ಸ್ತ್ರೀ, ಎಲ್ಲೆ ಮೀರಿದ ಸಭ್ಯತೆ

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ಈ ನಾಡಿನಲ್ಲಿ ಪರಸ್ತ್ರೀಯರಿಗೆ ತಾಯಿ ಮತ್ತು ಸಹೋದರಿಯಂತಹ ಪವಿತ್ರವಾದ ಸ್ಥಾನವನ್ನು ನೀಡಿ ಗೌರವಿಸುತ್ತೇವೆ.

ಹೆಣ್ಣನ್ನು ಎಷ್ಟೇ ಪೂಜ್ಯ ಭಾವನೆಯಿಂದ ಕಂಡರೂ ಹಿಂದೂ, ಇಂದು ಮತ್ತು ಮುಂದು ಹೆಣ್ಣು ಒಂದು ಆಕರ್ಷಣೀಯ ಕೇಂದ್ರವೇ ಸರಿ. ಅದಕ್ಕಾಗಿಯೇ ಹೆಣ್ಣು ಒಂದು ಮಾಯೆ ಎಂದಿದ್ದಾರೆ. ಒಂದು ಹೆಣ್ಣಿಗಾಗಿಯೇ ರಾಮಾಯಣ ಮತ್ತು ಮಹಾಭಾರತದಲ್ಲಿ ಘನಘೋರ ಯುದ್ದಗಳು ನಡೆದಿವೆಯಾದರೂ ಇಂದಿಗೂ ಜನರು ಅದರಿಂದ ಬುದ್ಧಿ ಕಲಿಯದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಒಂದು ಯಶಸ್ವೀ ಪುರುಷನ ಹಿಂದಿನ ಶಕ್ತಿ ಹೆಣ್ಣು ಎನ್ನುವುದು ಎಷ್ಟು ಸತ್ಯವೂ ಅದೇ ರೀತಿ ಬಹುತೇಕ ಪ್ರಕರಣಗಳಲ್ಲಿ ಒಬ್ಬ ಪುರುಷನ ಸೋಲಿನ ಹಿಂದೆಯೂ ಹೆಣ್ಣಿನ ಜಾದೂ ಕೆಲಸ ಮಾಡಿರುತ್ತದೆ. ಹಾಗಾಗಿ ಪುರುಷರ ಶಕ್ತಿ ಮತ್ತು ದೌರ್ಬಲ್ಯ ಎರಡೂ ಸಹಾ ಹೆಣ್ಣು ಎಂಬುದನ್ನು ಬಹುಶಃ ಯಾರೂ ಅಲ್ಲ ಗಳೆಯಲಾರರು.

ಬಹುಶಃ ಪುರುಷರ ಈ ದೌರ್ಬಲ್ಯವನ್ನು ಚೆನ್ನಾಗಿ ಅರಿತಿರುವ ಹೆಣ್ಣು, ಪುರುಷರನ್ನು ತನ್ನ ಕೈವಶ ಪಡಿಸಿಕೊಂಡು ತನ್ನಿಚ್ಚೆಯಂತೆ ಆಡಿಸುವುದನ್ನು ಕರಗತ ಮಾಡಿಕೊಂಡಿದ್ದಾಳೆ. ಊರಿಗೆ ಅರಸನಾದರೂ ಮನೆಯಲ್ಲಿ ಹೆಂಡತಿಯ ಗುಲಾಮನೇ ಎನ್ನುವುದು ಜೀವನದ ಕಠು ಸತ್ಯವೇ ಸರಿ.

ಹೆಣ್ಣಿನ ಬಗ್ಗೆ ಈ ರೀತಿ ಬರೆದಿರುವವರು ಪ್ರಯಾಶಃ ಹೆಣ್ಣಿನ ದ್ವೇಷಿಯೇ ಆಗಿರಬೇಕು ಎಂದು ಭಾವಿಸಿದಲ್ಲಿ ಖಂಡಿತವಾಗಿಯೂ ತಪ್ಪು ಕಲ್ಪನೆ. ನಿಜಕ್ಕೂ ಹೆಣ್ಣಿನ ಮೇಲಿನ ಮಮತೆ ಮತ್ತು ಮಮಕಾರಕ್ಕಾಗಿ ಈ ರೀತಿಯ ಸಾತ್ವಿಕ ಕೋಪವಷ್ಟೇ. ಕಳೆದ ವಾರ ಮತ್ತು ಈ ವಾರವೂ ಮುಂದುವರೆಯುತ್ತಿರುವ ಸುದ್ದಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಲ್ಲಿ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿಯೂ ಪ್ರಮುಖವಾಗಿ ಮಹಿಳೆಯ ವಿರುದ್ಧದ ಪ್ರಕರಣಗಳೇ ಪ್ರಭಾವವಾಗಿ ಎದ್ದು ಕಂಡು ಬಂದಿದ್ದು ನಿಜಕ್ಕೂ ವಿಪರ್ಯಾಸ ಮತ್ತು ಶೋಚನೀಯ. ಬಹುಶಃ ಹೆಣ್ಣು ಮಕ್ಕಳು ಸಮಾಜದಲ್ಲಿ ತಮಗೆ ಸಿಗುತ್ತಿರುವ ಗೌರವನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರಾ? ತಮ್ಮ ಎಲ್ಲೆ ಮೀರುತ್ತಿದ್ದಾರ? ಎನ್ನುವ ಭಾವನೆ ಕಾಡಿರುವುದಂತೂ ಸುಳಲ್ಲ.

ಕನ್ನಡ ಚಿತ್ರರಂಗದಲ್ಲಿ ಚೆಂದವಾಗಿ ಕಾಣುವ ಬಳ್ಳಿಯಂತೆ ಬಳುಕುವ ನಟಿಯರ ಕೊರತೆ ಇದೇ ಎಂದು ಕೊಳ್ಳುತ್ತಿದ್ದಂತೆಯೇ ಧುತ್ತೆಂದು ಪ್ರತ್ಯಕ್ಷಳಾದವಳೇ ರಾಗಿಣಿ ದ್ವಿವೇದಿ. ಎತ್ತರದ ಸಪೂರದ, ಸುಂದರದ ನಟಿ ಎಲ್ಲರ ರೀತಿಯಲ್ಲಿ ಕನ್ನಡ್ ಗೊತ್ತಿಲ್ಲಾ. ಎಂದು ಉಲಿಯದೇ, ಕೆಲವೇ ಕೆಲವು ದಿನಗಳಲ್ಲಿಯೇ ಕನ್ನಡವನ್ನು ಕಲಿತು ನಮ್ಮವರೇ ಆಗಿ ಹೋದಳು. ನೋಡ ನೋಡುತಿದ್ದಂತೆಯೇ ಸುದೀಪ್, ಶಿವರಾಜ್ ಕುಮಾರ್ ದರ್ಶನ್, ಸರ್ಜಾ, ಯೋಗಿ ಮುಂತಾದ ಘಟಾನುಘಟಿ ನಟರಲ್ಲದೇ ಇತ್ತೀಚಿನ ಹೊಸ ನಟರುಗಳೊಂದಿಗೆ ಅಭಿನಯಿಸಿ ಎಲ್ಲರ ಮನಗೆದ್ದ ಹುಡುಗಿಯಾಗಿದ್ದ ರಾಗಿಣಿ ದ್ವಿವೇದಿ ಮಾದಕದ್ರ್ವವ್ಯಗಳ ವ್ಯಸನಿ ಮಾತ್ರವಲ್ಲದೇ ಮಾದಕದ್ರವ್ಯಗಳನ್ನು ಸರಬರಾಜು ಮಾಡುವ ಜಾಲದಲ್ಲಿ ಸಕ್ರೀಯವಾಗಿದ್ದಾಳೆ ಎಂಬ ಬರಸಿಡಿಲು ಬಡಿಯುವಂತಹ ಸುದ್ದಿ ಹರಿದಾಡಿ ಸದ್ಯಕ್ಕೆ ಆಕೆ ಪೋಲಿಸರ ಅಥಿತಿಯಾಗಿ ವಿಚಾರಣೆಯಲ್ಲಿ ಇದ್ದಾಳೆ.

ಅರೇ, ಕೈತುಂಬಾ ಕೆಲಸ, ಹಣ, ಪ್ರತಿಷ್ಟೆ, ಪ್ರಶಸ್ತಿ, ಪುರಸ್ಕಾರಳು ಎಲ್ಲವೂ ಇದ್ದರೂ ಹೀಗೇಕೆ ಮಾಡಿದಳು ಎಂದು ಯೋಚಿಸಿದಲ್ಲಿ ಹೇಳುವುದು ಶಾಸ್ತ್ರ ತಿನ್ನುವುದು ಬದನೇ ಕಾಯಿ ಎನ್ನುವಂತೆ ಭಾರತೀಯ ಮೌಲ್ಯಗಳನ್ನು ಧಿಕ್ಕರಿಸಿ ಅಂಧ ಪಾಶ್ಚಾತ್ಯ ಮೋಜು ಮಸ್ತಿ ಮಾಡುವ ಸಂಸ್ಕೃತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನಗೇ ಅರಿವಿಲ್ಲದಂತೆಯೇ ಆ ಮೃತ್ಯುಕೂಪದಲ್ಲಿ ಬಿದ್ದು ಈಗ ಒದ್ದಾಡುತ್ತಿರುವುದು ಸ್ಪಪ್ಷವಾಗಿ ಗೋಚರಿಸುತ್ತದೆ.

