ಗಿಡ ಮರಗಳು ಇರಲವ್ವಾ ಮನೆಯ ಸುತ್ತ ಮುತ್ತಾ

babiesಸಾಧಾರಣವಾಗಿ ಹಿಂದಿನಕಾಲದಲ್ಲಿ ಮಕ್ಕಳಿರಲವ್ವಾ ಮನೆ ತುಂಬಾ ಎನ್ನುವ ಗಾದೆ ಮಾತನ್ನು ಸಹಜವಾಗಿ ಕೇಳಿರುತ್ತಿದ್ದೆವು. ಅಂದೆಲ್ಲಾ ಮನೆ ತುಂಬಾ ಹೇಗೆ ಮಕ್ಕಳು ಇರುತ್ತಿದ್ದರೋ ಅದೇ ರೀತಿ ಗಿಡ ಮರಗಳು ಇರಲವ್ವಾ ಮನೆಯ ಸುತ್ತ ಮುತ್ತಾ ಎನ್ನುವುದನ್ನೂ ಅಕ್ಷರಶಃ ಪಾಲಿಸಿಕೊಂಡು ಬರುತ್ತಿದ್ದರು. ಮನೆ ಮುಂದೆ ಅಥವಾ ಕೈ ತೋಟದಲ್ಲಿ ತೆಂಗಿನ ಮರ, ಹೂವು, ಹಣ್ಣುಗಳ ಗಿಡಗಳಿದ್ದರೆ ಮನೆಗೆ ಅದೇನೋ ಶೋಭೆ. ಆ ಮರ ಗಿಡಗಳ ನಿತ್ಯಹರಿದ್ವರ್ಣ ಬಣ್ಣ ಮನೆಗೆ ವಿಶೇಷ ಕಳೆಯನ್ನು ನೀಡುವುದಲ್ಲದೇ, ತರಕಾರಿ ಹೂವು ಹಣ್ಣು ಕಾಯಿಗಳನ್ನು ಕೊಡುವುದರ ಜೊತೆಗೆ ನಮಗೆ ಅತಗ್ಯವಿರುವಷ್ಟು ಆಮ್ಲಜನಕವನ್ನು ಉತ್ಪಾದಿಸಿಕೊಳ್ಳುವ ಮೂಲಕ ನಮ್ಮೆಲ್ಲರ ಆರೋಗ್ಯವನ್ನೂ ಕಾಪಾಡುತ್ತಿತ್ತು. . ಇನ್ನು ವಾಸ್ತುಶಾಸ್ತ್ರದಲ್ಲಿಯೂ ಕೆಲವೊಂದು ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ ಎಂದೇ ಹೇಳಲಾಗುತ್ತದೆ. ನಾವಿಂದು ಮನೆಯ ಆವರಣದಲ್ಲೇ ಸುಂದರವಾಗಿ ಕೈ ತೋಟ ಮತ್ತು ತಾರಸೀ ತೋಟಗಳನ್ನು ಮಾಡಿಕೊಂಡು ಸಾವಯವ ಕೃಷಿಯಾಧಾರಿತವಾಗಿ ಆರೋಗ್ಯಕರವಾದ ಹೂವು ಹಣ್ಣು ತರಕಾರಿಗಳನ್ನು ಬೆಳೆಯುತ್ತಿರುವವರನ್ನು ನೋಡಿ ಸಂಭ್ರಮಿಸುವುದರ ಜೊತೆಗೆ ಅದರಿಂದ ಪ್ರೇರಿತವಾಗಿ ನಮ್ಮ ಮನೆಗಳಲ್ಲೂ ಗಿಡ ಮರಗಳನ್ನು ನೆಡುವಂತಾಗಲಿ ಎಂಬ ಎಂಬ ಆಶಯದೊಂದಿಗೆ ಈ ವೀಡಿಯೋ ನಿಮ್ಮೆಲ್ಲರಿಗೂ ಸಮರ್ಪಿಸುತ್ತಿದ್ದೇನೆ.

ಹಾಗಾಗಿಯೇ ನಮ್ಮ ಪೂರ್ವಜರು ಮನೆಯ ಮುಂದೆ ತುಳಸೀ ಗಿಡದ ಜೊತೆಗೆ ಒಂದೆರಡು ತೆಂಗಿನ ಮರಗಳನ್ನು ನೆಟ್ಟರೆ, ಮನೆಯ ಹಿಂದೆ ಹಿತ್ತಲಿನಲ್ಲಿ ಮನೆಗೆ ಬೇಕಾಗುವಷ್ಟು ತರಕಾರಿಗಳು, ಬಾಳೇ ಗಿಡ, ಸೊಪ್ಪು, ದೇವರ ಪೂಜೆಗೆ ಬೇಕಾಗುವ ಹೂವುಗಳ ಗಿಡಗಳನ್ನು ಬೆಳಸುತ್ತಿದ್ದದ್ದಲ್ಲದೇ, ಅಡುಗೆ ಮನೆಯಲ್ಲಿ ಪಾತ್ರೆ ತೊಳೆದ ನೀರು ಬಚ್ಚಲು ಮನೆಯಲ್ಲಿ ಸ್ನಾನದ ನೀರು ಎಲ್ಲವೂ ನೇರವಾಗಿ ಈ ಗಿಡಗಳಿಗೇ ಹೋಗಿ ನೀರು ಅನಗತ್ಯವಾಗಿ ಪೋಲಾಗುವುದನ್ನು ತಡೆಗಟ್ಟುತ್ತಿದ್ದದ್ದಲ್ಲದೇ, ಅಂತರ್ಜಲ ಮಟ್ಟ ಸದಾಕಾಲಾವೂ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಇನ್ನು ಊಟಕ್ಕೆ ಬಾಳೇ ಎಲೆ ಇಲ್ಲವೇ ಮುತ್ತಗದ ಎಲೆಗಳನ್ನು ಬಳಸಿ ಅವುಗಳನ್ನು ಮನೆಯಲ್ಲಿರುತ್ತಿದ್ದ ಹಸುಗಳಿಗೆ ಆಹಾರವಾಗಿ ತಿನ್ನಿಸುತ್ತಿದ್ದರು ಇಲ್ಲವೇ, ಮನೆಯ ಪಕ್ಕದಲ್ಲೇ ಇರುತ್ತಿದ್ದ ಗೊಬ್ಬರದ ಗುಂಡಿಗಳಿಗೆ ಹಾಕಿ ತಮ್ಮ ಹೊಲಗದ್ದೆಗಳಿಗೆ ಅಗತ್ಯವಿದ್ದ ಸಾವಯವ ಗೊಬ್ಬರಗಳನ್ನು ತಯಾರಿಸಿಕೊಳ್ಳುತ್ತಿದ್ದರು.

ನಗರೀಕರಣ ಹೆಚ್ಚುತ್ತಿದ್ದಂತೆಯೇ ನೈರ್ಮಲ್ಯದ ಹೆಸರಿನಲ್ಲಿ ವಿಶಾಲವಾದ ಸುವ್ಯಸ್ಥಿತ ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು ಆರಂಭವಾಗಿದ್ದಲ್ಲದೇ, ಮನೆಯ ಸುತ್ತ ಒಂದು ಚೂರೂ ಜಾಗವನ್ನು ಬಿಡದೇ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಲು ಆರಂಭಿಸುತ್ತಿದ್ದಂತೆಯೇ, ಮನೆಯ ಮುಂದಿನ ಗಿಡಗಳು, ಕೈತೋಟಗಳೆಲ್ಲವೂ ಮಾಯವಾಗಿ ಹೂವು ಹಣ್ಣುಗಳನ್ನು ಬಿಡಿ, ಕರಿಬೇವು, ಪುದೀನ, ಕೊತ್ತಂಬರಿ ಸೊಪ್ಪುಗಳನ್ನೂ ಅಂಗಡಿಯಿಂದಲೇ ತರಬೇಕಾದಂತಹ ಪರಿಸ್ಥಿತಿ ಉಂಟಾಗಿದೆ.

ಮೊನ್ನೆ ಯುಗಾದಿ ಹಬ್ಬಕ್ಕೆಂದು ಮೈಸೂರಿನಲ್ಲಿರುವ ಚಿಕ್ಕಪ್ಪನ ಮನೆಗೆ ಹೋದಾಗ, ಹಬ್ಬದ ಪೂಜೆಗೆ ಮತ್ತು ಅಡುಗೆಗೆ ಬೇಕಾದ ಬಹುತೇಕ ಪರಿಕರಗಲನ್ನು ನಮ್ಮ ಚಿಕ್ಕಪ್ಪನ ಮನೆಯಲ್ಲೇ ಬೆಳೆದದ್ದನ್ನು ಸಂಭ್ರಮದಿಂದ ತೋರಿಸಿದಾಗ ಆದ ಆನಂದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

tornaಹಬ್ಬದ ದಿನ ಬಾಗಿಲುಗಳಿಗೆ ತೋರಣ ಕಟ್ಟಲು ಬಳಸಿದ ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪು ಚಿಕ್ಕಪ್ಪನವರೇ ಆಸ್ತೆಯಿಂದ ಬೆಳಸಿದ ಮನೆಯ ಮುಂದಿರುವ ಉದ್ಯಾನದದ್ದಾದರೇ, ಪೂಜೆಗೆ ಅಗತ್ಯವಿದ್ದ ಬಹುತೇಕ ಹೂವುಗಳು ಮನೆಯ ಅಂಗಳದ್ದೇ ಆಗಿತ್ತು. ಇನ್ನು ನೈವೇದ್ಯಕ್ಕೆ, ಅಡುಗೆಗೆ ಮತ್ತು ಒಬ್ಬಟ್ಟಿಗೆ ತೆಂಗಿನ ಕಾಯಿ ಮನೆಯ ಮುಂದಿನ ತೆಂಗಿನ ತೋಟದ್ದಾದರೇ, ಪಲ್ಯಕ್ಕೆ ಬಳಸಿದ್ದ ತೊಂಡೇ ಕಾಯಿ ಸಹಾ ಮನೆಯದ್ದೇ. ಮನೆಯ ಪಕ್ಕದಲ್ಲಿ ಹಾಕಿದ್ದ ತೊಂಡೇಕಾಯಿ ಬಳ್ಳಿ, ಮಹಡಿಯವರೆಗೂ ಹಬ್ಬಿಕೊಂಡು ಪ್ರತೀ ವಾರಕ್ಕೆ ಸುಮಾರು ಒಂದರಿಂದ ಒಂದೂವರೆ ಕೆಜಿ ತಾಜಾ ತಾಜಾ ಸಾವಯವ ತೊಂಡೆಕಾಯಿ ಸಿಗುತ್ತದೆ. ಬಳ್ಳಿಗಳ ಮಧ್ಯೆ ಅಡಗಿ ಕುಳಿತಿರುವ ತೊಂಡೇ ಕಾಯಿಯನ್ನು ಬಿಡಿಸುವುದೇ ಒಂದು ಆನಂದ. ನಾವೆಲ್ಲರೂ ಬಿಡಿಸಿದ ನಂತರವೂ ನಮ್ಮ ಚಿಕ್ಕಪ್ಪನವರು ಇನ್ನೂ 20-30  ತೊಂಡೆಕಾಯಿಗಳನ್ನು ಅದೇ ಬಳ್ಳಿಯಿಂದ ಬಿಡಿಸಿ ನಮಗೆ ತೋರಿಸುತ್ತಾ ದೇಶಾವರಿ ನಗೆ ಚೆಲ್ಲಿದಾಗ, ಅರೇ ನಮ್ಮ ಕಣ್ಣಿಗೆ ಅದು ಹೇಗೆ ಕಾಣಿಸಲಿಲ್ಲ ಎಮ್ಬ ಅಶ್ಚರ್ಯವೂ ಆಯಿತು.

tondekaiತೊಂಡೇಕಾಯಿ ಬಳ್ಳಿಯ ಪಕ್ಕದಲ್ಲೇ ಸೀಮೇಬದನೇ ಕಾಯಿ ಬಳ್ಳಿ ಬೆಳೆಯುತ್ತಿದ್ದು, ಮುಂದಿನ ಬಾರಿ ಚಿಕ್ಕಪ್ಪನ ಮನೆಗೆ ಹೋಗುವಷ್ಟರಲ್ಲಿ ಖಂಡಿತವಾಗಿಯೂ ಹತ್ತಾರು ಸೀಮೇ ಬದನೇಕಾಯಿಗಳು ಸಿಗುತ್ತವೆ. ಇನ್ನು ಒಬ್ಬಟ್ಟು ಮಾಡಲು ಮತ್ತು ಊಟಕ್ಕೆ ಬಳಸಿದ ಬಾಳೇಎಲೆಯೂ ಮನೆಯದ್ದೇ ಆಗಿದ್ದು. ಊಟ ಮಾಡಿದ ನಂತರ ಆ ಎಂಜಿಲು ಬಾಳೇ ಎಲೆಗಳನ್ನು ಹೊರಗೆ ಬಿಸಾಡದೇ ಮನೆಯ ಮುಂದೆ ಬಂದ ಬೀಡಾಡಿ ಹಸುಗಳಿಗೆ ತಿನ್ನಿಸುವ ಮುಖಾಂತರ ಕಸದಿಂದಲೂ ರಸವನ್ನು ತೆಗೆಯುವಂತಹ ಅರ್ಥಪೂರ್ಣ ಆಚರಣೆ ನಿಜಕ್ಕೂ ಅನನ್ಯ ಮತ್ತು ಅನುಕರಣಿಯ.

tt1ಅಯ್ಯೋ ನಮ್ಮ ಮನೆಯಲ್ಲಿ ಜಾಗವೇ ಇಲ್ಲಾ ಇನ್ನು ಗಿಡಗಳನ್ನು ಎಲ್ಲಿ ಬೆಳೆಸುವುದು? ಎಂದು ಹೇಳುವವರಿಗಾಗಿಯೇ ಇತ್ತೀಚೆಗೆ ತಾರಸೀ ತೋಟದ ಪರಿಕಲ್ಪನೆ ಉತ್ತಮವಾಗಿ ಎಲ್ಲೆಲ್ಲಿಯೂ ಕಂಡು ಬರುತ್ತಿದ್ದು, ಕೆಲ ಸಾವಿರ ರೂಪಾಯಿಗಳನ್ನು ವ್ಯಯಿಸಿದರೆ ಅತ್ಯುತ್ತಮವಾಗಿ ಮನೆಯ ಮೇಲೆಯೇ ಸುಂದರವಾದ ತಾರಸೀ ತೋಟವನ್ನು ಬೆಳಸಬಹುದಾಗಿದೆ. ಇದಕ್ಕೆ ಉತ್ತಮ ಉದಾಹರಣೆಯಂತೆ ಕರೋನಾ ಸಮಯದಲ್ಲಿ ಬಹುತೇಕರಿಗೆ ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದ ಕಾರಣ, ಬಹಳಷ್ಟು ಸಮಯ ಸಿಗುತ್ತಿದ್ದದ್ದನ್ನು ಸದ್ಬಳಕೆ ಮಾಡಿಕೊಂಡ ನಮ್ಮ ಮಿತ್ರರೊಬ್ಬರು ಹತ್ತಾರು ಬಗೆಯ ಹೂವುಗಳನ್ನು ಬೆಳಸಿರುವುದಲ್ಲದೇ, ಮನೆಗೆ ಅಗತ್ಯವಿರುವ ಕೊತ್ತಂಬರಿ, ಪುದೀನ, ಬದನೇಕಾಯಿ, ಬೆಂಡೇಕಾಯಿ, ಟೋಮ್ಯಾಟೋ ಮುಂತಾದ ತರಕಾರಿಗಳನ್ನು ಬೆಳಸಿ ಪ್ರತೀ ದಿನವೂ ಮುಖಪುಟದಲ್ಲಿ ಅವುಗಳ ಪೋಟೋವನ್ನು ಹಾಕಿ ನಮ್ಮೆಲ್ಲರ ಹೊಟ್ಟೆ ಉರಿಸಿದ್ದಂತೂ ಸುಳ್ಳಲ್ಲ. ಕೊರೋನ ಲಾಕ್ಡೌನ್ ಸಮಯದಲ್ಲಿ ಆರಂಭಿಸಿದ ಈ ಉತ್ತಮ ಪ್ರಯತ್ನ ಇಂದು ಅವರ ದೈನಂದಿನ ಚಟುವಟಿಕೆಯ ಅವಿಭಾಜ್ಯ ಅಂಗವಾಗಿ ತನ್ಮೂಲಕ ತಮ್ಮ ಸಮಯವನ್ನು ಉತ್ತಮವಾಗಿ ಸದ್ಭಳಕೆ ಮಾಡಿಕೊಳ್ಳುತ್ತಿರುವುದಲ್ಲದೇ, ಮನೆಯ ಪೂಜೆಗೆ ಬೇಕಾದ ಹೂವು ಮತ್ತು ಅಡುಗೆಗೆ ಬೇಕಾದ ಆರೋಗ್ಯಕರವಾದ ತರಕಾರಿಗಳನ್ನು ಬೆಳಸಿಕೊಳ್ಳುತ್ತಿರುವುದು ಅಭಿನಂದನೀಯ ಮತ್ತು ಅನುಕರಣಿಯವೂ ಹೌದು.

ನಮ್ಮ ಪೂರ್ವಜರು ಮಾಡುತ್ತಿದ್ದ ಪ್ರತಿಯೊಂದು ಕಾರ್ಯಗಳ ಹಿಂದೆಯೂ ಒಂದು ವೈಜ್ಞಾನಿಕ ಮತ್ತು ಆರೋಗ್ಯಕರವಾದ ಕಾರಣಗಳಿದ್ದು ಅವುಗಳನ್ನು ಮುಂದುವರೆಸಿಕೊಂಡು ಹೋಗಲು ನಾವು ನೀವು ಸ್ವಲ್ಪ ಮನಸ್ಸು ಮಾಡಿ, ಸ್ಪಲ್ಪ ಸಮಯವನ್ನು ಮೀಸಲಿಡ ಬೇಕಷ್ಟೇ.

flowersಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ಮೇಲೆ ಇನ್ನೇಕೆ ತಡಾ, ಇಂದಿನಿಂದಲೇ ನಿಮ್ಮ ಮನೆಗಳ ಅಂಗಳದಲ್ಲಿಯೋ, ಇಲ್ಲವೇ ಮನೆಯ ತಾರಸಿಯ ಮೇಲೆಯೂ ಅದಾವುದೂ ಸಾಧ್ಯವಾಗದೇ ಹೋದಲ್ಲಿ, ಮನೆಯ ಮುಂದಿನ ರಸ್ತೆಯಲ್ಲಿಯೂ ಒಂದೆರಡು ಗಿಡ ಮರಗಳನ್ನು ಬೆಳಸುವ ಮೂಲಕ  ಉತ್ತಮವಾದ ಆಮ್ಲಜನಕವನ್ನು ಸ್ಥಳೀಯವಾಗಿಯೇ ಉತ್ಪಾದನೆ ಮಾಡಿಕೊಳ್ಳುವುದಲ್ಲದೇ, ಹೆಮ್ಮರವಾಗಿ ಬೆಳೆದ ಮರಗಳು ನೂರಾರು ಪಕ್ಶಿಗಳಿಗೆ ಆಶ್ರಯ ತಾಣವಾಗುವ ಮೂಲಕ ಪರಿಸರವನ್ನು ಕಾಪಾಡ ಬಹುದು ಅಲ್ವೇ? ಕನ್ನಡದಲಿ ಭಿನ್ನಹ ಗೈದರೆ ಹರಿ ವರಗಳ ಮಳೆ ಕರೆಯುವನು ಎಂದು ರಾಷ್ಟ್ರಕವಿ ಕುವೆಂಪುರವರ ಪದ್ಯವೊಂದರಲ್ಲಿ ಹೇಳಿರುವಂತೆ ಮನೆಯಲ್ಲೇ ಬೆಳೆದಿರುವ ಹೂವು ಹಣ್ಣುಗಳಿಂದ ದೇವರನ್ನು ಪೂಜಿಸಿದರೆ, ಹರಿ ಹರ ವರಗಳ ಮಳೆಗರೆಯುವರು ಮತ್ತು ಮನೆಯ ತೋಟದಲ್ಲಿ ಬೆಳೆದ ತರಕಾರಿಗಳಿಂದ ಮಾಡಿದ ಅಡುಗೆ ಮನಸ್ಸಿಗೆ ಮುದು ನೀಡುವುದರ ಜೊತೆಗೆ ಆರೋಗ್ಯಕರವಾಗಿರುವುದಲ್ಲದೇ ರುಚಿಯೂ ಹೆಚ್ಚಾಗಿಯೇ ಇರುತ್ತದೆ ಎನ್ನುವುದಕ್ಕೆ ಈ ಮೇಲಿನವುಗಳೇ ಜ್ವಲಂತ ಉದಾಹರಣೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

#NoBindi_NoBusiness

ಅರೇ ಇದೇನಿದು ಇಂತಹ ಶೀರ್ಷಿಕೆ? ಜನರನ್ನು ಹೀಗೆ ಧರ್ಮಾಧಾರಿತವಾಗಿ ಕೆರಳುಸಿತ್ತಿದ್ದೀರಿ ಎಂದು ಭಾವಿಸುತ್ತಿದ್ದೀರಾ? ಅರೇ ಇದೇನಿದು ಹೀಗೆ ಕೋಮುವಾದವನ್ನು ಹರಡುತ್ತಿದ್ದೇನೆ ಎಂದು ಭಾವಿಸಿದ್ದೀರಾ? ಖಂಡಿತವಾಗಿಯೂ ಅಂತಹ ಪ್ರಯತ್ನವಾಗಿರದೇ ನಮ್ಮ ಸುತ್ತಮುತ್ತಲಿನವರು ನಮ್ಮ ಹಿಂದುಗಳ ಹೃದಯ ವೈಶಾಲ್ಯತೆಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ ಎಂಬುದನ್ನು ಕೆಲವು ಉದಾಹರಣೆಯ ಮುಖಾಂತರ ವಿವರಿಸುತ್ತಿದ್ದೇನೆ ಅಷ್ಟೇ.

ದಸರ ಮತ್ತು ದೀಪಾವಳಿ ಹಿಂದೂಗಳ ಪವಿತ್ರ ಹಬ್ಬ. ಈ ಹಬ್ಬಗಳನ್ನು ಅತ್ಯಂತ ಸಡಗರ ಸಂಭ್ರಮಗಳಿಂದ ಹಿಂದೂಗಳು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಎಷ್ಟು ಚೆನ್ನಾಗಿ ಅಗುತ್ತದೆಯೋ? ಅದೇ ರೀತಿ ಇಡೀ ವರ್ಷ ಹಾಗೆಯೇ ಮುಂದುವರೆಯುತ್ತದೆ ಎಂಬ ನಂಬಿಕೆ ಬಹಳಷ್ಟು ಜನರಿಗೆ ಇರುವ ಕಾರಣ ಬಹುತೇಕ ಹಿಂದೂಗಳು ಈ ಹಬ್ಬಗಳನ್ನು ಬಹಳ ಅದ್ದೂರಿಯಾಗಿ ಅಚರಿಸಲು ಇಚ್ಚಿಸುತ್ತಾರೆ. ಹಾಗಾಗಿ ಹೊಸ ಉಡುಗೆ ತೊಡುಗೆಗಳು, ವಾಹನಗಳು, ಆಭರಣಗಳು, ಗೃಹೋಪಯೋಗಿ ಉಪಕರಣಗಳನ್ನು ಭರಪೂರವಾಗಿ ಕೊಂಡು ಕೊಳ್ಳುವುದರ ಜೊತೆಗೆ ಸವಿರುಚಿಯಾದ ಆಹಾರವನ್ನು ಸೇವಿಸಲು ಬಯಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಹುತೇಕ ವ್ಯಾಪಾರಿಗಳು ಅದರಲ್ಲೂ, ಬಟ್ಟೆ ಬರೆ, ಆಭರಣಗಳು, ಸಿಹಿ ಉತ್ಪನ್ನಗಳ ವ್ಯಾಪಾರಿಗಳು ಅದಕ್ಕಿಂತಲೂ ಮುಂದು ವರೆದು ವಾಹನಗಳ ಟೈರ್ ವ್ಯಾಪಾರಿಗಳೂ ಸಹಾ ದೃಶ್ಯ ಮಾಧ್ಯಮ, ಸಾಮಜಿಕ ಜಾಲತಾಣಗಳಲ್ಲಿ ಮುಂಬರುವ ದೀಪಾವಳಿಯ ಹಬ್ಬವನ್ನು ನೆಪವಾಗಿಟ್ಟು ಕೊಂಡು ತಮ್ಮ ಉತ್ಪನ್ನಗಳನ್ನೇ ಬಳಸುವಂತೆ ಜಾಹೀರಾತುಗಳನ್ನು ನೀಡುತ್ತಿವೆ.

ಇನ್ನು ದೇಶದ ಬಹುತೇಕ online E-commerce Shopping Portal ಗಳು ವಾರಗಟ್ಟಲೇ ಸೇಲ್ ಗಳನ್ನು ಮಾಡಿ ಕೋಟ್ಯಾಂತರ ಹಣವನ್ನು ಈಗಾಗಲೇ ಬಾಚಿಕೊಂಡಿದೆ. ಒಂದು ಮೂಲದ ಪ್ರಕಾರ ದೇಶದ ದೈತ್ಯ ಕಂಪನಿಗಳು ಕೇವಲ ಒಂದು ವಾರದಲ್ಲೇ ಸರಿ ಸುಮಾರು 10-12.000 ಕೋಟಿಯಷ್ಟು ವ್ಯಾಪಾರ ಮಾಡುವ ಮೂಲಕ ಅರ್ಥಿಕವಾಗಿ ಭಾರತ ತೀವ್ರವಾಗಿ ಕುಸಿತ ಕಂಡಿದೆ ಎಂದು ಬೊಬ್ಬಿರಿಯುವ ಗಂಜೀ ಗಿರಾಕಿಗಳಿಗೆ ಭಾರತೀಯರ ನಿಜವಾದ ಆರ್ಥಿಕ ಶಕ್ತಿಯನ್ನು ಪ್ರಕಟ ಪಡಿಸಿವೆ ಎಂದರೂ ತಪ್ಪಾಗದು.

ಸಮುದ್ರದ ಕಡೆ ನದಿಯ ನೀರು ಹರಿಯುವುದು, ಗಾಳಿ ಬಂದ ಕಡೆ ವಸ್ತುಗಳು ಹಾರುವುದು ಸಹಜ ಪ್ರಕ್ರಿಯೆಯಾಗಿದೆ. ಅದೇ ರೀತಿಯಲ್ಲೇ ಹಿಂದೂಗಳ ಹಬ್ಬಗಳ ಹಬ್ಬ ಎಂದಲ್ಲಿ ಸಹಜವಾಗಿ ಹಿಂದೂ ಗ್ರಾಹಕರನ್ನು ಓಲೈಸಲು ಅವರಿಗೊಪ್ಪುವಂತಹ ಸಾಂಧರ್ಭಿಕ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಸಹಜ ಪ್ರಕ್ರಿಯೆ. ಸ್ವಾತಂತ್ರ್ಯಾನಂತರ ಧರ್ಮಾಧಾರಿತವಾಗಿಯೇ ಈ ದೇಶ ವಿಭಜನೆಯಾದರೂ ಕೆಲ ಪಟ್ಟ ಭದ್ರ ರಾಜಕೀಯ ನಾಯಕರುಗಳ ಕುಮ್ಮಕ್ಕಿನಿಂದಾಗಿ ಹಿಂದೂಸ್ಥಾನವಾಗ ಬೇಕಿದ್ದ ಈ ದೇಶ ಭಾರತ ದೇಶವಾಗಿ ಹೋಗಿದ್ದು ಈಗ ಇತಿಹಾಸ. ಕೇವಲ ಭಾರತ ದೇಶವಾಗಿದ್ದಲ್ಲಿ ಯಾರದ್ದು ಆಕ್ಷೇಪವಿರುತ್ತಿರಲಿಲ್ಲ. ಆದರೆ ಬಲವಂತವಾಗಿ ಈ ದೇಶಕ್ಕೆ ಜಾತ್ಯಾತೀತ ಎಂಬ ಪದವನ್ನು ಪದೇ ಪದೇ ಹೇರಿಕೆ ಮಾಡುತ್ತಾ, ಹಂತ ಹಂತವಾಗಿ ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ.

ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ಮುಸ್ಲಿಂ ರಾಷ್ಟ್ರಗಳಾದಾಗ ಪಾಕೀಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಎರಡಂಕಿಯಷ್ಟಿದ್ದ ಹಿಂದೂಗಳ ಸಂಖ್ಯೆ ಇಂದು 2-3% ಆಗಿದೆ. ಮೊನ್ನೆ ಮೊನ್ನೆ ದುರ್ಗಾಪೂಜೆಯ ಸಮಯದಲ್ಲಿ ಬಾಂಗ್ಲಾ ದೇಶದಲ್ಲಿ ಹಿಂದೂಗಲ ಮೇಲೆ ನಡೆದ ಹಿಂಸಾಚಾರಕ್ಕೆ ಅಲ್ಲಿನ ದೇಶದ ಪ್ರಧಾನಿ ನಮ್ಮ ದೇಶ ಮುಸ್ಲಿಂ ದೇಶವಾಗಿದ್ದು ಇಲ್ಲಿ ವಾಸಿಸುವ ಇತರೇ ಧರ್ಮದವರು ದೇಶದ ಧರ್ಮಕ್ಕೆ ಅನುಗುಣವಾಗಿ ಇರಬೇಕು ಎಂದು ಪರೋಕ್ಷವಾಗಿ ಹಿಂದೂಗಳ ಮೇಲಿನ ಧಾಳಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಆದರೆ ಆದೇ ಭಾರತದಲ್ಲಿ ಒಂದಂಕಿಯಷ್ಟಿದ್ದು ಅಲ್ಪ ಸಂಖ್ಯಾತರಾಗಿದ್ದವರು, ನಂತರ ದೇಶದ ಯಾವುದೇ ಕುಟುಂಬ ಯೋಜನೆಗಳಿಗೂ ಬೆಲೆ ನೀಡದೆ ಎಗ್ಗಿಲ್ಲದೇ ತಮ್ಮ ಜನಸಂಖ್ಯೆಯನ್ನು ಒಂದು ಕಡೆ ಬೆಳೆಸಿಕೊಳ್ಳುತ್ತಿದ್ದಲ್ಲಿ ಮತ್ತೊಂದು ಕಡೆ ಬಲವಂತವಾಗಿಯೋ ಇಲ್ಲವೇ ಆಮಿಷದಿಂದಲೋ ಲವ್ ಜಿಹಾದ್ ಮುಖಾಂತರವೋ ಹಿಂದೂಗಳನ್ನು ಮತಾಂತರ ಮಾಡುತ್ತಾ ಈಗ ಎರಡಂಕಿಯ ಸಂಖ್ಯೆಯಾಗಿದ್ದು ಇದೇ ಪ್ರಕಾರದ ವೇಗದಲ್ಲೇ ಮುಂದು ವರೆದಲ್ಲಿ 2045-50 ರಷ್ಟರಲ್ಲಿ ಈ ದೇಶದಲ್ಲಿ ಬಹುಸಂಖ್ಯಾತರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಅದೇಕೋ ಏನೋ ಮಾಧ್ಯಮಗಳು, ಕೆಲ ಸ್ವಘೋಷಿತ ಬುದ್ಧಿಜೀವಿಗಳು, ತುಕ್ಡೇ ತುಕ್ಡೇ ಗ್ಯಾಂಗಿನವರ ಜೊತೆ ಇಡೀ ಜಾಹೀರಾತು ತಯಾರಿಕಾ ಕಂಪನಿಗಳ ಮನಸ್ಥಿತಿಯೂ ಹಿಂದೂ ವಿರೋಧಿ ಭಾವನೆಗಳಿಂದ ಕೂಡಿದ್ದು ಪ್ರತಿ ಬಾರೀ ಹಿಂದೂ ಹಬ್ಬಗಳು ಬಂದಾಗ ಹಿಂದೂಗಳ ಹಬ್ಬಗಳು ಪರಿಸರವನ್ನು ಹಾಳು ಮಾಡುತ್ತವೆ ಎಂದು ಬ್ಬೊಬ್ಬಿರಿದು ಪ್ರಪಂಚದ ಮುಂದೆ ನಮ್ಮ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುತ್ತವೆ

bin3ಇದಕ್ಕೆ ಆಧಾರವಾಗಿ CEAT tyresನ ಇತ್ತೀಚಿನ ದೀಪಾವಳಿ ಕುರಿತಾದ ಜಾಹೀರಾತಿನಲ್ಲಿ ಅಮೀರ್ ಖಾನ್ ರಸ್ತೆಗಳು ಇರುವುದು ವಾಹನಗಳು ಸಂಚರಿಸುವುದಕ್ಕಾಗಿಯೇ ಹೊರತು ಪಟಾಕಿ ಹತ್ತಿಸುವುದಕ್ಕಲ್ಲ ಎಂದು ಜನರ ಬಗ್ಗೆ ಬಾರೀ ಕಾಳಜಿ ಇರುವ ಹಾಗೆ ಮಾತನಾಡಿದ್ದಾನೆ. ಅದರೇ ಅದೇ ಅಮೀರ್ ಖಾನ್ ತನ್ನದೇ ಧರ್ಮದವರು ಪ್ರತಿ ಶುಕ್ರವಾರ ಮತ್ತು ಅವರ ವಿಶೇಷ ಹಬ್ಬಗಳಂದು ರಸ್ತೆಯ ಮೇಲೇಯೇ ನಮಾಜ್ ಮಾಡುವಾಗ ರಸ್ತೆಗಳು ಇರುವುದು ವಾಹನಗಳು ಸಂಚರಿಸುವುದಕ್ಕಾಗಿಯೇ ಹೊರತು ಈ ರೀತಿಯಾಗೆ ಪ್ರಾರ್ಥನೆ ಮಾಡುವುದಕ್ಕಲ್ಲ ಎಂದು ಹೇಳಿದ್ದಾನೆಯೇ? ಇದ ಅಮೀರ್ ಖಾನ್ ಕುಲಬಾಂಧವರು CAA ವಿರುದ್ದದ ಪ್ರತಿಭಟನೆಯ ಸಂಧರ್ಭದಲ್ಲಿ ಶಹೀನ್ ಭಾಗ್ ರಸ್ತೆಯನ್ನು ತಿಂಗಳಾನುಗಟ್ಟಲೆ ಬಂದ್ ಮಾಡಿದ್ದಾಗ ಮತ್ತು ಕಳೆದ ಒಂದೂವರೆ ವರ್ಷದಿಂದಲೂ ರೈತರ ಹೆಸರಿನಲ್ಲಿ ದಲ್ಲಾಳಿಗಳು ದೆಹಲಿಯ ಹೊರವಲಯದಲ್ಲಿ ಹೆದ್ದಾರಿಯನ್ನು ಬಂದ್ ಮಾಡಿಕೊಂಡಿರುವುದನ್ನು ಕಂಡೂ ಕಾಣದೇ ಸುಮ್ಮನಿರುವುದೇಕೇ?

ಇನ್ನು ಹಿಂದಿ ಚಲನಚಿತ್ರ ನಟಿ ಪ್ರಿಯಾಂಕ ಚೋಪ್ರಾ ಮತ್ತು ಭಾರತ ಕ್ರಿಕೆಟ್ ತಂಡದ ಆಟಗಾರರದ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ವರ್ಷದಲ್ಲಿ ಮೂರು ದಿನಗಳ ಕಾಲ ಪಟಾಕಿ ಹೊಡೆದರೆ, ಪರಿಸರ ಹಾನಿಯಾಗುತ್ತದೆ ಎಂದು ಬೊಬ್ಬಿರಿಯುತ್ತಾರೆ. ಅದೇ ಪ್ರಿಯಾಂಕ ಚೋಪ್ರಾ ಮತ್ತು ಯುವರಾಜ್ ಸಿಂಗ್ ಮದುವೆಯ ಸಮಯದಲ್ಲಿ ಲಕ್ಷಾಂತರ ಪಟಾಕಿಗಳನ್ನು ಸುಟ್ಟಾಗ ಪರಿಸರ ಹಾನಿಯಾಗಲಿಲ್ಲವೇ? ಐಪಿಎಲ್ ಪ್ರತೀ ಪಂದ್ಯದ ನಂತರವು ಲಕ್ಷಾಂತರ ರೂಗಳ ಬಾಣ ಬಿರುಸುಗಳನ್ನು ಸುಡುವುದು ವಿರಾಟ್ ಕೊಹ್ಲಿಯ ಗಮನಕ್ಕೆ ಬರುವುದಿಲ್ಲವೇ? ಯಾರಾದರೂ ಹಣ ಕೊಡುತ್ತಾರೆ ಎಂದಲ್ಲಿ ತಮ್ಮತನವನ್ನೇ ಮಾರಿಕೊಂಡು ಏನು ಮಾಡುವುದಕ್ಕೂ ಮುಂದಾಗುವರೇ ಈ ಜನ?

speakersದೀಪಾವಳಿ ಸಮಯದಲ್ಲಿ 3 ದಿನ ಪಟಾಕಿ ಹೊಡೆಯುವುದರಿಂದ ಪರಿಸರಮಾಲಿನ್ಯ ಮತ್ತು ಶಬ್ಧಮಾಲಿನ್ಯವಾಗುತ್ತದೆ ಎನ್ನುವವರಿಗೆ ಪ್ರತಿದಿನವೂ ಹೊತ್ತಲ್ಲದ ಹೊತ್ತಿನಲ್ಲಿ 5 ಬಾರಿ ಕರ್ಕಶವಾಗಿ ಧ್ವನಿವರ್ಧಕಗಳಲ್ಲಿ ಬರುವ ಶಬ್ಧದಿಂದ ಮಾಲಿನ್ಯವಾಗುವುದಿಲ್ಲವೇ? ಎಲ್ಲೆಂದರಲ್ಲಿ ಎತ್ತರೆತ್ತರದ ಮೊಬೈಲ್ ಟವರ್ಗಳನ್ನು ಅಳವಡಿಸಿ ಅದರ ತರಂಗಾಂತರಗಳಿಂದಾಗಿ ನಮ್ಮ ನಿಮ್ಮೆಲ್ಲರ ಚಿಂವ್ ಚಿಂವ್ ಗುಬ್ಬಿ ಅವಸಾನಕ್ಕೆ ಹೋಗಿರುವುದು ಕಾಣುವುದಿಲ್ಲವೇ?

bi5ಇದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದುವರೆದ ವಿರಾಟ್ ಕೊಹ್ಲಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ದೀಪಾವಳಿಯ ಕುರಿತು ವೀಡಿಯೊವನ್ನು ಹಂಚಿಕೊಂಡು ಅದರಲ್ಲಿ ಈ ವರ್ಷ ಪ್ರಪಂಚದಾದ್ಯಂತದ ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ಕಷ್ಟಕರವಾಗಿದೆ ಎಂದು ಕನಿಕರ ತೋರಿಸುತ್ತಲೇ, ನಾವೆಲ್ಲರೂ ದೀಪಾವಳಿಗಾಗಿ ಎದುರು ನೋಡುತ್ತಿದ್ದೇವೆ. ದೀಪಾವಳಿ ಹತ್ತಿರ ಬರುತ್ತಿದ್ದಂತೆ, ನಾನು ದೀಪಾವಳಿಯನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೇಗೆ ಅರ್ಥಪೂರ್ಣ ಆಚರಿಸಬೇಕು ಮತ್ತು ಆನಂದಿಸಬೇಕು ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ. ದೀಪಾವಳಿಗಿಂಗಲೂ ಮುಂಚೆ ಅನ್ಯಧರ್ಮೀಯರ ಅನೇಕ ಹಬ್ಬಗಳು ಎಗ್ಗಿಲ್ಲದೇ ಆಚರಿಸಲ್ಪಟ್ಟವು. ರಸ್ತೆಯಲ್ಲಿ ಸಾವಿರಾರು ಲೀಟರ್ ಗಟ್ಟಲೆ ಪ್ರಾಣಿಗಳ ರಕ್ತದ ಕೋಡಿಯನ್ನು ಹರಿಸಲಾಗಿತ್ತು. ಅಂತಹ ಸಮಯದಲ್ಲೇಕೆ ವಿರಾಟ್ ಕೋಹ್ಲಿ ಸಲಹೆಯನ್ನು ನೀಡಲಿಲ್ಲ?

taniಇನ್ನು ತನಿಷ್ಕ್ ಆಭರಣ ಕಂಪನಿ ಪರೋಕ್ಷವಾಗಿ ಲವ್ ಜಿಹಾದ್ ಪ್ರೋತ್ಸಾಹಿಸುವಂತೆ ಹಿಂದೂ ಧರ್ಮದ ಹೆಣ್ಣು ಮಗಳು ಮುಸ್ಲಿಂ ಹುಡುಗನೊಂದಿಗೆ ಮದುವೆಯಾಗಿ ತನಿಷ್ಕ್ ಆಭರಣಗಳನ್ನು ಧರಿಸಿ ಸೀಮಂತ ಮಾಡಿಕೊಂಡು ಸಂತೋಷವಾಗಿರುವಂತೆ ತೋರಿಸಲಗುತ್ತದೆ. ಮಸಲ್ಮಾನರನ್ನು ಮದುವೆಯಾದ ನಂತರವೂ ಆ ಹೆಣ್ಣು ಮಗಳು ಹಿಂದೂ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲು ಅವರ ಧರ್ಮ ಅನುವು ಮಾಡಿ ಕೊಡುತ್ತದೆಯೇ? ವಾಸ್ತವಿಕವಾಗಿ ಈ ರೀತಿಯಾಗಿ ಎಲ್ಲಿಯಾದರೂ ನಡೆಯುತ್ತದೆಯೇ?

jಇನ್ನು ಫ್ಯಾಬ್ಇಂಡಿಯಾ ಅವರು ಹಿಂದೂ ಹಬ್ಬವಾದ ದೀಪಾವಳಿಯ ಹೆಸರನ್ನೇ ಜಶ್ನ್-ಇ-ರಿವಾಜ್ ಎಂದು ಬದಲಾಯಿಸಲು ಮುಂದಾಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ ಮತ್ತು ಖಂಡನಾರ್ಹವೇ ಸರಿ. ಹೀಗೆ ಒಂದೊಂದೇ ಹಬ್ಬದ ಹೆಸರನ್ನು ಬದಲಿಸುತ್ತಾ ಹೋದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನಮ್ಮ ಹಬ್ಬಗಳೇ ಮಾಯವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ. ಇವರ ಉತ್ಪನ್ನಗಳ ಮಾರಾಟಕ್ಕಾಗಿ ಅನಗತ್ಯವಾಗಿ ಜಾತ್ಯತೀತತೆ ಎಂಬ ಹೆಸರಿನಲ್ಲಿ ಮುಸ್ಲಿಂ ಸಿದ್ಧಾಂತಗಳನ್ನು ಹಿಂದೂಗಳ ಮೇಲೆ ಹೇರುತ್ತಿರುವುದಲ್ಲದೇ, ಬಲವಂತವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಎಷ್ಟು ಸರಿ? ಈ ರೀತಿಯಾದ ಅಧಿಕಾರವನ್ನು ಅಂತಹವರಿಗೆ ಕೊಟ್ಟವರು ಯಾರು?

ಈ ಎಲ್ಲಾ ಕಂಪನಿಗಳಿಗೂ ದೇಶದ ಬಹುಸಂಖ್ಯಾತ ಹಿಂದೂಗಳೇ ಪ್ರಮುಖ ಗ್ರಾಹಕರು ಅವರ ಹಣದಿಂದಲೇ ಇವರ ವ್ಯಾಪಾರ ನಡೆಯುತ್ತದಾದರೂ, ಈ ಕಂಪನಿಗಳು ಹಿಂದೂ ಆಚರಣೆಗಳು, ನಂಬಿಕೆಗಳು ಅಥವಾ ಹಿಂದೂಗಳ ಜೀವನ ಶೈಲಿಯನ್ನೇಕೆ ಗೌರವಿಸುವುದಿಲ್ಲ? ಎನ್ನುವುದೇ ನಮ್ಮೆಲ್ಲರ ವಾದವಾಗಿದೆ. ಅದು #ಫ್ಯಾಬಿಂಡಿಯಾ, #ಟಾಟಾಕ್ಲಿಕ್, #ಸೀಟ್ಟೈರ್ಸ್, #ಮನ್ಯಾವರ್ #ಸಿಯಟ್ ಟೈರ್ಸ್ ಯಾರೇ ಅಗಿರಲಿ ಅವರ ಉತ್ಮನ್ನಗಳನ್ನು ಖರೀಧಿಸದೇ ಇರುವ ಮೂಲಕ ಮತ್ತು ಅವರೆಲ್ಲರ ವಿರುದ್ಧ ಸಕಲ ಹಿಂದೂಗಳೂ ಒಗ್ಗಟ್ಟಾಗಿ ಗಟ್ಟಿ ಧ್ವನಿಯಲ್ಲಿ ಖಂಡಿತವಾಗಿಯೂ ಪ್ರತಿಭಟನೆ ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊಗಿಯಾಗಿದೆ.

ಒಂದು ಬ್ರಾಂಡ್ ಸಂಕ್ರಾಂತಿ, ಯುಗಾದಿ, ಗೌರೀ ಗಣೇಶ, ದಸರಾ, ದೀಪಾವಳಿ ಹಬ್ಬಗಳಿಗೆ ತಮ್ಮ ಉತ್ಪನ್ನಗಳ ಜಾಹೀರಾತುಗಳನ್ನು ಮಾಡಿದಾಗ, ಮತ್ತು ಅ ಉತ್ಪನ್ನಗಳನ್ನು ಹಿಂದೂಗಳು ಖರೀದಿಸಬೇಕೆಂದು ಬಯಸಿದಾಗ, ಆದರ ಪ್ರಚಾರವನ್ನು ಸಂಪೂರ್ಣವಾಗಿ, ಪ್ರಜ್ಞಾಪೂರ್ವಕವಾಗಿ ಹಿಂದೂಗಳ ಭಾವನೆಗೆ ತಕ್ಕಂತೆಯೇ ಇರಬೇಕೇ ಹೊರತು ಅನಗತ್ಯವಾಗಿ ಜಾತ್ಯಾತೀತೆ ಪರಿಸರ ಹಾನಿ ಮಣ್ಣು ಮಸಿ ಎಂದು ಉದ್ದೇಶಪೂರ್ವಕವಾಗಿ ಮೂಗು ತೂರಿಸುವುದು ಸರಿಯಾದ ಕ್ರಮವಲ್ಲ.

ಇದರ ವಿರುದ್ಧವಾಗಿ ಬಲಪಂಥೀಯ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿರುವ ಲೇಖಕಿ ಶೆಫಾಲಿ ವೈದ್ಯ, ತನ್ನ, ಟ್ವಿಟ್ಟರ್ನಲ್ಲಿ, ನಾನು ಯಾವುದೇ ದೀಪವಿಲ್ಲದ ಬಿಂದಿ ಇಲ್ಲದ ಹೆಣ್ಣುಮಕ್ಕಳನ್ನು ಜಾಹೀರಾತನ್ನು ತೋರಿಸುವ ಯಾವುದೇ ಬ್ರ್ಯಾಂಡ್ನಿಂದ #ದೀಪಾವಳಿಗಾಗಿ ಏನನ್ನೂ ಖರೀದಿಸುವುದಿಲ್ಲ ಎಂಬ ಶಪಥವನ್ನು ಮಾಡಿದ್ದು ಅದಕ್ಕಾಗಿ #NOBindi_NoBusiness ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ವಯಕ್ತಿಕವಾಗಿ ನನಗೆ ಆಕೆಯ ಪರಿಚಯವಿಲ್ಲದಿದ್ದರೂ ಈ ಸಂಧರ್ಭದಲ್ಲಿ ಆಕೆ ಎತ್ತಿರುವ ಪ್ರಶ್ನೆ ಬಹಳ ಸಮಯೋಚಿತವಾಗಿರುವ ಕಾರಣ ಈ ದೇಶದ ಬಹುಸಂಖ್ಯಾತ ಹಿಂದೂಗಳಲ್ಲಿ ಒಬ್ಬನಾಗಿ ಈ ಲೇಖನದ ಮೂಲಕ ಆಕೆಯ ವಿಚಾರಗಳನ್ನು ಸಮರ್ಥನೆ ಮಾಡುತ್ತಿದ್ದೇನೆ ನಿಮಗೆ ಈ ವಿಚಾರ ಧಾರೆ ಇಷ್ಟವಾದಲ್ಲಿ ದಯವಿಟ್ಟು ಈ ವಿಚಾರವನ್ನು ಮತ್ತಷ್ಟು ಜನರಿಗೆ ತಲುಪಿಸುವ ಮುಖಾಂತರ ಎಲ್ಲರಿಗೂ ಅರಿವನ್ನು ಮೂಡಿಸುವಂತೆ ಮಾಡಬೇಕೆಂದು ಕೋರುತ್ತೇನೆ.

ಇದು ಯಾರದ್ದೇ ವಿರುದ್ಧ ಹೊಡೆದಾಟ ಬದಿದಾಟ ದ್ವೇಷ ಅಸೂಯೇ ಇಲ್ಲವೇ ರಕ್ತಪಾತವಾಗಲೀ ನಡೆಯದೇ ಕೇವಲ ಖಡ್ಗಕ್ಕಿಂತ ಲೇಖನಿಯೇ ಹರಿತ ಎಂಬ ಮಾತನ್ನು ಹಿಂದೂಗಳ ಭಾವನೆಗಳ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತರ ನಡೆಸುತ್ತಿರುವವರಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸುವ ಮೂಲಕ ಅವರನ್ನು ಸರಿ ದಾರಿಗೆ ತರುವ ಪ್ರಯತ್ನಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲವಿರಲಿ

ಏನಂತೀರೀ?
ನಿಮ್ಮವನೇ ಉಮಾಸುತ

#jashneRiwaaz
#FabIndiaAdvertise
#fabindia
#Diwali
#Deepawali
#news

ಗೊರೆ ಹಬ್ಬ (ಸಗಣಿ ಹಬ್ಬ)

ದೀಪಾವಳಿ ಹಬ್ಬವೆಂದರೆ ಮಡಿ ಹುಡಿಗಳು ಗೌಣವಾಗಿ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಹ ಹಬ್ಬ. ಬೆಳ್ಳಂಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸಾ ಬಟ್ಟೇ ಹಾಕಿಕೊಂಡು, ದೇವರಿಗೆ ಕೈ ಮುಗಿದು ಪಟಾಕಿ ಹೊಡೆದು. ಮಧ್ಯಾಹ್ನ ಅಮ್ಮಾ ಮಾಡಿದ ಮೃಷ್ಟಾನ್ನ ಭೋಜನ ಸವಿದು ಸಂಜೆ ಮನೆಯ ಅಂಗಳದಲೆಲ್ಲಾ ದೀಪಗಳನ್ನು ಹಚ್ಚಿ ಮತ್ತೆ ಸುರ್ ಸುರ್ ಬತ್ತಿ, ಮತಾಪು, ಹೂವಿನ ಕುಂಡ, ರಾಕೆಟ್ ಎಲ್ಲವನ್ನೂ ಸಿಡಿಸಿ ಸಂಭ್ರಮಿಸುವ ಹಬ್ಬ. ಆದರೆ, ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರಾಂತ್ಯಕ್ಕೆ ಹೊಂದಿಕೊಂಡೇ ಇರುವ ಭೌಗೋಳಿಕವಾಗಿ ತಮಿಳುನಾಡಿಗೇ ಸೇರಿದರೂ, ಕನ್ನಡಿಗರೇ ಬಹು ಸಂಖ್ಯಾತರಾಗಿರುವ ಗುಮ್ಮಟಾಪುರದಲ್ಲಿ ಸಾಂಪ್ರದಾಯಿಕವಾಗಿ ಊರಿನ ಆಬಾಲವೃದ್ಧರಾದಿಯಾಗಿ ಗಂಡಸರು ಪರಸ್ಪರ ಸಗಣಿಯನ್ನು ಎರೆಚಾರಿಕೊಂಡು ಪರಸ್ಪರ ಮನಸೋ ಇಚ್ಚೆ ಬಯ್ದಾಡಿಕೊಂಡು ಗೊರೆ ಹಬ್ಬವನ್ನು ವಿಲಕ್ಷಣ ಎನಿಸಿದರೂ ವಿಶಿಷ್ಟವಾಗಿ ಆಚರಿಸುತ್ತಾರೆ.

ಪ್ರತಿವರ್ಷ ನಾನಾ ಕಾರಣಕ್ಕೆ ದೇಶಾದ್ಯಂತ ವಲಸೆ ಹೋಗಿರುವ ಈ ಊರಿನವರು, ಯಾವುದೇ ಆಸ್ತಿ, ಅಂತಸ್ತು, ಹುದ್ದೆ ಎಂಬ ಹಮ್ಮು ಬಿಮ್ಮು ಇಲ್ಲದೇ ದೀಪಾವಳಿಯ ಸಮಯಕ್ಕೆ ಊರಿಗೆ ಬಂದು ಬಲಿಪಾಡ್ಯಮಿಯ ಮಾರನೇ ದಿನ ಜಾತಿ ಬೇಧದ ಮನೋಭಾವ ಇಲ್ಲದೇ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಸಗಣಿಯನ್ನು ಸಂಗ್ರಹಿಸಿ ಸಗಣಿ ಎರೆಚಾಟದ ಹಬ್ಬದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡು, ಒಬ್ಬರಿಗೊಬ್ಬರು ಸಗಣಿ ಎರಚಾಡಿಕೊಂಡು ಸಂಭ್ರಮಿಸಿ ಸಹಬಾಳ್ವೆ ಬೆಸೆಯುತ್ತಾ, ಮಾರನೇಯ ದಿನ ಮುಂದಿನ ವರ್ಷದ ಹಬ್ಬಕ್ಕೆ ಬರೋಣ ಎಂದು ಪರಸ್ಪರ ಮಾತನಾಡಿಕೊಂಡು ತಮ್ಮ ತಮ್ಮ ಊರಿಗೆ ಹಿಂದಿರುಗುವ ಪದ್ದತಿ ನೂರಾರು ವರ್ಷಗಳಿಂದಲೂ ರೂಡಿಯಲ್ಲಿದೆ.

ಈ ಗ್ರಾಮದವರು ಈ ರೀತಿಯಾಗಿ ಹಬ್ಬವನ್ನು ಆಚರಿಸುವ ಹಿಂದೆ ಒಂದು ಕುತೂಹಲಕಾರಿಯಾದ ಪೌರಾಣಿಕ ಕಥೆಯಿದೆ. ನೂರಾರು ವರ್ಷಗಳ ಹಿಂದೆ ಈ ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ದೇಶದಿಂದ ವ್ಯಕ್ತಿಯೊಬ್ಬರು ಬಂದಿದ್ದರಂತೆ. ಅವರು ಅಚಾನಕ್ಕಾಗಿ ಮರಣ ಹೊಂದಿದಾಗ ಅವನ ಅಂತಿಮ ಕ್ರಿಯೆಗಳನ್ನು ಮುಗಿಸಿದ ನಂತರ ಅವರ ಜೊತೆಯಲ್ಲಿ ಸದಾ ಕಾಲವೂ ಇರುತ್ತಿದ್ದ ಜೋಳಿಗೆ, ಬೆತ್ತ ಮತ್ತು ಅವರ ಇತರೇ ಎಲ್ಲಾ ವಸ್ತುಗಳನ್ನೂ ಮನೆಯ ಪಕ್ಕದಲ್ಲಿ ಸಗಣೀ ಸಂಗ್ರಹಿಸುವ ತಿಪ್ಪೇ ಗುಂಡಿಗೆ ಬಿಸಾಡಿದರಂತೆ. ಇದಾದ ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿಯ ಬಳಿ ಗೌಡರ ಎತ್ತಿನ ಗಾಡಿ ಹಳಿ ತಪ್ಪಿ ಆ ಜೊಳಿಗೆ ಮೇಲೆ ಹರಿದಾಗ ಅದರಲ್ಲಿದ್ದ ಲಿಂಗದ ಮೇಲೆ ಗಾಡಿಯ ಚಕ್ರ ಹರಿದು, ಆ ಲಿಂಗದಿಂದ ಧಾರಾಕಾರವಾದ ರಕ್ತ ಹರಿದು ಬಂದಿತಂತೆ. ಇದನ್ನು ನೋಡಿ ಊರನವರೆಲ್ಲಾ ಭಯಭೀತರಾಗಿದ್ದರೆಂತೇ. ಅದೇ ರಾತ್ರಿ ಆ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೋಷ ಪರಿಹಾರಕ್ಕಾಗಿ ಬೀರಪ್ಪನ ಗುಡಿ ಕಟ್ಟಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಅಚರಿಸಬೇಕು ಎಂದು ಗೌಡನಿಗೆ ಹೇಳಿತಂತೆ. ಆ ಕೂಡಲೇ ಆ ತಿಪ್ಪೆ ಇದ್ದ ಜಾಗದಲ್ಲಿಯೇ ಬೀರಪ್ಪನ ದೇವಸ್ಥಾನ ಕಟ್ಟಿ, ಗೊರೆಹಬ್ಬದ ಆಚರಣೆ ಆರಂಭವಾಯಿತೆಂಬ ಪ್ರತೀತಿ ಇದೆ.

ತಲತಲಾಂತರದಿಂದಲೂ ಈ ಹಬ್ಬದ ಅಂಗವಾಗಿ ಇಡೀ ಗ್ರಾಮವನ್ನು ತಳಿರು, ತೋರಣಗಳಿಂದ ಶೃಂಗಾರಗೊಳಿಸಿ ಊರಿನ ಸಣ್ಣ ಸಣ್ಣ ಮಕ್ಕಳು ತರುಣರೊಂದಿಗೆ ಊರಿನ ಎಲ್ಲಾ ಮನೆಗಳಿಗೂ ಹೋಗಿ ಸಗಣಿಯನ್ನು ಸಂಗ್ರಹಿಸಿ ತಂದು ದೇವಸ್ಥಾನದ ಬಳಿ ಒಟ್ಟು ಮಾಡುತ್ತಾರೆ

ಮಧ್ಯಾಹ್ನವಾಗುತ್ತಿದ್ದಂತೆ ಅವರೆಲ್ಲರೂ ಊರಿನ ಹೊರಗಡೆ ಇರುವ ಕಾರಪ್ಪ ದೇವಸ್ಥಾನಕ್ಕೆ ಬಂದು ತಮ್ಮ ತಮ್ಮ ಮೆನೆಗಳಿಂದ ತಂದಿದ್ದ ಎಣ್ಣೆಯಿಂದ ಪೂಜೆ ಸಲ್ಲಿಸಿ, ಬಳಿಕ ಕೆರೆಯಂಗಳದಲ್ಲಿ ಕತ್ತೆಯೊಂದನ್ನು ತಂದು ಅದನ್ನು ಚೆನ್ನಾಗಿ ತೊಳೆದು ಶೃಂಗರಿಸಿ, ಪೂಜೆ ಸಲ್ಲಿಸಿ, ಊರಿನ ಚಾಡಿಕೋರ ಎಂದು ಊರಿನೊಬ್ಬನನ್ನು ಬಿಂಬಿಸಿ ಆತನಿಗೆ ತೆಂಗಿನ ನಾರು ಹಾಗೂ ಒಣ ಹುಲ್ಲಿನಿಂದ ಭರ್ಜರಿಯಾದ ಗಿರಿಜಾ ಮೀಸೆಯಂತೆ ಕಟ್ಟಿ, ಆತನ ಮೈಗೆಲ್ಲ ವಿಭೂತಿ ಬಳಿದು ವಿವಿಧ ಗಿಡಗಳ ಸೊಪ್ಪುಗಳಿಂದ ಅಲಂಕರಿಸಿ, ಶೃಂಗರಿಸಿದ ಕತ್ತೆಯ ಮೇಲೆ ಕೂರಿಸಿ ಮೆರೆವಣಿಗೆ ಮಾಡುತ್ತಾ, ಅಶ್ಲೀಲ ಶಬ್ದಗಳಿಂದ ಮನಸೋ ಇಚ್ಚೆ ಬೈಯುತ್ತಾ ಸಂಭ್ರಮಿಸಿ, ಕೇಕೆ ಹಾಕುತ್ತಾ, ಸ್ವಲ್ಪ ದೂರ ಮೆರೆವಣಿಗೆ ಮಾಡಿದ ನಂತರ ಆತನನ್ನು ಕತ್ತೆಯಿಂದಿಳಿಸಿ, ಆ ಯುವಕರೆಲ್ಲರೂ ಕತ್ತೆಯನ್ನೇ ಹೊತ್ತುಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಅದನ್ನು ಬೀರೇಶ್ವರಸ್ವಾಮಿ ದೇವಸ್ಥಾನದ ಬಳಿ ತಂದು ಆ ವ್ಯಕ್ತಿಯ ಹುಲ್ಲಿನ ಮೀಸೆಯನ್ನು ಸಗಣಿ ರಾಶಿಯಲ್ಲಿ ನೆಟ್ಟು, ಬೀರೇಶ್ವರನಿಗೆ ಪೂಜೆ ಸಲ್ಲಿಸಿ ಸಗಣಿಯಾಟವನ್ನು ಆರಂಭಿಸುತ್ತಾರೆ.

ನಂತರ ಊರಿನ ನೂರಾರು ಹುಡುಗರು ಮತ್ತು ಯುವಕರು, ಸಗಣಿಯ ರಾಶಿಯೊಳಗೆ ಬಿದ್ದು ಎದ್ದು ಹೊರಳಾಡಿದ ನಂತರ ಸುಮಾರು ಒಂದುವರೆ ಎರಡು ಗಂಟೆಗಳ ಅವರವರ ಇಚ್ಚೆಗೆ ಅನುಗುಣವಾಗಿ ದಪ್ಪ ದಪ್ಪ ಸಗಣಿ ಉಂಡೆ ಮಾಡಿಕೊಂಡು ಪರಸ್ಪರ ಮನಸೋ ಇಚ್ಚೆ ಬೈದಾಡುತ್ತಾ ಯಾವುದೇ ಜಾತಿ, ಅಂತಸ್ತು, ಮೇಲು ಕೀಳುಗಳೆಂಬ ಭಾವವಿಲ್ಲದೇ ಪರಸ್ಪರ ಎರೆಚಾಡುತ್ತಾ ಸಂಭ್ರಮಿಸುತ್ತಾರೆ. ಆ ಅಶ್ಲೀಲ ಬೈಗುಳವೆಲ್ಲವೂ ಕೇವಲ ಆ ಕ್ಷಣಕ್ಕೆ ಮಾತ್ರವೇ ಸೀಮಿತವಾಗಿದ್ದು ಹಬ್ಬ ಮುಗಿದ ನಂತರ ಎಲ್ಲರೂ ಪರಸ್ಪರ ಸ್ನೇಹಭಾವದಿಂದ ಸಹಬಾಳ್ವೆ ನಡೆಸುವುದು ಗಮನಾರ್ಹವಾಗಿದೆ.

ವರ್ಷದಿಂದ ವರ್ಷಕ್ಕೆ ಈ ಹಬ್ಬ ಪ್ರಸಿದ್ಧಿ ಪಡೆಯುತ್ತಿದ್ದು ಆ ಊರಿನವರ ನೆಂಟರಿಷ್ಟರಲ್ಲದೇ, ಅಕ್ಕ ಪಕ್ಕದ ಊರುಗಳ ನೂರಾರು ಹುಡುಗರುಗಳು ಕೂಡಾ ಈ ಹಬ್ಬಕ್ಕೆ ಬಂದು ತಾವೂ ಹಬ್ಬದಲ್ಲಿ ಭಾಗವಹಿಸಿಯೋ ಇಲ್ಲವೇ ಕೆರೆಚಾಡುವವರಿಗೆ ಹುಮ್ಮಸ್ಸು ಕೊಡುತ್ತಲೋ ಸುಮಾರು ಎರಡು ಗಂಟೆಗಳ ಎಲ್ಲಾ ಕಷ್ಟ, ನಷ್ಟ ಮತ್ತು ನೋವುಗಳನ್ನು ಮರೆತು ಸಂಭ್ರಮಿಸುವುದೇ ಈ ಹಬ್ಬದ ವೈಶಿಷ್ಠ್ಯ. ಅದಕ್ಕಾಗಿಯೇ ಇಲ್ಲಿನ ಯುವಕರು ಎಲ್ಲಿಲ್ಲದ ಹುಮ್ಮಸ್ಸಿನಿಂದ ದೀಪಾವಳಿ ಹಬ್ಬ ಬರುವುದನ್ನೇ ಕಾಯುತ್ತಾ, ಗೊರೆ ಹಬ್ಬದಲ್ಲಿ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ.

ಸಗಣಿ ಎಂದು ಅಸಹ್ಯ ಪಡದೇ ಹಬ್ಬದ ಸಂಪ್ರದಾಯ ಎಂಬ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಗೊರೆಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಬೀರೇಶ್ವರನಲ್ಲಿ ಬೇಡಿಕೊಂಡರೆ ಒಳಿತಾಗುತ್ತದೆ ಎಂಬ ನಂಬಿಕೆಯೂ ಊರಿನವರಿಗೆದೆ. ಈ ರೀತಿ ಸಗಣಿಯನ್ನು ಪರಸ್ಪರ ಮೈ ಮೇಲೆ ಎರಚಡಿಕೊಳ್ಳುವುದರಿಂದ ವೈಜ್ಞಾನಿಕವಾಗಿಯೂ ಆ ವ್ಯಕ್ತಿಯ ಆರೋಗ್ಯ ವೃದ್ಧಿಯಾಗಲಿದೆ ಎಂಬ ಕಾರಣದಿಂದಾಗಿಯೇ ನಮ್ಮ ಹಿರಿಯರು ಈ ರೀತಿಯಲ್ಲಿ ಬೀರೇಶ್ವರ ಸ್ವಾಮಿಯ ನೆಪದಲ್ಲಿ ಈ ಊರಿನವರಲ್ಲದೇ, ಸುತ್ತ ಮುತ್ತಲ ಗ್ರಾಮಸ್ಥರೂ ಜಾತಿ ಭೇದ ಮರೆತು ಒಂದಾಗಿ ಸಗಣಿಯಾಟವನ್ನು ರೂಢಿಗೆ ತಂದಿರಬಹುದು ಎನ್ನುವುದು ಊರಿನ ಹಿರಿಯರೊಬ್ಬರ ವಿಶ್ಲೇಷಣೆ. ತಮ್ಮ ಗ್ರಾಮದಲ್ಲಿ ಮನೆಮುರುಕ ಚಾಡಿಕೋರರು ಇರಲೇ ಬಾರದು ಎಂಬ ಕಾರಣದಿಂದ ಸಾಂಕೇತಿಕವಾಗಿ ಅವನನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಅಶ್ಲೀಲ ಪದಗಳಿಂದ ಬೈಯುತ್ತಾ ಅವನ ಪ್ರತಿರೂಪವಾದ ಮೀಸೆಯನ್ನು ಸಗಣಿಯಲ್ಲಿ ನೆಟ್ಟು ನಂತರ ಎಲ್ಲರೂ ಅದನ್ನು ತುಳಿದುಹಾಕಿ, ಪರಸ್ಪರ ಸಗಣಿಯನ್ನು ಎರೆಚಾಡಿಕೊಂಡು ಸಹೋದರತೆಯ ಸಹಬಾಳ್ವೆ ಸದಾಕಾಲವೂ ಹಚ್ಚ ಹಸಿರಾಗಿರಲೆಂಬ ಉದ್ದೇಶದಿಂದ ರೂಡಿಯಲ್ಲಿರುವ ಈ ಹಬ್ಬ ನಿಜಕ್ಕೂ ವಿಶಿಷ್ಟವಲ್ಲದೇ, ನಮ್ಮ ಪೂರ್ವಜರ ಭೌದ್ಧಿಕ ಮಟ್ಟ ಮತ್ತು ವೈಜ್ಞಾನಿಕ ಜ್ಞಾನವನ್ನು ಎತ್ತಿ ತೋರಿಸುತ್ತದೆ ಎಂದರೂ ತಪ್ಪಾಗಲಾರದು ಅಲ್ವೇ?

ಏನಂತೀರೀ?

ಅಂಟಿಗೆ- ಪಿಂಟಿಗೆ ಹಬ್ಬ

ನಮ್ಮ ಹಳೇ ಮೈಸೂರಿನ ಕಡೆ ಆಶ್ವಯುಜ, ಬಹುಳ, ತ್ರಯೋದದಶಿಯಿಂದ ಆರಂಭವಾಗಿ ಕಾರ್ತೀಕ ಶುಕ್ಲ ಬಿದಿಗೆಯವರೆಗೂ ಐದು ದಿನಗಳವರೆಗೂ ದೀಪವಳಿಯನ್ನು ಆಚರಿಸಲಾಗುತ್ತದೆ. ಮಲೆನಾಡು ಅದರಲ್ಲೂ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಮತ್ತು ಉತ್ತರ ಕನ್ನಡದ ಕೆಲವು ಭಾಗಗಳಲ್ಲಿನ ರೈತಾಪಿ ಸಮುದಾಯಗಳಲ್ಲಿ ಈ ಅಂಟಿಗೆ ಪಿಂಟಿಗೆ ಹಬ್ಬವನ್ನು ಆಚರಿಸುವ ರೂಢಿಯಲ್ಲಿದೆ. ನಮ್ಮಲ್ಲಿ ದೀಪವನ್ನು ಹಚ್ಚಿಸು ಎನ್ನುವುದಕ್ಕೆ ದೀಪವನ್ನು ಅಂಟಿಸು ಎಂದೂ ಹೇಳುವ ಕಾರಣ ಮತ್ತು ಪಿಂಟಿಗೆ ಎಂಬ ಪದವು ಹಬ್ಬ ಎನ್ನುವುದಕ್ಕೆ ತಮಿಳಿನ ಪಂಡಿಗೈ ಅಥವಾ ತೆಲುಗಿನ ಪಂಡಗ ಎಂಬ ಪದಗಳಿಂದ ಎರವಲು ಪಡೆದು ಅಂಟಿಗೆ-ಪಿಂಟಿಗೆ ಎಂಬ ಹೆಸರು ಬಂದಿರಬಹುದು ಎಂದು ಕೆಲವರ ಅಂಬೋಣ.

ದೀಪಾವಳಿಯ ಹಬ್ಬದ ಬಲಿಪಾಡ್ಯಮಿಯಂದು ಊರಿನ ಪ್ರಮುಖ ದೇವಸ್ಥಾನದಲ್ಲಿ ಯುವಕರ ತಂಡವು ಒಗ್ಗೂಡಿ, ದೇವರನ್ನು ಭಕ್ತಿಯಿಂದ ಪೂಜಿಸಿ, ತಾವು ಹೊತ್ತು ಸಾಗಿಸಲಿರುವ ದೊಡ್ಡದಾದ ಕಂಚಿನ ಅಥವಾ ಮಣ್ಣಿನ ದೀವಕ್ಕೆ ಸಾಕಷ್ಟು ಎಣ್ಣೆಯನ್ನು ಹಾಕಿದ ಗಟ್ಟಿಯಾದ ಹಿಡಿಕೆಯುಳ್ಳ ದೀವಟಿಕೆಯನ್ನು ದೇವಸ್ಥಾನದ ನಂದಾದೀಪದಿಂದ ಹತ್ತಿಸಿಕೊಳ್ಳುತ್ತಾರೆ. ಇದರ ಜೊತೆಯಲ್ಲಿಯೇ ಹಿಂದೆಲ್ಲಾ ಮಣ್ಣಿನ ಹೂಜಿಯಲ್ಲಿ (ಈಗ ಕಾಲಕ್ಕೆ ಅನುಗುಣವಾಗಿ ಪ್ಲಾಸ್ಟಿಕ್ ಅಥವಾ ಸ್ಟೀಲ್ ಕ್ಯಾನಿನಲ್ಲಿ) ದೀಪದ ಎಣ್ಣೆಯನ್ನು ತುಂಬಿಕೊಂಡು ಅವರ ಜೊತೆಗೆ ಹೋಗುತ್ತಾರೆ. ಸಾಗುವ ಹಾದಿಯಲ್ಲಿ ಗಾಳಿಬೀಸಿಯೋ ಅಥವಾ ಮತ್ತಾವುದೋ ಕಾರಣದಿಂದ ದೀಪವು ಆರಿಹೋದಲ್ಲಿ ಅಪಶಕುನ ಆಗುತ್ತದೆ ಎಂಬ ಕಾರಣದಿಂದ ಬಹಳ ಎಚ್ಚರಿಕೆಯಿಂದ ಮೂರು ದಿನವೂ ದೀಪವು ಆರದಂತೆ ನೋಡಿಕೊಳ್ಳುತ್ತಾರೆ. ಈ ತಂಡದಲ್ಲಿ ತಂಡದಲ್ಲಿ ಏಳೆಂಟು ಜನ ಸದಸ್ಯರಿದ್ದು ಜ್ಯೋತಿಯನ್ನು ಹಿಡಿದುಕೊಂಡ ನಾಯಕನು ಮಧ್ಯದಲ್ಲಿದ್ದರೆ, ಅವನ ಮುಂದೆ ಇಬ್ಬರು ಗಾಯಕರು (ಮುಮ್ಮೇಳಧಾರಿಗಳು) ಮತ್ತನವನ ಹಿಂದೆ ದೀವಟಿಗೆಯರು, ಹಾಡುವವರು, ಸಂಭಾವನೆ ಹೊರುವವರು ಹಾಗೂ ಹಿಮ್ಮೇಳಧಾರಿಗಳು ಹಿಂಬಾಲಿಸುತ್ತಾರೆ. ಇನ್ನೂ ವಿಶೇಷವೆಂದರೆ ದೀಪ ಸಾಧಾರಣ ಪಂಚೆ, ಅದಕ್ಕೊಪ್ಪುವ ಅಂಗಿ ಅಥವಾ ಜುಬ್ಬದ ಜೊತೆಗೆ ತಲೆಗೊಂದು ಮುಂಡಾಸು ಕಟ್ಟಿಕೊಂಡು, ದಾರಿಯಲ್ಲಿ ಎದುರಾಗ ಬಹುದಾದ ಅಪಾಯಗಳನ್ನು ಎದುರಿಸಲು ಸಹಾಯಕವಾಗುವಂತೆ ಕೈಯ್ಯಲ್ಲೊಂದು ಗಟ್ಟಿಯಾದ ದಂಡವನ್ನು ಹಿಡಿದು ಹಗಲು ಇರಳು ಎನ್ನದೇ, ಮೂರು ದಿನಗಳ ಕಾಲ ನಿದ್ರಿಸದೇ, ಈ ಕಲಾವಿದರು ಮನೆಗಳಿಂದ ಮನೆಗಳಿಗೆ ದೀಪವನ್ನು ಹಿಡಿದುಕೊಂಡು ಜಾನಪದ ಗೀತೆಯನ್ನು ಒಕ್ಕೊರಲಿನಿಂದ ಹಾಡಿಕೊಂಡು ಹೋಗುತ್ತಾರೆ. ಪ್ರತಿಯೊಬ್ಬರ ಮನೆಯ ಮುಂದೆ ಹೋಗಿ ನಿಂತು ಮನೆಯ ಯಜಮಾನಿಗೆ ಹಾಡಿನ ಮೂಲಕ ಬಾಗಿಲ ತೆರೆಯಮ್ಮ, ಭಾಗ್ಯದ ಲಕ್ಷ್ಮಮ್ಮ, ಜ್ಯೋತ್ಸಮ್ಮನ್ನೊಳಗೆ ಕರಕೊಳ್ಳಿ. ಹಾಗೆಯೇ ಜ್ಯೋತಿದ್ದ ಮನೆಯಲ್ಲಿ ರೀತ್ಯುಂಟು, ನೀತ್ಯುಂಟು, ಒಳ್ಳೆ ಮಾತುಗಳುಂಟು ಮನದಲ್ಲಿ ಎಂದು ಹಾಡುತ್ತಾ ಅವರ ಮನೆಯ ದೀಪಗಳನ್ನು ಹತ್ತಿಸಿಕೊಳ್ಳಲು ಸೂಚಿಸುತ್ತಾರೆ. ಇವರ ಬರುವಿಕೆಗಾಗಿಯೇ ಕಾಯುತ್ತಿದ್ದ ಆ ಮನೆಯವರೂ, ತಮ್ಮ ಮನೆಯ ನಂದಾ ದೀಪವನ್ನು ಅವರು ಹೊತ್ತು ತಂದಿದ್ದ ದೀವಟಿಕೆಯಿಂದ ಹತ್ತಿಸಿಕೊಂಡು, ಅದರ ಮುಂದೆ ದೀಪದ ಎಣ್ಣೆ, ಅಕ್ಕಿ, ಕಾಯಿ, ಹಬ್ಬದಲ್ಲಿ ಮಾಡಿದ್ದ ನೈವೇದ್ಯ ಮತ್ತು ದಕ್ಷಿಣೆಯನ್ನಿಟ್ಟು ಭಕ್ತಿಯಿಂದ ನಮಿಸುವುದಲ್ಲದೇ, ರನ್ನಾದಟ್ಟಾಕೆ ಬಣ್ಣದೇಣಿಯಾ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ…… ಸಾವಿರ ಕಾಲ ಸುಖಿ ಬಾಳಿ ಎಂದು ಹಾಡುತ್ತಾ, ತಾವು ಹತ್ತಿಸಿಕೊಂಡ ನಂದಾದೀಪವನ್ನು ಬಲೀಂದ್ರಕಂಬ ಎನ್ನುವ ನಿರ್ದಿಷ್ಟ ಜಾಗದಲ್ಲಿ ಇಟ್ಟ ನಂತರ ದೀಪದ ಮೆರವಣಿಗೆಯನ್ನು ಮುಂದಿನ ಮನೆಗೆ ಕಳಿಸುತ್ತಾರೆ.

ಹೀಗೆ ಅಂಟಿಗೆ-ಪಿಂಟಿಗೆಯಲ್ಲಿ ದೇವಸ್ಥಾನದ ಹಣತೆಯ ಮೂಲಕ ಮೂಲಕ ಧನಾತ್ಮಕ ಚಿಂತನೆಗಳನ್ನು ಹೊತ್ತು ತಂದು, ಎಲ್ಲರ ಮನೆಯವರ ಅಂತರಂಗ(ಹೃದಯ)ದ ಬಾಗಿಲನ್ನು ತೆರೆದು ಅವರ ಮನೆಯ ನಂದಾದೀಪವನ್ನು ಹಚ್ಚುವ ಮೂಲಕ, ಅವರ ಬದುಕಿನ ಸಾರ್ಥಕತೆಯನ್ನು ಮತ್ತು ಆಧ್ಯಾತ್ಮಿಕ ಒಲವನ್ನು ಜಾಗೃತಗೋಳಿಸಿ ತಮ್ಮ ಪಯಣವನ್ನು ಮುಂದುವರೆಸುವ ಸುಂದರ ಕಲ್ಪನೆಯನ್ನು ನಮ್ಮ‌ ಹಿರಿಯರು ರೂಢಿಗೆ ತಂದಿದ್ದಾರೆ.

ದೀಪವನ್ನು ಹಚ್ಚಿಕೊಂಡು, ಹಳ್ಳಿಯ ಬೀದಿಗಳಲ್ಲಿ ಚಲಿಸುತ್ತಾ, ಮನೆ ಮನೆಯಲ್ಲಿಯೂ ಬೆಳಕನ್ನು ತುಂಬುವ ಈ ಸಂದರ್ಭದಲ್ಲಿ ಹಾಡುವ ಗೀತೆಗಳನ್ನು ಅಂಟಿಕೆ-ಪಂಟಿಕೆ ಪದಗಳು ಎಂದು ಕರೆಯುತ್ತಾರೆ. ಹೀಗೆ ಹಾಡುವ ಪದಗಳಲ್ಲಿಯೂ ಹಲವು ವಿಧಗಳಿವೆ. ಶಿವಯೋಗಿ ಪದ, ದೀಪ ಹಚ್ಚುವ ಪದ, ಬಲೀಂದ್ರ ಪದ, ಗೋವಿನ ಪದ, ಕವಲೆ ಹಾಡು, ಎಣ್ಣೆ ಎರೆಯುವ ಪದ, ದ್ರೌಪದಿ ಪದ, ಗಂಗೆ ಗೌರಿ ಪದ, ಜೋಗುಳ ಪದ, ಕೌಟುಂಬಿಕ ‌ಪದ ಹೀಗೆ ಹತ್ತು ಹಲವಾರು ರೀತಿಯ ಹಾಡುಗಳಿದ್ದು ಅವುಗಳ ಜೊತೆ ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಆ ಕಲಾವಿದನ ಆಶುಕವಿತ್ವಕ್ಕೆ ತಕ್ಕಂತೆ ಬದಲಾಗುವ ಸಂಧರ್ಭವೂ ಇರುತ್ತದೆ. ಕೆಲವೊಮ್ಮೆ ಮನೆಯವರ ಕಾಲು ಎಳೆಯುವ ಭರದಲ್ಲಿ ಆಶ್ಲೀಲದ ಪದಗಳ ಸೋಂಕು ಕೂಡ ತಗುಲಿ ಅಲ್ಲಿದ್ದ ಹಿರಿಯರ ಎಚ್ಚರಿಕೆಯ ನಂತರ ಸರಿ ದಾರಿಗೆ ಬರುವ ಉದಾಹರಣೆಯೂ ಇದೆ.

ಹೀಗೆ ದೀಪವನ್ನು ಹೊತ್ತು ಸಾಗುವಾಗ, ಮತ್ತೊಂದು ಊರಿನ ತಂಡವು ಎದುರು ಬದಿರು ಆಗುವ ಸಂಧರ್ಭ ಎದುರಾದಲ್ಲಿ. ಅವರು ದೀಪ-ದೀಪೋಳ್ಗೆ ಎಂದು ಗಟ್ಟಿಯಾಗಿ ಕೂಗುವುದರ ಮೂಲಕ ಪರಸ್ಪರ ಎಚ್ಚರಿಕೆ ಕೊಡುತ್ತಾ ಇಬ್ಬರೂ ಬೇರೆ ಬೇರೆ ದಾರಿಯಲ್ಲಿ ಸಾಗುತ್ತಾರೆ. ದೀಪವನ್ನು ಹತ್ತಿಸಿಕೊಳ್ಳುವವರೂ ಕೆಲವೊಂದು ಸಂಪ್ರದಾಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿರುತ್ತದೆ. ದೀಪ ಸ್ವೀಕರಿಸಬೇಕಾದ ಕುಟುಂಬದಲ್ಲಿ ಮುಟ್ಟು ಚೆಟ್ಟು, ಪುರುಡು, ಸಾವಿನ ಮೈಲಿಗೆಗಳು ಬಂದಿರಬಾರದು. ಈ ಎಲ್ಲಾ ಮೈಲಿಗೆಗಳು ಕಳೆದ ಮೂರು ವರ್ಷಗಳ ನಂತರವೇ ಆಂತಹ ಮನೆಗಳಿಗೆ ಹೋಗುತ್ತಾರೆ.

ಹೀಗೆ ಮೂರು ದಿನಗಳ ಕಾಲ ನಿರಂತರವಾಗಿ ಸಂಚರಿಸಿದ ನಂತರ ತಂಡವು ಮತ್ತೆ ತಮ್ಮ ಹಳ್ಳಿಯಲ್ಲಿ ತಾವು ಆರಂಭಿಸಿದ ದೇವಸ್ಥಾನಕ್ಕೇ ಬಂದು ಸಂಗ್ರಹಿಸಿದ ದವಸ ಧಾನ್ಯಗಳು, ನಗನಾಣ್ಯಗಳು ಮತ್ತು ಉಡುಗೊರೆಯನ್ನೆಲ್ಲಾ ದೇವಸ್ಥಾನಕ್ಕೆ ಅರ್ಪಿಸಿ, ಪೂಜೆ ಮಾಡಿಸಿ, ಮುಂದಿನ ವರ್ಷದವರೆಗೆ ಆ ದೀವಟಿಕೆಯನ್ನು ದೇವಸ್ಥಾನದಲ್ಲಿಯೇ ಇರಿಸಿ ಆ ವರ್ಷದ ಆಚರಣೆಗೆ ಮಂಗಳ ಹಾಡುತ್ತಾರೆ. ಈ ರೀತಿಯಾದ ಜನಪದ ಆಚರಣೆಗಳು ಇಂದಿನ ಯುವ ಜನತೆಗೆ ತಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದ ಸಮುದಾಯಗಳನ್ನು ಪರಿಚಯ ಮಾಡಿಸುವ ಮೂಲಕ ಅವರ ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸುತ್ತಿದೆ. ಮುಂದಿನ ವರ್ಷದ ದೀಪವನ್ನು ಹೊರಲು ಅಥವಾ ಆ ತಂಡಕ್ಕೆ ಸೇರಲು ಈ ವರ್ಷದಿಂದಲೇ ಯುವಕರುಗಳು ಅರ್ಜಿ ಹಾಕುವ ಸಂದರ್ಭಗಳಿಗೇನೂ ಕಡಿಮೆ ಇಲ್ಲ.

ಈಗ ಕಾಲ ಕಾಲಕ್ಕೆ ಮಳೆ ಬೆಳೆಯಾಗದೇ, ಮಲೆನಾಡಿನ ಹಳ್ಳಿಗಳ ಯುವಕರುಗಳು ಕೆಟ್ಟು ಪಟ್ಟಣ ಸೇರು ಎನ್ನುವಂತೆ ಹತ್ತಿರದ ನಗರಕ್ಕೆ ವಲಸೇ ಹೋಗುತ್ತಿರುವ ಪರಿಣಾಮದಿಂದಾಗಿ, ಪ್ರತೀ ಮನೆ-ಮನವನ್ನು ಬೆಳಗಬೇಕಿದ್ದ ಈ ಸುಂದರ ಕಲ್ಪನೆಯ ಅಂಟಿಗೆ-ಪಿಂಟಿಗೆ ಹಬ್ಬ ಈಗ ಅವಸಾನ ದತ್ತ ಸಾಗುತ್ತಾ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹೋಗು ಮಾರಾಯಾ, ಮೂರು ರಾತ್ರಿ ನಿದ್ದೆಗೆಡುವ ಗೋಳು ಯಾರಿಗೆ ಬೇಕು? ಎಂಬ ತಾತ್ಸಾರದಿಂದ ಆ ತಂಡದೊಂದಿಗೆ ಕೈ ಜೋಡಿಸುವವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಪರ್ಯಾಸವೇ ಸರಿ.

ಇಂತಹ ಸಂದರ್ಭ ಬಂದೊದಗಬಹುದು ಎಂದು ಸುಮಾರು 60 ವರ್ಷಗಳ ಹಿಂದೆಯೇ ಯೋಚಿಸಿ ತೀರ್ಥಹಳ್ಳಿ ತಾಲ್ಲೂಕಿನ ಹುಲಿಸರ- ಹಣಗೋಡಿನ ಗ್ರಾಮಸ್ಥರು ತಮ್ಮೂರಿನ ಗ್ರಾಮದೇವತೆಯ ಹೆಸರಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಂಟಿಗೆ ಪಿಂಟೆಗೆ ಸಂಘವನ್ನು 1962ರಲ್ಲಿ ರಚಿಸಿಕೊಂಡು ನಿರಂತರವಾಗಿ ಕಳೆದ 60 ವರ್ಷಗಳಿಂದಲೂ ನಿರಂತರವಾಗಿ ತಮ್ಮೂರಿನ ಯುವಕರ ತಂಡ ರಚಿಸಿಕೊಂಡು ಅಂಟಿಗೆ-ಪಿಂಟಿಗೆಯನ್ನು ಶ್ರದ್ಧಾ ಭಕ್ತಿಯಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅಂಟಿಗೆ ಪಿಂಟಿಗೆ ಮೂಲಕ ಸಂಗ್ರಹವಾದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳುವ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದ್ದಾರೆ.

ಶರಾವತಿ ನದಿಯ ದಡದಲ್ಲಿ ಕೃಷಿಯಾಧರಿತವಾಗಿದ್ದ ಈ ಊರಿಗೆ ಸರಿಯಾದ ಸಂಪರ್ಕ ವ್ಯವಸ್ಥೆಯೂ ಇರಲಿಲ್ಲ. ಮಳೆಗಾಲದ ಮೂರು ತಿಂಗಳಿನಲ್ಲಿ ಹುಲಿಸರ ಗ್ರಾಮವು ಅಕ್ಷರಶಃ ದ್ವೀಪವಾಗಿ, ರಸ್ತೆಯ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕವಿಲ್ಲದಾಗಿರುತ್ತಿತ್ತು.
ಇಂತಹ ದಿನಗಳಲ್ಲಿ ಆ ಊರಿನ ಹಿರಿಯರು ಅಂಟಿಗೆ-ಪಿಂಟಿಗೆ ಮೂಲಕ ಊರನ್ನು ಒಗ್ಗೂಡಿಸಿ, ಹಿರಿಯರೊಂದಿಗೆ ಎಳೆಯರಿಗೂ ಅಂಟಿಗೆ-ಪಿಂಟಿಗೆ ಕಲಿಸಿ, ಗ್ರಾಮದ ದೇವಸ್ಥಾನವನ್ನು ಅಭಿವೃದ್ಧಿ ಮಾಡಿದ್ದಲ್ಲದೇ, ತಮ್ಮ ಸಂಘ ಶಕ್ತಿಯ ಮೂಲಕ ರಾಜಕೀಯ ಒತ್ತಡ ತಂದು ತಮ್ಮೂರಿನ ಶರಾವತಿ ನದಿಗೆ ಸೇತುವೆ ನಿರ್ಮಿಸಿಕೊಂಡರು. ಈ ಹಳ್ಳಿಯಿಂದ ಪಟ್ಟಣಕ್ಕೆ ಸುಗಮವಾದ ಸಂಪರ್ಕರಸ್ತೆಯಾದ ಕೂಡಲೇ, ಊರಿನ ರಸ್ತೆಗಳು ಡಾಂಬರೀಕರಣ ಗೊಂಡಿದ್ದಲ್ಲದೇ, ವಿದ್ಯುತ್, ಫೋನ್ ಎಲ್ಲವೂ ಬಂದು ಊರಿನ ಯುವಕರು ಶಿಕ್ಷಣ ಪಡೆದು ಉದ್ಯೋಗ ಹಿಡಿದು ಬದುಕು ಕಟ್ಟಿಕೊಂಡಿದ್ದಾರೆ.

ನಮ್ಮ ಪೂರ್ವಜರು ಧಾರ್ಮಿಕ ಹಿನ್ನಲೆಯಲ್ಲಿ ರೂಡಿಗೆ ತಂದಿದ್ದ ಅಂಟಿಗೆ-ಪಿಂಟಿಗೆ ಹಬ್ಬ ಇಂದು ಹಳ್ಳಿ ಹಳ್ಳಿಗಳಲ್ಲಿ ಸಾಮಾಜಿಕ ಕ್ರಾಂತಿ ತಂದಿರುವುದಲ್ಲದೇ ಅವರೆಲ್ಲರೂ ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ ತಮ್ಮ ತಮ್ಮ ಊರಿನ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವಂತೆ ಇಡೀ ಊರನ್ನು ಒಗ್ಗೂಡಿಸುತ್ತಿದೆ. ಇದೇ ಅಲ್ಲವೇ ನಮ್ಮ ಹಬ್ಬಗಳ ವಿಶೇಷತೇ?

ಏನಂತೀರೀ?

ಹಬ್ಬದ ಸಡಗರ ಸಂಭ್ರಮ

ಎಲ್ಲಾ ಹಬ್ಬಗಳ ಆಚರಣೆಯ ಸಂದರ್ಭದಲ್ಲಿಯೂ ಇಂದು ವಿಶ್ವಾದ್ಯಂತ, ದೇಶಾದ್ಯಂತ, ನಾಡಿನಾದ್ಯಂತ ….. ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು ಎಂದು ದೃಶ್ಯ ಮತ್ತು ಮುದ್ರಣ ಮಾದ್ಯಮದಲ್ಲಿ ಕೇಳುವುದು ಮತ್ತು ಓದುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾದರೆ ಆ ಸಡಗರ ಮತ್ತು ಸಂಭ್ರಮ ಎಂದರೆ ಏನು? ಅದು ಹೇಗೆ ಇರುತ್ತದೆ ಎಂಬುದನ್ನು ಆಲೋಚಿಸುತ್ತಿರುವಾಗಲೇ ಮೂಡಿದ ಲೇಖವವೇ ಇದು.

