ಪಂಚಾಮೃತ ಮತ್ತು ಪಂಚಲೋಹ

ಸಾಧಾರಣವಾಗಿ ಬಹುತೇಕ ಎಲ್ಲಾ ದೇವಸ್ಥಾನಗಳಿಗೂ ಬೆಳಗ್ಗೆ ಹೋದಾಗ ತೀರ್ಥದ ರೂಪದಲ್ಲಿ ಪಂಚಾಮೃತ ಕೊಟ್ಟು ಅದನ್ನು ಭಕ್ತಿಯಿಂದ ಸೇವಿಸಿದ ನಂತರ ತುಳಸೀ ಮತ್ತು ಪಚ್ಚ ಕರ್ಪೂರ ಹಾಕಿದ ತೀರ್ಥವನ್ನು ಕೊಡುವುದನ್ನು ನಾವು ನೋಡಿದ್ದೇವೆ. ಪ್ರತೀ ದಿನ ದೇವರ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ,ಜೊತೆಗೆ ಬಾಳೆಹಣ್ಣು, ಎಳನೀರು, ನೀರಿನ ಮುಖಾಂತರ ಅಭಿಷೇಕವನ್ನು ಮಾಡಿದ ನಂತರ ಅವೆಲ್ಲವನ್ನೂ ಒಂದು ಶುಭ್ರವಾದ ಬೆಳ್ಳಿ ಇಲ್ಲವೇ ಹಿತ್ತಾಳೆ, ಕಂಚು ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಂದ ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ ಕೊಡುವುದನ್ನೇ ಪಂಚಾಮೃತ ತೀರ್ಥ ಎನ್ನುತ್ತೇವೆ. ಅಂತಹ ಪಂಚಾಮೃತದ ವಿಶೇಷತೆ ಮತ್ತು ಅದರ ಕುರಿತಾದ ಸ್ವಾರಸ್ಯಕರವಾದ ಪ್ರಸಂಗ ಇದೋ ನಿಮಗಾಗಿ.

ನಮಗೆಲ್ಲರಿಗೂ ತಿಳಿದಿರುವಂತೆ ಶಿವಲಿಂಗ ಅಥವಾ ಸಾಲಿಗ್ರಾಮಗಳು ನೇಪಾಳದ ಗಂಡಕಿ ನದಿ ಮತ್ತು ನರ್ಮದಾ ನದಿಗಳಲ್ಲಿ ಸಿಗುತ್ತದೆ. ಈ ನದಿಯ ನೀರಿನಲ್ಲಿ ಸಿಲಿಕಾ ಹಾಗೂ ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿರುತ್ತದೆ ಮತ್ತು ಈ ಶಿವಲಿಂಗಗಳು ಮತ್ತು ಸಾಲಿಗ್ರಾಮಗಳಲ್ಲಿಯೂ ಔಷಧೀಯ ಗುಣಗಳು ಇರುವುದರಿಂದ ಅವುಗಳೂ ಸಹಾ ನೀರಿನೊಂದಿಗೆ ಬೆರೆತುಕೊಂಡಿರುತ್ತದೆ.