ಎನ್ನುವ ಮನೋಭಾವ ಮತ್ತು ಮನಸ್ಥಿತಿ ಯಾರಿಗೂ ಇಲ್ಲವಾಗಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಕನ್ನಡ ಚಿತ್ರರಂಗಕ್ಕೆ ಬಂದ ಏಳೆಂಟು ವರ್ಷಗಳಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಇನ್ನೂ ತನ್ನ ಅಸ್ತಿತ್ವಕ್ಕಾಗಿ ಒದ್ದಾಡುತ್ತಿರುವ ಸಂಸ್ಕಾರವಂತ ಕುಟುಂಬದ ಹಿನ್ನೆಲೆಯ ನಟಿ ನಿವೇದಿತಾಗೆ ಗಾಂಜ ಗಿಡ, ತುಳಸೀ ಗಿಡದಷ್ಟೇ ಪವಿತ್ರವಂತೆ. ಗಾಂಜವನ್ನು ಅನೇಕ ಔಷಧಿಗಳಲ್ಲಿ ಬಳಸುವ ಕಾರಣ, ಗಾಂಜ ಬೆಳೆಯನ್ನು ಕಾನೂನು ಬದ್ಧಗೊಳಿಸಿ ಎಂದು ಓತಪ್ರೋತವಾಗಿ ತನ್ನ ನಾಲಿಗೆಯನ್ನು ಹರಿಬಿಟ್ಟಿದ್ದಾಳೆ.

ಒಂದು ಬಾರಿ ತುಳಸಿ ರಸ ಕುಡಿಸಿದ ಹಾಗೆ, ಈ ನಟಿಗೆ ಗಾಂಜಾ ರಸವನ್ನು ಕುಡಿಸಿ ಅದರ ನಶೆ ಮತ್ತು ದುಶ್ಪರಿಣಾಮಗಳ ಪರಿಚಯ ಮಾಡಿಸಿದಲ್ಲಿ ಬಹುಶಃ ಆಗ, ನನಗೆ ಸ್ವಲ್ಪ ತುಳಸಿ ರಸ ಕೊಡಿ ನಾನು ಬದುಕಬೇಕು ಅಂತ ಹೇಳಬಹುದೇನೋ? ದಿಢೀರ್ ಪ್ರಚಾರ ಪಡೆಯುವ ಹಪಾಹಪಿಯಲ್ಲಿ ಈ ನಟನಾ ಮಣಿಗಳ ಬೌದ್ಧಿಕ ಮಟ್ಟ ಈ ಪಾಟಿ ಕುಸಿದಿರುವುದು ಶೋಚನೀಯ.

ಇನ್ನು ಹೆಣ್ಣಿಗೆ ಹೆಣ್ಣೇ ಶತ್ರು. ಒಂದು ಹೆಣ್ಣನ್ನು ಮಟ್ಟ ಹಾಕ ಬೇಕೆಂದರೆ ಅವಳ ವಿರುದ್ಧ ಮತ್ತೊಂದು ಹೆಣ್ಣನ್ನು ಎತ್ತಿಕಟ್ಟಿದರೆ ಸಾಕು. ಯಾವುದೇ ಹೆಣ್ಣು ತನ್ನ ಕಣ್ಣ ಮುಂದೆ ಮತ್ತೊಬ್ಬ ಹೆಣ್ಣು ಪ್ರವರ್ಧಮಾನಕ್ಕೆ ಬರುವುದನ್ನು ಸಹಿಸುವುದಿಲ್ಲ ಎನ್ನುವುದಕ್ಕೆ ಕಳೆದ ವಾರ ಕಿರಿಕ್ ನಟಿ ಸಂಯುಕ್ತಾ ಹೆಗಡೆ ಮತ್ತು ದರ್ಪದ ಹೆಂಗಸು ಕವಿತಾ ರೆಡ್ಡಿಯ ಪ್ರಕರಣವೇ ಸಾಕ್ಷಿ. ನಿಜ ಹೇಳ ಬೇಕೆಂದರೆ, ಇವರಿಬ್ಬರ ಕ್ಷೇತ್ರಗಳು ಬೇರೆ ಬೇರೆಯದ್ದಾದರೂ, ಸ್ವಭಾವತಃ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆಯೇ ಎಂದರೂ ತಪ್ಪಾಗಲಾರದು. ಇವರಿಬ್ಬರೂ ಹೋದ ಬಂದ ಕಡೆಯೆಲ್ಲೆಲ್ಲಾ ಒಂದಾಲ್ಲಾ ಒಂದು ಸಮಸ್ಯೆಗಳನ್ನು ಹುಟ್ಟಿಹಾಕಿದರೇನೇ ಅವರಿಗೆ ತಿಂದ ಆಹಾರ ಅರಗುವುದು ಎಂದು ಕಾಣುತ್ತದೆ.

ಕಳೆದ ವಾರ ಅಗರ ಕೆರೆಯ ತಾಣದಲ್ಲಿ ಸಂಯುಕ್ತ ಮತ್ತು ಆಕೆಯ ಗೆಳತಿಯರು ಕಸರತ್ತು ಮಾಡಲು ಅನುಕೂಲವಾಗುವಂತಹ ಅರೆ ಬರೇ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳದಲ್ಲಿ ವ್ಯಾಯಾಮ ಮಾಡುತ್ತಿದ್ದದ್ದು ಕೆಲವರಿಗೆ ಮುಜುಗರ ತಂದು ಈ ವಿಷಯವನ್ನು ಕವಿತಾ ರೆಡ್ಡಿಯ ಕಿವಿಗೆ ಮುಟ್ಟಿಸಿದ್ದಾರೆ. ಈ ವಯಸ್ಸಿನಲ್ಲಿಯೂ ತುಂಡು ಚೆಡ್ಡಿ ಹಾಕಿಕೊಂಡು ಓಲಾಡುವ ಕವಿತಾ ರೆಡ್ಡಿ ನೈತಿಕ ಪೋಲೀಸ್ ಗಿರಿಗೆ ಮುಂದಾಗಿದ್ದಲ್ಲದೇ ಸಂಯುಕ್ತ ಮತ್ತವರ ಗೆಳತಿಯರ ಮೇಲೆ ದೈಹಿಕ ಹಲ್ಲೆಗೆ ಮುಂದಾದ ವೀಡಿಯೋಗಳು ಈಗ ವೈರಲ್ ಆಗಿದೆ

ನಿಜ ಹೇಳ ಬೇಕೆಂದರೆ ಇದು ಇಷ್ಟೊಂದು ದೊಡ್ಡ ಪ್ರಕರಣವಾಗ ಬೇಕಾದ ವಿಷಯವೇ ಅಲ್ಲ. ಇಬ್ಬರಿಗೂ ಪ್ರಚಾರದ ಹಪಾಹಪಿ. ನನ್ನ ದೇಹ, ನನ್ನ ಉಡುಪು, ನನ್ನಿಚ್ಚೆಯಂತೆ ಧರಿಸುತ್ತೇನೆ, ನನ್ನ ಬದುಕು ತನ್ನಿಚ್ಚೆಯಂತೆ ನಡೆಸುತ್ತೇನೆ ಎನ್ನುವ ಉದ್ಧಟತನದ ಹುಂಬತನದ ಹದಿಹರೆಯದ ಹುಡುಗಿ ಒಂದು ಕಡೆಯಾದರೇ, ಆ ಭಾಗದ ಶಾಸಕರು ನನಗೆ ಆತ್ಮೀಯರು ಜೊತೆಗೆ ತಾನೊಂದು ಪಕ್ಷದ ವಕ್ತಾರೆ. ಹಾಗಾಗಿ ತನ್ನ ಮನೆಯ ಆಸು ಪಾಸಿನಲ್ಲಿ ತಾನು ಹೇಳಿದಂತೆಯೇ ನಡೆಯ ಬೇಕು ಎನ್ನುವ ಪಾಳೇಗಾರಿಕೆಯ ಮನಸ್ಥಿತಿಯ ಹೆಣ್ನು ಮತ್ತೊಂದೆಡೆ. ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಟಿ.ಆರ್.ಪಿ ಹುಚ್ಚಿನಲ್ಲಿರುವ ಮಾಧ್ಯಮಗಳಿಗೆ ಸರಕಾಗಿದ್ದದ್ದನ್ನು ಹೊರತು ಪಡಿಸಿದಲ್ಲಿ ಇವರಿಬ್ಬರ ಹುಚ್ಚುತನ ಮತ್ತು ಪ್ರತಿಷ್ಠೆಗೆ ಬಲಿಯಾದದ್ದು ಮಾತ್ರ ನಮ್ಮ ಸಂಸ್ಕೃತಿ ಮಾತ್ರ.