ಹಬ್ಬಗಳ ವಿಷಯಕ್ಕೆ ಬಂದಾಗ, ಸಡಗರ ಮತ್ತು ಸಂಭ್ರಮ ಎರಡೂ ಜೋಡಿ ಪದಗಳು. ಸಡಗರ ಹಬ್ಬದ ಹಿಂದಿನ ಪ್ರಕ್ರಿಯೆಗಳಾದರೆ, ಸಂಭ್ರಮ ಹಬ್ಬ ಮತ್ತು ಹಬ್ಬಾ ನಂತರದ ಸಮಯವಾಗಿರುತ್ತದೆ ಮತ್ತು ಈ ಪ್ರಕ್ರಿಯೆಗಳು ವ್ಯಕ್ತಿಯಿಂದ ವ್ಯಕ್ತಿಗಳಿಗೆ ಬೇರೆ ಬೇರೆರೀತಿಯಾಗಿರುತ್ತದೆ ಉದಾಹರಣೆಗೆ ಗೌರೀ ಗಣೇಶನ ಹಬ್ಬವನ್ನೇ ತೆಗೆದುಕೊಳ್ಳೋಣ. ಹಬ್ಬಕ್ಕೆ ಎರಡು ಮೂರು ತಿಂಗಳ ಹಿಂದೆಯೇ ಮಣ್ಣಿನ ಮೂರ್ತಿಗಳನ್ನು ಮಾಡುವವರಿಗೆ ಸಡಗರ. ಆತ, ಕೆರೆ ಇಲ್ಲವೇ ನದೀ ಪಾತ್ರಗಳಿಂದ ಮಣ್ಣನ್ನು ತಂದು ಅದನ್ನು ಹದಮಾಡಿ ತನ್ನ ಕಲ್ಪನೆಗೆ ತಕ್ಕಂತೆ ಮೂರ್ತಿಗಳನ್ನು ಮಾಡಿ ಅವುಗಳನ್ನು ಒಪ್ಪವಾಗಿ ಜೋಡಿಸಿ ಅವುಗಳು ಒಣಗಿದ ಮೇಲೆ, ಅವುಗಳಿಗೆ ಆಕರ್ಷಣೀಯವಾಗಿ ಬಣ್ಣ ಬಳಿದು, ಎಲ್ಲದಕ್ಕಿಂತ ಹೆಚ್ಚಾಗಿ ಕಣ್ಣುಗಳನ್ನು ಮೂಡಿಸುವುದೇ ಕಲಾವಿದನ ಪ್ರತಿಭೆಗೆ ಹಿಡಿದ ಕನ್ನದಿ ಮೂರ್ತಿ ಎಷ್ಟೇ ಚೆನ್ನಾಗಿದ್ದರೂ ಕಣ್ಣುಗಳನ್ನು ವಿಕಾರವಾಗಿ ಮೂಡಿಸಿದಲ್ಲಿ ಮೂರ್ತಿಯ ಮೂರ್ತರೂಪವೇ ಬದಲಾಗುತ್ತದೆ. ಹಾಗಾಗಿ ಆ ಕಲಾವಿದನಿಗೆ ಮೂರ್ತಿಗಳಿಗೆ ಸರಿಯಾದ ಮೂರ್ತರೂಪವನ್ನು ಕೊಡುವುದೇ ದೊಡ್ಡ ಸಡಗರ. ಇನ್ನು ತಯಾರಾದ ಮೂರ್ತಿಗಳನ್ನು ಭಕ್ತಾದಿಗಳು ಬಂದು ಅವನು ಮಾಡಿದ ಎಲ್ಲಾ ಮೂರ್ತಿಗಳನ್ನು ಕೊಂಡೊಯ್ದು ಅವನ ಪರಿಶ್ರಮಕ್ಕೆ ತಕ್ಕಷ್ಟು ಅಥವಾ ಅದಕ್ಕಿಂತ ಅಧಿಕ ಹಣ ಸಿಕ್ಕಿದಲ್ಲಿ ಅದುವೇ ಅವನಿಗೆ ಸಂಭ್ರಮ.

festive1

ಹೀಗೆ ಹಬ್ಬಗಳು ಬಂದಿತೆಂದರೆ ಹಬ್ಬ ಆಚರಿಸುವವರಿಗೆ ಸಡಗರವಾದರೇ, ಆಹಾರ ಪದಾರ್ಥಗಳನ್ನು , ತರಕಾರಿ, ಹಣ್ಣುಗಳನ್ನು , ಹೂವುಗಳ್ಳನ್ನು ಬೆಳೆಯುವ ರೈತರಿಗೆ , ಅದನ್ನು ಕೊಂಡು ತಂದು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ, ಸಾರ್ವಜನಿಕವಾಗಿ ಹಬ್ಬಗಳು ಮಾಡಲು ಚೆಂದಾ ಎತ್ತುವ ಹುಡುಗರಿಗೆ, ಮೈದಾನಗಳಲ್ಲಿ ಪೆಂಡಾಲ್ ಮತ್ತು ದೀಪಾಲಂಕಾರ ಮಾಡುವ ಶಾಮೀಯಾನದವರಿಗೆ, ವಿವಿಧ ಸಾಂಸ್ಕೃತಿಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಸಂಗೀತಗಾರರಿಗೆ, ನೃತ್ಯಕಲೆಯವರಿಗೆ, ವಾದ್ಯಗೋಷ್ಠಿಯವರಿಗೆ, ಮೆರವಣಿಗೆಯಲ್ಲಿ ಭಾಗವಹಿಸುವ ಬಾಜಾಭಜಂತ್ರಿಯವರಿಗೆ, ಡೊಳ್ಳು ಕುಣಿತದವರಿಗೆ, ವೀಸಗಾಸೆಯವರಿಗೆ, ಕೀಲುಕುದುರೆ, ದೈತ್ಯದ ಬೊಂಬೆ ಕುಣಿಯುವವರಿಗೆ, ನೇಕಾರರಿಗೆ, ಬಟ್ಟೇ ವ್ಯಾಪಾರಿಗಳಿಗೆ, ಸೌಂದರ್ಯವರ್ಧಕ ತಯಾರಕರಿಗೆ, ಬಳೆ ಮಾರುವವರಿಗೆ ಹೀಗೆ ಎಲ್ಲರಿಗೂ ಸಂಭ್ರಮವೋ ಸಂಭ್ರಮ. ಹೀಗೆ ಒಬ್ಬರಿಗೊಬ್ಬರ ಸುಖಃ ಸಂತೋಷವನ್ನು ಹಂಚಿಕೊಳ್ಳಲೆಂದೇ, ನಮ್ಮ ಪೂರ್ವಜರು ಹಬ್ಬ ಹರಿದಿನಗಳ ಆಚರಣೆಗೆ ತಂದರು ಎನಿಸುತ್ತದೆ. ಹಬ್ಬ ಮಾಡುವವರು ಕಷ್ಟ ಪಟ್ಟು ಬೆವರು ಸುರಿಸಿದ ಹಣವನ್ನು ಹಬ್ಬದ ನೆಪದಲ್ಲಿ ಖರ್ಚುಮಾಡಿದಲ್ಲಿ. ಆ ಖರ್ಚು ಮತ್ತೊಬ್ಬರ ಆದಾಯವಾಗಿ, ಅದು ಒಬ್ಬರಿಂದ ಮತ್ತೊಬ್ಬರ ಕೈ ಬದಲಾಗುತ್ತಾ ಅಂತಿಮವಾಗಿ ದೇವರ ಹೆಸರಿನಲ್ಲಿ, ಸಂಪ್ರದಾಯದ ರೂಪದಲ್ಲಿ ಈ ರೀತಿಯ ಆಚರಣೆಗಳಿಂದ ಎಲ್ಲರೂ ಸುಖಃ ಮತ್ತು ಸಂತೋಷದಿಂದ, ಸಡಗರ – ಸಂಭ್ರಮದಿಂದ ಹರ್ಷೋಲ್ಲಾಸದಿಂದ ಇರಲು ಈ ರೀತಿಯ ಹಬ್ಬಗಳು ಆಚರಣೆಯಲ್ಲಿವೆ.

festive2

ಇತ್ತೀಚೆಗೆ ದೇಶಾದ್ಯಂತ ಆರ್ಥಿಕ ಕುಸಿತದ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಿದ್ದರೆ. ಕೆಲವರಂತೂ ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ದೇಶ ದೀವಾಳಿಯಾಗುವ ಹಂತಕ್ಕೆ ತಲುಪುತ್ತದೆ ಎಂದು ಎಚ್ಚರಿಸುವ ನೆಪದಲ್ಲಿ ಜನರಿಗೆ ಭಯವನ್ನು ಉಂಟು ಮಾಡುತಿದ್ದಾರೆ. ಆವರು ಅಧಿಕಾರಿಯಾಗಿದ್ದಾಗ ಮತ್ತು ಅವರು ಆಳ್ವಿಕೆ ನಡೆಸುತ್ತಿದ್ದಾಗ, ದೇಶ ಇದಕ್ಕಿಂತಲೂ ಅಧಃ ಪತನ ಕಂಡು ದೇಶದ ಚಿನ್ನವನ್ನು ಕದ್ದು ಮುಚ್ಚಿ ಸದ್ದಿಲ್ಲದೆ ಪರದೇಶದಲ್ಲಿ ಅಡವಿಟ್ಟು ನಂತರ ಬೇರೆಯವರು ಆಳ್ವಿಕೆಗೆ ಬಂದಾಗ ಅದನ್ನು ಬಿಡಿಸಿಕೊಂಡು ಬಂದಿದ್ದದ್ದು ಜಾಣ ಮರೆವಿನಂತಾಗಿದೆ. ಪ್ರತಿಯೊಬ್ಬರೂ ತಮಗೆ ಸಮಸ್ಯೆಗಳು ಬಂದಾಗ, ಏನೂ ಅರಿವಿಲ್ಲದ ಮುಗ್ಧರಂತೆ ನಟಿಸುತ್ತಾರೆ. ಆದರೆ, ಅದೇ ಸಮಸ್ಯೆಗಳಿಗಳಿಗೆ ಇತರರು ಬಲಿಯಾದಾಗ, ತಾವೇ ಅಧ್ಬುತ ಪರಮ ಜ್ಞಾನಿಯಂತೆ ವರ್ತಿಸುತ್ತಾ , ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಅವರನ್ನು ಭಯಭೀತರನ್ನಾಗಿ ಮಾಡುವುದು ನಿಜಕ್ಕೂ ಅಸಹ್ಯಕರ.

ಇಂದು ದೇಶದ ಆರ್ಥಿಕ ಆಭದ್ರತೆ ಎಂದು ಗಾಭರಿ ಹುಟ್ಟಿಸುತ್ತಿರುವವರೇ, ಅಧಿಕಾರ ಹೋದ ತಕ್ಷಣವೇ ವಿದೇಶಕ್ಕೆ ಬ್ಯುಸಿನೆಸ್ ಕ್ಲಾಸ್ ವಿಮಾನದಲ್ಲೇ ಪ್ರಯಾಣ ಮಾಡುತ್ತಾ , ಐಶಾರಾಮಿ ಕಾರುಗಳಲ್ಲಿ ಓಡಾಡುತ್ತಾ, ಪಂಚತಾರಾ ವಾಸ್ತವ್ಯ ಹೂಡಿ, ಕ್ಯಾಸಿನೋದಲ್ಲಿ ಜೂಜಾಡಾತ್ತಾ ಮೋಜು ಮಸ್ತಿ ಮಾಡುತ್ತಾ ಜನರಿಗೆ ಮಾತ್ರ ಆತಂಕ ಹುಟ್ಟಿಸುತ್ತಿರುವುದು ನಿಜಕ್ಕೂ ಖಂಡನೀಯ, ಇಂತಹವರ ಮನೆಯ ಮದುವೆ ಮುಂಜಿ, ನಾಮಕರಣಗಳು ಇನ್ನೂ ಐಶಾರಾಮಿಯಾಗಿಯೇ ನಡೆಸುತ್ತಿದ್ದಾರೆ ಮತ್ತು ತಮ್ಮ ವಾರಾಂತ್ಯದ ಪಾರ್ಟಿಗಳಲ್ಲಿ ಮತ್ತು ಮೋಜು ಮಸ್ತಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲವೆಂದಲ್ಲಿ ಅರ್ಥಿಕ ಅಭ್ರದ್ರತೆ ಎಲ್ಲಿಂದ ಬಂತು?.

1990ರ ಆಸುಪಾಸಿನಲ್ಲಿ ಜಾಗತೀಕರಣಕ್ಕೆ ನಮ್ಮನ್ನು ನಾವು ತೆರೆದುಕೊಂಡಂತೆಲ್ಲಾ, ವಿದೇಶೀ ಬಂಡವಾಳಗಳು ನಮ್ಮಲ್ಲಿ ಅಧಿಕೃತವಾಗಿಯೇ ಹರಿದು ಬರತೊಡಗಿದವು. ಅದರ ಜೊತೆ ಜೊತೆಯಲ್ಲಿಯೇ ಮಾಹಿತಿ ತಂತ್ರಜ್ಞಾನದ ಕ್ರಾಂತಿ ನಮ್ಮ ದೇಶಕ್ಕೆ ವರದಾನವಾಗಿ, ಇಲ್ಲಿನ ಬಹುತೇಕ ಯುವಕ ಯುವತಿಯರಿಗೆ ದಂಡಿಯಾಗಿ ಕೆಲಸ ಸಿಕ್ಕಿ, ತಮ್ಮ ಜೀವಮಾನದಲ್ಲಿ ಊಹಿಸಿಯೋ ನೋಡಲಾರದಷ್ಟು ಹಣ ಗಳಿಸತೊಡಗಿದರೋ ಅಂದಿನಿಂದ ಕೊಳ್ಳುಬಾಕ ಸಂಸ್ಕೃತಿ ನಮ್ಮಲ್ಲಿ ಹೆಚ್ಚಾಗ ತೊಡಗಿತು. ಕೈಯಲ್ಲಿ ಹೇಗೋ ಹೇರಳವಾಗಿ ದುಡ್ಡಿದೆ ಅವಶ್ಕತೆ ಇದೆಯೋ ಇಲ್ಲವೋ ನೀರಿನಂತೆ ದುಡ್ಡನ್ನು ಪೋಲು ಮಾಡುವ ಮಂದಿ ಒಂದಷ್ಟಾದರೆ, ಹಾಗೆ ಗಳಿಸಿದ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿ ಆಸ್ತಿ ಪಾಸ್ತಿಗಳನ್ನು ಮಾಡಿಕೊಂಡವರು ಮತ್ತೊಂದಿಷ್ಟು ಮಂದಿ. ಅಲಿಯವರೆಗೂ 30-40 ಸಾವಿರದ ದ್ವಿಚಕ್ರ ವಾಹನಗಳಲ್ಲಿ ಓಡಾಡುವುದರಲ್ಲಿಯೇ ಸುಖಃ ಕಾಣುತ್ತಿದ್ದವರು, ಸಣ್ಣ ಪುಟ್ಟ ಹೋಟೆಲ್, ಮನೆಯ ಬಳಿಯ ಸಿನಿಮಾ ಮಂದಿರಗಳಿಗೆ ಹೋಗುತ್ತಿದ್ದವರು, ಇದ್ದಕ್ಕಿದ್ದಂತೆಯೇ ಲಕ್ಷಾಂತರ ಬೆಲೆ ಬಾಳುವ ದ್ವಿಚಕ್ರ ವಾಹನಗಳು, ಕೋಟ್ಯಾಂತರ ಬೆಲೆ ಬಾಳುವ ಐಶಾರಾಮಿ ಕಾರ್ ಗಳು, ನಗರದ ಹೊರಒಲಯಗಳಲ್ಲಿ ತಲೆ ಎತ್ತಿದ ಐಶಾರಾಮಿ ಮಾಲ್ ಗಳಲ್ಲಿ ಶಾಪಿಂಗ್, ಮಲ್ಟೀ ಪ್ಲೆಕ್ಸ್ನಲ್ಲಿ ಸಿನಿಮಾ, ಹತ್ತು ರೂಪಾಯಿ ಕೊಟ್ಟು ಬಿಸಿ ಬಿಸಿ ಕಾಫೀ ಟೀ ಕುಡಿಯಲು ಹಿಂದು ಮುಂದು ನೋಡುತ್ತಿದ್ದವರೆಲ್ಲಾ ಇದ್ದಕ್ಕಿದ್ದಂತೆಯೇ, ನೂರಾರು ರೂಗಳು ತೆತ್ತು ತರತರಾವರಿಯ ತಣ್ಣಗಿನ ಕಾಫೀ ಕುಡಿಯಲು ಶುರು ಮಾಡಿಕೊಂಡರೋ ಅಲ್ಲಿಂದಲೇ ದೇಶದಲ್ಲಿ ಒಂದು ರೀತಿ ಅಸಮಾನತೆ, ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗ ತೊಡಗಿತು.

ಯಾವಾಗ ಒಮ್ಮಿಂದೊಮ್ಮೆಲೆ, ಈ ರೀತಿಯ ಕೊಳ್ಳುಬಾಕರು ದೇಶದಲ್ಲಿ ಹುಟ್ಟುಕೊಂಡರೋ, ಆಗ ಸಂತೆಗೆ ತಕ್ಕಂತೆ ಬಂತೆ ಎನ್ನುವಂತೆ ಇವರ ರಿಯಲ್ ಎಸ್ಟೇಟ್, ವಾಹನಗಳ ಅಗತ್ಯಕ್ಕೆ ತಕ್ಕಂತೆ ನೂರಾರು ಕಂಪನಿಗಳು ನಾಯಿ ಕೊಡೆಯಂತೆ ಹುಟ್ಟುಕೊಂಡವು. ಕಾಲ ಚಕ್ತ್ರ ಉರುಳಿದಂತೆಲ್ಲಾ, ಹೇಗೆ ಗಡಿಯಾರದ ಮುಳ್ಳು, ಒಮ್ಮೆ ಮೇಲಕ್ಕೆ ಹೋದದ್ದು ಕೆಲವು ಸಮಯದ ನಂತರ ಕೆಳಕ್ಕೆ ಬರುತ್ತದೆಯೋ ಹಾಗೆಯೇ, ಆಗ ಉಚ್ಚ್ರಾಯ ಸ್ಥಿತಿಯಲ್ಲಿ ಇದ್ದ ರಿಯಲ್ ಎಸ್ಟೇಟ್, ವಾಹನಗಳ ತಯಾರಿಕಾ ಕಂಪನಿಗಳ ಆದಾಯ ಸ್ವಲ್ಪ ಕಡಿಮೆಯಾಗ ತೊಡಗಿದೆ. ಬಹುತೇಕ ನಗರ ವಾಸಿಗಳ ಬಳಿ ಒಂದಕ್ಕಿಂತ ಹೆಚ್ಚಿನ ವಾಹನಗಳು ಮತ್ತು ಸೈಟು/ಮನೆಗಳು ಇರುವ ಕಾರಣ ಮತ್ತು ಜಾಗತೀಕ ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವವರು ತಮ್ಮ ಹೂಡಿಕೆಯನ್ನು ಬೇರೆ ದಿಕ್ಕಿನತ್ತ ತಿರುಗಿಸಿದ ಪರಿಣಾಮ ಇಡೀ ವಿಶ್ವದಲ್ಲಿ ಆದಂತೆಯೇ ನಮ್ಮ ದೇಶದಲ್ಲೂ ಸ್ವಲ್ಪ ಆರ್ಥಿಕ ಪರಿಸ್ಥಿತಿ ಏರು ಪೇರಾಗಿರುವುದಕ್ಕೆ ಇಷ್ಟೋಂದು ಗಾಭರಿಯಾಗುವುದು ಅನಾವಶ್ಯಕ.

ಇಂದಿಗೂ ನಮ್ಮಲ್ಲಿ ಹತ್ತು ರೂಪಾಯಿ ದುಡಿದು ಮನೆಗೆ ಹೆಂಗಸರ ಕೈಗೆ ಕೊಟ್ಟಲ್ಲಿ ಆಕೆ ಕೇವಲ ಐದಾರು ರೂಪಾಯಿಗಳನ್ನು ಖರ್ಚುಮಾಡಿ ಉಳಿದ ನಾಲ್ಕೈದು ರೂಪಾಯಿಗಳನ್ನು ತನ್ನ ಸಾಸಿವೇ ಡಬ್ಬಿಯಲ್ಲಿ ಉಳಿತಾಯ ಮಾಡಿ, ಕುಟುಂಬಕ್ಕೆ ಕಷ್ಟ ಬಂದಾಗ ಅದನ್ನು ಉಪಯೋಗಿಸುತ್ತಾಳೆ. ನಮ್ಮ ಪೂರ್ವಜರು ಹಾಸಿಗೆ ಇದ್ದಷ್ಟು ಮಾತ್ರವೇ ಕಾಲು ಚಾಚಬೇಕು ಎಂಬುದನ್ನು ಹೇಳಿ ಕೊಟ್ಟಿದ್ದಾರೆ ಮತ್ತು ಅನಾವಶ್ಯಕ ಖರ್ಚು ಮಾಡಬಾರದು ಮತ್ತು ಪರರ ಕಷ್ಟದಲ್ಲಿ ಸಹಾಯ ಮಾಡು ಎಂದು ಸಾರಿ ಸಾರಿ ಹೇಳಿಕೊಟ್ಟಿದ್ದಾರೆ. ಬಾದ್ರಪದ ಚೌತಿಯಂದು ಚಂದ್ರನ ನೋಡಿದರೆ ವಿನಾಕಾರಣ ಅಪವಾದಕ್ಕೆ ಈಡಾಗುತ್ತೀರೀ ಎಂದು ಎಷ್ಟೇ ಎಚ್ಚರಿಸಿದರೂ, ನಮ್ಮವರು ನೋಡ ಬಾರದು, ನೋಡ ಬಾರದು ಎಂದೇ ಕದ್ದು ಮುಚ್ಚಿ ನೋಡಿ ಅಪವಾದಕ್ಕೆ ಈಡಾಗುವಂತೆ, ಪಾಶ್ಚಾತ್ಯರ ಆಂಧಾನುಕರಣೆಯ ಪಲವಾಗಿ ಅನಾವಶ್ಯಕ ಕೊಳ್ಳು ಬಾಕತನ ಮತ್ತು ದುಂದು ವೆಚ್ಚದ ಪರಿಣಾಮವಾಗಿ ಈ ರೀತಿಯ ಕೃತಕ ಆರ್ಥಿಕ ಅಭದ್ರತೆಯನ್ನು ತಂದು ಕೊಂಡಿದ್ದೇವೆ ಎಂದರೆ ತಪ್ಪಾಗಲಾರದು. ನಾನು ಯಾವುದೇ ಅಂಕಿ ಅಂಶ ತಜ್ಞನಲ್ಲಾ ಅಥವಾ ಜ್ಯೋತಿಯಿಯಂತೂ ಅಲ್ಲವೇ ಅಲ್ಲಾ. ಆದರೆ ನಮ್ಮ ಪೂರ್ವಜರ ನಂಬಿಕೆ, ಆಚಾರ ವಿಚಾರಗಳ ಬಗ್ಗೆ ಸಂಪ್ರೂರ್ಣ ಭರವಸೆ ಇಟ್ಟು ಕೊಂಡವನು. ಹಾಗಾಗಿ ಇನ್ನು ಕೆಲವೇ ಕೆಲವು ತಿಂಗಳೊಳಗೆ ಭಾರತದ ಆರ್ಥಿಕ ಪರಿಸ್ಥಿತಿ ಮತ್ತೊಮ್ಮೆ ಪುಟಿದೆದ್ದು, ನಮ್ಮ ಪ್ರಧಾನಿಗಳು ಮತ್ತು ವಿತ್ತಮಂತ್ರಿಗಳ ಆಶಯದಂತೆ ನಮ್ಮ ದೇಶ ಐದು ಟ್ರಿಲಿಯನ್ ಆರ್ಥಿಕತೆಯತ್ತ ಧಾಪುಗಾಲು ಹಾಕಲಿದೆ ಎನ್ನುವುದು ನನ್ನ ವಯಕ್ತಿಯ ಆಶಯ. ಇಂದು ಸಂಕಷ್ಟಹರ, ವಿಘ್ನವಿನಾಶಕ, ವಿನಾಯಕ ಚೌತಿ ಹಬ್ಬವನ್ನು ಶ್ರಧ್ಧಾ ಭಕ್ತಿಯಿಂದ ಆಚರಿಸಿದ್ದೇವೆ. ಅದಕ್ಕೆ ಪ್ರತಿಯಾಗಿ ಆ ಗಣೇಶ ಖಂಡಿತವಾಗಿಯೂ ನಮ್ಮೆಲ್ಲಾ ಸಂಕಷ್ಟಗಳನ್ನೂ ಅರೀ ಶೀಘ್ರದಲ್ಲಿಯೇ ಪರಿಹರಿಸುತ್ತಾನೆ ಎಂಬ ನಂಬಿಕೆ ನನ್ನದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ…. ಅಂದರೆ ನಮ್ಮ ಕೆಲಸ ನಾವು ಮಾಡೋಣ. ಫಲಾ ಫಲಗಳನ್ನು ಆ ಭಗವಂತನ ಮೇಲೆ ಬಿಡೋಣ.

ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ಎಂದೆಂದೂ, ನಂಬಿ ಕೆಟ್ಟವರಿಲ್ಲವೋ ಎನ್ನುವ ಚಿ. ಉದಯಶಂಕರರ ಹಾಡಿನಂತೆ ದೇಶವನ್ನು ನಂಬಿ ಕೆಟ್ಟವರು ಯಾರೂ ಇಲ್ಲಾ ಮತ್ತು ಕೆಡುವುದು ಇಲ್ಲಾ.

ಏನಂತೀರೀ?

ಹೂವಿನ ಹಾರ

ಹಬ್ಬ ಹರಿ ದಿನಗಳಲ್ಲಿ ದೇವರ ಅಲಂಕಾರ ಮಾಡಲು ಯಾವುದೇ ರೀತಿಯ ಎಷ್ಟೇ ಆಭರಣಗಳಿಂದ ದೇವರನ್ನು ಅಲಂಕರಿಸಿದರೂ ವಿಧ ವಿಧದ ಹೂವುಗಳು ಮತ್ತು ಹೂವಿನ ಹಾರಗಳ ಅಲಂಕಾರದ ಮುಂದೆ ಉಳಿದೆಲ್ಲವೂ ನಗಣ್ಯವೇ ಸರಿ. ಅದೇ ರೀತಿ ಮುನಿಸಿಕೊಂಡಿರುವ ನಾರಿಯರನ್ನು ಸರಳವಾಗಿ ಮತ್ತು ಸುಲಭವಾಗಿ ಒಲಿಸಿಕೊಳ್ಳಲು ಒಂದು ಮೊಳ ಮಲ್ಲೇ ಅಥವಾ ಮಲ್ಲಿಗೆ ಹೂ ಸಾಕು ಎನ್ನುವುದು ಕೆಲವು ಅನುಭವಸ್ತರ ಅಂಬೋಣ. ಸುಮಾರು ವರ್ಷಗಳ ಹಿಂದೆ ಕೃಷ್ಣರಾಜಾ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನ ಹೂವಿನ ಹಾರ ಕೊಂಡು ಕೊಳ್ಳಲು ಹೋದಾಗ ನಡೆದ ಮೋಜಿನ ಸಂಗತಿಯನ್ನೇ ಈ ದಿನ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನಮ್ಮ ತಾಯಿ ಹೂ ಕಟ್ಟುವುದರಲ್ಲಿ ಎತ್ತಿದ ಕೈ. ಯಾವುದೇ ಬಿಡಿ ಹೂಗಳನ್ನು ಅವರ ಮುಂದೆ ತಂದಿಟ್ಟಲ್ಲಿ ಕ್ಷಣಾರ್ಧದಲ್ಲಿಯೇ ಅದರ ಜೊತೆ ನಾನಾ ರೀತಿಯ ಪತ್ರೆಗಳನ್ನೋ ಇಲ್ಲವೇ ಗರಿಕೆಯನ್ನೋ ಸೇರಿಸಿ ಬಹಳ ಒತ್ತಾಗಿ, ಮುದ್ದಾಗಿ ಹೂವಿನ ಹಾರವನ್ನು ಕಟ್ಟಿ ದೇವರಿಗೆ ಮುಡಿಸಿ ಬಿಡುತ್ತಿದ್ದರು. ನಮ್ಮ ಅಮ್ಮನ ಕಟ್ಟಿದ ಒಂದು ಮೊಳ ಹೂವಿನಲ್ಲಿ ಹೂ ಮಾರುವವರು ಎರಡು ಇಲ್ಲವೇ ಮೂರು ಮೊಳ ಕಟ್ಟಬಹುದಾಗಿತ್ತು ಎಂದರೆ ನಮ್ಮ ತಾಯಿ ಎಷ್ಟು ಚೆನ್ನಾಗಿ ಮತ್ತು ಒತ್ತಾಗಿ ಕಟ್ಟುತ್ತಿದ್ದರು ಎಂಬ ಅರಿವಾಗುತ್ತದೆ.

hara3
ಸುಮಾರು ವರ್ಷಗಳ ಹಿಂದೆ ಗೌರಿ ಗಣೇಶ ಹಬ್ಬಕ್ಕಿಂತ ಎರಡು ಮೂರುಗಳ ದಿನಗಳ ಮುಂಚೆ ನನ್ನನ್ನು ಕರೆದು ಹಬ್ಬದ ಹಿಂದಿನ ದಿನ ಹೂ ಹಣ್ಣುಗಳ ಬೆಲೆ ಜಾಸ್ತಿ ಮಾಡಿಬಿಡ್ತಾರೆ ಹಾಗಾಗಿ, ನಾಳೆ ಕಾಲೇಜಿನಿಂದ ಬರುವಾಗ ಮಾರ್ಕೆಟ್ಟಿಗೆ ಹೋಗಿ ಸ್ವಲ್ಪ ಹೂವು, ಹಣ್ಣು ಮತ್ತು ಪತ್ರೆಗಳನ್ನು ತೆಗೆದು ಕೊಂಡು ಬಾ ಎಂದರು. ಮಾರನೆಯ ದಿನ ಮಧ್ಯಾಹ್ನವೇ ಕಾಲೇಜ್ ಮುಗಿಸಿ ಕೊಂಡು ಕೆ.ಆರ್ ಮಾರ್ಕೆಟ್ಟಿಗೆ ಹೋಗಿ ಮೊದಲು ಐದು ತರಹದ ಹಣ್ಣುಗಳನ್ನು ಕೊಂಡು ಕೊಂಡು ನಂತರ ಮರುಗ, ದವನ, ಮಂಚಿ ಪತ್ರೆಗಳನ್ನು ಕೊಂಡು ಕೊಂದು ಅದರ ಪಕ್ಕದಲ್ಲೇ ಬಿಡಿ ಹೂವುಗಳಾದ ಮಲ್ಲಿಗೆ, ಕನಕಾಂಬರ, ಸೇವಂತಿ, ಕಣಗಲೆ, ಬಣ್ಣ ಬಣ್ಣದ ಗುಲಾಬಿ, ಡೇರೇ, ಹೂವುಗಳನ್ನು ತೆಗೆದುಕೊಂಡು ಆದಾದ ನಂತರ ಕಟ್ಟಿದ ಸೇವಂತಿ ಮತ್ತ್ತು ಮಲ್ಲೇ ಹೂವುಗಳ ಮಾರುಗಳನ್ನು ಕೊಂಡು ಕೊಂಡೆ. ದೇವರ ಅಲಂಕಾರಕ್ಕೆ ಒಂದೆರದು ಮಲ್ಲಿಗೆ ಹೂವಿನ ಹಾರ ಅದರ ಜೊತೆಗೆ ಅಲ್ಲೇ ಪಕ್ಕದಲ್ಲೇ ಇದ್ದ ಅರಿಶಿನ ಕುಂಕುಮ ಅಂಗಡಿಯಲ್ಲಿ ಒಂದೆರಡು ಕಟ್ಟು ಚಿಗುರು ವಿಳ್ಳೇದೆಲೆ, ಆಡಿಕೆ, ಕರ್ಪೂರ, ಊದುಕಡ್ಡಿ ಅದರ ಜೊತೆಗೆ ಹತ್ತಿಯಿಂದ ಮಾಡಿದ ಬಣ್ಣ ಬಣ್ಣದ 21 ಎಳೆಯ ಗೆಜ್ಜೆವಸ್ತ್ರ ಹೀಗೆ ಅಮ್ಮಾ ಹೇಳಿದ ಎಲ್ಲವುಗಳನ್ನೂ ತೆಗೆದು ಕೊಂಡು ಅಮ್ಮಾ ಬರೆದು ಕೊಟ್ಟಿದ್ದ ಚೀಟಿಯನ್ನು ಮತ್ತೊಮ್ಮೆ ಪರಿಶೀಲಿಸುತ್ತಿದ್ದಾಗ , ಹೂವುಗಳ ರಾಜ ಸುಗಂಧರಾಜ ಹೂವಿನ ಹಾರವನ್ನು ಕೊಂಡಿರಲಿಲ್ಲ.

ಸರಿ ಸುಗಂಧರಾಜ ಹೂವಿನ ಹಾರ ಎಲ್ಲಿ ಮಾರುತ್ತಿದ್ದಾರೆ ಎಂದು ನೋಡುತ್ತಿದ್ದಾಗ ಅಲ್ಲೇ ಒಬ್ಬ ನಡು ವಯಸ್ಸಿನವರೊಬ್ಬರು ಕೈಯಲ್ಲಿ ಸುಗಂಧರಾಜಾ ಹೂವಿನ ಹಾರ ಹಿಡಿದು ಓಡಾಡುತ್ತ ವ್ಯಾಪಾರ ಮಾಡುತ್ತಿದ್ದನ್ನು ನೋಡಿ ಅವರ ಬಳಿ ಹೋಗಿ, ಏನಪ್ಪಾ ಹಾರ ಎಷ್ಟು ಎಂದು ಕೇಳಿದೆ. ಅದಕ್ಕೆ ನನ್ನನ್ನು ಅಡಿಯಿಂದ ಮುಡಿಯವರೆಗೆ ಒಮ್ಮೆ ನೋಡಿ 25ರೂ ಜೊತೆ ಅಂತ ಹೇಳಿದರು. ಅರೇ ಅಷ್ಟೊಂದಾ!! ಬಿಡಿ ಹೂವೇ ಕೆಜಿಗೆ 25 ಇದೆ. ಈ ಹಾರಕ್ಕೆ ಇಷ್ಟೊಂದಾ? ಎಂದು ಕೇಳಿದೆ. ಅದಕ್ಕೆ ಹಾರಾ ನೋಡಿ ಅಮೇಲೆ ಮಾತಾಡಿ ಎಂದ. ನಾನೂ ಕೂಡ ಹಾರಾನೇ ನೋಡ್ತಾನೇ ಇದ್ದೀನಲ್ಲಾ. ಸ್ವಲ್ಪ ಕಡಿಮೆ ಮಾಡಿಕೊಡಿ. ನನಗೆ ಎರಡು ಜೊತೆ ಬೇಕು ಎಂದೆ. ಎರಡೇನು? ನಾಲ್ಕು ಜೊತೆ ಬೇಕಿದ್ರೂ ತೆಗೊಳ್ಳಿ ಕೊಡ್ತೀನಿ. ನೀನಿನ್ನು ಚಿಕ್ಕ ಹುಡುಗಾ ಹಾರ ಸುಮ್ಮನೆ ಕಣ್ಣಿನಲ್ಲಿ ನೋಡಿ ತಗೋಬಾರ್ದು. ಹಾರ ತೊಗೊಳದಕ್ಕೆ ಮುಂಚೆ ಹಾರಾನ ಒಂದು ಸರಿ ಕೈಯಲ್ಲಿ ಹಿಡಿದು ನೋಡಿ ತೆಗೆದುಕೊಳ್ಳಬೇಕು ಎಂದು ಕಣ್ಣು ರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ನನ್ನ ಕೈಗೆ ಹಾರವನ್ನು ಹಾಕಿಬಿಟ್ಟ. ಬೆನ್ನ ಹಿಂದೆ ಕಾಲೇಜ್ ಬ್ಯಾಗ್, ಎರಡೂ ಕೈಗಳಲ್ಲಿಯೂ ವಿವಿಧ ಹೂಗಳ ಚೀಲ ಇತ್ತು. ಅದರ ಮಧ್ಯೆ ಹೂವಿನ ಹಾರ ನನ್ನ ಕೈಗೆ ಬಿತ್ತು. ಕೈಗಳಲ್ಲಿ ಇದ್ದ ಹೂವಿನ ಚೀಲಗಳನ್ನು ಕೆಳಗಿಟ್ಟು ಬಲಗೈಯಲ್ಲಿ ಹೂವಿನ ಹಾರ ಹಿಡಿದು, ಹಾರಾ ಏನೋ ಚೆನ್ನಾಗಿಯೇ ಇದೇ. ಸರಿ ಕೊಡುವುದನ್ನು ಹೇಳಿ ಎಂದೆ. ಅದಕ್ಕೆ ಆಗಲೇ ಹೇಳಿದ್ದೀನಲ್ಲಾ, ಜೋಡಿ 25. ಸರಿ ಎರಡು ರೂಪಾಯಿ ಕಡಿಮೆ ಮಾಡಿ ಕೊಡಿ ಎಂದ. ನಾನು ಇಲ್ಲಾ ಇಲ್ಲಾ ಆಷ್ಟು ಕೊಡುವುದಕ್ಕೆ ಆಗುವುದಿಲ್ಲ. 15ರೂಪಾಯಿ ಕೊಟ್ರೇ ಕೊಡಿ. ಇಲ್ಲಾಂದ್ರೇ ಬೇಡ ಎಂದೆ. ನಾನು 15ಕ್ಕೆ ಕೇಳಿ ಕೊನೆಗೆ 18 ಇಲ್ಲವೇ 20 ಕ್ಕೆ ಕೊಡಬಹುದು ಎಂದು ನನ್ನ ಭಾವನೆಯಾಗಿತ್ತು. ಆದರೆ ಅಲ್ಲಿ ನಡೆದದ್ದೇ ಬೇರೆಯದೇ ಆಗಿತ್ತು.

ಇಲ್ಲಾ 23ಕ್ಕಿಂತ ಒಂದು ರೂಪಾಯಿ ಕಡಿಮೆ ಕೊಡೋದಿಲ್ಲಾ ಎಂದ ಆತ. ಹಾಗಿದ್ರೇ ನನಗೆ ಬೇಡ ಬಿಡಿ. ನಾನು ಬೇರೆ ಎಲ್ಲಾದರೂ ತೆಗೆದುಕೊಳ್ತೀನಿ ಎಂದು ಹಾರ ವಾಪಸ್ಸು ಮಾಡಲು ಹೋದ್ರೆ, ಆತ ತೆಗೆದುಕೊಳ್ಳಲು ಸಿದ್ದವೇ ಇರಲಿಲ್ಲ. ಹಾರ ಒಂದು ಸಲಾ ಮುಟ್ಟಿ ನೋಡಿದ ಮೇಲೆ ತೆಗೆದುಕೊಳ್ಳಲೇ ಬೇಕು ಎಂದು ಎತ್ತರದ ಧನಿಯಲ್ಲಿ ಜೋರು ಮಾಡಿದ. ಆತನ ಏರು ಧನಿಗೆ ಅವನ ಸುತ್ತಾ ಮೂರ್ನಾಲ್ಕು ಅದೇ ರೀತಿ ಹಾರ ಮಾರುವವರು ನನ್ನನ್ನು ಸುತ್ತುವರೆದು ಬಿಟ್ಟರು. ಆ ಕ್ಷಣದಲ್ಲಿ ನನಗೆ ಒಂದು ರೀತಿಯ ಆತಂಕವಾಯಿತಾದರೂ ಸಾವರಿಸಿಕೊಂಡು ಅಷ್ಟೊಂದು ಬೆಲೆ ಹೇಳಿದ್ರೇ ನಾನು ಹೇಗೆ ತೆಗೆದುಕೊಳ್ಳಲಿ, ನಾನು ಕೇಳಿದ ಬೆಲೆಗೆ ಕೊಟ್ರೇ ತೆಗೆದು ಕೊಳ್ತೀನಿ ಇಲ್ಲಾಂದ್ರೇ ಬೇಡ ಎಂದು ನಾನೂ ಎತ್ತರದ ಧನಿಯಲ್ಲಿ ಹೇಳಿದ ಕೂಡಲೇ ಎಲ್ಲರೂ ನನ್ನ ಮೇಲೆ ಮುಗಿಬಿದ್ದರು. ಹಾರ ತೆಗೊಳಲ್ಲಾ ಅಂದ್ರೇ ಕೈಯಲ್ಲಿ ಯಾಕೆ ಹಿಡ್ಕೋಬೇಕಿತ್ತು ಅಂತಾ ಒಬ್ಬ ಅಂದ್ರೇ, ವ್ಯಾಪಾರ ಮಾಡೊದಿಕ್ಕೆ ಬರೋದಿಲ್ಲ ಅಂದ್ರೇ ಈ ಚಿಕ್ಕ ವಯಸ್ಸಿನ ಹುಡುಗರು ಯಾಕೆ ಬರ್ತೀರಿ ಅಂದಾ ಮತ್ತೊಬ್ಬ. ಸರಿ ಇನ್ನು ಒಂದು ರೂಪಾಯಿ ಕಡಿಮೆ ಮಾಡ್ತೀನಿ 22 ರೂಪಾಯಿ ಕೊಟ್ಟುಬಿಡು ಎಂದು ಧಮ್ಕಿಹಾಕಿದ ಮತ್ತೊಬ್ಬ. ಸುಮ್ಮನೆ ಹಾರದ ಬೆಲೆ ಕೇಳಿದ್ದಕ್ಕೆ , ಆವನೇ ಕೈಗೆ ಹಾರ ಕೊಟ್ಟು ಈಗ ಈ ರೀತಿಯಲ್ಲಿ ಧಮ್ಕಿ ಹಾಕುತ್ತಿದ್ದದ್ದು ನನಗೇಕೋ ಸರಿ ಬಾರದೇ ಅವನು ಬಿಟ್ಟಿ ಕೊಟ್ರೂ ತೆಗೆದು ಕೊಳ್ಳಬಾರದು ಎಂದು ನನ್ನ ಮನಸ್ಸು ಹೇಳಿತು. ಬೇಡಾ ಬೇಡ ನನಗೆ ಹಾರ ಬೇಡಾ ಎಂದು ಮತ್ತೊಮ್ಮೆ ಹಾರ ಹಿಂದಿರುಗಿಸಲು ಪ್ರಯತ್ನಿಸಿದೆ. ಸುಮ್ಮನೆ ದುದ್ಡು ಕೊಡ್ತೀಯೋ ಇಲ್ಲ ನಾನೇ ಜೋಬಿನಿಂದ ತೆಗೆದುಕೊಳ್ಳಲೋ ಎಂದಾಗ ನನಗೆ ಅಳುವುದೊಂದೇ ಬಾಕಿ. ಇದೊಳ್ಳೇ ಗ್ರಹಚಾರವಾಯ್ತಲ್ಲಪ್ಪಾ. ಇವರಿಂದ ಹೇಗೆ ಬಚಾವಾಗುವುದು ಎಂದು ಯೋಚಿಸುತ್ತಿದ್ದ ಹಾಗೆ, ದೇವರೇ ಬಂದಂತೆ ಟೀ.. ಟೀ.. ಗರ್ಮಾ.. ಗರಂ.. ಟೀ.. ಎಂದು ಟೀ ಮಾರುತ್ತಾ ಒಬ್ಬ ಸಣ್ಣ ಹುಡುಗ ಬಂದು, ಆ ಹೂವಿನವನಿಗೆ ಅಣ್ಣಾ ಟೀ ತಗೋ ಎಂದ. ಅದಕ್ಕೆ ಆ ಹಾರ ಮಾರುವವನು, ಇಂತಹವರು ಬಂದು ನನ್ನ ತಲೆ ಬಿಸಿ ಮಾಡಿ ಬಿಡ್ತಾರೆ. ಸರಿ ಸರಿ ಟೀ ಕೊಡಪ್ಪಾ ಎಂದು ಟೀ ಕಪ್ ತೆಗೆದುಕೊಳ್ಳಲು ಕೈ ಚಾಚಿದ. ಅಂತಹ ಕ್ಷಣವನ್ನೇ ಬಕಪಕ್ಷಿಯಂತೆ ಕಾಯುತ್ತಿದ್ದ ನಾನು, ಚಾಚಿದ್ದ ಅವನ ಕೈಗೆ ಹೂವಿನ ಹಾರವನ್ನು ತಗಲು ಹಾಕಿ ಎರಡೂ ಕೈಗಳಲ್ಲಿ ಭಾರವಾದ ಚೀಲಗಳನ್ನು ಹಿಡಿದು ಎದ್ದೆನೋ, ಬಿದ್ದೆನೋ ಎಂದು ಒಂದೇ ಉಸಿರಿನಲ್ಲಿ ಬಸ್ ಸ್ಟಾಂಡಿನ ಕಡೆ ಓಟ ಕಿತ್ತೆ. ಇಂತಹ ಕ್ಷಣವನ್ನು ಆ ಹಾರ ಮಾರುವವರೂ ನೀರೀಕ್ಷಿಸದ ಕಾರಣ ಆವರೂ ತಬ್ಬಿಬ್ಬಾಗಿ ಏ.. ಏ… ಏ… ಅಂತಾ ಕೂಗುತ್ತಿದ್ದದ್ದು ಮಾತ್ರಾ ನನಗೆ ಕೇಳಿಸುತ್ತಿತ್ತು. ಬೀಸೋ ದೊಣ್ಣೆ ತಪ್ಪಿಸಿಕೊಂಡರೇ ನೂರು ವರ್ಷ ಆಯಸ್ಸು ಎನ್ನುವ ಹಾಗೆ ಒಂದೇ ಗುಕ್ಕಿನಲ್ಲಿ ಓಡಿ ಬಂದು ಸಿದ್ಧವಾಗಿದ್ದ ಬಸ್ ಹತ್ತಿ ಮನೆಗೆ ಬಂದೆ.

hara4

ಮನೆಗೆ ಬರುವಷ್ಟ್ರಲ್ಲಿ ನಮ್ಮತಾಯಿ ದೊಡ್ಡ ದೊಡ್ಡ ಪಂಚೆಗಳನ್ನು ನೆನೆಸಿ ಹೂ ಪತ್ರೆಗಳನ್ನು ಕೆಡದಂತೆ ಎತ್ತಿಡಲು ಸಿದ್ಧ ಮಾಡಿಟ್ಟಿದ್ದರು. ನಾನು ಎಲ್ಲಾ ಚೀಲಗಳನ್ನು ಅವರ ಕೈಗಿತ್ತು. ಕೈಕಾಲು ಮುಖಾ ತೊಳೆದುಕೊಂಡು ಅಡುಗೆ ಮನೆಯಿಂದ ಊಟ ಹಾಕಿಕೊಂಡು ಹಜಾರಕ್ಕೆ ಬರುವಷ್ಟರಲ್ಲಿ, ಇದೇನೋ ಮಗೂ ಹಾರಾನೇ ತಂದಿಲ್ಲಾ. ಮತ್ತು ಕಟ್ಟಿದ ಮಾರಿನ ಹೂವನ್ನು ಇದೇಕೆ ಇಷ್ಟು ಕಡೆಮೆ ತಂದಿದ್ದೀಯಾ ಬಾಗಿಲುಗಳಿಗೆ ಹಾಕಿದರೆ ಪೂಜೆಗೇ ಸಾಲೋದಿಲ್ಲ ಎಂದರ ನಮ್ಮಮ್ಮ. ಅಯ್ಯೋ ಅದು ಒಂದು ದೊಡ್ಡ ಕಥೆ ಎಂದು ನಿಧಾನವಾಗಿ ಊಟ ಮಾಡುತ್ತ ನಡೆದದ್ದೆಲ್ಲವನ್ನೂ ಸವಿವರವಾಗಿ ಹೇಳಿ, ಇನ್ನೊಮ್ಮೆ ನಾನು ಮಾತ್ರಾ ಒಬ್ಬನೇ ಹೂ ತರಲು ಮಾರ್ಕ್ಕೆಟ್ಟಿಗೆ ಹೋಗೋದಿಲ್ಲಪ್ಪಾ ಎಂದೆ. ಅಯ್ಯೋ ವ್ಯಾಪಾರ ಮಾಡಲು ಹೋದಾಗಾ ಇದೆಲ್ಲಾ ಸಹಜ. ಇದನ್ನು ಒಂದು ಪಾಠ ಅಂತಾ ತಿಳಿದು ಅದರಿಂದ ಕಲಿತು ಕೊಳ್ಳಬೇಕೇ ಹೊರತು, ವ್ಯಾಪಾರಕ್ಕೇ ಹೋಗುವುದಿಲ್ಲಾ ಅನ್ನೋದು ಸರಿಯಲ್ಲಾ. ಅದು ಹೇಡಿಗಳ ಲಕ್ಷಣ ಎಂದರು ನಮ್ಮಮ್ಮ.

ಅದು ಸರಿ ಐದು ಮಾರು ಮಲ್ಲೇ ಮತ್ತು ಸೇವಂತಿಕೆ ತಂದಿದ್ದನಲ್ಲಾ ಎಂದು ಯೋಚಿಸಿ ಎಷ್ಟು ಇದೆ ಎಂದು ನೋಡಿದರೆ ಎರಡೂ ಸಹಾ ಮೂರರಿಂದ ಮೂರೂವರೆ ಮಾರು ಆಷ್ಟೇ ಇತ್ತು. ನಮ್ಮ ಮುಂದೆ ಅಳೆದು ತೋರಿಸುವಾಗ ಸರಿಯಾಗಿ ಅಳೆದು ಹಾಕಿ ಪೊಟ್ಟಣ ಕಟ್ಟುವಾಗ ಹೂವಿನಮ್ಮ ತನ್ನ ಕರಾಮತ್ತು ತೋರಿರುವುದು ಗೊತ್ತಾಯಿತು. ವ್ಯಾಪಾರ ದ್ರೋಹ ಚಿಂತನಂ ಎನ್ನುವುದು ಗಾದೆ ಮಾತಾದರೂ, ಒಮ್ಮೆ ಒಪ್ಪಿಕೊಂಡ ಬೆಲೆಗೆ ಸರಿಯಾದ ಅಳತೆ ಮತ್ತು ತೂಕವನ್ನು ಕೊಡುವುದು ವ್ಯಾಪಾರಿಗಳ ಕರ್ತವ್ಯ ಮತ್ತು ಅದನ್ನು ಸರಿಯಾಗಿ ಕೇಳಿ ಪಡೆಯುವುದು ನಮ್ಮ ಹಕ್ಕೂ ಹೌದು.

ಇಂದಿಗೂ ಸಹಾ ಹಬ್ಬ ಹರಿದಿನಗಳು ಬಂದಾಗ , ಹೂವು ಹಣ್ಣುಗಳನ್ನು ತರಲು ಹೋದಾಗ ಈ ಪ್ರಸಂಗ ನನ್ನ ನೆನಪಿಗೆ ಬಂದು ಎಚ್ಚರಿಕೆಯಿಂದ ವ್ಯಾಪಾರ ಮಾಡಲು ನೆನಪಿಸುತ್ತದೆ ಅದರ ಜೊತೆ ಜೊತೆಯಲ್ಲಿಯೇ ತಂದ ಹೂಗಳನ್ನು ಅಮ್ಮನ ಜೊತೆ ಕುಳಿತು ಕೊಂಡು ನಾವು ಜೋಡಿಸಿ ಕೊಡುತ್ತಿದ್ದರೆ ಅವರು ಅದನ್ನು ಪಟ ಪಟನೇ ಚೆಂದದ ಹೂವಿನ ಹಾರಗಳು ಮತ್ತು, ತೋಮಾಲೆಗಳನ್ನಾಗಿ ಕಟ್ಟುತ್ತಿದ್ದದ್ದು ನೆನಪಾಗಿ ನನಗೇ ಅರಿವಿಲ್ಲದಂತೆಯೇ ಗಂಟಲು ಉಬ್ಬಿ ಹೃದಯ ತುಂಬಿಬಂದರೆ ಇಷ್ಟು ದಿನಗಳಾದರೂ ಕಣ್ಣಂಚಿನಲ್ಲಿ ನೀರೂರುತ್ತದೆ. ಅದಕ್ಕೇ ಹೇಳುವುದು ನೆನಪುಗಳು ಮಧುರ ಎಂದು. ಅದು ಒಳ್ಳೆಯದಾಗಿರಲೀ, ಇಲ್ಲವೇ ಕೆಟ್ಟದ್ದಾಗಿರಲಿ ಅವುಗಳು ನಮ್ಮೊಂದಿಗೆ ಸದಾ ಕಾಲವೂ ಇದ್ದೇ ಇರುತ್ತವೆ ಮತ್ತು ಜೀವನದಲ್ಲಿ ಅನುಭವದ ಪಾಠವನ್ನು ಕಲಿಸುತ್ತದೆ. ಅನುಭವದಲ್ಲಿ ಕಲಿತದ್ದನ್ನು ಎಂದೂ ಯಾರೂ ಮರೆಯುಲಾರರು ಮತ್ತು ಮರೆಯಲೂ ಬಾರದು.

ಏನಂತೀರೀ?

ಪಟಾ ಪಟಾ ಹಾರೋ ಗಾಳಿಪಟ

ಹೊಸದಾಗಿ ಮದುವೆಯಾದ ಸಹೋದ್ಯೋಗಿ ಸುಮಾರು ಎಂಟು ಗಂಟೆಯಾದರೂ ಇನ್ನೂ  ಕಛೇರಿಯಲ್ಲಿಯೇ ಇದ್ದದ್ದನ್ನು ಗಮನಿಸಿದ ನಾನು, ಏನಪ್ಪಾ ರಾಜಾ, ಮನೆಗೆ ಹೋಗುವುದಿಲ್ಲವಾ?  ಮೊನ್ನೆ ಮೊನ್ನೆ ತಾನೇ  ಮದುವೆ ಆಗಿದ್ದೀಯಾ,ನಿಮ್ಮ ಮನೆಯಲ್ಲಿ ನಿಮ್ಮ ಮನೆಯವರು ಒಬ್ಬರೇ ಇರುತ್ತಾರೆ ಮತ್ತು ನಿನ್ನ ಆಗಮನವನ್ನೇ ಕಾಯುತ್ತಿರುತ್ತಾರೆ.  ಪರವಾಗಿಲ್ಲಾ ನಾಳೆ ಕೆಲಸ ಮುಂದುವರಿಸುವಂತೆ ಎಂದು ತಿಳಿಹೇಳಿದೆ.  ಅದಕ್ಕವನು ಸಾರ್, ಹಾಗೇನಿಲ್ಲ ಸಾರ್. ಮನೆಯಲ್ಲಿ ಯಾರೂ ಇಲ್ಲಾ. ಸುಮ್ಮನೆ ಮನೆಗೆ ಹೋಗಿ ಮಾಡಲು ಏನೂ ಕೆಲಸ ಇಲ್ಲ. ಅದೇ ಟಿವಿ ನೋಡುವ ಬದಲು  ಎಲ್ಲಾ ಕೆಲಸ ಮುಗಿಸ್ತಾಇದ್ದೀನಿ ಅಂದ. ಯಾಕೇ? ಮನೆಯವರು ಇಲ್ವಾ? ಎಲ್ಲಿಗೆ ಹೋಗಿದ್ದಾರೆ ಅಂತಾ ಕೇಳಿದ್ದಕ್ಕೆ. ಸ್ವಲ್ಪ  ಬೇಸರದಿಂದ. ಸಾರ್ ಹೋದವಾರನೇ ಅವರ  ಅಪ್ಪಾ ಅಮ್ಮಾ ಬಂದು ಆಷಾಡ ಮಾಸ ಅಂತ ತವರಿಗೆ ಕರೆದುಕೊಂಡು ಹೋದ್ರು ಅಂದ. ಓಹೋ!!  ರಾಯರ ಬೇಸರಕ್ಕೆ ಇದಾ ಕಾರಣ. ಹಾಗಿದ್ರೆ ರಾಯರು ಮದುವೆಯಾದ ಮೇಲಿನ ಬ್ರಹ್ಮಚಾರಿ ಎಂದು ಅವನ ಕಾಲೆಳೆದು ನಮ್ಮ ಮೊದಲ ಆಷಾಡದ ವಿರಹ ವೇದನೆಯನ್ನು  ನೆನೆಸಿ ಕೊಂಡೆ.

ಮದುವೆಯಾದ ಮೊದಲ ವರ್ಷದ ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಂದೇ ಸೂರಿನಡಿಯಲ್ಲಿ ಇರಬಾರದೆಂಬ  ಶಾಸ್ತ್ರದ ಪ್ರಕಾರ ನಮ್ಮ ಮನೆಯವರನ್ನು ನಮ್ಮ ಮನೆಯಿಂದ  ಸುಮಾರು ಮೂರ್ನಾಲ್ಕು ಕಿಮೀ ದೂರದಲ್ಲಿಯೇ ಇದ್ದ ಅವರ ತವರು ಮನೆಗೆ  ಕಳುಹಿಸಿದ್ದೆವಾದರೂ  ಅಗಾಗ  ಕಛೇರಿ ಮುಗಿಸಿ ಸಂಜೆ ಭೇಟಿಯಾಗಲು ತೊಂದರೆ ಇರಲಿಲ್ಲ. ವಾಸ್ತವವಾಗಿ ಆ ಒಂದು ತಿಂಗಳಿನಲ್ಲಿಯೇ ನಾವು ಅತ್ಯಂತ ಹೆಚ್ಚಿನ ಸಮಯ ಕಳೆದಿದ್ದೆವು. ಬಹಳಷ್ಟು ದಿನ ಸಂಜೆ ನೇರವಾಗಿ ನಮ್ಮ ಮನೆಯವರ ಕಛೇರಿಗೆ ಹೋಗಿ ಅವಳನ್ನು ಕರೆದುಕೊಂಡು ಸುತ್ತದ ಜಾಗವಿಲ್ಲ   ತಿನ್ನದೇ ಇರುವ ಪ್ರದೇಶಗಳೇ ಇಲ್ಲವೇನೋ. ಇಂದಿಗೂ ನಮ್ಮಾಕಿ, ನೀವು ತುಂಬಾ ಬದಲಾಗಿದ್ದೀರಿ, ಮುಂಚಿನಂತೆ  ಎಲ್ಲಿಗೂ ಕರೆದು ಕೊಂಡು  ಹೋಗುವುದೇ ಇಲ್ಲಾ ಎಂದು ಮೊದಲ ಆಷಾಡ ಮಾಸದ  ಮೆಲಕನ್ನೇ ಹಾಕುತ್ತಿರುತ್ತಾಳೆ.  ನಿಜಕ್ಕೂ ಹೇಳಬೇಕೆಂದರೆ, ಆಷಾಡ ಮಾಸದ ಸಮಯ ಬೇಸಾಯದ ಸಮಯ. ಆಗಷ್ಟೇ ಮಳೆ ಬಿದ್ದು ಭೂಮಿ ಹಸನಾಗಿರುತ್ತದೆ. ರೈತಾಪಿ ಜನರು ಭೂಮಿಯನ್ನು ಚೆನ್ನಾಗಿ ಉತ್ತಿ ಬೀಜ ಬಿತ್ತುವ ಕಾಯಕದಲ್ಲಿ ತೊಡಗಿರುತ್ತಾರೆ. ಹಾಗಾಗಿ ಹೊಸದಾಗಿ ಮದುವೆಯಾಗಿರುವವರು  ಅದೇ ಗುಂಗಿನಲ್ಲಿಯೇ ಹೆಂಡತಿಯ ಸೆರಗಿನಲ್ಲಿಯೇ ಇದ್ದು ಬೇಸಾಯದಿಂದ ವಿಮುಖರಾಗದಿರಲೆಂದು ಈ ಪದ್ದತಿಯನ್ನು ನಮ್ಮ  ಹಿರಿಯರು ಮಾಡಿರಬಹುದು ಎನ್ನುವುದು ನನ್ನ   ಅಭಿಪ್ರಾಯ.   ಸಂಬಂಧೀಕರ ಇಲ್ಲವೇ ಸ್ನೇಹಿತರ ಶುಭಸಮಾರಂಭಕ್ಕೆ  ಅಂದೆಲ್ಲಾ  ಕನಿಷ್ಟ ಪಕ್ಷ ಒಂದು ವಾರದ ಮುಂಚೆಯೇ ಬಂದು ಸಮಾರಂಭ ಮುಗಿದ ಒಂದು ವಾರದವರೆಗೂ ಅಲ್ಲಿಯೇ ಇದ್ದು ಸಂಭ್ರಮಿಸುವ ಪರಿಪಾಠವಿದ್ದ ಕಾರಣ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗ ಬಾರದೆಂಬ ಕಾರಣದಿಂದಾಗಿ   ಈ ತಿಂಗಳಿನಲ್ಲಿ ಯಾವುದೇ  ಶುಭ ಕಾರ್ಯಗಳಾಗಲೀ, ಶುಭ ಸಮಾರಂಭಗಳನ್ನೂ ಮಾಡುವುದಿಲ್ಲ. ಇಂದಿಗೆ ಬೇಸಾಯ ಮಾಡುವವರೇ ಕಡಿಮೆಯಾಗಿ ಹೋದರೂ ಆ ಪದ್ದತಿಯನ್ನು ಇನ್ನೂ ಹಾಗೆಯೇ ಮುಂದುವರಿಸಿಕೊಂಡು ಬಂದಿರುವುದು ಅನೇಕ ನವ ದಂಪತಿಗಳ ವಿರಹ ವೇದನೆಗೆ ಕಾರಣವಾಗಿರುವುದು ನಿಜಕ್ಕೂ ದೌರ್ಭಾಗ್ಯ.  ಕಾಲ ಬದಲಾದಂತೆ  ಬಹುತೇಕ ಪದ್ದತಿಗಳು ಬದಲಾದರೂ ಇದೊಂದು ಮಾತ್ರ ಹಾಗೆಯೇ ಉಳಿದುರುವುದು ನಿಜಕ್ಕೂ ನವದಂಪತಿಗಳ ಪಾಲಿಗೆ ಶೋಚನೀಯವೇ ಸರಿ.

ಇನ್ನು ನಾವು ಬಾಲ್ಯದಲ್ಲಿದ್ದಾಗ ನಮಗೆಲ್ಲಾ ಆಷಾಡ ಮಾಸ ಬಂದಿತೆಂದರೆ ನಮಗೆ ಸಂಭ್ರಮವೋ ಸಂಭ್ರಮ. ಆಷಾಡ ಮಾಸದಲ್ಲಿ ಗಾಳಿ ಹೆಚ್ಚಾಗಿರುವ ಕಾರಣ  ನಮಗೆಲ್ಲಾ  ಗಾಳಿಪಟ ಹಾರಿಸುವ ಆನಂದ. ಹಾಗಾಗಿ ನಮ್ಮ ಕಡೆ ಆಷಾಢ ಮಾಸದ ಪ್ರಥಮ ಏಕದಶಿಯಂದು  ಗಾಳೀ‌ಪಟದ ವನ್ನು ಆಚರಿಸುತ್ತಾರೆ.  ಪ್ರಥಮ ಏಕಾದಶಿಯಂದು ಗಾಳೀ ಪಟ ಹಬ್ಬವಿದ್ದರೂ  ನಮಗೆಲ್ಲಾ ಇಡೀ ತಿಂಗಳೂ ಗಾಳಿ ಪಟ   ಹಾರಿಸುವುದೇ ಆಟ.  ಗಾಳಿಪಟ ಹಬ್ಬ ಬರುವುದಕ್ಕೆ ಮುಂಚೆಯೇ ಅದಕ್ಕೆ ಜೋರು ತಯಾರಿ ನಡೆದಿರುತ್ತದೆ.  ಪಟಕ್ಕೆ ಮುಖ್ಯ ಆಧಾರವಾದ ದಾರ. ದಾರ ಗಟ್ಟಿ ಇಲ್ಲದಿದ್ದಲ್ಲಿ ಗಾಳಿಯ ರಭಸಕ್ಕೆ  ಪಟದ ಜಗ್ಗಾಟಕ್ಕೆ ಕಿತ್ತು ಹೋಗಿ ಪಟ ದಿಕ್ಕಾಪಾಲಾಗಿ ಹೋಗುತ್ತದೆ. ಹಾಗಾಗಿ ಮೊದಲು ದಾರವನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿಯೇ ಮಾಂಜಾ ಹಾಕುವ ಪ್ರಕ್ರಿಯೆ ಶುರುವಾಗುತ್ತದೆ.  ಗಾಜನ್ನು ಸಣ್ಣ ಸಣ್ಣದಾಗಿ ಪುಡಿ ಮಾಡಿ ಅದಕ್ಕೆ ಮರದ ಅಂಟು ಅರ್ಥಾತ್, ಗೊಂದು ಇಲ್ಲವೇ ಮರವಜ್ರವನ್ನು ಕಾಯಿಸಿ ದ್ರವರೂಪಕ್ಕೆ ತಂದು ಅದಕ್ಕೆ ಪುಡಿ ಮಾಡಿದ ಗಾಜಿನ ಪುಡಿಯನ್ನು ಹಾಕಿ ಚೆಂದವಾಗಿ ಕಾಣಲು ಬಣ್ಣವನ್ನು ಬೆರೆಸಿ ಆ ದ್ರಾವಣವನ್ನು  ಬಟ್ಟೆಯಲ್ಲಿ ಅದ್ದಿಕೊಂಡು ದಾರಕ್ಕೆ ಬಳಿಯುವುದಕ್ಕೇ ಮಾಂಜಾ ಹಾಕುವುದು ಎನ್ನುತ್ತಾರೆ. ಮರವಜ್ರ ಇಲ್ಲವೇ ಗೋಂದಿನ ಬದಲಾಗಿ ಅನ್ನದ ಗಂಜಿಯೋ ಇಲ್ಲವೇ ಮೈದ ಗಂಜಿಯನ್ನೂ ಬಳೆಸುವುದೂ ವಾಡಿಕೆಯಲ್ಲಿದೆ. ಮಾಂಜಾ ಹಾಕುವ ಮುನ್ನಾ ಎರಡು ದೊದ್ಡ ಮರಗಳ ಕೊಂಬೆಗಳಿಗೋ ಇಲ್ಲವೇ ಒಂದು ಮನೆಯ ಗೇಟಿನಿಂದ ಮತ್ತೊಂದು ಮನೆಯ ಗೇಟಿಗೆ  ದಾರವನ್ನು  ಉದ್ದ ಉದ್ದವಾಗಿ ಕಟ್ಟಿ  ಕೈಗೆ ಬಟ್ಟೆ ಕಟ್ಟಿಕೊಂಡು ಮಾಂಜಾ ಹಾಕುತ್ತಾರೆ.  ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕೈ ಕೊಯ್ದುಕೊಂಡು ರಕ್ತ ಬರುವ ಸಂಭವ ಇದ್ದರೂ, ಒಂದು ಪಕ್ಷ ಕೈ ಕೊಯ್ದು ಕೊಂಡು ರಕ್ತ ಬಂದರೂ ಅದನ್ನೇ ಶೌರ್ಯದ ಪ್ರತೀಕ ಎಂದು ಬಿಂಬಿಸುವ ಪರಿಪಾಠವಿತ್ತು. ಹಾಗೆ ಮಾಂಜಾ ಹಾಕಿ ಒಣಗಿಸಿದ  ದಾರವನ್ನು  ಮರದ ರಾಟೆ ಇಲ್ಲವೇ ಡೀಲ್ನಲ್ಲಿ ಸುತ್ತಿಟ್ಟು ಯಾರ ಬಳಿ ದೊಡ್ದ ದೊಡ್ಡದಾದ ಡೀಲ್ ಇರುತ್ತದೋ ಅವನೇ  ಆ ಮಕ್ಕಳ ನಡುವೆ ಹೀರೋ ಎನ್ನುವ ಭಾವ ಇರುತ್ತಿತ್ತು . ಸಾಧಾರಣವಾಗಿ ಮರದ ರಾಟೆಗಳು ಮಗ್ಗದವರ ಬಳಿ ಇರುತ್ತಿದ್ದರಿಂದ ಅವರನ್ನು ಕಾಡಿ ಬೇಡಿ ಹಳೆಯ ರಾಟೆಗಳನ್ನು ತಂದು ಅದಕ್ಕೆ  ಮಾಂಜ ಹಾಗಿದ ದಾರವನ್ನು ಜೋಪಾನವಾಗಿ ಸುತ್ತುತ್ತಿದ್ದೆವು.

