ಬದಾಮಿಯ ಅನ್ನಪೂರ್ಣೆಯರು

ಅರೇ ಇದೆಂತಹಾ ಶೀರ್ಷಿಕೆ? ಬದಾಮಿಯಲ್ಲಿರುವುದು ಬನಶಂಕರಿ ದೇವಿ. ಅನ್ನಪೂರ್ಣೇ ಇರುವುದು ಹೊರನಾಡಿನಲ್ಲಿ ಎಂದು ಯೋಚಿಸುತ್ತಿದ್ದರೆ, ನಿಮ್ಮ ಉಹೆ ತಪ್ಪೆಂದು ಹೇಳುತ್ತಿಲ್ಲ. ಹಸಿದವರಿಗೆ ಹೊಟ್ಟೇ ತುಂಬ ಅಮ್ಮನ ಮಮತೆಯಿಂದ ಊಟ ಬಡಿಸುವ ಅನ್ನಪೂರ್ಣೆಯರು ಎಲ್ಲಾ ಮನೆಗಳಲ್ಲಿಯೂ ಒಬ್ಬೊಬ್ಬರು ಇದ್ದರೆ, ಬಶಾಕಾಂಬರಿದಾಮಿಯ ತಾಯಿ ಬನಶಂಕರಿಯ ಸನ್ನಿಧಿಯಲ್ಲಿ ಇಂತಹ ನೂರಾರು ಅನ್ನಪೂರ್ಣೆಯರನ್ನು ಕಾಣಬಹುದಾದಂತಹ ಸುಂದರ ರೋಚಕವಾದ ಅನುಭವ ಇದೋ ನಿಮಗಾಗಿ.

ಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ ತಾಯಿ ಬನಶಂಕರಿಯಾಗಿ ನೆಲೆಸಿರುವ ಶ್ರೀ ಕ್ಷೇತ್ರವೇ ಬದಾಮಿ. ಈ ಮಹಾತಾಯಿಯನ್ನು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಹೀಗೆ ಹತ್ತಾರು ಹೆಸರುಗಳಿಂದ ಭಕ್ತರು ಪೂಜಿಸುತ್ತಾರೆ. ನವದುರ್ಗೆಯರಲ್ಲಿ 6ನೇ ಅವತಾರವೇ ಬನಶಂಕರಿ ಎಂದೂ ಹೇಳಲಾಗುತ್ತದೆ.

ಈ ಪ್ರದೇಶದಲ್ಲಿ ಸರಸ್ವತಿ ಹೊಳೆ ಹರಿಯುವ ಕಾರಣ ಸುಂದರವಾದ ಮತ್ತು ದಟ್ಟವಾದ ಅರಣ್ಯ ಪ್ರದೇಶಗಳಿಂದ ಆವರಸಿದ್ದು, ಎಲ್ಲೆಲ್ಲೂ ತೆಂಗು, ಬಾಳೆ ಮತ್ತು ವಿಳ್ಳೇದೆಲೆ ಹಂಬುಗಳ ತೋಟಗಳ ಮಧ್ಯೆ ಇರುವ ಈ ವನಶಂಕರಿ, ಕಾಡುಗಳ ದೇವತೆ, ಅರ್ಥಾತ್ ಬನಶಂಕರಿ ದೇವಿ ಈ ಪ್ರದೇಶದಲ್ಲಿ ನೆಲೆಗೊಳ್ಳುವುದರದ ಹಿಂದೆ ಒಂದು ಪೌರಾಣಿಕ ಕಥೆಯಿದೆ.

