ಖ್ಯಾತ ಕಾದಂಬರಿಕಾರ ತರಾಸು

tarasu2.jpgಕನ್ನಡ ಚಿತ್ರರಂಗದ ದಿಗ್ಗಜರುಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತು ಅನಂತ್ ನಾಗ್ ಈ ಎಲ್ಲಾ ನಟರುಗಳ ನಡುವೆ ಒಂದು ಸಾಮ್ಯವಾದ ಅಂಶವಿದೆ ಎಂದರೆ ಅಶ್ವರ್ಯವಾಗುತ್ತದೆಯಲ್ಲವೇ? ಹೌದು ಎಲ್ಲಾ ನಟರುಗಳ ಹೆಮ್ಮೆಯ ಚಿತ್ರಗಳು ಇಲ್ಲವೇ ಅವರ ಮೊದಲ ಚಿತ್ರದ ಕಥೆಗಳು ಒಬ್ಬನೇ ಮಹಾನ್ ಲೇಖಕನ ಕಾದಂಬರಿಯನ್ನು ಆಧರಿದ್ದಾಗಿದೆ. ಹಾಗಾದರೇ ಆ ಮಹಾನ್ ಲೇಖಕರು ಯಾರು ಎಂದರೆ, ಅವರೇ, ನಮ್ಮೆಲ್ಲರ ಹೆಮ್ಮೆಯ ಲೇಖಕ ಶ್ರೀ ತಳುಕು ರಾಮಸ್ವಾಮಯ್ಯ ಸುಬ್ಬರಾಯ. ಎಲ್ಲರೂ ಅವರನ್ನು ಪ್ರೀತಿಯಿಂದ ತರಾಸು ಎಂದೇ ಕರೆಯುತ್ತಿದ್ದರು.

21 ಏಪ್ರಿಲ್ 1920 ರಂದು ಅಂದಿನ ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರು ಎಂಬ ಗ್ರಾಮದಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು ಶ್ರೀ ಸುಬ್ಬರಾಯರು. ಅವರ ಹಿರೀಕರು ಮೂಲತಃ ಆಂಧ್ರದಿಂದ ಕರ್ನಾಟಕಕ್ಕೆ ಬಂದವರಾದ್ದರಿಂದ ಮನೆಯ ಆಡು ಭಾಷೆ ತೆಲುಗು. ಆದರೆ ಕಲಿತದ್ದು ಮತ್ತು ಬರೆದದ್ದು ಎಲ್ಲವೂ ಕನ್ನಡವೇ. ಓದಿನಲ್ಲಿ ಎಷ್ಟು ಚುರುಕೋ ಹಾಗೆಯೇ ತುಂಟತನದಲ್ಲಿಯೂ ಒಂದು ಕೈ ಹೆಚ್ಚೇ ಎಂದರೂ ತಪ್ಪಾಗಲಾರದು. ಬಹುಶಃ ಮುಂದೇ ಸುಬ್ಬರಾಯರೇ ಬರೆದ, ಪುಟ್ಟಣ್ಣನವರು ನಿರ್ದೇಶಿಸಿದ ನಾಗರಹಾವು ಚಿತ್ರದ ವಿಷ್ಣುವರ್ಧನ್ ಅವರ ರಾಮಾಚಾರಿ ಪಾತ್ರ ಸುಬ್ಬರಾಯರ ಬಾಲ್ಯದ ತುಂಟತನ, ಹುಂಬತನ ಮತ್ತು ಛಲವಂತಿಕೆಯ ತದ್ರೂಪು ಎಂದರೂ ಅತಿಶಯೋಕ್ತಿಯೇನಲ್ಲ. ಅಂದೆಲ್ಲಾ ದೇಶಾದ್ಯಂತ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹಬ್ಬಿತ್ತು. ಗಾಂಧಿಯವರ ಸ್ವಾತಂತ್ರ ಚಳುವಳಿಯಿಂದ ಪ್ರೇರಿತರಾಗಿ ಲಕ್ಷಾಂತರ ಯುವಕರುಗಳು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುತ್ತಿದ್ದರು. ಅದಕ್ಕೆ ನಮ್ಮ ಸುಬ್ಬರಾಯರೂ ಹೊರತಾಗಿರಲಿಲ್ಲ. ತಮ್ಮ ಇಂಟರ್ ಮುಗಿಯುತ್ತಿದ್ದಂತೆಯೇ ಓದಿಗೆ ಸಲಾಂ ಹೇಳಿ, ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಸ್ವಪ್ರೇರಣೆಯಿಂದ ಧುಮುಕುತ್ತಾರೆ.

