ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ

ಗಂಡ, ಹೆಂಡತಿ ಮತ್ತು ಮುದ್ದಾದ ಮಗಳು ಇದ್ದ ಅದೊಂದು ಸುಂದರವಾದ ಕುಟುಂಬ. ಒಬ್ಬಳೇ ಮಗಳಾಗಿದ್ದರಿಂದ ಬಹಳ ಮುದ್ದಿನಿಂದಲೇ ಗಿಣಿ ಸಾಕುವಂತೆ ಸಾಕಿ ಸಲಹಿದ್ದರು. ನೋಡ ನೋಡುತ್ತಿದ್ದಂತೆಯೇ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆಯೇ ಅವಳಿಗೊಂದು ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂದು ನಿರ್ಧರಿಸಿ ತಮ್ಮ ಬಂಧು ಮಿತ್ರರೊಂದಿಗೆ ತಮ್ಮ ಮಗಳಿಗೆ ಅನುರೂಪವಾದಂತಹ ಸಂಬಂಧವಿದ್ದರೆ ತಿಳಿಸಿ ಎಂದೂ ಸೂಚಿಸಿದ್ದರು.

ಅಲ್ಲಿ ಮತ್ತೊಂದು ಸುಂದರ ಸುಸಂಸ್ಕೃತ ಸುಖೀ ಕುಟುಂಬದವರೊಬ್ಬರೂ ಸಹಾ ಅವರ ವಿದ್ಯಾವಂತ, ವಿವೇಕವಂತ ಮಗನಿಗೂ ಸಂಬಂಧವನ್ನು ಹುಡುಕುತ್ತಿದ್ದರು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಎರಡೂ ಕುಟಂಬಕ್ಕೂ ಪರಿಚಯವಿದ್ದವರೊಬ್ಬರು ಆ ಎರಡೂ ಕುಟುಂಬವನ್ನು ಪರಿಚಯಿಸಿ ಒಗ್ಗೂಡಿಸಿದ ಪರಿಣಾಮ ಆ ಮನೆಯ ಮಧುಮಗಳು ಈ ಮನೆಯ ಮಧುಮಗನೊಂದಿಗೆ ವಿವಾಹವಾಗಿ ಎರಡೂ ಕುಟುಂಬಗಳು ಒಂದಾದವು.

lawyer

ಆರಂಭದ ಮೂರ್ನಾಲ್ಕು ತಿಂಗಳುಗಳ ಕಾಲ ನಿಜವಾಗಿಯೂ ಮಧುಚಂದ್ರದಂತೆಯೇ ಇದ್ದು, ನವದಂಪತಿಗಳು ಬಹಳ ಅನ್ಯೋನ್ಯವಾಗಿದ್ದರು. ಅತ್ತೆ ಮತ್ತು ಮಾವ ಸಹಾ ಮಕ್ಕಳು ಈಗ ತಾನೇ ಮದುವೆಯಾಗಿದ್ದಾರೆ ಅವರಿಗಿಷ್ಟ ಬಂದಂತೆ ಇರಲಿ ಎಂದು ಯಾವುದೇ ರೀತಿಯ ತೊಂದರೆ ಕೊಡುತ್ತಿರಲಿಲ್ಲ. ಇಡೀ ವಾರ ತನ್ನ ಗಂಡನ ಮನೆಯಲ್ಲಿ ಇರುವಾಗ ಸಂತೋಷದಿಂದ ಇರುತ್ತಿದ್ದ ಹೆಂಡತಿ ವಾರಾಂತ್ಯದಲ್ಲಿ ಅಮ್ಮನ ಮನೆಗೆ ಹೋಗಿ ಬಂದ ನಂತರ ಅದೇಕೋ ಏನೋ ಗೊಂದಲಕ್ಕೆ ಬಿದ್ದವಳಂತೆ ಅನ್ಯಮನಸ್ಕಳಾಗಿರುತ್ತಿದ್ದದ್ದನ್ನು ಗಮನಿಸಿದ ತಾಯಿ ಮತ್ತು ಮಗ ಹೊಸದಾಗಿ ಮದುವೆಯಾಗಿ ತವರು ಮನೆ ಬಿಟ್ಟು ಬಂದಿರುವ ಕಾರಣ ಹೀಗಾಗುತ್ತಿರಬಹುದು. ನಂತರದ ದಿನಗಳಲ್ಲಿ ಇವೆಲ್ಲವೂ ಸರಿ ಹೋಗಬಹುದು ಎಂದೇ ಭಾವಿಸಿದ್ದರು.

ಅದೊಂದು ದಿನ ತಾಯಿ ಹೊಸದಾಗಿ ಮದುವೆಯಾಗಿದ್ದ ಮಗಳನ್ನು ತಮ್ಮ ಪರಿಚಯವಿದ್ದ ವಕೀಲರ ಬಳಿ ಕರೆದುಕೊಂಡು ಹೋಗಿ, ವಕೀಲರೇ ನಮ್ಮ ಮಗಳಿಗೆ ವಿಚ್ಚೇದನ ಕೊಡಿಸಿ ಎಂದು ಕೇಳಿಕೊಳ್ಳುತ್ತಾಳೆ. ವಕೀಲರೂ ಸಹಾ ಅ ಮದುವೆಗೆ ಹೋಗಿ ನವದಂಪತಿಗಳಿಗೆ ಆಶೀರ್ವದಿಸಿದ್ದ ಕಾರಣ ಅವರಿಗೆ ಬಹಳ ಅಚ್ಚರಿಯಾಗಿ,

ಏನಮ್ಮಾ ನಿನ್ನ ಗಂಡ ನಿನಗೆ ಹೊಡೆಯುತ್ತಾನಾ ?
ನಿನ್ನ ಗಂಡನಿಗೆ ನಿನ್ನ ಮೇಲೇ ಪ್ರೀತಿ ಇಲ್ಲವೇ? ಬೇರೆ ಯಾವುದಾದರು ಅನೈತಿಕ ಸಂಬಂಧವಿದೆಯೇ?
ನಿಮ್ಮ ಅತ್ತೆ ಮಾವ ಏನಾದರೂ ಹಿಂಸಿಸುತ್ತಿದ್ದಾರಾ?
ಅವರು ನಿಮ್ಮ ತವರಿನಿಂದ ವರದಕ್ಷಿಣೆ ಏನಾದರೂ ತರಲು ಒತ್ತಾಯ ಮಾಡುತ್ತಿದ್ದಾರಾ?
ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಲೇ ಹೋದಾಗ
ಎಲ್ಲದ್ದಕ್ಕೂ ಇಲ್ಲ, ಇಲ್ಲ, ಇಲ್ಲಾ.. ಎಂದೇ ಹೇಳುತ್ತಿದ್ದರೆ

ಇದರ ಮಧ್ಯೆ ಬಾಯಿ ಹಾಕಿದ ತಾಯಿ, ನನ್ನ ಮಗಳು ಅವರ ಗಂಡನ ಮನೆಯಲ್ಲಿ ತುಂಬಾ ಕಷ್ಟ ಪಡುತ್ತಿದ್ದಾಳೆ. ಅವರೆಲ್ಲರೂ ಅವಳಿಗೆ ತುಂಬಾನೇ ಹಿಂಸಿಸುತ್ತಿದ್ದಾರೆ ಎಂದು ಸ್ವಲ್ಪ ಜೋರಾಗಿ ಹೇಳಿದ್ದನ್ನು ಗಮನಿಸಿದ ವಕೀಲರು ಬಿಡೀ ಅಮ್ಮಾ.. ನಿಮ್ಮ ಮಗಳ ಸಮಸ್ಯೆ ಅರ್ಥವಾಯಿತು. ಆ ಸಮಸ್ಯೆಯನ್ನು ಬಗೆ ಹರಿಸುವ ಮೊದಲು ಕೆಲವೊಂದು ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸಿ ಎಂದು ಹೇಳುತ್ತಲೇ,

ನಿಮ್ಮ ಮನೆಯಲ್ಲಿ ನೀವೇ ಆಡುಗೆ ಮಾಡ್ತೀರಲ್ವಾ? ಹಾಗೆ ಅಡುಗೆ ಮಾಡುವಾಗ ನೀವು ಎಷ್ಟು ಸಲಾ ಕೈ ಆಡಿಸುತ್ತೀರೀ? ಎಂದು ಕೇಳಿದರು.

ಹೌದು ಸರ್ ನಾನೇ ಅಡುಗೆ ಮಾಡ್ತೀನಿ. ಅಡುಗೆ ಮಾಡುವಾಗ ತಳ ಹಿಡಿಯದಿರಲಿ ಎಂದು ಕೈ ಆಡಿಸಿ ನಂತರ ಕೈ ಆಡಿಸುವುದಿಲ್ಲ ಎಂದರು.

ಹಾಗೆ ಕೈಯ್ಯಾಡಿಸಿದರೇ ಏನಾಗುತ್ತದೆ? ಎಂದು ಕೇಳಿದ ಮರು ಪ್ರಶ್ನೆಗೆ

ಹುಡುಗಿಯ ತಾಯಿ ಇಲ್ಲಾ ಸರ್ ಹಾಗೆ ಪದೇ ಪದೇ ಕೈಯ್ಯಾಡಿಸುತ್ತಿದ್ದಲ್ಲಿ ಅಡುಗೆ ಹಳಸಿಹೋಗುತ್ತದೆ ಎಂದರು.

amma

ಅಮ್ಮಾ ಇದೇ ಕೆಲಸವನ್ನು ನೀವು ನಿಮ್ಮ ಮಗಳ ಜೀವನದಲ್ಲಿಯೂ ಅಳವಡಿಸಿಕೊಂಡಲ್ಲಿ ಆಕೆಯ ಜೀವನ ಹಸನಾಗಿ ಇರುತ್ತದೆ. ಹೌದು ನಿಜ ನಿಮ್ಮ ಒಬ್ಬಳೇ ಮಗಳನ್ನು ಬಹಳ ಮುದ್ದಿನಿಂದ ಸಾಕಿ ಸಲಹಿದ್ದೀರಿ. ಎಲ್ಲಿ ನೆಲದ ಮೇಲೆ ಕಾಲಿಟ್ಟರೆ ಆಕೆಯ ಪಾದಗಳು ಸವೆದು ಹೋಗಬಹುದು ಎನ್ನುವಷ್ಟರ ಮಟ್ಟಿಗೆ ಸಾಕಿ ಸಲಹಿದ್ದೀರಿ. ಆಕೆಗೆ ಒಳ್ಳೆಯ ವಿದ್ಯೆ, ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಕಲಿಸಿದ್ದೀರಿ. ನೀವೀಗ ಅರ್ಥ ಮಾಡಿ ಕೊಳ್ಳಬೇಕಾದ ಸತ್ಯವೇನೆಂದರೆ ಮದುವೆಗೆ ಮುಂಚೆ ಆಕೆ ನಿಮ್ಮ ಮಗಳು. ಮದುವೆ ಆದ ನಂತರ ಆಕೆ ಮತ್ತೊಬ್ಬರ ಮನೆಯ ಸೊಸೆ. ಅಲ್ಲಿ ಆಕೆಗೆ ಅದ ಜವಾಬ್ಧಾರಿಗಳು ಇರುತ್ತವೆ. ಸಣ್ಣ ಮಗು ಆರಂಭದಲ್ಲಿ ನಡಿಗೆ ಕಲಿಯುವಾಗ ಬಿದ್ದು ಎದ್ದು ನಂತರ ತನ್ನ ಪಾಡಿಗೆ ನಡಿಗೆಯನ್ನು ಕಲಿತು ಕೊಳ್ಳುತ್ತದೆ. ಮಗು ಬೀಳುತ್ತದೆ ಎಂದು ಅದನ್ನು ಕಂಕಳಲ್ಲಿ ಎತ್ತಿಕೊಂಡೇ ಹೋಗುತ್ತಿದ್ದಲ್ಲಿ ಅದು ಎಂದಿಗೂ ಸ್ವತಂತ್ರ್ಯವಾಗಿ ನಡಿಗೆಯನ್ನು ಕಲಿಯುವುದೇ ಇಲ್ಲ ಅಲ್ಲವೇ?.

