ಕೆಜಿಎಘ್ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯಂತ ವಿಶೇಷವಾಗಿ ಮತ್ತು ರೋಚಕಚಾಗಿ ಚಿತ್ರಿಕರಣವಾಗಿದೆ ಮತ್ತು ಬಿಡುಗಡೆಯ ಮುಂಚೆಯೇ ಪ್ರಪಂಚಾದ್ಯಂತ ಸದ್ದು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಡೀ ಚಿತ್ರತಂಡ ಸುಮಾರು ಎರಡು ಮೂರು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ ಪರಿಶ್ರಮ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟೀಸರ್ನಲ್ಲಿ ನೋಡಬಹುದಾಗಿದೆ. ಕನ್ನಡದ ಹುಡುಗರೂ ಈ ರೀತಿಯಾಗಿ ಹಾಲಿವುಡ್ ಚಿತ್ರಗಳಿಗೆ ಸರಿಸಮನಾಗಿ ನಿಲ್ಲಬಲ್ಲಂತಹ ಚಿತ್ರಗಳನನ್ನು ಮಾಡಬಹುದು ಎಂದು ಜಗತ್ತಿಗೆ ತೋರಿಸಿರುವುದು ಮತ್ತು ಅದನ್ನು ಈಗಾಗಲೇ ಚಲಚಿತ್ರ ರಂಗದ ನಾನಾ ಗಣ್ಯರು ಹಾಡಿ ಹೊಗಳುತ್ತಿರುವುದು ನಿಜಕ್ಕೂ ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.
ಎಲ್ಲವೂ ಸರಿಯಾಗಿ ಇನ್ನೇನು ಪ್ರಪಂಚಾದ್ಯಂತ ನಾನಾ ಭಾಷೆಗಳಲ್ಲಿ ಕೆಜಿಎಫ್ ಚಲನಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಯಾರೂ ಅನಾಮದೇಯರು ಕೆಜಿಎಫ್ ನಾಗರೀಕರು ಎನ್ನುವ ಅನಾಮದೇಯ ಪತ್ರದ ಮೂಲಕ ಊರಿನ ಮರ್ಯಾದೆ, ಗೌರವಕ್ಕೆ ಧಕ್ಕೆ ತರುತ್ತಿದೆ ಎನ್ನುತ್ತಾ ಅನವಶ್ಯಕವಾಗಿ ಈ ವಿಷಯದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಎಳೆತಂದು ದಲಿತರನ್ನು ಎತ್ತಿ ಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ಕೆಜಿಎಫ್ ನಲ್ಲಿಯೇ ಹುಟ್ಟಿದ ನಾನು ಅವರು ಹೇಳಿರುವ ಎಲ್ಲಾ ವಿಷಯಗಳನ್ನು ಒಪ್ಪುವುದಿಲ್ಲ. ನಾನು ಹುಟ್ಟಿ ಬಾಲ್ಯದ ದಿನಗಳನ್ನು ಕಳೆದ ನಮ್ಮ ಅಜ್ಜಿ ಮನೆ ಛಾಂಪಿಯನ್ ರೀಫ್ (ಅದೊಂದು ಗಣಿಯ ಹೆಸರು) ಸುಮಾರು 100 ಅಡಿ ಎದುರು ಮತ್ತು ಮಾರಿಕುಪ್ಪಂ ಪೋಲೀಸ್ ಠಾಣೆಯಿಂದ 50 ಆಡಿ ದೂರದಲ್ಲಿತ್ತು.
