ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ದಿನೇ ದಿನೇ ನೋಡ ನೋಡುತ್ತಲೇ ಬೆಳೆಯುತ್ತಲೇ ಹೊದಂತೆಲ್ಲಾ, ನಗರದ ಹಿಂದಿನ  ಎಲ್ಲದರ ಮೌಲ್ಯವನ್ನು ಕೇವಲ ಹಣದ ರೂಪದಲ್ಲಿ ಮಾತ್ರವೇ ಅಳೆಯಲಾರಂಭಿಸಿದರು. ಬೆಂಗಳೂರಿನ ಪರಂಪರೆ, ಇತಿಹಾಸ ಅಥವಾ ಸಂಸ್ಕೃತಿಗೆ ಯಾವುದೇ ಮೌಲ್ಯವಿಲ್ಲದೇ, ಎಲ್ಲವೂ ರಿಯಲ್ ಎಸ್ಟೇಟ್ ಮುಂದೆ ಅಡಿಯಾಳಾಗಿ ತಲೆಬಗ್ಗಿಸಿ  ಒಂದೊಂದೇ ಕಳೆದು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿ. ಹಿಂದಿನ ಕಲೆ ಮತ್ತು ಇತಿಹಾಸದ ಪ್ರತೀಕವಾಗಿದ್ದಂತಹ ಒಂದೊಂದೇ ಕಟ್ಟಡಗಳು ನೆಲ್ಲಕ್ಕುರುಳಿಸಿ ಆ ಜಾಗದಲ್ಲಿ ಬಹುಮಹಡಿ ಗಗನ ಚುಂಬನ ಕಟ್ಟಡಗಳು ಏಳಿಸುವುದನ್ನೇ ನಗರಾಭಿವೃಧ್ಧಿ ಎಂದೇ ಎಲ್ಲರೂ ಭಾವಿಸಿರುವುದು ನಿಜಕ್ಕೂ ದುಃಖಕರವೇ ಸರಿ. ಬೆಂಗಳೂರಿನ ಹೃದಯಭಾಗ ಎನಿಸಿಕೊಂಡಿರುವ ಅಂದಿಗೂ ಇಂದಿಗೂ ಬೆಂಗಳೂರಿನ ವೈಭವೋಪೇತ ಭಾಗವೇ ಆಗಿರುವ ಎಂ.ಜಿ ರಸ್ತೆಯ ವೃತ್ತದಲ್ಲಿದ್ದ ಕಾವೇರಿ ಎಂಪೋರಿಯಂ ಪಕ್ಕದಲ್ಲಿದ್ದ ಬೃಂದಾವನ್ ಹೋಟೆಲ್ಲಿನ ಗತವೈಭವದ ಇತಿಹಾಸದ ಬಗ್ಗೆ ಮೆಲುಕು ಹಾಕೋಣ.

ಮೊಬೈಲಿನಲ್ಲಿ ಹಾಗೆಯೇ ಮುಖಮುಟವನ್ನು ನೋಡುತ್ತಿದ್ದಾಗ 2012ರಲ್ಲಿ ಮುಚ್ಚಿಹೋದ ಬೃಂದಾವನ್ ಹೋಟೆಲ್ ಒಂದರ ಫೋಟೋವೊಂದನ್ನು ನೋಡಿದೆ. ಕೇವಲ ಫೋಟೋವೊಂದನ್ನು ಹಾಕಿದ್ದಕ್ಕೇ ಸರಿ ಸುಮಾರು  400ಕ್ಕೂ ಹೆಚ್ಚು ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದರೆ  ಆ ಹೋಟೆಲ್ಲಿನ ಖ್ಯಾತಿ ಎಷ್ಟಿತ್ತು ಎಂಬುದರ ಅರಿವಾಗುತ್ತದೆ. ತೊಂಬ್ಬತ್ತು ಮತ್ತು ಎರಡು ಸಾವಿರದ ದಶಕದಲ್ಲಿ ಆ ಹೋಟೆಲ್ಲಿನಲ್ಲಿ ಗ್ರಾಹನಾಗಿ ಅಲ್ಲಿನ ಊಟವನ್ನು ಸವಿದಿದ್ದ ಕಾರಣ ಬೃಂದಾವನ್ ಹೋಟೆಲ್ ಕುರಿತಂತೆ ಕೆಲವೊಂದು ಸವಿ ಸವಿ ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬಯಕೆಯಾಗಿದೆ.

ಕರ್ನಾಟಕದ ಕರಾವಳಿ ಪ್ರಾಂತದ ಉಡುಪಿಯ ಮೂಲದವರಾದ ಶ್ರೀ ರಾಮಕೃಷ್ಣ ರಾವ್ ಅವರು ತಮ್ಮ ಕೆಲಸವನ್ನರಸಿ ದೂರದ ಮದ್ರಾಸಿಗೆ ಹೋಗಿ ಅಲ್ಲಿ ಹೋಟೆಲ್ಲಿನಲ್ಲಿ ಕೆಲಸವನ್ನಾರಂಭಿಸಿ ಕಡೆಗೆ ತಮ್ಮದೇ ಹೋಟೆಲ್ಲೊಂದನ್ನು ಆರಂಭಿಸಿ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಾರೆ. ದೂರದ ಮದ್ರಾಸಿಗಿಂತಲೂ ತಮ್ಮ ಕರ್ನಾಟಕದಲ್ಲೇ ಹೋಟೆಲ್ಲೊಂದನ್ನು ಏಕೆ ಅರಂಭಿಸಬಾರದು? ಎಂದು ಯೋಚಿಸುತ್ತಿರುತ್ತಾರೆ. ಬೆಂಗಳೂರಿನ ಕಂಟೋನ್ಮೆಂಟ್ ಭಾಗವಾಗಿದ್ದ ಬಹುತೇಕ  ಬ್ರಿಟೀಷರ ಸಂಸ್ಕೃತಿಯನ್ನೇ ಅಳವಡಿಸಿಕೊಂಡಿದ್ದ ಇಂದಿನ ಮಹಾತ್ಮಾಗಾಂಧಿ ರಸ್ತೆಯಲ್ಲಿ ಉತ್ತಮವಾದ ದಕ್ಷಿಣ ಭಾರತ ಸಸ್ಯಾಹಾರಿ ಹೋಟೆಲ್ ಇಲ್ಲದಿದ್ದದ್ದನ್ನು ಗಮನಿಸಿ 1967 ರಲ್ಲಿ ತಮ್ಮ ಕುಟುಂಬಸ್ಥರೊಡನೆ ಹೋಟೆಲ್  ಬೃಂದಾವನವನ್ನು ಸ್ಥಾಪಿಸುತ್ತಾರೆ. ಆರಂಭದಲ್ಲಿ ಕೇವಲ ರೆಸ್ಟೋರೆಂಟ್ ಆರಂಭಿಸಿ ನಂತರ ಅಲ್ಲಿಯೇ ದೂರದ ಊರಿನಿಂದ ಬೆಂಗಳೂರಿಗೆ ಬಂದು ಉಳಿದುಕೊಳ್ಳುವವರಿಗೆ ಅನುಕೂಲವಾಗುವಂತೆ ಕೊಠಡಿಗಳನ್ನೂ ನಿರ್ಮಿಸುತ್ತಾರೆ.

ಮೂಲತಃ ಉಡುಪಿಯವರಾಗಿದ್ದು ಕೆಲ ಕಾಲ ಮದ್ರಾಸಿನಲ್ಲಿಯೂ ಹೋಟೆಲ್ ಉದ್ಯಮ ನಡೆಸಿದ್ದ ಕಾರಣ ಬೃಂದಾವನ್ ಹೋಟೇಲ್ ಉಡುಪಿ ಮತ್ತು ಮದ್ರಾಸ್  ಪಾಕಶಾಸ್ತ್ರದ ಸಮಾಗಮವಾಗಿದ್ದು  ಬಹುತೇಕ ತಿಂಡಿಗಳಾದ ಇಡ್ಲಿ, ದೋಸೇ, ಪೊಂಗಲ್ ಉಪ್ಪಿಟ್ಟುಗಳು ಮದ್ರಾಸ್ ಶೈಲಿಯದ್ದಾಗಿದ್ದರೇ, ಊಟ ಮಾತ್ರಾ ಅಪ್ಪಟ  ಉಡುಪಿಯ ಶೈಲಿಯಲ್ಲಿದ್ದ ಕಾರಣ ಬಹಳ ಬೇಗ ಜನಾಕರ್ಷಣಿಯವಾದ ಕೇಂದ್ರವಾಗುತ್ತದೆ.

ಆರಂಭದಲ್ಲಿ ಕೇವಲ ರೂ 2.50ಕ್ಕೆಲ್ಲಾ ಅನಿಯಮಿತ ಊಟವನ್ನು ಉಣ ಬಡಿಸುತ್ತಿದ್ದ ಕಾರಣ ಬಹುತೇಕ ಅವಿವಾಹಿತರ ಮೆಚ್ಚಿನತಾಣವಾಗಿ ಮಾರ್ಪಾಟಾಗುತ್ತದೆ. ವಯಕ್ತಿಕವಾಗಿ ಹೇಳಬೇಕೆಂದರೆ, 90ರ ದಶಕದಲ್ಲಿ ನಾನು ಕೆಲಸ ಮಾಡುತ್ತಿದ್ದ ಸಣ್ಣದಾದ ಸಾಫ್ಟ್ವೇರ್ ಕಂಪನಿ ಮಲ್ಲೇಶ್ವರಂನಿಂದ ಪ್ರತಿಷ್ಟಿತ ಎಂ.ಜಿ ರಸ್ತೆಗೆ ವರ್ಗಾವಣೆಯಾದಾಗಲೇ ಸಹೋದ್ಯೋಗಿಯೊಬ್ಬನಿಂದ ಈ ಬೃಂದಾವನ್ ಹೋಟೆಲ್ ಪರಿವಯವಾಗುತ್ತದೆ. ವಾರ ಪೂರ್ತಿ ಮನೆಯಿಂದ ಡಬ್ಬಿಯ ಊಟ ಮಾಡಿದರೆ, ಶನಿವಾರ ಮಧ್ಯಾಹ್ನ ಮಾತ್ರ ಗೆಳೆಯರೊಟ್ಟಿಗೆ ಬೃಂದಾವನ್ ಹೋಟೆಲ್ಲಿನಲ್ಲಿ ಊಟ ಮಾಡುವುದು ಒಂದು ರೀತಿಯ ಅಲಿಖಿತ ನಿಯಮವಾಗಿ ಹೋಗುತ್ತದೆ.

