ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ಕಳೆದ ಎರಡು ತಿಂಗಳುಗಳಲ್ಲಿ , ಇಡೀ ವಿಶ್ವದ ಚಿತ್ತ ನಮ್ಮ ದೇಶದತ್ತ ಇತ್ತು. ಕಾರಣ, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಾರ್ವತ್ರಿಕ ಚುನಾವಣೆ ನಡೆಯುತ್ತಲಿತ್ತು. ಬಹುಶಃ ಪ್ರಪಂಚದ ಅತ್ಯಂತ ದೀರ್ಘಕಾಲದ ಮತ್ತು ಅತ್ಯಂತ ಹೆಚ್ಚಿನ
ಕ್ಷೇತ್ರಗಳು ಮತ್ತು ಮತದಾರರು ಪಾಲ್ಗೊಂಡ ಚುನಾವಣೆ ಎಂದರೆ ಇದುವೇ ಇರಬೇಕು.

2014 ರಲ್ಲಿ UPA-1 ಮತ್ತು UPA-2ರ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ ಭಾರತೀಯರಿಗೆ ತಮ್ಮ ದೇಶವನ್ನು ಮುನ್ನಡೆಸಲು ಕಾಣಿಸಿದ ಏಕೈಕ ಆಶಾಕಿರಣವೆಂದರೆ ನರೇಂದ್ರ ದಾಮೋದರ್ ದಾಸ್ ಮೋದಿ. ಅರ್ಥಾತ್ ನರೇಂದ್ರ ಮೋದಿ ಎಲ್ಲರ ಪ್ರೀತಿಯ ಮೋದಿಜೀ. NDA ಎಂಬ ಹೆಸರಿನಲ್ಲಿ ಕೆಲವು ಪಕ್ಷದೊಡನೆ ಚುನಾವಣಾ ಪೂರ್ವ ಮೈತ್ರಿಮಾಡಿಕೊಂಡು ಎಲ್ಲರ ನಿರೀಕ್ಷೇಗೂ ಮೀರಿ ಪ್ರಪ್ರಥಮ ಬಾರಿಗೆ ಸ್ವಸಾಮರ್ಥ್ಯದಿಂದ ಬಹುಮತದೊಂದಿಗೆ ಸಂಸತ್ ಭವನಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ ಭವನ ಪ್ರವೇಶಿಸಿದ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ, ಜನರ ನೀರೀಕ್ಷೆಗಳು ಅಪಾರ. ಕಾಂಗ್ರೇಸ್ಸಿನ ಕಳೆದ 60 ವರ್ಷಗಳಲ್ಲಿ ಮಾಡಲು ಸಾಧ್ಯಾವಾಗದಿದ್ದನ್ನು ಮೋದಿಯವರ ಸರ್ಕಾರ ಕೇವಲ 5 ವರ್ಷಗಳಲ್ಲಿ ಸಾಧಿಸಿ ತೋರಿಸಬೇಕೆಂಬ ಬಯಕೆ ಜನರದ್ದು. ಜನರ ನಿರೀಕ್ಶೆಯಷ್ಟಿಲ್ಲದ್ದಿದ್ದರೂ ದೇಶದ ಪ್ರಸಕ್ತ ಪರಿಸ್ಥಿತಿಗೆ ಅನುಗುಣವಾಗಿ ಐದು ವರ್ಷಗಳ ದಕ್ಷ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಾ, ದೇಶದಲ್ಲಿ ಒಂದರ ಮೇಲೊಂದು ರಾಜ್ಯಗಳಲ್ಲಿ ಅಧಿಕಾರ ಪಡೆದು ನಾಗಾಲೋಟದಿಂದ ಸಾಗುತ್ತಿದ್ದದ್ದು ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಂತು ಸುಳ್ಳಲ್ಲ. ಇದು ಹೀಗೆಯೇ ಮುಂದುವರಿದರೆ, ಮುಂದೆಂದೂ ತಾವು ಅಧಿಕಾರಕ್ಕೆ ಬರುವುದಿರಲೀ, ಅಧಿಕಾರದ ಕನಸನ್ನೂ ಕಾಣಲು ಸಾಧ್ಯವಿಲ್ಲ ಎಂಬುದನ್ನು ಅರಿತ ಎಲ್ಲಾ ವಿರೋಧಿಗಳು ಮೋದಿಯವರ ಮೇಲೆ ಮುಗಿಬಿದ್ದವು. ಹಾಗೆ ಮುಗಿಬಿದ್ದ ವಿರೋಧಿಗಳಲ್ಲಿ ಯಾವುದೇ ಸೈದ್ಧಾಂತಿಕ ಕಾರಣಗಳಿರದೇ ಅದು ಕೇವಲ ಸ್ವಾರ್ಥಕಷ್ಟೇ ಮೀಸಲಾಗಿದ್ದದ್ದು ನಿಜಕ್ಕೂ ವಿಪರ್ಯಾಸ. ಅದರಲ್ಲೂ ಕಾಂಗ್ರೇಸ್ ಪಕ್ಷ ವಿನಾಕಾರಣ ಪ್ರಧಾನಿಗಳ ಮೇಲೆ ವಯಕ್ತಿಕ ದಾಳಿ ಮಾಡತೊಡಗಿತು. ಇಲ್ಲ ಸಲ್ಲದ ಸುಳ್ಳಾರೋಪಗಳನ್ನು ಮಾಡುತ್ತಾ ಸಾವಿರ ಸುಳ್ಳಿನ್ನೇ ಹೇಳಿ ಅದನ್ನೇ ನಿಜವನ್ನಾಗಿ ಮಾಡಿಸುವ ಗೋಬೆಲ್ಸ್ ತಂತ್ರಕ್ಕೆ ಶರಣಾಗಿದ್ದು ನಿಜಕ್ಕೂ ದುಃಖಕರವೇ ಸರಿ.