ಆರಂಭದಲ್ಲಿ ಅದು ಆಕೆಗೆ ಗಂಡನ ಮನೆ ಎನಿಸಿದರು ಕ್ರಮೇಣ ಅದು ಆಕೆಯ ಮನೆಯೇ ಅಗುತ್ತದೆ. ಕೆಲ ವರ್ಷಗಳ ಹಿಂದೆ ನೀವೂ ಅದೇ ರೀತಿಯಲ್ಲಿಯೇ ಗಂಡನ ಮನೆಗೆ ಬಂದು ಎಲ್ಲವನ್ನೂ ಕಲಿತುಕೊಂಡಿರಲಿಲ್ಲವೇ? ಅದೇ ರೀತಿಯಲ್ಲಿ ಆಕೆಯೂ ಕೆಲ ದಿನಗಳಲ್ಲಿ ಕಲಿತುಕೊಳ್ಳುತ್ತಾಳೆ. ಆಕೆ ಖುದ್ದಾಗಿ ನಿಮ್ಮ ಬಳಿ ಯಾವುದಾದರೂ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಮಾತ್ರವೇ ಅದಕ್ಕೆ ಸೂಕ್ತವಾದ ಪರಿಹಾರ ನೀಡಬೇಕಷ್ಟೇ ಹೊರತು, ಅನಾವಶ್ಯಕವಾಗಿ ಆಕೆಯ ಸಂಸಾರದಲ್ಲಿ ಮೂಗು ತೂರಿಸಿಕೊಂಡು ಹೋದಲ್ಲಿ, ಅವಳು ತನ್ನ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಸಂಸಾರ ಒಡೆದು ಹೋಗಿ ಆಕೆ ಖಿನ್ನತೆಗೆ ಹೋಗುವ ಸಾಧ್ಯತೆಯೂ ಇದೆ.

atte2

ಮದುವೆಯಾಗಿ ಕೇವಲ ಮೂರ್ನಾಲ್ಕು ತಿಂಗಳುಗಳಾಗಿವೆ. ಆಕೆ ಅವಳ ಗಂಡನ ಮನೆಯವರ ನಡುವಳಿಕೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಹೊಂದಿಕೊಂಡು ಹೋಗಲು ಸಮಯಾವಕಾಶ ಕೊಡಬೇಕೇ ಹೊರತು, ಅವಳಿಗೆ ಈ ರೀತಿಯಾಗಿ ತಪ್ಪು ಹೆಜ್ಜೆಯನ್ನು ಇಡುವಂತೆ ಮಾಡಬೇಡಿ, ಸಂಬಂಧವನ್ನು ಒಗ್ಗೂಡಿಸಲು ಪ್ರಯತ್ನಿಸಬೇಕೇ ಹೊರತು ಸಂಬಂದ ಒಡೆಯುವ ಕೆಲಸವನ್ನು ದಯವಿಟ್ಟು ಮಾಡಬೇಡಿ ನಿಮಗೆ ಮತ್ತು ನಿಮ್ಮ ಮಗಳಿಗೆ ಶುಭವಾಗಲಿ ಎಂದು ಹೇಳಿ ಕಳುಹಿಸಿದರು.

ಇನ್ನು ಹೊಸದಾಗಿ ಹೆಣ್ಣು ಮಗಳದ್ದೂ ಒಂದಷ್ಟು ಜವಾಬ್ಧಾರಿ ಇರುತ್ತದೆ. ಆಕೆ ಹೇಗೆ ತನ್ನ ಗಂಡನ ಮನೆಯವರನ್ನು ಅರ್ಥಮಾಡಿಕೊಳ್ಳುತ್ತಾಳೋ ಹಾಗೆಯೇ ಆಕೆಯ ಪತಿಯೂ ತನ್ನ ಮನೆಯವರನ್ನು ಅರ್ಥ ಮಾಡಿಕೊಳ್ಳಲು ಸಮಯ ಕೊಡಬೇಕು. ಒಬ್ಬರ ಬಗ್ಗೆ ಮತ್ತೊಬ್ಬರ ಅಭಿಪ್ರಾಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಕಾರಣ, ಆಕೆ ತಾನೇ ತನ್ನ ಮನೆಯವರ ಬಗ್ಗೆ ಆಭಿಪ್ರಾಯಗಳನ್ನು ಕಟ್ಟಿಕೊಡುವ ಮೂಲಕ ತಪ್ಪು ಸಂದೇಶ ರವಾನಿಸಬಾರದು.

WhatsApp Image 2021-08-01 at 11.27.17 PM

ಹೊಸಾ ಮಧುಮಗಳನ್ನು ನೆನಪಿಸಿಕೊಂಡಾಗ ಈ ಚಿತ್ರದಲ್ಲಿ ಧ್ಯಾನ್ಯಗಳನ್ನು ತುಂಬಿದ್ದ ಡಬ್ಬದಲ್ಲಿ ಸಿಕ್ಕಿಕೊಂಡ ಇಲಿ ಮರಿಯ ಕಥೆ ನೆನಪಾಗುತ್ತದೆ ಅಲ್ಲೊಂದು ಇಲಿ ಮರಿ ಧಾನ್ಯಗಳಿಂದ ತುಂಬಿದ ಡಬ್ಬದೊಳಗೆ ಹೋದ ತಕ್ಷಣ ತನ್ನಷ್ಟು ಸುಖೀ ಯಾರೋ ಇಲ್ಲಾ ಎಂದು ಭಾವಿಸಿ ಬೇರಾವುದನ್ನೂ ಯೋಚಿಸದೇ ತನ್ನಷ್ಟಕ್ಕೆ ತಾನು ಸದ್ದಿಲ್ಲದೇ ಧಾನ್ಯಗಳನ್ನು ತಿನ್ನತೊಡಗಿತು. ಡಬ್ಬಿಯಲ್ಲಿ ಧಾನ್ಯ ಕಡಿಮೆ ಯಾಗುತ್ತಿದ್ದಂತೆಯೇ ಅದಕ್ಕೆ ಅರಿವಿಲ್ಲದೆಯೇ ಅದು ಡಬ್ಬದಲ್ಲಿ ಬಂಧಿಯಾಗಿ ಹೊರ ಬರಲು ಗೊತ್ತಾಗದೇ ಪರದಾಡತೊಡಗಿತು.

ತವರಿನ ಬೆಂಬಲ ತನಗೆ ಸದಾಕಾಲವೂ ಇರುತ್ತದೆ ಎಂದು ಭಾವಿಸಿದ ಗಂಡನ ಮನೆಗೆ ಹೋದ ಮಗಳು ಆರಂಭದಲ್ಲಿ ತನ್ನ ಗಂಡನ ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳನ್ನೂ ತನ್ನ ತಾಯಿಯ ಮನೆಗೆ ಹೇಳುತ್ತಲೇ ಹೋಗುವ ಮುಖಾಂತರ ಆಕೆಗೇ ಅರಿವಿಲ್ಲದಂತೆಯೇ ದಬ್ಬದಲ್ಲಿ ಸಿಕ್ಕಿಕೊಂಡ ಇಲಿ ಮರಿಯಂತೆ ತಾನೇ ಸಿಕ್ಕಿ ಹಾಕಿಕೊಂಡು ಹೊರಬರಲಾಗದೇ ಒದ್ದಾಡುವಂತಹ ಪರಿಸ್ಥಿತಿ ತಂದುಕೊಳ್ಳುತ್ತಾಳೆ.

ಅತ್ತ ದರಿ ಇತ್ತ ಪುಲಿ ಎನ್ನುವಂತೆ ಅತ್ತ ತವರನ್ನು ಬಿಡಲಾಗದೇ ಇತ್ತ ಗಂಡನ ಮನೆಯಲ್ಲಿಯೂ ಹೊಂದಿಕೊಳ್ಳಲಾಗದೇ ವಿಲಿ ವಿಲಿ ಒದ್ದಾಡುವಂತಾಗುತ್ತದೆ. ಈ ಪರದಾಟ ಕೆಲವೊಮ್ಮೆ ಅತಿರೇಕಕ್ಕೂ ಹೋದಂತಹ ಉದಾಹರಣೆಗಳು ಹಲವಾರಿವೆ. ಹಾಗಾಗಿ ತಾಯಂದಿರು ತಮ್ಮ ಮಗಳ ಮೇಲೆ ಪ್ರೀತಿ ಇರಬೇಕೆಯೇ ಹೊರತು, ಅತೀಯಾದ ಕರಡಿ ಪ್ರೀತಿಯಿಂದ ಮಗಳ ಬಾಳಿನಲ್ಲಿ ಖಳನಾಯಕಿಯಾಗಬಾರದು. ಅದೇ ರೀತಿ ಮಗಳಿಗೂ ಸಹಾ ತವರಿನ ಮೇಲೆ ಪ್ರೀತಿ ಇರಬೇಕೇ ಹೊರತು, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತನ್ನು ಸದಾಕಾಲವೂ ಮನಸ್ಸಿನಲ್ಲಿಟ್ಟು ಕೊಂಡು ತನ್ನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ತನ್ನ ಜೀವನವನ್ನು ಸರಿ ದಾರಿಗೆ ಕೊಂಡೊಯ್ಯುವ ಮೂಲಕ ಹೋದ ಮನೆಗೂ, ತನ್ನ ತವರಿಗೂ ಕೀರ್ತಿ ತರುವಂತಾಗಬೇಕು.

ಏನಂತೀರಿ?
ನಿಮ್ಮವನೇ ಉಮಾಸುತ

ಅತ್ತೆ-ಸೊಸೆ, ಸಂಬಂಧ-ಅನುಬಂಧ

husbandಪತ್ನಿ ಮತ್ತೆ ಮತ್ತೆ ತಾಯಿಯ ಮೇಲೆ ಆರೋಪ ಮಾಡುತ್ತಿದ್ದಳು. ಆದರೆ ಪತಿ ಅವಳಿಗೆ ತನ್ನ ಮಾತಿನ ಮಿತಿ ಮೀರಬೇಡವೆಂದು ಮನವಿ ಮಾಡುತ್ತಿದ್ದ. ಆದರೂ ಪತ್ನಿ ಮೌನವಾಗದೆ ಜೋರು ಜೋರಾಗಿ ಟೇಬಲ್ ಮೇಲೆ ಕೈಸನ್ನೆ ಮಾಡುತ್ತಾ ಕೂಗಿ ಹೇಳುತ್ತಿದ್ದಳು ನಾನು ಚಿನ್ನದ ಹಾರವನ್ನು ಇಲ್ಲೇ ಟೇಬಲ್ ಮೇಲೆ ಇಟ್ಟಿದ್ದೆ, ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರು ಕೋಣೆಯೊಳಗೆ ಬಂದಿಲ್ಲ, ಮನೆಯಲ್ಲಿ ಮೂರನೆಯವರು ನಿಮ್ಮ ತಾಯಿಯೇ. ಹಾಗಾಗಿ ಅವರೇ ಅದನ್ನು ತೆಗೆದುಕೊಂಡಿದ್ದಾರೆ.

