ಹಾಗಲಕಾಯಿ ಎಣ್ಣೆಗಾಯಿ ಮತ್ತು ಮಸಾಲೆ ರೊಟ್ಟಿ

ಎಣ್ಣೆಗಾಯಿ ಅಂದ ತಕ್ಷಣವೇ, ಥಟ್ ಅಂತ ನೆನಪಿಗೆ ಬರುವುದೇ ಉತ್ತರ ಕರ್ನಾಟಕದ ಸಾಂಪ್ರದಾಯಕ ಅಡುಗೆ ಗುಳ್ಳ ಬದನೇಕಾಯಿ ಎಣ್ಗಾಯ್ ಆದರೆ ಅದೇ ಎಣ್ಗಾಯ್ ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಸಾಂಪ್ರದಾಯಕವಾದ ಹಾಗಲಕಾಯಿ ಎಣ್ಣೆಗಾಯಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಎಣ್ಣೆಗಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಹಾಗಲಕಾಯಿ – 4-5
 • ಈರುಳ್ಳಿ – 2-3
 • ಬೆಳ್ಳುಳ್ಳಿ 4-6 ಎಸಳು
 • ಕೊತ್ತಂಬರಿ ಸೊಪ್ಪು – 2 ಚಮಚ
 • ಕರಿಬೇವಿನ ಸೊಪ್ಪು – 8-10 ಎಲೆಗಳು
 • ಹುಣಸೇರಸ – 2-3 ಚಮಚ
 • ಹುರಿಗಡಲೆ – 1/4 ಬಟ್ಟಲು
 • ಬಿಳೀ ಎಳ್ಳು – 3-4 ಚಮಚ
 • ಬೆಲ್ಲ – 1/4 ಬಟ್ಟಲು
 • ಚಕ್ಕೆ – 1/2 ಇಂಚು
 • ಕಾಯಿ ಚೂರು 1/2 ಬಟ್ಟಲು
 • ಅಚ್ಚ ಖಾರದ ಪುಡಿ – 2-3 ಚಮಚ
 • ಹುಳೀ ಪುಡಿ – 2-3 ಚಮಚ
 • ರುಚಿಗೆ ತಕ್ಕಷ್ಟು ಉಪ್ಪು

ಹಾಗಲಕಾಯಿ ಎಣ್ಣೆಗಾಯಿ ತಯಾರಿಸುವ ವಿಧಾನ

 • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿಕೊಂಡು ಅದಕ್ಕೆ ಸ್ವಲ್ಪ ಕರಿಬೇವು ಮತ್ತು ಅರಿಶಿನ ಬೆರೆಸಿ, ಹೆಚ್ಚಿದ ಈರಳ್ಳಿಯನ್ನು ಹಾಕಿಕೊಂಡು ಕೆಂಪಗೆ ಬರುವವರೆಗೂ ಬಾಡಿಸಿಕೊಂಡ ನಂತರ ದಪ್ಪಗೆ ಹೆಚ್ಚಿಟ್ಟುಕೊಂಡಿರುವ ಹಾಗಲ ಕಾಯಿಯನ್ನು ಬಾಣಲೆಗೆ ಹಾಕಿ ಸುಮಾರು ಎಂಟರಿಂದ ಹತ್ತು ನಿಮಿಷಗಳ ಕಾಲ ಬಾಡಿಸಿಕೊಳ್ಳಿ
 • ಮಿಕ್ಸಿ ಜಾರಿಗೆ ತೆಂಗಿನ ಕಾಯಿ, ಈರುಳ್ಳಿ, ಹುರಿಗಡಲೆ, ಹುರಿದ ಎಳ್ಳು ಮತ್ತು ಚೆಕ್ಕೆಯನ್ನು ಸೇರಿಸಿಕೊಂಡು ತರಿತರಿಯಾಗಿ ರುಬ್ಬಿಕೊಂಡ ನಂತರ ಅಚ್ಚ ಖಾರದ ಪುಡಿ, ಹುಳಿಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ.
 • ಬಾಡಿಸಿಕೊಂಡ ಹಾಗಲಕಾಯಿ ಮತ್ತು ರುಬ್ಬಿಕೊಂಡ ಮಿಶ್ರಣವನ್ನು ಒಂದು ಕುಕ್ಕರಿನೊಳಗೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಮತ್ತು ಹುಣಸೇ ರಸವನ್ನು ಸೇರಿಸಿ ಒಂದು ಕೂಗು ಬರುವವರೆಗೆ ಬೇಯಿಸಿದಲ್ಲಿ ರುಚಿರುಚಿಯಾದ ಹಾಗಲಕಾಯಿ ಎಣ್ಣೆಗಾಯಿ ಸವಿಯಲು ಸಿದ್ಢ.

