ಎಲ್ಲರಂತಲ್ಲ ನನ್ನ ಮಕ್ಕಳು

dad2

ಅರೇ! ಇದೇನಿದು ಈ ರೀತಿಯ ಶೀರ್ಷಿಕೆ? ನಿಮ್ಮ ಮಕ್ಕಳು ಅದೇನು ಅಷ್ಟು ದೊಡ್ಡ ಸಾಧಕರೇ? ಎಂದು ಕೇಳಿದರೆ, ನಾನು ಯಾವುದೇ ಮುಚ್ಚುಮರೆ ಇಲ್ಲದೇ ಹೇಳುತ್ತೇನೆ. ಇಲ್ಲಾ ನನ್ನ ಮಕ್ಕಳು ಸರಾಸರಿಯವರು ಮತ್ತು ನಾನು ಸರಾಸರಿ ಮಕ್ಕಳ ತಂದೆ. ನನ್ನ ಮಕ್ಕಳು ಶಾಲೆಯ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವಲ್ಲಿ ಸರಾಸರಿ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಓಹೋ!! ಎಂದು ಹೇಳಿಕೊಳ್ಳುವಂತಿಲ್ಲದ ಸರಾಸರಿಯವರು. ಹಾಗಾದರೆ ಆವರ ವಿಶೇಷತೆಗಳೇನು? ಎಂದು ಕೇಳಿದರೆ ಸದ್ಯಕ್ಕೆ ಸಮಾಜದ ದೃಷ್ಟಿಯಲ್ಲಿ ಮತ್ತು ಶೈಕ್ಷಣಿಕವಾಗಿ ಅವರು ಅಂತಹದ್ದೇನನ್ನೂ ಸಾಧಿಸಿಲ್ಲ ಎನ್ನುತ್ತೇನೆ.

ಯಾರಾದರೂ ನಿಮ್ಮ ಮಕ್ಕಳು ಬಿಡಿ ಅವರು ತುಂಬಾ ಬುದ್ದಿವಂತರು ಬಿಡಿ. ಎಷ್ಟೇ ಆದರೂ ಅವರು ನಿಮ್ಮ ಮಕ್ಕಳಲ್ಲವೇ? ಎಂದು ಹೇಳಿದರೆ, ನಾನು ದಯವಿಟ್ಟು ಕ್ಷಮಿಸಿ, ನೀವು ತಪ್ಪು ತಿಳಿದಿದ್ದೀರಿ. ನಾನು ಮತ್ತು ನನ್ನ ಮಕ್ಕಳು ಅಷ್ಟೇನೂ ಬುದ್ಧಿವಂತರಲ್ಲ. ನಾವೆಲ್ಲರೂ ಶೈಕ್ಷಣಿಕವಾಗಿ ಸರಾಸರಿಯವರು ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯನ್ನೇನು ಪಡುವುದಿಲ್ಲ. ಸುಮ್ಮನೇ ಯಾರನ್ನೋ ಮೆಚ್ಚಿಸುವುದಕ್ಕೋ ಇಲ್ಲವೇ ಪ್ರತಿಷ್ಠೆಗಾಗಿ ಎಲ್ಲರ ಮುಂದೆ ಇಲ್ಲ ಸಲ್ಲದ ಸುಳ್ಳನ್ನು ಹೇಳಿಕೊಂಡು ಅನಗತ್ಯವಾದ ನಿರೀಕ್ಷೆಯನ್ನು ಹುಟ್ಟಿಸಿ ನಂತರ ನಿಜಾಂಶ ತಿಳಿದು ಒಡೆದ ಬೆಲೂನ್ ನಂತೆ ಆಗುವುದು ನನಗೆ ಖಂಡಿತವಾಗಿಯೂ ಇಷ್ಟವಿಲ್ಲ.

dat

ಶೈಕ್ಷಣಿಕವಾಗಿ ನನ್ನ ಮಕ್ಕಳು ಇತರರಂತೆ ಸದಾಕಾಲವೂ 100ಕ್ಕೆ 90ರ ಮೇಲೆ ಅಂಕ ಗಳಿಸದೇ 80-85 ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ ಗಳಿಸಬಹುದು ಆದರೆ ಅವರು ಗಳಿಸಿದ ಅಂಕಗಳ ಹಿಂದೆ ಖಂಡಿತವಾಗಿಯೂ ಆವರ ಪರಿಶ್ರಮವಿರುತ್ತದೆ ಮತ್ತು ಅದು ಉರು ಹೊಡೆದು ಗಳಿಸಿದ ಅಂಕವಾಗಿರದೇ, ವಿಷಯವನ್ನು ಅರ್ಥಮಾಡಿಕೊಂಡು ಗಳಿಸಿದ ಅಂಕವಾಗಿರುತ್ತದೆ. ಆವರ ನಡತೆ, ಸ್ನೇಹಪರ ವ್ಯಕ್ತಿತ್ವ, ದಯೆಯ ನಡವಳಿಕೆ, ಸೌಮ್ಯ ನಡವಳಿಕೆ ಮತ್ತು ಮತ್ತೊಬ್ಬರ ಕಷ್ಟದಲ್ಲಿ ಸಹಾಯ ಮಾಡುವ ಸ್ವಭಾವವನ್ನು ಜನರು ಗಮನಿಸಲು ವಿಫಲರಾಗುತ್ತಾರೆ ಏಕೆಂದರೆ ಆವರಿಗೆ ಅಂಕಗಳಷ್ಟೇ ಮಾನದಂಡವಾಗಿ ಇಳಿದೆಲ್ಲಾ ಅಂಶಗಳು ನಗಣ್ಯವಾಗಿ ನನ್ನ‌ ಮಕ್ಕಳನ್ನು ಸಾಮಾನ್ಯ ಸರಾಸರಿಯ ಮಕ್ಕಳು ಎಂದೇ ಎಲ್ಲರೂ ಹಣೆಪಟ್ಟಿ ಕಟ್ಟಿಬಿಡುತ್ತಾರೆ.

dad3

ಇನ್ನು ಈ ಸಮಾಜದಲ್ಲಿ ಶಾಲೆಗೆ ಸೇರಿಸಿಕೊಳ್ಳುವಾಗ ಸಣ್ಣ ಪುಟ್ಟ ಕಂದಮ್ಮಗಳ ಬುದ್ಧಿ ಮತ್ತೆಗಿಂತಲೂ ಅವರ ಪೋಷಕರು ಕೊಡಬಹುದಾದ ದೇಣಿಗೆಗಳಿಂದ, ವಿದ್ಯಾರ್ಥಿಗಳಾಗಿದ್ದಲ್ಲಿ ಅವರು ಗಳಿಸುವ ಅಂಕಗಳಿಂದ, ಕ್ರೀಡಾಪಟುಗಳಾಗಿದ್ದಲ್ಲಿ ಅವರು ಆಟ ಆಡಿದ್ದಕ್ಕಿಂತಲೂ ಅವರು ಗಳಿಸಿದ ವಿಜಯ/ಪದಕಗಳಿಂದ, ಇನ್ನು ಕೆಲಸ ಮಾಡುವವರು ಅಥವಾ ವ್ಯಾಪಾರಿಗಳಾಗಿದ್ದಲ್ಲಿ, ಅವರು ಕೆಲಸ ಮಾಡುತ್ತಿರುವ ಸಂಸ್ಥೆ ಮತ್ತು ಅವರು ಗಳಿಸುವ ದೊಡ್ಡ ಮೊತ್ತದ ಸಂಬಳಗಳಿಂದ, ಹೆಣ್ಣು ಮಕ್ಕಳಿಗೆ ಗಂಡು ಹುಡುಕುವಾಗ ಹುಡುಗನ ವಿದ್ಯಾರ್ಹತೆ ಮತ್ತು ನಡತೆಗಳಿಗಿಂತಲೂ ಆತನ ಮನೆಯ ಆಸ್ತಿ ಮತ್ತು ಅಂತಸ್ತುಗಳಿಂದ, ಅದೇ ರೀತಿ ಗಂಡು ಮಕ್ಕಳಿಗೆ ಹೆಣ್ಣುಗಳನ್ನು ಹುಡುಕುವಾಗ ಆಕೆಯ ಸ್ವಭಾವ, ಹೊಂದಿಕೊಳ್ಳುವ ಗುಣಗಳಿಗಿಂತಲೂ ಅವರ ಪೋಷಕರು ಹೊಂದಿರಬಹುದಾದ ಆಸ್ತಿ ಮತ್ತು ಅವರು ಕೊಡಬಹುದಾದ ವರದಕ್ಷಿಣೆಯಿಂದ ಅಳೆಯುವ ಕೆಟ್ಟ ಸಂಪ್ರದಾಯ ರೂಢಿಯಲ್ಲಿರುವುದರಿಂದ ಅವರಿಗೆ ಸರಾಸರಿಯವರನ್ನು ಗಣನೆಗೇ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಈ ಎಲ್ಲದರ ನಡುವೆ, ನನ್ನ ಸರಾಸರಿ ಮಕ್ಕಳು ಮೂಕ ಪ್ರೇಕ್ಷಕರಾಗಿ ತಮ್ಮ ಸುತ್ತಮುತ್ತಲಿರುವವರನ್ನು ಪೂರ್ಣ ಹೃದಯದಿಂದ ಹುರಿದುಂಬಿಸುವುದನ್ನು ಗಮನಿಸದೆ ಹೋಗುತ್ತದೆ. ನಮ್ಮ ಮಕ್ಕಳು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡದೇ ಹೋದರೂ ಅವರಿಗೆ ಆ ಕ್ರೀಡೆಯ ಬಗ್ಗೆ ಇರುವ ಸಂಪೂರ್ಣ ಜ್ಞಾನದ ಬಗ್ಗೆ ಇತರರಿಗೆ ಪರಿಜ್ಞಾನವೇ ಇರುವದಿಲ್ಲ. ಅವರು ಇತರರಂತೆ ವೇದಿಕೆಯ ಮೇಲೆ ತಮ್ಮ ಸಂಗೀತದ ಸುಧೆಯನ್ನು ಹರಿಸದೇ ಇರಬಹುದು ಆದರೆ ಅವರಿಗೆ ಸಂಗೀತದ ಮೇಲಿರುವ ಪ್ರೀತಿ ಮತ್ತು ಸ್ವರ ಜ್ಞಾನದ ಬಗ್ಗೆ ಇರುವ ಜ್ಞಾನವನ್ನು ತಿಳಿದುಕೊಳ್ಳುವುದಕ್ಕೆ ಯಾರೂ ಪ್ರಯತ್ನಿಸುವುದೇ ಇಲ್ಲಾ ಏಕೆಂದರೆ ಆ ರೀತಿಯ ಪರೀಕ್ಷಿಸುವವರಿಗೇ ಅದರ ಬಗ್ಗೆ ಹೆಚ್ಚಿನ ಅರಿವಿಲ್ಲದೇ ಬಹುತೇಕರು ಸ್ವಂತಿಕೆ ಇಲ್ಲದೇ ಮತ್ತೊಬ್ಬರನ್ನು ಅನುಸರಿಸುತ್ತಾ ಆಯಾಯಾ ಕ್ಷೇತ್ರಗಳಲ್ಲಿ ಮೇಲೆ ಬರುವುದಷ್ಟೇ ಸಾಧನೆ ಎಂದು ಭಾವಿಸಿರುತ್ತಾರೆ.