ಅದೇ ರೀತಿ ದೇವರುಗಳ ವಿಗ್ರಹಗಳನ್ನು ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಸತು ಹಾಗೂ ಕಬ್ಬಿಣದ ಸಮ ಪ್ರಮಾಣದ ಮಿಶ್ರಣಮಾಡಿ ಮಿಶ್ರಲೋಹದಿಂದ ತಯಾರಿಸುತ್ತಾರೆ. ಕೆಲವೊಮ್ಮೆ ಸತುವಿನ ಬದಲಾಗಿ ತವರ ಅಥವಾ ಸೀಸವನ್ನು ಸಹಾ ಬಳಸಲಾಗುತ್ತದೆ. ಇಂತಹ ಮಿಶ್ರಲೋಹದಿಂದ ತಯಾರಿಸಿದ ವಿಗ್ರಹಗಳ ಮೇಲೆ ಪಂಚಾಮೃತ ಅಭಿಷೇಕ ಮಾಡಿದಲ್ಲಿ ಆ ಲೋಹಗಳ ಸತ್ವವೂ ಅದರಲ್ಲಿ ಸೇರಿಕೊಳ್ಳುವುದರ ಜೊತೆಗೆ, ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ ಪೊಟ್ಯಾಶಿಯಂ ಕೂಡಾ ಸೇರಿದ ಪರಿಣಾಮವಾಗಿ ಅದೊಂದು ಕೇವಲ ತೀರ್ಥವಾಗಿರದೇ ಅನೇಕ ಖಾಯಿಲೆಗಳಿಗೆ ಪರೋಕ್ಷವಾಗಿ ಔಷಧಿಯಾಗಿರುತ್ತದೆ. ಈಗ ಹೇಳಿದ ಕ್ರಮದಂತೆ ಪಂಚಲೋಹದ ವಿಗ್ರಹದ ಮೇಲೆ ಅಭಿಷೇಕ ಮಾಡಿ ಅದಕ್ಕೆ ಪಚ್ಚಬಾಳೆ, ಸ್ವಲ್ಪ ಪಚ್ಚ ಕರ್ಪೂರ ಮತ್ತು ಎಳನೀರು ಸೇರಿಸಿ ತಯಾರಿಸಿದ ಪಂಚಾಮೃತವನ್ನು ಸೇವಿಸುವ ಮೂಲಕ ಹೃದಯ ಸಂಬಂಧಿತ ಖಾಯಿಲೆಗಳು ಬಾರದಂತೇ ತಡೆಗಟ್ಟಬಹುದಾಗಿದೆ.

ಅದೇ ರೀತಿ ಈ ಪಂಚಲೋಹಗಳಿಂದ ತಯಾರಿಸಿದ ಆಭರಣಗಳನ್ನು ಧರಿಸಿದಲ್ಲಿ ಜೀವನದಲ್ಲಿ ಸಮತೋಲನ, ಆತ್ಮವಿಶ್ವಾಸ, ಉತ್ತಮ ಆರೋಗ್ಯ, ಅದೃಷ್ಟ, ಸಮೃದ್ಧಿ ಹಾಗೂ ಮನಃಶಾಂತಿ ಬರುತ್ತದೆ ಎಂದು ನಂಬಿರುವ ಕಾರಣವೇ ನಮ್ಮ ಪೂರ್ವಜರರು ದೇವರ ಹೆಸರಿನಲ್ಲಿ ಈ ರೀತಿಯ ಸಂಪ್ರದಾಯವನ್ನು ತಂದಿರುವುದು ನಿಜಕ್ಕೂ ಅದ್ಭುತವೆನಿಸುತ್ತದೆ.

ಇನ್ನು ಸಾಲಿಗ್ರಾಮ ಮತ್ತು ಶಿವಲಿಂಗಗಳು ದೃಷ್ಟಿ ಸಂಬಂಧಿತ ನರಗಳ ಬಲವನ್ನು ಹೆಚ್ಚಿಸುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಇಂದು ಸಾಬೀತಾಗಿದೆ. ಆದರೆ ಈ ಕಾರಣವನ್ನು ಅಂದೇ ತಿಳಿದಿದ್ದ ನಮ್ಮ ಪೂರ್ವಜರು, ಅಭಿಷೇಕವಾದ ನಂತರ ಶುದ್ಧ ನೀರಿನಲ್ಲಿ ಸಾಲಿಗ್ರಾಮ ಅಥವಾ ಶಿವಲಿಂಗಗಳನ್ನು ಒಮ್ಮೆ ತೊಳೆದು ಭಕ್ತಿಪೂರ್ವಕವಾಗಿ ಕಣ್ಣುಗಳಿಗೆ ತಾಗಿಸಿ ನಮಸ್ಕಾರ ಮಾಡುವುದನ್ನು ಸಂಪ್ರದಾಯದ ಹೆಸರನಲ್ಲಿ ರೂಢಿಗೆ ತಂದಿದ್ದರು.

ಇನ್ನು ಚಿನ್ನದ ಆಭರಣಗಳ ಜೊತೆ ಬಿಸಿ ನೀರು ತಾಗಿದಲ್ಲಿ ಅದು ಆರೋಗ್ಯಕ್ಕೆ ಒಳ್ಳೆಯದೆಂಬ ಕಾರಣಕ್ಕಾಗಿಯೇ ಸ್ತ್ರೀ ಪುರುಷರಾದಿ, ಮೈಮೇಲೆ, ಚಿನ್ನದ ಆಭರಣಗಳನ್ನು ಧರಿಸಿ ಸ್ನಾನ ಮಾಡುವಾಗ ಅದರ ನೀರು ಮೈ ಮೇಲೆ ಬೀಳುವ ರೂಢಿಯನ್ನು ತಂದಿದ್ದಲ್ಲದೇ, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರ ಮೂಲಕ ಸತು ದೇಹಕ್ಕೆ ಸೇರಿದರೆ, ತಾಮ್ರದ ಲೋಟಗಳಲ್ಲಿ ನೀರು ಕುಡಿಯುವ ಮೂಲಕ ಮೈಲುತುತ್ತ ದೇಹಕ್ಕೆ ಸೇರುವ ಮೂಲಕ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಬಹುದೆಂಬ ಸತ್ಯವನ್ನು ನಮ್ಮ ಹಿರಿಯರು ಚೆನ್ನಾಗಿಯೇ ಅರಿತಿದ್ದರು.

ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಮಾವನವರು ಇದ್ದ ಮನೆಯ ಸಮೀಪವೇ ಗಣೇಶನ ದೇವಸ್ಥಾನವಿತ್ತು. ಪ್ರತೀ ದಿನವೂ ನಮ್ಮ ಅತ್ತೇ ಮಾವನವರು ಆ ದೇವಸ್ಥಾನಕ್ಕೆ ಶ್ರದ್ಧಾ ಭಕ್ತಿಗಳಿಂದ ಹೋಗುತ್ತಿದ್ದ ಕಾರಣ ಇಡೀ ದೇವಸ್ಥಾನದವರೆಲ್ಲರೂ ನಮ್ಮ ಕುಂಟಬಕ್ಕೆ ಆತ್ಮೀಯರಾಗಿದ್ದರು. ಕೆಲವೊಮ್ಮೆ ಅಜ್ಜ ಅಜ್ಜಿಯರ ಜೊತೆ ನಮ್ಮ ಪುಟಾಣಿ ಮಕ್ಕಳೂ ದೇವಸ್ಥಾನಕ್ಕೆ ಹೋಗುತ್ತಿದ್ದರು. ನೋಡಲು ತುಂಬಾನೇ ಮುದ್ದಾಗಿದ್ದು ಅ ‍ಸಣ್ಣ ವಯಸ್ಸಿಗೇ ಅಮ್ಮ ಮತ್ತು ತಾತ ಹೇಳಿಕೊಟ್ಟ ಶ್ಲೋಕಗಳನ್ನು ಪಟ ಪಟನೆ ಹೇಳುತ್ತಿದ್ದ ನಮ್ಮ ಮಗ ಸಾಗರ್ ಬಲು ಬೇಗನೆ ಆಕರ್ಷಣೀಯ ಕೇಂದ್ರ ಬಿಂದುವಾಗುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಎಂದರೂ ತಪ್ಪಾಗಲಾರದು. ಹಾಗಾಗಿ ಪ್ರತೀ ಬಾರೀ ಆ ಗಣೇಶನ ದೇವಸ್ಥಾನಕ್ಕೆ ಹೋದಾಗಲೂ ಪೂಜೆಯಾದ ನಂತರ ನಮ್ಮ ಮಕ್ಕಳಿಗೆ ಅರ್ಚಕರು ಸಣ್ಣ ಸಣ್ಣ ಲೋಟದ ಭರ್ತಿ ಪಂಚಾಮೃತವನ್ನು ಕೊಡುವ ರೂಢಿ ಮಾಡಿ ಬಿಟ್ಡಿದ್ದರು. .ಹಾಗಾಗಿಯೇ ಕೆಲವೊಮ್ಮೆ ನಮ್ಮ ಮಕ್ಕಳೇ ಆ ದೇವಾಲಯಕ್ಕೆ ಹೋಗುವಾಗ ಮನೆಯಿಂದಲೇ ಲೋಟವನ್ನು ಕೊಂಡೊಯ್ದು ಲೋಟದ ಭರ್ತಿ ದೇವರ ಅಭಿಷೇಕವಾದ ಪಂಚಾಮೃತವನ್ನು ಲೋಟಕ್ಕೆ ಹಾಕಿಸಿಕೊಂಡು ಮನೆಗೆ ಬಂದು ನಿಧಾನವಾಗಿ ಸೇವಿಸುತ್ತಿದ್ದದ್ದೂ ಉಂಟು.ಅದೊಮ್ಮೆ ಕುಟಂಬವರೆಲ್ಲರೂ ತೀರ್ಥಯಾತ್ರೆಗೆಂದು ದಕ್ಷಿಣ ಕನ್ನಡದ ದೇವಸ್ಥಾನಗಳಿಗೆ ಹೋಗಿದ್ದೆವು. ಯಥಾಪ್ರಕಾರ ದೇವರ ದರ್ಶನವಾದ ನಂತರ ನನ್ನ ಮಗ ಶ್ಲೋಕವನ್ನೆಲ್ಲಾ ಹೇಳಿದ ನಂತರ ಅಲ್ಲಿನ ಅರ್ಚಕರೂ ಸಂತೋಷಗೊಂಡು ಅವನಿಗೆ ದೇವರ ಮೇಲಿದ್ದ ಹಾರವನ್ನು ತಂದು ಅವನ ಕೊರಳಿಗೆ ಹಾಕಿ ಆಶೀರ್ವದಿಸಿ ತೀರ್ಥ ಪ್ರಸಾದವನ್ನು ಕೊಟ್ಟರು. ಪಂಚಾಮೃತವನ್ನು ಲೋಟಗಟ್ಟಲೇ ಕುಡಿಯುವುದನ್ನು ಆಭ್ಯಾಸ ಮಾಡಿಕೊಂಡಿದ್ದ ನನ್ನ ಮಗನಿಗೆ ಉದ್ದರಣೆಯಲ್ಲಿ ಕೊಟ್ಟ ಪಂಚಾಮೃತ ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯಂತಾಗಿತ್ತು. ಕೂಡಲೇ ಲೋಟದಲ್ಲಿ ತೀರ್ಥ ಕೊಡಿ ಎಂದು ಅರ್ಚಕರನ್ನು ಕೇಳಬೇಕೇ? ಅವನ ಮಾತುಗಳು ಅರ್ಚಕರಿಗೆ ತಿಳಿಯದಾದಾಗ ರಚ್ಚೆ ಹಿಡಿಯಲಾರಂಭಿಸಿದ.

ಪರಿಸ್ಥಿತಿಯನ್ನು ಕೂಡಲೇ ಅರ್ಥೈಸಿಕೊಂಡ ನನ್ನ ಮಡದಿ ಅರ್ಚಕರಿಗೆ ಸೂಕ್ಷ್ಮವಾಗಿ ಅವನ ಪಂಚಾಮೃತದ ಪ್ರಲಾಪವನ್ನು ಹೇಳಿದಾಗ ಅಷ್ಟೇನಾ ಎಂದು ಒಂದು ಸಣ್ಣ ಪೇಪರ್ ಕಪ್ಪಿನಲ್ಲಿ ಪಂಚಾಮೃತವನ್ನು ತಂದು ಕೊಟ್ಟಾಗಲೇ ನನ್ನ ಮಗ ಸಮಾಧಾನವಾಗಿದ್ದ. ಅದಾದ ನಂತರ ಅವನಿಗೆ ತಿಳಿ ಹೇಳಿದ ನಮ್ಮಾಕಿ ಆ ಲೋಟ ಭರ್ತಿ ಪಂಚಾಮೃತದ ಅಭ್ಯಾಸವನ್ನು ತಪ್ಪಿಸಿ ಅರ್ಚಕರು ಎಲ್ಲರಿಗೂ ಎಷ್ಟು ತೀರ್ಥ ಪ್ರಸಾದ ಕೊಡ್ತಾರೋ ಅಷ್ಟನ್ನೇ ಎಲ್ಲರೂ ತೆಗೆದುಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟಿದ್ದರು.

ಇಂದು ನಮ್ಮ ಮಗ ಸಾಗರನ 17ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶಾಶ್ವತ ಪೂಜೆಯ ನಿಮಿತ್ತ ಅದೇ ಗಣೇಶನ ದೇವಸ್ಥಾನಕ್ಕೆ ಹೋಗಿ, ಪೂಜೆ ಮಾಡಿಸಿಕೊಂಡು ಕಣ್ತುಂಬ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ತೆಗೆದುಕೊಳ್ಳುವಾಗ ಅವನ ಪಂಚಾಮೃತ ಪ್ರಲಾಪ ನೆನಪಿಗೆ ಬಂದಿತು. ಅಂದಿನ ಅರ್ಚಕರು ಇಂದು ಆ ದೇವಸ್ಥಾನದಲ್ಲಿ ಇಲ್ಲದೇ ಇದ್ದರೂ ಅವರು ರೂಢಿ ಮಾಡಿದ್ದ ಪಂಚಾಮೃತ ನನೆಪಾಗಿ ನಾನೂ ಮತ್ತು ನನ್ನ ಮಗ ಇಬ್ಬರೂ ಮನಸಾರೆ ನಕ್ಕಿದ್ದಂತೂ ಸುಳ್ಳಲ್ಲ.

ನಮ್ಮ ಅರೋಗ್ಯ ಸುಧಾರಣೆಗಾಗಿ ನಮ್ಮ ಹಿರಿಯರು ರೂಢಿ ಮಾಡಿರುವ ಪದ್ದತಿಗಳನ್ನು ತಿಳಿದುಕೊಂಡು ಅದನ್ನು ಹಿತ ಮಿತವಾಗಿ ಸೇವಿಸುವ ಮೂಲಕ ಆರೋಗ್ಯವಾಗಿ ಇರುಬಹುದು ಅಲ್ವೇ? ಅದೇ ರೀತೀ ಈ ಲೇಖನ ಓದಿದ ಪ್ರತಿಯೊಬ್ಬರೂ ನಮ್ಮ ಮಗನ ಹುಟ್ಟು ಹಬ್ಬದ ದಿನದಂದು ಹೃದಯಪೂರ್ವಕವಾಗಿ ಹರಸುತ್ತೀರಿ ಅಲ್ವೇ? ನಿಮ್ಮೆಲ್ಲರ ಹಾರೈಕೆಗಳೇ ನಮ್ಮ ಮಗ ಸಾಗರನಿಗೆ ಶ್ರೀ ರಕ್ಷೆ.

ಏನಂತೀರೀ?

ಕಾಫೀ ಪುರಾಣ

ಬಿಸಿ ಬಿಸಿ ಕಾಫಿ

ಶಂಕರನ ಮನೆಯವರು ಒಟ್ಟು ಕುಟುಂಬದವರು.  ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಮನೆಗೆ ಬಂದು  ಹೋಗುವವರು ತುಸು ಹೆಚ್ಚೇ.  ಬಂದವರಿಗೆ ಕಾಫೀ ತಿಂಡಿ, ಊಟೋಪಚಾರ ಮಾಡುವುದು ಅವರ ಮನೆಯಲ್ಲಿ  ನಡೆದು ಬಂದ ಸಂಪ್ರದಾಯ. ಹಾಗೆ ಪ್ರತೀ ಬಾರಿ ಕಾಫೀ ಮಾಡಿದಾಗಲೂ ಮಕ್ಕಳೂ ಕಾಫಿ ಕುಡಿಯಲು ಬಯಸುವುದು ಸಹಜ.  ಹಾಗಾಗಿ ಸುಮ್ಮನೆ ಬಂದು ಹೋದವರೆಲ್ಲರ ಜೊತೆಯೂ ಕಾಫಿ ಕುಡಿಯುತ್ತಾ ಹೋದರೆ ಮಕ್ಕಳಿಗೆ ಕಾಫಿ ಚಟವಾಗುತ್ತದೆ ಎಂದು ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಫೀ ಅಭ್ಯಾಸ ಮಾಡಿಸದೇ ಇದ್ದರೆ ಮಕ್ಕಳ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದರು. ಅದರಂತೆ ಮಕ್ಕಳಿಗೆ ಬೆಳಿಗ್ಗೆ  ಮತ್ತು ಸಂಜೆ ಹಾಲು ಕೊಡುವ ಅಭ್ಯಾಸ ಮಾಡಿದರು. ಆದರೆ ಮಕ್ಕಳು ಯಾರೂ ಕಾಫಿ ಕುಡಿಯುವುದಿಲ್ಲ ಎಂದರೆ ಅವರ ಮನೆಯಲ್ಲಿ ಕಾಫಿ ಖರ್ಚು ಕಡಿಮೆ ಎಂದು ಭಾವಿಸಬೇಕಿರಲಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಅವರ ಮನೆಯಲ್ಲಿ  ಕಾಫಿ ಡಿಕಾಕ್ಷನ್ ಸಿದ್ದವಿದ್ದು ,   ಬೆಳಿಗ್ಗೆ ಎದ್ದೊಡನೆಯೇ ಕಾಫಿ, ತಿಂಡಿಗೆ ಮುಂಚೆ ಕಾಫಿ, ತಿಂಡಿ ತಿಂದಾದ ನಂತರ ಕಾಫೀ, ಮಧ್ಯಾಹ್ನ ಊಟದ ನಂತರ ಕಾಫಿ, ಸಂಜೆ ಕಾಫಿ ಹೀಗೆ  ಮಕ್ಕಳ ಪಾಲನ್ನು  ಸೇರಿಸಿ  ಅಷ್ಟೂ ಕಾಫಿಯನ್ನು  ಹಿರಿಯರೇ ಹೀರುತ್ತಿದ್ದರು. ಆದರೆ  ಶಂಕರನ  ಮನೆಯ ಮಕ್ಕಳಿಗೆ ಕಾಫಿ ಟೀ ರುಚಿಯೇ ಪರಿಚಯವಿರಲಿಲ್ಲ.

