ಗೋವು ಕಳ್ಳರು

ki

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ ನೋಡಿಕೊಂಡ. ಅಷ್ಟೇ ಅಲ್ಲದೇ, ಬಹುತೇಕರ ಮನೆಗಳಲ್ಲಿ ಅವುಗಳಿಗೆ ತಮ್ಮ ಹೆತ್ತ ಮಕ್ಕಳಿಗೆ ಹೆಸರಿಡುವಂತೆಯೇ ಹೆಸರನ್ನು ಇಟ್ಟು ಬಹಳ ಅಕ್ಕರೆಯಿಂದ ಸಾಕುವುದಲ್ಲದೇ ಅವುಗಳನ್ನು ತಮ್ಮ ಮನೆಯ ಕುಟುಂಬದ ಸದಸ್ಯರೇ ಎನ್ನುವಂತೆ ಕಾಪಾಡಿಕೊಳ್ಳುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಸರಿ. ಇನ್ನು ಹಳೇ ಮೈಸೂರಿನ ಕಡೆ ಸಂಕ್ರಾಂತಿಯ ಹಬ್ಬ ಮತ್ತು ಉತ್ತರ ಕರ್ನಾಟಕದಲ್ಲಿ ಮಳೆಗಾಲದ ಮುಂಚೆ ಸಂಭ್ರಮ ಸಡಗರಗಳಿಂದ ಅಚರಿಸುವ ಕಾರಹುಣ್ಣಿಮೆಯಂದು ತಮ್ಮ ದನ ಕರುಗಳಿಗೆ ಚೆನ್ನಾಗಿ ಮೈತೊಳೆದು ಅವುಗಳ ಕೋಡುಗಳಿಗೆ ಬಣ್ಣ ಬಣ್ಣದ ಟೇಪು ಇಲ್ಲವೇ ಬಣ್ಣಗಳನ್ನು ಬಳಿದು ಅವುಗಳನ್ನು ಗೋಮಾತೆ ಎಂದು ಪೂಜಿಸುವುದಲ್ಲದೇ, ಸಂಜೆ ಊರ ತುಂಬಾ ಮೆರವಣಿಗೆ ಮಾಡಿ ಕಿಚ್ಚು ಹಾಯಿಸುವ ಪದ್ದತಿ ಇರುವುದು ಎಲ್ಲರಿಗೂ ತಿಳಿಸಿರುವ ವಿಷಯವಷ್ಟೇ.

gov6

ಇನ್ನು ಕೃಷಿಕರಿಗೆ ತಮ್ಮ ಕೃಷಿಯ ಜೊತೆ ಹೈನುಗಾರಿಕೆಯೂ ಒಂದು ಉಪ ಉದ್ಯಮವಾಗಿದ್ದು ಎತ್ತುಗಳು ಹೊಲದಲ್ಲಿ ರೈತರ ಸರಿಸಮನಾಗಿ ದುಡಿದರೆ, ಹಸುಗಳು ಹಾಲನ್ನು ಕೊಡುವುದಲ್ಲದೇ, ಅವುಗಳ ಸಗಣಿ ಮತ್ತು ಗಂಜಲಗಳೆಲ್ಲವೂ ಸಾವಯವ ಗೊಬ್ಬರದಲ್ಲಿ ಬಳಕೆಯಾಗುತ್ತದೆ. ಅದೆಷ್ಟೋ ಮನೆಗಳಲ್ಲಿ ಹತ್ತಾರು ಹಸುಗಳನ್ನು ಸಾಕಿಕೊಂಡು ತಮ್ಮ ಮನೆಯಲ್ಲಿ ಹೆಚ್ಚಾದ ಹಾಲಿನಿಂದ ಮೊಸರು, ಬೆಣ್ಣೆ, ತುಪ್ಪ ತಯಾರಿಸಿಯೋ ಇಲ್ಲವೇ, ನೇರವಾಗಿ ಸ್ಥಳೀಯ ಹಾಲಿನ ಡೈರಿಗೆ ಮಾರುವ ಮೂಲಕ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

gov3

ತಾನೊಂದು ಬಗೆದರೆ ದೆವ್ವವೊಂದು ಬಗೆದೀತು ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಗೋವುಗಳ್ಳರ ಹಾವಳಿ ವಿಪರೀತವಾಗಿದ್ದು, ರಾತ್ರೋ ರಾತ್ರಿ ಸದ್ದಿಲ್ಲದೆ ಮನೆಗಳಿಗೆ ನುಗ್ಗಿಯೋ ಇಲ್ಲವೇ ಹಗಲು ಹೊತ್ತಿನಲ್ಲಿ ಮೇಯಲು ಬಿಟ್ಟ ದನಕರುಗಳನ್ನು ಮಾಂಸದ ಆಸೆಗಾಗಿ ಕದ್ದೊಯ್ಯುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಆಗಿದೆ.