dad5

ಇವೆಲ್ಲದರ ಅರಿವಿದ್ದೂ ನಾನೂ ಸಹಾ ಹಲವಾರು ಬಾರಿ ನನ್ನ ಮಕ್ಕಳು ಪರೀಕ್ಷೆಗಳಲ್ಲಿ ಎಲ್ಲರಂತೆ ಅಥವಾ ನನ್ನ ನಿರೀಕ್ಷೆಯಂತೆ ಅಂಕಗಳನ್ನು ಗಳಿಸದೇ ಇದ್ದಾಗ ತಾಳ್ಮೆ ಕಳೆದುಕೊಂಡು ಅವರ ಮೇಲೆ ರೇಗಿರುವ ಅಥವಾ ಕೆಲವೊಮ್ಮೆ ಕೈ ಎತ್ತಿರುವ ಸಂದರ್ಭಗಳೂ ಉಂಟು. ಏಕೆಂದರೆ ನಮಗೆ ಆವರ ಇಚ್ಚೆಗಳೇನು? ಅವರ ಮನಸ್ಸಿನಲ್ಲಿ ಅವರು ಮುಂದೆ ಏನಾಗ ಬಯಸಲು ಇಚ್ಚಿಸುತ್ತಾರೆ? ಎಂದು ತಾಳ್ಮೆಯಿಂದ ಕೇಳುವ ಬದಲು, ನಾವು ಸಾಧಿಸಲು ಆಗದೇ ಹೋದದ್ದನ್ನೋ ಇಲ್ಲವೇ ನಮ್ಮ ಬಂಧು-ಮಿತ್ರರ ಮಕ್ಕಳೋ ಇಲ್ಲವೇ ಅಕ್ಕ ಪಕ್ಕದ ಮನೆಯ ಮಕ್ಕಳು ಸಾಧಿಸಿದ್ದನ್ನು ನಮ್ಮ ಮಕ್ಕಳು ಸಾಧಿಸಲಿ ಎಂಬುವ ಹಪಾಹಪಿ ಇರುತ್ತದೆ. ಹಾಗಾಗಿ ನಾವು ನಮ್ಮ ಮಕ್ಕಳ ಮೇಲೆ ಅನಗತ್ಯವಾಗಿ ಹೇರಿಕೆಯನ್ನು ಹಾಕುತ್ತೇವೆ. ನಮ್ಮಲ್ಲಿ ಬಹುತೇಕರು ನಮ್ಮ ಮಕ್ಕಳ ಇಚ್ಚೆಗಳನ್ನೂ ಗೌರವಿಸಬೇಕು. ಈಗ ಅವರೇನೂ ಸಣ್ಣವರೇನಲ್ಲಾ. ಆವರೂ ವಯಸ್ಕರಾಗಿದ್ದು ಅವರಿಗೂ ಮುಂದೆ ತಾನು ಏನಾಗಬೇಕು ಎಂಬುದರ ಅರಿವಿರುತ್ತದೆ ಎಂಬ ವಿಷಯ ಗೊತ್ತಿದ್ದೂ ಜಾಣ ಮೌನವನ್ನು ತಾಳುತ್ತೇವೆ.

ನಮ್ಮಲ್ಲಿ ಪದವಿ ಎಂದ ತಕ್ಷಣ ಐ.ಐ.ಟಿ, ಐ.ಎ.ಎಮ್. ಡಾಕ್ಟರ್ ಇಂಜೀನಿಯರ್ ಇಲ್ಲವೇ ಕಡೇ ಪಕ್ಷ ಚಾರ್ಟಡ್ ಅಕೌಂಟೆಟ್/ವಕೀಲರಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹಾರುವ ಮೂಲಕ ಪ್ರತಿಭಾಪಲಾಯನ ಮಾಡಿ ಅಲ್ಲಿ ಯಾವುದೋ ವಿದೇಶೀ ಕಂಪನಿಗಳಿಗೆ ಕೆಲಸ ಮಾಡುತ್ತಾ ಅವರು ಕಳುಹಿಸುವ ವಿದೇಶೀ ವಿನಿಮಯದ ಹಣ ಮತ್ತು ಮಕ್ಕಳು ವಿದೇಶದಲ್ಲಿ ಇದ್ದಾರೆ ಎಂದು ಎಲ್ಲರ ಬಳಿ ಹೇಳಿ ಕೊಳ್ಳುವುದೇ ಗೌರವ ಮತ್ತು ಘನತೆ ಎಂದು ಭಾವಿಸಿರುತ್ತೇವೆ. ನಮಗೆ ಮಕ್ಕಳ ಅವಶ್ಯತೆ ಇದ್ದಾಗ ಅವರು ಬಾರದೇ ಹೋದಲ್ಲಿ ಅದೇ ಕೊರತೆಯಲ್ಲಿಯೇ ಖಿನ್ನರಾಗಿ ಹೋದ ಅದೆಷ್ಟೋ ಜನರನ್ನು ನಾವೇ ನೋಡಿದ್ದೇವೆ.

ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

ಲಂಕೆ ಚಿನ್ನದ ನಗರಿಯೇ ಆಗಿದ್ದರೂ ನಮಗೆ ನಮ್ಮ ಜನ್ಮಭೂಮಿಯೇ ಸ್ವರ್ಗಕ್ಕೆ ಸಮಾನ. ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು ಎಂದು ಲಕ್ಷಣನಿಗೆ ಪ್ರಭು ಶ್ರೀರಾಮ ಚಂದ್ರನು ತಿಳುವಳಿಕೆ ಹೇಳಿದಂತೆ ಇಂದು ನಮ್ಮ ಮಕ್ಕಳಿಗೆ ನಮ್ಮ ದೇಶದ ಹಿರಿಮೆ ಗರಿಮೆ ಬಗ್ಗೆ ತಿಳುವಳಿಕೆ ಹೇಳುವ ಮನೋಭಾವನೆಯನ್ನು ಬಹುತೇಕರು ಬೆಳಸಿಕೊಳ್ಳದೇ, ತಮ್ಮ ವಯಕ್ತಿಕ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನೇ ಬಲಿ ಕೊಡುತ್ತಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.

ಲೊಕದ ವ್ಯವಹಾರಕ್ಕೆ ತಕ್ಕಷ್ಟು ವಿದ್ಯೆ ಮತ್ತು ಜೀವನೋಪಾಯಕ್ಕಾಗಿ ತಕ್ಕಷ್ಟು ದುಡಿಮೆಯಿದ್ದು ತಂದೆ ತಾಯಿ ಮತ್ತು ಸಂಸಾರದೊಂದಿಗೆ ತಮ್ಮ ಇಷ್ಟಾನುಸಾರವಾದ ಹವ್ಯಾಸಗಳೊಂದಿಗೆ ನೆಮ್ಮದಿಯಾಗಿ ಎರಡು ಹೊತ್ತು ಊಟ ಮತ್ತು‌ ಕಣ್ತುಂಬ ನಿದ್ದೆ ಮಾಡಿಕೊಂಡು ಹಾಯಾಗಿ ಇರುತ್ತಿದ್ದ ನಮ್ಮ ಪೂರ್ವಜರ ಜೀವನ ಶೈಲಿ ಇಂದಿನವರಿಗೆ ತುಚ್ಚವಾಗಿದೆ.