ಆಗ 25ರೂಪಾಯಿಗಳಿಗೆ ಅನಿಯಮಿತ ಊಟ ಉಣಬಡಿಸುತ್ತಿರುತ್ತಾರೆ. ಶನಿವಾರ ಮಧ್ಯಾಹ್ನ  12 ರಿಂದ 1 ಗಂಟೆಯೊಳಗೆ ಹೋದಲ್ಲಿ ಮಾತ್ರವೇ  ನೆಮ್ಮದಿಯಾಗಿ ಊಟ ಮಾಡಬಹುದಾಗಿತ್ತು. ಅಕಸ್ಮಾತ್ ತಡವಾಗಿ ಹೋದಲ್ಲಿ ಎಲ್ಲಾ ಟೇಬಲ್ಗಳೂ ಭರ್ತಿಯಾಗಿ  ಸರದಿಯಲ್ಲಿ ನಿಲ್ಲಬೇಕಿತ್ತು.  ಆನಂತರದ ದಿನಗಳಲ್ಲಿ ಅಲ್ಲಿನ ಪರಿಚಾರಕರುಗಳು ಪರಿಚಯವಾಗಿದ್ದ ಕಾರಣ ಎಷ್ಟೇ ಹೊತ್ತಿಗೆ ಹೋದರೂ ನಮಗೆ ಸ್ಥಳಾವಕಾಶ ಮಾಡಿಕೊಡುತ್ತಿದ್ದರು.

ಅಗಲವಾದ ಬಾಳೇ ಎಲೆಯನ್ನು ಹಾಸಿ ಅದರ ಮೇಲೆ ನೀರನ್ನು ಚುಮುಕಿಸಿ. ಎಲೆ ಕೊನೆಗೆ ಪಾಯಸ ಇಲ್ಲವೇ ಯಾವುದಾದರೊಂದು ಸಿಹಿ ತಿಂಡಿ, ನಂತರ ಬಗೆ ಬಗೆಯ ಪಲ್ಯಗಳು, ಉಪ್ಪಿನ ಕಾಯಿ ಬಡಿಸಿ ಮೃದುವಾದ ಕೈ ಅಗಲದ ಬಿಸಿಬಿಸಿಯಾದ ಚಪಾತಿ ಮತ್ತು ಸಾಗು ಬಡಿಸಿದ ತಕ್ಷಣವೇ ನಮ್ಮೆಲ್ಲಾ ಮಾತುಗಳಿಗೆ ಬ್ರೇಕ್ ಹಾಕಿ, ಕೈ ಬಾಯಿಗೆ ಕೆಲಸವನ್ನು ಕೊಡುತ್ತಿದ್ದೆವು, ಊಟ ಬಡಿಸುವ ಸಿಬ್ಬಂಧಿಯವರೂ ಸಹಾ ಒಂದು ಚೂರು ಬೇಸರವಿಲ್ಲದೇ, ಕೇಳಿದಷ್ಟು ಚಪಾತಿ ಮತ್ತು ಪಲ್ಯಗಳನ್ನು ನಗುಮುಖದಿಂದಲೇ ಬಡಿಸುತ್ತಿದ್ದ ಕಾರಣ ತುಸು ಹೆಚ್ಚೇ ತಿನ್ನುತ್ತಿದ್ದೆವು.  ನಮ್ಮ ಗೆಳೆಯರೊಂದಿಗೆ ಅಲ್ಲಿನ ಚಪಾತಿ ತಿನ್ನುವುದೇ ನಮ್ಮಲ್ಲಿ ಸ್ಪರ್ಧೆಯಾಗಿರುತ್ತಿತ್ತು. ಅಂತಿಮವಾಗಿ ನಾನು ಆರು ಚಪಾತಿ ತಿಂದೇ, ನಾನು ಎಂಟು, ಹತ್ತು ಎಂದು ಚಪಾತಿ ತಿನ್ನುವುದರಲ್ಲಿಯೇ ನಮ್ಮ ಪೌರುಷವನ್ನು ಕೊಚ್ಚಿಕೊಳ್ಳುತ್ತಿದ್ದೆವು. ಅಷ್ಟೆಲ್ಲಾ ಚಪಾತಿ ತಿಂದ ಮೇಲೆ ಅನ್ನ ತಿನ್ನುವುದಕ್ಕೆ ಹೊಟ್ಟೆಯಲ್ಲಿ ಜಾಗವೇ ಇಲ್ಲದಿದ್ದರೂ, ಅಲ್ಲಿಯ ಸಾರು ಮತ್ತು ಹುಳಿಯ ರುಚಿಯನ್ನು ಸವಿಯಲೆಂದೇ ಸ್ವಲ್ಪ ಸ್ವಲ್ಪ ಅನ್ನವನ್ನು ಹಾಕಿಸಿಕೊಂಡು ಗಡದ್ದಾಗಿ ತಿಂದು ಡರ್ ಎಂದು ತೇಗಿ ಕೈತೊಳೆದುಕೊಂಡು ಹೊರಬಂದರೆ ಅದೇನೋ ಸಾಧಿಸಿದ ಸಂತೃಪ್ತಿ ದೊರೆಯುತ್ತಿತ್ತು.

ಇನ್ನೂ ಸ್ವಲ್ಪ ದಿನಗಳ ನಂತರ ನಾವು ಗೆಳೆಯರು ಯಾವುದಾದರೂ ಬೆಟ್ಟಿಂಗ್  ಕಟ್ಟಬೇಕೆಂದರೆ ಅದು ಬೃಂದಾವನ್ ಹೋಟೆಲ್ಲಿನ ಊಟದ ಲೆಕ್ಕದಲ್ಲಿಿ ಇರುತ್ತಿತ್ತು. ಯಾರು ಪಂದ್ಯ ಸೋಲುತ್ತಾರೋ ಅವರು ಉಳಿದವರಿಗೆಲ್ಲರಿಗೂ ಬೃಂದಾವನ್ ಹೋಟೆಲ್ಲಿನಲ್ಲಿ ಊಟವನ್ನು ಕೊಡಿಸಬೇಕಾಗಿತ್ತು.

ಆದಾದ ಕೆಲ ವರ್ಷಗಳ ನಂತರ ಬೃಂದಾವನ್ ಹೋಟೆಲ್ಲಿನ ಪಕ್ಕದಲ್ಲಿಯೇ ಇರುವ United mansion ಕಟ್ಟದಲ್ಲಿ Zee ಸಮೂಹಕ್ಕೆ ಕೆಲಸಕ್ಕೆ ಸೇರಿದ ಮೇಲಂತೂ ಬೃಂದಾವನ್ ಹೋಟೆಲ್ಲಿಗೂ ನಮಗೂ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು, ಆ ಸಮಯದಲ್ಲಿ ಊಟಕ್ಕೆ 65 ರೂಪಾಯಿಗಳನ್ನು ನಿಗಧಿ ಪಡಿಸಿದ್ದರೂ  ಅಲ್ಲಿನ ಸವಿಸವಿಯಾದ ಊಟದ ಮುಂದೆ ಈ ಬೆಲೆ ಹೆಚ್ಚೆನಿಸದೇ  ಅದೆಷ್ಟು ಬಾರಿ ಅಲ್ಲಿನ ಊಟವನ್ನು ಸವಿದಿದ್ದೇವೋ ನೆನಪೇ ಇಲ್ಲ. ಕಾಡುಗಳ್ಳ ವೀರಪ್ಪನ್ ಭೀಮನ ಅಮವಾಸ್ಯೆಯ ಕಗ್ಗತ್ತಲಿನಲ್ಲಿ ರಾಜಕುಮಾರ್ ಆವರನ್ನು ಅವರ ಹುಟ್ಟೂರು ಗಾಜನೂರಿನಿಂದ ಅಪಹರಿಸಿಕೊಂಡು ಹೋದಾಗ ಮೂರ್ನಲ್ಕು ದಿನ ಬೆಂಗಳೂರು ಅಕ್ಷರಶಃ ಬಂದ್ ಆಗಿತ್ತು. ಇದೇ ಪ್ರಯುಕ್ತ ದಿನದ  ಇಪ್ಪನ್ನಾಲ್ಕು ಗಂಟೆ ಕೆಲಸ ಮಾಡುವ ಕೆಲ ಸಿಬ್ಬಂಧಿಗಳು ನಮ್ಮ ಕಛೇರಿಯಿಂದ ಹೊರಬರಲಾಗದೇ ಕಛೇರಿಯಲ್ಲಿಯೇ ಉಳಿಯುವಂತಾದಾಗ, ಇದೇ ಬೃಂದಾವನ್ ಹೋಟೆಲ್ಲಿನವರೇ ನಮ್ಮ ಕಛೇರಿಯ ಸಿಬ್ಬಂಧಿಗಳಿಗೆ ಹಿಂದಿನ ಬಾಗಿಲಿನಿಂದ ಊಟ ತಿಂಡಿಯ ಜವಾಬ್ಧಾರಿಯನ್ನು  ನೋಡಿಕೊಂಡಿದ್ದರು.