ಸುಮಾರು ವರ್ಷಗಳ ನಂತರ  ಅದೊಂದು ದಿನ  ಶಂಕರನ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಯಾವುದೋ ಸಮಾರಂಭಕ್ಕೆ ಹೋಗಿದ್ದರು. ಅದೇ ಸಮಯಕ್ಕೆ ಶಂಕರನ ತಂದೆಯ ಸ್ನೇಹಿತರು ತಮ್ಮ ಹೆಂಡತಿ ಮತ್ತು  ಸಣ್ಣ ವಯಸ್ಸಿನ ಮಗನೊಂದಿಗೆ ತಮ್ಮ ಮನೆಯ ಗೃಹಪ್ರವೇಶಕ್ಕೆ ಆಮಂತ್ರಿಸಲು ಮನೆಗೆ ಬಂದಿದ್ದರು. ಸರಿ ಬಂದಿರುವವರಿಗೆ  ಶಂಕರ ಮತ್ತವನ ತಂಗಿ ಸೇರಿ ಕಾಫಿ ಮಾಡಿಕೊಟ್ಟು  ಬಂದವರ ಜೊತೆ ಮಾತಾನಾಡಲು ಕುಳಿತರು. ದೊಡ್ಡವರೇನೂ ಸುಮ್ಮನೆ ಕಾಫಿ ಕುಡಿಯತೊಡಗಿದರು. ಆದರೆ ಅವರ ಜೊತೆಯಲ್ಲಿ ಬಂದಿದ್ದ ಹುಡುಗ ಒಂದು ತೊಟ್ಟು ಕಾಫಿಯನ್ನು ಹೀರಿದ ಕೂಡಲೇ ಮುಖ ಕಪ್ಪಿಟ್ಟಿತು. ಅವನು ಆ ರೀತಿ ಅಸಹ್ಯ ಮಾಡಿಕೊಂಡದ್ದು ಶಂಕರ ಮತ್ತವನ ತಂಗಿಗೆ ಒಂದು ರೀತಿಯ ಕಸಿವಿಸಿ. ಯಾಕೋ ಸಂಜೀವಾ, ಕಾಫಿ ಚೆನ್ನಾಗಿಲ್ವಾ?  ಸ್ವಲ್ಪ ಸ್ಟ್ರಾಂಗ್ ಆಯ್ತಾ? ಇರು ಸ್ವಲ್ಪ ಹಾಲು ಬೆರೆಸಲಾ? ಅಂತ ಕೇಳಿದ ಶಂಕರ.  ಅದಕ್ಕೆ ಸಂಜೀವಾ, ಅಯ್ಯೋ ಅಣ್ಣಾ ಕಾಫಿಗೇ ಸಕ್ಕರೇನೇ ಹಾಕಿಲ್ಲ ಅದಕ್ಕೇ ತಂಬಾ ಕಹಿಯಾಗಿದೆ ಎಂದ.  ಅಯ್ಯೋ ಅತ್ತೆ ಮಾವಾ ನೀವಾದರೂ  ಕಾಫಿಗೆ ಸಕ್ಕರೆ ಹಾಕಿಲ್ಲಾ ಅಂತ ಹೇಳ್ಬಾರ್ದಾ ಅಂದ್ರೆ, ಅವರು ಅಯ್ಯೋ ಬಿಡ್ರೋ ಮಕ್ಕಳಾ ನಮಗೆ ಗೊತ್ತಿಲ್ವಾ ನಿಮಗೆ ಕಾಫಿ ಕುಡಿದ ಅಭ್ಯಾಸವಿಲ್ಲ ಹಾಗಾಗಿ ಇಂತಹ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಅದನ್ನು ಎತ್ತಿ ಆಡಿ ತೋರಿಸಿ ನಿಮ್ಮಂತಹ ಸಣ್ಣ ಮಕ್ಕಳ  ಮನಸ್ಸು ಬೇಜಾರು ಮಾಡುವದಕ್ಕೆ ನಮಗೆ ಮನಸ್ಸಾಗಲಿಲ್ಲ ಎಂದರು. ಆಷ್ಟರಲ್ಲಾಗಲೇ ಶಂಕರ ತಂಗಿ ಓಡಿ ಹೋಗಿ  ಬಟ್ಟಲಿನಲ್ಲಿ ಸಕ್ಕರೆ ಮತ್ತು ಚಮಚಗಳನ್ನು ತಂದು ಎಲ್ಲರಿಗೂ ಅವರ ರುಚಿಗೆ ತಕ್ಕಂತೆ ಸಕ್ಕರೆ ಬೆರೆಸಿದಳು.