gov1

ಈ ರೀತಿಯ ಕಳ್ಳತನವನ್ನು ಮಾಡುವವರು ಕೇವಲ ಸಣ್ಣ ಪುಟ್ಟ ಕಳ್ಳರಾಗಿರದೇ, ಅವರ ಹಿಂದೆ ಒಂದು ವ್ಯವಸ್ಥಿತ ಹೈಟೆಕ್ ಜಾಲವಿದ್ದು ಅದಕ್ಕೆ ಸ್ಥಳೀಯರ ಬೆಂಬಲದಿಂದಾಗಿ ಹಗಲು ಹೊತ್ತಿನಲ್ಲಿ ಎಲ್ಲವನ್ನೂ ಯೋಜನೆ ಮಾಡಿ ರಾತ್ರಿ ಹೊತ್ತು ಕದ್ದೊಯ್ಯುತ್ತಿದ್ದಾರೆ. ಈ ಸಮಯದಲ್ಲಿ ಅಕಸ್ಮಾತ್ ಮನೆಯವರಿಗೆ ಎಚ್ಚರವಾಗಿ ಆ ಕಳ್ಳರನ್ನು ತಡೆಯಲು ಪ್ರಯತ್ನಿಸಿದಲ್ಲಿ ಮುಖ ಮೂತಿಯನ್ನು ನೋಡದೆ ಮಾರಕಾಸ್ತ್ರಗಳಿಂದ ಧಾಳಿಮಾಡಿ ಪರಾರಿಯಾಗುವ ಕಳ್ಳರನ್ನು ಎಷ್ಟೇ ದೂರು ದಾಖಲಿಸಿದರೂ ಹಿಡಿಯಲು ಪೋಲೀಸರು ಮುಂದಾಗದಿರುವುದು ಅವರೂ ಸಹಾ ಈ ಕೃತ್ಯದಲ್ಲಿ ಪರೋಕ್ಷವಾಗಿ ಭಾಗಿಗಳಾಗಿದ್ದಾರಾ? ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

gov5

ಅಕಸ್ಮಾತ್ ಹಳ್ಳಿಯ ಹುಡುಗರು ಗುಂಪು ಕಟ್ಟಿಕೊಂಡು ಅಂತಹ ಗೋವು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿ, ಆ ಗೋವುಗಳ್ಳರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಹತ್ಯೆಯಾದವರು ಮತ್ತು ಶಾಶ್ವತವಾಗಿ ಕೈ ಕಾಲುಗಳನ್ನು ಕಳೆದುಕೊಂಡವರ ಉದಾಹರಣೆ ಲೆಕ್ಕವಿಲ್ಲದಷ್ಟಿದೆ. ಆಕಸ್ಮಾತ್ ಗೋಗಳ್ಳರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದೇ ತಡಾ ಅದಕ್ಕೊಂದು ಕೋಮುವಾದದ ಬಣ್ಣವನ್ನು ಕಟ್ಟಿ, ಸಕಲ ಸನ್ಮಾನಗಳಿಂದ ಗೋವು ಕಳ್ಳನ್ನು ಬಿಡಿಸಿಕೊಂಡು ಹೋಗುವುದಲ್ಲದೇ, ಅವರ ವಿರುದ್ಧ ದೂದು ನೀಡಿದ ಹುಡುಗರ ವಿರುದ್ಧವೇ ದಾವೆಯನ್ನು ಹೂಡುವ ಪುಢಾರಿಗಳು ಮತ್ತು ಸ್ಥಳೀಯ ರಾಜಕೀಯ ವ್ಯಕ್ತಿಗಳೂ ಇತ್ತೀಚೆಗೆ ತಲೆ ಎತ್ತಿಕೊಂಡಿರುವುದು ದುರಾದೃಷ್ಟಕರವೇ ಸರಿ. ಕೆಲ ವರ್ಷಗಳ ಹಿಂದೆ ಇದೇ ರೀತಿ ಗೋವುಗಳನ್ನು ಕಳ್ಳತನ ಮಾಡುವಾಗ ಪೋಲೀಸರ ಗುಂಡೇಟಿಗೆ ಬಲಿಯಾದವನಿಗೆ ಸರ್ಕಾರದಿಂದಲೇ 10 ಲಕ್ಷ ಕೊಟ್ಟ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ.

