ನಾವೆಲ್ಲರೂ ಒಂದೇ..

Gm2

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ ಅಗ್ಗಾಗ್ಗೇ ಕೆಲ ದಿನಗಳ ಮಟ್ಟಿಗೆ ಒಬ್ಬೊಬ್ಬರ ಮನೆಗಳಲ್ಲಿ ಅವರಿಗೆ ಇಷ್ಟ ಬಂದಷ್ಟು ದಿನಗಳು (ಇಷ್ಟ ಅನ್ನುವುದಕ್ಕಿಂತ ಕಷ್ಟ ಎನಿಸುವಷ್ಟು) ಇದ್ದು ಮತ್ತೊಬ್ಬರ ಮನೆಗೆ ಹೋಗುತ್ತಿದ್ದರು.

ಅಜ್ಜಿಯ ಮಕ್ಕಳು ಒಮ್ಮೆ ಕಾಶೀ ಯಾತ್ರೇ, ಎರಡು ಬಾರಿ ರಾಮೇಶ್ವರದ ಯಾತ್ರೆ, ಮೊಮ್ಮಗಳ ಮನೆಗೆಂದು ಮುಂಬೈಯ್ಯಿಗಲ್ಲದೇ, ನಾಡಿನ ಎಲ್ಲಾ ತೀರ್ಥಕ್ಷೇತ್ರಗಳಿಗೂ ಅದೆಷ್ಟೋ ಬಾರಿ ಕರೆದುಕೊಂಡು ಹೋಗಿದ್ದರು. ಅಜ್ಜಿ ಬರ್ತೇನೇ ಅಂದರೆ ಸಾಕು. ಕಾರಿನಲ್ಲಿ ಹೋಗಿ ಅಜ್ಜಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೊಗುವ ಮೊಮ್ಮಕ್ಕಳಿದ್ದರು. ಒಟ್ಟಿನಲ್ಲಿ ಜೀವನವಿಡೀ ಕಷ್ಟದಲ್ಲೇ ಬೆಂದಿದ್ದ ನಮ್ಮಜ್ಜಿಗೆ ಕಡೆಯ ದಿನಗಳಲ್ಲಿ ಎಲ್ಲಾ ರೀತಿಯ ಐಶಾರಾಮೀ ಸೌಲಭ್ಯಗಳೂ ಕೈಗೆಟುಕಿತ್ತು. ಇಷ್ಟೆಲ್ಲಾ ಇದ್ದರೂ ನಮ್ಮಜ್ಜಿಗೆ ಅದೋಕೋ ಏನೋ ಅಸಮಧಾನ. ತಾನು ಇನ್ನೂ ಏನನ್ನೂ ನೋಡಿಲ್ಲವಲ್ಲಾ, ತಾನೂ ಇನ್ನೂ ಏನನ್ನು ಅನುಭವಿಸಿಲ್ಲ ಎಂಬ ಕೊರತೆ.

Gm

ಅದೊಮ್ಮೆ ನಮ್ಮ ಮನೆಗೆ ಬಂದವರೊಬ್ಬರು ಲೋಕಾರೂಢಿಯಾಗಿ, ಅಜ್ಜೀ, ಮೊನ್ನೆ ನಮ್ಮೂರಿಗೆ ಹೋಗಿದ್ದಾಗ ಅಲ್ಲೇ ಹತ್ತಿರದ ತೀರ್ಥಕ್ಷೇತ್ರಕ್ಕೆ ಹೋಗಿದ್ದೆವು. ಆ ಪುಣ್ಯಕ್ಷೇತ್ರ ಏನು ಚೆನ್ನಾಗಿದೇ ಅಂತೀರೀ? ಅಲ್ಲಿಯ ದೇವರನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದ ತಕ್ಷಣವೇ, ನಮ್ಮಜ್ಜಿಯ ಎಂದಿನ ಡೈಲಾಗ್ ನೆನಪಾಗಿ ,ಅಯ್ಯೋ ನಮಗೆಲ್ಲಿ ಬರಬೇಕು ಅಂತಹ ಪುಣ್ಯ. ನಾನೂ ಇದ್ದೀನಿ ಭೂಮಿಗೆ ಭಾರ ಊಟಕ್ಕೆ ದಂಡ ಅಂತಾ ಹೇಳ್ಬಿಡೋದೇ? ಅರೇ ಇಷ್ಟು ಚೆನ್ನಾಗಿ ನೋಡಿ ಕೊಂಡರೂ ಬಂದವರ ಮುಂದೆ ಈ ರೀತಿಯ ಅಕ್ಷೇಪಣೆ ಮಾತುಗಳನ್ನು ಆಡಿ ನಮ್ಮಲ್ಲರನ್ನು ಮುಜುಗರಕ್ಕೆ ಈಡು ಮಾಡುತ್ತಾರಲ್ಲಾ? ಎಂದು ನಮ್ಮಮ್ಮ ಸಿಡಿಮಿಡಿಗೊಂಡಿದ್ದರು.

ತಮ್ಮ ಅಮ್ಮನ ಗುಣವನ್ನರಿತಿದ್ದ ನಮ್ಮ ತಂದೆಯವರು ಈ ರೀತಿಯ ಸಿಡಿಮಿಡಿಗಳಿಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರೇನೋ ಅವರಮ್ಮನ್ನನ್ನು ಸಹಿಸಿಕೊಳ್ಳುತ್ತಿದ್ದರು ಆದರೆ ನನಗೆ ನಮ್ಮಮ್ಮನ ಸಂಕಟವನ್ನು ಸಹಿಸಲಾಗದೇ ಇದಕ್ಕೆಲ್ಲಾ ಒಂದು ಪರಿಹಾರವನ್ನು ಕಂಡು ಹಿಡಿಯಲೇ ಬೇಕೆಂದು ಮುಂದಿನ ಬಾರಿ ಮತ್ತೊಬ್ಬರೊಂದಿಗೆ ಇದೇ ರೀತಿಯ ಸಂಭಾಷಣೆ ನಡೆಯುತ್ತಿದ್ದಾಗ ಆವರ ಮಾತಿನ ಮಧ್ಯೆಯಲ್ಲಿ ಮೂಗು ತೂರಿಸಿ, ಬಂದವನ್ನು ನೀವು ಕಾಶೀಗೆ ಹೋಗಿದ್ದೀರಾ? ರಾಮೇಶ್ವರ ಎಷ್ಟು ಬಾರಿ ನೋಡಿದ್ದೀರಿ? ಶೃಂಗೇರಿ ಜಗದ್ಗುರುಗಳ ಆಶೀರ್ವಾದ ನಿಮಗೆ ಎಷ್ಟು ಬಾರೀ ಆಗಿದೇ? ಕಂಚಿ ಮಹಾ ಗುರುಗಳನ್ನು ಪೇಜಾವರ ಶ್ರೀಗಳನ್ನು ಎಂದಿಗಾದರು ನಿಮ್ಮ ಮನೆಗೆ ಕರೆಸಿದ್ದೀರಾ? ಎಂದು ಕೇಳಿದಾಗ, ಅವರು ಅಯ್ಯೋ ನಮ್ಮ ಯಜಮಾನರ ಸಂಬಳದಲ್ಲಿ ಸಂಸಾರ ನಡೆಸೋದೇ ಕಷ್ಟ ಆಗಿತ್ತು. ಈಗ ಮಕ್ಕಳು ಈಗ ಕೆಲಸಕ್ಕೆ ಸೇರಿಕೊಂಡ ಮೇಲೆ ಸ್ವಲ್ಪ ಸುಧಾರಿಸಿ ಎಷ್ಟೋ ವರ್ಷಗಳ ನಂತರ ನಮ್ಮೂರಿಗೆ ಹೊಗಿ ಬಂದ್ವೀ, ಹಾಗೇ ಪಕ್ಕದ ಊರಿಗೂ ಹೊಗಿದ್ವೀ ಅಷ್ಟೇ ಎಂದಾಗಾ, ನಾನು ನಮ್ಮಜ್ಜಿಯ ಕಡೆ ನೋಡಿ, ಸುಮ್ಮನೇ ಮಾತನಾಡದೇ, ಏನಜ್ಜೀ? ಏನಂತೀರೀ? ಎಂದು ಹುಬ್ಬೇರಿಸಿದಾಗ, ನಮ್ಮಜ್ಜಿ ಏನೂ ಆಗೇ ಇಲ್ವೇನೋ ಎಂಬಂತೆ ಮೂತಿ ತಿರುಗಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ನಮ್ಮ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ದೇಶವಾಸಿಗಳ ಮನಸ್ಥಿತಿ ಇದಕ್ಕಿಂತಲೂ ಭಿನ್ನವಾಗಿ ಏನೂ ಇಲ್ಲಾ. ಧರ್ಮಾಧಾರಿತವಾಗಿ ದೇಶ ವಿಭಜನೆ ಆದರೂ, ಯಾರದ್ದೋ ತೆವಲಿಗೆ ಜಾತ್ಯಾತೀತ ರಾಷ್ಟ್ರವಾಗಿಯೇ ಉಳಿದು ಹೋದ ಈ ದೇಶದಲ್ಲಿಯೇ ಹುಟ್ಟಿ ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದು ಕೊಂಡು ಪ್ರತಿ ದಿನವೂ, ಈ ದೇಶವನ್ನೇ ಬೈದ್ಯಾಡಿಕೊಂಡು ಅಡ್ಡಾಡುತ್ತಾ, ತಮ್ಮ ಗಂಜಿಯನ್ನು ಬೇಯಿಸಿಕೊಳ್ಳುತ್ತಿರುವ ಮಂದಿಯನ್ನು ನೋಡುವಾಗ ಸಾಮಾಜಿಕ ಜಾಲತಾಣದಲ್ಲಿ ಓದಿದ ಈ ಪ್ರಸಂಗ ನೆನಪಿಗೆ ಬರುತ್ತದೆ.

ವ್ಯಕ್ತಿಯೊಬ್ಬ ಪಕ್ಕದೂರಿಗೆ ಹೋಗುವ ಸಲುವಾಗಿ ನದಿಯನ್ನು ದಾಟಲು ತನ್ನ ನಾಯಿಯೊಂದಿಗೆ ದೋಣಿಯನ್ನು ಏರಿದ. ಆ ನಾಯಿಗೆ ದೋಣಿಯ ಪ್ರಯಾಣ ಮೊದಲ ಬಾರಿಯಾಗಿದ್ದ ಪರಿಣಾಮ ಇದ್ದಕ್ಕಿದ್ದಂತೆಯೇ ಚಡಪಡಿಕೆಯುಂಟಾಗಿ ಅತ್ತಿಂದಿತ್ತ, ಇತ್ತಿಂದಿತ್ತ ಓಡಾಡುತ್ತಾ ಎಲ್ಲರಿಗೂ ತೊಂದರೆ ಕೊಡುತ್ತಿದ್ದದ್ದಲ್ಲದೇ, ದೋಣಿಯನ್ನೂ ಡೋಲಾಯಮಾನ ಸ್ಥಿತಿಗೆ ತಳ್ಳಿತ್ತು.

dog2

ದೋಣಿಯನ್ನು ನಡೆಸುತಿದ್ದವರು ದಯವಿಟ್ಟು ನಾಯಿಯನ್ನು ಒಂದು ಕಡೆ ಹಿಡಿದಿಟ್ಟುಕೊಳ್ಳದೇ ಹೋದಲ್ಲಿ ದೋಣಿಯೇ ಮುಳುಗಿ ಎಲ್ಲರಿಗೂ ತೊಂದರೆ ಆಗಬಹುದು ಎಂದು ಎಚ್ಚರಿಸಿದಾಗ ಆ ನಾಯಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಿದಾಗ, ಅದು ಭಯದಿಂದಲೋ ಇಲ್ಲವೇ ತನ್ನ ಬುದ್ದಿಯ ಅನುಗುಣವಾಗಿ ಸುಖಾ ಸುಮ್ಮನೇ ಬೊಗಳತೊಡಗಿದಾಗ ಎಲ್ಲರಿಗೂ ಅದರಿಂದ ತೊಂದರೆಯಾಗ ತೊಡಗಿತು. ನಾಯಿಯನ್ನು ಸುಮ್ಮನಾಗಿಸಲು ಅದರ ಮಾಲಿಕ ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತಿತ್ತು.

dog1

ಇದೆಲ್ಲವನ್ನು ಗಮನಿಸುತ್ತಿದ್ದ ಹಿರಿಯರೊಬ್ಬರು, ನೀವು ಅನುಮತಿಸಿದರೆ, ನಾನು ಈ ನಾಯಿಯನ್ನು ನಿಮ್ಮ ಮನೆಯಲ್ಲಿದ್ದಂತೆಯೇ ಶಾಂತವಾಗಿರಿಸಬಲ್ಲೇ ಎಂದಾಗ ಮಾಲಿಕನಿಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿ ಕೂಡಲೇ ಒಪ್ಪಿಕೊಂಡರು. ಮಾಲಿಕರರು ಒಪ್ಪಿಕೊಂಡ ಕೂಡಲೇ ಆ ಹಿರಿಯರು ನಾಯಿಯನ್ನು ಎತ್ತಿ ನದಿಗೆ ಎಸೆದು ಬಿಟ್ಟರು. ಅಚಾನಕ್ಕಾಗಿ ಈ ರೀತಿ ನೀರಿಗೆ ಬಿದ್ದ ನಾಯಿ ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಈಜಲಾರಂಭಿಸಿತು, ಸ್ವಲ್ಪ ಹೊತ್ತು ಈಜಿದ ನಂತರ ನಾಯಿಯ ಶಕ್ತಿಯೆಲ್ಲವೂ ಕ್ಷೀಣಿಸತೊಡಗಿದಾಗ ಹತಾಶೆಯಿಂದ ತಾನು ನೀರಿನಲ್ಲಿ ಮುಳುಗಿ ಸಾಯುತ್ತಿದ್ದೇನೆ ಎಂಬ ಅನುಭವ ಆಗ ತೊಡಗಿದಾಗ ಜೀವ ಉಳಿಸಿಕೊಳ್ಳುವುದಕ್ಕಾಗಿ ಹೆಣಗಾಡುತ್ತಿದ್ದನ್ನು ಗಮನಿಸಿದ ಆ ಹಿರಿಯರು ನಾಯಿಯತ್ತ ತಾವು ಹೊದ್ದಿಕೊಂಡಿದ್ದ ಶಲ್ಯವನ್ನು ಎಸೆದರು. ಬದುಕಿದೆಯಾ ಬಡ ಜೀವ ಎಂದು ಆ ಶಲ್ಯವನ್ನು ನಾಯಿ ಹಿಡಿದುಕೊಂಡಾಗ ನಿಧಾನವಾಗಿ ತಮ್ಮ ಶಲ್ಯವನ್ನು ಎಳೆದುಕೊಂಡು ನಾಯಿಯನ್ನು ಮತ್ತೆ ದೋಣಿಯೊಳಗೆ ಎಳೆದು ಕೊಂಡರು ಆ ಹಿರಿಯರು. ನೀರಿನಿಂದ ದೋಣಿಗೆ ಬಂದ ಕೂಡಲೇ ತನ್ನನ್ನು ಬದುಕಿಸಿದ ಆ ಹಿರಿಯರಿಗೆ ಪ್ರೀತಿಯಿಂದ ಅವರ ಪಾದಗಳನ್ನು ನೆಕ್ಕಿ ನೆಮ್ಮದಿಯಿಂದ ತನ್ನ ಮಾಲಿಕನ ಬಳಿ ಬಂದು ತೆಪ್ಪಗೆ ಬಂದು ಕುಳಿತಿದ್ದಲ್ಲದೇ, ಇಡೀ ಪ್ರಯಾಣದ ಪೂರ್ತಿ ಕಮಿಕ್ ಕಿಮಿಕ್ ಎನ್ನಲಿಲ್ಲ.

ನಾಯಿಯ ಬದಲಾದ ನಡವಳಿಕೆಯನ್ನು ಕಂಡ ಮಾಲಿಕರು ಮತ್ತು ಇತರೇ ಪ್ರಯಾಣಿಕರು ಆಶ್ಚರ್ಯಚರಾಗಿ, ದೋಣಿ ಹತ್ತಿದಾಗ ಅಷ್ಟೆಲ್ಲಾ ಹಾರಾಡುತ್ತಿದ್ದ ನಾಯಿ, ನೀರಿನಿಂದ ಹೊರಬಂದ ಕೂಡಲೇ ಶಾಂತವಾಗಿ ಹೇಗಾಯಿತು? ಎಂದು ಕೇಳಿದಾಗ, ಆ ಹಿರಿಯರು ಸಣ್ಣಗೆ ನಕ್ಕು ನಾನು ಆ ನಾಯಿಗೆ ದೋಣಿಯ ನಿಜವಾದ ಶಕ್ತಿಯ ಪರಿಚಯವನ್ನು ಮಾಡಿ ಕೊಟ್ಟೆನಷ್ಟೇ. ದೋಣಿಯಲ್ಲಿದ್ದಾಗ ಅದರ ಅವಶ್ಯಕತೆಯನ್ನು ಅರಿಯದೇ ಸುಮ್ಮನೆ ಹಾರಾಡುವ ಮೂಲಕ ಉಳಿದೆವರೆಲ್ಲರ ಜೀವಕ್ಕೆ ಕುತ್ತು ತರುತ್ತಿದ್ದೇನೆ ಎಂಬ ಅರಿವು ಆ ನಾಯಿಗೆ ಇರಲಿಲ್ಲ. ಯಾವಾಗಾ ನಾನು ಅದನ್ನು ನೀರಿಗೆ ಎಸೆದೆನೋ, ಅಗ ಅದಕ್ಕೆ ತನ್ನ ಜೀವದ ಬಗ್ಗೆ ಅರಿವಾಗಿದ್ದಲ್ಲದೇ, ಅದಕ್ಕೆ ನೀರಿನ ಶಕ್ತಿ ಮತ್ತು ದೋಣಿಯ ಉಪಯುಕ್ತತೆಯ ಅರ್ಥವಾಗಿ ಜೀವ ಉಳಿಸಿಕೊಂಡರೆ ಸಾಕು ಎನ್ನುವಂತಾದಾಗ ಅದನ್ನು ನೀರಿನಿಂದ ಎಳೆದು ದೋಣಿಗೆ ತಂದೆ ಹಾಗಾಗಿ ಅದು ಸುಮ್ಮನಾಯಿತು ಎಂದರು.