ಈ ಹೋರಾಟದ ಕಿಚ್ಚು ನಂತರ ನಾನಾ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣದತ್ತ ತಿರುಗಿ ಏಕೀಕರಣದ ಪಿತಾಮಹಾ ಆಲೂರು ವೆಂಕಟರಾಯರು, ತಮ್ಮ ಗುರುಗಳಾದ ಅ.ನ.ಕೃಷ್ಣರಾಯರು, ಕನ್ನಡದ ಹೋರಾಟಗಾರರಾಗಿದ್ದ ಮ.ರಾಮಮೂರ್ತಿಗಳ ಜೊತೆಗೂಡಿ ರಾಜ್ಯಾದ್ಯಂತ ಸುತ್ತಾಡಿ ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆ ಮತ್ತು ಕನ್ನಡಿಗರ ಒಗ್ಗೂಡಿಗೆಯ ಬಗ್ಗೆ ಜಾಗೃತಿ ಮೂಡಿಸಲು ಬಹಳಷ್ಟು ಶ್ರಮವಹಿಸುತ್ತಾರೆ.

ಇವೆಲ್ಲದರ ಮಧ್ಯೆಯೇ ತಮ್ಮ ಸಂಬಂಧಿಗಳೇ ಆಗಿದ್ದ ಅಂಬುಜ ಅವರನ್ನು ವರಿಸಿ ನಾಗಪ್ರಸಾದ್, ಪೂರ್ಣಿಮಾ ಮತ್ತು ಪ್ರದೀಪ ಎಂಬ ಮುದ್ದಾದ ಮೂರು ಮೂವರು ಮಕ್ಕಳ ತಂದೆಯೂ ಆಗುತ್ತಾರೆ. ತಮ್ಮ ಹೋರಾಟದ ನಡುವೆಯೂ ಮೈಸೂರಿನ ಯಾದವಗಿರಿಯಲ್ಲಿ ಗಿರಿಕನ್ಯಕಾ ಎಂಬ ಮನೆಯೊಂದನ್ನು ಕಟ್ಟಿಸಿ ಅಲ್ಲಿ ತಮ್ಮ ಸಂಸಾರವನ್ನಿರಿಸಿ ಯಥಾ ಪ್ರಕಾರ ಕನ್ನಡ ಪರ ಹೋರಾಟ, ಸಂಘಟನೆಗಳು ಮತ್ತು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಈ ರೀತಿಯ ಚಳುವಳಿಗಳು ಮತ್ತು ಜನರ ಪರ ಹೋರಾಟಗಳ ಮಧ್ಯೆಯೇ ಹಲವಾರು ಕಾದಂಬರಿಗಳನ್ನು ಬರೆಯುತ್ತಾರೆ. ಆರಂಭದಲ್ಲಿ ಅವರು ಹೆಚ್ಚಾಗಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರೆ ನಂತರದ ದಿನಗಳಲ್ಲಿ ಅನೇಕ ಸಾಮಾಜಿಕ ಕಳಕಳಿಯ ವಿಷಯದ ಕಾದಂಬರಿಗಳತ್ತ ಹರಿಸುತ್ತಾರೆ ತಮ್ಮ ಚಿತ್ತ. ಇನ್ನೂ ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕಥೆಗಳೇ ಇಲ್ಲಾ ಎನ್ನುವ ಕೊರಗು ಈಗ ಇರುವಂತೆ ಅಂದೆಯೂ ಇತ್ತು. ಅಂತಹ ಒಳ್ಳೆಯ ಕಥೆಗಳ ಬರದ ಸಮಯದಲ್ಲಿ ತರಾಸು ಅವರ ಕಾದಂಬರಿಗಳು ಬಹುತೇಕ ಚಿತ್ರ ನಿರ್ದೇಶಕರುಗಳಿಗೆ ಚಿನ್ನದ ಗಣಿಯಂತೆ ಕಂಡು ಅವರ ಬಹುತೇಕ ಕಾದಂಬರಿಗಳು ಚಲನಚಿತ್ರವಾಗಿ ನಿರ್ದೇಶಕರಿಗೆ, ಕಲಾವಿದರಿಗೆ ಮತ್ತು ನಿರ್ಮಾಪಕರಿಗೆ ಒಳ್ಳೆಯ ಹೆಸರು ಮತ್ತು ಹಣ ಗಳಿಸಿ ಕೊಟ್ಟಿತೇ ಹೊರತು ತರಾಸು ಅವರಿಗೆ ಅದರಿಂದ ಹೆಚ್ಚಿನ ಲಾಭ ಸಿಗಲಿಲ್ಲವಾದರೂ ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಸಾಹಿತ್ಯವನ್ನು ಕೊಟ್ಟಿರುವ ಹೆಗ್ಗಳಿಗೆ ತರಾಸು ಅವರದ್ದು ಎಂಬುದನ್ನು ಯಾರೂ ಅಲ್ಲಗಳಿಯಲು ಸಾಧ್ಯವಿಲ್ಲ.

