ಪಾತಾಳ ಗರಡಿ

ಅದು ಎಪ್ಪತ್ತರ ದಶಕ. ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲ. ಆಗಿನ್ನೂ ಈಗಿನ ತರಹದಲ್ಲಿ ಮನೆ ಮನೆಗೂ ನಲ್ಲಿಗಳು ಇಲ್ಲದ ಕಾಲ. ನೀರಿಗಾಗಿ ಬಹುತೇಕ ಎಲ್ಲರ ಮನೆಗಳಲ್ಲಿಯೂ ಬಾವಿಯನ್ನೇ ಆಶ್ರಯಿಸುತ್ತಿದ್ದ ಕಾಲವದು. ನಮ್ಮ ತಂದೆಯವರು ಪ್ರತೀ ದಿನ ತಮ್ಮ ಕಛೇರಿಯಿಂದ ಬಂದ ತಕ್ಷಣ ಸ್ವಲ್ಪ ವಿರಾಮ ತೆಗೆದುಕೊಂಡು ಕತ್ತಲಾಗುವ ಮುನ್ನಾ ಬಾವಿಯಿಂದ ಸರಾಗವಾಗಿ ನೀರನ್ನು ಸೇದಿ ನಮ್ಮ ಮನೆಯ ಬಚ್ಚಲು ಮನೆಯಲ್ಲಿದ್ದ ಹಂಡೆ, ನೀರಿನ ತೊಟ್ಟಿಗಳು ಬಕೆಟ್ ಎಲ್ಲದಕ್ಕೂ ತುಂಬಿಸಿಡುತ್ತಿದ್ದದ್ದನ್ನು ನೋಡಿ ನಮಗೆ ಸೋಜಿಗವುಂಟಾಗುತ್ತಿತ್ತು. ಅದೊಮ್ಮೆ ಬಾವಿಯ ರಾಟೆಗೆ ಹಗ್ಗ ಹಾಕಿ ಅದಕ್ಕೆ ಬಿಂದಿಗೆ ಕಟ್ಟಿದ್ದನ್ನು ನೋಡಿ ನಮಗೂ ನೀರನ್ನು ಸೇದುವ ಆಸೆಯಾಗಿ ನಾನು ಮತ್ತು ನನ್ನ ತಂಗಿ ಭಾವಿಯತ್ತ ಓಡಿ, ಸರ ಸರನೆ ಭಾವಿಯೊಳಗೆ ಹಗ್ಗವನ್ನು ಬಿಟ್ಟು ಹತ್ತಾರು ಬಾರಿ ಹಗ್ಗವನ್ನು ಎಳೆದೂ ಎಳೆದೂ ಜಗ್ಗಿ ಹಾಗೂ ಹೀಗೂ ಬಿಂದಿಗೆಯಲ್ಲಿ ನೀರನ್ನು ತುಂಬಿಸಿ ಎಳೆಯಲು ಪ್ರಯತ್ನಿಸುತ್ತೇವೆ. ಊಹೂಂ ನನ್ನ ಕೈಯ್ಯಲ್ಲಿ ಆಗುತ್ತಿಲ್ಲ. ಈ ನೀನೂ ಒಂದು ಕೈ ಹಾಕೇ ಎಂದು ತಂಗಿಯನ್ನು ಕರೆದಾಗ ಅವಳೂ ಸಹಾ ಕೈ ಹಾಕಿ ಹಗ್ಗವನ್ನು ಎಳೆದ ಪರಿಣಾಮ ಒಂದು ನಾಲ್ಕೈದು ಅಡಿ ಎತ್ತರಕ್ಕೆ ಎಳೆದಿರಬಹುದೇನೋ? ನಮ್ಮ ಪುಟ್ಟ ಪುಟ್ಟ ಎಳೆಯ ಕೈಗಳಿಗೆ ಹಗ್ಗದ ನಾರು ಸವೆದು ನೋವಾಗುತ್ತಿದ್ದದ್ದು ಒಂದು ಕಡೆಯಾದರೇ, ನೀರು ತುಂಬಿದ ತಾಮ್ರದ ಬಿಂದಿಗೆಯ ಭಾರವನ್ನು ತಡೆಯಲಾರದೇ, ಸರ ಸರನೆಂದು ಹಗ್ಗ ಕೈಜಾರುತ್ತಾ ಕೈಯ್ಯನ್ನೆಲ್ಲಾ ತರಚಿಕೊಂಡಿದ್ದೇ ತಡಾ ನಾವಿಬ್ಬರೂ ಹಗ್ಗವನ್ನು ಸಡಿಲಗೊಡಿಸಿದೆವು. ಕೂಡಲೇ, ನೀರಿನಿಂದ ತುಂಬಿದ್ದ ಭಾರವಾದ ತಾಮ್ರದ ಬಿಂದಿಗೆ ಡುಂ ಎಂದು ಶಬ್ಧ ಮಾಡುತ್ತಾ ಬಾವಿಯಲ್ಲಿ ಬಿದ್ದು ಹೋಯಿತು ಮತ್ತು ಅದರ ಜೊತೆ ಹಗ್ಗವೂ ಭಾವಿಯ ತಳ ಸೇರಿತ್ತು