ಮೊದಲನೆಯ ಪ್ರಸಂಗದಲ್ಲಿನ ನಮ್ಮ ಅಜ್ಜಿಯವರನ್ನು ಖಂಡಿತವಾಗಿಯೂ ಎರಡನೇ ಪ್ರಸಂಗದಲ್ಲಿನ ನಾಯಿಗೆ ಹೋಲಿಸುತ್ತಿಲ್ಲವಾದರೂ, ಇಬ್ಬರ ಮನೋಭಾವನೆಯೂ ಸದ್ಯದ ಕೆಲವು ಭಾರತೀಯರ ಮನೋಭಾವನೆಗಳು ಒಂದೇ ಎಂದು ತೋರಿಸುವ ಸಲುವಾಗಿ ಈ ಎರಡೂ ಉದಾಹರಣೆಗಳನ್ನು ಹೇಳಬೇಕಾಯಿತು. ನಿಜ ಹೇಳಬೇಕೆಂದರೆ ಅವರೆಲ್ಲರಿಗೂ ತಮ್ಮ ದೇಶ/ಕುಟುಂಬ ಮತ್ತು ತಾವು ಅನುಭವಿಸುತ್ತಿರುವ ಸೌಲಭ್ಯಗಳ ಅರಿವಿರದೇ ಸದಾ ಕಾಲವೂ ಅಕ್ಕ ಪಕ್ಕದ ಮನೆಯ ಮತ್ತು ದೇಶಗಳಲ್ಲಿ ನೆಮ್ಮದಿಯಾಗಿದ್ದಾರೆ ಎಂದೇ ಭಾವಿಸಿರುತ್ತಾರೆ. ಅವರಾರಿಗೂ ಅಕ್ಕ ಪಕ್ಕದ ಕುಟುಂಬ, ರಾಜ್ಯ, ದೇಶಗಳ ಅರಿವೇ ಇರುವುದಿಲ್ಲ. ಎಲ್ಲವನ್ನೂ ಯಾರಿಂದಲೂ ಕೇಳಿಯೋ ಇಲ್ಲವೇ ಪೂರ್ವಾಗ್ರಹ ಪೀಡಿತ ಮಾಧ್ಯಮಗಳಲ್ಲಿ ಪ್ರಸಾರವಾಗುವ ತುಣುಕುಗಳನ್ನು ನೋಡಿಯೋ ಇಲ್ಲವೇ ವೃತ್ತಪತ್ರಿಕೆಗಳ ಮೂಲಕ ಅರ್ಧಂಬರ್ಧ ಕೇಳಿ, ನೋಡೀ ಓದಿ ನಮ್ಮ ಕುಟುಂಬ/ರಾಜ್ಯ/ದೇಶ ಸರಿ ಇಲ್ಲ, ಇಲ್ಲ ಬದುಕುವುದಕ್ಕೇ ಅಸಾಧ್ಯ ಎಂದು ಬೊಬ್ಬಿರಿಯುತ್ತಿರುತ್ತಾರೆ. ಹೀಗೆಯೇ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ ಖ್ಯಾ(ಕುಖ್ಯಾ)ತ ನಟನ ಮಡದಿಯೊಬ್ಬಳು ಈಗ ಅತನಿಂದಲೇ ವಿಚ್ಚೇದನ ಪಡೆದು ಇದೇ ದೇಶದಲ್ಲೇ ವಾಸಿಸಬೇಕಾದ ಅನಿವಾರ್ಯ ಪರಿಸ್ಥಿತಿಯೂ ನಮ್ಮ ಕಣ್ಣಮುಂದಿದೆ.

ind4

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರು, ಇಲ್ಲಿಯ ಭಾಷೇ, ಇಲ್ಲಿಯ ಸಂಸ್ಕಾರ ಮತ್ತು ಸಂಸೃತಿ ತಮ್ಮದ್ದಲ್ಲಾ ಎಂದು ಹೇಳುವವರನ್ನು ಎರಡನೆಯ ಪ್ರಸಂಗದಲ್ಲಿ ನೀರಿಗೆ ಎಸೆದಂತೆ, ನೆರೆಯ ಪಾಪೀಸ್ಥಾನ, ಬಾಂಗ್ಲಾದೇಶ, ಆಫ್ಗಾನೀಸ್ಥಾನ, ಅಷ್ಟೇ ಏಕೆ ಬರ್ಮಾ ಇಲ್ಲವೇ ಶ್ರೀಲಂಕ ಅದೂ ಬೇಡವೆಂದರೆ, ಉತ್ತರ ಕೊರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಸಿರಿಯಾ, ಇರಾಕ್ ದೇಶಗಳಿಗೆ 6 ತಿಂಗಳ ಕಾಲ ಕಳಿಸಿಬಿಟ್ಟರೆ ಸಾಕು.

ind6

ಅವರಿಗೆ ಭಾರತ ದೇಶದಲ್ಲಿರುವ ನಿಜವಾದ ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಸಮಾನತೆಯ ಬಗ್ಗೆಯ ಅರಿವಾಗಿ ಮುಂದೆಂದೂ ಕಮಿಕ್ ಕಿಮಿಕ್ ಎನ್ನಲಾರರು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ರಾಷ್ಟ್ರ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಎಲ್ಲರಿಗೂ ಇಲ್ಲಿ ಎಲ್ಲರಿಗೂ ನೆಮ್ಮದಿಯಾಗಿ ಸರ್ವ ಸ್ವತ್ರಂತ್ರ್ಯವಾಗಿ ಬದುಕುವ ಸಮಾನ ಹಕ್ಕಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಇಲ್ಲಿ ಎಲ್ಲಾ ಧರ್ಮ, ಜಾತಿ ಮತ್ತು ಭಾಷೆಗಳ ಜನರಿಗೂ ಬದುಕಲು ಅವಕಾಶವಿದೆ. ಆದರೆ ಅವರವರ ಧರ್ಮ, ಜಾತಿ ಎಲ್ಲವೂ ಅವರ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿದ್ದು ಮನೆಯಿಂದ ಹೊರೆಗೆ ಬಂದಾಗ, ಎಲ್ಲರಿಗೂ ದೇಶವೇ ಪ್ರಧಾನವಾಗ ಬೇಕು.

india2

ಈ ದೇಶದಲ್ಲಿ ಹುಟ್ಟಿ ಇಲ್ಲಿನ ಸಕಲ ಸೌಲಭ್ಯಗಳನ್ನು ಪಡೆದು ಬೆಳೆದು ದೊಡ್ಡವರಾಗಿ ವಿದ್ಯಾವಂತರಾದ ಮೇಲೆ ಈ ದೇಶದ ಕಾನೂನಿನ ಅನುಗುಣವಾಗಿ ನಡೆಯಬೇಕಾದದ್ದು ಅವರೆಲ್ಲರ ಕರ್ತವ್ಯವೇ ಹೌದು. ದೇಶದ ಏಕತೆ ಮತ್ತು ಅಖಂಡತೆ ಅವರೆಲ್ಲರೂ ಕಟಿಬದ್ದರಾಗಿರಬೇಕು. ದುರಾದೃಷ್ಟವಶಾತ್ ಮತಾಂಧತೆಯಿಂದಲೋ, ಭಾಷಾ ಧುರಾಭಿಮಾನದಿಂದಲೋ, ಅಥವಾ ತಮ್ಮ ಸಿದ್ದಾಂತದ ಅಮಲಿನಿಂದಲೋ ಪ್ರತಿ ದಿನವೂ ದೇಶವನ್ನು ತುಂಡರಿಸುವ ಮಾತುಗಳನ್ನಾಡುವ ಮಂದಿಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೋಗಿರುವುದು ಈ ದೇಶದ ವಿಪರ್ಯಾಸವೇ ಸರಿ.

ind1

ಕೋಟ್ಯಾಂತರ ಹೋರಾಟಗಾರ ತ್ಯಾಗ ಬಲಿದಾನಗಳಿಂದ ಸ್ವಾತ್ರಂತ್ಯ್ರಗೊಂಡ ದೇಶಕ್ಕಿಂತಲೂ ಅವರೆಲ್ಲರಿಗೂ ಅವರವರ ಧರ್ಮ, ಜಾತೀ, ಭಾಷೆ, ಮತ್ತು ಸಿದ್ಧಾಂತವೇ ಹೆಚ್ಚು ತಾವು ಈ ದೇಶದ ಕಾನೂನು, ಸಂಸ್ಕಾರ, ಸಂಸ್ಕೃತಿಗೆ ತಲೆಬಾಗುವುದಿಲ್ಲ ಎಂದು ದಿನ ಬೆಳಗಾದರೇ ದೇಶ ನಿಂದನೆ ಮಾಡುತ್ತಾ, ಜನರನ್ನು ಎತ್ತಿಕಟ್ಟಿ ಅಸಹಕಾರ ಚಳುವಳಿಗಳನ್ನು ಮಾಡುವ ಮೂಲಕ ದೇಶದಲ್ಲಿ ದೊಂಬಿ ಎಬ್ಬಿಸುತ್ತಾ, ವಿದೇಶಿಗರ ಮುಂದೇ ದೇಶದ ಮಾನವನ್ನು ಹರಾಜು ಹಾಕುವವರನ್ನು ಮುಲಾಜಿಲ್ಲದೇ ಅವರಿಗಿಷ್ಟ ಬಂದ ದೇಶಕ್ಕೆ ಈ ಕೂಡಲೇ ಗಡಿಪಾರು ಮಾಡಿದಾಗಲೇ ದೇಶ ಮತ್ತು ಸಮಾಜದ ಸ್ವಾಸ್ಥ್ಯ ನೆಮ್ಮೆದಿಯಾಗಿರುತ್ತದೆ ಮತ್ತು ದೇಶ ಅಭಿವೃದ್ಧಿಯ ಪಥಕ್ಕೆ ಮರಳುತ್ತದೆ. ಇಲ್ಲದೇ ಹೋದಲ್ಲಿ ಪ್ರತೀ ದಿನ ಇಂತಹ ಕ್ಷುಲ್ಲಕ ಸಮಸ್ಯೆಗಳನ್ನು ಪರಿಹರಿಸುವುದಕ್ಕೇ ನಮ್ಮೆಲ್ಲರ ಸಂಪನ್ಮೂಲಗಳು ವ್ಯರ್ಥವಾಗಿ ದೇಶ ಅಧೋಗತಿಗೆ ಜಾರುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ.

ಸಾಯುತ್ತಿರುವುದು ಮನುಷ್ಯರಲ್ಲಾ, ಮಾನವೀಯತೆ

ದುರಂತ – 1 : ಗಂಡ ಹೆಂಡತಿ ಮತ್ತು ವಯಸ್ಸಿಗೆ ಬಂದಂತಹ ಇದ್ದ ಸಣ್ಣ ಮಧ್ಯಮ ವರ್ಗದ ಕುಟುಂಬ. ಅದು ಹೇಗೋ ಗಂಡ ಮತ್ತು ಹೆಂಡತಿ ಇಬ್ಬರಿಗೂ ಕೊರೋನಾ ಮಹಾಮಾರಿ ವಕ್ಕರಿಸಿಕೊಂಡು ಇಬ್ಬರು ಅಸ್ಲತ್ರೆಗೆ ದಾಖಲಾಗುತ್ತಾರೆ ಈ ವಿಷಯ ತಿಳಿದ ಮಗ ಪಟ್ಟಣದಿಂದ ಓಡೋಡಿ ಬರುತ್ತಾನೆ. ಆ ಔಷಧಿ ನಮ್ಮಲ್ಲಿ ಸ್ಟಾಕ್ ಇಲ್ಲಾ.. ಆಮ್ಕಜನಕದ ಕೊರತೆ ಇದೆ. ಇಂತಹವರ ಹತ್ತಿರ ಕೆಲವೇ ಸ್ಟಾಕ್ ಔಷಧಿ ಇದೆಯಂತೆ ಪ್ರಯತ್ನಿಸಿ ನೋಡಿ ನಂಬರ್ ಕೊಡ್ತಾರೆ. ಅವರಿಗೆ ಕರೆ ಮಾಡಿದರೆ ಒಂದಕ್ಕೆ ನಾಲ್ಕು ಪಟ್ಟು ಹಣ ಕೊಟ್ಟರೆ ಕೊಡ್ತೀವೀ ಎನ್ನುತ್ತಾರೆ. ಅಪ್ಪಾ ಅಮ್ಮನ ಜೀವಕ್ಕೆ ಬೆಲೆ ಕಟ್ಟುವುದೇ ಎಂದು ಒಂದು ಕ್ಷಣವೂ ಯೋಚಿಸದೇ, ಅವರು ಕೇಳಿದಷ್ಟು ಹಣ ನೀಡಿ ಔಷಧಿ ತಂದು ಕೊಡುತ್ತಾನೆ. ಯಾರದ್ದೋ ಕೈ ಕಾಲು ಹಿಡಿದು ನೀರಿನಂತೆ ಹಣ ಖರ್ಚು ಮಾಡಿ ಅಮ್ಲಜನಕದ ವ್ಯವಸ್ಥೆ ಮಾಡಿ ಉಸ್ಸಪ್ಪಾ ಎಂದು ಆಸ್ಲತ್ರೆಯ ಮೂಲೆಯೊಂದರಲ್ಲಿ ಕುಳಿತುಕೊಂಡಿರುತ್ತಾನೆ. ಆ ಮಧ್ಯರಾತ್ರಿ ತಂದೆಯ ಪ್ರಾಣ ಹೋಗುತ್ತದೆ. ತನ್ನೆಲ್ಲಾ ಶಿಫಾರಸ್ಸನ್ನು ಬಳಸಿ ನೀರಿನಂತೆ ಹಣವನ್ನು ಚೆಲ್ಲಿ ಅಪ್ಪನ ಹೆಣವನ್ನು ಪಡೆದು ಮಾರನೆಯ ದಿನ ಸದ್ದಿಲ್ಲದೇ ಅಮ್ಮನಿಗೂ ತಿಳಿಸದೇ ಸ್ಮಶಾನದಲ್ಲಿಯೂ ಸಾವಿರಾರು ಗಟ್ಟಲೆ ಹಣ ಖರ್ಚು ಮಾಡಿ ಅಪ್ಪನ ಅಂತಿಮ ಸಂಸ್ಕಾರ ಮುಗಿಸಿ, ಸಂಜೆಯ ಹೊತ್ತಿಗೆ ಮನೆಗೆ ಬರುವಷ್ಟರಲ್ಲಿಯೇ, ಅವರ ತಾಯಿಯವರಿಗೆ ಉಸಿರಾಟದ ತೊಂದರೆ ಹೆಚ್ಚಾಗಿದೆ ಎಂದು ಮತ್ತದೇ ಆಸ್ಪತ್ರೆಯಿಂದ ಕರೆ ಬಂದು ಒಂದು ಕ್ಷಣವೂ ವಿರಮಿಸದೇ ಆಸ್ಪತ್ರೆಗೆ ಓಡಿದರೆ, ಸಾರಿ.. ನಮ್ಮ ಪ್ರಯತ್ನವೆಲ್ಲಾ ನಾವು ಮಾಡಿದೆರೂ ನಿಮ್ಮ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ ಕ್ಷಮಿಸಿ ಎನ್ನುತ್ತಾರೆ ವೈದ್ಯರು. ಮತ್ತದೇ ಹಣ ಖರ್ಚು ಮಾಡಿ ಅಮ್ಮನ ಅಂತಿಮ ವಿದಿವಿಧಾನವನ್ನು ಮುಗಿಸಿದ್ದಾನೆ ಮಗ


WhatsApp Image 2021-05-24 at 5.30.30 PMದುರಂತ – 2 : ಗಂಡ ಹೆಂಡತಿ ಇಬ್ಬರು ಗಂಡು ಮಕ್ಕಳು ಇದ್ದ ಕುಟುಂಬವದು ಹಿರಿಯ ಮಗ ಅಮೇರಿಕಾದಲ್ಲಿ ಕೈ ತುಂಬ ಸಂಬಳ ಪಡೆಯುತ್ತಿದ್ದರೆ, ಕಿರಿಯ ಮಗ ತಂದೆ ತಾಯಿರೊಡನೆ ಇಲ್ಲೇ ಇದ್ದಾನೆ. ಅದು ಹೇಗೋ ಮನೆಯಲ್ಲಿದ್ದ ಮೂವರಿಗೂ ಕೋವಿಡ್ ವಕ್ಕರಿಸಿ ಆಸ್ಪತ್ರೆ ಸೇರುತ್ತಾರೆ. ಗಂಡ ಹೆಂಡತಿ ಕೇವಲ ಎರಡು ದಿನಗಳ ಅಂತರದಲ್ಲಿ ಮರಣ ಹೊಂದಿದರೆ, ಹಿರಿಯ ಮಗ ಅಮೇರಿಕಾದಿಂದ ತಕ್ಷಣ ಬರಲಗುತ್ತಿಲ್ಲಾ. ಇನ್ನು ಕಿರಿಯ ಮಗ ಆಸ್ಪತ್ರೆಯಲ್ಲೇ ಜೀವನ್ಮರಣ ಹೋರಾಡುತ್ತಿದ್ದದ್ದರಿಂದ ವಂಶೋದ್ಧಾರಕರೆಂದು ಇಬ್ಬರು ಮಕ್ಕಳಿದ್ದರೂ ತಂದೆತಾಯಿಕರ ಅಂತ್ಯಕ್ರಿಯೆಯನ್ನು ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಸಂಭಂಧೀಕರೇ ಮಾಡಿದ ಉದಾಹರಣೆ ನಮ್ಮ ಕಣ್ಣಮುಂದಿದೆ,

ಈ ರೀತಿ ದುರಂತಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೇ ಬರೆಯಬಹುದೇನೋ? ಹಿಂದೆ ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಅಜ್ಜ ಅಜ್ಜಿಯರು ಕಥೆ ಹೇಳುತ್ತಿದ್ದಾಗ ನಾವೆಲ್ಲಾ ಬೇರೊಂದು ಊರಿನಲ್ಲಿ ವಾಸ ಮಾಡುತ್ತಿದ್ದೆವು. ಆಗ ಪ್ಲೇಗ್ ಎಂಬ ಮಹಾಮಾರಿ ಬಂದು ಇಡೀ ಊರಿಗೆ ಊರಿನ ಜನರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾಗ ಅಳುದುಳಿದ ಜನರು ಮನೆ, ಮಠ, ಹೊಲ ಗದ್ದೆ ಆಸ್ತಿ ಪಾಸ್ತಿಗಳನ್ನೆಲ್ಲಾ ಬಿಟ್ಟು ಜೀವ ಉಳಿಸಿಕೊಂಡರೆ ಸಾಕು ಎಂದು ಊರು ಬಿಟ್ಟು ಈ ಊರಿಗೆ ಬಂದು ಹೊಸಾ ಬದುಕನ್ನು ಕಟ್ಟಿಕೊಂಡೆವು ಎಂದು ಹೇಳುತ್ತಿದ್ದದ್ದನ್ನು ಕೇಳಿ ಅಚ್ಚರಿ ಪಡುತ್ತಿದ್ದೆವು.

ದುರಾದೃಷ್ಟವಷಾತ್, ನಾವೀಗ ನಮ್ಮ ಕಣ್ಣ ಮುಂದೆಯೇ, ದೀಪದ ಹುಳುಗಳು ದೀಪದ ಮುಂದೆ ಸಾಯುವಂತೆ ನಮ್ಮ ಆತ್ಮೀಯರು, ಬಂಧು ಮಿತ್ರರಗಳು ಪುತ ಪುತನೇ ಸಾಯುವುದನ್ನು ನೋಡುತ್ತಿದ್ದೇವೆ. ದುರಂತವೆಂದರೆ, ಈ ಕೊರೋನಾ ಮಹಾಮಾರಿ ಇಡೀ ಪ್ರಪಂಚಕ್ಕೇ ವಕ್ಕರಿಸಿರುವ ಕಾರಣ, ಅಂದಿನಂತೆ ನಾವು ಬೇರೆಲ್ಲೋ ಹೋಗಿ ಜೀವಿಸಲು ಸಾಧ್ಯವಾಗದೇ ಮನೆಯಲ್ಲಿಯೇ ಇರಬೇಕಾದಂತಹ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.

ನಾವೆಲ್ಲಾ ಚಿಕ್ಕವರಿರುವಾಗ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಮ್ ಶರೀರಮ್ ll ಎಂಬ ಶ್ಲೋಕವನ್ನು ಹೇಳಿಕೊಡುತ್ತಾ ನಾವು ನಮ್ಮ ಕೈಲಾದಷ್ಟು ಮತ್ತೊಬ್ಬರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು ಎಂದು ಹೇಳಿಕೊಡುತ್ತಿದ್ದರು ಮತ್ತು ನಮ್ಮ ಪೋಷಕರು ನೆರೆಹೊರೆಯವರೊಂದಿಗೆ ಅದೇ ರೀತಿ ನಡೆದುಕೊಂಡು ನಮೆಗೆಲ್ಲಾ ಅದರ್ಶ ಪ್ರಾಯರಾಗಿದ್ದರು. ಆಗೆಲ್ಲಾ ಕೈಯ್ಯಲ್ಲಿ ಹಣವಿಲ್ಲದಿದ್ದರೂ ಯಾರೂ ಸಹಾ ಹಸಿವಿನಿಂದ ಸಾಯಬೇಕಿರಲಿಲ್ಲ. ಭವತೀ ಭಿಕ್ಷಾಂದೇಹಿ ಎಂದು ಕೇಳಿದರೆ ಯಾರಾದರೂ ಊಟವನ್ನು ಹಾಕುತ್ತಿದ್ದರು. ದೇವಾಲಯಗಳು, ಅನ್ನ ಛತ್ರಗಳು, ಅರವಟ್ಟಿಕೆಗಳು ಅವಶ್ಯವಿದ್ದವರಿಗೆ ಸದಾಕಾಲವು ತೆರದೇ ಇರುತ್ತಿತ್ತು.

ಇನ್ನು ಮನೆಗಳೆಲ್ಲವೂ ಅವಿಭಕ್ತ ಕುಟುಂಬವಾಗಿದ್ದು ಅಜ್ಜಿ, ತಾತ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ ಮಾವ ಹೀಗೆ ತುಂಬು ಸಂಸಾರದಿಂದ ಎಲ್ಲರೂ ಒಗ್ಗಟ್ಟಾಗಿ ದುಡಿಯುತ್ತಿದ್ದರು ಸುಖಃದಿಂದ ಜೀವಿಸುತ್ತಿದ್ದರು. ಯಾರಿಗೂ ಸ್ವಾರ್ಥವಿರಲಿಲ್ಲ. ಅನಾವಶ್ಯಕ ಹಣ ಗಳಿಸಬೇಕೆಂಬ ದುರಾಸೆ ಇರಲಿಲ್ಲ. ತಮಗೆ ಬಂದದ್ದರಲ್ಲಿ ಸ್ವಲ್ಪವನ್ನು ದಾನ ಧರ್ಮಕಾರ್ಯಗಳಿಗೆ ಮೀಸಲಿಡುತ್ತಿದ್ದರು.

ದಿನಕಳಂದತೆ ಸ್ವಾರ್ಧ ಹೆಚ್ಚಾದಂತೆಲ್ಲಾ ದುರಾಸೆ ಹೆಚ್ಚಾಯಿತು. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ನಾನು ನನ್ನದು ಎಂಬ ವ್ಯಾಮೋಹಕ್ಕೆ ಸಿಲುಕಿ ದಾನ ಧರ್ಮವೆಲ್ಲವೂ ಮರೆಯಾಗಿ ಹೋಯಿತು. ಹಣವಿದ್ದರೆ ಏನು ಬೇಕಾದರೂ ಕೊಂಡು ಕೊಳ್ಳಬಹುದು ಎಂಬ ಮನೋಭಾವ ಬೆಳದದ್ದೇ ತಡಾ, ಹಣಗಳಿಸಲು ಎಲ್ಲರೂ ಯಾವುದೇ ಕೆಲಸವನ್ನಾಗಲೀ ಮಾಡಲು ಸಿದ್ಧರಾದರು. ಇಲ್ಲಿ ದಯೆ ಧರ್ಮ ಎನ್ನುವುದೆಲ್ಲವೂ ಮಾಯವಾಗಿದ್ದೇ ತಡಾ ಮೋಸ ಕಪಟ ವಂಚನೆಗಳೆಲ್ಲವೂ ಸರ್ವೇ ಸಾಮಾನ್ಯವೆನಿಸಗೊಡಗಿದವು.

vACಮನೆಯೇ ಇರಲಿ ಮಠವೇ ಇರಲಿ, ಇಲ್ಲವೇ ಊರು, ರಾಜ್ಯ ದೇಶವೇ ಇರಲಿ, ಎಲ್ಲ ಕಡೆಯಲ್ಲಿಯೂ ಅಧಿಕಾರದ ಅಮಲು ತಲೆಗೇರಿದ್ದೇ ತಡಾ ತನ್ನಲ್ಲಿಯೇ ಎಲ್ಲಾ ಅಧಿಕಾರ ಸೂತ್ರವಿರಬೇಕು. ತಾನು ಹೇಳಿದ ಹಾಗೆಯೇ ಉಳಿದೆಲ್ಲರೂ ಕೇಳಬೇಕು ಎಂಬ ಸರ್ವಾಧಿಕಾರಿ ಧೋರಣೆ ತಲೆಗೆ ಏರಿದ್ದರಿಂದಲೇ ಇಂದು ಇಡೀ ಪ್ರಪಂಚಾದ್ಯಂತ ದಯೆ ದಾಕ್ಷಿಣ್ಯಗಳೇ ಇಲ್ಲವಾಗಿ ಹೋಗಿ ಧರ್ಮ, ಭಾಷೆ, ಜಾತಿ, ಉಪಜಾತಿಯ ಆಧಾರಿತವಾಗಿ ಹೋರಾಟ ಮಾಡುತ್ತಿರುವ ಪರಿಣಾಮವಾಗಿಯೇ ಈ ರೀತಿಯ ಜೈವಿಕ ಯುದ್ಧಗಳು ಆರಂಭವಾಗಿವೆ ಎಂದರೂ ತಪ್ಪಾಗದು.