ಇನ್ನು ನಾಲ್ಕನೆಯ ಪ್ರಕರಣ ಇನ್ನೂ ಅದ್ವಾನ. ಬ್ಯಾಂಕುಗಳು ಇರುವುದು ಜನರ ಅನುಕೂಲಕ್ಕಾಗಿಯೇ, ನಮಗೆ ಹಣದ ಅವಶ್ಯಕವಾದಾಗ, ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಹಣವನ್ನು ಪಡೆದು ನಂತರ ಅದನ್ನು ನಿಗಧಿತ ಕಂತುಗಳ ರೂಪದಲ್ಲಿ ಸರಿಯಾಗಿ ಕಟ್ಟ ಬೇಕಾದದ್ದು ನ್ಯಾಯಯುತವಾದ ಮಾರ್ಗ. ಒಮ್ಮೆ ಅನಿವಾರ್ಯ ಕಾರಣಗಳಿಂದ ಸರಿಯಾದ ಸಮಯದಲ್ಲಿ ಹಣವನ್ನು ಪಾವತಿ ಮಾಡಲಾಗದಿದ್ದಲ್ಲಿ, ಬ್ಯಾಂಕಿನವರ ಬಳಿ ಕೇಳಿಕೊಂಡರೆ, ನಾವು ನೀಡುವ ಕಾರಣ ಸೂಕ್ತವೆನಿಸಿದರೆ ಅದಕ್ಕೆ ತಕ್ಕ ಪರಿಹಾರವನ್ನು ಅವರೇ ಸೂಚಿಸುತ್ತಾರೆ. ಆದರೆ, ಬ್ಯಾಂಕಿನಿಂದ ಸಾಲವನ್ನು ಪಡೆದು ಕಾಲ ಕಾಲಕ್ಕೆ ಅದನ್ನು ಸರಿಯಾಗಿ ಪಾವತಿಸದೇ, ತೆಗೆದುಕೊಂಡ ಸಾಲವನ್ನು ವಾಪಸ್ ಕೊಡಿ ಎಂದು ಸಭ್ಯ ರೀತಿಯಲ್ಲಿಯೇ ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿಯ ಮೇಲೆ ಮಹಿಳೆಯೊಬ್ಬಲು ಸುಖಾ ಸುಮ್ಮನೆ ಜಗಳ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗಳನ್ನು ಆಕೆಯೇ ತಳ್ಳಿ, ಎಳೆದಾಡಿದ್ದಲ್ಲದೇ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ತನ್ನ ಮೇಲೆ ಬ್ಯಾಂಕ್ ಸಿಬ್ಬಂಧಿ ಹಲ್ಲೆ ಮಾಡಿದ್ದಾರೆ ಮತ್ತು ಅತ್ಯಾಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡುವುದಲ್ಲದೇ, ಪೋಲೀಸರಿಗೆ ದೂರು ನೀಡಿ ನಿಮ್ಮನ್ನು ಬಂಧಿಸುತ್ತೇನೆ ಎಂಬ ಬೆದರಿಕೆ ಹಾಕಿರುವುದು ವೀಡಿಯೋದಲ್ಲಿ ಸ್ಲಷ್ಟವಾಗಿ ಕಾಣಿಸುತ್ತಿದೆ. ಆಕೆಯ ದೌರ್ಜನ್ಯಕ್ಕೆ ಬೆದರಿದ ವಯಸ್ಸಿನಲ್ಲಿ ಆಕೆಗಿಂತಲೂ ಹಿರಿಯರಾದ ಬ್ಯಾಂಕ್ ಸಿಬ್ಬಂದಿಯೋರ್ವರು ಆಕೆಯ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬಿಡಿ ಎಂದು ದೈನೇಸಿಯಿಂದ ಕೇಳಿಕೊಳ್ಳುತ್ತಿರುವುದು ಮತ್ತು ಆಕೆಯ ಪತಿ ಹೋಗಲೀ ಬಿಡು ಎಂದು ಹೇಳಿದರೂ, ನೀವು ಸುಮ್ಮನೆ ಒಳಗೆ ಹೋಗಿ, ನಾನು ಇವರಿಗೆ ಗ್ರಹಚಾರ ಬಿಡಿಸುತ್ತೇನೆ ಎಂಬ ದರ್ಪ ತೋರಿದ್ದಾಳೆ.

ಅರೇ, ಅವರೇನು ಆಕೆಯ ಮನೆಗೆ ಭಿಕ್ಷೇ ಬೇಡಲು ಹೋಗಿರಲಿಲ್ಲ. ಭಿಕ್ಷೇ ಬೇಡಲು ಬಂದವರ ಹತ್ತಿರವೂ ಆ ರೀತಿಯಲ್ಲಿ ನಡೆದು ಕೊಳ್ಳುವುದು ಅಕ್ಷ್ಯಮ್ಯ ಅಪರಾಧ. ಆಕೆಯ ಅವಶ್ಯಕತೆಗಾಗಿ ಬ್ಯಾಂಕಿನ ಎಲ್ಲಾ ಒಪ್ಪಂದಗಳಿಗೂ ಬದ್ಧಳಾಗಿಯೇ ಸಾಲ ಪಡೆದು ಈಗ ಹಿಂದಿರುಗಿಸಲು ಈ ಪರಿಯ ಉದ್ಧಟತನವೇ? ಸಾಲವನು ಕೊಂಬಾಗ ಹಾಲೋಗರುಂಡಂತೆ. ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿಂದಂತೆ ಸರ್ವಜ್ಞ. ಹೀಗೆ ಇಂದು ನಡೆದಂತಹ ಪ್ರಕರಣವನ್ನು ಎಂದೋ ಊಹಿಸಿಯೇ ಸರ್ವಜ್ಞ ಬರೆದು ಬಿಟ್ಟಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲಿಯೂ ಹೆಣ್ಣು ತನ್ನ ಎಲ್ಲೆ ಮೀರಿ ಅಸಭ್ಯತೆಯನ್ನು ತೋರಿರುವುದು ನಿಜಕ್ಕೂ ಕಳಕವಳಕಾರಿಯಾಗಿದೆ. ಹೆಣ್ಣು ಸಂಸಾರದ ಕಣ್ಣು. ಹೆಣ್ಣು ಮಗು ಕಲಿತು ತನ್ನ ಕ್ಷೇತ್ರದಲ್ಲಿ ಮುಂದುವರಿದರೆ ಅದರಿಂದ ತನ್ನ ಸಂಸಾರದಲ್ಲಷ್ಟೇ ಅಲ್ಲದೇ ದೇಶಕ್ಕೂ ಮಾದರಿಯಾಗುತ್ತಾಳೆ. ಅದಕ್ಕಾಗಿಯೇ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ನಿಲ್ಲಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂಬ ಅಭಿಯಾನಕ್ಕೆ ಕೋಟ್ಯಾಂತರ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ವಿದ್ಯೆಯ ಜೊತೆ ವಿನಯ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಳ್ಳದೇ, ದುರಾದೃಷ್ಟವಶಾತ್ ಕೆಲವು ಹೆಂಗಳೆಯರು ಸ್ತ್ರೀ, ಕ್ಷಮಯಾ ಧರಿತ್ರೀ ಎನ್ನುವುದನ್ನೂ ಮರೆತಿರುವುದೇ ಇಂತಹ ಮುಜುಗರಕ್ಕೆ ಕಾರಣವಾಗುತ್ತಿದೆ.

ಏನಂತೀರೀ?

ಕ್ಷಮಯಾಧರಿತ್ರೀ

ಇಡೀ ದೇಶವೇ ಲಾಕೌಟ್ ಆಗಿ ಎಲ್ಲವೂ ಬಂದ್ ಆದಾಗ ನಮ್ಮ ಕ್ಷೇಮಕ್ಕಾಗಿ ಮಮ್ಮಲ ಮರುಗುವುದೇ.
ನಮ್ಮ ದೇಶ ಮತ್ತು ನಮ್ಮ ಮನೆ.

ಎರಡು ಜೀವಗಳು ಮಾತ್ರಾ ನಮ್ಮೆಲ್ಲಾ ತಪ್ಪುಗಳನ್ನೂ ಮನ್ನಿಸಿ ಒಪ್ಪಿಕೊಳ್ಳಲು ಸಿದ್ಧವಾಗಿರುತ್ತವೆ
ಒಂದು ಹೆತ್ತ ತಾಯಿ ಮತ್ತೊಂದು ಕಟ್ಟಿಕೊಂಡ ಮಡದಿ.

ಯಾವ ಬಂದ್ ಲೆಕ್ಕಿಸದೇ, ವರ್ಷದ ಮುನ್ನೂರೈವತ್ತೈದು ದಿನಗಳೂ, ದಿನದ ಇಪ್ಪತ್ನಾಲ್ಕು ಗಂಟೆಗಳೂ
ನಮಗೆ ಆಶ್ರಯ ನೀಡಿರುವ ದೇಶ, ನಮಗೆ ಜನ್ಮ ನೀಡಿದ ತಾಯಿ ಮತ್ತು ಸಲಹುತ್ತಿರುವ ಮಡದಿ,
ಕ್ಷಮಯಾಧರಿತ್ರೀಗಳಿಗೆ ಮತ್ತು ಅನ್ನಪೂರ್ಣೆಯರಿಗೆ ನಮ್ಮ ಹೃದಯಪೂರ್ವಕ ವಂದನೆಗಳು.

ದೇಶವಿಲ್ಲದೇ ಆಶ್ರಯವಿಲ್ಲಾ, ತಾಯಿಯಿಲ್ಲದೇ ದೇಹವಿಲ್ಲಾ, ಮಡದಿ ಇಲ್ಲದೇ ನೆಮ್ಮದಿ ಇಲ್ಲ.
ಹಾಗಾಗಿ, ಅವಳಿಗೆ ಸ್ತ್ರೀ ಎಂದರೆ ಅಷ್ಟೇ ಸಾಕೇ? ಕ್ಷಮಯಾಧರಿತ್ರೀ ಎಂದು ಮನಸಾರೆ ಪೂಜಿಸಬಾರದೇಕೇ?

ಏನಂತೀರೀ??

ಸ್ತ್ರೀ ! ಕ್ಷಮಯಾಧರಿತ್ರಿ!!

ಹುಡುಗಿಯರು ಕಲಿಯುತ್ತಿರುವ ಪ್ರೌಢಶಾಲೆಯ ಅಧ್ಯಾಪಿಕೆಯಾಗಿದ್ದಳು ಆಕೆ…

ಪಾಠ ಹೇಳಿ ಕೊಡಲು ಸಮರ್ಥರಾದ ಅಧ್ಯಾಪಿಕೆಯರಲ್ಲಿ ಒಬ್ಬಳಾಗಿದ್ದಳು ಮತ್ತು ಚೆಲುವೆಯಾಗಿದ್ದಳು ಆಕೆ… ಆಕೆಯ ಮದುವೆ ಆಗಿರಲಿಲ್ಲ….

ಒಂದು ದಿನ ತರಗತಿಯ ಹೆಣ್ಣು ಮಕ್ಕಳು ಆ ಟೀಚರ್ ಹತ್ತಿರ ಕೇಳಿದರು –

“ ಮಿಸ್.. ನೀವು ಮದುವೆಯಾಗದೇ ಇರೋದು ಯಾಕೆ…?”

