ಕೃಷಿತೋ ನಾಸ್ತಿ ದುರ್ಭಿಕ್ಷಂ

farmers3ಹೇಳೀ ಕೇಳಿ ಭಾರತ ಕೃಷಿಯಾಧಾರಿತವಾದ ದೇಶಾವಾಗಿದು ರೈತನೇ ಈ ದೇಶದ ಬೆನ್ನಲುಬು. ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಯುವಕರು ತಾಂತ್ರಿಕ ವಿಷಯಗಳಲ್ಲಿ ಎಷ್ಟೇ ಪರಿಣಿತಿಯನ್ನು ಪಡೆದು ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತಿದ್ದರೂ ಅವರೆಲ್ಲರ ನಾಲಿಗೆ ಬರವನ್ನು ಕಳೆದು ಹೊಟ್ಟೆಯನ್ನು ತುಂಬಿಸುತ್ತಿರುವವನೇ ರೈತ. ಇಂಥ ಪರಿಸ್ಥಿತಿ ಮುಂದೆ ಬರಬಹುದು ಎಂಬುದನ್ನು ಅರಿತೇ ನಮ್ಮ ಹಿಂದಿನವರು ಈ ಸುಭಾಷಿತದ ಮೂಲಕ ಜನರನ್ನು ಎಚ್ಚರಿಸಿದ್ದಾರೆ.
ಕೃಷಿತೋ ನಾಸ್ತಿ ದುರ್ಭಿಕ್ಷಂ ಜಪತೋ ನಾಸ್ತಿ ಪಾತಕಮ್ |
ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ || ಕೃಷಿಯನ್ನು ನಂಬಿ ಶ್ರದ್ಧೆಯಿಂದ ವ್ಯವಸಾಯ ಮಾಡುವವರಿಗೆ ಎಂದಿಗೂ ಬರಗಾಲವಿಲ್ಲ. ಹಾಗೇಯೇ ಜಪ ತಪಗಳನ್ನು ಮಾಡುವವರಿಗೆ ಪಾಪವಿರುವುದಿಲ್ಲ. ಇನ್ನೂ ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸದೇ, ಮೌನವಾಗಿರುವವರಿಗೆ ಜಗಳವೇ ಇರುವುದಿಲ್ಲ. ಅದೇ ರೀತಿ ಸದಾಕಾಲವೂ ಜಾಗೃತರಾಗಿರುವುವರಿಗೆ ಯಾರಿಂದಲೂ ಯಾವುದೇ ರೀತಿಯ ಭಯ ಇರುವುದಿಲ್ಲ ಎನ್ನುವುದು ಈ ಸುಭಾಷಿತದ ಅರ್ಥವಾಗಿದೆ.

farmers5ಮೀರತ್ ನ ನೂರ್ಪುರ್ ನಲ್ಲಿ 1902ರ ಡಿಸೆಂಬರ್ 23ರಂದು ಜನಿಸಿ ರಾಷ್ಟ್ರ ರಾಜಕಾರಣದಲ್ಲಿ ಹಂತ ಹಂತವಾಗಿ ಮೇಲೇರುತ್ತಾ ಭಾರತದ 5ನೇ ಪ್ರಧಾನ ಮಂತ್ರಿಗಳಾಗಿ ಅಲ್ಪಾವಧಿಗೆ ಅಧಿಕಾರವನ್ನು ನಡೆಸಿದ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಆವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಜುಲೈ 1979ರಿಂದ 1980ರ ಜನವರಿಯವರಿಗೆ ಪ್ರಧಾನಿಯಾಗಿದ್ದ ಕೆಲ ಕಾಲದಲ್ಲೇ ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕ್ಕಾಗಿ ಅವರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿವಸದ ಅಂಗವಾಗಿ ಅನೇಕ ರಾಜ್ಯಗಳಲ್ಲಿ ಕೃಷಿ ಸಮುದಾಯದ ಅನೇಕ ಸದಸ್ಯರು ಮತ್ತು ಗ್ರಾಮೀಣ ವಿಭಾಗಗಳು ಒಟ್ಟಾಗಿ ಕೃಷಿ ಆಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಿ ಅಲ್ಲಿ ಕೃಷಿ ಸಂಬಧಿಸಿದಂತೆ ತಜ್ಞರ ಚರ್ಚೆಗಳ ಮೂಲಕ ಕೃಷಿ ಕೆಲಸಕ್ಕೆ ಸಂಬಂಧಿಸಿದ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ. ಈ ಸಮಯದಲ್ಲಿ, ರೈತರ ಪ್ರತಿನಿಧಿಗಳು ರೈತರಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ತಮ್ಮ ಸಮಸ್ಯೆಗಳನ್ನು ಎಲ್ಲರಮುಂದೆ ಮುಕ್ತವಾಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುವುದಲ್ಲದೇ, ರೈತರ ಅಭಿವೃದ್ಧಿಗೆ ಶ್ರಮಿಸುತ್ತಿರುವವರನ್ನು ಈ ದಿನದಂದು ವಿಶೇಷವಾಗಿ ಗೌರವಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಈ ರೈತ ದಿನಾಚರಣೆಯನ್ನು ಅಚರಿಸಲಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ನಮಗೆ ಬೇರೇ ಯಾವುದೇ ಐಶಾರಾಮಿ ವಸ್ತುಗಳು ಇಲ್ಲದೇ ಇದ್ದರೂ ಬದಕು ಬಲ್ಲವಾದರೂ, ಆಹಾರವಿಲ್ಲದೇ ಮನುಷ್ಯ ಬದುಕಿರಲಾರ. ಹಾಗಾಗಿಯೇ ಅನ್ನದಾತ ರೈತರಿಲ್ಲದೆ ಪ್ರಪಂಚದಲ್ಲಿ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅಂತಹ ಆಹಾರವನ್ನು ಬೆಳೆಯುವ ರೈತರಿಗೆ ಸೂಕ್ತವಾದ ಆರ್ಥಿಕ ಗೌರವವನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯವೇ ಆಗಿದೆ. ನಮ್ಮ ಭಾರತ ದೇಶದ ಅತಿ ಹೆಚ್ಚಿನ ಆದಾಯವೇ ಕೃಷಿಯಾಗಿದ್ದು, ಇಷ್ಟು ದೊಡ್ಡ ಆದಾಯದ ಕಾರಣರ್ತರೇ ರೈತರು. ಹಾಗಾಗಿ ಕೃಷಿ ಮತ್ತು ರೈತ ಈ ದೇಶದ ಅವಿಭಾಜ್ಯ ಅಂಗವಾಗಿದ್ದರೂ, ರೈತರು ಇನ್ನೂ ಈ ದೇಶದ ಅಸಂಘಟಿತ ಕಾರ್ಮಿಕರಾಗಿಯೇ ಇರುವುದು ನಿಜಕ್ಕೂ ಬೇಸರದ ಸಂಗತಿಯಗಿದೆ. ಅತ್ಯಂತ ಕಷ್ಟಪಟ್ಟು ದುಡಿದ ನಂತರವೂ ಅವರ ಶ್ರಮಕ್ಕೆ ಸಲ್ಲಬೇಕಾಗಿರುವ ಪ್ರತಿಫಲ ಸಿಗದ ಕಾರಣ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತರ ಬಾಳು ಕರುಣಾಜನಕ ಸ್ಥಿತಿಯಲ್ಲಿರುವುದಲ್ಲದೇ, ಪ್ರತಿ ದಿನವೂ ದೇಶಾದ್ಯಂತ ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಆಹಾರ ಮನುಷ್ಯರಿಗೆ ಜೀವನಾವಶ್ಯಕ ಅಂತಹ ಆಹಾರವನ್ನು ಬೆಳೆಯಲು ಹಸನಾದ ಭೂಮಿ ಅವಶ್ಯಕ ಎಂಬುದರ ಅರಿವಿದ್ದರೂ ಸಹಾ, ಸರ್ಕಾರವೇ ವಿವಿಧ ರೀತಿಯ ಅಭಿವೃದ್ಧಿ, ಕೈಕಾರಿಕ ಚಟುವಟಿಕೆಗಳ ವಿಸ್ತೀರ್ಣ ಮತ್ತು ನಗರಾಭಿವೃದ್ಧಿಯ ಹೆಸರಿನಲ್ಲಿ ಇದೇ ಅನ್ನದಾತ ರೈತರುಗಳಿಂದ ಕೃಷಿ ಭೂಮಿಗಳನ್ನು ಕಿತ್ತು ಕೊಂಡು ಅಲ್ಲಿ ದೊಡ್ಡ ದೊಡ್ಡದಾದ ಕಾರ್ಖಾನೆ, ಮಾಲುಗಳನ್ನು ಸ್ಥಾಪಿಸಿ ಪರಿಸರದ ಹಾನಿಗೆ ಕಾರಣವಾಗುತ್ತಿರುವುದಲ್ಲದೇ, ಅದೇ ಮಾಲ್ ಮತ್ತು ಕಾರ್ಖಾನೆಗಳಿಗೆ ಜಾಗ ನೀಡಿದ ರೈತರನ್ನೇ ಸಂಬಳಕ್ಕಾಗಿ ಕೈ ಚಾಚುವಂತೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವಾದರೂ ಇದಕ್ಕೆ ಕೇವಲ ಸರ್ಕಾರವನ್ನು ದೂರಿದರೆ ಸರಿ ಎನಿಸುವುದಿಲ್ಲ.

ಹಿಂದೆ ಕೃಷಿ ಕಾರ್ಯವು ಮಾನವಕುಲದ ಅತ್ಯಂತ ಹಳೆಯ ಮತ್ತು ಅಗತ್ಯವಾದ ಉದ್ಯಮವಾಗಿದ್ದು ದೈನಂದಿನ ಚಟುವಟಿಕೆಗಳಿಗೆ ಅತ್ಯಾವಶ್ಯಕವಾಗಿದೆ. ನಮ್ಮ ದೇಶ ಶತ ಶತಮಾನಗಳಿಂದಲೂ ಕೃಷಿ ಪ್ರಧಾನ ದೇಶವಾಗಿದ್ದು ದೇಶದ ಎಲ್ಲಾ ಕಡೆಯಲ್ಲೂ ಕಾಲ ಕಾಲಕ್ಕೆ ಅನುಗುಣವಾಗಿ ಸೂರ್ಯೋದಯವಾಗುವ ಮುನ್ನವೇ ಮನೆಯಲ್ಲಿರುವ ಹಸುಕರುಗಳನ್ನು ಸ್ವಚ್ಚ ಗೊಳಿಸಿ ಅವರುಗಳ ಸಗಣಿಗಳನ್ನು ಗೊಬ್ಬರದ ಗುಂಡಿಗೆ ಹಾಕಿ, ತಮ್ಮ ತಮ್ಮ ಹೊಲಗದ್ದೆಗಳಿಗೆ ಹೋಗಿ ಸೂರ್ಯ ನೆತ್ತೆಯ ಮೇಲೆ ಬರುವ ವರೆಗೂ ಕೃಷಿ ಚಟುವಟಿಕೆಗಳಲ್ಲಿ ಮೈ ಬಗ್ಗಿಸಿ ಬೆವರು ಬರುವವರೆಗೂ ದುಡಿಯುತ್ತಿದ್ದರು. ತಮ್ಮ ತಮ್ಮ ಕೆಲಸಗಳಿಗೆ ಹೆಚ್ಚಿನ ಜನರ ಆವಶ್ಯಕತೆ ಇದ್ದಾಗ ಆಕ್ಕ ಪಕ್ಕದ ಜಮೀನಿನ ರೈತರುಗಳನ್ನು ಒಗ್ಗೂಡಿಸಿ ಅವರುಗಳು ಇವರ ಜಮೀನಿನಲ್ಲಿ ಇವುವರುಗಳು ಅವರ ಜಮೀನುಗಳಲ್ಲಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾ ಒಂದೇ ಕಡೆ ಕಣ ಮಾಡಿ ತಾವು ಬೆಳೆದಿದ್ದ ಭತ್ತ, ರಾಗಿ ಕಾಳುಗಳನ್ನು ಬಡಿದು ಅವುಗಳನ್ನು ಒಪ್ಪ ಓರಣ ಮಾಡಿ ತಮ್ಮ ಮನೆಗೆ ವರ್ಷಕ್ಕಾಗುವಷ್ಟನ್ನು ಇಟ್ಟುಕೊಂಡು ಹೆಚ್ಚಿನದ್ದನ್ನು ಮಾರಾಟಮಾಡಿ ಅದರಿಂದ ಬಂದ ಹಣದಿಂದ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವಂತೆ ಸುಖಃ ಜೀವನ ನಡೆಸುತ್ತಿದ್ದರು.

farmers4ಹೀಗೆ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಕಾಲದಲ್ಲಿ ಇಳುವರಿ ಕಡಿಮೆ ಇದ್ದರೂ ಸಹಾ ದೇಶ ನೆಮ್ಮದಿಯಾಗಿದ್ದಲ್ಲದೇ ಸುಭಿಕ್ಷವಾಗಿಯೂ ಇತ್ತು. ಆದರೆ ಜನಸಂಖ್ಯೆ ಹೆಚ್ಚಾದಂತೆಲ್ಲಾ ಆಹಾರಗಳಿಗೆ ಹೆಚ್ಚಿನ ಬೇಡಿಕೆ ಉಂಟಾದಾಗ ಕೃಷಿ ಚಟುವಟಿಕೆಗಳಲ್ಲೂ ಆಧುನಿಕತೆಯ ಸೋಂಕು ತಗುಲಿ, ಸಾಂಪ್ರಾದಾಯಿಕ ಕೃಷಿಗಳ ಜಾಗದಲ್ಲಿ ಯಂತ್ರಗಳು ಆಗಮನವಾಗಿದ್ದಲ್ಲದೇ ಅಧಿಕ ಇಳುವರಿ ಪಡೆಯುವ ಸಲುವಾಗಿ ಸಾವಯವ ಕೃಷಿಯ ಬದಲಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಲಾರಂಭಿಸಿದ್ದದ್ದು ನಿಜಕ್ಕೂ ಜೈವಿಕ ಕೃಷಿಯ ಅವಸಾನದ ಸಂಕೇತ ಎಂದರೂ ತಪ್ಪಾಗದು. ಹೀಗೇ ಯಾವುದೋ ಕೃಷಿ ಸಂಬಂಧಿತ ವಿಚಾರ ಸಂಕೀರ್ಣದಲ್ಲಿ ಹಿರಿಯರೊಬ್ಬರು ಹೇಳಿದ ಟ್ರಾಕ್ಟರ್ ಸಗಣಿ ಹಾಕೋದಿಲ್ಲ, ಗೋವುಗಳು ಹೊಗೆ ಉಗುಳೋದಿಲ್ಲ ಎಂಬ ಮಾತು ಎಷ್ಟು ಅರ್ಥಗರ್ಭಿತವಾಗಿದೆ ಎಂದೆನಿಸಿದೆ.

farmers7ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಪಾರಂಪರಿಕ ಸಾವಯವ ಕೃಷಿಯಿಂದ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗದೇ, ಜಮೀನಿನ ಫಲವತ್ತತೆಯನ್ನು ಹೆಚ್ಚಿಸುವ ಮೂಲಕ ಉತ್ತಮವಾದ ಆರೋಗ್ಯಕರವಾದ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿತ್ತು. ದುರಾದೃಷ್ಟವಷಾತ್ ಇಂದು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬುವ ಹಪಾಹಪಿಗೆ ಬಿದ್ದು ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ಸಾಂಪ್ರಾದಾಯಿಕ ಕೃಷಿ ಪದ್ದತಿಗೆ ತಿಲಾಂಜಲಿ ಕೊಟ್ತು, ಕೃಷಿಯನ್ನೂ ಯಾಂತ್ರೀಕೃತಗೊಳಿಸಿರುವುದಲ್ಲದೇ, ಯಥೇಚ್ಚವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುವ ಮೂಲಕ ಭೂಮಿಯ ಸಹಜ ಫಲವತ್ತತೆ ಮತ್ತು ಸಾರವನ್ನು ಕಡಿಮೆ ಮಾಡುತ್ತಿರುವುದಲ್ಲದೇ, ಭೂಮಿಯನ್ನು ವಿಷಕಾರಿಯನ್ನಾಗಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಬೆಳೆಯುವ ಭೂಮಿಯೇ ವಿಷಕಾರಿಯಾದಾಗ, ಅದರಲ್ಲಿ ಬೆಳೆದ ಬೆಳೆಗಳೂ ವಿಷಕಾರಿಗಳಾಗಿ ಪರಿಣಮಿಸಿ, ಪ್ರತ್ಯಕ್ಷವಾಗಿ ಈಗ ಕಾಣಿಸಿಕೊಳ್ಳುತ್ತಿರುವ ಬಹುತೇಕ ಖಾಯಿಲೆಗಳಿಗೆ ಮೂಲವಾಗಿ ತಿನ್ನುವ ಆಹಾರವೇ ವಿಷಯುಕ್ತವಾಗಿ, ಶತಾಯುಷಿಗಳಾಗಿದ್ದವರೂ ಅರ್ಧವಯಸ್ಸಿಗೇ ನಾನಾ ರೀತಿಯ ಖಾಯಿಲೆಗಳಿಗೆ ತುತ್ತಾಗಿ ಮರಣ ಹೊಂದುತ್ತಿರುವುದು ದುರಾದೃಷ್ಟಕರವಾಗಿದೆ.

farmers6ಈ ಹಿಂದೆ ರೈತರುಗಳು ಪರಸ್ಪರ ವಿನಿಮಯಗಳ ಮೂಲಕ ವ್ಯವಹಾರಗಳನ್ನು ನಡೆಸುತ್ತಿದ್ದು ನಂತರ ದಿನಗಳಲ್ಲಿ ರೈತರುಗಳಿಂದ ನೇರವಾಗಿ ಕಡಿಮೆ ಬೆಲೆಗೆ ಕೊಂಡು ಅದನ್ನು ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರುವಂತಹ ದಳ್ಳಾಳಿಗಳು ಹುಟ್ಟಿಕೊಂಡ ಕಾರಣ ರೈತರಿಗೆ ತಮ್ಮ ಪರಿಶ್ರಮಕ್ಕೆ ಸೂಕ್ತವಾದ ಬೆಲೆ ದೊರಕದೇ ರೈತರುಗಳು ಸಾಲಕ್ಕೆ ಅಲ್ಲಿಲ್ಲಿ ಕೈ ಚಾಚುವಂತಹ ಪರಿಸ್ಥಿತಿಗೆ ಬರುವಂತಾಯಿತು. ನಿಜ ಹೇಳಬೇಕೆಂದರೆ, ನಮ್ಮ ರೈತರುಗಳೇನು ಭಿಕ್ಷುಕರೇನಲ್ಲಾ ಬದಲಾಗಿ ಅವರು ಕೈ ಎತ್ತಿ ಕೊಡುವ ಕೊಡುಗೈ ದಾನಿಗಳು ಎಂದರೂ ಅತಿಶಯವಲ್ಲ. ಅವರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ದೊರೆತು ಅವರ ಜೀವನ ಹಸನಾದಲ್ಲಿ ಖಂಡಿತವಾಗಿಯೂ ಯಾವುದೇ ರೈತ ಕೃಷಿಯಿಂದ ವಿಮುಖನಾಗುವ, ಆತ್ಮಹತ್ಯೆಗೆ ಶರಣಾಗುವ ಪ್ರಮೇಯವೇ ಬರುವುದಿಲ್ಲ. ಅದಕ್ಕಾಗಿಯೇ ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದಿರುವುದು.

ದುರಾದೃಷ್ಟವಷಾತ್ ಇಂದು ಮೈ ಬಗ್ಗಿಸಿ ದುಡಿಯುವವರಿಗಿಂತಲೂ ಮಧ್ಯವರ್ತಿಗಳ ಸಂಖ್ಯೆಯೇ ಅಧಿಕವಾಗಿರುವ ಕಾರಣ, ರೈತರಿಂದೆ ಕನಿಷ್ಟ ಬೆಲೆಗೆ ಕೊಂಡು ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರಿ ಅವರುಗಳು ಲಾಭಗಳಿಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದ್ದರೆ, ಹಳ್ಳಿಯಲ್ಲಿರುವ ಇಂದಿನ ಯುವಕರುಗಳೂ ಸಹಾ ಮೈ ಬಗ್ಗಿಸಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಮನಸ್ಸು ಮಾಡದೇ ಸೋಮಾರಿಗಳಾಗಿ, ನಗರಗಳಿಗೆ ವಲಸೆ ಬಂದು Office boys, security guards, garments workers, servers/cleaners at hotels, Cab drivers ಆಗಿ ಅಷ್ಟೋ ಇಷ್ಟು ದುಡಿದು ಮೋಜು ಮಸ್ತಿಯಲ್ಲಿ ಮುಳುಗಿರುವುದು ನಿಜಕ್ಕೂ ಆತಂಕದ ನಡೆಯಾಗಿದೆ.

ಈ ರೀತಿ ನಗರಪ್ರದೇಶಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವ ರೈತರ ಮಕ್ಕಳು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳಲ್ಲೇಕೆ ತೊಡಗಿಕೊಳ್ಳುವುದಿಲ್ಲಾ ಎಂದು ಕೇಳಿದರೆ, ಮಳೆ ಇಲ್ಲಾ, ಕೂಲಿಗಳು ಸಿಗುವುದಿಲ್ಲ, ಬೆಳೆದದ್ದಕ್ಕೆ ಸೂಕ್ತವಾದ ಬೆಲೆ ಇಲ್ಲ ಎಂಬ ಸಬೂಬು ಹೇಳುತ್ತಾರೆಯೇ ಹೊರತು ಕೃಷಿಯಲ್ಲೇ ಹೊಸ ಹೊಸಾ ಆವಿಷ್ಕಾರಗಳ ಬಗ್ಗೆ ತಲೆಯೇ ಕೆಡಿಸಿಕೊಳ್ಳುದಿರುವುದು ತುಸು ಬೇಸರದ ಸಂಗತಿಯಾಗಿದೆ. ತಮ್ಮ ಬಳಿ ಇರುವ ಜಮೀನಿನಲ್ಲಿ ಸಾಂಪ್ರದಾಯಿಕವಾಗಿ ಏಕ ಬೆಳೆಯನ್ನು ಬೆಳೆಯುವ ಬದಲು ಕೃಷಿ ತಜ್ಞರಾದ ಸುಭಾಷ್ ಪಾಳೇಕರ್ ಅವರ ಬಹು ಬೆಳೆಯನ್ನು ಬೆಳೆದಲ್ಲಿ ವರ್ಷವಿಡೀ ಕೆಲಸವಿದ್ದು ಇರುವ ಜಮೀನಿನಲ್ಲೇ ಹೆಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ. ಅದೇ ರೀತಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚಿನ ನೀರಿಲ್ಲದಯೇ ಉತ್ತಪಮಾದ ಫಸಲು ಮತ್ತು ಅಧಿಕ ಲಾಭವನ್ನು ತಂದು ಕೊಡುವ ಸಿರಿಧಾನ್ಯಗಳು, ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಬಹುದಾಗಿದೆ.

farmers1ಒಟ್ಟಿನಲ್ಲಿ ಮನಸ್ಸಿದ್ದಲ್ಲಿ ಮಾರ್ಗ ಎನ್ನುವಂತೆ ದುಡಿಯುವ ಛಲವಿದ್ದು, ವಿಷಕಾರಕ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಹತ್ತು ಪಟ್ಟು ಬೆಳೆ ಬೆಳೆದು ದೇಶಾದ್ಯಂತ ಅನಾರೋಗ್ಯವನ್ನು ಉಲ್ಪಣಗೊಳಿಸುವ ಬದಲು ಸಾಂಪ್ರದಾಯಕ ಕೃಷಿ ಪದ್ದತಿಯಲ್ಲೇ ಪರಿಸರಕ್ಕೂ ಜನ ಜೀವನಕ್ಕೂ ಹಾನಿಯಾಗದ ರೀತಿಯಲ್ಲಿ ಸ್ವಲ್ಪವೇ ಬೆಳೆದರೂ ಅದಕ್ಕೆ ಸೂಕ್ತವಾದ ಬೆಲೆಯನ್ನು ದೊರೆಯುವಂತೆ ಮಾಡುವಂತಾದಲ್ಲಿ ಮಾತ್ರವೇ, ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿರುವ ರೈತರುಗಳಿಗೆ ಗೌರವ ನೀಡಿದಂತೆ ಆಗುತ್ತದೆಯಲ್ಲದೇ, ಅದೇ ರೈತ ದಿನಾಚರಣೆ ಅರ್ಥಪೂರ್ಣ ಆಚರಣೆ ಎನಿಸಿಕೊಳ್ಳುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