ಆನಂದವಾಗಿ ಜೀವನ ನಡೆಸಬೇಕೆಂದರೆ ಐಶಾರಾಮ್ಯವಾಗಿಯೇ ಇರಬೇಕು ಎಂದೇನಿಲ್ಲ. ನಿಜ ಹೇಳ ಬೇಕೆಂದರೆ . ನಾಳೆಯ ಬಗ್ಗೆ ಸುದೀರ್ಘವಾಗಿ ಯೋಚಿಸದೇ ದೈನಂದಿನ ಕೂಲೀ ಕೆಲಸ ಮಾಡಿ ಸಂಪಾದನೇ ಮಾಡಿ ಪ್ರತೀದಿನವೂ ಹೊಟ್ಟೆಯ ತುಂಬಾ ಊಟ ಕಣ್ತುಂಬ ನಿದ್ದೇ ಮಾಡುವವರೇ ನಿಜಕ್ಕೂ ಯಾವುದೇ ರೀತಿಯ ಖಾಯಿಲೆಗಳು ಇಲ್ಲದೇ ನೆಮ್ಮದಿಯಾಗಿ ಜೀವನ ನಡೆಸುತ್ತಿರುತ್ತಾರೆ ಎಂಬು ಪರಮ ಸತ್ಯವನ್ನು ಅರಿಯಲಾರದಷ್ಟು ಬೌದ್ಧಿಕ ದಿವಾಳಿತನದಿಂದ, ಅಂಧ ಪಾಶ್ಚಾತ್ಯ ಅನುಕರಣೆಯಲ್ಲೇ ಮುಳುಗಿರುವ ಇಂದಿನ ಯುವ ಜನತೆಯ ಬಗ್ಗೆ ಕನಿಕರ ಮೂಡುತ್ತದೆ.

ಹಾಗಂತ ಯಾವುದೇ ವಿದ್ಯಾ ಬುದ್ಧಿ ಇಲ್ಲದೇ ನನ್ನ ಮಕ್ಕಳು ಕೂಲಿ ಕೆಲಸ ಮಾಡಲಿ ಎಂದೇನೂ ನಾನು ಬಯಸುವುದಿಲ್ಲ. ಅದೇ ರೀತಿ 100 ಕ್ಕೆ 100 ಅಂಕಗಳನ್ನು ಗಳಿಸಿ ನಾಲ್ಕಾರು ಪದವಿಗಳನ್ನು ಪಡೆದು ಸಣ್ಣ ವಯಸ್ಸಿನಲ್ಲಿಯೇ ವಿದೇಶೀ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಾ ಆನಾವಶ್ಯಕವಾದ ಕೆಲಸದ ಒತ್ತಡಕ್ಕೆ ಒಳಗಾಗಿ ಸಣ್ಣ ವಯಸ್ಸಿಗೇ ಹತ್ತಾರು ಖಾಯಿಲೆಗಳಿಗೆ ತುತ್ತಾಗಿ, ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ನೋಡಲು ನಾನು ಖಂಡಿತವಾಗಿಯೂ ಬಯಸುವುದಿಲ್ಲ.

dad4

ನನಗೆ ನನ್ನ ಮಕ್ಕಳು ಸರಾಸರಿ ಮಕ್ಕಳಾಗಿದ್ದರೂ ಪರವಾಗಿಲ್ಲ. ಆದರೆ ಅವರು ತಮ್ಮ ಇಚ್ಚೆಗೆ ಅನುಗುಣವಾಗಿ ವಿದ್ಯೆಯನ್ನು ಪಡೆಯುವ ಜೊತೆ ಸಂಸ್ಕಾರವಂತರಾಗಿ ದೇಶ ಮತ್ತು ಧರ್ಮದ ಬಗ್ಗೆ ಅಭಿಮಾನ, ಉತ್ತಮ ನಡೆ ನುಡಿಗಳೊಂದಿಗೆ ಲೋಕಜ್ಞಾನವನ್ನು ಹೊಂದುವ ಮೂಲಕ, ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ಕೊಡುವ ಹಿಂದೂ ಸ್ಥಾನವು ಎಂದೂ ಮರೆಯದಂತಹ ಭಾರತ ರತ್ನಗಳಾದರೆ ಸಾಕು ಎಂದು ಬಯಸುತ್ತೇನೆ. ನಮ್ಮ ಮುಂದಿನ ಪೀಳಿಗೆಯವರಿಗೆ ಆಸ್ತಿ ಮಾಡುವುದಕ್ಕಿಂತಲೂ ನಾವು ಪ್ರಸ್ತುತ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸುವುದನ್ನು ಇಚ್ಚಿಸುತ್ತೇನೆ.

ಹೀಗಾಗಿಯೇ ನನ್ನ ಮಕ್ಕಳು ಎಲ್ಲರಂತಹವರಲ್ಲ ಮತ್ತು ನಾನೂ ಸಹಾ ಲೋಕದ ದೃಷ್ಟಿಯಲ್ಲಿ ಸಾಧಾರಣ ಸರಾಸರಿ ಮಕ್ಕಳ ತಂದೆ ಎಂದು ಹೇಳಿಕೊಳ್ಳುತ್ತೇನೆ. ಇನ್ನು ನೀವೂ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಾಮಾಜಿಕ ಜಾಲತಾಣದಲ್ಲಿ ಓದಿದ ಲೇಖನವೊಂದರಿಂದ ಸ್ಪೂರ್ತಿ ಪಡೆದ್ದಾಗಿದೆ.

ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು

graduationಅವನೊಬ್ಬ ಅಸಾಧಾರಣ ಹುಡುಗನಾಗಿದ್ದ. ಓದಿನಲ್ಲಂತೂ ಸದಾಕಾಲವೂ ಚುರುಕು. ಗಣಿತ ಮತ್ತು ವಿಜ್ಞಾನದಲ್ಲಂತೂ ಸದಾಕಾಲವೂ 100% ಅಂಕಗಳನ್ನು ಗಳಿಸುತ್ತಿದ್ದ ಕಾರಣ ಸಹಜವಾಗಿ ಐಐಟಿ ಮದ್ರಾಸ್‌ಗೆ ಆಯ್ಕೆಯಾಗಿದ್ದಲ್ಲದೇ ಅಲ್ಲೂ ಸಹಾ ಅತ್ಯುತ್ತಮ ಅಂಕಗಳನ್ನು ಗಳಿಸಿ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ ಒಂದರಲ್ಲಿ ಎಂಬಿಎ ಪದವಿಯ ನಂತರ ಆರಂಕಿಯ ಸಂಬಳದ ಉದ್ಯೋಗವನ್ನು ಗಿಟ್ಟಿಸಿ ಅಲ್ಲಿಯೇ ನೆಲೆಸಿದ.

banglowಕೆಲವು ವರ್ಷಗಳ ನಂತರ ಕರ್ನಾಟಕ್ಕೆ ಬಂದು, ಮನೆಯವರು ನೋಡಿದ ಕನ್ನಡತಿಯನ್ನೇ ವಿವಾಹವಾಗಿ ಅಮೇರಿಕಾದಲ್ಲಿ 5 ಕೊಠಡಿಗಳು ಇರುವಂತಹ ದೊಡ್ಡದಾದ ಮನೆ ಮತ್ತು ಐಷಾರಾಮಿ ಕಾರುಗಳನ್ನು ಕಂತಿಯನಲ್ಲಿ ಖರೀದಿಸಿದ್ದ. ಅವರಿಬ್ಬರ ಸುಖ ದಾಂಪತ್ಯದ ಕುರುಹಾಗಿ ಆರತಿಗೊಬ್ಬಳು ಮಗಳು ಮತ್ತು ಕೀರ್ತಿಗೊಬ್ಬ ಮಗನೊಂದಿಗೆ ಅತ್ಯಂತ ಆರಾಮಾಗಿ ಜೀವಿಸತೊಡಗಿದ. ತಮ್ಮ ಮಗ ಅಮೇರಿಕಾದಲ್ಲಿ ಇದ್ದಾನೆಂದು ಆವರ ಪೋಷಕರು ಎಲ್ಲರ ಮುಂದೇ ಮಗನ ಬುದ್ಧಿ ಮತ್ತೆಯ ಬಗ್ಗೆ ಕೊಂಡಾಡಿಕೊಂಡಿದ್ದರೇ, ಉಳಿದವರು ತಮ್ಮ ಮಕ್ಕಳೂ ಅದೇ ರೀತಿ ಆಗಬೇಕೆಂದು ಇಚ್ಚೆ ಪಟ್ಟಿದ್ದರು.

ಆದರೆ ಇತ್ತೀಚೆಗೆ ಕೋವಿಡ್ ನಿಂದಾಗಿ ಇಡೀ ವಿಶ್ವವೇ ಲಾಕ್ಡೌನ್ ಆದಾಗ ಇದ್ದಕ್ಕಿದ್ದಂತೆಯೇ, ಅದೊಂದು ದಿನ ತನ್ನ ಹೆಂಡತಿ ಮತ್ತು ಮಕ್ಕಳನ್ನು ಗುಂಡಿಕ್ಕಿ ಕೊಂದಿದ್ದಲ್ಲದೇ ತಾನೂ ಸಹಾ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯವನ್ನು ತರಿಸಿತ್ತು. ಅಂತಹ ಸುಂದರವಾದ ಕುಟುಂಬಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದೇನಾಗಿತ್ತು ಎಂದು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಕ್ಲಿನಿಕಲ್ ಸೈಕಾಲಜಿ ಅವರ ಪ್ರಕರಣವನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿದಾಗ ಅದು ಎಲ್ಲರಿಗೂ ಅಚ್ಚರಿಯನ್ನು ತರಿಸಿತ್ತು.