WhatsApp Image 2021-05-24 at 5.30.45 PMಇಂತಹ ಸಂಧರ್ಭದಲ್ಲಿ ಇಡೀ ದೇಶವಾಸಿಗಳು ನಮ್ಮೆಲ್ಲಾ ಧರ್ಮ, ಜಾತಿ, ಭಾಷೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯನ್ನು ಎದುರಿಸಬೇಕಿತ್ತು. ಅದೇಕೋ ಏನೂ? ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ನನ್ನ ವಿರೋಧಿಯ ಎರಡೂ ಕಣ್ಣುಗಳು ಹೋಗಲಿ ಎನ್ನುವ ಮನೋಭಾವನೆ. ಆಡಳಿತ ಪಕ್ಷ ಹೇಳಿದ್ದಕ್ಕೆಲ್ಲಾ ವಿರೋಧ ಪಕ್ಷಗಳು ಅಸಹಕಾರ ವ್ಯಕ್ತ ಪಡಿಸುತ್ತಿರುವುದು ಛೇಧಕರವಾಗಿದೆ.

nahi_sudharengeಇಂತಹ ಸಮಯದಲ್ಲಿ ಅವಶ್ಯಕತೆ ಇರುವವರಿಗೆ ತನು ಮನ ಧನ ಸಹಾಯ ಮಾಡಬೇಕಿದ್ದವರೇ ಎಲ್ಲವನ್ನೂ ಬದಿಗಿಟ್ಟು ಹಣದಾಹಿಗಳಾಗಿ ಪರಿಹಾರ ಕಾರ್ಯಗಳಲ್ಲಿಯೂ ಹಣ ಮಾಡುವ ಹೀನ ಕೃತ್ಯಕ್ಕೆ ಕೈ ಹಾಕಿರುವುದು ನಿಜಕ್ಕೂ ಹೇಸಿಗೆ ತರಿಸುತ್ತಿದೆ. ಅದರಲ್ಲೂ ವೈದ್ಯಕೀಯ ಸಿಬ್ಬಂಧಿಗಳು ಮಾನವೀಯತೆಯನ್ನು ಮರೆತು ಸಾಮಾನ್ಯ ಚಿಕಿತ್ಸೆಗೂ ದುಪ್ಪಟ್ಟು ಹಣ ಕೇಳುತ್ತಿದ್ದರೆ, ಜೀವರಕ್ಷಕ ಔಷಧಿಗಳನ್ನು ಮಾರುವವರು, ಲಸಿಕೆಗಳನ್ನು ಕಳ್ಳತನ ಮಾಡಿಕೊಂಡು ಹೊರಗೆ ಅನಧಿಕೃತವಾಗಿ ಹಣಕ್ಕಾಗಿ ಮಾರಾಟ ಮಾಡುವುದು. ಔಷಧಿ ವ್ಯಾಪಾರಿಗಳು ಕಾಳಸಂತೆಯಲ್ಲಿ ನಾಲ್ಕು ಐದು ಪಟ್ಟು ಹಣ ಕೇಳುತ್ತಿರುವುದು, ಆಂಬ್ಯುಲೆನ್ಸ್ ಅವರು ಕಡೆಗೆ ಸ್ಮಶಾನದಲ್ಲಿ ಹೆಣ ಸುಡುವವರೂ ಧುಃಖಿತರನ್ನು ಸಿಕ್ಕಾ ಪಟ್ಟೆ ದೋಚುತ್ತಿರುವುದು ಅತ್ಯಂತ ಅಸಹನೀಯವಾಗಿದೆ.

mysore_incidentಇಂದಿನ ದಿನ ಪತ್ರಿಕೆಯಲ್ಲಿ ಓದಿದ ಎರಡು ವಿಭಿನ್ನ ಸಂಗತಿಗಳು ನಿಜಕ್ಕೂ ಬೇಸರವನ್ನು ತರಿಸುತ್ತಿದೆ. ತಾಯಿ ಮಗಳು ಇಬ್ಬರೂ ಕೋವಿಡ್ ಮಹಾಮಾರಿಗೆ ತುತ್ತಾಗಿ ಮಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾದರೇ ತಾಯಿಯ ಪರಿಸ್ಥಿತಿ ಘೋರವಾಗಿ ಆಸ್ಪತ್ರೆಯಲ್ಲಿ ಮರಣ ಹೊಂದುತ್ತಾರೆ. ಅಸ್ಪತ್ರೆಯ ಸಿಬ್ಬಂಧಿಯವರು ಆಕೆಯ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವಾಗ ಯಾರೋ ಕಿಡಿಗೇಡಿಗಳು ಆಕೆಯ ಮೊಬೈಲ್ ಎಗರಿಸಿಬಿಟ್ಟಿರುವುದು ಆ ಪುಟ್ಟ ಮಗಳ ಅರಿವಿಗೆ ಬಂದು ದಯವಿಟ್ಟು ನಮ್ಮ ಅಮ್ಮನ ಪೋಟೋಗಳಿದ್ದ ಮೊಬೈಲ್ ಹಿಂದಿರುಗಿಸಲು ಅಂಗಲಾಚಿದ್ದು ನಿಜಕ್ಕೂ ಕರುಳ್ ಚುರುಕ್ ಎಂದಿತು.

WhatsApp Image 2021-05-24 at 5.31.45 PMಅದೇ ಲೇಖನದಲ್ಲಿ ಮೈಸೂರಿನವರೊಬ್ಬರು ಕೋವಿಡ್ ನಿಂದಾಗಿ ಮೃತಪಟ್ಘಾಗ ಆವರ ಸ್ವಂತ ಮಗನೇ ತಂದೆಯವರ ಶವವನ್ನು ನೋಡಲು ಬಾರದೇ, ಅವರ ಅಂತಿಮ ಸಂಸ್ಕಾರವನ್ನು ಮಾಡಲು ಸಹಾ ನಿರಾಕರಿಸಿ, ಅದನ್ನು ಅನಾಥ ಶವವೆಂದು ಸರ್ಕಾರಿ ವತಿಯಿಂದಲೇ ವಿಧಿ ವಿಧಾನ ಮಾಡಲಿ ಎಂದು ಒತ್ತಾಯಿಸಿದ್ದಲ್ಲದೇ, ತಮ್ಮ ತಂದೆಯವರಿಗೆ ಸೇರಿದ್ದ ಮೊಬೈಲ್, ಹಣ ಮತ್ತು ದಾಖಲೆಗಳನ್ನು ಮಾತ್ರ ತಾನು ಇರುವ ಜಾಗಕ್ಕೇ ತಂದು ಕೊಡಬೇಕೆಂದು ಸ್ಥಳೀಯ ಕಾರ್ಪೊರೇಟರ್ ಅವರೊಂದಿಗೆ ನಡೆಸಿದ ವೀಡೀಯೋ ನೋಡಿದಾಗ ಇದೇ ಏನು ನಮ್ಮ ಸಂಸ್ಕಾರ? ಇದೇ ಏನು ನಮ್ಮ ಕರುಳ ಸಂಬಂಧ? ಇದಕ್ಕಗಿಯೇ ಏನು ನಮ್ಮ ವಂಶೋದ್ಧಾರಕ ಬೇಕು ಎಂದು ಹತ್ತು ಹಲವಾರು ದೇವರುಗಳನ್ನು ಬೇಡಿ ಹೊತ್ತು ಹೆತ್ತು ಸಲಹಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಸಾಕಿದರೇ? ಎಂದೆನಿಸಿತು.

ನಿಜ. ಜಾತಸ್ಯ ಮರಣಂ ಧೃವಂ. ಅಂದರೆ ಹುಟ್ಟಿದವರೆಲ್ಲಾ ಸಾಯಲೇ ಬೇಕು ಎಂಬುದೇ‌ ಈ ಜಗದ ನಿಯಮ. ಅದರೆ ಇಂದೆಲ್ಲಾ ಆಗುತ್ತಿರುವುದನ್ನು ನೋಡಿದರೆ ಈಗ ಸಾಯುತ್ತಿರುವವರು ನಮ್ಮ ಅಪ್ಪಾ, ಅಮ್ಮ, ಬಂಧು ಬಾಂಧವರಲ್ಲಾ. ಈಗ ಸತ್ತು ಹೋಗಿರುವುದು ಮಾನವೀಯತೆ. ಈಗ ಹರಿದು ಹೋಗಿರುವುದು ಕರುಳ ಬಳ್ಳಿಯ ಸಂಬಂಧ. ಕೊರೋನದಂತಹ ನೂರಾರು ಮಹಾಮಾರಿಗಳನ್ನು ಬಂದರೂ ಎದುರಿಸಬಹುದು ಆದರೆ, ಸಂಸ್ಕಾರ ಮತ್ತು ಸಂಸ್ಕೃತಿಯೇ ಸತ್ತು ಹೋಗಿ ಮನುಷ್ಯತ್ವ ಮತ್ತು ಮಾನವೀಯತೆಯೇ ಇಲ್ಲವಾದರೆ ಖಂಡಿತವಾಗಿಯೂ ಮನುಷ್ಯ ಇದ್ದರೂ ಸತ್ತಂತೆಯೇ ಸರಿ.

ಇಂತಹ ಘನ ಘೋರಪರಿಸ್ಥಿತಿ ಮುಂದೊಮ್ಮೆ ಬರುತ್ತದೆ ಎಂದು ಯೋಚಿಸಿಯೋ ಏನೋ ಕವಿಗಳಾದ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಮೈಸೂರು ಮಲ್ಲಿಗೆ ಕೃತಿಯಲ್ಲಿ

ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ
ನೆರಳು, ಬಿಸಿಲು ಎಲ್ಲವೂ ನಿನ್ನವೆ ಇರಲಿ ಏಕರೀತಿ

ಎಂದು ಹೇಳಿದ್ದಾರೆ ಎಂದೆನಿಸುತ್ತಿದೆ. ದಯವಿಟ್ಟು ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಬೆಲೆ ಕೊಡುವುದನ್ನು ಇಂತಹ ಪರಿಸ್ಥಿತಿಯಲ್ಲಿ ರೂಢಿಸಿಕೊಳ್ಳೊಣ. ಜೀವ ಇದ್ದಲ್ಲಿ ಖಂಡಿತವಾಗಿಯೂ ಯಾರೂ ಸಹಾ ಯಾರ ಋಣವನ್ನು ಇಟ್ಟು ಕೊಳ್ಳಲು ಬಯಸುವುದಿಲ್ಲ

ಏನಂತೀರೀ
ನಿಮ್ಮವನೇ ಉಮಾಸುತ

ಶ್ರೀರಾಮ ನವಮಿ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದಿವಿ ಇದೇನು ಹೊಸಾ ಶ್ರೀರಾಮ ನವಮಿ ಸ್ಟ್ರೈಕ್ ಅಂತಾ ಯೋಚನೆ ಮಾಡ್ತಿರ್ತೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಇದುವರೆಗೂ ಯಾರಿಗೂ ಹೇಳಿದಿದ್ದ ಶ್ರೀರಾಮ ನವಮಿ ಸ್ಟ್ರೈಕ್ ಅಂತಹ ರೋಚಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ.

ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಗ ತಾನೆ ಶುರುವಾಗಿದ್ದ ಸ್ಟಾರ್ಟಪ್ ಕಂಪನಿಯೊಂದರ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ. ಭಾರತೀಯರೊಬ್ಬರೇ ಅಮೇರಿಕಾದಲ್ಲಿ ಆರಂಭಿಸಿದ ಕಂಪನಿಯೊಂದರ ಶಾಖೆಯನ್ನು ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆರಂಭಿಸಿದ್ದರು. ಬೆಂಗಳೂರು ಶಾಖೆಯ ಎರಡನೇ ಉದ್ಯೋಗಿ ಎಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಬಹಳ ಜವಾಬ್ಧಾರಿಯುತವಾಗಿ ಎಲ್ಲವನ್ನೂ ಹೊಸದರಿಂದಲೇ ಆರಂಭಿಸಿ ಕಂಪನಿ ದೊಡ್ಡದಾಗಿ ಬೆಳೆಯುವಂತೆ ಮಾಡುವ ಗುರುತರ ಜವಾಬ್ಧಾರಿ ನನ್ನ ಮೇಲಿತ್ತು.

ಹಾಗಾಗಿ ಪ್ರತಿಯೊಂದುಕ್ಕೂ ಅಳೆದೂ ತೂಗಿ ಹೆಚ್ಚು ಹಣ ಪೋಲು ಮಾಡದೇ, ಎಷ್ಟು ಬೇಕೋ ಅಷ್ಟನ್ನೇ ಖರ್ಚು ಮಾಡಿ ಅಗತ್ಯವಿದ್ದ Laptops, Desktops, Switches & Servers ಖರೀದಿಸಿ ಕಂಪನಿಯನ್ನು ಆರಂಭಿಸಿದ್ದ ದಿನಗಳು. ನಮ್ಮ ಕಂಪನಿಯ ಮಾಲಿಕರು ಭಾರತೀಯ ಹಿಂದೂಗಳು ಅದರಲ್ಲೂ ಮಾಜೀ ಸೈನ್ಯಾಧಿಕಾರಿಗಳೇ ಆಗಿದ್ದರೂ ಅಮೇರಿಕಾದಲ್ಲಿ ಮೊದಲು ಕಂಪನಿ ಆರಂಭಿಸಿದ್ದ ಕಾರಣ ಅವರು ನಮ್ಮ ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯೆಂದೇ ಕರೆಯಲು ಇಚ್ಚಿಸುತ್ತಿದ್ದಲ್ಲದೇ ಆಗ್ರಹ ಪಡಿಸುತ್ತಿದ್ದರು. ಇನ್ನು ನನ್ನದೋ ಅಪ್ಪಟ ಕನ್ನಡಿಗ ಮತ್ತು ಹಿಂದೂ ಮನಸ್ಥಿತಿಯವನಾಗಿದ್ದ ಕಾರಣ ಕೆಲಸದಲ್ಲಿಯೂ ಸಾಧ್ಯವಾದ ಕಡೆಯಲೆಲ್ಲಾ ನಮ್ಮ ತನವನ್ನು ಎತ್ತಿ ತೋರಿಸುತ್ತಿದ್ದೆ. ಹಾಗಾಗಿಯೇ ನಮ್ಮ Servers ಗಳಿಗೆ ಭೀಮಾ, ಕರ್ಣ, ಅಶ್ವಿನಿ, ಭರಣಿ, ಗಂಗಾ, ಯಮುನಾ ಸರಸ್ವತಿ ಕಾವೇರಿ, ನರ್ಮದಾ, ಮಲ್ಲಿಗೆ, ಸಂಪಿಗೆ, ಕೇದಿಗೆ, ಎಂದಿದ್ದರೆ, ಹೊಸದೊಂದು ಪ್ರಾಜೆಕ್ಟಿಗೆ ಕೊಟ್ಟಿದ್ದ ಎರಡು ಸರ್ವರ್ಗಳಿಗೆ ಲವ-ಕುಶ ಎಂದು ಹೆಸರು ಇಟ್ಟಿದ್ದೆ. ಇನ್ನು ನಮ್ಮ Conference Roomಗಳಿಗೆ ಅಜಂತಾ, ಎಲ್ಲೋರ, ಐಹೊಳೆ, ಬಾದಾಮಿ ಎಂದು ನಾಮಕರಣ ಮಾಡಲು ಸಫಲನಾಗಿ, ಇಲ್ಲಿನ ಮಣ್ಣಿನ ದೇಸೀ ಸೊಗಡನ್ನು ಹರಡಿಸಲು ಸಫಲನಾಗಿದ್ದೆ.

ನಮ್ಮ ಕಂಪನಿಗೆ ಹೊಸದಾಗಿ ಸೇರಿಕೊಳ್ಳುತ್ತಿದ್ದ ಸಹೋದ್ಯೋಗಿಗಳಿಗೂ ಈ ಹೆಸರುಗಳು ಬಲು ಅಪ್ಯಾಯಮಾನವಾಗಿದ್ದರೂ ನಮ್ಮ ಕಂಪನಿಯ ಮಾಲಿಕರಿಗೆ ಇದೇಕೋ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹಾಗಾಗಿಯೇ ಆಯುಧಪೂಜೆ ಮಾಡುವುದಕ್ಕೂ ಬಿಟ್ಟಿರಲಿಲ್ಲ. ನಮ್ಮದು MNC ಕಂಪನಿ ಹಾಗಾಗಿ ಇಲ್ಲಿ ಯಾವುದೇ ಧಾರ್ಮಿಕ ಆವರಣೆಗೆ ಅವಕಾಶವಿಲ್ಲ ಹಾಗಾಗಿ ಆಯುಧ ಪೂಜೆಗೆ ಖರ್ಚು ಮಾಡಲಾಗದು ಎಂದಿದ್ದರು. ಹೇಗೂ ಆಯುಧ ಪೂಜೆ ಮಾಡಲು ಈ ಮೊದಲೇ ನಿರ್ಧರಿಸಿದ್ದರಿಂದ ನಾನೇ ಸ್ವಂತ ಖರ್ಚಿನಲ್ಲಿಯೇ ಸರಳವಾಗಿಯಾದರೂ ಅರ್ಥಪೂರ್ಣವಾಗಿ ಆಯುಧ ಪೂಜೆ ಮಾಡಿ ಮುಗಿಸಿದ್ದೆ.

ಇದಾಗಿ ಡಿಸೆಂಬರ್ ಎರಡನೇ ವಾರದಲ್ಲಿ ಬೆಳ್ಳಂಬೆಳಿಗ್ಗೆ ಕಛೇರಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಝಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಕ್ರಿಸ್ಮಸ್ ಗಿಡ ನೋಡುತ್ತಿದ್ದಂತೆ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ. ನಮ್ಮ ಸ್ವಾಗತಕಾರಿಣಿ ಬಳಿ ಇದನ್ನು ಹಾಕಿದವರು ಯಾರು ಎಂದು ಕೇಳಿದೆ. ಅಕೆ ಅಷ್ಟೇ ಮುಗ್ಧವಾಗಿ ನೆನ್ನೆ ಸಂಜೆ ಅಡ್ಮಿನ್ ಡಿಪಾರ್ಟ್ಮೆಂಟಿನವರು ಇದನ್ನು ಮಾಡಿಹೋದರು ಎಂದಳು. ಛೇ!! ನಾವು ಇಲ್ಲಿನ ಸಂಪ್ರದಾಯದ ಅನುಗುಣವಾಗಿ ಆಯುಧಪೂಜೆ ಮಾಡ್ತೀವಿ ಅಂದಾಗ ಇಲ್ಲಾ ಎಂದವರು ಇದಕ್ಕೇ ಹೇಗೆ ಅನುವು ಮಾಡಿಕೊಟ್ಟಿದ್ದೀರಿ? ಎಂದು ಆಕೆಯನ್ನು ದಬಾಯಿಸಿದ್ದಕ್ಕೆ ಆಕೆ ಒಂದು ಚೂರು ಮಾತನಾಡದೇ ಸುಮ್ಮನಿದ್ದಳು. ಇದನ್ನೇ ಅಡ್ಮಿನ್ ಡಿಪಾರ್ಟ್ಮೆಂಟ್ ಬಳಿ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದೆ. ಮಧ್ಯಾಹ್ನ ಊಟದ ಸಮಯದಲ್ಲಿ ನಮ್ಮ ಸಹೋದ್ಯೋಗಿಗಳ ಬಳಿ ಇದೇ ಕುರಿತಂತೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ತಿಳಿದು ಬಂದ ವಿಷಯವೇನೆಂದರೆ ನಮ್ಮ ಸ್ವಾಗತಕಾರಣಿಯೂ ರೋಮನ್ ಕ್ಯಾಥೋಲಿಕ್ ಎಂದು ತಿಳಿಯುತಾದರೂ ಆಕೆ ತನ್ನ ಮೇಲಧಿಕಾರಿಯ ಆಜ್ಞೆಯನ್ನು ಪಾಲಿಸಿದ್ದಳು.