ಹೌದು ನಿಜ. ಆಹಾರ ಅವರವರ ಅಯ್ಕೆಯಾಗಿದ್ದು ಅವರಿಗೆ ಇಷ್ಟ ಬಂದ ಆಹಾರವನ್ನು ತಿನ್ನುವುದಕ್ಕೆ ಯಾರದ್ದೇ ಆಕ್ಷೇಪವಿಲ್ಲವಾದರೂ, ಹಾಗೆ ತಿನ್ನುವ ಆಹಾರ ಅವರ ಸ್ವಂತ ಪರಿಶ್ರಮದ್ದೇ ಆಗಿರಬೇಕೇ ಹೊರತು, ಬೇರೆಯವರು ಕಷ್ಟ ಪಟ್ಟು ಸಾಲ ಸೋಲ ಮಾಡಿ ತಂದು ಜತನದಿಂದ ಸಾಕಿ ಸಲಹಿದದ್ದನ್ನು ಕಳ್ಳತನ ಮಾಡಿ ತಿನ್ನಬೇಕು ಎಂದು ಯಾವ ಶಾಸ್ತ್ರಗಳಲ್ಲಿಯೂ ಹೇಳಿಲ್ಲ ಎನ್ನುವುದೂ ಅಷ್ಟೇ ಸತ್ಯವಾಗಿದೆ. ಕೆಲ ಸಮುದಾಯದ ಜಿಹ್ವಾ ಜಪಲಕ್ಕಾಗಿ ನಮ್ಮ ಶ್ರದ್ಧೇಯ ಗೋವುಗಳನ್ನು ಕದ್ದೊಯ್ಯುವುದನ್ನು ತಡೆಯುವ ಸಲುವಾಗಿಯೇ ಗೋಹತ್ಯೆ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಹಲವಾರು ವರ್ಷಗಳಿಂದಲೂ ಅನೇಕರು ಹೋರಾಟ ಮಾಡುತ್ತಿದ್ದರೂ, ತಮ್ಮ ಓಟ್ ಬ್ಯಾಂಕ್ ರಾಜಕಾರಣ ಮತ್ತು ತುಷ್ಟೀಕರಣದಿಂದಾಗಿ ನಮ್ಮವರೇ ನಮ್ಮ ಶ್ರದ್ದೇಯ ಗೋವುಗಳ ಹತ್ಯಾ ನಿಷೇಧವನ್ನು ತರಲು ವಿರೋಧಿಸುತ್ತಿರುವುದು ನಿಜಕ್ಕೂ ಅಸಹ್ಯವನ್ನು ಹುಟ್ಟಿಸುತ್ತದೆ.

gov4

ಪ್ರತೀ ನಿತ್ಯವೂ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಸುದ್ದಿಗಳಲ್ಲಿ ಗೋಗಳ್ಳರದ್ದೇ ಬ್ರೇಕಿಂಗ್ ನ್ಯೂಸ್ ಆಗಿ ಹೋಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇದೀಗ ತಾನೆ ಓದಿದ ಸುದ್ದಿಯಂತೆ, ಕಾರ್ಕಳ ತಾಲೂಕು ಕರಿಯಕಲ್ಲು ಕಜೆ ನಿವಾಸಿ 58ರ ಹರೆಯದ ಯಶೋದಾರವರು ತಮ್ಮ ಪತಿ ವಿಠಲ ಆಚಾರ್ಯರು ಅಪಘಾತದಲ್ಲಿ ತೀರಿಕೊಂಡ ನಂತರ ತಮ್ಮ ಜೀವನೋಪಾಯಕ್ಕಾಗಿ ಕಳೆದ 18 ವರ್ಷಗಳಿಂದಲೂ ತಮ್ಮ ಮಗಳೊಂದಿಗೆ ಪುಟ್ಟ ಹೆಂಚಿನ ಮನೆಯೊಂದರಲ್ಲಿ ಹೈನುಗಾರಿಕೆಯನ್ನು ಮಾಡಿಕೊಂಡು ಜೀವನವನ್ನು ಹಾಗೂ ಹೀಗೂ ನಡೆಸಿಕೊಂಡು ಹೋಗುತ್ತಿದ್ದರು.

ಮುಖ್ಯ ರಸ್ತೆಯಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಇವರ ಮನೆಯಿಂದ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 16 ಗೋವುಗಳನ್ನು ಕಟುಕರು ಕದ್ದೊಯ್ಯುವ ಮೂಲಕ ಅವರ ಇಡೀ ಕುಟುಂಬ ಅಕ್ಷರಶಃ ಬೀದಿ ಪಾಲಾಗಿದ್ದು ಕಳೆದ ಒಂದೂವರೆ ವರ್ಷಗಳಿಂದಲೂ ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ ಎಂದರೂ ತಪ್ಪಾಗದು. ಕಳೆದ ವಾರ ಜನವರಿ 3ರ ರಾತ್ರಿ ಹಟ್ಟಿಯಲ್ಲಿದ್ದ ತುಂಬು ಗಬ್ಬದ ಹಸುವನ್ನು ಕದ್ದೊಯ್ಯಲು ಬಂದಾಗ ಎಚ್ಚರಗೊಂಡು ಅದನ್ನು ತಡೆಯಲು ಪ್ರಯತ್ನಿಸಿದರಾದರೂ ಕಟುಕರು ಝಳುಪಿಸುತ್ತಿದ್ದ ಮಾರಕಾಸ್ತ್ರಗಳ ಭಯದಿಂದಾಗಿ ತಾಯಿ ಮಗಳ ಕಣ್ಣ ಮುಂದೆಯೇ ತಮ್ಮ ಕೊಟ್ಟಿಗೆಯಲ್ಲಿದ್ದ ಕಟ್ಟ ಕಡೆಯ ಹಸುವನ್ನು ಕಳೆದುಕೊಂಡು ದಿಕ್ಕೇ ತೋಚದೆ ಕಣ್ಣೀರು ಸುರಿಸುತ್ತಿರುವ ಸುದ್ದಿ ಓದಿ ನಿಜಕ್ಕೂ ಕರುಳು ಚುರುಕ್ ಎಂದಿತು.