susideಸಂಶೋಧಕರು ಆ ಯುವಕನ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿಯಾಗಿ ಆತನ ಆತ್ಮಹತ್ಯೆ ಹಿಂದಿರಬಹುದಾದ ಕಾರಣವನ್ನು ವಿಚಾರಿಸಿದಾಗ ತಿಳಿದ ಬಂದ ವಿಷಯವೇನೆಂದರೆ, ಕೋವಿಡ್ನಿಂದಾಗಿ ಅಮೆರಿಕದ ಕೆಲವು ಸಾಫ್ಟ್ ವೇರ್ ಕಂಪನಿಗಳು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಬಹುತೇಕ ಕಂಪನಿಯ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿರದ ಕಾರಣ ಸುಮಾರು ತಿಂಗಳುಗಳ ಕಾಲ ಆತನಿಗೆ ಕೆಲಸ ಸಿಗದೇ ಹೋದಾಗ, ಕೈಯಲ್ಲಿರುವ ಹಣವೆಲ್ಲಾ ಖರ್ಚಾಗಿ ಹೋಗಿ ಮನೆ, ಕಾರ್ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಕಟ್ಟಲು ಕಷ್ಟವಾಗುತ್ತಿತ್ತು. ಆರಂಭದಲ್ಲಿ ಒಂದೆರಡು ಕೆಲಸದ ಅವಕಾಶಗಳು ದೊರೆತರೂ, ಆ ಕಂಪನಿಗಳು ಆತನಿಗೆ ಹಿಂದಿನಷ್ಟು ಸಂಬಳ ಕೊಡಲು ಸಾಧ್ಯವಿಲ್ಲ ಎಂದಾಗ ಅಂತಹ ಕೆಲಸಗಳಿಗೆ ಆತ ಸೇರಿಕೊಂಡಿರಲಿಲ್ಲ. ನಂತರ ಆತ ಎಂತಹ ಕೆಲಸವೇ ಆಗಲಿ ಎಷ್ಟೇ ಸಂಬಳವೇ ಆಗಲೀ ಕೆಲಸ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿಗೆ ಬಂದಾಗ ಆತನಿಗೆ ಕೆಲಸವೇ ಸಿಗದೇ ಹೋದಾಗ ಮಾನಸಿಕ ಖಿನ್ನತೆಗೆ ಓಳಗಾಗಿ ಹೋದ. ಇದೇ ಸಮಯ್ದಲ್ಲಿ ಕಾರ್ ಮತ್ತು ಮನೆಯ ಕಂತನ್ನು ಕಟ್ಟಿಲ್ಲದ ಕಾರಣ ಎರಡನ್ನೂ ಮುಟ್ಟುಗೋಲು ಹಾಕಿಕೊಂಡಾಗ ಆಕಾಶವೇ ಕಳಚಿ ಬಿತ್ತು ಎಂದು ಕೊಂಡು ಆತ್ಮಹತ್ಯೆಯೇ ಅಂತಿಮ ಪರಿಹಾರ ಎಂದು ನಿರ್ಧರಿಸಿ, ಮೊದಲು ತನ್ನ ಹೆಂಡತಿ ನಂತರ ಮುದ್ದಾದ ಅಮಾಯಕ ಮಕ್ಕಳನ್ನು ಗುಂಡಿಕ್ಕಿ ಕೊಂದು ನಂತರ ಸ್ವತಃ ಗುಂಡನ್ನು ಹಾರಿಸಿಕೊಂಡು ಮೃತಪಟ್ಟಿದ್ದ.

ಆತ ಶೈಕ್ಷಣಿಕವಾಗಿ ನಿಜಕ್ಕೂ ಅಪ್ರತಿಮನಿದ್ದರೂ, ಪರಿಸ್ಥಿತಿಯ ವೈಫಲ್ಯಗಳನ್ನು ನಿಭಾಯಿಸಲು ಅವನಿಗೆ ತಿಳಿದಿರಲಿಲ್ಲ. ಶಿಕ್ಷಣ ಪದ್ದತಿಯಲ್ಲಿಯೂ ಸಹಾ ಆತನಿಗೆ ಜೀವನದ ಕಲೆಯ ಬಗ್ಗೆ ಯಾವುದೇ ತರಬೇತಿ ನೀಡಲಾಗಿರಲಿಲ್ಲ. ಕೇವಲ ಹೇಳಿಕೊಟ್ಟಿದ್ದನ್ನು ಉರು ಹೊಡೆದದ್ದನ್ನು ಪರೀಕ್ಶೆಯಲ್ಲಿ ಕಕ್ಕಿ ಅದರಿಂದ ಉತ್ತಮ ಅಂಕಗಳನ್ನು ಗಳಿಸಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಐದಾರಂಕಿಯ ಸಂಬಳದ ಕೆಲವನ್ನು ಗಿಟ್ಟಿಸಿಕೊಂಡು ಕಂತಿನಲ್ಲಿ ಕಾರು ಬಂಗಲೆಗಳನ್ನು ಕೊಂಡು ಕೊಂಡು ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡುವುದೇ ಜೀವನ ಎಂದು ಕೊಂಡಿದ್ದ ಕಾರಣ ಒಂದು ಸುಂದರವಾದ ಕುಟುಂಬ ನಾಶವಾಗಬೇಕಾಯಿತು.

ಹಾಗಾದರೇ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದಾಗಿತ್ತು ಎಂದು ಯೋಚಿಸಿದಾಗ ತಿಳಿದು ಬಂದ ಅಂಶಗಳೆಂದರೆ,

 • ಪ್ರತಿದಿನ ಮುಂಜಾನೆ ಉದಯಿಸುವ ಸೂರ್ಯ, ಮಧ್ಯಾಹ್ನದ ವೇಳೆ ಅತ್ಯಂತ ಪ್ರಕಾಶಮಾನವಾಗಿ ಪ್ರಜ್ವಲಿಸಿ, ಸಂಜೆಯ ಹೊತ್ತಿಗೆ ನಿಧಾನವಾಗಿ ಮುಳುಗುವಂತೆಯೇ ನಮ್ಮ ಜೀವನ ಎಂಬುದರ ಪರಿವೆ ಎಲ್ಲರಿಗೂ ಇರಬೇಕು. ಜೀವನದಲ್ಲಿ ಎಷ್ಟು ಕ್ಷಿಪ್ರಗತಿಯಲ್ಲಿ ಗಳಿಸುತ್ತೇವೆಯೋ, ಅದೇ ವೇಗದಲ್ಲಿಯೇ ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕಳೆದುಕೊಳ್ಳುತ್ತೇವೆ ಎಂಬ ಪರಿಜ್ಞಾನ ನಮಗಿರಬೇಕು. ಜಗತ್ತಿನ ಆರ್ಥಿಕ ಪರಿಸ್ಥಿತಿ ಯಾವಾಗಲೂ ಒಂದೇ ರೀತಿಯಾಗಿರದೇ ಅದು ಏಳು ಬೀಳುಗಳನ್ನುಕಾಣುತ್ತಲೇ ಇರುತ್ತದೆ ಅದನ್ನು ಎದುರಿಸುವಂತಹ ಮಾನಸಿಕ ಧೈರ್ಯವನ್ನು ಹೊಂದಿರುವುದು ಅತ್ಯಾವಶ್ಯಕ.
 • ಯಶಸ್ಸನ್ನು ಅನುಭವಿಸಲು ಹೇಗೆ ಸಿದ್ಧರಿರುತ್ತೇವೆಯೋ ಹಾಗೆಯೇ, ವೈಫಲ್ಯಗಳನ್ನು ನಿಭಾಯಿಸಲು ಸೂಕ್ತವಾದ ರೀತಿಯಲ್ಲಿ ತಯಾರಾಗಿರುವುದೋ ಇಲ್ಲವೇ ತರಬೇತಿ ಪಡೆದಿರುವುದು ಉತ್ತಮ ಯಶಸ್ಸಿನ ಭಾಗವಾಗಿದೆ.
 • ಸಾಲ ಮಾಡಿಯಾದರೂ ತುಪ್ಪಾ ತಿನ್ನು ಎನ್ನುವ ನಮ್ಮ ಹಿಂದಿನ ನಾಣ್ಣುಡಿ ಉಪಯೋಗಕ್ಕೆ ಬಾರದೇ ಕೇವಲ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತು ವಾಸ್ತವಕ್ಕೆ ಹತ್ತಿರವಾಗಿದೆ.
  ಹಾಗಾಗಿ ಪ್ರತೀ ಪೋಷಕರೂ  ತಮ್ಮ ಮಕ್ಕಳಿಗೆ ಉರು ಹೊಡೆದು ಅಂಕಗಳಿಸುವುದೇ ಜೀವನದ ಧ್ಯೇಯ ಎನ್ನುವುದನ್ನು ಕಲಿಸದೇ, ಇಂತಹ ಸಂಧರ್ಭಗಳಲ್ಲಿ ಬದುಕಿನ ವೈಫಲ್ಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನೂ ತಮ್ಮ ಮಕ್ಕಳಿಗೆ ಕಲಿಸಿದಾಗಲೇ ಜೀವನದ ಮೌಲ್ಯಗಳು ಹೆಚ್ಚುತ್ತವೆ.
 • ಉನ್ನತ ಮಟ್ಟದ ವಿಜ್ಞಾನ ಮತ್ತು ಗಣಿತವನ್ನು ಕಲಿಯುವಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಾಯಕಾರಿಯಾದರೂ, ಅದರ ಜೊತೆಗೆ ಸಾಮಾಜಿಕ ಪರಿಜ್ಞಾನ ಮತ್ತು ಇತಿಹಾಸವನ್ನು ಅಭ್ಯಾಸ ಮಾಡುವುದರಿಂದ ಪ್ರತಿ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಮತ್ತು ನಮ್ಮ ಹಿಂದಿನವರು ಅದನ್ನು ಹೇಗೆ ನಿಭಾಯಿಸಿದ್ದರು ಎಂಬುದು ತಿಳಿಯುತ್ತದೆ.
 • ಕೇವಲ ಹಣಕ್ಕಾಗಿ ಕೆಲಸ ಮಾಡುವುದನ್ನು ಕಲಿಸುವ ಬದಲು ಹಣದ ಮೌಲ್ಯ ಮತ್ತು ಕಡಿಮೆ ಹಣವಿದ್ದಾಗಲೂ ಹೇಗೆ ಜೀವನವನ್ನು ನಿಭಾಯಿಸಬಹುದು ಎಂಬುದನ್ನು ಕಲಿಸುವುದು ಇಂದಿನ್ಗ ಪರಿಸ್ಥಿತಿಗೆ ಅತ್ಯುತ್ತಮವಾಗಿದೆ.
 • panchaಇದನ್ನೇ ನಮ್ಮ ಹಿಂದಿನವರು ಪಂಚತಂತ್ರ ಕಥೆಗಳು ಮತ್ತು ಪುರಾಣ ಪುರುಷರ ಜೀವನ ಚರಿತ್ರೆಯ ಮೂಲಕ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದರು.
 • ನಮ್ಮ ಮನೆಯಲ್ಲಿ ಅಮ್ಮಂದಿರು ತಮಗೆ ಸಿಕ್ಕ ಹಣದಲ್ಲಿ ಅಷ್ಟೋ ಇಷ್ಟು ಹಣವನ್ನು ಸಾಸಿವೇ, ಜೀರಿಗೆ ಡಭ್ಬದಲ್ಲಿ ಜತನದಿಂದ ಎತ್ತಿಟ್ಟು ಅವಶ್ಯಕತೆ ಬಂದಾಗ ಉಪಯೋಗಿಸಿಕೊಳ್ಳುತ್ತಿದ್ದರು.
 • ಕೈಯ್ಯಲ್ಲಿ ಹಣವಿದ್ದಾಗ ಮಜಾ ಉಡಾಯಿಸದೇ, ಭೂಮಿ, ಬೆಳ್ಖಿ ,  ಬಂಗಾರಗಳಂತಹ ಸ್ಥಿರಾಸ್ತಿಗಳ ಮೇಲೆ ವಿನಿಯೋಗಿಸಿ ಅವಶ್ಯಕತೆ ಇದ್ದಾಗ ಅದನ್ನು ಮಾರಿಯಾದರೂ ಜೀವಿಸಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದ್ದರು.