ಅಲ್ಲಿಯವರೆಗೂ ಸುಮ್ಮನಿದ್ದ ಪತಿ, ತನ್ನ ತಾಯಿಯ ಮೇಲೆ ಕಳ್ಳತನದ ಆರೋಪ ಬಂದ ಕೂಡಲೇ, ಅವನ ಸಂಯಮವನ್ನೇ ಮೀರಿಸಿತು. ಅವನು ತನ್ನ ಪತ್ನಿಯ ಕಪಾಳಕ್ಕೊಂದು ಜೋರಾಗಿ ಬಾರಿಸಿದ. ಇನ್ನೂ ಮದುವೆಯಾಗಿ ಮೂರು ತಿಂಗಳು ಕಳೆದಿರಲಿಲ್ಲ.

ಹೊಡೆತ ಹೆಂಡತಿಗೆ ಸಹನೆಯಾಗಲಿಲ್ಲ ಮನೆ ಬಿಟ್ಟು ಹೊರಟು ಬಿಟ್ಟಳು.. ಹಾಗೆ ಹೋಗುವಾಗ, ನಿಮಗೆ ತಾಯಿಯ ಮೇಲೆ ಯಾಕೆ ಇಷ್ಟು ಭರವಸೆ ? ಎಂದು ಕೇಳಿಯೇ ಬಿಟ್ಟಳು

ಪತಿ ನೀಡಿದ ಪ್ರತ್ಯುತ್ತರದಿಂದ ಬಾಗಿಲ ಹಿಂದೆ ಬಗ್ಗಿ ಹೋದ ಬಡಕಲು ಶರೀರದ ಹೆತ್ತವ್ವನ ಮನಸ್ಸಿನ ದುಃಖ ಕಣ್ಣಿನ ಮೂಲಕ ಧುಮ್ಮಿಕಿತು.

ಪತಿ ಪತ್ನಿಗೆ ತನ್ನ ಪೂರ್ವ ಇತಿಹಾಸವನ್ನು ಈ ರೀತಿ ಪರಿಚಯಿಸುತ್ತಾನೆ

ನಾನು ಚಿಕ್ಕವನಾಗಿರುವಾಗಲೇ ತಂದೆಯನ್ನು ಕಳೆದು ಕೊಂಡೆ, ನನ್ನ ಪಾಲನೆ ಪೋಷಣೆಗಾಗಿ ಹೆತ್ತ ಅವ್ವ ಬೇರೆಯವರ ಮನೆಯಲ್ಲಿ ಪಾತ್ರೆ ಮುಸುರೆ ತಿಕ್ಕಿ ಏನು ಸಂಪಾದಿಸಲು ಸಾಧ್ಯವಿತ್ತೋ ಅದರಿಂದ ಒಂದು ಹೊತ್ತಿನ ಊಟ ತರುತ್ತಿದ್ದಳು.

ತಾಯಿ ತಟ್ಟೆಯೊಂದರಲ್ಲಿ ನನಗೆ ಊಟ ಬಡಿಸಿ ಖಾಲಿ ಡಬ್ಬವನ್ನು ಮುಚ್ಚಿ ಇಡುತ್ತಿದ್ದಳು. ನನ್ನ ಊಟ ಇದರಲ್ಲಿದೆ ನೀನು ಊಟ ಮಾಡು ಅನ್ನುತ್ತಿದ್ದಳು. ನಾನು ಸಹ ಪ್ರತಿದಿನವೂ ಅರ್ಧ ಊಟ ಮಾಡಿ ಹೊಟ್ಟೆ ತುಂಬಿ ಹೋಯಿತು ಎಂದು ಎದ್ದು ಓಡುತ್ತಿದ್ದೆ. ಅಮ್ಮ ನನ್ನ ಎಂಜಿಲು ಊಟ ಮಾಡಿ ನನ್ನನ್ನು ಬೆಳೆಸಿ ದೊಡ್ಡವನಾಗಿ ಮಾಡಿ ನಾನು ಇಂದು ಮೂರು ಹೊತ್ತು ಊಟ ಸಂಪಾದಿಸುವ ಮಟ್ಟಕ್ಕೆ ತಂದಿದ್ದಾಳೆ ನನಗಾಗಿ ಅವಳು ತನ್ನ ಎಲ್ಲಾ ಇಚ್ಚೆಯನ್ನೇ ಕೊಂದಿದ್ದಾಳೆ.ಆ ತಾಯಿಗೆ ಈ ವಯಸ್ಸಿನಲ್ಲಿ ನಿನ್ನ ಚಿನ್ನದ ಹಾರದ ಹಸಿವು ಇರಲಿಕ್ಕಿಲ್ಲ.

ನನಗೆ ಮೂರು ತಿಂಗಳಿನಿಂದ ನಿನ್ನ ಪರಿಚಯ ಅಷ್ಟೇ, ನನ್ನ ಅವ್ವನ ತಪಸ್ಸನ್ನು ನಾನು ಇಪ್ಪತ್ತೈದು ವರುಷದಿಂದ ನೋಡುತ್ತಿದ್ದೇನೆ.

ಮಗನ ಮಾತನ್ನು ಕೇಳಿದ ಆ ಮುಗ್ಧ ಮಾತೆಗೆ ಕಂಬನಿ ನಯನಗಳಿಂದ ನಿಲ್ಲದೆ ಹರಿಯಿತು ಹೆತ್ತವ್ವನಿಗೆ ಅರ್ಥವೇ ಆಗಲಿಲ್ಲ ತಾನು ಮಗನಿಗೆ ಬಡಿಸಿದ ಅರ್ಧ ಊಟದ ಋುಣ ಅವನು ತೀರಿಸುತ್ತಿದ್ದಾನಾ? ಇಲ್ಲವೇ ಅವನು ಉಳಿಸಿದ ಅರ್ಧ ಊಟದ ಋುಣ ನಾನು ತೀರಿಸುತ್ತಿದ್ದೇನಾ?

#ಕಥೆಯಲ್ಲಾ ಇದು ವ್ಯಕ್ತಿಯ ವ್ಯಥೆ#

ಅಮ್ಮ ದೇವರಲ್ಲ, ಅವಳ ಮುಂದೆ ದೇವರು ಏನೇನೂ ಇಲ್ಲಾ.

ಈ ಕಥೆಯನ್ನು ನನ್ನ ತಂಗಿ ನಮಗೆ ವಾಟ್ಸಾಪ್ ಮುಖಾಂತರ ಕಳುಹಿಸಿದಾಗ ಈ ಕಥೆ ಏಕೋ ಸಂಪೂರ್ಣವಾಗಿರದೇ ಕೇವಲ ಒಂದೇ ದೃಷ್ಟಿಕೋನದಲ್ಲಿದೆ ಎಂದೆನಿಸಿ ನನ್ನ ಕಲ್ಪನೆಯಲ್ಲಿ ಕಥೆಯನ್ನು ಮುಂದುವರಿಸಿದ್ದೇನೆ.

ಹೊಸದಾಗಿ ಮದುವೆಯಾದ ಗಂಡನಿಂದ ಅಚಾನಕ್ಕಾಗಿ ಈ ರೀತಿಯ ಆಘಾತದಿಂದ ಮನನೊಂದ ಹೆಂಡತಿ, ‌ಕೋಪ ಮಾಡಿಕೊಂಡು ದಡದಡನೆ ಕೈಗೆ ಸಿಕ್ಕ ನಾಲ್ಕಾರು. ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಮನೆಯಿಂದ ಆಚೇ ಹೋಗ್ತಾಳೆ

ಸೊಸೆ ಕೋಪ ಮಾಡೊಂಡು ಮನೆ ಬಿಟ್ಟು ಹೋಗೋದನ್ನು ತಾಳಲಾಗದ ಅತ್ತೇ, ಮಗೂ ಗಂಡ ಹೆಂಡ್ತಿ ಮಧ್ಯೆ ಸಣ್ಣ ಪುಟ್ಟ ಜಗಳ ಬಂದು ಹೋಗಾ ಇರುತ್ತೆ ಅದಕ್ಕೆ ಹೆಂಡ್ತಿ ಮೇಲೆ ಕೈಮಾಡುವುದು ಸಭ್ಯ ಗಂಡನ ಲಕ್ಷಣವಲ್ಲ. ಹೋಗಿ ನಿನ್ನ ಹೆಂಡ್ತಿನಾ ಕರ್ಕೊಂಡು ಬಾ ಎನ್ನುತ್ತಾರೆ.

ಹೆಂಡತಿ ಮೇಲೆ ಕೈ ಮಾಡಿದ್ದಕ್ಕೆ ಪಶ್ಚಾತ್ತಾಪವಾದರೂ, ತಾನೇ ಹೋಗಿ ಸಮಾಧಾನ ಪಡಿಸಿದರೆ, ಎಲ್ಲಿ ತನ್ನ ಗೌರವ ಕಡಿಮೆ ಆಗುತ್ತದೋ ಎಂಬ ಪುರುಷಪ್ರಧಾನ ಅಹಂ ನಿಂದಾಗಿ. ಸುಮ್ಮನಿರಮ್ಮಾ, ಸಂಜೆ ಹೊತ್ತಿಗೆ ಎಲ್ಲವು ತಣ್ಣಗಾಗಿ ಅವ್ಳೇ ಬರ್ತಾಳೆ ಎಂದು ಅಮ್ಮನ ಮೇಲೆ ತನ್ನ ಉತ್ತರನ ಪೌರುಷ ತೋರಿಸುತ್ತಾನೆ.

ಆಟೋ ಹಿಡಿದು ತವರು ಮನೆಗೆ ಬಂದು ಆಟೋದವನ ಲೆಕ್ಕ ಚುಕ್ತಾ ಮಾಡಿ, ಇನ್ನೇನು ಅಮ್ಮನ ಮನೆಯ ಹೊಸಿಲೊಳಗೆ‌ ಕಾಲು ಇಡಬೇಕು ಎನ್ನುವಷ್ಟರಲ್ಲಿ ಅದಾವುದೋ ಸಮಾರಂಭಕ್ಕೆ ಹೋಗಲು ಸಿದ್ಧರಾಗಿದ್ದ ತನ್ನ ತಂದೆ ತಾಯಿ ಮನೆಯಿಂದ ಹೊರಗೆ ಬರುತ್ತಿದ್ದದ್ದನ್ನು ನೋಡುತ್ತಾಳೆ.

ಅದೇ ಸಮಯಕ್ಕೆ ಮಗಳ ಕಣ್ಣು ತನ್ನ ತಾಯಿಯ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಆಭರಣಗಳತ್ತ ಹರಿಯುತ್ತದೆ. ತಾನು ಯಾವ ಚಿನ್ನದ ಹಾರ ಕಳುವಾಗಿದೆ ಎಂದು ಕೊಂಡಿದ್ದಳೋ ಅದೇ ಚಿನ್ನದ ಹಾರ ಆಕೆಯ ತಾಯಿಯ ಕೊರಳಲ್ಲಿದ್ದದ್ದು ಕಂಡು ಆಕೆಗೆ ಅಚ್ಚರಿಯ‌ ಜೊತೆಗೆ ಎಂತಹ ಅಚಾತುರ್ಯವಾಗಿ ಹೋಯಿತು ಎಂಬ ಅರಿವಾಗುತ್ತದೆ. ಕೂಡಲೇ ಸಾವರಿಸಿಕೊಂಡು ಏನಮ್ಮಾ ಯಾವ ಕಡೆ‌ ಪ್ರಯಾಣ? ಎನ್ನುತ್ತಾಳೆ.

