ಅತ್ಮನಿರ್ಭರ್( ಸ್ವಾಭಿಮಾನಿ) ಇಡ್ಲಿ ಅಜ್ಜಿ

ಕೂರೋನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಆಗಿರುವ ಪರಿಣಾಮ ವಿಶ್ವಾದ್ಯಂತ ಅನೇಕರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಎಲ್ಲಾ . ದೇಶಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರ ನಾನಾ ರೀತಿಯ ಆರ್ಥಿಕ ಪರಿಹಾರಗಳನ್ನು ಕೊಡುತ್ತಿರುವಾಗ , ಅದನ್ನು ಜಾತಿಗಳಿಗೆ ಸಮೀಕರಿಸಿ, ನಮ್ಮ ಜಾತಿಗೆ ಸಿಕ್ಕಿಲ್ಲ. ನಮ್ಮ ಪಂಗಡಗಳಿಗೆ ಸಿಕ್ಕಿಲ್ಲ ಎಂದು ಹಾದಿ ಬೀದಿಯಲ್ಲಿ, ಮಾಧ್ಯಮಗಳ ಮುಖಾಂತರ, ಸಾಮಾಜಿಕ ಜಾಲತಾಣಗಳಲ್ಲಿ ಆಯಾಯಾ ಪಂಗಡಗಳ ನಾಯಕರುಗಳು ವಿರೋಧ ಪಕ್ಷದ ರಾಜಕೀಯ ಧುರೀಣರು, ಬಾಯಿ ಬಡಿದುಕೊಳ್ಳುತ್ತಿರುವ ಸಂದರ್ಭದಲ್ಲಿ 85 ವರ್ಷದ ಇಳಿ ವಯಸ್ಸಿನ ಅಜ್ಜಿಯೊಬ್ಬರು, ಪ್ರಧಾನಿಗಳ ಹೇಳಿದಂತೆಯೇ ಸ್ವಾಭಿಮಾನಿಯಾಗಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸವನ್ನು ಕಳೆದ ಹಲವಾರು ವರ್ಷಗಳಿಂದಲೂ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ ಮತ್ತವರ ಕಾರ್ಯ  ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆಯಲ್ಲದೇ ಅನುಕರಣೀಯವೂ ಆಗಿದೆ. ಅಂತಹ ಮಹಾನ್ ಸಾಧಕಿಯಾದ ಎಲ್ಲರ ಪ್ರೀತಿಯ ಇಡ್ಲಿ ಅಜ್ಜೀ ಎಂದೇ ಖ್ಯಾತಿಯಾಗಿರುವ ಶ್ರೀಮತಿ ಎಂ. ಕಮಲಥಾಳ್ ಅವರ ಸಾಧನೆಗಳನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

ಅಕ್ಕಿ, ಬೇಳೆ, ತರಕಾರಿಗಳು ಎಲ್ಲದರ ಬೆಲೆಯೂ ಗಗನಕ್ಕೇರಿದ್ದರೂ ಕೊಯಮತ್ತೂರಿನ ವಡಿವೇಲಂಪಾಳ್ಯನಲ್ಲಿ ವಾಸಿಸುತ್ತಿರುವ ಸುಮಾರು 85 ವರ್ಷದ ಶ್ರೀಮತಿ ಎಂ. ಕಮಲಥಾಳ್ (ಇಡ್ಲಿ ಅಜ್ಜಿ) ತಮ್ಮ ಆದಾಯದ ಬಗ್ಗೆ ಕೊಂಚವೂ ಯೋಚಿಸದೇ ಇಂದಿಗೂ ಕೇವಲ 1 ರೂಪಾಯಿಗೆ 1 ಇಡ್ಲಿಯನ್ನು ಸುಮಾರು 30 ವರ್ಷಗಳಿಗೂ ಅಧಿಕ ಸಮಯದಿಂದ ನಿಸ್ಚಾರ್ಥವಾಗಿ ಮಾರುತ್ತಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. 10 ಪೈಸೆಯಿಂದ ಆರಂಭವಾದ ಇಡ್ಲಿಯ ಬೆಲೆ ಕ್ರಮೇಣ 25, 50, 75 ಪೈಸೆಗಳಾಗಿ ಕಳೆದ 15 ವರ್ಷಗಳಿಂದ 1 ರೂಪಾಯಿಗೇ ಸೀಮಿತವಾಗಿರುವುದು ನಿಜಕ್ಕೂ ಅಶ್ಚರ್ಯಕರವಾಗಿದೆ.