ಕೈ ಎಲ್ಲಾ ತರಚಿದ ನೋವು ಒಂದೆಡೆಯಾದರೇ, ಆಳವಾದ ಭಾವಿಯಲ್ಲಿ ಬಿಂದಿಗೆ ಬಿಟ್ಟಿರುವುದು ಅಪ್ಪಾ ಅಮ್ಮನಿಗೆ ಗೊತ್ತಾದರೆ ಗ್ರಹಚಾರ ಹೇಗಪ್ಪಾ ಎಂಬ ಚಿಂತೆ ಮತ್ತೊಂದೆಡೆ. ಶಬ್ಧ ಕೇಳಿ ಮನೆಯೊಳಗಿನಿಂದ ಏನದು ಶಬ್ಧಾ? ಎಂದು ಹಿತ್ತಲಿಗೆ ಅಮ್ಮಾ ಬರುವಷ್ಟರಲ್ಲಿ ನಾವಿಬ್ಬರೂ ದಿಕ್ಕಾಪಾಲಾಗಿ ಓಟ ಕಿತ್ತಿದ್ದೆವು. ಸರಿ ಅಮ್ಮಾ ಬಂದು ಆ ಕಡೆ ಈ ಕಡೆ ಎಲ್ಲಾ ನೋಡಿ ಯಾರು ಇಲ್ಲದಿದ್ದನ್ನು ನೋಡಿ ಸುಮ್ಮನೆ ಒಳ ಹೋಗಿದ್ದನ್ನು ಕದ್ದು ಮುಚ್ಚಿ ನೋಡುತ್ತಿದ್ದ ನಮಗೆ ಬದುಕಿತು ಬಡ ಜೀವ ಎಂದೆನಿಸಿತು. ಸಂಜೆ ತಂದೆಯವರು ಯಥಾ ಪ್ರಕಾರ ನೀರು ಸೇದಲು ಹಗ್ಗಾ ಬಿಂದಿಗೆ ಸಿಗದಿದ್ದಾಗ ಕಡೆಗೆ ಭಾವಿಯಲ್ಲಿ ಹಗ್ಗ ತೇಲುತ್ತಿದ್ದದ್ದನ್ನು ನೋಡಿ ಹೇಳಿದಾಗಲೇ ಅಮ್ಮನಿಗೆ ಮಧ್ಯಾಹ್ನದ ಕೇಳಿದ ಶಭ್ದದ ರಹಸ್ಯ ಅರಿವಾಯಿತ್ತು. ಭಾವಿಗೆ ಬಿಂದಿಗೆ ಬಿಟ್ಟವರು ಯಾರು? ಎಂದು ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೇ ಮಗೂ, ಮೂಲೇ ಮನೆಗೆ ಹೋಗಿ ಪಾತಾಳ ಗರುಡಿ ಇಸ್ಕೋಂಡು ಬಾ ಅಂದಾಗಲೇ? ಹಾಂ!! ಪಾತಾಳ ಗರುಡಿನಾ? ಎನದು? ಎಂದು ಕೇಳಿದ್ದಕ್ಕೆ ನೀನೂ ಹೋಗಿ ಕೇಳು ಅವರು ಕೊಡ್ತಾರೆ ಆಗ ನಿನಗೇ ಗೊತ್ತಾಗುತ್ತದೆ ಅಂದ್ರು.

