ಕನ್ಯಾದಾನ ಮತ್ತು ಅಸಹಿಷ್ಣುತೆ

ಕಳೆದ ವಾರಾಂತ್ಯದಲ್ಲಿ #Nobindi_Nobusiness ಎಂಬ ಲೇಖನವೊಂದನ್ನು ಬರೆದು ಅದರಲ್ಲಿ ಮಾಧ್ಯಮ ಮತ್ತು ಜಾಹೀರಾತುಗಳ ಮೂಲಕ ಹೇಗೆ ನಮ್ಮ ಹಿಂದೂ ಹಬ್ಬಗಳನ್ನು ಅವಹೇಳನ ಮಾಡಲಗುತ್ತಿದೆ ಹಾಗೂ ತಿರುಚಲಾಗುತ್ತಿದೆ ಎಂಬುದನ್ನು ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದೆ.

ಈ ಲೇಖನವನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಲವರೊಡನೆ ಹಂಚಿಕೊಂಡಿದ್ದೆ. ಇಡೀ ಲೇಖನ ಯಾರದ್ದೇ ವಯಕ್ತಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಹಿಂದೂ ಧರ್ಮದ ಬಗ್ಗೆ corporate company ಗಳಿಗೆ ಇರುವ ತಾತ್ಸಾರ, ನಮ್ಮ ಆಚರಣೆಗಳ ಬಗ್ಗೆ ತೋರುವ ಅಸಡ್ಡೆ ಮತ್ತು ತಾರತಮ್ಯವನ್ನು ಎತ್ತಿ ತೋರಿಸಿದ್ದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದರೆ, ಒಂದು ಗುಂಪಿನಲ್ಲಿ ಮಾತ್ರಾ ಒಬ್ಬ ಶಾಂತಿಧೂತ ಅಸಹಿಷ್ಣು ಮನುಷ್ಯ ಇದ್ದಕ್ಕಿದ್ದಂತೆಯೇ ಯಾವುದೇ ಆಭಿಪ್ರಾಯವನ್ನು ವ್ಯಕ್ತಪಡಿಸದೇ ಸ್ವಇಚ್ಚೆಯಿಂದ ಹೊರಗೆ ಹೋಗಿದ್ದನ್ನು ಗಮನಿಸಿದ ಕೂಡಲೇ ಆ ಗುಂಪಿನಲ್ಲಿದ್ದ ಕೆಲವು ಜಾತ್ಯಾತೀತರಿಗೆ ಒಂದು ರೀತಿ ಅಸಹನೆ/ಅಸಹಿಷ್ಣುತೆ ಜಾಗೃತವಾಗಿ, ದಯವಿಟ್ಟು ಈ ಗುಂಪಿನಲ್ಲಿ ಕೋಮುವಾದವನ್ನು ಹರಡದಿರಿ ಎಂಬ ಎಚ್ಚರಿಕೆಯನ್ನು ನನಗೆ ನೀಡಿದರು.

ನಿಜ ಹೇಳ ಬೇಕೆಂದರೆ ಆ ಲೇಖನದಲ್ಲಿ When you are in ROM, be like a Roman ಎನ್ನುವಂತೆ ಹಿಂದೂಸ್ಥಾನದಲ್ಲಿ ವ್ಯವಹಾರ ಮಾಡುವವರು ಹಿಂದೂಗಳ ಭಾವನೆಗೆ ಸ್ಪಂದಿಸದೇ ಧಕ್ಕೆ ತರುವುದನ್ನು ಹೇಗೆ ತಾನೇ ಸಹಿಸಿಕೊಂಡಿರಲು ಸಾಧ್ಯ? ನಮ್ಮ corporate companyಗಳಲ್ಲಿ ಆಯುಧಪೂಜೆ ಮಾಡಿದರೆ ಕೋಮುವಾದ, ಅದೇ corporate companyಗಳು ನಮಗೆ ಸಂಬಂಧವೇ ಇಲ್ಲದ Halloween Day ಮತ್ತು Christmasಗಳಿಗೆ ಇಡೀ office ಸಿಂಗಾರ ಮಾಡುವುದನ್ನು ಸಹಿಸಿಕೊಂಡಿರಲು ಸಾಧ್ಯವೇ? ಜಾತ್ಯಾತೀತತೆ ಎಂದರೆ ಹಿಂದೂಗಳ ಮೇಲಿನ ದಬ್ಬಾಳಿಕೆಯೇ? ಗುಂಪನ್ನು ಬಿಟ್ಟು ಹೋದ ವ್ಯಕ್ತಿ ಇದೇ ಗುಂಪಿನಲ್ಲಿ ಕೆಲವು ದಿನಗಳ ಹಿಂದೆ ಈದ್ ಮುಬಾರಕ್ ಹೇಳಿದಾಗ ನಾವುಗಳು ಸಹಿಸಿಕೊಂಡಿವೇ ಹೊರತೂ ನಾವೇನೂ ಗುಂಪನ್ನು ಬಿಡಲಿಲ್ಲ ಅಥವಾ ಪ್ರತಿಭಟಿಸಲೂ ಇಲ್ಲಾ ಅಲ್ಲವೇ? corporate companyಗಳ ಜಾಹೀರಾತು ಕುರಿತಂತೆ ಲೇಖನವನ್ನು ಬರೆದದ್ದನ್ನೇ ಸಹಿಸಿಕೊಳ್ಳಲಾಗದೇ ಸಹಿಷ್ಣುತೆ ಇಲ್ಲದೇ ಗುಂಪನ್ನು ಬಿಟ್ಟು ಹೋದವರ ಮನಸ್ಥಿತಿ ಎಂಥಹದ್ದು ಎಂಬುದನ್ನು ಅರಿತುಕೊಳ್ಳಿ. ಎಂದು ಪ್ರಶ್ನಿಸಿದ ಕೂಡಲೇ,

ಆ ನಕಲೀ ಜಾತ್ಯಾತೀತ ವ್ಯಕ್ತಿ ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಓತಪ್ರೋತವಾಗಿ ವಿತಂಡ ವಾದ ಮಂಡಿಸುತ್ತಾ, ಅಂತಿಮವಾಗಿ ರಾಜಕೀಯದ ವಿಷಯ ಎತ್ತಿ ವಿಷಯಾಂತರ ಮಾಡಿದ್ದಲ್ಲದೇ, ಮೊದಲು ಮಾನವನಾಗು ಎಂಬ ಸಂದೇಶವೊಂದನ್ನು ಹಾಕಿ ಹಿಂದೂ ಧರ್ಮದ ಬಗ್ಗೆ ತಮ್ಮ ಅಸಹನೆ ಮತ್ತು ಅಸಹಕಾರವನ್ನು ಪ್ರಕಟಿಸುತ್ತಾ ಸಾರ್ವಜನಿಕವಾಗಿ ತಮ್ಮ ಬೌದ್ದೀಕ ದಿವಾಳಿತನವನ್ನು ಹೊರಹಾಕಿದ್ದು ನಿಜಕ್ಕೂ ಬೇಸರ, ಅಕ್ರೋಶದ ಜೊತೆ ಆವರ ಬಗ್ಗೆ ಕನಿಕರವೂ ಉಂಟಾಯಿತು.

ಸಹಿಷ್ಣುತೆ ಎಂದರೆ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಬೇರೆಯವರು ಹತ್ತಿಕ್ಕುತ್ತಿದ್ದಾಗ ಅದನ್ನು ನೋಡಿಕೊಂಡು ಸುಮ್ಮನಿರ ಬೇಕು ಎಂದೇನಲ್ಲ. ನಮಗೆ ನಮ್ಮತನದ ಬಗ್ಗೆ ಅಭಿಮಾನವಿರ ಬೇಕು ಹಾಗೆಯೇ ಮತ್ತೊಂದು ಧರ್ಮದ ಬಗ್ಗೆ ಗೌರವವನ್ನೂ ತೋರುವಂತಿರಬೇಕು. ಎಲ್ಲರ ಭಾವನೆಗಳಿಗೆ ಸ್ಪಂದಿಸುವವರೇ ನಿಜವಾದ ಮಾನವೀಯತೆ. ಅದನ್ನೇ ಭಾರತದ ಹಿಂದೂಗಳು ಈವರೆವಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ.

ಇಷ್ಟೆಲ್ಲಾ ಸಮಜಾಯಿಷಿ ಕೊಟ್ಟನಂತರವೂ ಹಾಗೆ ಬಿಟ್ಟು ಹೋದವರನ್ನು ಗುಂಪಿಗೆ ಸೇರಿಸಿ ಎಂದು ಸುಮ್ಮನಾಗಿದ್ದ ಗಾಯದ ಮೇಲೇ ತಾನೇ ಬರೆ ಹಾಕಿಕೊಂಡಿದ್ದಲ್ಲದೇ ಅನಾವಶ್ಯಕವಾಗಿ ಓತಪ್ರೋತವಾಗಿ ಸಂದೇಶಗಳನ್ನು ಕಳುಹಿಸುತ್ತಾ ಇಡೀ ಗುಂಪಿನ ಶಾಂತಿಯನ್ನು ಹಾಳುಗೆಡವಿದ್ದನ್ನೇ ಪ್ರಶ್ನಿಸಿದ ಮತ್ತೊಬ್ಬ ಹಿರಿಯರ ಮೇಲೂ ಹರಿಹಾಯ್ದು ಸಿಟ್ಟಿನಿಂದ ಮೂಗು ಕತ್ತರಿಸಿಕೊಳ್ಳುವಂತೆ ನನ್ನಂತಹ ವ್ಯಕ್ತಿ ಈ ಗುಂಪಿನಲ್ಲಿ ಇರಲು ಅಸಾಧ್ಯ ಎಂದು ಆತ್ಮರತಿಯನ್ನು ತೋರಿಸಿಕೊಂಡು ಗುಂಪನ್ನು ತ್ಯಜಿಸಿದಾಗ ನನಗೆ ಅನ್ನಿಸಿದ್ದು, ಹಿಂದೂಗಳಿಗೆ ಅನ್ಯಧರ್ಮೀಯರಿಗಿಂತ ಇಂತಹ ಎಡಬಿಡಂಗಿ ಜಾತ್ಯಾತೀತ ಹಿಂದೂಗಳೇ ನಿಜವಾದ ಆಂತರಿಕ ಶತ್ರುಗಳು.