ಎಂ.ಜಿ ರಸ್ತೆಯಲ್ಲಿನ ಕೆಲಸ ಬಿಟ್ಟು ಕೋರಮಂಗಲದಲ್ಲಿ ಕೆಲಸ ಮಾಡುತ್ತಿದ್ದರೂ ಅಗೊಮ್ಮೆ ಈಗೊಮ್ಮೆ ಗೆಳೆಯರೊಡನೆ ಬೃಂದಾವನ್ ಹೋಟೆಲ್ಲಿಗೆ ಬಂದು ಊಟ ಮಾಡುತ್ತಿದ್ದೆವು. ಯಾವಾಗ ಎಂಜಿ ರಸ್ತೆಯಲ್ಲಿ ಮೆಟ್ರೋ ಕೆಲಸ ಆರಂಭವಾಯಿತೋ ಅಲ್ಲಿಂದ  ಎಂಜಿ ರಸ್ತೆಯ ಬಹುತೇಕರ ವ್ಯಾಪಾರಕ್ಕೆ ಹೊಡೆತ ಬಿತ್ತು.  ಅಂತಹ ಹೊಡೆತಕ್ಕೆ ಬೃಂದಾವನ್ ಹೋಟೆಲ್ಲಿನವರೂ ಹೊರಬರಲಾಗದೇ ಅಂತಿಮವಾಗಿ ಸುಮಾರು 45 ವರ್ಷಗಳ ಸುಧೀರ್ಘವಾದ ವ್ಯಾಪಾರದ  ನಂತರ 2012ರಲ್ಲಿ ಬೃಂದಾವನ್ ಹೋಟೆಲ್ಲನ್ನು ಮುಚ್ಚಲು ನಿರ್ಧರಿಸಿದ್ದರು.

ಅದೊಂದು ಮಂಗಳವಾರ, ಬೃಂದಾವನ್ ಹೋಟೆಲ್ಲಿನಲ್ಲಿ ಖಾಯಂ ಆಗಿ ಊಟ ಮಾಡುತ್ತಿದ್ದವರು ನಾಳೇ ಹೋಟೆಲ್ ಇಲ್ಲಾ ಎಂಬ ಬೋರ್ಡ್ ನೋಡಿ, ಅರೇ ಇದೇನಿದು ನಾಳೆ ಏಕೆ ಹೋಟೆಲ್ ಬಂದ್ ಎಂದು ವಿಚಾರಿಸಿದಾಗ, ಕೇವಲ ನಾಳೇ ಮಾತ್ರವಲ್ಲಾ. ಇನ್ನು ಮುಂದೆ  ಖಾಯಂ ಆಗಿ ಬೃಂದಾವನ್ ಹೋಟೆಲ್ ಮುಚ್ಚಲಾಗಿದೆ ಎಂದು ತಿಳಿಸಿದಾಗ ಅದೆಷ್ಟೋ ಜನರು ಮರುಗಿದ್ದುಂಟು.  ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರ ಇಡ್ಲಿ ಸಾಂಬಾರ್ ಚೆಟ್ನಿ, ದೋಸೆ, ಪೂರಿ ಯಂತಹ ತಿಂಡಿ ಫಿಲ್ಟರ್ ಕಾಫೀ, ಟೀಗಳನ್ನು ಕೈ ಗೆಟುಕುವ ಬೆಲೆಯಲ್ಲಿ ಸವಿಯಬಹುದಾಗಿದ್ದಂತಹ, ಬೃಂದಾವನ್ ಹೋಟೆಲ್ ಶಾಶ್ವತವಾಗಿ ಮುಚ್ಚಲಾಗಿತ್ತು.

ರಾಮಕೃಷ್ಣ ರಾವ್  ಅವರು ಆರಂಭಿಸಿದ್ದ ಬೃಂದಾವನ್ ಹೋಟೆಲ್ಲನ್ನು ಅವರ ಸಹೋದರರಾಗಿದ್ದ  ಶಂಕರ್ ರಾವ್, ಮತ್ತು  ಅವರ ಕುಟುಂಬದ ಕುಡಿಗಳಾಗಿದ್ದ ಎ. ಮೋಹನ್ ರಾವ್, ಶ್ರೀನಿವಾಸ ರಾವ್ ಮತ್ತು ನೂರಕ್ಕೂ ಹೆಚ್ಚಿನ ಸಿಬ್ಬಂದಿಗಳು ಅಕ್ಷರಶಃ ನಿರುದ್ಯೋಗಿಗಳಾಗುತ್ತಾರೆ.  ಅಲ್ಲಿನ ಸಿಬ್ಬಂಧಿಗಳಿಗೆ ತಮ್ಮ ಉಡುಪಿ ಮೂಲದ ಅನೇಕ ಹೋಟೆಲ್ಲಿನಲ್ಲಿ ಕೆಲವನ್ನು ಹುಡುಕಿಕೊಡುವ ಮೂಲಕ ತಮ್ಮೊಂದಿಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದವರ ಬದಕನ್ನು ಹಸನು ಮಾಡುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯುತ್ತಾರೆ.

ಮಹಾತ್ಮ ಗಾಂಧಿ ರಸ್ತೆಯ ಹೆಗ್ಗುರುತಾಗಿದ್ದ 1967ರಲ್ಲಿ 46,000 ಚದರ ಅಡಿ ವಿಸ್ತೀರ್ಣದ ಹೋಟೆಲ್ ಭೂಮಿಯನ್ನು ಕೇವಲ 25 ಸಾವಿರ ರೂಗಳಿಗೆ ಸ್ವಾಧೀನಪಡಿಸಿಕೊಂಡು ಬೃಂದಾವನ್ ಹೋಟೆಲನ್ನು ಆರಂಭಿಸಿದ್ದ ರಾವ್ ಕುಟುಂಬ ಅದನ್ನು 2012 ರಲ್ಲಿ ಕೇವಲ  82 ಕೋಟಿ ರೂ.ಗಳಿಗೆ ಶುಭಂ ಜ್ಯುವಲರಿ ಖ್ಯಾತಿಯ ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ಮೆಹ್ತಾರವರು ನಗರದ ಹೃದಯ ಭಾಗದಲ್ಲಿ ತಮ್ಮ  ಖಾಸಗಿ ನಿವಾಸಕ್ಕಾಗಿ ಹುಡುಕುತ್ತಿದ್ದ ಜಾಗಕ್ಕಾಗಿ ಮಾರಾಟ ಮಾಡುತ್ತಾರೆ. ನಿಜ ಹೇಳೆಬೇಕೆಂದರೆ, ಮಾರುಕಟ್ಟೆಯ ಆಸ್ತಿಯ  ಮೌಲ್ಯ ಅದಕ್ಕಿಂತಲೂ ಹೆಚ್ಚೇ ಇದ್ದರೂ. Carvery Emporium ಮತ್ತು United mansion ಕಟ್ಟಡಗಳ ನಡುವೆ ಕಿರಿದಾದ ರಸ್ತೆಯಿಂದ ಈ ಪ್ರದೇಶಕ್ಕೆ ಹೋಗಬೇಕಿರುವ ಕಾರಣದಿಂದಾಗಿ ಇದು  ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗಿರವಹುದು.

ಈ ಮೂಲಕ ದೂರದೂರದ  ಪ್ರಯಾಣಿಕರಿಗೆ ವಸತಿ ಒದಗಿಸುವುದರ ಹೊರತಾಗಿ, ಸ್ವಾದಿಷ್ಟವಾದ ಮತ್ತು ರುಚಿಕರವಾದ ಭಕ್ಷ್ಯಗಳನ್ನು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಉಣಬಡಿಸಿದ ಬೃಂದಾವನ್ ಹೋಟೆಲ್ ಅಧಿಕೃತವಾಗಿ ಇತಿಹಾಸದ ಪುಟಕ್ಕೆ ಸೇರಿಹೋಗಿದ್ದು  ಅತ್ಯಂತ ದುಃಖಕರವೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಪುರೋಹಿತರ ಪರದಾಟ

ಬಹಳ ದಿನಗಳ ತರುವಾಯು ಮಕ್ಕಳು ಮನೆಯಲ್ಲಿ ಅಮ್ಮಾ ಮಾಡುವ ರುಚಿ ರುಚಿಯ ಅಡುಗೆಯ ಹೊರತಾಗಿಯೂ ಹೊರಗಡೆ ಊಟ ಮಾಡುವ ಆಸೆ ವ್ಯಕ್ತ ಪಡಿಸಿದ ಕಾರಣ ಕಳೆದ ವಾರಾಂತ್ಯದಲ್ಲಿ ಮಡದಿ, ಮಗಳು ಮತ್ತು ಮಗನೊಂದಿಗೆ ರಾತ್ರಿ ಊಟಕ್ಕೆಂದು ಸ್ವಲ್ಪ ದೂರದ ಹೊಸಾ ಹೋಟೆಲ್ ಒಂದಕ್ಕೆ ಹೋದೆವು. ಭಾನುವಾರವಾದ್ದರಿಂದ ಹೋಟೇಲ್ ಬಹುತೇಕ ಭರ್ತಿಯಾಗಿತ್ತು ಸ್ವಲ್ಪ ಮಬ್ಬಾಗಿಯೂ ಇತ್ತು. ಹಾಗಾಗಿ ಖಾಲಿ ಇರುವ ಜಾಗವನ್ನು ಹುಡುಕುತ್ತಿದ್ದಾಗ, ಒಬ್ಬರನ್ನು ನೋಡಿದ ತಕ್ಷಣ, ಎಲ್ಲೋ ನೋಡಿದ ನೆನಪು ಆದರೆ ಸರಿಯಾಗಿ ಸ್ಮೃತಿಗೆ ಬರುತ್ತಿರಲಿಲ್ಲ. ಅವರೂ ಕೂಡಾ ನಮ್ಮನ್ನು ನೋಡಿದ ಕೂಡಲೇ ಪರಿಚಯದ ದೇಶಾವರಿ ನಗೆ ಬೀರಿ ನಂತರ ಏನೋ ಅಪರಾಧೀ ಭಾವನೆಯಂತೆ ತಲೆ ತಗ್ಗಿಸಿ ತಮ್ಮ ಕುಟುಂಬದೊಡನೆ ಊಟ ಮಾಡತೊಡಗಿದರು. ಸರಿ ನಮಗೇಕೆ ಇನ್ನೊಬ್ಬರ ಉಸಾಬರಿ ಎಂದು ಸುಮ್ಮನೆ ಖಾಲಿ ಇದ್ದ ಜಾಗದಲ್ಲಿ ಕುಳಿತು ಕೊಂಡು ಊಟಕ್ಕೆ ಕುಳಿತರೂ, ಕೆಟ್ಟ ಕುತೂಹಲದಿಂದ ನನ್ನ ಮಗನಿಗೆ ಅವರನ್ನು ತೋರಿಸಿ, ಅವರನ್ನು ಎಲ್ಲೋ ನೋಡಿದ್ದೀವಿ ಆದರೆ ಅವರ ನೆನಪಾಗುತ್ತಿಲ್ಲ, ನೀನೇನಾದರೂ ನೋಡಿದ್ದಿಯಾ ಅಂತ ಕೇಳಿದೆ. ಹಾಗೆ ಕೇಳಿದ ತಕ್ಷಣ ಅವರನ್ನೇ ದಿಟ್ಟಿಸಿ ನೋಡಿದ ನನ್ನ ಮಡದಿ ಮತ್ತು ಮಗಾ, ಓ ಅವ್ರಾ, ಮೊನ್ನೆ ನಿಮ್ಮಮ್ಮನ ತಿಥಿಯಂದು ಮುತ್ತೈದೆ – ಬ್ರಾಹ್ಮಣಾರ್ತಕ್ಕೆ ಗಂಡ ಹೆಂಡತಿ ಬಂದಿದ್ರಲ್ಲಾ ಅವರೇ ಇವರು ಎಂದು ನೆನಪಿಸಿದಳು. ಓಹೋ ಸರಿ ಸರಿ. ನಮ್ಮಂತೆಯೇ ಅವರೂ ಕುಟುಂಬ ಸಮೇತ ಊಟಕ್ಕೆ ಬಂದಿದ್ದಾರೆ ಎಂದು ಹೇಳುತ್ತಾ ಊಟ ಮುಗಿಸಿ ಅಲ್ಲಿಯೇ ಮಗಳ ಅಭೀಪ್ಸೆಯಂತೆ ಪಕ್ಕದಲ್ಲಿಯೇ ಇದ್ದ ನ್ಯಾಚುರಲ್ಸ್ ಐಸ್ ಕ್ರೀಂ ತಿನ್ನಲು ಬಂದರೆ ಅಲ್ಲಿಯೋ ಅವರೇ ಸಿಗಬೇಕೆ?

ನನ್ನನ್ನು ನೋಡಿದ ಕೂಡಲೇ ಸಾರ್ ಚೆನ್ನಾಗಿದ್ದೀರಾ? ಏನು ಅಷ್ಟು ದೂರದಿಂದ ಇಲ್ಲಿಯವರೆಗೆ ಬಂದಿದ್ದೀರಿ ಎಂದು ನಾವು ಕೇಳುವುದಕ್ಕೆ ಮುಂಚೆಯೇ ನಮ್ಮನ್ನೇ ಅವರೇ ಕೇಳೀ ಬಿಟ್ಟರು. ಅದಕ್ಕೇ ನಾನು, ಏನು ಇಲ್ಲ ಸುಮ್ಮನೆ ಮಕ್ಕಳು ಹೊರಗಡೆ ಊಟ ಮಾಡಲು ಇಷ್ಟ ಪಟ್ಟರು. ಹೇಗೋ ಮನೆಯ ಬಳಿ ಇರುವ ಎಲ್ಲಾ ಹೋಟೆಲ್ಗಳಿಗೂ ಈಗಾಗಲೇ ಹೋಗಿದ್ದರಿಂದ ಬದಲಾವಣೆ ಇರಲಿ ಎಂದು ಇಷ್ಟು ದೂರ ಬಂದಿದ್ವೀ ಅಂದೆ. ನಾವು ಅಷ್ಟೇ ಸಾರ್. ಇವತ್ತು ನಮ್ಮ ಮಗಳ ಹುಟ್ಟು ಹಬ್ಬ. ಅದಕ್ಕೇ ಇಷ್ಟು ದೂರ ಬಂದ್ವೀ ಅಂದ್ರು. ಓಹೋ ಹೌದಾ!! ತುಂಬ ಸಂತೋಷ ಎಂದು ಹೇಳಿ ಐಸ್ ಕ್ರೀಂ ತಿನ್ನುತ್ತಿದ್ದ ಅವರ ಮಗಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ ಬೇಡ ಬೇಡ ಎಂದರೂ 200 ರೂಗಳನ್ನು ಕೈಗಿತ್ತು ಏನಾದರೂ ತೆಗೆದುಕೊ ಎಂದು ಹೇಳಿದೆ. ಹೇ!! ಇದೆಲ್ಲಾ ಯಾಕೆ ಸಾರ್. ನಿಮ್ಮಂತಹವರ ಆಶೀರ್ವಾದವೇ ಸಾಕು ಅಂತ ಹೇಳುತ್ತಲೇ ಮಗಳ ಕೈಯಿಂದ 200 ರೂಗಳನ್ನು ತೆಗೆದುಕೊಂಡು ಸದ್ದಿಲ್ಲದೆ ತಮ್ಮ ಶರ್ಟಿನ ಜೋಬಿಗೆ ಇಳಿಸಿಕೊಂಡರು ಆ ಪುರೋಹಿತರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂದು ಆ ಪುಟ್ಟ ಹುಡುಗಿ ಮತ್ತು ಅವಳ ತಾಯಿ ಒಂದು ಕ್ಷಣ ಕಕ್ಕಾಬಿಕ್ಕಿಯಾದರೂ ಅದನ್ನು ಹೆಚ್ಚಾಗಿ ತೋರಿಸಿಕೊಳ್ಳದೇ ಸಾವರಿಸಿಕೊಂಡು ಸುಮ್ಮನಾದರು. ಅಷ್ಟರೊಳಗೆ ನಮ್ಮ ಮಕ್ಕಳು ಅವರಿಗೆ ಬೇಕಾದ ಐಸ್ ಕ್ರೀಂ ಆರ್ಡರ್ ಮಾಡಿದ್ದರಿಂದ ನೀವು ಆರಾಮಾಗಿ ಐಸ್ ಕ್ರೀಂ ತಿನ್ನಿ ಅಂತ ಹೇಳಿ ಅವರಿಂದ ಜಾರಿಕೊಳ್ಳುವ ಭರದಲ್ಲಿ ಇರುವಾಗ, ಸಾರ್ ನಾವುಗಳು ಹೊರಗಡೆ ಹೋಟೆಲ್ನಲ್ಲಿ ಊಟ ಮಾಡಿದ್ದರಿಂದ ನಿಮಗೇನು ಅಭ್ಯಂತರ ಇಲ್ಲ ತಾನೇ. ದಯವಿಟ್ಟು ಈ ವಿಷಯ ನಿಮ್ಮ ಮನೆಗೆ ಬರುವ ಶಾಸ್ತ್ರಿಗಳಿಗೆ ಹೇಳಬೇಡಿ ಸಾರ್. ಆಮೇಲೆ ನಮ್ಮನ್ನು ಅವರು ಬ್ರಾಹ್ಮಣಾರ್ಥಕ್ಕೆ ಕರೆಯುವುದೇ ಇಲ್ಲ ಎಂದು ಕೇಳಿಕೊಂಡರು. ಅದಕ್ಕೆ ನಾನು ಅರೇ.. ಹೊರಗಡೆ ಊಟ ಮಾಡುವುದು ಬಿಡುವುದು ನಿಮ್ಮ ವಯಕ್ತಿಕ ವಿಚಾರ. ಭಯಪಡಬೇಡಿ ನಾನು ಅವರಿಗೆ ಹೇಳುವುದಿಲ್ಲ ಎಂದು ತಿಳಿಸಿ ಮಕ್ಕಳೊಡನೆ ಐಸ್ ಕ್ರೀಂ ತಿಂದು ಮನೆಗೆ ಬರುತ್ತಿದ್ದಾಗ ಇದೇ ರೀತಿಯ ಮತ್ತೊಂದು ಹಾಸ್ಯಮಯ ಪ್ರಸಂಗ ನನಗೆ ಜ್ಞಾಪಕಕ್ಕೆ ಬಂದಿತು.