patal_sooji

ಅವರ ಮನೆಗೆ ಹೋಗಿ ಅತ್ತೇ (ಆಗೆಲ್ಲಾ ಆಂಟಿ ಅಂಕಲ್ ಸಂಸ್ಕೃತಿ ಇರಲಿಲ್ಲ) ಪಾತಾಳ ಗರುಡಿ ಕೊಡ್ಬೇಕಂತೇ ಅಂತ ಕೇಳ್ದೇ. ಯಾಕೋ ಯಾರ್ ಮನೆ ಭಾವಿಯಲ್ಲಿ ಬಿಂದಿಗೆ ಬಿತ್ತು? ಯಾರು ಬೀಳಿಸಿದ್ರೂ ಅಂತಾ ಕೇಳುತ್ತಲೇ ಮನೆಯೊಳಗಿನಿಂದ ಕಬ್ಬಿಣದ ಮುಳ್ಳು ಮುಳ್ಳುಗಳಿದ್ದ ಒಂದು ಪರಿಕರವನ್ನು ತಂದು ಕೊಟ್ಟರು. ಒಂದು ಅಗಲವಾದ ಕಬ್ಬಿಣದ ತಟ್ಟೆಯಾಕಾರದ ಮಧ್ಯದಲ್ಲಿ ಹಗ್ಗ ಕಟ್ಟಲು ಒಂದು ಸರಳು ಇದ್ದರೆ, ಇಡೀ ತಟ್ಟೆಯಾಕಾರಕ್ಕೆ ಅನೇಕ ಮುಳ್ಳುಗಳನ್ನು ತಗುಲಿ ಹಾಕಿದಂತಿದ್ದು ಅತ್ಯಂತ ಭಾರವಾಗಿತ್ತು. ಹಾಗೂ ಹೀಗೂ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಅಪ್ಪನ ಕೈಗೆ ಕೊಟ್ಟಾಗ ಅವರು ಅಟ್ಟದ ಮೇಲಿದ್ದ ಮತ್ತೊಂದು ಹಗ್ಗಕ್ಕೆ ಈ ಪಾತಾಳ ಗರುಡಿಯನ್ನು ಕಟ್ಟಿ ರಾಟೆಯ ಸಹಾಯದಿಂದ ಬಾವಿಯೊಳಗೆ ಬಿಟ್ಟು ಒಂದಷ್ಟು ಕಾಲ ಹಗ್ಗವನ್ನು ಆಚೀಚೆ ಜಗ್ಗಾಡುತ್ತಾ ಭಾವಿಯಲ್ಲಿದ್ದ ಬಿಂದಿಗೆಗೆ ಕಟ್ಟಿದ್ದ ಹಗ್ಗ ಚೆನ್ನಾಗಿ ಆ ಮುಳ್ಳುಗಳಿಗೆ ಸಿಕ್ಕಿಕೊಂಡ ನಂತರ ಸುಲಭವಾಗಿ ನೀರು ಸೇದುವ ಹಾಗಿ ಸೇದಿ ಹಗ್ಗ ಮತ್ತು ಬಿಂದಿಗೆಯನ್ನು ತೆಗೆದಾಗ ಒಂದು ರೀತಿಯ ನೆಮ್ಮದಿ. ಕೂಡಲೇ ಮೂಲೆ ಮನೆಯವರಿಗೆ ಪಾತಾಳ ಗರುಡಿಯನ್ನು ಹಿಂದಿರುಗಿಸಿ ಧನ್ಯವಾದ ಹೇಳಿಬಂದಿದ್ದೆ. ರಾತ್ರಿ ಊಟಕ್ಕೆ ಬಿಸಿ ಬಿಸಿಯಾದ ಅನ್ನದ ಜೊತೆ ಸಾರು ಕಲೆಸಲು ಆಗದೇ ಒದ್ದಾಡುತ್ತಿದ್ದದ್ದನ್ನು ನೋಡಿದಾಗಲೇ ಅಮ್ಮನಿಗೆ ಬಾವಿಗೆ ಬಿಂದಿಗೆಯನ್ನು ಹಾಕಿದವರು ಯಾರು ಎಂಬ ರಹಸ್ಯ ಗೊತ್ತಾಗಿ ಬಿಂದಿಗೆ ಹೋದ್ರೇ ಪರವಾಗಿಲ್ಲ ನೀವೇ ಬಾವಿಯೊಳಗೆ ಬಿದ್ದಿದ್ದರೇ ಏನು ಗತಿ ಎಂತು ಬೈದು ಅನ್ನಾ ಕಲೆಸಿ ಬಾಯಿಗೆ ಇಟ್ಟ ನೆನಪು ಎಷ್ಟು ವರ್ಷಗಳಾದರೂ ಇನ್ನೂ ಹಚ್ಚ ಹಸಿರಾಗಿಯೇ ಇದೆ.
paralsooji

