ಬದಾಮಿ ಬನಶಂಕರಿಯ ಬನದ ಹುಣ್ಣಿಮೆ

ಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ ತಾಯಿ ಬನಶಂಕರಿಯಾಗಿ ನೆಲೆಸಿರುವ ಶ್ರೀ ಕ್ಷೇತ್ರವೇ ಬದಾಮಿ. ಈ ಮಹಾತಾಯಿಯನ್ನು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಹೀಗೆ ಹತ್ತಾರು ಹೆಸರುಗಳಿಂದ ಭಕ್ತರು ಪೂಜಿಸುತ್ತಾರೆ. ನವದುರ್ಗೆಯರಲ್ಲಿ 6ನೇ ಅವತಾರವೇ ಬನಶಂಕರಿ ಎಂದೂ ಹೇಳಲಾಗುತ್ತದೆ.

ಈ ಪ್ರದೇಶದಲ್ಲಿ ಸರಸ್ವತಿ ಹೊಳೆ ಹರಿಯುವ ಕಾರಣ ಸುಂದರವಾದ ಮತ್ತು ದಟ್ಟವಾದ ಅರಣ್ಯ ಪ್ರದೇಶಗಳಿಂದ ಆವರಸಿದ್ದು, ಎಲ್ಲೆಲ್ಲೂ ತೆಂಗು, ಬಾಳೆ ಮತ್ತು ವಿಳ್ಳೇದೆಲೆ ಹಂಬುಗಳ ತೋಟಗಳ ಮಧ್ಯೆ ಇರುವ ಈ ವನಶಂಕರಿ, ಕಾಡುಗಳ ದೇವತೆ, ಅರ್ಥಾತ್ ಬನಶಂಕರಿ ದೇವಿ ಈ ಪ್ರದೇಶದಲ್ಲಿ ನೆಲೆಗೊಳ್ಳುವುದರದ ಹಿಂದೆ ಒಂದು ಪೌರಾಣಿಕ ಕಥೆಯಿದೆ.

ಬಹಳ ಹಿಂದೆ ದುರ್ಗಮಾಸುರ ಎಂಬ ರಕ್ಕಸನೊಬ್ಬನು ನಾಲ್ಕೂ ವೇದಗಳನ್ನು ವಶಪಡಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಹಿಮಾಲಯಕ್ಕೆ ಹೋಗಿ ನಿರಾಹಾರನಾಗಿ ಕೇವಲ  ಗಾಳಿಯನ್ನು ಸೇವಿಸುತ್ತ ಬ್ರಹ್ಮನ ಕುರಿತು ಘನ ಘೋರವಾದ  ತಪಸ್ಸನ್ನು ಮಾಡಿದ.  ಅವನ ತಪ್ಪಸ್ಸಿಗೆ ಮೆಚ್ಚಿದ  ಬ್ರಹ್ಮ ದೇವರು ಪ್ರತ್ಯಕ್ಷನಾದಾಗ, ವೇದಗಳನ್ನು ವಶಪಡಿಸಿಕೊಳ್ಳುವ ವರವನ್ನು ಕೇಳಿದಾಗ, ಬ್ರಹ್ಮನೂ ಕೂಡಾ ಯಾವುದೇ ಮರು ಮಾತಿಲ್ಲದೇ, ತಥಾಸ್ತು ಎಂದ ಕೂಡಲೇ, ಭೂಲೋಕದಲ್ಲಿ ಅಲ್ಲೋಲ ಕಲ್ಲೋಲ ಏರ್ಪಟ್ಟಿತು.  ಪ್ರತಿನಿತ್ಯ  ನಡೆಯುತ್ತಿದ್ದ ದೇವತಾ ಕಾರ್ಯಗಳೆಲ್ಲವೂ  ನಿಂತು ಹೋಗಿ, ಎಲ್ಲಾ ಋಷಿ ಮುನಿಗಳು, ಸಾಧು ಸಂತರರಿಗೆ ತಾವು ಕಲಿತಿದ್ದ  ವೇದ ಮಂತ್ರಗಳೆಲ್ಲವೂ ಮರೆತು ಹೋಗಿ  ಯಜ್ಞ ಯಾಗಾದಿಗಳು ಅಕ್ಷರಶಃ ನಿಂತು ಹೋದವು. ಹೀಗೆ   ಯಜ್ಞ ಯಾಗಾದಿಗಳು ನಿಂತ ಕಾರಣ,  ದೇವತೆಗಳಿಗೂ ಸಿಗುತ್ತಿದ್ದ ಹವಿಸ್ಸು ನಿಂತು ಹೋಗಿ ದೇವತೆಗಳ ಶಕ್ತಿಯೂ ಕ್ರಮೇಣ ಕುಂದತೊಡಗಿದ ಪರಿಣಾಮ  ಭೂಲೋಕದಲ್ಲಿ ಅರಾಜಕತೆ ಉಂಟಾಗಿದ್ದಲ್ಲದೇ,  ಮಳೆ ಬೆಳೆ ಇಲ್ಲದೇ  ಕ್ಷಾಮ ಉಂಟಾಗಿ ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ಬಂದೊದಗಿತು.

ಭೂಲೋಕದ ಮನುಷ್ಯರು, ಪಶು ಪಕ್ಷಿಗಳು ಹಸಿವು ಮತ್ತು ನೀರಿನಿಂದ ತತ್ತರಿಸಿ ಪ್ರಾಣ ಬಿಡತೊಡಗಿದರೆ, ಆ ರಾಕ್ಷಸನ ವಿರುದ್ಧ ಹೋರಾಡಲೂ ಶಕ್ತಿ ಇಲ್ಲದ  ದೇವಾನು ದೇವತೆಗಳೂ ದಿಕ್ಕೇ ತೋಚದೇ ಸಿಕ್ಕ ಸಿಕ್ಕ ಕಡೆ ಅಡಗಿ ಕುಳಿತುಕೊಂಡರು. ಇವೆಲ್ಲವನ್ನೂ ಗಮನಿಸಿದ ಋಷಿ ಮುನಿಗಳು ಒಂದಾಗಿ ತಮ್ಮೆಲ್ಲಾ  ಅಳಿದುಳಿದ ಶಕ್ತಿಗಲನ್ನು ಕ್ರೋಢಿಕರಿಸಿ ಹಿಮಾಲಯಕ್ಕೆ ಹೋಗಿ ಸಮಭಾವ ಮತ್ತು ಸಮಚಿತ್ತದಿಂದ ಲೋಕಕಲ್ಯಾಣಕ್ಕಾಗಿ   ಶಕ್ತಿ ದೇವಿಯನ್ನು ಕುರಿತು ನಿರಾಹಾರಿಗಳಾಗಿ  ಕಠಿಣ ತಪಸ್ಸನ್ನು  ಆಚರಿಸಿದರು.  ಅವರೆಲ್ಲರ ತಪ್ಪಸ್ಸಿಗೆ ಮೆಚ್ಚಿ ಪಾರ್ವತಿಯು  ಪ್ರತ್ಯಕ್ಷಳಾದಾಗ, ಭೂಲೋಕದಲ್ಲಿ  ಹಸಿವಿನಿಂದ ಹಲುಬಿ ನರಳುತ್ತಿದ್ದ ನರರು,  ಪ್ರಾಣಿ, ಪಶು ಪಕ್ಷಿಗಳ ಯಾತನೆಯನ್ನು ವಿವರಿಸುತ್ತಿದ್ದಾಗ,  ತಾಯಿ ಹೃದಯದ ಪಾರ್ವತೀ ದೇವಿಯ ಕರುಳು ಚುರುಕ್ ಎಂದಿದ್ದಲ್ಲದೇ, ಅವಳಿಗೇ ಅರಿವಿಲ್ಲದಂತೆ  ಆಕೆಯ ಕಣ್ಣಿನಿಂದ ಅಗಾಧವಾಗಿ  ಕಣ್ಣಿರು ಹರಿದು, ಅದೇ  ಭೋರ್ಗೆರೆವ ಮಳೆ ರೂಪದಲ್ಲಿ ಭೂಲೋಕದಲ್ಲಿ ಧಾರಾಕಾರವಾಗಿ ಸುರಿದ ಪರಿಣಾಮ ಎಲ್ಲಾ ಕೆರೆ ಕಟ್ಟೆಗಳು ನದಿಗಳು ಮತ್ತೆ  ಮೈದುಂಬಿ ಹರಿಯತೊಡಗಿದವು. ಪಾರ್ವತಿ ದೇವಿಯು ಪ್ರಕೃತಿಯ ರೂಪ ಧರಿಸಿ ಎಲ್ಲ ರೀತಿಯ ಸಸ್ಯ ಹಾಗೂ ಹಣ್ಣುಗಳನ್ನು ಚಿಗುರಿಸಿ ಎಲ್ಲರಿಗೂ ಆಹಾರ ನೀಡಿದಳು. ಹೀಗೆ ಪ್ರತಿಯೊಬ್ಬರ ಹಸಿವನ್ನು ನೀಗಿಸಿಅಲು  ಶಾಕಾಹಾರದ ಆಹಾರವನ್ನು ನೀಡಿದ್ದ ಕಾರಣ ಆ  ದೇವಿಗೆ ಶಾಕಾಂಬರಿ  ಎಂಬ ಹೆಸರು ಬಂದಿತು ಎನ್ನುತ್ತದೆ.

ಮತ್ತೊಂದು ಪುರಾಣದ ಪ್ರಕಾರ, ಬಹಳ ಹಿಂದೆ ಈ ಪ್ರದೇಶವು ಭಯಂಕರ ಕ್ಷಾಮದಿಂದ ತತ್ತರಿಸಿ, ಪಶು ಪಕ್ಷಿ ಪ್ರಜೆಗಳಾದಿಗಳೆಲ್ಲರೂ ನೀರಿಲ್ಲದೇ ಪರಿತಪಿಸುತ್ತಿದ್ದಾಗ, ದೇವಾನುದೇವತೆಗಳೆಲ್ಲರೂ ಸೇರಿ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ್ನು ಕಂಡು ಈ ಸಮಸ್ಯೆಯಿಂದ ಪಾರು ಮಾಡಲು ಎಂದು ಪ್ರಾರ್ಥಿಸಿದರಂತೆ. ಅದಕ್ಕೆ ಆ ತ್ರಿಮೂರ್ತಿಗಳು ಈ ಸಮಸ್ಯೆಗೆ ಬನಶಂಕರಿದೇವಿ ಮಾತ್ರಾ ಪರಿಹಾರವನ್ನು ನೀಡಬಲ್ಲಳು ಎಂದು ಹೇಳಿ ಎಲ್ಲರೂ ಸೇರಿ ತಿಲಕಾರಣ್ಯ ಪ್ರದೇಶಕ್ಕೆ ಬಂದು ತಾಯಿ ಬನಶಂಕರಿಯನ್ನು ಕುರಿತು ತಾಯಿ, ಈ ಪ್ರದೇಶದಲ್ಲಿ ಮಳೆ ಬೆಳೆಯಿಲ್ಲದೇ, ಯಜ್ಞಯಾಗಾದಿಗಳು ಇಲ್ಲದೇ, ಬದುಕಲು ಬಹಳ ಕಷ್ಟವಾಗಿದೆ. ದಯವಿಟ್ಟು ಈ ಸಮಸ್ಯೆಯಿಂದ ಪಾರು ಮಾಡು ಎಂದು ಪರಿ ಪರಿಯಾಗಿ ಪ್ರಾರ್ಥಿಸುತ್ತಾರೆ. ಅವರೆಲ್ಲರ ಪ್ರಾರ್ಥನೆಯಿಂದ ಪ್ರಸನ್ನಳಾದ ಬನಶಂಕರಿ ದೇವಿ ಪ್ರತ್ಯಕ್ಷಳಾಗಿ ಜನರ ನೀರಿನ ದಾಹವನ್ನು ತೀರಿಸಿದ್ದಲ್ಲದೇ, ತನ್ನ ತನುವಿನ ಶಾಖದಿಂದ ಕಾಯಿಪಲ್ಲೆಗಳನ್ನು ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ. ಹಾಗಾಗಿ ಈ ದೇವಿಗೆ ಶಾಕಾಂಬರಿ ಎಂದೂ ಕರೆಯಲಾಗುತ್ತದೆ ಎನ್ನುತ್ತದೆ.

ಮುಂದೆಂದೂ ಈ ಪ್ರದೇಶ ನೀರಿಲ್ಲದೇ ಕ್ಷಾಮಕ್ಕೆ ಈಡಾಗಬಾರದೆಂದು ಈ ಪ್ರದೇಶದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಮುಂತಾದ ಅನೇಕ ತೀರ್ಥಕೊಳಗಳನ್ನು ಸೃಷ್ಟಿ ಮಾಡಿದ ಕಾರಣ ಈ ಪ್ರದೇಶ ಸದಾ ನಂದನವನವಾಗಿ ನಿತ್ಯಹದ್ವರ್ಣಗಳಿಂದ ಕಂಗೊಳಿಸುವಂತಾಗಿದೆ.

ನಂತರ  ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿದ್ದ ಈ ದೇವಸ್ಥಾನವನ್ನು ಮುಂದೆ 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಜೀರ್ಣೋದ್ಧಾರ ಮಾಡಿರುವ ಈ ದೇವಾಲಯದಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಬನಶಂಕರಿಯ ವಿಗ್ರಹವಿದ್ದು ಪ್ರತೀ ದಿನವೂ ನೂರಾರು ಭಕ್ತಾದಿಗಳು ಆಕೆಯ ದರ್ಶನ ಪಡೆದು ಪುನೀತರಾಗುತ್ತಾರೆ.

ಪ್ರತಿ ವರ್ಷ ಪುಷ್ಯ ಮಾಸದ ಹುಣ್ಣಿಮೆಯಂದು (ಜನವರಿ ತಿಂಗಳಿನಲ್ಲಿ) ಅಂದರೆ ಬನದ ಹುಣ್ಣಿಮೆಯಂದು  ಇಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ  ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದ್ದು, ಕೇವಲ ಕರ್ನಾಟಕ ಮಾತ್ರವಲ್ಲ್ದೇ ನೆರೆಯ ಮಹಾರಾಷ್ಟ್ರ ಮತ್ತು ದೇಶಾದ್ಯಂತ ಹರಿದು ಹಂಚಿಹೋಗಿರುವ ಆಕೆಯ ಭಕ್ತರು ಈ ಜಾತ್ರೆಗೆ ಬಂದು ತಾಯಿಯ ದರ್ಶನ ಪಡೆದು ಪ್ರಸನ್ನರಾಗುತ್ತಾರೆ.

ಈ ಬನಶಂಕರಿ ಜಾತ್ರೆಯ ಅರಂಭವಾಗುವ ಹತ್ತು ದಿನಗಳ ಮುಂಚಿತವಾಗಿಯೇ ಇಲ್ಲಿ ಸಂಭ್ರಮ ಸಡಗರಗಳು ಪ್ರಾರಂಭವಾಗುತ್ತದೆ. ಈ ಜಾತ್ರೆಯ ಸಮಯದಲ್ಲಿ ದೇವಾಲಯ ಮತ್ತು ಇಡೀ ಬದಾಮಿ ಪಟ್ಟಣವನ್ನು ಬಗೆ ಬಗೆಯ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸುವುದು ಇಲ್ಲಿನ ವಿಶೇಷವಾಗಿದೆ. ಈ ರಥೋತ್ಸವದ ಹಿಂದಿನ ದಿನ ಪಲ್ಯದ ಹಬ್ಬ (ಪಲ್ಲೇದ ಹಬ್ಬ) ಅರ್ಥಾತ್ ತರಕಾರಿ ಉತ್ಸವ ಎಂದು ಆಚರಿಸುತ್ತಾರೆ. ಅಂದು ತಾಯಿ ಬನಶಂಕರಿಗೆ 108 ಬಗೆಯ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ಬಾದಾಮಿಯ ಬನಶಂಕರಿಯ ರಥ ಅರ್ಥಾತ್ ತೇರನ್ನು ಎಳೆಯುವ ಮೂಲಕ  ಆರಂಭವಾಗುವ ಅದ್ದೂರಿಯ ಜಾತ್ರೆಯ ಸಂಭ್ರಮ ಸಡಗರಗಳು ಸುಮಾರು ಮೂರು ವಾರಗಳ ಕಾಲ  ಯಾವುದೇ ಧರ್ಮ, ಜಾತಿಗಳ ಹಂಗಿಲ್ಲದೇ ತಂಡೋಪ ತಂಡದಲ್ಲಿ ಬಂದು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.  ಜಾತ್ರೆ ನಡೆಯುವ  ಸಂದರ್ಭದಲ್ಲಿ ಭಕ್ತಾದಿಗಳ ಮನರಂಜಿಸಲು ನಾನಾ ವಿಧಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾದ ಸುಮಾರು 5 ಅಡಿ ಎತ್ತರವಿರುವ, ಕಪ್ಪು ಶಿಲೆಯ ದೇವಿಗೆ ಅಷ್ಟ ಭುಜ, ಕೈಗಳಿವೆ. ಬಲಗೈ ನಲ್ಲಿ ಖಡ್ಗ, ಗಂಟೆ, ತ್ರಿಶೂಲ ಹಾಗು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಟೇ ಇವೆ. ಈ ದೇವಿ ತ್ರಿನೇತ್ರೆ. ಬನಶಂಕರಿ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮೀ ಹಾಗು ಮಹಾ ಸರಸ್ವತಿ ಎಂತಲೂ ಕರೆಯುತ್ತಾರೆ. ತಾಯಿಯ ಬಲಗೈಯು ಸುಜ್ಞಾನದ ಸಂಕೇತ ಎಡಗೈಯು ಶೌರ್ಯದ ಸಂಕೇತವಾಗಿದೆ. ದೇವಸ್ಥಾನದ ಶಿಖರವು ಚೌಕ ಕೋನಾಕಾರವಾಗಿ ಹಂತ ಹಂತವಾಗಿ ಮೇಲೆರುತ್ತಾ ಹೋಗಿದೆ. ಬೇರೆಲ್ಲಾ ದೇವಾಲಯದ ಗೋಪುರದಂತೆ  ಇಲ್ಲಿ ಯಾವುದೇ ದೇವರುಗಳ ವಿಗ್ರಹಗಳು ಇಲ್ಲದಿರುವುದು ಇಲ್ಲಿನ ವಿಶೇಷವಾಗಿದೆ  ಈ ದೇವಾಲಯಕ್ಕೆ ನಾಲ್ಕೂ  ದಿಕ್ಕಿನಲ್ಲಿ ದ್ವಾರಗಳು ಇದ್ದು ದೇವಸ್ಥಾನದ ಆವರಣದಲ್ಲಿ ನಾಲ್ಕು ಸುಂದರವಾಗಿ ವೈಶಿಷ್ಟ್ಯವಾಗಿ ಇರುವ  ದೀಪಸ್ತಂಭಗಳು ಭಕ್ತರ ಮನಸ್ಸನ್ನು ಸೆಳೆಯುತ್ತವೆ.  ಕಾರ್ತಿಕ ಮಾಸದಲ್ಲಿ ಈ ದೀಪ ಸ್ತಂಭಗಳಲ್ಲಿ ಭಕ್ತರು ದೀಪವನ್ನು ಬೆಳಗುತ್ತಾರೆ.

ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳು ದೇವಾಲಯದ ಎದುರಿಗಿರುವ  360 ಅಡಿಗಳ ಚಚ್ಚೌಕಾಕಾರದ ಈ ಕಲ್ಯಾಣಿಯ ಸುತ್ತಲೂ ಇರುವ ಅರವಟ್ಟಿಗೆಯಲ್ಲಿ ಬಿಡಾರ ಹೂಡುತ್ತಾರೆ. ಹಬ್ಬದ ದಿನ,   ಭಕ್ತಿಯಿಂದ ದೇವಿಯನ್ನು ಪೂಜಿಸುತ್ತಾರೆ. ಶ್ರದ್ಧಾ ಭಕ್ತಿಗಳಿಂದ  ಈ ದೇವಿಗೆ ಶರಣಾದಲ್ಲಿ ಅವರ ಸಕಲ ಅಭಿಷ್ಟಗಳೂ ಈಡೇರುತ್ತವೆ ಎಂಬ ನಂಬಿಕೆ ಇರುವ ಕಾರಣ ವರ್ಷಕ್ಕೊಮ್ಮೆ ನಡೆಯುವ  ಈ ಜಗದ್ವಿಖ್ಯಾತ ಬನಶಂಕರಿ ಜಾತ್ರೆಗೆ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ.

ಬಾಗಲಕೋಟೆಯಿಂದ 40 ಕಿ.ಮೀ, ಹುಬ್ಬಳ್ಳಿಯಿಂದ 125 ಕಿ.ಮೀ ಹಾಗೂ ಬೆಂಗಳೂರಿನಿಂದ 495 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಬಾದಾಮಿಗೆ  ಹೋಗಲು, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಸರ್ಕಾರಿ ಬಸ್ಸುಗಳು ಸೇವೆಯಿದೆ. ಅದೂ ಅಲ್ಲದೇ ರಸ್ತೆಯೂ ಸಹಾ ಅತ್ಯುತ್ತಮವಾಗಿರುವ ಕಾರಣ ಬಹುತೇಕ ಭಕ್ತರು ತಮ್ಮ ಸ್ವಂತ ವಾಹನಗಳಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.

ಬದಾಮಿಗೆ ಬಂದು ಬನಶಂಕರಿಯ ದರ್ಶನ ಪಡೆದ ನಂತರ ಭಕ್ತರ ಹಸಿವನ್ನು ನೀಗಿಸಲು ಪ್ರಸಾದದ ವಿತರಣೆಯ ವ್ಯವಸ್ಥೆ ಇದ್ದರೂ, ಅವಲ್ಲಕ್ಕಿಂತಲೂ ಮಿಗಿಲಾಗಿ  ದೇವಸ್ಥಾನದ ಎದುರಿಗಿನ ಕಲ್ಯಾಣಿಯ ತಟದಲ್ಲಿರುವ ಅರವಟ್ಟಿಕೆಗಲ್ಲಿ ಕುಳಿತು ಭಕ್ತರ ಹಸಿವನ್ನು ನೀವಾರಿಸಲು ಕುಳಿತಿರುವ ಈ ಪ್ರೀತಿಯ ಅನ್ನಪೂರ್ಣೆಯಂತಹ  ತಾಯಂದಿರ ಅಕ್ಕರೆಯ ಕೈ ಅಡುಗೆಯ ರೊಟ್ಟಿ, ಕಾಯಿ ಪಲ್ಲೆ,  ಕಾಳು ಪಲ್ಲೇ,  ಅನ್ನಾ ಸಾಂಬಾರ್ ಮೊಸರಿನ   ಸವಿಯನ್ನು ಅನುಭವಿಸಿದವರಿಗೇ ಗೊತ್ತು ಅದರ ಮಜ.

ಇನ್ನೇಕೆ ತಡಾ, ನೆನ್ನೆ ತಾನೇ ಬನದ ಹುಣ್ಣಿಮೆಯ ಜಾತ್ರೆ ಆರಂಭವಾಗಿದ್ದು ಇನ್ನೂ ಒಂದೆರಡು ವಾರಗಳ ಕಾಲ ಜಾತ್ರೆಯ ಸಡಗರ ಸಂಭ್ರಮಗಳು ಇರುವುದರಿಂದ ಸಮಯ ಮಾಡಿಕೊಂಡು ತಾಯಿ ಬನಶಂಕರಿಯ ದರ್ಶನ ಪಡೆದು  ದೇವಿಯ ಕೃಪಾಶೀರ್ವಾದ ಪಡೆದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರಿ?

ನಿಮ್ಮವನೇ ಉಮಾಸುತ ​

ವಿಜಯನಗರದ ಶ್ರೀ ಕೃಷ್ಣದೇವರಾಯ

WhatsApp Image 2022-01-17 at 8.13.07 AMಶ್ರೀ ಕೃಷ್ಣದೇವರಾಯ. ಈ ಹೆಸರು ಕೇಳಿದೊಡನೆಯೇ ನಮ್ಮ ಕಣ್ಣ ಮುಂದೆ ಬರುವುದು ದಕ್ಷಿಣ ಭಾರತದ ಕ್ಷಾತ್ರ ತೇಜದ ಸಮರ್ಥ ಅಡಳಿತಗಾರ. ಸಾವಿರಾರು ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನಗೊಳಿಸಿದ ಮಹಾನ್ ನಾಯಕ, ಮುತ್ತು ರತ್ನ ಪಚ್ಚೆ ಹವಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದಂತಹ ಸುವರ್ಣಯುಗದ ಸೃಷ್ಟಿಸಿದ್ದ ರಾಜ.  16 ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರು, ಬಹಮನಿ ಸುಲ್ತಾನರನ್ನು ಬಗ್ಗು ಬಡಿದಿದ್ದಲ್ಲದೇ, ಉತ್ತರದ ಮೊಘಲರ  ಅಧಿಪತಿ ಬಾಬರನಿಗೂ ಹುಟ್ಟಿಸಿದ ಕರ್ನಾಟಕದ ಕೆಚ್ಚೆದೆಯ ಹಿಂದೂ ಹುಲಿಯಷ್ಟೇ ಅಲ್ಲದೇ ವಿದೇಶಿಗರೊಂದಿಗೆ ಉತ್ತಮವಾದ ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳನ್ನು ಬೆಳಸಿಕೊಂಡು  ಯುರೋಪ್ ಮತ್ತು ಏಷ್ಯಾದ ಶ್ರೇಷ್ಠ ಚಕ್ರವರ್ತಿಗಳೊಂದಿಗೆ  ಸರಿ ಸಾಟಿಯಾಗಿ ಸ್ಥಾನ ಪಡೆದ ಭಾರತದ ಹಿಂದೂ ಹೃದಯ ಸಾಮ್ರಾಟ. ಅಂತಹ ಧೀರರ ಜನ್ಮ ದಿನದಂದು ಅವರ ಯಶೋಗಾಥೆಯನ್ನು ಮೆಲುಕು ಹಾಕೊಣ.

