ಹೃದಯ ಶ್ರೀಮಂತಿಕೆ

bus2

ದಿನವಿಡೀ ಕಛೇರಿಯಲ್ಲಿ ಕೆಲಸ ಮಾಡಿದ ನಂತರ ಸುಸ್ತಾಗಿ ಸಂಜೆ ಮನೆಗೆ ಹೋಗಬೇಕೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ವಿಪರೀತ ಜನಸಂದಣಿಯಿಂದಾಗಿ ಒಂದೆರಡು ಬಸ್ಸುಗಳು ನಮ್ಮ ನಿಲ್ದಾಣದಲ್ಲಿ ನಿಲ್ಲಿಸದೇ ಹಾಗೇ ಹೊರಟು ಹೋದವು. ಆದಾದ ಕೆಲವು ಸಮಯದ ನಂತರ ಬಂದ ಮೂರನೇ ಬಸ್ಸಿನಲ್ಲಿಯೂ ಸಾಕಷ್ಟು ಜನರಿದ್ದರು. ಅದಾಗಲೇ ಸಾಕಷ್ಟು ಸಮಯವಾಗಿದ್ದರಿಂದ ಮಾತ್ತು ಬಸ್ಸಿಗೆ ಕಾದೂ ಕಾದೂ ಸುಸ್ತಾದ ಪರಿಣಾಮ ವಿಧಿ ಇಲ್ಲದೇ ಹಾಗೂ ಹೀಗೂ ಮಾಡಿಕೊಂಡು ಬಸ್ಸನ್ನೇರಿ ಒಂದು ಕಂಬಕ್ಕೆ ಒರಗಿ ನಿಂತು ಕೊಂಡೆ.

bus3

ಅಲ್ಲಿಂದ ಸ್ವಲ್ಪ ದೂರ ಪ್ರಯಾಣಿಸುತ್ತಲೇ ನಿಲ್ದಾಣವೊಂದರಲ್ಲಿ ಬಸ್ ನಿಂತಾಗ ಅದಾಗಲೇ ಸೀಟಿನಲ್ಲಿ ಆಸೀನರಾಗಿದ್ದ ಪ್ರಯಾಣಿಕರೊಬ್ಬರು ಬಸ್ಸಿನಿಂದ ಇಳಿದಾಗ ಆ ಖಾಲಿ ಸೀಟಿನ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರು ಆ ಸೀಟಿನಲ್ಲಿ ಕುಳಿತುಕೊಳ್ಳದೇ ಅವರ ಪಕ್ಕದಲ್ಲೇ ಕಂಬಕ್ಕೆ ಒರಗಿ ನಿಂತಿದ್ದ ನನಗೆ ಕುಳಿತುಕೊಳ್ಳಲು ಹೇಳಿದಾಗ ನನಗೆ ಆಶ್ಚರ್ಯ ಮತ್ತು ಮುಜುಗರವಾಯಿತಾದರೂ, ಬಹುಶಃ ಅವರು ಮುಂದಿನ ನಿಲ್ಡಾಣದಲ್ಲಿ ಇಳಿಯ ಬಹುದಾದ ಕಾರಣ ನನಗೆ ಸೀಟ್ ನೀಡುತ್ತಿದ್ದಾರೆ ಎಂದು ಭಾವಿಸಿ ನಾನು ಆ ಸೀಟಿನಲ್ಲಿ ಕುಳಿತು, ಧನ್ಯತಾ ಭಾವದಿಂದ ಅವರಿಗೆ ಧನ್ಯವಾದಗಳನ್ನು ಹೇಳಿದೆ. ಅದಕ್ಕೆ ಅವರೂ ಸಹಾ ಸಣ್ಣದಾಗಿ ನಗುತ್ತಲೇ, ಪ್ರತಿವಂದಿಸಿ ಮುಂದಿನ ಸೀಟಿನೆಡೆಗೆ ನಿಂತು ಕೊಂಡರು. ನಾನೂ ಉಸ್ಸಪ್ಪಾ ಎಂದು ಉಸಿರು ಬಿಡುತ್ತಾ, ವಾವ್! ಇದೇ ಅಲ್ಲವೇ ನಮ್ಮ ಸಂಸ್ಕೃತಿ. ಈಗಿನ ಕಾಲದಲ್ಲೂ ಇಂತಹವರು ಇರೋದರಿಂದಲೇ ಈ ದೇಶದಲ್ಲಿ ಇನ್ನೂ ಚೆನ್ನಾಗಿ ಮಳೆ ಬೆಳೆ ಆಗ್ತಾ ಇರೋದು ಎಂದು ಮನಸ್ಸಿನಲ್ಲೇ ಯೋಚಿಸತೊಡಗಿದೆ.

bus1

ಮುಂದಿನ ನಿಲ್ದಾಣದಲ್ಲಿಯೂ ಸಹಾ ಅವರು ನಿಂತಿದ್ದ ಸೀಟಿನ ಪಕ್ಕದ ವ್ಯಕ್ತಿಯೊಬ್ಬರು ಬಸ್ಸಿನಿಂದ ಇಳಿದಾಗ, ಯಥಾ ಪ್ರಕಾರ ಆ ವ್ಯಕ್ತಿ ಆ ಖಾಲೀ ಸೀಟಿನಲ್ಲಿ ಕೂರದೇ ತಮ್ಮ ಸ್ಥಾನವನ್ನು ಇನ್ನೊಬ್ಬರಿಗೆ ನೀಡಿದರು. ಹೀಗೆ ಇಡೀ ಪ್ರಯಾಣದಲ್ಲಿ ಮೂರ್ನಾಲ್ಕು ಬಾರಿ ಇದೇ ರೀತಿ ಪುನರಾವರ್ತನೆ ಆದಾಗ ನನಗೆ ಬಹಳ ಕುತೂಹಲವೆನಿಸಿ ಆ ವ್ಯಕ್ತಿಯನ್ನು ಸೂಕ್ಶ್ಮವಾಗಿ ಗಮನಿಸಗೊಡಗಿದೆ.

ಆತ ಗರಿಗೆದರಿದ ಕೂದಲುಗಳು, ಮಾಸಿದ ಬಟ್ಟೆ ಧರಿಸಿಕೊಂಡು, ಸಾಧಾರಣವಾದ ಚಪ್ಪಲಿಯನ್ನು ಕಾಲಿಗೆ ಧರಿಸಿರುವ ಸಾಮಾನ್ಯ ಕೆಲಸಗಾರನಂತೆ ಕಾಣುತ್ತಿದ್ದು ಅವರೂ ಸಹಾ ನನ್ನಂತೆಯೇ ಯಾವುದೋ ಕಛೇರಿಯಲ್ಲಿ ಕಷ್ಟು ಪಟ್ಟು ದುಡಿದು ಬರುತ್ತಿರುವವ ಹಾಗೆ ಕಂಡರು. ಬಸ್ ಕೊನೆಯ ನಿಲ್ದಾಣದಲ್ಲಿ ನಿಂತಾಗಾ ನಾವೆಲ್ಲರೂ ಒಟ್ಟಿಗೇ ಇಳಿಯಲೇ ಬೇಕಾದಾಗ, ಕುತೂಹಲ ತಡೆಯಲಾರದೇ, ಆ ವ್ಯಕ್ತಿಯನ್ನು ಮಾತನಾಡಿಸಿಯೇ ಬಿಟ್ಟೆ.

bus5

ನೀವು ಪ್ರತೀ ಬಾರಿಯೂ ನಿಮಗೆ ಸಿಕ್ಕ ಖಾಲಿ ಸೀಟನ್ನು ಮತ್ತೊಬ್ಬರಿಗೆ ಕೊಡುತ್ತಾ ಇದ್ದದ್ದನ್ನು ನಾನು ಸೂಕ್ಷ್ಮವಾಗಿ ಗಮನಿಸಿದೆ. ಆ ರೀತಿಯಾಗಿ ಮಾಡಲು ಕಾರಣವೇನು? ಎಂದು ಕೇಳಿದಾಗ ಅವರ ಉತ್ತರ ನನಗೆ ಆಶ್ಚರ್ಯ ತಂದಿತಲ್ಲದೇ ಮೂಕವಿಸ್ಮಿತನನ್ನಾಗಿ ಮಾಡಿಸಿತು ಎಂದರೂ ಅಚ್ಚರಿಯೇನಲ್ಲ.

ನೋಡೀ ಸ್ವಾಮೀ, ನಾನು ಬಹಳಷ್ಟು ಬಡ ಕುಟುಂಬದಲ್ಲಿ ಜನಿಸಿದ ಕಾರಣ, ಚಿಕ್ಕವಯಸ್ಸಿನಲ್ಲಿ ಹೆಚ್ಚು ಓದಲು ಆಗಲಿಲ್ಲ. ಹಾಗಾಗಿ ನನಗೆ ನಿಮ್ಮಷ್ಟು ವಿದ್ಯಾ ಬುದ್ಧಿ ಇಲ್ಲದ ಕಾರಣ ಸಣ್ಣ ಕಾರ್ಖಾನೆಯೊಂದರೆಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ಬರುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟವಾಗಿರುವಾಗ ನನಗೆ ಯಾರಿಗೂ ಹಣದ ರೂಪದಲ್ಲಿ ಏನನ್ನೂ ಕೊಡಲು ಸಾಧ್ಯವಿಲ್ಲವಲ್ಲಾ ಎಂದು ಬೇಸರವಾಗುತ್ತಿತ್ತು.

bus4

ಆದರೆ, ದಿನವಿಡೀ ದುಡಿದ ನಂತರವೂ ಇನ್ನೂ ಹೆಚ್ಚು ಕಾಲ ನಿಂತು ಕೊಳ್ಳುವ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದೊಮ್ಮೆ ಇದೇ ರೀತಿಯಾಗಿ ಬಸ್ಸಿನಲ್ಲಿ ಸೀಟ್ ಸಿಗದೇ ನಿಂತಿದ್ದಾಗ ಖಾಲಿಯಾದ ಸೀಟನ್ನು ಪಕ್ಕದಲ್ಲಿ ಬಹಳ ಆಯಾಸವಾಗಿ ಕಾಣುತ್ತಿದ್ದಂತಹ ವ್ಯಕ್ತಿಯೊಬ್ಬರಿಗೆ ಬಿಟ್ಟು ಕೊಟ್ಟಾಗ ಅವರು ಧನ್ಯತಾ ಪೂರ್ವಕವಾಗಿ ನನಗೆ ಧನ್ಯವಾದಗಳನ್ನು ಹೇಳಿದಾಗ ಆ ಕ್ಷಣದಲ್ಲಿ ನಾನು ಅವರಿಗೆ ಏನನ್ನೋ ಕೊಟ್ಟೇ ಎನ್ನುವ ತೃಪ್ತಿ ನನ್ನ ಮನದಲ್ಲಿ ಮೊದಲ ಬಾರಿಗೆ ಮೂಡಿದ್ದಲ್ಲದೇ ಮುಖದಲ್ಲಿಯೂ ನನಗೇ ಅರಿವಿಲ್ಲದಂತೆಯೇ ಮಂದಹಾಸ ಮೂಡಿದ್ದಲ್ಲದೇ ನಾನು ಮತ್ತಷ್ಟು ದೂರ ನಿಲ್ಲಬಲ್ಲೆ ಎಂಬ ಆತ್ಮ ಸ್ಥೈರ್ಯವನ್ನು ತಂದು ಕೊಟ್ಟಿತು. ಒಂದೆರಡು ದಿನ ಇದೇ ರೀತಿಯಾಗಿ ಮಾಡಿದಾಗ ನನಗೆ ಮತ್ತಷ್ಟು ಮಗದಷ್ಟು ತೃಪ್ತಿ ಸಿಗಲು ಆರಂಭಿಸಿದಾಗ, ಇದನ್ನೇ ಪ್ರತಿ ದಿನವೂ ಮುಂದುವರೆಸಿಕೊಂಡು ಹೊಗಬೇಕೆಂದು ನಿರ್ಧರಿಸಿ ಸುಮಾರು ವರ್ಷಗಳಿಂದ ಪ್ರತಿ ದಿನವೂ ನಾನು ಈ ಕೆಲಸವನ್ನು ಮಾಡುವ ಮೂಲಕ ಸಾವಿರಾರು ಜನರ ಶುಭಹಾರೈಕೆಗಳನ್ನು ಗಳಿಸಿರುವ ಖುಷಿ ಇದೆ ಎಂದಾಗ ಅವರ ಮುಖದಲ್ಲಿ ಆದ ಬದಲಾವಣೆ ನಿಜಕ್ಕೂ ಅನನ್ಯ ಮತ್ತು ಅವರ್ಣನೀಯ.

ಕೈ ತುಂಬಾ ಹಣ, ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಉಳಿತಾಯ, ಸುಂದರವಾದ ಬಣ್ಣ ಬಣ್ಣ ಬಟ್ಟೆಗಳನ್ನು ಧರಿಸಿ, ದುಬಾರಿಯಾದ ಗ್ಯಾಜೆಟ್‌ಗಳನ್ನು ಧರಿಸಿಕೊಂಡು ಐಷಾರಾಮ್ಯವಾಗಿ ಇರುವವರೋ ಇಲ್ಲವೇ ಹತ್ತು ಹಲವಾರು ಪದವಿಗಳನ್ನು ಪಡೆಯುವ ಮೂಲಕ ಶ್ರೀಮಂತಿಕೆಯಿಂದ ಸಂತೋಷದಿಂದ ಇರಬಹುದು ಎಂದು ಭಾವಿಸುವವರೇ ಹೆಚ್ಚಾಗಿರುವಾಗ, ಪ್ರತಿ ದಿನವೂ ಯಾವುದೇ ಖರ್ಚಿಲ್ಲದೇ ಮತ್ತೊಬ್ಬರನ್ನು ಸಂತೋಷವಾಗಿರಲು ಹೃದಯವೈಶಾಲ್ಯತೆಯಿಂದ ಮಾಡುವ ಈ ಒಂದು ಸಣ್ಣ ಕ್ರಿಯೆಯೇ ನಿಜಕ್ಕೂ ಹೆಚ್ಚಾಗಿ ಶ್ರೀಮಂತಿಕೆಯಾಗಿ ಕಾಣಿಸುತ್ತದೆ ಎಂದೆನಿಸಿದ್ದು ಸುಳ್ಳಲ್ಲ.

ಈ ವ್ಯಕ್ತಿಯ ಈ ರೀತಿಯ ನಿಸ್ವಾರ್ಥ ಸೇವೆ, ತ್ರೇತಾಯುಗದಲ್ಲಿ ರಾಮನಿಗಾಗಿ ಕಾಯುತ್ತಿದ್ದ ಶಬರಿ ತನ್ನ ಎಂಜಿಲು ಹಣ್ಣುಗಳನ್ನು ಕೊಟ್ಟು ರಾಮನ ಹಸಿವನ್ನು ನಿವಾರಿದ್ದಳು.ಬಾಲ್ಯದ ಗೆಳೆಯ ಶ್ರೀಕೃಷ್ಣನ ಬಳಿ ಸಹಾಯ ಕೇಳಿರೆಂದು ಹೆಂಡತಿಯ ಬಲವಂತದಿಂದ ಶಲ್ಯದಲ್ಲಿ ಮೂರು ಹಿಡಿ ಅವಲಕ್ಕಿ ಕಟ್ಟಿಕೊಂಡು ಶ್ರೀಕೃಷ್ಣನ ಮನೆಗೆ ಬಂದು ಅವನ ಆದರಾತಿಥ್ಯಕ್ಕೆ ಮಾರುಹೋಗಿ ಏನನ್ನೂ ಕೇಳದೇ ಹಿಂದಿರುಗಿದ ಕುಚೇಲನನ್ನು ನೆನಪಿಸುವಂತಾಯಿತು.

ಯಾವುದೇ ಪ್ರಶಂಸೆ ಅಥವಾ ಕೃತಜ್ಞತೆಯ ರೂಪದಲ್ಲಿ ಪ್ರತಿ ನಿರೀಕ್ಷೆಯೊಂದಿಗೆ ಮಾಡುವ ಸಹಾಯ ಅಥವಾ ನೀಡುವ ಉಡುಗೊರೆ ಅದು ಸಹಾಯ ಅಥವಾ ಉಡುಗೊರೆ ಎನಿಸಿಕೊಳ್ಳದೇ ಕೊಡು/ತೆಗೆದುಕೋ ಎನ್ನುವ ಶುದ್ಧ ವ್ಯಾಪಾರವಾಗುತ್ತದೆ. ನಮಗೆ ಎಲ್ಲವನ್ನು ಭಗವಂತನೇ ಕೊಟ್ಟಿರುವುದು ಅವನ ಮುಂದೆ ನಮ್ಮದೇನೂ ಇಲ್ಲ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದಿರುವೆವು ಸುಮ್ಮನೆ ಎಂಬ ಮಾತು ತಿಳಿದಿದ್ದರೂ, ಇಂದಿನವರು ದೇವಾಲಯದಲ್ಲಿ ಒಂದು ಗಂಟೆಯನ್ನೋ, ಇಲ್ಲವೇ ವಿದ್ಯುತ್ ದೀಪವನ್ನೂ ಇಲ್ಲವೇ ಫ್ಯಾನ್ ಕೊಟ್ಟು ಅದರ ಮೇಲೆ ಅಷ್ಟು ದೊಡ್ಡದಾಗಿ ದಾನಿಗಳು ಎಂದು ಬರೆಸಿಕೊಳ್ಳುತ್ತಾರೆ. ಮದುವೆ ಮುಂಜಿ, ನಾಮಕರಣ, ಹುಟ್ಟಿದ ಹಬ್ಬಗಳಿಗೆ ಹೋಗಿ ಸಣ್ಣದಾದ ಉಡುಗೊರೆಯೊಂದನ್ನು ನೀಡಿ ಹೊಟ್ಟೆ ಬಿರಿಯುವಷ್ಟು ತಿನ್ನುವುದಲ್ಲದೇ, ಕಾರ್ಯಕ್ರಮಕ್ಕೆ ಬಂದಿದ್ದಕ್ಕಾಗಿ ಪ್ರತಿ ಉಡುಗೊರೆಯನ್ನಾಗಿ (ರಿಟನ್ ಗಿಫ್ಟ್) ಏನು ಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟು ಕೊಳ್ಳುವುದನ್ನು ನೋಡಿದಾಗ ಈ ಕೆಳಗಿನ ಶುಭಾಷಿತ ನೆನಪಾಗುತ್ತದೆ.