ಬ್ರಿಟಿಷರು ಅಕ್ಷರಶಃ ಅಲ್ಲಿನ ಚಿನ್ನವನ್ನು ಕೊಳ್ಳೆ ಹೊಡೆದುಕೊಂಡು ಕೇವಲ ಉಪ್ಪಿನಕಾಯಿಯಷ್ಟನ್ನು ಮಾತ್ರವೇ ನಮಗೆ ಉಳಿಸಿಹೋಗಿದ್ದರು. ಇಂದಿಗೂ ಸಹಾ ಅಲ್ಲಿಯ ಸ್ಥಳೀಯರು ಬ್ರಿಟಿಷ್ ಅಧಿಕಾರಿಗಳನ್ನು ತೊರೈ (ದೊರೆ) ಎಂದು ಸಂಭೋದಿಸುತ್ತಿದ್ದದ್ದು ನನಗೆ ಅಚ್ಚರಿಯ ತರಿಸಿ ಅಮ್ಮನೊಂದಿಗೆ ಇದರಬಗ್ಗೆ ಹಲವಾರುಬಾರಿ ವಾದ ವಿವಾದಗಳನ್ನು ನಡೆಸಿದ ದ ಉದಾಹರಣೆಗಳಿವೆ ಇಂದಿಗೂ ಸಹಾ ಅಲ್ಲಿನ ಹಲವಾರು ಪ್ರದೇಶಗಳು ಬಟ್ಲರ್ ಕಾಲೋನಿ, ಟೌನ್, ಬಿಯರ್‌ಷಾಪ್ ಹೀಗೆ ಆಂಗ್ಲಮಯವಾಗಿಯೇ ಉಳಿದಿದೆ.
ಮೂಲತಃ ಕನ್ನಡನಾಡಾದರೂ ಕೋಲಾರ ತೆಲುಗಿನವರ ಪ್ರಾಭಲ್ಯದ ನಾಡಾಗಿದ್ದ ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ ಆಳದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು ನಮ್ಮವರು ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು ಇಡೀ ಊರನ್ನೇ ತಮಿಳುಮಯವನ್ನಾಗಿ ಮಾಡಿದರು. ಕೇವಲ ಹೊಟ್ಟೆಪಾಡಿನ ಕೆಲಸಕ್ಕಾಗಿ ಬಂದ ಅವರು ಮೂಲತಃ ದಲಿತರೇನಲ್ಲ. ಏಕೆಂದರೆ ಎಲ್ಲಾ ತಮಿಳರು ದಲಿತರಲ್ಲ. ಚಿಕ್ಕವನಿದ್ದಾಗ ಅಂತಹವರ ಮನೆಗಳಲ್ಲಿ ಆಡಿ ಬೆಳೆದವನು ನಾನು. ಪ್ರಾಯಶಃ ಸರ್ಕಾರದ ಮೀಸಲಾತಿಯನ್ನು ಪಡೆಯಲು ಸರ್ಕಾರೀ ದಾಖಾಲಾತಿಗಳಲ್ಲಿ ದಲಿತರೆಂದು ತೋರಿಸಿ ಕೊಂಡಿರಬಹುದು. ಅಂದು ಅಲ್ಲಿ ತಮಿಳಿರ ಹಾವಳಿ ಎಷ್ಟಿತ್ತೆಂದರೆ ಕನ್ನಡ ಶಾಲೆಗಳೇ ವಿರಳವಿದ್ದು ಇದ್ದ ಒಂದೆರಡು ಕನ್ನಡ ಶಾಲೆಗಳು ಬಹಳ ದೂರವಿದ್ದುದರ ಪರಿಣಾಮವಾಗಿ ಅಪ್ಪಟ ಕನ್ನಡಿಗಳಾಗಿಯೂ ನಮ್ಮಅಮ್ಮನ ವಿದ್ಯಾಭ್ಯಾಸ ತಮಿಳಿನಲ್ಲಿ ಆಯಿತು ಎನ್ನುವುದು ನಂಬಲೇ ಬೇಕಾದ ಸಂಗತಿ.* ನರ್ಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನೀ* ಅಂತ ರತ್ನನ ಪದಗಳನ್ನು ಹೇಳಿ ಕೊಚ್ಚಿಕೊಳ್ಳುವ ನಾನೂ ಸಹಾ ಹುಟ್ಟಿದಾಗ ನನ್ನ ಕಿವಿಯ ಮೇಲೆ ಕೇಳಿದ ಮೊದಲನೆ ಪದವೇ ಕೊಳಂದೆ ಆಣ್, ಪೆಣ್ಣಾ? ಎನ್ಗುವುದು ಎನ್ನುವುದು ನಂಬಲೇಬೇಕಾದ ಸತ್ಯ ಸಂಗತಿ. ನಂತರ ನಾನು ಮಾತಾನಾಡಲು ಶುರು ಮಾಡಿದಾಗ ಅಕ್ಕ ಪಕ್ಕದವರು ಎನ್ನಡಾ ಎಂದರೆ ನಾನು ಕನ್ನಡ ಎನ್ನುತ್ತಿದ್ದೆ ಎಂದು ನಮ್ಮಜ್ಜಿ ಮತ್ತು ಚಿಕ್ಕಮ್ಮಂದಿರು ನನಗೆ ಹಲವಾರು ಸಲ ತಿಳಿಸಿದ್ದಾರೆ.
ಎಪ್ಪತರ ದಶಕದಲ್ಲಿ ಚಿನ್ನದ ಅದಿರಿನ ಉತ್ಪತ್ತಿ ಕಡಿಮೆಯಾಗಿ ಸಂಪಾದನೆ ಕಡಿಮೆಯಾದಾಗ ಗಂಡಸರು ಕಳ್ಳತನದ ಅಡ್ಡ ದಾರಿ ಹಿಡಿದರೆ ಹೆಂಗಸರುಗಳು ಕ್ರೈಸ್ತ ಮಿಷಿನರಿಗಳು ಕೊಡುತ್ತಿದ್ದ ಹಾಲಿನ ಪುಡಿ, ಅಲ್ಪ ಸ್ವಲ್ಪ ರೇಷನ್ ಮತ್ತು ಪುಡಿಗಾಸಿನ ಆಸೆಗಾಗಿ ಕ್ರೈಸ್ತರಾಗಿ ಮತಾಂತರ ಹೊಂದಿದರು. ಇದ್ದಕ್ಕಿದ್ದಂತೆ ಜಾನ್, ಕೆನಡಿ, ಜಾರ್ಜ್ ಮುಂತಾದ ಹೆಸರುಗಳೇ ಊರೆಲ್ಲಾ ತುಂಬಿ ತುಳುಕಾಡತೊಡಗಿದವು. ಅವರೆಲ್ಲರೂ ದೇಹ ಮೈಮುರಿದು ಕೆಲಸ ಮಾಡಲು ಒಪ್ಪದೆ ಇತರರ ಮೈ ಕೈ ಮುರಿಯುವ ಕಾಯಕಕ್ಕೆ ಇಳಿದು ಕೆಜಿಎಫ್ನಲ್ಲಿದ್ದ ಐದಾರು ಪೋಲಿಸ್ ಠಾಣೆಗಳ ಜೈಲುಗಳು ಸದಾಕಾಲವೂ ತುಂಬಿ ತುಳುಕುವ ಹಾಗೆ ನೋಡಿಕೊಂಡರು. . ಹೊಡೆದಾಟ ಮತ್ತು ಬಡಿದಾಟಗಳು ಅಲ್ಲಿ ಸಹಜ ಪ್ರಕ್ರಿಯೆಯಾಗಿದ್ದು, ಹೆಂಡದ ಮಾಫಿಯಾ ಅಂದಿನದಿನಗಳಲ್ಲಿ ಹೆಚ್ಚಾಗಿದ್ದಂತೂ ಸುಳ್ಳಲ್ಲ. ನಾವು ಚಿಕ್ಕವರಿದ್ದಾಗ ಮನೆಯ ಪಕ್ಕದಲ್ಲೇ ಇದ್ದ ಠಾಣೆಯಲ್ಲಿ ಕಳ್ಳಕಾಕರನ್ನು ನೋಡುವುದೇ ನಮಗೆ ಕುತೂಹಲಕಾರಿಯಾಗಿತ್ತು.
ಲಕ್ಕ್ಮೀ ಟಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದ ಭಕ್ತವತ್ಸಲ, ಆರ್ಮುಗಂ, ರಾಜೇಂದ್ರ ಸರದಿಯಂತೆ ಶಾಸಕರಾಗಿ ಆಯ್ಕೆಯಾಗಿದ್ದು ಹೊರತಾಗಿ ಊರನ್ನು ಮೂರುಕಾಸಿನ ಉದ್ದಾರ ಮಾಡಲಿಲ್ಲ ಎನ್ನುವದು ಅಕ್ಷರಶಃ ಸತ್ಯ.
ದೇಶಾದ್ಯಂತ ಅಂಬೇಡ್ಕರ್ ಮತ್ತು ಅವರ ಬೆಂಬಲಿಗರು ಚುನಾವಣೆಯಲ್ಲಿ ಸೋಲುಂಡರೆ ಕೆಜಿಎಫ್ನಲ್ಲಿ ಮಾತ್ರವೇ ಅಂಬೇಡ್ಕರ್ ಬೆಂಬಲಿತ ಅಭ್ಯರ್ಥಿ ಗೆಲುವನ್ನು ಕಂಡಿದ್ದು ಈಗ ಇತಿಹಾಸ.
ಕರ್ನಾಟಕ ರಾಜ್ಯದಲ್ಲಿನ ಪ್ರಪ್ರಥಮ ಜಲವಿದ್ಯುತ್ ಯೋಜನೆಯಾದ ಶಿವನ ಸಮುದ್ರದಿಂದ ತಯಾರಾದ ವಿದ್ಯುತ್ ಮೊದಲಿಗೆ ಮೈಸೂರಿನಲ್ಲಿ ಅರಮನೆಯಲ್ಲಿ ಬೆಳಗಿದರೆ, ಎರಡನೇಯ ಪ್ರದೇಶವೆಂದರೆ ಕೆಜಿಎಫ್ ಗಣಿಗಳ ಪ್ರದೇಶ ಎನ್ನುವುದು ಸತ್ಯ ಸತ್ಯ ಸತ್ಯ. 90ರ ದಶಕದಲ್ಲಿ ಇಡೀ ಗಣಿ ಪ್ರದೇಶದ ಕೆಲಸಗಳೆಲ್ಲಾ ಸಂಪೂರ್ಣ ನಿಂತುಹೋಗಿ ಕೆಲಸಗಾರರಿಗೆಲ್ಲಾ ಸ್ವಯಂ ನಿವೃತ್ತಿ ಕೊಡಿಸಿದರು. ಅಂತಹ ಸ್ಚಯಂ ನಿವೃತ್ತಿ ಹೊಂದಿ ಬೆಂಗಳೂರಿಗೆ ಗುಳೇ ಎದ್ದ ಸಹಸ್ರಾರು ಕುಟುಂಬಗಳಲ್ಲಿ ನಮ್ಮ ಸೋದರಮಾವನ ಕುಟುಂಬವೂ ಒಂದು.
ಇಂದಿಗೂ ಕೆಜಿಎಫ್ನಿಂದ ಬೆಂಗಳೂರಿಗೆ ಪ್ರತಿದಿನ ರೈಲಿನಲ್ಲಿ ಬಂದು ಕೆಲಸ ಮಾಡಿ ಹೋಗುವ ಸಹಸ್ರಾರು ಉದ್ಯೋಗಿಗಳಿದ್ದಾರೆ ಅವರಲ್ಲಿ ಕೆಲವರು ಅಂದಿನ ನಮ್ಮ ಅಕ್ಕ ಪಕ್ಕದ ಮನೆಯವರಿದ್ದಾರೆ.
ಎಪ್ಪತ್ತರ ದಶಕದಲ್ಲಿ ಊರಿಗಾಂ ಪ್ರದೇಶದಲ್ಲಿ ಬಿಇಎಂಲ್ ಕಾರ್ಖಾನೆ ಆರಂಭವಾಗಿ ಬೆಮೆಲ್ ನಗರ ಆರಂಭವಾದ ನಂತರವೇ ಅಲ್ಲಿ ಕನ್ನಡದ ಸೊಗಡನ್ನು ಕಾಣತೊಡಗಿದ್ದಂತೂ ದಿಟ.
ಇವೆಲ್ಲವೂ ನನಗೆ ನನ್ನ ಹುಟ್ಟೂರಿನ ಬಗ್ಗೆ ತಿಳಿದಿರುವ ಸಂಗತಿಗಳಾಗಿವೆ. ನಿಮ್ಮೆಲ್ಲರ ಹಾಗೆ ನನಗೂ ಕೆಜಿಎಫ್ ಚಿತ್ರದ ಬಗ್ಗೆ ಕುತೂಹಲವಿದೆ.
ನೋಡೋಣ ನಾನು ವಿವರಿಸಿದ ಇತಿಹಾಸಕ್ಕೂ ಅವರು ಚಿತ್ರದಲ್ಲಿ ತೋರಿಸಿರ ಬಹುದಾದ ಇತಿಹಾಸವನ್ನು ಚಿತ್ರ ನೋಡಿದ ನಂತರ ಮತ್ತೊಮ್ಮೆ ಚರ್ಚಿಸೋಣ
ಏನಂತೀರೀ?