ಮೂರ್ತಿ ಪೂಜೆ

nj1ರಸ್ತೇ ಅಗಲೀಕರಣದ ನೆಪದಲ್ಲಿ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಕಳೆದ ವಾರ ನಂಜನಗೂಡಿನ ಬಳಿ 800 ವರ್ಷದ ಹಳೆಯದಾದ ಚೋಳರ ಕಾಲದ  ದೇವಾಲಯವನ್ನು ಒಡೆದು ಹಾಕಿರುವ ವಿಷಯ ಇನ್ನೂ ಆರದಿರುವಾಗ ಅದೇ ಪ್ರಾಂತ್ಯದ ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ತೆರವು ಮಾಡುವ ಎಡವಟ್ಟೊಂದನ್ನು ಮಾಡುವ ಮೂಲಕ  ಆಸ್ತಿಕ ಮಹಾಶಯರ ಸಾತ್ವಿಕ ಕೋಪ ಹೆಚ್ಚುವಂತಾಗಿದೆ.

wadeyarನಮ್ಮ ರಾಜ್ಯದ ಹಲವಾರು ದೇವಾಲಯಗಳಿಗೆ ನಮ್ಮ ಮೈಸೂರು ಅರಸರ ಕೊಡುಗೆ ಅಪಾರ ಎನ್ನುವುದು ನಿರ್ವಿವಾದ. ಅದರಲ್ಲೂ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಆವರುಗಳು ಬಿಳಿಗಿರಿ ದೇವಸ್ಥಾನದ ಏಳಿಗೆಗೆ ಮತ್ತು ಬಿಳಿಗಿರಿ ರಂಗಾನಾಥಸ್ವಾಮಿಗೆ ಅಪಾರವಾದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕೊಡುಗೆಯಾಗಿ ಕೊಟ್ಟ ಸವಿ ನೆನಪಿಗಾಗಿ ಅವರುಗಳ ಭಾವಚಿತ್ರಗಳನ್ನು ದೇವಸ್ಥಾನದಲ್ಲಿ ಬಹಳ ವರ್ಷಗಳಿಂದಲೂ  ಹಾಕಲಾಗಿತ್ತು.

ಆದರೆ ಇತ್ತೀಚೆಗೆ ದೇವಸ್ಥಾನದಲ್ಲಿ ನಡೆದ ಜೀರ್ಣೋದ್ಧಾರದ ನಂತರ ಅದನ್ನು ವೀಕ್ಷಿಸಲು ಬಂದಿದ್ದ ಅಲ್ಲಿನ ಹಿರಿಯ ಅಧಿಕಾರಿಗಳು ಸತ್ತವರ ಫೋಟೋಗಳನ್ನೇಕೆ ದೇವಾಲದಲ್ಲಿ ಹಾಕಿದ್ದೀರಿ? ಈ ಕೂಡಲೇ ಅವುಗಳನ್ನ ತೆಗೆದು ಹಾಕಿ ಎಂಬ ಆದೇಶದ ಮೇರೆಗೆ ಫೊಟೊಗಳನ್ನು ದೇವಸ್ಥಾನದಿಂದ  ತೆರವುಗೊಳಿಸಿ ಸದ್ಯಕ್ಕೆ ಅವುಗಳನ್ನು ದೇವಸ್ಥಾನದ ಆಡಳಿತ ಮಂಡಳಿಯ ಕಛೇರಿಯಲ್ಲಿ ಇಡಲಾಗಿದೆ.

ಮೈಸೂರು ಮಹಾರಾಜರ ಕೊಡುಗೆಗಳನ್ನು ಅರಿಯದ  ಅಧಿಕಾರಿಗಳು  ನೀಡಿರುವ ಈ ಸೂಚನೆ ಬಹಳಷ್ಟು ವಿವಾದಕ್ಕೆ ಕಾರಣವಾಗಿದ್ದು, ಇದು  ಮೈಸೂರು ಮಹಾರಾಜರುಗಳಿಗಷ್ಟೇ ಅಲ್ಲದೇ ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ,  ತೆರವು ಮಾಡಿದ ಫೋಟೋಗಳನ್ನು  ಈ ಕೂಡಲೇ ಪುನರ್ಸ್ಥಾಪಿಸಬೇಕೆಂದು ಆಗ್ರಹ ಪಡಿಸಿದ್ದಾರೆ.

ಈ ಸುದ್ದಿಯನ್ನು ಓದುತ್ತಿರುವಾಗ ಸ್ವಾತಂತ್ಯ್ರ ಪೂರ್ವದಲ್ಲಿ ಸ್ವಾಮೀ ವಿವೇಕಾನಂದರು ಮತ್ತು ಆಳ್ವಾರ್ ರಾಜ್ಯದ  ಮಂಗಲ್ ಸಿಂಗ್ ಅವರ ನಡುವೆ ಇದೇ ರೀತಿಯಾಗಿ ನಡೆದ ಪ್ರಸಂಗವೊಂದು ನೆನಪಿಗೆ ಬಂದಿತು.

parivrajakaಅಮೇರಿಕಾದ ಚಿಕಾಗೋದಲ್ಲಿ ದಿಕ್ಸೂಚಿ ಭಾಷಣ ಮಾಡುವ ಮೊದಲು ಸ್ವಾಮೀ ವಿವೇಕಾನಂದರು ಇಡೀ ಭಾರತವನ್ನು ಪರಿವ್ರಾಜಕರಾಗಿ ಸುತ್ತಾಡುತ್ತಿದ್ದ ಸಮಯದಲ್ಲಿ ಅದು  1891 ರ ಆರಂಭ ಬಹುತೇಕ ಫೆಬ್ರವರಿ ತಿಂಗಳಿರಬಹುದು.  ವಿವೇಕಾನಂದರು ಪ್ರಸ್ತುತ ರಾಜಸ್ಥಾನಕ್ಕೆ ಸೇರಿರುವ  ಆಳ್ವಾರ್ ಪ್ರಾಂತ್ಯಕ್ಕೆ ತಲುಪಿದರು. ಆ ರಾಜ್ಯದ  ಮಹಾರಾಜ ಮಂಗಲ್ ಸಿಂಗ್ ಬಹದ್ದೂರ್ ಎಲ್ಲರ ಅಚ್ಚು ಮೆಚ್ಚಿನ  ಮಂಗಲ್ ಸಿಂಗ್ ಅವರನ್ನು ಭೇಟಿಯಾಗುತ್ತಾರೆ. ಭಾರತೀಯರಾಗಿದ್ದರೂ ಅದಾಗಲೇ ಮಂಗಲ್ ಸಿಂಗ್ ಅವರ ಮನೋಸ್ಥಿತಿ ಪಾಶ್ಚಾತ್ಯೀಕರಣಗೊಂಡಿದ್ದಲ್ಲದೇ, ಭಾರತೀಯರು ಅದರಲ್ಲೂ ವಿಶೇಷವಾಗಿ ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅಷ್ಟೇನೂ ಗೌರವಾದರಗಳನ್ನು ಹೊಂದಿರಲಿಲ್ಲ. ಅವರಿಗೆ ಭಾರತೀಯ ಸಂಸ್ಕೃತಿಗಿಂತಲೂ, ಪಾಶ್ಚಿಮಾತ್ಯರ ರೀತೀ, ಪಾಶ್ಚಿಮಾತ್ಯರ ಜೊತೆಯಲ್ಲಿ, ಬೇಟೆ ಮತ್ತು ಇತರ ಐಷಾರಾಮಗಳಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. 

ಅಂತಹ ರಾಜನನ್ನು ಸ್ವಾಮೀ ವಿವೇಕಾನಂದರು ಭೇಟಿ ಮಾಡಿ ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಸಮಯದಲ್ಲಿ ರಾಜಾ ಮಂಗಲ್ ಸಿಂಗ್ ವಿವೇಕಾನಂದರಿಗೆ ನೀವು ಪೂಜಿಸುವ ಮೂರ್ತಿಗಳು ಕೇವಲ ಮರ ಇಲ್ಲವೇ ಮಣ್ಣಿನ ತುಂಡುಗಳು. ಇನ್ನೂ ಕೆಲವುಗಳು ಕಲ್ಲು ಅಥವಾ ಲೋಹಗಳಲ್ಲದೇ ಮತ್ತೇನಿಲ್ಲ. ಹಾಗಾಗಿ ನಾನು ಈ ಮೂರ್ತಿಪೂಜೆಯನ್ನು ಅರ್ಥಹೀನ ಎಂದು ಭಾವಿಸುತ್ತೇನೆ ಎನ್ನುತ್ತಾರೆ

ರಾಜಾ ಪ್ರತ್ಯಕ್ಷ ದೇವತ. ಯಥಾ ರಾಜಾ ತಧಾ ಪ್ರಜಾ ಎಂಬ ನಾಣ್ಣುಡಿಗಳು ವಿವೇಕಾನಂದರಿಗೆ ನೆನಪಾಗಿ, ರಾಜನಾಗಿ ಅವರಿಗೇ, ಹೀಗೆ  ಹಿಂದೂ ಧರ್ಮದ ಮೇಲೆ ಅಪನಂಬಿಕೆಯಾದರೆ ಇನ್ನು ಪ್ರಜೆಗಳ ಗತಿಯೇನು?  ಎಂದು ಯೋಚಿಸಿದ ವಿವೇಕಾನಂದರು ಮೂರ್ತಿ ಪೂಜೆಯ ಬಗ್ಗೆ ಸವಿವರವಾಗಿ ರಾಜನಿಗೆ ವಿವರಿಸಲು ಪ್ರಾರಂಭಿಸಿದರು. ಹಿಂದೂಗಳಲ್ಲಿ ದೇವರು ಎಂಬುದು ಕಣ್ಣಿಗೆ ಕಾಣದ ನಂಬಿಕೆಯ ವಿಷಯವಾಗಿದ್ದು ಜನರಿಗೆ ದೇವರಲ್ಲಿ ನಂಬಿಕೆ ಮತ್ತು ಭಕ್ತಿ ಮೂಡಿಸುವ ಸಲುವಾಗಿ  ವಿಗ್ರಹಗಳನ್ನು ಸಂಕೇತಿಕವಾಗಿ ಬಳಸುತ್ತಾರೆ ಎಂದು ವಿವರಿಸಿದರು. ಆದರೆ ವಿವೇಕಾನಂದರು ಹೇಳಿದ್ದನ್ನು ಕೇಳುವ ಮನಸ್ಸು ಮತ್ತು ವ್ಯವಧಾನವೇ  ಇಲ್ಲದಿದ್ದ ರಾಜರಿಗೆ ವಿವೇಕಾನಂದರು ಹೇಳಿದ ವಿಷಯ ಅರ್ಥವಾಗದಿದ್ದದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಸ್ವಾಮೀಜಿ ಅವರು ಇವರಿಗೆ ಮಾತಿಗಿಂತ ಕೃತಿಯಿಂದ ತೋರಿಸಿದರೆ ಸುಲಭವಾಗಿ ಅರ್ಥ ಮಾಡಿಸಬಹುದು ಎಂದು ತಿಳಿದರು.

alwarಕೂಡಲೇ ಅಲ್ಲಿದ್ದ ಸೇವಕರೊಬ್ಬರನ್ನು ಕರೆದು ರಾಜನ  ಅರಮನೆಯಲ್ಲಿ ತೂಗು ಹಾಕಿದ್ದ ಭಾವಚಿತ್ರವನ್ನು ಅಲ್ಲಿಗೆ ತರಲು ಹೇಳಿದರು. ಹಾಗೆ ತೂಗು ಹಾಕಿದ್ದ ಭಾವಚಿತ್ರವನ್ನು  ಸೇವಕರು ಸ್ವಾಮೀಜಿಗಳ ಬಳಿ ತಂದಾಗ, ಅಲ್ಲಿಯೇ ಇದ್ದ ಮಹಾಮಂತ್ರಿಗಳನ್ನು ಕರೆದು  ಆ ಭಾವ ಚಿತ್ರದ ಮೇಲೆ ಉಗುಳುವಂತೆ ಕೋರಿದರು.  ಸ್ವಾಮೀಜಿಗಳ ಈ ಮಾತನ್ನು ಕೇಳಿ ಬೆಚ್ಚಿದ ಮಂತ್ರಿಗಳು ಕೂಡಲೇ ನಾಲ್ಕಾರು ಹೆಜ್ಜೆ ಹಿಂದೆ ಸರಿದರೆ, ಅಲ್ಲಿಯವರೆಗೂ ಸುಮ್ಮನಿದ್ದ ರಾಜನು ಕೋಪಗೊಂಡಿದ್ದಲ್ಲದೇ, ಇದೇನಿದು ನಿಮ್ಮ ಹುಚ್ಚಾಟ. ನೀವು ನನ್ನ ತಂದೆಯವರ ಮೇಲೆ ಉಗುಳುವಂತೆ ನಮ್ಮ ಮಂತ್ರಿಳಿಗೆ ಹೇಳುವ ಧೈರ್ಯವನ್ನು ಮಾಡುವ ಮೂಲಕ ಉದ್ಧಟತನ ತೋರಿದ್ದೀರಿ ಎಂದು ಜೋರು  ಧ್ವನಿಯಲ್ಲಿ ಹೇಳುತ್ತಾರೆ.

ರಾಜನ ಎತ್ತರದ ಧ್ವನಿಗೆ ಅಷ್ಟೇ ಮೆಲುಧನಿಯಲ್ಲಿ ಸ್ವಾಮೀ ವಿವೇಕಾನಂದರು ಮುಗುಳ್ನಗುತ್ತಲೇ, ರಾಜ ನಿಮ್ಮ  ತಂದೆಯವರು ಎಲ್ಲಿದ್ದಾರೆ? ಅವರು ಗತಿಸಿಹೋಗಿರುವ ವಿಷಯ ಎಲ್ಲರಿಗೂ ಗೊತ್ತಿರುವ ವಿಷಯವಷ್ಟೇ. ಇದು  ಒಬ್ಬ ಕಲಾವಿದ ಬಿಡಿಸಿದ ನಿಮ್ಮ ತಂದೆಯವರ ಭಾವಚಿತ್ರವಷ್ಟೇ. ಅದಕ್ಕಿಂತಲೂ ಹೆಚ್ಚಾಗಿ ಇದು ಬಣ್ಣ ಮೆತ್ತಿರುವ  ಕಾಗದದ ತುಂಡಷ್ಟೇ ಅದು ಖಂಡಿತವಾಗಿಯೂ ನಿಮ್ಮ ತಂದೆ ಅಲ್ಲ ಅಲ್ಲವೇ? ಎಂದು ಹೇಳಿದಾಗ ಇಡೀ ರಾಜನ ಸಭೆ ಕೆಲವು ಕ್ಷಣಗಳಕಾಲ ಮೌನಕ್ಕೆ ಜಾರಿತು.

