ಶಂಕ್ರ, ಆನಂದ ಮತ್ತು ನಂದ ಬಾಲ್ಯದ ಗೆಳೆಯರು. ನಂದ ಮತ್ತು ಆನಂದ ಒಡಹುಟ್ಟಿದವರಾದರೆ, ಆನಂದ ಮತ್ತು ಶಂಕ್ರ ಸಹಪಾಠಿಗಳು. ಮೂವರೂ ಸದಾ ಆಟೋಟಗಳಲ್ಲಿ ಜೊತೆಯಾಗಿದ್ದವರು. ಹಿರಿಯವನಾದ ನಂದ ಸ್ವಲ್ಪ ಅಂತರ್ಮುಖಿ. ತಾನಾಯಿತು ತನ್ನ ಪಾಡಾಯಿತು ಅನ್ನುವ ಹಾಗೆ. ಆದರೆ ಆನಂದ ಅಣ್ಣನಿಗೆ ತದ್ವಿರುದ್ಧ. ಸದಾ ಚಟುವಟಿಕೆಯಿಂದ ಇರುವವ. ಎಂತಹ ಕಲ್ಲಿನ ಹೃದಯದವರನ್ನು ಬೇಕಾದರೂ ಮಾತಾನಾಡಿಸಿ ಒಲಿಸಿ ಕೊಳ್ಳುವ ಛಾತಿ. ಎಲ್ಲರೂ ಕಾಲೇಜು ಓದುತ್ತಿರುವ ಸಮಯದಲ್ಲಿ ಆನಂದನ ತಂದೆಯವರು ನಿವೃತ್ತರಾಗಿ ಶಂಕ್ರನ ಮನೆಯ ಪ್ರದೇಶದಿಂದ ಬಹುದೂರಲ್ಲಿ ಸ್ವಂತ ಮನೆಯನ್ನು ಕಟ್ಟಿಸಿಕೊಂಡು ಅಲ್ಲಿಗೆ ಹೋಗಿ ಬಿಟ್ಟರು. ಗೆಳೆಯರು ಮನೆಯಿಂದ ದೂರವಾಗಿದ್ದರೇನಂತೆ ಮನಸ್ಸಿನಿಂದ ದೂರವಾಗಿರಲಿಲ್ಲ. ಆಗಾಗ ಸಮಯ ಸಿಕ್ಕಾಗಲೆಲ್ಲಾ ಭೇಟಿ ಮಾಡುತ್ತಾ ಒಡನಾಟವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ನಂದ ಬಿಕಾಂ ಪದವಿ ಮುಗಿಸಿ, ಖಾಸಗೀ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರೆ, ಆನಂದ ತನ್ನ ಹೊಸಾ ಸ್ನೇಹಿತರ ಸಹವಾಸ ದೋಷದಿಂದ ಓದಿನ ಕಡೆ ಅಷ್ಟೊಂದು ಗಮನ ಹರಿಸದೆ, ಕಡೆಗೆ ಓದನ್ನು ಮುಂದುವರಿಸದೆ ಅಪ್ಪನ ಸಹಾಯ ಮತ್ತು ಸ್ನೇಹಿತರ ಸಹಾಯದಿಂದ ತನ್ನದೇ ಆದ ಸ್ವಂತ ಟ್ರಾವೆಲ್ಸ್ ಶುರುಮಾಡಿ ಕೊಂಡು ಜೀವನಕ್ಕೆ ತೊಂದರೆ ಇಲ್ಲದಂತೆ ಸಂಪಾದನೆ ಮಾಡುತ್ತಿದ್ದ.
ಅದೊಂದು ದಿನ ಆನಂದ, ಶಂಕ್ರನಿಗೆ ಕರೆ ಮಾಡಿ ಸಂಜೆ ನಿಮ್ಮ ಮನೆಗೆ ಬರುತ್ತಿದ್ದೀನಿ ಇರುತ್ತೀಯಾ ಎಂದು ಕೇಳಿದ. ಏನಪ್ಪಾ ಸಮಾಚಾರ ಅಂತ ಕೇಳಲು ಫೋನ್ನಲ್ಲಿ ಮಾತನಾಡುವುದು ಬೇಡ. ಮುಖಃತಹ ಬಂದೇ ಹೇಳುತ್ತೀನಿ ಎಂದು ಶಂಕ್ರನ ತಲೆಯಲ್ಲಿ ಹುಳಬಿಟ್ಟ. ಏನಪ್ಪಾ ಅದು ಅಂತಹ ವಿಷ್ಯಾ? ಏನಾದರೂ ಸಮಸ್ಯೆಯಾ? ವ್ಯಾಪಾರದಲ್ಲಿ ಏನಾದರೂ ನಷ್ಟವಾ? ಆರ್ಥಿಕ ಸಹಾಯ ಏನಾದರೂ ಬೇಕೇನೋ ಎಂದು ನಾನಾ ರೀತಿಯಾಗಿ ಯೋಚಿಸಿ ನೋಡಿ ತಲೆಕೆಟ್ಟು ಗೊಬ್ಬರವಾಗಿ, ಸರಿ ಹೇಗೂ ಸಂಜೆ ಬರ್ತಾನಲ್ಲಾ. ಅವಾಗಲೇ ಗೊತ್ತಾಗುತ್ತದೆ ಎಂದು ಸುಮ್ಮನಾದ ಶಂಕ್ರ.
ಸಂಜೆ ಮನೆಗೆ ಬಂದ ಶಂಕರ, ಅಮ್ಮಾ ಬಹಳ ದಿನಗಳ ನಂತರ ಇವತ್ತು ಆನಂದ ಮನೆಗೆ ಬರ್ತಾ ಇದ್ದಾನೆ ಅವನಿಗೂ ಸೇರಿ ಅಡುಗೆ ಮಾಡಮ್ಮಾ ಎಂದು ಹೇಳಿ ಪ್ರಾಣ ಸ್ನೇಹಿತ ಆನಂದನ ಬರುವಿಗಾಗಿ ಜಾತಕಪಕ್ಷಿಯಂತೆ ಕಾದು ಕುಳಿತ. ಗಂಟೆ, ಏಳಾಗಿ, ಎಂಟಾಗಿ ಕೊನೆಗೆ ಒಂಭತ್ತೂಕಾಲಿಗೆ ಆನಂದ ಲಗ್ನಪತ್ರಿಕೆಯೊಡನೆ ಶಂಕ್ರನ ಮನೆಗೆ ಬಂದ. ಓಹೋ!! ಇದಾ ವಿಷ್ಯಾ? ಅದಕ್ಕೆ ಇಷ್ಟೊಂದು ಬಿಲ್ಡಪ್ಪಾ? ನಾನು ಸುಮ್ಮನೆ ಏನೇನೋ ಯೋಚನೆ ಮಾಡ್ಕೊಂಡಿದ್ದೆ ಅಂತ ಹೇಳಿದ ಶಂಕ್ರ, ಅದು ಸರಿ ಇನ್ನೂ ನಂದನಿಗೇ ಮದುವೆ ಆಗಿಲ್ಲ ಅಷ್ಟು ಬೇಗ ನಿನಗೇನಪ್ಪಾ ಆತುರ ಎಂದು ಒಂದೇ ಸಮನೆ ಪ್ರಶ್ನೆಗಳ ಮಳೆ ಸುರಿಸಿದ. ಅದಕ್ಕೆಲ್ಲಾ ಉತ್ತರಿಸುವಂತೆ ನಿಧಾನವಾಗಿ ತುಸು ನಕ್ಕಆನಂದ, ನಮ್ಗೆಲ್ಲಾ ಯಾರಪ್ಪಾ ಕೊಡ್ತಾರೆ ಹೆಣ್ಣು. ಮುಂದಿನ ವಾರ ನಮ್ಮ ಮಾವನ ಮಗಳು ದೀಪಾಳ ಜೊತೆ ನಮ್ಮ ಊರಿನಲ್ಲಿ ನಮ್ಮ ಅಣ್ಣ ನಂದನ ಮದುವೆ ಅದಕ್ಕೆ ತಾವೆಲ್ಲರೂ ಕುಟುಂಬ ಸಮೇತವಾಗಿ ಬರ್ಬೇಕು ಆಂದ. ಓಹೋ ದೀಪಾ. ನಮ್ಮ ತಂಗಿ ಜೊತೆಯವಳು. ರಜೆಯದಿನಗಳಲ್ಲಿ ಊರಿನಿಂದ ನಿಮ್ಮ ಮನೆಗೆ ಬರ್ತಿದ್ಲು. ನೀವಿಬ್ಬರೂ ಸದಾ ಹಾವು ಮುಂಗುಸಿ ತರಹ ಜಗಳ ಆಡ್ತಾ ಇದ್ದಿದ್ದು ನನ್ಗೆ ಚೆನ್ನಾಗಿ ನೆನಪಿದೆ ಎಂದ ಶಂಕ್ರ. ಹಾಂ ಅವಳೇ. ಈಗ ಮುಂಚಿನಂತೆ ಇಲ್ಲಾ ಬಿಡು. ಅವಳೂ ಡಿಗ್ರಿ ಮುಗಿಸಿದ್ದಾಳೆ. ನಮ್ಮ ಅಮ್ಮನಿಗೂ ತವರಿನ ಸಂಬಂಧ ಉಳಿಸ್ಕೊಬೇಕು ಅಂತ ಆಸೆ. ನಂದ ಮೊದಲು ಒಪ್ಕೊಳ್ಳಲಿಲ್ಲ. ಆಮೇಲೆ ಮನೆಯವರೆಲ್ಲರ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡ. ಸರಿ ತಪ್ಪದೆ ಹಿಂದಿನ ದಿನಾನೇ ಬಂದು ಬಿಡು.ನಾನು ಎಲ್ಲಾ ರೀತಿಯ ವ್ಯವಸ್ಥೆ ಮಾಡಿರ್ತೀನಿ ಅಂದ ಆನಂದ. ಎಲ್ಲರೂ ಬಹು ದಿನಗಳ ನಂತರ ಒಟ್ಟಿಗೆ ಕುಳಿತು ಊಟ ಮಾಡಿದರು.
ಕಾರಾಣಂತರದಿಂದ ಮದುವೆಯ ಹಿಂದಿನ ದಿನ ಹೋಗಲಾಗದೆ, ಮದುವೆಯ ದಿನವೇ ಮುಂಜಾನೆಯೇ ಸಿಧ್ದವಾಗಿ ಹೊತ್ತಿಗೆ ಮುಂಚಯೇ ಮದುವೆ ಮಂಟಪ ತಲುಪಿದ ಶಂಕ್ರ. ಮದುವೆ ಮಂಟಪದ ಮುಂದಿನ ಕಮಾನಿನ ಎರಡೂ ಕಡೆ ನಂದಾದೀಪವನ್ನು ಹಿಡಿದ ಇಬ್ಬರು ತರುಣಿಯರು ಅದರ ಮಧ್ಯೆಯಲ್ಲಿ *ದೀಪ ಮತ್ತು ನಂದಾ ಶುಭವಿವಾಹ* ಎಂದು ಬರೆಯಲಾಗಿತ್ತು. ವಾಹ್! *ಇಬ್ಬರ ಹೆಸರಿನಲ್ಲಿಯೇ ನಂದಾದೀಪವಿದೆ.* ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಾ ಮದುವೆ ಮನೆಗೆ ಕಾಲಿಟ್ಟ ಶಂಕ್ರ. ಆವೇಳೆಗೆ ಬಂಧು ಮಿತ್ರರೆಲ್ಲರ ಆಗಮನವಾಗಿತ್ತು. ನಾದಸ್ವರದ ಸದ್ದು ಜೋರಾಗಿತ್ತು. ಶಂಕರನ ಕಣ್ಣುಗಳು ಆನಂದನನ್ನೇ ಹುಡುಕುತ್ತಿತ್ತು. ಅದೇ ವೇಳೆ ಪುರೋಹಿತರು ಮುಹೂರ್ತ ಮೀರುತ್ತಿದೆ. ಹುಡುಗ ಮತ್ತು ಹುಡುಗಿ ಕರೆದುಕೊಂಡು ಬನ್ನಿ ಎಂದು ಹೇಳುವುದು ಕೇಳಿಸಿತು. ಸರಿ ಮಧುಮಗ ನಂದನ ಜೊತೆ ಇರಬಹುದು ಆನಂದ ಎಂದೆಣಿಸಿ ಮದುವೆ ಮಂಟಪದ ಸಮೀಪಕ್ಕೆ ಹೋಗಿ ನೋಡುಲು, ಒಂದು ಕ್ಷಣ ಆಶ್ಚರ್ಯಚಕಿತನಾಗುತ್ತಾನೆ ಶಂಕರ. ಇದೇನಿದು? ನಾನು ನೋಡುತ್ತಿರುವುದು ಕನಸಾ ನನಸಾ ಎಂದು ತನ್ನ ಕಣ್ಣನ್ನು ಉಜ್ಜಿ ಉಜ್ಜಿ ಸರಿಯಾಗಿ ನೋಡಿದರೆ *ಮಧು ಮಗನ ಸ್ಥಾನದಲ್ಲಿ ನಾಪತ್ತೆಯಾಗಿದ್ದಾನೆ ನಂದ, ಆ ಜಾಗದಲ್ಲಿ ಇದ್ದಾನೆ ಆನಂದ*. ಪುರೋಹಿತರು ಗಟ್ಟಿ ಮೇಳಾ ಗಟ್ಟಿ ಮೇಳಾ ಎಂದೊಡನೆಯೇ ಆನಂದ ದೀಪಾಳಿಗೆ ತಾಳಿಕಟ್ಟಿದ್ದ. ನಂತರ ತಿಳಿದ್ದೇನೆಂದರೆ, ವರಪೂಜೆವರೆಗೂ ಹಾಜರಿದ್ದ ನಂದ, ಮದುವೆಯ ದಿನ ಬೆಳ್ಳಂಬೆಳಿಗ್ಗೆ , ತಾನು ಬೇರೊಂದು ಹುಡುಗಿಯನ್ನು ಪ್ರೀತಿಸಿರುವ ಕಾರಣ ದೀಪಾಳನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಕ್ಷಮೆಯಾಯಿಸಿ ಪತ್ರ ಬರೆದು ಯಾರಿಗೂ ಹೇಳದೆ ಕೇಳದೆ ನಾಪತ್ತೆಯಾಗಿದ್ದ. ಪತ್ರ ನೋಡಿದ ಆನಂದನ ತಾಯಿ ಅಲ್ಲಿಯೇ ಮೂರ್ಚೆ ತಪ್ಪಿದ್ದರು. ಮದುವೆಗೆ ಎಲ್ಲರೂ ಬಂದಿದ್ದಾಗಿದೆ ಇಡೀ ಕುಟುಂಬದ ಮಾನ ಹಾನಿಯಾಗುವುದನ್ನು ತಪ್ಪಿಸಲು ಹಿರಿಯರೊಬ್ಬರ ಸಲಹೆ ಮೇರೆಗೆ ಮತ್ತು ತನ್ನ ತಾಯಿಯ ಮಾತಿಗೆ ಕಟ್ಟು ಬಿದ್ದು *ಆನಂದ ದೀಪಳನ್ನು ವರಿಸಿದ್ದ*. ಮದುವೆಯ ದಿನ ಮಧು ಮಗ ಮತ್ತು ಮಧು ಮಗಳ ಮುಖದಲ್ಲಿ ಸಂತೋಷಕ್ಕಿಂತ ಒಂದು ರೀತಿಯ ದುಗುಡವೇ ತುಂಬಿತ್ತು. ಮದುವೆಗೆ ಬಂದಿದ್ದ ಹೆಚ್ಚಿನವರೆಲ್ಲರೂ ತಲಾ ತಟ್ಟಿಗೆ ಮಾತಾನಾಡಿಕೊಂಡರೂ ಶಂಕರನಿಗೆ ತನ್ನ ಸ್ನೇಹಿತ ಆನಂದನ ಬಗ್ಗೆ ಹೆಮ್ಮೆಯಿತ್ತು. ಒಂದು ಹೆಣ್ಣಿಗೆ ಬಾಳನ್ನು ಕೊಟ್ಟನಲ್ಲಾ ಎನ್ನುವ ಹೆಮ್ಮೆಯಿತ್ತು. ಮದುವೆಯ ಊಟದ ಸಮಯದಲ್ಲಿ ಆನಂದನ ಮಾವನವರು ಶಂಕರನನ್ನು ಗುರುತು ಹಿಡಿದು, ಶಂಕ್ರಾ ಚೆನ್ನಾಗಿಇದ್ದೀಯೇನಪ್ಪಾ? ಸಾವಕಾಶವಾಗಿ ಎಷ್ಟು ಬೇಕೋ ಕೇಳಿ ಬಡಿಸಿಕೊಂಡು ಊಟ ಮಾಡು ಎಂದಾಗ ಶಂಕರನಿಗೆ ಗಂಟಲು ಉಬ್ಬಿಹೋಗಿ ಅನ್ನವೇ ಇಳಿಯದಂತಾಯಿತು. ಹೆಣ್ಣಿನ ತಂದೆ ಅನೇಕ ವರ್ಷಗಳ ತಮ್ಮ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ಜೊತೆಗೆ ಸಾಲಾ ಸೋಲಾ ಮಾಡಿ ವಿಜೃಂಭಣೆಯಿಂದ ಮಗಳ ಮದುವೆ ಮಾಡಿ ಮುಗಿಸಿ ಬಂದವರೆಲ್ಲರಿಗೂ ಭಕ್ಷ ಭೋಜನವನ್ನು ಹಾಕಿಸುತ್ತಾರೆ. ಅವರ ಬೆವರು ಹನಿಯ ಪರಿಶ್ರಮದ ಫಲದ ಆಹಾರವನ್ನು ತಾನು ಸೇವಿಸಲು ತಾನೆಷ್ಟು ಅರ್ಹ ಎಂಬ ಜಿಜ್ಞಾಸೆ ಶಂಕರಿಗೆ ಕಾಡಿತ್ತು.
ಆನಂದನ ಮದುವೆಯಾದ ನಂತರ ಕೆಲ ತಿಂಗಳು ಒಬ್ಬೊರನ್ನೊಬ್ಬರು ಭೇಟಿ ಮಾಡಲೇ ಇಲ್ಲ. ನಂತರ ಯಾರಿಂದಲೂ ಕೇಳಿ ಬಂದ ವಿಷಯವೇನೆಂದರೆ ಮದುವೆ ಮನೆಯಿಂದ ನಾಪತ್ತೆಯಾಗಿ ಓಡಿ ಹೋಗಿದ್ದ ನಂದಾ, ಯಾರಿಂದಲೋ ಮೋಸ ಹೋಗಿ ಮದುವೆಯೂ ಇಲ್ಲದೆ ಕೈಯಲ್ಲಿದ್ದ ದುಡ್ಡನ್ನೆಲ್ಲವನ್ನೂ ಕಳೆದು ಕೊಂಡು ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿದ್ದದನ್ನು ನೋಡಿ ಪರಿಚಯಸ್ಥರು ಮನೆಗೆ ಕರೆದು ತಂದು ಬಿಟ್ಟಿದ್ದರಂತೆ. ಅದಾದ ಕೆಲವೇ ತಿಂಗಳುಗಳಲ್ಲಿ ಆನಂದ ತನ್ನ ಮಗಳ ನಾಮಕರಣಕ್ಕೆ ಆಹ್ವಾನಿಸಿದ. ಶಂಕರ ನಾಮಕರಣಕ್ಕೆ ಹೋಗುತ್ತಿದ್ದಂತೆಯೇ ಎದುರಿಗೇ ಸಿಕ್ಕ ನಂದಾ, ಶಂಕರನನ್ನು ನೋಡಿ ಒಂದು ರೀತಿಯ ಅಪರಾಧಿ ಭಾವನೆಯಿಂದ ತಲೆ ತಗ್ಗಿಸಿದ. ಅವನನ್ನು ಪಕ್ಕಕ್ಕೆ ಕರೆದು ಕೊಂಡು ಹೋಗಿ ನಂದಾ? ತಪ್ಪು ನಿಂದಾ? ಇಲ್ಲವೇ ಅವಳದ್ದಾ? ಎಂದು ಕೇಳಿದ್ದಕ್ಕೆ, ಯಾವುದೋ ಹೆಣ್ಣಿನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಆಕೌಂಟ್ನಿಂದ ನಂದನ ಮೃದು ಸ್ವಭಾವವನ್ನು ದುರುಪಯೋಗ ಪಡಿಸಿಕೊಂಡು ಅವರ ಬುಟ್ಟಿಗೆ ಬೀಳಿಸಿಕೊಂಡು ಮದುವೆಯಾಗುವ ನಾಟಕ ಮಾಡಿ ದುಡ್ಡಿನೊಂದಿಗೆ ಬರಲು ಹೇಳಿ ಅವನನ್ನು ದೋಚಿದ್ದು ತಿಳಿಯಿತು. ಹೇ ಬೇಜಾರು ಮಾಡಿಕೊಳ್ಳಬೇಡ ನಿನ್ನ ಬಾಳಿನಲ್ಲಿ ನಂದಾ ದೀಪ ಇಲ್ಲದಿದ್ದರೇನಂತೆ, ನಿನ್ನ ಬಾಳಿಗೆ ಜ್ಯೋತಿಯಾಗಿ ಬರಲು ಯಾವುದಾದರೂ ಹೆಣ್ಣನ್ನು ಆ ಬ್ರಹ್ಮ ಬರೆದಿಟ್ಟಿರುತ್ತಾನೆ ಎಂದು ಸಂತೈಸಿದ ಶಂಕರ.
ಅದೇ ಸಮಯದಲ್ಲಿ ಆನಂದನ ಮಾವನವರು ಸಿಕ್ಕಾಗ, ಎಂದಿನ ರೂಢಿಯಂತೆ, ಎನು ಮಾವಾ ಚೆನ್ನಾಗಿದ್ದೀರಾ? ಹೇಗಿದ್ದಾನೆ ನಿಮ್ಮ ಅಳಿಯಾ? ಅವನು ಏನಂತಾನೇ? ಎಂದು ಕೇಳಿದ ಶಂಕರ. ಏನು ಹೇಳೋದು ಬಂತು. ನಿಜಕ್ಕೂ ನನ್ನ ಮಗಳು ಅದೃಷ್ಟವಂತಳೇ. ಅವರಿಬ್ಬರ ಸುಂದರ ದಾಂಪತ್ಯದ ಕುರುಹುವಾಗಿಯೇ ಇಂದು ಮುದ್ದಾದ ಮಹಾಲಕ್ಶ್ಮೀ ಮನೆಗೆ ಬಂದಿದ್ದಾಳೆ. ಮಗಳ ಕಾಲ್ಗುಣವೋ, ಆನಂದನ ಪರಿಶ್ರಮವೋ, ಮದುವೆಯಾದ ನಂತರ ಇನ್ನೂ ಏಳೆಂಟು ಕಂಪನಿಗಳ ದೀರ್ಘಕಾಲೀನ ಒಪ್ಪಂದವಾಗಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಬಹುಶಃ ನಂದನಿಗೆ ಮದುವೆ ಮಾಡಿ ಕೊಟ್ಟಿದ್ದರೂ ಇಷ್ಟುಚೆನ್ನಾಗಿ ನೋಡಿ ಕೊಳ್ಳುತ್ತಿದ್ದನೋ ಇಲ್ಲವೋ. ಸತ್ಯವಾಗಲೂ ನಾನು ನೆನೆಸಿದ್ದಕ್ಕಿಂತಲೂ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಆನಂದ ಎಂದಾಗ ತನ್ನ ಗೆಳೆಯನ ಬಗ್ಗೆ ಇನ್ನಷ್ಟು ಆಭಿಮಾನ ಮೂಡಿತು. ಆಗ ಶಂಕರನ ಬಾಯಿಂದ ಅವನಿಗೇ ಅರಿವಿಲ್ಲದಂತೆ ಬೆಸುಗೆ ಚಿತ್ರದ *ಯಾವ ಹೂವು ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ* ಎನ್ನುವ ಹಾಡು ಗುನುಗುಡುತ್ತಿತ್ತು.
ಅದಾದ ಕೆಲವೇ ದಿನಗಳಲ್ಲಿ ನಂದಾ ಮತ್ತು ಆನಂದ ಇಬ್ಬರೂ ಶಂಕರನ ಮನೆಗೆ ಮತ್ತೆ ನಂದಾನ ಮದುವೆಯ ಲಗ್ನಪತ್ರಿಕೆಯ ಸಮೇತ ಬಂದಿದ್ದರು. ಲಗ್ನಪತ್ರಿಕೆಯನ್ನು ತೆರೆದು ನೋಡಿದರೆ ಕಾಕತಾಳೀಯವೋ ಎನ್ನುವಂತೆ *ಹುಡುಗಿಯ ಹೆಸರು ಜ್ಯೋತಿ* ಎಂದಿತ್ತು. ಸರಿ ಬಿಡು ನಿಮ್ಮ ಮನೆಯಲ್ಲಿ *ನಂದಾ-ಜ್ಯೋತಿ, ಸದಾ ಆನಂದ-ದೀಪ* ಆಗಿರಲಿ ಎಂದು ಹರೆಸುತ್ತೇನೆ ಎಂದ ಶಂಕರ. ಇಂದು ನಂದಾ-ಜ್ಯೋತಿಯರ ಆರತಕ್ಷತೆ ಮತ್ತು ನಾಳೆ ಮದುವೆ. ಶಂಕರನ ಜೊತೆ ದಯವಿಟ್ಟು ಸ್ವಲ್ಪ ಪ್ರುರುಸೊತ್ತು ಮಾಡಿಕೊಂಡು ತಾವೆಲ್ಲರೂ ಬಂದು ವಧು ವರನನ್ನು ಆಶೀರ್ವಾದ ಮಾಡ್ತೀರಾತಾನೇ?
ಏನಂತೀರೀ?