ವರ್ಷದ ಹಿಂದೆ ದಿನವೊಂದಕ್ಕೆ 25ರಿಂದ 30 ಲೀ. ಹಾಲನ್ನು ಡೈರಿಗೆ ಮಾರಿ ತಿಂಗಳಿಗೆ 10ರಿಂದ 15 ಸಾವಿರ ರೂ. ಬರುತ್ತಿದ್ದ ಆದಾಯವನ್ನೇ ನೆಚ್ಚಿಕೊಂಡು ಪಾಳು ಬಿದ್ದು ಹೋಗುತ್ತಿದ್ದ ಸದ್ಯದ ಮನೆಯ ಪಕ್ಕದಲ್ಲೇ ಬ್ಯಾಂಕಿನಿಂದ ಸಾಲವನ್ನು ಮಾಡಿ ವಾಸಿಸಲು ಮನೆಯೊಂದನ್ನು ಕಟ್ಟಿ ಕೊಳ್ಳುತ್ತಿದ್ದಾಗಲೇ, ಒಂದೊಂದೇ ಹಸುಗಳು ಕಳ್ಳರ ಪಾಲಾಗುತ್ತಿದ್ದಂತೆ ಮನೆ ಕಟ್ಟುವುದಿರಲಿ, ದೈನಂದಿನ ಜೀವನಕ್ಕೂ ಕುತ್ತು ಬಂದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ಇದು ಕೇವಲ ಯಶೋಧ ಅವರ ಒಬ್ಬರ ಕರುಣಾಜನಕ ಕಥೆಯಾಗಿರದೇ ಆ ಪ್ರದೇಶದ ಸುತ್ತಮುತ್ತಲಿನ ದೈನಂದಿನ ಗೋಳಾಗಿದೆ. ಯಶೋದಾ ಅವರ ಗ್ರಾ.ಪಂ. ಮಾಜಿ ಸದಸ್ಯರ ಮನೆಯಿಂದಲೂ ಇದುವರೆಗೆ 12 ಗೋವುಗಳ ಕಳವಾಗಿದ್ದು, ಇದೇ ರೀತಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಹಸುಗಳ ಕಳ್ಳತನ ಎಗ್ಗಿಲ್ಲದೇ ಅವ್ಯಾಹತವಾಗಿ ನಡೆದುಕೊಂಡೇ ಹೋಗುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.

ನಾವುಗಳು ಚಿಕ್ಕವರಿದ್ದಾಗ ನಮ್ಮ ಅಜ್ಜ ಅಜ್ಜಿಯರು ಹೇಳುತ್ತಿದ್ದ ಕಥೆಗಳಲ್ಲಿ ಕಾಡಿನಲ್ಲಿ ಮೇಯುತ್ತಿದ್ದ ಹಸುಗಳನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಹುಲಿ, ಸಿಂಹದಂತಹ ಕಾಡು ಪ್ರಾಣಿಗಳು ತಿಂದು ಹಾಕುತ್ತಿತ್ತು ಎಂಬುದನ್ನೇ ಕೇಳಿ ದುಃಖದಿಂದ ನಿದ್ದೆ ಬಾರದ ದಿನಗಳೆಷ್ಟೋ ಇದೆ. ಅದಕ್ಕೆ ಸಮಾಧಾನ ಪಡಿಸಲೋ ಎನ್ನುವಂತೆ ಕ್ರೂರ ಪ್ರಾಣಿ ಹುಲಿಯೂ ಸಹಾ ಮಾನವೀಯತೆನ್ನು ಎತ್ತಿ ಹಿಡಿದ ಗೋವಿನ ಕಥೆಯನ್ನು ಹಾಡಿನ ಮೂಲಕ ಹೇಳಿಕೊಟ್ಟು ಸಮಾಧಾನ ಪಡಿಸಿದ್ದೂ ಇನ್ನೂ ಹಚ್ಚಹಸಿರಾಗಿಯೇ ಇರುವಾಗ, ಮಕ್ಕಳಂತೆ ಸಾಕಿ ಸಲಹಿದ್ದ ಹಸುಗಳನ್ನು ತಮ್ಮ ಆಹಾರಕ್ಕಾಗಿ ಕದ್ದೊಯ್ಯುವ ಕಟುಕರು ಕ್ರೂರ ಮೃಗಗಳಿಗಿಂತಲೂ ಕೀಳು ಎಂದು ಸಾಭೀತು ಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಇನ್ನಾದರು ಆಳುವ ಸರ್ಕಾರಗಳು ಎಚ್ಚೆತ್ತು ಕೊಂಡು ಯಾವುದೇ ಜಾತೀ ಧರ್ಮದ ಹಂಗು ಮತ್ತು ನೆಪವನ್ನು ಒಡ್ಡದೇ ನಮ್ಮ ಶ್ರದ್ದೇಯ ಗೋಮಾತೆಯನ್ನು ಕದ್ದೊಯ್ಯುವ ಗೋವು ಕಳ್ಳರನ್ನು ಹೆಡೆಮುರಿಕಟ್ಟಲಿ ಮತ್ತು ಆದಷ್ಟು ಶೀಘ್ರವಾಗಿ ಗೋಹತ್ಯಾ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಮೂಲಕ ಈ ಅನಿಷ್ಟ ಪದ್ದತಿಗೆ ಶಾಶ್ವತವಾದ ಪರಿಹರವನ್ನು ನೀಡಲಿ ಎಂದು ಆಶಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಗೊರೆ ಹಬ್ಬ (ಸಗಣಿ ಹಬ್ಬ)