ಕೆಲ ನಿಮಿಷಗಳ ಹಿಂದೆಯಷ್ಟೇ ಮೂರ್ತಿ ಪೂಜೆಯ ಬಗ್ಗೆ ರಾಜನಾಡಿದ್ದ ಮಾತುಗಳಿಗೆ ವಿವೇಕಾನಂದರು ಈ ರೀತಿಯಾಗಿ ಪ್ರಾತ್ಯಕ್ಷಿಕವಾಗಿ ಪ್ರತ್ಯುತ್ತರವನ್ನು ನೀಡುತ್ತಾರೆ  ಎಂದು ನಿರೀಕ್ಷಿಸಿರದ ಕಾರಣ ರಾಜನೂ ಸಹಾ ಗೊಂದಲಕ್ಕೊಳಗಾಗಿದ್ದಲ್ಲದೇ, ಏನು ಹೇಳಬೇಕೆಂದೇ ತೋರದೇ  ಕೆಲ ಕ್ಷಣ ಮೂಕನಾಗಿ ಹೋದ.

ರಾಜನ ಪರಿಸ್ಥಿತಿಯನ್ನು ಅರಿತ ವಿವೇಕಾನಂದರು ಅದನ್ನು ತಿಳಿಗೊಳಿಸುವ ಸಲುವಾಗಿ ನೋಡಿ ಮಹಾರಾಜರೇ, ಇದು ಕೇವಲ ನಿಮ್ಮ ತಂದೆಯ ವರ್ಣಚಿತ್ರ. ಆದರೆ ಅದನ್ನು ಪ್ರತಿಸಲವೂ ನೋಡಿದಾಗಲೆಲ್ಲವೂ ಅವರ ನೆನಪಾಗುವುದಲ್ಲದೇ ಆ ಮಹಾನುಭಾವರ ನೆನಪನ್ನು ನಮಗೆ ತರಿಸುತ್ತದೆ. ಹಾಗಾಗಿ ಈ ಚಿತ್ರಕಲೆ ನಿಮ್ಮ ತಂದೆಯ  ಸಂಕೇತ. ಅದೇ ರೀತಿ ಹಿಂದೂಗಳೂ ಸಹಾ ಮೂರ್ತಿರೂಪದಲ್ಲಿ ತಮ್ಮ ತಮ್ಮ ಪ್ರೀತಿಯ ದೇವರುಗಳನ್ನು ಚಿತ್ರಿಸಿಕೊಂಡು ಆ ವಿಗ್ರಹಗಳಲ್ಲಿ ದೇವರ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಅನುಭವಿಸುತ್ತಾರೆ. ಎಂದು ವಿವರಿಸಿದರು.

ಸ್ವಾಮೀಜಿಗಳು ಇಷ್ಟು ಸರಳವಾಗಿ  ಮೂರ್ತಿ ಪೂಜೆಯ ನಿಜವಾದ ಅರ್ಥವನ್ನು ಹೇಳಿದ್ದು ರಾಜಾ ಮಂಗಲ್ ಸಿಂಗ್ ಅವರಿಗೆ ಅರ್ಥವಾಗಿ,  ತನ್ನ  ಅವಿವೇಕತೆ ಮತ್ತು ಅಸಭ್ಯತೆಗಾಗಿ ವಿವೇಕಾನಂದರೊಂದಿಗೆ ಕ್ಷಮೆಯಾಚಿಸಿದ್ದಲ್ಲದೇ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.  ವಿವೇಕಾನಂದರನ್ನು ತಮ್ಮ ಅರಮನೆಯಲ್ಲಿ ಕೆಲವು ದಿನಗಳ ಕಾಲ ಇರಲು ವಿನಂತಿಸಿಕೊಂಡಿದ್ದಲ್ಲದೇ, ಸ್ವಾಮೀಜಿಗಳ ಅಮೇರಿಕಾ ಪ್ರಯಾಣದ ವೆಚ್ಚವನ್ನೂ ಭರಿಸಲು ಮುಂದಾದರು.

biligiriಎಲ್ಲವನ್ನೂ ಭಗವಂತನೇ ನಮಗೆ ನೀಡಿರುವಾಗ ಅವನಿಗೆ  ಹಿಂದಿರುಗಿ ಕೊಡುವಷ್ಟು ದೊಡ್ಡವರು ಯಾರೂ ಇಲ್ಲವಾದರೂ, ದೇವಾಲಯಗಳು ಮತ್ತು ಧರ್ಮಛತ್ರಗಳಲ್ಲಿ ಸೇವಾಕರ್ತರು ಮತ್ತು ದಾನಿಗಳ ಹೆಸರು ಮತ್ತು ಭಾವಚಿತ್ರಗಳನ್ನು ಹಾಕುವ ಮೂಲಕ ಅದನ್ನು ನೋಡುವ ಇತರೇ ಆಸ್ತಿಕ ಬಂಧುಗಳಿಗೂ ಧಾನ ಮತ್ತು ಧರ್ಮಗಳನ್ನು ಮಾಡಲು ಪ್ರೇರಣೆ ನೀಡಲಿ ಎನ್ನುವುದಾಗಿರುತ್ತದೆ  ಮತ್ತು ಹಾಗೆ ಉಪಕಾರ ಮಾಡಿದವರಿಗೆ ಕೃತಜ್ಞತಾ ಪೂರ್ವಕವಾಗಿ ಸ್ಮರಣೆ ಮಾಡಿದಂತಾಗುತ್ತದೆ  ಎನ್ನುವುದನ್ನು ಈ ಕೂಡಲೇ ಬಿಳಿಗಿರಿ ಬೆಟ್ಟದ ರಂಗನಾಥ ದೇವಾಲಯದ ಅಧಿಕಾರಿಗಳಿಗೆ ತಿಳಿಯುವಂತಾಗಿ ನಮ್ಮ ಹೆಮ್ಮೆಯ ಮೈಸೂರು ಮಹಾರಾಜರ ಭಾವಚಿತ್ರಗಳನ್ನು ಯಥಾಸ್ಥಿತಿಯಲ್ಲಿ ಹಾಕುವಂತೆ ಮಾಡುವಂತಹ ಮನಸ್ಥಿತಿಯನ್ನು ಆ ಬಿಳಿಗಿರಿ ರಂಗನಾಥನೇ ಕೊಡಲಿ ಎಂದು ಆಶಿಸೋಣ.

ಅದೇ ರೀತಿ ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಭಕ್ತಿಪೂರ್ವಕವಾಗಿ ಕಟ್ಟಿದ/ಕಟ್ಟಿಸಿದ ದೇವಾಲಯಗಳನ್ನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಈಗ ಒಡೆದು ಹಾಕಲು ಮುಂದಾಗಿರುವ ಎಲ್ಲರೂ ತಿಳಿದು ಕೊಳ್ಳಬೇಕಾದ ವಿಷಯವೇನೆಂದರೆ ಅವರು ಕೇವಲ ದೇವಸ್ಥಾನಗಳನ್ನು ಒಡೆಯುತ್ತಿರುವುದಷ್ಟೇ ಅಲ್ಲದೇ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ನಂಬಿಕೆಗಳು,  ಕೊಡುಗೆಗಳು ವಾಸ್ತುಶಿಲ್ಪ ಮತ್ತು  ಆ ದೇವಾಲಯದ ಹಿಂದಿರಬಹುದಾದ ಸುಂದರವಾದ ಐತಿಹ್ಯವನ್ನು ಹಾಳುಗೆಡುವುದರ ಮೂಲಕ ನಮ್ಮ ಮಕ್ಕಳ ಬೌಧ್ಧಿಕ ಮಟ್ಟವನ್ನು ಕಡಿಮೆ ಮಾಡುತ್ತಿದ್ದಾರೆ  ಎನ್ನುವುದನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕಾಗಿದೆ.

ಎಲ್ಲದ್ದಕ್ಕೂ ಪಾಶ್ಚಾತ್ಯರ  ಅಂಧಾನುಕರನವನ್ನೇ ಮಾಡುವ ಇಂದಿನ ಪೀಳಿಗೆಯವರು,  ಪುರಾತನ ಕಟ್ಟಡಗಳ ಬಗ್ಗೆ ಪಾಶ್ಚಾತ್ಯರಿಗಿರುವ ಕಕ್ಕುಲತೆಯನ್ನೇಕೆ ಅನುಸರಿಸುವುದಿಲ್ಲ? ಎನ್ನುವುದು ಅಚ್ಚರಿಯಾಗಿದೆ. ಅಲ್ಲಿಯ ಜನರು 100-200 ವರ್ಷಗಳ ಕಟ್ಟಡಗಳನ್ನು ಪರಂಪರೆ ಎಂದು ಜತನದಿಂದ ಸಂರಕ್ಷಿಸುವುದಲ್ಲದೇ ಅದನ್ನು ಎಲ್ಲರಿಗೂ ಬಹಳ ವೈಭವೀಕರಿಸಿ ತೋರಿಸುತ್ತಿದ್ದರೆ, ನಮ್ಮವರು 800-1000 ವರ್ಷಗಳ ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳನ್ನು ರಾತ್ರೋ ರಾತ್ರಿ ಒಡೆದು ಹಾಕುತ್ತಿರುವುದು ನಿಜಕ್ಕೂ ವಿಪರ್ಯಾಸವಲ್ಲವೇ? ಪ್ರಸ್ತುತ ನಮಗೆ ಅಂತಹ ಭವ್ಯವಾದ, ಸುಂದರವಾದ ಮತ್ತು ಕಲಾತ್ಮಕವಾದ ದೇವಾಲಯಗಳನ್ನು ಕಟ್ಟಲು ಸಾಧ್ಯವಿಲ್ಲದಿರುವಾಗ ಕನಿಷ್ಟ ಪಕ್ಷ ಅವುಗಳನ್ನು ಉಳಿಸಿಕೊಳ್ಳುವ ಜವಾಬ್ಧಾರಿ ನಮ್ಮದೇ ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

vk7ಭಾರತ ಎಂದರೆ ಹಾವಾಡಿಗರ ದೇಶ, ಹಿಂದೂಗಳು ಎಂದರೆ ಮೂಢ ನಂಬಿಕೆಯ ಜನರು ಎಂದು ಇಡೀ ಜಗತ್ತೇ ಮೂದಲಿಸುತ್ತಿದ್ದಾಗ ವಿಶ್ವ ಧರ್ಮಗಳ ಸಂಸತ್ತು 11 ಸೆಪ್ಟೆಂಬರ್ 1893 ರಂದು ಚಿಕಾಗೋದಲ್ಲಿ ಐತಿಹಾಸಿಕ ದಿಕ್ಸೂಚಿ ಭಾಷಣವನ್ನು ಮಾಡಿ ಜಗತ್ತೇ ಭಾರತ ಮತ್ತು ಹಿಂದೂ ಧರ್ಮದತ್ತ ಬೆಚ್ಚಿ ಬೀಳುವಂತೆ ಮಾಡುವ ಮುನ್ನಾ ದೇಶಾದ್ಯಂತ ಪರಿವಾಜ್ರಕರಾಗಿ ಪರ್ಯಟನೆ ಮಾಡುತ್ತಿದ್ದಂತಹ ಸಮಯದಲ್ಲಿ, 24 ಡಿಸೆಂಬರ್ 1892 ರಂದು ಸ್ವಾಮೀ ವಿವೇಕಾನಂದರು ಕನ್ಯಾಕುಮಾರಿಯನ್ನು ತಲುಪಿದ್ದರು. ಸಮುದ್ರದ ದಂಡೆಯಲ್ಲೇ ಇರುವ ದೇವಿಯ ದರ್ಶನ ಪಡೆದು ಹಿಂದೂಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಗಳ ಸಂಗಮದಲ್ಲಿ ಸಮುದ್ರ ತಟದಿಂದ ಸುಮಾರು 500ಮೀ ದೂರ ಇರುವ ಬಂಡೆಯನ್ನು ನೋಡಿ ಅಲ್ಲಿಗೆ ಕರೆದೊಯ್ಯುವಂತೆ ಅಲ್ಲಿಯೇ ಇದ್ದ ದೋಣಿಯವರನ್ನು ಕೇಳಿಕೊಳ್ಳುತ್ತಾರೆ. ಆ ಸಮಯದಲ್ಲಿ ಭೋರ್ಗರೆಯುತ್ತಿದ್ದ ಸಮುದ್ರ ಅಲೆಗಳನ್ನು ಕಂಡು ಈ ಸಮಯದಲ್ಲಿ ದೋಣಿಯನ್ನು ಚಲಾಯಿಸುವುದು ಅಪಾಯಕರ ಎಂದಾಗ, ಅಲ್ಲಿನ ನಾವಿಕರ ಎಚ್ಚರಿಕೆಗೂ ಗಮನ ಹರಿಸದೇ, ತಾವೇ ಧೈರ್ಯದಿಂದ ಸಮುದ್ರಕ್ಕೆ ದುಮುಕಿ ಈಜಿಕೊಂಡು ಆ ಬೃಹತ್ ಬಂಡೆಯನ್ನು ತಲುಪುತ್ತಾರೆ. ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಸುಮಾರು 3 ದಿನಗಳ ಕಾಲ ಹಸಿವು, ನಿದ್ರೆ ನೀರಡಿಕೆಯಿಲ್ಲದೇ, ಧ್ಯಾನವನ್ನು ಮಾಡಿ, ಜ್ಞಾನೋದಯವನ್ನು ಪಡೆದು, ಮಾನವೀಯತೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುವ ಸಂಕಲ್ಪವನ್ನು ತೆಗೆದುಕೊಳ್ಳುತ್ತಾರೆ.

ಆ ರೀತಿ ಸಂಕಲ್ಪ ಮಾಡಿದ ಸ್ವಾಮಿ ವಿವೇಕಾನಂದರು 1893 ರ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ, ನನ್ನ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಭಾಷಣವನ್ನು ಆರಂಭಿಸಿ ಅಲ್ಲಿ ನೆರೆದಿದ್ದ ಸಭಿಕರನ್ನೆಲ್ಲಾ ಮಂತ್ರ ಮುಗ್ಧರನ್ನಾಗಿಸಿ ಭಾರತ, ಹಿಂದೂ ಧರ್ಮ, ಯೋಗ, ವೇದಾಂತದ ಮತ್ತು ಭಾರತೀಯ ತತ್ವಶಾಸ್ತ್ರಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜನವರಿ 1962 ರಲ್ಲಿ, ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಅವರು ಜ್ಞಾನೋದಯ ಪಡೆದ ಕನ್ಯಾಕುಮಾರಿಯ ಆ ಬೃಹತ್ ಬಂಡೆಯ ಮೇಲೆ ಸ್ವಾಮೀಜಿಯವರ ಸ್ಮಾರಕವೊಂದನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಿದರು. ಈ ರೀತಿಯ ಮಹಾಸಂಕಲ್ಪವನ್ನು ನೆರೆವೇರಿಸಲು ಅಂದಿನ ಮದ್ರಾಸಿನ ಶ್ರೀ ರಾಮಕೃಷ್ಣ ಮಿಷನ್ ಅವರು ಸ್ಥಳ ಪರಿಶೀಲನೆಗೆ ಬಂದಾಗ ಈ ಸುಂದರ ಪರಿಕಲ್ಪನೆಯ ವಿರುದ್ಧ ಸ್ಥಳೀಯ ಕ್ಯಾಥೊಲಿಕ್ ಮೀನುಗಾರರ ಸಂಘವು ಉಗ್ರವಾಗಿ ಪ್ರತಿಭಟನೆ ನಡೆಸಿತಲ್ಲದೇ, ಆ ಬಂಡೆಯ ಮೇಲೊಂದು ದೊಡ್ಡದಾದ ಶಿಲುಬೆಯನ್ನು ಪ್ರತಿಷ್ಟಾಪನೆ ಮಾಡಲು ಹೊಂಚು ಹಾಕಿತು. ಇದರಿಂದ ಕೆಲ ಸಮಯ ಆ ಪ್ರದೇಶದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ ಆ ಸ್ಥಳವನ್ನು ನಿಷೇಧಿತ ಸ್ಥಳವೆಂದು ಗುರುತಿಸಿ, ಶಸ್ತ್ರಸಜ್ಜಿತ ಕಾವಲುಗಾರರನ್ನು ಅಲ್ಲಿಗೆ ಗಸ್ತು ಹಾಕುವಂತರ ಪರಿಸ್ಥಿತಿ ಬಂದೊದಗಿತ್ತು. ಹಿಂದೂಗಳ ಸತತ ಹೋರಾಟದ ಫಲವಾಗಿ ಜನವರಿ 17, 1963 ರಂದು ಸರ್ಕಾರವು ಅಲ್ಲಿಗೆ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಲು ಅನುಮತಿ ಕೊಡಲಾಯಿತು.