ಟೀಚರ್ ಹೇಳಿದರು – ” ನಾನೊಂದು ಕಥೆ ಹೇಳುತ್ತೇನೆ. ಎಲ್ಲರೂ ಶ್ರಧ್ಧೆಯಿಂದ ಕೇಳಬೇಕು…”

ಟೀಚರ್ ಕಥೆ ಶುರು ಮಾಡಿದರು – ಒಂದು ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳಿದ್ದರು… ಐದನೆಯ ಬಾರಿಯೂ ಆ ತಾಯಿ ಗರ್ಭಿಣಿಯಾದಳು… ಪ್ರಸವದ ದಿನ ಹತ್ತಿರವಾಗುತ್ತಿದ್ದಂತೆ ಆಕೆಯ ಪತಿಯು

ಈ ಮಗು ಕೂಡಾ ಹೆಣ್ಣುಮಗುವಾದರೆ ಅದನ್ನು ಎಲ್ಲಾದರು ತಗೊಂಡುಹೋಗಿ ಬಿಸಾಕುತ್ತೇನೆ ಅಂತ ಎಚ್ಚರಿಸುತ್ತಲೇ ಇದ್ದರು….

ಆದರೆ , ವಿಧಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ…. ಈ ಬಾರಿಯೂ ಹೆಣ್ಣುಮಗುವಿಗೇ ಜನ್ಮವಿತ್ತಳು ಆ ತಾಯಿ….

ಅಂದು ರಾತ್ರಿ ಆ ತಂದೆಯು ಆ ನವಜಾತ ಶಿಶುವನ್ನು ತಗೊಂಡು ಹೋಗಿ ದೂರ ಬೀದಿದೀಪದ ಹತ್ತಿರ ಮಲಗಿಸಿ ವಾಪಾಸಾದರು…

ಪಾಪ ಆ ತಾಯಿಯು ಆ ಮಗುವಿಗಾಗಿ ಪ್ರಾರ್ಥಿಸುತ್ತಿದ್ದಳು… ಮರುದಿನ ಬೆಳ್ಳಂಬೆಳಿಗ್ಗೆ ಆ ತಂದೆಯು ಆ ಬೀದಿ ದೀಪದ ಹತ್ತಿರ ಹೋಗಿ ನೋಡಿದಾಗ ಆ ಮಗುವು ಅಲ್ಲೇ ಇತ್ತು…. ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ….

ಆ ತಂದೆಯು ಮಗುವನ್ನು ಎತ್ತಿಕೊಂಡು ಮನೆಗೆ ಮರಳಿದರು.

ಮರುದಿನವು ರಾತ್ರಿ ಆ ತಂದೆಯು ಆ ಮಗುವನ್ನು ಎತ್ತಿಕೊಂಡು ಹೋಗಿ ದೂರದ ಬೀದಿದೀಪದ ಹತ್ತಿರ ಇಟ್ಟು ಬಂದರು..

ಆದರೆ , ಆ ತಂದೆ ಮರುದಿನ ಬೆಳಿಗ್ಗೆ ಹೋಗಿ ನೋಡಿದಾಗಲೂ ಆ ಮಗು ಅಲ್ಲೇ ಇತ್ತು. ಹೀಗೇ ಮೂರನೇ ದಿನವು ಆ ತಂದೆಯು ಮಗುವನ್ನು ಬಿಟ್ಟು ಬಂದಿದ್ದರು. ಆದರೆ ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ.

ಕೊನೆಗೆ ಆ ತಂದೆಯು ಸೃಷ್ಟಿಕರ್ತನ ವಿಧಿಯನ್ನು ಸ್ವೀಕರಿಸುತ್ತಾ ಆ ಮಗುವನ್ನು ಬಿಸಾಕುವ ಪ್ರಯತ್ನವನ್ನು ಕೈಬಿಟ್ಟರು

ಒಂದೂವರೆ ವರ್ಷದ ನಂತರ ಆ ತಾಯಿ ಪುನಃ ಒಂದು ಮಗುವಿಗೆ ಜನ್ಮವಿತ್ತಳು…. ಅದು ಗಂಡು ಮಗುವಾಗಿತ್ತು….

ಆದರೆ ಕೆಲವೇ ತಿಂಗಳೊಳಗೆ ಐದು ಹೆಣ್ಣು ಮಕ್ಕಳಲ್ಲಿ ಒಬ್ಬಳು ಹೆಣ್ಣು ಮಗಳು ರೋಗಪೀಡಿತಳಾಗಿ ಸಾವನ್ನಪ್ಪಿದಳು….

ಪುನಃ ಆ ತಾಯಿ ಗಂಡು ಮಗುವೊಂದಕ್ಕೆ ಜನ್ಮಕೊಟ್ಟಳು… ಆದರೆ ವಿಧಿ ಆ ತಾಯಿಯನ್ನು ಪರೀಕ್ಷಿಸುತ್ತಲೇ ಇತ್ತು…

ಒಂದೊಂದು ಗಂಡು ಮಗು ಹುಟ್ಟುವಾಗಲೂ, ತಿಂಗಳುಗಳೊಳಗೆ ಒಂದೊಂದು ಹೆಣ್ಣುಮಗು ರೋಗಪೀಡಿತಳಾಗಿ ಅಥವಾ ಅಪಘಾತದಲ್ಲಿ ಸತ್ತು ಹೋಗುತ್ತಲೇ ಇತ್ತು….

ಕೊನೆಗೆ ಆ ಮನೆಯಲ್ಲಿ ಹೆಣ್ಣು ಮಗಳಾಗಿ ಒಬ್ಬಳು ಮಾತ್ರ ಉಳಿದಳು. ಆ ಹೆಣ್ಣು ಮಗಳು ಆ ತಂದೆಯು ಬಿಸಾಕಲು ಕೊಂಡು ಹೋಗಿದ್ದ ಹೆಣ್ಣು ಮಗಳೇ ಆಗಿದ್ದಳು..

ಒಂದು ದಿನ ಆ ತಾಯಿಯೂ ಸಾವನ್ನಪ್ಪಿದಳು….

ನಾಲ್ಕು ಗಂಡುಮಕ್ಕಳು, ಒಬ್ಬಳು ಹೆಣ್ಣು ಮಗಳು ಮತ್ತು ಆ ತಂದೆ ಆ ಮನೆಯಲ್ಲಿ ವಾಸವಾಗಿದ್ದರು…

ಕಾಲಚಕ್ರ ಉರುಳುತ್ತಿದ್ದಂತೆ ಮಕ್ಕಳೆಲ್ಲರೂ ಬೆಳೆದು ದೊಡ್ಡವರಾದರು…

ಆ ಟೀಚರ್ ನಿಟ್ಟುಸಿರು ಬಿಡುತ್ತಾ ಮುಂದುವರಿಸಿದರು…

ಆ ಮನೆಯ ತಂದೆಯು ಬಿಸಾಕಲು ಪ್ರಯತ್ನಿಸಿದ್ದ ಆ ಹೆಣ್ಣುಮಗಳೇ ನಾನು…..

sthree2

ಮಕ್ಕಳೆಲ್ಲರೂ ಮೂಖವಿಸ್ಮಿತರಾಗಿ ತದೇಕಚಿತ್ತದಿಂದ ಟೀಚರ್ ನ ಮಾತುಗಳನ್ನೇ ಆಲಿಸುತ್ತಿದ್ದರು…

ನಾನು ಮದುವೆಯಾಗದಿರಲು ಕಾರಣವನ್ನು ಈಗ ಹೇಳುತ್ತೇನೆ –

ನನ್ನ ತಂದೆಗೆ ವಯಸಾಗಿದೆ…. ಸ್ವತಃ ಆಹಾರವನ್ನು ಕೂಡಾ ತಿನ್ನೋದಕ್ಕೆ ಆಗುತ್ತಿಲ್ಲ…

ನನ್ನ ಸಹೋದರರೆಲ್ಲರೂ ಮದುವೆಯಾಗಿ ಅವರವರ ಪಾಡಿಗೆ ಹೋದರು…. ಈಗ ತಂದೆಯ ಯೋಗಕ್ಷೇಮವನ್ನು ನೋಡೋದಕ್ಕಾಗಲಿ, ಪರಿಚರಿಸಲಿಕ್ಕಾಗಲಿ ನಾನಲ್ಲದೆ ಬೇರೆ ಯಾರೂ ಇಲ್ಲ…..

ನನ್ನ ತಂದೆ ಆವಾಗಾವಾಗ ಅಳುತ್ತಾ ಹೇಳುತ್ತಾರೆ – ನೀನು ನವಜಾತ ಶಿಶುವಾಗಿದ್ದಾಗ ನಾನು ನಿನ್ನ ಮೇಲೆ ಮಾಡಿದ ತಪ್ಪನ್ನು ಕ್ಷಮಿಸಿಬಿಡು ಮಗಳೇ ಅಂತ….

ಟೀಚರ್ ತುಂಬಿ ಬಂದ ಕಣ್ಣೀರನ್ನು ಸೀರೆಯ ಸೆರಗಿನಿಂದ ಒರೆಸುತ್ತಾ ಕಥೆಯನ್ನು ನಿಲ್ಲಿಸಿದರು….

ನೆನಪಿರಲಿ ಸ್ನೇಹಿತರೇ…. ಒಬ್ಬ ತಂದೆಗೆ ಸೃಷ್ಟಿಕರ್ತನಿಂದ ಸಿಗುವ ಅತ್ಯಂತ ಅಮೂಲ್ಯವಾದ ವರದಾನಗಳಲ್ಲಿ ಒಂದಾಗಿದೆ ಹೆಣ್ಣುಮಕ್ಕಳು…..

ಆಕೆಗೆ ಸ್ತ್ರೀ ಅಂದರೆ ಅಷ್ಟೇ ಸಾಕೇ…….

Screenshot 2019-08-28 at 12.00.10 PM

ಇಂದು ಮುಂಜಾನೆ ನನ್ನ ಗೆಳೆಯರೊಬ್ಬರು ವ್ಯಾಟ್ಯಾಪ್ ಮುಖಾಂತರ ಕಳುಹಿಸಿದ ಈ ಸುಂದರ ಕಥೆಯ ಅನಾಮಿಕ ಮೂಲ ಲೇಖಕ/ಲೇಖಕಿಗೆ ನನ್ನ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ.