ಅದಾದ ನಂತರ ಎರಡು ಮೂರು ಬಾರಿ ಹೊಸಾ ಕಛೇರಿಗೆ ಸ್ಥಳಾಂತರ ಗೊಂಡಾಗ, ಪೂಜೆ ಮಾಡಿಸೋಣ ಎಂದರೂ ಮತ್ತೇ ಇದೇ ವರಾತೆ ತೆಗೆಯುತ್ತಿದ್ದರು. ಹಾಗೂ ಹೀಗೂ ಮಾಡಿ ಹೊಸಾ ಕಟ್ಟಡಕ್ಕೆ ಹೋದಾಗ ಇದೇ ಕ್ರಿಸ್ಮಸ್ ವಿಷಯವನ್ನು ಮುಂದಿಟ್ಟು ಕಂಪನಿಯ ಕಡೆಯಿಂದಲೇ ಹೋಮ ಮತ್ತು ಹವನ ಪೂಜೆ ಪುನಸ್ಕಾರಗಳನ್ನು ಮಾಡಿಸಲು ಸಫಲನಾಗಿದ್ದರೂ ಹೇಗಾದರೂ ಮಾಡಿ ಇಲ್ಲೊಂದು ನಮ್ಮ ಸಂಪ್ರದಾಯವನ್ನು ಪಾಲಿಸಲೇ ಬೇಕು ಎಂದು ಯೋಚಿಸುತ್ತಿರುವಾಗಲೇ ರಾಮನವಮಿ ಬಂದು ಬಿಟ್ಟಿತ್ತು.

srirama1ಪ್ರಭು ಶ್ರೀರಾಮ ಒಂದು ರೀತಿಯ ಸರ್ವಧರ್ಮ ಸರ್ವಜಾತಿಯವರೂ ಒಪ್ಪುವ ದೇವರು ಹಾಗಾಗಿ ಮಾರನೆಯ ದಿನ ಸರವಾಗಿಯಾದರೂ ಸಂಭ್ರಮವಾಗಿ ರಾಮನವಮಿ ಆಚರಿಸಲು ನಾಲ್ಕಾರು ಗೆಳೆಯರು ಸೇರಿ ನಿರ್ಧರಿಸಿದ್ದೇ ತಡಾ ಎಲ್ಲರೂ ಸ್ವಲ್ಪ ಹಣವನ್ನು ಹಾಕಿ ಕೆಲವು ಆಸ್ಥಿಕ ಸಹೋದ್ಯೋಗಿಗಳಿಂದ ಅಲ್ಪ ಸ್ವಲ್ಪ ಹಣವನ್ನು ಸಂಗ್ರಹಿಸಿದೆವು. ಕೂಡಲೇ ನಮ್ಮ ಕಂಪನಿಗೆ ಊಟವನ್ನು ತಂದು ಕೊಡುತ್ತಿದ್ದ ರಾಘವೇಂದ್ರನಿಗೆ ಕರೆ ಮಾಡಿ ಇಡೀ ನಮ್ಮ ಕಛೇರಿಯ ಎಲ್ಲಾ ಸಹೋದ್ಯೋಗಿಗಳಿಗೂ ಪ್ರಸಾದ ರೂಪದಲ್ಲಿ ಹಂಚಲು ಕೋಸಂಬರಿ, ಪಾನಕ ಮತ್ತು ನೀರು ಮಜ್ಜಿಗೆ ಮಾಡಿಕೊಂಡು ಬರಲು ತಿಳಿಸಿದೆ. ಉಳಿದವರಿಗೆಲ್ಲರಿಗೂ ಹಣ್ಣು, ಹೂವು ಮುಂತಾದ ಪೂಜೆ ಸಾಮಗ್ರಿಗಳನ್ನು ತರಲು ಸೂಚಿಸಲಾಯಿತು. ಕೂಡಲೇ ಇಂಟರ್ನೆಟ್ಟಿನಲ್ಲಿ ಶ್ರೀರಾಮನ ಫೋಟೋ ಡೌನ್ ಲೋಡ್ ಮಾಡಿ ಕಲರ್ ಪ್ರಿಂಟ್ ತೆಗೆದು ಅದನ್ನು ಚೆಂದವಾಗಿ ಒಂದು ರೊಟ್ಟಿಗೆ ಅಂಟಿಸಿ ರಾಮನ ಪೋಟೋ ಸಿದ್ದ ಪಡಿಸಿಯಾಗಿತ್ತು. ಹೀಗೆ ಕೆಲವೇ ಕೆಲವು ಜನರಿಗೆ ಮಾತ್ರವೇ ಗೊತ್ತಿರುವ ಹಾಗೆ ಸಿದ್ದತೆ ನಡೆಸಿ ಮಾರನೆಯ ದಿನ ಮಧ್ಯಾಹ್ನ ಸುಮಾರು 12ರ ಹೊತ್ತಿಗೆ ಎಲ್ಲರಿಗೂ ಕಾನ್ಫರೆನ್ಸ್ ರೂಮಿಗೆ ಬರಲು ಸೂಚಿಸಲಾಯಿತು. ಎಲ್ಲರೂ ಬಂದು ನೋಡುತ್ತಿದ್ದಂತೆಯೇ ಮೂಗಿನ ಮೇಲೆ ಬೆರಳಿಡುವಂತೆ ಅಚ್ಚುಕಟ್ಟಾಗಿ ಅಲಂಕರಿಸಲಾಗಿತ್ತು. ನಾನೇ ಪಂಚೆಯುಟ್ಟುಕೊಂಡು ಸಾಂಗೋಪಾಂಗವಾಗಿ ಪೂಜೆ ಮಾಡಿ ಎಲ್ಲರಿಗೂ ಪ್ರಸಾದ ಹಂಚುವ ಮೂಲಕ ಸದ್ದಿಲ್ಲದೇ ಶ್ರೀರಾಮ ನವಮಿ ಸ್ಟ್ರೈಕ್ ಮಾಡಿದ್ದು ಎಲ್ಲರಿಗೂ ಮೆಚ್ಚುಗೆಯಾಗಿತ್ತು.

ram3ಮುಂದಿನ ವರ್ಷ ರಾಮನವಮಿಗೆ ಒಂದು ವಾರದ ಮುಂಚೆಯೇ ನಮ್ಮ ಸಹೋದ್ಯೋಗಿಗಳೇ ಈ ವರ್ಷ ಶ್ರೀ ರಾಮ ನವಮಿ ಮಾಡೋದಿಲ್ವಾ? ಎಂದು ಕೇಳಿದಾಗ ರೋಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದಂತಾಗಿ, ಹೇ.. ಯಾಕ್ ಮಾಡೋದಿಲ್ಲಾ? ಇನ್ನೂ ಒಂದು ವಾರ ಇದೆಯಲ್ಲಾ ಅಂತ ಸುಮ್ಮನಿದ್ದೆವು. ಎಂದು ಹೇಳಿ ಕೂಡಲೇ ಎಲ್ಲಾರ ಹತ್ತಿರವೂ ಹಣ ಸಂಗ್ರಹ ಮಾಡಲು ನಿರ್ಧರಿಸಿದಾಗ ಮಗಾ.. ಈ ವರ್ಷಾ ಹೋದ ವರ್ಷಕ್ಕಿಂತಲೂ ಗ್ರಾಂಡ್ ಆಗಿ ಮಾಡೋಣ ಎಂದು ನಮಗೆ ಮೊದಲು ದೇಣಿಗೆ ನೀಡಿದ್ದೇ ಹಿಮಾಯತ್ ಎಂಬ ಮ್ಯಾನೇಜರ್. ಇದೇ ಸಂಗತಿಯನ್ನೇ ಮುಂದಿಟ್ಟು ಕೊಂಡು ಹಿಮಾಯತ್ತೇ ಇಷ್ಟು ಕೊಟ್ಟಿದ್ದಾನೆ ಇನ್ನು ನೀವು ಎಂದು ಉಳಿದ ಮ್ಯಾನೇಜರ್ ಬಳಿಯೂ ಒಳ್ಳೆಯ ಮೊತ್ತವನ್ನು ಸಂಗ್ರಹಿಸಿ ಈ ಬಾರಿ ಕಳೆದ ಬಾರಿಗಿಂತಲೂ ಅದ್ಧೂರಿಯಾಗಿ ಶ್ರೀರಾಮ ನವಮಿಯನ್ನು ಆಚರಿಸಿದ್ದಲ್ಲದೇ, ಹಣ ಸಾಕಷ್ಟು ಸಂಗ್ರಹವಾಗಿದ್ದ ಕಾರಣ, ಪ್ರಸಾದಕ್ಕೆ ಕೋಸಂಬರಿ, ಪಾನಕ ನೀರು ಮಜ್ಜಿಗೆ ಜೊತೆಗೆ ಹುಳಿಯವಲಕ್ಕಿ (ಗೊಜ್ಜವಲಕ್ಕಿ) ಮತ್ತು ರಸಾಯನನೂ ಸೇರಿಕೊಂಡಿತು.

ram2ಹೀಗೆ ವರ್ಷಾನು ವರ್ಷ ಕಳೆಯುತ್ತಿದ್ದಂತೆಯೇ ನಾನು ಆ ಕಂಪನಿಯಲ್ಲಿ ಇರುವವರೆಗೂ ಶ್ರೀ ರಾಮ ನವಮಿ ನಮ್ಮ ಬೆಂಗಳೂರು ಕಛೇರಿಯಲ್ಲಿ ಅಲ್ಲದೇ ಹೈದರಾಬಾದಿನಲ್ಲಿಯೂ ಬಹಳ ಅದ್ದೂರಿಯಿಂದ ಆಚರಣೆಗೆ ರೂಢಿಯಲ್ಲಿ ಬಂದಿತು. ಆರಂಭದಲ್ಲಿ ಪ್ರಸಾದ ರೂಪದಲ್ಲಿದ್ದದ್ದು ಕಡೆಗೆ ಇಡೀ ಕಛೇರಿಯ ನಾಲ್ಕುನೂರರಿಂದ ಐದು ನೂರು ಉದ್ಯೋಗಿಗಳಿಗೆ ಹೊಟ್ಟೆ ತುಂಬುವಷ್ಟು ಒಬ್ಬಟ್ಟಿನ ಊಟದವರೆಗೂ ಬೆಳೆದಿತ್ತು. ಒಟ್ಟಿನಲ್ಲಿ, ನಾವು ಹೆದರಿದರೆ, ನಮ್ಮ ತಲೆ ಮೇಲೆ ಕೂರುವವರು ಇದ್ದೇ ಇರುತ್ತಾರೆ. ಅದೇ ನಾವು ಆದನ್ನು ಧಿಕ್ಕರಿಸಿ ನಿಂತರೆ ನಮ್ಮ ದಾರಿಗೆ ಅವರೂ ಬರುತ್ತಾರೆ ಎಂಬುದಕ್ಕೆ ಈ ಶ್ರೀರಾಮ ನವಮಿ ಸ್ಟ್ರೈಕ್ ಜ್ವಲಂತ ಉದಾಹರಣೆಯಾಗಿತ್ತು.

ram4ಶ್ರೀರಾಮ ನವಮಿಯನ್ನು ನಮ್ಮ ಕಛೇರಿಯಲ್ಲಿ ಮಾಡುತ್ತಿದ್ದಂತೆಯೇ ಸದ್ದಿಲ್ಲದೇ ನಮ್ಮ ಕಛೇರಿಯಲ್ಲಿ ಹಿಂದೂ ವಾತಾವರಣ ಮೂಡಿದ್ದಲ್ಲದೇ, ನಮ್ಮ ಯಾವುದೇ ಹಿಂದೂ ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಇಟ್ಟು ಕೊಳ್ಳದಿದ್ದಲ್ಲಿ ಅಥವಾ ಕೈಗೆ ಬಳೇ ಹಾಕಿಕೊಂಡು ಬಾರದೇ ಇದ್ದು, ಅಕಸ್ಮಾತ್ ಅದನ್ನು ನಾನೇದಾದರೂ ಗಮನಿಸಿದಲ್ಲಿ ಕೂಡಲೇ ಹೋ!! ಸಾರಿ ಸಾರಿ ಎಲ್ಲೋ ಬಿದ್ದು ಹೋಗಿದೆ ಎಂದು ಹೇಳಿ ಮತ್ತೆ ಹಣೆಗೆ ಬಿಂದಿ ಇಟ್ಟುಕೊಳ್ಳುವಷ್ಟರ ಮಟ್ಟಿಗಿನ ವಾತಾವರಣ ಸೃಷ್ಟಿಯಾಗಿತ್ತು. . ಇವೆಲ್ಲವೂ ಆಗ್ರಹ ಪೂರ್ವಕವಾಗಿಯೋ ಇಲ್ಲವೇ ಬಲವಂತವಾಗಿ ಹೇರದೇ ಪ್ರೀತಿ ಪೂರ್ವಕವಾಗಿ ಹೇಳಿದ ಪರಿಣಾಮವಾಗಿತ್ತು. ಅರೇ ಗಂಡಸಾಗಿ ನಾನೇ ಹಣೆಗೆ ತಪ್ಪದೇ ಕುಂಕುಮ ಇಟ್ಟು ಕೊಳ್ಳುತ್ತೇನೆ. ಕಿವಿಗೆ ಕರ್ಣ ಕುಂಡಲಗಳಿವೆ. ಸಣ್ಣದಾದ ಶಿಖೆ ಇದೆ. ಇನ್ನು ಹೆಣ್ಣು ಮಕ್ಕಳಾಗಿ ನೀವೇ ಇಟ್ಟು ಕೊಳ್ಳದೇ ಹೋದರೆ ಹೇಗೇ ಎಂದು ಭಾವನಾತ್ಮಕವಾಗಿ ಅವರನ್ನು ಕಿಚಾಯಿಸುತ್ತಿದ್ದೆ. ಆರಂಭದಲ್ಲಿ ಒಂದಿಬ್ಬರು ಕಮಿಕ್ ಕಿಮಿಕ್ ಎಂದರೂ ನಂತರ ಅವರಿಗೆ ನಮ್ಮ ಭಾವನೆಗಳು ಅರ್ಥವಾಗಿ ಮನಃಪೂರ್ವಕವಾಗಿ ಅವರೆಲ್ಲರೂ ಸ್ಪಂದಿಸಿದ್ದರು.

ಸುಮಾರು ಹತ್ತು ವರ್ಷಗಳ ಕಾಲ ಆ ಕಂಪನಿಯಲ್ಲಿ ಕೆಲಸ ಮಾಡಿ ಆ ಕಂಪನಿ ಬಿಟ್ಟು ಸುಮಾರು ಹತ್ತು ವರ್ಷಗಳಾದರೂ ಇಂದಿಗೂ ಆ ಕಂಪನಿಯ ಮಾಜೀ ಸಯೋದ್ಯೋಗಿಗಳ ಪ್ರತಿಯೊಂದು ಶುಭ ಮತ್ತು ಅಶುಭಕಾರ್ಯಗಳಲ್ಲಿ ಬಹುತೇಕರೆಲ್ಲರೂ ಭಾಗಿಗಳಾಗುವ ಮೂಲಕ ಅದೇ ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಂಡು ಬೆಳಸಿಕೊಂಡು ಹೋಗಿದ್ದೇವೆ ಮತ್ತು ಪ್ರತೀ ಬಾರಿ ಭೇಟಿಯಾದಾಗಲೂ ನಮ್ಮ ಶ್ರೀರಾಮನವಮಿಯ ಆಚರಣೆಯ ಬಗ್ಗೆ ಒಂದಾದರೂ ಮಾತಾನಾಡುತ್ತೇವೆ. ಹೀಗೆ ಅಂದು ಗಟ್ಟಿ ಮನಸ್ಸು ಮಾಡಿ ಎಲ್ಲರೂ ಸೇರಿ ಮಾಡಿದ್ದ ಶ್ರೀರಾಮನವಮಿ ಸ್ಟ್ರೈಕ್ ಇಂದಿಗೂ ಉತ್ತಮ ಫಲಿತಾಂಶವನ್ನು ನೀಡುತ್ತಲಿದೆ. ನಾವು ಎಲ್ಲೇ ಇರಲಿ, ನಾವೆಲ್ಲರೂ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗಳ ರಾಯಭಾರಿಗಳು ಹಾಗಾಗಿ ಅದನ್ನು ಉಳಿಸಿ ಬೆಳಸುವ ಗುರುತರ ಜವಾಬ್ಧರಿ ನಮ್ಮದೇ ಅಗಿರುತ್ತದೆ ಎನ್ನುವುದನ್ನು ಆ ಶ್ರೀರಾಮ ನವಮಿ ನೆನಪಿಸುತ್ತಲೇ ಇರುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

ವಂಶವಾಹಿ ಸಂಸ್ಕಾರ (ಜೀನ್ಸ್)

ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.

ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ. ಇವೆಲ್ಲವೂ ನಮ್ಮ ಹಿರಿಯರಿಂದ ಬಂದ ಬಳುವಳಿ ಎಂದರೂ ತಪ್ಪಾಗಲಾರದು. ತಾತನಿಂದ ಅಪ್ಪಾ ಸಂಗೀತ, ಸಾಹಿತ್ಯ ಮತ್ತು ಗಮಕ ಕಲೆಯನ್ನು ಕಲಿತರೇ, ನನಗೆ ಭಗವದ್ಗೀತೆಯ ಧ್ಯಾನ ಶ್ಲೋಕ ಕಲಿಸಿದ್ದೇ ನಮ್ಮ ತಾತನವರು. ಇನ್ನು ತಾತ ಮತ್ತು ತಂದೆಯವಂತೆ ಗಮಕ ಕಲೆಯ ಪದ್ಯ ಒಲಿಯದಿದ್ದರೂ ಗದ್ಯದ ಬರವಣಿಗೆ ಬಂದಿರುವುದು ತಾತ ಮತ್ತು ಅಪ್ಪನಿಂದಲೇ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ನಾವು ಚಿಕ್ಕವರಿದ್ದಾಗ ಈಗಿನಂತೆ ಟಿವಿ ಇರಲಿಲ್ಲ. ವಿಡೀಯೋ ಗೇಮ್ ಮತ್ತು ಮೊಬೈಲ್ ಗೇಮ್ಗಳ ಕಲ್ಪನೆಯೇ ಇರಲಿಲ್ಲ.

ಸಂಜೆ 6:30 ಕ್ಕೆ ಸರಿಯಾಗಿ ಕೈ ಕಾಲು ಮುಖ ತೊಳೆದುಕೊಂಡು ಹಣೆಗೆ ಕುಂಕುಮ ಇಟ್ಟುಕೊಂಡು ದೇವರ ಮುಂದೆ ಕುಳಿತುಕೊಂಡು ಮಕ್ಕಳೆಲ್ಲರೂ ಬಾಯಿ ಪಾಠ ಒಪ್ಪಿಸಲೇ ಬೇಕಿತ್ತು. ಸಣ್ಣ ಸಣ್ಣ ಶ್ಲೋಕಗಳಿಂದ ಹಿಡಿದು, 1-20ರ ವರೆಗಿನ ಮಗ್ಗಿ, ಎಲ್ಲಾ ವಾರಗಳು, ಮಾಸಗಳು, ನಕ್ಷತ್ರಗಳು, ತಿಥಿ ಹೀಗೆ ಎಲ್ಲವನ್ನೂ ಕಂಠಸ್ಥ ಮಾಡಿಸಿದ್ದರು. ನನಗೆ ಇನ್ನೂ ಚೆನ್ನಾಗಿ ನೆನಪಿರುವಂತೆ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಹೇಳಿದ ನಂತರ ಶುಕ್ರವಾರ, ಶನಿವಾರ ಮತ್ತು ಭಾನುವಾರ ಎಂದು ಹೇಳಿ ಗುರುವಾರವನ್ನೇ ಅದೇಕೋ ಏನೋ ಮರೆತು ಬಿಡುತ್ತಿದ್ದೆ. ನನಗೆ ಗುರುವಾರವನ್ನು ನೆನಪಿಸಲು ಪಕ್ಕದ ಮನೆಯ ಗುರುವನ್ನು ನೆನಪಿಸಿಕೊಳ್ಳೋ, ನಿಮ್ಮ ಶಿಶುವಿಹಾರ ಟೀಚರ್ ನೆನಪಿಸಿಕೊಳ್ಳೋ ಎಂದು ಅದೆಷ್ಟು ಸಾರಿ ತಿದ್ದಿ ತೀಡಿ ಕಡೆಗೂ ಗುರುವಾರವನ್ನು ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಇರುವಂತೆ ಮಾಡುವುದಕ್ಕೆ ನನ್ನ ಅಪ್ಪಾ ಅಮ್ಮಾ ಪಟ್ಟ ಪರಿಶ್ರಮ ಇನ್ನೂ ಹಚ್ಚಹಸಿರಾಗಿಯೇ ಇದೆ.