ದೀಪಾವಳಿ ಹಬ್ಬವೆಂದರೆ ಮಡಿ ಹುಡಿಗಳು ಗೌಣವಾಗಿ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಹ ಹಬ್ಬ. ಬೆಳ್ಳಂಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸಾ ಬಟ್ಟೇ ಹಾಕಿಕೊಂಡು, ದೇವರಿಗೆ ಕೈ ಮುಗಿದು ಪಟಾಕಿ ಹೊಡೆದು. ಮಧ್ಯಾಹ್ನ ಅಮ್ಮಾ ಮಾಡಿದ ಮೃಷ್ಟಾನ್ನ ಭೋಜನ ಸವಿದು ಸಂಜೆ ಮನೆಯ ಅಂಗಳದಲೆಲ್ಲಾ ದೀಪಗಳನ್ನು ಹಚ್ಚಿ ಮತ್ತೆ ಸುರ್ ಸುರ್ ಬತ್ತಿ, ಮತಾಪು, ಹೂವಿನ ಕುಂಡ, ರಾಕೆಟ್ ಎಲ್ಲವನ್ನೂ ಸಿಡಿಸಿ ಸಂಭ್ರಮಿಸುವ ಹಬ್ಬ. ಆದರೆ, ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರಾಂತ್ಯಕ್ಕೆ ಹೊಂದಿಕೊಂಡೇ ಇರುವ ಭೌಗೋಳಿಕವಾಗಿ ತಮಿಳುನಾಡಿಗೇ ಸೇರಿದರೂ, ಕನ್ನಡಿಗರೇ ಬಹು ಸಂಖ್ಯಾತರಾಗಿರುವ ಗುಮ್ಮಟಾಪುರದಲ್ಲಿ ಸಾಂಪ್ರದಾಯಿಕವಾಗಿ ಊರಿನ ಆಬಾಲವೃದ್ಧರಾದಿಯಾಗಿ ಗಂಡಸರು ಪರಸ್ಪರ ಸಗಣಿಯನ್ನು ಎರೆಚಾರಿಕೊಂಡು ಪರಸ್ಪರ ಮನಸೋ ಇಚ್ಚೆ ಬಯ್ದಾಡಿಕೊಂಡು ಗೊರೆ ಹಬ್ಬವನ್ನು ವಿಲಕ್ಷಣ ಎನಿಸಿದರೂ ವಿಶಿಷ್ಟವಾಗಿ ಆಚರಿಸುತ್ತಾರೆ.

ಪ್ರತಿವರ್ಷ ನಾನಾ ಕಾರಣಕ್ಕೆ ದೇಶಾದ್ಯಂತ ವಲಸೆ ಹೋಗಿರುವ ಈ ಊರಿನವರು, ಯಾವುದೇ ಆಸ್ತಿ, ಅಂತಸ್ತು, ಹುದ್ದೆ ಎಂಬ ಹಮ್ಮು ಬಿಮ್ಮು ಇಲ್ಲದೇ ದೀಪಾವಳಿಯ ಸಮಯಕ್ಕೆ ಊರಿಗೆ ಬಂದು ಬಲಿಪಾಡ್ಯಮಿಯ ಮಾರನೇ ದಿನ ಜಾತಿ ಬೇಧದ ಮನೋಭಾವ ಇಲ್ಲದೇ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಸಗಣಿಯನ್ನು ಸಂಗ್ರಹಿಸಿ ಸಗಣಿ ಎರೆಚಾಟದ ಹಬ್ಬದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡು, ಒಬ್ಬರಿಗೊಬ್ಬರು ಸಗಣಿ ಎರಚಾಡಿಕೊಂಡು ಸಂಭ್ರಮಿಸಿ ಸಹಬಾಳ್ವೆ ಬೆಸೆಯುತ್ತಾ, ಮಾರನೇಯ ದಿನ ಮುಂದಿನ ವರ್ಷದ ಹಬ್ಬಕ್ಕೆ ಬರೋಣ ಎಂದು ಪರಸ್ಪರ ಮಾತನಾಡಿಕೊಂಡು ತಮ್ಮ ತಮ್ಮ ಊರಿಗೆ ಹಿಂದಿರುಗುವ ಪದ್ದತಿ ನೂರಾರು ವರ್ಷಗಳಿಂದಲೂ ರೂಡಿಯಲ್ಲಿದೆ.