ನನ್ನ ಭಾವನೆಯಲ್ಲಿ ಈ ಲೇಖನದ ಮುಂದುವರೆದ ಭಾಗವಾಗಿ ನನ್ನ ದೃಷ್ಟಿಯಲ್ಲಿ ಹೆಣ್ಣುಮಗಳನ್ನು ಕೇವಸ್ತ್ರೀ ಎಂದು ಅಲ್ಲಿಗೇ ನಿಲ್ಲಿಸದೇ ಆಕೆಯ ನಾನಾ ರೂಪಗಳು ಹೀಗಿವೆ.

ಹುಟ್ಟಿದಾಗ ಮಗಳು , ಬೆಳೆಯುತ್ತಾ ಒಡಹುಟ್ಟಿದವರಿಗೆ ಸಹೋದರಿ, ಸಹಪಾಠಿಗಳಿಗೆ ಗೆಳತಿ, ಮದುವೆಯಾದಾಗ ಒಬ್ಬರ ಮಡದಿ ಮತ್ತೊಬ್ಬರ ಸೊಸೆ‌, ಮಕ್ಕಳಾದ ಕೂಡಲೇ ಮಮತಾಮಯಿಯಾದ ತಾಯಿ, ಮಂದೆ ತಾನೇ ಹೆತ್ತ ಮಕ್ಕಳಿಗೆ ಮದುವೆಯಾದಾಗ, ಬರುವ ಅಳಿಯಂದಿರಿಗೆ ಮತ್ರು ಸೊಸೆಯರಿಗೆ ಅತ್ತೆ, ಆ ಮಕ್ಕಳಿಗೆ ಮಕ್ಕಳಾದಾಗ, ಆ ಮೊಮ್ಮಕ್ಕಳಿಗೆ ಪ್ರೀತಿ ಪಾತ್ರವಾದ ಅಜ್ಜಿ. . ಹೀಗೆ ಒಂದು ಹೆಣ್ಣು ಹುಟ್ಟಿನಿಂದ ಆಕೆ ಜೀವಿತವಿರುವವರೆಗೂ ಸಂಧರ್ಭಕ್ಕೆ ತಕ್ಕಂತೆ ನಾನಾ ಪಾತ್ರಗಳಲ್ಲಿ ತನ್ನನ್ನು ತಾನು ಒಗ್ಗಿಕೊಂಡು ಹೋಗುತ್ತಾಳೆ. ಅದಕ್ಕೇ ಆಕೆಯನ್ನು ಗಂಗೆ ಹೋಲಿಸಲಾಗುತ್ತದೆ. ನೀರಿಗೆ ಬಣ್ಣವಿಲ್ಲ ವಾಸನೆಯಿಲ್ಲ, ಆಕಾರವಿಲ್ಲ, ರುಚಿಯಿಲ್ಲ, ಹಾಕಿದ ಪಾತ್ರೆಗೆ ಒಗ್ಗಿ ಕೊಳ್ಳುತ್ತದೆ. ಬೆರೆಸಿದ ಬಣ್ಣಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಿಸಿಕೊಳ್ಳುತ್ತದೆ. ಸಕ್ಕರೆ ಹಾಕಿದಲ್ಲಿ ಸಿಹಿ, ಉಪ್ಪು ಹಾಕಿದಲ್ಲಿ ಉಪ್ಪುಪ್ಪು, ಹುಳಿ ಹಿಂಡಿದಲ್ಲಿ ಹುಳಿ ಹೀಗೆ ನೀರು ಎಲ್ಲರೊಳಗೆ ಒಂದಾಗುವಂತೆ ಹೆಣ್ಣು ಕೂಡಾ ಕುಟುಂಬದಲ್ಲಿ ಒಂದಾಗಿ ಕುಟುಂಬದ ಕಣ್ಣಾಗಿ ಕಡೆಗೆ ಕುಟುಂಬದ ಅಧಾರವಾಗುತ್ತಾಳೆ. ಒಂದು ತಾಯಿ ಹತ್ತು ಗಂಡು ಮಕ್ಕಳನ್ನು ಸಾಕಿ ಬೆಳಸಬಹುದು ಆದರೆ ಅದೇ ಹತ್ತು ಗಂಡು ಮಕ್ಕಳು ಆ ತಾಯಿಯನ್ನು ಸುಖಃವಾಗಿ ನೆಮ್ಮದಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.

ಈ ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳು ಯಾವುದೇ ಕುಟುಂಬಕ್ಕೆ ಹೊರೆಯಲ್ಲ. ಹಾಗಾಗಿ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಬೇಡ. ಒಂದು ಕುಟುಂಬದಲ್ಲಿ ಹೆಣ್ಣಾಗಲೀ, ಗಂಡಾಗಲಿ ಮಕ್ಕಳೆರಡೇ ಇರಲಿ. ಒಂದೇ ಮಗುವಾದರೆ ಆ ಮಗುವಿಗೆ ಮುಂದೆ ಯಾವುದೇ ರಕ್ತಸಂಬಂಧವೇ ಇರದಿರುವ ಕಾರಣ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇರದಿರುವ ಕಾರಣ ಎರಡು ಮಕ್ಕಳಿರಬೇಕು ಎನ್ನುವುದು ನನ್ನ ವಯಕ್ತಿಕ ಆಭಿಪ್ರಾಯ. ಅದೇ ರೀತಿ ಈ ಲೇಖನದಲ್ಲಿಯೇ ತಿಳಿಸಿದಂತೆ ದುರದೃಷ್ಟವಶಾತ್ ಒಂದು ಮಗುವಿಗೆ ಹೆಚ್ಚು ಕಡಿಮೆಯಾದಲ್ಲಿ (ಯಾರಿಗೂ ಹಾಗಾಗುವುದು ಬೇಡ) ಮತ್ತೊಂದು ಮಗು ಇರುತ್ತದೆ ಎನ್ನುವುದು ಮತ್ತೊಂದು ವಾದ. ದಯವಿಟ್ಟು ಹೆಣ್ಣು ಮಕ್ಕಳನ್ನು ಉಳಿಸಿ ಮತ್ತು ಬೆಳಸಿ ಅದಕ್ಕೆಂದೇ ಸರ್ಕಾರವೂ ಕೂಡಾ ಬೇಟಿ ಬಚಾವ್ ಮತ್ತು ಬೇಟಿ ಪಡಾವ್ ಎಂಬ ಆಂಧೋಲನವೂ ಇದೇ. ಭ್ಯಾಗ್ಯಲಕ್ಷ್ಮೀ ಎಂಬ ಯೋಜನೆಯನ್ನೂ ಜಾರಿ ಗೊಳಿಸಿದೆ. ವಿದ್ಯೆ ಕಲಿತ ನಾರಿ ದೇಶಕ್ಕೆ ದಾರಿ ಎಂಬಂತೆ ಇಂದು ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ದುಡಿಯುತ್ತಿದ್ದಾರೆ. ವೈಜ್ಞಾನಿಕ ಕ್ಷೇತ್ರ, ಸಾಮಾಜಿಕ, ಕಲೆ ಸಾಹಿತ್ಯ, ರಂಗಭೂಮಿ, ರಾಜಕೀಯ ಯಾವುದೇ ಕ್ಷೇತ್ರವಿರಲಿ ಪ್ರಮಿಳೆಯರದ್ದೇ ಪ್ರಾಭಲ್ಯ. ಊರಿಗೆ ಅರಸನಾದರೂ ತಾಯಿಗೆ ಮಗ/ಹೆಂಡತಿಗೆ ಗುಲಾಮ ಎನ್ನುವ ಗಾದೆ ಮಾತೇ ಇದೆ. ಇಂದಿಗೂ ಕೂಡ ನಮ್ಮ ದೇಶ ಆರ್ಥಿಕವಾಗಿ ಸಧೃಢವಾಗಿದೆ ಎಂದರೆ ಅದರ ಹಿಂದೆ ಮನೆಯಲ್ಲಿ ನಮ್ಮ ಹೆಣ್ಣುಮಕ್ಕಳು ಸಾಸಿವೆ ಡಬ್ಬಿಯಲ್ಲಿ ಪೈಸೆ ಪೈಸೇ ಎತ್ತಿಟ್ಟು ಮಾಡುವ ಉಳಿತಾಯವೇ ಆಗಿದೆ. ಹಾಗಾಗಿಯೇ ನಾವಿಂದು, ನಮ್ಮ ದೇಶದ ಹಣಕಾಸನ್ನು ನಿರ್ವಹಿಸಲು ಹೆಣ್ಣುಮಗಳ ಕೈಗೇ ಅಧಿಕಾರವನ್ನು ಕೊಟ್ಟಿದ್ದೇವೆ.

ಹೆಣ್ಣು ಒಂದು ಮಾತೃ ಸ್ವರೂಪಿ, ಬಹುರೂಪಿ, ಕರುಣಾಮಯಿ. ಆಕೆ ಒಂದು ಶಕ್ತಿ ಸ್ವರೂಪ, ನಮ್ಮ ಪುರಾಣಗಳಲ್ಲಿಯೂ ದುಷ್ಟರ ಶಿಕ್ಷೆಗಾಗಿ ದುರ್ಗೇ, ಚಾಮುಂಡಿ ತಾಯಿಯರನ್ನೇ ಆಶ್ರಯಿಸಿದ್ದೇವೆ. ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಗಾದೇ ಮಾತೂ ಇದೆ. ಹಾಗಾಗಿ ಆಕೆಯನ್ನು ಕೇವಲ ಸ್ತ್ರೀ ಎಂಬ ಒಂದೇ ಒಂದು ಪದಕ್ಕೇ ಸೀಮಿತ ಗೊಳಿಸದೇ ಆಕೆಯನ್ನು ಇಡೀ ಜಗತ್ತನ್ನೇ ಎತ್ತಿ ಹಿಡಿದಿರುವ ಭೂಮಿ ತಾಯಿಯ ರೂಪದಲ್ಲಿ ನೋಡ ಬಯಸುತ್ತೇನೆ. ನಾವು ಎನೇ ತಪ್ಪು ಮಾಡಿದರೂ, ಎಷ್ಟೇ ತಪ್ಪು ಮಾಡಿದರೂ, ಅಕೆಯ ಒಡಲನ್ನು ಅಗೆದು ಬಗೆದು ಸೋಸಿದರೂ, ನಮ್ಮ ಮೇಲೆ ಒಂದು ಚೂರು ಬೇಸರಿ ಕೊಳ್ಳದೇ ಎಲ್ಲವನ್ನೂ ತನ್ನ ಮಡಿಲಲ್ಲಿ ಹಾಕಿಕೊಂಡು ಸಲಹುತ್ತಿರುವ ತಾಯಿಯವಳು .ಹಾಗಾ ಹಾಗಾಗಿ ನನ್ನ ಪಾಲಿಗೆ ಆಕೆ ಕೇವಲ ಸ್ರೀ ಮಾತ್ರ ಆಗಿರದೆ, ಆಕೆ ಕ್ಷಮಯಾಧರಿತ್ರೀ .