ಚಂದವಳ್ಳಿಯ ತೋಟ, ಹಂಸಗೀತೆ, ನಾಗರಹಾವು, ಚಂದನದ ಗೊಂಬೆ, ಬೆಂಕಿಯ ಬಲೆ, ಗಾಳಿಮಾತು, ಬಿಡುಗಡೆಯ ಬೇಡಿ ಮಸಣದ ಹೂ, ಆಕಸ್ಮಿಕ ಉಫ್ ಹೀಗೆ ಒಂದೇ ಎರಡೇ, ಅವರು ಬರೆದ ಬಹುತೇಕ ಕಾದಂಬರಿಗಳು ಯಶಸ್ವಿಯಾದ ಚಲನಚಿತ್ರಗಳಾದವು.

tarasu2ಸಾಮಾನ್ಯಾವಾಗಿ ಬಹುತೇಕ ಖ್ಯಾತ ಸಾಹಿತಿಗಳು ಒಂದಲ್ಲಾ ಒಂದು ಚಟಗಳಿಗೆ ಬಲಿಯಾಗುವುದು ದೌಭ್ಯಾಗ್ಯವೇ ಸರಿ. ಅದೇ ರೀತಿ ತರಾಸು ಅವರಿಗೂ ಮಧ್ಯಪಾನ ಮತ್ತು ಸಿಗರೇಟಿಗೂ ಬಿಡಿಸಲಾಗದ ನಂಟಿತ್ತು . ತರಾಸು ಎಂದರೆ ಮೊದಲಿಗೆ ನಮ್ಮ ಕಣ್ಣ ಮುಂದೆ ಬರುವುದೇ ಅವರು ಸಿಗರೇಟ್ ಹಿಡಿದುಕೊಂಡಿರುವ ಚಿತ್ರವೇ ಎನ್ನುವುದು ವಿಪರ್ಯಾಸವೇ ಸರಿ. ಮೊದಲೇ ನರ ದೌರ್ಬಲ್ಯದಿಂದ ನರಳುತ್ತಿದ್ದ ಅವರಿಗೆ ಗುಂಡು ಮತ್ತು ಸಿಗರೇಟ್ ಸೇರಿಕೊಂಡು ತರಾಸು ಅವರನ್ನು ಇನ್ನಷ್ಟು ಹೈರಾಣಾಗಿಸಿತ್ತು. ಕುಡಿತದ ಚಟದಿಂದ ವಿಮುಕ್ತರಾಗಲೆಂದೇ ಮಲ್ಲಾಡಿಹಳ್ಳಿಯ ತಿರುಕ ಎಂದೇ ಖ್ಯಾತರಾಗಿದ್ದ ರಾಘವೇಂದ್ರ ಸ್ವಾಮಿಗಳ ಸೇವಾಶ್ರಮದಲ್ಲಿ ಚಿಕಿತ್ಸೆಗಾಗಿ ಸೇರಿಕೊಂಡಿದ್ದರು. ಚಿಕಿತ್ಸೆ ಪಾಡಿಗೆ ಚಿಕಿತ್ಸೆ ನಡೆದರೂ ತರಾಸು ಮಧ್ಯದ ವ್ಯಸನದಿಂದ ಹೊರಬರಲಾಗದೇ, ಆಶ್ರಮದಿಂದಲೇ ಹೊರಬಿದ್ದರು. . ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ನೆರೆದಿದ್ದ ಸಾವಿರಾರು ಜನಸಂದಣಿಯನ್ನು ವೇದಿಕೆ ಮೇಲಿಂದ ನೋಡಿದ ತರಾಸು ಮನಸ್ಸಂತೋಷವಾಗಿ ಅಲ್ಲಿಂದಲೇ ತಾವು ಚಿತ್ರದುರ್ಗದ ಕೊನೆಯ ರಾಜ ಮದಕರಿನಾಯಕನ ಕುರಿತಾಗಿ ಬರೆಯುವುದಾಗಿ ಘೋಷಿಸಿಯೇ ಬಿಟ್ಟರು.