ಈ ಗ್ರಾಮದವರು ಈ ರೀತಿಯಾಗಿ ಹಬ್ಬವನ್ನು ಆಚರಿಸುವ ಹಿಂದೆ ಒಂದು ಕುತೂಹಲಕಾರಿಯಾದ ಪೌರಾಣಿಕ ಕಥೆಯಿದೆ. ನೂರಾರು ವರ್ಷಗಳ ಹಿಂದೆ ಈ ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ದೇಶದಿಂದ ವ್ಯಕ್ತಿಯೊಬ್ಬರು ಬಂದಿದ್ದರಂತೆ. ಅವರು ಅಚಾನಕ್ಕಾಗಿ ಮರಣ ಹೊಂದಿದಾಗ ಅವನ ಅಂತಿಮ ಕ್ರಿಯೆಗಳನ್ನು ಮುಗಿಸಿದ ನಂತರ ಅವರ ಜೊತೆಯಲ್ಲಿ ಸದಾ ಕಾಲವೂ ಇರುತ್ತಿದ್ದ ಜೋಳಿಗೆ, ಬೆತ್ತ ಮತ್ತು ಅವರ ಇತರೇ ಎಲ್ಲಾ ವಸ್ತುಗಳನ್ನೂ ಮನೆಯ ಪಕ್ಕದಲ್ಲಿ ಸಗಣೀ ಸಂಗ್ರಹಿಸುವ ತಿಪ್ಪೇ ಗುಂಡಿಗೆ ಬಿಸಾಡಿದರಂತೆ. ಇದಾದ ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿಯ ಬಳಿ ಗೌಡರ ಎತ್ತಿನ ಗಾಡಿ ಹಳಿ ತಪ್ಪಿ ಆ ಜೊಳಿಗೆ ಮೇಲೆ ಹರಿದಾಗ ಅದರಲ್ಲಿದ್ದ ಲಿಂಗದ ಮೇಲೆ ಗಾಡಿಯ ಚಕ್ರ ಹರಿದು, ಆ ಲಿಂಗದಿಂದ ಧಾರಾಕಾರವಾದ ರಕ್ತ ಹರಿದು ಬಂದಿತಂತೆ. ಇದನ್ನು ನೋಡಿ ಊರನವರೆಲ್ಲಾ ಭಯಭೀತರಾಗಿದ್ದರೆಂತೇ. ಅದೇ ರಾತ್ರಿ ಆ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೋಷ ಪರಿಹಾರಕ್ಕಾಗಿ ಬೀರಪ್ಪನ ಗುಡಿ ಕಟ್ಟಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಅಚರಿಸಬೇಕು ಎಂದು ಗೌಡನಿಗೆ ಹೇಳಿತಂತೆ. ಆ ಕೂಡಲೇ ಆ ತಿಪ್ಪೆ ಇದ್ದ ಜಾಗದಲ್ಲಿಯೇ ಬೀರಪ್ಪನ ದೇವಸ್ಥಾನ ಕಟ್ಟಿ, ಗೊರೆಹಬ್ಬದ ಆಚರಣೆ ಆರಂಭವಾಯಿತೆಂಬ ಪ್ರತೀತಿ ಇದೆ.

ತಲತಲಾಂತರದಿಂದಲೂ ಈ ಹಬ್ಬದ ಅಂಗವಾಗಿ ಇಡೀ ಗ್ರಾಮವನ್ನು ತಳಿರು, ತೋರಣಗಳಿಂದ ಶೃಂಗಾರಗೊಳಿಸಿ ಊರಿನ ಸಣ್ಣ ಸಣ್ಣ ಮಕ್ಕಳು ತರುಣರೊಂದಿಗೆ ಊರಿನ ಎಲ್ಲಾ ಮನೆಗಳಿಗೂ ಹೋಗಿ ಸಗಣಿಯನ್ನು ಸಂಗ್ರಹಿಸಿ ತಂದು ದೇವಸ್ಥಾನದ ಬಳಿ ಒಟ್ಟು ಮಾಡುತ್ತಾರೆ

ಮಧ್ಯಾಹ್ನವಾಗುತ್ತಿದ್ದಂತೆ ಅವರೆಲ್ಲರೂ ಊರಿನ ಹೊರಗಡೆ ಇರುವ ಕಾರಪ್ಪ ದೇವಸ್ಥಾನಕ್ಕೆ ಬಂದು ತಮ್ಮ ತಮ್ಮ ಮೆನೆಗಳಿಂದ ತಂದಿದ್ದ ಎಣ್ಣೆಯಿಂದ ಪೂಜೆ ಸಲ್ಲಿಸಿ, ಬಳಿಕ ಕೆರೆಯಂಗಳದಲ್ಲಿ ಕತ್ತೆಯೊಂದನ್ನು ತಂದು ಅದನ್ನು ಚೆನ್ನಾಗಿ ತೊಳೆದು ಶೃಂಗರಿಸಿ, ಪೂಜೆ ಸಲ್ಲಿಸಿ, ಊರಿನ ಚಾಡಿಕೋರ ಎಂದು ಊರಿನೊಬ್ಬನನ್ನು ಬಿಂಬಿಸಿ ಆತನಿಗೆ ತೆಂಗಿನ ನಾರು ಹಾಗೂ ಒಣ ಹುಲ್ಲಿನಿಂದ ಭರ್ಜರಿಯಾದ ಗಿರಿಜಾ ಮೀಸೆಯಂತೆ ಕಟ್ಟಿ, ಆತನ ಮೈಗೆಲ್ಲ ವಿಭೂತಿ ಬಳಿದು ವಿವಿಧ ಗಿಡಗಳ ಸೊಪ್ಪುಗಳಿಂದ ಅಲಂಕರಿಸಿ, ಶೃಂಗರಿಸಿದ ಕತ್ತೆಯ ಮೇಲೆ ಕೂರಿಸಿ ಮೆರೆವಣಿಗೆ ಮಾಡುತ್ತಾ, ಅಶ್ಲೀಲ ಶಬ್ದಗಳಿಂದ ಮನಸೋ ಇಚ್ಚೆ ಬೈಯುತ್ತಾ ಸಂಭ್ರಮಿಸಿ, ಕೇಕೆ ಹಾಕುತ್ತಾ, ಸ್ವಲ್ಪ ದೂರ ಮೆರೆವಣಿಗೆ ಮಾಡಿದ ನಂತರ ಆತನನ್ನು ಕತ್ತೆಯಿಂದಿಳಿಸಿ, ಆ ಯುವಕರೆಲ್ಲರೂ ಕತ್ತೆಯನ್ನೇ ಹೊತ್ತುಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಅದನ್ನು ಬೀರೇಶ್ವರಸ್ವಾಮಿ ದೇವಸ್ಥಾನದ ಬಳಿ ತಂದು ಆ ವ್ಯಕ್ತಿಯ ಹುಲ್ಲಿನ ಮೀಸೆಯನ್ನು ಸಗಣಿ ರಾಶಿಯಲ್ಲಿ ನೆಟ್ಟು, ಬೀರೇಶ್ವರನಿಗೆ ಪೂಜೆ ಸಲ್ಲಿಸಿ ಸಗಣಿಯಾಟವನ್ನು ಆರಂಭಿಸುತ್ತಾರೆ.

ನಂತರ ಊರಿನ ನೂರಾರು ಹುಡುಗರು ಮತ್ತು ಯುವಕರು, ಸಗಣಿಯ ರಾಶಿಯೊಳಗೆ ಬಿದ್ದು ಎದ್ದು ಹೊರಳಾಡಿದ ನಂತರ ಸುಮಾರು ಒಂದುವರೆ ಎರಡು ಗಂಟೆಗಳ ಅವರವರ ಇಚ್ಚೆಗೆ ಅನುಗುಣವಾಗಿ ದಪ್ಪ ದಪ್ಪ ಸಗಣಿ ಉಂಡೆ ಮಾಡಿಕೊಂಡು ಪರಸ್ಪರ ಮನಸೋ ಇಚ್ಚೆ ಬೈದಾಡುತ್ತಾ ಯಾವುದೇ ಜಾತಿ, ಅಂತಸ್ತು, ಮೇಲು ಕೀಳುಗಳೆಂಬ ಭಾವವಿಲ್ಲದೇ ಪರಸ್ಪರ ಎರೆಚಾಡುತ್ತಾ ಸಂಭ್ರಮಿಸುತ್ತಾರೆ. ಆ ಅಶ್ಲೀಲ ಬೈಗುಳವೆಲ್ಲವೂ ಕೇವಲ ಆ ಕ್ಷಣಕ್ಕೆ ಮಾತ್ರವೇ ಸೀಮಿತವಾಗಿದ್ದು ಹಬ್ಬ ಮುಗಿದ ನಂತರ ಎಲ್ಲರೂ ಪರಸ್ಪರ ಸ್ನೇಹಭಾವದಿಂದ ಸಹಬಾಳ್ವೆ ನಡೆಸುವುದು ಗಮನಾರ್ಹವಾಗಿದೆ.