ಪರೋಪಕಾರಾಯ ಫಲಂತಿ ವೃಕ್ಷಾ:, ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ:, ಪರೋಪಕಾರಾರ್ಥಮಿದಂ ಶರೀರಂ ||

ಪರೋಪಕಾರಕ್ಕಾಗಿಯೇ ವೃಕ್ಷಗಳು ಫಲವನ್ನು ನೀಡುತ್ತದೆ. ನದಿಗಳು ಹರಿಯುತ್ತವೆ, ಹಸುವು ಹಾಲನ್ನು ಕೊಡುತ್ತದೆ. ಅದರಂತೆ ಪರೋಪಕಾರಕ್ಕಾಗಿಯೇ ನಮ್ಮೀ ಶರೀರವಿರುವುದು ಎನ್ನುವುದು ಈ ಶುಭಾಷಿತದ ಅರ್ಥ. ಇನ್ನೂ ಸರಳವಾಗಿ ಹೇಳಬೇಕೆಂದರೆ ನಾವು ಮತ್ತೊಬ್ಬರಿಗೆ ಬಲಗೈಯ್ಯಲ್ಲಿ ಕೊಟ್ಟಿದ್ದು ನಮ್ಮ ಎಡಗೈಗೂ ತಿಳಿಯಬಾರದು. ನಾವು ಮಾಡುವ ಪ್ರತಿಯೊಂದು ಕೆಲಸ-ಕಾರ್ಯ, ದಾನ-ಧರ್ಮದಲ್ಲಿ ಮತ್ತೊಬ್ಬರಿಂದ ಯಾವುದೇ ನಿರೀಕ್ಷೆ ಮಾಡದೇ ನಿಸ್ವಾರ್ಥವಾಗಿ ಈ ರೀತಿಯಾಗಿ ಅಗತ್ಯ ಇರುವವರಿಗೆ ಹೃದಯ ಶ್ರೀಮಂತಿಕೆಯಿಂದ ಸಹಾಯ ಮಾಡುವುದೇ ನಿಜವಾದ ಶ್ರೀಮಂತಿಕೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ವಾಟ್ಸಾಪ್ ನಲ್ಲಿ ಒದಿದ ಆಂಗ್ಲ ಸಂದೇಶವೊಂದರ ಭಾವಾನುಭವಾಗಿದೆ.

ಸಮಸ್ಯೆಗಳಿಗೆ ಸಾವೇ ಪರಿಹಾರವೇ?

ರಮೇಶ ಹಳ್ಳಿಯಲ್ಲಿ  ತಕ್ಕ ಮಟ್ಟಿಗೆ ಓದಿ ಬೆಂಗಳೂರಿಗೆ ಬಂದು ಕೆಲಸ ಗಿಟ್ಟಿಸಿಕೊಂಡು ಜೀವನ ನಡೆಸ ತೊಡಗಿದರು.  ಆವರದ್ದು ಸಂಪ್ರದಾಯಸ್ತ ಒಟ್ಟು ಕುಟಂಬವಾದ್ದರಿಂದ ಅಕ್ಕ ತಂಗಿಯರಿಗೆಲ್ಲ ಮದುವೆ ಮಾಡಿ ತಮ್ಮಂದಿರಿಗೆ ಒಂದು ದಾರಿ ತೋರಿಸಿ ಮದುವೆ ಆಗುವಷ್ಟರಲ್ಲಿ ಅವರ ಮದುವೆಯ ವಯಸ್ಸು ಮೀರಿದ್ದರೂ ಮದುವೆ ಆಗಿ ಆವರ ಸುಖಃ ದಾಂಪತ್ಯದ ಫಲವಾಗಿ  ವರ್ಷದೊಳಗೇ ಹೆಣ್ಣು ಮಗುವಿನ ಜನನವಾಗಿ ಮಗಳಿಗೆ ಆಶಾ ಎಂದು ಹೆಸರಿಟ್ಟು ಮುದ್ದಿನಿಂದ ಸಾಕುತ್ತಿದ್ದರು.

ಹೆಣ್ಣು ಗಂಡುಗಳ ನಡುವೆ ಬೇಧವಿಲ್ಲ  ಎಂದು ಎಷ್ಟೇ ಹೇಳಿದರೂ ಇಂದಿಗೂ ನಮ್ಮ ದೇಶದಲ್ಲಿ ಪುರುಷ ಪ್ರಧಾನ ಸಮಾಜವೇ ಹೆಚ್ಚಾಗಿರುವ ಕಾರಣ, ರಮೇಶ್ ಅವರ ಪೋಷಕರು ವಂಶೋದ್ಧಾರಕ್ಕೆ ಒಬ್ಬ ಗಂಡು ಮಗುವಾಗಲೀ ಎಂದು ಹಪಾಹಪಿಸುತ್ತಿದ್ದರು.  ವಯಸ್ಸಾದ ಮೇಲೆ ಮದುವೆಯಾಗಿದೆ. ಮೇಲಾಗಿ ಈಗಾಗಲೇ ಮಗಳೊಬ್ಬಳಿದ್ದಾಳೆ. ಅವಳನ್ನು ಸಾಕಿ ಸಲಹಿ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ಕಡೆ ಮದುವೆ ಮಾಡಿಕೊಟ್ಟರೆ ಸಾಕು ಎಂದು ಎಷ್ಟೇ ಹೇಳಿದರೂ ಒಪ್ಪದ ಪೋಷಕರ ಹಾರೈಕೆಯ ಫಲವೋ ದೇವರ ಆಶೀರ್ವಾದವೋ ಏನೋ? ಅಂತೂ ಇಂತು ತಡ ವಯಸ್ಸಿನಲ್ಲಿಯೂ ರಮೇಶರಿಗೆ ಗಂಡು ಮಗುವಾಗಿ, ಆ ಮಗುವಿಗೆ ಕಿರಣ ಎಂದು ಹೆಸರಿಡುತ್ತಾರೆ.  ಅಕ್ಕ ಮತ್ತು ತಮ್ಮಂದಿರ ನಡುವೆ ಸುಮಾರು ವರ್ಷಗಳ ಅಂತರವಿದ್ದರೂ ರಮೇಶ್ ದಂಪತಿಗಳು ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯಿಂದ ನಮ್ಮ ಆಶಾ ಮತ್ತು ಕಿರಣರೇ ನಮ್ಮ  ಬಾಳಿನ ಆಶಾಕಿರಣ. ಅವರೇ ನಮ್ಮ ಮುಂದಿನ ಬಾಳಿನ ದೀಪ ಎಂದು  ಭಾವಿಸಿದ್ದರು.

ಮಗಳು ಪಿಯೂಸಿ ಓದಿ ಮುಗಿಸುವಷ್ಟರಲ್ಲಿಯೇ ಸಾಲ ಸೋಲ ಮಾಡಿ ತಮ್ಮ ಸಂಬಂಧೀಕರ ಹುಡುಗನಿಗೇ ಮದುವೆ ಮಾಡಿದಾಗ ಕಿರಣ ಇನ್ನೂ ಪ್ರೈಮರಿಯಲ್ಲಿ ಓದುತ್ತಿದ್ದ.  ಅಕ್ಕನ ಮದುವೆಯಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದ. ಕಾಲ ಉರುಳಿದಂತೆಯೇ ಕಿರಣ ಕೂಡ ಪದವಿ ಮುಗಿಸಿ ಅಲ್ಲೇ ಒಂದು ಖಾಸಗಿ ಕಂಪನಿಯಲ್ಲಿ ಸೇಲ್ಸ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಗಿಟ್ಟಿಸಿಕೊಳ್ಳುವಷ್ಟರಲ್ಲಿ ರಮೇಶ್ ಅವರು  ತಮ್ಮ ಕೆಲಸದಿಂದ ನಿವೃತ್ತಿ ಹೊಂದಿ ಉಳಿಸಿದ್ದ ಹಣದಲ್ಲಿ ಜೀವನ ನಡೆಸುತ್ತಿದ್ದರು.  ದುಡಿಯುವ ಮಗನ ಸಂಪಾದನೆಯಲ್ಲಿಯೇ ಜೀವನ ಹಾಗೂ ಹೀಗೂ ಸಾಗುತ್ತಲಿತ್ತು.  ಮಗನಿಗೆ ಮದುವೆ ವಯಸ್ಸಾದಾಗ  ಎಲ್ಲಾ ತಂದೆ ತಾಯಿಯರಂತೆಯೇ ರಮೇಶ್ ದಂಪತಿಗಳೂ ಮಗನಿಗೆ ಹೆಣ್ಣು ನೋಡ ತೊಡಗಿದರು. ಬಹಳಷ್ಟು ಹೆಣ್ಣುಗಳು ಇವರ ಸಂಬಂಧವನ್ನು ಒಪ್ಪದಿದ್ದದರೆ, ಹಾಗೆ ಒಪ್ಪಿದ್ದ ಸಂಬಂಧವನ್ನು ಕಿರಣ  ಯಾವುದೋ ಕಂಟು ನೆಪವೊಡ್ಡಿ  ಸಂಬಂಧ ಕೆಡಿಸಿ ಬಿಡುತ್ತಿದ್ದ.  ಮಗನ ಈ ರೀತಿಯ ನಡವಳಿಕೆಯಿಂದ ಬೇಸತ್ತ ತಂದೆ ತಾಯಿಯರು ಕಾರಣ ಏನೆಂದು ಕೇಳಿದರೂ,  ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ಎಂದರೂ,  ಕಿರಣ ಸರಿಯಾದ ಕಾರಣ ತಿಳಿಸಿಸದೆ ಬಾಯಿ ಬಡಿದು ಬಿಡುತ್ತಿದ್ದ.  ಸರಿ ಕಂಕಣ ಕೂಡಿ ಬಂದಾಗ ಎಲ್ಲವೂ ಸರಿ ಹೋಗುತ್ತದೆ ಎಂದು ಸುಮ್ಮನಾಗಿದ್ದರು.

ಅದೊಂದು ದಿನ ಕೆಲಕ್ಕೆ ಹೋಗಿದ್ದ ಮಗ ಎಷ್ಟು ಹೊತ್ತಾದರೂ ಬರಲಿಲ್ಲವಾದ್ದರಿಂದ ರಮೇಶ್ ದಂಪತಿಗಳಿಗೆ ಆತಂಕವಾಗಿ ಕಿರಣನ ಮೊಬೈಲ್ಗೆ ಕರೆ ಮಾಡಿದರೆ ಮೊಬೈಲ್ ಸ್ವಿಜ್ ಆಫ್ ಎಂಬ ಸಂದೇಶ ಬರುತ್ತಿತ್ತು. ಬಹುಷಃ ಮೊಬೈಲ್ ಬ್ಯಾಟರಿ ಖಾಲಿಯಾಗಿರಬಹುದು ಎಂದು ಸ್ವಲ್ಪ ಹೊತ್ತು ನೋಡಿದ ನಂತರ ಮಗನ ಆಗಮನದ ಸುಳಿವೇ ಇಲ್ಲದ ಕಾರಣ ಅವನ ಸ್ನೇಹಿತನಿಗೆ ಕರೆ ಮಾಡಿದಾಗ ಕಿರಣ ಇಂದು ಕೆಲಸಕ್ಕೇ ಹೋಗಿಲ್ಲ  ಎಂಬ ವಿಚಾರ ಕೇಳಿ ಗಾಬರಿಯಾಗಿ ಕೂಡಲೇ ಪೋಲಿಸ್ ಸ್ಟೇಶನ್ನಿಗೆ ಹೋಗಿ ಮಗ ಕಾಣೆಯಾಗಿರುವ ಬಗ್ಗೆ ದೂರು ದಾಖಲಾತಿಸಿದರು. ಸರಿ ಹೊತ್ತಿನಲ್ಲಿ ಹೋಗಿದ್ದ ರಮೇಶ್ ಅವರಿಗೆ ಪೋಲೀಸರು ಮಗನ ಹವ್ಯಾಸ, ಸ್ನೇಹಿತರು ಕೆಲಸ ಮಾಡುತ್ತಿದ್ದ ಕಂಪನಿ ಎಲ್ಲವನ್ನೂ ವಿಚಾರಿಸಿ ಯಾವುದರಲ್ಲೂ ಅನುಮಾನ ಬಾರದಿದ್ದ ಕಾರಣ  ವಯಸ್ಸಿಗೆ ಬಂದ ಹುಡುಗನಿಗೆ ಏನೂ ಆಗಿರುವುದಿಲ್ಲ  ಒಂದೆರಡು ದಿನಗಳಲ್ಲಿ ಬಂದು ಬಿಡುತ್ತಾನೆ. ನಾವೂ ಕೂಡ ಈ ವಿಷಯವನ್ನು ಎಲ್ಲಾ ಸ್ಟೇಷನ್ಗಳಿಗೆ ಕಳಿಹಿಸಿ, ಏನಾದರೂ ವಿಷಯ ತಿಳಿದಲ್ಲಿ ತಿಳಿಸುತ್ತೇವೆ ಎಂದು ಹೇಳಿ ಕಳುಹಿಸಿದರು. ರಮೇಶ್ ಮತ್ತು ಕಿರಣನ ಗೆಳೆಯ ಭಾರವಾದ ಹೃದಯದಿಂದ ಮನೆಗೆ ಬಂದರೂ ಆ ರಾತ್ರಿ ಇಡೀ ರಮೇಶರಿಗೆ ನಿದ್ದೆಯೇ ಬರಲಿಲ್ಲ.