ನಂತರ ಅಂದಿನ ದಿನದ ಮನೆಪಾಠವನ್ನೆಲ್ಲಾ ಮುಗಿಸಿದ ನಂತರ ರಾತ್ರಿ 9ಕ್ಕೆ ಸರಿಯಾಗಿ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿದ ನಂತರ 9.30ಕ್ಕೆ ಹಾಸಿಗೆ ಹಾಸಿ, ಪ್ರತಿದಿನವೂ ತಪ್ಪದೇ ರಾಮಾಯಣ, ಮಹಾಭಾರತ, ಮತ್ತು ದೇಶಭಕ್ತರ ಕಥೆಗಳನ್ನು ತಂದೆಯವರಿಂದ ಕೇಳಿದ ನನೆಪು ಇನ್ನು ಅಚ್ಚಳಿಯದೇ ಉಳಿದಿದೆ. ಮನುವಿನಿಂದ ರಾಮಾಯಣ ಆರಂಭವಾಗಿ ಲವಕುಶವರೆಗೂ ಮುಗಿಸುವಷ್ಟರಲ್ಲಿ ಐದಾರು ತಿಂಗಳುಗಳಾಗುತ್ತಿತ್ತು ನಂತರ ಶಂತನುವಿನಿಂದ ಆರಂಭವಾಗುವ ಮಹಾಭಾರತ ನಾನಾ ಕಥೆ ಉಪಕಥೆಗಳಿಂದ ಎಂಟು ಹತ್ತು ತಿಂಗಳವರೆಗೂ ಸಾಗುತ್ತಿತ್ತು. ಇದಾದ ನಂತರ ಮತ್ತೆ ರಾಮಾಯಣ ಆರಂಭ ಹೀಗೆ ಅದೆಷ್ಟು ಬಾರಿ ಹೇಳಿದ್ದಾರೋ ಲೆಕ್ಕವೇ ಇಟ್ಟಿರಲಿಲ್ಲ. ಅವರು ಪ್ರತೀ ಬಾರೀ ಹೇಳುವಾಗಲೂ ವಿಭಿನ್ನ ರೀತಿಯಾಗಿ ಕುತೂಹಲಕಾರಿಯಾಗಿ ಹೇಳುತ್ತಿದ್ದದ್ದಲ್ಲದೇ ಅಂದು ಕೇಳಿದ ಕಥೆಯ ಸಾರಾಂಶವನ್ನು ನಾವು ಪುಸ್ತಕವೊಂದರಲ್ಲಿ ಬರೆದಿಡಬೇಕಿತ್ತು. ಮಾರನೇಯ ದಿನ ಹಿಂದಿನ ದಿನದ ಸಾರಾಂಶ ಓದಿಸಿದ ನಂತರವೇ ಕಥೆಯನ್ನು ಮುಂದುವರೆಸುವ ಮೂಲಕ ಆ ಎಲ್ಲಾ ಕಥೆಗಳು ಪುಸ್ತಕದಿಂದ ನಮ್ಮ ಮಸ್ತಕಕ್ಕೆ ಅಚ್ಚಾಗುವಂತೆ ಮಾಡಿದ್ದರು ನಮ್ಮ ತಂದೆಯವರು.

ಇಷ್ಟೆಲ್ಲಾ ಪೀಠಿಕೆ ಏಕೆ ಹೇಳ ಬೇಕಾಯಿತೆಂದರೆ ಮೊನ್ನೆ ನಡೆದ ಸಂಕ್ರಾಂತಿಯಂದು ನಮ್ಮಕಿ ಅವರೇಕಾಯಿ, ಸಿಹಿಗೆಣಸು ಮತ್ತು ಹಸೀ ಕಡಲೇ ಕಾಯಿಯನ್ನು ಬೇಯಿಸಿಟ್ಟಿದ್ದರು. ಬೇಯಿಸಿದ ಗೆಣಸು ಮತ್ತು ಅವರೇ ಕಾಯಿಯನ್ನು ಹಬ್ಬದ ದಿನದಂದೇ ತಿಂದಿದ್ದೆನಾದರೂ ಕಡಲೇಕಾಯಿ ಬಿಡಿಸಿಕೊಂಡು ತಿನ್ನುವ ಪುರುಸೊತ್ತಿರದೇ ಹಾಗೆಯೇ ಸುಮ್ಮನಾಗಿದ್ದೆ. ಪುರುಸೊತ್ತು ಇಲ್ಲಾ ಎನ್ನುವುದಕ್ಕಿಂತಲೂ ಕಡಲೇಕಾಯಿ ಸುಲಿದು ತಿನ್ನಲು ಸೋಮಾರಿತನ ಎಂದರೂ ತಪ್ಪಾಗದು. ಜನವರಿ 15 ರಂದು ಸಂಜೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಬೈಠಕ್ ಮುಗಿಸಿ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಊಟಕ್ಕೆ ಕುಳಿತುಕೊಂಡಾಗ ಒಂದು ಬಟ್ಟಲು ಬೇಯಿಸಿದ ಬಿಡಿಸಿದ ಕಡಲೇ ಕಾಯಿ ಬೀಜಗಳನ್ನು ನನ್ನ ಮುಂದಿಟ್ಟಾಗಾ ನನಗೆ ಸಂತೋಷ ಮತ್ತು ಆಶ್ಚರ್ಯವಾಯಿತು. ಅರೇ!! ನೀನಾ ಇಷ್ಟೋಂದು ಕಡಲೇ ಕಾಯಿಬೀಜವನ್ನು ಸುಲಿದಿದ್ದು? ಎಂದು ಮಡದಿಯನ್ನು ಕೇಳಿದರೇ ಇಲ್ಲಾ, ನಿಮ್ಮಪ್ಪ ಬಿಡಿಸಿಟ್ರೂ ಎಂದಾಗ, ಅರೇ ಇದೇನಿದು ಹೀಗೆ ಬಯ್ತಾ ಇದ್ದಾಳಪ್ಪಾ ಎಂದು ಕೊಂಡೆ. ಕೂಡಲೇ ನನ್ನ ಭಾವನೆಗಳನ್ನು ಅರ್ಧ ಮಾಡಿಕೊಂಡ ನನ್ನಾಕಿ ಅವರ ತಾತನ ತದ್ರೂಪು ನಿಮ್ಮ ಮಗ ನಿಮಗೇ ಅಂತ ಬಿಡಿಸಿ ಇಟ್ಟಿದ್ದಾನೇ ನೋಡಿ ಎಂದಾಗ, ನನಗೇ ಅರಿವಿಲ್ಲದಂತೆಯೇ ಗಂಟಲು ಬಿಗಿಯಾಗಿ ಹೃದಯ ತುಂಬಿ ಹೋಗಿ ಮಾತೇ ಬಾರದಂತಾಯಿತು. ಕೂಡಲೇ ಮಗನಿಗೆ ಧನ್ಯವಾದಗಳನ್ನು ಹೇಳಿದಾಗ ಅವನಿಗೂ ಆಶ್ವರ್ಯ.

ನಿಜ ಹೇಳಬೇಕೆಂದರೆ, ನಮ್ಮನೆಯಲ್ಲಿ ಕಡಲೇಕಾಯಿ ತಂದಾಗ ಅಥವಾ ದೂರ ಪ್ರಯಾಣದ ಸಮಯದ ಮಧ್ಯದಲ್ಲಿ ಕಡಲೇ ಕಾಯಿಯನ್ನು ಕೊಂಡಾಗಲೆಲ್ಲಾ ನಮ್ಮ ತಂದೆಯವರು, ಅತ್ಯಂತ ಜತನದಿಂದ ಕಡಲೇಕಾಯಿಗಳನ್ನು ಬಿಡಿಸಿ, ವಾಹನ ಚಲಾಯಿಸುತ್ತಿದ್ದ ನನಗೇ ಮಗೂ ತಗೊಳ್ಳೋ ಎಂದು ಕೊಡುತ್ತಿದ್ದರು. ಬಹುಶಃ ತಾತನನ್ನೂ ನೋಡಿಯೋ ಇಲ್ಲವೇ ವಂಶವಾಹಿಯಾಗಿಯೋ ಅವರ ಗುಣಗಳು ನನ್ನ ಮಗನಲ್ಲೂ ಹಾಗೆಯೇ ಹರಿದು ಬಂದಿರುವುದಕ್ಕೆ ಹೃದಯಸ್ಪರ್ಶಿ ಪ್ರಸಂಗ ಸಾಕ್ಷಿಯಾಯಿತು.

ಸುಮಾರು ಹದಿನಾಲ್ಕು- ಹದಿನೈದು ವರ್ಷಗಳ ಕಾಲ ತಾತನ ಆರೈಕೆ ಪಡೆಯುವ ಅಪೂರ್ವ ಅವಕಾಶ ನಮ್ಮ ಮಕ್ಕಳಿಗೆ ಒದಗಿ ಬಂದಿದ್ದು ಅವರ ಸುಕೃತವೇ ಸರಿ. ನಮಗೆ ಪುರಾಣ ಕಥೆಗಳನ್ನು ಹೇಳಿದಂತೆಯೇ ಮೂಮ್ಮಕ್ಕಳಿಗೂ ಇಡೀ ರಾಮಾಯಣ ಮತ್ತು ಮಹಾಭಾರತ, ಭಗವದ್ಗೀತೆ ಶ್ಲೋಕಗಳಲ್ಲದೇ ಇನ್ನೂ ಹತ್ತು ಹಲವಾರು ಶ್ಲೋಕಗಳನ್ನು ಧಾರೆ ಎರೆದಿದ್ದಾರೆ. ನಮ್ಮ ಇಬ್ಬರು ಮಕ್ಕಳು ಎಂದಿಗೂ ಸಹಾ ರಾಮಾಯಣ ಮತ್ತು ಮಹಾಭಾರತದ ಯಾವುದೇ ಕಥೆ ಅಥವಾ ಅಲ್ಲಿರುವ ಪಾತ್ರಗಳನ್ನು ಥಟ್ಟನೇ ಹೇಳುತ್ತಾರೆ ಎನ್ನುವ ಹೆಮ್ಮೆ ನಮಗಿದೆ ಮತ್ತು ಅದರ ಸಂಪೂರ್ಣ ಶ್ರೇಯ ಅವರ ಅಜ್ಜಿ ಮತ್ತು ತಾತನವರಿಗೇ ಸಲ್ಲುತ್ತದೆ

ಮಗಳು ಭಾಗಶಃ ಅಜ್ಜಿಯ ಗುಣಗಳನ್ನೇ ಹೋಲುವಂತಿದ್ದರೆ, ಮಗ ಮಾತ್ರಾ ಗುಣ, ನಡವಳಿಕೆ, ಆಲೋಚನೆ ಎಲ್ಲದ್ದರಲ್ಲೂ ತಾತನದ್ದೇ ತದ್ರೂಪು. ಅವರಂತೆಯೇ, ಯಾವುದೇ ವಿಷಯವನ್ನು ಒಮ್ಮೆ ಕೇಳಿದರೆ ಸಾಕು ನೆನಪಿನಲ್ಲಿ ಇಟ್ಟು ಕೊಳ್ಳುವ, ತಂದೆಯವರ ಜೊತೆ ಮೈಸೂರಿನ ಅರಮನೆಯ ಸಂಗೀತ ಕಛೇರಿಯಲ್ಲಿ ಮೋರ್ಚಿಂಗ್ (ಅತ್ಯಂತ ಕ್ಲಿಷ್ಟಕರವಾದ ತಾಳವಾದ್ಯ) ನುಡಿಸುವುದನ್ನು ನೋಡಿ, ಆಕರ್ಷಿತರಾಗಿ ತಾವೇ ಸ್ವತಃ ಮೋರ್ಚಿಂಗ್ ನುಡಿಸುವುದನ್ನು ಕಲಿತಂತೆ ಅವರ ಮೊಮ್ಮಗ ಇಷ್ಟ ಪಟ್ಟು ಕಷ್ಟ ಪಟ್ಟು ಕೀಬೋರ್ಡ್ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ಅವನ ಆಲೋಚನಾ ಲಹರಿಗಳು, ಅವನು ಬೆನ್ನಹಿಂದೆ ಕೈ ಕಟ್ಟಿ ನಡೆಯುವುದು, ಟಿವಿ ನೋಡುವಾಗ. ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವ ಭಂಗಿ, ಸದಾ ಯಾವುದೋ ಹಾಡನ್ನು ಗುನುಗುತ್ತಿರುವುದು ಇಲ್ಲವೇ ತನ್ನಷ್ಟಕ್ಕೆ ತಾನೇ ಸಣ್ಣದಾಗಿ ವಿಸಿಲ್ ಹಾಕುವುದು ಹೀಗೆ ಎಲ್ಲದರಲ್ಲೂ ತಾತನದ್ದೇ ಅನುಕರಣೆ.

ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ತಂದೆ ತಾಯಿಯರು ಇಂದು ನಮ್ಮನ್ನಗಲಿದ್ದರೂ ಅವರನ್ನು ಅವರ ಪ್ರತಿರೂಪಗಳಾದ ಅವರ ಮೊಮ್ಮಗಳು ಮತ್ತು ಮೊಮ್ಮಗನ ರೂಪದಲ್ಲಿ ಕಾಣುತ್ತಿದ್ದೇವೆ. ಮಗಳು ಯಾವುದೋ ಸಣ್ಣ ಕಾರಣಕ್ಕೆ ಸರ್ ಎಂದು ಕೋಪ ಮಾಡಿಕೊಂಡು ಅಷ್ಟೇ ವೇಗದಲ್ಲಿ ಜರ್ ಎಂದು ಕೋಪ ತಣ್ಣಗಾದಾಗ ನಾವು ಅವಳಿಗೆ ಏನನ್ನೂ ಹೇಳದೇ, ಹಾಂ ಗೊತ್ತಾಯ್ತು, ಉಮಾಜ್ಜಿ ಮೈ ಮೇಲೆ ಬಂದು ಹೊದ್ರೂ ಅಂತಾ ರೇಗಿಸುತ್ತೇವೆ. ಅದೇ ರೀತಿ ನಮ್ಮ ಕೋಣೆಯಲ್ಲಿ ನಾನೂ ಮತ್ತು ನಮ್ಮಾಕಿ ಯಾವುದೋ ಗಹನವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದರೆ, ದೂರದ ತಾತನ ಕೋಣೆಯಲ್ಲಿಯೇ ಕುಳಿತುಕೊಂಡು ಅಲ್ಲಿಂದಲೇ ಇದ್ದಕ್ಕಿದ್ದಂತೆಯೇ ನಾವು ಮಾತನಾಡುತ್ತಿರುವ ವಿಷಯಕ್ಕೆ ತನ್ನ ಅಭಿಪ್ರಾಯವನ್ನು ಅಲ್ಲಿಂದಲೇ ತಿಳಿಸಿದಾಗ ಸಾಕು ಸಾಕು ಶಿವಮೂರ್ತಿಗಳೇ, ನೀವು ನಿಮ್ಮ ಪಾಡಿಗೆ ಓದಿಕೊಳ್ಳಿ ಎಂದು ಪ್ರೀತಿಯಿಂದ ಕಿಚಾಯಿಸುವುದೂ ಉಂಟು.

ಅದಕ್ಕೇ ಹೇಳೋದು ಒಂದು ಕುಟುಂಬ ಎಂದರೆ ಅದರಲ್ಲಿ ಕೇವಲ ಗಂಡ ಹೆಂಡತಿ ಮತ್ತು ಮಕ್ಕಳಲ್ಲದೇ, ಆ ಕುಟುಂಬದಲ್ಲಿ ಹಿರಿಯರೂ ಇದ್ದಲ್ಲಿ ನಿಜ ರೂಪದಲ್ಲಿ ಮನೆಯೇ ಮೊದಲ ಪಾಠ ಶಾಲೆಯಾಗಿ ಮಕ್ಕಳಿಗೆ ನಮ್ಮ ಸಂಪ್ರದಾಯ ಮತ್ತು ಸಂಸ್ಕಾರಗಳು ರೂಢಿಯಾಗುತ್ತದೆ. ತಂದೆ ತಾಯಿಯರಿಬ್ಬರೂ ಕೆಲಸಕ್ಕೆ ಹೋಗುವವರಾದರೆ ದಯವಿಟ್ಟು ಮಕ್ಕಳನ್ನು Day care or Play homeಗಳಿಗೆ ಸೇರಿಸಿ ಆಯಾಗಳ ಕೈಯ್ಯಲ್ಲಿ ನಮ್ಮ ಮಕ್ಕಳನ್ನು ಬೆಳಸದೇ, ನಮ್ಮದೇ ಕುಟುಂಬದ ಹಿರಿಯರ ಅಕ್ಕರೆಯಲ್ಲಿ ಬೆಳೆಯುವಂತಾದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪರೋಕ್ಷವಾಗಿ ಹೇಳಿಕೊಟ್ಟಂತಾಗುತ್ತದೆ. ಅದಕ್ಕೇ ಅಲ್ಲವೇ ನಮ್ಮ ಪೂರ್ವಜರು ಹೇಳುತ್ತಿದ್ದದ್ದು ವಂಶ ನೋಡಿ ಸಂಬಂಧ ಬೆಳೆಸು ಎಂದು.

ಏನಂತೀರೀ?
ನಿಮ್ಮವನೇ ಉಮಾಸುತ

ಕಾಲ ಹೀಗೇ  ಇರುವುದಿಲ್ಲ

ಸ್ವಲ್ಪ ದಿನಗಳಾದ ನಂತರ, ಯಾರೂ ನಮ್ಮಲ್ಲಿ ಈ ವಿಷಯಗಳ ಬಗ್ಗೆ ವಿಚಾರಿಸುವುದೇ ಇಲ್ಲಾ

 • ನೀವು ಎಷ್ಟು ಹಣ ಸಂಪಾದಿಸಿದ್ದೀರೀ?
 • ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?
 • ನಿಮ್ಮಲ್ಲಿ ಎಷ್ಟು ಮತ್ತು ಯಾವ ಕಾರುಗಳಿವೆ? ಅಂತಾ,

ಅದರ ಬದಲು ಎಲ್ಲರೂ ಕೇಳುವುದು ಕೇವಲ ಎರಡೇ ಪ್ರಶ್ನೆಗಳು

 • ನಿಮ್ಮ ಆರೋಗ್ಯ ಹೇಗಿದೆ?
 • ನಿಮ್ಮ ಮಕ್ಕಳು ಏನು ಮಾಡ್ತಾ ಇದ್ದಾರೆ?

ಹಾಗಾಗಿ ಈ ಕರೋನಾ ಲಾಕ್ ಡೊನ್ ಸಮಯದಲ್ಲಿ ಚೆನ್ನಾಗಿ ಊಟ ತಿಂಡಿ ಮಾಡಿ, ಸ್ವಲ್ಪ ವ್ಯಾಯಾಮಾನೂ ಮಾಡಿ , ಮನೆಯಿಂದ ಹೊರಗೆ ಬರದೇ, ಮನೆಯಲ್ಲಿಯೇ ಲವಲವಿಕೆಯಿಂದ  ಮಡದಿ ಮಕ್ಕಳೊಂದಿಗೆ  ಚಟುವಟಿಕೆಯಿಂದ ಸಂತೋಷವಾಗಿ ಕಾಲ ಕಳೆಯಿರಿ. ಈ ಸಮಯದಲ್ಲಿ ಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ಕಲಿಸಿಕೊಡಿ. ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪರಿಚಯಿಸಿ. ಏಕಂದರೆ ಇಂದಿನ ಮಕ್ಕಳೇ ನಾಳೇ ನಾಡಿನ ಸತ್ಪ್ರಜೆಗಳು. ಯಥಾ ರಾಜಾ ತಥಾ ಪ್ರಜಾ ಎನ್ನುವುದರ ಜೊತೆಗೆ ಯಥಾ ಪ್ರಜಾ ತಥಾ ದೇಶ ಎನ್ನುವುದೂ ಈಗ ಅನ್ವಯವಾಗುವ ಹೊಸಾ ಮಾತು

ಆರೋಗ್ಯ  ಇದ್ರೇ, ಹಣ ಸಂಪಾದನೆ ಮಾಡ ಬಹುದೇ  ಹೊರತು,

ಹಣದಿಂದ ಆರೋಗ್ಯವನ್ನು  ಖಂಡಿತವಾಗಿಯೂ ಕೊಳ್ಳಲಾಗುವುದಿಲ್ಲ.

kala

ಏಕೆಂದರೆ,  ಕಾಲ ಹೀಗೇ  ಇರುವುದಿಲ್ಲ. ಸದಾಕಾಲವೂ ಬದಲಾಗುತ್ತಲೇ ಇರುತ್ತದೆ.

 

 

ಏನಂತೀರೀ?

ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು

ವಿದ್ಯಾರಣ್ಯಪುರ ಮಂಥನದ  ಹನ್ನೊಂದನೆಯ ಆವೃತ್ತಿ  ನಿಗಧಿಯಾಗಿದ್ದಂತೆ, ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ  ಶ್ರೀ  ಶ್ರಿಕಂಠ ಬಾಳಗಂಚಿ (ಹವ್ಯಾಸಿ ಬರಹಗಾರರು, https://enantheeri.com) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೂ ಕರೆಯುತ್ತಾರೆ.’ಸನಾತನ’ಎಂದರೆ ಎಂದೂ ಅಳಿಯದ,ಚಿರಂತನ,ನಿರಂತರವಾದ ಎಂದರ್ಥ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲದಿರುವುದು ವೈಶಿಷ್ಟ್ಯದ ಸಂಗತಿ. ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದವಾಗಿದೆ. ವಿಶ್ವದ ಮೂರನೇ ಅತಿ ದೊಡ್ಡ ಧರ್ಮ ಇದು ಎಂದು ಪರಿಗಣಿಸಲ್ಪಡುತ್ತಿದೆ.

ಹಿಂದೂ ಎನ್ನುವುದು ಇತರ ಧರ್ಮಗಳಾದ ಮುಸ್ಲಿಂ,ಬೌದ್ಧ,ಜೈನ ಇತ್ಯಾದಿಗಳಂತೆ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ,ಒಂದು ಸಮುದಾಯದ ಹೆಸರಾಗಿದೆ.ಸಿಂಧೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು,ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ.