ಈ ಮಾತನ್ನು ಕೇಳಿದ ಹಲವರು ಮೊದಲೇ ಆರೋಗ್ಯ ಸರಿ ಇಲ್ಲಾ. ಪೆಗ್ಗುಗಳಿಂದ ನಡುಗುತ್ತಿರುವ ಕೈಗಳಲ್ಲಿ ಪೆನ್ನು ನಿಲ್ಲ ಬಲ್ಲದೇ ?ಎಂದು ಅಣಕವಾಡಿದರೂ ಅವರೆಲ್ಲರೂ ಮುಟ್ಟಿ ನೋಡಿಕೊಳ್ಳುವಂತೆ ಕೆಲವೇ ಕೆಲವು ದಿನಗಳಲ್ಲಿ ಅವರ ತವರೂರಾದ ಚಿತ್ರದುರ್ಗದ ಮದಕರಿ ನಾಯಕನ ಕುರಿತು ದುರ್ಗಾಸ್ತಮಾನ ಎಂಬ ಐತಿಹಾಸಿಕ ಕಾದಂಬರಿಯನ್ನು ಬರದೇ ಬಿಟ್ಟರು. ಈ ಕೃತಿಗೆ ಮುಂದೆ 1985 ರಲ್ಲಿ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಒಲಿದು ಬಂದ್ದಿತ್ತು. ಇದೇ ಕಾದಂಬರಿಯನ್ನು ವಿಷ್ಣುವರ್ಧನ್ ಅವರ ನಾಯಕತ್ವದಲ್ಲಿ ಬೆಳ್ಳಿ ತೆರೆಗೆ ತರಲು ರಾಜೇಂದ್ರ ಸಿಂಗ್ ಬಾಬು ಅವರು ಪ್ರಯತ್ನಿಸಿದರಾದರೂ ಆ ಕನಸು ನನಸಾಗಿಯೇ ಉಳಿದು ಹೋದದ್ದು ವಿಷಾಧನೀಯವೇ ಸರಿ.

whatsapp-image-2019-11-03-at-5.59.38-pm.jpeg

ತರಾಸು ಅವರು ಬಳೆಸುತ್ತಿದ್ದ ಈ ಟೈಪ್‌ರೈಟರ್ ನನ್ನ ಸ್ನೇಹಿತ ಮೈಸೂರಿನ ಶ್ರೀ ವೆಂಕಟರಂಗ ಅವರ ತಂದೆಯವರು 1969 ರಲ್ಲಿ ತರಾಸು ಅವರಿಂದಲೇ ಖರೀದಿಸಿದ್ದು, ಅದು ಅವರ ಬೆಂಗಳೂರಿನ ಮನೆಯಲ್ಲಿ ಇಂದಿಗೂ ಅಚ್ಚು ಕಟ್ಟಾಗಿ ಉಪಯೋಗಿಸುವಂತಹ ಸುಸ್ಥಿತಿಯಲ್ಲಿದೆ.

ತಮ್ಮ ಜೀವಿತಾವಧಿಯಲ್ಲಿ 20 ಕಾದಂಬರಿಗಳು ಸೇರಿದಂತೆ ಒಟ್ಟು 68 ಕೃತಿಗಳನ್ನು ರಚಿಸಿದ್ದ ಸುಬ್ಬರಾಯರು 1984ರ ಏಪ್ರಿಲ್ ತಿಂಗಳಿನಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿ ನಗರದಲ್ಲಿರುವ ವರಲಕ್ಷ್ಮಿ ನರ್ಸಿಂಗ್ ಹೋಂ ಗೆ ಸೇರಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 10, 1984ರಂದು ನಮ್ಮನ್ನಗಲಿದರು. ಕಾಕತಾಳೀಯವೆಂಬಂತೆ ಏಪ್ರಿಲ್ ತಿಂಗಳಿನಲ್ಲಿಯೇ ಜನನ ಮತ್ತು ಮರಣ ಹೊಂದಿದ ಅಪರೂಪದ ವ್ಯಕ್ತಿ ತರಾಸು ಅವರು.

ಕನ್ನಡಡ ಖ್ಯಾತ ಸಾಹಿತಿ, ಕಾದಂಬರಿಕಾರ, ಚಳುವಳಿಗಾರ, ಪತ್ರಿಕೋದ್ಯಮಿ, ಚಲನಚಿತ್ರ ಗೀತೆಕಾರ ಹೀಗೆ ಬರೆದಂತೆ ಬದುಕಿದ, ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡಿದ್ದ ಶ್ರೀ ತಳುಕು ರಾಮಸ್ವಾಮಯ್ಯ ಸುಬ್ಬರಾಯರು (ತರಾಸು) ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?

 

 

ರಾಜರ್ಷಿ, ಜಿ. ವಿ. ಅಯ್ಯರ್

ಕನ್ನಡದ ಕಲಿಗಳು ಮಾಲಿಕೆಯಲ್ಲಿ ನೆನ್ನೆ ಕನ್ನಡದ ಮೇರು ನಟ ಬಾಲಕೃಷ್ಣ ಅವರ ಬಗ್ಗೆ ತಿಳಿದುಕೊಂಡಿದ್ದೆವು. ಇಂದು ಅವರ
ಜೊತೆ ಜೊತೆಯಲ್ಲಿಯೇ ಗುಬ್ಬಿ ನಾಟಕದ ಕಂಪನಿಯಲ್ಲಿದ್ದು ನಂತರ ರಾಧಾ ರಮಣ ಚಿತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಿ ಮುಂದೆ ದಿಗ್ಗಜರಾಗಿ ಬೆಳೆದ ಮತ್ತೊಬ್ಬ ಮಹಾನ್ ನಟ, ಚಿತ್ರಸಾಹಿತಿ, ಸಂಭಾಷಣೆಕಾರ, ಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ ಎಲ್ಲದಕ್ಕಿಂತಲೂ ಹೆಚ್ಚಾಗಿ ಜನಾನುರಾಗಿ, ಕನ್ನದ ಚಿತ್ರರಂಗದ ರಾಜರ್ಷಿ, ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹಾ ಎಂದರೂ ತಪ್ಪಾಗಲಾರದ ಶ್ರೀ ಗಣಗಪತಿ ವೆಂಕಟರಮಣ ಅಯ್ಯರ್ ಅರ್ಥಾತ್ ಜಿ.ವಿ.ಐಯ್ಯರ್ ಅವರ ಸಾಧನೆಗಳನ್ನು ಮೆಲುಕು ಹಾಕೋಣ.