ನಮ್ಮ ತಂದೆಯವರ ಅಣ್ಣ ಬಹು ದೊಡ್ಡ ಪುರೋಹಿತರು. ಸುತ್ತ ಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಅವರದ್ದೇ ಪ್ರಾಧಾನ್ಯತೆ. ಪೌರೋಹಿತ್ಯದ ಜೊತೆಗೆ ಜ್ಯೋತಿಷ್ಯವನ್ನು ಹೇಳುತ್ತಿದ್ದರಿಂದ ಸದಾ ಕಾಲವು ಅವರ ಮನೆಯಲ್ಲಿ ಜನ ಗಿಜಿ ಗಿಜಿ ಗುಟ್ಟುತ್ತಲೇ ಇರುತ್ತಿದ್ದರು. ನಮ್ಮ ಮನೆಯಲ್ಲಿ ಯಾವುದೇ ಹೊಸಾ ವಾಹನಗಳನ್ನು ಖರೀದಿಸಿದಲ್ಲಿ ಅದನ್ನು ಮೊದಲಿಗೆ ನಮ್ಮ ದೊಡ್ಡಪ್ಪನವರಿಗೆ ತೋರಿಸಿ ನಂತರ ಅವರ ಊರಿನಲ್ಲಿರುವ ಹೊನ್ನಾದೇವಿ ಗುಡಿಯಲ್ಲಿ ಪೂಜೆ ಮಾಡಿಸಿ ಕೊಂಡು ಬರುವ ಸಂಪ್ರದಾಯ ನಮ್ಮ ಮನೆಯಲ್ಲಿತ್ತು. ಹಾಗಾಗಿ ನಾನು ಹೊಸಾ ಕಾರ್ ತೆಗೆದುಕೊಂಡಾಗ ಸಂಸಾರ ಸಮೇತರಾಗಿ ನಮ್ಮ ದೊಡ್ದಪ್ಪನವರ ಊರಿಗೆ ಹೋಗಿ ದೊಡ್ಡಪ್ಪ ಮತ್ತು ದೊಡ್ಡಮ್ಮನವರಿಗೆ ಕಾರ್ ತೋರಿಸಿ ಅವರ ಆಶೀರ್ವಾದ ಪಡೆದುಕೊಂಡು ಅವರನ್ನೂ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಕೊಂಡು ಬಂದೆವು. ಅದಾಗಲೇ ಸಂಜೆ ಹೊತ್ತಾಗಿದ್ದರಿಂದ ಕತ್ತಲಲ್ಲಿ ಹೋಗುವುದು ಬೇಡ. ಈ ದಿನ ಇಲ್ಲೇ ಇದ್ದು ಮಾರನೆಯ ದಿನ ಸ್ನಾನ ಸಂಧ್ಯಾವಂದನೆ ಮುಗಿಸಿ ತಿಂಡಿ ತಿಂದು ಕೊಂಡು ಹೋಗಲು ಒತ್ತಾಯ ಪಡಿಸಿದರು. ಹೇಗೂ ಹಿರಿಯರು ಅಷ್ಟೊಂದು ಒತ್ತಾಯಿಸುತ್ತಿದ್ದಾರೆ ಅವರ ಮನಸ್ಸನ್ನು ಬೇಸರ ಪಡಿಸುವುದು ಬೇಡ ಎಂದುಕೊಂಡು ಆ ದಿನ ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದೆವು.

ಹೆಂಗಸರೆಲ್ಲಾ ಮನೆಯೊಳಗೆ ರಾತ್ರಿಯ ಅಡುಗೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದರೆ, ನಮ್ಮ ತಂದೆ, ದೊಡ್ಡಪ್ಪ, ಮತ್ತು ನಾನು ಹೊರಗಡೆ ಜಗುಲಿಯ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುದ್ದಾಗ, ನಮ್ಮ ದೊಡ್ಡಪ್ಪನವರು ಇದ್ದಕ್ಕಿಂದ್ದಂತೆಯೇ ಜಗ್ಗನೆ ಎದ್ದು ಎಲ್ಲೀ ಮಗು ನೀನು ಹೇಗೆ ಕಾರ್ ಓಡಿಸ್ತಿಯಾ ಅಂತಾ ನೋಡ್ಬೇಕು. ಬಾ ಹಾಗೆ ಹೋಗಿ ಬರೋಣ ಅಂತಾ ಅಂದ್ರು. ಅದಕ್ಕೇ ಅರೇ ದೊಡ್ಡಪ್ಪಾ, ಸ್ವಲ್ಪ ಹೊತ್ತಿಗೆ ಮುಂಚೇನೇ ದೇವಸ್ಥಾನಕ್ಕೆ ಹೋಗಿ ಬಂದ್ವಲ್ಲಾ ಅಂತಾ ಹೇಳಿದ್ದಕ್ಕೇ, ಅದು ತುಂಬಾ ಹತ್ತಿರವಾಯ್ತು. ಸ್ವಲ್ಪ ದೂರ ಹೋಗೋಣ ಬಾ ಎಂದು ಕರೆದರು. ಸರಿ ಎಂದು ನಾನು ಹೊರಟಾಗ ನೀನು ಒಬ್ಬನೇ ಇಲ್ಲಿ ಕುಳಿತು ಏನು ಮಾಡ್ತೀಯಾ? ನೀನೂ ನಮ್ಮ ಜೊತೆ ಬಾ ಎಂದು ನಮ್ಮ ತಂದೆಯವರನ್ನೂ ಕರೆದು ಕೊಂಡು ಮೂವರೂ ಕಾರಿನಲ್ಲಿ ಕುಳಿತು ಕೊಂಡು ಸುಮಾರು ಹದಿನೈದು ಇಪ್ಪತ್ತು ಕಿಮೀ ದೂರದ ಪಟ್ಟಣಕ್ಕೆ ಬಂದೆವು. ಪಟ್ಟಣ ಬಂದ ತಕ್ಷಣ ಸೀದಾ ಒಂದು ಹೋಟೆಲ್ ಒಂದಕ್ಕೆ ಕರೆದು ಕೊಂಡು ಹೋಗಲು ಹೇಳಿದರು. ಸಂಜೆ ಆಗಿದ್ದ ಕಾರಣ ಕಾಫೀ ಕುಡಿಯಬೇಕೇನೋ ಎಂದು ಹೋಟೇಲ್ ಮುಂದೆ ನಿಲ್ಲಿಸಿ ಎಲ್ಲರೂ ಹೋಟೇಲ್ ಒಳಗಡೆ ಹೋದ ಕೂಡಲೇ ನಮ್ಮ ದೊಡ್ಡಪ್ಪನವರು ಮೂರು ಮಸಾಲೆ ದೋಸೆ, ಮೂರು ಜಾಮೂನು ಒಂದು ಪ್ಲೇಟ್ ಬಜ್ಜಿ/ಪಕೋಡ ಆರ್ಡರ್ ಮಾಡಿದರು. ಇದೇನು ದೊಡ್ಡಪ್ಪಾ, ಮನೆಯಲ್ಲಿ ದೊಡ್ಡಮ್ಮ ಏನೋ ಔತಣವನ್ನು ಮಾಡಲು ಹೊರಟಿದ್ದಾರೆ. ನೀವು ನೋಡಿದ್ರೇ ಇಷ್ಟೊಂದು ಆರ್ಡರ್ ಮಾಡ್ತಾ ಇದ್ದೀರಿ. ಇಷ್ಟೆಲ್ಲಾ ತಿಂದ ಮೇಲೇ ರಾತ್ರಿ ಊಟದ ಸಮಯದಲ್ಲಿ ಏನು ತಿನ್ನೋದು ಎಂದು ಕೇಳಿದೆ. ಆಹಾ ಹಾ!! ನೋಡು ನೋಡು ದೊಡ್ಡಮ್ಮನ ಪರ ಹೇಗೆ ವಹಿಸಿಕೊಂಡು ಮಾತಾಡ್ತಾನೆ. ನಿಮ್ಮ ದೊಡ್ದಮ್ಮ ಇಷ್ಟು ರುಚಿರುಚಿಯಾಗಿ ಎಲ್ಲಿ ಮಾಡ್ತಾಳೆ? ಅಂತಾ ಮತ್ತೊಂದು ಪ್ಲೇಟ್ ಬಜ್ಜಿಯನ್ನು ಆರ್ಡರ್ ಮಾಡಿದ್ರು. ಜೊತೆಗೆ ಕಾಫೀ ಕೂಡಾ ತರಲು ಹೇಳಿದರು. ಅದು ಸರಿ ದೊಡ್ದಪ್ಪಾ ಇದನ್ನು ತಿನ್ನೋದಿಕ್ಕೆ ಇಷ್ಟೊಂದು ದೂರ ಬರಬೇಕಾ? ಅಲ್ಲೇ ನಿಮ್ಮ ಊರಿನ ಹತ್ತಿರದ ಹೋಟೆಲ್ನಲ್ಲೇ ತಿನ್ನಬಹುದಿತ್ತಲ್ವಾ ಅಂತಾ ಕುತೂಹಲದಿಂದ ಕೇಳಿದೆ. ಛೇ ಛೇ ಛೇ!! ಎಲ್ಲಾದರೂ ಉಂಟಾ ಊರ ಹತ್ತಿರ ಇರೋ ಹೋಟೇಲ್ನನಲ್ಲಿ ನಾವು ತಿನ್ನೋದಾ ಅಂದ್ರು. ಯಾಕೆ ದೊಡ್ದಪ್ಪಾ ಅಲ್ಲಿ ಚೆನ್ನಾಗಿರೊಲ್ವಾ ಅಂತಾ ಕೇಳಿದ್ದಕ್ಕೆ. ನೋಡು ಮಗೂ ಸುತ್ತ ಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಶುಭ ಮತ್ತು ಅಶುಭ, ಮದುವೆ ಮುಂಜಿ, ನಾಮಕರಣ ಯಾವುಕ್ಕೇ ಆಗಲೀ ನನ್ನನ್ನೇ ಪೌರೋಹಿತ್ಯಕ್ಕೆ ಕರೀತಾರೆ. ನಾನೇನಾದ್ರು ಹೋಟೆಲ್ನಲ್ಲಿ ತಿನ್ನೋದನ್ನು ನೋಡಿ ಬಿಟ್ಟರೆ, ಅರೇ ಇದೇನಿದು ಐನೋರೇ, ನೀವು ಕೂಡಾ ಹೋಟೆಲ್ನಲ್ಲಿ ನಮ್ಮ ತರಹ ತಿಂತಿದ್ದೀರಾ ಅಂತ ಹೇಳಿ ಮುಂದೆ ಯಾವುದಕ್ಕೂ ಕರೆಯುವುದಿಲ್ಲ. ಅದಕ್ಕೇ ನಿನ್ನನ್ನು ಇಷ್ಟು ದೂರ ಕರೆದು ಕೊಂಡು ಬಂದೇ. ಪೆಟ್ರೋಲ್ ದುಡ್ಡು ಎಷ್ಟು ಆಯ್ತು ಅಂತಾ ಹೇಳು ನಾನೇ ಕೊಟ್ಬಿಡ್ತೀನಿ ಅಂದ್ರು. ನಮ್ಮ ದೊಡ್ಡಪ್ಪನ ಪರದಾಟ ನೋಡಿ ನಾನೂ ನಮ್ಮ ತಂದೆಯವರು ಮುಸಿ ಮುಸಿ ನಗುತ್ತಾ ನಾನೇ ಹೊಟೇಲ್ ಬಿಲ್ ಚುಕ್ತ ಮಾಡಿ ಮನೆಗೆ ಬಂದೆವು.