ಯಾವುದೇ ಒಂದು ಧರ್ಮ  ಅಥವಾ ಪಂಗಡ ಬೆಳೆಯುವುದು ಒಂದು  ನದೀ ಪಾತ್ರದ ಸುತ್ತ ಮುತ್ತಲೇ.  ಅದೇ ರೀತಿ ಊರುಗಳಲ್ಲಿಯೂ ಹಿಂದಿನ ಕಾಲದಲ್ಲಿ ಒಂದು ಕೆರೆ ಕಟ್ಟೆ ಭಾವಿಗಳನ್ನು ಗಿರಕಿ ಹೊಡೆಯುತ್ತಲೇ ಊರು ಬೆಳೆಯುತ್ತಿತ್ತು  ಮತ್ತು ಅಲ್ಲಿನ ಹವಾಮಾನದ ಅನುಗುಣವಾಗಿ ಅಲ್ಲಿನ ಆಚಾರ ವಿಛಾರ ಪದ್ದತಿಗಳು ರೂಢಿಯಲ್ಲಿ ಬಂದವು

ಇಂದಿನ ವಿಷಯ ನೋಡಲು ಅತ್ಯಂತ ಸರಳವಾಗಿ ಕಂಡರೂ ಅದನ್ನು ಅರಿವು ಮಾಡಿಕೊಳ್ಳಲು ಒಳಹೊಕ್ಕಂತೆಲ್ಲಾ ಅಗಾಧವಾದ ಆಲದ ಮರದಂತಿದೆ. ಹಾಗಾಗಿ ಅದನ್ನು ಸರಳವಾಗಿ ಒಂದು ದಿನದ ಆರಂಭದಿಂದ ಹಿಡಿದು, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಊಟ ಮಾಡಿ ಮಲಗುವ ವರೆಗಿನ  ಆಚಾರ ಪದ್ದತಿಗಳು ಅಂದು ಹೇಗಿದ್ದವು ಮತ್ತು ಇಂದು ಹೇಗಿದೆ  ಎಂಬುದನ್ನು ಒಮ್ಮೆ ಮೆಲಕು ಹಾಕೋಣ.

ಒಂದು ದಿನನಲ್ಲಿ ನಡೆತ್ತಿದ್ದ ಪ್ರತಿಯೊಂದು ಪ್ರಕ್ರಿಯೆಗಳು ಮತ್ತು ಅದರ ಮಹತ್ವವೇನು  ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಕಾರಣಗಳು ಏನಿರಬಹುದು ಎಂದು ತಿಳಿಯೋಣ.

ಸೂರ್ಯ ಬದುಕಿನ ಚೇತನ.  ಸೂರ್ಯನ ಬೆಳೆಕಿನಿಂದಲೇ ಜಗ ಬೆಳಗುವುದು ಮತ್ತು ಸಕಲ ಜೀವರಾಶಿಗಳಿಗೆ ಶಕ್ತಿ ಒದುಗುವುದು

ಅಂತಹ ಸೂರ್ಯ ಮೂಡಣದಲ್ಲಿ ಉದಯವಾಗುವ  ಹೊತ್ತಿಗೆ ಮೆನೆಯಲ್ಲಿ ಮೊದಲು ಏಳುವವಳೇ ಆ ಮನೆಯ ಒಡತಿ ಮಹಾ ತಾಯಿ.

ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಅತ್ಯಂತ ಗೌರವ ಮತ್ತು ಎತ್ತರದ ಸ್ಥಾನಮಾನವನ್ನು ನೀಡಿದ್ದೇವೆ. ಇಂದು ಲೋಕವೆಲ್ಲಾ ಮಹಿಳಾ ಸಬಲೀಕರಣ,  ಮಹಿಳೆಯರು ಮತ್ತು ಪುರುಷರು ಸರಿಸಮಾನರು ಎಂದು ವಾದ ಮಾಡುತ್ತಲೇ ಇದ್ದರೇ ನಾವು ಅಂದಿನ ಕಾಲದಲ್ಲಿಯೇ  ಆಕೆಯನ್ನು ಶಕ್ತಿ ದೇವತೇ ಎಂದೇ ಸಂಭೋದಿಸಿದ್ದೇವೆ. ಪ್ರತಿಯೊಂದು ಬಾರಿ ದುಷ್ಟ ಶಿಕ್ಷಣವಾಗಬೇಕಾದರೂ ನಾವು ದೇವಿಯನ್ನೇ ಅವಲಿಂಭಿಸಿದ್ದೇವೆ. ಉದಾ:  ರಾಕ್ಷಸ ಮಹಿಷನನ್ನು ಸಂಹರಿಸಲು  ತಾಯಿ ದುರ್ಗೆ ಮಹಿಷಾಸುರ ಮರ್ಧಿನಿಯ ರೂಪ ತಾಳಿದಳು.

ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ.

ಅದೇ ರೀತಿ ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ ಸ್ತ್ರೀಯನ್ನು ದೂಷಣೆ ಮಾಡಿದ್ದಲ್ಲಿ ಸಮಾಜದ ನಾಶ ಕಾಣಬಹುದು ಎಂದು ಎಚ್ಚರಿಸಿದ್ದಾರೆ ನಮ್ಮ ಹಿರಿಯರು. ಇಡೀ ರಾಮಾಯಣ ಮತ್ತು  ಮಹಾಭಾರತದ ಯುದ್ಧ ನಡೆದದ್ದೇ ಸ್ರೀಯನ್ನು ದೂಷಣೆ ಮಾಡಿರುವುದಕ್ಕೆ . ಇಡೀ ರಾಮಾಯಣ ಕಾರಣವಾಗಿದ್ದೇ ಸೀತಾಪರಣ ಅದೇ ರೀತಿ ಮಹಾಭಾರತದ ಕುರುಕ್ಷೇತ್ರ ನಡೆದದ್ದೇ ದ್ರೌಪತಿಯ ವಸ್ತ್ರಾಭರಣದ ಸೇಡನ್ನು ತೀರಿಸಿಕೊಳ್ಳಲು ಎಂಬುದು ಗಮನಾರ್ಯವಾಗಿದೆ

ಅಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿದ್ದರೆ, ಹೆಂಗಸರು ಮನೆಯಲ್ಲಿಯೇ ಕುಳಿತುಕೊಂಡು ಅವರಿಗಿಂತಲೂ ಹೆಚ್ಚಾಗಿಯೇ ದುಡಿಯುತ್ತಿದ್ದಳು ಮತ್ತು ಆ ಮನೆಯ ಸಂಪತ್ತಿನ   ಸಂಪೂರ್ಣ ನಿರ್ವಹಣೆ ಮನೆಯ ಹಿರಿಯ ಹೆಂಗಸಿನ ಕೈಯಲ್ಲಿಯೇ ಇರುತ್ತಿತ್ತು . ನಾವೆಲ್ಲಾ ಗಮನಿಸಿರಬಹುದು  ಮನೆಯ ತಿಜೋರಿಯ ಕೀಲಿಗಳು  ಹೆಂಗಸರ ಸೆರಗಿನಲ್ಲಿಯೇ ಭದ್ರವಾಗಿರುತ್ತಿದ್ದವು.  ಅದು ತಲಾತಲಾಂತರದಿಂದ ಅತ್ತೆಯಿಂದ ಸೊಸೆಗೆ ಹಸ್ತಾಂತರವಾಗುತ್ತಿತ್ತೇ ವಿನಃ ಅದರ ಮಧ್ಯೆ ಪುರುಷರ ಪಾತ್ರವೆಲ್ಲಾ ಗೌಣವಾಗಿರುತ್ತಿತ್ತು.

ಅಂತಹ ತಾಯಿ  ಸೂರ್ಯ ಉದಯಿಸುವ ಮೊದಲೇ ಎದ್ದು  ಬಲ ಪಕ್ಕಕ್ಕೆ ಹೊರಳಿ ಎದ್ದು ಎರಡೂ ಕೈಗಳನ್ನೂ ಉಜ್ಜಿ ನೋಡಿ ಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರ ದರ್ಶನಂ ಎಂದು ಸಕಲ ದೇವಿಯರನ್ನು ಪ್ರಾರ್ಥನೆ ಮಾಡಿಕೊಂಡೇ  ಏಳುತ್ತಾಳೆ.

ಆದರೆ  ಇಂದು  ಬಹುತೇಕರು ಮಲಗುವ ಮುನ್ನ ಹಾಸಿಗೆಯ ಪಕ್ಕದಲ್ಲೇ ಮೊಬೈಲ್ ಚಾರ್ಜ್ ಹಾಕಿಟ್ಟು ಎದ್ದ ಕೂಡಲೇ  ದೇವರನ್ನು ನೆನೆಯುವುದೋ ಇಲ್ಲವೇ ನೋಡುವುದಿರಲಿ,  ಫೇಸ್ ಬುಕ್ ಮತ್ತು ವ್ಯಾಟ್ಸಾಪ್ ಇಲ್ಲವೇ ಇನ್ಸ್ತಾಗ್ರಾಮ್ ನೋಡಿಯೇ  ಏಳುತ್ತಿರುವುದು ನಿಜಕ್ಕೂ ದುಃಖಕರ

ನಮಗೆಲ್ಲಾ ತಿಳಿದಿರುವಂತೆ ನಮ್ಮ ಹೃದಯ ಎಡಭಾಗದಲ್ಲಿರುತ್ತದೆ ಮತ್ತು ಮಲಗಿರುವ ಸಮಯದಲ್ಲಿ ಇಡೀ ದೇಹ ಸುಮಾರು ಏಳೆಂಟು ಗಂಟೆ  ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಒಮ್ಮೆಲ್ಲೆ ಎಡಭಾಗದಲ್ಲಿ ಎದ್ದರೆ ಅನಗತ್ಯವಾಗಿ ಹೃದಯದ ಮೇಲೆ ಭಾರ ಹಾಕಬಾರದು ಮತ್ತು  ಅದರಿಂದ ಹೃದಯಕ್ಕೆ ಧಕ್ಕೆಯಾಗವಾದೆನ್ನುವ  ಕಾರಣ ಬಲ ಭಾಗದಲ್ಲಿ ಎದ್ದು ಎರಡೂ ಕೈಗಳನ್ನು ಪರಸ್ಪರ ಉಜ್ಜಿ ಶಾಖವನ್ನು ಉತ್ಪತ್ತಿಸಿ ಅದನ್ನು ಮುಖ ಮತ್ತು ಎರಡೂ ಕಿವಿಗಳ ಮೇಲೆ ಒತ್ತಿಕೊಂಡು ಕೆಲಸ ಆರಂಭಿಸುತ್ತೇವೆ

ಬೆಳಗಿನ ಶೌಚ ಕಾರ್ಯಕ್ರಮಗಳನ್ನು ಮುಗಿಸಿ ಕೂಡಲೇ ಬರುವುದೇ ಮನೆಯ ಮುಂಬಾಗದ ಸ್ವಚ್ಚತೆಗಾಗಿ. ಸಾಧಾರಣವಾಗಿ ಮನೆ ಹೇಗಿಟ್ಟುಕೊಂಡಿದ್ದಾರೆ ಎಂದು ಯಾರಾದರೂ ವಿಚಾರಿಸಿದರೆ,   ಮನೆ ಒಳ್ಳೇ ಕನ್ನಡಿ ಇಟ್ಟು ಕೊಂಡ ಹಾಗೆ ಇಟ್ಟು ಕೊಂಡಿದ್ದಾರೆ ಎನ್ನುವುದು ವಾಡಿಕೆ. ಕನ್ನಡಿ ನಮ್ಮ ಪ್ರತಿಬಿಂಬವನ್ನು ಸೂಚಿಸುತ್ತದೆ, ನಾವು ಹೇಗಿರುತ್ತೇವೆಯೋ ಅದನ್ನು  ಯಥಾವತ್ತಾಗಿ ತೋರಿಸುವುದೇ ಕನ್ನಡಿ ಅದರಲ್ಲಿ ಯಾವ ಮುಚ್ಚುಮರೆ ಇರುವುದಿಲ್ಲ ಹಾಗಾಗಿ ಕನ್ನಡಿ ಮುಂದೆ ಹೋದೊಡನೆಯೇ ಎಲ್ಲರೂ ತಮ್ಮ ಮುಖವನ್ನು ಆದಷ್ಟು ತಿದ್ದಿ ತೀಡಿ ಕೊಳ್ಳುತ್ತೇವೆ ಅಂತೆಯೇ ಮನೆಯನ್ನೂ ಸಹಾ ಚೆನ್ನಾಗಿ  ಗುಡಿಸಿ ಯಾವುದೇ ಕಸಕಡ್ಡಿಗಳು ಇಲ್ಲದಂತೆ ತೆಗೆದು ಅದಕ್ಕೆ ಸಗಣಿಯಿಂದ ಸಾರಿಸುತ್ತಿದ್ದರು. ಗೋಮೂತ್ರ ಮತ್ತು ಗೋಮಯ ಒಂದು ರೀತಿಯ ಕೀಟನಾಶಕಗಳು ಹಾಗಾಗಿ ಮನೆಗೆ ಯಾವುದೇ ಕೀಟನಾಶಕಗಳು ಬಾರದಂತೆ ನೈಸರ್ಗಿಕವಾಗಿಯೇ ತಡೆಯುತ್ತಿದ್ದೆವು.

ತಮಾಷಿಗಾಗಿ ಹೇಳಬೇಕೆಂದರೆ ಮುಸಲ್ಮಾನರ ಮನೆಯ ಮುಂಭಾಗ ಮತ್ತು  ಹಿಂದೂಗಳ ಮನೆಯ ಹಿಂಭಾಗ ನೋಡುವುದಕ್ಕೆ ಹೋಗಬಾರದಂತೆ. ಏಕೆಂದರೆ ಎರಡೂ ಪರಮ ಗಲೀಜಿನ ಸ್ಥಳ ವಾಗಿರುತ್ತದೆ ಎನ್ನುವುದು ಕೆಲವರ ಅಂಬೋಣ.

ಇನ್ನು ರಂಗೋಲಿ. ಅದನ್ನು ರಂಗ ನೀ ಒಲಿ ಎಂದೂ ಅರ್ಥೈಸುತ್ತಾರೆ.  ಇದು ಮಹಿಳೆಯರ ಸೃಜನಶೀಲತೆಯನ್ನು ಎತ್ತಿ ತೋರಿಸುವ ಸಾಧನವೇ ಹೌದು. ನಾವೆಲ್ಲರೂ ಸುಮ್ಮನೆ ಹೋಗುವಾಗ ಯಾರ ಮನೆಯ ಮುಂದಾದರೂ ರಂಗೋಲಿ ಚೆನ್ನಾಗಿದ್ದಾಗ ವಾಹ್!! ಎಷ್ಟು ಚೆನ್ನಾಗಿ ರಂಗೋಲಿ ಹಾಕಿದ್ದಾರೆ ಎಂದು ಪ್ರಶಂಸಿಸುತ್ತೇವೆ. ಅಂದರೆ  ಅದು ಆ ಮನೆಯಲ್ಲಿರುವ ಹೆಂಗಸು ಅತ್ಯಂತ ಸೃಜನ ಶೀಲೆ ಮತ್ತು ಕಲಾವಂತಿಕೆ ತಿಳಿಯುತ್ತಿತ್ತು. ಹಾಗೆ ಮನೆಯ ಸುತ್ತಲೂ ಸಾರಣೆ ಸಾರಿಸುವುದು ಎಂದರೆ ಬಣ್ಣ ಬಣ್ಣದರೀತಿಯಲ್ಲಿ ಅಲಂಕಾರ ಮತ್ತು ಆಕೃತಿಗಳನ್ನು ಬಿಡಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಎತ್ತಿ ತೋರಿಸುತ್ತಿದ್ದರು.

ಇನ್ನು ಇಂದಿನ ರೀತಿಯಾಗಿ ರಂಗೋಲಿ ಮಣ್ಣನ್ನು ಬಳೆಸದೇ, ಅಂದು  ರಂಗೋಲಿಗೆ ಬಳೆಸುತ್ತಿದ್ದದ್ದು ಅಕ್ಕಿಯ ಹಿಟ್ಟು. ಈ  ಅಕ್ಕೀ ಹಿಟ್ಟು  ಪಕ್ಷಿಗಳು ಮತ್ತು ಕ್ರಿಮಿಕೀಟಗಳಿಗೆ ಆಹಾರವಾಗುತ್ತಿದ್ದಲ್ಲದೇ, ಅವುಗಳು ಅದನ್ನು ಅಲ್ಲಿಯೇ ತಿಂದು ಮನೆಯ ಒಳಗೆ ಪ್ರವೇಶಿಸುತ್ತಿರಲಿಲ್ಲ.

ಹಾಗೆ ರಂಗೋಲಿ ಇಟ್ಟು  ಮನೆಯೊಳಗೆ ಪ್ರವೇಶಿಸಲು ಮುಂಬಾಗಿಲ ಹೊಸ್ತಿಲನ್ನು ತಲೆ ಬಾಗಿಸಿ ಕೊಂಡು ದಾಟಬೇಕಿತ್ತು. ಅಂದೆಲ್ಲಾ ಬಾಗಿಲ ಎತ್ತರವನ್ನು ಕೇವಲ ಐದು ಅಡಿಗಳಷ್ಟು ಇದ್ದು  ಮನೆಗೆ ಬರುವವರೆಲ್ಲರೂ ತಗ್ಗೀ ಬಗ್ಗೀ ಬರಬೇಕು ಎಂಬುದಾಗಿತ್ತು. ಅದೇ ರೀತಿ ಬಾಗಿಲಿಗೆ ಮಾವಿನ ಸೊಪ್ಪಿನ ತೋರಣವನ್ನು ಕಟ್ಟಿರಲಾಗುತ್ತಿತ್ತು.  ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ  ಇಂಗಾಲದ ಡೈಆಕ್ಸೈಡನ್ನು  ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ  ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.  ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು  ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ  ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ  ಮಂಟಪದ ಸುತ್ತಮುತ್ತಲೂ  ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ   ಮಾವಿನ ಎಲೆಯನ್ನೇ  ತೋರಣವನ್ನಾಗಿ ಏಕೆ  ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ.  ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳೆಸುತ್ತೇವೆ.

ಇನ್ನು  ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ  ಮಾವಿನ ತೋರಣ ಕಟ್ಟುವುದರಿಂದ  ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ.  ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿಗಿದ್ದು ಆ ವ್ಯಕ್ತಿಯ ಮನಸ್ಸು  ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.

ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ  ಬೇವಿನ ಸೊಪ್ಪಿನ ಎಲೆ ಅಥವಾ  ಟೊಂಗೆಗಳನ್ನು ಸಿಕ್ಕಿಸುವುದರಿಂದ,  ಮಾವು ಮತ್ತು ಬೇವಿನ ಎಲೆಯಲ್ಲಿ  ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ,  ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ  ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.

ಮಾವಿನ ತೋರಣದ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ   ಇರುವಂತೆ  ಮಾಡಿ, ಅವುಗಳು  ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ.

ಇನ್ನು ಹೆಂಗಸರು ಈ ರೀತಿಯಾಗಿ ಮನೆ ಶುದ್ಧೀಕರಣ ಮಾಡುತ್ತಿದ್ದರೆ,  ಮನೆಯ ಗಂಡಸರು ತಮ್ಮ ಪ್ರಾಥರ್ವಿಧಿ ಮುಗಿಸಿ ಕೊಟ್ಟಿಗೆಗೆ ಹೋಗಿ ಸಗಣಿಯನ್ನು ಬಾಚಿ  ಅಲ್ಲೇ ಪಕ್ಕದಲ್ಲಿಯೇ ಇರುತ್ತಿದ್ದ  ತಿಪ್ಪೆಗೆ ಹಾಕಿ ಅದು ಮುಂದೇ ಗೊಬ್ಬರವಾಗುತ್ತದೆ. ಹೆಗಲಿನ ಮೇಲೆ ನೇಗಿಲು ಹೊತ್ತಿಕೊಂಡು ಕೃಷಿ ಪರಿಕರಗಳನ್ನೂ ತೆಗೆದುಕೊಂಡು ಎತ್ತುಗಳನ್ನು ಹೊಡೆದುಕೊಂಡು ತಮ್ಮ ಕೃಷಿ ಭೂಮಿಗೆ ಕೆಲಸ ಮಾಡಲು ಹೋಗುತ್ತಾರೆ. ಸೂರ್ಯನ ಝಳ ಹೆಚ್ಚಾಗುವ ಮುಂಚೆ ಬೆವರು ಸುರಿಯುವಷ್ಟು ದುಡಿಯುತ್ತಾರೆ. ಹಾಗಾಗಿ ಅವರೆಲ್ಲರೂ ಗಟ್ಟಿ ಮುಟ್ಟಾಗಿರುತ್ತಿದ್ದರು ಮತ್ತು ದೀರ್ಘಕಾಲ ಬಾಳಿ ಬಳುಕುತ್ತಿದ್ದರು. ಆದರೆ ಈಗ ಅದೇ ಜನಾ ಜಿಮ್ ಎಂದು ಒಂದೆರಡು ಗಂಟೆ ಬೆವರು ಸುರಿಸುತ್ತಾರೆ  ಅದರಿಂದ ದೇಹ ದಣಿವಾಗಬಹುದೇ ಹೊರತು ಇನ್ನೇನು ಪ್ರಯೋಜನವಾಗದು.