ಇನ್ನೂ ಗಾಳಿಪಟ ಮಾಡಲು ಮನೆಯಲ್ಲಿರುವ ಹಳೇ ವೃತ್ತಪತ್ರಿಕೆ ಮತ್ತು ತೆಂಗಿನ ಕಡ್ದಿಯ ಪೊರಕೆಯ ಕಡ್ಡಿಗಳು ಮತ್ತು ಅಂಟಿಸಲು ಗೋಂದು ಇದ್ದರೆ ಸಾಕು. ಬಹಳಷ್ಟು ಸಲಾ ಗೋಂದು ಇಲ್ಲದ ಕಾರಣ ಅನ್ನ ಇಲ್ಲವೇ ರಾಗಿ ಮುದ್ದೆಯನ್ನೇ ಅಂಟಿಸಲು ಬಳೆಸಿರುವ ಉದಾರಣೆಗಳಿಗೆ.  ಚಚ್ಚೌಕವಾಗಿ ಪತ್ರಿಕೆಯನ್ನು ಕತ್ತರಿಸಿಕೊಂಡು ಅದರ ಎರಡೂ ತುದಿಗಳಿಗೆ ಸರಿಯಾಗಿ ಬಿಲ್ಲಿನಂತೆ ಬಾಗುವ ಹಾಗೆ ಸಾಲುವ ಕಡ್ದಿಯನ್ನು ಅಂಟಿಸಿ ಅದರ ಮೇಲೆ ಬಾಣದ ಆಕಾರದಲ್ಲಿ ಮತ್ತೊಂದು ತೆಂಗಿನ ಕಡ್ಡಿಯನ್ನು ಅಂಟಿಸಿ ಕಡ್ಡಿಯ ಎಲ್ಲಾ ತುದಿಗಳು ಮತ್ತು ಕಡ್ಡಿಗಳು ಒಂದು ಗೂಡುವ ಕಡೆಗಳಲ್ಲಿ ಭದ್ರವಾಗಿ ಚಚ್ಚೌಕಾರವಾಗಿ ಕತ್ತರಿಸಿದ ಕಾಗದ ತುಣುಕುಗಳನ್ನು ಅಂಟಿಸಿ ಬಾಣದ ಹಾಗೆ ಇರುವ ತಳ ತುದಿಗೆ ಉದ್ದನೆಯ ಬಾಲಗಂಚಿಯನ್ನು ಅಂಟಿಸಿದರೆ ಗಾಳಿಪಟ ತಯಾರು.  ಗಾಳಿಪಟ ಸರಿಯಾಗಿ ಹಾರಲು ನಾವು ಹಾಕುವ ಸೂತ್ರ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಗಾಳಿಪಟದ ಮೇಲ್ತುದಿ ಮತ್ತು ಕೆಳತುದಿಯಿಂದ ಸಮಾನ ಅಂತರದಲ್ಲಿ  ಬಾಣದ ಹಾಗೆ ಅಂಟಿಸಿರುವ ಕಡ್ದಿಯ ಇಕ್ಕೆಲಗಳಲ್ಲಿ ದಾರ ತೂರುವಷ್ಟು ಎರಡು ರಂಧ್ರಗಳನ್ನು ಮಾಡಿ ಅದರೊಳಗೆ ದಾರ ತೂರಿಸಿ ಅದನ್ನು ಸರಿಯಾಗಿ ಮಧ್ಯಕ್ಕೆ ಬರವ ಹಾಗೆ ಒಂದು ಗಂಟು ಹಾಕಿದರೆ ಗಾಳಿಪಟ  ಸಿದ್ಧ.  ಆ ಸೂತ್ರದ ಮಧ್ಯಕ್ಕೆ ಸರಿಯಾಗಿ ರಾಟೆಯಲ್ಲಿ ಸುತ್ತಿಟ್ಟಿದ್ದ  ದಾರದ ತುದಿಯನ್ನು ಕಟ್ಟಿದಲ್ಲಿ  ಗಾಳಿಪಟ ಹಾರಲು ಸಿದ್ಧ. ಸಾಧಾರಣವಾಗಿ ಪಟದ ಎರಡೂ ತುದಿಯನ್ನು ಗಾಳಿಬೀಸುವ ದಿಕ್ಕಿನಲ್ಲಿ ಒಬ್ಬ ಹಿಡಿದು ಕೊಂಡರೆ ಮತ್ತೊಬ್ಬ ದಾರವನ್ನು ಹಿಡಿದುಕೊಂಡು  ಜೋರಾಗಿ ಗಾಳಿಯತ್ತ ಗಾಳಿಪಟವನ್ನು ತೂರಿಬಿಡುತ್ತಾನೆ. ಆಗ ದಾರ ಹಿಡಿದಿರುವಾತ ಗಾಳಿಗೆ ತಕ್ಕಂತೆ ಮೇಲೆ ಏರುವ ಪಟಕ್ಕೆ ಅಗತ್ಯವಾದಷ್ಟು ದಾರವನ್ನು ಬಿಡುತ್ತಾ , ಆಗಾಗ ದಾರವನ್ನು  ಕೆಳೆಗೆ ಇಲ್ಲವೇ ಆಚಿವೆ ಎಳೆಯುತ್ತಾ  ಪಟವನ್ನು ಹಾರಿಸುತ್ತಾನೆ. ಸೂತ್ರ ಸರಿಯಾಗಿ ಇದ್ದು ಬಾಲಗೋಂಚಿಯ ಭಾರ ಸರಿಯಾಗಿದ್ದಲ್ಲಿ ಗಾಳಿಯ ರಭಸಕ್ಕೆ   ಪಟ ಕೆಲವೇ ಕ್ಷಣಗಳಲ್ಲಿ ಬಾನೆತ್ತರಕ್ಕೆ ಹಾರುತ್ತದೆ.   ಅದರಲ್ಲಿ  ಯಾವುದೇ ಒಂದು ಸರಿಇಲ್ಲದಿದ್ದಲ್ಲಿ,  ಗಿರಿಗಿರನೇ ಸುತ್ತುತ್ತಾ ಅಲ್ಲಿಯೇ ಬಿದ್ದು ಬಿಡುತ್ತದೆ. ಹಾಗೆ ಬಿದ್ದಾಗ  ಅದನ್ನು ಲಾಂಡ ಪಟ ಎಂದು ಕರೆಯುತ್ತಾರೆ. ಕೂಡಲೇ ಆ ಪಟದ ಸೂತ್ರವನ್ನೋ ಇಲ್ಲವೇ ಬಾಲಗೋಂಚಿ ಭಾರವನ್ನು ಹೆಚ್ಚು ಕಡಿಮೆ ಮಾಡಿ ಯಶಸ್ವಿಯಾಗಿ ಆಗಸದತ್ತ ಹಾರಿಸಿದಾಗ ಆಗುವ ಆನಂದವನ್ನು  ಪದಗಳಲ್ಲಿ ವರ್ಣಿಸುವುದಕ್ಕಿಂತ ಅನುಭವಿಸಿದರೇ ಹೆಚ್ಚು ಆನಂದಮಯ.

ಸಾಧಾರವಾಗಿ  ಮೈದಾನಗಳಲ್ಲಿ ಅನೇಕರು ಇದೇ ರೀತಿ ಗಾಳಿಪಟವನ್ನು ಮಾಡಿ ಹಾರಿಸುತ್ತಿರುವಾಗ ಅವರಿಗೆ ಅರಿವಿಲ್ಲದಂತೆಯೇ ಒಂದು ರೀತಿಯ   ಸ್ವರ್ಧೆ ಎರ್ಪಟ್ಟು ಯಾರ ಪಟ ಹೆಚ್ಚು ಮೇಲೆ ಏರುತ್ತದೆ? ಯಾರ ಪಟ ಅತ್ಯಂತ ದೀರ್ಘಕಾಲ ಬಾನಿನಲ್ಲಿ ಹಾರಡುತ್ತದೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧರಿಸಲ್ಪಡುತ್ತದೆ.  ಕೆಲವೊಮ್ಮೆ ಒಬ್ಬರ ಮೇಲೆ ಒಬ್ಬರಿಗೆ ವೈಮನಸ್ಯವಾಗಿ ಒಬ್ಬರ ಪಟವನ್ನು ಮತ್ತೊಂದು ಪಟದ ದಾರದಿಂದ ಕೀಳಲು ಪ್ರಯತ್ನಿಸುವುದೂ ಉಂಟು ಈ ಪ್ರಕ್ರಿಯನ್ನು ಪೇಂಚ್ ಹಾಕುವುದು ಎನ್ನುತ್ತಾರೆ.  ಯಾರ ಮಾಂಜಾ ದಾರ ಚೆನ್ನಾಗಿರುತ್ತದೋ  ಅದರಲ್ಲಿರುವ ಗಾಜಿನ ಅಂಶ ಮತ್ತೊಂದು ಪಟದ ದಾರವನ್ನು ಹರಿದು ಹಾಕಿದರೆ ಅದೇನೋ ಯುದ್ಧ ಗೆದ್ದ ಸಂಭ್ರಮ. ಹಾಗೆ ದಾರ ಹರಿದು ಗೊತ್ತು ಗುರಿ ಇಲ್ಲದೇ ಹಾರುವ ಪಟವನ್ನು ಹಿಡಿಯಲು ಅದೆಷ್ಟೂ ದೂರ ದಿಕ್ಕಾಪಾಲಾಗಿ  ಆ ಪಟದ ವಾರಸುದಾರರು ಓಡುವುದೂ ಉಂಟು. ಒಟ್ಟಿನಲ್ಲಿ ಆಷಾಡ ಮಾಸದ ಗಾಳಿಯನ್ನು ಬಳಸಿಕೊಂಡು ಗಾಳಿಪಟ ಹಾರಿಸುವ ಆಟ ಅಂದು ನಮಗೆ ಅತ್ಯಂತ ಮೋಜಿನ ಖುಷಿ ಕೊಡುವ ಸಂಗತಿಯೇ ಆಗಿತ್ತು.

ಹೀಗೆ ಗಾಳಿಪಟ ಮಾಡುವಾಗ ಅನೇಕ ಯಡವಟ್ಟುಗಳನ್ನು ಮಾಡಿ ಹಿರಿಯರ ಕೈಯಲ್ಲಿ ಒದೆ ತಿಂದ ಉದಾರಣೆಗಳು ಬಹಳಷ್ಟು. ಅದೊಮ್ಮೆ ಪಟ ಮಾಡಲು ಮನೆಯಲ್ಲಿ ವೃತ್ತ ಪತ್ರಿಕೆಯನ್ನು ಹುಡುಕಿದರೆ, ದುರದೃಷ್ಟವಶಾತ್ ಅಂದಿನ ಬೆಳಿಗ್ಗೆಯೇ ನಮ್ಮ ತಾಯಿಯವರು ರದ್ದಿಗೆ ಹಾಕಿದ್ದಾಗ ಮನೆಯಲ್ಲಾ ತಡಕಿ ಬೀರುವಿನ ಮೇಲೆ ಇಟ್ಟಿದ್ದ ಪೇಪರನ್ನು ಹರಿದು ಕೊಂಡು ಗಾಳಿಪಟ ಮಾಡಿ ಹಾರಿಸಿ ಸಂಭ್ರಮದಿಂದ ಮನೆಗೆ ಬಂದಾಗಲೇ ನನಗೆ ತಿಳಿದಿದ್ದ ನಾನು ಪಟ ಮಾಡಲು ಬಳೆಸಿದ್ದು ನಮ್ಮ ತಂದೆಯವರು ಅತ್ಯಂತ ಜೋಪಾನವಾಗಿ ಎತ್ತಿಟ್ಟಿದ್ದ ಪ್ರಜಾವಾಣಿ ಪತ್ರಿಕೆಯಲ್ಲಿ ಅನಕೃ ಕುರಿತಾದ ಪ್ರಕಟವಾಗಿದ್ದ ವಿಶೇಷ ಸಂಚಿಕೆಯ ಪ್ರತಿ. ಕತ್ತೇಗೇನು ಗೊತ್ತು  ಕಸ್ತೂರಿ ಪರಿಮಳ ಎನ್ನುವಂತೆ  ಆ ಸಂಚಿಕೆಯ ಮಹತ್ವ ಗೊತ್ತಿಲ್ಲದೆ ಹರಿದು ಹಾಕಿದ್ದರ ಪರಿಣಾಮ ಒಂದೆರಡು ಗೂಸಾ ಬಿದ್ದಿತ್ತು. ಇನ್ನು ದೊಡ್ಡ ದೊಡ್ಡ ಪಟ ಮಾಡಲು ಮೈದಾಹಿಟ್ಟಿನ ಗೋಂದು ಮಾಡಲು ಹೋಗಿ  ಅಡುಗೆಮನೆಯಲ್ಲಾ ಗಲೀಜು ಮಾಡಿಟ್ಟು ಅಮ್ಮನ ಕೈಯಿಂದ ಬಾಸುಂಡೆ ತಿಂದ ಸಂದರ್ಭಗಳು ಅದೆಷ್ಟೋ ಇವೆ.

WhatsApp Image 2019-07-05 at 6.58.10 PM (1)

ಗಾಳಿಪಟ ಎಂದ ಮೇಲೆ ನಮ್ಮ ಕೀರ್ತಿಶೇಷ ರಾಮಕೃಷ್ಣಾ ಚಿಕ್ಕಪ್ಪನವರನ್ನು ನೆನಯಲೇ ಬೇಕು. ಕೇವಲ ಚೌಕಾಕಾರದ ಸಾಧಾರಣ ಪಟ ಮಾಡುತ್ತಿದ್ದ ನನಗೆ ಎಂಟು ಕಡ್ದಿಯ ಪಟ,  ಹದಿನಾರು ಕಡ್ಡಿಯ  ಆಯಾತಾಕಾರದ ಪಟ, ನಕ್ಷಾತ್ರಾಕಾರದ ಪಟ, ಮತ್ತು ಪಟದ ತುದಿಯಲ್ಲಿ  ಕೋಡಿನಂತೆ ಕಡ್ಡಿಗಳನ್ನು  ಬಿಟ್ಟು ಅವುಗಳ ನಡುವೆ ತೋರಣಗಳಂತೆ ಪೇಪರಿನಲ್ಲಿ ಕತ್ತರಿಸಿ ಅಂಟಿಸಿ ಅವುಗಳು ಗಾಳಿಯಲ್ಲಿ ಹಾರುವಾಗ ಪಟ ಪಟ ಎಂದು ಮಾಡುತ್ತಿದ್ದ ಶಬ್ಧ ನನ್ನ ಕಿವಿಯಲ್ಲಿ ಇನ್ನೂ ಹಾಗೆಯೇ ಇದೆ. ಸಾಧಾರಣ ವೃತ್ತ ಪತ್ರಿಕೆಯಲ್ಲಿ ಮಾಡಿದ ಪಟ ಗಾಳಿಯ ರಭಸಕ್ಕೆ ಹರಿದು ಹೋಗುತ್ತಿದ್ದ ಕಾರಣ ಆಸ್ಪತ್ರೆಯಲ್ಲಿ ಎಕ್ಸರೇ ಹಾಕಿಡಲು ಬಳೆಸುತ್ತಿದ್ದ ದಪ್ಪನೆಯ ಹಳದೀ ಇಲ್ಲವೇ ಬೂದು ಬಣ್ಣದ ಕಾಗದ ನಂತರ ಪ್ಲಾಸ್ಟಿಕ್ ಪಟವನ್ನೂ ಮಾಡಲು ಹೇಳಿಕೊಟ್ಟವರೇ ಆವರು. ಅಯಾಯಾ ಪಟಕ್ಕೆ ತಕ್ಕಂತೆ ಹೇಗೆ  ಸೂತ್ರವನ್ನು ಹಾಕಬೇಕೆಂಬ ಲೆಕ್ಕಾಚಾರ ಕಲಿತದ್ದೂ ಅವರಿಂದಲೇ. ಅನೇಕ ರಜಾ ದಿನಗಳಲ್ಲಿ ಅವರೊಂದಿಗೆ  ಗಾಳಿಪಟ ಹಾರಿಸಿ ಆನಂದಿಸಿದ ರಸಗಳಿಗೆಗಳನ್ನು ನನ್ನ ಜೀವನ ಪರ್ಯಂತ ಮರೆಯಾಗದು. ಅಂತಹ ಸುಂದರ ಕ್ಷಣಗಳು ಮತ್ತೆ  ಖಂಡಿತವಾಗಿಯೂ ಬಾರದು.

ಗಾಳಿಪಟ  ನಮ್ಮ ಜೀವನಕ್ಕೆ ಬಲು ಹತ್ತಿರದ ಸಂಗಾತಿ ಎಂದರೂ ತಪ್ಪಾಗಲಾದರು.   ಗಾಳಿಪಟದ ಏರಿಳಿತದಂತೆ ನಮ್ಮ ಜೀವನದಲ್ಲಿಯೂ ಏರಿಳಿತವಿದ್ದೇ ಇರುತ್ತದೆ. ಗಾಳಿಪಟದ ಸೂತ್ರ ಅಥವಾ ಬಾಲಂಗೋಚಿ ಸರಿ ಇಲ್ಲದಿದ್ದಲ್ಲಿ ಅದು ಹೇಗೆ ಗಾಳಿಪಟ ಇದ್ದಲ್ಲಿಯೇ ಗಿರಿಕಿ ಹೊಡೆಯುತ್ತದೆಯೋ ಅಂತೆಯೇ ನಮ್ಮ ಜೀವನದಲ್ಲಿ ಗುರಿ ಇಲ್ಲದೆ ಮುನ್ನಡೆಯಲು ಹೋದರೆ ಗೊತ್ತು ಗುರಿ ಇಲ್ಲದಂತೆಯೇ ಗಿರಿಕಿ ಹೊಡೆಯುವುದು ಖಂಡಿತವೇ ಸರಿ. ಹೇಗೆ ಗಾಳಿ ಬಳೆಸಿಕೊಂಡು ಪಟ  ಎತ್ತರೆತ್ತರಕ್ಕೆ  ಹಾರುತ್ತದೆಯೋ ಹಾಗೆಯೇ ನಾವೂ ಕೂಡಾ ಜೀವನದಲ್ಲಿ ಬರುವ  ಅವಕಾಶಗಳನ್ನು ಬಳೆಸಿಕೊಂಡು ಎತ್ತರಕ್ಕೇರುಲು ಪ್ರಯತ್ನಿಸಬೇಕು. ಪಟ ಮೇಲಕ್ಕೆ ಎಷ್ಟೇ ಏರಿದರೂ ಅದನ್ನು ಹಾರಿಸುವ ಇಲ್ಲವೇ ತೂರಾಡುತ್ತಿದ್ದಾಗ ಆದನ್ನು ಸರಿಪಡಿಸುವ ಸಾಮರ್ಥ್ಯ ದಾರ ಹಿಡಿದವನ ಬಳಿಯೇ ಇರುವ ಹಾಗೆ ನಮ್ಮನ್ನು  ಜೀವನದಲ್ಲಿ  ಎತ್ತರೆಕ್ಕೆ ಏರಿಸುವ ಮತ್ತು  ಅಡ್ಡದಾರಿಯನ್ನು ಹಿಡಿದಾಗ ಸರಿಪಡಿಸಲು ನಮ್ಮ ಹಿರಿಯರು ಬಳಿ ನಮ್ಮ ಸೂತ್ರ ಇದ್ದೇ ಇರುತ್ತದೆ.

WhatsApp Image 2019-07-05 at 6.58.25 PM (1)

ಇದೇ ಸಮಯದಲ್ಲಿ   ನನ್ನ ತಂಗಿಯ ಬಾಲ್ಯದ ಪಠ್ಯದಲ್ಲಿದ್ದ  ಮತ್ತು ಆಕೆ  ಮುದ್ದು ಮುದ್ದಾಗಿ ತೊದಲು ನುಡಿಯಲ್ಲಿ ಸದಾ ಹೇಳುತ್ತಿದ್ದ  ಗಾಳಿಪಟ ಕುರಿತಾದ ಪದ್ಯ ನೆನಪಿಗೆ ಬರುತ್ತದೆ. ಅಂದು ಆಕೆ ಹಾಗೆ ಪದ್ಯವನ್ನು ಉಲಿಯುತ್ತಿದ್ದರೆ ಅದು ನನಗೇ ಹೇಳುತ್ತಿದ್ದಳೇನೋ ಎನಿಸುತ್ತಿತ್ತು.

ಅಣ್ಣನು ಮಾಡಿದ ಗಾಳಿಪಟ

ಬಣ್ಣದ ಹಾಳೆಯ ಗಾಳಿಪಟ

                 ನೀಲಿಯ ಬಾನಲಿ ತೇಲುವ ಸುಂದರ

                 ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ

ಬೆದರದ ಬೆಚ್ಚದ ಗಾಳಿಪಟ

                 ದಾರವ ಜಗ್ಗಿ ದೂರದಿ ಬಗ್ಗಿ

                 ತಾರೆಯ ನಗಿಸುವ ನನ್ನ ಪಟ

ಉದ್ದದ ಬಾಲದ ಗಾಳಿಪಟ

ನನ್ನಯ ಮುದ್ದಿನ ಗಾಳಿಪಟ

ಇಂದು ತರತರಹದ ಬಣ್ಣ ಬಣ್ಣದ ಸಿದ್ದ ಪಡಿಸಿದ  ಗಾಳಿಪಟಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಚೀನಾ ಕೂಡ ತರ ತರಹದ ಪ್ಲಾಸ್ಟಿಕ್ ಮತ್ತು ನೈಲಾನ್ ಬಟ್ಟೆಯ, ಗಾಳಿ ಊದಿ ಬೆದರು ಬೊಂಬೆ ಮಾದರಿಯ ಇಲ್ಲವೇ ಡ್ರಾಗನ್ ಮಾದರಿಯ ತರತರಾವರಿ ಗಾಳಿಪಟವನ್ನು ಮಾರುಕಟ್ಟೆಗೆ ತಂದಿದ್ದಾರೆ. ಉತ್ತರ ಭಾರತದ ಕೆಲವು ಭಾಗದಲ್ಲಿ  ಕೇವಲ ಆಷಾಡ ಮಾಸವಲ್ಲದೆ ಸಂಕ್ರಾಂತಿ ಹಬ್ಬದ ಸಮಯದಲ್ಲೂ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಅನೇಕ ಕಡೆ ಗಾಳಿಪಟ ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರದರೂ ನಾವು ನಮ್ಮ ಕೈಯಾರೆ ಮಾಡಿ ಸರಿಯಾಗಿ ಸೂತ್ರ ಹಾಕಿ ಬಾನೇತ್ತರಕ್ಕೆ ಹಾರಿಸಿ ಆನಂದ ಪಡುವುದರ ಮುಂದೆ ಕೊಂಡು ತಂದು ಹಾರಿಸುವ ಪಟ ಮಜಾ ಕೊಡದು.

WhatsApp Image 2019-07-05 at 7.03.44 PM

ಆಷಾಢ ಮಾಸದ ಪ್ರಥಮ ಏಕದಶಿಯಂದು ಆಚರಿಸಲ್ಪಡುವ ಗಾಳೀ‌ಪಟದ ಹಬ್ಬಕ್ಕೆ ನಿಮಗೆಲ್ಲರಿಗೂ ಹಾರ್ಧಿಕ ಶುಭಾಶಯಗಳು.

ಪಟ ಮೇಲಕ್ಕೆ ಎಷ್ಟೇ ಏರಿದರೂ ಅದರ ಸೂತ್ರ  ದಾರ ಹಿಡಿದವನ ಬಳಿಯೇ ಇರುವ ಹಾಗೆ  ನಮ್ಮ ಜೀವನದಲ್ಲಿ ನಾವು ಎಷ್ಟೇ ಏರಿದರೂ ನಮ್ಮೆಲ್ಲರ ಸೂತ್ರ ಆ ಭಗವಂತನ ಬಳಿಯೇ ಇರುತ್ತದೆ.  ಜೀವನದಲ್ಲಿ ಅವನು ಸೂತ್ರಧಾರಿ ನಾವು  ಕೇವಲ ಅವನಾಡಿಸುವ ಪಾತ್ರಧಾರಿಗಳಷ್ಟೇ.

ಏನಂತೀರೀ?

WhatsApp Image 2019-07-05 at 7.02.50 PM (1)