ಏಷ್ಯನ್ ಕ್ರೀಡಾಕೂಟ

ನೂರಾ ಇಪ್ಪತ್ತೈದು ಕೋಟಿ ಜನಸಂಖ್ಯೆಯ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ, ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿರುವ, ಪ್ರಪಂಚಾದ್ಯಂತ ಅತೀ ಹೆಚ್ಚು ಯುವಜನ ಶಕ್ತಿಯನ್ನು  ಹೊಂದಿರುವ ಸುಮಾರು ಒಂದು ಸಾವಿರ ಕ್ರೀಡಾಳುಗಳು ಭಾಗವಹಿಸಿರುವ  ಏಷ್ಯನ್ ಕ್ರೀಡಾ ಪದಕಗಳ ಪಟ್ಟಿಯಲ್ಲಿ ಸದ್ಯದ ಪರಿಸ್ಥಿತಿ ನೋಡಿ ನಿಜಕ್ಕೂ ಖೇದವೆನಿಸಿತು.  ಇತರೇ ಕ್ರೀಡೆಗಳನ್ನು ಬಿಡಿ. ನಮ್ಮದೇ ದೇಶದ  ಕ್ರೀಡೆಗಳಾದ ಹಾಕಿ ಮತ್ತು ಕಬ್ಬಡ್ದಿಯಲ್ಲೂ ಕೂಡಾ ಪದಕಗಳನ್ನು ಗೆಲ್ಲಲು ವಿಫಲರಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ದುಖಃಕರವೇ ಸರಿ.

ಹಾಕಿಯಲ್ಲಂತೂ ದೇಶಿ ಆಟಗಾರ ಎದೆಗಾರಿಕೆ ಎಂದೋ  ಕುಂದು ಹೋಗಿ ವಿದೇಶೀ ಆಟಗಾರರ ಪ್ರಾಭಲ್ಯ ಹೆಚ್ಚಾಗಿ ಹೋಗಿದೆ. ಪದಕ ಗೆಲ್ಲುವುದು ಇರಲಿ ಏಷ್ಯನ್ ಮತ್ತು ಓಲಂಪಿಕ್ಸ್ ಮುಂತಾದ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೇ ಅರ್ಹತೆ ಪಡೆಯುವುದೇ ಹೆಮ್ಮೆಯ ಸಂಗತಿಯಾಗಿ ಬಿಟ್ಟಿದೆ.

ಕಳೆದ ನಾಲ್ಕಾರು ಏಷ್ಯನ್ ಕ್ರೀಡಾಕೂಟಗಳಲ್ಲಿ ಬೇರಾವುದೇ ಕ್ರೀಡೆಗಳಿಂದ ಪದಕ ನಿರೀಕ್ಷಿಸದಿದ್ದರೂ ಕಬ್ಬಡ್ಡಿ ಆಟದಲ್ಲಿ ನಮಗೇ ಚಿನ್ನದ ಪದಕ ಕಟ್ಟಿಟ್ಟ ಬುತ್ತಿ ಎನ್ನುಬಹುದಿತ್ತು. ಆದರೆ ಈ ಬಾರಿ ಪುರುಷರ ತಂಡ ಪದಕ ಪಟ್ಟಿಯಿಂದ ಹೊರಬಿದ್ದರೆ, ಮಹಿಳೆಯರ ತಂಡ ಎರಡನೇ ಸ್ಥಾನಕ್ಕೆ ಅಲ್ಪತೃಪ್ತಿ ಪಟ್ಟಿಕೊಂಡಿದೆ.  ಇಂತಹ ಅಧೋಗತಿಗೆ ಇಳಿಯಲು ಕಾರಣವೇನೂ ಎಂದು ಅವಲೋಕಿಸಿದರೆ ಅತಿಯಾದ ಆತ್ಮವಿಶ್ವಾಸ ಮತ್ತು ಕಬ್ಬಡ್ಡಿ ಆಟವನ್ನು ಅತೀಯಾಗಿ ವೈಭವೀಕರಿಸಿ ಕ್ರಿಕೆಟ್  ಟಿ-ಟ್ವೆಂಟಿ ಆಟದಂತೆಯೇ ಪ್ರೋ-ಕಬ್ಬಡ್ಡಿ  ಲೀಗ್ ಆರಂಭಿಸಿ ಸಣ್ಣ ಪುಟ್ಟ ಆಟಗಾರರಿಗೂ ಅತೀ ಹೆಚ್ಚಿನ ಮೌಲ್ಯ ಕಟ್ಟಿ ಅವರಲ್ಲಿದ್ದ ನೈಸರ್ಗಿಕ ಆಟಗಳಿಗಿಂತ ಚಮಕ್-ಗಿಮಿಕ್ ಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುವುದರಿಂದ ಆಟಗಾರರಿಗೆ ದೇಶಕ್ಕೆ ಪದಕ ಗೆಲ್ಲುವುದಕ್ಕಿಂತ ಯಾವುದಾದರೂ ತಂಡಕ್ಕೆ ಆಡಿದಲ್ಲಿ ಹೆಚ್ಚಿನ ವರಮಾನ ಮತ್ತು ಖ್ಯಾತಿ ಪಡೆಯುವುದೇ ಆದ್ಯತೆಯಾಗಿದೆ.