ಪುರಾಣ ಕಾಲದಲ್ಲಿ ಈ ಪ್ರದೇಶವು ಭಯಂಕರ ಕ್ಷಾಮದಿಂದ ತತ್ತರಿಸಿ, ಪಶು ಪಕ್ಷಿ ಪ್ರಜೆಗಳಾದಿಗಳೆಲ್ಲರೂ ನೀರಿಲ್ಲದೇ ಪರಿತಪಿಸುತ್ತಿದ್ದಾಗ, ದೇವಾನುದೇವತೆಗಳೆಲ್ಲರೂ ಸೇರಿ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ್ನು ಕಂಡು ಈ ಸಮಸ್ಯೆಯಿಂದ ಪಾರು ಮಾಡಲು ಎಂದು ಪ್ರಾರ್ಥಿಸಿದರಂತೆ. ಅದಕ್ಕೆ ಆ ತ್ರಿಮೂರ್ತಿಗಳು ಈ ಸಮಸ್ಯೆಗೆ ಬನಶಂಕರಿದೇವಿ ಮಾತ್ರಾ ಪರಿಹಾರವನ್ನು ನೀಡಬಲ್ಲಳು ಎಂದು ಹೇಳಿ ಎಲ್ಲರೂ ಸೇರಿ ತಿಲಕಾರಣ್ಯ ಪ್ರದೇಶಕ್ಕೆ ಬಂದು ತಾಯಿ ಬನಶಂಕರಿಯನ್ನು ಕುರಿತು ತಾಯಿ, ಈ ಪ್ರದೇಶದಲ್ಲಿ ಮಳೆ ಬೆಳೆಯಿಲ್ಲದೇ, ಯಜ್ಞಯಾಗಾದಿಗಳು ಇಲ್ಲದೇ, ಬದುಕಲು ಬಹಳ ಕಷ್ಟವಾಗಿದೆ. ದಯವಿಟ್ಟು ಈ ಸಮಸ್ಯೆಯಿಂದ ಪಾರು ಮಾಡು ಎಂದು ಪರಿ ಪರಿಯಾಗಿ ಪ್ರಾರ್ಥಿಸುತ್ತಾರೆ. ಅವರೆಲ್ಲರ ಪ್ರಾರ್ಥನೆಯಿಂದ ಪ್ರಸನ್ನಳಾದ ಬನಶಂಕರಿ ದೇವಿ ಪ್ರತ್ಯಕ್ಷಳಾಗಿ ಜನರ ನೀರಿನ ದಾಹವನ್ನು ತೀರಿಸಿದ್ದಲ್ಲದೇ, ತನ್ನ ತನುವಿನ ಶಾಖದಿಂದ ಕಾಯಿಪಲ್ಲೆಗಳನ್ನು ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ. ಹಾಗಾಗಿ ಈ ದೇವಿಗೆ ಶಾಕಾಂಬರಿ ಎಂದೂ ಕರೆಯಲಾಗುತ್ತದೆ.

ಮುಂದೆಂದೂ ಈ ಪ್ರದೇಶ ನೀರಿಲ್ಲದೇ ಕ್ಷಾಮಕ್ಕೆ ಈಡಾಗಬಾರದೆಂದು ಈ ಪ್ರದೇಶದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಮುಂತಾದ ಅನೇಕ ತೀರ್ಥಕೊಳಗಳನ್ನು ಸೃಷ್ಟಿ ಮಾಡಿದ ಕಾರಣ ಈ ಪ್ರದೇಶ ಸದಾ ನಂದನವನವಾಗಿ ನಿತ್ಯಹದ್ವರ್ಣಗಳಿಂದ ಕಂಗೊಳಿಸುವಂತಾಗಿದೆ.

ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿದ್ದ ಈ ದೇವಸ್ಥಾನವನ್ನು ಮುಂದೆ 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಜೀರ್ಣೋದ್ಧಾರ ಮಾಡಿರುವ ಈ ದೇವಾಲಯದಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಬನಶಂಕರಿಯ ವಿಗ್ರಹವಿದ್ದು ಪ್ರತೀ ದಿನವೂ ನೂರಾರು ಭಕ್ತಾದಿಗಳು ಆಕೆಯ ದರ್ಶನ ಪಡೆದು ಪುನೀತರಾಗುತ್ತಾರೆ. ಪ್ರತೀ ವರ್ಷ ಪುಷ್ಯ ಮಾಸದಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಇಲ್ಲಿ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದ್ದು, ಕೇವಲ ಕರ್ನಾಟಕ ಮಾತ್ರವಲ್ಲ್ದೇ ನೆರೆಯ ಮಹಾರಾಷ್ಟ್ರ ಮತ್ತು ದೇಶಾದ್ಯಂತ ಹರಿದು ಹಂಚಿಹೋಗಿರುವ ಆಕೆಯ ಭಕ್ತರು ಈ ಜಾತ್ರೆಗೆ ಬಂದು ತಾಯಿಯ ದರ್ಶನ ಪಡೆದು ಪ್ರಸನ್ನರಾಗುತ್ತಾರೆ.

ಪುಷ್ಯ ಮಾಸದ ಹುಣ್ಣಿಮೆಯಂದು ನಡೆಯುವ ಈ ಬನಶಂಕರಿ ಜಾತ್ರೆಯ ಹತ್ತು ದಿನಗಳ ಮುಂಚಿತವಾಗಿಯೇ ಇಲ್ಲಿ ಸಂಭ್ರಮ ಸಡಗರಗಳು ಪ್ರಾರಂಭವಾಗುತ್ತದೆ. ಈ ಜಾತ್ರೆಯ ಸಮಯದಲ್ಲಿ ದೇವಾಲಯ ಮತ್ತು ಬದಾಮಿ ಪಟ್ಟಣವನ್ನು ಬಗೆ ಬಗೆಯ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸುವುದು ಮತ್ತೂ ವಿಶೇಷವಾಗಿದೆ. ಈ ರಥೋತ್ಸವದ ಮುನ್ನಾ ದಿನ ಪಲ್ಯದ ಹಬ್ಬ ಅರ್ಥಾತ್ ತರಕಾರಿ ಉತ್ಸವ ಎಂದು ಆಚರಿಸುತ್ತಾರೆ. ಅಂದು ದೇವಿ ಬನಶಂಕರಿಗೆ 108 ವಿಧಧ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ.

ಇಂತಹ ಪುರಾಣ ಪ್ರಸಿದ್ಧ ಬನಶಂಕರಿ ದೇವಾಲಯದ ಎದುರಿಗೆ ಸುಂದರವಾದ ಕೋಟೆಯಂತೆ ಕಾಣಿಸುವ ಪ್ರವೇಶ ದ್ವಾರದ ಎದುರಿಗೆ ಸುಮಾರು 360 ಅಡಿಗಳ ಚೌಕಾಕಾರದ ಕಲ್ಯಾಣಿ ಅದರ ಸುತ್ತಲೂ ಅರವಟ್ಟಿಗೆ ರೂಪದಲ್ಲಿ ಇರುವ ಕಟ್ಟಡವಿದೆ. ಸದ್ಯಕ್ಕೆ ಮಳೆಗಾಲದಲ್ಲಿ ಮಾತ್ರವೇ ತುಂಬಿ ಹರಿಯುವ ಈ ಕಲ್ಯಾಣಿಯನ್ನು ನೋಡಲು ಎರಡು ಕಣ್ಣೂ ಸಾಲದು ಎಂದರೂ ತಪ್ಪಾಗಲಾರದು. ಇಂತಹ ದೇವಸ್ಥಾನ ಮತ್ತು ಕಲ್ಯಾಣಿಯ ಅರವಟ್ಟಿಗೆಯಲ್ಲಿ ತಲೆಯ ಮೇಲೆ ಅಥವಾ ಸೊಂಟದ ಮೇಲೆ ಬುತ್ತಿಯ ಬುಟ್ಟಿ ಹೊತ್ತ ಅನೇಕ ಶ್ರದ್ದೇಯ ತಾಯಂದಿರು ಕಾಣ ಸಿಗುತ್ತಾರೆ.