ಇದಕ್ಕೆ ತಕ್ಕಂತೆ, ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಘಡದಲ್ಲಿ ದೀರ್ಘಕಾಲದ ಆಡಳಿತ ವಿರೋದಿ ಅಲೆಯಿಂದ ಅತ್ಯಂತ ಕಡಿಮೆ ಅಂತರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೇಸ್ ಅಧಿಕಾರ ಪಡುದುಕೊಂಡ ಮೇಲಂತೂ ಕಾಂಗ್ರೇಸ್ ಪಕ್ಷ ಮತ್ತದರ ನಾಯಕರ ತಲೆ ಭೂಮಿ ಮೇಲೆ ನಿಲ್ಲಲೇ ಇಲ್ಲ. ಮೋದಿಯವರ ಐದು ವರ್ಷದ ಆಡಳಿತದಲ್ಲಿ ಯಾವುದೇ ಕಪ್ಪು ಚುಕ್ಕೆಗಳು ಇಲ್ಲದಿದ್ದರೂ ದೇಶದ ರಕ್ಷಣೆಗಾಗಿ ಕಾಂಗ್ರೇಸ್ ಬಹುಕಾಲದಿಂದಲೂ ನೆನೆಗುದಿಗೆ ಬಿದ್ದಿದ್ದ ರಫೇಲ್ ಶಶಸ್ತ್ರಯುದ್ಧ ವಿಮಾನ ಖರೀದಿಯ ವ್ಯವಹಾರವನ್ನು ಮಾಡಿಮುಗಿಸಿದ ಮೇಲಂತೂ ರಾಹುಲ್ ಗಾಂಧಿ ವಿನಾಕಾರಣ 30,000 ಕೋಟಿ ಹಗರಣ ನಡೆದಿದೆ ಎಂದು ಸುಳ್ಳಾರೋಪ ಮಾಡತೊಡಗಿದರು. ಇದೇ ವಿಷಯ ಸುಪ್ರೀಂ ಕೋರ್ಟಿನಲ್ಲಿಯೂ ತನಿಖೆಯಾಗಿ ಅಲ್ಲಿಯೂ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ತೀರ್ಪು ಕೊಟ್ಟಮೇಲೂ, ಹೋದ ಬಂದ ಕಡೆಯಲ್ಲೆಲ್ಲಾ ಚೌಕೀದಾರ್ ಚೋರ್ ಹೈ ಎಂದು ಹಿಯ್ಯಾಳಿಸತೊಡಗಿದರು. ಆರಂಭದಲ್ಲಿ ಜನರಿಗೆ ಇವರ ಆರೋಪ ಸತ್ಯವೇ ಇರಬಹುದೇನೋ ಎಂದೆನಿಸಿದರೂ ಕ್ರಮೇಣ ಇದು ಕಾಂಗ್ರೇಸ್ಸಿಗರ ಕಟ್ಟು ಕಥೆ ಎಂಬುದರ ಅರಿವಾಗ ತೊಡಗಿತು.

ಲೋಕಸಭಾ ಚುನಾವಣೆಯ ಹತ್ತಿರ ಹತ್ತಿರ ಬಂದಂತೆಲ್ಲಾ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳು ಮಹಾಘಟ್ ಬಂಧನ್ ಎಂಬ ಹೆಸರಿನಲ್ಲಿ ಮೋದಿಯವರನ್ನು ಎದುರಿಸಲು ಒಂದಾಗಿ ಸಜ್ಜಾಗತೊಡಗಿದರೂ ಮತ್ತದೇ ಅವರರವರ ವಯಕ್ತಿಕ ಸ್ವಾರ್ಥ, ಅಹಂಗಳಿಂದಾಗಿ ಕೇವಲ ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಕಿಲೇಶ್, ತಮಿಳುನಾಡಿನಲ್ಲಿ ಕಾಂಗ್ರೇಸ್ ಮತ್ತು ಡಿಎಂಕೆ ಒಂದವವೇ ಹೊರತು ಮಿಕ್ಕೆಲ್ಲಾ ಪಕ್ಷಗಳು ತಮ್ಮ ಸ್ವಂತ ಬಲದಿಂದಲೇ ಸ್ಪರ್ಧಿಸುವ ನಿರ್ಧಾರಕ್ಕೆ ಬಂದವು.

ಆದರೆ ಇದಕ್ಕೆ ತದ್ವಿರುದ್ದವಾಗಿ ಬಿಜೆಪಿ ಪಕ್ಷದವರು ತಮ್ಮ ಅಹಂ ಬದಿಗಿಟ್ಟು ಮಿತ್ರಪಕ್ಷಗಳನ್ನು ಓಲೈಸಿಕೊಂಡು ತಕ್ಕಮಟ್ಟಿಗಿನ ಸೀಟ್ ಹೊಂದಾಣಿಕೆ ಮಾಡಿಕೊಂಡು ಮೈತ್ರಿಯಿಂದ ಚುನಾವಣೆ ಸ್ಪರ್ಧಿಸಲು ನಿರ್ಧರಿಸಿದರಾದರೂ, ಅಲ್ಲಿ ಪಕ್ಷ, ಅಭ್ಯರ್ಥಿಗಳ ಹೊರತಾಗಿಯೂ ಸ್ಪರ್ಧೆ ಏನಿದ್ದರೂ ಏಕ ವ್ಯಕ್ತಿ ನರೇಂದ್ರ ಮೋದಿಯವರನ್ನೇ ಕೇಂದ್ರೀಕೃತವಾಗಿಸಿಕೊಂಡಿತು. ಇನ್ನು ಬಿಜೆಪಿ ಪಕ್ಷದ ಆಭ್ಯರ್ಥಿಗಳೂ ತಮ್ಮ ಸಾಮರ್ಥ್ಯವನ್ನು ಓರೆ ಹಚ್ಚುವ ಬದಲು ಎಂಬ ಘೋಷಣಾ ವಾಕ್ಯದೊಡನೆ ಪ್ರಚಾರ ಮಾಡಿದ್ದದ್ದು ಪ್ರಜಾಪ್ರಭುತ್ವವನ್ನೇ ಅಣಕ ಮಾಡುವಂತಿತ್ತು.

ಇನ್ನೂ ಎಲ್ಲಾ ಮಾಧ್ಯಮದವರೂ ಈ ಬಾರಿ 2014ರಲ್ಲಿ ಇದ್ದಂತೆ ಇದ್ದ ಮೋದಿಯವರ ಅಲೆ ಇಲ್ಲವಾದ್ದರಿಂದ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅಷ್ಟೊಂದು ಸುಲಭವಲ್ಲ ಎಂಬುದನ್ನು ಪದೇ ಪದೇ ಹೇಳುತ್ತಾ ಬಂದಿತೋ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವೊಂದು ಪ್ರಾದೇಶಿಕ ಪಕ್ಷಗಳು ಕಿಂಗ್ ಮೇಕರ್ ಆಗುವ ಕನಸನ್ನು ಕಾಣ ತೊಡಗಿದವು. ಅದರಲ್ಲೂ ಪಶ್ವಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಯಾವತೀ, ಆಂಧ್ರದ ಚಂದ್ರ ಬಾಬು ನಾಯ್ಡು, ತೆಲಂಗಾಣದ ಕೆಸಿಆರ್ ತಾವಾಗಲೇ ಪ್ರಧಾನಿ, ಉಪಪ್ರಧಾನಿಗಳಾಗಿಬಿಟ್ಟೆವು ಎಂಬಂತೆ ಆಡಲಾರಂಬಿಸಿದರು. ಇನ್ನು ಇದೇ ಕಡೇ ಚುನಾವಣೆ , ಕಡೇ ಚುನಾವಣೆ ಎಂದು ಹೇಳುತ್ತಲೇ ಚುನಾವಣೆ ಮೇಲೆ ಚುನಾವಣೆ ಸ್ಪರ್ಥಿಸುತ್ತಿರುವ ದಿನದ 24 ಘಂಟೆಗಳೂ ಮತ್ತು ವರ್ಷದ 365 ದಿನಗಳು ರಾಜಕೀಯವನ್ನೇ ಮಾಡುವ 86ರ ಮಾಜೀ ಪ್ರಧಾನಿ ದೇವೇಗೌಡರೂ ಮತ್ತೊಮ್ಮೆ ಪ್ರಧಾನಿಗಳಾಗುವ ಕನಸನ್ನು ಹೊತ್ತು ತಮ್ಮಿಬ್ಬರು ಮೂಮ್ಮಕ್ಕಳೊಂದಿಗೆ ಚುನಾವಣಾ ಕಣಕ್ಕೆ ಧುಮಿಕಿಯೇ ಬಿಟ್ಟರು.

ಚುನಾವಣಾ ಪ್ರಚಾರ ಆರಂಭವಾದ ಕೂಡಲೇ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶಾದ್ಯಂತ ದಿನಕ್ಕೆ ಎರಡು ಮೂರು, ಕೆಲವೊಂದು ಬಾರಿ ನಾಲ್ಕು ಪ್ರಚಾರ ಸಭೆಗಳನ್ನು ನಡೆಸುತ್ತಾ ಎಲ್ಲಾ ಕಡೆಯಲ್ಲೂ ಸ್ಥಳೀಯ ವಿಷಯಗಳ ಬಗ್ಗೆ ಮಾತನಾಡುತ್ತಾ ತಮ್ಮ ಆಭ್ಯರ್ಥಿಗಳ ಪರ ಮೋದಿ ಮತ್ತು ಅಮಿತ್ ಶಾ ಮತ ಯಾಚಿಸಿದರೆ, ಯಾರೋ ಬರೆದು ಕೊಟ್ಟದ್ದನ್ನು ಗಿಳಿ ಪಾಠದಂತೆ ಒಪ್ಪಿಸುವ ಪಪ್ಪು ರಾಹುಲ್ ಹಾಡಿದ್ದೇ ಹಾಡುವ ಕಿಸ್ವಾಯಿ ದಾಸ ಎನ್ನುವಂತೆ ರಫೇಲ್ ಮತ್ತು ಚೌಕೀದಾರ್ ಚೋರ್ ಬಿಟ್ಟರೆ ಮತ್ತೊಂದರ ಬಗ್ಗೆ ಮಾತನಾಡಲೇ ಇಲ್ಲ. ಇಷ್ಟರ ಮಧ್ಯೆ ರಫೇಲ್ ತೀರ್ಮಾನದ ಬಗ್ಗೆ ಪುನರ್ ಪರೀಶಿಲಿಸುವುದನ್ನು ಒಪ್ಪಿಕೊಂಡ ನ್ಯಾಯಾಲಯದ ಆದೇಶವನ್ನೇ ಇಟ್ಟುಕೊಂಡು, ನೋಡಿ ನ್ಯಾಯಲಯವೇ ಚೌಕೀದಾರ್ ಚೋರ್ ಎಂದು ಒಪ್ಪಿಕೊಂಡಿದೇ ಎಂದು ಸುಳ್ಳಾಡಿ ಉಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡು ಕ್ಷಮಾಪಣಾ ಪತ್ರವನ್ನೂ ಬರೆದುಕೊಟ್ಟು ಜನರ ಮುಂದೆ ನಗೆಪಾಟಲಾಗಿದ್ದು ಸುಳ್ಳೇನಲ್ಲ.