ಹೀಗೆ ಬಾವಿಯಿಂದ ನೀರೆತ್ತುವಾಗ ಕೈಜಾರಿಯೋ ಇಲ್ಲವೇ ಹಗ್ಗ ಸಡಿಲವಾಗಿ ನೀರು ತುಂಬಿದ ಕೊಡ ಬಾವಿಯಲ್ಲಿ ಬಿದ್ದಾಗ ಮೇಲೆತ್ತಲು ಬಳಸುವ ಪದಾರ್ಥವನ್ನೇ ಪಾತಾಳ ಗರಡಿ ಅಥವಾ ಪಾತಾಳ ಸೂಜೀ ಅಂತ ಕರೆಯುತ್ತಾರೆ. ಉದ್ದವಾದ ಹಗ್ಗವನ್ನು ಈ ಪರಿಕರದ ಒಂದು ತುದಿಗೆ ಕಟ್ಟಿ ಅದನ್ನು ಬಾವಿಯ ಒಳಗೆ ಇಳಿಸಿ ಅಚೀಚೆಗೆ ಜಗ್ಗಾಡಿಸುತ್ತಾ ಇದ್ದಲ್ಲಿ ಬಾವಿಯೊಳಗೆ ಬಿದ್ದ ವಸ್ತುಗಳು ಗಾಳಕ್ಕೆ ಸಿಲುಕಿಕೊಳ್ಳುವ ಮೀನಿನಂತೆ ಈ ಪರಿಕರದ ಮುಳ್ಳುಗಳಿಗೆ ಸಿಕ್ಕಿಹಾಕಿಕೊಂಡಾಗ, ನಿಧಾನವಾಗಿ ಹಗ್ಗವನ್ನು ಮೇಲಕ್ಕೆಳೆದುಕೊಳ್ಳಬಹುದಾಗಿದೆ.