ಮಾರನೇಯದಿನ ಮಗ ಕೆಲಸ ಮಾಡುತ್ತಿದ್ದ ಕಂಪನಿಗೂ ಹೋಗಿ ವಿಚಾರಿಸಿದರೆ. ಅಲ್ಲೂ ಯಾರೂ ಕೂಡಾ ಆತನ ನಡತೆಯ ಬಗ್ಗೆ ಯಾವುದೇ ರೀತಿಯ ಅನುಮಾನ ವ್ಯಕ್ತಪಡಿಸಲ್ಲಿಲ್ಲವಾದರೂ ಇತ್ತೀಚೆಗೆ ಕಿರಣ ಎಲ್ಲರ ಬಳಿಯಲ್ಲೂ ತಂದೆಯವರಿಗೆ ಆರೋಗ್ಯ ಸರಿಯಿಲ್ಲ ಎಂಬ ನೆಪ ಹೇಳಿ ಆಗ್ಗಾಗೆ ರಜೆ ಹಾಕುತ್ತಿದ್ದ ಮತ್ತು ಎಲ್ಲರ ಬಳಿಯಲ್ಲೂ  ಕೈ ಸಾಲ ಮಾಡಿದ್ದ ಎಂಬ ವಿಷಯ ತಿಳಿದು ರಮೇಶ್ ಅವರಿಗೆ ಮತ್ತಷ್ಟೂ ಗಾಭರಿಯಾಗ ತೊಡಗಿತು. ಸಂಭಾವಿತ ಹುಡುಗ  ಏಕಾ ಏಕಿ ಮನೆಯಿಂದ ಈ ರೀತಿಯಾಗಿ ಎರಡು ದಿನಗಳಿಂದ ಹೇಗೆ ನಾಪತ್ತೆಯಾಗಿದ್ದಾನೆ ಎಂದು ಯೋಚಿಸುತ್ತಾ ದೂರದ ತಮ್ಮ ಸಂಬಂಧೀಕರ ಎಲ್ಲಾ ಮನೆಗಳಿಗೂ ಕರೆ ಮಾಡಿ ಕಿರಣ ನಿಮ್ಮ ಮನೆಗೆ ಬಂದಿದ್ದಾನಾ? ಅಥವಾ ಕಿರಣನ ಬಗ್ಗೆ ನಿಮಗೇನಾದರೂ ವಿಷಯ ತಿಳಿದಿದೆಯೇ ಎಂದು ವಿಚಾರಿಸುವಷ್ಟರಲ್ಲಿಯೇ ಪೋಲಿಸರಿಂದ ರಮೇಶ್ ಅವರಿಗೆ ಕರೆ ಬಂದು ಈ ಕೂಡಲೇ ಸ್ಟೇಷನ್ನಿಗೆ ಬರಲು ಹೇಳಿದರು.  ರಮೇಶ ಅವರು ಸ್ಟೇಷನ್ನಿಗೆ ಹೋದಾಗ, ಕಾರವಾರದಲ್ಲಿ ನಿಮಗೆ ಯಾರಾದರೂ ಸಂಬಂಧೀಕರು ಇದ್ದಾರೆಯೇ ಅಥವಾ ಅವನ ಕೆಲಸದ ಮೇಲೆ ಕಾರವಾರಕ್ಕೇನಾದರೂ ಹೋಗುತ್ತಿದ್ದನಾ ನಿಮ್ಮ ಮಗ ಎಂದು ವಿಚಾರಿಸಿದರು. ಕಾರವಾರದಲ್ಲಿ ನಮ್ಮ ಯಾರೂ ಸಂಬಂಧೀಕರು ಇಲ್ಲ ಮತ್ತು ಅವನು ಹೊರ ಊರಿಗೆ ಆಗಾಗ ಕೆಲಸದ ಮೇಲೆ ಹೋಗುತ್ತಿದ್ದನಾದರೂ ಮನೆಯವರಿಗೆ ತಿಳಿಸಿಯೇ ಹೋಗುತ್ತಿದ್ದ  ಎಂದು ತಿಳಿಸಿದರು.   ಪೋಲಿಸರು ಕಿರಣನ ಮೊಬೈಲ್ ಕರೆಗಳನ್ನೆಲ್ಲಾ ಟ್ರಾಕ್ ಮಾಡಿ ಅವನ ಕಡೆಯ ಮೂರ್ಲ್ನಾಲ್ಕು ಕರೆಗಳು ಕಾರವಾರದಿಂದಲೇ ಬಂದು ಆ ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅನುಮಾನ ಗೊಂಡ ಪೋಲಿಸರು ಕಾರವಾರದ ಠಾಣೆಗೆ ಕರೆಮಾಡಿ ಅಲ್ಲಿ  ಕಿರಣನ ಬಗ್ಗೆ ಏನಾದರೂ ವಿಷಯ ತಿಳಿದಿದೆಯಾ ಎಂದು ವಿಚಾರಿಸಿದಾಗ ಅಂದು ಬೆಳಿಗ್ಗೆಯೇ ಅಲ್ಲಿಯ ಸ್ಥಳಿಯ ಹೋಟೆಲ್ ಒಂದರಲ್ಲಿ ಒಬ್ಬ ಅಪರಿಚಿತ ತರುಣ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಸಿದರು. ಕೂಡಲೇ ಆ ವ್ಯಕ್ತಿಯ ಫೋಟೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಇಲ್ಲಿಯ ಠಾಣೆಗೆ ಕಳುಹಿಸಿದಾಗ  ಮೃತನ ದೇಹ ಕಿರಣನಿಗೆ ಹೋಲುತ್ತಿದ್ದರಿಂದ ಆ ಕೂಡಲೇ ರಮೇಶ್ ಮತ್ತು ಕಿರಣನ ಗೆಳೆಯನ ಸಮೇತ ಕಾರವಾರಕ್ಕೆ ಹೋಗಿ ನೋಡಿದರೆ, ಆ ಮೃತ ದೇಹ ಕಿರಣನದ್ದೇ ಆಗಿತ್ತು .