ನಿಜ ಹೇಳಬೇಕೆಂದರೆ, ಈ ಹೋರಾಟ ಮತುತ್ ಸ್ಮಾರಕದ ಹಿಂದಿನ ಸಂಪೂರ್ಣ ಶ್ರೇಯ ಶ್ರೀ ಏಕನಾಥ ರಾಮಕೃಷ್ಣ ರಾನಡೆ ಅವರಿಗೆ ಸಲ್ಲ ಬೇಕು ಎಂದರೆ ತಪ್ಪಾಗಲಾರದು. ಶ್ರೀ ಏಕನಾಥ ರಾನಡೆಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಹಿರಿಯ ಪ್ರಚಾರಕರಾಗಿದ್ದಲ್ಲದೇ,ಸ್ವಾಮೀಜಿಗಳ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅವರೊಬ್ಬ ಪ್ರಖ್ಯಾತ ಭಾರತೀಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಧಾರಕರಾಗಿದ್ದರು. ಅವರ ನೇತೃತ್ವದಲ್ಲೇ, ವಿವೇಕಾನಂದ ರಾಕ್ ಮೆಮೋರಿಯಲ್ ಆರ್ಗನೈಸಿಂಗ್ ಕಮಿಟಿಯನ್ನು ಸ್ಥಾಪಿಸಲಾಯಿತು. ವಿವೇಕಾನಂದ ಶಿಲಾ ಸ್ಮಾರಕವು ರಾಷ್ಟ್ರೀಯ ಸ್ಮಾರಕ ಎಂದೇ ಜನರ ಮುಂದೆ ಬಿಂಬಿಸಿದ ಶ್ರೀ ರಾನಡೆಯವರು ಇದರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯರ ಕೊದುಗೆ ಇರಬೇಕೆಂದು ನಿರ್ಧರಿಸಿ, ಪ್ರತೀ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದಲ್ಲದೇ, ಇನ್ನೂ ಹೆಚ್ಚಿನ ಧನಸಹಾಯಕ್ಕಾಗಿ ಒಂದು ರೂಪಾಯಿಯ ಪೋಸ್ಟ್ ಕಾರ್ಡ್ ಮಾದರಿಯನ್ನು ಅಚ್ಚು ಹಾಕಿಸಿ ದೇಶಾದ್ಯಂತ ಜನಸಾಮಾನ್ಯರಿಂದ ದೇಣಿಗೆಗಳನ್ನು ಸಂಗ್ರಹಿಸಿದರು. ಇಂತಹ ಪವಿತ್ರ ಕಾರ್ಯಕ್ಕಾಗಿ ಮೊದಲ ದೇಣಿಗೆಯನ್ನು ವಿಶ್ವಹಿಂದೂಪರಿಷತ್ತಿನ ಸ್ಥಾಪಕರಾದ ಪೂಜ್ಯ ಶ್ರೀ ಚಿನ್ಮಯಾನಂದರಿಂದ ಸಂಗ್ರಹಿಸುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.

ಒಂದು ಕಡೆ ಹಣ ಸಂಗ್ರಹದ ಆಭಿಯಾನ ನಡೆಯುತ್ತಿದ್ದರೆ ಮತ್ತೊಂದೆದೆ ಇಂತಹ ಸ್ಮಾರಕ ನಿರ್ಮಾಣಕ್ಕೆ ಅಗತ್ಯವಿರುವ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕಟ್ಟಡ ಕಟ್ಟಲು ಕಾರ್ಮಿಕರು ಎಲ್ಲವನ್ನೂ ಹೊಂಚುವುದು ಸುಲಭವಾಗಿರಲಿಲ್ಲ. ಇದೆಲ್ಲದರ ಮಧ್ಯೆ, ಈ ಕಾರ್ಯಕ್ಕೆ ತಡೆಯೊಡ್ಡಲು ಅಂದಿನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರಾಗಿದ್ದ ಹುಮಾಯೂನ್ ಕಬೀರ್ ಮತ್ತು ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಮಿಂಜೂರ್ ಭಕ್ತವತ್ಸಲಂ ನಾನಾರೀತಿಯ ರಾಜಕೀಯ ಒತ್ತಡಗಳನ್ನು ಹೇರುವುದರಲ್ಲಿ ಸಫಲವಾಗುತ್ತಿದ್ದಂತೆಯೇ ಸ್ಮಾರಕದ ನಿರ್ಮಾಣ ಕೊಂಚ ತಡವಾಗತೊಡಗಿತು. ಆಗ ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಲಹೆಯಂತೆ ರಾನಡೆಯವರು, ಈ ಸ್ಮಾರಕ ನಿರ್ಮಾಣದ ಫಲವಾಗಿ ಸುಮಾರು 323 ಸಂಸತ್ ಸದಸ್ಯರ ಸಹಿಯನ್ನು ಸಂಗ್ರಹಿಸುವ ಹೊತ್ತಿಗೆ ಲಾಲ್ ಬಹದ್ದೂರು ವಿವಾದಾತ್ಮಕವಾಗಿ ನಿಧನರಾಗಿ, ಭಾರತದ ಪ್ರಧಾನ ಮಂತ್ರಿಯ ಸ್ಥಾನವನ್ನು ಶ್ರೀಮತಿ. ಇಂದಿರಾ ಗಾಂಧಿಯವರು ಅಲಂಕರಿಸಿದ್ದರು. ಪಕ್ಷಾತೀತವಾಗಿ ಇಷ್ಟೊಂದು ಸಾಂಸದರ ಬೆಂಬಲವಿದ್ದ ಯೋಜನೆಯನ್ನು ವಿಧಿ ಇಲ್ಲದೇ ಅನುಮೋದಿಸಲೇ ಬೇಕಾಯಿತು. ನಂತರ ಸ್ಮಾರಕದ ಕೆಲಸ ಚುರುಕುಗೊಂಡು ವಿವೇಕಾನಂದ ಶಿಲಾ ಸ್ಮಾರಕದ ನಿರ್ಮಾಣವು 1970 ರಲ್ಲಿ ಆರು ವರ್ಷಗಳ ಧಾಖಲೆಯ ಅವಧಿಯಲ್ಲಿ ಸುಮಾರು 650 ನುರಿತ ಕುಶಲಕರ್ಮಿಗಳು ಮತ್ತು ಕಾರ್ಮಿಕರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಸಮರ್ಪಣೆಯ ಶ್ರಮದೊಂದಿಗೆ ಸಂಪೂರ್ಣವಾದಾಗ, ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರಿ ವಿ.ವಿ.ಗಿರಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಶ್ರೀಕರುಣಾನಿಧಿಯವರ ಅಮೃತಹಸ್ತದಿಂದ 2 ನೇ ಸೆಪ್ಟೆಂಬರ್, 1970 ರಂದು ಲೋಕಾರ್ಪಣೆಗೊಂಡಾಗ ಇಡೀ ದೇಶವಾಸಿಗಳು ಸಂಭ್ರಮಗೊಂಡಿದ್ದರು.

ಈ ಭವ್ಯವಾದ ಸ್ಮಾರಕವು ಭಾರತದ ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶಿಲ್ಪ ಶೈಲಿಯ ಮಿಶ್ರಣವಾಗಿ ಅದರಲ್ಲೂ ವಿಶೇಷವಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಾಸ್ತುಶಿಲ್ಪದ ಸಮ್ಮಿಳನವಾಗಿದೆ ಎನ್ನಬಹುದಾಗಿದೆ. ಸ್ಮಾರಕ ಮಂಟಪವು ಕೊಲ್ಕಾತ್ತಾದ ಬೇಲೂರಿನಲ್ಲಿರುವ ಶ್ರೀ ರಾಮಕೃಷ್ಣ ಮಠವನ್ನು ಹೋಲುತ್ತದೆ. ಇನ್ನು ಅದರ ಪ್ರವೇಶ ದ್ವಾರದ ವಿನ್ಯಾಸವು ಅಜಂತಾ ಮತ್ತು ಎಲ್ಲೋರ ವಾಸ್ತುಶಿಲ್ಪ ಶೈಲಿಗಳನ್ನು ಒಳಗೊಂಡಿದೆ. ಖ್ಯಾತ ಶಿಲ್ಪಿಗಳಾಗಿದ್ದ ಶ್ರೀ ಸೀತಾರಾಮ್ ಎಸ್. ಆರ್ಟೆಯವರ ನೇತೃತ್ವದಲ್ಲಿ ಅಲ್ಲಿನ ಪ್ರಮುಖ ಆಕರ್ಷಣೆಯಾದ, ಪರಿವ್ರಾಜಕ ಭಂಗಿಯಲ್ಲಿ ನಿಂತಿರುವ ಸ್ವಾಮಿ ವಿವೇಕಾನಂದರ ಜೀವಿತ ಗಾತ್ರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ದೇವಿ ಕನ್ಯಾ ಕುಮಾರಿಯ ಪವಿತ್ರ ಪಾದಗಳ ಸ್ಪರ್ಶವಾಗಿರುವ ಕಾರಣ ಈ ಬೃಹತ್ ಬಂಡೆಯನ್ನು ಶ್ರೀಪಾದ ಪರೈ ಎಂದೂ ಕರೆಯಲಾಗುತ್ತದೆ. ವಾಸ್ತವದಲ್ಲಿ ಅಲ್ಲಿರುವ ಕಲ್ಲಿನ ಬಣ್ಣವು ಕಂದು ಬಣ್ಣದಿಂದ ಕೂಡಿದ್ದು ಅದು ಮಾನವ ಹೆಜ್ಜೆಯ ಗುರುತಿನಂತೆ ಕಾಣುವುದರಿಂದ ಅದನ್ನು ಶ್ರೀ ಪಾದಂ ಎಂದು ಕರೆಯಲಾಗುತ್ತದೆ ಹಾಗಾಗಿ ಆ ಪವಿತ್ರ ಸ್ಥಳದಲ್ಲಿ ಶ್ರೀ ಪಾದಪರೈ ಮಂಟಪ’ ಎಂಬ ದೇವಾಲಯವನ್ನು ನಿರ್ಮಿಸಲಾಗಿದೆ.

ಸ್ಮಾರಕದೊಳಗೆ ಎರಡು ಪ್ರಮುಖ ರಚನೆಗಳಾಗಿ ವಿಭವಿಸಿದ್ದು, ಅದರಲ್ಲಿ ಮುಖ್ಯವಾಗಿ ಚೌಕಾಕಾರದಲ್ಲಿರುವ ಗರ್ಭ ಗ್ರಹದ ಒಳಪ್ರಾಕಾರ ಮತ್ತು ಹೊರಪ್ರಾಕಾರದ ಇರುವ ಶ್ರೀಪಾದ ಮಂಟಪವಾದರೆ, ಮತ್ತೊಂದು, ಸ್ವಾಮೀಜಿಯ ಗೌರವಾರ್ಥವಾಗಿ ನಿರ್ಮಿಸಲಾಗಿರುವ ವಿವೇಕಾನಂದ ಮಂಟಪವಾಗಿದೆ. ಈ ಮಂಟಪದಲ್ಲಿರುವ ಧ್ಯಾನ ಮಂಟಪ ಮತ್ತು ಸಭಾ ಮಂಟಪವನ್ನು ನಿರ್ಮಿಸಲಾಗಿದೆ. ಧ್ಯಾನ ಮಂದಿರದ ವಿನ್ಯಾಸವು ಭಾರತದ ದೇವಾಲಯದ ವಾಸ್ತುಶಿಲ್ಪದ ವಿವಿಧ ಶೈಲಿಗಳ ಸಮ್ಮೀಳಿತವಾಗಿದೆ. ಇಲ್ಲಿಗೆ ಬರುವ ಸಂದರ್ಶಕರಿಗೆ ಶಾಂತವಾಗಿ ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಮತ್ತು ಧ್ಯಾನ ಮಾಡಲು ಅನುಕೂಲವಾಗುವಂತೆ 6 ಕೊಠಡಿಗಳನ್ನು ಹೊಂದಿದೆ. ಇನ್ನು ಸಭಾ ಮಂಟಪವು ಎಲ್ಲರೂ ಕುಳಿತು ಕೊಳ್ಳುವಂತಹ ವಿಶಾಲವಾಗಿದ್ದು, ಪ್ರತಿಮಾ ಮಂಟಪ ಎಂಬ ಪ್ರತಿಮೆ ವಿಭಾಗವನ್ನು ಒಳಗೊಂಡಿದ್ದು, ಸಭಾಂಗಣವನ್ನು ಒಳಗೊಂಡ ಕಾರಿಡಾರ್ ಮತ್ತು ಹೊರಗಿನ ಪ್ರಾಂಗಣವನ್ನು ಒಳಗೊಂಡಿದೆ. ಸ್ವಾಮಿಯವರ ಪ್ರತಿಮೆಯ ದೃಷ್ಟಿ ನೇರವಾಗಿ ಶ್ರೀಪಾದದ ಮೇಲೆ ಬೀಳುವ ರೀತಿಯಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಗಮನಾರ್ಹವಾಗಿದ್ದು ಪ್ರತಿಯೊಬ್ಬ ಭಾರತೀಯರೂ ಖಂಡಿತವಾಗಿಯೂ ನೋಡಲೇ ಬೇಕಾದಂತಹ ಪ್ರೇಕ್ಷಣೀಯ ಮತ್ತು ಪುಣ್ಯಕ್ಷೇತ್ರವಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ.

ಖ್ಯಾತ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಉಪಾಸನೆ ಚಿತ್ರದ ಹಾಡಿನಲ್ಲಿರುವ ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿಯ ಈ ಬೃಹತ್ ಮತ್ತು ಭವ್ಯವಾದ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಪ್ರತಿದಿನವೂ ಸಾವಿರಾರು ಪ್ರವಾಸಿಗರು ಇಲ್ಲಿನ ಸಮುದ್ರ ತೀರದಿಂದ ಸುಮಾರು ೨ ನಿಮಿಷದ ದೋಣಿಯ ಪ್ರಯಾಣದ ಮೂಲಕ ಇಲ್ಲಿಗೆ ಬಂದು ತಲುಪಬಹುದಾಗಿದೆ. ಈ ಸ್ಮಾರಕವು ವರ್ಷವಿಡೀ ಬೆಳಿಗ್ಗೆ 7.00 ರಿಂದ ಸಂಜೆ 5.00 ರವರೆಗೆ ಸಂದರ್ಶಕರ ಭೇಟಿಗೆ ಅವಕಾಶವಿದ್ದು ಇದಕ್ಕೆ ಅತ್ಯಲ್ಪ ಪ್ರವೇಶ ಶುಲ್ಕವಾದ ರೂ. 10/-ನ್ನು ನಿಗಧಿಪಡಿಸಿದ್ದು ಇನ್ನು ಕ್ಯಾಮೆರಾ ಬಳಸುವುದಕ್ಕೆ ರೂ. 10/- ಮತ್ತು ವಿಡಿಯೋ ಚಿತ್ರೀಕರಣಕ್ಕೆ ರೂ. 50/- ಪಾವತಿಸಬೇಕಾಗುತ್ತದೆ.

ಭಾರತದ ತುತ್ತ ತುದಿಯ ಪ್ರದೇಶವಾದ ಕನ್ಯಾಕುಮಾರಿಗೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಗರಗಳಿಂದಲು ಬಸ್ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಇನ್ನು ವಿಮಾನದ ಮೂಲಕ ಇಲ್ಲಿಗೆ ಬರಲು ಇಚ್ಚಿಸುವರು ಕನ್ಯಾಕುಮಾರಿಯಿಂದ ಕೇವಲ 67 ಕಿಮೀ ದೂರದಲ್ಲಿರುವ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಬಸ್ ಇಲ್ಲವೇ ಖಾಸಗೀ ವಾಹನಗಳ ಮೂಲಕ ತಲುಪಬಹುದಾಗಿದೆ.

ಇಷ್ಟೆಲ್ಲಾ ವಿವರಗಳನ್ನು ತಿಳಿದುಕೊಂಡ ಮೇಲೆ ಇನ್ನೇಕೆ ತಡಾ, ಸಮಯ ಮಾಡಿಕೊಂಡು ನಮ್ಮ ರಾಷ್ಟ್ರೀಯ ಸ್ಮಾರಕಗಳಲ್ಲಿ ಒಂದಾದ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕವನ್ನು ನೋಡಿಕೊಂಡು ದೇಶಭಕ್ತಿಯ ಸ್ವಾಭಿಮಾನವನ್ನು ತುಂಬಿಕೊಳ್ಳೋಣ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಸಂಪಮಾಸ ಪತ್ರಿಕೆಯ ಸೆಪ್ಟೆಂಬರ್ ತಿಂಗಳಲ್ಲಿ ಈ ಲೇಖನ ಪ್ರಕಟವಾಗಿದೆ.

ಕ್ರಿಕೆಟ್ ಆಟಗಾರರಾಗಿ ಸ್ವಾಮಿ ವಿವೇಕಾನಂದ

ball

ಲೇಖನದ ಶೀರ್ಷಿಕೆ ನೋಡಿ ಶಾಕ್ ಆಯ್ತಾ? ಆಗಿರ್ಲೇ ಬೇಕು. ನನಗೂ ಇದರ ಬಗ್ಗೆ ತಿಳಿದುಕೊಂಡಾಗ ಇದೇ ರೀತಿ ಶಾಕ್ ಆದೆ. ನಮಗೆಲ್ಲ ತಿಳಿದಿರುವಂತೆ ಸ್ವಾಮೀ ವಿವೇಕಾನಂದರ ಆಧ್ಯಾತ್ಮದ ಗುರುಗಳು. ಇಡೀ ಜಗತ್ತಿನವರಿಗೆ ಹಿಂದೂ ಧರ್ಮದವ ಬಗ್ಗೆ ಇದ್ದ ತಾತ್ಸಾರವನ್ನು ಹೋಗಲಾಡಿಸಿ ಅವರ ಮನದಲ್ಲಿ ಹಿಂದೂ ಧರ್ಮದ ಬಗ್ಗೆ ಪೂಜ್ಯ ಭಾವನೆ ಮೂಡಿಸುವುದರಲ್ಲಿ ಶ್ರಮಿಸಿದ ಅಗ್ರಗಣ್ಯರು. ಆದರೆ ಈ ಶೀರ್ಷಿಕೆಯಲ್ಲಿ ಕ್ರಿಕೆಟ್ ಆಟ ಅಂತಾ ಇದೇ? ಎಲ್ಲಿಯ ಬೆಟ್ಟದ ನೆಲ್ಲಿಕಾಯಿ? ಎಲ್ಲಿಯ ಸಮುದ್ರ ಉಪ್ಪು? ಎಲ್ಲಿಂದ ಎಲ್ಲಿಗೆ ಸಂಬಂಧ ಅಂತಾ ಕೇಳಿದ್ರೇ. ಸ್ವಲ್ಪ ಸಮಾಧಾನ ತಗೋಳ್ಳೀ. ನಿಧಾನವಾಗಿ ಎಲ್ಲವನ್ನೂ ತಿಳಿದು ಕೊಳ್ಳೋಣ.

ಬಾಲ್ಯದಲ್ಲಿ ನರೇಂದ್ರ ದತ್ತ ಎಂಬ ನಾಮಾಂಕಿತರಾಗಿ ನಂತರ ರಾಮಕೃಷ್ಣ ಪರಮಹಂಸರಿಂದ ಸನ್ಯಾಸತ್ವ ಸ್ವೀಕರಿಸಿ ಪರಿಪೂರ್ಣ ಆಧ್ಯಾತ್ಮದ ಕಡೆಗೆ ವಾಲುವ ಓದಿನಲ್ಲಿ ಚುರುಕಾಗಿದ್ದಂತೆಯೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಮುಂದಿದ್ದರು. ಸ್ವತಃ ಅತ್ಯುತ್ತಮ ಪುಟ್ಬಾಲ್ ಆಟಗಾರರಾಗಿದ್ದಲ್ಲದೇ ಅತ್ಯುತ್ತಮ ದೇಹದಾಢ್ಯ ಪಟುವಾಗಿದ್ದರು ಜೊತೆಗೆ ಕತ್ತಿವರಸೆ (ಫೆನ್ಸಿಂಗ್)ಯಲ್ಲಿಯೂ ಅವರಿಗೆ ಆಸಕ್ತಿ ಇತ್ತು. ಅದೇ ಸಮಯದಲ್ಲಿ ತಮ್ಮ ಸಹಪಾಠಿಗಳಿಗೆ ಆದರ್ಶ ವ್ಯಕ್ತಿಯಾಗಿದ್ದರು. ಯುವಕರುಗಳು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ದೈಹಿಕ ಚಟುವಟಿಕೆಗಳನ್ನು ಮಾಡಲು ಯುವಕರನ್ನು ಪ್ರೇರೇಪಿಸುತ್ತಿದ್ದಲ್ಲದೇ ಕಾಲೇಜು ದಿನಗಳಲ್ಲಿ ಸಾಕಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಗಂಟೆ ಗಟ್ಟಲೇ ಗರಡೀ ಮನೆಯ ಅಖಾಡದಲ್ಲಿ ದೇಹದಾಢ್ಯಕ್ಕೆ ಸಮಯವನ್ನು ಕಳೆಯುತ್ತಿದ್ದರು . ಹಾಗಾಗಿ ಅವರು ಕಲ್ಕತ್ತಾದ ಟೌನ್ ಕ್ಲಬ್‌ನ ಸದಸ್ಯರಾಗಿದ್ದರು ಮತ್ತು ದೈಹಿಕ ಚಟುವಟಿಕೆಗಳಲ್ಲಿ ಉತ್ಸಾಹಭರಿತರಾಗಿದ್ದರು. ಮುಂದೆ ಅದೇ ನರೇಂದ್ರ ದತ್ತ ಸ್ವಾಮಿ ವಿವೇಕಾನಂದರಾದಾಗ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಹಾಗಾಗಿ ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನನಗೆ 100 ಜನ ಗಟ್ಟಿ ಮುಟ್ಟಾದ ಯುವಕರನ್ನು ಕೊಡಿ ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎಂದು ಸದಾ ಕಾಲವೂ ಹೇಳುತ್ತಿದ್ದರು.

town_club

ಆಹ್ಟು ಹೊತ್ತಿಗಾಗಲೇ ಭಾರತೀಯರಿಗೆ ಬ್ರಿಟಿಷರು ಕ್ರಿಕೆಟ್ ಆಟದ ರುಚಿಯನ್ನು ಹತ್ತಿಸಿಬಿಟ್ಟ ಕಾರಣ ಎಲ್ಲಾ ಕಡೆಯಲ್ಲೂ ಅನೇಕ ಕ್ರಿಕೆಟ್ ಕ್ಲಬ್ಬುಗಳು ತಲೆಯೆತ್ತಿದ್ದವು. ಇದಕ್ಕೆ ಕಲ್ಕತ್ತಾ ನಗರವೂ ಹೊರತಾಗಿರಲಿಲ್ಲ. 1792 ರಲ್ಲಿ ಬ್ರಿಟಿಷರು ಕಲ್ಕತ್ತಾ ಕ್ರಿಕೆಟ್ ಕ್ಲಬ್ ಎಂಬ ಕ್ಲಬ್ ಸ್ಥಾಪಿಸಿದ್ದರು. ಅದಕ್ಕೆ ಪ್ರತಿಸ್ಪರ್ಧಿಯಂತೆ 1884 ರಲ್ಲಿ ಖ್ಯಾತ ಗಣಿತಶಾಸ್ತ್ರಜ್ಞರಾಗಿದ್ದ ಶ್ರೀ ಶಾರದಾರಂಜನ್ ರೇ ಅವರೊಂದು ಪ್ರಸಿದ್ಧ ಕ್ರಿಕೆಟ್ ಕ್ಲಬ್ ಓಂದನ್ನು ಸ್ಥಾಪಿಸಿ ಅದಕ್ಕೆ ದಿ ಟೌನ್ ಕ್ಲಬ್ ಎಂದು ಹೆಸರಿಸಿ ಬ್ರಿಟಿಷರಿಗೆ ಅವರದೇ ಆಟದಲ್ಲಿ ಕಠಿಣ ಸ್ಪರ್ಧೆ ಒಡ್ಡಲು ಸಜ್ಜಾಗಿದ್ದರು.

ಅದಾಗಲೇ ದಿ ಟೌನ್ ಕ್ಲಬ್ಬಿನ ಸದಸ್ಯರಾಗಿದ್ದ ನರೇಂದ್ರರು ಅದೊಮ್ಮೆ ಅಂದಿನ ಕಾಲದ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಹೇಮಾ ಚಂದ್ರ ಘೋಷ್ ಅವರನ್ನು ಹೀಗೆಯೇ ಭೇಟಿ ನೀಡಿದಾಗ ಬ್ರಿಟಿಷರ ಹುಟ್ಟನ್ನಡಗಿಸಲು ಅವರದ್ದೇ ಆದ ಕ್ರಿಕೆಟ್ ಆಟದಲ್ಲಿ ಸೋಲಿಸುವ ಸಲುವಾಗಿ ಕ್ರಿಕೆಟ್ ಆಟದತ್ತ ಏಕೆ ಗಮನ ಹರಿಸಬಾರದು ಎಂದು ಸೂಚಿಸಿದರು. ಬ್ರಿಟಿಷರ ವಿರುದ್ಧ ಎಂತಹ ಹೋರಾಟಕ್ಕೂ ಸಿದ್ಧರಾಗಿದ್ದ, ಉತ್ಸಾಹಿ ತರುಣ ನರೇಂದ್ರರು ಸಂತೋಷದಿಂದಲೇ ದಿ ಟೌನ್ ಕ್ಲಬ್ಬಿನ ಕ್ರಿಕೆಟ್ ತಂಡದಲ್ಲಿ ಭಾಗಿಯಾಗಿ ಘೋಷ್ ಅವರ ಪ್ರಾಮಾಣಿಕವಾದ ಮಾರ್ಗದರ್ಶನದಲ್ಲಿ ಪರಿಣಾಮಕಾರಿ ಬೌಲರ್ ಆಗಿ ಪರಿವರ್ತಿತರಾದರು.

ಅಮೀರ್ ಖಾನ್ ಅವರ ಲಗಾನ್ ಚಿತ್ರದಲ್ಲಿ ಬರುವಂತೆಯೇ ಅದೊಂದು ದಿನ ಬ್ರಿಟಿಷ್ ಮತ್ತು ಭಾರತೀಯರ ನಡುವೆ ಕಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಪಂದ್ಯವೊಂದು ನಡೆಯಿತು. ಕಲ್ಕತ್ತಾ ಕ್ರಿಕೆಟ್ ಕ್ಲಬ್ ವಿರುದ್ಧದ ಐತಿಹಾಸಿಕ ಪಂದ್ಯದಲ್ಲಿ ನರೇಂದ್ರರು ಟೌನ್ ಕ್ಲಬ್ ತಂಡದ ಸದಸ್ಯರಾಗಿದ್ದರು. ಆಡುವ ಸಮಯದಲ್ಲಿ, ಹೇಮಾ ಚಂದ್ರ ಘೋಷ್ ನರೇಂದ್ರರನ್ನು ಭಾವನೆಗಳಿಂದ ದೂರವಿಡದಂತೆ ಮತ್ತು ಕೇವಲ ಬೌಲಿಂಗ್‌ನತ್ತವೇ ಗಮನಹರಿಸದಂತೆ ಸೂಚಿಸಿದರು. ಅದರಂತೆಯೇ ಬೌಲಿಂಗ್ ಮಾಡಲು ಚೆಂಡನ್ನು ಕೈಗೆತ್ತಿಕೊಂಡು ದಿಟ್ಟ ಮನಸ್ಸಿನಿಂದ ಕೆಚ್ಚದೆಯ ಛಲದಿಂದ ನರೇಂದರು ಬೌಲಿಂಗ್ ಮಾಡಲು ಶುರುವಾದಂತೆಯೇ. ಕೆಲವೇ ಕೆಲವು ಸಮಯದಲ್ಲಿ ಒಂದಾದ ಮೇಲೆ ಒಂದರಂತೆ ವಿಕೆಟ್ ಗಳಿಸುತ್ತಾ ಬ್ರಿಟಿಷರ ವಿರುದ್ಧ ಕೇವಲ 20 ರನ್‌ಗಳನ್ನು ನೀಡಿ ಏಳು ವಿಕೆಟ್‌ಗಳನ್ನು ಪಡೆದು ಕೊಂಡು ತಂಡಕ್ಕೆ ಭರ್ಜರಿ ಜಯಗಳಿಸುವುದರಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಈ ಮೂಲಕ ಬ್ರಿಟಿಷರ ಸೊಕ್ಕನ್ನು ಮುರಿಯುವುದರಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದರು. ಇಂದಿಗೂ ಸಹಾ ಕಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಈ ಪಂದ್ಯದ ಕುರಿತಂತೆ ದಾಖಲೆ ದೊರೆಯುತ್ತದೆ.

