ಸಂಡಿಗೆ ಹುಳಿ (ಉಂಡೇ ಹುಳಿ)

ಹಳೇ ಮೈಸೂರಿನ ಪ್ರಾಂತ್ಯದವರ ಸಭೆ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯ ಹಿಂದಿನ ದಿನದ ದೇವರ ಸಮಾರಾಧನೆ, ವೈಕುಂಠ ಸಮಾರಾಧನೆಗಳಲ್ಲಿ ಅದೇ ತರಕಾರಿ ಕೂಟು ಅಥವಾ ಹುಳಿದೊವ್ವೆ ಬದಲು ರುಚಿಕರವಾದ, ಪೌಷ್ಟಿಕವಾದ  ಸಂಡಿಗೆ ಹುಳಿ (ಉಂಡೇ ಹುಳಿ)  ಮಾಡುವ ಸಂಪ್ರದಾಯವಿದೆ. ಈಗ  ಸಾಂಪ್ರದಾಯಕವಾಗಿ ಮನೆಯಲ್ಲಿ ಹೇಗೆ ಅದನ್ನು  ತಯಾರಿಸಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ.

ಸುಮಾರು 4-6   ಜನರಿಗೆ ಸಾಕಾಗುವಷ್ಟು ಸಂಡಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿಗಳು

WhatsApp Image 2020-05-01 at 5.20.16 PM

 • ತೊಗರಿ ಬೇಳೆ-3 ಬಟ್ಟಲು
 • ಬೆಲ್ಲ- 100 ಗ್ರಾಂ
 • ಸಾರಿನಪುಡಿ- 2  ಚಮಚ
 • ಕಾಳು ಮೆಣಸು – 1 ಚಮಚ
 • ಜೀರಿಗೆ – 1  ಚಮಚ
 • ಸಾಸಿವೆ- 1/4 ಚಮಚ
 • ಚಿಟಿಕೆ ಇಂಗು
 • ಚಿಟಿಕೆ ಅರಿಶಿನದ ಪುಡಿ
 • ಹುಣಸೇ ರಸ- 1 ಬಟ್ಟಲು
 • ಕಾಯಿತುರಿ-1 ಬಟ್ಟಲು
 • ರುಚಿಗೆ ತಕ್ಕಷ್ಟು ಉಪ್ಪು
 • ಎಣ್ಣೆ-2 ಚಮಚ

ಮಾಡುವ ವಿಧಾನ :

 • ಹುಣಸೇಹಣ್ಣನ್ನು ನೀರಿನಲ್ಲಿ  ಸ್ವಲ್ಪ ಹೊತ್ತು ನೆನೆಸಿಟ್ಟು  ಚೆನ್ನಾಗಿ ಹಿಂಡಿ ಹುಣಸೇ ಹುಳಿಯನ್ನು ತೆಗೆದುಟ್ಟು ಕೊಳ್ಳಬೇಕು.
 • ತೋಗರೀ ಬೇಳೆಯನ್ನು ಮೂರ್ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ಚೆನ್ನಾಗಿ ನೆನೆಸಿಟ್ತುಕೊಂಡು ನಂತರ ನೀರನ್ನು ಬಸಿದುಟ್ಟು ಕೊಳ್ಳ ಬೇಕು
 • ನೆನೆಸಿಟ್ಟಿದ್ದ ತೊಗರೀ ಬೇಳೆಯನ್ನು ನೀರು ಹಾಕಿಕೊಳ್ಳದೇ ಗಟ್ಟಿಯಾಗಿ ತರಿತರಿಯಾಗಿ (ಆಂಬೋಡೆಯ ತರಹ) ರುಬ್ಬಿಟ್ಟುಕೊಳ್ಳಬೇಕು
 • ರುಬ್ಬಿಟ್ಟು ಕೊಂಡ ತೊಗರೀ ಬೇಳೆಯಲ್ಲಿ ಸುಮಾರು ಮುಕ್ಕಾಲು ಭಾಗವನ್ನು  ಮತ್ತೊಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಂಡು ಉಳಿದ ಕಾಲು ಭಾಗಕ್ಕೆ ತುರಿದಿಟ್ಟುಕೊಂಡಿದ್ದ ಕಾಯಿ ಮತ್ತು ಸಾರಿನಪುಡಿಯನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು
 • ಬಾಣಲೆಯಲ್ಲಿ ಎಣ್ಣೆಹಾಕಿ ಅದಕ್ಕೆ ಸಾಸಿವೆ ಸಿಡಿಸಿಕೊಂಡು ಚಿಟಿಕೆ ಇಂಗು ಮತ್ತು ಅರಿಶಿನಹಾಕಿದ ನಂತರ  ರುಬ್ಬಿದ ಮಸಾಲೆಯನ್ನು ಬಾಣಲೆಗೆ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಗಂಟಾದಂತೆ ಕೈಯಾಡಿಸಬೇಕು.
 • ಕುದಿಯುತ್ತಿರುವ ಹುಳಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸಣ್ಣನೆಯ ಉರಿಯಲ್ಲಿ  ಹುಳಿಯನ್ನು ಕುದಿಯಲು ಬಿಡಬೇಕು
 • ಈಗ ತೆಗೆದಿಟ್ಟಿದ್ದ ಮುಕ್ಕಾಲು ಭಾಗ ಬೇಳೆಗೆ ಜೀರಿಗೆ  ಮತ್ತು ಮೆಣಸನ್ನು   ತರಿತರಿಯಾಗಿ ಕುಟ್ಟಿಕೊಂಡು ಅದಕ್ಕೆ ಬೆರೆಸಿ ಸಣ್ಣ ಸಣ್ಣದಾದ ಗಟ್ಟಿಯಾದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು
 • ಹುಳಿ ಕುದಿಯಲು ಆರಂಭವಾದಾಗ  ಮಾಡಿಟ್ಟು ಕೊಂಡಿದ್ದ ಉಂಡೆಗಳನ್ನು ನಿಧಾನವಾಗಿ ಹುಳಿಗೆ ಹಾಕಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳಷ್ಟು ಸಮಯದ ನಂತರ ರುಚಿಕರ ಸಂಡಿಗೆ ಹುಳಿ (ಉಂಡೇ ಹುಳಿ) ಸವಿಯಲು ಸಿದ್ಧ