ವರ್ಷದಿಂದ ವರ್ಷಕ್ಕೆ ಈ ಹಬ್ಬ ಪ್ರಸಿದ್ಧಿ ಪಡೆಯುತ್ತಿದ್ದು ಆ ಊರಿನವರ ನೆಂಟರಿಷ್ಟರಲ್ಲದೇ, ಅಕ್ಕ ಪಕ್ಕದ ಊರುಗಳ ನೂರಾರು ಹುಡುಗರುಗಳು ಕೂಡಾ ಈ ಹಬ್ಬಕ್ಕೆ ಬಂದು ತಾವೂ ಹಬ್ಬದಲ್ಲಿ ಭಾಗವಹಿಸಿಯೋ ಇಲ್ಲವೇ ಕೆರೆಚಾಡುವವರಿಗೆ ಹುಮ್ಮಸ್ಸು ಕೊಡುತ್ತಲೋ ಸುಮಾರು ಎರಡು ಗಂಟೆಗಳ ಎಲ್ಲಾ ಕಷ್ಟ, ನಷ್ಟ ಮತ್ತು ನೋವುಗಳನ್ನು ಮರೆತು ಸಂಭ್ರಮಿಸುವುದೇ ಈ ಹಬ್ಬದ ವೈಶಿಷ್ಠ್ಯ. ಅದಕ್ಕಾಗಿಯೇ ಇಲ್ಲಿನ ಯುವಕರು ಎಲ್ಲಿಲ್ಲದ ಹುಮ್ಮಸ್ಸಿನಿಂದ ದೀಪಾವಳಿ ಹಬ್ಬ ಬರುವುದನ್ನೇ ಕಾಯುತ್ತಾ, ಗೊರೆ ಹಬ್ಬದಲ್ಲಿ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ.

ಸಗಣಿ ಎಂದು ಅಸಹ್ಯ ಪಡದೇ ಹಬ್ಬದ ಸಂಪ್ರದಾಯ ಎಂಬ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಗೊರೆಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಬೀರೇಶ್ವರನಲ್ಲಿ ಬೇಡಿಕೊಂಡರೆ ಒಳಿತಾಗುತ್ತದೆ ಎಂಬ ನಂಬಿಕೆಯೂ ಊರಿನವರಿಗೆದೆ. ಈ ರೀತಿ ಸಗಣಿಯನ್ನು ಪರಸ್ಪರ ಮೈ ಮೇಲೆ ಎರಚಡಿಕೊಳ್ಳುವುದರಿಂದ ವೈಜ್ಞಾನಿಕವಾಗಿಯೂ ಆ ವ್ಯಕ್ತಿಯ ಆರೋಗ್ಯ ವೃದ್ಧಿಯಾಗಲಿದೆ ಎಂಬ ಕಾರಣದಿಂದಾಗಿಯೇ ನಮ್ಮ ಹಿರಿಯರು ಈ ರೀತಿಯಲ್ಲಿ ಬೀರೇಶ್ವರ ಸ್ವಾಮಿಯ ನೆಪದಲ್ಲಿ ಈ ಊರಿನವರಲ್ಲದೇ, ಸುತ್ತ ಮುತ್ತಲ ಗ್ರಾಮಸ್ಥರೂ ಜಾತಿ ಭೇದ ಮರೆತು ಒಂದಾಗಿ ಸಗಣಿಯಾಟವನ್ನು ರೂಢಿಗೆ ತಂದಿರಬಹುದು ಎನ್ನುವುದು ಊರಿನ ಹಿರಿಯರೊಬ್ಬರ ವಿಶ್ಲೇಷಣೆ. ತಮ್ಮ ಗ್ರಾಮದಲ್ಲಿ ಮನೆಮುರುಕ ಚಾಡಿಕೋರರು ಇರಲೇ ಬಾರದು ಎಂಬ ಕಾರಣದಿಂದ ಸಾಂಕೇತಿಕವಾಗಿ ಅವನನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಅಶ್ಲೀಲ ಪದಗಳಿಂದ ಬೈಯುತ್ತಾ ಅವನ ಪ್ರತಿರೂಪವಾದ ಮೀಸೆಯನ್ನು ಸಗಣಿಯಲ್ಲಿ ನೆಟ್ಟು ನಂತರ ಎಲ್ಲರೂ ಅದನ್ನು ತುಳಿದುಹಾಕಿ, ಪರಸ್ಪರ ಸಗಣಿಯನ್ನು ಎರೆಚಾಡಿಕೊಂಡು ಸಹೋದರತೆಯ ಸಹಬಾಳ್ವೆ ಸದಾಕಾಲವೂ ಹಚ್ಚ ಹಸಿರಾಗಿರಲೆಂಬ ಉದ್ದೇಶದಿಂದ ರೂಡಿಯಲ್ಲಿರುವ ಈ ಹಬ್ಬ ನಿಜಕ್ಕೂ ವಿಶಿಷ್ಟವಲ್ಲದೇ, ನಮ್ಮ ಪೂರ್ವಜರ ಭೌದ್ಧಿಕ ಮಟ್ಟ ಮತ್ತು ವೈಜ್ಞಾನಿಕ ಜ್ಞಾನವನ್ನು ಎತ್ತಿ ತೋರಿಸುತ್ತದೆ ಎಂದರೂ ತಪ್ಪಾಗಲಾರದು ಅಲ್ವೇ?

ಏನಂತೀರೀ?