ದುರಾದೃಷ್ಟವಷಾತ್ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಇಂದಿನ ಯುವಜನಾಂಗಕ್ಕೆ ನಮ್ಮ ಹಿರಿಯರ ಹಾಕಿಕೊಟ್ಟ ಜೀವನ ಶೈಲಿಯು ಒಗ್ಗಿ ಬರದೇ, ಪಾಶ್ಚಿಮಾತ್ಯದ ದಿಢೀರ್ ಜೀವನಕ್ಕೆ ಮಾರು ಹೋಗಿರುವ ಕಾರಣದಿಂದಾಗಿಯೇ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ ಎಂದರೂ ತಪ್ಪಾಗಲಾರದು.

ಹಿಂದೆಲ್ಲಾ 8 ವರ್ಷಗಳ ವರೆವಿಗೂ ಅಮ್ಮನ ಸೆರಗಿನಂಚಿನಲ್ಲಿಯೇ ಹಾಲು ಕುಡಿಯುತ್ತಿದ ಮಗು ನಂತರ 16 ವರ್ಷಗಳ ಕಾಲ ವಿಧ್ಯಾಭ್ಯಾಸ ಪಡೆದು ಉದ್ಯೋಗವನ್ನು ಗಿಟ್ಟಿಸಿ ಒಂದೆರಡು ವರ್ಷಗಳ ನಂತರ ಮದುವೆಯಾಗಿ ಮಕ್ಕಳಾಗಿ ಮಕ್ಕಳ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿಯೇ ಮನೆ ಮಠವನ್ನು ಕಟ್ಟಿಸಿಕೊಂಡು 50-60ರ ಆಸುಪಾಸಿನಲ್ಲಿ ಮಕ್ಕಳ ಮದುವೆ ಮಾಡಿ ನಿವೃತ್ತರಾಗ್ಗಿ ನೆಮ್ಮಯಿಂದ ಮೊಮ್ಮಕ್ಕಳೊಂದಿಗೆ ರಾಮಾ ಕೃಷ್ಣಾ ಗೋವಿಂದಾ ಎಂದು ಜೀವನ ನಡೆಸುತ್ತಿದ್ದರು.

ಆದರೆ ಇಂದು ಎಲ್ಲವೂ ದಿಢೀರ್ ಪ್ರಪಂಚ. ಇವತ್ತು ಹಾಕಿದ ಬೀಜ ಮಾರನೇ ದಿನವೇ ಮೊಳಕೆಯೊಡೆದು ಒಂದು ವಾರದೊಳಗೇ ಫಲ ನೀಡಬೇಕೆಂದು ಬಯಸುತ್ತಿರುವುದೇ ಅಚ್ಚರಿ ಮೂಡಿಸುತ್ತದೆ ಇಂದು 25-30 ವರ್ಷಗಳಿಗೇ ಉನ್ನತ ಮಟ್ಟದ ಹುದ್ದೆಯನ್ನು ಪಡೆದು ಲಕ್ಷಾಂತರ ಹಣವನ್ನು ಸಂಪಾದಿಸಿ ಕೆಲಸದ ಒತ್ತಡಗಳನ್ನು ನಿಭಾಯಿಸಲಗದೇ30ಕ್ಕೆಲ್ಲಾ ತಲೆಯ ಕೂದಲೆಲ್ಲಾ ಉದುರಿಕೊಂಡು ಅಧಿಕ ರಕ್ತದೊತ್ತಡ, ಮದುಮೇಹ ಮತ್ತು ಹೃದಯಸಂಬಂಧಿತ ಖಾಯಿಲೆಗಳಿಗೆ ತುತ್ತಾಗಿ ೪೦ಕ್ಕೆಲ್ಲಾ ಇಹಲೋಕ ತ್ಯಜಿಸುವಷ್ಟರ ಮಟ್ಟಿಗೆ ಬಂದಿರುವುದು ಇಜಕ್ಕೂ ದುಃಖಕರವಾಗಿದೆ.

ಯಶಸ್ಸು ನಮಗೆ ಕ್ಷಣಿಕ ಸುಖಃವನ್ನು ಕೊಡುತ್ತದಾದರೂ, ವೈಫಲ್ಯವು ಬದುಕಿನ ಪಾಠವನ್ನು ಕಲಿಸುತ್ತದೆ. ಹಾಗಾಗಿ ಯಶಸ್ಸು ಗಳಿಸಿದಾಗ ಹಿಗ್ಗದೇ, ವೈಫಲ್ಯ ಬಂದಾಗ ಕುಗ್ಗದ ರೀತಿಯಲ್ಲಿ ಸಮಚಿತ್ತದಲ್ಲಿ ಜೀವನ ನಡೆಸುವತ್ತ ಹರಿಸೋಣ ನಮ್ಮ ಚಿತ್ತ

ಏನಂತೀರೀ?
ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ

ತೋಳ ಬಂತು ತೋಳ

ksrtc2ಸಾರಿಗೆ ಸಂಪರ್ಕ ಜನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರನ್ನು ಕರೆದೊಯ್ಯಲು ಮತ್ತು ವಸ್ತುಗಳನ್ನು ಸಾಗಿಸಲು ಸಾರಿಗೆ ವಾಹನಗಳ ಅವಶ್ಯಕತೆ ಅತ್ಯಗತ್ಯವಾಗಿ ಇದನ್ನು ಮನಗಂಡ ಸ್ವಾತ್ರಂತ್ರ್ಯಾ ನಂತರ  ಸರ್ಕಾರವೇ ನೇರವಾಗಿ ಸಾರಿಗೆ  ಸಂಸ್ಜೆಗಳನ್ನು ಅರಂಭಿಸಿ ಸುಮಾರು ವರ್ಷಗಳ ವರೆಗೂ ಅದನ್ನು ನಡೆಸಿಕೊಂಡು ಹೋಗಿತ್ತು. ಈ  ಸಾರಿಗೆ ಸಂಸ್ಥೆಯ ನೌಕರಿಗಲ್ಲರಿಗೂ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನೇ ನೀಡುತ್ತಿದ್ದರೂ. ಈ ನೌಕರ  ದುರಾಡಳಿತ ಮತ್ತು ಕದ್ದು ತಿನ್ನುವಿಕೆಯಿಂದಾಗಿ ಪ್ರತೀವರ್ಷವೂ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವಾಗಿ ಈ ಸಂಸ್ಥೆಗಳು ಬಿಳೀ ಆನೆಯನ್ನು ಪೋಷಿಸುವ ಹಾಗೆ ಆದ ಕಾರಣ ಸರ್ಕಾರ  ಈ ಸಂಸ್ಥೆಯನ್ನು  ಆಯಾಯಾ ಭಾಗಗಳಾಗಿ ವಿಂಗಡಿಸಿ ನಿಗಮ ಮಂಡಳಿಯನ್ನು ನಿರ್ಮಿಸಿ ಸರ್ಕಾರದ ನೇರ ಆಡಳಿತದಿಂದ ಹೊರಗಿರಿಸಿ  ಅವುಗಳಿಗೆ ಸ್ವಾಯುತ್ತತೆಯನ್ನು ಕೊಟ್ಟು ಅವುಗಳನ್ನು ನೋಡಿಕೊಳ್ಳಲು  ರಾಜ್ಯದ ಸಾರಿಗೆ ಸಚಿವ ಮತ್ತು ಕೆಲವು IAS ಅಧಿಕಾರಿಗಳನ್ನು ನೇಮಿಸಲಾಯಿತು. ಎಲ್ಲದ್ದಕ್ಕಿಂತಲೂ ಮುಖ್ಯವೆಂದರೆ ಈ ಎಲ್ಲಾ ನೌಕರರೂ ಇನ್ನು ಮುಂದೆ  ಅಯಾಯಾ ನಿಮಗದ ನೌಕರರಾಗಿರುತ್ತಾರೆಯೇ ಹೊರತು ಸರ್ಕಾರೀ ನೌಕರರಲ್ಲ ಎಂಬುದನ್ನು ಸ್ಪಷ್ಟ ಪಡಿಸಿತ್ತು.

ಹೈಸ್ಕೂಲು ದಾಟದ ಡ್ರೈವರುಗಳು ಮತ್ತು ಎಸ್.ಎಸ್.ಎಲ್.ಸಿ ಪಾಸ್ ಮಾಡಿ ಮುಂದೆ ಓದಲಾಗದಂತಹವರು ಹೇಗಾದರೂ  ಕೆಲಸ ಸಿಕ್ಕರೆ ಸಾಕು ಎಂದು ಡ್ರೈವರ್ ಮತ್ತು ಕಂಡೆಕ್ಟರ್ಗಳಾಗಿ ಕೆಲಸಕ್ಕೆ ಸೇರಿಕೊಂಡರು. ಕೆಲಸಕ್ಕೆ ಸೇರುವಾಗ ಇದು ಸರ್ಕಾರಿ ಉದ್ಯೋಗವಲ್ಲ ಎಂದೇ ಸ್ಪಷ್ಟ ಪಡಿಸಿಯಾಗಿತ್ತಲ್ಲದೇ ಅವರವರ ವಿದ್ಯಾರ್ಹತೆಗೆ ತಕ್ಕಂತೆ ಸಂಬಳವನ್ನು ನಿಗಧಿಪಡಿಸಲಗಿತ್ತು.  ಅದೆಷ್ಟೋ ನಿರೋದ್ಯೋಗಿಗಳು ಕೆಲಸ ಸಿಗುತ್ತದಲ್ಲಾ ಎಂದು ಯಾರ್ಯಾರಿಗೂ ಎಷ್ಟೆಷ್ಟೋ ಲಂಚವನ್ನು ನೀಡಿ ಈ ಕೆಲಸವನ್ನು ಗಿಟ್ಟಿಸಿಕೊಂಡು ಕೆಲಸವನ್ನು ಮಾಡಿಕೊಂಡರು.

ಅಲ್ಲಿಯವರೆಗೂ ಕೆಲಸ ಸಿಕ್ಕರೆ ಸಾಕು ಎನ್ನುತಿದ್ದವರು ಈಗ ನೆಮ್ಮದಿಯ ಕೆಲಸ ಮತ್ತು ಅದಕ್ಕೆ ತಕ್ಕಂತೆ ಕೈತುಂಬಾ ಸಂಬಳ ಸಿಗುತ್ತಿದ್ದರೂ ಅತೀ ಆಸೆಯಿಂದ ಪ್ರತಿಯೊಬ್ಬರೂ ಮೇಲು ಸಂಪಾದನೆಗೆ ಇಳಿದಿದ್ದೇ ಸಾರಿಗೆ ಸಂಸ್ಥೆಯ ಅವನತಿಗೆ ಕಾರಣವಾಯಿತು

 • ಕಂಡಕ್ಟರ್ ಟಿಕೆಟ್ ನೀಡದೇ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಆ ಹಣವನ್ನು  ಜೋಬಿಗೆ ಇಳಿಸತೊಡಗಿದ. ಇನ್ನು ತನ್ನ ಬಳಿ ಚಿಲ್ಲರೆ ಇದ್ದರೂ ಟಿಕೆಟ್ ಹಿಂದೆ ಚಿಲ್ಲರೆ ಬರೆದುಕೊಟ್ಟು ಪ್ರಯಾಣದ ಭರದಲ್ಲಿ ಪ್ರಯಾಣಿಕರು ಚಿಲ್ಲರೆ ತೆಗೆದುಕೊಳ್ಳುವುದನ್ನು ಮರೆತು ಹೋದರೆ ಆ ದುಡ್ಡೂ ಕಂಡೆಕ್ಟರ್ ಜೋಬಿಗೆ ಇಳಿಯತೊಡಗಿತು. ಪ್ರತೀ ಪ್ರಯಾಣಿಕರೂ ಇಂತಿಷ್ಟು ಸಮಾನುಗಳನ್ನು ತೆಗೆದುಕೊಂಡು ಹೋಗಬಹುದು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಕಂಡಕ್ಟರ್ ಮನಸೋ ಇಚ್ಚೆ ಪ್ರಯಾಣಿಕರನ್ನು ಲೂಟಿ ಮಾಡ ತೊಡಗಿದ್ದರು.
 • ಈ ರೀತಿ ಕಂಡಕ್ಟರ್ ಮಾಡಿದರೆ ತಾನೇನು ಕಡಿಮೆ ಎಂದು ಡ್ರೈವರ್ ಸಹಾ ಮಾರ್ಗದ ಮದ್ಯದಲ್ಲಿರುವ ಹೋಟೆಲ್ ಚೆನ್ನಾಗಿಲ್ಲದಿದ್ದರೂ  ಆತ ತನ್ಗೆ ಬಿಟ್ಟಿ ಊಟದ ಜೊತೆಗ್ಗೆ ಸ್ವಲ್ಪ ಹಣ ಕೊಡ್ತಾನೆ ಅಂತ ಎಂಜಿಲು ಕಾಸಿಗೆ ಬೇಕಾಬಿಟ್ಟಿಯ ಕಡೆ ಬಸ್ ನಿಲ್ಲಿಸಿದರು. ಡ್ರೈವರ್ ಸೀಟಿನ ಕೆಳಗೆ ಲಗ್ಗೇಜುಗಳನ್ನು ಹಾಕಿಕೊಂಡು ನಿರ್ಧಿಷ್ಟ ಸ್ಥಳದಲ್ಲಿ ನಿರ್ಧಿಷ್ಟ ವ್ಯಕ್ತಿಗಳಿಗೆ ತಲುಪಿಸುವ ಮೂಲಕ ಅನಧಿಕೃತವಾಗಿ ಮತ್ತು ಅಕ್ರಮವಾಗಿ ಹಣ ಸಂಪಾಡಿಸತೊಡಗಿದರು. ಇನ್ನೂ ಎಷ್ಟೋ ಜನರು ಹೇಳುವಂತೆ ಖಾಸಗಿಯವರಿಗೆ ಡೀಸೆಲ್ ಮಾರಿಕೊಂಡು ಹಣ ಸಂಪಾದನೆ ಮಾಡಿದವರೆಷ್ಟೋ?
 • ಇನ್ನು ಬಸ್ ಡಿಪೋಗಳಲ್ಲಿರುವ ಸಿಬ್ಬಂಧಿಗಳು  ಬಸ್ಸುಗಳ ಬಿಡಿ ಭಾಗಗಳನ್ನು ಕದ್ದೊಯ್ದು ಮಾರಾಟ ಮಾಡುತ್ತಿದ್ದದ್ದಲ್ಲದೇ ಹೊಸಾ ಹೊಸಾ ಟೈರುಗಳನ್ನು ಬೇರೆಯವರಿಗೆ ಮಾರಿ ಅದು ಇತರರಿಗೆ ಗೊತ್ತಾಗಬಾರದೆಂದು ಆಗ್ಗಾಗೆ ಟೈರ್ ಗೋದಾಮುಗಳಲ್ಲಿ ಹತ್ತಾರು ಹಳೇ ಟೈರಗಳಿಗೆ ತಾವೇ ಬೆಂಕಿ ಇಟ್ಟು ಲೆಕ್ಕವನ್ನು ಚುಕ್ತಾ ಮಾಡತೊಡಗಿದರು.
 • ನೌಕರರೇ ಹೀಗೆ ಮಾಡಿದರೆ ಇನ್ನು ಅಧಿಕಾರಿ ವರ್ಗ ಮತ್ತು ಸಾರಿಗೆ ಸಚಿವರು ಮತ್ತು ಅವರ ಸಿಬ್ಬಂಧಿಗಳು ಹೊಸಾ ಬಸ್ಸುಗಳ ಖರೀದಿಯಲ್ಲಿ ಕೊಟ್ಯಾಂತರ ರೂಪಾಯಿಗಳ ಲಂಚವನ್ನು ಪಡೆದಿರುವುದು ಈಗ ಇತಿಹಾಸ.

conductಒಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ದೋಚುತ್ತಲೇ ಹೊದರೇ ಹೊರತು  ಯಾರೂ ಸಹಾ ಸಂಸ್ಥೆಯನ್ನು ಲಾಭದತ್ತ ನಡೆಸಿಕೊಂಡು ಹೋಗುವತ್ತ ಹರಿಸಲೇ ಇಲ್ಲ ತಮ್ಮ ಚಿತ್ತ. ಸರ್ಕಾರವೂ ಸಹಾ ಸಾರ್ವಜನಿಕರ ಸೇವೆಗೆಂದು ಇರುವ ಸಂಸ್ಥೆಗಳಲ್ಲಿ ಲಾಭ ನಿರೀಕ್ಷಿಸಲಾಗದು ಎಂದು ಆಗ್ಗಿಂದ್ದಾಗೆ ಹಣವನ್ನು ಕೊಡುತ್ತಲೇ ಹೋದ ಪರಿಣಾಮ ಈ ನೌಕರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಮತ್ತು ಗಿಂಬಳ ಸಿಗತೊಡಗಿತ್ತು.   ಇಷ್ಟರ ಮಧ್ಯೆ ಇಡೀ ಪ್ರಪಂಚಾದ್ಯಂತ ಕರೋನಾ ಮಾಹಾಮಾರಿ ವಕ್ಕರಿಸಿ ಲಾಕ್ ಡೌನ್ ಆದಾಗ, ಮೂರ್ನಾಲ್ಕು ತಿಂಗಳುಗಳ ಕಾಲ ಯಾವುದೇ ಸಾರಿಗೆ ನಿಗಮದ ವಾಹನಗಳು ರಸ್ತೆಗೇ ಇಳಿಯದಿದ್ದರೂ ಮಾನವೀಯತೆಯ ದೃಷ್ಟಿಯಿಂದ ನೌಕರರಿಗೆ ಸಂಬಳವನ್ನು ನೀಡಿತ್ತು.

