ರಸ್ತೆಗಳಲ್ಲಿ ಕಳ್ಳರು ಹೆಚ್ಚಾಗಿದ್ದಾರೆ ಎಚ್ಚರಿಕೆ

ಕೆಲ ದಿನಗಳ ಹಿಂದೆ, ಸಂಜೆ ಮಾರತ್ ಹಳ್ಳಿ ಕಡೆಯಿಂದ ರಿಂಗ್ ರೋಡಿನಲ್ಲಿ ಕಛೇರಿ ಮುಗಿಸಿಕೊಂಡು ನಮ್ಮ ಮನೆಯ ಕಡೆ ಕಾರ್ನಲ್ಲಿ ಒಬ್ಬನೇ ಹೊರಟಿದ್ದೆ. ಪ್ರತಿದಿನ ನಾನೂ ಮತ್ತು ನನ್ನ ಗೆಳೆಯ ಕಾರ್ ಪೂಲ್ ಮಾಡಿ ಕೊಂಡು ಹೋಗುವುದಾರರೂ ಅಂದು ಆತ ಕಛೇರಿಗೆ ಬಾರದಿದ್ದರಿಂದ ನಾನೋಬ್ಬನೇ ಎಫ್ ಎಂನಲ್ಲಿ ಹಾಡು ಕೇಳುತ್ತಾ ಸೆಖೆ ಇದ್ದ ಕಾರಣ ಕಾರಿನ ಮುಂಬಾಗಿಲಿನ ಎರಡೂ ಕಿಟಕಿಗಳನ್ನು ಅರ್ಧ ತೆರೆದುಕೊಂಡು ನಿಧಾನವಾಗಿ ಚಲಾಯಿಸುತ್ತಿದ್ದೆ. ಕಾರ್ ಅಷ್ಟರಲ್ಲಾಗಲೇ ಕೃಷ್ಣರಾಜಪುರಂ ಜಂಕ್ಷನ್ ತಲುಪಿಯಾಗಿತ್ತು. ಅಲ್ಲಿ ದಿನದ 24 ಘಂಟೆಯೂ ವಾಹನ ದಟ್ಟಣೆಯೇ. ಇನ್ನು ಮೆಟ್ರೋ ಕೆಲಸ ನಡೆಯುತ್ತಿರುವ ಕಾರಣ ಆಮೆ ಹೆಜ್ಜೆಯಂತೆ ವಾಹನ ಚಲಾಯಿಸಲ್ಪಡುತ್ತಿದ್ದವು

ಅಷ್ಟರಲ್ಲಿ, ಇದ್ದಕ್ಕಿದ್ದಂತೆಯೇ ನನ್ನ ಕಾರಿನ ಬಲ ಭಾಗದಲ್ಲಿ ಯಾರೋ ಧಡ್ ಧಡ್ ಎಂದು ತಟ್ಟಿದ ಹಾಗಾಯ್ತು. ಅರೇ ದೇಖ್ ಕೇ ಗಾಡಿ ಚಲಾ ನಹೀ ಸಕ್ತೆ ಹೋ ಕ್ಯಾ? ಎಂದು ಯಾರೋ ಜೋರಾಗಿ ಹೇಳಿದ ಹಾಗಾಯ್ತು. ಇದೇನಪ್ಪಾ ನನ್ನ ಪಾಡಿಗೆ ನಾನು ಹೋಗುತ್ತಿದ್ದೇನಲ್ಲಾ. ಯಾರಿಗೂ ನನ್ನ ಗಾಡಿ ತಗಲಿಸಲಿಲ್ಲವಲ್ಲಾ ಎಂದು ಸ್ವಲ್ಪ ಬಲಕ್ಕೆ ತಿರುಗಿ ನೋಡುತ್ತಿರುವಾಗಲೇ, ನನ್ನ ಗಾಡಿಯನ್ನು ಕುಟ್ಟುತ್ತಿದ್ದವ ನನ್ನ ಮುಂಬಾಗಿಲಿನ ಕಿಟಕಿಯ ಸಮೀಪವೇ ಬಂದು ಜೋರಾಗಿ ಕೂಗಾಡತೊಡಗಿದ. ಏನಪ್ಪಾ ನಿಂದೂ ನನ್ನದೇನೂ ತಪ್ಪಿಲ್ಲವಲ್ಲಾ ಎಂದು ಹೇಳುತ್ತಿರುವಾಗಲೇ, ನನ್ನ ಎಡ ಕಿಟಕಿಯ ಬಳಿ ಯಾರೋ ಬಂದು ಅರ್ಧ ಕಿಟಕಿ ತೆರದಿದ್ದರಲ್ಲಿ ಕೈ ಹಾಕಿ ಪಕ್ಕದ ಸೀಟಿನ ಮೇಲಿದ್ದ ನನ್ನ ಮೊಬೈಲ್ ತೆಗೆದುಕೊಳ್ಳುತ್ತಿರುವುದು ಕಾಣಿಸಿತು. ಕೂಡಲೇ ನಾನು ಎಚ್ಚೆತ್ತು ಕೊಂಡು ಜೋರಾಗಿ ಕೂಗುತ್ತಾ ಅವನ ಕೈಯಿಂದ ಮೊಬೈಲ್ ಕಿತ್ತು ಕೊಳ್ಳಲು ಪ್ರಯತ್ನಿಸಿ ಕೂಡಲೇ ಪವರ್ ವಿಂಡೋ ಬಟನ್ ಒತ್ತಿದೆ. ಯಾವಾಗ ಕಿಟಕಿ ಮುಚ್ಚಿಕೊಳ್ಳಲಾರಂಭಿಸಿತೋ ಆತ ನನ್ನ ಮೊಬೈಲ್ ಕೈ ಬಿಟ್ಟು ನನ್ನ ಕೈಯನ್ನು ಸರಕ್ ಎಂದು ತರಚಿ, ಲಬಕ್ ಎಂದು ತನ್ನ ಕೈ ತೆಗೆದುಕೊಂಡ. ಅಷ್ಟರಲ್ಲಿ ಕಾರ್ ಕಿಟಕಿ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರಿಂದ ಮತ್ತು ನಾನೂ ಜೋರಾಗಿ ಕಿರುಚುತ್ತಿದ್ದರಿಂದ ಇಬ್ಬರೂ ದಿಕ್ಕಾಪಾಲಾಗಿ ಓಡಿ ಹೋದರು. ಅಚಾನಕ್ಕಾಗಿ ಆದ ಈ ರೀತಿಯ ಆಘಾತದಿಂದ ಒಂದು ಕ್ಷಣ ನಾನು ಅವಕ್ಕಾಗಿ ಹೋದೆ. ಅಷ್ಟರಲ್ಲಿ ಹಿಂದಿನ ಕಾರ್ನವರು ಜೋರಾಗಿ ಹಾರ್ನ್ ಮಾಡಿದ್ದರಿಂದ ವಾಸ್ತವ ಲೋಕಕ್ಕೆ ಮರಳಿ ಕಾರನ್ನು ಮುಂದಕ್ಕೆ ಚೆಲಾಯಿಸಿಕೊಂಡು ಅಲ್ಲಿಯೇ ನಿಂತಿದ್ದ ಆರಕ್ಷರಿಗೆ ತಿಳಿಸಿದರೆ, ಸಾರ್, ಕಿಟಕಿ ಯಾಕೆ ತೆಗೆದು ಕೊಂಡು ಹೋಗ್ತೀರಾ? ಸುಮ್ಮನೆ ಕಿಟಕಿ ಮುಚ್ಚಿಕೊಂಡು ಏಸಿ ಹಾಕಿ ಕೊಂಡು ನೆಮ್ಮದಿಯಿಂದ ಪ್ರಯಾಣಿಸಿ. ಕಿಟಕಿ ತೆಗೆದು ಕೊಂಡು ಕಾರ್ ಚೆಲಾಯಿಸಿದರೆ ಧೂಳು ಕೂಡಾ ನಿಮ್ಮ ಕಾರಿನ ಒಳಗೆ ಬರುತ್ತದೆ ಎಂಬ ಪುಕ್ಕಟ್ಟೆ ಸಲಹೆ ನೀಡಿದರೇ ಹೊರತು ಆ ಕಳ್ಳರನ್ನು ಹಿಡಿಯುವ ಪ್ರಯತ್ನವಾಗಲೀ ನನ್ನನ್ನು ಸ್ವಾಂತ್ವನ ಗೊಳಿಸುವ ಪ್ರಯತ್ನವಾಗಲೀ ಮಾಡದಿದ್ದದ್ದು ನನಗೆ ಸೋಜಿಗವೆನಿಸಿತು.

ಈ ರೀತಿಯಾಗಿ ನಡೆದ ವಿಷಯವನ್ನು ಆ ಕೂಡಲೇ ನನ್ನ ಸ್ನೇಹಿತನಿಗೂ ಕರೆ ಮಾಡಿ ಅಚ್ಚರಿಯಿಂದ ತಿಳಿಸಿದಾಗ, ಓ ಆಷ್ಟೇನಾ, ಎಂದು ತಿಳಿಸಿ ಅಷ್ಟಕ್ಕೇ ಸುಮ್ಮನಾಗದೇ, ತಪ್ಪೆಲ್ಲಾ ನಿಂದೇ. ಕಾರ್ ಕಿಟಕಿ ತೆಗಿದೇ ಇದ್ದಿದ್ರೇ ಹೀಗಾಗ್ತಾ ಇತ್ತಾ? ಏಸಿ ಹಾಕಿಕೊಳ್ಳದೆ ಕಾರ್ ಓಡಿಸಿ ಅದೇನು ಪೆಟ್ರೋಲ್ ಉಳಿಸುತ್ತೀರೋ? ಎಂದು ನನ್ನನ್ನೇ ದಬಾಯಿಸಿದಾಗ ತಬ್ಬಿಬ್ಬಾಗಿ ಮರು ಮಾತನಾಡದೇ, ಮರು ಮಾತನಾಡದೇ, ಸುಮ್ಮನಾಗಿ ಹೋಗಿದ್ದೆ. ಮನೆಗೆ ಹೋಗಿ ಹೆಂಡತಿ ಮಕ್ಕಳೊಂದಿಗೆ ನಡೆದ ಸಂಗತಿ ತಿಳಿಸಿ ಕೈಗೆ ಆದ ಗಾಯಕ್ಕೆ ಮುಲಾಮು ಹಚ್ಚಿಕೊಂಡು ನಾಲ್ಕೈದು ದಿನಗಳ ಒಳಗೆ ವಾಸಿಮಾಡಿ ಕೊಂಡು ನಡೆದ ಸಂಗತಿಯನ್ನು ಸಂಪೂರ್ಣವಾಗಿ ಮರೆತು ಹೋಗಿದ್ದೆ.

ಆದರೆ ಮೊನ್ನೆ ಇದೇ ರೀತಿಯ ಘಟನೆ ಕೋರಮಂಗಲದ ಫೋರಂ ಮಾಲ್ ಬಳಿ ಒಂಟಿಯಾಗಿ ಕಾರ್ ಚೆಲಾಯಿಸುತ್ತಿದ್ದ ಮಹಿಳೆಯ ಕಾರ್ ಮೇಲೆ ಇದೇ ರೀತಿ ನಾಲ್ವರು ಧಾಳಿ ನಡೆಸಿದ ಸಂಗತಿಯನ್ನು ಸ್ನೇಹಿತೆಯೊಬ್ಬರು ವಾಟ್ಯಾಪ್ನಲ್ಲಿ ಕಳುಹಿಸಿದ್ದನ್ನು ಓದಿದಾಗ ನನ್ನ ಅನುಭವವನ್ನೂ ಎಲ್ಲರೊಂದಿಗೆ ಹಂಚಿಕೊಂಡು ಎಲ್ಲರನ್ನೂ ಎಚ್ಚರಿಸ ಬೇಕೆನಿಸಿತು. ಎಲ್ಲಿಯವರೆಗೂ ನಮ್ಮಂತೆ ಮೋಸ ಹೋಗುವವರೂ ಇರುತ್ತೇವೆಯೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ ಇದಕ್ಕೆಲ್ಲಾ ಸುಮ್ಮನೆ ಪೋಲೀಸರನ್ನೋ ಇಲ್ಲವೇ ಸರ್ಕಾರವನ್ನಾಳುವ ರಾಜಕಾರಣಿಗಳನ್ನೋ ಬೈಯುವುದರ ಬದಲು ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.

ಏನಂತೀರೀ?