ಮಸಾಲೆ ರೊಟ್ಟಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಅಕ್ಕಿ ಹಿಟ್ಟು – 1 ಪಾವು
 • ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ – 2-3
 • ತುರಿದ ತರಕಾರಿಗಳು
 • ಕೊತ್ತಂಬರಿ ಸೊಪ್ಪು – 2 ಚಮಚ
 • ಕರಿಬೇವಿನ ಸೊಪ್ಪು – 8-10 ಎಲೆಗಳು
 • ರುಚಿಗೆ ತಕ್ಕಷ್ಟು ಉಪ್ಪು
 • ರುಚಿಯನ್ನು ಹೆಚ್ಚಿಸಲು ಚೆಟ್ನೀಪುಡಿ – 2 ಚಮಚ (ಐಚ್ಚಿಕ)

ಮಸಾಲೆ ರೊಟ್ಟಿ ತಯಾರಿಸುವ ವಿಧಾನ

 • ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಅಗಲವಾದ ಪಾತ್ರೆಗೆ ಹಾಕಿಕೊಂಡು ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾಗಿ ರೊಟ್ಟಿ ತಟ್ಟುವ ಹದಕ್ಕೆ ಕಲೆಸಿಕೊಳ್ಳಿ
 • ಕಾವಲಿಯ ಮೇಲೆ ಕಲೆಸಿಕೊಂಡ ಹಿಟ್ಟಿನಿಂದ ರೊಟ್ಟಿಯನ್ನು ತಟ್ಟಿ ಸ್ವಲ್ಪ ಎಣ್ಣೆ ಹಾಕಿ
 • ರೊಟ್ಟಿಯ ರುಚಿಯನ್ನು ಹೆಚ್ಚಿಸಲು ಸ್ವಲ್ಪ ಚೆಟ್ನೀಪುಡಿಯನ್ನು ಬೇಯುತ್ತಿರುವ ರೊಟ್ಟಿಯ ಮೇಲೆ ಉದುರಿಸಿ, ಎರಡೂ ಬದಿ ಚೆನ್ನಾಗಿ ಬೇಯಿಸಿದಲ್ಲಿ ರುಚಿ ರುಚಿಯಾದ ಮಸಾಲೆ ರೊಟ್ಟಿ ಸವಿಯಲು ಸಿದ್ಧ.

ಬಿಸಿ ಬಿಸಿಯಾದ ರೊಟ್ಟಿಯ ಜೊತೆ ಘಮ ಘಮವಾದ ಹಾಗಲಕಾಯಿ ಎಣ್ಣೆಗಾಯಿ ನೆಂಚಿಕೊಂಡು ತಿನ್ನುತ್ತಿದ್ದರೆ ಸ್ವರ್ಗಕ್ಕೇ ಕಿಚ್ಚು ಹತ್ತಿಸುವಂತಿರುತ್ತದೆ ಎಂದರೆ ಅತಿಶಯೋಕ್ತಿಏನಲ್ಲ.

ಹಾಗಲಕಾಯಿ ಎಣ್ಣೆಗಾಯಿ ಮತ್ತು ಮಸಾಲೆ ರೊಟ್ಟಿ ಮಾಡುವುದನ್ನು ಈ ವೀಡಿಯೋ ಮೂಲಕವೂ ತಿಳಿದು ಕೊಳ್ಳಬಹುದು