ಸಾಂಪ್ರದಾಯಿಕವಾಗಿ ಸಂಡಿಗೆ ಹುಳಿ (ಉಂಡೇ ಹುಳಿ) ಈ ವೀಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.

ಇನ್ನೇಕೆ ತಡಾ ನೋಡ್ಕೋಳ್ಳಿ,  ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ

ಇಷ್ಟ ಲೇಖನ ಮತ್ತು ವೀಡಿಯೋ ನಿಮಗೆ  ಇಷ್ಟ ಆಗಿದ್ದಲ್ಲಿ Like  ಮಾಡಿ. Share ಮಾಡಿ, Subscribe ಆಗಿ

ಏನಂತೀರೀ?

ಮನದಾಳದ ಮಾತು : ಮನೆಯಲ್ಲಿಯೇ  ಲಭ್ಯವಿರುವಂತಹ ಪದಾರ್ಥಗಳನ್ನೇ ಬಳೆಸಿಕೊಂಡು  ಮಾಡುವ ಸಂಡಿಗೆ ಹುಳಿ (ಉಂಡೇ ಹುಳಿ) ನಿಜವಾಗಿಯೂ ರುಚಿಕರ ಮತ್ತು  ಕೇವಲ  ತೊಗರೀ ಬೇಳೆಯನ್ನು ಮಾತ್ರವೇ ಬಳಸುವುದರಿಂದ   ಆರೋಗ್ಯಕರವೂ ಹೌದು.

ತೊಗರೀ ಉಂಡೆಗಳನ್ನು  ನೇರವಾಗಿ ಕುದಿಯುತ್ತಿರುವ ಹುಳಿಗೆ ಹಾಕದೆ, ಅದೇ ಉಂಡೆಗಳನ್ನು ನುಚ್ಚಿನುಂಡೇ ರೀತಿಯಲ್ಲಿ ಇಡ್ಲಿ ಕುಕ್ಕರ್ ಪಾತ್ರೆಯಲ್ಲಿ  ಹಬೆಯಲ್ಲಿ  ಬೇಯಿಸಿ ನಂತರ ಮಾಡಿಕೊಂಡ ಹುಳಿಯಲ್ಲಿ ಹಾಕಿ ಹತ್ತು ಹದಿನೈದು ನಿಮಿಷಗಳಷ್ಟು ಬೇಯಿಸಿದಲ್ಲಿ  ಉಂಡೆಗಳೂ ಒಡೆಯುವುದಿಲ್ಲ ಮತ್ತು  ಎರಡು ಬಾಯಿ ಬೇಯುವುದರಿಂದ  ಬೇಳೆಯ ಕಟ್ಟು ಚೆನ್ನಾಗಿ ಬಿಟ್ಟು  ಮತ್ತಷ್ಟೂ  ರುಚಿಕರವಾಗಿರುತ್ತದೆ.

#ಅನ್ನಪೂರ್ಣ

#ಸಂಡಿಗೆ ಹುಳಿ

#ಉಂಡೇ ಹುಳಿ

#ಏನಂತೀರೀ YouTube