kan1

ಇನ್ನು ಕನ್ಯಾದಾನದ ಬಗ್ಗೆ ಬರೋಣ. ನಮ್ಮ ಶಾಸ್ತ್ರದಲ್ಲಿ ದಾನ ದಾನಗಳಲ್ಲಿ ಅತೀ ಶೇಷ್ಠವಾದ ದಾನವೆಂದರೆ ಅದು ಕನ್ಯಾದಾನ. ಆದರೆ ಇಂದು ಅದರ ಹಿನ್ನಲೆ ಮತ್ತು ಮಹತ್ವವನ್ನು ಅರಿಯದ ಮಾನ್ಯವರ್ ಎಂಬ ಉಡುಪು ತಯಾರಕ ಸಂಸ್ಥೆ ಮತ್ತು ಅವರು ಪ್ರಸಾರ ಮಾಡುತ್ತಿರುವ ಜಾಹೀರಾತಿನ ನಿರ್ದೇಶಕ ಮತ್ತು ಈ ಜಾಹೀರಾತಿನಲ್ಲಿ ನಟಿಸಿರುವ ನಟಿ ಕನ್ಯಾದಾನ ಎಂದು ದಾನ ಮಾಡಲು ನಾನೇ ವಸ್ತುವೇ? ‍ ಚಿಕ್ಕಂದಿನಿಂದಲೂ ನನ್ನನ್ನು ಗುಬ್ಬಿ ಗುಬ್ಬೀ ಎಂದು ಪ್ರೀತಿಯಿಂದ ಕರೆದು ಮುದ್ದು ಮಾಡಿದ್ದೀರಿ. ಆಕಾಶದಲ್ಲಿ ಸ್ವಚ್ಚಂಧವಾಗಿ ಹಾರಾಡಬೇಕಾದಂತಹ ಈ ಗುಬ್ಬಿಯನ್ನು ದಾನ ಮಾಡುವಂತಹ ವಸ್ತು ಎಂದು ಏಕೆ ಕರೆಯುತ್ತೀರೀ? ಹಾಗಾಗಿ ನಾನು ಇದನ್ನು ಕನ್ಯಾದಾನ ಎಂದು ಪರಿಗಣಿಸದೇ ಕನ್ಯಾಮಾನ ಎಂದು ಕರೆಯಲು ಇಚ್ಚಿಸುತ್ತೇನೆ ಎಂದು ಅಸಂಬದ್ಧವಾಗಿ ಹೇಳುತ್ತಾ, ನಮ್ಮ ಸಂಸ್ಕಾರ ಮತ್ತು ಸಂಪ್ರದಾಯವನ್ನೇ ತಿರುಚಿದಾಗಲೂ ಅದನ್ನು ಸಹಿಸಿಕೊಳ್ಳಲು ಸಾಧ್ಯವೇ?

kan2

ಕನ್ಯಾದಾನ ಎಂಬ ಪದವು ಎರಡು ಪದಗಳ ಕೊಂಡಿಯಾಗಿದೆ. ಕನ್ಯಾ, ಅಂದರೆ ಹುಡುಗಿ, ದಾನ ಎಂದರೆ ಧಾರೆ ಎರೆಯುವುದು. ಸನಾತನ ಸಂಪ್ರದಾಯಗಳ ಪ್ರಕಾರ, ವರನು ವಿಷ್ಣುವಿನ ಅವತಾರವಾದರೆ, ವಧು ಮಹಾಲಕ್ಷ್ಮಿಯ ಅವತಾರವಾಗಿರುತ್ತಾಳೆ. ಅಷ್ಟು ವರ್ಷಗಳ ಕಾಲ ಹೊತ್ತು ಹೆತ್ತು ಸಾಕಿ ಸಲಹಿದ ಮಗಳನ್ನು ತಾವು ಅಳೆದು ತೂಗಿ ಹುಡುಗನ ಮನೆತನ, ಕುಲಾ ಗೋತ್ರ ಎಲ್ಲವನ್ನು ವಿಚಾರಿಸಿ ನಂತರ ಶಾಸ್ತ್ರೋಕ್ತವಾಗಿ ಲಗ್ನವನ್ನು ನೋಡಿ ಬಂಧು ಮಿತ್ರರ ಸಮ್ಮುಖದಲ್ಲಿ ಮಧುಮಗನ ಕೈಯಲ್ಲಿ ತನ್ನ ಮಗಳನ್ನು ಇತ್ತು ಗಂಗಾ ಜಲದ ಸಾಕ್ಷಿಯಾಗಿ ತನ್ನ ಮಗಳನ್ನು ಧಾರೆ ಎರೆದು ಕೊಡುವ ಮೂಲಕ ಆಕೆಯ ಸಕಲ ಜವಬ್ದಾರಿಯನ್ನು ಅಳಿಯನಿಗೆ ವಹಿಸಿಕೊಡುತ್ತಾರೆ. ಇಷ್ಟು ವರ್ಷ ಗಿಣಿಸಾಕಿದಂತೆ ಸಾಕಿ ಸಲಹಿ ದೊಡ್ಡವಳನ್ನಾಗಿ ಮಾಡಿದ್ದೇವೆ. ನಮ್ಮ ಮನೆಯ ಮಹಾಲಕ್ಷ್ಮಿಯು ಇನ್ನು ಮುಂದೆ ನಿಮ್ಮ ಎಲ್ಲಾ ಕಷ್ಟ ಸುಖದ ಕಾಲದಲ್ಲಿಯೂ ಜೊತೆಗಿದ್ದು ನಿಮ್ಮ ಮನೆಯ ಘನತೆ ಗೌರವನ್ನು ಕಾಪಾಡುವ ಜೊತೆಗೆ ನಿಮ್ಮ ವಂಶೋದ್ಧಾರದ ಜವಾಬ್ಧಾರಿಯನ್ನೂ ಹೊರಯವ ಮೂಲಕ ನಿಮ್ಮ ಮನೆಯ ನಂದಾದೀಪವಾಗಲಿ. ಹಾಗಾಗಿ ನೀವು ಆಕೆಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂಬುದೇ ಈ ಕನ್ಯಾದಾನದ ಹಿಂದಿರುವ ಮಹತ್ವವಾಗಿದೆ. ಹೀಗೆ ಧಾರೆ ಎರೆದು ಕೊಡುವ ಮೂಲಕ, ವರ ಮತ್ತು ವಧುವಿನ ಬಾಂಧವ್ಯವನ್ನು ಇದು ಗಟ್ಟಿಗೊಳಿಸುವುದರ ಜೊತೆಗೆ, ಎರಡೂ ಮನೆಯ ಸಂಬಂಧವನ್ನು ಬೆಳಸುತ್ತದೆ.

ಅದೇ ರೀತಿ ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ, ಮಗಳೇ ಇಷ್ಟು ದಿನ ನಮ್ಮ ಮನೆಯಲ್ಲಿ ಏನೇ ಮಾಡಿದರೂ ತಂದೆ ತಾಯಿಗಳಾಗಿ ಸಹಿಸಿಕೊಂಡು ಹೋಗುತ್ತಿದ್ದಲ್ಲದೇ, ನಿನ್ನೆಲ್ಲಾ ತಪ್ಪನ್ನು ಕ್ಷಮಿಸಿ ಪ್ರೀತಿ ಮಾಡುತ್ತಿದ್ದೆವು. ಇನ್ನು ಮುಂದೆ ನೀನು ನಿಮ್ಮ ಅತ್ತೆ ಮತ್ತು ಮಾವನಲ್ಲೇ ತಂದೆ ತಾಯಿಯರನ್ನು ಕಾಣುತ್ತಾ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಲ್ಲದೇ ಗಂಡನ ಸುಖಃ ದುಃಖಗಳಲ್ಲಿ ಅರ್ಧಾಂಗಿಯಾಗಿ ಕೊಟ್ಟ ಮನೆಗೂ ಹೋದ ಮನೆಗೂ ಗೌರವನ್ನು ತರಬೇಕೆಂದು ತಿಳಿ ಹೇಳಿ ಕಳುಹಿಸಿಕೊಡುತ್ತಾರೆ.

kan3

ಮಗಳನ್ನು ಮದುವೆ ಮಾಡಿ ಕಳುಹಿಸಿಕೊಟ್ಟರೆ ಜವಾಬ್ಧಾರಿ ಕಳೆದು ಹೋಗುತ್ತದೆ ಎನ್ನುವುದು ಲೋಕಾರೂಢಿಯ ಮಾತಾದರೂ, ನಿಜ ಹೇಳಬೇಕೆಂದರೆ, ಮಗಳನ್ನು ಮದುವೆ ಮಾಡಿಕೊಟ್ಟ‌ನಂತರ ಜವಾಬ್ಧಾರಿ ಹೆಚ್ಚುತ್ತದೆ. ಅಲ್ಲಿಯವರೆಗೂ ಕೇವಲ ಮಗಳ ಆರೈಕೆ ಮಾಡುತ್ತಿದ್ದವರು ಇನ್ನು ಮುಂದೆ ಅಳಿಯನ ಜವಾಬ್ಧಾರಿ ಬರುತ್ತದಲ್ಲದೇ ಮುಂದೆ ಮಗಳಿಗೆ ಮಕ್ಕಳಾದಾಗ ಮೊಮ್ಮಕ್ಕಳನ್ನು ಸಾಕಿ ಸಲಹುವುದೂ ಅಜ್ಜಾ ಅಜ್ಜಿಯರ ಜವಾಬ್ಧಾರಿಯಾಗಿರುತ್ತದೆ. ಇಂತಹ ಪವಿತ್ರ ಸಂಬಂಧ ಮಹತ್ವವನ್ನು ಅರಿಯದೇ, ತಮಗೆ ತೋಚಿದಂತೆ ಸಂಪ್ರದಾಯವನ್ನು ತಿರುಚಲು ಜಾಹೀರಾತು ಕಂಪನಿಗಳಿಗೆ ಅಧಿಕಾರವನ್ನು ಕೊಟ್ಟವರು ಯಾರು?
ಇಂತಹ ಸುಂದರವಾದ ಕಲ್ಪನೆಯ ಅರಿವಿಲ್ಲದ ಕೆಲವರು ವಿಕೃತ ಮನಸ್ಸಿನವರು ಕವಿ ಜಿ ಎಸ್ ಶಿವರುದ್ರಪ್ಪನವರು ಬರೆದಿರುವ ಈ ಸುಂದರ ಕವಿತೆಯಂತೆ,

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ

ನಮ್ಮ ಕೈಯ್ಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕೆ ಅಲೆಂದಂತೆ, ಚಿನ್ನ ಹುಡುಕುವ ಭರದಲ್ಲಿ, ಕೈಯ್ಯಲ್ಲಿದ್ದ ವಜ್ರವನ್ನೇ ಕಳೆದುಕೊಂಡಂತೆ ನಮ್ಮ ಧರ್ಮದಲ್ಲೇ ಎಲ್ಲವೂ ಇದ್ದರೂ ಅದರ ಮಹತ್ವವನ್ನು ಅರಿಯದೇ ನಮ್ಮ ಧರ್ಮದ ಆಚರಣೆಳನ್ನು ಅವಹೇಳನ ಮಾಡುತ್ತಾ ಅನ್ಯಧರ್ಮದ ಅಂಧಾನುಕರಣೆ ಮಾಡುವುದೋ ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

ನಮ್ಮ ಸಂಸ್ಕಾರ ಸಂಪ್ರದಾಯಗಳಿಗೆ ವ್ಯತಿರಿಕ್ತವಾಗಿ ಮತ್ತೊಬ್ಬರು ಅವಹೇಳನ ಮಾಡುತ್ತಿರುವ ಸಂಧರ್ಭದಲ್ಲಿ ಸುಮ್ಮನೇ ಹೊಡೀ ಬಡೀ ಕಡೀ ಎಂದು ಹೊಡೆದಾಟಕ್ಕೆ ಇಳಿಯದೇ, ಅವರು ಮಾಡುತ್ತಿರುವ ತಪ್ಪನ್ನು ಅವರ ಅವಗಾಹನೆಗೆ ತರುವುದಲ್ಲದೇ ಅವರು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಹೇಳಬೇಕು. ತಪ್ಪನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದಲ್ಲಿ ಆವರ ಅಹಂ ಬಗ್ಗು ಬಡಿಯಲು ಗಾಂಧಿಯವರೇ ಹೇಳಿಕೊಟ್ಟ ಅಸಹಕಾರ ಚಳುವಳಿಯೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡು, ಆ ಕಂಪನಿಗಳ ಉತ್ಪನ್ನಗಳನ್ನೂ, ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ನಟ/ನಟಿಯರನ್ನೂ ಮತ್ತು ವಿಕೃತ ಮನೋಭಾವದ ನಿರ್ದೇಶಕರನ್ನು ಬಹಿಷ್ಕರಿಸುವುದೇ ಉತ್ತಮ ಮಾರ್ಗವಾಗಿದೆ.

1000 ವರ್ಷಗಳ ಮೊಘಲರ ಆಳ್ವಿಕೆ, 300ವರ್ಷಗಳ ಬ್ರಿಟಿಷರ ಆಳ್ವಿಕೆಯಲ್ಲಿ ದಾಸ್ಯಕ್ಕೆ ಒಳಗಾಗಿ ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಗಳಿಗೆ ಸಾಕಷ್ಟು ಹಾನಿಯಾಗಿರುವುದನ್ನು ಗಮನಿಸಿಯೂ ಇನ್ನು ಮುಂದೇಯೂ ಪಾಠ ಕಲಿಯದೇ, ಸಹಿಷ್ಣುತೆ ಎಂಬ ಹೆಸರಿನಲ್ಲಿ ನಮ್ಮ ಮೇಲೆಯೇ ದಬ್ಬಾಳಿಕೆಯ ನಡೆಯುತ್ತಿದ್ದರೂ ಸಹಿಸಿಕೊಂಡು ಹೋಗಬೇಕು ಎಂದು ವಾದಿಸುವುದು ಮೂರ್ಖತನದ ಪರಮಾವಧಿ ಆದೀತು..

ಧರ್ಮೋ ರಕ್ಷತಿ ರಕ್ಷಿತಃ!!

ಏನಂತೀರೀ?
ನಿಮ್ಮವನೇ ಉಮಾಸುತ

ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ಕೊರೋನಾ ಬಂದು ಇಡೀ ಪ್ರಪಂಚವೇ ಕಳೆದು ಒಂದೂವರೆ ವರ್ಷಗಳಿಂದ ಲಾಕ್ಡೌನ್ ಆಗಿರುವಾಗ ಅರೇ ಇದೇನಪ್ಪಾ ಇಂತಹ ಶೀರ್ಷಿಕೆ ಎಂದು ಆಶ್ಚರ್ಯ ಪಡುತ್ತಿದ್ದರೆ ನಿಮಗೊಂದು ಅಚ್ಚರಿಯ ಸಂಗತಿಗಳೊಂದಿಗೆ ನಿಮಗೆ ಸಾದರ ಪಡಿಸುವ ಸಣ್ಣದಾದ ಪ್ರಯತ್ನ

ಕೊರೋನಾ ವಕ್ಕರಿಸುವುದಕ್ಕಿಂತಲೂ ಮುಂಚೆ, ಎಲ್ಲರ ಮನೆಗಳಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಸಮಾರಂಭಗಳೂ ಸಹಾ ಬಹಳ ಅದ್ದೂರಿಯಿಂದ ನೂರಾರು ಜನರ ಸಮ್ಮುಖದಲ್ಲಿ ನಡೆಯುತ್ತಿತ್ತು. ಇನ್ನೂ ಮದುವೆ ಮುಂಜಿ ಉಪನಯನಗಳಲ್ಲಂತೂ ಸಾವಿರಾರು ಜನರನ್ನು ಸೇರಿಸಿ ನಭೂತೋ ನ ಭವಿಷ್ಯತಿ ಎನ್ನುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಜಾಂ ಜಾಂ ಎಂದು ನಡೆಸುತ್ತಿದ್ದರು. ನಿಜ ಹೇಳಬೇಕೆಂದರೆ ಈ ಎಲ್ಲಾ ಸಮಾರಂಭಗಳಲ್ಲಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಆತ್ಮೀಯತೆಗಿಂತ ಅಬ್ಬರದ ಆಡಂಬರವೇ ಪ್ರಾಧಾನ್ಯವಾಗಿ ಕಾರ್ಯಕ್ರಮಕ್ಕೆ ಬಂದಿರುವವರನ್ನು ಸರಿಯಾಗಿ ಯಾರೂ ವಿಚಾರಿಸಿಕೊಳ್ಳದೇ, ಬಂದವರು ಬಂದರು ಹೋದವರು ಹೋದರು ಎನ್ನುವಂತೆ ಹೊಟ್ಟೆ ಭರ್ತಿ ಉಂಡು ಲೋಕಾರೂಢಿಯಾಗಿ ಉಡುಗೊರೆಯೊಂದನ್ನು ಕೊಟ್ಟು ಫೋಟೋ ಇಲ್ಲವೇ ವೀಡಿಯೋ ತೆಗೆಸಿಕೊಳ್ಳುವುದಕ್ಕೆ ಮಾತ್ರವೇ ಸೀಮಿತವಾಗಿ ಹೋಗಿದ್ದದ್ದು ವಿಪರ್ಯಾಸವಾಗಿತ್ತು.

ಯಾವಾಗ ಕೊರೋನ ವಕ್ಕರಿಸಿ ಕೊಂಡಿತೋ, ಅದನ್ನು ತಡೆಗಟ್ಟುವುದಕ್ಕೆ ಮಾಸ್ಕ್ ಧರಿಸುವುದು, ಶುಚಿತ್ವ ಕಾಪಾಡಿ ಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದೊಂದೇ ಸೂಕ್ತವಾದ ಮಾರ್ಗ ಎಂದು ತಿಳಿಯುತ್ತಿದ್ದಂತೆಯೇ, ಸರ್ಕಾರವು ಎಲ್ಲಾ ಸಭೆ ಸಮಾರಂಭಗಳಿಗೆ ಅಂಕುಶವನ್ನು ಹಾಕಿದ್ದಲ್ಲದೇ, ಮೂವತ್ತು ನಲವತ್ತು ಜನರಿಗಷ್ಟೇ ಸೀಮಿತಗೊಳಿಸಿತು. ಆರಂಭದಲ್ಲಿ ಸರ್ಕಾರದ ಈ ನಿಯಮ ಅನೇಕರಿಗೆ ಕೋಪ ತರಿಸಿದರೂ ನಂತರದ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರದ ನಿಯಮಗಳು ಸೂಕ್ತ ಎನಿಸಿ ಅದಕ್ಕೆ ತಕ್ಕಂತೆ ಅನುಸರಿಸಿದ್ದು ಮೆಚ್ಚಿಗೆಯ ವಿಷಯವಾಗಿತ್ತು.

ನಮ್ಮ ಕುಟುಂಬದಲ್ಲೂ ಇದಕ್ಕೆ ಹೊರತಾಗಿರಲಿಲ್ಲ. ನಮ್ಮ ತಂದೆ ತಾಯಿಯರ ಶ್ರಾದ್ಧ ಕಾರ್ಯಕ್ಕೆ ಸುಮಾರೂ ಐವತ್ತು ಅರವತ್ತು ಜನರು ಸೇರುವುದು ಸಹಜ ಪ್ರಕ್ರಿಯೆಯಾಗಿತ್ತು. ಈ ಕೊರೋನಾದಿಂದಾಗಿ ಶ್ರಾದ್ಧ ಕಾರ್ಯಗಳನ್ನು ಮಾಡಿಸಲು ಪೌರೋಹಿತರು ಮತ್ತು ಅಡುಗೆಯವರು ಸಿಗದೇ ಹೋದಂತಹ ಪರಿಸ್ಥಿತಿಯ ಜೊತೆಗೆ ಕುಟುಂಬದವರು ಕೊರೋನಾ ನೆಪದಿಂದ ಬರಲು ಹಿಂದೇಟು ಹಾಕಿದಾಗ ವಿಧಿ ಇಲ್ಲದೇ ಮನೆಯ ಮಟ್ಟಿಗೆ ಶ್ರದ್ಧೆಯಿಂದ ಶ್ರಾದ್ಧವನ್ನು ಮಾಡಿ ಪಿತೃಕಾರ್ಯವನ್ನು ಮುಗಿಸಿದ್ದೆವು.