dose1

ರಾತ್ರಿ ಮನೆಯ ಎಲ್ಲಾ ಹೆಂಗಸರೂ ಸೇರಿ ಭೂರೀ ಭೋಜನದ ವ್ಯವಸ್ಥೆ ಮಾಡಿದ್ದರು. ಆದರೆ ಗಡದ್ದಾಗಿ ತಿಂದಿದ್ದ ನಮಗೆ ಹೊಟ್ಟೆಯ ಹಸಿವೇ ಇರಲಿಲ್ಲ . ನಮ್ಮ ದೊಡ್ಡಪ್ಪಾ ಮಾತ್ರ, ಕೇಳಿ ಕೇಳಿ ಇನ್ನೂ ನಾಲ್ಕು ಹೀರೇಕಾಯಿ ಬಜ್ಜಿಯನ್ನು ಹೆಚ್ಚಿಗೆ ಹಾಕಿಸಿಕೊಂಡು ಜೊತೆಗೆ ಎರಡ್ಮೂರು ಲೋಟ ಗಸಗಸೆ ಪಾಯಸ ಕುಡಿದು. ಆಹಾ ಏನು ಚೆನ್ನಾಗಿ ಮಾಡಿದ್ದೀಯಾ ಎಂದು ನಮ್ಮ ದೊಡ್ಡಮ್ಮನನ್ನು ಹೊಗಳುತ್ತಿದ್ದಾಗ, ಹತ್ತಾರು ಊರಿಗೆ ಪುರೋಹಿತರಾಗಿದ್ದರೇನು? ಮನೆಯಲ್ಲಿ ಹೆಂಡತಿಗೆ ಗುಲಾಮರೇ ಎಂದು ಮನಸ್ಸಿನಲ್ಲಿಯೇ ನೆನೆದು ಕೊಂಡು ನಾನೂ ಮತ್ತು ನಮ್ಮ ತಂದೆಯವರು ಸುಮ್ಮನಾದೆವು. ನಾನು ಊಟದ ಸಮಯದಲ್ಲಿ ಕೋಳಿ ಕೆದಕಿದಂತೆ ಕದಕುತ್ತಾ ತುತ್ತಿಗೆ ಮುತ್ತಿಡುತ್ತಾ ಕಾಟಾಚಾರಕ್ಕೆ ತಿಂದಿದ್ದನ್ನು ಗಮನಿಸಿದ ನಮ್ಮಾಕಿ ಏನು ಸಾಹೇಬ್ರೇ, ಯಾಕೇ ಊಟ ಸೇರಲಿಲ್ವೇ ಎಂದು ಕುಹಕದಲ್ಲಿ ಕೇಳಿದಾಗ, ಗತಿ ಇಲ್ಲದೇ ಸಂಜೆ ಗಡದ್ದಾಗಿ ದೋಸೆ, ಬೋಂಡ ತಿಂದದ್ದನ್ನು ಒಪ್ಪಿಕೊಂಡೆ ಏಕೆಂದರೆ ನಾನೂ ಕೂಡ ನಮ್ಮ ದೊಡ್ಡಪ್ಪನ ಹಾಗೇ, ಅಮ್ಮಾವ್ರ ಗಂಡನೇ ಅಲ್ವೇ!!

ಇದೆಲ್ಲಾ ಗೊತ್ತಿದ್ದೇ ಏನೋ ನಮ್ಮ ಹಿರಿಯರು ಊಟ ತನ್ನಿಷ್ಟ ನೋಟ ಪರ ಇಷ್ಟ ಅಂತಾ ಗಾದೇನೇ ಮಾಡಿ ಬಿಟ್ಟಿದ್ದಾರೆ. ಬೇರೆ ಯಾರನ್ನೋ ಮೆಚ್ಚಿಸಲು ಹೋಗಿ ನಮ್ಮ ಊಟಕ್ಕೇ ಕಲ್ಲು ಹಾಕಿ ಕೊಳ್ಳಬಾರದು. ಮಡಿ ಮೈಲಿಗೆ ಏನಿದ್ರೂ ಮನಸ್ಸಿನಲ್ಲಿ ಇರಬೇಕು ಮತ್ತು ಮಾಡುವ ಕೆಲಸವನ್ನು ಶ್ರಧ್ಧಾ ಭಕ್ತಿಯಿಂದ ಮಾಡಬೇಕೇ ಹೊರತೂ ಬೇರೆಯವರು ಏನು ಅನ್ಕೋತಾರೋ ಅಂತಾ ಕದ್ದು ಮುಚ್ಚಿ ಕೆಲ್ಸ ಮಾಡಿ ಸಿಕ್ಕಿ ಹಾಕಿಕೊಂಡು ಮುಜುಗರ ಪಡೋ ಬದಲು, ಹಂಗಿನ ಅರಮನೆಗಿಂತ ಗಂಜಿಯ ಗುಡಿಸಲೇ ಲೇಸು ಅಂತಾ ಇರೋದೇ ಒಳ್ಳೇದಲ್ವಾ.

ಏನಂತೀರೀ?

ನೀರು, ಕಣ್ಣೀರು

ಕೆಲ ವರ್ಷಗಳ ಹಿಂದೆ ಹೊರಗೆಲ್ಲೋ ಹೋಗಿದ್ದಾಗ ಬಾಯರಡಿಕೆಯಾದಾಗ, ಸೀದಾ ಯಾವುದಾದರೂ ಹೋಟೆಲ್ಗಳಿಗೆ ಹೋಗಿ ಯಾರನ್ನೂ ಕೇಳದೇ ನೀರನ್ನು ಕುಡಿದು ಬರಬಹುದಾಗಿತ್ತು. ಅದೇ ರೀತಿ ಯಾವುದೇ ಅಪರಿಚಿತರ ಮನೆಯ ಕದವನ್ನು ತಟ್ಟಿ ಕುಡಿಯಲು ನೀರನ್ನು ಕೇಳಿದರೆ, ನಿಸ್ಸಂಕೋಚವಾಗಿ ನೀರನ್ನು ಕೊಡುತ್ತಿದ್ದರು. ಇನ್ನೂ ಕೆಲವರ ಮನೆಯವರು ನೀರಿನ ಜೊತೆ ಬೆಲ್ಲವನ್ನೂ ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅದೂ ಇಲ್ಲದೇ ಹೋದಲ್ಲಿ, ಅನೇಕ ಸಂಘಸಂಸ್ಥೆಗಳು ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಅರವಟ್ಟಿಕೆಗಳನ್ನು ಸ್ಥಾಪಿಸಿ ಎಲ್ಲರ ನೀರಡಿಕೆಯನ್ನು ನೀಗಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ ಸಂಪೂರ್ಣವಾಗಿ ಬದಲಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಕೆಲ ದಿನಗಳ ಹಿಂದೆ ಮೈಸೂರಿನ ಹೋಟೆಲ್ ಒಂದರಲ್ಲಿ ತಿಂಡಿ ತಿಂದ ನಂತರ ಕುಡಿಯಲು ನೀರು ಕೇಳಿದರೆ, ಆ ಹೋಟೆಲ್ಲಿನವರು ಎಂದಿನಂತೆ ಲೋಟದಲ್ಲಿ ನೀರನ್ನು ತಂದು ಕೊಡದೇ, Packed Water Bottle ತಂದು ಕೊಟ್ಟರಂತೇ. ಅಯ್ಯಾ ನನಗೆ ಈ ರೀತಿಯಾದ ಬಾಟಲ್ ನೀರು ಬೇಡ ಶುದ್ಧವಾದ ಸಾಧಾರಣವಾಗಿ ಎಲ್ಲರೂ ಕುಡಿಯುವ ನೀರನ್ನು ತಂದು ಕೊಡಿ ಎಂದಾಗ, ಅಂತಹ ಶುದ್ಧ ನೀರು ನಮ್ಮಲ್ಲಿಲ್ಲ ಎಂದು ಜೋರಾಗಿಯೇ ಗದರಿಸಿ ಹೇಳಿದರಂತೆ ಆ ಹೋಟೆಲ್ಲಿನವರು. ಈ ಕುರಿತಂತೆ ರಾಜ್ಯಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿಯೂ ವೈರಲ್ ಆಗಿ ಆ ಹೋಟೆಲ್ ವಿರುದ್ಧ ಪ್ರತಿಭಟನೆ ನಡೆಸಿದ್ದು ಈಗ ಇತಿಹಾಸ.