ಈ ಉಪಾಹಾರ ಗೃಹ ನೋಡಲು ಅಷ್ಟೇನೂ ಆಕರ್ಷಣೀಯವಾಗಿರದೇ, ಸಾಧಾರಣ ಹಳ್ಳಿಗಳಲ್ಲಿರುವ ಹಳೆಯ ಉಪಾಹಾರ ಗೃಹದಂತಿದ್ದರೂ, ಅಜ್ಜಿಯ ಇಡ್ಲೀ, ಸಾಂಬರ್ ಮತ್ತು ಚೆಟ್ನಿಯ ರುಚಿಯನ್ನು ಸವಿಯಲು ನೂರಾರು ಕಿಮೀ ದೂರಗಳಿಂದಲೂ ಜನರು ಹುಡುಕಿಕೊಂಡು ಬೆಳ್ಳಂಬೆಳಗ್ಗೆ ಉಪಹಾರ ಗೃಹದ ಮುಂದೆ ಸಾಲು ಗಟ್ಟಿ ನಿಲ್ಲುವುದನ್ನು ನೋಡುವುದಕ್ಕೇ ಆನಂದವಾಗುತ್ತದೆ.

idli1ಕಮಲಥಾಲ್ ಅಜ್ಜಿಯ ದೈನಂದಿನ ಚಟುವಟಿಕೆ ಬೆಳಿಗ್ಗೆ 5 ಗಂಟೆಗೆ ಆರಂಭವಾಗುತ್ತದೆ, ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿಯೇ ರುಬ್ಬುವ ಕಲ್ಲು ಬಳಸಿ ಸುಮಾರು ಎಂಟು ಕೆಜಿ ಅಕ್ಕಿಯನ್ನು ಬಳಸಿ ಇಡ್ಲಿ ಹಿಟ್ಟನ್ನು ತಯಾರಿಸಿ ಅಂದಾಜಿನ ಪ್ರಕಾರ ಪ್ರತೀ ದಿನ ಸುಮಾರು 1000-1200 ಬಿಸಿ ಬಿಸಿಯಾದ ಇಡ್ಲಿಗಳನ್ನು ತಯಾರು ಮಾಡಲಾಗುತ್ತದೆ. ಪ್ರತೀ ದಿನ ಬೆಳಿಗ್ಗೆ 6 ಗಂಟೆಗೆ ಗ್ರಾಹಕರಿಗೆ ಆರಂಭವಾಗುವ ಈ ಉಪಾಹಾರ ಗೃಹ ಸಾಧಾರಣವಾಗಿ ಮಧ್ಯಾಹ್ನದ ವರೆಗೂ ತೆರೆದಿರುತ್ತದೆ. ವಾರಾಂತ್ಯಗಳಲ್ಲಿ ಮತ್ತು ಹಲವಾರು ದಿನಗಳಲ್ಲಿ ಅತೀ ಶೀಘ್ರದಲ್ಲಿಯೇ ಇಡ್ಲಿ ಹಿಟ್ಟು ಖಾಲಿಯಾದ ಪರಿಣಾಮ ಉಪಹಾರಗೃಹವನ್ನು ಬೇಗನೆ ಸಹಾ ಮುಚ್ಚ ಬೇಕಾದ ಸಂದರ್ಭಗಳು ಇದೆಯಾದರೂ, ಅಜ್ಜಿಯು ತಮ್ಮ ಉಪಹಾರಗೃಹಕ್ಕೆ ಬರುವ ಗ್ರಾಹಕರಿಗೆ ಎಂದೂ ಖಾಲಿ ಹೊಟ್ಟೆಯಲ್ಲಿ ನಿರಾಸೆಯಾಗಿ ಕಳುಹಿಸಿದ ಉದಾಹರಣೆ ಇಲ್ಲವೇ ಇಲ್ಲ ಎನ್ನುವುದು ಗಮನಾರ್ಹ ಅಂಶವಾಗಿದೆ.