ಹೀಗೆ ಪಾತಾಳದಲ್ಲಿ ಬಿದ್ದ ಪದಾರ್ಥಗಳನ್ನೂ ಸುಲಭವಾಗಿ ಎತ್ತಿ ತರಬಲ್ಲುದು ಎಂಬ ಅರ್ಥದಲ್ಲಿ ಇದಕ್ಕೆ ಪಾತಾಳ ಗರಡಿ, ಪಾತಾಳ ಗರುಡಿ, ಮುಳ್ಳುಕೈ, ಪಾತಾಳ ಭೈರಿಗೆ, ಅಥವಾ ಪಾತಾಳ ಸೂಜಿ ಎಂಬ ಸಾರ್ಥಕ ನಾಮವನ್ನು ನಮ್ಮ ಹಿಂದಿನವರು ಇಟ್ಟಿದ್ದಾರೆ. ಸಾಮಾನ್ಯವಾಗಿ ಊರಿನ ಹಿರಿಯ ಗೌಡರ ಮೆನೆಯಲ್ಲಿಯೋ ಅಥವಾ ಕಮ್ಮಾರರ ಮನೆಯಲ್ಲಿ ಈ ರೀತಿಯ ಸಾಧನಗಳು ಇರುತ್ತಿದ್ದವು. ಯಾರಿಗಾದರೂ ಈ ಸಾಧನದ ಅವಶ್ಯಕತೆ ಬಂದಲ್ಲಿ ಅವರ ಮನೆಗೆ ಯಾವುದಾದರೂ ಹಿತ್ತಾಳೆಯ ಅಥವಾ ತಾಮ್ರದ ಪಾತ್ರೆ ಪಗಡ ಇಲ್ಲವೇ ಬಿಂದಿಗೆಯನ್ನು ಅವರಿಗೆ ಒತ್ತೆಯ ರೂಪದಲ್ಲಿ ಕೊಟ್ಟು ಸಾಧನವನ್ನು ಹಿಂದುರಿಗಿಸಿದ ನಂತರ ಆ ಒತ್ತೆಯ ಪಾತ್ರೆಯನ್ನು ತೆಗೆದುಕೊಂಡು ಹೋಗಬಹುದಾಗಿತ್ತು.

ಈಗೆಲ್ಲಾ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಎಗ್ಗಿಲ್ಲದೇ ಕೊರೆದ ಕಾರಣ ಅಂತರ್ಜಲ ಬರಿದಾಗಿರುವ ಕಾರಣ ತೆರೆದ ಭಾವಿಗಳೇ ಕಾಣೆಯಾಗಿ ಹೋಗಿದೆ. ಸಾವಿರಾರು ಅಡಿಗಳಷ್ಟು ಆಳಕ್ಕೆ ಕೊಳವೇ ಭಾವಿ ಕೊರೆಸಿ, ಅದಕ್ಕೆ ಮೋಟರ್ ಪಂಪ್ ಅಳವಡಿಸಿ ಸ್ವಿಚ್ ಹಾಕಿದ ತಕ್ಷಣವೇ ಝಳ ಝಳ ಎಂದು ನೀರು ಪಡೆಯುವವರಿಗೆ ಇಂತಹ ಅಪರೂಪದ ಸಾಧನಗಳ ಪರಿಚಯವೇ ಇಲ್ಲದೇ ಹೋಗುತ್ತಿರುವುದು ವಿಷಾಧನೀಯವೇ ಸರಿ.

ನೀವೂ ಸಹಾ ಇಂತಹ ಅಪರೂಪದ ಸಾಧನಗಳನ್ನು ಉಪಯೋಗಿಸಿದ್ದಲ್ಲಿ, ದಯವಿಟ್ಟು ಅದರ ಚಿತ್ರ ಮತ್ತು ನಿಮ್ಮ ಅನುಭವನ್ನು ನಮ್ಮೊಂದಿಗೆ ಹಂಚಿಕೊಂಡಲ್ಲಿ, ಆ ಸಾಧನದ ಪರಿಚಯವನ್ನು ಹತ್ತಾರು ಜನರಿಗೆ ತಿಳಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ.

ಏನಂತೀರೀ?