ನಿಜ ಹೇಳಬೇಕೆಂದರೆ, ಇದು ವಾಸ್ತವದ ಕಠು ಸತ್ಯವೇ ಆಗಿದೆ ಇಂದು ಶುದ್ಧವಾದ ನೀರು ಉಚಿತವಾಗಿ ಸಿಗುವುದೇ ದುರ್ಲಭವಾಗಿ ಹೋಗಿರುವುದು ನಿಜಕ್ಕೂ ಆತಂಕವಾಗಿದೆ. ನೀರು ಸಕಲ ಜೀವರಾಶಿಗಳಿಗೆ ಅತ್ಯಾವಶ್ಯಕವಾದದ್ದು. ಒಂದು ಪಕ್ಷ ಆಹಾರವಿಲ್ಲದೇ ಬದುಕ ಬಹುದೇನೋ? ಆದರೆ ನೀರಿಲ್ಲದೆ ಜೀವನವನ್ನು ಊಹಿಸಲೂ ಅಸಾಧ್ಯ. ಎಲ್ಲರ ಪ್ರಾತರ್ವಿಧಿಯಿಂದ ಹಿಡಿದು ರಾತ್ರಿ ಮಲಗುವ ವರೆಗೆ ನೀರು ಮನುಷ್ಯರ ಜೀವನಾವಶ್ಯಕವಾಗಿದೆ. ಇನ್ನೂ ಕೃಷಿ, ಹೈನುಗಾರಿಕೆ ಮತ್ತಾವುದೇ ಉದ್ಯೋಗಗಳೇ ಆಗಲಿ ಅದು ಒಂದಲ್ಲಾ ಒಂದು ರೀತಿಯಿಂದ ಅದು ನೀರಿನ ಮೇಲೆ ಅವಲಂಭಿತವಾಗಿದೆ. ಇಡೀ ಭೂ ಮಂಡಲದ ಶೇ 60ಕ್ಕೂ ಹೆಚ್ಚಿನ ಭಾಗ ಜಲಾವೃತವಾಗಿದ್ದರೂ ಇಡೀ ವಿಶ್ವದಲ್ಲಿ ಇಂದು ನೀರಿಗೆ ಹಾಹಾಕಾರವಾಗಿರುವುದು ನಿಜಕ್ಕೂ ಕಳಕಳಕಾರಿಯಾಗಿದೆ.

ಭಾರತದಲ್ಲಿ ಗಂಗಾ, , ಯಮುನಾ, ಗೋದಾವರಿ, ಸರಸ್ವತಿ,ನರ್ಮದಾ, ಸಿಂಧೂ, ಕಾವೇರಿ ಬ್ರಹ್ಮಪುತ್ರ, ಕೃಷ್ಣಾ, ಶರಾವತಿ, ತುಂಗಭದ್ರಾ ಇನ್ನೂ ಮುಂತಾದ ಅನೇಕ ನದಿಗಳು ನಮ್ಮ ದೇಶಾದ್ಯಂತ ಹರಿಯುತ್ತವಾದರೂ ಈ ರೀತಿಯ ನೀರಿನ ಬರಕ್ಕೆ ಕಾರಣವೇನು ಎಂದು ಯೋಚಿಸಿ ನೋಡಿದಲ್ಲಿ, ಈ ಎಲ್ಲಾ ನದಿಗಳಲ್ಲಿ ಅಂದಿನ ಸೊಬಗು ಇಂದು ಮಾಯವಾಗಿದೆ. ಹರಿಯುತ್ತಿರುವ ನೀರಿನ ಪ್ರಮಾಣವೂ ಅತ್ಯಂತ ಗಣನೀಯವಾಗಿ ಕಡಿಮೆಯಾಗಿದೆ. ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ ಉಗಮವಾಗಿ ಹರಿಯುವ ಕೆಲವು ಪ್ರಮುಖ ನದಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ನದಿಗಳು ಮಳೆಯನ್ನೇ ಆಶ್ರಯಿಸಿವೆ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾದ ಪರಿಣಾಮವಾಗಿಯೇ ಇಂದು ಹಲವಾರು ನದಿಗಳು ಕೇವಲ ಮಳೆಗಾಲದಲ್ಲಿ ಮಾತ್ರವೇ ಪ್ರಸ್ತುತವಾಗಿದ್ದು ಉಳಿದ ಸಮಯದಲ್ಲಿ ಬತ್ತಿ ಹೋಗುತ್ತಿರುವುದು ನೀರಿನ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿವೆ.

ನದಿಗಳು ತುಂಬಿ ಹರಿಯುತ್ತಿದ್ದಲ್ಲಿ ನದಿ ಪಾತ್ರಗಳ ಪ್ರದೇಶಗಳ ಕರೆ ಕಟ್ಟೆಗಳು ತುಂಬುತ್ತವೆ. ಕೆರೆ ಕಟ್ಟೆಗಳು ತುಂಬಿದ್ದಲ್ಲಿ ಸಹಜವಾಗಿ ಅ ಭಾಗಗಳಲ್ಲಿ ಅಂತರ್ಜಲ ಉತ್ತಮವಾಗಿದ್ದು ಜೀವನ ಅವಶ್ಕಕ್ಕೆ ಮತ್ತು ಕೃಷಿಗೆ ಅಗತ್ಯವಾದ ನೀರು ದೊರಕಿ ಎಲ್ಲವೂ ಸುಭಿಕ್ಷವಾಗಿರುತ್ತವೆ. ಹಾಗೆ ನದಿಗಳು ತುಂಬಿ ಹರಿಯಬೇಕಿದ್ದಲ್ಲಿ ಮಳೆಯ ಅವಶ್ಯಕವಿದೆ. ಸರಿಯಾದ ಸಮಯದಲ್ಲಿ ಸರಿಪ್ರಮಾಣದ ಮಳೆ ಸುರಿಯಲು ಗಿಡ ಮರಗಳ ಅವಶ್ಯಕವಿದೆ. ಭೂಮಿಯ ಮೇಲಿನ ನೀರು ಆವಿಯಾಗಿ ಮೋಡಗಳಾಗಿ ಮಾರ್ಪಾಡಗಿರುವುದನ್ನು ಈ ಎತ್ತರೆತ್ತರದ ಮರಗಿಡಗಳು ಆಕರ್ಷಿಸಿ ನಿಲ್ಲಿ ಮೋಡಗಳೇ, ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲೀ ಎಂಬ ಕವಿ ಶಿವರುದ್ರಪ್ಪನವರ ಕವಿತೆಯಂತೆ ಮಳೆ ಸುರಿಸುತ್ತವೆ. ಇಳೆಯನ್ನು ತಂಪಾಗಿಸುತ್ತವೆ.

ದುರದೃಷ್ಟವಶಾತ್ ನದಿ ಪಾತ್ರಗಳಲ್ಲಿ ಮರಗಳ್ಳರ ಹಾವಳಿ ಹೆಚ್ಚಾದ ಪರಿಣಾಮ ಸದ್ದಿಲ್ಲದೆ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಪರಿಣಾಮ ಆ ನದೀ ಪಾತ್ರಗಳಲ್ಲಿ ಸರಿಯಾಗಿ ಮಳೆಯೇ ಆಗುತ್ತಿಲ್ಲ. ಮಳೆಯೇ ಆಗದಿದ್ದರೆ ಇನ್ನು ನದಿಗಳು ತುಂಬುವುದು ಎಲ್ಲಿಂದ ಬಂತು? ನದಿಗಳೇ ತುಂಬದಿದ್ದರೆ ಕೆರೆ ಕಟ್ಟೆಗಳಿಗೆ ನೀರು ಎಲ್ಲಿಂದ ಬರಬೇಕು? ಮಾನವ ತನ್ನ ದುರಾಸೆಯಂದ ನಿತ್ಯಹರಿದ್ವರ್ಣ ಕಾಡುಗಳನ್ನು ಬರಿದು ಮಾಡುತ್ತಾ ಕಾಂಕ್ರೀಟ್ ನಾಡನ್ನು ಕಟ್ಟುವ ಭರದಲ್ಲಿ ನದಿ ಪಾತ್ರಗಳ ಮರಳನ್ನು ಸದ್ದಿಲ್ಲದೆ, ಎಗ್ಗಿಲ್ಲದೆ ದೋಚುತ್ತಿರುವ ಪರಿಣಾಮವೂ ನೀರಿನ ಆಭಾವಕ್ಕೆ ಕಾರಣವಾಗಿದೆ. ಇನ್ನು ಅಲ್ಪ ಸ್ವಲ್ಪ ಹರಿಯುವ ನದಿಗಳಿಗೆ ಅಥವಾ ಕೆರೆಗಳಿಗೆ ವಿವಿಧ ಕಾರ್ಖಾನೆಗಳ ಮತ್ತು ಜನರ ತ್ಯಾಜ್ಯದ ನೀರನು ಹರಿಸಿ ನೀರನ್ನು ಮಲಿನಗೊಳಿಸುತ್ತಿರುವ ಪರಿಣಾಮ ಅಂತಹ ನೀರು ಕಲುಷಿತಗೊಂಡು ಕುಡಿಯಲು ಮತ್ತು ಬಳೆಸಲು ಅಯೋಗ್ಯವಾಗುತ್ತಿರುವುದು ಮಾರಕವಾಗಿದೆ.

ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಕೇವಲ ಎಂಟು ಹತ್ತು ಅಡಿ ಭಾವಿ ತೋಡಿದರೆ ಸಾಕಷ್ಟು ದೊರಕುತ್ತಿದ್ದ ನೀರು ಇಂದು ಸಾವಿರಾರು ಅಡಿಗಳಷ್ಟು ಕೊರೆದರೂ ಕೊಳವೆ ಭಾವಿಗಳಲ್ಲಿ ಚಿಲುಕು ನೀರು ದೊರೆಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನೀರು ಸಂಪೂರ್ಣವಾಗಿ ಬಟ್ಟ ಬರಿದಾಗುವ ಅಪಾಯವೇ ಕಣ್ಣ ಮುಂದಿದೆ. ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಇದೆ. ಖಂಡಿತವಾಗಿಯೂ ಈ ಸಮಸ್ಯೆಗೆ ನಮ್ಮಲ್ಲಿಯೇ ಪರಿಹಾರವಿದೆ. ಅದರೆ ಅದಕ್ಕಾಗಿ ನಮ್ಮ ಜೀವನ ಶೈಲಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಿದೆ.

ಮೊಟ್ಟ ಮೊದಲಿಗೆ ಅಗತ್ಯವಿದ್ದಷ್ಟೇ ನೀರನ್ನು ಬಳಸಬೇಕಿದೆ. ಸ್ನಾನ ಮಾಡಲು, ಶೌಚಾಲಯಗಳಲ್ಲಿ, ಪಾತ್ರೆ ತೊಳಯಲು, ಬಟ್ಟೆ ಒಗೆಯುವಾಗ ಧಾರಳವಾಗಿ ನೀರನ್ನು ಬಳೆಸದೆ ಎಷ್ಟು ಬೇಕೋ ಅಷ್ಟನ್ನೇ ಬಳಸುವ ಅಭ್ಯಾಸ ರೂಡಿಸಿಕೊಳ್ಳ ಬೇಕಾಗಿದೆ. ಹಿಂದಿನ ಕಾಲದಲ್ಲಿ ಈ ರೀತಿಯಾಗಿ ಬಳೆಸಿದ ಎಲ್ಲಾ ನೀರೂ, ಮನೆಯ ಹಿಂದಿನ ಹಿತ್ತಲಿಗೆ ಹೋಗುತ್ತಿತ್ತು. ಆಹಿತ್ತಲಿನಲ್ಲಿಯೇ ಸುಂದರವಾದ ಕೈತೋಟವಿದ್ದು, ಅಲ್ಲಿ ಮನೆಗೆ ಬೇಕಾದ ಹಣ್ಣು ವಿಶೇಷವಾಗಿ ಬಾಳೆಹಣ್ಣು, ವಿವಿಧ ತರಕಾರಿಗಳು ಹೂವಿನ ಗಿಡಗಳನ್ನು ಹಾಗಿ ಬಳೆಸಿದ ನೀರನ್ನು ಮರುಬಳಕೆ ಮಾಡುತ್ತಿದ್ದರು. ಇಂದು ಎಲ್ಲವನ್ನೂ ಒಳ ಚೆರಂಡಿಗೆ ಹಾಯಿಸಿ ನೀರನ್ನು ವ್ಯರ್ಥ ಮಾಡದೆ ಮೊದಲಿನಂತೆಯೇ ಉಪಯೋಗ ಮಾಡಿಕೊಳ್ಳಬೇಕಾಗಿದೆ.

ಹಿಂದೆ ಯಾವುದೇ ಪಾಳೇಗಾರರಿರಲಿ, ಸಾಮಂತರಿರಲಿ ಇಲ್ಲವೇ ರಾಜ ಮಹಾರಾಜರುಗಳೇ ಇರಲಿ ಪ್ರತೀ ನಾಲ್ಕೈದು ಹಳ್ಳಿಗಳ ಮಧ್ಯೆ ಒಂದು ದೊಡ್ಡದಾದ ಕೆರೆಯನ್ನು ನಿರ್ಮಿಸಿ ಎಲ್ಲಾ ಹಳ್ಳಿಗಳಿಂದಲೂ ರಾಜ ಕಾಲುವೆಗಳ ಮುಖಾಂತರ ಮಳೆಯ ನೀರೆಲ್ಲವೂ ಆ ಕೆರೆಯನ್ನು ತುಂಬಿಸುವುದರ ಮೂಲಕ ಆ ಎಲ್ಲಾ ಹಳ್ಳಿಗಳ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಆದರೆ ಇಂದು ಇದ್ದ ರಾಜಕಾಲುವೆ ಮತ್ತು ಕೆರೆಗಳನ್ನೆಲ್ಲಾ ಮುಚ್ಚಿ ದೊಡ್ದದೊಡ್ಡ ಗಗನಚುಂಬಿ ಕಟ್ಟಡಗಳನ್ನು ಕಟ್ಟಿರುವುದರಿಂದಲೇ ನೀರಿಗೆ ಹಾಹಾಕಾರವಾಗಿದೆ. ಅಳಿದುಳಿದಿರುವ ಕೆರೆ ಕಟ್ಟೆಗಳ ಹೂಳನ್ನು ಎತ್ತಿಸಿ, ದಂಡೆಗಳನ್ನು ಭದ್ರಪಡಿಸಿ ರಾಜಕಾಲುವೆಗಳನ್ನು ಒತ್ತುವರಿಯನ್ನು ತೆರವು ಮಾಡಿಸಿ ಮಳೆ ನೀರು ಸರಾಗವಾಗಿ ಹರಿದು ಕೆರೆ ಕಟ್ತೆಗಳನ್ನು ತುಂಬುವಂತೆ ಮಾಡಬೇಕಿದೆ.

ದೇಶಾದ್ಯಂತ ಎಲ್ಲರ ಮನೆಗಳಲ್ಲಿಯೂ ಖಡ್ಡಾಯವಾಗಿ ಮಳೆಯ ನೀರಿನ ಕೊಯ್ಲಿನ ಪದ್ದತಿಯನ್ನು ಅಳವಡಿಸಿಕೊಂಡು ಮನೆಯ ಮಾಳಿಗೆಯ ಮೇಲೆ ಬಿದ್ದ ಪ್ರತಿ ಹನಿ ನೀರನ್ನೂ ಸಂಗ್ರಹಿಸಿ ಅದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆ ಹೆಚ್ಚಾದ ಮಳೆ ನೀರನ್ನು ಅಲ್ಲಿಯೇ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಬಹುದಾಗಿದೆ.

ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎಲ್ಲರ ಮನೆಯ ಮುಂದೆಯೂ ಖಡ್ಡಾಯವಾಗಿ ಮರಗಳನ್ನು ನೆಟ್ಟು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿ ಅವರದ್ದೇ ಆಗಬೇಕಿದೆ. ಹಾಗೆ ಮರ ಗಿಡಗಳನ್ನು ನೆಡುವುದರಿಂದ ಶುಧ್ಧವಾದ ಆಮ್ಲಜನಕವನ್ನು ನಮ್ಮಲ್ಲೇ ಪಡೆಯಬಹುದಲ್ಲದೆ ಆ ಮರಗಳು ಅನೇಕ ಪಕ್ಷಿಗಳ ಆಶ್ರಯ ತಾಣವಾಗುವುದಲ್ಲದೇ, ಮೋಡಗಳನ್ನು ಆಕರ್ಷಿಸಿ ಮಳೆಯನ್ನು ಸುರಿಸಬಲ್ಲದಾಗಿದೆ.

ಮಾರ್ಚ್ 22 ವಿಶ್ವನೀರಿನ ದಿನ. ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಕೇವಲ ಇದೊಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿ ದಿನವೂ, ಪ್ರತಿಕ್ಷಣವೂ ನಮ್ಮ ಮನಸ್ಸಿನಲ್ಲಿ ಗಮನವಿಟ್ಟು ಕೊಂಡು ಎಲ್ಲೆಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಅತ್ಯಗತ್ಯವಾಗಿ ಉಳಿಸಬೇಕಾದ ಜವಾಬ್ಧಾರಿ ನಮ್ಮ ಮೇಲಿಯೇ ಇದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರ ಈಗಾಗಲೇ ಅಕ್ಷರಶಃ ನೀರಿಲ್ಲದ ನಗರ ಎಂದು ಘೋಷಿಸಲಾಗಿದೆ ಮತ್ತು ಅದೇ ರೀತಿ ನಮ್ಮ ದೇಶದಲ್ಲೂ 21 ನಗರಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿಹೋಗಿದೆ ಎಂದು ಫೋಷಿಸಲಾಗಿದೆ. ಮಿಂಚಿ ಹೋದರೆ ಚಿಂತಿಸಿ ಫಲವಿಲ್ಲ ಎಂಬಂತೆ, ಪ್ರತಿ ಹನಿ ಹನಿ ನೀರನ್ನೂ ಸರಿಯಾದ ರೀತಿಯಲ್ಲಿ ಬಳಸದೇ, ಉಳಿಸದೇ ಹೋದಲ್ಲಿ , ಮುಂದೆ ನೀರಲ್ಲ, ಕಣ್ಣೀರನ್ನೂ ಸುರಿಸಲು ಆಗದಂತಹ ಪರಿಸ್ಥಿತಿ ಬರುವ ಎಲ್ಲ ಸಂಭವೂ ಹೆಚ್ಚಾಗಿದೆ. ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ನಾವು ಬಳಸುವ ಪ್ರತಿಯೊಂದು ಹನಿ ಹನಿ ನೀರನ್ನೂ ಎಚ್ಚರಿಕೆಯಂದ ಬಳಸುವ ಮೂಲಕ‌ ಮುಂದಿನ ಪೀಳಿಗೆಗೆ ನೀರನ್ನು ಉಳಿಸಲೇ ಬೇಕಿದೆ.

ಏನಂತೀರೀ?

ನಿಮ್ಮವನೇ ಉಮಾಸುತ