ಈ ಪಂದ್ಯದ ಕ್ರಿಕೆಟ್ ಆಟದಿಂದ ಇಡೀ ದಿನ ವ್ಯರ್ಥವಾಗಿ ಹೋಗುವ ಕಾರಣ ಚುಟುಕು ಆಟಗಳಾದ ಫುಟ್ಬಾಲ್ ಆಡಿ ಎಂದು ಹೇಳುತ್ತಿದ್ದರು. ನಂತರ ಆಧ್ಯಾತ್ಮದತ್ತ ಅವರ ಚಿತ್ತ ಹರಿದ ಕಾರಣ ಕ್ರೀಡೆಯ ಕಡೆ ಅಷ್ಟೇನೂ ಗಮನ ಹರಿಸದೇ ರಾಮಕೃಷ್ಣರ ಕೃಪಾಶೀರ್ವಾದದಿಂದ ಆಧ್ಯಾತ್ಮಸಾಧನೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಈ ದೇಶದ ಸೌಭಾಗ್ಯವೂ ಏನೋ ಅಂದು ಅವರು ಕ್ರೀಡೆಯತ್ತಲೇ ಕೇಂದ್ರೀಕೃತಗೊಂಡಿದ್ದರೆ ನಮ್ಮ ದೇಶಕ್ಕೊಬ್ಬ ಅತ್ಯುತ್ತಮ ಜ್ಞಾನಿ, ದಾರ್ಶನಿಕ, ವೇದಾಂತಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಿವೇಕಾನಂದರ ಬರಹಗಳು ಗಾಂಧಿಜೀ, ಸುಭಾಷ್ ಚಂದ್ರ ಬೋಸ್ ಅಲ್ಲದೇ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿತ್ತು. ಅಂತಹ ಶ್ರೇಷ್ಠ ಚಿಂತಕ, ಬೋಧಕ ಮತ್ತು ಮಾನವೀಯತೆಯ ಗುಣವುಳ್ಳ ವ್ಯಕ್ತಿಯೊಬ್ಬನನ್ನಉ ಕಳೆದುಕೊಳ್ಳುತ್ತಿದ್ದೆವು.

ಏನಂತೀರೀ?

ಪೋಟೋಗಳು : ಅಂತರ್ಜಾಲ ಕೃಪೆ

ರಾಷ್ಟ್ರೀಯ ಯುವ‌ದಿನ

ramakrishnaಇಂದು ಜನವರಿ 12ನೇ ತಾರೀಖು ಇಡೀ ವಿಶ್ವದ ಯುವ ಜನತೆಗೆ ಒಂದು ವಿಶೇಷ ದಿನ. ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ವಿಶ್ವದ ಯುವಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಜಯಂತಿ. ಸುಮಾರು 159 ವರ್ಷಗಳ ಹಿಂದೆ ಕಲ್ಕತ್ತಾ ನಗರದಲ್ಲಿ ಜನವರಿ 12 1863 ಸಂಕ್ರಾಂತಿ ದಿನದಂದು ಶ್ರೀ ವಿಶ್ವನಾಥ ದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳ ಗರ್ಭದಲ್ಲಿ ಜನಿಸಿದ ನರೇಂದ್ರ ಮುಂದೆ ಸ್ವಾಮಿ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯನಾಗಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮಿ ವಿವೇಕಾನಂದರಾದರು.

ಪ್ರಪಂಚದಲ್ಲಿ ಅತ್ಯಂತ ಪುರಾತನ ಇತಿಹಾಸವುಳ್ಳ ಮತ್ತು ಇಂದಿಗೂ ಪ್ರಸ್ತುತವಾಗಿರುವ ದೇಶವೆಂದರೆ ಭಾರತ ದೇಶ ಎಂದು ಹೇಳಲು ಹೆಮ್ಮೆಯಾಗುತ್ತದೆ. ಒಂದು ಕಾಲದಲ್ಲಿ ಏಷ್ಯಾ ಖಂಡದ ಅರ್ಧಕ್ಕೂ ಹೆಚ್ಚಿನ ಭಾಗದಿಂದ ಕೂಡಿದ ವರ್ಷದ ಎಲ್ಲಾ ಋತುಗಳನ್ನೂ ಕಾಣಬಹುದಾಗಿರುವ ಏಕೈಕ ರಾಷ್ಟ್ರ ಎಂದರೆ ಅದು ಭಾರತ ದೇಶ. ಭಾರತೀಯರ ಸಂಸ್ಕೃತಿ, ಆಚಾರ, ವಿಚಾರ, ಕಠಿಣ ಪರಿಶ್ರಮ, ಧರ್ಮ ಸಹಿಷ್ನುತೆ, ವಿದ್ಯೆ ಮತ್ತು ವಿವೇಕಗಳು ಪ್ರಪಂಚದ ಇತರೆ ಯಾವುದೇ ದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ಹೆಚ್ಚಿನದಾಗಿತ್ತು. ಚೀನಾ ದೇಶದಿಂದ ಭಾರತಕ್ಕೆ ವಿದ್ಯೆ ಕಲಿಯಲು ಬಂದಿದ್ದ ಪ್ರಖ್ಯಾತ ಇತಿಹಾಸಕಾರ ಪಾಹಿಯಾನ್ ತಿಳಿಸಿರುವಂತೆ ಆತನಿಗೆ ಇಡೀ ಭರತ ಖಂಡದಲ್ಲಿ ಒಬ್ಬನೇ ಒಬ್ಬ ಭಿಕ್ಷುಕನನ್ನು ಕಂಡಿರಲಿಲ್ಲವಂತೆ. ಹೆಚ್ಚಿನ ಭಾರತೀಯರು ಶಾಲೆಗೇ ಹೋಗಿ ಪಾಠ ಕಲಿಯದಿದ್ದರೂ, ಪ್ರಕೃತಿದತ್ತವಾಗಿ ಮತ್ತು ಮನೆಯಲ್ಲಿನ ಸಂಸ್ಕಾರಗಳಿಂದ ಸಾಮಾನ್ಯ ಜ್ಞಾನದಲ್ಲಿ ಅಪ್ರತಿಮರಾಗಿದ್ದು ವಿವೇಕವಂತರಾಗಿರುತ್ತಿದ್ದರು.. ಇಡೀ ಪ್ರಪ್ರಂಚದ ಇತಿಹಾಸದ ಪುಟ ತೆರೆದು ನೋಡಿದಲ್ಲಿ ಒಬ್ಬನೇ ಒಬ್ಬ ಭಾರತೀಯ ರಾಜ ಇತರೇ ಭೂಭಾಗದ ಮೇಲೆ ದಂಡೆತ್ತಿ ಹೋದದ್ದಾಗಲೀ, ಅನ್ಯ ಧರ್ಮೀಯರ ಮೇಲೆ ಅಕ್ರಮಣ ಮಾಡಿದ ಪುರಾವೆಗಳು ಕಂಡು ಬರುವುದೇ ಇಲ್ಲ. ಇನ್ನು ಅನ್ಯ‌ಮತದವರನ್ನು ಮತಾಂತರಗೊಳಿಸಿದ ಉದಾಹರಣೆ ಎಲ್ಲೂ ಕಾಣಸಿಗುವುದೇ ಇಲ್ಲ.

ಆತಿಥಿ ದೇವೋಭವ ಎಂದು ಅತಿಥಿಗಳನ್ನು ಆಪ್ಯತೆಯಿಂದ ನೋಡಿಕೊಳ್ಳುತ್ತಿದ್ದ ಪರಿಣಾಮವೋ ಅಥವಾ ಪರಮ ಸಹಿಷ್ಣುಗಳಾಗಿದ್ದ ಪರಿಣಾಮವೋ ಏನೋ? ಕಳೆದ ಸಾವಿರ ವರ್ಷಗಲ್ಲಿ ನೂರಾರು ಪರಕೀಯರು ಸತತವಾಗಿ ಆಕ್ರಮಣ ನಡೆಸಿ ಈ ದೇಶವನ್ನು ಹತ್ತಾರು ಸಲ ಲೂಟಿ ಮಾಡಿ, ನಮ್ಮಲ್ಲಿದ್ದ ಲಕ್ಷಾಂತರ ಮಠ ಮಂದಿರಗಳನ್ನು ನಾಶ ಮಾಡಿದ್ದಲ್ಲದೇ, ನಮ್ಮವರನ್ನು ಆಮಿಷದಿಂದಲೋ, ಆಕ್ರಮಣದಿಂದಲೋ ಅನ್ಯಧರ್ಮಕ್ಕೆ ಮತಾಂತರ ಮಾಡಿದ್ದರೂ, ಬಹುಪಾಲು ಭಾರತೀಯರು ಇನ್ನೂ ಹಿಂದೂಗಳಾಗಿಯೇ ಇರುವುದು ನಮ್ಮ ಹೆಗ್ಗಳಿಕೆ.

sept1 ನಮ್ಮ ಸಹಿಷ್ಣುತೆಯನ್ನು ಅಪಾರ್ಥ ಮಾಡಿಕೊಂಡಿದ್ದ, ಪರಕೀಯರು, ಭಾರತ ಹಾವಾಡಿಗರ ದೇಶ, ಅಲ್ಲಿಯವರು ಅನಾಗರೀಕರು, ಕಲ್ಲುಗಳನ್ನು ದೇವರೆಂದು ಪೂಜಿಸುತ್ತಾರೆ, ಮಕ್ಕಳನ್ನು ಗಂಗಾ ನದಿಗೆ ಎಸೆಯುತ್ತಾರೆ, ಅವರಲ್ಲಿ ಒಗ್ಗಟ್ಟೇ ಇಲ್ಲ ಎಂದು ಹೀಗೇ ಹಾಗೆ ಹೇಳಿಕೆ ನೀಡುತ್ತಾ ನಮ್ಮ ದೇಶವನ್ನೂ, ನಮ್ಮ ಹಿಂದೂ ಧರ್ಮವನ್ನು ಅಪಹಾಸ್ಯ ಮತ್ತು ಅಪ ಪ್ರಚಾರ ಮಾಡುತ್ತಿದ್ದರ ಪರಿಣಾಮವಾಗಿ ಇಲ್ಲಿನ ಜನಗಳೇ ಕ್ಷಾತ್ರ ಹೀನರಾಗಿ, ನನ್ನನ್ನು ಕತ್ತೆ ಎಂದು ಬೇಕಾದರೂ ಕರೆಯಿರಿ ಆದರೆ, ಹಿಂದೂ ಎಂದು ಮಾತ್ರ ಕರೆಯದಿರಿ ಎನ್ನುವಂತಹ ದುಸ್ಠಿತಿ ಬಂದೊದಗಿತ್ತು. ಅಂತಹ ಸಮಯದಲ್ಲೇ, ಅಮೇರಿಕಾದ ಚಿಕಾಗೂ ನಗರದಲ್ಲಿ ಏರ್ಪಾಡಾಗಿದ್ದ ವಿಶ್ವ ಧರ್ಮ ಸಮ್ಮೇಳನನದಲ್ಲಿ ನಮ್ಮ ಧರ್ಮವನ್ನು ಪ್ರತಿನಿಧಿಸಲು ಯಾವುದೇ ಸಮರ್ಥ ವ್ಯಕ್ತಿ ಕಾಣ ಸಿಗದಂತಹ ಪರಿಸ್ಥಿತಿ ಬಂದೊದಗಿತ್ತು.

sept2ಇಂತಹ ಸಮಯದಲ್ಲೇ ಹತ್ತಾರು ಸಂಕಷ್ಟಗಳನ್ನು ಎದುರಿಸಿ, ಹಲವರ ಸಹಾಯದಿಂದ ಸೆಪ್ಟೆಂಬರ್ 11, 1893 ರಂದು ಅಮೇರಿಕಾದ ಚಿಕಾಗೂ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಭಾಷಣ ಆರಂಭಸಿ ಇಡೀ ವಿಶ್ವಕ್ಕೇ ಭಾರತ ದೇಶ ಮತ್ತು ಹಿಂದೂಗಳ ಬಗ್ಗೆ ಇದ್ದ ಅಪನಂಬಿಕೆಯನ್ನು ಹೋಗಲಾಡಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.

ಹಿಂದೂ ಎದ್ದಲ್ಲಿ ದೇಶ ಎದ್ದೀತು. ಹಿಂದೂಗಳು ನಮ್ಮ ಸನಾತನ ಧರ್ಮದ ಅಧ್ಯಾತ್ಮವನ್ನು ಮರೆತು ಪಾಶ್ಚಿಮಾತ್ಯರ ಅಂಧಾನುಕರಣೆ ಮಾಡಿದಲ್ಲಿ ಇನ್ನು ಎರಡು ಮೂರು ತಲೆಮಾರುಗಳಲ್ಲಿ ವಿಶ್ವದಲ್ಲಿ ಹಿಂದೂಗಳು ಮತ್ತು ಭಾರತ ದೇಶ ಇತ್ತು ಎನ್ನುವ ಕುರುಹೇ ಇಲ್ಲದಂತಾಗುತ್ತದೆ ಎಂದು ಅಂದು ಎಚ್ಚರಿಸಿದ್ದದ್ದರು.  ಒಬ್ಬ ಹಿಂದು ಮತಾಂತರವಾದರೆ, ಹಿಂದುವಿನ ಸಂಖ್ಯೆ ಒಂದು ಕಡಿಮೆ ಆಗುವುದಿಲ್ಲ. ಬದಲಿಗೆ ಒಬ್ಬ ಹಿಂದೂ ವಿರೋಧಿ ದೇಶದಲ್ಲಿ ಹೆಚ್ಚಿಗೆ ಹುಟ್ಟಿಕೊಳ್ಳುತ್ತಾನೆ ಎಂದು ಸ್ವಾಮೀಜಿಗಳು ಅಂದು ಮತಾಂತರದ ವಿರುಧ್ಧ ನೀಡಿದ ಹೇಳಿಕೆ ಇಂದಿಗೂ ಪ್ರಸ್ತುತವಾಗಿರುವುದು ನಿಜಕ್ಕೂ ದುರಾದೃಷ್ಟವೇ ಸರಿ.

ನನಗೆ ದಷ್ಟ ಪುಷ್ಟ ಬಲಿಷ್ಟ ಯುವಕರುಗಳನ್ನು ಕೊಡಿ. ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡಿಸುತ್ತೇನೆ. ಎಂದು ಯುವಕರುಗಳು ಮೋಜು ಮಸ್ತಿಯಲ್ಲಿ ಕಾಲ ಕಳೆಯದೇ, ಸಧೃಡರಾಗಿ ಆರೋಗ್ಯವಂತರಾಗಿ ಇರಬೇಕು ಎಂಬುದನ್ನು ಎತ್ತಿ ಹೇಳಿದ್ದರು. ಹತ್ತಾರು ವರ್ಷ ಓದಿ,‌ ಪದವಿಯನ್ನು ಗಳಿಸಿದರೂ ಅದು ದೇಶ ಕಾರ್ಯಕ್ಕೆ ಉಪಯೋಗ ಬಾರದಿದ್ದಲ್ಲಿ ಆ‌ ಪದವಿಗಳನ್ನೆಲ್ಲಾ ಸಮುದ್ರಕ್ಕೆ ಎಸೆಯಬೇಕು ಎಂದು ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದ್ದರು.

vk7ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದ, ಭಗತ್ ಸಿಂಗ್ ಚಂದ್ರಶೇಖರ ಆಝಾದ್, ಸುಭಾಷ್ ಚಂದ್ರ ಬೋಸ್ ರಂತಹ ಸಾವಿರಾರು ಸ್ವಾತ್ರಂತ್ರ್ಯ ಹೋರಾಟಗಾರರಿಗೆ ಸ್ವಾಮಿ ವಿವೇಕಾನಂದರೇ ಸ್ಪೂರ್ತಿಯಾಗಿದ್ದರು.  ಹಾಗಾಗಿಯೇ ವಿವೇಕಾನಂದರನ್ನು ಯುವಜನರ ಆದರ್ಶವೆಂದು ಪರಿಗಣಿಸಲಾಗಿದೆ. ಸ್ವಾಮೀಜಿಯವರ ಜೀವನ ಮತ್ತು ಸಂದೇಶದಲ್ಲಿ ವಿಶೇಷವಾಗಿ ಯುವಕರಿಗೆ ಅನ್ವಯವಾಗುವ ಹಲವಾರು ಅಂಶಗಳಿದ್ದು, ಯುವಕರು ತಮ್ಮನ್ನು ತಾವು ಕಂಡುಕೊಳ್ಳುವ, ತಮ್ಮನ್ನು ತಾವು ಪಡೆಯುವುದರ ಜೊತೆಗೆ ಸಮಾಜದಲ್ಲಿ ತಮ್ಮ ಸ್ಥಾನವನ್ನು ಹೇಗೆ ಕಂಡುಕೊಳ್ಳಬೇಕು, ಸಮಾಜದೊಡನೆ ತಾವು ಯಾವರೀತಿಯಲ್ಲಿ ಅರ್ಥಪೂರ್ಣ ಸಂಬಂಧವನ್ನು ಹೊಂದಿರಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸಲಾಗಿದೆ.

yuvadinaಅದಕ್ಕಾಗಿಯೇ ಸ್ವಾಮೀಜಿಗಳ ಜನ್ಮದಿನವಾದ ಜನವರಿ 12ನೇ ತಾರೀಖನ್ನು ರಾಷ್ಟ್ರೀಯ ಯುವದಿನ ಎಂದು ಆಚರಿಸಲಾಗುತ್ತದೆ. ಆದರೆ ಇದನ್ನು ಮರೆತ ನಮ್ಮ ಭಾರತದ ಯುವಜನತೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿ ಹೋಗಿ ಸುಮಾರು 75 ವರ್ಷಗಳಾದರೂ ಇಂದಿಗೂ ಅವರು ಬಿಟ್ಟು ಹೋದ ಪಾಶ್ವಾತ್ಯ ಸಂಸ್ಕೃತಿಗೇ ಜೋತು ಬಿದ್ದು ಮೋಜು ಮಸ್ತಿಗಳಲ್ಲಿಯೇ ಕಾಲ ಕಳೆಯುವಂತಾಗಿರುವುದು ಈ ದೇಶದ ವಿಪರ್ಯಾಸವೇ ಸರಿ. ಬನ್ನಿ ಇನ್ನೂ ಕಾಲ ಮಿಂಚಿಲ್ಲ. ವಿವೇಕಾನಂದರೇ  ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ಹೇಳಿರುವಂತೆ ಸೆಟೆದೆದ್ದು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಕಟಿಬದ್ದರಾಗೋಣ.

ಏನಂತೀರೀ?
ನಿಮ್ಮವನೇ ಉಮಸುತ

ಸ್ವಾಮಿ ವಿವೇಕಾನಂದರ ದಿಗ್ವಿಜಯ

ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣ. ಈ ಎರಡೂ ಸಂಧರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಸ್ವಾಮಿ ವಿವೇಕಾನಂದರ ದಿಗ್ವಿಜಯ ಎಂಬೀ ಲೇಖನ.

ಕ್ರಿ.ಶ. 1893 ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1492 ಕ್ಕೆ ಭಾರತಕ್ಕೆ ಬರಲು ಹವಣಿಸಿ ಹಡಗನ್ನೇರಿ ಹೊರಟಿದ್ದ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಅವನು ಭಾರತೀಯರೆಂದು ತಿಳಿದು ಆವರನ್ನೇ ರೆಡ್ ಇಂಡಿಯನ್ಸ್ ಎಂದು ಕರೆದ್ದದ್ದು ಇತಿಹಾಸವಾಗಿ ನಂತರ ಅಲ್ಲಿನ ಮೂಲನಿವಾಸಿಗಳನ್ನೆಲ್ಲಾ ನಾಶಪಡಿಸಿದ ಬ್ರಿಟಿಷರು ಅಮೇರಿಕಾ ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಕೈಗಾರಿಕಾ ಕ್ರಾಂತಿಯಿಂದಾಗಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆದು ತಮ್ಮ ಉತ್ಪನ್ನಗಳಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ಹುಡುಕಲು ಹವಣಿಸುತ್ತಿದ್ದ ಸಂಧರ್ಭದಲ್ಲಿ John Benny ಎಂಬ ಅಮೇರಿಕಾದ ಪ್ರಖ್ಯಾತ ಲೇಖಕನ ಸಲಹೆಯ ಮೇರೆಗೆ World Trade Congress ಎಂಬ ಕಾರ್ಯಕ್ರಮವನ್ನು 1893 ಮೇ ತಿಂಗಳಿನಿಂದ ಡಿಸೆಂಬರ್ ವರೆಗೂ ನಡೆಸಲು ತೀರ್ಮಾನಿಸಲಾಯಿತು. ಈ ಸಮ್ಮೇಳನದ ಹಿಂದೆ ಅಮೇರಿಕಾದ 400 ವರ್ಷಗಳ ಸಂಭ್ರಮಾಚರಣೆಯ ಜೊತೆಗೆ ಒಂದಷ್ಟು ವ್ಯಾಪಾರದ ಮಾರುಕಟ್ಟೆಯನ್ನು ವೃಧ್ಧಿಸಿಕೊಳ್ಳುವ ಉದ್ದೇಶವಿತ್ತು. ಅದಕ್ಕಾಗಿ ಪ್ರಪಂಚಾದ್ಯಂತ ಎಲ್ಲಾ ದೇಶಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಇಂತಹ ಸಂಧರ್ಭವನ್ನು ತಮ್ಮ ಮತ ಪ್ರಚಾರಕ್ಕಾಗಿ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕೆಂದು ಹವಣಿಸಿದ ಕೆಲ ಕ್ರೈಸ್ತ ಪಾದ್ರಿಗಳ ಫಲವೇ ಸೆಪ್ಟೆಂಬರ್ 11-27ರ ವರೆಗಿನ ವಿಶ್ವ ಧರ್ಮ ಸಮ್ಮೇಳನದ ಆಯೋಜನಕ್ಕೆ ನಾಂದಿಯಾಯಿತು.

ಆರಂಭದಲ್ಲಿ ಈ ವಿಶ್ವಧರ್ಮ ಸಮ್ಮೇಳನಕ್ಕೆ ಸಾಕಷ್ಟು ಪರ ವಿರೋಧಗಳ ಚರ್ಚೆಗಳಾದವು. ವಿಶ್ವದಲ್ಲಿ ಧರ್ಮವೆಂದು ಯಾವುದಾದರೂ ಇದ್ದಲ್ಲಿ ಅದು ಕೇವಲ ಕ್ರೈಸ್ತ ಧರ್ಮವೊಂದೇ. ಮಿಕ್ಕೆಲ್ಲಾ ಧರ್ಮಗಳು ಕೇವಲ ಪೊಳ್ಳು ಧರ್ಮಗಳು ಅಂತಹ ಪೊಳ್ಳುಗಳ ನಡುವೆ ನಮ್ಮನ್ನು ಹೋಲಿಸಿಕೊಳ್ಳುವುದು ಸರಿಯಲ್ಲಾ ಎಂದು ವಾದಿಸಿದರೆ ಮತ್ತೆ ಕೆಲವರು, ಪರಮ ಸಹಿಷ್ಣುವಾದ ಕ್ರೈಸ್ತ ಮತದಿಂದ ಮಾತ್ರವೇ ಎಲ್ಲರೂ ಸದ್ಗತಿ ಕಾಣಲು ಸಾಧ್ಯ. ಹಾಗಾಗಿ ಉಳಿದ ಎಲ್ಲಾ ಮತಗಳಿಗೂ ತಮ್ಮ ಕ್ರೈಸ್ತ ಮತದ ಹಿರಿಮೆ ಗರಿಮೆಯನ್ನು ಎತ್ತಿ ತೋರಿಸಿ ಅವರನ್ನೆಲ್ಲಾ ಕ್ರೈಸ್ತ ಮತಕ್ಕೆ ಪರಿವರ್ತಿಸಿ ಅವರನ್ನೆಲ್ಲಾ ಪಾಪ ಮುಕ್ತರನ್ನಾಗಿಸುವ ಹೊಣೆಗಾರಿಕೆ ನಮ್ಮ ಮೇಲಿರುವುದರಿಂದ ಇಂತಹ ವಿಶ್ವಧರ್ಮ ಸಮ್ಮೇಳನ ಅತ್ಯಗತ್ಯ ಎಂದು ವಾದಿಸಿ ಸಮ್ಮೇಳನದ ಆಯೋಜನೆ ಮಾಡಿದ್ದರು.

vivek2

ಇತ್ತ ಭಾರತದ ಕಲ್ಕತ್ತಾದಲ್ಲಿ ಹುಟ್ಟಿ ಬೆಳೆದ ನರೇಂದ್ರ ಎಂಬ ಯುವಕ ದೇವರನ್ನು ಕಾಣುವ ಹಂಬಲದಿಂದ ನಾನಾ ರೀತಿ ಪರಿಶ್ರಮ ಪಟ್ಟು ಕೊನೆಗೆ ಶ್ರೀ ರಾಮಕೃಷ್ಣ ಪರಮಹಂಸರಂತಹ ಗುರುಗಳ ಆಶ್ರಯಲ್ಲಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮೀ ವಿವೇಕಾನಂದ ಎಂಬ ಹೆಸರಿನಲ್ಲಿ ದೇಶವನ್ನು ಮತ್ತು ಧರ್ಮವನ್ನು ಅರಿಯಲು ಪರಿವ್ರಾಜಕರಾಗಿ ದೇಶಾದ್ಯಂತ ಪರ್ಯಟನೆ ಮಾಡುತ್ತಿರುವ ಸಂಧರ್ಭದಲ್ಲಿ ಅವರಿಗೆ ಖೇತ್ರಿ ಮಹಾರಾಜನ ಪರಿಚಯವಾಗುತ್ತದೆ. ಹೇಳಿ ಕೇಳಿ ಅಂದು ಬ್ರಿಟಿಶರು ದೇಶವನ್ನು ಆಳುತ್ತಿರುತ್ತಾರೆ. ನಮ್ಮ ಬಹುತೇಕ ರಾಜಮಹಾರಾಜರ ಬ್ರಿಟಿಷರ ಸಾಮಂತರಾಗಿ ಅವರ ಪ್ರಭಾವಕ್ಕೆ ಒಳಗಾಗಿರುಂತೆ ಖೇತ್ರಿ ರಾಜನೂ ಬ್ರಿಟಿಷರಂತೇ ನಮ್ಮ ಹಿಂದೂಗಳ ಮೂರ್ತಿ ಪೂಜೆಯ ಬಗ್ಗೆ ತುಸು ವಿರೋಧಿ ಧೋರಣೆ ಹೊಂದಿರುವುದು ಸ್ವಾಮೀಜಿಗಳ ಗಮನಕ್ಕೆ ಬಂದಿರುತ್ತದೆ. ಅದೊಂದು ದಿನ ರಾಜನ ಆಸ್ಥಾನದ ಸಭೆಯಲ್ಲಿ ಸ್ವಾಮೀಜಿಗಳು ಖೇತ್ರಿ ರಾಜನ ಮಂತ್ರಿಗೆ ರಾಜನ ಭಾವಚಿತ್ರವನ್ನು ತೋರಿಸಿ ಅದಕ್ಕೆ ಉಗಿಯಲು ಸೂಚಿಸುತ್ತಾರೆ. ಸ್ವಾಮೀಜಿಗಳ ಈ ಮಾತನ್ನು ಕೇಳಿ ಬೆಚ್ಚಿದ ಮಂತ್ರಿ , ರಾಜನ ಭಾವಚಿತ್ರಕ್ಕೆ ಉಗುಳಲು ಹಿಂಜರಿಯುವುದನ್ನು ಕಂಡ ಸ್ವಾಮೀಜಿ, ಅರೇ, ರಾಜ ನಮ್ಮ ಮುಂದಿದ್ದಾನೆ. ನೀನು ಉಗುಳುತ್ತಿರುವುದು ಕೇವಲ ಕಾಗದಕ್ಕೆ ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಉಗಳಬಹುದು ಎಂದು ಸೂಚಿಸುತ್ತಾರೆ. ಅದಕ್ಕೆ ಮಂತ್ರಿಗಳು ರಾಜಾ ಪ್ರತ್ಯಕ್ಷ ದೇವತಾ ಎನ್ನುವಂತೆ ನಾವು ಈ ಭಾವಚಿತ್ರದಲ್ಲೂ ರಾಜನನ್ನೇ ಕಾಣುವುದರಿಂದ ಅದಕ್ಕೆ ಅಷ್ಟೇ ಗೌರವ ಕೊಡುವುದರಿಂದ ಆ ಭಾವಚಿತ್ರಕ್ಕೆ ನನ್ನಿಂದ ಉಗುಳಲು ಸಾಧ್ಯವಿಲ್ಲ ದಯವಿಟ್ಟು ಮನ್ನಿಸಿ ಎಂದಾಗ, ಸ್ವಾಮೀಜಿಗಳು ಹಸನ್ಮುಖರಾಗಿ ರಾಜನತ್ತ ತಿರುಗಿ, ರಾಜಾ, ಇದೇ ಭಕ್ತಿ ಭಾವವನ್ನೇ ನಮ್ಮ ಹಿಂದೂಗಳು ದೇವಸ್ಥಾನದಲ್ಲಿರುವ ದೇವರ ಮೂರ್ತಿಯಲ್ಲಿ ಕಾಣುತ್ತಾರೆ. ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಸ್ಥಾಪಿಸಿದ ಕಲ್ಲಿನ ಮೂರ್ತಿ ಅದು ಕೇವಲ ಕಲ್ಲಾಗಿರದೆ ಭಗವಂತನ ಸ್ವರೂಪವಾಗಿ ಹೋಗುವುದರಿಂದ ಜನರು ಭಕ್ತಿಭಾವದಿಂದ ಪೂಜಿಸುತ್ತಾರೆ ಎಂದಾಗ ಆ ಖೇತ್ರಿ ಮಹಾರಾಜನಿಗೆ ಸ್ವಾಮೀಜಿಗಳ ಮೇಲಿನ ಭಕ್ತಿ ಹೆಚ್ಚಾಗಿ ಇಂತಹ ಪರಮ ಜ್ಞಾನಿಗಳೇ ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ನಮ್ಮ ಹಿಂದೂ ಧರ್ಮವನ್ನು ಪ್ರತಿಪಾಸಲು ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಆವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಕಳಿಹಿಸುವುದಕ್ಕೆ ಎಲ್ಲಾ ಏರ್ಪಾಟುಗಳನ್ನು ಮಾಡಲು ಅನುವಾಗುತ್ತಾನೆ. ಆದರೆ ಈದಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ವಾಮಿಗಳು ತಮ್ಮ ದೇಶ ಪರ್ಯಟನೆಯನ್ನು ಮುಂದುವರೆಸಿ ತಮ್ಮ ಅಯಸ್ಕಾಂತೀಯ ಆಕರ್ಷಣಾ ಶಕ್ತಿಯಿಂದ ಅಪಾರ ರಾಜ ಮಹಾರಾಜರುಗಳನ್ನು ಶಿಷ್ಯವೃಂದವನ್ನೂ ಸಂಪಾದಿಸುತ್ತಾರೆ. ಅವರಿಂದ ಪ್ರಭಾವಿತರಾದ ರಾಜಮಹಾರಾಜರುಗಳಲ್ಲಿ ನಮ್ಮ ಮೈಸೂರು ಒಡೆಯರು ಕೂಡ ಒಬ್ಬರು. ಅವರೂ ಕೂಡ ಸ್ವಾಮೀಜಿಗಳ ಬುದ್ದಿಮತ್ತೆಯನ್ನು ಕಂಡು ಪ್ರಭಾವಿತರಾಗಿ ಅವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಬಲವಂತ ಪಡಿಸಿ ಅದರ ಖರ್ಚುವೆಚ್ಚಗಳನ್ನು ಭರಿಸು ಮುಂದಾಗುತ್ತಾರೆ. ಅಂತೆಯೇ ಸ್ವಾಮಿಗಳು ತಮ್ಮ ಪ್ರವಾಸವನ್ನು ಮುಂದುವರಿಸಿ ಕನ್ಯಾಕುಮಾರಿಯನ್ನು ತಲುಪಿ ಅಲ್ಲಿ ಸಮುದ್ರವನ್ನು ಈಜಿ ತುತ್ತ ತುದಿಯ ಬಂಡೆಯ ಮೇಲೆ ಕುಳಿತು ತಪಸ್ಸನ್ನು ಮಾಡಿ ಜ್ನಾನೋದಯ ಪಡೆದು ಮುಂದೆ ಮದ್ರಾಸ್ ನಗರಕ್ಕೆ ಪ್ರಯಾಣಿಸಿ ಅಲ್ಲಿನ ಅನೇಕ ಶಿಷ್ಯಂದಿರ ಒತ್ತಾಯಕ್ಕೆ ಮಣಿದು ಅಮೇರಿಕಾದ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಒಪ್ಪಿ ಹಡಗನ್ನೇರಿ ಸುಮಾರು ಎರಡು ತಿಂಗಳಿನ ಸುಧೀರ್ಘ ಪ್ರಯಾಣದ ನಂತರ ಅಮೇರಿಕಾ ತಲುಪುತ್ತಾರೆ.

ವಿಶ್ವ ಧರ್ಮ ಸಮ್ಮೇಳನಕ್ಕೆ ಮೂರ್ನಾಲ್ಕು ತಿಂಗಳ ಮುಂಚೆಯೇ, ಅಪರಿಚಿತ ನಾಡಾದ ಅಮೇರಿಕದಲ್ಲಿ ಕಾಲಿಡುವ ಹೊತ್ತಿಗೇ, ಹಡಗಿನ ಪ್ರಯಾಣದ ಮಧ್ಯದಲ್ಲಿಯೇ ತಮ್ಮ ದಾಖಲೆಗಳನ್ನು ಕಳೆದುಕೊಂಡ ಸ್ವಾಮೀಜಿಗಳು ದುಬಾರಿ ಪ್ರದೇಶವಾದ ಚಿಕಾಗೋದಲ್ಲಿ ಇದ್ದ ಅಲ್ಪ ಸ್ವಲ್ಖ ಹಣವೂ ಖರ್ಚಾಗಿ ಹೋಗಿ ಮುಂದೇನೂ ಮಾಡುವುದು ಎಂದು ಯೋಚಿಸುತ್ತಿರುವಾಗ ಯಾರದ್ದೋ ಸಲಹೆಯ ಮೇರೆಗೆ ಅಂದಿಗೆ ಸಾಮಾನ್ಯ ನಗರವಾಗಿದ್ದ ಬೋಸ್ಟನ್ ನಗರಕ್ಕೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸ್ವಾಮೀಜಿಗಳ ತೇಜಸ್ಸಿಗೆ ಮಾರು ಹೋದ ಸಹ ಪ್ರಯಾಣಿಕಳೊಬ್ಬಳು ಸ್ವಾಮೀಜಿಗಳ ಜೊತೆ ಮಾತಿಗಿಳಿಯುತ್ತಾ, ಅವರ ಅಸಹನೀಯ ದಯಾನೀಯ ಪರಿಸ್ಥಿಗೆ ಮರುಕಗೊಂಡು ಅವಳ ಮನೆಯಲ್ಲಿಯೇ ಆಶ್ರಯ ನೀಡುತ್ತಾಳೆ. ತತ್ವಶಾಸ್ತ್ರದ ಪಂಡಿತೆಯಾಗಿದ್ದ ಆಕೆ ಮೊದಲೆರಡು ಮೂರು ದಿನಗಳಲ್ಲಿಯೇ ಸ್ವಾಮೀಜೀಗಳ ಪಾಂಡಿತ್ಯಕ್ಕೆ ಮಾರು ಹೋಗಿ ಆಕೆ ಅವರ ಪಾಂಡಿತ್ಯವನ್ನು ತನ್ನೆಲ್ಲಾ ಸ್ನೇಹಿತರಿಗೆ ಪರಿಚಯಿಸಲು ಪ್ರತೀ ದಿನ ಸಂಜೆ ತನ್ನ ಮನೆಯಲ್ಲಿ ಚಹಾ ಕೂಟವನ್ನೇರಿಪಡಿಸಿ ಅಲ್ಲಿ ಸ್ವಾಮೀಜಿಗಳ ಒಂದೆರಡು ಘಂಟೆಗಳ ಪ್ರವಚನ ನಡೆಯುತ್ತದೆ. ತನ್ನ ಪರಿಚಯಸ್ಧರ ಬಳಿ ಸ್ವಾಮೀಜಿಯವರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿರುವುದಾಗಿಯೂ, ಆದರೆ ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಕಳೆದುಕೊಂಡ ಕಾರಣ ಅವರಿಗೆ ತಮ್ಮ ಶಿಫಾರಸ್ಸು ಪತ್ರ ನೀಡಲು ಕೇಳಿಕೊಂಡಾಗ, ಅವರು ಸ್ವಾಮೀಜಿಯನ್ನು ಭೇಟಿ ಮಾಡಿ, ಅವರ ಪಾಂಡಿತ್ಯಕ್ಕೆ ಬೆರಗಾಗಿ ಇವರಿಗೆ ಶಿಫಾರಸ್ಸು ಪತ್ರ ನೀಡುವುದೆಂದರೆ ಪ್ರಖರ ಸೂರ್ಯನ ಬೆಳಕಿಗೆ ಪ್ರಮಾಣ ಪತ್ರ ನೀಡಿದಂತೆ ಎಂದು ಉಧ್ಘರಿಸಿ, ಸಮ್ಮೇಳನದ ಆಯೋಜಕರಿಗೆ ಬರೆದ ಪತ್ರದಲ್ಲಿ ಇಡೀ ಅಮೇರಿಕಾದಲ್ಲಿರುವ ಎಲ್ಲಾ ಧರ್ಮಗುರುಗಳ ಪ್ರಾವೀಣ್ಯತೆಯನ್ನೂ ಮತ್ತು ಈ ಸ್ವಾಮಿಗಳ ಪ್ರಾವೀಣ್ಯತೆಯನ್ನು ತಕ್ಕಡಿಗೆ ಹಾಕಿದಲ್ಲಿ ನಿಶ್ಚಿತವಾಗಿಯೂ ಈ ಸ್ವಾಮಿಗಳದ್ದೇ ಹೆಚ್ಚಿನ ತೂಕವಿರುವ ಕಾರಣ ಇಂತಹವರಿಗೆ ಖಂಡಿತವಾಗಿಯೂ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ನೀಡದಿದ್ದಲ್ಲಿ ನಮಗೇ ನಷ್ಟ ಎಂದು ಕೇವಲ ಎರಡು ಮೂರು ದಿನಗಳು ಅವರೂಡನೆ ವ್ಯವಹರಿಸಿದ ಪಾಶ್ಚಿಮಾತ್ಯ ವಿದ್ವಾಂಸರೊಬ್ಬರು ಬರೆದು ಕೊಡುತ್ತಾರೆಂದರೆ ಹೇಗಿರಬಹುದು ನಮ್ಮ ಸ್ವಾಮೀಜಿಯವರ ಪ್ರಾವೀಣ್ಯತೆ.

vivek3

ನಂತರದ ದಿನಗಳಲ್ಲಿ ಈ ಪತ್ರವನ್ನೂ ಕಳೆದುಕೊಂಡ ಸ್ವಾಮಿಗಳು ಮತ್ತೊಬ್ಬರ ಸಹಾಯದ ಮೂಲಕ ಹಾಗೂ ಹೀಗೂ ಮಾಡಿಕೊಂಡು ಸೆಪ್ಟೆಂಬರ್ 11ರ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಪ್ರತಿಪಾದಕರಾಗಿ ವೇದಿಕೆಯನ್ನೇರುತ್ತಾರೆ. ಆಗಷ್ಟೇ ಸುಮಾರು ಮೂವತ್ತು ವರ್ಷ ಪ್ರಾಯದ ತರುಣ ಸ್ವಾಮೀ ವಿವೇಕಾನಂದರು ಸಮ್ಮೇಳನದಲ್ಲಿ ನೆರೆದಿದ್ದ ಭಾರೀ ಜನಸ್ತೋಮವನ್ನು ನೋಡಿ ನಿಬ್ಬೆರಗಾಗಿದ್ದಂತೂ ಸುಳ್ಳಲ್ಲ. ಅದಕ್ಕಿಂತ ಮುಂಚೆ ಅವರೆಂದೂ ಅಷ್ಟೋಂದು ಜನರೆದರು ಮಾತನಾಡಿಯೇ ಇರಲಿಲ್ಲ. ಅವರ ಪ್ರವಚನಗಳೇನಿದ್ದರೂ ಐವತ್ತು ಅರವತ್ತು ಜನರ ನಡುವೆಯೇ ನಡೆಯುತ್ತಿತ್ತಾದ್ದರಿಂದ ಮೊದಲ ಕೆಲವು ಗಂಟೆಗಳು ಭಾಷಣ ಮಾಡಲು ಹಿಂಜರಿದು, ಆಯೋಜಕರು ಪ್ರತೀ ಬಾರಿ ಮುಂದಿನ ಭಾಷಣ ನಿಮ್ಮದೇ ಎಂದಾಗಲೂ ಈಗ ಬೇಡ ನಂತರ ಮಾತನಾಡುತ್ತೇನೆ ಎಂದು ಮುಂದೂಡುತ್ತಾ, ವಿಧಿ ಇಲ್ಲದೆ ದಿನದ ಕಟ್ಟ ಕಡೆಯ ಭಾಷಣಕಾರರಾಗಿ ಧ್ವನಿವರ್ಧಕದ ಮುಂದೆ ಬಂದು ನಿಲ್ಲುತ್ತಾರೆ. ಇಡೀ ದಿನ ಹಲವಾರು ಧರ್ಮ ಪ್ರಚಾರಕರ ಭಾಷಣಗಳಿಂದ ಆಗಲೇ ಬೇಸರಿಗೊಂಡಿದ ಸಭಿಕರಲ್ಲನೇಕರು ಈ ಸ್ವಾಮಿ ಏನು ಮಾತಾನಾಡುತ್ತಾನೆ ಎಂದು ತಿಳಿದು ತಮ್ಮ ತಮ್ಮ ಜಾಗದಿಂದ ಹೊರನಡೆಯಲು ಸಿಧ್ಧರಾಗುತ್ತಿದ್ದಂತೆಯೇ, ತಮ್ಮ ಗಂಟಲನ್ನು ಸರಿ ಮಾಡಿಕೊಂಡು, ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನೂ, ತಾಯಿ ಭಾರತಿಯನ್ನು ಮನದಲ್ಲಿಯೇ ವಂದಿಸಿ, ಅಮೇರಿಕಾದ ನನ್ನ ನೆಚ್ಚಿನ ಸಹೋದರಿ, ಸಹೋದರರೇ ( Sisters & Brothers of America) ಭಾಷಣ ಆರಂಭಿಸುತ್ತಿದ್ದಂತೆಯೇ, ಆ ಒಂದು ವಾಕ್ಯ ಕೇಳಿದೊಡನೆಯೇ ಇಡೀ ಸಮ್ಮೇಳದಲ್ಲಿ ಒಂದು ರೀತಿಯ ವಿದ್ಯುತ್ ಸಂಚಲನಗೊಂಡು ಇಡೀ ಜನಸ್ತೋಮ ತಮಗರಿವಿಲ್ಲದಂತೆಯೇ ಕರತಾಡನ ಮಾಡಲು ಶುರು ಮಾಡಿ ಅದು ಸುಮಾರು ಎರಡು ನಿಮಿಷಕ್ಕೂ ಅಧಿಕಕಾಲ ಇಡೀ ಸಭಾಂಗಣದಲ್ಲಿ ಮಾರ್ಧನಿಸುತ್ತದೆ. ಸಭಾಂಗಣದ ಹೊರಗಿನವರೆಗೂ ಗಡಚಿಕ್ಕುವ ಆ ಚಪ್ಪಾಳೆಯ ಸದ್ದನ್ನು ಕೇಳಿ, ಈಗಾಗಲೇ ಸಭೆಯಿಂದ ಹೊರನಡೆದವರೂ ಸಹಾ ಲಘು ಬಗೆಯಿಂದ ಸಭಾಗಂಣದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಕುತೂಹಲದಿಂದ ಒಳಗೆ ಬಂದರೆ ಇಡೀ ಸಭಾಂಗಣದಲ್ಲಿ ನಿಲ್ಲಲೂ ಸಾಧ್ಯವಾಗದಷ್ಟು ಜನರಿಂದ ಕಿಕ್ಕಿರಿದು ತುಂಬಿಹೋಗುತ್ತದೆ. ಚಪ್ಪಾಳೆ ಸದ್ದೇಲ್ಲ ನಿಂತು ನಿಶ್ಯಬ್ಧವಾದಾಗ ತಮ್ಮ ಭಾಷಣ ಮುಂದುವರಿಸಿದ ಸ್ವಾಮೀಜಿಗಳು ನಿರರ್ಗಳವಾಗಿ ಸನಾತನ ಹಿಂದೂಧರ್ಮ ಮತ್ತು ನಮ್ಮ ಧರ್ಮನಿರಪೇಕ್ಷತೆ, ನಮ್ಮ ಜನರ ಇತಿಹಾಸವನ್ನೆಲ್ಲಾ ಎಳೆ ಎಳೆಯಾಗಿ ಎಲ್ಲರ ಮುಂದೆಯೂ ಬಿಚ್ಚಿಟ್ಟು ತಮ್ಮ ಭಾಷಣ ಮುಗಿಸಿದಾಗ ನೆರೆದಿದ್ದ ಸಭಿಕರಿಗೆಲ್ಲಾ ರೋಮಾಂಚನವಾಗಿದ್ದಂತೂ ಸುಳ್ಳಲ್ಲ.

ಸೆಪ್ಟೆಂಬರ್ 12ರಂದು ಅಮೇರಿಕಾದ ಬಹುತೇಕ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೂ ವಿವೇಕಾನಂದರು ಮತ್ತು ಅವರ ದಿಕ್ಸೂಚಿ ಭಾಷಣಕ್ಕೇ ಮೀಸಲಾಗಿಟ್ಟಿದ್ದವು. ಭಾರತ ಎಂದರೆ ಅನಾಗರೀಕ ದೇಶ, ಅದು ಹಾವಾಡಿಗರ, ಕರಡಿ ಮತ್ತು ಕೋತಿ ಕುಣಿಸುವ ದೇಶ. ಅಂತಹ ದೇಶವನ್ನು ಉದ್ಧಾರ ಮಾಡಲು ನಾವಲ್ಲಿಗೆ ಹೋಗಲೇ ಬೇಕು ಎಂದು ಎಲ್ಲರಿಂದಲೂ ಪ್ರತೀ ತಿಂಗಳು ದೇಣಿಗೆ ಸಂಗ್ರಹಿಸುತ್ತಿದ್ದ ಕ್ರೈಸ್ತ ಮಿಷನಿರಿಗಳಿಗೆ ಈ ಭಾಷಣ ಮರ್ಮಾಘಾತವನ್ನುಂಟು ಮಾಡಿದೆ. ಭಾರತದಂತಹ ದೇಶದಿಂದ ಬಂದ ಒಬ್ಬ ಸನ್ಯಾಸಿಗೇ ಇಷ್ಟೋಂದು ಪಾಂಡಿತ್ಯವಿರಬೇಕಾದರೆ ಇಂತಹ ಸಾವಿರಾರು ಪಂಡಿತರನ್ನು ಹೊಂದಿ ಭೌಧ್ಧಿಕವಾಗಿ ಸುಭಿಕ್ಷವಾಗಿರಲೇ ಬೇಕು ಎಂದು ಬರೆದಿದ್ದವು. ಅಂದಿನಿಂದ ಸಮ್ಮೇಳನದಲ್ಲಿ ಪ್ರತಿದಿನ ವಿವೇಕಾನಂದರನ್ನು ನೋಡಲು ಮತ್ತು ಅವರ ಮಾತನ್ನು ಕೇಳಲು ಜನರ ನೂಕು ನುಗ್ಗಲನ್ನು ಮನಗಂಡ ಸಮ್ಮೇಳನದ ಆಯೋಜಕರು ಪ್ರತಿದಿನ ಸಂಜೆ ವಿವೇಕಾನಂದರ ಭಾಷವನ್ನು ಏರ್ಪಾಡು ಮಾಡುತ್ತಾರೆ. ಕೇವಲ ಸ್ವಾಮೀಜೀಗಳ ಮಾತನ್ನು ಕೇಳುವ ಸಲುವಾಗಿಯೇ ಇಡೀ ದಿನ ಇತರರ ಭಾಷಣಗಳನ್ನು ಸಹಿಸಿಕೊಂಡು ದಿನದ ಅಂತ್ಯದಲ್ಲಿ ಸ್ವಾಮೀಜೀಯವರ ಪ್ರೇರಣಾತ್ಮಕ ಭಾಷವನ್ನಾಲಿಸಿ ಕೃತಾರ್ಥರಗುತ್ತಿದ್ದದ್ದು ಅನೇಕ ಕ್ರೈಸ್ತ ಧರ್ಮಗುರುಗಳಿಗೆ ಸ್ವಾಮೀಜಿಗಳ ಮೇಲೆ ಕೋಪವನ್ನು ತರಿಸಿದ್ದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಯಾವುದೇ ಹೆಚ್ಚಿನ ಅಪೇಕ್ಷೆ ಇಲ್ಲದೇ ಎಲ್ಲರಿಂದಲೂ ತಾತ್ಸಾರಕ್ಕೊಳಗಾಗಿದ್ದ ಸ್ವಾಮೀ ವಿವೇಕಾಂದರು ವಿಶ್ವಧರ್ಮ ಸಮ್ಮೇಳನದ ತಮ್ಮ ಸಾಲು ಸಾಲು ಭಾಷಣಗಳಿಂದ Man of the series ಆಗಿ ಹೋಗುತ್ತಾರೆ ಎನ್ನುವುದಂತೂ ಅಕ್ಷರಶಃ ಸತ್ಯ.

ಈ ದಿಕ್ಸೂಚಿ ಭಾಷಣದ ನಂತರದ ನಾಲ್ಕು ವರ್ಷಗಳು ಸ್ವಾಮೀಜಿಯವರು ಬಿಡುವಿಲ್ಲದಂತೆ ಅಮೇರಿಕಾ ಮತ್ತು ಯೂರೋಪಿನ ನಾನಾ ಪ್ರದೇಶಗಳಿಗೆ ಪ್ರವಾಸ ಮಾಡಿ ತಮ್ಮ ಅನುಯಾಯಿಗಳ ಪಡೆಯನ್ನು ಹೆಚ್ಚಿಸಿಕೊಳ್ಳುತ್ತಾ, ಹಿಂದೂ ಧರ್ಮದ ಬಗ್ಗೆಯೂ ಮತ್ತು ಭಾರತ ಬಗ್ಗೆ ಇದ್ದ ಎಲ್ಲಾ ಅಪನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿರುವಾಗಲೇ, ಸ್ವಾಮಿಗಳ ಮೇಲೆ ಕ್ರೈಸ್ತ ಮಿಷನರಿಗಳು ಇಲ್ಲ ಸಲ್ಲದ ಆರೋಪಗಗಳನ್ನು ಮಾಡುತ್ತಾ ಸ್ವಾಮಿಜಿಯವರ ಮಾನ ಹಾನಿ ಮಾಡಲು ಪ್ರಯತ್ನಿಸಿದರೂ ಅದು ನದಿ ನೀರಿನಲ್ಲಿ ಹುಣಸೇಹಣ್ಣು ತೊಳೆದಂತೆ ಕೊಚ್ಚಿಕೊಂಡು ಹೋಗುತ್ತವೆ.

vivek1

ಈ ವೇಳೆಗಾಗಲೇ ವಿದೇಶದಲ್ಲಿ ನಮ್ಮ ದೇಶದ ಮತ್ತು ಧರ್ಮದ ಕೀರ್ತಿಪತಾಕೆಯನ್ನೇರಿಸಿದ ಸ್ವಾಮೀಜಿಯವರ ಪ್ರತಾಪ ಭಾರತಾದ್ಯಂತ ಹಳ್ಳಿ ಹಳ್ಳಿಗಳಲ್ಲಿಯೂ ಜನರಿಂದ ಜನರಿಗೆ ಕಾಳ್ಗಿಚ್ಚಿನಂತೆ ಹಬ್ಬಿ ಎಲ್ಲರಿಗೂ ಸ್ವಾಮೀಜೀಯವನ್ನು ಕಾಣುವ ಕುತೂಹಲ ಮೂಡಿರುತ್ತದೆ. ಇನ್ನೂ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ದೇಶ ಭಕ್ತರಿಗಂತೂ ವಿದೇಶದ ನೆಲದ ಮೇಲೆಯೇ ನಿಂತು ಅವರನ್ನೇ ನೇರವಾಗಿ ಪ್ರಶ್ನಿಸುತ್ತಿದ್ದ, ಅವರ ತಪ್ಪುಗಳನ್ನು ಎತ್ತಿತೋರುವ ದಿಟ್ಟ ತನವನ್ನು ತೋರುತ್ತಿದ್ದ ಸ್ವಾಮಿ ವಿವೇಕಾನಂದರು ಸ್ಪೂರ್ತಿದಾಯಕರಾಗುತ್ತಾರೆ. ಸುಭಾಸ್ ಚಂದ್ರ ಬೋಸ್, ಗಾಂಧೀಜೀ, ರವೀಂದ್ರನಾಥ್ ಟಾಗೂರರಂತಹ ಮಹಾನ್ ನಾಯಕರುವಳು ಸ್ವಾಮೀಜಿಯವರಿಂದ ಪ್ರೇರಿತರಾಗಿದ್ದಂತೂ ಸತ್ಯ ಸಂಗತಿ.

ಅಮೇರಿಕಾದಿಂದ ಶ್ರೀಲಂಕಾದ ಮೂಲಕ ಭಾರತಕ್ಕೆ ಮರಳುವಾಗ, ಸ್ವಾಮೀಜಿಯವರನ್ನು ಕಾಣಲು ಅಲ್ಲಿನ ಗಣ್ಯಾತಿ ಗಣ್ಯರೇ ಕಾಯುತ್ತಾ ನಿಂತಿರುವಾಗ, ಹಡಗಿನಿಂದ ಇಳಿದ ಕೂಡಲೇ ಸ್ವಾಮೀಜಿಯವರು ಮರಳನ್ನು ತಮ್ಮ ಮೇಲೆ ಸುರಿದುಕೊಳ್ಳುತ್ತಿದ್ದದ್ದನ್ನು ನೋಡಿ ಎಲ್ಲರೂ ಆಶ್ವರ್ಯಚಕಿತರಾಗುತ್ತಾರೆ. ಸ್ವಲ್ಪ ಸಮಯದನಂತರ ಸಾವರಿಸಿಕೊಂಡು ಕಳೆದ ನಾಲ್ಕೈದು ವರ್ಷಗಳಿಂದ ಭೋಗ ಭೂಮಿಯಲ್ಲಿದ್ದ ನನ್ನ ದೇಹ ಅಪವಿತ್ರಗೊಂಡಿದೆ. ಈಗ ಅದನ್ನು ತ್ಯಾಗಭೂಮಿಯ ಮಣ್ಣಿನಿಂದ ಶುಚಿಗೊಳ್ಳಿಸುತ್ತಿದ್ದೇನೆ ಎಂದಾಗ ಎಲ್ಲರಿಗೂ ಸ್ವಾಮೀಜಿಯವರ ದೇಶಪ್ರೇಮದ ಅರಿವಾಗಿ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಮಂದೆ ನಾಲ್ಕೈದು ವರ್ಷಗಳು ದೇಶಾದ್ಯಂತ ಪರ್ಯಟನ ಮಾಡಿ ಎಲ್ಲರಿಗೂ ಮಾರ್ಗದರ್ಶನ ಮಾಡಿ ತಮ್ಮ ಮೂವತ್ತೊಂಬತ್ತರ ವಯಸ್ಸಿನಲ್ಲಿ ಜುಲೈ 4, 1902 ರಂದು ನಾನಾ ರೀತಿಯ ಖಾಯಿಲೆಗಳಿಂದ ಜರ್ಜರಿತವಾಗಿದ್ದ ದೇಹದಿಂದ ಮುಕ್ತಿಹೊಂದುತ್ತಾರೆ. ಹಾಗೆ ಮುಕ್ತಿ ಹೊಂದುವ ಮೊದಲು ತಮ್ಮ ಶಿಷ್ಯರೊಂದಿಗೆ ಮಾತನಾಡುತ್ತಾ ಸರಿಯಾದ ಆಹಾರವಿಲ್ಲದೆ, ಸರಿಯಾದ ಪಥ್ಯವಿಲ್ಲದೆ, ದೇಶ ವಿದೇಶಗಳ ವಿವಿಧ ಹವಾಮಾನಗಳಲ್ಲಿ ಸುತ್ತಿದ ಪರಿಣಾಮವಾಗಿ ಈ ದೇಹ ಕೃಶವಾರಿರುವ ಪರಿಣಾಮವಾಗಿ ಈ ದೇಹವನ್ನು ತ್ಯಜಿಸಲೇ ಬೇಕಾಗಿದ್ದರೂ ನನ್ನ ಚಿಂತನೆಗಳ ಮೂಲಕ ಇನ್ನೂ ಸಾವಿರ ವರ್ಷಗಳು ನಿಮ್ಮೊಂದಿಗೇ ಇರುತ್ತೇನೆ ಎಂದು ಹೇಳಿದ್ದದ್ದು ಇಂದಿಗೂ ಪ್ರಸ್ತುತವಾಗಿದೆ.

ಇಂದಿನ ಯುವಜನತೆ ಆಧುನಿಕತೆ ಎಂಬ ಹೆಸರಿನಲ್ಲಿ ಪಾಶ್ವಾತ್ಯ ಸಂಸ್ಕೃತಿಯನ್ನು , ಸಿನಿಮಾ ನಾಯಕರಗಳು, ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ಮತ್ತು ಅಪ್ರಬುಧ್ಧ ರಾಜಕೀಯ ನಾಯಕರುಗಳನ್ನು ತಮ್ಮ ನಾಯಕರುಗಳು ಎಂದು ನಂಬಿ ಅವರನ್ನೇ ಅಂಧಾನುಕರಣೆ ಮಾಡುತ್ತಾ ದಿಕ್ಕು ತಪ್ಪುತ್ತಿರುವ ಸಮದಲ್ಲಿ ನರೇಂದ್ರರ ಚಿಂತನೆಗಳು ಇಂದಿಗೂ ಅತ್ಯಾವಶ್ಯಕ ಅನಿಸುತ್ತಿದೆಯಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