ಯಾವುದೇ ಒಂದು ದೇಶ ಜಾಗತಿಕವಾಗಿ ಮುಂದುವರೆಯ ಬೇಕಾದಲ್ಲಿ ಅಂತಹ ದೇಶದ ಜನರಿಗೆ ಮೊದಲು ತಮ್ಮ ದೇಶದ ಇತಿಹಾಸದ ಅರಿವಿರಬೇಕು.  ತಮ್ಮ ದೇಶದ ಇತಿಹಾಸ ಅರಿವಿದ್ದಲ್ಲಿ ಮಾತ್ರವೇ ತಮ್ಮ ದೇಶವನ್ನು ಕಟ್ಟಲು ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸಲು ತಮ್ಮ ಪೂರ್ವಜರು  ಎಂತಹ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಎಂಬುದರ ಅರಿವಾಗುತ್ತದೆ. ಈ ದೇಶದಲ್ಲಿ ಹಿಂದೂಗಳು ಇನ್ನೂ  ಅಸ್ತಿತ್ವಕ್ಕೆ ಇದ್ದಾರೆಂದರೆ ಅದಕ್ಕೆ ಮೂಲ ಕಾರಣವೇ ವಿಜಯನಗರದ ಹೈಂದವೀ ಸಾಮ್ರಾಜ್ಯ ಎಂದರೂ ತಪ್ಪಾಗದು.  ಅರಬ್ ದೇಶದ ಕಡೆಯಿಂದ ನಮ್ಮ ದೇಶಕ್ಕೆ ದಂಡೆತ್ತಿ ಬಂದು ತಮ್ಮ ದಬ್ಬಾಳಿಕೆ ಮತ್ತು ಲೂಟಿಕೋರ ತನದಿಂದ ಬಹುತೇಕ ಉತ್ತರ ಭಾರತವನ್ನು ಆಕ್ರಮಿಸಿ ದಕ್ಷಿಣ ಭಾರತದೆಡೆ ಭರದಿಂದ ನುಗ್ಗುತ್ತಿದ್ದಾಗ, ಗುರುಗಳಾದ ಶ್ರೀ ವಿದ್ಯಾರಣ್ಯರು ಹಕ್ಕ-ಬುಕ್ಕ ಎಂಬ ಇಬ್ಬರು ಕ್ಷಾತ್ರ ತೇಜದ ಯುವಕರುಗಳ ಸಹಾಯದಿಂದ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಸುಮಾರು 330 ವರ್ಷಗಳ ಅತ್ಯಂತ ವೈಭವೋಪೇತವಾಗಿ ಆಳ್ವಿಕೆ ನಡೆಸಿದ ಅಂತಹ ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಮುಖದೊರೆ ಎನಿಸಿದವರೇ ಶ್ರೀ ಕೃಷ್ಣದೇವರಾಯರು.

ಜನವರಿ 17, 1471ರಲ್ಲಿ ಹಂಪೆಯ ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕ ಮತ್ತು ನಾಗಲಾಂಬಿಕೆ ದಂಪತಿಗಳ ಮಗನಾಗಿ ಕೃಷ್ಣದೇವರಾಯರ ಜನನವಾಗುತ್ತದೆ.  ನಾಯಕ ಜನಾಂಗಕ್ಕೆ ಸೇರಿದ ತುಳುವ ನರಸ ನಾಯಕರು ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದ ನಂತರ 1509ರ  ಕೃಷ್ಣಜನ್ಮಾಷ್ಟಮಿಯಂದು ಶ್ರೀ ಕೃಷ್ಣದೇವರಾಯರು ಪಟ್ಟಕ್ಕೇರುತ್ತಾರೆ. ಆತ  ವಿಜಯನಗರ ಸಾಮ್ರಾಜ್ಯದ ಪಟ್ಟಕ್ಕೇರಿದಾಗ ಅಂದಿನ ರಾಜಕೀಯ ಸ್ಥಿತಿಯು ಬಹಳ ದುಸ್ತಿತಿಯಲ್ಲಿತ್ತು.

timmarasuಒರಿಸ್ಸಾದ ದೊರೆಗಳು ನೆಲ್ಲೂರಿನವರೆಗೆ ವಶಪಡಿಸಿಕೊಂಡಿದ್ದರೆ, ಬಿಜಾಪುರದ ಸುಲ್ತಾನರೂ ಸಹಾ ತನ್ನ ರಾಜ್ಯದ ಗಡಿಯನ್ನು ವಿಸ್ತರಿಸಲು ಹೊಂಚು ಹಾಕುತ್ತಿದ್ದನು.  ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣದೇವರಾಯರಿಗೆ ತಂದೆಯ ಸ್ಥಾನದಲ್ಲಿ ನಿಂತು  ರಾಯರಿಗೆ ಸಕಲ  ರೀತಿಯಲ್ಲೂ ಬೆಳೆಯಲು ಬೆಂಗಾವಲಿನಂತೆ ನಿಂತು ಬೆಳಸಿದ ಕೀರ್ತಿ ಶ್ರೀ ತಿಮ್ಮರಸು ಅವರದ್ದಾಗಿದೆ. ರಾಯರು ಪಟ್ಟವೇರಲು ಕಾರಣೀಭೂತನಾಗಿದ್ದಷ್ಟೇ ಅಲ್ಲದೇ ಅವರ ಪ್ರಧಾನಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು ಅತ್ಯಂತ ಶ್ಲಾಘನಿಯವಾಗಿದೆ.

ಶ್ರೀಕೃಷ್ಣದೇವರಾಯ ಮೊದಲಿಗೆ ವಿಜಯನಗರದ ವಿರುದ್ಧ ಹೊಂಚುಹಾಕುತ್ತಿದ್ದ  ಡೆಕ್ಕನ್ನ ಮುಸ್ಲಿಂ ಆಡಳಿತಗಾರರ ಕಡೆಗೆ ಗಮನ ಹರಿಸಿ, ತನ್ನ ಯೋಜಿತ ಧಾಳಿಯ ಮೂಲಕ, 1512 ರಾಯಚೂರನ್ನು ವಶಪಡಿಸಿಕೊಂಡ  ನಂತರ ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು, ತನ್ನ ರಾಜ್ಯವನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿ ಕೃಷ್ಣ ಮತ್ತು ತುಂಗಭದ್ರೆಯ  ಸಂಪೂರ್ಣ ಪ್ರದೇಶವು ಶ್ರೀ ಕೃಷ್ಣದೇವರಾಯನ ನಿಯಂತ್ರಣಕ್ಕೆ ಒಳಪಟ್ಟಿತು. ತದನಂತರ  ಗುಲ್ಬರ್ಗದ ಬಹಮನಿ ಸಾಮ್ರಾಜ್ಯವನ್ನೂ ವಶಪಡಿಸಿಕೊಂಡು ಅಲ್ಲಿಯೇ ಕಾನೂನು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ  ಮುಹಮ್ಮದ್ ಶಾನನ್ನು ತನ್ನ ಸಾಮಂತನಾಗಿಸಿದ. ನಂತರ ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ವೀರನಂಜರಾಜೇ ಒಡೆಯರ್ (ಗಂಗರಾಜ)ರನ್ನು ಸೋಲಿಸಿದಾಗ, 1512ರಲ್ಲಿ ಗಂಗರಾಜರು  ಕಾವೇರಿನದಿಯಲ್ಲಿ ಮುಳುಗಿ ಅಸುನೀಗಿದರು ಹೀಗೆ ಶಿವಸಮುದ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅದನ್ನು ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವನ್ನಾಗಿಸಿದ. 1516-17ಲ್ಲಿ ಶ್ರೀ ಕೃಷ್ಣದೇವರಾಯನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತ್ತು ಎಂದರೆ ಅತನ ವೀರ ಪರಾಕ್ರಮದ ಅರಿವಾಗುತ್ತದೆ.

kalinga1512-1518ರ ಮಧ್ಯೆ ಶ್ರೀಕೃಷ್ಣದೇವರಾಯರು ಒಡಿಸ್ಸಾ ದೊರೆಗಳ ವಿರುದ್ಧ ಐದು ಅಭಿಯಾನಗಳ  ಕಳಿಂಗ ಯುದ್ಧವನ್ನು ಆರಂಭಿಸಿದರು. ಆ ಸಮಯದಲ್ಲಿ  ಸೂರ್ಯ ವಂಶದ ಒಡೆಯರಾಜು ಕ್ಷತ್ರಿಯ ಮನೆತನದ ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶದ ಜೊತೆಗೆ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಕ್ಷತ್ರಿಯ ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ಆ ದೊರೆಗಳು ಆಕ್ರಮಿಸಿಕೊಂಡಿದ್ದ ನೆಲ್ಲೂರು ಜಿಲ್ಲೆಯ ಅಜೇಯ ಕೋಟೆ ಎಂದೇ ಪರಿಗಣಿಸಲಾಗಿದ್ದ ಉದಯಗಿರಿ ಕೋಟೆಯ ಮೇಲೆ  1512ರಲ್ಲಿ ಆಕ್ರಮಣ ಮಾಡಿ ಕೋಟೆಯನ್ನು ಸುಮಾರು ಒಂದು ವರ್ಷದವರೆಗೂ ಮುತ್ತಿಗೆಯನ್ನು ಹಾಕಿದರು. ಕೋಟೆಯಿಂದ ಹೊರಬರಲಾರದೇ,  ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗ ತೊಡಗಿತು. ಒಂದು ವರ್ಷಗಳ ಕಾಲ  ಕೋಟೆಗೆ ಲಗ್ಗೆ ಹಾಕಿ ಸುಮ್ಮನೆ ಕೂರಬೇಕಾಗಿ ಬಂದ ವಿಜಯನಗರ ಸೈನ್ಯವೂ ಯುದ್ದದಿಂದ ವಿಮುಖರಾಗ ತೊಡಗಿದಾಗ, ಮಂತ್ರಿ ತಿಮ್ಮರಸು ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯ ಒಳದಾರಿಯನ್ನು ಕಂಡು ಹಿಡಿದು ಅದರ ಮೂಲಕ  ವಿಜಯನಗರದ ಸೇನೆಯನ್ನು ಕೋಟೆ ಒಳಗೆ ಒಳನುಗ್ಗಿಸಿ  ಆ ಕಾಲದ ಅತಿ ಸಮರ್ಥ ಕತ್ತಿ ವರಸೆಗಾರ ಎಂದು ಹೆಸರಾಗಿದ್ದ ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯುವ ಮೂಲಕ  1513ರಲ್ಲಿ ಕೋಟೆಯನ್ನು ವಶಪಡಿಸಿಕೊಂಡ ನಂತರ ಮಂತ್ರಿ ತಿಮ್ಮರಸುವಿನನ್ನು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕ ಮಾಡಲಾಯಿತು.

ಈ ಜಯದಿಂದ ಉತ್ಸುಕನಾಗಿ ಉತ್ಕಲ-ಕಳಿಂಗದ ಮೇಲೆ ನೇರ ಧಾಳಿ ಮಾಡಿ ವಶಪಡಿಸಿಕೊಳ್ಳ ಬೇಕೆಂದು ಹವಣಿಸುತ್ತಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರ ದೇವನು ಸಹಾ ವಿಜಯನಗರದ ಸೇನೆಯನ್ನು ಹೀನಾಯವಾಗಿ ಸೋಲಿಸುವ ಪ್ರತಿ ಯೋಜನೆ ಹಾಕಿಕೊಂಡ ಪರಿಣಾಮ  ಆ ಎರಡೂ ಸೇನೆಗಳು ಕಳಿಂಗಾ ನಗರದಲ್ಲಿ ಪರಸ್ಪರ ಯುದ್ಧ ಮಾಡಬೇಕಾದ  ಸಂದರ್ಭ  ಎದುರಾಗಿತ್ತು. ಆದರೆ ಈ ಮಾಹಿತಿಯನ್ನು  ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಚಾಣಾಕ್ಷ ತಿಮ್ಮರಸು ಸಂಪಾದಿಸಿದ  ಕಾರಣ, ಪ್ರತಾಪರುದ್ರನ ಯೋಜನೆ ಎಲ್ಲವೂ ತಲೆಕೆಳಗಾಗಿ ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಮದುವೆ ಮಾಡಿ ಕೊಡುವ ಮೂಲಕ ಸ್ನೇಹ ಸಂಬಂಧವನ್ನು ಬೆಳಸಿ ಕೊಂಡು  ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಗಿದ್ದಲ್ಲದೇ ಮತ್ತಷ್ಟೂ ಪ್ರಜ್ವಲಿಸುವಂತಾಯಿತು.

ಇವಿಷ್ಟೂ ಕೃಷ್ಣದೇವರಾಯರ ಸಾಮ್ರಾಜ್ಯ ವಿಸ್ತರಣೆಯ ವಿಷಯವಾದರೆ, ತನ್ನ  ರಾಜ್ಯದ ಒಳಿತಿಗಾಗಿ ಮತ್ತು ರಕ್ಷಣೆಗಾಗಿ ವಿದೇಶಿಗರೊಂದಿಗೆ  ಸ್ನೇಹ ಸಂಬಂಧಗಳನ್ನು ಬೆಳೆಸಿದನು.  1510 ರಲ್ಲಿ ಗೋವಾದಲ್ಲಿ ಪ್ರಾಭಲ್ಕಯಕ್ಕೆ ಬಂದಿದ್ದ ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಕೊಂಡು ತನ್ನ ಸೇನೆಯನ್ನು ಬಲ ಪಡಿಸಿದ್ದಲ್ಲದೇ, ಪೋರ್ಚುಗೀಸರ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆನ್ನೂ ತಂದರು.

ಇಷ್ಟೆಲ್ಲಾ ಹೋರಾಟದ ಬದುಕಿನಲ್ಲಿ ಆತ ಹೋದ ಕಡೆಗಳಲೆಲ್ಲಾ ಪಾಳು ಬಿದ್ದಿದ್ದ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ್ದಲ್ಲದೇ,  ಲಕ್ಷಾಂತರ ದೇವಾಲಯಗಳಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ಯಥಾವತ್ತಾಗಿ ನಡೆಯುವಂತಾಗಲು ಧಾರ್ಮಿಕ ದತ್ತಿ ಮತ್ತು ಉಂಬಳಿಗಳನ್ನು ನೀಡಿದ್ದದ್ದು ಅತ್ಯಂತ ಗಮನಾರ್ಹವಾಗಿದೆ.

krish1ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ ಸ್ವಾಮಿಗೆ ವಜ್ರಖಚಿತ ಕಿರೀಟಗಳಿಂದ ಹಿಡಿದು ಚಿನ್ನದ ಖಡ್ಗಗಳವರೆಗೆ ಬೆಲೆಬಾಳುವ ಮೌಲ್ಯದ ಹಲವಾರು ವಸ್ತುಗಳನ್ನು ನೀಡಿ  ವಿಜೃಂಭಿಸಿದರು. ಇದರ ಕುರುಹಾಗಿಯೇ  ಇಂದಿಗೂ ಸಹಾ ತಿಮ್ಮಪ್ಪನ ದೇವಾಲಯದ ಸಂಕೀರ್ಣದಲ್ಲಿ ಕೃಷ್ಣದೇವರಾಯ ಮತ್ತು ಅವರ  ಇಬ್ಬರು ಪತ್ನಿಯರೊಂದಿಗೆ ತಿರುವ ಪ್ರತಿಮೆಯನ್ನು ಸ್ಥಾಪಿಸಿ  ಗೌರವ  ಸಲ್ಲಿಸುತ್ತಿರುವುದು ಗಮನಾರ್ಹ. ಅದೇ ರೀತಿಯಲ್ಲಿ ರಾಜಮಂಡ್ರಿಯನ್ನು ವಶಪಡಿಸಿಕೊಂಡಾಗ, ಶ್ರೀಕೃಷ್ಣದೇವರಾಯರು ಸಿಂಹಾಚಲಕ್ಕೆ ತೆರಳಿ ನರಸಿಂಹ ಸ್ವಾಮಿಗೆ ನಮನ ಸಲ್ಲಿಸಿ  ಅಲ್ಲಿಯೂ ದಾನ ಧರ್ಮಗಳನ್ನು ಮಾಡಿದ ನಂತರ ಪೊಟ್ನೂರಿನಲ್ಲಿ ತಮ್ಮ ವಿಜಯಗಳ ಸ್ಮರಣಾರ್ಥ ವಿಜಯದ ಸ್ತಂಭವನ್ನು ಸ್ಥಾಪಿಸಿದರು.

ಶ್ರೀ ಕೃಷ್ಣದೇವರಾಯರು ತಮ್ಮ ಅಗಾಧವಾದ ಶಕ್ತಿ ಸಾಮರ್ಥ್ಯದೊಂದಿಗೆ, ಬಹುಮುಖ ಪ್ರತಿಭೆ, ಸಮರ್ಥ ಆಡಳಿತಗಾರ ಮತ್ತು ಕಲೆ ಮತ್ತು ಸಾಹಿತ್ಯದ ಉದಾರವಾದಿ ಪೋಷಕರಾಗಿ ದಕ್ಷಿಣ ಭಾರತದಲ್ಲಿ ತಮ್ಮದೇ ಆದ  ವಿಶಿಷ್ಟ ರೀತಿಯ ಛಾಪು ಮೂಡಿಸುವ ಮೂಲಕ ದಂತಕಥೆಯಾಗಿದ್ದರು.  ಕೃಷ್ನದೇವರಾಯರರ ಕುರಿತು ಇಂದಿಗೂ  ಸಹಾ ಮಕ್ಕಳು ಮತ್ತು ಅನಕ್ಷರಸ್ಥ ಗ್ರಾಮಸ್ಥರು ಸಹ ಅವರ ಸಾಹಸಗಳನ್ನು ಲಾವಣಿಗಳ ಮೂಲಕ  ನೆನಪಿಸಿಕೊಳ್ಳುವುದಲ್ಲದೇ, ಕರ್ನಾಟಕದ ವಿಜಯನಗರದ ರಾಜನಾಗಿದ್ದರೂ,  ಆಂಧ್ರಪ್ರದೇಶದ ನೈಋತ್ಯ ಭಾಗದಲ್ಲಿರುವ ಐದು ಜಿಲ್ಲೆಗಳಾದ ರಾಯಲಸೀಮಾ ಭಾಗವನ್ನು ಇಂದಿಗೂ  ಶ್ರೀ ಕೃಷ್ಣದೇವರಾಯನ ಭೂಮಿ ಎಂದೇ ಕರೆಯಲಾಗುತ್ತದೆ.

ಕಲೆ ಮತ್ತು ತೆಲುಗು ಸಾಹಿತ್ಯದ ಪೋಷಕರಾಗಿ ಶ್ರೀಕೃಷ್ಣದೇವರಾಯರು ಅಪ್ರತಿಮರಾಗಿದ್ದರು. ಅವರ ಕಾಲದಲ್ಲಿ ತೆಲುಗು ಸಾಹಿತ್ಯದ ಸುವರ್ಣಯುಗ ಎಂದೇ ನೆನೆಯಲಾಗುತ್ತದೆ. ಅಷ್ಟದಿಗ್ಗಜರೆಂದು ಹೆಸರಾದ ಎಂಟು ಜನ ಸಾಹಿತ್ಯದ ದಿಗ್ಗಜರು ಇವರ ಆಸ್ಥಾನವನ್ನು ಅಲಂಕರಿಸಿದರು. ಅವರಲ್ಲಿ ಮನು ಚರಿತ್ರಮು ಗ್ರಂಥದ ಕರ್ತೃ ಅಲ್ಲಸಾನಿ ಪೆದ್ದಣ ಶ್ರೇಷ್ಠರು. ಅವರನ್ನು ಆಂಧ್ರ ಕವಿತಾ ಪಿತಾಮಹ ಎಂದು ಕರೆಯಲಾಗುತ್ತಿತ್ತು. ವಿಕಟಕವಿ ಮತ್ತು ಅತ್ಯಂತ ಚಾಣಾಕ್ಷ ಮಂತ್ರಿ ಎಂದೇ ಖ್ಯಾತರಾಗಿದ್ದ ತೆನಾಲಿ ರಾಮಕೃಷ್ಣರಿಗೂ ಆಶ್ರಯವನ್ನು ನೀಡಿದ್ದು ಇದೇ  ಕೃಷ್ಣದೇವರಾಯರು.  ಸ್ವತಃ ಉತ್ತಮ ಕವಿ ಎನಿಸಿಕೊಂಡಿದ್ದ ಕೃಷ್ಣದೇವರಾಯರು ತೆಲುಗು ಭಾಷೆಯಲ್ಲಿ ಕೆಲವು ಕೃತಿಗಳನ್ನು ರಚಿಸಿರುವುದು ಗಮನಾರ್ಹವಾಗಿದೆ.

hampe templeಶ್ರೀ ಕೃಷ್ಣದೇವರಾಯರೊಬ್ಬರು ದೂರದೃಷ್ಣಿಯ  ಮಹಾನ್ ವ್ಯಕ್ತಿಯಾಗಿದ್ದಲ್ಲದೇ, ಹಿಂದೂ ಧರ್ಮದ ಪರಮ ಸಹಿಷ್ಣುವಾಗಿದ್ದಕ್ಕೆ ಕುರುಹಾಗಿ  ಹಜಾರ ರಾಮ ದೇವಸ್ಥಾನ ಅಲ್ಲದೇ, ಹಂಪೆಯ ವಿಠ್ಥಲಸ್ವಾಮಿಯ ದೇವಸ್ಥಾನದ ನಿರ್ಮಾಣದ ಸಂಪೂರ್ಣ ಶ್ರೇಯ ಇವರಿಗೆ ಸಲ್ಲುತ್ತದೆ. ತನ್ನ ತಾಯಿಯ ಗೌರವಾರ್ಥವಾಗಿ ಅವರು ನಾಗಲಾಪುರಂ ಎಂಬ ಹೊಸ ನಗರವನ್ನು ನಿರ್ಮಿಸಿದ್ದರು.

ಇಷ್ಟೆಲ್ಲಾ ಬಲಿಷ್ಠನಾಗಿದ್ದ ಚಕ್ರವರ್ತಿಯ ಕೊನೆಯ ದಿನಗಳು ಸಂತೋಷವಾಗಿರಲಿಲ್ಲ. ತನ್ನ ಉತ್ತರಾಧಿಕಾರಿಯಾಗಿ ತನ್ನ ಚಿಕ್ಕ ಮಗ ತಿರುಮಲದೇವನನ್ನು ನೇಮಿಸಿದ್ದರೆ ಆತ  ಅನುಮಾನಾಸ್ಪದವಾಗಿ ನಿಧನರಾದನು. ತನ್ನ ಮಗನ ಸಾವಿಗೆ  ತನ್ನ ಪರಮಾಪ್ತರು ಮತ್ತು ತಂದೆಯ ಸಮಾನರದಂತಹ ಮಂತ್ರಿಗಳದ ತಿಮ್ಮರಸುವಿನ ಮಗನೇ ಕಾರಣ ಎಂದು  ಯಾರೋ ತಿಳಿಸಿದ್ದನ್ನು ಕೇಳಿ ತಿಮ್ಮರಸು ಮತ್ತು ಅವರ ಮಗನನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡಿ ಹಾಗಿ ಅವರಿಬ್ಬರ ಕಣ್ಣುಗಳನ್ನು ತೆಗೆಸಿದ ನಂತರ ಕೃಷ್ಣದೇವರಾಯನ ಮನಸ್ಸು ವಿಲವಿಲ ಒದ್ದಾಡಿತ್ತು.  ಈ ಎಲ್ಲಾ ಘಟನೆಗಳ ನಂತರ ಬಹಳವಾಗಿ ನೊಂದಿದ್ದ ರಾಯರು, ತನ್ನ ಮಲಸಹೋದರ ಅಚ್ಯುತ ದೇವರಾಯನನ್ನು ತನ್ನ ಉತ್ತರಾಧಿಕಾರಿಯಾಗಿ ಮಾಡಿ, 1529 ರಲ್ಲಿ ಹಂಪೆಯಲ್ಲಿ ನಿಧನರಾಗುವ ಮೂಲಕ ಕರ್ನಾಟಕದ ಅತ್ಯಂತ ಪ್ರಭಲ ದೊರೆಯ ಅಂತ್ಯವಾಯಿತು.