ಮನೆ ಮನೆಯಲ್ಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ ……!!

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆದರ ಮತ್ತು ಆಚರಣೆಗಳು ಕೇವಲ ಮಾರ್ಚ್ 8 ಒಂದೇ ದಿನಕ್ಕೇ ಸೀಮಿತವಾಗಿರದೇ, ಅದು ನಿರಂತರವಾಗಿರುವಂತೆ ನೋಡಿಕೊಳ್ಳುವ ಜವಾಬ್ಧಾರಿಯೂ ನಮ್ಮದೇ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಗೃಹಿಣಿ ಗೃಹಮುಚ್ಯತೆ

ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಆ ಮನೆಯ ಮಗಳಿಗೆ ಲೋಯರ್ ಸೆಕೆಂಡರಿಗಿಂತ ಹೆಚ್ಚಿಗೆ ಓದಲಾಗಲಿಲ್ಲ. ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ತನ್ನ ಹಿರಿಯರಿಂದ ಕಲಿತುಕೊಳ್ಳುತ್ತಾಳೆ. ಮುಂದೆ ಮದುವೆಯ ವಯಸ್ಸು ಬಂದಾಗ ನೋಡಲು ಸುರದ್ರೂ ಪವತಿಯಾಗಿದ್ದರೂ ಕಡಿಮೆ ಓದಿನ ನೆಪವೊಡ್ಡಿ ಒಂದೆರಡು ಸಂಬಂಧಗಳು ಕೂಡಿ ಬರುವುದಿಲ್ಲವಾದರೂ, ಹಾಗೆ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಬಂದು ಆಗಿನ ಕಾಲಕ್ಕೇ ಇಂಜಿನಿಯರಿಂಗ್ ಓದಿದ್ದ ಹುಡುಗನೊಂದಿಗೆ ಆಕೆಯ ಮದುವೆಯಾಗಿ ತುಂಬು ಕುಟುಂಬದ ಸೊಸೆಯಾಗಿ, ಸುಖಃ ದಾಂಪತ್ಯದ ಕುರುಹಾಗಿ ಮುದ್ದಾದ ಮೂರು ಹೆಣ್ಣು ಮಕ್ಕಳ ತಾಯಿಯಾಗುತ್ತಾಳೆ. ತಾನು ಹೆಚ್ಚು ಓದದಿದ್ದರೇನಂತೆ, ತನ್ನ ಎಲ್ಲಾ ಆಸೆಗಳನ್ನು ತನ್ನ ಮಕ್ಕಳ ಮೂಲಕ ತೀರಿಸಿಕೊಳ್ಳುತ್ತಾಳೆ. ಮೊದಲ ಮಗಳು ಇಂಜಿನಿಯರ್, ಎರಡನೇ ಮಗಳು ಡಾಕ್ಟೃರ್ ಆದರೆ ಮೂರನೇಯವಳು ಸಂಗೀತ ಮತ್ತು ನೃತ್ಯ ಪಾರಂಗತಳನ್ನಾಗಿ ಮಾಡುವುದಲ್ಲದೇ ಅವರಿಗೆ ನಮ್ಮ ಸತ್ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಕಲಿಸಿ ಎಲ್ಲರಿಗೂ ಮದುವೆ ಮಾಡುತ್ತಾಳೆ. ಆ ಮಕ್ಕಳೆಲ್ಲಾ ಈಗ ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಆಕೆ ಅವರನ್ನು ನೋಡಲು ಆಗಿಂದ್ದಾಗ್ಗೆ ಬೆಂಗಳೂರು ಮೈಸೂರಿಗೆ ಹೋಗುವ ಹಾಗೆ ದೇಶ ವಿದೇಶಗಳಲ್ಲಿ ಸುತ್ತಾಡುತ್ತಾ, ತನ್ನ ಮೊಮ್ಮಕ್ಕಳಿಗೂ ನಮ್ಮ ಭಾಷೆ, ಸಂಸ್ಕಾರ ಮತ್ತು ಸಂಸ್ಕೃತಿಯ ಪರಿಚಯವನ್ನು ಮಾಡಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ.

ಮನೆಯಲ್ಲಿ ಮುದ್ದಾಗಿ ಬೆಳೆದ ಹುಡುಗಿ ಕಾಲೇಜು ಕಲಿಕೆಯ ಜೊತೆ ಜೊತೆಯಲ್ಲಿಯೇ ಬೆರಳಚ್ಚು ಮತ್ತು ಶೀಘ್ರಲಿಪಿಯನ್ನು ಉತ್ತಮ ದರ್ಜೆಯಲ್ಲಿ ಮುಗಿಸಿದ ಪರಿಣಾಮವಾಗಿ ಎರಡನೇ ವರ್ಷದ ಪದವಿ ಮುಗಿಯುವಷ್ಟರಲ್ಲಿಯೇ ಸರ್ಕಾರಿ ವೃತ್ತಿಯನ್ನು ಗಳಿಸುತ್ತಾಳೆ ಆಕೆ. ಮೂರನೇ ವರ್ಷದ ಪದವಿಯನ್ನು ದೂರ ಶಿಕ್ಷಣದ ಮುಖಾಂತರ ಮುಗಿಸುತ್ತಿದ್ದಂತೆಯೇ ತುಂಬಿದ ಸಂಪ್ರದಾಯಸ್ಥರ ಮನೆಯ ಸೊಸೆಯಾಗುತ್ತಾಳೆ. ತವರು ಮನೆಯ ಪದ್ದತಿಗಳಿಗೂ ಗಂಡನ ಮನೆಯ ಪದ್ದತಿಗಳಿಗೂ ಅಜಗಜಾಂತರ ವೆತ್ಯಾಸದಿಂದ ಆರಂಭದಲ್ಲಿ ತುಸು ತೊಂದರೆಯನ್ನು ಅನುಭವಿಸಿದರೂ ಕೆಲವೇ ದಿನಗಳಲ್ಲಿ ಗಂಡನ ಮನೆಯ ಪದ್ದತಿಗಳಿಗೆ ಮತ್ತು ಆಹಾರ ಶೈಲಿಗೆ ಒಗ್ಗಿ ಹೋಗಿ ತನ್ನ ಕೈ ಚೆಳಕದಿಂದ ತನ್ನ ಅತ್ತೆಯಿಂದಲೇ ಭೇಷ್ ಪಡೆಯುವಷ್ಟರ ಮಟ್ಟಿಗೆ ಆಗುತ್ತಾಳೆ. ಅತ್ತೆ ಅಕಾಲಿಕವಾಗಿ ಕಾಲವಾದ ನಂತರ ತನ್ನ ವಯೋವೃದ್ಧ ಮಾವನವರನ್ನೂ ಮತ್ತು ಮುದ್ದಾದ ಮಕ್ಕಳನ್ನು ಆರೈಕೆ ಮಾಡುವ ಸಲುವಾಗಿಯೇ ಕೈ ತುಂಬಾ ಸಂಬಳ ಬರುತ್ತಿದ್ದ ಸರ್ಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಅಪ್ಪಟ ಗೃಹಿಣಿಯಾಗಿ ತನ್ನ ಸಂಸಾರದ ನೊಗವನ್ನು ಸಂಪೂರ್ಣವಾಗಿ ಹೊತ್ತು ಕುಟುಂಬದ ಆರೈಕೆಯೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರಲ್ಲಿ ಹರಿಸಿದ್ದಾಳೆ ತನ್ನ ಚಿತ್ತ.

ಅಲ್ಲೊಂದು ಹಳ್ಳಿಯಲ್ಲಿ ಒಬ್ಬ ರೈತಾಪಿ ಕುಟುಂಬ. ಅನೇಕ ದಿನಗಳಾದರೂ ದೇವರು ಆವರಿಗೆ ಮಕ್ಕಳ ಭಾಗ್ಯವನ್ನು ಕರುಣಿಸಲೇ ಇಲ್ಲ. ಅದಕ್ಕಾಗಿ ಅವರು ಮಾಡದ ಪೂಜೆಯಿಲ್ಲ ಕಟ್ಟದ ಹರಕೆ ಇಲ್ಲ. ಆದರೂ ಭಗವಂತನ ಅವರ ಮನೆಯಲ್ಲಿ ತೊಟ್ಟಿಲು ಕಟ್ಟುವ ಭಾಗ್ಯ ಕರುಣಿಸಲೇ ಇಲ್ಲ. ಮಕ್ಕಳಿಲ್ಲದಿದ್ದರೇನಂತೆ ಮಕ್ಕಳ ಬದಲಾಗಿ ಮರಗಳನ್ನೇ ಸಾಕೋಣ, ಪೋಷಿಸೋಣ ಎಂದು ತೀರ್ಮಾನಿಸಿದರು ಆ ದಂಪತಿಗಳು. ಆದರೆ ಅಕಾಲಿಕವಾಗಿ ಪತಿಯನ್ನು ಕಳೆದುಕೊಂಡರೂ ಧೃತಿಗೆಡೆದ ಆಕೆ, ತನ್ನ ಸ್ವಪ್ರಯತ್ನದಿಂದ ಲಕ್ಷಾಂತರ ಸಾಲು ಮರಗಳನ್ನು ರಸ್ತೆಯ ಬದಿಯಲ್ಲಿ ನೆಟ್ಟಿದ್ದಲ್ಲದೆ ಅವುಗಳನ್ನು ತನ್ನ ಹೆತ್ತ ಮಕ್ಕಳಿಗಿಂತಲೂ ಹೆಚ್ಚಿಗೆ ಪೋಷಿಸಿದ ಪರಿಣಾಮವಾಗಿ ಆ ಲಕ್ಷಾಂತರ ಮರಗಳೆಲ್ಲಾ ಇಂದು ಹೆಮ್ಮರಗಳಾಗಿ ಪರಿಸರವನ್ನು ಸಂರಕ್ಷಿಸುತ್ತಿವೆ. ಕೊಟ್ಯಾಂತರ ಜನರಿಗೆ ಶುಧ್ಧ ಗಾಳಿಯನ್ನು ನೀಡುತ್ತಿದೆಯಲ್ಲದೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ತನ್ನ ಮನೆಯಲ್ಲಿ ತೊಟ್ಟಿಲು ಕಟ್ಟಲಾಗದಿದ್ದರೇನಂತೆ, ಲಕ್ಷಾಂತರ ಮನೆಗಳಲ್ಲಿ ತೊಟ್ಟಿಲು ಕಟ್ಟುವಷ್ಟು ಮರ ಮುಟ್ಟಗಳನ್ನು ಬೆಳೆಸಿದ್ದಾಳೆ ಆಕೆ.