ಇನ್ನು ಭಾರತದ  ಟೆನಿಸ್ ಆಟಗಾರರೂ ಇದಕ್ಕೆ ಹೊರತಲ್ಲ. ವಯಕ್ತಿಯವಾಗಿ ಅಥವಾ ಡಬಲ್ಸ್ನಲ್ಲಿ ನಮ್ಮ ದೇಶದ ಆಟಗಾರರು ಜಗತ್ತಿನಲ್ಲಿಯೇ ಅಗ್ರಜರೆನಿಸಿದರೂ, ತಮ್ಮೊಳಗಿನ ಅಹಂನಿಂದಾಗಿ ದೇಶಕ್ಕಾಗಿ ಒಗ್ಗಟ್ಟಾಗಿ ಆಡದೆ ಇಂದಿಗೂ ಡೇವಿಸ್ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ .  ವಿದೇಶಿ ಸಹ ಆಟಗಾರರೊಂದಿಗೆ ಆಡಲು ಮನಸ್ಸು ಮಾಡುವ ನಮ್ಮ ಆಟಗಾರರು ನಮ್ಮದೇ ದೇಶದ ಆಟಗಾರರೊಂದಿಗೆ ಆಡಲು ಮೀನಾ ಮೇಷ ಎಣಿಸುವುದು, ಸಾರ್ವಜನಿಕವಾಗಿ ಒಬ್ಬರನ್ನೊಬ್ಬರು ವಯಕ್ತಿಕವಾಗಿ ನಿಂದಿಸಿ ದೇಶಕ್ಕೆ ಅವಮಾನ ತರುತ್ತಿರುವುದು ನಿಜಕ್ಕೂ ವಿಷಾಧನೀಯವೇ ಸರಿ.

ಕ್ರಿಕೆಟ್ ಬಿಟ್ಟರೆ, ಬ್ಯಾಡ್ಮಿಂಟನ್, ಶೂಟಿಂಗ್ ಬಾಕ್ಸಿಂಗ್, ಕುಸ್ತಿ, ವೇಯ್ಟ್ ಲಿಫ್ಟಿಂಗ್ ಮತ್ತು ಸ್ಕ್ವಾಶ್ ಆಟಗಳಲ್ಲಿ ಅದೂ ಕೆಲ ವಯಕ್ತಿಕ ಆಟಗಾರ ಸ್ವಸಾಮರ್ಥ್ಯದಿಂದ ಇಂದು ನಮ್ಮ ದೇಶದ ಗರಿಮೆ ದೇಶ ವಿದೇಶಗಳಲ್ಲಿ ಹಬ್ಬುವಂತಾಗಿದ್ದರೂ ಉಳಿದ ಆಟಗಳಲ್ಲಿ ಕೆಳಗಿನಿಂದ ಮೊದಲ ಸ್ಥಾನವೇ ಗಟ್ಟಿಯಾಗಿರುವುದು ಯೋಚಿಸಿ ಬೇಕಾದ ಸಂಗತಿಯೇ ಆಗಿದೆ.

ಹಾಗೆಂದ ಮಾತ್ರಕ್ಕೆ ನನ್ನನ್ನು ಕ್ರಿಕೆಟ್ ಮತ್ತು ಪ್ರೋ-ಕಬ್ಬಡ್ದಿ ಆಟದ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟದೆ, ಒಮ್ಮೆ ಕೂಲಂಕುಶವಾಗಿ ಯೋಚಿಸಿ ನೋಡಿದರೆ ಎಲ್ಲವೂ ಸುಸ್ಪಷ್ಟವಾಗಿ ಗೋಚರವಾಗುತ್ತದೆ. ಇಂದು ಎಲ್ಲರಿಗೂ ಹಣ ಮತ್ತು ಖ್ಯಾತಿಗಳೇ ಪ್ರಮುಖವಾಗಿ ಎಲ್ಲಿ ಹಣ ಮತ್ತು ಖ್ಯಾತಿ ಹೆಚ್ಚಿರುತ್ತದೆಯೋ ಅಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡಿ ಉಳಿದೆಡೆ ಕಾಟಾಚಾರಕ್ಕೆ  ಅಡುವ ನಿದರ್ಶನಗಳೇ ಹೆಚ್ಚಾಗಿವೆ. ಇದಕ್ಕೆ ಪ್ರಸಕ್ತ ಏಷ್ಯನ್ ಕ್ರೀಡಾಕೂಟವೇ ಸಾಕ್ಷಿಯಾಗಿದೆ.

ಈ ಎಲ್ಲಾ ಅವ್ಯವಸ್ಥೆಗಳ ಮದ್ಯೆಯೂ ಆಶಾಕಿರಣವಾಗಿ ಜಿಮ್ನಾಸ್ಟಿಕ್ ಮತ್ತು ಅತ್ಲೆಟಿಕ್ಸ್ನಲ್ಲಿ ಕೆಲ ಪದಕಗಳು ಬಂದಿರುವುದು ದೇಶದ ಮಾನವನ್ನು ಉಳಿಸಿರುವುದಾದರೂ ಕ್ರಿಕೆಟ್ ಬಿಟ್ಟು ಉಳಿದಾವುದೇ ಆಟಗಳಿಗೆ ಮಹತ್ವ ನೀಡದಿದ್ದಲ್ಲಿ ಮತ್ತು ಎಲ್ಲಾ  ಆಟಗಳನ್ನು  ಮತ್ತು

ದೈಹಿಕ ಕಸರತ್ತುಗಳನ್ನು  ಬದಿಗೊತ್ತಿ ಕೇವಲ ಓದಿಗೇ ಮಹತ್ವ ನೀಡಿ ಎಲ್ಲ ಮಕ್ಕಳೂ ಡಾಕ್ಟರ್ ಇಲ್ಲವೇ ಇಂಜಿನೀಯರ್ಗಳಾಗಿ ವಿದೇಶಿ ಗುಲಾಮರಾದಲ್ಲಿ  ಎಲ್ಲ ರೀತಿಯ ಕ್ರೀಡಾಕೂಟಗಳ  ಪದಕಗಳ ಪಟ್ಟಿಯಲ್ಲಿ ನಮ್ಮ ದೇಶದ ಹೆಸರೇ ಮಾಯವಾಗುವ ದಿನ ದೂರವಿಲ್ಲ ಎಂದೆನಿಸುತ್ತಿದೆ.

ಏನಂತೀರೀ?

Leave a comment