ಹೆಂಗಸರು ಹಸನಾಗಿ ಹಾಲು ಕರೆದು ನಂತರ ಸ್ನಾನ ಮಾಡಿ ಮನೆಯ ದೇವರಿಗೆ ಮತ್ತು ಮನೆಯ ಮುಂದಿನ ತುಳಸೀ ಕಟ್ಟೆಗೆ ಪೂಜೆ ಮಾಡಿ  ಅಡುಗೆ ಕಾರ್ಯದಲ್ಲಿ ಮಗ್ನರಾದರೆ, ಮನೆಯ ಇತರೇ ಹೆಣ್ಣು ಮಕ್ಕಳು ಅಂದಿನ ಅಡುಗೆ ಕೆಲಸಕ್ಕೆ ಬೇಕಾದ ತರಕಾರಿಗಳನ್ನು ತಮ್ಮ ಮನೆಯ ಹಿತ್ತಲಿನಿಂದಲೇ ತಂದು ಬಳಸುತ್ತಿದ್ದರು  ಆ ಹಿತ್ತಲು ಎಂತಹದ್ದು ಎಂದರೆ ಮನೆಯಲ್ಲಿ ಸ್ನಾನ ಮಾಡಿದ ನೀರು ಪಾತ್ರೆ ತೋಳೆದ ನೀರು ಸುಮ್ಮನೆ ಪೋಲಾಗದೇ ನೇರವಾಗಿ ಮನೆಯ ಹಿಂದಿನ  ತೋಟದಲ್ಲಿದ್ದ ಹೂವು ಹಣ್ಣುಗಳು ಮತ್ತು ತರಕಾರಿ ಗಿಡಗಳಿಗೆ ನೀರು ಉಣಿಸುತ್ತಿತ್ತು.  ಇಂದು ನಾವೆಲ್ಲಾ ನೀರು ಪೋಲು ಮಾಡಬೇಡಿ. ನೀರನ್ನು ಸದ್ಬಳಕೆ ಮಾಡಿ ಎಂದು ಬೊಬ್ಬೆ ಹೊಡೆಯುತ್ತಿದ್ದರೆ ನಮ್ಮ ಪೂರ್ವಜರು ಅದನ್ನಾಗಲೇ ಮಾಡಿ ತೋರಿಸಿಯೇ ಬಿಟ್ಟಿದ್ದರು.

ನನಗೇ ತಿಳಿದ ಮಟ್ಟಿಗೆ  ಬಹಳ ಇತ್ತೀಚಿನ ದಿನಗಳ ವರೆಗೂ ಬಾಳೇ ದಿಂಡು, ಬಾಳೇ ಹೂ, ಸೀಮೇ ಬದನೇ ಕಾಯಿ, ಕುಂಬಳಕಾಯಿ, ಕರಿಬೇವಿನ ಸೊಪ್ಪು, ವಿಳ್ಳೇದೆಲೆ,  ಪರಂಗೀ ಹಣ್ಣುಗಳನ್ನು  ನಾವು ಕೊಂಡು ತಿಂದ ನೆನಪೇ ಇಲ್ಲಾ. ಒಂದೋ ನಮ್ಮ ಮನೆಯ ಹಿತ್ತಲಿನಲ್ಲಿಯೇ ಬೆಳೆಯುತ್ತಿತ್ತು  ಇಲ್ಲವೇ ಬೆಳೆದವರು ಯಾರೋ ಮಹಾನುಭಾವರು ಕೊಡುತ್ತಿದ್ದರು.

ಮನೆಯ  ಉಳಿದ ಹಂಗಸರೂ ಶುಚಿವಂತರಾಗಿ ಮನೆಯ ಮುಂದಿನ ಭಾವಿಯಿಂದಲೂ ಇಲ್ಲವೇ  ಊರ ಹೊರಗಿನ ಸಿಹಿ ನೀರಿನ ಭಾವಿಯಿಂದ ತಲೆ ಮೇಲೆ ಎರಡು, ಸೊಂಟದಲ್ಲಿ ಒಂದು ಮತ್ತೊಂದು ಕೈಯಲ್ಲಿ ಒಂದು ಬಿಂದಿಗೆ ಇಲ್ಲವೇ ಕೊಡದ ತುಂಬಾ ನೀರು ತುಂಬಿ ಕೊಂಡು ತರುತ್ತಿದ್ದರು.  . ಮನೆಯಲ್ಲಿ ಅಡುಗೆಗೆ  ಬಳೆಸಿದ ನಂತರ ಉಳಿದ ಹುಣಸೇ ಹಣ್ಣಿನ ಗಷ್ಟಿನಿಂದ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದ ತಾಮ್ರದ ಇಲ್ಲವೇ ಹಿತ್ತಾಳೆ ಬಿಂದಿಗಳು ಫಳ ಫಳನೆ ಹೊಳೆಯುತ್ತಿದ್ದವು. ಹಾಗಾಗಿ ಅಂದಿನ ಬಹುತೇಕ ಹೆಣ್ಣು ಮಕ್ಕಳು ಸಣ್ಣಗೆ ತಳುಕು ಬಳುಕುವ ಹಾಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲದೇ ಬದುಕುತ್ತಿದ್ದರು. ಮಲೆನಾಡ ಹೆಣ್ಣ ಮೈ ಬಣ್ಣ. ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ.  ಎನ್ನುವ ಜನಪ್ರಿಯ ಗೀತೆಯೇ ಇದೆ.

ಇಷ್ಟೆಲ್ಲಾ ಆಗುವ ಹೊತ್ತಿಗೆ  ಸುಮಾರು ಏಳೆಂಟು ಗಂಟೆ ಆ ಹೊತ್ತಿಗೆ ಮಕ್ಕಳನ್ನು ಎಬ್ಬಿಸಿ ಅವರ ಪ್ರಾಥರ್ವಿಧಿ ಮುಗಿಸಿ ಸ್ನಾನ ಮಾಡಿಸುತ್ತಿದ್ದರು. ಹಾಗೆ ಸ್ನಾನ ಮಾಡುವಾಗ  ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಯೇ ಸ್ನಾನ ಮಾಡಿಸುತ್ತಲೇ, ಭಾರತದ ಅಷ್ಟೂ ನದಿಗಳ ಪರಿಚಯ ಆ ಮಗುವಿಗೆ ಬಾಲ್ಯದಲ್ಲೇ ಆಗುತ್ತಿದ್ದಲ್ಲದ್ದೇ ಅವುಗಳ ಮಹತ್ವ ಆ ಮಗುವಿಗೆ ತಿಳಿದಿರುತ್ತಿತ್ತು. ಕುತೂಹಲದಿಂದ  ಆ ನದಿಗಳ ಪಾತ್ರ ಮತ್ತು ಭೂಗೋಳದ ಪರಿಚಯ ಸುಲಭವಾಗಿ ಅಲ್ಲಿಂದಲೇ ಆಗಿ ಹೋಗುತ್ತಿತ್ತು

ಮಕ್ಕಳಿಗೆಲ್ಲಾ ಸಾಲಾಗಿ  ಕುಳಿತು ತಿಂಡಿ ಬಡಿಸಲಾಗುತ್ತಿತ್ತು. ಹಾಗೆ ಸಾಲಾಗಿ ಒಟ್ಟಿಗೆ ಊಟ ತಿಂಡಿ ಬಡಿಸುವಾಗ ಮಕ್ಕಳಿಗೆ ಸಹಪಂಕ್ತಿ ಭೋಜನದ  ಕಲ್ಪನೆ ಜೊತೆಗೆ ಹಂಚಿ ತಿನ್ನುವ ಅಭ್ಯಾಸವಾಗುತ್ತಿತ್ತು. ಓಂ ಸಹನಾವವತು| ಸಹನೌ ಭುನಕ್ತು| ಸಹ ವೀರ್ಯಂ ಕರವಾವಹೈ| ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವ ಹೈ| ಓಂ ಶಾಂತಿಃ ಶಾಂತಿಃ ಶಾಂತಿಃ||  ಜೊತೆಗೆ  ಅನ್ನಪೂರ್ಣೇ ಸದಾ ಪೂರ್ಣೇ, ಶಂಕರ ಪ್ರಾಣ ವಲ್ಲಭೇ. ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ. ಭಿಕ್ಷಾಂ ದೇಹಿ ಚ ಪಾರ್ವತಿ.” ಮಂತ್ರವನ್ನು ಎಲ್ಲರೂ ಒಟ್ಟಿಗೆ ಹೇಳಿಯೇ ಎದುರಿಗೆ ಪಾತ್ರೆಯಲ್ಲಿರುವ ಆಹಾರವನ್ನು ಎಲ್ಲರೂ ಸಮಾನಾಗಿ ಖುಷಿ ಖುಷಿಯಿಂದ ಹಂಚಿಕೊಂಡು ತಿನ್ನುವುದನ್ನು   ನೋಡುವುದೇ ಆನಂದ. ಇನ್ನು ಮಕ್ಕಳು ತುಂಬಾ ಇದ್ದರೆ   ಎಲ್ಲರನ್ನೂ ಒಟ್ಟಿಗೆ ಕಲೆ ಹಾಕಿ ಕೈ ತುತ್ತು ಕೊಟ್ಟು ತಿನ್ನಿಸುತ್ತಿದ್ದರು. ಹಾಗೆ ಕೈ ತುತ್ತು ತಿನ್ನಿಸುವಾಗ ತಾಯಿಯ ಮಮತೆಯ ಜೊತೆಗೆ ಮಕ್ಕಳ ನಡುವೆ ಆರೋಗ್ಯಕರ ಪೈಪೋಟಿ ಬೆಳೆದು ಮಕ್ಕಳು ಒಂದೆರಡು ತುತ್ತು ಹೆಚ್ಚಾಗಿಯೇ ತಿನ್ನುತ್ತಿದ್ದರು.

ಆದಾದ ನಂತರ ಮಾಡಿದ ಅಡುಗೆಯನ್ನು ಬುತ್ತಿ ತೆಗೆದುಕೊಂಡು ಹೊಲ ಗದ್ದೆಗಳಿಗೆ ಹೋಗಿ ಅಲ್ಲಿ ದುಡಿದು ದಣಿವಾಗಿರುತ್ತಿದ್ದ ಮನೆಯ ಗಂಡಸರಿಗೆ ಊಟ ಬಡಿಸಿ ಅವರದ್ದಾದನಂತರ ತಾವೂ ಊಟ ಮಾಡಿ ಜೊತೆಗೆ ಕಷ್ಟ ಸುಖದ ವಿಚಾರ ವಿನಿಮಯಗಳನ್ನು ಮಾಡಿ ಮನಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಮಾರನೆಯ ದಿನಕ್ಕೆ ಬೇಕಾಗುವಷ್ಟು  ಅಕ್ಕಿಯನ್ನು  ಒರಳಿನಲ್ಲಿ ಭತ್ತ ಕುಟ್ಟಿ ಸಿದ್ದ ಪಡಿಸಿಕೊಳ್ಳುತ್ತಿದ್ದರು.   ಇಲ್ಲವೇ ಅಕ್ಕಿ, ರಾಗಿ ಮತ್ತು ಗೋದಿಯನ್ನು ಬೀಸುವ ಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡುತ್ತಿದ್ದರು. ಹೀಗೆ ಕುಟ್ಟುವುದರಿಂದ ಮತ್ತು ಬೀಸುವುದರಿಂದ ಮಹಿಳೆಯರ ಆರೋಗ್ಯ ಚೆನ್ನಾಗಿದ್ದು ಯಾರೂ ಕೂಡಾ ಬೆನ್ನು  ಅಥವಾ ಸೊಂಟ ಅಥವಾ  ಹರ್ನಿಯಾ ತೊಂದರೆಯಿಂದ  ಬಳಲುತ್ತಿರಲಿಲ್ಲ,

ಆದರೆ ಇಂದು ಒರಳು ಕಲ್ಲು  ಮತ್ತು ಬೀಸೋ ಕಲ್ಲು ಮದುವೆ ಮುಂಜಿಗಳಿಗೆ ಶಾಸ್ತ್ರಕ್ಕೆ ಯಾರಮನೆಯಿಂದಲೂ ಎರವಲು ಪಡೆದುಕೊಂಡು ಶಾಸ್ತ್ರ ಮುಗಿಸಿದ ನಂತರ  ಹಿಂದಿರುಗಿಸುವ ಶಾಸ್ತ್ರಕಷ್ಟೇ ಸೀಮಿತವಾಗಿದೆ. ಇಂದು ಎಲ್ಲದ್ದಕೂ ಮಿಕ್ಸಿ ಗ್ರೈಂಡರ್ ಬಳಕೆ ಹೆಚ್ಚಾಗಿದೆ, ನಿಜಕ್ಕೂ ಹೇಳ್ತೀನಿ ನಮ್ಮ ಊರಿನ ಮನೆಯಲ್ಲಿರುವ ಒರಳು ಕಲ್ಲಿನಲ್ಲಿ ರುಬ್ಬಿದ ಕಾಯಿ ಚೆಟ್ನಿಯ  ರುಚಿಯೇ ಬೇರೆ ಮತ್ತು ಅದೂ ಎರಡು ದಿನ ಇಟ್ಟರೂ ಕೆಡುತ್ತಿರಲಿಲ್ಲ ಆದರೆ ಇಂದಿನ ಮಿಕ್ಸಿ ಯಲ್ಲಿ ರುಬ್ಬಿದ ಚೆಟ್ನಿ ಬಿಸಿಯಾಗಿ ಹೋಗಿ ಮಧ್ಯಾಹ್ನ ಇಲ್ಲವೇ ಸಂಜೆ ಹೊತ್ತಿಗೇ ಹಳಸಿ ಹೋಗುತ್ತದೆ. ಕಾರಣ ಮಿಕ್ಸಿಯಲ್ಲಿ ಕಾಯಿ ನುರಿಯುವುದಿಲ್ಲ ಅದು ತುಂಡರಿಸಲ್ಪಡುವುದರಿಂದ ಅಲ್ಲಿ ಶಾಖ ಉತ್ಪತ್ತಿಯಾಗಿ ಅದು ಬಹಳ ಬೇಗ ಕೆಡುತ್ತದೆ.

ಈಗಿನ ಕಾಲದಂತೆ ಅಂದು ಶಾಲಾ ಕಾಲೇಜುಗಳು ಇರುತ್ತಿರಲಿಲ್ಲ, ಆಗೆಲ್ಲಾ ಮಕ್ಕಳನ್ನು  ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿಸುವ ಪದ್ದತಿ ಇತ್ತು. ಮಕ್ಕಳಿಗೆ  ಉಪನಯನ ಮಾಡಿ ಗುರುಕುಲಕ್ಕೆ ಬಿಟ್ಟು ಬರುತ್ತಿದ್ದರು.  ಅಲ್ಲಿ ಮಕ್ಕಳು ಬೆಳಿಗ್ಗೆ ಮದುಕರ ವೃತ್ತಿ (ಭಿಕ್ಷಾಟನೆ) ಮಾಡಿ ಕೊಂಡು ಆ ದಿವಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬೇಡಿ ತಂದು ಅದರಲ್ಲಿ ಅಡುಗೆ ಮಾಡಿ ತಿಂದು ಮಿಕ್ಕ ಸಮಯವನ್ನು  ವಿದ್ಯಾಭ್ಯಾಸಕ್ಕೆ ಮಿಸಲಿಡುತ್ತಿದ್ದರು.  ಕೇವಲ ಶೈಕ್ಷಣಿಕ ವಿದ್ಯೆಯಲ್ಲದೆ  ಪ್ರಾಯೋಗಿಕಕ್ಕೆ ಹೆಚ್ಚಿನ ಆಸ್ಥೆ ಕೊಡಲಾಗುತ್ತಿತ್ತು

ಇನ್ನು   ಶೈಕ್ಷಣಿಕವಾಗಿ ಶ್ಲೋಕಗಳು ಮತ್ತು ಶುಭಾಷಿತಗಳ ಮೂಲಕ ನೆನಪಿನ ಶಕ್ತಿ ಅದರೆ ಹೊತೆ ಮಗ್ಗಿ ಉರುಹೊಡೆಯುವುದರಿಂದ ತಟ್ಟನೆ ಗುಣಾಕಾರ ಮತ್ತು ಭಾಗಾಕಾರಗಳನ್ನು ಮಾಡುತ್ತಿದ್ದರು ಆದರೆ ಇಂದಿನ ಮಕ್ಕಳಿಗೆ ಕ್ಯಾಲುಕ್ಲೇಟರ್ ಇಲ್ಲದೇ 2+2 ಕೂಡಲೂ ಕಳೆಯಲೂ ಬಾರದಿರುವುದು ನಿಜಕ್ಕೂ ದುಃಖಕರ.

ಆದರೆ ಇಂದು ಎರಡು ಮೂರು  ಮೊಬೈಲ್ ನಂ. ನೆನೆಪಿನಲ್ಲಿ ಇಟ್ಟು ಕೊಳ್ಳುವುದಕ್ಕೆ ತಿಣುಕಾಡುತ್ತಿದ್ದೇವೆ.  ಲ್ಯಾಂಡ್ ಲೈನ್ ಇದ್ದಾಗಲೇ, ನೂರಾರು ನಂಬರ್ಗಳನ್ನು ನೆನಪಿನಲ್ಲಿ ಇಟ್ಟು ಕೊಳ್ಳುತ್ತಿದ್ದ ನಮಗೆ ಮೊಬೈಲ್ ಬಂದ ಮೇಲೇ ಎಲ್ಲವನ್ನೂ ಮರೆಯುವಂತಾಗಿದೆ.

ಅಂದು ಅಮರ ಕೋಶ ಕಲಿಸಿಕೊಡುವುದರ ಮೂಲಕ ಮಕ್ಕಳಿಗೆ ನನಪಿನ ಶಕ್ತಿಯನ್ನು ಹೆಚ್ಚಿಸುತ್ತಿದ್ದಲ್ಲದೇ ಪ್ರತಿಯೊಂದು ಪದಕ್ಕೂ ಸಮಾನಾಂತರ ಪದರ ಅರ್ಥ ತಿಳಿಯುತ್ತಿತ್ತು ಉದಾ: ಉಮಾಕಾತ್ಯಾಯಿನೀ ಗೌರಿ ಕಾಳೀ …. ಶ್ರೀಕಂಠ ಶ್ಯಿತಿಕಂಠ ಕಪಾಲಬೃತ್..

ಅಮರಕೋಶದ  ವನೌಷಧಾ ವರ್ಗದಲ್ಲಿ ಇಲ್ಲದ ಔಷಧೀಯೇ ಇಲ್ಲ  ಅದರಂತೆ ಅಮರಕೋಶದಲ್ಲಿ ಇಲ್ಲದಿರುವ ಹೆಸರುಗಳೇ ಇಲ್ಲ ಎನ್ನಬಹುದು.

ಜ್ಯೋತಿಷ್ಯ ಶಾಸ್ತ್ರ :  ಖಗೋಳ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ, ಆರ್ಯಭಟ, ಭಾಸ್ಕರಾಚಾರ್ಯ ಮಂತಾದವರು ಬಹಳ ಖ್ಯಾತ ನಾಮವರು. ಇಲ್ಲಿ ಕುಳಿತಲ್ಲಿಂದಲೇ  ಕರಾರುವಾಕ್ಕಾಗಿ ಸೂರ್ಯ ಚಂದ್ರರ ಚಲನವಲನಗಳನ್ನು ಸರಿಯಾದ ಲೆಕ್ಕಾಚಾರದಿಂದ ಕರಾರುವಾಕ್ಕಾಗಿ  ಗ್ರಹಣಗಳ ಮಾಹಿತಿ ಮತ್ತು ಮಳೆ ಬೆಳೆ, ವಿನಾಶ ಮತ್ತು ವಿಪತ್ತುಗಳನ್ನು ಹೇಳುತ್ತಿದ್ದರು ಮತ್ತು ಅದನ್ನು ಎಲ್ಲರಿಗೂ ತಿಳಿಯಲೆಂದೇ ಪಂಚಾಗಗಳನ್ನು ಬರೆಯುತ್ತಿದ್ದರು.

ಕಾಲಕ್ಕೆ ನಮ್ಮಷ್ಟು ಬೆಲೆ ಕೊಟ್ಟವರು ಇನ್ನಾರು ಇಲ್ಲ. ರಾಹುಕಾಲಾ, ಗುಳಿಕಾಲ, ಯಮಗಂಡ ಕಾಲ ಎಂದು ಪ್ರತೀ ದಿನವೂ ವಿಭಜಿಸಿ ಪುಣ್ಯ ಕೆಲಸಗಳು ಮತ್ತು  ಅಪರ ಕರ್ಮಗಳನ್ನು ಸರಿಯಾದ ಸಮಯಕ್ಕೆ ಮಾಡುವ ಪದ್ದತಿ ನಮ್ಮಲ್ಲಿದೆ. ಅದಕ್ಕಾಗಿಯೇ ಸರಿಯಾಗಿ ಮಹೂರ್ತದ ಸಮಯ ನಿಗಧಿ ಪಡಿಸುತ್ತಾರೆ. ಆದರೆ ನಾವು IST- Indian standard time ಬದಲು Indian stretchable time ಎಂದು ಸುಮ್ಮನೆ ನಮ್ಮನ್ನೇ ನಾವು ಅಪಹಾಸ್ಯ ಮಾಡಿಕೊಳ್ಳುತ್ತಾ ಕಾಲ ಕಳೆಯುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ನಮ್ಮಲ್ಲಿ ಮಕ್ಕಳಿಗೆ ಹೆಸರು ಇಡುವುದರ ಹಿಂದೆಯೂ ಅನೇಕ ಕಾರಣಗಳಿವೆ.

ಸುಮ್ಮನೆ,  ಟಿಟ್ಟು, ಬಿಟ್ಟು, ಮೋನಿ ಸೋನಿ ಅಂತಾ ಕಾಟಾಚಾರದ ಹೆಸರುಗಳಿರದೆ, ರಾಮ ಕೃಷ್ಣಾ, ಗೋವಿಂದಾ ಶ್ರೀಹರಿ ವಾಸುದೇವ. ಶಿವ, ಸುಂದರ, ಲಕ್ಷ್ಮೀ ಸರಸ್ವತಿ, ಕಮಲ, ವಿಮಲ ಶಾರದೆ ಮುಂತಾಗಿ ತಮ್ಮ ಮನೆ ದೇವರ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಹೆಸರಿಡುತ್ತಿದ್ದರು. ಈ ಮೂಲಕ ಮಕ್ಕಳನ್ನು ಕರೆಯುವುದರ ಮೂಲಕವಾದರೂ ಅ ಸದಾ ದೇವರನ್ನು ನೆನೆಯುವಂತಾಗುತ್ತಿತ್ತು.

ಇನ್ನು ಸಂಜೆ ಹೊತ್ತಿಗೆ ಮಕ್ಕಳೆಲ್ಲರೂ ಮನೆಗೆ ಬಂದೊಡನೆಯೇ ಕೈಕಾಲು ಮುಖ ತೊಳೆದುಕೊಂಡು ಸ್ವಲ ಲಘು ಉಪಹಾರ ತಿಂದು  ದೈಹಿಕ ಪರಿಶ್ರಮದ ಆಟಗಳನ್ನು ಆಡುತ್ತಿದ್ದರು

ಇನ್ನು ಮಕ್ಕಳ  ಆಡುತ್ತಿದ್ದ  ಆಟಗಳ ಬಗ್ಗೆ ಗಮನ ಹರಿಸಿದರೆ

 • ಗೋಲಿ ಬುಗುರಿ  ಏಕಾಗ್ರತೆ  ಮತ್ತು ಗುರಿಯನ್ನು ಕಲಿಸುತ್ತಿತ್ತು.
 • ಕಬ್ಬಡ್ಡಿ ಖೋಖೋ . ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದವು.
 • ಮರಕೋತಿ ಮತ್ತು ಈಜು –  ಧೈರ್ಯವನ್ನು ಹೆಚ್ಚಿಸುವುದರೊಂದಿಗೆ ಜೀವ ರಕ್ಷಕ ಕಲೆಯೂ ಆಗಿರುತ್ತಿತ್ತು.
 • ಕುಂಟೇಬಿಲ್ಲೆ – ಹೆಣ್ಣು ಮಕ್ಕಳಿಗೆ ಅದಕ್ಕಿಂತ ಉತ್ತಮ ಆರೋಗ್ಯಕರ ವ್ಯಾಯಾಮ ಇನ್ನೊಂದಿಲ್ಲ,
 • ಚೌಕಾಬಾರ ಮತ್ತು ಅಳುಗುಳಿ ಮನೆ -> ಲೆಕ್ಕಾಚಾರ
 • ಚೆದುರಂಗ – ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಕ್ಕಳನ್ನು ಹಿಂದೆ ಬೈಯುವಾಗಲೂ ಅಯ್ಯೋ ಕೊದಂಡರಾಮ,  ನೀನೊಳ್ಳೆ ಹನುಮಂತ ಕಣೋ. ಬಾಲ ವಿಲ್ಲದ  ಅಂಜನೇಯ ಎನ್ನುತ್ತಿದ್ದರೇ ಹೊರತು ಈಗಿನ ರೀತಿಯಾಗಿ ಕೆಟ್ಟ ಭಾಷಾ ಪ್ರಯೋಗವನ್ನು ಖಂಡಿತವಾಗಿಯೂ ಮಾಡುತ್ತಲೇ ಇರುತ್ತಿರಲಿಲ್ಲ

ಇನ್ನು ಮಕ್ಕಳಿಗೆ ಮನೋರಂಜನೆ ಎಂದರೆ  ಹರಿಕಥೆ, ಪೌರಾಣಿಕ ನಾಟಕಗಳು ಯಕ್ಷಗಾನ ಇಲ್ಲವೇ ಅಂತ್ಯಾಕ್ಷರಿ.  ಅಂತ್ಯಾಕ್ಷರಿ ಆಟ ಮಕ್ಕಳಲ್ಲಿ ಸಂಗೀತ ಮತ್ತು ಸಾಹಿತ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚಿಸುತ್ತಿತ್ತು.

ಆದರೆ ಇಂದು ಮಕ್ಕಳು ದೈಹಿಕವಾಗಿ ಪರಿಶ್ರಮ ಪಡುತ್ತಲೇ ಇಲ್ಲ ಸದಾಕಾಲ ಟಿವಿಯಲ್ಲಿ ಕಾರ್ಟೂನ್ ಇಲ್ಲವೇ ಮೊಬೈಲ್ ಗೇಮ್ಸ್ ಇದರಿಂದ ಕಣ್ಣುಗಳಿಗೆ ಹಾನಿ ಮತ್ತು ಮನಸ್ಸಿಗೆ ಛೇದವನ್ನು ಉಂಟು ಮಾಡುತ್ತಿವೆ.

ಗಂಡಸರುಗಳು ಅರಳೀ ಕಟ್ಟೆಯ ಕೆಳಗೆ ಕುಳಿತು ಲೋಕಾಭಿರಾಮವಾಗಿ ಆಗು ಹೋಗುಗಳನ್ನ್ನು ಹರಟುತ್ತಿದ್ದರು ಇಲ್ಲಿಯೇ ಹಳ್ಳಿಯ ಬಹಳಷ್ತು ಸಮಸ್ಯೆಗಳು ಪರಿಹಾರವಾಗಿ ಹೊಗುತ್ತಿತ್ತು. ಅರಳೀ ಮರವೂ ಕೂಡಾ  ಹೆಚ್ಚಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಹೆಮ್ಮರವಾಗಿದ್ದರಿಂದ  ಅರಳೀ ಕಟ್ಟೆಯ ಮೇಲೇ ಎಲ್ಲರೂ ಕುಳಿತುಕೊಳ್ಳುತ್ತಿದ್ದರು.

ಇನ್ನು ಸೂರ್ಯ ಮುಳುಗುತ್ತಿದ್ದಂತೆಯೇ ಮನೆಯವರೆಲ್ಲರೂ ಸೇರಿ ಕೈ ಕಾಲು ಮುಖ ತೊಳೆದುಕೊಂಡು ಹಣೆಗೆ ವಿಭೂತಿ ಇಲ್ಲವೇ ಕುಂಕುಮ ಧರಿಸಿ  ದೇವರ ಕೋಣೆಯ ಕುಳಿತು ಭಕ್ತಿಯಿಂದ ಕೆಲಕಾಲ ದೇವರ ಭಜನೆ ಮಾಡುತ್ತಿದ್ದರು,  ಹೀಗೆ ಭಜನೆ ಮಾಡುತ್ತಿದ್ದರಿಂದ ಹೆಂಗಸರು ಮತ್ತು ಮಕ್ಕಳಿಗೆ ತನ್ನಿಂದ ತಾನೇ ಸಂಗೀತದ ಪರಿಚಯವಾಗಿ ಹೋಗುತ್ತಿತ್ತು. ಮಕ್ಕಳಿಗೆ ಶೃತಿ ಲಯ ಮತ್ತು ತಾಳದ ಜ್ಞಾನ ಬಂದು ಬಿಡುತ್ತಿತ್ತು. ಜೊತೆಗೆ ಹಾರ್ಮೋನಿಯಂ ಮತ್ತು ತಬಲ ಇಲ್ಲವೇ ಮೃದಂಗ ವಾದನ ಕಲಿತುಕೊಳ್ಳುತ್ತಿದ್ದರು,  ಇತ್ತೀಚೆಗೆ ಹೆಸರಾಂತ ಸಂಗೀತ ನಿರ್ದೇಶಕ ರವೀ ಬಸ್ರೂರ್ ಅವರ  ಸಂದರ್ಶನ ಕೇಳುತ್ತಿದ್ದಾಗ ಅವರಿಗೆ ಸಂಗೀತಾಸಕ್ತಿ   ಬಂದದ್ದೇ  ಈ ರೀತಿಯ ಸಾಮೂಹಿಕ ಭಜನೆಗಳಿಂದ ಎಂದು ತಿಳಿದು ನಮ್ಮ ಪೂರ್ವಜರ ಪರಿಕಲ್ಪನೆ ನಮಗೆ ಅರ್ಥವಾಯಿತು

ಇನ್ನು ಏಳೂವರೆ ಎಂಟಕ್ಕೆಲ್ಲಾ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡಿ ನಂತರ ಮಕ್ಕಳಿಗೆ ರಾಮಾಯಣ ಇಲ್ಲವೇ ಮಹಾಭಾರತ, ಭಾಗವತದ ಕುರಿತಾದ ಕತೆಗಳನ್ನು ಹೇಳುತ್ತಾ ಮಲಗಿಸುವ ಹೊತ್ತಿಗೆ ಗಂಟೆ ಹತ್ತಾಗಿರುತ್ತಿತ್ತು. ಅಲ್ಲಿಗೆ  ಊಟ ಮಾಡಿ ಎರಡು ಗಂಟೆಯಾಗಿ ಸ್ವಲ್ಪ ಅರಗಿರುತ್ತಿತ್ತು ಮತ್ತು ನೆಮ್ಮದಿಯಾಗಿ ನಿದ್ದೆ ಬರುತ್ತಿತ್ತು

ರೀತಿಯಾಗಿ ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ  ವೈಜ್ಞಾನಿಕವಾದ ವಿಶೇಷ ಕಾರಣಗಳು ಇದ್ದೇ  ಇರುತ್ತಿತ್ತು ಎಂದು ಸಮಯಾಭಾವದಿಂದಾಗಿ ಕಾರ್ಯಕ್ರಮವನ್ನು ಅಲ್ಲಿಗೇ ಮುಗಿಸಿ ಮುಂದೆ ಎಂದಾದರೂ ಸಮಯ ಸಿಕ್ಕಲ್ಲಿ ಅಂದು ಇದರ ಭಾಗ ಎರಡರಲ್ಲಿ  ನಾವು ಸಂಭ್ರಮದಿಂದ  ಆಚರಿಸುವ ಹಬ್ಬಗಳು ಮತ್ತು ಅವುಗಳ ವಿಶೇಷತೆಯ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಎಂದಿನಂತೆ ಶ್ರೀ ಜಯಂತ್ ಅವರು ಸರಳ ಮತ್ತು ಸುಂದರವಾಗಿ ನಿರೂಪಣೆ ಮಾಡಿ, ಅವರೇ ವಂದಾನಾರ್ಪಣೆಯನ್ನೂ ಮಾಡಿದ್ದು ವಿಶೇಷವಾಗಿತ್ತು. ಶ್ರೀಮತಿ ಸುಧಾ ಸೋಮೇಶ್ ಅವರ ಜೊತೆಗೆ ಬಂದಿದ್ದವರೆಲ್ಲರ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಸುರಿಯುತ್ತಿದ್ದ ಮಳೆಯ ನಡುವೆಯೂ ಅನಿವಾರ್ಯ ಕಾರಣದಿಂದ ಕಾರ್ಯಕ್ರಮ ಅರ್ಧ ಗಂಟೆ ತಡವಾಗಿ ಆರಂಭವಾದರೂ  ಉತ್ತಮ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.   ಇಂದಿನ ಕಾರ್ಯಕ್ರಮ ಎಂದಿಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿದ್ದು ಅದು ಕೇವಲ ವಕ್ತಾರರು ಮಾತನಾಡುವುದನ್ನು ಸಭಿಕರು ಆಲಿಸುವ ಬದಲು ಆವರಿಬ್ಬರ ನಡುವೆ ನೇರ ನೇರ ವಿಚಾರ ವಿನಿಮಯದ ಮೂಲಕ ಸಾಕಷ್ಟು ವಿಚಾರ ವಿನಿಮಯದ ಜೊತೆಗೆ ಅವರ ಅನುಭವಗಳನ್ನು ಹಂಚಿಕೊಂಡಿದ್ದು ಅತ್ಯಂತ ಮಹತ್ವವಾಗಿತ್ತು.

ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ ನಾವುಗಳು ನಮ್ಮ ತಂದೆ ತಾಯಿರಿಂದ ಕಲಿತ  ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮೆಲುಕು ಹಾಕುತ್ತಾ , ಸಾಧ್ಯವಾದಷ್ಟೂ ಅದನ್ನು  ನಮ್ಮ ಮಕ್ಕಳಿಗೆ ತಿಳಿಸಿಕೊಡುವತ್ತ ಹರಿಸೋಣ ನಮ್ಮ ಚಿತ್ತ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಹಾಗಾಗಿ ಅವರಿಗೆ ನಮ್ಮ ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಸಂಪ್ರದಾಯಗಳನ್ನು  ನಮ್ಮ ಮುಂದಿನ ಪೀಳಿಗೆಯವರಿಗೂ ಕಲಿಸುವ ಮತ್ತು ಉಳಿಸುವ ಜವಾಬ್ಧಾರಿ ನಮ್ಮದೇ ಆಗಿದೆ.

ಇಡೀ ಕಾರ್ಯಕ್ರಮವನ್ನು ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ

 

ಏನಂತೀರೀ?

ವಿದ್ಯೆ ಮತ್ತು ಸಂಸ್ಕಾರ

ಕಳೆದ ವಾರ ನನ್ನ ಆತ್ಮೀಯ ಗೆಳೆಯರು ಅದರಲ್ಲೂ ವಿಶೇಷವಾಗಿ ಕನ್ನಡ ಪ್ರಾಧ್ಯಾಪಕರು ವಿದ್ಯೆ ಮತ್ತು ಸಂಸ್ಕಾರ ಎರಡೂ ಒಂದು ರೀತಿಯ ಜೋಡಿ ಪದಗಳು ಹೌದಾದರೂ ಇವರೆಡಲ್ಲಿರುವ ವೆತ್ಯಾಸ ಏನಿರಬಹುದು ಎಂದು ವ್ಯಾಟ್ಯಾಪ್ ಮುಖೇನ ಪ್ರಶ್ನಿಸಿದರು. ಅವರು ಕೇಳಿರುವ ಪ್ರಶ್ನೆ ನೋಡಲು ಸುಲಭವಾಗಿದ್ದರೂ ಉತ್ತರಿಸಲು ಸ್ವಲ್ಪ ಕಠಿಣ ಎಂದು ಸ್ವಲ್ಪ ಯೋಚಿಸಿದ ನಂತರ ಅರಿವಾಯಿತಾದರೂ, ಕೂಡಲೇ ಸಂಸ್ಕಾರ ಎನ್ನುವುದು ಜೀವನದ ತಳಹದಿ. ಬಹಳಷ್ಘು ಬಾರಿ ಅದು ನಮ್ಮ ತಂದೆ ತಾಯಿ, ಇಲ್ಲವೇ ಕುಟುಂಬ ಮತ್ತು ನೆರೆಹೊರೆಯವರ ಪ್ರಭಾವ, ಬೆಳೆದು ಬಂದ ಪರಿಸರದಿಂದ ಚಿಕ್ಕವಯಸ್ಸಿನಲ್ಲಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವುದು. ಆ ಬುನಾದಿಯ ಮೇಲೆಯೇ ಕಟ್ಟುವ ಕಟ್ಟಡವ್ವೇ ವಿದ್ಯೆ. ಆ ತಳಹದಿಯ ಗಟ್ಟಿತನದ ಮೇಲೆಯೇ ವಿದ್ಯೆ ಎಂಬ ಕಟ್ಟಡದ ಅಯಸ್ಸು ಅವಲಂಭಿತವಾಗಿರುತ್ತದೆ ಎಂದು ನನಗೆ ತಿಳಿದ ಮಟ್ಟಿಗೆ ತಿಳಿಸಿದೆ

ಅದಕ್ಕೆ ನನ್ನ ಸ್ನೇಹಿತರು ಸಂಸ್ಕಾರ ನಡವಳಿಕೆಗೆ ಸಂಬಂಧ ಪಟ್ಟದ್ದು. ಅದು ಪ್ರತ್ಯಕ್ಷ. ವಿದ್ಯೆ ಪರೋಕ್ಷ. ವಿದ್ಯೆ ಒಂದು ಕ್ಷೇತ್ರದಲ್ಲಿನ ಕುಶಲತೆಯೂ ಇರಬಹುದು. ಇವೆರಡರ ಆಶ್ರಯವೂ ಅಂತಃಕರಣವೇ. ಹೆಚ್ಚಿನ ಸಂದರ್ಭದಲ್ಲಿ ವಿದ್ಯೆಯಿಂದ ಸಂಸ್ಕಾರವುಂಟಾಗುತ್ತದೆ ಎಂದು ಪ್ರತ್ಯುತ್ತರಿಸಿದರು

ಅವರ ಆರಂಭಿಕ ಅಂಶಗಳನ್ನು ಒಪ್ಪಿಕೊಂಡನಾದರೂ ಅವರ ಕಡೆಯ ಅಂಶ ವಿದ್ಯೆಯಿಂದ ಸಂಸ್ಕಾರವುಂಟಾಗುತ್ತದೆ ಎನ್ನುವುದರ ಬಗ್ಗೆ ನನಗೆ ಸ್ವಲ್ಪ ವಿರೋಧವಿದ್ದು ಸಂಸ್ಕಾರವಿದ್ದರೆ ವಿದ್ಯೆ ತನ್ನಿಂದತಾನೇ ಬರುತ್ತದೆ ಎನ್ನುವುದು ನನ್ನ ವಾದವಾಗಿತ್ತು.

ಇದಕ್ಕೆ ಪೂರಕ ಎಂಬಂತೆ ಕೊಲ್ಹಾಪುರದಲ್ಲಿ ಆಶ್ಲೇಷ ಮಳೆಯಿಂದಾಗಿ ಜಲಾವೃತವಾದ ಊರುಗಳಿಂದ ನೆರೆಸಂತಸ್ತ್ರರನ್ನು ಎತ್ತರದ ಸುರಕ್ಷಿತ ಸ್ಥಳಗಳಿಗೆ ನಮ್ಮ ವೀರ ಯೋಧರು ತಮ್ಮ ಜೀವನದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದರೆ, ತನ್ನ ಜೀವವನ್ನು ಕಾಪಾಡಿದ ಆ ವೀರ ಯೋಧನಿಗೆ ಒಬ್ಬ ನಡುವಯಸ್ಸಿನ ಮಹಿಳೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಮತ್ತು ಅದಕ್ಕೆ ಆ ಸೈನಿಕರ ಪ್ರತಿಕ್ರಿಯೆಯ ಮನಮಿಡಿಯುವ ದೃಶ್ಯ ನೋಡಿದಾಗ ನಮ್ಮ ಸ್ನೇಹಿತರ ವಿದ್ಯೆ ಮತ್ತು ಸಂಸ್ಕಾರ ನಡುವಿನ ಜಿಜ್ಞಾಸೆಗೆ ಉತ್ತರ ದೊರಕಿತು.

 

ಸೈನಿಕರು ತಾವು ಕಲಿತ ವಿದ್ಯೆಯಿಂದ ನೆರೆ ಸಂಸ್ತ್ರಸ್ತರನ್ನು ರಕ್ಷಿಸುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದರೆ, ಆ ಸಂಸ್ಕಾರವಂತ ಆ ಮಹಾತಾಯಿ ಆ ಕ್ಷಣದಲ್ಲಿ ತನ್ನ ಜೀವವನ್ನು ರಕ್ಷಿಸಿದ ಯೋಧರಲ್ಲಿ ಭಗವಂತನನ್ನು ಕಂಡು ಅವರ ಪರಿಶ್ರಮಕ್ಕೆ ಅಲ್ಲಿದ್ದ ಆಷ್ಟೂ ಯೋಧರಿಗೆ ಕಾಲು ಮುಟ್ಟಿ ನಮಸ್ಕರಿಸುವ ಮೂಲಕ ಅವರಿಗೆ ಪ್ರತಿಫಲವನ್ನು ಅರ್ಪಿಸುತ್ತಾಳೆ. ಅದಕ್ಕೆ ಆ ಸಂಸ್ಕಾರವಂತ ಸೈನಿಕರೂ ಮುಜುಗರದಿಂದ ಮತ್ತು ಧನ್ಯತಾಪೂರ್ವಕವಾಗಿ ಪ್ರತಿವಂದಿಸುತ್ತಾರೆ. ಅ ಕ್ಷಣದಲ್ಲಿ ಹಾಗೆ ಮಾಡಬೇಕೆಂದು ಆಕೆಗೆ ಯಾರೂ ಹೇಳಿರಲಿಲ್ಲ. ಆಕೆಯ ಹೊರತಾಗಿ ಆ ದೋಣಿಯಲ್ಲಿದ್ದ ಮತ್ತಾರೂ ಆ ರೀತಿಯಾಗಿ ಪ್ರತಿಕ್ರಿಯಿಸಲಿಲ್ಲ. ಇದಕ್ಕೇ ಹೇಳುವುದು ಸಂಸ್ಕಾರ ಎಂದು. ಖಂದಿತವಾಗಿಯೂ ಇಂತಹ ಸಂಸ್ಕಾರವನ್ನು ನಮ್ಮ ಇಂದಿನ ವಿದ್ಯೆ ಕಲಿಸುವುದಿಲ್ಲ. ಇದು ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಹಾಕಿ ಕೊಟ್ಟ ಭಧ್ರ ಬುನಾದಿ. ಎಲ್ಲಿಯವರೆಗೂ ಇಂತಹ ಸಂಸ್ಕಾರವಂತರು ಇರುತ್ತಾರೋ ಅಲ್ಲಿಯವರೆಗೆ ನಮ್ಮ ದೇಶವನ್ನು ಯಾರೂ ಅಲುಗಾಡಸಲಾರರು. ಇಂತಹ ಸಂಸ್ಕಾರವಂತರ ಸಂಖ್ಯೆ ಅಗಣಿತವಾಗಲಿ.

ಏನಂತೀರೀ?