1917ರ ಸೆಪ್ಟೆಂಬರ್ 3ರಂದು ನಂಜನಗೂಡಿನ ವೈದೀಕ ಮನತನದಲ್ಲಿ ಶ್ರೀ ಜಿ.ವಿ.ಅಯ್ಯರ್ ಅವರ ಜನನವಾಗುತ್ತದೆ. ಕೇವಲ ಎಂಟು ವರ್ಷದಲ್ಲಿರುವಾಗಲೇ ಬಣ್ಣದ ಗೀಳನ್ನು ಹಿಡಿದು ಮನೆ ಬಿಟ್ಟು ಹೋರಟಾಗ ಅವರಿಗೆ ಆಶ್ರಯ ನೀಡಿದ್ದು ಮತ್ತದೇ ಗುಬ್ಬಿ ವೀರಣ್ಣನವರ  ಕಂಪನಿಯೇ. ಬಾಲಣ್ಣನವರಂತೇ ಇವರು ಸಹಾ ಭಿತ್ತಿ ಪತ್ರ ಅಂಟಿಸುವುದು, ಕರ ಪತ್ರ ಹಂಚುವುದು, ಪ್ರಚಾರ ಮಾಡುವುದು, ಬೋರ್ಡ್ ಬರೆಯುವುದರ ಮೂಲಕವೇ ಅರಂಭವಾಗಿ ನಂತರ ಸಣ್ಣ ಪುಟ್ಟ ಪಾತ್ರಗಳ ನಂತರ, ನರಸಿಂಹ ರಾಜು, ಬಾಲಕೃಷ್ಣ ಅವರ ಜೊತೆಗೂಡಿದ ಜಿ.ವಿ. ಅಯ್ಯರ್ ಅತ್ಯುತ್ತಮ ಹಾಸ್ಯಕಲಾವಿದರ ಜೋಡಿಯಾದರು. ಅನಂತರ ಅವಕಾಶಗಳನ್ನರಸಿ ಪೂನಾಗೆ ಹೋಗಿ, ಅಲ್ಲಿ ಹೋಟೆಲ್ ಒಂದರಲ್ಲಿ ಮಾಣಿಯಾಗಿದ್ದುಕೊಂಡೇ ಚಲನಚಿತ್ರಗಳಲ್ಲಿ ಅವಕಾಶಗಳಿಗೆ ಪ್ರಯತ್ನಿಸಿದರಾದರೂ, ಅದು ಫಲಕಾರಿಯಾಗದೆ ಮತ್ತೆ ಕರ್ನಾಟಕಕ್ಕೆ ಹಿಂದಿರುಗಿ, ಕರ್ನಾಟಕ ನಾಟಕ ಸಭಾ ಕಂಪನಿಗೆ ಸೇರಿ ಬೇಡರ ಕಣ್ಣಪ್ಪ, ಭಾರತಲಕ್ಷ್ಮಿ, ಟಿಪ್ಪೂಸುಲ್ತಾನ್, ವಿಶ್ವಾಮಿತ್ರ, ಮುಂತಾದ ನಾಟಕಗಳಲ್ಲಿ ಅಭಿನಯಿಸುತ್ತಿರುವ ಸಮಯದಲ್ಲಿಯೇ ಎಂ.ವಿ.ರಾಜಮ್ಮನವರು ನಿರ್ಮಿಸಿದ ರಾಧಾರಮಣ ಚಿತ್ರದ ಮೂಲಕ ಬಾಲಕೃಷ್ಣ ಅವರ ಜೊತೆಯಲ್ಲಿಯೇ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