kodiಇಂತಹ ಕಷ್ಟದ ಸಮಯದಲ್ಲಿಯೂ ತಮ್ಮ ಕೈ ಹಿಡಿದ ಸರ್ಕಾರಕ್ಕೆ ಕೃತಜ್ಞರಾಗ ಬೇಕಿದ್ದ ಸಾರಿಗೇ ನೌಕರರಿಗೆ ಅದೆಲ್ಲಿಂದಲೋ ಮುಷ್ಕರ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿರುವ, ರೈತರಿಂದಲೂ ತಿರಸ್ಕರಿಸಲ್ಪಟ್ಟಿರುವ ಕೋಡೀಹಳ್ಳಿ ಚಂದ್ರಶೇಖರ್ ಗಂಟು ಬಿದ್ದ,   ಸರಿಯಾಗಿ ಹೈಸ್ಕೂಲ್ ಸಹಾ ದಾಟಿರದ ಸಾರಿಗೆ ನೌಕರಿಗೆ ಅಲ್ಲಿನೋಡಿ ನಿಮ್ಮ IAS ಅಧಿಕಾರಿಗಳು ಮತ್ತು ನಿಮ್ಮ ಸಾರಿಗೆ ಸಚಿವರು ಲಕ್ಷಾಂತರ ಹಣ ಸಂಬಳ ಮತ್ತು ಸವಲತ್ತು ರೂಪದಲ್ಲಿಪಡೆಯುತ್ತಿದ್ದಾರೆ ನಿಮಗೆ ಮಾತ್ರ ಕಡಿಮೆ ಸಂಬಳ ಕೊಡುತ್ತಿದ್ದಾರೆ,  ಮುಷ್ಕರ ನಡೆಸುವ ಮೂಲಕ ನಿಮಗೆಲ್ಲರಿಗೂ IAS, IPS ಸಂಬಳ ಕೋಡಿಸುತ್ತೇನೆ, ಸರ್ಕಾರಿ ಉದ್ಯೋಗಿಗಳಿಗೆ ಕೊಡುವ ಸೌಲಭ್ಯಗಳನ್ನೇ ನಿಮಗೂ ಕೊಡಿಸುತ್ತೇನೆ ಎಂದು ತಲೆ ಸವರಿ ಅನಿರ್ಧಿಷ್ಟಾವಧಿಯ ಕಾಲ ಮುಷ್ಕರ ನಡೆಸಿಯೇ ಬಿಟ್ಟ,

ಕರೋನಾದಿಂದಾಗಿ ಎಲ್ಲವೂ ಸ್ತಭ್ಧವಾಗಿದ್ದ ಕಾರಣ ಸರ್ಕಾರದ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿರಲಿಲ್ಲ, ಅದ್ಯಾರೋ ಕ್ಷಣಕ್ಕೊಂದು ಬಣ್ಣ ಬದಲಾಯಿಸೋ ಊಸರವಳ್ಳಿ ಗಂಜಿ ಗಿರಾಕಿ ತನ್ನ ರಾಜಕೀಯ ತೆವಲುಗಳಿಗಾಗಿ ಇವರನ್ನು ಎತ್ತಿಕಟ್ಟಿದರೆ ಅವರ ಮಾತನ್ನು ನಂಬಿ ಸಾರಿಗೇ ನೌಕರರೂ ಮುಷ್ಕರ ನಡೆಸಿದ್ದಲ್ಲದೇ ಸರ್ಕಾರ ಕರೆದ ಸಂಧಾನ ಸಭೆಗಳಿಗೂ ಬರಲು ಒಪ್ಪದೇ ತಮ್ಮ ಮೂಗಿನ ನೇರಕ್ಕೇ ಎಲ್ಲವೂ ನಡೆಯಬೇಕು ಎಂಬ ಹಠ ಬೇರೆ, ಕಡೆಗೆ ಅತ್ತೂ ಕರೆದು, ಆಳೆದು ತೂಗಿ ಅವರ ಎಂಟು ಬೇಡಿಕೆಗಳಲ್ಲಿ ಏಳು ಬೇಡಿಕೆಗಳನ್ನು ಈಡೇರಿಸಿ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಮುಷ್ಕರವನ್ನು ನಿಲ್ಲಿಸುವುದರಲ್ಲಿ ಸರ್ಕಾರವು ಸಫಲವಾಯಿತು.

ಹೇಗೋ ಮುಷ್ಕರ ನಿಂತಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾದ ಮೇಲೆ ಸಾರಿಗೆ ನೌಕರರ ಸಂಬಳ ಹೆಚ್ಚಿಸುವ ಬಗ್ಗೆ ಯೋಚಿಸೋಣ ಎಂದುಕೊಂಡಿದ್ದಾಗಲೇ, ಮತ್ತೊಮ್ಮೆ ಹೊಟ್ಟೆ ತುಂಬಿದ ಗಂಜೀ ಗಿರಾಕಿ ಕೋಚಂ ನೇತೃತ್ವದಲ್ಲಿ ಒಂದು ದಿವಸದ ಮುಷ್ಕರ ಮಾಡ್ತೀವಿ ಎಂದವರು ಈಗ ಅನಿರ್ಧಿಷ್ಟಾವಧಿ ಮುಷ್ಕರ ಮಾಡತೊಡಗಿದ್ದಾರೆ. ಹೀಗೆ ತಿಂಗಳಿಗೊಮ್ಮೆ ಮುಷ್ಕರ ನಡೆಸುತ್ತಾ ಹೋದರೆ, ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕ್ಕೊಂಡು ಮಲಗೋದು ಸಾರಿಗೆ ಸಂಸ್ಥೆಯ ನೌಕರರೇ ಹೋರತು ಕೋಚಂ ಅಲ್ಲಾ ಎನ್ನುವುದರ ಅರಿವಿಲ್ಲದಾಗಿದೆ.

ಜೀವನವೇ ಒಂದು ಸಾಮರಸ್ಯ. ಇಲ್ಲಿ ತಗ್ಗಿ ಬಗ್ಗಿ ಹೊಂದಿಕೊಂಡು ಹೋಗಬೇಕು. ಆತ ಇವತ್ತು ಸಾರಿಗೆ ಮುಷ್ಕರ ನಡೆಸ್ತಾನೆ ನಾಳೆ ರೈತರನ್ನು ಎತ್ತಿ ಕಡ್ತಾನೆ. ಮತ್ತೊಂದು ದಿನ ಶಿವರಾಮಕಾರಂತ ಬಡಾವಣೆಯ ಜನರನ್ನು ಬಿಡಿಎ ವಿರುದ್ದ ಛೂ ಬಿಡುತ್ತಾ, ಸದ್ದಿಲ್ಲದೇ ಐಶಾರಾಮಿ ಕಾರಿನಲ್ಲಿ ವೈಭವೋಪೇತ ಹೋಟೆಲ್ಲುಗಳು ಮತ್ತು ಬಂಗ್ಲೆಗಳಲ್ಲಿ ಧಿಮ್ಮಾಲೇ ರಂಗ ಅಂತ ಇರ್ತಾನೆ. ಇಂತಹ ಮುಷ್ಕರಗಳಿಂದ ಅವನ ಕುಟುಂಬ ಏನೂ ಹಸಿದುಕೊಂಡು ಬದುಕಲ್ಲ

private_busಇಂತಹ  ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ನೌಕರರೂ ಈಗಾಗಲೇ ಸವಿವರವಾಗಿ ತಿಳಿಸಿದ ಎಲ್ಲಾ ಕೆಟ್ಟ ಚಾಳಿಗಳನ್ನೂ ಬಿಟ್ಟು, ನಿಯತ್ತಾಗಿ ದುಡಿದು ಸಾರಿಗೆ ನಿಗಮ ಮಂಡಲಗಳನ್ನು ಲಾಭಕ್ಕೆ ತಂದು ನಂತರ ಸಂಬಳ  ಅಧಿಕಾರಯುತವಾಗಿ ಸಂಬಳ  ಹೆಚ್ಚು ಕೇಳಿದರೆ ಅದಕ್ಕೂ ಒಂದು ಘನತೆ ಮತ್ತು ಮರ್ಯಾದೆ ಇರುತ್ತದೆ. ಅದು ಬಿಟ್ಟು, ಕೆಲಸಕ್ಕೆ ಕರೀಬೇಡಿ ಸಂಬಳ ಮಾತ್ರಾ ಮರೀ ಬೇಡಿ ಅಂದ್ರೇ, ಇಂತಹವರ  ಸಹವಾಸವೇ ಬೇಡ ಅಂತ ಸಾರಿಗೆ ನಿಗಮವನ್ನೇ ಬರ್ಕಸ್ತು ಮಾಡಿ ಎಲ್ಲವನ್ನೂ ಖಾಸಗೀಕರಣ ಮಾಡಿ ಸರ್ಕಾರ ಕೈ ತೊಳ್ಕೋಂಡ್ರೇ ನಷ್ಟ ಆಗೋದು ನೌಕರಿಗೇ ಹೊರತು, ಇವರನ್ನು ಎತ್ತಿಕಟ್ಟುತ್ತಿರುವ ಗಂಜಿ ಗಿರಾಕಿಗಲ್ಲ.

canaraಈಗಲೂ ಸಹಾ ದಕ್ಷಿಣಕನ್ನಡದಲ್ಲಿ ಅನೇಕ ದಶಕಗಳಿಂದಲೂ ಖಾಸಗೀ ಸಂಸ್ಥೆಗಳೇ ಅತ್ಯಂತ ಸುಗಮವಾಗಿ ಸಾರಿಗೆ ಸೌಲಭ್ಯಗಳನ್ನು ನಡೆಸಿಕೊಂಡು ಹೋಗುತ್ತಿದೆ. ಇಂದಿಗೂ ಸಹಾ  ವಿಜಯ ಸಂಕೇಶ್ವರ ಅವರ ವಿ.ಆರ್.ಎಲ್ ಮತ್ತು ಅನೇಕ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗಿ ಜನಮನ್ನಣೆ ಗಳಿಸಿರುವುದು ಕಣ್ಣ ಮುಂದೆಯೇ ಇದೆ. ಯಾರೋ ಹೋಟ್ಟೇ ತುಂಬಿದವನ ರಾಜಕೀಯ ತೆವಲಿಗೆ ತಿಂಗಳಿಗೊಮ್ಮೆ ಈ ರೀತಿ ಬಂದ್ ನಡೆಸುತ್ತಾ ಹೋದಲ್ಲಿ  ಸಾರಿಗೆಯನ್ನು ಖಾಸಗೀಕರಣಗೊಳಿಸಿ ಶಾಶ್ವತವಾಗಿ ಸಾರಿಗೆ ಸಂಸ್ಥೆಯನ್ನು ಮುಚ್ಚಬೇಕಾದ ದಿನಗಳು ದೂರವಿಲ್ಲ.

ಹೀಗೆ ಹೇಳುತ್ತಿದ್ದಂತೆ ನಿಮಗೇನ್ರೀ ಗೊತ್ತು ನೌಕರರ ಕಷ್ಟ?. ಎಸಿ. ರೂಮಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಗೀಚುವವರಿಗೆ ಏನು ಗೊತ್ತು ನೌಕರರ ಸಂಕಷ್ಟ ಎಂದು ಹೇಳುವವರಿಗೇನೂ ಕಡಿಮೆ ಇಲ್ಲ.  ನಿಜ ಹೇಳಬೇಕೆಂದರೆ ಈ ಕೋವಿಡ್ ನಿಂದಾಗಿ ಕೆಲಸ ಕಳೆದು ಕೊಂಡವರಲ್ಲಿ ನಾನೂ ಒಬ್ಬ. ಕಳೆದ ಒಂದು ವರ್ಷದಿಂದ ಸಂಬಳ ಇಲ್ಲ. ಹೇಗೋ ಕಷ್ಟು ಪಟ್ಟು ಉಳಿಸಿದ ಹಣದಲ್ಲಿ ಹಿತಮಿತವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದೇನೆಯೇ ಹೊರತು ಇವರಂತೆ ಬೀದಿಗೆ ಬಂದು ಸರ್ಕಾರದ ವಿರುದ್ದ ದಂಗೆ ಎದ್ದಿಲ್ಲ. ಅದರ ಬದಲು ಸದ್ದಿಲ್ಲದೆ ಹೊಸಾ ‌ಕೆಲಸ ಹುಡುಕುವ ಪ್ರಯತ್ನದಲ್ಲಿ ನಿರತನಾಗಿದ್ದೇನೆ ಮತ್ತು ಇನ್ನು ಕೆಲವೇ ಕಲವು ದಿನಗಳಲ್ಲಿ ಕೆಲಸ ಸಿಗುವುದಂಬ ಆಶಾವಾದಿಯಾಗಿದ್ದೇನೆ. ಇವರಂತೆ  ಸರ್ಕಾರದ ಎಂಜಿಲು ಕಾಸಿಗೆ ಆಸೆ ಪಡುತ್ತಿಲ್ಲ.

ಖಾಸಗಿ ಸಂಸ್ಥೆಯಲ್ಲಿ ದುಡಿಯುವವರಿಗೆ, ಸಂಬಳ ಸಾಲದೇ ಹೋದಲ್ಲಿ ಇರುವ ಕೆಲಸ ಬಿಟ್ಟು ಯಾರು ಹೆಚ್ಚಿನ ಸಂಬಳ ಕೊಡ್ತಾರೋ ಅಂತಹ ಕಡೆ ಬೇರೆ ಕೆಲಸ‌ ಹುಡುಕಿಕೊಂಡು ಹೋಗುತ್ತಾರೆಯೇ ಹೊರತು ಈ ರೀತಿ ಬಂದ್ ಮಾಡುತ್ತಾ ಸಾರ್ವಜನಿಕರಿಗೆ‌ ತೊಂದರೆ ಕೊಡುವುದಿಲ್ಲ. ಈ‌ ಸಾರಿಗೆ ನಿಗಮಗಳೂ‌ ಸಹಾ ಖಾಸಗೀ ಸಂಸ್ಥೆಗಳೇ ಹೊರತು ಸರ್ಕಾರೀ ಸಂಸ್ಥೆಯಲ್ಲ.  ನಾನೂ ಸಹಾ ಖಾಸಗಿ ಕಂಪನಿಯ ಉದ್ಯೋಗಿ ಅವರು ಸಹಾ ಖಾಸಗಿ ಕಂಪನಿಯ ಉದ್ಯೋಗಿಗಳೇ? ನಮಗೊಂದು ನಿಯಮ ಅವರಿಗೊಂದು ನಿಯಮವೇಕೇ?

WhatsApp Image 2021-04-08 at 5.53.54 PMಸರ್ಕಾರಿ ನೌಕರರಿಗೆ ಇಲ್ಲದಿರುವ ಹೆಚ್ಚುವರಿ ಸೌಲಭ್ಯಗಳಾಗಿ ಬೋನಸ್, ಉಚಿತ ಬಸ್ ಪಾಸ್, ವರ್ಷಕ್ಕೊಮ್ಮೆ ಕುಟುಂಬ ಸಮೇತ ಪ್ರಯಾಣಿಸಲು ಉಚಿತ ಪಾಸ್, ನೌಕರರ ಮಕ್ಕಳು ಶಾಲೆ, ಕಾಲೇಜುಗಳಿಗೆ ತೆರಳಲು ಉಚಿತ ಪಾ‌ಸ್, ಸಾರಿಗೆ ಆದಾಯದಲ್ಲಿ ಶೇ 3 ರಷ್ಟು ಪ್ರೋತ್ಸಾಹ ಧನ, ಮನೆ ಕಟ್ಟಲು, ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆಯುವ ₹5 ಲಕ್ಷ ಸಾಲಕ್ಕೆ ಶೇ 4 ರಷ್ಟು ಬಡ್ಡಿ ಸಹಾಯ ಧನ, ವಾರ್ಷಿಕ ಗರಿಷ್ಠ ₹20 ಸಾವಿರ ಬಡ್ಡಿ ಸಹಾಯಧನ ಮತ್ತು ಸೇವಾವಧಿಯಲ್ಲಿ ₹1 ಲಕ್ಷ ಬಡ್ಡಿ ಸಹಾಯಧನ ನೀಡಲಾಗುತ್ತಿದೆ.

ಇಷ್ಟೆಲ್ಲಾ ಸೌಲಭ್ಯಗಳನ್ನು ಕೊಟ್ಟಿದ್ದರೂ  ಅದಕ್ಕಿಂತಲೂ ಹೆಚ್ಚಿನ ಸಂಬಳ ಕೇಳುವುದು ನಿಜಕ್ಕೂ ದುರಾಸೆಯಲ್ಲವೇ? ಅವರವರ ವಿದ್ಯಾರ್ಹತೆ ಮತ್ತು ಕೆಲಸಕ್ಕೆ ಅನುಗುಣವಾಗಿ ಸಂಬಳ ಕೊಡುತ್ತಾರೆಯೇ ಹೊರತು ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆಲ್ಲಾ ಐವತ್ತು ಸಾವಿರ ಮತ್ತು ಲಕ್ಷ ರೂಪಾಯಿಗಳ ಸಂಬಳ ಕೊಡಲು ಹೇಗೆ ಸಾಧ್ಯ ಎನ್ನುವುದರ ಅರಿವಿಲ್ಲವೇ?

ತಮ್ಮ ರಾಜಕೀಯ ತೆವಲಿಗೆ  ಸಾರಿಗೆ ನೌಕರರ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ಗಂಜಿ ಗಿರಾಕಿಗೆ ಇದೆಲ್ಲಾ ಅರ್ಥವಾಗದೇ ಇರುವುದೇ ನಿಜವಾದ ಸಮಸ್ಯೆಯಾಗಿದೆ. ಇರುವುದರಲ್ಲಿ ಹಂಚಿಕೊಂಡು ತಿನ್ನಬೇಕೇ ಹೊರತು, ಯಾರು ಬೇಕಾದರೂ ಹಾಳಾಗಲೀ  ನನಗೆ ಮಾತ್ರ ಸಿಂಹಪಾಲು ಇರಲಿ  ಎನ್ನುವುದು ಉದ್ದಟತನದ ಪರಮಾವಧಿಯೇ ಅಲ್ಲವೇ?‌

ಏನಂತೀರೀ?

ನಿಮ್ಮವನೇ ಉಮಾಸುತ.