ಇನ್ನೇಕೆ ತಡಾ, ನೋಡ್ಕೋಳ್ಳೀ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ಹಾಗಲಕಾಯಿಯೆಂದರೆ ಅದು ಕಹಿ ಎಂದು ಮೂಗು ಮುರಿಯುವವರೆ ಹೆಚ್ಚು. ಆದರೆ ಮಧುಮೇಹದಿಂದ ನರಳುತ್ತಿರುವ ರೋಗಿಗಳಿಗೆ ಹಾಗಲಕಾಯಿಯನ್ನು ರಾಮಬಾಣ. ಹಾಗಲಕಾಯಿಯನ್ನು ಹಸಿಯಾಗಿ ತಿನ್ನಲು ಆಗದವರು ಈ ರೀತಿಯಾಗಿ ಎಣ್ಣೆಗಾಯಿ, ಗೊಜ್ಜು ಮತು ಪಲ್ಯಗಳನ್ನು ಮಾಡಿಕೊಂಡು ಸೇವಿಸಬಹುದಾಗಿದೆ. ಹಾಗಲಕಾಯಿಯನ್ನು ಭೇದಿ, ಉದರಶೂಲೆ, ಜ್ವರಗಳು, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಃಸ್ರಾವ, ತುರಿಗಜ್ಜಿ ಹಾಗು ಚರ್ಮದ ಇತರ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಇತರ ಅಸ್ವಸ್ಥತೆಗಳಿಗಾಗಿ ಸಾಂಪ್ರದಾಯಿಕ ಔಷಧಪದ್ಧತಿಯಲ್ಲಿ ಬಳಸಲಾಗುತ್ತದೆ. ಇದನ್ನು ಸಂತಾನ ನಿಯಂತ್ರಣದಲ್ಲಿ ಗರ್ಭಸ್ರಾವಕವಾಗಿ, ಹಾಗು ಶಿಶುವಿನ ಜನನಕ್ಕೆ ಸಹಕಾರಿಯಾಗಲು ಸಹ ಬಳಸಲಾಗುತ್ತದೆ. ಕಣ್ಣು ಮತ್ತು ಚರ್ಮ ರೋಗಗಳು, ಗೌಟ್, ಮೂಲವ್ಯಾಧಿ ಹಾಗೂ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಬಲ್ಲದು.

ಹೀಗೆ ಸಾಂಪ್ರದಾಯಕವಾಗಿ ಹಾಗಲಕಾಯಿ ಎಣ್ಣಗಾಯಿ ಮತ್ತು ಮಸಾಲೆ ರೊಟ್ಟಿ ಮಾಡುವುದನ್ನು ತೋರಿಸಿಕೊಟ್ಟ ಕುಮಾರಿ ಸಿಂಧು ಸೋಮೇಶ್ ಅವರಿಗೆ ನಮ್ಮ ಏನಂತೀರೀ ಚಾನೆಲ್ಲಿನ ಪರವಾಗಿ ತುಂಬು ಹೃದಯದ ಧನ್ಯವಾದಗಳು

ಹಾಗಲಕಾಯಿ ಗೊಜ್ಜು

ಸಾಧಾರಣವಾಗಿ ಹಾಗಲಕಾಯಿ ಗೊಜ್ಜು ಎಂದರೆ ಅದರ ಕಹಿ ಗುಣದಿಂದಾಗಿ ಮೂಗು ಮುರಿಯುವವರೇ ಹೆಚ್ಚು. ಆದರೆ ಹಾಗಲಕಾಯಿಯ ಈ ಕಹೀ ಗುಣವೇ ಮಧುಮೇಹಿಗಳಿಗೆ ರಾಮಬಾಣ. ಬರೀ ಹಾಗಲಕಾಯಿಯನ್ನು ತಿನ್ನಲು ಅಸಾಧ್ಯವಾದ್ದರಿಂದ ಕಾಯಿ, ಹುಣಸೇಹಣ್ಣು, ಬೆಲ್ಲ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಗೊಜ್ಜು ತಯಾರಿಸಲು ಬೇಕಾಗುವ ಪದಾರ್ಥಗಳು

 • ಮಧ್ಯಮ ಗಾತ್ರದ ಹಾಗಲಕಾಯಿ – 2
 • ನೆನಸಿದ ಹುಣಸೇ ಹಣ್ಣು – ನಿಂಬೆ ಗಾತ್ರದ್ದು
 • ಬೆಲ್ಲದ ಪುಡಿ – 5 ಚಮಚ
 • ಗೊಜ್ಜಿನ ಪುಡಿ – 3 ಚಮಚ
 • ಚಿಟಿಕಿ ಅರಿಷಿನ ಪುಡಿ
 • ರುಚಿಗೆ ತಕ್ಕಷ್ಟು ಉಪ್ಪು
 • ಕತ್ತರಿಸಿದ ಕೊತ್ತಂಬರೀ ಸೊಪ್ಪು – 2 ಚಮಚ

ಗೊಜ್ಜಿನ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು

 • ಉದ್ದಿನಬೇಳೆ – 2 ಚಮಚ
 • ಜೀರಿಗೆ – 1/2 ಚಮಚ
 • ಮೆಣಸು – 1/4 ಚಮಚ
 • ಬಿಳೀ ಎಳ್ಳು – 2 ಚಮಚ
 • ತುರಿದ ಕೊಬ್ಬರಿ – 4 ಚಮಚ

ಒಗ್ಗರಣೆಗಾಗಿ ಬೇಕಾಗುವ ಸಾಮಗ್ರಿಗಳು

 • ಕತ್ತರಿಸಿದ ಒಣಮೆಣಸಿನಕಾಯಿ – 2
 • ಸಾಸಿವೆ – 2 ಚಮಚ
 • ಅಡುಗೆ ಎಣ್ಣೆ – 2 ಚಮಚ
 • ಚಿಟಿಕೆ ಇಂಗು
 • ಕರಿಬೇವು 3 – 4 ಎಲೆಗಳು