iyer1
ಮುಂದೆ 1954ರಲ್ಲಿ ಎಚ್ ಎಲ್ ಎನ್ ಸಿಂಹರ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ದಿಗ್ಗಜರಾದ ರಾಜ್’ಕುಮಾರ್ ಮತ್ತು ನರಸಿಂಹರಾಜು ಅವರ ಜೊತೆ ಜಿ.ವಿ.ಅಯ್ಯರ್ ಅವರಿಗೂ ಕೂಡಾ ಆ ಚಿತ್ರ ಖ್ಯಾತಿಯನ್ನು ತಂದು ಕೊಟ್ಟಿತು. ಆನಂತರ ಮೂವರೂ ಅನೇಕ ಚಿತ್ರಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸತೊಡಗಿದರೆ, ಅಯ್ಯರ್ ಅವರು ನಟನೆಯ ಜೊತೆಗೆ ಬರವಣಿಗೆಯಲ್ಲಿ ಕೈಯ್ಯಾಡಿಸತೊಡಗಿ ಹಲವಾರು ಜನಪ್ರಿಯ ಗೀತೆಗಳ ರಚನಕಾರರಾಗಿಯೂ ಮತ್ತು ಅತ್ಯುತ್ತಮ ಸಂಭಾಷಣೆಕಾರರಾಗಿಯೂ ಖ್ಯಾತಿ ಪಡೆಯತೊಡಗಿದರು.

iyer5ವಾಲ್ಮೀಕಿ ಚಿತ್ರದ ‘ಜಲಲ ಜಲಲ ಜಲ ಧಾರೆ’, ದಶಾವತಾರ ಚಿತ್ರದ ‘ಗೋದಾವರಿ ದೇವಿ ಮೌನವಾಗಿಹೆ ಏಕೆ’, ‘ವೈದೇಹಿ ಏನಾದಳು’, ಎಮ್ಮೆ ತಮ್ಮಣ್ಣ ಚಿತ್ರದ ‘ನೀನಾರಿಗಾದೆಯೋ ಎಲೆ ಮಾನವ’, ಕಿತ್ತೂರು ಚೆನ್ನಮ್ಮ ಚಿತ್ರದ ‘ಸನ್ನೆ ಏನೇನೋ ಮಾಡಿತು ಕಣ್ಣು’, ರಣಧೀರ ಕಠೀರವ ಚಿತ್ರದ ‘ಕರುನಾಡ ಕಣ್ಮಣಿಯೇ ಕಠೀರವ’, ರಾಜಶೇಖರ ಚಿತ್ರದ ‘ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ’, ಸಂಧ್ಯಾರಾಗದ ‘ನಂಬಿದೆ ನಿನ್ನ ನಾದ ದೇವತೆಯೇ’, ‘ಕನ್ನಡತಿ ತಾಯೆ ಬಾ’, ಕಣ್ತೆರೆದು ನೋಡು ಚಿತ್ರದ ‘ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ’, ಗಾಳಿಗೋಪುರ ಚಿತ್ರದ ‘ಗಾಳಿಗೋಪುರ ನಿನ್ನಾಶಾ ತೀರ ನಾಳೆ ಕಾಣುವ’, ‘ನನ್ಯಾಕೆ ನೀ ಹಾಗೇ ನೋಡುವೆ ಮಾತಾಡೇ ಬಾಯಿಲ್ಲವೇ’, ಪೋಸ್ಟ್ ಮಾಸ್ಟರ್ ಚಿತ್ರದ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ’, ತಾಯಿ ಕರುಳು ಚಿತ್ರದ ‘ಬಾ ತಾಯೆ ಭಾರತಿಯೇ ಭಾವ ಭಾಗೀರಥಿಯೇ’ ಮುಂತಾದ ಜನಪ್ರಿಯ ಗೀತೆಗಳೊಂದಿಗೆ ಸರಿ ಸುಮಾರು 850 ಅಧ್ಭುತ ಗೀತೆಗಳು ಅಯ್ಯರ್ ಅವರ ಲೇಖನಿಯಿಂದ ಮೂಡಿಬಂದವು.

ನಂತರ ಬರವಣಿಗೆಯಿಂದ ನಿಧಾನವಾಗಿ ನಿರ್ದೇಶನದತ್ತ ಗಮನ ಹರಿಸಿ ಭೂದಾನ ಚಿತ್ರವನ್ನು ನಿರ್ದೇಶಿಸಿದರು. ಅವರು ನಿರ್ದೇಶಿಸಿದ ಪ್ರಪ್ರಥಮ ಚಿತ್ರಕ್ಕೇ ರಾಷ್ಟ್ರಪ್ರಶಸ್ತಿ ಗಳಿಸಿದ ಹೆಗ್ಗಳಿಗೆ ಅವರದ್ದು. ಕನ್ನಡದ ಕಲಾವಿದರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಮುಂತಾದ ಹಿರಿಯ ಕಲಾವಿದರ ಜೊತೆಗೆಗೂಡಿ ಕನ್ನಡ ಕಲಾವಿದರ ತಂಡವನ್ನು ರಚಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಹಲವಾರು ನಾಟಕಗಳನ್ನು ಮಾಡಿ ನೂರಾರು ಕಲಾವಿದರುಗಳಿಗೆ ಆಶ್ರಯದಾತರಾಗಿದ್ದಲ್ಲದೇ, ಅದೇ ಗೆಳೆಯರೊಡನೆ ಸೇರಿ ಕೊಂಡು ರಣಧೀರ ಕಂಠೀರವ ಚಲನಚಿತ್ರದ ಸಹ ನಿರ್ಮಾಪಕರಾಗಿದ್ದಲ್ಲದೇ, ನಿರ್ದೇಶನವನ್ನೂ ಮಾಡಿದರು. ನಂತರ ಪೋಸ್ಟ್ ಮಾಸ್ಟರ್, ಕಿಲಾಡಿ ರಂಗ, ರಾಜಶೇಖರ, ಮೈಸೂರು ಟಾಂಗ, ಚೌಕದ ದೀಪ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ಮುಂದೆ ಬಿ.ವಿ.ಕಾರಂತ ಮತ್ತು ಗಿರೀಶ್ ಕಾರ್ನಾಡ್ ಜಂಟಿ ನಿರ್ದೇಶನದ ಎಸ್. ಎಲ್. ಭೈರಪ್ಪನವರ ಪ್ರಸಿದ್ಧ ಕಾದಂಬರಿ ವಂಶವೃಕ್ಸವನ್ನು ನಿರ್ಮಾಣ ಮಾಡಿದರು. ಆ ಚಿತ್ರವೂ ಕೂಡಾ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಜಿಕೊಂಡಿತು.

iyer3ಇದಾದ ನಂತರ ತರಾಸು ಅವರ ಕಾದಂಬರಿ ಆಧಾರಿತ. ಹಂಸಗೀತೆ ಎಂಬ ಸಂಗೀತಮಯ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ನಟ ಅನಂತನಾಗ್ ಅವರ ಜೊತೆ ಜೊತೆಯಲ್ಲಿ ಸಂಗಿತಗಾರ ಬಿ.ವಿ.ಕಾರಂತ, ಗಾಯಕರಾದ ಬಾಲಮುರಳಿಕೃಷ್ಣ, ಎಂ.ಎಲ್ ವಸಂತಕುಮಾರಿ, ಪಿ.ಲೀಲಾ, ಬಿ.ಕೆ.ಸುಮಿತ್ರ ಆವರಿಗೂ ಕೂಡಾ ರಾಷ್ಟ್ರಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟಿತು.

ವಂಶವೃಕ್ಷ ಮತ್ತು ಹಂಸಗೀತೆ ಗಳಂತಹ ಸೃಜನಶೀಲ ವಿಶಿಷ್ಟ ಕಲಾತ್ಮಕ ಚಿತ್ರಗಳನ್ನು ನಿರ್ದೇಶನ ಮಾಡಿ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದ ಮೇಲೆ ಮುಂದೆಂದೂ ವ್ಯಾಪಾರೀ ಚಿತ್ರಗಳತ್ತ ಹರಿಸಲಿಲ್ಲ ಅಯ್ಯರ್ ಅವರು ಚಿಕ್ಕಂದಿನಿಂದಲೂ ಮಹಾತ್ಮ ಗಾಂಧಿಯವರ ವಿಚಾರಧಾರೆಗಳಿಂದ ಬಹಳವಾಗಿ ಪ್ರೇರಿತರಾಗಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಯಾದಾಗ ಬಹಳವಾಗಿ ನೊಂದು ಅವರ ನೆನಪಿನಲ್ಲಿಯೇ ಅಯ್ಯುರ್ ಅವರು ಪಾದರಕ್ಷೆಗಳನ್ನು ಧರಿಸುವುದನ್ನು ನಿಲ್ಲಿಸಿದವರು, ಮುಂದೇ ಇಡೀ ಜೀವನ ಪರ್ಯಂತ ದೇಶ ವಿದೇಶ ಸುತ್ತಿದರೂ ಮತ್ತೆಂದೂ ಪಾದರಕ್ಷೆಗಳನ್ನು ಧರಿಸಲೇ ಇಲ್ಲ. ಅದೇ ರೀತಿ ಗಾಂಧಿಯವರು ಪ್ರತಿಪಾದಿಸಿದಂತೆ ಸದಾ ಖಾದಿಯ ಬಟ್ಟೆಗಳನ್ನೇ ಧರಿಸುತ್ತಿದ್ದದ್ದು ಮತ್ತೊಂದು ಗಮನಾರ್ಹ ಅಂಶ. ಈ ರೀತಿಯ ಪ್ರತಿಜ್ಞೆ ಮಾಡಿ ಅದನ್ನು ಕಡೆಯ ತನಕ ಪಾಲಿಸುವ ಮೂಲಕ ಕನ್ನಡ ಚಿತ್ರಗಳ ಭೀಷ್ಮರಾಗಿ ಬರಿಗಾಲು ನಿರ್ದೇಶಕ ಎಂದೇ ಹೆಸರಾದರು.