ವರ್ಷದ ಹಿಂದೆಯೇ ತಂಗಿಯ ಮಗಳಿಗೆ ಸಂಬಂಧ ಗೊತ್ತಾಗಿದ್ದರೂ ಕೊರೋನಾದಿಂದಾಗಿ ನಿಶ್ಚಿತಾರ್ಥ ಮತ್ತು ಮದುವೆಯನ್ನು ಮುಂದೂಡುತ್ತಲೇ ಬಂದು ಕಡೆಗೆ ಕಳೆದ ಅಕ್ಟೋಬರ್ ಸಮಯದಲ್ಲಿ ಕೊರೋನಾ ಸ್ವಲ್ಪ ಕಡಿಮೆಯಾದಾಗ ಸರ್ಕಾರೀ ನಿಯಮದಂತೆಯೇ, ಕೇವಲ ಮೂವತ್ತು ಜನರ ಸಮ್ಮುಖದಲ್ಲಿಯೇ ನಿಶ್ಚಿತಾರ್ಥ ನಡೆಸಿದಾಗ, ಮನೆಯ ಅನೇಕ ಹಿರಿಯರು ನೀವೆಲ್ಲಾ ದೊಡ್ಡವರಾಗಿ ಬಿಟ್ರೀ. ನಮ್ಮನ್ನೆಲ್ಲಾ ಕರೆಯದೇ ನಿಮ್ಮ ಪಾಡಿಗೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿಯೂ ಆಗಿತ್ತು. ಆನಂತರ ಅವರಿಗೆ ಕಾರ್ಯಕ್ರಮದ ವೀಡೀಯೋ ಮತ್ತು ಪೋಟೋಗಳನ್ನು ತೋರಿಸಿ ಕೇವಲ ಮನೆಯ ಮಟ್ಟಿಗೆ ಮಾಡಿಕೊಂಡಿದ್ದೇವೆ ಎಂದು ಸಮಾಧಾನ ಪಡಿಸುವುದರಲ್ಲಿ ಸಾಕು ಸಾಕಾಗಿ ಹೋಗಿತ್ತು.

ಮದುವೆಯನ್ನಾದರೂ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗೇ ಮಾಡೋಣ ಎಂದು ತೀರ್ಮಾನಿಸಿ ಅದಕ್ಕೆ ತಕ್ಕಂತೆ ಛತ್ರ, ಪುರೋಹಿತರು, ಅಡುಗೆಯವರು, ಪೋಟೋ, ಓಲಕ, ಹೀಗೆ ಎಲ್ಲರನ್ನೂ ಸಂಪರ್ಕಿಸಿ ಎಲ್ಲರಿಗೂ ಮುಂಗಡವನ್ನು ಕೊಟ್ಟು ಒಪ್ಪಿಸಲಾಗಿತ್ತು. ದುರಾದೃಷ್ಟವಶಾತ್ ಮತ್ತೆ ಕೊರೋನಾ ಎರಡನೇ ಅಲೇ ಮಿತಿ ಮೀರೀ ಹರಡಿ ಅನೇಕ ಹತ್ತಿರದ ಬಂಧು ಮಿತ್ರರನ್ನೇ ಆಹುತಿ ತೆಗೆದುಕೊಂಡಾಗ ಸರ್ಕಾರವೂ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ಡೌನ್ ಮತ್ತೊಮ್ಮೆ ಘೋಷಿಸಿದ್ದಲ್ಲದೇ ಮತ್ತೆ ಮದುವೆ ಮುಂಜಿ ಮತ್ತು ಸಮಾರಂಭಳಿಗೆ ಜನರ ಮಿತಿಯನ್ನು ಹೇರಿದಾಗ ಮತ್ತೊಮ್ಮೆ ಕುಟುಂಬದಲ್ಲಿ ಆತಂಕದ ಛಾಯೆ. ಮದುವೆಗೆ ಇನ್ನೇನು ಹತ್ತು ದಿನಗಳವರೆಗೂ ಎಲ್ಲವೂ ಅಯೋಮಯವಾಗಿತ್ತು. ಕಡೆಗೆ ಛತ್ರದವರು ಫೋನ್ ಮಾಡಿ ಸರ್ಕಾರದ ಆಜ್ಞೆಯ ಅನುಸಾರವಾಗಿ ನಿಮ್ಮ ಮದುವೆಗೆ ನಮ್ಮ ಛತ್ರ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ ಆದರೂ ಮನೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದಾಗ ಕೊಂಚ ನಿರಾಳ.

ಮತ್ತೆ ಪುರೋಹಿತರು, ಪೋಟೋದವರಿಗೆ, ಹೂವಿನವರಿಗೆ, ಅಡುಗೆಯವರಿಗೆ, ಅಲಂಕಾರ ಮಾಡುವವರಿಗೆ ಎಲ್ಲರೀಗೂ ಮನೆಯಲ್ಲಿಯೇ ಮನೆಮಟ್ಟಿಗೆ ಮದುವೆ ಮಾಡುತ್ತಿರುವ ವಿಷಯವನ್ನು ತಿಳಿಸಿ ಮತ್ತೊಮ್ಮೆ ಬಂಧು ಮಿತ್ರರಿಗೆಲ್ಲರಿಗೂ ಅನಿವಾರ್ಯ ಕಾರಣಗಳಿಂದಾಗಿ ಮದುವೆಯನ್ನು ಮನೆಯ ಮಟ್ಟಿಗೆ ಮನೆಯಲ್ಲೇ ಮಾಡುತ್ತಿರುವ ವಿಷಯವನ್ನು ತಿಳಿಸುವುದಕ್ಕೂ ಕೊಂಚ ನಿರಾಸೆಯಾದರೂ, ವಿಧಿ ಇಲ್ಲದೇ ಎಲ್ಲರಿಗೂ ವಿಷಯವನ್ನು ತಿಳಿಸಿ, ಅದರ ಜೊತೆಗೆ ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲರು ಅವರವರ ಮನೆಗಳಲ್ಲಿಯೇ ಕುಳಿತುಕೊಂಡು ಮದುವೆಯ ನೇರಪ್ರಸಾರ (Live) ನೋಡುವ ಸೌಲಭ್ಯವನ್ನು ಕಲ್ಪಿಸಿರುವುದನ್ನು ತಿಳಿಸಿಯಾಗಿತ್ತು. ಸ್ಥಳೀಯ ಬಿಬಿಎಂಪಿ ಕಛೇರಿಗೆ ಹೋಗಿ ಐದಾರು ಗಂಟೆಗಳ ಕಾಲ ವ್ಯಯಿಸಿ ಮದುವೆಗೆ ಬೇಕಾಗಿದ್ದ ಎಲ್ಲಾ ಅನುಪತಿ ಪತ್ರಗಳನ್ನು ಪಡೆದು ಅದರ ನಕಲನ್ನು ಹತ್ತಿರದ ಪೋಲೀಸ್ ಠಾಣೆಗೆ ತಲುಪಿಸಿದಾಗಲೇ ಮದುವೆ ಹೆಣ್ಣಿನ ಅಪ್ಪನಿಗೆ ಒಂದು ರೀತಿಯ ನಿರಾಳ.

ಮನೆಯಲ್ಲಿಯೇ ಮದುವೆಯಾಗಿದ್ದರಿಂದ ಸಾಂಗೋಪಾಂಗವಾಗಿ ಯಾವುದೇ ಶಾಸ್ತ್ರ ಸಂಪ್ರದಾಯಗಳಿಗೆ ಲೋಪವಾಗಂತೆ ಐದು ದಿನಗಳ ಮದುವೆಯ ಕಾರ್ಯ ಶುರುವಾಗಿತ್ತು. ಮನೆಯ ಹೆಣ್ಣು ಮಕ್ಕಳಿಗಂತೂ ಐದು ದಿನಗಳ ಮದುವೆಯ ಸಂಭ್ರಮ ನಿಜಕ್ಕೂ ಕೌತುಕವನ್ನು ಹೆಚ್ಚಿಸಿತ್ತು, ಗುರುವಾರ ಶಾಸ್ತ್ರ ಎಂದಿಲ್ಲದಿದ್ದರೂ, ಇಂದಿನ ರೂಢಿಯಂತೆ ಮದರಂಗಿ ಹಚ್ಚುವವರನ್ನು ಮನೆಗೇ ಕರೆಸಿ ಮನೆಯ ಹೆಣ್ಣು ಮಕ್ಕಳಿಗೆಲ್ಲರಿಗೂ ಎರಡೂ ಕೈಗಳಿಗೂ ಮದರಂಗಿ ಹಚ್ಚಿಸಿದ್ದ ಕಾರಣ ಅವರ ಊಟೋಪಚಾರಗಳೆಲ್ಲವೂ ಮನೆಯ ಗಂಡುಮಕ್ಕಳದ್ದೇ ಆಗಿತ್ತು. ಐದಾರು ಗಂಟೆಗಳ ನಂತರ ಅವರ ಕೈಗಳಲ್ಲಿ ಕೆಂಪಗೆ ಅರಳಿದ್ದ ಮದರಂಗಿಯ ಬಣ್ಣ ನೋಡಿ ಅವರ ಮುಖಾರವಿಂದಗಳು ಅರಳಿದ್ದನ್ನು ಹೇಳುವುದಕ್ಕಿಂತಲೂ ನೋಡಿದ್ದರೇ ಚೆನ್ನಾಗಿರುತ್ತಿತ್ತು.

ಎರಡನೆಯ ದಿನ ಚಪ್ಪರದ ಪೂಜೆ, ಹಿರಿಯರಿಗೆ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆದು, ನಾಂದಿ ಹೋಮದಲ್ಲಿ ಗಣಪತಿ ಮತ್ತು ನವಗ್ರಹಗಳನ್ನು ಸಂಪ್ರಿತಗೊಳಿಸಿ ಮದುವೆ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುವಂತೆ ಕೋರಿ, ಬಂದಿದ್ದ ಮುತ್ತೈದೆಯರ ಕಾಲು ತೊಳೆದು, ಕೈ ತುಂಬಾ ಅರಿಶಿನ ಕೊಟ್ಟು ಬಳೆ ತೊಡಿಸಿ ನಾನಾವಿಧದ ಪಲಪುಷ್ಪಗಳೊಂದಿಗೆ ಹೂವಿಳ್ಯವೆಲ್ಲವೂ ಶಾಸ್ತ್ರೋಕ್ತವಾಗಿ ವಿಧಿವತ್ತಾಗಿ ನಡೆದು ಇಂದಿನ ಕಾಲಕ್ಕೆ ಅನುಗುಣವಾಗಿ ಬೀಸೋಕಲ್ಲು, ಒನಕೆ ಎಲ್ಲವಕ್ಕೂ ಪೂಜೆ ಮಾಡಿ ಶಾಸ್ತ್ರಕ್ಕಾಗಿ ಅರಿಶಿನ ಕುಟ್ಟಿಸಿದಾಗ ಅಧಿಕೃತವಾಗಿ ಮದುವೆಯ ಕಾರ್ಯ ಆರಂಭವಾಗಿತ್ತು.