ಅಯ್ಯೋ ಮಗಳೇ, ಏನು ಬಂದದ್ದು ಏನು ಸಮಾಚಾರ? ಎಲ್ಲಾ ಆರಾಮಾ? ನಾವೇ ಇನ್ನು ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಮನೆಗೆ ಬರ್ತಾ ಇದ್ವೀ. ನಿಮ್ಮ‌ ಮನೆಯ ಹತ್ತಿರದಲ್ಲೇ, ನಿಮ್ಮಪ್ಪನ ಸ್ನೇಹಿತರ ಮಗಳ ಮದುವೆ ಇದೆ. ಅಲ್ಲಿಗೆ ಬಂದು ಹಾಗೇ ನಿಮ್ಮ‌ ಮನೆಗೆ ಬಂದು ಈ ಚಿನ್ನದ ಹಾರವನ್ನು ‌ಕೊಟ್ಟು ಹೋಗೋಣಾ ಅಂತಿದ್ವಿ ಎನ್ನುತ್ತಾರೆ ಅವರ ತಾಯಿ.

ಮೊನ್ನೆ ನೀನು ಅದ್ಯಾವುದೋ ಪಾರ್ಟಿ ಮುಗಿಸಿ ನಮ್ಮ ಮನೆಗೆ ಬಂದಿದ್ದಾಗ ಬಟ್ಟೆ ಬದಲಾಯಿಸುವಾಗ ಈ ಚಿನ್ನದ ಹಾರವನ್ನೂ ನಿನ್ನ ಡ್ರಸಿಂಗ್ ಟೇಬಲ್ ಮೇಲೆ ಬಿಚ್ಚಿಟ್ಟು ಮರೆತು ಹೋಗಿದ್ದೀ. ನೀನು‌ ಹೋದ್ಮೇಲೆ ನಾವೂ ಗಮನಿಸಿದ್ವೀ. ಹೇಗೂ ಇವತ್ತು ನಿಮ್ಮ ಮನೆ ಹತ್ರಾನೇ ಬರ್ತೀವಲ್ಲಾ, ಆಗ್ಲೇ ಕೊಡೋಣ ಎಂದು ಸುಮ್ಮನಾದ್ವೀ. ಸುಮ್ಮನೆ‌ ವ್ಯಾನಿಟಿ ಬ್ಲಾಗಿನಲ್ಲಿ ಇಟ್ಟುಕೊಳ್ಳುವ ಬದಲು ಕುತ್ತಿಗೆಗೆ ಹಾಕಿಕೊಂಡಿದ್ದೇನೆ. ಬೇಜಾರು‌ ಮಾಡ್ಕೋ ಬೇಡ್ವೇ. ಎಂದು ಬಡ ಬಡನೇ‌ ಹೆಂಡತಿ ಮಾತನಾಡುತ್ತಿದ್ದದ್ದನ್ನು ಕಂಡ ಆಕೆಯ ಯಜಮಾನರು,

ಇದೇನೇ? ಮನೆಗೆ ಬಂದ ಮಗಳನ್ನು ಬಾಗಿಲಲ್ಲೇ ನಿಲ್ಲಿಸಿ‌ ಮಾತ್ನಾಡಿಸ್ತಾ ಇದ್ಯಾ? ಒಳಗೆ‌ ಕರ್ದು ಬಂದ ಸಮಾಚಾರ ವಿಚಾರಿಸು.‌ ಮದುವೆ ಮಹೂರ್ತಕ್ಕೆ‌ ಇನ್ನೂ ಸಮಯವಿದೆ ಎಂದು ಹೇಳುತ್ತಲೇ, ಏನಮ್ಮಾ ಮಗಳೇ, ಒಬ್ಳೇ ಬಂದಿದ್ದೀಯಾ? ಅಳಿಯಂದಿರು ಎಲ್ಲಿ? ನಿಮ್ಮತ್ತೆ ಚೆನ್ನಾಗಿದ್ದಾರಾ? ಅವರು ಬಿಡು ಚೆನ್ನಾಗಿಯೇ ಇರ್ತಾರೆ. ಎಷ್ಠೇ ಆಗಲಿ ನೀನು ನಮ್ಮ ಮಗಳಲ್ಲವೇ,ಅವರನ್ನು ಚೆನ್ನಾಗಿಯೇ ನೋಡ್ಕೋತಿರ್ತೀಯಾ ಎನ್ನುತ್ತಾರೆ.

ಅಪ್ಪನ ಆ ಮಾತುಗಳು ಮಗಳ ಮನಸ್ಸಿಗೆ ಚಾಕು ಚುಚ್ಚಿದಂತೆ ನಾಟಿ, ಕಸಿವಿಸಿಯಾದರೂ,  ಅದನ್ನು ತೋರಿಸಿ ಕೊಳ್ಳದೇ, ಹೂಂ ಅಪ್ಪಾ ಮನೆಯಲ್ಲಿ ಎಲ್ಲರೂ ಚೆನ್ನಾಗಿಯೇ ಇದ್ದೇವೆ. ಇವತ್ತು ಸಂಜೆ ನಮ್ಮ ಮನೆಯವರ ಸ್ನೇಹಿತರ ರಿಸೆಶ್ಪನ್ನಿಗೆ ಹೋಗೋದಿತ್ತು. ಈ ಮೂರು ತಿಂಗ್ಳಲ್ಲಿ, ಅತ್ತೆಯ ಕೈ ರುಚಿ ತಿಂದು ತಿಂದು ಸ್ವಲ್ಪ ದಪ್ಪಗೆ ಆಗಿಬಿಟ್ಟಿರುವ ಕಾರಣ, ಈ ಬಟ್ಟೆಗಳು ಸ್ವಲ್ಪ ಟೈಟಾಗ್ತಾ‌ ಇತ್ತು. ಹಾಗಾಗಿ ಇಲ್ಲೇ ಟೈಲರ್ ಅಂಗಡಿ ಹತ್ರಾ ನಮ್ಮ ಮನೆಯವರೇ ಬಿಟ್ಟು ಅವರು ಆಫೀಸಿಗೆ ಹೋದ್ರು. ಆದ್ರೇ ಟೈಲರ್ ಅಂಗಡಿ ಇನ್ನೂ ತೆಗೆಯಲು‌ ಇನ್ನೂ ಅರ್ಧ‌ ಮುಕ್ಕಾಲು ಗಂಟೆ ಆಗತ್ತೇ ಅಂತ ಅದರ ಪಕ್ಕದ ಅಂಗಡಿಯವರು ಹೇಳಿದ್ರು. ಹಾಗಾಗಿ‌ ಮನೆಗೆ ಬಂದೇ. ನೀವು ಮದುವೆ ಮನೆಗೆ ಹೋಗಿ ಬನ್ನಿ ನಾನು ಟೈಲರ್ ಹತ್ರಾ ಹೋಗಿ ಬರ್ತೀನಿ ಎಂದು ಹೇಳುತ್ತಾ ಮನೆಯ ಒಳಗೂ ಹೋಗದೇ ಮನೆಯ ಹೊರಗೇ ಅಪ್ಪಾ ಅಮ್ಮನ ಕಾಲಿಗೆ ನಮಸ್ಕರಿಸಿ, ಮದ್ವೇ ಮುಗಿಸಿಕೊಂಡು ನಮ್ಮ ಮನೆಗೆ ಬನ್ನಿ ನಾನು ಕಾಯ್ತಾ ಇರ್ತೀನಿ ಎಂದು ಹೇಳಿ ಮನೆಯಿಂದ ಸ್ವಲ್ಪ ದೂರ ಬಂದು ಯಾರಿಗೂ ಕಾಣದ ಹಾಗೆ ಆಟೋ ಹತ್ತಿ ತನ್ನ ಮನೆಗೆ ಹೋದಳು.

ಗಂಡ ಮತ್ತು ಅತ್ತೇ ಮೇಲೆ‌‌ ಕೋಪ ಮಾಡ್ಕೋಂಡು ದುಡುದುಡನೇ ಬ್ಯಾಗ್ ತೆಗೆದುಕೊಂಡು ಹೋದವಳು‌ ಇಷ್ಟು ಬೇಗನೆ ಮನೆಗೆ ಬಂದು ಬಿಟ್ಟಳಲ್ಲಾ? ಎಂದು ಅತ್ತೆ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರೆ, ಸೀದಾ ಮನೆಯೊಳಗೆ ಬಂದು, ಚಪ್ಪಲಿಯನ್ನು ಮೂಲೆಯಲ್ಲಿ ಬಿಟ್ಟು ಅತ್ತೆಯ ಕಾಲು ಹಿಡಿದು ನನ್ನನ್ನು ಕ್ಷಮಿಸಿ ಬಿಡಿ ಅತ್ತೇ!! ನಾನು ವಿನಾಕಾರಣ ನಿಮ್ಮ ಮೇಲೆ ಆರೋಪ ಮಾಡಿಬಿಟ್ಟೇ ಎಂದು‌ ಕಣ್ಣೀರು ಸುರಿಸುತ್ತಾಳೆ.

ಸೊಸೆಯ ಈ ರೀತಿಯ‌ ಮಾರ್ಪಾಟು ಅತ್ತೆಗೆ ಅಚ್ಚರಿ‌ ಮೂಡಿಸಿತಾದರೂ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ ಮೇಲೆ ಅವರನ್ನು ಕ್ಷಮಿಸುವುದು ದೊಡ್ಡ ಗುಣ‌ ಎಂದು ಸೊಸೆಯ ಬುಜವನ್ನು ಹಿಡಿದು ಮೇಲಕ್ಕೆ ಎಬ್ಬಿಸಿ ಸಂತೈಸುತ್ತಾರೆ.

atte6ಆತ್ತೆ ಕ್ಷಮಿಸಿದ್ದರಿಂದ ಸಂತಸಗೊಂಡ ಸೊಸೆ, ನಡೆದದ್ದೆಲ್ಲವನ್ನೂ ಕೂಲಂಕುಷವಾಗಿ ಅತ್ತೆಗೆ ತಿಳಿಸಿ ಇನ್ನೆಂದೂ ತನ್ನಿಂದ ಈ ರೀತಿಯ ತಪ್ಪಾಗದು ಎಂದು ಭಾಷೆ ಕೊಡುತ್ತಾಳಲ್ಲದೇ, ಅಂದಿನಿಂದ ಅವರಿಬ್ಬರೂ ಕೇವಲ ಅತ್ತೆ ಸೊಸೆಯಾಗಿರದೇ, ತಾಯಿ‌ ಮಗಳಂತೆ ಅನ್ಯೋನ್ಯವಾಗಿ ಸುಖವಾಗಿ ಬಾಳ ತೊಡಗಿದರು.