ಅದೊಂದು ಸಣ್ಣ ಹಳ್ಳಿ. ಅಲ್ಲೊಂದು ಪುಟ್ಟ ಕುಟಂಬ, ಗಂಡ ಹೆಂಡತಿ ಮತ್ತು ಒಬ್ಬನೇ ಮಗ. ಜೀವನಕ್ಕೆ ಸಾಕಾಗುವಷ್ಟು ಜಮೀನು. ಆದರೆ ಮನೆಯ ಯಜಮಾನರಿಗೆ ನಾಟಕದ ಖಯಾಲಿ. ಸದಾ ಎಲ್ಲೆಂದರಲ್ಲಿ ನಾಟಕ ಮಾಡುವುದಾಗಲೀ ಅಥವಾ ನಾಟಕ ಕಲಿಸುವುದಕ್ಕಾಗಲೀ ತಿಂಗಳಾನು ಗಟ್ಟಲೆ ಮನೆಯನ್ನು ಬಿಟ್ಟು ಹೋಗುವ ಚಾಳಿ. ಚುರುಕಾದ ಮಗನಿಗೆ ವಿದ್ಯಾಭ್ಯಾಸ ಮಾಡಿಸಬೇಕು, ಜೀವನ ಸಾಗಿಸಬೇಕು. ಧೃತಿಗೆಡದ ಆಕೆ ಮನೆಯ ಮುಂದೆ ಪುಟ್ಟ ಹೋಟೆಲ್ ಅರಂಭಿಸಿದಳು. ಜನರಿಗೆ ಕಾಫೀ, ಟೀ, ಸಣ್ಣ ಪುಟ್ಟ ತಿಂಡಿಗಳನ್ನು ಉಣ ಬಡಿಸುತ್ತಲೇ ಸಂಸಾರ ಸಾಗಿಸ ತೊಡಗಿದಳು. ಎಂಜಲು ತಟ್ಟೆ ಲೋಟಗಳನ್ನು ತೊಳೆಯುತ್ತಾ ಜೊತೆ ಜೊತೆಗೆ ಓದುತ್ತಾ ಸ್ನಾತಕೋತ್ತರ ಪದವಿಯನ್ನು ಗಳಿಸಿ ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವಂತನಾದ ಮಗ. ಮಣ್ಣಿನ ಮೇಲಿನ ಆಸೆಯಿಂದ ಇದ್ದ ಕೆಲಸವನ್ನು ಬಿಟ್ಟು ತನ್ನ ಹಳ್ಳಿಯಲ್ಲಿಯೇ ಜಮೀನನ್ನು ಖರೀದಿಸಿ ಆಧುನಿಕ ಕೃಷಿವಂತನಾಗಿ ಲಕ್ಷಾಂತರ ರೂಪಾಯಿ ಸಂಪಾದಿಸಿದ. ನಗರದಲ್ಲಿ ಅರಮನೆಯಂತಹ ಬಂಗಲೆ ಇದ್ದರೂ, ಐಶಾರಾಮಿ ಕಾರ್ ಇದ್ದರೂ ಆ ತಾಯಿ ತನ್ನ ಹಿಂದಿನ ಕಷ್ಟಕಾರ್ಪಣ್ಯಗಳನ್ನು ಮರೆಯದೇ ಇಂದಿಗೂ ತನ್ನ ಹಳ್ಳಿಯಲ್ಲಿಯೇ ಕೃಷಿ ಮಾಡಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ.

ಆಕೆ ತರಕಾರಿ ಮಾರುತ್ತಿದ್ದರೆ ಆಕೆಯ ಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅದೊಂದು ದಿನ ಒಂದು ಬಾರೀ ಖಾಯಿಲೆಗೆ ತುತ್ತಾಗಿ ಯಾವ ಸರ್ಕಾರೀ ಸೌಲಭ್ಯಗಳು ದೊರಕದೆ ಮತ್ತು ಸರಿಯಾದ ಚಿಕಿತ್ಸೆ ಅಗತ್ಯ ಸಮಯದಲ್ಲಿ ಸಿಗದೆ ಆತ ಮೃತ ಪಟ್ಟ. ಎರಡು ಸಣ್ಣ ಮಕ್ಕಳ ವಿಧವೆಯಾದ ಆಕೆ ಆ ಕ್ಷಣದಲ್ಲೇ ತನಗೆ ಎಷ್ಟೇ ಕಷ್ಟ ಬರಲಿ ತನ್ನ ಒಬ್ಬ ಮಗಳನ್ನು ಡಾಕ್ಟರ್ ಮತ್ತೊಬ್ಬ ಮಗನನ್ನು ಐ.ಎ.ಎಸ್ ಅಧಿಕಾರಿಯನ್ನಾಗಿ ಮಾಡಲೇ ಬೇಕೆಂದು ನಿರ್ಧರಿಸಿದಳು. ಮಕ್ಕಳೂ ಕಷ್ಟಪಟ್ಟು ಸರ್ಕಾರೀ ಶಾಲಾ ಕಾಲೇಜಿನಲ್ಲಿಯೇ ಅರ್ಹತೆಯ ಆಧಾರದ ಮೇಲೆ ಸೀಟ್ ಗಿಟ್ಟಿಸಿ ಅಮ್ಮನ ಕನಸನ್ನು ನನಸಾಗಿಸಿದರು. ಮಗಳು ತಮ್ಮದೇ ಊರಿನಲ್ಲಿ ತಾಯಿಯ ಉಳಿತಾಯದಲ್ಲೇ ಆಸ್ಪತ್ರೆಯನ್ನು ಕಟ್ಟಿಸಿ ರೋಗಿಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದರೆ, ಮಗ ಡಿಸಿ ಆಗಿ ತಾಯಿಯ ಕನಸುಗಳನ್ನು ಸಾಕಾರ ಮಾಡುತ್ತಿದ್ದಾನೆ. ಆ ತಾಯಿ ಯಥಾ ಪ್ರಕಾರ ತನ್ನ ತರಕಾರಿ ವ್ಯವಹಾರವನ್ನೇ ಮುಂದುವರಿಸಿದ್ದಾಳೆ.

ಪರಕೀಯರ ಧಾಳಿಯಿಂದ ನಮ್ಮ ದೇಶ ಮತ್ತು ಧರ್ಮ ತತ್ತರಿಸುತ್ತಿದ್ದಾಗ ಆ ಮಹಾತಾಯಿ ಜೀಜಾಬಾಯಿ ತನ್ನ ಮಗನಿಗೆ ರಾಮಾಯಣ ಮಹಾಭಾರತದ ಜೊತೆಗೆ ನಮ್ಮ ಅನೇಕ ವೀರರ ಕಥೆಗಳನ್ನು ಹೇಳಿ ಸಮರ್ಥ ರಾಮದಾಸರ ಬಳಿ ವಿದ್ಯೆ ಕಲಿಸಿ ಹಿಂದೂ ಸಾಮ್ರಾಜ್ಯದ ಪುನರ್ ಸ್ಥಾಪನೆಗೆ ಕಾರಣೀಭೂತಳಾದರು. ಅಂತೆಯೇ ನಿಮ್ಮ ಮಗ ಬಹಳ ದಡ್ದನಾಗಿದ್ದಾನೆ. ಅವನಿಗೆ ನಮ್ಮ ಶಾಲೆಯಲ್ಲಿ ಪಾಠ ಕಲಿಸಲು ಸಾಧ್ಯವಿಲ್ಲ ಎಂದು ಗುರುಗಳು ಹೇಳಿದಾಗ ಅವರಿಗೆ ಎದುರು ಮಾತನಾಡದೆ, ಮನೆಯಲ್ಲಿಯೇ ತನ್ನ ಮಗನಿಗೆ ವಿದ್ಯೆ ಕಲಿಸಿ ವಿದ್ಯುತ್ ಬಲ್ಬ್, ಕ್ಯಾಮೆರಾ, ಫೋಟೋಗ್ರಾಫಿ, ಮೂವಿ ಕ್ಯಾಮೆರಾಗಳು ಮತ್ತಿತರ ಹಲವಾರು ಉತ್ಪನಗಳನ್ನು ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಎಂಬುವನನ್ನು ವಿಶ್ವ ವಿಖ್ಯಾತ ವಿಜ್ಞಾನಿಯನ್ನಾಗಿ ಮಾಡಿದ್ದದ್ದು ಆತನ ತಾಯಿ ನ್ಯಾನ್ಸಿ ಮಾಥ್ಯು ಎಲಿಯಾಟ್ ಎಂಬಾಕೆ .