ಹಿಂದೂ ಧರ್ಮದ ಆಚಾರ್ಯತ್ರಯದಲ್ಲಿ ಅಗ್ರಗಣ್ಯರಾದ ಶ್ರೀ ಶಂಕರರ ಕುರಿತು 1983ರಲ್ಲಿ ಸಂಸ್ಕೃತ ಭಾಷೆಯಲ್ಲಿ ಅವರು ನಿರ್ದೇಶಿಸಿದ ಆದಿ ಶಂಕರಾಚಾರ್ಯ ಅವರ ನಿರ್ದೇಶನವನ್ನು ಉತ್ತುಂಗ ಸ್ಥಿತಿಗೆ ಏರಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದು ಕೊಟ್ಟಿತು ಇದರಿಂದ ಪ್ರೇರಿತರಾಗಿ, ಕನ್ನಡ ಭಾಷೆಯಲ್ಲಿ ಮಧ್ವಾಚಾರ್ಯ ಮತ್ತು ತಮಿಳು ಭಾಷೆಯಲ್ಲಿ ರಾಮಾನುಜಾಚಾರ್ಯ ಚಿತ್ರಗಳನ್ನು ನಿರ್ದೇಶಿಸಿ ಮತ್ತು ನಿರ್ಮಾಣ ಮಾಡಿದರೂ ಆರ್ಥಿಕವಾಗಿ ಕೈಹಿಡಿಯಲಿಲ್ಲವಾದರೂ ಅವರೆಂದೂ ಅದರಿಂದ ವಿಚಲಿತರಾಗದೇ ಸಮಾಜದ ಪರಿವರ್ತನೆಗೆ ಕಾರಣರಾದ ಆ ಮೂರು ಮಹಾನುಭಾವರನ್ನು ಜನರಿಗೆ ತಲುಪಿಸಿದ ಕೀರ್ತಿ ತಮ್ಮದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಮುಂದೆ ಭಗವದ್ಗೀತೆಯನ್ನೂ ತೆರೆಯ ಮೇಲೆ ತಂದು ಮತ್ತೆ ರಾಷ್ಟ್ರಪ್ರಶಸ್ತಿಯ ಜೊತೆಗೆ ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು, ನಂತರ ದೂರದರ್ಶನಕ್ಕಾಗಿ ನಾಟ್ಯ ರಾಣಿ ಶಾಂತಲ ಎಂಬ ಧಾರಾವಾಹಿಯನ್ನು ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ನಿರ್ದೇಶಿಸಿದರೆ, ಹೇಮಾಮಾಲಿನಿ, ಮಿಥುನ್ ಚಕ್ರವರ್ತಿ, ಸರ್ವದಮನ್ ಬ್ಯಾನರ್ಜಿಯಂತಹ ಹೆಸರಾಂತ ಕಲಾವಿದರೊಂದಿಗೆ ವಿವೇಕಾನಂದ, ಶ್ರೀಕೃಷ್ಣ ಲೀಲಾ ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ ಕೀರ್ತಿಗೆ ಭಾಜನರಾದರು.

ವಾಲ್ಮೀಕಿ ರಾಮಾಯಣವನ್ನು ತೆರೆಗೆ ತರಲು ನಿರ್ಧರಿಸಿ ರಾವಣನ ಪಾತ್ರಕ್ಕೆ ಹೆಸರಾಂತ ಕಲಾವಿದ ಸಂಜಯ ದತ್ ಅವರನ್ನು ಒಪ್ಪಿಸಲು ಮುಂಬೈಗೆ ತೆರಳಿದ್ದಾಗಲೇ ಡಿಸೆಂಬರ್ 21, 2003 ರಂದು ಮತ್ತೆಂದೂ ಹಿಂದಿರುಗಿ ಬಾರದ ಶಾಶ್ವತ ಲೋಕದತ್ತ ಪಯಣಿಸಿದರು.

ಹೀಗೆ ವೃತ್ತಿ ರಂಗಭೂಮಿಯಲ್ಲಿ ನಾನಾ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ನಂತರ ನಟರಾಗಿ, ಸಂಭಾಷಣಕಾರರಾಗಿ, ಗೀತ ರಚನೆಕಾರರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಇವೆಲ್ಲಕ್ಕೂ ಮಿಗಿಲಾಗಿ ಭಾರತೀಯ ಸಂಸ್ಕೃತಿಯನ್ನು ತಮ್ಮ ಸೃಜನಶೀಲ ಚಿತ್ರಗಳ ಮೂಲಕ ವಿಶ್ವಕ್ಕೆ ತೋರಿಸಿದ ಶ್ರೀ ಜಿ.ವಿ.ಅಯ್ಯರ್ ಹೆಮ್ಮೆಯ ಕನ್ನಡ ಕಲಿಗಳು ಎನ್ನುವುದೇ ಕನ್ನದಿಗರೆಲ್ಲರ ಹೆಗ್ಗಳಿಕೆ.

ಏನಂತೀರೀ?