ಹಾಗಲಕಾಯಿ ಗೊಜ್ಜು ತಯಾರಿಸುವ ವಿಧಾನ:

 • ಒಣ ಕೊಬ್ಬರಿಯನ್ನು ಹೊರತು ಪಡಿಸಿ ಗೊಜ್ಜಿನ ಪುಡಿಯ ಉಳಿದೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಿ
 • ಅದು ತಣ್ಣಗಾದ ನಂತರ ಅದಕ್ಕೆ ಒಣ ಕೊಬ್ಬರಿಯನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
 • ಹಾಗಲಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಿ
 • ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಹಸೀ ಹೋಗುವವರೆಗೂ ಹೆಚ್ಚಿದ ಹಾಗಲಕಾಯಿಯನ್ನು ಹುರಿದುಕೊಳ್ಳಿ
 • ಈಗ ಸ್ವಲ್ಪ ಅರಿಷಿನ, ರುಚಿಗೆ ತಕ್ಕಷ್ಟು ಉಪ್ಪು, ಹುಣಸೇ ಹುಳಿ ಮತ್ತು ಬೆಲ್ಲದ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ
 • ಚೆನ್ನಾಗಿ ಕುದಿಯುತ್ತಿರುವಾಗ ಸಿದ್ಧ ಪಡಿಸಿಟ್ಟುಕೊಂಡ ಗೊಜ್ಜಿನ ಪುಡಿಯನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾಗುವಷ್ತು ಹೊತ್ತು ಕುದಿಸಿ.
 • ಸಣ್ಣ ಬಾಣಲೆಯನ್ನು ಒಲೆಯ ಮೇಲೆ ಇರಿಸಿ ಅದಕ್ಕೆ ಎಣ್ಣೆ ಹಾಕಿ,
 • ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿಕೊಂಡು ಅದಕ್ಕೆ ಇಂಗು,ಅರಿಶಿನ ಮತ್ತು ಕತ್ತರಿಸಿಕೊಂಡ ಒಣ ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ
 • ಸಿದ್ಧ ಪಡಿಸಿಟ್ಟು ಕೊಂಡ ಒಗ್ಗರಣೆಯನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಒಂದೆರಡು ನಿಮಿಷಗಳಷ್ಟು ಕುದಿಸಿ ಅದಕ್ಕೆ ಕತ್ತರಿಸಿದ ಕೊತ್ತಂಬರೀ ಸೊಪ್ಪನ್ನು ಸೇರಿಸಿದಲ್ಲಿ ಆರೋಗ್ಯಕರವಾದ ಮತ್ತು ರುಚಿಕರವಾದ ಹಾಗಲಕಾಯಿ ಗೊಜ್ಜು ಸಿದ್ದ.

ಚಪಾತಿ, ದೋಸೆ, ರೊಟ್ಟಿ ಮತ್ತು ಅನ್ನದ ಜೊತೆಯೂ ಈ ಹಾಗಲಕಾಯಿ ಗೊಜ್ಜು ಸವಿಯಲು ಮಜವಾಗಿರುತ್ತದೆ.

ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ಮಾಡುವುದನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

WhatsApp Image 2020-06-25 at 2.34.49 PM

ಮನದಾಳದ ಮಾತು : ಕಹಿ ಎಂಬ ಪದ ನೆನಪಾದಾಗಲೆಲ್ಲ ಅದರ ಹೊತೆ ನೆನಪಾಗುವ ಇನ್ನೆರಡು ಪದಗಳೆಂದರೆ ಹಾಗಲಕಾಯಿ ಮತ್ತು ಬೇವಿನ ಕಾಯಿ. ಈ ಎರಡೂ ಪದಾರ್ಥಗಳೂ ಕಹಿಯಾಗಿರುವುದರಿಂದ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬ ಗಾದೆ ಮಾತಿದೆ. ಅದರೆ ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪಲ್ಯ, ಗೊಜ್ಜು, ಉಪ್ಪಿನಕಾಯಿ ಇಲ್ಲವೇ ಯಾವುದೇ ಒಂದು ರೀತಿಯಲ್ಲಾದರೂ ಹಾಗಲಕಾಯಿಯನ್ನು ವಾರಕ್ಕೊಮ್ಮೆಯಾದರೂ ಬಳಸುವ ಮೂಲಕ ಆರೋಗ್ಯವಂತರಾಗಿರೋಣ.
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು