ಗರೀಬೀ ಹಟಾವೋ

ಮೊನ್ನೆ ಬೆಳಿಗ್ಗೆ ಇದ್ದಕ್ಕಿದ್ದಂತೆಯೇ ಸ್ವಘೋಷಿತ ಯುವರಾಜ,  ರಾಹುಲ್ ಗಾಂಧಿ ಅಕ್ಕ ಪಕ್ಕದಲ್ಲಿ ಕರಟಕ ಧಮನಕಳಂತೆ ಸುರ್ಜಿವಾಲ ಮತ್ತು ವೇಣುಗೋಪಾಲ್ ಅವರುಗಳನ್ನು ಕೂರಿಸಿಕೊಂಡು,  ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ,  ದೇಶದ 20% ಬಡವರಿಗೆ ಪ್ರತಿ ತಿಂಗಳು 6000 ರೂಪಾಯಿಗಳಂತೆ  ವರ್ಷಕ್ಕೆ 72000 ರೂಪಾಯಿಗಳನ್ನು ಕನಿಷ್ಠ ಆದಾಯದ ರೂಪದಲ್ಲಿ ಉಚಿತವಾಗಿ ಸರ್ಕಾರದ ವತಿಯಿಂದ ಕೊಡುತ್ತೇವೆ ಎಂದು ಪತ್ರಿಕಾ ಗೋಷ್ಟಿಯಲ್ಲಿ  ಪ್ರಕಟಿಸಿದಾಗ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರಿತಿರುವ  ನೆರೆದಿದ್ದ ಪತ್ರಕರ್ತರೆಲ್ಲರೂ ಒಮ್ಮೆಲೆ ರಾಹುಲ್  ತಲೆ ಸರಿ ಇದೆಯೇ, ಯಾವುದಾದರೂ ನಶೆಯಲ್ಲಿದ್ದಾರೆಯೇ? ಆಥವಾ ರಾತ್ರಿಯ ನೆಶೆ ಇನ್ನೂ ಇಳಿದಿಲ್ಲವೋ  ಎಂಬಂತೆ ದಿಟ್ಟಿಸಿ ನೋಡಿದಾಗ, ಥೇಟ್ ಕೆಂಪೇಗೌಡ ಸಿನಿಮಾದಲ್ಲಿ ರೌಡಿ ಆರ್ಮುಗಂ ಕೇಳಿದ ರೀತಿಯಲ್ಲಿಯೇ ಯಾಕೇ? ಶಾಕ್ ಆಯ್ತಾ? ಶಾಕ್ ಆಗಿರ್ಲೇ ಬೇಕು. ಶಾಕ್ ಆಗಲೀ ಅಂತಾನೇ ಈ ರೀತಿಯಾಗಿ ಘೋಷಣೆ ಮಾಡಿದ್ದೀನಿ.  ಇಂದು ದೇಶದಲ್ಲಿ ಅತ್ಯಂತ ಮಹತ್ವದ ದಿನ. ಇಂತಹ ಕಾರ್ಯಕ್ರಮ ನಭೂತೋ ನಭವಿಷ್ಯತಿ, ಹಿಂದೆ ಯಾರೂ ಮಾಡಿಲ್ಲ, ಮುಂದೆ ಯಾರೂ ಮಾಡೋದಿಲ್ಲ. ಕೇವಲ ಭಾರತದಲ್ಲೇಕೆ? ಇಡೀ ವಿಶ್ವದಲ್ಲೇ ಇಂತಹ  ಪ್ರಯೋಗವನ್ನು ಪ್ರಪ್ರಥಮವಾಗಿ ತಮ್ಮ ಪಕ್ಷ ಮಾಡುತ್ತಿದೆ ಎಂದು ತಿಳಿಸಿ,  ಈ ಕಾರ್ಯಕ್ರಮ ಅನುಷ್ಟಾನಗೊಂಡಲ್ಲಿ ದೇಶದಲ್ಲಿ ಬಡತನ ನಿರ್ಮೂಲವಾಗಲಿದೆ. ಇದೊಂದು ಮಾಸ್ಟರ್ ಸ್ಟ್ರೋಕ್  ಎಂದು ಕೊಚ್ಚಿ ಕೊಂಡಿದ್ದು ನೆರೆದಿದ್ದವರಿಗೆ ಖಂಡಿತವಾಗಿಯೂ  ಅಚ್ಚರಿ ಮೂಡಿಸಿರುವುದಂತೂ ಸತ್ಯ.

ಸ್ವಾಂತಂತ್ರ್ಯಾನಂತರ ಮುಕ್ಕಾಲು ಪಾಲು ಆಳ್ವಿಕೆ ನಡೆಸಿದ್ದೇ ರಾಹುಲನ ಕುಟುಂಬ ಮತ್ತು ಅವರದ್ದೇ ಪಕ್ಷ. ಎಪ್ಪತ್ತರ ದಶಕದಲ್ಲಿ ಅಜ್ಜಿ ಇಂದಿರಾಗಾಂದಿಯ ಕಾಲದ ಜನಪ್ರಿಯ ಕಾರ್ಯಕ್ರಮ ಗರೀಬೀ ಹಟಾವೋ ನಂತರ ರಾಜೀವ್ ಗಾಂಧಿ, ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಕಾಲದಲ್ಲೂ ಮುಂದುವರೆದು ಇನ್ನೂ ಬಡತನವನ್ನು ನಿರ್ಮೂಲನ ಮಾಡಲು ಆಗದಿದ್ದವರಿಗೆ ಕೇವಲ ಈ ಕಾರ್ಯಕ್ರಮದಿಂದ ಮೋದಿಯವರ ಕಳೆದ ಐದು ವರ್ಷಗಳ ಆಳ್ವಿಕೆಯಲ್ಲಿ ಬವಣೆ ಪಟ್ಟ ಪ್ರಜೆಗಳಿಗೆ ನೆಮ್ಮದಿ ಕೊಡಲಿದೆ ಎಂದು ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದವೇ ಸರಿ. ದೇಶದ 125 ಕೋಟಿ ಜನರಲ್ಲಿ  ಸರಿಯಾಗಿ ತೆರಿಗೆ ಕಟ್ಟುತ್ತಿದ್ದವರು  ಸುಮಾರು 10% ಜನರು ಮಾತ್ರ. ಈಗ ಮೋದಿಯವರ ಆಳ್ವಿಕೆಯಲ್ಲಿ ಆರ್ಥಿಕ ಸುಧಾರಣೆ ತಂದ ಪರಿಣಾಮವಾಗಿ ತೆರಿಗೆ ಕಟ್ಟುವವರ ಸಂಖ್ಯೆ ಇನ್ನೂ 2-3% ಹೆಚ್ಚಾಗಿದೆ.  ಈ ಯೋಜನೆ ಜಾರಿಗೆಯಾಗಬೇಕಾದ್ರೆ, ಸುಮಾರು 3.60 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ.  ಇಷ್ಟೋಂದು ಹಣವನ್ನು ಪ್ರತೀ ವರ್ಷವೂ ಹೊಂದಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ, ನಾನು  ಆರ್ಥಿಕ ತಜ್ಞರೊಡನೆ ಸಮಾಲೋಚನೆ ಮಾಡಿದ್ದೇನೆ ನನಗೆ ಹೇಗೆ ಜಾರಿಗೆ ತರಬೇಕೆಂದು ಗೊತ್ತಿದೆ ಎಂಬ  ಉಡಾಫೇ ಉತ್ತರ. ಹೇಗೋ ಸುಳ್ಳುಗಳ ಸರಮಾಲೆಯನ್ನೇ ಹೇಳಿಕೊಂಡು  ಅಧಿಕಾರಕ್ಕೆ ಬಂದರಾಯಿತು. ನಂತರ  ಜಾರಿಗೆ ತರುವುದನ್ನು ನೋಡಿ ಕೊಳ್ಳೊಣ ಎನ್ನುವ ಉದ್ಧಟತನ. ಅಧಿಕಾರಕ್ಕೆ ಬಂದ  24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಮ್ಮ ರಾಜ್ಯದ ಮುಖ್ಯಮಂತ್ರಿ ನಂತರ ಪೂರ್ಣ ಪ್ರಮಾಣದ ಅಧಿಕಾರ ತಂದರೆ ಮಾಡುತ್ತಿದ್ದೆವು ನಂತರ ಒಂದು  ತಿಂಗಳಿನಲ್ಲಿ  ಮಾಡುತ್ತೇವೆ, ಆರು ತಿಂಗಳಲ್ಲಿ ಮಾಡುತ್ತೇವೆ ಎಂದು ಹೇಳುತ್ತಲೇ, ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂಬಂತೆ  ಒಂಭತ್ತು ತಿಂಗಳು ಕಳೆದಿರುವುದು ನಮ್ಮ ಕಣ್ಣ ಮುಂದೆಯೇ ಇದೆ.   ಸರ್ಕಾರೀ ಕೆಲಸದಲ್ಲಿ  ಮೂವತ್ತು ನಲವತ್ತು ವರ್ಷಗಳಷ್ತು ಸೇವೆ ಸಲ್ಲಿಸಿದ ನೌಕರರಿಗೇ ಪ್ರತಿ ತಿಂಗಳು ಪಿಂಚಣಿ ನೀಡಲು ಕಷ್ಟವಾಗುತ್ತಿದೆ ಎಂದು ಕಳೆದ ಹದಿನೈದು ವರ್ಷಗಳ ಹಿಂದೆಯೇ  ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಪಿಂಚಣಿಯ ಸೌಲಭ್ಯವನ್ನೇ ರದ್ದು ಪಡಿಸಲಾಗಿರುವುದು ರಾಹುಲನಿಗೆ ಗೊತ್ತಿಲ್ಲವೆ?

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಬೆಂಗಳೂರಿನ ಬಹುತೇಕ ಕಟ್ಟಡಗಳ ನಿರ್ಮಾಣ ಕೆಲಸಕ್ಕೆ ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಸುತ್ತ ಮುತ್ತಲಿನ ಊರಿನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಯಾವಾಗ ತಮಿಳುನಾಡಿನ ಎರಡೂ ಪಕ್ಷಗಳೂ ಒಂದರ ಮೇಲೊಂದು ಜಿದ್ದಾ ಜಿದ್ದಿಗೆ ಉಚಿತ ಕೊಡುಗೆಗಳನ್ನು ನೀಡಲು ಆರಂಭಿಸಿದವೋ ಅಂದಿನಿಂದ ಆ ಎಲ್ಲಾ ಕೆಲಸಗಾರರೂ ತಮ್ಮ ತಮ್ಮ ಊರಿಗೆ ಮರಳಿ ಹೋಗಿ ಉಚಿತ ಅಕ್ಕಿ, ಬೇಳೆ, ಎಣ್ಣೆ ಜೊತೆ ಯೊಂದಿಗೆ ಕೆಲಸ ಮಾಡಲಿ ಬಿಡಲಿ  ನರೇಗ ಯೋಜನೆಯಡಿ ಪ್ರತಿದಿನ ಸಿಗುವ ಸಂಬಳದಲ್ಲಿ ಅಚ್ಚುಕಟ್ಟಾಗಿ ಕುಡಿದು ತಿಂದು ಸೋಮಾರಿಗಳಾಗಿರುವುದು ನಮ್ಮ ಕಣ್ಣ ಮುಂದೆಯೇ ಇದೆ.

ಈ ರಾಜಕೀಯ ನಾಯಕರು ತಮ್ಮ  ಓಟ್ ಬ್ಯಾಂಕ್ ವೃಧ್ದಿಸಿಕೊಳ್ಳಲು ಮತ್ತು ತಾವು ಹೇಳಿರುವ ಉಚಿತ ಕೊಡುಗೆಗಳನ್ನು ಕೊಡಲು ನಿಜವಾಗಿಯೂ ಶ್ರಮಪಟ್ಟು ಸಂಪಾದಿಸಿ ನ್ಯಾಯಯುತವಾಗಿ ಕಟ್ಟಿದ ತೆರಿಗೆಯ ಹಣವನ್ನು ಪೋಲು ಮಾಡುವುದು ಎಷ್ಟು ಸರಿ?  ಅದರ ಜೊತೆ ಜೊತೆಯಲ್ಲೇ ತಮ್ಮ ತೆವಲುಗಳನ್ನು ತೀರಿಸಿಕೊಳ್ಳಲು ಆಗ್ಗಿಂದ್ದಾಗೆ, ತೈಲ ಬೆಲೆ, ವಿದ್ಯುತ್ ಬೆಲೆ, ನೀರಿನ ಬೆಲೆ, ಸಾರಿಗೆ ಬೆಲೆಯನ್ನು ಹೇಳದೇ ಕೇಳದೆ ಹೆಚ್ಚು ಮಾಡುತ್ತಲೇ ಇರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ನಮ್ಮ ನಿಮ್ಮಂತಹ ಜನರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದ್ ಎಷ್ಟು ಸರಿ?

ಈ ರೀತಿಯಾಗಿ ಉಚಿತವಾಗಿ ಕೊಡುತ್ತಲೇ ಹೋದರೆ ಜನ ಸೋಮಾರಿಗಳಾಗುತ್ತಾರೆ ಹೊರತು ಉದ್ಧಾರವಾಗುವುದಿಲ್ಲ ಎಂಬ ಸರಳ ಸತ್ಯ ಈ ರಾಜಕೀಯ ನಾಯಕರಿಗೆ ಏಕೆ ಅರ್ಥವಾಗುತ್ತಿಲ್ಲ? ಅಥವಾ ಅರ್ಥವಾಗಿದ್ದರೂ ಜಾಣ ಮೌನವೇಕೆ? ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷ  ನಮ್ಮ ತೆರಿಗೆ ಹಣವನ್ನು ನೀರಿನಂತೆ  ಕೆಲವೇ ಕೆಲವು ಜನರನ್ನು ತೃಪ್ತಿ ಪಡಿಸಲು ಉಚಿತ ಕೊಡುಗೆಗಳನ್ನು ನೀಡಲು ಪೋಲು ಮಾಡುತ್ತಾರೋ ಅಂತಹವರ ವಿರುದ್ಧವಿರಲಿ. ನಮ್ಮ ಕಠಿಣ ಪರಿಶ್ರಮ ತೆರಿಗೆ ಹಣ ದೇಶದ ಆಭಿವೃಧ್ದಿಗೆ ಹೊರತು ಇಂತಹ ಸಾಲ ಮನ್ನಕ್ಕಾಗಲೀ, ಪುಗಸಟ್ಟೆ ಹಂಚುವುದಕ್ಕಾಗಲೀ, ಈ ರೀತಿಯ ಉಚಿತ ಕೊಡುಗೆಗಳಿಗಲ್ಲಾ. ಹಾಗೊಂದು ಬಾರಿ ನಿಜವಾಗಿಯೂ ಬಡತನ ನಿರ್ಮೂಲನ ಮಾಡಬೇಕೆಂದಿದ್ದಲ್ಲಿ  ಪ್ರತಿ ಚುನಾವಣೆಯಲ್ಲಿಯೂ ಈ ರಾಜಕಾರಣಿಗಳು ತಮ್ಮ ಆಸ್ತಿ ಪಾಸ್ತಿ ಘೋಷಣೆ ಮಾಡಿಕೊಳ್ಳುವ ಸಮಯದಲ್ಲಿ  ಹತ್ತು ಪಟ್ಟು ಕೆಲವೊಂದು ಬಾರಿ ನೂರು ಪಟ್ಟು ಏರಿಕೆಯಾಗಿರುವ ಹಣದಲ್ಲಿಯೋ ಅಥವಾ ದೇಶದ ಹಣವನ್ನು ಕೊಳ್ಳೆ ಹೊಡೆದು ವಿದೇಶೀ ಬ್ಯಾಂಕ್ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಹಣದಿಂದ ಕೊಡಲಿ ಹೊರತು ನಮ್ಮ ತೆರಿಗೆ ಹಣದಿಂದಲ್ಲಾ.

ಏನಂತೀರೀ?

Leave a comment