ಹಾವು ಮುಂಗುಸಿ ತರಹಾ ಕಿತ್ತಾಡುತ್ತಿದ್ದ ಅತ್ತೇ ಸೊಸೆಯರು ಇದ್ದಕ್ಕಿಂದ್ದಂತೆಯೇ ಒಂದಾಗಿದ್ದದ್ದನ್ನು ಗಮನಿಸಿದ ಮಗ, ಇದು ಹೇಗಾಯ್ತು ಎಂದು ತಿಳಿದುಕೊಳ್ಳುವ ಮನಸ್ಸಾದರೂ, ಜೇನುಗೂಡಿಕೆ ಕಲ್ಲು ಎಸೆದು ಜೇನುಹುಳಗಳಿಂದೇಕೆ ಕಚ್ಚಿಸಿಕೊಳ್ಳಬೇಕು ? ಎಂದು ಸುಮ್ಮನಾಗುತ್ತಾನೆ.

atte4ನಿಜ ಹೇಳ್ಬೇಕು ಅಂದ್ರೇ, ಯಾರ ಮನೆಯಲ್ಲಿ ಅತ್ತೇ ತನ್ನ ಸೊಸೆಯಲ್ಲಿ ಮಗಳನ್ನು ಕಾಣ್ತಾರೋ? ಯಾರ ಮನೆಯಲ್ಲಿ ಸೊಸೆ ತನ್ನ ಅತ್ತೆಯಲ್ಲಿ ತಾಯಿಯನ್ನು ಕಾಣ್ತಾರೋ ಆ ಮನೆ ಖಂಡಿತವಾಗಿಯೂ ನಂದಗೋಕುಲವಾಗಿರುತದೆ. ಅದೇ ರೀತಿ ಎಲ್ಲಾ ಹೆಣ್ಣು ಹೆತ್ತ ತಂದೆ ತಾಯಿಯರೂ ತಮ್ಮ ಮಗಳ ಸಂಸಾರ ಚೆನ್ನಾಗಿ ಇರಲಿ ಎಂದೇ ಬಯಸುತ್ತಾರೆಯೇ ಹೊರತು ಯಾರೂ ಮಗಳ ಸಂಸಾರ ಒಡೆಯಲು ಮುಂದಾಗುವುದಿಲ್ಲ.

atte5ಅದಕ್ಕೇ ನಾನು ಬಹಳಷ್ಟು ಬಾರೀ ಗಂಡು ಹೆಣ್ಣು ಜಾತಕ ಹೊಂದಾಣಿಕೆ ಮಾಡುವ ಸಮಯದಲ್ಲಿ ತಮಾಷೆಗೆಂದು ಹೇಳ್ತಾನೇ ಇರ್ತೀನಿ. ಗಂಡು ಹೆಣ್ಣು ಜಾತಕ ಹೊಂದಾಣಿಕೆ ಆಗ್ದೇ ಹೋದ್ರೋ ಅವರಿಬ್ಬರೂ ಸ್ಚಲ್ಪ ದಿನಗಳ ನಂತರ ಪರಸ್ಪರ ಅರ್ಥಮಾಡ್ಕೊಂಡು ಚೆನ್ನಾಗಿಯೇ ಸಂಸಾರ ಮಾಡಿ ಬಿಡುತ್ತಾರೆ. ಜಾತಕ ನೋಡುವಾಗ ಅತ್ತೇ ಸೊಸೆಯ ಜಾತಕಾ, ಅತ್ತೇ ಅಳಿಯನ ಜಾತಕಗಳು ಹೊಂದಾಣಿಕೆ ಆಗತ್ತಾ ಅಂತ ನೋಡಿಬಿಟ್ಟರೇ ಅವರ ಸಂಸಾರ ಆನಂದ ಸಾಗರವಾಗಿರುತ್ತದೆ ಅಲ್ವೇ?

ಈ ಕಥೆ ಇಷ್ಟ ಆದ್ರೇ ಲೈಕ್ ಮಾಡಿ ಎಲ್ಲಾ ಅಮ್ಮಾ ಅತ್ತೆ ಮತ್ತು ಸೊಸೆಯಂದಿರಿಗೆ ತಲುಪಿಸಿ.

ಏನಂತೀರೀ?

ನಿಮ್ಮವನೇ ಉಮಾಸುತ

ಕರ್ಮ

ನಮ್ಮ ಸನಾತನ ಧರ್ಮದಲ್ಲಿ ಕರ್ಮದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೇವೆ. ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ ಎಂಬ ನಂಬಿಕೆ ಇದೆ. ಆದರೆ ಈ ಕಲಿಗಾಲದಲ್ಲಿ ಅದು ಸ್ವಲ್ಪ ಬದಲಾಗಿ, ನಾವು ಮಾಡಿದ ಕರ್ಮವನ್ನು ಇಂದೇ ಡ್ರಾ, ಇಂದೇ ಬಹುಮಾನ ಎನ್ನುವ ಹಾಗೆ ಇಲ್ಲೇ ಅನುಭವಿಸುವ ಹೃದಯವಿದ್ರಾವಕ ಕಥೆಯೊಂದನ್ನು ಹೇಳಲು ಹೊರಟಿದ್ದೇನೆ.

ಧಾರವಾಡದ ಪ್ರಾಣೇಶ್ ಕುಲಕರ್ಣಿಯವರು ಇದ್ದಕ್ಕಿದ್ದಂತೆಯೇ ನಡು ರಾತ್ರಿಯಲ್ಲಿ ತಮ್ಮ ಪ್ರಾಣ ಸ್ನೇಹಿತ ಗುರುರಾಜ ದೇಶಪಾಂಡೆಯವರಿಗೆ ಕರೆಮಾಡಿದರು. ಇಬ್ಬರೂ ಒಳ್ಳೆಯ ಕೆಲಸದಲ್ಲಿದ್ದು ನಿವೃತ್ತರಾದವರೇ, ಹಾಗಾಗಿ ಗಾಡ ನಿದ್ದೆಯಲ್ಲಿದ್ದ ದೇಶಪಾಂಡೆಯವರು ಕರೆ ಬಂದ ಕೆಲ ಸಮಯದ ನಂತರವೇ ಕರೆ ಸ್ವೀಕರಿಸಲು ಮುಂದಾದರು. ಆದರೆ ಅತ್ತ ಕಡೆ ಬಹಳ ಆತಂಕದಲ್ಲಿದ್ದ ಕುಲಕರ್ಣಿಯವರು, ಛೇ!! ಇದೇನಿದು ಗೆಳೆಯ, ಇಷ್ಟು ಹೊತ್ತು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲವಲ್ಲಾ? ಆವನು ಆರಾಮಾಗಿದ್ದಾನೋ ಇಲ್ಲೊ? ಅಥವಾ.. ಎಂದು ನೂರಾರು ಆಲೋಚನೆ ಮಾಡುವಷ್ಟರಲ್ಲಿ ದೇಶಪಾಂಡೆಯವರೇ ಕರೆ ಮಾಡಿ, ದೋಸ್ತಾ, ಏನ್ ಪಾ!! ಸಮಾಚಾರ? ಇಷ್ಟೊಂದು ರಾತ್ರಿಯಾಗ ಕರೆ ಮಾಡಿದ್ದೀ? ಎಲ್ಲಾ ಆರಾಮ್ ಇದ್ದೀರಿ? ಎಂದು ಕೇಳಿದ ಕೂಡಲೇ, ಅದುವರೆಗೂ ದುಃಖವನ್ನು ತಡೆ ಹಿಡಿದಿದ್ದ ಕುಲಕರ್ಣಿಯವರು ಒಮ್ಮಿಂದೊಮ್ಮೆಲೆ, ಜೋರಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಏ… ಏ.. ಸಮಾಧಾನ ಮಾಡ್ಕೋ.. ನೀ ಹೀಗ್ ಅಳ್ತಾ ಕುಂದ್ರೆ ಏನಾತ್ ಎಂದು ನನಗೆ ತಿಳಿವಲ್ದು? ಸ್ವಲ್ಪ ಅಳು ನಿಂದ್ರಿಸಿ ಏನಾತು ವದರು ಎಂದು ಪ್ರೀತಿಯಿಂದಲೇ ಗೆಳೆಯನನ್ನು ಗದುರಿಸಿದರು. ದೇಶಪಾಂಡೆಯವರ ಜೋರು ಧನಿಗೆ ಸ್ವಲ್ಪ ತಣ್ಣಗಾದ ಕುಲಕರ್ಣಿಯವರು, ನನ್ನಾಕಿ ಲಕ್ಶ್ಮೀಗೆ ನಾಲ್ಕೈದು ದಿನಗಳಿಂದ ಆರಾಮಿಲ್ಲ. ಈಗ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಎದೆ ನೋವು ಅಂತಿದ್ದಾಳೆ ಏನು ಮಾಡ್ಲಿಕ್ಕೂ ತಿಳಿವಲ್ದು ಅದಕ್ಕೇ ನಿನಗೆ ಕರಿ ಮಾಡ್ದೇ ಅಂದ್ರು. ಅದನ್ನು ಕೇಳಿಸಿಕೊಂಡ ದೇಶಪಾಂಡೆಯವರು, ಸರಿ ಸರಿ ಸ್ವಲ್ಪ ಬಿಸಿ ನೀರು ಕುಡಿಸ್ತಾ ಇರು. ನಾನು ನನ್ನ ಮಗನ್ ಜೋಡಿ ಕಾರ್ ತಗೊಂಡ್ ಬರ್ತೀನಿ. ದವಾಖಾನೆಗೆ ಕರ್ಕೊಂಡು ಹೋಗೋಣು ಎಂದು ಹೇಳಿ, ಫೋನ್ ಕೆಳಗಿಟ್ಟು ಆತುರಾತುರದಲ್ಲಿ ತಮ್ಮ ಮಗ ಹರಿಯ ಜೊತೆ ಕುಲಕರ್ಣಿಯವರ ಮನೆಗೆ ಹೋಗಿ ಅವರ ಮನೆಯವರನ್ನು ಹತ್ತಿರದಲ್ಲೇ ಇದ್ದ ನರ್ಸಿಂಗ್ ಹೋಮ್ ಒಂದಕ್ಕೆ ಸೇರಿಸಿದರು. ಅಲ್ಲಿಯ ವೈದ್ಯರು ಆ ಕೂಡಲೇ ಪ್ರಥಮ ಚಿಕಿತ್ಸೆಯ ಜೊತೆ ಜೊತೆಯಲ್ಲಿಯೇ ECG ಮಾಡಿ ಸ್ವಲ್ಪ ಹೃದಯ ಸಂಬಂಧದ ತೊಂದರೆಯಿದೆ. ನಾಳೆ ಬೆಳಿಗ್ಗೆ ದೊಡ್ಡ ಡಾಕ್ಟರ್ ಆವರು ಬಂದು ಮುಂದಿನ ಚಿಕಿತ್ಸೆಗಳನ್ನು ನೋಡುತ್ತಾರೆ. ಅಲ್ಲಿಯವರೆಗೂ ಆವರಿಗೆ ನೋವಾಗದಂತೆ ನಾವು ನೋಡಿಕೊಳ್ತೇವೆ ಎಂದು ತಿಳಿಸಿದರು. ಮಾರನೇಯ ದಿನ ಬಂದ ಸರ್ಜನ್ ಅವರನ್ನು ಕೂಲಂಕುಶವಾಗಿ ಪರೀಕ್ಷಿಸಿ, ಸರಿಯಾದ ಸಮಯಕ್ಕೆ ಕರೆದು ತಂದಿದ್ದೀರಿ. ಈ ಕೂಡಲೇ ಒಂದು ಶಸ್ತ್ರಚಿಕಿತ್ಸೆ ಮಾಡಿದರೆ, ಒಂದೆರಡು ತಿಂಗಳೊಳಗೇ ಸರಿ ಹೋಗುತ್ತಾರೆ ಎಂದು ತಿಳಿಸಿ, ಶಸ್ತ್ರ ಚಿಕಿತ್ಸೆಗೆ ಸರಿ ಸುಮಾರು 8-10 ಲಕ್ಷಗಳು ಆಗಬಹುದು. ಅದನ್ನು ಎಷ್ಟು ಬೇಗ ಹೊಂದಿಸುತ್ತೀರೋ ಅಷ್ಟು ಬೇಗ ನಾವು ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದರು. ನೀವು ದುಡ್ಡಿನ ಬಗ್ಗೆ ಯಾವುದೇ ಯೋಚನೆ ಮಾಡದಿರಿ. ನಾವಿಗಲೇ ವಿಮೆ ಮಾಡಿಸಿದ್ದೇವೆ ಮತ್ತು ಅದಕ್ಕಿಂತಲೂ ಹೆಚ್ಚಿನ ಖರ್ಚಾದಲ್ಲಿ ಭರಿಸಲು ಸಿದ್ದವಿದ್ದೇವೆ. ಹಾಗಾಗಿ ತಡಮಾಡದೇ ಶಸ್ತ್ರಚಿಕಿತ್ಸೆಯನ್ನು ಮಾಡಿ ನನ್ನ ಮಡದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿ ಎಂದು ಕೇಳಿಕೊಂಡರು ಕುಲಕರ್ಣಿಯವರು.