ಈ ಎಲ್ಲಾ ಘಟನೆಗಳು ಕಾಲ್ಪನಿಕವಾಗಿರದೆ ನಿಜ ಜೀವನದಲ್ಲಿ ನಡೆದಂತಹ ಸತ್ಯ ಘಟನೆಗಳೇ ಆಗಿವೆ. ಹೆಣ್ಣುಮಕ್ಕಳ ಇಂತಹ ನೂರಾರು ಸಾಹಸ ಗಾಥೆಗಳು ನಮ್ಮೆಲ್ಲರ ನಿಜ ಜೀವನದಲ್ಲಿ ಹಲವಾರು ಬಾರಿ ನೋಡಿರುತ್ತೇವೆ ಇಲ್ಲವೇ ಕೇಳಿಯೇ ಇರುತ್ತೇವೆ. ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಹೆಣ್ಣುಮಕ್ಕಳು ಸಾಮಾಜಿಕವಾಗಿ ಸಕ್ರಿಯರಾದಷ್ಟೂ ಒಂದು ಸ್ವಸ್ಥ, ಸದೃಢ ಮನೆ ಮತ್ತು ಸಮಾಜ ಹೇಗೆ ನಿರ್ಮಾಣ ಆಗುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಗಂಡಸರು ಎಷ್ಟೇ ದುಡಿದು ತಂದು ಹಾಗಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದು ಹೆಣ್ಣೇ ಅಲ್ಲವೇ? ಆಕೆ ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಗೆಳತಿಯಾಗಿ, ಬಾಳ ಸಂಗಾತಿಯಾಗಿ, ಗೃಹಿಣಿಯಾಗಿ, ತಾಯಿಯಾಗಿ, ಅಜ್ಜಿಯಾಗಿ, ಕಾಲ ಕಾಲಕ್ಕೆ ತಕ್ಕಂತೆ ವಯೋಸಹಜವಾಗಿ ನಾನಾ ರೀತಿಯ ಪಾತ್ರಗಳನ್ನು ನಮ್ಮ ಜೀವನದಲ್ಲಿ ಸಕ್ರೀಯವಾಗಿ ನಿಭಾಯಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ನಾಡು. ಪರ ಪುರುಷರೊಂದಿಗೆ ಸಂಭಾಷಣೆ ಮಾಡುವಾಗ ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ತಲೆ ಬಗ್ಗಿಸಿಯೇ ಮಾತನಾಡಿಸುವ ಸಂಸ್ಕೃತಿ ನಮ್ಮದು. ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ ಗೋಳಾಡಿದ ಸತ್ಯ ಹರಿಶ್ಚಂದ್ರನ ಪತ್ನಿ ತಾರಮತಿ ಹುಟ್ಟಿದ ನಾಡಿದು. ಅಲ್ಲಾಹುದ್ದೀನ್ ಖಿಲ್ಚಿಯು ಮೋಸದಿಂದ ರಾಜನನ್ನು ಸೋಲಿಸಿ ರಾಣಿ ಪದ್ಮಾವತಿಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಪರ ಪುರುಷನ ಸೆರೆ ಸಿಗಬಾರದೆಂದು ತನ್ನನ್ನೇ ಆತ್ಮಾಹುತಿ ಮಾಡಿಕೊಂಡ ಇತಿಹಾಸವಿರುವ ನಾಡಿದು.

ಹೌದು ಇಂದು ಕಾಲ ಬದಲಾಗಿದೆ. ಹೆಣ್ಣು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಮುಸುರೆ ತೊಳೆದುಕೊಂಡು ಕುಳಿತುಕೊಳ್ಳದೆ ಪುರುಷರ ಸರಿ ಸಮನಾಗಿ ಎಲ್ಲಾ ಉದ್ದಿಮೆಗಳಲ್ಲಿಯೂ ದುಡಿಯುತ್ತಿದ್ದಾಳೆ . ನಮ್ಮ ದೇಶದಲ್ಲಿ ಈಗಾಗಲೇ ಒಬ್ಬ ಹೆಂಗಸು ಪ್ರಧಾನಿಯಾಗಿದ್ದಾರೆ, ರಾಷ್ಟ್ರಪತಿಗಳಾಗಿದ್ದಾರೆ. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳೂ ಆಗಿದ್ದಾರೆ. ನಮ್ಮ ದೇಶದ ಜವಳಿ ಮಂತ್ರಿ, ವಿದೇಶಾಂಗ ಸಚಿವೆ, ರಕ್ಷಣಾಮಂತ್ರಿಗಳು,ಹಣಕಾಸಿನ‌ ಮಂತ್ರಿಯಾಗಿಯೂ ಹೆಂಗಸರೇ ಆಳಿದ್ದಾರೆ. ಅದೇ ರೀತಿ ಪ್ರಪಂಚಾದ್ಯಂತ ನಾನಾ ರಾಷ್ಟ್ರಗಳ ಅಧ್ಯಕ್ಷೆಯರು ಮತ್ತು ಅನೇಕ ಬಹುರಾಷ್ಟ್ರೀಯ ಕಂಪನಿಗಳ ಆಡಳಿತ ನಿರ್ವಾಹಣಾ ಅಧಿಕಾರಿಯಾಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಹೆಣ್ಣು ನಿರ್ವಹಿಸದ ಪಾತ್ರವೇ ಇಲ್ಲವೇನೂ ಎನ್ನಬಹುದು. ಅದಕ್ಕೇ ಗೃಹಿಣಿ ಗೃಹಮುಚ್ಯತೆ ಎಂಬ ಸಂಸ್ಕೃತದ ನಾಣ್ಣುಡಿಯಂತೆ ಒಂದು ಗೃಹಕ್ಕೆ ಒಬ್ಬ ಗೃಹಿಣಿಯಿದ್ದರೆ ಅದು ಉತ್ತಮ ಗೃಹವಾಗುತ್ತದೆ. ಆಕೆ ಮನೆಯ ಒಳಗೆ ಮತ್ತು ಹೊರಗೂ ಗಂಡಸರ ಸರಿ ಸಮನಾಗಿ ದುಡಿಯುತ್ತಾಳಾದ್ದರಿಂದ ಆಕೆಯನ್ನು ಅಸಡ್ಡೆಯಿಂದ ಕಾಣುವುದಾಗಲಿ,ಆಕೆಯ ಕೆಲಸವನ್ನು ಅವಹೇಳನ ಮಾಡದೆ ಆಕೆಯೊಂದಿಗೆ ಆಕೆಯ ಕೆಲಸಗಳ ನ್ನು ಹಂಚಿಕೊಳ್ಳುವ ಮೂಲಕ ಆಕೆಗೆ ಸಹಕರಿಸೋಣ. ನಮಗೆಲ್ಲರಿಗೂ ತಿಳಿದುರುವಂತೆ ಒಬ್ಬ ತಾಯಿ ತನ್ನ ಹತ್ತು ಗಂಡು ಮಕ್ಕಳನ್ನು ಸಾಕ ಬಲ್ಲಳು ಆದರೆ ಅದೇ ಹತ್ತು ಗಂಡು ಮಕ್ಕಳು ಒಬ್ಬ ತಾಯಿಯನ್ನು ಸರಿಯಾಗಿ ನೋಡಿ ಕೊಳ್ಳಲಾರರು. ಪತಿಯ ಮರಣಾನಂತರ ಕುಟುಂಬದ ಸಂಪೂರ್ಣ ಜವಾಬ್ಧಾರಿಯನ್ನು ಪತ್ನಿಯೇ ವಹಿಸಿಕೊಂಡು ಸಂಸಾರವನ್ನು ಸುಗಮವಾಗಿ ಸಾಗಿಸಿದ ಅನೇಕ ಉದಾಹರಣೆಗಳಿವೆ. ಆದರೆ ಅದೇ ಪತ್ನಿಯ ಮರಣಾನಂತರ ಇಡೀ ಕುಟುಂಬವೇ ಚಿದ್ರ ಛಿದ್ರವಾದ ಉದಾಹಣೆಗಳೂ ಸಾಕಷ್ಟು ನಮ್ಮ ಮುಂದಿವೆ. ನಿಜವಾಗಿಯೂ ಹೆಣ್ಣನ್ನು ಆಲದ ಮರಕ್ಕೆ ಹೋಲಿಸಬಹುದೇನೋ? ಏಕೆಂದರೆ ಆಕೆ ಆಲದ ಮರದಂತೆ ವಿಶಾಲವಾಗಿ ಬೆಳೆದು ತನ್ನ ಸಂಸ್ಕಾರ, ಸಂಪ್ರದಾಯಗಳೆಂಬ ಬಿಳಲನ್ನು ಎಲ್ಲಾ ಕಡೆಗೂ ಹಬ್ಬಿಸಿ ತನ್ನ ಜೀವಿತಾವಧಿ ಎಲ್ಲರಿಗೂ ಆಶ್ರಯ ನೀಡಿಯೇ ತೀರುತ್ತಾಳೆ.

ಇಂದು ಮಾರ್ಚ್ 8ನೇ ತಾರೀಖು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ನಮ್ಮೆಲ್ಲರ ಬದುಕಿಗೆ ಮತ್ತು ಸಮಾಜಕ್ಕೆ ಸದಾ ದಾರಿ ದೀಪವಾಗಿರುವ ಎಲ್ಲಾ ಮಹಿಳೆಯರಿಗೂ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸೋಣ, ಕೃತಜ್ಞತೆ ಸಲ್ಲಿಸೋಣ ಮತ್ತು ಪ್ರೀತಿಯಿಂದ ವಂದಿಸೋಣ. ಈ ಆದರ ಮತ್ತು ಆಚರಣೆಗಳು ಕೇವಲ ಮಾರ್ಚ್ 8 ಒಂದೇ ದಿನಕ್ಕೇ ಸೀಮಿತವಾಗಿರದೇ, ಅದು ನಿರಂತರವಾಗಿರುವಂತೆ ನೋಡಿಕೊಳ್ಳುವ ಜವಾಬ್ಧಾರಿಯೂ ನಮ್ಮದೇ ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