ಅಣ್ಣಾ ಬರ್ರೀ, ಅವ್ವಾ ಬರ್ರೀ, ಖಡಕ್ ರೊಟ್ಟಿ, ಗುರೆಳ್ಳು ಚೆಟ್ಣಿ, ಬದ್ನೀ ಕಾಯಿ, ಕಾಳು ಪಲ್ಲೆ, ತಣ್ಣನೆಯ ಮೊಸರಿನೊಂದಿಗೆ ಹೊಟ್ಟೇ ತುಂಬಾ ತಿನ್ನ ಬರ್ರೀ ಎಂದು ಅಕ್ಕರೆಯಿಂದ ಕರೆಯುತ್ತಾರೆ. ಕೆಲವೊಬ್ಬರು ತೀರಾ ಮುಜುಗರಕ್ಕೀಡಾಗುವಷ್ಟು ಗೋಗರೆಯುವ ಮಹಿಳೆಯರು ಕಾಣ ಸಿಗುತ್ತಾರೆ. ಇವರೆಲ್ಲರೂ ಸುತ್ತ ಮುತ್ತಲಿನ ಹತ್ತಿರದ ಊರುಗಳಿಂದ ಹೊತ್ತಿಗೆ ಮುಂಚೆಯೇ ಎದ್ದು, ಜೋಳದ ರೊಟ್ಟಿ, ಅನ್ನ, ಅದಕ್ಕೆ ನೆಂಚಿಕೊಳ್ಳಲು ಎಣ್ಣೆಗಾಯಿ, ಬಗೆ ಬಗೆಯ ಕಾಳು ಪಲ್ಯಗಳು, ಹುಳಿ, ಗುರೆಳ್ಳು, ಬೆಳ್ಳುಳ್ಳಿ ಚಟ್ನಿ ಪುಡಿಗಳು, ಬಗೆ ಬಗೆಯ ಉಪ್ಪಿನಕಾಯಿ, ಮಾವಿನಕಾಯಿ ಚಟ್ನಿ ಗಡಿಗೆಯಲ್ಲಿ ತಣ್ಣನೆಯ ಮೊಸರು ಹೀಗೆ ನಾನಾ ತರಹದ ಆಹಾರ ಪದಾರ್ಥಗಳನ್ನು ತಮ್ಮ ಚಿಕ್ಕ ಚಿಕ್ಕ ಬುಟ್ಟಿಗಳಲ್ಲಿ ಹೊತ್ತು ತಂದು ಬದಾಮಿ ಬನಶಂಕರಿಯ ದರ್ಶನ ಮಾಡಲು ಬರುವ ಭಕ್ತರ ಹಸಿವನ್ನು ನೀಗಿಸುತ್ತಾ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಿರುವ ಶ್ರಮ ಜೀವಿಗಳು.

ತೊಂಭತ್ತರ ದಶಕದಲ್ಲಿ ಮೊತ್ತ ಮೊದಲ ಬಾರಿಗೆ ಅಲ್ಲಿಗೆ ಹೋಗಿದ್ದಾಗ ಜೋಳದ ರೊಟ್ಟಿಯ ಗಮ್ಮತ್ತನ್ನು ಅರಿಯದಿದ್ದ ನನಗೆ, ಈ ಮಹಿಳೆಯರು ಜೋಳದ ರೊಟ್ಟಿ ತಿನ್ನಲು ದಂಬಾಲು ಬಿದ್ದದ್ದು ಒಂದು ರೀತಿಯ ಅಸಹ್ಯ ಹುಟ್ಟಿಸಿತ್ತು ಎಂದರೂ ಸುಳ್ಳಲ್ಲ. ಅವರ ಕಾಟ ತಡಿಯಲಾರದೇ ತಗೊಳಮ್ಮಾ ಅಂತ ಹತ್ತು ರೂಪಾಯಿ ಕೊಡಲು ಹೋದ್ರೇ, ರೊಕ್ಕಾ ಬ್ಯಾಡ್ರೀ, ನಾವು ಭಿಕ್ಷೇ ಬೇಡ್ತಾ ಇಲ್ರೀ, ನೀವು ಒಮ್ಮೆ ನಮ್ಮ ಬುತ್ತಿ ತಿಂದ್ ನೋಡೀ. ಇಷ್ಟಾ ಆಗ್ದೇ ಹೋದ್ರೇ ನಿಮ್ಮ ರೊಕ್ಕಾ ಬ್ಯಾಡ್ರೀ ಎಂದಂತಹ ಸ್ವಾಭಿಮಾನಿ ತಾಯಂದಿರು. ಆದರೇ ಜವಾರೀ ಊಟದ ಖರಾಮತ್ತು ಗೊತ್ತಿಲ್ಲದ ನನಗೆ ಅವರಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕು ಸಾಕು ಆಗಿತ್ತು. ಆದರೇ ಮುಂದೆ ಅದೇ, ಜೋಳದ ರೊಟ್ಟಿ, ಎಣ್ಣೆಗಾಯಿ, ಚೆಟ್ನಿಪುಡಿಯ ರುಚಿ ಹತ್ತಿದ ನಂತರ ಆ ತಾಯಂದಿರ ಕಕ್ಕುಲತೆ ಅರ್ಥವಾಗಿ, ಛೇ!! ಎಂತಹ ಅವಕಾಶ ತಪ್ಪಿ ಹೋಯ್ತಲ್ಲಾ ಅಂತ ಬೇಜಾರಾಗಿತ್ತು.

ಕೆಲ ವರ್ಷಗಳ ಹಿಂದೆ ಸಹೋದ್ಯೋಗಿಯ ಮದುವೆಗೆಂದು ಗುಳೇದಗುಡ್ಡಕ್ಕೆ ಹೋಗಿ ಅಲ್ಲಿಂದ ಬದಾಮಿಗೆ ಹೋಗಿ ಬನಶಂಕರಿ ದೇವಿಯನ್ನು ನೋಡುವುದಕ್ಕಿಂತಲೂ ಆ ಬನಶಂಕರಿ ದೇವಾಲಯದ ಸುತ್ತಮುತ್ತಲಿನ ಅನ್ನಪೂರ್ಣೆಯರ ಊಟದ ಸವಿಯನ್ನು ಸವಿಯಲೇ ಬೇಕೆಂಬ ಉತ್ಕಟ ಆಸೆಯಿಂದ ಲಗುಬಗೆನೆ ದೇವಿಯ ದರ್ಶನ ಮಾಡಿ ದೇವಸ್ಥಾನದ ಹೊರಗಡೆ ಬಂದರೆ ಅಲ್ಲಿ ಬುತ್ತಿ ಹೊತ್ತ ಮಹಿಳೆಯರನ್ನು ಕಾಣದೇ ಹೋದಾಗ ಬೇಸರಗೊಂಡಿದ್ದಂತೂ ಸುಳ್ಳಲ್ಲ. ನಂತರ ಸ್ಥಳೀಯರನ್ನು ವಿಚಾರಿಸಿದಾಗ ಆ ಎಲ್ಲಾ ಅನ್ನಪೂರ್ಣೆಯೆಲ್ಲರೂ ಕಲ್ಯಾಣಿಯ ಅರವಟ್ಟಿಗೆಯ ತಣ್ಣನೆಯ ನೆರಳಿನಲ್ಲಿ ಇರುತ್ತಾರೆ ಎಂದು ತಿಳಿದು ಅಲ್ಲಿಗೆ ಹೋಗಿ ನೋಡಿದರೆ ಹತ್ತಾರು ಅನ್ನಪೂರ್ಣೆಯರ ಸುತ್ತ ನೂರಾರು ಭಕ್ತಾದಿಗಳು ಭಕ್ತಿಯಿಂದ ಪ್ರಸಾದ ಸ್ವೀಕರಿಸುವಂತೆ ಕೈ ಬಾಯಿಗೆ ಕೆಲಸ ಕೊಟ್ಟು ಸಂತೋಷದಿಂದ ರೊಟ್ಟಿ ಸವಿಯುತ್ತಿದ್ದನ್ನು ನೋಡಿ ಮಹದಾನಂದವಾಗಿತ್ತು.

ಛಂಗನೇ ಕಲ್ಯಾಣಿಗೆ ಇಳಿದು ಕೈತೊಳೆದು ಅಲ್ಲಿದ್ದ ತಾಯಿಯ ಬಳಿ ಕೈ ಒಡ್ಡುತ್ತಿದ್ದಂತೆಯೇ ರೊಟ್ಟಿ, ಕಾಯಿ ಪಲ್ಲೇ. ಶೇಂಗಾ ಚಟ್ನಿ ಇದ್ದ ತಟ್ಟೆ ಕೈಯಿಗೆ ಬಂದಿತ್ತು. ನಾನು ರೊಟ್ಟಿ ತಿಂದು ಮುಗಿಸ್ತಾ ಇದ್ದಂತಯೇ ಒಂದೊಂದಾಗಿ ತೆಳುವಾದ ರೊಟ್ಟಿ ತಟ್ಟೆಗೆ ಥೇಟ್ ಅಮ್ಮಾ ಹಾಕಿದಂತೆಯೇ, ಬೀಳ್ತಾ ಇತ್ತು. ಜೊತೆಯಲ್ಲಿ ಸಾವಕಾಶವಾಗಿ ಹೊಟ್ಟೇ ತುಂಬಾ ತಿನ್ನಿ. ಇನ್ನು ಸ್ವಲ್ಪ ಕಾಳು ಪಲ್ಲೇ ಹಾಕ್ಲೇ, ಅನ್ನಾ ಸಾಂಬಾರ್ ಮೊಸರೂ ಇದೇ ಎಂದು ನೆನಪಿಸಲು ಮರೆಯಲಿಲ್ಲ. ಹೇಗೂ ನಮ್ಮ ಮನೆಗಳಲ್ಲಿ ಅನ್ನಾ ಹುಳಿ ತಿನ್ನುತ್ತಲೇ ಇರುತ್ತೇವೆ ಎಂದು ಲೆಕ್ಕವಿಲ್ಲದಷ್ಟು ರೊಟ್ಟಿಗಳನ್ನು ಕಾಳು ಪಲ್ಲೆ, ಬಗೆ ಬಗೆಯ ಚೆಟ್ನಿಪುಡಿಗಳು, ಉಪ್ಪಿನ ಕಾಯಿ ಮತ್ತು ಮೊಸರಿನೊಂದಿಗೆ ಸವಿದು ಡರ್ ಎಂದು ತೇಗಿ ವಾತಾಪೀ ಜೀರ್ಣೋಭವ ಎಂದು ಅಗಸ್ತ್ಯರು ಹೇಳಿದಂತೆ ನಾನೂ ಹೊಟ್ಟೇ ಸವರಿಕೊಂಡು ಎಷ್ಟಾಯ್ತಮ್ಮಾ ಎಂದು ಕೇಳಿದರೆ ಆಕೆ ಕೇಳಿದ ಬೆಲೆ ಕೇಳಿ ನಿಜಕ್ಕೂ ಆಶ್ವರ್ಯವಾಗಿತ್ತು. ಆಕೆ ಕೇಳಿದ ಬೆಲೆಗಿಂತಲೂ ಸ್ವಲ್ಪ ಹೆಚ್ಚಿನ ದುಡ್ಡು ಕೊಟ್ಟಾಗ ಮೊದಲು ಬೇಡಾ ಎಂದವರು, ನಂತರ ಸಂತೋಷದಿಂದ ಕೋಡ್ತಾ ಇದ್ದೀನಿ. ನೀವು ತೆಗೆದುಕೊಳ್ಳಬೇಕು ಎಂದಾಗಲೇ ಬಹಳ ಸಂಕೋಚದಿಂದ ತೆಗೆದುಕೊಂಡು ಆಗಾಗ ಬರ್ತಾ ಇರೀ ಅಂತಾ ಹೇಳಿ ಕಳುಹಿಸಿ ಕೊಟ್ಟರು.

ನಿಜ ಹೇಳಬೇಕು ಅಂದರೆ, ಬಹಳ ರುಚಿ ರುಚಿಯಾದ ಮತ್ತು ಅತ್ಯಂತ ಕಡಿಮೆ ದರದಲ್ಲಿ ನಮ್ಮ ಮನೆಯ ಅಡುಗೆಯಂತೆಯೇ ಇರುವ, ಖುದ್ದಾಗಿ ಅಮ್ಮನೇ ಬಡಿಸುತ್ತಿದ್ದಾರೇನೋ ಎನುಸುವಷ್ಟರ ಮಟ್ಟಿಗೆ ಅಕ್ಕರೆ ತೋರಿಸುವ ಈ ಅನ್ನಪೂರ್ಣೆಯರ ನಗು ಮುಖ ನೋಡಿದರೆ ಸಾಕು ಹೊಟ್ಟೆ ತುಂಬಿದಂತಾಗುವುದಲ್ಲದೇ, ಊಟ ಮಾಡಿದ ನಂತರ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ ಸಿಗುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.

ಈ ಲೇಖನ ಓದಿದ ಮೇಲಾದರೂ, ಮುಂದಿನ ಬಾರೀ ನೀವು ಬದಾಮಿಗೆ ಹೋಗಿ ತಾಯಿ ಬನಶಂಕರಿಯ ದರ್ಶನ ಪಡೆದ ನಂತರ ಖಂಡಿತವಾಗಿಯೂ ಬೇರೆಲ್ಲೂ ಊಟ ಮಾಡದೇ, ದೇವಸ್ಥಾನದ ಎದುರಿಗಿನ ಕಲ್ಯಾಣಿಯ ತಟದಲ್ಲಿ ಭಕ್ತರ ಹಸಿವನ್ನು ನೀವಾರಿಸಲು ಕುಳಿತಿರುವ ಈ ಪ್ರೀತಿಯ ತಾಯಂದಿರ ಅಕ್ಕರೆಯ ಕೈ ಅಡುಗೆಯ ಸವಿಯನ್ನು ನೋಡಿಯೇ ಬರ್ತೀರಿ ಅಲ್ವೇ?

ಏನಂತೀರೀ?
ಇಂತೀ ನಿಮ್ಮ ಉಮಾಸುತ