idli1085 ವರ್ಷದ ಇಳೀ ವಯಸ್ಸಿನ ಶ್ರಿಮತಿ ಕಮಲಥಾಲ್ ಅಜ್ಜಿ, ವಯೋ ಸಹಜವಾಗಿ ಸುಕ್ಕುಗಟ್ಟಿದ, ಮುಖ, ಮೂಳೆಗಳಿಗೆ ಅಂಟಿಕೊಂಡ ಚರ್ಮ ಮತ್ತು ಬೆನ್ನು ಸ್ವಲ್ಪ ಬಾಗಿದೆ, ಕಣ್ಣುಗಳೂ ಸಹಾ ಮಂಜಾಗಿದೆಯಾದರೂ , ಯಾವುದೇ ಮಧ್ಯವಯಸ್ಕ ಮಹಿಳಿಗಿಂತಲೂ ಅತ್ಯಂತ ಚುರುಕಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಇಡೀ ಉಪಾಹಾರ ಗೃಹದ ವ್ಯವಹಾರಗಳನ್ನು ಸ್ವತಃ ತಾವೇ ನೋಡಿಕೊಳ್ಳುತ್ತಾರೆ. ಅವರ ಮೊಮ್ಮಗನ ಪತ್ನಿ ಪಿ. ಆರತಿ ಸಹಾ ಇವರ ಜೊತೆ ಸಹಾಯಕ್ಕಾಗಿ ಇರುತ್ತಾರೆ ಮತ್ತು ಆಕೆಯೂ ಅಜ್ಜಿಯ ಈ ಮಾಹಾನ್ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಇಚ್ಚೆಯನ್ನು ವ್ಯಕ್ತಪಡಿಸಿರುವುದು ಮೆಚ್ಚಬೇಕಾದ ಅಂಶವಾಗಿದೆ.

ಇಂದಿಗೂ ಸಹಾ ಅಡುಗೆಗೆ ಬೇಕಾದ ಉರುವಲುಗಳನ್ನು ಮಧ್ಯಾಹ್ನ ಉಪಹಾರ ಗೃಹ ಮುಚ್ಚಿದ ನಂತರ ಅಜ್ಜಿಯೇ ಆರಿಸಲು ಹೋಗುವುದು ನಿಜಕ್ಕೂ ಆಶ್ಚರ್ಯವಾಗಿವೆ. ಯಾವುದೇ ಆಧುನಿಕ ವ್ಯವಸ್ಥೆಗಳಿಲ್ಲದೇ ಇಂದಿಗೂ ಸಹಾ ಸಾಂಪ್ರದಾಯಿಕವಾಗಿ ಕಟ್ಟಿಗೆ ಉರುವಲುಗಳನ್ನು ಬಳಸಿ, ಮಣ್ಣಿನ ಒಲೆಗಳ ಮೇಲೇ ಹಳೆಯ ಇಡ್ಲೀ ತಟ್ಟೆಗಳಿಗೆ ತೆಳುವಾದ ಕೋರಾ ಬಟ್ಟೆಹಾಸಿ (ಇಂದೆಲ್ಲಾ ಅನಾರೋಗ್ಯಕರವಾದ ಪ್ಲಾಸ್ತಿಕ್ ಹಾಳೆಗಳನ್ನು ಬಳೆಸುತ್ತಾರೆ) ಅತ್ಯಂತ ಸಾಂಪ್ರದಾಯಿಕವಾಗಿ ಇಡ್ಲಿ ತಯಾರಿಸುವುದಲ್ಲದೇ, ಪ್ರತೀ ದಿನವೂ ಬೇರೆ ಬೇರೆ ತರಹದ ಸಾಂಬಾರ್ ಮಾಡುವುದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

idli8ಈ ದಿನಗಳಲ್ಲಿ ಎಲ್ಲದರ ಬೆಲೆಯೂ ಹೆಚ್ಚಾಗಿರುವಾಗ ಇಂದಿಗೂ ಕೇವಲ 1 ರೂಪಾಯಿಗೆ 1 ಇಡ್ಲಿ ಮತ್ತು ಅದರ ಜೊತೆಗೆ ಯಥೇಚ್ಚ ಚೆಟ್ನೀ ಮತ್ತು ಸಾಂಬಾರ್ ಹೇಗೆ ಕೊಡುತ್ತೀರೀ ? ಎಂದು ಕುತೂಹಲದಿಂದ ಅಜ್ಜಿಯನ್ನು ವಿಚಾರಿಸಿದರೆ, ಸುಮ್ಮನೆ ಮನದಾಳದಿಂದ ಸಂತಸದ ನಗೆ ಚೆಲ್ಲುತ್ತಾ , ನಾನೆಂದೂ ಇದನ್ನು ಒಂದು ವ್ಯಾಪಾರ ಎಂದು ಯೋಚಿಸಿಯೇ ಇಲ್ಲ. ಹಸಿದವರ ಹೊಟ್ಟೆ ತುಂಬಿಸುವುದು ಒಂದು ಶ್ರೇಷ್ಠ ಕಾರ್ಯ. ಇಂದಿಗೂ ಹಲವಾರು ಜನರಿಗೆ ಒಪ್ಪೊತ್ತಿನ ಊಟವೂ ಸಿಗದ ಪರಿಸ್ಥಿತಿ ಇದೆ. ಹಾಗಾಗಿ ಅಂತಹವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮನಸ್ಸಿನಿಂದ ಈ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಇದರಿಂದ ಲಾಭ ಮತ್ತು ನಷ್ಟವನ್ನು ಎಂದೂ ಯೋಚಿಸಿಲ್ಲವಾದರೂ, ತಾನು ಸಹಾ ಆರ್ಥಿಕವಾಗಿ ಬಡವಿಯಾದರೂ ತನ್ನ ಕೈಯಲ್ಲಾದ ಮಟ್ಟಿಗೆ ಇತರರಿಗೆ ಸಹಾಯವನ್ನು ಮಾಡಬೇಕು ಎಂಬ ಹಂಬಲ. ಹಾಗಾಗಿ ನನಗೆ ನಷ್ಟವಾದರೂ ಪರವಾಗಿಲ್ಲ ಇತರರು ಹಸಿದ ಹೊಟ್ಟೆಯಲ್ಲಿ ಇರಬಾರದು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆಯಾದರೂ ಇದುವರೆಗೂ ನಾವು ಹಾಕಿದ ಬಂಡವಾಳಕ್ಕೆ ನಷ್ಟವಂತೂ ಆಗಿಲ್ಲ ಎಂಬ ಅಜ್ಜಿಯ ಹೆಮ್ಮೆಯ ಹೃದಯವಂತಿಕೆಯ ಕತೆ ಕೇಳಿದರೆ ಹೃದಯ ತುಂಬಿ ಬರುತ್ತದೆ.

ಅದೆಷ್ಟೋ ಬಾರಿ ಆ ಒಂದು ರೂಪಾಯಿಯನ್ನೂ ಕೊಡಲಾಗದವರೂ ಸಹಾ ಈ ಉಪಹಾರ ಗೃಹಕ್ಕೆ ಬಂದು ಹೊಟ್ಟೆ ತುಂಬಾ ತಿಂದುಕೊಂಡು ಹೋಗುವ ಅಥವಾ ಚಿಲ್ಲರೆ ಇಲ್ಲ ಮುಂದಿನ ಬಾರಿ ಬಂದಾಗ ಕೊಡುತ್ತೀನಿ ಲೆಖ್ಖ ಬರೆದುಕೊಳ್ಳಿ ಎಂದು ಹೇಳುವವರ ಸಂಖ್ಯೆಯೂ ಕಡಿಮೆ ಇಲ್ಲದಿದ್ದರೂ, ಅಜ್ಜಿ ಅವುಗಳನ್ನು ಲೆಖ್ಖಕ್ಕೇ ಇಟ್ಟಿಲ್ಲ. ಅನೇಕ ಬಾರಿ ಗ್ರಾಹಕರೇ ಅಜ್ಜಿಯ ಈ ನಿಸ್ವಾರ್ಥ ಸೇವೆಗಾಗಿ ಹೆಚ್ಚಿನ ಹಣವನ್ನು ಕೊಟ್ಟಿರುವುದೂ ಉಂಟು. ಮುಂದೆ ಎಂದಾದರೂ ಇಡ್ಲಿಗಳ ಬೆಲೆಯನ್ನು ಹೆಚ್ಚಿಸುವ ಆಲೋಚನೆ ಇದೆಯೇ ? ಎಂದು ಅಜ್ಜಿಯನ್ನು ಕೇಳಿದಾಗ ಇದೊಂದು ಪುಣ್ಯದ ಕೆಲಸ. ಭಗವಂತನ ಕೃಪೆಯಿಂದ ಮತ್ತು ಎಲ್ಲರ ಸಹಾಕಾರದಿಂದ ನಡೆದು ಕೊಂಡು ಹೋಗುತ್ತಿದೆ, ಹಾಗಾಗಿ ತಿನ್ನುವವರು ನೆಮ್ಮದಿಯಗಿ ತಿನ್ನಲಿ ಬಿಡಿ ಎಂದು ಹೇಳುತ್ತಾರೆ ಇಡ್ಲಿ ಅಜ್ಜಿ.

idli9ಆ ಊರಿನ ಹಿರಿಯರಾದ ಮತ್ತು ಸುಮಾರು 20 ವರ್ಷಗಳಿಗೂ ಅಧಿಕ ಸಮಯದಿಂದ ಈ ಉಪಹಾರ ಗೃಹದ ಖಾಯಂ ಗ್ರಾಹಕರಾದ ಕೆ.ಮರಪ್ಪನ್ ಅವರು ನನ್ನ ಮಕ್ಕಳು ಹೊರಗೆ ತಿನ್ನಲು ಬಯಸುತ್ತಾರಾದರೂ ತಾನು ಮಾತ್ರ ಇಲ್ಲಿಯೇ ತಿನ್ನಲು ಬಯಸುತ್ತೇನೆ ಎನ್ನುತ್ತಾರೆ. ಅದೆಷ್ಟೋ ಬಾರಿ ನಾನು ಹಣವನ್ನು ಕೊಡದೇ ಬಾಕಿ ಉಳಿಸಿಹೋದರೂ ಮುಂದಿನ ಬಾರಿ ಬಂದಾಗ ಯಾವುದೇ ತಕರಾರಿಲ್ಲದೇ ನಗುನಗುತ್ತಲೇ ಅಜ್ಜಿ ಇಡ್ಲಿಗಳನ್ನು ಬಡಿಸುವುದನ್ನು ಸ್ಮರಿಸಿಕೊಳ್ಳುತ್ತಾರೆ.

idli6ಅದೇ ರೀತಿಯಲ್ಲಿ ಸ್ಥಳೀಯ ಶಾಲೆಗೆ ಹೋಗುವ ಮಕ್ಕಳುಗಳೂ ಸಹಾ ಬೆಳಿಗ್ಗೆ ಹೊಟ್ಟೆಯ ತುಂಬಾ ಇಡ್ಲಿಗಳನ್ನು ಇಲ್ಲಿಯೇ ತಿಂದುಕೊಂಡು ಜೊತೆಗೆ ಮಧ್ಯಾಹ್ನದ ಊಟಕ್ಕೂ ದಬ್ಬಿಗಳಲ್ಲಿ ಅದೇ ಇಡ್ಲಿಗಳನ್ನು ತೆಗೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಕೇವಲ ಒಂದು ರೂಪಾಯಿಗೆ ಒಂದು ಇಡ್ಲಿ ಸಿಗುತ್ತದೆ ಎಂಬ ಕಾರಣಕ್ಕಿಂತ ಅಜ್ಜಿಯ ಕೈ ರುಚಿಯ ಇಡ್ಲಿ, ಸಾಂಬಾರ್ ಮತ್ತು ಚೆಟ್ನಿಯ ರುಚಿಯನ್ನು ಸವಿಯುವುದಕ್ಕಾಗಿಯೇ ನೂರಾರು ಗ್ರಾಹಕರು ದೂರ ದೂರಗಳಿಂದ ಹಲವಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಬರುವುದು ಅಜ್ಜಿಯನ್ನು ಮತ್ತಷ್ಟು ಪ್ರಖ್ಯಾತಿಯನ್ನಾಗಿಸಿದೆ.

ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರೂ ಸಹಾ ಹೀಗೆಯೇ ಅಜ್ಜಿಯ ಬಗ್ಗೆ ತಿಳಿದುಕೊಂಡು ಪ್ರೀತಿಯಿಂದ ಅಜ್ಜಿಗೆ ಕರೆ ಮಾಡಿ, ನಿಮ್ಮೀ ಸಮಾಜ ಮುಖೀ ಕಾರ್ಯದಲ್ಲಿ ನನ್ನದೇನಾದಾರೂ ಅಳಿಲು ಸೇವೆ ಮಾಡಬಹುದೇ? ಎಂದು ಕೇಳಿದಾಗ, ಅಷ್ಟೇ ವಿನಮ್ರವಾಗಿ ಅಜ್ಜಿಯೂ ಸಹಾ ನಗತ್ತಲೇ ಸಧ್ಯಕ್ಕೆ ಅದರ ಅವಶ್ಯಕತೆ ಇಲ್ಲಾ. ಎಂದು ಹೇಳಿದ್ದನ್ನೇ ಶ್ರೀ ಆನಂದ್ ಮಹೀಂದ್ರ ಅವರು ತಮ್ಮ Twitter ಖಾತೆಯಲ್ಲಿ ಬರೆದು ಕೊಂಡು ಅಜ್ಜಿಯ ಬಗ್ಗೆ ಎರಡು ಒಳ್ಳೆಯ ಮಾತುಗಳನ್ನಾಡಿದ ವೀಡೀಯೋ ವೈರಲ್ ಆಗಿ ದಿನ ಬೆಳಗಾಗುವುದರೊಳಗೆ ಅಜ್ಜಿ ಮತ್ತಷ್ಟು ಖ್ಯಾತಿಯನ್ನು ಪಡೆದುಕೊಂಡರು.

ಇದಾದ ನಂತರ ಬಹುತೇಕ ಮಾಧ್ಯಮಗಳು ಅಜ್ಜಿಯ ಈ ಮಹತ್ಕಾರ್ಯವನ್ನು ದೇಶಾದ್ಯಂತ ಪರಿಚಯಿಸಿದರು. ಅಜ್ಜಿಯ ಕುರಿತಾದ ಅನೇಕ ವೀಡಿಯೋಗಳು ಸಹಾ YouTube ನಲ್ಲಿ ಲಭ್ಯವಿದ್ದು ಅದನ್ನು ನೋಡಿಯೂ ಸಹಾ ಅನೇಕ ಗ್ರಾಹಕರು ಈ ಉಪಹಾರ ಗೃಹಕ್ಕೆ ಬಂದು ಸಂತೋಷದಿಂದ ಅಜ್ಜಿಯ ಕೈರುಚಿಯನ್ನು ಸವಿದು ಹೋಗುತ್ತಿದ್ದಾರೆ.

ಕೊಯಮತ್ತೂರಿನ ಮಿಕ್ಸರ್, ಗ್ರೈಂಡರ್ ತಯಾರಿಕಾ ಕಂಪನಿಯೊಂದು ಪ್ರೀತಿಯಿಂದ ಅಜ್ಜಿಗೆ ಮಿಕ್ಸರ್, ಗ್ರೈಂಡರ್ ಉಡುಗೊರೆಯಾಗಿ ಕೊಟ್ಟರೆ, ಉಜ್ವಲ ಯೋಜನೆಯಡಿಯಲ್ಲಿ ಭಾರತ್ ಗ್ಯಾಸ್ ಅವರು ಉಚಿತವಾಗಿ ಅಜ್ಜಿಯ ಮನೆಗೇ ಬಂದು ಗ್ಯಾಸ್ ಕನೆಕ್ಷನ್ ಮಾಡಿಕೊಟ್ಟಿದ್ದಲ್ಲದೇ, ಕೇಂದ್ರ ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರೂ ಸಹಾ ಅಜ್ಜಿಗೆ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸ್ಥಳೀಯ ಜಿಲ್ಲಾಧಿಕಾರಿಗಳೂ ಸಹಾ ಅಜ್ಜಿಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿ ಅಜ್ಜಿಗೆ ಹೊಸ ಮನೆ ಕಟ್ಟಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇಷ್ಟೆಲ್ಲಾ ಪ್ರಖ್ಯಾತಿಯನ್ನು ಪಡೆದಿದ್ದರೂ ಸಹಾ ಅಜ್ಜಿ, ಇದಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ಇಂದಿಗೂ ಸಹಾ ಒಂದು ದಿನವೂ ರಜೆ ಮಾಡದೇ ತನ್ನ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಈ ಲಾಕ್ ಡೌನ್ ಸಮಯದಲ್ಲಿ ಸರ್ಕಾರ ನಮಗೆ ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲಾ ಎಂದು ಸರ್ಕಾರದ ಪುಡಿ ಕಾಸಿಗಾಗಿ ಜೊಲ್ಲು ಸುರಿಸುತ್ತಿರುವ ಲಕ್ಷಾಂತರ ಯುವಕರುಗಳಿಗೆ ಈ 85 ವರ್ಷದ ಇಳಿ ವಯಸ್ಸಿನ ಶ್ರೀಮತಿ ಕಮಲಥಾಲ್ ಅಜ್ಜಿಯ ಸ್ವಾಭಿಮಾನಿ ಬದುಕು ನಿಜಕ್ಕೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ಪ್ರಧಾನ ಮಂತ್ರಿಗಳು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ನಿಧಿ ಸುಖಾ ಸುಮ್ಮನೆ ಸೋಮಾರಿಯಾಗಿ ಬಿಟ್ಟಿ ತಿಂದು ಕುಳಿತು ತಿನ್ನುವವರಿಗಲ್ಲದೇ, ಕಮಲಥಾಲ್ ಅಜ್ಜಿಯಂತೆ ಸ್ವಾಭಿಮಾನಿಯಾಗಿ ದುಡಿದು ಸಂಪಾದಿಸಿ ತಾನೂ ತಿಂದು ಮತ್ತೊಬ್ಬರಿಗೂ ತಿನ್ನಲು ಅನುವು ಮಾಡುವಂತಹವರಿಗೆ ಸರ್ಕಾರ ಕೊಡುವ ಆರ್ಥಿಕ ಸಹಾಯ ಅರ್ಧಾತ್ ಹಿಂದಿರುಗಿಸಬೇಕಾದ ಸಾಲ ಎಂಬುದನ್ನು ಮನಗಾಣಿಸ ಬೇಕಾಗಿದೆ.

ಏನಂತೀರೀ?