ದೇವರ ದಯೆ ಮತ್ತು ವೈದ್ಯರ ಕೈಗುಣದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಕುಲಕರ್ಣಿಯವರ ಪತ್ನಿ ಲಕ್ಷ್ಮಿಯವರು ನಿಧಾನವಾಗಿ ಹುಶಾರಾಗುವಷ್ಟರಲ್ಲಿ, ಕುಲಕರ್ಣಿಯವರು ವಿದೇಶದಲ್ಲಿ ಇದ್ದ ತಮ್ಮ ಇಬ್ಬರು ಗಂಡು ಮಕ್ಕಳಿಗೂ ಕರೆ ಮಾಡಿ ಅವರ ತಾಯಿಯವರು ಗಂಭೀರ ಸ್ಥಿತಿಯಲ್ಲಿರುವುದನ್ನು ತಿಳಿಸಿ ಮಕ್ಕಳು ಮತ್ತು ಮೊಮ್ಮಕ್ಕಳನ್ನು ನೋಡಿಯಾದರೂ ಅವರ ಮಡದಿ ಆದಷ್ಟು ಬೇಗನೆ ಚೇತರಿಸಿಕೊಳ್ಳಬಹುದೇನೋ ಎಂದೆಣಿಸಿ, ಆದಷ್ಘು ಬೇಗನೆ ಅವರನ್ನು ನೋಡಲಿಕ್ಕೆ ಬರಲು ಸೂಚಿಸಿದ್ದರು. ಮೊದ ಮೊದಲು ಕೆಲಸ ತುಂಬಾ ಇದೆ. ಈಗ ಬರಲು ಸಾದ್ಯವಿಲ್ಲ. ದುಡ್ಡು ಎಷ್ಟೇ ಖರ್ಚಾದರೂ ಪರವಾಗಿಲ್ಲಾ. ದೊಡ್ಡ ಆಸ್ಪತ್ರೆಗೆ ಸೇರಿಸಿ ಅವರನ್ನು ಗುಣಪಡಿಸಿ. ಮನೆಗೆ ಬಂದ ಮೇಲೆ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಅವರನ್ನು ನೋಡಿ ಕೊಳ್ಳಲು ದಾದಿಯರ ವ್ಯವಸ್ಥೆ ಮಾಡೋಣ. ಆಡಿಗೆಯವರನ್ನು ನೇಮಿಸೋಣ ಎಂದೆಲ್ಲಾ ಹೇಳಿದ ಮಕ್ಕಳು, ತಮ್ಮ ತಂದೆಯವರ ಬಾರಿ, ಬಾರಿ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದಲೇ ತಾಯಿಯನ್ನು ನೋಡಲು ಸಕುಂಟ ಸಮೇತರಾಗಿ ಬಂದರು.

ತಂದೆ ಮಕ್ಕಳ ಮಾತುಕತೆಯ ಅರಿವಿಲ್ಲದಿದ್ದ ಕುಲಕರ್ಣಿಯವರ ಮಡದಿ, ಒಮ್ಮಿಂದೊಮ್ಮೆಲೆ ಇಬ್ಬರೂ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ನೋಡಿ ಬಹಳ ಸಂತೋಷಗೊಂಡರು. ಅವರ ಆಗಮನದ ಪರಿಣಾಮವಾಗಿಯೋ ಏನೋ? ವೈದ್ಯರು ಹೇಳಿದ್ದಕಿಂತ ಮೊದಲೇ ಸಂಪೂರ್ಣ ಗುಣಮುಖರಾಗಿ ಮನೆಯವರೆಲ್ಲರೂ ಕೂಡಿ ಅವರ ಮನೆದೇವರು ಮತ್ತು ಸುತ್ತ ಮುತ್ತಲಿನ ತೀರ್ಥಕ್ಷೇತ್ರಗಳಿಗೂ ಹೋಗಿ ಬಂದರು. ಅತ್ಯಂತ ಆಸೆ ಪಟ್ಟು ವಿಶಾಲವಾಗಿ ಕಟ್ಟಿದ್ದ ಮನೆಯಲ್ಲಿ ಅನೇಕ ವರ್ಷಗಳಿಂದಲೂ ಕೇವಲ ಅಜ್ಜಿ ಮತ್ತು ತಾತಂದಿರೇ ಇದ್ದದ್ದು ಈಗ ಎಲ್ಲರೂ ಬಂದ ಪರಿಣಾಮ ಮನೆಯಲ್ಲಿನ ಕಲರವ ಹೇಳ ತೀರದು. ಇನ್ನೇನು ಮಕ್ಕಳು ಹೊರಡಲು ಎರಡು ದಿನಗಳು ಇವೇ ಎಂದಾಗ ಕುಲಕರ್ಣಿಯವರು ತಮ್ಮ ಆಪ್ತಮಿತ್ರ ದೇಶಪಾಂಡೆಯವರ ಸಮ್ಮುಖದಲ್ಲಿ ಇಬ್ಬರೂ ಮಕ್ಕಳನ್ನು ಮನೆಯ ಮೇಲಿನ ಹಜಾರಕ್ಕೆ ಕರೆದೊಯ್ದು ಇಬ್ಬರೂ ಮಕ್ಕಳನ್ನು ತಬ್ಬಿಕೊಂಡು ಗಳಗಳನೆ ಅಳ ತೊಡಗಿದರು. ಮಕ್ಕಳ ಮುಂದೆ ಈ ರೀತಿಯಾಗಿ ಎಂದು ಅಳದ ತಂದೆಯವರ ಈ ರೀತಿಯ ವರ್ತನೆ ಮಕ್ಕಳಲ್ಲಿ ಆತಂಕ ತರಿಸಿತಾದರೂ ಅದನ್ನು ಸಾವರಿಸಿಕೊಂಡು ಅವರ ತಂದೆಯನ್ನು ಸಂತೈಯಿಸಿ, ಸುಮ್ಮನೆ ಅಳಬೇಡಿ. ಏನೋ ಮಾತನಾಡಬೇಕು ಎಂದು ಹೇಳಿದ್ದಿರಿ. ಏನು ಸಮಾಚಾರ? ಯಾರಾದರೂ ಏನಾದರೂ ಹೇಳಿದರೇ? ನಮ್ಮಿಂದೇನಾದರೂ ಆರ್ಥಿಕ ಸಹಾಯ ಬೇಕೇ? ಅಥವಾ ಇನ್ನಾವುದಾರೂ ಸೌಲಭ್ಯಗಳು ಬೇಕೇ? ಎಂದು ಒಂದೇ ಉಸಿರಿನಲ್ಲಿ ತಂದೆಯವರನ್ನು ಕೇಳಿದರು. ಅಲ್ಲಿಯವರೆಗೂ ಸುಮ್ಮನೆ ತಲೆ ತಗ್ಗಿಸಿ ಮೌನವಾಗಿ ಅಳುತ್ತಿದ್ದ ಕುಲಕರ್ಣಿಯವರು ಒಮ್ಮೆಲೆ ಛಗ್ಗನೆ, ತಮ್ಮ ತಲೆ ಎತ್ತಿ ಮಕ್ಕಳನ್ನು ದುರು ದುರುಗುಟ್ಟಿ ನೋಡಿದರು. ಅಪ್ಪನನ್ನು ಹಾಗೆಂದೂ ನೋಡಿರದ ಮಕ್ಕಳಿಬ್ಬರೂ ತಬ್ಬಿಬ್ಬಾದರು.

ನಮಗೆ ಯಾರೂ ಏನೂ ಹೇಳಲಿಲ್ಲ. ನಮಗೆ ಇನ್ನಾವ ಸೌಲಭ್ಯಗಳೂ ಬೇಡ. ನಿಮ್ಮ ಆರ್ಥಿಕ ಸಹಾಯವಂತೂ ಮೊದಲೇ ಬೇಡ. ದಯವಿಟ್ಟು ನೀವು ಹೋಗೋ ಮುಂದೆ ಎರಡು ತೊಟ್ಟು ವಿಷವನ್ನು ನಿಮ್ಮ ಕೈಯ್ಯಾರೆ ನಮ್ಮಿಬ್ಬರಿಗೆ ಕೊಟ್ಟು ಬಿಡಿ. ನಾವಿಬ್ಬರೂ ಒಟ್ಟಿಗೆ ನೆಮ್ಮದಿಯಿಂದ ಸಾಯುತ್ತೇವೆ. ಸರಿ ಸುಮಾರು 50 ವರ್ಷಗಳಿಗೂ ಅಧಿಕ ವರ್ಷಗಳಿಂದ ಒಟ್ಟಿಗೆ ಬಾಳುತ್ತಿದ್ದೇವೆ. ನನ್ನ ಬಿಟ್ಟು ನಿಮ್ಮ ಅಮ್ಮ , ನಿಮ್ಮ ಅಮ್ಮನನ್ನು ಬಿಟ್ಟು ನಾನು. ಹೀಗೆ ಒಬ್ಬರೊನ್ನೊಬ್ಬರು ಅಗಲಿ ಇರಲಾವು. ನಮ್ಮ ಕಾಲಾನಂತರ ನಮ್ಮ ಅಂತ್ಯಕ್ರಿಯೆಯನ್ನು ಮಾತ್ರಾ ಮಾಡಿದರೆ ಸಾಕು. ಬೇರಾವ ವಿಧಿ ವಿಧಾನಗಳನ್ನೂ ಮಾಡದಿದ್ದರೂ ಪರವಾಗಿಲ್ಲ. ಎಂದು ಹೇಳಿದರು. ಅಪ್ಪಾ! ಇದೇನಿದು ಈ ರೀತಿಯಾಗಿ ಅಪಶಕುನದ ಮಾತಗಳನ್ನು ಆಡುತ್ತೀರಿ? ನಾವೇನು ನಿಮಗೆ ಕಡಿಮೆ ಮಾಡಿದ್ದೇವೆ? ಇಲ್ಲಿ ಸಕಲ ರೀತಿಯ ಸೌಲಭ್ಯಗಳಿವೆ ಮತ್ತೇಕೆ ಚಿಂತೆ ಎಂದ ದೊಡ್ಡ ಮಗ. ಅದಕ್ಕೆ ಹೂಂ ಎಂದು ಹೂಂಗುಟ್ಟಿದ ಚಿಕ್ಕ ಮಗ. ಹೌದಪ್ಪಾ. ನಮಗೆ ಇಲ್ಲಿ ಎಲ್ಲವೂ ಇದೆ. ಆದರೆ ವಯಸ್ಸಾದ ಸಮಯದಲ್ಲಿ ನಮ್ಮನ್ನು ನೋಡಿ ಕೊಳ್ಳಬೇಕಾದವರೇ ಇಲ್ಲಿ ಇಲ್ಲ. ಆದಿನ ನಿಮ್ಮ ಅಮ್ಮ ಹುಷಾರು ತಪ್ಪಿದಾಗ, ಇದೇ ದೇಶಪಾಂಡೆ ಮತ್ತವನ ಮಗ ಇಲ್ಲದಿದ್ದಲ್ಲಿ ನೀವಿಂದು ನಿಮ್ಮ ಅಮ್ಮನ ಮುಖ ನೋಡಲು ಸಾಧ್ಯವಾಗುತ್ತಿರಲಿಲ್ಲ. ವಂಶೋದ್ದಾರಕರು ಎಂದು ಇಬ್ಬಿಬ್ಬರು ಗಂಡು ಮಕ್ಕಳಿದ್ದರೂ ಸಹಾ ಆಪತ್ತಿನಲ್ಲಿ ಸ್ನೇಹಿತ ಮತ್ತು ಆತನ ಮಗನನ್ನು ಆಶ್ರಯಿಸಬೇಕಾಯಿತು. ಇಂತಹ ಸುಖಃಕ್ಕೆ ಮಕ್ಕಳೇಕೆ ಬೇಕು? ನಿಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿ, ನೀವು ಕೇಳಿದ್ದದ್ದನ್ನೆಲ್ಲಾ ಕೊಡಿಸಿ ನಿಮಗ ವಿದ್ಯೆಕಲಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೂ ಕಳುಹಿಸಿ, ಮದುವೆ ವಯಸ್ಸಿಗೆ ಬಂದಾಗ, ನಿಮಗೊಪ್ಪುಂತಹಾ ಹುಡುಗಿಯ ಜೊತೆಗೇ ಮದುವೆ ಮಾಡಿಸಿ ನಿಮ್ಮ ಸುಖಃವೇ ನಮ್ಮ ಸುಖಃ ಎಂದು ತಿಳಿದಿರುವ ನಮಗೆ ಸಾಯುವ ಕಾಲದಲ್ಲಿ ನೋಡಿಕೊಳ್ಳಲು ಹೆತ್ತ ಮಕ್ಕಳೇ ಇಲ್ಲದಿದ್ದರೆ ಹೇಗೆ ? ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಅಲ್ಲಿಯವರೆಗೂ ಸುಮ್ಮನೆ ಅಣ್ಣನ ಮಾತಿಗೆ ಹೂಂ ಗುಟ್ಟುತ್ತಿದ್ದ ತಮ್ಮ, ಇದ್ದಕ್ಕಿದ್ದಂತೆಯೇ ವ್ಯಗ್ರನಾಗಿ ಹೋದ. ಅಪ್ಪಾ, ಸಾಕು ಮಾಡಿ ಈ ನಿಮ್ಮ ಪ್ರಲಾಪ. ಅವಾಗಲಿನಿಂದಲೂ ಕೇಳುತ್ತಲೇ ಇದ್ದೇನೆ ನಿಮ್ಮ ಆಲಾಪ. ಸುಮ್ಮನೆ ನಮ್ಮನ್ನೇಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುತ್ತಿದ್ದೀರಿ? ನೀವು ಹೇಳಿದ್ದೆಲ್ಲವೂ ಒಬ್ಬ ಪೋಷಕರಾಗಿ ಮಾಡಬೇಕಾದಂತಹ ಕರ್ತವ್ಯಗಳೇ ಹೊರತು ಅದಕ್ಕಿಂತ ಹೆಚ್ಚಿನದ್ದೇನು ನೀವು ಮಾಡಿಲ್ಲ. ನಾವೆಲ್ಲರೂ ನಿಮ್ಮ ಆಣತಿಯಂತೆಯೇ ಓದಿ, ವಿದೇಶಗಳಲ್ಲಿ ನೆಲೆಸಿದಾಗ, ನಮ್ಮ ಮಕ್ಕಳು ವಿದೇಶದಲ್ಲಿದ್ದಾರೆ ಎಂದು ಎಲ್ಲರ ಮುಂದೆ ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದವರು, ಈಗ ಕಷ್ಟ ಬಂದಿತೆಂದು ನಮ್ಮನ್ನು ತೆಗಳುವುದು ಸರಿಯೇ? ಭಗವಧ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಪ್ರತಿಪಲಾಪೇಕ್ಷೆಯಿಂದ ಯಾವುದೇ ಕೆಲಸಗಳನ್ನು ಮಾಡಕೂಡದು. ನಿಜಕ್ಕೂ ಹೇಳಬೇಕೆಂದರೇ, ಸದ್ಯದ ಈ ಪರಿಸ್ಥಿತಿ ಬಂದೊದಗಲು ನಿಮಗೆ ನೀವೇ ಕಾರಣ. ನೀವು ಅಂದು ಒಬ್ಬ ಮಗನಾಗಿ ನಿಮ್ಮ ತಂದೆ ತಾಯಿಯರಿಗೆ ಏನು ಮಾಡಿದ್ದೀರೋ ಅದನ್ನೇ ನೀವು ಇಂದು ನಿಮ್ಮ ಮಕ್ಕಳಿಂದ ಪಡೆಯುತ್ತಿದ್ದೀರಿ ಎಂದು ಅಬ್ಬರಿಸಿದ. ಕಿರಿಯ ಮಗನ ಈ ಹೇಳಿಕೆಯಿಂದ ಎಲ್ಲರೂ ಒಂದು ಕ್ಷಣ ಮೌನವಾದರು. ಆ ಒಂದು ಕ್ಷಣ ಯಾರಿಗೂ ಏನು ಹೇಳಬೇಕೆಂದೇ ತಿಳಿಯಲಿಲ್ಲ.

ಸ್ವಲ್ಪ ಸಾವರಿಸಿಕೊಂಡ ಕುಲಕರ್ಣಿಯವರು. ಹೌದು. ಎಲ್ಲವೂ ನನ್ನದೇ ತಪ್ಪು. ಅಂದು ನನ್ನ ಹೆತ್ತ ತಂದೆ ತಾಯಿಯರು, ಅಂತಹ ಕಷ್ಟದ ಸಮಯದಲ್ಲೂ ಹೊಟ್ಟೆ ಬಟ್ಟೆ ಕಟ್ಟಿ ಅಂದಿನ ಕಾಲದಲ್ಲೇ ಇಂಜಿನೀಯರಿಂಗ್ ಓದಿಸಿದರು. ಹಾಗೆ ಓದಿದ ನಂತರ ಧಾರವಾಡದಲ್ಲಿ ನನಗೆ ಸೂಕ್ತ ಕೆಲಸ ಸಿಗದ ಕಾರಣ, ದೂರದ ಪೂನಾಕ್ಕೆ ಕೆಲಸ ಹುಡುಕಿಕೊಂಡು ಹೋಗಿ ಅಲ್ಲೇ ನನ್ನ ಬದುಕು ಕಟ್ಟಿಕೊಂಡೆ. ಅಲ್ಲೇ ನನ್ನ ಮದುವೆಯಾಗಿ ಮಕ್ಕಳಾದರು. ಕಾಲ ಕಾಲಕ್ಕೆ ಪರಿಶ್ರಮಕ್ಕೆ ತಕ್ಕ ಹಣವೂ ಕೈ ಸೇರ ತೊಡಗಿತು. ಮೊದಮೊದಲು ಅಪ್ಪಾ ಅಮ್ಮನನ್ನು ನೋಡಲು ತಿಂಗಳಿಗೊಮ್ಮೆಯಾದರೂ ಬಂದು ಹೋಗುತ್ತಿದ್ದವನು, ಕ್ರಮೇಣ ಮೂರು, ಇಲ್ಲವೇ ಆರು ತಿಂಗಳು ಇಲ್ಲವೇ, ವರ್ಷಕ್ಕೊಮ್ಮೆ ನಾಗರಪಂಚಮಿಗೆ ಬರುವಷ್ಟಕ್ಕೇ ಸೀಮಿತವಾಯಿತು. ತಿಂಗಳು ತಿಂಗಳಿಗೆ ಸರಿಯಾಗಿ ಹಣವನ್ನು ಕಳುಹಿಸುತ್ತಿದ್ದೆನಾದ್ದರಿಂದ ಊರಿನಲ್ಲಿ ಎಲ್ಲರೂ ಚೆನ್ನಾಗಿರ ಬಹುದೆಂಬ ಭಾವನೆ ನನ್ನದಾಗಿತ್ತು. ನಾನು ಊರಿಗೆ ಬಂದಾಗಲೂ ನನ್ನ ಮನಸ್ಸನ್ನು ನೋಯಿಸಬಾರದೆಂಬ ಕಾರಣದಿಂದ ನಮ್ಮ ತಂದೆ ತಾಯಿಯರೂ ನನ್ನ ಬಳಿ ಯಾವುದೇ ತೊಂದರೆಗಳನ್ನು ಹೇಳಿಕೊಳ್ಳದೇ ಚೆನ್ನಾಗಿಯೇ ಇರುವಂತೆ ನಟಿಸಿ, ಕಾಲ ಬಂದಾಗ ನಮ್ಮನ್ನಗಲಿದರು. ಅವರು ಕಾಲವಾದ ನಂತರ ಅವರ ನೆನಪಿನಲ್ಲಿ ಈ ಬಂಗಲೆ ಕಟ್ಟಿಸಿದೆ. ಕೆಲಸದಿಂದ ನಿವೃತ್ತನಾದ ನಂತರ ಕಡೆಯ ದಿನಗಳನ್ನು ನಮ್ಮ ತವರಿನಲ್ಲೇ ಕಳೆಯುವ ಇಚ್ಛೆಯಿಂದ ಇಲ್ಲೇ ಬಂದು ನೆಲೆಸಿದೆ. ನಾವು ವಯಸ್ಸಾದಾಗ, ನಮಗೀಗ ಮಕ್ಕಳ ಅಗಲಿಕೆಯಿಂದಾಗಿರ ಬಹುದಾದ ಕಷ್ಟಗಳು ಅರಿವಾಗುತ್ತಿದೆ ಎಂದು ಹೇಳಿ. ಇಬ್ಬರೂ ಮಕ್ಕಳಿಗೆ ಕೈ ಮುಗಿಯುತ್ತಾ , ನಮಗಿಂತಲೂ ಚಿಕ್ಕವರಾದರೂ ನೀವು ಕಣ್ಣು ತೆರೆಸಿದ್ದೀರಿ ಅದಕ್ಕೆ ಧನ್ಯವಾದಗಳು. ಮರ್ಯಾದಾ ಪುರುಶೋತ್ತಮನಾದ, ಎಲ್ಲರಿಗೂ ಆದರ್ಶ ಪ್ರಾಯನಾದ, ಶ್ರೀರಾಮ ಚಂದ್ರನ ತಂದೆ ದಶರಥ ಮಹಾರಾಜನಿಗೇ ಸಾಯುವ ಸಮಯದಲ್ಲಿ ಅವರ ನಾಲ್ಕೂ ಮಕ್ಕಳು ಜೊತೆಯಲ್ಲಿ ಇಲ್ಲದಿದ್ದಾಗಾ, ಇನ್ನು ಹುಲು ಮಾನವನಾದ ನಾನು ಅದನ್ನು ಹೇಗೆ ಬಯಸಲಿ? ನನ್ನ ಹಣೆಯಲ್ಲಿ ಬರೆದ ವಿಧಿಯಂತೆಯೇ ಆಗುತ್ತದೆ. ವಿಧಿ ಬದಲಿಸಲು ನಾನ್ಯಾರು? ನೀವ್ಯಾರು? ನಾವು ಮಾಡಿದ ಕರ್ಮವನ್ನು ನಾವೇ ಅನುಭವಿಸುತ್ತೇವೆ. ಅದಕ್ಕೇ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದು ಹೇಳಿ, ದೇಶಪಾಂಡೇ, ನಡೀರೀ, ಆಕೀಗೆ ದವಾ ಕೊಡ ಹೊತ್ತಾತು. ಹಂಗೇ ಇಬ್ರೂ ಕೂಡೀ ಊಟ ಮಾಡೋಣು ಎನ್ನುತ್ತಾ ತನ್ನ ಆಪ್ತ ಮಿತ್ರರನ್ನು ಕರೆದುಕೊಂಡು ಮಹಡಿ ಇಳಿಯತೊಡಗಿದರು.