ಮುಂದೆ ಶಂಕರ ದೊಡ್ಡವನಾಗಿ ತನ್ನ ಮದುವೆಯ ಆಮಂತ್ರಣ ಪತ್ರ ಕೊಡಲು ತನ್ನ ತಂದೆಯವರ ಜೊತೆ  ಅದೇ ಸ್ನೇಹಿತರ ಮನೆಗೆ ಹೋದಾಗಾ,ಆವರು ತಮ್ಮ ಶುಗರ್ ಲೆಸ್  ಕಾಫಿ ಪುರಾಣವನ್ನು ನೆನಸಿಕೊಂಡು, ಏನಯ್ಯಾ ಮಿತ್ರಾ, ಕಡೇ ಪಕ್ಷ ನಿನ್ನ ಭಾವೀ ಪತ್ನಿಗಾದರೂ ಕಾಫಿ, ಟೀ ಕುಡಿಯುವ ಅಭ್ಯಾಸವಿದೆಯೋ?  ಪರವಾಗಿಲ್ಲಾ ಬಿಡು ಈಗ ಹೇಗಿದ್ರೂ ನಡೆಯುತ್ತೆ.  ಈಗ ನಾವೆಲ್ಲಾ ಕುಡಿತಾ ಇರೋದೇ ಲೆಸ್ ಶುಗರ್ ಕಾಫಿ ಅಂತ ಹುಸಿ ನಗೆಯಾಡಿದರು. ಹೇ ಮಾವಾ, ಇನ್ಮುಂದೆ  ನಿಮಗೆ ಅಂತ ಸಮಸ್ಯೆ ಇರೋದಿಲ್ಲ. ನನ್ನ ಭಾವಿ ಪತ್ನಿ ತುಂಬಾ ಚೆನ್ನಾಗಿ ಕಾಫಿ ಟೀ ಮಾಡ್ತಾಳೆ ಅಂತ ಎಲ್ಲರೂ ಹೇಳ್ತಾರೆ. ಮದುವೆ ಆದ್ಮೇಲೆ  ನೀವೂ ನಮ್ಮನೆಗೆ ಒಂದ್ಸಲ ಬಂದು  ಸಿಹಿ ಸಿಹಿ ರುಚಿಯಾದ ಕಾಫಿ ಜೊತೆ ಅವಳ ಕೈ ರುಚಿಯನ್ನೂ ನೋಡಿವಿರಂತೆ  ಎಂದ ಶಂಕರ.  ಶಂಕರನ ಈ ಮಾತನ್ನು ಕೇಳಿದ ಅಂದಿನ ಪುಟ್ಟ ಹುಡುಗ ಇಂದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿ ಸಂಜೀವಾ, ಅಣ್ಣಾ ,  ಅಪ್ಪ ಅಮ್ಮ ಜೊತೆ ನಾನೂ ಬರ್ತೀನಿ. ಮೊದಲು ನಾನು ಕಾಫೀ ಕುಡಿದು ನಂತರ ಅವರಿಗೆ  ಕುಡಿಸೋಣ ಅದರಿಂದ ಆಭಾಸವೂ ತಪ್ಪುತ್ತದೆ ಎಂದಾಗ ಎಲ್ಲರೂ ಗೊಳ್ ಎಂದು ನಕ್ಕಿದ್ದೇ ನಕ್ಕಿದ್ದು.

ಅಂದಿನಿಂದ ಶಂಕರನ ಮನೆಯಲ್ಲಿ  ಅಡಿಕೆಗೆ  ಹೋದ ಮಾನ ಆನೆ ಕೊಟ್ಟ್ರೂ ಬರೋದಿಲ್ಲ ಅನ್ನೂ ಗಾದೆ ಜೊತೆಗೆ ಶುಗರ್ ಲೆಸ್ ಕಾಫಿಗೆ ಹೋದ ಮಾನ ಎಷ್ಟೇ ಶುಗರ್ ಹಾಕಿದ್ರೂ ಬರೋದಿಲ್ಲ ಅನ್ನೋ ಗಾದೆ ಮನೆ ಮಾತಾಯ್ತು. ಸರಿ, ಇನ್ನೇನು ಮತ್ತೇ  ಹೇಗೂ  ಶಂಕ್ರನ ಹೆಂಡತಿ ಘಮ ಘಮವಾದ ಕಾಫಿ ಮಾಡ್ತಾರಂತೆ  ನಡೀರಿ ಎಲ್ಲಾರೂ ಒಮ್ಮೆ ಅವರ ಕೈ ರುಚಿಯ ಕಾಫಿ ಕುಡಿದೇ ಬರೋಣ.

ಏನಂತೀರೀ?