ಉಸರೀಕಾಯಿ (ಸುಂಡಕಾಯಿ) ವತ್ತ ಕೊಳಂಬು 

ತಮಿಳುನಾಡಿನ ಯಾವುದೇ ಸಮಾರಂಭಗಳಿಗೆ ಹೋದಲ್ಲಿ ಅಥವಾ ಹೋಟೆಲ್ಗಳಲ್ಲಿ ಉಣಬಡಿಸುವ ಸಾಂಪ್ರದಾಯಿಕ ಅಡುಗೆಯಾದ ಉಸುರೀಕಾಯಿ (ಸುಂಡಕಾಯಿ) ವತ್ತ ಕೊಳಂಬು ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ವತ್ತ ಕೊಳಂಬು ಮಾಡಲು ಅವಶ್ಯವಾಗಿರುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ

  • ಕಡಲೇಬೇಳೆ – 2 ಚಮಚ
  • ಉದ್ದಿನಬೇಳೆ- 2 ಚಮಚ
  • ದನಿಯ- 1 ಚಮಚ
  • ಮೆಂತ್ಯ- 1 ಚಮಚ
  • ಮೆಣಸು- 1 ಚಮಚ
  • ಜೀರಿಗೆ- 1 ಚಮಚ
  • ಒಣಮೆಣಸಿನಕಾಯಿ – 5-6

ವತ್ತ ಕೊಳಂಬು ಪುಡಿ ತಯಾರಿಸುವ ವಿಧಾನ

  • ಒಂದು ಗಟ್ಟಿ ತಳದ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ನಂತರ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಸಿ ಹೋಗುವವರೆಗೂ ಕೆಂಪಗೆ ಹುರಿದುಕೊಳ್ಳಿ
  • ಹುರಿದುಕೊಂಡದ್ದು ಚೆನ್ನಾಗಿ ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.

ವತ್ತ ಕೊಳಂಬು ಮಾಡಲು ಬೇಕಾಗುವ ಸಾಮಗ್ರಿಗಳು

  • ಒಣಗಿದ ಉಸುರೀಕಾಯಿ(ಸುಂಡಕಾಯಿ) 2-3 ಹಿಡಿ
  • ಸಾಸಿವೆ – 1 ಚಮಚ
  • ಮೆಂತ್ಯ- 1/4 ಚಮಚ
  • ಕರಿಬೇವು – 8-10
  • ಒಣಮೆಣಸಿನಕಾಯಿ – 5-6
  • ಬೆಲ್ಲ – 2-3 ತುಣುಕುಗಳು
  • ಹುಣಸೇಹಣ್ಣಿನ ರಸ – 1/2 ಬಟ್ಟಲು
  • ಚಿಟುಕಿ ಅರಿಶಿನ
  • ಇಂಗು – 1 ಚಮಚ
  • ಅಡುಗೆ ಎಣ್ಣೆ 3-4 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ವತ್ತ ಕೊಳಂಬು ತಯಾರಿಸುವ ವಿಧಾನ

  • ಒಂದು ಗಟ್ಟಿ ತಳದ ಬಾಣಲಿಯಲ್ಲಿ 3-4 ಚಮಚ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ನಂತರ, ಒಣಗಿದ 2-3 ಹಿಡಿ ಉಸರೀಕಾಯಿ(ಸುಂಡಕಾಯಿ)ಯನ್ನು ಚೆನ್ನಾಗಿ ಕೆಂಪಗೆ ಬರುವಂತೆ ಕರಿದುಕೊಂಡು ಆರಲು ಬಿಡಿ.
  • ಕಾದ ಅದೇ ಬಾಣಲಿ ಮತ್ತು ಎಣ್ಣೆಗೆ ಸಾಸಿವೆ ಹಾಕಿಕೊಂಡು ಸಿಡಿಸಿಕೊಂಡ ನಂತರ, ಮೆಂತ್ಯ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿಕೊಂಡು ಚೆನ್ನಾಗಿ ಹಸಿ ಹೋಗುವವರೆಗೂ ಕೆಂಪಗೆ ಹುರಿದುಕೊಂಡು ಅದನ್ನು ಒಂದು ಪಾತ್ರೆಗೆ (ಕಲ್ಲಿನ ಮರಗಿ) ಹಾಕಿಕೊಳ್ಳಿ
  • ನೆನಸಿಟ್ಟು ಕೊಂಡಿದ್ದ ಹುಣಸೇ ಹುಳಿಯನ್ನು ಪಾತ್ರೆಗೆ ಸೇರಿಸಿ ಅದಕ್ಕೆ ಅರಿಶಿನ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ
  • ಚೆನ್ನಾಗಿ ಕುದಿಯುತ್ತಿದ್ದ ಮಿಶ್ರಣಕ್ಕೆ ಕರಿದುಕೊಂಡಿದ್ದ ಉಸರೀಕಾಯಿ (ಸುಂಡಕಾಯಿ) ಮತ್ತು ಇಂಗನ್ನು ಹಾಕಿ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿದ ನಂತರ ಮಾಡಿಟ್ಟು ಕೊಂಡಿದ್ದ ಪುಡಿಯನ್ನು ಬೆರಸಿ, ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿದರೆ ರುಚಿ ರುಚಿಯಾದ ಸಾಂಪ್ರದಾಯಕವಾದ ಮತ್ತು ಆರೋಗ್ಯಕರವಾದ ವತ್ತ ಕೊಳಂಬು ಸವಿಯಲು ಸಿದ್ಧ.

ವತ್ತ ಕೊಳಂಬುವನ್ನು ಚಪಾತಿ, ದೋಸೆ, ಪರೋಟ ಅಲ್ಲದೇ, ರಾಗಿ ಮುದ್ದೆ ಮತ್ತು ಅನ್ನದೊಂದಿಗೂ ಕಲೆಸಿಕೊಂಡು ತಿನ್ನಬಹುದಾಗಿದೆ.

ವತ್ತ ಕೊಳಂಬು ಮಾಡುವುದನ್ನು ಈ ವಿಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.

ತಮಿಳುನಾಡಿನ ಸಾಂಪ್ರದಾಯಿಕ ಅಡುಗೆಯಾದ ವತ್ತ ಕೊಳಂಬು ಮಾಡುವುದನ್ನು ತೋರಿಸಿಕೊಟ್ಟ ಶ್ರೀಮತಿ ರೇವತಿ ವೆಂಕಟೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು

ಇನ್ನೇಕೆ ತಡಾ, ನೋಡ್ಕೋಳ್ಳಿ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ವತ್ತ ಕೊಳಂಬು ತಯಾರಿಸಲು ಉಸರೀ ಕಾಯಿಯ ಬದಲಾಗಿ ಒಣಗಿದ ಗಣಕೀಹಣ್ಣು(ಕಾಶೀಹಣ್ಣು) ಇಲ್ಲವೇ ಬೆಂಡೇಕಾಯಿ ಅಥವಾ ಬದನೇಕಾಯಿ ಜೊತೆ ಅವರೇಕಾಳನ್ನು ಬೆರೆಸಿಯೂ ಸಾಂಪ್ರದಾಯಕವಾಗಿ ವತ್ತೆ ಕೊಳಂಬು ತಯಾರಿಸಬಹುದಾಗಿದೆ.

ಹಸೀ ಉಸುರೀ ಕಾಯಿಯ ಬೀಜ ಬಹಳ ಒಗುರು ಒಗುರಾಗಿರುವ ಕಾರಣ ಚೆನ್ನಾಗಿ ಜೆಜ್ಜಿ, ಸುಮಾರು ಎಂಟು ಹತ್ತು ಬಾರಿ ತೊಳೆದು ಉಪಯೋಗಿಸಬೇಕು

ಉಸರೀ ಕಾಯಿ ಅರೋಗ್ಯಕ್ಕೆ ಬಹಳ ಉತ್ತಮವಾಗಿದ್ದು ಇದನ್ನು ಆಗ್ಗಿಂದ್ದಾಗೆ ಸೇವಿಸುವ ಮೂಲಕ ಪಚನಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಬಹುದಲ್ಲದೇ, ಸುಲಭವಾಗಿ ಕರಳುಗಳನ್ನು ಶುದ್ಧೀಕರಿಸಿಬಹುದಾಗಿದೆ.

ಇದರ ಬೀಜ ಕಹಿಯಾಗಿರುವ ಕಾರಣ ಮಧುಮೇಹಿಗಳಿಗೂ ಇದು ಉತ್ತಮ ಪರಿಣಾಮಕಾರಿಯಾಗಿದೆ

ಹೀರೇಕಾಯಿ ಹುಳಿಸೊಪ್ಪು

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ  ಹೀರೇಕಾಯಿ ಹುಳಿಸೊಪ್ಪು ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಹೀರೇಕಾಯಿ ಹುಳಿಸೊಪ್ಪು ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಹೀರೇಕಾಯಿ – 1
  • ಹಸಿರು ಮೆಣಸಿನಕಾಯಿ – 4-5
  • ಹುಣಸೇಹಣ್ಣು – ಅರ್ಧ ನಿಂಬೇ ಗಾತ್ರದ್ದು
  • ತೆಂಗಿನಕಾಯಿ ತುರಿ –  1/4 ಬಟ್ಟಲು
  • ಬೆಲ್ಲ – 2 ಚಮಚ
  • ಜೀರಿಗೆ – 1 ಚಮಚ
  • ಅರಿಶಿನ 1/4 ಚಮಚ
  • ರುಚಿಗೆ ತಕ್ಕಂತೆ ಉಪ್ಪು

ಒಗ್ಗರಣೆಗೆ

  • ಸಾಸಿವೆ – 1/4 ಚಮಚ
  • ಒಣ ಮೆಣಸಿನಕಾಯಿ – 2
  • ಚಿಟುಕೆ ಇಂಗು
  • ಕರಿಬೇವು – 4-5
  • ಅಡುಗೆ ಎಣ್ಣೆ – 2 ಚಮಚ

ಹೀರೇಕಾಯಿ ಹುಳಿಸೊಪ್ಪು ತಯಾರಿಸುವ ವಿಧಾನ

  • ಸಿಪ್ಪೆ ಹೆರೆದ ಹೀರೆಕಾಯಿಗಳನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಂಡು ಜೀರಿಗೆ ಮತ್ತು ಹಸಿರು ಮೆಣಸಿನಕಾಯಿ ಜೊತೆ ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ ಕುಕ್ಕರಿನಲ್ಲಿ  ಒಂದು ಶಿಳ್ಳೆ ಬರುವ ತನಕ ಬೇಯಿಸಿ.
  • ಬೇಯಿಸಿದ ತರಕಾರಿ ತಣ್ಣಗಾದ ನಂತರ  ಹುಣಸೇಹಣ್ಣು, ಬೆಲ್ಲಾ, ಉಪ್ಪು ಮತ್ತು ತೆಂಗಿನ ತುರಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ದಪ್ಪ ತಳದ ಬಾಣಲೆಗೆ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ, ಸಾಸಿವೆ, ಇಂಗು, ಕರಿಬೇವು ಮತ್ತು ಒಣ ಮೆಣಸಿನಕಾಯಿಯ ಒಗ್ಗರಣೆ ಹಾಕಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಬೆರೆಸಿದಲ್ಲಿ,  ರುಚಿ ರುಚಿಯಾದ ಹೀರೇಕಾಯಿ ಹುಳಿಸೊಪ್ಪು ಸಿದ್ದ

ಇದನ್ನು ಚಪಾತಿ, ದೋಸೆ, ಪರೋಟ ಅಲ್ಲದೇ, ರಾಗಿ ಮುದ್ದೆ ಮತ್ತು ಅನ್ನದೊಂದಿಗೂ ಕಲೆಸಿಕೊಂಡು ತಿನ್ನಬಹುದಾಗಿದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ಎಲ್ಲಾ ಕಡೆಯಲ್ಲಿಯೂ ಎಲ್ಲಾ ಸಮಯದಲ್ಲಿಯೂ ಮತ್ತು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಹೀರೇಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ವಿಟಮಿನ್‌-ಸಿ, ಸತು, ಕಬ್ಬಿಣಾಂಶ, ರೈಬೋಫ್ಲಾವಿನ್‌, ಮೆಗ್ನೇಶಿಯಂ, ಥಯಾಮಿನ್‌ ಹೊಂದಿರುವ ತರಕಾರಿಯಾಗಿದ್ದು ಫ್ಯಾಟ್‌, ಕೊಲೆಸ್ಟ್ರಾಲ್‌ ಮತ್ತು ಕ್ಯಾಲೊರಿ ಹೊಂದಿರುವ ಕಾರಣ ತೂಕ ಇಳಿಸಿಕೊಳ್ಳಬಯಸುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ.  ಸಾಕಷ್ಟು ಸೆಲ್ಯುಲೋಸ್‌ ಮತ್ತು ನೀರಿನಂಶ ಹೊಂದಿದ್ದು, ಮಲಬದ್ಧತೆಯಿಂದ ಪೈಲ್ಸ್‌ ತಡೆಗಟ್ಟಲು ಸಹಹರಿಸುತ್ತದೆ. ಇನ್ನು ನಿತ್ಯ ಒಂದು ಗ್ಲಾಸ್ ಹೀರೇಕಾಯಿ ಜ್ಯೂಸ್ ಕುಡಿದರೆ ಕಾಮಾಲೆ ಕಡಿಮೆಯಾಗುತ್ತದೆ. ಮಧುಮೇಹ ರೋಗಿಗಳಿಗಳು ಹೀರೇಕಾಯಿಯನ್ನು ಹುಳಿ, ಪಲ್ಯ, ಚಟ್ನಿ ಅಥವಾ ಜ್ಯೂಸ್ ಮಾಡಿಕೊಂಡು ಹೀಗೆ  ರೂಪದಲ್ಲಾದರೂ, ಸೇವಿಸಿದರೂ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಈ ಪಾಕ ವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು