ನೀರು ಓಕೆ. ಕೃತಕ‌ ಪಾನೀಯ ಏಕೆ?

ಪೋರ್ಚುಗಲ್ ನಲ್ಲಿ ನಡೆಯುತ್ತಿರುವ ಯೂರೋ 2020 ಟೂರ್ನಿಯಲ್ಲಿ ಪೋರ್ಚುಗಲ್ ತನ್ನ ಮೊದಲ ಪಂದ್ಯವನ್ನು ಆಡುತ್ತಲಿತ್ತು. ಸಹಜವಾಗಿ ಪಂದ್ಯ ಆಡುವ ಮುನ್ನ ತಂಡದ ಮ್ಯಾನೇಜರ್ ಮತ್ತು ತಂಡದ ನಾಯಕರ ಪ್ರೆಸ್ ಕಾನ್ಫರೆನ್ಸ್ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಈ ಸಂವಾದ ಪ್ರಪಂಚಾದ್ಯಂತ ಪ್ರಸಾರವಾಗುವ ಕಾರಣ, ಟೂರ್ನಿಯ ಪ್ರಾಯೋಜಕರಾದ ಕೋಕೋಕೋಲ ಇದರ ಪ್ರಯೋಜನವನ್ನು ಪಡೆಯುವ ಸಲುವಾಗಿ ಸಂವಾದ ನಡೆಸುವವರ ಟೇಬಲ್ ಮುಂದೆ ಸಣ್ಣದಾದ ಎರಡು ಕೋಕ್ ಬಾಟಲ್ ಗಳನ್ನು ಇಟ್ಟಿದ್ದರು. ಮೊದಲು ಈ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಪೋರ್ಚುಗಲ್ ತಂಡದ ಮ್ಯಾನೇಜರ್ ಫರ್ನಾಂಡೋ ಸ್ಯಾಂಟೋಸ್ ಯಾವುದೇ ಮುಜುಗರವಿಲ್ಲದೇ ಸಂವಾದ ಮುಗಿಸಿದ್ದರು.

ronoldo1

ಹಂಗರಿ ವಿರುದ್ಧದ ಪಂದ್ಯದ ಮುನ್ನ ಬುದಾಪೆಸ್ಟ್ನಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಗೆ ಆಗಮಿಸಿದ ಪೋರ್ಚುಗಲ್ ತಂಡದ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ, ಕುರ್ಚಿಯಲ್ಲಿ ಕೂರಲು ತನ್ನ ಟೇಬಲ್ ಮುಂದೆ ಬಂದಾಗ ಅವರ ಮುಂದಿದ್ದ ಕೋಲಾ ಬಾಟಲುಗಳನ್ನು ಗಮನಿಸಿದ ಕೂಡಲೇ ಸುಮ್ಮನೇ ಎರಡೂ ಬಾಟಲುಗಳನ್ನು ದೂರ ಸರಿಸಿ ಅಲ್ಲಿಯೇ ಇದ್ದ ನೀರಿನ ಬಾಟಲಿ ಎತ್ತಿ ತೋರಿಸುತ್ತಾ ಅಕುವಾ (ನೀರು) ಎಂದು ಪೋರ್ಚುಗೀಸ್ ಭಾಷೆಯಲ್ಲಿ ಹೇಳಿದರಲ್ಲದೇ, ತಮ್ಮ ಸಂವಾದ ಮುಂದುವರೆಸಿದರು. ಈ ಎಲ್ಲಾ ಪ್ರಕ್ರಿಯೆಗಳು ಕೇವಲ 20-30 ಸೆಕಂಡುಗಳಲ್ಲಿ ಸಹಜ ಎನ್ನುವಂತೆ ನಡೆದು ಹೋಗಿತ್ತು.

ರೋನಾಲ್ಡೊ, ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದನ್ನು ಬಿಟ್ಟು, ಶುದ್ಧವಾದ ನೀರು ಕುಡಿಯಿರಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎಂದೇ ಈ ಘಟನೆಯನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ, ಎನ್ನುವ ಹಾಗೆ ಇದರ ಪರಿಣಾಮ ನಷ್ಟವನ್ನು ಅನುಭವಿಸಿದ್ದು ಮಾತ್ರ ಕೋಕಾ ಕೋಲಾ ಕಂಪನಿ ಎನ್ನುವುದು ಮಾತ್ರ ರೋಚಕದ ಸಂಗತಿಯಾಗಿದೆ.

ಕೋಕಾ-ಕೋಲಾ ಬಹುರಾಷ್ಟ್ರೀಯ ಕಂಪನಿಯು ವಿಶ್ವದ 200 ಕ್ಕೂ ಹೆಚ್ಚು ದೇಶಗಳಲ್ಲಿ ದಿನಕ್ಕೆ 1.8 ಬಿಲಿಯನ್ ಪಾನೀಯಗಳನ್ನು ಮಾರಾಟ ಮಾಡುತ್ತದೆ. ಸೂಕ್ಷ್ಮವಾಗಿ ಗಮನಿಸಿದಲ್ಲಿ, ಪ್ರತಿ ಸೆಕೆಂಡಿಗೆ 12,600 ಜನರು ಕೋಕ್ ಉತ್ಪನ್ನವನ್ನು ಸೇವಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಯೂರೋ ಕಪ್ಪಿನ ಪ್ರಾಯೋಜಕ ಕಂಪನಿಗಳಲ್ಲಿ ಒಂದಾಗಿರುವ ಕೋಕಾ ಕೋಲಾದ ಷೇರುಗಳು, ರೋನಾಲ್ಡೋ ಅವರ ಈ ಪ್ರಹಸನದಿಂದಾಗಿ ಈಗಾಗಲೇ, ಭಾರಿ ಕುಸಿತಕ್ಕೆ ಒಳಗಾಗಿವೆ. ಈ ಪತ್ರಿಕಾಗೋಷ್ಠಿಯ ಬಳಿಕ ಕೋಕಾ ಕೋಲಾ ಕಂಪನಿಯ ಷೇರು ಮೌಲ್ಯ 56.10 ಡಾಲರ್ನಿಂದ 55.22 ಡಾಲರ್ಗೆ ಇಳಿಕೆಯಾಗಿತ್ತು. ಜತೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ 4 ಬಿಲಿಯನ್ ಡಾಲರ್ (ಸುಮಾರು 30 ಸಾವಿರ ಕೋಟಿ ರೂ.) ಕುಸಿತ ಕಂಡಿರುವುದು ಕಂಪನಿಗೆ ಭಾರೀ ಹೊಡೆತ ಕೊಡುವಷ್ಟು ದುಷ್ಪರಿಣಾಮವನ್ನು ಬೀರಿದೆ ಎನ್ನುವುದು ಗಮನಾರ್ಹವಾಗಿದೆ.

ಯೂರೋ 2020 ಟೂರ್ನಿಗೆ ಕೋಕಾ ಕೋಲಾ ಕಂಪನಿ ಕೂಡಾ ಸಹಾ ಪ್ರಾಯೋಕತ್ವ ವಹಿಸಿಕೊಂಡಿರುವ ಕಾರಣ, 5 ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೋ ಅವರ ಈ ನಡೆಯ ವಿರುದ್ಧ ಕಠಿಣವಾದ ಕ್ರಮವನ್ನು ಜರುಗಿಸಲಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರೂ, ಇಡೀ ಜಗತ್ತೇ ರೊನಾಲ್ಡೋ ಅವರ ಈ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸಿರುವುದು ಅಭಿನಂದನಾರ್ಹವಾಗಿದೆ.

ಇಷ್ಟೆಲ್ಲಾ ಮುಜುಗರದ ಪ್ರಸಂಗದ ನಂತರವೂ ಯೂರೋ ಟೂರ್ನಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೋ ಬಾರಿಸಿದ 2 ಮಿಂಚಿನ ಗೋಲುಗಳ ನೆರವಿನಿಂದ ಹಂಗೇರಿ ವಿರುದ್ದ ಪೋರ್ಚುಗಲ್ 3-0 ಅಂತರದಲ್ಲಿ ಗೆದ್ದು ಯೂರೋ ಟೂರ್ನಿಯಲ್ಲಿ ಶುಭಾರಂಭ ಮಾಡಿರುವುದೂ ಸಂತಸದ ವಿಷಯವಾಗಿದೆ.

ರೊನಾಲ್ಡೋ ಅವರ ಈ ರೀತಿಯ ಅನಿರೀಕ್ಷಿತ ನಡೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆಯಲ್ಲದೇ ಅನೇಕರು ಟ್ವಿಟರ್ ಮುಖಾಂತರ ಅಭಿನಂದಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ರಾಜೇಶ್ ಕಾಲ್ರಾ ಅವರೂ ಈ ಕುರಿತಂತೆ ಟ್ವೀಟ್ ಮಾಡಿದ್ದು, ರೊನಾಲ್ಡೋ ಅವರು ಈಗ ಮಾಡಿರುವುದನ್ನು ಬಹಳ ಹಿಂದೆಯೇ ಭಾರತದ ಬ್ಯಾಡ್ಮಿಂಟನ್ ದಿಗ್ಗಜರಾಗಿದ್ದ ಮತ್ತು ಪ್ರಸ್ತುತ ಖ್ಯಾತ ತರಭೇತುದಾರರಾಗಿರುವ ಪುಲ್ಲೇಲಾ ಗೋಪಿಚಂದ್, ಆರ್ಥಿಕವಾಗಿ ಅಷ್ಟೇನೂ ಸಬಲರಾಗಿಲ್ಲದಿದ್ದರೂ, ತಮ್ಮ ವೃತ್ತಿ ಜೀವನದ ಉನ್ನತ ಸ್ಥಾನದಲ್ಲಿದ್ದಾಗಲೇ ಪೆಪ್ಸಿ ಕಂಪನಿಯವರ ಭಾರೀ ಮೊತ್ತದ ಪ್ರಾಯೋಜತ್ವವನ್ನು ನಿರಾಕರಿಸಿದ್ದರ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಅದೇ ರೀತಿ ತಮ್ಮ ಆರಂಭದ ದಿನಗಳಲ್ಲಿ ಪೆಪ್ಸಿ ಪರವಾಗಿದ್ದ ವಿರಾಟ್ ಕೋಹ್ಲಿ ಸಹಾ 2017 ರ ನಂತರ ಈ ರೀತಿಯ ಎಲ್ಲಾ ಕೃತಕ ತಂಪು ಪಾನೀಯಗಳ ಪ್ರಾಯೋಜಕತ್ವವನ್ನು ನಿರಾಕರಿಸಿರುವುದು ಅನನ್ಯ ಮತ್ತು ಇತರೇ ಸೆಲೆಬ್ರಿಟಿಗಳಿಗೆ ಅನುಕರಣಿಯವಾಗಿದೆ ಎಂದರೂ ತಪ್ಪಾಗಲಾರದು.

ಇತ್ತೀಚಿನ ಯುವಕರುಗಳು ಸರಿಯಾದ ಆಹಾರ ಸೇವಿಸದೇ ಜಂಕ್ ಪುಡ್ ಗಳತ್ತಾ ವಾಲಿರುವುದಲ್ಲದೇ ನೀರಿನ ಬದಲಾಗಿ ಇಂತಹ ಕೃತಕ ಪಾನೀಯಗಳನ್ನು ಸೇವಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. 2014ರ ಅಂಕಿ ಅಂಶದ ಪ್ರಕಾರ, ಒಬ್ಬ ಫ್ರೆಂಚ್ ಮನುಷ್ಯ ವರ್ಷಕ್ಕೆ ಸರಾಸರಿ 20.7 ಲೀಟರ್ ಕೋಕಾ-ಕೋಲಾವನ್ನು ಕುಡಿಯುತ್ತಿದ್ದರೆ, ಒಬ್ಬ ಅಮೇರಿಕನ್ ಸರಾಸರಿ 99.5 ಲೀಟರ್ ಮತ್ತು ಮೆಕ್ಸಿಕನ್ 105.9 ಲೀಟರ್ ಕುಡಿಯುತ್ತಾರೆ ಎನ್ನುವುದು ಆತಂಕದ ವಿಷಯವಾಗಿದೆ. ನಮ್ಮ ದೇಶದ ಹಳ್ಳಿಯಲ್ಲಿ ಕುಡಿಯಲು ಶುದ್ದವಾದ ನೀರು ಸಿಗದಿದ್ದರೂ, ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಇಂತಹ ತಂಪು ಪಾನೀಯಗಳು ಸುಲಭವಾಗಿ ಲಭ್ಯವಿರುವುದು ಸ್ವಲ್ಪ ಆತಂಕಕ್ಕೆ ಎಡೆ ಮಾಡಿಕೊಡುತ್ತದೆ.

ಕೋಕಾ-ಕೋಲಾದಲ್ಲಿ ಬಳಸುವ ಪದಾರ್ಥಗಳೆಂದರೆ, ಕಾರ್ಬೊನೇಟೆಡ್ ನೀರು, ಸಕ್ಕರೆ, ಕ್ಯಾರಮೆಲ್ ಫಾಸ್ಪರಿಕ್ ಆಮ್ಲ ಕೆಫೀನ್ ಜೊತೆಗೆ ಕೆಲವು ಸಸ್ಯದ ಸಾರಗಳನ್ನು ನೈಸರ್ಗಿಕ ರುಚಿಗಳಾಗಿ ಬಳಸುತ್ತಾರೆ. ಒಂದು ಕ್ಯಾನ್ ಕೋಕಾ-ಕೋಲಾ ಸುಮಾರು 33 ಕ್ಯಾಲೋರಿಗಳಷ್ಟಿದ್ದರೆ, ಅದರಲ್ಲಿ 35 ಗ್ರಾಂ ಸಕ್ಕರೆಯಿರುತ್ತದೆ. ಅಂದರೆ ಇದು 7 ಸಕ್ಕರೆ ಉಂಡೆಗಳಿಗೆ ಸಮಾನವಾಗಿರುತ್ತದೆ.

ಕೋಕಾ-ಕೋಲಾದಲ್ಲಿ ಈ ಪ್ರಮಾಣದಲ್ಲಿ ಸುಕ್ರೋಸ್ ಮತ್ತು ಸಕ್ಕರೆಗಳು ಇರುವುದರಿಂದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುವುದಲ್ಲದೇ ಮಧುಮೇಹಕ್ಕೂ ಕಾರಣವಾಗುತ್ತದೆ, ಹಲ್ಲು ಹುಳುಕಾಗುವುದಲ್ಲದೇ ಬೊಜ್ಜು ಸಹಾ ಹೆಚ್ಚಾಗುತ್ತದೆ.

ಅಮೇರೀಕಾದಲ್ಲಿ 43,000 ವಯಸ್ಕರು ಮತ್ತು 4,000 ಹದಿಹರೆಯದವರೊಂದಿಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ದಿನಕ್ಕೆ ಒಮ್ಮೆ ಅಥವಾ ಅದಕ್ಕಿಂತ ಹೆಚ್ಚಿನ ಬಾರೀ ಈ ರೀತಿಯ ತಂಪು ಪಾನೀಯಗಳನ್ನು ಸೇವಿಸುವುದರಿಂದ ಬೊಜ್ಜು ಬರುವ ಸಾಧ್ಯತೆಯು 27% ಹೆಚ್ಚಾಗುತ್ತದೆ ಎಂದು ಹೇಳಿದೆ. ದಿನಕ್ಕೆ ಕನಿಷ್ಠ ಒಂದು ಬಾರಿ ಸೋಡಾವನ್ನು ಸೇವಿಸುವುದರಿಂದ 62% ವಯಸ್ಕರು ಅಧಿಕ ತೂಕ ಅಥವಾ ಬೊಜ್ಜು ಹೊಂದುತ್ತಾರೆ ಎನ್ನುವುದು ಕಳವಳಕಾರಿಯಾಗಿದೆ.

ಕೋಕಾ-ಕೋಲಾದ ಸೇವನೆಯಿಂದಾಗಿ, ಅದರಲ್ಲಿರುವ ಅತಿಯಾದ ಸಿಹಿಯು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುವುದಲ್ಲದೇ, ಅವುಗಳು ಹಲ್ಲುಗಳ ದಂತಕವಚದ ಮೇಲೆ ಆಕ್ರಮಣ ಮಾಡುವ ಆಮ್ಲವನ್ನು ಬಿಡುಗಡೆ ಮಾಡುವ ಕಾರಣ ದಂತ ಕುಳಿಗಳಿಗೆ ಕಾರಣವಾಗುತ್ತದೆ. ಕೋಕಾ ಕೋಲಾದಲ್ಲಿ ಬಳಸುವ ಫಾಸ್ಪರಿಕ್ ಆಮ್ಲದಲ್ಲಿ 2.5-2.7 ರಷ್ಟು ಪಿಹೆಚ್ ಅನ್ನು ಹೊಂದಿರುವ ಕಾರಣ, ಈ ಆಮ್ಲೀಯತೆಯು ಬಾಯಿಯ ಪಿಹೆಚ್ ಅನ್ನು ಕಡಿಮೆ ಮಾಡುವುದರಿಂದ ವಿಶೇಷವಾಗಿ ಕ್ಷಯದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎನ್ನುವುದು ಬೆಳಕಿಗೆ ಬಂದಿದೆ,

ಕೋಕಾ-ಕೋಲಾದಲ್ಲಿ ಹುಳಿಯಾದ ರುಚಿಯನ್ನು ನೀಡುವ ಫಾಸ್ಪರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿಸುತ್ತವೆ. ಇನ್ನು ಇದೇ ಫಾಸ್ಪರಿಕ್ ಆಮ್ಲವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದಲ್ಲದೇ, ಆಸ್ಟಿಯೊಪೊರೋಸಿಸ್ ನಂತಹ ಮೂಳೆ ಕಾಯಿಲೆಗಳನ್ನು ಉತ್ತೇಜಿಸುತ್ತದೆ ಎನ್ನುವುದು ಆತಂಕಕಾರಿಯಾಗಿದೆ.

ಯಾರೋ ನಮ್ಮ ನೆಚ್ಚಿನ ಸಿನಿಮಾ ನಟ ಇಲ್ಲವೇ ಯಾರೋ ನಮ್ಮ ನೆಚ್ಚಿನ ಆಟದ ಆಟಗಾರರು ಇಂತಹ ಕಂಪನಿಗಳಿಂದ ಪ್ರಾಯೋಜಕತ್ವ ಪಡೆದು ತಮ್ಮ ಜೋಬನ್ನು ತುಂಬಿಸಿ ಕೊಂಡು E Dil mange more ಎಂದೋ, har wrong ko right bana de ಎಂದೋ, Always the Real Thing!, ठंडा मतलब Coca-Cola! / Thanda matalaba Coca-Cola! ಎಂದು ಅವುಗಳನ್ನು ಕುಡಿಯುವುದನ್ನು ನೋಡಿ, ಅವರ ಮೇಲಿನ ಅಂಧಾಭಿಮಾನದಿಂದ ನಾವುಗಳು ಹಣವನ್ನು ಕೊಟ್ಟು ಆರೋಗ್ಯವನ್ನು ಏಕೆ ಹಾಳು ಮಾಡಿಕೊಳ್ಳ ಬೇಕು?

ನಮ್ಮ ನೆಚ್ಚಿನ ನಟ ಮತ್ತು ಆಟಗಾರ ಮೇಲಿನ ಅಭಿಮಾನ ತಪ್ಪಲ್ಲ ಅದರೇ ಈ ರೀತಿಯ ಅಂಧಾಭಿಮಾನ ನಿಜಕ್ಕೂ ಅನಾರೋಗ್ಯಕರವೇ ಸರಿ. ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಈ ರೀತಿಯ ಕೃತಕ ಪಾನೀಯ ಕುಡಿಯಿರಿ, ಆ ಜೂಜಾಟ ಆಡಿರಿ ಎನ್ನುವರಿಗಿಂತ ತಮ್ಮ ಅಭಿಮಾನಿಗಳ ಪರ ಕಾಳಜಿಯನ್ನು ವಹಿಸಿ ಇಂತಹ ಕೃತಕ ಪೇಯಗಳನ್ನು ತಿರಸ್ಕರಿಸಿದ, ಪುಲ್ಲೇಲ ಗೋಪಿಚಂದ್, ತಡವಾಗಿಯಾದರೂ ಬುದ್ಧಿ ಕಲಿತುಕೊಂಡ ವಿರಾಟ್ ಕೊಹ್ಲಿ ಮತ್ತು ಈಗ ಕ್ರಿಶ್ಚಿಯಾನೊ ರೊನಾಲ್ಡೊ ಗಳೇ ನಿಜವಾದ ಹೀರೋಗಳು ಎನಿಸಿ ಕೊಳ್ಳುತ್ತಾರೆ.

ಏನಂತೀರೀ?
ನಿಮ್ಮವನೇ ಉಮಾಸುತ

ಉಷ್ಟ್ರಾರೂಢಾ ಹನುಮಂತ

ವಾಯುಪುತ್ರ ಆಂಜನೇಯನಿಗೆ ಗಾಳಿಯಲ್ಲಿ ಸ್ವತಃ ತಾನೇ ನೂರಾರು ಯೋಜನಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಅದನ್ನು ಸೀತಾನ್ವೇಷಣೆಯ ಸಂಧರ್ಭದಲ್ಲಿ ಸಮುದ್ರ ಲಂಘನದ ಸಮಯದಲ್ಲಿ ನಿರೂಪಿಸಿಯೂ ಇದ್ದ ಆದರೂ, ಆಂಜನೇಯಯನ ಅನೇಕ ದೇವಾಲಯಗಳಲ್ಲಿ ಅಂಜನೇಯಯನ ವಿಗ್ರಹದ ಮುಂದೆ ಒಂಟೆಯನ್ನು ಇಟ್ಟಿರುತ್ತಾರಲ್ಲದೇ ಅವರನ್ನು ಉಷ್ಟ್ರಾರೂಡಾ ಎಂದೂ ಕರೆಯಲಾಗುತ್ತದೆ. ರಾಮಾಯಣ ಮತ್ತು ಪರಾಶರ ಸಂಹಿತೆಯಲ್ಲಿಯೂ ಹನುಮಂತ ಗಾಳಿಯ ವೇಗದಲ್ಲಿ ಹಾರಬಲ್ಲ ಎಂಬುವ ಅನೇಕ ಉದಾಹರಣೆಗಳನ್ನು ವಿವರಿಸುತ್ತಾರೆ ಮತ್ತು ಲಂಕೆಯನ್ನು ತಲುಪಲು ಸಾಗರದಾದ್ಯಂತ ಹಾರಾಟ, ಸಂಜೀವೀನಿಯನ್ನು ತರುವ ಸಲುವಾಗಿ ಲಂಕೆಯಿಂದ ಹಿಮಾಲಯಕ್ಕೆ ಹಾರಾಟ, ಪಾತಾಳ ಲೋಕಕ್ಕೆ ಹಾರುವುದು ಹೀಗೆ ಶರವೇಗದಲ್ಲಿ ಎಲ್ಲಾ ಕಡೆಯೂ ಹಾರುವುದನ್ನೇ ಬಿಂಬಿಸಿರುವಾಗ ಒಂಟೆಯಂತಹ ನಿಧಾನವಾಗಿ ಚಲಿಸುವ ಪ್ರಾಣಿಯೇಕೆ ಹನುಮಂತನ ವಾಹನ? ಎಂಬ ಜಿಜ್ಞಾಸೆ ಬಹಳವಾಗಿ ಕಾಡಿದ ಕಾರಣ ಅದರ ಬಗ್ಗೆ ಸೂಕ್ಷ್ಮವಾಗಿ ಜಾಲಾಡಿದಾಗ ದೊರೆತ ಕೆಲವೊಂದು ಮಾಹಿತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

hanuman2ಎಲ್ಲರಿಗೂ ತಿಳಿದಂತೆ ಹನುಮಂತ ಆಜನ್ಮ ಬ್ರಹ್ಮಚಾರಿಯಾಗಿ ಅತ್ಯಂತ ಶ್ರದ್ಧೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿದವನು. ನಮ್ಮ ಪುರಾಣಗಳ ಪ್ರಕಾರ ಈ ರೀತಿಯಾಗಿ ಕಠೋರ ಬ್ರಹಚರ್ಯ ಪಾಲಿಸಿದವರೆಂದರೆ ಭೀಷ್ಮಾಚಾರ್ಯರು ಮತ್ತು ಹನುಮಂತ ಇಬ್ಬರೇ. ಇಂತಹ ಹನುಮಂತನಿಗೆ ನವ ವೈಕರ್ಣವನ್ನು (9 ವ್ಯಾಕರಣ ನಿಯಮಗಳು) ಕಲಿಯಲು ಬಯಸಿದರಂತೆ. ಆದರೆ ಕೇವಲ ಗೃಹಸ್ಥರಾಗಿದ್ದವರು ಮಾತ್ರವೇ ಇದನ್ನು ಅಧ್ಯಯನ ಮಾಡಬಹುದು ಎಂಬ ನಿಯಮವಿದ್ದ ಕಾರಣ, ಆಜನ್ಮ ಬ್ರಹ್ಮಚಾರಿ ಹನುಮಂತ ಇದನ್ನು ಕಲಿಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಹನುಮಂತನಿಗೆ ಬಹಳ ದುಃಖವಾಗಿತ್ತು. ಇದನ್ನು ಕಂಡ ಸೂರ್ಯ ದೇವರು, ಇಂತಹ ಸಮರ್ಥನೊಬ್ಬನು ಕಲಿಕೆಯಿಂದ ದೂರವಾಗಬಾರದೆಂದು ಬಯಸಿ ತನ್ನ ಮಗಳಾದ ಸುವರ್ಚಲೆಯನ್ನು ಮದುವೆ ಮಾಡಿಕೊಟ್ಟು ಅವನಿಗೆ ಪ್ರಜಾಪತ್ಯ ಬ್ರಹ್ಮಚಾರಿ ಎಂಬ ವರವನ್ನು ಕರುಣಿಸುತ್ತಾನೆ. ಈ ವರದ ಪ್ರಕಾರ ಆಂಜನೇಯನು ಮದುವೆಯಾದ ನಂತರವೂ ತನ್ನ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳುತ್ತಾನೆ. ಆಂಜನೇಯನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡ ಕುರುಹಿಗಾಗಿ ಅವರಿಬ್ಬರಿಗೂ ಒಂಟೆಯೊಂದನ್ನು ಬಹುಮಾನವಾಗಿ ಕೊಟ್ಟ ಕಾರಣದಿಂದಾಗಿ ಇಂದಿಗೂ ಸಹಾ ಅನೇಕ ದೇವಾಲಯಗಳಲ್ಲಿ ಆಂಜನೇಯನ ಪತ್ನಿ ಸಮೇತವಿರುವ ವಿಗ್ರಹಗಳ ಮುಂದೆ ಒಂಟೆಯ ಪ್ರತಿಮೆ ಇರುತ್ತದೆ ಎಂಬ ಪ್ರತೀತಿ ಇದೆ. ನಿಜವಾಗಿಯೂ ಸುವರ್ಚಲ ದೇವಿ ಎಂಬುವರು ಹೆಣ್ಣಾಗಿರದೆ ಅದೊಂದು ದೈವಿಕ ಶಕ್ತಿಯಾಗಿದ್ದು, ಸೂರ್ಯ ದೇವರ ಅನುಗ್ರಹದಿಂದ, ಹನುಮಂತನ ಜ್ಞಾನಾರ್ಜನೆಗಾಗಿ ಮತ್ತು ಧಾರ್ಮಿಕ ಪೂಜೆಯ ಉದ್ದೇಶಕ್ಕಾಗಿ ಹನುಮನೊಂದಿಗೆ ಅವಳನ್ನು ವಿವಾಹ ಮಾಡಿಕೊಡಲಾಗಿದೆ. ಸಾಮಾನ್ಯವಾಗಿ ಎಲ್ಲಾ ದೇವರುಗಳಿಗೂ ಶಕ್ತಿ (ಹೆಂಡತಿ), ವಾಹಕ (ವಾಹನಾ) ಮತ್ತು ಆಯುಧ (ಶಸ್ತ್ರಾಸ್ತ್ರ)ಗಳು ಇರಬೇಕೆಂಬ ನಿಯಮವಿರುವುದರಿಂದ ಹನುಮಂತನಿಗೆ ಸುವರ್ಚಲಾ ದೇವಿ ಹೆಂಡತಿ, ಒಂಟೆ ವಾಹನವಾಗಿ ಮತ್ತು ಗದೆ ಆಯುಧವಾಗಿದೆ ಎನ್ನುತ್ತಾರೆ ತಿಳಿದವರು.

pampaಇನ್ನು ವೈಜ್ಞಾನಿಕವಾಗಿರುವ ಮತ್ತೊಂದು ದೃಷ್ಟಾಂತದ ಪ್ರಕಾರ,  ಎಲ್ಲಾ ವಾನರರು ಪಂಪಾ ಸರೋವರದ ತಟದಲ್ಲಿದ್ದ ಕಿಷ್ಕಿಂದೆಯಲ್ಲಿ ವಾಸಿಸುತ್ತಿದ್ದರು. ಪಂಪಾ ಸರೋವರದ ತಟ ಬಹಳಷ್ಟು ಮರಳುಗಳಿಂದ ತುಂಬಿರುವ ಕಾರಣ ವಾನರರಿಗೆ ನಡೆಯಲು ಬಹಳ ಕಷ್ಟವಾಗಿತ್ತು , ನೀಳ ಕಾಲ್ಗಳ ಒಂಟೆಗಳು ಮರಳುಗಾಡಿನಲ್ಲಿ ಸರಾಗವಾಗಿ ನಡೆಯಲು ಸಾಧ್ಯವಿದ್ದ ಕಾರಣ ಈ ಮಾರ್ಗದಲ್ಲಿ ಒಂಟೆಗಳನ್ನು ಪ್ರಯಾಣಿಸುವ ಮಾಧ್ಯಮವಾಗಿ ಬಳಸುತ್ತಿದ್ದರು. ಹನುಮಂತನೂ ಸಹಾ ಕಿಷ್ಕಿಂದೆಯಲ್ಲಿಯೇ ವಾಸಿಸುತ್ತಿದ್ದ ಕಾರಣ ಆ ಭೂಭಾಗದಲ್ಲಿ ಸುಲಭವಾಗಿ ಓಡಾಡುವ ಸಲುವಾಗಿ ಒಂಟೆಯನ್ನು ತನ್ನ ವಾಹನವಾಗಿ ಬಳಸುತ್ತಿದ್ದನು ಎಂಬ ಉದಾಹರಣೆಯು   ವಾಸ್ತವಕ್ಕೆ ಸ್ವಲ್ಪ ಹತ್ತಿರವಾದಂತಿದೆ.

hanuman1ಇನ್ನೊಂದು ಕತೆಯ ಪ್ರಕಾರ, ಹನುಮಂತನ ಪರಮ ಭಕ್ತರೊಬ್ಬರು, ಹನುಮಂತನ ದರ್ಶನಕ್ಕಾಗಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು. ತನ್ನ ಭಕ್ತರ ಅಭೀಷ್ಟೆಯನ್ನು ಈಡೇರಿಸುವ ಸಲುವಾಗಿ ಹನುಮಂತನು ಅವರಿಗೆ ತನ್ನ ದರ್ಶನದ ಪ್ರಾಪ್ತಿಯನ್ನು ಕರುಣಿಸಿ ಆಶೀರ್ವದಿಸಿದನು. ಹೀಗೆ ಬಂದು ಹಾಗೆ ಹೋದ ಹನುಮಂತನ ದರ್ಶನದಿಂದ ತೃಪ್ತರಾಗದ ಆ ಭಕ್ತರು, ಮತ್ತೊಮ್ಮೆ ಹನುಮಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಅಯ್ಯಾ ಭಗವಂತ, ನೀನು ವಾಯು ವೇಗ, ಮನೋ ವೇಗದ ಸ್ವಭಾವ ಹೊಂದಿರುವ ಕಾರಣ ನೀನು ಕ್ಷಣಾರ್ಧದಲ್ಲಿ ಬಂದು ನಿನ್ನ ದರ್ಶನ ಕರುಣಿಸಿದೆ. ಹಲವಾರು ಸಮಯದಿಂದ ನಿನ್ನ ದರ್ಶನಕ್ಕಾಗಿ ಕಾದಿದ್ದ ನಾನು, ನನ್ನ ಕಣ್ಣುಗಳನ್ನು ತೆರೆಯುವ ಮೊದಲೇ ನೀನು ಮಾಯವಾಗಿ ಹೋದೆ. ಹಾಗಾಗಿ ನಿಧಾನವಾಗಿ ಚಲಿಸುವ ಒಂಟೆಯ ಮೇಲೆ ಬಂದು ನಿನ್ನ ದರ್ಶನ ಕರುಣಿಸಿದರೆ, ಆನಂದದಿಂದ ನಿನ್ನನ್ನು ಕಣ್ತುಂಬಿಸಿಕೊಂಡು ಸಂತೋಷ ಪಡುತ್ತೇನೆ ಎಂದು ಕೋರಿಕೊಂಡರಂತೆ. ಭಕ್ತನ ಭಕ್ತಿಯಿಂದ ಬಂಧಿಸಲ್ಪಟ್ಟ ಹನುಮಂತ ತನ್ನ ಭಕ್ತನ ಆಶೆಯಂತೆಯೇ ಉಷ್ಟ್ರಾರೂಢನಾಗಿ ಒಂಟೆಯ ಮೇಲೆ ನಿಧಾನವಾಗಿ ಬಂದು ತನ್ನ ಭಕ್ತನ ಮನಸ್ಸಿಗೆ ತೃಪ್ತಿಯಾಗುವಷ್ಟು ಹೊತ್ತು ದರ್ಶನವನ್ನು ನೀಡಿ ಸಂತೃಷ್ಟಗೊಳಿಸಿದನಂತೆ.

ಲೇಖನ ಓದಿದ ಓದುಗರಾದ ಶ್ರೀ ‌ಗಣಪತಿ ಶಾಸ್ತ್ರಿಗಳು, ಮತ್ತೊಂದು ದೃಷ್ಟಾಂತವನ್ನು ವಿವರಿಸಿದ್ದಾರೆ.  ಅವರ ಪ್ರಕಾರ, ಹನುಮನು ಹುಟ್ಟಿ ಮಗುವಿದ್ದಾಗಲೇ ಬಾನಿನಲ್ಲಿ ಸೂರ್ಯನ ಕಂಡು ಹಣ್ಣೆಂದು ಗ್ರಹಿಸಿ ಸೂರ್ಯನನ್ನು ಹಿಡಿಯಲು ಮುಂದಾಗುತ್ತಾನೆ. ಅದನ್ನು ಕಂಡ ಪ್ರಜಾಪತಿ ಇಂದ್ರನು ಸೂರ್ಯನಿಲ್ಲದೆ ಇದ್ದರೆ ಮುಂದೆ‌ ಕಷ್ಟವೆಂದು ಗ್ರಹಿಸಿ ಬಾಲ ಹನುಮನಿಗೆ ತನ್ನ ವಜ್ರಾಯುಧದಲ್ಲಿ ಹೊಡೆಯುತ್ತಾನೆ. ಇಂದ್ರನು ಹೊಡೆದ ಘಾತಕ್ಕೆ ಹನುಮ ಭೂಮಿ ಮೇಲೆ ಬೀಳುತ್ತಾನೆ ಅದನ್ನು ಕಂಡ ಆತನ ತಂದೆ ವಾಯುದೇವ, ತನ್ನ ಮಗನನ್ನು ರಕ್ಷಣೆ ಮಾಡಿ ಇಂದ್ರನ ಮೇಲೆ ಕೋಪಗೊಂಡು, ತನ್ನ ಮಗನ ಸಹಿತ ಗುಹಾಂತರ್ಗಾಮಿಯಾಗುತ್ತಾನೆ. ಉಸಿರಾಡಲು ವಾಯುವೇ ಇಲ್ಲದೇ ಇಡೀ ಲೋಕವೆ ಅಲ್ಲೋಲ ಕಲ್ಲೋಲವಾಗಿ ಅನೇಕರು  ಸಾಯ ತೊಡಗುತ್ತಾರೆ. ಇದನ್ನು ಕಂಡ ತ್ರಿಮೂರ್ತಿಗಳು ಮತ್ತು  ದೇವಾನು ದೇವತೆಗಳು ವಾಯುದೇವ ಇರುವ ಗುಹೆಯ ಹತ್ತಿರ ಬಂದು ಪ್ರಾರ್ಥನೆ ಮಾಡುತ್ತಾರೆ. ಆಗ ಮಗನೊಂದಿಗೆ ಬಂದ ವಾಯುದೇವ ತನ್ನ‌ ಮಗನಿಗಾದ ಕಷ್ಟವನ್ನು ಹೇಳುತ್ತಾರೆ‌. ಅವನ ಎಲ್ಲಾ ಕಷ್ಟಗಳು ನಿವಾರಣೆಯಾಗಲಿ ಎಂದು ಇಂದ್ರನು ಕ್ಷಮೆಯನ್ನೂ ಕೇಳಿದ್ದಲ್ಲದೇ ಬಾಲ ಹನುಮನಿಗೆ ಆಗಿದ್ದ  ಆಘಾತವು ಕ್ಷಣಾರ್ಧದಲ್ಲಿ ಶಮನವಾಗುತ್ತದೆ. ಇದರಿಂದ ಸಂತೃಪ್ತಿ ಹೊಂದಿದ ಸೂರ್ಯದೇವ ಅವನಿಗೆ ತನ್ನ ಮಗಳನ್ನೇ ಕೊಡುವೆ. ಅವನು ಅವಳ ಲಾಲನೆ ಮಾಡಿಕೊಂಡಿರಲಿ ಎಂದು ಸೂರ್ಯ ದೇವನ ಅನುಗ್ರಹವಾಗುತ್ತದೆ.  ಹಾಗೆ ಅವಳು ಮಾತೃಸ್ವರೂಪದಲ್ಲಿ ಹನುಮನ ರಕ್ಷಣೆ ಮಾಡುತ್ತಾಳೆ ಅಂದು ಹನುಮಂತ ಗೋಕರ್ಣದ ಸಮುದ್ರ ತೀರದಲ್ಲಿ‌ ಬಿದ್ದ ಕಾರಣ ಅವನಿಗೆ ನಡೆಯಲು ಕಷ್ಟವಾದ ಕಾರಣ ಒಂಟೆಯ ವಾಹನವನ್ನು ಅವಳು ಕರುಣಿಸುತ್ತಾಳೆ ಮುಂದೆ ಅದು ಹನುಮಗಿರಿಯೆಂದು ಪ್ರಸಿದ್ದವಾಗುತ್ತದೆ ಅವನ ಜನ್ಮವೂ ಅಲ್ಲೇ ಆದ ಕಾರಣ ಈ ಗಿರಿದಾಮ ಇಂದು ಪ್ರಸಿದ್ದ ಕ್ಷೇತ್ರವಾಗ ತೊಡಗಿದೆ ಇದು ನಿಜ ಕತೆಯಾಗಿರ ಬೇಕು ಎಂದಿದ್ದಾರೆ.

ಯಧ್ಭಾವಂ ತದ್ಭವತಿ ಎನ್ನುವಂತೆ ಅವರವರ ಭಾವಕ್ಕೆ ಅವರವರ ಭಕುತಿ. ಒಟ್ಟಿನಲ್ಲಿ ದೇವನೊಬ್ಬ ನಾಮ ಹಲವು ಎನ್ನುವಂತೆ, ಹನುಮಂತನ ವಾಹನಕ್ಕೂ ಹಲವಾರು ಕಥೆಗಳು. ಎಷ್ಟು ಸುಂದರ ಮತ್ತು ಶ್ರೀಮಂತವಾಗಿದೆಯಲ್ಲವೇ ನಮ್ಮ ಸನಾತನ ಧರ್ಮ ಮತ್ತು ಪುರಾಣಗಳು.

ಏನಂತೀರೀ?
ನಿಮ್ಮವನೇ ಉಮಾಸುತ

ಆಂಜನೇಯನೇಕೆ ಉಷ್ಟ್ರಾರೂಢ ಎಂಬ ಜಿಜ್ಞಾಸೆಯನ್ನು ನನ್ನ ಮುಂದಿಟ್ಟು ನನ್ನ ಚಿಂತನೆಗಳನ್ನು ಗರಿಕೆದರುವಂತೆ ಮಾಡಿದ ಆತ್ಮೀಯರಾದ ಶ್ರೀ ಜಯದೇವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

ಆಪರೇಷನ್ ಬ್ಲೂ ಸ್ಟಾರ್

ಅದು ಎಂಭತ್ತರ ದಶಕ. ಈಗಿನಂತೆ ದೃಶ್ಯ ಮಾಧ್ಯಮಗಳ ಹಾವಳಿಯೇ ಇರಲಿಲ್ಲ. ಸುದ್ಧಿಯ ಮೂಲವೆಂದರೆ, ಸರ್ಕಾರಿ ಸುಪರ್ಧಿಯಲ್ಲಿದ್ದ ರೇಡಿಯೋ ಇಲ್ಲವೇ ವೃತ್ತ ಪತ್ರಿಕೆಗಳು ಮಾತ್ರ. ರೇಡಿಯೋದಲ್ಲಿನ ವಾರ್ತೆಗಳಲ್ಲಿ ಮತ್ತು ಪ್ರತಿ ದಿನ ಪತ್ರಿಕೆಗಳಲ್ಲಿ ಕಂಡು ಬರುತ್ತಿದ್ದ   ಒಂದೇ ಒಂದು ಅಂಶವೆಂದರೆ, ಪಂಜಾಬಿನಲ್ಲಿ ಇವತ್ತು ಉಗ್ರಗಾಮಿಗಳ ಧಾಳಿಯಿಂದಾಗಿ ಇಷ್ಟು ಜನ ಮೃತಪಟ್ಟರು ಅಷ್ಟು ಜನ ಮೃತಪಟ್ಟರು ಎಂಬುದೇ ಆಗಿತ್ತು. ಆರಂಭದಲ್ಲಿ  ಎಲ್ಲರೂ ಇದರ ಬಗ್ಗೆ ಆತಂಕ ಪಟ್ಟು ಕೊಳ್ಳುತ್ತಿದ್ದರಾದರೂ ನಂತರದ ದಿನಗಳಲ್ಲಿ ದಿನ ಸಾಯುವವರಿಗೆ ಅಳುವವರು ಯಾರು? ಎನ್ನುವಂತಾಗಿತ್ತು.  ಇನ್ನು ಪಂಜಾಬಿನ ಸ್ಥಳೀಯರೂ ಗುಂಡಿನ ಧಾಳಿ ಅಥವಾ ಬಾಂಬ್ ಸ್ಪೋಟವನ್ನು ಕೇಳಿದಾಗ ಆರಂಭದಲ್ಲಿ ಬೆಚ್ಚಿ ಬೀಳುತ್ತಿದ್ದವರು ನಂತರದ ದಿನಗಳಲ್ಲಿ ಕೋಯೀ ನಾ ಕೋಯಿ ಪಟಾಕಾ ಮಾರ್ ರಹಾ ಹೈ ಎಂದೋ ಇಲ್ಲವೇ ಕೋಯಿ ನಾ ಕೋಯಿ ಗಯಾ! ಖತಂ ಹೋಗಯಾ! ಸತ್ ಶ್ರೀ ಅಕಾಲ್ ಎಂದು ಹೇಳಿ ಸುಮ್ಮನಾಗುವಷ್ಟು ರೋಸಿ ಹೋಗಿದ್ದರು.

ಆ ಸಮಯದಲ್ಲಿ ಕೆಲಸವನ್ನು ಅರಸುತ್ತಿದ್ದ ಪಂಜಾಬ್ ತರುಣರಿಗೆ ಕೇವಲ ಎರಡೇ ಆಯ್ಕೆಗಳು ಇರುತ್ತಿದ್ದವು  ಒಂದು ಭಾರತದ ದೇಶವನ್ನು ಕಾಯುವ ಸಿಖ್ ರೆಜಿಮೆಂಟಿನ ಸೇನೆಗೆ ಸೇರುವುದು ಇಲ್ಲವೇ ಮತ್ತೊಂದು ಭಾರತದ ವಿರುದ್ಧ ಹೋರಾಟ ಮಾಡುತ್ತಿದ್ದ ಉಗ್ರರ ಸೇನೆಗೆ ಸೇರಬೇಕಿತ್ತು.  ಮೊದಲನೆಯ ಆಯ್ಕೆಗಿಂತಲೂ ಎರಡನೆಯದ್ದರಲ್ಲಿ ಕೈ ತುಂಬಾ ಹಣ ದೊರಕುತ್ತಿತ್ತಾದರೂ, ನಾಳಿನ ಬದುಕಿನ ಬಗ್ಗೆ ನಂಬಿಕೆಯೇ ಇಲ್ಲದೇ, ಯಾವಾಗಲಾದರೂ ಪೋಲೀಸರ ಗುಂಟೇಟಿಗೆ ಬಲಿಯಾಗ ಬಹುದಾದಂತಹ ಘನ ಘೋರ ಪರಿಸ್ಥಿತಿ ಬಂದೊದಗಿತ್ತು.

ಸ್ವಾತಂತ್ರ್ಯ ಪೂರ್ವದ ಅಖಂಡ ಭಾರತದಲ್ಲಿ ದೆಹಲಿ, ಪಂಜಾಜ್, ಲಾಹೋರ್, ರಾವಲ್ಪಿಂಡಿ ಮುಲ್ತಾನ್ ಪ್ರಾಂತ್ಯಗಳಲ್ಲಿಯಷ್ಟೇ  ಪಂಜಾಬಿಗಳು  ಬಹುಸಂಖ್ಯಾತರಾಗಿದ್ದಿದ್ದಲ್ಲದೇ, ಬ್ರಿಟನ್ ಮತ್ತು ಕೆನಡಾ ದೇಶಗಳಲ್ಲಿಯೂ ತಮ್ಮ ವ್ಯವಹಾರಗಳನ್ನು ಆರಂಭಿಸಿ ಅತ್ಯಂತ ಶ್ರೀಮಂತರೆಂದೇ ಖ್ಯಾತಿ ಪಡೆದಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಗತ್ ಸಿಂಗ್, ಸುಖದೇವ್, ಲಾಲಾ ರಜಪತ್ ರಾಯ್, ಉಧಮ್ ಸಿಂಗ್, ಮದಲ್ ಲಾಲ್ ಢಿಂಗ್ರಾ, ಬಾಬಾ ಗುರ್ಜೀತ್ ಸಿಂಗ್, ಸೋಹನ್ ಸಿಂಗ್, ದುಲ್ಲಾ ಭಟ್ಟಿ ಮುಂತಾದ  ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು.

ಖಲಿಸ್ಥಾನ್ ಬಗ್ಗೆ ತಿಳಿಯುವ ಮುನ್ನಾ ಪಂಜಾಬ್ ಪ್ರಾಂತ್ಯದ ಇತಿಹಾಸವನ್ನೊಮ್ಮೆ ತಿಳಿಯ ಬೇಕು.

18ನೇ ಶತಮಾನದ ಆದಿಯಲ್ಲಿ ಮಹಾರಾಜ ರಂಜಿತ್‌ ಸಿಂಗ್ ಪ್ರವರ್ಧಮಾನಕ್ಕೆ ಬರುವವರೆಗೂ, ಸುಮಾರು 12 ಸಿಖ್‌ ರಾಜಮನೆತನಗಳು ಪಂಜಾಬ್‌ ಪ್ರದೇಶವನ್ನು ಆಳುತ್ತಿದ್ದವು. 18ನೇ ಶತಮಾನದ ಆದಿಯಲ್ಲಿ ಮಹಾರಾಜ  ರಣಜಿತ್ ಸಿಂಗ್ ತನ್ನ ಶಕ್ತಿ ಸಾಮರ್ಥ್ಯದಿಂದ ಪಂಜಾಬ್ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಆಡಳಿತವನ್ನು ನಡೆಸಲಾರಂಭಿಸಿದನು.

1849 ರಲ್ಲಿ  ಮಹರಾಜ ರಣಜಿತ್ ಸಿಂಗ್  ಅವರ ಕಿರಿಯ ಮಗನಾದ ದುಲೀಪ್ ಸಿಂಗ್ ಪಂಜಾಬ್ ಪ್ರಾಂತ್ಯವನ್ನು ಆಳುತ್ತಿದ್ದ ಸಮಯದಲ್ಲಿಯೇ ಬ್ರಿಟಿಷ್ ಅಧಿಕಾರಿ ಸರ್ ಜಾನ್ ಲಾರೆನ್ಸ್ ಪಂಜಾಬ್ ಪ್ರಾಂತ್ಯದಲ್ಲಿ ಆಕ್ರಮಣ ನಡೆಸಿ ಪಂಜಾಬನ್ನು  ವಶಪಡಿಸಿಕೊಂಡಿದ್ದಲ್ಲದೇ, ಪ್ರತಿಷ್ಠೆಯ ಸಂಕೇತವಾಗಿ  ಇಟ್ಟುಕೊಂಡಿದ್ದ ಸುಮಾರು 793 ಕ್ಯಾರಟ್ ಅಂದರೆ 158.6 ಗ್ರಾಂ ತೂಕವಿದ್ದ ಅಮೂಲ್ಯವಾದ ಕೋಹಿನೂರ್ ವಜ್ರವನ್ನು ಮೋಸದಿಂದ ಕದ್ದೊಯ್ದ, ಅ ಆಪವಾದ ತಮ್ಮ ಮೇಲೆ ಬಾರದಂತೆ ಅದನ್ನು ಯುದ್ದದ ಖರ್ಚು ಎಂದು ದಾಖಲಿಸಿದ್ದಲ್ಲದೇ, ಕುತಂತ್ರದಿಂದ  ಈ ಕೊಹಿನೂರು ವಜ್ರವನ್ನು ರಾಜ ಕಾಣಿಕೆಯನ್ನಾಗಿ ನೀಡಿರುವಂತೆ ದಾಖಲೆಯಲ್ಲಿ ನಮೂದಿಸಲಾಗಿತ್ತು.

1940 ರಷ್ಟರಲ್ಲಿ ಮುಸ್ಲಿಂ ಲೀಗ್ ಭಾರತೀಯ ಮುಸ್ಲಿಮ್‌ರಿಗಾಗಿ ಪ್ರತ್ಯೇಕ  ರಾಷ್ಟ್ರ ಬೇಕೆಂದು ಆಗ್ರಹ ಪಡಿಸಿದಾಗಲೇ, ಪಂಜಾಬಿ ಮಾತನಾಡುವ ಜನರಿಗೆ ಮತ್ತು ಸಿಖ್ಖರಿಗಾಗಿ ಪ್ರತ್ಯೇಕ ಖಲಿಸ್ತಾನ್  ರಾಜ್ಯದ ವಿಚಾರ ಮೊಳಕೆಯೊಡೆಯಿತು.

1947 ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಧರ್ಮಾಧಾರಿತವಾಗಿ ದೇಶ ಇಭ್ಭಾಗವಾಗಿ ಹೋದಾಗ ನಿಜವಾಗಿಯೂ ಧಕ್ಕೆಯಾದದ್ದು ಪಂಜಾಬ್ ಪ್ರಾಂತ್ಯದವರಿಗೆ  ಎಂದರೂ ತಪ್ಪಾಗಲಾರದು. ದೇಶ ವಿಭಜನೆಯ ಸಮಯದಲ್ಲಿ   ಪಂಜಾಬ್  ಇಭ್ಭಾಗವಾದಾಗ ಲಕ್ಷಾಂತರ ಪಂಜಾಬಿಗಳು  ತಮ್ಮ ಅಸ್ತಿ ಪಾಸ್ತಿ ಮನೆ ಮಠ ಬಿಟ್ಟು ಬರಲು ಇಚ್ಚಿಸದೇ ಅಲ್ಲಿಯೇ ಉಳಿಯಲು ಇಚ್ಚಿಸಿದರಾದರೂ, ಅಂದು ನಡೆದ  ಲೂಟಿ, ಅತ್ಯಾಚಾರ ಮತ್ತು ನರಮೇಧದ ಕಾರಣದಿಂದಾಗಿ ಲಕ್ಷಾಂತರ ಸಿಖ್ಖರ ಮಾರಣ ಹೋಮ ನಡೆದಿದ್ದ ಕಾರಣ  ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಸೂತಕದ ಛಾಯೆ ಮೂಡಿದ್ದ ಕಾರಣ ಸಿಖ್ಖರಿಗಾಗಿಯೇ ಪ್ರತ್ಯೇಕ ರಾಜ್ಯದ ಬೇಡಿಕೆ ಕೆಲ ಕಾಲ ತಣ್ಣಗಾಗಿತ್ತು.

1950  ಭಾಷಾವಾರು ಆಧಾರದಲ್ಲಿ ರಾಜ್ಯಗಳನ್ನು ವಿಭಜಿಸಿ ಗಣತಂತ್ರ ದೇಶವಾದಾಗ,ಮತ್ತೆ ಈ ಪ್ರತಿಭಟನೆಗೆ ಚಾಲನೆ ನೀಡಿದ ಅಕಾಲಿ ದಳ,  ಪಂಜಾಬಿ ಬಹುಸಂಖ್ಯಾತರಿಗಾಗಿಯೇ ಪ್ರತ್ಯೇಕ ರಾಜ್ಯ ನೀಡಬೇಕೆಂದು ಪಂಜಾಬಿ ಸುಬಾ ಚಳವಳಿ ಆರಂಭಿಸಿತು.

ಪಂಜಾಬಿಗಳ ಹೋರಾಟ ದಿನೇ ದಿನೇ  ತೀವ್ರವಾಗಿ 1955 ಜುಲೈ 4 ರಂದು ಪಂಜಾಬಿ ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ನೀಡಬೇಕೆಂದು ಒತ್ತಾಯಿಸಿ ಅಮೃತಸರದ ಸುವರ್ಣ ಮಂದಿರದ  ಹರ್ಮಿಂದಿರ್‌ ಸಾಹಿಬ್‌ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದನ್ನು ಚದುರಿಸಲು ಮೊಟ್ಟ ಮೊದಲ ಬಾರಿಗೆ ಸಿಖ್ಖರ ಪವಿತ್ರ ಮಂದಿರಕ್ಕೆ ಪೊಲೀಸರನ್ನು ನುಗ್ಗಿಸಿ ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಕೆಲ ವರ್ಷಗಳ ಕಾಲ ಈ ವಿಷಯ ತಣ್ಣಗಾಗುವಂತೆ ಮಾಡಿದರು.

ಬೂದಿ ಮುಚ್ಚಿದ ಕೆಂಡದಂತಿದ್ದ ಈ ಪ್ರತಿಭಟನೆಯ ಕಾವನ್ನು ಶಾಶ್ವತವಾಗಿ ಹತ್ತಿಕ್ಕುವ ಸಲುವಾಗಿ 1966ರಲ್ಲಿ ವಿಶಾಲ ಪಂಜಾಬ್‌ ಪ್ರಾಂತ್ಯವನ್ನು ನಾಲ್ಕು ಭಾಗಗಳಾಗಿ ತುಂಡರಿಸಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ್‌ಗಳನ್ನು ಹೊಸದಾಗಿ ರಚಿಸಲಾಯಿತು. ತಾವೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಈ ವಿಭಜನೆಯ ನಂತರ ಮೂಲ ಪಂಜಾಬ್  ಸಿಖ್ ಅಲ್ಪಸಂಖ್ಯಾತರ ರಾಜ್ಯವಾಗಿ ಹೋಯಿತು.

1969 ರಲ್ಲಿ, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳ ಸೋತು ಪಂಜಾಬ್ ಕಾಂಗ್ರೇಸ್ ಪಕ್ಷದ ತೆಕ್ಕೆಗೆ ಬಿದ್ದ ಎರಡು ವರ್ಷಗಳ ನಂತರ, 1971ರಲ್ಲಿ ಪಂಜಾಬ್‌ನ ಮಾಜಿ ಹಣಕಾಸು ಸಚಿವ ಜಗ್ಜಿತ್ ಸಿಂಗ್ ಚೌಹಾನ್  ಸಿಖ್ಖರು ಬಹಳವಾಗಿ ವಾಸವಿದ್ದ ಇಂಗ್ಲೇಂಡ್ ಮತ್ತು ಕೆನಡ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಿಖ್ ಮುಖಂಡರನ್ನು ಒಗ್ಗೂಡಿಸಿ ನಿಧಾನವಾಗಿ  ಅವರ ತಲೆಯಲ್ಲಿ ಸಿಖ್ಖರಿಗೇ ಪ್ರತೇಕವಾದ ಖಲಿಸ್ತಾನ್ ದೇಶದ ಸೃಷ್ಟಿಗೆ ಮರು ಹುಟ್ಟನ್ನು ಹಾಕಿದ್ದಲ್ಲದೇ  ಅಮೇರಿಕಾದ  ಇಂಗ್ಲಿಷ್ ದಿನ‌ಪತ್ರಿಕೆಯೊಂದರಲ್ಲಿ ಖಲಿಸ್ತಾನ್ ಸ್ಥಾಪನೆ ಕುರಿತಾದ ಜಾಹೀರಾತು ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

1973 ಅಕಾಲಿ ದಳದ ಮುಖಂಡರು ಸಭೆ ಸೇರಿ ಸಿಖ್ ಧರ್ಮವನ್ನು ಹಿಂದೂ ಧರ್ಮದಿಂದ ಪ್ರತ್ಯೇಕವಾದ ಧರ್ಮವೆಂದು ಗುರುತಿಸಲು ಕೋರಿದ್ದಲ್ಲದೇ, ಪಂಜಾಬ್‌ಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡ ಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಂಡಿತು. ಈ ನಿರ್ಣಯವು ಆನಂದಪುರ ಸಾಹಿಬ್ ನಿರ್ಣಯ  ಎಂದೇ ಖ್ಯಾತಿ ಪಡೆದಿದೆ.

ಮುಂದೆ 1976 ರಾವಿ ಮತ್ತು ಬಿಯಾಸ್‌ ನದಿ ನೀರಿನ ಹಂಚಿಕೆ ವಿಷಯದಲ್ಲಿ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಮಧ್ಯೆ ವಿವಾದ ತಲೆದೋರಿಸಿದಾಗ ಕೇಂದ್ರ ಮತ್ತು ರಾಜ್ಯದಲ್ಲಿದ್ದ ಕಾಂಗ್ರೇಸ್ ಸರ್ಕಾರದ ವಿರುದ್ಧ ಅಕಾಲಿ ದಳ ತೀವ್ರತರವಾದ ಹೋರಾಟವನ್ನು ಆರಂಭಿಸಿತು.  ಇದು ರಾಜಕೀಯ ಅಸ್ತಿತ್ವದ ಹೋರಾಟವಾಗಿದ್ದರೂ ಅದಕ್ಕೆ ಧಾರ್ಮಿಕ ನಾಯಕರ ಪರೋಕ್ಷವಾದ ಬೆಂಬಲವಿತ್ತು.

ಆಗ ಕೇಂದ್ರದಲ್ಲಿ ಪ್ರಧಾನಿಗಳಾಗ್ಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ನಿಯಮದಂತೆ  ಪಂಜಾಬಿನಲ್ಲಿ ಧಾರ್ಮಿಕ ಗುರುವಾಗಿದ್ದ ತಕ್ಸಲ್‌ನ ನಾಯಕನಾಗಿದ್ದ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆಯನ್ನು ಪ್ರವರ್ಧಮಾನಕ್ಕೆ ತರುವ ಮೂಲಕ ಪರಿಸ್ಥಿತಿಯನ್ನು ತನ್ನ ಕೈವಶ ಮಾಡಿಕೊಳ್ಳುವುದರಲ್ಲಿ ಸಫಲರಾದವೆಂದು ಮಂದಹಾಸ ಬೀರಿದ್ದರು. ಆದರೆ ಬಾಣಲೆಯಿಂದ ಬೆಂಕಿಗೆ ನೇರವಾಗಿ ಬಿದ್ದಿದ್ದೇವೆ ಎಂಬ ನಿಜಾಂಶ ತಿಳಿಯುವ ಹೊತ್ತಿಗೆ ಕೈ ಮೀರಿ ಹೋಗಿತ್ತು.ಪ್ರಧಾನಿಗಳ ಪರೋಕ್ಷ ಬೆಂಬಲ ಸಿಕ್ಕ ಕೂಡಲೇ ಬಿಂದ್ರನ್ವಾಲೆ ತನ್ನ ಅಸಲೀ ಮುಖವನ್ನು ಪ್ರದರ್ಶನ ಮಾಡತೊಡಗಿದ. ಪಂಜಾಬಿನ  ಮೂಲದವರೆಲ್ಲರೂ ಸಿಖ್‌ ಧರ್ಮವನ್ನು ಕಡ್ಡಾಯವಾಗಿ ಅನುಸರಿಸಲೇ ಬೇಕೆಂದು ಆಗ್ರಹಪಡಿಸುತ್ತಾ, ಪಂಜಾಬಿನ ಅಂದಿನ ಯುವಕರ ಮೇಲೆ ಬಹಳವಾಗಿ ಪ್ರಭಾವ ಬೀರಿದ್ದಲ್ಲದೇ, ನೋಡ ನೋಡುತ್ತಿದ್ದಂತೆಯೇ, ಕೆಲವೇ ಕೆಲವು ವರ್ಷಗಳಲ್ಲಿ ಸಿಖ್ ಧರ್ಮಕ್ಕಾಗಿ ಪ್ರಾಣವನ್ನೇ ಕೊಡಲು ಸಿದ್ಧವಾಗಿದ್ದ  ಒಂದು ಬಲಿಷ್ಟ ತಂಡವನ್ನೇ ಕಟ್ಟಿಯೇ ಬಿಟ್ಟಿದ್ದ. ನಾನು ಬರುವ ವರೆಗೂ ಬೇರೆಯವರ ಹವ. ನಾನು ಬಂದ ಮೇಲೆ ನನ್ನದೇ ಹವಾ ಎನ್ನುವ ಸಿನಿಮಾದ ಸಂಭಾಷಣೆಯಂತೆ ತನ್ನ ಭಯೋತ್ಮಾದನಾ ಚಟುವಟಿಕೆಗಳ ಮೂಲಕ ಅಕ್ಷರಶಃ ಇಡೀ ಪಂಜಾಬ್ ಪ್ರಾಂತ್ಯವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಬಿಸಿದ್ದಲ್ಲದೇ ತನ್ನ ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಪಡಿಸುವವರನ್ನು ನಿರ್ದಾಕ್ಷಿಣ್ಯವಾಗಿ  ನಿರ್ನಾಮ ಮಾಡ ತೊಡಗಿದ್ದ.

ಅತ್ಯಂತ ಕಡಿಮೆ ಸಮಯದಲ್ಲಿ ಈ ಪರಿಯಾಗಿ ಪ್ರವರ್ಧಮಾನಕ್ಕೆ ಬಂದ ಬಿಂದ್ರನ್ ವಾಲೆ ಮತ್ತವನ ಬಲಿಷ್ಟ ತಂಡಕ್ಕೆ ದೂರದ ಇಂಗ್ಲೇಂಡ್ ಮತ್ತು ಕೆನಡಾದ ಶ್ರೀಮಂತ ಖಟ್ಟರ್ ಸಿಖ್ಖರು ಆರ್ಥಿಕ ನೆರವನ್ನು ನೀಡಲು  ಸಿದ್ದರಾದರು. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಭಾರತದ ವಿರುದ್ಧ ಸದಾಕಾಲವೂ ಕತ್ತಿ ಮಸೆಯುತ್ತಿದ ಪಾಕೀಸ್ಥಾನವೂ ಸಹಾ ಪರೋಕ್ಷವಾಗಿ ಬಿಂದ್ರನ್ವಾಲೆಗೆ ಸಹಾಯ ಹಸ್ತವನ್ನು ನೀಡಿತ್ತು. ಇವೆಲ್ಲವುಗಳಿಂದ ಮತ್ತಷ್ಟು ಬಲಿಷ್ಟನಾಗಿ 1977ರಲ್ಲಿ ಮೊಟ್ಟ ಮೊದಲ ಬಾರಿಗೆ ಬಾಹ್ಯ ಜಗತ್ತಿಗೆ ತನ್ನ ಖಟ್ಟರ್ ನಿಜ ಸ್ವರೂಪವನ್ನು ಜಗಜ್ಜಾಹೀರಾತು ಪಡಿಸಿದ ಬಿಂದ್ರನ್ವಾಲೇ, ಅನೇಕ ದಶಕಳಿಂದ ಮೊಳಕೆಯೊಡೆದು ಕೇವಲ ಗಿಡವಾಗಿಯೇ ಇದ್ದ ಖಲೀಸ್ಥಾನ್ ಹೋರಾಟಕ್ಕೆ  ಗೊಬ್ಬರ ಮತ್ತು ನೀರನ್ನು ಹಾಕಿ, ಪೋಷಿಸಿ ಹೆಮ್ಮರವಾಗಿ ಬೆಳೆಯುವಂತೆ  ಪ್ರಾಮುಖ್ಯತೆ ತಂದು ಕೊಟ್ಟ. ನಿಧಾನವಾಗಿ ಸ್ವತಂತ್ರ್ಯ ಖಲೀಸ್ಥಾನದ ಹುಳವನ್ನು ಎಲ್ಲರ ತಲೆಯಲ್ಲಿ ಬಿತ್ತಿದ್ದಲ್ಲದೇ, ಅಮೃತಸರದಲ್ಲಿದ್ದ ಸಿಖ್ ಧರ್ಮದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಸ್ವರ್ಣಮಂದಿರವನ್ನೇ ತನ್ನ ಸುರಕ್ಷಿತ  ಅಡಗುತಾಣವನ್ನಾಗಿ ಮಾಡಿಕೊಂಡ.

ಸ್ವರ್ಣ ಮಂದಿರದ  ಅಕಾಲ್‌ ತಖ್ತಿನ‌ ಸಂಕೀರ್ಣದಲ್ಲಿ ಸದ್ದಿಲ್ಲದೇ  ಅಕ್ರಮವಾಗಿ ಮದ್ದು ಗುಂಡುಗಳು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸತೊಡಗಿದ. ಹೇಳಿ ಕೇಳಿ ಖ್ಯಾತ ಧಾರ್ಮಿಕ ಕ್ಷೇತ್ರವಾಗಿದ್ದ ಕಾರಣ ಯಾರಿಗೂ  ಇವರ ಕುಕೃತ್ಯದ ಮೇಲೆ ಅನುಮಾನವೇ ಬಿದ್ದಿರಲಿಲ್ಲ. ಇಲ್ಲಿಂದಲೇ,  ಭಿಂದ್ರನ್‌ವಾಲೆ ತನ್ನ ಬಂಡುಕೋರ ಸಹಚರರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಾ ಎಂಭತ್ತರ ದಶಕದಲ್ಲಿ  ಪಂಜಾಬ್ ಪ್ರಾಂತ್ಯದಲ್ಲಿ ಗೆರಿಲ್ಲಾ ಮಾದರಿಯ ಹೋರಾಟ ಮತ್ತು ದಂಗೆಯನ್ನು ಎಬ್ಬಿಸಿತೊಡಗಿದ್ದಲ್ಲದೇ ತನಗೆ ರಾಜಾಶ್ರಯ ನೀಡಿದ್ದ ಸ್ಥಳೀಯ ರಾಜಕೀಯ ನಾಯಕರುಗಳಿಗೇ ತಲೆನೋವಾಗಿದ್ದಲ್ಲದೇ, ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರದ ಬೇಡಿಕೆ ಇಟ್ಟು ಅಮೃತಸರದ ಸ್ವರ್ಣಮಂದಿರವನ್ನು ವಶಪಡಿಸಿಕೊಂಡು ಸ್ವರ್ಣ ಮಂದಿರದಿಂದಲೇ ಹೋರಾಟವನ್ನು ಆರಂಭಿಸಿದ್ದಲ್ಲದೇ ಅಕ್ಷರಶಃ ಆತ ಅಲ್ಲಿಂದಲೇ ತನ್ನದೇ ಆದ ಪ್ರತ್ಯೇಕವಾದ ಸರಕಾರವನ್ನೇ ನಡೆಸುತ್ತಿದ್ದ ಎಂದರೆ  ಅಚ್ಚರಿಯಾಗುತ್ತದೆ.

ತಾನೇ ಬೆಳಸಿದ ಹುಡುಗನೇ ತನಗೆ ಮಗ್ಗಲ ಮುಳ್ಳಾಗಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ವಿಧ್ವಂಸಕ ಮಾರ್ಗ ಹಿಡಿದಿದ್ದು ಇಂದಿರಾ ಗಾಂಧಿಯವರಿಗೆ ಕೋಪವನ್ನು ತರಿಸಿತ್ತು. ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಆಶ್ರಯ ತಾಣವಾಗಿಸಿಕೊಂಡು,  ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಬಂಡುಕೋರರ ನಾಯಕ ಭಿಂದ್ರನ್‌ವಾಲೆ ಮತ್ತು ಅವನ ಬಂಡುಕೋರರನ್ನು ಹೊರದಬ್ಬಲು ಸೇನೆ ಮತ್ತು ಅಂದಿನ ಪ್ರಧಾನ ಮಂತ್ರಿ ಶ್ರೀಮತಿ  ಇಂದಿರಾಗಾಂಧಿಯವರು ದಿಟ್ಟತನದಿಂದ ತೆಗೆದುಕೊಂಡ ನಿರ್ಣಯವೇ ಆಪರೇಷನ್‌ ಬ್ಲೂಸ್ಟಾರ್‌. 1984ರ ಜೂನ್‌ 3ರಿಂದ 8ರವರೆಗೆ 6 ದಿನಗಳ ಕಾಲ ನಡೆದ ಈ ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ತರ ಎನಿಸಿಕೊಂಡಿದ್ದಲ್ಲದೇ, ಮುಂದೆ ಶ್ರೀಮತಿ ಇಂದಿರಾ ಗಾಂಧಿ ಅವರ ಹತ್ಯೆಗೂ ಇದೇ  ಕಾರ್ಯಾಚರಣೆಯೇ ಕಾರಣವಾಗಿ ಹೋಗಿದ್ದು ನಿಜಕ್ಕೂ ವಿಷಾಧನೀಯ.

ಜೂನ್‌ 3ರಿಂದ 8ರವರೆಗೆ ಸೇನೆಯು ನಡೆಸಿದ  ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆನ್ನು  ಸಿಖ್‌ ಸೇನಾಧಿಕಾರಿಯಾದ ಜನರಲ್‌ ಕುಲ್ದೀಪ್‌ ಸಿಂಗ್‌ ಬ್ರಾರ್‌ ಅವರು  ನೇತೃತ್ವ ವಹಿಸಿಕೊಂಡಿದ್ದರು. ಎರಡು ಹಂತದಲ್ಲಿ ನಡೆದ ಈ ಕಾರ್ಯಾಚರಣೆಯ ಮೊದಲ ಹಂತವೇ ಆಪರೇಷನ್‌ ಮೆಟಲ್‌. ಇದು ಹರ್ಮಂದಿರ್‌ ಸಾಹಿಬ್‌ ಕಾಂಪ್ಲೆಕ್ಸ್‌ಗೆ ಸೀಮಿತವಾಗಿ ಸತತವಾಗಿ ಗುಂಡಿನ ಧಾಳಿ ನಡೆಸಿ, ಬಂಡುಕೋರ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ ಮತ್ತು ಮಾಜಿ ಮೇಜರ್‌ ಜನರಲ್‌ ಶಬೇಗ್‌ ಸಿಂಗ್ ಮತ್ತವರ ತಂಡವನ್ನು ಹತ್ಯೆ ಮಾಡಿ, ಸ್ವರ್ಣಮಂದಿರವನ್ನು ಸಂಪೂರ್ಣವಾಗಿ ಸೇನೆಯ ವಶಕ್ಕೆ ತೆಗೆದುಕೊಂಡಿತು. ಇದಾದ ನಂತರ ನಡೆದಿದ್ದೇ ಆಪರೇಷನ್‌ ಶಾಪ್‌. ಈ ಕಾರ್ಯಾ ಚರಣೆಯನ್ನು ಪಂಜಾಬ್‌ನ ಗ್ರಾಮಾಂತರ ಪ್ರದೇಶದಲ್ಲಿ ಕೈಗೊಂಡು, ಶಂಕಿತ ಬಂಡುಕೋರರನ್ನು ಸೆರೆ ಹಿಡಿಯ ಲಾಯಿತು. ಇದಾದ ಬಳಿಕ ಆಪರೇಷನ್‌ ವುಡ್‌ರೋಸ್‌  ಕಾರ್ಯಾಚರಣೆಯನ್ನು  ಪಂಜಾಬ್‌ ರಾಜ್ಯಾದ್ಯಂತ, ಹೆಲಿಕಾಪ್ಟರ್‌, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿದಳವನ್ನು ಬಳಸಿಕೊಂಡು ಅಳಿದುಳಿದ್ದ ಬಂಡುಕೋರರನ್ನು ಮಟ್ಟ ಹಾಕಿದ್ದಲ್ಲದೇ,  ಅಕಾಲಿದಳ ಮತ್ತು ಆಲ್‌ ಇಂಡಿಯಾ ಸಿಖ್‌ ಫೆಡರೇಷನ್‌ನ ಪ್ರಮುಖ ನಾಯಕರನ್ನು ಬಂಧಿಸುವ ಮೂಲಕ  ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ತಾರ್ಕಿಕ ಅಂತ್ಯವನ್ನು ಮಾಡಲಾಯಿತು. ಈ ಆಪರೇಷನ್‌ ವೇಳೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಸಾವಿರಾರು ಜನರು ಸಾವಿಗೀಡಾದರೂ ಸರ್ಕಾರೀ ಧಾಖಲೆಗಳ ಪ್ರಕಾರ ಕೇವಲ 575 ಜನರು ಮಾತ್ರ ಸಾವಿಗೀಡಾದರು ಎಂದು ಅಧಿಕೃತವಾಗಿ ಘೋಷಿಸಿತು.

ಸರ್ಕಾರದ ಈ ದಿಟ್ಟ ತನಕ್ಕೆ ಇಡೀ ದೇಶವೇ ಕೊಂಡಾಡಿದರೂ ಸಿಖ್ ಸಮುದಾಯದಲ್ಲಿ ಮಾತ್ರಾ ಅಸಹನೆಯ ಕೆಂಡ ಬೂದಿ ಮುಚ್ಚಿದಂತಿದ್ದು ಈ ಕಾರ್ಯಾಚರಣೆಗೆ ಪ್ರತಿಧಾಳಿಯನ್ನು ಮಾಡಲು ಸಂಚು ಹಾಕುತ್ತಲೇ ಇದ್ದರು. ಇದರ ಪ್ರತೀಕವೆಂಬತೆಯೇ 1984 ಅಕ್ಟೋಬರ್‌ 31ರಂದು ಇಂದಿರಾ ಗಾಂಧಿಯವರ ಅಧಿಕೃತ ನಿವಾಸದಲ್ಲಿಯೇ  ಅವರ ಅಂಗರಕ್ಷಕರಾಗಿದ್ದ ಸತ್ವಂತ್‌ ಸಿಂಗ್‌ ಹಾಗೂ ಬಿಯಾಂತ್‌ ಸಿಂಗ್‌  33 ಬಾರಿ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಲಾಯಿತು.

ಇಂದಿರಾ ಗಾಂಧಿಯವರ ಹತ್ಯೆಯ ಪ್ರತೀಕಾರವನ್ನು ತೆಗೆದುಕೊಳ್ಳುವ ಸಲುವಾಗಿ 1984 ಅಕ್ಟೋಬರ್‌ 31ರಿಂದ ನವೆಂಬರ್‌3ರವರೆಗೆ ದೆಹಲಿ ಮತ್ತು ದೇಶಾದ್ಯಂತ ಸಿಖ್ಖರ ಮೇಲೆ ದಾಳಿ ಆರಂಭವಾಗಿ ಸಾವಿರಾರು ಸಿಖ್ಖರ ಮಾರಣಹೋಮ ನಡೆದು ಹೋದದ್ದು ಈಗ ಕೆಟ್ಟ ಇತಿಹಾಸ.

ಇವೆಲ್ಲಕ್ಕೂ ಪ್ರತೀಕಾರವಾಗಿ 1985, ಜೂನ್‌ ತಿಂಗಳಿನಲ್ಲಿ ಕೆನಡಾದಿಂದ ಮುಂಬೈಗೆ ಹೊರಟಿದ್ದ ಏರ್‌ ಇಂಡಿಯಾ ಕನಿಷ್ಕ ವಿಮಾನವನ್ನು ಸಿಖ್‌ ಬಂಡುಕೋರರು ಆಕಾಶದಲ್ಲೇ ಸ್ಫೋಟಿಸಿ ಐರಿಷ್‌ ಕರಾವಳಿಯಲ್ಲಿ ಪತನವಾಗುವ ಮೂಲಕ ಅಮಾಯಕ 329 ಪ್ರಯಾಣಿಕರ ಹತ್ಯೆಗೆ ಕಾರಣವಾಗಿದದ್ದು ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿದೆ.

1985 ಜುಲೈ ನಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ, ಅಕಾಲಿ ದಳದ ಪ್ರಕಾಶ್‌ ಸಿಂಗ್‌ ಬಾದಲ್‌ ಬಣ ಮತ್ತು ಅನೇಕ ನಾಯಕರು ತೀವ್ರತರ ವಿರೋಧದ ನಡುವೆಯೂ. ಮೃದು ಧೋರಣೆಯ ಅಕಾಲಿ ದಳದ ನಾಯಕ ಹರ್ಚರಣ್‌ ಸಿಂಗ್‌ ಲೊಂಗ್ವೊಲಾ ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಒಪ್ಪಂದ ಮಾಡಿಕೊಂಡ ಪರಿಣಾಮ, ರಾಜಕೀಯ ಪ್ರತಿಭಟನೆಯನ್ನು ಹಿಂಪಡೆಯುವಂತಾಯಿತು.

ಆಪರೇಷನ್‌ ಬ್ಲೂ ಸ್ಟಾರ್‌ ನಂತರವೂ ಅಳಿದುಳಿದ ಖಲಿಸ್ತಾನ್ ಬಂಡುಕೋರರು ಮತ್ತೆ ತಮ್ಮ ಕಾರ್ಯಾಚರಣೆಗೆ ಸುವರ್ಣ ಮಂದಿರವನ್ನೇ ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದನ್ನು ಹಿಮ್ಮೆಟ್ಟಿಸುವುದಕ್ಕಾಗಿಯೇ 1986 ಏಪ್ರಿಲ್‌ 30ರಂದು ಆಪರೇಷನ್‌ ಬ್ಲ್ಯಾಕ್‌ ಥಂಡರ್‌ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ಭದ್ರತಾ ದಳದ ಬ್ಲ್ಯಾಕ್‌ ಕ್ಯಾಟ್‌ ಕಮಾಂಡೊ ಪಡೆಯನ್ನು ಬಳಸಿಕೊಳ್ಳಲಾಗಿತ್ತು, ಮತ್ತೊಮ್ಮೆ 1988 ಮೇ 9ರಂದು ಪಂಜಾಬ್‌ ಪೊಲೀಸ್‌ನ ಡಿಜಿಪಿ ಆಗಿದ್ದ ಕೆ.ಪಿ.ಗಿಲ್‌. ಅವರ ನೇತೃತ್ವದಲ್ಲಿ ನಡೆಸಿ  ಅಳಿದುಳಿದ ಬಂಡುಕೋರರನ್ನು ಮಟ್ಟಹಾಕುವಲ್ಲಿ ಈ ಬ್ಯ್ಲಾಕ್‌ ಥಂಡರ್‌ ಕಾರ್ಯಾಚರಣೆ ಯಶಸ್ವಿಯಾಗುವ ಮೂಲಕ ಖಲಿಸ್ಥಾನ್  ಹೋರಾಟಕ್ಕೆ ಶಾಶ್ವತವಾದ  ಅಂತ್ಯವನ್ನು ಮಾಡಲಾಗಿತ್ತು. ನಂತರ ಅಲ್ಲಿ ಪ್ರಜಾತಾಂತ್ರಿಕವಾಗಿ ಶಾಂತಿಯುತವಾಗಿ ಚುನಾವಣೆ ನಡೆದು ಸರ್ಕಾರ ಆಡಳಿತಕ್ಕೆ ಬಂದಿತ್ತು. ಈಗಲೂ ಅದೇ ರೀತಿ ಎಲ್ಲಾ ಹೋರಾಟಗಳೂ ತಣ್ಣಗಾಗಿ ಶಾಂತಿ ನೆಲೆಸಲಿ.

ಏನಂತೀರೀ?

ನಿಮ್ಮವನೇ ಶ್ರೀಕಂಠ ಬಾಳಗಂಚಿ

ಸೌರಶಕ್ತಿಯ ಮಿಲಿಟರಿ ಡೇರೆಗಳು

ಬೆಂಗಳೂರಿನಲ್ಲಿನ ಉಷ್ಣಾಂಶ 17 ಕ್ಕಿಂತ ಕಡಿಮೆ ಇಳಿದರೆ ಸಾಕು. ಜನರು ಅಹಹಾ! ಚಳಿ ಚಳಿ ತಾಳೆನು ಈ ಚಳಿಯಾ. ಅಂತ ಚೆಚ್ಚನೆಯ ವಸ್ತ್ರಗಳನ್ನು ಧರಿಸಿ ಬಿಸಿ ಬಿಸಿಯಾದ ಕಾಫೀ, ಟೀ ಹೀರುತ್ತಾ ಮನೆಯಿಂದ ಹೊರಗೇ ಕಾಲು ಇಡುವುದಿಲ್ಲ. ಅದರೆ ಅದೇ, ಹಿಮಚ್ಛಾದಿತ ಪ್ರದೇಶಗಳಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರ ಪಾಡು ನಿಜಕ್ಕೂ ಹೇಳ ತೀರದು. ರಾತ್ರಿಹೊತ್ತಿನಲ್ಲಂತೂ ಹೊರಗಿನ ಕನಿಷ್ಠ ತಾಪಮಾನ ಕೆಲವೊಮ್ಮೆ -20 – 40ರ ವರೆಗೂ ತಲುಪಿರುತ್ತದೆ ಎಂದರೆ ಅಲ್ಲಿನ ಸಮಸ್ಯೆಗಳನ್ನು ಉಹಿಸಿಕೊಳ್ಳಬಹುದು. ನೀರು ಕುದಿಸಿ ಸ್ಟವ್ ನಿಂದ ಹೊರಗಿಡುತ್ತಿದ್ದಂತೆಯೇ ಮಂಜಾಗೆಡ್ಡೆಗೆ ಪರಿವರ್ತಿತವಾಗುವಷ್ಟರ ಮಟ್ಟಿಗಿನ ಕೊರೆ ಅಲ್ಲಿರುತ್ತದೆ.

ಹಿಮಚ್ಛಾದಿತ ಪ್ರದೇಶಗಳಲ್ಲಿ ಸೈನಿಕರನ್ನು ಸದಾಕಾಲವೂ ಬೆಚ್ಚಗಿಡಿವಿದೇ ಸೈನ್ಯಾಧಿಕಾರಿಗಳಿಗೆ ಒಂದು ಸವಾಲಿನ ಸಂಗತಿಯಾಗಿದೆ. ಎಲ್ಲಾ ಕಡೆಯಲ್ಲೂ ವಿದ್ಯುತ್ ಇಲ್ಲದ ಕಾರಣ ಡೇರೆಗಳನ್ನು ಬೆಚ್ಚಗಿಡಲು ಡೀಸೆಲ್, ಸೀಮೆಎಣ್ಣೆ ಅಥವಾ ಉರುವಲುಗಳನ್ನು ಸುಡುವ ಮೂಲಕ ಬೆಚ್ಚಗಿಡುವ ಪ್ರಯತ್ನಗಳು ನಿರಂತರವಾಗಿದ್ದರೂ, ಭದ್ರತಾ ದೃಷ್ಟಿಯಿಂದ ಮತ್ತು ಅಂತಹ ಎತ್ತರದ ಪ್ರದೇಶಗಳಿಗೆ ದೀಸೆಲ್ ಮತ್ತು ಸೀಮೇಎಣ್ಣೆಗಳನ್ನು ಸಾಗಿಸುವುದು ಬಹಳ ತ್ರಾಸದಾಯಕವಾಗಿದೆ. ಹಾಗಾಗಿ ಸಶಸ್ತ್ರ ಪಡೆಗಳನ್ನು ನೈಸರ್ಗಿಕವಾಗಿ ಬೆಚ್ಚಗೆ ಮತ್ತು ಆರೋಗ್ಯಕರವಾಗಿಡಲು ಹೊಸ ಹೊಸಾ ಮಾರ್ಗೋಪಾಯಗಳನ್ನು ಕಂಡು ಹಿಡಿಯುವ ಪ್ರಯತ್ನ ನಿರಂತವಾಗಿದೆ.

ಸೈನಿಕರ ಅನುಕೂಲಕ್ಕಾಗಿಯೇ ಅಂತಹದ್ದೇ ಪ್ರತ್ಯತ್ನದ ಫಲವಾಗಿ ಹೆಮ್ಮೆಯ ಭಾರತೀಯ ವಿಜ್ಞಾನಿಯಾದ ಶ್ರೀ ಸೋನಮ್ ವಾಂಗ್‌ಚುಕ್ ಎತ್ತರದ ಪ್ರದೇಶಗಳ ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಒಂದು ಅಧ್ಭುತವಾದ ಆವಿಷ್ಕಾರವನ್ನು ಸಮರ್ಪಿಸಿದ್ದಾರೆ. ಸೋನಮ್ ವಾಂಗ್‌ಚುಕ್ ಅಂದರೆ ಥಟ್ ಅಂತಾ ನೆನಪಾಗದೇ ಹೋದರೆ, ಅಮೀರ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಹಿಂದಿ ಚಿತ್ರ 3 ಈಡಿಯಟ್ಸ್ ಪಾತ್ರದಲ್ಲಿ ಅಮೀರ್ ಖಾನ್ ಅಭಿನಯಿಸಿರುವ ಫುಂಗ್‌ಸುಕ್ ವಾಂಗ್ಡು ಪಾತ್ರಕ್ಕೆ ಮೂಲ ಪ್ರೇರಣೆ ನೀಡಿದ ವ್ಯಕ್ತಿಯೇ ಸೋನಮ್ ವಾಂಗ್‌ಚುಕ್ ಎಂದರೆ ನೆನಪಾಗುತ್ತದೆ. ಇಲ್ಲದೇ ಹೋದರೆ, ಇತ್ತೀ‍ಚೀಗೆ ಗಾಲ್ವಾನ್ ಕಣಿವೆಯಲ್ಲಿ ನಿಂತು ನಮ್ಮ ಸೈನಿಕರು ತಮ್ಮ ಬುಲೆಟ್ ನಿಂದ ಹೋರಾಡಿದರೆ, ಸಾಮಾನ್ಯ ಭಾರತೀಯರಾದ ನಾವು ನಮ್ಮ ವಾಲೆಟ್ ಶಕ್ತಿ ಯಿಂದ ಚೀನಾದ ವಿರುದ್ಧ ಹೋರಾಡೋಣ. ಎಂದು ಭಾರತೀಯರನ್ನು ಹುರಿದುಂಬಿಸಿದ ಅಪ್ಪಟ ಸ್ವಾಭಿಮಾನಿ ದೇಶಪ್ರೇಮಿ ಅವರು.

ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನ್ಯಕ್ಕಾಗಿ ಸೌರಶಕ್ತಿಯಿಂದ ಬಿಸಿಯಾಗಿಸ ಬಲ್ಲ ಮಿಲಿಟರಿ ಟೆಂಟನ್ನು ಆವಿಷ್ಕರಿಸಿದ್ದಾರೆ. ಈ ಡೇರೆಯಲ್ಲಿ ಸುಮಾರು 10 ಸೈನಿಕರಿಗೆ ಸ್ಥಳಾವಕಾಶವಿದ್ದು ಇದು ಸಂಪೂರ್ಣವಾಗಿ ಪೋರ್ಟಬಲ್ ಆಗಿದ್ದು ಎಲ್ಲಾ ಭಾಗಗಳೂ ಸೇರಿದಂತೆ 30 ಕಿ.ಗ್ರಾಂಗಿಂತ ಕಡಿಮೆ ತೂಕವಿರುತ್ತವೆ. ಇದರಲ್ಲಿ ರಾತ್ರಿ 10 ಗಂಟೆಯಿಂದ ಬೆಳಗಿನವರೆಗೂ +15 ಡಿಗ್ರಿಯ ತಾಪಮಾನವನ್ನು ಹಿಡಿದಿಡುವ ಮೂಲಕ ಟನ್ ಗಟ್ಟಲೆ ಡೀಸಲ್ ಮತ್ತು ಸೀಮೇ ಎಣ್ಣೆಯನ್ನು ಉಳಿಸುವಂತಾಗಿರುವುದಲ್ಲದೇ ಪರಿಸರ ಮಾಲಿನ್ಯವನ್ನು ತಡೆಯುವಂತಾಗಿದೆ. ಈದು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ, ಆತ್ಮನಿರ್ಭರದ ಉತ್ಪನ್ನವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಡೇರೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಸ್ಥಳಾಂತರ ಮಾಡಬಹುದಾಗಿರುವುದು ಗಮನಾರ್ಹವಾಗಿದೆ.

ಹೊಸದಾಗಿ ನಿರ್ಮಿಸಲಾದ ಈ ಡೇರೆಗಳು -14 ಡಿಗ್ರಿ ವರೆಗಿನಷ್ಟು ಕಡಿಮೆ ಹೊರಗಿನ ತಾಪಮಾನವಿದ್ದರೂ ಸಹಾ ಡೇರೆಯ ಒಲಗೆ 15 ಡಿಗ್ರಿ ಸೆಲ್ಸಿಯಸ್‌ನಷ್ಟು ಬೆಚ್ಚಗಿನ ಸ್ಥಿರವಾದ ತಾಪಮಾನವನ್ನು ಕೊಡಬಲ್ಲದು ಎನ್ನಲಾಗಿದೆ. ಆರಂಭದಲ್ಲಿ ಈ ಡೇರೆಯ ತಯಾರಿಕಾವೆಚ್ಚ ಸುಮಾರು 6-8 ಲಕ್ಷವಾಗಿದ್ದು, ಸೈನ್ಯದಿಂದ ಅಂಗೀಕಾರವಾಗಿ ಹೆಚ್ಚಿನ ಸಂಖ್ಯೆಯ ಆದೇಶ ಬಂದರೆ ಸುಮಾರು 3-4 ಲಕ್ಷಗಳಲ್ಲಿಯೇ ಮುಂದಿನ ದಿನಗಳಲ್ಲಿ ತಯಾರಿಸಿಕೊಡಲು ಸಿದ್ಧರಾಗಿದ್ದಾರೆ ಶ್ರೀ ಸೋನಮ್ ವಾಂಗ್‌ಚುಕ್.

ಇದಕ್ಕೂ ಮೊದಲು, ಅವರು ಭಾರತೀಯ ಸಶಸ್ತ್ರ ಪಡೆಗಳು ಎತ್ತರದ ಪ್ರದೇಶದಲ್ಲಿ ಬಳಸಲು ಅನುಕೂಲವಾಗುವಂತೆ ಸೌರಶಕ್ತಿ ಅಳವಡಿಸಿದ ಮಣ್ಣಿನ ಗುಡಿಸಲನ್ನು ಸಹ ವಿನ್ಯಾಸಗೊಳಿಸಿದ್ದರು. ಇದು ಒಂದು ಸ್ಥಿರವಾದ ಕಟ್ಟಡವಾಗಿದ್ದು ಇದನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರ ಮಾಡಲು ಸಾಧ್ಯವಿಲ್ಲದ್ದಾಗಿತ್ತು.

ಇದೇ ರೀತಿಯಲ್ಲಿ ಸೈನಿಕರಿಗೆ ಎಲ್ಲಾ‌ ಕಾಲದಲ್ಲೂ ಶುದ್ದವಾದ ನೀರನ್ನು ಸ್ಥಳೀಯವಾಗಿಯೇ ಸಂಗ್ರಹಿಸಿ ಒದಗಿಸುವ, ಐಸ್ ಸ್ತೂಪಸ್ ಎಂಬ ಪರಿಕಲ್ಪನೆಯ ಮೂಲಕ ಹಿಮದ ನೀರನ್ನು ಚಳಿಗಾಲದಲ್ಲಿ ಹಿಮದ ಗುಡ್ಡದ ರಾಶಿಯಂತೆ ಸಂಗ್ರಹಿಸಿಟ್ಟುಕೊಂಡು‌ ನಂತರ ಅದನ್ನು ಬೇಸಿಗೆಯಲ್ಲಿ ಸುಲಭವಾಗಿ ಬಳಸುವಂತಹ ವಿಧಾನವನ್ನೂ ಸಹಾ ಕಂಡು ಹಿಡಿದ್ದರು.
ಇವೆಲ್ಲವಕ್ಕೂ ಕೀರ್ತಿ ಶಿಖರದಂತೆ ತ್ರೀ ಈಡಿಯಟ್ ಸಿನಿಮಾದ ಕಡೆಯಲ್ಲಿ ತೋರಿಸಿರುವಂತೆ, ಲಡಾಖ್‌ಗೆ ಪ್ರದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಯುಂಟು ಮಾಡಿದ ಲಡಾಖ್‌ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಂದೋಲನ ಅರ್ಥಾತ್ Students Educational and Cultural Movement of Ladakh (SECMOL) ನಿಜಕ್ಕೂ ಅಲ್ಲಿನ ಮಕ್ಕಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಮಹತ್ತರ ಕೊಡುಗೆಯನ್ನು ನೀಡುತ್ತಿದೆ.

ಸೋನಮ್ ವಾಂಗ್‌ಚುಕ್ ಅಭಿವೃದ್ಧಿಪಡಿಸಿರುವ ಈ ಹೊಸ ಪರಿಸರ ಸ್ನೇಹಿ ಪರಿಹಾರವು ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಭಾರತ್ ಅಭಿಯಾನಕ್ಕೆ ಹೇಳಿ ಮಾಡಿಸಿದಂತಿದೆ. ಈ ಹೊಸ ಸೌರಶಕ್ತಿ ಚಾಲಿತ ಡೇರೆಗಳು ಅತ್ಯಂತ ಪರಿಣಾಮಕಾರಿ ಮತ್ತು ಅಂತಹ ಕಠಿಣ ಪರಿಸ್ಥಿತಿಗಳಲ್ಲಿ ಸೈನಿಕರಿಗೆ ಬೆಚ್ಚಗಿನ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಒಂದು ಪರಿಪೂರ್ಣ ಪರಿಹಾರವಾಗಿದೆ. ಭಗವಂತನ ಅನುಗ್ರಹದಿಂದ ಸೋನಮ್ ವಾಂಗ್‌ಚುಕ್ ಅವರಿಗೆ ಆಯುರಾರೋಗ್ಯಗಳು ಲಭಿಸಿ ಇನ್ನು ಇಂತಹ ಹತ್ತಾರು ಪರಿಸರ ಸ್ನೇಹಿ ಉತ್ಪನ್ನಗಳನ್ನು ಆವಿಷ್ಕಾರ ಮಾಡುವಂತಹ ಶಕ್ತಿಯನ್ನು ನೀಡಲಿ ಮತ್ತು ನಮ್ಮ ಸೈನಿಕರಿಗೆ ಉಪಯೋಗವಾಗಲಿೆ ಎಂಬ ಹಾರೈಕೆ ನಮ್ಮೆಲ್ಲದ್ದಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ

ದಕ್ಷಿಣ ಭಾರತೀಯ ಪಾಕಶಾಸ್ತ್ರದಲ್ಲಿ ಟೋಮ್ಯಾಟೋ ಹಣ್ಣುಗಳಿಗೆ ಬಹಳ ಪ್ರಾಶಸ್ತ್ಯ. ಯಾವುದೇ ತರಕಾರಿಗಳೊಂದಿಗೆ ಟೋಮ್ಯಾಟೋ ಹಣ್ಣುಗಳು ಸುಲಭವಾಗಿ ಒಗ್ಗಿಕೊಂಡು ಹೋಗುತ್ತದೆ ಇಲ್ಲವೇ ಕೇವಲ ಟೋಮ್ಯಾಟೋ ಹಣ್ಣುಗಳಿಂದಲೇ, ಬಗೆ ಬಗೆಯ ಸಾರುಗಳು, ಗೊಜ್ಜುಗಳನ್ನು ತಯಾರಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಟೋಮ್ಯಾಟೋ ಬಹಳ ಸುಲಭದಲ್ಲಿ ಎಲ್ಲೆಡೆಯೂ ಸಿಗುತ್ತಿರುವ ಕಾರಣ, ಬಿಸಿ ಬಿಸಿ ಅನ್ನ, ದೋಸೆ, ಚಪಾತಿಗಳ ಜೊತೆ ನೆಂಚಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ, ರುಚಿಕರವಾದ ಮತ್ತು ಥಟ್ ಅಂತ ಮಾಡಬಹುದಾದ ಟೋಮ್ಯಾಟೋ ಹಣ್ಣಿನ ದಿಢೀರ್ ಬಿಸಿ ಉಪ್ಪಿನಕಾಯಿ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ

 • ನಾಟಿ ಟೊಮೆಟೊ – 5 ರಿಂದ 6
 • ಸಾಸಿವೆ – 2 ಚಮಚ
 • ಮೆಂತ್ಯ – 1 ಚಮಚ
 • ಅಚ್ಚ ಮೆಣಸಿನ ಪುಡಿ – 1 ಚಮಚ
 • ಅರಿಶಿನ – 1/4 ಚಮಚ
 • ಇಂಗು ಸ್ವಲ್ಪ
 • ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ
 • ಅಡುಗೆ ಎಣ್ಣೆ – 3 ಚಮಚ

ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ ತಯಾರಿಸುವ ವಿಧಾನ

 • ಮೊದಲು ಟೋಮ್ಯಾಟೋಗಳನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಿಂದ ಒರೆಸಿಕೊಂಡು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಿ
 • ಸಣ್ಣದಾದ ಬಾಣಲೆಯನ್ನು ಒಲೆಯ ಮೇಲಿಟ್ಟು, ಸಾಸಿವೆ ಮತ್ತು ಮೆಂತ್ಯವನ್ನು ಹಸೀ ಹೋಗುವವರೆಗೂ ಹುರಿದುಕೊಂಡು, ಅದು ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
 • ಗಟ್ಟಿ ತಳದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿದ ನಂತರ ಸ್ವಲ್ಪ ಇಂಗು ಮತ್ತು ಕತ್ತರಿಸಿದ ಟೋಮ್ಯಾಟೋಗಳನ್ನು ಹಾಕಿ ಬಾಡಿಸಿಕೊಳ್ಳಿ
 • ಟೋಮ್ಯಾಟೋ ಚೆನ್ನಾಗಿ ಬಾಡುತ್ತಿದ್ದಂತೆಯೇ, ಅದಕ್ಕೆ ಉಪ್ಪು ಅರಿಶಿನಪುಡಿ, ಅಚ್ಚ ಖಾರದ ಪುಡಿ ಮತ್ತು ಬೆಲ್ಲವನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ 3 ರಿಂದ 4 ನಿಮಿಷ ಬೇಯಲು ಬಿಡಿ.
 • ಆದಾದ ನಂತರ ಸಾಸಿವೆ ಮತ್ತು ಮೆಂತ್ಯದ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಐದಾರು ನಿಮಿಷಗಳಷ್ಟು ಬೇಯಿಸಿದಲ್ಲಿ ಸವಿ ಸವಿಯಾದ ರುಚಿಯಾದ, ಬಿಸಿ ಬಿಸಿ ಟೋಮ್ಯಾಟೋ ಉಪ್ಪಿನಕಾಯಿ ಸವಿಯಲು ಸಿದ್ಧ.

ಈ ಉಪ್ಪಿನಕಾಯಿಯನ್ನು ದೋಸೆ, ಚಪಾತಿ ಜೊತೆ ನೆಂಚಿಕೊಂಡು ತಿನ್ನ ಬಹುದಾದರೂ, ಬಿಸಿ ಬಿಸಿ ಅನ್ನದ ಜೊತೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕಲಸಿಕೊಂಡು ಮಾವಿನ ಮಿಡಿ ಉಪ್ಪಿನಕಾಯಿ ಜೊತೆ ಸವಿಯಲು ಬಲು ಮಜವಾಗಿರುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ನಿಮ್ಮವನೇ ಉಮಾಸುತ

ಮನದಾಳದ ಮಾತು : ಟೋಮ್ಯಾಟೋ ಹಣ್ಣುಗಳು ಕೇವಲ ಆಡುಗೆಗೆ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಎಲ್ಲಾ ಕಾಲದಲ್ಲಿಯೂ ಬಹಳ ಬೇಡಿಕೆ ಇರುವ ತರಕಾರಿಯಾಗಿದೆ. ಹೃದಯದ ರಕ್ತ ನಾಳದಲ್ಲಿರುವ ಕೊಬ್ಬು ನಿವಾರಣೆಗೆ ಟೊಮೆಟೊ ರಾಮಬಾಣವಾಗಿದೆ.

ಟೋಮ್ಯಾಟೋಗಳನ್ನು ಅಡುಗೆಯಲ್ಲಿ ಸಾರು, ಸಾಗು, ಹುಳಿ, ಚೆಟ್ನಿ, ಗೊಜ್ಜು, ಸೂಪ್, ಉಪ್ಪಿನಕಾಯಿ ಗಳಲ್ಲದೇ ಹಾಗೆಯೇ ಹಸಿಯಾಗಿ ಈರುಳ್ಳಿ, ಕ್ಯಾರೇಟ್, ಸೌತೇಕಾಯಿಯ ಜೊತೆ ಸಲಾಡ್ ರೂಪದಲ್ಲಿಯೂ ತಿನ್ನಬಹುದಾಗಿದೆ.

ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ಹೇಳಿ ಕೇಳಿ ಥೈಲ್ಯಾಂಡ್ ದೈವದತ್ತವಾದ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ದೇಶ ಎಂದರೂ ತಪ್ಪಾಗಲಾರದು. ಭಗವಂತ ಬಹಳ ಸಮಯ ಮಾಡಿಕೊಂಡು ಒಂದೊಂದು ದ್ವೀಪಗಳನ್ನು ಸೃಷ್ಟಿ ಮಾಡಿದಂತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ ಸುಮಾರು ರಸ್ತೆಯ ಮೂಲಕ ಕ್ರಮಿಸಿದರೆ 783 ಕಿ.ಮೀ ದೂರದಲ್ಲಿರುವ ವಿಮಾನದಲ್ಲಿ ಸುಮಾರು ಒಂದು ಘಂಟೆಯಲ್ಲಿ ತಲುಪಬಹುದಾದ ಅತ್ಯಂತ ರಮಣೀಯ ದ್ವೀಪವಾದ ಕ್ರಾಬಿ ನದಿಯ ಮತ್ತು ಸಮುದ್ರದ ತಟದಲ್ಲಿರುವ ಕ್ರಾಬಿ (ಥೆಸಾಬನ್ ಮುವಾಂಗ್) ದ್ಚೀಪವನ್ನು ಸ್ವಲ್ಪ ಸುತ್ತಿ ಹಾಕಿ ಬರೋಣ.

ಸುಮಾರು 60-70 ಸಾವಿರ ಜನಸಂಖ್ಯೆ ಇರುವ ಈ ಕ್ರಾಬಿ ಪಟ್ಟಣ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದೆ. ಇಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಎನ್ನುವ ತಾರತಮ್ಯವಿಲ್ಲದೇ ಇಬ್ಬರೂ ಸಹಾ ಒಗ್ಗೂಡಿಯೇ ದೇಶ ವಿದೇಶಗಳಿಂದ ಬರುವ ಪ್ರವಾಸಿಗರನ್ನು ನೋಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಅವರ ಸ್ವಭಾವ ಮತ್ತು ಇಚ್ಛೆಗಳು ಅರಿಯುವಂತಹ ಗುಣವನ್ನು ರೂಢಿಸಿಕೊಂಡು ಅವರ ಬೇಕು ಬೇಡಗಳನ್ನು ಅರ್ಧೈಸಿಕೊಂಡು ಅವರ ಇಚ್ಚೆಗೆ ತಕ್ಕಂತಹ ಸೇವೆ ಮಾಡಲು ಸದಾ ಸನ್ನದ್ಧರಾಗಿರುತ್ತಾರೆ.

ಥೈಲ್ಯಾಂಡ್ ಎಂದಾಕ್ಷಣ ಸುಂದರವಾದ ದ್ವೀಪಗಳು, ಮೋಜು ಮತ್ತು ಮಸ್ತಿ ಎಂದುಕೊಂಡವರಿಗೆ ಅದರ ಹೊರತಾಗಿಯೂ ನಯನ ಮನೋಹರವಾದ ಬುದ್ಧನ ಅನೇಕ ದೇವಾಲಯಗಳಿವೆ. ನೈಸರ್ಗಿಕ ಪ್ರಕೃತಿದತ್ತವಾದ ಪರಿಸರದಲ್ಲಿ ನಿಜವಾದ ಆಧ್ಯಾತ್ಮಿಕ ಅನುಭವವನ್ನು ನೀಡುವ. ಟೈಗರ್ ಕೇವ್ ಟೆಂಪಲ್ ಅಥವಾ ವಾಟ್ ಥಾಮ್ ಸುವಾ ಕ್ರಾಬಿ ಪಟ್ಟಣದಿಂದ 5 ಕಿ.ಮೀ ದೂರದಲ್ಲಿದೆ. ಇಲ್ಲಿನ ದೇವಾಲಯದ ತಡದಲ್ಲಿರುವ ಆಕರ್ಷಕವಾದ ಗುಹೆಯ ರೂಪದ ದೇವಾಲಯಕ್ಕೆ ದ್ವಾರಪಾಲಕರಂತಿರುವ ಎರಡು ದೊಡ್ಡದಾದ ಹುಲಿಗಳು ಹೃನ್ಮನಗಳನ್ನು ಸೆಳೆಯುತ್ತವೆ. ಅದೊಮ್ಮೆ ಒಂದು ಹುಲಿ ಮುಖ್ಯ ಗುಹೆಯನ್ನು ಪ್ರವೇಶಿಸಿ ಆ ಗುಹೆಯನ್ನೇ ತನ್ನ ವಾಸ ಸ್ಥಾನವನ್ನಾಗಿ ಮಾಡಿಕೊಂಡಿತ್ತು ಎಂಬ ಐತಿಹ್ಯವಿದ್ದ ಕಾರಣ ಈ ದೇವಾಲಯಕ್ಕೆ ವಾಟ್ (ದೇವಾಲಯ) ಥಾಮ್ (ಗುಹೆ) ಸುವಾ (ಹುಲಿ) ಎಂಬ ಹೆಸರು ಬಂದಿದೆ ಎನ್ನುತ್ತದೆ ಅಲ್ಲಿನ ಇತಿಹಾಸ. ಇಂದಿಗೂ ಇಲ್ಲಿನ ದೇವಾಲಯದಲ್ಲಿ ಹುಲಿಯ ಹೆಜ್ಜೆ ಗುರುತುಗಳಿವೆ ಮತ್ತು ಅದರ ಜೊತೆ ಸುಂದರವಾದ ಬುದ್ಧನ ಪ್ರತಿಮೆಗಳಿವೆ.

ಈ ದೇವಸ್ಥಾನದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಸುಣ್ಣದ ಮಣ್ಣಿನ ಎತ್ತರದದ ದೊಡ್ಡದಾದ ಮತ್ತು ಅಷ್ಟೇ ಕಡಿದಾದ ಬೆಟ್ಟ. ಆ ಸುಂದರವಾದ ಬೆಟ್ಟವನ್ನು ನೋಡಿ 1,237 ಮೆಟ್ಟಿಲುಗಳಾ? ನನ್ನ ಕೈಯ್ಯಲ್ಲಿ ಅಗೋದಿಲ್ಲಪ್ಪಾ ಎಂದು ನನ್ನ ಮಡದಿ ರಾಗವೆಳೆದಾಗ, ಏ 1,237 ಮೆಟ್ಟಿಲುಗಳು ತಾನೇ ಸುಲಭವಾಗಿ ಹತ್ತಿ ಬಿಡಬಹುದು ಎಂದು ಪುಸಲಾಯಿಸಿ ಮೊದಲ ಮುನ್ನೂರು ನಾಲ್ಕು ನೂರು ಬೆಟ್ಟಿಲುಗಳನ್ನು ಆರಾಮವಾಗಿ ಹತ್ತುತ್ತಿದ್ದಂತೆಯೇ ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ನೆನಪಾಗುವಂತೆ ಮಾಡಿತು. ಸಾಮಾನ್ಯವಾಗಿ ಬಹಳಷ್ಟು ಮೆಟ್ಟಿಲುಗಳು ಎಂಟರಿಂದ ಹತ್ತು ಇಂಚುಗಳ ಎತ್ತರವಿದ್ದು ಸುಮಾರು ಒಂದರಿಂದ ಒಂದುವರೆ ಅಡಿ ಅಗಲದಷ್ಟಿರುತ್ತದೆ. ಅದರೆ ಇಲ್ಲಿ ಎಲ್ಲವೂ ಕಡಿದೇ. ಇಲ್ಲಿನ ಮೆಟ್ಟಿಲುಗಳು ಏಕರೂಪವಾಗಿರದೇ, ಕೆಲವೊಂದು ಮೆಟ್ಟಿಲುಗಳು ಒಂದರಿಂದ ಒಂದೂ ಕಾಲು ಆಡಿಗಳಷ್ಟು ಎತ್ತರವಿದ್ದರೆ, ಕೇವಲ ಎಂಟರಿಂದ ಹತ್ತು ಇಂಚಿನ ಅಗಲದ್ದಾಗಿದ್ದು ಬಹಳಷ್ಟು ತಿರುವುಗಳಿಂದ ಕೂಡಿದೆ. ಬಹಳಷ್ಟು ಬೆಟ್ಟಗಳು 30-45 ಡಿಗ್ರಿಗಳಾಗಿದ್ದರೆ ಇಲ್ಲಿನ ಮೆಟ್ಟಿಲುಗಳು 70-80 ಡಿಗ್ರಿಗಳಷ್ಟು ಇದ್ದು ನಿಜಕ್ಕೂ ಬೆಟ್ಟ ಹತ್ತುವುದು ಸವಾಲಿನದ್ದೇ ಆಗಿದೆ. ಸುಮಾರು 500 ಮೆಟ್ಟಿಲುಗಳನ್ನು ಹತ್ತಿದಕೂಡಲೇ, ಅಲ್ಲೇ ಪಕ್ಕಕ್ಕೆ ಒರಗಿ ಕುಳಿತ ಮಡದಿ ನನ್ನ ಕೈಯಲ್ಲಿ ಆಗೋದಿಲ್ಲ. ನೀವು ಬೇಕಿದ್ರೇ ಹೋಗಿ ಬನ್ನಿ ಎಂದಾಗ, ಸ್ವಲ್ಪ ನೀರು ಕುಡಿಸಿ ಕೆಲಕಾಲ ಅಲ್ಲಿಯೇ ವಿರಮಿಸಿಕೊಂಡು ಸ್ವಲ್ಪ ಮೆಟ್ಟಿಲುಗಳನ್ನು ಹತ್ತಿ ಏದುರಿಸು ಬಿಡುತ್ತಿದ್ದಾಗಲೇ ಹೇ.. ಹುಷಾರು ನಿಧಾನವಾಗಿ ನೋಡ್ಕೊಂಡ್ ಹತ್ತಮ್ಮಾ ಎನ್ನುವ ಕನ್ನಡ ಪದ ಕಿವಿಗೆ ಬಿದ್ದಾ ಕ್ಷಣ, ಕನ್ನಡ ಎನೆ ಕುಣಿದಾಡುವುದೆನ್ನದೇ, ಕನ್ನಡ ಎಂದರೆ ಕಿವಿ ನಿಮಿರುವುದು ಎಂಬ ಕುವೆಂಪುರವರ ಕವನದಂತೆ, ಸಾಗರದಾಚೆ ನಾಡಿನಲಿ ಕನ್ನಡ ನುಡಿಯಾ ಕೇಳುತಲೀ ಎನ್ನುವ ಸಿಂಗಾಪುರದಲ್ಲಿ ರಾಜಾ ಕುಳ್ಳಾ ಚಿತ್ರದ ಗೀತೆಯಂತೆ ಹೃದಯ ತುಂಬಿ ಬಂದು, ನಮಸ್ಕಾರ. ಬೆಂಗಳೂರಿನವರಾ? ಎಂದು ನನಗೇ ಅರಿವಿಲ್ಲದಂತೆಯೇ ಕೇಳಿದ್ದೆ. ಅವರೂ ಸಹಾ ಆಶ್ಚರ್ಯ ಚಕಿತರಾಗಿ ನಮ್ಮಿಬ್ಬರನ್ನೂ ನೋಡಿ. ಹೂಂ ಹೌದು ಬೆಂಗಳೂರಿನ ಬಸವೇಶ್ವರ ನಗರದವರು. Weeding Pre-Shootಗಾಗಿ Family & Photographers ರೊಂದಿಗೆ ಬಂದಿದ್ದೇವೆ ಎಂದರು. ಹಾಗೇ ಅವರೊಂದಿಗೆ ಕನ್ನಡದಲ್ಲಿಯೇ ಹರಟುತ್ತಾ, ಸ್ವಲ್ಪ ಸ್ವಲ್ಪವೇ ಮೆಟ್ಟಿಲುಗಳನ್ನು ಹತ್ತಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಮುಂದುವರಿಸುತ್ತಾ ಹಾಗೂ ಹೀಗೂ ಬೆಟ್ಟದ ತುದಿಯನ್ನು ತಲುಪಿದ್ದೇ ಗೊತ್ತಾಗಲಿಲ್ಲ.

ಬಿಸಿಲಿನ ಬೇಗೆಯ ನಡುವೆಯೂ ಬೆಟ್ಟದ ತುದಿಯನ್ನು ತಲುಪುತ್ತಿದ್ದಂತೆಯೇ ತಣ್ಣನೆಯ ಗಾಳಿ ನಮ್ಮನ್ನು ಸ್ವಾಗತಿಸಿದರೆ, ಎದುರಿಗೆ ಕಾಣುವ ಭವ್ಯವಾದ ಬುದ್ಧನ ವಿಗ್ರಹ ಅದರ ಬುಡದಲ್ಲಿರುವ ಗಣೇಶನ ವಿಗ್ರಹ ಮತ್ತು ಅಲ್ಲಿಂದ ಇಡೀ ಪಟ್ಟಣದ ವಿಹಂಗಮ ನೋಟ ಬೆಟ್ಟ ಹತ್ತಿದ್ದ ಆಯಾಸವನ್ನೆಲ್ಲಾ ಕ್ಷಣ ಮಾತ್ರದಲ್ಲಿಯೇ ಪರಿಹರಿಸಿ, ಅಷ್ಟು ಕಷ್ಟ ಪಟ್ಟು ಹತ್ತಿದ್ದಕ್ಕೂ ಸಾರ್ಥಕ ಎನಿಸುವಂತೆ ಮಾಡಿತ್ತು.

ಅಂತಹ ಸುಂದರವಾದ ಪ್ರಕೃತಿ ತಾಣದಲ್ಲಿ ಸುಮಾರು ಅರ್ಧ ಮುಕ್ಕಾಲು ಗಂಟೆ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ. ಸಾಧಾರಣವಾಗಿ ಬಹುತೇಕ ಬೆಟ್ಟಗಳನ್ನು ಹತ್ತುವಾಗ ಕಷ್ಟ ಪಟ್ಟು ಹತ್ತಿದರೆ, ಇಳಿಯುವಾಗ ಸುಲಭವೆನಿಸುತ್ತದೆ. ಆದರೆ ಇಲ್ಲಿಯ ಮೆಟ್ಟಿಲುಗಳು ಬಹಳ ಇಳಿಜಾರು ಮತ್ತು ಕಡಿದಾದ ಪರಿಣಾಮ ಇಳಿಯುವಾಗಲೂ ಬಹಳ ಹುಶಾರಾಗಿಯೇ ನಿಧಾನವಾಗಿ ಇಳಿಯಬೇಕಾಗುತ್ತದೆ. ಭಕ್ತಾದಿಗಳು ಮತ್ತು ಪ್ರವಾಸಿಗರು ಇಷ್ಟು ಕಷ್ಟ ಪಡುವ ಬದಲು ಈ ಬೆಟ್ಟದ ಬುಡದಿಂದ ತುದಿಯವರೆಗೂ ಸುಲಭವಾಗಿ ತಲುಪುವಂತೆ ರೋಪ್ ಟ್ರೈನ್ ಹಾಕಬಹುದಿತ್ತಲ್ಲವೇ ಎಂಬ ಯೋಚನಾ ಲಹರಿಯೊಂದು ತಲೆಗೆ ಬಂದು ಕಡೆಗೆ ಬೆಟ್ಟ ಇಳಿದ ನಂತರ ಅಲ್ಲಿನವರೊಬ್ಬರ ಬಳಿಿ ಈ ಕುರಿತಂತೆ ವಿಚಾರಿಸಿದಾಗ, ಶ್ರಮವಹಿಸಿ ಭಗವಂತನನ್ನು ದರ್ಶನ ಮಾಡಿದಾಗ ಸಿಗುವ ಆನಂದ ಅನುಭವವೇ ಬೇರೆ. ಪ್ರತೀ ಬಾರಿ ಕಡಿದಾದ ಎತ್ತರದ ಮೆಟ್ಟಿಲುಗಳನ್ನು ಹತ್ತುವಾಗ ಭವವಂತನ ಧ್ಯಾನವನ್ನು ಮಾಡಿಕೊಂಡೇ ಹತ್ತುತ್ತೇವೆ ಮತ್ತು ಮೇಲೆ ಹತ್ತಿ ಆ ಭಗವಂತನನ್ನು ನೋಡಿದಾಕ್ಷಣ ಭಕ್ತಿಪರವಶರಾಗಿ ಆ ಭಗವಂತನ ಚರಣಾರವಿಂದಗಳಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುತ್ತೇವೆ. ಆ ಕ್ಷಣದಲ್ಲಿ ನಮ್ಮೆಲ್ಲಾ ಲೌಕಿಕ ಭಾವನೆಗಳನ್ನು ಮರೆತು ಭಗವಂತನಲ್ಲಿ ಲೀನವಾಗುವಂತಹ ಸುಂದರ ಕ್ಷಣಗಳು ಸುಲಭವಾದ ಮೆಟ್ಟಿಲುಗಳನ್ನು ಹತ್ತುವುದರಿಂದಾಗಲೀ ಅಥವಾ ರೋಪ್ ಟ್ರೈನ್ ಮುಖಾಂತರ ತಲುಪಿದಾಗ ಆಗದ ಕಾರಣ ಈ ಬೆಟ್ಟವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ನಮ್ಮ ಸಮಸ್ಯೆಯನ್ನು ಪರಿಹರಿಸಿದರು.

ಬೆಟ್ಟ ಇಳಿಯುತ್ತಿದ್ದಂತೆಯೇ ದೇವಾಲಯದ ಹಿಂದೆಯೇ ದೇವಾಲಯದ ಆಡಳಿತ ಮಂಡಳಿ ನಡೆಸುವ ಕ್ಯಾಂಟೀನ್ ನಲ್ಲಿ ಸಿಗುವ ತಾಜಾ ತಾಜಾ ಹಣ್ಣುಗಳು ಮತ್ತು ಬಗೆ ಬಗೆಯ ಮಿಲ್ಕ್ ಶೇಕ್, ಚಿಪ್ಸ್, ಚಾಕ್ಲೇಟ್ಗಳನ್ನು ತಿಂದು ಆಯಾಸವನ್ನು ಪರಿಹರಿಸಿಕೊಂಡು ಕೆಲವು ಬಾಳೆಹಣ್ಣುಗಳನ್ನು ಖರೀದಿಸಿ ದೇವಸ್ಥಾನದ ಸುತ್ತಲೂ ಕಾಣಸಿಗುವ ನೂರಾರು ಕೋತಿಗಳಿಗೆ ಕೊಟ್ಟಾಗ ಮನಸ್ಸಿಗಾಗುವ ಆನಂದ ನಿಜಕ್ಕೂ ವರ್ಣಿಸುವುದಕ್ಕಿಂತಲೂ ಅಲ್ಲಿಗೇ ಹೋಗಿ ಅನುಭವಿಸಿದರೇ ಚೆಂದ. ಕೋತಿಗಳು ಭಾರತದ್ದಾದರೂ, ಥೈಲ್ಯಾಂಡಿನದ್ದಾದರೂ ತಮ್ಮ ಕಪಿ ಚೇಷ್ಟೇ ಬಿಡದು ಎನ್ನುವುದಕ್ಕೆ ಸಾಕ್ಷಿಯಾಗಿ ತಮ್ಮ ಆಹಾರದ ಹುಡುಕಾಟದಲ್ಲಿ ನಮ್ಮ ಕೈಚೀಲಗಳ ಮೇಲೆ ಎಗ್ಗಿಲ್ಲದೇ ಎರಗುವ ಸಂಭವವೂ ಇರುವ ಕಾರಣ ಸ್ವಲ್ಪ ಜೋಪಾನವಾಗಿರುವುದು ಉತ್ತಮ.

ಕ್ರಾಬಿ ಪಟ್ಟಣದ ಗಿಜಿ ಬಿಜೆಯ ನಡುವೆಯೂ ಇಂತಹ ರಮಣೀಯವಾದ ಪ್ರಶಾಂತವಾದ ವಾತಾವರಣ ನಿಜಕ್ಕೂ ಮನಸ್ಸನ್ನು ಸೂರೆಗೊಳ್ಳುತ್ತದೆ. ಬೆಟ್ಟದ ಅಡಿಯಲ್ಲಿ ಕಾಣಸಿಗುವ ಪುಟ್ಟ ಪುಟ್ಟ ಮಕ್ಕಳ ಮುದ್ದಾದ ನಗುತ್ತಿರುವ ವಿಗ್ರಹಗಳನ್ನು ನೋಡಿದಾಗ ದೂರದ ಬೆಂಗಳೂರಿನಲ್ಲಿ ಮಕ್ಕಳನ್ನು ಬಿಟ್ಟು ಗಂಡ ಹೆಂಡತಿ ಇಲ್ಲಿ ಸುತ್ತಾಡುವುದಕ್ಕೆ ಬಂದಿದ್ದೀರಾ? ಎಂದು ಕಿಚಾಯಿಸುವ ರೀತಿಯಲ್ಲಿತ್ತು.

ಮುಂದಿನ ಲೇಖನದಲ್ಲಿ ಕ್ರಾಬಿಯ ಮತ್ತಷ್ಟೂ ಮಹೋಹರ ವಿಷಯಗಳನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವವರೆಗೂ ಈ ಲೇಖನ ಕುರಿತಂತೆ ನಿಮ್ಮ ಆಭಿಪ್ರಾಯವನ್ನು ತಿಳಿಸಿ. ಇಮಗೆ ಈ ಲೇಖನ ಇಷ್ಟವಾದ್ರೇ ನಿಮ್ಮ ಬಂಧು ಮಿತ್ರರೊಡನೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರಾಷ್ಟ್ರಕವಿ ಶ್ರೀ ರವೀಂದ್ರ ನಾಥ್ ಟ್ಯಾಗೋರ್ ಅವರು ದೇಶದ ಸ್ತುತಿಗಾಗಿ ಬರೆದಿದ್ದದ್ದಲ್ಲ ಬದಲಾಗಿ ಐದನೆಯ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿ ಬರೆದ್ದದ್ದು ಎಂಬ ವಿವಾದ ಮೊದಲಿನಿಂದಲೂ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇದ್ದೇಿ ಇರುತ್ತದೆ. ಕನ್ನಡಿಗರಿಗೆ ಮೂಲ ಗೀತೆಯನ್ನು ಕೇಳಿದಾಗ ಅಷ್ಟೊಂದು ಸರಿಯಾಗಿ ಅರ್ಥವಾಗದಿದ್ದದ್ದು ಈಗ ಕನ್ನಡದಲ್ಲಿಯೇ ಅದರ ಭಾವಾನುವಾದವನ್ನು ಕೇಳಿದಾಗ ಅಂದಿನ ವಿವಾದದಲ್ಲಿ ಬಹಳಷ್ಟು ತಿರುಳಿದೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತಿದೆ.

 

ಸಾಮಾನ್ಯವಾಗಿ ನಾವು ಭೂಮಿಯನ್ನು ತಾಯಿ ಎಂದೇ ಭಾವಿಸುತ್ತೇವೆ ಹಾಗಾಗಿ ಭೂಮಿ ತಾಯಿ, ಭೂದೇವಿ, ವಸುಂಧರೆ ಎಂದು ಹೇಳುವುದಲ್ಲದೇ ನಮ್ಮ ದೇಶವನ್ನು ಸಂಭೋದಿಸುವಾಗ ಭಾರತಾಂಬೇ ಎಂದೇ ಪ್ರೀತಿಯಿಂದ ಕರೆಯುತ್ತೇವೆ.

ಈ ಹಾಡಿನ ಪಲ್ಲವಿ ಆರಂಭವಾಗುವುದುದೇ ಜನಮನದ ಒಡೆಯಗೇ ನಾಡಿನ ಒಲುಮೆ ನಿನಗಿದೆ ಎಂದಿಗೂ ಗೆಲುಮೆ ಎಂದಿದೆ. ಹಾಗಾದರೇ ಸ್ವಾತಂತ್ರ ಪೂರ್ವದಲ್ಲಿ ನೂರಾರು ಚಿಕ್ಕ ಚಿಕ್ಕ ಸ್ವತಂತ್ರ್ಯ ರಾಜ್ಯಗಳಾಗಿ ಹರಿದು ಹಂಚಿಹೋಗಿದ್ದ ಭಾರತಕ್ಕೆ ಒಡೆಯರು ಯಾರಿದ್ದರು?

ಅವಿಭಜಿತ ಭಾರತದ ಭೂಭಾಗಗಳಾಗಿದ್ದ ಪಂಜಾಬ್, ಸಿಂಧ್, ಗುಜರಾತ್, ಮರಾಠಾ, ದ್ರಾವಿಡ, ಒಡಿಶಾ ಮತ್ತು ಬಂಗಾಳಗಳಲ್ಲದೇ, ವಿಂಧ್ಯಾ ಮತ್ತು ಹಿಮಾಲಯದ ಬೆಟ್ಟಗಳಲ್ಲಿಯೂ ನಿನ್ನದೇ ಹೆಸರು ಪ್ರತಿಧ್ವನಿಸುತ್ತದೆ. ಯಮುನಾ ಮತ್ತು ಗಂಗಾ ನದಿಗಳಲ್ಲಿಯೂ ನಿನ್ನದೇ ಹೆಸರಿನ ತರಂಗಗಳು ಮೂಡುತ್ತಿವೆ ಎಂದು ವರ್ಣಿಸಿರುವುದು.

ಇಡೀ ದೇಶಾದ್ಯಂತ ನಿನ್ನಯ ಹೆಸರನು ಮೆರೆಸಿ, ನಿನಗಿದು ಒಳಿತನು ಬಯಸಿ ಹಾಡುವೆ ಗೆಲುವನೆ ಬಯಸಿ ಎಂದು ಹೇಳಿರುವುದು ಬಹಳ ಸ್ಪಷ್ಟವಾಗಿ ಅಂದು ದೇಶವನ್ನು ಪರೋಕ್ಷವಾಗಿ ಒತ್ತೆಯಾಳಾಗಿಟ್ಟುಕೊಂಡಿದ್ದ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿಯೇ ಬರೆದಿರುವುದನನ್ನು ಮನಗಾಣಬಹುದಾಗಿದೆ.

1911 ರ ಡಿಸೆಂಬರ್‌ನಲ್ಲಿ ಬ್ರಿಟಿಷ್ ರಾಜ ಐದನೇ ಜಾರ್ಜ್ ಮತ್ತು ರಾಣಿ ಮೇರಿಯವರ ಭಾರತದ ಭೇಟಿಯ ಸಮಯದಲ್ಲಿ ಅವರನ್ನು ಹೊಗುಳುವುದಕ್ಕಾಗಿಯೇ ಈ ಹಾಡನ್ನು ಸಂಯೋಜಿಸಲಾಗಿತ್ತು. ಹಾಗಾಗಿಯೇ ಆತನನ್ನು ಅಧಿನಾಯಕ (ಭಗವಂತ ಅಥವಾ ಆಡಳಿತಗಾರ) ಎಂದು ಪ್ರಶಂಸಿರುವುದಲ್ಲದೇ, ಭಾರತ ಭಾಗ್ಯ ವಿಧಾತ (ಭಾರತದ ಹಣೆಬರಹವನ್ನು ಬರೆಯುವವ) ಎಂದೇ ಹಾಡಿ ಹೊಗಳಿರುವುದು ನಿಜಕ್ಕೂ ದಾಸ್ಯದ ಸಂಕೇತವೇ ಸರಿ.

ಯಾವ ದಿಕ್ಕಿನಲ್ಲಿ ಯಾವುದೇ ಭಾವನೆಯಿಂದ ನೋಡಿದರೂ ಈ ಗೀತೆ ನಮ್ಮ ಭಾರತಾಂಬೆಯ ಕುರಿತಂತೆ ಪ್ರೀತಿಯಿಂದ ಹಾಡಿ ಹೊಗಳುತ್ತಿಲ್ಲ ಎನ್ನುವುದು ಸುಸ್ಪಷ್ಟವಾಗಿದೆ .

ಡಿಸೆಂಬರ್ 1911 ರಲ್ಲಿ ಐದನೇ ರಾಜ ಜಾರ್ಜ್‌ಗೆ ನಿಷ್ಠಾವಂತ ಸ್ವಾಗತ ನೀಡಲು ಮತ್ತವನಿಗೆ ಧನ್ಯವಾದ ಹೇಳಲು ಕಲ್ಕತ್ತಾದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ವಿಶೇಷ ಸಮ್ಮೇಳನದ ಎರಡನೇ ದಿನದಂದು ಭಾರತದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಗಿತ್ತು. ಆ ದಿನ ಚಕ್ರವರ್ತಿ ಮತ್ತು ಸಾಮ್ರಾಜ್ಞೆ ಗೆ ಸ್ವಾಗತ ಮತ್ತು ನಿಷ್ಠೆಯನ್ನು ವ್ಯಕ್ತಪಡಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು ಎನ್ನುವುದು ಗಮನಾರ್ಹ.

ಶ್ರೀ ಬಂಕಿಮಚಂದ್ರ ಚಟರ್ಚಿಯವರ ವಿರಚಿತ ನಿಜವಾದ ದೇಶ ಭಕ್ತಿ ಗೀತೆ ವಂದೇಮಾತರಂ, ಸ್ವಾತಂತ್ರ್ಯ ಪೂರ್ವದಲ್ಲಿ ನಾಡಿನುದ್ದಕ್ಕೂ ಜನಮಾನಸದಲ್ಲಿ ಅಚ್ಚನ್ನು ಒತ್ತಿ, ವಂದೇಮಾತರಂ ಎಂದು ಘೋಷಣೆ ಕೋಟ್ಯಾಂತರ ಜನರನ್ನು ದೇಶಭಕ್ತಿಯ ಅಡಿಯಲ್ಲಿ ಒಂದು ಮಾಡಿತ್ತು. ವಂದೇಮಾತರಂ ಎಂಬ ಪದ ಬ್ರಿಟೀಷರ ಕಿವಿಗೆ ಬಿದ್ದೊಡನೆಯೇ ಕಾಯ್ದ ಸೀಸ ಕಿವಿಗೆ ಬಿದ್ದ ಹಾಗಾಗುತ್ತಿತ್ತು.

ಹಾಗಾಗಿ ಜನಗಣಮನ ಕುರಿತಂತೆ ಅನೇಕರು ಅಕ್ಷೇಪ ವ್ಯಕ್ತಪಡಿಸಿದಾಗ 1937ರಲ್ಲಿ ರವೀಂದ್ರನಾಥ ಟ್ಯಾಗೋರರು ತಾವು ಪರಮ ದೇಶಭಕ್ತರೆಂದೂ ತಾವೆಂದೂ ಬ್ರಿಟಿಷ್ ರಾಜನನ್ನು ಗೌರವಿಸಲು ಈ ಹಾಡನ್ನು ಬರದಿಲ್ಲವೆಂದು ಸ್ಪಷ್ಟನೆ ನೀಡ ಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಗಿತ್ತು. ಬಹುಜನರ ಒತ್ತಾಸೆಯನ್ನು ಬದಿಜೊತ್ತಿ ವಂದೇ ಮಾತರಂ ಬದಲಾಗಿ ಅಂದಿನ ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ವಿಶೇಶ ಆಸ್ತೆ ಮತ್ತು ಅಸಕ್ತಿಗಳಿಂದಾಗಿ ಜನ ಗಣ ಮನವನ್ನೇ ಭಾರತ ರಾಷ್ಟ್ರಗೀತೆಯನ್ನಾಗಿ ಹೆಮ್ಮೆಯಿಂದ ಅಂಗೀಕರಿಸಲಾಯಿತು.

ಇನ್ನು ಧರ್ಮಾಧಾರಿತವಾಗಿ ದೇಶ ವಿಭಜಿತವಾಗಿ ಭಾರತದಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದರೂ ತಮ್ಮ ರಾಜಕೀಯ ಸ್ವಾರ್ಥ ಹಿತಾಸಕ್ತಿಗಾಗಿ ಅನ್ಯ ಧರ್ಮೀಯರನ್ನು ಓಲೈಸುವ ಮನಸ್ಥಿತಿಯ ನಾಯಕರಿದ್ದ ಕಾರಣ ಭಗವಾಧ್ವಜದ ಬದಲು ಮೂರೂ ಧರ್ಮಗಳನ್ನು ಆಧರಿಸಿಯೇ ತ್ರಿವರ್ಣಧ್ವಜವನ್ನು ಆಯ್ಕೆಮಾಡಿ, ಆದರ ಮಧ್ಯದಲ್ಲೊಂದು ಅಶೋಕ ಚಕ್ರವನ್ನು ಇಟ್ಟು ನಂತರ ಅದಕ್ಕೆ ತ್ಯಾಗ, ಶಾಂತಿ ಮತ್ತು ಭರವಸೆ ಎಂದು ಹೆಸರಿಸಿ ಜನರನ್ನು ಮರಳು ಮಾಡಲಾಯಿತು.

ಬ್ರಿಟೀಷರಿಂದ ಸ್ವಾತಂತ್ರ್ಯ ಗಳಿಸಿದ 75 ವರ್ಷಗಳ ನಂತರವೂ ಪ್ರತೀ ದಿನ ರಾಷ್ಟ್ರ ಗೀತೆಯ ಹೆಸರಿನಲ್ಲಿ ಅದೇ ಬ್ರಿಟಿಷ್ ರಾಜನನ್ನು ಹೊಗಳಬೇಕಾದ ಅನಿವಾರ್ಯತೆ ನಮ್ಮ ಭಾರತೀಯರಿಗೆ ಬಂದೊದಗಿರುವುದು ದೇಶದ ದೌರ್ಭಾಗ್ಯವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಬೋಲೋ ಭಾರತ್ ಮಾತಾ ಕೀ.. ಜೈ..

ಜೈ ಹಿಂದ್, ಜೈ ಕರ್ನಾಟಕ ಮಾತೆ.

ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ

ನಾವೆಲ್ಲರೂ ಕೇಳಿ, ಓದಿ, ನೋಡಿ ತಿಳಿದಿರುವಂತೆ ಅಯೊಧ್ಯೆ ಪ್ರಭು ಶ್ರೀರಾಮ ಚಂದ್ರನ ಜನ್ಮಸ್ಥಳ. ಆತ ತನ್ನ ಆದರ್ಶಗಳಿಂದಾಗ ಮರ್ಯಾದಾ ಪುರುಶೋತ್ತಮ ಎನಿಸಿಕೊಂಡಿದ್ದಲ್ಲದೇ, ಸಕಲ ಹಿಂದೂಗಳ ಆರಾಧ್ಯ ದೈವವಾಗಿ ಪ್ರತಿನಿತ್ಯವೂ ಪ್ರಪಂಚಾದ್ಯಂತ ಕೋಟ್ಯಾಂತರ ಮನ ಮತ್ತು ಮನೆಗಳಲ್ಲಿ ಪೂಜೆಗೆ ಪಾತ್ರರಾಗುತ್ತಿದ್ದಾನೆ. ವಾಲ್ಮೀಕಿ ವಿರಚಿತ ರಾಮಯಣ ಪ್ರಪಂಚದ ಅತ್ಯಂತ ಪುರಾತನ ಗ್ರಂಥವಾಗಿದ್ದು ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಪ್ರಪಂಚಾದ್ಯಂತ ಹಲವಾರು ದೇಶಗಳಲ್ಲಿ ಪ್ರಭು ಶ್ರೀರಾಮ ಆಡಳಿತಾತ್ಮಕವಾಗಿ ಆದರ್ಶ ಪುರುಷನಾಗಿ ಆರಾಧಿಸುತ್ತಾರೆ.

ಇಂತಹ ಪ್ರಭು ಶ್ರೀರಾಮನ ಮಂದಿರ ಕೆಲವು ಮತಾಂಧರ ಆಕ್ರಮಣದಿಂದಾಗಿ ಐದು ನೂರು ವರ್ಷಗಳ ಹಿಂದೆ ಧ್ವಂಸಗೊಂಡಾಗಿನಿಂದಲೂ ರಾಮಮಂದಿರವನ್ನು ಪುನರ್ನಿರ್ಮಾಣ ಮಾಡಲು ಹೋರಾಟ ನಡೆಯುತ್ತಲೇ ಇದ್ದು ಈ ಪ್ರಕ್ರಿಯೆಯಲ್ಲಿ ಲಕ್ಶಾಂತರ ಹಿಂದೂಗಳು ತಮ್ಮ ಪ್ರಾಣವನ್ನೇ ಕಳೆದು ಕೊಂಡಿದ್ದಾರೆ. ಕಳೆದ ಏಳೆಂಟು ದಶಕಗಳಲ್ಲಿ ಈ ಪ್ರಕರಣದ ಕುರಿತಂತೆ ನ್ಯಾಯಾಲಯದಲ್ಲೂ ವಿವಿಧ ಹಿಂದೂಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಫೆಬ್ರವರಿ 5, 2020 ರಂದು ಸರ್ವೋಚ್ಚನ್ಯಾಯಾಲಯದ ತೀರ್ಪು ಪ್ರಭುರಾಮನ ಪರವಾಗಿದ್ದ ಕಾರಣ ಆಗಸ್ಟ್ 5, 2020 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಇದ್ದ ಸ್ಥಳದಲ್ಲಿಯೇ ಮಂದಿರದ ಶಿಲಾನ್ಯಾಸ ಪ್ರಧಾನ ಮಂತ್ರಿಗಳ ಸಾರಥ್ಯದಲ್ಲಿ ನಡೆದು, ಟೆಂಟ್ ನಲ್ಲಿ ಇದ್ದ ರಾಮ ಲಲ್ಲಾನ ಮೂರ್ತಿ ಮರದ ತಾತ್ಕಾಲಿಕ ದೇವಸ್ಥಾನಕ್ಕೆ ಸ್ಥಳಾಂತರಗೊಂಡಿದ್ದಲ್ಲದೇ, ಅದೇ ಜಾಗದಲ್ಲಿ ಭವ್ಯವಾದ ಮಂದಿರವನ್ನು ಕಟ್ಟಲು ತೀರ್ಮಾನಿಸಲಾಗಿದೆ.

ಸುಮಾರು 2.7 ಎಕರೆಯಷ್ಟು ಜಾಗದಲ್ಲಿ, 57,400 ಚದುರ ಅಡಿಯಷ್ಟು ವಿಸ್ತಾರದ ,3 ಅಂತಸ್ಥಿನ 161 ಅಡಿ ಎತ್ತರದ ಭವ್ಯವಾದ ಮಂದಿರವನ್ನು ಕಟ್ಟಲು ನೀಲ ನಕ್ಷೆಯನ್ನು ಸಿದ್ಧ ಪಡಿಸಿ ಈಗಾಗಲೇ ಸಿದ್ಧವಾಗಿರುವ ನೂರಾರು ಕೆತ್ತನೆಯ ಕಂಬಗಳು, 1989ರಲ್ಲೇ ಸಂಗ್ರಹಿಸಿದ ಶ್ರೀರಾಮ ಇಟ್ಟಿಗೆಗಳು ಮತ್ತು ಅಂದು ಸಂಗ್ರಹಿಸಿದ ಹಣದಿಂದ ಕೊಂಡಂತಹ ಅಮೃತಶಿಲೆಯ ನೆಲಹಾಸುಗಳನ್ನು ಬಳಸಿಕೊಂಡು ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ. ಸಕಲ ಹಿಂದೂಗಳ ಶ್ರದ್ಧಾ ಕೇಂದ್ರ ಮತ್ತು ಕಾಶೀ ರಾಮೇಶ್ವರ, ಚಾರ್ ಧಾಮ್ ಗಳಂತೆ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗ ಬಹುದಾದ ಈ ಭವ್ಯ ಮಂದಿರವನ್ನು ತಮ್ಮ ಸ್ವಂತ ಹಣದಿಂದ ನಿರ್ಮಾಣ ಮಾಡಲು ಕೆಲ ಶ್ರೀಮಂತ ವ್ಯಕ್ತಿಗಳು ಮುಂದೆ ಬಂದರೂ ಅದನ್ನು ಸಾರಾಸಗಟಾಗಿ ನಿರಾಕರಿಸಿ, ಪ್ರಭು ಶ್ರೀರಾಮನ ಮಂದಿರ ಪ್ರಪಂಚಾದ್ಯಂತ ನೆಲಸಿರುವ ಭಕ್ತಾದಿಗಳ ತನು ಮನ ಮತ್ತು ಧನಗಳ ಸಹಾಯದಿಂದಲೇ ಆಗುವುದೆಂದು ಸಂಕಲ್ಪ ಮಾಡಿ 2021 ಜನವರಿ15 ರಿಂದ ಫೆಬ್ರವರಿ 05 ರವರೆಗೆ ನಿಧಿ
೨೦ ದಿನಗಳ ಕಾಲ ನಿಧಿ ಸಂಗ್ರಹಣ ಅಭಿಯಾನವನ್ನು ಮಾಡುವ ನಿರ್ಥಾರ ಕೈಗೊಳ್ಳಲಾಗಿದೆ.

ಇಂತಹ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಕಳೆದ ಒಂದು ವಾರಗಳಿಂದಲೂ ತೊಡಗಿಸಿಕೊಂಡು ಮನೆ ಮನೆಗಳಿಗೂ ಶ್ರೀ ರಾಮ ಮಂದಿರದ ಕರಪತ್ರಗಳನ್ನು ನಾವಿರುವ ಪ್ರದೇಶದ ಪ್ರತಿ ಮನೆ ಮನೆಗಳಿಗಊ ತಲುಪಿಸುತ್ತಾ, ಈ ಮಹೋನ್ನತ ಕಾರ್ಯದಲ್ಲಿ ಅಳಿಲು ಸೇವೆಯಂತೆ ಆವರು ಕೊಡುವ ದೇಣಿಗೆಯನ್ನು ಸಂಗ್ರಹಿಸಿ ಅದಕ್ಕೆ ತಕ್ಕಂತೆ ರಶೀದಿಯನ್ನು ಕೊಟ್ಟು ಸಂಗ್ರಹಿಸಿದ ಹಣವನ್ನು ತಪ್ಪದೇ ಮಾರನೆಯ ದಿನ ನಿಗಧಿತ ಬ್ಯಾಂಕಿನಲ್ಲಿ ರಾಮ ಮಂದಿರದ ಅಕೌಂಟಿಗೆ ಹಾಕುವ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಅವಕಾಶ ದೊರೆತಿರುವುದು ನಮ್ಮ ಪೂರ್ವ ಜನ್ಮದ ಸುಕೃತವೇ ಸರಿ. ಇಷ್ಟು ದಿನ ನಮ್ಮ ಪೂರ್ವಜರು ನಿರ್ಮಾಣ ಮಾಡಿದ ದೇವಸ್ಥಾನಗಳನ್ನು ಹೆಮ್ಮೆಯಿಂದ ನೋಡಿ ಬೆಳೆದಿದ್ದೆವು. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ಪ್ರಭು ಶ್ರೀರಾಮ ಮಂದಿರ ನಿರ್ಮಾಣವಾದಾಗ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿ ಈ ಮಂದಿರ ನಮ್ಮ ಕಾಲದಲ್ಲಿ ನಿರ್ಮಾಣವಾಗಿದೆ. ಈ ಪವಿತ್ರ ಕಾರ್ಯದಲ್ಲಿ ನಮ್ಮದೂ ಅಳಿಲು ಸೇವೆಯಿದೆ. ಇದು ನಮ್ಮ ಮಂದಿರ ಎಂದು ಹೆಮ್ಮೆಯಿಂದ ಹೇಳುವ ಸುವರ್ಣಾವಕಾಶ ಲಭಿಸಿರುವುದು ನಿಜಕ್ಕೂ ಅವರ್ಣನೀಯವೇ ಸರಿ.

ನಾಲ್ಕೈದು ಜನರ ಮೂರ್ನಾಲ್ಕು ಸನ್ಣ ಸಣ್ಣ ತಂಡಗಳನ್ನು ಮಾಡಿಕೊಂಡು ಯಾವುದೇ ಗೌಜು ಗದ್ದಲವಿಲ್ಲದೇ ಹಿಂದು, ಮುಸಲ್ಮಾನ ಮತ್ತು ಕ್ರೈಸ್ತ ಎನ್ನುವ ಧರ್ಮ ತಾರತಮ್ಯವಿಲ್ಲದೇ, ಮೇಲು, ಕೀಳು, ಉಚ್ಚ, ನೀಚ ಎನ್ನುವ ಯಾವುದೇ ಜಾತಿಯ ತಾರತಮ್ಯವಿಲ್ಲದೇ ಪ್ರತೀ ಮನೆಮನೆಗಳಿಗೂ ಹೋಗಿ ರಾಮ ಮಂದಿರದ ವಿಷಯವನ್ನು ತಿಳಿಸುವಾಗ ಬಹುತೇಕ ಜನರು, ಹೌದು ನಾವು ಈ ಅಭಿಯಾನದ ಕುರಿತಂತೆ ಈಗಾಗಲೇ ಟಿವಿಯಲ್ಲಿಯೋ, ವೃತ್ತ ಪತ್ರಿಕೆಗಳಲ್ಲಿಯೋ ಇಲ್ಲವೇ ಸಾಮಾಜಿಕ ಜಾಲ ತಾಣಗಳಲ್ಲಿ ಓದಿ ತಿಳಿದಿದ್ದೇವೆ. ಇಂತಹ ಪವಿತ್ರ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ನಮಗೆ ದೊರೆತಿರುವುದು ನಿಜಕ್ಕೂ ನಮ್ಮ ಸೌಭಾಗ್ಯ ಎಂದು ತುಂಬು ಹೃದಯದಿಂದ ಹೇಳಿ, ಮನೆಯೊಳಗೆ ಬರಮಾಡಿಕೊಂಡು ಯಥಾಶಕ್ತಿ ಕಾಣಿಕೆಯನ್ನು ಅರ್ಪಿಸಿ ಧನ್ಯತಾಭಾವದಿಂದ ಕೃತಾರ್ಥರಾಗುವ ಪರಿಯನ್ನು ವರ್ಣಿಸಿವುದಕ್ಕಿಂತಲೂ, ಅಭಿಯಾನದಲ್ಲಿ ಭಾಗಿಗಳಾಗಿ ಅನುಭವಿಸಿದರೇ ಆನಂದವಾಗುತ್ತದೆ.

ನಾವು ಹೋಗುವ ಮನೆಯವರಿಗೆ ನಾವು ಪರಿಚಿತರಲ್ಲ. ನಮಗೆ ಅವರ ಪರಿಚಯವಿರುವುದಿಲ್ಲ. ಆದರೆ ಪ್ರಭು ಶ್ರೀರಾಮನ ಹೆಸರನ್ನು ಹೇಳಿದ ಕೂಡಲೇ, ನಮ್ಮಿಬ್ಬರ ನಡುವೆ ಅದೇನೋ ಒಂದು ಅವಿನಾಭಾವ ಬೆಸುಗೆ ಬೆಳೆದು ಓ ನೀವಾ, ಬನ್ನಿ ಬನ್ನೀ, ಇನ್ನೂ ಯಾಕೆ ನಮ್ಮ ಮನೆಗೆ ಬಂದಿಲ್ಲಾ ಎಂದು ಎದಿರು ನೋಡುತ್ತಿದ್ದೆವು ಎಂದು ಆತ್ಮೀಯವಾಗಿ ಮನೆಯ ಒಳಗೆ ಕರೆದು ದೇಣಿಗೆಯನ್ನು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಅದೆಷ್ಟೋ.

ಪಕ್ಕದ ಮನೆಯಲ್ಲಿ ನಿಧಿ ಸಂಗ್ರಹಣೆ ಮಾಡುತ್ತಿದ್ದದ್ದನ್ನು ಗಮನಿಸಿ ಅದೆಷ್ಟೋ ಮಂದಿ ಕೂಡಲೇ ಮನೆಯೊಳಗೆ ಹೋಗಿ ತಮ್ಮ ಕಾಣಿಕೆಯನ್ನು ಹಿಡಿದುಕೊಂಡು ನಮ್ಮ ಆಗಮನಕ್ಕಾಗಿಯೇ ಕಾಯುವ ಮಂದಿ ಅದೆಷ್ಟೋ?

ಅಯ್ಯೋ ಬಿಸಿಲಿನಲ್ಲಿ ಬಂದಿದ್ದೀರಿ. ಬನ್ನೀ ಕುಳಿತುಕೊಳ್ಳಿ, ನೀರು ಕುಡಿತೀರಾ? ಕಾಫೀ ಟೀಿ ಇಲ್ಲಾ ಮಜ್ಜಿಗೆ ಕೊಡ್ಲಾ ಅಂತ ಕೇಳಿ ಬಲವಂತ ಮಾಡಿ ಕೊಡುವವರು ಅದೆಷ್ಟೋ?

ಇನ್ನೂ ಕೆಲವರು ಮನೆಗಳಲ್ಲಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಕಜ್ಜಾಯ ಇಲ್ಲವೇ ಸಿಹಿತಿಂಡಿಗಳನ್ನು ಕೊಟ್ಟು ಕಳುಹಿಸಿದ್ದಾರೆ. ಅಯ್ಯೋ ಇದೆಲ್ಲಾ ಏನೂ ಬೇಡ ಎಂದರೆ, ಸರಿ ಈ ಬಾಳೇ ಹಣ್ಣಾದರೂ ತೆಗೆದುಕೊಳ್ಳಿ ಇಲ್ಲವೇ, ಈ ಖರ್ಜೂರವನ್ನಾದರೂ ಬಾಯಿಗೆ ಹಾಕಿಕೊಳ್ಳಿ ಎಂದು ಬಲವಂತದಿಂದ ಕೊಟ್ಟು ಕಳುಹಿಸಿದ ಮಂದಿ ಅದೆಷ್ಟೋ?

ಮನೆಯಲ್ಲಿ ದುಡಿಯುವವರು ತಮ್ಮ ಕೈಲಾದಷ್ಟು ನಿಧಿಯನ್ನು ಅರ್ಪಣೆ ಮಾಡಿದರೆ, ಅದರಿಂದ ಸಮಾಧಾನವಾಗದ ಮನೆಯ ಹಿರಿಯರು ತಮ್ಮ ಸಂಗ್ರಹದಿಂದಲೂ ಒಂದಷ್ಟು ಹಣವನ್ನು ಕೊಟ್ಟು ಸಾರ್ಥಕತೆ ಪಡೆದವರೆಷ್ಟೋ?

ಮನೆಗಳಿಗೆ ಹೋಗಿ ರಾಮ ಮಂದಿರದ ಬಗ್ಗೆ ಹೇಳುವುದನ್ನೇ ಬೆರೆಗು ಕಣ್ಣುಗಳಿಂದ ನೋಡುತ್ತಾ ಕೇಳಿ, ಮನೆಯ ಹಿರಿಯರು ನಿಧಿ ಸಂಗ್ರಹದಲ್ಲಿ ಭಾಗಿಗಳಾಗಿದ್ದದ್ದನ್ನು ಗಮನಿಸಿ, ನಾನು ನನ್ನ ಪಾಕೆಟ್ ಮನಿಯಿಂದ ರಾಮ ಮಂದಿರಕ್ಕೆ ಕೊಡ್ತೀನಿ ಎಂದು ರಾಮ ಮಂದಿರದ ನಿರ್ಮಾಣಕ್ಕೆ ನಿಧಿ ಸಮರ್ಪಿಸಿದ ಮಕ್ಕಳೆಷ್ಟೋ?

ನಾವು ಅವರ ಮನೆಗಳಿಗೆ ಹೋದಾಗ ತಿಂಡಿ ತಿನ್ನುತ್ತಲೋ ಇಲ್ಲವೇ ಊಟ ಮಾಡುತ್ತಿದ್ದರೆ, ನಾವು ಅಪರಿಚಿತರು ಬಂದು ಭಾವಿಸದೇ, ಬನ್ನೀ ಅಣ್ಣಾ ಊಟ ಮಾಡೋಣ ಎನ್ನುವಾಗ ಕರುಳು ಚುರುಕ್ ಎನಿಸಿ, ರಾಮಾ ಏನಪ್ಪಾ ನಿನ್ನ ಮಹಿಮೆ ಅಂದುಕೊಂಡ ಪ್ರಸಂಗಳೆಷ್ಟೋ?

ಒಂದು ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳು ಎನ್ನುವಂತೆ, ಇಂತಹ ಪವಿತ್ರ ಕಾರ್ಯದಲ್ಲೂ ಹುಳುಕು ಹುಡುಕುವ ಮಂದಿಗೇನೂ ಕಡಿಮೆ ಇಲ್ಲ. ನಿಂದಕರು ಇರಬೇಕು. ಕೇರಿಯಲ್ಲಿ ಹಂ… ಇದ್ದಾ ಹಾಂಗ ಎಂದು ಪುರಂದರೇ ಹೇಳಿದಂತೆ ಮೊರರಿನಲ್ಲೂ ಕಲ್ಲು ಹುಡುಕುವ ಬೆರಳೆಣಿಕೆಯ ಮಂದಿಗಳ ಅನುಭವವೂ ಆಗಿದೆ.

ಪೂರ್ವಾಗ್ರಹ ಪೀಡಿತರಾಗಿ, ನಾವೇಕೇ ಕೊಡ್ಬೇಕು? ನಿಮ್ಮ ಮೋದಿ ಇದ್ದಾನಲ್ಲಾ ಅವ್ನಿಗೆ ಹೇಳಿ ಅವ್ನತ್ರ ಕಟ್ಸಿ ಎಂದರೆ, ಎಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲಾ ಅಂತಾ ಸಾಯ್ತಾ ಇದ್ದಾರೆ ಅವರಿಗೆ ಮೊದ್ಲು ಊಟ ಹಾಕ್ರೀ.. ಆಮೇಲೆ ಮಂದಿರನಾದ್ರೂ ಕಟ್ಟಿ ಮಸೀದೀನಾದ್ರೂ ಕಟ್ಟಿ ಅಂತ ದಬಾಯಿಸಿ ಕಳಿಸುವವರೂ ಇದ್ದಾರೆ.

ಮನೆಯ ಕರೆಗಂಟೆ ಹೊಡೆದಾಗ ನಮ್ಮನ್ನು ಕಿಟಕಿಯಿಂದಲೇ ನೋಡಿ ಎಷ್ಟು ಹೊತ್ತಾದರೂ ಬಾಗಿಲು ತೆಗೆಯದೇ ಇರುವವರಿಗೇನೂ ಕಡಿಮೆ ಇಲ್ಲಾ. ಅದೇ ರೀತಿ ದುಡ್ಡು ಕೇಳೋದಿಕ್ಕೆ ಮತ್ರಾ ಬರ್ತೀರಿ, ನಮ್ಮ ರಸ್ತೆ ಸರಿ ಇಲ್ಲಾ, ಚರಂಡಿ ಉಕ್ಕಿ ಹರಿಯುತ್ತಿದೆ, ನೀರು ಬರ್ತಿಲ್ಲ ಅಂತ ಗೋಳು ಹೇಳುವವರೂ ಇದ್ದಾರೆ.

ಬಾಗಿಲು ತೆಗೆದು ನಮ್ಮೊಂದಿಗೆ ಮಾತನಾಡುತ್ತಿದ್ದ ಮನೆಯವರನ್ನು ನಮ್ಮ ಮುಂದೆಯೇ ಬೈದು, ನಾವು ದುಡ್ಡು ಕೊಡೋದಿಲ್ಲಾ ಅಂತಾ ಖಡಾ ಖಂಡಿತವಾಗಿ ಹೇಳಿ ರಪ್ ಅಂತಾ ಬಾಗಿಲು ಹಾಕಿ ಕೊಂಡವರೂ ಇದ್ದಾರೆ.

ನೋಟ್ ಬ್ಯಾನ್ ಮಾಡಿ ಎಲ್ಲರೂ ಡಿಜಿಟಲ್ ವ್ಯವಹಾರ ಮಾಡಿ ಎಂದಾಗ ಬೊಬ್ಬಿರಿದು ನೋಟೇ ಇಲ್ಲದೇ ಅದು ಹೇಗೆ ವ್ಯವಹಾರ ಮಾಡೋದಿಕ್ಕೆ ಆಗುತ್ತೇ ಅಂತ ಬೀದಿಗೆ ಬಂದು ಪ್ರತಿಭಟನೆ ಮಾಡಿದವರೇ, ಈಗ ರಾಮ ಮಂದಿರಕ್ಕೆ ಹಣ ಕೊಡಲು ಮನಸ್ಸಿಲ್ಲದೇ, ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತೆ, ಅಯ್ಯೋ ಈಗೆಲ್ಲಾ ನಾವು ಮನೆಲಿ ದುಡ್ಡೇ ಇಟ್ಟು ಕೊಳ್ಳಲ್ಲಾ, Google Pay, PhonePe, Online transfer ಮಾಡ್ತೀವಿ ಅಂತಾ ಹೇಳಿ ಚಿಲ್ರೇ ಇಲ್ಲಾ ಮುಂದೇ ಹೋಗಯ್ಯಾ ಎಂದು ಭಿಕ್ಶೇ ಬೇಡುವವರನ್ನು ಸಾಗ ಹಾಕಿದ ಹಾಗೆ ಸಾಗಹಾಕುವವರೂ ಇದ್ದಾರೆ.

ಇಂತಹವರಿಗೆಲ್ಲಾ ತಾಳ್ಮೆಯಿಂದಲೇ, ಸಾರ್ ನಾವು ವಂತಿಕೆ ವಸೂಲು ಮಾಡಲು ಬಂದಿಲ್ಲ. ರಾಮಮಂದಿರ ನಿರ್ಮಾಣದ ಕುರಿತಾದ್ ವಿಷಯವನ್ನು ಮನೆ ಮನೆಗೂ ತಿಳಿಸಲು ಅಭಿಯಾನದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿರುವ ಸ್ವಯಂಸೇವಕರು ನಾವು. ನೀವು ಸ್ವಯಂಪ್ರೇರಿತರಾಗಿ ಸಂತೋಷದಿಂದ ಕೊಟ್ಟ ದೇಣಿಗೆಯನ್ನು ಮಾತ್ರಾ ಸ್ವೀಕರಿಸಿ ಅದನ್ನು ರಾಮ ಮಂದಿರ ನಿರ್ಮಾಣದ ನಿಧಿಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದೇವೆ ಎಂದು ಹೇಳಿ ಮುಂದಿನ ಮನೆಯತ್ತ ಹೋಗುತ್ತೇವೆ.

ಮನೆಯ ಗಂಡಸರು ಗದರಿಸಿ ಕಳುಹಿಸಿದಾಗ, ಸಾಸಿವೆ ಡಬ್ಬಿಯಲ್ಲಿ ಜತನದಿಂದ ಯಾವುದೋ ಕೆಲಸಕ್ಕೆಂದು ಎತ್ತಿಟ್ಟಿದ್ದ ದುಡ್ಡನ್ನು ಸೆರಿಗಿನಲ್ಲಿ ಮುಚ್ಚಿಟ್ಟುಕೊಂಡು ತಂದು ರಾಮ ಮಂದಿರಕ್ಕೆ ನಮ್ಮದೂ ಪಾಲಿರಲಿ ಎಂದು ತಂದು ಕೊಡುವ ಶ್ರದ್ಧೇಯ ತಾಯಂದಿರು,

ಆ ಇಳೀ ವಯಸ್ಸಿನ ವೃದ್ದಾಪ್ಯದಲ್ಲೂ ತಮ್ಮ ಪಿಂಚಣಿ ಹಣದಲ್ಲಿ ಸ್ವಲ್ಪ ಹಣವನ್ನು ರಾಮ ಮಂದಿರಕ್ಕೆ ದೇಣಿಯಾಗಿ ನೀಡಿ, ತುಂಬಾ ಒಳ್ಲೇ ಕೆಲ್ಸ ಮಾಡ್ತಾ ಇದ್ದೀರಪ್ಪಾ, ಆ ರಾಮ ನಿಮಗೆ ಒಳ್ಳೆಯದನ್ನೂ ಮಾಡಲಿ ಎಂದು ತುಂಬು ಹೃದಯದಿಂದ ನಮ್ಮನ್ನು ಹಾರೈಸುವ ಹಿರಿಯರು,

ಅಬ್ಬಾ ನಮ್ಮ ಕಾಲದಲ್ಲೇ ಶ್ರೀರಾಮನ ದೇವಾಲಯ ಕಟ್ಟುತ್ತಿರುವುದು ನಮ್ಮ ಸೌಭಾಗ್ಯ. ನಾವು ನೂತನ ದೇವಸ್ಥಾನ ನೋಡಿದ ಮೇಲೆಯೇ ನಮನ್ನು ಕರೆಸಿಕೊಳ್ಳಲಪ್ಪಾ ಎನ್ನುವ ತಾಯಂದಿರು,

ರಾಮ ಮಂದಿರಕ್ಕೆ ಹಣ ಎಲ್ಲಿ ಕೊಡ್ಬೇಕು ಯಾರಿಗೆ ಕೊಡ್ಬೇಕು ಅನ್ನೊದು ಗೊತ್ತಿರಲಿಲ್ಲ ಈಗಲೇ ಕೊಡ್ತೀವಿ ಎಂದು ಕೂಡಲೇ Online Transfer ಮಾಡಿ Transaction details ನಮಗೆ ತೋರಿಸುವುದಲ್ಲದೇ ಅವರ ಅಪಾರ್ಟ್ಮೆಂಟ್, ಅವರ ಅಕ್ಕ ಪಕ್ಕದ ಮನೆ ಮತ್ತು ಅವರ ರಸ್ತೆ ಪೂರ್ತಿ ನಮ್ಮ ಜೊತೆ ಸಂತೋಷದಿಂದ ಆಭಿಯಾನದಲ್ಲಿ ಪಾಲ್ಗೊಳ್ಳುವರು,

ಅಭಿಯಾನದಲ್ಲಿ ಅಚಾನಕ್ಕಾಗಿ ಪರಿಚಯವಾಗಿ ಕಡೆಗೆ ಕಾರ್ಯಕರ್ತರಾಗಿ ನಮ್ಮೊಂದಿಗೆ ಜೋಡಿಸಿಕೊಂಡವರೊಂದಿಗೆ ನಮ್ಮೀ ಈ ಅಭಿಯಾನವನ್ನು ಸಂತೋಷದಿಂದ ಮಂದುವರೆಸಿಕೊಂಡು ಹೋಗುತ್ತಿದ್ದೇವೆ.

ನಮ್ಮಂತಹ ಕಾರ್ಯಕರ್ತರು ನಿಮ್ಮ ಮನೆಗೂ ಬರಬಹುದು. ಅವರಿಗೆ ಇಷ್ಟೇ ಅಷ್ಟೇ ಕೊಡಬೇಕು ಅಂತೇನೂ ಇಲ್ಲಾ. ನಿಮ್ಮಿಷ್ಟ ಬಂದಷ್ಟು ಕೊಡಿ. ಕಡೇ ಪಕ್ಷ ಏನನ್ನೂ ಕೊಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಅವರ ಜೊತೆ ಒಂದು ಜೈ ಶ್ರೀರಾಮ್ ಎಂದು ಜಯಕಾರ ಹಾಕಿ ಸಾಕು ನೀವು ಸಹಾ ಅಭಿಯಾನಲ್ಲಿ ಪಾಲ್ಗೊಂಡಂತಾಗುತ್ತದೆ. ಅದಕ್ಕೇ ಏನೋ ನಮ್ಮಮ್ಮ ಚಿಕ್ಕವಯಸ್ಸಿನಲ್ಲಿ ಹೇಳಿ ಕೊಟ್ಟಿದ್ರೂ, ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು.

ರಾಮಸೇತುವಿನಲ್ಲಿ ವಾನರರಾಗುವ ಭಾಗ್ಯ ನಮಗೆ ಸಿಗಲಿಲ್ಲ …

ಸೀತಾನ್ವೇಷಣೆಯಲ್ಲಿ ರಾಮನಿಗೆ ಮಾಹಿತಿ ನೀಡಿದ ಜಟಾಯು ನಾವಾಗಲಿಲ್ಲ …

ಕನಿಷ್ಠ ಪಕ್ಷ ರಾಮ ಮಂದಿರಕ್ಕಾಗಿ ನಡೆದ ಕರಸೇವೆಯಲ್ಲಿ ಭಾಗವಹಿಸುವ ಭಾಗ್ಯವೂ ನಮ್ಮಲ್ಲಿ ಬಹುತೇಕರಿಗೆ ಸಿಗಲಿಲ್ಲ …

ಈಗ ನಿರ್ಮಾಣವಾಗುತ್ತಿರುವ ರಾಮನ ಭವ್ಯ ಮಂದಿರಕ್ಕಾಗಿ ಶ್ರಮಿಸಬಹುದಾದ ಭಾಗ್ಯ ಸಿಕ್ಕಿರುವುದೇ ನಮ್ಮ ಪುಣ್ಯ.

ಹಾಗಾಗಿ ಈ ಐತಿಹಾಸಿಕ ಅಭಿಯಾನದಲ್ಲಿ ಎರಡು ವಾರ ಕಟಿ ಬದ್ಧರಾಗಿ ಪ್ರಭು ಶ್ರೀರಾಮನಿಗಾಗಿ ತನು, ಮನ, ಧನವನ್ನು ಸಮರ್ಪಿಸೋಣ.

ರಾಮ ಸೇವೆದಿಂದ, ರಾಷ್ಟ್ರ ಮಂದಿರ …

ರಾಷ್ಟ್ರ ಮಂದಿರದಿಂದ, ರಾಮರಾಜ್ಯ ಸ್ಥಾಪಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಭರವಸೆ

ಅದು ಮಾಗಿಯ ಕಾಲ. ವಾತಾವರಣವೆಲ್ಲಾ ಬಹಳ ತಣ್ಣಗಿದ್ದು, ಕೈ ಕಾಲು ಹೆಪ್ಪುಗಟ್ಟುವಷ್ಟರ ಮಟ್ಟಿಗಿನ ಚಳಿ ಇತ್ತು. ಆ ಊರಿನ ಸಾಹುಕಾರರೊಬ್ಬರು ಇನ್ನೇನೂ ತನ್ನ ಭವ್ಯವಾದ ಬಂಗಲೆಯನ್ನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಚಳಿಯಿಂದ ತಮ್ಮ ಮನೆಯ ಹೊರಗೆ ಅಂತಹ ಮೈಕೊರೆಯುವ ಛಳಿಯಲ್ಲೂ ಮೈಮೇಲೆ ಸರಿಯಾದ ಬಟ್ಟೆಗಳಿಲ್ಲದ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಗಮನಿಸಿದರು. ಕೂಡಲೇ ತನ್ನ ಕಾರಿನಿಂದ ಇಳಿದ ಅವರು ಏನಪ್ಪಾ ನಿನಗೆ ಛಳಿಯಾಗುತ್ತಿಲ್ಲವೇ? ಇದೇಕೇ ಹೀಗೆ ಹೊದಿಕೆ ಇಲ್ಲದೇ ಇರುವೇ? ಎಂದು ಕೇಳಿದರು.

ಸ್ವಾಮೀ ನಾನು ಬಡವ ಹಾಗಾಗಿ ನನ್ನ ಬಳಿ ಛಳಿಯಿಂದ ರಕ್ಷಿಸಿಕೊಳ್ಳಲು ಸರಿಯಾದ ಹೊದಿಕೆ ಇಲ್ಲ. ಆದರೆ ನನ್ನ ದೇಹ ಇಂತಹ ಛಳಿ ಮತ್ತು ಗಾಳಿಗೆ ಒಗ್ಗಿಹೋಗಿದೆ ಎಂದು ಹೇಳಿದರು ಆ ವಯೋವೃದ್ಧರು. ವೃದ್ಧರ ಮಾತುಗಳಿಂದ ಮರುಗಿದ ಸಾಹುಕಾರರು, ಇಲ್ಲೇ ಇರೀ, ನಾನು ನನ್ನ ಮನೆಯೊಳಗಿನಿಂದ ನಿಮಗೊಂದು ಹೊದ್ದಿಕೆಯನ್ನು ತಂದು ಕೊಡುತ್ತೇನೆ ಎಂದು ಹೇಳಿ ಮನೆಯೊಳಗೆ ಹೋದರು.

ಸಾಹುಕಾರರ ಈ ಮಾತುಗಳಿಂದ ಸಂತೃಷ್ಟರಾದ ಆ ವೃದ್ಧರು ಖಂಡಿತವಾಗಿಯೂ ನಿಮಗಾಗಿ ನಾನು ಇಲ್ಲಿಯೇ ಕಾಯುತ್ತಿರುತ್ತೇನೆ ಎಂದು ಪ್ರತ್ಯುತ್ತರಿಸಿದರು. ವಯೋವೃದ್ಧರಿಗೆ ಹೊದಿಕೆಯನ್ನು ತಂದು ಕೊಡಲು ಮನೆಯೊಳಗೆ ಪ್ರವೇಶಿಸಿದ ಸಾಹುಕಾರರಿಗೆ ಯಾವುದೋ ಕರೆ ಬಂದು ಅದರಲ್ಲಿಯೇ ಮಗ್ನರಾಗಿ ಹೋಗಿ ಆ ವೃದ್ಧರಿಗೆ ಹೊದಿಕೆ ಕೊಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದನ್ನು ಸಂಪೂರ್ಣವಾಗಿ ಮರೆತೇ ಬಿಟ್ಟರು.

ಮಾರನೇ ದಿನ ಬೆಳಿಗ್ಗೆ ಎದ್ದ ಕೂಡಲೇ ಆ ಸಾಹುಕಾರರಿಗೆ ತಾವು ವೃದ್ಧರಿಗೆ ಹೊದಿಕೆ ತಂದು ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದು ನೆನಪಾಗಿ ಕೂಡಲೇ ಆ ವೃದ್ಧರನ್ನು ಹುಡುಕಿಕೊಂಡು ಮನೆಯ ಹೊರಗೆ ಬಂದು ನೋಡಿದರೇ, ಆ ವಯೋವೃದ್ಧರು, ವಿಪರೀತವಾದ ಛಳಿಯಿಂದಾಗಿ ಅವರ ಮೈ ಎಲ್ಲಾ ಹೆಪ್ಪುಗಟ್ಟಿ ಮೃತಪಟ್ಟಿರುತ್ತಾರೆ. ಛೇ ನನ್ನಿಂದ ಹೀಗಾಗಿ ಹೋಯಿತಲ್ಲಾ ಎಂದು ಸಾಹುಕಾರರು ಪರಿತಪಿಸುತ್ತಿರುವಾಗಲೇ ಆ ವೃದ್ಧರ ಕೈಯ್ಯಲ್ಲೊಂದು ಚೀಟಿ ಕಾಣಿಸುತ್ತದೆ.

ಕುತೂಹಲದಿಂದ ಆ ಚೀಟಿಯನ್ನು ತೆಗೆದುಕೊಂಡು ಓದಲಾರಂಭಿಸಿದರೆ, ಅದರಲ್ಲಿ ವೃದ್ಧರು ಹೀಗೆ ಬರೆದಿರುತ್ತಾರೆ. ನನ್ನ ಬಳಿ ಯಾವುದೇ ಬೆಚ್ಚಗಿನ ಬಟ್ಟೆಗಳನ್ನು ಹೊಂದಿರದಿದ್ದಾಗ, ಶೀತದ ವಿರುದ್ಧ ಹೋರಾಡುವ ಶಕ್ತಿ ನನ್ನ ಬಳಿ ಇತ್ತು ಏಕೆಂದರೆ ಅದಕ್ಕೆ ನನ್ನ ಮೈ ಒಗ್ಗಿ ಹೋಗಿತ್ತು ಮತ್ತು ನನ್ನ ಮನಸ್ಸು ಛಳಿಯನ್ನು ಎದುರಿಸುವ ಸ್ಥೈರ್ಯವನ್ನು ಹೊಂದಿತ್ತು. ಆದರೆ ನೀವು ನನಗೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದಂತೆಯೇ ಎಂತಹ ಛಳಿಯನ್ನು ಬೇಕಾದರೂ ಎದುರಿಸಬಲ್ಲೆ ಎಂದಿದ್ದ ನನ್ನ ಮನಸ್ಥೈರ್ಯ ಇದ್ದಕ್ಕಿದ್ದಂತೆಯೇ ಕುಸಿದು ಹೋಗಿ, ಕೊರೆಯುವ ಛಳಿಯನ್ನು ಎದುರಿಸುವ ಪ್ರತಿರೋಧದ ಶಕ್ತಿಯನ್ನು ನನ್ನ ಮೈ ಕಳೆದುಕೊಂಡು ಬೆಚ್ಚಗಿನ ಹೊದಿಕೆಗಾಗಿ ಹಾತೊರೆಯತೊಡಗಿತು. ಎಷ್ಟು ಹೊತ್ತಾದರೂ ನಿಮ್ಮಿಂದ ಹೊದಿಗೆ ಬಾರದಿದ್ದ ಕಾರಣ, ನನ್ನ ದೇಹದ ಒಂದೋಂದೇ ನರನಾಡಿಗಳು ಹೆಪ್ಪುಗಟ್ಟುತ್ತಿದೆ.

ಈ ಹೃದಯಸ್ಪರ್ಶಿ ಘಟನೆಯಿಂದ ನಾವುಗಳು ಕಲಿಯಬಹುದಾದ ಸಂಗತಿಯೆಂದರೆ, ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾದಲ್ಲಿ ಮಾತ್ರವೇ ಮತ್ತೊಬ್ಬರಿಗೆ ಭರವಸೆ ನೀಡಬೇಕು ಮತ್ತು ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳಲು ನಮ್ಮಿಂದಾಗದೇ ಹೋದಲ್ಲಿ ಅಂತಹ ಭರವಸೆಗಳನ್ನು ನೀಡದೇ ಇರುವುದು ಒಳಿತು. ನಾವು ಕೊಟ್ಟ ಭಾಷೆ ತಪ್ಪಿದ್ದಕ್ಕಾಗಿ ನಮಗೆ ಅದರಿಂದ ಯಾವುದೇ ಸಮಸ್ಯೆಗಳು ಆಗದೇ ಇರವಹುದು. ಆದರೆ ನಮ್ಮ ಭರವಸೆಯನ್ನೇ ನಂಬಿಕೊಂಡವರ ಮೇಲೆ ಖಂಡಿತವಾಗಿಯೂ ಅತ್ಯಂತ ಘನಘೋರವಾದ ಪ್ರತಿಕೂಲ ಪರಿಣಾಮ ಬೀರಿಯೇ ತೀರುತ್ತದೆ.

ಏನಂತೀರೀ?

ಇಂತೀ ನಿಮ್ಮನೇ, ಉಮಾಸುತ

ಆತ್ಮೀಯರಾದ ಶ್ರೀ ಪ್ರೇಮ್ ಅವರು ಕಳುಹಿಸಿಕೊಟ್ಟಿದ್ದ ಆಂಗ್ಲ ಸಂದೇಶದ ಭಾವಾನುವಾದ