯಗಳು ತಿಳಿದ ನಂತರ ಇನ್ನೇಕೆ ತಡಾ, ಇಂದು ವೈಕುಂಠ ಏಕಾದಶಿಯಂದು ಮುಂಜಾನೆಯೇ ಸ್ನಾನ ಸಂಧ್ಯವಂಧನೆಗಳನ್ನು ಮುಗಿಸಿ, ಶುಚಿರ್ಭೂತವಾಗಿ, ಭಕ್ತಿಯಿಂದ ಶ್ರೀಮನ್ನಾರಾಯಣನ ದರ್ಶನ ಪಡೆದು ದೇವಾಲಯದ, ವೈಕುಂಠ ದ್ವಾರದ ಮೂಲಕ ಹೊರಗೆ ಬರುವ ಮೂಲಕ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳ ಪರಿಹಾರವನ್ನು ಪಡೆದು ಕೊಳ್ಳೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಪುರಿ ಜಗನ್ನಾಥ ರಥಯಾತ್ರೆ

ಪುರಿ ಒರಿಸ್ಸಾದಲ್ಲಿರುವ ಪ್ರಮುಖವಾದ ಧಾರ್ಮಿಕ ಕ್ಷೇತ್ರವಾಗಿದೆ. ಬಲಭದ್ರ, ಸುಭದ್ರ ಮತ್ತು ಜಗನ್ನಾಥ (ಇಲ್ಲಿ ಶ್ರೀಕೃಷ್ಣನನ್ನು ಜಗನ್ನಾಥ ಎಂದೇ ಸಂಭೋದಿಸುತ್ತಾರೆ) ಜೊತೆಗೆ ಇರುವ ಇಲ್ಲಿನ ದೇವಸ್ಥಾನ ಪುರಾಣ ಪ್ರಸಿದ್ಧವಾಗಿದೆ. ಇಲ್ಲಿ ನಡೆಯುವ ರಥಯಾತ್ರೆ ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಪ್ರಮುಖವಾಗಿದ್ದು ಈ ರಥೋತ್ಸವದ ಉಲ್ಲೇಖ ಬ್ರಹ್ಮಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಮತ್ತು ಕಪಿಲ ಸಂಹಿತೆಯಲ್ಲಿಯೂ ಕಾಣ ಸಿಗುತ್ತದೆ.

WhatsApp Image 2021-07-12 at 3.23.48 PMಸಾಧಾರಣವಾಗಿ ಎಲ್ಲೆಡೆಯಯಲ್ಲಿ ಬ್ರಹ್ಮ ರಥೋತ್ಸವ ಒಂದು ಅಥವಾ ಮೂರು ದಿನಗಳ ಕಾಲ ನಡೆದರೆ ಇಲ್ಲಿ ಮಾತ್ರ ಪ್ರತಿವರ್ಷದ ಆಷಾಢ ಶುಕ್ಲ ದ್ವಿತೀಯದಂದು ಆರಂಭವಾಗಿ ಅಲ್ಲಿಂದ ನಿರಂತರವಾಗಿ ಅತ್ಯಂತ ಸಡಗರ ಸಂಭ್ರಮಗಳಿಂದ ವೈಭೋವೋಪೇತವಾಗಿ 7 ದಿವಸಗಳ ಕಾಲ ನಡೆಯುತ್ತದೆ. ಈ ರಥಯಾತೆಯಲ್ಲಿ ಸಾಕ್ಷತ್ ಶ್ರೀ ಕೃಷ್ಣ ಜಗನ್ನಾಥನಾಗಿ, ಜೊತೆಗೆ ಬಲರಾಮ ಬಲಭದ್ರ ಮತ್ತು ತಂಗಿಯಾದ ಸುಭದ್ರೆಜೊತೆಗೆ ನಗರ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದ್ದು ಇದನ್ನು ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ.

WhatsApp Image 2021-07-12 at 3.20.40 PMಸಾಮಾನ್ಯವಾಗಿ ಎಲ್ಲಾ ದೇವಸ್ಥಾನದ ರಥಕ್ಕೆ, 4 ಚಕ್ರಗಳಿದ್ದರೆ ಇಲ್ಲಿನ ಜಗನ್ನಾಥನ ರಥಕ್ಕೆ 16 ಚಕ್ರಗಳಿದ್ದು ಅದಕ್ಕೆ ನಂದಿಘೋಷ ರಥ ಎಂದು ಕರೆಯಲಾಗುತ್ತದೆ. ಬಲಭದ್ರನ ರಥಕ್ಕೆ 14 ಚಕ್ರಗಳಿದ್ದು ಅದಕ್ಕೆ ತಳಧ್ವಜ ರಥ ಎಂದು ಕರೆಯಲಾಗುತ್ತದೆ. ಇನ್ನು ಸುಭದ್ರೆಯ ರಥಕ್ಕೆ 12 ಚಕ್ರಗಳಿದ್ದು ಅದಕ್ಕೆ ದರ್ಪದಾಳನ ರಥ ಎಂದು ಕರೆಯುತ್ತಾರೆ.

WhatsApp Image 2021-07-12 at 3.24.00 PMಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯಾತ್ರೆಯು ಕೇವಲ ಒರಿಸ್ಸಾಕಷ್ಟೇ ಸೀಮಿತವಾಗಿರದೇ ಇದೊಂದು ರೀತಿಯ ರಾಷ್ಟ್ರೀಯ ಹಬ್ಬದ ರೂಪದಲ್ಲಿ ದೇಶಾದ್ಯಂತ ಆಚರಿಸಲ್ಪಡುತ್ತದೆ. .ಜಗನ್ನಾಥ, ಬಲಭದ್ರ, ಸುಭದ್ರ ಎಂಬ ತ್ರಿಮೂರ್ತಿಗಳನ್ನು ನಂದಿಘೋಷ, ತಳಧ್ವಜ ಹಾಗೂ ದೇವದಳನ ಎಂಬ ಮೂರು ದೈತ್ಯ ರಥಗಳಲ್ಲಿ ಕುಳ್ಳಿರಿಸಿ ಗುಂಡೀಚ ದೇವಿಯ ದೇವಾಲಯಕ್ಕೆ ವೈಭವದ ಘೋಷಾಯಾತ್ರೆಯ ಮೂಲಕ ಕರೆದುಕೊಂಡು ಹೋಗುವುದು ಇಲ್ಲಿನ ಸಂಪ್ರದಾಯವಾಗಿದೆ. ಸಾಮಾನ್ಯವಾಗಿ ದೇವರ ವಿಗ್ರಹಗಳನ್ನು ಕಲ್ಲಿನಲ್ಲಿಯೋ ಇಲ್ಲವೇ ಲೋಹದಲ್ಲಿ ಮಾಡಲ್ಪಟ್ಟರೇ, ಇಲ್ಲಿನ ಮೂರ್ತಿಗಳನ್ನು ಮರದಿಂದ ಮಾಡಲ್ಪಟ್ಟಿದ್ದು. ಪ್ರತೀ 12 ವರ್ಷಗಳಿಗೊಮ್ಮೆ ಈ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಬದಲಾಯಿಸುವುದು ಇಲ್ಲಿ ತಲೆತಲಾಂತರ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಹಿಂದಿನ ಕಾಲದಲ್ಲಿ ಪುರಿಯ ಜಗನ್ನಾಥನ ರಥ ಎಳೆಯುವ ಮುನ್ನ ರಾಜ ಮಹಾರಾಜರು ಚಿನ್ನದ ಪೊರಕೆಯಿಂದ ಆ ಪ್ರದೇಶವನ್ನು ಗುಡಿಸುತ್ತಿದ್ದರು. ಇಂದಿಗೂ ಅದೇ ಸಂಪ್ರದಾಯವನ್ನು ಅಲ್ಲಿನ ಮಹಾರಾಜ ಮನೆತನದವರು ಚಿನ್ನದ ಪೊರಕೆಯಿಂದ ಗುಡಿಸುವ ಮೂಲಕ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಒರಿಸ್ಸಾದ ಈ ಪುರಾಣ ಪ್ರಸಿದ್ಧ ವಿಷ್ಣು ದೇವಾಲಯಕ್ಕೆ ಮೋಕ್ಷಕ್ಕಾಗಿ ಕೊನೆಯುಸಿರೆಳೆಯುವ ಮುನ್ನ ಈ ಪವಿತ್ರ ದೇವಾಲಯಕ್ಕೆ ಹಲವುರು ಭೇಟಿ ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿಯೇ ಹಿಂದೆಲ್ಲಾ ಅನೇಕರು ಈ ರಥಯಾತ್ರೆಯ ಸಮಯದಲ್ಲಿ ರಥದಡಿಗೆ ಸಿಕ್ಕು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದ ಉದಾಹರಣೆಗಳು ಇದ್ದವು. ಇತ್ತೀಚಿನ ವರ್ಷಗಳಲ್ಲಿ ಇಂತಹ ಅವಘಢಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಂಕರಾಚಾರ್ಯರು ಸಹಾ ತಮ್ಮ ನಾಲ್ಕು ಶಕ್ತಿ ಪೀಠಗಳಲ್ಲಿ ಪವಿತ್ರಧಾಮವಾದ ಹಾಗೂ ವಿಷ್ಣುವಿನ ಸ್ಥಾನವಾಗಿ ಹೆಸರುವಾಸಿಯಾದ ಪುರಿ ಅರ್ಧಾತ್ ಜಗನ್ನಾಥ ಪುರಿಯಲ್ಲಿ ಗೋವರ್ಧನ ಮಠ ಅಥವಾ ಪುರಿ ಪೀಠವನ್ನು ಸ್ಥಾಪಿಸಿ, ಋಗ್ವೇದವನ್ನು ಪ್ರತಿನಿಧಿಸುವ ಗೋವರ್ಧನ ಪೀಠಕ್ಕೆ ಪೀಠಾಧಿಪತಿಯಾಗಿ ಶ್ರೀ ಪದ್ಮಪಾದರನ್ನು ನೇಮಿಸಿದ್ದರು.

WhatsApp Image 2021-07-12 at 3.14.15 PM (2)ಇಲ್ಲಿನ ದೇವಾಲಯ ಅನೇಕ ವಿಶೇಷಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಗೋಪುರ ಬಾವುಟ ಮತ್ತು ಸುದರ್ಶನ ಚಕ್ರದ ಕುರಿತಂತೆ ನಮ್ಮ ಪೂರ್ವಜರು ಮಾಡಿರುವ ವಾಸ್ತುಶಿಲ್ಪ ಇಂದಿಗೂ ಅಚ್ಚರಿಯನ್ನು ಮೂಡಿಸಿದೆ. ಸಾಮಾನ್ಯವಾಗಿ ವಿಜ್ಞಾನದ ಪ್ರಕಾರ ಗಾಳಿ ಬೀಸುವ ದಿಕ್ಕಿನಲ್ಲಿ ಧ್ವಜ ಹಾರಾಡುವುದು ಸಹಜ ಪ್ರಕ್ರಿಯೆಯಾದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರಾಡುವುದು ಅಚ್ಚರಿಯನ್ನುಂಟು ಮಾಡುತ್ತದೆ. ಈ ಪ್ರವಿತ್ರ ಕ್ಷೇತ್ರದಲ್ಲಿ ಯಾವುದೋ ದೈವಿಕ ಪ್ರಭಾವದಿಂದ ಇಂಥಹದ್ದೊಂದು ಪವಾಡ ನಡೆಯುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.

ಇನ್ನು ಗೋಪುರದ ಮೇಲಿರುವ ಸುದರ್ಶನ ಚಕ್ರವು ಸುಮಾರು 20 ಅಡಿ ಎತ್ತರವಿದ್ದು, ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಈ ಚಕ್ರ ನಮ್ಮೆ ಕಡೆಯೇ ಮುಖ ಮಾಡಿಕೊಂಡು ನೋಡುತ್ತಿರುವಂತೆ ಭಾಸವಾಗುತ್ತದೆ. ಈ ಮಂದಿರದ ಮೇಲೆ ಯಾವುದೇ ರೀತಿಯ ಹಾರಾಟವನ್ನು ನಿಷೇಧಿಸಿಲ್ಲವಾದರೂ, ಈ ಮಂದಿರದ ಮೇಲೆ ಯಾವುದೇ ಪಕ್ಷಿಯಾಗಲಿ, ವಿಮಾನವಾಗಲಿ ಹಾರುವುದಿಲ್ಲ. ಇದಕ್ಕೆ ಕಾರಣವೇನೆಂದು ಇನ್ನೂ ನಿಗೂಢವಾಗಿಯೇ ಇದ್ದು, ಯಾವುದೋ ದೈವೀ ಶಕ್ತಿಯಿಂದ ಇಂತಹ ಪವಾಡವೊಂದು ನಡೆಯುತ್ತದೆ ಎಂದೇ ಇಲ್ಲಿನವರು ಪ್ರಭಲವಾಗಿ ನಂಬುತ್ತಾರೆ. ಭಾರತದ ಇತರೇ ಯಾವುದೇ ಮಂದಿರದಲ್ಲಿಯೂ ಇಂತಹ ಪ್ರಭಾವ ಇಲ್ಲದಿರುವುದು ಗಮನಾರ್ಹವಾಗಿದೆ.

ಸಾಮಾನ್ಯವಾಗಿ ಸೂರ್ಯನು ನೆತ್ತಿಯ ಮೇಲೆ ಬಂದಾಗ ದೇವಾಸ್ಥಾನದ ನೆರಳು ಬೀಳುವುದು ಸಹಜ ಪ್ರಕ್ರಿಯೆಯಾಗಿದ್ದರೆ, ಇಲ್ಲಿ ಎಂತಹ ಪ್ರಖರವಾದ ಬಿಸಿಲಿದ್ದರೂ ಈ ದೇವಾಲಯದಲ್ಲಿ ಮತ್ತು ದೇವಾಲಯದ ಆವರಣದಲ್ಲಿ ಕೊಂಚವೂ ನೆರಳು ಬೀಳದಿರುವುದು ಅಂದಿನ ನಮ್ಮ ವಾಸ್ತುತಜ್ಣರ ಕಲಾ ನೈಪುಣ್ಯಕ್ಕೆ ಸಾಕ್ಶಿಯಾಗಿದೆ ಎಂದರೂ ಅತಿಶಯವಲ್ಲವಾದರೂ, ಇದೊಂದು ಸ್ಥಾನಿಕ ವಿಸ್ಮಯ ಇಲ್ಲವೇ ಪವಾಡವೆಂದೇ ಅಲ್ಲಿನ ಸ್ಥಳೀಯರು ನಂಬುತ್ತಾರೆ.

ಈ ದೇವಾಲಯವನ್ನು ಪ್ರವೇಶಿಸಲು ನಾಲ್ಕು ಪ್ರಮುಖ ದ್ವಾರಗಳಿದ್ದು, ಮುಖ್ಯ ದ್ವಾರವಾದ ಸಿಂಗದ್ವಾರಮ್ ಅನ್ನು ಮೊದಲ ಬಾರಿಗೆ ಪ್ರವೇಶಿಸುವಾಗ, ಒಂದು ರೀತಿಯ ಶಬ್ದ ತರಂಗಗಳು ಕೇಳಿಸುತ್ತದೆ. ಆದರೆ, ಪುನಃ ಮತ್ತೊಮ್ಮೆ ಅದೇ ದ್ವಾರದಲ್ಲಿ ಪ್ರವೇಶಿಸಿದರೆ ಅಂತಹ ಶಬ್ದ ಪುನಃ ಕೇಳಿಸುವುದಿಲ್ಲದಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ.

ಸಮುದ್ರಕ್ಕೆ ಹತ್ತಿರದಲ್ಲೇ ಇರುವ ಕಾರಣ, ದೇವಾಲಯ ಪ್ರವೇಶಿಸುವ ಮುನ್ನಾ ಸಮುದ್ರದ ಅಲೆಗಳ ಶಬ್ಧ ಕಿವಿಗಳಿಗೆ ಅಪ್ಪಳಿಸುತ್ತವಾದರೂ, ಒಮ್ಮೆ ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಮುದ್ರದ ಶಬ್ದ ಕಿಂಚಿತ್ತೂ ಕೇಳದಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ.

ಸಾಮಾನ್ಯವಾಗಿ ಸಮುದ್ರದ ತಟದಲ್ಲಿ ಪ್ರಕೃತಿಯ ಸಹಜ ಪ್ರಕ್ರಿಯೆಯ ಪ್ರಕಾರ ಬೆಳಗಿನ ಸಮಯದಲ್ಲಿ ಗಾಳಿ ಸಮುದ್ರದಿಂದ ಭೂಮಿಯೆಡೆಗೆ ಚಲಿಸುತ್ತದೆ. ಅದೇ ಸಂಜೆಯ ಸಮಯದಲ್ಲಿ ಗಾಳಿ ಭೂಮಿಯಿಂದ ಸಮುದ್ರದೆಡೆಗೆ ಸಂಚರಿಸುತ್ತದೆ. ಆದರೆ ಪುರಿಯಲ್ಲಿ ಮಾತ್ರಾ ಈ ಪ್ರಕ್ರಿಯೆ ಪ್ರಕೃತಿಯ ವಿರುದ್ಧವಾಗಿರುವುದು ಮತ್ತಷ್ಟು ವಿಸ್ಮಯಕಾರಿಯಾಗಿದೆ.

ಈ ದೇವಸ್ಥಾನದ ಗೋಪುರವು ಸುಮಾರು 1000 ಅಡಿ ಎತ್ತರವಿದ್ದು, ಕಳೆದ 1800 ವರ್ಷಗಳಿಗೂ ಅಧಿಕ ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ ಪ್ರತಿದಿನವೂ ಇಲ್ಲಿನ ಅರ್ಚಕರು ಅಷ್ಟು ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಈ ಪ್ರಕ್ರಿಯೆ ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ, ಎಂಬ ಪ್ರತೀತಿ ಇರುವ ಕಾರಣ ಈ ಪ್ರಕ್ರಿಯೆಯನ್ನು ಅತ್ಯಂತ ಶ್ರದ್ಧೆಯಿಂದ ಅಲ್ಲಿನ ಅರ್ಚಕರು ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನು ನೋಡುವುದಕ್ಕೆ ನಿಜಕ್ಕೂ ಎದೆ ಘಲ್ ಎನಿಸಿವಷ್ಟು ರೋಚಕವಾಗಿರುತ್ತದೆ.

ವಿಶೇಷ ದಿನಗಳ ಹೊರತಾಗಿ ಈ ದೇವಸ್ಥಾನಕ್ಕೆ ಪ್ರತಿ ದಿನವೂ ಅಂದಾಜಿನಂತೆ 2 ಸಾವಿರದಿಂದ 10 ಸಾವಿರ ವರೆಗೆ ಭಕ್ತರು ಬರುತ್ತಾರೆ. ಎಷ್ಟೇ ಜನರು ಬಂದರೂ ಇಲ್ಲಿ ಮಾಡುವ ಪ್ರಸಾದದ ಪ್ರಮಾಣದಲ್ಲಿ ಮಾತ್ರ ಎಂದಿಗೂ ಹೆಚ್ಚು ಅಥವಾ ಕಡಿಮೆಯಾಗುವುದಿಲ್ಲ. ಅಷ್ಟು ನಿಖರವಾಗಿಯೇ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರತೀ ದಿನವೂ ಒಂದೇ ಪ್ರಮಾಣದಲ್ಲಿಯೇ ಆಹಾರ ತಯಾರಿಸಿದರೂ ಒಂದು ಅಗುಳೂ ಹೆಚ್ಚು ಕಡಿಮೆಯಾಗದಂತೆ ಅಷ್ಟೂ ಜನಕ್ಕೆ ಸಾಕಾಗುವಷ್ಟು ಆಹಾರ ಅಕ್ಷಯವಾಗುವುದು ನಿಜಕ್ಕೂ ಆಶ್ಚರ್ಯಕರವಾದ ವಿಷಯವಾಗಿದೆ.

ಇನ್ನು ಇಲ್ಲಿ ಪ್ರಸಾದ ಮಾಡುವ ವಿಧಾನವೂ ಬಹಳ ವಿಶೇಷವಾಗಿದೆ, ಏಳು ಮಣ್ಣಿನ ಮಡಕೆಗಳನ್ನು ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಸಾಮನ್ಯವಾಗಿ ಕೆಳಗಿನ ಮಡಿಗೆಯ ಪ್ರಸಾದ ಮೊದಲು ಬೆಂದ ನಂತರ ಅದರ ಮೇಲಿನದ್ದು ಬೇಯುವುದು ಸಹಜ ಪ್ರಕ್ರಿಯೆಯಾದರೆ, ಇಲ್ಲಿ ಮಾತ್ರಾ ಅಚ್ಚರಿಯಂತೆ ಮೇಲಿನ ಮಡಿಕೆಯ ಪ್ರಸಾದ ಬೆಂದ ನಂತರವೇ ಕೆಳಗಿನ ಮಡಿಕೆಯ ಪ್ರಸಾದ ಬೇಯುವುದು ನಿಜಕ್ಕೂ ಕುತೂಹಲಕಾರಿಯಾಗಿದೆ.

ಈ ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಈ ರಥಯಾತ್ರೆಯನ್ನು ನಡೆಸಲು ಹಿಂದೂ ಮುಂದೂ ಯೋಚಿಸುತ್ತಿದ್ದಾಗ, ತಲತಲಾಂತರದಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ನಿಲ್ಲಿಸಬಾರದೆಂದು ನ್ಯಾಯಾಲಯಾದಲ್ಲಿ ವಿಶೇಷವಾದ ಅನುಮತಿಯನ್ನು ಪಡೆದು ಈ ಬಾರಿಯ ರಥಯಾತ್ರೆಯನ್ನು ನಡೆಸುತ್ತಿರುವುದು ವಿಶೇಷವಾಗಿದೆ.

WhatsApp Image 2021-07-12 at 3.23.00 PMಇಂತಹ ಪುರಾಣ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದ ವಿಶೇಷತೆಗಳನ್ನು ಮತ್ತು ನಮ್ಮ ಹೆಮ್ಮೆಯ ಪ್ರತೀಕವಾದ ಜಗನ್ನಾಥನ ರಥಯಾತ್ರಾ ಇತಿಹಾಸವನ್ನು ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ದೂರ ಹೋಗಿ ನೋಡಲು ಸಾಧ್ಯವಿಲ್ಲದ ಕಾರಣ, ಟಿವಿಯಲ್ಲಾಗಲೀ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರದಲ್ಲಿ ಲಭ್ಯವಿರುವ ಕಾರಣ, ಅಲ್ಲಿಯೇ ದರ್ಶನ ಮಾಡುವ ಮುಖಾಂತರ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಅಲ್ವೇ?

ಪುರಿ ದೇವಾಲಯವನ್ನೂ ಮತ್ತು ರಥಯಾತ್ರೆಯನ್ನು ಕಣ್ತುಂಬ ಇಲ್ಲಿಯೇ ನೋಡೋಣ ಬನ್ನಿ.

ಏನಂತೀರೀ?
ನಿಮ್ಮವನೇ ಉಮಾಸುತ

ಪೇಜಾವರ  ಶ್ರೀ ವಿಶ್ವೇಶ ತೀರ್ಥರು

ಉಡುಪಿ ಅಂದ ತಕ್ಷಣ ನಮಗೆ ನೆನಪಾಗೋದು ಶ್ರೀಕೃಷ್ಣ ಪರಮಾತ್ಮ ಕನಕನ ಕಿಂಡಿ, ಆಷ್ಟ ಮಠಗಳು ಮತ್ತು ಅಲ್ಲಿನ ದಾಸೋಹ. ಇವೆಲ್ಲವ್ವಕ್ಕೂ ಕಳಸ ಪ್ರಾಯವಾಗಿ, ಇಡೀ ದೇಶಕ್ಕೆ ಉಡುಪಿಯನ್ನು ಹೆಚ್ಚಾಗಿ ಪರಿಚಯಿಸಿದ ಮತ್ತು ದೇಶಾದ್ಯಂತ ಎಲ್ಲೇ ಧಾರ್ಮಿಕ ಚಟುವಟಿಕೆಗಳು ನಡೆಯಲಿ ಆಥವಾ ಧರ್ಮಾಧಾರಿತ ಯಾವುದೇ ಸಮಸ್ಯೆಗಳಾದಲ್ಲಿ ಅದಕ್ಕೆ ಪರಿಹಾರವಾಗಿ ಉಡುಪಿಯತ್ತಲೇ ಮುಖಮಾಡುವ ಹಾಗೆ ಮಾಡಿದ ಕೀರ್ತಿ ಪೇಜಾವರ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿದ್ದಲ್ಲದೆ, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ, ಎಲ್ಲದ್ದಕ್ಕೂ ಹೆಚ್ಚಾಗಿ ದೇಶಪ್ರೇಮಿಯಾಗಿ ಪ್ರಸಿದ್ಧರಾಗಿದ್ದರು.

ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳವಾದ ರಾಮಕುಂಜದ ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಗಳಿಗೆ ಎರಡನೆಯ ಮಗನಾಗಿ ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ಅಂದರೆ, 1931 ಎಪ್ರಿಲ್ 27 ರಂದು ಜನಿಸಿದ ವೆಂಕಟರಮಣರಿಗೆ ಏಳನೆಯ ವರ್ಷಕ್ಕೇ ಉಪನಯನವಾಗಿ ಸಂಸ್ಕಾರ ಮತ್ತು ಸಂಸ್ಕೃತ ಎರಡೂ ಅಭ್ಯಾಸವಾದವು.

ಆರು ವರ್ಷದ ಬಾಲಕ ವೆಂಕಟರಮಣ ಪೇಜಾವರ ಮಠದ ಪರ್ಯಾಯ ನಡೆಯುತ್ತಿದ್ದ ಸಂದರ್ಭದಲ್ಲಿ ಪೋಷಕರೊಡನೆ ಉಡುಪಿಗೆ ಬಂದಿದ್ದಾಗ ವೆಂಕಟರಮಣ ಮಠದ ಸ್ವಾಮೀಜಿಗಳು ಕೃಷ್ಣನ ಪೂಜೆ ಮಾಡುವುದನ್ನು ಆಸಕ್ತಿಯಿಂದ ನೋಡುತ್ತಿದ್ದದ್ದನ್ನು ಗಮನಿಸಿದ ಸ್ವಾಮಿಗಳು, ತಮ್ಮನ್ನು ಭೇಟಿಯಾಗಲು ಬಂದಾಗ ಪುಟ್ಟ ಹುಡುಗನ ಮುಗ್ಧ ಮುಖ, ಅವನಲ್ಲಿ ತುಂಬಿದ್ದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿ ನೀನು ನನ್ನಂತೆ ಸ್ವಾಮಿಯಾಗುತ್ತೀಯಾ? ಎಂದು ಪ್ರಶ್ನಿಸಿದರಂತೆ. ಅದಕ್ಕೆ ಒಂದು ಕ್ಷಣವೂ ಯೋಚಿಸದೇ, ಹ್ಞೂ, ಆಗುತ್ತೇನೆ ನಿಮ್ಮಂತೆ ಶ್ರೀ ಕೃಷ್ಣನನ್ನು ಪೂಜಿಸುವುದು ನನಗೂ ಇಷ್ಟ ಎಂದಿದ್ದನಂತೆ ಬಾಲಕ ವೆಂಕಟರಮಣ.

pj3.jpg

ಪರ್ಯಾಯದ ಅವಧಿ ಮುಗಿದ ನಂತರ ಆಗಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರದ ನಿಮಿತ್ತ ಹಂಪೆಯಲ್ಲಿದ್ದಾಗ ಬಾಲಕ ವೆಂಕಟರಮಣನನ್ನು ಕರೆಸಿಕೊಂಡು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು 3.12.1938 ಹಂಪೆಯ ಯಂತ್ರೋದ್ಧಾರ ಪ್ರಾಣದೇವರು ಆಂಜನೇಯನ ಸನ್ನಿಧಿಯಲ್ಲಿ ಸನ್ಯಾಸತ್ವದ ದೀಕ್ಷೆ ಕೊಟ್ಟು ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ವಿಶ್ವೇಶ ತೀರ್ಥರಾದರು ಅ ಪುಟ್ಟ ಬಾಲಕ ವೆಂಕಟರಮಣ.

ಮುಂದೆ ಭಂಡಾರಕೇರಿ ಮಠಾಧೀಶರಾದ ಮುಂದೆ ಫಲಿಮಾರು ಮಠಾಧೀಶರೂ ಆದ ಶ್ರೀ ವಿದ್ಯಾಮಾನ್ಯ ತೀರ್ಥರ ಕಣ್ಣಿಗೆ ಈ ಪುಟ್ಟ ಚುರುಕು ಬುದ್ಧಿಯ ಚಾಕಚಕ್ಯತೆಯ ಯತಿಗಳಾದ ವಿಶ್ವೇಶ ತೀರ್ಥರು ಬಿದ್ದು ಅವರನ್ನು ಶಿಷ್ಯರಾಗಿ ಸ್ವೀಕರಿಸಿ ತಮ್ಮೆಲ್ಲಾ ಅರಿವನ್ನು ಇವರಿಗೆ ಧಾರೆಯೆರೆದು ಶಾಸ್ತ್ರಪಾಂಡಿತ್ಯದಲ್ಲಿ ವಿಶ್ವೇಶ ತೀರ್ಥರ ಸಮಕ್ಕೆ ನಿಲ್ಲಬಲ್ಲ ಪೀಠಾಧಿಪತಿ ಇಡೀ ದೇಶದಲ್ಲಿ ಮತ್ತೊಬ್ಬರಿಲ್ಲದಂತೆ ತಯಾರು ಮಾಡಿದ ಹೆಗ್ಗಳಿಕೆ ಆವರದ್ದು. ಮುಂದೆ ತಮ್ಮ ಪ್ರಖಾಂಡ ಪಾಂಡಿತ್ಯದಿಂದ ಶ್ರೀಗಳು ಅನೇಕ ಕಡೆಗಳಲ್ಲಿ ವಿದ್ವಜ್ಜನರ ಸಭೆ ಸಮಾರಂಭಗಳಲ್ಲಿ ತಮ್ಮ ಪಾಂಡಿತ್ಯವನ್ನು ಎತ್ತಿ ತೋರಿಸಿದರು

1952 ಜನವರಿ 18 ರಂದು, ತಮ್ಮ 21ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ ಮಾಡಿ , ಅನ್ನದಾನ – ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಆತ್ಯಂತ ಯಶಸ್ವಿಯಾಗಿ ನಡೆದ ಪರ್ಯಾಯವಾಗಿದ್ದಲ್ಲದೇ, ಈ ಅವಧಿಯಲ್ಲೇ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನವಾಗಿ ಹೊರಹೊಮ್ಮಿತು.

1968 ಜನವರಿ 18ರಿಂದ, 1970 ಜನವರಿ 17ರ ವರೆಗೆ ನಡೆದ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯವು ಒಂದು ಐತಿಹಾಸಿಕ ಪರ್ಯಾಯವಾಯಿತು ಎಂದರೆ ತಪ್ಪಾಗಲಾದರು. ಇದು ಅವರ ಮೊದಲ ಪರ್ಯಾಯವನ್ನೂ ಮೀರಿ ಅದ್ದೂರಿಯಾಗಿ ನದೆಯಿತು. ಈ ಬಾರಿ ಕಲಾವಿದರ ಮತ್ತು ವಿದ್ವಾಂಸರ ಮನಸೂರೆಗೊಂಡ ಪರ್ಯಾಯವಾಗಿತ್ತು. ಈ ಅವಧಿಯಲ್ಲೇ, ಪರ್ಯಾಯೋತ್ಸವದ ಸಂಭ್ರಮದಲ್ಲೇ, ಶ್ರೀಪಾದರು ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿ ಗೀತಾ ಸಾರೋದ್ಧಾರವಾಗಿ ಮೂಡಿ ಬಂದಿತು.

ಈ ಪರ್ಯಾಯದ ಅವಧಿಯಲ್ಲೇ 1968 ಆಗಸ್ಟ್ 18ರಂದು ಉಡುಪಿಯಲ್ಲಿ, ಕೃಷ್ಣನ ಸನ್ನಿಧಿಯಲ್ಲಿ, ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆಯಾಗಿ ಬಡ ರೋಗಿಗಳಿಗೆ ವರದಾನವಾಗಿ ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನವಾಯಿತು. ಇದೇ ಸಮಯದಲ್ಲಿಯೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆದು ದೇಶದ ಜನಸಾಗರವೇ ಉಡುಪಿಯತ್ತ ಹರಿದು ಬರುವಂತೆ ಮಾಡಿತು. ಈ ಸಂದರ್ಭದಲ್ಲಿಯೇ ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಪ್ರಚಲಿತಕ್ಕೆ ಬಂದು ಸಮಸ್ತ ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದರು.

pj

ಸಮಾಜದಲ್ಲಿ ಸ್ಪೃಶ್ಯ ಮತ್ತು ಅಸ್ಪೃಷ್ಯತೆಯ ಭಾವ ತಾಂಡವಾಡುತ್ತಿದ್ದದ್ದು ಶ್ರೀಪಾದರನ್ನು ಬಹಳವಾಗಿ ಕಾಡಿತ್ತು. ಹಾಗಾಗಿ ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದನ್ನು ಧಿಕ್ಕರಿಸಿ ಅವರನ್ನೂ ಮುಖ್ಯವಾಹಿನಿಯಲ್ಲಿ ತರಲು ಬಹಳವಾಗಿ ಪ್ರಯತ್ನಿಸಿದರು. ಅದರ ಫಲವಾಗಿಯೇ ಹರಿಜನ ಕೇರಿಗಳಿಗೆ ಭೇಟಿ ನೀಡಿ ಅವರ ಮನೆಗಳಲ್ಲಿಯೂ ಪಾದಪೂಜೆ ಫಲಮಂತ್ರಾಕ್ಷತೆ, ಸಹಪಂಕ್ತಿ ಭೋಜನಗಳು ನಡೆಯುವಂತೆ ಮುಂದಾಳತ್ವವನ್ನು ವಹಿಸಿದ್ದರು ಶ್ರೀಗಳು. ಎಲ್ಲರೊಡಗೆ ಸಹಜವಾಗಿ ಅವರಂತೆಯೇ ಇರಲು ನಿರ್ಧರಿಸಿದ ಶ್ರೀಗಳು ಸಾಮಾನ್ಯವಾಗಿ ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು ಮತ್ತು ಅದನ್ನು ಬದುಕಿನುದ್ದಕ್ಕೂ ಚಾಚೂ ತಪ್ಪದೆ ಪಾಲಿಸಿಕೊಂಡ ಬಂದರು. ಎಲ್ಲರೊಳಗಾಗೋ ಮಂಕುತಿಮ್ಮ ಎನ್ನುವಂತೆ ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾವೂ ಸೇವಿಸಿದ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು. ತಮ್ಮ ಕಡೆಯ ಪರ್ಯಾಯ ಸಮಯದಲ್ಲಿಯೇ ಮುಸ್ಲಿಂ ಬಾಂಧವರಿಗೂ ಶ್ರೀ ಕೃಷ್ಣ ಮಠದಲ್ಲಿಯೇ ಇಫ್ತಾರ್ ಕೂಟವನ್ನು ಏರ್ಪಡಿಸಿ ಕೋಮು ಸೌಹಾರ್ಧತೆಯನ್ನು ಎತ್ತಿ ಹಿಡಿದವರು.

ಪೇಜಾವರರು 1970ರ ದಶಕದಲ್ಲಿ ದಲಿತರ ಕೇರಿಗಳಿಗೆ ಹೋಗುವ ಕಾರ್ಯಯೋಜನೆ ಹಾಕಿಕೊಂಡಾಗ ಪೇಜಾವರರು ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಡಿಕೊಳ್ಳುವವರಿಗೆ ಕಡಿಮೆ ಇರಲಿಲ್ಲ. ಇದಾವುದನ್ನೂ ತಲೆಗೆ ಹಚ್ಚಿಕೊಳ್ಳದ ಶ್ರೀಗಳು ಕರಾವಳಿಯಾದ್ಯಂತ ಹಳ್ಳಿ ಹಳ್ಳಿಗಳಿಗೂ ಭೇಟಿ ಕೊಟ್ಟು ಅಲ್ಲಿನ ದಲಿತರಿಗೂ ತಾವೂ ಹಿಂದೂ ಧರ್ಮೀಯರೆಂಬ ಭಾವನೆ ಹುಟ್ಟುವಂತೆ, ಗಟ್ಟಿಗೊಳ್ಳುವಂತೆ ಮಾಡುವುದರಲ್ಲಿ ಸಫಲರಾದರು. ತಮ್ಮ ಮಠದ ಖರ್ಚಿನಿಂದಲೇ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮಾಡಿಕೊದುವುದರ ಮೂಲಕ ಕ್ಷಣಿಕ ಆಶೆಗಳಿಗಾಗಿ ತಮ್ಮನ್ನು ತಾವು ಅನ್ಯಮತಕ್ಕೆ ಪರಿವರ್ತನೆಯಾಗುವುದಕ್ಕೆ ಕಡಿವಾಣ ಹಾಕುವುದರಲ್ಲಿ ಯಶಸ್ವಿಯಾದರು. ಅವರ ಜೀವಿತಾವಧಿಯವರೆಗೂ ದಲಿತರ ಕೇರಿಗೆ ಭೇಟಿ ಕೊಡುವ ಕಾರ್ಯಕ್ರಮಗಳು ಮುಂದುವರಿಯುತ್ತಲೇ ಸರಕಾರದ ಸವಲತ್ತುಗಳು ಸಿಗದ ಕುಗ್ರಾಮಗಳಿಗೆ ಇವರು ಬೆಳಕು, ನೀರು, ಸ್ವಚ್ಛತೆ, ಉದ್ಯೋಗ, ಶಿಕ್ಷಣ ಸಿಗುವಂತೆ ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ ಉಚಿತ ವಿದ್ಯಾರ್ಥಿನಿಲಯಗಳನ್ನು ತಮ್ಮ ಮಠದ ಮೂಲಕ ನಡೆಯುವಂತಹ ಶಾಶ್ವತ ವ್ಯವಸ್ಥೆಯನ್ನು ಮಾಡಿದರು. ಇಷ್ಟೆಲ್ಲ ಸಮಾಜೋದ್ಧಾರದ ಕೆಲಸಗಳನ್ನು ಕೈಗೊಂಡರೂ ಜಾತಿವಾದಿ, ಕೋಮುವಾದಿ, ದಲಿತವಿರೋಧಿ ಎಂದು ಹಲವಾರು ಬುದ್ಧಿ ಜೀವಿಗಳು ನಿಂದಿಸತೊಡಗಿದಾಗ, ಶ್ರಿಕೃಷ್ಣನೇ ನಿಂದನೆಯಿಂದ ಹೊರತಾಗದಿದ್ದಾಗ ಇನ್ನು ನನ್ನದೇನೂ ಎನ್ನುವಂತೆ ಅದನ್ನು ತಲೆಗೆ ಹಚ್ಚಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಸಮಾಜಮುಖೀ ಕೆಲಸಗಳನ್ನು ಮುಂದುವರಿಸಿಕೊಂಡು ಹೋದರು.

pj2

ಶ್ರೀಪಾದರು ಹೀಗೆ ಸಮಾಜದ ಹರಿಕಾರರಾಗಿ ಗುರುತಿಸಿಕೊಂಡರೂ ತಮ್ಮ ಯತಿ ಧರ್ಮದ ಯಾವ ನಿಯಮವನ್ನೂ ಕೈ ಬಿಡಲಿಲ್ಲ. ತಮ್ಮ ಅಖಂಡವಾದ ಬ್ರಹ್ಮಚರ್ಯೆ, ನಿತ್ಯವೂ ಜಪ ತಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ ಉಳಿದ ಮಠಗಳ ಯತಿಯರಿಗೆ ಹಿರಿಯರಾಗಿ ಮಾರ್ಗದರ್ಶಿಗಳಾಗಿ ನಿಂತರು. ಎಂದಿನಂತೆ ಬೆಳಿಗ್ಗೆ ನಾಲ್ಕುವರೆಯಿಂದ ಆರಂಭವಾಗುತ್ತಿದ್ದ ಅವರ ದಿನಚರಿ ದಿನವಿಡೀ ನಾನಾ ರೀತಿಯ ಪೂಜಾಕೈಂಕರ್ಯಗಳು ಮತ್ತು ಹತ್ತಾರು ಕಾರ್ಯಕ್ರಮಗಳೊಂದಿಗೆ ರಾತ್ರಿ ಹನ್ನೊಂದರವರೆಗೆ ನಡೆಯುತ್ತಿದ್ದರೂ ಒಂದು ಚೂರೂ ಯಾರಮೇಲೂ ಬೇಸರಿಸಿಕೊಳ್ಳದೇ, ಆಯಾಸಗೊಳ್ಳದೇ ಸದಾಕಾಲವೂ ನಸುನಗುತ್ತಲೇ ಇದ್ದ ಧೀರ ಸನ್ಯಾಸಿಗಳಾಗಿದ್ದರು ಶ್ರೀ ಪೇಜಾವರರು.

ಶ್ರೀಪಾದರು ವಿಶ್ವಹಿಂದೂ ಪರಿಷತ್ ಜೊತೆ ನಿಕಟವಾಗಿ ಗುರುತಿಸಿಕೊಂಡಿದ್ದರು ಮತ್ತು ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಆಗಲೇಬೇಕೆಂದು ಫಣ ತೊಟ್ಟ ಸಾಧುಗಳ ವೃಂದದಲ್ಲಿ ಪೇಜಾವರರೇ ಆಗ್ರೇಸರರಾಗಿದ್ದರು. ಅಶೋಕ್ ಸಿಂಘಾಲ್ ಪ್ರೇರಣೆಯಂತೆ ರಾಮ ಮಂದಿರದ ಹೋರಾಟಕ್ಕೆ ರಥಯಾತ್ರೆ ಹೊರಟ ಲಾಲಕೃಷ್ಣ ಅಡ್ವಾನಿಯವರ ಜೊತೆ ಶ್ರೀಗಳ ಗೆಳೆತನ ಬಹಳ ಅಪರೂಪವಾದದ್ದು. ಇನ್ನು ಬೆಂಕಿಯ ಚೆಂಡು ಎಂದೇ ಖ್ಯಾತವಾಗಿದ್ದ ಉಮಾಭಾರತಿಯವರೂ ಪೇಜಾವರ ಸ್ವಾಮಿಗಳಿಂದಲೇ ದೀಕ್ಷೆ ಪಡೆದ ಸನ್ಯಾಸಿನಿಯಾಗಿದ್ದರು. 1992 ಡಿಸೆಂಬರ್ 6ರಂದು ಬಾಬರೀ ಮಸೀದಿ ಕರಸೇವಕರಿಂದ ಪುಡಿಪುಡಿಯಾಗಿ ತಾತ್ಕಾಲಿಕವಾಗಿ ಪ್ರತಿಷ್ಠಾಪನೆಯಾದ ಶ್ರೀರಾಮ ಲಲ್ಲನ ರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದು ನಮ್ಮ ಶ್ರೀಗಳೇ. ಹೀಗೆ ನಮ್ಮ ಪೇಜಾವರರು ರಾಜಗುರುವಾಗಿದ್ದರು.

ತಮ್ಮ ಜೀವಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಶ್ರೀಗಳ ಆಸೆಯಾಗಿತ್ತು. ಅದಕ್ಕಾಗಿಯೇ ಕೆಲವೇ ತಿಂಗಳ ಹಿಂದೆ ಉಡುಪಿಯಲ್ಲಿ ನಡೆದ ಧರ್ಮ ಸಭೆ ಆಯೋಜಿಸಿದ್ದಾಗಲೂ ರಾಮ ಮಂದಿರದ ಬಗ್ಗೆಯೇ ಶ್ರೀಗಳು ಮಾತನಾಡಿದ್ದರು. ರಾಮ ಮಂದಿರದ ಕುರಿತಾಗಿದ್ದ ಎಲ್ಲಾ ಅಡ್ಡಿ ಆತಂಕಗಳೂ ನಿವಾರಣೆಯಾಗಿ ಇನ್ನೇನೂ ರಾಮ ಮಂದಿರದ ಕೆಲಸಕಾರ್ಯಗಳು ಆರಂಭವಾಗ ಬೇಕು ಎನ್ನುವ ಹೊತ್ತಿನಲ್ಲಿ ಶ್ರೀಗಳು 29 ಡಿಸೆಂಬರ್ 2019ರಂದು ನಮ್ಮನ್ನಗಲಿರುವುದು ನಿಜಕ್ಕೂ ದುಃಖಕರವಾದ ಸಂಗತಿ. ಆ ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಅವರ ಅಪಾರ ಭಕ್ತಾದಿಗಳಿಗೆ ಆವರ ಅಗಲಿಕೆಯ ದುಖಃ ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ.

ಇನ್ನು ವಯಕ್ತಿಕವಾಗಿ ಶ್ರೀಗಳನ್ನು ಹಲವು ಬಾರಿ ಬಹಳ ಹತ್ತಿರದಿಂದ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆಯುವಂತಹ ಸೌಭಾಗ್ಯ ನನ್ನದಾಗಿತ್ತು ಎನ್ನುವುದೇ ನನಗೊಂದು ಹೆಮ್ಮೆಯ ವಿಷಯ. 1976ರಲ್ಲಿ ನನ್ನ ಚೌಲದ ದಿನ ನಮ್ಮೂರಿನ ದೇವಸ್ಥಾನದ ಕಾರ್ಯಕ್ರಮಕ್ಕೆ ಶ್ರೀಗಳು ಬಂದಿದ್ದ ಸಂದರ್ಭದಲ್ಲಿ ಅವರ ಆಶೀರ್ವಾದ ನನಗೆ ಲಭ್ಯವಾಗಿತ್ತು. ಅದಾದ ನಂತರ 90ರ ದಶಕದಲ್ಲಿ ನಮ್ಮ ನೆರೆಯವರ ಮನೆ ಕಾರ್ಯಕ್ರಮಕ್ಕೆ ಶ್ರೀಗಳು ಬರುವರಿದ್ದರು. ಆದ ಕಾರಣ ಆ ಮನೆಯವರು ನಮ್ಮನ್ನು ಪೂರ್ಣಕುಂಭ ಸ್ವಾಗತಕ್ಕಾಗಿ ಬರಬೇಕೆಂದು ಕೇಳಿಕೊಂಡಾಗ, ನಮ್ಮ ತಂದೆಯವರು ಅದಾವ ಮನಸ್ಥಿತಿಯಲ್ಲಿದ್ದರೋ ಕಾಣೆ, ಬಿಡಿ ಬಿಡಿ ಪೇಜಾವರರು ಕೇವಲ ಸ್ಥಿತಿವಂತರ ಮನೆಗಷ್ಟೇ ಬರುವುದು ನಮ್ಮ ಮನೆಗೆಲ್ಲಾ ಏಕೆ ಬರುವುದಿಲ್ಲಾ ಎಂಬ ಅಳಲನ್ನು ತೋಡಿಕೊಂಡಿದ್ದರು. ಈ ವಿಷಯ ಪೇಜಾವರರಿಗೆ ಅದು ಹೇಗೆ ತಲುಪಿತೋ ಕಾಣೆ. ಅವರ ಮನೆಗೆ ಹೋಗುವುದಕ್ಕಿಂತಲೂ ಮುಂಚೆಯೇ ಸಿಗುವ ನಮ್ಮ ಮನೆಗೆ ಸೀದಾ ಹೇಳಿ ಕೇಳದೇ ಬಂದೇ ಬಿಟ್ಟಾಗ ನಮ್ಮ ಜಂಘಾಬಲವೇ ಉಡುಗಿಹೋಗಿತ್ತು. ಅದನ್ನು ಸಾವರಿಸಿಕೊಂಡು ಯಥಾಶಕ್ತಿ ಅವರ ಪಾದಪೂಜೆ ಮಾಡಿದ್ದು ಇನ್ನೂ ಹಚ್ಚ ಹಸಿರಾಗಿದೆ. ಅದೇ ರೀತಿ ನಮ್ಮ ಸ್ನೇಹಿತನ ಮನೆಯಲ್ಲಿ ನಡೆದ ಕಲ್ಯಾಣೋತ್ಸವದಲ್ಲೂ ಅವರ ಆಶೀರ್ವಾದ ಪಡೆದಿದ್ದೆವು. ಇನ್ನು ಎರಡು ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಯಾಂಪಿನಲ್ಲಿ ಅವರ ಸೇವೆ ಮಾಡುವ ಮತ್ತು ಆವರ ಮಾರ್ಗದರ್ಶನ ಲಭಿಸಿತ್ತು. ಸರ್ವೇಜನಾಃ ಸುಖಿನೋಭವಂತು ಎಂದು ಸದಾ ಕೇಳಿಕೊಳ್ಳಬೇಕು ಎಂದು ಅವರು ಹೇಳಿದ ಗಂಡುಬೇರುಂಡ ಕಥೆ ( ಓದಿ Nation First Everything Next ಗಂಡುಬೇರುಂಡ ಕಥೆ) ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.

WhatsApp Image 2019-12-29 at 4.24.49 PM

2019ನೇ ವರ್ಷ ನಿಜಕ್ಕೂ ನಮಗೆ ಅತ್ಯಂತ ಬೇಸರ ತರಿಸುವ ವರ್ಷ. ವರ್ಷಾರಂಭದ ಜನವರಿ ತಿಂಗಳಿನಲ್ಲಿ ನಡೆದಾಡುವ ದೇವರು ಶತಾಯುಷಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳನ್ನು ಕಳೆದುಕೊಂಡರೆ ವರ್ಷಾಂತ್ಯದ ಡಿಸೆಂಬರ್ ತಿಂಗಳಿನಲ್ಲಿ ಮತ್ತೊಬ್ಬ ಯತಿವರ್ಯ ಶ್ರೀ ಶ್ರೀ ಶ್ರೀ ಪೇಜಾವರ ಪೇಜಾವರ ಶ್ರೀ ವಿಶ್ವೇಶ ತೀರ್ಥರನ್ನು ಕಳೆದುಕೊಂಡಿದ್ದೇವೆ. ಕಲ್ಲಿನ ದೇವರುಗಳನ್ನು ನೋಡಿದ್ದ ನಮಗೆ ವಿಶ್ವೇಶ ತೀರ್ಥರು ಮತ್ತು ಶಿವಕುಮಾರಸ್ವಾಮಿಗಳು ಹರಿ ಮತ್ತು ಹರರಂತೆ ನಿಜವಾದ ದೇವರಾಗಿ ಕಂಡರು ಎಂದರೆ ಅತಿಶಯೋಕ್ತಿಯೇನಲ್ಲ. ಇವರಿಬ್ಬರ ನಡುವೆಯೂ ಬಹಳ ಸಾಮ್ಯತೆ ಇದೆ. ಇಬ್ಬರೂ ಪರಿವರ್ತನಾಕಾರರು, ಇಬ್ಬರೂ ಸೇವಾ ಮಾನೋಭಾವದಿಂದ ರಾಜ್ಯಾದ್ಯಂತ ನೂರಾರು ವಿದ್ಯಾಸಂಸ್ಥೆಗಳನ್ನು ತೆರೆದವರು.ವಿದ್ಯಾರ್ಥಿಗಳಿಗೆ ಮತ್ತು ಭಕ್ತಾದಿಗಳಿಗೆ ನಿರಂತರ ದಾಸೋಹವನ್ನು ನಡೆಸಿಕೊಂಡು ಬಂದವರು. ತಾವು ನಂಬಿದ ಸಿದ್ದಾಂತಗಳಿಗೆ ಕಟಿಬದ್ಧರಾಗಿ ಜೀವನ ಪೂರ್ತಿ ಅದನ್ನು ಪ್ರತಿಪಾದಿಸಿದ್ದವರು.

ತಮ್ಮರಾಜಕೀಯ ತೆವಲುಗಳಿಗೆ, ಓಟಿನ ರಾಜಕೀಯಕ್ಕಾಗಿ ಮತ್ತು ಕುಟುಂಬ ರಾಜಕೀಯಕ್ಕಾಗಿ ತಮಗೆ ತಾವೇ ಭಾರತರತ್ನ ಪ್ರಶಸ್ತಿಗಳನ್ನು ಕೊಟ್ಟು ಆ ಪ್ರಶಸ್ತಿಯ ಮೌಲ್ಯವನ್ನು ಅಪಮೌಲ್ಯವನ್ನಾಗಿ ಮಾಡಿರುವಾಗ, ಈ ಇಬ್ಬರೂ ಮಹಾಸಾಧಕರಿಗೆ ಭಾರತರತ್ನ ಪ್ರಶಸ್ತಿಗಳನ್ನು ನಮ್ಮ ಘನ ಸರ್ಕಾರ ನೀಡುವ ಮೂಲಕ ಆ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸ ಬೇಕು ಎಂದು ಸಮಸ್ತ ಕನ್ನಡಿಗರ ಪರವಾಗಿ ಕೋರಿಕೊಳ್ಳುತ್ತೇನೆ.

ಏನಂತೀರೀ?

ಶ್ರೀಗಳ ಜೀವನದ ಸಂಪೂರ್ಣ ಮಧುರ ಕ್ಷಣಗಳು ಫೋಟೋ ರೂಪದಲ್ಲಿ

Screenshot 2020-01-02 at 9.30.35 AM

Screenshot 2020-01-02 at 9.33.26 AM

Screenshot 2020-01-02 at 9.36.07 AM

ಶ್ರೀ ಕೃಷ್ಣ ಜನ್ಮಾಷ್ಟಮಿ

ಸಾಮಾನ್ಯವಾಗಿ ಬಹುತೇಕರು ತಮ್ಮ ನಾಯಕರನ್ನು ಹೊಗಳುವ ಭರದಲ್ಲಿ ಅನಾಥರಕ್ಷಕ, ಧೀನಬಂಧು, ಆಪತ್ಬಾಂಧವ, ಕರುಣಾಸಿಂಧು, ಬಡವರ ಬಂಧು, ಜಗದೋದ್ಧಾರಕ ಎಂದೆಲ್ಲಾ ವಾಚಾಮಗೋಚರವಾಗಿ ಹೇಳುತ್ತಾರಾದರೂ ಅದು ಬಹುತೇಕರಿಗೆ ಮುಖ: ಸ್ತುತಿಯಾಗಿರುತ್ತದೆಯೇ ಹೊರತು ನಿಜವಾಗಿಯೂ ಅಂತಹ ವ್ಯಕ್ತಿಗಳೇ ಆಗಿರುವುದಿಲ್ಲ. ಹಾಗಾದರೇ ಈ ಎಲ್ಲಾ ಉಪಮಾನ ಉಪಮೇಯಗಳು ಯಾರಿಗೆ ಹೋಲುತ್ತವೆ ಎಂದು ಯೋಚಿಸಿದಲ್ಲಿ ಥಟ್ಟನೇ ಮನಸ್ಸಿಗೆ ಹೊಳೆಯುವುದೇ, ನಮ್ಮ ಶ್ರೀಕೃಷ್ಣಾ. ಪ್ರೀತಿಯ ಕಳ್ಳ ಕೃಷ್ಣಾ, ನವನೀತ ಚೋರ, ಹೆಂಗಳೆಯರ ಚಿತ್ತ ಚೋರ, ಗಿರಿಧರ, ಮುರಳೀಧರ, ಗೋಪಾಲಕೃಷ್ಣ ಹೀಗೆ ಜನರು ಪ್ರೀತಿಯಿಂದ ನಾನಾ ರೀತಿಯ ಹೆಸರಿನಿಂದ ಕರೆದರೂ, ಎಲ್ಲವೂ ಅವನಿಗಷ್ಟೇ ಅನ್ವರ್ಥವಾಗುವಂತಹದ್ದು ಎಂದರೆ ತಪ್ಪಾಗಲಾರದು.

ದ್ವಾಪರಯುಗದಲ್ಲಿ ತಂಗಿ ದೇವಕಿಗೆ ಹುಟ್ಟುವ ಮಗನಿಂದಲೇ ತನ್ನ ವಧೆ ಎಂದು ತಿಳಿದು, ತಂಗಿ ಎಂಬ ಮಮಕಾರವೂ ಇಲ್ಲದೇ, ದೇವಕಿ ಮತ್ತು ಭಾವ ವಸುದೇವನನ್ನು ಕಂಸನು ಮಥುರೆಯ ಸೆರೆ ಮನೆಗೆ ತಳ್ಳಿ ಪ್ರತೀ ಬಾರಿ ಹುಟ್ಟುವ ಮಗುವನ್ನೂ ಕೊಂದು ಹಾಕುತ್ತಿರುತ್ತಾನೆ. ಆದರೆ ಎಂಟನೇ ಮಗುವಿನ ನಿರೀಕ್ಷೆಯಲ್ಲಿರುವಾಗ ಈ ಬಾರೀ ಹೇಗಾದರೂ ಮಗುವನ್ನು ಉಳಿಸಿಕೊಳ್ಳಲೇ ಬೇಕೆಂದು ನಿರ್ಧರಿಸಿದ ದಂಪತಿಗಳು, ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಮಗುವನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ, ವಿಪರೀತವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ತಲೆಯ ಮೇಲೆ ಬುಟ್ಟಿಯಲ್ಲಿ ನವಜಾತ ಶಿಶುವನ್ನು ಹೊತ್ತು ಕೊಂಡು ಗೋಕುಲಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ನಂದರಾಜನ ಮನೆಯಲ್ಲಿ ಯಶೋಧೆಯ ವಶಕ್ಕೊಪ್ಪಿಸಿ, ಯಶೋಧೆಯ ಮಗುವನ್ನು ಕರೆದು ಕೊಂಡು ಪುನಃ ಸೆರೆಮನೆಗೆ ವಾಪಸ್ಸಾಗುತ್ತಾನೆ. ಭಗವಂತನ ಅನುಗ್ರಹದಿಂದ, ಅದೇ ಸಮಯದಲ್ಲಿ ಸೆರೆಮನೆಯ ಭಟರು ನಿದ್ದೆಗೆ ಜಾರಿ, ಸೆರೆಮನೆಯ ಬೀಗ ತನ್ನಿಂದ ತಾನೇ ತೆರೆದುಕೊಂಡು ಪುನಃ ಸೆರೆಮನೆಗೆ ಹಿಂದಿರುಗಿದ ನಂತರ ತನ್ನಷ್ಟಕ್ಕೆ ತಾನೇ ಬೀಗ ಹಾಕಿಕೊಳ್ಳುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಶ್ರೀ ಕೃಷ್ಣನಿಗೆ ದೇವಕಿ ಜನ್ಮ ಕೊಟ್ಟ ತಾಯಿಯಾದರೆ, ಯಶೋಧೆ ಆತನ ಸಾಕು ತಾಯಿಯಾಗುತ್ತಾಳೆ. ಮುಂದೆ ಗೋಕುಲದಲ್ಲಿ ತನ್ನ ಗೆಳೆಯರೊಂದಿಗೆ ಬಾಲಲೀಲೆಗಳಿಂದ ಎಲ್ಲರನ್ನೂ ಗೋಳು ಹೊಯ್ದು ಕೊಳ್ಳುತ್ತಾ ತನ್ನ ವಿವಿಧ ಚಮತ್ಕಾರಗಳನ್ನು ತೋರಿಸುತ್ತಾ ಅಣ್ಣ ಬಲರಾಮನೊಂದಿಗೆ ಲೋಕವಿಖ್ಯಾತನಾದ ಕಥೆ ಎಲ್ಲರಿಗೂ ತಿಳಿದೇ ಇದೆ.

ದುಷ್ಷರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಸಾಕ್ಷಾತ್ ವಿಷ್ಣು ದೇವರೇ ದಶಾವತಾರದ ಎಂಟನೇ ಅವತಾರವಾಗಿ ದೇವಕಿ ಮತ್ತು ವಸುದೇವ ದಂಪತಿಗಳಿಗೆ ಜನಿಸಿದ ಆ ದಿನವನ್ನು ಪ್ರಪಂಚಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಬಹಳ ವೈಭವದಿಂದ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಚಾಂದ್ರಮಾನ ಪದ್ದತಿಯನ್ನು ಪಾಲಿಸುವವರು ಶ್ರಾವಣ ಮಾಸದ ಬಹುಳ ಅಷ್ಟಮಿ ತಿಥಿಯಂದು ಹಬ್ಬವನ್ನು ಆಚರಿಸಿದರೆ, ಸೌರಮಾನ ಪದ್ದತಿಯನ್ನು ಪಾಲಿಸುವವರು ಶ್ರಾವಣ ಮಾಸದ ಶುಕ್ಲಪಕ್ಷದ ರೋಹಿಣಿ ನಕ್ಷತ್ರದ ದಿನದಂದು ಆಚರಿಸುತ್ತಾರೆ.

ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬದ ಎರಡು ಮೂರು ದಿನಗಳಿಗೆ ಮುಂಚೆಯೇ ಎಲ್ಲರ ಮನೆಯಲ್ಲಿಯೂ ಸಂಭ್ರಮದ ವಾತವರಣ ವಿದ್ದು, ಅಂದಿನಿಂದಲೇ ಮನೆಯಲ್ಲಿ ಶ್ರೀಕೃಷ್ಣನಿಗೆ ಇಷ್ಟವಾದ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ತೇಂಗೊಳಲು, ಮುಸ್ಸೋರೆ ಯಂತಹ ಕುರುಕಲು ತಿಂಡಿಗಳು, ಒಬ್ಬಟ್ಟು, ಲಾಡು ಮುಂತಾದ ಬಗೆ ಬಗೆಯ ಉಂಡೆಗಳು ಮೈಸೂರು ಪಾಕ್, ಕೊಬ್ಬರೀ ಮಿಠಾಯಿಗಳನ್ನು ಬಹಳ ಭಯ ಭಕ್ತಿಯಿಂದ ಮಡಿಯಲ್ಲಿ ತಯಾರು ಮಾಡುತ್ತಾರೆ. ಹಬ್ಬದ ದಿನದಂದು, ಮನೆ ಮತ್ತು ದೇವರ ಮನೆಯಲ್ಲಿ ತಳಿರು ತೋರಣಗಳಿಂದ ಸುಂದರವಾಗಿ ಅಲಂಕರಿಸಿ ಕೃಷ್ಣನ ವಿಗ್ರಹಗಳನ್ನೋ ಇಲ್ಲವೇ, ಕೃಷ್ಣನ ಫೋಟೋವನ್ನು ವಿಧ ವಿಧ ಹೂವುಗಳಿಂದ ಅದರಲ್ಲೂ ವಿಶೇಷವಾಗಿ ತುಳಸೀ ಅಲಂಕರಿಸಿ, ಮಾಡಿದ ಬಗೆ ಬಗೆಯ ತಿಂಡಿಗಳನ್ನು ನೈವೇದ್ಯಕ್ಕಿರಿಸಿ ಪೂಜಿಸಲಾಗುತ್ತದೆ. ಮನೆಯ ಮುಂದಿನ ತುಳಸೀ ಕಟ್ಟೆಯಿಂದ ದೇವರ ಮನೆಯವರೆಗೂ ಶ್ರೀ ಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬಿಡಿಸಿ ಸಂಭ್ರಮಿಸಲಾಗುತ್ತದೆ. ಪೂಜೆಯ ನಂತರ ಅಕ್ಕ ಪಕ್ಕದ ಮುತ್ತೈದೆಯರನ್ನು ಕರೆದು ಅವರಿಗೆ ಅರಿಶಿನ ಕುಂಕುಮದ ಜೊತೆ ಜನ್ಮಾಷ್ಟಮಿಯ ಬಾಗಿಣವನ್ನು ಕೊಟ್ಟು ನಂತರ ಎಲ್ಲರೂ ಒಟ್ಟಿಗೆ ಪ್ರಸಾದದ ರೂಪದಲ್ಲಿ ಮಾಡಿದ ಎಲ್ಲಾ ತಿಂಡಿಗಳನ್ನು ಸೇವಿಸುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಬೆಳಗಿನಿಂದ ಮಧ್ಯರಾತ್ರಿಯವರೆಗೂ ಉಪವಾಸವಿದ್ದು ನಂತರ ಶ್ರೀಕೃಷ್ಣನಿಗೆ ಮೇಲೆ ತಿಳಿಸಿದಂತೆ ಪೂಜೆ ಮಾಡಿ ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ.

WhatsApp Image 2019-08-22 at 9.35.51 AM

ಇನ್ನು ದೇವಾಲಯಗಳಲ್ಲಿ ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟೋ ಇಲ್ಲವೇ ಕೃಷ್ಣನ ವಿವಿಧ ಬಗೆಯ ವಿಗ್ರಹಗಳನ್ನು ಜೋಡಿಸಿಯೋ ಇಲ್ಲವೇ ಕೃಷ್ಣನ ನಾನಾ ಭಂಗಿಯ ಫೋಟೋಗಳನ್ನು ಇಟ್ಟು ಚೆಂದವಾಗಿ ಅಲಂಕರಿಸಿ ಹೂವು, ಪತ್ರೆಗಳನ್ನು ಅರ್ಪಿಸಿ, 108 ತುಳಸಿದಳದಿಂದ ಕೃಷ್ಣಾಷ್ಟೋತ್ತರದೊಂದಿಗೆ ಅರ್ಚನೆಯನ್ನು ಮಾಡಿ. ಅಷ್ಟೋತ್ತರ, ಭಜನೆಯ ನಂತರ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಹಾಲನ್ನು ಜೊತೆಗೆ ಬಗೆ ಬಗೆಯ ಉಂಡೆಗಳು, ಕುರುಕಲು ತಿಂಡಿಗಳು ಮತ್ತು ಸಿಹಿತಿಂಡಿಗಳನ್ನು ನೈವೇದ್ಯ ರೂಪದಲ್ಲಿ ಸಮರ್ಪಿಸಿ, ವಿಶೇಷವಾದ ಪೂಜೆ ಮಾಡುತ್ತಾರೆ. ಅದೇ ರೀತಿ ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀಕೃಷ್ಣ ವೇಷದ ಸ್ಪರ್ಧೆ ಏರ್ಪಡಿಸುತ್ತಾರೆ. ಇನ್ನೂ ಹಲವಾರು ಕಡೆ ಶ್ರೀ ಕೃಷ್ಣನ ಬಾಲ್ಯದ ಆಟಗಳನ್ನು ನೆನಪಿಸುವ ಬೆಣ್ಣೆ ಕದಿಯುವ ಸ್ಪರ್ಥೆ, ಎತ್ತರದಲ್ಲಿ ಮೊಸರು ಕುಡಿಕೆಯನ್ನು ಕಟ್ಟಿ ಅದನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಡೆಯುವ ಸ್ಪರ್ಥೆ ಅದೇ ರೀತಿ ಪಿರಾಮಿಡ್ ತರಹ ಹುಡುಗರು ಒಬ್ಬರ ಮೇಲೆ ಒಬ್ಬರು ನಿಂತು ಮಡಿಕೆ ಒಡೆಯಲು ಪ್ರಯತ್ನಿಸುತ್ತಿದ್ದರೆ ಅಕ್ಕ ಪಕ್ಕದಲ್ಲಿ ನಿಂತಿರುವವರು ರಭಸವಾಗಿ ನೀರನ್ನು ಎರಚುತ್ತಾ ಮೊಸರಿನ ಕುಡಿಕೆ ಒಡೆಯದಿರುವಂತೆ ನೋಡಿಕೊಳ್ಳುವ ಸ್ಪರ್ಥೆಯ ಬಗ್ಗೆ ಹೇಳುವುದಕ್ಕಿಂತ ಅನುಭವಿಸಿದರೇ ಚೆಂದ.

krishna11

ಉತ್ತರ ಭಾರತಾದ್ಯಂತ ಜನಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ, ಕೃಷ್ಣನ ವಿಗ್ರಹವನ್ನು ವೈಭವೋಪೇತವಾಗಿ ಅಲಂಕರಿ, ಕೃಷ್ಣನ ಸಾಹಸಗಳನ್ನು ವರ್ಣಿಸುವ ಭಜನೆಗಳು ಛಪ್ಪನ್ ಭೋಗ್ ಎಂಬ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಇಲ್ಲಿ 56 ಬಗೆ ಬಗೆಯ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲುಗಳನ್ನು ಶ್ರೀಕೃಷ್ಣನಿಗೆ ನೈವೇದ್ಯ ಸಲ್ಲಿಸಿದ ಬಳಿಕ ಎಲ್ಲಾ ತಿಂಡಿಗಳನ್ನು ಒಂದೆಡೆ ಸೇರಿಸಿ ಪ್ರಸಾದ ವಿತರಿಸಲಾಗುತ್ತದೆ. ಯಾವುದೇ ಜಾತಿ ಮತ, ಪಂಥ ಎನ್ನದೆ ಎಲ್ಲಾ ಭಕ್ತರು ತಂದಿರುವ ಪ್ರಸಾದವನ್ನು ಭಕ್ತರಿಗೆ ವಿತರಿಸುವ ಮೂಲಕ ವಸುದೈವ ಕುಟುಂಬಕಂ ಎಂಬ ಪದಕ್ಕೆ ನಿಜವಾದ ಅರ್ಥವನ್ನು ಕಲ್ಪಿಸುತ್ತಾರೆ.

ಇನ್ನು ಶ್ರೀ ಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಮಧ್ಯರಾತ್ರಿಯಲ್ಲಿ ನಂದ ಉತ್ಸವ ನಡೆಸಿ , ಭೋಗ್ ಅರ್ಪಣೆಯಲ್ಲಿ ಶ್ರೀ ಕೃಷ್ಣನಿಗೆ ಪ್ರಿಯವಾದ ಆಹಾರಗಳನ್ನು ನೈವೇದ್ಯ ಮಾಡಲಾಗುತ್ತದೆ. ಬಳಿಕ ಈ ನೈವೇದ್ಯವನ್ನು ಭಕ್ತರಿಗೆ ಹಂಚಲಾಗುತ್ತದೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ವಿಶೇಷವಾಗಿ 9 ರಂಧ್ರಗಳಿರುವ ನವಗ್ರಹ ಕಿಟಕಿಯ ಮೂಲಕ ಕೃಷ್ಣನ ದರ್ಶನ ಪಡೆಯುತ್ತಾರೆ. ಜೊತೆಗೆ ಹುಲಿ ವೇಷದ ಕುಣಿತ,ತಾಳ ಮದ್ದಳೆ ಮತ್ತು ಚಂಡೆಯ ಸೇವೆ, ಮೊಸರು ಗಡಿಗೆ ಒಡೆಯುವ ವಿಟ್ಲಪಿಂಡಿ, ಮತ್ತಿತರೆ ಕೃಷ್ಣ ಬದುಕಿನ ಚಿತ್ರಣ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇನ್ನು ದೇಶಾದ್ಯಂತ ಇರುವ ಇಸ್ಕಾನ್ ದೇವಾಲಯಗಳಲ್ಲಿ ಶ್ರೀ ಕೃಷ್ಣ ಜನಾಷ್ಟಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ವೇಳೆ 108 ವಿಭಿನ್ನ ನೈವೇದ್ಯಗಳನ್ನಿಟ್ಟು ಕೃಷ್ಣನಿಗೆ ಅರ್ಪಿಸಿ ಪೂಜಿಸಲಾಗುತ್ತದೆ. ಅಲ್ಲದೆ ಕೃಷ್ಣನ ಮೂರ್ತಿಯನ್ನು ನೀರು, ಅರಿಶಿನ, ತುಳಸಿ ದಳಗಳು ಹಾಗೂ ಗುಲಾಬಿ ದಳಗಳಿಂದ ಅಭಿಷೇಕ ಮಾಡಲಾಗುತ್ತದೆ. ರಾಧಾ ಕೃಷ್ಣರ ಮೂರ್ತಿಯನ್ನು ತರಹೇವಾರಿ ಹೂವು ಹಣ್ಣುಗಳಿಂದ ಅಲಂಕರಿಸಿರುತ್ತಾರೆ ಮತ್ತು ಶಾಲಾ ಮಕ್ಕಳಿಗೆ ಭಗವಧ್ಗೀತೆಯ ಸ್ಪರ್ಧೆ, ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀ ಕೃಷ್ಣನ ವೇಷದ ರಸಪ್ರಶ್ನೆಗಳು, ಚಿತ್ರಕಲಾ ಸ್ಪರ್ಧೆ. ಹೆಂಗಸರಿಗೆ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಿ ಆಕರ್ಷಕವಾದ ಬಹುಮಾನವನ್ನು ವಿತರಿಸುತ್ತಾರೆ. ಸಂಜೆ ನಗರಾದ್ಯಂತ ಶ್ರೀ ಕೃಷ್ಣನ ಚೈತನ್ಯ ರಥದೊಂದಿಗೆ ನಗರ ಸಂಕೀರ್ತನೆ ನಡೆಸಿ, ಬೆಳಗಿನಿಂದ ಇಡೀ ರಾತ್ರಿಯವರೆಗೂ ಲಕ್ಷಾಂತರ ಭಕ್ತರು ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನ ಪಡೆದು ಧನ್ಯರಾಗುತ್ತಾರೆ.

WhatsApp Image 2019-08-21 at 11.36.52 PM

ಹದಿನೈದನೇ ಶತಮಾನದ ಚೈತನ್ಯ ಮಹಾಪ್ರಭುಗಳ ಭಕ್ತಿ ಚಳುವಳಿಯ ಸಮಯದಲ್ಲಿ ಪ್ರಚಲಿತಕ್ಕೆ ಬಂದ

ಹರೇ ಕೃಷ್ಣ ಹರೇ ಕೃಷ್ಣ , ಕೃಷ್ಣ ಕೃಷ್ಣ ಹರೇ ಹರೇ|

ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ| ಎಂಬ ಮಂತ್ರ ಇಂದಿಗೂ ಎಲ್ಲರಿಗೂ ಅಚ್ಚು ಮೆಚ್ಚಿನ ಮಹಾ ಮಂತ್ರವಾಗಿದೆ.

ಈ ರೀತಿಯಾಗಿ ಶ್ರೀಕೃಷ್ಣ ಚಿಕ್ಕವರಿಂದ ದೊಡ್ಡವರಿಗೆ, ಗಂಡು ಮತ್ತು ಹೆಣ್ಣು ಎಂಬ ಬೇಧವಿಲ್ಲದೆ, ಅಬಾಲವೃದ್ದರೂ ಪ್ರೀತಿಸಲ್ಪಡುವ ದೇವರಾಗಿದ್ದು, ಹೆತ್ತ ತಾಯಿ ಮತ್ತು ಬೆಳೆಸಿದ ತಾಯಿಗೆ ಮುದ್ದಿನ ಮಗುವಾಗಿ, ಪ್ರೇಮಿಕೆಗೆ ಪ್ರಿಯತಮನಾಗಿ, ಗೋವುಗಳಿಗೆ ಗೋಪಾಲಕನಾಗಿ, ದೀನರಿಗೆ ಬಂಧುವಾಗಿ, ಆರ್ತರಿಗೆ ರಕ್ಷಕನಾಗಿ, ಧರ್ಮಿಗಳಿಗೆ ಮಿತ್ರನಾಗಿ, ಅಧರ್ಮಿಗಳಿಗೆ ಸಿಂಹಸ್ವಪ್ನವಾಗಿ, ವೈರಿಯೊಡನೆ, ಸ್ನೇಹಿತರೊಡನೆ, ಸಹೋದರಿ ದ್ರೌಪದಿಯ ಮಾನ ಕಾಪಾಡುವ ಅಣ್ಣನಾಗಿ , ಯುದ್ಧ ರಾಯಭಾರಿಯಾಗಿ, ಸಾರಥಿಯಾಗಿ, ಪ್ರೇಮಿ, ಮಡದಿಯರೊಂದಿಗೆ ಮತ್ತು ಗೆಳೆಯರೊಡನೆ ಹೇಗಿರ ಬೇಕು? ಸಂಬಂಧ, ಬಾಂಧವ್ಯ, ಬದುಕಿನ ರಾಜಕೀಯಗಳನ್ನು ಹೇಗೆ ನಿಭಾಯಿಸ ಬೇಕು? ಯುದ್ದದ ಸಮಯದಲ್ಲಿ ಯಾವ ರೀತಿಯಾಗಿ ತಂತ್ರಗಾರಿಕೆ ಮಾಡಬೇಕು? ಸಂಕಷ್ಟದ ಸಮಯವನ್ನು ಹೇಗೆ ನಿಭಾಯಿಸ ಬೇಕು? ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟ ಶ್ರೀಕೃಷ್ಣನೇ ನಮಗೆ ಅತ್ಯುತ್ತಮ ಮಾರ್ಗದರ್ಶಿ. ಅಂದಿಗೂ… ಇಂದಿಗೂ… ಎಂದೆಂದಿಗೂ… ಮತ್ತು ಬದುಕಿನ ಪ್ರತಿಯೊಂದೂ ಕ್ಷಣ ಕ್ಷಣಕ್ಕೂ ಶ್ರೀ ಕೃಷ್ಣನ ನಡೆಯೇ ನಮಗೆಲ್ಲಾ ಆದರ್ಶ. ಹಾಗಾಗಿ ಕೃಷ್ಣಂ ವಂದೇ ಜಗದ್ಗುರುಂ.

ಏನಂತೀರೀ?

ನಿಮ್ಮವನೇ‌ ಉಮಾಸುತScreenshot 2019-08-21 at 11.43.55 PM