ಬಯಸೀ ಬಯಸೀ ವಂಶೋದ್ಧಾರಕ ಬೇಕು ಎಂದು ದೇವರಲ್ಲಿ ಕಾಡಿ ಬೇಡಿ ಪಡೆದಿದ್ದ ಮಗ,  ಇಂದು ಕಣ್ಣ ಮುಂದೆಯೇ ಮೃತನಾಗಿರುವುದನ್ನು ನೋಡಿದ ರಮೇಶ್ ಅವರಿಗೆ ಆಕಾಶವೇ ಕಳಚಿ ಬಿದ್ದಂತಾಗಿ ಕುಸಿದು ಬಿದ್ದರು. ಕೂಡಲೇ ಅವರಿಗೆ ನೀರು ಚುಮುಕಿಸಿ ಸ್ವಲ್ಪ ನೀರು ಕುಡಿಸಿ ಸಮಾಧಾನ ಪಡಿಸಿ ಪೋಲೀಸರು ಮಹಜರು ಪ್ರಾರಂಭಿಸಿದಾಗ, ಅವನ ಜೀಬಿನಲ್ಲಿ ಸ್ವಹಸ್ತದಿಂದ ಬರೆದಿದ್ದ ಪತ್ರದಿಂದ  ತಿಳಿದು ಬಂದ ವಿಷಯವೇನೆಂದರೆ, ಸೇಲ್ಸ್ ಕೆಲಸ ಮೇಲೆ  ಬೇರೆ ಬೇರೆ ಕಂಪನಿಗಳಿಗೆ ಹೋಗುತ್ತಿದ್ದಾಗ ಒಂದು ಕಡೆ ಅವನಿಗೆ ಒಂದು ಹುಡುಗಿ ಪರಿಚಯವಾಗಿ ಅದು ಸ್ನೇಹದಿಂದ ಪ್ರೀತಿಗೆ ತಿರುಗಿತ್ತು.  ಕೆಲಸಕ್ಕೆ ರಜೆ ಹಾಕಿ ಮನೆಯವರಿಗೆ ತಿಳಿಸಿಸದೆ ಆಗ್ಗಾಗೆ  ಕೆಲ ದಿನಗಳು ಆಕೆಯೊಂದಿಗೆ  ಸುತ್ತಾಡುತ್ತಿದ್ದ ಮತ್ತು ಅವಳಿಗಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದ.   ಆಕೆ ಅನ್ಯ ಕೋಮಿನವಳು ಎಂದು ಗೊತ್ತಿದ್ದರೂ  ನೋಡಲು ಸುಂದರವಾಗಿದ್ದ ಕಾರಣ ಆಕೆಯ ಮೋಹದ ಪಾಶಕ್ಕೆ ಬಿದ್ದು ಮನೆಯವರಿಗೂ ಆಕೆಯ ಬಗ್ಗೆ ತಿಳಿಸಲು ಆಗದೆ ತಂದೆ ತಾಯಿಯರು ತೋರಿಸುತ್ತಿದ್ದ ಹುಡುಗಿಯರನ್ನೆಲ್ಲ ನಿರಾಕರಿಸುತ್ತಿದ್ದ.  ಕಿರಣನೊಂದಿಗೆ ಅಷ್ಟೊಂದು ಆಪ್ತಳಾಗಿದ್ದ  ಆ ಹುಡುಗಿ ಇದ್ದಕ್ಕಿದ್ದಂತೆಯೇ ಒಂದು ವಾರದಿಂದ ಯಾವುದೇ ಕರೆಗಳನ್ನೂ ಸ್ವೀಕರಿಸದೇ ಕಿರಣನಿಗೂ ಎಂದಿನ ಸ್ಥಳಗಳಲ್ಲಿ ಸಿಗದ ಕಾರಣ ಅನುಮಾನಗೊಂಡು ಅಕೆಯ ಬಗ್ಗೆ  ವಿಚಾರಿಸಿದಾಗ  ಆಕೆಯೂ ಕೂಡ ಮನೆಯವರ ಕಟ್ಟು ಪಾಡುಗಳಿಗೆ ಬಿದ್ದು ತನ್ನ ತಂದೆ ತಾಯಿಯರು ತೋರಿಸಿದ ತನ್ನದೇ ಕೋಮಿನ ಹುಡುಗನೊಂದಿಗೆ ಮದುವೆಯಾಗಿ ಬಿಟ್ಟಿದ್ದಳು.  ಗೆಳತಿಯ ಅಗಲಿಕೆ ಮತ್ತು ಸಾಲಗಾರ ಕಾಟ ತಾಳಲಾರದೇ,  ಬೇರೆ ದಾರಿ ಕಾಣದೆ ಕಿರಣ ದೂರದ ಕಾರವಾರಕ್ಕೆ ಹೋಗಿ ಹೋಟೆಲ್ ರೂಮ್ ಬಾಡಿಗೆ ಪಡೆದು ಅಲ್ಲಿ  ಬ್ಲೇಡಿನಿಂದ ತನ್ನ ರಕ್ತನಾಳಗಳನ್ನು ಕತ್ತರಿಸಿಕೊಂಡು ದೇಹದಿಂದ ರಕ್ತ ಒಸರಿ ಹೋಗಿ ಆತ್ಯಹತ್ಯೆ ಮಾಡಿ ಕೊಂಡಿದ್ದ.

ತಮ್ಮನ ಅಕಾಲಿಕ ಮರಣವನ್ನು ತಾಳಲಾರದ ಕಿರಣ ಅಕ್ಕನಿಗೆ  ಹೃದಯಾಘಾತವಾಗಿ ಆಕೆಯೂ ಕೂಡ ಆಸ್ಪತ್ರೆಗೆ ಸೇರಿಸಬೇಕಾಯಿತು. ತಮ್ಮ ಅಂತ್ಯಕಾಲದಲ್ಲಿ ನಮ್ಮ ಚಿತೆಗೆ ತಮ್ಮ ಮಗ ಅಂತ್ಯ ಸಂಸ್ಕಾರ ಮಾಡುತ್ತಾನೆ ಎಂದು ತಿಳಿದಿದ್ದ ರಮೇಶ್ ಅವರಿಗೆ ಅವರೇ ಅವರ ಮಗನ ಚಿತೆಗೆ ಕೊಳ್ಳಿ ಇಡಬೇಕಾದ ದುರ್ವಿಧಿ ಕಾಡಿತ್ತು. ಕಿರಣ ಅಕ್ಕ ಆಶಾ ಕೂಡಾ ತಮ್ಮನ ಅಕಾಲಿಕ ಅಗಲಿಕೆಯಿಂದ ನೊಂದು ಹೆಚ್ಚು ದಿನ ಇರಲಿಲ್ಲಪುತ್ರ ಶೋಕ ನಿರಂತರಂ ಎನ್ನುವಂತೆ  ಕಿರಣನ ತಾಯಿ ಮಗನ ಮರಣದ ಆಘಾತದಿಂದ ಇನ್ನೂ ಕೂಡಾ ಹೊರಬರಲಾಗದೇ ಮಾನಸಿಕವಾಗಿ ನರಳುತ್ತಿದ್ದಾರೆ.  ತಮ್ಮ ಬಾಳಿನ ಆಶಾಕಿರಣ ತಮ್ಮ ಮುಂದಿನ ದಾರಿ ದೀಪ ಎಂದು ತಿಳಿದಿದ್ದ ಮಕ್ಕಳಿಬ್ಬರನ್ನೂ ಕಳೆದುಕೊಂಡ ರಮೇಶ್ ಈ ಇಳೀ ವಯಸ್ಸಿನಲ್ಲಿ ನಾನಾ ರೀತಿಯ ಖಾಯಿಲೆಗಳಿಂದ ಬಳಲುತ್ತಿದ್ದರೂ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.

ಆತ್ಮಹತ್ಯೆ ಎಲ್ಲಾ  ಸಮಸ್ಯೆಗಳಿಗೂ ಪರಿಹಾರವಲ್ಲ. ಪ್ರತಿಯೊಂದು ಸಮಸ್ಯೆಗಳಿಗೂ ಹಲವಾರು ಪರಿಹಾರಗಳು ಇದ್ದೇ ಇರುತ್ತವೆ. ನಾವು  ತಾಳ್ಮೆಯಿಂದ ಕುಳಿತು ಯೋಚಿಸಿದರೆ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ನಮಗೆ ಹೊಳೆಯುತ್ತದೆ. ಮಿಕ್ಕ ಸಮಸ್ಯೆಗಳನ್ನು ಗುರು ಹಿರಿಯರು  ಅಥವಾ ಸ್ನೇಹಿತರೊಂದಿಗೆ ಚರ್ಚಿಸಿ ಪರಿಹರಿಸಿ ಕೊಳ್ಳಬಹುದಾಗಿದೆ. ಎಲ್ಲಾ ಧರ್ಮಗಳಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳುವುದು ಪಾಪ ಎಂದೇ ಹೇಳುತ್ತದೆ.  ಅದಕ್ಕಿಂತ ಒಂದು  ಹೆಜ್ಜೆ ಮುಂದುವರಿಸಿ ಹೇಳುವುದಾದರೇ ಆತ್ಮಹತ್ಯೆ ಮಾಡಿಕೊಳ್ಳುವವರು ಕೇವಲ ದುರ್ಬಲ ಮನಸ್ಸಿನವರ ಮಾತ್ರ. ಅಂತಹವರನ್ನು  ಹೇಡಿಗಳು ಎಂದು ಕರೆದರೂ ತಪ್ಪಾಗಲಾರದು. ಈಸ ಬೇಕು ಇದ್ದು ಜಯಿಸಬೇಕು ಎಂದು ಎಷ್ಟೋ ವರ್ಷಗಳ ಹಿಂದೆಯೇ ಪುರಂದರ ದಾಸರೇ ಹೇಳಿದ್ದಾರೆ. ಹಾಗಾಗಿ  ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮ ಹತ್ಯೆ ಮಾಡಿಕೊಂಡರೆ ಅವರನ್ನೇ ನಂಬಿಕೊಂಡಿರುವ ಅವರ ಕುಟುಂಬದ ಗತಿ ಏನು? ಯಾರದ್ದೋ ತಪ್ಪಿಗೆ  ಕುಟುಂಬಕ್ಕೇಕೆ ಶಿಕ್ಷೆ? ಆಗಿದ್ದೆಲ್ಲ ಆಗಿ ಹೋಯಿತು. ಆ ಹುಡುಗಿ ಇಲ್ಲದಿದ್ದರೆ ಮತ್ತೊಬ್ಬಳು ಎಂದು ಕಿರಣ  ನಿರ್ಮಲ ಚಿತ್ತದಿಂದ ಯೋಚಿಸಿ, ನಿಶ್ಚಿಂತೆಯಾಗಿ ಕುಟುಂಬದೊಡನೆ ತುಂಬು ಜೀವನ ನಡೆಸಿಕೊಂಡು ಹೋಗಿದ್ದರೆ ಈ ಇಳಿ ವಯಸ್ಸಿನಲ್ಲಿ ಅವರ ತಂದೆ ಜೀವನೋಪಾಯಕ್ಕಾಗಿ ಕೆಲಸ ಮಾಡುವ ಅವಶ್ಯಕತೆ ಇರಲಿಲ್ಲ.  ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ. ಅವನು ನಮ್ಮ  ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಸೂಚಿಸಲು ಸಿದ್ಧನಾಗಿಯೇ ಇರುತ್ತಾನೆ.  ನಾವುಗಳು ಭಗವಂತನ ಸಹಾಯ ಕೇಳುವ ಮನಸ್ಸು ಮಾಡಬೇಕಷ್ಟೇ.  ಇಲ್ಲಿ ಭಗವಂತ ಎನ್ನುವುದು ಕೇವಲ ಸೂಚಕ ಪದವಾಗಿದ್ದು. ಭಗವಂತ  ಗಂಡ, ಹೆಂಡತಿ, ಮಕ್ಕಳು, ಅತ್ತೆ ,ಮಾವ, ಸಂಬಂಧಿಗಳು, ಸ್ನೇಹಿತರು ಹೀಗೆ ಯಾರ ಮುಖಾಂತರವಾದರೂ ಸಹಾಯ ಮಾಡಬಹುದು.  ಅವರ ಸಹಾಯದಿಂದ ಸಮಸ್ಯೆಗಳಿಂದ ಹೊರ ಬರುವ ಮನಸ್ಸನ್ನು ಆತ್ಯಹತ್ಯೆ ಮಾಡಿಕೊಳ್ಳುವವರು  ಮಾಡಬೇಕಷ್ಟೇ.

ಏನಂತೀರೀ?