ಇನ್ನೂ ಕರ್ನಾಟಕದಲ್ಲಂತೂ ಚುನಾವಣೆ ತಾರಕ್ಕೇರಿತು. ಅದರಲ್ಲೂ ಮಂಡ್ಯಾದಿಂದ ಖುದ್ದು ಮುಖ್ಯಮಂತ್ರಿಗಳ ಮಗ ನಿಖಿಲ್ ಮತ್ತು ದಿವಂಗಂತ ಅಂಬರೀಶ್ ಅವರ ಪತ್ನಿ ಸುಮಲತಾರವರ ನಡುವಿನ ಜಿದ್ದಾ ಜಿದ್ದಿನ ಪೈಪೋಟಿ ಇಡೀ ದೇಶದ ಗಮನವನ್ನು ಸೆಳೆಯಿತು. ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎಂಬ ನಮ್ಮ ಸಂಸ್ಕೃತಿಯನ್ನೂ ಮರೆತು ಹೀನಾಮಾನವಾಗಿ ವಯಕ್ತಿಕವಾಗಿ ನಿಂದಿಸ ತೊಡಗಿದರು. ಆಕೆಯ ಪರ ನಿಂತ ದರ್ಶನ್ ಮತ್ತು ಯಶ್ ನಾವುಗಳು ಅಮ್ಮನ ಪರ ದುಡಿಯುವ ಜೋಡೆತ್ತುಗಳು ಎಂದರೆ, ಸ್ವತಃ ಕುಮಾರಸ್ವಾಮಿಯವರೇ ತಮ್ಮ ಪದವಿಯ ಗೌರವನ್ನು ಬೀದಿಗೆ ಹರಾಜು ಮಾಡುವಂತೆ ಇವರು ಜೋಡೆತ್ತುಗಳಲ್ಲಾ, ಇವರು ಹೊಲ ಗದ್ದೆಗಳಿಗೆ ನುಗ್ಗುವ ಕಳ್ಳೆತ್ತುಗಳು. ನಿಜವಾದ ಜೋಡೆತ್ತುಗಳು ಎಂದರೇ ನಾವುಗಳೇ ಎಂದು ಪರಂಪರಾಗತ ವೈರಿಯಾದ ಡಿಕೆಶಿಯ ಹೆಗಲಿನ ಮೇಲೆ ಕೈ ಹಾಕಿ ಹೇಳಿದ್ದದ್ದು ಜನರಿಗೆ ಅಷ್ಟಾಗಿ ರುಚಿಸಲಿಲ್ಲ. ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಮುಖ್ಯಮಂತ್ರಿಗಳೇ ನಿಂದಿಸಿದಾಗ ನಮ್ಮದೂ ಒಂದು ಪಾಲಿರಲೀ ಎಂದು ಅವರ ಪಕ್ಷದ ಎಲ್ಲಾ ನಾಯಕರೂ ಬಾಯಿಗೆ ಬಂದಂತೆ ದಿನಕ್ಕೊಂದಂತೆ ವಯಕ್ತಿಕ ನಿಂದನೆಗಿಳಿದಿದ್ದು ಶೋಚನೀಯವಾಗಿತ್ತು.

ಇನ್ನು ಸೋಲಿಲ್ಲದ ಸರದಾರನೆಂದೇ ಖ್ಯಾತಿ ಪಡೆದು ಸತತ 9 ಬಾರಿ ಶಾಸಕರಾಗಿ ಮತ್ತು 3ನೇ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಲೋಕಪಕ್ಷದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಈಬಾರಿ ಖಂಡಿತವಾಗಿಯೂ ಸೋಲಿಸಲೇ ಬೇಕೆಂದು ನಿರ್ಧರಿಸಿ ಅವರದೇ ಪಕ್ಷದಲ್ಲಿದ್ದ ಅವರ ಶಿಷ್ಯ ಉಮೇಶ್ ಜಾದವ್ ಅವರನ್ನು ಕಣಕ್ಕಿಸಿತು ಬಿಜೆಪಿ. ಯಾವಾಗ ತಮ್ಮ ವಿರುದ್ಧ ಪ್ರಧಾನಿಗಳೇ ಆಸ್ಥೆ ವಹಿಸಿದ್ದನ್ನು ಕಂಡು ನಖಶಿಖಾಂತ ಉರಿದು ಹೋದ ಖರ್ಗೆ, ತಮ್ಮ ಸ್ಥಿಮಿತ ಕಳೆದುಕೊಂಡು ಮೋದಿಯವರ ವಿರುದ್ಧ ಏಕವಚನದಲ್ಲಿ ವಯಕ್ತಿಕ ನಿಂದನೆಗಿಳಿದರೆ, ಕೇವಲ ತಂದೆಯ ನಾಮಬಲದಿಂದ ಗೆದ್ದು ಮಂತ್ರಿ ಪದವಿಗಿಟ್ಟಿಸಿಕೊಂಡಿರುವ ಅವರ ಮಗ ಪ್ರಿಯಾಂಕ್ ಕೂಡ ತಂದೆಯವರ ನಿಂದನೆಗಳಿಗೆ ಧನಿಯಾದರು. ಇವರಿಬ್ಬರ ಜೊತೆ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡುರಾವ್ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಪ್ರಧಾನಿಗಳನ್ನು ನಿಂದಿಸಿದ್ದದ್ದು ವಿಷಾಧನೀಯ.

ಒಟ್ಟು ಏಳು ಹಂತಗಳಲ್ಲಿ ಪಶ್ವಿಮ ಬಂಗಾಳ ಹೊರತು ಪಡಿಸಿ ಮಿಕ್ಕೆಲ್ಲಾ ಕಡೆಗಳಲ್ಲೂ ಶಾಂತಿಯುತವಾಗಿ ಚುನಾವಣೆ ನಡೆದರೆ, ಪಶ್ಚಿಮ ಬಂಗಾಳದ ದೀದಿ, ತನ್ನ ಸರ್ವಾಧಿಕಾರೀ ದರ್ಪನ್ನು ತೋರಿಸುತ್ತಾ ಮೋದಿ, ಅಮಿತ್ ಶಾ, ಯೋಗಿಯವರನ್ನು ನಿಂದಿಸಿದ್ದಲ್ಲದೇ ಪ್ರಚಾರಕ್ಕೆ ಪಶ್ವಿಮ ಬಂಗಾಳಕ್ಕೆ ಬಾರದಂತೆ ತಡೆಗಟ್ಟಿದ್ದು ಕಪ್ಪುಚುಕ್ಕೆಯಂತಾಯಿತು.

ಯಾರು ಏನೇ ಹೇಳಿದರೂ, ಯಾವುದೇ ಆರೋಪ ಪ್ರತ್ಯಾರೋಪಗಳನ್ನು ಮಾಡಿದರೂ ಅದಕ್ಕೆ ಪ್ರತಿ ಮಾತಾನಾಡದೇ ಘನ ಗಾಂಭೀರ್ಯದಿಂದ ಕಳೆದ ಬಾರಿ ಚಾಯ್ವಾಲದಂತೆ ಈ ಬಾರಿ ಮೇ ಭೀ ಚೌಕೀದಾರ್ ಎಂಬ ಅಭಿಯಾನದೊಂದಿಗೆ, ದಿಟ್ಟವಾಗಿ ತಮ್ಮ ಸಾಧನೆಗಳನ್ನು ಜನರ ಮುಂದಿಡುತ್ತಾ ಮತ್ತೊಮ್ಮೆ ತಮ್ಮನ್ನು ಏಕೆ ಪ್ರಧಾನ ಸೇವಕನನ್ನಾಗಿ ಆಯ್ಕೆ ಮಾಡಬೇಕು ಎಂಬುದನ್ನು ಸಮರ್ಥವಾಗಿ ಜನರ ಮುಂದಿಡುತ್ತಾ ಹೋದ ಪ್ರಧಾನಿಗಳು ಜನರ ಮನಸ್ಸೆಳೆದುಕೊಂಡು ಹೋಗಿ ಅದನ್ನೇ ಮತಗಳನ್ನಾಗಿ ಪರಿವರ್ತಿಸಿ ಕೊಳ್ಳುವುದರಲ್ಲಿ ಯಶಸ್ವಿಯಗಿ ಯಾರೂ ನಿರೀಕ್ಷಿಸದಂತೆ ಸ್ವತಃ ಬಿಜೆಪಿಯೇ 300+ ಮತ್ತು NDA ಮೈತ್ರಿ ಕೂಟ 350+ ಸ್ಥಾನ ಪಡೆದು ಕೊಳ್ಳಲು ಸಮರ್ಥರಾದರೆ, ಯಥಾ ಪ್ರಕಾರ ಕಾಂಗ್ರೇಸ್ 50, ಅವರ ಮೈತ್ರಿಕೂಟ 90 ಕ್ಕಿಂತ ಮೇಲೇರಲಿಲ್ಲ. ಇನ್ನೂ ಕಿಂಗ್ ಮೇಕರ್ ಎನಿಸಿಕೊಳ್ಳಲು ಹೋದ ಸಮಯಸಾಧಕರು 99ಕ್ಕಿಂತ ಮೀರಲು ಆಗದಿದ್ದದ್ದು ಪ್ರಜಾಪ್ರಭುತ್ವದ ಹೆಗ್ಗಳಿಕೆಯಾಯಿತು.

ಈ ಬಾರಿಯ ಚುನಾವಣಾ ವಿಶೇಷಗಳು ಹೀಗಿವೆ

  • ವಿರೋಧ ಪಕ್ಷಗಳ ಘಟಾನು ಘಟಿಗಳಾದ, ದೇವೇಗೌಡ, ರಾಹುಲ್ ಗಾಂಧಿ, ದಿಗ್ವಿಜಯಸಿಂಗ್, ಜ್ಯೋತಿರಾಧ್ಯ ಸಿಂಧ್ಯಾ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೋಯ್ಲಿ, ಮುನಿಯಪ್ಪ, ಉಗ್ರಪ್ಪ, ಮೀಸಾಭಾರತಿ, ಶೀಲಾದೀಕ್ಷಿತ್ ಮುಂತಾದವರು ಸೋಲನ್ನುಂಡರು
  • ಇನ್ನು ದೇಶವನ್ನು ತುಂಡರಿಸುತ್ತೇವೆ ಎಂದು ಹೊರಟ ತುಕುಡೇ ತುಕುಡೇ ಗ್ಯಾಂಗ್ ಪ್ರಮುಖರಾದ ಕನ್ನಯ್ಯಾ ಮತ್ತು ಪ್ರಕಾಶ್ ರಾಜ್ ಮಕಾಡೆ ಮಲಗಿದ್ದು ಗಮನಿಸಬೇಕಾದ ಅಂಶ
  • ವಿಧಾನ ಸಭೆ ಮತ್ತು ಲೋಕ ಸಭಾ ಚುನಾಚಣೆಯ ನಿಜಾವಾದ ಅರ್ಥವನ್ನು ಗ್ರಹಿಸಿದ ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಘಡದ ಪ್ರಜೆಗಳು ಕಳೆದ ಆರು ತಿಂಗಳ ಹಿಂದೆ ಮಾಡಿದ್ದ ಆಯ್ಕೆಯ ತದ್ವಿರುದ್ದವಾಗಿ ಆಯ್ಕೆ ಮಾಡಿದ್ದದ್ದು ಗಮನಾರ್ಹ.
  • ಚುನಾವಣೆ ಎಂದರೆ ಕೇವಲ ಸಾಮಾನ್ಯ ಸ್ಪರ್ಧೆಯಲ್ಲ ಅದೊಂದು ತಂತ್ರಗಾರಿಗೆ ಎಂಬುದನ್ನು ತೋರಿಸುವಂತೆ ಉತ್ತರ ಪ್ರದೇಶದಲ್ಲಿ ಕಳೆದು ಕೊಳ್ಳಬಹುದಾದ ಸಂಖ್ಯೆಗಳನ್ನು ಸರಿದೂಗಿಸುವಂತೆ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಹೆಚ್ಚಿನ ಶ್ರಮವಹಿಸಿ ನಿರೀಕ್ಷಿತ ಫಲಿತಾಂಶ ಪಡೆದು ಅಮಿತ್ ಶಾ ನಿಜವಾದ ಚುನಾವಣಾ ಚಾಣುಕ್ಯ ಎಂದು ಖ್ಯಾತಿ ಪಡೆದರು.
  • ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡಲು ಜನರ ಆದೇಶದ ವಿರುದ್ದವಾಗುವ ರೀತಿ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಒಂದಂಕಿಯ ಸ್ಥಾನಕ್ಕೆ ನಿಲ್ಲಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೇಸ್ ಕರ್ನಾಟಕದಲ್ಲಿ ಸಂಪೂರ್ಣವಾಗಿ ನೆಲಕಚ್ಚಿ ಹೀನಾಮಾನವಾಗಿ ಸೋತು ಸುಣ್ಣವಾಗಿ ಕೇವಲ ಒಂದೇ ಒಂದು ಸ್ಧಾನ ಪಡೆದದ್ದು ಶೋಚನೀಯವಾಗಿತ್ತು.
  • ಜಾತಿ ಲೆಕ್ಕಾಚಾರ ಆಧಾರದ ಮೇಲೆ ಹಾಸನದಲ್ಲಿ ಮೂಮ್ಮಗ ಪ್ರಜ್ಬಲ್ ರೇವಣ್ಣ, ಮಂಡ್ಯಾದಲ್ಲಿ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರ ಸ್ವಾಮಿ ಮತ್ತು ತುಮಕೂರಿನಲ್ಲಿ ತಾತ ದೇವೇಗೌಡ ಸ್ಪರ್ಧಿಸಿ HMT ಕ್ಷೇತ್ರಗಳು ಎಂದೇ ಪ್ರಸಿದ್ದಿ ಪಡೆದು ಅಂತಿಮವಾಗಿ HMTಯಲ್ಲಿ H ಮಾತ್ರ ಗೆಲುವು ಗಳಿಸಿ ಉಳಿದ MT (EMPTY) ಆಗಿದ್ದು ಪ್ರಜಾಪ್ರಭುತ್ವದ ಗರಿಮೆಯನ್ನು ಎತ್ತಿ ತೋರಿಸಿತು.
  • ತಾತ ಮತ್ತು ಮೊಮ್ಮಗನನ್ನು ಈ ರೀತಿ ಹೀನಾಯವಾಗಿ ಸೋಲಿಸುವ ಮೂಲಕ ಕಳೆದ ಸಲ ಚಾಮುಂಡೇಶ್ವರಿ ಚುನಾಚಣೆಯಲ್ಲಿ ತಮ್ಮನ್ನು ಸೋಲಿಸಿದ್ದ ಜಿಡಿಎಸ್ ವಿರುದ್ದ ಸಿದ್ದರಾಮಯ್ಯನವರು ಸೇಡು ತೀರಿಸಿಕೊಂಡರು ಎಂದು ಜನ ಮಾತನಾಡುಕೊಳ್ಳುವಂತಾಯಿತು.
  • ಇಡೀ ರಾಜ್ಯಸರ್ಕಾರವೇ ವಿರುದ್ಧವಾಗಿದ್ದರೂ ಪಕ್ಷೇತರವಾಗಿ ಸ್ಪರ್ಧಿಸಿ, ದಿಟ್ಟವಾಗಿ ಹೋರಾಡಿ ಪ್ರಪ್ರಥಮವಾಗಿ ವಿಜಯಶಾಲಿಯಾದ ಸುಮಲತಾ ಅಂಬರೀಶ್ ದೇಶದ ಗಮನ ಸೆಳೆದರು.
  • ಕಾಂಗ್ರೇಸ್ ಹೊರತಾಗಿ ಸತತವಾಗಿ ಎರಡನೇ ಬಾರಿಗೆ ಅಭೂತ ಪೂರ್ವ ವಿಜಯದೊಂದಿಗೆ ಮತ್ತೊಮ್ಮೆ ಮೋದಿಯವರ ಸರ್ಕಾರ ಅಧಿಕಾರಕ್ಕೆ ಏರಿರುವುದು ಶ್ಲಾಘನೀಯವಾಗಿತ್ತು.

ದೇಶದ ಅಭಿವೃಧ್ದಿಗಾಗಿ ಒಂದು ಸುಭಧ್ರ ಸರ್ಕಾರ ಅತ್ಯವಶ್ಯಕವಾಗಿದೆ. ಅದನ್ನು ಸರಿಯಾಗಿ ಮನಗಂಡ ದೇಶವಾಸಿಗಳು ಮತ್ತೊಮ್ಮೆ ಮೋದಿಯವರನ್ನು ಮತ್ತವರ ತಂಡವನ್ನು ಆಯ್ಕೆಮಾಡಿದ್ದಾರೆ. ಕೇವಲ ಮೋದಿಯವರೇ ಒಬ್ಬಂಟಿಯಾಗಿ ದೇಶಾದ್ಯಂತ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲದಿರುವ ಕಾರಣ, ಈ ಬಾರಿ ತಮ್ಮ ಸ್ವಸಾಮರ್ಥ್ಯವಿಲ್ಲದಿದ್ದರೂ, ಕೇವಲ ಮೋದಿಯವರ ಹೆಸರಿನಿಂದಲೇ ಆಯ್ಕೆಯಾದ ಸಂಸದರು ಮನಗಂಡು ಈ ಬಾರಿಯಾದರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜನ ಸೇವೆ ಮಾಡಿ ಮೋದಿಯವರೊಂದಿಗೆ ಭಾರತವನ್ನು ವಿಶ್ವ ಗುರುವನ್ನಾಗಿಸುವ ಮೋದಿಯವರ ಕನಸನ್ನು ಸಾಕಾರ ಮಾಡುವಂತಾಗಲೀ.

ಏನಂತೀರೀ?

One thought on “ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

Leave a comment