WhatsApp Image 2022-01-17 at 9.02.54 AMಶ್ರೀ ಕೃಷ್ಣದೇವರಾಯರು ಗತಿಸಿ ಇಂದಿಗೆ ಐದಾರು ಶತಮಾನಗಳು ಕಳೆದು ಹೋಗಿದ್ದರೂ,  ಬಸವಣ್ಣನವರ ವಚನದಲ್ಲಿ ಹೇಳಿರುವಂತೆ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಎಂದು ಕನ್ನಡಿಗರು, ತೆಲುಗರು, ತುಳುವರು, ತಮಿಳರು, ಒರಿಸ್ಸಾದವರು  ಹೀಗೆ ದೇಶದ ಬಹುತೇಕರು  ಈತ ನಮ್ಮ ಹೆಮ್ಮೆಯ ರಾಜ ಎಂದು ಹೇಳಿಕೊಂಡು ಸಂಭ್ರಮ ಪಡುತ್ತಿದ್ದಾರೆ  ಎಂದರೆ,  ಒಬ್ಬನ ಉಪಸ್ಥಿತಿಗಿಂತ ಆತನ  ಅನುಪಸ್ಥಿತಿಯಲ್ಲಿಯೂ ಅತನನ್ನು ನೆನಸಿಕೊಳ್ಳುತ್ತಿದ್ದಾರೆ ಆತ ಶ್ರೇಷ್ಠನಾಗಿರಲೇ ಬೇಕಲ್ಲವೇ?  ಹೌದು ನಿಸ್ಸಂದೇಹವಾಗಿ, ಶ್ರೀಕೃಷ್ಣದೇವರಾಯರು ಕೇವಲ ವಿಜಯನಗರ ಸಾಮ್ರಾಜ್ಯದ  ಶ್ರೇಷ್ಠ ಚಕ್ರವರ್ತಿಯಲ್ಲದೇ ಬಹುಶಃ ಈ ಜಗತ್ತು ಕಂಡ ಮಹಾನ್ ಚಕ್ರವರ್ತಿಗಳಲ್ಲಿ ಒಬ್ಬರು ಎಂದರೂ ಅತಿಶಯವಲ್ಲ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಮಾಗಡಿ ಶ್ರೀ ರಂಗನಾಥಸ್ವಾಮಿ

WhatsApp Image 2022-01-13 at 11.07.37 PMಧನುರ್ಮಾಸದ ಸಮಯದಲ್ಲಿ ಭಗವಾನ್ ವಿಷ್ಣುವಿನನ್ನು ಒಮ್ಮೆ ದರ್ಶನ ಮಾಡಿದಲ್ಲಿ  ಸಾವಿರ ವರ್ಷಗಳ ದರ್ಶನದ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾವಿಂದು ಬೆಂಗಳೂರಿನಿಂದ ಸುಮಾರು 50-55 ಕಿಮೀ ದೂರದಲ್ಲಿರುವ ಕೆಂಪೇಗೌಡರ ಊರಾದ ಮಾಗಡಿಯಲ್ಲಿರುವ ಚೋಳರ ಕಾಲದ ಪ್ರಸಿದ್ಧ ದೇವಾಲಯವಾದ ತಿರುಮಲೈ ಶ್ರೀ ರಂಗನಾಥಸ್ವಾಮಿಯ ದರ್ಶನವನ್ನು ಈ ಧರ್ನುರ್ಮಾಸದಲ್ಲಿ ಕುಳಿತಲ್ಲಿಂದಲೇ ಮಾಡೋಣ ಬನ್ನಿ.

mandyaಮಾಂಡವ್ಯ ಋಷಿಗಳಿಂದ ಸ್ಥಾಪಿತವಾದ ಈ ಕ್ಷೇತ್ರ ಮಾಂಡವ್ಯ ಕ್ಷೇತ್ರ ಎಂದು ಹೆಸರಾಗಿದೆ. ಆರಂಭದಲ್ಲಿ ಮಾಂಡವ್ಯಕುಟಿ ಎಂದಿಂದ್ದು ನಂತರ ಜನರ ಆಡು ಮಾತಿನಲ್ಲಿ ಅಪಭ್ರಂಷವಾಗಿ ಮಾಕುಟಿ, ಮಾಗುಡಿ ನಂತರ ಅಂತಿಮವಾಗಿ ಮಾಗಡಿ ಎಂದಾಗಿದೆ ಎನ್ನುತ್ತಾರೆ ಸ್ಥಳೀಯರು. ಈ ಪ್ರದೇಶವು ಅಷ್ಟಶೈಲಗಳಿಂದಲೂ,  ಅಷ್ಟ ತೀರ್ಥಗಳಿಂದಲೂ, ಪವಿತ್ರ ಕಣ್ವಾ ನದಿಯಿಂದಲೂ ಕೂಡಿದ ದಿವ್ಯ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ಶುಕ ಮುಂತಾದ ಅನೇಕ ಮಹಿಮಾವಂತ ಮುನಿಗಳ ತಪೋಭೂಮಿ, ಪುಣ್ಯಭೂಮಿಯಾಗಿದ್ದು, ಸುಂದರ ಗಿರಿಕಾನನಗಳಿಂದ ಕೂಡಿದ ರಮ್ಯತಾಣವಾಗಿದೆ. ಮಾಂಡವ್ಯ ಎಂಬ ಋಷಿಗಳು ತಿರುಪತಿಗೆ ಹೋಗಿ ಶ್ರೀ ಶ್ರೀನಿವಾಸನನ್ನು ಕುರಿತು ತಪಸ್ಸು ಮಾಡಿದಾಗ, ಅವರ  ತಪಸ್ಸಿಗೆ ಮೆಚ್ಚಿದ ಶ್ರೀ ವೆಂಕಟಾಚಲಪತಿಯು ಸ್ವರ್ಣಾಚಲಕ್ಕೆ ಹೋಗಿ ತನ್ನನ್ನು ಆರಾಧಿಸಿದಲ್ಲಿ ಅನುಗ್ರಹಿಸುತ್ತೇನೆಂದು ಹೇಳಿದಾಗ, ಆದರಂತೆ,  ಮಾಂಡವ್ಯ ಋಷಿಗಳು ಸ್ವರ್ಣಾಚಲಕ್ಕೆ ಬಂದು ಒಂದು ಕುಟೀರವನ್ನು ನಿರ್ಮಿಸಿಕೊಂಡು ಅಲ್ಲಿಯೇ ಇರುವಾಗ ಅದೊಮ್ಮೆ ಸ್ವಪ್ನದಲ್ಲಿ ಶ್ರೀನಿವಾಸರು ಕಾಣಿಸಿಕೊಂಡು ಉದ್ಭವ ಸಾಲಿಗ್ರಾಮ ರೂಪದಲ್ಲಿರುವ ನನ್ನನ್ನು ನಿತ್ಯವೂ ಆರಾಧಿಸಿದರೆ ನಿನ್ನೆಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗಿ ಮೋಕ್ಷ ಲಭಿಸುತ್ತದೆ ಎಂದು ಹೇಳಿದ ಕಾರಣಕ್ಕೆ, ಮಾಂಡವ್ಯ ಋಷಿಗಳು ಅಲ್ಲಿ ಉದ್ಭವ ಸಾಲಿಗ್ರಾಮವನ್ನು ನಂತರ ಅಲ್ಲಿ ಶ್ರೀ ವೇಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ವಸಿಷ್ಠ ಮಹರ್ಷಿಗಳ ಜೊತೆ ಶ್ರೀ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸಿ ಮುಕ್ತಿಯನ್ನು  ಈ ತಿರುಮಲೆಯಲ್ಲಿ ಪಡೆದರೆಂದು  ಬ್ರಹ್ಮಾಂಡ ಪುರಾಣದಲ್ಲಿ ವಿವರಿಸಲಾಗಿದೆ. ತಿರುಪತಿಗೆ ಹೋಗಲಾಗದವರು ಈ ತಿರುಮಲೆಯ ಶ್ರೀ ಪಶ್ಚಿಮ ವೆಂಕಟಾಚಲಪತಿ  ದರ್ಶನ ಮಾಡಿದಲ್ಲಿ, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದೇ  ನಂಬಲಾಗಿದೆ.

ಆನಂತರ 11-12 ನೇ ಶತಮಾನದಲ್ಲಿ ಚೋಳ ರಾಜನೊಬ್ಬ ಈ ಮಾಗಡಿ ಪಟ್ಟಣವನ್ನು ನಿರ್ಮಿಸಿ, ಅವನ ಕಾಲದಲ್ಲೇ  ದ್ರಾವಿಡ ಶೈಲಿಯಲ್ಲಿ ಈ ಶ್ರೀ ರಂಗನಾಥ ಸ್ವಾಮಿಯ ಈ ದೇವಾಲಯವನ್ನು ಕಟ್ಟಲಾಯಿತು. ನಂತರ ಈ ದೇವಸ್ಥಾನವನ್ನು ಹೊಯ್ಸಳರು, ವಿಜಯನಗರದ ಅರಸರು,  ಕೆಂಪೇಗೌಡರ ವಂಶಸ್ಥರು, ಮೈಸೂರ ಅರಸರು ಅದರಲ್ಲೂ ಮುಖ್ಯವಾಗಿ ಸಂಪಾಜರಾಯ, ಇಮ್ಮಡಿ ಕೆಂಪೇಗೌಡ ಮತ್ತು ದೊಡ್ಡವೀರಪ್ಪ ಗೌಡರ ಕಾಲದಲ್ಲಿ ದೇವಾಲಯದ ವಿಸ್ತೀರ್ಣಗೊಂಡಿದ್ದಲ್ಲದೇ, ಜೀರ್ಣೊದ್ಧಾರ ಮತ್ತು ಅಭಿವೃದ್ಧಿ ಹೊಂದುತ್ತದೆ.  ಈ ಸ್ವಾಮಿಯ ನಿತ್ಯಪೂಜೆ, ಅಮೃತ ಪಡಿಗೆ, ಆಭರಣ ಅಲಂಕಾರ, ದೀಪಾರಾಧನೆ ಇತ್ಯಾದಿಗಳಿಗಾಗಿ ರಾಜರುಗಳು, ಅಧಿಕಾರಿಗಳು ಮತ್ತು ಭಕ್ತಾದಿಗಳು ದಾನ-ದತ್ತಿಗಳನ್ನು ನೀಡಿರುವ ವಿಚಾರವನ್ನು ಅಲ್ಲಿ ಕಾಣಸಿಗುವ  ಅನೇಕ ಶಾಸನಗಳು ಮತ್ತು ದಾನಪತ್ರಗಳಲ್ಲಿ ಕಾಣಬಹುದಾಗಿದೆ. ಈ ದೇವಾಲಯದ ಬಳಿ ದೊರೆತಿರುವ 1524 ಮತ್ತು 1578ರ ಶಾಸನಗಳು ಮತ್ತು ಇತರ ದಾನ ಪತ್ರಗಳಲ್ಲಿ ಈ ಸ್ವಾಮಿಯನ್ನು ತಿರುವಂಗಳನಾಥ ಎಂದು ಕರೆಯಲಾಗುತ್ತಿದ್ದು, ಮೈಸೂರು ಅರಸರ ಕಾಲದಿಂದೀಚೆಗೆ ಇದು ಶ್ರೀ ರಂಗನಾಥ ಸ್ವಾಮಿ  ಎಂದು  ಪ್ರಸಿದ್ಧವಾಯಿತು. ಕೇವಲ ರಾಜ ಮಹಾರಾಜರುಗಳಲ್ಲದೇ,  ದೇವರ ಭಕ್ತನಾದ ನಾಗಿರೆಡ್ಡಿ ಎಂಬಾತನು  ದೇವಾಲಯದ ಮುಖ ಮಂಟಪವನ್ನು ನಿರ್ಮಿಸಿದಲ್ಲಿ, ದೇವಾಲಯದ ಹಿಂದಿನ ಸಾರ್ಸನಿಕ್ ಶೈಲಿಯ ಗೋಪುರವನ್ನು ಸ್ವಾಮಿಯ ಮತ್ತೊಬ್ಬ ಭಕ್ತನಾದ ಮುಸ್ಲಿಂ ಧರ್ಮದ ಖಿಲ್ಲೇದಾರನು ಕಟ್ಟಿಸಿದರೆಂದು ಬಲ್ಲವರಿಂದ ತಿಳಿದು ಬರುತ್ತದೆ. ದೇವಾಲಯದ ಪಶ್ಚಿಮ ಮತ್ತು ಪೂರ್ವದ ದ್ವಾರಗಳಲ್ಲಿ ಎತ್ತರವಾದ ಎರಡು ರಾಜ ಗೋಪುರಗಳಿಂದಾಗಿ ಈ ತಿರುಮಲೆಯ ಅಸ್ತಿತ್ವವನ್ನು ಬಲು ದೂರದಿಂದಲೂ ಕಾಣಬಹುದಾಗಿದೆ.

anga2ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿಯೂ ದೇವರನ್ನು ಪೂರ್ವಾಭಿಮುಖವಾಗಿಯೋ ಇಲ್ಲವೇ ಉತ್ತರಾಭಿಮುಖವಾಗಿಯೋ ಪ್ರತಿಷ್ಟಾಪನೆ ಮಾಡುವುದು ಸಹಜವಾಗಿದ್ದು ಈ ದೇವಾಲಯದಲ್ಲಿರುವ ಉಳಿದ ಎಲ್ಲಾ  ದೇವರುಗಳೂ  ಪೂರ್ವಾಭಿಮುಖವಾಗಿದ್ದರೆ, ಈ ದೇವಸ್ಥಾನದ ಪ್ರಮುಖ ದೇವರಾದ ಸುಮಾರು 4.5 ಅಡಿ ಎತ್ತರದ ವಿಜಯನಗರ ಶೈಲಿಯಲ್ಲಿರುವ ಶ್ರೀರಂಗನಾಥ ಸ್ವಾಮಿಯ ವಿಗ್ರಹ ಮಾತ್ರ ಪಶ್ಚಿಮಾಭಿಮುಖವಾಗಿರುವುದು ಇಲ್ಲಿನ ವಿಶೇಷವಾಗಿದೆ. ಈ ದೇವರ ಮುಂದೆ ಮಾಂಡವ್ಯರು ಆರಾಧಿಸುತ್ತಿದ್ದರೆನ್ನಲಾದ ಸ್ವಾಮಿ ಸ್ವಯಂಭೂ ರೂಪದ ಸಾಲಿಗ್ರಾಮವನ್ನು ಕಾಣಬಹುದಾಗಿದ್ದು ಅದನ್ನೇ ಮೂಲ ದೇವರೆಂದೇ ಅಲ್ಲಿಯ ಅರ್ಚಕರು ತಿಳಿಸುತ್ತಾರೆ. ಅ ಸಾಲಿಗ್ರಾಮಕ್ಕೆ ಎಷ್ಟೇ ಕೊಡ ನೀರಿನ ಅಭಿಷೇಕ ಮಾಡಿದರೂ ಆ ನೀರು  ಎಲ್ಲಿಗೆ ಹೋಗುತ್ತದೆ ಎಂದು ಇದುವರೆವಿಗೂ ರಹಸ್ಯವಾಗಿಯೇ ಇದೆ  ಎಂದು ತಿಳಿಸುತ್ತಾರೆ.  ನವರಂಗದಲ್ಲಿರುವ ಶ್ರೀದೇವಿ ಸಮೇತ ಶ್ರೀ ಸ್ವಾಮಿಯ ಉತ್ಸವ ಮೂರ್ತಿ ಅತ್ಯಂತ ಸುಂದರವಾಗಿದ್ದು ಸ್ವಾಮಿಯ ಎಡಗಡೆಗೆ ಅರ್ಥಾತ್ ಹಿಂದೆ ಲಕ್ಷ್ಮಿ ಇದ್ದರೆ, ಮುಂದೆ ಬಲದಲ್ಲಿ ಶ್ರೀ ಸೀತಮ್ಮನವರು ಇದ್ದಾರೆ. ಸ್ವಾಮಿಯ ಎದುರಿಗೆ ಹನುಮ-ಗರುಡರ ದೊಡ್ಡ ಕೆತ್ತನೆಗಳೂ, ಅದರ ಸುತ್ತ ಶ್ರೀ ರಾಮ, ರಾಮಾನುಜಾಚಾರ್ಯರು, ಇತರ ಆಳ್ವಾರುಗಳು ಮತ್ತು ವೈಷ್ಣವ ಭಕ್ತರ ಪ್ರತಿಮೆಗಳು ಪ್ರತ್ಯೇಕ ಗರ್ಭಗೃಹಗಳಲ್ಲಿ ನಯನಮನೋಹರವಾಗಿವೆ.

ranga4ಶ್ರೀ ರಂಗನಾಥಸ್ವಾಮಿಯ ಗರ್ಭಗುಡಿಯ ಹಿಂದೆಯೇ ಗೋಡೆಯ ಮೇಲೆ ಮಲಗಿರುವ ಭಂಗಿಯಲ್ಲಿರುವ ಭವ್ಯವಾದ ಶ್ರೀ ರಂಗನಾಥ ಸ್ವಾಮಿ ಇದ್ದು ಈ ದೇವರನ್ನು ಮಾಗಡಿರಂಗ, ಮಕ್ಕಳರಂಗ, ಮೂಲರಂಗ ಎಂದು ಕರೆಯುತ್ತಾರಲ್ಲದೇ,  ಈ ರಂಗನಾಥ  ಸ್ವಾಮಿಯು ದಿನೇ ದಿನೇ ಬೆಳೆಯುತ್ತಿದೆ ಎಂಬ ನಂಬಿಕೆ ಇರುವ ಕಾರಣ ಇದನ್ನು ಬೆಳೆಯುವರಂಗ  ಎಂದೂ ಕರೆಯುತ್ತಾರೆ ಎಂದು  ಅಲ್ಲಿನ ಅರ್ಚಕರು ತಿಳಿಸುತ್ತಾರೆ.  ಈ ಬೆಳೆಯುವ ರಂಗನ ಪೂಜೆ ಮಾಡುವ ಅರ್ಚಕರು ಮುಖ ನೋಡಿದ ತಕ್ಷಣವೇ ಅವರ ಆಗು ಹೋಗುಗಳನ್ನು ಕರಾರುವಾಕ್ಕಾಗಿ ಹೇಳುವುದು ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಅದರ ಜೊತೆ  ಅಲ್ಲಿನ ಫಲಕಗಳ ಮೇಲೆ ಬರೆಯುವ ಹಿತವಚನಗಳು ಭಕ್ತರಿಗೆ ಅಪ್ಯಾಯಮಾನವೆನಿಸುತ್ತದೆ. ಶ್ರೀರಂಗನಾಥ ಸ್ವಾಮಿ ದೇವಾಲಯದ ಬಲಭಾಗಕ್ಕೆ ಅನತಿ ದೂರದಲ್ಲಿರುವ ಸ್ತಂಭಗಿರಿ ಎಂದು ಹೆಸರಾದ ಶ್ರೀ ನರಸಿಂಹಸ್ವಾಮಿ ಬೆಟ್ಟ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಕ್ತ ಪ್ರಹ್ಲಾದನು ಸ್ಥಾಪಿಸಿದನೆಂದು ಹೇಳಲಾಗುವ ಕಂಬದ ಮುಂದಿರುವ ಯೋಗಾನರಸಿಂಹನನ್ನು ಕಂಬದ ನರಸಿಂಹಸ್ವಾಮಿ ಎಂದು ಕರೆಯುತ್ತಾರೆ.

ranga1ದೇಶದ ಹಲವೆಡೆ ವರ್ಷಕ್ಕೊಮ್ಮೆ ಅಥವಾ ವಿಶೇಷ ದಿನಗಳಲ್ಲಿ ಸ್ವಾಮಿಯ ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ. ಆದರೆ ತಿರುಮಲೈ ಶ್ರೀರಂಗನಾಥಸ್ವಾಮಿ ದೇವಾಲಯದ ಹೊರಗಿರುವ ಮರಗಳು, ಧ್ವಜಪಟ ಕಂಬ, ಹೆಬ್ಬಾಗಿಲುಗಳನ್ನು ಬೇಧಿಸಿ ಪ್ರತಿ ದಿನವೂ ಸೂರ್ಯಾಸ್ತ ಸಮಯದಲ್ಲಿ   ಸೂರ್ಯನ ಕಿರಣಗಳು ರಂಗನಾಥಸ್ವಾಮಿಯ ಪಾದದಿಂದ ಶಿರದವರೆಗೆ ಚುಂಬಿಸುವುದು ಇಲ್ಲಿನ ವಿಶೇಷವಾಗಿದೆ. ಉತ್ತರಾಯಣ ಕಾಲದಲ್ಲಿ ಸೂರ್ಯ ಮುಳುಗುವ ಹೊತ್ತಿನಲ್ಲಿ ಸೂರ್ಯನ ರಶ್ಮಿ ಮೊದಲು ಸ್ವಾಮಿಯ ಶಿರದ ಮೇಲಿನ ಕಿರೀಟವನ್ನು ಪ್ರಜ್ವಲಿಸಿ ನಂತರ ಮೂರ್ತಿಯ ಮುಂದಿರುವ ಸಾಲಿಗ್ರಾಮಕ್ಕೆ ಸೂರ್ಯಕಿರಣಗಳು ಚುಂಬಿಸಿ, ಆನಂತರ ನೇರವಾಗಿ ತಿರುಮಲೆ ರಂಗನಾಥಸ್ವಾಮಿ ಮೂರ್ತಿಯ ಮೇಲೆ ಬಿದ್ದು ರಂಗನ ಮೂರ್ತಿ ಚಿನ್ನದಂತೆ ಪ್ರಜ್ವಲಿಸುವುದನ್ನು ವರ್ಣಿಸುವುದಕ್ಕಿಂತಲು ನೋಡುವುದಕ್ಕೆ ಮಹದಾನಂದವಾಗುತ್ತದೆ.

ಪ್ರತಿ ದಿನವೂ ಬೆಳಿಗ್ಗೆ 6 ಗಂಟೆಗೆ  ಅರ್ಚಕರು ದೇವಾಲಯವನ್ನು ತೆರೆದು, ತಿರುಪ್ಪವೈ ನಲ್ಲಿರುವ  ಒಂದೊಂದು ಪಾಶುರಗಳ ಪಾರಾಯಣ ಆಂಡಾಳ್ ತಾಯಿಯ ಸಮ್ಮುಖದಲ್ಲಿ ಶ್ರೀರಂಗನಾಥಸ್ವಾಮಿಯ ಪಾದಕಮಲಗಳಿಗೆ ಅರ್ಪಣೆಯಾಗುತ್ತದೆ. ನಂತರ  8:30 ರಿಂದ 1:30ರ ವರೆಗೆ ಭಕ್ತಾದಿಗಳ ದರ್ಶನಕ್ಕೆ ಅವಕಾಶವಿರುತ್ತದೆಯಲ್ಲದೇ, ಪುನಃ ಸಂಜೆ 4:30 ರಿಂದ ರಾತ್ರಿ 7:30ರ ವರೆಗೆ ತೆರೆದಿರುತ್ತದೆ,

ಮಾಗಡಿಯ ಸ್ವರ್ಣಾದ್ರಿಗಿರಿ ತಿರುಮಲೆಯಲ್ಲಿ ಪ್ರತಿ ಹಬ್ಬ ಹರಿದಿನಗಳಲ್ಲಿ  ಶ್ರೀರಂಗನಿಗೆ ವಿಶೇಶ ಪೂಜೆ ಪುನಸ್ಕಾರಗಳು ನಡೆದರೆ, ಧನುರ್ಮಾಸದ ಪೊಜಾಸೇವೆಗಳು ಬೆಳಿಗ್ಗೆ 4.30ರಿಂದಲೇ ಪ್ರಾರಂಭವಾಗಿ ಕಾಮಧೇನು ಗೋಪೊಜೆಯ ನಂತರ ಶ್ರೀರಂಗನಿಗೆ ಆಂತರಿಕವಾಗಿ ದೈನಂದಿನ ತಿರುವರಾಧನೆ ಸಮರ್ಪಣೆಯಾಗುತ್ತದೆ. ಇದಾದ ಬಳಿಕೆ ಸ್ವಾಮಿಗೆ ಅರ್ಚನೆ, ನಿವೇಧನೆ, ತಿರುಪ್ಪಾವೈ ಪಾರಯಣ ನೆರವೇರಿಸಲಗುತ್ತದೆ.

ಇನ್ನು ಪ್ರತಿ ವರ್ಷದ ಚೈತ್ರ ಮಾಸದ ಹುಣ್ಣಿಮೆಯ ಮುಂಚೆ ಬರುವ ಉತ್ತರಾ ನಕ್ಷತ್ರದಂದು ಶ್ರೀ  ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವವನ್ನು ಬಹಳ  ಅದ್ದೂರಿಯಿಂದ ನಡೆಸಲಾಗುತ್ತದೆ ಈ ಸುಂದರ ಕ್ಷಣಗಳನ್ನು  ಕಣ್ತುಂಬಿಸಿಕೊಂಡು ಭಗವಂಗನ  ಅನುಗ್ರಹಕ್ಕೆ ಪಾತ್ರರಾಗಲೂ ದೇಶವಿದೇಶಗಳಿಂದ ಸಹಸ್ರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಇದೇ ಸಮಯದಲ್ಲಿ ಇಲ್ಲಿ ನಡೆಯುವ ದನಗಳ ಜಾತ್ರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ.

ದೇವಾಲಯದ ಮುಂಭಾಗದಲ್ಲಿ ಪುರಾತನ ಕಾಲದ ಪುಷ್ಕರಣಿ ಇದ್ದು ಅಲ್ಲಿನ ನೀರನ್ನು ಸ್ವಾಮಿಯ ಅಭಿಷೇಕಕ್ಕೆ ಬಳಸಲಾಗುತ್ತಾದೆ. ಅದರ ಪಕ್ಕದಲ್ಲೇ  ಇರುವ ಅನ್ನಪೂರ್ಣ ಮಂದಿರದಲ್ಲಿ ಪ್ರತಿ ನಿತ್ಯವೂ.ದಾಸೋಹವಿದ್ದು  ದೇವಾಲಯಕ್ಕೆ ಭೇಟಿ ನೀಡುವ ಸಹಸ್ರಾರು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ.

ಇಷ್ಟೆಲ್ಲಾ ತಿಳಿದ ಮೇಲೆ ಇನ್ನೇಕ ತಡಾ ಈ ವಾರಾಂತ್ಯದಲ್ಲಿ ಸಮಯ ಮಾಡಿ ಕೊಂಡು ಮಾಗಡಿಯ ತಿರುಮಲೈ ಶ್ರೀ ರಂಗನಾಥ ಸ್ವಾಮಿಯ ದರ್ಶನವನ್ನು ಪಡೆದು ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗ್ತೀರೀ ತಾನೇ?

ಏನಂತೀರಿ?

ನಿಮ್ಮವನೇ ಉಮಾಸುತ

ವೈಕುಂಠ ಏಕಾದಶಿ  

ಏಕಾದಶಿ ಎಂದರೆ 11ನೇಯ ದಿನವಾಗಿದ್ದು, ನಮ್ಮ ಹಿಂದೂ ಪಂಚಾಂಗದಲ್ಲಿ ಪ್ರತಿ 15 ದಿನಕ್ಕೊಮ್ಮೆ (ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ) ಹನ್ನೊಂದನೆಯ ದಿನಕ್ಕೆ ಏಕಾದಶಿ ಬರುತ್ತದೆ. ಈ ದಿನದಂದು ಬಹುತೇಕ ಆಸ್ತಿಕರು ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಹೀಗೆ ಚೈತ್ರ ಮಾಸದ ಕಾಮದಾ ಏಕಾದಶಿ, ಆಷಾಢ ಮಾಸದ ಏಕಾದಶಿ, ಪುಷ್ಯ ಮಾಸದ ವೈಕುಂಠ ಏಕಾದಶಿ, ಫಾಲ್ಗುಣದ ಪಾಪ ವಿಮೋಚನೀ ಏಕಾದಶಿಯವರೆಗೂ ಹೀಗೆ ವರ್ಷವಿಡೀ ಬರುವ ಏಕಾದಶಿಗಳಿಗೆ ಅದರದ್ದೇ ಆದ ಮಹತ್ವವಿದೆ.

ಇನ್ನು ವೈಜ್ಞಾನಿಕವಾಗಿಯೂ ಏಕಾದಶಿಯ ಉಪವಾಸ ಅತ್ಯಂತ ಮಹತ್ವದ್ದಾಗಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸವಾಸ ಮಾಡುವುದೂ ಒಂದು ರೀತಿಯ ಔಷಧ ಎಂದು ಆಯುರ್ವೇದದಲ್ಲಿ ತಿಳಿಸಲಾಗಿರುವ ಕಾರಣ ಏಕಾದಶಿ ಧಾರ್ಮಿಕವಾಗಿ ಅತ್ಯಂತ ಮಹತ್ವವಾಗಿದೆ. ಉಪವಾಸದ ಮುಖಾಂತರ ಪಚನ ಕ್ರಿಯೆ ಶುದ್ಧಿಗೊಂಡಲ್ಲಿ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಇಡೀ ದಿನ ನಿಟ್ಟುಪವಾಸ ಮಾಡುಲು ಆಶಕ್ತರಾದವರು ಮತ್ತು ವಯೋವೃದ್ಧರು, ಸಾತ್ವಿಕವಾದ ಲಘು ಫಲಹಾರವಾದ ವಿವಿಧ ಬಗೆಯ ಹಣ್ಣುಗಳು, ಹಾಲು ಮತ್ತು ಮುಸುರೆಯಲ್ಲದ ಪದಾರ್ಥಗಳನ್ನು ಸ್ವೀಕರಿಸುವ ಪದ್ದತಿಯೂ ರೂಢಿಯಲ್ಲಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳನ್ನೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಿದ್ದು ಅಂದು ಉಪವಾಸದಿಂದಿದ್ದು, ಮಾನಸಿಕವಾಗಿ ದೃಢಚಿತ್ತದಿಂದ ಹರಿ ನಾಮ ಜಪ ಮಾಡಿದಲ್ಲಿ ಪುಣ್ಯ ಲಭಿಸುತ್ತದೆ ಎಂದೇ ಬಹುತೇಕ ಆಸ್ತಿಕರ ನಂಬಿಕೆಯಾಗಿದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

vk2ಏಕಾದಶಿ ವ್ರತದ ಅಂಗವಾಗಿ, ಏಕಾದಶಿಯ ಹಿಂದಿನ ದಿನ ದಶಮಿಯಂದು ಕೇವಲ ಮಧ್ಯಾಹ್ನ ಒಂದು ಹೊತ್ತು ಮಾತ್ರವೇ ಊಟ ಮಾಡಿ, ಸಕಲ ಭೋಗಗಳನ್ನು ತ್ಯಜಿಸಿ, ಏಕಾದಶಿಯಂದು ಇಡೀ ದಿನ ಉಪವಾಸವಿದ್ದು, ಮಾರನೆಯ ದಿನ ದ್ವಾದಶಿಯಂದು ನಿತ್ಯಕರ್ಮ ಮುಗಿಸಿ ಭೋಜನ ಮಾಡುವುದು ರೂಢಿಯಲ್ಲಿದೆ. ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ ಭಗವಂತನ ಸಮೀಪದಲ್ಲಿರುವುದು ಎಂಬ ಅರ್ಥ ಬರುತ್ತದೆ. ಹೀಗೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥವಾಗಿದೆ. ಹೀಗೆ ಮಾಡುವುದರಿಂದ ಏಕ ಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.

WhatsApp Image 2022-01-13 at 8.45.12 AMಉಳಿದೆಲ್ಲಾ ಏಕಾದಶಿಗಿಂತಲೂ ಪುಷ್ಯಮಾಸದ ಶುಕ್ಲಪಕ್ಷದಂದು ಬರುವ ವೈಕುಂಠ ಏಕಾದಶಿಯು ಅತ್ಯಂತ ವಿಶೇಷವಾಗಿದೆ. ಈ ದಿನದಂದು ವೈಕುಂಠದ (ಸ್ವರ್ಗ ಲೋಕ ಅಥವಾ ವಿಷ್ಣುವಾಸ ಸ್ಥಾನ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ದೇಶಾದ್ಯಂತ ಇರುವ ವಿಷ್ಣು ಅಥವಾ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಅಂದು ಬಹುತೇಕ ದೇವಾಲಯಗಳಲ್ಲಿ ದೇವಸ್ಥಾನದ ಉತ್ಸವ ಮೂರ್ತಿಗಳನ್ನು ಎತ್ತರದ ಉಯ್ಯಾಲೆಯಲ್ಲಿ ತೂಗಿ ಹಾಕಿ ಅದರ ಕೆಳಗೆ ಸ್ವರ್ಗದ ಬಾಗಿಲಿನಂತ ಅಲಂಕರಿಸಿ ಅದರ ಕೆಳಗೆ ಭಕ್ತಾದಿಗಳು ಹಾದು ಹೋಗುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಶರೀರಮಾಧ್ಯಂ ಖಲು ಧರ್ಮಸಾಧನಂ ಎಂದರೆ, ಒಳ್ಳೆಯ ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೆ, ಅದಕ್ಕೆ ದೇಹ ಮತ್ತು ಮನಸ್ಸು ಸದೃಢವಾಗಿರುವುದು ಅತ್ಯಗತ್ಯವಾಗಿದೆ. ಹಾಗಾಗಿ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಸುಧಾರಿಸುವ ಕಾರಣ, ಜೀವನದಲ್ಲಿ ಎದುರಾಗುವ ಎಲ್ಲಾ ಸಂಕಷ್ಟಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಪರಮಪದವನ್ನು ಸೇರಬಹುದು ಎಂಬುದೇ ವೈಕುಂಠ ಏಕಾದಶಿಯ ವ್ರತಾಚರಣೆ ಹಿಂದಿರುವ ಅಂಶವಾಗಿದೆ.

ವೈಕುಂಠ ಏಕಾದಶಿಯ ಆಚರಣೆಯ ಹಿಂದೆಯೂ ರೋಚಕವಾದ ಪೌರಾಣಿಕ ಕಥೆಯಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನ ಸಾಕು ತಂದೆ ನಂದಗೋಪನು ತಪ್ಪದೇ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ಆಚರಿಸುತ್ತಿದ್ದ. ಅದೊಮ್ಮೆ ಏಕಾದಶಿಯ ವ್ರತವನ್ನು ಆಚರಿಸಿದ ಮಾರನೇಯ ದಿನ ದ್ವಾದಶಿಯಂದು ಬೆಳ್ಳಂಬೆಳಿಗ್ಗೆ ಯಮುನಾನದಿಯಲ್ಲಿ ಸ್ನಾನಕ್ಕಿಳಿ. ಆ ಸಮಯ ರಾಕ್ಷಸರ ಸಂಚಾರದ ಸಮಯವಾದ್ದರಿಂದ, ವರುಣದೇವನ ಸೇವಕನು ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ಯುತ್ತಾನೆ. ಸ್ನಾನಕ್ಕೆಂದು ಹೋದ ನಂದನು ಎಷ್ಟು ಹೊತ್ತಾದರೂ ಬಾರದಿದ್ದದ್ದನ್ನು ಗಮನಿಸಿದ, ಗೋಕುಲವಾಸಿಗಳು ಬಲರಾಮ ಮತ್ತು ಕೃಷ್ಣರಿಗೆ ಈ ಸುದ್ದಿ ತಿಳಿಸುತ್ತಾರೆ. ಕೂಡಲೇ, ತಂದೆಯನ್ನು ಕರೆತರಲು ಶ್ರೀಕೃಷ್ಣನು ವರುಣಲೋಕಕ್ಕೆ ತೆರಳಿ ಅಲ್ಲಿ ವರುಣದೇವನನ್ನು ಭೇಟಿಯಾದಾಗ, ತಮ್ಮ ಸೇವಕರಿಂದಾದ ತಪ್ಪನ್ನು ಮನ್ನಿಸಬೇಕೆಂದು ಕೋರಿದ ವರುಣನು ನಂದಗೋಪನನ್ನು ಸಕಲ ಮರ್ಯಾದೆಯೊಂದಿಗೆ ಶ್ರೀ ಕೃಷ್ಣನೊಂದಿಗೆ ಕಳುಹಿಸಿಕೊಡುತ್ತಾನೆ.

ವರುಣಲೋಕದಿಂದ ಹಿಂದುರಿಗಿದ ನಂದಗೋಪನು ತನ್ನ ಪರಿವಾರದೊಂದಿಗೆ ವರುಣನ ಲೋಕದ ವೈಭವದ ಜೊತೆಗೆ ವರುಣ ದೇವನನು ತನ್ನ ಮಗನಿಗೆ ತೋರಿದ ಆದರಾತಿಥ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ, ಆ ಗೋಪಾಲಕರಿಗೆಲ್ಲಾ ಶ್ರೀಕೃಷ್ಣನೇ ಸಾಕ್ಷಾತ್ ಭವಂತನಾಗಿದ್ದು ಅಲ್ಪಮತಿಗಳಾದ ನಮಗೆ ಅದರ ಅರಿವಿಲ್ಲದೇ ಹೋಯಿತಲ್ಲಾ ಎಂದು ಪರಿತಪಿಸಿ, ಶ್ರೀಕೃಷ್ಣನ ಬಳಿ ಕ್ಷಮೆಯಾಚಿಸುತ್ತಾರೆ. ಆಗ ಶ್ರೀಕೃಷ್ಣನು ಅವರೆಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ಸೂಚಿರುತ್ತಾನೆ. ಶ್ರೀಕೃಷ್ಣನ ಆದೇಶದಂತೆ ಬ್ರಹ್ಮಕುಂಡಲ್ಲಿ ಮುಳುಗಿದವರಿಗೆಲ್ಲರಿಗೂ ವೈಕುಂಠದ ದರ್ಶನವಾಗಿ ಅವರ ಜೀವನ ಪರಮ ಪಾವನವಾಯಿತು. ಈ ಕಾರಣಕ್ಕಾಗಿಯೇ ಆ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ ಎಂಬ ನಂಬಿಕೆ ಇದೆ.

ಮತ್ತೊಂದು ಪುರಾಣದ ಪ್ರಕಾರ, ದೇವತೆಗಳ ರಾಜನಾದ ದೇವೇಂದ್ರನು ತನ್ನ ಐರಾವತದ ಮೇಲೇರಿ ಎಲ್ಲಿಗೋ ಹೋಗುತ್ತಿದ್ದಾಗ ಅವರಿಗೆ ದೂರ್ವಾಸ ಮಹರ್ಷಿಗಳು ಎದಿರಾಗುತ್ತಾರೆ. ಆಗ ಮಹರ್ಷಿಗಳು ರಾಜಾ ಪ್ರತ್ಯಕ್ಷ ದೇವತ. ಅತನಿಗೆ ಗೌರವ ಸಲ್ಲಿಸುವುದು ಕರ್ತವ್ಯ ಎಂಬು ಭಾವಿಸಿ, ಸುವಾಸನೆಯುಳ್ಳ ಹೂವಿನ ಮಾಲೆಯನ್ನು ಇಂದ್ರನಿಗೆ ಗೌರವಪೂರ್ವಕವಾಗಿ ಕೊಡುತ್ತಾರೆ. ಅದರೆ ಅದಾವುದೋ ಯೋಚನೆಯಲ್ಲಿದ್ದ ಇಂದ್ರನು ಒಂದು ರೀತಿಯ ತಿರಸ್ಕಾರ ಇಲ್ಲವೇ ದುರಹಂಕಾರದಿಂದ ಆ ಹೂವಿನ ಮಾಲೆಯನ್ನು ತನ್ನ ಆನೆಯ ಕುತ್ತಿಗೆಗೆ ಹಾಕುತ್ತಾನೆ. ಕತ್ತೆಗೆ ಏನು ಗೊತ್ತು ಕಸ್ತೂರಿ ವಾಸನೆ ಎನ್ನುವಂತೆ ಅಂತಹ ಸುವಾಸನೆಯುಕ್ತ ಹೂವಿನ ಹಾರ ಆನೆಗೆ ಒಗ್ಗದೆ ಅದು ತನ್ನ ಕೊರಳಿನಿಂದ ಕಿತ್ತು ತೆಗೆದು ತನ್ನ ಕಾಲಿನಿಂದ ಹೊಸಕಿ ಹಾಕುತ್ತದೆ. ತಾನು ಆಶೀರ್ವಾದದ ರೂಪದಲ್ಲಿ ಕೊಟ್ಟ ಹೂವಿನ ಮಾಲೆಗೆ ಇಂದ್ರನು ಅಪಮಾನ ಮಾಡಿದ್ದನ್ನು ಸಹಿಸಿದ ಪರಮ ಕೋಪಿಷ್ಠ ದೂರ್ವಾಸರು, ಇಂದ್ರನ ಸಮೇತ ದೇವಾನು ದೇವತೆಗಳ ಸಕಲ ಶಕ್ತಿ ಮತ್ತು ಐಶ್ವರ್ಯಗಳು ನಶಿಸಿ ಹೋಗಲಿ ಎಂದು ಶಾಪವನ್ನು ನೀಡುತ್ತಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ, ಇಂದ್ರನಿಗೆ ತನ್ನ ತಪ್ಪಿನ ಅರಿವಾಗಿ ಕೂಡಲೇ, ಅಂಬಾರಿಯಿಂದ ಕೆಳಗಿಳಿದು ದುರ್ವಾಸರ ಬಳಿ ಮಾಡಿದ ಅಚಾತುರ್ಯಕ್ಕೆ ಕ್ಷಮೆ ಕೇಳಿದರೂ ಶಾಂತರಾಗದ ದೂರ್ವಾಸರು ಸುಮ್ಮನೆ ಹೊರಟು ಹೋಗುತ್ತಾರೆ.

bali

ಇದಾದ ಕೆಲವೇ ದಿನಗಳಲ್ಲೇ ರಾಕ್ಷಸ ರಾಜ ಬಲಿ ಚಕ್ರವರ್ತಿಯು ಶಕ್ತಿಹೀನರಾದ ದೇವತೆಗಳ ಮೇಲೆ ಧಾಳಿ ನಡೆಸಿ ಮೂರು ಲೋಕಗಳನ್ನೂ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಆಗ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಕಲ ದೇವಾನು ದೇವತೆಗಳು ವಿಷ್ಣುವಿನ ಬಳಿ ಹೋಗಿ ತಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡು ಎಂದು ಕೋರಿದಾಗ, ಭಗವಾನ್ ವಿಷ್ಣು ವಾಮನನ ರೂಪದಲ್ಲಿ ಭೂಲೋಕಕ್ಕೆ ಬಂದು ಬಲಿ ಚಕ್ರವರ್ತಿಯ ಬಳಿ ಮೂರು ಹೆಜ್ಜೆಯ ದಾನ ಕೇಳಿ, ವಿಶ್ವರೂಪ ತಾಳಿ, ಮೊದಲ ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೆಟ್ಟು, ಎರಡನೇ ಹೆಜ್ಜೆಯನ್ನು ಆಕಾಶವನ್ನೇಲ್ಲಾ ಆಕ್ರಮಿಸಿ, ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ ಬಂದಿರುವುದು ಸಾಮಾನ್ಯ ವಟುವಾಗಿರದೇ, ಸಾಕ್ಷಾತ್ ವಿಷ್ಣು ಎಂಬುದನ್ನು ಅರಿತ ಬಲಿ ಚಕ್ರವರ್ತಿ ಮೂರನೇ ಹೆಜ್ಜೆಯನ್ನು ತನ್ನ ತಲೆಯ ಮೇಲಿಡಿ ಎಂದು ಹೇಳಿದಾಗ, ವಾಮನರೂಪಿ ವಿಷ್ಣು, ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ತುಳಿದು ಕಳಿಸುತ್ತಾನೆ.

samudra

ಬಲಿ ಚಕ್ರವರ್ತಿಯ ಧಮನದ ನಂತರ ಕಳೆದು ಹೋದ ಲೋಕವೆಲ್ಲಾ ಹಿಂದಿರುಗಿದರೂ, ದೂರ್ವಾಸರ ಶಾಪದಿಂದಾಗಿ, ದೇವತೆಗಳ ಶಕ್ತಿ ಮಾತ್ರ ಇನ್ನೂ ಕ್ಷೀಣಿಸಿಯೇ ಇದ್ದಾ ಕಾರಣ, ಮತ್ತೆ ವಿಷ್ಣುವಿನ ಆಜ್ಞೆಯಂತೆ ಸಮುದ್ರ ಮಂಥನ ಮಾಡಿ ಅದರಿಂದ ಹೊರಬರುವ ಅಮೃತವನ್ನು ಗಳಿಸುವ ಸಲುವಾಗಿ ರಾಕ್ಷಸರೊಂದಿಗೆ ಸೇರಿ ಮಂದರಗಿರಿ ಪರ್ವತವನ್ನು ಕಡಗೋಲನ್ನಾಗಿಸಿ, ಆದಿಶೇಷನನ್ನು ಹಗ್ಗವನ್ನಾಗಿಸಿಕೊಂಡು ದೇವರು ಮತ್ತು ದಾನವರು ಸೇರಿಕೊಂಡು ಕ್ಷೀರ ಸಮುದ್ರವನ್ನು ಕಡೆಯಲು ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ದೇವತೆಗಳಿಗೆ ಶಕ್ತಿ ಹಿಂದಿರುಗಿ ಬರಲಿ ಎಂದು ಭೂಲೋಕದ ಋಷಿಮುನಿಗಳು ಇಡೀ ದಿನ ಉಪವಾಸವಿದ್ದು ಶ್ರೀ ಸೂಕ್ತ, ಪುರುಷುಕ್ತವನ್ನು ಪಠಿಸುತ್ತಾ ಯಜ್ಞಯಾಗಾದಿಗಳನ್ನು ಮಾಡಿ ದೇವತೆಗಳಿಗೆ ಹವಿಸ್ಸನ್ನು ಕೊಟ್ಟು, ಭಗವಂತನನ್ನು ಸ್ಮರಣೆ ಮಾಡುತ್ತಾರೆ. ಹೀಗೆ ಪೂಜೆ ಮಾಡಿದ ದಿನವೇ ಪರಶಿವ ಹಾಲಾಹಲವನ್ನು ಕುಡಿದು ವಿಷಕಂಠನಾದರೇ ಸಮುದ್ರಮಂಥನದಲ್ಲಿ ಅಂತಿಮವಾಗಿ ಅಮೃತವು ದೊರಕಿದ ದಿನವು ಏಕಾದಶಿಯಾಗಿದ್ದು, ಅಂದಿನಿಂದಲೇ ಪವಿತ್ರವಾದ ಏಕಾದಶಿ ವ್ರತದ ಆಚರಣೆಗೆ ಬಂದಿತು ಎಂಬ ನಂಬಿಕೆ ಇದೆ. ಈ ರೀತಿಯಾಗಿ ಏಕಾದಶಿಯಂದು ಉಪವಾಸ ಮಾಡಿ ಭಗವಂತನ ಧ್ಯಾನ ಮಾಡಿದರೆ ಆಯುರಾರೋಗ್ಯ ಐಶ್ವರ್ಯಾದಿಗಳು ಅಭಿವೃದ್ಧಿಯಾಗುತ್ತದೆ ಎಂದು ಶ್ರೀಕೃಷ್ಣನು ಏಕಾದಶಿ ವ್ರತದ ಮಹತ್ವವನ್ನು ಧರ್ಮರಾಯನಿಗೆ ತಿಳಿಸುತ್ತಾನೆ ಎಂಬ ಪ್ರತೀತಿಯೂ ಇದೆ.

kur

ಮಹಾಭಾರತ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದ ದಿನವೂ ಏಕಾದಶಿಯಾಗಿತ್ತು ಎಂಬ ನಂಬಿಕೆ ಇದೆ.
ಮಹಾ ವಿಷ್ಣುವು ಬಹಳ ದಿನಗಳವರೆಗೆ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೂ ಏಕಾದಶಿಯಾಗಿದ್ದು, ಹಾಗಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು ಎಂಬ ಪದ್ದತಿ ಇದೆ ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಹೋಮ ಹವನಗಳು, ಜಪ-ತಪಗಳು ನಡೆಯುವುದಲ್ಲದೇ, ಈ ದಿನ ಉಪವಾಸ ಹಾಗೂ ಜಾಗರಣೆ ಮಾಡಿದರೆ ಒಳ್ಳೆಯದಾಗುತ್ತದೆ. ವಿಷ್ಣು ಪುರಾಣದ ಪ್ರಕಾರ ರಾಕ್ಷಸರ ವಿರೋಧದ ನಡುವೆಯೂ ವಿಷ್ಣುವು ವೈಕುಂಠ ಏಕಾದಶಿ ದಿನ ತನ್ನ ವೈಕುಂಠದ ಬಾಗಿಲನ್ನು ತೆರೆದಿರುತ್ತಾನಂತೆ. ಹಾಗಾಗಿ ಈ ಕಥೆಯನ್ನು ಓದುವುದರಿಂದ ಇಲ್ಲವೇ ಕೇಳುವುದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವುದಲ್ಲದೇ ಮೋಕ್ಷವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ.

ಧನುರ್ಮಾಸದ ಶುಕ್ಲ ಏಕಾದಶಿ ದಿನವನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ಮುಕ್ಕೋಟಿ ಏಕಾದಶಿಯ ದಿನ ಉಪವಾಸಮಾಡಿದಲ್ಲಿ, ವರ್ಷದ ಉಳಿದ 23 ಏಕಾದಶಿಗಳಲ್ಲಿ ಉಪವಾಸ ಮಾಡಿದ ಫಲ ಸಿಗುವುದಲ್ಲದೇ, ರಾಜಸಿಕ ಹಾಗೂ ತಾಮಾಸಿಕ ಗುಣಗಳನ್ನು ಜಯಿಸುವ ಮೂಲಕ ಮುಕ್ತಿಗೆ ಮಾರ್ಗ ದೊರೆಯುತ್ತದೆ ಎಂಬ ನಂಬಿಕೆ ಇದೆ.

vk3

ಇಷ್ಟೆಲ್ಲಾ ವಿಷಯಗಳು ತಿಳಿದ ನಂತರ ಇನ್ನೇಕೆ ತಡಾ, ಇಂದು ವೈಕುಂಠ ಏಕಾದಶಿಯಂದು ಮುಂಜಾನೆಯೇ ಸ್ನಾನ ಸಂಧ್ಯವಂಧನೆಗಳನ್ನು ಮುಗಿಸಿ, ಶುಚಿರ್ಭೂತವಾಗಿ, ಭಕ್ತಿಯಿಂದ ಶ್ರೀಮನ್ನಾರಾಯಣನ ದರ್ಶನ ಪಡೆದು ದೇವಾಲಯದ, ವೈಕುಂಠ ದ್ವಾರದ ಮೂಲಕ ಹೊರಗೆ ಬರುವ ಮೂಲಕ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳ ಪರಿಹಾರವನ್ನು ಪಡೆದು ಕೊಳ್ಳೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಗೋವು ಕಳ್ಳರು

ki

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ ನೋಡಿಕೊಂಡ. ಅಷ್ಟೇ ಅಲ್ಲದೇ, ಬಹುತೇಕರ ಮನೆಗಳಲ್ಲಿ ಅವುಗಳಿಗೆ ತಮ್ಮ ಹೆತ್ತ ಮಕ್ಕಳಿಗೆ ಹೆಸರಿಡುವಂತೆಯೇ ಹೆಸರನ್ನು ಇಟ್ಟು ಬಹಳ ಅಕ್ಕರೆಯಿಂದ ಸಾಕುವುದಲ್ಲದೇ ಅವುಗಳನ್ನು ತಮ್ಮ ಮನೆಯ ಕುಟುಂಬದ ಸದಸ್ಯರೇ ಎನ್ನುವಂತೆ ಕಾಪಾಡಿಕೊಳ್ಳುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಸರಿ. ಇನ್ನು ಹಳೇ ಮೈಸೂರಿನ ಕಡೆ ಸಂಕ್ರಾಂತಿಯ ಹಬ್ಬ ಮತ್ತು ಉತ್ತರ ಕರ್ನಾಟಕದಲ್ಲಿ ಮಳೆಗಾಲದ ಮುಂಚೆ ಸಂಭ್ರಮ ಸಡಗರಗಳಿಂದ ಅಚರಿಸುವ ಕಾರಹುಣ್ಣಿಮೆಯಂದು ತಮ್ಮ ದನ ಕರುಗಳಿಗೆ ಚೆನ್ನಾಗಿ ಮೈತೊಳೆದು ಅವುಗಳ ಕೋಡುಗಳಿಗೆ ಬಣ್ಣ ಬಣ್ಣದ ಟೇಪು ಇಲ್ಲವೇ ಬಣ್ಣಗಳನ್ನು ಬಳಿದು ಅವುಗಳನ್ನು ಗೋಮಾತೆ ಎಂದು ಪೂಜಿಸುವುದಲ್ಲದೇ, ಸಂಜೆ ಊರ ತುಂಬಾ ಮೆರವಣಿಗೆ ಮಾಡಿ ಕಿಚ್ಚು ಹಾಯಿಸುವ ಪದ್ದತಿ ಇರುವುದು ಎಲ್ಲರಿಗೂ ತಿಳಿಸಿರುವ ವಿಷಯವಷ್ಟೇ.

gov6

ಇನ್ನು ಕೃಷಿಕರಿಗೆ ತಮ್ಮ ಕೃಷಿಯ ಜೊತೆ ಹೈನುಗಾರಿಕೆಯೂ ಒಂದು ಉಪ ಉದ್ಯಮವಾಗಿದ್ದು ಎತ್ತುಗಳು ಹೊಲದಲ್ಲಿ ರೈತರ ಸರಿಸಮನಾಗಿ ದುಡಿದರೆ, ಹಸುಗಳು ಹಾಲನ್ನು ಕೊಡುವುದಲ್ಲದೇ, ಅವುಗಳ ಸಗಣಿ ಮತ್ತು ಗಂಜಲಗಳೆಲ್ಲವೂ ಸಾವಯವ ಗೊಬ್ಬರದಲ್ಲಿ ಬಳಕೆಯಾಗುತ್ತದೆ. ಅದೆಷ್ಟೋ ಮನೆಗಳಲ್ಲಿ ಹತ್ತಾರು ಹಸುಗಳನ್ನು ಸಾಕಿಕೊಂಡು ತಮ್ಮ ಮನೆಯಲ್ಲಿ ಹೆಚ್ಚಾದ ಹಾಲಿನಿಂದ ಮೊಸರು, ಬೆಣ್ಣೆ, ತುಪ್ಪ ತಯಾರಿಸಿಯೋ ಇಲ್ಲವೇ, ನೇರವಾಗಿ ಸ್ಥಳೀಯ ಹಾಲಿನ ಡೈರಿಗೆ ಮಾರುವ ಮೂಲಕ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

gov3

ತಾನೊಂದು ಬಗೆದರೆ ದೆವ್ವವೊಂದು ಬಗೆದೀತು ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಗೋವುಗಳ್ಳರ ಹಾವಳಿ ವಿಪರೀತವಾಗಿದ್ದು, ರಾತ್ರೋ ರಾತ್ರಿ ಸದ್ದಿಲ್ಲದೆ ಮನೆಗಳಿಗೆ ನುಗ್ಗಿಯೋ ಇಲ್ಲವೇ ಹಗಲು ಹೊತ್ತಿನಲ್ಲಿ ಮೇಯಲು ಬಿಟ್ಟ ದನಕರುಗಳನ್ನು ಮಾಂಸದ ಆಸೆಗಾಗಿ ಕದ್ದೊಯ್ಯುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಆಗಿದೆ.

gov1

ಈ ರೀತಿಯ ಕಳ್ಳತನವನ್ನು ಮಾಡುವವರು ಕೇವಲ ಸಣ್ಣ ಪುಟ್ಟ ಕಳ್ಳರಾಗಿರದೇ, ಅವರ ಹಿಂದೆ ಒಂದು ವ್ಯವಸ್ಥಿತ ಹೈಟೆಕ್ ಜಾಲವಿದ್ದು ಅದಕ್ಕೆ ಸ್ಥಳೀಯರ ಬೆಂಬಲದಿಂದಾಗಿ ಹಗಲು ಹೊತ್ತಿನಲ್ಲಿ ಎಲ್ಲವನ್ನೂ ಯೋಜನೆ ಮಾಡಿ ರಾತ್ರಿ ಹೊತ್ತು ಕದ್ದೊಯ್ಯುತ್ತಿದ್ದಾರೆ. ಈ ಸಮಯದಲ್ಲಿ ಅಕಸ್ಮಾತ್ ಮನೆಯವರಿಗೆ ಎಚ್ಚರವಾಗಿ ಆ ಕಳ್ಳರನ್ನು ತಡೆಯಲು ಪ್ರಯತ್ನಿಸಿದಲ್ಲಿ ಮುಖ ಮೂತಿಯನ್ನು ನೋಡದೆ ಮಾರಕಾಸ್ತ್ರಗಳಿಂದ ಧಾಳಿಮಾಡಿ ಪರಾರಿಯಾಗುವ ಕಳ್ಳರನ್ನು ಎಷ್ಟೇ ದೂರು ದಾಖಲಿಸಿದರೂ ಹಿಡಿಯಲು ಪೋಲೀಸರು ಮುಂದಾಗದಿರುವುದು ಅವರೂ ಸಹಾ ಈ ಕೃತ್ಯದಲ್ಲಿ ಪರೋಕ್ಷವಾಗಿ ಭಾಗಿಗಳಾಗಿದ್ದಾರಾ? ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

gov5

ಅಕಸ್ಮಾತ್ ಹಳ್ಳಿಯ ಹುಡುಗರು ಗುಂಪು ಕಟ್ಟಿಕೊಂಡು ಅಂತಹ ಗೋವು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿ, ಆ ಗೋವುಗಳ್ಳರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಹತ್ಯೆಯಾದವರು ಮತ್ತು ಶಾಶ್ವತವಾಗಿ ಕೈ ಕಾಲುಗಳನ್ನು ಕಳೆದುಕೊಂಡವರ ಉದಾಹರಣೆ ಲೆಕ್ಕವಿಲ್ಲದಷ್ಟಿದೆ. ಆಕಸ್ಮಾತ್ ಗೋಗಳ್ಳರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದೇ ತಡಾ ಅದಕ್ಕೊಂದು ಕೋಮುವಾದದ ಬಣ್ಣವನ್ನು ಕಟ್ಟಿ, ಸಕಲ ಸನ್ಮಾನಗಳಿಂದ ಗೋವು ಕಳ್ಳನ್ನು ಬಿಡಿಸಿಕೊಂಡು ಹೋಗುವುದಲ್ಲದೇ, ಅವರ ವಿರುದ್ಧ ದೂದು ನೀಡಿದ ಹುಡುಗರ ವಿರುದ್ಧವೇ ದಾವೆಯನ್ನು ಹೂಡುವ ಪುಢಾರಿಗಳು ಮತ್ತು ಸ್ಥಳೀಯ ರಾಜಕೀಯ ವ್ಯಕ್ತಿಗಳೂ ಇತ್ತೀಚೆಗೆ ತಲೆ ಎತ್ತಿಕೊಂಡಿರುವುದು ದುರಾದೃಷ್ಟಕರವೇ ಸರಿ. ಕೆಲ ವರ್ಷಗಳ ಹಿಂದೆ ಇದೇ ರೀತಿ ಗೋವುಗಳನ್ನು ಕಳ್ಳತನ ಮಾಡುವಾಗ ಪೋಲೀಸರ ಗುಂಡೇಟಿಗೆ ಬಲಿಯಾದವನಿಗೆ ಸರ್ಕಾರದಿಂದಲೇ 10 ಲಕ್ಷ ಕೊಟ್ಟ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ.

ಹೌದು ನಿಜ. ಆಹಾರ ಅವರವರ ಅಯ್ಕೆಯಾಗಿದ್ದು ಅವರಿಗೆ ಇಷ್ಟ ಬಂದ ಆಹಾರವನ್ನು ತಿನ್ನುವುದಕ್ಕೆ ಯಾರದ್ದೇ ಆಕ್ಷೇಪವಿಲ್ಲವಾದರೂ, ಹಾಗೆ ತಿನ್ನುವ ಆಹಾರ ಅವರ ಸ್ವಂತ ಪರಿಶ್ರಮದ್ದೇ ಆಗಿರಬೇಕೇ ಹೊರತು, ಬೇರೆಯವರು ಕಷ್ಟ ಪಟ್ಟು ಸಾಲ ಸೋಲ ಮಾಡಿ ತಂದು ಜತನದಿಂದ ಸಾಕಿ ಸಲಹಿದದ್ದನ್ನು ಕಳ್ಳತನ ಮಾಡಿ ತಿನ್ನಬೇಕು ಎಂದು ಯಾವ ಶಾಸ್ತ್ರಗಳಲ್ಲಿಯೂ ಹೇಳಿಲ್ಲ ಎನ್ನುವುದೂ ಅಷ್ಟೇ ಸತ್ಯವಾಗಿದೆ. ಕೆಲ ಸಮುದಾಯದ ಜಿಹ್ವಾ ಜಪಲಕ್ಕಾಗಿ ನಮ್ಮ ಶ್ರದ್ಧೇಯ ಗೋವುಗಳನ್ನು ಕದ್ದೊಯ್ಯುವುದನ್ನು ತಡೆಯುವ ಸಲುವಾಗಿಯೇ ಗೋಹತ್ಯೆ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಹಲವಾರು ವರ್ಷಗಳಿಂದಲೂ ಅನೇಕರು ಹೋರಾಟ ಮಾಡುತ್ತಿದ್ದರೂ, ತಮ್ಮ ಓಟ್ ಬ್ಯಾಂಕ್ ರಾಜಕಾರಣ ಮತ್ತು ತುಷ್ಟೀಕರಣದಿಂದಾಗಿ ನಮ್ಮವರೇ ನಮ್ಮ ಶ್ರದ್ದೇಯ ಗೋವುಗಳ ಹತ್ಯಾ ನಿಷೇಧವನ್ನು ತರಲು ವಿರೋಧಿಸುತ್ತಿರುವುದು ನಿಜಕ್ಕೂ ಅಸಹ್ಯವನ್ನು ಹುಟ್ಟಿಸುತ್ತದೆ.

gov4

ಪ್ರತೀ ನಿತ್ಯವೂ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಸುದ್ದಿಗಳಲ್ಲಿ ಗೋಗಳ್ಳರದ್ದೇ ಬ್ರೇಕಿಂಗ್ ನ್ಯೂಸ್ ಆಗಿ ಹೋಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇದೀಗ ತಾನೆ ಓದಿದ ಸುದ್ದಿಯಂತೆ, ಕಾರ್ಕಳ ತಾಲೂಕು ಕರಿಯಕಲ್ಲು ಕಜೆ ನಿವಾಸಿ 58ರ ಹರೆಯದ ಯಶೋದಾರವರು ತಮ್ಮ ಪತಿ ವಿಠಲ ಆಚಾರ್ಯರು ಅಪಘಾತದಲ್ಲಿ ತೀರಿಕೊಂಡ ನಂತರ ತಮ್ಮ ಜೀವನೋಪಾಯಕ್ಕಾಗಿ ಕಳೆದ 18 ವರ್ಷಗಳಿಂದಲೂ ತಮ್ಮ ಮಗಳೊಂದಿಗೆ ಪುಟ್ಟ ಹೆಂಚಿನ ಮನೆಯೊಂದರಲ್ಲಿ ಹೈನುಗಾರಿಕೆಯನ್ನು ಮಾಡಿಕೊಂಡು ಜೀವನವನ್ನು ಹಾಗೂ ಹೀಗೂ ನಡೆಸಿಕೊಂಡು ಹೋಗುತ್ತಿದ್ದರು.

ಮುಖ್ಯ ರಸ್ತೆಯಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಇವರ ಮನೆಯಿಂದ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 16 ಗೋವುಗಳನ್ನು ಕಟುಕರು ಕದ್ದೊಯ್ಯುವ ಮೂಲಕ ಅವರ ಇಡೀ ಕುಟುಂಬ ಅಕ್ಷರಶಃ ಬೀದಿ ಪಾಲಾಗಿದ್ದು ಕಳೆದ ಒಂದೂವರೆ ವರ್ಷಗಳಿಂದಲೂ ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ ಎಂದರೂ ತಪ್ಪಾಗದು. ಕಳೆದ ವಾರ ಜನವರಿ 3ರ ರಾತ್ರಿ ಹಟ್ಟಿಯಲ್ಲಿದ್ದ ತುಂಬು ಗಬ್ಬದ ಹಸುವನ್ನು ಕದ್ದೊಯ್ಯಲು ಬಂದಾಗ ಎಚ್ಚರಗೊಂಡು ಅದನ್ನು ತಡೆಯಲು ಪ್ರಯತ್ನಿಸಿದರಾದರೂ ಕಟುಕರು ಝಳುಪಿಸುತ್ತಿದ್ದ ಮಾರಕಾಸ್ತ್ರಗಳ ಭಯದಿಂದಾಗಿ ತಾಯಿ ಮಗಳ ಕಣ್ಣ ಮುಂದೆಯೇ ತಮ್ಮ ಕೊಟ್ಟಿಗೆಯಲ್ಲಿದ್ದ ಕಟ್ಟ ಕಡೆಯ ಹಸುವನ್ನು ಕಳೆದುಕೊಂಡು ದಿಕ್ಕೇ ತೋಚದೆ ಕಣ್ಣೀರು ಸುರಿಸುತ್ತಿರುವ ಸುದ್ದಿ ಓದಿ ನಿಜಕ್ಕೂ ಕರುಳು ಚುರುಕ್ ಎಂದಿತು.

ವರ್ಷದ ಹಿಂದೆ ದಿನವೊಂದಕ್ಕೆ 25ರಿಂದ 30 ಲೀ. ಹಾಲನ್ನು ಡೈರಿಗೆ ಮಾರಿ ತಿಂಗಳಿಗೆ 10ರಿಂದ 15 ಸಾವಿರ ರೂ. ಬರುತ್ತಿದ್ದ ಆದಾಯವನ್ನೇ ನೆಚ್ಚಿಕೊಂಡು ಪಾಳು ಬಿದ್ದು ಹೋಗುತ್ತಿದ್ದ ಸದ್ಯದ ಮನೆಯ ಪಕ್ಕದಲ್ಲೇ ಬ್ಯಾಂಕಿನಿಂದ ಸಾಲವನ್ನು ಮಾಡಿ ವಾಸಿಸಲು ಮನೆಯೊಂದನ್ನು ಕಟ್ಟಿ ಕೊಳ್ಳುತ್ತಿದ್ದಾಗಲೇ, ಒಂದೊಂದೇ ಹಸುಗಳು ಕಳ್ಳರ ಪಾಲಾಗುತ್ತಿದ್ದಂತೆ ಮನೆ ಕಟ್ಟುವುದಿರಲಿ, ದೈನಂದಿನ ಜೀವನಕ್ಕೂ ಕುತ್ತು ಬಂದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ಇದು ಕೇವಲ ಯಶೋಧ ಅವರ ಒಬ್ಬರ ಕರುಣಾಜನಕ ಕಥೆಯಾಗಿರದೇ ಆ ಪ್ರದೇಶದ ಸುತ್ತಮುತ್ತಲಿನ ದೈನಂದಿನ ಗೋಳಾಗಿದೆ. ಯಶೋದಾ ಅವರ ಗ್ರಾ.ಪಂ. ಮಾಜಿ ಸದಸ್ಯರ ಮನೆಯಿಂದಲೂ ಇದುವರೆಗೆ 12 ಗೋವುಗಳ ಕಳವಾಗಿದ್ದು, ಇದೇ ರೀತಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಹಸುಗಳ ಕಳ್ಳತನ ಎಗ್ಗಿಲ್ಲದೇ ಅವ್ಯಾಹತವಾಗಿ ನಡೆದುಕೊಂಡೇ ಹೋಗುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.

ನಾವುಗಳು ಚಿಕ್ಕವರಿದ್ದಾಗ ನಮ್ಮ ಅಜ್ಜ ಅಜ್ಜಿಯರು ಹೇಳುತ್ತಿದ್ದ ಕಥೆಗಳಲ್ಲಿ ಕಾಡಿನಲ್ಲಿ ಮೇಯುತ್ತಿದ್ದ ಹಸುಗಳನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಹುಲಿ, ಸಿಂಹದಂತಹ ಕಾಡು ಪ್ರಾಣಿಗಳು ತಿಂದು ಹಾಕುತ್ತಿತ್ತು ಎಂಬುದನ್ನೇ ಕೇಳಿ ದುಃಖದಿಂದ ನಿದ್ದೆ ಬಾರದ ದಿನಗಳೆಷ್ಟೋ ಇದೆ. ಅದಕ್ಕೆ ಸಮಾಧಾನ ಪಡಿಸಲೋ ಎನ್ನುವಂತೆ ಕ್ರೂರ ಪ್ರಾಣಿ ಹುಲಿಯೂ ಸಹಾ ಮಾನವೀಯತೆನ್ನು ಎತ್ತಿ ಹಿಡಿದ ಗೋವಿನ ಕಥೆಯನ್ನು ಹಾಡಿನ ಮೂಲಕ ಹೇಳಿಕೊಟ್ಟು ಸಮಾಧಾನ ಪಡಿಸಿದ್ದೂ ಇನ್ನೂ ಹಚ್ಚಹಸಿರಾಗಿಯೇ ಇರುವಾಗ, ಮಕ್ಕಳಂತೆ ಸಾಕಿ ಸಲಹಿದ್ದ ಹಸುಗಳನ್ನು ತಮ್ಮ ಆಹಾರಕ್ಕಾಗಿ ಕದ್ದೊಯ್ಯುವ ಕಟುಕರು ಕ್ರೂರ ಮೃಗಗಳಿಗಿಂತಲೂ ಕೀಳು ಎಂದು ಸಾಭೀತು ಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಇನ್ನಾದರು ಆಳುವ ಸರ್ಕಾರಗಳು ಎಚ್ಚೆತ್ತು ಕೊಂಡು ಯಾವುದೇ ಜಾತೀ ಧರ್ಮದ ಹಂಗು ಮತ್ತು ನೆಪವನ್ನು ಒಡ್ಡದೇ ನಮ್ಮ ಶ್ರದ್ದೇಯ ಗೋಮಾತೆಯನ್ನು ಕದ್ದೊಯ್ಯುವ ಗೋವು ಕಳ್ಳರನ್ನು ಹೆಡೆಮುರಿಕಟ್ಟಲಿ ಮತ್ತು ಆದಷ್ಟು ಶೀಘ್ರವಾಗಿ ಗೋಹತ್ಯಾ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಮೂಲಕ ಈ ಅನಿಷ್ಟ ಪದ್ದತಿಗೆ ಶಾಶ್ವತವಾದ ಪರಿಹರವನ್ನು ನೀಡಲಿ ಎಂದು ಆಶಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಆಂತರಿಕ ಹಿತಶತ್ರುಗಳು

img1

ಮೊನ್ನೆ ಪಂಜಾಬಿನಲ್ಲಿ ವಿವಿಧ ಯೋಜನೆಗಳನ್ನು ಉಧ್ಘಾಟಿಸುವ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ನಿಗಧಿಯಂತೆ ಹೆಲಿಕ್ಯಾಪ್ಟರಿನಲ್ಲಿ ಪ್ರಯಾಣಿಸಲು ನಿರ್ಧಾರವಾಗಿದ್ದರೂ, ಹವಾಮಾನದ ವೈಪರೀತ್ಯದಿಂದಾಗಿ ಕೂಡಲೇ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು ನಿರ್ಧರಿಸಿ, ಆದರ ಸಂಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿ ಅವರ ರಕ್ಷಣೆಯ ಜವಾಬ್ಛಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿರುತ್ತದೆ. ನಂತರ ವಿವಿಧ ಕಾರಣಗಳಿಂದಾಗಿ ನಮ್ಮ ಪ್ರಧಾನ ಮಂತ್ರಿಗಳನ್ನು ರಸ್ತೆಯ ಮಾರ್ಗದ ಮಧ್ಯದಲ್ಲೇ ಸುಮಾರು 15-20 ನಿಮಿಷಗಳ ಕಾಲ ಮೇಲ್ಸೇತುವೆ ಮೇಲೆ ತಡೆದು ನಿಲ್ಲಿಸುವ ಮೂಲಕ ಈ ದೇಶದಲ್ಲಿ ಹಿಂದೆಂದೂ ಕಾಣದ ವಿಛಿದ್ರಕಾರಿ ಘಟನೆಗೆ ಸಾಕ್ಷಿಯಾಗುತ್ತದೆ.

img2

ಇದು ಅಚಾನಕ್ಕಾಗಿ ನಡೆದ ದುರ್ಘಟನೆ ಎಂದು ಪಂಜಾಬ್ ಸರ್ಕಾರ ವಾದಿಸಿದರೆ, ಇದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಕೇಂದ್ರ ಸರ್ಕಾರ ವಾದಿಸುತ್ತದೆ. ಲಜ್ಜೆಗೆಟ್ಟ ಕಾಂಗ್ರೇಸ್ ನಾಯಕರು ಈ ದುರ್ಘಟನೆ ನಡೆದ ಕೇವಲ 10 ನಿಮಿಷಗಳಲ್ಲಿಯೇ ದೇಶಾದ್ಯಂತ ಸಂಭ್ರಮಿಸಲು ಆರಂಭಿಸಿದ್ದಲ್ಲದೇ, How is the Josh ಎಂದು ಸಾಮಾಜಿಕಜಾಲತಾಣಗಳಲ್ಲಿ ಪ್ರಧಾನಮಂತ್ರಿಗಳನ್ನೇ ಅಣಕಿಸುವ ಪೋಸ್ಟರ್ಗಳನ್ನು ಹರಿದುಬಿಡುವ ದುಸ್ಸಾಹಸಕ್ಕೂ ಕೈ ಹಾಕಿರುವುದು ನಿಜಕ್ಕೂ ದುರ್ದೈವವೇ ಸರಿ.

ಈ ಕುರಿತಾಗಿ ಕಾಂಗ್ರೇಸ್ ಮತ್ತು ಬಿಜೆಪಿ ನಾಯಕರುಗಳಲ್ಲದೇ ಅಯಾಯಾ ಪಕ್ಷದ ಸಮರ್ಥಕರು ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಸಮರ್ಥನೆ ಮಾಡಿಕೊಂಡ ಲೇಖನಗಳನ್ನು ಈಗಾಗಲೇ ಓದಿದ್ದೇವೆ. ಆದರೆ ನಾವು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೇನೆಂದರೆ ಈ ರೀತಿಯ ರಾಜಕೀಯ ಪಕ್ಷಗಳ ತೆವಲುಗಳಿಂದಾಗಿ, ಪ್ರಪಂಚದ ಮುಂದೆ ನಮ್ಮ ದೇಶದ ಮಾನವನ್ನು ನಾವೇ ಹರಾಜಿಗೆ ಹಾಕುತ್ತಿರುವುದಲ್ಲದೇ ತಮ್ಮ ದೇಶದ ಪ್ರಧಾನಿಗಳಿಗೇ ರಕ್ಷಣೆ ಕೊಡಲಾಗದವರ ದೇಶದ ರಕ್ಷಣಾ ವ್ಯವಸ್ಥೆ ಇನ್ನು ಹೇಗೆ ಇರಬಹುದು ಎಂದು ನಮ್ಮ ಆಂತರಿಕ ರಕ್ಷಣೆಯ ಬಗ್ಗೆ ಬೆತ್ತಲೆ ಗೊಳಿಸುತ್ತಿದ್ದೇವೆ ಎಂಬುದರ ಅರಿವಿಲ್ಲದಿರುವುದು ನಿಜಕ್ಕೂ ಗಾಭರಿಯನ್ನುಂಟು ಮಾಡುತ್ತಿದೆ.

indira_ghandhi

ಮೋದಿಯವರನ್ನು ಸೈದ್ಧಾಂತಿಕವಾಗಿಯೇ ಆಗಲಿ ಇಲ್ಲವೇ ಪ್ರಜಾತಾಂತ್ರಿಕವಾಗಿ ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡೇ ವಿರೋಧ ಪಕ್ಷಗಳು ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವಹಾಗೆ ಮೋದಿಯವರನ್ನು ಶತಾಯ ಗತಾಯ ಸೋಲಿಸಲೇ ಬೇಕು ಎಂದು ದೇಶ ವಿರೋಧಿಗಳ ಕೈ ಜೋಡಿಸುತ್ತಿರುವುದು ದೇಶದ ಭಧ್ರತೆ ನಿಜಕ್ಕೂ ಆಘಾತಕಾರಿಯಾಗಿದೆ.
80ರ ದಶಕದಲ್ಲಿ ಶತ್ರುಗಳನ್ನು ಮಣಿಸುವ ಸಲುವಾಗಿ ಬಿಂದ್ರನ್ ವಾಲೆ ಎಂಬ ಖಲಿಸ್ಥಾನಿಯನ್ನು ಪಂಜಾಬಿನಲ್ಲಿ ಪರೋಕ್ಷವಾಗಿ ಬೆಳೆಸಿದ ಕಾಂಗ್ರೇಸ್ ಕಡೆಗೆ ಅದೇ ಖಲೀಸ್ಥಾನಿ ಬಿಂದ್ರನ್ ವಾಲೆ ಅಮೃತಸರದ ಸಿಖ್ಖರ ದೇವಾಲಯವನ್ನೇ ಶಸ್ತ್ರಾಸ್ತ್ರಗಳ ಅಡುಗುತಾಣವನ್ನಾಗಿಸಿ ದೇಶಕ್ಕೆ ತಲೆ ನೋವಾದಾಗ ಅವನನ್ನು ಮಣಿಸಲು ಆಪರೇಷನ್ ಬ್ಲೂಸ್ಟಾರ್ ಕೈಗೆತ್ತಿಕೊಂಡ ಪರಿಣಾಮವಾಗಿಯೇ ಇಂದಿರಾಗಾಂಧಿಯವರನ್ನು ಕಳೆದುಕೊಂಡ ಅನುಭವವಿದ್ದರೂ ರೈತರಂತೆ ಛದ್ಮ ವೇಷ ಧರಿಸಿರುವ ಮತ್ತದೇ ಖಲಿಸ್ಥಾನಿಗಳೊಂದಿಗೆ ಕೈ ಜೋಡಿಸಿ ದೆಹಲಿಯಲ್ಲಿ ಹತ್ತಾರು ತಿಂಗಳುಗಳ ಕಾಲ ನಿರಂತರವಾದ ಚಳುವಳಿ ನಡೆಸಿದ್ದಲ್ಲದೇ ಈಗ ಪ್ರಧಾನ ಮಂತ್ರಿಯವರನ್ನು ನಡು ರಸ್ತೆಯಲ್ಲಿ ತಡೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

WhatsApp Image 2022-01-08 at 11.49.27 PM

ಪಂಜಾಬ್ ಸರ್ಕಾರವೇ ರೈತರ ವೇಷದಲ್ಲಿ ಖಲಿಸ್ತಾನಿಗಳನ್ನು ಪ್ರಧಾನ ಮಂತ್ರಿಗಳು ಸಂಚರಿಸುತ್ತಿದ್ದ ರಸ್ತೆ ಕರೆತಂದು ಪ್ರಧಾನಿಗಳನ್ನು ಘೇರಾವ್ ಮಾಡಿ, SPG ಪಡೆಗಳು ಸಂಚಾರ ಕ್ಕೆ ಅಡ್ಡಿಮಾಡಿದ ರೈತರ ಮೇಲೆ ಅಕಸ್ಮಾತ್ ಫೈರಿಂಗ್ ಮಾಡಿ ಕೆಲ ರೈತರು ಬಲಿಯಾದಲ್ಲಿ, ಪ್ರತಿಭಟನಾ ನಿರತ ರೈತರ ಮೇಲೆ ಪ್ರಧಾನಿಗಳು ಗೋಲಿಬಾರ್ ನಡೆಸಿ ಅಮಾಯಕರ ಹತ್ಯೆ ನಡೆಸಿದರು ಎಂದು ಬಿಂಬಿಸಿ ದೇಶದ್ಯಂತ ಪ್ರತಿಭಟನೆ ಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರವೂ ಅಡಗಿತ್ತು ಎನ್ನುತ್ತವೆ ಬಲ್ಲ ಮೂಲಗಳು. ಆದರೆ ಇಷ್ಟೆಲ್ಲಾ ಅವಘಡಗಳ ನಡುವೆಯೂ ತಾಳ್ಮೆಯನ್ನು ಕಳೆದು ಕೊಳ್ಳದೇ ಸಹನಾಮೂರ್ತಿಯಾಗಿ ಕುಳಿತಿದ್ದ ಮೋದಿಯವರು ಅಲ್ಲಿಂದ ಸದ್ದಿಲ್ಲದೇ ಹಿಂದಿರುಗುವ ಮೂಲಕ ವಿರೋಧಿಗಳ ತಂತ್ರವನ್ನು ಸಮರ್ಥವಾಗಿ ವಿಫಲ ಗೊಳಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಕೇಂದ್ರ ಮಂತ್ರಿಗಳ ಕಾರಿಗೆ ರೈತರ ಮೂಲಕ ಪ್ರತಿಭಟನೆ ಅಡ್ಡಿ ಪಡಿಸಿದ್ದಲ್ಲದೇ ಅವರ ವಾಹನದ ಮೇಲೆ ಕಲ್ಲು ಎಸೆದು ಪ್ರಚೋದನೆ ನೀಡಿ ರೈತರ ಮೇಲೆ ವಾಹನ ಹರಿಯುವಂತೆ ಮಾಡಿ ನಾಲ್ವರು ಅಮಾಯಕ ರೈತರು ಬಲಿಯಾಗಿದ್ದಲ್ಲದೇ ರೊಚ್ಚಿಗೆದ್ದ ಪ್ರತಿಭಟನಕಾರರು ಸಚಿವರ ಕಡೆಯ ನಾಲ್ವರನ್ನು ಬಡಿದು ಕೊಂದಿದ್ದ ಘಟನೆಯನ್ನು ಮರುಕಳಿಸಲು ಹೋಗಿ ವಿರೋಧಿಗಳು ಅಂಡು ಸುಟ್ಟ ಬೆಕ್ಕಿನಂತಾಗಿರುವುದಂತೂ ಸತ್ಯವಾಗಿದೆ.

ಈಗಾಗಲೇ ಹಲವಾರು ಬಾರಿ ಹೇಳಿರುವಂತೆ ಶತ್ರುಗಳು ಅಥವಾ ಭಯೋತ್ಪಾದಕರು ಹೊರ ದೇಶದವರಾಗಿದ್ದರೆ ಖಂಡಿತವಾಗಿಯೂ ಸುಲಭವಾಗಿ ಹಣಿಯಬಹುದಾಗಿದೆ ಆದರೇ ಈ ಆಂತರಿಕ ಹಿತಶತ್ರುಗಳನ್ನು ಮಣಿಸುವುದು ದುಸ್ಸಾಹಸವೇ ಸರಿ. ಅದರಲ್ಲೂ ತಮ್ಮ ಸೈದ್ಧಾಂತಿಕ ವಿರೋಧಕ್ಕಾಗಿ ರಾಜ್ಯಸರ್ಕಾರವೇ ಪರೋಕ್ಶವಾಗಿ ದೇಶದ ಪ್ರಧಾನಿಗಳ ಭದ್ರತೆಯೊಂದಿಗೆ ಚಲ್ಲಾಟವಾಡುವ ಮೂಲಕ ದೇಶದಲ್ಲಿ ಅಭದ್ರತೆಯನ್ನು ಮೂಡಿಸಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

rajiv

ಮೋದಿಯವರಿಗೆ ಈ ರೀತಿಯಾಗಿ ತೊಂದರೆ ಕೊಟ್ಟಲ್ಲಿ ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆವರ ಮೇಲೆ ಹಲ್ಲೆ ಅಥವಾ ಹತ್ಯೆ ಮಾಡಿದಲ್ಲಿ ಅದು ವಿರೋಧ ಪಕ್ಷದವರಿಗೆ ಉಪಯೋಗಕ್ಕಿಂತಲೂ ಉರುಳಾಗುವ ಸಂಭವವೇ ಹೆಚ್ಚು ಎಂದು ಈಗಾಗಲೇ ಭಾರತದ ಇತಿಹಾಸದಲ್ಲಿ ಕಂಡಾಗಿದೆ. ಇಂದಿರಾ ಎಂದರೆ ಇಂಡಿಯಾ, ಇಂದಿರಾ ಇಲ್ಲದಿದ್ದರೇ ದೇಶವೇ ಇಲ್ಲಾ ಎನ್ನುವಂತೆ ಭ್ರಮೆಯನ್ನು ಹುಟ್ಟಿಸಿದ್ದ ಕಾಲವೊಂದಿತ್ತು. ಆದರೆ ಅಂತಹ ನಾಯಕಿಯೇ ದೂರದೃಷ್ಟಿಯ ಕೊರತೆಯಿಂದಾಗಿ, ತನ್ನದೇ ಅಂಗರಕ್ಷಕರ ಕೈಯ್ಯಲ್ಲಿ ಭರ್ಭರವಾಗಿ ಹತ್ಯೆಯಾದ ನಂತರ ದಿನಗಳಲ್ಲಿ ಕಾಂಗ್ರೇಸ್ 400ಕ್ಕೂ ಹೆಚ್ಚಿನ ಸ್ಥಾನಗಳಿಸಿತ್ತು ಅದೇ ರೀತಿ ಚುನಾವಣೆಯ ಪ್ರಚಾರದ ಸಮಯದಲ್ಲಿಯೇ ಎಲ್.ಟಿ.ಟಿ.ಇ ಆತ್ಮಹತ್ಯಾದಳದಿಂದ ಅತ್ಯಂತ ದಯಾನೀಯವಾಗಿ ದೇಹವೂ ಸಿಗದಂತೆ ಛಿದ್ರ ಛಿದ್ರವಾಗಿ ರಾಜೀವ್ ಗಾಂಧಿಯವರು ಹತ್ಯೆಯಾದಾಗಲೂ ಭಾವುಕತೆಯಿಂದ ಜನರು ಕಾಂಗ್ರೇಸ್ಸನ್ನೇ ಅಧಿಕಾರಕ್ಕೆ ತಂದಿದ್ದರು ಎಂಬುದನ್ನು ಮನಗಾಣ ಬೇಕು.img4

ಸದ್ಯದ ಪರಿಸ್ಥಿತಿಯಲ್ಲಿ ಮೋದಿಯವರು ಕೇವಲ ಭಾರತದ ಪ್ರಧಾನಿಗಳಾಗಿಯಷ್ಟೇ ಅಗಿರದೇ ವಿಶ್ವ ನಾಯಕರಾಗಿರುವಾಗ ಅವರನ್ನು ಈ ರೀತಿಯಾಗಿ ಅಪಮಾರ್ಗದಲ್ಲಿ ಹಣಿಯಲು ಪ್ರಯತ್ನಿಸಿದರೆ ಕೆಲ ದಿನಗಳ ವರೆಗೆ ದೇಶದಲ್ಲಿ ಆಂತರಿಕ ಅಭದ್ರತೆ ಕಾಡ ಬಹುದಾದರೂ, ಅದರಿಂದ ವಿರೋಧ ಪಕ್ಷಕ್ಕೆ ಯಾವುದೇ ಪ್ರಯೋಜನವಾಗದೇ, ಜನರು ಮತ್ತೇ ಮೋದಿಯವವರ ಜಾಗದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕನನ್ನು ಅಧಿಕಾರಕ್ಕೆ ತಂದೇ ತರುತ್ತಾರೆ ಎಂಬ ಸೂಕ್ಷ್ಮ ಪ್ರಜ್ಞೆಯೂ ಇಲ್ಲದಿರುವುದು ಅಶ್ಚರ್ಯವನ್ನು ಉಂಟು ಮಾಡುತ್ತದೆ

ಗುಂಡಾಗಿರಿ ಮಾಡಿ ಜನರನ್ನು ಹೆದರಿಸಿ ಬೆದರಿಸಿ ಮತ ಹಾಕಿಸಿಕೊಳ್ಳುವ ಇಲ್ಲವೇ ಹೆದರಿಸಿ ಬೆದರಿಸಿ ಮತ ಹಾಕಲು ಬರದಂತೆ ಮಾಡುವ ಮೂಲಕ, ಇಲ್ಲವೇ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರವನ್ನು ಮಾಡುವ ಮೂಅಕ ಅಥಿಕಾರಕ್ಕೆ ಬರಬಹುದು ಎಂದು ವಿರೋಧ ಪಕ್ಷದವರು ಭಾವಿಸಿದಲ್ಲಿ ಅದು ಕೇವಲ ಅವರ ಭ್ರಮೆ ಎಂದರೂ ತಪ್ಪಾಗದು. ಈಗ ತಂತ್ರಜ್ಞಾನ ಬಹಳ ಮುಂದುವರಿದಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಇವರು ಮಾಡುವ ತಪ್ಪು ಒಪ್ಪುಗಳು ಕೆಲವೇ ಕ್ಷಣಗಳಲ್ಲಿ ದೇಶದ ಮೂಲೆ ಮೂಲೆಗೂ ತಲುಪಿ ಜನರಿಗೆ ಯಾರು ತಪ್ಪು ಮಾಡುತ್ತಿದ್ದಾರೆ, ಯಾರು ಸರಿ ಮಾಡುತ್ತಿದ್ದಾರೆ ಎಂಬುದು ತಲುಪುತ್ತಿರುವ ಕಾರಣ, ಈ ರೀತಿಯ ಕ್ಷುಲ್ಲಕ ಹೋರಾಟಗಳನ್ನು ಬದಿಗೊತ್ತಿ ರಚನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಹೋರಾಟ ಮಾಡುವ ಮೂಲಕ ಜನರ ಮನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸಲಿ. ಅಧಿಕಾರ ಎಂಬುದು ಎಂದಿಗೂ ಶಾಶ್ವತವಲ್ಲ ಎಂಬುದು 60 ವರ್ಷಗಳ ಕಾಲ ಇಡೇ ದೇಶವನ್ನೇ ಆಳಿದ ಕಾಂಗ್ರೇಸ್ಸು ಹೇಳ ಹೆಸರಿಲ್ಲದಂತಾಗಿದ್ದಲ್ಲಿ, 80ರ ದಶಕದಲ್ಲಿ ಕೇವಲ 2 ಸಂಸದರಿದ್ದ ಬಿಜೆಪಿ ಸಮರ್ಥವಾದ ವಿರೋಧಪಕ್ಷವಾಗಿ ಅಂದಿನ ಆಡಳಿತ ಪಕ್ಷದವನ್ನು ಸಮರ್ಥವಾಗಿ, ರಚನಾತ್ಮಕವಾಗಿ ಸಂವಿಧಾನಾತ್ಮಕವಾಗಿ ಎದುರಿಸಿದ ಪರಿಣಮವಾಗಿಯೇ ಇಂದು ಸತತವಾಗಿ ಎರಡು ಬಾರಿ ಅಧಿಕಾರಕ್ಕೇ ಎರಿರುವುದೇ ಜ್ವಲಂತ ಉದಾಹರಣೆಯಾಗಿದೆ.

ಜನರು ಮೋದಿಯವರಿಗೇನೂ ಪ್ರಧಾನ ಮಂತ್ರಿಯ ಪಟ್ಟವನ್ನು ಚಿನ್ನದ ತಟ್ಟೆಯಲ್ಲಿಟ್ಟು ಸುಖಾ ಸುಮ್ಮನೇ ಕೊಡಲಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಸುಮಾರು ವರ್ಷಗಳ ಕಾಲ ಸಂಘಟನೆಯಲ್ಲಿ ತೊಡಗಿಸಿಕೊಂಡವರು, ನಂತರ 3 ಬಾರಿಗೆ ಗುಜರಾತಿನ ಮುಖ್ಯಮಂತ್ರಿಗಳಾಗಿ ಸಾಕಷ್ಟು ಅವಮಾನಗಳನ್ನು ಅನುಭವಿಸಿ, ಅವೆಲ್ಲವನ್ನೂ ಲೀಲಾಜಾಲವಾಗಿ ಎದುರಿಸಿ, ಗುಜರಾತನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ದದ್ದನ್ನು ನೋಡಿಯೇ ಜನ ಅಭೂತಪೂರ್ವವಾಗಿ ಬಹುಮತದಿಂದ ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಒಂದು ಗೆರೆಯನ್ನು ಮುಟ್ಟದೇ ಸಣ್ಣದಾಗಿ ಮಾಡಬೇಕೆಂದರೆ ಅದರ ಪಕ್ಕದಲ್ಲಿ ಒಂದು ದೊಡ್ಡ ಗೆರೆಯನ್ನು ಎಳೆಯಬೇಕು ಎನ್ನುವಂತೆ ಮೋದಿಯವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಬೇಕಾದಲ್ಲಿ ಅವರ ಸಾಧನೆಗಿಂತಲೂ ಅತ್ಯುತ್ತಮವಾದದ್ದನ್ನು ಅವರ ವಿರೋಧಿಗಳು ಮಾಡಿ ತೋರಿಸಿದಲ್ಲಿ ಮಾತ್ರವೇ ಜನರ ಹೃದಯ ಗೆಲ್ಲಬಹುದೇ ಹೊರತು ಈ ರೀತಿಯ ಹಿಂಬಾಗಿಲಿನ ಪ್ರಯತ್ನ ಎಂದೂ ಕೈಗೂಡದು.

ದೇಶವಾಸಿಗಳಿಗೆ ಈ ರೀತಿಯಾದ ಅಸಹ್ಯಕರವಾದ ಅಹಿತಕರವಾದ ಘಟನೆಗಳು ರಾಜಕೀಯ ವ್ಯವಸ್ಥೆಯ ಬಗ್ಗೆ ಆಸಹ್ಯವನ್ನೇ ಮೂಡಿಸಿ ಮತದಾನದಿಂದಲೂ ದೂರಾಗುವ ಸಂಭವವೇ ಹೆಚ್ಚಾಗಿದೆ. ಇದನ್ನೇ ಮೊನ್ನೆ ಪಬ್ಲಿಕ್ ಟಿವಿಯ ರಂಗನಾಥ್ ಅವರು ಭಾರತದಲ್ಲಿ ನೆಮ್ಮದಿಯಿಂದ ಬದುಕಬೇಕು ಎಂದರೆ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳಬೇಕು. ರಾಜಕೀಯದಿಂದ ದೂರವಿದ್ದು ನಮ್ಮ ಪಾಡಿಗೆ ನಾವು ಬದುಕಬೇಕು. ಆಗ ಮಾತ್ರ ನೆಮ್ಮದಿಯಾಗಿರಲು ಸಾಧ್ಯ ಎಂದಿರುವುದು ನಿಜಕ್ಕೂ ಮಾರ್ಮಿಕವಾಗಿದೆ. ಆದರೆ ನಮ್ಮ ದೇಶ ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿದ್ದು ಇಲ್ಲಿ ಪ್ರಜೆಗಳೇ ಪ್ರಭುಗಳು ಹಾಗಾಗಿ ಅವರುಗಳೇ ಮತದಾನದಿಂದ ವಿಚಲಿತವಾದಲ್ಲಿ ಕ್ಷುದ್ರ ಶಕ್ತಿಗಳು ದೇಶದ ಅಧಿಕಾರವನ್ನು ಹಿಡಿದು ದೇಶವನ್ನು ಅಧೋಗತಿಗೆ ತರುವ ಸಾಧ್ಯತೆ ಇರುವ ಕಾರಣ, ನಾವೆಲ್ಲರೂ ಎಚ್ಚೆತ್ತು ದೇಶದ ಆಂತರಿಕ ಹಿತಶತ್ರುಗಳನ್ನು ಸಾಂವಿಧಾನಿಕವಾಗಿಯೇ ಬಗ್ಗು ಬಡಿಯುವ ಸಮಯ ಬಂದಿದೆ ಅಲ್ವೇ?.

ಏನಂತೀರೀ?
ನಿಮ್ಮವನೇ ಉಮಾಸುತ

ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

WhatsApp Image 2021-12-14 at 6.13.04 PMಈ ಚಿತ್ರವನ್ನು ನೋಡುತ್ತಿದ್ದಂತೆಯೇ, ನಮ್ಮ ಮನಸ್ಸಿಗೆ ಹೊಳೆಯುವುದು,  ಅರೇ ಇದೇನಿದು? ಈ ಸಣಕಲ ದೇಹದ  ಮಾವುತನು  ಅಷ್ಟು  ದೊಡ್ಡ ಆನೆಯನ್ನು ಟ್ರಕ್ಕಿನೊಳಗೆ ದೂಡುತ್ತಿದ್ದಾನಾ? ಎಂದು  ಹುಬ್ಬನ್ನು ಹಾರಿಸತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಅಲ್ಲಿ  ಮಾವುತನ ಕೈ ಆಸರೆ ಕೇವಲ ನಿಮಿತ್ತ ಮಾತ್ರವಾಗಿದ್ದು ಆನೆಯ ತನ್ನ ಬಲದಿಂದ ಟ್ರಕ್ಕನ್ನು ಹತ್ತುತ್ತಿರುತ್ತದೆ.  ಆನೆಗೆ ತನ್ನ ಸ್ವಸ್ವಾಮರ್ಥ್ಯದ ಮೇಲೆ ನಂಬಿಕೆ ಇರದ ಕಾರಣ, ಮಾವುತನ ಕೈ ತನ್ನ ಬೆನ್ನಿನ ಮೇಲೆಿ ಕೈ ಇಟ್ಟಿರುವ ತನ್ನ ಯಜಮಾನ ಸದಾ ಕಾಲವೂ ತನ್ನ ಸಹಾಯಕ್ಕೆ  ಇರುತ್ತಾನೆ ಎಂಬ ನಂಬಿಕೆ ಮತ್ತು ವಿಶ್ವಾಸ ಇಟ್ಟು ಕೊಳ್ಳುವುದರಿಂದ ಆನೆಯು ನಿರ್ಭಯವಾಗಿ ಟ್ರಕ್ಕನ್ನು ಹತ್ತಬಹುದು ಎಂದು ಭಾವಿಸಿ  ಸುಲಭವಾಗಿ ಟ್ರಕ್ಕನ್ನು ಹತ್ತುತ್ತದೆ.

jam1ತ್ರೇತಾಯುಗದಲ್ಲೂ ಹನುಮಂತ ಮತ್ತು ಜಾಂಬವಂತನ ನಡುವೆ ನಡೆದ ಇದೇ ರೀತಿಯ ಪ್ರಸಂಗವನ್ನೂ ಇಲ್ಲಿ ಸ್ಮರಿಸಬಹುದಾಗಿದೆ.  ವನವಾಸದಲ್ಲಿದ್ದ  ಸೀತೆಯನ್ನು ಮಾಯಾ ಜಿಂಕೆಯ ಮೋಹವೊಡ್ಡಿ,  ಮೋಸದಿಂದ ರಾವಣ ಕದ್ದೊಯ್ದಿರುತ್ತಾನೆ.  ಚಿನ್ನದ ಜಿಂಕೆಯ ಭೇಟೆಯಾದ ನಂತರ ಕಾಡಿನ ತಮ್ಮ ಮನೆಗೆ ಬಂದು ಮಡದಿ ಸೀತಾಮಾತೆ ಕಾಣದಿದ್ದಾಗ, ವೈದೇಹೀ ಏನಾದಳೂ? ಎಂದು ಪರಿತಪಿಸುತ್ತಾ ಆಕೆಯನ್ನು ಹುಡುಕುತ್ತಿರಲು ಅವರಿಗೆ ಕಿಷ್ಕಿಂದೆಯಲ್ಲಿ ಹನುಮಂತನ ಮತ್ತು ಸುಗ್ರೀವನ ಪರಿಚಯವಾಗಿ ನಂತರ ಜಟಾಯುವಿನ ಮೂಲಕ ಸೀತಾ ಮಾತೆಯನ್ನು ರಾವಣನು ಕದ್ದೊಯ್ದಿರುವ ವಿಷಯ ತಿಳಿದು ಸಮಸ್ಥ ಕಪಿ ಸೇನೆ ರಾಮೇಶ್ವರದ ಸಮುದರ ತಟದಲ್ಲಿ ನಿಂತು  ಸಾಗರದ ಮಧ್ಯದಲ್ಲಿರುವ ಲಂಕೆಗೆ ಹೇಗೆ ಹೋಗುವುದು ಎಂದು ಯೋಚಿಸುತ್ತಿರುವಾಗ, ಜಾಂಬವಂತನಿಗೆ ಥಟ್ ಎಂದು ಆಲೋಚನೆ ಹೊಳೆದು, ದೂರದಲ್ಲಿ ರಾಮನ ಧ್ಯಾನವನ್ನು ಮಾಡುತ್ತಿದ್ದ ಹನುಮಂತನಿಗೆ ಸಮುದ್ರೋಲಂಘನ ಮಾಡಿ ಸೀತಾಮಾತೆಯನ್ನು ಹುಡುಕಿಕೊಂಡು ಬರಲು ಸೂಚಿಸುತ್ತಾನೆ.

han2ತನ್ನ ಶಕ್ತಿ ಸಾಮರ್ಥ್ಯದ ಅರಿವಿಲ್ಲದಿದ್ದಂತಹ ಹನುಮಂತ ಈ ಕೆಲಸ ನನ್ನಿಂದಾಗದು ಎಂದು ಹೇಳಿದಾಗ ವಯೋವೃದ್ಧ ಜಾಂಬವಂತ ಹನುಮಂತನ ಶಕ್ತಿ ಸಾಮರ್ಥ್ಯವನ್ನು ಒಂದೊಂದಾಗಿ ವರ್ಣಿಸಿ ಹನುಮಂತನಿಗೆ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿದ ನಂತರ ಬೃಹದಾಕಾರವಾಗಿ ಬೆಳೆದ ಅಂಜನೀ ಪುತ್ರ ಆಂಜನೇಯ ಸಮುದ್ರವನ್ನು ದಾಟಿ ಸೀತಾಮಾತೆಯನ್ನು ಹುಡುಕಿ ನಂತರ ಅರ್ಧ ಲಂಕೆಯನ್ನು ದಹನ ಮಾಡಿದ್ದು ಈಗ ಇತಿಹಾಸ.

ಈ ಎರಡೂ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ,  ಆನೆ ಮತ್ತು ಹನುಮಂತನಿಗೆ ಶಕ್ತಿ ಸಾಮರ್ಥ್ಯವಿದ್ದರೂ, ಅದರ ಅರಿವೇ ಇಲ್ಲದ ಕಾರಣ ಕಾರ್ಯವನ್ನು ಮಾಡಲು ಹಿಂಜರಿಯುತ್ತಿರುತ್ತಾರೆ. ಆನೆಯ  ಬೆನ್ನಿನ ಮೇಲೆ ಕೇವಲ ನಿಮಿತ್ತ ಮಾತ್ರಕ್ಕೆ ಕೈ ಇಟ್ಟ ಮಾವುತನು  ಹತ್ತು ಹತ್ತು ಎಂದು ಪ್ರೇರೇಪಿಸಿದರೆ, ಜಾಂಬವಂತನು ಹನುಮಂತನಿಗೆ ಆತನ ಶಕ್ತಿ ಸಾಮರ್ಥ್ಯದ ಅರಿವನ್ನು ಮೂಡಿಸಿ ಸರಳ ರೀತಿಯಲ್ಲಿ ಆದರೆ ಅಷ್ಟೇ ಸ್ಪೂರ್ತಿದಾಯಕವಾಗಿ  ಪ್ರೇರಣೆ ನೀಡಿದ ಕಾರಣ ಮುಂದೆಲ್ಲಾ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.

accidentನಮ್ಮ ನಿಮ್ಮ  ನಡುವೆ ಅದೆಷ್ಟೋ ಈ ರೀತಿಯ ಜನರು ಇದ್ದಾರೆ. ಅವರಿಗೆ ತಮ್ಮ ಶಕ್ತಿ ಸಾಮರ್ಥ್ಯದ ಅರಿವಿಲ್ಲದೆ  ಅಥವಾ ತಮ್ಮನ್ನು ಬೆಂಬಲಿಸುವ ಇಲ್ಲವೇ ಪ್ರೇರೇಪಿಸುವವರು ಯಾರೂ ಇಲ್ಲ ಸುಮ್ಮನಾಗಿರುವವರೇ ಹೆಚ್ಚಿನ ಜನರು ಇರುತ್ತಾರೆ.  ಇದಕ್ಕೆ ಸಣ್ಣ ಉದಾಹರಣೆ ನೀಡಬೇಕೆಂದರೆ, ದಾರಿಯಲ್ಲಿ ಹೋಗುತ್ತಿರುವಾಗ ಅಚಾನಕ್ಕಾಗಿ  ಯಾರಿಗೋ ಅಪಘಾತವಾಗಿ ಜೀವನ್ಮರಣ ಹೋರಾಟದಲ್ಲಿ ಇದ್ದಲ್ಲಿ  ಅದನ್ನು ಗಮನಿಸಿದ ಕೆಲವರು ನಮಗೇಕೆ ಉಸಾಬರಿ ಎಂದು ಪಕ್ಕಕ್ಕೆ ತಿರುಗಿಕೊಂಡು ಹೋಗುವವರು ಕೆಲವರಾದರೆ, ಇನ್ನೂ  ಹಲವರು ಆ ಪ್ರದೇಶವನ್ನು ಸುತ್ತುವರೆದು ಅದನ್ನೇ ನೋಡುತ್ತಾ ಮಮ್ಮಲ ಮರುಗುವವರಾದರೇ, ಇನ್ನೂ ಕೆಲವರು ಕೂಡಲೇ ತಮ್ಮ ಮೋಬೈಲ್ ತೆಗೆದು ಆದರ ಚಿತ್ರೀಕರಣವನ್ನು ಮಾಡಿ  ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು  ಸಹಾಯವನ್ನು ಯಾಚಿಸುವುದೂ ಉಂಟು. ಆದರೆ ಅವರಲ್ಲೊಬ್ಬ ಹೃದಯವಂತ ಮನುಷ್ಯ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮಾನವೀಯತೆಯ ದೃಷ್ಛಿಯಿಂದ ಕೂಡಲೇ ಗಾಯಾಳುವಿನ ಬಳಿ ಧಾವಿಸಿ ಅವರಿಗೆ ನೀರನ್ನು ಕುಡಿಸಲು ಮುಂದಾಗಿದ್ದೇ ತಡಾ, ಹತ್ತಾರು ಮಂದಿಯೂ ತಮ್ಮ ಸಹಾಯವನ್ನು ಮಾಡಲು ಮುಂದಾಗಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುವುದಲ್ಲದೇ ಸ್ಥಳೀಯ ಆರಕ್ಷಕರಿಗೆ ಕರೆ ಮಾಡಿ ವಿಷಯವನ್ನು ತಿಳಿಸಲು ಮುಂದಾಗುತ್ತಾರೆ.

acc2ಆ ಒಬ್ಬ ಹೃದಯವಂತ ಮನುಷ್ಯ ಸಹಾಯ ಹಸ್ತವನ್ನು ಚಾಚಲು ಮುಂದಾಗುವವರೆಗೂ ಉಳಿದವರೆಲ್ಲರೂ ಬೇರೆಯವರ ಸಹಾಯಕ್ಕೆ ನಿರೀಕ್ಷಿಸುತ್ತಿರುತ್ತಾರೆಯೇ ಹೊರತು, ತಾವೇ ಸಹಾಯ ಹಸ್ತವನ್ನು ಚಾಚಲು ಮುಂದಾಗಿರುವುದಲ್ಲ ಈ ರೀತಿಯಾಗಿ ಬಹುತೇಕರು ಯಾರಾದರೂ ಬೆಂಬಲಿಸಿದರೆ ಅಥವಾ ಪ್ರೇರೇಪಿಸಿದ್ದಲ್ಲಿ ಮಾತ್ರವೇ ಅವರಲ್ಲಿನ ಶಕ್ತಿ ಸಾಮರ್ಥ್ಯಗಳು ಜಾಗೃತವಾಗಿ ಕೆಲವವನ್ನು ಮುಂದುವರೆಸುತ್ತಾರೆ.

ಮುಂದೆ ಸ್ಪಷ್ಟ ಗುರಿ ಮತ್ತು ಹಿಂದೆ ದಿಟ್ಟ ಗುರುವಿದ್ದಲ್ಲಿ ಎಂತಹ ಕೆಲಸವನ್ನೂ ಸುಸೂತ್ರವಾಗಿ ಮಾಡಬಹುದು ಎನ್ನುವುದು ಸರ್ವೇ ಸಾಮಾನ್ಯವಾದರೂ, ಆದರೆ ಜೀವನದಲ್ಲಿ ಎಲ್ಲಾ ಸಮಯದಲ್ಲಿಯೂ ಎಲ್ಲರಿಗೂ ಈ ರೀತಿಯಾಗಿ ಪ್ರೇರಣೆ ನೀಡಬಲ್ಲವರು ಸಿಗುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದ ಕಾರಣ, ನಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ನಮ್ಮಲ್ಲಿಯೇ  ಅರಿವು ಮೂಡಿಸಿ ಕೊಳ್ಳೋಣPractice makes man perfect ಎನ್ನುವ  ಆಂಗ್ಲ ಉಕ್ತಿಯಂತೆ,  ಅರಂಭದಲ್ಲಿ ಒಂದೆರಡು ಬಾರಿ ಸೋಲಾಗಬಹುದು. ಆಗ ಅದೇ ಸೋಲನ್ನೇ ನೆನೆಯುತ್ತಾ ಹತಾಶರಾಗದೇ, ಅದೇ ಸೋಲಿನ ಅನುಭವವನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸತತ ಪರಿಶ್ರಮದ ಮೂಲಕ ವಿಜಯವನ್ನು ಸಾಧಿಸಬಹುದಾಗಿದೆ.

ಅದೇ ರೀತಿ ನಮಗೂ ಸಹಾ ಯಾರಾದರೂ ಸಹಾಯ ಮಾಡಿದಲ್ಲಿ ನಾವು ಕೂಡ ಬಲಶಾಲಿಯಾಗಬಹುದು ಅಥವಾ ಇನ್ನೂ ಮೇಲಕ್ಕೆ ಏರಬಹುದಿತ್ತು ಎಂದು ಕೊರಗುವ ಮಂದಿ ಕಾಣಿಸಿದಲ್ಲಿ ಕೂಡಲೇ ಅಂತಹವರಿಗೆ ನಮ್ಮ ಅನುಭವಗಳನ್ನು ಹೇಳುವ ಮೂಲಕ ಅವರಲ್ಲಿನ ಸಾಮಥ್ಯವನ್ನು ಜಾಗೃತಗೊಳಿಸಿ ಅವರ ಸಂಕಷ್ಟದಿಂದ ಪಾರಾಗಿಸ ಬಹುದು.  ಸರಳ  ಪ್ರೀತಿ, ಸಕಾರಾತ್ಮಕ ಸ್ಪಂದನೆ ಮತ್ತು ಕೆಲವು ಪ್ರೇರಕ ಪದಗಳು ಮತ್ತೊಬ್ಬರ ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು ಎಂದಾದಲ್ಲಿ ಆ ರೀತಿಯಾಗಿ  ನಿಸ್ವಾರ್ಥತೆಯಿಂದ, ಉತ್ಸಾಹ ಮತ್ತು ಬೆಂಬಲ ಸೂಚಿಸುವ ಕೆಲಸವನ್ನು ನಾವೂ ನೀವೇ ಮಾವುತ, ಜಾಂಬವಂತರಂತೆ  ಹೃದಯ ಶ್ರೀಮಂತರೇಕಾಗಬಾರದು?

ಏನಂತೀರೀ?

ನಿಮ್ಮವನೇ ಉಮಾಸುತ

ತಿರುಪತಿ ಬೆಟ್ಟದ ನೈಸರ್ಗಿಕ ಶ್ರೀ ವೆಂಕಟೇಶ್ವರ ಸ್ವಾಮಿ

venk1ತಿರುಮಲ ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕರ ಭಾವನೆಯಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದಾದರೂ ಅದರ ಹೊರತಾಗಿಯೂ ತಿರುಮಲ ಬೆಟ್ಟ ಹಾಗೂ ತಿರುಪತಿ ನಗರದ ಸುತ್ತ ಮುತ್ತ ಸಾಕಷ್ಟು  ರಮಣೀಯವಾದ ಸ್ಥಳಗಳು ಇದ್ದು ಅವುಗಳಲ್ಲಿ ಬಹುತೇಕರು ಗಮನಿಸದಿರದ ನೈಸರ್ಗಿಕ ವೆಂಕಟೇಶ್ವರ ಸ್ವಾಮಿ ಪ್ರತಿಮೆ ಇದೆ. ನಾವಿಂದು ಕುಳಿತಲ್ಲಿಂದಲೇ  ಆ ಸ್ವಾಮಿಯ ದಿವ್ಯ ದರ್ಶನವನ್ನು ಪಡೆಯೋಣ ಬನ್ನಿ.

ಧನುರ್ಮಾಸದಲ್ಲಿ ಕೇವಲ ಒಂದು ದಿನ ವಿಷ್ಣುವಿನನ್ನು ದರ್ಶನ ಮಾಡಿದಲ್ಲಿ ಅದು ಸಾವಿರ ದಿನ ದರ್ಶನ ಮಾಡಿದಷ್ಟು ಪುಣ್ಯ ಬರುತ್ತದೆ ಎಂಬ ನಂಬಿಕೆ ಅಸ್ತಿಕರಲ್ಲಿ ಇರುವ ಕಾರಣ, ಬಹುತೇಕರು ಧನುರ್ಮಾಸದಲ್ಲಿ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ. ಅದರಲ್ಲೂ ವೈಕುಂಠ ಏಕದಶಿಯ ದಿನವಂತೂ ಕೇಳುವುದೇ ಬೇಡ. ತಿರುಮಲದಲ್ಲಿ ಒಂದು ಸೂಜಿಯಷ್ಟೂ ಜಾಗ ಇರದಂತಾಗಿರುತ್ತದೆ.  ಅದೆಷ್ಟೋ ಜನ ವಿವಿಧ ರಾಜ್ಯಗಳಿಂದ ವೈಕುಂಠ ಏಕಾದಶಿಯಂದು ತಲುಪುವ ಹಾಗೆ ಕಾಲ್ನಡಿಗೆಯಲ್ಲಿ ಪ್ರತೀ ವರ್ಷವೂ ತಿರುಪತಿಗೆ ಬರುವ ಸಂಪ್ರದಾಯವನ್ನೂ ಇಟ್ಟುಕೊಂಡಿದ್ದಾರೆ.   ನಾವು ಇಂದು ತಿಳಿಸಲು ಹೊರಟಿರುವ ನೈಸರ್ಗಿಕ ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ  ವಾಹನಗಳಲ್ಲಿ ಹೋಗುವವರಿಗೆ ಕಾಣಸಿಗದೇ, ಭಕ್ತಿಯಿಂದ ಸ್ವಾಮಿಯ ಬೆಟ್ಟವನ್ನು ಹತ್ತುವ ಭಕ್ತಾದಿಗಳಿಗೆ ಈ ಸ್ವಾಮಿಯ ದರ್ಶನದ ಭಾಗ್ಯ ಕಾಣಸಿಗುತ್ತದೆ.

govindaಒಂದೊಂದೇ ಬೆಟ್ಟಗಳನ್ನು ದಾಟುತ್ತಾ ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ವಿಶಾಲವಾದ ಎತ್ತರೆತ್ತರದ ಬೆಟ್ಟ ಗುಡ್ಡಗಳು ಮತ್ತು ಕಾಡಿನ ಮಧ್ಯದಲ್ಲಿ ಬಂಡೆಗಳಲ್ಲಿ  ಯಾರೋ   ಸ್ವಾಮಿಯ ಮೂರ್ತಿಯನ್ನು ಕೆತ್ತಿರುವಂತೆ ಭಾಸವಾಗುತ್ತದಾದರೂ ಅದು ನೈಸರ್ಗಿಕವಾಗಿ ನಿರ್ಮಾಣವಾಗಿದೆ ಎನ್ನುವುದು ಸರಿ ಎನಿಸುತ್ತದೆ.  ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಬೆಳ್ಳಗಿನ  ಮೋಡಗಳ ಮಧ್ಯೆ ಇರುವ ಈ ಸ್ವಾಮಿಯ ಬಳಿ ಹೋಗುವುದೇ  ಒಂದು ಹರಸಾಹಸವೇ ಸರಿ.  ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಭಕ್ತಾದಿಗಳು ಧೈರ್ಯದಿಂದ ಆ ಪ್ರದೇಶಕ್ಕೆ  ಹೋಗಿ, ಸೊಂಟಕ್ಕೆ  ಹಗ್ಗ ಕಟ್ಟಿಕೊಂಡು ಸ್ವಾಮಿಗೆ ಹಾರವನ್ನು ಹಾಕಿ ಹಾಲಿನಿಂದ ಅಭಿಷೇಕ ಮಾಡಿ ಪೂಜಿಸುವುದನ್ನು ನೋಡಿದರೇ ಎದೆ ಘಲ್ ಎನಿಸುವಂತಿರುವಾಗ ನಿಜವಾಗಿಯೂ  ಅಲ್ಲಿಗೆ ಹೋಗುವ ಭಕ್ತಾದಿಗಳಿಗೆ ನಿಜಕ್ಕೂ ಒಂದು ದೊಡ್ಡ  ನಮಸ್ಕಾರಗಳನ್ನು  ಹೇಳಲೇ ಬೇಕು.

ಹಬ್ಬ ಹರಿದಿನ ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈಕುಂಠ ಏಕಾದಶಿಯಂದು ತಿರುಮಲದಲ್ಲಿ ವೆಂಕಟರಮಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರೆ ಇಲ್ಲಿಯ ನೈಸರ್ಗಿಕ ಸ್ವಾಮಿಗೂ ಸಹಾ ನಾನಾ ವಿಧದಲ್ಲಿ ಅಲಂಕರಿಸಿ ಭಕ್ತಿ ಭಾವಗಳಿಂದ ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ವರ್ಣಿಸುವುದಕ್ಕಿಂತಲೂ ನೋಡಿದರೆ ಎದೆ ಝಲ್ ಎನಿಸುವುದಂತೂ ಸುಳ್ಳಲ್ಲಾ.  ಇನ್ನು  ಅಂತಹ ದುರ್ಗಮ ಪ್ರದೇಶಕ್ಕೆ ಹೋಗಲು ಸಾಧ್ಯವಾಗದವರು ಕೆಳಗಿನಿಂದಲೇ ಸ್ವಾಮಿಗೆ ಭಕ್ತಿಯಿಂದ ಪೂಜೆ ಮಾಡಿ ಸಕಲ ನೈವೇದ್ಯಗಳನ್ನು ಅರ್ಪಿಸಿ ಗೋವಿಂದ ಗೋವಿಂದ ಎಂದು ಭಗವಂತನ ನಾಮಸ್ಮರಣೆ ಮಾಡುವುದು ನಿಜಕ್ಕೂ ಕರ್ಣಾನಂದವೆನಿಸುತ್ತದೆ.

ಹಾಂ!! ಗೋವಿಂದ ಎಂಬ ನಾಮಸ್ಮರಣೆ ಕೇಳಿದಾಗ ಭಗವಾನ್ ವಿಷ್ಣುವಿಗೆ ಗೋವಿಂದೆ ಎಂಬ ಹೆಸರು ಹೇಗೆ ಬಂದಿತು ಎಂಬುದರ ಕುರಿತಾಗಿ ಇತ್ತೀಚೆಗೆ ವ್ಯಾಟ್ಸ್ಯಾಪಿನಲ್ಲಿ  ಓದಿದ ಒಂದು ಪ್ರಸಂಗ ನೆನಪಾಗಿ ಅದನ್ನೂ ಹೇಳೇ ಬಿಡ್ತೀನಿ.

ಎಲ್ಲರಿಗೂ ಗೊತ್ತಿರುವಂತೆ ಶಿವ ಅಭಿಷೇಕಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ, ಅದೊಮ್ಮೆ ಶಿವ ಮತ್ತು ವಿಷ್ಣು ಹಾಗೇ ಲೋಕಾಭಿರಾಮವಾಗಿ ಹರಟುತ್ತಿರುವಾಗ, ಹೇ ಪರಮೇಶ್ವರ ನಾನು ಅತಲ, ಸುತಲ, ಪಾತಾಳ, ಬ್ರಹ್ಮಾಂಡ, ದೇವಲೋಕ, ಇಂದ್ರಲೋಕ ಎಲ್ಲವನ್ನೂ ನೋಡಿರುವೆನಾದರೂ, ನೀವಿರುವ  ಕೈಲಾಸವನ್ನು  ಒಮ್ಮೆಯೂ ನೋಡಿಲ್ಲ, ಹಾಗಾಗಿ ನನಗೆ ನಿಮ್ಮ ಕೈಲಾಸ ಪರ್ವತವನ್ನು  ನೋಡಬೇಕೆಂಬ  ಆಸೆ ಇದೆ ಎಂದು ವಿಷ್ಣು ಮಹೇಶ್ವರನನ್ನು ಕೇಳಿದಾಗ, ಕೇಳಿದವರಿಗೆ ಕೇಳಿದ್ದನ್ನು ಇಲ್ಲಾ  ಎಂದು ಕೊಡುವ ಕೊಡುಗೈ ದಾನಿ ಪರಮೇಶ್ವರ ಅರೇ ಅದಕ್ಕೇನಂತೇ, ನಾಳೆಯೇ  ನಾಳೆಯೇ ನಮ್ಮ ಕೈಲಾಸವನ್ನು ನೋಡಲು ಬರಬಹುದು ಎಂದು ಆಹ್ವಾನಿಸುತ್ತಾರೆ.

ಅದಾದ ನಂತರ ಪರ ಶಿವನು ಕೈಲಾಸಕ್ಕೆ ಹಿಂದಿರುಗಿ ತನ್ನ ಸೇವಕ ಬೃಂಗಿಯನ್ನು ಕರೆದು  ನಾಳೆ ಮಹಾವಿಷ್ಣುವು ನಮ್ಮ ಕೈಲಾಸಕ್ಕೆ ಬರುತ್ತಿದ್ದಾನೆ ಹಾಗಾಗಿ ಕೈಲಾಸವನ್ನು ಸ್ವಲ್ಪ ಸ್ವಚ್ಛಮಾಡಿ ಅಂದ ಚಂದವಾಗಿ ಇಡಲು ಸೂಚಿಸುತ್ತಾನೆ.

ಆದರೆ  ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಆ ಕೈಲಾಸವನ್ನು ಹೇಗೆ ಸ್ವಚ್ಛ ಮಾಡುವುದು ಎಂಬುದನ್ನು ಅರಿಯದೇ, ಏನು ಮಾಡುವುದು ಎಂದು ದಿಗ್ಬ್ರಾಂತನಾಗಿರುವಾಗ, ಗೋಮಾತೆ  ಕಾಮಧೇನು ಅಲ್ಲಿ ಸಗಣಿಯನ್ನು” ಹಾಕಿ ಹೋಗುವುದನ್ನು ಗಮನಿಸುತ್ತಾನೆ. ಕೂಡಲೇ ಕೈಲಾಸದಲ್ಲಿರುವ  ಹೆಣ್ಣು ಮಕ್ಕಳನ್ನು ಕರೆದು, ಸುತ್ತಮುತ್ತಲೂ ಇದ್ದ ಸಗಣಿಯನ್ನು ಶೇಖರಿಸಿ ಆ ಸಗಣಿಯಿಂದಲೇ ಇಡೀ ಕೈಲಾಸವನ್ನು  ಸಾರಿಸಿ ಗುಡಿಸಿ  ರಂಗೋಲಿ ಹಾಕಿ ಅಲಂಕರಿಸಿ, ಹೆಬ್ಬಾಗಿಲಿಗೆ ತಳಿರು ತೋರಣದಿಂದ  ಸಿಂಗಾರಗೊಳಿಸುತ್ತಾನೆ.

ನಿಶ್ವಯದಂತೆ  ಮರುದಿನ ವೈಕುಂಠ ವಾಸಿ ಆಲಂಕಾರ ಪ್ರಿಯ ವಿಷ್ಣು ಕೈಲಾಸಕ್ಕೆ ಬರುವ ಮೊದಲು ಅಷ್ಟೈಶ್ವರ್ಯಗಳನ್ನು ಧರಿಸಿಕೊಂಡು  ಸುಗಂಧ ದ್ರವ್ಯಗಳಿಂದ.ಶಂಕು,ಚಕ್ರ ಗದ, ಪುಷ್ಪ, ಹಸ್ತಗಳಿಂದ ವಿರಾಜಿಸುತ್ತ ಗರುಡ ರೂಢನಾಗಿ  ಕೈಲಾಸಕ್ಕೆ ಬಂದಿಳಿಯುತ್ತಾನೆ.

ಕೈಲಾಸಕ್ಕೆ ಬಂದ ವಿಷ್ಣುವನ್ನು ಸ್ವಾಗತಿಸಲು ಶಿವನು ತನ್ನ ಗಣದೊಂದಿಗೆ ಬಂದು ಭವ್ಯವಾಗಿ ಸ್ವಾಗತಿಸಲು ಬಂದಾಗ, ಇದ್ದಕ್ಕಿದ್ದಂತೆಯೇ ವಿಷ್ಣುವಿಗೆ ಸುವಾಸನೆಯು ಮೂಗಿಗೆ ಬಡಿದು ಅರೇ, ಇಷ್ಟೊಂದು ಸುಗಂಧವಾದ ಪರಿಮಳ ಎಲ್ಲಿಂದ ಬಂತು ಎಂದು ಆಶ್ಚರ್ಯಚಕಿತನಾಗುತ್ತಾನೆ.

ಆದಕ್ಕೆ ಅಲ್ಲೇ ಇದ್ದ  ಬೃಂಗಿಯು ಸ್ವಾಮಿ ಇದು ಸುಗಂಧವಲ್ಲ ಇದು ಗೋವಿನ  ವಿಂದಾ  ಎನ್ನುತ್ತಾನೆ. ವಿಂದಾ  ಅಂದರೆ ಎಂದರೆ ಸಂಸ್ಕೃತದಲ್ಲಿ ಸಗಣಿ ಎಂದು ಅರ್ಥ. ಆ ಕೂಡಲೇ ಅಲ್ಲಿ ನೆರೆದಿದ್ದವರೆಲ್ಲರೂ ಜೋರು ಧ್ವನಿಯಲ್ಲಿ ಗೋವಿಂದಾ- ಗೋವಿಂದಾ- ಗೋವಿಂದ ಎನ್ನಲು  ಸಂತೋಷಗೊಂಡ ವೈಕುಂಠ ಪತಿಯಾದ ಶ್ರೀ ಮನ್ನಾರಾಯಣನು ಇದೇ ವೈಕುಂಠ, ಇದೇ ಕೈಲಾಸ ಎಂದು ಅಲ್ಲಿದ್ದ ಜನಗಳಿಗೆ ಆಶೀರ್ವಾದ ಮಾಡುತ್ತಾನೆ.

ಆಗ ಅಲ್ಲಿದ್ದ ಪರಶಿವನು ಇನ್ನು ಮುಂದೆ ನಿನ್ನ ಹೆಸರು ಗೋವಿಂದ ಎಂದಾಗಲಿ ಮತ್ತು ಯಾರು ಗೋವಿಂದ – ಗೋವಿಂದ ಎಂದು ನಿನ್ನನ್ನು ಭಜಿಸುತ್ತಾರೋ ಅವರಿಗೆ  ಮುಕ್ತಿ ಸಿಗಲಿ ಎಂದು ಹರಿಸುತ್ತಾನೆ. ಅಂದಿನಿಂದ  ದೇವಾನುದೇವತೆಗಳು ಮತ್ತು  ಇಡೀ ಜಗತ್ತೇ  ತಿರುಪತಿ ತಿಮ್ಮಪ್ಪನ ಪಾದಕ್ಕೆ ಗೋವಿಂದ ಗೋವಿಂದ ಎಂದು ಭಗವಂತನನ್ನು ಕೊಂಡಾಡುತ್ತಿದ್ದಾರೆ

ಹೇಗೋ ಕುಳಿತಲ್ಲಿಂದಲೇ ತಿರುಪತಿಯ ನೈಸರ್ಗಿಕವಾದ ವೆಂಕಟರಮಣಸ್ವಾಮಿಯ ದರ್ಶನವನ್ನು ಮಾಡಿದ್ದಲ್ಲದೇ ಗೋವಿಂದ ಎಂಬ ಹೆಸರು ಹೇಗೆ ಬಂದಿತು ಎಂಬ ಕಧನವನ್ನು ಕೇಳಿಯಾಯ್ತು. ಈಗ ಇನ್ನೇಕೆ ತಡಾ, ಈ ಸಾಂಕ್ರಾಮಿಕ ಮಹಾಮಾರಿ ಎಲ್ಲವೂ ಕಡಿಮೆ ಆದ ನಂತರ ತಿರುಪತಿಯಿಂದ ತಿರುಮಲಕ್ಕೆ ವಾಹನದಲ್ಲಿ ಹೋಗದೇ ಕಾಲ್ನಡಿಗೆಯಲ್ಲಿ ಮೆಟ್ಟಿಲುಗಳ ಮೂಲಕವೇ ಹೋಗಿ ಮಾರ್ಗದ ಮಧ್ಯದಲ್ಲಿ ಕಾಣಸಿಗುವ  ನೈಸರ್ಗಿಕ ವೆಂಕಟರಮಣಸ್ವಾಮಿಯ ದರ್ಶನವನ್ನು ಪಡೆದು  ಆದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರಿ?

ನಿಮ್ಮವನೇ ಉಮಾಸುತ

ತಿರುಪತಿ ವೆಂಕಟರಮಣ ಸ್ವಾಮಿ ಪಾದಕ್ಕೆ  ಗೋವಿಂದಾ ಗೋವಿಂದಾ

ಸಿಂಧೂ ತಾಯಿ ಸಪ್ಕಾಲ್, ಅನಾಥ ಮಕ್ಕಳ ಅಕ್ಕರೆಯ ಆಯಿ

ಮಹಾರಾಷ್ಟ್ರದಲ್ಲಿ ಸಿಂಧೂ ತಾಯಿ ಎಂದರೆ ಅನಾಥರ ಪಾಲಿನ ಆಯಿ ಎಂದೇ ಖ್ಯಾತಿ ಪಡೆದಿದ್ದವರು. ಸುಮಾರು 50 ವರ್ಷಗಳಿಂದಲೂ  ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ದಿಕ್ಕು ದೆಸೆ ಇಲ್ಲದ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮಾಡಿರುವ ಕಾರಣ ಆಕೆ ತನಗೆ  207 ಅಳಿಯಂದಿರು ಮತ್ತು 36 ಸೊಸೆಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ನವೆಂಬರ್ 14, 1948 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಸಿಂಧು ಸಪ್ಕಾಲ್ ಸಿಂಧು ತಾಯಿ ಆಗಿ ರೂಪುಗೊಂಡಿದ್ದೇ ಒಂದು ರೋಚಕ ಕತೆ. ತನ್ನೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸದ ಅಂಗವಾಗಿ ತನ್ನ 4 ನೇ ತರಗತಿ ಮುಗಿಸಿ ಓದನ್ನು ಮುಂದುವರೆಸಬೇಕು ಎಂದು ಆಲೋಚಿಸುತ್ತಿರುವ ಸಮಯದಲ್ಲೇ ಆಕೆಯನ್ನು ಅದಾಗಲೇ 32 ವರ್ಷದ ವ್ಯಕ್ತಿಯೊಂದಿಗೆ  ಮದುವೆಯನ್ನು ಮಾಡಲಾಯಿತು.  ಆಕೆಗೆ ಕೇವಲ 19 ವರ್ಷದಗಳಾಗುವಷ್ಟರಲ್ಲಿ  ಮೂರು ಗಂಡುಮಕ್ಕಳ ತಾಯಿಯಾಗಿದ್ದಳಲ್ಲದೇ ನಾಲ್ಕನೇ ಮಗು ಹೊಟ್ಟೆಯಲ್ಲಿತ್ತು.

ಜೀವನೋಪಾಯಕ್ಕಾಗಿ ಅವರ ಊರಿನಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದಾಗ ಅಲ್ಲೊಬ್ಬ ಹೆಣ್ಣುಮಕ್ಕಳನ್ನು ವಿಪರೀತವಾಗಿ ದ್ವೇಷಿಸುತ್ತಿದ್ದ ಕ್ರೂರ ವ್ಯಕ್ತಿಯೊಬ್ಬನಿದ್ದ. ಆತ ಹಳ್ಳಿಯ ಹೆಣ್ಣು ಮಕ್ಕಳಿಂದ ವಿಪರೀತವಾಗಿ ದುದಿಸಿಕೊಳ್ಳುತ್ತಿದ್ದದ್ದಲ್ಲದೇ, ದೈಹಿಕವಾಗಿಯೂ ದಂಡಿಸುತ್ತಾ, ಅವರ ದುಡಿದಕ್ಕೆ  ತಕ್ಕ ಹಣವನ್ನೂ ನೀಡದೇ ಸತಾಯಿಸುತ್ತಿದ್ದ. ಆತನ ಕ್ರೂರತೆಗೆ ಹೆದರಿ ಯಾರೂ ಸಹಾ ಚಕಾರವನ್ನು ಎತ್ತದಿದ್ದನ್ನು ಗಮನಿಸಿದ ಸಿಂಧು ಧೈರ್ಯ ಮಾಡಿ ಆತನ ವಿರುದ್ಧ  ಊರಿನ ಕಲೆಕ್ಟರ್ ಬಳಿ ದೂರು ನೀಡಿದಳು. ಆಗ ಪೊಲೀಸರು ಬಂದು ಆ ಕ್ರೂರಿಯನ್ನು ಕರೆದೊಯ್ಯುವ ಸಮಯದಲ್ಲಿ ಸಿಂಧುವಿನ ಮೇಲಿನ ದ್ವೇಷದಿಂದಾಗಿ,  ಆತ ಸಿಂಧುವಿನ ಪತಿಯ ಬಳಿ ಆಕೆಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಲ್ಲದೇ, ನಿನ್ನ ಹೆಂಡತಿ ನಡತೆಗೆಟ್ಟವಳು. ನನಗೂ ಆಕೆಗೂ ಅಕ್ರಮ ಸಂಬಂಧವಿದ್ದು ಆಕೆಯ ಹೊಟ್ಟೆಯಲ್ಲಿರುವ  ಮಗು ನನ್ನದು ಎಂದು ಹೇಳಿದ್ದನ್ನೇ ನಂಬಿದ ಆಕೆಯ ಪತಿ ತುಂಬಿದ ಗರ್ಭಿಣಿ ಎಂಬುದನ್ನೂ ಪರಿಗಣಿಸಿದೇ, ಕೋಪದಿಂದ  ತನ್ನ ಹೆಂಡತಿಯ ಹೊಟ್ಟೆಗೆ ಜಾಡಿಸಿ ಒದ್ದ.  ಅಚಾನಕ್ಕಾಗಿ ಈ ಪರಿಯ ಏಟಿನಿಂದ ಹತ್ತೊಂಬತ್ತರ ಹರೆಯದ ಹುಡುಗಿ ಪ್ರಜ್ಞಾಹೀನಳಾದಳು. ಆಕೆ ನೆಲದ ಮೇಲೆ ‍ಚಲನೆ ಇಲ್ಲದೇ ಬಿದ್ದಿದ್ದನ್ನು ಗಮನಿಸಿ ಆಕೆ ಸತ್ತು ಹೋಗಿರಬೇಕು ಎಂದು ಭಾವಿಸಿ  ಹಸುಗಳ ತುಳಿತದಿಂದ ಅವಳು ಸತ್ತಳು ಎಂದು  ಜನ ಭಾವಿಸಲಿ ಎಂದು ಆಕೆಯನ್ನು ಹಸುಗಳಿದ್ದ ತನ್ನ ಕೊಟ್ಟಿಗೆಗೆ ಸಾಗಿಸಿ ಪರಾರಿಯಾಗಿದ್ದ.

ಪ್ರಾಣಿಗಳೇ ಗುಣದಲೀ ಮೇಲು ಮಾನವ  ಅದಕಿಂತ ಕೀಳು ಎನ್ನುವ ರಾಜಕುಮಾರ್ ಆವರ ಹಾಡಿನಂತೆ, ಅವಳು ಸಾಕಿದ ಆ ಹಸುಗಳೇ ಆಕೆಗೆ ನೆರಳಾಗಿ ನಿಂತು ಅವಳ ರಕ್ಷಣೆ ಮಾಡಿದ ಕಾರಣ ಆಕೆ ಅಲ್ಲಿಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆಕೆ ಬದುಕಿದ್ದಾಳೋ ಇಲ್ಲಾ ಸತ್ತಿದ್ದಾಳೋ ಎಂದು ಪರೀಕ್ಷಿಸಲು ಆಕೆಯ ಮಾವನವರು ಬಂದಾಗ ಆ  ಹಸುಗಳು  ಅವರನ್ನು  ಅಕೆಯ ಹತ್ತಿರಕ್ಕೂ ಬರಲು ಬಿಡಲಿಲ್ಲ. ಸ್ವಲ್ಪ ಹೊತ್ತು ಸುಧಾರಿಸಿಕೊಂಡ ನಂತರ ಇಲ್ಲಿದ್ದರೆ ತನಗೆ ಉಳಿಗಾಲವಿಲ್ಲ ಎಂದು ನಿರ್ಧರಿಸಿ ಹಸುಗೂಸನ್ನು ಎತ್ತಿಕೊಂಡು ಮನೆಯಿಂದ ಹೊರಬಂದು ಹತ್ತಿರದ ರೈಲ್ವೇ ಹಳಿಯ ಮೇಲೆ ತಾನೂ ಮತ್ತು ಹಸುಗೂಸು ಸಾಯಲು ನಿರ್ಧರಿಸಿ ಹಳಿಯ ಮೇಲೆ ಮಲಗಿದ್ದಳು. ಇನ್ನೇನು ಕೆಲವೇ ನಿಮಿಷಗಳಲ್ಲಿ ವೇಗವಾಗಿ ರೈಲು ಬಂದು ಹಳಿಯ ಮೇಲೆ ಮಲಗಿದ್ದ ಆಕೆಯ ಮೇಲೆ ಹರಿದು ಆಕೆಯ ಪ್ರಾಣ ಪಕ್ಷಿ ಹಾರಿ ಹೋಗತ್ತದೆ ಎಂದೇ ಭಾವಿಸಿದ್ದಾಗ, ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಆಕೆಗೆ ಅಲ್ಲಿ ಯಾರೋ ನರಳುತ್ತಿರುವ ಶಬ್ಧ ಕೇಳಿಸಿತು.

ಕುತೂಹಲದಿಂದ ಹಳಿಯಿಂದ ಎದ್ದು ನರಳುತ್ತಿರುವವರು ಯಾರು? ಎಂದು ನೋಡಿದರೆ ಅಲ್ಲೊಬ್ಬ ಹಣ್ಣು ಹಣ್ಣು ವಯಸ್ಸಿನ ಮುದುಕರೊಬ್ಬರು ಹಸಿವಿನಿಂದ ನರಳುತ್ತಿದ್ದದ್ದು ಆಕೆಯ ಮನಸ್ಸನ್ನು ಬದಲಿಸಿತು. ಆತನಿಗೆ ತಿನ್ನಲು  ಏನನ್ನಾದರೂ ಕೊಡಬಹುದೇ ಎಂದು ಸುತ್ತಮುತ್ತಲೂ ನೋಡಿದಾಗ, ಹತ್ತಿರದಲ್ಲೊಂದು ಸ್ಮಶಾನ ಕಾಣಿಸಿತು ಅಲ್ಲಿಗೆ ಹೋಗಿ ನೋಡಿದಾಗ  ಹೆಣದ ಮೇಲೆ ಚೆಲ್ಲಿದ ಅಕ್ಕಿ ಮತ್ತು  ಗೋಧಿಹಿಟ್ಟನ್ನು ಒಟ್ಟು ಮಾಡಿ, ಹೆಣವನ್ನು ಸುಡುತ್ತಿದ್ದ ಸೌದೆಯನ್ನೇ ಒಟ್ಟು ಮಾಡಿ ಅದರ ಮೇಲೆಯೇ ರೊಟ್ಟಿಯನ್ನು ಮಾಡಿ ಆ ವೃದ್ಧರ ಹಸಿವನ್ನು ನೀಗಿಸಿದಾಗ ಆತನ ಮುಖದಲ್ಲಿ ಮೂಡಿದ ಮಂದಹಾಸ ಆಕೆಗೆ ಶ್ರೀ ಕೃಷ್ಣನಂತೆ ಕಾಣಿಸಿದನಂತೆ. ಆಗ ಆಕೆಗೆ ತನ್ನ ಬದುಕಿನ ಅರ್ಥವಾಯಿತುಸುಮ್ಮನೆ ಸಾಯುವ ಬದಲು ಇಂತಹ ನೆಲೆಯಿಲ್ಲದ ನಿರ್ಗತಿಕರಿಗೆ ತಾಯಿಯಾಗಲು ನಿರ್ಧರಿಸಿ ಅದೇ ಊರಿನ ಸುತ್ತ ಮುತ್ತ ಇರುವ ನಿರ್ಗತಿಕರು ಮತ್ತು ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ಪೋಷಿಸಲಾರಂಭಿಸಿದಳು.

ಚಿಕ್ಕವಯಸ್ಸಿನಲ್ಲಿ ಅಮ್ಮನಿಂದ ಕಲಿತಿದ್ದ ಹಾಡುಗಳು ಆಕೆಗೆ ಉಪಯೋಗಕ್ಕೆ ಬಂದಿತು. ಸುಶ್ರಾವ್ಯವಾಗಿ ಬೀದಿ ಬೀದಿಯಲ್ಲಿ ಹಾಡುತ್ತಾ ಭಿಕ್ಷೆ ಎತ್ತಿ ಮಕ್ಕಳಿಗೆ ಆಹಾರ ಮತ್ತು ರಕ್ಷಣೆ ನೀಡತೊಡಗಿದಳು. ದಿನೇ ದಿನೇ  ಅನಾಥ ಮಕ್ಕಳ ಸಂಖ್ಯೆ ಏರತೊಡಗಿತು. ಆಕೆಯ ಈ ಪರಿಶ್ರಮವನ್ನು ಗಮನಿಸಿದ ಆ ಊರಿನ ಆನೇಕರು ಸಹಾಯ ಮಾಡಿದ ಪರಿಣಾಮ ಮಹಾರಾಷ್ಟ್ರದ ಹಡಪ್ಸಾರ್ ಎಂಬ ಸ್ಥಳದಲ್ಲಿ ‘ಸನ್ಮತಿ ಬಾಲನಿಕೇತನ್’ಎಂಬ ಮೊದಲ ಬೀದಿಯ ಮಕ್ಕಳ ಸುಂದರವಾದ ಅನಾಥಾಶ್ರಮ ನಿರ್ಮಾಣವಾಯಿತು. ನೋಡ ನೋಡುತ್ತಿದ್ದಂತೆಯೇ ಆ ಆಶ್ರಮದಲ್ಲಿನ ಮಕ್ಕಳ ಸಂಖ್ಯೆ ಒಂದೂವರೆ ಸಾವಿರವನ್ನೂ ಮೀರಿತ್ತು. ಆಶ್ರಮದ ಮಕ್ಕಳಿಗೆ ಪ್ರೀತಿಯಲ್ಲಿ ಪಕ್ಷಪಾತದ ನೆರಳು ಬೀಳಬಾರದು ಎಂಬ ಕಾರಣಕ್ಕೆ ತನ್ನ ಸ್ವಂತ ಮಗಳಾದ ಮಮತಾಳನ್ನು ಬೇರೆಯ ಅನಾಥಾಶ್ರಮಕ್ಕೆ ಸೇರಿಸುತ್ತಾರೆ. ಸರ್ಕಾರದ ಯಾವುದೇ ಅನುದಾನಕ್ಕೂ ಕೈ ಚಾಚದೇ, ಕೇವಲ ಸೇವಾಸಕ್ತ ದಾನಿಗಳ ನೆರವಿನಿಂದ ಈ ಅನಾಥಾಶ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.  ಎಲ್ಲರಿಗೂ ಉತ್ತಮವಾದ ವಿದ್ಯಾಭ್ಯಾಸವನ್ನು ನೀಡುವ ಜವಾಬ್ಧಾರಿಯನ್ನು ಆಕೆಯೇ ತೆಗೆದುಕೊಂಡ ಪರಿಣಾಮ ಆಕೆಯ ಆಶ್ರಮದಲ್ಲಿ ಓದಿ ಬೆಳೆದವರು ಹಲವರು ವೈದ್ಯರು, ಕೃಷಿಕರು, ದೇಶ ವಿದೇಶಗಳಲ್ಲಿ ಉದ್ಯೋಗಿಗಳಾಗಿದ್ದೂ ಎಲ್ಲರೂ ಆಕೆಯನ್ನು ತಮ್ಮ ಹೆತ್ತಮ್ಮನಿಗಿಂತಲೂ ಪ್ರೀತಿಯಾಗಿ ನೋಡಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಅದೊಮ್ಮೆ ಸಿಂಧೂ ತಾಯಿ ಆಶ್ರಮದ ಮುಂದೆ  ಅನಾರೋಗ್ಯ ಪೀಡಿತ ವ್ಯಕ್ತಿ ಬಸವಳಿದು ಬಂದು  ನಿಂತು ಅಕೆಯ ಆಶ್ರಮದಲ್ಲಿ ಆಶ್ರಯ ಕೋರಿದ. ಬಹಳ ನಿತ್ರಾಣರಾಗಿದ್ದ ಆತನನ್ನು ಆಶ್ರಮಕ್ಕೆ ಕರೆತಂದು ವಿಕಾರವಾಗಿ  ಬೆಳೆದು ನಿಂತಿದ್ದ ಕೂದಲು ಮತ್ತು ಗಡ್ಡವನ್ನು ಕತ್ತರಿಸಿ ಆತನಿಗೆ ಸ್ನಾನ ಮಾಡಿಸಿ ಹೊಸದಾದ ಬಟ್ಟೆಯನ್ನು ತೊಡಿಸಿ ಆಶ್ರಮದಲ್ಲೇ ಇದ್ದ ವೈದ್ಯೆಯ ಬಳಿ ಚಿಕಿತ್ಸೆ ಕೊಡಿಸಿ ಆತನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಕೆಗೇ ಅಚ್ಚರಿ ಮೂಡಿಸಿತು. ಆಕೆಯ ಬಳಿ ಆಶ್ರಯ ಪಡೆಯಲು ಬಂದವ ಬೇರಾರೂ ಆಗಿರದೇ ತನ್ನನ್ನು ಕೊಲ್ಲಲು ಮುಂದಾಗಿದ್ದ ಆಕೆಯ ಪತಿಯಾಗಿದ್ದ.  ಅವರಿಬ್ಬರ ನಡುವೆ ಗಂಡ ಹೆಂಡತಿಯ ಸಂಬಂಧ ಎಂದೋ ಮುಗಿದು ಹೋಗಿದ್ದ ಅಧ್ಯಾಯವಾಗಿದ್ದ ಕಾರಣ, ಆತ ಇಲ್ಲಿ ಉಳಿದ ಮಕ್ಕಳ ಜೊತೆಗೆ ಮಗುವಾಗಿಯೇ ಇದ್ದಲ್ಲಿ ಮಾತ್ರವೇ ಆತ ಈ ಆಶ್ರಮದಲ್ಲಿ ಇರಬಹುದು ಎಂಬ ಕರಾರು ಒಡ್ದಿ ಆತನಿಗೆ ಆಶ್ರಯ ನೀಡಲಾಯಿತು. ಆತ ಈಗ ಅವಳ ಗಂಡ ಅಲ್ಲ ಮತ್ತು ಆಕೆ ಅವನ ಹೆಂಡತಿ ಅಲ್ಲ. ಬದಲಾಗಿ ಆಕೆ ಅಮ್ಮ ಮತ್ತು ಆತ ಆಕೆಯ ಮಗ. ಇನ್ನು ಆತನಿಗೆ ಚಿಕಿತ್ಸೆ ನೀಡಿ ಆತನನ್ನು ಸಂಪೂರ್ಣವಾಗಿ ಗುಣಮುಖ ಗೊಳಿಸಿದವಳು ಆತನ ಸ್ವಂತ ಮಗಳಾಗಿದ್ದಳು ಎನ್ನುವುದು ಮತ್ತೊಂದು ಗಮನಾರ್ಹವಾದ ಅಂಶವಾಗಿತ್ತು.

ಸಿಂಧೂ ತಾಯಿಯರನ್ನು ಸಂಘ ಸಂಸ್ಥೆಗಳು ಆಹ್ವಾನಿಸಿದಾಗ ಆ ವೇದಿಕೆಗಳಲ್ಲಿ ತನ್ನ ಬದುಕಿನ ಹೋರಾಟದ ಕಥೆಯನ್ನು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ವರ್ಣನೆ ಮಾಡುತ್ತಿದ್ದದ್ದಲ್ಲದೇ, ಮಂಜಿಲ್ ಬಹುತ್ ದೂರ ಹೈ. ಜಾನಾ ವಹಾನ್ ಜರೂರಿ ಹೈ! ರಾಸ್ತಾ ಮುಷ್ಕಿಲ್ ಹೈ. ಹಮೆ ಮರನಾ ಮಂಜೂರು ಹೈ ಎಂದು ಹೇಳಿ ಮಾತು ಮುಗಿಸಿ, ಅಲ್ಲಿದ್ದವರ ಮುಂದೆ ತಮ್ಮ ಸೆರಗು ಹಿಡಿದು ಭಿಕ್ಷೆ ಬೇಡುತ್ತಾರೆ. ಹಾಗೆ ಸಂಗ್ರಹವಾದ ಮತ್ತು ಆಕೆಗೆ ಪ್ರಶಸ್ತಿಯ ಜೊತೆಗೆ ದೊರೆಯುವ ಸಂಪೂರ್ಣ ಹಣವನ್ನು ತಮ್ಮ ಆಶ್ರಮಕ್ಕೆ ಬಳಸಿಕೊಳ್ಳುವುದು ಆಕೆಯ ಹೆಗ್ಗಳಿಕೆಯಾಗಿತ್ತು.

ಕೇವಲ 4ನೇ ತರಗತಿ ಓದಿದ್ದ ಹಳ್ಳಿಯ ಸಾಮಾನ್ಯ ಸಿಂಧುವಾಗಿದ್ದವಳು  ಈಗ ಸಿಂಧೂತಾಯಿ ಆಗಿ ಬದಲಾಗಿದ್ದರು. ಆಕೆಯ ಈ ಸಾಧನೆಯನ್ನು ಮೆಚ್ಚಿ ಹತ್ತು ಹಲವಾರು  ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಆಕೆಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿತ್ತು. ರಾಷ್ಟ್ರಪತಿಗಳೇ ಈಕೆಯ ಸಾಧನೆಗೆ ಬೆರಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.  ಕರ್ನಾಟಕ ಸರ್ಕಾರದಿಂದಲೂ ಆಕೆ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.  ಸುಮಾರು 750 ಕ್ಕೂ ಹೆಚ್ಚು ಗೌರವಗಳನ್ನು ಪಡೆದಿದ್ದರೂ,  ಪ್ರಶಸ್ತಿ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಕಾಯಕವೇ ಕೈಲಾಸ ಎಂದು ತನ್ನ ಆಶ್ರಮದಲ್ಲೇ ತನ್ನ ಸಾವಿರಾರು ಮಕ್ಕಳು ಮತ್ತು ನೂರಾರು ಮೊಮ್ಮಕ್ಕಳೊಂದಿಗೆ ಇದ್ದ ಅನಾಥ ಮಕ್ಕಳ ಪಾಲಿನ ಆಯಿ ಸಿಂಧುತಾಯಿ ಸಪ್ಕಾಲ್ ಆವರಿಗೆ ತಮ್ಮ 73 ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಗಳು ಕಾಣಿಸಿಕೊಂಡಾಗ ಆಕೆಯನ್ನು ಪುಣೆಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಯಿತು.

ಪುಣೆಯಲ್ಲಿರುವ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಹಿಂದೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಕೆ ಬಹಳ ನಿಧಾನವಾಗಿತ್ತು.  ಎಲ್ಲಾ ವೈದ್ಯರುಗಳ ಹರಸಾಹವೂ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗಿ  ಆವರು ನೀಡಿದ ಚಿಕಿತ್ಸೆಗೆ ಸಿಂಧು ತಾಯಿಯ ದೇಹ ಸ್ಪಂದಿಸದೇ ಜನವರಿ 4, 2022ರ ರಾತ್ರಿ 8 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶೈಲೇಶ್ ಪುಂಟಂಬೆಕರ್ ತಿಳಿಸಿದಾಗ ಆಕೆಯ ಆಶ್ರಮದಲ್ಲಿ ಸಾವಿರಾರು  ಅನಾಥ ಮಕ್ಕಳು ನಿಜವಾಗಿಯೂ ಅನಾಥರಾದರು ಎಂದರೂ ಅತಿಶಯವೇನಲ್ಲ.

ಕಡು ಬಡತನದಲ್ಲಿ ಬೆಳೆದು  ಅಪಾರ ಕಷ್ಟಗಳನ್ನು ಅನುಭವಿಸಿಯೂ ಅವೆಲ್ಲವನ್ನೂ ಮೆಟ್ಟಿ ನಿಂತು ಸಾವಿರಾರು ಅನಾಥ ಮಕ್ಕಳಿಗೆ ಅಕ್ಕರೆಯ ಅಯಿಯಾಗಿದ್ದ ಸಿಂಧೂ ತಾಯಿ ಸಪ್ಕಾಲ್ ಎಂದೂ ಯಾರನ್ನೂ ಜಾತಿ, ಧರ್ಮದ ಬೇಧ ಮಾಡಿಲ್ಲ ಮತ್ತು ಯಾರನ್ನೂ ಮತಾಂತರ ಮಾಡಲಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಆಕೆಯ ಜೀವನ ಅನೇಕರಿಗೆ ಸ್ಫೂರ್ತಿಯಾಗಿರುವುದಲ್ಲದೇ, 2010 ರಲ್ಲಿ, ಆಕೆಯ ಜೀವನವನ್ನೇ ಆಧರಿಸಿದ ಮೀ ಸಿಂಧುತೈ ಸಪ್ಕಲ್  ಎಂಬ ಮರಾಠಿ ಚಿತ್ರವು ಬಿಡುಗಡೆಯಾಗಿದ್ದಲ್ಲದೇ ಅದು 54 ನೇ ಲಂಡನ್ ಚಲನಚಿತ್ರೋತ್ಸವದಲ್ಲಿ ವಿಶ್ವ ಪ್ರಥಮ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು ಅಕೆಯ ಹೆಗ್ಗಳಿಕೆ. ಸಮಾಜದ ಅಂಚಿನಲ್ಲಿರುವ ಸಮುದಾಯಗಳ ನಡುವೆಯೂ ಸಾಕಷ್ಟು ಕೆಲಸ ಮಾಡಿದ್ದ ಸಿಂಧೂ ತಾಯಿಯವರ ಅಗಲಿಕೆಗೆ ದೇಶದ ಪ್ರಧಾನಿಗಳು ಸೇರಿದಂತೆ, ಮಹಾರಾಷ್ಟ್ರ ದ ಮುಖ್ಯಮಂತ್ರಿಗಳು ಮತ್ತು ದೇಶದ ನಾನಾ ಗಣ್ಯರು ದುಃಖವನ್ನು ವ್ಯಕ್ತಪಡಿಸಿ ಆಕೆಯ ಆಶ್ರಮದ ಸಾವಿರಾರು ಮಕ್ಕಳಿಗೆ ಅವರ ಪ್ರೀತಿಯ ಆಯಿಯ ಅಕಾಲಿಕ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕೋರಿದ್ದಾರೆ.

ಹೆತ್ತವರಷ್ಟೇ ಅಮ್ಮಯೇನಲ್ಲ ಸಾಕಿ ಸಲಹಿದವರೂ ಅಮ್ಮನೇ. ದೇವಕಿ ಶ್ರೀ ಕೃಷ್ಣನ ಜನ್ಮದಾತೆಯಾದರೂ ಆತನನ್ನು ಸಾಕಿ ಸಲಹಿ ಬೆಳದಿದ ಯಶೋಧೆಯೂ ಆತನಿಗೆ ತಾಯಿಯೇ ಅಲ್ಲವೇ? ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ತನ್ನ ಇಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಸಿಂಧು ತಾಯಿಯಯವರ ಆತ್ಮಕ್ಕೆ ಸದ್ಗತಿಯನ್ನು ಆ ಭಗವಂತನು ನೀಡಲಿ ಮತ್ತು ಆಕೆಯ ಜೀವನ ಲಕ್ಷಾಂತರ ಜನರಿಗೆ ಪ್ರೇರಣೆಯಗಲಿ ಎಂದು ನಾವೂ ನೀವೂ ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