ಮೂರನೇ ದಿನದ ಸಂಜೆ ವರಪೂಜೆಯಾದರೂ ಬೆಳಗಿನಿಂದಲೇ ಮನೆಯಲ್ಲಿ ಸಂಭ್ರಮ. ಗಂಡಸರು ಹೂವು ಮತ್ತಿತರ ಸಾಮಗ್ರಿಗಳನ್ನು ತರಲು ಹೊರಗೆ ಹೊದರೆ, ಮನೆಯಲ್ಲಿದ್ದ ಹೆಣ್ಣುಮಕ್ಕಳು ಮದುವೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಮಧ್ಯಾಹ್ನವಾಗಿ ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಮನೆಯಲ್ಲಿದ್ದ ಹತ್ತು ಹದಿನೈದು ಜನರಿಗೆ ತಟ್ಟೆಯಲ್ಲಿ ಊಟಬಡಿಸಿ ಆ ತಟ್ಟೆಗಳನ್ನೆಲ್ಲಾ ತೊಳೆಯುವವರು ಯಾರು ಎಂದು ಅಲ್ಲರನ್ನೂ ಅರ್ಧ ಚಕ್ರಾಕಾರದಲ್ಲಿ ಕುಳ್ಳರಿಸಿಕೊಂಡು ಮನೆಯ ಹಿರಿಯ ತಾಯಿ ಕೈ ತುತ್ತು ಹಾಕುತ್ತಿದ್ದರೆ, ತಾಮುಂದು ನಾಮುಂದು ಎಂದು ಹತ್ತು ಹದಿನೈದು ನಿಮಿಷಗಳಲ್ಲಿ ಎಲ್ಲರ ಹೊಟ್ಟೆ ತುಂಬಿಹೋಗಿದ್ದೇ ಗೊತ್ತಾಗಲಿಲ್ಲ.

ಸಂಜೆ ಗಂಡಿನ ಮನೆಯವರು ಬರುವಹೊತ್ತಿಗೆ ಎಲ್ಲಾ ಹೆಣ್ಣುಮಕ್ಕಳು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಯಥಾಶಕ್ತಿ ಸೌಂದರ್ಯವರ್ಧಕಗಳನ್ನು ಧರಿಸಿ ಆಕಾಶದಲ್ಲಿದ್ದ ನಕ್ಷತ್ರಗಳೆಲ್ಲಾ ಒಟ್ಟಿಗೆ ಭೂಮಿಗೆ ಇಳಿದು ಬಿಟ್ಟಿದ್ದಾರೇನೋ ಎನ್ನುವಂತೆ ಕಂಗಳಿಸುತ್ತಿದ್ದರು ಎಂದರೂ ಉತ್ರ್ಪೇಕ್ಶೆಯೇನಲ್ಲ.

ಬೀಗರ ಮನೆಯವರು ಆಗಮಿಸುತ್ತಿದ್ದಂತೆಯ ಮನೆಯ ಹೆಣ್ಣು ಮಕ್ಕಳು ಆರತಿ ಬೆಳಗಿದರೆ, ಮನೆಯ ಹಿರಿಯರು ಎಲ್ಲರಿಗೂ ಸಂಬಂಧಮಾಲೆ ಹಾಕಿ ಸ್ವಾಗತಿಸಿದರು, ಗಂಡು ಮಕ್ಕಳು ಬೀಗರ ಮೆನೆಯವರು ತಂದಿದ್ದ ಸಾಮಾನುಗಳನ್ನೆಲ್ಲಾ ಅಚ್ಚುಕಟ್ಟಾಗಿ ಅವರ ಕೋಣೆಗೆ ತಲುಪಿಸಿ ಎಲ್ಲರನ್ನು ತಿಂಡಿಗೆ ಕೂರಿಸುವ ಹೊತ್ತಿನಲ್ಲಿ ಸೂರ್ಯ ಮುಳುಗಿ ಚಂದ್ರ ವರಪೂಜೆಯಲ್ಲಿ ನವ ದಂಪತಿಗಳನ್ನು ನೋಡಲು ಬಂದಿದ್ದ. ಗಂಡು ಮತ್ತು ಹೆಣ್ಣಿನ ಮನೆ ಎರಡೂ ಕಡೆ ಸೇರಿಸಿದರು ಸಂಖ್ಯೆ 40 ಮೀರದೇ ಹೋದದ್ದು ಹೆಣ್ಣಿನ ತಂದೆಗೆ ಕೊಂಚ ನಿರಾಳ. ಎಂಕಾ ನಾಣಿ ಸೀನ ಎಂದು ಮೂರು ಮತ್ತೊಂದು ಜನರು ಇದ್ದ ಕಾರಣ, ಕೆಲವೇ ಕೆಲವು ನಿಮಿಷಗಳಲ್ಲಿ ಎಲ್ಲರಿಗೂ ಅವರವರ ಪರಿಚಯವಾಗಿ ವರಪೂಜೆಯ ಕಾರ್ಯಕ್ರಮಗಳೆಲ್ಲವೂ ನಿರ್ವಿಘ್ನವಾಗಿ ನಡೆದು ರಾತ್ರಿ ಹೋಳಿಗೆ ಊಟ ಮುಗಿಯುತ್ತಿದ್ದಂತೆಯೇ ಬಂದವರಿಗೆ ಹಾಸಿಗೆ ಹೊದಿಕೆಯನ್ನು ಹೊಂದಿಸಿಯಾಗಿತ್ತು.

ನಾಲ್ಕನೇಯ ದಿನ ಧಾರೆಯ ದಿನ ಬೆಳಿಗ್ಗೆಯೇ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ, ಎಲ್ಲರೂ ಅವರವರಿಗೆ ಒಪ್ಪಿಸಿದ್ದ ಕಾರ್ಯಗಳನ್ನೆಲ್ಲಾ ಮುಗಿಸುವಷ್ಟರಲ್ಲಿ ಗಂಟೆ ಎಂಟಾಗಿತ್ತು. ಒಂದು ಸಾರಿ ಕಾಫಿ ಕುಡಿದ ನಂತರ ಹೆಣ್ಣು ಮಕ್ಕಳೆಲ್ಲಾ ಪುರೋಹಿತರ ಆಣತಿಯಂತೆ ಹಸೆಹಾಕಿ ಹಸೇಮಣೆಯನ್ನು ಇಟ್ಟು ಎಲ್ಲಾ ಅಲಂಕಾರಗಳನ್ನು ಮಾಡುತ್ತಿದ್ದರೆ, ಗಂಡಸರು ಹಿಂದಿನ ದಿನ ಹಿಡಿದಿಟ್ಟಿದ್ದ ನೀರೇಲ್ಲಾ ಖಾಲಿಯಾಗಿದ್ದನ್ನು ನೋಡಿ ಮತ್ತೆ ನೀರು ತುಂಬಿಸುವಷ್ಟರಲ್ಲಿ ಬಿಸಿ ಬಿಸಿ ತಿಂಡಿ ಸಿದ್ಧವಾಗಿತ್ತು. ಒಂದು ಕಡೆ ತಿಂಡಿ ತಿನ್ನುತ್ತಿದ್ದರೆ ಮತ್ತೊಂದು ಕಡೆ ಕಾಶೀ ಯಾತ್ರೆಗೆ ವರ ಸಿದ್ಧಾನಾಗಿ ಹೊರಟಾಗಿತ್ತು. ಅರರರೇ.. ಕಾಶೀಯಾತ್ರೆಗೆ ಒಬ್ಬಂಟಿಯಾಗಿ ಹೋಗುವುದು ಸರಿಯಲ್ಲ. ಹಾಗಾಗಿ ನಿಮ್ಮೊಂದಿಗೆ ನನ್ನ ಮಗಳನ್ನು ಕಲ್ಯಾಣ ಮಾಡಿಕೊಡುತ್ತೇನೆ. ಇಬ್ಬರೂ ನೆಮ್ಮದಿಯಾಗಿ ಕಾಶೀ ಯಾತ್ರೆ ಮುಗಿಸಿಕೊಂಡು ಬನ್ನಿ ಎಂದು ವಧುವಿನ ತಂದೆ ವರನ ಕಾಲು ತೊಳೆದು ಕೇಳಿಕೊಂಡರೆ ಹುಡುಗಿಯ ಸಹೋದರ ಭಾವನ ಕಾಲುಗಳಿಗೆ ಚಪ್ಪಲಿ ತೋಡಿಸಿ, ಛತ್ರಿ ಹಿಡಿದು ಹಸೆ ಮಣೇಗೆ ಕರೆದು ತರುವಷ್ಟರಲ್ಲಿ ಅಂತರಪಟ ಹಿಡಿದಾಗಿತ್ತು. ಹುಡುಗಿಯ ಸೋದರ ಮಾವ, ಸಕ್ಕರೆಯಂತೆ ಅಲಂಕಾರ ಮಾಡಿಕೊಂಡು ಸಿದ್ಧವಾಗಿದ್ದ ತನ್ನ ಸೊಸೆಯನ್ನು ಅಕ್ಕರೆಯಿಂದ ಎತ್ತುಕೊಂಡು ಹಸೆಯಣೆಯ ಮೇಲೆ ನಿಲ್ಲಿಸಿ ಜೀರಿಗೆ ಧಾರಣೆ ಮಾಡಿಸಿ, ಮಾಂಗಲ್ಯವನ್ನು ಬಂದಿದ್ದವರೆಲ್ಲರ ಕೈಗೆ ಮುಟ್ಟಿಸಿ ತನ್ನ ಸೊಸೆಯ ಮಾಂಗಲ್ಯಭಾಗ್ಯ ನೂರ್ಕಾಲ ಗಟ್ಟಿಯಾಗಿರಲಿ ಎಂದು ಹರಸಿ ಎಂದು ಕೇಳಿಕೊಂಡು ಮಾಂಗಲ್ಯವನ್ನು ವರನ ಕೈಗೆ ಕೊಡುತ್ತಿದ್ದಂತೆಯೇ ಪುರೋಹಿತರ ಗಟ್ಟಿ ಮೇಳಾ ಗಟ್ಟಿಮೇಳಾ ಎನ್ನುತಿದ್ದಂತೆಯೇ, ಮೊಬೈಲಿನಲ್ಲಿಯೇ ನಾದಸ್ವರ ಜೋರಾದರೆ, ಮಾಂಗಲ್ಯಂ ತಂತುನಾನೇನಾ ಮಮ ಜೀವನ ಹೇತುನಾ… ಎಂದು ಪುರೋಹಿತರು ಹೇಳುತ್ತಿದ್ದರೆ, ವರ ಮಧುವಿನ ಕೊರಳಿಗೆ ಮಾಂಗಲ್ಯದ ಮೂರು ಗಂಟು ಹಾಕುತ್ತಿದ್ದರೆ, ಅಲ್ಲಿಯವರೆಗೂ ತಡೆದು ಹಿಡಿದುಕೊಂಡಿದ್ದ ಕಣ್ನೀರ ಧಾರೆ ವಧುವಿನ ತಾಯಿಯ ಕಣ್ಣುಗಳಲ್ಲಿ ಧಾರಾಕಾರವಾಗಿ ಹರಿದು ಅದೇ ಕಣ್ಣಿರಿನಲ್ಲಿಯೇ ಮಗಳನ್ನು ಅಳಿಯನಿಗೆ ಧಾರೆ ಎರೆದು ಕೊಡುತ್ತಿದ್ದಂತೆಯೇ ಮದುವೆಯೂ ಮುಗಿದು ಹೊಗಿತ್ತು. ಸಪ್ತಪದಿ, ಲಾಜಹೋಮಗಳೆಲ್ಲವೂ ಸಾಂಗವಾಗಿ ನಡೆದು, ನಂತರ ಬಂದವರೆಲ್ಲರು ಭೂರೀ ಭೂಜನ ಸವಿದರೆ, ವಧು ವರರು ಜೊತೆಗೊಂದಿಷ್ಟು ಹಿರಿಯರು ಎಲ್ಲರು ಒಟ್ಟಿಗೆ ಭೂಮದ ಊಟಕ್ಕೆ ಕುಳಿತರೆ, ಉಳಿದವರೆಲ್ಲರು ಅದರ ಮಜ ತೆಗೆದುಕೊಳ್ಳಲು ಸುತ್ತುವರೆದಿದ್ದರು. ಅತ್ತೆ ಅಳಿಯನಿಗೆ ಪಾಯಸ ಹಾಕಲು ಬಂದಾಗ ಅಳಿಯ ಅತ್ತೆಯ ಕೈ ಹಿಡಿದು ಚಕ್ಕುಲಿಯನ್ನು ತೊಡಿಸಿದಾಗ ಎಲ್ಲರ ಹರ್ಷೋಧ್ಗಾರ ಮುಗಿಲಿ ಮುಟ್ಟಿತ್ತು. ನಂತರ ವರ ನಯವಾಗಿ ಸಿಹಿತಿಂಡಿಗಳನ್ನು ತಿನ್ನಿಸಿದರೆ, ವಧು ಮಾತ್ರಾ ತನ್ನ ಪತಿಗೆ ಬಗೆ ಬಗೆಯ ಉಂಡೆಗಳು, ಚಕ್ಕುಲಿ ಕೋಡುಬಳೆಯಂತಹ ಬಗೆ ಬಗೆಯ ತಿನಿಸಿಗಳನ್ನು ತಿನ್ನಿಸಿದರೆ, ಅವರ ಜೊತೆಗೆ ಕುಳಿತಿದ್ದ ಹಿರಿಯರೂ ತಮ್ಮ ಮದುವೆಯ ಸಮಯದಲ್ಲಿ ತಾವು ಇದೇ ರೀತಿಯಾಗಿ ತಿನಿಸಿದ್ದದ್ದನ್ನು ಮೆಲುಕು ಹಾಕುತ್ತಾ ಮತ್ತೆ ತಿನಿಸಿದ್ದು ಎಲ್ಲರಿಗೂ ಮೋಜು ತರಿಸಿದ್ದಂತೂ ಸುಳ್ಳಲ್ಲ. ಮತ್ತೆ ಸಂಜೆ ಔಪಚಾರಿಕವಾಗಿ ನಡೆದ ಆರತಕ್ಷತೆಗೆ ಎಲ್ಲರೂ ಮತ್ತೆ ಸಿದ್ಧರಾಗಿ, ಬಂದ ಅಕ್ಕ ಪಕ್ಕದ ಮನೆಯವರ ಜೊತೆ ಫೋಟೋ ತೆಗೆಸಿಕೊಂಡು ಎಲ್ಲರೊಂದಿಗೆ ಬಗೆ ಬಗೆಯ ಸಿಹಿಗಳೊಂದಿಗೆ ಊಟ ಮುಗಿಸಿ ಹಾಸಿಗೆಗೆ ಕಾಲು ಚಾಚಿದ್ದಷ್ಟೇ ನೆನಪಾಗಿ ಮತ್ತೆ ಎಚ್ಚರವಾದಾಗ ಸೂರ್ಯ ತನ್ನ ಆಗಮನವನ್ನು ತಿಳಿಸಿಯಾಗಿತ್ತು.

ಐದನೇ ದಿನ ಲಗುಬಗನೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಸತ್ಯನಾರಾಯಣ ಸ್ವಾಮಿಯ ಪೂಜೆಗೆ ಸಿದ್ಧತೆ ಮಾಡಿಕೊಂಡು ಭಕ್ತಿ ಪೂರ್ವಕವಾಗಿ ವಿಘ್ನವಿನಾಶಕನ ಜೊತೆ, ಮನೆ ದೇವರಿಗೆ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡಿ, ಸತ್ಯನಾರಾಯಣ ಕತೆಯ ಜೊತೆಜೊತೆಯಲ್ಲಿಯೇ ಪೂಜೆಯನ್ನು ಮುಗಿಸಿ ಎಲ್ಲರೂ ಭಕ್ತಿಯಿಂದ ಮಂಗಳಾರತಿ ತೀರ್ಥಪ್ರಸಾದಗಳನ್ನು ಸ್ವೀಕರಿಸಿ, ಬೀಗರ ಔತಣವನ್ನು ಸವಿದು ಫಲತಾಂಬೂಲವನ್ನು ಸ್ವೀಕರಿಸುತ್ತಿದ್ದಂತೆಯೇ ಮಗಳನ್ನು ಕಳುಹಿಸಿಕೊಡುವ ಹೃದಯವಿದ್ರಾವಕ ಪ್ರಸಂಗ ಹೇಳಲಾಗದು. ಮಧುಮಗಳಿಗೆ ಗಂಡನ ಮನೆಗೆ ಹೋಗುವ ಸಂಭ್ರಮದ ಕಡೆ ಇಷ್ಟು ದಿನಗಳ ಕಾಲ ಹುಟ್ಟಿ ಆಡಿ ಬೆಳೆದ ತವರು ಮನೆಯನ್ನು ಬಿಟ್ಟು ಹೊಗಬೇಕಲ್ಲಾ ಎಂಬ ಸಂಕಟವಾದರೇ, ಇಷ್ಟು ದಿನ ತಮ್ಮ ತೋಳಿನಲ್ಲಿ ಆಡಿ ಬೆಳೆದ ಮಗಳನ್ನು ಕಳುಹಿಸಿ ಕೊಡುವ ಸಂಕಟಕ್ಕೆ ಹರಿಯುವ ಕಣ್ಣೀರ ಧಾರೆ ಅಲ್ಲಿದ್ದ ಮಕ್ಕಳಿಗೆ ನಗುಹುಟ್ಟಿಸುವುದಾದರೂ ಮುಂದೆ ಅವರು ಆ ಸಂಧರ್ಭವನ್ನು ಅನುಭವಿಸಬೇಕಾದಗಲೇ ಅದರ ಸಂಕಟದ ಅರಿವಾಗುತ್ತದೆ.

ಬಹುಶಃ ಕೊರೋನಾ ಇಲ್ಲದಿದ್ದರೆ ಛತ್ರದಲ್ಲಿ ಇದೇ ಮದುವೆ ನಡೆದಿದ್ದರೇ, ಯಾವುದೋ ಕೆಲಸದಲ್ಲಿ ತೊಡಗಿಕೊಂಡೋ ಇಲ್ಲವೇ ಛತ್ರದ ಮೂಲೆಯೊಂದರಲ್ಲಿ ಕುಳಿತುಕೊಂಡು ಕಾಡು ಹರಟೆ ಹೊಡೆಯುವುದರಲ್ಲೇ ಕಳೆದು ಹೊಗುತ್ತಿತ್ತು. ಕೊರೋನಾದಿಂದಾಗಿ ಮನೆಯ ಮಟ್ಟಿಗೆ ಮದುವೆ ಮಾಡಬೇಕಾದಾಗ ಪ್ರತಿಯೊಂದನ್ನು ಹತ್ತಿರದಿಂದ ನೋಡುತ್ತಾ ಆ ಸಂಭ್ರಮ ಸಡಗರಗಳಲ್ಲಿ ಪಾಲ್ಗೊಳ್ಳುವ ಸುಯೋಗ ಲಭಿಸಿತು ಎಂದರು ತಪ್ಪಾಗದು.

ಮದುವೆ ಎಂದರೆ ಅದು ಕೇವಲ ಗಂಡು ಮತ್ತು ಹೆಣ್ಣಿನ ಸಂಬಂಧವಲ್ಲ. ಅದು ಕುಟುಂಬ ಕುಟುಂಬಗಳ ನಡುವಿನ ಸಂಬಂಧಕ್ಕೆ ಬೆಸುಗೆಯನ್ನು ಹಾಕುವ ಒಂದು ಸುಂದರ ವಿಧಿ ವಿಧಾನ ಎಂಬುದನ್ನು ಈ ಮೂಲಕ ಕೊರೋನಾ ತಿಳಿಸಿ ಕೊಟ್ಟಿದ್ದಲ್ಲದೇ ಕಾಲ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದರು ಅತಿಶಯವಲ್ಲ. ಇದೇ ಸತ್ ಸಂಪ್ರದಾಯವನ್ನು ಕೊರೋನ ನಂತರವೂ ಮುಂದುವರೆಸಿಕೊಂಡು ಹೋದರೆ ಉತ್ತಮವಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ ನಮ್ಮಲ್ಲಿ 33 ಕೋಟಿಗೂ ಅಧಿಕ ದೇವರುಗಳು ಇದ್ದಾರೆ ಮತ್ತು ಪ್ರತಿಯೊಬ್ಬ ದೇವರಿಗೂ ಅದರದ್ದೇ ಅದ ಶಕ್ತಿ ಸಾಮರ್ಥ್ಯಗಳಿವೆ ಎಂದು ನಂಬಿರುವ ಕಾರಣ ಆವರವರ ನಂಬಿಕೆ ಮತ್ತು ಭಕ್ತಿಗಳ ಅನುಗುಣವಾಗಿರುವ ಭಕ್ತ ಸಮೂಹವಿದೆ. ಹಾಗಿದ್ದಲ್ಲಿ ನಿಜವಾಗಿಯೂ ದೇವರಿದ್ದಾನೆಯೇ? ಎಂದು ಕೇಳಿದರೆ ಅದನ್ನು ಪ್ರತ್ಯಕ್ಷವಾಗಿ ನೋಡಿದವರು ಇಲ್ಲದ ಕಾರಣ ಸೂಕ್ತವಾದ ಉತ್ತರವನ್ನು ಕೊಡುವುದು ಕಷ್ಟವಾದರೂ, ದೈವೀ ಶಕ್ತಿ ಎಂಬ ಅಗೋಚರವಾದ ಅನುಭವವನ್ನು ಅನೇಕರು ಅನುಭವಿಸಿದ್ದಾರೆ. ಹಾಗಾಗಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ತಮ್ಮ ತಮ್ಮ ಕಲ್ಪನೆಗೆ ಅನುಗುಣವಾದ ರೂಪಗಳನ್ನು ಭಗವಂತನಿಗೆ ಕೊಟ್ಟು ಅವುಗಳನ್ನು ಮೂರ್ತಿರೂಪದಲ್ಲಿ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾ ಬಂದಿದ್ದೇವೆ. ನಮ್ಮ ದೇವರುಗಳು ಸರ್ವಾಂತರ್ಯಾಮಿಯಾಗಿ ಎಲ್ಲಾ ಕಡೆಯಲ್ಲಿಯೂ ಇರುವಾಗ ಅವನಿಗೊಂದು ಪ್ರತ್ಯೇಕ ದೇವಾಲಯಗಳೇಕೆ? ಎಂದು ವಾದಿಸುವವರಿಗೇನೂ ಕಡಿಮೆ ಇಲ್ಲ

WhatsApp Image 2020-06-28 at 4.34.52 PMನಿಜಕ್ಕೂ ಹೇಳಬೇಕೆಂದರೆ ನಮ್ಮ ಪೂರ್ವಜರು ದೇವಾಲಯಗಳನ್ನು ಶಕ್ತಿ ಮತ್ತು ಶ್ರದ್ಧಾ ಕೇಂದ್ರಗಳಾಗಿ ನಿರ್ಮಿಸಿದ್ದರು. ಜನರನ್ನು ಧಾರ್ಮಿಕವಾಗಿ ಒಂದು ನಿರ್ಧಿಷ್ಟ ಸಮಯದಲ್ಲಿ ಒಗ್ಗೂಡಿಸುವ ಕೇಂದ್ರಗಳಾಗಿಸಿದ್ದರು. ಆಲ್ಲಿಗೆ ಬರುವ ಭಕ್ತಾದಿಗಳಿಗೆ ಒಂದು ಮನಸ್ಸು ಶುದ್ಧವಾಗುತ್ತದೆ, ಸಂತೋಷ, ನೆಮ್ಮದಿ ಸಿಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಸ್ಥಳದ ಮಹಿಮೆಯಿಂದ ಭಕ್ತರಿಗೆ ಧನಾತ್ಮಕ ಚಿಂತನಾ ಶಕ್ತಿ ಸಿಗುತ್ತಿತ್ತು ಮತ್ತು ಅವನ ಆಚಾರ-ವಿಚಾರ-ಉಚ್ಚಾರಗಳು ಶುದ್ಧವಾಗುತ್ತಿದ್ದವು.

ಹಾಗಾಗಿ ದೇವಾಲಯಗಳನ್ನು ನಿರ್ಮಿಸುವಾಗ ಸ್ಥಳೀಯ ಪರಿಸರ, ಹವಾಗುಣ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದಾಗಿ ಅನುಗುಣವಾಗಿ ಅದ್ಭುತ ವಾಸ್ತುಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಹಾಗೆ ದೇವಾಲಯಗಳ ಗರ್ಭಗುಡಿ, ಕಂಬಗಳು ಗೋಪುರ ಮತ್ತು ಕಳಸಗಳು ಕಾಂತೀಯ ಹಾಗೂ ವಿದ್ಯುತ್ ತರಂಗಗಳನ್ನು ಉತ್ಪತ್ತಿಸುತ್ತವೆ ಈ ತರಂಗಾಂತರಗಳು ದೇವಾಯಗಳಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಇನ್ನು ದೇವರ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಅವುಗಳಿಗೆ ಪ್ರಾಣಪ್ರತಿಷ್ಠಾಪನೆ ಮಾಡುವ ಮೂಲಕ ಆ ಜಾಗದಲ್ಲಿ ಕಾಂತೀಯ ಶಕ್ತಿ ಹೆಚ್ಚಾಗಿ ಕೇಂದ್ರಿತವಾಗಿರುವಂತೆ ಮಾಡುತ್ತಿದ್ದರ ಪರಿಣಾಮ ಗರ್ಗಗೃಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿರುತ್ತಿತ್ತು.

ಇನ್ನು ದೇವಸ್ಥಾನದ ದಿಕ್ಕು, ರಾಜಗೋಪುರ ಮತ್ತು ದೇವಾಲಯದಲ್ಲಿ ನೆಲಕ್ಕೆ ಬಳಸಲಾಗುವ ಹಾಸುಗಲ್ಲುಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿದ್ದು ಅವೂ ಸಹಾ ಧನಾತ್ಮಕ ತರಂಗಾಂತರಗಳು ಪ್ರವಹಿಸುವಂತೆ ಮಾಡುವುದಲ್ಲದೇ ಭಕ್ತಾದಿಗಳ ಏಕಾಗ್ರತೆಯನ್ನು ಮತ್ತು ಶಾಂತಿಯನ್ನು ಕೊಡಲು ಸಹಕರಿಸುತ್ತಿದ್ದವು.

ದೇವಸ್ಥಾನದಲ್ಲಿ ಪೂಜೆಯ ನಂತರ ಕೊಡುವ ತೀರ್ಥ ಮತ್ತು ಪ್ರಸಾದಗಳಲ್ಲಿಯೂ ಸಹಾ ಔಷಧೀಯ ಗುಣಗಳಿಂದ ಭರಿತವಾಗಿರುತ್ತದೆ. ತಾಮ್ರದ ಕಳಸದಲ್ಲಿ, ಪಚ್ಚ ಕರ್ಪೂರ, ತುಳಸಿದಳ ಬೆರೆಸಿದಂತಹ ಔಷಧೀಯ ಗುಣಗಳಿರುವ ತೀರ್ಥ ನಿಜಕ್ಕೂ ಆರೋಗ್ಯವೇ ಹೌದು. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆ ಮತ್ತು ಉದ್ದರಣೆಯ ಮೂಲಕ ಸ್ವೀಕರಿಸುವ ತೀರ್ಥವು ವಾತ, ಪಿತ್ತ ಕಫ ಎಂಬ ತ್ರಿದೋಷಗಳನ್ನು ನಿವಾರಿಸಲು ಸಹಾಯ ಮಾಡಿದರೆ, ತುಳಸಿದಳವು ಜಿಹ್ವಾ ಶಕ್ತಿಯನ್ನು ಕ್ರಿಯಾತ್ಮಕವಾಗಿಡುತ್ತದೆ. ಪ್ರಸಾದ ರೂಪದಲ್ಲಿ ಕೊಡುವ ಬೆಲ್ಲದ ಪಾಯಸ, ಮೆಣಸು, ಜೀರಿಗೆ, ಕಾಯಿ, ಅಕ್ಕಿ ಮತ್ತು ಹೆಸರು ಬೇಳೆಗಳಿಂದ ಕೂಡಿದ ಪಂಚಾನ್ನ(ಪೊಂಗಲ್) ಆರೋಗ್ಯಕ್ಕೆ ಉತ್ತಮವಾದದ್ದು.

ಮಂಗಳಾರತಿಯ ಸಮಯದಲ್ಲಿ ಮಾಡುವ ಘಂಟಾನಾದದ ತರಂಗಗಳು ಭಕ್ತಾದಿಗಳಲ್ಲಿ ಧನಾತ್ಮಕ ಕಂಪನಗಳನ್ನು ಜಾಗೃತಗೊಳಿಸಿದರೆ, ಕರ್ಪೂರದಾರತಿಯಿಂದ ಏಕಾಗ್ರತೆ ಹೆಚ್ಚಿಸುವುದಲ್ಲದೇ, ಆರತಿಯಿಂದ ಬಿಸಿಯಾದ ಕೈಗಳನ್ನು ಕಣ್ಣುಗಳಿಗೆ ಸ್ಪರ್ಶಿಸುವುದರಿಂದ ಸ್ಪರ್ಶಜ್ಞಾನ ಕ್ರಿಯಾತ್ಮಕವಾಗಿರುತ್ತದೆ ಮತ್ತು ಪಂಚೇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಇನ್ನು ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತು ಹಾಕಿದಾಗ ಭಕ್ತಾದಿಗಳ ಇಂದ್ರಿಯಗಳು ದೇವಾಲಯದ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ ಎಂದು ವೇದವಿಜ್ಞಾನ ಹೇಳುತ್ತದೆ.

ನಮ್ಮ ಪೂರ್ವಜರು ಬಹುತೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ದಟ್ಟವಾದ ಕಾಡುಗಳಲ್ಲಿ ಕಡಿದಾದ ಬೆಟ್ಟದ ತುತ್ತ ತುದಿಯಲ್ಲಿ ನಿರ್ಮಿಸುತ್ತಿದ್ದ ಹಿಂದೆಯೂ ಒಂದು ಕಾರಣವಿತ್ತು. ಆ ಗೊಂಡಾರಣ್ಯದಲ್ಲಿದ್ದ ಭಗವಂತನ ದರ್ಶನ ಮಾಡಲು ಈ ಪುಣ್ಯಕ್ಷೇತ್ರಗಳಿಗೆ ಹೋಗುವ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಮಡಿ ಹುಡಿಯಿಂದ ತಮ್ಮೆಲ್ಲಾ ಕಷ್ಟಗಳನ್ನು ಮರೆತು ಭಗವಂತನ ಸಂಕೀರ್ತನೆ ಮಾಡುತ್ತಾ ಭಕ್ತಿ ಪರವಶರಾಗಿ ಭಗವಂತನ ಧ್ಯಾನವನ್ನೇ ಮಾಡುತ್ತಲೇ ಬೆಟ್ಟವನ್ನು ಹತ್ತಲಿ ಎನ್ನುವುದು ನಮ್ಮ ಪೂರ್ವಜರ ಭಾವನೆಯಾಗಿತ್ತು. ಇನ್ನು ಆ ರೀತಿಯಲ್ಲಿ ಚಾರಣ ಮಾಡುವಾಗ ಮನಸ್ಸು ಮತ್ತು ದೇಹ ಎರಡಕ್ಕೂ ಸಾಕಷ್ಟು ಪರಿಶ್ರಮ ದೊರೆತು ಅಂತಿಮವಾಗಿ ಭಗವಂತನ ದರ್ಶನ ಮಾಡಿದಾಗ ದೊರೆಯುತ್ತಿದ್ದ ಆನಂದವೇ ಬೇರೆ. ಆ ಕಾಡಿನಲ್ಲಿ ಬರೀ ಕಾಲಿನಲ್ಲಿ ಹೋಗುತ್ತಿದ್ದಾಗ ಅಲ್ಲಿದ್ದ ಅನೇಕ ಔಷಧೀಯ ಸಸ್ಯಗಳಿಂದ ಅತ್ಯುತ್ತಮ ಆಮ್ಲಜನಕ ಅವರ ದಣಿವನ್ನು ನಿವಾರಿಸುತ್ತಿದ್ದಲ್ಲದೇ ಅವರ ಅನೇಕ ಖಾಯಿಲೆಗಳು ಪರೋಕ್ಷವಾಗಿ ನಿವಾರಣೆಯಾಗುತ್ತಿತ್ತು. ನಾವು ಎಷ್ಟೇ ದೊಡ್ಡವರಾದರೂ ದೇವರ ಮುಂದೆ ಇನ್ನೂ ಸಣ್ಣವರೇ ಎಂಬ ಸಂಕೇತವಾಗಿಯೂ ದೇವಾಲಯಗಳನ್ನು ಎತ್ತರದ ಸ್ಥಾನಗಳಲ್ಲಿ ನಿರ್ಮಿಸುತ್ತಿದ್ದರು. ಇನ್ನು ದೇವಸ್ಥಾನಗಳಲ್ಲಿ ದೇವರಿಗೆ ಶಿರಬಾಗಿ ಸಾಷ್ಟಾಂಗ ನಮಸ್ಕರಿಸುವ ಮೂಲಕ ನಮ್ಮಲ್ಲಿರುವ ಅಹಂ ದೂರವಾಗಿಸಲಿ ಎನ್ನುವುದು ನಮ್ಮ ಹಿರಿಯರ ಭಾವನೆಯಾಗಿತ್ತು. ಇನ್ನು ಹಬ್ಬ ಹರಿದಿನಗಳು ಮತ್ತು ವಿಶೇಷ ದಿನಗಳಂದು ದೇವಾಲಗಳಲ್ಲಿ ನಡೆಸುತ್ತಿದ್ದ ಹರಿಕಥೆ, ಸಂಗೀತ, ನೃತ್ಯ ಭಜನಾ ಸಂಕೀರ್ತನಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳಿಗೆ ಮನೋರಂಜನೆಯೊಂದಿಗೆ ನೆಮ್ಮದಿಯನ್ನು ಕೊಡುತ್ತಿದ್ದದ್ದಲ್ಲದೇ ಭಕ್ತಾದಿಗಳ ಭೌದ್ಧಿಕ ಮಟ್ಟವನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದ್ದವು.

temp6ದಿನ ಕಳೆದಂತೆಲ್ಲಾ ಈ ತೀರ್ಥಕ್ಷೇತ್ರಗಳನ್ನು ಅಲ್ಲಿಯ ಆಡಳಿತ ಮಂಡಳಿಗಳು ಮತ್ತು ರಾಜಕೀಯ ಧುರೀಣರು ಪ್ರಸಿದ್ಧ ಯಾತ್ರಾ ಸ್ಥಳಗಳನ್ನಾಗಿ ಪರಿವರ್ತಿಸಿ ಶ್ರದ್ಧಾಕೇಂದ್ರಗಳ ಬದಲಾಗಿ ಆದಾಯ ತರುವ ಕೇಂದ್ರಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾಡು ಮೇಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನಾಗಿ ಪರಿವರ್ತಿಸಿ ಪರಿಸರದ ಹಾನಿಗೆ ಕಾರಣೀಭೂತರಾಗಿ ನಮ್ಮ ಪೂರ್ವಜರ ಮೂಲ ಆಶಯಕ್ಕೇ ಕೊಳ್ಳಿ ಇಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ದೇವರ ಧ್ಯಾನ ಮಾಡುತ್ತಾ ಶ್ರಮದಿಂದ ಬೆವರು ಸುರಿಸಿ ಮೆಟ್ಟಲುಗಳನ್ನು ಹತ್ತಿ ದೇವರ ದರ್ಶನ ಮಾಡುವಾಗ ದೊರೆಯುವ ಆನಂದ ಬೆಟ್ಟಗಳನ್ನು ಕಡಿದು ರಸ್ತೆಗಳನ್ನು ಮಾಡಿ ತುತ್ತ ತುದಿಯವರೆಗೆ ನೇರವಾಗಿ ವಾಹನದ ಮೂಲಕ ತಲುಪಿದಾಗ ಇಲ್ಲವೇ ರೋಪ್ ಟ್ರೈನ್ ಮೂಲಕ ಆರಾಮವಾಗಿ ದೇವರ ದರ್ಶನ ಮಾಡಿದಲ್ಲಿ ಅಂತಹ ಸಾರ್ಥಕತೆ ದೊರೆಯದು ಎಂದೇ ನನ್ನ ಭಾವನೆ.

WhatsApp Image 2020-06-28 at 4.37.36 PMಇನ್ನು ದೇವಸ್ಥಾನಗಳ ಪುನರುಜ್ಜೀವನದ ಹೆಸರಿನಲ್ಲಿ ನಮ್ಮ ಪೂರ್ವಜರು ಸ್ಥಳೀಯ ಪರಿಸರ ಸಂಪ್ರದಾಯ ಮತ್ತು ಹವಾಮಾನಗಳಿಗೆ ಅನುಗುಣವಾಗಿ ನಿರ್ಮಿಸಿದ್ದ ವಾಸ್ತುಶಿಲ್ಪಗಳ ಬದಲಾಗಿ ಕರಾವಳಿ ಮಾದರಿಯ ದೇವಾಲಯಗಳನ್ನು ನಿರ್ಮಿಸುತ್ತಿರುವುದು ಸರಿಯಾದ ನಿರ್ಣಯವಲ್ಲ ಎಂದೇ ನನ್ನ ಭಾವನೆ. ದೇವಾಲಯ ನಿರ್ಮಿಸುವಾಗ ಸ್ಥಳೀಯ ಇತಿಹಾಸ ಮತ್ತು ಸಂಶೋಧಕರ ಸಲಹೆ ತೆಗೆದುಕೊಳ್ಳುವುದಕ್ಕಿಂತ, ಕರಾವಳಿ ಪ್ರಾಂತ್ಯದ ಅಷ್ಟ ಮಂಗಳ ಪ್ರವೀಣರು ಮತ್ತು ವಾಸ್ತು ಶಿಲ್ಪಿಗಳ ಸಲಹೆಯ ಮೇಲೆ ದೇವಸ್ಥಾನ ನಿರ್ಮಿಸುತ್ತಿರುವುದು ಮತ್ತು ಅದಕ್ಕೆ ಅನುಗಣವಾಗಿ ನದೀ ಪಾತ್ರಗಳನ್ನು ಬದಲಿಸುವುದು, ಭಕ್ತಾದಿಗಳು ಉಳಿದುಕೊಳ್ಳಲು ಯಾತ್ರಿನಿವಾಸ ನಿರ್ಮಿಸುವ ಭರದಲ್ಲಿ ಕಾಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ಬೆಳೆಸುತ್ತಿರುವುದು ಮತ್ತು ತೀರ್ಥಕ್ಷೇತ್ರಗಳೆಂಬುದನ್ನು ಮರೆತು ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಂದಾಗಿ ಜನರಿಗೆ ತೀರ್ಥಕ್ಷೇತ್ರಗಳ ಬಗ್ಗೆ ಒಂದು ರೀತಿಯ ಅಸಹ್ಯ ಭಾವನೆ ಮೂಡುತ್ತಿರುವುದು ನಿಜಕ್ಕೂ ದುಃಖಕರವೇ ಸರಿ.

ದೇವಾಲಯಗಳೆಂಬ ಶ್ರದ್ಧಾ ಕೇಂದ್ರಗಳು ನಮ್ಮ ಹಿಂದೂ ಧರ್ಮದ ಸಿದ್ಧಾಂತ ಮತ್ತು ಪೂರ್ವಜರ ದೂರದೃಷ್ಟಿಯ ಬುನಾದಿಯ ಮೇಲೆ ನಿಂತಿದೆ ಎಂಬುದನ್ನು ಮರೆತು, ಕಾಟಾಚಾರಕ್ಕೆ ದೇವಸ್ಥಾನಕ್ಕೋ ಇಲ್ಲವೇ ತೀರ್ಥಕ್ಷೇತ್ರಗಳಿಗೆ ಹೋಗುವುದರಿಂದ ನಮ್ಮ ಹಿಂದು ಧರ್ಮವನ್ನು ಸಂರಕ್ಷಣೆ ಮಾಡುವುದು ಸಾಧ್ಯ ಇಲ್ಲದ ಮಾತಾಗಿದೆ. ಮೊದಲು ನಾವುಗಳು ನಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿದು ಕೊಳ್ಳಬೇಕು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೋದಾಗ ವಸ್ತ್ರಸಂಹಿತೆಯೊಂದಿಗೆ ಅಲ್ಲಿಯ ಶಾಸ್ತ್ರ, ಸಂಪ್ರದಾಯಗಳ ಅನುಗುಣವಾಗಿ ನಡೆದುಕೊಂಡಲ್ಲಿ ಮಾತ್ರವೇ ನಾವು ನಮ್ಮ ಧರ್ಮವನ್ನು ಸಂರಕ್ಷಣೆ ಮಾಡಲು ಸುಲಭವಾಗುತ್ತದೆ. ಇಲ್ಲದೇ ಹೋದಲ್ಲಿ ನಮ್ಮ ಹಿಂದು ಧಾರ್ಮಿಕ ಪುಣ್ಯಕ್ಷೇತ್ರಗಳು ಕೇವಲ ಪ್ರವಾಸಿ ತಾಣವಾಗಿ ಸರ್ಕಾರಕ್ಕೆ ಆದಯ ತರುವ ತಾಣಗಳಾಗಿ ಹೋಗುತ್ತದೆ.

ಏನಂತೀರೀ?