ತಂದೆ ಮತ್ತು ಅವರ ಸ್ನೇಹಿತರು ಕೆಳಗಿ ಇಳಿದು ಹೋದಂತೆಯೇ, ಮಕ್ಕಳಿಬ್ಬರಿಗೂ ಮಾತಿನ ಭರದಲ್ಲಿ ತಾವು ಆಡಿದ ಮಾತಿನಿಂದ ತಮ್ಮ ತಂದೆಯವರಿಗಾದ ನೋವು ಅರಿವಾಯಿತು ಮತ್ತು ಅದರ ಜೊತೆ ಜೊತೆಗೇ ಇನ್ನೊಬ್ಬರು ಮಾಡಿದ ತಪ್ಪನ್ನು ಎತ್ತಿ ಆಡಿ ತೋರಿಸಿದರೆ ಅದು ದ್ವೇಷವಾಗುತ್ತದೆಯೇ ಹೊರತು ಅಲ್ಲಿ ಪ್ರೀತಿ ಉಕ್ಕುವುದಿಲ್ಲ ಎಂಬುದು ಮನದಟ್ಟಾಯಿತು. ತಮ್ಮ ತಂದೆಯವರು ಅಂದು ಅರಿವಿಲ್ಲದೇ ಮಾಡಿದ ತಪ್ಪನ್ನು ಇಂದು ತಾವುಗಳು ಗೊತ್ತಿದ್ದೂ ಗೊತ್ತಿದ್ದೂ ಮಾಡಿದರೇ, ಮುಂದೇ ಅದೇ ತಪ್ಪನ್ನು ತಮ್ಮ ಮಕ್ಕಳೂ ಖಂಡಿತವಾಗಿಯೂ ಮಾಡಿಯೇ ತೀರುತ್ತಾರೆ ಮತ್ತು ನಾವುಗಳು ಇದೇ ಪರಿಸ್ಥಿತಿಯನ್ನು ಅನುಭವಿಸಿಯೇ ತೀರುತ್ತೇವೆ. ಇಲ್ಲೇ ಸ್ವರ್ಗ. ಇಲ್ಲೇ ನರಕ. ಮೇಲೇನಿಲ್ಲಾ ಇಲ್ಲಾ ಸುಳ್ಳು ಹುಟ್ಟು ಸಾವು ಎರಡರ ಮಧ್ಯೇ ಮೂರು ದಿನದಾ ಬಾಳು ಎಂಬ ನಾಗರಹೊಳೆ ಚಿತ್ರದ ಅಂಬರೀಷ್ ಅಭಿನಯದ ಹಾಡು ಅವರಿಗೆ ನೆನಪಾಯಿತು. ಇಬ್ಬರೂ ಕೊಂಚ ಹೊತ್ತು ಮಾತನಾಡಿ, ಒಂದು ನಿರ್ಧಾರಕ್ಕೆ ಬಂದು, ತಮ್ಮ ತಮ್ಮ ಮಡದಿಯರೊಡನೇ ನಡೆದದ್ದೆಲ್ಲವನ್ನೂ ತಿಳಿಸಿ ತಮ್ಮ ನಿರ್ಧಾರವನ್ನೂ ಅವರಿಗೆ ತಿಳಿಸಿ ಎಲ್ಲರೂ ಒಟ್ಟಾಗಿ ತಂದೆ ತಾಯಿಯರ ಕೋಣೆಗೆ ಬಂದು ಅಪ್ಪಾ, ಅಮ್ಮಾ ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ. ಗೊತ್ತಿದ್ದೋ ಗೊತ್ತಿಲ್ಲದಂತೆಯೋ ಇಷ್ಟು ದಿನ ನಿಮಗೆ ತೊಂದರೆ ಕೊಟ್ಟಿದ್ದೀವಿ. ಇನ್ನು ಮುಂದೆ ಆ ರೀತಿಯಾಗಿ ಮಾಡುವುದಿಲ್ಲ. ನಮ್ಮ ಮಕ್ಕಳ ಈ ವರ್ಷದ ಪರೀಕ್ಷೇ ಮುಗಿಯುತ್ತಿದ್ದಂತೆಯೇ, ಇಲ್ಲಿಗೇ ಹಿಂದಿರುಗಿ ಬರುತ್ತೇವೆ. ಇಲ್ಲಿಗೇ ಬಂದು ನಮ್ಮಿಬ್ಬರ ಅನುಭವದ ಮೇಲೆ ಒಂದು ಹೊಸಾ ಕಂಪನಿ ಹುಟ್ಟು ಹಾಕಿ ಇಲ್ಲಿಂದಲೇ ಕೆಲಸ ಮಾಡುತ್ತೀವಿ. ಆಗ ಕೇವಲ ನಮಗಲ್ಲದೇ ನಮ್ಮಂತಹ ಅನೇಕರು ತಮ್ಮ ತಂದೆ ತಾಯಿಯರ ಜೊತೆಯಲ್ಲಿಯೇ ಇದ್ದು ಇಲ್ಲೇ ಉದ್ಯೋಗ ಮಾಡುವಂತಾಗುತ್ತದೆ. ದೇಶ ಕಾರ್ಯ ಈಶ ಕಾರ್ಯ ಎನ್ನುವಂತೆ, ನಮ್ಮ ಸ್ವಾರ್ಥಕ್ಕಾಗಿ ಸ್ಥಾಪಿಸುವ ಕಂಪನಿ, ನಿಸ್ವಾರ್ಥವಾಗಿ ಅನೇಕರಿಗೆ ಉಪಯೋಗವಾಗುತ್ತದೆ ಎಂದು ಹೇಳಿ ತಂದೆ ತಾಯಿಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಇಷ್ಟು ಶ್ರೀಘ್ರವಾಗಿ ಮತ್ತು ಈ ರೀತಿಯಾಗಿ ತಮ್ಮ ಮಕ್ಕಳು ಬದಲಾಗುತ್ತಾರೆ ಎಂಬುದನ್ನು ನಿರೀಕ್ಷಿಸದ ಅವರ ತಂದೆ ತಾಯಿಯರು ಆನಂದ ಭಾಷ್ಪ ಹರಿಸಿದರು. ಕಾಲ ಉರುಳಿ ಹೋಗಿದ್ದೇ ಗೊತ್ತಾಗಲಿಲ್ಲ. ನುಡಿದಂತೆ ಆರೆಂಟು ತಿಂಗಳಿನಲ್ಲಿ ಮಕ್ಕಳಿಬ್ಬರೂ ಸಕುಟುಂಬ ಸಮೇತರಾಗಿ ಹಿಂದಿರುಗಿ ಬಂದು ಒಂದೇ ಮನೆಯಲ್ಲಿ ಅಜ್ಜಿ, ತಾತ, ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮೊಕ್ಕಳೊಂದಿಗೆ ಅವಿಭಕ್ತ ಕುಟುಂಬವಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಅವರು ಸ್ಥಾಪಿಸಿದ ಕಂಪನಿಯಲ್ಲಿ ಆ ಇಬ್ಬರು ಗಂಡು ಮಕ್ಕಳು ಮತ್ತು ಸೊಸೆಯರಲ್ಲದೇ, ಅವರ ಜೊತೆ ನೂರಾರು ಜನರಿಗೆ ಉದ್ಯೋಗ ದೊರೆತು, ಸಾವಿರಾರು ಜನರಿಗೆ ಆಶ್ರಯತಾಣವಾಗಿ, ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಮಾಡುತ್ತಾ , ಕೋಟ್ಯಾಂತರ ಜನಸಂಖ್ಯೆ ಇರುವ ಈ ದೇಶಕ್ಕೇ ಹೆಮ್ಮೆಯನ್ನು ತರುತ್ತಿದೆ.

ನಿಜ. ಮೇಲೆ ಹೇಳಿದಂತಹ ಕಥೆಯಲ್ಲಿ ಎಲ್ಲವೂ ನಿಜವಲ್ಲ. ಕೆಲವೊಂದು ಕಾಲ್ಪನಿಕವಾಗಿಯೂ ಇದೆಯಾದರೂ, ಸಾಧಿಸಲು ಅಸಾಧ್ಯೇನೂ ಅಲ್ಲದ್ದಾಗಿದೆ. ಜೀವನದಲ್ಲಿ
ಪ್ರಾಣ, ಯೌವನ ಮತ್ತು ಕಾಲ ಹಿಂದಿರುಗಿ ಬರಲಾರದು, ಅದೇ ರೀತಿ
ರೋಗ, ಆಸ್ತಿ ಮತ್ತು ಕಷ್ಟಗಳು ಬಂದು ಹೋಗುವಂತಹದ್ದು. ಆದರೇ,
ವಿದ್ಯೆ, ಸ್ನೇಹ ಮತ್ತು ಸಂಬಂಧಗಳು ಜೀವಿತಾವಧಿಯವರೆಗೂ ನಮ್ಮೊಂದಿಗೇ ಇರುವಂತಹವು. ಹಾಗಾಗಿ ಕಲಿತ ವಿದ್ಯೆಯನ್ನು ಸರಿಯಾಗಿ ಬಳೆಸಿಕೊಂಡು ಬಂಧು-ಮಿತ್ರರೊಡನೇ ಸ್ನೇಹ ವೃದ್ಧಿಸಿ ಕೊಂಡು ಸಂಬಂಧಗಳನ್ನು ಬೆಳೆಸೋಣ ಮತ್ತು ಉಳಿಸೋಣ. ಏಕೆಂದೆರೆ ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲಿ ಬಲವಿದೆಯೋ ಅಲ್ಲಿ ಛಲವಿರುತ್ತದೆ. ಎಲ್ಲಿ ಛಲ ಇರುತ್ತದೆಯೋ ಅಲ್ಲಿ ಗೆಲುವು ಇದ್ದೇ ಇರುತ್ತದೆ.

ನಾವು ಗೆದ್ದೇ ಗೆಲ್ತೀವೀ.. ನಾವು ಗೆದ್ದೇ ಗೆಲ್ತೀವೀ, ಒಂದು ದಿನಾ.. ನಮ್ಮಲೀ ಛಲವಿದೇ.. ನಮ್ಮಲೀ ಬಲವಿದೇ.. ನಾವು ಗೆದ್ದೇ ಗೆಲ್ತೀವೀ..ಒಂದು ದಿನಾ.. ನಾವು ಗೆಲ್ಲಲೇ ಬೇಕು ಒಂದು ದಿನಾ..

ಏನಂತೀರೀ?